ಇಷ್ಟು ನಕ್ಷತ್ರಗಳಲ್ಲಿ ಯಾವುದು ನನಗೆ?

ಮಧುಕರ, ಇನ್ನೊಮ್ಮೆ ಯೋಚಿಸುತ್ತ ಕೂತರೆ ಹಿಂದೆ ಅನೇಕ ಸಲ ಆದ ಹಾಗೆ ಅಡಧಳೆಯಾಗಿ, ಮನಸ್ಸಿಗೆ ನಿಷ್ಕಾರಣ ಕಣಕಣಿ ಆವರಿಸಿ; ನಿರ್ಧಾರ ಬದಲಾಗುವ ಎಲ್ಲ ಶಕ್ಯತೆಯೂ ಇದೆಯೆಂದು ಅನ್ನಿಸಿದ್ದರಿಂದ ಅಂದುಕೊಂಡದ್ದನ್ನು ಪಕ್ಕೀಮಾಡಲು ಟಪಾಲು ಬರೆದುಹಾಕಿದ್ದ.

“…ಈ ಸಲದ ಮುಂಗಾರಿನ ಸೂಟಿ ಕೂಡ ಹತ್ತುದಿನ ಹೆಚ್ಚಿಗೆ ಲೀವ್ ಅಪ್ಲೈ ಮಾಡೀನಿ. ಊರಿನ ಮಳೀ ನೋಡಿದ ಹಾಂಗೂ ಆತು; ನಿಮ್ಮ ಜೋಡಿ ನಾಕ ದಿನ ಇದ್ದಾಂಗೂ ಆತು. ಅವ್ವ, ಮೋನಿದಾದಾರಿಗೆ ಈ ವಿಚಾರ ಒತ್ತಿ ಹೇಳಿ, ನನ್ನ ಶಿ.ಸಾ. ನಮಸ್ಕಾರ ತಿಳಸು…”

ಅಣ್ಣ ಗೋಪಾಲನಿಗೆ ಪತ್ರ ಬರೆದು ಮುಗಿಸಿ ಕಿಟಕಿಯಾಚೆಗೆ ದಿಟ್ಟಿಸಿದ; ಮುಂಗಾಲು ಪುಟಿಗೆ ಹಾಕಿ ತುಸು ಅವಸರದಲ್ಲಿ ಬಂದ ಈ ಸಲದ ಮುಂಗಾರಿನ ಸೋನೆ ಸಣ್ಣಗೆ ಹೂ ಪಕಳೆ ಹಾಗೆ ಹನಿಯುತ್ತ ನೆಲಮುಟ್ಟುತ್ತಿತ್ತು. ದಾಮರು ರಸ್ತೆಯ ಶಹರದಂಥ ಶಹರದಲ್ಲೂ ಒದ್ದೆಮಣ್ಣು ಸಿಕ್ಕಲ್ಲಿ ಹಸಿರು ಗರಿಕೆಯೊಡೆದು ನಳನಳಿಸುತ್ತಿತ್ತು. ಇಂಥದೇ ಗರಿಕೆ ಎಸಳಿಗೆ ಅಂಟಿಕೊಂಡ ಇಬ್ಬನಿ ಮಣಿಗಳನ್ನು ಬರಿಗಾಲಿನಲ್ಲಿ ಒದೆಯುತ್ತ ಒಂದೊಮ್ಮೆ ನಡೆದ ಬಾಲ್ಯ ಮೈಸವರಿತು. ಇದೇ ದಿನಗಳಲ್ಲಿ ಅವ್ವನ ಶ್ರಾವಣ ಶುಕ್ರವಾರದ ಪೂಜೆಗೆ ಗರಿಕೆ, ಅಗಸೆ ಹೂ ಆಯ್ದು, ಆಯ್ದು ಕೊಡುತ್ತಿದ್ದುದು, ಅಲ್ಲ? ಹೌದು.

ಹಾಗೇ ಸಶಬ್ದ ಜಿನಿಜಿನಿ ಮಳೆಯನ್ನು ನೋಡತೊಡಗಿದ್ದ ಮಧುಕರ. ಕುಳಿರ್ಗಾಳಿ ಮೈಸೋಕಿ ಸಣ್ಣಗೆ ನಡುಗಿದ. ಕುರ್ಚಿಯಿಂದೆದ್ದು ಬಂದು ಕಿಟಕಿ ಸಳಿಗೆ ಕೈಯೂರಿ ನಿಂತ. ರಸ್ತೆ ಬದಿಗೆ-ಮೈತುಂಬ ಹಳದಿ ಹೂ ತುಂಬಿಕೊಂಡ ತಿಕೋಮ ಮರವೊಂದು ಧ್ಯಾನಕ್ಕೆ ಕೂತಂತೆ ನಿರಂಬಳವಾಗಿ ನೆನೆಯುತ್ತಿತ್ತು. ತಿಕೋಮಾ ಮರದ ಪಾರ್ಶ್ವಕ್ಕೆ ಸಂಕೇಸರ. ಮೇ ಮಾಸದಲ್ಲಿ ಅರಳಿ, ದಟ್ಟ ಕೇಸರಿ, ಕಡುಗೆಂಪು ಬಣ್ಣದ ಹೂವನ್ನು ತೊಟ್ಟೂ ಜಾಗ ಬಿಡದಂತೆ ಮರವಿಡೀ ಸಿಂಗರಿಸಿಕೊಳ್ಳುವ ಮರ. ಮುಂಗಾರು ಪ್ರಾರಂಭವಾಗುವ ಹೊತ್ತಿಗೆ ಈ ಗಿಡಕ್ಕೆ ಹೂವೇ ಇಲ್ಲವೇನೋ ಅನ್ನುವಂತೆ ಎಲೆಗಳನ್ನು ತುಂಬಿಕೊಂಡುಬಿಡುತ್ತದೆ. ಕುಸುಮಳಿಗೆ ಸಂಕೇಸರ ಮರದ ಇತಿಹಾಸ ಗೊತ್ತು. ಇನ್ನೂರು ವರ್ಷದ ಹಿಂದೆಯಂತೆ ಇದು ಭಾರತಕ್ಕೆ ಬಂದಿದ್ದು. ವಾಸನೆಯಿಲ್ಲದ; ನೋಡಲಷ್ಟೇ ಚೆಂದಕಾಣುವ ಈ ಹೂವೆಂದರವಳಿಗೆ ಇರುಸು, ಮುರುಸು. ನಕ್ಕರೆ ಸಂಕತ್ತಿ ಹೂವಿನಗತೆ ಹಲ್ಕಿರಿಬೇಡ ಅನ್ನುತ್ತಾಳೆ. ಆಗ ಅವಳ ಕಣ್ಣು ಸಂಕೇಸರ ಹೂವಿನ ಬಣ್ಣದಂತಿರುತ್ತವೆ…

ಹನಿಯಂತಿರುವ ಮಳೆಗೇ ರಸ್ತೆಯನ್ನು ಬಿಟ್ಟುಕೊಟ್ಟು ಜನಪದ ಮನೆಯಲ್ಲಿತ್ತು. ಆಗೊಮ್ಮೆ ಈಗೊಮ್ಮೆ ಸರಿವ ವಾಹನಗಳು. ನಗರದಲ್ಲಿ ಮಳೆ ಎಂದರೆ-ಕೊಡೆಗಳು. ಅರೆ! ತೋಯ್ದು ಬಿಟ್ಟೆ; ರೂಟ್ ಬಸ್ ಮಿಸ್…ದಿನ ಮುಗಿಯುತ್ತದೆ. ಹೀಗೆ ಮಳೆ ಜೋರಾಗಿ ನೆಲ ಗುಮ್ಮುವುದು; ಹಳ್ಳಿ ಮನೆಯ ಹರನಾಳಿಗೆಯಿಂದ ನೀರು ಚಿಮ್ಮುವುದು ಮೋನಿದಾದಾನೊಂದಿಗೆ ನೋಡಬೇಕು. ಕಾಗದದ ಹಡಗು ಮಾಡಿಕೊಟ್ಟು “ಅದರ ಮ್ಯಾಲೆ ನಿಮ್ಮ ಹೆಸರು ಶಾಯೀಲೆ ಬರದುಬಿಡ್ರೋ, ಅಂದ್ರ ಮುಂದಿನ ಊರಾನ್ಮಂದಿಗೆ ಅದು ನಿಮದಂತ ಗೊತ್ತಾಗತದ…” ಎಂದು ಹುರಿದುಂಬಿಸುತ್ತಿದ್ದ. ಈಗ ಐವತ್ತೈದರ ಮೇಲಾಗಿ, ಕೂದಲು ನೆರತು ಮುದುಕನಾಗಿದ್ದಾನೆ. ಮೊದಲಿದ್ದ ಸಿಟ್ಟಿನ ಖೋಡಿ ಇಳಿದಿದೆಯೋ ಇಲ್ಲವೋ?

ಅವನ ಸಿಟ್ಟು, ತನ್ನ ಹುಡುಗುತನದ ಆವೇಶ ಎಲ್ಲರಿಂದ ಇಬ್ಬರನ್ನೂ ಬೇರೆಮಾಡಿತು. “ನಿಮ್ಮ ಮಗಾ ಪರ್ತ ಬರಲಿಲ್ಲೇನು” ಎಂದು ಕೇಳುತ್ತಾರೆಂದು ಅವ್ವ ಮದುವೆ-ಮುಂಜಿ, ಆರತಿಗೆ, ಅರಿಸಿಣ-ಕುಂಕುಮಕ್ಕೆಂದು ಹೋಗುವುದನ್ನು ಬಿಟ್ಟಳಂತೆ… ಎಂದುಕೊಳ್ಳುತ್ತ ಮಧುಕರ ಮತ್ತೊಮ್ಮೆ ಪತ್ರ ಓದಿ, ಕವರಿಗೆ ಹಾಕಿ ವಿಳಾಸ ಬರೆದ. ಹಿಂದೆ ಒಂದೆರಡು ಬಾರಿ ಧೈರ್ಯ ಸಾಲದ್ದಕ್ಕೊ, ಅರಿವಾಗದ ಖಿನ್ನತೆ, ಬೇಸರ, ಕೋಪ, ಅಳುಬುರುಕುತನ ಏನೆಲ್ಲ ಮುತ್ತಿ ರಿಸರ್ವೇಶನ್ ಮಾಡಿಸಿಯೂ ಕಡೆಗಳಿಗೆಯಲ್ಲಿ ಹೋಗುವ ನಿರ್ಧಾರ ಕೈ ಬಿಟ್ಟದ್ದು ಈ ವರ್ಷಗಳಲ್ಲಿ ಅವನ ಬದುಕಲ್ಲಿ ನಡೆದಿದ್ದಿದೆ. ಹಾಗೆಂದೇ ಟಪಾಲು ಹಾಕುವ ನೆವದಲ್ಲಿ ಹೊರಗೆ ನಡೆದು, ಊರಿಗೆ ಹೋಗುವುದು ಇನ್ನಷ್ಟು ಪಕ್ಕಾ ಮಾಡಲು ಮುಂಗಡ ಟಿಕೀಟನ್ನೂ ಪಡೆದ. ಬಂದಮೇಲೆ ಸಂಭ್ರಮ, ಆತಂಕ ತನ್ನೊಳಗೆ ಒಡಮೂಡಿದಾಗ ಆ ಭಾವನೆಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೆ, ಅಂಗೈಯನ್ನು ಘಸಘಸ ತೀಡಿಕೊಂಡು ಅವು ಬೆಚ್ಚಗಾದಾಗ ಅಂಥದ್ದೇ ಬಿಸಿ ಎದೆಗೂ ತುಂಬಿಕೊಂಡು ಸುಖಿಸಿದ. ಹೊಸ ಬದುಕಿನ ಮಣ್ಣ ಹಾದಿ ತುಳಿಯುವವನಂತೆ ಹುರಿಗೊಂಡ. ಮುಲ್ಕೀ ಪರೀಕ್ಷೆ ಕಟ್ಟಿದ ಹಸಿ ಬಾಲಕ ಪರೀಕ್ಷೆ ನಾಲ್ಕು ತಿಂಗಳಿದೆ ಎನ್ನುವಾಗಲೇ ನಡುರಾತ್ರಿಮಟ ತೂಕಡಿಸುತ್ತ ಓದಿ; ಮತ್ತೆ ಬ್ರಾಹ್ಮೀ ಮುಹೂರ್ತಕ್ಕೆ ಎದ್ದು, ತಲೆಗೆ ಗುಬುರು ಹಾಕಿ ಪಾಠ ಕಂಠಪಾಠ ಮಾಡುವ ಉಪಾದಿಯಲ್ಲಿ ಸಕಲ ತಯಾರಿ ನಡೆಸಿದ. ಯಾವ ಅಂಗಿ-ಪ್ಯಾಂಟು ಒಯ್ಯುವುದು, ಅವ್ವನಿಗೇನು ತೆಗೆಯುವುದು; ಮೋನಿದಾದಾನಿಗೊಂದು ಶಾಲಾದರೆ ನಡೆದೀತೆ? ಪುಷ್ಪಕ್ಕ ಕಕ್ಕಿಯ ಮಕ್ಕಳು ಸೂಟಿಗೆ ಬಂದಿದ್ದರೆ ಅವರಿಗೆಂಥ ಟಾಯ್ಸ್ ಒಯ್ಯುವುದು? ಇತ್ಯಾದಿಯಾಗಿ ಪಟ್ಟಿ ಮಾಡಿದ. ತನ್ನ ಬೂಟುಗಳನ್ನು ದಿನಕ್ಕೆರಡಾವರ್ತಿ ಪಾಲಿಷ್ ಮಾಡಿಟ್ಟು ಅವು ಮಿರಮಿರ ಮಿಂಚುವುದನ್ನು ನೋಡಿ ಆನಂದತುಂದಿಲನಾದ. ಬಟ್ಟೆಗಳನ್ನು ಟ್ರಂಕಿಗೆ ತುಂಬಿ, ತೆಗೆದು ಮತ್ತೆ ತುಂಬಿ ಬಂದು ಮಾಡಿದ.

