ಚಿಕ್ಕನ ಸತ್ಯಾಗ್ರಹ

ಸುವರ್ಣಮ್ಮನ ಮನೆಯ ಕೆಲಸದವಳು ಚಿಕ್ಕ. ಎಷ್ಟೊತ್ತಿಗೆ ಕಂಡರೂ ಅಡ್ಡಸೊಡ್ಡು ಹಾಕಿಕೊಂಡು ಚಪ್ಪೆ ಮುಖದಲ್ಲಿ ತಿರುಗುವವಳು. ದುಡ್ಡಿನ ತಾಪತ್ರಯವಂತೂ ಹೇಗೇ ಮಾಡಿದರೂ ಮುಗಿಯದವಳು. ಇಂತಿರುವಾಗ ಈ ದಿನ ತುಸು ಸಂತೋಷ ತೋರುತ್ತಿದ್ದಾಳೆ.
“ಏನಾ! ಏನಾರೂ ಗಂಟ್ ಗಿಂಟ್ ಸಿಕ್ತ ಯಂತ ಕತೆ?”

“ಗ್ಯಂಟ್ ಸಿಕ್ರ್ ನಾನ್ಯಲ್ ಇವತ್ತ್ ಕೆಲ್ಸಕ್ ಬತ್ತಿದಿ?” – ಮರುಸವಾಲು ಹೊಡೆದಳು ಚಿಕ್ಕ. ಮತ್ತೇನಾಯಿತು ಹಾಗಾದರೆ ಮುಖ ಚೂರು ಹೊಳವಾಗಿದೆಯಲ್ಲ.
ಚಿಕ್ಕ ಗಸಗಸ ಪಾತ್ರೆ ತಿಕ್ಕುತ್ತ ಉಸಿರಿನ ನಡುವೆಯೇ ಹೇಳಿದಳು. ತನ್ನ ಮನೆ ಮುಂದಿನ ಜಾಗವನ್ನ, ಅಷ್ಟು ವರ್ಷದಿಂದ ಖಾಲಿ ಬಿದ್ದಿತ್ತಲ್ಲ, ಯಾರೋ ದೂರದೂರಿನವರು ಕೊಂಡುಕೊಂಡಿದ್ದಾರೆ. ಅವರು ಮನೆ ಕಟ್ಟಲು ಸುರುಮಾಡಿದಾಗಲೇ ತನಗದು ತಿಳಿದದ್ದು. “ಯಂತಾ ದ್ವಡ್ ಬೂತ್ ಮನಿ ಅಂತ್ರಿ! ಯ್ಯೇನ್, ಯೆಸ್ಟ್ ಲಕ್ಸೊ ಬೇಕೋ ದೇವ್ರೆ!” – ಎಂದವಳು ಸ್ವಗತದಂತೆ

“ನಾವೂ ಇತ್ತಲೆ! ತಲೆಮಾರಿಂದ, ಮನಿ ಅಂತೆಳಿ. ಎಲ್ಲರೂ ಊರ್ಜಿತ ಆತೊ. ಮನಿ ಕಟ್ತೊ. ನಂಗಿನ್ನೂ ಅಂಗೈ‌ಅಗ್ತೊ ಜಾಗನ್ನ ಅಲ್ಲಾಡ್ಸುಕ್ ಆಯಿಲ್ಲೆ. ಅದ್ವಂದ್ ಮನಿಯ? ನಾವಿತ್ತ್ ಅಂತೆಳಿ ಮನಿ. ನಾವೀಗ್ ಎದ್ರೆ ಮಶಾವೊ”-

ಅದೇನೋ ಅಪ್ಪ, ದೇವರಿಗೆ ತಾವು ಮಾತ್ರ ಕಾಣುವುದಿಲ್ಲ. ಇನ್ನೆಲ್ಲರೂ ಕಾಣಿಸುತ್ತಾರೆ ಎಂದು ಒಳ ಚರ್ಚಿಸುತ್ತ ದೇವರಿಗಾದರೂ ಕಷ್ಟವೇ ಎನ್ನುವಳು. “ಒಂದ್ ಮೀನಿನ್ ಸಾರ್ ಊಣ್ದೆ ಸ್ವಲ್ಪ್ ಕಾಲೊ ಆಯ್ತೇ?”-ಎಂದು ಸಾರಿನ ನೆನಪಲ್ಲಿ ಕ್ಷಣ ಕಣ್ಣರಳಿಸಿ ನಿಂತಲ್ಲೇ ನಿಲ್ಲುವವಳಿಗೆ ಈಗ ಮನೆಯೆದುರೇ ಏಳುತ್ತಿರುವ ದೊಡ್ಡ ಮನೆಯ ಹಂದರವನ್ನು ನಿತ್ಯಾ ನೋಡುವ ಖುಶಿಯಲ್ಲಿ ನಿತ್ಯದ ಕುದಿತಗಳೆಲ್ಲ ತುಸು ಅಡಿ ಹೋಗಿವೆ. ಕೆಲಸ ಮುಗಿದಿದ್ದೇ ಹೋಗಿ ಮನೆ ಮುಂದೆ ನಿಲ್ಲುವುದು, ನೋಡುವುದು, ಸುವರ್ಣಮ್ಮನ ಹತ್ತಿರ ಬಣ್ಣನೆ ಮಾಡುವುದು. ಕಟ್ಟುವುದನ್ನ ನೋಡುವುದೇ ಒಂದು ಖುಶಿ ಅಲ್ಲವ ಅಮ್ಮ? ಹೊಸ ಮನೆ ಸಾಮಾನ್ಯದ್ದಲ್ಲ. ದುಡ್ಡು ಕೈಯಲ್ಲಿ ಇದ್ದು ಕಟ್ಟುವವರ ಮನೆ. ಇವತ್ತು ಕಟ್ಟಿದ ಆಯ ಸರಿಯಿಲ್ಲವಂತ ಕಂಡಿತೇ, ನಾಳೆ ಅದನ್ನು ಅಳಿದಾಯಿತು, ಹೊಸದಾಗಿ ಕಲ್ಲು ಕಟ್ಟಿಯಾಯಿತು. “ಯಪ್ಪ. ಅವ್ರ್ ಕಟ್ಟಿ ಅಳ್ಸು ದುಡ್ಡೊಳ್ಗೆ ಸುಮಾರಿನ್ ಒಂದ್ ಮನಿಯೇ ಆತಿದಿತ್.”

