ನನ್ನ ಸಂಶೋಧನೆಯ ಪರಿಕಲ್ಪನೆ

ಈ ಶೀರ್ಷಿಕೆಯೇ ಒಂದರ್ಥದಲ್ಲಿ ನನಗೆ ಅಸಂಬದ್ಧವಾಗಿ ಕಾಣಿಸಿದರೂ ಅದನ್ನೆ ಉಳಿಸಿಕೊಳ್ಳಲು ಬಯಸುತ್ತಿರಲು ಕಾರಣ, ಸಂಶೋಧನೆಯ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ನಾನು ಆ ಶಿಸ್ತಿನಲ್ಲಿ ಶಿಕ್ಷಣವನ್ನು ನನಗೆ ನೀಡಿದ ಹಿರಿಯ ಸಂಶೋಧಕರ, ಅವರ ಒಡನಾಟದ, ಅವರ ಬರಹ ಚರ್ಚೆಗಳ ಹಿನ್ನೆಲೆಯಲ್ಲಿ ನಾನು ಆ ಕ್ರಿಯೆಯನ್ನು ಗ್ರಹಿಸಿರುವ ರೀತಿ, ಮಾಡಿದ ಕೆಲಸ, ಪಡೆದ ಅನುಭವ ಇವುಗಳನ್ನೇ ಇಲ್ಲಿ ಮೂಲ ಸಾಮಗ್ರಿಯನ್ನಾಗಿ ಭಾವಿಸಿರುವುದರಿಂದ ಈ ಲೇಖನದ ಶೀರ್ಶಿಕೆಯಲ್ಲಿ ‘ನನ್ನ’ ಎಂಬ ಮಾತು ಇರುವುದು ಅಗತ್ಯವಾಗಿದೆ. ಹಾಗೆ ನೋಡಿದರೆ ವಾಸ್ತವವಾಗಿ ಎಲ್ಲ ಶ್ರೇಷ್ಠ ಸಂಶೋಧಕರ ಗುರಿ ತಮ್ಮ ತಮ್ಮ ಕ್ಷೇತ್ರದ ಸತ್ಯವನ್ನು, ಇತರರು ಕಾಣದೆ ಇರುವ ಸಂಗತಿಯನ್ನು ವ್ಯಕ್ತದ ಹಿಂದೆ ೦೦೦೦ನಿಕ್ಷಿವಾಗಿರುವ ನಿಯಮವನ್ನು ಗುರಿತಿಸುವುದೇ ಆಗಿರುವುದರಿಂದ. ‘ಅವರ’ ‘ಇವರ’ ‘ನನ್ನ’ ‘ಇತರರ’ ಎಂಬ ಸಂಶೋಧನೆಯ ಪರಿಕಲ್ಪನೆಯಿರುವುದು ತಾತ್ವಿಕವಾಗಿ ಅಸಾಧ್ಯ. ಕ್ಷೇತ್ರಗಳು, ವಿಧಾನಗಳು, ವಸ್ತು ಬೇರೆ ಇರಬಹುದಾದರೂ ಎಲ್ಲ ಸಂಶೋಧನೆಯ ಗುರಿ ಒಂದೇ: ವಾಸ್ತವವನ್ನು ಕಾಣುವುದು. ‘ತಮಸೋ ಮಾ ಜ್ಯೋತಿರ್ಗಮಯ’: ತಮಸ್ಸಿನಿಂದ ಜ್ಯೋತಿಯೆಡೆಗೆ ಸಾಗುವ ಉಪನಿಷತ್ತಿನ ದಾರ್ಶನಿಕರು ಒಂದು ರೀತಿಯ ಏಕೆ, ನಿಜವಾಗಿಯೂ ಬಹು ದೊಡ್ಡ ಸಂಶೋಧಕರು. ಸಂಶೋಧನೆ ಸತ್ಯವನ್ನು ಕಾಣುವ ಹಂಬಲದ ಒಂದು ಮಾರ್ಗ, ನಿರಂತರ ಪ್ರಯತ್ನದ ಶ್ರಮದ ಮಾರ್ಗ.

