ಆಘಾತಗಳ ನಡುವೆ ಹಾಗು ಆಚೆಗಿನದು..

ಆದದ್ದು ಎರಡು ಆಘಾತಗಳು. ಎರಡೂ ನನ್ನ ಮಟ್ಟಿಗೆ ಪ್ರಾಣಾಂತಿಕವೆ. ಒಂದು ನನಗಾದ ಹೃದಯಾಘಾತ. ನಾನು ಶ್ರೀಮಂತನೇನೂ ಅಲ್ಲ. ಮೊದಲನೆ ತಾರೀಖು ಬರುವ ಸಂಬಳವನ್ನು ನೆಚ್ಚಿಕೊಂಡು ತುಟಿಕಚ್ಚಿಕೊಂಡು ಬದುಕುವುದನ್ನು ಕಲಿತವನು. ಪ್ರಾಣ ಹೋಗಿದ್ದರೆ ಚೆನ್ನಿತ್ತೇನೋ ಎಂದನ್ನಿಸಿಬಿಡದಂತೆ ನನ್ನ ಸುತ್ತೆಲ್ಲ ಇದ್ದ ಸ್ನೇಹಿತರು, ಕನ್ನಡಸಾಹಿತ್ಯ.ಕಾಂ ಉತ್ಸಾಹಿಗಳು ಕಾಪಾಡಿದರು. ಇಂದು ಹೆಚ್ಚು ಸಾಲವಿಲ್ಲದೆ ಬದುಕಿದ್ದೇನೆಂದರೆ, ಅದರೆಲ್ಲ ಶ್ರೇಯಸ್ಸೂ ಅವರುಗಳಿಗೆ ಹೋಗಬೇಕು. ಅಂತೆಯೇ ನನ್ನ ಕುಟುಂಬದ ಆತ್ಮೀಯರಿಗೂ ಸಹ. ರವಿ ಅರೇಹಳ್ಳಿ, ಕಿರಣ್, ರಾಘವ ಕೋಟೇಕರ್, ದತ್ತಾತ್ರೇಯ, ರಾಜೀವ್, ಸೀತಾ, ಅನ್ನಪೂರ್ಣ, ಟಿ ಆರ್ ಸುಬ್ಬರಾವ್, ಯಶಸ್ವಿನಿ ಹೆಗಡೆ, ಪ್ರಶಾಂತ್..೭೪ ವರ್ಷ ವಯಸ್ಸಿನ ಮಿತ್ರರಾದ ಕೋಟೆ ನಾಗಭೂಷಣ್, ಹೀಗೆ ಒಬ್ಬರೆ ಇಬ್ಬರೆ. ಎಷ್ಟೋಂದು ಜನ….‘ಏನೂ ಯೋಚನೆ ಮಾಡಬೇಡಿ’, ಸಮಾಧಾನ ಹೇಳುತ್ತಲೇ ಹೋಗಿದ್ದರು.

ಹಾಸಿಗೆಯ ಮೇಲೆ ಅರೆಜ್ಞಾನದಲ್ಲಿದ್ದಾಗಲೂ, ಸುದ್ಧಿ ಕೇಳಿ ಬಂದಿದ್ದ ಸ್ನೇಹಿತರ ಪಟ್ಟಿಯನ್ನು ಸಾದರ ಪಡಿಸುತ್ತಲೇ ಇದ್ದರು – ಬಳಿಯೇ ಇದ್ದವರು, ಆಗ ಅನ್ನಿಸಿದ್ದು: ನಾನು ಸಾಯ ಬಾರದು, ಬದುಕಬೇಕು. ಇಷ್ಟೊಂದು ಜನರಿದ್ದಾರ? ಬದುಕು ಧನ್ಯವೆಂದನ್ನಿಸಿದ್ದಂತೂ ನಿಜ. ಈ ಧನ್ಯತೆಯನ್ನು ಮತ್ತಷ್ಟು ಅನುಭವಿಸಲಾದರೂ ನಾನು ಇನ್ನೂ ಒಂದಷ್ಟು ದಿನ ಉಳಿಯಬೇಕು. ಇವರನ್ನೆಲ್ಲ-ಜೊತೆಗೆ, ಶಸ್ತ್ರ ಚಿಕಿತ್ಸೆಯನಂತರ ಆಸ್ಪತ್ರೆಯಿಂದ ಹೊರಬಂದ ಮೇಲೆ, ಬಂದು ನೋಡಿಹೋಗಿದ್ದ ಹರೀಶ ಕಡಲಬಾಳು, ಹೇಮಾ ಇನ್ನೂ ಅನೇಕಾನೇಕರನ್ನು ಕೃತಜ್ಞತೆಯಿಂದ ನೆನೆಯುತ್ತಾ, ಕನ್ನಡಸಾಹಿತ್ಯ.ಕಾಂನ ಈ ಸಂಚಿಕೆಯನ್ನು ಮುಂದಿಡುತ್ತಿದ್ದೇನೆ.

