ಛೇದ – ೧

ಅಧ್ಯಾಯ ಒಂದು

ಇನ್ನೆರಡು ತಿಂಗಳು ಕಳೆಯುವುದರಲ್ಲಿ ದೀರ್ಘಕಾಲದ ನೌಕರಿಯಿಂದ ನಿವೃತ್ತನಾಗಲಿದ್ದ ಪಾರಸೀ ಗೃಹಸ್ಥ ಬೆಹರಾಮ್ ಕೇಕೀ ಪೋಚಖಾನಾವಾಲಾ, ಒಂದು ಶನಿವಾರದ ಮಧ್ಯಾಹ್ನ, ಮನೆಯ ಬಾಲ್ಕನಿಯಲ್ಲಿ ಕೂತು ವಿಶ್ರಾಂತಿಯ ದಿನಗಳ ಬಗ್ಗೆ ಧೇನಿಸುತ್ತ ಚಹ ಕುಡಿಯುತ್ತಿರುವಾಗ, ಕದದ ಕರೆಗಂಟೆ ಬಾರಿಸಿ ಗುರುತು ತಿಳಿಸುವ ಕಾರ್ಡು ಕೊಟ್ಟು, ಪರವಾನಗಿ ಸಿಕ್ಕ ಬಳಿಕ ಒಳಗೆ ಬಂದ ಸುಮಾರು ಇಪ್ಪತ್ತೈದು ವರ್ಷದ ಅಪರಿಚಿತ ಯುವಕನೊಬ್ಬ ಅವನ ಇದಿರಿನ ಕುರ್ಚಿಯಲ್ಲಿ ಕೂರುತ್ತ, “ನಾನು ಕರುಣಾಕರನ್, ಸರ್, ” ಎಂದು ತನ್ನ ಹೆಸರು ಹೇಳಿದ. “ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಕೆಲವು ತಿಂಗಳ ಹಿಂದೆ ನಡೆದ ರದ್ದೀವಾಲಾನ ಖೂನಿಯ ಬಗ್ಗೆ ನಿಮ್ಮಿಂದ ಮಾಹಿತಿ ಬೇಕಿತ್ತು,” ಎಂದು ತಾನು ಬಂದಂಥ ಕಾರ್ಯವನ್ನೂ ಜಾಹೀರುಪಡಿಸಿದ.

ಬೆಹರಾಮ್ ಮುಂಬಯಿಯ, ಬ್ರಿಟಿಷ್ ಆಡಳಿತವುಳ್ಳ, ದೊಡ್ಡ ರಾಸಾಯನಿಕ ಉದ್ಯೋಗಕ್ಕೆ ಸಂಬಂಧಪಟ್ಟ ಕಂಪನಿಯೊಂದರಲ್ಲಿ ಮೇಲಿನ ಹುದ್ದೆಯಲ್ಲಿದ್ದವನು. ಕಂಪನಿಯ ನಿಯಮಗಳ ಪ್ರಕಾರ ಎರಡು ವರ್ಷಗಳ ಹಿಂದೆ ವಯಸ್ಸಿನ ಐವತ್ತೆಂಟು ವರ್ಷ ಮುಗಿದಕೂಡಲೇ ನಿವೃತ್ತನಾಗಬೇಕಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಆಡಳಿತದಲ್ಲಿ ಬದಲುಗಳಾಗಿ ಮಾರವಾಡಿ ಉದ್ಯೋಗಪತಿಯೊಬ್ಬನು ಕಂಪನಿಯನ್ನು ತನ್ನ ಒಡೆತನಕ್ಕೆ ತೆಗೆದುಕೊಂಡ ಮೇಲೆ ಆವರೆಗೂ ಇಲ್ಲದ ದುಷ್ಟ ರಾಜಕಾರಣ ತಲೆಯೆತ್ತಲು ಶುರುಮಾಡಿದಾಗ ಹಲವು ತರುಣ ಅಧಿಕಾರಿಗಳು ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೇರೆ ಕಂಪನಿಗಳನ್ನು ಸೇರಿದರು. ಹೊಸಬರನ್ನು ನೇಮಿಸಿ ತರಬೇತುಗೊಳಿಸಲು ಸಮಯ ಬೇಕಿತ್ತು. ಹೀಗಾಗಿ, ಬಹಳ ವರ್ಷಗಳ ಅನುಭವವಿದ್ದ ಬೆಹರಾಮನ ನಿವೃತ್ತಿಯ ದಿವಸ ಎರಡು ವರ್ಷಗಳಿಂದ ಮುಂದೆ ಬಿದ್ದಿತು. ಈ ಎರಡು ವರ್ಷಗಳಲ್ಲಿ ಅವನಿಗೆ ಬಂದ ಅನುಭವ ಮಾತ್ರ ಮುವ್ವತ್ತಾರು ವರ್ಷಗಳಷ್ಟು ಧೀರ್ಘಕಾಲ ಒಂದೇ ಸಂಸ್ಥೆಗೆ ಅಂಟಿಕೊಳ್ಳುವಂತೆ ಮಾಡಿದ ಕೆಲಸದ ಬಗೆಗಿನ ತನ್ನ ಶ್ರದ್ಧೆಯನ್ನೇ ನಾಶಮಾಡುತ್ತಿದೆ ಎನ್ನುವಂಥ ಭಾವನೆಗೆ ಎಡೆಮಾಡಿಕೊಡಹತ್ತಿತ್ತು.

ಹಾಗೆ ನೋಡಿದರೆ ಬೆಹರಾಮನಿಗೆ ಈ ಕೆಲಸದ ಗರಜೇ ಇರಲಿಲ್ಲ. ಅವನಿಗೆ ಇಬ್ಬರೇ ಮಕ್ಕಳು. ಇಬ್ಬರೂ ದೊಡ್ಡವರಾಗಿದ್ದಾರೆ. ಒಬ್ಬಳು ಮಗಳು, ಒಬ್ಬ ಮಗ. ಮಗಳೇ ಹಿರಿಯವಳು-ಶಿರೀನ್. ಹತ್ತು ವರ್ಷಗಳ ಹಿಂದೆಯೇ ಮದುವೆಯಾಗಿ, ಜಮ್‌ಶೇದ್‌ಪೂರದಲ್ಲಿ ಗಂಡ, ಮೂವರು ಮಕ್ಕಳ ಜೊತೆಗೆ ಸುಖವಾಗಿ ಸಂಸಾರ ಹೂಡಿದ್ದಾಳೆ. ಅವಳ ಗಂಡನಾದ ಬೇಜನ್ ದಾರೂವಾಲಾ ಅಲ್ಲಿಯ ದೊಡ್ಡ ಉಕ್ಕಿನ ಕಾರಖಾನೆಯಲ್ಲಿ ಫೌಂಡ್ರಿ ಮ್ಯಾನೇಜರನಾಗಿ ಕೆಲಸ ಮಾಡುತ್ತಿದ್ದಾನೆ. ಶಿರೀನಳ ಹಿಂದೆ ಹುಟ್ಟಿದ ಕೇಕೀ ಅಮೇರಿಕೆಗೆ ಇಂಜಿನಿಯರಿಂಗ್ ಕಲಿಯಲು ಹೋದವನು ಕಲಿಯುವುದು ಮುಗಿದು ಐದು ವರ್ಷಗಳಾದರೂ ಇನ್ನೂ ಹಿಂತಿರುಗಿ ಬಂದಿರಲಿಲ್ಲ. ಬರುವ ಭರವಸೆಯೂ ಇರಲಿಲ್ಲ. ಅಲ್ಲಿಯವಳೇ ಒಬ್ಬ ಹುಡುಗಿಯನ್ನು ಮದುವೆಯಾಗಿ, ಅಲ್ಲೇ ಒಂದು ಒಳ್ಳೆಯ ನೌಕರಿಯನ್ನೂ ದೊರಕಿಸಿ ಮಜವಾಗಿದ್ದಾನೆ. ನಿವೃತ್ತರಾದ ಕೂಡಲೇ ಒಂದೆರಡು ತಿಂಗಳ ಮಟ್ಟಿಗಾದರೂ ತಂದೆತಾಯಿಗಳೇ ತಮ್ಮಲ್ಲಿಗೆ ಬರಬೇಕು, ಅಮೇರಿಕೆಯ ವೈಭವವನ್ನು ಸವಿಯಬೇಕು ಎನ್ನುವ ಆಶಯದಿಂದ ಪತ್ರ ಕೂಡ ಕೆಲವು ದಿನಗಳ ಹಿಂದೆ ಬಂದಿದೆ. ಸೊಸೆಯ ಮೊದಲ ಹೆರಿಗೆಗೆ ಹೋದರಾಯಿತು ಎಂದು ಹೇಳಿದ ಹೆಂಡತಿ ಅಮೇರಿಕೆಗೆ ಹೋಗುವ ಉತ್ಸಾಹ ಪ್ರಕಟಿಸುವಾಗ ಹೋಗಲು ಯೋಗ್ಯವಾದ ಅವಕಾಶವನ್ನೂ ಕಲ್ಪಿಸಿಕೊಂಡಿದ್ದಾಳೆ.

ಬೆಹರಾಮನಿಗೆ ಕೆಲಸ ಆರ್ಥಿಕ ಗರಜಾಗಿರಲಿಲ್ಲ. ಇಷ್ಟಾಗಿ, ಯಾಕೆಂದು ಯಾರಿಗಾಗಿ ತಾನು ಈ ಕೆಲಸಕ್ಕೆ ಇಷ್ಟೊಂದು ಚಿಕಾಟಿಯಿಂದ ಅಂಟಿಕೊಂಡಿದ್ದೇನೆ ಎಂಬುದರ ಬಗೆಗೆ ವಿಚಾರ ಮಾಡಿದವನೂ ಅಲ್ಲ. ಅದೊಂದು ವಿಚಾರ ಮಾಡಬೇಕಾದ ವಿಷಯವೆ! ಕೆಲಸ ಮನುಷ್ಯನಿಗೆ ತೀರ ಸಹಜವಾದ ಸಂಗತಿಯಲ್ಲವೆ! ಎಂದುಕೊಂಡಂತಿದ್ದ ಅವನಿಗೆ ಎರಡು ವರ್ಷಗಳ ಹಿಂದೆಯೇ, ನಿವೃತ್ತಿಯ ದಿನ ಹತ್ತಿರವಾಗುತ್ತಿದ್ದ ಹಾಗೆ, ಅರ್ಥವಾಗದ ಅಸ್ಪಷ್ಟವಾದ ಭಯ ಕಾಡಹತ್ತಿತು ಎಂಬುದು ಮಾತ್ರ ನಿಜ. ಕಂಪನಿಯ ಆಡಳಿತದಲ್ಲಾದ ಪಲ್ಲಟ, ನಿವೃತ್ತಿಯ ದಿನವನ್ನು ಮುಂದೆ ಹಾಕುವಂತೆ ಮೇಲಧಿಕಾರಿಗಳಿಂದ ಬಂದ ಬಿನ್ನಹ ಇವುಗಳಿಂದಾಗಿ ಆ ನಿರ್ಣಾಯಕ ದಿನ ಸದ್ಯಕ್ಕಂತೂ ಮುಂದೆ ಸರಿದಾಗ ಮನಸ್ಸಿಗೆ ನೆಮ್ಮದಿಯೆನಿಸಿತ್ತು ಎನ್ನುವುದೂ ನಿಜ. ಮುಂದೆ ಈ ನೆಮ್ಮದಿ ಬಹಳ ದಿನ ಬಾಳಲಿಲ್ಲ, ಆ ಮಾತು ಬೇರೆ. ಮಾತ್ರವಲ್ಲ, ಕಳೆದ ಕೆಲವು ತಿಂಗಳಿಂದಂತೂ ಹೊಸ ನಿವೃತ್ತಿಯ ದಿನವನ್ನು ಅತ್ಯಂತ ಕಾತರದಿಂದಲೇ ಇದಿರುನೋಡುವಂತಾಗಿದೆ. ಒಂದು ರೀತಿಯಿಂದ ಈ ಹೊಸ ಅನುಭವವೇ ಅವನ ಮನಸ್ಸನ್ನು ವಿಶ್ರಾಂತಿಗಾಗಿ ಸಿದ್ಧಗೊಳಿಸಿತು ಎನ್ನಬಹುದು.

ನಿವೃತ್ತಿ ಪಡೆದ ದಿನವೇ ಅವನನ್ನು ಜಮ್‌ಶೇದ್‌ಪೂರಕ್ಕೆ ಕರೆದೊಯ್ಯಲೆಂದು, ಮೊನ್ನೆಯಷ್ಟೇ, ಅವನ ಮಗಳೂ ಬಂದಿದ್ದಾಳೆ, ಸಾಲೆಗೆ ರಜೆ ಬಿದ್ದ ಮಕ್ಕಳೊಂದಿಗೆ. ಮುಂಬಯಿಯಲ್ಲಿ ಅಪ್ಪ-ಅಮ್ಮರ ಸಹವಾಸದಲ್ಲಿ ಕೆಲವು ಕಾಲ ಕಳೆದು ತಿರುಗಿ ಹೋಗುವಾಗ ಅವರಿಬ್ಬರನ್ನೂ ಜೊತೆಗೆ ಕರೆದೊಯ್ಯಲಿದ್ದಾಳೆ. ಇಷ್ಟು ದೀರ್ಘಕಾಲದ ಸೇವೆಯ ನಂತರ ವಿಶ್ರಾಂತಿ ಪಡೆಯುವ ಅರವತ್ತು ದಾಟಲಿದ್ದವನ ಮಾನಸಿಕ ಸ್ಥಿತಿಯ ಬಗ್ಗೆ ಬೆಹರಾಮನಿಗಿಂತ ಹೆಚ್ಚಾಗಿ ಅವನ ಮಗಳೇ ಯೋಚಿಸಿದಂತಿತ್ತು.

ಕರುಣಾಕರನ್ ಕೇಳಿದ ಪ್ರಶ್ನೆಗಳಿಗೆ ಮೈಮೇಲೆ ನವಿರೇಳಲು ಕಾರಣವಾಗಿದ್ದು ಅವನು ಪ್ರಶ್ನೆ ಕೇಳಿದ ರೀತಿಯೋ ಅಥವಾ ತನ್ನ ಸದ್ಯದ ದೇಹಮಾನವೋ ಬೆಹರಾಮನಿಗೆ ಸ್ಪಷ್ಟವಾಗಲಿಲ್ಲ. ಹಾಗೆ ನೋಡಿದರೆ ಕರುಣಾಕರನ್ ಯಾವ ಪ್ರಶ್ನೆಯನ್ನೂ ಕೇಳಿರಲಿಲ್ಲ. ಬಹುಶಃ ಅವನು ತನ್ನ ಭೇಟಿಯ ಇರಾದೆಯನ್ನು ಪ್ರಕಟಿಸಿದ ನೇರವಾದ, ಚುಟುಕಾದ ರೀತಿಯೇ ತನ್ನ ಈಗಿನ ಇಳಿವಯಸ್ಸಿನ ಆರೋಗ್ಯದ ಸ್ಥಿತಿಯಲ್ಲಿ ಹಲವು ಪ್ರಶ್ನೆಗಳಾಗಿ ಕೇಳಿಸಿರಬೇಕು, ಅನ್ನಿಸಿತು. ಆಗ, ಕರುಣಾಕರನ್ ಕರೆಗಂಟೆ ಬಾರಿಸಿದಾಗ ಕದ ತೆರೆದು ಅವನನ್ನು ಒಳಗೆ ಬಿಟ್ಟ ಕೆಲಸದ ಹುಡುಗಿ, ಚಿಕ್ಕ ಪ್ರಾಯದ ಸೀತೆ, ಕರುಣಾಕರನ್ ಸಲುವಾಗಿ ಚಹಾ ಮಾಡಿ ತಂದಳು. ಹುಡುಗಿಯ ಚುರುಕುತನಕ್ಕೆ ತಲೆದೂಗುತ್ತ, “ತೆಗೆದುಕೊಳ್ಳಿ. ಮನೆಯವರೆಲ್ಲ ಹೊರಗೆ ಹೋಗಿದ್ದಾರೆ, ನನ್ನನ್ನು ಈ ಯಜಮಾನಿಯ ವಶಕ್ಕೆ ಬಿಟ್ಟು,” ಎನ್ನುತ್ತ ಸೀತೆಯ ಕೈಯಿಂದ ಕಪ್ಪನ್ನು ತೆಗೆದುಕೊಂಡು ಅದನ್ನು ಕರುಣಾಕರನ್ನನ ಕೈಗೆ ಒಪ್ಪಿಸಿದ. ಸೀತೆಗೂ ಮುದುಕನ ಮಾತಿನಿಂದ ಖುಶಿಯಾಯಿತು. ಇಂಗ್ಲೀಷ್‌ನಲ್ಲಿ ಆಡಿದ ಮಾತುಗಳಾದರೂ ಅವುಗಳಲ್ಲಿ ತನ್ನ ಬಗೆಗೆ ಪ್ರಶಂಸೆ ಇದ್ದುದರ ಅರಿವು ಬಂದ ಹುಡುಗಿ ಹಲ್ಲು ತೋರಿಸಿ ನಗುತ್ತ ಒಳಗೆ ಓಡಿದಳು. ಚಹದ ಗುಟುಕಿನ ಬಿಸಿಗೆ ಎಂಬಂತೆ ಕೆಲಹೊತ್ತಿನ ಮೊದಲಷ್ಟೇ ಕರುಳಲ್ಲಿ ಸೇರಿಕೊಂಡಂತೆ ಭಾಸವಾದ ನಡುಕ ಈಗ ತುಸು ದೂರವಾದಂತೆ ತೋರಿದಾಗ ಬೆಹರಾಮನಿಗೆಸುಖವೆನಿಸಿತು.

ಕಳೆದ ಹಲವು ವರ್ಷಗಳಲ್ಲಿ ಒಮ್ಮೆಯೂ ಆರೋಗ್ಯ ಕೆಟ್ಟು ಹಾಸಿಗೆ ಹಿಡಿದವನಲ್ಲವಾದರೂ ಬೆಹರಾಮ್ ಕಾಣಲು ನಾಜೂಕುಪ್ರಕೃತಿಯವನೇ. ಹೆಚ್ಚುಕಡಿಮೆ ಆರು ಫೂಟಿನ ಎತ್ತರಕ್ಕೆ ಶೋಭಿಸದ ಸಪೂರವಾದ ಕೈಕಾಲುಗಳು. ಉದ್ದವಾದ ಮೋರೆಯಲ್ಲಿ ಪ್ರತಿಯೊಂದೂ ಉದ್ದವಾದದ್ದು : ಕಿವಿ, ಮೂಗು, ಹಣೆ ಎಲ್ಲ. ಬಂಗಾರದ ಗಿಲೀಟು ಉಳ್ಳ ಫ್ರೇಮ್, ಲಕಲಕನೆ ಹೊಳೆಯುವ ದಪ್ಪ ಗಾಜುಗಳ ಕನ್ನಡಕದೊಳಗಿಂದ ತೀಕ್ಷ್ಣವಾಗಿ ಅವಲೋಕಿಸುವ ಕಣ್ಣುಗಳ ಮೇಲಿನ ಹುಬ್ಬುಗಳು ಅಳತೆ ಮೀರಿ ದಪ್ಪವಾಗಿದ್ದುವು. ಒಟ್ಟೂ ವ್ಯಕ್ತಿತ್ವ ದರ್ಪ ಸಾರುವಂತಹದಲ್ಲ;ಶಾಂತ, ಮೆತ್ತಗಿನ ಸ್ವಭಾವವನ್ನು ಪ್ರಕಟಿಸುವಂತಹದು. ಕೇರಿಯ ಮನೆಗಳಲ್ಲಿ, ಆಫೀಸಿನಲ್ಲಿ ಹಲವರ ಪ್ರೀತಿ ಗೌರವಗಳನ್ನು ದೊರಕಿಸಿಕೊಟ್ಟದ್ದು ಕೆಲಸದ ಬಗೆಗಿನ ಅವನ ದಕ್ಷತೆ, ಅಗಾಧ ಜ್ಞಾನ ಮತ್ತು ಅನುಭವಗಳಾಗಿದ್ದುವು; ಹೊರತು, ದೈಹಿಕ ವ್ಯಕ್ತಿತ್ವವಲ್ಲ.

ಇತ್ತೀಚೆಗೆ ಕೆಲವು ದಿನಗಳಿಂದ ಯಾವ ಸ್ಪಷ್ಟ ಕಾರಣವೂ ಇಲ್ಲದೇನೆ ದೇಹದಲ್ಲಿ ಸೇರಿಕೊಂಡ ಒಂದು ಬಗೆಯ ಬಳಲಿಕೆಯ ಕಾರಣ ಮಾನಸಿಕವಾಗಿರಬಹುದೆಂಬ ಗುಮಾನಿ ಬೆಹರಾಮನಿಗೆ ಇಲ್ಲದಿಲ್ಲ. ದಿನವೂ ರಾತ್ರಿ ಕಾಂಪೋಜ್ ಗುಳಿಗೆಯನ್ನು ಸೇವಿಸಿದ ಮೇಲೆಯೇ ನಿದ್ದೆ ಬರುತ್ತಿತ್ತು. ಶಿರೀನಳ ಚಿಂತೆಗೆ ಕಾರಣವಾದ ಸಂಗತಿ ಕೂಡ ಇದೇ ಆಗಿತ್ತು: ಕೆಲಸದಲ್ಲಿ ತೊಡಗಿರುವವರೆಗೂ ಇಬ್ಬರೂ ಮಕ್ಕಳಿಂದ ದೂರವಾಗಿರಬೇಕಾದ ತಮ್ಮ ಸ್ಥಿತಿಯ ಬಗ್ಗೆ ಅವನು ಈವರೆಗೂ ವಿಚಾರ ಮಾಡಿದವನೇ ಅಲ್ಲ ಎಂಬುದನ್ನು ಅವಳು ಬಲ್ಲಳು.

ಚಹ ಕುಡಿಯುತ್ತ ಕರುಣಾಕರನ್ ಕಡೆಗೆ ನೋಡುತ್ತಿದ್ದ ಹಾಗೆ ಅವನು ಕೇಳಿದನೆಂದುಕೊಂಡ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಬೇಕೆಂದು ಬೆಹರಾಮ್ ಚಿಂತಿಸತೊಡಗಿದ.

