ಕರಿಮಾಯಿ – ೧

ಸಾವಿರದ ಶರಣವ್ವ ಕರಿಮಾಯಿ ತಾಯೆ

ಶಿವಾಪುರ ದೊಡ್ಡ ಊರೇನಲ್ಲ. ಬೆಳಗಾವಿ ಜಿಲ್ಲೆಯ ನಕಾಶದಲ್ಲಿ ಕೂಡ ಆ ಹೆಸರಿನ ಊರು ಸಿಕ್ಕುವುದಿಲ್ಲ. ಆದರೆ ಪ್ರಾಥಮಿಕ ಶಾಲೆಯ ಒಂದು ಹಳೇ ಭೂಗೋಳದಲ್ಲಿ ಬೆಳಗಾವಿಯ ಉತ್ತರಕ್ಕೆ, ಮೂರಿಂಚಿನ ಮೇಲೆ ಆ ಹೆಸರಿನ ಒಂದು ಊರಿದೆ. ಅದನ್ನೊಮ್ಮೆ ಗುಡಸೀಕರ ರೈತಾಪಿ ಜನರಿಗೆ ತೋರಿಸಿ, ಅಭಿಮಾನಪಡಿಸಿದ್ದ. ಹೀಗೆ ನಕಾಶದಲ್ಲಿ ತಮ್ಮ ಊರು ಗುರುತಿಸುವ ವಿದ್ಯೆಯನ್ನು ತಕ್ಷಣ ಗ್ರಹಿಸಿದವ ಗುಡಸೀಕರನ ಶಿಷ್ಯ ಕಳ್ಳ ಸಿದರಾಮ.

ಅದು ಅವನಿಗೆ ಬಹಳ ಸುಲಭವಾದ ವಿದ್ಯೆ. ಬೆಳಗಾವಿ ದೊಡ್ಡ ಶಹರವಾದುದರಿಂದ ಅದಂತೂ ಪ್ರತಿಯೊಂದು ನಕಾಶದಲ್ಲೂ ಇದ್ದೇ ಇರುತ್ತದೆ. ಅವನಿಗೆ ಇಂಗ್ಲೀಷಿನ “ಬಿ” ಅಕ್ಷರ ಗೊತ್ತಾಗಿತ್ತು. “ಬಿ” ಅಕ್ಷರದಿಂದ ಸುರುವಾಗೋದೇ ಬೆಳಗಾವಿ. ಸರಿ, ಸದರಿ ಬೆಳಗಾವಿಯಿಂದ ಮೂರಿಂಚು ಉತ್ತರಕ್ಕೆ ಸರಿದರೆ ಶಿವಾಪುರ ಸಿಕ್ಕಲೇಬೇಕೆಂಬುದು ಅವನ ಖಾತ್ರಿ ತರ್ಕ. ಹೀಗಾಗಿ ಅವನು ತೋರಿಸುವ ಶಿವಾಪುರ ಒಮ್ಮೊಮ್ಮೆ ದಿಲ್ಲಿಯೋ, ಕಲ್ಕತ್ತಾದ ಬಳಿಯ ಹಳ್ಳಿಯೋ, ಅಥವಾ ಹಿಂದೂಸ್ಥಾನದ ಯಾವದೇ ಹಳ್ಳಿಯಾಗಿರುತ್ತಿತ್ತು. ಇದರಲ್ಲಿ ಆತ ಎಷ್ಟು ಪರಿಣಿತನಾಗಿದ್ದನೆಂದರೆ ಒಮ್ಮೊಮ್ಮೆ ಜಗತ್ತಿನ ನಕಾಶದಲ್ಲೂ ಆತ ಶಿವಾಪುರವನ್ನು ಗುರುತಿಸುತ್ತಿದ್ದ! ಏನು ಮಾಡುವುದು? ಶಹರದ ಸಂಬಂಧದಲ್ಲಿ ಗುರುತಿಸಲ್ಪಡುವ ಸಣ್ಣ ಹಳ್ಳಿಯ ಹಾಡೇ ಇಷ್ಟು.

ಊರ ಮಂದಿ ಕಳ್ಳ ಸಿದರಾಮನ ಮಾತನ್ನು ಮೊದಲೇಟಿಗೆ ನಂಬಲಿಲ್ಲ. ನಮ್ಮ ಊರಿನ ಸುತ್ತಮುತ್ತ ಯಾವ್ಯಾವ ಊರಿವೆಯೆಂಬುದು ಅಥವಾ ಯಾವ್ಯಾವ ಊರಿನ ಮಧ್ಯೆ ತಮ್ಮ ಊರಿದೆ ಎನ್ನುವುದು ಅವರಿಗೂ ಗೊತ್ತಿದೆ. ಆದರೆ ಜಂಬೂ ದ್ವೀಪದ ಶ್ರೀರಾಮ ಕ್ಷೇತ್ರದ ಮೇಲನಾಡಿನ ಹಳ್ಳಿಯೇ ಶಿವಾಪುರವೆಂದು ಹೇಳುವ ಹೇಳವರ ಮಾತು ನಕಾಶದ ವಿವರಗಳಲ್ಲಿ ಬರುವುದಿಲ್ಲವಲ್ಲ? ಅಂಡಾಂಡ ಪಿಂಡಾಂಡದಿಂದ ಸುರುವಾಗುವ ಲಗಮವ್ವನ ಹಾಡಿನಲ್ಲೂ ಶಿವಾಪುರವಿದೆ. ಆದರೆ ಅದರಲ್ಲೂ ಜಂಬೂದ್ವೀಪವಿದೆಯಲ್ಲ? ಇವೆಲ್ಲ ಆದಿ ಗುರುತು ಹೇಗೆ ಸುಳ್ಳಾದಾವು? ಎಂದೂ ತಕರಾರು ತೆಗೆದರು. ಕಳ್ಳ ಸಿದರಾಮನೆ ವಿಶೇಷವಿರುವುದೇ ಇಲ್ಲಿ, ಬೇಕಾದರೆ ಇವೆಲ್ಲ ವಿವರಗಳನ್ನು ತಳುಕು ಹಾಕಿ ನಕಾಶದಲ್ಲಿ ಶಿವಾಪುರ ತೋರಿಸಬಲ್ಲ. ಹೀಗಾಗಿ ನಂಬದವರೂ ಅವನ ಮಾತು ನಂಬುವಂತಾಯಿತು.

ಊರನ್ನು ದೂರದಿಂದ ನೋಡಿದರೆ ಕೆರೆ, ಕಾಡುಗಳ ವಿಸ್ತಾರದಲ್ಲಿ, ಅವುಗಳ ದಟ್ಟ ಬಣ್ಣಗಳಲ್ಲಿ ಬಹಳ ಸಣ್ಣದಾಗಿ ಕಂಡೀತು. ರಾತ್ರಿಯಾಗಿದ್ದರೆ ಬರೀ ಒಂದು ಕೊಳ್ಳಿಯಾಗಿ, ಹಗಲಾದರೆ ಒಂದು ಕಪ್ಪು ಕಲೆಯಾಗಿ ಕಂಡೀತು. ಪಡವಲ ದಿಕ್ಕಿಗೆ ಎತ್ತರವಾದ ದಟ್ಟ ಅಡವಿ ಬರುವುದರಿಂದ ಉಳಿದ ಊರುಗಳಿಗಿಂತ ಮುಂಚೆಯೇ ಇಲ್ಲಿ ಹೊತ್ತು ಮುಳುಗುತ್ತದೆ. ಕತ್ತಲೆ ಹೆಚ್ಚು ದಟ್ಟವಾಗಿ ಆವರಿಸುತ್ತದೆ. ಆದ್ದರಿಂದಲೇ ಬೆಳಕಿರುವಾಗಲೇ ಊರು ಸೇರುವುದು ಒಳ್ಳೆಯದು. ಬೆಳಕಿದ್ದಾಗ ತಿಳಿದೀತೆಂದಲ್ಲ, ಅಥವಾ ಕತ್ತಲಾದೊಡನೆ ಊರು ಮಲಗಿರುವುದೆಂದೂ ಅಲ್ಲ. ತೆಂಕ ಹಾಗು ಮೂಡದಿಕ್ಕಿಗೆ ಊರ ಹೊಲ ಮರಡಿಗಳಿವೆ. ಬಡಗಣಕ್ಕೊಂದು ಕೆರೆಯಿದೆ. ಅಡ್ಡ ಹಾದಿ ನೂರಾರಿದ್ದರೂ ಊರನ್ನು ಪ್ರವೇಶಿಸುವ ಮುಖ್ಯ ರಸ್ತೆ ಮೂಡಣ ದಿಕ್ಕಿಗೇ ಇದೆ. ಅದೊಂದು ಬಂಡೀ ಹಾದಿ. ಅಲ್ಲಿಂದಲೇ-ಬೆಳಗಾವಿಗೆ ಕೂಡ- ಹೋಗಬೇಕು, ಬರಬೇಕು. ಆ ರಸ್ತೆ ಮುಗಿದು ಊರು ಸುರುವಾಗುವ ಅಗಸಿ ಬಾಗಿಲ ಬಳಿಯೇ ಕರಿಮಾಯಿಯ ಗುಡಿಯಿದೆ. ಹೊರಗಿನಿಂದ ಬಂದವರು ಊರು ಹೋಗುವ ಮುನ್ನ, ಒಳಗಿದ್ದವರು ಅಗಸಿ ದಾಟುವ ಮುನ್ನ ಈ ದೇವಿಗೆ ಅಡ್ಡಬಿದ್ದೇ ಮುಂದುವರಿಯುವದರಿಂದ ನಮ್ಮ ಪುರವರ್ಣನೆ ಇಲ್ಲಿಂದಲೇ ಆರಂಭವಾಗುತ್ತದೆ.
ಊರು ಪ್ರವೇಶಿಸುವಲ್ಲಿ ರಸ್ತೆಯ ಎಡಗಡೆ ಎರಡು ಕಲ್ಲಿನ ಕಂಬಗಳಿವೆ. ಅದೇ ಅಗಸಿ.
ಮದರಾಸದಿಂದ ಕಲ್ಲ ತರಿಸಿ
ಕಟ್ಟಿಸ್ಯಾರ ಈ ಊರ ಅಗಸಿ ||
ಎಂದು ಲಗಮವ್ವನ ಹಾಡಿನಲ್ಲಿ ಇದರ ವರ್ಣನೆ ಇದೆ. ಅಲ್ಲಿಂದ ನೇರವಾಗಿ ಮುಂದೆ ಕಾಣಿಸುವುದೇ ಕರಿಮಾಯಿ ಕರ್ರೆವ್ವನ ಅರ್ಥಾತ್ ಕರಿಮಾಯಿಯ ಗುಡಿ. ದೊಡ್ಡದಲ್ಲ, ಚೆಂದವೂ ಇಲ್ಲ. ಎದುರಿಗೊಂದು ಕಟ್ಟೆಯ ದೀಪಕಂಬವಿದೆ. ಅದರಾಚೆ ಗುಡಿಯ ಪೌಳಿ. ಅದರ ಮಧ್ಯಭಾಗದಲ್ಲಿ ಗುಡಿಯಿದೆ. ಗುಡಿಯಲ್ಲಿ ಹೆಜ್ಜೇನಿನ ಮೂರು ದೊಡ್ಡ ದೊಡ್ಡ ಹುಟ್ಟುಗಳಿರುವುದೇ ಇದರ ವಿಶೇಷ. ಇದಕ್ಕಂಟಿ ಗರ್ಭಗುಡಿ. ಅದಕ್ಕೊಂದು ಚಿಕ್ಕ ಬಾಗಿಲು. ಬಾಗಿಯೇ ಒಳಕ್ಕೆ ಹೋಗಬೇಕು.
ಹಾಗೆ ಒಳಕ್ಕೆ ಹೋದರೆ ಹೋದೊಡನೆ ಕಣ್ಣಿಗೆ ಕತ್ತಲೆ, ಮೈಗೆ ಅಲ್ಲಿಯ ತಂಪು ತಕ್ಷಣ ಅಂಟುತ್ತದೆ. ಒಮ್ಮೆಲೇ ಕಣ್ಣು ಕಪ್ಪಡಿಗಳ ಕಿರಿಚಾಟದಿಂದ ಒಂದೆರಡು ನಿಮಿಷ ಇಡೀ ಗುಡಿ ಕಿಟಾರನೆ ಕಿರಿಚಿದಂತಾಗಬಹುದು. ಒಳಹೊಕ್ಕವರು ಹೊಸಬರಾದರೆ ಸತ್ತೆನೋ, ಬದುಕಿದೆನೋ ಎಂದು ಹೊರಗದರೂ ಓಡಬಹುದು. ಇಲ್ಲವೇ ಅವರೂ ಕಿರುಚಬಹುದು. ಧೈರ್ಯದಿಂದ ಅಲ್ಲೇ ನಿಂತಿದ್ದರೆ ಸ್ವಲ್ಪ ಸಮಯದ ಬಳಿಕ ನಿಧನಿಧಾನವಾಗಿ, ಮೆಲ್ಲನೇ, ಸದ್ದಿಲ್ಲದೇ ಮೊಗ್ಗು ಹೂವಾದ ಹಾಗೆ ಒಳಗಿನ ವಿವರಗಳು ಬಿಚ್ಚಿಕೊಳ್ಳತೊಡಗುತ್ತದೆ.
ನಾಲಗೆ ಹಿರಿದು ತೇಲುಗಣ್ಣಾಗಿ ಬಿದ್ದ ಕೋಣ, ಅದರ ಕತ್ತಿನಲ್ಲಿ ನೆಟ್ಟ ಕತ್ತಿ. ಸೀರೆಯ ನೆರಿಗೆಯನ್ನೊದ್ದು ಅರೆ ಕಾಣುವ ಪಾದ, ಜರಿಯಂಚಿನ ಸೀರೆಯ ತೆರೆತೆರೆ ನೆರಿಗೆಗಳು, ಎರಡು ಬಲ ಹಸ್ತಗಳು, ಒಂದರಲ್ಲಿ ಖಡ್ಗವಿದೆ, ಇನ್ನೊಂದು ಆಶೀರ್ವದಿಸುತ್ತಿದೆ; ಎಡಗಡೆಗೆ ಒಂದು ಕೈಯಲ್ಲಿ ದೈತ್ಯನ ತಲೆಯಿದೆ. ಇನ್ನೊಂದು ನರ್ತಿಸುವ ಭಂಗಿಯಲ್ಲಿದೆ. ಈ ಹಸ್ತಗಳು ಥೇಟ್ ಮನುಷ್ಯರ ಹಸ್ತಗಳಂತೇ ಸಹಜವಾಗಿರುವುದರಿಂದ ಒಮ್ಮೊಮ್ಮೆ ಹೆದರಿಕೆಯಾಗುವುದೂ ಉಂಟು. ಮೇಲೆ ನೋಡಿದರೆ ಏಕದಂ ಎರಡು ಹೊಳೆಹೊಳೆಯುವ ದೊಡ್ಡದೊಡ್ಡ ಕಣ್ಣುಕಟ್ಟುಗಳು, ಬೆಳ್ಳಿಯವು, ಮುಖ ತುಂಬಿ ಕಿವಿಯ ತನಕ ವ್ಯಾಪಿಸಿವೆ. ಅವಕ್ಕೆ ತಕ್ಕಂತೆ ಎಸಳು ಮೂಗು, ಬಹುಶಃ ಮುಗುಳು ನಗುವ ತುಟಿ, ಹಣೆ, ಗದ್ದ, ಮುಕುಟ-ಎಲ್ಲ ಎಲ್ಲಾ ಕಣ್ಣಿಗೊತ್ತಿ ತುಂಬಿಕೊಳ್ಳುವಂತಿರುವ ಹಡದವ್ವ, ಜಗದಂಬಿ, ಮೂಲೋಕದ ತಾಯಿ, ಕರಿಮಾಯಿ ಕರ್ರೆವ್ವನ ಸಾಕ್ಷಾತ್ ಮೂರ್ತಿ ಈಗಲೋ ಆಗಲೋ ಎದ್ದು ಬರುವಂತಿದೆ.
ಕರಿಮಾಯಿಯ ಪ್ರಭಾವ ಈ ಊರಿನಲ್ಲಿ ಅಷ್ಟಿಷ್ಟಲ್ಲ. ಅವರಿಗೇನು ಪಾಪ ಹಲವು ಹದಿನೆಂಟು ದೇವರಿಲ್ಲ. ಇದ್ದ ಸಣ್ಣ ಪುಟ್ಟ ದೇವರುಗಳೂ ಕೂಡ ಇವಳೊಂದಿಗೆ ಒಂದಿಲ್ಲೊಂದು ಸಂಬಂಧ ಹೇಳಿಕೊಂಡೇ ಬದುಕಬೇಕು. ಜನ ಬೆಳಿಗ್ಗೆ ಏಳುವಾಗ “ತಾಯೀ” ಎಂದು ಏಳುತ್ತಾರೆ. ಮಲಗುವಾಗ “ತಾಯೀ” ಎಂದು ಮಲಗುತ್ತಾರೆ. ಎದ್ದಾಗ ತಾಯೀ, ಬಿದ್ದಾಗ ತಾಯೀ, ಕೂತಾಗ ತಾಯೀ, ಒಳ್ಳೆಯ ಕೆಲಸಕ್ಕೂ ತಾಯೀ, ಕೆಟ್ಟ ಕೆಲಸಕ್ಕೂ-ಅಂದರೆ ಹಾದರ, ಕಳ್ಳತನಗಳಿಗೂ ತಾಯೀ-ಹೀಗೆ ಯಾವುದರ ಸುರುವಿಗೂ, ಮುಗಿವಿಗೂ ಅವಳ ಸೊಲ್ಲು ಬೇಕೇ ಬೇಕು.