ಚಿಕ್ಕನ ಮುಖ ಗೆಲುವಿರುವ ಕಾರಣ ಇನ್ನೂ ಇದೆ. ಅಷ್ಟು ದೊಡ್ದ ಮನೆಯಲ್ಲಿ ಇರಲು ಬರುವವರಿಗೆ ಆಳುಕಾಳು ಇಲ್ಲದೆ ನಡೆಯುವಂತೆಯೇ ಇಲ್ಲ. ತನಗೆ ಹೇಗೋ ದುಡ್ದು ಎಷ್ಟಿದ್ದರೂ ಬೇಕು. ಅಲ್ಲೆ, ಆಚೆಗೇ, ಇದ್ದೇನೆ. ಚಿಕ್ಕ ಅಂತ ಪೂರ್ತಿ ಕರೆಯುವುದೂ ಬೇಡ. ಚಿ ಅಂದರೆ ಸಾಕು, ಆ ಎಂಬೆ. ಇಷ್ಟು ಸುಲಭದಲ್ಲಿ ತನ್ನಂತಹ ಘನಾಜನ ಸಿಕ್ಕಿದರೆ ಅವರು ಬಿಡುತ್ತಾರೆಯೆ? ಆ ಹಿತ್ತಲಲ್ಲಿ ಕಡಿಮೆ ಪಕ್ಷ ಹದಿನೈದು ತೆಂಗಿನ ಸಸಿ ನೆಡಬಹುದೆ? ನೆಟ್ತವರು ನೀರು ಹಾಕಲೇಬೇಕೇ? ಪಂಪ್‌ಸೆಟ್ ಈಗಾಗಲೇ ಹಾಕಿದ್ದಾರೆ. ಪೈಪನ್ನು ಗಿಡದ ಬುಡಕ್ಕೆ ಹೀಗೆ ಹಿಡಿದರೆ ಸರಿ. ಏನಾಗಬೇಕು?…. ಅಂದಹಾಗೆ ಪೈಪು ಹಿಡಿದು ಕಡೆಕಡೆಗೆ ರಟ್ಟೆ ಸಿಡಿಸಿಡಿಯೆನ್ನುತ್ತದಂತೆ ಹೌದೆ ಅಮ್ಮ? ಒಂದು ವೇಳೆ ಹಾಗಾದರೆ, ಮಗಳಿದ್ದಾಳೆ, ಮಗನಿದ್ದಾನೆ. ದೇವರು ಅಷ್ಟರೊಳಗೆ ಅವನಿಗೊಂಚೂರು ಬುದ್ಧಿ ಕೊಡಲಿ. ಗಂಡ ಏನು, ಮನೆಯಲ್ಲೇ ಕುಂಡೆ ಒರಕಿಕೊಂಡು ಇರುವವರು. ಹೋಗಿ ಹಿತ್ತಲಿಗೆ ನೀರನ್ನಾದರೂ ಬಿಡಿ ಎನ್ನುತ್ತೇನೆ. ಕೂಳು ಬೇಕಾದರೆ ಹೋಗಬೇಕಪ್ಪ. ಕಾಲುಬುಡದಲ್ಲೇ ಇದೆ. ಏನು ದೂರ ಹೋಗಬೇಕಾ? “ಆದ್ರೂ, ನಿಮ್ಮನಿ ಬಿಡೂದಿಲ್ಯೆ. ಸಾವಲ್ತೊಟ್ ಬಿಡೂದಿಲ್ಲೆ.”

ಹಸಿದವರು ಗಬಗಬನೆ ಉಣ್ಣುವ ಹಾಗೆ ಲಗುಬಗನೆ ಒಂದಷ್ಟು ಕನಸು ಹೆಣೆಹೆಣೆದು ಹಾಕಿದಳು ಚಿಕ್ಕ. “ಒಳ್ಳೆ ಕಾಲೊ ಬಾರ್ದೆ ಎಲ್ಲಿಗ್ ಹ್ವಾತ್ತ್? ಕಲ್‌ಬಂಡೆಗಾರೂ ದಿನ ಬತ್ತತ್ ಅಂತ್ರಲೆ!” ಚಿಕ್ಕನ ಮಾತು ಆಲೈಸುತ್ತ ಅಲ್ಲೇ ನಿಂತಿದ್ದಾಳೆ ಮಗಳು. ತುಟಿ ಕುಡಿಯಲ್ಲೊಂದು ನಗೆ ಮಿಂಚುತ್ತಿದೆ. “ಬಂದಿತ್ತಲೆ ಈಗ ಕಲ್‌ಬಂಡೆಗೂ ಪಾರಿನ್ನಿಗ್ ಹೋಪ್ ಯೋಗೊ. ಇನ್ ನಮ್ಗ್ ಕಾಲೊ ಬಾರ್ದೆ ಹೊಕ್ಕಾ?” – ಎಂದು ಕಿಲಕಿಲನೆ ನಕ್ಕವಳು, “ಹ್ಯಾಂಗಿತ್ ಇಂಜಿಶನ್! ಅಬ್ಬಿಗ್ ಇಂಜಿಶನ್ ಕೊಡೊಕೆ ನಾನೇ ಆಯ್ಕ್ ಅಲ್ದೆ?”

