ಒಡಲಾಳ

ಸಾಕವ್ವನ ನಾಕು ಕಂಬದ ತೊಟ್ಟಿ ಹಟ್ಟಿ ಅನ್ನೋದು ದೇಹವ ಭೂಮಿಗೆ ಇಳಿಬಿಟ್ಟು ಹಂಚು ಹುಲ್ಲು ತೆಂಗಿನಗರಿಯ ಅರರೆ ಮುಸುಡಿ ಮಾಡಿಕೊಂಡು ನಿಂತಿತ್ತು. ಆ ಹಟ್ಟೀಲಿ ಯಜಮಾನಿ ಸಾಕವ್ವ ಮೂಗಿನ ತುದೀಲಿ ಬಿಂಕಿಕೆಂಡ ಇಟುಗೊಂಡು ಉರಿಯೂತ ಕೂತಿದ್ದಳು. ಅವಳು ಕುಳಿತಿದ್ದರೂ ಸಪೋರ್ಟಿಗಾಗಿ ತನ್ನ ಚಕಳದ ಕಯ್ಯನ್ನು ನೆಲಕ್ಕೆ ಚೆಲ್ಲಿದ್ದಳು. ಸಾಕವ್ವನ ಚರುಮಕ್ಕೂ ಮೂಳೆಗೂ ಹೊಂದಾಣಿಕೆ ತಪ್ಪಿತ್ತಾದ್ದರಿಂದ ಮಯ್ಯ ಚರುಮಗಳು ಸ್ವತಂತ್ರವಾಗಿ ಅಲ್ಲಾಡುತ ತಮ್ಮಷ್ಟಕ್ಕೆ ತಾವಿದ್ದುವು. ಅವಳ ನಡುವಾಗಿದ್ದ ಆಸರೆಗೋಲು ತಬ್ಬಲಿಯಾಗಿ ಮುಂದೆ ಬಿದ್ದಿತ್ತು. ಆ ಕೋಲಿಗೆ, ನೊಣಗಳು ಸಾಕವ್ವನನ್ನೂ ಕೇರು ಮಾಡದೆ ಗುಂಪುಕಟ್ಟಿ ಧಾಳಿ ಮಾಡುತ್ತಿದ್ದವು.

ಮುಖ್ಯ ಅವಳ ಖಾಸ ಹುಂಜವೊಂದು ನೆನ್ನೆ ಚಂದಗಾಣವಾಗಿ ಹಟ್ಟಿ ಬಿಟ್ಟದ್ದು ಇಂದಾದರೂ ಬಾರದೆ ಚಕಿತಗೊಳಿಸಿತ್ತು. ಅದು ದೇವರಿಗೆ ಬುಟ್ಟುದ್ದಾದ್ದರಿಂದ ಅಂಥ ಅಪಶಕುನಕ್ಕೇನೂ ಎಡೆ ಇರಲಿಲ್ಲ. ರಾತ್ರಿ ಎಲ್ಲೋ ಕುಂತದೆ ಈಗಲ್ಲದಿದ್ದರೂ ಇನ್ನೊಂದು ಗಳಿಗೆಗೆ ಬತ್ತದೆ ಎಂಬೊ ಆಸೆ ನೆನ್ನೆ ತುಂಬಾ ಅವಳ ಸುತ್ತಾಡಿತ್ತು. ಹಾಗೂ ಮನೆ ದೇವತೆ ತನ್ನ ದುಡ ಪರಿಕಿಸುತಿರಬಹುದೆನ್ನಿಸಿ ಆಗ ಸಾಕವ್ವನ ಹಟವೂ ಹೆಚ್ಚುತ್ತಿತ್ತು. ಕೈಲಾಗದ ಮುದುಕಿ ತಾನು ಬವಣೆ ಪಡುತ್ತಿದ್ದರೂ ತನ್ನ ಮಕ್ಕ ಮೊಮ್ಮಕ್ಕ ಸೊಸೇರೂ ಇಡೆನ ಅನ್ನದಿರೋದ ಕಂಡು ಅವಳ ದುಕ್ತಿ ಒಳಗಿಂದ ಉಕ್ಕಿ ಬರುತ್ತಿತ್ತು. ಸಾಕವ್ವ ಆ ರಾತ್ರೀಲಿ ಎಡವಿ ತಡವರಿಸಿ ಕೊಕ್-ಕೊಕ್ ಎಂದು ಬೀದಿ ಬೀದೀಲಿ ಕರ್‍ದು ಅತ್ತು ಊರೆಲ್ಲ ಮುಳುಗಿದ ಮೇಲ ಹಟ್ಟಿಗೆ ಬಂದು ಉಸ್ಸೋ ಎಂದು ಕಾಲುನೀಟಿ ಕೂತುಗೊಂಡಳು. ಯಾರೂ ಇದ್ಯಾಕ ಅನ್ನಲಿಲ್ಲ. ಅವಳು ಆ ರೀತಿಯಾಗಿ ಇರಲಿ ನಿದ್ರಾದೇವಿ ಬೇಜಾರಲಿ ಬಂದು ಸಾಕವ್ವನ ಕಣ್ಣುಗಳ ಸವುರಿ ಮಾಯವಾದಳು.

ಊರು ಕಣ್ಬುಡುವ ಮೊದಲು ಕಣ್ಣುಬಿಟ್ಟ ಸಾಕವ್ವನ ಜೀವ ಹುಂಜನ ಕಾಣಲು ಪತರುಗುಟ್ಟಿತು. ಯಾವ ಮಾಯದಲ್ಲಾದರೂ ಹುಂಜನು ರಾತ್ರೀನೆ ಬಂದಿರಬಹುದಾ ಅನ್ನಿಸಿ ಕಣ್ಬೆಳಕು ಕಾಣುವವರೆಗೂ ಕಣ್ಣೋಡಿಸಿದಳು. ಕಾಣದೆ, ಹಟ್ಟಿ ತುಂಬಾ ’ಬಾ…ಬಾ, ಕೊ….ಕೊ’ ಎನ್ನುತ್ತಾ ನಡೆದಾಡಿದಳು. ಹಟ್ಟೀಯ ಬಲಮೂಲೆ ನೆರಕೇಲಿ ಮಲುಗಿದ್ದ ಅವಳ ದೊಡ್ಡ ಮಗ ಕಾಳಣ್ಣನಿಗೆ ಅವರವ್ವನ ಕೊರಕೊರದಿಂದಾಗಿ ನಿದ್ದೆ ಮುರುದು ತಡೆಯಲಾರದೆ ’ಅವ್ವಾ ಹೊತ್ಮೂಡ್ಲಿ ಈಗ ಮಲಿಕ್ಕೊ’ ಅಂದನು. ಸಾಕವ್ವನ ಸುಮ್ಮನಿದ್ದ ನರವಾಗಿದ್ದ ನರಗಳೆಲ್ಲಾ ಎದ್ದು ನೆಗೆದಾಡತೊಡಗಿದವು. ಸಾಕವ್ವ ’ಏನಂದೆ ಕಂದಾ! ಹೊತ್ಮೂಡ್ಲಿ ಎಂದ್ಯ, ಹೊತ್ಮೂಡಿ ಏಡು ಮಾರು ಬಂದ್ರೂನು ನೀನು ಏಳ್ದಿದ್ದಕ್ಕಲ್ವ ನನ್ನ ಹಟ್ಟಿ ಮೂರು ಪಾಲಾದ್ದು….’ ಎಂದು ಮಾತು ಮುಗುಸಿ ಹಣೆ ಚಚ್ಚಿಕೊಳ್ಳುವುದನ್ನು ಮುಂದುವರೆಸಿದಳು.

ಇನ್ನು ಮಾತಾಡಿದರೆ ಮಾತು ಬೆಳೆಯುತ್ತದೆ ಅಂದುಕೊಂಡು ಕಾಳಣ್ಣನ ದಿಕ್ಕಿಂದ ಮಾತು ಏಳಲಿಲ್ಲ. ಅವುನು ಮಲುಗಿದಂಗೆ ಮಾಡಿದನು. ಅವ್ವ ಅಣ್ಣಂದಿರ ಮಾತಿಗೆ ಕಿರುಮನೆಯ ಎರಡನೆ ಮಗ ಸಣ್ಣಯ್ಯನೂ ಕಣ್ಬಿಟ್ಟು ಹೆಡ್ತಿ ಪಿಸುಗುಟ್ಟಲು ಕಣ್ಮುಚ್ಚಿದನು. ಸಣ್ಣಯ್ಯನ ಮೂರು ಮಕ್ಕಳು ಒಂದರ ಕಾಲ ಇನ್ನೊಂದರ ಮೇಲಾಕಿ ಬಿದ್ದಿದ್ದವು. ಅವುಗಳ ಹೊದ್ದಿದ್ದ ಹೊಸ ದುಪ್ಪಟಿ ಮೂವರನ್ನೂ ಹೊದ್ದುಕೊಳ್ಳಲು ತನ್ನ ಶಕ್ತ್ಯಾನುಸಾರ ಯತ್ನಿಸುತ್ತಿತ್ತು. ಇನ್ನೊಂದು ಕೈಗೂಸು ಅವ್ವ ಚಲುವಮ್ಮನ ಎದೆ ಹೊಟ್ಟೆಗಂಟಿ ಬೆಚ್ಚಗಿತ್ತು.

ಇತ್ತ ನಡುಮನೇಲಿ ಸಾಕವ್ವನ ದೊಡ್ಡಮಗಳು ಗೌರಮ್ಮನ ರೋಗಿಷ್ಟ ಮಗ ಗೋಡೆಗಂಟಿಕೊಂಡು ಬಿಳಿ ದುಪ್ಪಟಿ ಹಾಸ್ಕೊಂಡು ಅದೇ ದುಪ್ಪಟಿಯ ಹೋದ್ಕೊಂಡು ಮಲುಗಿತ್ತು. ಅದರ ಪಕ್ಕವೆ ಅದರವ್ವ ಗೌರಮ್ಮ ಅವುಳುದ್ದ ಅವಳಗಲದ ಚಾಪೇಲಿ ಒಂದು ಹಳೆ ಸೀರೆ ಹೊದ್ದು ಒಂದು ಕಯ್ಯ ಮಗನ ಮೇಲಾಕಿ ಮಲುಗಿದ್ದಳು. ಅಲ್ಲೇ ಇನ್ನೊಂದು ಮೂಲೇಲಿ ಹಾಸಿದ್ದ ಹಳೆ ಮಂದಲಿಗೆ ಮೇಲೆ ಗೌರಮ್ಮನ ತಂಗಿ ಪುಟ್ಟಗೌರಿ, ಅವಳಿಗಂಟಿ ಗೌರಮ್ಮನ ಕಿರೀಮಗ ಮೂರನೆ ಕ್ಲಾಸಿನ ಶಿವೂ ಇಬ್ಬುರೂನು ಒಂದು ದುಪ್ಪಟಿ ಹೊದ್ದು ಮಲುಗಿದ್ದರು.

ಶಿವೂನ ಅವ್ವ ಗೌರಮ್ಮನ ಗಂಡನು ಊರೂರು ಅಲೆಯಲಾರಂಭಿಸಿದಲಾಗಾಯ್ತು ಅವುಳು ತನ್ನ ತೌರಿಗೆ ಬಂದು ನೆಲೆಗೊಂಡಿದ್ದಳು. ಅವಳ ಗಂಡನೊ ಮೂರು ತಿಂಗಳಿಗೊಮ್ಮೆ ಆರು ತಿಂಗಳಿಗೊಮ್ಮೆ ಬಂದು ಮೊಖ ತೋರಿಸಿ ಪುಡಿಗಾಸ ಕೊಟ್ಟು ಮಾಯವಾಗುತ್ತಿದ್ದನು. ಇಲ್ಲಿ ಗೌರಮ್ಮ ಕೂಲಿನಾಲಿಗೆ ಅದ್ದಿನಂತ್ ಕಾಯ್ತ ಸಿಕ್ಕಿದ್ದು ತಂದು ತನ್ನ ಇರೋ ಏಡು ಹೈಕಳ ಹೊಟ್ಟೆಗಾಕುತ ಒಡಬಾಳ ಪಾಡುತ್ತಿದ್ದಳು. ತಂಗಿ ಪುಟಗೌರಿ ಕಿರಿಯವಳು ಮದುವೆಗೆ ಬಂದು ಅಣಿಯಾಗಿ ನಿಂತಿದ್ದಳು. ಅವಳ ಕಯ್ಯಿಗೆ ಬಂದ ಕೂಲಿ ಅವುಳು ಅವಳವ್ವನ ಬಾಯಿಗಾಗುತ್ತಿತ್ತು. ಕೂಲಿ ಸಿಗದೆ ಅವಳು ಕೈಚೆಲ್ಲಿ ಕುಂತಲ್ಲಿ, ಶಿವೂನ ಹರಿದ ಅಂಗಿ ಚಡ್ಡಿ ಬ್ಯಾಗು ಹೊಲಿಯೋದು ಆ ಬಟ್ಟ ವಗ್ದು ಮಡ್ಸಿ ತಲೆಗಿಟ್ಟು ಇಸ್ತ್ರಿ ಮಾಡೋದು ಮಾಡುತ್ತಿದ್ದಳು. ದಿನಾಲು ಶಿವೂನ ಮೊಖ ಕರಾಪು ಬಾಚಿ ಕೂದಲಿಗೆ ಕುಪ್ಪೆ ಕೂರಿಸಿ ಹಣೆಗೆ ಕಪ್ಪಿಟ್ಟು ಇಸ್ಕೂಲಿಗೆ ರೇಡಿ ಮಾಡುತ್ತಿದ್ದಳು.

ಇನ್ನು ಉಳಿದವನು ಗುರುಸಿದ್ದು, ಸಾಕವ್ವನ ಕಿರೀಮಗ. ಅವನ ಪಾಲಿಗೇ ನಡುಮನೆ ಸೇರಿದ್ದುದು, ಅವುನು ಮನೆಗೆ ನೆಂಟನಂತಿದ್ದು ಮಾರಿಗುಡೀನ ತನ್ನ ವಾಸಸ್ಥಾನ ಮಾಡಿಕೊಂಡಿದ್ದನು. ಊರೂರು ಸುತ್ತುತ್ತ ಹಾಲಿ ಗಾರೆ ಕೆಲಸ ಮಾಡುತ್ತಿದ್ದನು. ರೇಷ್ಮೆಗೂಡಿನ ಯಾಪಾರ ಮಾಡಿ, ಚಿಲ್ಲರೆ ಅಂಗಡಿ ಇಟ್ಟು, ದನದ ದಳ್ಳಾಳಿಯಾಗಿ ಈಗ ಗಾರೆ ಕೆಲಸದಲ್ಲಿ ನಿಂತಿದ್ದನು. ಕೈಲಿ ಕಾಸಿದ್ದಾಗ ಅವ್ವನ ಎಲೆ ಅಡುಕೆಗೂ ಕೊಡುತ್ತಿದ್ದನು. ಏಡು ಬೇಳೆ ಪೈರಿನಿಂದಲೂ ಅವನಿಗೆ ಗುಂಪು ನಾಟಕ ಅನ್ನೋವು ತಲೆಗಂಟಿ ಈಗ ದಾನಸೂರಕರ್ಣದಲ್ಲಿ ಕರ್ಣನ ಮಗನ ಪಾರ್ಟು ಮಾಡುತ್ತಿದ್ದನು. ಅವನು ಮಾಮೂಲಿಯಾಗಿ ಮಾರೀಗುಡಿಯಲ್ಲಿ ಮಲುಗಿದ್ದನು.

ಬೆಳುಕು ಕತ್ತಲಿಗೆ ಬೆರೆತುಕೊಳ್ಳುತ್ತಿದ್ದ ಆಗ, ಹೊರಬಂದು ಸಾಕವ್ವ ತನ್ನ ಹುಂಜ ನಿಲ್ಲುತ್ತಿದ್ದ ಕೂರುತ್ತಿದ್ದ ಜಾಗವ ಕಣ್ತುಂಬಿ ನೋಡಿದಳು. ಅಂಥದೇನೂ ಕಾಣದೆ ಅವುಳು ಹೀಗೆ ನಾಕಾರು ಸಲ ಎಡತಾಕುತಿರಲು ಬೆಳಕಾಯ್ತು. ಒಳಗಿರೋ ಕೋಳಿಗಳಾರು ತನ್ನ ಹುಂಜನ ತರೆತರಬಹುದೆಂದು ಪಂಜರವ ಎತ್ತಲು ಇದ್ದಬದ್ದ ಕೋಳಿಗಳು ಎಂದಿನಂತೆ ಉತ್ಸಾಹದಿಂದಲೆ ಹಾರುತ ಹೊರಹೋದವು. ಆವುದರ ಮೊಖದಲ್ಲು ದುಕ್ಕ ದುಗುಡ ಕಾಣದೆ ಸಾಕವ್ವನಿಗೆ ಎತ್ತಿ ಕುಕ್ಕಿದಂತಾಯ್ತು. ಅಯ್ಯೋ ಪಾಪಿ ನನ್ಮಕ್ಳಾ ಎಂದು ಹತ್ತಾರು ಸಲ ಅಂದುಕೊಂಡಳು.

ಆಗಲೆ ಎದ್ದು ಎರದನೆ ಮಗ ತೊಟ್ಟೀಲಿ ಹಲ್ಲುಜ್ಜುತ್ತಿದ್ದನು. ಸಣ್ಣಯ್ಯ, ಅವ್ವ ಆ ಕಡೆ ಬಂದರೆ ಈ ಕಡೆಗೆ ಮೊಖ ತಿರುವುತ್ತ, ಅವ್ವ ಈ ಕಡೆ ಬಂದರೆ ಆ ಕಡೆಗೆ ಮೊಖ ತಿರುವುತ್ತ ಯಾವ ಪಟ್ಟಿಗೂ ಸಿಗದೆ ತಾನು ತನ್ನ ಕೆಲಸ ಅನ್ನುವಂತಿದ್ದನು. ಸಾಕವ್ವ ಒಂದು ಸಲ ತೊಟ್ಟಿಗೆ ಕ್ಯಾಕರಿಸಿ ಉಗುದು ಹೊರಬಂದು ಅಂಗಳದಲ್ಲಿ ನಿಂತಳು.

ಅಂಗಳದಲ್ಲಿ ನಿಂತಂಥ ಸಾಕವ್ವನ ಕಣ್ಮುಂದೆ ಅವಳ ಹುಂಜನ ಅಂದ ಚಂದವು ಓಡಾಡಿತು. ಯಾರೋ ಪಾಪಗೇಡಿಗಳು ದೇವುರುದಿಂಡರ ಲಕ್ಕಿಸದೆ ತನ್ನ ಹುಂಜನ ಮುರುದಿರಬೇಕೆಂದು ಅನ್ನಿಸುತ್ತ, ಅದು ಹೊತ್ತೇರಿದಂತೆ ದುಡವಾಗತೊಡಗಿತು. ಸಾಕವ್ವ ತನಗಾಗದವರು ಯಾರಾರೆಂದು ಒಂದೊಂದಾಗಿ ನೆಪ್ಪಿಡಿಯತೊಡಗಿದಳು. ಅವುಳ ಸವತಿ ಕೆಂಪಮ್ಮ ಮೂಡಿನಿಂತಳು. ಸಾಕವ್ವನ ಗಂಡನನ್ನು ತನ್ನ ಕಿರುಬೆರಳಲಿ ಕುಣಿಸೀಕುಣ್ಸಿ ಮುಪ್ಪಾಗಿದ್ದ ಕೆಂಪಮ್ಮನ ತಿಪ್ಪೆ ದಿಕ್ಕಿಗೆ ಸಾಕವ್ವ, ಹಿಂದಕ್ಕೆಳೆಯುತ್ತಿದ್ದ ಕಾಲೆಳೆದುಕೊಂಡು ನಡೆದಳು.

ಸಾಕವ್ವ ಆ ತಿಪ್ಪೇನ ಒಂದು ಕಡೆಯಿಂದ ಒಂದು ಚೂರೂ ಬುಡದೆ ನೋಡೂ ಏನೂ ಕಾಣದೆ, ಅಲ್ಲೊಂದು ಇಲ್ಲೊಂದು ಸಿಕ್ಕಂಥ ತುಪ್ಪಟ ಪುಕ್ಕಗಳ ಕಣ್ಣಿಗಂಟಿಸಿ ನೋಡೂ ಅವು ಅವಳ ಹುಂಜನದಾಗಿರದೆ ಆ ತಿಪ್ಪೆ ಅವಳ ಹಠಕ್ಕೆ ಸವಾಲೊಡ್ಡೆ ನಿಂತಿತ್ತು. ಕೈ ಬುಡದೆ ಸಾಕವ್ವ ’ಎಲ್ಲ್ಗೋದೈ ನನ್ನ ಸವುತಿ! ಸಿಕ್ತೀಯ ಸಿಕ್ತೀಯ’ ಅನ್ನುತ್ತ ಊರುಗೋಲಿಂದ ತಿಪ್ಪೇನೆ ಬುಡಮೇಲು ಮಾಡಿ ಕೆದುಕಿದಳು. ಹಾಗೂ ಏನೂ ಸುಳುವಾಗದೆ ಸುಸ್ತಾಗಿ ’ಥೂ ನನ್ನ ಸವುತಿ….ಮಾಯಕಾತಿ, ಅಷ್ಟು ಸುಲಭವಾಗಿ ನಿನ್ನ ಮರ್ಮ ಬುಟ್ಟುಕೊಟ್ಟಯಾ’ ಎಂದು ತಿಪ್ಪೆಗೆ ಉಗುದು ಮುಂದಿನದಕ್ಕೆ ಸಾಗಿದಳು.

ಹತ್ತಾರು ತಿಪ್ಪೇನ ಮುಗಿಸುವಲ್ಲಿ ಸಾಕವ್ವನ ತ್ರಾಣ ಅನ್ನೋದು ಏರುತ್ತಿದ್ದ ಬಿಸುಲಿಗೆ ಒಣುಗಿ ಗಾಳಿ ಅಲ್ಲಾಡಿದರೆ ಅವುಳೂ ಅಲ್ಲಾಡುವಂತಾಯ್ತು. ಆಗ ಅಲ್ಲಿಗೆ ಕಸಹೊತ್ತು ಬಂದ ಪುಟ್ಟಿ ’ಇದೇನಮ್ಮ ಇಷ್ಟೊತ್ತಲಿ…’ ಎಂದು ಕೇಳಿದಳು. ಅದಕೆ ಸಾಕವ್ವ ’ತಿಪ್ಗ ಬಮಿದಿದ್ದಿಕಾ ಕೂಸು ಅಷ್ಟಿಯಾ’ ಅಂದಳು. ಪುಟ್ಟಿ ’ಅಷ್ಟಿಯಾ’ ಅಂದು ನಗಾಡ ಕಸ ಸುರುದು ಹೋದಳು. ಪುಟ್ಟಿಯ ಧಿಮಾಕು ಗಣ್ಯೆ ಸಾಕವ್ವನ ಮೊಖಕ್ಕೊಡದಿತ್ತು. ಪುಟ್ಟಿ ಅಂಬೋಳು ಕಣ್ಗೆ ಮರೆಯಾಗುವವರ್ಗೂ ತಿಪ್ಗ ಕುಂತವರಂತೆ ಕುಂತಿದ್ದು ಆಮೇಲ ಮುಂದಿನದಕ್ಕೆ ಬಂದಳು.

ಹೊತ್ತುನೊಂತೆ ಎದ್ದವಳೆ ತಿಪ್ಪೆ ಕಸ ಕಡ್ಡೀಯ ಕಣ್ತುಂಬಾ ನೋಡಿ, ಅವು ಕಣ್ಣಿಗಚ್ಚೊತ್ತಿ ಸಾಕವ್ವ ಯಾವ ದಿಕ್ಕು ನೋಡಿದರೂ ಕಸಕಡ್ಡಿಗಳು ಬಂದು ಪಾರ್ಟು ಮಾಡುತ್ತಿದ್ದವು. ಮುಂದೆ ನಡೆಯಲು ತೊಡೆ ಬಂಡಾಯವೆದ್ದು ನಿಂತಾಗ ಸಾಕವ್ವ ’ನನ್ನ ಮನೆ ದೇವ್ರ ಸತ್ಯ ಇದ್ರ ನನ್ನುಂಜ ಹಟ್ಟಿಗೋಗಿರಲಿ, ಇಲ್ಲದಿದ್ರ ಇಲ್ಲ’ ಎನ್ನುತ ಅನ್ನುತ್ತಾ ಊರದಿಕ್ಕ ತೊಡೆ ಎಳೆದಳು.

ಸಾಕವ್ವ ಎತ್ತ ಹೋಗಿದ್ದಳು ಏನು ಮಾಡಿದಳು ಎಂಬುದು ಚಿನಾಲಿ ಪುಟ್ಟಿಯಿಂದಾಗಿ ಪ್ರಚುರಗೊಂಡು ಹೋಗಿಬರೋರು ಕುಂತವರು ಎಂದೂ ಮಾತಾಡಿಸದವರೂ ಏನವ್ವೊ ಏನಮ್ಮೊ ಅನ್ನುತ್ತಿದರು. ನನ್ನುಂಜ ಕಪ್ಪ, ನನ್ನುಂಜಕಾ ನನಕಂದ ಎನ್ನುತ್ತ ಸಾಕವ್ವ ಬರುತ್ತಿದ್ದಳು. ಕೇಳಿದವರು, ಅವುಳು ಮರೆಯಾದ ಮೇಲ ನಗಾಡ್ತ ಹೋಗುತ್ತಿದ್ದರು. ಹೀಗೆ ಆಗುತ್ತಿತ್ತು.

ಹಾಗೂ ಹೀಗೂ ಸಾಕವ್ವ ಹಟ್ಟಿ ಅಂಗಳಕ್ಕೆ ಮುಟ್ಟಿದಳು. ಅಸ್ತುಲ ಮೇಲ ಅವಳ ಮಗಳ ಮಗ ಚಿವೂ ನಿಂತಿದ್ದನು. ಸಾಕವ್ವ ’ಬಂತಾ ನನಕಂದಾ’ ಎಂದು ಶಿವೂನ ಕೇಳಿದಳು. ಶಿವೂ ’ಏನಮ್ಮಾ’ ಅಂದಿತು. ಶಿವೂ ಬಾಯಿಂದ ಆ ವಾಕ್ಯ ಸಾಕವ್ವನಲ್ಲಿ ದುಕ್ಕ ಕೋಪ ಅನ್ನೋವು ಉಕ್ಕಿದವು. ’ಅಯ್ಯೋ ನನ್ನ ಮಗಳ ಮಗ್ನೇ……ನಾನು ಬಂತಾ ಅಂತ ಕೇಳಿದ್ರ ಏನಮ್ಮಾ ಅಂತಿಯಲ್ಲೊ’ ಎಂದು ಅಳುತ್ತ ಅಂಗಳದಲ್ಲೆ ಕೂತಳು. ಆ ಹೈದನಿಗೆ ಗಲಿಬಿಲಿ ಎದ್ದು ಅದರವ್ವನಲ್ಲಿಗೆ ಓಡಿತು.

ದೊಡ್ಡ ಮಗಳು ಗೌರಮ್ಮ ಬಂದು ನೋಡಿದರೆ – ಅವ್ವ ಅಂಗಳದೊಳಗ ಮುಳುಗಿ ತನ್ನ ಸುತ್ತಗೂ ಮಣ್ಣೂ ಧೂಳೂ ಬಾಚುತ್ತಿದ್ದಳು. ಮಣ್ಣು ಬೊಗಸೆಯಾಗಲು ಅದನ್ನು ಹೂಪಟಾಕಿಯಂತೆ ಎರುಚಿ ’ನನ್ನ ಕೋಳಿ ತಿಂದವರ ಮನೆ ಮಣ್ಣಾಗ್ಲೋ….ನನ್ನ ಮನೆ ದೇವ್ರ ಸತ್ಯ ಇದ್ದುದೇ ಉಂಟಾದ್ರೆ ನನ್ನ ಕೋಳಿ ಮುರ್‍ದವರ ಮನೆ ಮುರ್‍ದಾಗಲೋ’ ಅನ್ನುತ್ತ ಒಂದು ಬೈಗುಳ ಬಯ್ಯೋದು ಒಂದು ಸಲ ಧೂಳು ಎರಚೋದು ಮಾಡ್ತ ನಾಕದಿಕ್ಕೂ ಧೂಳು ಬಾಣ ಬುಡುತ್ತಿದ್ದಳು. ಕ್ರಮಬದ್ಧವಾಗಿ ಒಂದೊಂದು ಸಲ ಆ ಧೂಳ ಮೇಲ ಬಿದ್ದು ಒರಳಾಡುವಳು. ಎದ್ದು ನಟುಕೆ ಮುರಿದಳು. ಬಾಚಿ ಧೂಳ ತಗುದು ಎರಚಿದಳು. ಮಗಳು ತಾಳಲಾರದೆ ಬಂದು ಅವ್ವನ ಕಯ್ಯ ಹಿಡುದು ’ಸಾಕು ಏಳವ್ವ, ವೋದ್ದು ತಿರ್‍ಗಾ ಬರ್‍ದಾ’ ಎಂದು ಎತ್ತಿದಳು. ಸಾಕವ್ವ ಕಯ್ಯ ಕಿತ್ತೊಗೊಂಡು ಇನ್ನೊಂದು ಸಲ ಅಂಗಳ ತುಂಬುವಂತೆ ಮಣ್ಣೆರುಚಿದಳು. ಅಲ್ಲಿಗೆ ಕಿರಿಮಗಳೂ ಬಂದು ಅವ್ವನ ಒಂದೊಂದು ಕಯ್ಯ ಒಬ್ಬೊಬ್ಬರು ಹಿಡಿದು ಎತ್ತಿ ಏಳಿಸಿ ನಡೆಸುತ ಹಟ್ಟಿಗೆ ತಂದರು. ಸಾಕವ್ವನ ಇರಬಹುದಾದ ಮಯ್ಯಿಕಯ್ಯಿ ದೇಹವು ಮಣ್ಣು ಧೂಳು ತೊಪ್ಪೆಯಾಗಿ ಅವಳು ಆ ದೇಹವ ಭೂಮಿಗಿಳಿಬಿಟ್ಟು ಕೂತಳು.