ಮಧುಕರನಿಗೆ ಊರಲ್ಲಿ ಯಾರನ್ನು ಹೇಗ್ಹೇಗೆ ಮಾತಾಡಿಸುವುದು ಎನ್ನುವ ಮತ್ತೂ ಒಂದು ಸಮಸ್ಯೆ ಎದುರಾಗಿತ್ತು. ಅವ್ವನಿಗಾದರೆ ಹ್ಯಾಂಗಿದ್ದೀ? ಯಾಕೋ ಭಾಳ ಸೊರಗಿಯಲ್ಲ? ಉಪಾಸ ಭಾಳ ಮಾಡತಿ ಕಾಣಸ್ತದ ಎಂಬಂಥ ಮಾತಿಂದ ಶುರುಮಾಡಬಹುದಿತ್ತು. ಅದೇ ಬೇರೆಯವರಿಗೆ? ಮುಖ್ಯ ಮೋನಿದಾದಾನಿಗೆ, ಅವ್ಯಕ್ತ ಭಯ. ಅದನ್ನು ನೆನಸಿಕೊಂಡೇ ಎದೆ ಹಾರಿಬಂದು ಗಂಟಲು ಒಣಗಿತು. “ನೀನು ನನ ರಕ್ತಕ್ಕ ಹುಟ್ಟಿದಾಂವಲ್ಲ ತಗೋ! ಬೇಕಾದ್ರ ನಿನ ಹೆಸರಲೇ ಥಣ್ಣೀರು ತಲೀಮ್ಯಾಲ ಹಾಕ್ಕೋಳ್ಳೇನು?” ನಾಕುವರ್ಷದ ಹಿಂದೆ ಮೋನಿದಾದಾ ತನ್ನೊಂದಿಗೆ ಆಡಿದ್ದ ಕಡೆ ಮಾತಾಗಿತ್ತು. ಈಗ ಆ ಮಾತು ಮರೆತು ಹೊಸ ಮಾತು ಬೆಸೆಯಬೇಕು. ಆಗ ನಮ್ಮಿಬ್ಬರ ನಡುವೆ ಕಣ್ಣೀರನ್ನು ತುಳುಕಿಸದೆ ರೆಪ್ಪೆಯಲ್ಲಿ ಹಿಡಿದಿಟ್ಟುಕೊಂಡು ಅವ್ವ ನಿಂತಿದ್ದಳು. ದಾದಾ ಇನ್ನಷ್ಟು ಒದರಾಡ ಹತ್ತಿದಾಗ “ಸಾಕು ನಿಂದ್ರಸರಿ. ಕಾಲ ಛಲೋ ಇಲ್ಲ. ಕೆಟ್ಟ ಮಾತು ಆಡಿದರೆ, ಅವ್ರು ವಾಪಸ್ಸು ಬರಂಗಿಲ್ಲ. ಹುಡುಗ್ಗ ಕೆಟ್ಟದಾಗಬೇಕಂತ ನಿಮಗ ಅನಿಸತದೇನು?” ಎಂದು ತನ್ನನ್ನು ಒಳ ಕರೆದೊಯ್ದಿದ್ದಳು. ಆಮೇಲೆ ಮೋನಿದಾದಾನಿಗೂ ಬೇಸರವೆನ್ನಿಸಿರಬೇಕು. “ಸಿಟ್ಟ ಭಾಳ ಬಂದಿತ್ತು ಬೈದೆ, ಮಾನಸೀಕ ಮಾಡಕೋಬ್ಯಾಡ ಛೋಟ್ಯಾ!” ಅಂದಿದ್ದ. ತನಗೆ ಮಾತ್ರ ಭಯಂಕರ ಅವಮಾನವಾಗಿ ಒಳಗೊಳಗೆ ಕನಲಿದ್ದು ನೌಕರಿ ಸಿಕ್ಕಿದ್ದೊಂದು ನೆವವಾಗಿ ಅವರ ಇರುವನ್ನೇ ಮರೆತುಬಿಟ್ಟಿದ್ದ. ಶಹರಕ್ಕೆ ನೂರುದಾರಿಗಳು; ಹಳ್ಳಿ ಮನೆಗೆ ಮಾತ್ರ ಒಂದೇ! ಅದೂ ಕಡೆಯ ಬಸ್ಸು ತಪ್ಪಿದರೆ ಗದ್ನಿಗೇರಿ ಕತ್ರಿಯಿಂದ ಹತ್ತು ಮೈಲಿ ನಡೆಯಬೇಕಾಗುತ್ತದೆ. ತಮ್ಮ ಊರಿನ ದೇಸಾಯರ ಕಟ್‌ರೂಟ್ ಬಸ್ಸು ಈ ವರ್ಷಗಳಲ್ಲಿ ಒಮ್ಮೆಯೂ ಯಾಕೆ ಕಾಡಲಿಲ್ಲ ಎಂಬ ಪ್ರಶ್ನೆಗೆ ಮಧುಕರನ ಬಳಿ ಉತ್ತರವಿಲ್ಲ. ಅಥವಾ ಹಾಗೆ ಕಾಡಿದ ಪ್ರಶ್ನೆಯನ್ನು; ಮೋನಿದಾದಾನನ್ನು ಅರಗಿಸಿಕೊಳ್ಳುವುದರಲ್ಲಿ ಅವನು ಈ ದಿನಗಳನ್ನು ಕಳೆದಿದ್ದಿರಬಹುದು. ಅಂಥ ಮೋನಿದಾದಾನೊಂದಿಗೆ ಮುಖಾಮುಖಿಯಾಗಲು ಮಧುಕರ ತನ್ನ ಮುಂದೊಂದು ಕಾಲ್ಪನಿಕ ಧ್ವನಿವರ್ಧಕ ಸೃಷ್ಟಿಸಿಕೊಂಡು ಪುಟ್‌ಪಾತಿನಲ್ಲಿ ನಡೆವಾಗ; ರೂಟ್ ಬಸ್ಸಿನ ಕಂಬಿಗೆ ಜೋತುಬಿದ್ದು ಮನೆಸೇರುವಾಗ ಮೋನಿದಾದಾ, ಅವ್ವ, ಗೋಪಾಲ ಬಂದಿದ್ದರೆ ಪುಷ್ಪಾ ಕಕ್ಕಿ ಇವರೆಲ್ಲರ ಪ್ರಶ್ನೆಗಳನ್ನು ಊಹಿಸಿಕೊಂಡು ಉತ್ತರಕೊಡತೊಡಗಿದ. ಹಲವೊಮ್ಮೆ ತನ್ನಲ್ಲೇ ಮಾತಾಡಿಕೊಳ್ಳುತ್ತಿರುವುದನ್ನು ಕಂಡ ಜನ ನಕ್ಕಂತೆನಿಸಿತು. ಅವನೇನು ಸೊಪ್ಪು ಹಾಕಲಿಲ್ಲ. ಬದಲು ಅವರೂ ಯಾಕೆ ತನ್ನಂತೆ ಕಾಲ್ಪನಿಕ ಸಂದರ್ಶನದಲ್ಲಿ ತೊಡಗಿರಬಾರದೆಂದು ತರ್ಕಿಸಿದ. ಜನ ತನ್ನನ್ನು ನೋಡಿ ನಕ್ಕಾಗ, ತಾನೂ ನಕ್ಕ. ಆಗೆಲ್ಲ ಒಟ್ಟು ಸಮುದಾಯವೇ ಕೆಲವೇ ದಿನಗಳಲ್ಲಿ ಅಪೂರ್ವವೊಂದಕ್ಕೆ ತೆರೆದುಕೊಳ್ಳಲಿದೆಯೆಂದೆನಿಸುವುದು.

ತನ್ನ ಪುಕ್ಕಲುತನದಿಂದಾಗಿ ತೆಗೆದುಕೊಳ್ಳಲು ಸಾಧ್ಯವಾಗದಿದ್ದ ಮಹತ್ವದ ತೀರ್ಮಾನದ ಹಿಂದೆ ಕುಸುಮಳ ಪ್ರಭಾವ ಬಹಳಷ್ಟಿದೆಯೆಂದು ಮಧುಕರನಿಗೆ ಗೊತ್ತಿದೆ. ಈ ಘಟನೆಗಾಗಿ ನಾಲ್ಕು ಇಡೀ ವರ್ಷ ಅವನು ಕಾದಿದ್ದಾನೆ. ಬಯಕೆ ಚಿಮ್ಮಿ ಬಂದರೂ ಒಳಗೇ ಅದುಮಿ ಈ ಸಲಕ್ಕೂ ಸುಮ್ಮನಾಗಿಬಿಡುತ್ತಿದ್ದ ಇವ ಎಂದು ಕುಸುಮಳಿಗೂ ಅನಿಸಿದ್ದಿದೆ. ಈ ಸಲದ ನಿರ್ಧಾರಕ್ಕೆ ಒತ್ತಾಸೆಯಾಗಿ ನಿಂತವಳು ಕುಸುಮಳೆ! ಪತ್ರದ, ಟಿಕೀಟು ಬುಕ್ ಮಾಡಿಸಿದ್ದರ ಹಿಂದೆಯೂ ಅವಳದೇ ಒತ್ತಾಯದ ಸಾನ್ನಿಧ್ಯವಿತ್ತು. “ಮಧು, ಮಂಗ್ಯಾನಹಂಗ ಹುಚ್ಚುಚ್ಚಾರ ಮಾಡಬ್ಯಾಡ. ಅವರೇನೂ ಹುಲಿ-ಕರಡಿಯಲ್ಲ. ನಿನ್ನನ್ನ ಹೆತ್ತವರಿದ್ದಾರ. ನಾಕಮಾತ ಅಂತಾರ, ಅಷ್ಟೇ ಪ್ರೇಮ ತೋರಿಸತಾರ. ಜಡ್ಡ ಬಿದ್ದರ ಮಂದಿ ಬಂದು ನೋಡೂದಿಲ್ಲ. ಮನೀಯವ್ರು ನೋಡತಾರ. ಸುಮ್ಮ ಹೇಳೂದು ಕೇಳು-ಊರಿಗೆ ಹೋಗಿ ಬಾ!” ಎಂದು ಮೂರು ದಿನದ ಹಿಂದಷ್ಟೇ ಹೇಳಿದ್ದಳು. ಗಂಜ್ ಚರ್ಚ್‌ನ ಹುಲ್ಲಿನ ಲಾನ್‌ಮೇಲೆ ಸಂಜೆಗಾವಳದಲ್ಲಿ ಮೈತಿಕ್ಕುತ್ತ ಮೈಕಾವು ಮಾಡಿಕೊಂಡಾಗಲೇ ಆಕೆ ಮಧುಕರನನ್ನು ಊರಿಗೆ ಕಳಿಸುವ ಪೀಠಿಕೆ ಹಾಕಿದ್ದಳು.

ಮಧುಕರ ಅದಕ್ಕಿಂತ ಮೊದಲು ‘ಯಾಕೋ ಭಾಳ ಬ್ಯಾಸರಿಕಿ, ಜೀವಕ ಹಳಹಳಕಿ, ಯಾವುದೂ ನಂದಂತ ಅನ್ನುಸುದಿಲ್ಲ, ತಲೀ ಚಿಟ್ಟ ಅನಲಿಕ್ಕೆ ಹತ್ತೇದ…’ ಎಂದೇನೊ ಹೇಳಿದ್ದ. ಅಂಥ ಅಯಿನಘಳಿಗೆಯಲ್ಲೇ ಕುಸುಮ ಈ ಸಲಹೆ ಕೊಟ್ಟಾಗ ವಿನಾಕಾರಣ ಅವಳ ಮೇಲೆ ಸಿಟ್ಟಾಗಿ ‘ಮಾರಿ ಮ್ಯಾಲಿನ ಮೊಡವೆ ಕೆರಕೋತ ಅದನ್ನ ನೀ ಯೇನ್ ಹೇಳಬೇಕಾಗಿಲ್ಲ! ಅದೇನು ನಂಗ ಹೋಳೀದ ವಿಚಾರೇನ ಅಲ್ಲ!’ ಎಂದು ಬೈದು, ಯೋಚಿಸಿದ-ಹಲವು ದಿನದಿಂದ ನಿರುದ್ದಿಶ್ಯವಾಗಿ ಅಸ್ವಸ್ಥನಾಗುತ್ತಿದ್ದೇನೆ. ಅಳುವಷ್ಟು ಭಾವುಕನಾಗುತ್ತಿದ್ದೇನೆ. ಇದೆಲ್ಲ ಕುಸುಮ ಗಮನಿಸಿಯೇ ಹಾಗೆ ಹೇಳಿದ್ದಾಳೆ. ಅದಕ್ಯಾಕೆ ಅವಳ ಮೇಲೆ ಚಿರಡಿಗೆ ಏಳಬೇಕು. ಕಡೆಗೂ ನನಗೆ ಬಂದ ವರ್ತಮಾನದೊಂದಿಗೆ ನಿರ್ಮೂಖನಾಗದೆ ಮುಖಾಮುಖಿಯಾಗಬೇಕಿರುವುದು; ಕಹಿಯೋ, ಹುಳಿ-ಮಧುರವೊ, ಅದನ್ನು ಜೇರ್ಣಿಸಿಕೊಳ್ಳಬೇಕಿರುವುದು – ನಾನೇ. ಖಂಡಿತಕ್ಕೂ! ಬಗೀಚದಿಂದೆದ್ದು ಬರುವಾಗ ಅಳುಕುತ್ತಲೇ ‘ಹಾಂಗಾರ ಊರಿಗೆ ಹೋಗಿ ಬಾ ಅಂತಿಯೇನು?’ ಕೇಳಿದ್ದ. ಕುಸುಮ ‘ನಾ ಜೀವದಿಂದುರುಮಟ ಮನಿ ಹೊಸ್ತಿಲಾ ತುಳ್ಯಾಂಗಿಲ್ಲ!’ ಎಂದು ಶಪಥ ಮಾಡಿ, ಇದೀಗ ಊರಿಗೆ ಹೋಗಲು ನಿಂತ ಮಧುಕರನತ್ತ ನೋಡಿ, ಜೋರಾಗಿ ಕೈ ತಟ್ಟಿ ಕಣ್ಣಲ್ಲಿ ನೀರು ತುಂಬಿಕೊಳ್ಳುವವರೆಗೂ ನಕ್ಕಳು. ಗೋಣು ಅಲುಗಿಸಿದಳು. ಆಗವಳ ಮುಡಿಯಲ್ಲಿದ್ದ ಮೊಗ್ಗುಮಲ್ಲಿಗೆ ಗಲಗಲಕ್ಕೆ ಒಂದೊಂದೇ ಉದುರಿದಾಗ ಅಸ್ವಸ್ಥನಾಗಿದ್ದ ಮಧುಕರ – ಅಹ! ಇವಳ ನಗು ಚೆಂದ. ಅಹ! ಇವಳ ಮಾತು ಚಂದ! ಇವಳು ನಿಲ್ಲುವುದು; ಕೂಡುವುದು.. ಎಲ್ಲ ಚೆಂದ ಎಂದುಕೊಳ್ಳುತ್ತ ಮೈಮರೆತು ನಿಂತ. ಕುಸುಮ ತಕ್ಷಣಕ್ಕೆ ಇವನ ಹಿಕಮತಿಯನ್ನು ಅರಿತಂತೆ ವ್ಯಾನಿಟಿ ಬ್ಯಾಗಿನಿಂದ ಪೆನ್ನು-ಕಾಗದ ತೆಗೆದು ‘ಹಂಗಂತ ಬರದು ಹಾಕಲ್ಲ! ಈಗಲೇ’ ಅಂದಾಗ ‘ಈಗ ಬ್ಯಾಡ. ಮನೀಗೆ ಹೋಗಿ ಒಬ್ಬಾಂವನ ಕೂತು ಆರಾಮ ಆಗಿ ಬರೀತೀನಿ’ ಎಂದು ಸುಳ್ಳು ಹೊಡೆದು ಮನೆಗೆ ಬಂದ. ಜೀವ ನಿಲ್ಲಲಿಲ್ಲ.

ಇಷ್ಟು ದಿನದಿಂದ ಇಂತಹ ಆಙ್ಞೆಯನ್ನು ಶಿರಸಾವಹಿಸಿ ಪಾಲಿಸಲು ಕಾಯುತ್ತಿದ್ದವನ ಹಾಗೆ ಕಾಗದ ಬರೆದು ಹಾಕಿದ. ಹಾಗೆಯೇ ಆಮೇಲೆ ಕೇಳಿ, ತೋರಿಸದಿದ್ದರೆ ಚೀರುದನಿಯಲ್ಲಿ ರಂಪಾಟಮಾಡುತ್ತಾಳೆಂದು ಕಾಗದದ ಪ್ರತಿಯೊಂದನ್ನು ಮಾಡಿಕೊಂಡು ವಿಧೇಯ ವಿದ್ಯಾರ್ಥಿ ಅಕ್ಕಾವರಿಗೆ ನೋಟ್ಸ್ ತೋರಿಸುವ ಹುಮ್ಮಸ್ಸಲ್ಲಿ ಕುಸುಮಳ ಕೈಯಲ್ಲಿಟ್ಟು ಅವಳ ಪ್ರತಿಕ್ರಿಯೆ ಏನೆಂದು ಕದ್ದು ನೋಡುತ್ತ ನಿಂತ. ಓದಿಯಾದ ಮೇಲೆ ‘ಛಲೋ ಬರಿದಿ. ಲೇಖದ ಬಿಗಿತ ಅದ. ಅಟ್ ದಿ ಸೇಂ ಟೈಮ್ ಇಮೋಶನಲ್ ಆಗಿನೂ ಅದ!’ ಎಂದಾಗ ಸಮಾಧಾನದ ನಿಟ್ಟುಸಿರಿಟ್ಟ. ನಾಲ್ಕು ವರ್ಷದ ಹಿಂದೆ ಮನೆಬಿಟ್ಟು ಬಂದಾದ ಮೇಲೆ ಮನೆಗೆ ಬರೆದ ಮೊದಲ ಪತ್ರವಾಗಿತ್ತದು! ಸಹಜವಾಗಿಯೇ ಉದಯೋನ್ಮುಖ ಕಥೆಗಾರನೊಬ್ಬ ಮೊದಲ ಕಥೆ ಬರೆದು, ತಪ್ಪು ಅಂಚೆ ವಿಳಾಸ, ಪೂರ್ಣ ಪಾವತಿಯಾಗದ ಅಂಚೆಚೀಟಿ ಅಂಟಿಸಿ, ಪತ್ರಿಕೆಯ ಉಪಸಂಪಾದಕಿ/ದಕ ಓದದೆ ವಾಪಸ್ಸು ಕಳಿಸಿದರೆ ಬದುಕಿರುವುದು ಹೇಗೆ ಎಂದು ಚಿಂತೆಯಲ್ಲಿ ಮುಳುಗಿ ಆತಂಕಗೊಂಡವನಂತಾಗಿತ್ತು ಮಧುಕರನ ಸ್ಥಿತಿ! ಇವನ ಕಳವಳದ ಮನವನ್ನು ಅರಿತಂತೆ ಕುಸುಮ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಯಾವುದಕ್ಕೂ ತಾನಾಗಿಯೇ ಮುಂದುವರಿಯದ, ದರವಂದಕ್ಕೂ ‘ಪುಷ್‌ಬ್ಯಾಕ್’ ಬಯಸುವ, (ಶಾಲೆಯಲ್ಲಿ ಹಿಂದಿನ ಸಾಲಲ್ಲಿ ಕೂತುಕೊಳ್ಳುವ!) ಮ್ರುದುಹುಡುಗ ಮಧುಕರನ ಕೈಯನ್ನು ಮೆತ್ತಗೆ ಅದುಮಿ ಅವನಿಗೆ ಮತ್ತಷ್ಟು ಉಮ್ಮೀದನ್ನು ತುಂಬಿ ಕಳಿಸಿದ್ದಳು.

ರೈಲಿನ ಟಿಕೇಟು ಬುಕ್ ಮಾಡಿಸಿ, ಹೋಗುವ ದಿನದವರೆಗೂ ನಿಶ್ಚಿಂತೆಯಿಂದಿದ್ದ ಮಧುಕರ, ಅಂದು ಬೆಳೆಗ್ಗೆ ಎದ್ದದ್ದೇ ಮಂಕಾಗಿ, ಟಿಕೇಟನ್ನು ಕ್ಯಾನ್ಸಲ್ ಮಾಡಿಸುವಷ್ಟು ಉದ್ವಿಗ್ನನಾದ. ಕೈಕಾಲು ಸೋತ ಹಾಗಾಗಿ, ತಲೆಗೆ ಚಕ್ರ ಬಂದು ಯಾಕಬೇಕು ಇಲ್ಲದ ಪಂಚೇತಿ ಅನ್ನಿಸತೊಡಗಿತು. ಮನಸ್ಸು ಹಳಾರವಾಗಲೆಂದು ಯೇಟ್ಸ್‌ನ ಪ್ರೇಮಗೀಮದ ಕವಿತೆಗಳನ್ನು ಓದುತ್ತ ಕುಳಿತ, ಸಾಧ್ಯವಾಗದಾದಾಗ ಹೊರಬಂದು ರಸ್ತೆಗೆ ಬಿದ್ದು ಕುಸುಮಳ ಕಛೇರಿಗೆ ಫ಼ೋನು ಮಾಡಿ ಒಂದೆರಡು ಸಲ ಎಂಗೇಜ್ ಬಂದಾಗ ಕಂಗಾಲಾದ. ಕೊನೆಗೆ ಲೈನ್ ಸಿಕ್ಕು – “ನಾ ಇವತ್ತ ರಾತ್ರಿ ಗಾಡೀಗೆ ಊರಿಗೆ ಹೊಂಟೀನಿ, ನೆನಪದ ಇಲ್ಲೋ?” ಎಂದು ಕೇಳಿದ್ದ. ಕುಸುಮ ಇವನ ಮಾತು ಕೇಳಿಕೊಂಡು ಮತ್ತೂ ಜೋರಾಗಿ ನಕ್ಕಳು. ‘ಅಲ್ಲೋ ನಿನ್ನೆ ಸಂಜೀಕಿ ಭೆಟ್ಟಿ ಆದಾಗ ಆ ಬಗ್ಗೆ ಮಾತಾಡಿಲ್ಲ? ಮತ್ಯಾಕ ಆತಂಕ? ಆಪಿ಼ಸು ಮುಗಿಸಿ, ನಿನ್ನ ಮನೀಕಡೆ ಬರ್ತೀನಿ. ಒಟ್ಟಿಗೆ ಸ್ಟೇಶನ್ನಿಗೆ ಹೋಗೂಣೂ. ಆತು…?’ ಅಂದಿದ್ದಳು.

ರಾತ್ರಿ ಸ್ಟೇಶನ್ನಿಗೆ ಬಂದು “ಇಲ್ಲದ್ದ ತೆಗೆದು ಜಗಳ ಆಡಬ್ಯಾಡ, ಹಳೇದು ಮರೆತು, ಈಗಿನ ಸುಖಾ ನೆಚ್ಚಿಕೊಂಡು ಬದುಕೂದು-ಸ್ವಸ್ಥರೀತಿಯಿಂದ ಎಲ್ಲಾನೂ ಸ್ವೀಕಾರಮಾಡೂದು ಕಲೀ ಮಂಗ್ಯಾ!” ಎಂದು ಬೀಳ್ಕೊಟ್ಟಳು.
*
*
*
ರಾತ್ರಿಯೆಲ್ಲಾ ನಿದ್ದೆಗೆಟ್ಟು ವಾಟರ್ ಜಂಕ್ಷನ್‌ಗಳಲ್ಲಿ ನಿಲ್ಲಿಸಿದಾಗೆಲ್ಲ ಸ್ಟ್ರೋಂಗ್ ಚಹಾ ಕುಡಿದು ಗರಗರ ಎನ್ನುವ ಗಂಟಲಲ್ಲಿ ಮಧುಕರ ಊರಿಗೆ ಹತ್ತಿದಾಗ ಇನ್ನೂ ಉಷಃಕಾಲ, ಕತ್ತಲು-ಬೆಳಕುಗಳ ನಡುವೆ ಜಗತ್ತು ನಿಂತಿತ್ತು. ರಾತ್ರಿಯೆಲ್ಲ ಬಿದ್ದ ಮಳೆಯಿಂದಾಗಿ ಮಣ್ಣು ಜಿಗುಟಾಗಿ ಕೆರಕ್ಕೆ ಕೆಸರು ಮೆತ್ತಿಕೊಳ್ಳುತ್ತಿತ್ತು. ಮನೆಯ ದೊಡ್ಡ ದರವಾಜಿ ತಳ್ಳಿ ಅಂಗಳ ಪ್ರವೇಶಿಸಿದ್ದೇ ಕಂಡದ್ದು- ಗಚ್ಚಿನಿಂದ ಬಕೇಟ್ಟಿಗೆ ನೀರು ತೋಡುತ್ತ ನಿಂತ ಮೋನಿದಾದಾ! ಅವನ ಬರಿಮೈಗೆ ಜೋತುಬಿದ್ದಿದ್ದ ಹನ್ನೆರಡೆಳೆ ಜನಿವಾರ ಸರಸರ ಜಾರಿ ಬರುವಾಗೆಲ್ಲ ಎಡಗೈಯಿಂದ ಎಳೆದು ಸಿಕ್ಕಿಸಿಕೊಳ್ಳುತ್ತಿದ್ದ ದಾದಾನ ಬೆನ್ನು ಹುರಿಯ ಬಳಿ ಪುಟ್ಟ ಗಂಟೊಂದಿರುವುದು; ಅದನ್ನು ತಾನಲ್ಲದೆ ಬೇರೆ ಯಾರೇ ಮುಟ್ಟಿದರೂ ಸಿಟ್ಟಿಗೇಳುತ್ತಿದ್ದುದು ಮಧುಕರನಿಗೆ ನೆನಪು ಬಂತು. ತನ್ನ ಕಡೆ ಬೆನ್ನು ಮಾಡಿ ನಿಂತ ಮೋನಿದಾದಾನನ್ನು ಮಾತನಾಡಿಸುವ ಪರಿ ತಿಳಿಯದೆ ಹುಂಹ್‌ಹೂಹ್‌ಮ್ ಎಂದ. ಮೋನಿದಾದಾ ನೀನು ಬಂದದ್ದು ಗೊತ್ತು ಎನ್ನುವಂತೆ ‘ಗಾಡೀ ಸಿಟಿ ಊದಿದ್ದು ಕೇಳಸ್ತು. ಹೈರಾಣಾಗಿ ಬಂದಿರತೀಂತ ಸ್ನಾನಾ ಮಾಡಲಿಕ್ಕೆ ನೀರು ಬೆರಸತಿದ್ದೆ’ ಎಂದು ತನ್ನ ಕಾರ್ಯದಲ್ಲಿ ತಾನು ತೊಡಗಿದಾಗ ಮೋನಿದಾದಾನ ಮಾತಿಗೆ ಪ್ರತಿಕ್ರಿಯೆ ಹವಣಿಸಿ ಸಾಧ್ಯವಾಗದೆ ‘ಹೌದು, ಇವತ್ತ ಕರೆಕ್ಟ ಟಾಯಿಮಕ್ಕ ಟಚ್ ಕೊಟ್ಟಾನ…ಅವ್ವ ಎಲ್ಲಿ ಕಾಣಸೊಳ್ಳಲ್ಲ?’ ಎಂದು ಕೇಳಿದ. ‘ಈಗ ಥಳಿ ರಂಗೋಲಿ ಮಾಡಿ ಹೋದ್ಳು. ಹಿತ್ತಲದಾಗ ಹಾಲ ಹಿಂಡಲಿಕ್ಕೆ ಹತ್ಯಾಳ ಕಾಣ್ತದ, ನೀ ಹೋಗಿ ಮಾರಿ ಗಲಬರಿಸಿಕೋ ಬಿಸಿನೀರು ಬಚ್ಚಲಕೆ ತರತೇನಿ..’ ಎಂದು ಮೋನಿದಾದಾ ಭಾರದ ಬಕ್ಕೆಟ್ಟನ್ನು ಝೋಲಿ ಹೊಡೆಯುತ್ತ ಬಚ್ಚಲಿಗೊಯ್ವದನ್ನು ನೋಡುತ್ತ ಮಧುಕರ ಅಂದುಕೊಂಡ; ಮೋನಿದಾದಾ ಮದಲಿನಂಗೆ ಇದ್ದಾನ, ಚೂರು ಬದಲಾಗಿಲ್ಲ. ಹಿಂದಿದೆಲ್ಲಾ ಮರತಾನ ಕಾಣಸ್ತದ. ಆದರ ನಾಯಾಕ ನಾಕವರ್ಷದ ಹಿಂದಿನ ಅವನ ಬೈಗುಳಾ ಮರತಿಲ್ಲ? ನಿನ್ನೆ ರಾತ್ರಿ ಮನೆಬಿಟ್ಟು ಮುಂಜಾನೆ ಬಂದಂವನಂತೆ ನನ್ನನ್ನು ಸಹಜವಾಗಿ ಸ್ವೀಕರಿಸಿದ ಮೋನಿದಾದಾ ಈ ವರ್ಷಗಳಲ್ಲಿ ನನ್ನ ಗೈರುಹಾಜರಿಯ ಶೂನ್ಯವನ್ನು ಅನುಭವಿಸಿಯೇ ಇಲ್ಲವೆ? ಅಥವ ಇಂಥಾವೆಲ್ಲ ಇದ್ದದ್ದೇ-ನಾನೂ ನಿನ್ನಂಥ ಹರೇದಾಗ ರಗಡ ಮಾಡೀನಿ. ಆತ್ಯು-ಹೋತ್ಯು ಈಗ್ಯಾಕವೆಲ್ಲಾ-ಎಂಬುದವನ ನಿಲುವಿರಬಹುದು ಇಂದುಕೊಳ್ಳುತ್ತ ಮಧುಕರ ಹಿತ್ತಲಿಗೆ ಅವ್ವನನ್ನ ಹುಡುಕಿಕೊಂಡು ಹೊರಟ.

ಒಂದು ಅಸಹನೀಯ ಕತ್ತಲಲೋಕದಿಂದ ಕಣ್ಣಿಗೆ, ಆತ್ಮಕ್ಕೆ, ಮನಸ್ಸಿಗೆ ಬೆಚ್ಚಗಿನ ಅನುಭವ ನೀಡುವ ನಂದಾದೀಪದ ಬೆಳಕಿನ ಲೋಕಕ್ಕೆ ಕಾಲಿಟ್ಟು ಅನುಭವವನ್ನು ವರ್ಣಿಸಲಾಗದೆ ಮಾತುಕಳೆದುಕೊಂಡಂತಾದ ಮಧುಕರ ಲೀನತೆಗೆ ಮೊದಲಿನ ಅಸ್ವಸ್ಥತೆ, ಮೈಯೆಲ್ಲ ಸಣ್ಣಗೆ ನಡುಗುವಿಕೆಗೆ ಪಕ್ಕಾದ. ಮನಸ್ಸಿಗಾವರಿಸಿದ್ದ ನಿಷ್ಕಾರಣ ಬಲಹೀನತೆ, ಕುಂದಿದ ಆತ್ಮಸ್ಥೈರ್ಯವೆಲ್ಲ ಗೊತ್ತಿಲ್ಲದಂತೆ ಮರೆಯಾಗಿದ್ದವು. ಎಲ್ಲ ತಾನು ಊಹಿಸಿದಂತಿರದೆ, ಎಷ್ಟು ಸಹಜವಾಗಿತ್ತು ಎಂದು ನೆನೆಸಿಕೊಂಡೇ ಅವನ ಮನಸ್ಸು ನಿರಾಳವಾಗಿತ್ತು. ಅವನು ಅಂದುಕೊಂಡದ್ದಾದರೂ; ಮೋನಿದಾದಾ “ಮತ್ಯಾಕ ಈ ಮನಿ ಹೊಸ್ತಲಾ ತುಳದ್ಯೋ? ಆಡಿದ್ದನ್ನ ಮರೀಯುದಕ್ಕ ನಿನಗ ಶರಂ ಆಗುದಿಲ್ಲ?” ಎಂದು ಹೀಯಾಳಿಸುತ್ತಾನೆಂದು! ಅದನ್ನು ನೋಡಿ ಅವ್ವ, ಯಾರ ಪಕ್ಷವೂ ವಹಿಸುವುದಾಗದೆ ಬಾಯಿಗೆ ಸೆರಗಿನ ಮುಟಿಗೆ ತುರುಕಿ ಬಿಕ್ಕುತ್ತಾಳೆಂದು! ಗೋಪಾಲ “ಈ ಪರಿ ದಾದಾನ್ನ, ಅವ್ವನ್ನ ಹುರವಳಿಸಿ ಮುಕ್ಕಿ ಏನ ಪಡದ್ಯಪಾ?” ಎಂದು ಹಂಗಿಸುತ್ತಾನೆಂದು! ಅದನ್ನು ನೋಡಿ, ಸೂಟಿಗೆ ಬಂದ ಪುಷ್ಪಕ್ಕ ಕಕ್ಕಿಯ ಮಕ್ಕಳು ಮೂಲೆಯಲ್ಲಿ ನಿಂತು “ಈ ಮಧುಕರ ಕಾಕಾ ಏನ ಕೆಟ್ಟ ಇದ್ದಾನಪಾ!” ಎಂದು ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತಾರೆಂದು! ಆದರೆ ಅಪ್ಪಿ-ತಪ್ಪಿಯೂ ಈ ಒಂದೂ ನಡೆಯಲಿಲ್ಲ.