ಕರಿಮಾಯಿಯ ಚರಿತ್ರೆ

ಊರ ಚರಿತ್ರೆಯಂತೆಯೇ ಕರಿಮಾಯಿಯ ಚರಿತ್ರೆಯೂ ಅಸ್ಪಸ್ಟವಾಗಿಯೇ ಇದೆ. ಸಿಕ್ಕುವ ಲಗುಮವ್ವನ ಹಾಡು, ದತ್ತಪ್ಪನ ಚಿಂತಾಮಣಿ ಹಾಗೂ ಕರಿಮಾಯಿಯ ಹಾಲೀ ಇರುವ ಆರಾಧನೆ, ಆಚರಣೆಗಳ ವಿವರಗಳಿಂದ ಅವಳ ಚರಿತ್ರೆ ಹೀಗಿರಬಹುದೆಂದು ತಿಳಿಯುತ್ತದೆ:
ಅನಾದಿ ಕಾಲದಲ್ಲಿ ಧರಣಿಯ ಮೇಲೆ, ದೇವ ದಾನವರ “ವಿದ್ಧ” ದಿಂದಾಗಿ ಪಾಪ ಅಧಿಕವಾಯಿತು. ಮಳೆ ಬೀಳದ ಹಾಗೆ, ಬೆಳೆ ಏಳದ ಹಾಗಾಗಿ ಲೋಕದ ಮಂದಿಗೆ ಸಂಕಟವೂ ಜಡೆಮುನಿ ಮುಂತಾದ ಸಾಧುಸತ್ಪುರುಷಸಜ್ಜನ‌ಋಷಿಮುನಿಗಳ ಜಪತಪಕ್ಕೆ ಕಂಟಕವೂ ಉಂಟಾಯಿತು. ಆಗ ಭೂಮಿತಾಯಿ ಶಿವಪಾರ್ವತಿಯರ ಬಳಿ ಹೋಗಿ ಕಾಪಾಡಬೇಕೆಂದು ಸೆರಗೊಡ್ಡಿ ಬೇಡಿದಳು. ಕೂಡಲೇ ಶಿವನು ತನ್ನ ಹಣೆಯ ಬೆವರನ್ನು ಸೀಟಿ ಭೂಮಿಯ ಮೇಲೆ ಚೆಲ್ಲಿದನು. ಆ ಕ್ಷಣವೇ ಅದೊಂದು ಅದ್ಭುತವಾದ ಸ್ತ್ರೀರೂಪ ತಾಳಿತು. ಅವಳೇ ಕರ್ರೆವ್ವ ತಾಯಿ.
ಆಗ ಬಿರುಬೇಸಿಗೆ. ಬಿಸಿಲಿನ ಧಗೆ ತಡೆಯದೆ ಕರ್ರೆವ್ವ ನೀರಡಿಸಿದಳು ನೀರಿಗಾಗಿ ಹುಡುಕುತ್ತಿರುವಾಗ “ಅಯ್ಯೋ, ಕಾಪಾಡ್ರೋ, ಗಂಡಸಾದರ ಶಿವ ಅಂದೇನು, ಹೆಂಗಸಾದರ ಪಾರ್ವತಿ ಅಂದೇನು, ಕಾಪಾಡ್ರೋ” ಎಂಬ ಸ್ವರ ಕೇಳಿಸಿತು. ಕರ್ರೆವ್ವ ಹೋಗಿ ನೋಡಿದರೆ ಒಬ್ಬ ಮುನಿ ದೈತ್ಯರಿಗೆ ಹೆದರಿ ಓಡಿ ಹೋಗುವಾಗ ಕಲ್ಲೆಡವಿ ಆಳವಾದ ಬಾವಿಯಲ್ಲಿ ಬಿದ್ದಿದ್ದ. ಅವನನ್ನು ಹೇಗೆ ಕಾಪಡಬೇಕು? ಕೊನೆಗೆ ಸುತ್ತ ಯಾರೂ ಇಲ್ಲದ್ದನ್ನು ನೋಡಿ, ಉಟ್ಟ ದಟ್ಟಿಯನ್ನೇ ಕಳೆದು ಬಾವಿಯಲ್ಲಿಳಿಬಿಟ್ಟಳು “ಕಣ್ಣುಮುಚ್ಚಿ ದಟ್ಟಿ ಹಿಡಿ . ನಾ ತಗಿ ಅಂಬೋ ತನಕ ಕಣ್ಣು ತಗೀಬೇಡ; ತಗಿದರೆ ಸಿಗಿದೇನೆಂದು” ಹೇಳಿದಳು. ಅವನು ಬಿಟ್ಟ ದಟ್ಟಿಯ ಆ ತುದಿ ಹಿಡಿದ. ಈ ತುದಿಯಿಂದ ಎಳೆದಳು.
ಮೇಲೆ ಬಂದನೋ ಇಲ್ಲವೋ, ಮುನಿಯ ಚಪಲಕ್ಕೇನನ್ನೋಣ-ಕಣ್ಣು ತೆರೆದ. ಎದುರಿಗೆ ಬೆತ್ತಲೆ ಮಾಯೆ! ಚಿತ್ತ ಚಂಚಲವಾಗಿ ಚೆಲ್ಲಿಹೋಯಿತು. ತಕ್ಷಣ ಕರ್ರೆವ್ವ ತನ್ನ ಕಠಾರಿಯಿಂದ ನೆಲದ ಮೇಲೆ ಏಳು ಅಡ್ಡಗೆರೆ ಕೊರೆದು, “ದಾಟಿ ಬಂದರೆ ಮೀಟಿ ಒಗೆದೇನು” ಎಂದಳು. ಜಡೆಮುನಿಗಳು ಹೆದರಿದರೆಂದು ತೋರುತ್ತದೆ; ಸುಮ್ಮನೆ ನಿಂತರು. ಕರ್ರೆವ್ವ ಸೀರೆ ಉಟ್ಟಾದ ಮೇಲೆ ಜಡೆಮುನಿ ಆಕೆ ಕೊರೆದ ಏಳೂ ಗೆರೆಗಳಲ್ಲಿ ತನ್ನ ರಕ್ತ ಸುರಿಸಿದನೆಂದೂ, ಅವು ನೆತ್ತರ ನದಿಯಾಗಿ ಹರಿದವೆಂದೂ ಅಷ್ಟೂ ನದಿ ದಾಟಿ ಬಂದು ಕರ್ರೆವ್ವನನ್ನು ವರಿಸಿದನೆಂದೂ ಅವಳಿಗೆ “ಕರಿಮಾಯಿ” ಎಂದು ಹೆಸರಿಟ್ಟು ಮದುವೆಯಾದನೆಂದೂ ತಿಳಿಯುತ್ತದೆ.
ಇವರು ಬಾಳ್ವೆ ಮಾಡಿದ್ದು ಜಂಬೂ ದ್ವೀಪದ ಶ್ರೀರಾಮ ಕ್ಷೇತ್ರದ ಮೇಲನಾಡಿನ ಶಿವಾಪುರದ ಬಳಿಯ ಅಡವಿಯಲ್ಲಿ! ಈಗ ಈ ದಂಪತಿಗಳಿಗೆ ಇಬ್ಬಗೆಯ ಶತ್ರುಗಳು ಹುಟ್ಟಿಕೊಂಡರು. ಕರ್ರೆವ್ವ ದೈತ್ಯರ ಕುಲದವಳಾಗಿ ದೇವಕುಲದ ಜದೆಮುನಿಯನ್ನು ಮದುವೆಯಾದುದು ತಪ್ಪೆಂದು ದೈತ್ಯರು ಸಾಧಿಸಿದರು. “ಈ ಶೂದ್ರ ಕನ್ಯೆ” ಯನ್ನು ಮದುವೆಯಾಗಿ ಜಡೆಮುನಿ ತಮ್ಮ ‘ಉಚ್ಚಕುಲ’ ವನ್ನು ಕುಲಗೆಡಿಸಿದುದರಿಂದ ಇಬ್ಬರನ್ನೂ ಸಂಹರಿಸಿ ಬಿಡಬೇಕೆಂದು ದೇವತೆಗಳು ಛಲ ಹಿಡಿದರು. ಆಗ ಕರಿಮಾಯಿ ತುಂಬು ಗರ್ಭಿಣಿ.
ಒಂದು ದಿನ ಜಡೆಮುನಿ ತಪಸ್ಸು ಮಾಡುತ್ತಿರಬೇಕಾದರೆ ಕರಿಮಾಯಿ ನೀರಿಗೆ ಹೋಗಿರಬೇಕಾದರೆ, ದೇವತೆಗಳು ಬಂದು ಕುಲಗೆಟ್ಟ ಜಡೆಮುನಿಯನ್ನು ಕೊಂದರು. ಅಂದು ಹುಣ್ಣಿಮೆ. ಕರಿಮಾಯಿ ಆ ದಿನ ವಿಧವೆಯಾದುದರಿಂದ ಆ ದಿನಕ್ಕೆ ರಂಡಿ ಹುಣ್ಣಿಮೆಯೆಂದು ಹೆಸರಾಯಿತು. ದೇವತೆಗಳು ಅಲ್ಲಿಗೂ ತೃಪ್ತರಾಗದೆ, ಜಡೆಮುನಿಯ ಸಂತಾನವನ್ನು ನಾಶಪಡಿಸಬೇಕೆಂದು ಕರಿಮಾಯಿಯ ಗರ್ಭಕ್ಕೆ ಗುರಿಯಿಟ್ಟು ಹೊರಟರು. ಕರಿಮಾಯಿ ತುಂಬಿದ ಗರ್ಭ ಹೊತ್ತುಕೊಂಡು ದೇವತೆಗಳನ್ನು ಎದುರಿಸಲಾರದೆ ಅಡವಿ ಪಾಲಾದಳು. ತ್ರಿಕಾಲ ಜ್ಞಾನಿಗಳಾದ ದೇವತೆಗಳಿಗೆ ಕರಿಮಾಯಿಯಿರುವ ಠಿಕಾಣಿ ಗೊತ್ತಾಯಿತು. ಅವಳಿಗೆ ಅನ್ನ, ನೀರು ಸಿಕ್ಕದ ಹಾಗೆ ಮಾಡಿದರು. ತಾಯಿ ಕಲ್ಲು ಕುದಿಸಿ ತಿಂದಳು. ಮುಳ್ಳು ಬೇಯಿಸಿ ತಿಂದಳು.
ಅಟ್ಟಿಸಿಕೊಂಡು ಬಂದ ದೇವತೆಗಳನ್ನು ನಿವಾರಿಸಿ ಪಾರಾಗಿ ಮಾವಿನ ತೋಪಿನಲ್ಲಿ ಹುದುಗಿಕೊಂಡು ಕೂತಿದ್ದಳು. ಜೋತುಬಿದ್ದ ಹುಳಿಮಾವಿನ ಗೊಂಚಲು ನೋಡಿ, ಬಯಕೆ ಮೂಡಿ ಬಾಯಿ ನೀರೂರಿತು. ಅವು ಕೈಗೆಟುಕುವಂತಿರಲಿಲ್ಲ. ಹೋಗಿ ಕಷ್ಟಪಟ್ಟು ಕಲ್ಲಿನ ಮೇಲೆ ಕಲ್ಲು ಪೇರಿಸಿ, ಅದರ ಮೇಲೆ ಹತ್ತಿ ಇನ್ನೇನು ಮಾವಿನ ಗೊಂಚಲು ಸಿಕ್ಕಿತೆಂಬಾಗ “ಕಾಯಿ ಹರಿದೀಯೇ ಹಾದರಗಿತ್ತಿ” ಎಂಬ ದನಿ ಕೇಳಿಸಿತು. ನೋಡಿದರೆ ಒಂದು ಕಡೆ ದೇವತೆಗಳು ಬಿಲ್ಲು ಬಾಣ ಹಿಡಿದು ತನ್ನ ಗರ್ಭಕ್ಕೆ ಗುರಿಯಿಟ್ಟು ನಿಂತಿದ್ದಾರೆ! ಇನ್ನೊಂದೆಡೆ ಗಡೆಹಿಡಿದು ಏಳೇಳು ಶಿರದ ಈರೇಳು ಭುಜದ ರಾಕ್ಷಸರು ನಿಂತಿದ್ದಾರೆ! ಹಾ ಎನ್ನುವುದರೊಳಗೆ ಸಾವಿರದೊಂದು ಬಾಣಗಳು, ಸಾವಿರದೊಂದು ಗದೆಗಳು ಕರಿಮಾಯಿಯ ಗರ್ಭಕ್ಕೆ ತಾಗಿ, ತಾಯಿ ಕಿಟಾರನೆ ಕಿರಿಚಿಕೊಂಡಳು.
ಕಳಚಿದ ಗರ್ಭವನ್ನು ಉಡಿಯಲ್ಲಿ ಕಟ್ಟಿ ಸೊಂಟಕ್ಕೆ ಬಿಗಿದುಕೊಂಡಳು. ಅವಳ ಕಿರಿಚುವಿಕೆ ಕೇಳಿ ಕೈಲಾಸದ ಶಿವ ನಡುಗಿ ತನ್ನ ನಂದಿಯನ್ನೂ, ತನ್ನ ಹುಲಿಯನ್ನೂ ಇವಳ ಬಳಿ ಓಡಿಸಿದರು. ಕರಿಮಾಯಿ ಹುಲಿಯೇರಿ ದೇವದಾನವರನ್ನು ಅಟ್ಟಿಸಿಕೊಂಡು ಹೊಕ್ಕಲ್ಲಿ ಹೊಕ್ಕು, ಹರಿದಲ್ಲಿ ಹರಿದು ಬೇಟೆಯಾಡಲಾರಂಭಿಸಿದಳು. ಆರಾರು ಗಾವುದಕ್ಕೊಂದು ಹೆಜ್ಜೆಯನ್ನಿಟ್ಟು ದುರುಳರ ಮೇಲೆ “ವಿದ್ಧ” ಹೂಡಿದಳು. ಕಾರೆಂಬೋ ಕತ್ತಲೆನ್ನದೆ, ಬೋರೆಂಬೋ ಮಳೆಗಾಳಿಯೆನ್ನದೆ ‘ಕಟ್ಟಿರೋ ಕಳ್ಳ ಲೌಡಿಮಕ್ಕಳ’ನ್ನೆಂದು ಮೆಟ್ಟಿ ಮೆಟ್ಟಿ ಕೊಂದಳು. ದೇವತೆಗಳು ಹೆದರಿ ದೇವಲೋಕ ಸೇರಿದರು. ದೈತ್ಯರೋ ಮಾಯಾವಿಗಳು. ಅವರ ಒಂದು ಹನಿ ರಕ್ತ ಬಿದ್ದಲ್ಲಿ ಸಾವಿರಾರು ದೈತ್ಯರೆದ್ದರು. ಕರಿಮಾಯಿಗೆ ಏನು ಮಾಡಬೇಕೆಂದು ತೋಚದಾಯ್ತು. ಕೊನೆಗೆ ತನ್ನ ನಾಲಗೆಯನ್ನೇ ಭೂಮಿಯಮೇಲೆ ಚಾಚಿ ದೈತ್ಯರನ್ನು ಸಂಹರಿಸಿದಳು. ರಕ್ತ ಬೀಳಬೀಳುತ್ತಿದ್ದಂತೆ ನೆಕ್ಕಿದಳು. ತಾಯಿಯ ಮಹಿಮೆ, ಬಿದ್ದ ರಕ್ತ ಜೇನುತುಪ್ಪವಾಯಿತು! ಅಶ್ಗ್ಟೂ ದೈತ್ಯರ ಶಿರ ತರಿದು ಶಿವನ ಬಳಿಗೆ ಹೋದಳು. “ಗಂಡನ ಜೀವ, ಮಕ್ಕಳ ಜೀವ ಕೊಡುವಿಯೋ? ನಿನ್ನನ್ನೇ ಮುಕ್ಕಲೋ?” ಎಂದು ಕೇಳಿದಳು. ಶಿವ ಹೆದರಿ ಉಡಿಯಲ್ಲಿಯ ಇಪ್ಪತ್ತೊಂದು ಪಿಂಡಗಳಿಗೆ ಜೀವ ಬರಿಸಿದ, ಅವು ಇಪ್ಪತ್ತೊಂದು ಮಕ್ಕಳಾದವು. ಜಡೆಮುನಿಗೂ ಜೀವ ಬಂತು. ಆ ದಿನ ಕರಿಮಾಯಿ ಮುತ್ತೈದೆಯಾಗಿ ಕುಂಕುಮ ಹಚ್ಚಿಕೊಂಡಳು. ಅದಕ್ಕೆ ಮುತ್ತೈದೆ ಹುಣ್ಣಿಮೆಯೆಂದು ಈಗಲೂ ಹೇಳುತ್ತಾರೆ.
ಕರಿಮಾಯಿ ಮಕ್ಕಳು ಹಾಗೂ ಗಂಡನೊಂದಿಗೆ ತಿರುಗಿ ಭೂಲೋಕಕ್ಕೆ ಬಂದುದೇನೋ ಆಯಿತು. ಆದರೆ ಅವಳಿಗೆ ದುರುಳ ದೇವತೆಗಳ ಭಯ ಇದ್ದೇ ಇತ್ತು. ಆದ್ದರಿಂದ ಮಕ್ಕಳನ್ನು ಸಂಜೆಯ ತನಕ ಆಡಬಿಟ್ಟು ಸೂರ್ಯಾಸ್ತವಾದೊಡನೆ ಅವರನ್ನು ಕವಡೆಗಳಾಗಿ ಪರಿವರ್ತಿಸಿ ಸರ ಮಾಡಿ ಕತ್ತಿನಲ್ಲಿ ಧರಿಸಿಕೊಳ್ಳುತ್ತಿದ್ದಳು. ಅದರ ಗುರುತಿನ ಇಪ್ಪತ್ತೊಂದು ಕವಡೆಗಳ ಸರವೊಂದು ಮೂರ್ತಿಯ ಕತ್ತಿನಲ್ಲಿ ಈಗಲೂ ಇದೆ. ಮುಂದೆ ನುಂಗಿದ ದೈತ್ಯರನ್ನು ಕಾರಿಕೊಂಡಳೆಂದೂ, ಅವರು ಜೇನು ಹುಳುಗಳಾಗಿ ಹೊರಬಂದು ಅವಳ ಗಣಂಗಳಾದರೆಂದೂ ಕಥೆಯಿದೆ. ಗುಡಿಯಲ್ಲಿ ಹೆಜ್ಜೇನಿನ ಹುಟ್ಟುಗಳಂತೂ ಈಗಲೂ ಇವೆ.
ಇಲ್ಲೀಗಿ ಹರ ಹರ ಇಲ್ಲೀಗಿ ಶಿವ ಶಿವ
ಇಲ್ಲೀಗಿ ನಮ ಕತಿ ಸಂಪೂರ್ಣವಾಯ್ತು
ಎಂದು ಲಗುಮವ್ವನ ಹಾಡು ಇಲ್ಲಿಗೆ ಮುಗಿಯುತ್ತದೆ. ಮುಂದಿನ ಕಥಾಭಾಗ ಹೆಳವರು ಹೇಳುವ ಗೌಡನ ವಂಶಾವಳಿಯಲ್ಲಿದೆ.
ಇತ್ತ ಜಂಬೂ ದ್ವೀಪದ ಶ್ರೀರಾಮ ಕ್ಷೇತ್ರದ ಮೇಲನಾಡಿನ ಶಿವಾಪುರದಲ್ಲಿ ಆದಿಗೌಡ ಮಂದಿಮಾರ್ಬಲ ದಂಡುದಳವಾಯಿ ಕೋಟೆಕೊತ್ತಳ ಸಹಿತ ರಾಜ್ಯವಾಳುತ್ತಿದ್ದ. ಅವನ ಬಳಿ ಸಾವಿರದೊಂದು ಹಿಂಡುವ ಆಕಳುಗಳಿದ್ದವು. ತುಂಬಿದ ಭಂಡಾರವಿತ್ತು. ತುಳುಕುವ ತಿಜೋರಿಯಿತ್ತು. ಹೌಂದೆನ್ನುವ ಮಂತ್ರಿ, ಬಾಗುವ ಪ್ರಜೆಗಳಿದ್ದರು. ಏನಿದ್ದರೇನು? ಮಕ್ಕಳ ಫಲಪುತ್ರಸಂತಾನವಿರಲಿಲ್ಲ. ಅಂಗೈಯಲ್ಲಿ ತಲೆಯಿಟ್ಟು ರಾಜರಾಣಿ ಭಾರೀ ದೊಡ್ಡ ದುಃಖ ಮಾಡಿದರು.
ಹೀಂಗಿರಲಾಗಿ ಸಾವಿರದೊಂದು ಆಕಳು ದಿನಾ ನೂರೊಂದು ಗಂಗಾಳ ಹಾಲು ಹಿಂಡುತ್ತಿದ್ದವು. ಒಂದು ದಿನ ನೂರು ಗಂಗಾಳ ಮಾತ್ರ ಹಿಂಡಿದವು. ಯಕೆಂದು ವಿಚಾರಿಸಲಾಗಿ ಸಾವಿರದೊಂದನೆ ಕೆಂದಾಕಳು ಹಿಂಡಲಿಲ್ಲವೆಂದಾಯಿತು. ಅದರ ಮೇಲೆ ನಿಗಾ ಇಟ್ಟ ರಾಜ ಅದರ ಹಿಂದಿನಿಂದಲೇ ಕಾಡಿಗೆ ಹೋದ. ನೋಡಲಾಗಿ ಒಂದು ಹುತ್ತದ ಮೇಲೆ ಹಾಲು ಕರೆಯುತ್ತಿತ್ತು. ಅಗಿಸಿದ. ಒಳಗೆ ಕರಿಮಾಯಿ ಹಾಗೂ ಜಡೆಮುನಿಯ ಕಟ್ಟಿಗೆಯ ಮೂರ್ತಿಗಳಿದ್ದವು. ಅಂದೇ ರಾತ್ರಿ ಕನಸಿನಲ್ಲಿ ಕರಿಮಾಯಿ ಕಾಣಿಸಿ “ನಿಲ್ಲೋದಕ್ಕೊಂದು ನೆಲಿ ಮಾಡು; ನೀ ಮಣ್ಣ ಮುಟ್ಟಿದರ ಚಿನ್ನ ಮಾಡತೀನಿ” ಎಂದಳು. ಈಗಿರುವ ದೇವೀ ಗುಡಿಯನ್ನು ಆಗಲೇ ಕಟ್ಟಿಸಿದ್ದು. ಗುಡಿ ಕಟ್ಟಿಸಿದ ಮೇಲೆ ರಾಜ ಮುಟ್ಟಿದ್ದೆಲ್ಲ ಚಿನ್ನ, ರನ್ನವಾಯಿತು. ಪಾವು ಬೆಳೆಯುವಲ್ಲಿ ಪಲ್ಲ ಬೆಳೆಯಿತು. ಸೇರು ಬೆಳೆಯುವಲ್ಲಿ ಹೇರು ಬೆಳೆಯಿತು. ವರ್ಷ ತುಂಬುವುದರೊಳಗಾಗಿ ರಾಣಿ ಗಂಡು ಹಡೆದಳು. ಆಗಲೇ ರಾಜ ತಾಯಿಗೆ ಚಿನ್ನದ ಮುಖ ಮಾಡಿಸಿದ. ಅದು ಈಗಲೂ ಇದೆ. ಶೀಗೆ ಹುಣಿಮೆಯದಿನ ಈ ಮುಖ ಹಾಕಿ ಸಮೃದ್ಧಿ ಉತ್ಸವ ಆಚರಿಸುವ ಪದ್ಧತಿ ಇದೆ. ಇಂದಿನ ತನಕ ಆ ವಂಶದಲ್ಲಿ ನೂರು ಜನ ಗೌಡರಾದರು. ಅವರ ಪೈಕಿ ಇತ್ತೀಚಿನ ಕೆಲವರ ಹೆಸರುಗಳು ಮಾತ್ರ ಹೆಳವರ ಹಾಡಿನಲ್ಲಿವೆ. ಕೊನೆಯವನೇ ಪರಗೌಡ; ನೂರಾ ಒಂದನೆಯವ.
ಕರುಮಾಯಿಗೆ “ಬಂಗಾರ ಮುಖದವಳು” ಎಂದು ವಿಶೇಷಣ ಬಂದುದೇ ಆದಿಗೌಡ ಮಾಡಿಸಿದ ಈ ಬಂಗಾರದ ಮುಖದಿಂದ. ಇದನ್ನು ಮಾಡಿದವನ ಹೆಸರಾಗಲಿ, ಊರಾಗಲಿ ಗೊತ್ತಾಗಿಲ್ಲ. ದಾಖಲೆಗಳೂ ಇಲ್ಲ. ಮೂರು ಕೊಪ್ಪರಿಗೆ ಚಿನ್ನದ ಕಸ, ಕಸರು ಸೋಸಿ ತೆಗೆದಾಗ ಒಂದು ಕೊಡ ಅಸಲು ಚಿನ್ನ ಸಿಕ್ಕಿತು. ಅದರಿಂದಾದ ಮೂರ್ತಿಯಿದು. ಕೆಲವರ ಪ್ರಕಾರ ತಂತಾನೇ ಉದ್ಭವಿಸಿದ್ದು. ನಂಬಿಕೆಗೆ ತಕ್ಕ ಹಾಗೆ ಆ ಬಂಗಾರದ ಮುಖವೂ ಅಷ್ಟೇ ಸುಂದರವಾಗಿದೆ.

