ಕರಿಮಾಯಿ – ೫

ಅವರ ತೋಟ ದೂರವೇನೂ ಇರಲಿಲ್ಲ. ಅವಳ ಬಗ್ಗೆ ಯಾರಿಗೂ ಸಂದೇಹ ಬರಬೇಕಾದ್ದಿರಲಿಲ್ಲ. ಭಯ, ಸಂಭ್ರಮ, ಕಲ್ಪನೆ ಬೆರೆತ ಮನಸ್ಸಿನಿಂದ ತೇಕುಸಿರು ಬಿಡುತ್ತ ತೋಟದ ಬಾವಿಯ ಬಳಿ ಬಂದಳು. ಯಾರೂ ಇರಲಿಲ್ಲ. ಪಕ್ಕದ ಹೊಲದಲ್ಲಿಯ ಜೋಳ ಅಲುಗಾಡಿತು. ನೋಡಿದರೆ ಆಳದಲ್ಲಿ ಬಸವರಾಜು ಮುಗುಳುನಗುತ್ತ ನಿಂತಿದ್ದವನು ಕೈಮಾಡಿ ಕರೆಯುತ್ತಿದ್ದ. ಸ್ವಲ್ಪ ಅಧೈರ್ಯವಾಯಿತು. ಓಡಿಬಿಡಲೇ ಎಂದುಕೊಂಡಳು. ಬಸವರಾಜು ಒಂದು ಚೆಂಡು ಹೂ ತಗೊಂಡು ಜೋರಿನಿಂದ ಇವಳ ಕಡೆ ಎಸೆದ. ಹೂಬಾಣ ಹುಡುಗಿಯ ಎದೆಗೇ ನಟ್ಟು ಒಂದು ಹೆಜ್ಜೆಯಿಟ್ಟು ಮತ್ತೆ ನಿಂತಳು. ಮತ್ತೊಂದು ಹೂ ಎಸೆದ. ಸೊಂಟಕ್ಕೆ ತಾಗಿ ತೊಡೆ ನಡುಗಿ ಒಂದೊಂದೇ ಹೆಜ್ಜೆಯಿಟ್ಟು ಅವನ ಬಳಿ ಹೋದಳು. ಹುಲಿ ಹಾರಿ ಜಿಂಕೆಮರಿಯನ್ನು ಮುರಿಯಿತು. ಗುದಮುರಿಗೆಗೆ ಎಳೆ ಜೋಳದ ಬೆಳೆ ಥರಥರ ನಡುಗಿತು.

ಎತ್ತಣಿಂದೆತ್ತವಯ್ಯ

ಆ ಊರಿನ ಜನಗಳ ತಲೆಯಲ್ಲೀಗ ಬೆಳೆ, ಭೂಮಿಗಳನ್ನು ಬಿಟ್ಟು ಬೇರೆ ವಿಚಾರ ಸುಳಿಯುವುದೇ ಸಾಧ್ಯವಿಲ್ಲ. ಪ್ರಕೃತಿಯೇನೋ ಸಮೃದ್ಧವಾಗಿ ಕೊಟ್ಟುಬಿಟ್ಟಿತ್ತು. ಮಳೆಯನ್ನು, ಬೆಳೆಯನ್ನು, ಕಳೆಯನ್ನು ಕೂಡ. ಬೆಳೆಕಳೆ ಬೇರ್ಪಡಿಸಬೇಕು. ಸಮೃದ್ಧಿಯನ್ನು ಹತೋಟಿಯಲ್ಲಿಟ್ಟುಕೊಂಡು ಗಟ್ಟಿಮುಟ್ಟಾದದ್ದಕ್ಕೆ, ಬೆಳೆಯುವ ಅವಕಾಶ ಕಲ್ಪಿಸಬೇಕು. ಮೈಕೈ ಮುರಿದು ಈಗ ದುಡಿದರೇ ಉಂಟು, ಇಲ್ಲದಿದ್ದರಿಲ್ಲ. ದಿನ ಹೆಚ್ಚುಕಮ್ಮಿಯಾದರೆ ಬೆಳೆ ಕೈಬಿಟ್ಟಂತೆ ಲೆಕ್ಕ. ಸಣ್ಣ ದೊಡ್ಡವರೆನ್ನದೇ, ಹೆಂಗಸು ಗಂಡಸೆನ್ನದೇ ಎಲ್ಲರೂ ಹೊಲಗಳಿಗೆ ಹೋಗುತ್ತಿದ್ದರು. ಬೆಳಗಿಂದ ರಾತ್ರಿಯ ತನಕ ಮೈಬಗ್ಗಿಸಿ ರಟ್ಟೆಮುರಿದು ದುಡಿಯುತ್ತಿದ್ದರು. ಇನ್ನು ಹರಟೆ ಹೊಡೆಯುವುದೆಲ್ಲಿಂದ ಬಂತು? ಸರಿಯಾಗಿ ಮೈತುರಿಸಿಕೊಂಡೇನೆಂದರೂ ಸಮಯವಿರಲಿಲ್ಲ ಯಾರಿಗೂ. ಹಾಗೆ ದುಡಿದು ಕತ್ತಲೆ ಮಾಡಿ ಮನೆಗೆ ಬಂದರೆ ಹಸಿದ ಹೊಟ್ಟೆಗಿಷ್ಟು ತಂದಳೋ, ಬಿಸಿಯೋ ಕೂಳು ಬಿದ್ದರಾಯ್ತು. ಆ ಮೇಲೆ ನೆಲ ಸಿಕ್ಕಿತೋ, ಇಲ್ಲವೋ ಅಂತ ಸಿಕ್ಕಸಿಕ್ಕಲ್ಲಿ ಸಿಕ್ಕ ಹಾಗೆ ಬಿದ್ದು ಗೊರಕಿ ಹೊಡೆಯುತ್ತಿದ್ದರು. ಈಗ ದುಡಿಯದವರೆಂದರೆ ಗುಡಸೀಕರ, ಬಸವರಾಜು ಮತ್ತು ಚಿಮಣಾ-ಮೂವರೇ.
ಗುಡಸೀಕರನ ಹೊಲದ ಕೆಲಸ ಆಳುಗಳು ಮಾಡುತ್ತಿದ್ದರು. ಬಸವರಾಜನಿಗಂತೂ ಸಿಗರೇಟು ಸೇದುವುದು, ರೇಡವೇ ಕೇಳುವುದು, ಗುಡಸೀಕರನ ತೋಟದ ಕಡೆ ಅಡ್ಡಾಡಿ ಬರುವುದು ಇಷ್ಟು ಬಿಟ್ಟರೆ ಬೇರೆ ಕೆಲಸವಿರಲಿಲ್ಲ. ಅವನ ಬೆಳಗಾವಿಯ ಪ್ರತಾಪ ಕೇಳುವುದಕ್ಕೆ ಈಗ ಒಬ್ಬನೂ ಸಿಕ್ಕುತ್ತಿರಲಿಲ್ಲ. ಜನ ಎಲ್ಲ ಮಲಗಿ ನಿದ್ರಿಸುತ್ತಿದ್ದರೆ ಈ ಮೂವರೇ ಭೂತಗಳ ಹಾಗೆ ಎಚ್ಚೆತ್ತಿದ್ದು, ಏನೇನೋ ಹಲುಬುತ್ತಿದ್ದರು. ಚಿಮಣಾಳ ಪೂರ್ವವೃತ್ತಾಂತವೂ ಅಸ್ಪಷ್ಟವಾಗೇ ಇದೆ. ಬಸವರಾಜು ಮತ್ತು ಚಿಮಣಾ ಇಬ್ಬರೇ ಮಾತಾಡಿದಾಗಿನ ಕೆಲವು ಸಂಭಾಷಣೆಗಳಿಂದ ಅವಳ ಜೀವನ ಹೀಗಿತ್ತೆಂದು ತಿಳಿಯುತ್ತದೆ: ಅವಳ ಹೆಸರು ಸುಂದರಿಯೆಂದು. ಅಲತಗಿ ಸೀತವ್ವನ ಬಳಿ ಚಿಮಣಾ ವೃತ್ತಿ ಕಲಿತಳಂತೆ. ಆದರೆ ಸುತ್ತಲಿನ ಯಾವುದೇ ಹಳ್ಳಿಗೆ ಬಯಲಾಟಕ್ಕೆ ಬಂದವಳಲ್ಲ. ಹೆಸರು ಮಾಡಿಕೊಂಡವಳಲ್ಲ. ಸುಂದರವಾದ ಮೈಯೊಂದೇ ಸದ್ಯಕ್ಕೆ ಅವಳಿಗಿದ್ದ ಚಿಮಣಾ ಲಕ್ಷಣ. ವಯಸ್ಸಿಗೆ ಮದ ನೆತ್ತಿಗೇರಿದ ದುರ್ಬಲ ಕ್ಷಣದಲ್ಲಿ ಬಸವರಾಜೂನೂ ವಶವಾಗಿರಬೇಕು. ಸೀತವ್ವನ ಮನೆ ಬಿಟ್ಟು ಒಂದೆರಡು ನಾಟಕ ಕಂಪನಿ ಸೇರಿದ್ದಳಂತೆ. ಸಿನಿಮಾ ನೋಡಿದ್ದಳಂತೆ, ಗಳಿಸಿದ್ದಳಂತೆ. ಗಳಿಸಿದ್ದನ್ನು ಉಂಡುಟ್ಟು ಖರ್ಚುಮಾಡಿದ್ದಳಂತೆ. ಅಂಥಾ ಚಿಕ್ಕವಯಸ್ಸಿನಲ್ಲೇ ಅವಳು ಉಂಗುಟಕ್ಕೆ ಹಾಕಿ ಹರಿದ ಹೆಚ್ಚಿನ ಸೀರೆಗಳ ಸಂಖ್ಯೆಯೇ ಒಂದು ಡಜನಾಗಿತ್ತಂತೆ!

ಬೆಳಗಾವಿಯಲ್ಲಿದ್ದಂಥ ಹಲ್‌ಚಲ್ ಭಾವನೆಗಳಿಗೆ ಇಲ್ಲಿ ಅವಕಾಶವಿರಲಿಲ್ಲ. ಉಟ್ಟು ತಿರುಗಲಿಕ್ಕಿಲ್ಲ, ನಗಾಡಿ ಮೆರೆದಾಡುವಂತಿಲ್ಲ. ಹಾಕಿಕೊಟ್ಟ ಚಹದಂಗಡಿ ಸರಿಯಾಗಿ ನಡೆಯಲಿಲ್ಲ. ಒಂದೆರಡು ಸಲ ಬಸವರಾಜನಿಗೆ ತನ್ನ ಅಸಮಧಾನ ತಿಳಿಸಿದಳು. ಅವನು ತಾಳು ವ್ಯವಹಾರ ಮುಗಿಯಲಿ ಎಂದು ಹೇಳುತ್ತಲೇ ಇದ್ದ. ಆ ವ್ಯವಹಾರ ಅದೇನಿತ್ತೋ, ಬಹುಶಃ ತಾನು ಇಷ್ಟು ದಿನ ಇಲ್ಲಿ ಇದ್ದದ್ದಕ್ಕೆ ಗುಡಸೀಕರನಿಂದ ಪ್ರತಿಫಲ ವಸೂಲಿ ಮಾಡುವುದೇ ಇದ್ದೀತೆಂದು ಭಾವಿಸಿದ್ದಳು.
ಇನ್ನೂ ಜಾಸ್ತಿ ಬೇಸರವಾದದ್ದು ಸದಾ ತನ್ನನ್ನು ಗುಡಿಸಲಿನಲ್ಲಿ ಕೊಳೆ ಹಾಕಿದ್ದಕ್ಕೆ. ಕಣ್ಣಿ ಬಿಚ್ಚಿದ ಮಣಕಿನಂತೆ ಅಡ್ಡಾಡಿದವಳು. ಠಸಿ ಉಂಡು ತಿರುಗಿದವಳು. ಇಲ್ಲಿ ಸದಾ ಒಲೆಯ ಮುಂದೆ ಕಟ್ಟಿದ ಮಣಕಿನಂತೆ ಬಿದ್ದಿರುವುದು ಅವಳ ಸ್ವಭಾವಕ್ಕೆ ಒಗ್ಗಲಿಲ್ಲ. ತಾನೇನು ಗುಡಸೀಕರನ ಕೈಹಿಡಿದ ಹೆಂಡತಿಯೆ? ಇವನು ಹಾಕಿದ ಕೂಳಿಗೆ ಹೇಳಿದಂತೆ ಕೇಳಿಕೊಂಡು ಒಲ್ಲದ ಮನಸ್ಸಿನಿಂದ ಯಾಕಿರಬೇಕು? ಗುಡಸೀಕರ ಬಾಯಿತುಂಬ ಬಡಿವಾರ ಆಡುತ್ತಿದ್ದ. ತಾಕತ್ತಿಲ್ಲದೆ ಮೈಪರಚಿಕೊಳ್ಳುತ್ತಿದ್ದ. ಹೆಂಗಸರ ಹಾಗೆ ಚಾಡಿ ನುಡಿಯುತ್ತಿದ್ದ, ಹೊಂಚುತ್ತಿದ್ದ. ಇಷ್ಟು ದುಡ್ಡು, ಇಷ್ಟು ವಯಸ್ಸು, ಇಷ್ಟು ಅಂತಸ್ತು ಇದ್ದವನು ಹ್ಯಾಗಿರಬೇಕು. ಔದಾರ್ಯವಿದೆ, ವ್ಯರ್ಥ ಸೋರುತ್ತದೆ. ಮಾನ, ಮರ್ಯಾದೆ ದುಡ್ಡಿನಿಂದ ಸಿಗುವುದೆಂದು ಭ್ರಮಿಸಿದವ. ಅಥವಾ ಅದೂ ನಿಜವಿದ್ದೀತು, ಕೆಲವರಿಗೆ ತನಗಲ್ಲ. ದಿಲ್‌ದಾರ್‍ತನಕ್ಕೆ ದುಡ್ಡು ಬೇಕು. ಹಾಗಂತ ದುಡ್ಡು ಸುರಿದು ದಿಲ್‌ದಾರನೆಂದೆನಿಸಿಕೊಳ್ಳುವುದೂ ಕ್ಷುದ್ರತನ. ಅದು ನಡವಳಿಕೆಯ ಮೇಲೆ ಒತ್ತಡ ಹೇರುವ ನೆತ್ತರಲ್ಲೇ ಇದ್ದಿರಬೇಕು. ಅಥವಾ ಸುತ್ತು ಬಳಸಿ ಯಾಕೆ? ಗುಡಸೀಕರ ತಾನು ಹತ್ತಬಯಸುವ ಕುದುರೆಯಲ್ಲ. ಬಸವರಾಜನೇನೋ ಗಂಡಸು ಖರೆ. ಆದರೆ ಅವನು ಅದಕ್ಕೂ ಬೆಲೆ ಕೇಳುತ್ತಿದ್ದ.

ಆದರೆ ಜಾತ್ಯಾ ಕಸಬೇರಿಗೂ, ಇವಳಿಗೂ ವ್ಯತ್ಯಾಸವಿತ್ತು. ದುಡ್ಡಿಗಾಗಿ ಇವಳನ್ನೊಮ್ಮೆಯೂ ಕಾಳಜಿ ಮಾಡಲಿಲ್ಲ. ಬರುತ್ತದೆ, ಹೋಗುತ್ತದೆ. ಅಥವಾ ಅದು ಬರೋದೇ ಹೋಗೋದಕ್ಕೆ. ಬಂದ ಗಿರಾಕಿ ಕೊಟ್ಟರೆ ಕೈ ಒಡ್ಡಿದಳು. ಕೊಡದಿದ್ದರೆ ಸುಮ್ಮನಾಗುತ್ತಿದ್ದಳು. ಕೊಟ್ಟಾಗ ಖುಶಿ ಪಡಲಿಲ್ಲ. ಕೊಡದಿದ್ದಾಗ ಕೊರಗಲಿಲ್ಲ. ಅವಳ ಈ ಸ್ವಭಾವ ಬಸವರಾಜುನಿಗೆ ಬಹಳ ಅನುಕೂಲವಾಗಿತ್ತು. ಗಿರಾಕಿಗಳ ಕೊಡುಕೊಳ್ಳುವ ವ್ಯವಹಾರ ತಾನು ನೋಡಿಕೊಂಡು ಹಸಿದ ಮೈಯನ್ನಷ್ಟೇ ಇವಳ ಬಳಿಗೆ ಕಳಿಸುತ್ತಿದ್ದ. ಅವನಿಗೆ ಬಂದ ಗಿರಾಕಿಯ ಜೇಬು ಕಾಣಿಸುತ್ತಿತ್ತು. ಇವಳಿಗೆ ಮೈ ಕಾಣುತ್ತಿತ್ತು. ಇವಳ ತೊಡೆಗೆ ಈಡಾಗುವ ಸೊಂಟ ಈ ಭೂಮಿಯ ಮೇಲೆ ಹುಟ್ಟಿಲ್ಲವೆಂದೇ ಅವನ ತೀರ್ಮಾನ. ಅದನ್ನೇ ಮುಂದೆ ಮಾಡಿ ಶೋಷಿಸುತ್ತಿದ್ದ. ಅವಳೋ ಅತೃಪ್ತ ಜೀವ. ತನಗೇನು ಬೇಕೆಂಬುದೇ ಗೊತ್ತಿಲ್ಲದೆ ಹುಡುಕುತ್ತಿದ್ದಳು.

ಈಗೀಗ ಗುಡಸೀಕರನ ಮೈ ಆಕರ್ಷಣೆ ನಂದಿತ್ತು. “ಸರಪಂಚರು” ಎಂದು ಬಹುವಚನದಲ್ಲಿ ಮಾತಾಡಿಸುತ್ತಿದ್ದವಳು ಈಗ ನೇರವಾಗಿ ಗುಡಸೀಕರನೆಂದು ಏಕವಚನದಲ್ಲೇ ಮಾತಾಡಿಸುತ್ತಿದ್ದಳು. ಅದು ಅವನ ಅಹಂಕಾರಕ್ಕೆ ಭಾರೀ ಪೆಟ್ಟಾಗಿತ್ತು. ಇದು ಕೂಡದೆಂದು ತಾನೇ ಅವಳಿಗೆ ಹೇಳಬೇಕೆಂದರೆ ಅದು ಹಗುರ ಬಾಯಿಯ ಹೆಂಗಸು. ನಾಲಗೆ ಬಿಗಿ ಹಿಡಿದು ಗೊತ್ತಿಲ್ಲ. ಸಟ್ಟನೇ ಏನಾದರೂ ಆಡಿಬಿಡುತ್ತಿತ್ತು. ಅದಕ್ಕೇ ಅವನು ಬಸವರಾಜುನಿಗೆ ಹೇಳಿದ. ಇದು ಗೊತ್ತಾಗಿ ಅದು ಇನ್ನೂ ಹೆಚ್ಚು ಅವನನ್ನು ನೋಯಿಸುತ್ತಿದ್ದಳು. ಒಮ್ಮೆ ಗುಡಸೀಕರ ಚತುಷ್ಟಯರೊಂದಿಗೆ ಕೂತಿದ್ದಾಗ ಕಳ್ಳ ಇವಳನ್ನು ಕದ್ದು ನೋಡುತ್ತಿದ್ದ. ಇವಳೂ ಪ್ರೋತ್ಸಾಹಿಸಿದಳು. ಕೊನೆಗೆ ಎಲ್ಲರ ಎದುರಿನಲ್ಲೇ “ಯಾಕೋ ಕಳ್ಳ ಹಂಗ ನೋಡತಿ ಬೇಕೇನ ಬಾ” ಎಂದಳು. ಗುಡಸೀಕರನ ಪಿತ್ಥ ನೆತ್ತಿಗೇರಿತು.

“ಯಾಕಽ ರಂಡೇ ಇದೇನ ಸೂಳೇರ ಮನಿ ಅಂತ ತಿಳದೇನ? ಹೇಳಿಧಾಂಗ ಕೇಳಿಕೊಂಡ ಸುಮ್ಮನೇ ಬಿದ್ದಕೊ”
ಎಂದ. ಇವಳೇನು ಕಮ್ಮಿ?
“ಯಾಕಲಾ ಭಾಡಕೌ? ನನ್ನ ಕೈಹಿಡಿದ ಮದಿವ್ಯಾದಿ? ರೊಕ್ಕಾ ಎಣಿಸಿಕೊಂಡ ತಂದಿ? ಇದ ಅನ್ನಾಣ ಅಂದಿ; ಇನ್ನೊಮ್ಮಿ ಹಿಂತಾ ಮಾತ ಅಂದರ ನಿನ್ನ ಕುರಿ ಮುರಿಧಾಂಗ ಮುರದೇನು?”
ಕೇಳಬೇಕೆ? ಏನು ಮಾಡುತ್ತಿದ್ದೇನೆಂದು ತಿಳಿಯದೆ ಗುಡಸೀಕರ ಕಾಲ್ಮರಿ ಹಿಡಿದು ಎದ್ದುನಿಂತ. ಇವಳು ‘ಹೊಡಿ’ ಎಂದು ಎದ್ದಳು. ಬಸವರಾಜು ಬರದಿದ್ದರೆ ಎಲ್ಲಿ ಮುಗಿಯುತ್ತಿತ್ತೋ! ಸಧ್ಯ ಹೇಳಿಕಳಿಸಿದಂತೆ ಬಂದು ಇಬ್ಬರನ್ನೂ ಸಮಾಧಾನ ಮಾಡಿದ.
ಆ ದಿನವೇ ಬಸವರಾಜೂನನ್ನು ಮನೆಗೆ ಕರೆದೊಯ್ದು, ಇನ್ನೂರು ರೂಪಾಯಿ ಕೊಟ್ಟು ಈಗಿಂದೀಗ ಇವಳನ್ನು ಬೆಳಗಾವಿಗೆ ಕಳಿಸಿಕೊಡೆಂದು ಹಟ ಹಿಡಿದ. ಆ ಇನ್ನೂರು ಕಿಸೆಗೆ ಹಾಕಿ ಬಸವರಾಜೂ ಮೊದಲು ಅವನಲ್ಲಿ ಒಂದು ತಗ್ಗು ತೋಡಿದ. ಆ ಮೇಲೆ ಅದನ್ನು ಮೂರು ಮಾತುಗಳಿಂದ ಭರ್ತಿಮಾಡಿದ. ಹಾದಿಬೀದಿಯ ಸೂಳೆಯರಿಗೆ ಗೌಡ ಔದಾರ್ಯ ತೋರಿಸಬಲ್ಲವನಾದರೆ ಚಿಮಣಾಳಿಗೆ ನೀ ಯಾಕ ತೋರಿಸಬಾರದು? ಅದು ದೊಡ್ಡದಲ್ಲ, ಅಥವಾ ಅದು ನಿನಗೆ ತಿಳಿಯುತ್ತದೆ; ಏನೋ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಹೀಗೆ ಮಾಡಿದ್ದಾಳು. ಒಂದುವೇಳೆ ಅವಳನ್ನು ಬೆಳಗಾವಿಗೆ ಕಳಿಸಿದರೆ ‘ಇವನೇನು ಇವಳನಾಳುತ್ತಾನೆ?’ ಅಂತ ದತ್ತಪ್ಪ ಹೇಳಿದ್ದು ನಿಜವಾಗಿ ಬಿಡುತ್ತದೆ. ಅದೂ ಬೇಡವಾದರೆ ಎಲೆಕ್ಷನ್ ಗೆಲ್ಲಲು ನಮಗವಳು ಬೇಕೇ ಬೇಕು-ಇತ್ಯಾದಿ.