ಬರಿಯ ಪ್ರಾಣಾಂತಿಕ ಮಾತ್ರವಲ್ಲ…
ಎರಡನೆಯ ಆಘಾತ ಬರಿಯ ಪ್ರಾಣಾಂತಿಕ ಮಾತ್ರವಲ್ಲ, ಸಾಕಷ್ಟು ಜನರ ಶ್ರಮ, ಸೃಜನಶೀಲತೆಯಿಂದ ತನ್ನೆಲ್ಲ ಸಾಕಾರವನ್ನು ಪಡೆದಿದ್ದ ಕನ್ನಡಸಾಹಿತ್ಯ.ಕಾಂನ ಡಾಟಾಬೇಸ್, ಎರಡು ಬ್ಯಾಕಪ್ ಸೇರಿದಂತೆ ನಾಶವಾದದ್ದು. ನಾನು, ಮೊದಲಿನಿಂದಲೂ ಒಂದು ತಪ್ಪು ಮಾಡಿದೆ ಎಂದನ್ನಿಸುತ್ತದೆ: ಅದು ತಾಂತ್ರಿಕತೆ ಹಾಗು ಪ್ರಾದೇಶಿಕ ಭಾಷೆ, ಸಂಸ್ಕೃತಿಯ ಕುರಿತಂತೆ ಹೆಚ್ಚು ತಲೆ ಕೆಡಿಸಿಕೊಂಡದ್ದು. ಒಂದೆಡೆ ತಾಂತ್ರಿಕತೆ, ಇನ್ನೊಂದೆಡೆ ಸಾಂಸ್ಕೃತಿಕ ಭಾಷೆ, ಸಾಮಾಜಿಕ ಪರಿಸರ-ಎರಡಲಗಿನ ಕತ್ತಿಯ ಮೇಲೆ ಹೆಚ್ಚೆ ಇಟ್ಟದ್ದು.

ಆನ್ಸಿ ಹಾಗು ಯುನಿಕೋಡ್ ಎರಡೂ ಗುಣ-ಶೈಲಿಯ ಅಗತ್ಯಗಳನ್ನು ಕನ್ನಡಸಾಹಿತ್ಯ.ಕಾಂ ಪ್ರತಿನಿಧಿಸುವಂತಿದ್ದರೆ ಮಾತ್ರವೇ ಅದಕ್ಕೆ ‘ತಾಂತ್ರಿಕ ದುರಹಂಕಾರರಹಿತ’ವಾದ ಅಗತ್ಯಗುಣ ಬರುತ್ತದೆ ಎಂದೇಕೆ ನಾನು ಆಲೋಚಿಸಿದ್ದು? – ಒಮ್ಮೊಮ್ಮೆ ಜಿಗುಪ್ಸೆಯಿಂದ ಕೈ ಕೈ ಹಿಸುಕಿಕೊಳ್ಳುವಂತಾಗುತ್ತದೆ. ಯಾವುದಾದರೂ ಒಂದನ್ನು ಹಿಡಿದಿದ್ದರೂ ಸಾಕಾಗಿತ್ತು, ಇನ್ನೊಂದಷ್ಟು ಜನ ‘ಹಿಂದುಳಿದಿರಲಿ’ ಏನಂತೆ ಎಂದು ‘ಮುಂದಕ್ಕೆ ಹೆಜ್ಜೆ ಇಡಬಹುದಿತ್ತು’. ಸೈಬರ್‌ಸ್ಪೇಸ್ ಎನ್ನುವುದು ನಮಗಷ್ಟೇ ಇದ್ದರೆ ಸಾಕು….? ಈ ಧೋರಣೆ ವ್ಯಾಪಕವಾಗುತ್ತಿದ್ದಂತೆ, ಆಗಬಹುದಾದ ವೈಯಕ್ತಿಕ ಹಾಗು ಸಾಮಾಜಿಕ ನ್ಯಾಯ ಹೇಗಿರುತ್ತದೆ ಎಂದು ಇಲ್ಲಿ ಹೆಚ್ಚು ವಿವರಿಸಬೇಕಾಗಿಲ್ಲ. ಕನ್ನಡದಲ್ಲಿ ಯುನಿಕೋಡನ್ನು ಪ್ರಥಮ ಬಾರಿಗೆ ಬಳಸಿದ್ದು ‘ಕನ್ನಡಸಾಹಿತ್ಯ.