ದುಗುಡ ಆತಂಕಗಳ ನಡುವೆ ನಮ್ಮ ಕಾಳಜಿಗಳು

– ನೊಮ್ ಚಾಮ್ಸ್‌ಕಿ
(ಕನ್ನಡಕ್ಕೆ ಪ್ರೀತಿ ನಾಗರಾಜ್)

ಈ ದುಗುಡ ತುಂಬಿದ ಕ್ಷಣಗಳಲ್ಲಿ ಇರಾಕ್ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸುವುದು ನಮ್ಮಿಂದ ಸಾಧ್ಯವಿಲ್ಲ. ಆದರೆ, ಇರಾಕ್ ಯುದ್ಧವನ್ನು ಖಂಡಿಸಿ, ತಡೆಗಟ್ಟಲು ಪ್ರಯತ್ನಿಸುವ ಜವಾಬ್ದಾರಿ ಬರೀ ನ್ಯಾಯ, ನೀತಿ, ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗ್ಗೆ ಕಾಳಜಿ ಇರುವವರದ್ದು ಮಾತ್ರ ಎಂದೇನಲ್ಲ.

ಯುದ್ಧದ ಪರಿಣಾಮವಾಗಿ ಈಗ ನಮ್ಮ ಮುಂದಿರುವ ಕೆಲಸ ಮಾತ್ರ ಬಹಳ ದೊಡ್ಡದು. ಅತೀ ಶೀಘ್ರವಾಗಿ ಮಾಡಬೇಕಾಗಿರುವಂಥಾದ್ದು. ಆದರೆ, ಈ ಕೆಲಸ ಎಷ್ಟು ಬೃಹತ್ತಾದ್ದು ಅನ್ನುವ ಬಗ್ಗೆ ಯಾರಿಗೂ ಅಂದಾಜು ಇರುವಂತಿಲ್ಲ. ನಮ್ಮ ಅತೀ ಜಾಣ “ಇಂಟೆಲಿಜೆನ್ಸ್” ಏಜೆನ್ಸಿಗಳಾದ “ಸೀ ಐ ಎ” ಅಥವಾ “ಪೆಂಟಗನ್” ಗೂ ಕೂಡ.

ದೈಹಿಕ ಮತ್ತು ಮಾನಸಿಕ ದುರಂತ ಮನುಷ್ಯರ ಮೇಲಾಗುವ ಯುದ್ಧದ ದುರ್ಭರ ಮತ್ತು ಅತಿಘೋರ ಪರಿಣಾಮ. ಇರಾಕಿನಲ್ಲಿ ಕೆಲಸ ಶುರು ಹಚ್ಚಿಕೊಂಡಿರುವ ಸ್ವಯಂ ಸೇವಾ ಸಂಸ್ಥೆಗಳೇ ಹೇಳುವಂತೆ ಯುದ್ಧದಲ್ಲಿ ಅಥವಾ ಯುದ್ಧದ ಪರಿಣಾಮವಾಗಿ ಚೂರೂ ಗಾಯಗೊಳ್ಳದೇ ಇರುವವನೂ ಕೂಡ ಅವನಿಗೆ ತನ್ನನ್ನು ಮತ್ತು ತನ್ನ ಜನರನ್ನು ಈ ದುಷ್ಕೃತ್ಯದಲ್ಲಿ ಭಾಗಿಯನ್ನಾಗಿ ಮಾಡಿಕೊಂಡ ಸ್ವಾರ್ಥಿಗಳ ಮೇಲಿನ ದ್ವೇಷವೇನೂ ಕಡಿಮೆ ಇರಲಿಕ್ಕೆ ಸಾಧ್ಯವಿಲ್ಲ.

ಯುದ್ಧದ ಸೋಲು ಗೆಲುವಿನ ಬಗ್ಗೆ ಯಾವುದೇ ರೀತಿಯ ನಿರ್ಣಾಯಕ ಮಾತುಗಳನ್ನು ಹೇಳಲು ಇನ್ನೂ ಬಹಳ ಸಮಯ ಬೇಕಾದೀತೇನೋ. ಯುದ್ಧದ ಘೋರ ಪರಿಣಾಮ ಮತ್ತು ಅದರಿಂದ ಮತ್ತೆ ಹುಟ್ಟುವ ಹಿಂಸೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಯತ್ನಿಸಬೇಕು, ಇದು ನಮ್ಮ – ಸಾಮಾನ್ಯ ಜನಗಳ – ಕೈಲಿ ಸಾಧ್ಯವಾಗುವಂಥ ಕೆಲಸ.

