ಏಕರೂಪತೆಯಿಲ್ಲದ ‘ಕನ್ನಡ’ ಸಾಧನಗಳು

ಎಲ್ಲರೂ ಕ್ಷಮಿಸಬೇಕು- ತಾಂತ್ರಿಕತೆಯ ಸಂದರ್ಭದಲ್ಲಿ ಕನ್ನಡ ಭಾಷೆ ಅಂತರ್ಜಾಲದಲ್ಲಿ ಎದುರಿಸುತ್ತಿರುವ ಅಡಚಣೆಗಳನ್ನು ಕುರಿತಂತೆ ಬರೆಯುತ್ತಿದ್ದೇನೆ. ಬಹಶಃ ಅಪ್ರಸ್ತುತವಾಗಲಾರದು ಎಂಬ ಹುಂಬ ಧೈರ್ಯವೂ ಇದೆ. ಚುಚ್ಚು ಮಾತುಗಳನ್ನಾಡದಿದ್ದರೆ- ಚರ್ಚೆ ಮುಂದುವರಿದು ’ಬೇಕು – ಬೇಡಗಳು’ ನಿರ್ಣಯವಾಗುವುದಾದರು ಹೇಗೆ ಎಂಬ ಪ್ರಶ್ನೆಯೂ ಮುಂದಿರುವುದರಿಂದ ಅಲ್ಲಲ್ಲಿ ಚುಚ್ಚು ಮಾತುಗಳಿದ್ದರೆ ಅದರ ಅಗತ್ಯದ ಕುರಿತಂತೆ ಸಹೃದಯರು ಮನಗಾಣುತ್ತಾರೆ ಎಂಬ ಭರವಸೆಯೂ ಇದೆ. ಆದುದರಿಂದ ಧೈರ್ಯ ಮಾಡಿದ್ದೇನೆ.

“ಕನ್ನಡದಲ್ಲಿ ಒಂದೇ ರೀತಿಯ ಸ್ಟಾಂಡರ್ಡೈಸೇಶನ್ ಇಲ್ಲ” ಎಂದು ಹೇಳಿದ ಬೆನ್ನಲ್ಲೇ ’ಸಾಹಿತಿಗಳಿಂದ ಕನ್ನಡ ಉಳಿದು-ಬೆಳೆಯುತ್ತದೆ ಎಂಬ ನಂಬಿಕೆ ಇಲ್ಲ, ಏನಿದ್ದರು ಮಾಹಿತಿ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಯುವಕರಿಂದ ಮಾತ್ರ ಕನ್ನಡ ಉಳಿಯಬಲ್ಲದು’ – ಎನ್ನುವ ಅರ್ಥ ಬರುವ ಮಾತುಗಳನ್ನು, ಪರಿಚಿತರಾದ ಕೆ ಎನ್ ಹರಿಕುಮಾರ್ ಹೇಳಿದಾಗ ಅದನ್ನು ಗಟ್ಟಿಯಾಗಿ ವಿರೋಧಿಸುವ ಧ್ವನಿ ನನ್ನಲಿರಲಿಲ್ಲ.

hಣಣಠಿ://ತಿತಿತಿ.e-ಣಚಿಠಿಚಿಚಿಟ.ಛಿom ಮೂಲಕ ವಿದ್ಯುನ್ಮಾನ ಅಂಚೆಯ ಸೇವೆ ಸಲ್ಲಿಸುತ್ತಿರುವ ಕಾವೇರಿ ಕಮ್ಯೂನಿಕೇಶನ್ಸ್‌ನ ಶ್ರೀ ಕೆ ಎನ್ ಹರಿಕುಮಾರ್‌ರವರು ಹೇಳಿದಾಗ ಅದನ್ನು ಸಂಪೂರ್ಣವಾಗಿ ಒಪ್ಪುವುದನ್ನಾಗಲಿ – ನಿರಾಕರಿಸುವುದಾಗಲಿ ಎರಡೂ ಸಾಧ್ಯವಿರಲಿಲ್ಲ. ಜೊತೆಗೆ ಆಗ ನಾನು ಅಮೆರಿಕೆಯತ್ತ ಹೊರಟಿದ್ದೆ. ಮಾತುಗಳನ್ನು ಬೆಳೆಸುವುದಕ್ಕಾಗಲಿ, ಆ ಕುರಿತಂತೆ ಅಲೋಚಿಸುವುದಕ್ಕಾಗಲಿ ಕಾಲಾವಕಾಶವಿರಲಿಲ್ಲ. ಈಗಿನ ನನ್ನ ಅನುಭವದ ವ್ಯಾಪ್ತಿಯಲ್ಲಿ ಮಾತನಾಡುವುದಾದರೆ: ಸಾಹಿತಿಗಳಿಂದ ಕನ್ನಡ ಉಳಿಯುತ್ತದೋ ಇಲ್ಲವೋ- ಮಾಹಿತಿ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಕನ್ನಡಿಗ ಯುವಕ-ಯುವತಿಯರಿಂದ ಕನ್ನಡ ಉಳಿಯುವ ಯಾವ ಸೂಚನೆಯೂ ಈವರೆಗೆ ಬಂದಿಲ್ಲ. ವಾಸ್ತವವಾಗಿ ಅವರು ಕನ್ನಡದಿಂದ ದೂರ ಹೋಗುತ್ತಿದ್ದಾರೆ ಎನ್ನುವುದು ಹೆಚ್ಚು ನಿಜವಾಗಬಹುದೇನೊ.

ಇಂಗ್ಲೀಷೂ ಸೇರಿದಂತೆ ಜಗತ್ತಿನ ಯಾವ ಭಾಷೆಗೂ ಇಂದಿಗೂ ಮಾಹಿತಿ ತಂತ್ರಜ್ಞಾನ ಕ್ಸೇತ್ರ ಒಂದೇ ರೀತಿಯ ’ಎಲ್ಲರೂ ಸಮಾನವಾಗಿ ಬಳಸಬಹುದಾದ- ಏಕರೂಪ’ ಸ್ಟಾಂಡರ್ಡೈಸೇಶನ್ ಇಲ್ಲ ಎಂಬುದೇ ನಿಜ- ಹರಿಕುಮಾರ್‌ರವರ ಮತುಗಳನ್ನು ಇಲ್ಲಿ ಕಾಣಿಸಿರುವ ಉದ್ದೇಶ: ಅವರಂತೆಯೇ ವಾದ ಮಾಡುವವರು ಅನೇಕರು ಇದ್ದಾರೆ, ಆ ವಾದ ಕೇವಲ ಕಾಲಕ್ಷೇಪದ ಒಂದು ಪರಿಯಾದರೆ ತಲೆ ಕೆಡಿಸಿಕೊಳ್ಳಲೇ ಬೇಕಾದ್ದಿಲ್ಲ. ಆದರೆ ಅದೇ ಒಂದು ನಂಬಿಕೆಯಾಗುತ್ತಿರುವಂತೆ ಕಾಣಿಸುತ್ತಿದೆ. ’ಅಲ್ಲಿ ನೋಡಿ ಏನೆಲ್ಲ ಇದೆ, ಇಲ್ಲೇನಿದೆ ಮಣ್ಣು’ ಎಂಬ ಉಪೇಕ್ಷೆಯೂ ಸೇರಿಕೊಂಡಿದೆ. ಆದುದರಿಂದ ಈ ವಾದವನ್ನು /ಉಪೇಕ್ಷೆಯನ್ನು, ಕನ್ನಡಸಾಹಿತ್ಯಕಾಂ ನನ್ನು ಪುನರ್‌ರೂಪಿಸಲು ನಾನು ತೊಡಗಿಕೊಂಡನಂತರದ ದಿನಗಳಲ್ಲಿ ಅನುಭವಿಸಿದ ಕಷ್ಟಗಳ ಹಿನ್ನೆಲೆಯಲ್ಲಿ ಪರೀಕ್ಷಿಸಲು ಬಯಸಿದ್ದೇನೆ. ಅವರ ಮಾತು/ವಾದ/ಉಪೇಕ್ಷೆ ಅರ್ಧ ನಿಜ ಅರ್ಧ ಉತ್ಪ್ರೇಕ್ಷೆ. ಕನ್ನಡದಲ್ಲೂ ಒಂದೇ ರೀತಿಯಲ್ಲಿ ’ಎಲ್ಲರೂ ಸಮಾನವಾಗಿ ಬಳಸಬಹುದಾದ- ಏಕರೂಪ’ (ಸ್ಟಾಂಡರ್ಡೈಸೇಶನ್) ಇಲ್ಲ. ಇಂಗ್ಲಿಷ್‌ನಲ್ಲಿಯೂ ಇಲ್ಲ. (ಈ ಕುರಿತಾಂತೆ ಯಾರೂ ಮಾತನಾಡುವುದಿಲ್ಲ, ಅಲ್ಲಿ ಎಲ್ಲವೂ ಚಂದವಾಗಿಯೇ ಇದೆ ಎಂಬ ಪೂರ್ವಭಾವಿ ನಿರ್ಣಯ. ಆ ಕುರಿತಂತೆ ತಲೆಕೆಡಿಸಿಕೊಳ್ಳಬೇಕಿಲ್ಲ. ಕನ್ನಡದಲ್ಲಿ ಇಲ್ಲ, ಅಷ್ಟರ ಮಟ್ಟಿಗಂತೂ ನಿಜ ಎಂಬುದನ್ನು ಮನಗಂಡಿದ್ದೇನೆ. ಈ ಮನಗಾಣುವಿಕೆಯ ಹಿನ್ನೆಲೆಯಲ್ಲಿ ಕನ್ನಡಸಾಹಿತ್ಯ.ಕಾಂ ನನ್ನು ಪುನರ್‌ರೂಪಿಸತೊಡಗಿದಾಗ ನನ್ನ ಹುಡುಕಾಟ, ಎದ್ದ ಪ್ರಶ್ನೆಗಳು, ಇರುವ ಮಿತಿಗಳಲ್ಲೇ ಕಂಡುಕೊಂಡ ಪರಿಹಾರಗಳ ಅನುಭವದ ಹಿನ್ನೆಲೆ ಇದೆ. ಈ ಅನುಭವ ಹರಿಕುಮಾರ್‌ರ ಮಾತುಗಳನ್ನು ಕೇಳಿದಾಗ ಆಗಿದ್ದ ಅಸಮಾಧಾನವನ್ನು ಬದಿಗಿಟ್ಟು ನೋಡುವ ಪಕ್ವತೆಯನ್ನು ತಂದುಕೊಟ್ಟಿದೆ. ಮೊದಲರ್ಧ ಮಾತುಗಳನ್ನು ಒಪ್ಪಿಕೊಂಡು- ಉಳಿದರ್ಧ ಮಾತುಗಳನ್ನು ಏಕೆ ನಿರಾಕರಿಸುತ್ತೇನೆಂಬ ಕಾರಣಗಳಿಗೆ ನಂತರ ಬರುತ್ತೇನೆ.

ಕನ್ನಡಸಾಹಿತ್ಯ.ಕಾಂ ಪುನರ್‌ರೂಪಿಸಬೇಕಾದ ಅಗತ್ಯವೇನಿತ್ತು? (ಪುನರ್‌ರೂಪಿಸುವ ಸಾಹಸಕ್ಕಿಳಿದು ತಪ್ಪು ಮಾಡಿದೆ ಎಂದು ಆಗಾಗ್ಯೆ ಅನ್ನಿಸಿದ್ದೂ ಸುಳ್ಳಲ್ಲ)
-ಎಂಬ ಪ್ರಶ್ನೆ ಸಹಜವಾದುದೆ. ಮೂರು ವರ್ಷಗಳ ಹಿಂದೆ ಈ ವೆಬ್‌ಸೈಟ್ ರೂಪಿಸಿದಾಗ ಇದ್ದ ಚಾರಣಿಕೆಗಳ ಮಿತಿಗೆ ತಕ್ಕಂತೆ ಪುಟಗಳ ವಿನ್ಯಾಸ ಮಾಡಿದ್ದೆ. ಕನ್ನಡ ಸಾಹಿತ್ಯ.ಕಾಂ ಆರಂಭಿಸಿದಾಗ ಕೈಗೆಟುಕುವಂತಿದ್ದದ್ದು ಶೈಶವಾವಸ್ಥೆಯಲ್ಲಿದ್ದ ’ಬರಹ’೨. ಚಾಲ್ತಿಯಲ್ಲಿದ್ದದ್ದು ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೪ ಹಾಗು ನೆಟ್‌ಸ್ಕೇಪ್ ೪.೪. ಇವುಗಳಿಗೆ ತಕ್ಕಂತೆ ಬರಹ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಿ, ಅಕಸ್ಮಾತ್ ವೆಬ್‌ಸೈಟಿಗೆ ಬಂದವರು ನಿರಾಶೆಯಾಗದಿರಲೆಂದು ಡೈನಾಮಿಕ್ ಫಾಂಟ್ಸ್ ಬಳಸಿದ್ದೆ. ಎರಡು ಚಾರಣಿಕೆಯಲ್ಲಿ ಇದ್ದುದರಲ್ಲಿ ಉತ್ತಮವಾಗಿ ಕಾಣಿಸುತ್ತಿದ್ದ ಪುಟಗಳನ್ನು ನೋಡುತ್ತ, ಒಮ್ಮೊಮ್ಮೆ, ಬಂದದ್ದನ್ನೆಲ್ಲ ಓದುತ್ತ, ಅಕ್ಷರಗಳು ಒಡ್ಡುತ್ತಿದ್ದ ಮಾಯೆಯಿಂದ- ಅತ್ಯುತ್ತಮವಾದ ವೆಬ್‌ಸೈಟ್ ಮಾಡಿದ್ದೇನೆಂಬ- ಒಮ್ಮೊಮ್ಮೆ ಅಹಂಕಾರದಿಂದ, ಒಮ್ಮೊಮ್ಮೆ ಹೆಮ್ಮೆಯಿಂದ ಬೀಗುತ್ತಿದ್ದ ನಾನು, ಅಂತರ್ಜಾಲದಲ್ಲಾಗುತ್ತಿದ್ದ- ತಾಂತ್ರಿಕತೆಯಲ್ಲಾಗುತ್ತಿದ್ದ ಪ್ರಗತಿಯನ್ನು ಗಮನಿಸಿದರೂ ಏಕೋ ಉಪೇಕ್ಷೆಸಿದ್ದೆ, ಸೋಮಾರಿತನ ಕಾರಣವಿರಬಹುದು. ನಂತರ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೫, ೫.೫, ೬ ಹಾಗು ನೆಟ್‌ಸ್ಕೇಪ್ ೪.೭, ೫, ೬, ೬.೧, ೭, ಆಪೆರಾ, ಮೊಜಿಲ್ಲಾ ಮುಂತಾದ ಚಾರಣಿಕೆಗಳು ಚಾಲ್ತಿಗೆ ಬರಲಾರಂಬಿಸಿದವು. ನಮ್ಮ ವೆಬ್‌ಸೈಟ್‌ನ ಪಠ್ಯ ಯಾವುದೇ ನಿಯಂತ್ರಣಕ್ಕೆ ಬರಲಾಗದಷ್ಟು ಬೆಳೆದು ಬಿಟ್ಟಿತ್ತು. ಮೊದಲು ರೂಪಿಸಿದ್ದ ಪುಟಗಳು ಇತ್ತೀಚಿನ ಚಾರಣಿಕೆಗಳಲ್ಲಿ ಕೆಟ್ಟದಾಗಿ ಕಾಣುತ್ತಿದ್ದುದನ್ನು ಗಮನಿಸಿದಾಗ ನಾನು ಸ್ವಲ್ಪ ಹೌಹಾರಿದ್ದೆ. ಪಠ್ಯವನ್ನೆಲ್ಲ ಪುನರ್‌ರೂಪಿಸದಿದ್ದರೆ ಹೊಸ ಚಾರಣಿಕೆಗಳನ್ನು ಬಳಸುತ್ತಿರುವವರು ಕಿರಿಕಿರಿ ಅನುಭವಿಸುತ್ತಾರೆ ಎಂದನ್ನಿಸಿತು. ಜೊತೆಗೆ ವಿಂಡೋಸ್ ಎಕ್ಸ್ ಪಿ ಬಿಡುಗಡೆಯಾಗಿ ಯುನಿಕೋಡ್ ಸೌಲಭ್ಯದ ಆಕರ್ಷಣೆಯೂ ಸೇರಿಕೊಂಡಾಗ ಈಗಲೇ ಇರುವ ಪಠ್ಯವನ್ನೆಲ್ಲ ಪುನರ್ ರೂಪಿಸದಿದ್ದರೆ ನಂತರ ಕೆಲಸ ಮತ್ತಷ್ಟು ಕಠಿಣವಾಗಿಬಿಡುತ್ತದೆ ಎಂಬ ಆತಂಕ ಆರಂಭವಾಯಿತು. ನನ್ನೊಳಗೆ ನಾನೆ ’ಅಡ್ವಾನ್ಸ್ಡ್ ಬ್ರೌಸರ್’ಗಳಲ್ಲಿ ಪುಟಗಳು ಕಾಣುತ್ತಿದ್ದ ರೀತಿಯ ಬಗೆಗೆ ಕಿರಿಕಿರಿ ಅನುಭವಿಸಲಾರಂಭಿಸಿದೆ. ಸರಿ, ಪುನರ್ ರೂಪಿಸಲಾರಂಭಿಸಿದಾಗ ಒಂದೊಂದೇ ತೊಡಕುಗಳು ಬಿಚ್ಚಿಕೊಳ್ಳಲಾರಂಭಿಸಿ ಕನ್ನಡಕ್ಕೆ ಇರುವ ತೊಡಕುಗಳೆಲ್ಲವೂ ಗಮನಕ್ಕೆ ಬರಲಾರಂಭಿಸಿದವು.