ಕರುಣಾಕರನ್ ತುಂಬ ಸುಟಿಯಾದ ಹುಡುಗ. ಯಾರೂ ಸಹಜವಾಗಿ ಮೆಚ್ಛಿಕೊಳ್ಳುವ ಹಾಗಿದ್ದ. ಸ್ವಚ್ಛವಾದ ಅಚ್ಚನೀಲಿಬಣ್ಣದ ಜೀನ್ಸ್; ಕಾಲರ್ ಇಲ್ಲದ, ಅರ್ಧತೋಳಿನ ಹಳದೀ ಬಣ್ಣದ ಜರ್ಸಿ; ಜರ್ಸಿಯ ಎದೆಯ ಮೇಲಿನ ದೊಡ್ಡ ಕಿಸೆಯ ಹತ್ತಿರ ನಿರ್ಮಾಪಕರ ಹೆಸರಿನ ಚಿಹ್ನೆ; ಕಾಲಲ್ಲಿ ಚೆನ್ನಾಗಿ ಲಕಲಕಿಸುವ ಹಾಗೆ ಪಾಲಿಶ್ ಮಾಡಿಸಿದ ಕಪ್ಪು ಬಣ್ಣದ ಲೆದರ್ ಬೂಟುಗಳು; ಸರಿಯಾಗಿ ಮಧ್ಯದಲ್ಲಿ ಬೈತಲೆ ತೆಗೆದು ಬಾಚಿಕೊಂಡ ತಲೆಗೂದಲು; ವಿಶೇಷ ಕಾಳಜಿ ತೆಗೆದುಕೊಳ್ಳದೆ ಅದರಷ್ಟಕ್ಕೆ ಬೆಳೆಯಲು ಬಿಟ್ಟಂತೆ ತೋರುತ್ತಿದ್ದ ದಪ್ಪ ಮೀಸೆ; ಸೆಲ್ಯುಲಾಯ್ಡ್ ಫ್ರೇಮಿನ ಕನ್ನಡಕ; ಇವೆಲ್ಲವುಗಳಿಗೆ ಆರೋಗ್ಯದ, ಲವಲವಿಕೆಯ ಕಳೆ ತಂದದ್ದು ಸೌಜನ್ಯ ತುಂಬಿದ ಹಸನ್ಮುಖತೆಯಾಗಿತ್ತು.

‘ನೋಡಿ ಕರುಣಾಕರನ್, ಇನ್ನೆರಡು ತಿಂಗಳಲ್ಲಿ ನಾನು ನಿವೃತ್ತನಾಗುವವನು’ ಎಂದು ಆರಂಭಿಸಬೇಕು ಎನ್ನುವಷ್ಟರಲ್ಲಿ ತನ್ನ ಉತ್ತರ ಅಪ್ರಸ್ತುತವಾಗಿ ಕಂಡಿತು. ‘ಆಫೀಸಿನ ರಾಜಕಾರಣಕ್ಕೇ ಬೇಸತ್ತಿರುವಾಗ ಈ ಹೊಸ ರಾಜಕಾರಣದಲ್ಲಿ ಸಿಕ್ಕಿಬೀಳುವ ಮನಸ್ಸಿಲ್ಲ.’-ಇದು ಬಹಳಷ್ಟನ್ನು ಗ್ರಹೀತ ಹಿಡಿಯುವ ಮಾತಾಗಿ ತೋರಿತು. ಚಹ ಕುಡಿದು ಕಪ್ಪನ್ನು ಕೆಳಗಿರಿಸುತ್ತಿದ್ದಹಾಗೆ, ‘ಆಫೀಸಿನ ಕೆಲಸದಲ್ಲಿ ಎಂಥೆಂಥ ಕಠಿಣ ಸನ್ನಿವೇಶಗಳನ್ನು ಇದಿರಿಸಿದವನಿಗೆ ನೀನು ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಧೈರ್ಯ ಮಾತ್ರ ಎಳ್ಳಷ್ಟೂ ಇಲ್ಲ ನೋಡು. ನಾಳೆ ಇನ್ನೊಮ್ಮೆ ಬಾರಲ್ಲ, ನನ್ನ ಮಗಳೂ ಇರುತ್ತಾಳೆ ಆಗ, ನಿನ್ನ ಪ್ರಶ್ನೆಗಳಿಗೆ ಅವಳೇ ಉತ್ತರ ಕೊಡಲಿ’ ಎಂದು ಹೇಳಬೇಕು ಎಂದುಕೊಂಡು ಬಾಯಿ ತೆರೆದರೆ ಬಾಯಿಂದ ಹೊರಟಿದ್ದು ಇನ್ನೊಂದು ಪ್ರಶ್ನೆಯೇ ಆಗಿತ್ತು: “ಯಾವ ರೀತಿಯಿಂದಲೂ ಸಂಬಂಧವಿಲ್ಲದ ಈ ಖೂನಿಯ ಬಗ್ಗೆ ನನ್ನ ಹತ್ತಿರ ಮಾಹಿತಿ ಇದೆಯೆಂದು ಯಾರು ಹೇಳಿದರು?” ಪ್ರಶ್ನೆಯಲ್ಲಿ ಮೂಡಿದ ಅನವಶ್ಯಕ ಅಳುಕಿನಿಂದ ಸ್ವತಃ ಬೆಹರಾಮನಿಗೇ ಅಸಮಾಧಾನವೆನಿಸಿತು.
“ನಿಮ್ಮ ನೆರೆಹೊರೆಯಲ್ಲೇ ನಡೆದ ಕೊಲೆಯಲ್ಲವೆ?”

‘ಪೇಪರಿನಲ್ಲಿ ದಿನವೂ ಹತ್ತಾರು ಕೊಲೆಗಳ ಸುದ್ದಿ ಓದಿ ಜಡ್ಡು ಬಿದ್ದಂತಿದ್ದ ನನ್ನ ಮನಸ್ಸಿನ ಮೇಲೆ ಈ ಕೊಲೆಯ ಸುದ್ದಿ -ಅದೂ ಒಬ್ಬ ಯಃಕಶ್ಚಿತ ರದ್ದೀವಾಲಾನ ಖೂನಿಯ ಸುದ್ದಿ -ಪರಿಣಾಮ ಮಾಡಿರಲಿಕ್ಕಿಲ್ಲ. ಈ ಕೊಲೆಯಂತೂ ಪೇಪರಿನಲ್ಲಿ ಕೂಡ ವರದಿಯಾಗಿರಲಿಲ್ಲ’ ಎನ್ನಲು ಹೊರಟವನು, ಕೊನೆಗೂ ಇದು ಒಬ್ಬ ಮನುಷ್ಯನ ಸಾವು ಎನ್ನುವುದು ಅರಿವಿಗೆ ಬಂದವನ ಹಾಗೆ:
“ಅವರಿವರಿಂದ ಕೇಳಿ ತಿಳಿದ ಸಂಗತಿಯೆಂದರೆ ಇವನು ಮಗ್ಗಲು ಝೋಪಡಿಯಲ್ಲಿ ಕಳ್ಳಭಟ್ಟಿಯನ್ನು ನಡೆಸುತ್ತಿದ್ದವರ ಬಗ್ಗೆ ಇವನು ಪೋಲಿಸರಿಗೆ ಮಾಹಿತಿ ಒದಗಿಸುತ್ತಿದ್ದ ಎಂಬ ಗುಮಾನಿ ಈ ಕೊಲೆಗೆ ಕಾರಣವಾಯಿತಂತೆ” ಎಂದ.
“ಇದು ನಿಮಗೆ ಹೇಗೆ ತಿಳಿಯಿತು?”
ಕರುಣಾಕರನ್‌ನ ಪ್ರಶ್ನೆಯೊಳಗಿನ ತನಿಖೆಯ ಧಾಟಿ ಬೆಹರಾಮನಿಗೆ ಸೇರಲಿಲ್ಲ. ಹಾಗೆಂದು ಹೇಳುವ ಧೈರ್ಯವೂ ಆಗಲಿಲ್ಲ. ಕೆಲಸದ ವಾತಾವರಣದಲ್ಲಿ ಅನ್ನಿಸುತ್ತಿದ್ದ ಧೈರ್ಯ ಈ ಸಣ್ಣ ಪ್ರಾಯದ ಯುವಕನ ಇದಿರು ಸಂಪೂರ್ಣವಾಗಿ ಉಡುಗಿಹೋದಂತೆ ತೋರಿದಾಗ ಖೂನಿಗೆ ಸಂಬಂಧಪಟ್ಟ ಮಾತುಕತೆಯಾದ್ದರಿಂದ ತನಿಖೆಯ ಧಾಟಿ ತಂತಾನೆ ಬಂದು ಸೇರಿಕೊಳ್ಳುತ್ತಿರಬೇಕು ಎಂದು ಸಮಾಧಾನ ತಂದುಕೊಂಡ.

‘ಸುಳ್ಳೇ ಅವರಿವರ ಹೆಸರುಗಳು ಯಾಕೆ? ನೀವು ಈಗ ನಡೆಸಿದ ತನಿಖೆಯ ಉದ್ದೇಶವೇನು? ಇಂಥದರಲ್ಲಿ ನನ್ನಂಥವನು ತಾನೇ ಏನು ಮಾಡುಬಲ್ಲ? ನಗರಗಳು ಬೆಳೆದಲ್ಲೆಲ್ಲ ಇಂಥ ಪಾತಾಳಲೋಕಗಳು ತೆರೆದುಕೊಳ್ಳುವುದರಲ್ಲಿ ಅಶ್ಚರ್ಯವೇನಿದೆ? ನಿಯಾನ್ ದೀಪಗಳ ಕಣ್ಣು ಕುಕ್ಕಿಸುವ ಬೆಳಕಿನಿಂದಾಗಿ ಹದ್ದು ಪಾರಾಗಬೇಕಾಗಿಬಂದ ಕತ್ತಲೆ ಇಂಥಲ್ಲಿ ತನ್ನ ಸಾಮ್ರಾಜ್ಯ ತೆರೆದರೆ ಅದಕ್ಕೆ ನಾವು ಹೊಣೆಗಾರರೆ? ಇಷ್ಟಕ್ಕೂ ರದ್ದೀವಾಲಾ ಕೊಲೆಯಾದದ್ದು ಈ ಕಾರಣಕ್ಕಾಗಿ ಅಲ್ಲ-ಈ ಕಾರಣಕ್ಕಾಗಿ ಅಂದರೆ ಹೋದವನು ತಿರುಗಿ ಬರುತ್ತಾನೆಯೇ? ಹೆಂಡತಿ-ಮಕ್ಕಳಾಗಲಿ, ಹುಟ್ಟಿಸಿದವರು ಒಡಹುಟ್ಟಿದವರು ಯಾರೂ ಇಲ್ಲದೆಯೆ, ಅನಾಥ ಹೆಣವಾಗಿ ಸರಕಾರದ ಹಣದಿಂದಲೇ ಬೂದಿಯಾದವನ ಸಾವಿಗಾಗಿ ನಾವು ಯಾಕೆ ಈಗ ತಲೆ ಕೆಡಿಸಿಕೊಳ್ಳಬೇಕು?’-ಹಲವು ಪ್ರಶ್ನೆಗಳು ಒಮ್ಮೆಗೆಲೇ ಕೋಲಾಹಲ ನಡೆಸಿದರೂ ಒಂದೂ ಮಾತಾಗಿ ಹೊರಗೆ ಬರಲಿಲ್ಲ. ನಿಜವಾಗಿ ನೋಡಿದರೆ ಈ ಪ್ರಶ್ನೆಗಳು ಇಷ್ಟೊಂದು ತ್ವರೆಯಲ್ಲಿ, ಇಷ್ಟೊಂದು ಸ್ಪಷ್ಟ ರೂಪದಲ್ಲಿ ಮೊಳೆದದ್ದಕ್ಕೆ ಕರುಣಾಕರನ್ ಹೊಣೆಯಾಗಿರಲಿಲ್ಲ. ಬಹಳ ಹಿಂದೆಯೆ ಮನೆಗೆಲಸದ ಹೆಣ್ಣು ಪಾರ್ವತಿಯಿಂದಾಗಿ ಎದುರಾದ ಒಂದು ಸನ್ನಿವೇಶದಲ್ಲಿ ಹುಟ್ಟಿದ ಈ ಪ್ರಶ್ನೆಗಳು ಈಗ ಮತ್ತೆ ಪಟಪಟನೆ ಹುಟ್ಟಿಕೊಂಡದ್ದಕ್ಕೆ ಕರುಣಾಕರನ್ ನಿಮಿತ್ತ ಮಾತ್ರನಾಗಿದ್ದ.

“ನೋಡಿ ಕರುಣಾಕರನ್, ನನಗೀಗ ವಯಸ್ಸಾದುದ್ದಕ್ಕೋ ಏನೋ ಇಂಥದ್ದನ್ನೆಲ್ಲ ಸಹಿಸುವ ಗಟ್ಟಿತನವೇ ಇಲ್ಲವಾಗಿಬಿಟ್ಟಿದೆ. ಆಗ ನಮಗೆ ಚಹ ಮಾಡಿ ತಂದ ಹುಡುಗಿಯಿದ್ದಾಳಲ್ಲ-ಅವಳ ತಾಯಿ ಪಾರ್ವತಿ ನಮ್ಮಲ್ಲಿ ಕಸಮುಸುರೆಯ ಕೆಲಸ ಮಾಡುತ್ತಾಳೆ. ಅವಳೆಲ್ಲೋ ರಾಜಕಾರಣಿಯಾಗಬೇಕಿತ್ತು, ತಪ್ಪಿ ಇಂಥ ಕೆಲಸಕ್ಕೆ ಸೇರಿದಳೆಂದು ತೋರುತ್ತದೆ. ಅವಳಿಗೆ ಈ ಖೂನಿಯ ಬಗ್ಗೆ ಬಹಳಷ್ಟು ಗೊತ್ತಿದ್ದಂತಿದೆ. ನಾಳೆ ಇದೇ ಹೊತ್ತಿಗೆ ಬನ್ನಿ, ಅವಳನ್ನು ಕರೆದಿರುತ್ತೇನೆ. ಜಮ್‌ಶೇದ್‌ಪೂರದಿಂದ ನನ್ನ ಹಿರಿಯ ಮಗಳು ಬಂದಿದ್ದಾಳೆ. ಅವಳು ಬೇಕಾದರೆ ನಿಮ್ಮೊಡನೆ ಮಾತನಾಡಲಿ. ಸಾಯ್ಕಾಲಜಿಯಲ್ಲಿ ಎಂ. ಎ ಅವಳು. ಇಂಥದರ ಬಗ್ಗೆ ತುಂಬ ಓದಿಕೊಂಡವಳು, ತಿಳಿದುಕೊಂಡವಳು.” ಇಷ್ಟನ್ನೂ ಹೇಳುವುದರೊಳಗೆ ಬೆಹರಾಮನಿಗೆ ದಣಿವಾಯಿತು. ತನ್ನನ್ನೇ ವಿಚಿತ್ರ ಕುತೂಹಲದಿಂದ ನೋಡುತ್ತ ಕುಳಿತುಬಿಟ್ಟ ಕರುಣಾಕರನ್‌ನನ್ನು ನೋಡಿ, ಸನ್ನಿವೇಶವನ್ನು ಹಗುರಗೊಳಿಸಲೆಂಬಂತೆ, “ಇನ್ನೊಂದು ಕಪ್ಪು ಚಹ ತರಿಸಲೇ? ನನಗಂತೂ ಬೇಕು”, ಎನ್ನುತ್ತ ಅವನ ಉತ್ತರಕ್ಕಾಗಿ ಕಾಯದೆ ಸೀತೆಯನ್ನು ಕರೆದು ಖಾಲಿಯಾದ ಕಪ್ಪು-ಬಶಿಗಳನ್ನು ಒಳಗೆ ಒಯ್ಯಲು ಹೇಳಿ ಇನ್ನೆರಡು ಚಹ ತರಲು ಹೇಳಿದ. ಕರುಣಾಕರನ್‌ನ ಕಡೆಗೆ ತಿರುಗಿ, “ನಿಮ್ಮ ಕಿಸೆಯಲ್ಲಿಯ ಸಿಗರೇಟ್ ಪ್ಯಾಕೆಟ್ ನಾನು ಕಾಣದೇ ಇಲ್ಲ. ಸೇದಬೇಕು ಎನಿಸಿದರೆ ಸೇದಲು ಭಿಡೆ ಮಾಡಿಕೊಳ್ಳಬೇಡಿ. ನಾನೇ ಸೇದಲಾರೆ,” ಎನ್ನುತ್ತ ಕುರ್ಚಿಯಿಂದ ಎದ್ದು ಆಶ್‌ಟ್ರೇ ಹುಡುಕಿ ತಂದ. ಜೊತೆಗೆ ಬೆಂಕೀಕಡ್ಡಿಯ ಪೊಟ್ಟಣವನ್ನೂ. ಹಾಗೂ, “ಇದೀಗ ಬಂದೆ,” ಎನ್ನುತ್ತ ಒಳಗೆ ನಡೆದ.

ಸಿಗರೇಟೊಂದನ್ನು ಹಚ್ಚಿಕೊಳ್ಳುವಾಗ ಕರುಣಾಕರನ್‌ಗೆ ಹಾಯೆನಿಸಿತು. ಹೊರಗೆ ತೋರಿಸಿಕೊಂಡಿರದಿದ್ದರೂ ಹಿಂದೆಂದೂ ಕಂಡು ಗೊತ್ತಿರದ ಈ ಹಿರಿಯನ ಇದಿರು ಕೂತು ಮಾತನಾಡುವಾಗ ಒಳಗೊಳಗೇ ಶೇಖರಿಸಹತ್ತಿದ ಆತಂಕದಿಂದ ಕರುಣಾಕರನ್ ಬಿಗಿಗೊಂಡಿದ್ದ. ಸಿಗರೇಟ್ ಹೊತ್ತಿಸಿ, ಕುರ್ಚಿಯನ್ನು ತುಸು ಹಿಂದಕ್ಕೆ ಸರಿಸಿ ಕುಳಿತುಕೊಂಡ. ಅನಾಯಾಸವಾಗಿಯೇ ದೃಷ್ಟಿ ಬಾಲ್ಕನಿಯ ಕಟಕಟೆಯ ಹೊರಗೆ ಸರಿದು ಆವರೆಗೂ ಲಕ್ಷ್ಯಕ್ಕೆ ಬಂದಿರದ ಸಮುದ್ರದ ಮೇಲೆ ಊರಿತು: ನೀರಿಗೆ ಆಗ ಇಳಿತವಾದ್ದರಿಂದ ಸ್ತಬ್ಧವಾಗಿತ್ತು. ಸಂಜೆಯ ಐದು ಗಂಟೆಯಾಗುತ್ತ ಬಂದಿದ್ದರೂ ನೀರ ಮೇಲಿನ ಬೆಳಕು ಇನ್ನೂ ಬಾಡಿರಲಿಲ್ಲ. ಆದರೂ ನೀರಿನ ನೋಟವೇ ಅವನಂಥ ಕೇರಳದವನ ಮನಸ್ಸಿಗೆ ಹುಚ್ಚು ಹಿಡಿಸುವಂತಹದು. ಮುದುಕ ಒಳ್ಳೆಯ ಜಾಗದಲ್ಲಿ ಮನೆ ಮಾಡಿದ್ದಾನೆ ಅನ್ನಿಸಿತು.

ಆಗಿನಿಂದಲೂ ಬಿಳಿಯ ಪಜಾಮ, ಬಟ್ಟೆಯಿಂದ ಹೊಲಿಸಿದ ಬನಿಯನ್ನಿನಂಥ ತೋಳಿಲ್ಲದ ಬಿಳಿಯ ಅಂಗಿ-ಸುದ್ರೇಹ್-ತೊಟ್ಟು ಕೂತ ಮುದುಕ ಒಳಗೆ ಹೋಗಿ ಪ್ಯಾಂಟು, ಶರ್ಟು ಧರಿಸಿ ಹೊರಗೆ ಬಂದ. “ಗಾಳಿಯಲ್ಲಿ ತುಸು ಚಳಿ ಸೇರಿಕೊಂಡಂತೆ ಅನ್ನಿಸಿತು,” ಎಂದು ಉಡುಪು ಬದಲಿಸಿದ್ದಕ್ಕೆ ವಿವರಣೆ ಈಯುತ್ತಿರುವಾಗ ಎರಡನೇ ಬಾರಿಯ ಚಹವೂ ಬಂತು. ಈ ಬಾರಿ ಒಂದು ಬಶಿಯಲ್ಲಿ ಕೆಲವು ಬ್ರಿಟಾನಿಯಾ ಬಿಸ್ಕೀಟುಗಳೂ ಇದ್ದುವು.
“ತೆಗೆದುಕೊಳ್ಳಿ, ಒಂದನ್ನು ನೀವು ವಿವರಿಸಲೇ ಇಲ್ಲ. ಈ ಖೂನಿಯ ಬಗೆಗಿನ ಮಾಹಿತಿಗಾಗಿ ನಮ್ಮ ಮನೆಗೇ ಬಂದದ್ದು ಹೇಗೆ?”
“ಇಲ್ಲಾ ಸರ್, ನನಗೂ ಗೊತ್ತಿಲ್ಲ. ಬಹುಶಃ ಬಸ್‌ಸ್ಟಾಪಿನಲ್ಲಿ ಇಳಿದ ಕೂಡಲೇ ಕಣ್ಣಿಗೆ ಬಿದ್ದ ಮೊದಲ ಮನೆಯೇ ನಿಮ್ಮದಾದುದಕ್ಕೇ ಇರಬೇಕು, ಅನ್ನಿಸುತ್ತದೆ ನೀವು ನನ್ನನ್ನು ನಂಬಬೇಕು , ಸರ್ ; ಈ ಖೂನಿಯ ಬಗ್ಗೆ ಯಾವುದೇ ಬಗೆಯ ದುಷ್ಟ ಕುತೂಹಲದಿಂದ ಬಂದವನಲ್ಲ. ಮಾಹಿತಿ ದೊರಕಿಸುವ ಉದ್ದೇಶವನ್ನೂ ಅರಿತವನಲ್ಲ. ಮೊನ್ನೆ ನಮ್ಮ ಆಫೀಸಿಗೆ, ಸಂಪಾದಕರ ಹೆಸರಿಗೆ, ಸಹಿಯಿಲ್ಲದ ಒಂದು ಪತ್ರ ಬಂದಿತು. ಈ ಪತ್ರ ನನ್ನ ಟ್ರೇಗೆ ಬಂದಿತು. ಅದರ ಮೇಲೆ ಸಂಪಾದಕರಿಂದ ಯಾವುದೇ ಷರಾ ಇರಲಿಲ್ಲ. ಅಂದರೆ ಅವರೂ ಕೂಡ ನನ್ನಿಂದ ಯಾವ ನಿರ್ದಿಷ್ಟ ಕ್ರಮವನ್ನೂ ಬಯಸಿರಲಿಲ್ಲ. ಬಹುಶಃ ಅವರು ಆ ಪತ್ರವನ್ನು ಪೂರ್ತಿಯಾಗಿ ಓದಿರಲಿಕ್ಕೂ ಇಲ್ಲ. ಅಥವಾ ಇಂಥ ಪತ್ರಗಳನ್ನು ದಿನವೂ ಓದುವುದು ಅಭ್ಯಾಸವಾಗಿಬಿಟ್ಟ ಅವರ ಮೇಲೆ ಅದು ಅಂಥ ಪರಿಣಾಮವನ್ನು ಮಾಡಿರಲಿಕ್ಕೂ ಇಲ್ಲ. ಈ ಪತ್ರಿಕಾ ವ್ಯವಸಾಯಕ್ಕೆ ತೀರ ಹೊಸಬನಾದ ನನ್ನ ಮೇಲೆ ಮಾಡಿದ ಪರಿಣಾಮದಿಂದಾಗಿ ನಿದ್ದೆಗೆ ಎರವಾಗಿದ್ದೇನೆ. ಆ ಪತ್ರ ಒಂದು ಖೂನಿಗೆ ಸಂಬಂಧಪಟ್ಟದ್ದು. ಸದ್ಯ ನಿಮಗೆ ತೋರಿಸುವ ಹಾಗಿಲ್ಲ. ತಪ್ಪು ತಿಳಿಯಬೇಡಿ. ಮಾಹಿತಿ ದೊರಕಿಸುವ ಉದ್ದೇಶ : ನಾನು ಕಳೆದುಕೊಂಡ ನಿದ್ದೆಯನ್ನು ತಿರುಗಿ ಪಡೆಯುವುದು.” ಇಲ್ಲಿಗೆ ಬರುವ ಮೊದಲೇ ಮನಸ್ಸಿನಲ್ಲಿ ಸಿದ್ಧಮಾಡಿಕೊಂಡ ಈ ಮಾತುಗಳಲ್ಲಿ ಎಷ್ಟೊಂದನ್ನು ಮುದುಕನ ಇದಿರು ಕೂತಾಗ ಆಡುವುದು ಸಾಧ್ಯವಾಯಿತೋ ಕರುಣಾಕರನ್‌ಗೆ ತಿಳಿಯಲಿಲ್ಲ. ಅವನ ಕಣ್ಣಿನಲ್ಲಿ ಕಣ್ಣಿಟ್ಟು ಆಡಿದ, ಆಡಲು ಸಾಧ್ಯವಾದ ಕೆಲವೇ ಕೆಲವು ಮಾತುಗಳು ಕೂಡ ಚಹ ಕುಡಿಯುವುದನ್ನೂ ಮರೆಯುವಂತೆ ಮಾಡಿದ್ದುವು. ಕೈಯಲ್ಲಿ ಹಿಡಿದ ಸಿಗರೇಟು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿತ್ತು. ತುದಿಯಲ್ಲಿನ್ನೂ ಕೆಂಡವುಳ್ಳ ಹಿಡಿಕೆಯನ್ನು ಆಶ್-ಟ್ರೇದಲ್ಲಿ ಮುರುಟಿ ಕೆಂಡ ಆರಿಸಿದಮೇಲೆ ಚಹದ ಕಪ್ಪನ್ನು ಕೈಗೆತ್ತಿಕೊಂಡ.

