ಬರಹ ೫

‘ಬರಹ ೫.೦’ರ ಮಧ್ಯಾವೃತ್ತಿ, ತಂತ್ರಾಂಶ ಅಭಿವೃದ್ಧಿ ಪೆಟ್ಟಿಯ ಸಹಿತ, ಇದೀಗ ಕನ್ನಡ ತಂತ್ರಾಂಶ ಆಸಕ್ತರ ಮುಂದಿದೆ. ಕನ್ನಡಕ್ಕೆ ಸಂಬಂಧಪಟ್ಟ ತಂತ್ರಾಂಶಗಳ ಅಭಿವೃದ್ಧಿಯೂ ಸೇರಿದಂತೆ, ಬರಲಿರುವ ದಿನಗಳಲ್ಲಿ ಅಂತರ್ಜಾಲದಲ್ಲಿಯೂ ಕೂಡ ಕನ್ನಡದ ಬೆಳವಣಿಗೆಗೆ ಇದೊಂದು ಮಹತ್ವದ ಹೆಜ್ಜೆಯಾಗಬಲ್ಲದೆಂದು ನಮ್ಮ ಅನಿಸಿಕೆಯಾಗಿದೆ. ಬರಹ ಡೈರಕ್ಟನ್ನು ಮುಖ್ಯ ವಿಂಡೋದಿಂದ ಬೇರ್ಪಡಿಸಿ ಸ್ವತಂತ್ರಗೊಳಿಸಿದ್ದು ಕನ್ನಡ ತಂತ್ರಾಂಶ ಅಭಿವೃದ್ದಿಗೆ ಸಹಾಯವಾಗಿದ್ದರೆ, ಇಂದು ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ಎಲ್ಲಾ ಭಾಷೆಯ ಫಾಂಟ್‌ಗಳ ಶಿಷ್ಟರೂಪವಾಗಿರುವ ‘೧೬ ಬಿಟ್ ಕೋಡ್’ಅನ್ನು ಇದರಲ್ಲಿ ಅಳವಡಿಸಿರುವುದು ಅಂತರ್ಜಾಲದ ದೃಷ್ಟಿಯಿಂದ ಇದೊಂದು ಗುಣಾತ್ಮಕ ಅಂಶವಾಗಿದೆ. ‘ಬರಹ ೫.೦’ರ ಮಧ್ಯಾವೃತ್ತಿ, ಈ ಯುನಿಕೋಡ್ ಅಷ್ಟೇ ಅಲ್ಲದೆ, ಇನ್ನಿತರ ರೂಪಗಳಾದ ೧) ಕಾನ್ಟ್ರಾನ್ಸ್(ಕನ್ನಡ) ೨)ಕನ್ನಡ ಗಣಕ ಪರಿಷತ್ತು ನಿಗದಿಪಡಿಸಿರುವ ಶಿಷ್ಟರೂಪ, ೩) ೮ ಬಿಟ್ ಕೋಡ್ ೪) ೮-ಬಿಟ್ ಯುಟಿ‌ಎಫ್ ೫) ೮ ಬಿಟ್ ಆನ್ಸಿ ಇಂಥವುಗಳಲ್ಲಿ, ಒಂದರಿಂದ ಇನ್ನೊಂದಕ್ಕೆ ಸುಲಭದಲ್ಲಿ ಮಾರ್ಪಾಡಿಸಲು ನೆರವಾಗುವ ಸಹತಂತ್ರಾಂಶವೊಂದನ್ನು ಒಳಗೊಂಡಿದೆ. ಈ ಬಗೆಯ ರೂಪಾಂತರ ತಂತ್ರಾಂಶದಿಂದ ಫಾಂಟ್ ಕಿರುಕುಳದಿಂದ ಬಳಕೆದಾರರು ಬಿಡುಗಡೆ ಅನುಭವಿಸಬಹುದೆಂದು ನಾವು ಆಶಿಸುತ್ತೇವೆ. ಅಕ್ಷರಗಳ ಆರೋಹಣ ಅವರೋಹಣ ಕ್ರಮದಲ್ಲಿ ಕನ್ನಡದ ಪದಗಳನ್ನು ಹಂಚಬಲ್ಲ ಸಹತಂತ್ರಾಶವೂ ಇದರಲ್ಲಿ ಅಡಕವಾಗಿರುವುದು ಇನ್ನೊಂದು ಹೆಗ್ಗಳಿಕೆ.

ಶ್ರೀಶೇಷಾದ್ರಿವಾಸುರವರ ಕನ್ನಡದ ಪ್ರೀತಿ ಮತ್ತವರ ಔದಾರ್ಯ ವಾಣಿಜ್ಯಮಯವಾಗಿರುವ ಈ ದಿನಗಳಲ್ಲಿ ಇಂಥದನ್ನು ಎಲ್ಲಾ ಕನ್ನಡಿಗರಿಗೆ ನಿರಾಪೇಕ್ಷೆಯಿಂದ ಕೊಟ್ಟಿದೆಯಂಬುದನ್ನು ನೆನೆದು, ಕನ್ನಡಿಗರ ಪರವಾಗಿ ಕನ್ನಡಸಾಹಿತ್ಯ.ಕಾಂ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತದೆಯಲ್ಲದೆ, ಬಳಕೆದಾರರಿಂದ ಈ ’ಬರಹ ೫.೦’ರ ಮಧ್ಯಾವೃತ್ತಿಯ ಬಗ್ಗೆ ಟಿಪ್ಪಣಿಯನ್ನು ‘ಬರಹ.ಕಾಂ’ಗೆ ತಲುಪಿಸಲು ಕನ್ನಡಸಾಹಿತ್ಯ.ಕಾಂ ಉತ್ಸುಕವಾಗಿರುತ್ತದೆ.