ಬಂಗಾರ ಮುಖದವಳೆ

ಶಿಂಗಾರ ಮೈಯವಳು ಬಂಗಾರ ಮುಖದವಳು
ಬಲಗೈ ಭಾಷೆ ಎಡಗೈ ನಂಬಿಕೆ ಕೊಟ್ಟು ಕಾಪಾಡಲಿ.
ಮೊದಲ ಸೊಲ್ಲಿಗೆ ಕರಿಮಾಯಿಗೆ ಸಾವಿರದೊಂದು ನಮಸ್ಕರಿಸಿ ಹೇಳಬೇಕಾದರೆ
ಮೂರು ಲೋಕಕೆ ಅಧಿಕ
ಕರಿಮಾಯಿ ಕಾರಣಿಕ
ತಿಳಿದೀತು ಹ್ಯಾಂಗ ಮರತೇಕ ||
ಎನ್ನುವ ಲಗುಮವ್ವನ ಹಾಡು ಈ ಬಂಗಾರ ಮುಖ ನೋಡಿದರೆ ಅಕ್ಷರಶಃ ನಿಜವೆನಿಸುತ್ತದೆ.
ಭಯದಿಂದಲೋ, ಕೋಪದಿಂದಲೋ ಅಗಲವಾಗಿ ಕಿವಿಯವರೆಗೆ ತೆರೆದ ಕಣ್ಣುಗಳು, ಉಸಿರಾಡುತ್ತಿದೆ ಎನಿಸುವಂಥ ಎಸಳು ಮೂಗು, ನಕ್ಕು ನಕ್ಕು ಈಗಷ್ಟೇ ಸುಮ್ಮನಾದ, ಇಲ್ಲವೇ ಇನ್ನೇನು ನಗುತ್ತಾಳೆನಿಸುವಂಥ ತುಟಿಗಳು, ಚೂಪುಗದ್ದ, ಮೇಲೆ ಬಹುಶಃ ಎಳೆಬೆವರಿನಿಂದ ಹಣೆಗಂಟಿದ ಸುರುಳಿ ಸುರುಳಿ ಮುಂಗುರುಳು, ಅವುಗಳ ಮೇಲೆ ಹದಿನೆಂಟು ರತ್ನದ ಹರಳುಗಳಿರುವ ಕಿರೀಟ-ಒಮ್ಮೆ ನೋಡಿದರೆ ಸಾಕು ಕಣ್ಣು ತುಂಬುತ್ತದೆ, ಎದೆ ಕೂಡ! ಊರವರಿಗೆ ಇದರ ಬಗ್ಗೆ ಎಷ್ಟು ಮಾಯೆಯೆಂದರೆ-ದಿಟ್ಟಿಸಿ ನೋಡಿದರೆ ಎಲ್ಲಿ ಬಿರಿದೀತೋ ಎನ್ನುವ ಭಾವ. ಅದಕ್ಕೇ ಶೀಗೆ ಹುಣ್ಣಿಮೆ, ರಂಡಿ ಹುಣ್ಣಿಮೆ, ಮುತ್ತೈದೆ ಹುಣ್ಣಿಮೆ- ಈ ಮೂರು ದಿನ ಬಿಟ್ಟರೆ ಉಳಿದ ದಿನಗಳಲ್ಲಿ ಅದನ್ನು ಗೌಡನ ಮನೆಯಲ್ಲೇ ಇಟ್ಟಿರುತ್ತಾರೆ.
ಬಸಿರಿಯರ ಕನಸಿನಲ್ಲಿ ತಾಯಿಯ ಈ ಬಂಗಾರದ ಮುಖ ಮೂಡಿಬಂದರೆ ಗಂಡು ಸಂತಾನ ಖಾತ್ರಿ. ಕೆಲವರ ಕನಸಿನಲ್ಲಿ ಈ ಮುಖ ಮಾತಾಡಿದ್ದೂ ಉಂಟು. ಬಾಗಿ ನಡೆದವರ ಭಾಗ್ಯವಂತೆಯಾಗಿ, ಬೇಡಿದ ವರ ಕೊಟ್ಟದ್ದೂ ಉಂಟು. ಹೆಚ್ಚೇನು ಇದು ಈ ಊರಿಗೆ ಸೊಕ್ಕು, ಅಭಿಮಾನ, ವಿದ್ಯೆ, ಬುದ್ಧಿ, ಭಯ, ಭಕ್ತಿ ಎಲ್ಲಾ ಕೊಟ್ಟದ್ದುಂಟು, ಸಣ್ಣವಳಲ್ಲ ಈ ಬಂಗಾರದ ಮುಖದವಳು.
ಸರಿಕ ದೇವತೆಗಳಾದ ಚಿಂಚಲಿ ಮಾಯವ್ವನಿಗೆ ಹಳಹಳಿ, ಲೋಕಾಪುರದ ದ್ಯಾಮವ್ವನಿಗೆ ಹೊಟ್ಟೆಕಿಚ್ಚು, ಸವದತ್ತಿ ಎಲ್ಲವ್ವನಿಗೆ ಮತ್ಸರಕೊಟ್ಟಳು. ಬಾಗಿ ನಡೆದ ಭಕ್ತರಿಗೆ ತೂಗುತೊಟ್ಟಿಲು ಬೆಳ್ಳಿಬಟ್ಟಲಿನ ಭಾಗ್ಯಕೊಟ್ಟಳು. ಇರುವೆ ಮೊದಲಾಗಿ, ಆನೆ ಕಡೆಯಾಗಿ ಎಂಬತ್ತನಾಲ್ಕು ಲಕ್ಷ ಜೀವರಾಶಿಗಳಿಗೆ ದೊಡ್ಡ ಹೊಟ್ಟೆ ಕೊಟ್ಟಳು. ಹೊಟ್ಟೆಗೆ ಹಸಿವು ಕೊಟ್ಟಳು. ಹಸಿವು ತೀರುವಷ್ಟು ಜೀವನ ಕೊಟ್ಟಳು. ಬೇಲಿಗೆ ಹಸಿರು, ಮಳಲಿಗೆ ನೀರು, ಸೂರ್ಯನಿಗೆ ಬಿಸಿಲು, ಚಂದ್ರನಿಗೆ ಬೆಳ್ದಿಂಗಳು ಕೊಟ್ಟಳು.
ದಿಟ್ಟಿಸಿ ನೋಡಿದವರಿಗೆ ಕುರುಡು, ಬರಡಿಗೆ ಹಯನು, ಬಂಜೆಯರಿಗೆ ಮಕ್ಕಳು, ಮಕ್ಕಳಿಗೆ ಛಲ, ಛಲಕ್ಕೊಂದು ಗುರಿ, ಗುರಿಗೆಂಟು ಸಾಧ್ಯತೆ ಕೊಟ್ಟಳು. ಎಳೆಯರಿಗೆ ಬಿಗಿದ ಸೊಂಟ ಕೊಟ್ಟಳು; ಸೊಂಟದ ತುಂಬ ಸೂಸುವ ಪ್ರಾಯ ಕೊಟ್ಟಳು; ಪ್ರಾಯಕ್ಕೆ ತುಳುಕಾಟ ಕೊಟ್ಟಳು, ತುಳುಕಾಟಕ್ಕೆ ಸ್ವಚ್ಛಂದ, ಹಾದರ ಕೊಟ್ಟಳು. ವಯಸ್ಸಿಗೆ ಬುದ್ಧಿ ಕೊಟ್ಟಳು, ಬುದ್ಧಿಗೆ ತೃಪ್ತಿ ಕೊಟ್ಟಳು, ತೃಪ್ತಿಗೆ ಸಾವು ಕೊಟ್ಟಳು. ಹೆಚ್ಚೇನು? ಯಾರಿಗೇನು ಕೊಡಬೇಕೆಂದು ತಿಳಿಯದೆ, ಕೊಡುವ ಉತ್ಸಾಹದಲ್ಲಿ ಸಮೃದ್ಧಿಯ ಹಡೆದ ತಾಯಿ, ಕೆಲವರಿಗೆ ಕಳ್ಳಬುದ್ಧಿಯನ್ನೂ ಕೊಟ್ಟಳು.
ಇಂಥಾ ಬಂಗಾರದ ತಾಯಿ ಆದಿಗೆ ಆದಿಯ ಹಡೆದವ್ವ, ಕಡೆಯಕಡೆ ಗೊತ್ತಿರದವ್ವ, ಇದಿಮಾಯಿ, ಘೋಡಗೇರಿಯ ಕಂಬಾರ ಬಸವಣ್ಣೆಪ್ಪನ ಮಗ, ಭೂಸನೂರುಮಠದ ಸಂಗಯ್ಯನ ಶಿಷ್ಯ, ಸಾವಳಗಿ ಶಿವಲಿಂಗೇಶವರ ಮಠದ ಸಿದ್ಧರಾಮ ಸ್ವಾಮಿಗಳ ಭಕ್ತ-ಚಂದ್ರಶೇಖರನಿಗೆ ಬರೆಯುವ ಬುದ್ಧಿಕೊಟ್ಟಳು. ಹಾಗೇಯೇ ಓದುಗರಿಗೆ ತೂಗುವ ತೊಟ್ಟಿಲು, ಬೆಳ್ಳಿಬಟ್ಟಲದ ಭಾಗ್ಯ, ಮಕ್ಕಳ, ಫಲಪುತ್ರ ಸಂತಾನದ ಸೌಭಾಗ್ಯ ಕೊಡಲಿ.

ಪುರವರ್ಣನೆ

ಅನಾದಿ ಕಾಲದ ಶಿವಾಪುರದ ವರ್ಣನೆಯಲ್ಲಿ ಅತಿಶಯೋಕ್ತಿಯೇ ಇದ್ದೀತು. ಹಾಡುಗಳಲ್ಲಿ
ಅಗಲಾರು ಗಾವುದ
ನಿಡಿದೇಳು ಗಾವುದ
ಸುತ್ತಲು ತಿರುಗಿದರೆ
ಹನ್ನೆರಡು ಗಾವುದ ||
ಎಂದು ಇದರ ವಿಸ್ತಾರವನ್ನು ವರ್ಣಿಸಲಾಗಿದೆ. ಅಲ್ಲದೆ
“ಕೆತ್ತುಗಲ್ಲಿನ ಕೋಟೆ ಮುತ್ತೀನ ತೋರಣ |
ಕೊತ್ತಳದ ವಿಸ್ತಾರ ಹೆಂಗ್ಹೇಳಲಿ |”
ಎಂದೂ ಆದಿ ಗೌಡನ ಕೋಟೆಕೊತ್ತಳದ ವರ್ಣನೆ ಇದೆ. ಅಲ್ಲದೆ ಊರ ಮಧ್ಯದಲ್ಲಿ ಬಾಳೆ, ಬಾಳೆಗಳಲ್ಲಿ ರಸಬಾಳೆ ಗಿಡ ನೂರು ಸಾಲಾಗಿ ರಂಜಿಸುವ ಸಾವಿರದ ಹೂದೋಟಗಳಿದ್ದುವಂತೆ! ಊರಿನ ಈಗಿನ ಸ್ವರೂಪ, ವಿಸ್ತಾರ ಗಮನಿಸಿದರೆ ಮೇಲಿನ ವರ್ಣನೆ ಅತಿಯಾಯಿತೆಂದು ಅನಿಸುತ್ತದೆ. ಅಲ್ಲದೇ ಅದರಲ್ಲಿರುವ ಕೋಟೆಕೊತ್ತಳಗಳಾಗಲಿ, ಹೂದೋಟಗಳಾಗಲಿ ಒಂದೂ ಇಲ್ಲ. ಅವುಗಳ ಗುರುತು ಕೂಡ ಇಲ್ಲ.
ಈಗಿದ್ದಂತೆ ಊರು ಚಿಕ್ಕದೇ. ಗ್ರಾಮ ಪಂಚಾಯತಿಯಾಗಿ ಈಗೀಗ ಎರಡು ವರ್ಷಗಳಾದುವಷ್ಟೇ. ಕೆಲವು ಹಾಡುಗಳಲ್ಲಿ “ಮೂರು ಮನಿ ಹಳ್ಯಾಗ ಊರ ದೇವತೆ ಎನಿಸಿ | ಕೋಣ ಕುರಿಗಳ ಕೊಯ್ಸಿ ಒಗಸ್ಯಾಡಿ ಬಿಟ್ಟಿ |” ಎಂದು ಕರಿಮಾಯಿಯ ವರ್ಣನೆ ಇರುವುದರಿಂದ ಮೊದಲು ಮೂರು ಮನೆಯಿದ್ದ ಊರು ಬೆಳೆದು ಪರಗೌಡನ ಆಳಿಕೆಯಲ್ಲಿ ಗ್ರಾಮ ಪಂಚಾಯತಿ ಆಗುವಷ್ಟು ದೊಡ್ಡದಾಗಿ ಬೆಳೆದಿದೆ ಎಂದು ತಿಳಿದರೆ ಸಾಕು.
ಗುಡಿ ಪೂರ್ವಾಭಿಮುಖವಾಗಿದ್ದು ಕರಿಮಾಯಿಯ ಬೆನ್ನ ಹಿಂದೆ ಊರು ಹಬ್ಬಿದೆ. ಹೀಗಾಗಿ ಊರು ತಾಯಿಯ ಬೆನ್ನಿಗೆ ಬಿದ್ದಹಾಗೆ, ಅವಳ ಬೆನ್ನಿನ ಆಶ್ರಯದಲ್ಲೇ ಬೆಳೆದ ಹಾಗೆ ಕಾಣುತ್ತದೆ. ಗುಡಿಯ ಹಿಂದಿನಿಂದ ಊರಿನ ಒಂದೇ ಒಂದು ಪ್ರಮುಖ ರಸ್ತೆ ಪಶ್ಚಿಮಾಭಿಮುಖವಾಗಿ ಸಾಗಿ ಊರ ಚಾವಡಿಗೆ ಕೊನೆಗೊಳ್ಳುತ್ತದೆ. ಆ ಮುಖ್ಯ ರಸ್ತೆಗಂಟಿ ಸಣ್ಣ ಸಣ್ಣ ಸಂದಿಗೊಂದಿಗಳಿವೆ.
ಅಂಗವಂತರ ಬೀದಿ !
ಲಿಂಗವಂತರ ಬೀದಿ !
ಜಂಗಮರ ಬೀದಿಗಳು ನೂರು ಒಪ್ಯಾವು
ಎಂದು ಊರಿನ ವರ್ಣನೆಯೇನೋ ಇದೆ. ಆದರೆ ಹೊಲಗೇರಿಯನ್ನು ಬಿಟ್ಟರೆ ಉಳಿದಂತೆ ಎಲ್ಲಾ ಜಾತಿಯವರು ಬೇಕಬೇಕಾದಲ್ಲಿ ಮನೆಮಾಡಿಕೊಂಡಿದ್ದಾರೆ. ಚಾವಡಿಯ ಎಡಕ್ಕೆ ಸುಳಿಯುವ ಸಂದಿಯ ಅಂಚಿನಲ್ಲಿ ಗೌಡನ ಮನೆಯಿದೆ. ದೊಡ್ಡ ಮನೆಯೇ, ಹಳೆಯದು. ಅಟ್ಟವೂ ಇದೆ. ಚಾವಡಿಯ ಬಲಸಂದಿಯಲ್ಲಿ ದತ್ತಪ್ಪನ ಮನೆ, ಸ್ವಲ್ಪ ಪ್ರತ್ಯೇಕವಾಗಿದೆ. ಊರಿಗಿರುವ ಏಕಮೇವ ಬ್ರಾಹ್ಮಣರ ಮನೆ ಅದು. ಅಲ್ಲಿಂದ ಇಪ್ಪತ್ತು ಹೆಜ್ಜೆ ಮುಂದೆ ಹೋದರೆ ಗುಡಸೀಕರನ ಅಂದರೆ ನಮ್ಮ ಕಥಾನಾಯಕನ ಮನೆಯಿದೆ. ಊರಲ್ಲಿ ಸ್ವಲ್ಪ ಅಧುನಿಕವೆನಿಸಿಕೊಳ್ಳಬಹುದಾದ, ಖರ್ಚುಮಾಡಿ ಕಟ್ಟಿಸಿದ, ಶ್ರೀಮಂತರದೆನ್ನಬಹುದಾದ ಮನೆ ಇದೊಂದೇ.
ಇಲ್ಲಿಗೆ ಪುರವರ್ಣನೆ ನಿಲ್ಲಿಸಿ ಲಗುಮವ್ವನ ಹಾಡಿನ ಚರಣಗಳಿಂದ ನಮ್ಮ ಕಥೆ ಸುರು ಮಾಡೋಣ:-
ಅಲ್ಲೀಗಲ್ಲಿಗೆ ಕಥೆ ಮಲ್ಲೀಗೆ ವಾಸನೆಯು |
ಬಲ್ಲಂಥ ಜಾಣರಿಗೆ ಮಧುರವಣ್ಣಾ |
ಮುಂದೀನ ಕಥೆಯ ಅದರಂದಽವ ಹೇಳುವೆನು |
ಕರಿಮಾಯಿ ನಮಗ ನೀ ವರವ ಕೊಡಮ್ಮಾ ||

ನೆನಪುಗಳು

ಶಿವಾಪುರದ ಪರಗೌಡನಿಗೀಗ ಅರವತ್ತು ಅರವತ್ತೈದು ವಯಸ್ಸು. ಅದು ಹೆಚ್ಚಲ್ಲ. ಅವನ ಆಕೃತಿ ನೋಡಿದರೆ, ಅಮಲೇರಿದಂತೆ ಸದಾ ಕೆಂಪಡರಿದ, ಆದರೆ ನಗುವ ಕಣ್ಣು, ನೇರ ಮೂಗು, ಎರಡೂ ಅಂಚಿನಲ್ಲಿ ತಗ್ಗುತೋಡಿ ಕೊನೆಗೊಳ್ಳುವ, ಗೆರೆಯಲ್ಲಿ ಬರೆದಂಥ ತುಟಿ, ಮನಸ್ವೀ ಬೆಳೆದ ಮೀಸೆ, ತುಂಬುಗೆನ್ನೆಯ ದುಂಡುಮುಖ, ದಾಡಿ ಬೋಳಿಸುತ್ತಿದ್ದುದೇ ಕಡಿಮೆ. ತಲೆಗೆ ರುಂಬಾಲಿದ್ದರೆ ಇತ್ತು. ಇಲ್ಲದಿದ್ದರೆ ಬಗಲಲ್ಲಿರುತ್ತಿತ್ತು. ಕಿವಿಯಲ್ಲಿ ಬಂಗಾರದ ವಾಲೆ, ಬಲಗೈ ಬೆರಳಿಗೆ ನಾಲ್ಕುಂಗುರ. ಆರಡಿ ಎತ್ತರದ ಆಜಾನುಬಾಹು ಆಕೃತಿಯನ್ನು ಒಮ್ಮೆ ನೋಡಿದವರು ಅವನನ್ನಾಗಲೀ, ಅವನ ಹೆಸರನ್ನಾಗಲೀ ಮರೆಯುವದೇ ಅಸಾಧ್ಯ. ಇಷ್ಟು ವಯಸ್ಸಾದರೂ ದೇಹದ ಒಂದು ಭಾಗದಲ್ಲಿಯೂ ಚರ್ಮ ಜೋತು ಬಿದ್ದಿರಲಿಲ್ಲ; ಒಂದು ನೆರಿಗೆ ಮೂಡಿರಲಿಲ್ಲ.
ನಕ್ಕಾಗಂತೂ ಗೌಡನನ್ನು ನೋಡುವದೇ ಚೆಂದ. ಗೌರವರ್ಣದ ಆ ಮುಖದಲ್ಲಿ ಅಚ್ಚ ಬಿಳಿಯ ದಾಳಿಂಬರದ ಬೀಜದಂಥ ಹಲ್ಲಿನ ಸಾಲು. ಬಹಳ ರಮಣೀಯವಾಗಿರುತ್ತಿತ್ತು. ಬೇರೆಯವರಿಗೆ ಕೊಡ್ಲಿ ಕುಡಗೋಲು ಅಸ್ತ್ರಗಳಾದರೆ ಗೌಡನಿಗೆ ಅವನ ನಗೆಯೇ ಅಸ್ತ್ರ. ಆ ನಗೆಯಿಂದ ಅವ ಬೇಕಾದ ಶತ್ರುಗಳನ್ನು ಹಾದಿಗೆ ತಂದಿದ್ದ. ಅವನ ಹತ್ತಿರ ಜಗಳವಾಡ ಬಂದ ಕೊಳವಿಯ ಮುದುಕಪ್ಪ ಗೌಡ ಅವನ ನಗೆಗೆ ಮಾರುಹೋಗಿ ಗೌಡ ಹೇಳಿದಂತೆ ಕೇಳಿಕೊಂಡು ತಿರುಗಿ ಹೋದನಂತೆ. ‘ಜಗಳ ಮಾಡದಽ ಹಾಂಗಽ ಯಾಕ ಬಂದ್ಯೋ?’ ಎಂದು ಊರವರು ಕೇಳಿದರೆ “ಏನ ಮಾಡ್ಲೋ? ನಕ್ಕಬಿಟ್ಟ” ಎಂದು ಹೇಳಿದನಂತೆ. ಅವಕಾಶ ಸಿಕ್ಕಾಗ ಯಾವ ಹೆಂಗಸೂ ಅವನನ್ನೊಮ್ಮೆ ಕದ್ದು ನೋಡದಿರುವುದು ಸಾಧ್ಯವಿಲ್ಲ. ಬಸೆಟ್ಟಿಯ ಹೆಂಡತಿ, ಒಮ್ಮೆ ರಾತ್ರಿ ಗೌಡನ ಹೆಸರಿನಲ್ಲಿ ಅದೇನೋ ಕನವರಿಸುತ್ತಿದ್ದಳಂತೆ. ಬಸೆಟ್ಟಿಗೆ ಎಚ್ಚರವಿತ್ತು. ಎದ್ದು ಕೂತು “ಆ ಗೌಡನ್ನೋಡಿದರ ನಮ್ಮಂಥ ಗಂಡಸರಿಗೇ ಹೆಂಗೆಂಗೋ ಆಗತೈತಿ; ಇನ್ನು ಇಂಥವಕ್ಕೇನು” ಎಂದುಕೊಂಡು ಮಲಗಿದನಂತೆ.
ಇದಕ್ಕೆ ತಕ್ಕ ಹಾಗೆ ಗೌಡ ರಸಿಕ ಕೂಡ. ಹಾಗಂತ ಹದ್ದು ಮೀರಿದವನಲ್ಲ; ಕುಡಿತ ಒಂದು ಬಿಟ್ಟರೆ. ಒಂದಲ್ಲ, ಎರಡಲ್ಲ ಬಾಸಿಂಗಬಲದ ಮದುವೆಗಳೇ ನಾಲ್ಕಾಗಿದ್ದವು. ಮೊದಲಿನ ಮೂವರು ಹೆರಿಗೆಯಲ್ಲೇ ಸತ್ತರು, ಊರವರ ನೆನಪಿನಲ್ಲೂ ನಮ್ಮ ಕಥೆಯಲ್ಲೂ ಹೆಸರು ಸಹ ಉಳಿಸಿಕೊಳ್ಳದೆ. ನಾಲ್ಕನೆಯವಳು ನಿಜಗುಣೆವ್ವ. ಕೊಳವಿಯ ಮುದುಕಪ್ಪಗೌಡನ ತಂಗಿ. ಆದರೆ ನಿಜಗುಣೆವ್ವನೂ ಸತ್ತಳು…. ಅದು ಹೇಗೆ:
ಮದುವೆಯಾಗಿ ಕೆಲ ದಿನಗಳಾದ ಮೇಲೆ ಆಕೆ ಗಂಡು ಹೆತ್ತಳು ನಿಜ; ಆದರೆ ಕೂಸು ಸತ್ತು ಬಾಣಂತಿ ಬದುಕಿದಳು. ಗೌಡನಿಗೆ ಆಗ ಹೊಳೆದುಬಿಟ್ಟಿತು; ಇದ್ದಷ್ಟು ದಿನ ಮೊಳಕೈವರೆಗೆ ಸೋರುವಂತೆ ಸುಖವುಂಡು ಸತ್ತರಾಯಿತು, ಎಂದು. ಹೀಗೆಂದು ದುಂದು ದುಂದಾಗಿ ಬದುಕತೊಡಗಿದ. ಆ ಅವಧಿಯ ಅವನ ರಸಿಕತನದ ಕಥೆಗಳೇ ನೂರೆಂಟಿವೆ. ಒಂದೆರಡನ್ನು ಸ್ವಥಾ ಕಗಮವ್ವ ಕವಿಮಾಡಿ ಹಾಡಿದ್ದಾಳೆ. ಗೌಡನೇನೋ ಗಂಡಸು, ಬಿಚ್ಚಿಬಿಟ್ಟ ಕುದುರೆಯ ಹಾಗೆ ಇರಬಲ್ಲ; ನಿಜಗುಣೆವ್ವ? ತನ್ನಿಂದ ಈ ಮನೆತನದ ದೀಪ ಆರುವಂತಾಯಿತಲ್ಲಾ ಎಂದು ಒಳಗೊಳಗೇ ಹಣ್ಣಾದಳು, ಒಣಗಿ ಉತ್ತತ್ತಿಯಾದಳು. ಗಂಡುಹೆಂಡಿರ ಬುದ್ಧಿ ಓಡದಿದ್ದರೇನಾಯಿತು? ಕುಲಕಣ್ಣಿ ದತ್ತಪ್ಪನ ಚಿಂತಾಮಣಿಬುದ್ಧಿ ಸುಮ್ಮನಿರುವದೇ? “ತಾಯವರಽ” ಎಂದು ನಿಜಗುಣೆವ್ವನ ಬಳಿ ಬಂದ. ಲೋಕಾಭಿರಾಮವಾಗಿ ಅದು ಇದು ಮಾತಾಡಿದ. ಪುರಾಣವಾಡಿದ, ದೃಷ್ಟಾಂತ ಹೇಳಿದ. ದತ್ತಕದ ಮಾತೆತ್ತಿದ ‘ಹ್ಯಾಂಗೂ ಬ್ಯಾಡರ ಶಿವಿಗೆ ಗೌಡನಿಂದ ಹುಟ್ಟಿದ ಮಗನಿದ್ದಾನಲ್ಲಾ ಅವನ್ನಽ ಯಾಕ ದತ್ತಕ ತೊಗೋಬಾರದು?’ ಎಂದೂ ಹೇಳಿಬಿಟ್ಟ.
ಶಿವಿಯ ಮಗ ಶಿವನಿಂಗ ಗೌಡನಿಗೇ ಹುಟ್ಟಿದವನೆಂಬ ಗುಲ್ಲು ಗುಟ್ಟೀನದಲ್ಲ. ಗೌಡನಿಗಾಗಿ ಶಿವಿ ಮಾಡಿಕೊಂಡ ಗಂಡನನ್ನೇ ಬಿಟ್ಟು ತೌರುಮನೆಯಲ್ಲೆ ಉಳಿದಿದ್ದಳು. ನಿಜಗುಣೆವ್ವನೇ ಹಟಹಿಡಿದು ಜಗಳವಾಡಿ ಶಿವಿ ಗೌಡನ ತೋಟದ ಕಡೆ ಹೋಗದ ಹಾಗೆ ಬಂದೋಬಸ್ತ ಮಾಡಿದ್ದಳು. ಮೊದಲೇಟಿಗೇ ದತ್ತಪ್ಪನ ಮಾತನ್ನು ಗೌಡತಿ ಒಪ್ಪಲಿಲ್ಲ. ದತ್ತಪ್ಪ ಬಿಡಲಿಲ್ಲ, ಒಂದೆರಡು ದಿನ ಕಳೆದು ಪೂಜಾರಿಯ ಬಾಯಿಯಿಂದಲೂ ಹೇಳಿಸಿಬಿಟ್ಟ. ಆ ಪೂಜಾರಿಗೆ ಯಾವಾಗ ದೇವಿ ಮೈ ತುಂಬುತ್ತದೆ ಯಾವಾಗಿಲ್ಲ ಎಂದು ಹೇಳುವದೇ ಕಷ್ಟ. ತಾನು ಆಡುವದೇನು, ದೇವಿ ನುಡಿಯುವದೇನೆಂದು ಅವನಿಗೂ ತಿಳಿಯದು. ಆಯಿತು, ಕರಿಮಾಯಿಯ ಅಪ್ಪಣೆಯಾಯಿತೆಂದು ಗೌಡ್ತಿ ಒಪ್ಪಿದಳು. ದತ್ತಕವೂ ಆಗಿಬಿಟ್ಟಿತು.
ಶಿವನಿಂಗ ಗೌಡನಿಗೆ ತಕ್ಕ ಮಗ. ಮನೆತನದ ಗೌರವ, ಹಕ್ಕು ಧಿಮಾಕುಗಳಿಗೆ ಯಾವಂದದಿಂದಲೂ ಕುಂದುಬರುವ ಹಾಗೆ ನಡೆದುಕೊಳ್ಳಲಿಲ್ಲ, ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತ ಹೆಚ್ಚಾಗಿಯೇ ಗೌಡ್ತಿಯನ್ನು ನೋಡಿಕೊಂಡ. ಶಿವಿಗೆ ತೋಟದ ಗುಡಿಸಲಿನಲ್ಲಿಯೇ ವಾಸಕ್ಕೆ ವ್ಯವಸ್ಥೆ ಮಾಡಿದರು. ಗೌಡ್ತಿ ಶಿವನಿಂಗನ ತೊಡೆಯ ಮೇಲೆ ತಲೆಯಿಟ್ಟು, ‘ಗೌಡನನ್ನು ಬರೋಬರಿ ನೋಡಿಕೋ ಮಗಾ’ ಎಂದು ಹೇಳಿ ಪ್ರಾಣ ಬಿಟ್ಟಳು. ಇದನ್ನು ಜನ ಮೆಚ್ಚಿಕೊಂಡರು.
ಗೌಡ ಹರೆಯದಲ್ಲಿ ಮಾಡಿದ ಕಾರುಬಾರನ್ನು ಎದೆಗೊಟ್ಟು ಒಪ್ಪಿಕೊಂಡನಲ್ಲ; ಕೊನೆಗೆ ಶಿವನಿಂಗನನ್ನು ಮಗನಾಗಿ ತಕ್ಕೊಂಡನಲ್ಲ! ಶಿವನಿಂಗ ಜಾತಿಯಲ್ಲಿ ಬಹಳ ಕಮ್ಮಿ, ತಾಯಿಯ ಕಡೆಯಿಂದ. ಆದರೇನು, ಗೌಡನ ಬೀಜ ತಾನೆ? ಗೌಡ್ತಿಯೂ ಅಷ್ಟೇ. ಮನಸ್ಸು ಮಾಡಿದ್ದರೆ ಅವಳ ಬಳಗದ ಬಳ್ಳಿಯೇನು ಸಣ್ಣದಲ್ಲ; ಅಣ್ಣನ ಮಗ, ತಮ್ಮನ ಮಗ, ಚಿಕ್ಕಪ್ಪನ ಮಗ, ತಂಗಿಯ ಮಗ ಹೀಗೆ ಎಷ್ಟೆಲ್ಲ ಕರುಳಿನ ಹಂದರವಿದ್ದರೂ ಅವರನ್ನೆಲ್ಲ ಬಿಟ್ಟು ಶಿವನಿಂಗನನ್ನೇ ದತ್ತು ತೆಗೆದುಕೊಂಡಳಲ್ಲ-ಇದನ್ನು ಜನ ಮೆಚ್ಚಿದರು.
ನಿಜಗುಣೆವ್ವ ಸತ್ತ ಮೇಲೆ ಗೌಡ ನೆನಪುಗಳಿಗೆ ಹೆದರಿ ಊರಿನ ಮನೆಯಲ್ಲಿ ಮಲಗುವುದನ್ನೇ ಬಿಟ್ಟು ತೋಟದ ಗುಡಿಸಲಲ್ಲೇ ಶಿವಿಯೊಂದಿಗೆ, ಈಗ ಶಿವಸಾನಿಯೊಂದಿಗೆ ಇರತೊಡಗಿದ. ಊರ ಮನೆಯಲ್ಲಿ ಶಿವನಿಂಗ ನಿಜಗುಣೆವ್ವನ ತಾಯಿಯೊಂದಿಗೆ ಇರುತ್ತಿದ್ದ.

