ಕರಿಮಾಯಿ – ೭

ಖಂಡಿತ ಅವನು “ಭಿರಂಡಿ” ಯ ಆಸೆಗಾಗಿ ಈ ಮಾತು ಆಡಿಲ್ಲವೆಂದು ಖಾತ್ರಿಯಾಯ್ತು. ಬಸವರಾಜು ತಕ್ಷಣ ಹೋಗಿ ಕಳ್ಳನನ್ನು ತಬ್ಬಿಕೊಂಡು ತಾನೇಕೈಯಾರೆ ಕುಡಿಸಿದ. ಉಳಿದವರೂ ಆನೆ ಮಾಡಿದರು.

ತಾಸರ್ಧ ತಾಸು ಮೀಟಿಂಗ್ ಮಾಡಿ ಬಸವರಾಜು ಚತುಷ್ಟಯರನ್ನು ಅವಸರದಿಂದ ಎಬ್ಬಿಸಿದ ತಾಕೆಂದು ಅಮಲಿನಲ್ಲಿದ್ದ ಅವರೂ ಕೇಳಲಿಲ್ಲ. ಗುಡಸೀಕರನೂ ಎದ್ದ “ಒಳಗ ಹಣಕಿ ಹಾಕೋ ರಾಜಾ, ನಿನಗಾಗಿ ಏನ ತಂದೆನ್ನೋಡು ಎಂದು ಹೇಳಿ ಗುಡಸೀಕರನನ್ನು ಅಲ್ಲೇ ಬಿಟ್ಟು ಮಿಕ್ಕವರೊಂದಿಗೆ ಹೊರಬಂದು ಬಾಗಿಲಿಕ್ಕಿಕೊಂಡ. ಒಳಗೆ ಚಿಮಣಾ ಇದ್ದಳು.

ಊರು ವಿ-ವಿಚಿತ್ರವಾಯಿತು

ಚುನಾವಣೆ ಆ ಸಣ್ಣ ಹಳ್ಳಿಗೆ ವಿಚಿತ್ರವಾಗಿ ಕಂಡಿತು. ಚತುಷ್ಟಯರ ಹಿರಿಯರು ಗೌಡರ ವಿರುದ್ಧ ನಿಂತುದಕ್ಕೆ ಬೈದು ಬುದ್ಧಿ ಹೇಳಿದರು. ಅದೇನು ಭಂಡತನವೋ, ಒಳಕ್ಕಿಳಿವ ಹೆಂಡವೋ ನಿಂತರೆ ತಪ್ಪೇನೆಂದು ಸಾಧಿಸಿದರು. ಹ್ಯಾಗೂ ಸೋಲುತ್ತವೆ, ನಿಂತರೆ ನಿಂತುಕೊಳ್ಳಲೆಂದು ಅವರೂ ಸುಮ್ಮನಾದರು. ಇಷ್ಟಾಗಿಯೂ ಊರ ಜೀವನ ನೆಮ್ಮದಿಯಾಗೇ ಇತ್ತು. ಚುನಾವಣೆಯ ಹುಳ ಕೊರೆಯುತ್ತಿದ್ದುದು ಇವರ ತಲೆಯಲ್ಲಿ ಮಾತ್ರ.

ಸರಕಾರೀ ಕಚೇರಿಯಿಂದ ಹುರಿಯಾಳುಗಳ ಹೆಸರು ಸ್ಥಿರಪಟ್ಟಿ ಬಗ್ಗೆ ಪತ್ರ ಬಂತು. ಶ್ರೀ ಪರಗೌಡಾ ಶಿವಗೌಡಾ ನಾಯಕ, ಶ್ರೀ ದತ್ತೋಬಾ ದೋಂಡೋಬಾ ಕುಲಕರ್ಣಿ, ಶ್ರೀ ಬಾಳಪ್ಪ ಬಸವಂತಪ್ಪ ಮುಗಳಿ, ಶ್ರೀ ಬಸೆಟ್ಟಿ ಪರಮಸೆಟ್ಟಿ ಪುಗಸೆಟ್ಟಿ, ಶ್ರೀ ನಿಂಗಪ್ಪ ಗೊಲೇರ, ದೇವರೇಸಿ ಇವರು ಐದು ಜನ ಒಂದು ಪಕ್ಷವಾದರೆ ಶ್ರೀ ಜಿ. ಎಂ. ಗುಡಸೀಕರ ಬಿ. ಎ. ಎಲ್. ಎಲ್.ಬಿ, ಶ್ರೀ ಸಿ. ಬಿ. ರಮೇಸ್, ಶ್ರೀ ಎಂ.ವಾಯ್ ಮೆರಮಿಂಡ, ಶ್ರೀ ಡಿ. ಬಿ. ಸಾತೀರ, ಶ್ರೀ ಎಸ್. ಎಸ್. ಕಡ್ಲಿ( ಅಂದರೆ ಕಳ್ಳ ಸಿದರಾಮ) ಇವರು ಇನ್ನೊಂದು ಪಕ್ಷವಾದರು ಜನ ಚುನಾವಣೆ ಅರಿಯದವರಲ್ಲ. ಈ ಹಿಂದೊಮ್ಮೆ ಒಂದು ನಡೆದಿತ್ತು. ಹೂಡಿದ ಎತ್ತು, ಗುಡಿಸಲ ಚಿತ್ರಗಳ ಮಧ್ಯೆ. ಹೂಡಿದ ಎತ್ತು ನಮ್ಮ ತಂದೆ ಇದ್ದ ಹಾಗೆ. ಅದಕ್ಕೇ ಹೋಟು ಬರೆಯೋಣ ಎಂದು ಗೌಡ ಹೇಳಿದ್ದರಿಂದ ಹೋಗಿ ಹೋಟು ಬರೆದು ಬಂದಿದ್ದರು. ಈ ಸಲ ಗುಡಸೀಕರನ ಗುಂಪಿಗೆ ತಕ್ಕಡಿಯ ಗುರುತನ್ನು ಕೊಡಲಾಗಿತ್ತು.

ಚತುಷ್ಟಯರು ಕೈಯಿಂದ ಹಣ ಖರ್ಚು ಮಾಡುವಂಥದೇನೂ ಇರಲಿಲ್ಲ, ಗುಡಸೀಕರನ ದಯದಿಂದ. ಆದ್ದರಿಂದ ನಾಲ್ವರೂ ಧಾರಾಳಿಗಳಾದರು. ಮಾತಾಡಿಸಿದವರಿಗೆಲ್ಲ ಬೀಡಿ ಕೊಡುತ್ತ ತಮಗೇ ಹೋಟು ಹಾಕಬೇಕೆಂದರು. ಬಸವರಾಜು ಬೆಳಗಾವಿಯಿಂದ ಒಬ್ಬ ಪೇಂಟರನ್ನು ಗೊತ್ತು ಮಾಡಿ ತಂದ. ಬಂದವನು ಗುಡಸೀಕರನ ಮನೆಯ ಸುಣ್ಣದ ಗೋಡೆಯ ಮೇಲೆ ದೊಡ್ಡ ತಕ್ಕಡಿಯ ಚಿತ್ರ ಬರೆದು “ನಿಮ್ಮ ಹೋಟು ತಕ್ಕಡಿಗೆ” ಎಂದು ಬರೆದಿದ್ದ.

ಬಣ್ಣದಿಂದ ಬರೆದ ಆ ಚಿತ್ರ ಎಷ್ಟು ದೂರದಿಂದ ನೋಡಿದರೂ ಒಡೆದು ಕಾಣುತ್ತಿತ್ತು. ಜನ ಗುಡಸೀಕರನ ಮನೇ ಮುಂದೆ ನಿಂತು, ನಡೆದಾಡಿ ನೋಡಿ ನೋಡಿ ಬಂದರು. ಚಿತ್ರಗಾರ ಪುಕ್ಕಟ್ಟಿ ಬರೆಯುವುದು ಗೊತ್ತಾದೊಡನೆ ಬಸವರಾಜನಿಗೆ ವಿನಂತಿಸಿಕೊಂಡು ಜನ ತಂತಮ್ಮ ಮನೆ ಗೋಡೆಗಳ ಮೇಲೆ ಅಂಥವೇ ಚಿತ್ರ ಬರೆಸಿದರು. ಹೀಗಾಗಿ ಪ್ರತಿ ಮನೆಯ ಗೋಡೆಯ ಮೇಲೆ ಚಿತ್ರದ ತಕ್ಕಡಿ ತೂಗ ತೊಡಗಿತು. ಮಕ್ಕಳು “ನಮ್ಮ ಮನೆಯ ತಕ್ಕಡಿ ದೊಡ್ದದು, ನಿಮ್ಮದು ಸಣ್ಣದೆಂದು ತಂತಮ್ಮಲ್ಲಿ ಜಗಳವಾಡತೊಡಗಿದರು. ಕೆಲವು ಸ್ಥಳಿಕ ಕಲಾವಿದರು ಬರೀ ತಕ್ಕಡಿಯಲ್ಲಿ ಹಣ್ಣು, ತೆಂಗಿನಕಾಯಿ, ವೀಳ್ಯೆದೆಲೆ ಬರೆದರು. ಇನ್ನೊಬ್ಬ ಕಲಾವಿದ ಒಂದು ಪರಡಿಗೆಯಲ್ಲಿ ಹಕ್ಕಿಯನ್ನೂ ಇನ್ನೊಂದರಲ್ಲಿ ರೂಪಾಯಿಗಳನ್ನೂ ಬರೆದ. ಗೌಡನಪಕ್ಷದವರು ಬರೆಸಲಿಲ್ಲವಾದ್ದರಿಂದ ಮರದ ಚಿತ್ರ ಮೂಡಲೇ ಇಲ್ಲ. ಆದರೆ ಗೌಡನ ಪಕ್ಷದ ಸಂಕೇತ ಮರವೆಂದು ಗುರುತಾದೊಡನೆ ತಂತಮ್ಮ ಮನೆಗಳ ತಕ್ಕಡಿಯಲ್ಲಿ ಮರ ಕೂರಿಸಿದಂತೆ, ಅದರ ಮೇಲೆ ಹಕ್ಕಿ ಕೂತ ಹಾಗೆ, ಅದರ ನೆರಳಿನಲ್ಲಿ ದನ ನಿಂತಂತೆ, ಕೆರೆಯಲ್ಲಿ ಕರಿಮಾಯಿ ಕಮಲದ ಹೂ ಹಿಡಿದಿದ್ದಂತೆ ಚಿತ್ರ ಬರೆದರು. ಹೀಗಾಗಿ ಇಡೀ ಊರು ತಕ್ಕಡಿ ಮರಗಳ ವಿಚಿತ್ರ ಪ್ರದರ್ಶನದಂತೆ ಕಾಣುತ್ತಿತ್ತು.

ಊರು ರಂಗು ರಂಗಾಗಿ ಕಂಡಿತಲ್ಲ, ಹಳೆಯ ಮಂದಿ ಅವರೂ ಸೋಜಿಗಪಟ್ಟರೇ, ಆನಂದಪಟ್ಟರೇ, ನೆವದಲ್ಲಿ ನೆವ ಊರಾದರೂ ಚೆಂದಾಯಿತಲ್ಲ ಎಂದರು. ಆದರೆ ಅವರಿಗೆಂದೂ ತಮ್ಮ ಯಶಸ್ಸಿನ ಬಗ್ಗೆ ಸಂದೇಹ ಬರಲಿಲ್ಲ, ಜನಕ್ಕೂ.
ಇತ್ತ ಚತುಷ್ಟಯರು ಅಂದಂದಿನ ಪರಿಣಾಮಗಳನ್ನು ಚರ್ಚಿಸಲು ಪ್ರತಿದಿನ ಗುಡಿಸಲಿನಲ್ಲಿ ಸೇರುತ್ತಿದ್ದರು. ನಾಳೆ ಮಾಡಬೇಕಾದ ಕೆಲಸಗಳನ್ನು ಬಸವರಾಜು ವಿವರಿಸುತ್ತಿದ್ದ. ಅವನ ತಂತ್ರಗಳ ಬಗ್ಗೆ ಈಗ ಗುಡಸೀಕರನಲ್ಲೂ ನಂಬಿಕೆ ಮೂಡಿತ್ತು. ಯಾಕೆಂದರೆ ತಕ್ಕಡಿಯ ಚಿತ್ರ ಬರೆಸುವ ಮೂಲ ವಿಚಾರ ಆತನದೆ. ಈಗಂತೂ ಅವನ ಮಾತೇ ಮಾತು. ಪ್ರಚಾರ ಮಾತ್ರ ಏಕಪಕ್ಷೀಯವಾಗಿತ್ತು. ಈ ತನಕ ಮಂದಿಗೆ ಬೀಡಿಕೊಟ್ಟು, “ನಮಗ ಹೋಟು ಹಾಕ್ರಿ” ಎಂದು ಹೇಳುತ್ತಿದ್ದವರು. ಈಗ ಸಿಗರೇಟು ಹಂಚತೊಡಗಿದರು. ಒಂದು ದಿನ ಬಸವರಾಜು ಇದ್ದಕ್ಕಿದ್ದಂತೆ ಬೆಳಗಾವಿಗೆ ಹೋಗಿ ಇನ್ನೂರು, ಮುನ್ನೂರು ಬಾಡಿತಂದು, ಗಿರಿಜಾ ಮೂಲಕ ಹೆಂಗಸರಿಗೆ ಗೋಪ್ಯವಾಗಿ ಹಂಚಿ, ಆ ಎಲ್ಲರಿಂದಲೂ ಗುಡಸೀಕರ ಪಾರ್ಟಿಗೇ ಹೋಟು ಹಾಕುವಂತೆ ಕರಿಮಾಯಿಯ ಆಣೆ ಮಾಡಿಸಿದ್ದ.

ಇತ್ತ ಚತುಷ್ಟಯರು ಸುಮ್ಮನೆ ಕೂತಿರಲಿಲ್ಲ. ಸಾಲೆ ಮಕ್ಕಳ ಮೆರವಣಿಗೆಯಲ್ಲಿ ದಿನಾ ಮಾಲೆ ಹಾಕಿಕೊಂಡಿ ಕಂಡ ಕಂಡವರಿಗೆ ಬೀಡಿ ಸಿಗರೇಟು ಕೊಡುತ್ತ ಪ್ರಚಾರ ಮಾಡತೊಡಗಿದರು. ಎಲ್ಲಕ್ಕಿಂತ ಹೆಚ್ಚಾಗಿ ನಾಲ್ವರಿಗೂ ಪುಷ್ಕಳ ಸಿಕ್ಕುತ್ತಿದ್ದ ಭಾಷಣದ ಅವಕಾಶಗಳನ್ನು ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇವರ ಭಾಷಣ ಕೇಳಲಿಕ್ಕೆ ಜನ ಬರಲಿ, ಬಿಡಲಿ, ಒಬ್ಬರಿರಲಿ, ಇಬ್ಬರಿರಲಿ, ಬಸವರಾಜು ಕಲಿಸಿದ ಸ್ಟೈಲಿನಲ್ಲಿ ನಿಂತುಕೊಂಡು ಭಾಷಣ ಮಾಡುತ್ತಿದ್ದರು. ಬರೀ ಒಬ್ಬಿಬ್ಬರು ಗಂಡಸರಿದ್ದ ಸಭೆಯಲ್ಲಿ ಚತುಷ್ಟಯರು “ನನ್ನ ನೆಚ್ಚಿನ ಬಂಧು ಭಗಿನಿಯರೇ” ಎಂದೇ ಸುರುಮಾಡಿ ಜೈಹಿಂದಿನಲ್ಲೇ ಮುಗಿಸುತ್ತಿದ್ದರು. ಮಕ್ಕಳು ಮೆರವಣಿಗೆ ಹೊರಟಾಗ “ಮುದಿಯರ ಕಾಲ ಮುಗೀತು, ತರುಣರ ಕಾಲ ಸುರುವಾತು, ಹಳಬರ ಗೊಡ್ಡು ನೀತಿಗೆ ದಿಃಕ್ಕಾರ! ಹೊಸ ರೀತಿಗೆ ಜಯಕಾರ! ಏನೇ ಬರಲಿ, ಒಗ್ಗಟ್ಟಿರಲಿ”, ಇತ್ಯಾದಿ ಕಿರುಚುತ್ತಿದ್ದವು. ಚತುಷ್ಟಯರ ಪೈಕಿ ಇದ್ದುದರಲ್ಲೇ ಸ್ವಲ್ಪ ಸ್ವಂತಿಕೆಯಿದ್ದವರೆಂದರೆ ಕಳ್ಳ ಹಾಗೂ ರಮೇಸ. ಕಳ್ಳ ಉಳಿದವರಂತೆ ಭಾಷಣ ಸುರುಮಾಡಿ ಮುಗಿಸುತ್ತಿದ್ದರೂ ಮಧ್ಯದಲ್ಲಿ ದೃಷ್ಟಾಂತಗಳನ್ನು ಸೇರಿಸುತ್ತಿದ್ದ. ಅವನ ಭಾಷಣದ ಸಾಧ್ಯವಾದಷ್ಟು ಅಶ್ಲೀಲವಲ್ಲದ ಭಾಗವನ್ನು ಕೆಳಗೆ ಉದಾಹರಿಸಿದ್ದೇನೆ.

“ಒಬ್ಬಾಕಿ, ಒಳೇ ಚಂದ, ನವ ತರುಣಿ ಇದ್ದಳಂತ. ಮದಿವ್ಯಾಗೋ ವಯಸ್ಸು ಬಂತು. ಯಾರನ್ನ ಮದಿವ್ಯಾಗಬೇಕು? ವಾರಿಗಿ ಹುಡುಗನ್ನ ಮದಿವ್ಯಾದರ ಅವಂಗ ರಾತ್ರಿ ಬರೋಬರಿ ಕೆಲಸಾ ಮಾಡಾಕ ಬರತೈತೋ ಇಲ್ಲೋ! ಅದಕ್ಕೆ ಒಬ್ಬಾಂವ ವಯಸ್ಸಾದ ಮುದುಕನ್ನ ಮದಿವ್ಯಾದರ, ಹೆಂಗೂ ಅನುಭವ ಇರತೈತಿ, ಕೆಲಸಾ ಬರೋಬರಿ ಮಾಡತಾನು!
ನನ್ನ ನೆಚ್ಚಿನ, ಅಚ್ಚುಮೆಚ್ಚಿನ ಶಿವಾಪುರದ ಬಾಂಧವರೇ, ಹಾಂಗ ತಿಳಕೊಂಡ ಆಕಿ ಮುದುಕನ್ನ ಮದಿವ್ಯಾದಳಂತ! ರಾತ್ರಿ ಸಡಗರ ಮಾಡಿಕೋತ ಹ್ವಾದರ ಅಲ್ಲೇನೈತಿ? ಅನುಭವ ಇತ್ತ ಖರೆ! ಗೂಟ? ಆದ್ದರಿಂದ ನನ್ನ ಬಂಧು ಭಗಿನಿಯರೇ, ಆ ನವ ತರುಣಿ ಹಾಂಗ ಹಳೇ ಬುಡ್ಡಾಗೋಳಿಗಿ ಹೋಟ ಹಾಕಿ ಗೂಟ ಇಲ್ಲಬೇ ಅಂತ ಅಳಬ್ಯಾಡರಿ. ಜೈಹಿಂದ್.”
ಇದಕ್ಕೆ ರಮೇಸನ ವಿವರಣೆ ಹೀಗಿರುತ್ತಿತ್ತು:
“ನನ್ನ ನೆಚ್ಚಿನ ಅಚ್ಚುಮೆಚ್ಚಿನ ಶಿವಾಪುರದ ಬಂಧು ಭಗಿನಿಯರೇ, ನಮ್ಮ ಕಳ್ಳರವರು ಹೇಳಿದ ಮಾತನ್ನು ಬರೋಬರಿ ತಿಳಕೊಳ್ಳಿರಿ. ಅವರು ಹೇಳಿದ ಕತೆ ಸುಳ್ಳಲ್ಲ. ಅದರೊಳಗ ನವತರುಣಿ ಅಂದರ ಹೋಟು ಹಾಕುವಂತಾ ನೀವು. ಬುಡ್ಡಾ ಅಂದರ ಗೌಡರ ಪಾರ್ಟಿ, ಮುದಿವ್ಯಾಗೋದಂದರ ಹೋಟ ಹಾಕೋದು; ರಾತ್ರಿ ಅಂದರ ಎಲೆಕ್ಷನ್ ಆದಮೇಲೆ ಅಂತ ಅರ್ತ. ಆ ನವ ತರುಣಿಯು ಯಾವ ರೀತಿ ಬುಡ್ಡಾನನ್ನು ಮದಿವ್ಯಾಗಿ ರಾತ್ರಿ ಗೂಟವಿಲ್ಲೆಂದು ಅತ್ತಳೋ, ಅದೇ ರೀತಿ ನೀವು ಗೌಡರ ಪಾರ್ಟಿಗೆ ಹೋಟು ಹಾಕಿ, ಬಂಧು ಭಗಿನಿಯರೇ, ಗೋಳಾಡಬ್ಯಾಡಿರಿ. ಮದುವೆ ಜೀವನದಾಗ ಮ್ಯಾಲಿಂದ ಮ್ಯಾಲ ಆಗೋದಿಲ್ಲ. ಈಗ ಆ ನವ ತರುಣಿ ಏನು ಮಾಡಬೇಕು? ಗೂಟಿಲ್ಲದ ಬುಡ್ಡಾ ಒಂದು ಕಡೆ, ನವ ಪ್ರಾಯ ತುಂಬಿ ತುಳುಕುವ ನವ ತರುಣ ಇನ್ನೊಂದು ಕಡೆ. ವಿಚಾರ ಮಾಡಿರಿ, ಏನು ಮಾಡಬೇಕು?”
ಅಷ್ಟರಲ್ಲಿ ಸಭಿಕರಲ್ಲಿ ಒಬ್ಬ “ಹಾದರ ಮಾದಬೇಕಪಾ” ಅಂದ. ರಮೇಸ ಅದನ್ನೇ ಮುಂದುವರೆಸಿದ.
“ನನ್ನ ನೆಚ್ಚಿನ ಅಚ್ಚುಮೆಚ್ಚಿನ ಬಂಧು ಭಗಿನಿಯರೇ, ಮೊದಲೇ ನವ ತರುಣನಾದ ಹುಡುಗನ್ನ ಮದಿವ್ಯಾಗಿದ್ದರೆ ಹಾದರ ಯಾಕೆ ಮಾಡಬೇಕಾಗಿತ್ತು? ಅದಕ್ಕೆ ನಮಗೇ ಹೋಟು ಹಾಕಿರಿ. ಜೈಹಿಂದ್!”
ಇವರು ಇಷ್ಟೆಲ್ಲ ಪ್ರಚಾರ ಮಾಡಿದ ಮೇಲೆ ಯಾವನಾದರೊಬ್ಬ “ಛೇ ಛೇ ನೀವೆಲ್ಲಾ ಗೌಡರ ಮುಂದಿನ ಕರುಗಳು. ಇನ್ನ ತಲೀ ಮ್ಯಾಲಿನ ಮಾಂಸ ಆರಿಲ್ಲ, ಚುನಾವಣೆ ಗೆಲ್ಲತಾರಂತ” ಹೀಗಂದರ ಸಾಕು ಪ್ರಚಾರ ಇನ್ನೂ ತೀವ್ರವಾಗುತ್ತಿತ್ತು.
ಬಹಳ ದಿನಗಳಿಂದ ಮನರಂಜನೆ ಕಾಣದಿದ್ದ ಊರಿಗೆ ಇದೆಲ್ಲ ಸೊಗಸಾಗೇ ಕಂಡಿತು. ಸೋಲು ಗೆಲುವುಗಳ ಬಗ್ಗೆ ಗುಡಸೀಕರ ಮತ್ತು ಪಾರ್ಟಿಯವರು ಮನಸ್ಸಿಗೆ ಹಚ್ಚಿಕೊಂಡಂತೆ ಉಳಿದವರ್‍ಯಾರೂ ಹಚ್ಚಿಕೊಳ್ಳಲೂ ಇಲ್ಲ. ಮಗನನ್ನು ಕಳೆದುಕೊಂಡ ಚಿಂತೆಯಲ್ಲಿದ್ದ ಗೌಡನಿಗಾಗಲಿ, ಆ ಬಗ್ಗೆ ಸಹಾನುಭೂತಿಯಲ್ಲಿದ್ದ ಹಿರಿಯರಿಗಾಗಲಿ ಪ್ರಚಾರ ಮಾಡುವ ಬುದ್ಧಿ ಬರಲೇ ಇಲ್ಲ. ಅವರಿಗೂ ಪ್ರಚಾರದ ಈ ಹುಡುಗಾಟ ಮೋಜೆನಿಸಿತು. ಚುನಾವಣೆಯ ದಿನ ಸಮೀಪಿಸಿದಂತೆ ಗುಡಸೀಕರನ ಪಾರ್ಟಿಯವರ ಚಡಪಡಿಕೆ ಜಾಸ್ತಿಯಾಗುತ್ತಿತ್ತು.ಚಡಪಡಿಕೆಯಲ್ಲಿ ಒಮ್ಮೊಮ್ಮೆ ಅಲ್ಲದ್ದನ್ನೂ ಆಡುತ್ತಿದ್ದರು. “ಚಿಮಣಾನ ಬಸರ ಮಾಡಿದ ಗೌಡನಿಗೆ ಧಿಕ್ಕಾರ” ಎಂದು ಮಕ್ಕಳಿಂದ ಒದರಿಸಿದರು. ಆದರೆ ಜನ ಛೀ, ಥೂ ಉಗುಳಿ ಹುಡುಗರನ್ನು ಹೊಡೆದದ್ದರಿಂದ ಅಷ್ಟಕ್ಕೇ ನಿಲ್ಲಿಸಿದರು.