ಈಶಾವಾಸ್ಸೋಪನಿಷತ್ತಿನಲ್ಲಿ ಇಂತಹ ಒಂದು ಪ್ರಾರ್ಥನೆಯಿದೆ ‘ಚಿನ್ನದ ಪಾತ್ರೆಯಂತಿರುವ ಈ ಜಗತ್ತಿನ ಹಿಂದೆ ಹುದುಗಿರುವ ಸತ್ಯವನ್ನು ನೋಡಲು ಬಯಸಿದ್ದೇನೆ. ಆ ಪಾತ್ರೆಯನ್ನು ಅತ್ತ ಸರಿಸು. ನನಗೆ ಬೇಕಾಗಿರುವುದು ಆ ಚಿನ್ನದ ಪಾತ್ರೆಯಲ್ಲ. ಸತ್ಯದ ದರ್ಶನ’ ಈ ಮಾತು ವಿಶ್ವದ ಹಿಂದಿನ ಸತ್ಯವನ್ನು ಕಾಣಲು ತವಕಿಸುತ್ತಿರುವ ಸತ್ಯಶೋಧಕ ಋಷಿಯೊಬ್ಬನ ಹಂಬಲ. ಪ್ರತಿಯೊಬ್ಬ ಸಂಶೋಧಕನಲ್ಲೂ ಆ ಋಷಿಯ ಸತ್ಯವನ್ನು ಕಾಣುವ ಹಂಬಲದ ಗುಣವಿರುತ್ತದೆ. ನಮ್ಮ ಕಣ್ಣಿಗೆ ಸಂಗತಿಗಳು ಕಾಣುತ್ತವೆ: ಆದರೆ ಆ ಸಂಗತಿಗಳ ಹಿಂದೆ ಅಡಗಿರುವ ವಾಸ್ತವವನ್ನು ಪ್ರವಹಿಸುವ ಒಂದು ನಿಯಮವನ್ನು ಗುರುತಿಸಲು ಬಯಸುತ್ತಾನೆ ಸಂಶೋಧಕ. ತಾನೂ ಸೇರಿದಂತೆ ಯಾರಿಗೂ ಕಾಣಿಸಿಕೊಳ್ಳದೆ. ತಾನು ಅಡಗಿದ್ದೇನೆ ಎಂಬುದರ ಸುಳುಹನ್ನೂ ಕೊಡದೆ ಯಾವ ಸಂಗತಿ ಅಡಗಿತ್ತೋ ಅಂತಹುದರ ಸುಳುಹನ್ನು ಪಡೆದುಕೊಂಡ ಸಂಶೋಧಕ ಅದನ್ನು ಕಾಣಲು ಒಂದು ವ್ಯವಸ್ಥಿತ, ಶಿಸ್ತುಬದ್ಧ, ವಸ್ತುನಿಷ್ಠ ಪ್ರಯತ್ನವನ್ನು ಕೈಗೊಳ್ಳುವ ಬೌದ್ಧಿಕ ಕ್ರಿಯೆಯೇ ಸಂಶೋಧನೆ.

ಒಂದು ಚಿಕ್ಕ ಉದಾಹರಣೆಯನ್ನು ನನ್ನ ಅನುಭವದಿಂದಲೇ ನೀಡಬಹುದು. ಕರ್ನಾಟಕದ ಹಲವು ಊರುಗಳ ಹೆಸರುಗಳು ‘-ವರ’ ಅಥವ ‘-ವಾರ’ ನಿಂದ ಕೊನೆಯಾಗುತ್ತದೆ. ಉದಾಹರಣೆಗೆ ಬಾಣಾವರ, ನಾಗವಾರ. ಅವುಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ಕೇವೆಲ ಊಹೆಯಾಗಿಬಿಡುತ್ತವೆ. ಅಂತಹ ಊರುಗಳ ಹೆಸರುಗಳು ಕಾಣಿಸಿಕೊಳ್ಳುವ ಮುನ್ನೂರು ನಾನೂರು ವರ್ಷಗಳ ಹಿಂದಿನ ದಾಖಲೆಗಳನ್ನು ಪರಿಶೀಲಿಸಿದರೆ ಅವುಗಳ ಏನನ್ನು ಸೂಚಿಸುತ್ತವೆ ಎಂಬುದರ ಮೇಲೆ ಥಟ್ಟನೆ ಬೆಳಕು ಬಿದ್ದಂತಾಗುತ್ತದೆ.