ಒಂದು ದಿನ, ಮಧ್ಯಾಹ್ನ ಆಗಷ್ಟೇ ತಿರುಗಿತ್ತು. ಚಿಮಣಾ ನೀರು ತರಲಿಕ್ಕೆ ಕೊಡ ತಗೊಂಡು ಕೆರೆಗೆ ಹೋದಳು. ಅಂಥ ಅಪವೇಳೆಯಲ್ಲಿ ಅಲ್ಲಿ ಯಾರಿದ್ದಾರು? ನೀರು ಹೊಡೆದು ಕೊಡವನ್ನೇನೋ ತುಂಬಿದಳು. ದೊಡ್ಡ ಕೊಡ, ಹೊರಲಾಗಲಿಲ್ಲ. ಹೀಗೆ ಯಾರಿಲ್ಲದಾಗ ಒಬ್ಬಳೇ ಬಂದಳಲ್ಲ. ಯಾರಾದರೂ ಬಂದಾರೆಂದು ಕಾಯ್ದಳು. ಯಾರೂ ಬರಲಿಲ್ಲ. ಕೈಕಾಲು ಮುಖ ತಿಕ್ಕಿ ತಿಕ್ಕಿ ತೊಳೆದುಕೊಂಡಳು. ಅದೇನು ದುರ್ಬುದ್ಧಿ ಬಂತೋ, ಇಲ್ಲೇ ದಂಡೆಯಲ್ಲಿ ಈಜೋಣವೆಂದು ಇಳಿದು ನಾಕೆಂಟು ಹೆಜ್ಜೆ ಹೋದಳು. ಕಾಲ ನೆಲ ತಪ್ಪಿ ಕುಸಿದಳು. ಗಾಬರಿಯಿಂದ ಕೈಕಾಲು ಬಡಿಯುತ್ತ ಅಯ್ಯೋ ಅಯ್ಯೋ ಎವ್ವಾ, ಎಪ್ಪ ಎನ್ನುತ್ತ ಚೀರಾಡುತ್ತಾ ಆಳದ ಕೆಳಗಿಳಿಯುತ್ತಿದ್ದಳು. ಗೌಡನ ಮಗ ಶಿವಲಿಂಗ ದೂರದಲ್ಲಿದ್ದವನು ಚೀರಾಟ ಕೇಳಿ ಓಡಿಬಂದು, ಬಂದವನೇ ಕೆರೆಗೆ ಧುಮುಕಿದ. ಚಿಮಣಾ ಇನ್ನೂ ನಡುನೀರಿಗೆ ಹೋಗಿರಲಿಲ್ಲವಾದ್ದರಿಂದ ಅವಳನ್ನು ಬದುಕಿಸುವುದು ತೊಂದರೆಯಾಗಲಿಲ್ಲ. ಶಿವಲಿಂಗ ಅವಳ ಸೋರುಮುಡಿ ಹಿಡಿದೆಳೆದ. ಅವಳೋ ಗಾಬರಿಯಾಗಿ ಶಿವಲಿಂಗನನ್ನು ತಬ್ಬಿ ನಡುವಿನಲ್ಲೇ ಎಳೆಯುತ್ತಿದ್ದಳು. ಇದ್ದೆಲ್ಲ ಬಲಪ್ರಯೋಗಿಸಿ ಅವಳ ಹಿಡಿತದಿಂದ ತಪ್ಪಿಸಿ ಎಳೆದ. ಹಾಗೇ ಹಿಡಿದುಕೊಂಡು ಈಜುತ್ತ ದಂಡೆಗೆ ತಂದು ಡಬ್ಬು ಮಲಗಿಸಿ ಬೆನ್ನ ಮೇಲೆ ಭಾರ ಹಾಕಿದ. ನೀರು ಹೊರಬಂತು. ಅಷ್ಟರಲ್ಲಿ ಬಸೆಟ್ಟಿ, ಮೆರಮಿಂಡ ಬಂದರು. ಎಲ್ಲರೂ ಸೇರಿ ಉಪಚರಿಸಿ ಮರಳಿ ಗುಡಿಸಲಕ್ಕೊಯ್ದು ಬಿಟ್ಟುಬಂದರು.
ಸ್ವಲ್ಪವೇ ಕೈತಪ್ಪಿದ್ದರೆ, ಶಿವಲಿಂಗ ಬರುವುದು ತಡವಾಗಿದ್ದರೆ ಚಿಮಣಾಳ ಕತೆ ಇಂದಿಗೇ ಮುಕ್ತಾಯವಾಗುತ್ತಿತ್ತು. ಈ ಯೋಚನೆ ಬಸವರಾಜನ ಒಳಗಿಗೆ ಇಳಿಯಲೇ ಇಲ್ಲ. ಅವನ ತಲೆಯಲ್ಲಿ ಬೇರೆ ಹುಳು ಕೊರೆಯುತ್ತಿತ್ತು. ನಿಂಗೂನಿಗೆ ಹೇಳಿಕಳಿಸಿದ್ದ. ನಿರ್ಲಿಪ್ತನಾಗಿ ಒಳಗೆಹೋಗಿ ಬೇಹೂಶ್ ಆಗಿ ಬಿದ್ದಿದ್ದ ಚಿಮಣಾಳ ಮೇಲೊಂದು ಬಟ್ಟೆ ಹೊದಿಸಿದ. ನಿಂಗೂ ಕರೆದದ್ದು ಕೇಳಿಸಿ ಹೊರಗೆ ಬಂದ.
ಆಗಲೇ ಸಂಜೆಯಾಗಿತ್ತು. ಹೊಲಗಳಿಂದ ರೈತರು ಬರುತ್ತಿದ್ದರು. ಆದರೆ ಯಾರೂ ಗುಡಿಸಲು ಕಟ್ಟೆಯ ಮೇಲೆ ನಿಂಗೂ ಮತ್ತು ಬಸವರಾಜು ಅನ್ಯೋನ್ಯವಾಗಿ ಕೂತದ್ದನ್ನು ಗಮನಿಸಲಿಲ್ಲ. ಜನರ ಹಾದಾಟ ಕಮ್ಮಿಯಾಗೋ ತನಕ ಬಸವರಾಜು ಏನೇನೋ ಹರಟೆ ಹೊಡೆದ. ನಿಂಗೂನ ಪ್ರಿಯವಾದ ಅನೇಕ ಸಂಗತಿಗಳನ್ನು ವರ್ಣಿಸಿದ. ನಿಂಗೂ ದಾಡಿ ಮಾಡಿಕೊಳ್ಳದ ಬಗ್ಗೆ ಆಕ್ಷೇಪಿಸಿದ. ಆತ ನ್ಯಾಯವಾಗಿ ಮಾಡಬೇಕಾದ “ಹೇರ್ ಸ್ಟೈಲ್” ಬಗ್ಗೆ ಮಾತಾಡಿದ. ಆಗಲೇ ರಾತ್ರಿಯಾಗಿ ಜನಸಂಚಾರ ಕಮ್ಮಿಯಾಗಿತ್ತು. ಒಳಗೆ ಕರೆದೊಯ್ದು ಕಪ್ಪು ತುಂಬ ಭಿರಂಡಿ ಕೊಟ್ಟ. ಕುಡಿದ ಮೇಲೆ ಒಳಗಿನ್ನೂ ದೀಪ ಹಚ್ಚಿದ್ದಿಲ್ಲ. ನಿಂಗೂನ ಕೆನ್ನೆಯ ಮೇಲೆ ಕೈ ತುರಿಸಿದ. ತಾನು ಹುಲಿಯ ಜೊತೆ ಆಟವಾಡುತ್ತಿದ್ದೇನೆಂಬುದು ಬಸವರಾಜನಿಗೆ ಈತನಕ ಗೊತ್ತಾಗಿರಲಿಲ್ಲ. ಕೆನ್ನೆ ತುರಿಸಿದ್ದಷ್ಟೇ ತಡ ನಿಂಗೂ ಬೆದೆ ಬಂದ ಪ್ರಾಣಿಯಂತಾದ. ಬಸವರಾಜೂನನ್ನು ಹಿಡಿದೆಳೆದಡರಿ ಇಕ್ಕಟ್ಟಿನ ಸಂಕಟಕ್ಕೆ ಬಾಯಿ ಬಂದು ಬಾಯಿ ಬಾಯಿ ಬಿಟ್ಟಂತಾಗಿ ಕೊಡವಿಕೊಂಡು ಬಿಟ್ಟ. ಬಸವರಾಜು ಲಬೊ ಲಬೊ ಹೊಯ್ಕೊಳ್ಳುವುದೊಂದು ಬಾಕಿ. ಇಬ್ಬರೂ ಧಾಂಡಿಗ ಕುಳಗಳು ಕುಸ್ತಿ ಹಿಡಿದಂತೆ ಶಬ್ದವಾಗುವುದನ್ನು ಕೇಳಿ ಚಿಮಣಾಳಿಗೆ ಎಚ್ಚರವಾಗಿ ಯಾರವರಾ? ಎಂದಳು. ಇಬ್ಬರೂ ಮನುಷ್ಯರೊಳಗೆ ಬಂದರು.
ದೀಪ ಹಚ್ಚಿ ಅವನನ್ನು ದೂರ ಕೂರಿಸಿಕೊಂಡು ಯಾರಿಗೂ ಹೇಳುವುದಿಲ್ಲವೆಂಬ ಬಗ್ಗೆ ಆಣೆ ಪ್ರಮಾಣ ಮಾಡಿಸಿಕೊಂಡು ಬಸವರಾಜು ಎಲ್ಲಾ ಬಿಚ್ಚಿ ಹೇಳಿದ:
ಗುಡಸೀಕರನನ್ನು ನೋಡಿ ದುರ್ಗಿ ಪುಳಕಿತಳಾಗೋದನ್ನ ಬಸವರಾಜ ಗಮನಿಸಿದ್ದ. ಗುಡಿಸಲಿಗೆ ಅವ ಬಂದೊಡನೆ ಅವಳು ಸೊಂಡಿ ಸುಟ್ಟ ಬೆಕ್ಕಿನ ಹಾಗೆ ತನ್ನ ಗುಡಿದಲ ಹಿಂದೆ ಮುಂದೆ ಏನೇನೋ ನೆವ ಒಡ್ಡಿ ಅಡ್ಡಾಡುತ್ತ ಎತ್ತರದ ದನಿಯಲ್ಲಿ ಲಗಮವ್ವನೊಂದಿಗೆ ಮಾತಾಡುತ್ತ ವಿನಾಕಾರಣ ನಗುತ್ತ ಕೂರದೆ ನಿಲ್ಲದೆ ಲಗಮವ್ವನೊಂದಿಗೆ ಮಾತಾಡುತ್ತ ಹಾರಾಡುವ ಪಾತರಗಿತ್ತಿಯಾಗುತ್ತಿದ್ದಳು. ಆತ ಇದ್ಯಾವುದನ್ನೂ ಗಮನಿಸಿರಲಿಲ್ಲ. ಒಂದು ದಿನ ಎಳೇ ಹುಡುಗನೊಬ್ಬನಿಂದ ಮಾದಚಿದ ಎಲಡಿಕೆ ಕೊಟ್ಟು ಸರಪಂಚನಿಗೆ ಕೊಡುವಂತೆ ಹೇಳಿಕಳಿಸಿದ್ದಳು. ಅದು ತಪ್ಪಿ ಬಸವರಾಜುನಿಗೆ ಸಿಕ್ಕಿತು. ಬಿಚ್ಚಿ ನೋಡಿದರೆ ಎಲೆಯ ಮೇಲೆ ಸುಣ್ಣದಿಂದ ಈ ಆಕಾರ ಬರೆಯಲಾಗಿತ್ತು.
ಈ ದಿನ ಚಿಮಣಾ ಹೋದಳಲ್ಲ. ಬಸವರಾಜು ಒಬ್ಬನೇ ಬಾಗಿಲಿಗೆಕ್ಕಿಕೊಂಡು ಒಳಗೇ ಮಲಗಿದ್ದ. ತೋಟಕ್ಕೆ ಹೊರಟಿದ್ದ ಗುಡಸೀಕರ ಹಾಗೇ ಗುಡಿಸಲ ಮೇಲೆ ಹಾದು ಹೋಗೋಣವೆಂದು ಬಂದ. ಚಿಮಣಾ ಇರಲಿಲ್ಲವಲ್ಲ. ಸ್ವಲ್ಪ ಹೊತ್ತು ಕೂತಿದ್ದು, ಎದ್ದು ಹೋದ. ತನ್ನ ಗುಡಿಸಲಲ್ಲಿದ್ದ ದುರ್ಗಿಗೆ ಸರಪಂಚ ಬಂದದ್ದು ಕಂಡಿತ್ತು. ಚಿಮಣಾ ಇಲ್ಲದ್ದು ಗೊತ್ತಿತ್ತು. ಕೂಡಲೇ ಒಳಗೆ ಹೋದಳು. ಮತ್ತೆ ಹೊರಬಂದಳು. ಗುಡಸೀಕರ ಎದ್ದು ಹೋದುದನ್ನು ಅವಳು ಗಮನಿಸಲೇ ಇಲ್ಲ. ಒಳಗೆ ಇದ್ದಾನೆಂದೇ ತಿಳಿದು ಮುತ್ತುಗದ ಎಲೆಯಲ್ಲಿ ಸುಣ್ಣದಿಂದೊಂದು ಮಂಡಲ ಬರೆದು, ಅದರಲ್ಲೊಂದು ಚುಕ್ಕೆಯಿಟ್ಟು ಮೂರು ಮಲ್ಲಿಗೆ ಹೂವಿಟ್ಟು ಮಡಚಿ ಗುಡಿಸಲಲ್ಲಿ ಎಸೆದು ಓಡಿದ್ದಳು, ಇದೂ ಸಹಜವಾಗಿ ಬಸವರಾಜನಿಗೇ ಸಿಕ್ಕಿತು. ಶಹರದಲ್ಲಿ ಬೆಳೆದ ಅವನಿಗೆ ಈ ಸಂಕೇತಗಳ ಅರ್ಥ ಬಗೆಹರಿಯಲಿಲ್ಲ.
ಇಂಥ ಆಪ್ತ ವಿಷಯಗಳನ್ನು ಹಂಚಿಕೊಳ್ಳಲು ಅವನಿಗ್ಯಾರೂ ಇರಲಿಲ್ಲ. ಚತುಷ್ಟಯರು ಲಾಯಖ್ಖಲ್ಲ. ಈಗೀಗ ನಿಂಗೂ ಇವನಿಗೆ ಹತ್ತಿರವಾಗುತ್ತಿದ್ದ, ಹೊಲಕ್ಕೆ ಹೋದಾಗ ಒಮ್ಮೊಮ್ಮೆ ನಿಂಗೂನ ಗುಡಿಸಲ ಕಡೆಗೂ ಹೋಗುತ್ತಿದ್ದ. ಆದ್ದರಿಂದ ಅವನನ್ನು ಕರೆಸಿದ್ದ. ಈಗ ಇದರ ಅರ್ಥವೇನೆಂದು ಕೇಳಿದ.
“ಯಾಕ? ಯಾವುದರ ಹುಡುಗಿ ಗಂಟ ಬಿದ್ದೈತೇನ?” ಎಂದು ನಿಂಗೂ ಮತ್ಸರದಿಂದ ಕೇಳಿದ.
“ನನಗೆಲ್ಲೋ ಮಾರಾಯ ಗುಡಸೀಕರಗ ಗಂಟು ಬಿದ್ದಾಳ”
“ಯಾರವಳು?”
ಎಂದು ನಿಂಗೂ ಪೀಡಿಸಿ ಕೇಳಿದಾಗ ದುರ್ಗಿಯ ಹೆಸರು ಹೇಳಿದ. ಕೊನೆಗೆ ಹುಣ್ಣಿಮೆಗೆ ಒಂದು ದಿನ ಮುಂಚೆ ಮೂರೂ ಸಂಜೆ ಗುಡೀ ಹಿಂದ ಬಾ” ಎಂಬುದಾಗಿ ಅದರರ್ಥ ಒಡೆದು ಹೇಳಿದ. “ಹಾಗಿದ್ದರೆ ಇದಕ್ಕೆ ಒಪ್ಪಿಗೆ ಸೂಚಿಸುವುದು ಹ್ಯಾಗೆ?” ಎಂದ ಬಸವರಾಜು. ಸರಪಂಚ ಅವಳ ಕಡೆಗೊಂದು ಅಡಕೆ ಎಸೆದರೆ ಅದೇ ಒಪ್ಪಿಗೆ ಎಂದ ನಿಂಗೂ ಎದ್ದು “ಮನೀ ಕಡೆ ಬಾ” ಎಂದು ಬಸವರಾಜನಿಗೆ ಹೇಳಿ ಹೋದ.
ಆ ದಿನ ರಾತ್ರಿ ನಿದ್ದೆಯಿಲ್ಲದೆ ಮಗ್ಗಲಿನಿಂದ ಮಗ್ಗುಲಿಗೆ ಹೊರಳಾಡಿದವರು, ಬಸವರಾಜೂ, ಚಿಮಣಾ ಮತ್ತು ದುರ್ಗಿ ಮೂವರೇ. ಚಿಮಣಾ ಅಂದಿನ ಘಟನೆಯಿಂದ ಬೆಚ್ಚಿ ಬಿದ್ದಿದ್ದಳು. ಬಸವರಾಜನ ಲೆಕ್ಕಾಚಾರದ ಮನಸ್ಸಿನಲ್ಲಿ ಚಕಮಕಿ ಕಿಡಿ ಹಾರತೊಡಗಿದ್ದವು. ಈ ತನಕ ಚಿಮಣಾಳನ್ನು ಹಿಂಡಿ ಹಿಂಡಿ ಪ್ರಯೋಜನ ಪಡೆದಿದ್ದ, ಈಗವಳು ಹಿಂಡಿದರೆ ರಸವೊಸರದಷ್ಟು ಒಣಗಿದ್ದಳು. ಅವಳನ್ನು ನಿವಾರಿಸಬೇಕಾಗಿತ್ತು. ಅದೂ ಉಪಾಯವಾಗಿ, ಲಾಭ ಸಿಕ್ಕುವಂತೆ. ಒಣಗಿದ್ದುದ್ದು ಉರುವಲಾಗಬೇಕು. ಇಲ್ಲಾ ಹೊಟ್ಟಾಗಬೇಕು. ಉರುವಲದಿಂದ ಒಲೆ ಉರಿಯುತ್ತದೆ. ಗುಡಸೀಕರನ ಒಲೆ ಈ ಉರುವಲದಿಂದ ಉರಿಯುವುದು ಸಾಧ್ಯವಿರಲಿಲ್ಲ. ಹೊಟ್ಟು ಹಾಕಿದರೆ ಹಿಂಡದ ದನ ಹೈನ ಕೊಡುತ್ತದೆ.
ದುರ್ಗಿಗಾದರೆ ವಿಚಿತ್ರ ಕಾತರ. ಅದು ಮೈ ಕಾತರವೋ, ಮನಸ್ಸಿನ ಕಾತರವೋ ಹೇಳುವುದೇ ಬಿಗಿಯೆಂಬಷ್ಟು ಮೈ ಬಿಗಿದಿತ್ತು. ಮುಗ್ಧಹುಡುಗಿ, ಹಸೀ ಮಣ್ಣಿನಂತಿದ್ದಳು. ಹೇಗೆ ಮಿದ್ದಿದರೆ, ಹೇಗೆ ನಾದಿದರೆ ಹಾಗೆ ಹದ, ಹಾಗೆ ಆಕಾರ ತಕ್ಕೊಳ್ಳಲು ಸಿದ್ಧಳಾದವಳು. ಅಬಾಯಿಯ ಖಾಸ ಮಗಳಲ್ಲ. ಸವದತ್ತಿಯ ಜೋಗತಿ ಎಲ್ಲವ್ವನ ಮಗಳು. ಅವಳು ಸಾಯುವ ಮುನ್ನ ದುರ್ಗಿ ಹತ್ತು ವರ್ಷದಾಕೆ. ಆಗಿನಿಂದಲೇ ತನ್ನ ಚಿಕ್ಕವ್ವ ಅಂದರೆ ಅಬಾಯಿಯ ಮನೆಯಲ್ಲೇ ಇದ್ದಳು. ಇನ್ನೇನು ವರ್ಷಾರು ತಿಂಗಳಲ್ಲಿ ಜೋಗತಿ ಬಿಡಬೇಕೆಂದು ಅಂಬಾಯಿ ಹೊಂಚಿದ್ದಳು. ಅಷ್ಟರಲ್ಲೇ ಇವಳು ಗುಡಸೀಕರನ ಹೆಸರಿನಲ್ಲಿ ಒಂಟಿಗಾಲಲ್ಲಿ ನಿಂತಿದ್ದಳು. ಮಧ್ಯೆ-ಬಸವರಾಜು ಪ್ರಯೋಜನದ ಲೆಕ್ಕ ಹಾಕುತ್ತಿದ್ದ. ಎಲ್ಲಿಂದೆಲ್ಲಿಗೆ ಸಂಬಂಧ?

ಬೆಂಕಿಯ ಹೊಂಡ

ಇದು ವಿಚಿತ್ರವಾದ ಹಂಗಾಮು, ಮಹಾನವಮಿಯ ಅಮವಾಸ್ಯೆಯಿಂದ ಶೀಗಿ ಹುಣ್ಣಿಮೆಯ ತನಕ ರೈತರಿಗೇನೂ ಕೆಲಸವಿರುವುದಿಲ್ಲ. ಕಳೆ ತೆಗೆಯಬೇಕಾದ್ದಿಲ್ಲ; ಬೆಳೆಯ ಕಾಳಜಿ ಮಾಡಬೇಕಾದ್ದಿಲ್ಲ. ಬೆಳೆಯ ಗಂಟಲಲ್ಲಿದ್ದ ಕಾಳು ಈ ಅವಧಿಯಲ್ಲೇ ಹೊರಕ್ಕೆ ಬರುತ್ತದೆ. ಈಗ ಭೂಮಿಯನ್ನು ನೋಡುವುದೇ ಚಂದ-ತುಂಬ ಬಸರಿಯ ಹಾಗೆ ಕಾಣಿಸುತ್ತದೆ. ನಿಜ ಹೇಳಬೇಕಂದರ ಬಸರಿಯಂತಹ ಸುಂದರಿ ಈ ಪ್ರಪಂಚದಲ್ಲೇ ಇಲ್ಲ. ಹೆಣ್ಣು ನಿಮಗೆ ಮಾಯೆ ಅನಿಸುವುದೇ ಆವಾಗ. ಅತ್ಯಂತ ಅದ್ಭುತವಾದ, ಮಾತಿಗೆ ಮೀರಿದ ಮಾದಕತೆ, ತೃಪ್ತಿ ಅವಳ ಅಂಗಾಂಗಗಳಲ್ಲಿ ಮೂಡಿರುತ್ತದೆ. ಆ ದಿವ್ಯ ಸೌಂದರ್ಯದ ಎದುರು ಮನುಷ್ಯ ಮಗುವಾಗುತ್ತಾನೆ. ಭೂಮಿಯ ಈಗಿನ ಸೌಂದರ್ಯವೂ ಅಂಥದೇ, ಗರ್ಭದ ನಿಧಿ ಚಡಪಡಿಸುವುದನ್ನು ಸಂತೋಷಿಸುತ್ತ, ಮೌನವಾಗಿರುವ ಈಗಿನ ಭೂಮಿಯನ್ನು ನೋಡಿ ‘ದೇವರನ್ನು ಕೊಂಡಾಡೋಣ; ಎನಿಸುತ್ತದೆ.