ಈ ಎಡೆಯಲ್ಲಿ ಚಿಕ್ಕ ಖಾಲಿ ಸಿಮೆಂಟುಚೀಲ ನಾಕು ಒಟ್ಟು ಹಾಕಿದಳು. ಈ ತಿಂಗಳು ಕಬ್ಬಿಣಗಿಬ್ಬಣ ಹೆಕ್ಕಿ ಮಾರಿಯೇ ಇಂತಿಷ್ಟು ದುಡ್ಡಾಯಿತು ಎಂದು ಚೂರುಪಾರು ಕಬ್ಬಿಣ ಕದ್ದ ರೋಮಾಂಚನ ಹೇಳಿಕೊಂಡಳು. ಮನೆ ಕಟ್ತಲು ಹಿಡಿದಲಾಗಾಯ್ತು ಏನೇ ಆಗಲಿ, ತನಗೆ ಒಲೆ ಉರಿಗೊಂದು ತತ್ವಾರವಿಲ್ಲ. ಕೀಸುಳಿಪುಡಿ ತೆಗೆಯುವವಳು ತಾನು ಮಾತ್ರ ಅಲ್ಲಪ್ಪ. ಆಸುಪಾಸಿನವೆಲ್ಲ ತೆಗೆಯುವವೇ. ನಿಮಗೆ ಕಸುಬಿಲ್ಲವೆ? ಎಲ್ಲರೂ ಕಳ್ಳರೇ. ಸಾಚಾ ಯಾ….ರಿಲ್ಲ ಎಂದು ಮೆಲ್ಲಗೆ ನಗುವಳು.

‘ಹೌದ್, ಇಷ್ಟ್ ದ್ವಡ್ ಮನಿ ಕಟ್ಕಂತ್ರ್ ಅಂಬ್ರ್, ನಮ್ಮಂಥ ಪಾಪ್‌ದವ್ ಒಂಚೂರ್ ಕೀಸುಳಿ ಪೊಡಿ ಕಬ್ಣದ್ ಚೂರು ಹೆಕ್ಕಿರೆ ಅವ್ರೇನ್ ಬಳ್ಕ ಹೋಪ್ರ?”-ಎಂದು ತರ್ಕ ಹೂಡಿಕೊಳ್ಳುವಳು. ಅಂತೂ ಚಿಕ್ಕನ ಬಾಯಿಗೆ ಬಿಡುವಿಲ್ಲ. ತಲೆಗೂ. ತನ್ನ ದಿನದ ಮನೆವಾರ್ತೆ ತುಸು ಹಗುರಾದ ಸುಖ. ಹೇಗೆ ಹೇಗೋ ಅಂತೂ ಗಂಡು ಗಂಡಸಿನಂತೆ ನಿಭಾಯಿಸುತ್ತಿದ್ದೇನೆಂಬ ಲಘು ಜಂಭ. ಗೋಡೆಗೆ ನೀರು ಸೋಕುವ ಕೆಲಸಕ್ಕಾದರೂ ತನ್ನನ್ನು ಕರೆಯುವಂತೆ ಆಚಾರರು ಮೇಸ್ತ್ರಿಗೆ ಶಿಫಾರಸು ಮಾಡುವರಂತೆ. “ಅದ್ಯೆಲ್ಲ ಎಷ್ಟ್ ಸುಲ್ಬ ಅಂತ್ರಿ! ಹೀಂಗ್ ನಿಂತ್ರ ಸೈ ಹೀಂಗ್ ಚ್ವೊಗ್‌ದ್ರ್ ಸೈ”-ಎಂದು ಡೊಂಕು ಕಾಲು ಮಾಡಿ ನಿಂತು ಬರಿಗೈಯಲ್ಲಿ ನೀರು ಬೀಸಿ ಚೊಗೆದ ಪಾರ್ಸು ಮಾಡಿದಳು. ಅತ್ತ ತನಗೇ ಅರಿಯದಂತೆ ತಾಯಿಯ ಹಾವಭಾವ ಕೈಕಾಲು ಬೀಸುಗಳನ್ನು ಸಣ್ಣಗೆ ಅನುಕರಿಸುತ್ತ ನಿಂತಿರುವ ಮಗಳ ತುಟಿಬದಿಯ ನಗೆ ಇವತ್ತು ಪೂರ್ತಿ ಹರಡಿದೆ. “ಈ ಅಬ್ಬಿಗ್ ಯ್ಯೇನಾತ್ ಕಾತೆ!”-ಎಂದು ಉದ್ಗರಿಸುತ್ತ ಕುಟುಕುಟು ನಗುತ್ತಾ ಇದ್ದಾಳೆ.

ಇಂಥದ್ದೆಲ್ಲ ಸಾಮಾನ್ಯವಾಗಿ ಹೀಗೆ ಹೀಗೆ ಮುಂದುವರಿಯುತ್ತದೆ ಅಂತ ಯಾರಿಗೂ ಗೊತ್ತೇ ಇರುತ್ತದೆ. ಹಾಗೇ ಆಯಿತು ಕೂಡ!