ವರ, ‘ವಾರ’ ಜಾಗದಲ್ಲಿ ಹಿಂದೆ ‘-ಪುರ’ ಎಂಬ ಪ್ರತ್ಯಯವಿದ್ದಿತು. ಮತ್ತು ಹೆಸರಿನ ಅರ್ಥ ಸ್ಪಷ್ಟವಾದರೂ ಹ್ರಸ್ವ. ದೀರ್ಘಗಳಿರುವ ‘ವರ’ ‘ವಾರ’ ಎಂದಾದದ್ದು ಏಕೆ ಎಂಬ ಪ್ರಶ್ನೆಗೆ ವಿಜ್ಞಾನ ಉತ್ತರ ಕೊಡಲಾರದು: ‘ಹೇಗೆ?’ ಎಂಬ ಪ್ರಶ್ನೆಗೆ ಉತ್ತರವನ್ನು ಕೊಡಬಲ್ಲದು. ‘ಪುರ’ ಪದವು ಹೆಸರುಗಳ ಕೊನೆಯಲ್ಲಿ ‘-ವರ’ ‘-ವಾರ’ ಆಗುವಲ್ಲಿ ಒಂದು ಚಿಕ್ಕ ನಿಯಮವು ಕಾಣಿಸಿಕೊಳ್ಳುತ್ತದೆ. ಆ ಪ್ರತ್ಯಯಗಳ ಹಿಂದಿನ ಸ್ವರವು ದೀರ್ಘವಾಗಿದ್ದರೆ ‘-ವರ’ ಎಂಬ ಹ್ರಸ್ವಾದಿ ಪ್ರತ್ಯಯವೂ, ಹ್ರಸ್ವಿವಾಗಿದ್ದರೆ ‘-ವಾರ’ ಎಂಬ ದೀರ್ಘಾದಿ ಪ್ರತ್ಯಯವೂ ಕಾಣಿಸಿಕೊಳ್ಳುತ್ತದೆ. ಕಾರವಾರ, ಮಾಯಾವರ, ಧರ್ಮಾವರ, ಸಿರಿವಾರ, ಇಂತಹ ಊರುಗಳ ಹೆಸರುಗಳನ್ನು ಗಮನಿಸಿ. ಆ ನಿಯಮವು ಯಾರೋ ಹಾಕಿಕೊಟ್ಟದ್ದಲ್ಲ. ಜನರ ಆಡುಮಾತಿನಲ್ಲಿ ತನಗೆ ತಾನೇ ರೂಪುಗೊಂಡಂತಹುದು. ಅಂತಹುವನ್ನು ಗುರುತಿಸುವ ಕ್ರಿಯೆ ಸಂಶೋಧನೆ. ಇದೊಂದು ಚಿಕ್ಕ ಉದಾಹರಣೆ ಮಾತ್ರ.

ಆಂಧ್ರದಲ್ಲಿ ವಾಸವಾಗಿದ್ದು ಅಲ್ಲೇ ಕೊನೆಯುಸಿರೆಳೆವ ಪಂಪ ತನ್ನದು ಧಾರವಾಡ ಜಿಲ್ಲೆಯ ಭಾಷೆ ಎಂದು ಹೇಳಿಕೊಳ್ಳಲು ಕಾರಣ ಏನು? ಪ್ರಭುತ್ವವನ್ನು ಧಿಕ್ಕರಿಸಿ ನಿಂತ ಹರಿಹರನಿಗೆ ಮನುಷ್ಯರ ಮೇಲೆ ಕಾವ್ಯ ಬರೆಯಬಾರದು ಎಂದು ಘೋಷಿಸುವ ಧೈರ್‍ಯ ಎಲ್ಲಿಂದ ಬಂದಿತು? ವಚನಕಾರರ ಅಂಕಿತಗಳು ವಾಸ್ತವವಾಗಿ ಏನನ್ನು ಸೂಚಿಸುತ್ತವೆ? ಇಂತಹ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಒಂದೇ ಸಾಲಿನವಾಗಿದ್ದರೂ ಒಂದು ದೀಪ ಇಡೀ ಪ್ರದೇಶವನ್ನು ಬೆಳೆಗುವಂತೆ ಶ್ರಮಪೂರ್ಣ ಪ್ರಯತ್ನದಿಂದ ಅರ್ಥಾತ್ ಸಂಶೋಧನೆಯಿಂದ ಸಿದ್ಧವಾದ ಅಂತಹ ಉತ್ತರಗಳು ಕವಿಗಳ ಕಾವ್ಯಗಳ ಮೇಲೆ, ವಚನ ವಾಙ್ಮಯದ ಮೇಲೆ ಅಪೂರ್ವ ಬೆಳಕನ್ನು ಬೀರಿ ಅವುಗಳನ್ನು ಹೆಚ್ಚು ಅರ್ಥಪೂರ್ಣವಾಗಿ ಗ್ರಹಿಸಲು ಸಹಾಯಕವಾಗುತ್ತದೆ.