ಈಗಾಗಲೇ ಹೇಳಿದಂತೆ ನೆಟ್‌ಸ್ಕೇಫ್ ೪ ರನಂತರದ ಚಾರಣಿಕೆಗಳು ಡೈನಾಮಿಕ್ ಫಾಂಟ್ಸ್‌ಗಳನ್ನು ಬೆಂಬಲಿಸುತ್ತಿದ್ದವು. ನೆಟ್‌ಸ್ಕೇಪ್ ೬ ಹಾಗು ನಂತರದ ಚಾರಣಿಕೆಗಳು ಈ ಬೆಂಬಲವನ್ನು ಹಿಂತೆಗೆದುಕೊಂಡಿವೆ. ಮೊಜಿಲ್ಲಾ ಆಪರಾ ಚಾರಾಣಿಕೆಗಳು ಸಹ ಡೈನಾಮಿಕ್ ಫಾಂಟ್ಸ್‌ಗಳನ್ನು ಬೆಂಬಲಿಸುವುದಿಲ್ಲ. ಇದ್ದ ಬೆಂಬಲವನ್ನು ಹಿಂತೆಗೆದುಕೊಂಡದ್ದು ಅಂತರ್ಜಾಲದಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿರುವ ಭಾಷೆಗಳು ಮತ್ತಷ್ಟು ಬಿಕ್ಕಟ್ಟನ್ನು ಎದುರಿಸುವ ಸಂದರ್ಭ ಬಂದಿದೆ. ನನ್ನ ಪರವಾಗಿ ಕಿಶೋರ್ ಹೆಬ್ಬಾರ್ ನೆಟ್‌ಸ್ಕೇಪ್ ಸಂಸ್ಥೆಗೆ ಬರೆದಾಗ ಅಲ್ಲಿಂದ ಬಂದ ಉತ್ತರದಲ್ಲಿ: ” ಜಾವ ತಂತ್ರದ ದುರ್ಬಳಕೆ” ಎಂಬ ಸಾಲಿತ್ತು. ಅಂದರೆ ನೆಟ್‌ಸ್ಕೇಪ್ ಹಾಗು ಮೊಜಿಲ್ಲಾ ಇದನ್ನು ಅಚಲವಾದ ಧೋರಣೆಯನ್ನಾಗಿ ನಿರ್ಣಯಿಸಿವೆ. ಇದು ಒಂದು ರೀತಿಯಲ್ಲಿ ಸರಿಯಾದ ನಿರ್ಣಯವೆ. ಇದರ ಬಗೆಗೆ ಬೇರೊಂದು ರೀತಿಯಲ್ಲಿಯೂ ಯೋಚಿಸಬಹುದು. ’ಜಾವಾದ ಈ ಸೌಲಭ್ಯವನ್ನು ಬಳಕೆಯನ್ನು ಬೆಂಬಲಿಸಿದರೆ ಇಂಗ್ಲಿಷ್ ಹೊರತಾಗಿ ಬೇರೆಲ್ಲ ಭಾಷೆಗಳಿಗೆ ಅಂತರ್ಜಾಲದಲಿ ತಮ್ಮವೇ ಆದ ಒಂದೇ ರೀತಿಯ ಸ್ಟಾಂಡರ್ಡೈಸೇಶನ್ ಬರುವುದು ಹೇಗೆ? ಎಲ್ಲಿಯತನಕ ಏಕರೂಪ ಬಳಕೆ (ಸ್ಟಾಂಡರ್ಡೈಸೇಶನ್) ಇರುವುದಿಲ್ಲವೋ ಅಲ್ಲಿಯನಕ ಗೊಂದಲ, ಕಿರಿಕಿರಿ, ಒಬ್ಬೊಬ್ಬರೂ ಒಂದೊಂದನ್ನು ಬಳಸುತ್ತಿರುತ್ತಾರೆ: ಕಂಪಾಟಬಿಲಿಟಿ ಇರುವುದಿಲ್ಲ. ಈ ಸಂದರ್ಭದ ದುರ್ಲಾಭವನ್ನು ಪಡೆಯಲು ಅನೇಕ ದೊಡ್ಡ ದೊಡ್ಡ ಸಂಸ್ಥೆಗಳು ಕಾಯುತ್ತಿರುತ್ತವೆ. ಸ್ಟಾಂರ್ಡ್ಡಿಸೇಶನ್ ಅಗತ್ಯಕ್ಕಾಗಿಯಾದರೂ ಜಾವಾದ ಈ ದುರ್ಬಳಕೆ ನಿಲ್ಲಬೇಕು.’ ಈ ರೀತಿ ಆಲೋಚಿಸಿದನಂತರ ಎದುರಾದದ್ದು ಮತ್ತೊಂದು ಸಮಸ್ಯೆ: ನನ್ನ ಬಳಿ ಇರುವುದು ವಿಂಡೋಸ್ ೯೮ (ಏರಡನೇ ಆವೃತ್ತಿ) ವಿಂಡೋಸ್ ಎಕ್ಸ್ ಪಿ ಇರಲಿಲ್ಲ. ಲೈನೆಕ್ಸ್‌ನಲ್ಲಿ ಕನ್ನಡಕ್ಕೆ ಬೆಂಬಲ ಇಲ್ಲ. ಯುನಿಕೋಡ್.ಆರ್ಗ್ ನಿರ್ಣಯಿಸಿದ್ದ ಯುನಿಕೋಡ್ ವ್ಯವಸ್ಥೆಯನ್ನು ವಿಂಡೋಸ್ ಎಕ್ಸ್ ಪಿ ಬಳಕೆಗೆ ತಂದಿತ್ತು. ಆನ್‌ಲೈನ್‌ನಲ್ಲಿ ಸಿಕ್ಕ ಗೋಪಿನಾಥ್ ತಾತಾಚಾರ್‌ರೊಡನೆ ಚರ್ಚಿಸಿದಾಗ ಅವರು ವಿಂಡೋಸ್ ಎಕ್ಸ್ ಪಿ ಗೆ ತಗಲುವ ವೆಚ್ಚಭರಿಸಲು ಗೆಳೆಯರನ್ನು ಸಂಪರ್ಕಿಸುವುದಾಗಿ ಹೇಳಿದರು. ಅವರ ಪ್ರಯತ್ನದಿಂದಾಗಿ ಅವರ ಸ್ನೇಹಿತರಾದ ಭಾರ್ಗವ್ ವಿಜಾಪುರ್ ವಿಂಡೋಸ್ ಎಕ್ಸ್ ಪಿಗಾಗಿ ಆಗಬಹುದಾದ ಖರ್ಚನ್ನು ಭರಿಸಿದರು. ಇಬ್ಬರಿಗೂ ಕೃತಜ್ಞತೆಗಳು.

ವಿಂಡೋಸ್ ಎಕ್ಸ್ ಪಿ ಬಂದನಂತರ:
ಯುನಿಕೋಡ್ ಕೀಬೋರ್ಡ್ (ಕೀಲಿಮಣೆ) ಹಾಗು ಬರಹದ ಕೀಬೋರ್ಡ್ ಮತ್ತು ಗಣಕ ಪರಿಷತ್ ವಿನ್ಯಾಸಗೊಳಿಸಿ- ಕರ್ನಾಟಕ ಸರ್ಕಾರ ಮಾನ್ಯ ಮಾಡಿರುವ ಕೀಲಿಮಣೆಯ ನನ್ನ ಎದುರಿಗಿದ್ದವು . ತೊಡಕು ಆರಂಭವಾಗುವುದು ಇಲ್ಲಿ. ಅಮೆರಿಕಾದ ಕೀಲಿಮಣೆಯನ್ನು ಆಧರಿಸಿದ ಶಬ್ಧ ಹಾಗು ಇಂಗ್ಲಿಷ್ ಮೂಲವಾಗುಳ್ಳ ಕೀಲಿಮಣೆ ಹಾಗು ಕನ್ನಡಕ್ಕಾಗಿ ಯುನಿಕೋಡ್ ನಿರ್ಣಯಿಸಿರುವ ಕೀಲಿಮಣೆ ಹಾಗು ಕಗಪ (ಕನ್ನಡ ಗಣಕ ಪರಿಷತ್) ಮೂರಕ್ಕೂ ಸಂಬಂಧವೇ ಇಲ್ಲ. ಯುನಿಕೋಡ್.ಆರ್ಗ್ ಕನ್ನಡಕ್ಕೆ ಆಧರಿಸಿರುವುದು ಕೇಂದ್ರಸರ್ಕಾರದ ಹಿನ್ನೆಲೆಯುಳ್ಳ “ಅ‌ಆಂಅ” ನ ’ISಅII’ ’IಓSಅಖIPಖಿ’. ಹಾಗಾದರೆ- ಗಣಕ ಪರಿಷತ್ ರೂಪಿಸಿ ಕರ್ನಾಟಕ ಸರ್ಕಾರ ಮಾನ್ಯಗೊಳಿಸಿರುವ ಕಗಪ ಕೀಲಿಮಣೆ? ಬರಹದಲ್ಲೇನೋ ಮೂರೂ ಕೀಲಿಮಣೆಗೂ ಅವಕಾಶ ಮಾಡಿಕೊಡಲಾಗಿದೆ. ಬರಹ.ಕಾಂ ನಲ್ಲಿ ಯುನಿಕೋಡ್ ಕೀಲಿಮಣೆ ಬಳಕೆ ಕುರಿತಂತೆ ಮಾರ್ಗದರ್ಶಿ ’ಡಾಕ್ಯುಮೆಂಟ್’ ಇದ್ದಿದ್ದರೆ ಚೆನ್ನಿತ್ತು.

ಈ ಮೂರು ಕೀಲಿಮಣೆಯಲ್ಲಿ ಬಳಕೆಯಾಗಬಹುದಾದ್ದು ಯಾವುದು? ಬೇಕಿರಲಿ, ಬೇಡದಿರಲಿ ವಿಂಡೋಸ್ ಎಕ್ಸ್ ಪಿಯಲ್ಲಿ ಅಳವಡಿಕೆಯಾಗಿರುವ ಯುನಿಕೋಡ್. ಏಕೆಂದರೆ ಅದರ ಹಿನ್ನೆಲೆಯಲ್ಲಿ ವಿಂಡೋಸ್ ಎಕ್ಸ್ ಪಿ ಇದೆ. ಲೈನೆಕ್ಸ್‌ನಲ್ಲಿ ಪ್ರಾದೇಶಿಕ ಭಾಷೆಗಳು ಗಟ್ಟಿಯಾದ ಹೊರತು ಈ ಮೈಕ್ರೊಸಾಫ್ಟ್‌ನ ವ್ಯವಹಾರಕ್ಕೆ ಚ್ಯುತಿಯಂತೂ ಇಲ್ಲ- ಗಟ್ಟಿಯಾಗುತ್ತಲೇ ಹೋಗುತ್ತದೆ. ಅಕಸ್ಮಾತ್ ಲೈನೆಕ್ಸ್ ಉತ್ಸಾಹಿಗಳು ಪ್ರಾದೇಶಿಕ ಭಾಷೆಗಳನ್ನು ಅಳವಡಿಸಿದರೂ ಸಹ ಅವರಿಗೂ ಸಹ ಅಂತಾರಾಷ್ಟ್ರಿಯ ಮಾನ್ಯತೆಯುಳ್ಳ ಯುನಿಕೋಡ್.ಆರ್ಗ್ ಶಿಫಾರಸ್ಸುಗಳನ್ನು ಒಪ್ಪಿಕೊಳ್ಳದೆ ಗತ್ಯಂತರವಿಲ್ಲ. (ವೈಯಕ್ತಿಕವಾಗಿ ನಾನಂತೂ ಈ ಮೈಕ್ರೊಸಾಫ್ಟ್ ಸಿಧ್ಧಾಂತಗಳನ್ನು ವಿರೋಧಿಸುವವ).

ಈ ಎಲ್ಲ ಸಮಸ್ಯೆಗಳನ್ನು ಗಮನಿಸುತ್ತಲೇ, ಯುನಿಕೋಡ್ ಹಾಗು ಬರಹ ಎರಡು ಅವೃತ್ತಿಯನ್ನು ರೂಪಿಸುವುದು ಎಂಬ ನಿರ್ಣಯಕ್ಕೆ ಬಂದೆ. ಈಗಾಗಲೆ ’ಬರಹದ’ ಕನ್ನಡ ಕೀಲಿಮಣೆಗೆ ಬೆರಳುಗಳು ಸುಮಾರಾಗಿ ಒಗ್ಗಿಹೋಗಿದೆ. ಯುನಿಕೋಡ್ ಆಧಾರಿತ ವಿಂಡೋಸ್ ಎಕ್ಸ್ ಪಿ ಯ ಕನ್ನಡ ಕೀಬೋರ್ಡನ್ನು ಹೊಸದಾಗಿ ಕಲಿಯುವ ಸಂಕಟ. ಜೊತೆಗೆ ಊಖಿ‌ಒ‌ಐ ಒಂದು ರೀತಿಯಲ್ಲಿ ಹಿನ್ನೆಲೆಗೆ ಸರಿದು ಘಿ‌ಒ‌ಐ ಚಲಾವಣೆಗೆ ಬರುವ ಎಲ್ಲ ಸೂಚನೆಗಳು ಕಾಣಿಸಿಕೊಳ್ಳುತ್ತಿದೆ. (ಊಖಿ‌ಒ‌ಐ ಖಿಚಿgsಗಳಿಂದ ಮುಕ್ತಿ ಸಿಕ್ಕಿ ನಮ್ಮದೇ ಆದ ತಾರ್ಕಿಕವಾದ ಪುಟಗಳ ವಿನ್ಯಾಸಕ್ಕೆ ಅವಕಾಶ ಮಾಡಿಕೊಡಲು ಅನುವಾಗುವಂತೆ ಅಂತರ್ಜಾಲವನ್ನು ತಯಾರಿಗೊಳಿಸುವ ಘಿ‌ಒ‌ಐ ಉದ್ದೇಶವನ್ನು ನಿಜಕ್ಕೂ ಸ್ವಾಗತಿಸಬಹುದು. ಕೀಲಿಮಣೆಯಲ್ಲಿ ಏಕರೂಪತೆ ಘಿ‌ಒ‌ಐ ನಲ್ಲಿ ಸ್ವಚ್ಛಂದ !!! ನಮ್ಮ ಹಂಬಲಗಳಲ್ಲಿ ಇದೆಂತಹ ವಿಪರ್ಯಾಸ…) ಸರಿ ಘಿ‌ಒ‌ಐ ಬಗೆಗಿರುವ ಪುಸ್ತಕಗಳನ್ನು ಗುಡ್ಡೆಹಾಕಿಕೊಂಡೆ. ನಿಧಾನಕ್ಕೆ ಒಂದೊಂದನ್ನೇ ಅರಗಿಸಿಕೊಳ್ಳಲಾರಂಭಿಸಿದೆ. (ಈ ವೇಳೆಯಲ್ಲಿ ನನಗೆ ಊಖಿ‌ಒ‌ಐನಲ್ಲಿ ಪ್ರಥಮ ಪಾಠ ಬೋಧಿಸಿದ ವಸುದೇಂದ್ರಶ್ರಾಫ್‌ನವರನ್ನು ನೆನೆಯಬೇಕು..) ಘಿ‌ಒ‌ಐ ಗೆ ಬೇಕಾಗಿರುವ ಸಿದ್ದತೆ ಈಗಲೇ ಮಾಡಿಕೊಳ್ಳೋಣ ಎಂದು ನಿರ್ಣಯಿಸಿ, ಸದ್ಯಕ್ಕೆ ಘಿ‌ಒ‌ಐನಲ್ಲೂ ಒಂದೇ ಬಗೆಯಾದ ’ಏಕರೂಪತೆ’ ಇಲ್ಲದಿರುವುದರಿಂದ ಕನಿಷ್ಟ ಘಿ‌ಊಖಿ‌ಒ‌ಐ ಬಳಸೋಣ ಎಂಬ ನಿರ್ಣಯಕ್ಕೆ ಬಂದೆ. ಅದು ಸುಲಭವಾಗಿತ್ತು. ಆದರೆ ಈ ಯುನಿಕೋಡ್‌ನ ಕೀಲಿಮಣೆ ಬಳಸುವುದು—ಬೆರಳುಗಳೆಲ್ಲ ನೋಯಲಾರಂಬಿಸಿದವು.- ರಾತ್ರಿ ಹೊತ್ತು ಮಾನಿಟರ್‌ನ ಗ್ಲೇರ್‌ಗೆ ಕಣ್ಣುಗಳು ಉರಿಯಲಾರಂಬಿಸಿದವು. ಸುಮಾರು ಇದೇ ವೇಳೆಗೆ ನಮ್ಮ ಶೇಷಾದ್ರಿವಾಸುರವರು (ಜಗತ್ತಿಗೆ ಕನ್ನಡ ಹಂಚಿದವರು) ಬರಹ ೫ ರ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಪಠ್ಯವನ್ನೆಲ್ಲ ಯುನಿಕೋಡ್‌ನಲ್ಲಿ ಉಳಿಸುವ ಸೌಲಭ್ಯವಿದ್ದದರಿಂದ ನನ್ನ ಕೆಲಸ ಸುಲಭವಾಯಿತು. ವಾಸುರವರಿಗೆ ಕನ್ನಡಸಾಹಿತ್ಯ.ಕಾಂ ಪರವಾಗಿ ಧನ್ಯವಾದಗಳು.

ಇದರ ಪರಿಣಾಮ ಯುನಿಕೋಡನ್ನು ಕನ್ನಡದಲ್ಲಿ ವ್ಯಾಪಕವಾಗಿ ಬಳಕೆಗೆ ತಂದಿರುವ ಪ್ರಥಮ ವೆಬ್‌ಸೈಟ್ ಕನ್ನಡಸಾಹಿತ್ಯ.ಕಾಂ.

-ಈಗ ಪುನಃ ಹರಿಕುಮಾರ್‌ರ ಉತ್ತಾರಾರ್ಧದ ಮಾತಿಗೆ ಬರುವ ಮುನ್ನ ಕರ್ನಾಟಕದಲ್ಲಿನ ಪರಿಸರವನ್ನು ಅತ್ಯುನ್ನತ ಮಟ್ಟದ ತಂತ್ರಜ್ಞಾನದ ಸೇವೆ ಸಲ್ಲಿಸುತ್ತಿರುವ ಪರಿಸರದ ನಡುವೆ ಇರುವ ಕನ್ನಡದ ವಾತಾವರಣವನ್ನು ಗಮನಿಸೋಣ.

ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನನ ಕ್ಷೇತ್ರದ ಪರಿಸರ: ನಮ್ಮ ಮುಖ್ಯಮಂತ್ರಿಯವರಾದ ಎಸ್ ಎಂ ಕೃಷ್ಣರವರ ಪ್ರಕಾರ ರೂ ೧೩.೦೦೦ ಕೋಟಿ ಮೌಲ್ಯವನ್ನು ರಫ್ತು ಮಾಡಲಾಗಿದೆ. ಕರ್ನಾಟಕ ಜಗತ್ತಿನ ನಕಾಶೆಯಲ್ಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯ ಪ್ರಮುಖ ಸ್ಥಾನದಲ್ಲಿದೆ…ಇದರಲ್ಲಿ ಕನ್ನಡದ ಯುವಜನತೆಯ ಪಾಲೂ ಸಹ ದೊಡ್ಡದೇ ಆಗಿರಲು ಸಾಧ್ಯ. ಇಂತಹ ವಾತಾವರಣವಿರುವ ಕಡೆ ಕನ್ನಡವನ್ನು ಹೇಗೆ ಅರ್ಥೈಸಬೇಕು? ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕನ್ನಡವನ್ನು ಒಗ್ಗಿಸುವುದಾಗಲಿ ಅಥವ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಕನ್ನಡಕ್ಕೆ ಒಗ್ಗಿಸುವು ನಿಟ್ಟಿನಲ್ಲಾಗಲಿ ಏನಾದರೂ ಪ್ರಯತ್ನಗಳು ನಡೆದಿವೆಯೆ? ಗಣಕ ಪರಿಷತ್ ಹಾಗು ಕರ್ನಾಟಕ ಸರ್ಕಾರಗಳು ಸೃಷ್ಟಿಸಿರುವ ಗೊಂದಲಗಳ ಕಡೆ ಗಮನ ಹರಿಸಿದಾಗ: ಮಾಹಿತಿ ತಂತ್ರಜ್ಞಾನ ಕ್ಸೇತ್ರದಿಂದ ಕನ್ನಡಕ್ಕೇ ಏಕ ರೂಪ ಬಳಕೆಯ ನಿಟ್ಟಿನಲ್ಲಿ ಏನಾದರೂ ಕಾರ್ಯಗಳಾಗಿವೆಯೆ? ಆಗಿದೆ: ಕನ್ನಡ ಕೀಲಿಮಣೆಯ ವಿನ್ಯಾಸ ಹಾಗು ಅದನ್ನಾಧರಿಸಿದ ನುಡಿ ಎಂಬ ತಂತ್ರಾಂಶ. ಇದರಿಂದ ಏಕರೂಪ ಬರುವ ಭರವಸೆ ಇಟ್ಟುಕೊಳ್ಳಬಹುದೆ? ಇರುವ ಗೊಂದಲಗಳನ್ನು ಪರಿಶೀಲಿಸಿದರೆ ಸದ್ಯದ ಪರಿಸ್ಥಿತಿಯನ್ನು ಗಂಭೀರವಾಗಿ ನೋಡದೆ ಹೋದರೆ ಖಂಡಿತ ಸಾಧ್ಯವಿಲ್ಲ.

ಕಾರಣಗಳು:
೧. ಈಗಾಗಲೇ ಆತುರಾತುರವಾಗಿ ಯಾವುದರ ಪರಿಣಾಮವನ್ನೂ ಯೋಚಿಸದೆ ಗಣಕ ಪರಿಷತ್ ಹಾಗು ಕರ್ನಾಟಕ ಸರ್ಕಾರಗಳೆರಡೂ ಕನ್ನಡಕ್ಕೆಂದೇ ಕೀಲಿಮಣೆಯ ಏಕರೂಪವನ್ನು ಪ್ರಕಟಿಸಿ ಮಾನ್ಯತೆ ನೀಡಿಬಿಟ್ಟಿವೆ. ಇದರಿಂದ ಮಾಹಿತಿ ತಂತ್ರಜ್ಞಾನ ಕ್ಸೇತ್ರದಲ್ಲಾಗಲಿ, ಅಂತರ್ಜಾಲದಲ್ಲಾಗಲಿ ಏಕರೂಪ ಬಳಕೆ ಬರಲು ಸಾಧ್ಯವಿಲ್ಲ. ಕಾರಣ ಸ್ಪಷ್ಟವಾಗಿದೆ: ಯುನಿಕೋಡ್,

೨. ಕೇಂದ್ರ ಸರ್ಕಾರದ ಪೋಷಿತ ಸಂಸ್ಥೆಗಳು ಭಾರತದ ಬಹುಭಾಷ ಬಳಕೆಗೆ ಅನುಗುಣವಾದ ISಅII ಆಧಾರಿತ IಓSಅಖIPಖಿ ಕೀಲಿಮಣೆಯನ್ನು ಅಭಿವೃದ್ಧಿಗೊಳಿಸಿ ಆಚರಣೆಗೆ ತಂದಿದೆ. (ಇದರಲ್ಲಿ ರೋಮನ್ ಸ್ಕ್ರಿಫ್ಟ್‌ನ ಅನುಕೂಲವಿದೆ. ಅದು ಸಾಮಾನ್ಯ ಬಳಕೆಗೆ ಸಾಕು. ಆದರೆ ಏಕರೂಪ ಬಳಕೆ ಸಾಧ್ಯವಿಲ್ಲ.) ಇದು ಇಲ್ಲಿಗೆ ನಿಂತಿದ್ದರೆ ಪರವಾಗಿರಲಿಲ್ಲ. ಅಂತರ್ಜಾಲ ಎಂಬುದೊಂದಿದೆ- ಜಗತ್ತಿನಾದ್ಯಂತ ಕನ್ನಡಿಗರಿದ್ದಾರೆ- ಕನ್ನಡ ಭಾಷೆಯನ್ನು ಅಂತರ್ಜಾಲ ಮಾಧ್ಯಮದ ವಾತಾವರಣಕ್ಕೆ ಹೊಂದಿಸಬೇಕಾಗಿದೆ- ಇಲ್ಲದಿದ್ದರೆ ಸಾಮಾನ್ಯರ ವರ್ತುಲವನ್ನು ಬಿಟ್ಟು ಆಚೆಗೆ ಹೋಗುತ್ತಿರುವವರನ್ನು (ವಿಶೇಷವಾಗಿ ಯುವ ಜನಾಂಗ) ಮತ್ತಷ್ಟು ಆಚೆ ಇಟ್ಟಂತಾಗುತ್ತದೆ. ಸಾಕಷ್ಟು ಪ್ರಧಾನ ಪಾತ್ರ ವಹಿಸುತ್ತಿರುವ ಈ ನವತಾಂತ್ರಿಕ ಶಿಕ್ಷಿತ ವರ್ಗವನ್ನು ಆಚೆಗೆ ಇಟ್ಟಾಗಲೇ ಡಿಜಿಟಲ್ ಡಿವೈಡ್ ಎಂಬ ಕಂದರ ಮತ್ತಷ್ಟು ಅಗಲವಾಗುತ್ತ ಹೋಗಿ ಮತ್ತೊಂದು ಅಸಮತೋಲನಕ್ಕೆ ಕಾರಣವಾಗುತ್ತದೆ ಎಂಬ ಸಾಮಾಜಿಕ ಹೊಣೆಗಾರಿಕೆಯನ್ನೂ ಸಹ ಮರೆತಂತಾಗುತ್ತದೆ. ಈ ವಾಸ್ತವವನ್ನು ಈಗ ಮನಗಾಣದೆ ಹೋದರೆ ಮುಂದಿನ ಸಾಮಾಜಿಕ ಬಿಕ್ಕಟ್ಟನ್ನು ಈಗಲೇ ಎದುರಿಸಬೇಕಾಗುತ್ತದೆ. ಆದುದರಿಂದ ಏಕ ರೂಪ ಬಳಕೆ ಅನಿವಾರ್ಯ. (ಈ ಡಿಜಿಟಲ್ ಡಿವೈಡ್ ಕುರಿತಂತೆ ಪ್ರಕಾಶ್ ಬೆಳವಾಡಿಯವರ ’ಸ್ಟಂಬಲ್’ ಚಿತ್ರದ ಕುರಿತಂತೆ ಸಣ್ಣ ಟಿಪ್ಪಣಿಯೊಂದನ್ನು ಕೆಳಗೆ ನೋಡಬಹುದು)

೩. ಯುನಿಕೋಡ್.ಆರ್ಗ್ ಈಗಾಗಲೇ ಕನ್ನಡಕ್ಕೆ ಏಕರೂಪ ಸಾಧ್ಯತೆಯನ್ನು ನಿರ್ಣಯಿಸಿಯಾಗಿದೆ. ಇದರಲ್ಲಿ ಯಾರ (ಅಂದರೆ ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕರ, ಕನ್ನಡ ಸಂಸ್ಕೃತಿ ಇಲಾಖೆ/ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಥವ ಗಣಕ ಪರಿಷತ್, ಕನ್ನಡ ಸಾಹಿತ್ಯ ಪರಿಷತ್‌ನಂತಹ ಸಾರ್ವಜನಿಕ ಸಂಸ್ಥೆಗಳ ಪಾತ್ರ ಎಷ್ಟೆಷ್ಟು ಎಂಬ ಮಾಹಿತಿಯಂತೂ ಲಭ್ಯವಿಲ್ಲ!!!!). ಯುನಿಕೋಡ್.ಆರ್ಗ್ ನಿರ್ಣಯಿಸಿರುವ ಕನ್ನಡ ಏಕರೂಪತೆಯನ್ನು ಮೈಕ್ರೋಸಾಫ್ಟ್ ಸಂಸ್ಥೆ ಈಗಾಗಲೇ ಒಪ್ಪಿಕೊಂಡು ಅದನ್ನು ವಿಂಡೋಸ್ ಎಕ್ಸ್ ಪಿ ಯಲ್ಲಿ ಅಳವಡಿಸಿಬಿಟ್ಟಿದೆ.

– ಈಗ ಈ ಮೂರರ ನಡುವೆ ಯಾವುದೇ ತೆರನಾದ ಏಕರೂಪತೆಯಿಲ್ಲದಿರುವುದು ಅತ್ಯಂತ ಕಠಿಣ ಪರಿಸ್ಥಿತಿಯನ್ನು ತಂದೊಡ್ಡಲಿದೆ. ಆ ಯುನಿಕೋಡ್‌ನ ಏಕರೂಪ ನಿರ್ಣಯವೂ ಸಹ ಕನ್ನಡವನ್ನು ಅಂತರ್ಜಾಲದಲ್ಲಾಗಲಿ, ಮಾಹಿತಿ ತಂತ್ರಜ್ಞಾನದಲ್ಲಾಗಲಿ ಅಳವಡಿಸುವುದರಲ್ಲಿ ಎಂತೆಂತಹ ಕಷ್ಟಗಳಿವೆ ಎಂಬುದಕ್ಕೆ ಉದಾಹರಣೆಯಾಗಿ ಯುನಿಕೋಡ್ ವಿಭಗದ ಪುಟಗಳನ್ನು ನೋಡಿ. ಟ್ರೂ ಟೈಪ್ ಫಾಂಟ್ಸ್‌ಗಳಿಗೂ ಅದರ ವಿಸ್ತರಣೆಯಾದ ಓಪನ್ ಟೈಪ್ ಫಾಂಟ್ಸ್ ಸರಳವಾಗಿರಬೇಕಿತ್ತು. ಬದಲಿಗೆ ಅವುಗಳು ಹೆಚ್ಚು ಜಾಗವನ್ನು ಆಕ್ರಮಿಸಿ ಪುಟಗಳು ಚಾರಣಿಕೆಗಳಲ್ಲಿ ಮೂಡಿಬರುವುದು ಅತ್ಯಂತ ನಿಧಾನವಾಗುತ್ತಿದೆ. (ಓಪನ್ ಟೈಫ್ ಫಾಂಟ್ಸ್‌ಗಳು ಕನ್ನಡಕ್ಕೆ ಈಗ, ಸಧ್ಯದಲ್ಲಿ ಲಭ್ಯವಿರುವುದು: ಏರಿಯಲ್ ಎಮ್ ಏಸ್ ಯುನಿಕೋಡ್, ತುಂಗಾ ಹಾಗು ಸಂಪಿಗೆ)

IಓSಅಖIPಖಿ ನ ಅಗತ್ಯ
ಭಾರತ ಬಹುಭಾಷೆಗಳ ಹಿನ್ನೆಲೆಯುಳ್ಳ ರಾಷ್ಟ್ರ. ಮಾಹಿತಿ ತಂತ್ರಜ್ಞಾನದಲ್ಲಿ ಎಲ್ಲದಕ್ಕೂ ಏಕರೂಪವಿದ್ದರೆ ಅನುಕೂಲ ಎನ್ನುವುದು ತಾರ್ಕಿಕವಾದ ಅಗತ್ಯ ಹಾಗು ವಾಸ್ತವದ ಅಗತ್ಯ ಕೂಡ. ಭಾರತೀಯ ಭಾಷೆಗಳ ಲಿಪಿ ವಿನ್ಯಾಸ (ಅಕ್ಷರ ವಿನ್ಯಾಸ) ಒಂದೊಂದೂ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿವೆ. ಆದರೆ ಇಂಗ್ಲಿಷ್ನಲ್ಲಿರುವುದು ಇಪ್ಪತ್ತಾರು ಅಕ್ಷರಗಳಷ್ಟೆ. ಅದಕ್ಕೆ ತಕ್ಕಂತೆ ಅವರು ತಮ್ಮ ಅಗತ್ಯಗಳನ್ನು ರೂಪಿಸಿಕೊಂಡಿದ್ದಾರೆ. ಅದನ್ನೇ ಭಾರತೀಯ ಭಾಷೆಗಳಿಗೆ ಅನ್ವಯಿಸಾಲಗುವುದಿಲ್ಲ. ಸಾಧುವೂ ಅಲ್ಲ. ಹೀಗಾಗಿ ಂSಅII ಯನ್ನು ಕೈಬಿಟ್ಟು ISಅIIಯ ಹಾದಿ ತುಳಿಯಿತು. ಅಂದರೆ ಭಾರತೀಯ ಭಾಷೆಗಳಿಗನುಗುಣವಾದ ವಿನ್ಯಾಸ. ಅಂತರ್ಜಾಲದ ಸಾಧನಗಳು, ಪರಿಸರ ಇತ್ಯಾದಿಗಳಲ್ಲಿ ಏಕರೂಪ ತರುವ ಪ್ರಯತ್ನ. ಜಗತ್ತಿನ ಎಲ್ಲ ಭಾಷೆಗಳಿಗೂ ಅನುಕೂಲ ಪರಿಸರ ಕಲ್ಪಿಸಬೇಕು ಎಂದು ಹೊರಟಿರುವ ಯುನಿಕೋಡ್.ಆರ್ಗ್‌ಗೆ ಇಂಗ್ಲಿಷ್ ಹೊರತು ಪಡಿಸಿದರೆ ಬೇರೆ ಭಾಷೆಗಳ ಅರಿವಿರುವುದು ಕಷ್ಟ. ಅದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ.

ಇಂತ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ (ಮುಖ್ಯವಾಗಿ: ಕನ್ನಡ ಪ್ರಾಧಿಕಾರ, ಕನ್ನಡ ಹಾಗು ಸಂಸ್ಕೃತಿ ಇಲಾಖೆ ಹಾಗು ಮಾಹಿತಿ ತಂತ್ರಜ್ಞಾನ ಇಲಾಖೆ) ಮಾಹಿತಿ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಕರ್ನಾಟಕದ ಕನ್ನಡ ಯುವಜನಾಂಗ, ಇರುವ ಮಿತಿಯಲ್ಲೇ ಒಳ್ಳೆಯ ಕೆಲಸ ಮಾಡಿಕೊಂಡು ಬರುತ್ತಿರುವ ಗಣಕ ಪರಿಷತ್ ಆಗಲಿ, ಆಸಕ್ತಿಯಿರುವ ಬೇರಿನ್ನಾರೆ ಆಗಲಿ ಇರುವ ಸಂದಿಗ್ಧವನ್ನು ಅರಿತುಕೊಳ್ಳಬೇಕಿತ್ತು. ಅಥವ ’ಮುಂದೆ ಬರಬಹುದಾದ ಬಿಕ್ಕಟ್ಟುಗಳನ್ನು’ ಮನಗಾಣಬೇಕಿತ್ತು. ಇದು ಆಗದೆ ಇರುವುದರಿಂದ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಏಕರೂಪ ಬಳಕೆಗೆ ಧಕ್ಕೆ ಬಂದಿದೆ. ಒಂದು ಕಡೆ ಅಂತರ್ಜಾಲದಲ್ಲಿ ಎಲ್ಲ ಭಾಷೆಗಳಿಗೂ ಏಕ ರೂಪ ಕೊಡಲು ಹೊರಟಿರುವ ಯುನಿಕೋಡ್.ಆರ್ಗ್, ಭಾರತದ ಎಲ್ಲ ಭಾಷೆಗಳಿಗೂ ಏಕರೂಪ ಬಳಕೆಯ ಪರಿಸರ ನಿರ್ಮಿಸಲು ಹೊರಟಿರುವ ಕೇಂದ್ರ ಸರ್ಕಾರ ಪೋಷಿತ ಸಂಸ್ಥೆಗಳು ಹಾಗು ಇರುವ ಸಂಕಟದ ಅರಿವೇ ಇಲ್ಲದಂತೆ ವರ್ತಿಸುತ್ತಿರುವ ಕರ್ನಾಟಕ ಸರ್ಕಾರ. (ಗಣಕ ಪರಿಷತ್‌ಗೆ ಏನಾಗಿದೆ? ಎಂಬ ಪ್ರಶ್ನೆ ಸಹ ಇಲ್ಲಿ ಸಹಜವಾದುದೆ).

ಹೊಣೆಗಾರಿಕೆಯ ಅರಿವಿರುವವರೆಲ್ಲ ಒಂದೆಡೆ ಸೇರಿ ಕನ್ನಡಕ್ಕೆ ಏಕರೂಪ ಶಿಷ್ಟತೆಯನ್ನು ಕೊಡುವತನಕ ಇನ್ನೂ ಏನೇನು ಸಮಸ್ಯೆಗಳನ್ನು ಎದುರಿಸಬೇಕಾಗಿದೆಯೋ ತಿಳಿಯದು.

ಈ ಮಧ್ಯೆ ಲೈನೆಕ್ಸ್ ಎಂಬ ಉತ್ಸಾಹಿಗಳು:
ಲೈನೆಕ್ಸ್‌ನಲ್ಲಿ ಕನ್ನಡದ ತಂತ್ರಾಂಶ ಇನ್ನೂ ಈವರೆಗೂ ಇಲ್ಲದಿರುವುದು ಅತಿಯಾದ ಆದರ್ಶಗಳನು ಹೊಂದಿರುವ ಲೈನೆಕ್ಸ್ ಕನ್ನಡ ಉತ್ಸಾಹಿಗಳ ಗಮನಕ್ಕೆ ಬರದಿರುವುದು ಅವರೊಳಗಿನ ವಿಪರ್ಯಾಸ ಹಾಗು ಉಪೇಕ್ಷೆಯನ್ನಲ್ಲದೆ ಬೇರಿನ್ನೇನನ್ನೂ ತೋರಿಸುವುದಿಲ್ಲ. ಅಲ್ಲಲ್ಲಿ ಸಣ್ಣ ಪ್ರಯತ್ನಗಳು ನಡೆದಿರುವುದು ನನ್ನ ಗಮನಕ್ಕೆ ಬರದೆ ಇಲ್ಲ. ಆದು ಯಾವುದೇ ರೀತಿಯಲ್ಲೂ ಸಾಲದು ಎಂಬುದಷ್ಟೆ ನನ್ನ ವಾದ. ಒಮ್ಮೊಮ್ಮೆ ಇವರ ಲೈನೆಕ್ಸ್ ಸಿಧ್ಧಾಂತ ಬೊಗಳೆಯೇನೋ ಎಂದು ತಂತ್ರಜ್ಞಾನದ ಅಲ್ಪ ಅನುಭವವಿರುವ ನನ್ನಂತಹವನಿಗೆ ಅನ್ನಿಸಿದರೆ ಅದು ನ್ಯಾಯವಾದ ಅನ್ನಿಸಿಕೆ ಎಂದೇ ನನ್ನ ಭಾವನೆ. ಈ ಲೈನೆಕ್ಸ್ ಉತ್ಸಾಹಿಗಳೆಲ್ಲ ಯಾರ ಪರವಾಗಿ ಯಾರ ವಿರುದ್ಧ ಹೋರಾಡುತ್ತಿದ್ದಾರೆ ಎಂಬುದನ್ನು ಅವರವರ ಪ್ರಾದೇಶಿಕ ಭಾಷೆಗಳ ಸಂದರ್ಭದಲ್ಲಿ ಇಟ್ಟು ನೋಡಿದಾಗ ಇವರಿಗೆಲ್ಲ ’ರಾಜಕೀಯವಾಗಿ ಸರಿಯಾಡ ನಿಲುವು ತೆಗೆದುಕೊಂಡಿದ್ದೇವೆ ಎಂಬ ಸ್ವರತಿ-ಸ್ವಮುಕ್ತಿ ಭಾವ ಮಾತ್ರ ಮುಖ್ಯ ನಿಜವಾದ ಕೆಲಸವಲ್ಲವೇನೋ ಎಂಬ ಅನುಮಾನವೂ ಬರುತ್ತದೆ.