-೨-

ಮಗಳು ಗೌರಮ್ಮ ತಂದಿಟ್ಟ ಗಡುಗೇಲಿ ನೀರು ಕುಡುದಾದ ಮೇಲ ಸಾಕವ್ವನ ದೇಹಕ್ಕೆ ಉಸುರು ಕೂಡಿಕೊಂಡಿತು. ಸಾಕವ್ವ ಮಗಳ ತಲ ಸವುರೂತ ’ನೀನು ತಣ್ಣಗಿರು ನನಕಂದ, ಕಡಗಾಲ್ಕು ನೀನೆ ನನಗಾಗೋಳು, ನನ್ನ ಇರೋ ಆಸ್ತಿನೆಲ್ಲ ನಿನ್ನ ಕಿರಿಮಗನ್ಗೆ ಬರ್‍ದು ಸತ್ತೋಯ್ತೀನಿ….’ ಎಂದು ದುಕ್ಕದ ರಾಗ ಬೆರುಸಿ ಹಾಡತೊಡಗಿದಳು. ಅವ್ವನ ಈ ರಾಗ ಈಗ ನಿಲ್ಲಬಹುದು ಇನ್ನೊಂದು ಗಳಿಗೇಗೆ ನಿಲ್ಲಬಹುದು ಎಂದು ಕಾದು ಕಾದು ನಿಲ್ಲದಿರಲು ಎರಡನೆ ಮಗ ಸಣ್ಣಯನಿಗೆ ತಡೆದುಕೊಳ್ಳಲಾಗಲಿಲ್ಲ. ಹೆಂಡುತಿ ಸನ್ನೆ ಮಾಡಿದರೂ ದಕ್ಕದೆ ’ಏನವ್ವ ನೀ ಅನ್ನೋದು’ ಎಂದು ಹೊರಕ್ಕೆ ನೆಗೆದು ಬಂದನು.

ಸಣ್ಣಯ್ಯ ಅನ್ನೋನು ಪೀಚಲಾಗಿ ಕಟುವಾಗಿದ್ದನು. ಅವನ ಕಯ್ಯಿ ಕಾಲುಗಳು ಕಡ್ಡಿಯಂತೆ ಒಣಗಿಕೊಂಡಿದ್ದೂ ನಾರಿನಂತೆ ಗಟ್ಟಿಯಾಗಿದ್ದವು. ಮಕ್ಕಳಿಲ್ಲದ ಅಣ್ಣನಾಸ್ತಿಗೂ ಕಣ್ಣಾಕಿದ್ದವನಿಗೆ ಅವ್ವನ ಮಾತುಗಳು ನೇರವಾಗಿ ಎದೆಗೇ ಬಂದು ಒದೆಯುತ್ತಿದ್ದವು. ಅವನು ಹೊರಗೆಲ್ಲಾ ಜೋರೊತ್ತಾಗಿದ್ದರೂ ಹೆಡ್ತಿ ಎದುರಾ ಮೆದುವಾಗಿರುತ್ತಿದ್ದನು. ಅಂಥವನೇ ಈಗ ಹೆಡ್ತಿಯ ಕಣ್ಸನ್ನೆಯನ್ನೂ ಲಕ್ಕಿಸದೆ ಕೇಲುತಲೆ ಅವ್ವನ ಎದುರಾ ರಾವುಳಾಸುರನಂತೆ ನಿಂತಿದ್ದನು.

ಸಾಕವ್ವನ ಮಂಜುಗಣ್ಣೊಳಗ ಮಗ ಸಣ್ಣಯ್ಯ ರಾವುಳಾಸುರನಂತೆ ಮೂಡಿ ನಿಂತಿದ್ದನು. ನೆನ್ನಿಂದಲೂ ಹುಂಜನೊಡನೆ ಹೆಣಬಾಳು ಪಟ್ಟು ಸುಸ್ತಾಗಿದ್ದ ಸಾಕವ್ವನ ಗಂಟಲಲ್ಲಿ ಬಡಪಟ್ಟಿಗೆ ಮಾತುಗಳು ಹುಟ್ಟಲಿಲ್ಲ. ಗಡುಗೇಲಿ ನಾನು ಕೀರು ಕುಡುದು ಮಗನ ದಿಕ್ಕ ಕಣ್ಣ ಮೆಡರಿಸಿ ’ಕೇಳವ್ನು ನೀ ಯಾರ?’ ಅಂದಳು. ಸಣ್ಣ, ಕಡ್ಡಿ ಮುರುದಂತೆ ’ನಾನು ಅಕ್ಕುದಾರ’ ಅಂದ. ಸಾಕವ್ವಗೂ ಕಮ್ಮಿ ಕಾನೂನು ಗೊತ್ತಿರಲಿಲ್ಲ. ’ಏನಂದೆ ಇನ್ನೊಂದ್ಸಲ ಅನ್ನು….ಅಕ್ಕುದಾರನಾ ನೀನು? ಹುಟ್ಟುದ್ದು ಹೆಣ್ಣೆಂಗ್ಸಾದರೂ ಗಂಡ್ಸ ಮೀರ್‍ಸಿ ಕಚ್ಚಕಟುಕೊಂಡು ಗೇದು ಸಂಪಾದ್ಸಿವ್ನಿ ಕನೊ ಭೂಪತಿ. ಆಸ್ತಿ ನನ್ನ ಸ್ವಾರ್ಜತ ಸ್ವಾರ್ಜತ…..’ ಅಂದಳು. ಸಣ್ಣಯ್ಯನಿಗೆ ಒಂದು ಚಣ ಅದೂ ದಿಟ ಅನ್ನಿಸಿ ದಿಗಿಲುಂಟಾಯ್ತು. ಈಗ ದನೀನ ವದ್ದೆ ಮಾಡಿ ’ಹಂಗಾರ ನನ್ನ ಇರೋ ನಾಕೈಕಳ ನಿನ್ನ ಕೈಯಾರ ಬೀದ್ಗ ತಳ್ಳು ಮತ್ತ…’ ಎಂದು ಅಂದು ಮಕ್ಕಳನ್ನು ಎಳೆದೆಳೆದು ತಂದು ಅವ್ವನ ಮಡುಲಿಗಿಟ್ಟು ಪಟ್ಟು ಬದಲಿಸಿ ನಿಂತನು.

ಸಣ್ಣಯನ ಮಾತು ವರ್‍ಸೆ ಈಗ ಮೆದುವಾಗಿದ್ದರೂ ಹುಂಜನಿಂದಾಗಿ ದಿಕ್ಕೆಟ್ಟವಳಾಗಿದ್ದ ಸಾಕವ್ವಗೆ ಜೋರತ್ತು ಮಾಡಬೇಕೆನ್ನೊ ಒಳಗುದಿ ಎದ್ದೆದ್ದು ಕುಣಿಯುತ್ತಿತ್ತು. ಮಕ್ಕಳು ಅನ್ನೋ ಮಾತ ಮರೆಸಿ ಸಾಕವ್ವನೂ ವರ್‍ಸೆ ಬದಲಿಸಿ-’ಅಲ್ಲೋ ಮನತಾನಸ್ಥ ನನ್ ಮಗನೆ…ನಿನ್ನ ಪಾಲ್ಗೆ ಹಂಚಾಕ್ಸದೆ ಹುಲ್ಲಾಕ್ಸಿದ್ದೀಯಲ್ಲೊ..ಹೊಟ್ಟಗ ತಣ್ಣೀರ ಬಟ್ಟೆ ಕಟ್ಕೊಂಡು ತೊಟ್ಟಿ ಹಟ್ಟಿ ಕಟ್ಸಿದ್ದನಲ್ಲೊ…….ನೋಡ್ದವರು ಮೂಗ್ಗೆ ಬೆರಳಿಟ್ಟು….’ ಏರಿಳಿಯುತ್ತಿದ್ದ ಮಾತುಗಳು ಕೊನೆಗಾಣದೆ ಸಣ್ಣಯ್ಯನ ನಿಂತ ಕಾಲುಗಳು ನೆಲಕ್ಕಿಳಿಯುತ್ತಿದ್ದವು. ಅವ್ವ ಆಂತೊಕೊಂಡು ಹಟ್ಟೀಯ ಒಂದು ಮೂಲೆ ಹಿಡಿದು ಸ್ಟಾರ್ಟು ಮಾಡಿ ನಿಧಾನವಾಗಿ ಕಣ್ಣು ಚಲಿಸುತ ಅಲ್ಲಲ್ಲಿ ನೆಡುತ ಕಂಡದ್ದು ವರ್ಣಿಸುತ್ತ ರಾಗವಾಗಿ ದನಿ ಎತ್ತರಿಸಿ ಹಾಡುತ್ತಿದ್ದಳು.

ಒಂದು ಕಾಲದಲ್ಲಿ ಪೂರ್ತವೆ ಹಂಚು ಹೊದ್ದು ಮೆಡುಗಾರಿಕೆ ಮಾಡಿದ್ದ ಆ ಹಟ್ಟೀಯ ಹಂಚು ಕಯ್ಯಾಡಿಸಿದಾಗ ಕಮ್ಮಿ ಬೀಳೋ ಹೆಂಚುಕೆ ಬದುಲು ಹಂಚು ತರಲಿ ಕಯ್ಲಾಗದೆ ಮುಂದಿನ ವರುಷಕ್ಕೆ ಹಂಚಾಕಿಸಿದರಾಯ್ತು ಅಂದುಕೊಂಡು, ಆ ಖಾಲಿಗೆ ಹುಲ್ಲೂ ತೆಂಗಿನ ಗರೀನ ಕವುಚಿ ಈಗ ಹಂಚೂ ಹುಲ್ಲೂ ಅನೂನ್ಯವಾಗಿದ್ದವು. ಹಟ್ಟೀಯ್ ಹೊತ್ತು ನಿಂತಿದ್ದ ಕಂಬ ಕಮಾನು ತೊಲಗಳು ಕುಗ್ಗಿ ಬಗ್ಗಿ ತಮ್ಮ ನೆರಳಡಿ ಉಸುರಾಡುತ್ತಿದ್ದ ಜೀವಿಗಳ ಬಗ್ಗೆ ದಯ ತೋರುತ್ತ ನಿಂತಿದ್ದವು.

ಹಟ್ಟೀನ ಕಣ್ಗೆ ತುಂಬಿಕೊಂಡಂಥ ಸಾಕವ್ವ ಕುಂತಲ್ಲೆ ಕುಸುದು, ಕಡ್ಡಿಯಂತೆ ಎದುದು ನಿಂತಿದ್ದ ಮಗ ಸಣ್ಣಯ್ಯನ ಕಡೆಗೆ ಕಣ್ಣಮೊನೆಗೆ ಸಾಣೆ ಹಿಡಿದು ನೋಡುತ್ತ ತನ್ನೇಡು ಕೈಗಳಿಂದಲೂ ನೆಲವ ತಾರಿಸಿ ಆ ಕೈಗಳ ಚಟಕ್ಕನೆ ಮಗನದಿಕ್ಕ ಚಾಚಿ ಅಲ್ಲಾಡಿಸುತ್ತ ’ಎಂಥ ರೂಪ್ಗೆ ತಂದ್ರಪ್ಪ ನನ್ನ ಹಟ್ಯ’ ಎಂದು ದುಕ್ಕವ ತುಂಬಿಕೊಂಡು ನೋಡಿದಳು. ಮಗನಿಗೂ ಆ ರೀತಿ ಅವ್ವನ ನೋಡಲಾಗಲಿಲ್ಲ. ಸಣ್ಣಯ್ಯ ’ಅದ್ಕ ನಾ ಯಾನ್ನ ಮಾಡ್ಲವ್ವ’ ಅಂದನು. ಸಾಕವ್ವ ಒಂದು ಸಲ ಕ್ಯಾಕರಿಸಿ ತೊಟ್ಟಿಗೆ ಉಗುದು ಒಂದೇ ಮಾತು ’ಕೆರ್‍ಗೆ ಬೀಳು’ ಅಂದಳು. ಸಣ್ಣ, ಹೊಟ್ಟ ಒಳಗ ಕುಣಿದಾಡುತ್ತಿದ್ದ ಮಾತುಗಳಿಗೆ ಬೀರುಗುಣಿಕೆ ಹಾಕಿ ’ನಿನ್ನೊಂದ್ಗ ಮಾತಾಡು ಕೀಮಿಲ್ದಿಯ’ ಅಂದು ತನ್ನ ಪಾಲು ಕಿರುಮನೆ ದಿಕ್ಕುಗ ಮೊಖ ಇಟ್ಟನು.

ಸಣ್ಣಯ್ಯ ಇನ್ನೂ ಮೊಖ ಇಟ್ಟಿದ್ದನೊ ಇಟ್ಟಿರಲಿಲ್ಲವೊ ಕಿರುಮನೆಯಿಂದ ಬಾಣದಂತೆ ಸಣ್ಣನ ಹೆಂಡತಿ ಹೊರಬಂದು ಅತ್ಯಮ್ಮನಿಗೆ ಸವಾಲಿನಂತೆ ನಿಂತಳು. ಚೆಲುವಮ್ಮ ಮುವ್ವತ್ತಾಗಿಲ್ಲದಿದ್ದರೂ ನಾಕು ಮಕ್ಕಳ ತಾಯಿ. ಇದ್ದುದರಲ್ಲಿ ಹೊಟ್ಟ ಬಟ್ಟಗ ನೇರವಾಗಿದ್ದವರ ಮನೆಯಿಂದ ಕಾಲಿರಿಸಿದವಳು. ಚೆಲುವಮ್ಮನ ತೌರಿಂದ ತಾಯಿ ಕದೇಯ ಒಳ ಸರಬರಾಜು ಒಂಟು, ಅದಕ್ಕೇನೆ ಹೆಡ್ತಿ ಮುಂದೆ ಸಣ್ಣ ಬಾಲ ಮುದುರುವವರೂ ಇದ್ದರು. ಯಾರಾರು ಸುತ್ತಿ ಬಳಸಿ ಕೇಳಿದರೆ ’ವೂ ಕಯ್ಯೋ ನಾ ಉಣ್ತಾ ಇರೋದು ನಮ್ಮತ್ತೆ ಮನೇದೆ’ ಎಂದು ರೇಗುತ್ತಿದ್ದನು. ಅಣ್ಣನಿಗೆ ಮಕ್ಕಳಾಗದು ಎಂಬುದು ದಿನಗಳಿದಂತೆ ದಿಟವಾಗುತ್ತ ಸಣ್ಣಯ್ಯನೂ ಹುಮ್ಮಸ್ಸಿನಿಂದ ದೇವರ ಮೇಲ ಭಾರ ಹಾಕಿ ಒಂದಾದಮೇಲೊಂದರಂತೆ ನಾಕು ಮಕ್ಕಳು ಮಾಡಿದ್ದನು. ಕೊನೆಯದು ಕೈ ಕೂಸು.

ಆ ಕೈಗೂಸು ಬೆಟ್ಟು ಚೀಪುತ್ತ ಪೆಕರು ಪೆಕರಾಗಿ ನೋಡ್ತ, ಅತ್ತೆಗೆ ಸವಾಲಾಗಿ ನಿಂತಿದ್ದ ಚಲುವಮ್ಮನ ಕಂಕುಳಲಿ ಆಡುತ್ತಿತ್ತು. ಚಲುವಮ್ಮ ಆ ಕೂಸನ್ನು ಒಂದು ಕಂಕುಳಿಂದ ಇನ್ನೊಂದು ಕಂಕುಳಿಗೆ ಕುಕ್ಕರಿಸಿ ’ಅದೇನತ್ತಮ್ಮ ನೀವು ಮಾತೆತ್ತಿದರ ನನ್ನಟ್ಟಿ ನನ್ನಟ್ಟಿ ನನ್ನಾಸ್ತಿ ನನ್ನಾಸ್ತಿ ಅಂತೀರಲ್ಲ…’ ಅಂದು ಅತ್ಯಮ್ಮನ ಉತ್ತರಕ್ಕೆ ಕಾದಳು. ಸಾಕವ್ವ ಹಿಡುತವಾಗಿ ’ಎದೇಕಾನಮ್ಮಿಯೆಣ್ಣ ನನ್ನಟ್ಟಿ ನನ್ನಾಸ್ತಿ’ ಅಂದಳು. ಅದರಲ್ಲೆಕಾ ಬಿಕನಾಸಿ ನೀನೂವೆ ಬಿದ್ದಿರೋದು ಎಂಬೊ ದನಿ ಆ ಮಾತಿನಿಂದ ಹೊರಟು ಅದು ಚೆಲುವಮ್ಮನ ಕೆಣುಕಿತು. ಚೆಲುವಮ್ಮ ಕಂಕುಳಲ್ಲಿದ್ದ ಕೂಸ ಗಂಡನ ಹೆಗುಲಿಗೆ ಬಿಸಾಕಿ ಅತ್ಯಮ್ಮನ ಮುಂದ ಕೈ‌ಆಡಿಸುತ್ತ ’ಅವೈ….ನಾನೂವಿ ಅದ್ನೆ ಕೇಳೋದು ಕನ್ಯತ್ತಮ್ಮ….ಎಷ್ಟು ಇಟ್ಟೀವ್ರಿ….ಅಂತ’ ಎಂದು ಕೆಕ್ಕರಿಸಿಕೊಂಡು ಕೇಳಿದಳು.

ಮಾತಾಡಿ ಮಾತಾಡಿ ಸಾಕವ್ವನ ಹೊಟ್ಟ ಒಳಗಲ ದ್ರವ ಮಂಗರಮಾಯವಾಗಿದ್ದ ಪ್ರಯುಕ್ತ ಗಡುಗೇಲಿದ್ದ ನೀರ ಒಂದು ಗುಟುಕಿಗೆ ಕ್ಡುದು ’ನಿನ್ನ ಕಣ್ಣು ಕುಂಡ?’ ಅಂದಳು.ಅತ್ತಮ್ಮನ ಮಾತು ಸೊಸಮುದ್ದಿಯ ಮಯ್ಯ ರೋಷ ಉಕ್ಕಿಸಿತು. ಚಲುವಮ್ಮ ಅಂದಳು-’ನನ್ನ ಕಣ್ಯಾತಕಮ್ಮ ಕುಂಡೂ…ನಾನುವಿ ಕಂಡಿವ್ನಿಕಣಾ ತಕ್ಕಳ್ಳಿ….ಪರದೇಸಿ ನಿಂತ ಥರ ಇರೋ ಈ ಹಟ್ಟಿ ಕಂಡಿಲ್ವಾ…..ಮಳ ದೇವರು ಕಣ್ಣುಬುಟ್ಟರೂ ಬೆಳೆಕಾಣ್ದ ನಾಕು ಎಕ್ರ ಹೊಲ ಕಂಡಿಲ್ವಾ….ನಿಮ್ಮ ಇರೊ ಮೂರು ಗಂಡ್ಮಕ್ಕಳ ತಲಗೆರಡು ಎಕ್ರನಾರು ಹಂಚಿ ಮತ್ತ ನೋಡವು..’ ಅನ್ನುತ್ತಾ ಅತ್ತೆ ಮುಂದ ಕೂತುಬುಟಳು. ಗಂಡ ಸಣ್ಣಯ್ಯ ಹೆಡ್ತಿ ಕಯ್ಯ ಹಿಡಿದೆಳೆಯುತ್ತ ’ನೀ ಏಳಮ್ಮಿ…ನೀ ನಡಿಯಮ್ಮಿ’ ಎಂದು ತೊದಲುತ್ತಿದ್ದನು. ಚಲ್ವಮ್ಮ ಗಂಡನಿಗೆ ಕೇರು ಮಾಡಾದೆ ಕಯ್ಯ ಕೊಸರಿ ಮತ್ತೂ ಪಟ್ಟಾಗಿ ಕೂತಳು. ಸಾಕವ್ವ ನಿಧಾನವಾಗಿ ಆದರೆ ಕಟುಕಾಗಿ ’ನನ್ನಾಸ್ತಿ ಅಂಗೈಯಗಲಾನೆ ಇರ್ಲಿಕಾ ಗರ್ತಿ…ಅದರಲ್ಲೇನೆ ನೀನೂವಿ ಉಣ್ತಿರೋದು’ ಅಂದಳು. ಚಲುವಮ್ಮನಿಗೆ ತನ್ನ ಕತ್ತು ಕತ್ತರಿಸಿ ಮುಂದಿಟ್ಟಂತಾಯ್ತು. ಅವಳು ನೆಲವ ಕುಟ್ಟಿ ತಟ್ಟಿ ಎದ್ದು ಬೆಂಕಿ ಕಕ್ಕುವಳಂತೆ ’ಅತ್ತೆಮ್ಮೊ ನೀವು ಹಿಂಗೇ ಅಂತಾ ಇರಿ. ನಾನು ಹುಚ್ಚತ್ತಿದರ ಹುಚ್ಚುಮುಂಡೆ. ತಲ ಒಳ್ಗಲ ಹು‌ಆ ಪತರಗುಟ್ತವ. ಒಂದಲ್ಲಾ ಒಂಜಿನ ನಿಮ್ಮ ಹಟ ಬಿಂಕಿ ಹತ್ಸುಬುಟ್ಟು ನಿಮ್ಮ ಹೊಲ್ಕ ಕೈಯ್ಯ ಬೀಸ್ಕಂಡು ಮೇಲುಕೂ ಕೆಳುಕು ಉಸುರು ಬುಡ್ತ ಕಿರುಮನೆಗೆ ಬಿರುಗಾಳಿಯಂತೆ ನುಗ್ಗಿದಳು. ಅವಳ ಕೈಗೂಸು ಅಜ್ಜಿಯ ಸುತ್ತ ಆಡುತ್ತಿತ್ತು.

ಯಾಕಾರು ಮಾತೆತ್ತಿದೆನೊ ಎಂದು ಸಣ್ಣಯ್ಯ ನಿಟ್ಟುಸಿರು ಬುಡುವುದ ಬಿಟ್ಟು ಬೇರೇನೂ ತೋಚದೆ ನಿಂತಿದ್ದನು. ಹೆಡ್ತಿ ಚಲುವಮ್ಮ ಈಗಾಡಿದ ಮಾತು ಅವನ ತಲೆಗೂ ಸಿವುರಾಗಿತ್ತು. ಅವ್ವ ಢಮಾರ್ ಅನ್ನಲು ನೆಲವ ಕುಟ್ಟುತ್ತ ತಟ್ಟುತ್ತ ರೆಡಿಯಾಗುತ್ತಿದ್ದಳು. ಉಸುರು ಅನ್ನೋದ ಹಿಡಿದು ಮಗ ನಿಂತಿದ್ದನು. ಕೂಸು ತನ್ನಜ್ಜಿ ಸುತ್ತ ತವುದಾಡುತ್ತಿತ್ತು.

ಸಾಕವ್ವ ನೆಲ ಸವುರುವುದ ಕುಟ್ಟುದ ನಿಲ್ಸಿ ’ಕೇಳ್ದೇನೋ ಗ್ರಾಸ್ತ ನಿನ್ನೆಡ್ತಿ ಮಾತ…’ ಎಂದು ಒಂದು ಸಲ ಚೀರಿದಳು. ಆ ಚೀರು ಹಟ್ಟೀನ ಒಂದು ಸಲ ಕಿತ್ತುಕೊಂಡು ಇಡೀ ಹಟ್ಟೀನ ಒಂದು ಸಲ ಅಲ್ಲಾಡಿಸಿತು. ಮಗನಿಗೆ ಬಾಯಿ ಬರಲಿಲ್ಲ. ದುಕ್ಕವೇ ಬಾಯಿಬುಟಗೊಂಡು ಕುಂತಥರ ಅವ್ವ ಕೂತಿದ್ದಳು. ಮಗನ ದಿಕ್ಕಿಂದ ಮಾತು ಹುಟ್ಟದಿರಲು ಇನ್ನೊಂದು ಸಲ ಅವ್ವ ’ಕೇಳ್ದೆನೋ ಗ್ರಾಸ್ತ ನಿನ್ನೆಡ್ತಿ ಮಾತ’ ಎಂದು ಕೂಗಿದಳು. ಸಣ್ಣಯ್ಯ ಬಾಯಿ ಕಟ್ಟಿದವನಾಗಿ ’ಸುಂಕಿರವ್ವ….ಸುಂಕಿರು’ ಅಂದನು. ಸಾಕವ್ವನ ಕ್ಯಾಣ ಅದಕ್ಕೂ ಎದ್ದಿತು. ’ನಿನ್ನ ಹೆಡ್ತಿ ಸುಂಕಿರ್‍ಸಕ ಆಗ್ದವ, ನನ್ನ ಸುಂಕಿರ್‍ಸಕ ಬಂದ್ಯಾ ನನ್ನ ಮಗ್ನೇ, ಸಭಾಸ್…ಸಭಾಸ್. ಅವುಳೇನಾರು ಈವತ್ತು ನನ್ನ ಹಟ್ಟೀಲಿ ಇದ್ರ ಅವುಳು ಅವಳಪ್ಪನ್ಗ ಹುಟ್ಟಿದ ಮಗಳಲ್ಲ…ಅಷ್ಟಿಯಾ ನಾ ಹೇಳೊದು…..ಅಷ್ಟಿಯಾ ನಾ ಹೇಳೊದು….’ ಎಂದು ಇಪ್ಪತ್ತು ಹೇಳುದ್ದನ್ನು ಹೇಳುತ್ತ ಹೇಳತೊಡಗಿದಳು.

ಅತ್ಯಮ್ಮನ ಬಾಯಿಂದ ಆ ವಾಕ್ಯ ಬಂದುದೇ ತಡ ಕಿರುಮನೆಯಲ್ಲಿ ತಡಾಬಡ ಸದ್ದು ಎದ್ದಿತ್ತು. ಸಣ್ಣಯ್ಯನಿಗೆ ನಿಲ್ಲಕೂ ಆಗದೆ ಹೂತ ಕಾಲು ಕಿತ್ತು ಕಿರುಮನೆದಿಕ್ಕ ನಡುದನು. ನಡುಮನೆಯ ವಸ್ತುಲಲ್ಲಿ ತಂಗಿ ಗೌರಮ್ಮ ಕಣ್ತುಂಬಾ ನೀರು ತುಂಬಿ ನಿಂತಿದ್ದವಳು ಅಣ್ಣಯ್ಯನ ಮೊಖ ಕಾಣುತ್ತಲೆ ಫಳಾರನೆ ಕಣ್ಣೀರ ಚೆಲ್ಲಿ ’ಅಣ್ಣೊ, ಅವ್ವ ಹೆಂಗಾರು ಪೇಚ್ಕಳ್ಲಿ. ನಾನೇನ ಇಲ್ಗ ಆಸ್ತಿಗ ಬಂದಿದ್ದನಣ್ಣ. ಅವ್ವ ಬರ್‍ಕೊಡ್ತೀನಿ ಅಂದ್ರೂ ನಾನು ಬರಸ್ಕಂಡನಾ’ ಅಂದಳು. ಗೌರಮ್ಮನ ಹಿರಿಮಗ ಹುಟ್ಟಿದಲಾಗಯ್ತು ಬಿಳುಚಿಕೊಂಡಿರುವಂಥವನು ತಲ ತುಂಬಾ ಬಿಳಿ ದುಪ್ಪಟ್ಟಿ ಹೊದ್ದು ನಡುಮನೆ ಗೋಡೆಗೆ ಮೊಖ ಹಾಕಿ ಕೂತವನು ಕಷ್ಟದಿಂದ ತಿರುಗಿ ತನ್ನವ್ವ ಮಾವನ ಕಡೆಗೆ ನೋಡಿದನು. ನಡುಮನೆ ದೀಪಾಲೆ ಕಂಬದ ಬಳಿಯ ಮಸಿ ತೊಡೆಯೂತಲಿದ್ದ ಕಿರಿ ತಂಗಿ ಪುಟಗೌರಿ ಯಾವ ದಿಕ್ಕೂ ತಿರುಗೂ ನೋಡದೆ ಅಣ್ಣಾನಿಗೆ ಚುಚ್ಚುವಂತೆ ’ನಾನು ಯಾವೊತ್ತು ಈ ಹಟ್ಟೀ ಬುಟ್ಟು ಕಡ್ದು ಹೊಂಟೋದನೊ ಸಿವ್ನಾ….ಅಂತಿವಿನಿ’ ಎಂದು ಮಾತೆಸೆದು ಮಸೀ ಕೆರೆಯತೊಡಗಿದಳು. ಸಣ್ಣಯ್ಯ ಗೌರವ್ವಮ್ಮನಿಗೆ ’ನೀನು ಸುಂಕ ಒಳಕ್ಕ ನಡೆಯವ್ವ….’ ಅಂದವನೆ ಕಿರುಮನೆಗೆ ಬಿರುಸಾಗಿ ಬಂದನು.

ಇತ್ತ ಹೊರಬಾಗಿಲು ತಳ್ಳಿಕೊಂಡು ಕಿರಿಮಗ ಗುರುಸಿದ್ದು ಒಳಬಂದನು. ಬಂದವನೆ ಕಣ್ಗೆ – ಅವ್ವ ಭೂಮಿಗಂಟಿ ಕುಂತ ಥರ, ಅಕ್ಕ ವಸ್ತುಲಿಗಂಟಿ ನಿಂತ ಥರ, ಕಿರುಮನೇಲಿ ತಡಬಡ ಗುಸುಪಿಸು, ಕಾಳಣ್ಣನ ನೆರುಕೇಲಿ ಸದ್ದಿಲ್ಲದ್ದು – ಕಂಡು, ಬಂದವನು ನಿಲ್ದೆ ಹಿಂದುಕೆ ತಿರುಗಿದನು. ಸಾಕವ್ವ, ಮಗ ಬಂದುದು ಕಂಡರೂ ಅವನೇ ಏನವ್ವ ಎಂದು ಕೇಳಲಿ ಅಂದುಕೊಂಡಿದ್ದು ಈಗ ಮಗ ಬಂದವನು ಮಂಗರಮಾಯ ಆಗುತ್ತಿರುವುದನು ಕಂಡು ಸಾಕವ್ವ ’ಗುರುಸಿದ್ದೂ’ ಎಂದು ಕರೆಯುವಷ್ಟರಲ್ಲಿ ಅವುನು ಅಂಗಳಕ್ಕಿಳಿದು ’ಬಂದಿ ತಡೆಯವೈ’ ಅಂದು ತಿರುಗೂ ನೋಡದೆ ಮರೆಯಾದನು.