ಕಾಂ’, ಆದರೂ ಅದು, ನಮ್ಮವರ, ಅಂದರೆ ಭಾರತೀಯ ಆರ್ಥಿಕಶಕ್ತಿಯನ್ನು ಪರಿಶೀಲನೆಯಲ್ಲಿಟ್ಟುಕೊಂಡು – ‘ಆನ್ಸಿ’ಯನ್ನು ಕೈಬಿಡಲಿಲ್ಲ. ಈ ಎರಡನ್ನೂ ಒಂದೆಡೇಯೇ ನಿರ್ವಹಿಸುವಂತಾಗುವ ಕೇಂದ್ರವ್ಯವಸ್ಥೆಯೊಂದು ಸಾಧ್ಯವಾದಲ್ಲಿ..ಎನ್ನುವ ಕನಸಿಗೆ ಇಂಬು ಕೊಟ್ಟವರು: ರಾಘವ ಕೋಟೇಕರ್. ಆಗ, ನಿರ್ಮಾಣವಾದದ್ದೇ “ಸಂಪೂರ್ಣ ಸಿ‌ಎಂಎಸ್”. ಅದರ ವಿನ್ಯಾಸಕಾರನಾಗಿ ನಾನು ಒಂದು ತಪ್ಪು ಮಾಡಿದ್ದೆ: ಮೈಸೀಕ್ವಲ್ ಹಾಗು ಪಿ‌ಎಚ್‌ಪಿಗಳ ನಡುವೆ ಪಠ್ಯದ ರೆಂಡರಿಂಗ್‌ನಲ್ಲಿ ಶಿಷ್ಟಾಚಾರವಿಲ್ಲದಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಅಲ್ಲಿಯವರೆಗೆ ಪಿ‌ಎಚ್‌ಪಿ-೪ ಹಾಗು ಮೈಸಿಕ್ವೆಲ್ ೪+ನೆ ಆವೃತ್ತಿಯನ್ನು ಬಳಸುತ್ತಿದ್ದೆವು. ಯುನಿಕೋಡನ್ನು ಪಿ‌ಎಚ್‌ಪಿ ೪ ಇನ್ನೂ ಸರಿಯಾಗಿ ತೋರುತ್ತಿರಲಿಲ್ಲ. ಆದುದರಿಂದ ಮೈಸೀಕ್ವಲ್‌ನಲ್ಲಿ ಯುನಿಕೋಡ್‌ನ ಹೆಕ್ಸಾಡೇಸಿಮಲ್ ಹಾಕಿ ಪಠ್ಯವನ್ನು ಹೊರಗೆ ಎಳೆದು ಹಾಕುತ್ತಿದ್ದೆವು. ಪಿ‌ಎಚ್‌ಪಿ ೫ ಯುನಿಕೋಡನ್ನು ಬೆಂಬಲಿಸಲಾರಂಭಿಸಿದಂತೆ- ಎಲ್ಲವನ್ನೂ ಒಂದೇ ಮೈಸೀಕ್ವೆಲ್ ಡಾಟಾಬೇಸ್ ಟೇಬಲ್‌ನಲ್ಲಿ ಹಾಕಿ ಅಲ್ಲಿಂದ ನಿರ್ವಹಿಸಬಹುದು ಎಂಬ ಆಲೋಚನೆಯೊಂದಿಗೆ “ಸಂಪೂರ್ಣ ಸಿ‌ಎಂಎಸ್” ಆರಂಭಿಸಿದ್ದು. ಎಲ್ಲವನ್ನೂ ಒಂದೆಡೆ ಹಾಕಿ ಬಹುಭಾಷಾ ಪಠ್ಯವನ್ನು ಒಂದೇ ಟೇಬಲ್ಲಿನಿಂದ, ಒಂದೇ ಸರ್ವರ್‌ಸ್ಕ್ರಿಪ್ಟ್‌ನಿಂದ ನಿರ್ವಹಿಸಬಹುದು ಎನ್ನುವುದನ್ನು ಖಚಿತಪಡಿಸಲೋ ಎನ್ನುವಂತೆ ನಮ್ಮ ಪ್ರಯತ್ನಗಳು ಯಶಸ್ವಿಯಾಗಿತ್ತು. ಕಾನ್‌ಲಿಟ್.