‘ಸಮಾನತೆಯ ಕನಸು ಹೊತ್ತು…’

ಸಾಗರ, ಎಲ್ಲ ರೀತಿಯ ಜಾತಿ, ಮತ, ವರ್ಗ, ಬೇಧಗಳನ್ನು ಒಳಗೊಂಡಂಥ ಊರು. ಮಂಜಿ ಎಂಬ ಮುದುಕಿಯಬ್ಬಳು ಊರ ತುಂಬ ಅಡ್ಡಾಡಿಕೊಂಡಿರುತ್ತಿದ್ದಳು. ಅವಳ ನಿಜವಾದ ಹೆಸರು ನನಗೆ ಗೊತ್ತಿಲ್ಲ. ಯಾರಿಗೂ ಗೊತ್ತಿದ್ದಹಾಗೆ ಕಾಣೆ. ಅವಳನ್ನು ಎಲ್ಲರೂ ’ಹುಚ್ ಮಂಜಿ’ ಎಂದೇ ಕರೆಯುತ್ತಿದ್ದರು. ಅವಳು ಭಿಕ್ಷುಕಿಯಲ್ಲ. ಅವರಿವರು ಕೊಟ್ಟ ಚಿಲ್ಲರೆ ಹಣವನ್ನು ನೀರು ತುಂಬಿರುತ್ತಿದ್ದ ಹಿತ್ತಾಳೆ ಚೊಂಬೊಂದರಲ್ಲಿ ಹಾಕಿ ಇಟ್ಟುಕೊಂಡಿರುತ್ತಿದ್ದಳು. ಅವಳು ಬಂದರೆ ಸಾಕು ಮಕ್ಕಳು, ಪಡ್ಡೆ ಹುಡುಗರು ಅವಳನ್ನು ’ಮಂಜಿ ನಿನ್ ಗಂಡ ಎಲ್ಲೆ’ ಎಂದೋ ಅಥವ ’ಮಂಜಿ ನಿನ್ ಮಗ ಬಂದ’ ಎಂದೋ ಚುಡಾಯಿಸುತ್ತಿದ್ದರು. ಆಗ ಅವಳು ತನ್ನ ಕೈಲಿದ್ದ ದೊಣ್ಣೆಯನ್ನು ಅವರತ್ತ ಬೀಸಿ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಳು. ಯಾರಿಗೂ ಅವಳ ಆ ಗಂಡನ ಬಗ್ಗೆ ಯಾಗಲಿ ಮಗನ ಬಗ್ಗೆ ಯಾಗಲಿ ತಿಳಿದಿರಲಿಲ್ಲ. ಅವಳ ಸುತ್ತಲೂ ನೂರೆಂಟು ಕಥೆಗಳಿದ್ದರೂ ಸಹ, ಅವಳ ವ್ಯಕ್ತಿತ್ವ ನಿಗೂಢವಾದ್ದು. ಅವಳಿಗೆ ಗಂಡಸರನ್ನು ಕಂಡರಾಗುತ್ತಿರಲಿಲ್ಲ. ಪಾಪ ಅವಳು ಜೀವನದಲ್ಲಿ ಏನೇನೆಲ್ಲ ಅನುಭವಿಸಿದ್ದಳೋ ಅವಳಿಗೇ ಗೊತ್ತು.