ಅವನ ಮಾತುಗಳಲ್ಲಿಯ ಅತೀವ ಸಹಜತೆಯೇ ಬೆಹರಾಮನನ್ನು ತಕ್ಷಣ ತಟ್ಟಿತು. “ನೋಡೋಣ ಕರುಣಾಕರನ್, ನಾಳೆಗೆ ಬನ್ನಿ. ಬರುವಾಗ ನೀವು ಆಗ ಉಲ್ಲೇಖಿಸಿದ ಆ ಸಹಿಯಿಲ್ಲದ ಪತ್ರವನ್ನೂ ತರಲು ಮರೆಯಬೇಡಿ,” ಎಂದ. ಆ ಆಶ್ವಾಸನೆಯೊಳಗಿನ ಪ್ರಾಮಾಣಿಕತೆ ಕರುಣಾಕರನ್‌ನ ಮೇಲೆ ಪರಿಣಾಮ ಮಾಡದೇ ಇರಲಿಲ್ಲ. “ತರುತ್ತೇನೆ, ಸರ್,” ಎಂದು ಎದ್ದುನಿಂತ. ಬೆಹರಾಮನೂ ಎದ್ದುನಿಂತು ಅವನನ್ನು ಕೈಕುಲುಕಿ ಬೀಳ್ಕೊಟ್ಟ. ನಿನ್ನೆಯವರೆಗೂ, ಪರಸ್ಪರರ ಅಸ್ತಿತ್ವದ ಅರಿವೂ ಇಲ್ಲದ ಇಬ್ಬರು ಒಬ್ಬರನ್ನೊಬ್ಬರು ಸಂಧಿಸಿದ ಅನಿರೀಕ್ಷಿತ ಗಳಿಗೆಯಲ್ಲಿ, ಸಂಧಿಸಿದಾಗ ಪರಸ್ಪರರ ಸಮ್ಮುಖದಲ್ಲಿ ಆಡಲು ಸಾಧ್ಯವಾದ ಕೆಲವೇ ಕೆಲವು ಮಾತುಗಳಿಂದಾಗಿಯೇ ತಮ್ಮ ಊಹೆಗೆ ಮೀರಿದ ಒಂದು ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗುತ್ತಿದ್ದ ರೀತಿ ಇಬ್ಬರಿಗೂ ಅಶ್ಚರ್ಯವನ್ನುಂಟುಮಾಡಿತ್ತು. ಅಂಥ ಆಶ್ಚರ್ಯದ ಗುಂಗಿನಲ್ಲಿರುವಾಗಲೇ, ಆಗ ತನಗೆ ಚಹ ಬಿಸ್ಕೀಟುಗಳನ್ನು ತಂದುಕೊಟ್ಟ ಸೀತೆ, ಅಡುಗೆಯ ಮನೆಯಲ್ಲಿ ಬಾಗಿಲಲ್ಲಿ ಕಾಣಿಸಿಕೊಂಡಾಗ ಅವಳಿಗೂ ಬರುತ್ತೇನೆ ಎಂದು ಹೇಳುವಹಾಗೆ ಕೈಮುಗಿದ. ಅವಳ ಮೋರೆಯನ್ನು ಬೆಳಗಿದ ಮುಗ್ಧ ಮುಗುಳುನಗೆ ಅಂತಃಕರಣವನ್ನು ವ್ಯಾಪಿಸುತ್ತಿರುವಾಗ ಮನೆಯ ಹೊರಗೆ ಕಾಲಿಟ್ಟ.

ಅವನು ಹೋದಕೂಡಲೇ ಬೆಹರಾಮ್, ಮಧ್ಯಾಹ್ನದ ನಿದ್ದೆ ಸರಿಯಾಗಿರದವನ ಹಾಗೆ, ಮಲಗುವ ಕೋಣೆಗೆ ನಡೆದು ಹಾಸಿಗೆಯ ಮೇಲೆ ಅಡ್ಡವಾಗಿ, ಹೊರಗೆ ಹೋದ ಹೆಂಡತಿ-ಮಕ್ಕಳು ಹಿಂತಿರುಗಿ ಬರುವುದರ ಹಾದಿ ಕಾಯಹತ್ತಿದ. ಯಾವುದರ ಬಗೆಗೂ ಧೇನಿಸುವ ಮನಸ್ಸಿಲ್ಲದವನ ಶೂನ್ಯದೃಷ್ಟಿ ಮೇಲೆ ಸಂತವಾಗಿ ತಿರುಗುತ್ತಿದ್ದ ಫ್ಯಾನಿನ ಮೇಲೇ ನೆಟ್ಟಿತ್ತು, ಸರಕ್ಕನೆಂಬಂತೆ, ಕರುಣಾಕರನ್‌ಗೆ ಕೊಟ್ಟ ಮಾತು ಶಿರೀನ್ ಮಾಡಿಕೊಂಡು ಬಂದ ಇಡಿಯ ಯೋಜನೆಯನ್ನೇ ಹಾಳುಮಾಡುವುದು ನಿಶ್ಚಿತ ಎಂಬುದು ಹೊಳೆದು ಹೋಯಿತು.

ಮನೆಯ ಇದಿರೇ ಬಾಂದ್ರಾ ಸ್ಟೇಶನ್ನಿಗೆ ಹೋಗುವ ಬಸ್ಸು ನಿಲ್ಲುವ ಸ್ಟಾಪು. ವಿಚಾರ ಮಾಡುವ ಮೊದಲೇ ಬಸ್‌ಸ್ಟಾಪಿನಲ್ಲಿ ನಿಂತು ಕರುಣಾಕರನ್ ಬಸ್ಸಿನ ಹಾದಿ ಕಾಯಹತ್ತಿದ. ಬಾಂದ್ರಾ ಸ್ಟೇಶನ್ನಿನಲ್ಲಿ ಟ್ರೇನ್ ಹತ್ತಿ ದಾದರ ಸ್ಟೇಶನ್ನಿಗೆ, ಅಲ್ಲಿ ಟ್ರೇನ್ ಬದಲಿಸಿ ಡೊಂಬಿವ್ಲಿಗೆ ಹೋಗಿ ಆದಷ್ಟು ಬೇಗ ತನ್ನ ಕೋಣೆ ಸೇರುವ ಮನಸ್ಸಾಗಿತ್ತು. ಬಸ್‌ಸ್ಟಾಪಿನ ಇದಿರುಗಡೆಯಲ್ಲಿ, ತಾನು ಇದೀಗ ಭೇಟಿಯಿತ್ತ ಮನೆಯ ಬಲಮಗ್ಗುಲಲ್ಲಿ ಕಾಣಿಸುತ್ತಿದ್ದ, ಹಾಳುಬಿದ್ದ ಗೋಲಾಕಾರಾದ ಹಳೆಯ ಕಟ್ಟಡವೇ ಪತ್ರದಲ್ಲಿಯ ಭೂತಬಂಗಲೆ ಇದ್ದರೂ ಇದ್ದೀತು. ಸ್ಟಾಪಿನಲ್ಲಿ ನಿಂತ ಮುದುಕಿಯೊಬ್ಬಳನ್ನು ಕೇಳಿ ನೋಡುವ ಮನಸ್ಸಾದರೂ ಕೇಳಲಿಲ್ಲ. ಕೆಲಹೊತ್ತಿನ ಮೊದಲು ಮುದುಕನನ್ನು ಭೇಟಿಯಾದ ಬಾಲ್ಕನಿಯ ಕಡೆಗೆ ಕಣ್ಣು ಹಾಯಿಸಿದ; ಯಾರೂ ನಿಂತಿರಲಿಲ್ಲ. ಅಷ್ಟರಲ್ಲಿ ತಾನು ಹತ್ತಬೇಕಾದ ಬಸ್ಸೂ ಬಂದಿತು. ಬಸ್ಸು ಹತ್ತಿ ಸ್ಟೇಶನ್ನಿಗೆ ಹೋಗುವಾಗ, ಟ್ರೇನ್ ಹತ್ತಿ ಮನೆಯ ಕಡೆಗೆ ಸಾಗಿದಾಗ ಮನೆ ತಲುಪುವತನಕವೂ ಈ ಭೇಟಿಯ ಬಗ್ಗೆ ವಿಚಾರವನ್ನೇ ಮಾಡಕೂಡದು ಎಂದು ನಿರ್ಧರಿಸಿದವನ ಹಾಗೆ ಲಕ್ಷ್ಯವನ್ನು ಸುತ್ತಲಿನದರ ಮೇಲೆಯೇ ನೆಲೆಸಿದ್ದ.

ಮನೆ ತಲುಪುವ ಪುರಸತ್ತಿಲ್ಲ, ಕರುಣಾಕರನ್ ತನ್ನ ಕೋಣೆಗೆ ಧಾವಿಸಿ ಕದ ತೆರೆದು ದೀಪ ಹಾಕಲು ಸ್ವಿಚ್ಚನ್ನೊತ್ತಿದ. ದೀಪ ಬೆಳಗಲಿಲ್ಲ. ಅವನು ‘ಪೀಜೀ’ ಆಗಿದ್ದ ಮನೆಯ ಒಡತಿಯನ್ನು ಕೇಳಿದಾಗ ಇಡೀ ಕೇರಿಯ ದೀಪಗಳೇ ಹೋದದ್ದು ತಿಳಿಯಿತು. ಡೊಂಬಿವ್ಲಿಯಲ್ಲಿ ಇದೇನು ಹೊಸದಾಗಿರಲಿಲ್ಲ. ಮುದುಕಿಯ ಮನೆಯಲ್ಲಿ ಮೇಣಬತ್ತಿ ಹೊತ್ತಿಸಿದ್ದು ಕಂಡಿತು. ವಿದ್ಯುತ್ ದೀಪದ ಹಾದಿ ಕಾಯುವ ಮನಸ್ಸು ತನಗೂ ಇಲ್ಲದವನಹಾಗೆ ಮೇಜಿನ ಖಣದಲ್ಲಿರಿಸಿದ ಮೇಣಬತ್ತಿಯನ್ನು ಹೊರತೆಗೆದು ಹಚ್ಚಿದ. ಅದರ ಬೆಳಕು ತನ್ನ ಸದ್ಯದ ಮೂಡಿಗೆ ಕಳೆ ತರುವಂತೆ ತೋರಿತು. ಲಗುಬಗೆಯಿಂದ ಡ್ರೆಸ್ಸು ಬದಲಿಸಿ, ಬಚ್ಚಲುಮನೆಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದ. ಮೇಣಬತ್ತಿಯನ್ನು ಮೇಜಿನ ಮೇಲೆ ನಿಲ್ಲಿಸಿ ಅದರ ಬೆಳಕಿನಲ್ಲಿ ಬರೆಯಲು ಕೂತ.

ಕೇರಳದಿಂದ ಬಂದಮೇಲೆ, ಕಳೆದ ಕೆಲವು ತಿಂಗಳಿಂದ ಇಟ್ಟುಕೊಂಡ ಪರಿಪಾಠವಿದು. ಊರಿನಲ್ಲಿ ಬಿಟ್ಟುಬಂದ ಕಿರಿಯ ತಂಗಿ ಲಲಿತಳಿಗೆ ಬರೆದ ಪತ್ರಗಳ ರೂಪದಲ್ಲಿ ಈ ಡಾಯರಿಯ ಬರವಣಿಗೆಯಿತ್ತು. ತಿಂಗಳಿಗೊಮ್ಮೆ ಅವಳಿಗೆ ಬರೆದ ಪತ್ರಗಳಲ್ಲಿ ಈ ಡಾಯರಿಯಿಂದಲೇ ಎತ್ತಿಹೇಳಿದ ಸಂಗತಿಗಳಿರುತ್ತಿದ್ದುವು. ಡಾಯರಿಯಲ್ಲಿ ಬರೆಯುತ್ತಿದ್ದ ಸಂಗತಿಗಳ ಬಗ್ಗೆ ಯಾವುದೇ ಒಂದು ನಿಶ್ಚಿತ ಯೋಜನೆಯಿರುತ್ತಿರಲಿಲ್ಲ. ಬರೆದಾಗ ಮನಸ್ಸಿಗೆ ಸುಖವೆನಿಸುತ್ತಿದ್ದ ಕ್ರಮದಲ್ಲಿ ಸಂಗತಿಗಳು ದಾಖಲೆಗೊಳ್ಳುತ್ತಿದ್ದುವು. ಎಂದಿನಹಾಗೆಯೇ ‘ಪ್ರೀತಿಯ ಲಲಿತಾ,’ ಎಂಬುದನ್ನು ಮನಸ್ಸಿನಲ್ಲೇ ಅಂದುಕೊಂಡು ಬರೆಯಲು ಶುರು ಮಾಡೋಣವೆಂದರೆ ಕಾಗದದ ಮೇಲೆ ಮೂಡಬಹುದಾದ ಮೊಟ್ಟಮೊದಲಿನ ಶಬ್ಧ ಯಾವುದಾಗಬಹುದು ಎಂಬುದರ ಬಗೆಗೇ ಕುತೂಹಲಪಟ್ಟವನ ಹಾಗೆ ಮೇಣಬತ್ತಿಯ ಬಂಗಾರದ ಬಣ್ಣದ ಜ್ಯೋತಿಯನ್ನು ನೋಡುತ್ತ ಕುಳಿತುಬಿಟ್ಟ, ತಾನು ಕಾಯುತ್ತಿದ್ದ ಶಬ್ದ ಆ ಜ್ಯೋತಿಯೊಳಗಿಂದಲೇ ಬರಲಿದೆ ಎಂಬಂತೆ!

ಹೀಗೆ ಆದದ್ದು ಇದುವೇ ಮೊದಲ ಬಾರಿ ಅಲ್ಲವಾಗಿತ್ತು. ಬರೆಯಲು ಕೂತಮೇಲೆ, ಕೇರಳದಲ್ಲಿಯ ತಮ್ಮ ಮನೆಯನ್ನು ಅದಕ್ಕಿಂತ ಹೆಚ್ಚಾಗಿ ತಂಗಿ ಲಲಿತಳನ್ನು ಕಣ್ಣಮುಂದೆ ನಿಲ್ಲಿಸಿಕೊಳ್ಳಲು ಮಾಡಿದ ಪ್ರಯತ್ನದೊಳಗಿಂದಲೇ ಎದ್ದು ಬರುವ ಸ್ಪಷ್ಟವಾದ ಪ್ರತಿಮೆ ಮೊದಲ ವಾಕ್ಯವನ್ನು ನಿರ್ಧರಿಸುತ್ತಿತ್ತು. ಈಗಲೂ ಹಾಗೆಯೇ ಆಯಿತು: “ನಾವು ಅಂಗಳದ ಸಂಪಿಗೆ ಮರದ ಮೇಲೆ ಕೂತು ಮಾತನಾಡುತ್ತಿದ್ದುದು ನೆನಪಿದೆಯೆ?-ರಾಜರಾಣಿಯರ ಕತೆಯ ಧಾಟಿಯಲ್ಲಿ ನಮ್ಮ ಅಪ್ಪನಿಗೆ ಇಬ್ಬರು ಹೆಂಡಂದಿರು. ನಾನು, ಲಲಿತ ಕಿರಿಯ ಹೆಂಡತಿಯ ಮಕ್ಕಳು. ಅಣ್ಣ ಹಿರಿಯ ಹೆಂಡತಿಯ ಮಗ. ನಾನೇ ಕಂಡಿಲ್ಲವಾದರೂ ಅವನ ಅಮ್ಮ ಅಣ್ಣನ ಹಾಗೇ ತುಂಬ ಚೆಂದಳಿದ್ದಳೆಂದು ಕೇಳಿ ಬಲ್ಲೆವು.” ಮೇಣಬತ್ತಿಯ ಬೆಳಕು ಸುತ್ತಲಿನ ಗೋಡೆಗಳ ಮೇಲೆಕುಣಿಸತೊಡಗಿದ ಹಲವು ಅಸ್ಪಷ್ಟ ಆಕೃತಿಗಳ ಹಾಗೆಯೇ ಹಲವು ಆಕೃತಿಗಳು ಮನಸ್ಸಿನಲ್ಲಿ ಮೂಡಿ ಶಬ್ದಗಳಾಗುವುದಕ್ಕೆ, ಅರ್ಥವಾಗಬಹುದಾದ ವಿನ್ಯಾಸವುಳ್ಳ ವಾಕ್ಯವಾಗುವುದಕ್ಕೆ ಹವಣಿಸುತ್ತಿರುವಾಗ ಮೈತುಂಬ ಮುಳ್ಳು ಹಾಸಿಕೊಂಡ ರೀತಿಗೆ ಕರುಣಾಕರನ್ ಪೆನ್ನನ್ನು ಕೆಳಗಿಟ್ಟುಬಿಟ್ಟ. ಅವನು ಬರೆಯಬೇಕೆಂದುಕೊಂಡದ್ದು ಇಂದು ಭೇಟಿಯಾಗಿಬಂದ ಮುದುಕನ ಬಗೆಗಾಗಿತ್ತು; ತಂಗಿಯ ನೆನಪು ಕೆದಕಿದ ಪುಟ್ಟ ಸೀತೆ, ಬಸ್‌ಸ್ಟಾಪಿನಲ್ಲಿ ನಿಂತಾಗ ನಸುಗೆಂಪಿಗೆ ತಿರುಗಿದ ಸಂಜೆಯ ಬೆಳಕಿನಲ್ಲಿ ವಿಚಿತ್ರವಾಗಿ ಕಂಡ ಭೂತಬಂಗಲೆಯ ಬಗೆಗೂ ಆಗಿತ್ತು. ಹೊರತು, ಅಣ್ಣನ ಬಗೆಗೆ ಆಗಿರಲೇ ಇಲ್ಲ. ಕೇವಲ ಹೊಟ್ಟೆಪಾಡಿಗಾಗಿ ದೂರದ ಕೇರಳದಲ್ಲಿ, ಪಾಲಘಾಟದ ಹತ್ತಿರದ ಪಲಯನ್ನೂರು ಎಂಬ ಹಳ್ಳಿಯಲ್ಲಿ ಮಡಲು ಹೊದೆಸಿದ ತಮ್ಮ ಸಣ್ಣ ಮನೆಯನ್ನು, ವಯಸ್ಸಾದ ಅಪ್ಪ, ವಯಸ್ಸಾಗಿರದ ಅಮ್ಮ, ಸಾಲೆಗೆ ಹೋಗುತ್ತಿದ್ದ ತಂಗಿಯರನ್ನು ಬಿಟ್ಟು ಮುಂಬಯಿಗೆ ಬಂದಾಗ ನೌಕರಿಯನ್ನು, ಇರಲು ಕೋಣೆಯನ್ನು ದೊರಕಿಸಿಕೊಳ್ಳುವಾಗ ಪಟ್ಟ ಶ್ರಮವನ್ನು ಕುರಿತು ಇತ್ತೀಚಿಗೆ ನಡೆದ ಒಂದು ಖೂನಿಯನ್ನು ಕುರಿತು ಬರೆಯುತ್ತಿದ್ದ ಈ ಡಾಯರಿಯಲ್ಲಿ ಎಂದೋ ಕಳಕೊಂಡ ಅಣ್ಣನಿಗೆ ಸಂಬಂಧಪಟ್ಟ ವಾಕ್ಯವೊಂದು ಸಂಕಲ್ಪವನ್ನು ಮೀರಿ ಮನಸ್ಸಿನಲ್ಲಿ ರೂಪ ತಳೆಯುತ್ತಿದ್ದ ರೀತಿಗೆ ದಂಗುಬಡೆದವನ ಹಾಗೆ ಕುಳಿತುಬಿಟ್ಟ.

ಕಡಿದುಹೋದ ವಿದ್ಯುತ್‌ಪ್ರವಾಹ ಮತ್ತೆ ಹರಿಯಲು ತೊಡಗಿರಬೇಕು. ಹಾಕಿಯೇ ಇದ್ದ ಸ್ವಿಚ್ಚಿನಿಂದಾಗಿ ಕೋಣೆಯೊಳಗಿನ ದೀಪ ಕಣ್ಣಿಗೆ ಧಕ್ಕೆ ಕೊಡುವ ಹಾಗೆ ಬೆಳಗಿಕೊಂಡಿತು. ಮೇಣಬತ್ತಿಯನ್ನು ಕೆಲಹೊತ್ತು ಹಾಗೇ ಉರಿಯಲು ಬಿಟ್ಟು, ಕರುಣಾಕರನ್ ಕುರ್ಚಿಯಿಂದ ಎದ್ದ. ತನ್ನ ಕೋಣೆಯೊಳಗಿನ ಮಂಚ, ಕಿಡಕಿಯ ಹತ್ತಿರ ಗೋಡೆಯೊಳಗೆ ಹುಗಿದ ಮರದ ಬಾಗಿಲುಳ್ಳ ಕಪಾಟು, ಅದರಾಚೆಯ ಮೂಲೆಯನ್ನು ರಚಿಸಿದ ಎರಡೂ ಗೋಡೆಗಳಿಗೆ ಮೊಳೆ ಹೊಡೆದು ಕಟ್ಟಿದ ಸರಿಗೆಯ ಮೇಲೆ ಒಣಗಲು ಹಾಕಿದ ಸ್ನಾನದ ಟವೆಲ್, ಬನಿಯನ್, ಚಡ್ಡಿಗಳು-ಎಲ್ಲವುಗಳ ಮೇಲೆ ಕಣ್ಣುಹಾಯಿಸುತ್ತ ಬಚ್ಚಲುಮನೆಗೆ ಹೋಗಿ ಇನ್ನೊಮ್ಮೆ ತಂಪು ನೀರಿನಿಂದ ಕಾಲು ತೊಳೆದುಕೊಂಡ. ನೀರನ್ನು ಒರಸಿಕೊಳ್ಳದೆಯೆ ಮೇಜಿಗೆ ಬಂದ. ಮೇಣಬತ್ತಿಯನ್ನು ಆರಿಸಿ ಇಂದಿನ ಭೇಟಿಯ ಬಗ್ಗೆ ಬರೆಯಬೇಕೆಂದುಕೊಂಡಿದ್ದನ್ನು ಬರೆದು ತೆಗೆದ; ಮುದುಕನನ್ನು ತಾನು ಮೆಚ್ಚಿಕೊಂಡ ರೀತಿ ಅರಿವಿಗೆ ಬಂದು ಖುಶಿಯಾಯಿತು. ಇವನ ಮುಖಾಂತರವಾದರೂ ತನ್ನ ಭಾವನೆಗಳ ಆಕೃತಿಯಲ್ಲಿ ಸೇರಿಕೊಳ್ಳಲು ಈವರೆಗೂ ನಿರಾಕರಿಸುತ್ತ ಬಂದ ಈ ಅಕರಾಳವಿಕರಾಳ ಮುಂಬಯಿಗೆ ಒಂದು ಆತ್ಮೀಯವಾದ ಆಕಾರ ಬಣ್ಣಗಳು ಮೂಡಬಹುದೇನೋ ಎಂದು ಆಶಿಸಿದ.