ನೆತ್ತಿಯ ಸೀಳಿದಂತೆ

ಹಗಲು ಹೊತ್ತಿನಲ್ಲಿ ಚತುಷ್ಟಯರ ಪ್ರಚಾರ ಕಾರ್ಯ ನಡೆದರೆ, ರಾತ್ರಿ ಹೊತ್ತು ಬಸವರಾಜೂನ ಸಂಚುಗಳು ನಡೆಯುತ್ತಿದ್ದವು. ಹಳ್ಳಿಯ ಕೊಳ್ಳೀ ಬೆಳಕಿನಲ್ಲಿ ಅವು ಜನಗಳ ಕಣ್ಣಿಗೆ ಬೀಳುತ್ತಿರಲಿಲ್ಲ.
ಮುಂಗಾರಿ ಬೆಳೆ ಬಂದಾಗಿತ್ತು. ಹಿಂಗಾರಿಯಿನ್ನೂ ಹೊಲಗಳಲ್ಲಿತ್ತು. ಈಗ ದೇವರೇಸಿಗೆ ಮೈತುಂಬ ಕೆಲಸ. ಓಡಾಡಿ ಆಯ ತರಬೇಕಿತ್ತು. ಸಂಜೆಯ ತನಕ ಕಣದಿಂದ ಕಣಕ್ಕೆ ಅಲೆದಾಡಿ ಗುಡಿಸಲಿಗೆ ಬಂದರೆ, ಕಂಬಳಿ ಚೆಲ್ಲಿಕೊಂಡು ಬಿದ್ದರೆ ಸಾಕಾಗಿತ್ತು. ಆದರೆ ಎಷ್ಟಂದರೂ ಚಪಲದ ಬಾಯಿ, ಕಂಠಮಟ ಕುಡಿಯಬೇಕೆನಿಸಿ ಒಣಗುತ್ತಿತ್ತು. ಇತ್ತ ಲಗಮವ್ವನಿಗೂ ಆಯ ಸಂಗ್ರಹಿಸುವ ಕೆಲಸ. ಭಟ್ಟಿಯಿಳಿಸುವುದು ಅವಳಿಂದ ಸಾಧ್ಯವಿರಲಿಲ್ಲ. ಅವಳು ಅಡಿಗೆ ಮಾಡಿಕೊಳ್ಳುವುದೇ ಅಪರೂಪವಾಗಿತ್ತು. ಹೊಲಗಳಲ್ಲಿ ರೈತರು ಕೊಡುವ ರೊಟ್ಟಿಯಿಂದಲೇ ತೃಪ್ತಳಾಗುತ್ತಿದ್ದಳು. ಇಷ್ಟು ದಿನ ಗುಡಿಸಲಲ್ಲಿ ದುರ್ಗಿಯಿರುತ್ತಿದ್ದಳು. ಲಗಮವ್ವ ಬೇಕೆನಿಸಿದರೆ ಒಂದು ರೊಟ್ಟಿ ಸುಡಿಸಿಕೊಳ್ಳುತ್ತಿದ್ದಳು. ಈಗ ದುರ್ಗಿಯ ಬಳಕೆ ಕಮ್ಮಿಯಾಗಿತ್ತು.
ಇತ್ತ ದಿನ ಅಲ್ಲ, ಕಾಲವಲ್ಲ, ಧೀನ್ ಅಂದ ಹಾಗೆ ಸುಂದರಿಯ ಸಡಗರ ಕಟ್ಟುಮೀರಿತ್ತು. ಗುಡಸೀಕರ ಮತ್ತೆ ಸಿಕ್ಕ ಸಂಭ್ರಮದಲ್ಲಿ ಮೈಮರೆತು ಖಬರಗೇಡಿಯಾಗಿದ್ದಳು. ಅವಳನ್ನು ಹಿಡಿಯುವುದೇ ಕಷ್ಟವಾಗಿ ಕಣ್ಣಿ ಬಿಚ್ಚಿದ ಉಡಾಳ ದನದಂತೆ ಮೈ ಉಮೇದಿಯನ್ನು ಕೇರಿಯ ತುಂಬ ತುಳುಕಿದಳು. ನೆಲ ಗುಡಿಸುವ ಹಾಗೆ ನೆರಿಗೆ ಹೊಡೆದು ಇಪ್ಪತ್ತು ರೂಪಾಯಿಯ ಶಾಪೂರಿ ಸೀರೆ ಉಟ್ಟು ಮೆರೆದಳು. ಬಾಡಿಯ ಎದೆಯಲ್ಲೆರಡು ಚೂಪಾದ ಚೂರಿ ಇಟ್ಟುಕೊಂಡು ಗುಡಸೀಕರನ ಕಣ್ಣಿರಿದಳು. ಸೊಂಟಕ್ಕೆ ಬೆಂಕಿ ಹಚ್ಚಿದಳು. ಮೂಗಿನ ದಿಗರಿನಲ್ಲಿ ಕೆಳಗಿನ ನೆಲ ಮರೆತಳು. ಜನ ಕೆಲಸಗಳಲ್ಲಿ ಬಹಿಷ್ಕಾರ ಮರೆತರು. ಇವಳ ಉಡಿಗೆ ತೊಡಿಗೆ ನಡಿಗೆಯ ವಿಲಾಸ ಊರವರ ಕಣ್ಣು ಕುಕ್ಕದಿರಲಿಲ್ಲ. ಆದರೆ ಹೇಳಿ ಕೇಳಿ ಸೂಳೆಯಾದ್ದರಿಂದ, ಅದೂ ಪರವೂರವಳಾದ್ದರಿಂದ ಅನ್ನುವಷ್ಟು ಅಂದು ಸುಮ್ಮನಾದರು. ಆದರೆ ಮೂಗಿನ ಮೂಗುತಿಯಲ್ಲೇ ನದರ ನೆಟ್ಟ ಸುಂದರಿಗೆ ಈ ಮಾತು ಕೇಳಿಸಲಿಲ್ಲ. ಚೈನಿಯ, ಪ್ರೇಮದ, ಕಾಮದ, ಸುಖದ ಉನ್ಮಾದದಲ್ಲಿ ಹುಚ್ಚು ಕುದುರೆಯಾಗಿದ್ದಳು. ಏರಿದವನ ಖರೆ, ಖೊಟ್ಟಿ, ತಿಳಿಯದೆ, ಗೊತ್ತುಗುರಿ ಗೊತ್ತಿಲ್ಲದೆ ಮೂಗಿನ ಮುಂದಿನ ದಿಕ್ಕಿಗೆ, ಎದುರು ತಗ್ಗಿರಲಿ, ದಿನ್ನೆಯಿರಲಿ, ಏಳಲಿ, ಬೀಳಲಿ, ಓಟಕ್ಕೆ ಸಿದ್ಧವಾಗುತ್ತಿದ್ದಳು. ಆದರೆ ಅವಳಿಗೂ ತಿಳಿದಿರಲಿಲ್ಲ. ತನ್ನ ನಿಜವಾದ ಸವಾರ ಯಾರೆಂದು.
ಇತ್ತ ಬಸವರಾಜು ಜಾತ್ಯಾ ಕಮ್ಮಾರನಂತೆ ಕುಲುಮೆಯಲ್ಲಿ ಅನೇಕ ಕಬ್ಬಿಣ ಹಾಕಿ ಕಾಸುತ್ತಿದ್ದ. ಚತುಷ್ಟಯರಿಂದ ತಿದಿ ಊದಿಸುತ್ತಿದ್ದ. ಇದ್ದಿಲು ಹಾಕುತ್ತಿದ್ದ. ಕಬ್ಬಿಣ ಕಾದೊಡನೆ ಗುಡಸೀಕರನಿಂದ ಹೊಡೆಸಿ ಏನೋ ಸಾಮಾನು ಮಾಡುತ್ತಿದ್ದ. ಆದರೆ ಮಾಡಿದ ಸಾಮಾನು ಯಾರಿಗೆ ಯಾವ ಕೆಲಸಕ್ಕೆ ಉಪಯೋಗ ಬೀಳುತ್ತದೆಂಬುದು ಮಾತ್ರ ಬೇರೆಯವರಿಗೆ ತಿಳಿಯುತ್ತಲೇ ಇರಲಿಲ್ಲ. ಅವನ ಕುಲುಮೆಯಲ್ಲಿ ಅನೇಕ ದಿನಗಳಿಂದ ಬಿದ್ದಿದ್ದ ಸಲಾಕೆಯೊಂದಿತ್ತು. ಹೊಸ ಮಿದು ಕಬ್ಬಿಣವೊಂದು ಬಂದು ಸೇರಿತ್ತು. ಅದೇನು ಸಾಮಾನು ಮಾಡುತ್ತಾನೋ ನೋಡೋಣ.
ಒಂದು ದಿನ ದೇವರೇಸಿ ಹೊಲದಿಂದ ಮೂರು ಸಂಜೆಗೇ ಬಂದ. ಬಸವರಾಜು ಮೆತ್ತಗೆ ದೇವರೇಸಿಯ ಗುಡಿಸಲಲ್ಲಿ ಕಾಲಿಟ್ತ. ನೋಡನೋಡುತ್ತಿದ್ದಂತೇ “ತಾಯೀ” ಎಂದು ಬಂದವನೇ ಕಾಲು ಹಿಡಿದ. ಅವನ ಬಗ್ಗೆ ದೇವರೇಸಿಗೇನೂ ಸಿಟ್ಟಿರಲಿಲ್ಲ. ಅಸಮಧಾನವೂ ಇರಲಿಲ್ಲ. ಆದರೆ ಆತ ತನ್ನ ಗುಡಿಸಲಿಗೆ ಬಂದಾನೆಂದು ಕನಸು ಮನಸಿನಲ್ಲೂ ಧೇನಿಸಿದವನಲ್ಲ. ತಾನಾಗಿ ಗುಡಿಸಲಿಗೆ ಬಂದನಲ್ಲ, ದೇವರೇಸಿಗೆ ಸಂತೋಷವೇ ಆಯ್ತು. ಇಂಗರೇಜಿ ಕಲಿತವರು ತನ್ನನ್ನು ನಿರ್ಲಕ್ಷ್ಯ ಮಾಡುತ್ತಾರೆಂದು ಮನಸಿನಲ್ಲಿ ಸ್ವಲ್ಪ ಅಸಮಧಾನ ಕೂಡ ಇತ್ತು. ಗುದಸೀಕರ ಒಮ್ಮೆಯೂ ಇವನ ಕಾಲು ಮುಟ್ಟಿರಲಿಲ್ಲ. ತಾಯೀ ಅಂದಿರಲಿಲ್ಲ. ಈತನಾದರೆ ಗುಡಸೀಕರನಿಗಿಂತ ಸ್ವಲ್ಪ ಹೆಚ್ಚು ಕಲಿತಿರಬೇಕೆಂದೇ ಅನೇಕರು ಮಾತಾಡಿಕೊಂಡಿದ್ದರು. ಈಗ ಇವನೇ ಬಂದು ಕಾಲು ಹಿಡಿದು, ಕೊಡಬೇಕಾದ ಗೌರವ ಕೊಟ್ಟಿದ್ದನಲ್ಲ, ಆ ಮಾತು ನಿಜವೆನ್ನಿಸಿತು. ಆದರೆ ಕೂಡಲೇ ಏನು ಮಾಡಬೇಕು? ಏನು ಮಾತಾಡಬೇಕೆಂದು ತೋಚಲಿಲ್ಲ. ಎದ್ದು ಹೋಗಿ ಮೂಲೆ ನೆಲುವಿಗಿದ್ದ ಬಂಡಾರ ಚೀಲತಂದು ಅವನ ಹಣೆಗಂಟಿಸಿ ಕೂತ. ಬಸವರಾಜು ಕೈಮುಗಿದೇ ಕೂತ. “ತಾಯೀ ನಮ್ಮ ಗುಡಿಸಲ ತನಕ ಪಾದಾ ಬೆಳೆಸಿ, ನಮ್ಮ ಸೇವಾ ಒಪ್ಪಿಸಿಕೋಬೇಕು” ಅಂದ. ದೇವರೇಸಿಗೆ ಇನ್ನೂ ದಿಗಿಲು. ಅವನ ಬರುವಿನ ಹಾಗೆ ಅವನ ಈ ಮಾತನ್ನೂ ಆತ ನಿರೀಕ್ಷಿಸಿರಲಿಲ್ಲ. ಹೂಂ ಎನ್ನಬೇಕೆ?ಈ ಅಡ್ಡದಿನ ಅಡ್ಡವೇಳೆಯಲ್ಲಿ ಸೇವೆ ಒಪ್ಪಿಸಿಕೊಳ್ಳೋದೆಂದರೇನು? ಗುಡಿಸಲ ತನಕ ಬರಬೇಕಂತ ಅಲ್ಲವೆ ಹೇಳಿದ್ದು? ಹೋಗಿ ಅದೇನು ಸೇವೆಯೋ ನೋಡೋಣವೆಂದುಕೊಂಡು ” ಆಗಲಿ” ಅಂದ. ಬಸವರಾಜು ಎದ್ದುನಿಂತ ಕೈ ಮುಗಿದುಕೊಂಡೇ, ಅವನ ಹೋಗದೆ ಅಲ್ಲೇ ನಿಂತದ್ದನ್ನು ನೋಡಿ ಬಹುಶಃ ಈಗಲೇ ಬಾ ಅಂತಿದ್ದಾನೆಂದು ದೇವರೇಸಿಯು ಎದ್ದ. ಬಸವರಾಜು ಮುಂದೆ ಹೊರಟ. ದೇವರೇಸಿ ಬೆನ್ನು ಹತ್ತಿದ.
ಕಂಬಳಿ ಹಾಸಿತ್ತು. ತಾಯಿ ಗದ್ದಿಗೆಗೊಂಡಳು. ಬಸವರಾಜು ಒಳಹೊರಗೆ ಓಡಾಡುತ್ತ, ಸಂಭ್ರಮ ಮಾಡುತ್ತ ಒಂದು ಹರಿವಾಣ ತುಂಬ ವಿಸ್ಕಿ ಸುರಿದು ತಾಯಿಗಿತ್ತ. ತಾಯಿಗೆ ಹಿಗ್ಗೋ ಹಿಗ್ಗು. ಈಗ ಹದಿನೈದು ದಿನಗಳಿಂದ ಮುಟ್ಟಿರಲಿಲ್ಲವಲ್ಲ, ಕುಡಿಯೋದನ್ನ ಬಿಟ್ಟು ವರ್ಷವಾದಂತಾಗಿತ್ತು. ಅಲ್ಲದೆ ಈ ತನಕ ಕುಡಿದದ್ದು ಕಂಟ್ರಿ ಸೆರೆ; ಅದೂ ಲಗಮವ್ವ ಮಾಡಿದ್ದು. ಇದಾದರೆ ಥಳಥಳ ಹೊಳೆಯುವ ಬಣ್ಣದ ಬಾಟ್ಲಿಯಲ್ಲಿಟ್ಟಿದ್ದು, ತನ್ನೆದುರಿಗೇ ಅದನ್ನು ಒಡೆದದ್ದು. ಮುಂದಿಡುವುದೇ ತಡ ತಾಯಿ ಒಂದೇ ಗುಟುಕಿಗೆ ತಳಕ್ಕೊಂದು ಹನಿ ಕೂಡ ಬಿಡದೆ ಮುಗಿಸಿದಳು. ಕರುಳಿನಲ್ಲಿ ಭಗ್ಗನೆ ಹೊತ್ತಿದಂತಾಗಿ ಕಿವಿ, ಮೂಗು, ಬಾಯಿಗಳಲ್ಲಿ ಬಿಸಿ ಗಾಳಿ ಸೂಸಿತು. ಆಮೇಲೆ ಒಳಗೆ ಹೋಗಿ ಹರಿವಾಣದ ತುಂಬ ಖಂಡದ ಪಲ್ಯ, ಏಳೆಂಟು ರೊಟ್ಟಿ ತಂದು ಮುಂದಿಟ್ಟ. ತಾಯಿಯ ಕಣ್ಣರಳಿ, ಮೂಗರಳಿ, ಆ ಈ ಕಡೆ ನೋಡದೆ ಪಚಪಚ ತಿನ್ನತೊಡಗಿದಳು.
ನೀರು ಕೂಡ ಬೆರೆಸದೆ ಇಡೀ ಬಾಟ್ಲಿ ವಿಸ್ಕಿಯನ್ನು ಒಂದೇ ಗುಟುಕಿಗೆ ಸೇವಿಸಿದಾಗ ಬಸವರಾಜು ಕಣ್ಣಗಲಿಸಿ ಆಶ್ಚರ್ಯ ಸೂಚಿಸಿದ್ದರೆ ಚಿಮಣಾ ಕಣ್ಣರಳಿಸಿ ನಾಲಿಗೆ ಕಚ್ಚಿಕೊಂಡು ಹೊಯ್ಮಾಲಿ ಹೊಯ್ಕಗೊಂಡಳು. ಈಗ ದೇವರೇಸಿ ಪ್ರಾಣಿಗಳ ಹಾಗೆ ಸಪ್ಪಳ ಮಾಡುತ್ತ ಖಂಡ ತಿನ್ನುವುದನ್ನು ನೋಡಿ ಬಸವರಾಜು ಮುಗುಳುನಕ್ಕ. ಒಳಗಿದ್ದ ಸುಂದರಿ ಇಶ್ಯೀ ಎಂದು ಕಿಸಕ್ಕನೆ ನಕ್ಕಳು. ದೇವರೇಸಿ ಮಾತ್ರ ಇದಾವುದರ ಪರಿವೆಯಿಲ್ಲದೆ ತಿನ್ನುತ್ತಿದ್ದ.
ಮೈಯಲ್ಲಿ ಸೊಂಟದ ಧೋತ್ರ ಬಿಟ್ಟರೆ ಒಂದು ಚೂರು ಬಟ್ಟೆಯಿರಲಿಲ್ಲ. ಖಂಡ ಹೆಂಡ ಎರಡೂ ಸೇರಿ ಮೈಮೇಲೆ ಧಾರಾಕಾರ ಬೆವರು ಸುರಿಯುತ್ತಿತ್ತು. ಮೊದಲೇ ಕರ್ರಗೆ ಕಬ್ಬಿಣದಂತಿದ್ದ ಮೈ, ಬೆವರಿನಿಂದ ಇನ್ನಷ್ಟು ಹೊಳೆಯತೊಡಗಿತ್ತು. ಆ ಮೈಕಟ್ಟಿಗೆ ಅರವತ್ತು ವರ್ಷ ಬಹಳವಾಯ್ತು. ಎದೆ, ರಟ್ಟೆಯ ಮಾಂಸಖಂಡ ಗಟ್ಟಿಗೊಂಡು ಹುರಿಯಾಗಿದ್ದವು. ಹಿಂದೆ ಮಾರುದ್ದ ಜಡೆ, ಮುಂದೆ ಗಡ್ಡ, ಹೆಂಗಸಲ್ಲದ ಗಂಡಸಲ್ಲದ ಆ ಆಕೃತಿ ವಿಶೇಷ ನೋಡಿ ಬಸವರಾಜನಿಗೆ ಮೋಜೆನಿಸಿತು. ಸುಂದರಿಗೂ ಮುಂದೆ ಬಂದು ದೇವರೇಸಿಯಿಂದ ನೋಡಿಸಿಕೊಳ್ಳಬೇಕೆಂದಳು. ತಾನು ಹೇಳದ ಹೊರತು ಹೊರಗೆ ಬರಕೂಡದೆಂದು ಬಸವರಾಜು ಹೇಳಿದ್ದ, ಸುಮ್ಮನಿದ್ದಳು. ಬಹುಶಃ ಖಾರ ಜಾಸ್ತಿಯಾಗಿರಬೇಕು ಪಲ್ಯಕ್ಕೆ. ದೇವರೇಸಿಯ ಮೂಗು ಸೋರಿ ಕಣ್ಣೀರೂ ಅದರೊಂದಿಗೆ ಬೆರೆತು, ಬೆವರುಗೈಯಿಂದಲೇ ಅದನ್ನೆಲ್ಲ ಒರೆಸಿಕೊಳ್ಳುತ್ತ ಉಂಡ. ಉಂಡಮೇಲೆ ಗುಡಿಸಲು ನಡುಗಿ, ಪಕ್ಕದ ಗುಡಿಸಲು ಮಕ್ಕಳು ಹೆದರಿ ಚೀರುವ ಹಾಗೆ ಡರ್ರ್ರ್ ಎಂದು ಢರಿಕೆ ತೇಗಿದ, ಸುಂದರಿಗೆ ಅಸಹ್ಯವಾಯ್ತು.
ಊಟವಾದ ಮೇಲೆ ಬಸವರಾಜು ಮತ್ತು ಸುಂದರಿ ಇಬ್ಬರೂ ಒಳಗೊಳಗೇ ನಗುತ್ತ ತಾಯಿಗೆ ಅಡ್ಡಬಿದ್ದರು. ತಾಯಿ ಅವರ ಹಣೆಗೆ ಬಂಡಾರ ಹಚ್ಚಲಿಲ್ಲ. ಹರಕೆ ನುಡಿಯಲಿಲ್ಲ. ತೇಲುಗಣ್ಣು ಮಾಡಿಕೊಂಡು ‘ತಾಯಿ’ ಎನ್ನುತ್ತ ಎದ್ದಳು. ತೂಕ ತಪ್ಪಿತು. ಬಸವರಾಜು ಹೋಗಿ ಹಿಡಿದುಕೊಂಡು ಅವಳ ಗುಡಿಸಲು ತನಕ ಹೋಗಿ ಬಿಟ್ಟುಬಂದ.
ಆ ದಿನ ರಾತ್ರಿ ದೇವರೇಸಿಗೆ ಯಾರೋ ನೆತ್ತಿಯ ಮೇಲೆ ಕೊಡ್ಲಿಯಿಂದ ಏಟು ಹಾಕಿದಂತೆ ಕನಸಾಯಿತು. ಗಡಬಡಿಸಿ ಎದ್ದುಕೂತ. ಬಿಕ್ಕಲಾಗಲಿಲ್ಲ. ಕನಸಿನ ಅರ್ಥವೂ ತಿಳಿಯಲಿಲ್ಲ. ಆದರೆ ಮಾರನೇ ದಿನದಿಂದ ತಾಯಿಯ ಕೃಪಾದೃಷ್ಟಿ ಬಸವರಾಜೂನ ಗುಡಿಸಲ ಕಡೆಗೆ ಬೀಳತೊಡಗಿತು. ಬಸವರಾಜು ನಿರಸೆಗೊಳಿಸಲಿಲ್ಲ.