ಇಲ್ಲಿ ಕಿರುಮನೆಯಲ್ಲಿ ಹೆಡ್ತಿ ಚಲುವಮ್ಮ ಸಾಮಾನು ಸಂಜಾಮು ಕಟ್ಟೋದು ಗಂಡ ಸಣ್ಣಯ್ಯ ಕಿತ್ತುಕಿತ್ತು ಇಡೋದು. ಅವುಳು ಹಣೆ ಚಚ್ಚಿಕೊಳ್ಳೋದು ನಿಂತಾಗ ಇವುನು ಹಣೆ ಚಚ್ಚಿಕೊಳ್ಳೋದು ನಡೀತಾ ಇತ್ತು. ಅವರ ಹಸುಗೂಸು ಅಜ್ಜಿ ಹತ್ತಿರ ಆಡುತ್ತಿದ್ದರ, ಇನ್ನೊಂದೆಲ್ಲೊ ಹೊರಕ್ಕೋಗಿದ್ದು ಉಳಿದವೆರಡು ಬೆಪ್ಪಾಗಿ ಅಪ್ಪ ಅವ್ವರ ಕಿತ್ತಾಟ ನೋಡ್ತ ಕೂತಿದ್ದವು. ಇದುವರಗೂ ಗಲುಗು ಗದ್ದಲಗಳನ್ನು ಬಾನಿಗಂಚುತ್ತಿದ್ದ ಹಟ್ಟಿಯು ಈಗ ತಲ್ಲಣಗೊಂಡು ಕೇವಲ ನಡುಗುವಂತಿತ್ತು.

ಆಗ ಮಾರಿಗೊಂದು ಹೆಜ್ಜೆ ಇಡುತ ಹಿರಿಮಗ ಕಾಳಣ್ಣ ಒಳ ಬಂದನು. ಅವ್ವನ ಕಂಡು ಏನೋ ಆಗಿದೆ ಅನ್ನಿಸಿ ಏನವ್ವಾ ಅಂದರೂ ಆ ಅವ್ವ ಬಿಟ್ಟಂಥ ಕಣ್ಬಾಯ ಮುಚ್ಚದೆ ಅಥವಾ ತಗೆಯದೆ ಕೂತಿರಲು, ಸರಸರ ತನ್ನ ನೆರುಕೆಗೆ ಬಂದನು. ಬಂದವನ ಕಿವಿಗೆ ಅವುನು ಉಸ್ಸೊ ಎಂದು ಕೂರುವ ಮೊದಲು, ಹೆಂಡತಿ ಕೂತಿದ್ದವಳು ಆದುದ್ದ ಒಂದೂ ಬುಡದೆ ತುಂಬಿದಳು. ಕಾಳಣ್ಣ ತನ್ನ ದೊಡ್ಡ ಘಟವನ್ನು ಹಿಡಿಮಾಡಿ ಕೂತನು. ಬೇಕಾದರೆ ಸುತ್ತಾ ನಾಕು ಗ್ರಾಮಕ್ಕೆ ತಿಳುವಳಿಕೆ ಹೇಳಿ ಸೈ ಅನ್ನಿಸಿಕೊಂಡರೂ ತನ್ನ ಹಟ್ಟೀಲಿ ಕ್ಯಾಬಿನೈ ಆಗುತ್ತಿತ್ತು. ಹೆಡ್ತಿಗೆ ಏನ್ಮಾಡಿದ್ದೀಯಾ ಎಂದು ಕೇಳಿದನು. ಹೆಡ್ತಿ ’ಟೀನೀರು ಕಾಯ್ಸಿವ್ನಿ, ನೆನ್ನ ಸಂತ ಕಳ್ಳಪುರಿ ಒಂದಿಷ್ಟವೆ’ ಅಂದಳು.

ಆಗಲೆ ಚಲುವಮ್ಮ ಸಣ್ಣಯ್ಯನಿಮ ಕೊಸರಾಡಿ ಕಿತ್ತುಕೊಂಡು ತನ್ನ ಬಟ್ಟಬರೆ ತುಂಬಿದ್ದ ತೌರ ಟ್ರಂಕ ಎಡಗೈಲಿ ಹಿಡುಕೊಂಡು ಬಲಗೈಲಿ ಅವಳ ಎರಡನೆ ಮಗನ ಎಳುಕೊಂಡು ಕಿರುಮನೆಯಿಂದ ಬರುತ್ತಿದ್ದಳು. ಆ ಹೈದ ಬುಡವ್ವೊ ಬುಡವ್ವೊ ಎಂದು ಅವ್ವನಿಂದ ಕಿತ್ತುಕೊಳ್ಳುತ್ತಿತ್ತು. ಚಲುವಮ್ಮ ರೋಷಗೊಂಡು ಆ ಹೈದನ ತಳ್ಳಿ ಆಮೇಲ ಟ್ರಂಕ ಭಾರಕ್ಕೂ ಜಗ್ಗದೆ ಅದರಜ್ಜಿ ಪಕ್ಕ ಆಡುತ್ತಿದ್ದ ಕೂಸನ್ನು ಎತ್ತಿ ರಭುಸವಾಗಿ ಕಂಕುಳಿಗೆ ಒಂದುಸಲ ಕುಕ್ಕರಿಸಿಕೊಂದಳು. ಆ ಕೂಸಿಗೆ ಗಕ್ಕಿಟ್ಟಂತಾಗಿ ಚೀರಿತು. ಅವಳ ಹಿಂದೆ ನಿಂತು ಗಂಡ ಸಣ್ಣಯ್ಯ ’ಯಾನಮ್ಮೀ ನೀ ಮಾಡೋದು…..ಯಾನಮ್ಮೀ ನೀ ಮಾಡೊದು’ ಅನ್ನುತ್ತ, ಬೆಬಗರಿಯುವುದ ಬಾಕಿ ಉಳಿಸಿಕೊಂಡು ನಿಂತಿದ್ದನು.

ಕಾಳಣ್ಣ ಒಳಗಿದ್ದವನು ಹೊರಬಂದು ನಿಲ್ಲಲು ಎಲ್ಲವೂ ಚಣ ಅಲ್ಲಲ್ಲೆ ನಿಂತಿತು. ಕಾಳಣ್ಣ ಎಲ್ಲರನ್ನೂ ಒಂದು ಸಲ ನೋಡಿ, ಕಿರುಮನೆ ದಿಕ್ಕು ಬೆರುಳು ಮಾಡಿ ಚಲುವಮ್ಮನಿಗೆ – ’ನೀ ಮೊದ್ಲು ಒಳಕ್ಕೋಗು ಇವ್ಳಾ’ ಅಂದನು. ಚಲುವಮ್ಮ ಹಿಡಿದಿದ್ದ ಟ್ರಂಕ ನೆಲಕೆ ದಬ್ಬನಿಟ್ಟು ತಾನು ಕೊಸಕ್ಕನೆ ಕೂತು, ಕೂಸ ಆಡಲು ಕೆಳಬಿಟ್ಟು ’ಅಲ್ಲ ಕನ್ನಿ ಬಾವಯ್ಯ…. ಈ ಮನೇಲಿ ನಾ ಏನಂದ್ರೂ ತಪ್ಪಾಯ್ತದಲ್ಲ….ನಾನು ಇರ್‍ಬೇಕ ಸಾಯ್ಬೇಕ….’ ಎಂದು ಸ್ರುಗ ಮೊಖಕ್ಕೆ ಮುಚ್ಚುಕೊಂಡು ಗೋಳೆಂದಳು. ಚಲುವಮ್ಮನ ಅಳುಕಂಡು ಅವಳ ಎರಡನೆ ಮಗನೂ ಬಾಯಿತಗುದು ಅವ್ವನ ಅಳುಗೆ ತನ್ನ ದನೀ ಕೂಡಿಸಿತು. ಸಾಕವ್ವ ಕೈಯಾಡಿಸೂತ ’ಅವ್ವವ್ವಾ….ಈ ಘನಗರ್ತಿ ಮಾತ್ ನೋಡ್ರವ್ವ…’ ಅಂದು ಚಲುವಮ್ಮನ ದಿಕ್ಕು ನಟುಕೆ ಮುರಿದಳು. ಬಚ್ಚಲ ದಿಕ್ಕಿಗೆ ತವುಯುತ್ತಿದ್ದ ಕೈಗೂಸ ಗೌರಮ್ಮ ಎತ್ತುಕೊಂದಳು. ಚಲುವಮ್ಮನ ಪಕ್ಕದಲ್ಲಿದ್ದ ಟ್ರಂಕ ಸಣ್ಣಯ್ಯ ಕೈಲಿಡಿದು ಕಿರುಮನೆಗೆ ನಡೆಯುತಲೆ ಚಲುವಮ್ಮ ಸೊರಗುಟ್ಟುತ್ತ ಎದ್ದು ಗಂಡ ಮತ್ತು ಟ್ರಂಕ ಅನುಸರಿಸಿ ನಡುದು ಕಿರುಮನೆಯಲೆ ಕುಕ್ಕರಬಡಿಸಳು.

ಅಷ್ಟಾಯ್ತು. ಅಲ್ಲಿಗೆ ಕಾಳಣ್ಣನಿಗೆ ನಿಲ್ಲಕಾಗದೆ ಮನೆ ತುಂಬೆಲ್ಲ ಒಂದ್ಸಲ ಕಣ್ಣ ಕೆಂಪಗಾಡಿಸಿ “ಅಲ್ಲಾ ಕನ್ರಮ್ಮೇ…..ಹಟ್ಟಿಯಮ್ಮಗಳೆಲ್ಲ ಎತ್ತಾಗು ಹೋಗ್ದೇನೆ ಗುಡ್ಡಾಕ್ಕಂಡಿದ್ದೀರಲ್ಲ…..ನಿಂಗ ಉಣ್ಣಾಕ ಬಾನಿಂದ ಇಳ್ದು ಬಂದದಾ….’ ಅಂದನು. ಯಾರ ಬಾಯಿಂದೂ‌ಒ ಮಾತು ಹೊರಡದೆ ಕೊನೆಗೆ ತಂಗಿ ಗೌರಮ್ಮ ’ಕೆಲ್ಸಕ ಕರದ್ರಲ್ವಣ್ಣ ವೋಗದು. ನಾವೂನು ಮೇಲ್ಬದ್ದು ಮೇಗಲ ಕೇರಿನೆಲ್ಲ ತಿರಕಂಡು ಬಂದ್ವು. ನೀ ಯಾರ ಅನ್ನೋರಿಲ್ಲ’ ಅಂದಳು. ಕಾಳಣ್ಣ ನಿಂತವನು ನಿಂತಿದ್ದನು.

ಆಗ ಕಿರುಮನೆಯಿಂದ ಚಲುವಮ್ಮ ಕೈಲಿ ಕುಡ್ಲು ಹಿಡಿದು ಹೊರಬಂದು ಕಾಳಣ್ಣನ ಹೆಡ್ತಿಗೆ ’ಅಕ್ಕಯ್ಯ…ಬನ್ನೀ, ಸೌದುಗಾರು ಹೋಗಿದ್ದು ಬರೋವು’ ಅಂದಳು. ಅದಕ್ಕ ಕಾಳಣ್ಣನ ಹೆಡ್ತಿ ’ಅಯ್ಯೋ ತಡೀ ತಾಯಿ, ಇವ್ರು ಈಗ ತಾನೆ ಬಂದ್ರು. ಉಣ್ಣಾಕಿಕ್ಕುಬುಡ್ತೀನಿ. ಸೌದಗೇನ ಸಂಜೆಗೋದ್ರೂ ಒಂದಿಶ್ಟು ತರಬೌದು…’ ಅಂದು ಗಂಡನಿಗ ’ಇನ್ನು ಬನ್ನಿ ಮತ್ತ’ ಅಂದಳು. ಕಾಳಣ್ಣ ಅಲ್ಲೆ ನಿಂತು ’ಅವ್ವಗ ತಂದ್ಕೊಡು’ ಅಂದನು. ಕಾಳಣ್ಣನ ಹೆಡ್ತಿ ಒಳಗಿಂದ ಒಂದು ಬೋಸೀಲಿ ಟೀನೀರು. ಒಂದು ಮೊರದಲಿ ನಾಕು ಹಿಡಿ ಪುರಿ ತಂದು ಸಾಕವ್ವನ ಮುಂದಿಟ್ಟಳು. ಸಾಕವ್ವ ’ಅಯ್ಯೊ ನನ್ಗ ಬ್ಯಾಡಕಾ…..ನನ ಕಂದ’ ಅಂದಳು. ಕಾಳಣ್ಣ ’ಸುಮ್ಮನ ಕುಡಿಯವ್ವ ಮತ್ತ’ ಅಂದನು. ಕಾಳಣ್ಣನ ಹೆಡ್ತಿ ’ಅವ್ರು ಕುಡುದ್ರು ಕಣ….ನೀವು ಕುಡೀರಿ ಅತ್ಯಮ್ಮ’ ಮದಳು.

ಸಾಕವ್ವ ಮೂರು ಪುರೀನ ತಗುದು ಚಿಕ್ಕವನ ಕೂಸಿನ ಮುಂದಿಟ್ಟು ನಾಕು ಪುರಿ ತಗುದು ತನ್ನ ಬಾಯ್ಗೆ ಹಾಕ್ಕೊಂಡು ’ಗೌರಿ ತಕ್ಕೊ….ಆ ನಿನ್ನ ಹಿರೀಗಂಡ್ಗೇಡು ಕೊಡು’ ಅಂದಳು. ಗೌರಮ್ಮ ಒಂದು ಹಿಡಿ ಪುರಿ ಈಸ್ಕಂಡು ತನ್ನ ಹಿರಿಮಗನಿಗೆ ನೀಡಿದಳು. ಆ ಹೈದ ತೊಗಟ ತೆಗದ ಕಡ್ಡಿಯಂತಿದ್ದ ತನ್ನ ಕೈ ನೀಡಿತು.

ಗೌರಮ್ಮನ ಆ ಹಿರೀ ಹೈದ ಕೊಟ್ಟದ್ದ ಈಸ್ಕಂಡು ತಿಂದ್ಕಂಡು ಅದರಷ್ಟಕ್ಕೆ ಅದಿತ್ತು. ಅದಕ್ಕೆ ಇದ್ದಂಥ ಕಾಯುಲೆ ಯಾವ ಕಾಲಕ್ಕು ವಾಸಿಯಾಗುವುದಲ್ಲ ಎಂದು ಅದ ನೋಡಿದವರು ಅದರೊಡನೆ ಅದರ ಅವ್ವನೂ ಅಂದುಕೊಂಡಿದ್ದರು. ಅದೂನು ಅಂತಲೇ ಅಂದ್ಕೊಂಡಿತ್ತು. ಅದು ಯಾವಾಗಲೂ ಒಂದು ಬಿಳಿದುಪ್ಪಟ್ಟಿಯ ತಲ ಮುಚ್ಚುವಂತೆ ಹೊದ್ದುಕೊಂಡಿರುತ್ತಿದ್ದು ಅದನ್ನು ಒಂದು ಚಣವೂ ಬಿಟ್ಟಿರುತ್ತಿರಲಿಲ್ಲ. ಅದಕ್ಕೇ ಅದರ ಚಿಕ್ಕಮಾವ ಗುರುಸಿದ್ದು ಆ ಹೈದನಿಗೆ ದುಪ್ಟಿ ಕಮೀಷನರು ಎಂದು ಕರೆಯುತ್ತಿದ್ದು ಈಗ ಅದೇ ಹೆಸರು ನಿಂತಿತ್ತು. ಅದರ ಹುಟ್ಟ ಹೆಸರು ಆ ಹೈದಗು ನೆಪ್ಪಿದ್ದಂತೆ ಕಾಣದು. ಆ ಹೈದ ಈ ಲೋಕದಿಂದ ಎಂದೋ ಚುಕ್ತವಾದದ್ದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಅದರಷ್ಟಕ್ಕೆ ಅದು ಕೂತಿರುತ್ತಿತ್ತು. ಉಳಿದ ಯಾಪಾರಗಳು ಅವರಷ್ಟಕ್ಕೆ ಅವು ನಡೆಯೂತ ಹೋಗುತ್ತಿದ್ದವು. ದೀಪಾಲೆ ಕಂಬದ ಬಳಿಯ ಮಸೀನ ಪುಟಗೌರಿ ಪೂರ್ತ ತೊಡುದು ಬೆಳ್ಳಗೆ ಕಾಣುತ್ತಿತ್ತು.

– ೩ –

ನಡೊತ್ತಿನಲಿ ಕೈಲಿ ಸ್ಕೂಲುಪ್ಪಿಟ್ಟು ಹಿಡುದು ಇಸ್ಕೋಲು ಮುಗುಸಿ ಶಿವೂ ಬಂದನು. ಮೇಲ ಉರಿಯೋ ಸೂರ್ಯ ಕ್ರೂರವಾಗಿ ನೆಲಕ್ಕೆ ಕೆಂಡ ಉಗುಳುತ್ತಿದ್ದನು. ಆ ಝ್ಹಳಕ್ಕೆ ಹಟ್ಟಿ ಸುಸ್ತಾಗಿ ಬೆವುತು ಮಲುಗಿತ್ತು. ಸಾಕವ್ವ ಕುಂತಲ್ಲೆ ತೂಕಡಿಸಿಕೊಂಡು ವಾಲಾಡುತ್ತಿದ್ದಳು. ದೊಡ್ಡ ಮಾವ ಕಾಳಣ್ಣ ತನ್ನ ನೆರುಕೆ ಬಾಗುಲಿಗೆ ತಲ ಹಾಕ್ಕೊಂಡು ಒಳಕ್ಕ ಕಾಲಾಕಿಕೊಂಡು ಗೊರಕೆ ವಡೀತ ಮಲುಗಿದ್ದನು. ಮಾವನ ತಲಮಾವನ ಹೆಡ್ತಿ ತೊಡ ಮೇಲಿತ್ತು. ಅವಳು ಮಾವನ ತಲೇನ ಬಗುದು ಬಗುದು ನೋಡ್ತ ಹೇನು ಬೇಟೆಯಲ್ಲಿ ಮುಳುಗಿದ್ದಳು. ನಡುಕಲ ಮಾವ ಸಣ್ಣಯ್ಯ ಎಲ್ಲೋ ಹೋಗಿದ್ದನು. ಅವನ ಎರಡು ಹೈಕಳು ಅಂಗಳದಲ್ಲೇ ಬಿದ್ದುಕೊಂಡಿದ್ದವು.

ಅತ್ತ, ಕಿರ್‍ಮನೆಯೊಳಗೆ ಚಲುವಮ್ಮ ಮಲೀಕಂಡು. ತನ್ನ ಕೂಸ ತಟ್ಟಿ ತಟ್ಟಿ ಮಲುಗಿಸುತ್ತಿದ್ದಳು. ಅವಳ ತಲೆ ದೆಸೆಯಲ್ಲಿ ಕೂತು ಅವಳ ಎರಡನೆ ಹೈದ ಬೋಸಿಯಲ್ಲಿ ಮಿಕ್ಕಿದ್ದ ಉಳುಕೆ ಅಂಬಲಿಗೆ ನಾಲುಗೆ ಅರ್ಪಿಸಿತ್ತು. ಇತ್ತ ನಡು ಮನೇಲಿ ಶಿವೂ ಅವ್ವ ಗೌರಮ್ಮ ನೆಲಕ್ಕೆ ಸೆರುಗ ಹಾಸ್ಕೊಂಡು ತನ್ನ ಹಿರೀಮಗನ ಪಕ್ಕ ಮಲುಗಿದ್ದಳು. ಶಿವೂ ಅಣ್ಣ ದುಪ್ಟಿಕಮೀಷನರು ಬಿಳಿದುಪ್ಪಟಿ ಹೊದ್ದುಕೊಂಡು ಅಲ್ಲಾಡದೆ ಕುಂತಿದ್ದು ಗೋಡೆ ನೋಡುತಲಿತ್ತು.

ಆ ನಡುಮನೆ ಬೆಳುಕಲ್ಲಿ ಶಿವೂ ಚಿಕ್ಕಮ್ಮ ಪುಟಗೌರಿ ಕುಕ್ಕರಗಾಲಲ್ಲಿ ಕೂತು ಲಂಗದ ಮೇಲಕ್ಕ ಸೀರೇನ ಎತ್ತಿಕಟ್ಟಾಕ್ಕೊಂಡು ಒಂದು ಗಳಾಸ್ನಲ್ಲಿ ತುಟೀಯ ಹಿಂದಕೂ ಮುಂದಕೂ ಮಾಡಿ ’ನವುಲು ಬರೀತೀನಿ ನೋಡ್ಕ’ ಅಂದಳು. ಶಿವು ಎಷ್ಟಾಗುತ್ತೊ ಅಷ್ಟೂ ಕಣ್ಣಗಲಿಸಿ ಅಲ್ಲೆ ಕೂತಿತು.

ನೀಲಿ ಕಲುಸಾದ ಮೇಲ ಪುಟಗೌರಿ ಶಿವೂ ಕೈಲಿದ್ದ ಸ್ಕೂಲುಪ್ಪಿಟ್ಟು ನೋಡಿ ’ತಿಂದ್ಕ ಅದ’ ಅಂತಲೆ ಶಿವೂ ’ನಿಂಗೂ ವಸೆಬೇಕ’ ಅಂದನು. ಅದಕ್ಕವಳು ’ಬ್ಯಾಡ…ನಿಮ್ಮಣ್ಣನ್ಗು ವಸಿಕೊಟ್ಟು…ನೀನೊಸಿತಿಂದ್ಕ’ ಅಂದಳು. ಶಿವೂ ಆ ಉಪ್ಪಿಟ್ಟನ್ನು ಎರಡು ಭಾಗ ಮಾಡಿ ಒಂದೊಂದು ಕೈಲು ಒಂದೊಂದು ಹಿಡುದು ಅದರಣ್ಣ ದುಪ್ಟಿ ಕಮೀಷನರ ಬಳಿಗೆ ಬಂದು ಒಂದು ಕಯ್ಯ ನೀಡಿ ಅಣ್ಣೋ ಅಣ್ಣೋ ಅಂತು. ಆ ಅಣ್ಣ ಕುಂತೇ ಇದ್ದು ಎಷ್ಟೋ ಹೊತ್ತು ಆದಮೇಲ ತಮ್ಮನ ದಿಕ್ಕ ತಿರುಗಿ ಕಯ್ಯ ನೀಡಿತು.

ಈಚಲ ಕಡ್ಡೀಗೆ ನೀಲಿ ಅಜ್ಜುಕೊಂಡು ಪುಟಗೌರಿ ನವುಲ ಕಾಲಿಂದ ಆರಂಭಿಸಿದಳು. ಪುಟಗೌರಿಯ ಕೈಗಳಿಗೆ ತನ್ನ ಕಣ್ಣು ಕೊಟ್ಟುಬಿಟ್ಟಿದ್ದ ಶಿವೂ ’ಅಯ್ಯೊ ಚಿಕ್ಕಿ ಎಲ್ಲಾರು ಮೊದ್ಲು ಬರ್ದಾರ’ ಎಂದು ಬೆರುಗಿಂದ ಅಂದನು. ಪುಟಗೌರಿ ಗೋಡೇಲಿ ಕಯ್ಯ ಆಡಿಸುತ್ತ ’ನೀ ಸುಂಕಿರಪ್ಪ ನಾ ಬರೆಯಗಂಟ’ ಅಂದು ಯಾವುದೊ ಪದ ಕುರುಕುತ್ತ ಕಯ್ಯ ಆಡಿಸಿದಳು. ಶಿವೂ ಸುಂಕಾಗಿ ಕೈಲಿದ್ದ ಉಪ್ಪಿಟ್ಟು ಮುಗ್ಸಿ ಪುಟಗೌರಿಯ ಬೆರಳುಗಳು ಆಡಿದ ಕಡೆ ತನ್ನ ಕಣಾದಿಸುತ್ತಲಿದ್ದು ಆಮೇಲ ನೆಲದಲಿ ಸಿಲೋಟ ಇಟ್ಟು ಆಮೇಲ ತನ್ನ ಇಡೀ ದೇಹವ ಅದರ ಮೇಲಕೆ ದಬ್ಬಾಕಿ ಆಮೇಲ ತನೂವಿ ನವುಲ ತಲೆಯಿಂದ ಆರಂಭಿಸಿ ಬಳಪ ಒಡಾಡಿಸಿದನು.

ಹೀಗಾಗುತ್ತ ಎಷ್ಟೊ ಹೊತ್ತಾದ ಮೇಲ ಪುಟಗೌರಿ ’ನೊಡಪ್ಪು ಈಗ’ ಅಂತಲೆ, ತಲೇನ ಸಿಳೋಟಲ್ಲಿ ಮುಳುಗಿಸಿ ನವುಲು ಬರೀತಿದ್ದ ಶಿವೂ ತಲವ ಎತ್ತಿ ನೋಡಿದರೆ, ನಡುಮನೆ ಗೂಡ ಬಲಪಕ್ಕದಲ್ಲಿ ನೀಲಿಲಿ ಮೂಡಿದ್ದ ನವುಲು ಶಿವೂನ ನೋಡ್ತ ಕುಣೀತಿತ್ತು. ಶಿವೂಗೆ ತಡಕೊಳ್ಳಕ್ಕಾಗದೆ ’ವುಜ್ಜೋ ಎಷ್ಟು ಚಂದಾಗದೆ..’ ಎಂದು ಚಪ್ಪಾಳೆ ತಟ್ಟಲು ಅವನ ಆ ಚಪ್ಪಾಳೆ ಗಲುಗು ಹಜಾರದಲ್ಲಿ ತೂಕಡಿಸ್ತ ವಾಲಾಡ್ತ ಕೂತಿದ್ದ ಸಾಕವ್ವನ ಎಚ್ಚರ ಮಾಡಿತು. ಅವಳು ಕಣ್ಣು ಬುಡುದೇನೆ ವಾಲಾಡ್ತಾನೆ, ’ಯಾರಮ್ಮೀ ಕೂಸ ಒಳ್ಗಾ’ ಅಂದಳು. ಪುಟಗೌರಿ ’ನಾನುಕವೈ’ ಅಂದಳು. ಸಾಕವ್ವ ’ನಡುಮನ ಗೂಡಲಿ’ ಒಂದೆಲ ಅಡ್ಕ ಇದ್ರ ವಸಿ’ ಎಂದು ವಾಲಾಡಿದಳು. ಪುಟಗೌರಿ ’ಇಲ್ಲಿ ಇಲ್ಲಕವೈ’ ಅನ್ನುತ್ತಿದ್ದಂತೆ ಶಿವೂ ನಡುಗೇಲಿ ಸಡಗರ ತುಂಬಿ ಅಜ್ಜಿ ಹತ್ತಿರಕ್ಕೆ ಬಂದು ’ಅಮ್ಮಯ್ ಪುಟಗೌರಿ ಚಿಕ್ಕಿ ನವುಲು ಬರ್ದವಳೆ ನೋಡು ಬಾ…’ ಅಂತು. ಸಾಕವ್ವ ಕಣ್ಬುಟ್ಟು ’ತಗಾ ಅದ್ಯಾರೊ ಒಬ್ಬಳು ಕುಟ್ಟೊ ಬತ್ತ ಬುಟ್ಟು ಹುಟ್ಟೋ ಶ್ಯಾಟ ನೋಡ್ಕತ್ತಿದ್ಲಂತೆ…’ ಅಂದು ಮತ್ತೂ ಕಣ್ಮುಚ್ಚಿ ನಿದ್ದೆ ತುಂಬಿಕೊಂಡು ವಲಾಟಕ್ಕೆ ಒಳಾಗಾದಳು. ಅವ್ವನ ಮಾತುಗಳು ಪುಟಗೌರಿ ಕಿವಿಗೆ ಚಿವುಟಲು ಅವುಳು ’ವೂಂ ಕವ್ವೊ ಇಲ್ಲಿ ಬತ್ತ ಕುಟ್ಟಾಕ ಗುಡ್ಡಾಕಿ ಮಡ್ಗದ’ ಎಂದು ಮಾತೆಸೆದು ಇನ್ನೊಂದು ಪಕ್ಕದಲ್ಲಿ ನವುಲು ಬರೆಯಲು ಕಣ್ಣಂದಾಜು ಇಡುತ ನಿಂತಳು.

ಹೀಗಾಗುತ್ತ ಕೊನೆಗೆ ಸಾಕವ್ವನ ಕಣ್ಗಳಿಂದ ನಿದ್ದೆ ಅನ್ನೋದು ನೆಗುದು ಹೋಯಿತು. ನೋಡುತಾಳೆ – ಬಾನಿಂದ ಕತ್ತಲ ಹನಿಗಳು ಭೂಮಿಗೆ ಉದುರುತ್ತಿದ್ದವು. ಮೊಮ್ಮಗೂಸು ಶಿವೂ ಅಲ್ಲಿ ಇದ್ದಬದ್ದ ಬೆಳುಕನ್ನು ಕಣ್ಗೆ ತುಂಬುಕೊಂಡು ಪುಸ್ತಕ ಸಿಲೋಟ ಕಣ್ಗಂಟಿಸಿ, ನೂರು ರೂ. ಗೆ ವರ್ಷಕ್ಕೆ ಹನ್ನೆರಡು ರೂ. ಬಡ್ಡಿಯಂತೆ ಎರಡು ವರ್ಷಕ್ಕೆ ಎಷ್ಟು ಬಡ್ಡಿ ಎಂದು ಬಾಯಲ್ಲಿ ಹೇಳ್ತ ಲೆಕ್ಕ ಮಾಡುತ್ತಿತ್ತು. ಹಿಂದಲ ನೆಪ್ಪಿಗೆ ಸಾಕವ್ವ ಬಿದ್ದು, ಶಿವೂನ ಕರೆದು ’ನೋಡಪ್ಪು ಆಗ ನಿಮ್ಮವ್ವ ನಿಂಗ ಏಡು ತಿಂಗಳ ಬಾಣ್ತಿ….ನಾನು ಕೊಳ್ಳಗಾಲದಿಂದ ಹನ್ನೇದು ರೂಪಾಯಿ ಕೊಟ್ಟು ತಂದಿದ್ನಲ್ಲ, ಆ ದೊಡ್ಡ ಚಲುಗವ ರತುನವ್ವನ ಹಟ್ಟೇಲಿ ಆರು ರೂಪಾಯ್ಗ ಅಡು ಇಟ್ಟಿವ್ನಿ.ಈಗ್ಗ ಅಸ್ಲು ಬಡ್ಡಿ ಸೇರಿ ಎಷ್ಟಾದ್ದು ಹೇಳುಮತ್ತ….’ ಅಂದಳು. ಶಿವೂ ಹೇಳ್ತೀನಿ ತಗಾ ಅನ್ನೋ ಮೊಖ ಮಾಡಿ ಕೂಡ್ದ ಕಳ್ದ ಸಿಗಲಿಲ್ಲ. ಆಗ ಮಿಂಚಿದಂತೆ ಶಿವೂ ’ಬಡ್ಡಿ ಎಷ್ಟ’ ಅಂದ. ಸಾಕವ್ವ ’ಅಷ್ಟೂ ಗೊತ್ತಿಲ್ವಾ ನಿಂಗ. ರುಪಾಯ್ಗ ತಿಂಗಳ್ಗ ಒಂದಾಣಿ ಬಡ್ಡಿ’ ಅಂದಳು. ಶಿವೂ ಹಾಗೂ ಹೀಗೂ ಮಾಡೂ ದಕ್ಕದೆ ’ಹೋಗಮ್ಮೋ, ನಾ ಓದ್ಕಬೇಕು….’ ಎಂದು ಸಾಕವ್ವನ ಕೈಕೊಸರಿ ಎದ್ದು ಮೊದಲಿದ್ದಲ್ಲಿಗೆ ಬಂದನು.

ಈಗ ಶಿವೂ ಪುಸ್ತಕಕೆ ಕಣ್ಣಾಕಲು, ಕಣ್ಣಾಕಿದರೆ ಆಗಲೆ ಕತ್ತಲು ಅನ್ನೋದು ಇದ್ದಬದ್ದ ಬೆಳುಕನ್ನೆಲ್ಲ ನೆಲಕೆ ತುಳುದಬುಟ್ಟಿತ್ತು. ಕಿರುಮನೇಲಿ ಮಾತ್ರ ಆಗ ಹಚ್ಚಿದ ದೀಪದ ಬೆಳಕು ಕೊಣಮಿಣಿ ಕೊಣಮಿಣಿ ಅಂತ ಕಿರುಮನೇಲಿ ವಸ್ತುಲ ಕಡುದು ಹೊರಕ್ಕೆ ಮೊಖ ಹಾಕಿ ಒಳಕ್ಕೋಗದು, ಒಳಕ್ಕೆ ಮುಖ ಹಾಕಿ ಹೊರಕ್ಕೋಗದು, ಮಾಡ್ತಿತ್ತು. ಶಿವೂ ಕುಂತಲ್ಲಿಂದಲೆ ’ಸೊಳ್ಳ ಹತ್ಸವೂ’ ಅಂದನು. ಒಳಗಿಂದ ಗೌರಮ್ಮ ’ತಾಡಪ್ಪು, ಚಿಕ್ಕಿ ನಾಳಕ ಕಂಬ್ಳಕ ಬತ್ತೀನಿ ಅಂದ್ಬುಟ್ಟು ದುಡ್ಡ ಈಸ್ಕ ಬರಾಕ ವೋಗೌಳೆ…..ಬಂದ್ಮೇಲ ಕೊಡ್ತೀನಿ’ ಅಂದಳು. ಚಲುವಮ್ಮ ’ಅಯ್ಯೋ ಎಲ್ಲಿದ್ದದು ಅತ್ಗಮ್ಮ….ಸಿವೂ ಬಾಪ್ಪು ಇಲ್ಲೆ ಓದ್ಕ….’ ಅನ್ನುತ್ತಲೆ ಶಿವೂ ಸಿಲೋಟು ಪುಸ್ತಕದೊಡನೆ ಕಿರುಮನೆಗೆ ಬಂತು. ಅದರವ್ವ ಖಾಲಿ ಸೊಳ್ಳ ಹಿಡುದು ನಡುಮನೆಗೆ ನಡೆದಳು. ಪುಟಗೌರಿ ಬರಿಕಯ್ಯ ಬೀಸುತ್ತ ಒಳಬಂದಳು.

– ೪ –

ಅಲ್ಲೊಂದು ಇಲ್ಲೊಂದು ಹೊಗೆಯಾಡಿದವರ ಮನೆಗಳ ಹಿಟ್ಟುನ ಮಡುಕೆ ಸದ್ದುಗಳು ಏಳ್ತ ಬೀಳ್ತ ಬಂದು ಸಾಕವ್ವನ ಕಿವೀಲಿ ನಿಂತು ಕರೆಯೋಲೆ ನೀಡಿದುವು. ಸಾಕವ್ವ ಶಿವೂನ ಕರೆದಳು. ಶಿವೂ ಬಂತಲೆ ’ಬಾಪ್ಪು ವಸಿ ನನ್ನುಂಜನ ನೋಡ್ಕಂಡು ಬರೋವು’ ಅಂದಳು. ಶಿವೂ ಆ ಊ‌ಒ ಅಂದು ’ಹುಂಜ ಇದ್ದಿದ್ದ್ರ ಬಂದಿರೋದು….ಈಗ ಕತ್ಲಲ್ಲಿ ನಂಗ ಹೆದ್ರಕ…ಹೋಗಮ್ಮೊ’ ಅಂದನು. ಸಾಕವ್ವ ಕಾಲು ನೀಟಿ ಕೂತವಳು ಅಂದಳು:

’ಅದ್ಯಾಕ ನಾ ಇಲ್ವ?’
’ನೀ ಇದ್ರ?’
’ಯಮದವರೂ ಓಡೋಯ್ತರ!’
ಶಿವೂಗೆ ಅದನ್ನು ತನ್ನ ಕಣ್ಣುಗಳಿಗೆ ತಂದುಕೊಳ್ಳಲು ಸಿಗಲಿಲ್ಲ. ಬೆಪ್ಪಗಣ್ಣು ಬುಟ್ಟು ನೋಡಿತು. ಸಾಕವ್ವ ಅಂದಳು:
’ಅವರ್‍ಗ ಆಲ್ದ ಮರ್‍ದ ಗಾತ್ರ ಮೀಸ…..ದಾರಂದದಗಲ ಹಲ್ಲು….’
’ಅವ್ರು ನಿನ್ನ ಎಳ್ಕೊಂಡೋದ್ರ….’
’ಅಯ್ ತಗತಗಾ…ನನ್ನ್ಯಾಕ ಎಳ್ಕೊಂಡುವೋದೀರಿ ಮೂದೇವ್ಗಳ….ನಾನೇ ಬತ್ತೀನಿ ನಡೀರಿ ಅಂತೀನಿ’
’ಆಮೇಲ…’
’ಆಮೇಲ ಅವರ್‍ಗಿಂತ ಮೊದ್ಲು ನಾನೀಯ ಯಮಧರ್ಮರಾಜ್ನ ತವುಕವೋಯ್ತೀನಿ…..’
ಸಾಕವ್ವನ ಬಾಯಿಂದ ಮಾತುಗಳು ಬರುತ್ತಿದ್ದಂತೆ….ಅವಳ ಸುಕ್ಕಿಂದ ಮಾಡಿದ ಅಲ್ಲಾಡುವ ಚರ್ಮ, ಅವಳ ಮೊಖದ ಹಲ್ಲಿಲ್ಲದ ಬಾಯಿ, ತಲೇಯ ನರಕೂದಲು ಮಾಯವಾದುವು. ಸಾಕವ್ವನೊಳಗ ಪುಟಗೌರಿ ಚಿಕ್ಕಿ ಮೂಡಿದಳು.
’ಯಮಧರ್ಮರಾಜ ಏನ್ಮಾಡೀನು….?’
’ಅವ್ನಾ….? ನಮ್ಮ ಹಟ್ಟೀ ಗಾತ್ರದ ಸಿಮ್ಮಾಸನದ ಮೇಲ ಕೂತ್ಗಂಡು….ಯಮದೂತರು ಕರ್‍ಕ ಬತ್ತಾರಲ್ಲ…..ಅವರ್‍ಗ ಸೀಕ್ಸ ಕೊಡ್ತಾನ….’
’ಅದ್ಕೂನೂ ನಿಂಗ ಹೆದ್ರಕ ಆಗಲ್ವಾ….?’
’ಅಯ್…ನರ ಲೋಕದಲಿ ನಾನು ಪಟ್ಟಂಥ ಕಷ್ಟಕ ಆ ಸೀಕ್ಸ ಎಲ್ಗಾದ್ದು ತಗಾ…..ಅವ್ನ ಜೊತಲೂ ಅದ್ನೆ ಅಂತೀನಿಕನಾ…..’
ಪುಟಗೌರಿ ಚಿಕ್ಕಿಯಾಗಿದ್ದ ಸಾಕವ್ವ ಈಗ ಸೀರೆ ಉಟ್ಟು ಹಾರಾಡುವ ಕೂದುಲ ಗಾಳೀಗೆ ಬಿಟ್ಟು ಬಳುಕೂತ ದೇವಕನ್ನಿಕ ಆದಳು.
’ಅವ್ನು….ಅದ್ಕೇನಂದನು?’
’ಅದ್ಕ ಅವ..ಆಯ್ತು ಮುದ್ಕಿ, ನಿನ್ನ ಧೈರಕ ಮೆಚ್ದೆ. ಏನ್ ವರ ಬೇಕು ಕೇಳ್ಕ ಅಂತಾನ.’
ಬಿಳಿ ಸೀರೆ ಉಟ್ಟು ಹಾರಾಡುವ ಕೂದುಲ ಗಾಳೀಗೆ ಬಿಟ್ಟು ಬಳುಕೂತ ದೇವಕನ್ನಿಕೆಯು ತನ್ನ ಕಿರುಬೆರುಳಲಿ ಭೂಲೋಕನ ಆಡಿಸತೊಡಗಿದಳು.
’ವರ ಕೇಳ್ಕ ಅಂದ್ಮೇಲ…’
ಅದ್ಕ ನಾನು, ನೋಡು ಸ್ವಾಮಿ…..ನನ್ನ ಮೊಂಗೂಸು ನರಲೋಕದಲಿ ರಾಜ್ಭಾರ ಮಾಡುವಂಥ ವರಕೊಂಡು….ಆಷ್ಟು ಸಾಕು ಅಂತೀನಿ.’
ಶಿವೂ ಧೇನಿಸುತ್ತ ಕೂತಿತ್ತು.

ಶಿವೂನ ಧ್ಯಾನವ ಸಾಕವ್ವ ಮುರುದು, ’ಈಗ ನನ್ನುಂಜನ ನೋದ್ಕಂಬ ರವ್ ಬಾ ಕೂಸು’ ಅಂದಳು. ಶಿವೂ ಎದ್ದಿತು. ಸಾಕವ್ವ ’ನಿಮ್ಮವ್ವನತವು ಒಂದುಗಳಾಸ ಈಸ್ಕಬಾ’ ಅಂದಳು. ಶಿವೂ ಅವ್ವ ಗಳಾಸ ಕೈಲಿಡುದು ಬಂದು ’ಅವ್ವೊ ಅದ್ಯಾಕ ಈ ಕತ್ಲಲಿ ಎದ್ದುಬಿದ್ದು ಬಂದಾಯಿ….ಹೋದ್ದು ಹೋಯ್ತು ಅಂದ್ಕಂಡು ಸುಂಕಿರು’ ಅಂದಳು. ಸಾಕವ್ವ ನೆಲಕ್ಕೆ ಕೈಕೊಟ್ಟು ಮೇಲೇಳುತ್ತ ಊರುಗೋಲು ಹಿಡುದು ’ನೀ ಸುಂಕ ಗಳಾಸ್ ಕೊಡುಮತ್ತ ಹೋದ್ದು ಹೋದ್ದಂತೆ ಎಲ್ಗೊ, ಅದು ಹೋಗ್ಲಿ…ಆಮೇಲ ತೋರಿಸ್ತೀನಿ. ಈ ನನ್ನ ಮನದೇವರ್‍ಗ ಮೆಣಸಿಕಾಯ ಹೊಗ ಕೊಟ್ಟು ನನ್ನ ಹಳ ಕೆರದಲ್ಲಿ ಚಾರಮಾರ ಬಾರಿಸ್ದೆ ಬುಟ್ಟಾನ….’ ಎಂದು ಗಳಾಸು ಹಿಡುಕಂಡು ನಿಂತಿದ್ದ ಶಿವೂ ಕೈಯ್ಯ ಹಿಡುಕಂಡು ಸಾಕವ್ವ ಕೋಲು ಊರುತ್ತ ಗವ್ವೋ ಅನ್ನುತ್ತಿದ್ದ ಕತ್ತಲಿಗೆ ಬಿದ್ದರು.

ಆ ಕತ್ತಲಲ್ಲಿ ಸಾಕವ್ವ ಊರುಗೋಲು ಊರ್‍ಕೊಂಡು ಶಿವೂ ಕಯ್ಯ ಹಿಡ್ಕೊಂಡು ಎದುರಾದ ಹಟ್ಟಿ ಮುಂದ ನಿಲ್ಲಿತ್ತಿದ್ದಳು, ನಿಂತು ಉಸುರ ಬಲವಾಗಿ ಎಳುದು ನೋಡುತ್ತಿದ್ದಳು, ನೋಡಿ ಮುಂದಕೆ ನಡೆಯೋದ ಮಾಡುತ್ತಿದ್ದಳು. ಹೀಗೆ ಹತ್ತು ಹಟ್ಟಿಗಳಾದವು, ಇಪ್ಪತ್ತು ಹಟ್ಟಿಗಳಾದವು, ಯಾರಾರು ’ಯಾರೋ’ ಅಂದರೆ ಸಾಕವ್ವ ’ನಾನುಕಪ್ಪ’ ಅನ್ನೋದು, ’ಯಾಕಮ್ಮೊ’ ಅಂದರೆ ’ಇಲ್ಲೆಕಪ್ಪೊ’ ಅನ್ನುತ್ತ ನಡೆಯುವುದಾಗುತ್ತಿತ್ತು. ಕಾಲು ಸೇದುವವರೆಗೂ ನಿಂತು ಸವುತಿ ಕೆಂಪಮ್ಮನ ಹಟ್ಟೀವಾಸನೆಯನ್ನು ಹೀರಿದರೂ ಏನೂ ಮೂಗಿಗೆ ಸೋಂಕದೆ ಸಾಕವ್ವ ಪೇಚಿಕೊಂಡು ಮುನ್ನಡೆದಳು. ಹೀಗಾಗುತಿರಲು ಒಂದು ಬಲವಾದ ವಾಸನೆಯು ಸಾಕವ್ವನನ್ನು ಒಂದು ಹಟ್ಟೀ ಬಾಗುಲಿಗೆ ಎಳುದು ತಂದು ನಿಲ್ಲಿಸಿತು.

ಅದು ಪರ್ವತಯ್ಯ ಅಂಬೋರ ಹಟ್ಟೀ, ಪರ್ವತಯ್ಯಗೂ ಸಾಕವ್ವಗೂ ಸುತ್ತೂ ಬಳಸಿ ನಂಟಾಗಬೇಕಿತ್ತು. ಸಾಕವ್ವ ದಾರಂದ ತಟ್ಟಿ ’ಅಮ್ಮೇ ತಾಯಿ…..ಯಾರವ್ವ ಒಳ್ಗ’ ಅಂದಳು. ಪರ್ವತಯ್ಯನ ಹೆಡ್ತಿ ದೇವೀರಮ್ಮ ಬಾಗುಲು ತಗುದು ’ಬನ್ಯಮ್ಮ ಒಳಕ್ಕ…..ಏನ್ ಬಂದ್ರಿ’ ಅಂದಳು. ಸಾಕವ್ವ ಉಸುರೆಳೆದು ಒಳಬಂದಾಗ ಪರ್ವತಯ್ಯ ಉಣ್ತಾ ಕೂತಿದ್ದನ್ನು. ಸಾಕವ್ವ ದೇವೀರಮ್ಮಗೆ ’ತಾಯೆ, ಮಾರಿಹಬ್ಬದ್ದು ಅರಪಾವು ಅಕ್ಕಿ ಉಳ್ದಿತ್ತು. ಅದ ನನ್ನ ಮೊಂಗೂಸ್ಗ ಬೇಯಿಸಿವ್ನಿ. ನಮ್ಮ ಕೇರೀಲಿ ಯಾರವ್ವ ಹಿಟ್ಟ ಮಾಡ್ಕಂಡು ಉಣ್ಣೋರು. ಅದ್ಕ ನಿಮ್ಮಟ್ಗ ಏಡು ಉದ್ಕದ ನೀರ್‍ಗ ಬಂದಿವ್ನಿ ಕನವ್ವಾ’ ಅಂದಳು. ದೇವೀರಮ್ಮ ಶಿವೂ ಕೈಲಿದ್ದ ಗಳಾಸಿಗೆ ಒಂದಿಷ್ಟು ಉದುಕ ತಂದೂದಳು. ಸಾಕವ್ವ ’ಬತ್ತೀನಿ ನನ ಕಂದ’ ಅಂದುಬುಟ್ಟು ಹೊರಬಂದ ಮೇಲ ಗಮುಗುಟ್ಟುತ್ತಿದ್ದ ಗಳಾಸ ಮೂಗಿಗೆ ಹಿಡಿದಳು. ಆಮೇಲ ಉದುಕದಲ್ಲಿದ್ದ ತುಂಡು ತಗುದು ಶಿವೂಗೆ ಕೊಟ್ಟು ’ತಿಂದು, ಬಾಡ ಏನ ನೋಡು ಕೂಸು’ ಅಂದಳು. ಶಿವೂ ಅದ ನೋಣೆದು ’ಬಾಡಲ್ಲಕಮ್ಮಯ್ ಅಣಬ’ ಅಂತು. ಸಾಕವ್ವ ಎಲೆಲಾ ಅಂದುಕೊಂಡು ಇನ್ನುಳಿದ ಹಟ್ಟಿಗಳ ವಾಸನೇಯ ಜಪ್ತಿ ಮುಂದುವರಿಸಿ, ಸುಸ್ತಾಗಿ ಕೊನೆಗೂ ಹಟ್ಟಿ ಮುಟ್ಟಿದಳು.

ಅಲ್ಲಿ ಹಟ್ಟಿ ಸೂರಡಿಯಲ್ಲಿ ಚಲುವಮ್ಮ ಮತ್ತು ನೆರೆಮನೆ ಕಾಳಕ್ಕ ನಿಂತಿದ್ದರು. ಸಾಕವ್ವ ಶಿವೂ ಒಳಹೋಗಲು ಆಮೇಲ ಕಾಳಕ್ಕ ’ಅತ್ತಿಗೆಮ್ಮೋರ, ಒಂದು ಬದುಕ ಕೇಳ್ತೀನಿ…ಇಲ್ಲ ಅನ್ನಬೇಡಿ’ ಅಂದಳು. ಆಗ ಕಾಳಕ್ಕ ’ಏನು ಅಲ್ಲಕನ್ನಿ ಅತ್ಗಮ್ಮ, ಒಲ ಮೇಲ ಹಿಟ್ಗ ಇಟ್ಟು ಬಂದೀನಿ. ಅಸಿಟು ಸಾಲ್ದೀಯ ತೆಳ್ಳಗಾಗದೆ. ಒಂದ್ಪಾವು ಅಸಿಟ್ಟು ಕೊಟ್ಟಿರಿ. ನಾಳ ಮಿಲ್ಲು ಮಾಡಸ್ಕಂಡು ಬಂದ್ಮೇಲ ಕೊಟ್ಟುಬುಡ್ತೀನಿ’ ಅಂದಳು. ಚಲುವಮ್ಮ ಹಣೆಮುಟ್ಟುಗೊಂಡು ’ನನ್ನ ಕಣ್ಣಾಣ್ಗೂ ಇಲ್ಲಕಾ ತಾಯಿ. ಅದ್ದರ ನಾನು ಇಲ್ಲ ಅಂತಿದ್ನಾ’ ಅಂದಳು. ಕಾಳಕ್ಕನ ಮೊಖದ ರೀತಿ ಆ ಕತ್ಲಲ್ಲಿ ಕಾಣಿಸುತ್ತಿರಲಿಲ್ಲ. ಚಲುವಮ್ಮ ದಾರಂದವ ಮುಚ್ಚಿ ಒಳಬಂದಳು.

ಸಾಕವ್ವ ಮಾಮೂಲಿ ಜಾಗದಲ್ಲಿ ಕೂತಿದ್ದು ’ಕೊನ್ಗೂ ಸಿಗಲಿಲ್ವಲ್ಲಪ್ಪಾ ಸಿವ್ನೆ….ಅದ ಸಾಕಾಕ ನಾ ಎಷ್ಟು ಪಾಡುಪಟ್ಟಿದ್ನಪ್ಪ ದೇವ್ರೇ…..ಅಯ್ಯೋ ನನ್ನ ಮನೆ ದೇವ್ರೇ, ಹಾಳು ಮುರುಮಗ್ನೇ….ನೀನು ಕಣ್ಣ ಬುಟ್ಗಂಡು ಕೂತಿದ್ದೀಯೋ…..ಇಲ್ಲಾ, ಕಣ್ಣ ಮುಚ್ಗಂಡು ಕೂತಿದ್ದೀಯೋ….’ ಎಂದು ಪೇಚಿಕೊಳ್ಳುತ್ತಿದ್ದಳು. ಗಳಾಸಲ್ಲಿದ್ದ ಉದುಕವನ್ನು ರೋಗಿಷ್ಟ ಹೈದನ ನಾಲುಗರುಚಿ ಪಟ್ಟುಗೊಂಡು ನೆಕ್ಕುತ್ತಿತ್ತು.

– ೫ –

ರೋಗಿಷ್ಟ ಹೈದನ ನಾಲುಗ ರುಚಿಪಟ್ಟುಕೊಂಡು ನೆಕ್ಕುತ್ತಿರುವಾಗ್ಗೆ ಹೊರುಗಿನ ಕತ್ತಲಿಂದ ಕಾಳಣ್ಣ ಒಳುಗಿನ ಕತ್ತಲಿಗೆ ಬಂದನು. ಹಟ್ಟಿ ಗವುಗುಡುತ್ತಿತ್ತು. ಕಾಳಣ್ಣ ಬೆನ್ನ ಮೇಲಿದ್ದ ಗೋಣಿಚೀಲದ ಹೊರೇನ ಹಜಾರದ ಒಲೆ ಮುಂದ ಇಳುಕಿ ಕುಗ್ಗಿದ ದನೀಲಿ ಹೆಂಡ್ತೀಯ ಕರೆದನು. ಮೂಟೆ ಹೊತ್ತ ಭಾರಕ್ಕೆ ಸಣ್ಣಗೆ ಬೆವುತೂ ಇದ್ದನು. ಕಿರುಮನೆ ದೀಪದ ಬೆಳಕು ಇಣುಕಿ ನೋಡಿ ಒಳಕ್ಕೋತು. ಬಂದು ನಿಂತ ಹೆಡ್ತಿಗೆ ಕಾಳಣ್ಣ ’ಒಲ ಮುಂದ ತರಗ ಕತು….ಒಂದಿಷ್ಟು ಬೆಳುಕ ಮಾಡು’ ಅಂದನು. ಅವಳು ಜೋಳದ ತರುಗನ್ನು, ಕಿರುಮನೇಲಿ ಜೀವ ಇಟಕೊಂಡು ಉರಿಯುತ್ತಿದ್ದ ಸೊಳ್ಳಿಂದ ಉರಿಮಾಡಿಕೊಂಡು ತಂದು, ಆ ಉರಿಗೆ ಕಸಕಡ್ಡಿ ತರುಗು ತುಂಬಲು ಅಲ್ಲಿ ಹೊಗೆಯೊಡನೆ ಬೆಳುಕೆದ್ದಿತು. ಆ ಬೆಳುಕಿಂದ ಹಟ್ಟೀ, ಹಟ್ಟೀ ಒಳಗಲ ಜನ ಒಂದೇ ಸಲಕ್ಕೆ ಕಾಣುವಂತಯ್ತು.

ಕಾಳಣ್ಣ ಚೀಲದ ಅರ್ಧದಷ್ಟನ್ನು ಎದ್ದಿದ್ದ ಬಿಂಕಿ ಹತ್ತಿರದಲಿ ನೆಲಕ್ಕೆ ಸುರಿಯಲಿ ಕಡಲೆಕಾಯಿ ಚಲ್ಲಿಕೊಂಡು ಒಂದು ಗುಡ್ಡೆ ಆಯ್ತು. ಅಲ್ಲೆ ಸಾಕವ್ವ ಗೋಡೆಗೊರಗಿ ಕಾಲುನೀಟಿ ಕೂತು ತಲೆ ಸುತ್ತಲೂ ಜೊಯ್ಯೋ ಎನ್ನುತ್ತಿದ್ದ ಸೊಳ್ಳೆಗಳೊಡನೆ ಹೋರಾಡುತ್ತಿದ್ದಳು. ಕುಂತ ಅವ್ವನ ಮೊಖಕ್ಕೆ ಇಲ್ಲೆದ್ದ ಬೆಳಕೋಗಿ ಬೀಳುತ್ತಿತ್ತು. ಆ ಬೀಳುತ್ತಿದ್ದ ಬೆಳುಕನ್ನು ಆ ಮೊಖ ಹೀರುತ್ತ ಸಾಕವ್ವ ಉರಿಯುತ್ತ ಕುಂತಂತೆ ಕಾಣುತ್ತಿದ್ದಳು. ಕಾಳಣ್ಣ ಬಾಯಿಗೆರಡು ಕಾಳಿಟ್ಟು, ’ಅವ್ವೊ ಬಾ…..ಅಲ್ಯಾಕ ಕುಂತಿದ್ದಿ’ ಅಂತಲೆ ಸಾಕವ್ವ ’ಬಾಪ್ಪು ಸಿವೂ’ ಎಂದು ಕಯ್ಯಿಗೆ ಕರೆದಳು.

ಇಳಿಯದೇರುತ್ತಿದ್ದ ಬಿಂಕಿ ಮುಂದಕ್ಕೆ ಬಂದು ಸಾಕವ್ವ ಶಿವೂ ಕೂತರು. ಆ ಬಿಂಕಿ ಉರಿ ಮ್ಹೂಮತಾಯ ನಾಲುಗೆಯಂತೆ ಹೊತೆ ಕಕ್ಕುತ್ತ ಸೊಳ್ಳೆ ಕ್ರಿಮಿ ಕೀಟಾದಿಗಳ ಉಸುರು ಕಟ್ಟಿಸುತ್ತ ಅಲ್ಲಿಂದೆದ್ದು ಹಟ್ಟಿಯ ನಾಕಾ ಮೂಲಕೂ ಚಾಚುತ್ತಿತ್ತು. ಕಾಳಣ್ಣನ ಹೆಡ್ತಿ ತರಲೆಪುರುಳೇನ ಉರಿಗೆ ತಳ್ಳುತ್ತ ನಡುಮನೆಗೆ ’ಬನ್ರವ್ವಾ ಅದೇನ್ ಮಾಡೀರಿ’ ಅಂದಳು. ಅಲ್ಲಿಂದ ಗೌರಮ್ಮ ಪುಟಗೌರೀರು ಬಂದರು. ಪುಟಗೌರಿ ಮೊಖಕ್ಕೆ ಆ ಬಿಂಕಿ ಬೆಳುಕು ಬಿದ್ದು ಅವಳ ಮೊಖದಿಂದಲೇ ಬೆಳುಕು ಅನ್ನೋದು ಹುಟ್ಟಿ ಉಳಿದ ಕಡೆಗೆ ಹೊಂಟಂತಿತ್ತು. ಅವರೆಲ್ಲರೂ ಕಡಲೆಕಾಯಿ ಗುಡ್ಡೆಗೆ ಕಯ್ಯಾಕುತ್ತ ಸಿಪ್ಪೇನ ಬಿಂಕಿಗೆ ಎಸೆಯುತ್ತಿದ್ದರು.

ಗಂಡನ ಕಣ್ಸನ್ನೆ ತಿವಿಯಲು ಕಾಳಣ್ಣನ ಹೆಡ್ತಿ ಬಿಂಕಿ ಉರುಬುತ್ತಿದ್ದವಳು ಅಲ್ಲಿಂದ ಮೊಖ ತಗುದು ಚಲುವಮ್ಮಗೆ ’ತಾಯೆ ಬಾ ನೀನೂವಿ’ ಅಂದಳು. ಚಲುವಮ್ಮ ’ಐಕ ಮನಿಕಂಡವಕನಾ ಬುಡಿ ಅಕ್ಕಯ್ಯಾ’ ಅಂದಳು. ಕಾಳಣ್ಣನ ಹೆಡ್ತಿ ’ಅದೊಳ್ಳೆ ಸರಿಕನಾ, ಐಕಳ ಆಳ್ಸಕಂಡು ಬವ್ವ’ ಅಂದು ಎದ್ದು ಕಿರುಮನೆಗೆ ಬಂದು ಚಲುವಮ್ಮನ ಎರಡನೆ ಹೈದನ ಎಬ್ಬಿಸಿ ಅದರ ಕೈ ಹಿಡುದುಕೊಂಡು ಬಂದಳು.