ಯಾವುದೇ ಸಂಶೋಧನೆಯಲ್ಲಿ ಕಂಡುಕೊಂಡ ಉತ್ತರಕ್ಕಿಂತ ಆ ಉತ್ತರ ಹುಡುಕಲು ಪ್ರಚೋದನೆ ನೀಡಿದ ಪ್ರಶ್ನೆ, ಮತ್ತು ಆ ಉತ್ತರವನ್ನು, ಅರ್ಥಾತ್ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಲು ನಡೆಯಿಸಿದ ಮಾರ್ಗ ಮುಖ್ಯ. ಕೆಲವರ ಪ್ರಕಾರ, ಸಂಶೋಧನೆಯಲ್ಲಿ ಒಂದು ಸುಸಂಬದ್ಧ ಪ್ರಶ್ನೆಯನ್ನು ರೂಪಿಸಿಕೊಳ್ಳುವ ಹಂತವೇ ಅತ್ಯಂತ ಮುಖ್ಯವಾದುದು. ಪ್ರಶ್ನೆಯೇ ಹೊಳೆಯದಿದ್ದರೆ ಉತ್ತರ ಕಂಡುಕೊಳ್ಳುವ ಪ್ರಶ್ನೆಯಾದರೂ ಹೇಗೆ ಉದ್ಭವಿಸೀತು? ಯಾವನೇ ಸಂಶೋಧಕನನ್ನು ಗುರುತಿಸುವುದು ಅವನು ಸಮಸ್ಯೆಗಳಿಗೆ ಕಂಡು ಹಿಡಿದ ಪರಿಹಾರ ಅಥವಾ ಉತ್ತರಗಳಿಂದ ಅಲ್ಲ. ಅವನು ಕಂಡುಕೊಂಡ ಉತ್ತರವು ಅಸಮರ್ಪಕವಾಗಿದ್ದರೆ ಇನ್ನೊಬ್ಬ ಸಮಸ್ಯೆಯ ಬಗ್ಗೆ ಕೆಲಸ ಮಾಡಿ ಆ ಸರಿಯಾದ ಉತ್ತರವನ್ನು ಗುರುತಿಸಬಹುದು. ಮೊದಲನೆಯವನ ಅಂತಹ ಪ್ರಯತ್ನವೇ ಇಲ್ಲದಿದ್ದರೆ ಎರಡನೆಯವನಿಗೆ ಪ್ರಚೋದನೆ ದೊರಕುತ್ತಿರಲಿಲ್ಲ.

ಕನ್ನಡ ಸಂಶೋಧನೆಯ ಮೊದಲ ಹಂತವನ್ನೇ, ಮುಖ್ಯವಾಗಿ ಹತ್ತೊಂಬತ್ತನೇ ಶತಮಾನವನ್ನೇ ಗುರುತಿಸಬಹುದು. ಪಾಶ್ಚಾತ್ಯ ವಿದ್ವಾಂಸರು ನಮ್ಮ ಇಂದಿನ ಬದುಕು, ಅವು ರೂಪುಗೊಳ್ಳಲು ಕಾರಣವಾದ ಹಿಂದಿನ ಪರಂಪರೆಗಳ ಬಗ್ಗೆ ವಿಶೇಷ ಕುತೂಹಲವನ್ನು ತೋರಿದರಲ್ಲದೆ ಆ ಬಗ್ಗೆ ವಿಶೇಷ ಕೆಲಸವನ್ನೂ ಮಾಡಿದರು. ಬುಕನನ್ ಎಂಬ ಅಧಿಕಾರಿ ೧೮೦೦ರ ಸುಮಾರಿನಲ್ಲಿ ಮೈಸೂರು ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಶೇಷವಾಗಿ ಸಂಚರಿಸಿ ಆ ಪ್ರದೇಶದ ಜನರ ನಂಬಿಕೆ, ಧಾರ್ಮಿಕ ವ್ಯವಸ್ಥೆ, ಕತೆಗಳು, ಆಚಾರ ವ್ಯವಹಾರಗಳೇ ಆದಿಯಾಗಿ ಹಲವು ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದುದಲ್ಲದೆ ಕಲ್ಲ ಮೇಲೆ ಕೆತ್ತಿದ್ದ ಶಾಸನಗಳನ್ನು ಓದಿಸಿದರು. ಆ ಶತಮಾನದಲ್ಲಿ (೧೯ ನೇ ಶ.) ಮತ್ತು ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಪ್ರಾಚೀನ ಕನ್ನಡ ವಾಙ್ಮಯ ಮತ್ತು ಶಾಸನಗಳ ಸಂಗ್ರಹ ಪ್ರಕಟಣೆಗಳ ಕ್ಷೇತ್ರದಲ್ಲಿ ಬಹು ಶ್ರೇಷ್ಠ ಸಂಶೋಧಕರು ಶ್ರಮಿಸಿದರು. ಫ್ಲೀಟ್, ರೈಸ್, ಕಿಟಲ್, ಆರ್.ನರಸಿಂಹಾಚಾರ್, ಅ.ವೆಂಕಟ ಸುಬ್ಬಯ್ಯ, ಗೋವಿಂದ ಪೈ, ಫ.ಗು. ಹಳಕಟ್ಟಿ, ಎಸ್.ಸಿ. ನಂದಿಮಠ, ಎಂ.ಎಚ್.ಕೃಷ್ಣ, ತೀ.ನ.ಶ್ರೀಕಂಠಯ್ಯ, ಡಿ.ಎಲ್.ನರಸಿಂಹಾಚಾರ್, ಅ.ನೇ.ಉಪಾಧ್ಯ, ಪಿ.ಬಿ.ದೇಸಾಯಿ ಇವರು ಆ ಅಗ್ರಗಣ್ಯರಲ್ಲಿ ಕೆಲವರು. ಅವರ ಸಂಶೋಧನ ವಿಧಾನ ಒಂದೇ: ಅದು ಸತ್ಯಶೋಧದ ವಿಧಾನ. ಶಾಸನಗಳೋ ಕಾವ್ಯಗಳೋ ಅವುಗಳ ಸಂಗ್ರಹ ಮೊದಲ ಹೆಜ್ಜೆ; ಅವುಗಳ ಪ್ರಕಟಣೆ ಎರಡನೆಯ ಹೆಜ್ಜೆ. ಆ ವಿಷಯವಾಗಿ ಅವರು ಪಟ್ಟಿರುವ ಶ್ರಮ ನಮ್ಮ ಎಣಿಕೆಗೆ ಮೀರಿದ್ದು.