ದತ್ತಾತ್ರೇಯನಾಮಾ

ಇಷ್ಟೆಲ್ಲ ಹೇಳಿ ದತ್ತಪ್ಪನ ಬಗ್ಗೆ ಮಾತಾಡದಿದ್ದರೆ ಗೌಡನ ಚರಿತ್ರೆಯೇ ಅಪೂರ್ಣವೆನಿಸಬಹುದು. ಗೌಡ, ಕುಲಕರ್ಣಿ ಎಂಬುದರಿಂದಲ್ಲ. ಲೋಕದ ಯಾವದೇ ಅಣ್ಣತಮ್ಮಂದಿರ ಜೋಡಿಗಿಂತ ಇವರಿಬ್ಬರ ಸಂಬಂಧ ಹೆಚ್ಚು ಆಳವಾಗಿತ್ತು. ಲಗುಮವ್ವನ ಕಥೆಗಳ ‘ರಾಜನ ಮಗ, ಮಂತ್ರಿ ಮಗ’ನಂತೆ ಇಬ್ಬರೂ ಕೂಡಿಯೇ ಬರೆದರು, ಆಡಿದರು, ಸಾಹಸ ಮಾಡಿದರು, ವಯಸ್ಸಾದ ಮೇಲೆ ಊರುಗಾರಿಕೆಯ ಜವಾಬ್ದಾರಿ ಹೊತ್ತು ನಿಭಾಯಿಸಿದರು.
ನೂರು ಜನ ಗೌಡರ ಆಳ್ವಿಕೆಯಲ್ಲಿಯೇ ಯಾವಾಗಲೋ ದತ್ತಪ್ಪನ ಪೂರ್ವಿಕರು ಕರಿಮಾಯಿಯ ಪೂಜೆ ಮಾಡೋದಕ್ಕೆ ಬಂದು ಶಿವಾಪುರದ ಒಕ್ಕಲಾದರೆಂದೂ ದತ್ತಪ್ಪನ ಮುತ್ತಜ್ಜನ ಮಡಿ, ಮೈಲಿಗೆಯನ್ನು ಸಹಿಸದ ಕರಿಮಾಯಿ ಪೂಜಾರಿಕೆಯನ್ನು ಮತ್ತೆ ಶೂದ್ರರಿಗೆ ಕೊಟ್ಟಳೆಂದೂ ಒಂದು ಹಾಡಿದೆ. “ಬ್ರಾಮರಿಂದಲಿ ಪೂಜೆ ಸುದ್ದಾಗೋದಿಲ್ಲೆಂದು! ನಿನ್ನ ಪೂಜಾರಿಕಿ ಸೂದ್ರರಿಗಿ ಕೊಟ್ಟಿ” ಎಂದು. ಆದರೆ ದತ್ತಪ್ಪ ಇದನ್ನೊಪ್ಪುವುದಿಲ್ಲ. ಸಾಮಾನ್ಯವಾಗಿ ಶೂದ್ರ ದೇವರುಗಳೆಲ್ಲ ಬ್ರಾಹ್ಮಣ ಪೂಜಾರಿಯನ್ನು ಬೇಡಿದರೆ ಕರಿಮಾಯಿ ಶೂದ್ರರನ್ನೇ ಕೇಳುವದೆಂದರೇನು? “ಹಾಂಗಲ್ಲ ತಗಿ. ಕುಲಕಣ್ಣಿಕೆ ಮಾಡಾಕಂತಽ ನಮ್ಮ ಪೂರ್ವಿಕರು ಇಲ್ಲಿಗಿ ಬಂದರು. ಹಾಗಂತ ಚಿಂತಾಮಣಿ ಹೇಳೇತಿ” ಎಂದು ಇವನ ಹೇಳಿಕೆ. ಕುಲಕರ್ಣಿಕೆಯ ಜೊತೆಗೆ ಹೊತ್ತಿಗೆ ಹೇಳುವದು, ವೈದ್ಯ ಮಾಡುವದು ಇವು ಆ ಮನೆತನಕ್ಕೆ ಪರಂಪರೆಯಿಂದ ಬಂದಿದೆ.
ಆ ಮನೆತನದ ವಿದ್ಯೆ, ಬುದ್ಧಿ, ವೈದ್ಯ ಇವೆಲ್ಲವನ್ನೂ ಒಳಗೊಂಡ ಒಂದೇ ಒಂದು ಪುಸ್ತಕ ಆ ಮನೆತನದಲ್ಲಿದೆ. ಅದೇ “….ಚಿಂತಾಮಣಿ.” ಅದು ಯಾವುದರ ಚಿಂತಾಮಣಿಯೆಂದು ಅವನಿಗೂ ತಿಳಿಯದು. ಯಾಕೆಂದರೆ ಚಿಂತಾಮಣಿಯ ಹಿಂದಿನ ಶಬ್ಧ ಹರಿದುಹೋಗಿತ್ತು. ಹೀಗಾಗಿ ಚಿಂತಾಮಣಿಯೆಂದೇ ಊರಲ್ಲಿ ಅದರ ಖ್ಯಾತಿಯಿತ್ತು. ಗೌಡ ಆಗಾಗ ಸಮಸ್ಯೆ ಉಂಟಾದಾಗ “ಇದಕ್ಕ ನಿನ್ನ ಚಿಂತಾಮಣಿ ಏನ ಹೇಳತೈತಿ?” ಎನ್ನುತ್ತಿದ್ದ. ಇವನು ಗಂಭೀರವಾಗಿಯೇ ಅದನ್ನು ಓದುತ್ತಿದ್ದ. ದತ್ತಪ್ಪನ ಓದುವ ಶೈಲಿಯೂ ಅವನದೇ-ಅವನ ಚಿಂತಾಮಣಿಯಂತೆ. ಮೂಗಿನ ತುದಿಗೆ ಕನ್ನಡಕ ಏರಿಸಿ, ಭಯಭಕ್ತಿಗಳಿಂದ ಚಪ್ಪಾಗಳಿ ಹಾಕಿಕೊಂಡು, ನಮಸ್ಕಾರ ಮಾಡಿ, ಪುಸ್ತಕ ತೆರೆದು ಒಂದೊಂದೇ ಸಾಲು ಓದುತ್ತಿದ್ದ. ಒಂದು ಸಾಲು ಮುಗಿದೊಡನೇ ಅಲ್ಲಿಗೆ ವಾಕ್ಯ ಮುಗಿಯಲಿ, ಬಿಡಲಿ, ಶಬ್ದ ಮುಗಿದಿರಲಿ, ಮುಗಿಯದಿರಲಿ ಕಣ್ಣುಮುಚ್ಚಿ ಸುಮ್ಮನೇ ಕೂತು ಆ ಸಾಲಿನ ಅರ್ಥವನ್ನು ಮೊದಲು ತಂತಾನೇ ತಿಳಿದುಕೊಂಡು ಆಮೇಲೆ ಎರಡನೇ ಸಾಲಿಗೆ ಹೋಗುತ್ತಿದ್ದ. ಅದೂ ಎಂಥ ವಿಚಿತ್ರ ಪುಸ್ತಕ ಎಂದರೆ, ಯಾರು ಏನು ಕೇಳಿದರೂ ಅದರಲ್ಲಿ ಬರೋಬ್ಬರಿ ಉತ್ತರ ಸಿಕ್ಕುತ್ತಿತ್ತು. ಅದರಲ್ಲಿಯ ಸಾಲುಗಳಿಂದ ಯಾವಾಗ ಬೇಕೋ ಆವಾಗ ಸಂದರ್ಭಕ್ಕೆ ತಕ್ಕ ಅರ್ಥ ಹಿಂಡುತ್ತಿದ್ದ. ಹೀಗಾಗಿ ಪುಸ್ತಕ ಹಿಡಿದಾಗ ಇವನ ಕೈ ನಡುಗುತ್ತಿತ್ತಲ್ಲ. ಇವನ ಅರ್ಥಕ್ಕೆ ಆ ಚಿಂತಾಮಣಿಯೇ ನಡುಗಿದ ಹಾಗೆ ಕಾಣುತ್ತಿತ್ತು.
ಕನ್ನಡಕ ಹಾಕುತ್ತಿದ್ದನಲ್ಲ. ಅವನ ಕಣ್ಣು ಮಂದವಾಗಿದ್ದವೆಂದು ಇದರರ್ಥವಲ್ಲ. ಅವರಪ್ಪ ಕನ್ನಡಕ ಹಾಕಿಕೊಂಡು ಆ ಪುಸ್ತಕ ಓದುತ್ತಿದ್ದ. ಆದ್ದರಿಂದ ಇವನೂ ಹಾಗೇ ಓದುತ್ತಿದ್ದ ಅಷ್ಟೇ. ಆ ಕನ್ನಡಕ ಅವನಿಗೆ ಅಂಜನದಷ್ಟು ಪ್ರಭಾವಶಾಲಿಯಾಗಿ ಕಂಡಿತು. ಯಾಕೆಂದರೆ ಕನ್ನಡಕ ಹಾಕಿದಾಗ ಪುಸ್ತಕದಲ್ಲಿ ಇಲ್ಲದ ಅರ್ಥಗಳೂ ಅವನಿಗೆ ಕಾಣಿಸುತ್ತಿದ್ದವು.
ಹಾಗಂತ ಓದುಬರಹದಲ್ಲಿ ದತ್ತಪ್ಪ ದಡ್ಡನೆಂದಲ್ಲ. ತನ್ನ ಹೌದೆಂಬೋ ಹಂಗಾಮದಲ್ಲಿ ಅವನೊಂದು ಕಾವ್ಯ ಕೂಡ ಮಾಡಿದ್ದ ಸಂಗತಿ ಅನೇಕರಿಗೆ ತಿಳಿದಿಲ್ಲ. ನಾಕನೇ ಇಯತ್ತೆ ಇತಿಹಾಸದಲ್ಲಿ ದಿಲ್ಲಿಯನ್ನಾಳಿದ ಬಾಬರನೆಂಬ ದೊರೆ “ಬಾಬರ ನಾಮಾ” ಎಂಬುದಾಗಿ ಒಂದು ಆತ್ಮಚರಿತ್ರೆ ಬರೆದಿದ್ದ ಸಂಗತಿಯನ್ನು ಓದಿದ್ದ. ಹಾಗೇ ತಾನೂ ಯಾಕೆ ತನ್ನ ಆತ್ಮಕಥೆ ಬರೆಯಬಾರದು? ಎನ್ನಿಸಿತು. ಪಾಪ; ಮೂರು ತಿಂಗಳು, ಹಗಲು, ರಾತ್ರಿ ಕೂತು ಭಾಮಿನಿ ಷಟ್ಪದಿಯಲ್ಲಿ ಮುನ್ನೂರು ಪುಟದ ಆತ್ಮಕಥೆ “ದತ್ತಾತ್ರೇಯನಾಮಾ” ಬರೆದೇ ಬಿಟ್ಟ! ಅದನ್ನಿನ್ನು ಯಾರಿಗಾದರೂ ಓದಬೇಕಲ್ಲ. ಗೌಡನ ಒಡ್ಡೋಲಗಕ್ಕೆ ತಗೊಂಡು ಹೋದ. ಆಸ್ಥಾನ ಕವಯತ್ರಿ ಲಗಮವ್ವನೂ, ಮಹಾಪಂಡಿತ ಪ್ರಶ್ನೋತ್ತರ ಮಾಸ್ತರನೂ ಆಗಲೇ ಆಸೀನರಾಗಿದ್ದರು. ‘ದತ್ತಾತ್ರೇಯನಾಮಾ’ದ ಕಥೆ ಹೀಗೆ ಸುರುವಾಗುತ್ತದೆ:
ಶಿವಾಪುರದಲ್ಲಿ ಕಲಿಕಾಲ ಪ್ರವೇಶಿಸಿ, ಭಕ್ತಿ ನಾಶವಾಗಿ ಪಾಪ ಹೆಚ್ಚಾಯಿತು. ಕರಿಮಾಯಿ ಶಿವನ ಬಳಿ ಓಡಿಹೋಗಿ “ನಿನ್ನ ಅವತಾರ ತೋರಿಸಿ ಪಾಪದಿಂದ ನನ್ನ ಊರನ್ನು ಪಾರುಮಾಡು” ಎಂದು ಮೊರೆಯಿಟ್ಟಳು. ಕೂಡಲೇ ಶಿವ ದತ್ತಾತ್ರೇಯನೆಂಬ ಗಣನನ್ನು ಕರೆದು, “ಶಿವಾಪುರದಲ್ಲಿ ಜನಿಸಿ ಭಕ್ತಿಯನ್ನು ಬೆಳಗಿ ಬಾ” ಎಂದು ಕಳಿಸಿದನಂತೆ. ಅವನೇ ನಮ್ಮ ದತ್ತಪ್ಪನಂತೆ!
ಕಾವ್ಯದ ಸುರುವಿಗೇ ಗೌಡ ‘ಹೋ’ ಎಂದು ನಗಲಾರಂಭಿಸಿದ. ಲಗಮವ್ವ ಬಿದ್ದು ಬಿದ್ದು ನಕ್ಕಳು. ದತ್ತಪ್ಪನಿಗೆ ಅವಮಾನವಾಯಿತು.
“ಏ ಗೌಡಾ, ನಿನ್ನ ಮಡ್ಡ ತಲೀಗಿ ಇಂಥಾ ಕಾವ್ಯ ಹೆಂಗ ತಿಳಿದೀತಲೆ” ಅಂದ. ಲಗಮವ್ವನ ಕಡೆ ತಿರುಗಿ-
“ಇವಳ್ಹೆಂಗ ನಗತಾಳ ನೋಡೋ, ಏ ಹುಚರಂಡೇ, ನಿನ್ನ ಜನ್ಮದಾಗ ಒಂದು ಭಾಮಿನಿ ಷಟ್ಪದಿ ಬರಿಯೇ ಹೌದಂತೀನಿ. ಇಡೀ ಜಗತ್ತಿನ್ಯಾಗ ದೀಡ ಸಾವಿರ ಭಾಮಿನೀ ಷಟ್ಪದಿ ಯಾ ಮಗಾ ಬರದ್ದಾನ ತೊರಿಸಿಕೊಡೇ” ಎಂದು ಹೇಳುತ್ತ.
“ಗೌಡಾ, ನಿನಗ ಈ ಹುಚ್ಚರಂಡೀ ಹಾಡಿಗಿಂತ ತನ್ನ- “ದತ್ತಾತ್ರೇಯನಾಮಾ” ಕಡೇ ಆಯ್ತಲೋ!” ಎಂದು ಹೇಳಿಕೊಳ್ಳುತ್ತ ಅಲ್ಲಿ ನಿಲ್ಲದೇ ತನ್ನ ಕಾವ್ಯ ತಗೊಂಡು ಭರ್ರನೇ ಹೋಗಿಬಿಟ್ಟ. ಪ್ರಶ್ನೋತ್ತರಮಾಸ್ತರನಿಗೆ ಕಾವ್ಯ ಇಷ್ಟವಾಗಿತ್ತು. ಯಾಕೆಂದರೆ ಒಂದೇ ಒಂದು ಭಾಮಿನಿ ಷಟ್ಪದಿ ಹೊಸೆಯುವದು ಎಷ್ಟು ಕಷ್ಟ ಅಂತ ಅವ ಬಲ್ಲ. ಇನ್ನು ದೀಡ ಸಾವಿರ ಷಟ್ಪದಿಗಳೆಂದರೆ! ಆದರೆ ತನ್ನ ಅಭಿಪ್ರಾಯ ಹೇಳುವ ಮೊದಲೇ ದತ್ತಪ್ಪ ಎದ್ದುಹೋಗಿದ್ದ.
ಮುಂದೆ ಎಂಟು ದಿನ ದತ್ತಪ್ಪ ಗೌದನ ಮುಖ ನೋಡಲಿಲ್ಲ. ‘ದತ್ತಾತ್ರೇಯನಾಮಾ’ದ ವಿಷಯ ಅಲ್ಲಿಗೆ ಎಲ್ಲರೂ ಮರೆತರು. ಯಾವಾಗಲೋ ಒಮ್ಮೆ ಲಗಮವ್ವ ಕೇಳಿದಾಗ ದತ್ತಪ್ಪ ಕಳೆದುಹೋಯ್ತೆಂದು ಹೇಳಿದ. ಅದು ಹೇಗೆ ಕಳೆದುಹೋಯ್ತೆಂಬ ಬಗೆಗೆ ಲಗಮವ್ವ ಹೇಳುವದು ಹೀಗೆ:
ಕಾವ್ಯ ವಾಚನದ ಮಾರನೆಯ ದಿನವೂ ದತ್ತಪ್ಪ ಮತ್ತೆ ಗೌಡನಿಗೆ ದುಂಬಾಲು ಬಿದ್ದನಂತೆ! “ಇದರಾಗ ಅದೇನ ಕಸರೈತಿ ತೋರಿಸಿಕೊಡೋ” ಅಂದನಂತೆ. ಗೌಡ “ಬಿಡೋ ದತ್ತೂ ಏನ ಹುಡುಗಾಟ” ಅಂದರೆ, “ಲೇ ನೀನಲ್ಲೋ ನನ್ನ ಕಾವ್ಯಕ್ಕ ಭೇಷ್ ಅನ್ನೋವನು; ಕರಿಮಾಯಿ, ಕರಿಮಾಯಿ! ಬಾ ತೋರಸ್ತೀನಿ”
-ಎಂದವನೇ ಗೌಡನನ್ನು ದರದರ ಎಳೆದುಕೊಂಡು ಕೆರೆಗೆ ಹೋದನಂತೆ. ಮೈಯಲ್ಲಿ ಆವೇಶ ತುಂಬಿದವರಂತೆ “ಕರಿಮಾಯೀ” ಎಂದು ಜೋರಿನಿಂದ ಕೂಗುತ್ತ ಎರಡೂ ಕೈಯಿಂದ ಕಾವ್ಯ ಹಿಡಿದು ಎತ್ತಿ,
ಕರಿಮಾಯೀ ಈ ಕಾವ್ಯದಾಗ ಸತ್ವ ಇದ್ದರ ಇದನ್ನ ತೇಲಿಸು. ಇಲ್ಲಾದರ ಮುಳಗಸು” ಎಂದವನೇ ಕೆರೆಯಲ್ಲಿ ಕಾವ್ಯ ಬಿಟ್ಟುಬಿಟ್ಟ! ಆಹಾ, ಕರಿಮಾಯಿಯ ಮಹಿಮೆಯೆಂದರೆ ಇದಲ್ಲವೆ? ಕಾವ್ಯ ಮುಳುಗಿಬಿಟ್ಟಿತು!
-ಅಂತೆ. ಹೀಗೆಂದು ಲಗುಮವ್ವ ಹೇಳುತ್ತಾಳೆ. ಇದರಲ್ಲಿ ಸುಳ್ಳೆಷ್ಟೋ, ಖರೆಯೆಷ್ಟೋ! ಅಂತೂ ಅಂದಿನಿಂದ ಲಗುಮವ್ವನ ಹಾಡು ಹೌಂದು ಅಂದದ್ದಕ್ಕೆಲ್ಲ ಚಿಂತಾಮಣಿ ಅಲ್ಲವೆನ್ನುತ್ತದೆ. ಇಬ್ಬರಿಗೂ ವೈರವಿದೆಯೆಂದು ಇದರರ್ಥವಾಗಬಾರದು. ಅಷ್ಟೇ ಏನು, ಒಳಗೊಳಗೇ ಒಂದು ನಮೂನಿ ಸ್ನೇಹವೇ ಇದೆ. ದತ್ತಪ್ಪನ ಮನೆಯಲ್ಲಿ ಹೊಸ ಉಪ್ಪಿನಕಾಯಿ ಹಾಕಲಿ-ಆ ‘ಹುಚ್ಚರಂಡಿ’ಯನ್ನು ಕರೆಸಿ ಒಂದು ಗಡಿಗಿ ಉಪ್ಪಿನಕಾಯಿ ಕೊಟ್ಟನೇ; ಹಬ್ಬ ಹರಿದಿನದ ಅಡಿಗೆಯಾಗಲಿ, ಆ ಹುಚ್ಚರಂಡಿಗೆ ಕರೆ ಹೋಯಿತೇ. ಲಗಮವ್ವನೂ ಅಷ್ಟೇ, ಹೋಳಿ ಹಬ್ಬದಲ್ಲಿ “ಆಯ್ ನನ ಹಾರುವಾ” ಎನ್ನುತ್ತಾ ಅವನನ್ನು ಅಟ್ಟಿಸಿಕೊಂಡು ಹೋಗಿ ಬಣ್ಣ ಗೊಜ್ಜುವದು. ಚಂಡಿಕೆ ಮುಟ್ಟಿ ಲಟಿಕೆ ಮುರಿಯುವದು ಯಾರಿಗೆ ಗೊತ್ತಿಲ್ಲ? ಹೋಗಲು “ಆಯ್ ನನ ಹಾರುವಾ” ಎಂದು ಅವಳೆಂದಾಗ ಅದರ ಶ್ಲೇಷೆಯನ್ನು ಜನಕ್ಕೆ ಹೇಳಿಕೊಡಬೇಕೊ?
ಊರ ಹಿರಿಯರೆಂದರೆ ಇವರೇ-ಗೌಡ, ದತ್ತಪ್ಪ, ಲಗಮವ್ವ, ಪೂಜಾರಿ, ಬಾಳೂ, ಬಸೆಟ್ಟಿ; ಅದರಲ್ಲೂ ಮುಖ್ಯವಾಗಿ ಗೌಡ ದತ್ತಪ್ಪ, ಇವರ ಮೇಲಿನ ವಿಶ್ವಾಸದಿಂದ ಉಳಿದವರು ಹಿರಿತನಕ್ಕೆ ಹಾಜರಿದ್ದರೂ ಸೈ, ಇರದಿದ್ದರೂ ಸೈ-ಇವರು ಹೇಳಿದ್ದಕ್ಕೆ ಸೈಗೊಡುತ್ತಿದ್ದರು. ಗೌಡ ವ್ಯವಹಾರ ತಿಳಿದವ. ವಹಿವಾಟು ಬಲ್ಲವ. ಜನಗಳನ್ನು ನಂಬುವವ. ದತ್ತಪ್ಪ ಸಿಡಿಕಿನವ. ಸ್ವಲ್ಪ ವಾಚಾಳಿ. ಕವಿಯಾದುದರಿಂದ ವ್ಯಂಗ್ಯವನ್ನೂ ಬಲ್ಲ. ಜೊತೆಗೆ ಹಾಸ್ಯದ ಸೊಗಸುಗಾರ….ಹೊರಗೆ ನಗಲಾರದಿದ್ದರೂ ಒಳಗೆ ನಗುತ್ತಿದ್ದ. ಇನ್ನು ಜನ ಕುಳ್ಳರಲ್ಲ, ಮುಪ್ಪಿಗೂ ಬಾಗಿದವರಲ್ಲ, ಸೊಂಟ ನೆಟ್ಟಗಿರುವ, ಸಮಕರಿದು ವರ್ಣದವರು. ಕಣ್ಣಿನಲ್ಲಿ ನಂಬಿಕೆ, ಕಿಲಾಡಿತನ ಎರಡು ಇರುತ್ತವೆ. ಗೌಡ ದತ್ತಪ್ಪನ ಆಳಿಕೆಯಲ್ಲಿ ಜನ ಅನ್ಯಾಯವಾಯಿತು ಅನ್ನಲಿಲ್ಲ. ಕಾಲ ಬದಲಾಯಿತು, ಅನ್ನಲಿಲ್ಲ. ಕಲಿಕಾಲ ಕಾಲಿಟ್ಟಿತು ಅನ್ನಲಿಲ್ಲ-ಹಾಗಿದ್ದರು. ಸೇರು ಇದ್ದಲ್ಲಿ ಹೇರಾಯಿತು. ಒಂದಿದ್ದಲ್ಲಿ ನೂರಾಯಿತು, ಸಾವಿರವಾಯಿತು. ಊರು ಎಷ್ಟು ಸಮೃದ್ಧವಾಗಿ ಬೆಳೆಯಿತೆಂದರೆ-ಜನಸಂಖ್ಯೆ ಜಾಸ್ತಿಯಾಗಿ ನಿಮ್ಮ ಊರಿಗೊಂದು ಗ್ರಾಮ ಪಂಚಾಯತಿ ಮಾಡಿಕೊಳ್ಳಿರೆಂದು ಸರ್ಕಾರದಿಂದ ಕಾಗದ ಬಂತು.