ಚಲುವಮ್ಮ ಮಲುಗಿದ್ದ ಕೂಸಿಗೆ ದುಪ್ಪಟಿ ಸರಿ ಮಾಡಿ ಉಳಿದೆರಡು ಪಿಸುಗುಟ್ಟಿ ಎಬ್ಬಿಸಿ ಕಣ್ಣುಜ್ಜುತ್ತಿದ್ದ ಅವುಗಳ ಒಂದೊಂದು ಕಯ್ಯ ಹಿಡುದುಕೊಂಡು ಬಂದು ಕಾಳಣ್ಣನ ಹೆಡ್ತಿ ಪಕ್ಕ ಕೂರಿಸಿದಳು. ಚಲುವಮ್ಮ ಕೂತವಳು ಮತ್ತೆದ್ದು ಕಿರುಮನೆಯಲ್ಲಿ ಉರಿಯುತ್ತಿದ್ದ ಸೊಳ್ಳು ತಂದು ಪೆಟ್ಟಿಗೆ ಮೇಲಿಟ್ಟಳು. ಗೌರಮ್ಮ ’ಅದ್ಯಾಕ ತಗೀರಿ’ ಅಂತಲೆ ಚಲುವಮ್ಮ ’ಇರ್‍ಲಿ ಬುಡಿ’ ಎಂದು ಕಯ್ಯಿ ಬಾಯಾಡಿಸಲು ಕೂಡಿದಳು.

ಆ ಬಿಂಕಿ ಹೊಗೆಯಾಗ್ತ ಬೆಳುಕಾಗ್ತ ಸುತ್ತ ಕುಂತವರ ಮೇಲ ಚಲ್ಲಾಡುತ್ತಿತ್ತು. ಪೆಟ್ಟಿ ಮೇಲಿಟ್ಟಿದ್ದ ಸೊಳ್ಳು ತನ್ನ ಬೆಳುಕನ್ನು ಅವರ ಬೆನ್ನಿಗೆ ತನ್ನ ಶಕ್ತ್ಯಾನುಸಾರ ಮುಟ್ಟಿಸುತ್ತಿತ್ತು. ಆಗ ಒಳಬಂದ ಸಣ್ಣಯ್ಯ ಚಿಲುಕ ಹಾಕಿ ಕಡಲಕಾಯ ಎಡುದೂ ಎಡುದೂ ಕಾಳು ಮಾಡುತ್ತಿದ್ದ ತನ್ನ ದೊಡ್ಡ ಹೈದನಪಕ್ಕದಲ್ಲಿ ಕೂತು ಬಿಂಕಿಗೆ ಕಯ್ಯ ಹಿಡಿದು ’ಏನಪ್ಪ ಸಳಿ ಸಿವ’ ಅಂದನು.

ಆಗಾಗಲೇ ಎಲ್ಲರ ಕಯ್ಯನುಕೂಲಕ್ಕಾಗಿ ಕಡಲೆಕಾಯಿದು ಎರುಡು ಗುಡ್ಡವಾಗಿದ್ದೊ. ಅಲ್ಲಿಂದ, ರೇಷ್ಮೆ ಹುಳುಗಳ ತಟ್ಟೆಗೆ ಸೊಪ್ಪಾಕಿದಂಥ ಸದ್ದು ಹುಟ್ಟುತ್ತಿತ್ತು. ಇಲ್ಲಿ ಅಕಸ್ಮತ್ತು ಸದ್ದು ನಿಂತಲ್ಲಿ ಹೊರಗೀನ ಕಪ್ಪುಗಳ ವಟವಟ ಕಿವಿ ಮುಟ್ಟುತ್ತಿತ್ತು. ಹೊರಗೊಂದು ನಾಯಿ ಬೊಗುಳುದ್ದೇ ಬೊಗಳುತ್ತಿತ್ತು. ಆ ಎಲ್ಲವನ್ನೂ‌ಒ ಮಾರಿಗುಡಿ ಹಾರ್ಮನಿ ದನಿ ಒಡಲಿಗೆ ಹಾಕಿಕೊಳ್ಳುತ್ತಿತ್ತು.

ಸಣ್ಣಯ್ಯ: ಮಳಗಿಳ ಬಂದದೇನ
ಕಾಳಣ್ಣ: ಯಾವುದರಿಂದಯ್ಯ ಮಳ ಬರಾದು. ಮಳ ಬಂದದಂತ ಮಳ.
ಸಾಕವ್ವ: ಈ ಸುಡಗಾಡೂರ್ಗ ಮಳ ಬೇರೆ ಕೇಡು ತಕ್ಕ.
ಕಾಳಣ್ಣ: ಅಯ್ಯ, ನಾನೂವಿ ಸುಮಾರು ಊರ ಸುತ್ತದೋನು. ಆ ಎತ್ತಪ್ಪನೋರು ಕಟ್ಸೊರೋ ದನದ ಹಟ್ಟಿ ನೋಡುದ್ರ ಕಣ್ಣು ಕಳ್ಕತ್ತವಲ್ಲಯ್ಯ.
ಸಣ್ಣಯ: ನಾ ನೋಡಿಲ್ವಲ್ಲಣ್ಣ ಅದ. ನಡೀತ ಇದ್ರೂವಿ ಮುಗೀದು ಬಡ್ಡಿ ಮಗಂದು.
ಕಾಳಣ್ಣ: ನಮ್ಮವ್ವ ಅಂಥದೇನಾದ್ರೂ ಕಟ್ಟಿಸಿದ್ದರ ಇನ್ನೆಂಗಾಡ್ತಿಬ್ಲೊ.
ಕಾಳಣ್ಣನ ಮಾತು ಕೇಳಿ ನಗೆ ಎದ್ದುದು ಸುಮಾರು ಹೊತ್ತು ಅಲ್ಲಿ ಸಂತೋಷದಿಂದ ಇತ್ತು.

ಆಗ ಶಿವೂ ಕಡಲಕಾಯ ಬಿಂಕಿಗೆಸೆದು ಸುಟ್ಟುಗೊಂಡು ನಿಂತಿದ್ದನು. ಮಗನ ಮಾತಿಗೆ ಸಾಕವ್ವ ’ನೀವಿದ್ದೀರಲ್ಲಪ್ಪ…..ವುಲಿಯಂಗ ಮೂರ್‍ಜನ ಗಂಡ್ಮಕ್ಳ, ಕಟ್ಸಿ’ ಅಂದಳು. ದಾರಂದ ಕುಟ್ಟಿದ ಸದ್ದು ಬಂದು ಇವರ ಮಾತು ಅಲ್ಲಿಗೇ ನಿಂತು ’ಅತ್ಗಮ್ಮೋರ’ ಅನ್ನೊ ದನಿ ಹೊರುಗಿಂದ ಬಂದಿತು. ಕಾಳಣ್ಣನ ಹೆಡ್ತಿದಾರಂದ ತಗುದು ’ಯಾರ’ ಅಂತಲೆ ಕಾಳಕ್ಕನ ದನಿಯು ’ನಾನು’ ಅಂತು. ಕಾಳಕ್ಕ ಆ ಕತ್ತಲಲ್ಲಿ ಕಾಣಿಸುತ್ತಿರಲಿಲ್ಲ. ಅವಳ ದನಿಯು – ’ಅತ್ಗಮ್ಮೋರ, ನನ್ಗಂಡು ಅಸ್ಕಂಡು ಅಳ್ತ ಮಲುಗದೆ. ಮೂರು ಜಿನದಿಂದಲೂ ಕಳಕಂಬಳ್ಕ ಕರೆಯೋರು ಯಾರೂ ದಿಕ್ಕಿಲ್ಲ. ಏನಾರೂ ಇದ್ರ ಒಂದಿಷ್ಟು ಕೊಡಿ’ ಎಂದಿತು. ಅಲ್ಲಿಂದ ಕಾಳಣ್ಣನ ಹೆಡ್ತಿ ಬಂದು, ಕರಗುತ್ತಿದ್ದ ಕಡಲಕಾಯ ಗುಡ್ಡದಿಂದ ಸೆರಗ್ಗ ನಾಕು ಬೊಗಸ ಹಾಕ್ಕೊಂಡು ಎದ್ದಳು. ಸಾಕವ್ವ ಕೈಸನ್ನೆ ಮಾಡಿ ಸೊಸ ಕರೆದು ಅವಳ ಮಳ್ಳಿಂದ ಒಂದು ಬೊಗಸ ತಗುದು ಗುಡ್ಡಕ್ಕಾಕಿದಳು. ಅಮೇಲ ಕಾಳಣ್ಣನ ಹೆಡ್ತಿ ಬಿರಬಿರನೆ ಹೊರನಡುದು ಬರಿಸೆರುಗಲ್ಲಿ ಒಳಬಂದಳು.

ಅಲ್ಲಿದ್ದವರು ಬಾಯಾಡಿಸುತ್ತ ಯಾವುದನ್ನೂ ಗಮನಿಸದೆ ಇದ್ದರು. ಕಡಲೆಬೀಜ ಹೊಟ್ಟೆಗೆ, ಸಿಪ್ಪ ಬಿಂಕಿಗೆ ಬೀಳ್ತಾ ಇದ್ವು. ಆ ರೀತಿಯಲ್ಲಿ ಇದ್ದಾಗ-
ಕಾಳಣ್ಣ: ಆ ಎತ್ತಪ್ಪನೋರ ದನದ ಹಟ್ಟಿ ಇರ್ಲಿ. ಅಲ್ಲಿರೊ ದನದ ಎಮ್ಮೆ ತಾನೆ ಏನಯ್ಯ!
ಸಣ್ಣಯ್ಯ: ಒಂದೊಂದುವಿ ಆನಥರ ಹಟ್ಟಿದಪ್ಪ ಅವ.
ಸಾಕವ್ವ: ಅಂಥ ಒಂದು ಎಮ್ಮ ಸತ್ರೀಗಪ್ಪ…..ನಮ ಕೇರಿ ದರಿದ್ರನಾರು ಒಂಜಿನ ಹಿಂಗ್ತದ.
ಗೌರಮ್ಮ: ಅವೈ ಸುಂಕಿರ್ತು ವಸಿಯಾ. ನೀನು ಮೂರ್‍ಕಾಸ್ನ ಕೋಳೋದ್ದಕ್ಕೇ ಅಷ್ಟು ಪಾಡುಪಟ್ಟೆ. ಇನ್ನು ಅವರ್ಗ ಎಮ್ಮೋದ್ರ ಇನ್ನೆಂಗಾದ್ದು.
ಕಾಳಣ್ಣನ ಹೆಡ್ತಿ: ಸರಿಯಾಗಂದಿಕಾ ಅತ್ಗಮ್ಮ
ಕಾಳಣ್ಣ: ಎತ್ತಪ್ಪನೇನ ದುಡುದು ಬೆವರಿಳಿಸಿ ರಗತ ಬಸುದು ಸಂಪಾದ್ನ ಮಾಡಿದ್ದನ ತಗಾ. ಹೋದ್ರ ಅವನ್ದೇನೋದ್ದು…….ಗುಡ್ಡ ಹಾಕಿರೊ ಬಡ್ಡಿ ದುಡ್ನಲ್ಲಿ ಒಂದು ಸಿವುರುಕನ.
ಚಲುವಮ್ಮ: ಸಿವಸಿವಾ ಅವುರ ಮಗಳ ಮದುವೆ ಇನ್ನೂವಿ ನನ್ನ ಕಣ್ಣೊಳಗ ಕುಂತದ ಕಣ್ರವ. ಬೋಂದಿ ಕಾಳ ಸಾಡುಮಕ್ರೀಲಿ ಇಕ್ಕದು ಎಲ್ಲಾರು ಉಂಟಾ! ಕೈ ನೀಡಿದವರ್ಗ ಒಂದೊಮು ಬೊಗಸ…..ಇಷ್ಟು…ಇಷ್ಟು….ಒಂದು ಬೊಗಸ.
ಕಾಳಣ್ಣನ ಹೆಡ್ತಿ: ನಮ್ಮ ಪುಟಗೌರಿ ಮದುವಾನು ಅಂಗೇ ಮಾಡವು ತಕ್ಕಳ್ಳಿ.
ಸಣ್ಣಯ್ಯ: ಆ ಮಟ್ಟಕ ಮಾಡಾಕ ನಂಗ ಅದ್ದ ಅತ್ತಿಗವ್ವ. ನಮ್ಮ ಕೈಲಿ ಸಾಗೊ ಅಷ್ಟು……ನಾಕ್ ಜನ ಸರಿ ಸರಿ ಅನ್ನಂಗ ಮಾಡವು ತಕ್ಕಳ್ಳಿ.
ಪುಟಗೌರಿ ಬಿಂಕಿ ಝಳಕ್ಕೆ ತಿಳಿಯಾಗಿ ಬೆವುರೂತ ಕೂತಿದ್ದಳು.

ಸಾಕವ್ವ, ಮಕ್ಕಳ ಮಾತುಗಳ ಮೆಲುಕು ಹಾಕ್ತ ಬಾಯಾಡಿಸುತ್ತ ’ಅಷ್ಟು ಮಾಡ್ರಪ್ಪ ನನ್ನ ಕಂದ್ಗಳಾ…..ನಾನು ಕಣ್ಮುಚ್ಚೊ ಒಳ್ಗೇನೆ ಆ ನನ್ನೇಡು ಐಕಳ್ಗುವಿ ಒಂದಾರಿ ತೋರ್ಸಿ’ ಅಂದಳು. ಅವ್ವನ ಮಾತಿಗೆ ಸಣ್ಣಯ್ಯ ’ಅವ್ನೀಗ ನಮ್ಮ ಕೈಲಿ ಮದ್ವ ಮಾಡಸ್ಕಳವಕವ್ವ! ಯಾರಾರು ನಿಂತಿರೋರ ಕಟ್ಗಂಡು ಬತ್ತಾನ ತಕ್ಕ’ ಅಂದನು. ಕಾಳಣ್ಣ ಶಿವೂಗೆ ’ಐಲೊ, ಆ ಚಿಕ್ಕ ಮಾವನ್ನೂವಿ ಕರ್ಕಂಬಾ ಮತ್ತ, ಹಾರ್ಮೋನಿ ಸದ್ದಿರೊತಾವು ಇರ್ತಾನ. ಅವುನೂ ಏಡು ತಿನ್ಲಿ’ ಅಂದನು. ಶಿವೂ ’ಈ ಕತ್ಲಲ್ಲಿ ನಾ ವೋದನ’ ಅಂತು. ಪುಟಗೌರಿ ’ಬಾಪ್ಪು ಅಲ್ಲಿ ನಾ ನಿಂತ್ಗತ್ತೀನಿ…ನೀನು ಕರ್ಕಂಬರೈ’ ಆಗಲು ಇಬ್ಬರೂ ಎದ್ದರು. ಆಗ, ಗೋಡೆಗೆ ಮೊಖ ಹಾಕಿ ಕುಂತು ಕುಂತು ಬೆಂಡಾಗಿದ್ದ ದುಪ್ಟಿ ಕಮಿಷನರು ನಡೆಯುವುದ ರುಜುವಾತುಪಡಿಸುತ ತೂರಾಡುತ್ತ ಅಲ್ಲಿಗೆ ಬಂತು. ಮುಂದಿಟ್ಟ ಕಡಲೆಬೀಜಗಳನ್ನು ಒಂದೊಂದನೆ ತಗುದು ನಿಧಾನವಾಗಿ ಬಾಯಿಗಿಟ್ಟುಕೊಳ್ಳಲಾರಂಭಿಸಿತು.

ಪುಟಗೌರಿ ಶಿವೂ ಕತ್ತಲಿಗಿಳುದು ಅದರಲ್ಲಿ ಹತ್ತುತ್ತಾ ಇಳೀತಾ ನಡೆದರು. ಕಣ್ಣಂದಾಜಲ್ಲೆ ಕಲ್ಲು ಮಣ್ಣು ಬದೀನ ದಾಟುಕೊಂಡು ಮಾರಿಗುಡಿ ತಿರುವಲ್ಲಿ ಪುಟಗೌರಿ ನಿಂತಳು. ಮಾರೀಗುಡೀಲಿ ಆಗ ನಾಟಕದ ಪದ ಮಾತು ನಡೀತಾ ಇರಲಿಲ್ಲ. ಚಿನ್ನಸ್ವಾಮಿ ಅಂಬೋದ್ನು ಹಾರ್ಮನಿ ಮುಂದ ಆರ್ಭಟಿಸಿಕೊಂಡು ’ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಆ….ಧರೆಯೊಳ್…’ ಎಂಬ ಸಿನಿಮಾ ಪದವ ಕುಟ್ಟುತ್ತಿದ್ದನು. ಹಾರ್ಮನಿ ಮೇಸ್ತ್ರು ಆವೇಶದಿಂದ ತಲತೂಗಾಡಸ್ತ ಬಾರಿಸುತ್ತಿದ್ದರು. ಅವರು ಕಚ್ಚಿದ್ದ ಬೀಡಿ ಕೆಟ್ಟೋಗಿದ್ದರೂ ಅದೂ ಬಾಯಲ್ಲೆ ಪದವ ಆಡುತ್ತಿತ್ತು. ತಬಲದ ಹೈದ ಇನ್ನೂ ಕಲಿಕೇದು, ಇನ್ನು ಉಗಿಸ್ಕಂಡನು ಅಂದುಬುಟ್ಟು ಮೆಲ್ಲಮೆಲ್ಲಗೆ ತಪ್ಪು ತಪ್ಪು ಕುಟ್ಟುತ್ತಿತ್ತು.

ಮಾರಿಗುಡಿಯ ತೊಲೆಗೆ ಕಟ್ಟಿದ್ದ ಲಾಟೀನಿನಿಂದ ನೆಗೀತಾ ಇದ್ದ ಬೆಳಕು ಅದರ ಕೆಳಗಿದ್ದ ಹತ್ತಾರು ಜನರ ಮೇಲೆ ಬೀಳುತ್ತಿತ್ತು. ಅದರಾಚೆಗೆ ಮಸಕು ಕತ್ತಲಾವರಿಸಿದ್ದು ಅದರಾಚೆಗೆ ಮೊಖ ಕಾಣಿಸದಂಥ ಕತ್ತಲು ನಿಂತಿತ್ತು. ಅಲ್ಲಿಂದ ಏಳುತಲಿದ್ದ ಬೀಡಿ ಹೊಗ ಹಾಡುವವನ ಆರ್ಭಟಕ್ಕೆ ತಕ್ಕಂತೆ ಅಲ್ಲಿದ್ದವರ ತಲ ಮೇಲ ನಲೀತಾ ಇತ್ತು. ಹಾಡುತ್ತಿದ್ದ ಚಿನ್ನಸ್ವಾಮಿ ಮಾರಿಗುಡಿಯೇ ವಾಲಾಡುವಂತೆ ಹಾಡುತ್ತಿದ್ದನಾದ್ದರಿಂದ ಅಲ್ಲಿದ್ದ ಜನವೂ ವಾಲಾಡ್ತ ಪದಕ್ಕೆ ತಕ್ಕಂತೆ ತಮ್ಮ ದೇಹವನ್ನು ತಾಳ ಕುಟ್ಟುತ್ತಿದ್ದರು. ಪುಟಗೌರೀನು ನಾಕು ಹೆಜ್ಜೆ ಮುಂದೆ ಬಂದು ನಿಂತಿದ್ದಳು.

ಮಾವನ ಬೆರಳಿಡುದು,
ಶಿವೂ: ಮಾವೊ ಹಿಟ್ಟುಂಡ್ಕಂಡು ಬರುವಂತೆ ಬಾ.
ಗುರುಸಿದ್ದು: ನೀ ನಡ ನಾ ಬತ್ತೀನಿ
ಶಿವೂ: ಬಾ ಮಾವ ವೋಗವು
ಗುರುಸಿದ್ದು: ತಾಡು ವೋಗವು
ಶಿವೂ: ಬಾ ಮಾವ
ಗುರುಸಿದ್ದು: ತಾಡು

ಇದು ನಡೆದಿತ್ತು. ಇದು ಬುಟ್ಟರೆ ಹಾಡಿಗೆ ಹೆಜ್ಜೆ ಇಟುಗೊಂಡು ಮಾರಿಗುಡಿ ವಾಲಾಡುತ್ತಿತ್ತು. ಹಾಡ್ತ ಇದ್ದ ಖುಷಿಗಾರ ಚಿನ್ನಸ್ವಾಮಿ ಮೀಸ ಕೆಳಗ ನಗು ತಂದುಕೊಂಡು ಕಣ್ಣ ಮೆಡ್ಡರಿಸಿ ಗುರುಸಿದ್ದೂಗೆ ಬೆರಳು ತೋರಿಸುತ್ತ ’ಹೋಗೊ ಹೋಗೆಲೊ ಶಿಕಂಡೀ’ ಎಂದು ಪದವ ಅಲ್ಗೆ ನಿಲ್ಸಿದನು. ಅವುನು ನಿಲ್ಲುಸೂವ ಮೊದ್ಲೆ ಎಲ್ರ ಬಾಯಿಂದೂ ನಗು ಅನ್ನೋದು ಗುಲ್ಲಂದ್ಕಂಡು ಎದ್ದಿತು. ಗುರುಸಿದ್ದೂನು ನಗಾಡ್ತಲೆ ಶಿವೂನು ಕೈಹಿಡಿದು ಎದ್ದನು.

ಆಮೇಲ ಮುಂದ್ ಮುಂದ ಗುರುಸಿದ್ದು, ಹಿಂದ್ ಹಿಂದ ಪುಟಗೌರಿ ಶಿವೂ ನಡೆದರು. ಗುರುಸಿದ್ದು ಮುಂದಾದ ಮೇಲ ಪುಟಗೌರಿ ಶಿವೂ ಕಿವಿಗೆ ಬಗ್ಗಿ ’ಅದ್ಯಾರಪ್ಪ ಶಿವೂ, ಪದ ಹೇಳ್ತಾ ಇದ್ದೋರು’ ಎಂದು ಕೇಳಿದಳು. ಅದಕ್ಕೆ ಶಿವೂ ’ಅದೀಯಾ ಚಿನ್ನಸೋಮಣ್ಣ ಚಿನ್ನಸೋಮಣ್ಣ ಅಂತಾರಲ್ಲ ಅವ್ನು’ ಅಂದನು. ಪುಟಗೌರಿ, ಅವ್ನೂ ಅವ್ನ ಪದ ಎರಡನ್ನೂ ಕಣ್ಮುಂದಿರಿಸಿಕೊಂಡು ನಡೆದಳು.

ಗುರುಸಿದ್ದೂ ಬಂದಾಗ ಹುರಿದ ಕಡಲೆಕಾಯಿ ಸಣ್ಣ ಗುಡ್ಡವೊಂದು ರೆಡಿಯಾಗಿತ್ತು. ಅಲ್ಲಿಗೆ ಗುರುಸಿದ್ದೂನ ಕೈ ಬೀಳಲು ಅವನ ಕಯ್ಯಿ ಕಟ್ಟಿದಂಥ ವಾಚು ಬಿಂಕಿ ಬೆಳುಕಿಗೆ ಫಳಾರಂತು. ಎಲ್ಲರ ಕಣ್ಣೂ ಅದರ ಮೇಲ ಬಿದ್ದವು. ಕೆಲವರ ಬಾಯಾಡುವುದೂ ಚಣ ನಿಂತಿತು. ಗುರುಸಿದ್ದೂನ ಕಯ್ಯಾಡಿದ ಕಡೆ ಶಿವೂನ ಕಣ್ಣಾಡುತ್ತಿತ್ತು. ಕಾಳಣ್ಣ ’ಯಾರ್‍ದಯ್ಯ ಗಡಿಯಾರ’ ಅಂತಲೆ ಗುರುಸಿದ್ದು ’ನಂದಿಯ’, ತಕ್ಕಂಡಿ’ ಅಂದನು. ಸಣ್ಣಯ್ಯ ’ಯೂ ತಕ್ಕತ್ತನಾ ಇವ…ಜೂಜಾಡ್ತ ಸಾಲ ಏರ್‍ಕಂಡು ಇವ್ನ ಸೈಕಲ್ಲೆ ವಜವಾಗ್ನಿಲ್ಲ….. ಆ ಥರ ಇವನ್ಗೂ ಯಾರ್‍ದೋ ವಜವಾಗಿರಬೇಕು’ ಎಂದನು. ಗುರುಸಿದ್ದ್ ಕಡ್ಲೆಕಾಯ ಬಾಯಿಗಿಡುತ ’ಸುಂಕಿರಣ್ಣೊ’ ಎಂದು ಆಮೇಲ ಮಾತಿನ ದಾರಿ ತಿರುಗಿಸಿದನು- ’ಅಣ್ಣೊ ನೆನ್ನ ತಗಡೂರ್‍ಗ ವೋಗಿದ್ದಿ. ಅಲ್ಲಿ ನಮ್ಮವರು ಸಿವಬಸಪ್ನ ಹೋಟಲ್ಗ ನುಗ್ಗುದ್ದೂ ಅಂದ್ರ…..ಸಿವಸಿವಾ ಆ ಪಾಟಿ ಜನ…ನಾವೇನ ಕಾಸ ಕೊಟ್ಟವೊ ಕಲ್ಲ ಕೊಟ್ಟವೊ ಕಾಫಿ ತಿಂಡಿ ಕೊಡ್ರಿ ಅನ್ನೋರು. ಸಿವಬಸಪ್ಪ ಅನ್ನೋವ ಬೆವುತೋದ. ಆಮೇಲ ಪೊಲೀಸ್ನವರು ಇಳುದ್ರು. ನಾವು ಕೊಡ್ಸತೀವಿ ಸುಂನಿರಿ ಸುಂನಿರಿ ಅನ್ನೋರು. ಜನ ಅನ್ನೋದು ಪೋಜು ನೋಡೊ ಥರ ನಿಂತಿರೋದು. ತಕ್ಕಳಪ್ಪ, ನಾನ್ಯಾಕ ಸುಂಕಿರೋದು ಅಂದುಬುಟ್ಟು ನಾನೂವಿ ಕಾಸ ಬಿಸಾಕಿ ’ದೋಸಾ ಟೀ ಕೊಡ್ರಿ’ ಅಂದೆ. ಸಿವಬಸಪ್ಪ ಅನ್ನೋನು ನನ್ನೇ ದುರಗುಟ್ಕಂಡು ನೋಡ್ತ ತಂದ್ಕೊಡನು…’ ಎಂದು ಎಲ್ಲರನ್ನೂ ನೋಡಿದನು. ಎಲ್ಲರೂ ಗುರುಸಿದ್ದೂ ಮಾತಿಗೆ ಕಿವಿಕೊಟ್ಟು ಕಿವಿಗೆ ಮುಟ್ಟಿದ್ದನ್ನು ಕಣ್ಣಲ್ಲಿ ಮೂಡಿಸಿಕೊಳ್ತ ಬಾಯಾಡಿಸುತ್ತಿದ್ದರು. ಗುರುಸಿದ್ದು ವಾಚ ನೋಡ್ಕಂಡು ’ತಾಳಪ್ಪೊ, ನನ್ನ ಪಾರ್ಟು ಬರೋ ಟೈಮಾಯ್ತೇನ….’ ಎಂದು ಮೇಲೆದ್ದನು. ಸಣ್ಣಯ್ಯ ’ತಾಳುಡ, ಬೆಲ್ಲಿದ್ದರ ಟೀ ಕಾಯ್ಸವು’ ಅಂದನು. ಗುರುಸಿದ್ದು ಕೈಯಾಡಿಸಿ ನಡೆಯಲು ಪುಟಗೌರಿ-’ಹೋಟ್ಲ ಟೀ ಕುಡಿಯಾವ….ಹಟ್ಟೀ ಗೊಡ್ಡ ಕಾಫಿ ಕುಡ್ದಾನ…’ ಅಂದು ಅವನ ಹಿಂದೇನೆ ಹೋಗಿ ಚಿಲುಕ ಹಾಕಿ ಬಂದು ಕುಂತಳು.

ಆಗ ಶಿವೂ ತಿಂತಾ ತಿಂತಾನೆ ತೂಕಡಿಸುತ್ತಿತ್ತು. ಅದರ ಮಾವ, ಶಿವೂನ ಎಚ್ಚರವಿರಿಸಲು ’ಲೋ ಸಿವು’ ಅನ್ನಲು ಶಿವೂ ಕಣ್ಬುಡ್ತು. ಆಗ ಮಾವ ನಿನ್ನ ಕೈಲಿ ಹತ್ ಪೈಸ ಕೊಡ್ತೀನಿ…ಊರೊಳ್ಗ ಹಾಲ ಬುಡ್ಸಕಬಾ ಮತ್ತ. ಆಗಲೀಗ ನಿನ್ನ ಬುಟ್ರ ಇನ್ನೊಬ್ಬ ಧೀರ ಇಲ್ಲಕಯ್ಯ’ ಅಂದನು. ಶಿವೂ ’ವು ಹೋಗು ಮಾವೊ. ಊರೊಳಗಲ ನಾಯ್ಗಳು ನನ್ನ ಕಂಡ್ತೂ ಅಂತ್ರ ದಬ್ಬಕತ್ತವ….’ ಎಂದು ಕಣ್ಮುಚ್ಚಿ ಬಾಯಾಡಿಸಿದನು. ಉಳಿದವರು ಅವ್ನ ಮಾತು ರೀತಿಗೆ ನೆಗಾಡತೊಡಗಿದರು.