ಈಗ ಮುಟ್ಟಾದ ಹೆಂಗಸರು ಹೊಲದ ಕಡೆ ಸುಳಿಯಬಾರದು. ಗಂಡಸರು ಹಾದರ ಮಾಡಬಾರದು. ಕಾಲ್ಮರಿ ಹಾಕಿಕೊಂಡು ಮೆಣಸಿನ ಹೊಲದಲ್ಲಾಗಲಿ, ಬಳ್ಳಿಗಳಲ್ಲಾಗಲೀ ಹಾಯಬಾರದು.
ಇದು ರೈತರಿಗೂ ಗೊತ್ತು. ಆದ್ದರಿಂದಲೇ ಬಸುರಿಯ ಬಯಕೆಯನ್ನೀಡೇರಿಸುವಂತೆ ಥರಾವರಿ ಅಡಿಗೆ ಮಾಡಿಕೊಂಡು ಹೊಲಗಳ ತುಂಬ ಚೆರಗ ಚೆಲ್ಲಿ ಬರುತ್ತಾರೆ. ಈಗಿನ ಆಕಾಶ ಬಲು ಶುಭ್ರ; ಹಗಲಾಗಲಿ, ರಾತ್ರಿಯಾಗಲಿ. ಹಗಲಾದರೆ ಹಸನಾದ ಬಿಸಿಲು, ಸೂರ್ಯ ನಕ್ಕ ಹಾಗೆ. ರಾತ್ರಿಯಾದರೆ ಆಕಾಶದ ತುಂಬ ಹುರಿದರಳು ಚೆಲ್ಲಿದಂತೆ ನಕ್ಷತ್ರಗಳು ಇಕಾ ನನ್ನ ಬೆಳಕು, ಅಕಾ ನಿನ್ನ ಮಿಣುಕು! ಸಾಲದ್ದಕ್ಕೆ ಮೆತ್ತಗೆ ಒತ್ತೊತ್ತಿ ಮುತ್ತುವ ಥಂಡಿ.
ಥಂಡಿ ಎಂದೊಡನೆ ವಿರಹಿಗಳ ಪ್ರೇಮ, ಪ್ರೇಮಿಗಳ ಕಾಮ, ಕಾಮಿಗಳ ಭೋಗ ಜಾಸ್ತಿಯ‌ಎಂಬಂಥ ಮರ್ಣನೆಗಳನ್ನು ಕೇಳಬೇಡಿರಿ. ಅದೆಲ್ಲ ಮಾತಿಗೆ ಬಾರದ ಕಾವ್ಯಗಳಲ್ಲಿ, ಕಾವ್ಯಗಳ ಅರಮನೆಗಳಲ್ಲಿ, ಮಾಡುವುದಕ್ಕೆ ಕೆಲಸವಿಲ್ಲದ ನಗರಗಳಲ್ಲಿ ನಡೆದೀತು. ಯಾವುದಕ್ಕೂ ಒಂದೊಂದು ಋತುಮಾನವಿದೆ. ಇದಂತೂ ಕುಚೇಷ್ಟೆಗಳಿಗೆ ಹೇಳಿ ಮಾಡಿಸಿದ ಹಂಗಾಮಲ್ಲ.
ಈಗ ದೇವರೇಸಿಯ ಮುಖ ನೋಡುವುದೇ ಚೆಂದ. ಹಿಂದೆ ಮೊಳಕಾಲ ಮಟ ಉದ್ದನೆಯ ಜಡೆ ಬಿಟ್ಟುಕೊಂಡು ಹಣೆತುಂಬ ಬಂಡಾರ ಬಳಿದುಕೊಂಡು ಒಂದು ಹೆಗಲಿಗೆ ಗೊಂಗಡಿ ಇನ್ನೊಂದಕ್ಕೆ ಬಂಡಾರ ಚೀಲ ತೂಗು ಬಿಟ್ಟುಕೊಂಡು ಉಧೋ ಎಂದು ಹೊರಡುತ್ತಾನೆ. ಊರ ಸೀಮೆಯ ಗುಂಟ ಭಂಡಾರ ಚೆಲ್ಲುವುದೇ ಅವನ ಕಾರ್‍ಯಕ್ರಮ. ಹೊಲಹೊಲಕ್ಕೆ ಹೋಗಿ ಆತ ಹೆಂಗಸಿನ ಥರ ಕೂತು ‘ಹಂಗ ಮಗನ ಹಿಂಗ ಮಗನ’ ಎನ್ನುತ್ತ ಕೂತಿದ್ದರೆ ಭಾವುಕ ರೈತನಿಗೆ ಸ್ವಥಾ ಕರಿಮಾಯಿಯೇ ತಮ್ಮ ಹೊಲಕ್ಕೆ ಬಂದಂತಾಗುತ್ತದೆ. ಹಸಿರು ಭೂಮಿಯ ಚಂದ ನೋಡಲೋ, ತಾಯಿಯ ಬಂಡಾರ ಮುಖದ ಅಂದ ನೋಡಲೋ! ಜನ ಕೃತಜ್ಞತೆಯಿಂದ ತುಂಬಿ ಸೂಸುತ್ತಾರೆ.
ದಿನದಿನಕ್ಕೆ ಹುಣ್ಣಿವೆ ಸಮೀಪ ಬರತೊಡಗಿತ್ತು. ಈ ಹುಣ್ಣಿಮೆಯ ದಿನ ನಡೆಯುವ ಪೂಜೆ ತಾಯಿಯೇ ಆದಿಯಲ್ಲಿ ಹೇಳಿದ ವರ್ಷದ ಮೂರು ಮುಖ್ಯ ಪೂಜೆಗಳಲ್ಲಿ ಒಂದು. ಈ ಪೂಜೆಯಲ್ಲಿ ತಾಯಿಯನ್ನು ಎಷ್ಟೆಷ್ಟು ತೃಪ್ತಿಪಡಿಸಿದರೆ ಅಷ್ಟಷ್ಟು ಹುಲುಸಾಗುತ್ತದೆ. ಮಹಾನವಮಿಯಂದು ಸೀಮೆ ಕಟ್ಟಲಿಕ್ಕೆ ಹೋದ ತಾಯಿ ಅಂದರೆ ದೇವರೇಸಿ ಹುಣ್ಣಿಮೆಯ ಮುನ್ನಾದಿನ ಗೌಡನ ತೋಟಕ್ಕೆ ಬರುತ್ತಾಳೆ. ಆ ದಿನ ತಾಯಿಗೆ ಗೌಡನ ಮನೆಯಿಂದಲೇ ಊಟ. ಅದಕ್ಕೂ ನಿಯಮಗಳಿವೆ. ಗಂಡುಳ್ಳ ಗರತಿ, ಕೋಳಿ ಕೂಗುವಾಗಲೇ ಎದ್ದು ತಣ್ಣೀರಲ್ಲಿ ಜಳಕ ಮಾಡಿ ಒದ್ದೆ ಬಟ್ಟೆಯಲ್ಲೇ ಅಡಿಗೆ ಮಾಡಬೇಕು. ಆ ಗರತಿ ಎದ್ದಾಗಿನಿಂದ ಹಿಡಿದು ಖುದ್ದಾಗಿ ಹೋಗಿ ತೋಟದಲ್ಲಿಯ ತಾಯಿಗೆ ಬಡಿಸುವ ತನಕ ಒಬ್ಬರ ಜೊತೆ ಮಾತನಾಡಕೂಡದು, ಕಣ್ಣಿಟ್ಟು ಒಬ್ಬರ ಮುಖ ನೋಡಕೂಡದು. ಇದು ತಲೆತಲಾಂತರದಿಂದ ನಡೆದುಬಂದ ಪದ್ಧತಿಯಾದ್ದರಿಂದ ಊರವರು ಅಂಥ ಗರತಿಯನ್ನು ಮಾತಾಡಿಸುವುದಿಲ್ಲ. ಆಕೆ ಸುಳಿಯುವ ಸ್ಥಳದಲ್ಲಿ, ಆ ಸಮಯದಲ್ಲಿ ಯಾರೂ ಕಾಲಿಕ್ಕುವುದೂ ಇಲ್ಲ.
ಮೂರೂ ಸಂಜೆಯಾಯಿತೆಂದರೆ ತಾಯಿಗೆ ಅಂದರೆ ದೇವರೇಸಿಗೆ ಸೆರೆಯ ಅರ್ಪಣೆಯಾಗಬೇಕು. ಅದು ಲಗಮವ್ವನ ಜವಾಬ್ದಾರಿ. ಅದಕ್ಕಾಗಿ ಮೂರು ಹೊಸ ಪರಿವಾಣಗಳೇ ಆಗಬೇಕು. ಮೊದಲು ಒಂದು ಪರಿವಾಣದ ತುಂಬ ಹಾಕಿಕೊಟ್ತರೆ ತಾಯಿ ಒಂದೇ ಗುಟುಕಿಗೆ ಮುಗಿಸಿ ತಾಯಿ ಚಕಾರ ಶಬ್ದ ಎತ್ತದೆ ಹ್ಯಾಗಿದ್ದರೆ ಹಾಗೇ ಬೆನ್ನು ಮೇಲಾಗಿ ಬಿದ್ದು ಬಿಡುತ್ತಾಳೆ. ಲಗಮವ್ವನ ಹಾಡಿನಲ್ಲಿ ತಾಯಿ ಮೂರು ಗುಟುಕು ಸೆರೆ ಕುಡಿದಳೆಂದು ವರ್ಣನೆ ಬರುತ್ತದಲ್ಲ, ಆ ಮೂರೂ ಗುಟುಕು ಎಂದರೆ ಇಂಥವು; ಎಷ್ಟೆಂದರೂ ಮಹಾತಾಯಿ; ದೊಡ್ಡವರದೆಲ್ಲ ದೊಡ್ಡದೇ
ಅದೇ ದಿನ ಮಧ್ಯಾಹ್ನದ ಹೊತ್ತು ರೈತರು ಊದಿ ಬಾರಿಸುತ್ತ ಮರದ ದೊಡ್ದ ದೊಡ್ಡ ದಿಮ್ಮಿಗಳನ್ನು ತಗೊಂಡು ಗುಡಿಯ ಪೌಳಿಯಲ್ಲಿ ಕೊಂಡ ಮಾಡಿ ಅದರಲ್ಲೆಸೆದು ಬೆಂಕಿ ಹಚ್ಚಿ ಬರುತ್ತಾರೆ. ಒಮ್ಮೆ ಹಾಗೆ ಹೊರಗೆ ಬಂದರೆ ನಾಳೆ ತಾಯಿಯ ಜಿತೆಗೇ ಕಾಲಿಡಬೇಕು. ಅಲ್ಲಿಯ ತನಕ ಒಂದು ಹುಳು ಕೂಡ ಒಳಗೆ ಸುಳಿಯಬಾರದು.
ಮೊದಲೇ ಕೆಂಡದಂಥ ದೇವಿ; ಮಡಿ ಮೈಲಿಗೆ ಸರಿಯಾಗಿ ಪಾಲಿಸಬೇಕು. ಮಾರನೇ ದಿನ ತಾಯಿಯ ಬಂಗಾರ ಮೂರ್ತಿಯೊಂದಿಗೆ ಮೆರವಣಿಗೆ ಬಂದು ಕಾರಣಿಕವಾದರೆ ಅಂದಿನ ಉತ್ಸವ ಮುಗಿದಂತೆ.
ಆಯ್ತು; ಕರಿಮಾಯಿ ಸೀಮೆಕಟ್ಟಿ ಬಂದು ಗೌಡನ ತೋಟದಲ್ಲಿ ಬೀಡುಬಿಟ್ಟಿದ್ದಳು. ಬೆಳಗಿನ ಊಟೋಪಚಾರ ಮುಗಿದಿತ್ತು. ಸಮಯ ಬಾರಾಬಜೆಯಾಗಿದ್ದೀತು. ಗುಡಿಸಲಲ್ಲಿ ದುರ್ಗಿಯನ್ನು ಕೂರಿಸಿ ಲಗಮವ್ವ ಹೊಲಕ್ಕೆ ಹೂ, ಹುಲ್ಲು, ಜೋಳದ ಗರಿ ತರುವುದಕ್ಕೆ ಹೋದಳು. ದುರ್ಗಿ ಒಬ್ಬಳೇ ಆದಳಲ್ಲ. ಮತ್ತೆ ಮತ್ತೆ ಹೊರಗೆ ಬಂದು ಗುಡಸೀಕರ ಬಂದಿದ್ದಾನೆಯೇ ಎಂದು ನೋಡಿದಳು. ತಾನು ಈ ಹಿಂದೆ ಕಲಿಸಿದ ಸಂದೇಶ ತಲುಪಿದೆಯೆ? ಸಂಜೆ ಗುಡಿಕಡೆ ಬರುತ್ತಾನೊ? ಅಥವಾ ಚಿಮಣಾ ಇರುವಾಗ ತನ್ನನ್ನು ಬಯಸುತ್ತಾನೊ? ಹಾಗಿದ್ದರೆ ಹೋಳೀಹಬ್ಬದಲ್ಲಿ ದುಡ್ಯಾಕೆ ಕೊಟ್ಟುಕಳಿಸಿದ್ದು? ಹೀಗೆ ಅಚಿತ್ರೋ ವಿಚಿತ್ರ ತರ್ಕದಲ್ಲಿ ಮುಳುಗಿದ್ದಳು. ಅವಳು ಆಗಾಗ ಹೊರಬಂದು ಒಳಹೋದುದನ್ನು ಬಸವರಾಜೂ ಗಮನಿಸಿದನೇ ಹೊರತು ಗುಡಸೀಕರನಿಗೆ ಇದರ ತುದಿಬುಡ ತಿಳಿಯಲೇ ಇಲ್ಲ.
ಬಸವರಾಜು ಉಪಾಯವಾಗಿ ಗುಡಿಸಲಕಟ್ಟೆಯ ಮೇಲೆ ಗುಡಸೀಕರನನ್ನು ಕೂಡಿಸಿಕೊಂಡು ಸ್ವಲ್ಪ ಹೊತ್ತು ಅದು ಇದು ಮಾತಾಡಿದ, ಮೆಲ್ಲಗೆ ಒಳಗಿದ್ದ ಚಿಮಣಾಳಿಗೆ ಕೇಳಿಸದಂತೆ ವಿಷಯ ತೆಗೆದ. ಒಬ್ಬ ಹುಡುಗಿ ಇವನಿಗಾಗಿ ಹಸಿದು ನಿಂತುದನ್ನು ರಸವತ್ತಾಗಿ ಬಣ್ಣಿಸಿದ. ಗುಡಸೀಕರನ ಆಸಕ್ತಿ ಕೆರಳಿತು. ಯಾರು ಯಾರೆಂದು ಪೀಡಿಸಿದ. “ಯಾರಿರಬೇಕು ಹೇಳು ನೋಡೋಣ” ಎಂದು ಆಟವಾಡಿದ. ಕೊನೆಗೆ “ಈಗ ಕಣ್ಣು ಮುಚ್ಚಿಕೊ. ತೋರಸ್ತೀನಿ” ಎಂದು ಒತಾಯ ಮಾಡಿ ಕಣ್ಣು ಮುಚ್ಚಿಸಿ, ಅವನ ಕೈಗೊಂದು ಅಡಿಕೆ ಕೊಟ್ಟು ಎದುರಿಗೆ ಎಸೆದರೆ ಅದು ಬಿದ್ದಲ್ಲಿ ಅವಳಿರುತ್ತಾಳೆಂದು ಹೇಳಿದ. ಗುಡಸೀಕರ ಕಣ್ಣು ಮುಚ್ಚಿ ಅಡಿಕೆ ಎಸೆದ. ಅದು ಆಗಷ್ಟೆ ಹೊರಗೆ ಬಂದ ದುರ್ಗಿಯ ಮುಂದೆ ಬಿತ್ತು. ನಾಚಿ ಅಡಿಕೆ ತಗೊಂಡು ಒಳಗೋಡಿದಳು. ಗುದಸೀಕರನಿಗೆ ಹೌದಲ್ಲಾ ಎನಿಸಿತು. ಆದರೆ ಉತ್ಸಾಹಿತನಾಗಲಿಲ್ಲ. ಬಸವರಾಜು ಇದನ್ನು ಗ್ರಹಿಸಿದ.
ಆಗುವ ಮೋಜು ಹೇಗೂ ಆದೀತು. ಬರಲಿರುವ ಚುನಾವಣೆಯ ಹೆಸರಿನಲ್ಲಿ ಇದು ನಡೆಯಲೇಬೇಕೆಂಬುದನ್ನು ಖಾತ್ರಿ ಮಾಡಿದ.
“ಮುಂದಿನ ಹಾದಿ ಹೆಂಗ?”
“‘ಅದು ನನ್ನ ಜವಾಬ್ದಾರಿ.”
ಹೌಹಾರಿದಳು ದುರ್ಗಿ. ಸೂರ್ಯ ಮುಳುಗಲೊಲ್ಲ. ಸಂಜೆಯಾಗಲೊಲ್ಲದು. ಕಾಲು ನೆಲಕ್ಕೆ ಊರಲೊಲ್ಲವು. ಮನಸ್ಸು ನಿಂತಲ್ಲಿ ನಿಲ್ಲಲೊಲ್ಲದು. ಹೊರಗೆ ಬಂದು ಸೂರ್ಯನನ್ನು ಶಪಿಸಿದಳು. ಒಳಗೆ ಹೋಗಿ ಕುಳಿತಳು. ಕೂರದೆ ನಿಂತಳು. ನಿಲ್ಲದೆ ನಡೆದಾಡಿದಳು. ಕೂತಳು. ನಿಂತಳು. ಹರಿದಾಡಿದಳು. ನಿಟ್ಟುಸಿರು ಬಿಟ್ಟುಬಿಟ್ಟು ಎದೆಯ ಏರಿಳಿವುಗಳನ್ನು ಅಳೆದಳು. ಅಂತೂ ಸಂಜೆಯಾಯ್ತು. ಗುಡಿಸಲಲ್ಲಿ ಲಗಮವ್ವ ಇರಲಿಲ್ಲ. ರೈತರು ಕೊಂಡಕ್ಕೆ ದಿಮ್ಮಿ ಚೆಲ್ಲಿ ಬೆಂಕಿ ಹಚ್ಚಿ ಬಂದುದನ್ನು ವಾಲಗದ ಸಪ್ಪಳದಿಂದಲೇ ತಿಳಿದಿದ್ದಳು. ಹೊತ್ತೂ ಸಂಜೆಯಾಗಿತ್ತು. ಮೈಯಲ್ಲಿ ಬೆದೆಯಿತ್ತು. ಮನಸ್ಸಿನಲ್ಲಿ ಉಮೇದಿಯಿತ್ತು. ಇನ್ನು ಅವಳನ್ನು ತಡೆಯುವವರು ಯಾರು?
ಗುಡಿಯ ಹಿಂಭಾಗದ ಮರಗಳ ಬಳಿ ಹೋಗಿ ಅತ್ತಿತ್ತ ನೋಡಿದಳು. ಯಾರಿರಲಿಲ್ಲ. ಮತ್ತೆ ಮತ್ತೆ ನೋಡಿಬಂದಳು. ಇನ್ನೂ ಬಂದಿರಲಿಕ್ಕಿಲ್ಲವೇ? ಸುಳ್ಳು ಸುಳ್ಳೇ ಅಡಿಕೆ ಎಸೆದನೇ? ಎಂದೆಲ್ಲ ಚಿಂತಿಸಿದಳು. ಬಂದಾನೆಂದು ಅಲ್ಲೇ ಕುಳಿತಳು. ಬೇಸತ್ತು ಮತ್ತೆ ಹುಡುಕಿ ಬಂದಳು. ಕೊನೆಗೆ ಗುಡಿಯ ಮುಂದುಗಡೆ ಹಾದು ಬರುತ್ತಿದ್ದಾಗ ಹಿಂದಿನಿಂದ ಯಾರೋ ಕದ್ದು ಕರೆದಂತಾಯ್ತು. ತಿರುಗಿ ನೋಡಿದಳು. ಗುಡಿಯ ಒಳಭಾಗದ ಕತ್ತಲಲ್ಲಿ ನಿಂತು ಕೈಬೀಸಿ ಕರೆಯುತ್ತಿದ್ದ. ಈ ದಿನ ಯಾರೂ ಗುಡಿಯೊಳಕ್ಕೆ ಬರುವುದಿಲ್ಲವೆಂದು ಗೊತ್ತು. ಒಂದು ಕ್ಷಣ ಹೋಗುವುದೇ ಬೇಡವೇ ಎಂದು ಯೋಚಿಸುತ್ತ ನಿಂತಳು. ತಲೆಯಲ್ಲಿ ಗಾಳಿ ತುಂಬಿದ ಹಾಗೆ ಮಡಿಮೈಲಿಗೆ ಯಾವುದನ್ನೂ ಗಣನೆಗೆ ತಾರದೆ ಭರದಿಂದ ಒಳಹೊಕ್ಕಳು. ಬಂದು ಸಿಕ್ಕೊಡನೆ ಅಮಾತ ಅವಳನ್ನೆತ್ತಿ ದೇವೀ ಮೂರ್ತಿಯ ಹಿಂಭಾಗಕ್ಕೊಯ್ದ. ಅವರ ಗುದಮುರಿಗೆಗೆ ತಾಯಿಯ ಮರದ ಮೂರ್ತಿ ಗಡಗಡ ನಡುಗಿ ಖಡ್ಗ ಹಿಡಿದ ಬಲಗೈ ಮುರಿದು ಕೆಳಗೆ ಬಿತ್ತು. ಕತ್ತಲಲ್ಲಿ ಅದ್ಯಾವುದೂ ಗೊತ್ತಾಗಲಿಲ್ಲ. ಅಥವಾ ಗೊತ್ತಾಗುವ ಸ್ಥಿತಿಯಲ್ಲಿ ಇಬ್ಬರೂ ಇರಲಿಲ್ಲ. ಕೊಂಡದ ಬೆಂಕಿ ಧಗಧಗ ಉರಿಯುತ್ತಿತ್ತು.