ಇದೇ ಸಾಗರದ ಗೌಜ್ ಗೇರಿಯಲ್ಲಿ ನಾವಿದ್ದದ್ದು. ನಮ್ಮ ಕೇರಿ ಒಂದು ರೀತಿಯಲ್ಲಿ ಲಿಬೆರಲ್ ಮನೋಭಾವ ಉಳ್ಳ ರಸ್ತೆಯಾಗಿತ್ತು. ಸಂಜೆಯಾದರೆ ನಾವೆಲ್ಲರೂ ಆಟವಾಡುತ್ತಿದ್ದದ್ದು ರೋಡಿನಲ್ಲೇ. ಲಗೋರಿ, ಚಿನ್ನಿ-ದಾಂಡು, ಗೋಲಿ, ಬುಗುರಿ, ಕ್ರಿಕೆಟ್, ಐಸ್ಪೈ, ಕುಂಟಾಟ… ಎಲ್ಲವನ್ನೂ ಕೇರಿಯ ಗಂಡುಮಕ್ಕಳು, ಹೆಣ್ಣು ಮಕ್ಕಳು ಒಟ್ಟು ಸೇರಿ ಆಡುತ್ತಿದ್ದೆವು. ಹೆಚ್ಚು ಕಡಿಮೆ ನಮ್ಮ ಕೇರಿಯ ಮಕ್ಕಳೆಲ್ಲರ ಹೆಸರು ನನಗಿನ್ನೂ ನೆನಪಿದೆ. ಶಿವರಾತ್ರಿಯ ಜಾಗರಣೆ ಮತ್ತು ಹೋಲಿಹಬ್ಬದ ಸಂಭ್ರಮಗಳನ್ನು ಕೇರಿಗೆ ಕೇರಿಯೇ ಸೇರಿ ಆಚರಿಸುತ್ತಿತ್ತು. ಭೂಮಿ ಹುಣ್ಣಿಮೆಗೆ ಒಂದುಸಾರಿ ಕೇರಿಯ ಹೆಂಗಸರು ಮಕ್ಕಳು ಎಲ್ಲರೂ ಲಾರಿಯೊಂದರಲ್ಲಿ ಯಾರದ್ದೋ ಗದ್ದೆಗೆ ಹೋಗಿ ಅಲ್ಲೇ ಅಡಿಗೆ ಮಾಡಿ ಉಂಡು ಬಂದ ನೆನಪು ನನ್ನ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಹೈಸ್ಕೋಲ್ ದಾಟುವ ಹೊತ್ತಿಗೆ ರಸ್ತೆಯಮೇಲಾಡುವುದು ಕಡಿಮೆಯಾಗಿ, ಸಂಜೆಯ ಹೊತ್ತಿಗೆ ಕಾದಂಬರಿ ಓದುವುದು, ಜಗಲಿಯಮೇಲೆ ಕೂತು ಹರಟೆಕೊಚ್ಚುವುದು ಅಥವ ಗೆಳತಿಯರು ಸೇರಿ ಪೇಟೆ ಬೀದಿ ಸುತ್ತಿಬರುವುದು ರೂಢಿಯಾಯ್ತು.

ಗೌಜ್ ಗೇರಿಯಿಂದ ಶಾಲೆಗೆ ಹೋಗಲು ಚಿಕ್ಕದೊಂದು ರಸ್ತೆ ಇತ್ತು. ಇದು ನಮಗೆ ಶಾರ್ಟ್ಕಟ್. ಇದನ್ನು ಬಿಟ್ಟರೆ, ಪೇಟೆಬೀದಿ ಬಳಸಿ, ಸುಮಾರು ದೂರ ಸುತ್ತಿ ಹೋಗಬೇಕಿತ್ತು. ಈ ರಸ್ತೆ ಎಷ್ಟು ಚಿಕ್ಕದೆಂದರೆ, ಒಂದು ದಿಕ್ಕಿನಿಂದ ಆಟೋ ಹಾದು ಹೋದರೆ, ಮತ್ತೊಂದು ದಿಕ್ಕಿನಿಂದ ಸೈಕಲ್ ಬರಲಿಕ್ಕೆ ಸಹ ಜಾಗವಿರುತ್ತಿರಲಿಲ್ಲ. ರಸ್ತೆಯ ಆಚೆ ಈಚೆಗೆ ದೊಡ್ಡ ದೊಡ್ಡ ಚರಂಡಿಗಳು. ಈ ಚರಂಡಿಗಳ ಅಂಚಿನಲ್ಲಿ ಬೆಳಗಿನ ಜಾವದಿಂದಲೇ ಮಕ್ಕಳು ಕುಪ್ಪೆ ಕುಪ್ಪೆ ಬಳುವಳಿ ಬಿಟ್ಟಿರುತ್ತಿದ್ದರು. ಮಳೆ ಬಂದರಂತು ಚರಂಡಿ ತುಂಬಿ ಹರಿಯುತ್ತಿತ್ತು. ಅತ್ತಲಾಗಿನ ಹೊಲಸು ಇತ್ತಲಾಗೆ ಮತ್ತು ಇತ್ತಲಾಗಿನ ಹೊಲಸು ಅತ್ತಲಾಗೆ ಹರಿದು, ಚರಂಡಿ ಶುದ್ದವಾಗಿ ರಸ್ತೆ ರಾಡಿಯಾಗಿ ಬಿಡುತ್ತಿತ್ತು. ಈ ರಸ್ತೆಯ ಒಂದು ಬದಿಗೆ, ಆ ತುದಿಯಿಂದ ಈ ತುದಿಯವರೆಗೂ ಚಾಚಿಕೊಂಡ ಮನೆಯ ಗೋಡೆ. ಗೋಡೆಯ ಮೇಲೆ ಡಾಂಬರಿನಿಂದ ಆಲದಮರದ ಚಿತ್ರ ಹಾಗು ಅದರಡಿಗೆ “ಜಾಲಿಮಲೋಷನ” ಎಂದು ಬರೆದಿತ್ತು. ಮತ್ತೊಂದುಕಡೆ ದೊಡ್ಡದಾಗಿ ’ಸುಗಂಧರಾಜ ರಸ್ತೆ’ ಎಂದು ಬರೆದಿತ್ತು. ಇಷ್ಟು ಬಿಟ್ಟರೆ, ಅಪರೂಪಕ್ಕೆ ನಮ್ಮೂರಿಗೆ ಬರುತ್ತಿದ್ದ ಸರ್ಕಸ್ಸಿನದ್ದೋ, ಪಬ್ಲಿಕ್ ಮೀಟಿಂಗುಗಳದ್ದೋ ಜಾಹೀರಾತುಗಳು, ಇತ್ಯಾದಿ… ಹೊಸದು ಹಳೆಯದು ಹೀಗೆ ಏನೇನೋ ಇರುತ್ತಿತ್ತು. ಇವೆಲ್ಲವನ್ನೂ ಮೀರಿಸುವಂತೆ, ಆ ಗೋಡೆಯ ಮೇಲೆ ಒಂದರಮೇಲೊಂದರಂತೆ ಅಂಟಿಸಿದ ಸಿನೆಮಾ ಪೋಸ್ಟರ್‌ಗಳು ಇರುತ್ತಿದ್ದವು. ಹರಿದ ಪೋಸ್ಟರ್ಗಳ ಸಂದಿನಿಂದ ಯಾವುದೋ ಸಿನೆಮಾದ ನಟ, ಮತ್ಯಾವುದೋ ಸಿನೆಮಾದ ನಟಿಯರ ನಡುವೆ ಅಲ್ಲಿ ಇಲ್ಲಿ ಅರೆ ಬರೆ ಬಟ್ಟೆ ತೊಟ್ಟ ಕ್ಯಾಬರೆ ನರ್ತಕಿಯರ ಚಿತ್ರಗಳೂ ಹಣಕುತ್ತಿದ್ದವು. ಕೆಲವು ಅಶ್ಲೀಲ ಪೋಸ್ಟರ್‌ಗಳಂತೂ ಒಂದಲ್ಲ ಒಂದು ಕಡೆಗೆ ಈ ಗೋಡೆಯಮೇಲೆ ಇದ್ದೇ ಇರುತ್ತಿತ್ತು. ಈ ಪೋಸ್ಟರ್‌ಗಳಿಂದಾಗಿ ದಿನನಿತ್ಯ ಆ ರಸ್ತೆಯನ್ನು ಹಾದು ಹೋಗಬೇಕಾದರೆ ಎಲ್ಲಿಲ್ಲದ ಸಂಕೋಚವಾಗುತ್ತಿತ್ತು. ಅವನ್ನು ನೋಡುವ ಕುತೂಹಲವಿದ್ದರೂ, ಕಣ್ಣಕೊನೆಯಿಂದ ನೋಡಿ, ಅವಮಾನವಾದಂತಾಗಿ, ನೋಡಿದರೂ ನೋಡದಹಾಗೆ ತಲೆ ತಗ್ಗಿಸಿ (ಮೂಗೂ ಮುಚ್ಚಿಕೊಂಡು) ದಡಬಡಿಸಿ ಹೋಗುತ್ತಿದ್ದ ನೆನಪು. ’ಶ್….