ಕಟ್ಟಡ ನೋಡಿಕೊಳ್ಳಲು, ಆ ಮನೆಯದೇ ಜನವಂತೆ, ಬಂದು ನಿಂತಿತು. ಅದು ಬಂದು ನಿಂತದ್ದೇ ನಿಂತದ್ದು ಒಂದು ಸಿಮೆಂಟುಚೀಲ ಅತ್ತಿತ್ತಾಗಲಿಲ್ಲ. ಕೀಸುಳಿ ಪುಡಿಯ ಒಂದು ಎಳೆಯೂ ಗಾಳಿಗೆ ಹಾರಲಿಲ್ಲ. ಎಲ್ಲಾ ಆಟೋದಲ್ಲಿ ಬಾಯ್ಮುಚ್ಚಿ ಸಾಗಿ ಹೋದವು. “ಎಲ್ಲಿಗೊ. ಯಾರ್ ಕಂಡಿದ.ಯಾರನ್ ಸುಡುಕೊ.”-ಈಚೆಗೆ ಬಂದರೆ ಕಾಲು ಮುರಿಯುತ್ತೇನೆ ಎಂದಿತಂತೆ ಉಸ್ತುವಾರಿ ಜನ. ಆಯಿತೇ? ನೀರು ಸೋಕಲು ಕೂಡ ಮೇಸ್ತ್ರಿಯ ಆಳೇ ಬಂತು. “ಹಪ್ ಹಿಡ್ದವು.”-ಎಂದು ವ್ಯಥೆ ಕೊಡಕಿಕೊಂಡಳು ಚಿಕ್ಕ. ಹೊರತು ಏಳುವ ಮನೆಯನ್ನು ನೋಡುತ್ತಾ ನಿಲ್ಲುವ ಚತ ಬಿಡಲಿಲ್ಲ.

ಈ ಹಬ್ಬೀಗ್ ಪಿರಾಯೊ ಯಾಕಾಯ್ತ್ ಹೇಳಿನಿ. ಬೈಯಗ್ ಮನಿ ಮುಂದ್ ನಿಂತ್ಕಂಡ್ ಸೂಮ್ನೆ ಕಾತ ಇರ್ತಾಳ್. ಈಗ ಇತ್ ಅಲ್ಲಿ ಸೀಮಿಟ್ಟಿನ್ ಧೂಳ್. ಧೂಳ್ ತಿಂದ್..ತಿಂದ್.. ಕಡೀಕೆ ಅಪ್ಪ್‌ನ್ ಹಾಂಗ್ ಇವ್ಳೂ ಕಾಯ್ಲಿ ಹಿಡ್ಕಂಡ್ ಕೂರ್ಮಂಡೆ ಹಾಕಿರ್ ಆಯ್ತಲೆ. ಅಜ್ಜಿ ಅಬ್ಬಿ ಅಪ್ಪೊ ಅಂತೆಳಿ ಚಾಕ್ರಿ ಮಾಡ್ಯೇ ಪೂರೈಸ.”- ಎನ್ನುವ ಮಗಳಿಗೆ ಎದುರಾಗಿ “ನಾವಾರೂ ಅಷ್ಟೆ ಅಲ್ದೆ? ಯಾರಿಗಾರೂ ಪುಗ್ಸಟೆ ತಿಂಬುಕ್ ಬಿಡ್‌ತ್ವಾ ಕಾಂ….ಬ!”- ಎಂದು ಮನೆ ಕಟ್ಟುವವರ ಪರವಾಗಿ ನಿಲ್ಲುವಳು ಚಿಕ್ಕ.

ಅದೆಲ್ಲ ಸಮನೇ. ಆದರೆ ಅಮ್ಮ ಗಾಳಿ ಮಾತ್ರ ಬಂದ್. ಅಷ್ಟೇ ಸೈಯಾ? ಕಗ್ಗತ್ಲೆ! ಎಲ್ಲಿ? ತನ್ನ ಮನೆಯಲ್ಲಿ! ಹೇಗಿದೆ ಹೊಡೆತ! ಈ ಮನೆ ಎದ್ದು ತನ್ನ ಮನೆಯಲ್ಲಿ ಗಾಳಿ ಬಂದಾಗುತ್ತದೆ, ಕತ್ತಲೆ ಕವಿಯುತ್ತದೆ ಅಂತ ತನ್ನ ತಲೆಗೇ ಬರಲಿಲ್ಲವಲ್ಲ. ಇನ್ನೆಂಥಾ ಹೆಡ್ಡೆ ಇರಬಹುದು ತಾನು! ಒಂದು ವೇಳೆ ತಲೆಗೆ ಬಂದರೂ ಹೇಳುವುದು ಯಾರ ಹತ್ತಿರ ಬೊಬ್ಬರ್ಯನ ಹತ್ತಿರವ? ಒಟ್ಟಾರಮೇಲೆ ಕಥೆ ತನ್ನದು. ದೇವರು ಹುಡುಕೀ ಹುಡುಕೀ ತನಗೇ ಕೊಡುತ್ತಾನಲ್ಲ ಇದೆಲ್ಲ….ಸ್ವಾಮೀ ದೇವರೇ, ಆಗಲಿ, ನಿನ್ನಿಚ್ಛೆಯಂತೆಯೇ ಆಗಲಿ. ಗಾಳಿ ಬೆಳಕು ಇಲ್ಲದಿದ್ದರೆ ಅಷ್ಟೇ ಹೋಯಿತು. ಮನೆಯವರು ಕೆಲಸಕ್ಕೆ ಕರೆಯಲಿ. ಅಷ್ಟಾದರೂ ಮಾಡು….

* * *

ಮನೆ ಸಿದ್ಧವಾಗಿದೆ. ಕಲ್ಲುಗುಂಡಿನ ಹಾಗಿನ ಮನೆ. ಉಪ್ಪರಿಗೆ, ಸುತ್ತಲೂ ಪಾಗಾರ. ಭರ್ಜರಿ ಗೇಟು. ಕಟ್ಟಿದರೆ ಹೀಗೆ ಕತ್ಟಬೇಕು ಎಂಬ ಹಾಗೆ. ಇವತ್ತು ಮನೆ ಒಕ್ಕಲು. ಇಡೀ ಮನೆಗೆ ಲೈಟು ಹಾಕಿದ್ದಾರೆ. ತಾವು ದೀಪ ಹಚ್ಚುವುದೇ ಬೇಡ ಇವತ್ತು. ಬೆಳದಿಂಗಳು ಮನೆ ಒಳಗೇ ಬಿದ್ದ ಹಾಗಿದೆ. ಮತ್ತೆ ಅಮ್ಮ, ಗೊತ್ತುಂಟ? ಮನೆ ಒಕ್ಕಲಿನ ಸಿನಿಮಾ ತೆಗೆಯುತ್ತಾರಂತೆ. ಬಂದವರು ಹೋದವರು ಇದ್ದವರದೆಲ್ಲ….ತಾನು ಪಾತ್ರೆ ತಿಕ್ಕುವಾಗ ಸಿನಿಮಾ ತೆಗೆದರೆ! ಇಸಿ! ತನ್ನ ಸೊಡ್ಡು ಬೇಡುವವರ ಸೊಡ್ಡಿನ ಹಾಗಿದೆ. ಹೇಗೆ ಬರುತ್ತದೇ, ಸುರುಪ, ಮುಂಚೆ ಸಾಪಾಗಿದ್ದಾಗ ಒಂದು ಪಟ ತೆಗೆದವರಿಲ್ಲ…..

