ನಂಜುಂಡನಾಗಿ ಬಾಳು


ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ
ನೈರಾಶ್ಯದಭ್ರಂಗಳು;
ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ
ಬೆಳಕೆಲ್ಲಿ? ಬರಿಯ ಇರುಳು!
ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ
ಕಾಳುಗೆಟ್ಟೋಡಿಸುವವು;
ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು
ದಂಡೆಗಪ್ಪಳಿಸುತಿಹವು.
ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು
ತಾಂಡವಂಗೈಯುತಿಹವು,
ಎದೆಯಟ್ಟ ನಿರಿನಿಟಿಲು, ಹೂಗಿಡಕೆ ಬರಸಿಡಿಲು
ಬಡಿಯುತಿರೆ ಬಾಳ್ವುದೆಂತು?


ಸಂಜೆಯಾಗಸದಲ್ಲಿ ಹೊಂಬೆಳಕು ಚಿಮುಕಿರಲು
ಕಾರ್ಮೋಡ ಹೂವಾಗದೆ?
ಜೀವನದ ಕಣದಲ್ಲಿ ಆ ಬೆಳಕು ಮೂಡಿಬರೆ
ಹೆದ್ದಾರಿ ತೋರಬಹುದೆ?
ಉತ್ತಿಬಿತ್ತಿದ ಬೀಜ ಮೊಳಕೆಯಲಿ ಹೊರಬಂದು
ಚಿಗುರಾಗಿ ಚಲ್ವರಿದಿರೆ,
ಹೂವಾಗಿ ಮಿಡಿಯಾಗಿ ಪಾಡಾಗಿ ಹಣ್ಣಾಗೆ
ಕಷ್ಟವೆನಿತನುಭವಿಸಿರೆ!

ವಿಧಿಮಾಟದೇರಾಟ ಹೋರಾಟಗಳಿಗೆಲ್ಲ
ಎದೆಗೊಟ್ಟು ನಿಲ್ಲು ಜೀವ;
ಕಲ್ಲು ಕಲ್ಲಾಗಲೆದೆ ಸಂಕಷ್ಟ ಸಂತತಿಗೆ
ಅಣಿಗೊಂಡ ವಜ್ರಾಯುಧ.
ಕುದಿಕುದಿದು ಬೆಂದು ಬೇಗುದಿಗೊಂಡ ನಿನ್ನಾಸೆ
ಹೊರಚೆಲ್ಲಿ ಹರಿಯದಿರಲಿ;

ಬಂದಡರಿದೆಡರು ತೊಡರುಗಳೆಲ್ಲ ಹೊಸಹೊಸದು
ಬತ್ತಿಗೈ ಸೊಡರಾಗಲಿ.
ನಿನ್ನೊಡಲ ಕಡಲ ಕಡೆ, ಬರುವಮೃತ ವಿಷಗಳನು
ಜೊತೆಯಾಗಿ ಕುಡಿಯುತ್ತಿರಲು,
ಬರಿಯ ವಿಷ ಕಾರದಿರು, ಲೋಕ ತಲ್ಲಣಿಸೀತು-
ನಂಜುಂಡನಾಗಿ ಬಾಳು.
*****