ಶೀ…. ಯಾವ ರೀತಿ ಪೋಸ್ಟರ್ ಮಾರಾಯ್ತಿ ಅದು!’ ಎಂದು ಗೆಳತಿಯರಲ್ಲಿ ಆಡಿಕೊಂಡದ್ದುಂಟು. ಇದೇ ರಸ್ತೆಯಿಂದ ಹುಡುಗರೂ ಹಾದು ಹೋಗುತ್ತಿದ್ದರು. ಅವರೂ ಸಹ ಈ ಪೋಸ್ಟರ್‌ಗಳನ್ನು ನೋಡುತ್ತಿದ್ದರು. ಕೆಲವರು ದಿಟ್ಟಿಸಿ, ಇನ್ನು ಕೆಲವರು ಸುಮ್ಮನೆ ಹಾಗೇ. ಹೀಗೆ, ಒಂದಲ್ಲ ಒಂದು ರೀತಿಯ ಕುತೂಹಲದಿಂದ ಈ ಪೋಸ್ಟರ್‌ಗಳನ್ನು ನೋಡಿದ ಹುಡುಗರಿಗೆ ಒಂದಾ, ಒಳಗೊಳಗೇ ಖುಷಿಯಾಗಿರಬೇಕು ಅಥವ ಮುಜಗರವಾಗಿರಬೇಕು. ಆದರೆ ಹುಡುಗಿಯರಿಗಾಗುತ್ತಿದ್ದಂಥ ಅವಮಾನವನ್ನು ಅವರೆಂದೂ ಅನುಭವಿಸಿರಲಿಕ್ಕಿಲ್ಲ.

ಇನ್ನೊಂದು ಘಟನೆ ನೆನಪಾಗುತ್ತಿದೆ, ಶಾಲೆಯ ಯಾವುದೋ ಕಾರ್ಯಕ್ರಮಕ್ಕಾಗಿ ನಾವು ಕೆಲವರು ಡ್ಯಾನ್ಸಿಗೆ ಸೇರಿದ್ದೆವು. ಆ ಡ್ಯಾನ್ಸಿಗೆ ಸೀರೆಯೋ ದಾವಣಿಯೋ ಹಾಕಿಕೊಳ್ಳಬೇಕಿತ್ತು. ಅದಕ್ಕಾಗಿ ಸೀರೆಯ ಬ್ಲೌಸ್ ಬೇಕು. ಒಂದಿಬ್ಬರು ಗೆಳತಿಯರು ಒಟ್ಟಿಗೆ ಅಂಗಡಿಗೆ ಹೋಗಿ ರೆಡಿಮೇಡ್ ಬ್ಲೌಸ್ ಕೊಂಡೆವು. ಬ್ಲೌಸ್ ಕೊಳ್ಳುವುದು ಕಷ್ಟವಾಗಲಿಲ್ಲ. ಆದರೆ ಅದರೊಳಗೆ ಹಾಕಿಕೊಳ್ಳಲು ಬ್ರಾ ಬೇಕಿತ್ತಲ್ಲ, ಅದನ್ನು ಕೊಳ್ಳುವುದೇ ನಮಗೆ ದೊಡ್ಡ ಸಮಸ್ಯೆ ಯಾಗಿತ್ತು. ಎಲ್ಲಾ ಬಟ್ಟೆ ಅಂಗಡಿಗಳಲ್ಲೂ ಗಂಡಸರೇ ಇರುತ್ತಿದ್ದರು. ಅವರಲ್ಲಿ ಹೋಗಿ ಮುಜಗರವನ್ನೆಲ್ಲಾ ಮೀರಿ, ’ಬ್ರಾ ತೋರಿಸಿ’, ಎಂದು ಕೇಳುವುದಾದರೂ ಹೇಗೆ? ಕೇಳಿದಾಗ ಅವರಿಗೆ ಸುಗಂಧರಾಜರಸ್ತೆಯ ಪೋಸ್ಟರ್‌ಗಳು