ಕಣ್ಣಿಗೆ ಕಾಣುವಂತೆ ಅಮೇರಿಕ ಇರಾಕಿನ ಮೇಳೆ ರಣಕಹಳೆ ಊದಿದ್ದು ನಿನ್ನೆ-ಮೊನ್ನೆಯಾದರೂ, ಅಸಲು ಯುದ್ಧ ಶುರುವಾಗಿ ಒಂದು ದಶಕದ ಮೇಲಾಯಿತು.

ಅದಕ್ಕಾಗಿಯೇ, ಈಗಿನ ಗಾಯಾಳುಗಳ ಶುಶ್ರೂಷೆಯಿಂದ ಮೊದಲು ಮಾಡಿ ವಾಷಿಂಗ್ಟನ್ನಿನ ವಿನಾಶಕಾರೀ ವ್ಯಾಪಾರ ನಿಷೇಧಾಜ್ಝೆಗಳಿಗೆ ಹತ್ತು ವರ್ಷಗಳಿಂದ ಬಲಿಯಾದವರ ಹಿತವನ್ನೂ ನಾವು ಕಾಪಾಡಬೇಕಿದೆ.

ಈ ನಿಷೇಧಾಜ್ಝೆಗಳ ಪರಿಣಾಮವಾಗಿ ಇರಾಕಿನ ಸಾಮಾಜಿಕ ವ್ಯವಸ್ಥೆ ಕುಸಿದುಬಿತ್ತು, ಆಳುತ್ತಿದ್ದವನನ್ನು ರಾಕ್ಷಸ ರೂಪಕ್ಕೆ ತಂದಿಟ್ಟು, ಅಲ್ಲಿನ ಜನರಿಗೆಲ್ಲ ಅವನನ್ನು ಬಿಟ್ಟರೆ ಬೇರೆ ಗತಿಯಿಲ್ಲವೆಂಬ ಸಂದರ್ಭ ಸೃಷ್ಟಿಯಾಯಿತು. ಸದ್ದಾಂ ಹುಸೇನನ ಶ್ರೇಣಿಯಲ್ಲೇ ಬರುವ ಇತರೆ ಕೊಲೆಪಾತಕ ಆಡಳಿತಗಾರರಷ್ಟು ಇವನು ಅಮಾನವೀಯವಾಗಿ ನಡೆದುಕೊಳ್ಳಲಾರ ಎಂದು ಜನ ತಿಳಿದದ್ದು ಹುಸಿಯಾಯಿತು.

ರೋಮೇನಿಯ ಕಂಡ ಘೋರ ಆಡಳಿತಗಾರ ನಿಕೋಲ್ ಚೂಶೆಸ್ಕೂನನ್ನು ಕೆಲ ದೇಶಗಳು ಬೆಂಬಲಿಸಿ ಬೆಳೆಸಿದ ಮಾದರಿಯಲ್ಲೇ ವಾಷಿಂಗ್ಟನ್ನಿನ ಪಾತಕಿಗಳು ಸದ್ದಾಮನನ್ನೂ ಗದ್ದುಗೆಗೆ ತಂದರು.