ಉಳಿದಂತೆ ಭಾರತದಲ್ಲಿ ಓದು ಮುಗಿಸಿ ಅವಕಾಶವಂಚಿತರಾಗಿದ್ದೇವೆ ಎಂಬ ಹಿನ್ನೆಲೆಯಲ್ಲಿ ಅತ್ಯುತ್ತಮ ಜೀವನ ಶೈಲಿಯನ್ನರಸಿ, ಅತ್ಯುತ್ತಮ ವೃತ್ತಿ ಪರಿಸರವನ್ನರಸಿ ಗುಳೆ ಹೋಗಿರುವ ಅನಿವಾಸಿ ಕನ್ನಡಿಗರಲ್ಲಿ ಬಹುತೇಕ ಜನರು ಯುವಜನಾಂಗವೆ. ತಾಂತ್ರಿಕವಾಗಿ ಸುಶಿಕ್ಷಿತರೆ, ’ಬರಹ’ ಬಿಟ್ಟರೆ ಬೇರಿನ್ನಾವ ಪ್ರಯತ್ನ ಒಂದೂ ಆಗಿಲ್ಲ. ಬಹುಶ ಇವರೂ ಸಹ ಲೈನೆಕ್ಸ್ ಮಂದಿಯೋ? ಇವರು ಏನು ಮಾಡಿಯಾರು: ಪಾಪ. ಕನ್ನಡಕ್ಕೆ ಬದುಕು ಅರ್ಪಿತ ಎಂದು ಕರಾರೇನನ್ನೂ ಬರೆದುಕೊಟ್ಟಿಲ್ಲವಲ್ಲ.

-ಹರಿಕುಮಾರ್‌ರವರ ಉತ್ತರಾರ್ಧದ ಮಾತುಗಳನ್ನೂ ಏಕೆ ನಿರಾಕರಿಸಿದ್ದೇನೆ ಎಂಬುದಕ್ಕೆ ಇನ್ನೂ ಹೆಚ್ಚಿನ ಕಾರಣಗಳನ್ನು ವಿವರಿಸಬೇಕಾಗಿಲ್ಲ ಎಂದಂದುಕೊಂಡಿದ್ದೇನೆ.

ಮೂರು ಚಿತ್ರಗಳ ಬಗೆಗೆ ಕೆಲವು ಸಾಲುಗಳು..

ಗಿರೀಶ್ ಕಾಸರವಳ್ಳಿಯವರ ದ್ವೀಪ, ಅಪರ್ಣಾಸೆನ್‌ರವರ ಮಿಸೆಸ್ ಅಂಡ್ ಮಿಸ್ ಅಯ್ಯರ್ ಹಾಗು ಪ್ರಕಾಶ್‌ಬೆಳವಾಡಿಯವರ ’ಸ್ಟಂಬಲ್’- ಈ ಮೂರು ಚಿತ್ರಗಳನ್ನು ಇದ್ದ ಅಗಾಧ ಕೆಲಸದ ಮಧ್ಯದಲ್ಲೇ ಬಿಡುವು ಮಾಡಿಕೊಂದು ನೋಡಿದೆ. ಒಳಗೆ ಎಲ್ಲೋ ಏನೋ ಅಸಮಾಧಾನ. ಕೆದಕಿ ನೋಡಿದಾಗ ತಟಕ್ಕನೆ ಅನ್ನಿಸಿದ್ದು ಬಹುಶಃ ಇವರನ್ನೆಲ್ಲ ಈ ಮಣಿರತ್ನಂ ಎಂಬ ನಿರ್ದೇಶಕ ಕಾಡಿದ್ದಾನೆ. ಅದು ಒತ್ತಟ್ಟಿಗಿಟ್ಟರೂ ನಮ್ಮನ್ನು ಇಂದಿಗೂ ಕಾಡುತ್ತಿರುವ ಅತ್ಯಂತ ಜ್ವಲಂತ ಸಮಸ್ಯೆಗಳನ್ನು ಈ ನಿರ್ದೇಶಕರು ಲಘುವಾಗಿ ಕಾಣಬಾರದಾಗಿತ್ತು ಎಂದೇ ಅನ್ನಿಸುವುದು. ಇತ್ತ ಸಾಮಾಜಿಕ ಬಧ್ಧತೆಯೂ ಇಲ್ಲದೆ ಅತ್ತ ವೈಯಕ್ತಿಕ ಸಿನಿಮಾ ಕೂಡ ಮಾಡಲಾಗದ ಇಬ್ಬಂದಿ ಸ್ಥಿತಿಗೆ ಇವರೆಲ್ಲ ತಮ್ಮನ್ನು ತಾವು ನೂಕಿಕೊಂಡಿದ್ದಾರೋ ಎನ್ನುವ ಅನುಮಾನದೊಂದಿಗೆ ನನಗೆ ನಾನೇ ಹುಸಿ ಸಮಾಧಾನ ಮಾಡಿಕೊಂಡೆ. ಸಮಾಜಿಕ ಸಮಸ್ಯೆಗಳನ್ನು ಸಶಕ್ತವಾಗಿ ಪ್ರತಿನಿಧಿಸಬಲ್ಲ ವ್ಯಾಪಕತೆಯ ಶಕ್ತಿ ಇವರುಗಳು ರೂಪಿಸಿರುವ ಪಾತ್ರಗಳಿಗೆ ಇಲ್ಲದಂತಾಗಿ ಹೋಗಿ ಸಾಮಾಜಿಕ ಸಮಸ್ಯೆಗಳು ಕೇವಲ ಹಿನ್ನೆಲೆಯಾಗಿ ಬಂದು ಹೋಗಿಬಿಡುವ ಮತ್ತೊಂದು ತೆಳುಕಾರಣವಾಗಿ ಚಿತ್ರದಲ್ಲಿ ಕಾಣಿಸಿಕೊಂಡಿವೆ. ಇಲ್ಲಿ ಹೆಚ್ಚಿಗೆ ನನ್ನ ಅನುಮಾನಗಳನ್ನು ತೆರೆದಿಟ್ಟರೆ ಇಂತಹ ಪ್ರಯತ್ನಗಳು ನಿಂತುಹೋದಾವೇನೊ ಎಂಬ ಭಯದಿಂದ ಸುಮ್ಮನಾಗಬೇಕಿದೆ. ಏನೇ ಇದ್ದರೂ ಇವರಿಗೆಲ್ಲ ಇನ್ನೂ ಸಾಮಾಜಿಕ ಬಧ್ಧತೆ ಸತ್ತಿರಲಾರದು ಎಂಬ ಆಶಾಭಾವನೆಯಿಂದ ಇವರುಗಳ ಚಿತ್ರಗಳನ್ನು ಪುನಃ ನೋಡಬಲ್ಲೆ..ಇವರುಗಳ ಚಿತ್ರಗಳಿಗೆ ಕಾಯಬಲ್ಲೇ ಎಂದು ಧೈರ್ಯವಾಗಿ ಹೇಳಬಲ್ಲೆ..

ದ್ವೀಪ ಚಿತ್ರ ಕುರಿತಂತೆ ನಮ್ಮ ಶಿವಕುಮಾರ್ ಬರೆದಿರುವ ವಿಮರ್ಶೆಯನ್ನೂ ತಡವಾಗಿಯಾದರೂ ಪ್ರಕಟಿಸಲಾಗಿದೆ..ಜೊತೆಗೆ ಗಿರೀಶ್ ಕಾಸರವಳ್ಳಿಯವರೊಂದಿಗೆ ಪ್ರೀತಿ ಬಿ ನಾಗರಾಜ್‌ರ ಸಂದರ್ಶನವೂ ಪ್ರಕಟಿಸಲಾಗಿದೆ. ಅಲ್ಲದೆ ದ್ವೀಪ ಕಾದಂಬರಿಯೂ ಇದ್ದು ಈ ಸಂಚಿಕೆಗೆ ಒಂದು ರೀತಿಯ ಥೀಮ್ಯಾಟಿಕ್ ಸ್ವರೂಪ ಬಂದಿದ್ದರೆ ಅದು ಕೇವಲ ಕಾಕತಾಳಿಯ.

-ಶೇಖರ್‌ಪೂರ್ಣ
*****
೭.೦೩.೨೦೦೩



ಅರುಣ್‌ಶರ್‍ಮರ ಪ್ರತಿಕ್ರಿಯೆ

ಶೇಖರ್‌ಪೂರ್ಣ ಅವರೆ,

ನಿಮ್ಮ ಲೇಖನ ತುಂಬಾ ಚೆನ್ನಾಗಿತ್ತು. ಯೂನಿಕೋಡಿನ ಮುಖ್ಯ ಅಗತ್ಯ ಅಂದರೆ ಅದರ “ಟೆಕ್ಸ್ಟ್ ಪ್ರೋಸೆಸಿಂಗ್ ” ಸಾಮರ್ಥ್ಯ. ಪದಗಳನ್ನು ಹುಡುಕಲಿಕ್ಕೆ (ಸರ್ಚ್) ಮತ್ತು ಕ್ರಮವಾಗಿ ಇಡಲಿಕ್ಕೆ (ಸರ್ಚ್) ತುಂಬಾ ಸುಲಭ. ನಿಮ್ಮ ಓದುಗರಿಗೆ ಇವತ್ತು ಈ ವಿಷಯಗಳಲ್ಲಿ ಆಸಕ್ತಿ ಇಲ್ಲದೇ ಇರಬಹುದು. ಆದರೆ ನಮ್ಮಂಥ ಗಣಕಯಂತ್ರ ಉತ್ಸಾಹಿಗಳಿಗೆ ಅದರಿಂದ ತುಂಬಾ ಉಪಯೋಗ ಇದೆ.

ಕೀಲಿಮಣೆ ವಿಷಯದಲ್ಲಿ ತುಂಬಾ ತಲೆ ಕೆಡಿಸಿಕೊಳ್ಳಬೇಡಿ. ಇಂಗ್ಲಿಷ್‌ನಲ್ಲೂ ೨-೩ ಕೀಲಿಮಣೆಗಳಿವೆ (ಕ್ವೆರ್ಟಿ, ಡ್ವೋರಕ್, ). ಒಂದಕ್ಕಿಂತಾ ಹೆಚ್ಚು ಭಾರತೀಯ ಭಾಷೆಗಳನ್ನು ಮಾತಾಡುವವರಿಗೆ ‘ಇನ್‌ಸ್ಕ್ರಿಪ್ಟ್’ ತುಂಬಾ ಅನುಕೂಲವಾಗುತ್ತೆ.

ನಿಮ್ಮ ಲೇಖನದಲ್ಲಿ ನೀವು “ಲಿನಕ್ಸ್” ಉತ್ಸಾಹಿಗಳ ಬಗ್ಗೆ ಮಾತಾಡುತ್ತೀರ. ಅದರ ಬದಲು “ಮುಕ್ತ ತಂತ್ರಾಂಶ”ದ ಬಗ್ಗೆ ಮಾತಾಡಿದರೆ ಚೆನ್ನಾಗಿತ್ತು. ಅಂತರ್ಜಾಲದಲ್ಲಿ ಲಿನಕ್ಸ್ ಅಲ್ಲದೇ ಇತರ ಉಚಿತ/ಮುಕ್ತ ‘ಓ‌ಎಸ್’ ಗಳೂ ಇವೆ. ನಾನು ಫ್ರೀ ಬಿ‌ಎಸ್‌ಡಿ() ಯ ಲೇಖಕರಲ್ಲಿ ಒಬ್ಬ. ಲಿನಕ್ಸ್ ನಲ್ಲಿ ಆದರ್ಶ ಹೆಚ್ಚು, ಹಣ, ವ್ಯವಹಾರ ಕಡಿಮೆ. ಇದಕ್ಕೆ ಕಾರಣ ಅಂದರೆ, ಕನ್ನಡ ಲಿನಕ್ಸ್ ಮಾಡಿ ಮಾರುವುದನ್ನು ನಿಶೇಧಿಸಲಾಗಿದೆ. ಫ್ರೀ ಬಿ‌ಎಸ್‌ಡಿಗೆ, ಈ ಸಮಸ್ಯೆ ಇಲ್ಲ.