ಅಧ್ಯಾಯ ಎರಡು

ಮರುದಿವಸ, ಮುದುಕ ಹೇಳಿದ ಹೊತ್ತಿಗೆ ಸರಿಯಾಗಿ ಅವನ ಮನೆಯನ್ನು ತಲುಪುವ ತವಕದಲ್ಲಿದ್ದ ಕರುಣಾಕರನ್ನನ ಮನಸ್ಸು, ಬಾಂದ್ರಾ ರೇಲ್ವೆ ಸ್ಟೇಶನ್ನಿನಲ್ಲಿ ಇಳಿಯುವ ಹೊತ್ತಿಗೆ ಈವರೆಗೂ ಮೊಳೆತಿರದ ಹಲವು ಹೊಸ ಭಾವನೆಗಳ ತುಮುಲಕ್ಕೆ ಒಳಗಾಯಿತು. ತಾನು ಇದೀಗ ಯೋಜಿಸಿಕೊಂಡ ಭೇಟಿಯಿಂದ ಹಿಡಿದು ಕೇರಳವನ್ನು ಬಿಟ್ಟು ನೌಕರಿಗಾಗಿ ಮುಂಬಯಿಗೇ ಬರಲು ಕಾರಣವಾದ ಸನ್ನಿವೇಶದವರೆಗಿನ ಹಲವು ಸಂಗತಿಗಳ ಕಡೆಗೆ ಮೋರೆ ತಿರುವಿದ ಮನಸ್ಸು ಎಲ್ಲವನ್ನೂ ಕೂಡಲೇ ಗ್ರಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ತಾನು ಹೋಗಬೇಕಾದ ಮನೆ ಸಮೀಪಿಸುತ್ತಿದ್ದ ಹಾಗೆ ಅರ್ಥವಾಗದ ಅಧೈರ್ಯ ಮನಸ್ಸನ್ನಾವರಿಸತೊಡಗಿತು. ಮನೆಯ ಇದಿರಿನ ಬಸ್‌ಸ್ಟಾಪಿನಲ್ಲಿ ಇಳಿದ ಬಳಿಕವೇ, ತಾನು ಇಂದು ಭೇಟಿಯಾಗಲಿದ್ದ ಇನ್ನು ಮೂವರು- ಮುದುಕನ ಹೆಂಡತಿ, ಮಗಳು ಹಾಗೂ ಸೀತೆಯ ತಾಯಿಯಾದ ಪಾರ್ವತಿ-ಎಂಥ ಜನವೋ ಎಂಬ ಅನುಮಾನ ತನ್ನ ಅಧೈರ್ಯಕ್ಕೆ ಕಾರಣವಾಗಿರಬೇಕು ಎಂದುಕೊಂಡ. ಇನ್ನೊಬ್ಬರ ವಿಶ್ವನ್ನು ಹೊಗುವ ಈ ಕೆಲಸ ಎಷ್ಟೊಂದು ಕಷ್ಟದ್ದು ಅನ್ನಿಸಿದಾಗ, ಮುದುಕನ ಮನೆಗೆ ಹೋಗುವ ಜಿನ್ನೆಯ ಮೆಟ್ಟಿಲುಗಳನ್ನು ಹತ್ತುವವನ ಹೆಜ್ಜೆಗಳು ತಮ್ಮ ಸದ್ದನ್ನು ಅವನ ಇಚ್ಚೆಯನ್ನು ಮೀರಿ ತಗ್ಗಿಸಿಕೊಂಡಿದ್ದುವು. ಕದದ ಮೇಲಿನ ಕರೆಗಂಟೆಯನ್ನು ಒತ್ತಿದ ಕೈಬೆರಳಿನಲ್ಲಿ ಕೂಡ ನಿನ್ನೆ ದಿನದ ಆತ್ಮವಿಶ್ವಾಸ ಇರಲಿಲ್ಲ.

ಎರಡೂ ಜಡೆಗಳ ತುದಿಗಳಲ್ಲಿ ಬಿಳಿಯ ರಿಬ್ಬನ್ ಕಟ್ಟಿಕೊಂಡು, ದುಂಡಗಿನ ಕಪ್ಪು ಕಣ್ಣುಗಳನ್ನು ಅರಳಿಸಿ, ಹಲ್ಲು ತೋರಿಸಿ ನಗುತ್ತ ಸೀತೆ ಕದ ತೆರೆಯುತ್ತಾಳೆಂದು ಕಲ್ಪಿಸಿಕೊಂಡು ತಾನೂ ಮುಗುಳುನಗುತ್ತ ನಿಂತವನನ್ನು ಇದಿರುಗೊಂಡವಳು ಸೀತೆಯಾಗಿರಲಿಲ್ಲ ; ಬೆಹರಾಮನ ಮಗಳು ಶಿರೀನಳಾಗಿದ್ದಳು. ‘ನೀವು ಕರುಣಾಕರನ್ ಅಲ್ಲವೆ?’ ಎಂದು ಕೇಳುವ ಧಾಟಿಯಲ್ಲಿ ಚುಟುಕಾಗಿ, “ಕರುಣಾಕರನ್?” ಎಂದಳು. ಕರುಣಾಕರನ್ “ಹೌದು”, ಎಂದಕೂಡಲೇ, ‘ನಿನ್ನ ಹಾದಿಯನ್ನೇ ಕಾಯುತ್ತಿದ್ದೆ,’ ಎನ್ನುವವಳ ಹಾಗೆ, “ಬನ್ನಿ,” ಎಂದು ಅವನನ್ನು ಒಳಗೆ ಬಿಟ್ಟು ಕದ ಮುಚ್ಚಿಕೊಂಡಳು. “ಹೀಗೆ ಬನ್ನಿ,” ಎನ್ನುತ್ತ ಅವನು ನಿರೀಕ್ಷಿಸಿದ ಬಾಲ್ಕನಿಯ ಕಡೆಗೆ ಹೋಗದೇ ಅದರಿಂದ ದೂರವಾದ ಹಾಲಿನ ಇನ್ನೊಂದು ಮೂಲೆಗೆ ಕರೆದೊಯ್ದು ಅಲ್ಲಿದ್ದ ಸೋಫಾ ಒಂದರಲ್ಲಿ ಕೂರಲು ಹೇಳಿ ತಾನೂ ಇನ್ನೊಂದರಲ್ಲಿ ಕುಳಿತುಕೊಂಡಳು.

ತೀರ ಅನಿರೀಕ್ಷಿತವಾದ ರೀತಿಯಲ್ಲಿ ನಡೆಯತೊಡಗಿದ ಈ ಭೇಟಿ ತಾನು ಸರಿಯಾದ ಮನೆಗೇ ಬಂದಿರುವೆ ತಾನೇ ಎಂಬುದರ ಬಗೆಗೇ ಸಂಶಯ ಹುಟ್ಟಿಸತೊಡಗಿತು.
“ನಿನ್ನೆ ನಾನು ಇಲ್ಲಿಗೆ ಬಂದಿದ್ದೆ,” ಎಂದ ತಡವರಿಸುತ್ತ.

“ನನಗೆ ಗೊತ್ತಿದೆ. ಅಪ್ಪ ಮಲಗಿದ್ದಾರೆ. ಅವರು ಏಳುವ ಮೊದಲು ನಾನೇ ನಿಮ್ಮ ಹತ್ತಿರ ಮಾತನಾಡುವ ಕೆಲವು ಸಂಗತಿಗಳಿವೆ.”

ಕರುಣಾಕರನ್‌ಗೆ ಅವಳ ಮಾತಿನಲ್ಲಿ ಏನೋ ತಪ್ಪು ತಿಳುವಳಿಕೆಯಿಂದಾಗಿ ಹುಟ್ಟಿದ ಅಸಮಾಧಾನವಿದ್ದಂತೆ ಕಂಡಿತು. ಅದರಿಂದಾಗಿಯೋ ಏನೋ ಮುಂದೆ ಕುಳಿತವಳು ಶಿರೀನಳೇ ಎಂದು ಊಹಿಸಿಕೊಂಡರೂ ಅವಳ ರೂಪದ ವಿವರಗಳನ್ನು ಗ್ರಹಿಸುವುದು ಕಷ್ಟವಾಯಿತು. ಸೀತೆ ಕಣ್ಣಿಗೆ ಬಿದ್ದರಾದರೂ ಮನಸ್ಸಿಗೆ ನೆಮ್ಮದಿಯಾಗುತ್ತಿತ್ತು ಅನ್ನಿಸಿದಾಗ ಅತ್ತಿತ್ತ ಕಣ್ಣುಕಾಯಿಸುವುದು ಸಾಧ್ಯವಾಗಲಿಲ್ಲ. ಅವಳು ಅಲ್ಲೆಲ್ಲೂ ಇದ್ದಂತೆಯೂ ತೋರಲಿಲ್ಲ; ಮನೆಯಲ್ಲಿ ತಮ್ಮಿಬ್ಬರನ್ನು ಬಿಟ್ಟರೆ ಇನ್ನಾರೂ ಇಲ್ಲವೇ ಇಲ್ಲವೇನೋ ಅಥವಾ ಇದ್ದರೂ ನಿದ್ದೆಯ ಸೋಗು ಮಾಡುತ್ತಿದ್ದಾರೇನೋ ಅನ್ನಿಸಿದಾಗ-ಅರೆ! ಮುದುಕ ನಾಳೆಗೆ ಬಾ ಎಂದು ಹೇಳಿ ಈಗ ಎಂತಹದೋ ಆಟ ಆಡಲು ನಿಶ್ಚಯಿಸಿರಬಹುದೇ ಎಂಬ ಗುಮಾನಿಯಿಂದ ನಿನ್ನೆಯಷ್ಟೇ ಆತ್ಮೀಯವಾಗಲು ತೊಡಗಿದೆ ಎಂದು ತೋರಿದ ಮುಂಬಯಿ ಈಗ ಮತ್ತೆ ತನ್ನ ಹಿಡಿತದಿಂದ ಜಾರಿಕೊಳ್ಳುತ್ತಿದೆ ಎಂಬಂತಹ ಭಾಸವಾಗಿ ಮೈಮೇಲೆ ಬೆವರು ಮೂಡಲು ತೊಡಗಿದ ಅನುಭವವಾಯಿತು. ಅವನಿಗೆ ಅರಿವಿಲ್ಲದೇನೆ ಅವನ ಕಣ್ಣು ಮೇಲಿನ ಫ್ಯಾನಿನ ಕಡೆಗೆ ಹೋಯಿತು, ಅದನ್ನು ಕಂಡು ಶಿರೀನ್ ಎದ್ದು ಫ್ಯಾನ್ ಹಾಕಿದಳು: ತುಸು ಹಾಯೆನಿಸಿತು. ಕಣ್ಣ ಇದಿರಿನ ಕಿಡಕಿಯ ಹೊರಗೆ ಇನ್ನೊಂದು ಬಾಲ್ಕನಿ ಇದ್ದಂತೆ ತೋರಿತು. ಭೂತಬಂಗಲೆಗೆ ಸಮ್ಮುಖವಾಗಿ. ಬಾಲ್ಕನಿಯಲ್ಲಿ ಗಿಡಗಳನ್ನು ನೆಟ್ಟಿರಬೇಕು. ರಬ್ಬರು ಗಿಡದ ಹಾಗೆ ತೋರುವ ಎತ್ತರದ ಗಿಡವೊಂದು ದಪ್ಪವಾದ ಹಸಿರು ಎಲೆಗಳಲ್ಲೆಲ್ಲ ಶೇಖರಿಸಿಕೊಂಡಿದ್ದ ತನ್ನ ಆರೋಗ್ಯವನ್ನು ಪ್ರದರ್ಶಿಸುತ್ತ ಕಿಡಕಿಯ ದಡಿಯ ಮೇಲೆ ತಲೆಯೆತ್ತಿ ಕೋಣೆಯೊಳಗಿನವರ ಲಕ್ಷ್ಯ ಸೆಳೆಯುವ ಪ್ರಯತ್ನದಲ್ಲಿ ತೊಡಗಿರುವಂತೆ ಕಂಡಿತು. ಗಿಡಗಳ ಹಸಿರೂ ಕೂಡ ಕೇರಳದವನ ಮನಸ್ಸಿಗೆ ಸಂತೋಷ ಕೊಡುವಂತಹದೇ. ಮುಂದೆ ಕುಳಿತು ಎಲ್ಲಿಂದ ಆರಂಭಿಸಲಿ ಎಂದು ಲೆಕ್ಕ ಹಾಕುತ್ತಿದ್ದ ಹೆಂಗಸಿನ ಪ್ರಶ್ನೆಯನ್ನು ಕೇಳುವ ಧೈರ್ಯ ಕೊನೆಗೂ ಆ ಗಿಡ ಕೊಡುತ್ತಿದ್ದ ಹಾಗೆ ತೋರಿತು. ಸೀತೆ, ತಂಗಿ ಲಲಿತಾರನ್ನು ನೆನಪಿಗೆ ತರುತ್ತಿದ್ದ ಗಿಡ ಬರಬರುತ್ತ ಅವರ ಹಾಗೆಯೆ ಕಾಣಲು ತೊಡಗಿತು.

“ನಿನ್ನೆ ನೀವು ಬಂದದ್ದನ್ನು ಅಪ್ಪ ತಿಳಿಸಿದರು. ಬಂದ ಕಾರಣವನ್ನೂ ವಿವರಿಸಿದರು. ಅವರ ಮನಸ್ಸನ್ನು, ಆರೋಗ್ಯವನ್ನು ಲಕ್ಷ್ಯದಲ್ಲಿರಿಸಿಕೊಂಡಾದರೂ ನೀವು ಅವರನ್ನು ಇಂತಹ ಉಪದ್ವ್ಯಾಪದಲ್ಲಿ ತೊಡಗಿಸುವ ಸಾಹಸ ಮಾಡಬಾರದಿತ್ತು.”
ಅವಳ ದನಿಯಲ್ಲಿ ಇದೆಯೆಂದು ತೋರಿದ ಸೌಮ್ಯ ಗದರಿಕೆಯಿಂದಾಗಿ ಕೂಡಲೇ ಉತ್ತರ ಕೊಡುವ ಧೈರ್ಯವಾಗಲಿಲ್ಲ. ರಬ್ಬರು ಗಿಡವನ್ನು ನೋಡುತ್ತ ಕುಳಿತುಬಿಟ್ಟ, ಕರುಣಾಕರನ್. ಹಾಗೆ ನೋಡಿದರೆ ಅವನ ಬಳಿ ಉತ್ತರವೇ ಇರಲಿಲ್ಲ. ಗಿಡವನ್ನು ನೋಡುತ್ತಿದ್ದಹಾಗೆ-ತಾನು ಮುದುಕನನ್ನು ಯಾವುದರಲ್ಲೋ ತೊಡಗಿಸುವ ಬದಲು ಮುದುಕನೆ ತನ್ನನ್ನು ಯಾವುದಕ್ಕೋ ಸಿದ್ಧಗೊಳಿಸುತ್ತಿರುವಂತೆ ಭಾಸವಾಯಿತು. ಬಾಲ್ಕನಿಯ ದಡಿಯ ಮೇಲೆ ಬಂದು ಕುಳಿತ ಕಾಗೆಯೊಂದು ಕರ್ಕಶವಾಗಿ ಧ್ವನಿ ತೆಗೆದು ಬಂದಹಾಗೆಯೆ ಹಾರಿಹೋಯಿತು. ಕಿಡಕಿಯಿಂದ ಅರ್ಧಂಬರ್ಧಕಾಣುತ್ತಿದ್ದ ಭೂತಬಂಗಲೆಯ ಎರಡನೇ ಮಜಲೆಯ ಕಿಡಕಿಯ ಚೌಕಟ್ಟಿನ ಕೆಳದಡಿಯ ಮೇಲೆ ನಾಯಿಮರಿಯೊಂದು ಗೋಣು ಚೆಲ್ಲಿದ ರೀತಿ ವಿಚಿತ್ರವಾಗಿ ಕಂಡಿತು.

“ನಿಮ್ಮ ಪ್ರಶ್ನೆಗೆ ನನ್ನಲ್ಲಿ ನೇರವಾದ ಉತ್ತರವಿಲ್ಲ. ಯಾಕೆಂದರೆ ನನಗೇ ಇದೆಲ್ಲ ಸರಿಯಾಗಿ ತಿಳಿದದ್ದಲ್ಲ.”
“ಅಂದಮೇಲೆ! ನಾನು ಇಲ್ಲಿಗೆ ಬಂದದ್ದು ಅಪ್ಪ-ಅಮ್ಮರನ್ನು ಜಮ್‌ಶೇದ್‌ಪೂರಕ್ಕೆ ಕರೆದೊಯ್ಯಲು. ನಿನ್ನೆ ನೀವು ಬಂದುಹೋದಾಗಿನಿಂದ ಅಪ್ಪ ತುಂಬ ಬೇಚೈನುಗೊಂಡಿದ್ದಾರೆ. ರಾತ್ರಿಯಿಡೀ ನಿದ್ದೆ ಕೂಡ ಸರಿಯಾಗಿ ಮಾಡಿದಂತಿಲ್ಲ- ಕಾಂಪೋಜ್ ಗುಳಿಗೆ ತೆಗೆದುಕೊಂಡರೂ. ಮಧ್ಯಾಹ್ನದ ಊಟವಾದಮೇಲೆ ಅಡ್ಡವಾದವರಿಗೆ ಈಗಷ್ಟೇ ನಿದ್ದೆಹತ್ತಿರಬೇಕು. ದಯಮಾಡಿ ನನ್ನನ್ನು ತಪ್ಪು ತಿಳಿಯಬೇಡಿ. ಅಪ್ಪನ ಆರೋಗ್ಯದ ಬಗ್ಗೆ ಕಾಳಜಿಯಾಗುತ್ತದೆ, ಅಷ್ಟೆ.”