ಮಗಳ ಮುಖದಲ್ಲಿಯೂ ಸಿನೆಮಾ ತೆಗೆಯುತ್ತಾರೆಂಬ ಕಲಮಲವಿದೆ. ಸಿನೆಮಾ ತೆಗೆಯುವಾಗ ತಾನಂತೂ ಪಾತ್ರೆ ತಿಕ್ಕುವುದಿಲ್ಲ ಎನ್ನುತ್ತಿದ್ದಾಳೆ.
ಮನೆ ಒಕ್ಕಲು ಮುಗಿಯಿತು. ದಿನ ಮಗುಚಿತು.
ಬೆಳಿಗ್ಗೆ ಕೆಲಸಕ್ಕೆ ಬಂದ ಚಿಕ್ಕನ ಮುಖ ಯಾಕೆ ಸತ್ತು ಮರಗಟ್ತಿದ ಹಾಗಿದೆ! “ಏನ, ಮನೆವಕ್ಲು ಗಡ್ದ?”
“ಹ್ಞುಂ”-ಹೊತ್ತು ಹಾಕಿದಂತೆ ಹೂಗುಟ್ಟಿ ಬರಬರಬರ ಧೂಳು ಕಲ್ಲು ಎಲ್ಲ ಒಟ್ಟಿಗೆ ಹಾರಬೇಕು ಹಾಗೆ ಅಂಗಳ ಗುಡಿಸಿದಳು ಚಿಕ್ಕ.

“ಹಣೇ, ಅಬ್ಬಿ ಯಾಕ್, ಮಾತಾಡತಿಲ್ಯಲೆ!”-ಎಂದರೆ ಮಗಳ ಗಲ್ಲ ಕತ್ತಿನ ನರಗಳೆಲ್ಲ ದುಃಖ ಬಚ್ಚಿಟ್ಟಂತೆ ಕಂಪಿಸಿದವು. ಚಿಕ್ಕ ಹಿಡಿಕಟ್ಟು ಅಲ್ಲೇ ಬೀಸಿ ಬಿಸಾಕಿ ಜಗಲಿಗೆ ಬಂದು-ಅಮ್ಮ, ಅವಕ್ಕೆ ಹಿಡಿಕಟ್ಟಿನ ಮುಂಡಿನಿಂದ ಹಾಕಬೇಕ ಬೇಡವ. ಊಟ ಆಗಿದ್ದೇ, ಎಂಜಲೆಲೆಯನ್ನು ತೆಗೆತೆಗೆದು ಹಿಂದೆ ನಮ್ಮನೆ ಕಡೆ ಬಿಸಾಡಿದ್ದೆ ಹಾಗಾದರೆ! ಎಲ್ಲ ಸೀದಾ ಮನೆ ಮೆಟ್ಟಿಲಿನ ಮೇಲೆ, ಬಾಗಿಲೊಳಗೇ. ಸೈರಣೆ ಕಳೆಯದೆ ಮುನ್ಸಿಪಾಲಿಟಿ ತೊಟ್ಟಿ ಅಲ್ಲೇ ಇದೆ ಅಂತ ತೋರಿಸಿದರೂ ಕಿವಿ ಮೇಲೇ ಇಲ್ಲ. ಮನೆಯವರೇ ಹೇಳಿ ಮಾಡಿಸಿದ್ದಾರೆ. ಇಲ್ಲವಾದರೆ ಕೆಲಸವಕ್ಕೆ ಅಷ್ಟು ದೈರ್ಯ ಎಲ್ಲಿಂದ?

ಚಿಕ್ಕನ ಮುಖದ ನಗೆಯ ಪುರಾತನ ಕಲೆಗಳೂ ಅಳಿಸಿ ಹೋದಹಾಗಿತ್ತು. ಆಸುಪಾಸಿನಲ್ಲಿ ಅವಳಿಗೆ ಬೇಕಾದವರು- ಈಗ ಒಂದು ಶಬ್ದ ಮಾತಾಡಬೇಡ. ಬಾಯಿ ಮೇಲೆ ಕೈ ಇಟ್ಟುಕೊ. ಅವು ಏನು ಮಾಡಲಿಕ್ಕೂ ಹೇಸದವು. ಕೋಳಿಮರಿ ಎತ್ತಿದಂತೆ ನಿನ್ನನ್ನು ಎತ್ತಿ ಬಿಸಾಕಿಯಾವು. ನಿನ್ನ ಮನೆಯನ್ನು ಎಲ್ಲರ ಸಮೇತ ಮುದ್ದೆ ಮಾಡಿ ನೀನು ತೋರಿಸಿದ ಮುನ್ಸಿಪಾಲಿಟಿ ತೊಟ್ಟಿಗೇ ಒಗೆದಾರು. ಇಷ್ಟಕ್ಕೂ ಅಷ್ಟಪ್ಪ ಎಲ್ಲಾ ಖರ್ಚು ಮಾಡಿ ಅಂಥಾ ವೈಭೋಗದ ಮನೆ ಕಟ್ಟಿದ್ದಾರೆ; ಪಕ್ಕದಲ್ಲಿಯೇ ನಿನ್ನ ಹರಕಲು ಮನೆಯ ದೃಷ್ಟಿಬೊಟ್ಟು ಬೇಕಾಗಿದೆಯ ಅವರಿಗೆ? ಏನಂತೆ ತಿಳಕೊಂಡೆ ನೀನು ಯೋಚನೆ ಮಾಡು-ಎಂದರಂತೆ. ಮಗಳಿಗೆ ಕಣ್ಣಿರು ಗಗನಕ್ಕೆ ಹಾರಿ ಹೋದಷ್ಟು ಕಂಗಾಲು ಕವುಚಿತ್ತು. ರಾತ್ರಿ ಆ ಎಲೆರಾಶಿಯನ್ನೆಲ್ಲ ಒಟ್ಟು ಮಾಡಿ ಎತ್ತಿ ತೊಟ್ಟಿಗೆ ಹಾಕಿ ಮನೆ ಸಾರಿಸಿಯೇ ಮಲಗಿದ ತನ್ನ ನಿದ್ದೆಗೆ ಕಿಚ್ಚಿಡಿ-ಎಂದಳು ಚಿಕ್ಕ.