ಅಮೇರಿಕ, ಸ್ವಲ್ಪವಾದರೂ ಮಾನವಂತ ದೇಶವಾಗಿ ಮಾಡಬಹುದಾದ ಕೆಲಸವೇನೆಂದರೆ, ಇರಾಕ್ ಕಳಕೊಂಡಿದ್ದರಲ್ಲಿ, ಕಳಕೊಳ್ಳುತ್ತಿರುವುದರಲ್ಲಿ ಸ್ವಲ್ಪವನ್ನಾದರೂ ಮತ್ತೆ ಕಟ್ಟಲು, ಮೇಲೇಳಲು ಸಾಧ್ಯವಾಗುವಷ್ಟು ನಾನಾ ರೀತಿಯ ಸಂಪನ್ಮೂಲಗಳನ್ನು ಒದಗಿಸುವುದು. ಧನ ಸಹಾಯ ಮೊದಲಾಗಬೇಕು. ಅದಕ್ಕೂ ಮಿಗಿಲಾಗಿ, ಇರಾಕಿನ ಜನ ತಮ್ಮ ಸಮಾಜವನ್ನು, ದೇಶವನ್ನು, ಬದುಕನ್ನು ತಮಗೆ ಹಿತವೆನ್ನಿಸಿದ ರೀತಿಯಲ್ಲಿ ಕಟ್ಟಲು ಸಾಧ್ಯವಾಗಬೇಕು. ವಾಷಿಂಗ್ಟನ್ನು, ಕ್ರಾಫ಼ರ್ಡುಗಳಲ್ಲಿ ಕೂತು “ಅಧಿಕಾರ ಹುಟ್ಟುವುದು ಬಂದೂಕಿನ ನಳಿಕೆಯಿಂದ” ಎಂದು ನಂಬಿದವರು ಬಯಸುವಂತೆ ಅಲ್ಲ.

ಆದರೆ, ಇಲ್ಲಿ ಮೂಲಭೂತವಾಗಿರುವ ಸಮಸ್ಯೆಗಳ ಉತ್ತರ ಅಷ್ಟು ಸರಳವಾಗಿಲ್ಲ. ಇರಾಕ್ ಮೇಲಿನ ದಾಳಿಗೆ ಎದುರಾದ ಪ್ರತಿರೋಧ ಯಾವ ಚರಿತ್ರೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹುಟ್ಟಿದ್ದಲ್ಲ. ಅದಕ್ಕಾಗಿಯೇ ಅಮೇರಿಕ ಅಧ್ಯಕ್ಷ ಬುಷ್ ತನ್ನಿಬ್ಬರು ದೋಸ್ತುಗಳನ್ನು ದೂರದ ಮಿಲಿಟರಿ ದ್ವೀಪದಲ್ಲಿ ಗುಪ್ತವಾಗಿ ಭೇಟಿ ಮಾಡಬೇಕಾಗಿ ಬಂದದ್ದು. ಸಾಮಾನ್ಯ ಜನರ ಕ್ಷುಲ್ಲಕ “ಯುದ್ಧ ಬೇಡ, ಯುದ್ಧ ಬೇದ..” ಎಂಬ ಕರೆಕರೆ ಕೇಳಿಸದೇ ಇರಲಿ ಅಂತ.

ಅಮೆರಿಕೆಯ ವಿರುದ್ಧ ಭುಗಿಲೆದ್ದಿರುವ ಪ್ರತಿರೋಧವನ್ನು ಸ್ಥೂಲವಾಗಿ ಇರಾಕ್ ಮೇಲಿನ ದಾಳಿಯನ್ನು ಖಂಡಿಸುತ್ತಿರುವ ದನಿ ಎಂದು ಹೇಳಬಹುದಾದರೂ, ಅದರ ಹಿಂದಿರುವ ಕಾಳಜಿ ಅದಕ್ಕಿಂತ ಹೆಚ್ಚಿನದ್ದು ಎಂಬುದನ್ನು ಮನಗಾಣಬೇಕು. ದಿನೇದಿನೇ ಹೆಚ್ಚುತ್ತಿರುವ ಅಮೇರಿಕೆಯ ನಿರಂಕುಶ ಅಧಿಕಾರಶಾಹಿ ಮನೋಭಾವ ವಿಶ್ವ ಶಾಂತಿಗೆ ಒಡ್ಡಿದ ಭಾರೀ ಬೆದರಿಕೆಯಾಗಿ ರೂಪುಗೊಂಡಿದೆ. ವಿನಾಶಕ್ಕಾಗಿ ಅತ್ಯುನ್ನತ ತಂತ್ರಜ್ಝಾನವನ್ನು ಕೈಯಳತೆಯಲ್ಲೇ ಇಟ್ಟುಕೊಂಡಿರುವ ಅಮೇರಿಕ ದಿನಬೆಳಗಾದರೆ ಒಂದಲ್ಲ ಒಂದು ರೀತಿಯಲ್ಲಿ ವಿಶ್ವ ಶಾಂತಿ ಹಾಳುಗೆಡವಿ ಬದುಕಿಗೇ ಸಂಚಕಾರ ತಂದಿಡಲು ಸದಾ ಸಿದ್ಧವಾಗಿದೆ.

ಯಾವುದೇ ದೇಶದ ಮೇಲೆ ದಾಳಿ ಅಥವಾ ಆಕ್ರಮಣ ಮಾಡಬಲ್ಲಂಥ ಶಕ್ತಿ ಅಮೇರಿಕಕ್ಕಿದೆ ಎನ್ನುವುದೊಂದೇ ಈ ವ್ಯಾಪಕವಾಗಿ ಅಮೇರಿಕೆಯ ಭಯ ಹುಟ್ಟಿರುವುದಕ್ಕೆ ಕಾರಣವಲ್ಲ. ಖುಲ್ಲಂಖುಲ್ಲಾ ಆಗಿ, ಬರೀ ಬಲಪ್ರಯೋಗದಿಂದ ಜಗತ್ತನ್ನೇ ಮಣಿಸಹೊರಟು, ಅದನ್ನು ವಿರೋಧಿಸುವ ಶಕ್ತಿಗಳನ್ನೇ ಇಲ್ಲದಂತಾಗಿಸ ಹೊರಟಿರುವ ಅದರ ಜನಗಳ ಅಧಿಕಾರ ದಾಹ.

ಮುಂದೆ ನಿಂತಿರುವ ಪ್ರತ್ಯಕ್ಷ ವಿನಾಶವನ್ನು ತಡೆಗಟ್ಟಲು ಹೊಡೆದಾಡಬೇಕಾದ್ದು ಸರಿಯೆನ್ನಬಹುದೇನೊ, ಆದರೆ, ಪ್ರತ್ಯಕ್ಷವಾಗಿ ಕಾಣದೇ ಇರುವುದನ್ನು ಊಹಿಸಿಕೊಂಡು ಯುದ್ಧಕ್ಕೆ ಹೊರಟರೆ ಅದನ್ನು ಸಮರ್ಥಿಸಿಕೊಳ್ಳುವುದದ್ರೂ ಹೇಗೆ?
ಕಂಡ ಸಾಕ್ಶಿಯ ಬೆನ್ನು ಹತ್ತಿಯೋ ಇಲ್ಲ ಕಲ್ಪಿಸಿಕೊಂಡು ಬಂದೂಕು ತಿರುಗಿಸಿರುವ ಹಿನ್ನೆಲೆಯಲ್ಲಿ, ಅದಕ್ಕೆ ಅಮೇರಿಕ ಕೊಡುವ ಕಾರಣಗಳೇನಾದರೂ ಇರಲಿ, ಅಸಲೀ ಯುದ್ಧದಲ್ಲಿ ಆಗುವುದಕ್ಕಿಂತ ಕಡಿಮೆ ಜೀವ ನಷ್ಟ ಆಗುತ್ತದೇನು?

“ಈ ಯುದ್ಧದ ಗುರಿ ನಮ್ಮ ದೇಶ, ಅಧಿಕಾರ ಮತ್ತು ಸ್ಥಾನಗಳಿಗೆ ಚ್ಯುತಿ ಬಾರದಂತೆ ಮಾಡುವುದು” ಎಂಬುದು ಯುದ್ಧ ಶುರುವಾಗುವ ಮುನ್ನ ಅಮೇರಿಕ ಮಾಡಿದ ಉದ್ಘೋಷಣೆ. ಹಾಗೇನಾದರೂ ಚ್ಯುತಿ ಬಂದಲ್ಲಿ, ಬರುವಂಥಾ ಸೂಚನೆ ಸಿಕ್ಕಿದಲ್ಲಿ, ಸಿಕ್ಕಿದ ಯಾವುದೇ ಸೂಚನೆಯನ್ನು ತನಗೆ ತೋಚಿದಂತೆ ತಿರುಚಿ, ಇನ್ನೊಂದು ಯುದ್ಧ ಮಾಡಲು ಜಗತ್ತಿನ ಹಿಂಸೆಯ ಲೋಕದಲ್ಲಿ ಹೊಸ ಆಯಾಮಗಳನ್ನು ಸೃಷ್ಟಿಸುತ್ತಿರುವ ಈ ಬಲಿಷ್ಠ ರಾಷ್ಟ್ರದ ನಾಯಕರು ಬಳಸಿಕೊಳ್ಳುತ್ತಾರೆ.