ಕಲಿಕಾಲ ಕಾಲಿಟ್ಟಿತು
ಸರ್ಕಾರಿ ಕಾಗದ ಬಂದಿತಲ್ಲ, ಆಗಷ್ಟೇ ಗುಡಸೀಕರ ಬೆಳಗಾವಿಯಲ್ಲಿ ಎಲ್.ಎಲ್.ಬಿ.ಮುಗಿಸಿ ಬಂದಿದ್ದ. ವಕೀಲ ಸುರುಮಾಡಬೇಕೆಂದರೆ ಅದು ಶಿವಾಪುರದಂಥ ಊರಿನಲ್ಲಿ ಹೇಗೆ ಸಾಧ್ಯ? ಅದಕ್ಕವನು ಬೆಳಗಾವಿಗೆ ಹೋಗಿರಬೇಕು. ಆದರೆ ಆಗೆಲ್ಲ ಸ್ವಾತಂತ್ರ್ಯ ಚಳುವಳಿಯ ಕಾಲ. ಕೋರ್ಟು ಕಛೇರಿಗಳೇ ಸುಟ್ಟು ಹೋಗುತ್ತಿದ್ದಾಗ ಇವನ ವಕೀಲ ಯಾರು ಕೇಳಬೇಕು? ಅದೇ ವರ್ಷ ಅವನ ತಂದೆ ತೀರಿಹೋದುದರಿಂದ ಊರಿನಲ್ಲೇ ಹೊಲಮನೆ ನೋಡಿಕೊಂಡು ಇರಬೇಕಾಯ್ತು; ಇದ್ದ.
ಆತ ಹಾಗೆ ಇದ್ದದ್ದು ಗೌಡನಿಗೆ ಅನುಕೂಲವಾಗಿಯೇ ಕಂಡಿತು. “ಹೇಗೂ ಪಂಚಾಯ್ತಿ ಮಾಡಿಕೊಳ್ಳಿರಿ” ಎಂದು ಸರ್ಕಾರಿ ಪತ್ರ ಬಂದಿದೆ. ಅದಕ್ಕೆಲ್ಲ ಇಂಗರೇಜಿ ಓದುಬರಹ ಬಲ್ಲವರಿದ್ದರೆ ಒಳ್ಳೆಯದು. ತಮ್ಮಂಥವರಿಂದೇನಾದೀತು? ಇಂಥದಕ್ಕೆ ಗುಡಸೀಕರನೇ ಯೋಗ್ಯನೆಂದು ತೀರ್ಮಾನಿಸಿ ಹಾಗೆಂದು ಊರ ಹಿರಿಯರಿಗೂ ಪಂಚರಿಗೂ ಹೇಳಿಬಿಟ್ಟ.
“ಏನಂಬೋ ಮಾತು ಗೌಡರ, ಇನ್ನ ತಲೀಮ್ಯಾಲಿನ ಮಾಂಸ ಆರಿಲ್ಲ. ಅವಕ್ಕೆಲ್ಲಾ ಇಂಥಾ ಜವಾಬ್ದಾರಿ ಹೊರಿಸಿದರ ತಡದಾವೇನ್ರೀ?” ಎಂದು ಅನೇಕರು, ಯಾಕೆ- ದತ್ತಪ್ಪ ಕೂಡ ಕೇಳಿದ್ದರು. “ಒಂದಿಷ್ಟು ದಿನಾ ಆದಮ್ಯಾಲ ತಾವಽ ದಾರಿಗಿ ಬರ್ತಾರ. ಊರಗಾರಿಕಿ ಹೋಗಬರೋದೆಲ್ಲಾ ಇನ್ನ ಮ್ಯಾಲ ಅವರಿಗೇ ಸೇರಬೇಕಾದ್ದಲ್ಲೇನ್ರೊ?” ಎಂದು ಗೌಡ ಎಲ್ಲರನ್ನೂ ಒಪ್ಪಿಸಿದ್ದ.
ಆಯ್ತುಃ ಕೊನೆಗೂ ಗೌಡನ ಇಚ್ಛೆಯಂತೆ ಚುನಾವಣೆಯಿಲ್ಲದೇ ಗುಡಸೀಕರ ಸರಪಂಚ (ಚೇರ್‍ಮನ್) ಆಗಿಯೂ ತನ್ನ ಸರಿಕರಾದ, ಶಿವಾಪುರದ ಕನ್ನಡ ಗಂಡು ಮಕ್ಕಳ ಶಾಲಾದ ಒಂದೆರಡು ಇಯತ್ತೆ ಕಲಿತುಬಿಟ್ಟ ನಾಲ್ಕು ಹುಡುಗರನ್ನು ಮೆಂಬರರಾಗಿಯೂ ನೇಮಿಸಲಾಯಿತು. ಕರಿಮಾಯಿ ಗುಡಿಯಹಿಂಭಾಗದ ಖಾಲಿಬಿದ್ದ ನಗಾರಿಖಾನೆಯನ್ನು ಪಂಚಾಯ್ತಿ ಆಫೀಸೆಂದೂ ಕರೆಯಲಾಯಿತು. ಆದರೆ ಇದರಿಂದ ಊರಲ್ಲಿ ಕೆಲವು ಬದಲಾವಣೆಗಳಾದುದು ನಿಜ:
(ಆ) ಗುಡಸೀಕರನ ಅಡ್ಡ ಹೆಸರು “ಗುಡಸ್ಯಾಗೋಳ” ಎಂದು. ಕುಲಕರ್ಣಿ ದತ್ತಪ್ಪನ ದಪ್ತರುಗಳಲ್ಲಿದ್ದದ್ದೂ ಇದೇ ಹೆಸರು. ಜನ ಅದನ್ನು ಸಂಕ್ಷೇಪಿಸಿ “ಗುಡಸ್ಯಾ” ಅನ್ನುತ್ತಿದ್ದರು. ಅವರಪ್ಪ ಜೀವಂತವಾಗಿದ್ದಾಗ ಅನೇಕರಿಗೆ ಬಡ್ಡಿಗೆ ಹಣ ಕೊಟ್ಟು ಅವರ ಮನೆ ಮುರಿದು ಮಠ ಮಾಡಿ ಗುಡಿಸಿದವನಾದ್ದರಿಂದ ಜನ “ಗುಡಸು” ಎಂದೇ ಕರೆಯುತ್ತಿದ್ದರು. ಈಗ ಸರಪಂಚ ಆದ ಮೇಲೆ ಅದು “ಗುಡಸೀಕರ್” ಎಂದು ಬದಲಾಯಿತು. ಹಾಗೂ ಇನ್ನೂ ಪೂರ್ವೀ ಹೆಸರಿನಿಂದಲೇ ಕರೆದವರನ್ನು ಹೀನಾಯವಾಗಿ ಬೈದು ಅವಮಾನಿಸಲಾಯಿತು. ಆದ್ದರಿಂದ ನಾವೂ ಸದರಿ ಗುಡಸುನನ್ನು ಗುಡಸೀಕರನೆಂದೇ ಕಥೆಯಲ್ಲಿ ಸಂಬೋಧಿಸೋಣ.
(ಬ) ಗುಡಸೀಕರನ ಮನೇ ಮುಂದೆ “ಜೆ.ಎಚ್. ಗುಡಸೀಕರ, ಬಿ.ಎ.ಎಲ್.ಎಲ್.ಬಿ.ಗ್ರಾಮ ಪಂಚಾಯತಿ ಸರಪಂಚ ಬೆಳಗಾಂ ಡಿಸ್ಟ್ರಿಕ್ಟ್”- ಎಂಬುದಾಗಿ ಒಂದು ಇಂಗ್ಲಿಷ್ ಬೋರ್ಡು ಬಂತು. ಗುಡಸೀಕರನನ್ನು ಬಿಟ್ಟೂ ಅದನ್ನು ಯಾರೂ ಓದಲಿಲ್ಲ. ಮತ್ತು ಓದುವದು ಸಾಧ್ಯವಿರಲಿಲ್ಲ. ಊರವರೆಲ್ಲ ಅವನ ಮನೆಯ ಮುಂದೆ ತಾಸರ್ಧತಾಸು ನಿಂತು, ನಿಂತು ಆ ಬೋರ್ಡು ನೋಡಿಬಂದರು. ಹಚ್ಚಿದ ಹದಿನೈದು ದಿನಗಳಂತೂ ದಿನಬೆಳಗಾದರೆ ಮಕ್ಕಳ ಹಿಂಡೊಂದು ಆ ಬೋರ್ಡು ನೋಡುತ್ತ ನಿಂತಿರುತ್ತಿತ್ತು. ಅದನ್ನು ಓದಿದವರಿಗೆ ಐನೂರು ರೂಪಾಯಿ ಬಹುಮಾನ ಕೊಡುವುದಾಗಿ ಇಷ್ಟರಲ್ಲೇ ಗುಡಸೀಕರ ಡಂಗುರ ಸಾರಲಿದ್ದಾನೆಂದು ಹೊಲಗೇರಿಯಲ್ಲಿ ಸುದ್ದಿಯಿತ್ತು.
(ಕ)ಪಂಚಾಯ್ತಿ ಆಫೀಸಿನಲ್ಲಿ ಕೆಲಸವಂತೂ ಇರಲಿಲ್ಲವಲ್ಲ; ಅಧವಾ ಇದ್ದರೂ ಇವರಿಗೆ ಗೊತ್ತಿರಲಿಲ್ಲವಲ್ಲ; ಆದ್ದರಿಂದ ಮೆಂಬರರು ಮೀಟಿಂಗ್ ಕೂಡಿದಾಗೊಮ್ಮೆ ಇಸ್ಪೀಟಾಟ ಆಡುತ್ತಿದ್ದರು. ಹೀಗಾಗಿ ಇಸ್ಪೀಟಾಟಕ್ಕೆ ‘ಮೀಟಿಂಗ್’ ಎಂಬ ಹೊಸ ಹೆಸರು ಬಂತು. ಮತ್ತು ಸದರಿ ಮೀಟಿಂಗುಗಳು ಒಮ್ಮೊಮ್ಮೆ ರಾತ್ರಿ ಹನ್ನೆರಡು ಗಂಟೆಯವರೆಗೂ ನಡೆಯುತ್ತಿದ್ದವು.
(ಡ) ಇದರಲ್ಲಿ ಗುಡಸೀಕರ್ ಸಂತೋಷಗೊಳ್ಳುವ ಸಂಗತಿಗಳೂ ಇದ್ದವು. ಇವರೇನು ಬರೆಯುತ್ತಿದ್ದರೋ, ಬಿಡುತ್ತಿದ್ದರೋ ಸರ್ಕಾರದವರಂತೂ ಇವರಿಗೆ ಪತ್ರ ಬರೆಯುತ್ತಿದ್ದರಲ್ಲ, ಬಂದ ಪತ್ರಗಳು ಇಂಗ್ಲೀಷಿನಲ್ಲಿರುತ್ತಿದ್ದವು. ಗುಡಸೀಕರ ಆ ಪರ್ತವನ್ನು ಎಲ್ಲರೆದುರಿಗೆ ಜೋರಿನಿಂದ ಓದುತ್ತಿದ್ದ. ಓದುತ್ತಿದ್ದನಲ್ಲ ಅಂತೂ ಒಂದು ವಿಚಿತ್ರ ರೀತಿಯ ಟಿಸ್‌ಪಿಸ್ ಮಾಡುತ್ತಿದ್ದನಲ್ಲ. ಜನ ಬೆಕ್ಕಸಬೆರಗಾಗಿ ತೆರೆದ ಬಾಯಿ ತೆರೆದಂತೆ ಕೇಳುತ್ತ ಕೂರುತ್ತಿದ್ದರು.
ಇದಕ್ಕಿಂತ ವಿಚಿತ್ರವೆಂದರೆ ಪತ್ರಿಕಾವಾಚನ. ಗುಡಸೀಕರ ಮೂರೋ ಆರೋ ತಿಂಗಳಿಗೊಮ್ಮೆ ಬೆಳಗಾವಿಗೆ ಹೋಗಿಬರುತ್ತಿದ್ದ. ಹೋದಾಗೊಮ್ಮೆ ತಪ್ಪದೆ ಇಂಗ್ಲಿಷ್ ದಿನಪತ್ರಿಕೆ ತರುತ್ತಿದ್ದ. ಇನ್ನೊಮ್ಮೆ ಬೆಳಗಾವಿಗೆ ಹೋಗಿ ಹೊಸ ಪೇಪರ್ ತರುವವರೆಗೆ ಅದೇ ಗತಿ. ಮಧ್ಯಾಹ್ನ ಊಟವಾದ ಮೇಲೆ ಸಾಮಾನ್ಯವಾಗಿ ಒಬ್ಬನೇ ಮಹಡಿಯ ಮೇಲೆ ಕೂತು ಜೋರಿನಿಂದ, ಒಂದು ಕೂಗಳತೆಯವರೆಗೆ ಕೇಳಿಸುವಂತೆ ಓದುತ್ತಿದ್ದ. ಆಗಂತೂ ಆಜುಬಾಜೂ ಮನೆಯ ಅವ್ವಕ್ಕಗಳು ಮಕ್ಕಳು ಓಡಿ ಬಂದು ಕೆಳಗಡೆ ಗುಂಪು ಗುಂಪಾಗಿ ನಿಂತು ಅವನ ಟಿಸ್‌ಪಿಸ್ ಕೇಳುತ್ತಿದ್ದರು. ಇದು ಗೊತ್ತಾಗಿ ಗುಡಸೀಕರ ಇನ್ನಷ್ಟು ಗತ್ತಿನಿಂದ ಓದುತ್ತಿದ್ದ. ಇದರಿಂದಾಗಿ ಊರ ಹೆಂಗಸರಲ್ಲಿ ಕೆಲವು ಜನಪದ ಕಥೆಗಳು ಹುಟ್ಟಿ ಹಬ್ಬಿದವು:
(೧) ಗುಡಸೀಕರನ ಇಂಗ್ಲಿಷ್ ಕೇಳಿ ಬೆಳಗಾವಿಯ ಬಿಳೀ ಚರ್ಮದ ಒಬ್ಬ ಇಂಗರೇಜಿ ಮೇಡಮ್ಮನು ನಡುರಸ್ತೆಯಲ್ಲೇ ಇವನನ್ನು ಅಡ್ಡಗಟ್ಟಿ ತನ್ನನ್ನು ಮದುವೆಯಾಗಬೇಕೆಂದು ಕೇಳಿಕೊಂಡಳಂತೆ! ಆದರೆ ಇವಳನ್ನು ಕಟ್ಟಿಕೊಂಡರೆ ತಾನು ತಂದೆತಾಯಿಗಳನ್ನು ಬಿಟ್ಟು ಪರದೇಶಕ್ಕೆ, ಸಮುದ್ರದಾಟಿ ಹೋಗಬೇಕಾಗುವದಲ್ಲಾ ಎಂದು ಒಲ್ಲೆ ಎಂದನಂತ.
(೨) (ಅ) ಗೋಕಾಕ ಫಾಲ್ಸದ ಮಾಲೀಕನ, ಅವನೂ ಇಂಗ್ರೇಜಿಯವನೇ- ಮಗಳು ಒಂದು ದಿನ ಕಾರಿನಲ್ಲಿ ಕೂತು ಇವನು ಓದುವ ಕಾಲೇಜಿಗೆ ಹೋಗಿ ಮನೆಗೆ ಕರೆದೊಯ್ದಳು. ಅದೋ ಶಿವಾಪುರದಷ್ಟು ದೊಡ್ಡ ಬಂಗಲೆ! ಇಬ್ಬರೂ ಕೈ ಕೈ ಹಿಡಿದು ಕುಣಿಯುತ್ತಿದ್ದರಂತೆ. ಅಷ್ಟರಲ್ಲಿ ಅವಳ ತಂದೆಬಂದು “ಅಪಾ ಗುಡಸೀಕರಾ, ನನ್ನ ಮಗಳ್ನ ಮದಿವ್ಯಾಗೋ, ನಿನಗೆ ಈ ಫಾಲ್ಸ ಎಲ್ಲಾ ಬರಕೊಟ್ಟ, ಮ್ಯಾಲ ನಿನ್ನ್ನ ಹಸರ ನೋಟಿನ್ಯಾಗ ಮುಚ್ಚತೇನೋ”- ಎಂದು ಇಂಗ್ಲೀಷಿನಲ್ಲಿ ಹೇಳೀದನಂತೆ! ರೊಕ್ಕ ರೂಪಾಯಿ ಸಿಕ್ಕಾವು. ಒಮ್ಮೆ ಜಾತಿ ಕೆಟ್ಟರೆಹೋದ ಜಾತಿ ಸಿಕ್ಕುವದೇ? ಎಂದು ಯೋಚಿಸಿ ಗುಡಸೀಕರ “ಸಾಧ್ಯವಿಲ್ಲಾ” ಎಂದು ಇಂಗ್ಲೀಷಿನಲ್ಲಿ ಹೇಳಿದನಂತೆ!
(ಬ) ಈ ಕಥೆಯ ಇನ್ನೊಂದು ಪಾಠಾಂತರ ಕೆಳಗಿನ ಓಣೆಯಲ್ಲಿದೆ. ಅದರ ಪ್ರಕಾರ ಗುಡಸೀಕರ ಒಲ್ಲೆನೆಂದ ತಕ್ಷಣವೇ ಹುಡುಗಿ ಅತ್ತು ಕರೆದು ಕೊನೆಗೆ ಇವನಿಗೊಂದು ಕೈಗಡಿಯಾರ ಕೊಟ್ಟು ಮುದ್ದಿಸಿದಳಂತೆ. ಈಗ ಗುಡಸೀಕರನ ಗಡಿಯಾರ ಇದೆಯಲ್ಲ, ಆ ಹುಡುಗಿಯೇ ಕೊಟ್ಟದ್ದಂತೆ.
ಆಶ್ಚರ್ಯವೆಂದರೆ ಈ ಕಥೆಗಳು ಸ್ವತಃ ಗುಡಸೀಕರನ ಕಿವಿಯ ಮೇಲೆ ಬಿದ್ದಾಗಲೂ ಅಲ್ಲಗಳೆಯಲಿಲ್ಲ. ನಕ್ಕು ಸುಮ್ಮನಾದನಷ್ಟೇ. ಹೀಗಾಗಿ ಜನಪದ ಕಥೆಗಳೆಲ್ಲ ನಿಜವಾದ ಘಟನೆಗಳಾಗಿ ಬಿಟ್ಟವು.
ಹೀಗಂದರೆ ಗುಡಸೀಕರ ಸಣ್ಣ ಮನುಷ್ಯನೆಂದು ಇದರರ್ಥವಲ್ಲ. ಊರಿಗೆ ಒಳ್ಳೆಯದಾಗುವ ಕೆಲಸ ಮಾಡಬೇಕೆಂದು ಅಥವಾ ಅವನ ಮಾತಿನಲ್ಲಿಯೇ ಹೇಳುವುದಾದರೆ “ಊರು ಮುಂದೆ ತರಬೇಕೆಂ”ದು ಅವನಿಗೆ ನಿಜವಾಗಿಯೂ ಆಸೆಯಿತ್ತು. ತನ್ನ ಬಳಿ ಬಂದ ಮೆಂಬರರಿಗೂ ಕ| ಗಂ| ಸಾಲೆಗೂ ಹೋಗಿ ಚಿಕ್ಕ ಭಾಷಣಗಳ ರೂಪದಲ್ಲಿ ಅದನ್ನು ಸ್ಪಷ್ಟಪಡಿಸಿದ್ದ ಕೂಡ. ಅಲ್ಲದೇ ಅವನ ಬಗ್ಗೆ ಕೆಟ್ಟ ಅಭಿಪ್ರಾಯ ತಾಳಲಿಕ್ಕೆ ಜನಕ್ಕೆ ಕಾರಣಗಳಿರಲಿಲ್ಲ ಏನೋ ಬೆಳಗಾವಿಯಲ್ಲಿ ಒಂದಿಬ್ಬರು ಇಂಗರೇಜಿ ಮೇಡಮ್‌ಗಳು ಇವನೆಂದರೆ ಬಿದ್ದು ಸಾಯುತ್ತಾರೆಂದೂ, ಅದಕ್ಕೇ ಇವನು ಆಗಾಗ ಬೆಳಗಾವಿಗೆ ಹೋಗುತ್ತಾನೆಂದೂ ಕಿಂವದಂತಿ. ವದಂತಿಗೇನು? ಕೈಯಿಲ್ಲ, ಕಾಲಿಲ್ಲ, ಹಬ್ಬುತ್ತವೆ, ಸಾಯುತ್ತವೆ. ಹಳ್ಳಿಯಲ್ಲಿ ಮಾತ್ರ ಒಬ್ಬರ ತೋರುಬೆರಳಿಗೆ ಗುರಿಯಾಗುವ ಕೆಲಸ ಮಾದಿದವನಲ್ಲ. ಮಾತ್ರವಲ್ಲ, ಊರು ಮುಂದೆ ತರಬೇಕೆಂದವನು. ಊರು ಮುಂದೆ ತರುವದೆಂದರೇನು? ಈಗದು ಹಿಂದೆ ಉಳಿದೆದೆಯೆಂದು ಅರ್ಥವಲ್ಲವೇ? ಹಾಗೆ ಅದು ಹಿಂದೆ ಉಳೀದಿದೆಯೆಂದು ಗೊತ್ತಾದದ್ದೇ ಅವನೊಬ್ಬನಿಗೆ ಮಾತ್ರ. ಗೌಡ, ಬಸೆಟ್ಟಿ, ದತ್ತಪ್ಪ- ಇವರೇನು ಬೆಳಗಾವಿ ಅರಿಯದವರೇ? ಆದರೆ ಇವರ್‍ಯಾರಿಗೂ ತಮ್ಮ ಊರು ಬೆಳಗಾವಿಯಂತಿಲ್ಲ- ಎಂದು ಅನಿಸಲಿಲ್ಲ.
ಅವನಲ್ಲಿರುವ ಒಂದೇ ಒಂದು ಸಣ್ಣ ದೋಷವೆಂದು ಹೇಳಿದ್ದು ದತ್ತಪ್ಪನೊಬ್ಬ ಮಾತ್ರ- ದತ್ತಪ್ಪನಿಗೇನು? ಪಿತ್ಥವಾದರೆ, ಯಾವದಕ್ಕೂ ದೋಷ ಎಂದಾನು, ಜನ ಹೇಳಬೇಕಲ್ಲ?- ಹೇಳಲಿ, ಬಿಡಲಿ, ಒಬ್ಬನಿಗಂತೂ ದೋಷವಾಗಿ ಕಂಡದ್ದು ನಿಜತಾನೆ?- ಸರಿ- ಅದನ್ನು ನೀವೂ ದೋಷವೆಂದು ಒಪ್ಪಿಕೊಳ್ಳುವಿರಾದರೆ- ಭಾಷಣವಿಲ್ಲದೇ ಯಾವದೇ ಕಾರ್‍ಯ ಸುರುವಾಗಕೂಡದು. ಸುರುವಾದರೆ ಮುಗಿಯಕೂಡದು- ಎಂಬ ನಂಬಿಕೆ.