ಎಂಜಲು ಕಸ ಮುಸುರೆ ಗಲೀಜನ್ನು ಬಿಸಾಡುವುದು ನಾಳೆಗೂ ನಿಲ್ಲಲಿಲ್ಲ. ನಾಡಿದಿಗೂ. ತೋಟದ ಮಾಲಿಯೂ ಅದೇ ಅಭ್ಯಾಸ ಮಾಡಿಕೊಂಡ. ಅಡುಗೆಯವರೂ ಅಳಿದಬಳಿದ ಎಲ್ಲವನ್ನೂ ಗೋಚಿ ಸಮಯಾಸಮಯದ ಗೊಡವೆಯೇ ಇಲ್ಲದೆ ಚಿಕ್ಕನ ಮನೆಯ ಕಡೆ ಬೀಸಿ ಬಿಸಾಡುವುದೊಂದೇ ಹೊಡೆತ. ಮೆಟ್ಟಿಲಿನ ಮೇಲೂ ಒಳಗೂ ಎಲ್ಲೆಂದರಲ್ಲಿ ಕಾಲು ಹಾಕಲು ಸಾಧ್ಯವಿಲ್ಲದಂತೆ. ತನ್ನ ಗಂಡನೋ, ಮಾತಿದ್ದೂ ಮೂಕ. ಅಬ್ಬೆ, ಹಾಸಿಗೆ ಬಿಟ್ಟು ಹಂದದವಳು. ಮಗನ ಬೊಜ್ಜವನ್ನು ಹೋದ ಜನ್ಮದಲ್ಲಿಯೇ ಮಾಡಿ ಮುಗಿಸಿದೆನಲ್ಲ. ಇನ್ನು ಯಾರು? ಆ ಹಿರೇಕುದ್ರು ಭಾಸ್ಕರ ಒಬ್ಬ ಇದ್ದ. ಏನು ಕಷ್ಟ ಬಂದರೂ ತಾನಿದ್ದೇನೆ ಎಂಬವ. ತಮ್ಮ ಓಟೆಲ್ಲ ಅವ ಹೇಳಿದವರಿಗೇ ಅಲ್ಲವೆ? ನಿತ್ಯಕ್ಕೆ ಎಲ್ಲಿ ಕಂಡರೂ ಸಿಗುವವ ಕಷ್ಟ ಬಂದಾಗ ಎಲ್ಲಿ ಹುಡುಕಿದರೂ ಇಲ್ಲ. ಮೂರು ಮೂರು ಸಲ ಹೋಗಿ ಬಂದೆ. ಊರಲ್ಲೇ ಇಲ್ಲವಂತೆ! ಎಲ್ಲಿ ಸತ್ತಿದ್ದಾನೋ. ಇದೊಂದು ಉಂಟಲ್ಲ ಈ ಮಗಳು! ಅಕಲು ಉಂಟೇ ಅಮ್ಮ ಇದಕ್ಕೆ? ತಾನು ಬೇಡ ಬೇದ ಅಂತ ತಡೆಯುತ್ತಿದ್ದ ಹಾಗೇ ನೆನ್ನೆ ಅವು ಈಚೆಗೆ ಹಾಕಿದಷ್ಟನ್ನೂ ಇವಳು ಬಾಚಿ ಆಚೆಗೆ ಬೀಸಿ ಬಿಸಾಡಿ ಅದು ಅವರ ಮನೆ ಗೋಡೆ ಕಿಟಕಿ, ಕಿಟಕಿ ದಾಟಿ ಕೋಣೆಯೊಳಗೂ ಬಿದ್ದು ಅಲ್ಲಿಂದೊಬ್ಬ ಗಂದಸು ಎದ್ದು ಬಂದು….ತನಗೂ ತಡೆಯದೆ ಕೂಗಾಡಿದೆ…. ಅದಕ್ಕೆ ಆತ ಸೀದಾ ಒಳಗೆ ಹೋಗಿ ಕೋವಿ ತರುವುದೆ! ಕೋವಿ ತೋರಿಸಿ “ಗುಂಡ್ ಹೊಡ್ದ್ ಒಂದೇ ಪೆಟ್ಟಿಗ್ ಹುಟ್ಯೇ ಇಲ್ಲೆ ಮಾಡ್‌ಸ್ವೆ. ನಸ್ರಾಣಿಗ್ಳ್. ಆಗ್ದಿರೆ ಜಾಗ ಬಿಟ್ ಎದ್ದ್ ನಡೀನಿ.” ಅಂತ ಒಂದ್ ಸ್ವರ ತೆಗೆದದ್ದೆಂದರೆ!