ಎಲ್ಲ ಎಷ್ಟು ಸಹಜವಾಗಿತ್ತು!

ಅವ್ವ-ಮೋನಿದಾದಾ! ಮೊದಲಿನ ಹಾಗೇ ಇದ್ದರು-ತುಸು ಕೂದಲು ಬೆಳ್ಳಗಾಗಿರುವುದನ್ನು ಬಿಟ್ಟರೆ, ಅವ್ವನಿಗಂತೂ ಮಧುಕರ ಇನ್ನೂ ಅಂಗಿ, ಚೊಣ್ಣ ತೊಡುವ ಗಿಳಲಿನ ಮೂತಿಯಿಂದ ಹಾಲುಕುಡಿವ ಎಳೆಗೂಸೆ. ಅತ್ತಾಗ ಕರೆದು ರಮಿಸಿ-ಬೆಲ್ಲದ ಹಳಕು; ಪುಠಾಣಿ ಕಿಸೆಗೆ ತುರುಕುತ್ತಿದ್ದ ಹುಡುಗನೆ!

ಎಲ್ಲ ಎಷ್ಟು ಸಹಜವಾಗಿತ್ತು!

ಇಲ್ಲಿ ಈ ವರ್ಷಗಳಲ್ಲಿ ಏನೂ ಆಗಿಲ್ಲ; ನೀನೆಂದೂ ನಮ್ಮ ಕೂಡ ಜಗಳಾಡಿ ಮನೆ ತೊರೆದು ಹೋಗಿಲ್ಲ. ಯಾವತ್ತೂ ಇಲ್ಲೇ ಇದ್ದೀ ಹಾಗೂ ಎಂದಿನಂತೆ ಮುಂಜಾನೆ ಎದ್ದದ್ದೇ ದಾದಾನೊಂದಿಗೆ ದೇವರಪೂಜೆಗೆ ತುಳಸಿತರಲು ತುಳಸಿ ತೋಟಕ್ಕೆ; ಅಡುಗೆಗೆ ರಾಜಗಿರಿ, ಹತ್ತರಿಗಿ ಸೊಪ್ಪು ತರಲು ಹೊಲಕ್ಕೆ ಹೋಗಿದ್ದಿ, ಅಷ್ಟೇ…ಅವ್ವ, ಮಧುಕರನತ್ತ ನೋಡಿದಾಗಲೆಲ್ಲ ಅವನಿಗೆ ಹೀಗನಿಸುತ್ತಿತ್ತು! ಹಳ್ಳಿಗೆ ಹೋದ ದಿನದಿಂದ ಮಧುಕರನಿಗೆ ವಿಶೇಷವೆಂದು ಸಾಬುದಾನಿ ಖೀರು, ಶ್ರೀಖಂಡ ಪುರೆ, ಅಪ್ಪೀಕರದ ಪಾಯಸ…ವೆಂದು ಅವ್ವ ಮಾಡಿ ಹಾಕಿದ್ದೇ ಹಾಕಿದ್ದು. ಊಟವಾದ ಮೇಲೆ ಮೋನಿದಾದಾ ತಟ್ಟೆಯಲ್ಲಿ ಹೋಳಡಿಕೆ-ಎಲೆ, ಕಾಚು, ಏಲಕ್ಕಿ, ಲವಂಗ ಇಟ್ಟುಕೊಂಡು ಕಣ್ಣುಮುಚ್ಚಿ ಅದರ ರುಚಿ ಸವಿಯುವುದು…

ಎಲ್ಲ ಎಷ್ಟು ಸಹಜವಾಗಿತ್ತು!

ಅಸಹಜವಾಗಿ ವರ್ತಿಸಿದ್ದು ತಾನು! ತಿಳಿದುಕೊಳ್ಳಲು; ಬುದ್ಧಿ ಭೆಟ್ಟಿಯಾಗಲು ನಾಲ್ಕು ವರ್ಷ ಹಿಡಿದವು. ಶಹರದ ಯಾತನಾಮಯ ನಾಲ್ಕು ವರ್ಷ, ಕಡಿಮೆ ಏನಲ್ಲ. ಬದುಕಿನ ವಿವಿಧ ರುಚಿಗಳನ್ನನುಭವಿಸಲು ಬಂದವನಿಗೆ ಸಿಕ್ಕಿದ್ದು ಧಾಬಾಗಳಲ್ಲಿನ ಹಳಸಿದ ಅಡುಗೆ, ನಾಲಿಗೆ ಜಂಗುಹತ್ತಿಸುವ ಮೆಸ್‌ಗಳಲ್ಲಿನ ಪಾಪಡ್-ತಿಳಿಸಾರು; ರಸ್ತೆಬದಿ ರಗಡಾಪಟ್ಟಿ ಮತ್ತು ಪಾವ್, ಕಾಫಿ ಹೌಸ್‌ನ ಒಣಗಿ ನಾಯಿಯಾದ ಬ್ರೆಡ್ ಟೋಸ್ಟ್. ಆಕಾಂಕ್ಷೆ ಬಹಳವಿದ್ದರೂ ಉಳಿಯಲಿಲ್ಲ. ಮೋನಿದಾದಾ-ಅವ್ವರನ್ನು ಮರೆತು ಹೊಸಮುಖ ಒಗೆತನ ಸಂಪಾದಿಸುವುದು ಆಗಲಿಲ್ಲ. ದಿಗ್ಮೂಢನನ್ನಾಗಿಸಿದ ನಗರದ ಮುಂಜಾವಿನಿಬ್ಬನಿ, ರಸ್ತೆದೀಪ, ಹೊಗೆಮಂಜು, ಸಮಯದ ಪರಿವೆಯಿಲ್ಲದೆ ಸುರಿವ ಜಿನಿಜಿನಿ ಮಳೆ-ಫ಼ಾಗ್…ಎಲ್ಲ ಆಕರ್ಷಣೆ ಕಳೆದುಕೊಂಡು, ಸ್ಕೈ ಸ್ಕೇಪರುಗಳು ಅತಿ ಕುಬ್ಜವಾಗಿ ಅವುಗಳತ್ತ ದಿಟ್ಟಿಸುವ ಉಮ್ಮೇದು ಹೊರಟುಹೊಯಿತು. ಇಲ್ಲಿನ ಜನಗಳ ಕಣ್ಣಲ್ಲೂ ಅದೇ ಮಾಮೂಲೀ ಆತಂಕ-ಖಾಲಿತನ, ಏನನ್ನೊ ಹುಡುಕುವ ಕುತೂಹಲ ಇದ್ದೇ ಇದ್ದವು! ಮನುಷ್ಯ ಎಷ್ಟೇ ದೂರ ಹೋದರೂ, ಏನೆಲ್ಲ ಬುದ್ಧಿ ಪ್ರದರ್ಶನದ ತಂತ್ರಗಳನ್ನು ಕಂಡುಕೊಂಡರೂ ಒಂದು ಪರಿಮಿತಿಯನ್ನು ಮೀರುವುದಾಗುವುದೇ ಇಲ್ಲ. ಅವನ ಸ್ಥಾಯಿಭಾವವೇ ವಿಶಾದ, ಅನಾಥತೆ, ಒಂಟಿತನ ಇರಬಹುದು.

ಶಹರದ ಯಾತನಾಮಯ ನಾಲ್ಕು ವರ್ಷಗಳು ಕಡಿಮೆಯೇನಲ್ಲ. “ಜೀವನಕ್ಕೆ ಎರಡು ಮುಖ; ಒಂದು ಸುಖ, ಒಂದು ದುಃಖ. ನಾಳಿನರಿವು ಯಾಕೆ ಸಖ?”

ಹಾಗೆಂದು ನಂಬಿಕೊಂಡು ಬಂದ ಹೊಸತು ದುಡಿಮೆಯೊಂದೇ ಪ್ರಗತಿಗೆ ಮಾರ್ಗವೆನ್ನುವ ಸರ್ಕಾರದ ಘೋಷಣಾವಾಕ್ಯ ಗೀತೆಯಾಯ್ತು. ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಸೆಕೆಂಡ್ ಶಿಫ಼್ಟ್; ನೈಟ್‌ಶಿಫ಼್ಟ್ ಓವರ್ ಟೈಮ್ ಮುಗಿಸಿದ್ದಾಯ್ತು. ದೇವರು, ದಿಂಡರು, ನಂಬಿಕೆ ಗಾಳಿಗೆ ಹೋಗಿ, ಆಧ್ಯಾತ್ಮವೆನ್ನುವುದು ಅಸಾಧ್ಯವೆಂಬ ಕಮ್ಯೂನಿಸ್ಟ್ ನಿಲುವಿಗೆ ಬಂದದ್ದು-ಇದೇ ಮಧುಕರನೆ ಅಲ್ಲವೆ? ದುಡಿಮೆ-ಕ್ರಾಂತಿ! ಪರಮೋಚ್ಛ ಗುರಿಗಳು! ಯಾವುದೋ ಸಬರ್ಬಿನಲ್ಲಿ ಪಾಯಿಖಾನೆಯೂ ಇಲ್ಲದ ಖೋಲಿ ತೆಗೆದು ಕಿಟಕಿಮೇಲೆ ಯರಗೂರೇಶ್ವರನ ಬದಲು ಮಾವೋನ ಫ಼ೋಟೋ ತೂಗು ಹಾಕಿದ್ದು-ಪರಿಚಯದ ಹಿರಿಯರೊಬ್ಬರ ಮನೆಗೆ ಪಕ್ಷದ ಕಾಮ್ರೇಡನೊಂದಿಗೆ ಹೋದಾಗ ಹಿರಿಯರು ಸಹಜವಾಗಿ ಕಾಮ್ರೇಡನಿಗೆ-ಏನು ಮಾಡಿಕೊಂಡಿದ್ದೀರಿ? ಎಂದು ಕೇಳಿದಾಗ, ಆತ “ಪ್ರೊಫೆಶನಲ್ ರೆವ್ಯೂಲ್ಯುಶನರಿ” ಎಂದು ಹೇಳಿದ. ಅದಕ್ಕೆ ಹಿರಿಯರು “ಅದು ಸರಿ ಮಾರಾಯಾ, ಊಟಕ್ಕೆ ಏನು ಮಾಡ್ತೀಯಂತ ನಾನು ಕೇಳಿದ್ದು” ಎಂದರೆಂದು ಆಮೇಲೆ ಅವರ ಮನೆಗೆ ಹೋಗುವುದನ್ನು ಬಿಟ್ಟಿದ್ದು-ಇದೇ ಮಧುಕರನೆ ಅಲ್ಲವೆ? ಮನುಷ್ಯರ ಫ಼್ಯೂಡಲ್ ಭಾವನೆಗೆ ಅದುಮಿಟ್ಟ ಲೈಂಗಿಕ ಆಶಯಗಳೆ ಕಾರಣ ಎಂದು ಚಿಂತಿಸಿದ್ದೂ ಇದೇ ಮಧುಕರನೇ ಅಲ್ಲವೆ?

ಹೌದು-ಇದೇ ಮಧುಕರನೆ. ಆದರೂ ಅವನಿಗೆ ಆಶ್ಚರ್ಯ; ಸೋಜಿಗವೆನಿಸುತ್ತದೆ.