ಅಪ್ಪ ಏಳುವ ಮೊದಲೇ ನೀನು ಇಲ್ಲಿಂದ ಹೋಗುವುದು ಒಳ್ಳೆಯದೆಂದು ಸೂಚಿಸುತ್ತಿರಬಹುದೇ? ಇವಳಿಗೆ ಹೀಗೆಲ್ಲ ಹೇಳಲು ಹೇಳಿ ಮುದುಕ ತಾನೇ ಮಲಗಿರುವ ನಟನೆ ಮಾಡುತ್ತಿರಬಹುದೇ? ಈ ಗುಮಾನಿಯಲ್ಲಿ ಕೂಡಲೇ ಹೊರಟುಹೋಗುವಂತಹ ಕ್ರಿಯೆಗೆ ಕಾರಣವಾಗುವ ಬಲ ಎಳ್ಳಷ್ಟೂ ಇರಲಿಲ್ಲ. ನಿನ್ನೆಯ ಭೇಟಿಯಲ್ಲಿ ಮುದುಕ ಮೂಡಿಸಿದ ಪ್ರತಿಮೆಯ ಬೆಳಕು ಅಂತಃಕರಣವನ್ನು ವ್ಯಾಪಿಸಿಬಿಟ್ಟಿತು.
“ಅವರೇ ಇದರಲ್ಲಿ ತೊಡಗಿಸಿಕೊಳ್ಳಬೇಕಾಗಿಲ್ಲ. ನೀವು ಹಾಗೂ ನಿಮ್ಮ ಕೆಲಸದ ಹೆಣ್ಣುಮಗಳು ಪಾರ್ವತಿ ನಿಮನಿಮಗೆ ಗೊತ್ತಿದ್ದ ಮಾಹಿತಿ ಕೊಟ್ಟರೂ ಸಾಕು.”
“ಆ ಮಾಹಿತಿಯಿಂದ ಈಗ ಆಗಬೇಕಾದ್ದೇನಿದೆ? ನಿಜವಾಗಿ ನೋಡಿದರೆ ಪೋಲೀಸು ಖಾತೆಯವರಿಗೆ ಸೇರಿದ ಕೆಲಸವಿದು. ನಾವು ಯಾಕೆ ತಲೆ ಕೆಡಿಸಿಕೊಳ್ಳಬೇಕು?”
“ಮನುಷ್ಯನೊಬ್ಬನ ಖೂನಿಯಲ್ಲವೇ ಇದು?”
“ನಿಮ್ಮ ಮಾತಿನಲ್ಲಿಯ-ಇನ್ನೊಬ್ಬರನ್ನು ದೂರುವ-ಧ್ವನಿಯ ಬಗ್ಗೆ ನನ್ನ ಆಕ್ಷೇಪವಿದೆ. ನಿನ್ನೆ ಅಪ್ಪನ ಮುಂದೆ ಇಂಥ ಮಾತನ್ನೇ ಆಡಿರಬೇಕು, ಅನ್ನಿಸುತ್ತದೆ. ನಮಗೆ ಭಾವನೆಗಳಿಲ್ಲವೆಂದೆ? ಪಾರ್ವತಿ ಇಂಥ ಸಂಗತಿಗಳ ಬಗ್ಗೆ ಆಡಿಕೊಳ್ಳುವಾಗ ಪ್ರಕಟಿಸುವ ಧೈರ್ಯ ನಮಗೇಕೆ ಇಲ್ಲದೇ ಹೋಯಿತು? ಈ ಸಾವು ಇದ್ದಕ್ಕಿದ್ದ ಹಾಗೆ ಎಚ್ಚರಿಸಬಹುದಾದ ರಾಜಕೀಯ ಶಕ್ತಿಗಳಿಗೆ ನಾನು ಹೆದರಿದ್ದೇನೆ.”
“ನಾನು ಕೂಡಿಸುವ ಮಾಹಿತಿಯಲ್ಲಿ ಯಾವ ಹೆಸರನ್ನೂ ಸೇರಿಸುವುದಿಲ್ಲ, ಯಾರೊಬ್ಬರ ಹೆಸರೂ ನನಗೆ ಬೇಕಾಗಿಲ್ಲ. ನೀವೂ ಹೇಳುವುದು ಬೇಡ.”
“ನಂಬುವ ಮಾತೆ? ನಿನ್ನೆ ನೀವು ನಮ್ಮ ಮನೆಯನ್ನೇ ಹುಡುಕಿಕೊಂಡು ಬಂದಂತೆ ಬಂದದ್ದು ಕೇವಲ ಆಕಸ್ಮಿಕವೆಂದು ವಿವರಿಸಿದಿರಂತೆ. ನಿಮ್ಮನ್ನು ಇಲ್ಲಿಗೆ ಕಳುಹಿಸಿದ ನಿಮ್ಮ ಪತ್ರಿಕೆಯ ಸಂಪಾದಕನನ್ನು ನನ್ನಪ್ಪ ಚೆನ್ನಾಗಿ ಬಲ್ಲ. ನೇರವಾಗಿ ಕೇಳಿ ಸಿಕ್ಕಿರದ ಮಾಹಿತಿಯನ್ನು ನಿಮ್ಮ ಮುಖಾಂತರ ಪಡೆಯುವ ಹಿಕ್ಮತಿಯಿದು.”
“ಇಲ್ಲ ಇಲ್ಲ,” ಎಂದ ಕರುಣಾಕರನ್, ‘ನನ್ನನ್ನು ನಂಬಿ’ ಎನ್ನುವ ಧಾಟಿಯಲ್ಲಿ. “ನನಗೂ ಸಂಪಾದಕನಿಗೂ ಯಾವ ಮಾತುಕತೆಯೂ ನಡೆದಿಲ್ಲ. ಬಸ್ಸಿನಿಂದ ಇಳಿದದ್ದೇ ಮುಂದೆ ಕಂಡ ಮನೆಯೆಂದು ಇಲ್ಲಿ ಬಂದೆನೇ ಹೊರತು ನಿಮ್ಮ ಅಪ್ಪನನ್ನು ಹುಡುಕಿಕೊಂಡು ಬಂದವನಲ್ಲ.”
ಕರುಣಾಕರನ್ ತುಂಬ ಕಳವಳಕ್ಕೊಳಗಾದ. ತಾನು ಸಹಜಸ್ಪೂರ್ತಿಯಿಂದ ಹೊರಟುಬಂದ ಕಾರ್ಯದ ಹೇತು ಈ ಹೆಣ್ಣಿನ ಕಣ್ಣುಗಳಲ್ಲಿ ಪಡೆಯುತ್ತಿದ್ದ ಆಕೃತಿ ಅವನನ್ನು ಧೃತಿಗೆಡಿಸಿತು. ಇವಳು ತನ್ನನ್ನು ನಂಬುತ್ತಿಲ್ಲವಲ್ಲ ಎಂಬ ಸಂಗತಿ ಅವನನ್ನು ಗಾಸಿಗೊಳಿಸುತ್ತಿದ್ದಹಾಗೆ, ತನ್ನ ಶಕ್ತಿಗೆ ಮೀರಿದ ಕೆಲಸದಲ್ಲಿ ತಾನು ತೊಡಗಿಸಿಕೊಳ್ಳಲು ಹೊರಟಿರುವೆ ಮಾತ್ರವಲ್ಲ, ತನ್ನ ಊಹೆಗೆ ಮೀರಿದ ವರ್ಚಸ್ಸಿನ ಗೃಹಸ್ಥನ ಮನೆಗೆ ತಾನು ಬಂದಿದ್ದೇನೆ ಎಂಬ ಅರಿವೂ ಮೂಡತೊಡಗಿತು. ಮಾತನಾಡಿದರೆ ಧ್ವನಿ ನಡುಗಬಹುದೆಂಬ ಭೀತಿಯಿಂದ ಅವುಡು ಕಚ್ಚಿಹಿಡಿದ. ಕೊರಳ ಸೆರೆಗಳು ಉಬ್ಬಿಕೊಂಡವು. ಫ್ಯಾನಿನ ಕೆಳಗೇ ಕೂತಿರುವಾಗಲೂ ಕಾಲರ್ ಸುತ್ತಲಿನ ಕೊರಳ ಭಾಗದಲ್ಲಿ ಬೆವರ ಹನಿ ಮೂಡುತ್ತಿರುವ ಭಾಸವಾಯಿತು. “ಕುಡಿಯಲು ನೀರು ಬೇಕು,” ಎನ್ನುವಷ್ಟರಲ್ಲಿ ಕದದ ಕರೆಗಂಟೆ ಎಡೆಬಿಡದೆ ಕಿರುಚಿತು.
“ಇದು ನನ್ನ ಮಗನ ಪ್ರತಾಪ! ಅಪ್ಪನಿಗೆ ನಿದ್ದೆ ಹತ್ತಿರಬೇಕೆಂದು ಕೊಂಡು ಮಕ್ಕಳನ್ನೆಲ್ಲ ಅಮ್ಮನ ಜೊತೆಗೆ ನೆರೆಮನೆಯವರಲ್ಲಿ ಕಳಿಸಿದ್ದೆ. ಅಪ್ಪ ಈಗ ನಿದ್ದೆ ಮಾಡಿದಹಾಗೆಯೆ! ಅಪ್ಪ ಎದ್ದುಬಂದರೆ ದಯಮಾಡಿ ಅವರ ಭಾವನೆಗಳ ಮೇಲೆ ಪರಿಣಾಮ ಮಾಡುವಂತಹದನ್ನು ಏನೂ ಮಾತನಾಡಲು ಹೋಗಬೇಡಿ.”

ಇಷ್ಟು ಹೇಳಿ ಶಿರೀನ್ ಕದ ತೆರೆಯಲು ಹೊರಟುಹೋದಳು. ಕದ ತೆರೆದ ಕೂಡಲೇ ಒಳಗೆ ಓಡಿಬಂದ ಮೂರೂ ಮಕ್ಕಳ ಹಿಂಡು ನೇರವಾಗಿ ದಿವಾಣಖಾನೆಗೆ ನುಗ್ಗಿ, ಕರುಣಾಕರನ್ನನನ್ನ ನೋಡಿ ಅವನನ್ನು ಸುತ್ತುಗಟ್ಟಿ ನಿಂತು ಪ್ರಶ್ನೆಗಳ ಪಟಾಕಿ ಸರ ಹಚ್ಚಿಬಿಟ್ಟರು: ಹೆಸರೇನು? ಎಲ್ಲಿಂದ ಬಂದಿರಿ? ಯಾಕೆ ಬಂದಿರಿ? ಈ ಮಕ್ಕಳ ಜತೆಗೇ ಒಳಗೆ ಬಂದಂತಿದ್ದ ಸೀತೆಯೇ ಚಿಕ್ಕ ಟ್ರೇದಲ್ಲಿ ನೀರಿನ ಗ್ಲಾಸನ್ನು ತಂದಳು. ಅವಳನ್ನು ಕಂಡಕೂಡಲೇ ತನ್ನ ಸುತ್ತಲಿನ ಎಲ್ಲದಕ್ಕೆ-ಕೋಣೆಯ ಬಾಗಿಲು, ಕಿಡಕಿಗಳಿಗೆ ಹಾಕಿದ ಬಣ್ಣದ ಪರದೆಗಳಿಗೆ, ಫರ್ನಿಚರ್‌ನ ಸಜ್ಜಿಕೆಗೆ, ಇದೀಗ ನಡೆಯತೊಡಗಿದ ವಿದ್ಯಮಾನಗಳಿಗೆ ದೂರದ ಕೇರಳದ ಚಿಕ್ಕ ಹಳ್ಳಿಯೊಂದರಲ್ಲಿ ಬೆಳೆದ ತನ್ನಂಥವನ ಮನಸ್ಸಿಗೂ ಅರ್ಥವಾಗಬಹುದಾದಂಥ ರೂಪ ಬರತೊಡಗಿದಾಗ ಮನಸ್ಸಿಗೆ ನೆಮ್ಮದಿ ಅನ್ನಿಸಿತು. ಸೀತೆಯ ಕೈಯಿಂದ ಗ್ಲಾಸನ್ನು ಪಡೆದು ಒಂದೇ ಗುಟುಕಿಗೆ ಎಂಬಂತೆ ಅದನ್ನು ಖಾಲಿಮಾಡಿ ಸೀತೆಗೆ ವಾಪಸ್ಸು ಕೊಟ್ಟ. ಸೀತೆಯ ಹಿಂದೆಯೇ, ಈವರೆಗೂ ಮೋರೆ ತೋರಿಸಿರದ ಮುದುಕಿಯೂ ಈಗ ದಿವಾಣಖಾನೆಗೆ ಬಂದು, ‘ನಿನ್ನೆ ಬಂದು ನನ್ನ ಗಂಡನ ನಿದ್ದೆ ಹಾಳುಮಾಡಿದವನು ನೀನೇಯೋ,’ ಎನ್ನುವಹಾಗೆ ಅವನತ್ತ ಒಮ್ಮೆ ನೊಡಿ ಮುಗುಳುನಕ್ಕು, “ಇವರು ಈಗ ಬರುತ್ತಾರೆ, ಕೂತಿರಿ.” ಎಂದು ಮಕ್ಕಳನ್ನು ಒಳಗೆ ಕರೆದೊಯ್ದಳು. ಮುದುಕಿ ಮುಗುಳುನಕ್ಕದ್ದನ್ನು ಕಂಡಾಗ ಆಗಿನಿಂದಲೂ ತಡೆ ಹಿಡಿದ ಕಂಬನಿ ಕೊನೆಗೂ ಕಣ್ಣುಗಳನ್ನು ಒದ್ದೆಮಾಡಿತ್ತು. ಜೀನ್ಸ್‌ನ ಕಿಸೆಯಿಂದ ಕರ್ಚೀಫನ್ನು ಹೊರತೆಗೆದು ಕಣ್ಣೊರೆಸಿಕೊಳ್ಳುವಾಗ, ಮುದುಕನ ಹೆಂಡತಿ ಇರಬೇಕು ಎಂದುಕೊಂಡ. ಸೀತೆಯ ತಾಯಿ ಪಾರ್ವತಿಯೊಬ್ಬಳು ಕಣ್ಣಿಗೆ ಬೀಳುವುದುಳಿಯಿತು ಎಂದೂ ಹೊಳೆಯಿತು.

ಶಿರೀನ್ ಚಹದ ಟ್ರೇ ಹೊತ್ತು ಬಂದಳು. “ಅಪ್ಪ ಇದೀಗ ಎದ್ದಿದ್ದಾರೆ. ಮೋರೆ ತೊಳೆದುಕೊಳ್ಳಲು ಹೋಗಿದ್ದಾರೆ. ನಿನ್ನೆಯ ಮೊದಲ ಭೇಟಿಯಲ್ಲೇ ನಿಮ್ಮನ್ನು ತುಂಬ ಹಚ್ಚಿಕೊಂಡಿದ್ದಾರೆ. ಆಗ ಹೇಳಿದ್ದು ಮಾತ್ರ ನೆನಪಿರಲಿ. ಪಾರ್ವತಿಗೂ ಹೇಳಿಕಳಿಸಿದ್ದೇವೆ. ಈಗ ಬರಬಹುದು,” ಎನ್ನುತ್ತ ಕಿಟ್ಲಿಯಿಂದ ಮೂರು ಕಪ್ಪುಗಳಿಗೆ ಚಹ ಸುರಿದು ಒಂದನ್ನು ಕರುಣಾಕರನ್ನನ ಕೈಗೆ ಕೊಟ್ಟಳು. “ಸಕ್ಕರೆ ಹಾಕಿಲ್ಲ. ನೀವೇ ಬೇಕಷ್ಟನ್ನು ಹಾಕಿಕೊಳ್ಳಿ. ನಾನು ಅಪ್ಪ ಸಕ್ಕರೆ ತಕ್ಕೊಳ್ಳುವುದಿಲ್ಲ,” ಎಂದು ಸಕ್ಕರೆಯ ತಟ್ಟೆಯನ್ನು ಟ್ರೇದಲ್ಲೇ ಅವನಿಗೆ ಹತ್ತಿರವಾಗುವ ಹಾಗೆ ಸರಿಸಿ ಇಟ್ಟಳು. ತಾನೂ ಒಂದು ಕಪ್ಪನ್ನು ಕೈಗೆತ್ತಿಕೊಂಡು ಅವನ ಇದಿರಿನ ಸೋಫಾದಲ್ಲಿ ಕುಳಿತುಕೊಂಡಳು. ಇವಳ ಸಾನಿಧ್ಯದಲ್ಲಿ ತನ್ನ ಭಾವನೆಗಳ ಆಕಾರವೇ ಬದಲಾಗುತ್ತಿರುವ ಭಯವಾಯಿತು, ಕರುಣಾಕರನ್‌ಗೆ. ಪರಿಚಯವಿಲ್ಲದ ಹೆಂಗಸಿನ ಇದಿರು ಸಿಗರೇಟು ಸೇದುವ ಧೈರ್ಯವಾಗಲಿಲ್ಲ. ಒಳಗೊಳಗೆ ಶೇಖರಿಸಹತ್ತಿದ ಆತಂಕದಿಂದಾಗಿ ಕಪ್ಪು ಹಿಡಿದ ಕೈ ನಡುಗಬಹುದೆ ಎಂಬ ಅನುಮಾನ ಬಂದು ಕಪ್ಪನ್ನು ಮೆಲ್ಲಗೆ ಟೀಪಾಯಿಯ ಮೇಲೆ ಇರಿಸಿದ, ಚಹ ತುಸು ತಣಿಯಲಿ ಎಂಬ ಧರ್ತಿಯಲ್ಲಿ. ಅದಾಗ ಹಾಲಿಗೆ ಬರಹತ್ತಿದ ಮುದುಕನ ಹೆಜ್ಜೆಗಳ ಸದ್ದು ಕೇಳಿಸಿದಾಗ ಸುಖವೆನಿಸತೊಡಗಿತು. ದೇವರೇ, ಅವನು ನಿನ್ನೆ ಕಂಡ ಮುದುಕನೇ ಆಗಿರಲಿ ಎಂಬ ತನ್ನ ವಿಚಿತ್ರ ಪ್ರಾರ್ಥನೆಯಿಂದ ತಾನೇ ಮುಜುಗರಪಟ್ಟ.

“ಬಂದು ಬಹಳ ಹೊತ್ತಾಯಿತೆ? ಚಹ ತೆಗೆದುಕೊಳ್ಳಿ,” ಎಂದು ಯಾವ ಸುಳ್ಳು ಆಡಂಬರವಿಲ್ಲದೆ ತನ್ನನ್ನು ಬರಮಾಡಿಕೊಂಡ ಆತ್ಮೀಯತೆಯಿಂದ ಕರುಣಾಕರನ್ನನಿಗೆ ಒಳಗೊಳಗೇ ಏನೋ ದ್ರವಿಸಹತ್ತಿದ ಅನಿಸಿಕೆ. ಚಹದ ಕಪ್ಪನ್ನು ಕೈಗೆ ಎತ್ತಿಕೊಳ್ಳುವಾಗ ಸದ್ದಾದರೂ ಎದೆಗುಂದಲಿಲ್ಲ. ಮುದುಕನನ್ನು ಮನಸ್ಸಿನಲ್ಲೇ ಕೃತಜ್ಞತೆಯಿಂದ ವಂದಿಸುತ್ತ, ಅಪ್ಪ-ಮಗಳು ಇಬ್ಬರ ಕಡೆಗೂ ಒಂದೇ ಕಾಲಕ್ಕೆ ನೋಡುತ್ತ ಮುಗುಳುನಕ್ಕ. ಶಿರೀನ್ ತೊಟ್ಟ ತಿಳಿನೀಲಿ ಬಣ್ಣದ ಡ್ರೆಸ್ಸು ಮೊದಲ ಬಾರಿಗೇ ಕಣ್ಣಿಗೆ ಬಿತ್ತು. ಕೊರಳಲ್ಲಿ ಧರಿಸಿದ ಒಂದೆಳೆಯ ಸಣ್ಣ ಮುತ್ತುಗಳ ಸರ ಕೂಡ. ಅವಳು ತುಂಬ ಲಾವಣ್ಯವತಿ ಎಂಬುದೂ ಇದೀಗ ಲಕ್ಷ್ಯಕ್ಕೆ ಬಂದವನಹಾಗೆ ಒಳಗೊಳಗೇ ಲಜ್ಜಿತನಾಗುವಾಗಲೂ ಸಂತೋಷಪಟ್ಟ.
“ಶಿರೀನ್ ಹೇಳಿರಬೇಕು: ನೀವು ನಿನ್ನೆಯ ಭೇಟಿಯಲ್ಲಿ ಬಹಳ ಏನೂ ಹೇಳಿರದಿದ್ದರೂ ಕೇಳಿದ ಕೆಲವೇ ಪ್ರಶ್ನೆಗಳೂ ನನ್ನನ್ನು ತುಂಬ ಬೇಚೈನುಗೊಳಿಸಿದುವು.”

ಅರವತ್ತು ವರ್ಷಗಳ ವಯೋವೃದ್ಧ ಹಿರಿಯನಿಂದ ನಿರೀಕ್ಷಿಸಿರದ ಈ ಮಾತುಗಳಿಗೆ ಹೇಗೆ ಪ್ರತಿಕ್ರಯಿಸಬೇಕೊ, ಕರುಣಾಕರನ್‌ಗೆ ತಿಳಿಯಲಿಲ್ಲ. ಮುದುಕ ತುಂಬ ಉತ್ತೇಜಿತನಾಗಿರುವಂತೆ ಕಂಡ. ತನ್ನ ಬಾಯಿಂದ ಹೊರಟ ಮಾತುಗಳಿಂದ ಸ್ವತಃ ಬೆಹರಾಮನಿಗೂ ಆಶ್ಚರ್ಯವಾಗಿತ್ತು. ಬೆಹರಾಮನಿಗೆ ಬಹಳ ಹೇಳುವುದಿತ್ತು. ಹಾಸಿಗೆಯಲ್ಲಿ ಅಡ್ಡವಾದಾಗ ಏನೆಲ್ಲ ಮಾತನಾಡಬೇಕೆಂದು ಯೋಜಿಸಿಕೊಂಡಿದ್ದ. ಅವುಗಳಲ್ಲಿಯ ಹಲವು ಮಾತುಗಳು,‘ನೋಡಿ, ಕರುಣಾಕರನ್, ನಿನ್ನೆ ನೀವು ಕೇಳಿದ ಪ್ರಶ್ನೆಗಳೇನಿವೆ: ಪ್ರತಿಯೊಬ್ಬ ಮನುಷ್ಯನ ಅಂತಃಕರಣದಲ್ಲಿ ಏಳುತ್ತಿರುವಂಥವುಗಳೇ. ಅವುಗಳಿಗೆ ಕಿವಿಗೊಡುವ ಧೈರ್ಯ ಮಾತ್ರ ನಮಗೆ ವ್ಯಕ್ತಿಗತವಾಗಿ ಇಲ್ಲ,” ಎನ್ನುವಂಥ ಹೇಳಿಕೆಯ ಸುತ್ತಲೂ ಹುಟ್ಟಿಕೊಂಡವುಗಳಾಗಿದ್ದರೆ ಇನ್ನು ಕೆಲವು-‘ಇನ್ನೊಬ್ಬನನ್ನು ಕೊಲ್ಲುವುದು ಯಾಕೆ ತಪ್ಪು? ಎಂಬ ಪ್ರಶ್ನೆಗೆ ಅದು ಕಾಯದೆಗೆ ವಿರುದ್ಧವಾದದ್ದು, ಪೋಲೀಸರು ಹಿಡಿಯುತ್ತಾರೆ ಎಂದು ಉತ್ತರ ಕೊಡಬೇಕಾದ ಹಾಸ್ಯಾಸ್ಪದ ಸ್ಥಿತಿಗೆ ಬಂದಿದ್ದೇವೆ ಅಲ್ಲವೆ?’ ಎಂಬಂಥ ಪ್ರಶ್ನೆಯ ಸುತ್ತಲೂ ಹುಟ್ಟಿಕೊಂಡವುಗಳಾಗಿದ್ದುವು ಆದರೆ ಇಂಥ ಯಾವ ಮಾತನ್ನೂ ಬೆಹರಾಮ್ ಆಡಲಿಲ್ಲ. ತಾನು ತನ್ನಷ್ಟಕ್ಕೇ ಆಡಿಕೊಂಡಾಗ ಅತ್ಯಂತ ಸಹಜವಾಗಿ ತೋರಿದ ಮಾತುಗಳು ಇನ್ನೊಬ್ಬನಿಗೆ ತಿಳಿಸಬೇಕು ಎನ್ನುವ ಗಳಿಗೆಯಲ್ಲೇ ತೀರ ನಾಟಕೀಯವಾಗಿ ತೋರಿದುವು. ಕೊನೆಗೆ, ‘ನಿಜ ಹೇಳಲೇ: ನಿನ್ನೆ ನೀವು ನಮ್ಮ ಮನೆಗೆ ಬಂದದ್ದೇ ನನಗೆ ತುಂಬ ತುಂಬ ಖುಶಿ ಕೊಟ್ಟಿದೆ ನೋಡಿ,’ ಎನ್ನುವಂತಹ ಮಾತೂ ಕೂಡ ಶಿರೀನಳ ಉಪಸ್ಥಿತಿಯಲ್ಲಿ ಹೊರಗೆ ಬರುವುದು ಕಷ್ಟವಾಯಿತು. ಶಿರೀನಳ ಉಪಸ್ಥಿತಿಯಿಂದಾಗಿ ತನ್ನ ಭಾವನೆಗಳ ಆಕೃತಿಯೇ ಡೊಂಕಾಗುತ್ತಿದೆ ಎನ್ನುವಂಥ ಅನ್ನಿಸಿಕೆ ಮಾತಿಗೆ ಅಡ್ಡಬಂದಿತು.
“ನಿಜ ಹೇಳಿ ಕರುಣಾಕರನ್, ನೀವೇ ಮತ್ತೆಮತ್ತೆ ಇದು ಮನುಷ್ಯನೊಬ್ಬನ ಸಾವಲ್ಲವೆ? ಎಂದು ಕೆದಕಿ ಕೇಳಿದ ಪ್ರಶ್ನೆಯ ಹಿಂದಿನ ಆಸ್ಥೆ ಕೇವಲ ಪತ್ರಿಕೋದ್ಯಮಿಯೊಬ್ಬನ ಆಸ್ಥೆಯಲ್ಲ ತಾನೆ?”
ಮೂವರೂ ಒಮ್ಮೆಗೆಲೇ ಧರಿಸಿಬಿಟ್ಟ ಮೌನವನ್ನು ಒಡೆದು ಬಂದ, ಬೆಹರಾಮ್‌ನಿಂದ ಕೊನೆಗೂ ಆಡಲು ಸಾಧ್ಯವಾದ, ಮಾತು ಮೂವರನ್ನೂ ಎಚ್ಚರಿಸಿತು. ತನ್ನ ಪ್ರಶ್ನೆ ತಳೆದ ರೂಪದಂತೆ ಅದು ಪ್ರಕಟಗೊಂಡ ರಭಸದಿಂದ ಬೆಹರಾಮನಿಗೆ ಮುಜುಗರವಾಯಿತು. ಕರುಣಾಕರನ್ ತಬ್ಬಿಬ್ಬುಗೊಂಡು ಚಹ ಕುಡಿದು ಖಾಲಿಯಾದ ಕಪ್ಪನ್ನು ಕೆಳಗಿಡುವಾಗ ಅತ್ತಿತ್ತ ನೋಡುವ ಧೈರ್ಯವಾಗಲಿಲ್ಲ.
“ಆಣೆ ಮಾಡಿ ಹೇಳುತ್ತೇನೆ, ಸರ್! ನನಗೂ ನನ್ನ ಸಂಪಾದಕನಿಗೂ ಯಾವ ಮಾತುಕತೆಯೂ ಆಗಿಲ್ಲ.”
ಶಿರೀನಳ ಮೋರೆಯಮೇಲಿನ ಅಪನಂಬಿಕೆಯ ಛಾಯೆ ಕಂಡು ಬೆಹರಾಮ್ ‘ಅದು ಬೇಡ,’ ಎನ್ನುವಹಾಗೆ ಅವಳ ಕಡೆಗೊಮ್ಮೆ ನೋಡಿ:

“ನಾನು ಹೇಳಿದ್ದು ಅದಲ್ಲ, ಕರುಣಾಕರನ್. ನನಗೆ ತಿಳಿಯಬೇಕಾದದ್ದು ಈ ಕೊಲೆಯಲ್ಲಿ ನಿಮಗಿರುವ ಆಸ್ಥೆಯ ಸ್ವರೂಪವನ್ನು. ಅದು ನಿಮ್ಮನ್ನು ಇಷ್ಟೊಂದು ಗಾಢವಾಗಿ ತಟ್ಟಿದ ಕಾರಣ ತಿಳಿಯುವ ಆಸೆಯಾಗಿದೆ. ನಿಮ್ಮನ್ನೇ ಮರುಪರೀಕ್ಷೆಗೆ ಒಡ್ಡುತ್ತಿದ್ದೇನೆಂದು ತಪ್ಪು ತಿಳಿಯಬೇಡಿ. ನಾನು ನಿಮ್ಮನ್ನು ಕೂಡಲೇ ಮೆಚ್ಚಿಕೊಂಡದ್ದು ನಿಮಗೆ ಇದರಲ್ಲಿರುವ ಆಸ್ಥೆಯಿಂದಾಗಿ ಎಂಬುದನ್ನು ದಯಮಾಡಿ ನಂಬಿ.”
“ನನಗೆ ಗೊತ್ತಿಲ್ಲ ಸರ್,” ಕರುಣಾಕರನ್ ಸಂಪೂರ್ಣವಾಗಿ ಗೊಂದಲಿಸಿದ. ಒಂದು ಬಗೆಯ ಅಳುಬುರುಕುತನ ಅವನ ಮಾತಿನಲ್ಲಿ ಸೇರಿಕೊಂಡಿತು. ಇನ್ನೂ ಹೆಚ್ಚು ಒತ್ತಾಯಪಡಿಸಿದರೆ ಅತ್ತೇಬಿಡುವನೇನೋ ಎಂದು ಬೆಹರಾಮನಿಗೆ ಭಯವಾಯಿತು.
“ನಿಮ್ಮ ನಿದ್ದೆಗೇಡಿಗೆ ಕಾರಣವಾಗಿದೆಯೆಂದು ಹೇಳಿದ ಆ ಸಹಿಯಿಲ್ಲದ ಪತ್ರ ನೋಡಬಹುದೇ?” ತಾನು ಕೇಳಿದ ಪ್ರಶ್ನೆ ಬಯಸಿದ್ದಕ್ಕಿಂತ ಹೆಚ್ಚು ನಿಷ್ಠುರವಾಯಿತು ಎನ್ನುವುದು ಸ್ವತಃ ಅವಳ ಲಕ್ಷ್ಯಕ್ಕೇ ಬಂದಾಗ ತನ್ನ ಅಸಮಾಧಾನವನ್ನು ಅಡಗಿಸುವ ಪ್ರಯತ್ನ ಮಾಡಿದಳು.

