ಗೃಹಭಂಗ – ಮುನ್ನುಡಿ

ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆ. ಭಾಷೆಯೂ ಅದರದೇ. ಆದರೆ, ‘ಇದೊಂದು ಪ್ರಾದೇಶಿಕ ಕಾದಂಬರಿ’ ಎಂಬ ಆತುರದ ಕ್ಲಾಸ್‌ರೂಮು ಬುದ್ಧಿಯ ವರ್ಗೀಕರಣ ಮಾಡಬಾರದು. ಕಥೆ ನಡೆಯುವುದಕ್ಕೆ ಒಂದು ಬೌಗೋಳಿಕ ಜಾಗ ಬೇಕು. ನಾನು ಈ ಜಾಗವನ್ನು ಆಯ್ದುಕೊಂಡಿರುವ ಕಾರಣ, ನನಗೆ ಅದು ಹೆಚ್ಚು ಪರಿಚಿತವಾಗಿರುವುದು ಮಾತ್ರ. ನನ್ನ ‘ಧರ್ಮಶ್ರೀ’ ಯಲ್ಲಿ ನಾಯಕನ ಬಾಲ್ಯ ಮತ್ತು ತಂದೆತಾಯಿಗಳ ವಿಷಯ ತುಂಬ ಸಂಕ್ಷಿಪ್ತವಾಗಿ ಬರುತ್ತದೆ. ಆ ಕಾದಂಬರಿಗೆ ಅಷ್ಟು ವಿವರ ಸಾಕಾಗಿತ್ತು. ಕಲ್ಪನೆಯಲ್ಲಿ ಕಾಡುತ್ತಿದ್ದ ಆ ವಿವರವು ಕಳೆದ ಎಂಟು ವರ್ಷಗಳಲ್ಲಿ ಹಿಮ್ಮುಖವಾಗಿ ಬೆಳೆದು ಈ ರೂಪವನ್ನು ತಳೆದುನಿಂತಿತು. ಆದರೆ ಇದಕ್ಕೂ ‘ಧರ್ಮಶ್ರೀ’ ಗೂ ಯಾವ ಸಂಬಂಧವೂ ಇಲ್ಲ. ಇವೆರಡೂ ಸಂಪೂರ್ಣ ಪ್ರತ್ಯೇಕ ಕಾದಂಬರಿಗಳು. ಈ ಕಾದಂಬರಿ ನಿಮ್ಮನ್ನು ನಾಗಾಲೋಟ ಓಡಿಸಿಕೊಂಡು ಹೋಗದಿರಬಹುದು. ಆದರೆ ಜೀವನವನ್ನು ನಿರ್ವಿಕಾರ ದೃಷ್ಟಿಯಿಂದ ನೋಡಬಲ್ಲವರ, ಸಾಕಷ್ಟು ಕಷ್ಟಸುಖಗಳನ್ನು ಕಂಡವರ, ತಕ್ಕಮಟ್ಟಿಗಾದರೂ ಹಳ್ಳಿಗಳನ್ನು ತಿಳಿದಿರುವವರ ಅಂತರಂಗವನ್ನು ತಟ್ಟುತ್ತದೆಂಬುದು ನನಗೆ ಗೊತ್ತಿದೆ. ನಡೆಯುವವನು ತನ್ನ ಸುತ್ತನ್ನು ನೋಡುವಷ್ಟು ಸ್ಪಷ್ಟವಾಗಿ ಓಟಹೊಡೆಯುವವನು ನೋಡಲಾರ. ಇದಕ್ಕೆ ಇಟ್ಟಿರುವ ಹೆಸರು ಸಮರ್ಪಕವಾಗಿಲ್ಲ. ಕೆಲವು ಬಾರಿ ಕೃತಿ ರಚನೆಯಾಗುವಾಗ, ಅಥವಾ ಅದಕ್ಕಿಂತ ಮೊದಲೇ, ಹೆಸರು ಹೊಳೆದುಬಿಡುತ್ತದೆ. ಮತ್ತೆ ಕೆಲವುಬಾರಿ ಬರೆದು ಎರಡುವರ್ಷ ಸಂದು, ತಲೆಗೂದಲ ಮಧ್ಯೆ ಬೆರಳು ತೂರಿಸಿ ಯೋಚಿಸಿದರೂ ಹೊಳೆಯುವುದಿಲ್ಲ. ಯೋಚಿಸಿ ಯೋಚಿಸಿ ಕೊನೆಗೆ “ಯಾವುದಾದರೇನು? ಹೆಸರೇ ಬೇಡ. ‘ಎಸ್.ಎಲ್. ಭೈರಪ್ಪ: ಕಾದಂಬರಿ ಸಂಖ್ಯೆ: ೮’ ಎಂದು ಯಾಕೆ ಇಡಬಾರದು?”-ಎಂಬ ವಿಚಾರ ಹುಟ್ಟಿತ್ತು. ವಸ್ತು, ಕೃತಿ, ಸ್ಥಳ, ವ್ಯಕ್ತಿ, ವಿಚಾರ, ಭಾವ, ಮೊದಲಾದುವನ್ನು ಸಂಕೇತಿಸುವುದೇ ಹೆಸರಿನ ಕೆಲಸ. ಆದುದರಿಂದ ಯಾವ ಹೆಸರಾದರೇನು ಎಂಬ ಉಪೇಕ್ಷೆಯೂ ಬಂದಿತ್ತು. ಅದರ ನಿಜವಾದ ಗುಣ ಚೈತನ್ಯಗಳು ಗೊತ್ತಿಲ್ಲದೆ, ಭವಿಷ್ಯದಲ್ಲಿ ತಿಳಿಯಬೇಕಾದ ಅನ್ವರ್ಥತೆಯನ್ನು ಸ್ವಲ್ಪವೂ ಲೆಕ್ಕಿಸದೆ ಮಗುವಿಗೆ ನಾಮಕರಣಮಾಡಿ ಪಾರಾಗುತ್ತೇವೆ. ಆದರೆ ಸಾಹಿತ್ಯಕೃತಿಗೆ ಹೆಸರಿಡುವಾಗ ಒಂದು ತಪ್ಪು-ಕೈಮರದ ನಿರ್ಮಾಣವಾಗುವ ಸಂಭವವುಂಟು: ಇಲ್ಲಿ ಹೆಸರು ಒಂದು ಪ್ರತೀಕವಾಗುತ್ತದೆ. ಇಡೀ ಕೃತಿಯ ಕ್ರಿಯೆ ಮತ್ತು ಮೌಲ್ಯಾರ್ಥಗಳನ್ನು ವಾಚಕರು ಈ ಪ್ರತೀಕದ ಕೇಂದ್ರ ದೃಷ್ಟಿಯಿಂದ ಗ್ರಹಿಸುತ್ತಾರೆ. ಕೃತಿಯನ್ನು ಅನುಭವಿಸುವ ದೃಷ್ಟಿಯನ್ನು ಹೆಸರು ನಿರ್ಧರಿಸಿಬಿಡುವ ಸಂಭವವಿರುತ್ತದೆ. ಕಥೆಯ ವಸ್ತುವು ಒಂದು ಪ್ರತೀಕದಲ್ಲಿ ಸಂಕೇತಿಸುವಷ್ಟು ಹಿಡಿತದಲ್ಲಿದ್ದಾಗ ವಸ್ತುವಿನ ಅರ್ಥದ ತೀವ್ರತೆಯನ್ನು ಸೂಚಿಸಲು ಹೆಸರು ಪ್ರತೀಕರೂಪದಲ್ಲಿ ನೆರವಾಗುತ್ತದೆ. ವಸ್ತುವು ಹಲವು ಪಾರ್ಶ್ವಗಳುಳ್ಳದ್ದಾಗಿರುವಾಗ ಹೆಸರು ವಾಚಕರ ಗಮನವನ್ನೆಲ್ಲ ಒಂದೇ ಪಾರ್ಶ್ವದಲ್ಲಿ ಎಳೆದು ನಿಲ್ಲಿಸಿ, ಉಳಿದ ಭಾಗಗಳನ್ನು ಮಬ್ಬುಮಾಡುವ ಅಪಾಯವಿರುತ್ತದೆ. ಆದುದರಿಂದ ಯಾವ ಸಾಹಿತ್ಯ ಕೃತಿಯನ್ನು ಓದಿ ಗ್ರಹಿಸಬೇಕಾದರೂ ಲೇಖಕನು ಇಟ್ಟಿರುವ ಹೆಸರನ್ನು ಆರಂಭದಲ್ಲಿಯೇ ಪ್ರತ್ಯೇಕಿಸುವುದು ಕ್ಷೇಮ. ಗೃಹಭಂಗ ಎಂಬುದು ಈ ಕೃತಿಯ ಕೇಂದ್ರಕಲ್ಪನೆಯಲ್ಲ. ಮೇಲೆ ಹೇಳಿದ ಅವಧಿಯಲ್ಲಿ ನಡೆಯಬಹುದಾದ ಜೀವನಚಿತ್ರಣದ ಪ್ರಯತ್ನವೇ ಇದರ ದೃಷ್ಟಿ. ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ; ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನ ದೃಷ್ಟಿಯು ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು. ಇವೆಲ್ಲವನ್ನೂ ಸಮಗ್ರವಾಗಿ ಧ್ವನಿಸುವ ಹೆಸರು ನನಗೆ ತಿಳಿಯಲಿಲ್ಲ. ಹಸ್ತಪ್ರತಿಯನ್ನು ಓದಿ ವಿವರವಾಗಿ ಟೀಕೆ ಟಿಪ್ಪಣಿ ಮಾಡಿ, ತಿದ್ದಲು ಸಹಾಯಕರಾದ ದಿಲ್ಲಿ ಆಕಾಶವಾಣಿಯ ಎಂ.ಶಂಕರ್, ಬೆಂಗಳೂರಿನ ಎಂ.ಎಸ್.ಕೆ. ಪ್ರಭು ಇವರಿಗೂ ಹೊಳೆಯಲಿಲ್ಲ. ಹೆಸರಿಡದೆ ಪ್ರಕಟವಾಗುವುದು ಸಾಧವಿಲ್ಲ. ಪ್ರಕಟಣೆಯ ಘಟ್ಟದಲ್ಲಿ ಯಾವುದೋ ಒಂದನ್ನು ಇಡಲೇಬೇಕೆಂದು ಹಟಹಿಡಿದಾಗ, ‘ಗೃಹಭಂಗ’ ಎಂದು ಮನಸ್ಸಿಗೆ ಬಂತು, ಇಟ್ಟಿದ್ದೇನೆ.

ಎಸ್.ಎಲ್. ಭೈರಪ್ಪ
ದಿಲ್ಲಿ
೧೯೭೦, ಮೇ ೧೫
*****

ಕೀಲಿಕರಣ: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.