ವಾಲೆಂಟರಿ ಸಂಘಗಳ ಹುಡುಗಿಯರೊಂದಿಗೆ ಖೈಬರ್, ಪಿಕಾಕ್‌ಗಳ ಮಂದ ಬೆಳಕಲ್ಲಿ ಸ್ಟೀವಿವಾಂಡರ್ ಸಂಗೀತ ಆಲಿಸುತ್ತ ನೊರೆಭರಿತ ಬಿಯರು ಸೀಪುವಾಗ; ಇದುರಿಗಿರುವ ವ್ಹಿಸ್ಕೀ ಗ್ಲಾಸಿನಲ್ಲಿ ಇಷ್ಟಿಷ್ಟೇ ಕರಗುತ್ತ ನಗರದ ರಾತ್ರಿಗೆ ಮೆರುಗುತರುವ ಐಸ್‌ಕ್ಯೂಬ್ ಅನ್ನೇ ನೋಡುತ್ತ ಮೈಮರೆತಾಗ ಒಂದೋ-ಮೋನಿದಾದಾ ಮುಂಜಾನೆ ದೇವರ ಖೋಲಿಯಲ್ಲಿ ಹೇಳುತ್ತಿದ್ದ ಮಂತ್ರ; ಇಲ್ಲ – ಪಾತರಗಿತ್ತಿ ಪಕ್ಕಾ, ನೋಡಿದೇನ ಅಕ್ಕಾ ಹಾಡು, ಅಥವಾ, ಭಾಂಡೀ ತೊಳೆಯುತ್ತ ಹರಿಕಥಾಂರುತಸಾರ ಹೇಳುವ ಅವ್ವನ ಮುಖ ಅದು ಹೇಗೆ ನೆನಪಿಗೆ ಬರುತ್ತಿದ್ದುವೆಂದು. ಬಹುಶಃ ವಿವಶತೆ ಶಕ್ಯವಾಗಿರುವುದು ಆಲ್ಕೋಹಾಲಿಗೆ ಸಾಧ್ಯವಿಲ್ಲ; ಪ್ರೀತಿಗೆ ಮಾತ್ರ ಸಾಧ್ಯವೆಂದು ಆಗಲೇ ಅನ್ನಿಸಿದ್ದು. ತಿಂಗಳ ಮೊದಲ ವಾರದಲ್ಲಿ ಬ್ರಿಗೆಡ್ಸ್‌ನ ಸೆಲೆಕ್ಟ್ ಬುಕ್ ಸೆಂಟರ್‌ಗೆ ಹೋಗಿ ಮೂರ್ತಿಯವರಲ್ಲಿ ಸಿಂಗರ್-ಗಾರ್ಸಿಯಾರ ಪುಸ್ತಕ ವಿಚಾರಿಸುವುದು; ಮುಂಪಾವತಿ ಮಾಡಿ ಬರುವುದು. ರಜಾ ದಿನದ ಸಂಜೆ ಪಿ಼ಲ್ಮ್ ಸೊಸೈಟಿಯಲ್ಲಿ ಕೋಸ್ಟಾ ಗವೇರಾ, ಗೊಡಾರ್ಡ, ಬರ್ಗಮನ್‌ರ ಚಿತ್ರಗಳ ತಂತ್ರದ ಕುರಿತು ಚರ್ಚಿಸುವುದು, ಸಿಲ್ಲಿಕವಿಯ ಸಿಲ್ಲಿಜೋಕಿಗೆ ನಗುವುದು… ಎಲ್ಲ ಎಷ್ಟು ನೀರಸವೆನ್ನಿಸಿ ಇವೂ ರುಟೀನ್ ಆಗುತ್ತಿವೆ ಎಂದು ಅವುಗಳ ಬಗ್ಗೆಯೂ ಅನಾಸಕ್ತಿ ಹುಟ್ಟಿತು. ಡ್ಯೂಟಿ ಮುಗಿಸಿ ಬಸ್‌ಸ್ಟಾಪಿಗೆ ಹೋದರೆ ಒಣಗಿದ ತುಟಿಗಳಿಗೆ ಅತಿಯಾದ ಬಣ್ಣ ಮೆತ್ತಿಕೊಂಡು ಗೋಣು ಎತ್ತಿ ಎತ್ತಿ ಪದೇ ಪದೇ ರಿಸ್ಟ್‌ವಾಚ್ ನೋಡಿಕೊಳ್ಳುತ್ತ ಅಕಾಲ ವೃದ್ಧಾಪ್ಯ ತಲುಪಿರುವ ಬಾಲೆಯರ ತುಟಿ ಒದ್ದೆ ಮಾಡಲು ಯಾರೂ ಹುಟ್ಟಿಲ್ಲವೆ ಅಂತನ್ನಿಸುವುದು. ಗಾಂಧಿಬಜಾರಿನಲ್ಲಿ ವಿದ್ಯಾರ್ಥಿಭವನದ ದೋಸೆ ತಿನ್ನಲೆಂದೇ ಹುಟ್ಟಿದ್ದೇವೆಂದು ಭ್ರಮಿಸಿ, ಸೀಟಿಗಾಗಿ ಪರದಾಡಿ, ಸಿಗದಾದಾಗ ಗರ್ಭಿಣಿ ಹೆಂಡತಿಯ ಕಡೆಗೆ ಪೆಚ್ಚಾಗಿ ನೋಡುವ ಗುಮಾಸ್ತರಿಗೆ ದೇವರು ಒಂದು ದೋಸೆಯ ಕಾರ್ಖಾನೆ ತೆಗೆದುಕೊಡಬಾರದೆ ಎಂದೆನ್ನಿಸುವುದು. ಮೂರನೆ ಜಗತ್ತಿನ ಎಡಸಾಹಿತ್ಯದ ಕುರಿತು ಮಾತಾಡಿ ವೇದಿಕೆಯಿಳಿದದ್ದೇ ಮುಂದಿನ ಸೋಫ಼ಾ ಸೀಟಲ್ಲಿ ಕೂತ ಹುಡುಗಿಯ ಬ್ರೇಸಿಯರ್ಸ್ ಬಗ್ಗೆ ಹರಟುವ ಸೆಮಿನಾರುವಾದಿಗಳನ್ನು ಕಂಡಾಗ ಆ ಕಂಪೆನಿಯ ಸೇಲ್ಸ್‌ರೆಪ್‌ರನ್ನಾಗಿ ಇವರನ್ನು ಭರ್ತಿ ಮಾಡಿದರೆ ಹೇಗೆ ಅಂತನ್ನಿಸುವುದು.

ಒಬ್ಬರಲ್ಲಾದರೂ ಸಹಜ ನಗು, ಕಣ್ಣಲ್ಲಿ ಜೀವದ ಹೊಳಪು? ಇಲ್ಲ. ಮೋನಿದಾದಾನೊಂದಿಗೆ ಅನವಶ್ಯಕ ಜಗಳಾಡಿ ಬಂದಿರದಿದ್ದರೆ ಕಡೆಯಪಕ್ಷ ಎರೆ ಹೊಲವನ್ನಾದರೂ ನೋಡಿ ಬದುಕಬಹುದಿತ್ತು ಎಂದೆಲ್ಲ ಯೋಚಿಸುವ ಮಧುಕರ ನಗರದ ರಾತ್ರಿಯ ಛಳಿ, ಅಕಾಲಿಕ ಜಿನುಮಳೆ-ಫ಼ಾಗ್ ಎಲ್ಲ ಸುಪ್ತವಾಗಿ ದ್ವೇಷಿಸಲು ತೊಡಗಿದಾಗಲೇ ವಿವಶತೆ ಹುಡುಕಿಕೊಂಡು ಬಂದಿತ್ತು.

ಪ್ರೀತಿಯೊಂದರಿಂದಲೇ ಚೇತನದ ಉದ್ಧಾರವೆಂದು ಮನವರಿಕೆಯಾದಾಗಲೇ ಕುಸುಮ ಬಂದಳು. ಗುಲಾಬಿ ಪಕಳೆ ಬಣ್ಣದ ಸೀರೆ, ಅದೇ ತೆಳು ರಂಗು ತುಟಿಗೆ, ತಿಲಕ ಹಣೆಗೆ, ಸ್ಟೆಡ್ ಕಿವಿಗೆ-ಮ್ಯಾಚಿಂಗ್ ಬಣ್ಣ ಕುಪ್ಪುಸಕ್ಕೆ, ಕಂಡದ್ದೇ ನನ್ನ ನಿನ್ನ ಬೆನ್ನಹಿಂದೆ ವಿಶಾಲವ್ರುಕ್ಷ ಬೆಳೆದಿದೆ ಎಂಬಂತೆ ಬೆನ್ನಿಗೆ ಹರಹಿದ ಕೂದಲನ್ನೊಮ್ಮೆ ಅಲುಗಿಸಿ ನಕ್ಕಳು. ಇಂಥ ನಗು ನೋಡಿಲ್ಲವೆಂಬಂತೆ ಮಧುಕರ ಪರವಶನಾದ, ಅವನ ಕೊರತೆಗಳೆಲ್ಲ ಆ ನಗು, ಪ್ರೀತಿಯಿಂದ ಆಡಿದ ಪರಿಚಯದ ಮಾತುಕತೆ ನೀಗಿದವು. ಪ್ರೀತಿ ಮಾತ್ರ ಕೊರತೆಯನ್ನು ಸೌಂದರ್ಯವೆಂದುಕೊಂಡು ಗೌರವಿಸುವುದು.

ಕುಸುಮ – ಇಂಟೆಲಿಜೆಂಟ್ ಆಂಡ್ ಅಂಡರ್‌ಸ್ಟಾಂಡಿಂಗ್! ಎಂದು ಮಧುಕರ ಉಬ್ಬಿದಾಗಲೇ-ನಗರಕ್ಕೆ ರಜಾದಿನದಾಗ ಮಾತ್ರ ಬರಬೇಕು. ಐರನಿ ಅಂದ್ರ ನಾವೆಲ್ಲಾ ಸೂಟಿವಳಗ ಹಳ್ಳಿಗೆ ಹೋಗ್ತೀವಿ. ಹಳ್ಯಾಗ ಇರಬೇಕಾದ ವ್ಯಾಳ್ಯಾದಾಗ ಶಹರದಾಗ ಇರತೇವಿ- ಎಂದು ಕುಸುಮ ಹೇಳಿದ್ದಳು. ಫ಼್ರೆಂಚ್ ಸಿನೆಮಾ ಫ಼ೆಸ್ಟಿವಲ್-ಮೆಮೋರಿಯಲ್ ಹಾಲ್. “ಸಿನೆಮಾದ ಕೊನೆ ಎಷ್ಟು ನೆಚುರಲ್ ಇತ್ತಲ್ಲಾ? ಪ್ರತಿಕಲಾವಿದ ಅತ್ರುಪ್ತ; ತನ್ನ ಕಲಾಕ್ರುತಿ ಪರಿಪೂರ್ಣವನ್ನಾಗಿ ಮಾಡೋದರಲ್ಲಿಯೇ ಅವನ ತನ್ಮಯತೆ ಅನ್ನೂದು ಎಷ್ಟು ಛಲೋ ಅದಲ್ಲ! ಅದೂ ಕಥಾನಾಯಕಿ ಎಂಥ ಕಲಾವಿದೆ-ಇನ್ನಷ್ಟು ಇನ್ನಷ್ಟು ರುಚಿಯಾಗಿ ಅಡುಗೆ ಮಾಡೋದರಲ್ಲಿ; ಬೀನ್ಸ್ ಅನ್ನು ಸಣ್ಣಗೆ ಹೆಚ್ಚೋದರಲ್ಲಿ ಅವಳ ಪರಿಣಿತಿ! ಹಾಗೆ ಬದುಕೋದು ಎಷ್ಟು ಚೆಂದ ಅಲ್ಲ?’ ಕುಸುಮ, ಮಧುಕರ -ಹೌದು, ನೀವು ಹೇಳೂದು ಬರಾಬ್ಬರಿ ಅದ. ಆದರ ನಮ್ಮ ಟ್ರಾಜಿಡಿ ಅಂದ್ರ ನಮ್ಮಂಥವರಿಗೆ ಇರೂತನಾ ಇದ್ದದ್ದರ ಕಿಮ್ಮತ್ತು ಗೊತ್ತಾಗುದಿಲ್ಲ. ಗೊತ್ತಾದಾಗ ಬೇಕಾದದ್ದು; ಬಯಸಿದ್ದು ಎರಡೂ ಇರೂದಿಲ್ಲ, ಅಂದಿದ್ದ. ಕುಸುಮಳಾದರೂ ಇವನ ಕವಿತೆಯಂಥ ಅಮೂರ್ತ ಮಾತುಕತೆಗೆ ತಲೆದೂಗಿದ್ದಳು, ಅರ್ಥವಾಗದಿದ್ದರೂ ಇಂಟೆಲಿಜೆಂಟ್ ಆಂಡ್ ಅಂಡರ್‌ಸ್ಟ್ಯಾಂಡಿಗ್!

ಒಳಗೇ ಚಿಗುರೊಡೆಯುತ್ತಿದ್ದ ಮೋನಿದಾದಾ-ಅವ್ವರನ್ನು ನೋಡುವ ಬಯಕೆಯನ್ನು ಈ ಕುಸುಮಿ ಬರೂತನಾ ನಗರದ ಬೀದಿಗಳು ಅದುಮಿಟ್ಟಿದ್ದವು, ಇಲ್ಲ ತಾನೇ ಅಮುಕುವಂತೆ ಪ್ರೇರೇಪಿಸುತ್ತಿದ್ದೆ ಎಂದುಕೊಂಡಿರುವ ಮಧುಕರ ಶಹರದ ಏಕಾಂಗಿ ವರುಷಗಳನ್ನು ಮಾಗಿಕಾಲ ಎಂದು ತಿಳಿದಿದ್ದಾನೆ. ತನ್ನಲ್ಲಿನ ಹೂ, ಹೊಗರು, ಒಗರು-ಚಿಗುರು ಚಿಮ್ಮಿಸಲು ಚೈತ್ರಳಾಗಿ ಕುಸುಮ ಬರಲೇಬೇಕಿತ್ತು. ಅದಕ್ಕಾಗಿ ಈ ಮಾಗಿಯೂ ಬೇಕೇಬೇಕಿತ್ತು ಎಂದು ತರ್ಕಬಲ್ಲ ಮಧುಕರ ವಾದಿಸಬಲ್ಲ, ಬೇಕಾದರೆ!
*
*
*
ಸೂಟಿ ಮುಗಿಯಲು ಕೇವಲ ವಾರಕಾಲ ಮಾತ್ರವಿದೆ ಎಂದಾಗ ಮಧುಕರನಿಗೆ ಅವ್ಯಕ್ತ ಕಳವಳ ಪ್ರಾರಂಭವಾಯಿತು. ಹಳ್ಳಿಗೆ ಬರುವ ಮೊದಲು ಆದ ಹಾಗೇ! ಇಲ್ಲಿಗೆ ಕಾಲಿಡುವುದು ಹೇಗೆಂಬ ಅಳುಕಿಂದ ದಣಿದವನಿಗೆ ಹಳ್ಳಿಯಿಂದ ಆ ಹಾಳುನರಕಕ್ಕೆ ಹೋಗುವುದು ಹೇಗೆಂಬ ಚಿಂತೆ ಪ್ರಾರಂಭವಾಯಿತು. ಕಡೆಯವರೆಗೂ ತಾನಿಲ್ಲಿ ಇರುವುದು ಅಸಾಧ್ಯವೆಂಬ ನೋವೇ ಅವನಿಗೆ ಹಳ್ಳಿಯ ಬಗೆಗಿನ ವ್ಯಾಮೋಹ ಹೆಚ್ಚಿಸಿತ್ತು. ಅಲ್ಲಿದ್ದಾಗ ಇಲ್ಲಿನ ತುಡಿತ ಕನವರಿಕೆಯ ಮಟ್ಟ ಮುಟ್ಟಿ, ಇಲ್ಲಿ ಬಂದಾಗ ಇಲ್ಲಿರುವುದರೊಂದಿಗೆ ಅಲ್ಲಿನದರ ಸೆಳೆತ ಅತಿಯಾಗುವುದರ ಬಗೆಯೇನು ಎಂಬುದನ್ನವನು ಯೋಚಿಸಿ ಹಣ್ಣಾದ. ಆದರೆ ಹಾಗವನು ಇಲ್ಲೇ ಇರಬೇಕಾಗಿ ಬಂದರೆ ಆಗಿನ ಅಭಿಪ್ರಾಯ; ನೋವಿನ ಬಗೆಯೇ ಬೇರೆಯಾಗಿರುತ್ತಿತ್ತೇನೋ. ಅದೂ ಅಲ್ಲದೆ ಅವನ ಯಾವತ್ತಿನ ನಿರಾಳ ಕನಸುಗಾರಿಕೆಯೇ ಅವನ ಎಲ್ಲಾ ನೋವಿನ ಮೂಲವಾಗಿ; ಸಂಬಂಧಗಳಲ್ಲಿನ ತೊಡಕು, ಏಳು-ಬೀಳು ಯೋಚಿಸದೆ ಮತ್ತಷ್ಟು ವ್ಯಾಕುಲತೆಗೆ ಮೂಲವಾಗಿ ಕೂರುತ್ತಿದ್ದುದು. ದೂರವಿರುವುದನ್ನು ಪ್ರಯಾಸದಿಂದ ಕರಗತಮಾಡಿಕೊಳ್ಳುವುದು – ಆನಂತರ ಸಖ್ಯಕ್ಕೆ, ಒಗೆತನಕ್ಕೆ, ನೋವಿನ ಮೂಲಕ್ಕೆ ತತ್‌ಕ್ಷಣ ಪ್ರತಿಕ್ರಿಯಿಸುವುದಾಗದೆ ಒದ್ದಾಡುವುದು ಮಧುಕರನ ಎಂದಿನ ಪರಿ. ಇಲ್ಲದಿದ್ದರೆ ಅವನು ಸಣ್ಣ ಬೈಗುಳವನ್ನು ಗಂಭೀರವಾಗಿ ತೆಗೆದುಕೊಂಡು ಮನೆಯವರೊಡನಿರುವುದು ಅಸಹನೀಯವಾಗಿ ಜೀವನವನ್ನರಸಿ ಹೋಗುತ್ತಿರಲಿಲ್ಲ; ಅವನು ವಾಸ್ತವ ಇದೇ ಎಂದು ಅರಿತಮೇಲೂ ಭ್ರಮನಿರಸನಗೊಳ್ಳುತ್ತಿರಲಿಲ್ಲ. ಅವನ ಮುಖ್ಯ ಪ್ರಾಣ ಯಾವತ್ತೂ ಹೊಕ್ಕುಳಲ್ಲಿ ಎನ್ನುವುದಕ್ಕೆ ಈಗವನಿಗೆ ಶಹರಕ್ಕೆ ಪರತ್ ಹೋಗದಿದ್ದರೆ ಹೇಗೆಂದು ಅನ್ನಿಸುತ್ತಿರುವುದು ಒಂದು ಉದಾಹರಣೆಯಾದರೆ ಅವನಿಂದ ಅದು ಎಂದೂ ಶಕ್ಯವಾಗದು ಎನ್ನುವುದು ಅವಸರವೂ ಇಲ್ಲದೆ ರಾತ್ರಿ ಓದಿದರಾಯಿತೆಂದುಕೊಂಡು ಆರಾಮವಾಗಿದ್ದ! ಮಧುಕರ ಪತ್ರದಲ್ಲೇನು ಬರೆದಿದ್ದಾನೆನ್ನುವ ಹಕೀಕತ್ತು ತನಗೆ ಗೊತ್ತೇ ಇದೆ ಎಂಬಂತೆ!