ಊರು ಬೀದಿಗಿಳಿಯಿತು

‘ರಂಡಿ ಹುಣ್ಣಿವೆ’ಯಿನ್ನೂ ನಾಕು ದಿನ ಇತ್ತು. ಅಂದು ಮಧ್ಯಾಹ್ನ ಬೇಸಿಗೆಯಂಥ ಬಿಸಿಲು ಬಿದ್ದು ದನಕರು ಕೆರೆಯಲ್ಲಿ ಬಿದ್ದು ತಂಪಿನ ಅಮಲಿನಲ್ಲಿದ್ದವು. ಹೊಲಗಳಲ್ಲಿದ್ದವರು ಒಣ ಕನಿಕೆಯ ಗೂಡು, ಮರ, ಮರೆಯ ನೆರಳುಗಳಲ್ಲಿ ಆಶ್ರಯ ಪಡೆದಿದ್ದರು. ಭೂಮಿ ಸೀಮೆಯ ಸುತ್ತಮುತ್ತ ಎತ್ತ ನೋಡಿದರೂ ಬಿಸಿಲುಗುದುರೆಗಳ ಓಟ ಕಾಣಿಸುತ್ತಿತ್ತು. ಊರಿನಲ್ಲಿ ಜನ ಕಟ್ಟೆಗಳ ಮೇಲೆ, ಪಡಸಾಲೆಯಲ್ಲಿ ತಂಪಾಗಿ ಕೂತಿದ್ದರು. ಉರಿ ಬಿಸಿಲಿನ ಪ್ರತಾಪ ಎಷ್ಟು ತೀವ್ರವಾಗಿತ್ತೆಂದರೆ ಮಾತಾಡುವುದಕ್ಕೆ ಕೂಡ ಮನಸ್ಸಾಗುತ್ತಿರಲಿಲ್ಲ. ಹೀಗಾಗಿ ಹಗಲಾದರೂ ರಾತ್ರಿಯಷ್ಟೇ ಊರು ನಿಶ್ಯಬ್ದವಾಗಿತ್ತು.
ಅಷ್ಟರಲ್ಲಿ ಊರವರು ಹಿಂದೆಂದೂ ಕೇಳರಿಯದ, ಊಹಿಸಬರದ, ಕಲ್ಪಿಸಬರದ ವಿಕಾರ ಸ್ವರ ಕಿವಿಯಲ್ಲಿ ಗೂಟ ಜಡಿದಂತೆ, ಇಡೀ ಊರು ಸಿಡಿದು ಸ್ಪೋಟಗೊಂಡಂತೆ, ಗುಡ್ಡ ಉರುಳಿ ಮೈ ಮೇಲೆ ಬಿದ್ದಂತೆ ಕೇಳಿಸಿ ಊರಿಗೂರೇ ಕೆಲವು ಕ್ಷಣ ದಿಗ್ಭ್ರಮೆಗೊಂಡಿತು. ಮಲಗಿದ್ದವರು ದುಃಸ್ವಪ್ನ ಕಂಡಂತೆ ಚಕ್ಕನೆ ಎದ್ದು ಕೂತರು. ಕೆರೆಯಲ್ಲಿದ್ದ ದನಗಳು ಬೆದರಿ, ಹೊರಗೋಡಿದವು. ಅನೇಕರ ಸೀರೆ ಧೋತ್ರಗಳು ಒದ್ದೆಯಾದವು. ಮಕ್ಕಳು ಕಿಟಾರನೆ ಕಿರುಚಿದವು. ಲಗಮವ್ವ ಹೇಳಿದ್ದು ನಿಜವೇ ಎನ್ನುವುದಾದರೆ, ಕರಿಮಾಯಿಯ ಮೂರ್ತಿ ಈ ದನಿ ಕೇಳಿ ಗಕ್ಕನೆ ಹಾರಿ, ಕುಪ್ಪಳಿಸಿ, ಮುರಿದ ಕೈ ಜಾರಿ ಕೆಳಗೆ ಬಿತ್ತಂತೆ! ಲಗಮವ್ವ ಅದನ್ನು ಮತ್ತೆ ಅವಳ ಕೈಯಲ್ಲಿಟ್ಟು ನೋಡಿದಾಗ ಮೂರ್ತಿ ಸಣ್ಣದಾಗಿ ಬೆವರಿತ್ತಂತೆ! ಕೆರೆಯ ಸುತ್ತಲಿನ ಗಿಡಮರಗಳಲ್ಲಿ ಕೂತ ಹಕ್ಕಿ ಪಕ್ಕಿಗಳು ಏನೋ ಆಘಾತವಾದಂತೆ ಕಿರ್ರ್ ಎಂದು ಕಿರುಚು‌ಉ‌ಅ ಹಾರಾಡತೊಡಗಿದವು! ಏನೇನೂ ಅತಿಶಯೋಕ್ತಿಯಿಲ್ಲದೆ ವರ್ಣಿಸಬೇಕೆಂದರೆ ಮನೆಗಳಲ್ಲಿ ಒಬ್ಬರೂ ಉಳಿಯದೆ ಊರಿಗೆ ಊರೇ ಹೊಟ್ಟೆ ತೊಳಸಿ ವಾಂತಿ ಮಾಡಿಕೊಂಡಂತೆ ಎಲ್ಲ ಜನ ಹಿರಿಕಿರಿಯರೆನ್ನದೆ, ಗಂಡು ಹೆಣ್ಣೆನ್ನದೆ ಬೀದಿಗೆ ಬಂದರು! ಮೊದಮೊದಲು ಅದರ ದನಿ ಮಾತ್ರ ಕೇಳಿಸಿ, ಅನಂತರ “ನಿಮ್ಮ ಹೋಟು ಯಾರಿಗೆ? ಗುಡಸೀಕರ ಸಾಹೇಬರಿಗೆ” ಎಂಬ ಶಬ್ದಗಳು ಕೇಳಿದ್ದರಿಂದ ಸ್ವಲ್ಪ ನೆಮ್ಮದಿಗೊಂಡು ದನಿಬಂದ ಕಡೆಗೆ ಕೂತ ನಿಂತವರೆಲ್ಲ ನುಗ್ಗಿದರು. ಗುಡಸೀಕರ ಮೈಕ್ ತರಿಸಿ ಮಟ ಮಟಾ ಮಧ್ಯಾಹ್ನದ ಹೊತ್ತಿನಲ್ಲಿ ಮಾರಾಯ, ಕರಿಮಾಯಿ ಅವನ ಹೊಟ್ಟಿ ತಣ್ಣಗಿಡಲಿ, ಚುನಾವಣೆಯ ಪ್ರಚಾರ ಒದರಿಸುತ್ತಿದ್ದ.
ಆ ದಿನ ಯಾರ ಬಾಯೊಳಗೆಲ್ಲ ಅದೇ ಮಾತು. ಉದ್ರೇಕಕರ ಕತೆಗಳಿಂದ, ಸುದ್ದಿಗಳಿಂದ, ಸಪ್ಪಳದಿಂದ, ಉರಿ ಬಿಸಿಲಿನಿಂದ ಊರು ದುಮುಗುಟ್ಟಿತು. ದುರ್ದೈವವೆಂದರೆ ಒಬ್ಬರ ಮಾತು ಒಬ್ಬರಿಗೆ ಕೇಳಿಸುತ್ತಿರಲಿಲ್ಲ. ಕಿರಿಚಿ, ಅಭಿನಯಿಸಿ, ಗಂಡಸರು ಗುಂಪುಗೂಡಿ, ಹೆಂಗಸರು ಹೊರಗಡೆ ಹೋದಲ್ಲಿ ಮಾತಾಡಿಕೊಂಡರು. ಹಿರಿಯರು ಕೂಡ ಹೆಂಗಸರಂತೆ ಆಡಿಕೊಂಡರು. ಮೈಕ್ ಶಬ್ಧವನ್ನು ಒಂಯ್ಕ್ ಒಂಯ್ಕ್ ಎಂದು ಅಣಕಿಸಿದರು. ಇದಕ್ಕೆಲ್ಲ ಎಷ್ಟು ಖರ್ಚು ಬಂದಿರಬಹುದೆಂದು ಅಂದಾಜು ಹಾಕಿದರು. ಅವರಪ್ಪ ಮಂದಿಯ ಗೋಣು ಮುರಿದು ಕೂಡಿಸಿದ್ದನ್ನೆಲ್ಲ ಮಗ ಕಕ್ಕಲೆಂದರು. ಎಲ್ಲರೂ ಆ ದಿನ ತಡವಾಗಿ ಮಲಗಿದರು.
ಹಳೆಯ ಪಂಚರೀಗ ಚಿಂತೆ ಮಾಡಲೇಬೇಕಾಯಿತು. ಈ ತನಕ ಅವರಿಗೆ ತಮ್ಮ ಗೆಲುವಿನಲ್ಲಿ ಭರವಸೆಯೇನೋ ಇತ್ತು. ಆದರೆ ಎದುರಿನವರ ಪ್ರಚಾರ ತಂತ್ರಕ್ಕೆ ತಲೆಬಾಗದೆ ವಿಧಿಯಿರಲಿಲ್ಲ. ಹೆಂಗಸರಲ್ಲಿ ಬಾಡಿ ಹಂಚಿ ಆಣೆ ಮಾಡಿಸಿದ ಸುದ್ದಿ ಕಿವಿಗೆ ತಲುಪಿತ್ತು. ಹುಣ್ಣಿಮೆಯ ಮಾರನೇ ದಿನ ಚುನಾವಣೆಯಿದ್ದುದೊಂದೇ ಅವರಿಗಿದ್ದ ಧೈರ್ಯ. ಆ ದಿನ ಹೆಂಗೂ ಬಂಗಾರದ ಮೂರ್ತಿ ಏಳುತ್ತದೆ. ದೇವರ ಕಾರಣಿಕವಾಗುತ್ತದೆ. ಕರಿಮಾಯಿ ಊರಿಗೊಂದು ಆಜ್ಞೆ ಕೊಟ್ಟೇ ಕೊಡುತ್ತಾಳೆ. ಅಂದರೆ ಅದು ತಮ್ಮ ಪರವಾಗೇ ಇರುತ್ತದೆಂದು ಇವರ ನಂಬಿಕೆ. ಹಾಗೆಂದು ಸುಮ್ಮನೆ ಕೂರುವುದ್ಯಾಕೆಂದು ಭೇಟಿಯಾದವರಿಗೆ ತಮ್ಮ ‘ಮರದ ಗುರುತಿಗೆ ಹೋಟ ಹಾಕ್ರೆಪಾ’ ಎಂದು ಅವರೂ ಹೇಳತೊಡಗಿದರು.
ಇತ್ತ ಗುಡಸೀಕರನಿಗೆ ಹುಣ್ಣಿಮೆಯ ಭಯ ಇರಲಿಲ್ಲವೆಂದಲ್ಲ. ಯಾಕೆಂದರೆ ನಿಂತ ಐವರಲ್ಲಿ ದೇವರೇಸಿಯೂ ಒಬ್ಬ. ಆದರೆ ಆ ಕಾಳಜಿ ನಿಮ್ಮದಲ್ಲ, ನನ್ನದೆಂದು ಬಸವರಾಜು ಹೇಳಿದ್ದರಿಂದ ಹ್ಯಾಗೋ ಸಮಾಧಾನ ಮಾಡಿಕೊಂಡಿದ್ದ. ಅದೇನೆಂದು ಬಸವರಾಜು ಹೇಳಿರಲಿಲ್ಲ.

ದೀಪವಾರಿತು

ಮಾರನೇ ದಿನ ಮಂಗಳವಾರ ಮುಂಜಾನೆ ದೇವರೇಸಿ ಗುಡಿಗೆ ಹೋಗಿ ಪೂಜೆ ಮಾಡುತ್ತಿದ್ದ. ದೇವಿಯ ಮೈಮೇಲಿನ ಆಭರಣ ಕಳಚಿ ಮಜ್ಜನ ಮಾಡಿಸಿದ, ಮಡಿಯುಡಿಸಿದ, ಮತ್ತೆ ತೊಡಿಸಬೇಕೆಂದು ನೋಡಿದರೆ ಆಭರಣಗಳೇ ಇರಲಿಲ್ಲ. ಅಲ್ಲಲ್ಲಿ ಹುಡುಕಾಡಿದ. ಮೊದಲು ಇದ್ದುವೆ? ಇಲ್ಲವೆ? ಎಂದು ನೆನಪು ಮಾಡಿಕೊಂಡ. ಇದ್ದವು ಮಾತ್ರವಲ್ಲ, ಅವನ್ನು ಕಳಚಿಟ್ಟ ಸ್ಥಳವೂ ನೆನಪಿತ್ತು. ಆದರೆ ಆ ಸ್ಥಳದಲ್ಲಿ ಅವಿರಲಿಲ್ಲ. ಗುಡಿಯಲ್ಲಿ ತನ್ನ ಬಿಟ್ಟು ಯಾರೂ ಇರಲಿಲ್ಲ. ದೇವಿಯ ಮಾಯೆಯೇ? ಎಂದೊಂದು ಕ್ಷಣ ಅಧೀರನಾದ. ಇರಲಾರದೆಂದು ಉಡಿಸಿದ ಸೀರೆಬಿಚ್ಚಿ ಜಾಡಿಸಿ ಹುಡುಕಿದ. ಸಿಕ್ಕಲಿಲ್ಲ. ಮತ್ತೆ ಉಡಿಸಿ ಮೂರ್ತಿಯ ಹಿಂದೆ ಮುಂದೆ ಹುಡುಕಿದ. ಧೋತ್ರದಲ್ಲಿರಬಹುದೇ ಎಂದು ಜಾಡಿಸಿಕೊಂಡ. ಯಾಕೆಂದರೆ ದೇವಿಯ ಸುತ್ತ ಕೆಲವು ಕಿಲಾಡಿ ಭೂತಗಳಿರುತ್ತವಲ್ಲ, ಅವು ಒಮ್ಮೊಮ್ಮೆ ಏನೇನೋ ಮಾಡಬಹುದು. ತನ್ನ ಧೋತರ ಕಚ್ಚೆ ಬಿಚ್ಚಿ ಹುಡುಕುತ್ತಿರುವಾಗ ಯಾರೋ ಕುಲುಕುಲು ನಕ್ಕಂತಾಯಿತು. ತಿರುಗಿ ನೋಡಿದರೆ ಸುಂದರಿ! ಭೂತವೇ ಇವಳ ರೂಪದಲ್ಲಿ ಬಂದಿದೆಯೋ ಎಂದುಕೊಂಡು ಕೂಡಲೇ ತಾಯಿಯ ಚೌರಿ ಹಿಡಿದ. ಈ ಭೂತ ಮಾಯವಾಗಲಿಲ್ಲ. ಇನ್ನೂ ನಗುತ್ತಿದ್ದಳು. ಸದ್ಯ ಅವಳೇ ಬಾಯಿ ಬಿಟ್ಟು ಮಾತಾಡಿದಳು. “ನನಗ ಈ ಸರ ಹೆಂಗ ಕಾಣತೈತಿ?” ನೋಡಿದರೆ ದೇವಿಯ ಕತ್ತಿನಲ್ಲಿದ್ದ ದಪ್ಪ ಕವಡೆಯ ಸರ ಚಿಮಣಾಳ ಕತ್ತಿನಲ್ಲಿತ್ತು! ಆ ಸರದಲ್ಲಿ ಎಣಿಸಿದರೆ ಹೆಬ್ಬೆರಳು ಗಾತ್ರದ ಇಪ್ಪತ್ತೊಂದು ಕವಡೆಗಳಿದ್ದವು. ಅದು ಅಲಂಕಾರಕ್ಕಾಗಿ ಹಾಕಿದ ಸರವಲ್ಲ. ದೇವಿ ಇಷ್ಟಪಟ್ಟಿದ್ದರೆ ಅಂಥ ಬಂಗಾರದ ಸರವನ್ನೇ ಊರಿನ ಜನ ಹಾಕಬಹುದಿತ್ತು. ಅವಳ ತೂಕದ ಬಂಗಾರದ ಮುಖ ಮಾಡಿಸಿಕೊಟ್ಟವರಿಗೆ ಒಂದು ಸರ ಮಾಡಿಸುವುದೇನು ದೊಡ್ಡದಲ್ಲ. ತಾಯಿ ದೇವತೆಗಳಿಗೆ ಹೆದರಿ ತನ್ನ ಇಪ್ಪತ್ತೊಂದು ಮಕ್ಕಳನ್ನು ಸಂಜೆಯವರೆಗೆ ಆಡಬಿಟ್ಟು ಸೂರ್ಯಾಸ್ತಮವಾದೊಡನೆ ಅವರನ್ನು ಕವಡೆಗಳಾಗಿ ಮಾರ್ಪಡಿಸಿ ಸರ ಮಾಡಿ ಕೊರಳಲ್ಲಿ ಧರಿಸುತ್ತಿದ್ದಳು! ಆ ಕವಡೆಗಳ ಸರವಿದು! ಪೂಜೆ ಮಾಡುವಾಗ ತಾಯಿಗೆ ಮಜ್ಜನ ಮಾಡಿಸಿದಂತೆ ಈ ಕವಡೆ ಸರವನ್ನೂ ಒಂದು ಸಲ ನೀರಿನಲ್ಲದ್ದಿ ಮತ್ತೆ ತೊಡಿಸುವ ಕ್ರಮವಿದೆ.
ಸುಂದರಿಗೆ ಇದೆಲ್ಲ ಯಾವ ಲೆಕ್ಕ? ದೇವರೇಸಿ ಗಡಬಡಿಸಿ ದೇವಿಯ ಹಿಂದೋಡಿ ಒದ್ದೆ ಧೋತ್ರ ಸುತ್ತಿಕೊಳ್ಳುತ್ತಿದ್ದ. ಅಷ್ಟರಲ್ಲಿ ದೂರದಿಂದ ದತ್ತಪ್ಪ ಬರುತ್ತಿರುವುದು ಕಾಣಿಸಿತು. ದೇವರೇಸಿಗೆ ಏನು ಮಾಡಬೇಕೆಂದು ತೋಚದಾಯಿತು. ದತ್ತಪ್ಪನದು ಮೊದಲೇ ತೀಕ್ಷ್ಣಬುದ್ಧಿ. ದೇವಿಗೆ ನಮಸ್ಕರಿಸುವಾಗ ಕತ್ತಿನಲ್ಲಿ ಸರ ಇಲ್ಲದ್ದು ಕಂಡರೆ, ಕಂಡು ಸರ ಎಲ್ಲಿ ಎಂದು ಕೇಳಿದರೆ, ಏನು ಹೇಳುವುದು? ಹೊರಗೆ ಗುಡಿಯನ್ನು ಬಲಗೊಳ್ಳುತಿದ್ದ ದತ್ತಪ್ಪನಿಗೆ ಕಾಣದಂತೆ ಅವಳ ಹತ್ತಿರ ಹೋಗಿ ಸರ ಕೊಡುವಂತೆ ಕೈಸನ್ನೆಯಿಂದಲೇ ಕೇಳಿದ. ಇವಳೂ ಕೈಸನ್ನೆಯಿಂದಲೇ ಕೊಡುವುದಿಲ್ಲವೆಂದು ಹೇಳುವಷ್ಟರಲ್ಲಿ ದತ್ತಪ್ಪ ಒಳ ಬಂದ. ದೇವರೇಸಿ ಹಾಗೇ ಅವಳ ಬಾಯಿಮುಚ್ಚಿ ಕುರಿಮರಿಯಂತೆ ಅವಳನ್ನು ಹಿಡಿದುಕೊಂಡು, ದೇವಿಯ ಮರದ ಮೂರ್ತಿಯ ಕೆಳಗಡೆ ಡೊಗ್ಗಿ ಅಡಗಿದ. ದತ್ತಪ್ಪನಿಗೆ ಇದ್ಯಾವುದೂ ತಿಳಿಯಲಿಲ್ಲ. ತಾನು ತಂದ ಹೂಗಳನ್ನು ದೇವಿಯ ಮೇಲೆ ಚೆಲ್ಲಿ ಅಡ್ಡಬಿದ್ದು ಹೊರಟುಹೋದ.
ಅವ ದೂರ ಹೋದ ಎಂದು ಖಾತ್ರಿಯಾದ ಮೇಲೆ ದೇವರೇಸಿ ಎದ್ದು “ಛೇ, ಎಷ್ಟ ಹೆದರ್‍ಸಿದಿ. ಕೊಡ ಕೊಡ ಸರ ಕೊಡು” ಅಂದ. ಇಂಥ ಚೇಷ್ಟೆಯನ್ನು ದೇವರೇಸಿಯೇನು, ಆ ಊರಿನ ಯಾರೂ ಸಹಿಸುವುದು ಸಾಧ್ಯವಿಲ್ಲ. ದೇವರೇಸಿಗೆ ಸಿಟ್ಟು ಬಂತು. “ಕೊಡ್ತೀಯೋ,…..” ಎಂದು ಅನ್ನುವಷ್ಟರಲ್ಲಿ ಯಾವುದೋ ಮಾಯೆಯಿಂದ ಬಸವರಾಜು ಹಾಜರಾದ. ಸುಂದರಿ ಮುಸಿ ಮುಸಿ ನಗುತ್ತ “ಕೊಡೋದಿಲ್ಲ” ಎಂದು ಹೇಳಿ ಇವನ ಹಿಂದಿನ ಜಡೆ ಎತ್ತಿ ಬೆನ್ನಿಗೆ ಅಪ್ಪಳಿಸಿ ಓಡಿ ಹೋದಳು. ಬಸವರಾಜು ಬಂದ ಹಾಗೇ ಮಾಯವಾದ.
ದೇವರೇಸಿಗೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಹಾಗಾಯಿತು. ಇದೇನಿದು? ಬೆಂಕಿ ಕೆಂಡದಂಥ ದೇವಿಯ ಜೊತೆಗೆ ಚೇಷ್ಟೆಯೆ? ಓಡಿ ಬೆನ್ನು ಹತ್ತಿ ಹೋಗಿ ಸರ ಕಸಿದು ತರುವುದು ತರವಲ್ಲ ಎಂದುಕೊಂಡ. ಗಡಿಬಿಡಿಯಿಂದ ಪೂಜೆ ಮಾಡಿದ. ಕತ್ತು ಕಾಣದ ಹಾಗೆ ತಾಯಿಗೆ ಸೀರೆ ಸುತ್ತಿದ. ಎವ್ವಾ ಎಂದು ಅಡ್ದಬಿದ್ದ. ಕಣ್ಣಲ್ಲಿ ದಳ ದಳ ಕಣ್ಣೀರು ಹರಿಯಿತು. ತಪ್ಪಾಯಿತೆಂದು ಗಲ್ಲ ಬಡಿದುಕೊಂಡ. ಕಿವಿಗೆ ಹರಳು ಹಚ್ಚಿಕೊಂಡ. ಸರ ಸಿಕ್ಕ ಮೇಲೆ ಇವರ ಮುಖ ನೋಡುವುದಿಲ್ಲವೆಂದು ಆಣೆ ಪ್ರಮಾಣ ಮಾಡಿಕೊಂಡ. ಮತ್ತೆ ಮತ್ತೆ ಅಡ್ಡಬಿದ್ದ. ಅವನ ಉಸಿರಿಗೋ, ಗಾಳಿಗೋ ಹಚ್ಚಿಟ್ಟ ದೀಪ ಆರಿತು. ಜೀವ ಗಕ್ಕನೆ ಬಂದು ಗಂಟಲಿಗೆ ಹಾದಂತಾಗಿ “ಅಯ್ಯೋ, ಎವ್ವಾ” ಎಂದು ಕುಕ್ಕರಿಸಿದ. ಬಾಯಿ ಒಣಗಿತು. ಕೈಕಾಲಲ್ಲಿಯ ಶಕ್ತಿ ಉಡುಗಿ ಹೋಯ್ತು. ತಡವರಿಸಿಕೊಂಡು ಎದ್ದು ಮತ್ತೆ ದೀಪಹಚ್ಚಿ ತನ್ನ ಗುಡಿಸಲಿಗೆ ನಡೆದ.
ಕಂಬಳಿ ಹಾಸಿದವನೇ ದೊಪ್ಪನೇ ಬಿದ್ದ. ಎವ್ವಾ ಎನ್ನುತ್ತಾ ಹೊರಳಾಡಿ ಮುಳುಮುಳು ಅತ್ತ. ನಾಕು ತಾಸು ಹೊತ್ತೇರಿ ಜ್ವರ ಬಂದು, ಕರಿಮೈ ಕಾದ ಹಂಚಿನಂತೆ ಸುಡುತ್ತಿತ್ತು. ಅತ್ತು ಅತ್ತು ಕಣ್ಣು ಕೆಂಪಗೆ ಕಾದಿದ್ದವು. ಅಂಥ ಜ್ವರದಲ್ಲಿ ಎದ್ದು ಬಸವರಾಜೂನ ಗುಡಿಸಲಿಗೆ ಹೋಗಿ ಬಂದ. ಬಸವರಾಜೂ ಇದ್ದ. ಸುಂದರಿ ಇಲ್ಲವೆಂದು ಗುಡಸೀಕರನ ಹೊಲಕ್ಕೆ ಹೋಗಿರುವಳೆಂದೂ, ರಾತ್ರಿ ಬರುವಳೆಂದೂ, ಹೇಳಿದ. ಹೊಲಕ್ಕೆ ಹೋಗಿ ಕೇಳುವಂತಿರಲಿಲ್ಲ. ಜನಕ್ಕೆ ಗೊತ್ತಾದರೆ ಕಷ್ಟ. ಈ ಮಧ್ಯೆ ಯಾರು ಯಾವಾಗ ಗುಡಿಯ ಕಡೆ ಹೋಗಿ ತಾಯಿಯ ಕತ್ತಿನಲ್ಲಿ ಸರ ಇಲ್ಲದ್ದನ್ನು ಪತ್ತೆ ಹಚ್ಚುತ್ತಾರೋ ಎಂಬ ಭಯ. ಜ್ವರದಿಂದ ತಲೆ ಸಿಡಿಯತೊಡಗಿತ್ತು. ದೇವಿಯ ಮುಂದೆ ದೀಪವಾರಿತ್ತು. ತಾನಿಂದು ಸಾಯುವುದೇ ಖಾತ್ರಿ ಎಂದುಕೊಂಡ. ಒಳ್ಳೆಯದೇ, ಹಾಗಾದರೆ ತನ್ನ ಮೇಲೆ ಹರಲಿ ಬರುವುದಿಲ್ಲ. ಅನ್ಯಾಯವಾಯಿತೇನೋ. ಹಿಡಿದು ಸುಂದರಿಯ ಕೆನ್ನೆಗೆರಡು ಬಿಟ್ಟು ಸರ ಕಸಿಯಬೇಕಾಗಿತ್ತು. ಅವರಲ್ಲಿ ಹೆಂಡ ಖಂಡ ತಿಂದದ್ದು ಹೇಲುಹುಚ್ಚೆ ತಿಂದಂತಾಯಿತೆಂದು ಪಶ್ಚಾತ್ತಾಪಪಟ್ಟ. ಈಗ ಬಂದಿದ್ದಾಳೆಂದು ಮಧ್ಯಾಹ್ನ ಇನ್ನೊಮ್ಮೆ ಅವರ ಗುಡಿಸಲಿಗೆ ಹೋದ. ಈಗಲೂ ಬಸವರಾಜ ಇಲ್ಲವೆಂದ. ದೇವರೇಸಿ ಹಾಹೂ ಎನ್ನದೆ ತಿರುಗಿದ. ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ತಲೆ ತಿರುಗಿದಂತಾಯಿತು. ಊಟವಿಲ್ಲ, ಬಿಸಿಲು, ಮಾನಸಿಕ ಯಾತನೆ ಬೇರೆ, ಬಂದವನೇ ತನ್ನ ಗುಡಿಸಲ ಮುಂದೆ ಕೂತುಕೊಂಡು ವಾಂತಿ ಮಾಡಿಕೊಂಡ. ಕೊನೆಯಲ್ಲಿ ಒಂದಿಷ್ಟು ರಕ್ತ ಬಿತ್ತು. ತಾಯಿ ರಕ್ತ ಕಾರಿಸುತ್ತಿದ್ದಾಳೆ ಎಂದುಕೊಂಡ. ಒಳಗೆ ಹೋಗಿ ತಾಯಿಗೆ ನಮಸ್ಕರಿಸುವಂತೆ ಬೆನ್ನು ಮೇಲಾಗಿ ಹಾಗೇ ಬಿದ್ದುಕೊಂಡ.