ನಾನು ಹೇಳುತ್ತಿರುವುದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ, ಈ ಮಾತುಗಳು ಡಿಕ್ ಚೆನೆ ಅಥವಾ ಡೋನಾಲ್ಡ್ ರಮ್ಸ್‌ಫ಼ೀಲ್ಡ್ ಅಥ್ವಾ ಈಗ ಅಧಿಕಾರ ವಹಿಸಿಕೊಂಡಿರುವ ಇನ್ಯಾವುದೇ ರ್‍ಯಾಡಿಕಲ್ ಸ್ಟಾಟಿಸ್ಟ್ ಎಕ್ಸ್‌ಟ್ರಿಮಿಸ್ಟುಗಳದ್ದಲ್ಲ ಅನ್ನುವುದು ನಿಮಗೆ ಅರ್ಥವಾದೀತು.

ಹೀಗೆ ಹೇಳಿದ್ದು, ನಮ್ಮಲ್ಲಿ ಬಹಳ ಗೌರವಿಸಲ್ಪಡುವಂಥಾ ಹಿರಿಯರಾದ ಡೀನ್ ಆಚೆಸನ್ (ಅಕಿಸನ್?). ನಲವತ್ತು ವರ್ಷಗಳ ಹಿಂದೆ, ಅವರು ಕೆನಡಿ ಆಡಳಿತದಲ್ಲಿ ಹಿರಿಯ ಸಹಲಗಾರಗಿ ಸೇವೆ ಸಲ್ಲಿಸುತ್ತಿದ್ದಾಗ ಅಮೇರಿಕ ಕ್ಯೂಬಾದ ಮೇಲೆ ಮಾಡಿದ ದಾಳಿಯನ್ನು ಸಮರ್ಥಿಸಿಕೊಂಡಿದ್ದರು. ಆ ಅಂತರಾಷ್ಟ್ರೀಯ ಭಯೋತ್ಪಾದಕರ ದಂಡಿನ ದಾಳಿ ಬರೀ ಅಮೇರಿಕ-ಕ್ಯೂಬಾಕ್ಕೆ ಸೀ‌ಎಮಿತವಾಗಿರದೇ, ಅಮೇರಿಕ ಹೇಳಿಕೊಮ್ಡಮ್ಟೆ ಆಳುವ ಕೂಟದ ಬದಲಾವಣೆಯ ಉದ್ದೇಶವನ್ನೂ ಮೀರಿ ಹೋಗಿ, ಇಡೀ ಜಗತ್ತೇ ನ್ಯೂಕ್ಲಿಯರ್ ಯುದ್ಧವನ್ನು ಎದುರು ನೋಡುತ್ತಾ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು ಎಂದು ಸ್ಪಷ್ಟವಾಗಿ ತಿಳಿದಿದ್ದಾಗಲೂ ಕೂಡ!
ಇಷ್ಟಾದ ಮೇಲೆ ಹಿರಿಯ ಅಚಿಸನ್ “ಅಮೇರಿಕನ್ ಸೊಸೈಟಿ ಆಫ಼್ ಇಂಟರ್‌ನ್ಯಾಷನಲ್ ಲಾ” ಕ್ಕೆ ನಿರ್ದೇಶಿಸಿದಂತೆ, ಅಮೇರಿಕದ
“ನೆಲ, ಅಧಿಕಾರ ಮತ್ತು ಸ್ಥಾನಗಳಿಗೆ ಚ್ಯುತಿ ಬಾರದಂತೆ ಮಾಡಲು ತೆಗೆದುಕೊಂಡ ಕ್ರಮ ಯಾವುದೇ ರೀತಿಯಲ್ಲಿ ಕಾನೂನಿಗೆ ಒಳಪಡಲಾರದು,” ಈ ಸಮರ್ಥನೆಯಲ್ಲಿ ಕ್ಯೂಬಾದ ಮೇಲೆ ನಡೆದ ಭಯೋತ್ಪಾದಕ ದಾಳಿ ಮತ್ತು ಆರ್ಥಿಕತೆಯನ್ನೇ ಬುಡಮೇಲು ಮಾಡಿದ ಕ್ರಮ ಕೂಡ ಸೇರಿತ್ತು.