ರಾತ್ರಿ ಎಲ್ಲರೂ ಮಲಗಿರುವುದು ಖಾತರಿಯಾದ ಮೇಲೆ, ಮೋನಿದಾದಾ ಸಪ್ಪಳವಾಗದ ಹಾಗೆ ಮಂಚದಿಂದಿಳಿದು ಕೋಟಿನಲ್ಲಿನ ಚೀಟಿ ತೆಗೆದ. ನಿಧಾನ ಬಾಗಿಲಿನ ಫ಼ಡಕು ಸರಿಸಿ, ಖಂದೀಲಿ ಕೈಗೆತ್ತಿಕೊಂಡು ಹಿತ್ತಲಿನ ಗೋದಲೆಗೆ ನಡೆದ. ದನಕರುಗಳ ಧುಸುಮುಸು, ಚರಪರ ದಂಟಿನ ಸದ್ದಿನ ನಡುವೆ ಮೂಲೆಯಲ್ಲಿ ಕುಳಿತು ಕಾಗದ ಬಿಚ್ಚಿದ; ಖಂದೀಲಿನ ಬೆಳಕಿಗೆ ಹಿಡಿದ.

‘ಮೋನಿದಾದಾ,

ನನ್ನ ಚಿಂತೆಗಳಲ್ಲಿ ಮುಪ್ಪಾಗಿ ಈ ಶಾಯಿಯಿಂದ ಅದನ್ನು ಕಾಗದಕ್ಕಿಳಿಸಲು ಕೂಡ ನನ್ನ ಕಣ್ಣಮುಂದೆ ಬರೀ ನೀನು ಕೂತ ಚಿತ್ರವಿದೆ-ತಲೆ ಖಾಲಿಯಾಗಿದೆ! ಗಡ್ಡ ಹೆರೆದುಕೊಳ್ಳುತ್ತ ತುದಿಗುಂಡೆಯಲ್ಲಿ ಕೂತ ಚಿತ್ರ! ನೀನು ಹಾಗೆ ಕೂರುವುದನ್ನೇ ಅದೆಷ್ಟು ವರ್ಷ ಕಾಲ ನಾನು ನೋಡಿದ್ದರೂ ನಿನಗಲ್ಲದೆ ಮತ್ತ್ಯಾರಿಗೂ ಹಾಗೆ ಕೂರಲುಬಾರದು. ದಾ… ನಿನಗೆ ನೆನಪದೋ ಇಲ್ಲೋ. ಒಮ್ಮೆ ಡಿಗ್ರಿಯಲ್ಲಿ ನಾನು ಹಾಸ್ಟಲ್ಲಕ್ಕ ಇದ್ದಾಗ ಗೋಕುಲಾಷ್ಟಮಿಯ ಅಂಟಿನುಂಡೆ, ಗಸಗಸೆ, ಶೇಂಗಾದುಂಡೆ, ಚಕ್ಕುಲಿಬಳ್ಳಿ ಕೊಡಲು ನೀನು ಬಂದಿದ್ದೆ. ಕ್ಯಾಂಪಸ್ಸಿನಲ್ಲಿ ನನ್ನನ್ನು ಹುಡುಕಿಕೊಂಡು ಬರಲು ಹಿಂಜರಿಕೆಯಾಗಿ ಮೂಲೆಯ ಗಿಡದ ಕಟ್ಟಿ ಕೆಳಗೆ ನೀನು, ನಾ ಬರೋದನ್ನೇ ಕಾಯುತ್ತ ಅದೇ ತುದಿಗುಂಡೆಯಲ್ಲಿ ಕೂತಿದ್ದೆ. ನನ್ನ ಗೆಳೆಯರ ಗೊಂಪೊಡನೆ ಬರುತ್ತಿದ್ದ ನನಗೆ ನಿನ್ನನ್ನು ನೋಡಿ ಅನವಶ್ಯಕವಾಗಿ ಸಿಟ್ಟು ಬಂದಿತ್ತು. ಹಳ್ಳಿಗೆ ಬಂದಾಗ ಇನ್ನೊಮ್ಮೆ ಹಂಗ ಕಾಲೇಜ ಹತ್ಯೇಕ ಬರಬೇಡ ಎಂದು ಜಗಳವಾಡಿದೆ. ನಿನಗೆ ಸಾಧ್ಯವಾಗದಿರುವುದು ನನ್ನಲ್ಲಿ ಕಾಣಬೇಕೆಂದುಕೊಂಡ ನಿನಗೆ ಅದರಿಂದ ಅವಮಾನವಾಗಿರಬೇಕು. ಅಂದಿನಿಂದ ನಮ್ಮಿಬ್ಬರ ನಡುವೆ ರಸಕಸಿ ಶುರುವಾಯಿತು!

ಅದು ಬೆಳೆದು ನಾನು ಶಹರದ ಬೀದಿ ಬೀದಿ ಸುತ್ತ ಅವಮಾನದಲ್ಲಿ ಬೇಯುವವರೆಗೂ ಹೋಯಿತು. ನಾನು ದೊಡ್ಡವನಾದಂತೆಲ್ಲ ನಮ್ಮಿಬ್ಬರ ಅಂತರ ಹೆಚ್ಚುತ್ತಲೇ ಹೋಯಿತು. ಸಣ್ಣವನಿದ್ದಾಗ ನಿನ್ನನ್ನು ಬಿಟ್ಟಿದ್ದ ನೆನಪಿರದ ನಾನು ಬೆಳೆದಂತೆಲ್ಲ ದೂರ ಹೋಗಲು ಯಾಕಾಗಿ ತವಕಿಸಿದೆ? ನನಗೀಗಲೂ ಗೋಕುಲಾಷ್ಟಮಿಯ ದಿನ, ಮಣ್ಣೆತ್ತಿನ ಅಮಾಸೆದಿನ ಇಬ್ಬರೂ ಹೊಲದ ಮೆದು ಜೇಡಿಮಣ್ಣು ತಂದು ಗೋಕುಲ, ಎತ್ತು, ದ್ವಾರಪಾಲಕರು, ಕ್ರುಷ್ಣ ಹುಟ್ಟಿದ ಜೇಲು ಮಾಡುತ್ತಿದ್ದ ನೆನಪು ಅಳಿಸಿಲ್ಲ. ಜಾತ್ರೆಗಳಂದು ನೀನು ಹೆಗಲಿಗೇರಿಸಿಕೊಂಡು ಕಬ್ಬಿನ ಹಾಲು, ಬೆಂಡು, ಬತ್ತಾಸ, ಫುಗ್ಗಾ ಕೊಡಿಸಿದ ದಿನ ಮಾಸಿಲ್ಲ. ನೀನು ಮಾಂಜದಾರ ಮಾಡಿಕೊಟ್ಟು ಗಾಳಿಪಟ ಮುಗಿಲೆತ್ತರ ಹಾರಿಸುವುದು ಕಲಿಸಿದ್ದು; ಒಣಗಿದ ಸೋರೆ ಕಟ್ಟಿಕೊಂಡು ತುಳಸಿವನದ ತುದಿಯಿಂದ ಗಡ್ಡೀ ಹಣುಮಪ್ಪನ ದಂಡೆವರೆಗೆ ಸೋಲದೆ ಈಜುವುದನ್ನು ಕಲಿಸಿದ್ದು ಯಾವುದೂ ಮರೆತಿಲ್ಲ.

ಒಂದು ನಸುಕು-ಛೋಟ್ಯಾ ಎರೀ ಹೊಲಾ ತೋರಸ್ತೀನಿ ಎಂದು ಎಬ್ಬಿಸಿ, ಸ್ನಾನ ಮಾಡಿಸಿ ನನ್ನನ್ನು ನೀನು ಕರೆದೊಯ್ದದ್ದು ನಿನಗೆ ನೆನಪಿದೆಯೆ? ನಿದ್ದೆಗಣ್ಣಲ್ಲಿ ಪುಷ್ಪಕ್ಕನ ಮಗ ರಾಮೂನೊಂದಿಗೆ ಎರೀ ಹೊಲಾ ನೋಡಲು ನಾವು ಹೊರಟಿದ್ದೆವು. ಮೊದಲು ಕೊತಲಪ್ಪ, ಆಮೇಲೆ ಪಂಖಾಮಸೂತಿ, ಆಮೇಲೆ ಹರಣಶಿಕಾರಿಗಳು. ರಾತ್ರಿಯೆಲ್ಲ ಕಾಯುವ ಗಡ್ಡೀ ಹನುಮಪ್ಪನ ಸ್ಮಶಾನ ದಾಟಿ, ಮುರನಾಳಪ್ಡಿ ಸೇರಬೇಕಿತ್ತು ನಾವು. ದಾರಿಯಲ್ಲಿ ಹರಣಿ ಶಿಕಾರಿಗಳು ರಕ್ತ ಕುಡಿಯುವುದು; ಕೈಯಲ್ಲಿ ತಲೆಬುರುಡೆ ಹಿಡಿದು ಜಾದು ಮಾಡುವುದು ಹೇಳಿದಾಗ ನಮ್ಮ ಹಕ್ಕೀಮರಿ ತುದಿಗಳು ನೆಂದಿದ್ದವು…ಬಿಸಿಲು ಏರಿದಾಗ ಮುರನಾಳ ಪಡಿಯ ಮುಟ್ಟಿದಾಗ ನೀನು, ಅವ್ವ ಕೊಟ್ಟಿದ್ದ ಅವಲಕ್ಕಿ-ಚೂಡಾ, ಅಳ್ಳಿಟ್ಟು ನನಗೆ-ದಾಮೂಗೆ ಕೊಟ್ಟೆ. ತಿಂದು, ಹೊಳೆನೀರು ಹಣಿದು ಚಿಕ್ಕ ಬರಿಗಾಲಲ್ಲಿ ಧೂಳೆಬ್ಬಿಸುತ್ತ ನಾವು ನಡೆದೆವು ನಿನ್ನ ಹಿಂದೆ. ನಾನಾದರೂ ಹೋದಂತೆಲ್ಲ ಬೆಳೆಯುತ್ತಿದ್ದ ಹಾದಿ ನೋಡಿ ಮುಗಿಯುವುದೇ ಇಲ್ಲವೆ ಈ ಯಾತ್ರೆ ಎಂಬಷ್ಟು ಹತಾಶನಾಗಿದ್ದೆ. ಆಗಲೇ ನೀನು-ಛೋಟ್ಯಾ, ಅಂಡರಮುರನಾಳ ಪಡಿ; ನಿಂತ ಶಂಖಾ ಹೊಡೀ- ಎಂದು ದೇಸಾಯರ ಹಳಬರ ಹುಲಿ-ಶತಗರ್ಭದ ಬ್ಯಾಟಿ ಪ್ರಸಂಗ ಹೇಳುತ್ತಿದ್ದೆ…ನಗಿಸುತ್ತಿದ್ದೆ.

ಬಿಸಿಲು ರಣರಣ ಸುರಿವ ಮಧ್ಯಾಹ್ನ ನಾವು ಒಕ್ಕಲಿನ ಯಲಗೂರಿ ಮನೆಗೆ ಹೋದೆವು. ಅಂವ ಭಕ್ಕರಿ-ಬೆಣ್ಣೆ, ಬೆಲ್ಲ ಕೊಟ್ಟದ್ದು ತಿಂದು ಹೊಲಕ್ಕೆ ನಡೆದೆವು. ಹೊಲದ ಪಕ್ಕ ಹೊಳೆ. ಇಕ್ಕೆಲಗಳಲ್ಲಿ ದೊಡ್ಡ ಮರಗಳು-ಥಣ್ಣಗಿನ ಗಾಳಿ. ಹೊಲದ ತುಂಬಾ ಜೋಳದ ಸೀತೆನೆ-ನಡುವೆ ಮಡಿಲಲ್ಲಿ, ಅಗಸೆಯ ಹಳದಿ ಹೂಗಳು…ನೋಡುತ್ತ ನನ್ನ ಕಣ್ಣು ದಣಿದವು. ನೀನು – ಛೋಟ್ಯಾ, ನಿನಗೆ ನವಿಲಾ, ಬೆಳ್ಳಿಹಕ್ಕಿ ತೋರಸ್ತೀನಿ ಬಾ, ಎಂದು ಹೊಳೆಯ ಒಂದು ಬದಿಗೆ ಕರೆದೊಯ್ದೆ. ಹೊಳೆನೀರಲ್ಲಿ ಇಕ್ಕೆಲ ಬೆಳೆದ ಮರಗಳ ನೆರಳು, ದೊಡ್ಡ ಮರದ ಹಿಂದೆ ಕೂರಿಸಿ ಹಾಂಗ ನೋಡತಿರ್ರಿ ಗುಂಪು ಗುಂಪು ನವಿಲಾ, ಬೆಳ್ಳಿಹಕ್ಕಿ ಹೆಂಗ ಬಂದು ನೀರು ಕುಡಿತಾವೊ…ನೀನು ಮೆಲ್ಲ ಉಸುರಿದ್ದೆ. ನಾನು, ದಾಮೂ ಬಾಯಿತೆರೆದು ಕೂತಾಗ ನೀನು, ಪಾತರಗಿತ್ತಿ ಪಕ್ಕಾ, ನೋಡಿದೇನ ಅಕ್ಕಾ ಎಂದು ಹಾಡುತ್ತ ಧೋತರ ಸೊಂಟಕ್ಕೆ ಕಟ್ಟಿ ಕುಣಿದಿದ್ದೆ. ನಾವು ನಕ್ಕಾಗ ಮತ್ತೂ ಕುಣಿದಿದ್ದೆ. ನಾನು ಹಾಗೇ ಕೂತು ಎಳೆವ ನಿದ್ದೆಗೆ ರೆಪ್ಪೆ ಇನ್ನೊಂದು ಉದಾಹರಣೆ.