ನೆನಪಾದರೆ, ಅಥವ ಬ್ರಾ – ಬ್ಲೌಸ್ – ಎದೆ – ಹುಡುಗಿಯರು – ಹೆಂಗಸರು – ಅವರ ಅಂಗಾಂಗಗಳು ಅಥವ ಇದರ ಸುತ್ತಲೂ ಇರುವ ನೂರಾರು ಪೋಲೀ ಜೋಕುಗಳಲ್ಲಿ ಏನಾದರೊಂದು ನೆನಪಾಗಿ ಅವರು ಸಣ್ಣಗೆ ನಕ್ಕರೆ! ಎಂಥಾ ಭಯವಾಗಿತ್ತು ಆಗ! ಅದು ಹೇಳಿಕೊಳ್ಳಲಿಕ್ಕಾಗದ ಭಯ. ನಾಚಿಕೆ ಅವಮಾನಗಳಿಂದ ಕೂಡಿದ ಭಯ! ಇದೇ ರೀತಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಕೊಳ್ಳುವುದೂ ಎಷ್ಟೋ ಸಾರಿ ಸಮಸ್ಯೆಯಾಗಿಬಿಡುತ್ತದೆ. ಚಿಕ್ಕ ಊರುಗಳಲ್ಲಿ ಮಾತ್ರವಲ್ಲ ದೊಡ್ಡ ಪೇಟೆಗಳಲ್ಲೂ ಸಹ, ಹೆಣ್ಣು ಮಕ್ಕಳು ಇಂಥಾ ಅವಮಾನ ಮತ್ತು ಭಯದಿಂದ ಹೊರತಾಗಿಲ್ಲ ಎಂದರೆ ತಪ್ಪಾಗಲಾರದು.

ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆಂದರೆ, ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ಇದರ ಕೇಂದ್ರ ಹೆಣ್ಣಿನ ದೇಹ ಮತ್ತು ಲೈಂಗಿಕತೆ, ಹಾಗು ಅದನ್ನು ಅರ್ಥ ಮಾಡಿಕೊಳ್ಳುವ ಬಗೆಯಲ್ಲಿದೆ. ಸಾಧಾರಣವಾಗಿ ಹೆಣ್ಣಿನ ದೇಹ ಮತ್ತು ಲೈಂಗಿಕತೆಯನ್ನು ವಿನಾಕಾರಣ ಹೀಗಳೆಯಲಾಗುತ್ತದೆ. ಅಶ್ಲೀಲತೆಯು ಪೋಸ್ಟರ್ಗಳ ಮೂಲಕ, ಪೋಲಿ ಜೋಕುಗಳ ಮೂಲಕ, ಕೊಳಕು ದೃಷ್ಟಿಯ ಮೂಲಕ, ಹೀಗೆ ಒಂದಲ್ಲ ಒಂದು ರೀತಿಯಿಂದ ಹೆಣ್ಣುಮಕ್ಕಳ ಬೆನ್ನಟ್ಟಿ ಬಂದ ಪಿಡುಗು. ಈ ಹಿಂದೆ ಇದು ಸಾಧಾರಣವಾಗಿ, ಮನೆಯ ಹೊರಗೆ ಎದುರಿಸುವಂಥದ್ದಾಗಿತ್ತು. ಆದರೆ ಈಗ ಈ ಎಲ್ಲದರ ಜೊತೆಗೆ ಟಿವಿ ಸೀರಿಯಲ್‌ಗಳು ಮತ್ತು ಟಿವಿ ಜಾಹೀರಾತುಗಳೂ ಸೇರಿರುವುದರಿಂದ, ಸಮಸ್ಯೆಯ ಒತ್ತಡ ದ್ವಿಗುಣವಾಗುತ್ತಿದೆ. ಮನೆಯೊಳಗೆ, ಮನೆ ಮಂದಿಯೆದುರೇ ಪ್ರತಿ ದಿನ ಪ್ರತಿ ಕ್ಷಣ ಅವರನ್ನೂ ನಮ್ಮನ್ನೂ ಅಶ್ಲೀಲತೆಗೆ ಇನ್ಸೆನ್ಸಿಟಿವ್ ಆಗಿಸಿ, ಅತಿ ಸಹಜವೆನ್ನುವಂತೆ ಎಲ್ಲವನ್ನೂ ಏಕಮುಖೇನವಾಗಿ ಒಪ್ಪಿಕೊಳ್ಳುವ ಮನೋಭಾವ ತಲೆದೋರುತ್ತಿದೆ. ಊರಿಗೆಲ್ಲ ಹೇಳಿಕೊಂಡು ಹೋಗುವ ಸಹನೆ ಅಥವ ಸಮಯ ನಮಗೆ ಇಲ್ಲ. ಆದರೆ ಕಡೇಪಕ್ಷ, ಟಿವಿ ನೋಡುವಾಗ ಮನೆಮಂದಿಯ ಅಥವ ಸ್ನೇಹಿತರ ಎದುರಾದರೂ ಅಶ್ಲೀಲತೆಯನ್ನು ವಿರೋಧಿಸಿ, ನಮ್ಮ ಅಸಮಾಧಾನವನ್ನು ನಾವು ಪ್ರಕಟಿಸುವುದು ಬಹಳಾಮುಖ್ಯ ಅನ್ನಿಸುತ್ತದೆ. ಹೀಗೆ ಹೇಳುವಾಗ ಮತ್ತೊಂದು ಆತಂಕ ಎದುರಾಗುತ್ತದೆ. ನಾವು ಏನನ್ನು ಎಷ್ಟರಮಟ್ಟಿಗೆ ಮತ್ತು ಯಾಕೆ ವಿರೋಧಿಸಬೇಕು ಎಂಬ ಪ್ರಶ್ನೆ. ಸ್ತೀತ್ವದ ಗುಣಾವಗುಣಾಗಳು ಹೀಗೆ ಹೀಗೇ ಇರಬೇಕೆಂಬುದು ಸತತವಾಗಿ ನಿರ್ಮಾಣಗೊಳ್ಳುತ್ತಿರುತ್ತದೆ. ಸ್ತೀತ್ವವು ಹೆಣ್ಣಿಗೆ ಸಹಜವಾಗಿ ಜನ್ಮತಃ ಬರುವಂಥದ್ದಲ್ಲ. ಪುರುಷತ್ವವು ಗಂಡಸಿಗೆ ಹೇಗೆ ಶೋಭಾಯಮಾನವೋ ಸ್ತೀತ್ವವು ಹೆಂಗಸಿಗೆ ಶೋಭಾಯಮಾನವೆಂದು ಬಾಲ್ಯದಿಂದ ಹೇಳಿಕೊಡಲಾಗುತ್ತದೆ. ಇದನ್ನಾಧರಿಸಿ ’ಒಳ್ಳೆಯ ಹೆಂಗಸಿನ ನಡತೆ’ ಎಂದರೆ ಈ…ಈ…ರೀತಿಯಲ್ಲಿರಬೇಕು ಮತ್ತು ’ಇಂಥಾ ಕೆಲವು ನಿರ್ದಿಷ್ಟ’ ಗುಣಗಳನ್ನು ಹೊಂದಿರದಿದ್ದರೆ ಆಕೆ ಒಳ್ಳೆಯ ಹೆಂಗಸಲ್ಲ ಎಂಬುದನ್ನು ಪದೇ ಪದೇ ನಮಗೆ ತಿಳಿಯ ಹೇಳಲಾಗುತ್ತದೆ. ಅಂಥಾ ಹೆಂಗಸರನ್ನು ಅವರ ಉಡಿಗೆ-ತೊಡಿಗೆ, ಹಾವ-ಭಾವಗಳ ಮೂಲಕ ನಮ್ಮೆದುರು ಇಡಲಾಗುತ್ತದೆ. ಟಿವಿ ಸೀರಿಯಲ್‌ಗಳನ್ನು, ಜಾಹಿರಾತುಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗಿಬಿಡುತ್ತದೆ.