ಇದನ್ನೆಲ್ಲ ನಿಮ್ಮ ಸ್ಮರಣೆಗೆ ತಂದದ್ದು ಯುದ್ಧದಿಂದ ಉದ್ಭವಿಸುವ ಸಮಸ್ಯೆಗಳ ಮತ್ತು ಮಾತುಗಳ ಬೇರು ಬಹಳ ಆಳಕ್ಕಿಳಿದಿರುತ್ತದೆ ಎಂದು ಹೇಳಲು. ಪ್ರಸ್ತುತ ಆಡಳಿತವು ಅತಿರೇಕದ ತುತ್ತತುದಿಯಲ್ಲಿ ಕೂತು ವಿಸ್ತೃತ ನೀತಿನಿರೂಪಣೆಯಲ್ಲಿ ತೊಡಗಿರುವುದರಿಂದ. ಈ ಪಡೆಯ ರಕ್ತದಾಹ ತಣಿಸಲಾರದಷ್ಟಿದೆ. ಈಗಿನ ಪಡೆಯ ವಿಸ್ತಾರ ಅಷ್ಟೇನೂ ದೊಡ್ಡದಿಲ್ಲ, ಆದರೆ ಆಳವಾಗಿ ಬೇರೂರಿರುವ ಈ ಸಮಸ್ಯೆಗಳನ್ನು, ಗಮನಿಸಿ, ಬಗೆಹರಿಸದ ಹೊರತು ಈಗಿರುವುದಕ್ಕಿಂತಾ ಹಿಂಸಾಪ್ರಿಯ ಪಡೆಯೊಂದು ಉದ್ಭವಗೊಳ್ಳುವುದು ನಿಶ್ಚಿತ.

ಈಗ ಕಾಣುವಂತೆ, ಈಗಿನ ಆಡಳಿತದ “ಮಹಾನ್ ಉದ್ದೇಶ” ತನ್ನ ದೇಶದಲ್ಲಿನ ಬಹುಪಾಲು ಜನರನ್ನೂ ಸೇರಿಸಿದಂತೆ ವಿಶ್ವದಾದ್ಯಂತ ವಿರೋಧ, ಹೆದರಿಕೆಯನ್ನು ಕೆರಳಿಸಿದೆ. ಹೆಚ್ಚಾಗಿ ಈ ಭಾವನೆಗಳು ಹೆಪ್ಪುಗಟ್ಟಿಗೊಂಡಷ್ಟು ತೀವ್ರವಾಗಿ ವ್ಯಕ್ತವಾಗಿರುವುದು ಹಿಂದೆ ಅಮೇರಿಕೆಯ ಕೃತ್ಯಗಳಿಗೆ ಬಲಿಬಿದ್ದು ಈಗ ಸಾವರಿಸಿಕೊಳ್ಳುತ್ತಿರುವ ದೇಶಗಳಲ್ಲಿ.

ಆ ದೇಶಗಳ ಚರಿತ್ರೆಯಲ್ಲಿ ಆಳವಾಗಿ ನಿಂತ ಆಕ್ರಮಣಗಳು ಅದರ ಹಿಂದಿದ್ದ ಸತ್ಯಗಳು ಸುಲಭಾವ್ಗಿ ಗೋಚರವಾದ್ದವಲ್ಲ. ಅದಕ್ಕೆ ದುಬಾರಿ ಬೆಲೆ ತೆತ್ತಿವೆ. ಅದಕ್ಕೇ ಅವು ಉನ್ನತ ಮಟ್ಟದ ಬುದ್ಧಿವಂತ ಮಾತುಗಳಿಂದ ಮರುಳಾಗುವುದಿಲ್ಲ. ಆ ರಾಷ್ಟ್ರಗಳು “ನಾಗರೀಕತೆ” ಎಂಬ ಕ್ಲಬ್ಬಿನ ಸೋಗಿನ ಸದಸ್ಯರ ತಂತ್ರಕ್ಕೆ ಬಲಿಯಾಗಿ ವಿಛ್ಹಿದ್ರಗೊಂಡು ಸಾವರಿಸಿಕೊಳ್ಳಲು ಹೆಣಗುತ್ತಿರುವವು.