ರಂಡಿ ಹುಣ್ಣಿವೆ

ಆ ದಿನ ರಾತ್ರಿ ದೇವರೇಸಿ ಬಯಸಿದ ಸರವೇನೋ ಸಿಕ್ಕಿತು. ಆದರೆ ತಾಯಿಯಿಂದ ಭಿನ್ನನಾದ.
ದೇವರೇಸಿ ಬಂದು ಹೋದಾಗ ಸುಂದರಿ ಒಳಗಿದ್ದರೂ ಬಸವರಾಜು ಇಲ್ಲವೆಂದು ಹೇಳಿದ್ದ. ದೇವರೇಸಿಯ ಮುಖಚರ್‍ಯೆ ನೋಡಿ ತೊಡೆತಟ್ಟಿ ನಕ್ಕ. ರಾತ್ರಿ ಮಂದಿ ಉಂಡು ಮಲಗೋ ಹೊತ್ತು. ಬಸವರಾಜು ಮತ್ತು ಸುಂದರಿ ರೇಡಿಯೋ ಕೇಳುತ್ತ ಕಾಲಮೇಲೆ ಕಾಲ ಹಾಕಿಕೊಂಡು ಕೂತಿದ್ದರು. ನಿರೀಕ್ಷಿಸಿದಂತೆ ದೇವರೇಸಿ ಬಂದ. ಮುಖ ಹೀರಿ ಒಗೆದ ಸೊಟ್ಟಿಯಾಗಿತ್ತು. ಕಣ್ಣು ಕೆಂಪಗಾಗಿ ಹರಳಾಗಿದ್ದವು. ಅವ ಬಂದಾಗ ಇಬ್ಬರೂ ಏಳಲಿಲ್ಲ. ಕೂತುಕೊಂಡೇ ಬಸವರಾಜು ‘ಬಾರವಾ ತಾಯಿ’ ಅಂದ. ಸುಂದರಿ ಇವನ ಮಾತಿನ ಧಾಟಿಗೆ ಮಾತಿಗೊಮ್ಮೆಬದಲಾಗುವ ಕೈಮುದ್ರೆಗೆ ಮೋಜುಗೊಂಡಳು. ಏನೂ ಮಾತಾಡದೆ ಒಳಕ್ಕೆ ಹೋದಳು. ಬಸವರಾಜು ಕಾಲು ಬದಲಿಸಿ ‘ಅದೇನ ದೊಡ್ಡ ಕಿಮ್ಮತ್ತಿನ ಸರಾ? ಅದ್ಯಾಕಿಷ್ಟ ಕಳವಳಪಡ್ತಿ?’ ಎಂದ. ದೇವರೇಸಿಗೆ ಅಸಮಧಾನವಾಯ್ತು.
“ಏನಂಬೋ ಮಾತೋ ಹುಡುಗಾ? ಬೆಂಕಿ ಕೆಂಡದಂಥಾ ದೇವೀ ಜೋಡಿ ನಗಾಡತಾರೇನೊ ಹುಚ್ಚಾ?”
ಈ ತನಕ ಬಾತಿಗೆಬಾರದ ಸರವಾಗಿದ್ದ ಅದರ ಬೆಲೆ, ದೇವರೇಸಿಯ ದೈನಾಸ ನೋಡಿದ ಮೇಲೆ, ಬಸವರಾಜನಿಗೆ ತಿಳಿದುಬಿಟ್ಟಿತು. ‘ಕೊಡೋಣಂತ, ನಾವೆಲ್ಲಿ ಓಡಿಹೋಗ್ತೇವೇನು? ಏನೋ ಹುಡುಗಾಟದ ಹುಡುಗಿ, ತಂದಾಳ, ಕೊಡಸ್ತೀನಿ. ಕೂತುಕೊ ಬಾ’ ಎಂದ. ಅಷ್ಟರಲ್ಲಿ ಸುಂದರಿ ಹರಿವಾಣದ ತುಂಬ ಭಟ್ಟೀ ಸೆರೆತಂದು ಮುಂದಿಟ್ಟಳು. ಈಗ ಸರ ತಿರುಗಿ ಕೊಡಿಸುತ್ತಾನೆಂದು ಖಾತ್ರಿಯಾಗಿತ್ತು. ಕೂತ. ಬೆಳಗಿನಿಂದ ತುತ್ತು ಕೂಳಿಲ್ಲ, ಹನಿ ನೀರು ಮುಟ್ಟಿರಲಿಲ್ಲ. ಒಮ್ಮೆಲೆ ಹಸಿದ ಅರಿವಾಯ್ತು. ಕುಡಿದ. “ಇನ್ನ ಸರ ಕೊಡವಾ” ಅಂದ. ಇನ್ನೊಮ್ಮೆ ಹರಿವಾಣ ತುಂಬಿದಳು. ಅದನ್ನೂ ಕುಡಿದ. ಖಂಡಬಂತು, ತಿಂದ. ಸುಮ್ಮನೇ ಕೂತ. ಬಸವರಾಜು ಹೇಳಿದ-“ಬೆಂಕೀಕೆಂಡದಂಥಾ ದೇವೀ ಅಂತೀ; ಆ ಸರ ಇದ್ದಲ್ಲಿಂದ ಇಲ್ಲಿ ಬಂದ ಬೀಳೋ ಹಾಂಗ ಮಾಡು” ಅಂದ. ದೇವರೇಸಿ ಸುಮ್ಮನಾದ. “ತಾಯೀ ಸತ್ಯ ಅಷ್ಟಿದ್ದರ ನಾ ರಕ್ತ ಕಾರಿ ಸಾಯೋ ಹಂಗ ಮಾಡಲಿ” ಎಂದು ಸುಂದರಿಯೂ ಮಾತು ಸೇರಿಸಿದಳು, ಬಸವರಾಜನ ಮುಗುಳು ನಗೆಗೆ ತನ್ನ ಹೀಹೀ ನಗೆ ಸೇರಿಸುತ್ತ. ದೇವರೇಸಿ ಒಂದು ಸಲ ಢರ್ರನೆ ತೇಗಿ ಬಿಕ್ಕತೊಡಗಿದ. ಕೂಡಲೇ ಬಸವರಾಜು “ತಾಯಿ ಬಂದಾಳ ಪಾದಾ ಹಿಡಕೊ” ಎಂದು ಸುಂದರಿಗೆ ಹೇಳಿದ. ಸುಂದರಿ ಓಡಿಹೋಗಿ ಕಾಲು ಹಿಡಿದಳು.
ಪಾದಾ ಹಿಡಕೊಂಡವಳು ಹಾಗೇ ಕಾಲು ತಿಕ್ಕತೊಡಗಿದಳು. ದೇವರೇಸಿ ತೇಲು ಗಣ್ಣಾಗಿ ಹಾಗೇ ಹಿಂದೆ ಮುಂದೆ ತೂಗುತ್ತ, ಬಿಕ್ಕುತ್ತ ಕೂತ. ಇದು ದೇವೀ ಮೈಮೇಲೆ ಬಂದ ಗುರುತು. ಬಸವರಾಜು ಒಳಗೊಳಗೇ ನಗುತ್ತಿದ್ದವನು ಸುಂದರಿಗೆ ಕಣ್ಣು ಹೊಡೆದ. ಅವಳು ಕಾಲು ತಿಕ್ಕುತ್ತ, ತಿಕ್ಕುತ್ತ ಮೊಳಕಾಲು ದಾಟಿ ತೊಡೆ ತಿಕ್ಕತೊಡಗಿದಳು. ತಾಯಿಯ ಬಿಕ್ಕು ಗಕ್ಕನೆ ನಿಂತು, ಗಡಬಡಿಸಿ ತೊಡೆಯ ಮೇಲಿನ ಕೈ ನಿವಾರಿಸಿದ. ಸುಂದರಿ ಹೋ ಎಂದು ನಕ್ಕಳು. ಬಸವರಾಜು ಹುಸಿ ಸಿಟ್ಟಿನಿಂದ ‘ತಾಯೀ ತೊಡೆಯಲ್ಲಿ ಬೆಂಕಿಯಿದೆ. ಹಾಗೆಲ್ಲ ಆಟ ಆಡಬ್ಯಾಡ’ ಎಂದ. ಸುಂದರಿ ಇನ್ನೂ ನಕ್ಕಳು. ನಗು ತಡೆಯದೆ ಒಳಗೆ ಹೋದಳು. ಮತ್ತೆ ಹರಿವಾನ ತುಂಬಿದಳು. ದೇವರೇಸಿ ಕುಡಿಯದೆ “ತಾಯೀ ನನ್ನ ಕೊಂದ ಹಾಕತಾಳ ಸರಾ ಕೊಡ ಎವ್ವಾ” ಎಂದು ದೊಡ್ಡ ದನಿ ತೆಗೆದು ಅಳುತ್ತಾ ಸುಂದರಿಗೆ ಕೈ ಮುಗಿದ. ಬಸವರಾಜು ಗಾಬರಿಯಾಗಿ ತಕ್ಷಣ ಸರ ಕೊಡುವಂತೆ ಹೇಳಿ ಹೊರಗೆ ಬಂದ, ಯಾರಾದರೂ ಇಲ್ಲಿ ನಡೆಯುವುದನ್ನ ಗಮನಿಸುತ್ತಿದ್ದಾರೆಯೋ ಎಂದು ನೋಡುವುದಕ್ಕೆ. ಸಧ್ಯ ಯಾರಿರಲಿಲ್ಲ, ಅಲ್ಲೇ ನಿಂತ.
ಸುಂದರಿ ಸರ ತಂದು, ‘ತಗೋ’ ಎಂದಳು. ದೇವರೇಸಿ ಅಡರಾಸಿ ಅದಕ್ಕೆ ಕೈಹಾಕ ಹೋದಾಗ ನಗುತ್ತ ಹಿಂದೆ ಸರಿದಳು. ಬುಡಕಡಿದ ದೊಡ್ಡ ಮರ ಬಿದ್ದ ಹಾಗೆ ದೇವರೇಸಿ ಸಮತೋಲ ತಪ್ಪಿಬಿದ್ದ. ಮತ್ತೆ ತೋರಿಸಿದಳು. ಮತ್ತೆ ಎದ್ದು ಅಲ್ಲೀತನಕ ತೂರಾಡುತ್ತ ಹೋಗಿ ಕೈಹಾಕಿದ. ಮತ್ತೆಯೂ ಹಿಂದೆ ಸರಿದಳು. ಹೀಗೆ ನಾಲ್ಕೈದು ಸಲ ಮಾಡಿದಾಗ ಕೊನೆಗೆ ಅವಳನ್ನೇ ಗಟ್ಟಿಯಾಗಿ ಹಿಡಿದು ಕಸಿಯುತ್ತಿದ್ದ. ಬೆಳಗಿನಿಂದ ಹಸಿದು ನಿಶ್ಯಕ್ತಗೊಂಡಿದ್ದ. ರಕ್ತ ಕಾರಿಕೊಂಡಿದ್ದ. ಮೈಮೇಲೆ ಅಡರಿದ್ದ ಅವನನ್ನು ಜೋರಿನಿಂದ ಚಿಮಣಾ ದೂಕಿದಳು. ಅಲ್ಲೇ ಜೋಲಿ ತಪ್ಪಿ ಕುಸಿದ. ಕೈಕಾಲೂರಿ ಏಳಬೇಕೆಂದಾಗ ಚಿಮಣಾ ಓಡಿಹೋಗಿ ಅವನ ಡುಬ್ಬ ಹತ್ತಿ ಕುಕ್ಕರಿಸಿದಳು. ಏಳಲಾರದೆ ಬೀಳಲಾರದೆ ನೊಂದ ಪ್ರಾಣಿಯ ಹಾಗೆ ದೇವರೇಸಿ ಹೋರಾಡುತ್ತಿದ್ದ. ಹೇಳಿ ಕಳಿಸಿದ ಹಾಗೆ ಬಸವರಾಜು ಒಳಗೆ ಬಂದ. ಅದೇನು ಉಮೇದಿ ಉಕ್ಕಿತ್ತೋ ಸುಂದರಿ ಹೋ ಎಂದು ನಗುತ್ತ ಹುಲಿಯೇರಿದ ಕರಿಮಾಯಿಯ ಭಂಗಿಯಲ್ಲಿ ಕೂತು ಆಶೀರ್ವದಿಸಿದಳು. ಬಸವರಾಜನಿಗೆ ದಿಗಿಲಾಯಿತೇನೋ, ಗಂಭೀರವಾಗಿ ಕೈಮುಗಿದ!
ಅಂತೂ ಹುಣ್ಣೀಮೆಯೇನೋ ಬಂತು. ತಾಯಿ ರಂಡಿಯೂ ಆದಳು.
ತಾಯಿ ರಂಡಿ ಆದುದಕ್ಕೆ ಏನೋ ಚಂದ್ರ ಕ್ಷಯರೋಗಿಯಂತೆ ಬಿಳಿಚಿದ.
ಆ ದಿನ ಬೆಳಗಿನ ಬೆಳ್ಳಿಮೂಡುವ ಸಮಯದಲ್ಲಿ ಗೌಡನಿಗೆ, ಕರಿಮಾಯಿಯ ಗುಡಿಯ ನಡುಗಂಬ ನಡುಗಿ ಇಡೀ ಗುಡೀ ಕುಸಿದಂತೆ ಕನಸಾಯಿತು. ಫಕ್ಕನೆ ಎದ್ದು ಕೂತ. ಎದೆ ನಡುಗಿತು. ಕೂತು ಚಿಂತಿಸಲಾಗಲಿಲ್ಲ. ಅನಾಹುತ ತಪ್ಪಿಸುವುದು ಸಾಧ್ಯವೇ ಎಂದು ನೋಡಿದ. ಹಾದಿ ಕಾಣಲಿಲ್ಲ. ಕನಸನ್ನು ದತ್ತಪ್ಪನಿಗೆ ತಿಳಿಸಬೇಕೆಂದು ಆಗಲೇ ಜಳಕಕ್ಕೆ ಕೆರೆಯ ಕಡೆ ನಡೆದ.
ಊರಿಗಿನ್ನೂ ಬೆಳಗಾಗಿರಲಿಲ್ಲ. ಗುಡಿಗೆ ಹೋದ. ಒಳಗೆ ಕತ್ತಲೆಯಿತ್ತು. ತಾಯಿಯ ಮೂರ್ತಿ ಕಾಣಿಸುತ್ತಿರಲಿಲ್ಲ. ಹಾಗೇ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಬಂದು ಹೊರಗೆ ಪೌಳಿಯ ದೀಪಗಂಬದ ಕಟ್ಟೆಯ ಮೇಲೆ ಕೂತ. ಶೀಗೆ ಹುಣ್ಣಿಮೆಯಲ್ಲಿ ತಾಯಿಯ ಕೈ ಮುರಿದವರ ಪತ್ತೆಯಾಗಿರಲಿಲ್ಲ. ಗುಡಿಕಟ್ಟಿಸಿದ ತನ್ನ ಹಿರಿಯರ ನೆನಪಾಯಿತು. ತಾಯಿ ಸೇಡು ತೀರಿಸಿಕೊಳ್ಳುತ್ತಿದ್ದಾಳೆನ್ನಿಸಿ ಭಯವಾಯ್ತು. ಮತ್ತೆ ಮಗನ ನೆನಪಾಗಿ ಕಂಠ ತುಬಿ ಬಂತು. ಎಷ್ಟು ಹೊತ್ತು ಕೂತಿದ್ದನೋ, ಮೈಯೆಚ್ಚರ ಬಂದಾಗ ಬೆಳ್ಳಂಬೆಳಕಾಗಿತ್ತು. ಮತ್ತೊಮ್ಮೆ ಪ್ರದಕ್ಷಿಣೆ ಹಾಕಿದ. ಕಣ್ಣುತುಂಬ ತಾಯಿಯ ಮೂರ್‍ತಿ ನೋಡಿದ. ‘ಹಡದವ್ವಾ ನನ್ನ ಮನೀ ದೀಪಾ ಉಳಸು’ ಎಂದು ಅಡ್ಡಬಿದ್ದ. ಶೀಗೇ ಹುಣ್ಣಿಮೆಯಲ್ಲಿ ಮುರಿದ ಕೈಯನ್ನು ಹಾಗೇ ಕಟ್ಟಿದ್ದರಲ್ಲ, ಅದು ಕೆಳಗೆ ಬಿದ್ದಿತ್ತು. “ಕತ್ತಿ ಚೆಲ್ಲೋದ ನಿನ್ನ ಪದವಿ ಅಲ್ಲ ತಾಯಿ, ಮತ್ತ ಹಿಡಿದ ಊರ ಜೀಂವಾ ಕಾಯಿ” ಎಂದು ಮತ್ತೆ ಮೊದಲಿನಂತೆ ಕಟ್ಟಿದ. ಆ ಕನಸು. ಈ ಅಪಶಕುನ ಒಟ್ಟಾರೆ ಅಮಂಗಳವೆನ್ನಿಸಿ ದತ್ತೂನ ಮನೆ ಕಡೆ ಹೆಜ್ಜೆ ಹಾಕಿದ.
ಅಲ್ಲಿ ದತ್ತಪ್ಪ ಸ್ನಾನ ಕೂಡ ಮಾದದೆ ತಲೆಮೇಲೆ ಕೈಹೊತ್ತು ಚಿಂತಾಮಣಿ ನೋಡುತ್ತ ಕೂತಿದ್ದ. ಇವ ತನ್ನ ಕನಸು ಹೇಳಬೇಕೆಂದು ಬಾಯಿ ತೆರೆಯುವುದರೊಳಗೆ ದತ್ತಪ್ಪ
“ಗೌಡಾ, ರಾತ್ರಿ ಕನಸಿನಾಗ ನನ್ನ ಚಿಂತಾಮಣಿ ಕಳಧಾಂಗಿತ್ತೊ!’ ಅಂದ. ಗೌಡ ಮಾತಾಡಲೇ ಇಲ್ಲ.
ಬಹುಶಃ ಇವರಿಬ್ಬರ ಕನಸು ಕೇಳಿದಮೇಲೆ ಹೇಳಿದಳೋ, ಅಥವಾ ನೆನೆಸಿಕೊಂಡಳೋ ಯಾಕೆಂದರೆ ಲಗಮವ್ವ ಕವಿಯತ್ರಿಯಾದ್ದರಿಂದ ಬೇಕುಬೇಕಾದ ಸಮಾಂತರ ಸಂಗತಿಗಳನ್ನು ನಿಂತಕಾಲ ಮೇಲೇ ಹೊಸೆಯಬಲ್ಲವಳಾದ್ದರಿಂದ ಹೀಗೆ ಹೇಳಬೇಕಾಯಿತು. ಅವಳ ನಾಲಗೆ ಕಳಚಿ ಬಿದ್ದಂತೆ ಕನಸಾಗಿತ್ತು.
ಊರಿಗೆಲ್ಲ ಆದಂತೆ ದೇವರೇಸಿಯ ಗುಡಿಸಲಿಗೂ ಬೆಳಗಾಯಿತು. ಬೆಳತನಕ ಕಣ್ಣಿಗೆ ಕಣ್ಣು ಹಚ್ಚಿರಲಿಲ್ಲವಾದ್ದರಿಂದ ಕಣ್ಣು ಕೆಂಪಗೆ ಕರಿಮಾಯಿಯ ಕಣ್ಣಂತೆ ಕಾಣುತ್ತಿದ್ದವು. ಜ್ವರದಿಂದ ಮೈ ಸಿಡಿಯುತ್ತಿತ್ತು. ತಾನಿಂದು ಬದುಕುವುದಿಲ್ಲವೆಂದು ಖಚಿತವಾಗಿತ್ತು. ಏನಿದ್ದದ್ದು ಏನಾಗಿ ಹೋಗಿತ್ತು! ಊರವರ ಮುಖ ನೋಡುವುದಿರಲಿ, ತಾಯಿಯ ಮುಖ ಕಣ್ಣಾರೆ ನೋಡುವುದು ಹ್ಯಾಗೆ, ಕೈಯ್ಯಾರೆ ಮುಟ್ಟಿ ಪೂಜೆ ಮಾಡೋದು ಹ್ಯಾಗೆ? ಓಡಿಹೋಗಿ ಒಂದು ಸಲ ನಿನ್ನೆ ನಡೆದಿದ್ದನ್ನೆಲ್ಲ ಗೌಡನ ಮುಂದೆ ಒದರಿ ಬಿಡಲೆ ಎನ್ನಿಸಿತು. ಯಾಕೆ, ತಾಯಿಯ ಮುಂದೇ ಒದರೋಣ. ಆದರೆ ಕಣ್ಣುತಪ್ಪಿ ನಡೆಯೋದೇನಿದೆ? ಊರು ಮುಚ್ಚಿರಬಹುದು, ತಾಯಿ ಕಣ್ಣು ಮುಚ್ಚುವುದು ಸಾಧ್ಯವೆ? ಹಾಗಂತ ಈ ದಿನ ಹಿಂದೆ ಸರಿಯುವುದೂ ಸಾಧ್ಯವಿಲ್ಲ. ತಾಯಿಯ ಮಹತ್ವದ ಹುಣಿಮೆ ಇದು; ತಾಯಿ ರಂಡಿಯಾಗುವ ಹುಣ್ಣಿಮೆ. ಆದದ್ದಾಗಲಿ ತಾಯಿ ಬೇಕಾದರೆ ನನ್ನನ್ನು ರಕ್ತಕಾರಿಸಿ ಕೊಂದು ಇನ್ನೊಬ್ಬರನ್ನಾಯ್ದುಕೊಳ್ಳಲಿ ಎಂದುಕೊಂಡ. ಇಷ್ಟು ವರ್ಷ ದೇವರೇಸಿಯಾಗಿದ್ದವನಿಗೆ ಅದೇ ಮಾನದ ಸಾವು. ಅಥವಾ ತಾಯಿ, ಎಷ್ಟಂದರೂ ಹಡದ ಕರುಳು. ನನ್ನ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಬಾರದೇಕೆ? ‘ನಾವೋ ಉಪ್ಪು ಹುಳಿ ಖಾರ ತಿಂಬವರು, ತಪ್ಪು ಮಾಡುವವರು, ತಾಯಿಯಲ್ಲದೆ ಇನ್ಯಾರು ಕಾಪಾಡಬೇಕು? ಮಗು ಹೇಸಿಗೆ ಮಾಡಿಕೊಳ್ಳುತ್ತದೆ. ತಾಯಿ ತೊಳೆದು ಹತ್ತಿರ ಕರೆದುಕೊಳ್ಳುವುದಿಲ್ಲವೆ? ಏನು ಮಾಡುತ್ತಿದ್ದೇನಂತ ಅರಿವಿಲ್ಲದೆ ಮಗು ತಾಯಿಗೆ ಹೊಡೆಯುತ್ತದೆ. ಹಸಿದಾಗ ಮತ್ತೆ ಅವ್ವಾ ಎನ್ನುತ್ತದೆ. ಹೊಡೆದಾಗ ಹೊಡಿಸಿಕೊಂಬುವಳೂ ಅವಳೇ. ಹಸಿದಾಗ ಮೊಲೆಯೂಡುವವಳೂ ಅವಳೇ ಅಥವಾ,
ಉಗುಳಿದಳು ಅನ್ನೋಣ, ಅವಳೇನು ಹೊರಗಿನವಳೆ? ತಾಯಿಯಲ್ಲವೆ? ಅವಳಿಗೆ ಉಗುಳುವ ಹಕ್ಕಿದೆ. ಆಕೆ ನನ್ನನ್ನು ಗಡಿಯಾಚೆ ಉಗುಳಿದರೂ ಅದು ಮಾನವೆ. ಅವಳೇ ಹುಟ್ಟಿಸಿದಳು. ಅವಳೇ ಕೊಲ್ಲಲಿ, ಎಂದುಕೊಂಡು ಧೋತರ ತಗೊಂಡೆದ್ದ. ಮೈಯಲ್ಲಿ ದಿನದ ಕಸುವಿರಲಿಲ್ಲ. ಉತ್ಸಾಹವಿರಲಿಲ್ಲ. ಮಂದಿಯ ಮುಖ ನೋಡುವ ಧೈರ್ಯವಿರಲಿಲ್ಲ. ಸುಡುಸುಡುವ ಜ್ವರ ಬೇರೆ. ಮೆಲ್ಲಗೆ ಸಾಧ್ಯವಿದ್ದಷ್ಟು ಜನಗಳನ್ನು ನಿವಾರಿಸಿ ಕೆರೆಗೆ ಹೋಗಿ ಮಿಂದ. ಒದ್ದೆಯುಟ್ಟು ಗುಡಿಗೆ ಬಂದ. ಕಣ್ಣಿಗೆ ಕತ್ತಲು ಬಂದು ಗುಡಿಯ ಹೊಸ್ತಿಲ ಮೇಲೆ ಬಿದ್ದ. ಮತ್ತೆ ತಾನೇ ಎದ್ದು ಒಳಗೆ ಹೋದ.
ದೀಪ ಹಚ್ಚಿದ. ತಾಯಿಯ ಸೀರೆ ಕಳಚಿ ಮೈಗೆ ಮಜ್ಜನ ಮಾಡಿಸುವಾಗ ಮೈ ಝುಂ ಎಂದು ಚಳಿ ಬಂದು ನಡುಗಿದ. ನಡುಗುವ ಕೈಗಳಿಂದಲೇ ಮಡಿ ಉಡಿಸಿದ. ತಾನು ತಂದಿದ್ದ ಕವಡೆಯ ಸರ ಹಾಕಿದ. ಹೂವೇರಿಸಿದ. ಗಂಟೆ ಬಾರಿಸಿದ.ಕೊನೆಗೆ ಪ್ರದಕ್ಷಿಣೆ ಹಾಕಿ ಅಡ್ಡಬಿದ್ದ. ಏಳುವ ಮನಸ್ಸಾಗಲೊಲ್ಲದು. ಚಳಿಜ್ವರ ನೆತ್ತಿಗೇರತೊಡಗಿತು.