ಕಾಮ್ ಅನ್ನು ಅದರಿಂದಲೇ ನಿರ್ವಹಿಸಲಾರಂಭಿಸಿದೆವು. ಅಲ್ಲಿದ್ದಿರಬಹುದಾದ ಅಘಾತಕಾರಿ ಅಂಶ ಮೂಲವಿನ್ಯಾಸಕಾರನಾಗಿದ್ದ ನನ್ನ ಅರಿವಿಗೆ ಬಂದೇ ಇರಲಿಲ್ಲ. ಯುನಿಕೋಡ್ ಹಾಗು ಯುನಿಕೋಡೇತರ ಗುಣಶೈಲಿಯನ್ನಾಧರಿಸಿದ (ಕ್ಯಾರೆಕ್ಟರ್ ಎನ್‌ಕೋಡಿಂಗ್) ಭಾಷೆ-ಅಕ್ಷರಗಳನ್ನು ಮೈಸೀಕ್ವೆಲ್ ಇಂಜಿನ್ ಎರಡರಲ್ಲಿ ಯಾವುದಾದರೂ ಒಂದನ್ನು (ಫೀಲ್ಡ್ ಹೆಸರುಗಳಿಗೆ ಯುಟಿ‌ಎಫ್, ಲ್ಯಾಟಿನ್-೧ರ ಸೂಕ್ತ ಆಯ್ಕೆಯನಂತರವೂ) ಇಂಪೋರ್ಟ್ ಮಾಡಿಕೊಂಡ ಟೇಬಲ್ಲನ್ನು ಮತ್ತೆ ಡಂಪ್ ಮಾಡಿದಾಗ ಅಕ್ಷರಗಳೆಲ್ಲ ವಿರೂಪಗೊಂಡು ಬಿಡುತ್ತಿದ್ದವು. ಆಗ, ನನ್ನ ವಿನ್ಯಾಸದಲ್ಲಿನ ತಪ್ಪು ಅರಿವಾದದ್ದು. ಕೈ ಕೈ ಹಿಸುಕಿಕೊಳ್ಳುವಂತಾಯಿತು. ಇದೇ ಸಂದರ್ಭದಲ್ಲಿ, ನಮ್ಮ ಸಂಪೂರ್ಣಸಿ‌ಎಂಎಸ್‌ನಲ್ಲಿ ಯಥೇಚ್ಛವಾಗಿ ‘.ಎಚ್‌ಟಿ‌ಆಕ್ಸೆಸ್’ ಬಳಸಿದ್ದೆವು. ಶೇರ್‍ಡ್ ಹೋಸ್ಟಿಂಗ್ ಪರಿಸರಕ್ಕೆ ನಿಮ್ಮ ಸ್ಕ್ರಿಪ್ಟ್‌ಗಳು ಹೊಂದುವುದಿಲ್ಲ ಎಂದು ಹೋಸ್ಟಿಂಗ್ ಕಂಪನಿಯವರು ಮೂಗೆಳೆಯಲಾರಂಭಿಸಿದರು. ‘ಇನ್ನೇನು ವರ್ಷವಾಗುತ್ತಾ ಬಂತು-ಬೇರೆಡೆಗೆ ವರ್ಗಾಯಿಸಿದರಾಯಿತು’ ಎಂದು ಸುಮ್ಮನಾಗಿ, ಬೇರೆ ಸಂಸ್ಥೆಯಲ್ಲಿ ಜಾಗವನ್ನು ಬಾಡಿಗೆಗೆ ಹಿಡಿದಿದ್ದೆವು. ಜೊತೆಗೆ, ಕೆ‌ಎಸ್‌ಸಿ ಡಾಟಾಬೇಸ್, ನನ್ನ ಡೆಸ್ಕ್‌ಟಾಪ್ ಹಾಗು ಲ್ಯಾಪ್‌ಟಾಪ್‌ಗಳೆರಡಲ್ಲೂ ‘ಬ್ಯಾಕಪ್’ ಇತ್ತು.