ಕೆಲದಿನಗಳ ಹಿಂದೆ, ವಿಶ್ವದ ಬಹುಪಾಲು ರಾಷ್ಟ್ರಗಳ ಪ್ರತಿನಿಧಿಗಳು ಸೇರಿವಿರುವ ಆಲಿಪ್ತ ಚಳುವಳಿಯ ಮುಖ್ಯಸ್ಥ ಬುಷ್ ಸರಕಾರವನ್ನು ಹಿಟ್ಲರ್ ಆಡಳಿತಕ್ಕಿಂತಾ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ವ್ಯಾಖ್ಯಾನಿಸಿದ.
ಆತ ವಾಸ್ತವಾಗಿ ಅಮೇರಿಕದ ಪರ ವಹಿಸಿ, ವಾಷಿಂಗ್ಟನ್ನಿನ ಅಂತರಾಷ್ಟ್ರೀಯ ಪ್ರಾಜೆಕ್ಟುಗಳಲ್ಲಿ ಮುಖ್ಯ ಪಾತ್ರವಹಿಸಿರುವವನು. ಅಂಥವನಿಂದ ಈ ಮಾತುಗಳು ಬರುತ್ತವೆಂದರೆ, ಅವನು ಮಾತಾಡಿದ್ದು ಸಾಮ್ಪ್ರದಾಯಿಕ ಬಲಿಪಶುಗಳ ಪರ ಮತ್ತು ಆ ಕೆಲಸವನ್ನು ಮಾಡುವುದನ್ನೇ ರೂಢಿಸಿಕೊಂಡಿರುವ ಆಕ್ರಮಣಕಾರರ ವಿರುದ್ಧವಾಗಿ ಈನುವುದರ ಬಗ್ಗೆ ಹೆಚ್ಚಿನ ಸಂಶಯವಿಲ್ಲ.

ಹೀಗೇ ಮಾತಾಡುತ್ತಾ ಹೋಗುವುದು ಬಹಳ ಸಲೀಸು. ಆದರೆ, ಈ ಅಂಶಗಳನ್ನು ಗಮನಿಸಿ, ಅತೀವ ಕಾಳಜಿಯಿಮ್ದ ತೂಗಿ ನೋಡುವುದೂ ಮುಖ್ಯ.

ಬುಷ್ ಆಡಳಿತ ಜಗತ್ತನ್ನು ಹೆದರಿಸುವ ಮುನ್ನ ಇಂಟೆಲಿಜೆನ್ಸ್ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ತಜ್ಝರು ವಾಷಿಂಗ್ಟನ್ನಿನ ನೀತಿಗಳು ಸೇಡಿಗಾಗಿ ಇಲ್ಲವೇ ವಿರೋಧ ಕಂಡಲ್ಲಿ, ಭಯೋತ್ಪಾದನೆ ಹುಟ್ಟುಹಾಕಲು ಸಮೂಹನಾಶಕ ಆಯುಧಗಳ ಉತ್ಪಾದನೆಯನ್ನು ದಿಢೀರನೆ ಏರಿಸುವಲ್ಲಿ ತೊಡಗಿವೆ ಎಂದು ಹೇಳುತ್ತಿದ್ದರು.