ಚಿಕ್ಕನ ಜಬ್ಬು ಗಲ್ಲ ನಡುಗುತ್ತಿತ್ತು. ಹದ್ದಿನ ಹಾಗಿನವು. ಅಯ್ಯಬ್ಬ. ಅವನ ಅವತಾರ ಕಂಡದ್ದೇ ತಾನು ಬೆಪ್ಪುಗಟ್ಟಿ ಅಲ್ಲೇ ನಿಂತ ಮಗಳ ಒಳರೆಟ್ಟೆ ರೊಯ್ಯ ಚಿಮುಟ ನಿವಾಳಿಸು ಒಳಗೆ ಅಂತ ದೂಡಿದ್ದಲ್ಲವೆ!

ಈಗ ಮಾತ್ರ ಮಗಳಿಗೆ ತಡೆಯದ ನಗೆ. ಅವನ್ನ ಕಂದದ್ದೇ ತನಗೆ ಚಿಮುಟಿದಳಲ್ಲ ಇ ಅಬ್ಬೆ ಯಾವ ಕರ್ಮಕ್ಕೆ ಎಂದು ನೆನೆನೆನೆದು ನಗೆ. ಕಣ್ಣಂಚಲ್ಲಿ ನೀರಿನ ಗೀಟು ಮೂಡುವ ಹಾಗೆ. ದುಹ್ಖದ ಸೇಂಕಿನ ಎಡೆಯಲ್ಲಿ ಹಣ್ಣುಮುಖವನ್ನು ಸೆರಗೊತ್ತಿ ಒರೆಸಿಕೊಂಡಳು ಚಿಕ್ಕ. ಮಗಳ ಮಾತಿಗೆ ಸಣ್ಣ ನಗೆ ಹೊಳೆಸುತ್ತ “ಹೋಂಕಿಲ್ಲದ ರಂಡೆ.”

ಪ್ರತಿದಿನದ ಗೋಳಾಯಿತಲ್ಲ ಇದು. ಅವಕ್ಕೆ ಮತ್ತೇನಲ್ಲ ಅಮ್ಮ, ಇಷ್ಟು ಒಳ್ಳೆಯ ಜಾಗದಲ್ಲಿ ಕುಳಿತಿದ್ದಾವಲ್ಲ ಇವು ಅಂತ ಹೊಟ್ಟೆಕಿಚ್ಚು. ತಾವು ಕುಳಿತುಕೊಂಡ ಕಾಲಕ್ಕೆ ಮೂರು ಪಾವಾಣೆಗೆ ಕೇಳುವವರಿಲ್ಲ ಇದನ್ನು. ಈಗ ಕ್ರಯ ಬಂದರೆ ತಮ್ಮ ತಪ್ಪಾ? ಅವರು ಇವತ್ತು ಬಂದವರು. ತಾವು ಆದಿಕಾಲದಿಂದಲೂ ಇಲ್ಲೇ ಸುತ್ತಿಕೊಂಡಿದ್ದವರು. “ಲಕ್ಸೊ ಅಲ್ಲ, ಕ್ವೋಟಿ ಕೊಟ್ರೂ ನಾ ಯೇಳ.”
“ಕ್ವೋಟಿ ಗೀಟಿ ಬ್ಯೇಡಪ್ಪ ಲಕ್ಸೊ ಕೊಟ್ರ್ ಸಾಕ್, ಯೇಳ್ವಲೆ. ಅದ್ಕೇನ್. ಅರೆ ಅವು ಕೊಡ್ಕ? ಕೊಡ್ತೊ ಗ್ವಯ್ಟ್.” ಎಂದಳು ಮಗಳು ಮುಂಗೈಯನ್ನು ಗೊರಟಿನಂತೆ ಮುರಿಯುತ್ತ. “ಕೊಡೊದಿದ್ರೆ ಸೀದ ಮಾತಿಗ್ ಬತ್ತಿದೊ.”
-ಕೋರ್ಟಿಗೆ ಹೋಗಲು ತನ್ನ ಹತ್ತಿರ ಮೂರು ಕಾಸಿಲ್ಲ. ಫಿರ್ಯಾದಿ ಮಾಡಲಿಕ್ಕಾದರೂ ಜನ ಬೇಕಲ್ಲ. ಅವಕ್ಕೆ ಗೊತ್ತು ಅದೆಲ್ಲ. ಅದಕ್ಕೇ ಈ ಹುನ್ನಾರ. ಗಂಡನಿಗೆ ಉಸಿರುಕಟ್ಟುತ್ತಿದೆ. ಹಾಸಿಗೆಯಲ್ಲೇ ಎಲ್ಲಾ ಆಗುವ ಅಬ್ಬೆ. ಗಾಳಿಯಿಲ್ಲದೆ ಮನೆಯಿಡೀ ನಾರುತ್ತಿದೆ….ಅಯ್ಯೋ….