ಶಾಸನಗಳ, ಹಸ್ತಪ್ರತಿಗಳ ಸಂಗ್ರಹಕ್ಕಾಗಿ ನಾಡಿನ ಮೂಲೆ ಮೂಲೆಗಳಲ್ಲಿ ಸುತ್ತಿ, ಅವುಗಳ ಪ್ರತಿ ಮಾಡಿ, ಅಚ್ಚಿಗೆ ಸಿದ್ಧಪಡಿಸಿ ಹೊರತರುವಲ್ಲು ಅವರು ಪಟ್ಟ ಸಾಹಸ ಅನೂಹ್ಯ. ಅವರು ಹೊರ ತಂದ ಆ ಪ್ರಾಚೀನ ಕೃತಿಗಳ ನೈಜತೆ, ಪಾಠ ಶುದ್ಧಿ, ಕಾಲ, ಕೃತಿಕಾರರು, ಆ ಕೃತಿಗಳು ಒಳಗೊಂಡಿರುವ ಮಾಹಿತಿಯ (ಸಾಹಿತ್ಯಕ, ಐತಿಹಾಸಿಕ ಅಥವಾ ಸಾಂಸ್ಕೃತಿಕ) ಚರ್ಚೆ, ವ್ಯಖ್ಯಾನಗಳೂ ನಡೆದುವು. ಅಲ್ಲೆಲ್ಲ ಆ ವಿದ್ವಾಂಸರಲ್ಲಿ ಕಂಡುಬರುವ ಒಂದು ಸಮಾನ ಅಂಶ; ಸತ್ಯಶೋಧದ ಬಗ್ಗೆ ಅವರಿಗಿದ್ದ ತುಡಿತ, ಆ ತುಡಿತದಿಂದಾಗಿ ಅವರು ಒಂದು ತೀವ್ರ ತನ್ಮಯತೆಯಿಂದ – ಸಾರಸ್ವತ ತಪಸ್ಸು ಎಂದು ಕರೆಯಬಹುದಾದ ಏಕಾಗ್ರ ಚಿತ್ತತೆಯಿಂದ ತಮ್ಮ ತಮ್ಮ ‘ಕಾಯಕ’ವನ್ನು, ‘ಸತ್ಯ-ಶುದ್ಧ-ಕಾಯಕ’ವನ್ನು ನಡೆಸಿದರು. ಅದು ಆಧುನಿಕ ಕಾಲದ ಸಂಶೋಧಕರಿಗೆ ಮಾರ್ಗದರ್ಶಿಯಾಗಬೇಕು.