ಚಲುವಮ್ಮ ಒಂದು ಎತ್ತೊಲೆ ತಂದ ಅದರ ಮೇಲೊಂದು ದೊಡ್ಡ ಬೋಸಿ ಇಟ್ಟು ಅದರೊಳಕ ಮೂರು ತಪ್ಪಲಿ ನೀರೂದು ಅಲ್ಲಿಗೆ ಏಡಾಚ್ಚು ಬೆಲ್ಲ ಹಾಕಿ ಆಮೇಲ ಹತ್ತು ಪೈಸೇದ ಟೀಸೊಪ್ಪು ಸುರ್‍ದು ಎತ್ತೂಲೆಗೆ ಬಿಂಕಿ ಇಟ್ಟಳು. ಭೂಮತಾಯ ವಚ್ಚೊರಿ ಮೊಗ್ಗಲಿಂದ ಇನ್ನೊಚ್ಚರಿ ಮೊಗ್ಗಲಿಗೆ ಹೊರಳಿ ಉಸ್ಸೊ ಎಂದು ಮಲುಗಿದಳು.

-೬-

ಆ ಹೊತ್ತಿನಲ್ಲಿ ಒಂದು ಕೈ ಬಂದು ಸಾಕವ್ವನ ಹಟ್ಟಿಗೆ ಚಿಲುಕವನ್ನು ಹಾಕಿತು. ಅದು ಪೋಲೀಸ್ ಕಾನ್‌ಸ್ಟೇಬಲ್ ರೇವಣ್ಣನವರ ಕೈಯ್ಯಾಗಿತ್ತು. ಕಳೆದಾರು ತಿಂಗಳ ಲಾಗಾಯ್ತಿನಿಂದಲೂ ಸಾಹುಕಾರ್ ಎತ್ತಪ್ಪನವರು ಇನ್ಸ್‌ಪೆಕ್ಟರ್ ಸಾಹೇಬರಿಗೆ ಹೇಳಿಕೊಂಡೇ ಬರುತ್ತಿದ್ದರು. ವಾರ ಹದಿನೈದು ದಿನ ಅನ್ನದೆ ಅವರ ಮಿಲ್ಲಿನ ಕಡಲೇಕಾಯಿ ಲಾಟಿನಲ್ಲಿ ಮುವ್ವತ್ತು ನಲವತ್ತು ಸೇರಷ್ಟು ಕಳ್ಳತನ ಆಗುತಲಿತ್ತು. ಆಸಾಮಿ ಹಿಡಿಯುವ ಎಲ್ಲಪಟ್ಟುಗಳೂ ಮುಗುದು ಆಸಾಮಿ ಸಿಗುತ್ತಿರಲಿಲ್ಲ. ಮಾಲು ಮಾತ್ರ ನಾಪತ್ತೆಯಾಗುತ್ತಿತ್ತು. ಎತ್ತಪ್ಪನವರೂ ಮತ್ತೂ ಇನ್ಸ್‌ಪೆಕ್ಟರಿಗೆ ‘ಏನ್ ಸಾಹೇಬರೆ ಆಗದು ಆಗ್ತಾನೇ ಇದೆ’ ಅಂದಾಗ ‘ಸುಮ್ಕಿರಿ ಸಾವ್ಕಾರ್ರೇ ಅಲ್ಲೊಬ್ಬ ಪೀಸ್ಯ ಡ್ಯೂಟಿಗೆ ಹಾಕುವ ಅಂದಿದ್ದರು’ ಆಡ್ದ ನುಡಿಗೆ ತಪ್ಪದೆ ಅಚರು ಪೀಸಿ ರೇವಣ್ಣನನ್ನು ರವಾನಿಸಿದ್ದರು.

ಪೀಸಿ ರೇವಣ್ಣ ಎಲ್ಲ ರೀತೀಲು ರಿಟೈರ್ಡ್‌ಗಾಗಿ ಕಾಯುತ್ತಿದ್ದನು. ಅವನು ದೇವರು ಕೊಟ್ಟಿದ್ದ ಎರಡು ಕಡ್ಡಿ ಕೈಕಾಲುಗಳನ್ನು ಅಲ್ಲಾಡಿಸುತ್ತಾ ಬೀಡಿ ಸೇದುತ ಕೆಮ್ಮುತ್ತ ತೂಕಡಿಸುತ ಸ್ಟೇಷನ್ನಲ್ಲೆ ಕೂತಿರುತ್ತಿದ್ದನು. ಅದು ಬಿಟ್ಟು ಅವನನ್ನು ಯಾರೂ ಎಲ್ಲಿಗೂ ಕಳಿಸಿದ್ದೂ ಇಲ್ಲ ಇವನು ಹೋಗಿದ್ದೂ ಇಲ್ಲ. ಈರ್ವರು ಹೆಂಡೀರು ಮತ್ತು ಹತ್ತೊ ಹನ್ನೊಂದೊ ಮಕ್ಕಳು ಇದ್ದು ಅದೇ ಅವನ ಮೆರಿಟ್ಟಾಗಿತ್ತು. ಇವನ ಹೊಟ್ಟೆಗೆ ಹೊಡೆದರೆ ಅದು ಅವನ ಹೆಡ್ತಿ ಮಕ್ಕಳ ಹೊಟ್ಟೆಗೆ ಬೀಳುತ್ತದೆ ಅಂದುಕೊಂಡು ಎಲ್ಲರೂ ಅನುಸರಿಸಿಕೊಂಡು ಬರುತ್ತಿದ್ದರು. ಹೀಗಿರಲು ಒಂದು ದಿನ ಸಾಹೇಬರು ಸ್ಪೆಷಲ್ ಡ್ಯೂಟಿಗೆ ನಿಯಮಿಸಿರುವುದ ತಿಳುಸಿ ‘ಹೋಗೋ ಭೋಸುಡಿ ಮಗ್ನೆ’ ಅಂದಾಗ ರೇವನ್ಣನನ್ನು ರೇವಣ್ಣನಿಗೇ ನಂಬಲಾಗಲಿಲ್ಲ. ಅಪರಿಚಿತ ಬದುಕಿಗೆ ಕೈಹಾಕಿದ ಸಂತೋಷ ಭಯಗಳಾದುವು. ಏನಾಗದಿದ್ದರೂ ಒಂದಂತು ಆಗುತ್ತಿತ್ತು-ಹೆಂಡೀರು ಮಕ್ಕಳ ಕಾಟದಿಂದ ಅವುನು ಅತೀತನಾಗುತ್ತಿದ್ದನು.

ಇಲ್ಲಿ ರೇವಣ್ಣನವರು ಎರಡೊತ್ತು ಉಂಡುಕೋತ ತಮ್ಮ ಶಕ್ತಿಯನ್ನು ಬೆಳುಸಿಕೋತ ತಮ್ಮ ಕಾರ್ಯಾಚರಣೆಯನ್ನು ಆತ್ಮವಿಶ್ವಾಸದಿಂದ ಆರಂಭಿಸಿದರು. ಅವರಿಗಿದ್ದ ಕೇವಲ ಆತ್ಮವಿಶ್ವಾಸವೂ ಒಂದಲ್ಲ ಒಂದು ದಿನ ಫಲ ನೀಡಿತು. ಊರುಮಲುಗಿ ಮಾರಿಗುಡಿ ಚಾವುಡಿಗಳು ಕಣ್ಬಿಟ್ಟಿದ್ದಂಥ ಆ ಟೈಮಲ್ಲಿ ರೇವಣ್ಣನವರು ಕಂಬಳಿ ಹೊದ್ದು ಕಾಣದೆ ಕುಳಿತಿರಲು, ದಪ್ಪಗೆ ಎತ್ತರಕೆ ಇದ್ದ ಒಂದು ಆಸಾಮಿ ಬಂತು. ಚೀಲಕ ಕಡಲೆಕಾಯಿ ತುಂಬಿತು, ಮುಂದಕೆ ನಡೀತು. ಅದಾಗು ರೇವಣ್ಣನವರಿಗೆ ಆಸಾಮಿ ಹಿಡಿಯಲು ಕಯ್ಯಿಕಾಲು ಬರಲಿಲ್ಲ ಕೂಗಲು ಬಾಯಿ ಬರಲಿಲ್ಲ. ಹಾಗಾಗಿ ರೇವಣ್ಣನವರು ತಮ್ಮ ಕಾಲನ್ನು ಕಣ್ಣು ಮಾಡಿಕೊಂಡು ಫಾಲೊ ಮಾಡಿದರು. ಆಸಾಮಿ ಒಂದು ಹಟ್ಟಿಗೆ ನುಗ್ಗಿತು. ಹಿಡುದು ರಂಪ ಎಬ್ಬಿಸದ ತಮ್ಮ ವಿವೇಕಕ್ಕೆ ರೇವಣ್ಣನವರು ತಲೆದೂಗುತ್ತ ಆ ಹಟ್ಟಿ ಎದುರಿನ ಜಗುಲೀಲಿ ಬೊಗುಳುತ್ತಿದ್ದ ನಾಯಿಗೆ ಸಮಾಧಾನ ಪಡಿಸುವ ಪ್ರಯತ್ನ ಪಡುತ ಕೂತರು.

ರೇವಣ್ಣನವರು ಕುಂತಿದ್ದರೂ ಅವರ ಪೋಲೀಸು ವಿವೇಕ ಓಡಾಡುತ್ತಿತ್ತು. ಈಗ ಹೇಗೂ ಮಾಲು ಆಸಾಮಿಗೆ ದುಕಾ ಇಲ್ಲ. ಇದರೊಟ್ಟಿಗೆ ಈ ಕಳ್ಳತನದ ಹಿಂದಿರುವ ಜಾಲವನ್ನೂ ಪತ್ತೆ ಹಿಡುದು ಒಂದೇ ಸಲಕ್ಕೆ ಢಂ ಅನ್ನಿಸುವ ಮನಸ್ಸಾಯ್ತು. ಅದಕ್ಕಾಗಿ ಆ ಹಟ್ಟಿಗೆ ಹೋಗುವವರು ಬರುವವರ ಮೇಲ ನಿಗಾ ಇಟ್ಟು ಕೂತರು. ಕುಂತಿರುವಲ್ಲಿ, ಪಾಯಿಂಟ್ ಒನ್-ಒಬ್ಬ ಪೀಚಲವನು ಹಟ್ಟಿ ಹೊಕ್ಕ ಮೇಲೆ, ಒಂದು ಹೆಂಗಸು ಬಹುಶಃ ಪ್ರಾಯ ಮೀರಿರದ್ದು ಬಂದು ಬಾಗುಲ ಬಳಿ ಆ ಹಟ್ಟಿಗೆ ಸಂಬಂಧಪಟ್ಟಂಥ ಹೆಂಗುಸಿನ ಜೊತೆ ಮಾತಾಡಿತು. ಈ ಹೆಂಗಸು ಆ ಹೆಂಗುಸಿಗೆ ಕನಿಷ್ಠ ಒಂದು ಸೇರಷ್ಟು ಕಡಲೆಕಾಯಿ ಕೊಟ್ಟಿರಬಹುದು. ಪಾಯಿಂಟ್ ಟು-ಒಂದು ಪ್ರಾಯಕ್ಕೆ ಕಾಲಿಟ್ಟ ಹುಡುಗಿ ಇನ್ನೊಂದು ಹುಡುಗ ಎಂದು ನಡುಗೆಯಿಂದ ತಿಳಿಯಬಹುದು. ಅವರು ಮಾರಿಗುಡಿಕಡೆ ಬಂದು ಪುನಃ ಇನ್ನೊಂದು ವ್ಯಕ್ತಿಯೊಡನೆ ಆ ಹಟ್ಟಿ ಹೊಕ್ಕರು. ಆ ವ್ಯಕ್ತಿ ಅಲ್ಲೊಂದು ಗಂಟೆ ಟೇಮಿಗೆ ಹೊರಬಂದು ತಿರುಗಾ ಮಾರಿಗುಡಿ ಕಡೆಗೆ ನಡೀತು. ಆ ವ್ಯಕ್ತಿ ಬೀಡಿ ಹಚ್ಚಿದಾಗ ಕಂಡುಬಂದ ಚಹರೆ ಪ್ರಕಾರ ಅವನ ಎಡುದ ಕೈಗೆ ವಾಚುಕಟ್ಟಿತ್ತು. ಈ ಕಳ್ಳತನದ ಜಾಲದಲ್ಲಿ ಪ್ರಮುಖ ಪಾತ್ರ ವಹಿಸಿರುವ ಚಹರೆ ಆ ಮೊಖದಲ್ಲಿತ್ತು. ಇದನ್ನು ರೇವಣ್ಣನವರು ಮನಸ್ಸಲ್ಲೆ ನಾಕುಸಲ ನೋಟ್ ಮಾಡಿಕೊಂಡರು. ಇದಾದಮೇಲ ಯಾವ ಪಾಯಿಂಟು ಜರುಗದಿದ್ದರೂ ಮುಂದಿನೆ ಪಾಯಿಂಟಿಗಾಗಿ ರೇವಣ್ಣನವರು ಕಾದರು.

ಮೊದಲು ಬೊಗಳುತ್ತಿದ್ದ ನಾಯಿ ಈಗ ಬಂದು ರೇವಣ್ಣನವರ ಕಾಲು ನೆಕ್ಕುತ್ತ ಕೂತಿತ್ತು. ಮಾರಿಗುಡೀಲಿ ಪದ ನಗು ಕೇಕೆ ಹೋಗಿ ಸಾಮೂಹಿಕ ಗೊರುಕೆ ಹೊರಡುತ್ತಿತ್ತು. ಕಣ್ಮುಚ್ಚದ ರೇವಣ್ಣನವರಿಗೆ ನಿದ್ದೆ ಅನ್ನೋದು ಹಗ್ಗ ಕಟ್ಟಿ ಎಳೀತಾ ಇತ್ತು. ಕೊನೆಗೆ ಬುದ್ದಿ ಕೈಲಿರುವಾಗಲೇ ಎದ್ದು ಆ ಹಟ್ಟಿಗೆ ಚಿಲುಕ ಹಾಕಿ ಮೊದಲಿದ್ದಲ್ಲಿಗೆ ಬಂದು ಕೂತು ಕಣ್ಮುಚ್ಚಿದರು. ಅಷ್ಟಕ್ಕೇ ನಿದ್ದೆ ಅನ್ನೋದು ಎಲ್ಲಿಗೋ ಎದ್ದು ಹೋಗಿತ್ತು. ರೇವಣ್ಣನವರು ಆ ಚಳಿಯ ಹೊಡುತಕ್ಕೆ ತಮ್ಮ ಕೈಕಾಲುಗಳ ಟಕಟಕಗುಟ್ಟಿಸುತ್ತಿದ್ದರು. ಮೀಸಬುಟ್ಟ ತಾವೇ ಗಂಡ್ಸೆಂದು ಬೀಗುವ ಜೊತ ಪೀಸಿಗಳು, ಬಾಯಿಬಿಟ್ಟರೆ ಬಯ್ಯುವ ಸಾಹೇಬರು ನಾಳೆ ಹೇಗೆ ಈ ರೇವಣ್ಣನವರನ್ನು ನೋಡಬಹುದೆಂಬ ಕನುಸಿಗೆ ಕಾವು ಕೊಡುತ್ತ ಚಳಿಯನ್ನೂ ತಮ್ಮನ್ನೂ ಮರೆಯುತ್ತ ಕೂತಿದ್ದರು.

ಯಾವಾಗ ಅಲ್ಲೊಂದೆಳೆ ಇಲ್ಲೊಂದೆಳೆ ಬೆಳಕು ಬೀಳಲು ಆರಂಭಿಸಿತೊ ಆವಾಗ ರೇವಣ್ಣನವರು ನಾಯಿ ಜೊತೇಲಿ ತಡಬಡಾಯಿಸಿ ಎದ್ದು ಹಾರುತ ಸಾಹುಕಾರರ ಆಳಿನ ಗುಡುಸಲಿಗೆ ಬಂದರು, ಆಳನ್ನು ಎಬ್ಬಿಸಿ ‘ಇನ್ನು ಮಲುಗವ್ನೆ ಮಗಾ…ಓಡೋ ಬೋಸುಡಿಕೆ. ಪೋಲೀಸ್ ರೇವಣ್ಣನೋರು ಮಾಲು ಕಳ್ಳ ಎರಡ್ನೂ ಹಿಡ್ದವರೆ ಅಂತ ಸಾಹೇಬರಿಗೆ ಹೇಳಿ ಜರೂರ್ ಕರ್ಕಬಾ’ ಎಂದು ಓಡಿಸಿದರು. ಪುನಹ ಕುಳಿತಿದ್ದಲ್ಲಿಗೆ ಬಿರುಸಾಗಿ ಬಂದು, ಚಿಲುಕ ಅಲುಗಾಡದಿರುವುದ ಗಟ್ಟಿಮಾಡಿಕೊಂಡು ಜೀಪಿನ ಸದ್ದಿಗಾಗಿ ಧ್ಯಾನಸ್ಥರಾದರು.

-೭-

ಕಣ್ಬೆಳಕು ಬರುವುದೂ ಜೊರ್ರೊ ಎಂದು ಜೀಪು ಇಳಿಯುವುದೂ ಕೂಡಿಕೊಂಡವು, ರೇವಣ್ಣನವರು ಬಟ್ಟೆ ನೀಟುಮಾಡಿಕೊಂಡು ಪಕ್ಕದಲ್ಲಿದ್ದ ಪೇಟವ ಧರಿಸಿ ಅಟೆನ್‌ಷನ್‌ನಲ್ಲಿ ನಿಂತುಕೊಂಡರು. ಜೀಪು ನಿಲ್ಲುತಲೆ ಹಿಂದುಗಡೆಯಿಂದ ಇನ್ಸ್‌ಪೆಕ್ಟರು ಚಟಕಪಟಕ ಪೋಲೀಸರು ಜಂಪ್ ಮಾಡಿದರು. ಮುಂದುಗಡೆಯಿಂದ ಇನ್ಸ್‌ಪೆಕ್ಟರು ಇಳಿದರು. ಜೀಪಿನ ಸದ್ದಿಗೆ ಒಂದೆರಡು ಹಟ್ಟಿಗಳು ತಂತಮ್ಮ ನಿಂತಿದ್ದ ತಲೆ ಇಣುಕಿಸಿದವು.

ಇನ್ಸ್‌ಪೆಕ್ಟರು ಇಳುದ ಮೇಲ ಅಟೆನ್‌ಷನ್‌ನಲ್ಲಿ ನಿಂತಿದ್ದ ರೇವಣ್ಣನವರು ಸೆಲ್ಯೂಟ್ ಹೊಡೆದರು. ಸಾಹೇಬರು ರೇವಣ್ಣನವರ ಕಡೆಗೆ, ಹುಳು ಹಿಡುದು ತಂದ ತನ್ನ ಮರಿ ನೋಡುವ ಕೋಳಿಯಂತೆ ನೋಡಿದರು. ದಫೇದಾರ ರೇವಣ್ಣನವರಿಗೆ ‘ಸಭಾಷ್ ಮಗ್ನೆ…ನಿನ್ನ ಕುಟುಕು ಜೀವ ಬದುಕುದ್ದಕ್ಕೂ ಸಾರ್ಥಕ ಆಯ್ತು’ ಅಂದರು. ಜೊತೆ ಪೀಸಿಗಳು ಕಣ್ಗಳಲ್ಲೆ ತಮ್ಮ ಸಖೇದಾಶ್ಚರ್ಯ ಸೂಸುತ್ತಿದ್ದರು. ರೇವಣ್ಣನಿಗೆ ಏನೂ ತೋಚದೆ ಪುಳಕಿತನಾಗಿ ನಿಂತನು. ಇನ್ಸ್‌ಪೆಕ್ಟರು ‘ಹೂಂ ಏನಯ್ಯ ಮುಂದೆ’ ಅನ್ನಲು, ರೇವಣ್ಣ ‘ಮಾಸ್ವಾಮಿ, ಮಾಲು ಆಸಾಮಿ ಎರಡೂನು ಆ ಹಟ್ಟಿ ಒಳಗೇ ಅವೆ. ಹಟ್ಟಿಗೆ ಚಿಲುಕ ಹಾಕ ಅದ ನೋಡ್ತ ರಾತ್ರ ಪೂರ್ತ ನಾನು ಕಣ್ಮುಚ್ಚಿಲ್ಲ’ ಅಂದನು.
ಆಗ ದಫೇದಾರಿ ಮತ್ತು ನಾಕು ಪೀಸಿಗಳು ದಪದಪ ನಡುದು ಆ ಹಟ್ಟಿ ದಾರಂದಕ್ಕೆ ಕೈಗಳಿಂದ ಬಡಿಯತೊಡಗಿದರು. ಅಷ್ಟಕ್ಕೆ ಹತ್ತಾರು ಜನ ದೂರ ದೂರದಲ್ಲೆ ನಿಂತು ಕಣ್ಣುಜಿಬುರು ತೊಡೀತ ನೋಡುತ್ತಿದ್ದರು. ಆ ಸದ್ದುಗಳು ಮಲುಗಿದ್ದ ಸಾಕವ್ವನಿಗೆ ಗುದ್ದಲು ‘ಯಾವ್ ಮುರಮಗ್ನ ಅವ್ಞ ಆ….ದಾರಂದ್ಕ ಆಪಾಟಿ ಬಡೀತಾನಲ್ಲ ಅವ್ನ ಕೈಸೇದೋಗ….’ ಅನ್ನುತ್ತ ಎದ್ದು ಬಂದು ಬಾಗುಲ ತಗದು ನೋಡುತ್ತಾಳೆ ಯಮದೂತರಂತೆ ಪೋಲೀಸರು ನಿಂತಿದ್ದರು. ಅವಳ ಜೀವ ಝಗ್ ಅಂದೋಯ್ತು. ನಡುಗುತ್ತಾ ‘ಏನ್ ಸೋಮ್ಗಳಾ’ ಅಂದಳು. ಅವುಳ ಆ ಮಾತು ಅವಳನ್ನು ಲಕ್ಕಿಸದೆ ನುಗ್ಗಿದ ಪೋಲೀಸರ ಬೂಟುಗಳ ಶಬುದದಲ್ಲಿ ಅಪ್ಪಚ್ಚಿಯಾಯ್ತು.
ಇನ್ಸ್‌ಪೆಕ್ಟರು ನಿಧಾನವಾಗಿ ಒಳಬಂದು ಎಲ್ಲವನ್ನೂ ಒಂದ್ಸಲ ಅವಲೋಕಿಸಿದರು. ಇಡೀ ಹಟ್ಟೀನ ಕಣ್ಣಿಗೆ ಸಿಕ್ಸಿಕೊಂಡು ಆಮೇಲ ಸಾಕವ್ವನಿಗೆ ‘ಯೇ ಮುದ್ಕಿ ಎಲ್ಲಿ ನಿನ್ಮಕ್ಕಳು…’ ಎಂದು ಗಡುಸಿಗೆ ದನಿ ತುಂಬಿ ಅಂದರು. ಸಾಕವ್ವ ಥರಗುಟ್ಟುತ್ತ ‘ಮಲ್ಗವರೆ ಮಾಸೋಮಿ’ ಅಂದಳು. ಕಾಳಣ್ಣನ ಹೆಡ್ತಿಗೂ ಎಚ್ಚರವಾಗಿ ನೆರುಕೆ ಕಿಂಡೀಲಿ ಕಂಡದ್ದು ಕಂಡು ಗಂಡನ ಎಬ್ಬಿಸಲೂ ಕೈ ಬರದೆ ಅಲ್ಲೆ ತಪರ್ಸಾಡ್ತ ಕೂತಳು.

ಇಲ್ಲಿ ಕಿರುಮನೆಯಿಂದ ಸಣ್ಣಯ್ಯ ಕತ್ತನ್ನು ಇಣುಕಿಸಿದವನು ಅದನು ಹಿಂದಕ್ಕೆಳೆಯಲೊ ಮುಂದಕ್ಕೆಳೆಯಲೊ ಎಂದು ದೇಹವ ಕಿರುಮನೇಲಿಟ್ಟು ತಲೆಯ ಹೊರಗಿಟ್ಟು ನಿಂತನು. ಅವನ ತಲೆಕಂಡ ದಫೇದಾರಿ ‘ಅವ್ನು ಇಣುಕೋದ ನೋಡ್ರಪ್ಪ ಇಣುಕೋದ ಆ ಆ ಹೊರಕ್ಕ ಬಾರೋಲೇ’ ಎಂದನು. ಹಗ್ಗ ಕಟ್ಟಿ ಎಳೆದಂತಾಗಿ ಸಣ್ಣಯ್ಯ ತಡಬಡಾಯಿಸಿ ಬಂದು ಚಕ್ಕನೆ ನಿಂತನು. ಸಣ್ಣಯ್ಯನ ಕೂಸು ಕಿರುಚ ಆರಂಭಿಸಿತು. ಚಲುವಮ್ಮ ಆ ಕೂಸ ಒಂದು ಕೈಲಿ ತಟ್ಟೋದು ಇನ್ನೊಂದು ಕೈಲಿ ಜೀವಹಿಂಡುಕೊಳ್ಳೋದು ಮಾಡತ ಬೆವರುತ್ತಿದ್ದಳು. ಸಣ್ಣಯ್ಯನನ್ನು ಸುಡುವಂತೆ ನೋಡಿ ಇನ್ಸ್‌ಪೆಕ್ಟರು ರೇವಣ್ಣನಿಗೆ ಕಣ್ಣಿಂದಲೆ ಮೀಟಿದರು. ರೇವಣ್ಣ ‘ಇವ್ನಲ್ಲ ಮಾಸ್ವಾಮಿ’ ಅಂದನು. ದಫೇದಾರಿ ನೆಲವ ಬಡಿಯುತ್ತ ಕಾಳಣ್ಣನ ನೆರುಕೇಗೆ ನುಗ್ಗಿದನು.

ಅಲ್ಲಿ ಕಾಳಣ್ಣ ಚಿಂತಿಲ್ಲದೆ ಮಲಗಿದ್ದನು; ಹೆಡ್ತಿ ಪತರಗುಟ್ಟುತ್ತಿದ್ದಳು, ಮಲಗಿದ್ದವನ ಕಂಡು ದಫೇದಾರಿ ಮೊಸ ಮೊಸ ಉಸುರು ಬುಡ್ತ ಕಾಳಣ್ಣನಿಗೆ ಲಾಟೀಲಿ ತಿವುದನು. ಕಾಳಣ್ಣನ ಹೆಡ್ತಿ ದುಕ್ಕಳಿಸಿ ಅಳತೊಡಗಿದಳು. ಯಾವಾಗ ದಫೇದಾರಿ ಬೂಟ ನೆಲಕ್ಕೆ ಬಡುದನೊ ಆವಾಗ ಅವುಳು ದುಕ್ಕವನ್ನು ಗಂಟಲಲ್ಲೆ ಮಡುಗಿಕೊಂಡಳು. ಕಾಳಣ್ಣ ಗಕ್ಕರಿಸಿಕೊಂಡು ಎದ್ದು ಕುಂತವನಿಗೆ ಕಣ್ಣಿಗೆ ಹೊಡುದಂತೆ ಪೋಲೀಸು ಹಟ್ಟಿ ತುಂಬಾ ನಿಂತಿದ್ದನು.