ಒಂದನೆಯ ಸಭೆ

ಬಹುಶಃ ಇದು ನಿಜವೋ ಏನೋ; ಯಾಕೆಂದರೆ ಪಂಚಾಯ್ತಿ ಆಗಿ ಒಂದೆರಡು ತಿಂಗಳಾಗಿರಬೇಕು – ತನ್ನ ಕನಸನ್ನು ನನಸಾಗಿಸುವ, ತನ್ನ ಹಳ್ಳಿಯನ್ನು ಬೆಳಗಾವಿಯಾಗಿಸುವ ಪ್ರಥಮ ಹೆಜ್ಜೆ – ಊರನ್ನು ಸ್ವಚ್ಛವಾಗಿಡುವ ಯೋಚನೆ ಹೊಳೆಯಿತು. ಅದಕ್ಕಾಗಿ ರಾತ್ರಿ ಕರಿಮಾಯಿಯ ಗುಡಿಯಲ್ಲಿ ಒಂದು ಸಭೆ ಕರೆಯಲಾಯಿತು.
ಊರವರು ಬಂದರೆ ಕಂಡದ್ದೇನು? ಸಾಲೆಯ ಟೇಬಲ್ ಇಲ್ಲಿಗೆ ಬಂದಿದೆ. ಅದರ ಹಿಂದೆ ಮಾಸ್ತರ ಕೂರುತ್ತಿದ್ದ ಕುರ್ಚಿಯಿದೆ. ಊರಿನಲ್ಲಿದ್ದುದು ಅದೊಂದೇ ಕುರ್ಚಿ. ಅದರ ಹಿಂದೆ ಗೌಡರ ಮನೆಯ ಕಾಳಿನ ಚೀಲ ಇಡುವ ಗಡಂಚಿಯಿದೆ. ಅದರ ಪಕ್ಕದಲ್ಲಿ ಗುಡಸೀಕರನ ಮನೆಯ ಗಡಂಚಿಯಿದೆ. ಪ್ರಶ್ನೋತ್ತರ ಮಾಸ್ತರ ಟೇಬಲ್ಲಿನ ಮುಂದೆ ನಿಂತು ಬಂದವರನ್ನೆಲ್ಲ “ಬರ್ರಿ, ಬರ್ರಿ” ಎಂದು ಸ್ವಾಗತಿಸುತ್ತಿದ್ದ. ಕೆಲವರು ಹೊಯ್ಕಿಗೆ ಬಂದರೆ ಕೆಲವರು ಕಾಳಜಿಯಿಂದ ಬಂದರು. ಅವಂತೂ ದತ್ತಪ್ಪ, ಬಸೆಟ್ಟಿ, ಬಾಳೂ ಪೂಜಾರಿಯಿಂದ ಮೊದಲುಗೊಂಡು ನಿಂಗೂ, ಹಜಾಮರ ಲಗಮನವರೆಗೆ ೫೦-೬೦ ಜನ ಬಂದರು. ಅಲ್ಲಿಯವರೆಗೆ ನಗಾರಿಖಾನೆ ಯಾ ಪಂಚಾಯ್ತಿ ಆಫೀಸಿನಲ್ಲಿದ್ದ ಗುಡಸೀಕರ ಹಾಗೂ ಅವನ ಮೆಂಬರರು ಸಾಲಾಗಿ ಬಂದು, ಮುಂದಿನ ಕುರ್ಚಿಯಲ್ಲಿ ಗುಡಸೀಕರನೂ ಹಿಂದಿನ ಗಡಂಚಿಗಳ ಮೇಲೆ ಒಂದರ ಮೇಲೆ ಇಬ್ಬಿಬ್ಬರಂತೆ ಮೆಂಬರರೂ ಕೂತರು.
ಕೆಲವರಿಗಾಗಲೇ ಅಸಮಾಧಾನವಾಯ್ತು. ಅದು ಪಾಪ, ಮಾಸ್ತರ ಕೂರೋ ಕುರ್ಚಿ; ಅದರ ಮೇಲೆ ಸ್ವತಃ ಗೌಡ ಕೂತಿರಲಿಲ್ಲ. ಗುಡಸೀಕರ ಅದರ ಮೇಲೆ ಕೂತಿದ್ದು ತಪ್ಪು ಎಂದು ದತ್ತಪ್ಪ ಒಳಗೊಳಗೇ ಅಸಮಾಧಾನಗೊಂಡ. ಅಷ್ಟರಲ್ಲಿ ಗುಡಸೀಕರ ಎದ್ದು “ಈಗ ಪ್ರಾರ್ಥನೆಃ ಶಿವಾಪುರ ಕನ್ನಡ ಗಂಡುಮಕ್ಕಳ ಶಾಲೆಯ ಮಕ್ಕಳಿಂದ” ಎಂದು ಹೇಳಿ ಕೂತ. ನಾಕೈದು ಅರಿಯದ ಹಸುಳೆಗಳು ಬಂದು ಸಾಲಾಗಿ ಕೂತವರತ್ತ ಮುಖಮಾಡಿ ನಿಂತು, ಕೈಮುಗಿದು –
ಜಯವೆಂದು ಬೆಳಗೂವೆ ಗುಡಸೀಕರ ರೀಗೆ
ಗುಡಸೀಕರ ರೀಗೆ ಜನನಾಯ ಕರಿಗೆ
ಜಯವೆಂದು ಬೆಳಗುವೆ||
ಎಂದು ಬೆದರಿದ ಅಪಸ್ವರದಲ್ಲಿ ಕಿರುಚಿದವು. ಆಮೇಲೆ ಸ್ವಾಗತ ಭಾಷಣ ಪ್ರಶ್ನೋತ್ತರ ಮಾಸ್ತರರಿಂದ. ಅದು ಮುಗಿದೊಡನೆ ಮಾಸ್ತರ ಹೋಗಿ ಒಂದು ದೊಡ್ಡ ಮಾಲೆ ತಂದು ಗುಡಸೀಕರನಿಗೆ ಹಾಕಿದ. ಅದಾದ ಮೇಲೆ ಸ್ವಲ್ಪ ಸಣ್ಣ ಸಣ್ಣ ಮಾಲೆಗಳನ್ನು ತಂದು ನಾಲ್ಕು ಜನ ಮೆಂಬರರಿಗೆ ಹಾಕಿದ. ಗುಡಸೀಕರನೇನೋ ಬೆಳಗಾವಿಯ ಸಭೆಗಳನ್ನು ನೋಡಿದವನಾದ್ದರಿಂದ ಮಾಲೆ ತೆಗೆದು ಮೇಜಿನ ಮೇಲಿಟ್ಟ. ಮೆಂಬರರು ಮಾತ್ರ ಹಾಕಿಕೊಂಡೇ ಕೂತರು, ಸಾಲಾಗಿ.
ಜನ ತಬ್ಬಿಬ್ಬಾದರು. ತಾವೇನು ನೋಡುತ್ತಿದ್ದೇವೆ, ಎಲ್ಲಿದ್ದೇವೆಂಬುದೇ ಕೆಲವರಿಗೆ ಮರೆತುಹೋಯ್ತು. ದತ್ತಪ್ಪನಿಗೆ ಹಿಡಿಸಲಾಗದ ನಗು. ಎಲ್ಲರಿಗೂ ಮಾಲೆ ಹಾಕಿ ಪ್ರಶ್ನೋತ್ತರ ಮಾಸ್ತರ ಕೆಳಗೆ ಕುಳಿತದ್ದು ನಿಂಗೂನಿಗೆ ಸರಿಬರಲಿಲ್ಲ. ಅದನ್ನು ಜೋರಿನಿಂದ ಹೇಳಿಯೂ ಬಿಟ್ಟ.
“ಮಾಸ್ತರ, ಪಾಪ ಎಲ್ಲರಿಗೂ ಮಾಲೀ ಹಾಕಿ, ನಿಮಗಽ ಇಲ್ಲಂದರ ಹೆಂಗರೀಽ? ನೀವೂ ಒಂದು ಹಾಕ್ಕೊಂಡ ಗಡಂಚೀ ಮ್ಯಾಲ ಕುಂದರ ಬಾರದ?”
ಎಂದ, ದತ್ತಪ್ಪ ನಗುತ್ತ.
“ಛೇ, ಛೇ ಅದ್ಹೆಂಗಾದೀತಪಾ? ಅವರು ಪಂಚಾಯ್ತಿ ಮೆಂಬರರು” ಅಂದ. ನಿಂಗೂನಿಗೆ ಸಮಾಧಾನವಾಗಲಿಲ್ಲ.
“ಆದರೇನಾತರೀ? ಆ ಕುರ್ಚೆ ಮಾಸ್ತರನ ಸಾಲ್ಯಾಗಿಂದಲ್ಲ” ಎಂದ. ಇದು ಹೀಗ ಮುಂದುವರಿದರೆ ಕಷ್ಟವೆಂದು ಗುಡಸೀಕರ ಭಾಷಣಕ್ಕೆ ಎದ್ದುನಿಂತು ನಿರರ್ಗಳವಾಗಿ, ಓತಪ್ರೋತವಾಗಿ ಒಂದೂವರೆ ತಾಸು ಮಾತಾಡಿದ. ಹಜಾಮರ ಲಗಮ ನಡುವೇ ತಡೆಯದಿದ್ದರೆ ಭಾಷಣ ಇನ್ನೂ ಎಷ್ಟು ಹೊತ್ತು ಸಾಗುತ್ತಿತ್ತೋ! ಈ ವರೆಗಿನ ಭಾಷಣದ ಸಾರಾಂಶ ಇಷ್ಟು:
“ಇಂಡಿಯಾ ಹಳ್ಳಿಗಳ ದೇಶ. ಈ ದೇಶದಲ್ಲಿ ಏಳು ಲಕ್ಷ ಹಲ್ಳಿಗಳಿವೆ. ಪಟ್ಟಣ, ಶಹರಗಳು ಬೆರಳೆಣಿಕೆಯಷ್ಟು ಮಾತ್ರ. ಬ್ರಿಟೀಷರು ನಮ್ಮ ದೇಶವನ್ನು ಆಳಿ ಹೊಲಗೆಡಿಸುತ್ತಿದ್ದಾರೆ. ಅವರು ನೀಚರು, ಪರಕೀಯರು. ಅವರನ್ನು ಹೊಡೆದೋಡಿಸಲೇಬೇಕು. ಪ್ರತಿಯೊಂದು ಹಳ್ಳಿಯೂ ಶಹರವಾಗಬೇಕು. ಅಂದರೇ ಈ ದೇಶದ ಉದ್ಧಾರ ಸಾಧ್ಯ. ಶಹರವಾಗಬೇಕಾದರೆ ಏನು ಮಾಡಬೇಕು? ಹಳ್ಳಿಯನ್ನು ಸ್ವಚ್ಛವಾಗಿಡಬೇಕು. ಬೆಳಗಾವಿಯನ್ನು ನೋಡಿರಿ. ಅಲ್ಲಿನ ರಸ್ತೆಯ ಮೇಲೆ ತುಪ್ಪ ಬಿದ್ದರೂ ಬಳಿದುಕೊಂಡು ತಿನ್ನಬೇಕು, ಅಷ್ಟು ಸ್ವಚ್ಛ…..
ಹಜಾಮರ ಲಗಮ ಭಾಷಣಕ್ಕೆ ಅಡಿಮಾಡಿದ್ದೇ ಈ ಭಾಗದಲ್ಲಿ. ಅವನಿಗಾಗಲೇ ಸಭಿಕರು ಸುಮ್ಮನೆ ಕೂತಿದ್ದಕ್ಕೆ ಆಶ್ಚರ್ಯವಾಗಿತ್ತು. ತಡೆಯದೇ ಎದ್ದುನಿಂತು-
“ಅಲ್ಲಪಾ ಗುಡಸೀಕರ, ಬೆಳಗಾವಿ ಮಂದಿಗೇನೋ ಸಾಕಷ್ಟು ತುಪ್ಪ ಸಿಗತೈತಿ, ರಸ್ತಾದ ಮ್ಯಾಲ ಚೆಲ್ಲಿ ನೆಕ್ಕಿ ತಿಂತಾದ್ದಾರು. ನಮಗ ತಿನ್ನಾಕಽ ತುಪ್ಪಿಲ್ಲ. ಇನ್ನು ರಸ್ತಾದ ಮ್ಯಾಲ ಯಾಕ ಚೆಲ್ಲೋಣು?” ಅಂದ. ಒಂಥ ಅಜ್ಞಾನಕ್ಕೆ ಏನು ಹೇಳಬೇಕು?
“ಅಲ್ಲಲೇ, ಬೆಳಗಾಂವ್ಯಾಗಿ ರಸ್ತಾ ಎಷ್ಟು ಹಸನು ಇರ್‍ತಾವಂತ ಹೇಳಾಕ ಹೇಳಿದೆ” ಎಂದ ಗುಡಸೀಕರ.
“ಹೌಂದಪಾ,ತುಪ್ಪಾ ಚೆಲ್ಲಿ ಚೆಲ್ಲಿ ನೆಕ್ಕತಾರ; ಅದಕ್ಕಽ ರಸ್ತಾ ಹಸನ ಇರ್‍ತಾವ, ನಾವ್ಯಾಕ ಹಾಂಗ ಮಾಡಬೇಕು?”
“ಏ ಲಗಮಾ, ಬಾಯಿ ಮುಚ್ಚಿ ಕುಂದರಲೆ?”
-ಎಂದು ಹೇಳಿ ಮತ್ತೆ ಭಾಷಣ ಸುರುಮಾಡಿದ. ಮುಂದೆ ಏನೇನು ಹೇಳಿದನೋ! ದತ್ತಪ್ಪ ಒಳಗೊಳಗೇ ನಗುತ್ತಿದ್ದ. ಆದರೆ ಉಳಿದ ಮಂದಿ ಲಗಮ ಹೇಳಿದ್ದೇ ಬರೋಬರಿ ಎಂದರು. ರಸ್ತೆಯ ಮೇಲೆ ತುಪ್ಪ ಚೆಲ್ಲಿ ನೆಕ್ಕುವದೆಂದರೇನು? ಯಾವದೋ ಒಂದು ಜಾತಿಯವರು ಹಾಗೆ ಮಾಡುತ್ತಿದ್ದಾರು. ಅದು ದೇವರ ಹರಕೆ ಇದ್ದೀತು. ಕುಲದ ಪದ್ಧತಿ ಇದ್ದೀತು. ಅದು ನಮ್ಮ ಕುಲದ ಪದ್ಧತಿಯಲ್ಲಿಲ್ಲ ಎಂದಮೇಲೆ ನಾವ್ಯಾಕೆ ನೆಕ್ಕಬೇಕು? ಇದರ ವಿಚಾರಧಾರೆ ನಿಂತದ್ದು ಗುಡಸೀಕರನ “ನಮ್ರ ಸೂಚನೆ” ಕೇಳಿ ಬಂದಾಗ:
“ಈ ಊರನ್ನ ನಾವು ಬೆಳಗಾವಿಯಂತೆ ಸ್ವಚ್ಛವಾಗಿಡಬೇಕು. ಆದ್ದರಿಂದ ನಾವೀಗ ದಿನಾಲು ಊರು ಗುಡಿಸುವವರನ್ನು ನೇಮಿಸಿಕೊಳ್ಳುತ್ತೇವೆ. ಅದಕ್ಕಾಗಿ ಮನೆಗೆ ಒಂದೊಂದು ರೂಪಾಯಿ ತೆರಿಗೆ ಕೊಡಬೇಕು.”
ತೆರಿಗೆ ಮಾತು ಬಂತೋ ಇಲ್ಲವೋ?-ಒಬ್ಬೊಬ್ಬರೇ ಎದ್ದು ಕುಂಡಿ ಜಾಡಿಸಿಕೊಳ್ಳುತ್ತ ಹೊರಟರು. ಗುಡಸೀಕರ ಒಬ್ಬಿಬ್ಬರ ಹೆಸರು ಹಿಡಿದು ಕೂಗಿ ಕೂರಿಸಲೆತ್ನಿಸಿದ. “ಇಕ್ಕಾ ಬರ್‍ತೀನಿ” ಎಂದು ಹೇಳುತ್ತ ಹೊರಟರು. ಇದ್ದವರನ್ನಾದರೂ ಕೂರಿಸಬೇಕಾದರೆ ದತ್ತಪ್ಪ ಏಳಬೇಕಾಯಿತು.
“ಅಲ್ಲಪಾ ಗುಡಸೀಕರ, ಮನೀಗೊಂದೊಂದ ರೂಪಾಯಿ ಕೊಡೋ ಬದಲು, ಎಲ್ಲಾರೂ ತಮ್ಮ ತಮ್ಮ ಮನೀ ಅಂಗಳಾ ತಪ್ಪದ ಗುಡಿಸಿಕೊಂಡರ ಹೆಂಗ?”
-ಎಂದ. ಕೂತವರೆಲ್ಲ “ಹೌದೆಂಬೋ ಮಾತಿದು” ಎಂದು ಕೂಡಲೇ ಮೆಚ್ಚುಗೆ ಸೂಚಿಸಿದರು. ಗುಡಸೀಕರನಿಗೆ ಅವಮಾನವಾಯ್ತು.
“ಅಲ್ಲರೀ ಪಂಚಾಯ್ತಿ ಆಫಿಸಂದರ ಅದಕ್ಕೊಬ್ಬ ಸಿಪಾಯಿ ಬೇಕು. ವಾರಕ್ಕೆರಡು ಬಾರಿ ಮೀಟಿಂಗ್ ಇರ್‍ತಾವ. ಅದರ ಲೆಕ್ಕಪತ್ರ ಬರ್‍ಯಾಕ ಒಬ್ಬ ಕಾರಕೂನ ಬೇಕು. ಅದೆಲ್ಲಾ ಖರ್ಚು ಎಲ್ಲಿಂದ ತರಬೇಕು?”-ಎಂದ. ಜನ ಹುಚ್ಚರೋ? “ಓಹೋ ಇವರು ದಿನಾಲೂ ಮೀಟಿಂಗ್ (ಇಸ್ಪೀಟಾಟ) ಮಾಡ್ತಾರಲ್ಲಾ; ಆ ಲೆಕ್ಕ ಬರಕೊಳ್ಳಾಕ ಒಬ್ಬ ಕಾರಕೂನ, ಚಾ ಮಾಡಿಕೊಡಾಕ ಒಬ್ಬ ಸಿಪಾಯಿ ಬೇಕಂತ. ಹೋ ಹೊ ಹೊ” ಎನ್ನುತ್ತ ಉಳಿದವರೂ ಹೋಗಿಬಿಟ್ಟರು.
ಸಭಿಕರ ಪೈಕಿ ಈಗ ಉಳಿದವರೆಂದರೆ ಪ್ರಾರ್ಥನಾ ಪದ್ಯ ಹೇಳಿದ ಹುಡುಗರು; ಪಾಪ, ಎದ್ದು ಹೋದರೆ ಮಾಸ್ತರ ಹೊಡೆಯುತ್ತಾನೆಂದು ಅವು ಎರಡು ಘಂಟೆಯಿಂದ ಕೈ ಕಟ್ತಿಕೊಂಡೇ, ಹೆದರಿ ಕಣ್ಣು ಕಿಸಿದುಕೊಂಡೇ ಕೂತಿದ್ದವು. ಇನ್ನೊಬ್ಬ ಪ್ರಶ್ನೋತ್ತರ ಮಾಸ್ತರ. ಗುಡಸೀಕರನಿಗೆ ಅವಮಾನವಾಗಿರಬಹುದು. ಆದರೆ ಹಿಂದಿನ ಸಾಲಿನಲ್ಲಿ ಮಾಲೆ ಹಾಕಿಕೊಂಡು ಕೂತ ಕಳ್ಳ ಸಿದರಾಮನಿಗೆ ಮಾತ್ರ ವಿರಾಸೆಯಾಯಿತು. ಯಾಕೆಂದರೆ ಅವನೇ ಕೊನೆಗೆ ವಂದನಾರ್ಪನೆ ಮಾಡಬೇಕಾದ್ದು. ಮಾಸ್ತರರಿಂದ ಬರಸಿಕೊಂಡು ಈಗ ೧೫ ದಿನಗಳಿಂದ ಬಾಯಿಪಾಠ ಮಾಡಿದ್ದ. ಅದು ಹತ್ತು ಪುಟದಷ್ಟಿತ್ತು. ಮೊದಲಿನ ಐದು ಪುಟಗಳಲ್ಲಿ ಗುಡಸೀಕರನ ವರ್ಣನೆಯೂ, ಆರನೇ ಪುಟದಲ್ಲಿ “ನಮ್ಮ ಜನನಾಯಕನಾದ ಗುಡಸೀಕರ ಸಾಹೇಬರಿಗೆ ಅಪಾರ ಬೆಂಬಲ ಸುಚಿಸಿದ್ದಕ್ಕೆ ಜನಗಳಿಗೆ ವಂದನಾರ್ಪಣೆಯೂ” ಇತ್ತು.