ತಡವರಿಸಿಕೊಂಡು ಮೇಲೆದ್ದು ತಾಯಿಯ ಮುಖದ ಕಡೆ ನೋಡಿದ. ಒತ್ತರಿಸಿ ದುಃಖ ತಡೆಯಲಾಗದೆ ‘ಎವ್ವಾ’ ಎಂದು ಅಳತೊಡಗಿದ. “ಎದಿ ಕಲ್ಲ ಮಾಡಿಕೊ ಬ್ಯಾಡ ತಾಯೀ”, ಎಂದು ಎದೆ ಎದೆ ಬಡಿದುಕೊಂಡ. “ನಾ ನಿನ್ನ ಮಗಾನ ಹಡದವ್ವಾ” ಎನ್ನುತ್ತ ಹಣೆಯನ್ನು ಕಲ್ಲಿಗೆ, ಗದ್ದಿಗೆಗೆ ಬಾರಿಸಿದ. ಅದೇನು ಕರಿಮಾಯಿಯ ಮಾಯೆಯೋ, ಮೂರ್‍ತಿಯ ಬಲಭುಜದ ಹೂವು ಕೆಳಗೆ ಬಿತ್ತು. ದೇವರೇಸಿಗೆ ಹೋದ ಜೀವ ತಿರುಗಿ ಬಂದಷ್ಟು ಸಂತೋಷವಾಯ್ತು. ಸ್ವಥಾ ತಾಯಿ ಅವನನ್ನು ತಬ್ಬಿಕೊಂಡು, ಮೈದಡವಿ ‘ಮಗನ ಚಿಂತೀ ಮಾಡಬ್ಯಾಡ. ನಾ ಇದ್ದೀನಿ’ ಅಂದಷ್ಟು ನೆಮ್ಮದಿಯಾಯ್ತು. ಮೈ ಹುಷಾರಾಗಿ ಚಳಿ ಜ್ವರ ಬಿಟ್ಟೋಡಿ ಮೈ ಬೆವರಿದ. ತಾಯಿಗೆ ಅತ್ಯಂತ ವಿನೀತನಾದ….ಕೃತಜ್ಞತೆಯಿಂದ ತುಂಬಿ ತುಂಬಿ ಕಣ್ಣೀರು ತುಳುಕಿದ. “ತಾಯಿ ನನ್ನ ತಪ್ಪ ಹೊಟ್ಯಾಗ ಹಾಕ್ಕೊಂಡ್ಳು; ತಾಯೀ ಆಶೀರ್ವಾದ ಆತು” ಎಂದು ತನಗೆ ತಾನೇ ಗಟ್ಟಿಯಾಗಿ ಹೇಳಿಕೊಳ್ಳುತ್ತ ಗುಡಿಸಲ ಕಡೆ ನಡೆದ.
ಇಡೀ ದಿನ ಗುಡಸೀಕರನ ಪಾರ್ಟಿಯ ಪ್ರಚಾರವೋ ಪ್ರಚಾರ. ಬೆಳಗಾವಿಯಿಂದ ಬ್ಯಾಂಡ್‌ಸೆಟ್‌ನವರನ್ನು, ಅವರ ಹಿಂದೆ ಕುಣಿಯುವ ಪಾತ್ರದ ಸೂಳೆಯರನ್ನು ಕರೆತಂದು ಊರ ತುಂಬ ಕುಣಿಸಿದರು. ಸ್ವಯಂ ಗುಡಸೀಕರ ಚತುಷ್ಟಯರೊಂದಿಗೆ ಮನೆ ಮನೆಗೆ ಹೋಗಿ ತಮಗೇ ಹೋಟು ಹಾಕಬೇಕೆಂದು ಆಬಾಲವೃದ್ಧರಿಗೆ ವಿನಂತಿಸಿಕೊಂಡು ಬಂದ. ಗೌಡ ದತ್ತಪ್ಪ ಹೋಗಲಿಲ್ಲ. ಕನಸುಗಳಿಂದ ಅವರ ಮನಸ್ಸು ಮೊದಲೇ ಜರ್ಜರಿತವಾಗಿತ್ತು. ನಿಂಗೂ ಮಾತ್ರ ಕುಸ್ತಿ ಹುಡುಗರನ್ನು ಕರೆದುಕೊಂಡು ಗೌಡರಿಗೇ ಹೋಟು ಹಾಕಬೇಕೆಂದು, ಗಂಡಸರು, ಹೆಂಗಸರೆನ್ನದೆ ಎಲ್ಲರಿಗೂ ಹೇಳಿಬಂದ. ಲಗಮವ್ವ ಹೆಂಗಸು ರೀತಿಯಲ್ಲಿ ಹೇಳಿಬಂದಳು. ಬಾಳೂ ಬಸೆಟ್ಟಿ ಅವರೂ ಅಲೆದಾಡಿ ಬಂದರು. ಕಂಡಕಂಡವರಿಗೆಲ್ಲ ದೇವಿಯ ಬಂಡಾರ ಹಚ್ಚಿಬಂದರು. ಈ ಗಡಿಬಿಡಿಯಲ್ಲಿ ಸಂಜೆಯಾದದ್ದೇ ಯಾರಿಗೂ ತಿಳಿಯಲಿಲ್ಲ.
ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಿದ್ದ. ದನಕರು ಮನೆಗೆ ಧಾವಿಸುವ ಅವಸರದಲ್ಲಿ ಎದ್ದ ಧೂಳು, ಪ್ರಚಾರಕ್ಕಾಗಿ ಜನ ಓಡಾಡಿ ಎದ್ದ ಧೂಳು, ಪಾತ್ರದವರು ಕುಣಿದಾಡಿ ಅವರ ಸುತ್ತ ಗುಂಪುಗೂಡಿ ತುಳಿದಾಡಿ ಎದ್ದ ಧೂಳು, ಕಾರಖಾನೆಯ ಹೊಗೆಯಂತೆ ಅಡರಿದ್ದ ಕಲಬೆರಕೆಯ ವಿಚಿತ್ರ ಧೂಳಿನಲ್ಲಿ ಊರಿನ ವಿವರಗಳು ಅಸ್ಪಷ್ಟವಾಗಿ ತೋರುತ್ತಿದ್ದವು. ಇದರ ಜೊತೆಗೆ ಮೈಕಿನ, ಬ್ಯಾಂಡ್‌ಸೆಟ್ಟಿನ, ಮನುಷ್ಯರ ವಿಕಾರ ದನಿಗಳು ಬೆರೆತು ಊರಿಗೂರೇ ಕಿಟಾರನೆ ಕಿರುಚುತ್ತಿದ್ದಂತೆ ಕೇಳಿಸುತ್ತಿತ್ತು. ಮಕ್ಕಳು ಹೆದರಿ ಮೊಲೆ ಮರೆತು ಚೀರಿದರೂ ಯಾರಿಗೂ ಕೇಳಿಸದಂತಾಗಿತ್ತು. ಪಶ್ಚಿಮದ ಆಗಸ ಕರಿಮಾಯಿಯ ಕೆಂಗಣ್ಣಿನಂತೆ ಕೆಂಪಾಗಿತ್ತು. ಮೂಡಣದಲ್ಲಿ ಹುಣ್ಣಿಮೆ ಚಂದ್ರನ ಆಕೃತಿ ಮೂಡಿತು.
ಇಂದು ಉಳಿದೆಲ್ಲ ಹುಣ್ಣಿಮೆಯಂತಿರಲಿಲ್ಲ. ಎದ್ದ ಧೂಳು ನೆಲಕ್ಕಂಟಿರಲಿಲ್ಲ. ಸಪ್ಪಳ ನಿಂತಿರಲಿಲ್ಲ.ಬೆಳದಿಂಗಳು ಹುಚ್ಚೆಚ್ಚು ಕೆರಳಿದಂತೆ ಆಕಾರಗೊಂಡುದಕ್ಕೆಲ್ಲ ನೆರಳು ಬಂತು. ನೆರಳು ಕ್ಷಣೇ ಕ್ಷಣೇ ದಟ್ಟವಾಗಿ ಕತ್ತಲೆಯ ಮರಿಯಂತಾಯಿತು.
ನಾನಾ ನಮೂನೆಯಲ್ಲಿ ದನಿಗಳಲ್ಲಿ ಗೌಡನ ಮನೆಯಿಂದ ಹೊರಟ ಹಲಗೆ, ಡೊಳ್ಳಿನ ದನಿಯೂ ಒಂದಷ್ಟೆ. ಕೆಲವರ ಊಟವಾಗಿತ್ತು; ಕೆಲವರದಿಲ್ಲ. ಆಗಲೇ ಪಂಚರು, ಹಿರಿಯರು, ಆಳು ಮಕ್ಕಳು, ಗರತಿಯರು ಗೌಡನ ಮನೆಮುಂದೆ ಸೇರಿದ್ದರು. ಪಲ್ಲಕ್ಕಿಯಲ್ಲಾಗಲೇ ದೇವಿಯ ಬಂಗಾರದ ಮುಖವನ್ನಿಟ್ಟಿದ್ದರು. ಒಂದು ಕಡೆಯಿಂದ ದತ್ತಪ್ಪ, ಇನ್ನೊಂದು ಕಡೆಯಿಂದ ಗೌಡ ತಾಯಿಗೆ ಚೌರಿ ಬೀಸುತ್ತಿದ್ದರು. ಡೊಳ್ಳಿನ ಅಬ್ಬರದಲ್ಲಿ ಅವರ ಹಾಡು ಕೇಳಿಸುತ್ತಿರಲಿಲ್ಲ. ಬರುವವರೆಲ್ಲ ಬಂದುದು ಖಚಿತವಾದೊಡನೆ ಗೌಡ ಮೆರವಣಿಗೆಹೊರಡಲೆಂದ. ‘ಚಾಂಗು ಭಲೇ’ ಎಂದು ಮೆರವಣಿಗೆ ಹೊರಟಿತು.
ಮೆರವಣಿಗೆ ಊರಿನ ಮುಖ್ಯ ರಸ್ತೆಗಳಲ್ಲಿ ಹಾದು ದೇವರೇಸಿಯ ಗುಡಿಸಿಲಿಗೆ ಬಂತು. ದೇವರೇಸಿಯಾಗಲೇ ಹಸಿರು ಸೀರೆ ಉಟ್ಟು ಸಿದ್ಧನಾಗಿದ್ದ. ದೇವರೇಸಿಯ ಮೈ ಸುಡುತ್ತಿದ್ದುದನ್ನು ಗಮನಿಸಿ ಲಗಮವ್ವ “ಯಾಕೋ ಅವ್ವನ ಮೈ ಕಾದ ತಗಡಾಗೇತಿ” ಎಂದಳು. ಉಳಿದ ಗರತಿಯರೂ ಗಮನಿಸಿದರು. ದೇವರೇಸಿ ಉತ್ತರ ಕೊಡಲಿಲ್ಲ. ಮುತ್ತೈದೆಯರು ಹಾಡುತ್ತ ಅವನ ಎರಡೂ ಕೈಗೆ ಐದು ವರ್ಣಗಳ ಬಳೆ ಮೊಳಕೈತನಕ ತೊಡಿಸಿದರು. ಹಣೆತುಂಬ ಕುಂಕುಮ, ಬಂಡಾರ ಹಚ್ಚಿದರು. ಜಡೆಗೆ ಹೂ ಮುಡಿಸಿ ಬಂಡಾರ ಸಿಡಿಸಿದರು. ಕಾಲಿಗೆ ತೋಡೆ ತೊಡಿಸಿದರು. ಕೈಯಲ್ಲಿ ನವಿಲು ಗರಿಯ ಚೌರಿ ಹಿಡಿದುಕೊಂಡಾದ ಮೇಲೆ ‘ಚಾಂಗು ಭಲೇ’ ಎಂದು ಮೆರವಣಿಗೆ ಗುಡಿಯ ಕಡೆ ನಡೆಯಿತು….
ಪೌಳಿಗೆ ಬಂದು ವಾಲಗ ಸುರುವಾಯಿತು. ಗೌಡ ತಾಯಿಯ ಬಂಗಾರದ ಮುಖವನ್ನೂ ಮಡಿಲಲ್ಲಿ ಬಚ್ಚಿಟ್ಟು ಕೂಸಿನಂತೆ ಎದೆಗವಚಿಕೊಂಡ. ದತ್ತಪ್ಪ ಚೌರಿ ಬೀಸುತ್ತ ದಾರಿ ತೋರಿಸಿದ. ತಾಯಿಯ ಬಂಗಾರದ ಮುಖವನ್ನು ಗರ್ಭಗುಡಿಗೆ ಒಯ್ದರು. ನಿಶ್ಯಕ್ತಿಯಿಂದ ದೇವರೇಸಿ ನಡೆಯಲಾರದಾಗಿದ್ದ. ಲಗಮವ್ವ ರಟ್ಟೆಯಲ್ಲಿ ಕೈಹಾಕಿ ಒಳಗೊಯ್ದಳು. ಅವರಷ್ಟೆ ಒಳಗೆ ಹೋದೊಡನೆ ಬಾಗಿಲಿಕ್ಕಿತು.
ತಾಯಿಯ ಬಂಗಾರದ ಮುಖವನ್ನು ಮೂಲ ವಿಗ್ರಹಕ್ಕೆ ಜೋಡಿಸಿದರು. ಕೆಂಪಗೆ ಥಳ ಥಳ ಹೊಳೆಯುವ ಕಣ್ಣುಪಟ್ಟಿಗಳನ್ನು ಹೊಂದಿಸಿದರು. ಕವಡೆಯ ಸರ ತೆಗೆದು ತಾಯಿಯ ಎದುರಿಗಿಟ್ಟರು. ಗರಿಗರಿ ನೆರಿಗೆ ಹೊಯ್ದು ಹಸಿರು ಸೀರೆ ಉಡಿಸಿದರು. ಬಂಗಾರದ ಥರಾವರಿ ಆಭರಣ ತೊಡಿಸಿದರು. ವಿಗ್ರಹದ ಕೈಗೂ ಐದು ವರ್ಣದ ಬಳೆ ತೊಡಿಸಿದರು ತಾಯಿಯ ಈ ಬಗೆಯ ಶೃಂಗಾರ ಇನ್ನು ಒಂದು ತಿಂಗಳ ತನಕ ನೋಡದೊರೆಯಿವುದಿಲ್ಲ. ಆದ್ದರಿಂದ ಗೌಡ, ಲಗಮವ್ವ, ದತ್ತಪ್ಪ ಬಿದ್ದ ಕನಸುಗಳಿಗೆ ಹೆದರಿದ್ದರಿಂದ ಇದ್ದೀತು, ತುಂಬ ಭಾವುಕರಾಗಿ ಕಣ್ಣುತುಂಬ ನೋಡಿದರು. ಹಿಂದೆ ತಾಯಿಯ ಕೈ ಸಿಡಿಯುವಂತೆ ಮಾಡಿದ ಪಾಪಿಯ ಪತ್ತೆಯಾಗಿರಲಿಲ್ಲ. ತಾಯಿಯ ಮಾತೇ ಹೀಗೆ. ಎಲ್ಲಾ ತಮ್ಮ ಪರಿಣಾಮಗಳಿಂ,ದಲೇ ತಿಳಿಯುತ್ತವೆ. ಮೊದಲೇ ಗೊತ್ತಾದರೆ ಆಗುವ ಅನಾಹುತವನ್ನಾದರೂ ತಪ್ಪಿಸಬಹುದು. ಆದರೆ ತಿಳಿಯುವಂತೆ ಮಾತಾಡಲು ತಾಯಿ ತಮ್ಮಂತೆ ಮನುಷ್ಯಳೆ? ಆಕೆಯ ವ್ಯವಹಾರದಲ್ಲಿ ಕೈಹಾಕುವುದು ತಮ್ಮಿಂದೇನಾದೀತು? ಇದನ್ನೆಲ್ಲ ನೆನೆದಾಗ ತಾವೆಂಥ ದುರ್ಬಲರೆಂದು ಅನಿಸುತ್ತದೆ. ಆಗೋದನ್ನ ಕೈಕಟ್ಟಿಕೊಂಡು ಸಾಕ್ಷಿಯಾಗಿ ನೋಡುವುದೆಷ್ಟೇ ಅಷ್ಟೆ.
ದೇವರೇಸಿಯನ್ನು ಎಬ್ಬಿಸಬೇಕಾಯ್ತು. ಎಬ್ಬಿಸುವಾಗ ಮೈ ಸುಡುತ್ತಿದ್ದುದು ಗೌಡನಿಗೂ ತಿಳಿದು ಹಳಹಳಿಸಿದ. ದೇವರೇಸಿ ಎದ್ದು ದೂಪಾರತಿಯನ್ನು ಕೈಗೆತ್ತಿಕೊಂಡೊಡನೆ ಗರ್ಭಗುಡಿಯ ಬಾಗಿಲು ತೆರೆದರು. ಹೊರಗೆ ನೆರೆದಿದ್ದ ಭಕ್ತರೆಲ್ಲ ಬಾಗಿಲಿಗೆ ಮುಕುರಿ ತಾಯಿಯ ಬಂಗಾರದ ಶೃಂಗಾರ ಮೂರ್ತಿಯನ್ನು ಕಣ್ಣತುಂಬ ನೋಡಿದರು. ದೇವರೇಸಿ ದೂಪಾರತಿ ತಗೊಂಡು ಹೊರಬಂದು ಗುಡಿ ಪ್ರದಕ್ಷಿಣೆ ಹಾಕಿದ. ದೀಪಕಂಬದ ಹತ್ತಿರ ಹೋಗಿ ಅಲ್ಲಿದ್ದ ಗಣಗಳಿಗೆ ದೂಪಾರತಿಯ ಕೈ ಮೇಲೆತ್ತಿ ‘ಚಾಂಗುಭಲೇ’ ಎಂದು ಕಿರಿಚಿ ನೆಲಕ್ಕೆ ಕುಕ್ಕಿದ ಕೂಡಲೇ ನೆರೆದ ಭಕ್ತರೆಲ್ಲ ಗುಡಿಯಲ್ಲಿದ್ದ ಎಲ್ಲ ಗಂಟಿ, ಜಾಗಟಿ, ತಾಳ, ಡೊಳ್ಳುಗಳನ್ನು ಚಾಂಗು ಭಲೇ ಎಂದು ಕಿರುಚುತ್ತ ಕಿವಿಗಡಚಿಕ್ಕುವಂತೆ ಬಾರಿಸತೊಡಗಿದರು.
ದೇವರೇಸಿ ಓಡೋಡುತ್ತ ಬಂದು ಗರ್ಭಗುಡಿ ಹೊಕ್ಕ. ಈಗ ತಪಸ್ಸಿಗಾಗಿ ಅಡವಿಯಲ್ಲಿದ್ದ ಜಡೆಮುನಿಯ ಸಂಹಾರವಾಯಿತೆಂದೂ ಆ ಸುದ್ದಿಯನ್ನು ದೇವರೇಸಿ ಓಡೋಡುತ್ತ ಬಂದು ತಾಯಿಗೆ ಅರಿಕೆಮಾಡಿದನೆಂದೂ ಇದರರ್ಥ. ತಾಯಿಯೀಗ ರಂಡೆ (ವಿಧವೆ)ಯಾದ್ದರಿಂದ ಆಕೆಯ ಕೈಬಳೆ ಒಡೆಯುತ್ತಾರೆ. ಗೌಡ ಆವೇಶದಲ್ಲಿದ್ದ ದೇವರೇಸಿಯನ್ನು ತೆಕ್ಕೆಹಾಯ್ದು ಹಿಡಿದುಕೊಂಡಿದ್ದ. ಲಗಮವ್ವ ಅವಸರದಲ್ಲಿ ದೇವರೇಸಿಯ ಕೈಬಳೆ ಒಡೆದಳು. ಕುಂಕುಮ ಅಳಿಸಿದಳು. ದತ್ತಪ್ಪ ಮೂರ್ತಿಯ ಕೈಬಳೆ ಒಡೆದು ಕುಂಕುಮ ಅಳಿಸಿದ. ಕೂಡಲೇ ಕೂಡಿದ ಭಕ್ತರು ಬಿಲ್ಲುಬಾಣೆಸೆದಂತೆ ಮೂರ್ತಿಯ ಕಡೆಗೆ ಅಡಿಕೆಗಳನ್ನು ಎಸೆದರು. ದೇವದಾನವರು ತಾಯಿಯ ಗರ್ಭಕ್ಕೆ ಆಯುಧಗಳನ್ನೆಸೆದರೆಂದು ಇದರರ್ಥ. ಗರ್ಭ ಕಳಚಿದೊಡನೆ ದೇವರೇಸಿ ವಿಕಾರವಾಗಿ ಕಿರಿಚಿದ. ಗೌಡ, ದತ್ತಪ್ಪ ಲಗುಬಗೆಯಿಂದ ನಾನಾ ಬಗೆಯ ಇಪ್ಪತ್ತೊಂದು ಹಣ್ಣುಗಳನ್ನು ತಾಯಿಯ ಉಡಿಯಲ್ಲಿ ಕಟ್ಟಿದರು.
ತಾಯಿ ಕೂಡಲೇ ಕೋಪಗೊಂಡಳು. ಮೈತುಂಬಿ ಮುಳ್ಳಾವಿಗೆ ಹತ್ತಿದಳು. ಕೈಯಲ್ಲಿ ಖಡ್ಗ ಕೊಟ್ಟರು. ಎಡಗೈಯಲ್ಲಿ ಪಂಜು ಕೊಟ್ಟರು. ರಭಸದಿಂದ ಗುಡಿಬಿಟ್ಟುಹೊರಗೆ ಪೌಳಿಗೋಡಿದಳು. ಪೌಳಿಯ ತು,ಬ ಗಂಡಸರು ಕಿಕ್ಕಿರಿದು ನೆರೆದಿದ್ದರು. ಈಗ ತಾಯಿ ದೇವದಾನವರ ಸಂಹಾರಕ್ಕೆ ಹೊರಡುವ ಸಮಯ. ಆ ಅವಸರದಲ್ಲಿಯೇ ಹಕ್ಕಿನ ಹಿರಿಯರನ್ನು ಕರೆದು ಊರ ಯೋಗಕ್ಷೇಮದ ಬಗ್ಗೆ ಮೂರು ವಿಶೇಷ ಕಾರಣಿಕ ಹೇಳಿ ಊರ ಸೀಮೆ ದಾಟುತ್ತಾಳೆ. ಪಲ್ಲಕ್ಕಿಯ ಹತ್ತಿರ ನಿಂತೊಡನೆ ತಾಯಿ ಪಂಜಿನ ಕೈ ಎತ್ತಿ ‘ಏಽಽಽಽ’ ಎಂದು ಕಿರಿಚಿದಳು. ಕೇಳುವುದಕ್ಕೆ ಎಲ್ಲರೂ ಸ್ತಬ್ಧರಾದರು. ಗೌಡ ಗಪ್ಪಬೆ ಬಗ್ಗಿ ತಾಯಿಯ ಮುಳ್ಳಾವಿಗೆಯ ಮೇಲೆ ನಿಂತ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ. ಗುಡಿಯ ಒಳಗಡೆ ಹೆಂಗಸರು ಇನ್ನೂ ಗದ್ದಲ ಮಾಡುತ್ತಿದ್ದರು. ದತ್ತಪ್ಪ ಗದರಿಸಿದ, ಸುಮ್ಮನಾದರು. ಆದರೆ ಏನೋ ಗುಸುಗುಸು ನಡೆಯುತ್ತಿತ್ತು. ತಾಯಿ ಬೇಗನೆ ಬಾಯಿ ಬಿಡಲಿಲ್ಲ; ಬರೀ ಬಿಕ್ಕತೊಡಗಿದಳು.
ಜನ ಮೈಯೆಲ್ಲ ಕಿವಿಯಾದರು. ಆಶ್ಚರ್ಯವೆಂದರೆ ಗುಡಸೀಕರ ಕೂಡ ಬಸವರಾಜನೊಂದಿಗೆ ಕಾರಣಿಕ ಕೇಳಲು ಬಂದಿದ್ದ. ಒಳಗೊಳಗೇ ದೇವಿ ತನ್ನ ಎಲೆಕ್ಷನ್ ಪರವಾಗಿಯೇ ಕಾರಣಿಕ ಹೇಳಿಯಾಳೆಂಬ ನಂಬಿಕೆಯಿತ್ತು. ಬಸವರಾಜು ಅವನ ಪಕ್ಕದಲ್ಲೇ ನಿಂತು ಹೆಂಗಸರ ಕಡೆ ಕುಡಿನೋಟ ಬೀರುತ್ತ ನಿಂತಿದ್ದ. ಗುಡಸೀಕರನ ಕಿವಿಯಲ್ಲಿ ಏನೋ ಹೇಳುತ್ತಿದ್ದಂತೆ ಬಾಯಿ ಮುಚ್ಚಲಿಕ್ಕೆ ಸನ್ನೆ ಮಾಡಿ ಕಾರಣಿಕಕ್ಕೆ ಕಿವಿಕೊಟ್ಟ. ಹೆಂಗಸರಲ್ಲಿದ್ದ ಗಿರಿಜಳಿಗೆ ಕಾರಣಿಕದ ಬಗ್ಗೆ ಕಾಳಜಿಯಿದ್ದಂತಿರಲಿಲ್ಲ. ಬಸವರಾಜೂನನ್ನು ಕಣ್ಣಿನಿಂದಿರಿಯುತ್ತ, ಹಲ್ಲು ಕಿಸಿಯುತ್ತ ನಿಂತಿದ್ದಳು. ಈಗಲೂ ತಾಯಿಗೆ ಬಾಯಿ ಬಂದಿರಲಿಲ್ಲ. ಬರೀ ಬಿಕ್ಕುತ್ತಿದ್ದಳು.
ಗೌಡನ ಎದೆ ಡವಡವ ಹೊಡೆದುಕೊಳ್ಳುತ್ತಿತ್ತು. ತಾಯಿಯ ವಾಣಿ ಏನಾಗುತ್ತದೋ, ಬಾಯಿ ಕೂಡ ಬರದಾಗಿತ್ತು. ನಿಂಗೂ ಹೆಂಗಸರಲ್ಲೇ ನಿಂತಿದ್ದವನು ಬಸವರಾಜುವಿನ ಕಣ್ಣ ಬೇಟಿ ಗಮನಿಸಿದ್ದ. ನೋಡಿ ಅಸೂಯೆಪಟ್ಟಿದ್ದ. ಹಿಂದೆ ನಿಂತಿದ್ದ ಸುಂದರಿ ನಿಧಾನವಾಗಿ ಬಿಕ್ಕತೊಡಗಿದಳು. ಕೂಡಲೇ ಹೆಂಗಸರು ಅವಳನ್ನು ಗದರಿಕೊಂಡು. ಒಂದು ಸಲ ಸುಮ್ಮನಾಗಿ ಮತ್ತೆ ಬಿಕ್ಕತೊಡಗಿದಳು. “ಈ ರಂಡಿಗೇನಾಗೈತ್ಯೊ ಬ್ಯಾನಿ” ಎಂದು ಹೆಂಗಸರಿಗೆ ಕೇಳಿಸುವಂತೇ ಲಗಮವ್ವ ಬೈದು ಮತ್ತೆ ಕಾರಣಿಕಕ್ಕೆ ಕಿವಿಯೊಡ್ಡಿದಳು. ನಿಂಗೂ ತಿರುಗಿ ನೋಡಿದಾಗ ಸುಂದರಿ ನಿಂತಲ್ಲೇ ಬಿಕ್ಕುತ್ತ ಕುಸಿದಿದ್ದಳು. ಬಿಕ್ಕುವಾಗ ಎದ್ದೆದ್ದು ಬೀಳುತ್ತಿದ್ದಳು. ಅಷ್ಟರಲ್ಲಿ ತಾಯಿ ಇನ್ನೊಮ್ಮೆ,
“ಏಽಽಽ”
ಎಂದು ಕಿರಿಚಿದಳು, ಜನ ಸ್ತಬ್ಧರಾದರು. ಗೌಡ ತಾಯಿಯ ಕಾಲನ್ನು ಇನ್ನೂ ಬಿಗಿಯಾಗಿ ಹಿಡಿದ. ಕಿವಿಯ ಮೇಲೆ ತಾಯಿಯ ಬೆಚ್ಚಗಿನ ಕಣ್ಣೀರ ಹನಿ ಬಿದ್ದಾಗ ಕಳವಳವಾಯ್ತು. ತಾಯಿಗೆ ಬಾಯಿ ಬಂತು;