ತಾನು ಹೇಳಿದಂತೆ ಗುಡಸೀಕರ ಬಂದಿರಬಹುದೆಂದುಕೊಂಡು ನಿಂಗೂ ಗುಡಿಯ ಹಿಂದಿನ ಮರದ ಗುಂಪಿನಲ್ಲಿ ಹೋಗಿ ಹುಡುಕಿದ, ಯಾರೂ ಇರಲಿಲ್ಲ. ಎಲ್ಲಾ ಸುಳ್ಳು ಎಂದುಕೊಂಡು ಗುಡಿಯ ಬದಿಯ ಹಾದಿಯಿಂದ ಬರುತ್ತಿರುವಾಗ ಗುಡಿಯಲ್ಲಿ ಯಾರೋ ಹೆಣ್ಣು ನರಳುತ್ತಿದ್ದಂತೆ ಕೇಳಿಸಿತು. ಗರ್ಭಗುಡಿಯಲ್ಲಿ ಏನೋ ಅಕೃತ್ಯ ನಡೆದಿರಬಹುದೆಂಬುದನ್ನು ಊಹಿಸುವುದು ಅವನಿಗೆ ಅಸಾಧ್ಯವಾಯ್ತು. ಹೇಳಿ ಕೇಳಿ ನಾಳೆ ಹುಣ್ಣಿಮೆ, ಇಂದು ಗುಡಿಯಲ್ಲಿ ಭೂತ ಸೇರುತ್ತವೆಯೆಂಬುದು ಗೊತ್ತಿತ್ತಲ್ಲ. ಗಾಬರಿಯಾಯ್ತು. ಅಷ್ಟು ದೂರ ಓಡಿಹೋಗಿ ಪೌಳಿಯ ಬಾಗಿಲಿನಿಂದ ಗುಡಿಯ ಕಡೆ ನೋಡಿದ. ಕೊಂಡದಲ್ಲಿ ಆಗಷ್ಟೇ ಹೊತ್ತಿಸಿದ ಬೆಂಕಿ ಉರಿಯುತ್ತಿತ್ತು. ಜ್ವಾಲೆಯೊಳಗಿನಿಂದ ಗರ್ಭಗುಡಿ ಥರಥರ ನಡುಗಿದಂತೆ ಕಾಣುತ್ತಿತ್ತು. ಅಯ್ಯಯ್ಯೋ ಎಂದು ಓಡಿದ. ‘ಗುಡ್ಯಾಗ ಹೆಣ್ಣದೆವ್ವ ನರಳಾಕ ಹತ್ತಿತ್ರೋ, ಸ್ವತಾಃ ಕಿವೀಲೇ ಕೇಳಿದೆ’ ಎಂದು ಸುದ್ದಿ ಹಬ್ಬಿಸಿದ.
ತಿರುಗಿ ಗುಡಿಸಿಲಿಗೆ ಬಂದಾಗಲೇ ದುರ್ಗಿಯ ಅರಿವು ಮೂಡಿತು. ಈ ತನಕ ಮಹಾಪೂರದ ಸೆಳೆವಿಗೆ ಸಿಕ್ಕವಳು ಈಗ ಹೊರಗೆ ಬಂದಂತಾಗಿತ್ತು. ಇಂದ್ರಿಯಗಳು ತಂತಮ್ಮ ಸ್ಥಳಕ್ಕೆ ಬಂದು ಸಹಜ ವ್ಯಾಪಾರಕ್ಕೆ ತೊದಗಿದವು. ಹುಡುಗಿ ನಡುಗುತ್ತಿದ್ದಳು. ತೊಡೆಗಳಲ್ಲಿ ಹಸಿನೆತ್ತರು ಸೋರ್‍ಯಾಡಿತ್ತು, ಒರೆಸಿಕೊಂಡಳು. ಕರಿಮಾಯಿಯ ಗುಡಿಯಲ್ಲಿ ಆಗಬಾರದ್ದು ಆಗಿಹೋಗಿತ್ತು. ತಾಯಿಯ ಮರದ ಉಗ್ರಮುಖ, ಆಯುಧ ಹಿಡಿದ ಕೈ ನೆನಪಾದವು. ಮೈ ತುಂಬಿದ ದೇವರೇಸಿಯ ಮುಖ ನೆನಪಾಯ್ತು. ನಡುಕ ಇನ್ನೂ ಜಾಸ್ತಿಯಾಯ್ತು. ಬೇರೆ ದಿನಗಳಲ್ಲಾದರೆ ಹೇಗೋ ನಡೆದೀತು. ಇವು ಮಡಿ ಮೈಲಿಗೆಯ ದಿನಗಳು. ನಾಳೆ ತಾಯಿ ಗುಡಿಗೆ ಬರಲಿದ್ದಾಳೆ. ಮೈಲಿಗೆಯಾಯ್ತು. ತನಗಿನ್ನು ಉಳಿಗಾಲವಿಲ್ಲ. ದೇವೀ ನಾಳೆ ತನ್ನನ್ನೆಳೆದು ತಲೆಯ ಮೇಲೆ ಬೆಂಕಿಯಿಡುವುದು ಖಂಡಿತ, ಅಯ್ಯೋ, ಘಾತವಾಯಿತೆಂದು ಬೆದರಿದಳು. ಜೀವ ಕೈಯಲ್ಲಿ ಹಿಡಿದುಕೊಂಡು ಚಾಪೆಯ ಮೇಲೆ ಮುದ್ದೆಯಾಗಿ ಬಿದ್ದಳು. ಕಿವಿಗೆ ಕೇಳಿಸುವಷ್ಟು ಗಟ್ಟಿಯಾಗಿ ಹೊಡೆದುಕೊಳ್ಳುತ್ತಿತ್ತು.
ಬಸವರಾಜೂ ಬಂದಾಗ ಗುಡಸೀಕರ ಚಿಮಣಾಳ ಜೊತೆ ಮಾತಾಡುತ್ತ ಕೂತಿದ್ದ. ಬಸವರಾಜು ವಿಜಯದ ಉನ್ಮಾದದಲ್ಲಿದ್ದ! ‘ಹಲೋ ಸರಪಂಚ್’ ಎಂದು ದಿನಕ್ಕಿಂತ ಎತ್ತರದ ದನಿಯಲ್ಲಿ ಮಾತಾಡುತ್ತ ಒಳಗೆ ಹೋದ. ಚಡ್ಡಿಗೆ ಹಸೀ ರಕ್ತ ಅಂಟಿತ್ತು. ಬದಲಿಸಿ ಬಾಟ್ಲಿ ತಗೊಂಡೇ ಬಂದ. ತೃಪ್ತಿ ಮುಖದ ತುಂಬ ಹೊರಸೂಸುತ್ತಿತ್ತು. ಜೋರು ಮಾಡಿ ಗುಡಸೀಕರನಿಗೆ ಸುರಿದ. ಚಿಮಣಾಳಿಗೆ ಇನ್ನಷ್ಟು ಸುರಿದ. ಮಾತಿಗೊಮ್ಮೆ ‘ಓಲ್ಡ್ ಬಾಯ್’ ಎನ್ನುತ್ತ ಗುಡಸೀಕರನ ಭುಜ ತಟ್ಟಿದ. ಗೆದ್ದವನಂತೆ ಆಗಾಗ ದೊಡ್ಡ ದನಿ ತೆಗೆದು ನಕ್ಕ. ದಣಿದಿದ್ದನಲ್ಲ, ಕಪ್ಪೆ ನುಂಗಿದ ಸರ್ಪದಂತೆ ಸುಂದಾಗಿ ಕೂತಲ್ಲೇ ಒರಗಿದ.
ಕೋಳಿ ಕೂಗುವ ಮುನ್ನವೇ ಲಗಮವ್ವ ಎದ್ದು ಜಳಕ ಮಾಡಿದ್ದಳು. ಮಡಿ ಉಟ್ಟು ಸಾಮಾಗ್ರಿ ಸೇರಿಸಿ ಪಕ್ಕದ ಇಬ್ಬರು ಗರತಿಯರನ್ನು ಎಬ್ಬಿಸಿದಾಗ ಕೋಳಿ ಕೂಗಿತು. ಮೂವರು ಗುಡಿಗೆ ಹೋದರು. ಕೊಂಡದಲ್ಲಿಯ ಮರದ ದಿಮ್ಮಿಗಳು ಸುಟ್ಟು ನಿಗಿನಿಗಿ ಕೆಂಡವಾಗಿದ್ದವು.
ಕರಿಮಾಯಿಗೆ ಈ ದಿನ ವಿಶೇಷ ಅಲಂಕಾರ. ಕತ್ತಿನಿಂದ ಸೊಂಟದ ತನಕ ಅವರೆಯ ಹೂ ಅಂಟಿಸುತ್ತಾರೆ. ಅದು ತಾಯಿಯ ಹಳದಿ ಕುಪ್ಪಸದಂತೆ ಕಾಣಿಸುತ್ತದೆ. ಸೊಂಟದಿಂದ ಕೆಳಗೆ ಪಾದದ ತನಕ ಸಾಲಾಗಿ ಜೋಳದ ಗರಿಗಳನ್ನು ಅಂಟಿಸುತ್ತಾರೆ. ಅದು ತಾಯಿಯ ಗರಿಗರಿ ಹಸಿರು ನೆರಿಗೆಯಂತೆ ಕಾಣುತ್ತದೆ. ಉಳಿದಂತೆ ತರತರದ ಹೂವಾಭರಣಗಳನ್ನು ಅಂಟಿಸುತ್ತಾರೆ. ಕತ್ತಿನ ತುಂಬ ಚೆಂಡು ಹೂ ಮಾಲೆ ಅಂಟಿಸುತ್ತಾರೆ. ಮೆರವಣಿಗೆ ಬಂದಾಗ ಮೇಲೆ ಬಂಗಾರದ ಮುಖ ಕೂರಿಸುತ್ತಾರೆ. ಈ ಶೃಂಗಾರ ನೋಡುವವರ ಕಣ್ಣು ತುಂಬುತ್ತದೆ. ಆ ಹೂವು, ಆ ಗರಿ, ಬಂಗಾರದ ಆ ಮುಖ-ತಾಯಿ ಈ ದಿನ ಸಮೃದ್ಧಿ ದೇವತೆಯ ಅವತಾರ ತಾಳಿದಂತಿರುತ್ತದೆ. ಹೀಗೆ ಮೈ ಶೃಂಗಾರವಾಗುವ ಹೊತ್ತಿಗೆ ಸೂರ್ಯೋದಯವಾಗುತ್ತದೆ.
ಬೆಳಗಿನ ಬೆಳಕಿನಲ್ಲಿ, ತಾಯಿಯ ಮರದ ಮೂರ್ತಿಯ ಕೈ ಮುರಿದಿತ್ತಲ್ಲ, ಲಗಮವ್ವನಿಗೆ ಕಂಡಿತು. ಜೀವ ಜಲ್ಲೆಂದಿತು. ಎರಡೂ ಕೈ ಎದೆಯ ಮೇಲಿಟ್ಟುಕೊಂಡು ‘ಅಯ್ಯೋ ತಾಯಿ’ ಎಂದಳು. ನೋಡಿ ಎಲ್ಲರೂ ಗಾಬರಿಯಾದರು. ಮುರಿದ ಕೈ ಖಡ್ಗ ಸಮೇತ ದೂರ ಸಿಡಿದು ಬಿದ್ದಿತ್ತು. ಅದರ ಬಳಿಯಲ್ಲೇ ನೆತ್ತರು ಸೋರ್‍ಯಾಡಿತ್ತು! ಶೃಂಗಾರದ ಸಡಗರದಲ್ಲಿ ತಾವೇ ಕೈಮುರಿದೆವೊ ಎಂದುಕೊಂಡರು. ಹಾಗೆ ನೆನಪಾಗಲಿಲ್ಲ. ತಾಯಿ ಮುನಿದಳು ಎಂದರು. ಅಪಶಕುನ ಎಂದರು. ಲಗಮವ್ವ ಅಡರಾಸಿ ಗೌಡನ ಬಳಿಗೆ ಓಡಿದಳು.
ಗೌಡನ ಮನೆಯಲ್ಲಾಗಲೇ ಹಿರಿಯರು ಸೇರಿದ್ದರು. ಆರತಿಯ ಮುತ್ತೈದೆಯರು ಬಂದಿದ್ದರು. ಶಿಷ್ಯಮಕ್ಕಳು ಡೊಳ್ಳುಬಾರಿಸತೊಡಗಿದ್ದರು. ಕಾಳೀಸಿಂಗ ದಿಕ್ಕಿಗೊಮ್ಮೆ ಮುಖಮಾಡಿ ಕಾಳೀ ಊದಿದ್ದ. ಇನ್ನೂ ದತ್ತಪ್ಪ ಬಂದಿರಲಿಲ್ಲ. ಅಷ್ಟರಲ್ಲಿ ಲಗಮವ್ವ ಓಡಿಬಂದಳು. ಗೌಡನ ಕಿವಿಯಲ್ಲಿ ತಾಯಿಯ ಕೈಮುರಿದ ಸುದ್ದಿ ಹೇಳಿದಳು. ಕೇಳಿ ಗೌಡನ ಕೈಕಾಲಲ್ಲಿಯ ಶಕ್ತಿಯೇ ಉಡುಗಿತು. ಎಲ್ಲರಿಗೆ ಅಲ್ಲೇ ಇರಹೇಳಿ, ದೂರಬರುತ್ತಿದ್ದ ದತ್ತಪ್ಪನಿಗೆ ‘ಬಾ’ ಎಂದಷ್ಟೇ ಸನ್ನೆ ಮಾಡಿ ಗುಡಿಯ ಕಡೆ ಧಾವಿಸಿದ. ಲಗಮವ್ವ ಹಾಗೇ ಬೆನ್ನು ಹತ್ತಿದಳು.
ನೋಡಿ ಆಘಾತವಾಯ್ತು. ಗೌಡ ಲಗಮವ್ವನನ್ನು ನೋಡಿದ. ನಮ್ಮಿಂದ ಆದದ್ದಲ್ಲವೆಂದಳು. ಸದ್ಯ ದೇವೀ ಬರೋತನಕ ಹ್ಯಾಗೋ ಅಂಟಿಸಿ ಆಮೇಲೆ ಸರಿಪಡಿಸಿದರಾಯ್ತೆಂದು ದತ್ತಪ್ಪ ಸೂಚಿಸಿದ. ಬರೋಬರಿಯೆಂದು ಆ ಕೈ ಮೊದಲಿನಂತೆ ಕೂರಿಸಿ ಸಣ್ಣೆಳೆ ಹುರಿಯಿಂದ ಬಿಗಿದರು. ಗೊತ್ತಾಗದಿರಲೆಂದು ಆ ಭಾಗದಲ್ಲೆರಡು ಹೂವಿನ ಮಾಲೆ ಇಳಿಬಿಟ್ತರು. ಹೇಗೆ ಏನು ಮಾಡಿದರೂ ಎದೆ ಹೊಡೆದುಕೊಳ್ಳುವುದು ನಿಲ್ಲಲಿಲ್ಲ. ಮೈಲಿಗೆಯಾಗಿರಬೇಕೆಂದು ಸಂಶಯ ಬಂತು. ಗೌಡ ಲಗಮವ್ವನನ್ನು ಪ್ರತ್ಯೇಕ ಕರೆದು ಕೇಳಿದ. ಅವಳು ಇಲ್ಲವೆಂದು ಕರಿಮಾಯಿ ಆಣೆಮಾಡಿದಳು. ಅಲ್ಲದೆ ಲಗಮವ್ವನೇನೂ ಇದನ್ನೆಲ್ಲ ಅರಿಯದವಳಲ್ಲ, ದೇವರ ಜವಾಬ್ದಾರಿಗಳನ್ನು ಅವಳಿಗೆ ಹೇಳಿಕೊಡಬೇಕಾದ್ದಿದೆಯೆ! ಹಳಹಳಿ ತಡೆಯಲಾರದೆ ಕೇಳಿದ್ದ, ಅಷ್ಟೆ. ಉಳಿದವರನ್ನು ಕೇಳಿದ ಕಣ್ಣಗಲ ಮಾಡಿ. ಅವರು ಹೆದರಿ ಓಡಿಹೋಗಿ ತಾಯಿಯ ಭಂಡಾರ ಮುಟ್ಟಿದರು. ಇದನ್ನು ನಿರ್ಧರಿಸುತ್ತ ಕೂರಲು ಸಮಯವೂ ಇದಲ್ಲ. ದೇವರು ಬರುವುದರೊಳಗೆ ನೆಲ ಸಾರಿಸಿ ಇನ್ನೊಮ್ಮೆ ಮಡಿಯಾಗಿ ಗದ್ದಿಗಿ ಪೂಜೆ ಮಾಡೆಂದು ಲಗಮವ್ವನಿಗೆ ಹೇಳಿ ದತ್ತಪ್ಪ, ಗೌಡ ಹೋದರು.
ಇವರು ಬಾಯಿ ಬಿಟ್ಟು ಆಡದಿದ್ದರೂ ಏನೋ ಅಚಾತುರ್ಯವಾಗಿದೆಯೆಂದು ಕೂಡಿದ ಮಂದಿ, ಅವರ ಮುಖ ನೋಡಿಯೇ ಮನಗಂಡರು. ಗೌಡನ ಮನೆಯಲ್ಲಿದ್ದ ಬಂಗಾರದ ಮುಖವನ್ನು ತಂದು ಪಲ್ಲಕ್ಕಿಯಲ್ಲಿಟ್ಟರು. ಮೆರವಣಿಗೆ ಗೌಡನ ತೋಟಕ್ಕೆ ಹೋಯಿತು. ಅಲ್ಲಿ ಕೂತ ತಾಯಿಯನ್ನು ತಿರುಗಿ ಗುಡಿಗೆ ತರಬೇಕಾದರೆ ನಾಕು ತಾಸು ಹೊತ್ತೇರಿತು.
ಮೆರವಣಿಗೆ ಪೌಳಿಯ ಹತ್ತಿರ ಬರುವಷ್ಟರಲ್ಲಿ ಊರ ಮಂದಿ ಅಲ್ಲಿ ಸೇರಿದ್ದರು. ದುರ್ಗಿ ಬಂದಿರಲಿಲ್ಲ. ಸುಂದರಿ, ಬಸವರಾಜು, ಗುಡಸೀಕರ ಇವರೂ ಬಂದಿದ್ದರು. ಮೋಜು ನೋಡುವುದಕ್ಕೆ ಬಸವರಾಜು ಬಂದಿದ್ದ. ಗುಡಸೀಕರನಿಗೆ ಭಕ್ತಿಯೇನೋ ಇತ್ತು. ಬಸವರಾಜನ ಎದುರಿಗೆ ಅದನ್ನು ತೋರದೆ ಒತ್ತಾಯಕ್ಕೆ ಬಂದ ಹಾಗೆ ಬಂದಿದ್ದ. ಮೆರವಣಿಗೆ ಪೌಳಿಯ ಸಮೀಪಕ್ಕೆ ಬರುತ್ತಿತ್ತು. ಪೂಜಾರಿಯ ಮೈತುಂಬ ಕಂಬಳಿ ಹೊದಿಸಿದ್ದರು. ಪಲ್ಲಕ್ಕಿಯ ಕೋಲಿನ ಮೇಲೆ ಎಡಗೈ ಇಟ್ಟು ತೇಲಾಡುತ್ತಿದ್ದಂತೆ ಮೆರವಣಿಗೆಯಲ್ಲಿ ನಡೆದುಬರುತ್ತಿದ್ದ. ಪೌಳಿಯ ಬಾಗಿಲು ಅಷ್ಟು ದೂರ ಇದೆಯೆಂದು ಹರಕೆ ಹೊತ್ತ ಇಪ್ಪತ್ತು ಮೂವತ್ತು ಭಕ್ತರು ಗಂಡು-ಹೆಣ್ಣುಮಕ್ಕಳೆನ್ನದೆ ಬೆನ್ನು ಮೇಲಾಗಿ ಅಡ್ಡಬಿದ್ದಿದ್ದರು. ಎಲ್ಲರೂ “ಚಾಂಗು ಭಲೇ” ಎಂದು ಕಿರುಚಿ ನಾಗಾಲೋಟದಿಂದ ಗುಡಿಯ ಕಡೆ ಓಡಿದರು. ಡೊಳ್ಳಿನವರು ಡೊಳ್ಳು ಬಾರಿಸುತ್ತ, ಚೌರಿಯವರು ಚೌರಿ ಬೀಸುತ್ತ, ಕಾಡುಕೂಗುಗಳನ್ನು ಕಿರಿಚುತ್ತ ಪೌಳಿಯ ಬಾಗಿಲ ತನಕ ಓಡಿದರು. ದೇವಿಯ ಮಹಿಮೆಯೆಂದರೆ ಇದು; ಅಡ್ಡಬಿದ್ದ ಭಕ್ತರ ಮೇಲೆ ಇಡೀ ಮೆರವಣಿಗೆ ಓಡಿದರೂ ಒಬ್ಬರಿಗೊಂದು ಕಾಲು ತಾಕಲಿಲ್ಲ. ನಿಜ ಹೇಳಬೇಕಂದರೆ ಒಂದು ಹೆಜ್ಜೆ ಇಟ್ಟಿದ್ದರೆ ಅಲ್ಲೇ ಜಿಬ್ಬಿಯಾಗುವಂಥ ಮಕ್ಕಳಿದ್ದವು. ಆ ಹುಚ್ಚು ಓಟದಲ್ಲಿ ಹಾಗೆ ತುಳಿಯುವುದು ಅಸಂಭವವೂ ಅಲ್ಲ. ಇಲ್ಲದಿದ್ದರೆ ಜನರ ಭಕ್ತಿ ಸುಳ್ಳೆ? ‘ಗುಂಡು ತೇಲಿಸುವಾಕೆ, ಚೆಂಡು ಮುಳುಗಿಸುವಾಕಿ’ ಎಂಬ ಲಗಮವ್ವನ ಹಾಡು ಸುಳ್ಳೆ?
ಈ ದಿನ ಅದೇನು ಮಾಯೆಯೋ ಪೌಳಿಯ ಬಾಗಿಲಿಗೆ ಪಲ್ಲಕ್ಕಿ ಬಂದು ಥಟ್ಟನೆ ನಿಂತುಬಿಟ್ಟಿತು. ಪಲ್ಲಕ್ಕಿ ಹೊತ್ತವರು. ಒಳಹೋಗಬೇಕೆಂದರೆ ಕಾಲು ಏಳಲೊಲ್ಲವು! ದೇವರೇಸಿಯ ರಟ್ಟೆಗೆ ಕೈಹಾಕಿ ನಡೆಸಿಕೊಂಡು ಹೋದೇವೆಂದರೂ ಜಗ್ಗಲಿಲ್ಲ. ಎಲ್ಲರಿಗೂ ಭಯ, ಆಶ್ಚರ್ಯವಾಯಿತು. ಇಂಥದ್ದೇನೋ ಆಗುತ್ತದೆಂದು ಗೌಡ, ದತ್ತಪ್ಪ, ಲಗಮವ್ವನಿಗೆ ತಿಳಿದಿತ್ತು. ಒಂದು ಒಡೆಯುವಲ್ಲಿ ಹತ್ತು ತೆಂಗಿನಕಾಯಿ ಒಡೆದರು, ಹತ್ತೂ ದಿಕ್ಕಿಗೆ ಲಿಂಬಿಯ ಹಣ್ಣೆಸೆದರು. ಸಮಾನ್ಯವಾಗಿ ಪಲ್ಲಕ್ಕಿ ಪೌಳಿಗೆ ಬರುತ್ತಲೂ ತಾಯಿ ದೇವರೇಸಿಯ ಮೈತುಂಬುವುದು ವಾಡಿಕೆ. ಆದರೆ ಮೈತುಂಬಿ ಹೀಗೆ ನಿಲ್ಲುವುದಿಲ್ಲ. ಓಡೋಡುತ್ತ ಹೋಗಿ ಕೊಂಡಕ್ಕೆ ಪ್ರದಕ್ಷಿಣೆ ಹಾಕಬೇಕು.