ಎರಡನೆಯ ಸಭೆ

ಪಂಚಾಯ್ತಿ ಆಗಿ ಆರು ತಿಂಗಳಾಗಿತ್ತು. ಅಥವಾ ಅಂದಾಜು ಅದರ ಎಡಬಲ ಇದ್ದೀತು. ಆಗೊಂದು ಘಟನೆ ನಡೆಯಿತು. ಗುಡಸೀಕರನಿಗೆ ಗೌಡನ ಬಗ್ಗೆಯೂ ಅಸಮಧಾನವಾಯ್ತು.
ಬೆಳಗಾವಿಯಿಂದ ಕ| ಗಂ| ಸಾಲೆಗೆ ಇನ್‌ಸ್ಪೆಕ್ಟರೊಬ್ಬರು ಬಂದಿದ್ದರು, ರಾತ್ರಿ ಸಾಲೆ ಸುರು ಮಾಡಲಿಕ್ಕೆ. ಬಂದವರು ಗುಡಸೀಕರನ ಮನೆಯಲ್ಲೇ ಉಳಿದುಕೊಂಡರು. ಹಳ್ಳಿಯ ಹುಂಬರು ಈ ಮೂಲಕ ಒಂದಿಷ್ಟು ಒಳ್ಳೆಯದಾಗುತ್ತಲ್ಲಾ, ಅದೂ ತನ್ನಿಂದ-ಎಂದು ಗುಡಸೀಕರನೂ ಹಿರಿಹಿರಿ ಹಿಗ್ಗಿಬಿಟ್ಟ. ಆ ದಿನ ರಾತ್ರಿ ಸಭೆ ಕರೆಯಲಾಯಿತು. ಈ ಸಭೆಗೆ ಗೌಡನೂ ಬಂದಿದ್ದ.
ಈ ಸಲದ ಸಭೆ ಕ| ಗಂ| ಸಾಲೆಯಲ್ಲಿತ್ತು. ಟೇಬಲ್ಲಿನ ಹಿಂದೆ ಒಂದು ಕುರ್ಚಿ, ಒಂದು ಗಡಂಚಿ ಮಾತ್ರವಿತ್ತು. ಗೌಡ ದತ್ತಪ್ಪ ಹಿರಿಯರು ಹೋಗಿ ಕೆಳಗೆ ಹಾಸಿದ ಗುಡಾರದ ಮೇಲೆ ಕೂತರು. ಊರಿಗಿದ್ದದ್ದು ಇದೊಂದೇ ಕುರ್ಚಿ ಎಂಬ ವಿಚಾರ ನಿಮಗೆ ಗೊತ್ತಿದೆ. ಜನ ಸೇರಿಯಾದ ಮೆಲೆ ಗುಡಸೀಕರ ಹಾಗೂ ಇನ್ಸ್‌ಪೆಕ್ಟರ್ ಬಂದರು. ಗುಡಸೀಕರ ಮುಂದೆ ಬಂದು ಕುರ್ಚಿಯ ಮೇಲೆ ಕೂತ. ಇನ್ಸ್‌ಪೆಕ್ಟರ್ ಗಡಂಚಿ ಬಿಟ್ಟ. ಈ ಹೊಸಬಗೆಯ ಪೀಠ ನೋಡಿ, ಅದರ ಅದ್ರವಾದ ಮೂರೇ ಕಾಲು ನೋಡಿ ಇನ್ಸ್‌ಪೆಕ್ಟರರಿಗೆ ಗಾಬರಿಯಾಯಿತೋ ಏನೋ, ಅದನ್ನು ಬಿಟ್ಟು ಅವರು ಜನಗಳೊಡನೆ ಕೆಳಗೆ ಕೂರಲು ಬಂದುಬಿಟ್ತರು. “ಏ ತಮ್ಮಾ ಅವರೆಷ್ಟಂದರೂ ನಮ್ಮೂರಿಗೆ ಬಂದವರು. ಅವರು ಕುರ್ಚಿಮ್ಯಾಲೆ ಕುಂದರಲಿ ನೀ ಬೇಕಾದರ ಗಡಂಚಿಮ್ಯಾಲ ಕುಂದರು” ಎಂದ. ಈ ಮಾತು ಕೇಳಿ ಗುಡಸೀಕರ ಸುಟ್ತು ಹುರುಪಳಿಸಿದ ಅರಳಿನಂತಾದ. ಬಂದವರ ಮುಂದೆ ಈ ರೀತಿ ಅವಮಾನವೆ? ತಾನು ಕಲಿತದ್ದೆಷ್ಟು? ಈ ಇನ್ಸ್‌ಪೆಕ್ರ‌ಎ ಕಲಿತದ್ದೆಷ್ಟು? ಈ ಹುಂಬರಿಗೆ ಇದೆಲ್ಲ ತಿಳಿಯಬಾರದೆ? ಎಲ್ಲಾ ಒಂದೇ ಊರಿನವರೆಂದ ಮೇಲೆ ತಮ್ಮವನನ್ನು ಮೇಲೆತ್ತಬೇಕೋ? ಹೀಗೆ ಅವಮಾನಿಸಿ ಮೇಲೆ ಹೋಗುವವನನ್ನು ಕೆಳಕ್ಕೆ ತಳ್ಳಬೇಕೋ? ಏನೇ ಬುದ್ಧಿ, ರೀತಿ ಹೇಳಲಿ. ಬಂದವನ ಮುಂದೆ ಹೀಗೆ ಹೇಳುವದೆ? ಹೀಗೆ ಆಲೋಚನೆ ಮಾಡಿದಷ್ಟು ಕೋಪ ಬಂತು. ಕೋಪ ಮಾಡುತ್ತ ಕೂರುವ ಸಮಯವಲ್ಲ. ಕೆಳಗೆ ಕುಳಿತ ಇನ್ಸ್‌ಪೆಕ್ಟರರಿಗೆ “ಬರ್ರಿ ಬರ್ರಿ ಮ್ಯಾಲ ಬರ್ರಿ” ಎಂದು ಕೂತಲ್ಲಿಂದಲೇ ಹೇಳುತ್ತ ಕೂತ, ತಾನು ಗೌದನ ಮಾತಿಗೆ ಸೊಪ್ಪು ಹಾಕದವನಂತೆ.
ಜನಗಳಿಗಾದರೆ ಗೌಡನ ಮಾತು ಸರಿ ಅನ್ನಿಸಿತು. ಊರಿಗೆ ಬಂದವರೆಂದ ಮೇಲೆ ಎಲ್ಲರೂ ಗೌರವ ಕೊಡಬೇಕಾದ್ದೇ. ನಾಳೆಯಿಂದ ಕೂರಬಹುದಲ್ಲ? ಕುರ್ಚಿಯೇನು ಓಡಿಹೋಗುತ್ತದೆಯೆ? ಅಥವಾ ಕೂತವನೇನು ತನ್ನೊಂದಿಗೆ ಕುರ್ಚಿ ಒಯ್ಯುತ್ತಾನೆಯೇ? ಅದೂ ಅಲ್ಲದೆ ಬಂದವರಿಗೆ ಪಾಪ, ಆಗಲೇ ಗುಡಸೀಕರನ ಅಪ್ಪನಷ್ಟು ವಯಸ್ಸಾಗಿದೆ. ವಯಸ್ಸಿಗಾದರೂ ಕಿಮ್ಮತ್ತು ಕೊಡಬೇಕಲ್ಲ? ಅಷ್ಟರಲ್ಲಿ ದತ್ತಪ್ಪ ಎದ್ದು ನೇರ ಹೋಗಿ ಇನ್ಸ್‌ಪೆಕ್ಟರ್ ಬಗಲಲ್ಲಿ ಕೈ ಹಾಕಿ “ಬರ್ರಿ ಸಾಹೇಬರ, ನೀವು ಇಲ್ಲಿ ಕೂತರ ಹೆಂಗ? ಗುಡಸೀಕರ ಎಷ್ತಂದರೂ ನಮ್ಮ ಹುಡುಗ ಬರ್ರಿ” ಎಂದು ಎಬ್ಬಿಸಿ ಟೇಬಲಿನತ್ತ ಕರೆದೊಯ್ದ. ಈಗ ಗುಡಸೀಕರ ಎದ್ದು ಗಡಂಚಿಯ ಮೇಲೆ ಕೂರಲೇ ಬೇಕಾಯಿತು. ಯಥಾಪ್ರಕಾರ ಪ್ರಶ್ನೋತ್ತರ ಮಾಸ್ತರನ- ಇವನಿಗೆ ಪ್ರಶ್ನೋತ್ತರ ಮಾಸ್ತರನೆಂದು ಹೆಸರು ಹ್ಯಾಗೆ ಬಂತೆಂಬುದನ್ನು ಆಮೇಲೆ ಸಂದರ್ಭಾನುಸಾರ ಹೇಳೋಣ-ಸ್ವಾಗತ ಭಾಷಣವಾದ ಮೇಲೆ ಅಧ್ಯಕ್ಷರ ಅಂದರೆ ಗುಡಸೀಕರನ ಅಪ್ಪಣೆ ಮೇರೆಗೆ ಇನ್ಸ್‌ಪೆಕ್ಟರರು ಅನಕ್ಷರಸ್ಥ ರೈತರಿಗೆ ರಾತ್ರಿ ಸಾಲೆ ಕಲಿಸುವ ಸರ್ಕಾರಿ ಯೋಜನೆಯ ಬಗ್ಗೆ ಮಾತಾಡಿದರು. ಇದಕ್ಕೆ ನೀವೆಲ್ಲ ಮುಂದಾಗಬೇಕೆಂದರು. ಗುಡಸೀಕರನಂಥ ಮೇಧಾವಿಗಳು ನೇತಾರರಾಗಿರುವ ಈ ಊರು ಬೇರೆ ಊರುಗಳಿಗಿಂತ ಹಿಂದೆ ಬೀಳಬಾರದು ಎಂದರು. ಇಂದಿನಿಂದಲೇ ಇಲ್ಲೇ, ನಿಮ್ಮ ಹೆಸರು ದಾಖಲು ಮಾಡಿಕೊಳ್ಳುತ್ತೇನೆ “ಲೋ ಮುದುಕಪ್ಪಾ, ನಿನ್ನ ಹೆಸರೇನು, ಹೇಳು” ಎಂದು ಗೌಡನನ್ನೇ ಕೇಳಿಬಿಟ್ಟರು.
ಕೂತಮಂದಿಯೇನು ಗುಡಸೀಕರನಿಗೂ ಕಸಿವಿಸಿಯಾಯ್ತು. ಸುಮ್ಮನೆ ಕುತರೆ ಗದ್ದಲವಾಗುತ್ತಿತ್ತೋ ಏನೊ. ಗೌಡ ಚೌಕಾಶಿ ಮಾಡದೇ “ಪರಗೌಡ” ಎಂದುಬಿಟ್ಟ. ಇದರಿಂದ ಇನ್ಸ್‌ಪೆಕ್ಟರರಿಗೆ ಭಾರೀ ಸ್ಪೂರ್ತಿ ಬಂತು. “ಏ ಅಜ್ಜಾ ನಿನ್ನ ಹೆಸರ್‍ಹೇಳು” ಎಂದು ದತ್ತಪ್ಪನನ್ನು ಕೇಳಿದ. ದತ್ತಪ್ಪ ಸುಮ್ಮನೇ ತನ್ನ ಹೆಸರು ಹೇಳಿದ. ಇಬ್ಬರೂ ಓದುಬರಹ ಬಲ್ಲವರೇ. ಆದರೂ ಹೆಸರು ಕೊಡುವದೆಂದರೆ? “ಅವರಿಗಿ ಓದಬರ್‍ಯಾಕ ಬರತೈತಿರಿ” ಎಂದು ಗುಡಸೀಕರ ಹೇಳಿದ. ಇನ್ಸ್‌ಪೆಕ್ಟರಿಗಾಗಲೇ ಅನುಮಾನ ಬಂತು. ಕೂಡಲೇ ಗುಡಸೀಕರನ ಕೈಗೇ ಪೆನ್ನುಕೊಟ್ಟು “ನೀವ ಬರದು ಬಿಡ್ರಿ” ಎಂದ. ಗುಡಸೀಕರ ಅಲ್ಲಿ ಕೂಡಿದ ಅನೇಕರ ಹೆಸರು ಬರೆದು ಅಧ್ಯಕ್ಷ ಭಾಷಣಕ್ಕೆ ಎದ್ದ.

“ಇಂಡಿಯಾ ದೇಶ, ಹಳ್ಳಿಗಳ ದೇಶ”ದಿಂದ ಸುರುವಾಗಿ ಬೆಳಗಾವಿಗೆ ಬಂತು. ಈ ಸಲ ತುಪ್ಪದ ಉದಾಹರಣೆ ಮಾತ್ರ ಬರಲಿಲ್ಲ. ಒಟ್ಟು ಸಭೆಯ ಕಾರ್‍ಯಕಲಾಪದಿಂದ ಗೌಡನಿಗೆ ಅಸಮಾಧಾನವೇನೂ ಆಗಲಿಲ್ಲ. ಆದರೆ ಗುಡಸೀಕರನ ಮನಸ್ಸಿನಲ್ಲಿ ಅದು ಗಟ್ಟಿಗೊಂಡು ಕೂತುಬಿಟ್ಟಿತು. ಕೊನೆಯ ವಂದನಾರ್ಪಣೆ ಮಾಸ್ತರನೇ ಮಾಡಿದ. ಅದರಲ್ಲಿ ಗುಡಸೀಕರನ ಬಗ್ಗೆ ಹೇಳುತ್ತ “ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ” ಇತ್ಯಾದಿ ಹೇಳಿ ಹಳ್ಳಿಯ ಉದ್ಧಾರಕ್ಕೆ ಬಂದ ಅವತಾರಿ ಪುರುಷನೇ ಗುಡಸೀಕರ ಎಂದೂ ಹೇಳಿಬಿಟ್ಟ. ಈ ಸಭೆಗಳಿಂದಾದ ಅಸಮಾಧಾನ ನಿಂಗೂನ ಕೇಸಿನಲ್ಲಿ ಸ್ಫೋಟಗೊಂಡಿತು.