  • ಟಿಪ್ಪಣಿ: ಎಸ್ ಪಿ ಕೆ

‘ಬರಹ ೫.೦’ರ ಒಂದು ಉಪಯುಕ್ತ ಅಂಶವೇನೆಂದರೆ, ಇದನ್ನು ಯೂನಿಕೋಡ್ ಕನ್ನಡ ಕಡತ (ಡಾಕ್ಯೂಮೆಂಟ್) ಗಳನ್ನು ತಯಾರಿಸಲು ಬಳಸಬಹುದು. ವಿಶ್ವದ ಪ್ರಮುಖ ಭಾಷೆಗಳ ಅಕ್ಷರ ಮತ್ತು ಸಂಖ್ಯೆಗಳನ್ನು ಶಿಷ್ಟರೀತಿಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬಳಸುವುದು ಯೂನಿಕೋಡ್ ಶಿಷ್ಟ ಪದ್ಧತಿಯ ಉದ್ದೇಶ. ಕನ್ನಡ ಕಡತ ತಯಾರಿಸುವಾಗ ಯೂನಿಕೋಡ್ ಪದ್ಧತಿಯನ್ನು ಅನುಸರಿಸುವುದರಿಂದ ಹಲವು ಲಾಭಗಳುಂಟು. ಆವುಗಳಲ್ಲಿ ಮುಖ್ಯವಾದವು ಫ಼ಾಂಟುಗಳ ಜಂಜಾಟದಿಂದ ಮುಕ್ತಿ ಮತ್ತು ನಿಮಗೆ ಇಷ್ಟವಾದ ಅಥವಾ ನಿಮ್ಮ ಬಳಿ ಇರುವ ಫ಼ಾಂಟುಗಳನ್ನು ಉಪಯೋಗಿಸಲು ದೊರೆಯುವ ಸ್ವಾತಂತ್ರ್ಯ. ಜೊತೆಗೆ ಯೂನಿಕೋಡ್ ಡಾಕ್ಯೂಮೆಂಟ್ ಗಳನ್ನು ಯಾವುದೇ ಗಣಕ ಪ್ಲಾಟ್ ಫ಼ಾರ್ಮ್ ನಲ್ಲಿ ಬಳಸಬಹುದು. ಅಂತರ್ಜಾಲದ ಮಟ್ಟಿಗೆ ಹೇಳುವುದಾದರೆ ಯೂನಿಕೋಡ್ ನ ಬಳಕೆ ಅನಿವಾರ್ಯ. ‘ಕಡತ ನಿರ್ಮಾಣ’ ಕಾಲದಲ್ಲಿ ನೀವು ಫ಼ಾಂಟುಗಳ ಬಗೆಗಾಗಲಿ, ಅದನ್ನು ಯಾವ ಪ್ಲಾಟ್ ಫ಼ಾರ್ಮ್ ನಲ್ಲಿ ಬಳಸಬಹುದು ಎಂಬುದರ ಬಗೆಗಾಗಲಿ ಯೋಚಿಸುವ ಅಗತ್ಯವನ್ನು ಯೂನಿಕೋಡ್ ತೆಗೆದುಹಾಕಿದೆ.

‘ಬರಹ ೫.೦’ ಯೂನಿಕೋಡನ್ನು ಕನ್ನಡಕ್ಕೆ ತಂದಿದೆ. ಯೂನಿಕೋಡ್ ನ ಬಳಕೆಯಿಂದ ಕನ್ನಡ ಲಿಪಿಗಳನ್ನು ಒಂದು ಶಿಷ್ಟ ರೀತಿಯಲ್ಲಿ ಬಳಸಬಹುದಾಗಿದೆ. ‘ಬರಹ ೫.೦’ ಬಳಸಿ ನೀವು ತಯಾರಿಸುವ ಡಾಕ್ಯೂಮೆಂಟ್ ಗಳನ್ನು ಯೂನಿಕೋಡ್ ಶಕ್ತ ಯಾವುದೇ ಸಾಫ಼್ಟ್ ವೇರ್ ಜೊತೆ ಬಳಸಬಹುದು. ಉದಾಹರಣೆಗೆ ನಿಮ್ಮ ಎಚ್. ಟಿ. ಎಂ. ಎಲ್. ಪುಟದಲ್ಲಿ ನೀವು ಆಂಗ್ಲ ಭಾಷೆಯಲ್ಲಿ ನಿಮ್ಮ ವೃತ್ತಿಯ ಬಗ್ಗೆ, ಕನ್ನಡದಲ್ಲಿ ನಿಮ್ಮ ಸಾಹಿತ್ಯಾಸಕ್ತಿಯ ಬಗ್ಗೆ ಮಾಹಿತಿ ಒದಗಿಸಬಹುದು. ‘ಬರಹ ೫.೦’ ರ ನೆರವಿನಿಂದ ನೀವು ಯಾವುದೇ ಶ್ರಮವಿಲ್ಲದೆ ನಿಮ್ಮ ಮೆಚ್ಚಿನ ವರ್ಡ್ ಪ್ರೋಸೆಸರ್ ನಲ್ಲಿ ಬರಹ ಲಿಪ್ಯಂತರಣ ಕ್ರಮದ ಮೂಲಕ ಕನ್ನಡ ಅಕ್ಷರಗಳನ್ನು ಬರೆಯಬಹುದು ಮತ್ತು ಯೂನಿಕೋಡ್ ಪದ್ಧತಿಗೆ ಅನುಗುಣವಾಗಿ ಡಾಕ್ಯೂಮೆಂಟ್ ತಯಾರಿಸಬಹುದು.

ಟಿಪ್ಪಣಿ: ಆರ್. ಉಡುಪ.


೦೬-೦೬-೨೦೦೨

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.