ಹೃದಯಾಘಾತವಾದೊಡನೆ ಆಸ್ಪತ್ರೆ, ಆಜೀವ ಪರ್ಯಂತ ದಿನನಿತ್ಯದ ಚಟುವಟಿಕೆಯಾಗಿ ಅಂಟಿಕೊಂಡ ಔಷಧಿಗಳು ಮನಸ್ಸು-ದೇಹವೆಲ್ಲವನ್ನೂ ಹಾಳು ಮಾಡಿತ್ತು. ಕನ್ನಡಸಾಹಿತ್ಯ.ಕಾಂನತ್ತ ಗಮನ ನೀಡಲಾಗಲೇ ಇಲ್ಲ. ಜೊತೆಗೆ ಅಪಾರವಾದ ವಿಶ್ರಾಂತಿಯ ಅಗತ್ಯವೂ ಇತ್ತು.

ಈ ನಮ್ಮ ರವಿ ಅರೇಹಳ್ಳಿ ಸುಮ್ಮನಿರುವ ಪೈಕಿಯಲ್ಲ, ‘ಸಾರ್ ಅಪ್‌ಡೇಟ್ ಮಾಡಿ’ ಎಂದು ವಿಶ್ವಾಸಪೂರ್ವಕವಾದ ವರಾತ ಹಚ್ಚಿದರು. ರಾಘವ ಕೋಟೇಕರ್‌ನನ್ನು ಸಂಪರ್ಕಿಸಿ ಕರೆತಂದರು. ಅಗ್ಯೆಗಾಗಲೇ ಸಂಪೂರ್‍ಣ ಸಿ‌ಎಂಎಸ್‌ನಲ್ಲಿದ್ದ ಲೋಪಗಳ ಅರಿವಿದ್ದ ರಾಘವ ಅದನ್ನು ಪುನರ್‌ರಚಿಸಲಾರಂಭಿಸಿದ್ದರು: ಕೇಕ್ ಫ್ರೇಂವರ್ಕ್ ಬಳಸಿ, ಕನಿಷ್ಟ ಕೋಡ್‌ನಲ್ಲಿ ಈ ಬಾರಿ ಎರಡು ಮೈಸೀಕ್ವೆಲ್ ಟೇಬಲ್ ಬಳಸೋಣವೆಂದು ತೀರ್ಮಾನವಾಗಿತ್ತು. ಅಂತೆಯೆ ವಾರಗಟ್ಟಲೆ ಮತ್ತೆ ಕೂತೆವು. ಜೊತೆಗೆ ರವಿ.