ನಿಂಗೂನ ಕಥೆ
ನಿಂಗೂ ಈ ಊರಿನ ನಪುಂಸಕ. ಇತ್ತ ಪುರುಷನಲ್ಲದ, ಅತ್ತ ಹೆಂಗಸಲ್ಲದ ಎರಡರಲ್ಲಿ ಒಂದೂ ಆಗದ ನಿರ್ಭಾಗ್ಯ. ಹಾಗಂತ ಆ ಬಗ್ಗೆ ಅವನಿಗೆ ದುಃಖವಿದೆಯೆಂದಲ್ಲ. ಹಾಗೆ ನೋಡಿದರೆ ಇಡೀ ಊರಲ್ಲಿ ಜನರ ವಯಸ್ಸು, ಅಂತಸ್ತು, ಲಿಂಗಭೇದಗಳನ್ನು ಗಮನಿಸದೆ ಚೇಷ್ಟೆ ಮಾದಿ ನಗಬಲ್ಲವನು ಅವನೊಬ್ಬನೇ. ತಾಯಿ ಇರಲಿಲ್ಲ. ತಂದೆ ಗಟಿವಾಳಪ್ಪನೇ ತಂದೆ, ತಾಯಿ ಎರಡೂ ಆಗಿ ಹುಡುಗನನ್ನು ಬೆಳೆಸಿದ್ದ. ಆದರೆ ಹುಡುಗನ ಚೇರಾಪಟ್ಟೆ, ನಡವಳಿಕೆ ದೊಡ್ಡವನಾದಂತೆ ಹೆಂಗಸರದೆಂದು ಸ್ಪಷ್ಟವಾಗತೊಡಗಿತು. ಸರಿಕರು ಚೇಷ್ಟೆ ಮಾಡಿದರು, ದೊಡ್ಡವರು ಬೈದರು; ಆದೇನು ರಿಪೇರಿ ಆಗಲಿಲ್ಲ. ನಿಂಗ್ಯಾ ಇದ್ದದ್ದು ನಿಂಗಿ ಎಂದೂ ಆಗದೆ ಎರಡರ ನಡುವಿನ ನಿಂಗೂ ಆದದ್ದು ಹೀಗೆ.
ಮದುವೆ ಮಾಡಿದರೆ ಎಲ್ಲ ಸರಿ ಹೋಗುತ್ತದೆಯೆಂದು ಜನ ಗಟಿವಾಳಪ್ಪನಿಗೆ ಬುದ್ಧೀ ಹೇಳಿದರು. ಅವನಿಗೂ ಗಂಡು ರೊಟ್ಟಿ ದಿಂಡು ಬೇಳೆ ತಿಂದು ಸಾಕಾಗಿತ್ತು. ಬೇಗನೆ ಮನೆಗೆ ಸೊಸೆ ಬಂದರೆ ಒಂದಿಷ್ಟು ಬೆಂದ ಅಡಿಗೆ ತಿನ್ನಬಹುದಲ್ಲಾ ಎಂದೋ, ಮಗ ಸುಧಾರಿಸಬಹುದೆಂದೋ ಅಂತೂ ತನ್ನ ಹೆಂಡತಿಯ ಸಂಬಂಧಿಕರಲ್ಲಿಯೇ ಒಂದು ಕನ್ಯಾ ಶೋಧಿಸಿ ಮಗನಿಗೆ ಅಂದರೆ ಸದರಿ ನೀಂಗೂನಿಗೆ ಮದುವೆ ಮಾಡಿಬಿಟ್ಟ.
ಮದುವೆ ಮಾಡುವದೇನೋ ತನ್ನ ಕೈಯಲ್ಲಿತ್ತು, ಮಾಡಿದ. ಮುಂದೆ? ಸೊಸೆ, ಅವಳ ಹೆಸರು ಗೌರಿ, ನಡೆಯಲಿಕ್ಕೆ ಬಂದಳಲ್ಲ, ಒಂದೆರಡು ದಿನ ನಿಂಗೂ ಮನೆಯಲ್ಲಿ ಮಲಗಿದ. ಆ ಮಾರನೇ ದಿನದಿಂದ ಮತ್ತೆ ಹೊರಗಡೆ ಕಟ್ಟೆಯ ಮೇಲೇ ಮಲಗತೊಡಗಿದ. ಹಬ್ಬಕ್ಕೆಂದು ತೌರಿಗೆ ಹೋದ ಗೌರಿ ತನಗೆ “ರಾತ್ರಿ ಸುಖ” ಇಲ್ಲವೆಂದು ನೆಪ ಹೇಳಿ ಗಂಡನ ಮನೆಗೆ ತಿರುಗಿ ಬರಲು ನಿರಾಕರಿಸಿದಳು. ಗಟೆವಾಳಪ್ಪನೇ ಏನೇನೋ ಹತ್ತು ಸುಳ್ಳು ಹೇಳಿ ಕರೆತಂದಾಯಿತು.
ಮತ್ತೆ ಅದೇ ಸುಖ. ಆದರೆ ಆಮೇಲೆ ಸೊಸೆ ಮತ್ತೆ ತೌರು ನೆನೆಸಲಿಲ್ಲ. ನಿಂಗೂ ಒಂದು ದಿನವೂ ರಾತ್ರಿ ಮನೆ ಸೇರಲಿಲ್ಲ. ಊರಲ್ಲಿ ಗಟಿವಾಳಪ್ಪ ಸೊಸೆಯನ್ನು ಇಟ್ಟುಕೊಂಡಿದ್ದಾನೆಂದು ಸುದ್ದಿ ಕೇಳಿ ಬರತೊಡಗಿದವು. ಸರಿಕರು ನಿಂಗೂನಿಗೆ ಛೀ ಅಂದರು, ಥೂ ಅಂದರು. ಏನಂದರೂ ನಿಂಗೂನಿರಂಬಳಾಗಿ ಹೊರಗೇ ಮಲಗುತ್ತಿದ್ದ. ನಿಂಗೂ ಈ ಬಗ್ಗೆ ಯೋಚಿಸಲಿಲ್ಲವೆಂದಲ್ಲ. ಮುಖದ ಗೆರೆ ಕಾಣಿಸಿದಂತೆ ಗೆರೆ ಕೊರೆಯುವ ಚಿಂತೆ ಕಾಣಿಸುತ್ತದೆಯೇ? ‘ಇದರಲ್ಲಿ ಪಾಪ, ಗೌರಿಯ ತಪ್ಪೇನಿದೆ? ಇರೋ ತಪ್ಪೆಲ್ಲಾ ಅಪ್ಪಂದು. ಅಪ್ಪನಾಗಿ ಸೊಸೆಯನ್ನೇ ಸೇರುತ್ತಾನಲ್ಲಾ, ನಾಚಿಕೆ ಬೇಡವೇ? ಆಗಲೇ ಗೋರಿಗೆ ಹೋಗೋ ವಯಸ್ಸಾಯಿತು. ಒಟ್ಟು ತಾನು ಮದುವೆಗೆ ಒಪ್ಪಿದ್ದೇ ತಪ್ಪು. ತಾನೆಲ್ಲಿ ಒಪ್ಪಿದೆ? ಅಪ್ಪನೇ ಅಲ್ಲವೇ ಒತ್ತಾಯದಿಂದ ಒಪ್ಪಿಸಿದ್ದು? ಆತ ಹಾಗೆ ಯಾಕೆ ಒತ್ತಾಯ ಮಾಡಿದ ಅಂತ ಈಗ ತಿಳಿಯುತ್ತದೆ. ಮದುವೆ ಮಾಡಿಕೊಳ್ಳದಿದ್ದರೆ ಈ ಅಪವಾದವಾದರೂ ಇರುತ್ತಿರಲಿಲ್ಲ. ಈಗ ತನ್ನ ಹೆಸರು; ತಂದೆಯ ಬಾಯಿಗೆ ಮೊಸರು’!
ಹೀಗೆ ಯೋಚಿಸುವಾಗ ಸಿಟ್ಟು ಬರುತ್ತಿತ್ತು. ಆದರೆ ಒಳಗೊಳಗೆ ಇದಕ್ಕೆಲ್ಲ ತಾನೇ ಜವಾಬ್ದಾರಿಯೆಂಬ ಅರಿವೂ ಮುಳ್ಳಾಗಿ ಚುಚ್ಚುತ್ತಿತ್ತು; ಸಾಲದ್ದಕ್ಕೆ ಗೌರಿ ಗರ್ಭಿಣಿ ಬೇರೆ ಆಗಿಬಿಟ್ಟಳು. ಈಗ ಮಾತ್ರ ನಿಂಗೂನಿಗೆ ಹಿಂಸೆಯಾಗತೊಡಗಿತು. ಮಂದಿಯ ಮಾತು ಚುಚ್ಚತೊಡಗಿದವು.
ಒಂದು ದಿನ ಅಂದರೆ ಕರಿ ಬೇಟೆ ನಾಳೆ ಇದೆಯೆಂದರೆ ಇಂದು ಮಧ್ಯಾಹ್ನದ ಸಮಯ, ತೋಟದ ಗುಡಿಸಲಲ್ಲಿ ನಿಂಗೂ ಕಂಬಳಿ ಹೊದ್ದುಕೊಂಡು ದಣಿದು ಮಲಗಿದ್ದ. ದಣಿಯಲಿಕ್ಕೆ ಕೆಲಸ ಎಲ್ಲಿ ಮಾಡಿದ್ದ? ಯಾರೋ ಚುಚ್ಚಿ ಮಾತಾನಾಡಿದ್ದರು. “ಹುಟ್ಟುವ ಕೂಸು ತಮ್ಮನೋ? ಯಾ ಮಗನೋ?” ಎಂದು. ತನ್ನ ಹೆಂಡತಿಯ ಯಾ-ತಾಯಿಯ ಬಗೆಗೆ ಉತ್ತರ ಕೊಡಲಾರದೆ ಅವಮಾನವನ್ನು ಸಹಿಸಲಾಗದೇ ಕಂಬಳಿ ಹೊದ್ದುಕೊಂಡು ಸುಮ್ಮನೇ ಬಿದ್ದುಕೊಂಡಿದ್ದ. ಹೊಲದಲ್ಲಿ ಹೆಂಡತಿಯೆಂಬಾಕೆ ಇದ್ದಳು. ತಂದೆಯೂ ಇದ್ದ. ಸ್ವಲ್ಪ ಹೊತ್ತಾದ ಮೇಲೆ ಹೆಂಡತಿ ಗುಡಿಸಲಲ್ಲಿ ಬಂದಳು. ಮುದುಕ ಇವಳು ಕೆಲಸ ಮಾಡುತ್ತಿದ್ದುದಕ್ಕೆ ಸಿಟ್ಟು ಮಾದಿ “ಆರಾಮ ತಗೋ” ಎಂದು ಬಾಯಿ ಮಾಡುತ್ತ ಒಳಗೆ ಬಂದ. ಹೊದ್ದ ಕಂಬಳಿಯ ತೂತಿನೊಳಗಿಂದ ನಿಂಗೂನಿಗೆ ಇವರ ವ್ಯವಹಾರವೆಲ್ಲ ಕಾಣಿಸುತ್ತಿತ್ತು. ಬಸುರಿನ ಭಾರಕ್ಕೆ ಬಾಡಿದ್ದ ಗೌರಿ ಕಟ್ಟೆಯ ಮೇಲೆ ಹಾಗೇ ಅಡ್ಡಾದಳು. ಮುದುಕ ಸುಮ್ಮನಿರದೇ “ಯಾಕ? ದಣಿವಾತೇನ?” ಎನ್ನುತ್ತ ಸಮೀಪ ಹೋಗಿ ಅವಳ ಕಾಲು ತಿಕ್ಕತೊಡಗಿದ. ಕಾಲಮೇಲೆ ಕೈಯಾಡಿಸುತ್ತ ಬಾಲವಾಡಿಸುವ ನಾಯಾಗಿ, ಅವಳ ಕಾಲಿಗಂಟಿದ ಧೂಳಾಗಿ ಧೂಳಿಗಂಟಿದ ಹುಳುವಾಗಿ ಜೊಲ್ಲು ಸುರಿಸುತ್ತ, ಮಾಯೆ, ಮಾಡತೊಡಗಿದ. ನಿಂಗೂನಿಗೆ ಹೇಸಿಕೆ ಬಂತು. ಎದ್ದು ಅವನ ಮುದಿ ಮುಖದ ಮೇಲೆ ಉಗುಳಬೇಕೆನ್ನಿಸಿತು.
“ಇಲ್ಲೇ ಮಲಗ್ಯಾನ, ದೂರ ಸರಿ” ಎಂದಳು ಗೌರಿ.
“ಮಲಗಿದರೇನ ಮಾಡತಾನ. ತಡಿ ಬರತೇನ” ಎನ್ನುತ್ತ ಏನೋ ನೆನಪಾಗಿ ಬಾಗಿಲು ಹಾಕಿಕೊಂಡು ಹೊರಗೆ ಹೋದ. ಗೌರಿ ಆಯಾಸದಿಂದ ಹಾಗೇ ಕಣ್ಣು ಮುಚ್ಚಿದಳು. ನಿಂಗೂನ ಮನಸ್ಸಿನಲ್ಲಿ ಎಲ್ಲಿಯ ಸೇಡು ಉಕ್ಕಿತೋ, ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ, ಹಾ ಎನ್ನುವುದರೊಳಗೆ ಮೈಯಲ್ಲಿ ಮಿಂಚು ಸರಿಸಿ ಪಕ್ಕದಲ್ಲಿದ್ದ ಕುಡಗೋಲು ಮಸೆಯುವ ಕಲ್ಲನ್ನೆತ್ತಿ ಗೌರಿಯ ಹೊಟ್ಟೆಯ ಮೇಲೇ ಹೆಟ್ಟಿಬಿಟ್ಟ! ತಾಯಿ ಹಾ ಎಂದು ಬಿಟ್ಟ ಉಸಿರನ್ನು ಮತ್ತೆ ತಕ್ಕೊಳ್ಳಲೇ ಇಲ್ಲ. ಹೊಟ್ಟೆ ಹಿಡಿದುಕೊಂಡು ಒಂದೆರಡು ಬಾರಿ ಹೊರಳಾಡಿ ಒದ್ದಾಡಿ ಸತ್ತುಬಿಟ್ಟಳು.
ಗೌರಿ ಹಾ ಎಂದು ಉಸಿರೆಳೆದದ್ದು ಗಟಿವಾಳಪ್ಪನಿಗೆ ಕೇಳಿಸಿ ಒಳಗೆ ಓಡಿಬಂದ. ಏನಾಯಿತೆಂದು ಹೆಣದ ಬಳಿ ಧಾವಿಸುವಷ್ಟರಲ್ಲಿ ನಿಂಗೂ ಸೂರಿನಲ್ಲಿದ್ದ ಚೂಪುಗೊದಲಿ ಹಿಡಿದು ಮುದುಕನ ಗೋಣಿಗೇ ಇಕ್ಕಿಬಿಟ್ಟ. ರುಂಡ ಚಂಗನೆ ನೆಗೆದು ಸೊಸೆಯ ಪಾದದ ಕಡೆ ಉರುಳಿ ಮುಂಡ ಮಾತ್ರ ಸೊಸೆಯ ಹಾಸಿಗೆ ಕಡೆಗೆ ಜಿಗಿದಾಡುತ್ತ ಧಾವಿಸತೊಡಗಿತು. ಅದೆನು ಭಯವೋ, ಆವೇಶವೋ, ನಿಂಗೂ “ಹಾ ಹಾ” ಎಂದು ಕಿರುಚುತ್ತ ಎರಡೂ ಕೈ ಎತ್ತಿ ಮುಂಡದ ಜೊತೆ ಸ್ಪರ್ಧೆಗಿಳಿದಂತೆ ಕುಣಿಯತೊಡಗಿದ. ಇನ್ನೊಂದು ಕ್ಷಣ ಮುಂಡ ಹಾಗೇ ಕುಣಿದಿದ್ದರೆ ನಿಂಗೂನ ಗತಿ ಏನಾಗುತ್ತಿತ್ತೋ; ಅದರ ಕಾಲಿಗೆ ಸೊಸೆಯ ಹೆಣವಿದ್ದ ಕಟ್ಟಿ ತಾಗಿದೊಡನೆ ಧೊಪ್ಪನೆ ಬೆನ್ನು ಮೇಲಾಗಿ ಬುಡ ಕಡಿದ ಮರದಂತೆ ಬಿದ್ದುಬಿಟ್ಟಿತು.
ಅದೇ ಆವೇಶದಲ್ಲಿ ಚೂಪುಗೊಡಲಿ ಹಿಡಿದುಕೊಂಡೇ ನಿಂಗೂ ಹೊರಬಂದು ಊರಕಡೆ ಓಡತೊಡಗಿದ. ಮಧ್ಯೆ ಕಳ್ಳ ಬರದಿದ್ದರೆ ಏನಾಗುತ್ತಿತ್ತೋ, ಕಳ್ಳ ಸಿದರಾಮ “ಯಾಕಲೇ ನಿಂಗೂ ಏನಾತೋ?” ಅಂದ. ನಿಂಗೂ ಈಗ ಮನುಷ್ಯನಾಗಿ ಅಲ್ಲೇ ಕುಸಿದುಬಿದ್ದ. ಎದೆ ಡವಡವ ಹೊಡೆದುಕೊಳ್ಳಲಾರಂಭಿಸಿತು. ಎಪ್ಪಾ ಎಂದು ಎದೆ ಎದೆ ಬಡಿದುಕೊಂಡು ಅಳಲಾರಂಭಿಸಿದ.
ನಿಂಗೂನ ಹುಯ್ಲಿನ ಅರೆ ಭಾಷೆ ಕೈ ಬಾಯಿಗಳ ಸನ್ನೆಗಳ ಮೇಲಿಂದ ಏನೋ ಅನಾಹುತವಾಗಿದೆಯೆಂದು ಊಹಿಸಿ “ಓಡಿಹೋಗಿ ಗೌಡ್ರ ಕಾಲ ಹಿದಕೊಳ್ಳಲೇ” ಎಂದ. ಕೊಡ್ಲಿ ಅಲ್ಲೇ ಬಿಟ್ಟು ನಿಂಗೂ ಊರಿನತ್ತ ಓಡಿದ. ಕಳ್ಳ ಗುಡಿಸಲಿಗೆ ಹೋಗಿ ನೋಡಿದ. ಗುಡಿಸಲ ತುಂಬ ರಕ್ತ ಹರಿದಾಡಿತ್ತು. ಕಟ್ಟೆಯ ಮೇಲೆ ಬಕ್ಕಬರಲೆ ಬೆನ್ನು ಮೇಲಾಗಿ ಕಾಲು ಗೀಸಿಕೊಂಡು ಗಟಿವಾಳೆಪ್ಪನ ಹೆಣ ಬಿದ್ದಿತ್ತು. ಕಾಲ್ದೆಸೆ ಕೆಳಕ್ಕೆ ರುಂಡ ಬಿದ್ದಿತ್ತು. ಅದರಾಚೆ ಗೌರಿಯ ಹೆಣ ಕಣ್ಣು ಕಿಸಿದುಕೊಂಡೇ ಬಿದ್ದಿತ್ತು. ಕಣ್ಣಿಗೆ ಚಕ್ರ ಬಂದಂತಾಯ್ತು. ಕೂಡಲೇ ಕಳ್ಳ ಕಾಲಿಗೆ ಬುದ್ಧಿ ಹೇಳಿದ. ಇಳಿ ಹೊತ್ತಾಗಿತ್ತು. ಪಡಸಾಲೆಯಲ್ಲಿ ಗೌಡ ಕೂತುಕೊಂಡು ಮಗ ಶಿವನಿಂಗನಿಗೆ ಅದೇನೋ ವ್ಯವಹಾರ ಹೇಳುತ್ತಿದ್ದ. ನಿಂಗೂ ಓಡಿಬಂದವನೇ ಗೌಡನ ಕಾಲು ಗಟ್ಟಿಯಾಗಿ ಹಿಡಕೊಂಡು, “ಎಪ್ಪಾಽ ಎಪ್ಪಾಽಽ” ಎನ್ನುತ್ತ ಅವನ ಪಾದಕ್ಕೆ, ತಪ್ಪಿದರೆ ನೆಲಕ್ಕೆ ತಲೆಯಿಂದ ಕುಟ್ಟಲಾರಂಭಿಸಿದ. ಗೌಡ ‘ಏನೋ’ ಅಂದರೂ ಇಲ್ಲ ‘ಎಂತೋ’ ಅಂದರೂ ಇಲ್ಲ; ಬರೀ “ಎಪ್ಪಾ ಎಪ್ಪಾ…”ಗೌಡ ನೋಡುವಷ್ಟು ನೋಡಿ ಅವನ ಜುಟ್ಟು ಹಿಡಿದು ಮೇಲೆತ್ತಿ ಕೆನ್ನೆಗೆರಡು ಬಿಗಿದ. ನಿಂಗೂ ಮತ್ತೆ ಮನುಷ್ಯರೊಳಗೆ ಬಂದ.
ಎಲ್ಲ ಕೇಳಿದ ಮೇಲೆ ಗೌಡ “ನೀ ಸೀದಾ ತೋಟಕ್ಕ ನಡಿ. ನಾವೂ ಬರುತೇವ” ಎಂದು ನಿಂಗೂನನ್ನು ಕಳಿಸಿ ದತ್ತಪ್ಪನ ಮನೆಗೆ ಹೊದ. “ದತ್ತೂ ದಗದೈತಿ ಬಾ” ಎಂದು ಬಾಗಿಲಲ್ಲೇ ನಿಂತು ಕರೆದ. ಏನೋ ಅನಾಹುತವಾಗಿರಬೇಕೆಂದು ಊಹಿಸಿದ ದತ್ತಪ್ಪ ನಿಂತ ಕಾಲಮೇಲೆ ಏನು ಯಾಕೆ ಎನ್ನದೇ ಬೆನ್ನು ಹತ್ತಿದ.
ಗೌರಿ, ಗಟಿವಾಳಪ್ಪನ ಹೆಣ ನೋಡಿ ದತ್ತಪ್ಪನಿಗೇನು ಗೌದನಿಗೂ ಭಯವಾಯಿತು. ತಕ್ಷಣ ಬಾಗಿಲು ಹಾಕಿ ಇಬ್ಬರೂ ಮುಂದಿನ ಹಾದಿ ಯೋಚಿಸುತ್ತ ಕೂತು ಬಿಟ್ಟರು. ನಿಂಗೂ ತಪ್ಪು ಮಾಡಿದ ಖರೆ, ಆದರೆ ಗಳಿವಾಳಪ್ಪ ಗೌರಿಯರದೂ ತಪ್ಪೇ. ಅಲ್ಲೇ ಮಲಗಿದ್ದ ಮಗ ಕಾಣದಶ್ಟು ಕುರುಡಾಗೋದಂದರೇನು? ಮನುಷ ಸಹನೆಗೂ ಮಿತಿ ಇಲ್ಲವೆ? ಇವರ ಆಸೆಗೆ ನಿಂಗೂ ಯಾವಾಗ ಅಡ್ಡಿ ಮಾಡಿದ್ದ? ಕಾಮ ಮುದುಕನ ಕಣ್ಣು ಕುಕ್ಕಿತು. ಸಿಟ್ಟು ನಿಂಗೂನ ಕಣ್ನು ಕುಕ್ಕಿತು. ಇಬ್ಬರೂ ಕುರುಡರಾದರು. ಸತ್ತವರು ಸತ್ತು ಹೋದರು. ಇದ್ದವನ ಗತಿಯೇನು?
ಇಂಥ ಕೇಸುಗಳಲ್ಲಿ ಗೌಡನ ಮನಸ್ಸು ಹೇಗೆ ಓಡುತ್ತದೆಂದು ದತ್ತಪ್ಪ ಬಲ್ಲ. ಇಷ್ಟು ವರ್ಷ ಕೂಡಿದ್ದು ಊರುಗಾರಿಕೆ ಮಾಡಿ ಸುಸೂತ್ರ ಪಾರುಗಾಣಿಸಿದರಲ್ಲವೆ? ಆದರೆ ಇಬ್ಬರ ತಲೆಯಲ್ಲೂ ಗುಡಸೀಕರ ತಪ್ಪಿ ಕೂಡ ಸುಳಿಯಲಿಲ್ಲ. ಬೇರೆ ದಿನಗಳಾಗಿದ್ದರೆ ಆ ಮಾತು ಬೇರೆ. ನಾಳೆ ಕರಿಬೇಟೆಯ ಹಬ್ಬ. ನಾಯಕರ ಹುಡುಗರು ಇಂದು ಬೇಟೆಯಾಡಲಿಕ್ಕೆ ಹೋಗುತ್ತವೆ. ಆ ಸಮಯವೂ ಹತ್ತಿರ ಬಂತು,
ಗುಡಸೀಕರ ಉಂಡು ಮಲಗಿದ್ದವನು ಇನ್ನೂ ಎದ್ದಿರಲಿಲ್ಲ. ಕಳ್ಳ ಅವನನ್ನೆಬ್ಬಿಸಿ ನಡೆದ ಘಟನೆಯನ್ನು, ತಾನೇ ಹೆದರಿದ್ದರಿಂದ ಇರಬೇಕು, ಭಯಂಕರವಾಗಿ ವರ್ಣಿಸಿದ. ಗುಡಸೀಕರನಿಗೂ ಭಯವಾಯ್ತು.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.