“ಅಯ್ಯೋ….ನಾವಿಪ್ದೇ ಇವ್ರ್ ಮನಿ ಗಲೀಜ್ ಹೆಕ್ಕಿ ಹಾಕೂಕೆ ಅಂತಾಯ್ತಲೇ….ನಂ ಕಂಡ್ರೇ ಅವ್ರ್ ಮನೀ ಹೆಂಗಸ್ರಿಗ್ ಸಮೇತ ಅಸಯ್ಯ ಅಂಬ್ರ್. ನನ ಗಂಡ ಕೆಮ್ಮಿರ್ ಅಸಯ್ಯ ಅಂಬ್ರ್. ನನ್ನ ಮಗ ಕುಡ್ಕಂಡ್ ಬಂದ್ರ್ ಅಸಯ್ಯ ಅಂಬ್ರ್….ದ್ವಡ್ ಕುಡ್ರೆ ಅಸಯ್ಯ ಇಲ್ಯ ಅಮ್ಮ, ಅವ್ರ್ ಹಾಂಗೆ ಹ್ಞಂ? ಇಚಿತ್ರೊ…..ನಾವ್ ಆಚೀಗ್ ಹೋಪೂಕಿಲ್ಲೆ ಈಚೀಗ್ ಹೋಪೂಕಿಲ್ಲೆ ಅಸಯ್ಯ ಥೂ ಅಸಯ್ಯ ಥೂ ಅಂತೆಳಿ ಉಗೀತೊ. ನಮ್ಮನ್ ಎಬ್ಸುಕ್ ಮಾಡೂ ಹಿಕ್ಡಿ ಇದೆಲ್ಲ. ಸಮಾ ಇಪ್ಪ್ ಮನ್‌ಸ್ರಾರೆ ಸರಾಸರಿ ಎಂದ್ರ್ ಬಂದ, ರಾಜಾರೋಷ ಮಾತಾಡ್ದ….ಇದ್ ಹಾಂಗಲ್ಲ. ಅಡ್ಡದಾರಿ, ಕಾತಿ. ನಾನೂ ಕಾತಿ. ಬಾಯಗ್ ಒಂದ್ ಶಬ್ದೊ ಆಡ್ದೆ, ಯೆಂಜ್ಲ್ ಕಸೊ ಅದ್ಯೇನೇನ್ ಬಿಸಾಕ್‌ತ್ವೊ ಯಲ್ಲ ಯೆತ್ಯೆತ್ತಿ ಮುನ್ಸಿಪಾಲ್ಟಿ ತೊಟ್ಟಿಗ್ ಬಿಸಾಕ್ತಿ. ಹಾಕ್ದ್ ಹಾಂಗೂ ಬಿಸಾಕ್ತಿ. ಹಾಕ್ದಾಂಗೂ….ನನ್ ಕೊಡೆ ಎಷ್ಟ್ ದಿವ್ಸೊ ತಡೂಕತ್ತೊ ಅಷ್ಟ್ ದಿವ್ಸೊ…..” ಚಿಕ್ಕನ ಇಡೀ ದೇಹ ನಡುಗತೊಡಗಿತು. ಒಡಲ ದುಹ್ಖ ಮೈಮೇಲೆ ಅಮರಿಕೊಳ್ಳತೊಡಗಿತು. ದನಿ ಏರುತ್ತಾ ಹೋಯಿತು. ಸ್ಪೋಟವಾಗುವಂತಿದ್ದಳು ಚಿಕ್ಕ. “ಅಯ್ಯೋ, ಹೊರಗಾರೂ ಮಲ್ಕಮ್ನೇ, ರಾತ್ರಿಯಂತೂ ಕಾಣ್ದೆ ಯಷ್ಟೊತ್ತಿಗ್ ಯೇನ್ ಹ್ಯಾಂಗ್ ಬಂದ್ ಬೀಳತ್ ಅಂತೆಳಿ ಹೇಳೂಕ್ ಯಡ್ವ? ನಾಯಿಹೇಲಂತೂ ಕಾಣ್ದೆ ಬಿಸಾಡ್ವಲೇ, ನಾನೆಲ್ಲಿಗ್ ಹ್ವಾಪ್ದ್! ನನ್ನ್ ಬದ್ಕೇ ಬರಿ ಹಗ್ಲ್‌ವೇಸೊ ಆಯ್ತಲಬ್ಯೇ….”

-ಬೆಂಕಿಯುಂಡೆಯಂತಹ ಮಗಳು ಸೊಂಟಕ್ಕೆ ಕೈಕೊಟ್ಟು ದಿಗ್ಭ್ರಮೆಯಿಂದ ಅವಳನ್ನು ನೋಡುತ್ತಿದ್ದಂತೆ, ಚಿಕ್ಕನ ರೋದನ ಸ್ವಯ ಮರೆತು ತಾರಕಕ್ಕೇರುತ್ತಿದ್ದಂತೆ ಸುವರ್ಣಮ್ಮ ಸಟ್ತೆಂತ ಎದ್ದರು. ಎದ್ದು ಒಳಹೋಗಲು ತಿರುಗುತ್ತ “ನೀ ಹೀಂಗ್ ಹುಯ್ಲೆಬ್ಸ್ ಬೇಡ; ಯಾರೋ ಸತ್ರಂಬಂಗೆ, ಆಚಿಂದ್ ಕೇಂಬವ್ರಿಗೆ ನಾವೇ ಯಂತದೋ ಮಾಡ್ದೊ ಅಂಬಂಗ್ ಕಾಂಬು. ಸಾಕ್ ಬೊಬ್ಬಿ ಹೊಡದ್. ಅಬ್ಬಿ ಮಗ್ಳ್ ಕೆಲ್ಸ ಕಾಣಿ”-ಎಂದು-
ಬಾಗಿಲು ಹಾಕಿಕೊಂಡರು.*
*
*
*
‘ಚಿಕ್ಕನ ಸತ್ಯಾಗ್ರಹ’ ಇತ್ಯಾದಿಯನ್ನು ಕಥೆಯಾಗಿ ಹೇಳಲು ಹೊರಟವಳು ಇಲ್ಲಿಗೆ ಬಂದು ತಲುಪಿದ್ದು ಹೇಗೆ? ಇನ್ನು ಮುಂದರಿಯಲಾರದೆ ನಿಂತದ್ದು ಹೇಗೆ?
ಒಳಗೆ ಸುವರ್ಣಮ್ಮ ನಿಶ್ಚಿಂತೆಯಿಂದ ಪೇಪರು ಓದುತ್ತಿರುವುದು ಕಾಣುತ್ತಿದೆ. ಪಕ್ಕದಲ್ಲೇ ಪೇರಿಸಿಟ್ಟ ಪೇಪರುಗಳ ಅಟ್ಟಿ ಇದೆ.
ಬಾಗಿಲು
….ಮುಚ್ಚಿದೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.