ಕಯ್ಯಿಬಾಯಿ ಬರದ ಕಾಳಣ್ಣ ಬುಟ್ಟಕಣ್ಣುಬುಟ್ಟು ನೋಡುವುದ ಮಾಡುತ್ತಿದ್ದನು. ದಫೇದಾರಿ ಕೈಕೋಲನು ಕಾಳಣ್ಣನ ಚೊಗದ ಕಾಲರಿಗೆ ಸಿಕ್ಸಿ ತಿರುಚಿ ಹಿಡುತವಾಗಿ ಮೇಲೆತ್ತುತ್ತ ಹಲ್ಮುಡಿ ಕಚ್ಚಿ ‘ಮಗ ಕುಂತವ್ನೆ…ಏಳಲೇ’ ಅಂದನು. ಅವುನು ಏಳುತ್ತಲೆ ಕಾಲರಿಗೆ ಸಿಕ್ಸಿದ್ದ ಕೈಕೋಲಲ್ಲೆ ತಳ್ತ ಇನ್ಸ್‌ಪೆಕ್ಟರ ಮುಂದೆ ತಂದು ನಿಲ್ಲಿಸಿದನು. ರೇವಣ್ಣ ಆನಂದಪರವಶನಾಗಿ ‘ಇವ್ನೇನೆ ಮಾಸ್ವಾಮಿ’ ಅಂದನು. ಸುತ್ತ ಇದ್ದ ಪೀಸಿಗಳು ತೋಳುಗಳ ಬೀಸ್ತ ಹಲ್ಮುಡಿ ಕಚ್ಕೊಂಡು, ಕಾಳಣ್ಣನ ಮೇಲ ಇನ್ನೇನು ನೆಗುದು ಬಿದ್ದರು ಅಂಬುವಂತೆ ನಿಂತರು. ಕಾಳಣ್ಣನ ಎದಗುಂಡುಗೆಯೊಳಗಿಂದ ನಡುಕ ಅನ್ನೋದು ಹುಯ್ಲೋ ಅಂದುಕೊಂಡು ಬಂತು.
ಬಹಳ ಹೊತ್ತಿನವರೆಗೂ ಇನ್ಸ್‌ಪೆಕ್ಟರು ತಮ್ಮ ತಿವಿಯುವ ಕಣ್ಣುಗಳನ್ನು ಕಾಳಣ್ಣನ ಕಣ್ಗಳಿಗೆನೆಟ್ಟು ಕೊರೆಯುತ್ತಿದ್ದು ಆಮೇಲ ‘ಏನ್ಲೇ…ಎಷ್ಟು ದಿನ್ದಿಂದ ಈ ಕಸುಬ ಮಾಡ್ತ ಇದ್ದಿ’ ಎಂದು ಗುಡುಗಿದರು. ಕಾಳಣ್ಣನಿಗೆ ನಿಲ್ಲಾಕೆ ಕಾಲು ವದುರುವುವು ಮಾತಾಡಕೆ ಪದಗಳು ಕಲಸಿಕೊಳ್ಳುವುವು. ದಫೇದಾರಿ ಕೈಕೋಲು ಸಿಕ್ಸಿಕೊಂಡು ನಿಂತಿದ್ದವನು ಆ ಕೋಲಲ್ಲಿ ಒಳುಗೇ ತಿರುಚಿ ತಿವುದು ಕಾಳಣ್ಣನ ಕತ್ತುಗೆ ಚುರುಕು ಮುಟ್ಟಿಸಿದನು. ಕಾಳಣ್ಣ ಮುಗ್ಗರಿಸಿ ‘ಮಾಸೋಮಿ’ ಎಂದು ನಿಂತನು.
ಇನ್ಸ್‌ಪೆಕ್ಟರು ಮೀಸೆ ಕುಣಿಸ್ತ-
‘ಕಡಲೆ ಕಾಯ್ಮೂಟೆ ಎಲ್ಲಿಟ್ಟಿದ್ದಿ….?’
‘ಮಾಸೋಮಿ’
‘ಬೊಗುಳು.’
‘ಇಲ್ಲ ಮಾಸೋಮಿ.’
‘ಹೇ…’ಘರ್ಜಿಸಿದರು.
‘ಇಲ್ಲ ಮಾಸೋಮಿ’ ನಡುಕ ಬಂದು ನಡುಗಿತು.
‘ನಾವೇ ಹುಡ್ಕೋ ಮೊದ್ಲು ನೀನೆ ತೋರುಸ್ದೊ ಬಚಾವಾದೆ ಮಗ್ನೆ…’
‘ಮಾಸೋಮಿ’ ಬಾಯಿಂದ ಮಾತು ಬೆವುತು ಬಂತು.
‘ನಾವೇ ಹುಡ್ಕಿ ತಂದ್ರೆ, ನಿನ್ನ ಹೆಂಡ್ತ್ಯ ಹರಾಜ್ ಹಾಕ್ತಿ ಏನ್ಲೇ…!’ ಹಿಂದ್ಲಿಂದ ಎಕ್ಕತ್ತಿಗೆ ಚುರುಕು ಮುಟ್ಟಿತು.
‘…..’
‘ಬೊಗುಳು….’
‘ಇಲ್ಲ ಮಾಸೋಮಿ.’
ಕಪಾಳಕ್ಕೊಂದು ಏಟು ಫಟೀರನೆ ಬಿತ್ತು.
ಕಾಳಣ್ಣನ ಕಣ್ಗಳಿಗೆ ಕತ್ತಲು ಕಟ್ಟಿಕೊಂಡು ಕೆಳಗೆ ಕೂತುಬುಟ್ಟನು. ಕೂತವನಿಗೆ ದಫೇದಾರಿ ಬಲವಾಗಿ ತಿವುದು ನಿಂತು ಇನ್ಸ್‌ಪೆಕ್ಟರಪ್ಪ ಅಪ್ಪಣೆಗೆ ಕಾದನು. ಮಾಸ್ವಾಮಿಗಳು ಒಂದ್ಸಲ ಕಣ್ಸನ್ನೆ ಮಾಡುದ್ದೇ ತಡ, ದಫೇದಾರಿಯಾದಿಯಾಗಿ ನಾಕಾರು ಪೋಲೀಸರು ಕಾಳಣ್ಣನ ನೆರುಕೆಗೆ ಬಿರುಗಾಳಿಯಂತೆ ನುಗ್ಗಿದರು. ಒಬ್ಬ ಪೋಲೀಸು ಕಾಳಣ್ಣನಿಗೆ ಒದ್ದುಕೊಂಡು ಸೇನಾನಿಯಂತೆ ನಿಂತನು.
ಪೋಲೀಸರು ನೆರುಕೆಗೆ ನುಗ್ದಾಗ ಉಂಟಾದ ಗಾಳಿ ರಭುಸಕ್ಕೆ ಕಾಳಣ್ಣನ ಹೆಡ್ತಿ ತೂರಾಡಿ ಹೋದಳು. ಅವಳು ಪೋಲೀಸರ ಚುಚ್ಚುಗಣ್ಗಳಿಗೆ ಸಿಕ್ಕಿವದ್ದಾಡಿ ಸೆರುಗ ಬಾಯಿಗೆ ತುರುಕಿ ಹೊರಬಂದು ನಡೆಯಾಕು ಆಗ್ದೆ ನಿಂತು, ನಿಲ್ಲಾಕು ಆಗ್ದೆ ನಿಂತಲ್ಲೆ ಕುಂತುಬುಟ್ಟಳು. ಅಲ್ಲಿನ ಗದ್ದಲಕ್ಕೆ ನಡು ಮನೆಯಿಂದ ಹಜಾರಕ್ಕೆ ನೆಗುದು ಬಂದ ಶಿವು ಬಲೆಗೆ ಸಿಕ್ಕಿಕೊಂಡಂತಾಗಿ ನಿಂತಿತು. ನಡುಮನೆ ಒಳಗೆ ಅಕ್ಕ ಗೌರಮ್ಮ ತಂಗಿ ಪುಟಗೌರೀನ ನೋಡೋದು, ತಂಗಿ ಪುಟಗೌರಿ ಅಕ್ಕ ಗೌರಮ್ಮನ ನೋಡೋದು ಮಾಡ್ತ, ಮಾಡಲೇನು ತಿಳೀದೆ ನಡುಗೋದು ಮಾಡ್ತ, ನಡುಮನೆಯಿಂದ ಕೋಣೆಗೆ, ಕೋಣೆಯಿಂದ ನಡುಮನೆಗೆ ಎಟತಾಕುತ್ತಿದ್ದರು.

-೮-

ಹೊರುಗ ಹತ್ತಾಗಿ ಇಪ್ಪತ್ತಾಗಿ ಸೇರುತ್ತಿದ್ದ ಜನ. ಭೂಮಿಗೆ ಬೆಳಕು ಬೀಳುತ್ತಿದ್ದಂತೆಲ್ಲ ಹುಟ್ಟುಕೊಂಡು ಡ್ರೈವರಿಗೆ ಕೇರುಮಾಡದೆ ನಿಲ್ಲುತ್ತಿದ್ದರು. ಕೆಲುವರು ಸಾಸ ಮಾಡಿ ಹಟ್ಟಿಬಾಗುಲ ಹತ್ತಿರಕ್ಕೂ ಬಂದು ತಮ್ಮ ಕಣ್ಣು, ಸಾಧ್ಯವಾದರೆ ತಲೆಯನ್ನೂ ಒಳಕ್ಕೂ ತುರುಕುತ್ತಿದ್ದರು. ಒಂದ್ಸಲ ಇನ್ಸ್‌ಪೆಕ್ಟರು ಅವರನ್ನು ಕೆಕ್ಕರಿಸಿಕೊಂಡು ನೋಡಲು ಆ ನೋಟಕ್ಕೆ ಆ ಜನ ಹಿಂಜಿಗಿಯಿತು. ಸೇನಾನಿಯಂತೆ ಕಾಳಣ್ಣನ ಪಕ್ಕ ನಿಂತಿದ್ದ ಪೋಲೀಸು ಲಾಟೀ ಬೀಸ್ತ ಆ ಜನದ ಮೇಲ ನೆಗುದನು. ಬಾಗುಲಲಿ ನಿಂತ ಜನ ಗುಂಪಿಗೆ ಬಿದ್ದಿತು. ಆ ಹಟ್ಟಿ ಮುಂದ ಪೋಜಿನಂತೆ ನೆರೆದಿದ್ದ ಜನಕಂಡು ಆಪೀಸಿಯ ಎದೆ ಧಸಕ್ಕೆಂದರೂ ಕಾಕಿಬಟ್ಟೆ ಮಹಿಮೆ ಜನರನ್ನು ತಳ್ತ ‘ಇಲ್ಲೇನು ಕೋತಿ ಕುಣೀತಾ ಇದ್ದಾದೇನ್ರಯ್ಯ…ಮಾಡೋ ಕೆಲ್ಸ ಮಾಡೋಗಿ’ ಎನ್ನುತ್ತ ಜನರನ್ನು ಹಿಂಜಿಗಿಸುತ್ತಿತ್ತು.

ಆಗ ಗುಂಪು ತನ್ನಷ್ಟಕ್ಕೆ ಏಡುಭಾಗವಾಗಿ ಒಡೆದು ದಾರಿಬಿಟ್ಟುಗಂತು. ಆ ದಾರೀಲಿ ಕತ್ತಿಗೆ ಶಾಲು ಹೊದ್ದು ಕೈಗೆ ಸಿಕರೋಟು ಹಿಡುದು ಎತ್ತಪ್ಪನವರು ಯಾವ ರೇಖೆಯನ್ನೂ ಮೊಖದಲ್ಲಿ ಹೆಚ್ಚುಕಮ್ಮಿ ಮಾಡದೆ ನಡೆದು ಬಂದರು. ಸೋಸಿತೆಗುರೂ ಒಂದು ಸಟುಗ ರಕ್ತಮಾಂಸ ಸಿಕ್ಕದ ರೇವಣ್ಣನ ಕಂಡಾಗ ಎತ್ತಪ್ಪನವರು ‘ಇದಾ ಕಳ್ನ ಹಿಡುಯೋ ಮುಸುಡ್ಯ’ ಅಂದುಕೊಂಡಿದ್ದು ಇದೀಗ ಅವರನ್ನು ಅವರೇ ನಂಬದಂತಾಗಿತ್ತು. ಶ್ರೀ ಎತ್ತಪ್ಪನವರನ್ನು ಕಂಡ ಪೋಲೀಸು ಸಲ್ಯೂಟು ಹೊಡೆದು ಅವರನ್ನು ಬಾಗುಲವರೆಗೂ ಮುಟ್ಟಿಸಿ ಬಂದು ಕುಣಿದಾಟ ಮುಂದುವರಿಸಿದನು.

ಒಳುಗೆ ಕಾಳಣ್ಣ ಕಣ್ಣು ಪಿಳಿಪಿಳಿ ಬುಡ್ತ ದೇಹವ ಕುಗ್ಗಿಸಿ ಕುಂತಿದ್ದನು. ಅವನ ಹೆಡ್ತಿ ಕಣ್ಣಿಗೆ ಮಂಕ ಅಂಟಿಸಿಕೊಂಡು ಕೂತಿದ್ದಳು. ಸಣ್ಣಯ್ಯ ಭೂಮಿಗೆ ನೆಟ್ಟ ಒಣಕಲ ಕಡ್ಡಿಯಂತೆ ನಿಂತಿದ್ದನು. ಬಲೆಗೆ ಸಿಕ್ಕ ಶಿವು ಮಿಲಮಿಲ ಅಂತಿತ್ತು. ಸಾಕವ್ವ, ಕುಗ್ಗಿ ಕುಂತಿದ್ದ ಮಗನದಿಕ್ಕ ಉಸುರಾಟದೊಡನೆ ಇಂಚಿಂಚು ತವುಯುತ್ತಿದ್ದಳು. ಕಾಳಣ್ಣನ ನೆರುಕೆ ತಡಬಡಾಯಿಸುತ್ತಿತ್ತು. ಹೊರುಗೆ ಜನ ಹೆಚ್ಚಿದಂತೆ ಪೋಲೀಸನ ಕುಣಿತವೂ ಹೆಚ್ಚುತ್ತಿತ್ತು.

ದಫೇದಾರಿ ಮುಂದಾಳ್ತನದಲ್ಲಿ ಕಾಳಣ್ಣನ ಮೂರಂಕಣದ ನೆರುಕೆಗೆ ಸಿಕ್ಸಿದ್ದ ಫೋಟೋದಲ್ಲಿ ಮಲೆಮಾದೇಶ್ವರಸ್ವಾಮಿ ಹುಲಿವಾಹನದ ಮೇಲ ಕುಂತು ಕಣ್ಮುಚ್ಚಿದ ಭಂಗಿಯಲ್ಲಿ ಕಿರುನಗೆ ಸೂಸುತ್ತಿದ್ದನು. ಫೋಟೋದ ಕೆಳುಗೊಂದು ಈಭೂತಿ ಹಲುಗೆ ಅದರೊಳಗೊಂದೆರಡು ಈಭೂತಿ ಉಂಡೆ ಇದ್ದವು. ಹಗ್ಗದುರೀಲಿ ಒಂದು ತೇಪೆ ಸೀರೆ ಎರುಡು ರವುಕೆ ಒಂದೆರಡು ಚೊಗನಿಕ್ಕರು, ಒಂದು ಇಪ್ಪತ್ತು ಕಿಂಡಿ ಪಂಚೆ ಇನ್ನೊಂದುಕಾಂಫಿ ತೋಟದ ಕಂಬಳಿ ಮಂಕು ಹಿಡುದು ನೇತಾಡುತ್ತಿದ್ದವು. ಮೂಲೇಲಿದ್ದ ರಾಗಿಕಲ್ಲು ಸೋಂಬೇರಿಯಾಗಿ ಮಲಗಿತ್ತು; ಅದರ ಮೇಲೊಂದು ಖಾಲಿಪುಟ್ಟಿ ಕುಂತಿತ್ತು. ನಡುಗೋಡೆಗೆ ಸೇರಿಕೊಂಡು ಒಂದು ಎತ್ತೊಲೆ ಆ ಎತ್ತೊಲೆಮೇಲೆ ಈಭೂತಿ ಕಟ್ಟು ಬಳಿದಿಟ್ಟಿದ್ದ ಹಿಟ್ಟು ಉದುಕದ ಮಡಕೆ. ಅಲ್ಲೇ ನೀರುತುಂಬಿದ್ದೆರಡು ಅರುವೆ ಅಲ್ಲಿಂದ ಕೈಗೆಟುಕೊ ದೂರದಲ್ಲಿ ಉಣ್ಣೊಹರೋಣ ಗಳಾಸುಗಳು ಜೊತೆಯಾಗಿ ಮಲಗಿದ್ದವು. ಗೋಡೆಗೊರಗಿ ವಿಶ್ರಮಿಸಿದ್ದ ದೊಡ್ಡ ಅಳಗದ ಹೊಟ್ಟೇಲಿ ಅರ್ಧ ಸೇರಷ್ಟು ಹುರುಳಿ ಕಾಳೂ ಆ ಆಳುಗದ ಮೇಲೆ ಒಂದೆರಡು ಮಡಕೆಗಳು ಒಂದರ ಮೇಲೊಂದು ನಿಂತೊ ಕುಂತೊ ಇದ್ವು. ನೆಲ ಬಗುದು ತಗುದರೂ ಮಾಲು ಏಳದು ಎಂಬ ಸ್ಥಿತಿಯನ್ನು ಪೋಲೀಸರು ಮುಟ್ಟಲು ದಫೇದಾರಿ ಮುಂದಾಳ್ತನದಲ್ಲಿ ಪೀಸಿಗಳು ಹೊರಬಂದರು.

ದಫೇದಾರಿ ಕಂಡದ್ದನ್ನು ಸಾಹೇಬರೆದುರು ತೋಡಿಟ್ಟು ಹಜಾರದಲ್ಲಿ ನೆಗಾಡ್ತ ಹುಡುಕುತ್ತಿದ್ದ ಪೋಲೀಸರ ಕೂಡಿಕೊಂಡನು. ಒಬ್ಬ ಪೀಸಿ ಸೌದೆಯ ಸರುಸಿ ನೋಡುತ್ತಿದ್ದನು. ಇನ್ನೊಬ್ಬ ಹಜಾರದ ಪೆಟ್ಟಿಗೆಯ ಉಲ್ಟಾ ಮಾಡಿದನು. ಅಲ್ಲಿ ಎಮ್ಮೆದನಕ್ಕೆ ಮೇವಾಕುವ ಚಣುಗದಲ್ಲಿ ಬೂದಿಕಸ ತುಂಬಿತ್ತು. ಅಲ್ಲಿಗೆ ಲಾಟೀ ಒಳಕೆಟ್ಟು ತಗುದು ಮತ್ತೊಬ್ಬ ಪೀಸಿ ಪರೀಕ್ಷಿಸುತ್ತಿದ್ದನು. ಆ ಪರೀಕ್ಷೆಗೆ ಬೂದಿ ನೊಣಗಳು ಹೆದುರಿ ಹಟ್ಟಿ ತುಂಬಾ ಹಾರಾಡತೊಡಗಿದವು. ಆ ಚಣುಗ ಹತ್ತಿ ರೇವಣ್ಣನವರು ತೊಲೆ ಮೇಲಿದ್ದ ಸಾಡನ್ನು ಅಲ್ಲಾಡುಸಿ ಇಳಿದರು. ಒಬ್ಬ ನೀರು ಕಾಯ್ಸುವ ಅಳುಗದ ಮುಚ್ಚಳ ಎತ್ತಿ ಮೊಖಹಾಕಿ ಮೊಖ ತಗುದನು. ಆಮೇಲ ಎಲ್ಲರೂ ಒಕ್ಕೆಡೆ ಸೇರಿ ಕಿರುಮನೆ ಎದುರಲ್ಲಿ ಅಡ್ಡಡ್ಡ ನೇತಾಕಿದ್ದ ದೊಡ್ಡ ತೊಂಬದೊಳಕ್ಕೆ ನಿಗುರಿನಿಗುರಿ ನೋಡಿಯೂ ಕಾಣಿಸದೆ ಒಬ್ಬ ಪೀಸಿ ರೇವಣ್ಣನವರನ್ನು ಹೆಗುಲಿಗೆ ಕೂರಿಸಿ ನೋಡೆಂದರು. ಆತೊಂಬೇಲಿ ಹಿಂದಲ ಕಾಲದ ಕತ್ತಲು ತುಂಬಿದ್ದು ಅಲ್ಲಾಡ್ಸಿದಾಗ ಹೊರಬರುತ್ತಿತ್ತು. ಅದರೊಳಗ ಗವೀಲಿ ಹುದುಗಿದ್ದಂತೆ ಸುತ್ತಿಗೆ ಕಡಗೋಲು ಎಲುಕೊಟ್ಟು ಗೋಣೀ ಚೀಲಾದಿಗಳು ತುಂಬಿದ್ದವು. ರೇವಣ್ಣನವರು ತೊಂಬದೊಳಕ್ಕ ಲಾಟಿ ಇಟ್ಟು ಮೇಲಿಂದ ಕೆಳುಕ್ಕೆ ಕೆಳಗಿಂದ ಮೇಲುಕ್ಕೆ ಎಡದಿಂದ ಬಲುಕ್ಕೆ ಬಲದಿಂದ ಎಡುಕ್ಕೆ ಅಲ್ಲಾಡ್ಸಿದರು. ಅದು ಲೊಳ ಲೊಳ ಎಂದು ಮಾತಾಡಿತು. ರೇವಣ್ಣನವರು ಏನೂ ಇಲ್ಲ ಅನ್ನುವ ಮೊದ್ಲೆ ಹೊತ್ತಿದ್ದ ಪೀಸಿ ಅವುರನ್ನು ನೆಲಕ್ಕೆ ಕುಕ್ಕಿದನು. ರೇವಣ್ಣನವರು ‘ಬಂದೆ ಸ್ವಾಮಿ’ ಎಂದು ದಫೇದಾರರಿಗೆ ಅಂದು ಹಿಂಜರ್‍ಕೊಂಡು ಇನ್ಸ್‌ಪೆಕ್ಟರ್ ಕಣ್ತಪ್ಪಿಸಿ ಹೊರಬಂದರು.

ಹೊರುಗೆ ಜನಸಾಗರ, ಆ ಜನಸಾಗರದ ತಡಗಟ್ಟುತ್ತಿದ್ದ ಜೊತೆ ಪೀಸಿಗೆ ಕಯ್ಯಾಡಿಸಿ ರೇವಣ್ಣನವರು ಬೀಡಿ ಹಚ್ಚಿಕೊಂಡು ನಡುಗೇಗೆ ಠೀವಿ ಅಂಟುಸಿಕೊಂಡು ಹಟ್ಟಿ ಹಿಂದಕ್ಕೆ ಬಂದರು. ಗೋಡೆ ಸಂದೀಲಿ ಮಾಲು ಸುರ್‍ದಿರಬಹುದಾ ಎಂಬ ಅನುಮಾನ ಅವರ ತಲೇಲಿ ಮಿಂಚಾಡಿತ್ತು. ಈ ಮಿಂಚಿನೋಟ್ಗೇ ಅವರಿಗೆ ಎತ್ತಿ ಕುಕ್ಕಿಸಿಕೊಂಡ ರಭುಸಕ್ಕೆ ಒಂದಾದ್ದು ಡಿಮಾಂಡ್ ಮಾಡುತ್ತಿತ್ತು. ಆ ವೋಣೀ ಉದ್ದಕ್ಕೂ ನಡುದೂ ನಡುದೂ ಅಂಥ ಯಾವ ಸುಳುವೂ ಇಲ್ದೇನೆ ನಡುದಾಡಿದ ಸುಸ್ತಿಗೆ ಕಣ್ಣು ಮಂಜ್ಗಟ್ಟಿ ಆ ವೋಣಿಯಲ್ಲಿ ಒಂದಾಮಾಡಲು ರೇವಣ್ಣನವರು ಕೂತರು.

ಅಲ್ಲಲ್ಲೆ ಗೋಡೆಗಂಟಿಕೊಂಡು ತಲೆಮಾತ್ರವ ಇಣುಕಿಸಿ ನೋಡುತ್ತಿದ್ದ ಹೆಂಗಳೆಯರು, ರೇವಣ್ಣನವರ ಠೀವಿ ಕಂಡು ಅದೆ ಅಂದುಕೊಂಡು ಪೋಣಿಗಿಣುಕಿ ಆ ಸ್ಥಿತಿಯಲ್ಲಿ ರೇವಣ್ಣನವರನ್ನು ಕಂಡರು. ಆಗ ಅವರುಗಳ ಬಾಯಿಂದ ನಗು ಅನ್ನೋದು ಉಕ್ಕೇರಲು ಸೆರಗು ಮುಚ್ಚಿ ಅದ ಅದುಮುತ್ತ ಮರೆಯಾಗುತ್ತಿದ್ದರು. ಯಾರಾರು ‘ಏನ ಅದು’ ಅಂತ ಕೇಳಿದರೆ ಅವರಿಗೆ ಹುಸುಕೋಪ ಬಂದೂ ಕೇಳ್ದವರಿಗೆ ‘ನೀನೇ ನೋಡದ’ ಅನ್ನುತ್ತಿದ್ದರು. ನೋಡ್ದವಳು ಅವಳೂ ಅವರಂತೇನೆ ಆಗುತ್ತಿದ್ದಳು. ಒಬ್ಬಳು ಸೆರುಗ ಬಾಯೊಳಕ್ಕೆ ತುರುಕಿಕೊಂಡಷ್ಟೂ ನಗು ಒದ್ದುಕೊಂಡು ಬಂದು ಜೋರಾಗಿ ಕೀಕೀಕೀ ಮಾಡಿ ಸುತ್ತಲಿದ್ದ ಹೆಂಗಳೆಯರು ನಗುನೊಡನೆ ವೀರಾವೇಶದಿಂದ ಹೊರಡುವಂತಾಯ್ತು. ಇತ್ತ ರೇವಣ್ಣನವರು ತಮ್ಮ ತೊಡೆಗಳ ನಡುಗಿಗೆ ಮನಸ್ಸಿಂದ ಬಲ ರವಾನಿಸಿ ಎದ್ದು ಹೆಜ್ಜೆ ಇಟ್ಟರು.

ರೇವಣ್ಣನವರು ಒಂದು ಕಾರ್ಯಕ್ರಮದಲ್ಲಿ ಇರುವಾಗ್ಗ್ಯೇ ಇಲ್ಲಿ ಕಿರುಮನೆ ಜಪ್ತಿ ನಡೆಯುತ್ತಿತ್ತು. ಪೋಲೀಸರು ಆ ಬಾಗುಲ ಹಿಡುಸದಂಥವರು ಒಳನುಗ್ಗಿದಾಗ ಕಿರುಮನೇಲಿ ಕತ್ತಲು ಕಟ್ಟಿಕೊಂಡಿತು. ಚೆಲುವಮ್ಮ ಬೆದರಿಕೊಂಡು ಅಳುತ್ತಿದ್ದ ಮಕ್ಕಳು ಚೀರುವುದರೊಳಗಾಗಿ ಹೊರಕ್ಕೆಳೆದುಕೊಂಡು ಬಂದು ಕುಕ್ಕರ ಬಡಿದಳು. ಇನ್ಸ್‌ಪೆಕ್ಟರು ದುರುಗುಟ್ಟಿ ನೋಡುತ್ತಿದ್ದರು. ಚೆಲುವಮ್ಮ ದೊಡ್ಡ ಜೀವ ಸಣ್ಣ ಜೀವ ಎರಡೂವೆ ನಾ ಮುಂದು ತಾ ಮುಂದು ಎಂದು ಹೊರಹೋಗಲು ಒಂದರ ಮೇಲೊಂದು ಬಿದ್ದು ನುಗ್ಗುತ್ತಿದ್ದವು. ಚೆಲುವಮ್ಮ, ಕಿರುಮನೇಲಿ ತನ್ನ ಪರಾಣಗಳಿಗಾಗಿ ಜಖಂ ಅನ್ನು ಕಣ್ಣಿಂದ ನೋಡಬೇಕಾದ ತಲತಗ್ಸಿ ತನ್ನ ಕೂಸ ಎದೆಗವುಚಿಕೊಂಡು ತಟ್ಟ ತೊಡಗಿದಳು. ಅವಳ ಹಿಂದು ಮುಂದಿದ್ದ ಹೈಕಳು ಜೋರಾಗಿ ಅಳಲು ಗೋರಂಜ ಸಾಲ್ದೆ ಸೊರಗುಟ್ಟುತ್ತಿದ್ದವು.

ಪೋಲೀಸರು ಕಷ್ಟಪಟ್ಟು ಹೊಕ್ಕಂಥ ಆ ಕಿರುಮನೇಲಿ ಅಂಥ ಎರಡು ಮನೆಗಾಗುವಷ್ಟು ಸಾಮಾನು ಸರಂಜಾಮುಗಳು ಅಡುಗಿದ್ದವು. ಪೀಸಿ ದಫೇದಾರರು ಹಬ್ಬದ ಸಡಗರದೊಡನೆ ಅಲ್ಲಿದ್ದವುಗಳ ಎತ್ತಿಕುಟ್ಟಿ ಒಡೆದು ನೋಡತೊಡಗಿದರು. ನೋಡ್ದ ಕಡೆಗೆ ಒಂದಲ್ಲಾ ಒಂದು ಚಂಬು ಚಲುಗ ಹರೋಣಗಳಾಸುಗಳಿದ್ದುವು. ಒಂದರ ಮೇಲೊಂದು ಜೋತಿದ್ದ ದಪ್ಪದಪ್ಪ ಮಡಕೆಗಳಲ್ಲಿ ಒಂದರಲ್ಲಿ ಆರೇಳು ಸೇರಷ್ಟು ಜೋಳ, ಇನ್ನೊಂದರಲ್ಲಿ ಅಸಿಟ್ಟನ್ನು ತಟ್ಟಿಡಲಾಗಿತ್ತು. ನಡುಮಧ್ಯದಲ್ಲಿ ಬೇಕಾಬಿಟ್ಟಿ ಬಿದ್ದಿದ್ದ ಟ್ರಂಕಲ್ಲಿ ಆತುರಾತುರವಾಗಿ ತುರುಕಿದ್ದಂತೆ ಬಟ್ಟೆಬರೆಗಳು ಉಸುರು ಕಟ್ಟಿಕೊಂಡಿದ್ದವು. ಉಳಿದ ಬಟ್ಟೆಬರೆ ದುಪ್ಪಟ್ಟಿಗಳು ಹಗ್ಗದುರೀಲಿ ಜೋಡಿಸಿಕೊಂಡು, ಮೊರಗೆರಸಿ ವಂದರಿಗಳು ಗೋಡೆಗಂಟಿಕೊಂಡು ಇದ್ದವು. ಕೆಳಗೊಂದು ಚಾಪೆ ಹಾಸ್ಕೊಂಡು ಮಲುಗಿತ್ತು. ಮಂದಲಿಗೆಯೊಂದು ಸುತ್ಕೊಂಡು ನಿಂತಿತ್ತು. ತನ್ನ ಸುತ್ತ ಒಂದೆರಡು ಹರೋಣಗಳಾಸು ಚಂಬುಗಳೊಡನಿದ್ದ ಕಂಚೀನ ಅಂಡೇಲಿ ನೀರು ತುಂಬಿತ್ತು. ಗೋಡೆ ಮೊಳೆಗಳಲ್ಲಿ ದೋಸಕಲ್ಲು ಸೀಸಗಳನ್ನು ನೇತಾಕಿದ್ದು ಒಂದರಲ್ಲಿ ಅರಸೀಸೆಯಷ್ಟು ಸೀಮೆ ಎಣ್ಣೆ ಇತ್ತು. ಪೀಸಿಯೊಬ್ಬ ತೊಂಬದ ಮಣ್ಮುಚ್ಚಳವ ಕಿತ್ತು ಬಿಸುಟು ಕೈಹಾಕಲು ಬೂದಿ ಬೆರೆಸಿಟ್ಟಿದ್ದ ಬಿತ್ತಣದ ಜೋಳದ ಕಾಳ್ಗಳು ಪೀಸಿ ಕೈಯಿಂದ ನೆಗುದು ಬಿದ್ದವು. ಆ ನಾಕೂ ಜನರೂ ಬುಡುತ್ತಿದ್ದ ಬಿರುಸಾದ ಉಸುರಾಟಗಳು ಅವರವರನ್ನೆ ತಳ್ಳುತ್ತಿದ್ದು ಅವರೆಲ್ಲರೂ ಒಬ್ಬೊಬ್ಬರಾಗಿ ನಿಧಾನವಾಗಿ ಹೊರಬಂದರು.

