ಬೆಂಗಳೂರಿನ ಹತ್ತಿರ ಜಪಾನೀ ಟೌನ್‌ಶಿಪ್

ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ ಮತ್ತು ಕನ್ನಡ ಚಳವಳಿಗಾರರು ಅಷ್ಟು ಗಂಭೀರವಾಗಿ ಪರಿಗಣಿಸಿದ ಹಾಗೆ ಕಾಣುತ್ತಿಲ್ಲ. ಕರ್ನಾಟಕಕ್ಕೆ, ಕನ್ನಡಕ್ಕೆ ಆ ಜಪಾನೀ ನೆಲೆಯಿಂದಾಗಿ ಆಗಲಿರುವ ಅಪಾಯವೇ ಕನ್ನಡಿಗರಿಗೆ ತಟ್ಟಿದಂತಿಲ್ಲ.

ಈಗ ಲಭ್ಯವಿರುವ ಹರಕು, ಮುರುಕು ಸುದ್ದಿಯ ಪ್ರಕಾರ ಜಪಾನಿ ಬಂಡವಾಳಿಗರು ಬೃಹತ್ ಪ್ರಮಾಣದ ಉಪನಗರವೊಂದನ್ನು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬಿಡದಿ ಸುಮಾರಿಗೆ ಕಟ್ಟಲಿದ್ದಾರೆ. ಏನಿಲ್ಲವೆಂದರೂ ಈ ಉಪನಗರ ಅಂತಿಮವಾಗಿ ಸುಮಾರು ೧೦ ಸಾವಿರ ಎಕರೆ ಕಬಳಿಸಲಿದೆ ಎಂದು ತಜ್ಞರ ಅಂದಾಜಿದೆ. ಆದರೆ, ನಿಗೂಢ ಸಂಗತಿ ಎಂದರೆ ಇಡೀ ಯೋಜನೆಯ ವಿವರಗಳು ಸರ್ಕಾರದ ಹತ್ತಿರವೇ ಇರುವ ಹಾಗೆ ಕಾಣುತ್ತಿಲ್ಲ. ರೆವಿನ್ಯೂ ಅಧಿಕಾರಿಗಳಲ್ಲೂ ಈ ಬಗ್ಗೆ ಅಗಾಧ ಅಜ್ಞಾನವೇ ತುಂಬಿದೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ಮಹಾ ಅಸಂಬದ್ಧ ಉತ್ತರಗಳು ಬರುತ್ತವೆ.

ಬೆಂಗಳೂರು ಬೆಳೆಯುತ್ತಿರುವ ದೈತ್ಯಾಕಾರೀ ರೀತಿಯಿಂದಾಗಿ ಅದರ ಸುತ್ತಮುತ್ತಲ ಸುಮಾರು ೭೦-೮೦ ಕಿ.ಮೀ.ಗಳ ತನಕ ಉಪನಗರಗಳು ಇತ್ಯಾದಿಗಳು ಬೃಹದಾಕಾರವಾಗಿ ಬೆಳೆಯುತ್ತವೆ ಎಂಬ ಬಗ್ಗೆ ಯಾರಿಗೂ ಅನುಮಾನವೇ ಬೇಡ. ಮೆಟ್ರೋಪಾಲಿಟನ್ ಬೆಂಗಳೂರು ಎಂಬ ಕಲ್ಪನೆಯೇ ಎಷ್ಟು ಭಯಾನಕ ಎಂದು ನಮಗೆ ನಿಜವಾಗಿ ಹೊಳೆಯುವುದು ೨೦-೨೫ ವರ್ಷಗಳ ನಂತರವೇ. ಅಥವಾ ಅಷ್ಟು ದೂರವೂ ಕಾಯಬೇಕಾದ ಅಗತ್ಯವಿಲ್ಲವೆಂದು ಕಾಣುತ್ತದೆ. ಮುಂದೆ ಅಷ್ಟು ಕ್ರಮಬದ್ಧವಾಗಿ ನಗರ ಬೆಳೆಯುತ್ತದೊ ಇಲ್ಲವೊ ಹೇಳುವುದು ಕಷ್ಟ. ಆದರೆ, ಕನ್ನಡ ಜನ ಮತ್ತು ಬೆಂಗಳೂರಿನ ಪರಿಸರದ ಆರೋಗ್ಯ ನಾಶವಾಗುವುದಂತೂ ಗ್ಯಾರಂಟಿ.