-ಅರುಣ


ಕನ್ನಡ ಗಣಕ ಪರಿಷತ್ತು (ಜಿ. ಎನ್. ನರಸಿಂಹ ಮೂರ್ತಿ. ) – ಪ್ರತಿಕ್ರಿಯೆ

ಬೆಂಗಳೂರು ೧೮. ೦೩. ೨೦೦೩

ಪ್ರಿಯ ಶ್ರೀ ಶೇಖರ ಪೂರ್ಣ,

ಕನ್ನಡ ಸಾಹಿತ್ಯ,ಕಾಂನ ಇತ್ತೀಚಿನ ಸಂಚಿಕೆಯಲ್ಲಿ ಮಾಹಿತಿ ತಂತ್ರeನ ಹಾಗೂ ಕನ್ನಡದ ಕುರಿತು ವಿವರವಾಗಿ ಚರ್ಚಿಸಿದ್ದೀರಿ. ಇದಕ್ಕಾಗಿ ಧನ್ಯವಾದಗಳು. ಆದರ ಈ ನಿಟ್ಟಿನಲ್ಲಿ ಕನ್ನಡ ಗಣಕ ಪರಿಷತ್ತು ಮತ್ತು ಕರ್ನಾಟಕ ಸರ್ಕಾರ ಗೊಂದಲ ಹುಟ್ಟು ಹಾಕಿದೆ ಎಂಬ ಯೂನಿಕೋಡ್ ಬಗ್ಗೆ ಎಲ್ಲ ತೀರ್ಮಾನ ಆಗಿ ಹೋಗಿದೆ ಎಂಬ ಅಭಿಪ್ರಾಯಗಳನ್ನು ನಿಮ್ಮ ಲೇಖನ ಬಿಂಬಿಸುತ್ತದೆ.
ಈ ಕುರಿತು ನನ್ನ ಪ್ರತಿಕ್ರಿಯೆಯನ್ನು ಈ ಮುಂದಿನಂತೆ ದಾಖಲಿಸಿದ್ದೇನೆ. ಸಾಧ್ಯವಾದರೆ ಪ್ರಕಟಿಸಬೇಕೆಂದು ವಿನಂತಿ.
೧. ಯೂನಿಕೋಡ್ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ಕಾಣಿಸುವುದಿಲ್ಲ. ಯೂನಿಕೋಡ್‌ನ ಅಂತಿಮ ಆವೃತ್ತಿ ಕನ್ನಡಕ್ಕೆ ಸಂಬಂಧಿಸಿದ ಹಾಗೆ ಪ್ರಕಟವಾಗಿಲ್ಲ, ಯೂನಿಕೋಡ್ ‘ಇನಸ್ಕ್ರಿಪ್ಟ್’ ಕೀಲಿಮಣೆ ವಿನ್ಯಾಸವನ್ನು ಕನ್ನಡಕ್ಕೆ ಕಡ್ಡಾಯ ಮಾಡಿಲ್ಲ. ಮಾಡುವುದು ಸಾಧ್ಯವೂ ಇಲ್ಲ. ಯೂನಿಕೋಡ್ ಸಂಕೇತ ವ್ಯವಸ್ಥೆಗೂ ಕೀಲಿಮಣೆ ವಿನ್ಯಾಸಕ್ಕೂ ನೇರವಾದ ಸಂಬಂಧವಿಲ್ಲ. ಇನ್ಸ್ಕ್ರಿಪ್ಟ್ ಕೀಲಿಮಣೆ ವಿನ್ಯಾಸದಲ್ಲಿ ಅನೇಕ ತೊಡಕುಗಳಿವೆ. ಉದಾಹರಣೆಗೆ ಅನೇಕ ಕೀಲಿಗಳಲ್ಲಿ ಸ್ವರಚಿಹ್ನೆಗಳು ಕುಳಿತಿವೆ. ಅವನ್ನು ನೆನಪಲ್ಲಿರಿಸಿಕೊಳ್ಳುವುದು ಒಂದು ಸಂಗತಿಯಾದರೆ ಅವು ಇರುವ ಚಹ್ನೆ, ಅಂಕಿಗಳು ಬೇಕಾದಾಗಲೆಲ್ಲ ಬೇರೆ ಅಕ್ಷರಶೈಲಿಯ ಆಶ್ರಯ ಬೇಕಾಗುತ್ತದೆ. ಭಾರತೀಯ ಭಾಷೆಗಳೆಲ್ಲವೂ ಅನನ್ಯವಾಗಿದ್ದು ಎಲ್ಲ ಒಳಗೊಂಡ ಏಕರೂಪತೆ ಸಾಧ್ಯವಿಲ್ಲ. ಎಂದೇ ಇಸ್ಕಿ ವಿಫಲವಾಗಿದೆ. ನಮ್ಮಲ್ಲಿ ಎಕ್ಸ್‌ಪಿ ವ್ಯಾಪಕವಾಗಿ ಬಂದಿಲ್ಲ. ಬಂದರೂ ಯೂನಿಕೋಡ್ ಮಾತ್ರ ಬಳಸಬೇಕೆಂದಿಲ್ಲ. ಯೂನಿಕೋಡ್‌ಗೆ ಸಂಬಂಧಿಸಿದಂತೆ ಕನ್ನಡಕ್ಕೆ ಅಗತ್ಯವಾದ ಬದಲಾವಣೆಗಳನ್ನು ಸೂಚಿಸಿರುವ ಪತ್ರವನ್ನು ಕನ್ನಡ ಗಣಕ ಪರಿಷತ್ತು ಕೇಂದ್ರ ಸರ್ಕಾರದ ಟಿ. ಡಿ. ಐ. ಎಲ್. ಗೆ ಕರ್ನಾಟಕ ಸರ್ಕಾರದ ಮೂಲಕ ಈಗಾಗಲೇ ಕಳಿಸಿದೆ. ಈ ಬದಲಾವಣೆಯನ್ನು ಯೂನಿಕೋಡ್ ಒಪ್ಪಿ ಅನುಷ್ಠಾನಗೊಳಿಸದ ಹೊರತು ಯೂನಿಕೋಡ್ ಕನ್ನಡದ ಬಳಕೆಗೆ ಒಗ್ಗುವುದಿಲ್ಲ. ಹೀಗಾಗಿ ಯೂನಿಕೋಡ್ ಬಳಕೆ ಕನ್ನಡದ ಮಟ್ಟಿಗೆ ಸದ್ಯಕ್ಕೆ ದೂರದ ಮಾತು. ಆದರೆ ಎಲ್ಲ ಪೂರ್ವ ಸಿದ್ಧತೆ ನಡೆಯಬೇಕು. ಕನ್ನಡ ಗಣಕ ಪರಿಷತ್ತು ಈಗಾಗಲೇ ನುಡಿಯಿಂದ ಯೂನಿಕೋಡ್‌ಗೆ ಮಾಹಿತಿ ಪರಿವರ್ತನೆಗೆ ಸೌಲಭ್ಯವನ್ನು ರೂಪಿಸಿದೆ. ಯೂನಿಕೋಡ್‌ಗೆ ಕೀಲಿಮಣೆ ವ್ಯವಸ್ಥೆಯನ್ನು ರೂಪಿಸುವುದು ಕಷ್ಟವಾಗುವುದಿಲ್ಲ. ಕನ್ನಡ ಗಣಕ ಪರಿಷತ್ತು ಮತ್ತು ಕರ್ನಾಟಕ ಸರ್ಕಾರ ಏಕರೂಪ ಕೀಲಿಮಣೆ ವ್ಯಷ್ಥೆಯನ್ನು ರೂಪಿಸಿ ಗೊಂದಲ ಉಂಟು ಮಾಡಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಇದು ಗೊಂದಲವನ್ನು ಕಳೆದು ಅನುಕೂಲ ಸ್ಥಿತಿಯತ್ತ ನಡೆಯಲು ಇರಿಸಿದ ಮಹತ್ವದ ಹೆಜ್ಜೆ . ಇದರತ್ತ ಗಮನ ಹರಿಸುವ ಯಾರೂ ಕನ್ನಡದ ಕುರಿತು ಹೆಮ್ಮೆ ಪಡಬಹುದಾಗಿದೆ. ಕೇವಲ ಕೆಲವು ಭಾರತೀಯ ಭಾಷೆಗಳಲ್ಲಿ ಮಾತ್ರ ಈ ಬಗೆಯ ಶಿಷ್ಟೀಕರಣ ನಡೆದಿದೆ. ಇತರ ಅನೇಕ ಭಾಷೆಯವರು ಈ ಬೆಳವಣಿಗೆಯನ್ನು ಅಸೂಯೆಯೊಡನೆಯ ಮೆಚ್ಚುಗೆ ವ್ಯಲ್ತಪಡಿಸಿದ್ದಾರೆ. ನಾನು ಈ ಮೂಲಕ ತಾವೂ ತಮ್ಮ ಓದುಗರೂ ಇದನ್ನು ಬೆಂಬಲಿಸಲು ಈ ಮೂಲಕ ವಿನಯಪೂರ್ವಕವಾಗಿ ವಿನಂತಿಸುತ್ತೇನೆ. ಈಗಾಗಲೇ ಸರ್ಕಾರದ ಹಲವು ಇಲಾಖೆಗಳಲ್ಲಿ ನುಡಿಯನ್ನು ಯಶಸ್ವಿಯಾಗಿ ಅಂತರಜಾಲದ ಭಾಷೆಯಾಗಿ ಮತ್ತು ದತ್ತ ಸಂಸ್ಕರಣೆಗಾಗಿ ಬಳಸಲಾಗಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ಇಂತಹ ಶಿಷ್ಟತೆ ಇಲ್ಲದಿದ್ದಲ್ಲಿ ವಿದ್ಯುನ್ಮಾನ ಆಡಳಿತ ಕನಸಾಗುತ್ತದೆ. ಗೊಂದಲದ ತವರಾಗುತ್ತದೆ.
೨. ಜತೆಗೆ ಈಗಾಗಲೇ ಕನ್ನಡವನ್ನು ಲೀನಕ್ಸ್‌ಗೆ ಹೊಂದಿಸಲು ಪ್ರಯತ್ನಗಳಾಗುತ್ತಿವೆ. ಕನ್ನಡಕ್ಕೆ ಒಂದು ‘ಆಫೀಸ್’ ನಂತಹ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಒಂದು ಜಾರಣಿಕೆಯೂ ಸೇರಿದೆ. ಇನ್ನು ಕೆಲವೇ ತಿಂಗಳ ಅವಧಿಯಲ್ಲಿ ಇದನ್ನು ಕನ್ನಡ ಜನತೆಗೆ ಒಪ್ಪಿಸಲು ಕನ್ನಡ ಗಣಕ ಪರಿಷತ್ತು ಪ್ರಯತ್ನಿಸುತ್ತಿದೆ.
೩. ಮಾಡ್ಯುಲಾರ್‌ನವರು ರೂಪಿಸಿರುವ ಲೈನಕ್ಸ್ ಸಂಪಾದಕದಲ್ಲಿ ನುಡಿಯ ಕೀಲಿಮಣೆ ವಿನ್ಯಾಸವನ್ನೂ ನೀಡಿದ್ದಾರೆ ಎಂಬುದು ಇದೀಗ ತಾನೇ ತಿಳಿದ ಸುದ್ದಿಯಾಗಿದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಕರ್ನಾಟಕ ಸರ್ಕಾರ ಮತ್ತು ಕನ್ನಡ ಗಣಕ ಪರಿಷತ್ತು ಯಾವುದೇ ನಿರ್ಧಾರವನ್ನು ಆತುರದಲ್ಲಿ ಅಥವಾ ಮುಂದಿನ ಪರಿಣಾಮವನ್ನು ಅರಿಯದೇ ತೆಗೆದುಕೊಂಡಿವೆ ಎಂಬುದು ಸರಿಯಲ್ಲ ಎಂದು ಸ್ಪಷ್ಟವಾಗಿದೆ ಎಂದು ಭಾವಿಸಿದ್ದೇನೆ. ಕನ್ನಡದ ಹಿತ ಎಲ್ಲಕ್ಕಿನ್ನ ದೊಡ್ಡದು ಎಂಬುದೇ ಕನ್ನಡ ಗಣಕ ಪರಿಷತ್ತಿನ ಆಶಯ, ನಂಬಿಕೆ.
ಕನ್ನಡದ ಬಳಕೆಗೆ ಇರುವ ತಾಂತ್ರಿಕ ಅಡಚಣೆಗಳಿಗೆಲ್ಲ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಕನ್ನಡ ಗಣಕ ಪರಿಷತ್ತು ಸದಾ ಶ್ರಮಿಸುತ್ತದೆ. ಅಂತರಜಾಲ ಕುರಿತಾದ ಸಮಸ್ಯಗಳೂ ಇದಕ್ಕೆ ಹೊರತಲ್ಲ. ಅವಸರ ಬೇಡ. ನಿಧಾನಕ್ಕೆ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳೋಣ. ಕನ್ನಡದ ಉಳಿವಿಗೆ ಬೆಳವಣಿಗೆಗೆ ಕಂಕಣಬದ್ಧರಾಗೋಣ.

ಜಿ. ಎನ್. ನರಸಿಂಹ ಮೂರ್ತಿ.
ಕಾರ್ಯದರ್ಶಿ,
ಕನ್ನಡ ಗಣಕ ಪರಿಷತ್ತು.

‘ಬರಹ’ ದ ವಾಸುರವರ ಪ್ರತಿಕ್ರಿಯೆ:

ಶ್ರೀ ಶೇಖರ್‌ಪೂರ್ಣ ಅವರಿಗೆ ನಮಸ್ಕಾರ,

ಮೊಟ್ಟ ಮೊದಲಿಗೆ ಅಂತರಜಾಲದಲ್ಲಿ ಕನ್ನಡದಲ್ಲಿ ಹೊಸ-ಹೊಸ ಪ್ರಯೋಗಗಳನ್ನು ಮಾಡುತ್ತಿರುವ ನಿಮಗೆ ಧನ್ಯವಾದಗಳು. ಕರ್ನಾಟಕ ಸರ್ಕಾರ ನಿಗಧಿಪಡಿಸಿದ ಫ಼ಾಂಟುಗಳನ್ನು ವೆಬ್‌ಸೈಟಿನಲ್ಲಿ ಬಳಕೆಗೆ ಮೊಟ್ಟಮೊದಲಿಗೆ ತಂದವರು ನೀವು. ಈಗ ಯೂನಿಕೋಡ್ ಅನ್ನೂ ಸಹಾ ಬಳಕೆಗೆ ತಂದಿದ್ದೀರಿ. ಅವಿಷ್ಕಾರಕ್ಕೆ ಅವಶ್ಯಕತೆಯೇ ಕಾರಣ ಎಂದು ಹೇಳಿರುವಂತೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿದಾಗ ಮಾತ್ರ ಅದರಲ್ಲಿರುವ ಕುಂದು-ಕೊರತೆಗಳು ಕಾಣಿಸಿಕೊಂಡು ಇನ್ನಷ್ಟು ಉತ್ತಮಪಡಿಸಲು ದಾರಿಯಾಗುತ್ತೆ.

ಇಂದು ಕನ್ನಡ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಶಿಷ್ಟೀಕರಣಗಳಿವೆ:

೧) ಯೂನಿಕೋಡ್: ಕನ್ನಡದಲ್ಲಿ ಮಾಹಿತಿಯನ್ನು ಶೇಖರಿಸಿಡಲು ಯೂನಿಕೋಡ್‌ನವರು ಮಾಡಿರುವ ಶಿಷ್ಟೀಕರಣ. ವಿಂಡೊಸ್ ಎಕ್ಸ್.ಪಿ, ಲಿನಕ್ಸ್ ಮುಂತಾದ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಕನ್ನಡ ಯೂನಿಕೋಡ್ ಲಭ್ಯವಿದೆ.

೨) ಇನ್‌ಸ್ಕ್ರಿಫ್ಟ್ ಕೀಲಿಮಣೆ: ಸಿ-ಡ್ಯಾಕ್ ನವರು ಮಾಡಿರುವ ಎಲ್ಲಾ ಭಾರತೀಯ ಭಾಷೆಗಳಿಗೂ ಅನ್ವಯವಾಗುವ ಕೀಲಿಮಣೆ. ಸಿ-ಡ್ಯಾಕ್ ನವರ ತಂತ್ರಾಂಶಗಳು, ವಿಂಡೋಸ್ ಎಕ್ಸ್.ಪಿ ಮತ್ತು ಲಿನಕ್ಸ್ ಈ ಕೀಲಿಮಣೆಯನ್ನು ಅಳವಡಿಸಿವೆ.

೩) ಕ.ಗ.ಪ (ಕನ್ನಡ ಗಣಕ ಪರಿಷತ್ತು) ಕೀಲಿಮಣೆ: ಗಣಕ ಕೀಲಿಮಣೆಯ ಮೂಲಕ ಕನ್ನಡದಲ್ಲಿ ಟೈಪ್ ಮಾಡಲು ಸರ್ಕಾರ ಅನುಮೋದಿಸಿರುವ ಕೀಲಿಮಣೆ. ಸದ್ಯಕ್ಕೆ ಬರಹ ಮತ್ತು ನುಡಿ ಇದನ್ನು ಅಳವಡಿಸಿವೆ.

೪) ಕನ್ನಡ ಟ್ರೂಟೈಪ್ ಫ಼ಾಂಟುಗಳು: ಕನ್ನಡ ಫ಼ಾಂಟುಗಳಲ್ಲಿ ಇರಬೇಕಾದ ಅಕ್ಷರಗಳು(ಗ್ಲಿಫ಼್) ಮತ್ತು ಅವುಗಳ ಸಂಕೇತಗಳು(ಕೋಡ್) ಕುರಿತು ಸರ್ಕಾರ ಮಾಡಿರುವ ಶಿಷ್ಟೀಕರಣ. ಸದ್ಯಕ್ಕೆ ಬರಹ ಮತ್ತು ನುಡಿ ಇದನ್ನು ಅಳವಡಿಸಿವೆ.

ಇನ್ಸ್‌ಕ್ರಿಪ್ಟ್, ಯೂನಿಕೋಡ್, ಕ.ಗ.ಪ ಮುಂತಾದವುಗಳಿಂದ ಗಣಕಗಳಲ್ಲಿ ಕನ್ನಡದ ಅಭಿವೃದ್ಧಿ ಎತ್ತಲೋ ಸಾಗುತ್ತಿದೆ ಎಂಬ ಅಭಿಪ್ರಾಯ ನಿಮ್ಮ ಲೇಖನದಲ್ಲಿದೆ. ಇದು ಸರಿಯಲ್ಲ ಎಂದೇ ನನ್ನ ಅಭಿಪ್ರಾಯ. ಮೊಟ್ಟಮೊದಲಿಗೆ ಕನ್ನಡ ಫ಼ಾಂಟುಗಳು, ಯೂನಿಕೋಡ್, ಕೀಲಿಮಣೆ ಇತ್ಯಾದಿಗಳು ಪ್ರತ್ಯೇಕವಾದ ವಿಚಾರಗಳಾಗಿವೆ. ಇವುಗಳಲ್ಲಿ ಒಂದಕ್ಕೊಂದು ಜೊತೆ ಮಾಡಿ ಹೋಲಿಸುವುದು ಸರಿಯಲ್ಲ. ಗಣಕದಲ್ಲಿ ಯಾವುದೇ ಭಾಷೆಯನ್ನು ಅಳವಡಿಸುವ ಸಂದರ್ಭದಲ್ಲಿ (ಉದಾಹರಣೆಗೆ ಕನ್ನಡ) ಮೂರು ತಾಂತ್ರಿಕ ಘಟ್ಟಗಳು/ಸವಾಲುಗಳನ್ನು ಗುರುತಿಸಬಹುದು.

ಗಣಕಕ್ಕೆ ಮಾಹಿತಿಯನ್ನು ಉಣಿಸುವುದು. (ಇನ್‌ಪುಟ್)
ಗಣಕದಲ್ಲಿ ಮಾಹಿತಿಯನ್ನು ಸಂಗ್ರಹಿಸುವುದು. (ಸ್ಟೋರೇಜ್)
ಗಣಕದಿಂದ ಹೊರಗೆ ಮಾಹಿತಿಯನ್ನು ಪಡೆಯುವುದು. (ಔಟ್‌ಪುಟ್)

ಈ ಮೂರು ಘಟ್ಟಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲವು. ಇಲ್ಲಿ ಒಂದು ಘಟ್ಟದಿಂದ ಇನ್ನೊಂದಕ್ಕೆ ಮಾಹಿತಿ ರವಾನೆಯಾಗುತ್ತದೆಯೇ ಹೊರತು ಒಂದು ಘಟ್ಟ ಹೇಗೆ ಕೆಲಸ ಮಾಡುತ್ತಿದೆ ಎಂಬ ವಿವರ ಇನ್ನೊಂದು ಘಟ್ಟಕ್ಕೆ ಬೇಕಾಗಿಲ್ಲ. ಉದಾಹರಣೆಗೆ, ಕ.ಗ.ಪ ಕೀಲಿಮಣೆ ಮೂಲಕ ಮಾಹಿತಿಯನ್ನು ಟೈಪ್ ಮಾಡಿ, ಯೂನಿಕೋಡ್ ರೂಪದಲ್ಲಿ ಶೇಖರಿಸಿಟ್ಟು, ಬೇಕಾದಾಗ ಬರಹ ಟ್ರೂಟೈಪ್ ಫ಼ಾಂಟುಗಳನ್ನು ಬಳಸಿ ತೆರೆಯ ಮೇಲೆ ಕಾಣಿಸಬಹುದು. ಅಥವಾ, ಬರಹ ಲಿಪ್ಯಂತರಣ ಕ್ರಮ ಉಪಯೋಗಿಸಿ ಮಾಹಿತಿಯನ್ನು ಟೈಪ್ ಮಾಡಿ, ಅದೇ ರೂಪದಲ್ಲೇ ಶೇಖರಿಸಿಟ್ಟು ಬೇಕಾದಾಗ ಯೂನಿಕೋಡ್‌ಗೆ ಪರಿವರ್ತಿಸಿ ತೆರೆಯ ಮೇಲೆ ಕಾಣಿಸಬಹುದು.

ಆದ್ದರಿಂದ ಗಣಕಕ್ಕೆ ಮಾಹಿತಿಯನ್ನು ಉಣಿಸುವಾಗ ಜನರು ತಮ್ಮ ಅವಶ್ಯಕತೆಗೆ, ಅನುಕೂಲಕ್ಕೆ ತಕ್ಕಂತೆ ಬರಹದ ಲಿಪ್ಯಂತರಣ ಕ್ರಮದಲ್ಲೋ, ಕ.ಗ.ಪ ಕೀಲಿಮಣೆ ಬಳಸಿಯೋ, ಅಥವಾ ಮೈಕ್ರೋಸಾಫ಼್ಟ್ ಅಳವಡಿಸಿರುವ ಇನ್‌ಸ್ಕ್ರಿಫ್ಟ್ ಕೀಲಿಮಣೆಯನ್ನೋ ಬಳಸಬಹುದು. ಮುಂದೆ, ಒ.ಸಿ.ಆರ್ ಮೂಲಕ ಅಥವಾ ವಾಯ್ಸ್ ರೆಕಗ್ನಿಷನ್ ಮೂಲಕವೂ ಕನ್ನಡವನ್ನು ಉಣಿಸುವ ಕಾಲ ಬರಬಹುದು. ಕನ್ನಡದಲ್ಲಿ ಮಾಹಿತಿಯನ್ನು ಶೇಖರಿಸಿ ಇಡುವಾಗ ನಮ್ಮ ಅನುಕೂಲಕ್ಕೆ ತಕ್ಕಂತೆ ಯೂನಿಕೋಡ್ ರೂಪದಲ್ಲೋ, ಬರಹ ಲಿಪ್ಯಂತರಣ ಕ್ರಮದಲ್ಲೋ, ಅಥವಾ ಬರಹ ಫ಼ಾಂಟ್‌ಗಳ ಗ್ಲಿಫ಼್ ಸಂಕೇತಗಳಾಗಿಯೋ ಶೇಖರಿಸಿಡಬಹುದು. ಮಾಹಿತಿಯನ್ನು ಗಣಕದ ಪರದೆಯ ಮೇಲೆ ತೋರಿಸುವಾಗ ಟ್ರೂಟೈಪ್ ಫ಼ಾಂಟ್‌ಗಳನ್ನು ಬಳಸಿಯೋ, ಅಥವಾ ಯೂನಿಕೋಡ್ ಆಧಾರಿತ ಓಪನ್ ಟೈಪ್ ಫ಼ಾಂಟುಗಳನ್ನೋ (ತುಂಗಾ) ಬಳಸಬಹುದು. ಇಲ್ಲಿ ಮುಖ್ಯವಾಗಿ ನಮಗೆ ಬೇಕಾಗಿರುವುದು ಮಾಹಿತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸುವ ಸವಲತ್ತು.

