ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ನಿನ್ನೆ ರಾತ್ರಿ ಮುಂಜಾವಿಲ್ಲಿ ನನ್ನ ನಲ್ಲ ಕೇಳಿದ
“ಏಕೆ ಈ ಅನ್ಯಮನಸ್ಕತೆ, ಆತಂಕ, ಎಷ್ಟು ದಿನ ಹೀಗೆ?”
ನನ್ನ ಕೆನ್ನೆ ಕಂಡು ಗುಲಾಬಿಗೂ ಮತ್ಸರ
ನಿನ್ನಾ ಕಣ್ಣು ಮುಳ್ಳ ಹುಡುಕಾಟಕ್ಕೊ ಏನೊ ರಕ್ತದ ಪೂರ
ನಾನು ಹೇಳಿದೆ- “ಎತ್ತರದ ತೇಗ ಕೂಡಾ ನಿನ್ನೆದುರು ಚಿಕ್ಕ ತಳಿರು”
ಮತ್ತೆ ಹೇಳಿದೆ- “ನಿನ್ನ ಕೆನ್ನೆ ಮುಂದೆ ಸ್ವರ್ಗದ ದೀಪ ಕೂಡಾ ಕರಿಯ ಗೀರು”
ನಾನು ಹೇಳಿದೆ- “ಭೂಮ್ಯಾಕಾಶ ನಿನ್ನಿಂದಾಗಿ ಅಲ್ಲೋಲ ಕಲ್ಲೋಲ
ಹೀಗಾಗಿ, ನೀನು ನನಗೆ ಸಿಗಬಲ್ಲೆಯ?”
ಅವನು ಹೇಳಿದ- ನಾನೇ ನಿನ್ನ ಹೃದಯ, ನಿನ್ನ ಆತ್ಮ
ಏಕೆ ಈ ಅನ್ಯಮನಸ್ಕತೆ, ವಿಶ್ರಮಿಸು ಎದೆಯಲ್ಲಿ
ನಾನು ಹೇಳಿದೆ- ನನ್ನ ಹೃದಯ ಆತ್ಮಗಳ ಶಾಂತಿ ಕಿತ್ತಿದ್ದಿ
ಸ್ವಸ್ಥವಾಗಿರುವ ಶಕ್ತಿಯನ್ನೆ ನಾಶ ಮಾಡಿದ್ದಿ
ಅವನು ಒಂದೇ ಉಸಿರಿನಲ್ಲಿ ಹೇಳಿದ-
“ನೀನು ನನ್ನ ಸಮುದ್ರದ ಹನಿ
ಮುಳುಗಿಬಿಡು ಪೂರಾ, ಈ ಚಿಪ್ಪಾಗಲಿ ಮುತ್ತಿನ ಗಣಿ”
*****