ಕರುಣಾಕರನ್ ನೀರಡಿಸಿ ಗ್ಲಾಸು ನೀರನ್ನು ಕೇಳಬೇಕು ಎನ್ನುವಷ್ಟರಲ್ಲಿ ಈ ಮೂವರನ್ನು, ಅವರು ತಾವು ಅರಿಯದೇನೆ ಸಿಕ್ಕಿಸಿಕೊಂಡ ವಿಚಿತ್ರ ಸನ್ನಿವೇಶದಿಂದ ಬಿಡಿಸಲೋ ಎಂಬಂತೆ ಆಗ ಒಮ್ಮೆ ಮಾತ್ರ ಮೋರೆ ತೋರಿಸಿ ಹೋದ ಮುದುಕಿ ಟ್ರಾಲಿಯೊಂದರ ಮೇಲೆ ಚಹ-ತಿಂಡಿಗಳ ಸರಂಜಾಮನ್ನು ಹೊತ್ತು ಬಂದಳು. ಟ್ರಾಲಿಯಲ್ಲಿ ನೀರು ತುಂಬಿದ ಗ್ಲಾಸುಗಳೂ ಇದ್ದುವು. ಅವುಗಳನ್ನೇ ಮೊದಲು ಎತ್ತಿ ಟೀಪಾಯಿಯ ಮೇಲೆ ಇಟ್ಟಾಗ ಕರುಣಾಕರನ್ ಎಲ್ಲ ಸಂಕೋಚವನ್ನೂ ಮರೆತು ಒಂದುಗ್ಲಾಸನ್ನು ಎತ್ತಿಕೊಂಡು ನೀರಿನ ಗುಟುಕೊಂದನ್ನು ಹೀರಿದ್ದೇ, ರಿಫ್ರಿಜರೇಟರಿನಲ್ಲಿಟ್ಟು ತಂಪುಗೊಳಿಸಿದ ನೀರಿನಿಂದ ಜೀವಕ್ಕೆ ಹಿತವೆನಿಸಿತು. ಅವನಿಗೆ ಅರಿವಿಲ್ಲದೇನೆ ಮನಸ್ಸು ದೊಡ್ಡ ನಿರ್ಧಾರಕ್ಕೆ ಸಿದ್ಧವಾಗತೊಡಗಿತ್ತು.

ಮುದುಕಿ, ತನ್ನ ಸಹಾಯಕ್ಕೆ ಬರುವ ಹವಣಿಕೆಯಲ್ಲಿದ್ದ ಮಗಳಿಗೆ ಬೇಡವೆನ್ನುವ ಸನ್ನೆ ಮಾಡಿದಳು. ಚಹ ಕುಡಿದು ಖಾಲಿಯಾದ ಕಪ್ಪುಬಶಿಗಳನ್ನು ಟೀಪಾಯಿಯಿಂದ ಮೊದಲು ಎತ್ತಿ ಟ್ರಾಲಿಯ ತೀರ ಕೆಳಗಿನ ಅಂತಸ್ತಿನ ಮೇಲೆ ಇರಿಸಿದಳು. ಆಮೇಲೆ ಟ್ರಾಲಿಯೊಳಗಿನ ಸಾಮಾನನ್ನು ಒಂದೊಂದೇ ಎತ್ತಿ ಟೀಪಾಯಿಗೆ ಸಾಗಿಸತೊಡಗಿದಳು. ಅವಳ ಈ ಚಟುವಟಿಕೆಯೊಳಗಿನ ಚಾಕಚಕ್ಯತೆಯನ್ನು ಉಳಿದ ಮೂವರೂ ಕೌತುಕ ತುಂಬಿದ ಕಣ್ಣುಗಳಿಂದ ನೋಡುತ್ತ ಕುಳಿತುಬಿಟ್ಟರು. ಹಾಲಿನಲ್ಲಿ ನೆಲೆಸಿದ ಮೌನ ಪ್ರತಿಯೊಬ್ಬರ ಲಕ್ಷ್ಯಕ್ಕೆ ಬಂದು ಕ್ಷಣಹೊತ್ತು ಅವರ ಮುಜುಗರಕ್ಕೆ ಕಾರಣವಾಗುತ್ತಿರುವಾಗಲೂ ಅವರು ಅದನ್ನೇ ಬಯಸಿದಂತಿತ್ತು. ಒಂದು ಪ್ಲೇಟಿನಲ್ಲಿ ಚೆಂದವಾಗಿ ಕತ್ತರಿಸಿ ಓರಣವಾಗಿ ಇರಿಸಿದ ಕೇಕ್‌ನ ಹೋಳುಗಳು; ಇನ್ನೊಂದರಲ್ಲಿ ಹಾಗೆಯೆ ಒಪ್ಪವಾಗಿರಿಸಿದ ಬರ್ಫಿಯ ಚಚ್ಚೌಕು ತುಂಡುಗಳು; ಮಗದೊಂದರಲ್ಲಿ ಮಸಾಲೆ ಹಚ್ಚಿದ ಗೇರುಬೀಜ, ಬಾಳೆಕಾಯಿಯ ಬಾಳಕಗಳು: ಈ ಕೊನೆಯ ಪ್ಲೇಟನ್ನು ಇಡುವಾಗ-“ಇವು ಖಾಸಾ ನಿಮ್ಮ ಕೇರಳದವು,” ಎನ್ನುತ್ತ ಆಗಿನಿಂದಲೂ ನೆಲೆಸಿದ ಮೌನಕ್ಕೆ ಭಂಗತಂದಳು. “ತೆಗೆದುಕೊಳ್ಳಿ” ಎಂದು ಹೇಳಿ, ಕಪ್ಪುಗಳಲ್ಲಿ ಚಹ ಸುರಿಯುವಾಗ, “ಹೋದ ವಾರವಷ್ಟೇ ನಮ್ಮ ಮಗ ಕೇಕಿಯ ಜನ್ಮದಿವಸ. ಅಮೆರಿಕೆಯಲ್ಲಿ ಇರುವವನು. ಅವನ ಅನುಪಸ್ಥಿತಿಯಲ್ಲಿ ನಾವಿಬ್ಬರೇ ಅಚರಿಸಿದೆವು. ಮಗಳು ಮೊಮ್ಮಕ್ಕಳು ಕೂಡ ಎರಡು ದಿನ ತಡಮಾಡಿ ಬಂದರು. ಅವರು ಬಂದಮೇಲೆ ಇನ್ನೊಮ್ಮೆ ಹಬ್ಬವಾಯಿತು. ನಮ್ಮ ಕೇಕೀ ಅಮೆರಿಕೆಗೆ ಹೋದಾಗ ನಿಮ್ಮಷ್ಟೇ ವಯಸ್ಸಿನವನು. ನಿನ್ನೆ ಇವರು ನಿಮ್ಮ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು,” ಎನ್ನುತ್ತ ಚಹ ತುಂಬಿದ ಕಪ್ಪುಗಳನ್ನು, ಟೀಪಾಯಿಯ ಮೇಲೆ ಕುಡಿಯುವವರಿಗೆ ಹತ್ತಿರವಾಗುವ ಹಾಗೆ ಅವರವರ ಎದುರಿನಲ್ಲಿ ಇಡತೊಡಗಿದಳು. ಕಪ್ಪುಬಶಿಗಳು ಒಂದಕ್ಕೊಂದು ಅಪ್ಪಳಿಸಿ ಸದ್ದುಮಾಡದ ಹಾಗೆ, ಚಹದ ಒಂದು ಹನಿ ಕೂಡ ಹೊರಚೆಲ್ಲದ ಹಾಗೆ ಜಾಗ್ರತೆ ವಹಿಸಿದ ಮುದುಕಿಯ ಕೈಯ ದಕ್ಷತೆಯನ್ನು ಮೆಚ್ಚಿಕೆ ತುಂಬಿದ ಕಣ್ಣುಗಳಿಂದ ನೋಡುತ್ತಿರುವಾಗ, ಶಿರೀನ್ ಕೇಕ್ ತುಂಬಿದ ಪ್ಲೇಟನ್ನು ಕರುಣಾಕರನ್ ಇದಿರು ಹಿಡಿದಳು. ಕೇಕ್ ತುಂಡೊಂದಕ್ಕೆ ಕರುಣಾಕರನ್ ಕೈಹಾಕುತ್ತಿದ್ದಾಗ ಮುದುಕಿ,”ನಿಮಗೆ ಅಣ್ಣತಮ್ಮಂದಿರೆಷ್ಟು?” ಎಂದು ಕೇಳಿದಳು. ಸನ್ನಿವೇಶಕ್ಕೆ ತೀರ ಸಹಜವಾದ ಪ್ರಶ್ನೆಯಾಗಿತ್ತಾದರೂ ಕರುಣಾಕರನ್‌ಗೆ ಅದು ವಿಶೇಷ ರೀತಿಯಲ್ಲಿ ಕೇಳಿಸಿತೆಂಬಂತೆ ತುಂಬ ವಿಹ್ವಲನಾದ. ಕೇಕಿನ ಹೋಳನ್ನು ಹಿಡಿದ ಕೈ ನಡುಗಹತ್ತಿತೇ ಹೊರತು ಬಾಯಿಗೆ ಹೋಗದಾಯಿತು. ಮೊದಲೇ ತುಸು ಗಾಬರಿ ತುಂಬಿ ದೊಡ್ಡವಾದಹಾಗೆ ತೋರುತ್ತಿದ್ದ ಕಣ್ಣುಗಳು ಇನ್ನಷ್ಟು ದೊಡ್ಡವಾದವು. ಒಂದು ಬಗೆಯ ದೈನ್ಯ ಸೇರಿದ ನೋಟದಿಂದ, ಸರಸರನೆ, ಮೊದಲೊಮ್ಮೆ ಮುದುಕನ ಕಡೆಗೆ ಆಮೇಲೆ ಮುದುಕಿಯ ಕಡೆಗೆ ನೋಡಿ ಕೊನೆಗೆ ಶಿರೀನಳತ್ತ ನೋಡುತ್ತ ಕುಳಿತುಬಿಟ್ಟ. ಅವನ ಈ ಅನಿರೀಕ್ಷಿತ ಪ್ರತಿಕ್ರಿಯೆಯಿಂದ ಎಲ್ಲರಿಗೂ ಆಶ್ಚರ್ವಾಯಿತು.

“ಮೊದಲು ತಿನ್ನಿ, ಆಮೇಲೆ ಮಾತಾಡೋಣ. ಅಮ್ಮ ಬಂದವರಿಗೆಲ್ಲ ಕೇಳುವ ಮಾಮೂಲು ಪ್ರಶ್ನೆಯಿದು. ಮಗನ ಹುಟ್ಟುಹಬ್ಬದ ನೆನಪಿಗೆ ಮಾಡಿದ ಕೇಕನ್ನು ತಿಂದರೆ ಅವಳಿಗೆ ಸುಖವೆನಿಸುತ್ತದೆ.” ಶಿರೀನಳ ಮಾತಿನಲ್ಲಿ ಸೇರಿಕೊಂಡ ಸಂತಯಿಸುವ ದನಿ ಅವಳು ಬಯಸಿದ್ದಾಗಿರಲಿಲ್ಲ.

ತನ್ನ ಬಾಯನ್ನು ಕಟ್ಟಿಬಿಟ್ಟ ಸನ್ನಿವೇಶದಿಂದ ಸ್ವತಃ ಕರುಣಾಕರನ್‌ನೇ ಚಕಿತನಾದ. ಉತ್ತರ ಕೊಡಲು ತಡವಾದಷ್ಟೂ ತನ್ನ ಮೌನ ಬಯಸಿರದ ಪದಾರ್ಥಕ್ಕೆ ಎಡೆಮಾಡಿಕೊಡಬಹುದೆಂಬ ಭಯವೂ ಕಾಡದೇ ಇರಲಿಲ್ಲ. ಆದರೂ ತನ್ನಿಂದ ಹೊರಗೆ ಬರಬೇಕಾದದ್ದು ಬರಿಯ ಒಂದು ಪ್ರಶ್ನೆಗೆ ಉತ್ತರವೆಂದು ತೋರಲಿಲ್ಲ. ಹಲವು ತಿಂಗಳಿಂದ ಕಾಡುತ್ತ ಬಂದ ಒಂದು ಭಾವನೆ ಮಾತಾಗುವಷ್ಟರಲ್ಲೇ ರೂಪ ಬದಲಿಸುತ್ತಿರುವ ವಿಚಿತ್ರ ಅನುಭವದಿಂದಾಗಿ ತುಟಿ ತೆರೆಯುವುದೇ ಕಷ್ಟವಾಗಹತ್ತಿತು. ಮುದುಕ-ಮುದುಕಿಯರನ್ನು ನೋಡುತ್ತಿದ್ದಾಗ ಅನ್ನಿಸುತ್ತಿದ್ದ ಸಂತವಾದ ಧೈರ್ಯ ಶಿರೀನಳನ್ನು ನೋಡುತ್ತಿದ್ದಾಗ ಅಲುಗಾಡುತ್ತಿತ್ತು. ಮುದುಕಿ ಒಬ್ಬಳೇ ಇದ್ದಾಗ ಕೊಡಬಹುದಾಗಿದ್ದ ಉತ್ತರದ ಸಹಜತೆ ಮೊದಲಿನಿಂದಲೂ ತನ್ನನ್ನು ಅನುಮಾನದಿಂದಲೇ ನೋಡುತ್ತಬಂದ ಈ ಹೆಣ್ಣಿನ ಇದಿರು ಸಾಧ್ಯವಾಗಿ ತೋರದಾಯಿತು.
‘ನೋಡಿ ಶಿರೀನ್, ನಾನು ಕೇರಳವನ್ನು ಬಿಟ್ಟು ಮುಂಬಯಿಗೆ ಬಂದದ್ದು ಹೊಟ್ಟೆಪಾಡಿಗಾಗಿಯೇ. ಆದರೆ ಮುಂಬಯಿಗೆ ಬಂದದ್ದು ನನ್ನ ಅಣ್ಣನೊಬ್ಬ ಇಲ್ಲಿಯದೇ ಝೋಪಡಪಟ್ಟಿಯಲ್ಲಿ ಮೂರು ವರ್ಷಗಳ ಹಿಂದೆ ಕೊಲೆಯಾಗಿದ್ದರಿಂದ. ಆಗ ನಾನು ಸಹಿಯಿಲ್ಲದ ಪತ್ರದ ಬಗ್ಗೆ ಹೇಳಿದ್ದೆನಲ್ಲ, ಅದು ನನ್ನ ನಿದ್ದೆಗೇಡಿಗೆ ಕಾರಣವಾದದ್ದನ್ನೂ ತಿಳಿಸಿದೆನಲ್ಲ. ಈ ಎಲ್ಲ ಸಂಗತಿಗಳೂ ಸತ್ಯವಾದವು. ಆದರೆ ಅ ಪತ್ರ ನಾನು ಮಾತಿನಲ್ಲಿ ಹೇಳಿದ ಹಾಗೆ ಸಂಪಾದಕನಿಗೆ ಬಂದದ್ದಲ್ಲ. ಅಪ್ಪನಿಗೆ ಬಂದದ್ದು. ನಾನು ಒಂದು ಅರ್ಥದಲ್ಲಿ ಸುಳ್ಳು ಹೇಳಿರಬಹುದು. ನಾನು ಯಾವ ಉದ್ದೇಶಕ್ಕಾಗಿ ಬಂದಿರುವೆನೋ ಅದನ್ನು ಸಾಧಿಸಬೇಕಾದರೆ ಬೇರೆ ಉಪಾಯ ಹೊಳೆಯಲಿಲ್ಲ. ಸದ್ಯವೇ ನಡೆದ ರದ್ದೀವಾಲಾನ ಖೂನಿಯ ಬಗ್ಗೆ ಮಾತನಾಡುವಾಗ ಸರಕ್ಕನೆ ನಿಮ್ಮಲ್ಲಿಯ ಯಾರಾದರೂ ಮೂರು ವರ್ಷಗಳ ಹಿಂದೆ ನಡೆದ ನನ್ನ ಅಣ್ಣನ ಖೂನಿಯ ಬಗ್ಗೆ ಮಾತನಾಡಿದ್ದರೆ! ನೀವಾಗಿ ಮಾತನಾಡುವುದು ಮುಖ್ಯ. ನಾನೇ ಕೇಳಿದಾಗ ನೀವು ಕೊಡಬಹುದಾದ ಉತ್ತರವನ್ನು ನಂಬುವಂತಿಲ್ಲ. ಯಾಕೆಂದರೆ ಇಂಥ ವಿಷಯದಲ್ಲಿ ನಮ್ಮ ನೆನಪುಗಳನ್ನು ನಂಬುವುದು ಕಷ್ಟ. ನಿಮಗೆ ಗೊತ್ತಿದ್ದುದೇ ಆದಲ್ಲಿ ನೀವು ಮಾತನಾಡದೇ ಇರುವುದು ಶಕ್ಯವೇ ಇಲ್ಲ ಎನ್ನುವಷ್ಟು ಭೀಕರವಾದ ಕೊಲೆಯದು-ಅಂದರೆ ಆ ಸಹಿಯಿಲ್ಲದ ಪತ್ರದ ಪ್ರಕಾರ. ಈ ಕೇರಿಯಲ್ಲೇ ನಡೆದದ್ದಂತೆ. ಇಲ್ಲಿಯ ಮುದುಕನೊಬ್ಬನಿಗೆ ಅದರ ಬಗ್ಗೆ ಬಹಳಷ್ಟು ಗೊತ್ತಿದೆಯಂತೆ. ದೊಡ್ಡ ರಾಜಕಾರಣಿಯೊಬ್ಬನಿಗೆ, ಪೋಲೀಸರಿಗೆ ಹೆದರಿಕೊಂಡು ಸುಮ್ಮನಿದ್ದಾನಂತೆ. ಪತ್ರ ಬರೆದವನು ಕೇರಳದವನೇ. ಈ ಮುದುಕನ ಮನೆಯಲ್ಲೇ ಕೆಲಸಕ್ಕಿದ್ದ. ಪತ್ರ ಮಲೆಯಾಳಮ್‌ದಲ್ಲಿದೆ. ನಾನು ಬಂದದ್ದು ಅಣ್ಣನ ಕೊಲೆಯಾದದ್ದನ್ನು ಖಾತ್ರಿಮಾಡಿಕೊಳ್ಳಲಲ್ಲ. ಅವನು ಬದುಕಿದ್ದಾನೆಂದು ಗುರುತುಹಿಡಿಯಲು. ಇಲ್ಲಿಯದೇ ಝೋಪಡಪಟ್ಟಿಯಲ್ಲಿ ವಾಸಿಸುತ್ತಿರಬಹುದು. ಅಪ್ಪನಿಗೆ, ನಮಗೆ ಮೋರೆ ತೋರಿಸಲು ಆಗದ ಸ್ಥಿತಿಯಲ್ಲಿ ಬದುಕುತ್ತಿರಬಹುದು. ಹಾಗೆಂದೇ ಆ ಪತ್ರವನ್ನು ಅವನೇ ಬರೆಸಿರಬಹುದು. ನಿಜ ಹೇಳ ಬೇಕೆಂದರೆ ಇದು ನನಗೆ ತಾನಾಗಿಯೆ ಹೊಳೆದ ವಿಚಾರವಲ್ಲ. ಅಪ್ಪ ಲಲಿತಾ ಮನೆಯಲ್ಲಿಲ್ಲದ ಹೊತ್ತಿನಲ್ಲೊಮ್ಮೆ ಅಣ್ಣನ ಬಗ್ಗೆ ನನ್ನೆದುರು ಕೆಟ್ಟ ಚಾಡಿ ಹೇಳುತ್ತಿರುವಾಗ ಅಮ್ಮ ನನ್ನ ತಲೆಯಲ್ಲಿ ಹಾಕಿದ್ದು. ಅಮ್ಮನಿಗೆ ಅಣ್ಣನೆಂದರೆ ಆಗುತ್ತಿರಲಿಲ್ಲ. ಈ ಅಣ್ಣನ ಬಗ್ಗೆ, ಅವನು ಊರು ಬಿಟ್ಟು ಬಂದ ಸಂದರ್ಭದ ಬಗ್ಗೆ ಹೇಳಬೇಕಾದರೆ- ಕೇರಳದ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ಈ ಸ್ಕಾಯ್‌ಸ್ಕ್ರೇಪರ್ ಜಗತ್ತಿನಲ್ಲಿ ವಾಸಿಸುತ್ತಿದ್ದವರ ಮನಸ್ಸನ್ನೂ ಮುಟ್ಟುವಹಾಗೆ- ಹೇಳಬೇಕಾದರೆ ನನ್ನ ಮುತ್ತಜ್ಜ, ಅಜ್ಜರಿಂದಲೇ ಅರಂಭಿಸಬೇಕು. ಅಪ್ಪ, ಅವನ ಇಬ್ಬರು ಹೆಂಡಂದಿರ ಬಗ್ಗೆ ಹೇಳಬೇಕು. ನಮ್ಮ ಚಿಕ್ಕ ಹಳ್ಳಿ, ಚಿಕ್ಕ ಮನೆ, ಚಾಪೆ, ಬುಟ್ಟಿಗಳನ್ನು ತಯಾರಿಸುವ ಅಪ್ಪನ ಧಂದೆಯ ಬಗೆಗೂ ಹೇಳಬೇಕು. ನಮ್ಮ ಹಿತ್ತಿಲು, ಅಲ್ಲಿಯ ಗಿಡ ಮರ ಬಳ್ಳಿ, ದನಕರುಗಳನ್ನೂ ವರ್ಣಿಸಬೇಕು. ನಿನಗೆ ಅಣ್ಣತಮ್ಮಂದಿರೆಷ್ಟು? ಎಂಬ ಪ್ರಶ್ನೆಗೆ ಉತ್ತರವಾಗಿ ಒಂದು ಸಂಖ್ಯೆ ಹೇಳಿದರೆ ಸಾಕೆ? ನನ್ನ ಅಪ್ಪನಿಗೆ ನಾವು ಮೂರು ಮಂದಿ ಮಕ್ಕಳು. ನಾನು ಈಗ ಹುಡುಕಲು ಹೊರಟ ಅಣ್ಣ ಅಪ್ಪನಿಗೆ ಹಿರಿಯ ಹೆಂಡತಿಯಿಂದ ಹುಟ್ಟಿದವನು. ನನ್ನ ಅಮ್ಮನಿಗೆ ನಾವು ಇಬ್ಬರೇ ಮಕ್ಕಳು-ನಾನು, ನನ್ನ ಕಿರಿಯ ತಂಗಿ ಲಲಿತಾ. ಏನು ಹೇಳಿದಹಾಗಾಯಿತು? ಕಳೆದ ಹಲವು ತಿಂಗಳಲ್ಲಿ ಇಲ್ಲಿಯ ಎಷ್ಟೊಂದು ಮನೆಗಳಿಗೆ ಹೋಗಿ ಬಂದಿದ್ದೇನೆ. ರದ್ದೀವಾಲಾನ ಖೂನಿಯ ಬಗ್ಗೆ, ಇಲ್ಲಿಯ ಜೀವನದ ಆರೋಗ್ಯಕ್ಕೆ ಈ ಝೋಪಡಪಟ್ಟಿಗಳಿಂದ ಉಂಟಾದ ಅಪಾಯದ ಬಗ್ಗೆ, ಸರಕಾರದ ನಿರ್ಲಕ್ಷ್ಯದ ಬಗ್ಗೆ ಮಾತು ಕೇಳಿಸಿದುವು. ಇಂಥಲ್ಲಿ ಕೊಲೆಗಳು ನಡೆದರೆ ಆಶ್ಚರ್ಯವೇನು ಎಂಬಂಥ ಪ್ರಶ್ನೆ ಕೇಳಿಸಿದುವು. ಹೊರತು, ಖೂನಿಯ ಬಗ್ಗೆ ಬಹಳಷ್ಟು ತಿಳಿಯಲಿಲ್ಲ. ಮೂರು ವರ್ಷಗಳ ಹಿಂದಿನ ಖೂನಿಯ ಬಗೆಗೆ ಒಬ್ಬರಿಂದಲೂ ಮಾತು ಹೊರಡದೇ ಇದ್ದಾಗ ಒಳಗೊಳಗೇ ಖುಶಿಯಾಗುತ್ತಿತ್ತು. ಕೊನೆಗೂ ಅಣ್ಣ ಸತ್ತಿರಲಿಕ್ಕಿಲ್ಲ, ಬದುಕಿರಬಹುದು; ನಮ್ಮ ಕಣ್ಣು ತಪ್ಪಿಸಿಕೊಂಡಿರಬಹುದು. ನೀವೂ ಆ ಕೊಲೆಯ ಬಗ್ಗೆ ಮಾತನ್ನೆತ್ತದೇ ಉಳಿದುಬಿಟ್ಟರೆ ನಾನು ಮಾಡಿಕೊಂಡಿರುವ ಊಹೆ ಸರಿಯಾದದ್ದೆಂದು ತಿಳಿದು ಸಂತೋಷದಿಂದ ಕುಣಿದುಬಿಡುತ್ತೇನೆ. ‘ನೀವೂ’ ಎಂದು ಯಾಕೆ ಅಂದೆನೆಂದರೆ, ನಿಮ್ಮ ಅಪ್ಪನನ್ನು ಕಂಡಂದಿನಿಂದಲೂ ಪತ್ರದಲ್ಲಿ ಉಲ್ಲೇಖಗೊಂಡ ಮುದುಕ ಅವರೇ ಇರಬಹುದೆಂದು ಅನ್ನಿಸತೊಡಗಿದೆ. ಯಾಕೆ? ಹೇಗೆ? ಎಂದು ಕೇಳಬೇಡಿ. ನಿನ್ನೆ ಬಾಲ್ಕನಿಯಲ್ಲಿ ಕೂತಾಗ ಇದಿರು ಕಂಡ ಸಮುದ್ರದ ನೊರೆ ಕಾರುತ್ತ ಮೊರೆಯುವ ನೀರು ಹೇಳಿತೆಂದು; ಕಿಡಕಿಯ ದಡಿಯ ಮೇಲಿಂದ ಹಣಕಿಕ್ಕಿ ನೋಡುತ್ತಿದ್ದ ಈ ರಬ್ಬರು ಗಿಡ ಕೂಡ ಇದೀಗ ಅದನ್ನೇ ಮತ್ತೆ ಹೊಳೆಯಿಸಿತೆಂದು ತಿಳಿದುಕೊಳ್ಳಿ. ಪತ್ರ ಬರೆದ ಕೇರಳದ ಹುಡುಗ ಕೆಲಸ ಮಾಡುತ್ತಿದ್ದುದು ಈ ಮನೆಯಲ್ಲೇ ಇರಬೇಕು. ಬಹುಶಃ ಅವನು ಇಲ್ಲಿಂದ ಹೋದನಂತರವೇ ಪಾರ್ವತೀ ಸೀತೆ ಇಲ್ಲಿ ಕೆಲಸಕ್ಕೆ ಹತ್ತಿರಬೇಕು..’