ಹೇಗಿದ್ದರೂ ನಾವು ಹೋಸ್ಟಿಂಗ್ ಕಂಪನಿ ಬದಲಾಯಿಸಬೇಕಲ್ಲ ಎಂದು ಇದ್ದ ಕ್ಯಾನ್‌ಲಿಟ್ ಕಾಂ ಕಡೆಗಾಗಲಿ, ಕನ್ನಡಸಾಹಿತ್ಯ.ಕಾಂ ಕಡೆಗಾಗಲಿ ಗಮನ ಹರಿಸಲಿಲ್ಲ. ಹೇಗಿದ್ದರೂ ಬೇರೆ ಕಡೆ ಹೋಗಬೇಕು, ನಮ್ಮ ಲೋಕಲ್ ಕಂಪ್ಯೂಟರ್‌ಗಳಲ್ಲಿರುವುದನ್ನೇ ಅಪ್‌ಲೋಡ್ ಮಾಡಬೇಕಾಗಿರುವುದು ಎಂದು ಉತ್ಪ್ರೇಕ್ಷಿಸಿದೆವು. ಮಳೆ, ಧಾರಕಾರ ಸಿಡಿಲು, ಡೆಸ್ಕ್‌ಟಾಪ್ ಹಾಗು ಕೆಲಸ ಮಾಡುತ್ತಿದ್ದ ಲ್ಯಾಪ್‌ಟಾಪ್ ಎರಡೂ ಕೈಕೊಡಲಾರಂಭಿಸಿತು. ಹಾರ್ಡ್‌ವೇರ್ ಇಂಜಿನಿಯರ್‌ನನ್ನು ಕರೆಸಿದಾಗ ಹಾರ್ಡ್‌ಡಿಸ್ಕ್ ಹೋಗಿರುವುದರ ಬಗೆಗೆ ತಿಳಿಸಿದಾಗ ಎದೆ ಧಸಕ್ಕೆಂದು ಕುಸಿದಿತ್ತು. ಲ್ಯಾಪ್‌ಟಾಪ್ ಹಾರ್ಡ್ ಡಿಸ್ಕ್ ತೆಗೆದಾಗ ಅದು ಶೇ೪೦.೦೦ರಷ್ಟು ಬ್ಯಾಡ್‌ಸೆಕ್ಟರ್‌ಗಳಿಂದ ಕರಫ್ಟ್ ಆಗಿದ್ದು ಪ್ರಯೋಜನಕ್ಕೆ ಬರದಂತಾಗಿತ್ತು. ಏಳು ವರ್ಷಗಳಷ್ಟು ಕಾಲ, ನೂರಾರು ಜನ ಶ್ರಮ ಪಟ್ಟು ಕಟ್ಟಿದ್ದು-ಕಣ್ಣ ಮುಂದೆ ನಾಶವಾಗಿತ್ತು. ಇದು ಎರಡನೆಯ ದೊಡ್ಡ ಆಘಾತ. ನಂತರ ಶುರುವಾಯಿತು, ಹಳೆಯ ಸಿಡಿ, ಡೀವಿಡಿಗಳನ್ನು ಹುಡುಕಿ ಒಂದೊಂದನ್ನೂ ಡಿವಿಡಿಡ್ರೈವ್‌ಗೆ ಹಾಕಿ, ಏನಾದರೂ ಕೆ‌ಎಸ್‌ಸಿಯ ಪಠ್ಯವಿದೆಯೇ ಎಂದೆನ್ನುವ ಹುಡುಕಾಟ. ಛಿದ್ರ ಛಿದ್ರವಾಗಿ ತುಣುಕು ತುಣುಕಾಗಿ ಅಲ್ಲಲ್ಲಿ ಬಿದ್ದಿದ್ದನ್ನೆಲ್ಲ ಆಯ್ದುಕೊಂಡೆವು…ಮತ್ತೆ ಅದನ್ನೆಲ್ಲ ವೆಬ್‌ಪುಟಗಳಿಗೆ ಪುನರ್‌ವಿನ್ಯಾಸಗೊಳ್ಸಿಸುವುದನ್ನು ಪ್ರಾರಂಭಿಸಿದೆವು. ಎಲ್ಲರಿಗೂ ಸುಸ್ತು, ಅಂತೆಯೇ, ರಘು ಹಾಗು ರವಿಗೂ. ಕೇವಲ ೭೦% ಭಾಗದಷ್ಟು ಮಾತ್ರ ಸಿಕ್ಕಿದ್ದು. ಏನೂ ಇಲ್ಲದೆ ಹೋಗುವುದಕ್ಕಿಂತಲೂ ಇರುವುದಷ್ಟನ್ನಾದರೂ ಹಾಕೋಣವೆಂದನ್ನಿಸಿತು. ಹುಡುಕಾಟವಂತೂ ನಡೇದೇ ಇತ್ತು. ಕಳೆದ ಮೂರು ಈ ಹುಡುಕಾಟದಲ್ಲಿದ್ದಾಗ, ಮುಂಬೈನ ಮಿಶ್ರಿಕೋಟಿಯವರು ಕನ್ನಡಸಾಹಿತ್ಯ.ಕಾಂನ ಸಾಕಷ್ಟು ಪಠ್ಯವನ್ನು ಅಕ್ಷರದೋಷಗಳಿಗಾಗಿ ಪರೀಕ್ಷಿಸಿ ಶುದ್ಧೀಕರಿಸಿದ್ದರು. ಅದರ ಫಲವಾಗಿ ಒಂದು ಲಕ್ಷ ಪದಗಳಷ್ಟು ಪದಪರೀಕ್ಷಕಕ್ಕೆ ಸೇರಿಸುವುದೂ ಸಾಧ್ಯವಾಗಿತ್ತು. ಆ ಸಂದರ್ಭದಲ್ಲಿ ಅವರು ಕಳಿಸಿದ ಅಟಾಚ್‌ಮೆಂಟ್ಸ್‌ಗಳೆಲ್ಲ ಸಿಕ್ಕಿದವು. ಜೊತೆಗೆ ‘ಅರ್ಕೈವ್.ಆರ್ಗ್’ ಕನ್ನಡಸಾಹಿತ್ಯ.ಕಾಂನ ಸುಮಾರು ೭೦೦೦ ಲಿಂಕ್‌ಗಳನ್ನು ಸಾಕಷ್ಟು ಪಠ್ಯವನ್ನು ರಕ್ಷಿಸಿಟ್ಟಿದ್ದರು. ಈಗಲೂ ಇವೆ. ಅವು ನನ್ನ ಗಮನಕ್ಕೆ ತೀರಾ ತಡವಾಗಿ ಬಂದಿದೆ, ಅವುಗಳಿಂದ ಈಗ ಕಾಪಿ ಮಾಡಿ ಇಟ್ಟಿದ್ದೇನೆ. ಆದರೆ ಅವುಗಳನ್ನೆಲ್ಲ ಪುನರ್‌ವಿನ್ಯಾಸ ಪಡಿಸಬೇಕಗಿದೆ. ಜೊತೆಗೆ ಮಿಶ್ರಿಕೋಟಿಯವರ ಶ್ರಮದ ಸದುಪಯೋಗವೂ ಆಗಬೇಕಾಗಿದೆ. ಈ ಎಲ್ಲ ದೃಷ್ಟಿಗಳಿಂದ ಇರುವ ಡಾಟಾವನ್ನೆಲ್ಲ ಪುನರ್‌ರಚಿಸಬೇಕಾಗಿದೆ. ಆದರೆ, ಅಲ್ಲಿಯತನಕ ಅಪ್‌ಡೇಟ್ ಮಾಡದೆ ಇರುವುದು ಸರಿಯಲ್ಲ ಎಂದೂ ಸಹ ಆಗ್ರಹಪೂರ್ವಕವಾಗಿ ಎಲ್ಲರೂ ಹೇಳತೊಡಗಿದಾಗ, ಈ ಸಂಚಿಕೆಯನ್ನು ಈ ಅವಸರದ ಕಾರಣದಿಂದಲೇ ನಿಮ್ಮ ಮುಂದಿದೆ. ಇದರ ಹೆಮ್ಮೆ, ಗೌರವ, ಬಯ್ಗಳ ಏನಿದ್ದರೂ ನಮ್ಮ ರಾಘವ, ರವಿ ಇನ್ನೂ ಅನೇಕಾನೇಕ ಕನ್ನಡಸಾಹಿತ್ಯ.ಕಾಂ ಉತ್ಸಾಹಿಗಳಿಗೆ ಸಲ್ಲಬೇಕಾಗುತ್ತದೆ. ಇದರ ಮಧ್ಯೆ ಈ ಅರುಣ್ ರಾಚೇಗೌಡರನ್ನು ಮರೆಯಲಾಗುತ್ತದೆಯೆ…?

ಮುಂದೇನು?