ತೆಂಗಿನ ಕಾಯಿ ನಿಂಬೇಹಣ್ಣಿಗೂ ತಾಯಿ ಜಗ್ಗಲಿಲ್ಲ. ಹೀಗೆಂದೂ ಆಗಿರಲಿಲ್ಲ. ವಾದ್ಯದವರು ಸ್ತಬ್ಧರಾದರು ಮೈತುಂಬಿದ ತಾಯಿ ವಿಚಿತ್ರವಾಗಿ ನಡುಗುತ್ತಿದ್ದಳು. ಗೌಡ ಗಪ್ಪನೆ ತಾಯಿ ಕಾಲು ಹಿಡಿದು “ಮಕ್ಕಳ ತಪ್ಪ ಹೊಟ್ಯಾಗ ಹಾಕ್ಕೊಳ್ಳಽ ಎವ್ವಾ” ಎಂದ. ಜನ ವಿಸ್ಮಯದಿಂದ ಮೂಕರಾಗಿದ್ದರು. ಗೌಡ ಕಾಲು ಬಿಡಲೇ ಇಲ್ಲ. ತಾಯಿ ಬಾಯಿ ಬಿಡಲಿಲ್ಲ. ದತ್ತಪ್ಪನೂ ಬಗ್ಗಿ ಕಾಲು ಹಿಡಿದು “ತಾಯೀ, ಏನ ತಪ್ಪಾಗೇತ್ಯೋ ನಮಗ್ಗೊತ್ತಿಲ್ಲ. ಕೇಳಿದ ತಪ್ಪದಂಡ ಕೊಡತೀವು, ಒಳಗ ಬಾ” ಎಂದ. ತಾಯಿಗೊಮ್ಮೆಲೆ ಆವೇಶ ಬಂದಂತೆ ಕಾಲುಹಿಡಿದವರನ್ನು ತಳ್ಳಿ ಹಾಹಾ ಎಂದು ಕಿರಿಚುತ್ತ ಒಳಕ್ಕೆ ಓಡಿದಳು.
ಸಾಮಾನ್ಯವಾಗಿ ಒಳಗೆ ಹೋದೊಡನೆ ಓಡೋಡುತ್ತಲೇ ಆಗಲಿ, ಕೊಂಡವನ್ನು ಮೂರು ಸಲಿ ಪ್ರದಕ್ಷಿಣೆ ಹಾಕಬೇಕು. ಆಗಲೇ ಮುಡಿಪು ಕಟ್ಟಿಕೊಂಡ ಭಕ್ತರು ಕೆಂಡದಲ್ಲು ಉಪ್ಪು ಸುರಿಯುತ್ತಾರೆ. ಆಮೇಲೆ ತಾಯಿ ಕೊಂಡ ಹಾಯಬೇಕು. ಭಕ್ತಿ ಕಮ್ಮಿಯಾದ ಜನರನ್ನು ಗುರುತಿಸಿ ಓಡಿಹೋಗಿ ಅವರನ್ನು ಎಳೆದು ತಂದು ಕೆಂಡದಲ್ಲಿ ಓಡಾಡಿಸಬೇಕು. ಆ ಮೇಲೆ ಖಡ್ಗದಿಂದ ನಾಲಿಗೆ ಇರಿದುಕೊಳ್ಳುತ್ತಾಳೆ, ಅಲಗಿನಿಂದ ಹೊಟ್ಟೆ ಕಡಿದುಕೊಳ್ಳುತ್ತಾಳೆ. ಬಹುಶಃ ಇದು ನಂಬಿಕೆ ಕಡಿಮೆಯಾಗದಂತೆ ನೋಡಿಕೊಳ್ಳುವ ವಿಧಾನವಿದ್ದೀತು. ಆದರೆ ಭಕ್ತರು ಇದಕ್ಕೆ ಅವಕಾಶ ಕೊಡುವುದಿಲ್ಲ. ಶಾಸ್ತ್ರಾರೀತ್ಯಾ ಒಂದೆರಡು ಸಲ ಅಲಗು ಹಾಯುವುದರೊಳಗೇ ಓಡಿಹೋಗಿ ಅಲಗು, ಖಡ್ಗಗಳನ್ನು ಕಸಿದುಕೊಳ್ಳುತ್ತಾರೆ. ಗೊತ್ತಿದ್ದೂ ತಾಯಿಯ ಪರೀಕ್ಷೆ ಮಾಡುವುದೆಂದರೇನು?
ಈ ಸಲ ಹಾಗಾಗಲಿಲ್ಲ. ತಾಯಿ ಓಡೋಡುತ್ತ ಹೋಗಿ ಗುಡಸೀಕರನ ಹೆಗಲಮೇಲೆ ಕೈಹಾಕಿ ನಿಂತ ಬಸವರಾಜನ ಜುಟ್ಟು ಹಿಡಿದು ದರದರ ಎಳೆದು ತಂದಳು. ಜನ ಹೌಹಾರಿ ಹೋ ಎನ್ನುವುದರೊಳಗೆ ಉಪ್ಪು ಸುರಿಯದ ಕೊಂಡದಲ್ಲಿ ಬಸವರಾಜನನ್ನು ವೀರಾವೇಶದಿಂದ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡಿಸತೊಡಗಿದಳು. ಕೊಂಡದೀಚೆಗೆ ಖಡ್ಗಹಿರಿದು ನಿಂತಿದ್ದವನ ಖಡ್ಗ ಕಸಿದುಕೊಂಡು ಹೊಟ್ಟೆಯ ಮೇಲೆ, ನಾಲಗೆಯ ಮೇಲೆ ಹೊಡೆದುಕೊಳ್ಳುತ್ತ ರಭಸದಿಂದ ಹರಿದಾಡತೊಡಗಿದಳು. ಲಗಮವ್ವನ ಭಾವುಕ ಕಣ್ಣುಗಳಂತೂ ತಾಯಿಯ ಪೂರ್ವೀ ಅವತಾರವನ್ನೇ ಕಂಡವು. ಬಿಟ್ಟಿದ್ದರೇನೇನು ಆಗಲಿತ್ತೋ ಕುಸ್ತಿ ಹುಡುಗರು ಕೆಂಡದ ಕೊಂಡದಲ್ಲೇ ಧುಮುಕಿ ತಾಯಿಗೆ ತೆಕ್ಕೆ ಹಾದು ಬಸವರಾಜನನ್ನು ಬಿಡಿಸಿದರು. ಬಿಟ್ಟಿದ್ದೇ ತಡ ಬಸವರಾಜು ಕೊಂಡದಿಂದ ಜಿಗಿದುಹೋಗಿ ಅಲ್ಲೇ ಕುಸಿದು ಬಿದ್ದ. ಮುಡಿಪು ಕಟ್ಟಿದ ಭಕ್ತರು ಅವಸರವಸರವಾಗಿ ಕೊಂಡದಲ್ಲಿ ಉಪ್ಪು ಸುರಿದರು. ಕೂಡಲೇ ತಾಯಿ ಓಡಿಹೋಗಿ ಮುಳ್ಳಾವಿಗೆಯ ಮೇಲೆ ಹತ್ತಿನಿಂತಳು.
ಗೌಡ ಓಡಿಬಂದು ಕಾಲು ಹಿಡಿದ. ದತ್ತಪ್ಪ ಅವನ ಹಿಂದೆ ಕೂತ. ತಾಯಿಯ ಕೈಗೆ ಆಶೀರ್ವಾದದ ಕಾಯಿ ಕೊಟ್ಟರು. ಕೂಡಿದವರ ಕಿವಿ ಬಿರಿಯುವ ಹಾಗೆ ತಾಯಿ ಕಿಟಾರನೆ ಕಿರಿಚಿದಳು. ಎಲ್ಲರೂ ಸ್ತಬ್ಧರಾದರು. ತಾಯಿ ಬಿಕ್ಕುತ್ತಿದ್ದಳು. ಗಂಟಲಲ್ಲಿ ಸಿಕ್ಕ ನುಡಿ ಹೊರಗೆ ಬರಲಾರದಾಗಿತ್ತು. ಅಪ್ರಿಯವಾದದ್ದನ್ನು ಹೇಳಲಿರುವಂತೆ, ಹೇಗೆ ಹೇಳಲೆಂಬಂತೆ, ಹೇಗೆ ಹೇಳದೇ ಇರಲೆಂಬಂತೆ ತಾಯಿ ಸಂಕಟಪಡುತ್ತಿದ್ದಳು. ಕೊನೆಗೆ ನಿರ್ಧರಿಸಿದಂತೆ-
“ಗೌಡೌಽ”
ಎಂದಳು. ಈಗ ಬಿಕ್ಕಲಿಲ್ಲ. ಸ್ವಲ್ಪ ಹೊತ್ತು ತಡೆದು ಕಾರಣಿಕ ಮುಂದುವರಿಸಿದಳು. “ಗೌಡಾ, ಚಿನ್ನದ ಕೂಸನ್ನ ಕಸಕೊಂಡು ಹೋದಾರು ಹುಷಾರಲೇಽಽ”
-ಎನ್ನುತ್ತ ತೆಂಗಿನಕಾಯಿ ಬಿಟ್ಟಳು. ಸುದೈವದಿಂದ ಕೆಳಗೆ ಬೀಳಲಿಲ್ಲ. ದತ್ತಪ್ಪ ಅದಕ್ಕಾಗೇ ಸಿದ್ಧನಾಗಿದ್ದವನು ಹಿಡಿದುಕೊಂಡ. ತಾಯಿ ಗರ್ಭಗುಡಿ ಹೊಕ್ಕಳು.
ಕಾರಣಿಕದಿಂದ ಯಾರಿಗೂ ಸಂತೋಷವಾಗಲಿಲ್ಲ. ಜನ ಈ ದಿನ ಹೊಯ್ಕಿನ ಸರಮಾಲೆಯನ್ನೇ ಕಂಡಿದ್ದರು. ತಾಯಿ ಪೌಳಿ ಬಾಗಿಲಿಗೆ ನಿಂತದ್ದೊಂದು, ಪ್ರದಕ್ಷಿಣೆ ಹಾಕದೆ ಕೊಂಡ ಹಾಯ್ದಿದ್ದಿನ್ನೊಂದು, ಊರಿಗೇನೂ ಸಂಬಂಧವಿಲ್ಲದ ಬಸವರಾಜೂನನ್ನು ಎಳೆದಾಡಿದ್ದಿನ್ನೊಂದು…..ಬಸವರಾಜು ಏನೋ ತಪ್ಪು ಮಾಡಿರಬೇಕೆಂದು ಕೆಲವರಂದರು. ದೇವೀ ನಿಂದೆ ಮಾಡಿರಬೇಕೆಂದು ಮತ್ತೆ ಕೆಲವರು. ಶಹರದ ಹುಡುಗ, ನಂಬಿಕೆ ಕಡಿಮೆ, ಅದಕ್ಕೇ ಹೀಗಾಯಿತೆಂದು ಇನ್ನು ಕೆಲವರು. ಎಷ್ಟೆಲ್ಲ ಹೇಳಿಕೊಂಡರೂ ಯಾರಿಗೂ ಸಮಾಧಾನವಾಗಲಿಲ್ಲ.
ಬಸವರಾಜನಿಗೆ ಇನ್ನೂ ಜೀವದಲ್ಲಿ ಜೀವ ಇರಲಿಲ್ಲ. ಮೊದಲೇ ಇದು ಗೊತ್ತಾಗಿದ್ದರೆ ಮನಸ್ಸನ್ನು ಆ ರೀತಿ ಅಣಿಗೊಳಿಸಬಹುದಾಗಿತ್ತು. ಅಥವಾ ಬಾರದೇ ಇರಬಹುದಿತ್ತು. ದೇವಿಯ ಬಗ್ಗೆ ಭಕ್ತಿ ಇರಲಿಲ್ಲ ನಿಜ. ಇಷ್ಟೆಲ್ಲ ರಾದ್ಧಾಂತಕ್ಕೆ ಅದು ಹೊಸದಾಗಿ ಹುಟ್ಟುವುದೂ ಅಸಂಭವವೇ. ಉಳಿದೆಲ್ಲರ ಮನಸ್ಸು ಒಂದನ್ನು ಚಿಂತಿಸಿದರೆ ಈತ ಬೇರೆ ರೀತಿ ಯೋಚಿಸುತ್ತ ಗುಂಪಿನಿಂದ ಒಡೆದು ಎರಡನೆಯವನಾಗಿದ್ದ. ಇದು ನಿಜ, ಇಂಥ ಶಿಕ್ಷೆ, ಈ ಅವಮಾನವನ್ನಾತ ನಿರೀಕ್ಷಿಸಿರಲಿಲ್ಲ. ತಾ ಮಾಡಿದ ಯಾವುದೋ ಅಕರ್ಮಕ್ಕೆ ಪಶ್ಚಾತ್ತಾಪ ಪಡುವಷ್ಟು ಸಂಸ್ಕಾರವೂ ಅವನಲ್ಲಿರಲಿಲ್ಲ. ಏನೋ ಮೋಜು ನೋಡಲು ಬಂದಿದ್ದ. ಖುಷಿಯಾಗಿ ತಂಪು ಕನ್ನಡಕ ಹಾಕಿ ಗುಂಪಿನಲ್ಲಿ ದುರ್ಗಿಯನ್ನು ಹುಡುಕುತ್ತ, ನಗಾಡುತ್ತ ನಿಂತಿದ್ದ. ನಿರಾಯುಧನ ಮೇಲೆ ಏಕದಂ ಶತ್ರು ಬಿದ್ದಂತೆ ದೇವರೇಸಿ ಎಳೆದೊಯ್ದು. ಮುಂದೆ ಬಿಡಿಸುವ ತನಕ ಏನಾಯಿತೋ, ಏನಿಲ್ಲವೋ ಒಂದೂ ಗೊತ್ತಾಗಲಿಲ್ಲ. ಅರಿವು ಬಂದದ್ದು ದೇವರೇಸಿ ಬಿಟ್ಟಮೇಲೆಯೇ. ಬಿಟ್ಟಾಗ ಕೈಕಾಲು ನಾಲಿಗೆಯಲ್ಲಿ ಶಕ್ತಿಯಿರಲಿಲ್ಲ. ನಿಂತಲ್ಲೇ ಕುಸಿದಿದ್ದ. ತಾಯಿಯ ಕಾರಣಿಕೆ ಕೇಳುವುದನ್ನು ಬಿಟ್ಟು ಯಾರೂ, ಗುಡಸೀಕರನೂ ಇವನನ್ನು ಉಪಚರಿಸುವ ಗೋಜಿಗೆ ಹೋಗಲಿಲ್ಲ.
ಮುಂಗಾರಿ ಬೆಳೆ ಕುಯ್ಯುವುದಕ್ಕೆ ನಾಳೆಯಿಂದ ಸುರುವಾದ್ದರಿಂದ ಈ ದಿನ ಭಯಂಕರವೆನಿಸುವ ಘಟನೆ ಜರುಗಿಬಿಟ್ಟಿತ್ತು. ನಿಶ್ಚಿಂತರಾದ ಜನಗಳ ಮನಸ್ಸು ಈಗ ನಿಂತಲ್ಲಿ ನಿಲ್ಲದೆ ಚಂಚಲವಾಗಿತ್ತು. ಅಲ್ಲಲ್ಲಿ ಗುಂಪುಗೂಡಿ ಇದನ್ನು ಮಾತಾಡಿಕೊಂಡರು. ಯಾರು, ಎಂಥ ಮುಗ್ಧ, ಮೂರ್ಖ ವಿವರಣೆ ಕೊಟ್ಟರೂ ಜನ ಆಸಕ್ತಿಯಿಂದ ಕೇಳುತ್ತಿದ್ದರು. ಕಾರಣಿಕದ ಅರ್ಥ ಸರಿಯಾಗಿ ತಿಳಿದಿರಲಿಲ್ಲ ಬೇರೆ. ಚಿನ್ನದ ಕೂಸು ಅಂದರೇನು? ಕಸಿದೊಯ್ಯುವವರು ಯಾರು? ಯಾರಿಗೂ ಬಗೆಹರಿಯಲಿಲ್ಲ. ಗೌಡನೋ, ದತ್ತಪ್ಪನೋ, ಲಗಮವ್ವನೋ ಹೇಳಬೇಕು. ಅವರಿನ್ನೂ ಬಾಯಿಬಿಟ್ಟಿರಲಿಲ್ಲ. ಹಿರಿಯರು ಹಿಂದಿನ ಹಬ್ಬಗಳನ್ನು ಸ್ಮರಿಸಿ ಹೀಗೆಂದೂ ಆಗಿರಲಿಲ್ಲವೆಂದರು. ಲಗಮವ್ವನ ಹಾಡುಗಳಿಗೂ ಇಂದಿನ ಸಂಗತಿ ಹೊರತಾಗಿತ್ತು.
ತಾಯಿಯ ಕೈಮುರಿದ ಸುದ್ದಿ ಆಗಲೇ ಹಬ್ಬಿತ್ತು. ನಿಂಗೂ ನೆನ್ನೆ ರಾತ್ರಿ ಹೆಣ್ಣು ದೆವ್ವಿನ ನರಳುವ ದನಿ ಕೇಳಿದ್ದನಲ್ಲ. ಅದೂ ಸುದ್ದಿಯಲ್ಲಿತ್ತು. ಹೆಂಗಸರಂತೂ ಗುಂಪುಗೂಡಿ ಈ ವರ್ಷ ಸತ್ತ ಹೆಂಗಸರನ್ನೆಲ್ಲಾ ಸ್ಮರಿಸಿ ಅವಳು ದೆವ್ವವಾಗಿರಬಹುದೇ? ಇವಳಾಗಿರಬಹುದೇ? ಬಸ್ವಿಗೆ ಮಕ್ಕಳ ಮಾಯೆ, ಚೆಲುವಿಗೆ ಗಂಡನ ಪ್ರೀತಿ ಇತ್ಯಾದಿ ಊಹಿಸುತ್ತಿದ್ದರು. ಯಾಕೆಂದರೆ ಈ ಹಳ್ಳಿಯವರ ನಂಬಿಕೆಯ ಪ್ರಕಾರ ಸಾವಿನಲ್ಲಿ ಇರೋದು ಎರಡೇ ರೀತಿ. ಒಂದು ತೃಪ್ತಿಯಿಂದ ಸಾಯೋದು. ಇನ್ನೊಂದು ಅತೃಪ್ತಿಯಿಂದ ಸಾಯೋದು. ಹಾಗೆ ಸತ್ತ ಮೇಲೆ ಕೂಡ ಸತ್ತವರು ಹೋಗಿ ಸೇರುವುದು ಸ್ವರ್ಗವೋ, ವೈಕುಂಠವೋ, ಕೈಲಾಸದಂಥ ಅದ್ದೂರಿಯ ಸ್ಥಳಗಳಲ್ಲ. ತೃಪ್ತಿಯಿಂದ ಸತ್ತವರು ಜೇನುಹುಳಗಳಾಗಿ ತಾಯಿಯ ಕೈಂಕರ್ಯಕ್ಕೆ ನಿಲ್ಲುತ್ತಾರೆ. ಅತೃಪ್ತರು ಭೂತಗಣಗಳಾಗಿ ನರಳುತ್ತಾರೆ. ಬಹುಶಃ ದತ್ತಪ್ಪನಿಗೊಬ್ಬನಿಗೆ ಮಾತ್ರ, ಅದೂ ಅವನು ಬ್ರಾಹ್ಮಣನಾದುದರಿಂದ ವೈಕುಂಠದ ಆಸೆ ಇತ್ತೋ ಏನೊ!
ಇನ್ನು ಬಸವರಾಜುನ ಬಗ್ಗೆಯೂ ಮಾತು ಬಂತು. ಆತ ತಪ್ಪು ಮಾಡಿರಬಹುದೆಂದು ಯಾರೂ ಕಲ್ಪಿಸಲೇ ಇಲ್ಲ. ಆದರೆ ಅವನಿಗೊಂದು ಮಡಿ ಇಲ್ಲ, ಮೈಲಿಗೆಯಿಲ್ಲ. ದೇವರಂತೂ ಮೊದಲೇ ಇಲ್ಲ. ಹೀಗೆ ಜನ ಯೋಚಿಸಿದಷ್ಟೂ ಅದು ಬಗೆಹರಿಯಲಿಲ್ಲ. ಬಗೆಹರಿಯದಷ್ಟೂ ಅವರು ಯೋಚಿಸುವುದನ್ನು ಬಿಡಲಿಲ್ಲ.
ತಾಯಿಯ ಕರಿಮಾಯೆ ಯಾರ್‍ಯಾರ ಬುದ್ಧಿಗೆ ಏನೇನು ಮುಸುಕು ಹೊದಿಸಿತ್ತೋ ಅವರಿಗೆ ತಿಳಿದಂತೆ, ತಿಳಿದಷ್ಟು ಕಾರಣೀಕದ ಅರ್ಥ ಹೇಳಿದರು, ಕೇಳಿದರು. ಲಗಮವ್ವ ಸಾಮಾನ್ಯಳಲ್ಲ, ಕರಿಮಾಯಿಯನ್ನು ಪ್ರತ್ಯಕ್ಷ ಕಂಡು ಎದುರು ಕೂತು ಮಾತಾಡಿಸಿದವಳು. ಕರಿಮಾಯಿ ಅವಳ ನಾಲಿಗೆಯಲ್ಲಿ ಕೂತು ತನ್ನ ಚರಿತ್ರೆ ಹೇಳಿಸಿದ್ದಳು! ಅವಳಿಗೂ ತೋರುಬೆರಳು ಮೂಗಿನ ಮೇಲಿತ್ತು.
ದತ್ತಪ್ಪನ ಪುರಾಣಮತಿಗೆ ಸೋಲಾಯ್ತು. ಅವನ ಚಿಂತಾಮಣಿಯಲ್ಲೂ ಅರ್ಥ ಸಿಗಲಿಲ್ಲ. ಗೌಡನಿಗೆ ಬುದ್ಧಿಯಿತ್ತು, ವಿವೇಕವಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಅನುಭವವಿತ್ತು. ಈ ಯಾವುದರಿಂದಲೂ ಕಾರಣಿಕದ ಸಮೀಪ ಸುಳಿಯಲಾಗಲಿಲ್ಲ. ಆದರೆ ಇಷ್ಟಂತೂ ಖಾತ್ರಿಯಾಗಿತ್ತು. ದೇವಿಯ ಕೈ ಮುರಿದಿತ್ತು. ಕಾರಣಿಕ ಹೀಗಾಗಿತ್ತು. ಆದ್ದರಿಂದ ಊರಿಗೇನೋ ಅನಿಷ್ಟವಿದೆ. ಆದರೆ ಊರ ಗೌಡನಾಗಿ ದೇವಿಯ ಕೈ ಮುರಿದ ಕಾರಣ ಕಂಡುಹಿಡಿಯಲೇ ಬೇಕಾಗಿತ್ತು. ಬಹುಶಃ ಆಗ ಕಾರಣಿಕದ ಅರ್ಥ ತಿಳಿಯಬಹುದು.
ಇದ್ದುದರಲ್ಲೇ ಮನಸ್ಸು ಹಗುರಾದವಳು ದುರ್ಗಿ. ತಾಯಿ ಗುಡಿ ಹೋಗುವಾಗ ಅವಳು ಅಲ್ಲಿರಲಿಲ್ಲ. ಮೈಲಿಗೆ ಮಾಡಿದ ಭಯ ಇತ್ತು. ತಾಯಿ ತನ್ನನ್ನು ಕೆಂಡದಲ್ಲಿ ಹಾಯಿಸುವುದು ಖಂಡಿತ ಎಂದುಕೊಂಡಿದ್ದಳು.
ಅದಕ್ಕೆ ಅವಳು ಬೇಕೆಂದೇ ತಪ್ಪಿಸಿದ್ದಳು. ಆದರೆ ಸರಪಂಚನನ್ನು ಕೆಂಡ ಹಾಯಿಸುವುದೂ ಅಷ್ಟೇ ಖಂಡಿತವೆಂದುಕೊಂಡಿದ್ದಳು. ತಮ್ಮ ಗುದಮುರಿಗೆಯಲ್ಲೇ ತಾಯಿಯ ಕೈ ಮುರಿದಿದ್ದು ಖಾತ್ರಿಯಾಗಿತ್ತು. ಆದರೆ ದೇವೀ ಹಿಡಿದೆಳೆದದ್ದು ಬಸವರಾಜನನ್ನು! ಇದಕ್ಕೇನನ್ನಬೇಕು? ಹೊಯ್ಕೆನ್ನಲೇ, ತಾಯಿಯ ದಯೆ ಎನ್ನಲೇ, ತಾಯಿಗೂ ತಿಳಿಯಲಿಲ್ಲ ಎನ್ನಲೇ? ದಿನಾ ಎಷ್ಟೊಂದು ಒಟಗುಡುವ ಹುಡುಗಿ ಬಾಯಿಬಿಟ್ಟರೆ ಎಲ್ಲಿ ತಾ ಮಾಡಿದ ತಪ್ಪು ಹೊರ ಹೊಮ್ಮುವುದೋ ಎಂದು ಬಾಯಿ ಹೊಲಿದುಕೊಂಡಿದ್ದಳು.
ಸುಂದರಿಯ ಗುಡಿಸಲಲ್ಲಿ ಅಚಾನಕ ಮೀಟಿಂಗ್ ಸೇರಿತ್ತು. ಬಸವರಾಜನಿಗೆ ಅವಮಾನವಾದುದರಿಂದ ಮಾತಾಡಿಸಲಿಕ್ಕೆ ಬಂದವರಂತೆ ಚತುಷ್ಟಯರು ಸೇರಿದ್ದರು. ಅವನನ್ನು ದೇವಿ ಯಾಕೆ ಎಳೆದಳೆಂಬುದರ ಬಗೆಗೆ ಗುಡಸೀಕರನಿಗೇನೋ ಸ್ಪಷ್ಟವಾಗಿತ್ತು: ಬೆಳಗಾವಿಯವ, ನಂಬಿಕೆಯಿಲ್ಲದವ, ಈ ಊರಲ್ಲಿನ್ನೂ ಹೊಂದಿಕೊಳ್ಳದವ ಇತ್ಯಾದಿ. ಅದನ್ನೇ ಆತ ಹೇಳುತ್ತಿದ್ದ. ಚತುಷ್ಟಯರಿಗೆ ಕೆಡುಕೆನಿಸಲಿಲ್ಲ. ಖುಶಿಯೂ ಆಗಿರಲಿಲ್ಲ. ಲೋಕಾರೂಢಿ ಆಡಿದರು. ಎಲ್ಲರೂ ಮಾತಾಡುವುದಾದಮೇಲೆ ಬಸವರಾಜ ಮೆಲ್ಲನೆ ಮಾತು ಬಿಚ್ಚಿದ: ‘ಮುಂದಿನ ಎಲೆಕ್ಷನ್ನ್‌ನಲ್ಲಿ ಸರಪಂಚನಿಗೆ ತನ್ನ ಸಹಾಯ ಬೇಕೇ ಬೇಕು. ಅದಾಗಲೇ ಗೌಡನಿಗೆ ಗೊತ್ತಾಗಿದೆ. ಈಗಿನಿಂದಲೇ ಬಂದೋಬಸ್ತ್ ಮಾಡಿದರೆ ಮುಂದೆ ನಾನೇನು ತಂತ್ರ ಮಾಡಿದರೂ ಜನರ ಮನಸ್ಸಿಗೆ ನಾಟಿರಬಾರದು. ಅದಕ್ಕೇ ದೇವಿಯಿಂದ ಈ ರೀತಿ ಎಳೆಸಿದ್ದು, ಇದಂತೂ ಸ್ಪಷ್ಟವಾಗಿ ಹೇಳಿ ಮಾಡಿಸಿದ ಕೆಲಸ’!
ಎಲ್ಲರಿಗೂ ಈ ತರ್ಕ ಕೂಡಲೇ ಖಾತ್ರಿಯಾಯ್ತು. ಗುಡಸೀಕರನಿಗೆ ಇನ್ನೂ ಹೆಚ್ಚು. ತಮಗೆ ಗೊತ್ತಾಗದಂತೆ ಎಂಥಾ ‘ಟ್ರಿಕ್ಕು’ ಮಾಡಿದ್ದಾರಲ್ಲಾ! ಒಳಗೆ ಸುಂದರಿ ಖಿಖ್ಖ್ ಎಂದು ನಕ್ಕಳು.
ಇವರ ಮಾತುಕತೆಯಲ್ಲಿ ಸುಂದರಿಗೆ ಆಸಕ್ತಿಯಿರಲಿಲ್ಲ. ಒಳಗೆ ಹಾಸಿಗೆಯ ಮೇಲೆ ಬಿದ್ದುಕೊಂಡು ಧೇನಿಸುತ್ತಿದ್ದಳು. ದೇವರೇಸಿ ಎಲ್ಲರನ್ನು ಬಿಟ್ಟು ಬಸವರಾಜೂನನ್ನು ಹಿಡಿದೆಳೆದಿದ್ದು ಅವಳಿಗೂ ಆಶ್ಚರ್ಯವಾಗಿತ್ತು. ಅವನ ಹಿಂದು ಮುಂದನ್ನ ಬಲ್ಲವಳು, ನಿಂಗೂನೊಂದಿಗೆ ಆತ ದುರ್ಗಿಯ ವಿಷಯ ಪ್ರಸ್ತಾಪಿಸಿದ್ದನ್ನ ಕದ್ದು ಕೇಳಿದ್ದಳು. ನಿನ್ನೆ ರಾತ್ರಿಯಷ್ಟೇ ಅವನ ಚಡ್ಡಿಗೆ ಹಸಿ ರಕ್ತ ಅಂಟಿದ್ದನ್ನ ನೋಡಿದ್ದಳು. ಜನ ಮೈಲಿಗೆಯ ಮಾತಾಡಿದ್ದನ್ನು, ದೇವಿಯ ಕೈ ಮುರಿದದ್ದನ್ನು ಕೇಳಿದ್ದಳು. ಆದ್ದರಿಂದ ಅವನಿಗಾದ್ದದ್ದು ಸರಿಯಾದ ಶಿಕ್ಷೆಯೇ. ಆದರೆ ಕಳ್ಳನನ್ನು ಊರಹೊರಗಿನ ದೇವಿ ಪತ್ತೆ ಮಾಡಿದ್ದು ಹೇಗೆ? ಹೀಗೆ ಚಿಂತಿಸುತ್ತಿದ್ದಾಗ ಹೊರಗಡೆ ಬಸವರಾಜು ಎಲೆಕ್ಷನ್‌ಗಾಗಿ ಗೌಡನೇ ಹೀಗೆಲ್ಲ ಮಾಡಿಸಿದ್ದನೆಂದು ಹೇಳುತ್ತಿದ್ದ. ಕೇಳಿ ನಗು ತಡೆಯಲಾಗಲಿಲ್ಲ. ನಗುತ್ತಲೇ ಎದ್ದು ಹೊರಗೆ ಬಂದಳು. ಯಾರನ್ನೂ ಮಾತಾಡಿಸದೆ ಅವರ ಮುಂದಿದ್ದ ಸೆರೆಯ ಬಾಟ್ಲಿ ತಗೊಂಡು ಮೊದಲಿನ ನಗೆಯಲ್ಲಿ ಇನ್ನೊಂದು ಲಯ ಬೆರೆಸಿ ಒಳಕ್ಕೆ ಸುಳಿದಳು. ಬಸವರಾಜು ಗೆಲುವಿನಿಂದ ಸಿಗರೇಟು ಹೊತ್ತಿಸಿದ.

ಅಡ್ಡಮಳೆ

ಶಿವನಿಂಗ ಗೌಡನ ಮಗನೆಂದಲ್ಲ; ಸ್ವಂತ ಛಾತಿ ಇದ್ದವನು. ಯಾರಿಗೊಂದು ಅಂದವನಲ್ಲ, ಆಡಿಸಿಕೊಂಡವನಲ್ಲ, ತಾನುಂಟೋ ತನ್ನ ಹೊಲ ಮನೆಯುಂಟೋ. ಎದುರಾಡಿದವನಲ್ಲ. ಕಣ್ಣೆತ್ತಿ ಒಬ್ಬರ ಮುಖ ದಿಟ್ಟಿಸಿ ನೋಡಿದವನಲ್ಲ, ವಾಚಾಳಿಯಲ್ಲ, ಮುಂಗುಲಿ, ಗುಬ್ಬಿ, ಗಿಳಿಗಳನ್ನು ಹಿಡಿದು ಸಾಕುವುದರಲ್ಲಾಯಿತು. ಹಕ್ಕಿ ಹಾಗೂ ಕಾಡುಪ್ರಾಣಿಗಳಂತೆ ಕೂಗುವುದರಲ್ಲಾಯಿತು; ಮರಹತ್ತಿ ಕೋತಿಗಳಂತೆ ನೆಗೆದಾಡುವುದರಲ್ಲಾಯಿತು; ಅದಕ್ಕೇ ಅವನ ತಾಯಿ ಶಿವಸಾನಿ, ‘ಇವನೆಂದು ಮನುಷ್ಯರೊಳಗೆ ಬೆರೆಯುತ್ತಾನೋ!’ ಎಂದುಕೊಳ್ಳುತ್ತಿದ್ದಳು. ಹೆಂಗಸರನ್ನು ಕಂಡಾಗಲಂತೂ ಹುಡುಗ ಆಮೆಯ ಥರ ಒಳಗೊಳಗೆ ಇಂಗಿ ಸಂಕೋಚಗೊಳ್ಳುತ್ತಿದ್ದ. ಕೆರೆಯಲ್ಲಿ ಮುಳುಗುತ್ತಿದ್ದ ಸುಂದರಿಯನ್ನು ಬದುಕಿಸಿದಾಗ ಕೆಲವರು ಗುಡಸೀಕರನ ಮೇಲಿನ ಸಿಟ್ಟಿನಿಂದ ಹಾಗೆ ಮಾಡಬಾರದಿತ್ತು ಎಂದಿದ್ದರು. ಆದರೆ ದತ್ತಪ್ಪ ಭೇಶ್ ಅಂದಿದ್ದ. ಎಷ್ಟೆಂದರೂ ‘ಗೌಡನ ಬೀಜ’, ಎಂದಿದ್ದಳು ಲಗಮವ್ವ.
ತನ್ನ ಜೀವ ಉಳಿಸಿದ ಧೀರ ಬಾಲಕನನ್ನು ಸುಂದರಿ ಆಗಾಗ ಧ್ಯಾನಿಸುತ್ತಿದ್ದಳು. ಗುಡಸೀಕರನ ತೋಟದ ಕಡೆ ಹೋದರೆ, ಪಕ್ಕದಲ್ಲೇ ಅವರ ತೋಟ, ಅಲ್ಲಿರುತ್ತಿರಲಿಲ್ಲ. ಊರಲ್ಲಿ ಹಾದಾಡುವಾಗಲೂ, ನೀರು ತರುವಾಗಲೂ, ಯಾವಾಗಲೂ ಹೊರಬಿದ್ದಾಗಲೂ ಹುಡುಕಿದ್ದಳು. ಊರ ಬಾಲೆಯರಿಗೇ ಅಪರೂಪವಾದ ಹುಡುಗ ಇವಳಿಗೆಲ್ಲಿ ಸಿಕ್ಕಾನು? ಸುದ್ದಿಯವನಲ್ಲ, ಬೇಲಿ ಜಿಗಿದವನಲ್ಲ, ತೋರುಬೆರಳಿಗೆ ಗುರಿಯಾದವನಲ್ಲ, ಅವ್ವಾ ಎಂಥಾ ಗಂಭೀರ ಇದ್ದಿದ್ದಾನ! ಎಂದುಕೊಂಡಿದ್ದಳು. ಇನ್ನೇನು ಬೇಡ, ಒಮ್ಮೆ ಸಿಕ್ಕರೆ, ‘ಎಪ್ಪಾ ಉಪಕಾರಾತೊ’ ಎಂದಾದರೂ ತನ್ನ ಕೃತಜ್ಞತೆ ಹೇಳುವ ಮನಸ್ಸಾಗಿತ್ತು. ಆ ಅವಕಾಶವೂ ಸಿಕ್ಕಿತು.
ಒಂದು ದಿನ ಇನ್ನೂ ಇಳಿಹೊತ್ತಾಗಿರಲಿಲ್ಲ. ಆಕಾಶದಲ್ಲಿ ಅಡ್ಡಮಳೆಯ ದಟ್ಟ ಮಳೆಯ ಮೋಡಗಳು ಕಟ್ಟಿ ಸೂರ್ಯನನ್ನು ಮುಚ್ಚಿ, ಗುಡ್ಡದೋರೆಯಲ್ಲಿ ನೆಲ ಕಂಡು ಹುಬ್ಬು ಹಾರಿಸುವಂತೆ ಮಿಂಚುತ್ತಿದ್ದವು. ಕೊಯ್ಲಿಗೆ ಸಿದ್ಧವಾಗಿ ಬೆಳೆದ ಮಾಗಿ ಹಾಗೇ ನಿಂತಿತ್ತು. ಇನ್ನೇನು ನಾಕಾರು ದಿನಗಳಲ್ಲಿ ದೀಪಾವಳಿ ಹಬ್ಬವಾಗಿ ಬೆಳೆ ಕೈಗೆ ಬರಬೇಕಷ್ಟೆ. ಈಗ ಮಳೆಯಾದರೆ ಕೈಗೆ ಬಂದೂ ಬಾರದ ಹಾಗೆ. ರೈತರು ಹಿಂಡುಗಟ್ಟಿ ಹೊಲಗಳಿಗೆ ಹೋಗುವುದು ಈಗ ಕಡಿಮೆ. ಹೋದರೂ ಒಬ್ಬಿಬ್ಬರು ಮೇವಿಗೆ, ಕಾಯಿಪಲ್ಲೆ, ದನ ಮೇಯಿಸಲಿಕ್ಕೆ ಹೋಗಬೇಕಷ್ಟೆ. ಮೋಡ ಕಟ್ಟಿದೊಡನೆ ರೈತರು ಹುಬ್ಬಿಗೆ ಕೈಹಚ್ಚಿ ಆಕಾಶದ ಕಡೆ ದೈನಾಸದಿಂದ ನೋಡಿದರು. ತಂಗಾಳಿ ಸೂಸತೊಡಗಿತ್ತು. ಶೀಗೀ ಹುಣ್ಣಿವೆಯ ಬುಟ್ಟಿಯೊಳಗಿಂದ ಬರುವ ಚಳಿಗಾಳಿ ಇದಾಗಿರಲಿಲ್ಲ. ಮಳೆ ಬರುವುದೇ ಖಾತ್ರಿಯಾಗಿ ಹಳಹಳಿಸುತ್ತ ರೈತರು ದನ ಬಿಚ್ಚಿಕೊಂಡು ಊರ ಕಡೆ ತೆರೆಳಿದರು. ಗುಡಿಸಲು ಕಟ್ಟಿದ್ದವರು ಅಲ್ಲೇ ಉಳಿದರು. ಈ ಅಡ್ಡಮಳೆಯಿಂದಾಗಿ ಕರಿಮಾಯಿಯ ಕೋಪ ಸ್ಪಷ್ಟವಾಗಿತ್ತು. ತೋಟದ ಗುಡಿಸಲಲ್ಲಿ ಶಿವನಿಂಗ ಒಬ್ಬನೇ ನಾರಿನಿಂದ ಹುರಿ ಹೊಸೆಯುತ್ತ ಕೂತಿದ್ದ. ಪಕ್ಕದ ಗುಡಸೀಕರನ ತೋಟದಲ್ಲಿ ಚಿಮಣಾ ಇದ್ದಂತಿತ್ತು. ಸಿನಿಮಾ ಹಾಡು ಗೊಣಗುತ್ತಿದ್ದಳೆಂದು ತೋರುತ್ತದೆ. ಅಥವಾ ಅದು ಚಿಮಣಾಳ ಹಾಡೇ ಆಗಬೇಕಿರಲಿಲ್ಲ. ಯಾಕೆಂದರೆ ಬಸವರಾಜೂನ ರೇಡಿಯೋ ಕೂಡ ಹಾಡುತ್ತಿದ್ದುದು ಹಾಗೇ, ಇದ್ದಕ್ಕಿದ್ದಂತೆ ಹಾಡು ನಿಂತಿತು. ಹಾಡಿದರೂ, ಹಾಡದಿದ್ದರೂ ಅದರಿಂದ ಇವನಿಗೇನಾಗಬೇಕಾಗಿದೆ? ಹೊಸೆಯುತ್ತ ಕೂತ.
ಅಷ್ಟರಲ್ಲಿ ಸಮೀಪ ನಿಂತು ಯಾರೋ ತನ್ನನ್ನು ಗಮನಿಸುತ್ತಿದ್ದಾರೆನಿಸಿತು. ಕತ್ತೆತ್ತಿ ನೋಡಿದ. ಎದುರಿಗೆ ಚಿಮಣಾ ನಿಂತಿದ್ದಳು. ಹೊಯ್ಕಾಯಿತು. ಗಂಟಲೊಣಗಿ ಎದೆ ಧಸ್ಸೆಂದಿತು. ಬಂದವಳು ಯಾರೇ ಆಗಿರಲಿ ತನ್ನ ಗುಡಿಸಲಿಗೆ ಬಂದಿರೋಣದಿಂದ ಮಾತಾಡಿಸಬೇಕಾದವನು ತಾನಲ್ಲವೆ? ಹಿಡಿದ ಹುರಿ ಕೈಯಲ್ಲೇ, ಮೂಡಿದ ಮಾತು ಗಂಟಲಲ್ಲೇ, ಹೊಯ್ಕಿನ ಭಂಗಿಯಲ್ಲೇ ಹಾಗೇ ಕೂತ. ಹುಡುಗನ ಬೆರಗಿಗೆ ಚಿಮಣಾ ಕುಲುಕುಲು ನಕ್ಕಳು.
“ಒಬ್ಬನಽ ಏನ ಮಾಡಾಕ ಹತ್ತೀದಿ?” ಅಂದಳು. ಶಿವನಿಂಗ ಮಾತಾಡಲಿಲ್ಲ. ಕೈ ಮುಂದೆ ಮಾಡಿಹುರಿ ತೋರಿಸಿದ ಅಷ್ಟೆ, “ಅಲೀ ನೋಡೋಣು” ಎನ್ನುತ್ತ ಅವನ ಬಳಿಗೆ ಹೋದಳು. ತಕ್ಷಣ ಹಾವು ಕಂಡಂತೆ ದೂರ ಸಿಡಿದ. ಚಿಮಣಾ ಖಿಖ್ಖೆಂದು ನಕ್ಕಳು. ಎಂಥಾ ಹುಚ್ಚು ಹುಡುಗ ಎಂದುಕೊಂಡಳು. ಆ ಹುಚ್ಚುತನ ಸೂಜಿಗಲ್ಲಿನಂತೆ ಅವಳನ್ನೆಳೆಯಿತು. ಹುಡುಗ ತಬ್ಬಿಬ್ಬಾಗಿ ಇನ್ನೂ ದೂರ ನಿಂತಿದ್ದ. ಇವನನ್ನು ಮುಟ್ಟುವುದಿರಲಿ, ಮಾತಿಗೆಳೆಯುವುದೂ ಕಷ್ಟ. ಅವಳು ನಿಂತಷ್ಟೂ ಇವನ ಪೆದ್ದುತನ ಹೆಚ್ಚಿತು. ಪೆದ್ದುತನ ಕಂಡಷ್ಟೂ ಇವಳ ಉಮೇದಿ ಉಕ್ಕಿತು.
“ಅಲ್ಲಾ, ಹೊಲದಾಗ ಸೇಂಗಾ ಇದ್ದರ ಸುಟ್ಟುಕೊಡಬಾರದ?” ಎಂದಳು. ಶಿವನಿಂಗ ತೋಟದ ಅಂಚಿನ ಕಡೆ ಕೈಮಾಡಿ ತೋರಿಸಿ ಈಗಲೇ ಸುಟ್ಟುಕೊಡಬೇಕೆಂದು ಉತ್ಸಾಹದಿಂದ ಆ ಕಡೆ ನಡೆದ. ಚಿಮಣಾ ಅವನ ಹಿಂದಿನಿಂದಲೇ ನಡೆದಳು. ಈಗ ಓಡತೊಡಗಿದ. ಚಿಮಣಾ ಒಂದು ಹೆಜ್ಜೆ ಹಾಕಿದರೆ, ಇವನು ಹತ್ತು ಹೆಜ್ಜೆ ಧಾವಿಸುತ್ತಿದ್ದ. ತೋಟಕ್ಕಂಟಿ ಹಳ್ಳ, ಹಳ್ಳದಾಚೆ ಜೋಳದ ಹೊಲ, ಹೊಲದಂಚಿಗೆ ಸೇಂಗಾ ಬೆಳೆ-ಸುಮಾರು ಹತ್ತು ಕೂರಿಗೆ ನೆಲವನ್ನು ಹೀಗೆ ಕ್ರಮಿಸಿದರು.
ಶಿವನಿಂಗ ಪಸಪಸ ಹತ್ತು ಬಳ್ಳಿ ಕಿತ್ತ. ಕಾಯಿ ಹರಿದ. ಓಡಿಹೋಗಿ ಕೊರೆ ಬೇಲಿ ತಂದ, ಕೂಡಿಟ್ಟು ಮೇಲೆ ಸೇಂಗಾ ಸುರಿದ. ಬೆಂಕಿಗಾಗಿ ಸುತ್ತ ನೋಡಿದ. ದೂರ ಮರಡಿಯ ಓರೆಯಲ್ಲಿ ಹೊಗೆ ಹಾಯುತ್ತಿತ್ತು. ಓಡಿಹೋದ. ಹುಡುಗನ ಕಾಲಲ್ಲಿ ಕುದುರೆಯ ಗೆರೆಯಿದ್ದವೋ ಏನೋ! ನೋಡು ನೋಡುವುದರಲ್ಲಿ ಗುರಿಮುಟ್ಟಿದ. ಚಕಪಕ ಮಿಂಚಿನ ವೇಗದಲ್ಲಿ ಸಂಚರಿಸಿ ಕುಳ್ಳು ಬೆಂಕಿ ತಂದು ಹಚ್ಚಿದ. ದೂರ ಕೂತುಕೊಂಡು ಇವನನ್ನೇ ನೋಡುತ್ತಿದ್ದ ಚಿಮಣಾ “ಅದ್ಯಾಕೆ ಅಲ್ಲಿ ಬೆಂಕಿ?” ಎಂದು ಮರಡಿಯ ಕಡೆ ಕೈಮಾಡಿ ಕೇಳಿದಳು. ಕೇಳಿಸಿತೋ, ಕೇಳಿಸಿಲ್ಲವೋ ಎಂಬಂತೆ “ಲಗಮವ್ವನ ಸೆರೇದ ಭಟ್ಟಿ” ಅಂದ. ಸೆರೆ ಅಂದೊಡನೆ ಅವಳ ಬಾಯಿ ನೀರೂರಿತು.