ಆಡಿದ್ದರೆ ಈ ಧಾಟಿಯ ಮಾತುಗಳಾಗಬಹುದಾಗಿದ್ದ ಹಲವು ಭಾವನೆಗಳು ಆಕೃತಿ ಪಡೆಯುವಷ್ಟರಲ್ಲಿ ಕರಗಿಹೋಗುತ್ತಿದ್ದುವೇ ಹೊರತು ಶಬ್ದಗಳಾಗುತ್ತಿರಲಿಲ್ಲ. ನಿನ್ನೆ ರಾತ್ರಿ ಡಾಯರಿ ಬರೆಯುವಾಗ ಕಣ್ಣ ಇದಿರು ನಿಂತ ಮೇಣಬತ್ತಿ, ಜ್ಯೋತಿಯ ಜಳಕ್ಕೆ ಕರಗುತ್ತಿದ್ದಂತೆಯೆ ಚಿತ್ರವಿಚಿತ್ರ ಆಕಾರಗಳಲ್ಲಿ ಹೆಪ್ಪುಗಟ್ಟುತ್ತಿದ್ದ ಅದರ ಮೇಣ ಈಗ ಮತ್ತೆ ಕಣ್ಣ ಮುಂದೆ ನಿಲ್ಲತೊಡಗಿದಾಗ ದೊಡ್ಡಕ್ಕೆ-“ನನಗೆ ಒಬ್ಬ ಅಣ್ಣ, ಒಬ್ಬ ತಂಗಿ,” ಎಂದ. ಎಷ್ಟೋ ಹೊತ್ತಿಗೆ ಮೊದಲು ಕೇಳಿದ ಒಂದು ಪ್ರಶ್ನೆಗೆ ಉತ್ತರವಾಗಿ ಈಗ ಬಾಯಿಂದ ಹೊರಬಂದ ಮಾತು ಎಲ್ಲರನ್ನೂ ದಂಗುಬಡಿಸುತ್ತಿರುವಾಗಲೇ ಹಾಲಿನಲ್ಲಿ ಹೊಸತಾಗಿ ಪ್ರವೇಶಿಸಿದ ಹೆಣ್ಣು ಅವರ ಲಕ್ಷ್ಯವನ್ನು ತನ್ನತ್ತ ಸೆಳೆದುಕೊಂಡಳು. ಬಂದವಳು ಪಾರ್ವತಿ ಎಂದು ತಿಳಿಯಲು ಕರುಣಾಕರನ್ನನಿಗೆ ಕಷ್ಟವಾಗಲಿಲ್ಲ. ಇವರೆಲ್ಲ ಕೂತ ಸ್ಥಳದಿಂದ ತುಸು ದೂರ ನಿಂತು ಕರುಣಾಕರನ್ನನನ್ನೇ ಗಂಭೀರವಾಗಿ ನೋಡುತ್ತಿದ್ದ ಪಾರ್ವತಿ, ಶಿರೀನಳ ದೃಷ್ಟಿ ತನ್ನದನ್ನು ಸಂಧಿಸಿದ್ದೇ ಗೋಣಿನಿಂದ ಹೌದು ಎನ್ನುವಂತೆ ಸನ್ನೆಮಾಡಿದಳು. ಹಾಗೂ ಒಳಗಿನ ಕೋಣೆಯಲ್ಲೆಲ್ಲೋ ಗಲಾಟೆ ಮಾಡಹತ್ತಿದ್ದ ಮಕ್ಕಳ ಗುಲ್ಲು ಕೇಳಿಸಿ ಅತ್ತ ಹೋಗಲು ಆತುರಪಟ್ಟವಳಹಾಗೆ ಹಾಲಿನಲ್ಲಿ ಪ್ರಕಟವಾದ ತರಾತುರಿಯಿಂದಲೇ ಅಲ್ಲಿಂದ ಹೊರಟುಹೋದಳು. ಈ ತೀರ ಅಲ್ಪಕಾಲದ ಪ್ರವೇಶದಿಂದ ಕರುಣಾಕರನ್ ದುಗುಡ ತುಂಬಿದ ನಿರಾಸೆಗೆ ಒಳಗಾದ. ಸೀತೆಯ ತಾಯಿಯನ್ನು ನೋಡಲು ತುಂಬ ಉತ್ಸುಕನಾಗಿದ್ದ. ಆದರೆ, ನಿರೀಕ್ಷೆಗೆ ಮೀರಿದ ಅವಳ ಮೋರೆಯ ಮೇಲಿನ ಗಾಂಭೀರ್ಯ, ಶಿರೀನಳಿಗೆ ಮಾಡಿದ ಸನ್ನೆ ಇವುಗಳಿಂದಾಗಿ ಅವಳ ಪ್ರವೇಶ ಕಳವಳಕ್ಕೆ ಕಾರಣವಾಗತೊಡಗಿತು. ಅವಳ ವರ್ತನೆ ಕೆಲಹೊತ್ತಿನ ಮೊದಲು ಮುದುಕಿ ಕೇಳಿದ ಪ್ರಶ್ನೆಗೆ ತಳಕು ಹಾಕಿಕೊಂಡಿರುವಂತೆ ಭಾಸವಾದಾಗ, ಊಹೆಗೆ ಮೀರಿದ ಒಂದು ನಾಟಕೀಯ ಪ್ರಸಂಗದಲ್ಲಿ ತಾನು ಸಿಲುಕಿಕೊಂಡಿದ್ದೇನೆ ಎಂದು ಅನುಮಾನವಾಗಿ ತಾನು ಯಾವುದೋ ಹುಚ್ಚಿನ ಭರದಲ್ಲಿ ತೊಡಗಿಸಿಕೊಂಡ-ತನ್ನ ಶಕ್ತಿಯ ಅಳಿವಿನ ಅಚೆಯ- ಈ ಉದ್ಯೋಗಕ್ಕೆ ಈ ಬೇರೆಯೇ ಅರ್ಥ ಹೊಳೆಯಹತ್ತಿತು; ತನ್ನ ಪ್ರಶ್ನೆಗಳು ಅನವಶ್ಯಕವಾಗಿ, ಅನೇಕರಲ್ಲಿ ಸಲ್ಲದ ಸಂಶಯ ಹುಟ್ಟಿಸಿ ಅವರ ಭಯಕ್ಕೆ, ಅಸಮಾಧಾನಕ್ಕೆ ಕಾರಣವಾಗುತ್ತಿರಬಹುದೆ? ತನ್ನನ್ನು ಮಾತನಾಡಿಸಲು ಸರಿಯಾದ ಅವಕಾಶದ ಹಾದಿ ಕಾಯುತ್ತಿರುವವನ ಹಾಗೆ ತೋರುತ್ತಿದ್ದ ಮುದುಕನ ಪ್ರೀತಿ ತುಂಬಿದ, ಶಾಂತ ಮೋರೆ ಮಾತ್ರ ಇಂಥ ಭಾವನೆಗೆ ಎಡೆಕೊಡದಾಯಿತು. ಆ ಮೋರೆಯ ಮೇಲಿನ ಭಾವವೊಂದನ್ನೇ ನಂಬಿ ಕರುಳಲ್ಲಿ ಸೇರಿದ ನಡುಕವನ್ನು ತಡೆಯುವ ಪ್ರಯತ್ನ ಮಾಡುತ್ತ ಕೈಯಲ್ಲಿನ ಕೇಕಿನ ಹೋಳನ್ನು ತಿಂದು ಮುಗಿಸಿದ. ಹಾಗೂ ಚಹದ ಕಪ್ಪನ್ನು ಕೈಗೆತ್ತಿ ಇತರರ ಜೊತೆಗೆ ತಾನೂ ಚಹ ಗುಟುಕರಿಸಹತ್ತಿದ.

ಅವನು ಚಹ ಕುಡಿದು ಮುಗಿಸುವುದರ ಹಾದಿಯನ್ನೇ ಕಾಯುತ್ತ ಕುಳಿತಂತಿದ್ದ ಶಿರೀನ್, ಅವನು ಚಹದ ಕಪ್ಪನ್ನು ಕೆಳಗಿರಿಸುತ್ತಲೇ: “ಹೇಳಿ ಕರುಣಾಕರನ್, ನೀವು ಈ ಪ್ರಶ್ನೆಗಳನ್ನು ಕೇಳಲು ಬಂದದ್ದು ಕೇವಲ ನಮ್ಮ ಮನೆಗೆ ಮಾತ್ರ ಅಲ್ಲ, ಅಲ್ಲವೆ?”
ಕರುಣಾಕರನ್ ತಬ್ಬಿಬ್ಬಾದ. ಪ್ರಶ್ನೆ ಕೇಳಿದವಳು ಶಿರೀನಳಾದರೂ ಅವನು ಮೋರೆ ತಿರುವಿದ್ದು ಬೆಹರಾಮನ ಕಡೆಗಾಗಿತ್ತು. ಅವನ ದೃಷ್ಟಿಯಲ್ಲಿಯ ಅಸಹಾಯಕತೆ ಬೆಹರಾಮನನ್ನು ತಟ್ಟದೆ ಇರಲಿಲ್ಲ.
“ಶಿರೀನ್, ನಿನ್ನ ಇಂಥ ಪ್ರಶ್ನೆಯ ಉದ್ದೇಶವೇನು? ಅವರು ನಿನ್ನೆಯೇ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.”
“ಅಪ್ಪ, ನೀನು ಸ್ವಲ್ಪ ಹೊತ್ತು ನನಗೆ ಮಾತನಾಡಲು ಬಿಡು. ನಾನೇನು ಅವರ ಮರುತಪಾಸಣೆಗೆ ಹೊರಟಿಲ್ಲ. ಆದರೂ ನನಗೊಂದು ಕೆಟ್ಟ ಗುಮಾನಿ. ಅದರ ನಿವಾರಣೆಯಾಗದೇ ಇವರ ಯಾವ ಪ್ರಶ್ನೆಗೂ ಉತ್ತರ ಕೊಡಲು ನಿನ್ನನ್ನು ಬಿಡಲಾರೆ.”

ಇದನ್ನು ಹೇಳುವಾಗಿನ ಅವಳ ದನಿ ಕರುಣಾಕರನ್ನನಿಗೆ ಸೇರಲಿಲ್ಲ. ಆಶ್ಚರ್ಯವೆಂದರೆ, ಆ ದನಿಯೇ ಈಗ ಸರಕ್ಕನೆಂಬಂತೆ ಅವಳನ್ನು ಎದುರಿಸುವ ಧೈರ್ಯ ತಂದುಕೊಡಹತ್ತಿತು. ತಾನೇನು ಯಾರನ್ನೂ ಯಾವುದೇ ಬಗೆಯ ಹಾನಿಗೆ ಗುರಿ ಮಾಡುವ ಉದ್ದೇಶದಿಂದ ಬಂದವನಲ್ಲ ಬಹಳವೆಂದರೆ ತಾನು ಯಾವುದೋ ಹುಚ್ಚಿನ ಭರದಲ್ಲಿ ಹುಡುಕಿಕೊಂಡು ಬಂದದ್ದು ತನಗೆ ದೊರಕದೇ ಹೋಗಬಹುದು, ಅಷ್ಟೇ. ತಾನು ಈವರೆಗೆ ಭೇಟಿಯಿತ್ತ ಎಲ್ಲ ಮನೆಗಳಲ್ಲಿ ಹೇಳುತ್ತ ಬಂದ ಒಂದು ಸಣ್ಣ ಸುಳ್ಳನ್ನು ಸಮರ್ಥಿಸಿಕೊಳ್ಳುವ ಧೈರ್ಯವೂ ಈಗ ಮೊದಲ ಬಾರಿಗೇ ಬರತೊಡಗಿದಂತೆ ತೋರಿತು. ಆದರೆ ಶಿರೀನ್ ಕೇಳಿದ ಪ್ರಶ್ನೆಯ ಹಿಂದೆ ತನ್ನನ್ನೇಕೋ ಸುಳ್ಳುಮಾಡುವ ಉದ್ದೇಶ ಸ್ಪಷ್ಟವಾಗಿ ಕಂಡದ್ದಕ್ಕೋ ಏನೋ ಅವನ ಬಾಯಿಂದ ಪ್ರತ್ಯಕ್ಷವಾಗಿ ಹೊರಟ ಮಾತು ಮಾತ್ರ ಸ್ವತಃ ಅವನಿಗೇ ಆಶ್ಚರ್ಯವನ್ನುಂಟುಮಾಡಿತು: “ಅಣ್ಣನ ಶೋಧದಲ್ಲಿದ್ದವನು ಒಂದೆರಡು ಸುಳ್ಳುಗಳನ್ನು ಹೇಳಬೇಕಾಗಿ ಬಂದರೆ..” ಕರುಣಾಕರನ್‌ಗೆ ತನ್ನ ವಾಕ್ಯವನ್ನು ಪೂರ್ಣಗೊಳಿಸುವುದಾಗಲಿಲ್ಲ. ವ್ಯಕ್ತಪಡಿಸಲು ಸಾಧ್ಯವಾದಷ್ಟು ಮಾತುಗಳಿಂದಲೇ ಖುದ್ದು ದಂಗುಬಡೆಯಲು ಕಾರಣವಾದ ಸಂಗತಿ-ಉಳಿದವರೂ ತನ್ನ ಹೇಳಿಕೆಯಿಂದ ದಂಗುಬಡೆಯಬಹುದೆಂಬ ನಿರೀಕ್ಷೆಯಾಗಿತ್ತು. ಕೇಳುತ್ತಿದ್ದ ಮುದುಕ, ಮುದುಕಿಯರ ಮೋರೆಗಳ ಮೇಲೆ ಅಂಥ ಭಾವ ಮೊಳೆಯಹತ್ತಿದ್ದನ್ನು ಕಂಡಿದ್ದ ಕೂಡ. ಆದರೆ ಮನೋವಿಜ್ಞಾನದಲ್ಲಿ ಎಂ. ಎ. ಪದವೀಧರಳಾದ ಶಿರೀನ್‌ಗೆ ಈ ಹೇಳಿಕೆ ತೀರ ಮಾಮೂಲಾಗಿ ಕಂಡಿರಬೇಕು: “ಅಣ್ಣನ ಶೋಧವೆಂಬುದೇ ಸುಳ್ಳು ಸಬೂಬಾಗಿದ್ದರೆ?”

ಮುದುಕ ಮುದುಕಿಯರಿಬ್ಬರಿಗೂ ಈ ಮಾತು ತುಂಬ ದುಡುಕಿನದಾಗಿ ಕಂಡಿತು. ತನ್ನ ಅಸಮ್ಮತಿಯನ್ನು ಕಣ್ಣಿನಿಂದಲೇ ವ್ಯಕ್ತಪಡಿಸಿದ ಮುದುಕಿ, ಚಹದ ಸರಂಜಾಮನೆಲ್ಲ ಟ್ರಾಲಿಗೆ ಸಾಗಿಸುತ್ತ “ಪಾರ್ವತೀ,” ಎಂದು ಕರೆದಳು. ಈ ಕರೆಯ ಹಾದಿಯನ್ನೇ ಕಾಯುತ್ತಿದ್ದೆ ಎನ್ನುವವಳ ಹಾಗೆ ದುಡುದುಡು ಒಳಗೆ ಬಂದವಳು, ಮುದುಕಿ ” ಈ ಟ್ರಾಲಿಯನ್ನು ಒಳಗೆ ತೆಗೆದುಕೊಂಡು ಹೋಗು,” ಎಂದು ಹೇಳಿದಾಗ, ‘ಓ! ಕರೆದದ್ದು ಬರಿಯೆ ಈ ಕೆಲಸಕ್ಕಾಗಿಯೆ?” ಎನ್ನುವಂತೆ ತನ್ನ ನಿರಾಸೆಯನ್ನು ತೋರಿಸುವಷ್ಟರಲ್ಲಿ, “ಪಾರ್ವತಿ, ಟ್ರಾಲಿ ಒಳಗಿಟ್ಟು ಇಲ್ಲಿ ಬಾ,” ಎಂದು ಶಿರೀನ್ ಹೇಳಿದಾಗ, ಪಾರ್ವತಿ ಮತ್ತೆ ಚೇತರಿಸಿಕೊಂಡಳು.
“ಅಪ್ಪಾ, ನನ್ನನ್ನು ದಯಮಾಡಿ ಕೆಲಹೊತ್ತು ಮಾತನಾಡಲು ಬಿಡು. ನನ್ನನ್ನು ಕಾಡುತ್ತಿದ್ದ ಒಂದು ಕೆಟ್ಟ ಸಂಶಯದ ನಿವಾರಣೆಯಾಗುವ ಸಮಯ ಈಗ ಬಂದಿದೆ. ಇವರನ್ನು ಬಲ್ಲ ಮೂವರು ಗೃಹಸ್ಥರು ಇನ್ನು ಕೆಲಹೊತ್ತಿನಲ್ಲೇ ಇಲ್ಲಿ ಬರಲಿದ್ದಾರೆ.”