ಆಸರದ ಆಲದ ಮರದ ಬೇರ
ನೀರಿಲ್ಲದ ಒಣಗ್ಯಾವು
ನೀರ ಹಾಕೋದ ಮರೀಬ್ಯಾಡ್ರಲೇ….

ಕಾರಣಿಕ ಸ್ಪಷ್ಟವಾಗಿ ಚುನಾವಣೆಯ ಬಗ್ಗೆ ಇತ್ತೆಂಬ ಬಗ್ಗೆ ಯಾರಿಗೂ ಅನುಮಾನವಾಗಲಿಲ್ಲ. ಆಸರದ ಆಲದ ಮರದ ಬೇರಿಗೆ ನೀರು ಹಾಕುವುದೆಂದರೆ ಗೌಡನ ಪಾರ್ಟಿಗೆ ‘ಹೋಟು’ ಹಾಕಬೇಕೆಂಬುದಾಗಿ ಎಲ್ಲರೂ ಅರ್ಥೈಸಿಕೊಂಡರು. ಗಟ್ಟಿಮುಟ್ಟಾದ ನುಡಿಯೆಂದು ಜನ ಆಡಿಕೊಂಡರು ಕೂಡ, “ನಡೀಪಾ ಗುಡಸೀಕರಾ ಇನ್ನ” ಎಂದೊಬ್ಬ ಕುಸ್ತೀ ಹುಡುಗ ಕುಹಕವಾಡಿದ. ಗುಡಸೀಕರನಿಗೆ ನಿರಾಶೆಯಾಯ್ತು. ಬಸವರಾಜೂನ ಕಡೆ ನೋಡಿದ. ಅವನಿರಲಿಲ್ಲ.
ರಂಡಿ ಹುಣ್ಣಿವೆ ದಿನ ಆಗೋದು ಒಟ್ಟು ಮೂರು ನುಡಿಗಳು. ಊರುಗಾರಿಕೆಯ ಮೊದಲನೆಯ ನುಡಿಯಾದ ಮೇಲೆ ಎರಡನೆಯ ನುಡಿ ಗೌಡನ ಮನೆತನಕ್ಕೆ ನೇರವಾಗಿ ಸಂಬಂಧಪಡುವುದರಿಂದ ತನ್ನ ಕಳೆದ ಮಗನ ಬಗ್ಗೆ ತಾಯಿ ಏನು ಹೇಳುವಳೋ ಎಂದು ಗೌಡ ತವಕಗೊಂಡ. ಗಂಟಲಲ್ಲಿದ್ದ ಎರಡನೆಯ ನುಡಿ ಇನ್ನೇನು ದನಿಗೊಂಡು ಹೊರಬರಬೇಕು, ಅಷ್ಟರಲ್ಲಿ ಗುಡಿಯೊಳಗಿದ್ದ ಸುಂದರಿ ವೀರಾವೇಶದಿಂದ “ಏ” ಎಂದು ಥೇಟ್ ದೇವರೇಸಿಯಂತೆಯೇ ಕಿರಿಚಿದಳು. ಜನ ದಂಗಾದರು.
ಏನು, ಎತ್ತ, ಯಾಕೆ-ತಿಳಿಯುವ ಮುನ್ನವೇ, ಜನ ಹಿಂದಿರುಗಿ ಹೆಂಗಸರತ್ತ ನೋಡನೋಡುವುದರೊಳಗೆ ಸುಂದರಿ ಹೆಂಗಸರ ಮಧ್ಯದಿಂದ ನೆಗೆದು ಬಂದು ಗಂಡಸರ ಗುಂಪಿನಲ್ಲಿ ಹೊಕ್ಕು ಎರಡೂ ಕೈಯಲ್ಲಿದ್ದ ಬಂಡಾರವನ್ನು ರಭಸದಿಂದ ಮೇಲಕ್ಕೆರೆಚಿದಳು. ದೇವರೇಸಿ ಅವಾಕ್ಕಾಗಿ ನಡುಗಿದ. ಅವಳು ಒಲೆದಾಡುವ ಪರಿ ನೋಡಿ ದೇವೀ, ತನ್ನ ಬಿಟ್ಟು ಇವಳ ಮೈತುಂಬಿದಳೆಂಬ ದುಃಖ ಒಂದೆಡೆಗಾದರೆ ಎಲ್ಲಿ ತನ್ನ ಗುಟ್ಟು ರಟ್ಟುಮಾಡುವಳೋ ಎಂಬ ಭಯ ಇನ್ನೊಂದೆಡೆ, ಸುಂದರಿ ಓಡಿ ಬಂದು ದೇವರೇಸಿಯ ಹತ್ತಿರವೇ ನಿಂತು ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಇನ್ನೊಮ್ಮೆ ಕಿರಿಚಿದಳು. ಜನರ ಮನಸ್ಸು ಚೆಲ್ಲಾಪಿಲ್ಲಿಯಾಯಿತು. ಅವಳು ಒಲೆದಾಡುವ ಪರಿಯೋ ಥೇಟ್ ದೇವರೇಸಿಯಂತೆಯೇ ಇದ್ದುದರಿಂದ ಇವಳಿಗೂ ತಾಯಿ ಮೈತುಂಬಿರಬೇಕೆಂದು ಕೆಲವರಂದುಕೊಂಡರು. ಈ ಹುಚ್ಚರಂಡೆ ಹಗರಣಾ ಮಾಡುತ್ತಿದ್ದಾಳೆಂದು ಕೆಲವರಂದರು. ಮೈತುಂಬದಿದ್ದರೆ ಕೂಡಿದ ಭಕ್ತರಲ್ಲಿ ಹೀಗೆ ಒದರುವ ಧೈರ್ಯ ಬರುತ್ತಿತ್ತೇ? ಪಲ್ಲಕ್ಕಿಯ ಹತ್ತಿರ ನಿಲ್ಲುವ ಧೈರ್ಯವಾಗುತ್ತಿತ್ತೇ? ಹಗರಣಾ ಮಾಡಿದ್ದರೆ ನಾವ್ಯಾಕೆ, ದೇವಿ ಸುಮ್ಮನಿರುತ್ತಿದ್ದಳೆ? ನಿಂತಲ್ಲೇ ರಕ್ತ ಕಾರಿಬಿಡುತ್ತಿದ್ದಳು. ಅದೂ ಹೋಗಲಿ, ಅವಳ ದನಿಯಲ್ಲೇ ಏನೋ ಒಂದು ವಿಶೇಷವಿದೆ. ಹಲ್ಕಟ ಹೆಂಗಸೇನೋ ಹೌದು. ಆದರೆ ತಾಯಿಯ ಮನಸ್ಸಿಗೆ ಬಂದರೆ ಏನು ಮಾಡಲಾಗುತ್ತದೆ? ದೇವರೇಸಿ ಏನೋ ಮೈಲಿಗೆ ಮಾಡಿರಬೇಕು. ಇಲ್ಲದಿದ್ದರೆ ಅವನನ್ನು ಬಿಟ್ಟು ದೇವೀ ಇನ್ನೊಬ್ಬರನ್ನು ಯಾಕೆ ಆರಿಸಿಕೊಳ್ಳುತ್ತಿದ್ದಳು? ಗೌಡ ಅಪ್ರತಿಭನಾದ. ದತ್ತಪ್ಪನ ಚಿಂತಾಮಣಿಯ ಬುದ್ಧಿ ಮಸಳಿಸಿತು. ಏನು ಮಾಡಬೇಕೆಂದು ಯಾರಿಗೂ ತೋಚಲೊಲ್ಲದು. ಸುಂದರಿ ಕಿರಿಚಿ ಮತ್ತೆ ಬಿಕ್ಕತೊಡಗಿದಳು. ಇದು ದೇವರೇಸಿಯ ಬಿಕ್ಕಿನಂತೇ ಇತ್ತು. ನಂಬಲು ಸಿದ್ಧರಾದ ಕೆಲವು ಭಾವುಕರಿಗೆ ಸಂಶಯವೇ ಉಳಿಯಲಿಲ್ಲ. ಚರ್ಚಿಸುವ ಸಮಯವೂ ಅದಲ್ಲ.