ಮೈಕ್ರೋಸಾಫ಼್ಟ್ ಎಕ್ಸ್.ಪಿ ಯಲ್ಲಿ ಇನ್‌ಸ್ಕ್ರಿಪ್ಟ್, ಯೂನಿಕೋಡ್, ಓಪನ್‌ಟೈಪ್ ಫ಼ಾಂಟ್ ತಂತ್ರಗಳನ್ನು ಬಳಸಿ ಕನ್ನಡದ ಬಳಕೆಗೆ ಅನುವು ಮಾಡಿಕೊಡಲಾಗಿದೆ. ಆದರೆ, ಗಣಕಗಳಲ್ಲಿ ಕನ್ನಡವನ್ನು ಬಳಸಲು ವಿಂಡೋಸ್ ಎಕ್ಸ್.ಪಿ ಯನ್ನೇ ಉಪಯೋಗಿಸಬೇಕು, ಮತ್ತು ಇನ್‌ಸ್ಕ್ರಿಪ್ಟ್ ಕೀಲಿಮಣೆಯನ್ನೇ ಬಳಸಿ ಕನ್ನಡವನ್ನು ಟೈಪ್ ಮಾಡಬೇಕು ಎಂಬ ಯಾವ ಕಾನೂನು ಇಲ್ಲ. ಮುಂದೆ, ಬರಹ ಲಿಪ್ಯಂತರಣ ಕ್ರಮದ ಮೂಲಕವೋ, ಅಥವಾ ಕ.ಗ.ಪ ಕೀಲಿಮಣೆ ಮೂಲಕವೋ ಟೈಪ್ ಮಾಡಿ ಯೂನಿಕೋಡ್ ಸಂಕೇತಗಳನ್ನು ನೇರವಾಗಿ ಪಡೆಯಬಹುದು. ಅಥವಾ, ಮಾಹಿತಿಯನ್ನು ಬೇರೇ, ಬೇರೆ ರೂಪಗಳಲ್ಲಿ ಶೇಖರಿಸಿಟ್ಟು, ನಮಗೆ ಬೇಕಾದಾಗ ಯೂನಿಕೋಡ್ ಅಥವಾ ಇನ್ಯಾವುದೇ ರೂಪಕ್ಕೆ ಪರಿವರ್ತಿಸಬಹುದು.

ಸಧ್ಯದಲ್ಲಿ ಬರಹದ ಲಿಪ್ಯಂತರಣ ಕ್ರಮದ ಮೂಲಕ ಕನ್ನಡವನ್ನು ಗಣಕಕ್ಕೆ ಉಣಿಸುವುದು ಅತ್ಯಂತ ಸುಲಭವೂ, ಜನಪ್ರಿಯವೂ ಆದ ಕ್ರಮವಾಗಿದೆ. ಇದರ ಜೊತೆಗೆ ಸರ್ಕಾರ ಅನುಮೋದಿಸಿರುವ ಕ.ಗ.ಪ ಕೀಲಿಮಣೆಯನ್ನು ಬಳಸುವುದು ಇನ್ನೊಂದು ಮಾರ್ಗವಾಗಿದೆ. ಕ.ಗ.ಪ ಕೀಲಿಮಣೆಯು ಇನ್‌ಸ್ಕ್ರಿಫ್ಟ್, ಅಥವಾ ಇತರ ಟೈಪ್‌ರೈಟರ್ ಕೀಲಿಮಣೆಗಳಿಗೆ ಹೋಲಿಸಿದರೆ ಸರಳವೂ, ಉಪಯುಕ್ತವೂ ಆಗಿದೆ. ಬರಹದಲ್ಲಿ ಲಿಪ್ಯಂತರಣ ಕ್ರಮದ ಜೊತೆಗೆ ಕ.ಗ.ಪ ಕೀಲಿಮಣೆಯನ್ನು ಬಳಸುವ ಅವಕಾಶವನ್ನೂ ನೀಡಲಾಗಿದೆ. ಯಾರಿಗೇ ಯಾವುದು ಅನುಕೂಲವಾಗಿ ಕಂಡುಬರುವುದೋ ಅದನ್ನು ಅವರು ಉಪಯೋಗಿಸಬಹುದು. (ಬರಹ ತಂತ್ರಾಂಶವನ್ನು ಉಪಯೋಗಿಸುವವರಲ್ಲಿ ಕ.ಗ.ಪ ಕೀಲಿಮಣೆಯನ್ನು ಬಳಸುವವರ ಸಂಖ್ಯೆ ೧% ಗಿಂತಲೂ ಕಡಿಮೆ!). ಬರಹ ೫.೦ ತಂತ್ರಾಂಶವನ್ನು ಉಪಯೋಗಿಸಿಕೊಂಡು ಕನ್ನಡದ ಸಧ್ಯದ ಎಲ್ಲಾ ಅಗತ್ಯಗಳನ್ನೂ ಪೂರೈಸಬಹುದಾಗಿದೆ. ಇದರಲ್ಲಿ ಯೂನಿಕೋಡ್ ಸಹಾ ಸೇರಿದಂತೆ ೭ ವಿವಿಧ ರೂಪಗಳಲ್ಲಿ ಕನ್ನಡದ ಮಾಹಿತಿಯನ್ನು ಸಂಗ್ರಹಿಸಿ ಇಡಬಹುದಾಗಿದೆ. ಬೇಕಾದಾಗ ಒಂದರಿಂದ ಇನ್ನೊಂದಕ್ಕೆ ಪರಿವರ್ತಿಸಬಹುದಾಗಿದೆ. ಕನ್ನಡ ಅಕ್ಷರಾನುಕ್ರಮದಲ್ಲಿ ವಿಂಗಡಣೆ ಮಾಡಬಹುದಾಗಿದೆ, ಡೇಟಾಬೇಸ್ ಬಳಸಿಕೊಂಡು ದತ್ತ-ಸಂಸ್ಕರಣೆಯನ್ನೂ ಮಾಡಬಹುದಾಗಿದೆ. ಗಣಕಗಳಲ್ಲಿ ಇಂಗ್ಲಿಷಿನಷ್ಟೇ ಸುಲಭವಾಗಿ ಕನ್ನಡವನ್ನೂ ಬಳಸಬಹುದಾಗಿದೆ. ಆದರೆ ಈ ತಂತ್ರಾಂಶಗಳ ತಂತ್ರಜ್ಞಾನದ ಸಂಪೂರ್ಣ ಉಪಯೋಗವೇ ಸಧ್ಯಕ್ಕೆ ಆಗುತ್ತಿಲ್ಲ. ಇಂಗ್ಲಿಷಿಗೆ ಹೋಲಿಸಿದರೆ ಗಣಕಗಳಲ್ಲಿ ಕನ್ನಡದ ಬಳಕೆ ಇನ್ನೂ ಶೈಶವಾವಸ್ಥೆಯಲ್ಲಿ ಇದೆ. ಸಧ್ಯಕ್ಕೆ ಗಣಕಗಳಲ್ಲಿ ಕನ್ನಡದ ಬಳಕೆ ಆಗುತ್ತಿರುವುದು ಪತ್ರಿಕೋದ್ಯಮ, ಪಬ್ಲಿಷಿಂಗ್ ಕ್ಷೇತ್ರಗಳಲ್ಲಿ ಮಾತ್ರ. ಶಿಕ್ಷಣ, ವಿಜ್ಞಾನ/ತಂತ್ರಜ್ಞಾನ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಆಗುತ್ತಿಲ್ಲ. ಈ ಕ್ಷೇತ್ರಗಳಲ್ಲೂ ಗಣಕಗಳಲ್ಲಿ ಕನ್ನಡ ಕಾಣಿಸಿಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ನಾವು ಜೀವನಪರ್ಯಂತ ಬರಹ, ಕ.ಗ.ಪ, ಇನ್‌ಸ್ಕ್ರಿಪ್ಟ್ ಇತ್ಯಾದಿಗಳಿಗೆ ಅಂಟಿಕೊಂಡು ಕುಳಿತುಕೊಳ್ಳಬೇಕೆಂದೇನೂ ಇಲ್ಲ. ಗಣಕಗಳಲ್ಲಿ ಕನ್ನಡದ ಹಣೆಬರಹವನ್ನು ತೀರ್ಮಾನಿಸುವುದು ಈ ತಂತ್ರಾಂಶಗಳೇ ಆಗಬೇಕೆಂದಿಲ್ಲ. ಅದನ್ನು ತೀರ್ಮಾನಿಸುವವರು ಕನ್ನಡವನ್ನು ಬಳಸುವ ಜನರು. ಈ ತಂತ್ರಾಂಶಗಳನ್ನು ಹೆಚ್ಚು ಹೆಚ್ಚು ಜನ, ಬೇರೇ ಬೇರೇ ಕ್ಷೇತ್ರಗಳಲ್ಲಿ ಬಳಸಿದಾಗ ಮಾತ್ರ ಹೊಸ ಅಗತ್ಯಗಳು ಕಂಡು ಬರುತ್ತವೆ. ಈಗಿರುವ ಪರಿಹಾರಗಳು ಹಳತಾಗುತ್ತವೆ. ಹೊಸ ಪರಿಹಾರಗಳ ಅವಶ್ಯಕತೆ ಉಂಟಾಗುತ್ತೆ. ಹಾಗಾದಾಗ, ಈಗಿರುವ ಸ್ಟ್ಯಾಂಡರ್ಡ್ ಗಳನ್ನು ತಿದ್ದುಪಡಿ ಮಾಡಬೇಕಾದ ಅಗತ್ಯವೂ ಕಾಣಿಸಿಕೊಳ್ಳಬಹುದು.

ಬರಹ, ಕ.ಗ.ಪ, ಯೂನಿಕೋಡ್ ಇತ್ಯಾದಿ ಕನ್ನಡದಲ್ಲಿ ಯಾವುದೇ ಸಮಸ್ಯೆಗಳನ್ನು ಹುಟ್ಟು ಹಾಕಿಲ್ಲ. ಬದಲಿಗೆ ಕನ್ನಡವನ್ನು ಹೇಗೆ ಬೇರೆ ಬೇರೆ ರೀತಿ ಬಳಸಬಹುದೆಂದು ತೋರಿಸಿಕೊಟ್ಟಿವೆ. ಇವೆಲ್ಲವೂ ಕನ್ನಡದ ಸಮಸ್ಯೆಗಳನ್ನು ಬೇರೆಬೇರೆ ಕೋನಗಳಿಂದ ನೋಡಿ ಪರಿಹಾರವನ್ನು ಸೂಚಿಸಿವೆ. ಕನ್ನಡಕ್ಕೆ ಒಂದು ಗಟ್ಟಿಯಾದ ಫ಼್ರೇಮ್‌ವರ್ಕ್ ಹಾಕಿಹೊಟ್ಟಿವೆ. ೫ ವರ್ಷಗಳ ಹಿಂದೆ ಗಣಕಗಳಲ್ಲಿ ಕನ್ನಡವನ್ನು ನೋಡುವುದು ಆಶ್ಚರ್ಯಕರ ವಿಷಯವಾಗಿತ್ತು. ಜನಸಾಮಾನ್ಯರು ಗಣಕಗಳಲ್ಲಿ ಕನ್ನಡವನ್ನು ಉಪಯೋಗಿಸುವುದು ಕನಸಿನ ಮಾತು ಆಗಿತ್ತು. ಅಂತರಜಾಲದಲ್ಲಿ ಸಂಜೆವಾಣಿ, ಪ್ರಜಾವಾಣಿ ಬಿಟ್ಟರೆ ಮೂರನೆಯ ವೆಬ್‌ಸೈಟನ್ನು ಹುಡುಕುವುದು ಅಸಾಧ್ಯವಾಗಿತ್ತು. ಇಂದು ಪ್ರಪಂಚಾದ್ಯಂತ ಕನ್ನಡಿಗರ ಗಣಕಗಳಲ್ಲಿ ಕನ್ನಡ ತಂತ್ರಾಂಶಗಳು ಸ್ಥಾಪಿತವಾಗಿವೆ. ನೂರಾರು ಹವ್ಯಾಸಿ ಕನ್ನಡ ತಾಣಗಳು ಕಾಣಿಸಿಕೊಂದಿವೆ. ಅಬಾಲವೃದ್ಧರೂ ಕನ್ನಡದಲ್ಲಿ ಪತ್ರ ವ್ಯವಹಾರ, ದಾಖಲೆಗಳನ್ನು ತಯಾರಿಸಬಹುದಾಗಿದೆ. ಗಣಕಗಳಲ್ಲಿ ಕನ್ನಡದ ಅಭಿವೃದ್ಧಿ ಆಶಾದಾಯಕವಾಗಿದೆ. ಇನ್ನೂ ಕೆಲವು ಕೆಲಸಗಳು ಆಗಬೇಕಿವೆ. ಇವು ಆದಷ್ಟು ಬೇಗ ಕಾರ್ಯಗತವಾಗಲಿ ಎಂದು ಹಾರೈಸೋಣ.

ಯೂನಿಕೋಡ್ ನವರು ಕನ್ನಡಕ್ಕೆ ನಿಗಧಿ ಮಾಡಿರುವ ಅಕ್ಷರ ಗಳಲ್ಲಿ ಕೆಲವು ಕನ್ನಡಕ್ಕೆ ಅಗತ್ಯವಲ್ಲದವು ಇವೆ. ಮತ್ತೆ ಕೆಲವು ಅಗತ್ಯವಾದ ಅಕ್ಷರಗಳು ಬಿಟ್ಟುಹೋಗಿವೆ. ಇದರ ಜೊತೆಗೆ ಮೈಕ್ರೊಸಾಫ಼್ಟ್ ನವರ “ತುಂಗಾ” ಯೂನಿಕೋಡ್ ಫ಼ಾಂಟಿನಲ್ಲೂ ಕೆಲವು ಬದಲಾವಣೆಗಳ ಅಗತ್ಯವಿದೆ. ಯೂನಿಕೋಡ್‌ನ ಕನ್ನಡ ಸಾರ್ಟಿಂಗ್ ವ್ಯವಸ್ಥೆಯಲ್ಲೂ ಕೆಲವು ಬದಲಾವಣೆ ಆಗಬೇಕಿದೆ. ಈ ಎಲ್ಲಾ ಅಂಶಗಳು ಮುಂದಿನ ಅವೃತಿಗಳಲ್ಲಿ ಸರಿಹೋಗಲಿ.

ಎಲ್ಲಾ ಕನ್ನಡ ತಂತ್ರಾಂಶಗಳೂ ತಮ್ಮ ಟ್ರೂಟೈಪ್ ಫ಼ಾಂಟುಗಳಿಗೆ ಸರ್ಕಾರ ಅನುಮೋದಿಸಿರುವ ಶಿಷ್ಟತೆಯನ್ನು ಬಳಸಲಿ. ಮತ್ತು ತಮ್ಮ ಈಗಿರುವ ಫ಼ಾಂಟುಗಳಿಂದ ಶಿಷ್ಟವಾದ ಫ಼ಾಂಟುಗಳಿಗೆ ಪರಿವರ್ತಿಸಲು ಸೌಲಭ್ಯವನ್ನು ಕಲ್ಪಿಸಲಿ. ಮತ್ತು ಈಗಾಗಲೇ ಲಭ್ಯವಿರುವ ಮಾಹಿತಿಯನ್ನು ಯೂನಿಕೋಡ್‌ಗೆ ಪರಿವರ್ತಿಸಲು ಸೌಲಭ್ಯವನ್ನು ಕಲ್ಪಿಸಲಿ.

ಎಲ್ಲಾ ಕನ್ನಡ ತಂತ್ರಾಂಶಗಳೂ ಸರ್ಕಾರ ಅನುಮೋದಿಸಿರುವ ಕ.ಗ.ಪ ಕೀಲಿಮಣೆಯನ್ನು ಅಳವಡಿಸಲಿ. ಇದರಿಂದ ಬಳಕೆದಾರರು ಒಂದು ಕನ್ನಡ ತಂತ್ರಾಂಶದಿಂದ ಇನ್ನೊಂದಕ್ಕೆ ವರ್ಗವಾದರೆ ಯಾವುದೇ ಅಡಚಣೆಯಿರುವುದಿಲ್ಲ. ಈ ಕೀಲಿಮಣೆಯ ಜೊತೆಗೆ ಬೇಕಾದರೆ, ಲಿಪ್ಯಂತರಣ ಕೀಲಿಮಣೆಯನ್ನೋ (ಬರಹದಲ್ಲಿರುವಂತೆ), ಅಥವಾ ಇನ್ನೂ ಉತ್ತಮವಾದ, ಸರಳವಾದ ಕ್ರಮವನ್ನು ಅಳವಡಿಸಿದರೆ ಸ್ವಾಗತಿಸೋಣ.

ಸರಕಾರದ ಎಲ್ಲಾ ಇಲಾಖೆಗಳು ಕನ್ನಡದ ಮೂಲಕ ಕೆಲಸ ನಡೆಸುವಂತಾಗಲಿ, ತನ್ಮೂಲಕ ಕನ್ನಡ ಅಕ್ಷರಗಳಿಗೆ ಬೇಡಿಕೆ ಹೆಚ್ಚಾಗಲಿ. ಕನ್ನಡಿಗರಿಗೆ ಕನ್ನಡ ಒಂದು ಹವ್ಯಾಸವಾಗದೆ, ಅದೇ ಬದುಕಾಗಲಿ.