ಶಿರೀನಳ ಈ ಮಾತನ್ನು ಕೇಳಿದೊಡನೆ, ಆಗ ಪಾರ್ವತಿ ಮಾಡಿದ ಸನ್ನೆಯ ಅರ್ಥ ಕರುಣಾಕರನ್‌ಗೆ ಹೊಳೆದುಹೋಯಿತು: ಹೌದು, ಈಗ ನೆನಪಾಗುತ್ತದೆ, ಇವಳನ್ನೆಲ್ಲೋ ಈ ಮೊದಲು ಕಂಡಿದ್ದೇನೆ. ಈಗ ಬರಲಿರುವ ಗ್ರುಹಸ್ಥರೊಬ್ಬರಲ್ಲಿ ಅಥವಾ ಮೂರೂ ಜನರ ಮನೆಗಳಲ್ಲಿ ಇವಳು ಕೆಲಸ ಮಾಡುತ್ತಿರಬೇಕು; ಅಲ್ಲಿ ಕಂಡ ಹುಡುಗ ನಾನೇ ಎಂಬುದನ್ನು ಸನ್ನೆಯಿಂದ ಶಿರೀನಳಿಗೆ ತಿಳಿಸಿರಬೇಕು. ನಾನು ಹುಟ್ಟುವುದಕ್ಕಿಂತ ಮೊದಲೇ ಬರೆದ ಪುಸ್ತಕಗಳ ಆಧಾರದ ಮೇಲೆ ನನ್ನ ಸತ್ವಪರೀಕ್ಷೆ ಮಾಡಲು ಹೊರಟಿರಬೇಕು ಸಾಯ್ಕಾಲಾಜಿ ಕಲಿತ ಈ ಹೆಣ್ಣು: ‘ನಿಮ್ಮನ್ನು ಹೇಗೆ ಕರೆಯಬೇಕೋ ತಿಳಿಯುವುದಿಲ್ಲ. ಅಕ್ಕಾ ಎಂದು ಕರೆಯೋಣ, ಅನ್ನಿಸುತ್ತದೆ. ನಾವು ಭೇಟಿಯಾಗುತ್ತಿದ್ದುದು ಇದೇ ಮೊದಲು. ಭೇಟಿಯಾಗುತ್ತಿದ್ದ ಸಂದರ್ಭ ಕೂಡ ನಮ್ಮಲ್ಲಿಯ ಯಾರೂ ಊಹಿಸಿದಂತಹದಲ್ಲ. ಯಾವುದೋ ಆವೇಶದ ಭರದಲ್ಲಿ, ಬಾಯಿ ಬಿಟ್ಟು ಹೇಳಲು ಆಗದ ಸಹಾಯ ಬೇಡಿ ಬಂದವನನ್ನು ಠಕ್ಕನೆಂದು ತೋರಿಸಿಕೊಡಲು ಹೊರಟಿರುವಿರಲ್ಲ?..” ಕರುಣಾಕರನ್ನನ ಈ ಭಾವಸರಣಿ ಎಲ್ಲರಿಗೂ ಕೇಳಿಸುವಷ್ಟು ದೊಡ್ಡ ಮಾತಾದದ್ದು-“ನಾನು ಠಕ್ಕನಲ್ಲ,” ಎಂಬ ಶಬ್ದಗಳಲ್ಲಿ. ಆದರೆ ಅದು ಶಿರೀನಳ ಮೇಲೆ ಪರಿಣಾಮ ಮಾಡಿದಂತೆ ತೋರಲಿಲ್ಲ. “ಅದು ಈಗ ಗೊತ್ತಾಗುತ್ತದೆ,” ಎಂದಳು, ಚುಟುಕಾಗಿ. ಮುದುಕ, ಮುದುಕಿ ಇಬ್ಬರೂ ಒಂದೇ ಕಾಲಕ್ಕೆ-“ನೀನು ಬಹಳ ದುಡುಕುತ್ತಿದ್ದೀ, ಇದು ಒಳ್ಳೆಯದಕ್ಕಲ್ಲ, ಹುಡುಗೀ,” ಎನ್ನುತ್ತಿರುವದಕ್ಕೂ ಕರೆಗಂಟೆ ಕಿರುಚುವುದಕ್ಕೂ ಸರಿಹೋಯಿತು.
ಕದ ತೆರೆಯಲು ಸೀತೆ, ಪಾರ್ವತಿ ಇಬ್ಬರೂ ಮನೆಯಲ್ಲಿ ಇದ್ದರೂ, ಅವರು ಹೋಗಿ ಯಾರೆಂದು ನೋಡಿ ತಿಳಿಸಬೇಕು, ಆಮೇಲೆ ಮತ್ತೆ ಹೋಗಿ ಕದ ತೆರೆಯಬೇಕು-ಈ ಯಾವ ರೀತಿಯ ವಿಲಂಬಕ್ಕೂ ಕಾಯುವ ತಾಳ್ಮೆ ಈಗ ಇಲ್ಲದವಳ ಹಾಗೆ, ಶಿರೀನ್ ತಾನೇ ಕದ ತೆರೆಯಲು ಎದ್ದಳು. ಬಂದವರು ಯಾರೆಂಬುದರ ಬಗ್ಗೆ ಸಂಶಯ ಇಲ್ಲದವಳ ಹಾಗೆ-“ನಾನು ತೆಗೆಯುತ್ತೇನೆ,” ಎನ್ನುತ್ತ ಕದ ತೆರೆಯಲು ಮುಂದಾಗಬಹುದಾದ ಇನ್ನಿಬ್ಬರನ್ನು ತಡೆದಳು. ಹೊತ್ತು ಮುಳುಗಿ ಮನೆಯೊಳಗಿನ ಬೆಳಕು ಕಡಿಮೆಯಾಗಲು ತೊಡಗಿದ್ದರಿಂದ ಬಾಗಿಲ ಕಡೆಗೆ ಹೋಗುವಾಗ ಹಾಲಿನಲ್ಲಿ ಮೂರೂ ಕಡೆಗಳಲ್ಲಿಯ ದೀಪಗಳನ್ನು ಬೆಳಗಿಸಿದಳು.

ತನ್ನ ಕಡೆಗೇ ಕಕ್ಕಾವಿಕ್ಕಿಯಾಗಿ ನೋಡುತ್ತಿದ್ದ ಕರುಣಾಕರನ್‌ನ ಬಗೆಗೆ ಬೆಹರಾಮನಿಗೆ ಕೆಡುಕೆನಿಸಿತು. ಶಿರೀನಳ ಮನಸ್ಸಿನಲ್ಲಿದ್ದ ಸಂಶಯವನ್ನು ಅವನಿಗೆ ಸ್ಪಷ್ಟಪಡಿಸುವುದು ಬೆಹರಾಮನಿಗೆ ಶಕ್ಯವೇ ಇರಲಿಲ್ಲ. ಅವಳ ಪ್ರಕಾರ ಅವನು ಈ ಖೂನಿಗೆ ಸಂಬಂಧಿಸಿ ಅಲ್ಲವೇ ಅಲ್ಲವಾಗಿತ್ತು. ಯಾವುದೋ ಠಕ್ಕರ ಗುಂಪಿಗೆ ಸೇರಿದ ಇವನು ಇಲ್ಲಿಗೆ ಬಂದದ್ದು ತಮ್ಮ ಮನೆಯ ಬಗ್ಗೆ, ಮನೆಯವರ ಬಗ್ಗೆ ಮಾಹಿತಿ ಒಟ್ಟುಮಾಡಲು. ರದ್ದೀವಾಲಾನ ಖೂನಿಯ ಬಗೆಗಿನ ಮಾಹಿತಿ ಮನೆ ಹೊಗಲು ಯೋಜಿಸಿಕೊಂಡ ಸಭ್ಯ ಸಬೂಬು. ಅಪ್ಪನಂಥವರು ಮೋಸಹೋಗಬಹುದೇ ಹೊರತು ತಾನಲ್ಲ! ಅಷ್ಟೇಕೆ, ವಯೋವೃದ್ಧರಾದ ಅಪ್ಪ ಅಮ್ಮ ಇಬ್ಬರೇ ಮನೆಯಲ್ಲಿರುತ್ತಾರೆ ಎಂದು ಇವನು ಮಾಡಿಕೊಂಡ ಎಣಿಕೆ ತನ್ನ ಅನಿರೀಕ್ಷಿತ ಉಪಸ್ಥಿತಿಯಿಂದ ಹಾಳಾಗಿರಬೇಕು! ಇತ್ತಲಾಗಿ ಮುಂಬಯಿಯಲ್ಲಿ ನಡೆಯುತ್ತಿರುವ ದರೋಡೆಗಳ ಹಿಂದೆ ಎಂಥೆಂಥ ಸುಶಿಕ್ಷಿತ ಮೆದುಳುಗಳು ಕೆಲಸ ಮಾಡುತ್ತಿವೆ ಎಂಬುದನ್ನು ಓದಿದವಳು ಬಲ್ಲಳು. ದಿನಪತ್ರಿಕೆಗಳಲ್ಲಿ ಬಂದ ಇಂಥ ಸುದ್ದಿಗಳನ್ನು ಬೆಹರಾಮ್ ಓದಿಲ್ಲವೆಂದಲ್ಲ. ಟೀವೀ ಮೇಲೆ ಕೂಡ ಇಂಥವರಿಂದ ರಕ್ಷಿಸಿಕೊಳ್ಳಲು ನೆರವು ನೀಡುವಂಥ ‘ಜಾಗರೂಕರಾಗಿರಿ’ ಎಂಬ ಹೆಸರಿನ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿದ್ದರಂತೆ. ಜನರೇನೋ ತಮ್ಮತಮ್ಮನ್ನು ರಕ್ಷಿಸಿಕೊಳ್ಳುವ ಮಾರ್ಗ ಕಲಿಯಬಹುದು. ಆದರೆ ಅದೇ ಹೊತ್ತಿಗೆ ಪರಸ್ಪರರ ಬಗೆಗೆ ಇರಬೇಕಾದ ಸಹಜ ವಿಶ್ವಾಸವನ್ನೇ ನಾಶಮಾಡುತ್ತಿದ್ದೇವೆ ಅನ್ನಿಸಿತು, ಬೆಹರಾಮನಿಗೆ. ಕರುಣಾಕರನ್ ಕಡೆಗೆ ನೋಡಿದಷ್ಟೂ ಅವನ ಮುಗ್ಧ ಮೋರೆಯ ಹಿಂದೆ ಠಕ್ಕುತನ ಅಡಗಿರುವುದು ಶಕ್ಯವೇ ಇಲ್ಲ ಎಂದೂ ತೋರಿತು. ಧೈರ್ಯ ಸಾಲದೋ ನಂಬಿಕೆ ಸಾಲದೋ, ಹುಡುಗ ತಾನು ಬಂದಂಥ ಕಾರ್ಯವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಶಿರೀನ್ ದುಡುಕಿನ ಮಾತುಗಳನ್ನು ಆಡಿರದಿದ್ದರೆ ಎಲ್ಲವನ್ನೂ ಇಷ್ಟರಲ್ಲಿ ತಿಳಿಸುತ್ತಿದ್ದನೋ ಏನೋ. ಏನೂ ಹೆದರಬೇಡಿ, ನಾನಿದ್ದೇನೆ. ಇಷ್ಟೇ, ತನಿಖೆಯ ಧಾಟಿಯನ್ನು ಬಿಟ್ಟುಕೊಟ್ಟು ನಿಮಗೆ ಈ ಖೂನಿಯಲ್ಲಿದ್ದ ಆಸ್ಥೆಯ ನಿಜವಾದ ಕಾರಣವನ್ನು ತಿಳಿಸಿಬಿಡಿ. ಆಗ ನಿಮ್ಮ ಅಣ್ಣನ ಮಾತೆತ್ತಿದಿರಲ್ಲ-ಯಾವ ಹೆದರಿಕೆಯಿಲ್ಲದೆ ಹೇಳಿಬಿಡಿ. ನಮ್ಮಿಂದ ಯಾರಿಂದಲೂ ಏನೂ ತಿಳಿಯದೇ ಹೋಗಬಹುದು. ನಿಮ್ಮ ಮೇಲಿನ ಶಿರೀನಳ ಇಲ್ಲದ ಸಂಶಯವಾದರೂ ದೂರವಾದೀತು,’ ಎಂದೆನ್ನಬೇಕೆಂದರೆ ನೋಟದಲ್ಲಿಯ ಏನೋ ಅಡ್ಡಬರುವಂತೆ ಕಂಡಿತು. ಅವಳೂ ಅಲ್ಲಿಂದ ಹೊರಟುಹೋದಕೂಡಲೇ, ” ಹೆದರಬೇಡಿ ಕರುಣಾಕರನ್, ಈಗ ಬರುವವರ ಇದಿರಾದರೂ ನಿಮ್ಮ ತನಿಖೆಯ ಉದ್ದೇಶವನ್ನು ಯಾವ ಮುಚ್ಚುಮರೆ ಇಲ್ಲದೆ ಸ್ಪಷ್ಟಪಡಿಸಿಬಿಡಿ.” ಎಂದ.

ಅಷ್ಟುಹೊತ್ತಿಗೆ, ಶಿರೀನ್ ತನ್ನ ದುಡುಕಿನ ಸ್ವಭಾವದಿಂದಾಗಿ ಇಲ್ಲಿಗೆ ಬರುವಂತೆ ಮಾಡಿದ ಗೃಹಸ್ಥರು ಒಬ್ಬರ ಹಿಂದೊಬ್ಬರು ಸಾಲುಗಟ್ಟಿ ಇವರು ಕೂತಲ್ಲಿಗೆ ಬರತೊಡಗಿದರು. ನೆಲಕ್ಕೆ ಹಾಸಿದ ಮೊಸಾಯಿಕ್ ಟೈಲ್ಸ್ಗಳ ಮೇಲೆ ಬೂಟುಗಳ ಸದ್ದು ನಿರೀಕ್ಷೆ ಮೀರಿ ದೊಡ್ಡದಾಗಿತ್ತು. ಕರುಣಾಕರನ್ ಕಣ್ಣುಗಳನ್ನು ದೊಡ್ಡವು ಮಾಡಿ ಬಂದವರನ್ನು ನೋಡಹತ್ತಿದ: ಬಂದವರು ಮೂವರಾಗಿರಲಿಲ್ಲ, ನಾಲ್ವರಾಗಿದ್ದರು. ಐದು ಜನ ಕೂಡಬಹುದಾಗಿದ್ದ ಸೋಫಾಗಳಲ್ಲಿ ಎಲ್ಲರಿಗೂ ಜಾಗ ಸಾಲುವಂತಿರಲಿಲ್ಲ. ಬೆಹರಾಮ್ ತಾನು ಕೂತಿದ್ದ ಉದ್ದನೆಯ ಸೋಫಾದಲ್ಲಿ ಬಂದವರಲ್ಲಿಯ ಮೂವರನ್ನು ಕರುಣಾಕರನ್ ಕೂತ ಸೋಫಾದ ಮಗ್ಗುಲಲ್ಲಿಯ ಸೋಫಾದಲ್ಲಿ ನಾಲ್ಕನೆಯವನನ್ನು ಕೂಡಲು ಹೇಳಿ ಪಾರ್ವತಿಗೆ ಇನ್ನೆರಡು ಕುರ್ಚಿಗಳನ್ನು ತರಹೇಳಲು ಅಡುಗೆಯ ಮನೆಯ ಕಡೆಗೆ ನಡೆದ. ಅಲ್ಲಿ ಭೇಟಿಯಾದ ಶಿರೀನಳಿಗೆ ಕೇಳಿದ: ” ಇಷ್ಟೇನೊ? ಇಡೀ ಕೇರಿಯ ಜನವನ್ನೇ ಕರೆದಿದ್ದೀಯೊ? ಅದೂ ವ್ಯವಹಾರಜ್ಞಾನವಿಲ್ಲದ ಒಬ್ಬ ಯುವಕನ ಠಕ್ಕುತನವನ್ನು ಹೊರಗೆಡಹಲು?” ಬೆಹರಾಮ್ ತನಗಾದ ತೀವ್ರ ಅಸಮಾಧಾನವನ್ನು ಅಡಗಿಸುವ ಪ್ರಯತ್ನ ಮಾಡಲಿಲ್ಲ. “ಪಾರ್ವತಿಗೆ ಅಲ್ಲಿ ಎರಡು ಕುರ್ಚಿ ಹಾಕಲು ಹೇಳು,” ಎಂದು ಹೇಳಿ ಸೀದ ತನ್ನ ಮಲಗುವ ಕೋಣೆಗೆ ನಡೆದ.

ಶಿರೀನ್ ಕೂಡ ಸನ್ನಿವೇಶ ತಾನು ಬಯಸಿದ್ದಕ್ಕಿಂತ ಭಿನ್ನವಾಗಿಯೆ ಬೆಳೆಯುತ್ತಿದೆಯೇನೋ ಅನ್ನಿಸಿ ಗಾಬರಿಗೊಂಡಳು. ತಾವು ಕರುಣಾಕರನ್‌ನ ಬಗ್ಗೆ ಬೆಳಿಗ್ಗೆ ಆಡಿಕೊಂಡದ್ದನ್ನು ಪಾರ್ವತಿಯಿಂದ ತಿಳಿದು ಫೋನ್ ಮಾಡಿ ಬಂದ ವ್ಯಕ್ತಿ ತಾನು ಊಹಿಸಿಕೊಂಡವನಿಗಿಂತ ಬೇರೆಯಾಗಿದ್ದ. ಅವನು ಜೊತೆಗೆ ತರುತ್ತೇನೆಂದು ಹೇಳಿದ ಇನ್ನಿಬ್ಬರು ಕೇವಲ ಇಬ್ಬರಾಗಿರಲಿಲ್ಲ, ಮೂವರಾಗಿದ್ದರು. ಇವರಲ್ಲಿಯ ಒಬ್ಬರೂ ಪರಿಚಯದವರಾಗಿರಲಿಲ್ಲ. ಗಂಟೆ ಬಾರಿಸಿ ಬಾಗಿಲಲ್ಲಿ ನಿಂತ ರೀತಿ, ಕದ ತೆರೆದದ್ದೇ ತನ್ನತ್ತ ನೋಡಿದ ರೀತಿ, ಹಾಲಿನಲ್ಲಿ ನಡೆಯುವಾಗ ಬೂಟುಗಳು ಸದ್ದುಮಾಡಿದ ರೀತಿ ಇದ್ದಕ್ಕಿದ್ದಂತೆ ಇವರು ಒಳ್ಳೆಯ ಜನವಲ್ಲ ಎಂಬ ಗುಮಾನಿಗೆ ಎಡೆಮಾಡಿಕೊಡತೊಡಗಿದುವು. ಮುದುಕನಿತ್ತ ಆದೇಶದ ಪ್ರಕಾರ ಕುರ್ಚಿಗಳನ್ನಿಟ್ಟುಬಂದ ಪಾರ್ವತಿಯಿಂದ, ಇವರಲ್ಲಿಯ ಒಬ್ಬರೂ ಅವಳ ಪರಿಚಯದವರೇ ಅಲ್ಲವೆಂದು ತಿಳಿದಮೇಲಂತೂ ತನ್ನ ಗುಮಾನಿ ನಿರಾಧಾರವಲ್ಲವೆಂಬ ಅರಿವಿನಿಂದ ಇನ್ನಷ್ಟು ಕಂಗಾಲಾಗಿಬಿಟ್ಟಳು. ಹಾಗಾದರೆ ಈಗ ಬಂದವರು ನಿಜಕ್ಕೂ ಯಾರು? ಎಂಬ ಪ್ರಶ್ನೆ ಹುಟ್ಟಿ ಬಂದಷ್ಟೇ ತ್ವರೆಯಲ್ಲಿ ಉತ್ತರವೂ ಹೊಳೆದಂತಾಯಿತು: ತಮ್ಮ ಮನೆಗೆ ಬಂದಹಾಗೆಯೇ ಈ ಹುಡುಗ ಭೇಟಿಯಿತ್ತಿರಬಹುದಾದ ಮನೆಗಳ ಈ ಗೃಹಸ್ಥರು ಈ ಕೇರಿಯವರಾಗಿಯೂ ತಾನು ಈವರೆಗೂ ಕಂಡಿರದವರಿರಬಹುದು. ಇಲ್ಲಿಯ ಮನೆಗಳ ಒಡೆತನ ಕೂಡ ಮೇಲಿಂದ ಮೇಲೆ ಬದಲಿಸುತ್ತಿರುವಂಥದ್ದು. ಬಹುಶಃ ಅಪ್ಪನ ಪರಿಚಯದವರಿರಬೇಕೆಂದು ಸಮಾಧಾನ ತಂದುಕೊಳ್ಳುವಷ್ಟರಲ್ಲಿ ಇವರಲ್ಲಿಯ ಯಾರೂ ಗೃಹಸ್ಥರಾಗಿ ಕಂಡಿರದ್ದೂ ನೆನಪಿಗೆ ಬಂದು ಕರುಣಾಕರನ್ ಸೇರಿರಬಹುದಾದ ಗ್ಯಾಂಗಿನ ಜನವಿರಬಹುದೇ ಎಂದು ಹುಟ್ಟಿದ ಸಂಶಯ ತೀರ ಸಿನೇಮಾ ತರಹದ್ದಾಗಿ ತೋರಿತು. ಬಂದವರು ಉಟ್ಟ ಧೋತಿ, ಜುಬ್ಬಾ ತರಹದ ಉದ್ದ ಅಂಗಿಗಳು, ಒಂದಿಬ್ಬರು ಹಾಕಿಕೊಂಡಿರುವಂತೆ ಹೊಳೆದ ಟೋಪಿಗಳು, ಇದೆಯೆಂದು ತೋರಿದ ಮೀಸೆ-ಅಪ್ಪ ಕರುಣಾಕರನ್ನನನ್ನು ಸಹಜಸ್ಪೂರ್ತಿಯಿಂದ ಹಂಚಿಕೊಂಡ ಬಗೆಯನ್ನು ಹಠಾತ್ತನೆ ನೆನಪಿಗೆ ತಂದವು. ಒಳಗೆಲ್ಲೋ ಏನೋ ಸಟಕ್ಕನೆ ಸಡಿಲಿಸಿಕೊಂಡಂತಹ ಅನುಭವವಾದಾಗ, ಅಸ್ಪಷ್ಟವಾಗಿಯಾದರೂ ಆಗಲೊಲ್ಲದೇಕೆ, ಅರೆಕ್ಷಣದ ಮಟ್ಟಿಗೇ ಆಗಲೊಲ್ಲದೇಕೆ, ತನ್ನಲ್ಲಿ ಮೊಳೆತ ನಿರ್ಧಾರದಿಂದ ತಾನೇ ಪುಳಕಿತಗೊಂಡಳು: ‘ ಏನೇ ಆಗಲಿ, ಕರುಣಾಕರನ್‌ಗೆ ಇವರಿಂದ ಎಳ್ಳಷ್ಟೂ ಹಾನಿಯಾಗದಹಾಗೆ ನೋಡಿಕೊಳ್ಳುತ್ತೇನೆ..’
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.