ನಾವು ಗಮನಿಸಬೇಕಾದ ಸಂಗತಿ ಎಂದರೆ ಅದರಲ್ಲಿ ಬಹುತೇಕರಿಗೆ ಡಾಕ್ಟೋರೇಟ್ ಪದವಿ ಇರಲಿಲ್ಲ. ಪಿ‌ಎಚ್‌ಡಿ ಪಡೆದವರೂ ಕೂಡ ತಮ್ಮ ಪಿ‌ಎಚ್‌ಡಿ ಪದವಿಯು ತಾವು ಸಂಶೋಧನೆ ಮಾಡಲು ಅರ್ಹತೆ ಪಡೆದಿರುವ ಶಿಫಾರಸು ಪತ್ರವೆಂದೇ ಭಾವಿಸಿ, ಆ ಪದವಿಯನ್ನು ಪಡೆದ ಮೇಲೆ ಅಲ್ಲಿಗೇ ನಿಲ್ಲದೆ ಕೊನೆ ಉಸಿರಿರುವವರೆಗೂ ತಮ್ಮ ಸಂಶೋಧನೆಗಳನ್ನು ಮುಂದುವರಿಸಿದರು. ಅವರನ್ನು ಈಗಿನ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಜೊತೆ ಹೋಲಿಸಿದರೆ ಅವರ ಮಹತ್ವ ಅರ್ಥವಾಗುತ್ತದೆ. ಅಚ್ಚಾಗಿರುವ ಕೆಲವು ಪಿ‌ಎಚ್‌ಡಿ ನಿರ್ಬಂಧಗಳನ್ನು ನೋಡಿ ನನಗೆ ನಿಜವಾಗಿಯೂ ಗಾಬರಿಯಾಗಿದೆ. ಅವುಗಳ ತೀರ ಕಳಪೆಯಾಗಿರುವ ಗುಣಮಟ್ಟಕ್ಕೆ ನಾನು ಪಿ‌ಎಚ್‌ಡಿ ಅಭ್ಯರ್ಥಿಗಳಿಗಿಂತ ಅವರ ಮಾರ್ಗದರ್ಶಕರನ್ನು () ಹೊಣೆ ಮಾಡಲು ಬಯಸುತ್ತೇನೆ ಅವರಲ್ಲ (ಮಾರ್ಗದರ್ಶಕರಲ್ಲಿ) ಬಹುಪಾಲು ಜನ ಅಂಥದೇ ನಿಬಂಧಗಳನ್ನು ಸಿದ್ಧಪಡಿಸಿ ಪದವಿ ಪಡೆದವರು: ಮತ್ತು ಡಾಕ್ಟೋರೇಟ್ ಪದವಿ ಪಡೆದ ಮೇಲೆ ಸಂಶೋಧನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವುದರಲ್ಲಿ ಸಂಪೂರ್ಣ ವಿಫಲರಾದವರು. ಗೊತ್ತಿರುವ ವಿಷಯವನ್ನೇ ಹೆಚ್ಚು ಆಕರ್ಷಕವಾಗಿ, ಈಚಿನ ಬಹು ಪ್ರಚಾರ ಪಡೆದಿರುವ ಪದಗಳನ್ನು ಪದ ಪುಂಜಗಳನ್ನು ಬಳಸಿ ಅದನ್ನೇ ಸುತ್ತಿ ಬಳಸಿ ಹೇಳುವುದು: ಜೊತೆಗೆ ರಂಜಕವಾಗಿ ಮಾಡಲು ಕೆಲವು ಕಲ್ಪನೆ ಬಳಸುವುದು ಹೆಚ್ಚಾಗಿ ಕಾಣಿಸುತ್ತದೆ. ಇದಕ್ಕೆ ವಿನಾಯ್ತಿಗಳಿದ್ದರೂ ಕಡಿಮೆ.