-ಶೇಷಾದ್ರಿವಾಸು


ಯೂನಿಕೋಡ್, ವಿಂಡೋಸ್ ಎಕ್ಸ್‌ಪಿ ಮತ್ತು ಕನ್ನಡ
(ಮಾರ್ಚ್ ೨೦೦೩ ರ ಸಂಪಾದಕೀಯಕ್ಕೆ ಪ್ರತಿಕ್ರಿಯಾತ್ಮಕ ಲೇಖನ)

ಇತ್ತೀಚೆಗೆ ವಿಂಡೋಸ್ ಎಕ್ಸ್‌ಪಿ ಗಣಕ ಕಾರ್ಯಾಚರಣ ವ್ಯವಸ್ಥೆಯು ಬಳಕೆಗೆ ಬರುತ್ತಿದೆ. ಇದರೊಂದಿಗೆ ಯೂನಿಕೋಡ್ ಎಂಬ ಹೊಸ ಸಂಕೇತ ವ್ಯವಸ್ಥೆಯೂ ಜಾರಿಗೆ ಬರುತ್ತಿದೆ. ಈ ಎರಡೂ ವ್ಯವಸ್ಥೆಗಳಿಂದ ಗಣಕಗಳ ಬಳಕೆದಾರರಿಗೆ ಅನೇಕಾನೇಕ ಅನುಕೂಲತೆಗಳು ಒದಗುತ್ತಿವೆ. ಗಣಕಗಳಲ್ಲಿ ಇಂಗ್ಲಿಷ್ ಬಳಸುವವರು ವಿಂಡೋಸ್‌ನ ೯೫,೯೮, ೨೦೦೦, ಎನ್‌ಟಿ ಮುಂತಾದ ವಿವಿಧ ಆವೃತ್ತಿಗಳಿಂದ ವಿಂಡೋಸ್ ಎಕ್ಸ್‌ಪಿ ಆವೃತ್ತಿಗೆ ಬದಲಾಯಿಸಿಕೊಳ್ಳಲು ಯಾವ ತಾಂತ್ರಿಕ ಸಮಸ್ಯೆಗಳೂ ಉಂಟಾಗುವುದಿಲ್ಲ. ಈ ನೂತನ ಆವೃತ್ತಿಯಲ್ಲಿ ನೀಡಿರುವ ಹೆಚ್ಚಿನ ಸೌಲಭ್ಯಗಳನ್ನು ಅರಿತು ಬಳಸಿಕೊಳ್ಳುವುದಷ್ಟೇ ಬಳಕೆದಾರರ ಕೆಲಸವಾಗಿದೆ. ಅಂತೆಯೇ ಇಂಗ್ಲಿಷ್ ಮಾಧ್ಯಮದಲ್ಲಿನ ವ್ಯವಹಾರಗಳಿಗೆ ಯೂನಿಕೋಡ್ ಸಂಕೇತ ವ್ಯವಸ್ಥೆಯೂ ಯಾವ ಗೊಂದಲಗಳನ್ನೂ ಉಂಟುಮಾಡುವುದಿಲ್ಲ. ಯೂನಿಕೋಡ್ ವ್ಯವಸ್ಥೆಯು ಗಣಕದ ಆಂತರಿಕ ವ್ಯವಹಾರ ಮತ್ತು ಗಣಕ ಕಾರ್ಯಾಚರಣ ವ್ಯವಸ್ಥೆಯ ತಾಂತ್ರಿಕ ಕ್ರಿಯೆಗಳಿಗೆ ಸಂಬಂಧಿಸಿದ್ದು. ಇದು ಬಳಕೆದಾರರ ತಿಳಿವಳಿಕೆಗೆ ಬರುವುದಿಲ್ಲ ಮತ್ತು ಬಳಕೆದಾರರು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಬಳಕೆದಾರರು ತಮ್ಮಲ್ಲಿರುವ ಗಣಕದಲ್ಲೇ ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣ ವ್ಯವಸ್ಥೆಯನ್ನು ಅನುಸ್ಥಾಪಿಸಿಕೊಂಡರೆ ಸಾಕು. ಎಂದಿನಂತೆ ಗಣಕವನ್ನು ಚಾಲನೆಗೊಳಿಸಿ ಈಗಾಗಲೇ ಬಳಸುತ್ತಿರುವ ಕೀಲಿಮಣೆಯನ್ನೇ ಎಂದಿನಂತೆಯೇ ಬಳಸಬಹುದು. ಕನ್ನಡಕ್ಕೆ ಸಂಬಂಧಿಸಿದಂತೆಯೂ ಈಗಿರುವ ಕೀಲಿಮಣೆ ವಿನ್ಯಾಸ ಅಂತೆಯೇ ಬಳಕೆಗೆ ದೊರಕುತ್ತದೆ.

ಆದರೆ ಯೂನಿಕೋಡ್ ಸಂಕೇತ ವ್ಯವಸ್ಥೆಯನ್ನು ಆಧಾರವಾಗಿಟ್ಟುಕೊಂಡು ಗಣಕಗಳಲ್ಲಿ ಕನ್ನಡವನ್ನು ನೀಡುವ ಹಾದಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಲಿಪಿಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳ ಸರಮಾಲೆ ಆರಂಭವಾಗುತ್ತದೆ.

ಆಸ್ಕಿ (ಎ‌ಎಸ್‌ಸಿ‌ಐ‌ಐ – ಅಮೆರಿಕನ್ ಸ್ಟಾಂಡರ್ಡ್ ಕೋಡ್ ಫಾರ್ ಇನ್‌ಫರ್‌ಮೇಶನ್ ಇಂಟರ್‌ಚೇಂಜ್) ಮತ್ತು ಇಸ್ಕಿ (ಐ‌ಎಸ್‌ಸಿ‌ಐ‌ಐ – ಇಚಿಡಿಯನ್ ಸ್ಕ್ರಿಪ್ಟ್ ಕೋಡ್ ಫಾರ್ ಇನ್‌ಫರ್‌ಮೇಶನ್ ಇಂಟರ್‌ಚೇಂಜ್) ಸಂಕೇತಗಳು
ಯಾವುದೇ ಭಾಷೆಯ ಅಕ್ಷರಗಳನ್ನು ಗಣಕಗಳಲ್ಲಿ ದ್ವಿಮಾನಾಂಕ ಸಂಕೇತಗಳಾಗಿ ಶೇಖರಿಸಿಡಲಾಗುತ್ತದೆ (ಅಂದರೆ ೦ ಮತ್ತು ೧ ಎರಡೇ ಸಂಕೇತಗಳನ್ನು ಬಳಸುವ ಸಂಖ್ಯೆಗಳು). ಇಂತಹ ಪ್ರತಿ ಸಂಖ್ಯೆಗೂ ಗರಿಷ್ಠ ಎಂಟು ಅಂಕಿ ಸ್ಥಾನಗಳೆಂದು ನಿಗದಿಪಡಿಸಲಾಗಿದೆ. ಇದನ್ನೇ ಆಸ್ಕಿ ಎಂದು ಕರೆಯುತ್ತಾರೆ. ಈ ಗರಿಷ್ಠ ಮಿತಿಯ ಕಾರಣದಿಂದ ಅಕ್ಷರಗಳನ್ನು ಪ್ರತಿನಿಧಿಸಲು ೨೫೬ ಅವಕಾಶಗಳಿರುತ್ತವೆ. ಇಂಗ್ಲಿಷ್‌ನಲ್ಲಾದರೋ ‘ಎ’ ಯಿಂದ ‘ಝಡ್’ ವರೆಗೆ ಸಣ್ಣಕ್ಷರಗಳನ್ನೂ ಸೇರಿದಂತೆ ಇಂಗ್ಲಿಷ್‌ಗಾಗಿ ಗಣಕದಲ್ಲಿ ಒಟ್ಟು ೫೨ ಅವಕಾಶಗಳು ಮಾತ್ರ ಸಾಕು. ಕನ್ನಡದಲ್ಲಾದರೋ ಸ್ವರಗಳು, ವ್ಯಂಜನಗಳು, ವ್ಯಂಜನಗಳೊಡನೆ ಸ್ವರಗಳು ಸೇರಿದ ಗುಣಿತಾಕ್ಷರಗಳು, ಒಂದಕ್ಕಿಂತ ಹೆಚ್ಚು ವ್ಯಂಜನಗಳು ಸೇರಿದ ಸಂಯುಕ್ತಾಕ್ಷರಗಳು ಮುಂತಾಗಿ ಸಹಸ್ರಾರು ಸಂಖ್ಯೆಯ ಅಕ್ಷರಗಳಾಗುತ್ತವೆ. ಅದೃಷ್ಟವಶಾತ್ ಗಣಕಗಳ ಉನ್ನತ ತಾಂತ್ರಿಕತೆಯ ಕಾರಣದಿಂದ ಸುಮಾರು ೧೫೦ ಅಕ್ಷರಭಾಗಗಳಿಂದ ಇವೆಲ್ಲವನ್ನೂ ಪಡೆಯಬಹುದಾಗಿದೆ. ಕನ್ನಡಕ್ಕೆ ಬೇಕಾದ ಈ ಅಕ್ಷರಭಾಗಗಳು ಮತ್ತು ಇವುಗಳಿಗೆ ಆಸ್ಕಿ ಸಂಕೇತಗಳನ್ನು ಕರ್ನಾಟಕ ಸರ್ಕಾರವು ನಿಗದಿಗೊಳಿಸಿದೆ. ಆದರೆ, ಈ ರೀತಿಯ ಸಂಕೇತೀಕರಣದಿಂದ ಗಣಕಗಳಲ್ಲಿ ದಾಖಲಾಗುವ ಮಾಹಿತಿಗಳ ಅಕಾರಾದಿ ವರ್ಗೀಕರಣ, ಸೂಚೀಕರಣ ಮುಂತಾದ ಭಾಷಾ ಸಂಬಂಧಿತ ಅತ್ಯಗತ್ಯ ಕ್ರಿಯೆಗಳನ್ನು ನಡೆಸಲಾಗುವುದಿಲ್ಲ. ಆದ್ದರಿಂದಲೇ ಈ ಮಾಹಿತಿಗಳನ್ನು ಸ್ವರ ವ್ಯಂಜನಗಳ ಮೂಲಾಕ್ಷರಗಳನ್ನಾಗಿ ಪರಿವರ್ತಿಸಿ ಅವುಗಳಿಗೆ ಸಂಕೇತಗಳನ್ನು ಗೊತ್ತುಪಡಿಸಿ ಮೇಲ್ಕಂಡ ಭಾಷಾ ಸಂಸ್ಕರಣೆ ಕಾರ್ಯಗಳನ್ನು ಕೈಗೊಳ್ಳಬೇಕು (ಉದಾಹರಣೆಗೆ ಕನ್ನಡ ಪದವನ್ನು ಗಣಕದೊಳಗೆ ಕನ್‌ನಡ ಎಂದು ಪರಿವರ್ತಿಸುವುದು). ಇಂತಹ ಕ್ರಯೆಗಳಿಗೆ ಸೂಕ್ತವಾದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಬಹುದು. ಈ ತಾತ್ಕಾಲಿಕ ಬದಲೀಕರಣ ಮತ್ತು ಸಂಕೇತೀಕರಣಗಳು ಗಣಕಗಳ ಆಂತರಿಕ ಕ್ರಿಯೆಗಳು. ಒಟ್ಟಿನಲ್ಲಿ ಕನ್ನಡ ಅಥವಾ ಇತರ ಭಾಷೆಗಳಿಗೆ (೧) ಅಕ್ಷರಭಾಗಗಳ ಸಂಕೇತೀಕರಣ ಮತ್ತು (೨) ಮೂಲಾಕ್ಷರಗಳ ಸಂಕೇತೀಕರಣ ಎರಡೂ ಅವಶ್ಯಕ.

ಸಾಮಾನ್ಯವಾಗಿ ಎಲ್ಲ ಭಾರತೀಯ ಭಾಷೆಗಳೂ ಒಂದೇ ರೀತಿಯ ರಚನೆಯನ್ನು ಹೊಂದಿರುವುದರಿಂದ ಒಂದು ಭಾರತೀಯ ಭಾಷೆಯಿಂದ ಮತ್ತೊಂದು ಭಾರತೀಯ ಭಾಷೆಗೆ ಲಿಪ್ಯಂತರಣ ಸಾಧ್ಯತೆ ಸುಲಭವಾಗುತ್ತದೆ. ಆದ್ದರಿಂದ ಎಲ್ಲ ಭಾರತೀಯ ಭಾಷೆಗಳ ಮೂಲಾಕ್ಷರಗಳಿಗೆ (ಸ್ವರಗಳು ಮತ್ತು ವ್ಯಂಜನಗಳು) ಸಮಾನ ಆಸ್ಕಿ ಸಂಕೇತಗಳನ್ನು ನಿಗದಿಪಡಿಸಲಾಗಿದೆ. ಈ ಸಂಕೇತ ವ್ಯವಸ್ಥೆಯನ್ನು ಇಸ್ಕಿ ಎಂದು ಕರೆಯಲಾಗಿದೆ. ಇಸ್ಕಿಗೆ ಸಂಬಂಧಿಸಿದಂತೆ ‘ಅ’ ಸ್ವರಯುಕ್ತವಾದ ವ್ಯಂಜನಗಳನ್ನು (ಕ, ಗ ಇತ್ಯಾದಿ) ಮೂಲವಾಗಿಟ್ಟುಕೊಳ್ಳಲಾಗಿದೆ. ಆದರೆ ‘ಅ’ಕಾರ ಸೇರಿದ ವ್ಯಂಜನಗಳನ್ನು ಮೂಲವಾಗಿಟ್ಟುಕೊಳ್ಳುವುದರಿಂದ ಗಣಕಗಳಲ್ಲಿ ಭಾಷಾಸಂಸ್ಕರಣೆ ಮಾಡುವಾಗ ಸಮಸ್ಯೆಗಳಾಗುವುದರಿಂದ ಮೂಲವ್ಯಂಜನಗಳನ್ನೇ (ಕ್, ಗ್ ಇತ್ಯಾದಿ) ಸಂಕೇತೀಕರಣಗೊಳಿಸಬೇಕು ಎಂಬ ಕೂಗು, ಒತ್ತಾಯಗಳಿವೆ. ಈ ಎರಡೂ ವಿಧಾನಗಳ ಪರ ಹಾಗೂ ವಿರುದ್ಧವಾದ ವಾದ ವಿವಾದಗಳು ತೀವ್ರತರವಾದ ವಾಕ್ ಸಮರಗಳಿಗೆ ಕಾರಣವಾಗಿವೆ. ಸದ್ಯದಲ್ಲಿ ‘ಅ’ ಸ್ವರಯುಕ್ತ ಸಂಕೇತೀಕರಣವೇ ಜಾರಿಯಲ್ಲದೆ.

ಯೂನಿಕೋಡ್
ಯೂನಿಕೋಡ್ ಎಂಬುದು ೧೬ ಅಂಕಿಸ್ಥಾನಗಳುಳ್ಳ ಎಲ್ಲ ಭಾಷೆಗಳಿಗೆ ನಿಗದಿತವಾಗಿರುವ ಸಂಕೇತಗಳ ಸೂಚಿ. ಇದನ್ನೇ ಎಲ್ಲ ಭಾಷೆಗಳೂ ಅಧಿಕೃತ ಅಂತಾರಾಷ್ಟ್ರೀಯ ಶಿಷ್ಟತೆ ಎಂದು ಪರಿಗಣಿಸಿ ಬಳಸುತ್ತಾರೆ. ಹೀಗೆ ಹೊಸದಾಗಿ ರೂಪಿತವಾಗಿರುವ ೧೬ ಅಂಕಿಸ್ಥಾನಗಳುಳ್ಳ ಯೂನಿಕೋಡ್‌ನಲ್ಲಿ ಭಾರತೀಯ ಭಾಷೆಗಳಿಗೆ ಎಂಟು ಅಂಕಿಸ್ಥಾನಗಳುಳ್ಳ ಇಸ್ಕಿಯನ್ನೇ ಆಧಾರವಾಗಿಟ್ಟುಕೊಳ್ಳಲಾಗಿದೆ. ಗಣಕಕ್ಕೆ ಊಡಿಸುವ ಎಲ್ಲ ಮಾಹಿತಿಗಳನ್ನೂ ಯೂನಿಕೋಡ್ ಸಂಕೇತಗಳನ್ನಾಗಿಯೇ (ಮೂಲಾಕ್ಷರ ಸಂಕೇತಗಳನ್ನಾಗಿ) ಗಣಕಗಳಲ್ಲಿ ಶೇಖರಿಸಿಡಲಾಗುವುದು. ಗಣಕಗಳೊಳಗೆ ಈ ಸಂಕೇತಗಳನ್ನು ಅಕ್ಷರಭಾಗ ಸಂಕೇತಗಳನ್ನಾಗಿ ಪರಿವರ್ತಿಲಾಗುವುದು. ಈ ಸಂಕೇತಗಳಿಗೆ ಗೊತ್ತುಪಡಿಸಿದ ಅಕ್ಷರಭಾಗಗಳು ಅಂದವಾಗಿ ಜೋಡಣೆಗೊಂಡು ತೆರೆಯಮೇಲೆ ಮೂಡುತ್ತವೆ ಅಥವಾ ಕಾಗದದ ಮೇಲೆ ಮುದ್ರಣಗೊಳ್ಳುತ್ತವೆ. ಇದಿಷ್ಟು ಯೂನಿಕೋಡ್ ವೃತ್ತಾಂತ.

ಯೂನಿಕೋಡ್‌ನ ಉಪಯುಕ್ತತೆ ಮತ್ತು ಸದ್ಯದಲ್ಲಿ ಯೂನಿಕೋಡ್‌ಗೆ ಬದಲಾಯಿಸುವಾಗ ಕನ್ನಡವು ಎದುರಿಸುತ್ತಿರುವ ಸಮಸ್ಯೆಗಳನ್ನು ಈಗ ಪರಿಶೀಲಿಸೋಣ.

ಉಪಯುಕ್ತತೆ:
ಬಹುಮುಖ್ಯವಾಗಿ ಗಣಕಗಳಲ್ಲಿ ಬಹುಭಾಷಾ ಬಳಕೆಯು ಸುಲಭವಾಗುತ್ತದೆ. ಅಂದರೆ ಒಂದೇ ಅಕ್ಷರಶೈಲಿಯಲ್ಲಿ (ಉದಾ: ಟೈಮ್ಸ್ ರೋಮನ್) ಬೇರೆ ಬೇರೆ ಭಾಷಾ ವಿಭಾಗಗಳಿರಲು ಸಾಧ್ಯ. ಆದ್ದರಿಂದ ಒಂದು ಅಕ್ಷರಶೈಲಿಯನ್ನು ಆಯ್ದುಕೊಂಡರೆ ಸಾಕು. ಅದರಿಂದಲೇ ವಾಕ್ಯದಲ್ಲಿ ನಮಗೆ ಬೇಕಾದ ವಿವಿಧ ಭಾಷಾ ಮಾಹಿತಿಗಳನ್ನು ಕೀಲಿಸಬಹುದು.
ಎಲ್ಲ ಭಾಷೆಗಳಿಗೆ ಆಗುವಂತೆ ಅನ್ವಯಿಕ ತಂತ್ರಾಂಶಗಳನ್ನು ಸಾರ್ವತ್ರೀಕರಿಸಬಹುದು.
ಅಂತರಜಾಲ, ವಿದ್ಯುನ್ಮಾನ ಅಂಚೆ ಸೌಲಭ್ಯಗಳು ಬಹುಭಾಷಾ ಮಾಧ್ಯಮದಲ್ಲಿರುವಂತೆ ಮಾಡಬಹುದು.