“ಹೋಗಿ ಸೊಲಪ ಕುಡದ ಬರೋಣು ಬಾರಲಾ” ಎಂದಳು. ಇಷ್ಟು ಕೇಳಿದ್ದೇ ಯಾಕೆಂಬುದಿಲ್ಲ, ಏನೆಂಬುದಿಲ್ಲ. ಶಿವನಿಂಗ ಆ ಕಡೆ ಓಡತೊಡಗಿದ. ಇವಳಿಗಾಶ್ಚರ್ಯವಾಯ್ತು. ಅಷ್ಟು ದೂರ ಹೋದ ಮೇಲೆ ಸೆರೆ ತರಲಿಕ್ಕೆ ಓಡಿದನೆಂದು ಗೊತ್ತಾಯ್ತು. ಇವಳೂ ಬೆನ್ನುಹತ್ತಿದಳು. ಸಕಾಲಕ್ಕೆ ಇವಳು ಅಲ್ಲಿ ಮುಟ್ಟದಿದ್ದರೆ ಕಾಯ್ದ ಇಡೀ ಹರವಿಯನ್ನೇ ಹೊತ್ತು ತರುತ್ತಿದ್ದನೋ ಏನೋ!
ಮೆಳೆಯ ಮರೆಯಲ್ಲಿ ತಗ್ಗಿನಲ್ಲೊಂದು ಹರವಿಯಿಟ್ಟು ಬೆಂಕಿ ಹಚ್ಚಲಾಗಿತ್ತು. ಹರವಿಯ ಮೇಲೆ ದೊಡ್ಡ ಹರಿವಾಣ ಮುಚ್ಚಲಾಗಿತ್ತು. ಅದು ಲಗಮವ್ವನ ಸೆರೇದ ಭಟ್ಟಿ. ಹೇಳಿಕೊಂಡರಾಯ್ತೆಂದು ಹರವಿ ಬಗ್ಗಿಸಿ ಹರಿವಾಣ ತುಂಬಿದ. ಭಕ್ತಿಯಿಂದ ಸುಂದರಿಗೆ ಕೊಟ್ಟ. ಹದವೇರಿ ಸುಮಾರು ಹೊತಾಗಿದ್ದರಿಂದ, ಅಪರೂಪ ರುಚಿಯ ಉಗುರು ಬೆಚ್ಚಗಿನ ದೇಸೀ ಸೆರೆ ನಾಲಗೆಗೆ ಆಪ್ಯಾಯಮಾನವಾಗಿ ಗಟಗಟ ಹೀರಿದಳು. ಹೀರಿ ಮತ್ತೆ ಒಡ್ಡಿದಳು. ಮತ್ತೆ ತುಂಬಿದ. ಮತ್ತೂ ತುಂಬಿದ. ಮೂರಕ್ಕೆ ಡರ್ರ್ ಎಂದು ಗಂಡಸಿನಂತೆ ಡರಿಕೆ ತೇಗಿ ನೀ ಕುಡಿ ಎಂದು ಸನ್ನೆ ಮಾಡಿದಳು. ಒಲ್ಲೆನೆಂದ.
ಸೇಂಗಾ ಸುಟ್ಟಲ್ಲಿಗೆ ಬಂದು ಗುಡುಗುಟ್ಟುವ ಮೋಡವೆನ್ನದೆ. ಎದುರಿಗಿನ ಹುಡುಗನನ್ನು ನೋಡದೆ, ಎರಡೂ ಕಾಲು ಆರಹಾಕಿದಂತಿಟ್ಟು, ಅಂದರೆ ಕರಿಮಾಯಿಯ ಭಂಗಿಯಲ್ಲಿ ಕೂತು, ಪಚಪಚಾ ಸೇಂಗಾ ತಿಂದಳು. ಶಿವನಿಂಗನ ನೆನಪಾಯ್ತು. ಅವನ ಕಡೆ ತೇಲುಗಣ್ಣಾಡಿಸಿದಳು. ತಿನ್ನದೆ, ತಿನ್ನುವುದನ್ನೇ ನೋಡುತ್ತ ಕೂತಿದ್ದವನು ಈಗ ನಾಚಿ ಮುಖ ಕೆಳಗೆ ಹಾಕಿದ. ಇನ್ನೇನು ನಾಳಿಯೋ, ನಾಡಿದ್ದೋ ಪ್ರಾಯ ಬರಬೇಕು. ಎಸಳು ಎಸಳಾಗಿ ಜಾತ್ಯಾ ಹೋರಿಯಂತೆ ಬೆಳೆದಿದ್ದ. ಗೆರೆ ಬರೆದಂತೆ ಚಿಗುರುಮೀಸೆ; ಈಗಷ್ಟೇ ಒಡೆದ ಹಾಗೆ. ಕೆನ್ನೆ ಮುಖ ಮಿರಿಮಿರಿ ಮಿಂಚಿ ಗೌಡನ ಪ್ರಾಯ ನೆನಪಿಸುತ್ತಿದ್ದ. ಇಷ್ಟಗಲ ಹೊಳೆ ಹೊಳೆವ ಕದ್ದುನೋಡುವ ಬೆರಗಿನ ಕಣ್ಣಿನ ಚೆಲುವನನ್ನು ನೋಡಿ ನಕ್ಕು ಎರಡೂ ಕೈ ಮೇಲೆತ್ತಿ ಹಾ ಎಂದು ಆಕಳಿಸಿ ಮೇಲೆದ್ದಳು. ಮಳೆ ಸಣ್ಣಾಗಿ ಹನಿಯತೊಡಗಿತ್ತು.
ಶಿವನಿಂಗ ಮುಂದೆ ಮುಂದೆ ನಡೆದ. ಇವಳಿಗೋ ಸಮತೋಲ ಉಳಿಯಲೊಲ್ಲದು, ನಡಿಯಲಾರೆ, ನಿಲ್ಲಲಾರೆ; ತೂರಾಡುತ್ತ, ತಪ್ಪು ಹೆಜ್ಜೆಯಿಡುತ್ತ ನಡೆದಳು. ಅಷ್ಟು ದೂರ ನಡೆಯುತ್ತಿದ್ದವನು ಬಿದ್ದಾಳೆಂದು ಮತ್ತೆ ಹಿಂದೆ ಬರುತ್ತಿದ್ದ, ನಿಲ್ಲುತ್ತಿದ್ದ. ದೊಡ್ಡ ಹನಿಯ ಮಳೆ ಜೋರಾಗಿ ಸುರಿಯತೊಡಗಿತು. ಹುಡುಗ ಓಡುತ್ತಿದ್ದ, ಹಿಂದಿರುಗಿ ನಿಲ್ಲುತ್ತಿದ್ದ. ಇಬ್ಬರೂ ಆಗಲೇ ಒದ್ದೆಯಾಗಿದ್ದರು.
ಸೇಂಗಾ ಬೆಳೆ ದಾಟುವುದು ಕಷ್ಟವಾಗಲಿಲ್ಲ. ಜೋಳದ ಬೆಳೆಯಲ್ಲಿ ಹೊಕ್ಕಾಗ ಸಮತೋಲ ಹಿಡಿಯಲಾರದೆ ಬೆಳೆಯ ಮೇಲೆ ಬೀಳುತ್ತ ಏಳುತ್ತ ನಡೆದಳು. ಮೊದಲೇ ಎರೇ ನೆಲ, ನೀರು ಹರಿದಾಡಿ ಕೆಸರು ಜಾರಿಕೆಯಾಗಿತ್ತು. ಸರ್ರನೆ ಜಾರಿ, “ಎವ್ವಾ” ಎಂದು ಬಿದ್ದಳು. ಶಿವನಿಂಗ ಓಡಿಬಂದು ದೂರದಲ್ಲೇ ನಿಂತ. ಸೀರೆ ಕೆಸರಾಗಿತ್ತು. ಸಾವರಿಸಿಕೊಂಡೆದ್ದಳು. ಮೇಲೆ ಮಳೆ ಸುರಿಯುತ್ತಿತ್ತು. ಒಳಗೆ ಹೊಟ್ಟೆಯಲ್ಲಿ ಸೆರೆ ನೆತ್ತಿಗೇರಿ ತುಳುಕುತ್ತಿತ್ತು. ಹಾಗೇ ನೆತ್ತಿಯ ಮೇಲೆ ಎರಡೂ ಕೈ ಹೊತ್ತು ತಪ್ಪು ಹೆಜ್ಜೆ ಹಾಕುತ್ತಲೇ “ಎಲ್ಲಿ ಕಾಣೆಲ್ಲಿ ಕಾಣೆ” ಎಂದು ಹಾಡು ತೊದಲುತ್ತಲೇ ಕುಣಿಯತೊಡಗಿದಳು. ಸುತ್ತಲ ಬೆಳೆ ಅವಳ ಕುಣಿತದ ಧಡಪಡಿಕೆಗೆ ಅತ್ತಿತ್ತ ವಾಲಿತು. ಎದೆ ಸೆರಗು ಜಾರಿ ಸೊಂಟಕ್ಕಂಟಿದ ಸೀರೆ ಇನ್ನೇನು ಕಳಚಲಿತ್ತು. ಶಿವನಿಂಗ ಗಾಬರಿಯಾಗಿ ಹಿಂದಿರುಗಿ ಗುಡಿಸಲ ಕಡೆ ಓಡುವುದಕ್ಕೆ ಒಂದೆರಡು ಹೆಜ್ಜೆ ಧಾಪುಗಾಲು ಹಾಕಿದ್ದ. ಅಷ್ಟರಲ್ಲೇ ಸುಂದರಿ ಓಡಿಹೋಗಿ ಜೋರಿನಿಂದ ಅವನ ಸೊಂಟದ ಮೇಲೆ ಒದ್ದಳು. ಹುಡುಗ ಅನಿರೀಕ್ಷಿತ ಒದೆಗೆ ತತ್ತರಿಸಿ ಬಕ್ಕಬರಲೆ ಬೆನ್ನುಮೇಲಾಗಿ ಬಿದ್ದು ಕೆಸರು ಮುಕ್ಕಿದ. ಗಕ್ಕನೆ ಅಂಗಾತ ಹೊರಳಿ ಚಿಮಣಾಳನ್ನು ನೋಡಿ ಅವಾಕ್ಕಾದ! ಸೀರೆ ಜಾರಿತ್ತು. ತುಂಬಿಕೊಂಡ ಕೆಂಪು ಕೆಂಪಾದ ತೊಡೆಯ, ಒತ್ತೊತ್ತಿ ತಿಟಗುಡುವ ಕೆಂಪು ಚಡ್ಡಿಯ ತಳ್ಳಿಕೊಂಡು ಉಬ್ಬಿದ ದುಂಡುದುಂಡಾದ ನಿತಂಬ. ಸಣ್ಣ ನಡು, ಬಿಗಿದ ಕುಬಸದ ಕಟ್ಟಿಗೊಗ್ಗದ ಉಬ್ಬಿದೆದೆ- ಹೂನಗೆ ನಗುತ್ತ ತೊದಲಿ ಹಾಡುತ್ತ ತೇಲುಗಣ್ಣು ಮೇಲುಗಣ್ಣಾಗಿ ಕುಣಿಯುತ್ತಿದ್ದಳು. ಮೈಯಲ್ಲಿ ಬೆಂಕಿ ಹರಿದಾಡಿ ಸೊಂಟದಿಕ್ಕಟ್ಟಿನ ಹುರಿ ಬಿಗಿದು ಅಳ್ಳಳ್ಳಾಯ ಹೋರಿ ಹುಡುಗ ಹೊಸ ಸಡಗರಕ್ಕೆ ತಳ್ಳಂಕಗೊಂಡ. ಕಣ್ಣಿ ಕಿತ್ತಂತೆ ಒಂದೆರಡು ಬಾರಿ ಹುಕಿಯಿಂದುಕ್ಕುವಷ್ಟರಲ್ಲಿ ಚಿಮಣಾ ಅವನೆದೆಯ ಮೇಲೆ ಕೆಸರುಗಾಲೂರಿ ಹೊಸಕುವಾಗ ಜೋಲಿತಪ್ಪಿ ಬಿದ್ದಳು. ಹುಡುಗ ಏಳಬೇಕೆಂದಿದ್ದ. ಗಪ್ಪನೆ ತೆಕ್ಕೆ ಹಾದಳು. ಗಿಣಿ ಜೋಳದ ತೆನೆಗೆ ಜೋತುಬಿದ್ದು ತಿನ್ನುವಂತೆ ಎಳೆದೆಳೆದು ಕೆನ್ನೆ ಕಚ್ಚಿದಳು. ಇಬ್ಬರ ರಭಸಕ್ಕೆ ಸುತ್ತಲ ಜೋಳದ ಬೆಳೆ ಕಡಕಡಕಡ ಮುರಿಯಿತು.
ಮೋಡ ಒಡೆದವರಂತೆ ಖಡ್‌ಖಡಲ್ ಗರ್ಜಿಸಿ, ಘರ್ಷಿಸಿ ಗುಡುಗಿ ಮಳೆ ಬಿತ್ತು. ಇಡೀ ಮುಗಿಲು ಹಾಗೇ ಹರಿದುಬಿದ್ದಂತೆ ಧೋಧೋಧೋ ಒಂದೇ ಸವನೆ ನೀರು ಸುರಿಯಿತು. ನೀರು ಬೇರಿನ ಸಂದಿಗೊಂದಿಗಿಳಿದು ಹರಿದಾಡಿತು. ರಭಸ ತಡೆಯದೆ ಬೆಳೆ ಚಡಪಡಿಸಿ ಒಲೆದಾಡಿತು. ಬೆಳೆಗೆ ಏನಾದರಾಗಲಿ ಮುಗಿಲು ಮೋಡ ಖಾಲಿಯಾಗುವ ತನಕ ಸುರಿಯಿತು. ನೆಲ ಕಣ್ಣುಮುಚ್ಚುವಷ್ಟು ತೃಪ್ತವಾಯಿತು.
ಖಬರು ಬಂದಾಗ ಸುಂದರಿ ಬಾಡಿದ ಎಳೆಬಾಳೆಯ ಸೊಪ್ಪಾಗಿದ್ದಳು. ಸೊಂಟದ ಹುರಿ ಸಡಿಲಾಗಿ ಸಣ್ಣಗೆ ನೋಯುತ್ತಿತ್ತು. ತೇಗುಸಿರು ನಿಂತಿರಲಿಲ್ಲ. ಹುಲಿಯ ಬಾಯಿಂದ ತಪ್ಪಿಸಿಕೊಂಡು ಬಂದ ಹಾಗೆ ಮೈತುಂಬ ಗಾಯಗಳಾಗಿದ್ದವು. ಎದ್ದು ಕೆಸರು ಮೆತ್ತಿದ ಸೀರೆಯನ್ನೇ ಸುತ್ತಿಕೊಂಡಳು. ಶಿವನಿಂಗ ತಪ್ಪುಮಾಡಿದವನಂತೆ ಅಳುಮುಖ ಮಾಡಿಕೊಂಡು ಮುದ್ದೆಯಾಗಿ ದೂರ ಕೂತಿದ್ದ. ಕೆಳದುಟಿ ನೆತ್ತರಾಡಿತ್ತು. ಕೆನ್ನೆ, ಕತ್ತಿನ ಮೇಲೆ ಹಲ್ಲಿನ ಗುರುತು ಮೂಡಿದ್ದವು. ಬೆರಗಿನ ಎಳೆತನದಲ್ಲೊಬ್ಬ ಗಡುಸು ಗಂಡಸನ್ನು ಸೃಷ್ಟಿಸಿದ ತೃಪ್ತಿಯಿಂದ ಮಾತಾಡದೆ ಮುಂದೆ ನಡೆದಳು. ಈತ ಮಂದಿ ನೋಡ್ಯಾರೆಂದು ಬಾಗಿ ಬಾಗಿ ಬೆನ್ನುಹತ್ತಿದ.
ಜೋಳದ ಬೆಳೆ ದಾಟಿ ಬಂದರು. ಹಳ್ಳ ತುಂಬಿ ಹರಿಯುತ್ತಿತ್ತು. ಶಿವನಿಂಗ ಮುಂದಾಗಿ ದಾಟಿದ. ಎದೆಮಟ ನೀರಿತ್ತು, ಸೆಳೆವಿತ್ತು. ಇವಳಿನ್ನೂ ಈಚೆ ದಡದಲ್ಲೇ ಇದ್ದಳು. ಅವಳಿಗೂ ಭಯ. ಕುಡಿದ ಮತ್ತಿನ್ನೂ ಇಳಿದಿರಲಿಲ್ಲ. ನೆತ್ತಿ ಭಾರವಾಗಿತ್ತು. ಕೈ ಹಿಡಿದು ದಾಟಿಸೆಂಬಂತೆ ಸನ್ನೆ ಮಾಡಿದಳು. ಶಿವನಿಂಗ ಸುಮ್ಮನೇ ನಿಂತ. “ಯಾರ ಮುಂದ ಹೇಳಾಣಿಲ್ಲ ಬಾ” ಎಂದಳು. ಸುತ್ತ ಮಂದಿ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡು ಬಂದ. ಕೈಹಿಡಿದ. ಹೌಹಾರಿದಂತೆ ಅಭಿನಯಿಸಿ “ಎತ್ತಿಕೊಂಡು ದಾಟಿಸಲ್ಲಾ” ಎನ್ನುತ್ತ ತಾನೇ ಅವನನ್ನು ಬಗ್ಗಿಸಿ ಹೆಗಲ ಮೇಲೆ ಕೂತಳು. ಅವಸರವಾಗಿಯೇ ದಾಟತೊಡಗಿದ. ಸುಂದರಿ ಅವನ ಕೆನ್ನೆಯ ಮೇಲಿನ ಹಲ್ಲಿನ ಗುರುತುಗಳನ್ನು ನೇವರಿಸುತ್ತಿದ್ದಳು. ಇನ್ನೇನು ದಾಟಲಿದ್ದವರು ಅಷ್ಟರಲ್ಲಿ ಯಾರೋ ದೂರದಲ್ಲಿ “ಏ ಶಿವನಿಂಗಾ” ಎಂದು ಕರೆದದ್ದು ಕೇಳಿತು. “ಎಪ್ಪಾ ಯಾರೋ ಬಂದ್ರೋ” ಎಂದವನೇ ಅವಳನ್ನಲ್ಲೇ ಚೆಲ್ಲಿ ಚೆಂಗನೇ ಹಾರಿ ಕಬ್ಬಿನ ತೋಟದಲ್ಲಿ ಮಾಯವಾದ.

ಕಳ್ಳ ಬಸುರು

ಮಾರನೇ ದಿನ ಹೊಲದಲ್ಲಿ ವಿಚಿತ್ರ ಚಟುವಟಿಕೆ ಕಂಡು ಬಂತು. ನಿನ್ನಿನ ಮಳೆಯ ಪ್ರಚಂಡ ಹೊಡೆತ ತಾಳದೆ ಜೋಳ ಭತ್ತಗಳು ಅಲ್ಲಲ್ಲಿ ಮಲಗಿದ್ದವು. ಅವನ್ನೆತ್ತಿ ಕಟ್ಟುತ್ತಿದ್ದರು. ಈಗ ಸೇಂಗಾ ಬೆಳೆ ಹಾಗೇ ಬಿಟ್ಟರೆ ಇಳಿದ ಕಾಯಿ ಮೊಳಕೆಯೊಡೆಯುವ ಸಂಭವವಿತ್ತು. ಕೆಲವೆಡೆ ಹೊರೆಹೊರೆ ಬಳ್ಳಿ ಕೊಚ್ಚಿಹೋಗಿತ್ತು. ಹೊಲ ಹೊಲದ ಅರ್ಧರ್ಧ ಬೆಳೆ ನೀರಲ್ಲೇ ನಿಂತಿದ್ದವು. ಸಜ್ಜೆಯ ತೆನೆ ಬಿಡಿಸಿಕೊಳ್ಳುತ್ತಿದ್ದರು. ಅಡಗಾಳು ಕೊಯ್ದುಕೊಂಡರು. ಜೋಳದ ಸ್ಥಿತಿ ಮಾತ್ರ ಅನಿಶ್ಚಿತವಾಗೇ ಇತ್ತು.
ಗುಡಿಸಲಲ್ಲಿ ಬಸವರಾಜು ಮಾತ್ರ ಸುಂದರಿ ಹೇಳಿದ್ದನ್ನು ಕೇಳಿ ತಬ್ಬಿಬ್ಬಾಗಿ ಕುಳಿತಿದ್ದ. ಅವಳು ಬಸಿರಾಗಿದ್ದಳು. ಗುಡಸೀಕರನಿಗೆ ಈ ಸುದ್ದಿ ಗೊತ್ತಾದರೆ ಅವನು ಸಿಡಿಯುವ ಸಂಭವವಿತ್ತು. ಎಲೆಕ್ಷನ್ ಸಮಯದಲ್ಲೇ ಹೀಗಾದರೆ ಹೇಗೆ? ವಿರೋಧಿಗಳು ಇದನ್ನು ಉಪಯೋಗಿಸಿಕೊಳ್ಳಬಹುದು. ಗುಡಸೀಕರ ಇಂಥಾದ್ದಕ್ಕೆ ಎದೆಗೊಡುವವನಲ್ಲ. ಒಳಗೊಳಗೇ ಪುಕ್ಕಲು ಸ್ವಭಾವದವ. ಈಗಿದ್ದ ಹಾಗೆ ಚುನಾವಣೆಯ ಬಗ್ಗೆ ಅವನಲ್ಲಿ ಭಾರೀ ಉತ್ಸಾಹವೇನೂ ಇರಲಿಲ್ಲ. ಗೌಡನ ಅನ್ಯಾಯಗಳನ್ನು ನೆನಪಿಸಿ ಸೇಡಿಗಾಗಿ ಅವನ ಮನಸ್ಸು ಮಸೆಯುತ್ತ, ಎಲೆಕ್ಷನ್ ಎನ್ನುತ್ತ ತಮ್ಮ ಅಗತ್ಯವನ್ನು ಮನದಟ್ಟು ಮಾಡಿಕೊಡುತ್ತ ಮತ್ತೆ ಮತ್ತೆ ಇವರೇ ಪಂಪು ಹೊಡೆಯಬೇಕಾಗಿತ್ತು. ಅಲ್ಲದೆ ಸುಂದರಿಯ ಮೈ ಬಗ್ಗೆ ಮೊದಲಿಗಿದ್ದ ಆಕರ್ಷಣೆ ಈಗ ಅವನಿಗಿರಲಿಲ್ಲ.