ಎಲ್ಲೀ ಹೋದಳೆನ್ನಬೇಡಿರೇ

ಸುಂದರಿ ಕೈ ಎತ್ತಿ “ಚಿಗಿರಿಗೆ ನೀರ ಹಾಕ್ರಲೇ” ಎಂದು ಕಿರಿಚಿದಳು. ದೇವರೇಸಿಯ ಕೈಯ ಪಂಜು ಕಳಚಿ ಹಾಗೇ ಕೆಳಕ್ಕೆ ಬಿತ್ತು. ಹತ್ತಿರಿದ್ದವರಿಗೆ ಅವಳ ಮಾತು ಕೇಳಿಸಿತು. ದೂರಿದ್ದವರಿಗೆ ಕೇಳಿಸಲಿಲ್ಲ. ಏನು, ಏನೆಂದು ಅವರಿವರಿಂದ ತಿಳಿದುಕೊಂಡರು. ಕೂಡಲೇ ದತ್ತಪ್ಪ ಕೈ ಮೇಲೆತ್ತಿ “ಇದು ಗುಡಿಸ್ಯಾನ ದೇವರಪೋ” ಎಂದು ಕೂಗಿದ. ಜನ ದೇವಿಯೆಂದರು. ಹೊಯ್ಮಾಲಿಯೆಂದರು. ಹಾ ಎಂದರು, ಹೋ ಎಂದರು. ದೇವರೇಸಿ
“ದೇವೀ ನನ್ನ ಕೈಬಿಟ್ಟಳ್ರೋಽಽಽ”
-ಎಂದು ಕಿರಿಚುತ್ತ ಭೂತ ಕಂಡ ಮಗುವಿನಂತೆ ರಭಸದಿಂದ ಜನಗಳನ್ನು ಆ ಕಡೆ ಈ ಕಡೆ ತಳ್ಳಿ ಹೊರಗೋಡಿಬಿಟ್ಟ. ಜನ ಹೋ ಎಂದು ಗಾಬರಿಯಲ್ಲಿ ಕಿರಿಚುತ್ತಿದ್ದಂತೆ ಗೌಡ “ಸತ್ತಗಿತ್ತಾನ ಬಾರೋ ದತ್ತೂ” ಎಂದು ಕಿರಿಚಿ ದೇವರೇಸಿಯ ಬೆನ್ನು ಹತ್ತಿದ. ದತ್ತಪ್ಪನೂ ಓಡಿದ. ಅವರ ಹಿಂದಿನಿಂದ ಕೆಲವು ಕುಸ್ತೀ ಹುಡುಗರೂ, ಇನ್ನೂ ಕೆಲವರು ಓಡಿದರು. ಬಸವರಾಜು ಯಾವುದೋ ಪರಿಯಿಂದ ಗರ್ಭಗುಡಿ ಸೇರಿದವನು ಯಾರಿಗೂ ಗೊತ್ತಾಗದಂತೆ ಹೆಜ್ಜೇನಿನ ಮೂರು ಹುಟ್ಟುಗಳಿಗೆ ಉದ್ದ ಕೋಲಿನಿಂದ ಬೀಸಿ ಹೊಡೆದ. ಒಂದೊಂದೇ ಏಟಿಗೆ ಮೂರು ಹುಟ್ಟುಗಳು ಕತ್ತರಿಸಿ ನೆಲಕ್ಕೆ ರೊಪ್ಪೆಂದು ಬಿದ್ದವು. ಬಿದ್ದ ಹುಟ್ಟುಗಳ ಸುತ್ತ ಹಸಿನೆತ್ತರಿನಂತೆ- ಜೇನುತುಪ್ಪ ಹುಳು ಸಮೇತ ಚಿಲ್ಲೆಂದು ಸಿಡಿಯಿತು. ಆಘಾತದಿಂದ ತತ್ತರಿಸಿದ ಹುಳುಗಳು ಗೊಯೆಂದು ಭಗ್ಗನೆ ಹೊಗೆಯೆದ್ದಂತೆ-ಹೊರಬಿದ್ದು ಸಿಕ್ಕಸಿಕ್ಕವರನ್ನು ಸಿಕ್ಕಸಿಕ್ಕಲ್ಲಿ ಕಚ್ಚತೊಡಗಿದವು.
ಕಿರಿಚಾಟ, ಕೂಗಾಟ, ಒದರಾಟ, ಅಯ್ಯೋ, ಅಪ್ಪಾ, ಅವ್ವಾ, ತಾಯೀ, ಕರಿಮಾಯೀ ಎಂದು ಜನ ಮರೆ ಎಲ್ಲಿದ್ದರಲ್ಲಿಗೆ ಹೋ ಎಂದು ಓಡತೊಡಗಿದರು. ಬಿದ್ದರೋ, ಎದ್ದರೋ, ತುಳಿದರೋ, ತುಳಿಸಿಕೊಂಡರೋ- ಬಟ್ಟೆ ಕಿತ್ತೆಸೆದರು, ಸೀರೆ ಬಿಚ್ಚಿ ಎಸೆದರು, ಹೊಯ್ಕೊಂಡರೂ, ಹೊಡಕೊಂಡರೂ ಹುಳು ಬಿಡದೆ ಅಟ್ಟಿಸಿಕೊಂಡು ಹೋಗಿ ಎಲ್ಲೆಂದರಲ್ಲಿ, ಒಬ್ಬೊಬರಿಗೆ ಸಾವಿರ ಸಾವಿರ ಮುತ್ತಿ, ಒಂದನ್ನು ಒರೆದರೆ ಅದರ ನೆತ್ತರಿನಿಂದ ಸಾವಿರ ಹುಟ್ಟಿ, ಜೀವದ ಪರಿವೆಯಿಲ್ಲದೆ ಹೆಂಗಸರು ಮಕ್ಕಳೆನ್ನದೆ, ಬಿದ್ದವರೆದ್ದವರೆನ್ನದೆ, ಹೊಕ್ಕಲ್ಲಿ ಬಿಡದೆ, ಬಿದ್ದಲ್ಲಿ ಸೋಲದೆ ಗೊಯೆಂದು, ಹುಯ್ಯೆಂದು ಕಚ್ಚಿದವು.
ಒಂದೆರಡು ಗಳಿಗೆಯಲ್ಲಿ ಗುಡಿ ಇದ್ದಕ್ಕಿದ್ದಂತೆ ಖಾಲಿಯಾಗಿ ದೂರದಲ್ಲಿ ಮಕ್ಕಳ ಅಳುವಿನ ದನಿ, ಊರನಾಯಿಗಳ ವಿಕಾರವಾಗಿ ಊಳಿಡುವ ದನಿ ಮಾತ್ರ ಕೇಳಿಸುತ್ತಿತ್ತು.
ಶಿಶು ಮಕ್ಕಳು ಕಡಿದಷ್ಟು ಕಡಿಯಲೆಂದು ಅಲ್ಲೇ ಕಂಬಳಿಗಳಲ್ಲಿ ಮುದ್ದೆಯಾಗಿ ಬಿದ್ದಿದ್ದರು. ಗುಡಸೀಕರನೂ ಒಬ್ಬನ ಕಂಬಳಿಯಲ್ಲಿ ಹಾಗೇ ಅವಿತಿದ್ದವನು ದೈವವಶಾತ್ ಎಂಬಂತೆ ದೇವಿಯ ಬಂಗಾರದ ಮುಖದ ನೆನಪಾಯಿತು. ಹುಳು ಇನ್ನೂ ಕಡಿಮೆಯಾಗಿರಲಿಲ್ಲ. ಕಡಿಮೆಯಾಗುವ ಲಕ್ಷಣಗಳೂ ಕಾಣಲಿಲ್ಲ. ಗೌಡ, ದತ್ತಪ್ಪ ಇವರೂ ಯಾರಿರಲಿಲ್ಲ. ಬಿದ್ದುಕೊಂಡೇ ಶಿಶುಮಕ್ಕಳನ್ನು ಉದ್ದೇಶಿಸಿ ದೇವಿಯ ಬಂಗಾರದ ಮುಖದ ಬಗ್ಗೆ ಹೇಳಿದ. ಆಗ ಅವರಿಗೂ ನೆನಪಾಯಿತು. ಏಳಿರೆಂದು ಒಂದಿಬ್ಬರನ್ನು ಎಬ್ಬಿಸಿ ಕಚ್ಚುತ್ತಿದ್ದ ಹುಳ ಗಮನಿಸದೆ ಗರ್ಭಗುಡಿಯೊಳಗೆ ಓಡಿಹೋಗಿ ತಾಯಿಯ ಬಂಗಾರದ ಮುಖವನ್ನು ಜೋರಿನಿಂದ ಕಿತ್ತುಕೊಂಡ. ಕಿತ್ತ ರಭಸಕ್ಕೆ, ತಾಯಿಯ ಇಡೀ ಮೂರ್ತಿ ರುಂಡವಿಲ್ಲದೆ ಬರೀ ಮುಂಡ ಮಾತ್ರ ಧೊಪ್ಪನೆ ನೆಲಕ್ಕೆ, ಬೆನ್ನು ಮೇಲಾಗಿ ಕೈಕಾಲೂರಿ ಬಿದ್ದುಬಿಟ್ಟಿತು. ಗುಡಿಯಲ್ಲಿದ್ದ ಫಲ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಅಲ್ಲಿದ್ದವರ ಜೀವ ಹಾರಿಹೋದಂತಾಯ್ತು. ನಾಳೆ ಸರಿಪಡಿಸಿದರಾಯ್ತೆಂದು ಉಟ್ಟ ಧೋತ್ರದಲ್ಲಿ ತಾಯಿಯ ಮೂರ್ತಿ ಬಚ್ಚಿಟ್ಟುಕೊಂಡು ಆಭರಣಗಳನ್ನಾಯ್ದುಕೊಂಡು ಶಿಶು ಮಕ್ಕಳೊಂದಿಗೆ ಮನೆಗೆ ಓಡಿದ. ಓಡಿ ಬಂದವರಲ್ಲಿ ಬಸವರಾಜೂ ಕೂಡ ಒಬ್ಬನಾದದ್ದು ಮನೆಗೆ ಬಂದ ಮೇಲೆ ತಿಳಿಯಿತು.
ಎಲ್ಲರ ಮುಖ ಬಾತುಹೋಗಿ ಗುರುತು ಸಿಗದಾಗಿತ್ತು. ಬಸವರಾಜೂನ ಕಣ್ಣು, ಸೊಂಡಿ, ಕಿವಿ, ಎಲ್ಲಾ ಉಬ್ಬಿ ಬಾಯಿ ತೆರೆದಾಗ ಲಗಮವ್ವನ ಹಾಡಿನ ದೈತ್ಯನಂತೆ ಕಾಣುತ್ತಿದ್ದ. ಈಗ ಮಾತಾಡಿ ಪ್ರಯೋಜನವಿರಲಿಲ್ಲ. ಒಬ್ಬೊಬ್ಬರೂ ಮೈ ಪರಚಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದರು. ಒಳಗೆ ಗಿರಿಜಾ ಸಣ್ಣಗೆ ಅಳುತ್ತಿದ್ದಳು. ದೂರದಲ್ಲಿನ್ನೂ ಜನರ ನರಳಾಟ ಕೇಳಿಸುತ್ತಿತ್ತು. ನಾಯಿಗಳು ಊಳಿಡುತ್ತಿದ್ದವು. ಗೌಡ, ದತ್ತಪ್ಪ ಈಗ ಬಂದಾರು ಆಗ ಬಂದಾರೆಂದು ಬಂದೊಡನೆ ಈ ಮುಖ, ಆಭರಣಗಳನ್ನು ಅವರಿಗೊಪ್ಪಿಸಿ ಜವಾಬ್ದಾರಿ ತೀರಿಸಿಕೊಳ್ಳಬೇಕೆಂದು ದಾರಿನೋಡುತ್ತ, ಮೈಪರಚಿಕೊಳ್ಳುತ್ತ ಗುಡಸೀಕರ ಕೂತ. ಬಹಳ ಹೊತ್ತಾದರೂ ಯಾರೂ ಬರುವ ಸುಳಿವು ಕಾಣಲಿಲ್ಲ. ತಾವೆಲ್ಲಾ ಇಲ್ಲಿದ್ದರೆ ಅವರಿಗೆ ದೇವಿಯ ಮುಖ ಇಲ್ಲಿದ್ದುದು ತಿಳಿಯುವುದಾದರೂ ಹ್ಯಾಗೆ? ಬಂದಿದ್ದ ಶಿಶು ಮಕ್ಕಳನ್ನು ಗೌಡ, ದತ್ತಪ್ಪರ ಮನೆಗೆ ಕಳುಹಿಸಿದ. ಅವರ ಅಳುಮುಖ ನೋಡಿ ಗುಡಸೀಕರನ ಕರುಳು ಕಿತ್ತು ಬಾಯಿಗೆ ಬಂದಂತೆ ಗಂಟಲು ತುಂಬಿ ಬಂತು. ಬಸವರಾಜ ಇಲ್ಲದಿದ್ದರೆ ಅತ್ತುಬಿಡುತ್ತಿದ್ದನೋ ಏನೋ! ಅವ ಮಿಕಿಮಿಕಿ ಇವನನ್ನೇ ನೋಡುತ್ತಿದ್ದ. ಅವನಿಗೂ ಅನಿರೀಕ್ಷಿತ ಆಘಾತವಾದಂತಿತ್ತು.
ಒಂದು ತಾಸು ಹಾದಿ ನೋಡಿದ. ಯಾರೂ ತನ್ನ ಮನೆ ಕಡೆ ಬರುವ ಲಕ್ಷಣ ಕಾಣಿಸಲಿಲ್ಲ. ಗಡಿಯಾರ ನೋಡಿಕೊಂಡ. ಆಗಲೇ ಮೂರು ಗಂಟೆಯಾಗಿತ್ತು. ಬಸವರಾಜು ಕೂತಲ್ಲೇ ಮಲಗಿ ಗೊರಕೆಹೊಡೆಯುತ್ತಿದ್ದ. ದೇವಿಯ ಮುಖ ಕಣ್ಣು ತೆರೆದುಕೊಂಡು ಪಲ್ಲಂಗದ ಮೇಲೆ ಹಾಗೇ ಕೂತಿತ್ತು. ತಗೊಂಡು ಹೋಗಿ ತನ್ನ ದೇವರ ಮನೆಯ ತಿಜೋರಿಯಲ್ಲಿಟ್ಟು ಬೀಗ ಹಾಕಿಬಂದ. ಇನ್ನೂ ಯಾರೂ ಬರಲಿಲ್ಲ.
ಒತ್ತೊತ್ತಿ ಉಕ್ಕಿಬರುವ ಆಲೋಚನೆಗಳಿಂದ, ಚಿಂತೆಗಳಿಂದ ಅಳು ಬಂತು. ಗಳಗಳ ಕಣ್ಣೀರು ಸುರಿಸಿದ. ಸುಂದರಿ ಮಾಡಿದ್ದು ಬಸವರಾಜೂನ ಕುತಂತ್ರದಿಂದಲೇ ಎಂದು ಖಾತ್ರಿಯಾಗಿತ್ತು. ಅದೆಲ್ಲ ತನಗಾಗಿ ಇದ್ದೀತು. ಆದರೆ ಹಾಗೆ ಮಾಡಿದ್ದು ಸರಿಯಲ್ಲವೆಂದು ಅವನ ಅಭಿಪ್ರಾಯವಾಗಿತ್ತು. ತನ್ನೊಬ್ಬನ ಅಧಿಕಾರ ದಾಹಕ್ಕಾಗಿ ಇಡೀ ಹಳ್ಳಿಯ ಪುರಾಣವನ್ನು ಬಲಿಕೊಡುವುದೂ ಅವನಿಗೆ ಬೇಕಿರಲಿಲ್ಲ. ಆದರೆ ಎಲ್ಲ ಅನಿರೀಕ್ಷಿತವಾಗಿ ಘಟಿಸಿಬಿಟ್ಟಿತ್ತು. ಗೌಡ ತನಗಿಂತ ಬಹಳ ದೊಡ್ಡವನೆನ್ನಿಸಿತು. ಬೆಳಿಗ್ಗೆ ದೇವಿಯ ಮುಖ ಒಪ್ಪಿಸಿ ಕ್ಷಮಾಪಣೆ ಕೇಳಬೇಕೆಂದುಕೊಂಡ. ತಾನು ಎಲ್ ಎಲ್. ಬಿ. ಪಾಸಾದಾಗ ಅವ ಸಕ್ಕರೆ ಹಂಚಿದ್ದನ್ನು, ಎಲೆಕ್ಷನ್ ಇಲ್ಲದೆ ಪಂಚಾಯ್ತಿ ತನ್ನ ಕೈಗಿತ್ತದ್ದನ್ನು, ಇತ್ತೀಚೆಗೆ ತೋಟದಲ್ಲಿ ತನ್ನನ್ನು ಕಂಡು ಅಂಗಲಾಚಿದ್ದನ್ನು ನೆನೆದುಕೊಂಡ. ಗುಡಿಯಲ್ಲಿ ನಡೆದ ಇಂದಿನ ಗೊಂದಲ ನೆನಪಿಸಿಕೊಂಡ. ದೇವಿಯ ಆಳು ಮಕ್ಕಳ ಅಳುಮುಖ ನೆನಪಿಸಿಕೊಂಡ. ಜನ ತನ್ನನ್ನು ಕ್ಷಮಿಸಲಾರರೆನ್ನಿಸಿತು. ಪಶ್ಚತ್ತಾಪದಿಂದ ಸುಟ್ಟು ಸುಣ್ಣವಾದ. ಬಹುಶಃ ಪಶ್ಚತ್ತಾಪಂದಿಂದಲೋ ಏನೋ ಎದೆ ಸ್ವಲ್ಪ ಹಗುರವಾಯ್ತು. ಅವನಿಗೇ ಗೊತ್ತಿಲ್ಲದಂತೆ ಕಣ್ಣುಮುಚ್ಚಿ ನಿದ್ರೆಹೋದ.
ಬೆಳಿಗ್ಗೆ ಯಾರೋ ಚಿಟ್ಟನೆ ಚೀರಿದ್ದು ಕೇಳಿಸಿತು. ಎಚ್ಚರವಾಗಿ ಕಣ್ಣು ತೆರೆದ. ಕೆಳಗೆ ತನ್ನ ತಾಯಿ ಕಿರಿಚುತ್ತಿದ್ದಳು. ತಬ್ಬಿಬ್ಬಾಗಿ ಕೆಳಗಿಳಿದುಹೋದ. ಮುದುಕಿ ದೇವರ ಮನೆಕಡೆ ಕೈ ತೋರಿಸುತ್ತ ಎದೆ ಎದೆ ಬಡಿದುಕೊಂಡು ಅಳುತ್ತಿತ್ತು. ನೋಡಿದರೆ ತಿಜೋರಿಯ ಬಾಗಿಲು ತೆರೆದಿತ್ತು. ಒಳಗೆಲ್ಲ ಖಾಲಿ.
ಬಸವರಾಜು ಕರಿಮಾಯಿಯ ಬಂಗಾರದ ಮುಖದೊಂದಿಗೆ ಆಭರಣ, ಹಣ ತಗೊಂಡು ಗಿರಿಜೆಯನ್ನು ಓಡಿಸಿಕೊಂಡು ಪರಾರಿಯಾಗಿದ್ದ.