ಸಂಶೋಧನೆಯ ಆರಂಭದ ಯುಗದ ಒಂದು ಕೊರತೆಯನ್ನು ಕಳೆದ ನಲವತ್ತು ವರ್ಷಗಳ ಸಂಶೋಧನೆಯು ಸ್ವಲ್ಪ ಮಟ್ಟಿಗೆ ಸರಿಪಡಿಸಿಕೊಂಡಿದೆ. ಮೊದ ಮೊದಲು ಸಂಶೋಧನೆಯು ಗ್ರಂಥಸ್ಥ ದಾಖಲೆಗಳನ್ನು ಸಂಪೂರ್ಣ ಅವಲಂಬಿಸಿದ್ದಿತು. ಹಸ್ತಪ್ರತಿಗಳು, ಶಾಸನ ತಾಮ್ರ ಪಟಗಳು, ನಾಣ್ಯಗಳು, ಭೂಶೋಧದ ಅವಶೇಷಗಳು ಇವು ಆ ದಾಖಲೆಗಳಲ್ಲಿ ಕೆಲವು, ಮತ್ತು ಅದು ಒಂದು ರೀತಿಯಲ್ಲಿ ಅನಿವಾರ್‍ಯವೂ ಆಗಿತ್ತು, ಸಹಜವೂ ಆಗಿತ್ತು. ಕ್ಷೇತ್ರ ಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸುವ ಕಾರ್‍ಯಕ್ಕೆ ಆ ಮೊದಲ ಘಟ್ಟದ ವಿದ್ವಾಂಸರು ಕೈಹಾಕಲಿಲ್ಲ. ಆಗ ಅವರಿಗೆ ಮುಖ್ಯವಾಗಿದ್ದುದು ಗತಕಾಲದ ಇತಿಹಾಸ. ಅದರ ಪುನಾರಚನೆ, ಜಾನಪದದ ಕಡೆ ಗಮನ ಹೋದುದು ಈಚಿನ ವರ್ಷಗಳಲ್ಲಿ. ಅದಕ್ಕಿಂತ ಭಾಷಾವಿಜ್ಞಾನದ ಉದಾಹರಣೆಯನ್ನೇ ನೋಡಬಹುದು. ಕನ್ನಡ ಭಾಷೆಯ ಚರಿತ್ರೆಯೇ ಮುಖ್ಯವಾಗಿದ್ದ ಆ ಕಾಲದಲ್ಲಿ ಸಹಜವಾಗಿಯೇ ಕಾವ್ಯ, ಶಾಸನಗಳು ಮುಖ್ಯ ಆಕರುಗಳಾದುದರಲ್ಲಿ ಆಶ್ಚರ್ಯವಿಲ್ಲ. ಭಾಷೆಗೆ ಒಂದು ಚರಿತ್ರೆ ಇರುವುದು ನಿಜವಾದರೂ ಅದು ಸಮಕಾಲೀನವೂ ಆಗಿರುವುದು ಮಾತ್ರವಲ್ಲ, ಅದು ಮನುಷ್ಯನ ಒಂದು ಭಾಗವೇ ಆಗಿರುವುದು ಅದಕ್ಕಿಂತ ಮುಖ್ಯ.

ಹೀಗಾಗಿ, ಭಾಷೆಯ ಹಿಂದಿನ ಚರಿತ್ರೆಗಿಂತ ಸಮಕಾಲೀನ ಆಡು ಭಾಷೆಯ ಕ್ಷೇತ್ರ ಕಾರ್ಯ ಮೂಲಕ ಅಧ್ಯಯನ, ವಿಶ್ಲೇಷಣೆ ಇವುಗಳತ್ತ ಕ್ರಮೇಣ ಭಾಷಾ ವಿಜ್ಞಾನಿಗಳ, ಗಮನ ಹರಿದುದು ತೀರ ಸ್ವಾಭಾವಿಕ. ಕನ್ನಡದಲ್ಲಿ ಜಾನಪದ ಅಧ್ಯಯನದ ಚರಿತ್ರೆ ಬಹಳ ಹಿಂದಕ್ಕೆ ಹೋಗುವುದಿಲ್ಲ. ಈಗಿನ ಸಂಶೋಧನೆಯಲ್ಲಿ ಕ್ಷೇತ್ರ ಕಾರ್‍ಯ ಸಹಜವಾಗಿಯೇ ಪ್ರಾಮುಖ್ಯವನ್ನು ಪಡೆದಿದೆ. ಕ್ಷೇತ್ರ ಕಾರ್‍ಯವು, ಅದು ಯಾವುದೇ ಸಂಶೋಧನೆಯಾಗಿರಲಿ, ತಂದುಕೊಡುವ ಫಲಿತಾಂಶಗಳು, ಕೆಲವೊಮ್ಮೆ ಅನಿರೀಕ್ಷಿತವೂ ಅಮೂಲ್ಯವೂ ಆಗಿರಬಲ್ಲುವು.

