ಹುತಾತ್ಮ

ನೂರಾರು ವರುಷಗಳ ಭೀರುನೊಗವನ್ನಿಳುಹಿ,
‘ಬಿಳಿಯರಾಳಿಕೆಗಿಂದು ಕೊನೆಗಾಲ ತಂದಪೆವು
ಸಾಕು ಸಾಕೀಗೋಳು ದಾಸ್ಯ ಹಾಸ್ಯದ ಬಾಳು’-
ಎಂಬ ನುಡಿ ಕಿಡಿಗೊಂಡು ಬತ್ತಿದೆದೆಯಲಿ ಹೊತ್ತಿ
ಹಳ್ಳಿದಿಳ್ಳಿಗು ಮುತ್ತಿ ನಾಡ ಗಡಿಯಂ ಸುತ್ತಿ
ಪಂಜಾಯ್ತು! ಪರರಡಿಯಲುರುಳುತಿಹ ನರಳುತಿಹ
ಭಾರತದ ನರಕೋಟಿ ಸಿಡಿದೆದ್ದು ಗುಡುಗಿತೋ:
ಮಾಡಿರಿಲ್ಲವೆ ಮಡಿಯಿರೆಂಬುದಕೆ ತಲೆಬಾಗಿ.

ಇಂಥ ಪಡೆಗಧಿಪತಿಯು ಕಡುಚಾಗಿ ನೀನಾಗಿ
ಸರ್ವ ಸುಖಭೋಗಕ್ಕೆ ಗಡ ತಿಲಾಂಜಲಿಯಿತ್ತು
ತಾಯ ಪಾದಕ್ಕೆಂದು ರಕ್ತಾಂಜಲಿಯನಿತ್ತು
ತೆರಳಿದೆಯ? ಇಲ್ಲಿಲ್ಲ! ನೆಲದ ಮಕ್ಕಳ ಎದೆಯ
ಕ್ರಾಂತಿಸೆಲೆಯಾಗಿರುವೆ ಮಹದೇವ ಮೈಲಾರ,
ಓ ಸ್ಫೂರ್ತಿಗೊಡು ಕಂನಾಡಿನೇಕಾಂಗಿ ವೀರ.
*****