ಸಾಕಷ್ಟು ಸಭೆಗಳಾಗಿವೆ. ಎಂ ಕಿರಣ್, ರವಿ, ರಾಘವ ಕೋಟೇಕರ್, ರುದ್ರಮೂರ್ತಿ ಹೀಗೆ ಅನೇಕಾನೇಕ ಉತ್ಸಾಹಿಗಳು ಕೆ‌ಎಸ್‌ಸಿಯ ಮುಂಚೂಣಿಗೆ ಬರುವ ಮಾತುಗಳು ತೇಲಿಬರುತ್ತಲಿವೆ. ಹೇಗೆ ನಡೆಸಿಕೊಂಡು ಹೋಗಬೇಕಿದೆ ಎಂಬ ನಿಯಮಾವಳಿಯನ್ನು ಇನ್ನೂ ರಚಿಸಬೇಕಾಗಿದೆ. ಅದಾದನಂತರ, ಅದನ್ನು ಅವರೆಲ್ಲ ಒಪ್ಪಿದ ಮೇಲೆ ಇದೇ ಪುಟಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಈ ಮಧ್ಯೆ ನಮ್ಮ ವಿಕ್ರಂ ಹತ್ವಾರ್‌ರವರು ಕನ್ನಡಸಾಹಿತ್ಯ.ಕಾಂನ ಲೇಖಕರ ಬಗೆಗೆ ವಿವರವಾದ ವ್ಯಕ್ತಿಚಿತ್ರಣದ ಸಂಗ್ರಹಣೆ ಕೆಲಸವನ್ನು ಒಪ್ಪಿಕೊಂಡಿದ್ದಾರೆ. ಅವರೀಗಾಗಲೇ ಕಾರ್ಯನಿರತರೂ ಆಗಿದ್ದಾರೆ. ವಿಕ್ರಂರವರ ಕೊಡುಗೆ ಇಲ್ಲೇ ನಿಲ್ಲುವುದಿಲ್ಲ-ಕನ್ನಡಸಾಹಿತ್ಯ.ಕಾಂನ ಪುಸ್ತಕ ಪ್ರಕಾಶನವಾದ ಸಲ್ಲಾಪದ ಹಿಂದೆಯೂ ಅವರ ದುಡಿಮೆ ಇದೆ.

ಅರುಣ್ ರಾಚೇಗೌಡ, ವಿವೇಕ್ ಶಂಕರ್ ಇಬ್ಬರೂ ತಲಾ ಹತ್ತುಸಾವಿರ ರೂಗಳನ್ನು ನೀಡಿದ್ದಾರೆ. ಅದನ್ನು ಈ ವರ್ಷದ ದೂರವಾಣಿ ಹಾಗು ಬ್ರಾಡ್‌ಬ್ಯಾಂಡಿನ ಖರ್ಚಿಗೆ ತೆಗೆದಿರಿಸಲಾಗಿದೆ. ಅಮೆರಿಕದಿಂದ, ಹೆಸರು ಹೇಳಬಹುದೋ, ಇಲ್ಲವೋ ಗೊತ್ತಿಲ್ಲ (ರಘು) ವಿಂಡೋಸ್ ಆಫೀಸ್-೨೦೦೭ ಹಾಗು ವೆಬ್ ಸ್ಟುಡಿಯೋ ಕಳುಹಿಸಿಕೊಟ್ಟಿದ್ದಾರೆ.

ಇವರಿಗೆಲ್ಲ ನನ್ನ ಕೃತಜ್ಞತೆಗಳನ್ನು ತಿಳಿಸುತ್ತಾ, ಜೊತೆಗೆ ತಮ್ಮ ಸೃಜನಶೀಲತೆಯಿಂದ ಈ ಸಂ ಚಿಕೆಯ ಮೆರುಗು ಹೆಚ್ಚಿಸಿರುವ ಪ್ರಮೋದ್ ಪಿ ಟಿಯವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸುತ್ತಾ- ವಿಶ್ರಾಂತಿ ಬಯಸುತ್ತಿರುವ

ಶೇಖರ್‌ಪೂರ್ಣ
೦೮-೬-೨೦೦೮


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.