ನವೋದಯ ಕಾಲದ ಕನ್ನಡ ಸಂಶೋಧನೆಯ ಮಾರ್ಗ ಎಂದೆಂದಿಗೂ ಪ್ರಸ್ತುತವೇ; ಏಕೆಂದರೆ ಹಿಂದೆ ಹೇಳಿದಂತೆ ಮಾರ್ಗ, ವಿಧಾನ ಎಲ್ಲ ಕಡೆಗೂ ಎಲ್ಲ ಕಾಲಕ್ಕೂ ಒಂದೇ. ಸಂಶೋಧಕ ಆರಿಸಿಕೊಳ್ಳುವ ಕ್ಷೇತ್ರಗಳು ಬೇರೆಯಾಗಬಹುದು. ಸಮಕಾಲೀನ ಸಂಶೋಧನ ಕ್ಷೇತ್ರದ ಸುಮಾರಾದ ಪರಿಚಯ ಮಾತ್ರ ನನ್ನದಾಗಿರುವುದರಿಂದ ಅದರ ಒಟ್ಟು ಸಮೀಕ್ಷೆ ಮಾಡುವುದು ನನ್ನಿಂದ ಆಗದ ಕೆಲಸ; ಮತ್ತು ಈ ಲೇಖನದ ಉದ್ದೇಶವೂ ಅದಲ್ಲ. ಈಗ ಪಿ‌ಎಚ್‌ಡಿ ಪದವಿ ಆಕರ್ಷಣೆಯೇ ಮುಖ್ಯವಾಗಿರುವುದರಿಂದ ಕೆಲವು ತೀರ ಕಳಪೆ ನಿಬಂಧಗಳು ಹೊರಬಂದಿರುವುದನ್ನು ನಾನು ಬಲ್ಲೆ. ಒಂದು ಒಳ್ಳೆಯ ಲೇಖನ ಬರೆದು ಅಲ್ಲಿಗೆ ನಿಲ್ಲಿಸಬಹುದಾದಷ್ಟು ಸೀಮಿತ ವಿಸ್ತಾರದ ವಿಷಯವು ಪಿ‌ಎಚ್‌ಡಿ ಪದವಿಗೆ ವಸ್ತುವಾಗುತ್ತದೆ. ಆ ಪದವಿ ಪಡೆದ ಮೇಲೆ ತಮ್ಮನ್ನು ತಾವು ಸಂಶೋಧನೆಗೆ ಒಪ್ಪಿಸಿಕೊಂಡಿರುವವರ ಸಂಖ್ಯೆ ಅಷ್ಟಾಗಿ ಕಾಣಿಸುತ್ತಿಲ್ಲ ಎಂಬುದನ್ನು ನಾನು ಹಲವರ ಜೊತೆ ಮಾತನಾಡಿ ಖಚಿತಪಡಿಸಿಕೊಂಡಿದ್ದೇನೆ. ಹಿಂದೆ ಪ್ರಬುದ್ಧ ಕರ್ನಾಟಕ, ಸಾಧನೆ, ಕರ್ನಾಟಕ ಭಾರತಿ, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಗಳು ನಿಯತವಾಗಿ ಪ್ರಕಟಗೊಳ್ಳುತ್ತಿದ್ದವು. ಮತ್ತು ಎಲ್ಲ ಬಗೆಯ ಶ್ರೇಷ್ಠ ಲೇಖನಗಳಿಗೆ, ಕಾವ್ಯ, ಕತೆ, ಸಣ್ಣಕತೆ, ಸಂಶೋಧನ ಪ್ರಬಂಧಗಳು ಅಲ್ಲಿ ಬೆಳಕು ಕಾಣುತ್ತಿದ್ದವು. ಇಂದು ಅವು ಹೇಗೋ ಏನೋ ಜೀವ ಹಿಡಿದು ಬದುಕಿವೆ. ಹಳಗನ್ನಡದ ಕಾವ್ಯಗಳ ಬಗ್ಗೆ ಸಂಶೋಧನೆ ಇರಲಿ, ಅವುಗಳ ಪದಶಃ ಅರ್ಥವನ್ನು ಸರಿಯಾಗಿ ವಿವರಿಸುವವರೂ ಕಾಣೆಯಾಗುತ್ತಿದ್ದಾರೆ. ಅದು ಸಿನಿಕತನದ ಮಾತಲ್ಲ. ಸ್ನಾತಕೋತ್ತರ ತರಗತಿಗಳಲ್ಲಿ ಉಪಾಧ್ಯಾಯರು ತರಗತಿಗಳನ್ನೇ ತೆಗೆದುಕೊಳ್ಳುತ್ತಿಲ್ಲವೆಂದೂ ಕೇಳಿದ್ದೇನೆ.

ಇದನ್ನೆಲ್ಲ ಸರಿಪಡಿಸುವವರು ಯಾರು? ಭರವಸೆಯನ್ನು ಕೈ ಬಿಡಬಾರದೆಂಬ ಕಾರಣಕ್ಕಾಗಿ ಒಳ್ಳೆಯ ದಿನಗಳು ನಾಳೆ ಬಂದಾವು ಎಂಬ ನಿರೀಕ್ಷೆಯಲ್ಲಿ ನಾನಿದ್ದೇನೆ. ಸಾಹಿತ್ಯದಂತೆಯೇ ಸಾಹಿತ್ಯಕ ಸಂಶೋಧನೆ ಕ್ಷೇತ್ರದಲ್ಲೂ ಯಾವುದು ಶ್ರೇಷ್ಠವೋ ಅದು ಉಳಿಯುತ್ತದೆ. ಎಂದೆಂದಿಗೂ ಮಾನ್ಯವಾಗಿರುತ್ತದೆ.
*****

ಕೀಲಿಕರಣ: ಶ್ರೀನಿವಾಸ (ಚೀನಿ) ಮತ್ತು ಗುರುಪ್ರಸಾದ್.ಎಸ್ (ಪಚ್ಚಿ)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.