ಬಾಳಕೊರಡು

ಇದು ಬಾಳಕೊರಡ ಮುಡಿ-
ಮೇಲೆ ಕಾಣದ ಕೈಯ ಕರಗಸವು
ರೌರವದಿ ಕೊರೆಯುತಿದೆ
ಕೊರಡಿನೆದೆ ಬಿರಿಯುತಿದೆ
ಕಂದರದಿ ಧಡಧಡಿಸಿ ನುಗ್ಗುತಿಹ ರೈಲಿನೊಲು
ಮೇಲೆ ಕೆಳಗೋಡುತಿದೆ ಕರಗಸದ ಹಲ್ಲು!

ಅದರ ಬಿರುಕಿನ ಕ್ಷೀಣ ಸ್ವರವೊಂದು ಬೇಸರದಿ
ಮೊರೆಯುತಿದೆ ಬಯಲಿನಲ್ಲಿ
ಕಾಲನೊಡ್ಡಿಹ ತುಮುಲ ಜಾಲದಲ್ಲಿ!

ಚಣಚಣಕೆ ಕಟ್ಟಿಗೆಯ ಅಟ್ಟಹಾಸವು ಅಡಗಿ
ಅವನ ಕೈಮಗೆ ಓರೆಕೋರೆ ಹುಡಿ ಹೊಟ್ಟಾಗಿ
ಒಟ್ಟೈಸಿ ಉದುರುತಿದೆ ರಾಶಿಯಾಗಿ
ಬಾಳೆಲ್ಲ ಗಾಸಿಯಾಗಿ.

ತೀಡುತಿದೆ ಉಜ್ಜುಗೊರಡು
ಮೂಡುತಿದೆ ಹೊಸತು ಕೊರಡು
ಪೊಳ್ಳು ಪೊದರಿನ ಪದರು
ಬೆದರಿ ಚದುರುತ್ತಿಹವು
ಉರುಳುರುಳಿ ಸುರುಳಿಯಾಗಿ
ತನ್ನ ಬಲಹೀನತೆಗೆ ತಾನೆ ಬಾಗಿ.
ಮತ್ತೆ ಕೆತ್ತಿಹವಲ್ಲಿ ಹೂವು ಬಳ್ಳಿ
ಕೊರಡು ಕೊನರಿಸಿತೆಂಬ ಭ್ರಾಂತಿಯಲ್ಲಿ.

ಯಾವ ಮಂದಿರದ ಆಧಾರಸ್ತಂಭಕೊ ಕಾಣೆ
ಇಂತು ಜೀವಸ್ತಂಭ ಸಿದ್ಧವಾಗಿ
ನಿಂತಿಹುದು ಕರ್‍ತವ್ಯಬದ್ಧವಾಗಿ!
ಹೊತ್ತ ತಲೆಭಾರದಲಿ
ಕತ್ತು ತತ್ತರಿಸದೊಲು
ಯಾವ ಶಕ್ತಿಯು ನೆರವು ನೀಡಲಿಹುದೊ,
ಇಲ್ಲ, ಬೇರೆಯ ತರವು ಬೇಡಲಿಹುದೊ!
*****