ತನ್ನ ವಿರುದ್ಧದ ಸಮಸ್ಯೆಗಳನ್ನು ನಿವಾರಿಸಲು ಅಮೇರಿಕಕ್ಕೆ ಎರಡು ಮಾರ್ಗಗಳು ಮಾತ್ರ ಇವೆ. ಒಂದು, ತನ್ನ ಮೇಲಿನ ದೂರುಗಳನ್ನು ತಾಳ್ಮೆಯಿಂದ ಆಲಿಸಿ ಮಾನವಂತ ರಾಷ್ಟ್ರವಾಗಿ ಕಾಣಿಸಿಕೊಳ್ಳಲು ಆಗಬೇಕಾದ ಸರ್ವ ರೀತಿಯ ಬದಲಾವಣೆಗಳನ್ನು ತನ್ನೊಳಗೆ ತಂದುಕೊಳ್ಳುವುದು. ಇದು ತಪ್ಪಿದಲ್ಲಿ, ಬೇರೆ ದೇಶಗಳಿಗಿಂತ ಪ್ರಬಲವಾದ, ವಿನಾಶಕಾರೀ ಮೆಷೀನುಗಳನ್ನು ತಯಾರಿಸಿ, ಸಿಕ್ಕಸಿಕ್ಕ ಕಡೆ, ಬೇರೆ ದೇಶಗಳಿಂದ ಸಿಕ್ಕ ಯಾವುದೇ ಸೂಚನೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಅರ್ಥೈಸುತ್ತಾ, ಭಸ್ಮಾಸುರನಾಗಿ ಮೆರೆಯುವುದು.

ಎರಡನೇ ದಾರಿಯನ್ನು ಸಧ್ಯಕ್ಕೆ ಅಮೇರಿಕ ಆಯ್ದುಕೊಂಡಿದೆ ಎನ್ನುವುದರಲ್ಲಿ ಸಮ್ಶಯವೇ ಇಲ್ಲ. ಹೀಗೇ ಮುಂದುವರೆದಲ್ಲಿ ಮನುಕುಲವೇ ನಾಶವಾಗಬಹುದು ಎಂದರೆ ಅತಿಶಯೋಕ್ತಿಯೇನಲ್ಲ.

ನಮ್ಮ ಮನಸ್ಸಿನಲ್ಲಿ ಈ ವಿಷಯಗಳು ಹಸಿಯಾಗಿರುವಾಗಲೇ ಇನ್ನೊಂದು ಮಾತು ಹೇಳಬೇಕು. ಬರ್ಬರ ಅಣು ಯುದ್ಧ ಅಕಿಸನ್‌ರ ಭಾಷಣಕ್ಕೆ ಮುನ್ನ ಪವಾಡವೊಂದರಿಂದಲೇ ತಪ್ಪಿತೆನ್ನಬಹುದು.

ಈಗ ಹಾಗಿಲ್ಲ. ರಕ್ತಪಾತದ ಸೂಚನೆಗಳು ದಿನೇ-ದಿನೇ ದಟ್ಟವಾಗುತ್ತಿವೆ. ವಾಷಿಂಗ್ಟನ್ನಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಭಯ, ಆತಂಕಗಳ ಸೆರೆಯಲ್ಲಿ ಜಗತ್ತು ಕಾದು ನೋಡಬೇಕಿದೆ.

ನಮ್ಮ ಆತಂಕಗಳಿಗೆ, ಭಯಕ್ಕೆ ಸಾಂತ್ವನದ ಉತ್ತರ ನೀಡಬಲ್ಲವರು, ಶಾಂತಿ ತುಂಬಿದ ಹೊಸ ಜಗತ್ತಿಗೆ ನಾಂದಿ ಹಾಡಬಲ್ಲವರೆಂದರೆ ಅಮೇರಿಕದ ಪ್ರಜೆಗಳು ಮಾತ್ರ.

ಇಷ್ಟೆಲ್ಲ ವಿಷಯಗಳನ್ನು ಗಮನದಲ್ಲಿಟ್ಟು, ದುರ್ಬಲ ಗುಬ್ಬಿಯ ಮೇಲೆ ಅತ್ಯುನ್ನತ ಬ್ರಹ್ಮಾಸ್ತ್ರ ಪ್ರಯೋಗಿಸುವುದನ್ನು ಇಪ್ಪತ್ತು ವರ್ಷಗಳಿಂದ ರೂಢಿಮಾಡಿಕೊಂಡ ಅಮೇರಿಕ ಪರಿಯನ್ನು ನಾವು ನೋಡಬೇಕಿದೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.