ಇಂಥ ಕಳವಳದಲ್ಲೇ ಮಧುಕರನ ದಿನಗಳು ಮುಗಿಯಹತ್ತಿದವು. ಅವನು ಬಂದ ದಿನದಿಂದ ಇಳಿ ಮಧ್ಯಾಹ್ನ ಕೂಡ ಮಳೆ ಹಿಡಿದೇ ಇತ್ತು. ಅವನಾದರೂ ಈ ಮಳೆಗಾಗಿ ಇಷ್ಟು ಸಮಯ ಕಾದೆ ಎನ್ನುವಂತೆ ಕೊಡೆಯಿಲ್ಲದೆ ಹಳ್ಳಿಯೆಲ್ಲ ಸುತ್ತಿ, ತಲೆ ಒದ್ದೆ, ಮೈ ಒದ್ದೆ ಮಾಡಿಕೊಂಡು, ಮನೆಗೆ ಬಂದು ಕಾವು ಹಂಡೆಯ ಬಿಸಿಗೆ ಕೈಯೊಡ್ಡಿ ಕಾಸಿಕೊಂಡ. ಅಂಗಳದ ಕಟ್ಟೆಗೆ ನಿಂತು ಹರನಾಳಿಗೆಯಿಂದ ನೀರು ನೆಲಕ್ಕೆ ಗುಮ್ಮುವುದನ್ನು ಆಸ್ಥೆಯಿಂದ ನೋಡಿ ಕಣ್ಣು ಕಿರಿದು ಮಾಡಿಕೊಂಡ. ಅವ್ವ, ಮೋನಿದಾದಾ, ಗೋಪಾಲರೊಂದಿಗೆ ತಪ್ಪಿಯೂ ನಗರದ ಬಗ್ಗೆ ಮಾತಾಡದೆ ಹೊಲಮನೆ, ಮಳೆಗೆ ಜಂಗುತಿಂದ ನೇಗಿಲಿನ ಮೊಳೆಯನ್ನು ಸಮಮಾಡಿಸುವುದು; ಅಟ್ಟಕ್ಕೆ ಗಚ್ಚು ಹಾಕಿಸುವುದು, ಪುಷ್ಪಕ್ಕ ಕಕ್ಕಿಯ ಮೂಲವ್ಯಾಧಿ…ಈ ಥರದ ಅಡಚಣಿ ವಿಷಯ ತೆಗೆದ. ಒಟ್ಟಿನಲ್ಲಿ ಒಂದೊಮ್ಮೆ ಅವರೊಡನೆ ಜಗಳವಾಡಿ, ನಿಷ್ಕಾರಣ ಮನೆಬಿಟ್ಟ ವಿಷಯ ಮರೆತೇ ಹೋದ.

ಮೋನಿದಾದನಾದರೋ ನಿನ್ನನ್ನು ಹುಟ್ಟಿದಂದಿನಿಂದ ಬಲ್ಲೆ ಎನ್ನುವ ಥರ ಅವನ ಹಿಂದೆ ಹಿಂದೆ ಕಣ್ಣುಹಚ್ಚಿ ಕಾದ. ಮಧುಕರ ಹಳೆಯ ಅಲಮಾರಿ ಬಾಗಿಲು ತೆಗೆದು ತಾನು – ಮೋನಿದಾದಾ ದೇಸಾಯರ ಮುರನಾಳ ಪಡಿಗುಡ್ಡದಲ್ಲಿ ಸಂಗ್ರಹಿಸಿದ ನವಿಲುಗರಿಗಳ ಬರಲು ಇದೆಯೋ, ಹೇಗೆಂದು ನೋಡುವಾಗ, ಅಟ್ಟದ ನೀರು ಗೋಡೆಗುಂಟ ಇಳಿಯುತ್ತ ಕೆಮ್ಮಣ್ಣು ಗುರುತು ಮಾಡುವುದನ್ನು ದಿಟ್ಟಿಸುತ್ತ ನಿಂತಾಗ, ಜಿನಿಮಳೆಯಲ್ಲಿ ಹೊಲದತ್ತ ಸಂಜೆ ವಾಯುವಿಹಾರಕ್ಕೆ ಹೋದಾಗ-ಅವನ ಹಿಂದೆ ಹೆಂದೆ, ನಡುಗೆ ಬಾರದ ಮಗುವೆ ಬಿದ್ದೀಯ ಎಂದು ಕಣ್ಣು ಹಚ್ಚಿ ಕಾದ. ಜಡಿಹಿಡಿದ ಚಿತ್ತ ಕುರುಡು ಮಳೆಯ ಅಂಥ ಒಂದು ಮುಂಜಾನೆ ಮಧುಕರ ಎದ್ದವನೆ ಅವ್ವ ಜಾಂಬೂದ ತುಂಬ ಕೊಟ್ಟ ಚಹಾ ಕುಡಿಯುತ್ತ ಪಡಸಾಲೆಯ ಹೊಸ್ತಿಲಿಗೆ ಕೂತಿದ್ದ. ತನ್ನೊಂದಿಗೇ ಬೆಳೆಯುತ್ತ ಇದೀಗ ಗೋಣೆತ್ತಿ ನೋಡುವಷ್ಟು ಎತ್ತರವಾಗಿದ್ದ, ಮನೆಯ ಮುಂದಿನ ಆಕಾಶಮಲ್ಲಿಗೆ ಹೂವಿನ ಗಿಡ ಮಳೆನೀರಿನೊಂದಿಗೆ ಹೂಡುಗಾಟಿಕೆಯಾಡುತ್ತಿತ್ತು. ತಾನು ಸಣ್ಣವನಾಗಿದ್ದಾಗ ಬರೀ ತೊಪ್ಪಲಾಗಿದ್ದ ಈ ಗಿಡವೀಗ ಗಿಡವಿಡೀ ತೋರುಬೆರಳಿನುದ್ದದ ಹೂ ತುಂಬಿಕೊಂಡು ಬಿಟ್ಟಿದೆಯಲ್ಲ. ಗಿಡದಲ್ಲಿದ್ದ ಹೂಗಳು ಗಿಡಕ್ಕೆ ಅಲಂಕಾರದಂತಿದ್ದರೆ, ನೆಲಕ್ಕುದುರಿ ನೀರು ಹೀರುತ್ತಿದ್ದ ಹೂವುಗಳು ಮಣ್ಣಿಗೆ ಅಲಂಕಾರದಂತಿದ್ದವು. ಹೂವಿನ ಕಡುವಾಸನೆ ವಾಸನಾಮಯ ಇಂದ್ರಿಯಗಳನ್ನು ಹಾದು ಮೈ ಮೆರೆಸುವಂತಿತ್ತು. ಹೂವಿನ ತೊಟ್ಟು ಹಾರಿಸಿ, ಅದರ ನಡುವಿನ ಪರಾಗನಳಿಕೆಯಿಂದ ಸಿಹಿಹೀರಿ-ಹಿಂಭಾಗದ ನಳಿಕೆಯಿಂದ ಪೀಪಿ ಮಾಡಿ, ಕಿನ್ನರಜೋಗಿ ಬಾರಿಸಲು ಕಲಿಸಿದ್ದು ಮೋನಿದಾದಾ ಅಲ್ಲ? ಅಂದುಕೊಂಡು, ಮಧುಕರ ಯಾಕೆ ಮೋನಿದಾದಾನ ಸಪ್ಪಳವಿಲ್ಲವೆಂದು ಸುತ್ತಲೂ ಕಣ್ಣಾಡಿಸಿದ. ಮೋನಿದಾದಾ ತನ್ನ ಖೋಲಿಯ ಅರೆಬರೆ ಕತ್ತಲೆಯಲ್ಲಿ ತುದಿಗುಂಡಿಯಲ್ಲಿ ಪರಜು ಹಾರಿದ ಕನ್ನಡಿ ಮುಂದೆ ಕೂತು ಕತ್ತೆತ್ತಿ ಗಡ್ಡ ಹೆರೆದುಕೊಳ್ಳುತ್ತಿದ್ದ. ಕೂದಲು ಬೆಳ್ಳಗಾದ, ಕೆನ್ನೆ ಸುಕ್ಕಾದ ಮೋನಿದಾದಾ ಮುಂಜಾನೆಯ; ಮಳೆ ಹಿಡಿದ ನಸುಕು ಕತ್ತಲೆಯ ಆ ಘಳಿಗೆ ಅವಧೂತನಂತೆ ಕಂಡ. ಮಧುಕರ ಎದ್ದು ಹೋಗಿ ಪಾದ ಹಿಡಿದು, ದಾದಾ ನಂದು ತಪ್ಪಾತು, ಎನ್ನಲೆ? ಅಂದುಕೊಂಡ. ಆದರೆ ಅದು ಬಹಳ ನಾಟಕೀಯ. ಜತೆಗೆ ತನ್ನಿಂದ ಸಾಧ್ಯವಾಗದ ಕ್ರಿಯೆ, ಅಲ್ಲದೆ ನಾನಷ್ಟು ಸರಳನೂ ಅಲ್ಲ ಅನ್ನಿಸಿತು. ಬಿಸಿರಕ್ತದ ನವ ತರುಣ ಅಹಂಕಾರ. ತನ್ನ ತಪ್ಪು ಆಲೋಚನೆಗಳಿಂದ ನಿದ್ದೆ ಬಾರದ ಮಾರ್ಗವನ್ನು ಹುಡುಕುವವ. ವಿಷಾದ; ಮನುಷ್ಯನಿಗೆ ಬೇಕು-ಬಾರದುಗಳ ಎರಡು ದಾರಿಗಳು ಖುಲ್ಲಾ ಇದ್ದರೂ ಆಯ್ಕೆಯ ವೇಳೆಯಲ್ಲಿ ಬುದ್ಧಿ ಮೀರಿ, ಭಾವನೆ ಮೇಲುಗೈ ಪಡೆದಿರುವುದರಿಂದ, ಒಳ್ಳೆಯದು-ಖರಾಬಿನದು; ಹೇಗೋ ಏನೋ, ಮೋನಿದಾದಾನಿಗೆ ಕೆಟ್ಟದ್ದು ಅಂತನ್ನಿಸಿದ್ದು ನನಗೆ ಒಳ್ಳೆಯದಾಯಿತು. ಇಷ್ಟಕ್ಕೂ ಮನುಷ್ಯನಿಗೆ ತನ್ನದೇ ಅನ್ನುವ ಆಯ್ಕೆಯಾದರೂ ಎಷ್ಟಿರುತ್ತವೆ? ಉದಾಹರಣೆಗೆ: ಒಬ್ಬ ವ್ಯಕ್ತಿ ಮರುಧರೆಯಲ್ಲಿದ್ದಾನೆ. ಅವನಿಗೆ ಈಜಲು ಆಗುತ್ತದೆಯೆ? ಮತ್ತೆಂಥದು ಆಯ್ಕೆ; ವಿಷಾದ ಇರುತ್ತದೆಂದುಕೊಳ್ಳುವದಷ್ಟೇ! ಈ ತರ್ಕ ನಿಜವಾದರೆ ನನ್ನದು-ಮೋನೀದಾದಾನದು ಇಬ್ಬರದೂ ತ್ರುಣಮಾತ್ರವೂ ತಪ್ಪಲ್ಲ! ಒಂದಲ್ಲ ಒಂದು ರೀತಿ ಮನುಷ್ಯ ಪರಿಪೂರ್ಣನಾಗಿಯೇ ಬದುಕಿರುತ್ತಾನೆ; ತನಗೆ ಸರಿಕಂಡ ರೀತಿಯಲ್ಲಿ. ಆದರೂ ತನ್ನಲ್ಲಿ ಯಾಕೆ ಉಳಿದುಹೋಗಿದೆ ನೋವು? ನನ್ನದು ತಪ್ಪಿರಲಿಲ್ಲವೆಂದು ಮೋನಿದಾದಾನಿಗೆ ತಿಳಿಹೇಳುವವರೆಗೆ ಬಹುಶಃ ಹಾಗೇ ಇರುತ್ತೆ ಅದು. ಆದರೆ ತಮ್ಮಿಬ್ಬರ ನಡುವೆ ಮಾತೇ ಸಾಧ್ಯವಿಲ್ಲವಲ್ಲ! ಎಂದುಕೊಳ್ಳುತ್ತಿರುವಾಗಲೇ ಮಧುಕರನಿಗೆ ಮೋನಿದಾದಾನಿಗೊಂದು ಪತ್ರ ಬರೆದರೆ ಹೇಗೆಂಬ ಯೋಚನೆ ಬಂದು, ಜಾಂಬೂದಲ್ಲಿದ್ದ ಚಹಾ ಮುಗಿಸಿದ್ದೇ ಅಟ್ಟದ ಖೋಲಿಗೆ ಹೊರಟು ಕಾಗದ – ಪೆನ್ನು ಹಿಡಿದು ಕುಳಿತ.

ಸುಪುತ್ರನ್ಯಾಕೋ ಅನ್ಯಮನಸ್ಕನಾಗಿ ಖೋಲಿ ಹಿಡಿದಿರುವುದನ್ನು ಗಮನಿಸಿದ ಮೋನಿದಾದಾ ಖಂದೀಲು ಹುಡುಕುವ ನೆಪದಲ್ಲೊಮ್ಮೆ, ಒಗ್ಗರಣೆಗೆ ಮೆಣಸಿನಕಾಯಿ ತೆರೆಯುವ ನೆಪದಲ್ಲೊಮ್ಮೆ ಅಟ್ಟಹತ್ತಿ ಬಂದ. ಮರೆಯಲ್ಲಿ ನಿಂತು ಮಗನ ಗಂಭೀರತೆ, ವಿಷಾದ, ಯಾತನೆ ತುಂಬಿದ ಮುಖ ಗಮನಿಸಿ, ಹುಚಪ್ಯಾಲಿ, ಹುಚಪ್ಯಾಲಿ ಎಂದುಕೊಂಡು ನಕ್ಕ. ನೀ ಅತ್ತಾಗ ಬೆಲ್ಲಾ-ಕೊಬ್ಬರಿ ಹಳಕು ಕೊಟ್ಟು ಬೆಳಸಿದಂವನೋ ನಾನು ಎಂದು ಮನಸ್ಸಿನಲ್ಲೇ ಅಂದುಕೊಂಡ.