ಮಹಿಳೆಯರಿಗೆ ಅತ್ಯವಷ್ಯಕವಾದ್ದು, ಬಹಳಾ ಪರ್ಸನಲ್ ಆದ್ದು, ಅಥವ ಮಹಿಳೆಯರ ದೇಹಕ್ಕೆ ಸಂಬಂದಿಸಿದಂಥದ್ದು ಮತ್ತು ಆ ಮೂಲಕ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುವಂಥದ್ದು ಎಲ್ಲವೂ ನೈತಿಕತೆ ಮತ್ತು ಪಾತಿವ್ರತ್ಯದ ಹೆಸರಿನಲ್ಲಿ ತನ್ನ ವೈಯ್ಯಕ್ತಿಕತೆಯನ್ನು ಕಳೆದುಕೊಂಡು ಸಾಮೂಹಿಕವಾಗಿಬಿಡುತ್ತದೆ. ಹಾಗೇ ಅಶ್ಲೀಲತೆಯ ಹಿನ್ನೆಲೆಯಲ್ಲಿ ಸಹ ಈ ಎಲ್ಲವೂ ವೈಯ್ಯಕ್ತಿಕತೆಯನ್ನು ಕಳೆದುಕೊಂಡು ಸಾಮೂಹಿಕವಾಗಿಬಿಡುತ್ತವೆ. ಈ ಎರಡೂ ಕೂಡ ಒಂದೇ ಮನೋಭಾವದ ಎರಡು ಸ್ಥಿತಿಗಳು. ಈ ಎರಡೂ ಸ್ಥಿತಿಗಳೂ ಮಹಿಳೆಯರಲ್ಲಿ ಅಭದ್ರತೆಯನ್ನು ಹೆಚ್ಚಿಸುವಂಥದ್ದೇ ಆಗಿದೆ. ಆದ್ದರಿಂದ ನಮ್ಮ ವಿರೋಧ ಈ ಎರಡೂ ರೀತಿಯ ಅರ್ಥವಂತಿಕೆಗಳಿಗೂ ಸೂಕ್ಷ್ಮವಾಗಿ ಇರುವಂಥದ್ದಾಗಿರಬೇಕು. ಏಲ್ಲಕ್ಕಿಂತ ಹೆಚ್ಚಾಗಿ, ನಾವು ಇಂದು ಸ್ತೀತ್ವ ಮತ್ತು ಹೆಣ್ಣಿನ ಸೆಕ್ಷುವಾಲಿಟಿಯನ್ನು ಕುರಿತಂತೆ ಹೆಚ್ಚೆಚ್ಚು ಮುಕ್ತವಾಗಿ ಪ್ರಶ್ನಿಸುವ ಹಾಗು ಮಾತನಾಡುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು. ಹದಿ ಹರೆಯದ ಹುಡುಗರು ಕ್ಷೌರ ಮಾಡಿಕೊಳ್ಳಲು ಅಂಗಡಿಗಳಿಂದ ಬ್ಲೇಡ್ ಅಥವ ರೇಜರ್ರನ್ನು ಎಷ್ಟು ನಿಃಸ್ಸಂಕೋಚವಾಗಿ ಕೊಳ್ಳುತ್ತಾರೋ ಅಷ್ಟೇ ನಿಃಸ್ಸಂಕೋಚವಾಗಿ ಯಾವುದೇ ಅಳುಕಿಲ್ಲದೇ ಹದಿ ಹರೆಯದ ಹೆಣ್ಣುಮಕ್ಕಳೂ ಅಂಗಡಿಗಳಿಂದ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಕೊಳ್ಳುವಂಥ ಪರಿಸ್ಥಿತಿ ಬಂದಾಗ ಮಾತ್ರ ಭಯ, ಆತಂಕ, ಅವಮಾನಗಳನ್ನು ಮೀರಿ ಬದುಕುವ ಸ್ಥೈರ್ಯವನ್ನು ಹೆಣ್ಣುಮಕ್ಕಳಿಗೆ ನಮ್ಮ ಸಮಾಜ ಕೊಟ್ಟೀತೆಂದು ಆಶಿಸಬಹುದು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.