ಒಟ್ಟಿನಲ್ಲಿ ಗಣಕಗಳು ಎಲ್ಲ ಭಾಷಾಬಾಂಧವರ ಆಶೋತ್ತರಗಳಿಗೆ ಸುಲಭವಾಗಿ ಸ್ಪಂದಿಸುವಂತೆ ಮಾಡಬಹುದು.

ಸಮಸ್ಯೆಗಳು:
ಸುಮಾರು ಆರುವರ್ಷಗಳ ಹಿಂದೆಯೇ ಭಾರತೀಯ ಭಾಷೆಗಳಿಗೆ ಯೂನಿಕೋಡ್ ಸಂಕೇತಗಳನ್ನು ನಿರ್ಧರಿಸುವಾಗ ಇಸ್ಕಿಯನ್ನೇ ಆಧಾರವಾಗಿಟ್ಟುಕೊಳ್ಳಲಾಯಿತು. ಇದರಿಂದಾಗಿ ಇಸ್ಕಿಯಿಂದ ಉಂಟಾಗುತ್ತಿದ್ದ ಸಮಸ್ಯೆಗಳು ಯೂನಿಕೋಡ್‌ನಲ್ಲೂ ಕಂಡುಬರುತ್ತಿವೆ. ಈಗ ೮ ಅಂಕಿಸ್ಥಾನಗಳನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಗೊಂಡಿರುವ ವಿವಿಧ ಭಾಷಾ ಲಿಪಿ ತಂತ್ರಾಂಶಗಳು ಸಾಮಾನ್ಯವಾಗಿ ಅಕ್ಷರಭಾಗ ಸಂಕೇತಗಳನ್ನೇ ಗಣಕಗಳಲ್ಲಿ ಶೇಖರಿಸಿಡುತ್ತಿವೆ. ಆದ್ದರಿಂದ ಇಸ್ಕಿ ತಂದೊಡ್ಡುವ ಸಮಸ್ಯೆಗಳಿಂದ ದೂರವಾಗಿವೆ; ಭಾಷಾ ಸಂಸ್ಕರಣೆಗಾಗಿ ಆಯಾ ಭಾಷೆಗಳಿಗೆ ಪ್ರತ್ಯೇಕ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಆದರೆ ಯೂನಿಕೋಡ್ ಪದ್ಧತಿಗೆ ಬದಲಾಗುವಾಗ ಈಗಾಗಲೇ ಅಧಿಕೃತಗೊಂಡಿರುವ ಮೂಲಾಕ್ಷರಗಳು ಮತ್ತು ೧೬ ಅಂಕಿಸ್ಥಾನದ ಯೂನಿಕೋಡ್ ಸಂಕೇತಗಳನ್ನೇ ಬಳಸುವುದು ಅನಿವಾರ್ಯ. ಇದರಿಂದ ಸಮಸ್ಯೆಗಳು ಉಂಟಾಗುತ್ತಿರುವುದನ್ನು ಮನಗಂಡ ಕೇಂದ್ರಸರ್ಕಾರದ ಮಾಹಿತಿ ತಂತ್ರeನ ಇಲಾಖೆಯು ಏರ್ಪಡಿಸಿದ್ದ ಸಭೆಗಳಲ್ಲಿ ಎಲ್ಲ ಭಾರತೀಯ ಭಾಷಾಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಸ್ತುತ ಇರುವ ಯೂನಿಕೋಡ್ ಶಿಷ್ಟತೆಗಳಲ್ಲಿ ಪ್ರತಿಭಾಷೆಗೂ ಸಂಬಂಧಿಸಿದಂತೆ ಹಲವಾರು ಅಕ್ಷರಗಳು ಮತ್ತು ಸಂಕೇತಗಳು ಸೇರ್ಪಡೆಯಾಗಬೇಕಾದ ಅವಶ್ಯಕತೆಗಳು ಕಂಡುಬಂದವು. ಈ ಸೇರ್ಪಡೆಗಳನ್ನು ಅಂಗೀಕರಿಸಿ ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ನೂತನ ಆವೃತ್ತಿಯನ್ನು ಅಧಿಕೃತವಾಗಿ ಪ್ರಕಟಿಸುವವರು ‘ಯೂನಿಕೋಡ್ ಕನ್ಸೋರ್ಷಿಯಮ್’ ಎಂಬ ಅಂತಾರಾಷ್ಟ್ರೀಯ ಪರಿಷತ್ತು. ಈ ಬದಲಾವಣೆಗಳನ್ನು ಮಾಡಬೇಕೆಂಬ ಬೇಡಿಕೆಗಳನ್ನು ಮಂಡಿಸಿ ಒತ್ತಾಯಿಸಬೇಕಾದವರು ಈ ಪರಿಷತ್ತಿನ ಅಧಿಕೃತ ಸದಸ್ಯತ್ವವನ್ನು ಪಡೆದಿರುವ ಕೇಂದ್ರ ಸರ್ಕಾರದ ಮಾಹಿತಿ ತಂತ್ರeನ ಇಲಾಖೆ. ಈ ಇಲಾಖೆಗೆ ಸರಿಯಾದ ಮಾಹಿತಿಗಳನ್ನು ಒದಗಿಸುವುದು ಆಯಾ ಭಾಷಾ ಸರ್ಕಾರಗಳ ಜವಾಬ್ದಾರಿ. ಕನ್ನಡಕ್ಕೆ ಸಂಬಂಧಿಸಿದಂತೆ ಈ ಪ್ರಕ್ರಿಯೆಯು ೧೯೯೯ ನೇ ಇಸವಿಯಲ್ಲಿ ಆರಂಭವಾಯಿತು. ಹಲವಾರು ಹಿರಿಯ ಕನ್ನಡ ಭಾಷಾವಿದ್ವಾಂಸರು ಹಾಗೂ ಗಣಕ ತಜ್ಞರೊಡನೆ ವಿಪುಲವಾಗಿ ಚರ್ಚಿಸಿ ೨೦೦೦ನೇ ಇಸವಿಯವೇಳೆಗೆ ಕನ್ನಡಕ್ಕಾಗಿ ಯೂನಿಕೋಡ್ ದಾಖಲೆಯನ್ನು ಸಿದ್ಧಪಡಿಸಲಾಯಿತು. ಆ ವರ್ಷ ನವೆಂಬರ್ ತಿಂಗಳಲ್ಲಿ ಕೇಂದ್ರಸರ್ಕಾರದ ಮಾಹಿತಿ ತಂತ್ರeನ ಇಲಾಖೆಯು ಏರ್ಪಡಿಸಿದ್ದ ಸಭೆಯಲ್ಲಿ ಇದನ್ನು ಮಂಡಿಸಲಾಯಿತು. ಆಗ ನಡೆದ ಚರ್ಚೆಗಳು ಮತ್ತು ಹೊರಬಂದ ಸಲಹೆಗಳು ಮುಂತಾದವನ್ನು ಪರಿಗಣಿಸಿ ಮತ್ತೆ ಹಲವಾರು ವಿಚಾರಗಳನ್ನು ಪರಿಶೀಲಿಸಿದ ನಂತರ ೨೦೦೧ ನೇ ಇಸವಿಯಲ್ಲಿ ನಡೆದ ಸಭೆಯಲ್ಲಿ ‘ಕನ್ನಡಕ್ಕಾಗಿ ಯೂನಿಕೋಡ್’ ವರದಿಯನ್ನು ಅಂತಿಮಗೊಳಿಸಲಾಯಿತು. ಇದನ್ನು ಕೇಂದ್ರಸರ್ಕಾರದ ಮಾಹಿತಿ ತಂತ್ರeನ ಇಲಾಖೆ ಹಾಗೂ ಯೂನಿಕೋಡ್ ಕನ್ಸೋರ್ಷಿಯಮ್ ಸಂಸ್ಥೆಗೆ ಕಳುಹಿಸಲಾಗಿದೆ. ಇದನ್ನೇ ಅಧಿಕೃತವೆಂದು ಘೋಷಿಸಿ ಯೂನಿಕೋಡ್‌ನ ಮುಂದಿನ ಆವೃತ್ತಿಯಲ್ಲಿ ಅಳವಡಿಸಬೇಕಾಗಿದೆ. ಅಲ್ಲಿಯವರೆಗೆ ಕನ್ನಡಕ್ಕೆ ತೊಂದರೆ ತಪ್ಪಿದ್ದಲ್ಲ.

ಹೀಗೆ ಸಿದ್ಧವಾಗಿರುವ ಯೂನಿಕೋಡ್ ಮೂಲಾಕ್ಷರಗಳು ಹಾಗೂ ಹಲವು ಅಕ್ಷರಚಿಹ್ನೆಗಳ ೧೬ ಅಂಕಿಸ್ಥಾನ ಸಂಕೇತಗಳನ್ನು ಗಣಕಗಳಲ್ಲಿ ಕನ್ನಡದ ಲಿಪಿಯ ದಾಖಲೆಗಾಗಿ ಬಳಸಬೇಕಾಗಿದೆ. ಹೀಗೆ ದಾಖಲಾಗುವ ಸಂಕೇತಗಳನ್ನು ತೆರೆಯಮೇಲೆ ಮೂಡುವ ಅಕ್ಷರಭಾಗಗಳ ಬೇರೊಂದು ಸಂಕೇತ ವ್ಯವಸ್ಥೆಗೆ ಪರಿವರ್ತಿಸಬೇಕು. ಈ ಅಕ್ಷರಭಾಗಗಳ ಶಿಷ್ಟತೆ ಆಗಬೇಕು ಮತ್ತು ಅಕ್ಷರಗಳನ್ನು ತೆರೆಯ ಮೇಲೆ ಮೂಡಿಸುವ / ಕಾಗದದ ಮೇಲೆ ಮುದ್ರಿಸುವ ಪ್ರಕ್ರಿಯೆಗಳಿಗೆ ಅಗತ್ಯವಾದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಬೇಕು. ಇದು ಖಾಸಗಿ ಪ್ರಯತ್ನವಾಗಬಹುದು (ಈಗಾಗಲೇ ಇರುವ ನುಡಿ, ಬರಹ, ಶ್ರೀಲಿಪಿ ಇತ್ಯಾದಿ ಲಿಪಿ ತಂತ್ರಾಂಶಗಳ ಯೂಲಿಕೋಡ್ ಆವೃತ್ತಿಗಳಾಗಬಹುದು) ಅಥವಾ ಅತಿಮುಖ್ಯವಾಗಿ ಮೈಕ್ರೋಸಾಫ಼್ಟ್ ಕಂಪನಿಯವರೇ ತಮ್ಮ ವಿಂಡೋಸ್ ಎಕ್ಸ್‌ಪಿ ಆವೃತ್ತಿಯಲ್ಲಿ ಕನ್ನಡವನ್ನು ನೀಡಬಹುದು. ಈ ಯಾವುದೇ ಪ್ರಯತ್ನವಾಗಲೀ ಅದು ಕನ್ನಡದ ಜಾಯಮಾನಕ್ಕೆ ಅನುಗುಣವಾಗಿರಬೇಕು; ಭಾಷೆ ಹಾಗೂ ಬರವಣಿಗೆಯ ಎಲ್ಲ ಸಾಧ್ಯತೆಗಳಿಗೂ ಸ್ಪಂದಿಸಬೇಕು; ಅಕಾರಾದಿ ವರ್ಗೀಕರಣ ಮುಂತಾದ ಅನೇಕ ಭಾಷಾ ಸಂಬಂಧಿತ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಿಕೊಂಡಿರಬೇಕು. ಖಾಸಗಿಯಾಗಿ ಅಭಿವೃದ್ಧಿಪಡಿಸಿದ ತಂತ್ರಾಂಶಗಳಿಗೆ ಸಂಬಂಧಿಸಿದಂತೆ ಅವರುಗಳು ವಿಂಡೋಸ್‌ನಲ್ಲಿ ಪ್ರತ್ಯೇಕ ಭಾಷಾ ಇಂಜಿನ್‌ಅನ್ನು ಅಳವಡಿಸಬಲ್ಲರು ಮತ್ತು ಅದರಲ್ಲಿ ಕನ್ನಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಉಪಾಯಗಳನ್ನು ಅಳವಡಿಸಬಲ್ಲರು.

ಗಣಕಗಳಲ್ಲಿ ಕನ್ನಡವೇ ಅಲ್ಲದೆ ಇತರ ಭಾರತೀಯ ಭಾಷೆಗಳನ್ನು ನೀಡಲು ಮೈಕ್ರೋಸಾಫ಼್ಟ್‌ನ ಪ್ರಯತ್ನ ಸಾಗಿದೆ. ಮೈಕ್ರೋಸಾಫ಼್ಟ್ ಕಂಪನಿಯವರೇ ನೇರವಾಗಿ ಈ ಕ್ರಯೆಗಳಲ್ಲಿ ಪಾಲ್ಗೊಂಡು ತಮ್ಮ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕನ್ನಡವನ್ನು ನೀಡುವುದು ಅತ್ಯುತ್ತಮ ಮಾರ್ಗ. ಈ ಹಾದಿಯಲ್ಲಿ ಅವರು ಮುನ್ನಡೆದಿರುವುದು ಸ್ವಾಗತಾರ್ಹ ಹಾಗೂ ಅಭಿನಂದನಾರ್ಹ. ಈ ದಿಸೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗೂ ಪರಿಹಾರಗಳನ್ನು ಅವರಿಗೆ ಸ್ಪಷ್ಟವಾಗಿಯೂ ವಿವರವಾಗಿಯೂ ತಿಳಿಸಲಾಗಿದೆ. ಈ ದಿಕ್ಕಿನಲ್ಲಿ ಗಣಕಗಳಲ್ಲಿ ದಾಖಲಾಗುವ ಭಾರತೀಯ ಭಾಷೆಗಳ ಮೂಲಾಕ್ಷರಗಳ ಯೂನಿಕೋಡ್ ಸಂಕೇತಗಳನ್ನು ವೀಕ್ಷಣೆ / ಮುದ್ರಣಕ್ಕಾಗಿ ಅಕ್ಷರ ಸಂಕೇತಗಳನ್ನಾಗಿ ಪರಿವರ್ತಿಸಲು ಮೈಕ್ರೊಸಾಫ಼್ಟ್ ಕಂಪನಿಯು ಒಂದು ತಂತ್ರಾಂಶವನ್ನು ಸಿದ್ಧಪಡಿಸಿದೆ. ಯಾವುದೇ ಭಾರತೀಯ ಭಾಷೆಗಾದರೂ ಈ ನಿರ್ದಿಷ್ಟ ತಂತ್ರಾಂಶವನ್ನು ಬಳಸುತ್ತಿರುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿರಬಹುದು. ಏಕೆಂದರೆ ಭಾರತೀಯ ಭಾಷೆಗಳು ಬಹುಪಾಲುಮಟ್ಟಿಗೆ ಪರಸ್ಪರ ಸಮಾನ ರಚನೆ ಹಾಗೂ ಅಕ್ಷರಗಳನ್ನು ಹೊಂದಿದ್ದರೂ ಪ್ರತಿಭಾಷೆಯೂ ಪ್ರತ್ಯೇಕವಾಗಿ ತನ್ನದೇ ಆದ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ. ಉದಾಹರಣೆಗೆ ಕನ್ನಡದಲ್ಲಿ (ಕಾರ್‍ಯ, ಕಾರ್ಯ), (ಮೂರ್ತಿ, ಮೂರ್‍ತಿ) ಮುಂತಾಗಿ ಒಂದೇ ಪದವನ್ನು ಎರಡು ರೀತಿಯಲ್ಲಿ ಬರೆಯಬೇಕಾಗಿದೆ. ಸಧ್ಯದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಇಂತಹ ಹಲವಾರು ವೈಶಿಷ್ಟ್ಯತೆಗಳು ಕನ್ನಡದಲ್ಲೇ ಅಲ್ಲದೆ ಇತರ ಭಾಷೆಗಳಲ್ಲೂ ಇವೆ. ಇವುಗಳಿಗೆ ಸರಿಯಾಗಿ ಸ್ಪಂದಿಸಲು ಮೈಕ್ರೋಸಾಫ಼್ಟ್ ಕಂಪನಿಯವರು ಈಗ ಬಳಸುತ್ತಿರುವ ಸಮಾನ ತಂತ್ರಾಂಶದಲ್ಲಿ ಆಯಾ ಭಾಷಾಧಾರಿತ ಪ್ರತ್ಯೇಕ ತಂತ್ರಾಂಶ ವಿಭಾಗಗಳಿರಬೇಕಾಗಬಹುದು.

ಒಟ್ಟಿನಲ್ಲಿ ಮೈಕ್ರೋಸಾಫ಼್ಟ್ ಕಂಪನಿಯವರು ಕನ್ನಡಕ್ಕಾಗಿ ಸಿದ್ಧಪಡಿಸಿರುವ ತಂತ್ರಾಂಶಗಳನ್ನು ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ವಿಂಡೋಸ್ ಎಕ್ಸ್‌ಪಿಯನ್ನು ಬಳಸುವಾಗ ಕನ್ನಡಕ್ಕೆ ಸಂಬಂಧಿಸಿದಂತೆ ಈಗ ಕಂಡುಬರುವ ಕೊರತೆಗಳು ನಿವಾರಣೆಯಾಗಲು ಸಾಧ್ಯವಾಗಬಹುದು. ಈ ಮಧ್ಯೆ ಕನ್ನಡಕ್ಕೆ ಸಂಬಂಧಿಸಿದಂತೆ ಸೂಚಿಸಿರುವ ಬದಲಾವಣೆಗಳನ್ನು ಯೂನಿಕೋಡ್ ಕನ್ಸೋರ್ಷಿಯಮ್‌ನವರು ಯೂನಿಕೋಡ್ ಆವೃತ್ತಿಯಲ್ಲಿ ಅಳವಡಿಸಬೇಕೆಂದೂ ಒತ್ತಾಯಿಸಬೇಕಾಗಿದೆ.

ಚಿ ವಿ ಶ್ರೀನಾಥಶಾಸ್ತ್ರೀ
ಪ್ರಧಾನ ಕಾರ್ಯದರ್ಶಿ, ಕನ್ನಡ ಗಣಕ ಪರಿಷತ್ತು
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಆವರಣ
ನರಸಿಂಹರಾಜ ಕಾಲೊನಿ, ಬೆಂಗಳೂರು ೫೬೦ ೦೧೯
ದೂ. (೦೮೦) ೬೬೧೫೯೭೨



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.