ಪತ್ರ ಬರೆದು ಮುಗಿಸಿದ ಮಧುಕರ ಅದನ್ನು ಮೋನಿದಾದಾ ತನ್ನ ಕೋಣೆಯಲ್ಲಿರದ ವೇಳೆ ನೋಡಿಕೊಂಡು ಅವನ ಕೋಟಿನ ಕಿಸೆಯಲ್ಲಿ ಪತ್ರ ತುರುಕಿ ಕಳ್ಳಬೆಕ್ಕಿನಂತೆ ಓಡಾಡಿದ. ಮೋನಿದಾದಾನಿಗೆ ಕೇಳುವಂತೆ ಅವ್ವನೊಡನೆಯೇ ಅವಾ, ದಾದಾನ ಕೋಟಿನ ಗುಂಡಿ ಕಿತ್ಯಾವ ಹೊಲಸಬಾರದೇನ? ಎಂದು ಹೇಳಿದ. ಮೋನಿದಾದಾನಾದರೂ ಯಾವ ಮುಚ್ಚಬೇಕು-ಗಿಡ-ಮರಗಳ ಮೇಲಿಂದ ರೆಕ್ಕೆ ಪಡಪಡಿಸುತ್ತ ನವಿಲುಗಳ ಹಿಂಡು, ಬೆಳ್ಳಿ ಹಕ್ಕಿಗಳ ಹಿಂಡು…ನನಗೆ ನಿದ್ದೆ. ಕನಸಲ್ಲಿ ನಾನೊಂದು ನವಿಲೇರಿದರೆ, ನೀನೊಂದು ನವಿಲೇರೆ ಮೋಡದಲ್ಲಿ ತೇಲುತ್ತಿದ್ದೆವು…ಎಷ್ಟೋ ವೇಳೆಗೆ ನಮ್ಮನ್ನೆಬ್ಬಿಸಿ ಮುಖತೊಳಿಸಿ, ಕುಲಕರ್ಣಿ ಕಟ್ಟಿದ ಬಂಡಿಯಲ್ಲಿ ಪರತ್ ಹಳ್ಳಿಗೆ ಬಂದೆವು. ಬರುವಾಗ ದಾರಿಯಲ್ಲಿ ನೀನು ಮೆತ್ತಗೆ-ಛೋಟ್ಯಾ ನೋಡಿಲ್ಲಿ! ಎಂದಾಗ ಕಣ್ಣಗಲಿಸಿ ನಾನು ನೋಡಿದರೆ- ಎರಡು ನವಿಲುಗರಿ ಬರಲು, ಸೂಡು! ಅವ್ವನ ಹೆರಳಿನಷ್ಟು ದಪ್ಪದ, ಕಮಾನು ಕಣ್ಣಿರುವ ನವಿಲು ಗರಿಗಳು! ನನ್ನೆದೆ ಉಬ್ಬಿಬಂದಿತ್ತು….

ಈಗಲೂ ಅದೇ ನವಿಲು ಬರಲಿದೆ, ಅದೇ ನಾನಿದ್ದೇನೆ, ಅದೇ ನೀನೂ, ಬದಲಾದದ್ದೇನು? ಹಾಗಿದ್ದರೆ ಮತ್ಯಾಕೆ ನಾವಿಬ್ಬರು ಅಂದಿನಂತೆ ಇಲ್ಲ? ನಿನ್ನ ತಲೆಯ ಟೊಪ್ಪಿಗೆಯನ್ನು ಕಿತ್ತೆಸುವುದು; ಬೆನ್ನಿನ ಚಿಕ್ಕ ಗಂಟನ್ನು ಚಿವುಟುವುದು ಯಾಕಾಗುವುದಿಲ್ಲ?…

ಮೋನಿದಾದಾನಿಗೆ ಮುಂದೆ ಓದುವುದಾಗದೆ ಕಣ್ಣಲ್ಲಿ ನೀರು ತುಂಬಿದವು. ಗಂಟಲು ಕಟ್ಟಿತು. ತನ್ನಷ್ಟಕ್ಕೆ ಛೋಟ್ಯಾ ಎಂದುಕೊಂಡ. ಕಾಗದ ಮಡಿಚಿಟ್ಟುಕೊಂಡು ಸಪ್ಪಳವಾಗದ ಹಾಗ ಅಟ್ಟಹತ್ತಿ ಮಧುಕರನ ಮುಖಕ್ಕೆ ತುಸುದೂರ ಖಂದೀಲು ಹಿಡಿದು, ಆ ಬೆಳಕಲ್ಲೇ ಅವನು ಹುಟ್ಟಿದ ದಿನದಂದು ತಾನವನನ್ನು ಮೊದಲಬಾರಿಗೆ ನೋಡಿದ ಸಂಭ್ರಮದಲ್ಲಿ ನೋಡಿದ. ಮುಗುಳುನಗುತ್ತ ಹುಚಪ್ಯಾಲಿ ಎಂದುಕೊಂಡು ಹೋಗಿ ಮಲಗಿಕೊಂಡ…
*
*
*
ಇದ್ದದ್ದು ಸಾಕಾಗಲಿಲ್ಲ ಎನ್ನಿಸಿದರೂ ಮಧುಕರ ಹೊರಟು ನಿಂತ. ಅವ್ವ, ಇನ್ನೆರಡು ದಿನಾ ಇರೋ ಛೋಟ್ಯಾ ಅಂದಾಗ-ಇಲ್ಲ ಸೋಮವಾರಕ್ಕೆ ಸೂಟಿ ಮುಗಿತದ. ಅವತ್ತ ಮೊದಲನೆ ಪಾಳಿ ಡ್ಯೂಟಿ ಅದ ಅಂದ. ಅವ್ವ ಮರುಮಾತಾಡದೆ, ಅಲಕ್ಷ್ಯ ಮಾಡಬ್ಯಾಡೋ, ಬರತ ಬಾ. ನಮದೂ ದಿವ್ಸ ಮುಗುದೂವು ಅಂದು, ತಲೆಗೆ ಕಾಸಿದ ಎಣ್ಣೆ ಹಚ್ಚಿ ಎರೆದಳು. ಹಬ್ಬದಡುಗೆ ಮಾಡಿ ಹಾಕಿದಳು..

ಮಧುಕರ-ನಾಚಿಕೆಯಾದರೂ ತಾನು ತಂದ ಖಣ-ಶಾಲನ್ನು ಅವರಿಗೆ ಕೊಟ್ಟು ನಮಸ್ಕಾರ ಮಾಡಿ ರಾತ್ರಿಗಾಡಿಗೆ ಊರಿಗೆ ಹೊರಟ.

ಜಿನಿಜಿನಿ ಮಳೆಯಿದ್ದರೂ ಮೋನಿದಾದಾ, ಗೋಪಾಲ ಕಳಿಸಲು ಸ್ಟೇಶನ್ನಿಗೆ ಹೊರಟರು. ದಾರಿಯಲ್ಲೆಲ್ಲ ಮೌನಿಯಾಗಿದ್ದ ಮೋನಿದಾದಾ ಸ್ಟೇಶನ್ನಿಗೆ ಬಂದದ್ದೇ ಬಡಬಡಿಸತೊಡಗಿದ.

ಛೋಟ್ಯಾ, ಮಾನಸಿಕ ಮಾಡ್ಕೋಬ್ಯಾಡ, ಆರೋಗ್ಯ ಛಲೋ ನೋಡಕೋ. ನನ್ನದೂ ಜೀವ ಭಾಳ ಹೈರಾಣ ಆಗೇದ ಹೋಲದಾಗ ದುಡುದು. ಅದರ ಯಾವತ್ತೂ ಬ್ಯಾಸರಿಕಿ-ಆಸರಿಕಿ ಬಂದಿಲ್ಲ ನೋಡು, ಖರೇ ಅಂದ್ರ ನಿಮ್ಮವ್ವ ನನ್ನ ಕೂಡ ಸಣ್ಣ ಆಗ್ಯಾಳ, ಅಕೀಗಂತ ನಾಯೇನ ಮಾಡೀನಿ ಹೇಳು? ಈ ಹಳ್ಳೀಬಿಟ್ಟು ಒಮ್ಮೆ ಸೈತ ಹೊರಗೆ ಹೋಗಿಲ್ಲ ಅಕೀ, ಇಷ್ಟು ದಿನ ಅಕೀ ಜೀವ ಅಂದ್ರ ನಾನಾಗಿದ್ದೆ. ಈಗ ನೀವ ಅಕೀ ಜೀವ, ನನ್ನ ಜೋಡಿ ಮಾತಾಡಬೇಕಂದ್ರೂ ಅಕೀ ಈಗನೂ ತೊದಲತಾಳ, ನಡಗತಾಳ. ಆದರ ತನ್ನ ದುಃಖ ಯಾರ ಮುಂದನೂ ಹೇಳಂಗಿಲ್ಲ ಇಷ್ಟೇ. ವಿಚಿತ್ರ ಅಂದ್ರ ಎಲ್ಲಾರ್ದೂ ಅವರವರದೇ ಬದುಕು ಸ್ವತಂತ್ರ ಇದ್ರೂ ಅವ್ರು ತಮ್ಮಷ್ಟಕ್ಕೇ ಇದ್ದಾಗ ಅರ್ಥಾ ಇರೂದಿಲ್ಲ. ಕೂಡಿ ಇದ್ದಾಗ ಪೂರ್ಣ ಅನಸತದ. ನನಗೆ ಹೊಲ, ಮನಿ, ಮಕ್ಕಳು ಇಷ್ಟೇ. ಇವೇ ಎಲ್ಲಾ ಗಾಳಿ, ಸೂರ್ಯ, ಮಳೀ ಎಲ್ಲಾ…ನಾ ಹೇಳೂದು ಇಷ್ಟ; ನಿನಗೆ ಹೆಂಗಬೇಕೊ ಹಂಗಿರು, ಆದರ ನಮ್ಮನ್ನ ಮರೀಬ್ಯಾಡ…ಹೆತ್ತವರೂಂತ ಕ್ರಿಯಾ ಹಿಡಿದು ನೋಡಲಿಕ್ಕೆ ಬಾ… ಬರತೀ ಅಲ್ಲ?…

ರೈಲು ಹೊರಟಂತೆ ಮೋನಿದಾದಾ-ಗೋಪಾಲರ ಆಕ್ರುತಿಗಳು ಮರೆಯಾಗಿ, ಅವರು ಕೈಬೀಸುವುದಷ್ಟೇ ಕಾಣಿಸಿತು-ಕಡೆಯವರೆಗೂ ಸ್ಪಷ್ಟ ಕಂಡದ್ದು ಮೋನಿದಾದಾನ ಟೊಪ್ಪಿಗೆ ಮಾತ್ರ…

ಮಧುಕರನ ಕಲಸಿದ ಮನಸ್ಸು ಮತ್ತೆ ಕನಸಿಗಿಳಿಯಿತು…ಹಳ್ಳಿಮನೆ…ನಗರ…

ನಗರಕ್ಕೆ ಕೃತಕ ಬಣ್ಣದ ಬಲ್ಬಿನ ಬೆಳಕು-ಹಳ್ಳಿಮನೆಗೆ ಖಂದೀಲಿನ ತಂಪು ಬೆಳಕು-ಹೊಲಕ್ಕೆ ತೆನೆಗಳ ಹೊದಿಕೆ, ನಕ್ಷತ್ರಗಳ ಕಿನಾಪು… ಮೋಡಗಳ ಬಟ್ಟೆ…ಮರಗಳ ಛತ್ತರಗಿ…

ಶಹರದಲ್ಲಿ ನಾನೇ ಆಕಾಶ! ನನ್ನ ಮನಸ್ಸೇ ಆಕಾಶ…

ಕಿಟಕಿಯಿಂದ ಬಾಗಿ ನೋಡಿದ-ನಕ್ಷತ್ರಮಾಲೆ ತೂಗುಬಿದ್ದಿದ್ದವು. ಆಕಾಶ ಕನ್ನಡಿಯ ಹಾಗಿತ್ತು. ಅರೆ! ಎಷ್ಟು ವಿಚಿತ್ರ! ಏನನ್ನೂ ಸ್ವೀಕರಿಸದ ನಿರಾಕಾರ ಆಕಾಶಕ್ಕೆ ನಾವು ನಮ್ಮ ಕಣ್ಣಿನ ಬಣ್ಣ ನೀಲಿ, ಹಳದಿ, ಕೆಂಪು ತುಂಬುತ್ತೇವೆ. ಆಕಾರ ನೀಡಿ ಚೌಕಟ್ಟು ಹಾಕುತ್ತೇವೆ. ಈಗ ತನ್ನೊಳಗೆ ಹುಗಿದುಕೊಂಡಂತೆ ಕಾಣುತ್ತಿರುವ ನಕ್ಷತ್ರಗಳನ್ನು ಸಹ ಅತಿ ಸನಿಹ-ಅತಿ ದೂರ ಇಟ್ಟಿದ್ದೆ! ಈ ಆಕಾಶ ಕನ್ನಡಿಗೆ ಈ ನೀಹಾರಿಕೆಯೆ ಯಾಕೆ ನೋವಾಗಬಾರದು? ಹೌದು, ಹೀಗೆ ಚುಕ್ಕೆಗಳ ಚೆಲ್ಲಿ ನಿಂತು ಪ್ರಜ್ವಲಿಸುವ ಆಕಾಶದಲ್ಲಿ ಎಷ್ಟು ಚುಕ್ಕೆ, ಎಷ್ಟು ಹೊಲದ ತೆನೆ-ನನ್ನವು? ಕುಸುಮ, ಮೋನಿದಾದಾ, ಅವ್ವ, ಗೋಪಾಲ ಇವರವು? ಬಹುಶಃ ಎಲ್ಲವೂ; ಅಥವಾ ಯಾವವೂ?…

ಇಲ್ಲಿನ ನೋವು, ಸಂತಸ, ಆಡಿದ-ಆಡಲಾಗದ ಮಾತು, ಬಂದ-ಬರದ ನೆನಪುಗಳಿಗೆಲ್ಲ ಕುಸುಮ ಹೇಗೆ ಪಾಲುದಾರಳು? ನಾಳೆ-ಏನಾಯಿತು? ಎಂದವಳು ಕೇಳಿದರೆ ಹೇಳುವುದು ಏನು – ಹೇಗೆ?

ಹಳ್ಳಿಯ ಮನೆಯ ಹರನಾಳಿಗೆ ನೀರು; ಬರಿಗಾಲಲ್ಲಿ ಎರೆಹೊಲ ನೋಡಿದ ಛೋಟ್ಯಾ, ಹೊಳೆದಂಡೆಗೆ ಕೂತುತಿಂದ ಅವಲಕ್ಕಿ ಚೂಡಾ, ಜೇಡಿಮಣ್ಣಿನ ಗೋಕುಲ, ಎತ್ತು…ತುಣುಕುಗಳು.

ನಗರ-ಶಿಫ಼್ಟ್, ರೂಟ್ ಬಸ್, ಚರ್ಚ್‌ನ ಲಾನ್‌ನಲ್ಲಿ ಕುಸುಮ, ಫ಼್ರೆಂಚ್ ಸಿನಿಮಾ, ಫ಼ೆಸ್ಟಿವಲ್…ತುಣುಕುಗಳು…

ಕುಳಿರ್ಗಾಳಿ…ಸಣ್ಣಗೆ ನಡುಗಿದ ಮಧುಕರ ಸ್ವೆಟ್ಟರ್ ಹಾಕಿಕೊಳ್ಳಲು ಕಿಟ್ ತೆಗೆದ.

ಅರೆ! ನವಿಲುಗರಿ ಬರಲು! ಎರಡು! ಅವ್ವನ ಹೆರಳಿನಷ್ಟೇ ದಪ್ಪ, ಕಮಾನುಕಣ್ಣಿನ ಗರಿಗಳ ಸೂಡು! ಜತೆಗೆ ಅಂಟಿನುಂಡೆಯ ಪೊಟ್ಟಣ! ಮೋನಿದಾದಾ, ಅವ್ವ! “ಇದು ಛೋಟ್ಯಾಗ” ದಾದಾನ ಅಕ್ಷರ!

ಮಧುಕರ ಅವನ್ನು ಮೆತ್ತಗೆ ಸವರಿ, ಸವರಿ ಚಳಿಯಲ್ಲಿ ಬೆಚ್ಚಗಾಗಿ ಹೊರಗಿನ ಕತ್ತಲು ನೋಡಿದ;
ಆಕಾಶ ಕನ್ನಡಿಯ ಹಾಗಿತ್ತು; ನಿರಭ್ರ ಸ್ಫಟಿಕ.
ನಕ್ಷತ್ರಗಳ ಮಾಲೆ ಬೆಳಗುತ್ತಿತ್ತು, ತಾನೇ ಬೆಳಕೆಂಬಂತೆ.
*****
(೧೯೮೯)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.