ಸುಂದರಿ ತುಂಬ ತಡವಾಗಿ ಸುದ್ದಿ ಹೇಳಿದ್ದಳು. ಉಳಿದವರಿಗೆ ಗೊತ್ತಾಗುವ ಮುನ್ನವೇ ಈ ಮುಳ್ಳು ತೆಗೆಯಬೇಕಾಗಿತ್ತು. ಹೇಗೆಂದು ಹೊಳೆಯಲೊಲ್ಲದು. ಗುಡಸೀಕರನ ಸ್ವಭಾವ ಅವಳು ಅರಿಯದವಳಲ್ಲ. ಅರಳಿಗಂಟಿನ ಮೇಲೆ ಲಾಗ ಹೊಡೆದವ ಬಸಿರೆಂದರೆ ಮಾರುದ್ದ ಹಾರುವುದರಲ್ಲಿ ಅನುಮಾನವೇ ಇರಲಿಲ್ಲ. ಬೇರೆ ಸೂಳೆಯರಿಗೆ ತಡೆದೀತು. ತನ್ನಂಥವರಿಗೆ ಇದು ಸಲ್ಲದೆಂದು ತೀರ್ಮಾನಿಸಿದ್ದಳು. ಈ ಶನಿಕಾಟವನ್ನು ನಿವಾರಿಸಲು ಏನೆಲ್ಲ ಉಪಾಯ ಮಾಡಲು ಸಿದ್ಧಳಾದಳು. ಹ್ಯಾಗಾದರೂ ಮಾಡಿ “ಈ ಪಾಪ ತೆಗಿ” ಎಂದು ಬಸವರಾಜನಿಗೆ ಮೊರೆಯಿಟ್ಟಳು. ಬಸವರಾಜನೂ ಹತಾಶನಾಗಿ ನಿಂಗೂನನ್ನು ಮೊರೆಹೊಕ್ಕ.
ಗರ್ಭಪಾತದ ವಿದ್ಯೆಯಲ್ಲಿ ನಿಂಗೂನನ್ನು ಬಿಟ್ಟರಿಲ್ಲವೆನ್ನುವುದೂ ನಿಜವೇ. ಅದಕ್ಕೇ ಕಳ್ಳಬಸುರಿನ ಸುದ್ದಿಗಳು ಅವನಿಗೆ ತಿಳಿದಷ್ಟು ಊರಲ್ಲಿ ಯಾರಿಗೂ ಗೊತ್ತಿಲ್ಲ. ಬಸವರಾಜೂ ಹೇಳಿದ್ದನ್ನೆಲ್ಲ ನಿಂಗೂ ಕೇಳಿಕೊಂಡ. ಯಾರು ಯಾರಿಗೆ ಎಂದು ಕೇಳದೆ, ಕೇಳಿ ತಿಳಿದುಕೊಳ್ಳದೆ ನಿಂಗೂ ಮದ್ದು ಕೊಟ್ಟಾನಾದರೂ ಹ್ಯಾಗೆ? ಬಸವರಾಜು ದುಃಖ ಅಭಿನಯಿಸಿ ಸಂಕಟ ತೋಡಿಕೊಂಡ. ಆದರೆ ಬಸಿರಾದವಳು ಸುಂದರಿ ಎಂದು ಹೇಳಲಿಲ್ಲ.ದುರ್ಗಿ ಎಂದಿದ್ದ…. ಅಷ್ಟೇ ಫರ್ಕಾಗಿತ್ತು ಸತ್ಯದಿಂದ. ಅವನ ಒದ್ದಾಟ ನೋಡಿ ನಿಂಗೂನಿಗೂ ಕರುಣೆ ಬಂತು. ಅಡವಿಗೆ ಹೋಗಿ ತಾನೇ ಗಿಡಮೂಲಿಕೆ ತಂದು, ಕುಟ್ಟಿ ರಸಮಾಡಿ ಕುಡಿಯಬೇಕೆಂದೂ, ಕುಡಿದಾಗ ಒಳಗೆ ಸಂಕಟವಾಗಿ ಸ್ವಲ್ಪ ಕೂಗಾಡಬಹುದಾದ್ದರಿಂದ ಹೊಲದ ಕಡೆ ಕರೆದುಕೊಂಡು ಹೋಗಿ ಕುಡಿಸು ಎಂದೂ ಹೇಳಿದ. ತನ್ನ ಜೊತೆ ಆಗಿದ್ದರೆ ಇದೆಲ್ಲ ತಾಪತ್ರಯ ಇರುತ್ತಿರಲಿಲ್ಲವೆಂಬ ಮಾತನ್ನು ಹೇಳದಿರಲಿಲ್ಲ.
ಒಂದು ದಿನ ಮಧ್ಯಾಹ್ನ ಗುಡಸೀಕರ ಮನೆಯಲ್ಲಿ ಮಲಗಿದ್ದ.ತೋಟದ ಕಡೆ ಆಗಾಗ ಸಾಯಂಕಾಲ ಅಡ್ಡಾಡಲಿಕ್ಕೆ ಹೋಗುವುದಿತ್ತು. ಹೋದರೆ ಹೋದ; ಇಲ್ಲದಿದ್ದರೆ ಇಲ್ಲ. ಈ ಹೊತ್ತು ಬಹುಶಃ ಹೋಗುವ ಸಂಭವ ಕಮ್ಮಿಯೆಂದು ಭಾವಿಸಿ ಬಸವರಾಜು ಗಿಡಮೂಲಿಕೆ ರಸದ ಬಟ್ಟಲು ತಗೊಂಡು ಸುಂದರಿಯನ್ನು ಕರೆದುಕೊಂಡು ಗುಡಸೀಕರನ ತೋಟಕ್ಕೆ ಹೋದ. ಸಮೀಪದಲ್ಲಿ ಯಾರೂ ಇರಲಿಲ್ಲ. ಮೊದಲು ಅವಳನ್ನು ಕಬ್ಬಿನ ಬೆಳೆಯಲ್ಲಿ ಹೊಗಿಸಿದ. ತಾನೂ ಹೋಗಬೇಕೆಂದಾಗ ಗೌಡನ ತೋಟದ ಬಾಂದಿನ ಮೇಲಿಂದ ಖಾದೀಧಾರಿಯೊಬ್ಬ ಇತ್ತ ಕಡೆಗೇ ಬರುತ್ತಿದ್ದ. ಅವನು ದಾಟಿ ಹೋಗುವ ತನಕ ಕಬ್ಬಿನ ಗಣಿ ಮುರಿದು ಸುಲಿಯುವ ನೆವಮಾಡಿ ನಿಂತ. ಅವನನ್ನೆಲ್ಲೋ ನೋಡಿದಂತಿತ್ತು. ನೆನಪಾಗಲಿಲ್ಲ. ಆತ ಮರೆಯಾದೊಡನೆ ತಾನೂ ಕಬ್ಬಿನಲ್ಲಿ ಮಾಯವಾದ.
ಒಳಗೆ ಹೊಕ್ಕು ಅರ್ಧ ತಾಸಾಗಿರಬಹುದು. ಸುಂದರಿ “ಸತ್ತೆನೋ ಎಪ್ಪಾ” ಎಂದು ಕಿರುಚತೊಡಗಿದಳು. ಮದ್ದು ಹೊಟ್ಟೆಗಿಳಿದಿದ್ದೇ ತಡೆ ಒಳಗಿನ ಕರುಳು ಚುರುಗುಟ್ಟಿ ಹರಿದು ಚೂರು ಚೂರಾದಂತಾಗಿ, ವೇದನೆ ಸಹಿಸಲಾರದೆ ಬಿದ್ದು ಹೊರಳಾಡಿದಳು. ಒಂದು ಕೈಯಿಂದ ಹೊಟ್ಟೆ ಕಿವುಚಿಕೊಳ್ಳುತ್ತ, ಇನ್ನೊಂದರಿಂದ ಬಾಯಿ ಬಾಯಿ ಬಡಿದುಕೊಳ್ಳುತ್ತ ಆಕಾಶ ಪಾತಾಳ ಒಂದು ಮಾಡುವಂತೆ ದೂರ ಗುಡಿಯ ಕರಿಮಾಯಿ ಮರದ ಮೂರ್ತಿಗೂ ಕೇಳಿಸುವಂತೆ ಒದರ್‍ಯಾಡಿದಳು. ಬಸವರಾಜನಿಗೆ ದಿಕ್ಕೇ ತೋಚದಾಯ್ತು. ಕೈಕಾಲು ಲಟಪಟ ಬಡಿದು ವಿಲಿವಿಲಿ ಒದ್ದಾಡುತ್ತಿದ್ದಳು. ಸಾಯುವುದೇ ಖಾತ್ರಿಯಾಗಿ ಅವಳ ಬಳಿ ಸುಳಿಯುವುದಕ್ಕೂ ಗಾಬರಿಯಾಗಿ ತಲೆಯ ಬುದ್ಧಿ ಕಾಲಿಗಿಳಿದು ಬೆಳೆ, ಕಲ್ಲು, ಮುಳ್ಳೆನ್ನದೆ ಹಾರಿ ಓಡಿಬಿಟ್ಟ.
ಪಕ್ಕದ ತೋಟದ ಗೌಡನಿಗೆ ಇದು ಕೇಳಿಸಿ ಕುಡುಗೋಲು ಹಿಡಿದುಕೊಂಡೇ ಓಡಿ ಬಂದ. ಅವನೊಂದಿಗೆ ಖಾದೀಧಾರಿ ಮುದುಕಪ್ಪ ಗೌಡನೂ ಬಂದ. ಗುಡಸೀಕರನ ಬೆಳೆ ಚಡಪಡಿಸುವಲ್ಲಿಗೆ ಓಡಿ ನೋಡಿದರೆ, ರಕ್ತ ಕಾರುತ್ತಾ ಸುಂದರಿ ಬಿದ್ದಿದ್ದಳು. ನಾಲಗೆ ಉಡುಗಿ ಹೋಗಿ ಗಂಟಲಿನಿಂದ ಗೊರ್ ಗೊರ್ ಶಬ್ಧ ಮಾತ್ರ ಬರುತ್ತಿತ್ತು. ಸಾಯಲಿರುವ, ಬಾಯಿಬಾರದ ಪ್ರಾಣಿಯ ಹಾಗೆ ಕೈಕಾಲು ಮಾತ್ರ ವಿಲಿವಿಲಿ ಒದ್ದಾಡುತ್ತಿದ್ದವು, ಮತ್ತೆ ಸ್ತಬ್ಧವಾಗುತ್ತಿದ್ದವು. ಗೌಡ ತಿರುಗಿ ನೋಡುವುದರೊಳಗೆ ಮುದುಕಪ್ಪ ಗೌಡ ದತ್ತಪ್ಪನನ್ನು ಕರೆತರಲು ಓಡಿಹೋಗಿದ್ದ. ಗೌಡ ಹೋದವನೇ ಅವಳ ಎಡಗೈ ಕಿರುಬೆಟ್ಟು ಹಿಸುಕಿದ. ಮತ್ತೆ ಒದ್ದಾಡಿತು. ಮತ್ತೆ ಹಿಸುಕಿದ. ಒದ್ದಾಡಲಿಲ್ಲ. ಕಿವಿಯಲ್ಲಿ ಜೋರಿನಿಂದ ಊದತೊಡಗಿದ. ಊದಿಯೇ ಊದಿದ. ಜೀವ ಬರಲೊಲ್ಲದು, ಗೌಡ ಬಿಡಲೊಲ್ಲ. ಓಡಿ ಹೊರಟ ಜೀವ ಹಿಡಿದು ತರುವ ಹಾಗೆ ಊದುತ್ತಿದ್ದ. ಬಹಳ ಹೊತ್ತಾದ ಮೇಲೆ ಜೀವ ಬರುವ ಲಕ್ಷಣ ಕಂಡವು. ಮೈಯಲ್ಲಿ ಬಿಸಿ ಬಂತು. ಕಿರುಬೆರಳು ಹಿಸುಕುತ್ತ “ಏ ಅವೂ, ಅವೂ” ಎಂದು ಕರೆದ. ಕಣ್ಣು ತೆರೆದೊಮ್ಮೆ ನೋಡಿ ಮತ್ತೆ ಮುಚ್ಚಿದಳು. ಸಧ್ಯ ಭಯವಿಲ್ಲ ಎಂದುಕೊಂಡ. ಇತ್ತ ಬಸವರಾಜ ದಿಕ್ಕೆಟ್ಟು ಸತ್ತೆನೋ, ಬದುಕಿದೆನೋ ಎಂದು ಬೇಟೆಗಾರನಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಪ್ರಾಣಿಯ ಹಾಗೆ ಓಡಿ ಹೊರಟಿದ್ದನಲ್ಲ, ತೋಟದ ಅಂಚಿನಿಂದ ಗುಡಸೀಕರ ಅಡ್ಡಾಡಲಿಕ್ಕೆ ಈ ಕಡೆಗೇ ಬರುತ್ತಿದ್ದ. ದಂಗು ಬಡಿದವರಂತೆ ಓಡುತ್ತಿದ್ದ ಬಸವರಾಜನನ್ನು ಕಂಡ.
“ಏ ಬಸವರಾಜು” ಎಂದು ಕೂಗಿ ಬಹುಶಃ ಏನೋ ಅನಾಹುತವಾಗಿರಬೇಕೆಂದು ತಾನೂ ಅವನ ಕಡೆ ಓಡಿದ. ಬಸವರಾಜ ಸಿಕ್ಕೊಡನೆ “ಯಾಕೊ? ಏನಾಯ್ತೋ?” ಎಂದು ರೆಟ್ಟೆ ಹಿಡಿದು ಅಲುಗಿ ಕೇಳುತ್ತಲೂ ಬಸವರಾಜು ಏನು ಮಾಡುತ್ತಿದ್ದೇನೆಂದು ತಿಳಿಯದೆ ಗುಡಸೀಕರನನ್ನು ಕರೆದುಕೊಂಡು ಸುಂದರಿ ಬಿದ್ದಲ್ಲಿಗೆ ಧಾವಿಸಿ ಬಂದ.
ಸುಂದರಿಯ ತಲೆ ಗೌಡನ ತೊಡೆಯ ಮೇಲಿತ್ತು. ಒಂದು ಕೈಯಿಂದ ಅವಳ ಎಡಗೈ ಕಿರಿಬೆರಳು ಗಟ್ಟಿಯಾಗಿ ಹಿಡಿದು ಬಲಗೈಯಿಂದ ಗಾಳಿ ಹಾಕುತ್ತಿದ್ದ. ಇಬ್ಬರ ತಲೆ ಕೆದರಿತ್ತು. ಸುಂದರಿಯ ಸೀರೆ ಅಸ್ತವ್ಯಸ್ತವಾಗಿತ್ತು. ಸರಪಂಚ ಅಂಗಾಲಿನಿಂದ ನೆತ್ತಿಯ ತನಕ ಕುದಿಯತೊಡಗಿದ. ಈ ದೃಶ್ಯ ಕಂಡೊಡನೆ ಬಸವರಾಜನಿಗೆ ಹೋದಜೀವ ಮರಳಿ ಬಂದಂತಾಯ್ತು. ಸುಂದರಿ ಸತ್ತಿರಲಿಲ್ಲ. ಗೌಡನ ತೊಡೆಯ ಮೇಲಿದ್ದಳು. ಕಂಡದ್ದೇ ತಡ ತನ್ನ ಮೂಲ ರೂಪಕ್ಕೆ ಬಂದ. ಬುದ್ಧಿ ಸಮತಲಗೊಂಡು ಚಕಮಕಿ ಕಿಡಿಯಂತೆ ‘ಐಡಿಯ’ ಹೊಳೆಯಿತು. ಕಿಡಿಗಣ್ಣು ಮಾಡಿಕೊಂಡು ತುಟಿ ಕಚ್ಚಿಕೊಂಡು ಸ್ವಹಿಂಸೆ ಮಾಡಿಕೊಳ್ಳುತ್ತಿದ್ದ ಗುಡಸೀಕರನ ಭುಜದ ಮೇಲೆ ಒಂದೆರಡು ಸಲ ತಟ್ಟಿ, ಅವರ ಗಮನ ತನ್ನ ಕಡೆ ಸೆಳೆಯಲು ಪ್ರಯತ್ನ ಮಾಡಿದ. ಗೌಡನೂ ಇವರನ್ನು ನೋಡಿರಲಿಲ್ಲ. ಕೂಡಲೇ ಬಲಗಾಲು ಕುಟ್ಟಿ “ಗೌಡಾ, ಈ ಮುದಿ ವಯಸ್ಸಿನಾಗ ಇಂಥಾ ಕೆಲಸ ಮಾಡಾಕ ನಾಚಿಕೆ ಬರಲಿಲ್ಲಾ?” ಎಂದು ಗುಡುಗಿದವನೇ ಉತ್ತರಕ್ಕಾಗಿ ಕಾಯದೇ, ಗುಡಸೀಕರ ಹೋಗಿಬಿಟ್ಟ. ಕಿವಿಗೆ ಈ ಶಬ್ಧ ಬೀಳುತ್ತಿದ್ದಂತೆ ಗೌಡ ತಲೆ ಎತ್ತಿ ನೋಡಿದ. ಏನಾಡುತ್ತಿದ್ದನೋ, ಏನು ಮಾಡುತ್ತಿದ್ದನೋ ಆಡಿದವನು ಅಲ್ಲೇ ಇದ್ದಿದ್ದರೆ, ಆಡಿದ್ದು ಅರ್ಥವಾಗಿದ್ದರೆ ನೋಡುನೋಡುವಷ್ಟರಲ್ಲಿ ಆಡುವುದಕ್ಕೆ ಬಾಯಿ ತೆರೆಯುವಷ್ಟರಲ್ಲಿ ಇಬ್ಬರೂ ಮರೆಯಾಗಿದ್ದರು. ಸಾಯಲಿದ್ದವಳನ್ನು ಉಳಿಸಿದ್ದಕ್ಕೆ ತನಗೆ ಕೃತಜ್ಞತೆ ಬೇಡ, ತನ್ನ ಹುಡುಗಿಯನ್ನೂ ನೋಡಿಕೊಳ್ಳದೆ, ಈ ರೀತಿ ಓಡಿಹೋದುದಕ್ಕೆ ಗೌಡನಿಗೆ ಕೆಡುಕೆನಿಸಿತು. ಗೌಡನಿಗೆ ಗುಡಸೀಕರನ ದನಿ ಕೇಳಿಸಿತ್ತೇ ಹೊರತು ಅವನೇನಾಡಿದ ಎಂದು ತಿಳಿದಿರಲಿಲ್ಲ. ಕೂಗಿ ಕರೆಯಬೇಕೆಂದುಕೊಂಡ. ಸುಂದರಿ ನರಳಿದಳು. ಬಿಟ್ಟೇಳುವ ಮನಸ್ಸಾಗಲಿಲ್ಲ. ಅಷ್ಟರಲ್ಲಿ ದತ್ತಪ್ಪ, ಲಗಮವ್ವ, ಮುದುಕಪ್ಪ ಗೌಡ ಓಡಿಬಂದರು.
ದತ್ತಪ್ಪ ನಾಡಿ ಹಿಡಿದು ನೋಡಿದ. ಹೆಚ್ಚು ಅರ್ಥವಾಗಲಿಲ್ಲ. ಕೂಡಲೇ ಗಿಡಮೂಲಿಕೆಯೊಂದರ ಹೆಸರನ್ನು ಲಗಮವ್ವನ ಕಿವಿಯಲ್ಲಿ ಹೇಳಿದ. ಲಗಮವ್ವ ಓಡಿದಳು. ಮದ್ದು ಕುಡಿಸಿ ಸುಂದರಿಯನ್ನು ಖಬರಿಗೆ ತರುವುದಕ್ಕೆ ಒಂದು ತಾಸು ಹಿಡಿಯಿತು. ಅವಳು ಚೇತರಿಸಿಕೊಳ್ಳುವುದಕ್ಕೆ ಇನ್ನಷ್ಟು ಸಮಯ ಹಿಡಿಯಿತು. ಆಗಲೇ ಸಂಜೆಯಾಗಿತ್ತು. ಅವಳಿಗೆ ನಡೆಯುವ ಚೇತನ ಇರಲಿಲ್ಲ. ಲಗಮವ್ವ ನಡೆಸಿಕೊಂಡು ಅವಳ ಗುಡಿಸಲಿಗೆ ಮುಟ್ಟಿಸಬೇಕಾದರೆ ಆಗಲೇ ರಾತ್ರಿಯಾಗಿತ್ತು.
ಸುಂದರಿಯನ್ನು ಗುಡಿಸಲಿಗೆ ತಂದಾಗ ಗುಡಸೀಕರ ಇರಲಿಲ್ಲ. ಬಸವರಾಜ ಬಾಯಿಬಿಡಲಿಲ್ಲ. ಲಗಮವ್ವ ಅವಳನ್ನು ಒಳಗೊಯ್ದು ಮಲಗಿಸಿ ತನ್ನ ಗುಡಿಸಲಿಗೆ ಹೋದಳು. ಸುಂದರಿ ಸ್ವಲ್ಪ ಹೊತ್ತು ಬಿದ್ದುಕೊಂಡಿದ್ದು ಆಮೇಲೆ ಮೆಲ್ಲನೆದ್ದು ತನ್ನ ಟ್ರಂಕಿನಲ್ಲಿಯ ಹಳೆಯ ದಿನಪತ್ರಿಕೆಯೊಂದನ್ನೆತ್ತಿ ಬಸವರಾಜನಿಗೆ ಕೊಟ್ಟಳು. ಅರ್ಥಪೂರ್ಣವಾಗಿ ನಕ್ಕು ಒಳಕ್ಕೆ ಕರೆದಳು. ಅವನ ಕಿವಿಯಲ್ಲಿ ಪಿಸುಪಿಸು ಸಂಚು ಉಸುರಿ ಮಲಗಿಕೊಂಡಳು. ಗುಡಸೀಕರ ಬಂದ.

ಗೌದನ ತೊಡೆಯ ಮೇಲಿನ ಸುಂದರಿಯನ್ನು ನೋಡಿ ಗುಡಸೀಕರ ಹಿಂದಿರುಗಿ ಬಂದನಲ್ಲ. ಸೀದಾ ಮನೆಗೆ ಹೋದ. ಬಸವರಾಜು ಗುಡಿಸಲಿಗೆ ಬಂದ. ಇಬ್ಬರೂ ಮಾತಾಡಲಿಲ್ಲ. ಪ್ರಾಯದ ತನ್ನ ಗಂಡಸುತನವನ್ನೇ ಮುದಿ ಗೌಡ ಪ್ರಶ್ನಿಸಿದಂತಾಗಿತ್ತು ಗುಡಸೀಕರನಿಗೆ. ಹಳೆಯ ಸೇಡುಗಳೆಲ್ಲ ಮರುಕಳಿಸಿ ಮೇಲೆದ್ದವು. ಅನ್ನ ಹಾಕಿದವನಿಗೇ ಸುಂದರಿ ಮೋಸ ಮಾಡಿದಂತಾಗಿತ್ತು. ಈ ಸುದ್ದಿ ಗೊತ್ತಾದರೆ ಇಡೀ ಊರು ವ್ಯಂಗ್ಯವಾಡಿ ಕೈತಟ್ಟಿ ನಗುವುದರಲ್ಲಿ ಸಂದೇಹವಿಲ್ಲ. ಅನೇಕ ಸಂದರ್ಭಗಳಲ್ಲಿ ಸೋತಿದ್ದು ನಿಜ. ಆದರೆ ಈ ಸೋಲು ಉಳಿದವುಗಳನ್ನು ಮೆಟ್ಟಿ ನಿಲ್ಲುವಂಥಾದ್ದು.
*****
ಮುಂದುವರೆಯುವುದು