***

ಅದಾಗಿ ಸರಿಯಾಗಿ ಒಂದು ತಿಂಗಳಾಯಿತು. ಇಂದು ಮುತ್ತೈದೆ ಹುಣ್ಣಿವೆ. ರಂಡಿ ಹುಣ್ಣಿವೆಯಂದು ವಿಧವೆಯಾದ ತಾಯಿ ಕರಿಮಾಯಿ ಒಂದು ತಿಂಗಳ ಅವಧಿಯಲ್ಲಿ ಏಳೇಳು ಶಿರದ ಈರೇಳು ಭುಜಗಳ ದೈತ್ಯರನ್ನೂ, ದೇವತೆಗಳನ್ನೂ ಸಂಹರಿಸಿ ಮಕ್ಕಳ ಹಾಗೂ ಗಂಡನ ಜೀವ ಮರಳಿ ಪಡೆದುಕೊಂಡು ಹಿಂದಿರುಗಿ ಬರುವ ದಿನ ಇಂದು. ತಾಯಿ ಬರಲೇ ಇಲ್ಲ.
ಧರಣಿಗೆ ದೊಡ್ಡವಳಾದ ಕರಿಮಾಯಿ ಆಡುವ ಮಕ್ಕಳಿಗೆ ತೂಗು ತೊಟ್ಟಿಲವಾದಳು. ಮುತ್ತೈದೆಯರಿಗೆ ಬಾಗಿನದ ಮರವಾದಳು. ಹಣ್ಣು ಮುದುಕರಿಗೆ ಊರುವ ಕೋಲಾದಳು. ಅನಾಥರಿಗೆ ಆಧಾರವಾದಳು. ಅವಳನ್ನು ನೆನೆದು ಕೈಲಿ ಹಿಡಿದ ಕೆಂಡ ಕೆಂದಾವರೆಯಾಯ್ತು. ಮಣ್ಣು ಚಿನ್ನವಾಯಿತು. ಹಿಟ್ಟು ಬೆಲ್ಲವಾಯಿತು. ಅಂಬಲಿ ಪಾಯಸವಾಯಿತು. ಜೋಪಡಿ ಅರಮನೆಯಾಯಿತು. ಇಂಥ ಮೂರು ಲೋಕಕ್ಕೆ ಅಧಿಕವಾದ ತಾಯಿ ಬರಲೇ ಇಲ್ಲ.
ಆಕಾಶ ಪಾತಾಳ ಒಂದು ಮಾಡಿ ಹುಡುಕಿಸಿದರೂ ಬಸವರಾಜು ಸಿಕ್ಕಲಿಲ್ಲ. ಪೋಲೀಸರಿಗೆ ಹೇಳಿ ಬಂದಿದ್ದರು. ಅವರಿಂದ ಈ ತನಕ ಯಾವ ಬಾತಮಿಯೂ ಬಂದಿರಲಿಲ್ಲ. ಆ ದಿನ ಗುಡಸೀಕರ ಬಂಗಾರದ ಮುಖ ತೆಗೆದಾಗ ರುಂಡವಿಲ್ಲದ ತಾಯಿಯ ಮೂರ್ತಿ ಬಕ್ಕ ಬರಲು ಕೈಕಾಲೂರಿ ಬಿದ್ದಿತ್ತು. ಅದನ್ನೆತ್ತಿ ಮುಂಡಕ್ಕೆ ಕಟ್ಟಿಗೆಯ ಮುಖವನ್ನಾದರೂ ಜೋಡಿಸಬೇಕಿತ್ತು. ಶುದ್ಧ ಮಾಡಿಲ್ಲದೆ ಅದಾಗದು. ತಾಯಿಯೇ ಬರದಿದ್ದರೆ ಶುದ್ಧ ಮಾಡಿಯಾದರೂ ಏನು ಪ್ರಯೋಜನ? ಹೆದರಿಕೆಯಲ್ಲಿ ಲಗಮವ್ವನೂ ಗುಡಿಯ ಕಡೆ ಸುಳಿದಿರಲಿಲ್ಲ. ಅವಳೇನಾದರೂ ಈ ಪರಿಯಲ್ಲಿರುವ ತಾಯಿಯನ್ನು ಕಂಡಿದ್ದರೆ, ದೈತ್ಯರು ತಾಯಿಯ ರುಂಡ ಚೆಂಡಾಡಿದರೆಂದು ಅತ್ತುಕೊಂಡು ಹಾಡುತ್ತಿದ್ದಳೋ ಏನೋ! ರಾತ್ರಿಯಾದೊಡನೆ ಒಬ್ಬಳೇ ಗುಡಿಸಲಲ್ಲಿ ಕೂತುಕೊಂಡು

ಎಲ್ಲೀ ಹೋದಳೆನ್ನಬ್ಯಾಡಿರೇ
ಕರಿಮಾಯಿ ನಿಮ್ಮ ಮನಸೀನಾಗ ಐದಾಳೆನ್ನಿರೇ!
ಎತ್ತ ಹೋದಳೆನ್ನಬ್ಯಾಡಿರೇ
ಕರಿಮಾಯಿ ನಿಮ್ಮ|ಚಿತ್ತದೊಳಗೈದಾಳೆನ್ನಿರೇ ||

ಎಂದೇನೋ ಹಾಡುತ್ತಿದ್ದಳು, ಬಹುಶಃ ತನ್ನ ಸಮಾಧಾನಕ್ಕಾಗಿ. ಆದರೆ ಅವಳ ದನಿ ವಿಕಾರವಾಗಿ ದೂರದಲ್ಲಿದ್ದವರಿಗೆ ಅದೊಂದು ನೊಂದ ಪ್ರಾಣಿಯ ಆಳಾಪದಂತೆ ಕೇಳಿಸುತ್ತಿತ್ತು.
ದೇವರೇಸಿ ಆ ದಿನ ಎಲ್ಲರನ್ನೂ ತಪ್ಪಿಸಿ ಕಾಡಿನಲ್ಲಿ ಮಾಯವಾದ. ಮೂರು ದಿನಗಳ ತರುವಾಯ ನೇಣು ಹಾಕಿಕೊಂಡ ಅವನ ಹೆಣ ಸಿಕ್ಕಿತ್ತಷ್ಟೆ. ತಾಯಿ ಇನ್ನೊಬ್ಬ ದೇವರೇಸಿಯನ್ನಾರಿಸಿಕೊಂಡು ಅವನ ಮುಖಾಂತರ ಬಂಗಾರದ ಮುಖದ ಸುಳಿವು ಕೊಟ್ಟಾಳು. ಇಲ್ಲವೆ ಬಸವರಾಜನಿಗೆ ನೆತ್ತರು ಕಕ್ಕಿಸಿ ಅವ ಓಡಿಬಂದು ವಾಪಸ್ಸು ಕೊಡುವಂತೆ ಮಾಡ್ಯಾಳೆಂದು ಎಲ್ಲರ ನಂಬಿಕೆಯಾಗಿತ್ತು. ಅಂಥ ಸುದ್ದಿ ಈಗ ಬಂದೀತು, ಆಗ ಬಂದೀತು, ನಾಳೆ ಬಂದೀತೆಂದು ಕಾದರು. ಬೆಳಗಾವಿಯ ಪತ್ರಿಕೆಗಳಲ್ಲಿ “ಶಿವಾಪುರದಲ್ಲಿ ಭಾರೀ ದರೋಡೆ, ಚಿನ್ನದ ಮೂರ್ತಿಯ ನಾಪತ್ತೆ” ಎಂಬ ತಲೆಬರಹದಡಿಯಲ್ಲಿ ಸುದ್ದಿ ಪ್ರಕಟವಾಗಿತ್ತಷ್ಟೆ. ಇದನ್ನು ನೋಡಿ ಜನ ತಮ್ಮ ಆಪ್ತರು ಸತ್ತ ಸುದ್ದಿ ಕೇಳಿದಂತೆ ಹೋ ಎಂದು ಅತ್ತರು. ಊರಿಗೆ ಊರೇ ಸತ್ತವರ ಮನೆಯಂತೆ ಬಿಕೋ ಎನ್ನುತ್ತಿತ್ತು.
ಈಗ ಕರಿಮಾಯಿಯ ಹೆಸರು ಹೇಳುವುದಕ್ಕೇ ಹೆದರುತ್ತಿದ್ದರು. ಯಾರೊಬ್ಬರೂ ದನಿ ಎತ್ತರಿಸಿ ಮಾತಾಡುತ್ತಿರಲಿಲ್ಲ. ಊರ ಹೊರಗಿನಿಂದ ಯಾರು ಬಂದರೂ ಅವರನ್ನು ಮುತ್ತಿ ಸುದ್ದಿಯೇನೆಂದು ಕೇಳುತ್ತಿದ್ದರು. ಒಬ್ಬರ ಮುಖದಲ್ಲೂ ಕಳೆಯಿರಲಿಲ್ಲ. ಪ್ರತಿಯೊಬ್ಬರ ಹೊಕ್ಕಳ ಬಳಿ ದೊಡ್ಡ ಗಾಯವಾಗಿ ಅದರ ವೇದನೆಯಿಂದ ಅತ್ತು ಅತ್ತು ಈಗಷ್ಟೇ ಸುಮ್ಮನಾಗಿದ್ದವರಂತೆ ಅಥವಾ ಉಕ್ಕುವ ದುಃಖವನ್ನು ತುಟಿಕಚ್ಚಿ ತಡೆದಂತೆ ಕಾಣಿಸುತ್ತಿದ್ದರು. ಕಣ್ಣಂಚಿನಲ್ಲಿ ತಾಯಿ ಸಿಕ್ಕಳೆಂಬ ಆಸೆ ಮಾತ್ರ ಹೊಳೆಯುತ್ತಿತ್ತು. ದಿನೇ ದಿನೇ ಅದೂ ಬಾಡತೊಡಗಿತ್ತು.
ಗೌಡ ಈ ಒಂದು ತಿಂಗಳ ಅವಧಿಯಲ್ಲಿ ತೊಗಲು ಜೋತು ಹೆಗಲು ಬಿದ್ದ ಮೈ ಮೇಲಿನ ನೊಣಕ್ಕೂ ಬಾಲ ಎತ್ತಲಾಗದ ಮುದಿ ಎತ್ತಿನಂತಾಗಿದ್ದ. ಕೂತರೆ ಕೂತ, ನಿಂತರೆ ನಿಂತ, ದಾಡಿ ಮಾಡಿಸಿಕೊಂಡರೆ ಮಾಡಿಸಿಕೊಂಡ, ಇಲ್ಲದಿದ್ದರಿಲ್ಲ, ಮಾತುಕೊಟ್ಟ ಹೋದ ತಾಯಿ ಬಂದಿರಲಿಲ್ಲ. ಮಗ ಶಿವನಿಂಗ ಬಂದಿರಲಿಲ್ಲ. ಶಿವನಿಂಗನ ಸುದ್ದಿ ಬಂದಿರಲಿಲ್ಲ. ‘ಕರಿಮಾಯಿಗೆ ಬೇಡ, ಸಾವಿಗಾದರೂ ನನ್ನ ಮೇಲೆ ಕರುಣೆ ಬರಬಾರದೇ?’ ಎಂದುಕೊಂಡು ಕಾಲ ನೂಕುತ್ತಿದ್ದ. ಆದರೆ ಸಾವಿಗೆಲ್ಲಿಯ ಕರುಳು? ಇದ್ದೊಂದು ಜೊತೆ ಶಿವಸಾನಿಯೂ “ಶಿವನಿಂಗಾ” ಎಂದು ಕಣ್ಣುಮುಚ್ಚಿದಳು. ಇನ್ನು ತನ್ನ ಸರದಿ. ಈಗಲೋ ಆಗಲೋ “ತಾಯೀ” ಎನ್ನುವುದಕ್ಕೆ ಸಿದ್ಧನಾಗಿ ಕೂತ, ಮಗನ ತೋರುವ ತಾಯಿ ಕರಿಮಾಯಿ ಮುತ್ತೈದೆ ಹುಣ್ಣಿವೆಯಂದು ಉದ್ಭವಿಸುವಳೆಂಬ ನಂಬಿಕೆ ಮಾತ್ರ ಕಣ್ಣಲ್ಲಿತ್ತು. ಜೀವ ಕಣ್ಣಲ್ಲೇ ಇತ್ತು. ಸದಾ ಮೊಳಕಾಲಿಗೆ ಕೈಕಟ್ಟಿ ಗುಡಿಯ ದೀಪದ ಕಂಬದ ಕಟ್ಟೆಯ ಮೇಲೆ ಎದುರನ್ನೇ ನೋಡುತ್ತ ಕೂತಿರುತ್ತಿದ್ದ. ಅಗತ್ಯವಿದ್ದಾಗ ಮಾತ್ರ ಆಗೀಗ ಒಂದೆರಡು ಮಾತಾಡುತ್ತಿದ್ದ. ಮಾತಾಡಿದಾಗೊಮ್ಮೆ ಕಣ್ಣಿರು ಸುರಿಸುತ್ತಿದ್ದ. ಅವನನ್ನು ನೋಡಿದೊಡನೆ ಜನಕ್ಕೆ ಕಳೆದ ತಾಯಿಯ ನೆನಪಾಗಿ ದುಃಖ ಒತ್ತರಿಸಿ ಬರುತ್ತಿತ್ತು. ಅವನ ಗಂಟಲಲ್ಲಿ ಅನ್ನ ಇಳಿಸುವುದೇ ದತ್ತಪ್ಪನ ಸಮಸ್ಯೆಯಾಗಿತ್ತು.
ಈ ಒಂದು ತಿಂಗಳಲ್ಲಿ ಇನ್ನೂ ಏನೆಲ್ಲಾ ಆಯ್ತು ಊರಿನಲ್ಲಿ. ಈ ಮಧ್ಯೆ ಚಿಮಣಾ ತುಂಬು ಗರ್ಭಿಣಿಯಾಗಿ ಇದೇ ಊರಿಗೆ ಬಂದಿದ್ದಳು. ತಲೆ ಕೆದರಿ, ಮೈ ಸೊರಗಿ ಕಡ್ಡಿಯಾಗಿ ಬರೀ ಚಿಂದಿ ಬಟ್ಟೆಯ ಉಬ್ಬಿದ ಬಸುರು ಮಾತ್ರ ಮುಂಚಾಚಿ ತೋರುತ್ತಿದ್ದ ಅವಳನ್ನು ಗುರುತಿಸುವುದೇ ಕಷ್ಟವಾಗಿತ್ತು. ಗುರುತು ಸಿಕ್ಕೊಡನೆ ಊರವರೆಲ್ಲ ಅವಳ ಸುತ್ತು ಮುತ್ತಿದರು. ಅವಳಿಂದ ಪ್ರಯೋಜನವಾಗುವಂತಿರಲಿಲ್ಲ. ಬಾಯಿ ಹೋಗಿತ್ತು. ಸಾಲದ್ದಕ್ಕೆ ಹುಚ್ಚು ಬೇರೆ. ಬಸವರಾಜು ಅವಳಿಗೂ ಮೋಸ ಮಾಡಿದ್ದ. ಅವಳ ಮೇಲೆ ಸಿಡಿದೆದ್ದರೆ ಏನಾದೀತು? ತಾಯಿಯೇ ಅವಳಿಗೆ ಸರಿಯಾದ ಶಿಕ್ಷೆ ಕೊಟ್ಟಳೆಂದು ಸುಮ್ಮನಾದರು. ತನ್ನ ಗುಡಿಸಲ ಮುಂದೆ ಸುಮ್ಮನೆ ನಾಯಿಯಂತೆ ಊಳಿಡುತ್ತ ಕೂರುತ್ತಿದ್ದಳು. ಯಾರಾದರೂ ಧರ್ಮಾತ್ಮರು ತುತ್ತು ಕೊಟ್ಟರೆ ತಿನ್ನುತ್ತಿದ್ದಳು. ಇಲ್ಲದಿದ್ದರೆ ಅಲ್ಲೇ ಬಿದ್ದಿರುತ್ತಿದ್ದಳು. ಅವಳಿಗೆ ಕರುಣೆ ತೋರಿಸುವಷ್ಟು ನೆಮ್ಮದಿ ಜನಕ್ಕಿರಲಿಲ್ಲ. ಅವರಿಗ್ಯಾರು ಕರುಣೆ ತೋರಿಸುತ್ತಿದ್ದರು?
ಇದ್ದುದರಲ್ಲಿ ಈ ದಿನವೇ ಗೌಡ ಸ್ವಲ್ಪ ಲವಲವಿಕೆಯಿಂದಿದ್ದ. ಇಂದು ಮುತ್ತೈದೆ ಹುಣ್ಣಿವೆಯಾದ್ದರಿಂದ ತಾಯಿ ತಿರುಗಿ ಬಂದು ಗದ್ದಿದೆಗೊಳ್ಳುವ ದಿನ. ತಾಯಿ ಖಂಡಿತ ಈ ದಿನ ಬರುತ್ತಾಳೆ. ಇಲ್ಲವೆ ಯಾರದಾದರೂ ಮೈ ತುಂಬಿ ತಾನಿರುವ ಠಿಕಾಣವನ್ನಾದರೂ ತಿಳಿಸುತ್ತಾಳೆ. ಶಿವನಿಂಗನನ್ನೂ ಕರೆ ತರುತ್ತಾಳೆಂದು ಬಲವಂತವಾಗಿ ನಂಬಿದ್ದ. ಮುಂಜಾನೆಯಿಂದಲೇ ಗುಡಿಯ ದೀಪ ಕಂಬದ ಮೇಲೆ ಕೂತಿದ್ದ. ಅವನೊಟ್ಟಿಗೆ ದತ್ತಪ್ಪನೂ ಕೂತಿದ್ದ.
ಗುಡಿಯ ಕಡೆ ಯಾರು ಸುಳಿದರೂ ಇಲ್ಲ ಮೈ ತುಂಬಿ ಬರುತಾರೆ, ಇಲ್ಲ, ಮೈ ತುಂಬಿದ ಸುದ್ದಿಯನ್ನಾದರೂ ತರುತ್ತಾರೆಂದು ನೋಡುತ್ತಿದ್ದರು. ಕೂಳು, ನೀರು ಮರೆತು, ದಿಕ್ಕುದಿಕ್ಕುಗಳನ್ನು ಹಡ್ಡಿ ಹಡ್ಡಿ ನೋಡಿದರು. ಕಣ್ಣುಗಳಲ್ಲಿ ಆಸೆ ಹೊತ್ತಿಸಿಕೊಂಡು ಹುಡುಕಿದರು. ಸಂಜೆಯಾಗಿ ದನಕರು ಮನೆಗೆ ಬಂದವು. ಮುಳುಗುವ ಸೂರ್ಯನೊಂದಿಗೆ ಇವರ ಕಣ್ಣೊಳಗಿನ ಬಳಕೂ ನಂದಿ ಕಮ್ಮಿಯಾಯಿತು. ಮೂಡಣದಲ್ಲಿ ಚಂದ್ರ ಮೂಡಿದ. ತಾಯಿ ಬರುವ ಸಮಯ ಮೀರಿತು. ಬೆಳದಿಂಗಳು ಹೆಚ್ಚಾದಂತೆ ಬೂದಿ ಬಣ್ಣಕ್ಕೆ ತಿರುಗಿದ ಊರು ಬಿಳಚಿಕೊಂಡು ಕ್ಷಯರೋಗಿಯಂತೆ ಕಾಣುತ್ತಿತ್ತು. ದತ್ತಪ್ಪ ದೊಡ್ಡದಾಗಿ ನಿಟ್ಟುಸಿರು ಬಿಟ್ಟು
“ಏಳ ಗೌಡಾ”
ಎನ್ನುತ್ತ ಗೌಡನ ಭುಜದ ಮೇಲೆ ಕೈಯಿಟ್ಟ. ಗೌಡ ಸುಮ್ಮನೆ ಎದ್ದ. ಎಲ್ಲಿದ್ದರೂ ಯಾವುದೋ ಮಾಯೆಯಿಂದ ಮುತ್ತೈದೆ ಹುಣ್ಣಿವೆ ದಿನ ಅವತರಿಸಿ ಬರುತ್ತೇನೆಂದ ತಾಯಿ ಮಾತಿಗೆ ತಪ್ಪಿದಳು!
ಬರುತ್ತಿರುವಾಗ ದಾರಿಯಲ್ಲಿ ದತ್ತಪ್ಪ ಒಮ್ಮೆಲೆ ಸ್ಪೂರ್ತಿಗೊಂಡಂತೆ “ಅಂದ್ಹಾಂಗ ಗೌಡಾ, ಲಗಮಿ ಯಕೋ ಬರಲಿಲ್ಲಲ್ಲ” ಎಂದ. ತಕ್ಷಣ ಗೌಡನ ಕಣ್ಣುಗಳು ಹೊಳೆದವು. ಹೌಂದಲ್ಲ ಎನಿಸಿತು. ಯಾರಿಗೆ ಗೊತ್ತು, ಅವಳ ಕೇರಿಯಲ್ಲಿ ತಾಯಿ ಅವತರಿಸಿರಬಹುದು. “ಬಾ ನೋಡೋಣ”ವೆಂದು ಹೊಲಗೇರಿಯ ಕಡೆ ಧಾವಿಸಿದರು.
ಚಿಮಣಾಳ ಗುಡಿಸಲಲ್ಲಿ ಹೆಂಗಸರು ಕಿಕ್ಕಿರಿದು ನೆರೆದಿದ್ದರು. ತಡೆಯಲಾರದೆ ಇಬ್ಬರೂ ಓಡಿದರು. ಒಳಗೆ ಹೆಂಗಸರು ಸಡಗರ ಮಾಡುತ್ತಿದ್ದರು. ಲಗಮವ್ವನ ದನಿ ಕೇಳಿಸುತ್ತಿತ್ತು. ಹೆಂಗಸರು ಕಲಕಲ ಮಾತಾಡಿಕೊಳ್ಳುತ್ತಿದ್ದರು. ಏನೆಂದು ಕೇಳಿದರೆ ಒಬ್ಬಳಿಂದ ಚಿಮಣಾ ಹೆಣ್ಣು ಹಡೆದಿರುವಳೆಂದು ತಿಳಿಯಿತು. ಸಂಭ್ರಮದಲ್ಲಿದ್ದ ಒಳಗಿನವರಿಗೆ ಹೊರಗೆ ಗೌಡ, ದತ್ತಪ್ಪ ಬಂದದ್ದು ಗೊತ್ತಾಗಲೇ ಇಲ್ಲ. ಒಬ್ಬಳು “ಏ ಏ, ಇದರ ಮೂಗ ಥೇಟ್ ಗುಡಿಸ್ಯಾನ್ಹಾಂಗ ಐತಿ ನೋಡ” ಎಂದಳು. ಲಗಮವ್ವ “ಅಲ್ಲ ತಗಿ, ಇದರ ಮೂಗ, ಬಾಯಿ, ಚೇರಾಪಟ್ಟಿ ಎಲ್ಲಾ ಥೇಟ್ ಗೌಡನ್ಹಾಂಗ! ಗೌಡನ ರೂಪದಾಗ ಎದ್ದಿ ತೆಗಧಾಂಗೇತಿ” ಎಂದಳು. ಗೌಡ ನಿರಾಸೆಯಿಂದ ಮನೆ ಕಡೆ ಹೆಜ್ಜೆ ಹಾಕಿದ. ಆ ನಿರಾಸೆಯಲ್ಲೂ ದತ್ತಪ್ಪನ ತುಟಿಯಲ್ಲಿ ಮಂದಹಾಸ ಸುಳಿದಾಡಿತು.

ಇಲ್ಲೀಗಿ ಹರ ಹರ
ಇಲ್ಲೀಗಿ ಶಿವ ಶಿವ
ಇಲ್ಲೀಗಿ ನಮ ಕತಿ ಸಂಪೂರ್ಣವಾಯ್ತು ||
ಇಲ್ಲೀಗಿ ಹರ ಹರ ಇಲ್ಲೀಗಿ ಶಿವ ಶಿವ
ಇಲ್ಲೀಗಿ ನಮ ಕತಿ ಸಂಪೂರ್ಣವಯ್ಯಾ ||
*****
ಮುಗಿಯಿತು