ಬಂದವರು ಒಂದು ಚಣವೂ ನಿಲ್ದೆ ತತರಪತರ ನಡುಮನೆಗೆ ನುಗ್ಗಬೂಡಗಿದರು. ಸಾಕವ್ವ ಜೀವ ಕೈಲಿಡಿದುಕೊಂಡು ‘ಸ್ವಾಮ್ಗಳೊ…ದೇವ್ರಮನಬಂದ್ಯೋ, ಬೂಟ್ಗಾಲಲ್ಲಿ’ ಎಂದು ಕೈ ನೀಟಿದಳು. ದಫೇದಾರಿ ಒಂದ್ಸಲ ತೊಟ್ಗಾಲ ನೆಲಕ್ಕುದ್ದಿ ‘ಹೇ..ಬಾಯ್ಮುಚ್ಕೊಂಡು ಬಿದ್ದಿರು. ದುಸರ ಮಾತಾಡಿದ್ರ ಬಾಯ್ಗೆ ಬೂಟ ಎಟ್ತೀನಿ.’ ಅಂದು ಕೆಕ್ಕರಿಸಿಕೊಂಡು ನಡುಮನ್ಗೆ ನುಗ್ಗಿದನು. ಸಾಕವ್ವ ಬಾಯ್ಬುಟುಗೊಂಡು ಕಣ್ಗುಡ್ಡೆಗಳ ಅಲುಗಾಡಿಸ್ದೆ ಕುಂತಳು.

ನಡುಮನೆ ಒಳಗಿದ್ದ ಅಕ್ಕ ತಂಗೀರು ಉಸುರುಬುಡ್ದೆ ಹೊರಬಂದು ಕಿರುಮನೆ ದಿಕ್ಕ ಮೊಖ ಹಾಕಿ ಉಸುರು ಬುಟ್ಟು ನಿಂತರು. ದುಪ್ಪಟ್ಟಿ ಹೊದ್ದು ಗೋಡೆ ನೋಡ್ತ ಕೂತಿದ್ದ ದುಪ್ಟಿ ಕಮಿಷನರು ಅವೈ ಅವೈ ಅನ್ನುತ್ತ, ತ್ರಾಣ ಕೂಡಿಸಿ ಎದ್ದು ನಡೆಯುತ ಬಂದು ನಿಧಾನವಾಗಿ ಮುಂಡಿಗೆಗೊರಗಿ ನೆಲಕೆ ಕಯ್ಯಿಳಿಸಿತು.

-೯-

ಹಟ್ಟಿ ಮುಂದಲ ಜನಪ್ರವಾಹಕ್ಕೆ ಇನ್ನೂ ಹತ್ತು ಜನರು ಸೇರಿಕೊಂಡರೇನೊ, ಆ ಗುಂಪು ಭಾಗ ಮಾಡಿಕೊಂಡು ಒಬ್ಬ ಮುಂದುಮುಂದಕೆ ನುಗ್ಗುತ್ತಿದ್ದನು. ಜನ ತಡಗುಟ್ಟುತ್ತಿದ್ದ ಪೀಸಿ ಅವನನ್ನು ಹಿಂದಹಿಂದಕೆ ತಳ್ಳುತ್ತಿದ್ದನು. ಕೊನೆಗವನು ‘ನಾನೂವಿ ಈ ಹಟ್ಯವ್ನೆ ಸ್ವಾಮೆ ಬುಡಿ’ ಅಂದನು. ಈ ಪೀಸಿ ಗಬಕ್ಕನೆ ಅವನ ತೋಳ ಹಿಡುದು. ‘ನೀನೆ ಬೇಕಾಗಿದ್ದವ್ನು ಬಾ ಬಾ ಎಂದು ಎಳುದು, ಎದೆಕೂಡಿಸಿಕೊಳ್ಳುತ್ತಿದ್ದ ರೇವಣ್ಣನಿಗೆ ಒಪ್ಪಿಸಿದನು. ರೇವಣ್ಣನು ಮನದಲ್ಲೆ ಗುರುಸಿದ್ದೂನ ಚಹರೆಯನ್ನು ನಾಕುಸಲ ನೋಟ್’ ಮಾಡಿಕೊಂಡಿದ್ದರಿಂದ ಪತ್ತೆಸಿಕ್ಕಿ ಗುರುಸಿದ್ದೂನ ತೋಳ ಹಿಡುದು ಒಳತಂದರು ರೇವಣ್ಣನು ಗುರುಸಿದ್ದೂನ ಸಾಹೇಬರ ಮುಂದಕ ತಳ್ಳಿ ‘ಇವ್ನೆ ಮಾಸ್ವಾಮಿ ರಾತ್ರಿ ಬಂದು ಹೋದವನು’ ಎಂದು ನಿಂತನು. ಇನ್ಸ್‌ಪೆಕ್ಟರು ಒಂದು ಸಲ ಕಣ್ಣಲ್ಲೆ ಗುದ್ದರಿಸಿದರು.
‘ನೀನೇನಾ ರಾತ್ರಿ ಬಂದು ಹೋದವನು?’
‘ಅಹುದು ಸ್ವಾಮಿ.’
‘ಯಾಕ್ ಬಂದಿದ್ದೆ?’
‘ಹಿಟ್ಟುಣ್ಣಾಕೆ ಸ್ವಾಮಿ.’
‘ಆಮೇಲೆ ಎಲ್ಲಿಗೆ ಹೋದೆ?’
‘ಮಾರಿಗುಡಿಗೆ ಮಲುಗಾಕೆ ಸ್ವಾಮಿ.’
‘ಹೊತ್ಕಂಡು ಹೋದ ಕಡ್ಲೆಕಾಯ ಏನ್ಮಾಡ್ದೆ?’
‘ಇಲ್ಲ ಸ್ವಾಮಿ.’
ಇನ್ಸ್‌ಪೆಕ್ಟರ ತಲ ಚಿಟ್ಟೋ ಅಂತು.
ಇನ್ಸ್‌ಪೆಕ್ಟರು ತಿರುಗಾಡುತ್ತಿದ್ದವರು ನಿಂತು ಪುಟಗೌರಿ ಕಡೆ ಬೆರಳು ತೋರು ‘ಹೇ ಹುಡ್ಗಿ. ಬಾ ಇಲ್ಲಿ’ ಅಂದರು. ಪುಟಗೌರಿ ಕಣ್ಣೆತ್ತಿನೋಡಿ ಕಣ್ಣ ಇಳುಸಿ ನಿಂತಂತೆ ನಿಂತಳು. ಸಾಹೇಬರು ಈಗ ಗುಡುಗಿಕೊಂಡರು. ಪುಟಗೌರಿ ಬಂದು ನಿಂತು ನಡುಗಿದಳು.
‘ಲೇ ಹುಡ್ಗಿ….ನಿಜ ಹೇಳು ನಿಂಗೇನು ಮಾಡೊಲ್ಲ’
ಪುಟಗೌರಿ ತುಟಿಕಚ್ಚಿಕೊಂಡಳು.
‘ಕಡ್ಲೆಕಾಯ ಮೂಟೆ ಎಲ್ಲಿ?’
ಪುಟಗೌರಿ ಬಾಯಿಬಿಡಲಿಲ್ಲ.
‘ಮಾತಾಡು….’
ಪುಟಗೌರಿ ಬಾಯ್ಗ ಸೆರಗುತುರುಕಿಕೊಂಡಳು.

ಇನ್ಸ್‌ಪೆಕ್ಟರ ರೂಲುಗೋಲು ಪುಟಗೌರಿ ಗಲ್ಲವನ್ನು ಸವರುತ್ತಿತ್ತು. ಪುಟಗೌರಿ ಮಾತುಗಳು ಹೊಟ್ಟ ಒಳ್ಗ ಅವುತುಕೊಳ್ಳುತ್ತಿದ್ದವು. ಗುರುಸಿದ್ದು ಇನ್ಸ್‌ಪೆಕ್ಟರ ದುರುಗುಟ್ಟಿ ನೋಡುತ್ತಿದ್ದನು. ಸಾಹೇಬರು ರೂಲು ಗೋಲನ್ನು ಪುಟಗೌರಿ ಗಲ್ಲದಿಂದ ತಗುದು ಗುರುಸಿದ್ದೂನ ಕಣ್ದಿಕ್ಕ ಚಾಚಿ ‘ಮಗ ನೋಡದ್ ನೋಡು ನೋಡದ. ಕಣ್ಗುಡ್ಡೆ ಮೀಟಾಕ್ತೀನಿ…ಹೇ’ ಎಂದು ಹಲ್ಲ ನೋರುಗುಟ್ಸಿದರು. ಗುರುಸಿದ್ದೂ ನೋಟಕ್ಕೆ ಸಾಹೇಬರ ಒಂದೆರಡು ರೋಮಗಳು ಅಳುಕುಪಟ್ಟಿದ್ದವು. ಸಾಹೇಬರು ಸಿಕರೋಟು ಹಚ್ಚಿದರು.

ನಡುಮನೆಗೆ ನುಗ್ಗಿದ ಪೀಸಿಗಳಿಗೆ ಆ ಕಡೆಗೊಂದು ಗಿಣಿ ಈ ಕಡೆಗೊಂದು ಗಿಣಿ ನಡು ಮಧ್ಯೆ ಕುಂತ ಕೃಷ್ಣ ಪರಮಾತ್ಮನ ಗೊಂಬೆ ಎದುರುಗೊಂಡಿತು. ಆ ಗೊಂಬೆಗಳ ಉದ್ದಕ್ಕೂ ಬಳೆಮಾಲೆಯ ನಲೀವಂತೆ ಸಿಂಗರಿಸಿತ್ತು. ಪಕ್ಕದಲಿ ದೀಪಾಲೆ ಕಂಬವೊಂದಿದ್ದು ಆದೀಪಾಲೆ ಕಂಬದ ಮೇಲೊಂದು ದೀಪವಿದ್ದು ಆ ದೀಪದೊಳಗ ಎಣ್ಣೆ ಇತ್ತೊ ಇಲ್ವೊ ಯಾರೂ ನೋಡಲಿಲ್ಲ. ಕೆಳಗೊಂದು ಮುಚ್ಚಳದ ಬಿದುರು ಪುಟ್ಟೀಲಿ ಒಂದೆರಡು ಲಂಗಸೀರೆ ರವುಕೆ ಸಿವೂನ ಅಂಗಿಚಡ್ಡಿ ಮಡಿಸಿಡಲಾಗಿತ್ತು. ಗೋಡೇಲಿ ಜೋಡಿಸಿದ್ದ ಬೊಂಬಿನ ಮೇಲೊಂದು ಪುಟ್ಟಿ ಆ ಪುಟ್ಟೀಲಿ ಸೇರು ಪಾವು ಇದ್ವು. ಬೊಂಬಿನ ಉಳಿದೆಡೆ ದುಪ್ಟಿ ಹರಿದಿದ್ದ ಹಳೆ ಸೀರೆ ಮತ್ತು ಹೊಸ ಚೀಟಿ ಸೀರೆ ಹಾಗೂ ಪಂಚೆ ಚೊಗ ಮುಂತಾಗಿದ್ದವು. ನೀರಳಗ ತನ್ನ ಸುತ್ತಲೂ ಗಳಾಸು ಚೊಂಬು ಹರೋಣ ತಟ್ಟೆಯ ಓತುಕೊಂಡಿತ್ತು. ಮುಂದೆ ಬಾಗುಲಿಲ್ಲದ ಕೋಣೇಲಿ ಒಂದು ಮಜ್ಜುಗೆ ಕಡೆಯೊ ಕಂಬ ಒಂಟಬಡ್ಕ ಸುಂಟ್ರಗಾಳಿಯಂತೆ ನಿಂತಿತ್ತು. ಮೇಲಿಂದ ಹಗ್ಗಕಟ್ಟಿ ಇಳಿಬಿಟ್ಟಿದ್ದ ನೆಲುನಲ್ಲಿ ಬಟ್ಟೇಲಿ ಬಾಯಿ ಕಟ್ಟುಗೊಂಡು ಎಣ್ಣೆ ಇಲ್ದ ಎಣ್ಣೆ ಗಡ್ಗ, ತುಪ್ಪ ಇಲ್ದ ತುಪ್ಪದ ಗಡ್ಗ ಒಂದರ ಮೇಲೊಂದು ತೂಕಡಿಸುತ್ತಿದ್ದವು. ಆ ನೆಲು ಉದ್ದಕ್ಕು ಅರಸಿನದ ಬಟ್ಟೇಲಿ ಬಾಯಿ ಕಟ್ಟಿದ್ದ ಹರಕೆ ಕಾಸುಗಳು ನೇತಾಡುತ್ತಿದ್ದವು. ಅದರ ಕೆಳಗೇನೆ ಒಂದೆರಡು ದೇವುರ ಪೋಟೋ ಮೊಳೆಗೊಡದಿದ್ದು ಆಗಾಗ್ಗೆ ಊದು ಬತ್ತಿ ಸಿಕ್ಸಿದ್ದ ಗುರ್ತು ನಿಂತಿತ್ತು. ಒಲೆಯ ಕೆಳುಗೆ ಮೇಲೆ ಅಕ್ಕಪಕ್ಕ ಆಮಡುಕು ಗೋಡೆಯ ದೊಡ್ಡ ಮೊಳೇಲಿ ನೂಲೊರಾಟೆಯ ಕತ್ತಿಗೆ ಹಗ್ಗ ಬಿಗುದು ನೇಣಾಕಿತ್ತು, ಕೋಣೆಯಿಂದ ಪೋಲೀಸರು ಕಣ್ಣುಮೇಲು ಮಾಡಿಕೊಂಡು ನಡುಮನೆಗೆ ಬಂದರು.

ಇನ್ನು ನಡುಮನೆಯ ಅಟ್ಲು ನೋಡುವುದು ಉಳುದಿತ್ತು. ಎಲ್ಲವೂ ದಪ್ಪದಪ್ಪವಾಗಿದ್ದ ಮೀಸೆ ಹೊಟ್ಟೆ ಕೈಕಾಲು ಇಟ್ಟುಕೊಂಡಿದ್ದ ಪೀಸಿಯೊಬ್ಬ ನಡುಮನೆ ದಾರಂದಕ್ಕೆ ಕಾಲುಕೊಟ್ಟು ಅಟ್ಲುಗೆ ಹತ್ತಿದನು. ಅಲ್ಲಿ ಇಲಿಪಿಕ್ಕ ಇಲ್ಲಣಗು ಹಳೇ ಚಾಪೆಗಳ ನಡುವೆ ಜಾಯಕಾಯ ಪಟ್ಟಿಯೊಂದಿತ್ತಷ್ಟೆ. ಅದ ಕೆಳಕ್ಕೊಗದು ಪೀಸಿಯು ಹೊಟ್ಟ ಕಲುಸ್ತ ಇಳಿದು ಬೊಸ ಬೊಸ ಉಸುರುಬುಡ್ತ ನಿಂತನು. ಜಾಯಕಾಯ ಪೆಟ್ಟೀಲಿ ನಡೆಯದ ಮತ್ತು ಸವಕಲು ಕಾಸುಗಳು ಚೆಲ್ಲಿಕೊಂಡಿದ್ದವು. ದಫೇದಾರಿ ಪೀಸಿಗಳು ಕೈಚೆಲ್ಲಿ ಇನ್ನೊಂದ್ಸಲ ಕಣ್ಲೆ ಜಪ್ತಿಮಾಡಿ ಹೊರಬಂದರು. ಯಾವ ಜಪ್ತಿಗೂ ಸಿಗದ ಗೋಡೆ ಮೇಲಿನ ನೆಲವುಗಳು ಕುಣಿಯುತ್ತಿದ್ದವು.
ದಫೇದಾರಿ ಪೀಸಿಗಳು ಬಂದು ನಿಂತ ಥರದಲ್ಲೆ ಇನ್ಸ್‌ಪೆಕ್ಟರಿಗೆ ಇಲ್ಲ ಅನ್ನಿಸಿತು. ದಫೇದಾರಿ ಕಂಡದ್ದನ್ನೆಲ್ಲ ಕಣ್ಣಿಂದ ತಗ್ದು ಸಾಹೇಬರ ಮುಂದಿಟ್ಟನು. ಅಟ್ಟಲು ಹತ್ತಿಳಿದಿದ್ದಂಥ ಪೀಸಿ ಮೇಲಕೂ ಕೆಳಕೂ ತಿದಿಯೊತ್ತುತ್ತಿದ್ದನು. ಸಾಹೇಬರು ಕಣ್ಣಿಂದಲೇ ರೇವಣ್ಣನನ್ನು ಸೆಳ್ದುಕೊಂಡರು. ರೇವಣ್ಣ ಬಂದು ನಡುಗುತ್ತಿದ್ದ ತೊಡೆಗಳಿಗೆ ಕಯ್ಯ ಜೋಡಿಸಿಕೊಂಡು ಅಟೆನ್‌ಷನ್‌ನಲ್ಲಿ ನಿಂತನು.
‘ಎಲ್ಲಯ್ಯಾ…?’
‘ಮಾಸ್ವಾಮಿ ನಮ್ಮ ತಾಯಾಣ್ಗೂ….’
‘ನಾನು ಖುದ್ದು ನೋಡ್ದೆ…’
‘ಬೇಕೂಫ ಸರಿಯಾಗಿ ಹೇಳು…’
‘ಸರಿಯಾಗೆ ನೋಡ್ದೆ ಮಾಸ್ವಾಮಿ…ಇವ್ನು ಒಂದ್ಮೂಟೆ ಹೊತ್ಕೊಂಡು…’
‘ನೀನೆಲ್ಲಿ ಸಾಯಕ್ ಹೋಗಿದ್ದೆ…?’
‘ನಾನು ಕಣ್ಮುಚ್ದೆ ಕಾಯ್ಕಂಡೇ ಇದ್ದಿ ಬುದ್ದೀ’
‘ಮತ್ತೇನಾಯ್ತು ಅದು…’
‘ಮಾಸ್ವಾಮಿ…’
‘ಮನೆಯವರೆಲ್ಲ ಸೇರಿ ಒಂದಕ್ಕೆರಡು ಅಂತ ತಿಂದ್ರೂನೂವೆ ಮೂಟೆ ಮುಗಿತದೇನಯ್ಯ…’
‘ಮಾಸ್ವಾಮಿ…’
‘ಥೂ…ತೊಲಗು’
ರೇವಣ್ಣನವರ ಕಡ್ಡಿಕೈಕಾಲುಗಳು ಒಂದಕ್ಕೊಂದು ಬಡ್ದುಕೊಂಡವು.

ಅಷ್ಟೊತ್ತಿಗೆ ಹಾಗೂ ಹೀಗೂ ಹತ್ತಾರು ಜನವೂ ಒಳಬಂದು ಗಪ್‌ಚಿಪ್ ನಿಂತಿದ್ದರು. ಸಾಹುಕಾರರಿಗೂ ಏನೂ ತೋಚದಾಗಿ ಹೊಟ್ಟ ಒಳಗ ಬಿಂಕಿ ಇಟ್ಕೊಂಡ ರಾಕ್ಷಸರು ಈ ಜನ ತಿಂದಿರಲೂ ಬಹುದಾ ಅನ್ನಿಸಿತು. ಇನ್ಸ್‌ಪೆಕ್ಟರು ರೂಲು ದೊಣ್ಣೇಲಿ ಕಾಳಣ್ಣನ ಗಲ್ಲ ಎತ್ತಿ ‘ಈ ಸಲ ಬದುಕ್ದೆ ನನ್ ಮಗ್ನೆ. ನೀನು ಎದ್ಗಳಿಗೆ ಚೆನ್ನಾಗಿತ್ತು. ಇನ್ನೊಂದ್ಸಲ ಏನಾರು ಚೂರು ಸುಳುವು ಸಿಕ್ತೊ. ನಿನ್ನ ಚಮ್ಡ ಸುಲ್ದು ಬುಡ್ತೀನಿ’ ಎಂದು ಹೂಂಕರಿಸಿದರು.

ಆ ಹೂಂಕಾರವು ಚಣುಗದ ಬಳಿ ನೆಲ ತುಳಿಯುತ್ತಿದ್ದ ರೇವಣ್ಣನಿಗೆ ಬಂದು ಗುದ್ದಿತು. ರೇವಣ್ಣ, ದೇಹ ಮನಸು ಆತ್ಮಗಳ ಶಕ್ತಿಯನ್ನೆಲ್ಲ ಸಮ್ಮಿಳನಗೊಳಿಸಿ ಒಂದ್ಸಲ ಆ ನೆಲಕ್ಕೆ ಎರಡೂ ಕಾಲುಗಳಿಂದಲೂ ಗುದ್ದಲು ಅವನ ಭಾರಕ್ಕೊ ಅವನ ಬೂಟುಗಳ ಭಾರಕ್ಕೊ ಅಲ್ಲಿ ಶಬುದದೊಡನೆ ನೆಲ ಕುಸುದು ಹಳ್ಳ ಉಂಟಾಯ್ತು ರೇವಣ್ಣ ‘ಈ ನೆಲ ಯಾಕೊ ಅನುಮಾನ ಮಾಸ್ವಾಮಿ…ಸೌಂಡ್ ಮಾಮೂಲಿ ಇಲ್ಲ’ ಎಂದು ಎರಡೂ ಕೈಲೂ ಹಳ್ಳದ ಮನ್ಣು ತೋಡಲು ಅಲ್ಲಿಂದ ಹಟ್ಟೀಯ ನಾಕಾದಿಕ್ಕೂ ಇಲಿಬಿಲಗಳು ಹೊರುಟಿದ್ದವು. ಒಂದೆರಡು ಇಲಿಗಳು ಹೊರುಕ್ಕೆ ನೆಗುದು ಓಡಾಡಿ ಹೋದುವು. ರೇವಣ್ಣನವರು ಒಂದು ಬಿಲದೊಳಕ್ಕೆ ಕಯ್ಯ ಸಲೀಸಾಗಿ ತುರುಕಿ ಹಿಂದಕ್ಕೆಳೆಯಲು ಅವರ ಕೈಲಿ ಹತ್ತಾರು ಕಡ್ಲೆ ಬೀಜಗಳು ಇದ್ದು ದೈವಸಾಕ್ಷಾತ್ಕಾರವಾದಂತಾಗಿ ‘ಸಿಕ್ತು ಮಾಸ್ವಾಮಿ’ ಎಂದು ಕೈಚಾಚಿ ರೇವಣ್ಣನವರು ಕೂಗಿದರು. ಮಾಸ್ವಾಮಿಗಳು ನೋಡಿ ‘ಅವ್ನೆಲ್ಲ ಗಂಟು ಮೂಟೆ ಕಟ್ಟಿ ಹೊತ್ಗೊ…ನಿನ್ನ ಹೆಂಡ್ತಿಮಕ್ಕಳ್ಗೆ ಕೊಡೊವಂತೆ’ ಅಂದರು ರೇವಣ್ಣನವರ ಕೈಗೆ ನಡುಕ ಬಂದು ಕಡ್ಲೆ ಬೀಜಗಳು ನೆಲ ಕಂಡು ಖುಷಿಗೊಂಡು ರೇವಣ್ಣನವರು ಆ ಇಲಿ ಬಿಲಗಳ ನೋಡ್ತ ಕಣ್ಣು ಗುಡ್ಡೇನ ಆ ಬಿಲದೊಳಕ್ಕೆ ನೆಟ್ಟು ಅಲ್ಲಿಂದ ಕಣ್ಣು ಎತ್ತದೆ ನಿಂತರು.

ಅಟ್ಟಲು ಹತ್ತಿಳಿದಿದ್ದ ಆ ದಪ್ಪಪೀಸಿ ಇನ್ನೂ ನಗರುತ್ತಿದ್ದರು. ಇನ್ಸ್‌ಪೆಕ್ಟರು ‘ಸಾವ್ಕಾರ್ರೇ ಕಳ್ತನ ಹಿಡುಯೋದು ನನ್ಮೇಲೆ ಇರ್ಲಿ’ ಅಂದು, ಕಾಳಣ್ಣನ ಕಣ್ಲೆ ತಿಂದು ಹೊರಡಲು ತಿರುಗಿದರು. ಆಗ ಸಾಕವ್ವ ಸುಮ್ಮನಿರಲಾರದೆ ‘ಮಾಸೋಮ್ಯೊ’ ಅಂದಳು. ಇನ್ಸ್‌ಪೆಕ್ಟರು, ಅವರೊಡನೆ ದಫೇದಾರಿ ಪೀಸಿಗಳು ತಿರುಗಿ ನೋಡಿದರು.
‘ಮಾಸೋಮಿ…’
‘ಏನ್ ಮುದ್ಕಿ…’
‘ನನ್ನ ಕೋಳಿವುಂಜ ಮೊನ್ನಜಿನ ಚಂದಗಾಣವಾಗಿ ಹಟ್ಟಿಬುಡ್ತು ನನ್ನೊಡ್ಯ’
‘ಏನಾಯ್ತು’
‘ಇನ್ನೂವಿ ಹಟ್ಟಿ ಮುಟ್ಟಿಲ್ಲ ನನ್ನಪ್ಪ’
ಇನ್ಸ್‌ಪೆಕ್ಟರಿಗೆ ನಗುಬಂತು.
‘ಹುಂಜ ಯಾವ ರೀತಿ ಇತ್ತು ಮುದ್ಕಿ…’
‘ತಾಳಿ ನನ್ನಪ್ಪ…’

ಸಾಕವ್ವ ಎದ್ದು ಕೋಲನ್ನೂ ಮರತು ಕಲ್ಲಲ್ಲೆ ನಡುದು ಪಂಜರ ಎತ್ತಿದಳು. ಕೊಕ್ಕರಿತಿದ್ದ ಹುಂಜ, ಕೋಳಿ, ಮರಿಗಳು ನೆಗೆಯುತ್ತ ನೆಗೆಯುತ, ಹೊರಬಂದ್ವು. ಸಾಕವ್ವ ಒಂದು ದಪ್ಪನೆ ಹುಂಜನ ತೋರಿಸಿ ಅಂದಳು :
‘ಅದೂನು ಇದ್ರ ಜೊತೇದೆ ಬುದ್ದಿ…’
‘ಭೇಷ್ ಚೆನ್ನಾಗದೆ ಮುದ್ಕಿ ಈ ಹುಂಜ ಹಿಡ್ಕೊಡು….ಇದನ್ನ ಅದ ಹುಡುಕ್ಕೊಂಡು ಬರಾಕೆ ಕಳಿಸ್ತೀನಿ’
‘ಅಷ್ಟು ಮಾಡಿ ನನ್ನಪ್ಪ…ನನ್ನ ಹೊಟ್ಟ ಕಟ್ಕೊಂಡು ಅದ ಸಾಕಿದ್ದಿ ನನ್ನೊಡ್ಯ…’
ನಗು ಅನ್ನೋದು ಅಲ್ಲಿಂದ ಎದ್ದು ಬಿದ್ದೂ ನಗಾಡತೊಡಗಿತು.

ಅದು ಸಾಕವ್ವನಿಗೆ ನಿಧಾನವಾಗಿ ಅರುವಾಯ್ತು. ಆ ಮೇಲ ಅವುಳು ಅಯ್ಯೊ ಅಯ್ಯೋ ಅಂದುಕೊಂಡದ್ದು ಯಾರ್‍ಗೂ ಕೇಳಿಸಲಿಲ್ಲ. ಕಾಳಣ್ಣ ಕುಂತವ್ನು ಎದ್ದು ಸಣ್ಣಯ್ಯ ನಿಂತವ್ನು ನಡ್ದು ಆ ಹುಂಜನ ಹಿಡಿಯಲು ತೊಡುಗಲು ಅವುರೊಟ್ಟಿಗೆ ಉಳುದವರೂ ಕೂಡಿಕೊಂಡರು. ಸಾಹುಕಾರರು ಒಂದು ರೂಪಾಯ ನೋಟ ತಗುದು ಮಡುಚಿ ಸಾಕವ್ವನಿಗೆ ‘ತಗೋ ಮುದ್ಕಿ…ಎಲೆ ಅಡುಕೇಗೆ ಅಂದರು. ಸಾಕವ್ವ ಅಯ್ಯೋ…ಬ್ಯಾಡಿ ಸ್ವಾಮಿ, ಅಯ್ಯೋ..ಬ್ಯಾಡಿ ನನ್ನಪ್ಪ’ ಅನ್ನುತ್ತ ಈಸಿಕೊಂಡಳು. ಇತ್ತ ಆ ಹುಂಜನ ಹಿಡಿಯಲು ಒಂದು ಗುಂಪೇ ಆಗಿ, ಆ ಹುಂಜ ನಡುದರೆ ಈ ಗುಂಪೂ ನಡೀತ ಆಹುಂಜ ನೆಗುದರೆ ಈ ಗುಂಪೂ ನೆಗೀತ ಹಟ್ಟಿ ತುಂಬಾ ನೆಗುದಾಡಿ ಕುಣಿದಾಡಿ ಕೊನೆಗೆ ಹುಂಜ ಸಿಕ್ಕಿತು. ಹುಂಜನ ಕಾಲುಗೆ ಹಗ್ಗಬಿದ್ದು ಅದು ಜೀಪಿಗೆ ಬಿತ್ತು. ಆ ಜೀಪು ಧೂಳೆಬ್ಬಿಸುತ್ತ ಬರ್ರೋ ಅಂತು. ಜೀಪು ಬುಟ್ಟೋದ ಧೂಳು ಬೀದಿ ಒಳಗೆ ಆಡುತ್ತಿತ್ತು.
*****

ಕೀಲಿಕರಣ: ಅಧ್ಯಾಯ ೧ ರಿಂದ ೫: ಶಿವಕುಮಾರ್ ಜಿ ವಿ, ಅಧ್ಯಾಯ ೬ ರಿಂದ ೯: ಸೀತಾಶೇಖರ್
ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.