೧
ಗಿರಿಗಿರಿ ಗಿಂಡಿ
ಇಬತ್ತಿ ಉಂಡಿ
ಸಂಜೆಯ ಗಾಳಿ
ತಂಪೊಳು ತೇಲಿ
ಗರಿಗರಿ ಮೋಡ
ಬಾನಿನ ಕೂಡ
ಮೈಮರೆತೋಟ
ಚಕ್ಕಂದಾಟ;
ಬಣ್ಣದ ಹಕ್ಕಿ
ಕೊರಳಲ್ಲು ಕ್ಕಿ
ಸುವ್ವೀ ಚವ್ವಿ,
ಹಾಡಿದೆ ‘ಟುವ್ವಿ’,
ಬನ ಬನದಲ್ಲಿ
ಮನ ಮನದಲ್ಲಿ
ಸಂತಸ ಬೀರಿ
ಹಾಡಿನ ಲಹರಿ
ಮೆಲ್ಲಗೆ ನಿಂತಿ
ಬಾರೇ ಗೆಳತಿ.
ಗಿರಿಗಿರಿ ಗಿಂಡಿ
ಇಬತ್ತಿ ಉಂಡಿ.
೨
ಬಗಾಟ ಬಗರಿ
ತಿರುಗುವ ತಿಗರಿ
ತೆಂಗಿನ ಚವರಿ
ಗಾಳಿ ಸವಾರಿ
ಹಿತ್ತಲದಲ್ಲಿ
ಕುಂಬಳ ಬಳ್ಳಿ
ಅಂಗಳದಲ್ಲಿ
ಹೂ ಗಿಡ ಬಳ್ಳಿ
ಮುಂಗಡೆಯಲ್ಲಿ
ಬೇಲಿಯ ಕಳ್ಳಿ
ಬಳಿಯಲಿ ಸುಳಿದು
ಬೇಸರ ಕಳೆದು
ಪಾತರಗಿತ್ತಿ
ಪಕ್ಕಾಹತ್ತಿ
ಮೈಕ್ಕೆ ತುಂಬ
ಹೂ ಮಕರಂದ
ಮಂಜಿನ ಹನಿಯ
ಮುತ್ತಿನ ತೆನಿಯ
ಹುಲ್ಲಿನ ವಸತಿ
ಕುಸುಮ ಕಸೂತಿ
ಕಾಮನ ಬಿಲ್ಲ
ಮೂಡಿಹುದಲ್ಲ!
ರೇಶಿಮೆ ಅಂಚ
ಮಿರಿ ಮಿರಿ ಮಿಂಚ
ಬಣ್ಣದ ಕುಂಚ
ಯಾರದು ಹೊಂಚ?
ಬಲಗೈ ತಾರ
ಎಡಗೈ ತಾರ
ಗಿರಿಗಿರಿ ಗಿಂಡಿ
ಇಬತ್ತಿ ಉಂಡಿ.
೩
ಕಂಬಕಂಬಾಟ
ನಿಂಬಿಯ ತೋಟ
ನವಿಲಿನ ಓಟ
ತಕಥೈ ಥಾಟ
ಗೆಳತಿಯರೆಲ್ಲ
ಬಂದಾರೇನ
ಮಲ್ಲಿಗೆ ಹೂವ
ಮುಡಿದಾರೇನ
ಗುಲಾಬಿ ಲಂಗ
ಉಟ್ಟಾರೇನ
ನೀಲಿ ಪೋಲಕ
ತೊಟ್ಟಾರೇನ
ನತ್ತು ಬುಗುಡಿ
ಇಟ್ಟಾರೇನ
ಚಿನ್ನದ ಬಳೆಗೆ
ಅತ್ತಾರೇನ?
ಬಾರೇ ಗೆಳತಿ
ನನ ಬಂಗಾರಿ
ವಸಂತ ಕಾಲದ
ಸಿರಿ ಸಿಂಗಾರಿ
ಮಾವಿನ ತಳಿರು
ಹುಣಿಸೆಯ ಚಿಗುರು
ಗಾಳಿಯ ಸುಳಿಗೆ
ಕುಣಿತದ ಕರೆಗೆ
ತಲೆಯನು ತೂಗಿ
ಮನಕಿಂಬಾಗಿ
ರವದೆಯ ಪೀಪಿ
ಊದುವದೇನ
ಹರುಷದ ಕೇಕಿ
ಹಾಕುವದೇನ?
ಗಿರಿಗಿರಿ ಗಿಂಡಿ
ಇಬತ್ತಿ ಉಂಡಿ.
೪
ನಗೆ ಮೊಗದಲ್ಲಿ
ಹರುಷದ ಬಳ್ಳಿ
ಕೋಮಲವೆನಿಸಿ
ರಾಗವ ರಚಿಸಿ
ತುಟಿಯಲಿ ಚಿಗುರಿ
ಗಲ್ಲದಲರಳಿ
ಕುರುಳಲಿ ಹೊರಳಿ
ಜಡೆಯಲಿ ತೂಗಿ
ಬಿಂಕದಿ ಬಿಗಿ
ನಿರಿ ಚೆಲ್ಲಾಟ
ಕೋಗಿಲೆ ಕುಕಿಲು
ತೆರೆ ಚಿನ್ನಾಟ;
ದಿನದಿನಕೊಂದು
ಹೊಸತನ ಬಂದು
ಸೆರಗನು ಹೊಚ್ಚಿ
ಕಣ್ಣೆವೆ ಮುಚ್ಚಿ
ತೆರೆ ತೆರೆವಂತೆ
ಚೆಲುವಿನ ಸಂತೆ!
ಕಣ್ಣಿನ ತುಂಬ
ಕನಸಿನ ಬಿಂಬ
ಜೀವದ ಗೆಳತಿ
ಒಲವಿನ ಒರತಿ
ಇತತ್ತ ಬಾರ
ಇದಿರಿಗೆ ಬಾರ
ಬಲಗೈ ತಾರ
ಎಡಗೈ ತಾರ
ಗಿರಿಗಿರಿ ಗಿಂಡಿ
ಇಬತ್ತಿ ಉಂಡಿ.
*****