ಬೆಂಗಳೂರು ಮೈಸೂರು ರಸ್ತೆಯಲ್ಲಿ ಜಪಾನೀ ಟೌನ್‌ಶಿಪ್ ಬಂದರೆ ಆಗುವ ಅನಾಹುತಗಳು ಏನೇನು ಎನ್ನುವುದನ್ನು ಸದ್ಯಕ್ಕೆ ಚಿಕ್ಕದಾಗಿಯಾದರೂ ಲೆಕ್ಕಹಾಕಲು ಸಾಧ್ಯವಿದೆ. ಸಾವಿರಾರು ಎಕರೆಗಳ ಈ ಯೋಜನೆ ನಿಸ್ಸಂದೇಹವಾಗಿ ಕನ್ನಡೇತರ ಶ್ರೀಮಂತರಿಗೆ ಎಂಬ ಬಗ್ಗೆ ಅನುಮಾನ ಬೇಡ. ಏಕೆಂದರೆ, ಅಂತಾರಾಷ್ಟ್ರೀಯ ಮಟ್ಟದ ಉಪನಗರ ಇದಾಗಿ ರೂಪುಗೊಳ್ಳುತ್ತದೆಯಾದ್ದರಿಂದ ಅಲ್ಲಿ ಮನೆ ಮತ್ತು ಆಸ್ತಿ ಪಾಸ್ತಿ ಕೊಳ್ಳುವ ಶಕ್ತಿ ಕನ್ನಡದ ಯಾವ ವರ್ಗಗಳಿಗೂ ಇಲ್ಲ. ಆದರೆ, ಇಲ್ಲೊಂದು ಚಿಕ್ಕ ಸಮಸ್ಯೆಯೂ ತಲೆಹಾಕಿದೆ. ಈ ರೀತಿಯ ವಿವಿಧ ನಗರ ವಸತಿ ಮತ್ತು ಉಪನಗರಗಳ ಯೋಜನೆಗಳಿಗೆ ಬೆಂಗಳೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಸರ್‍ವೆ ಪ್ರಾರಂಭವಾಗಿದೆ. ಇಲ್ಲಿ ನಿಜವಾದ ಅಪಾಯವೇನೆಂದರೆ ಸರ್ಕಾರವೇ ಖುದ್ದಾಗಿ ನಿಂತು ಕಡಿಮೆ ಬೆಲೆಗೆ ಭೂಮಿಯನ್ನು ವಶಪಡಿಸಿಕೊಂಡು ನಂತರ ವಿಶೇಷ ವಸತಿಯೋಜನೆಗಳ ನೆಪದಲ್ಲಿ ಖಾಸಗಿ ಬೃಹತ್ ಬಂಡವಾಳಿಗರಿಗೆ ಮುಂದೆ ಕೊಟ್ಟುಬಿಡಬಹುದು ಎನ್ನುವುದು. ಸರ್ಕಾರದ ಪರಿಹಾರ ನೀಡಿಕೆ ಕ್ರಮದಲ್ಲಿ ರೈತವಿರೋಧಿಯಾದ ಅಂಶಗಳು ಸಾಕಷ್ಟಿವೆ. ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ದಾಖಲಾಗಿರುವ ಮಾರಾಟದ ಬೆಲೆಯ ಮೊತ್ತ ಎಷ್ಟಿರುತ್ತದೊ ಅದರ ಸರಾಸರಿ ಆಧಾರದ ಮೇಲೆ ಪರಿಹಾರವನ್ನು ನಿಗದಿಮಾಡುವ ಕ್ರಮ ಒಂದು. ಆಮೇಲೆ ಪರಿಹಾರ ಸಾಲದು ಎಂದು ರೈತ ಅಪೀಲು ಹೋಗಬಹುದಾದರೂ ಇಲ್ಲಿ ಅಡಕವಾಗಿರುವ ಲಂಚ, ರುಷುವತ್ತು ತರಲೆಗಳು ಊಹಾತೀತ. ಒಂದಕ್ಕೆ ಹತ್ತರಷ್ಟು ಪರಿಹಾರ ಕೊಟ್ಟರೂ ಅದು ಅಂತಿಮವಾಗಿ ಕೃಷಿಭೂಮಿ ಲೆಕ್ಕದಲ್ಲೇ ಹೊರತು ಸಿಕ್ಕಾಪಟ್ಟೆ ಬೆಲೆಬಾಳುವ ಪರಿವರ್ತಿತ ನಗರ ಭೂಮಿ ಲೆಕ್ಕದಲ್ಲಿ ಅಲ್ಲ. ಇಷ್ಟಾದರೂ ಈಗಾಗಲೆ ಸರ್ವೆ ಆಗುತ್ತಿರುವ ಬೆಂಗಳೂರು ಜಿಲ್ಲೆ ಹಳ್ಳಿಗಳಲ್ಲಿ ಅನೇಕ ರೈತರಿಗೆ ತಮಗೆ ಸಿಗಬಹುದಾದ ಪರಿಹಾರ ಧನದ ಬಗ್ಗೆ ರೋಮಾಂಚಕಾರೀ ಕಲ್ಪನೆಗಳು ಹುಟ್ಟಿಕೊಂಡಿವೆ. ಎಕರೆಗೆ ಒಂದು ಲಕ್ಷ ಸಿಗಬಹುದು ಎನ್ನುವ ಕಲ್ಪನೆಯೇ ಅವರಿಗೆ ಥ್ರಿಲ್ ಉಂಟುಮಾಡಿದೆ. ಬೆಂಗಳೂರು ಸುತ್ತಮುತ್ತ ಹಳ್ಳಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮತ್ತು ಕೆಲಸ ತುಂಬ ಕಡಿಮೆ ಆಗಿಬಿಟ್ಟಿದೆ ಎನ್ನುವುದೂ ಕೂಡಾ ಸತ್ಯ. ಹೀಗಾಗಿ, ಬೀಳು ಬಿದ್ದಿರುವ ಜಮೀನುಗಳಿಗೆ ಎಕರೆಗೆ ಲಕ್ಷ ಸಿಗುತ್ತದೆ ಎಂಬ ಅಂಶ ಆಕರ್ಷಕವಾಗಿ ಕಾಣುತ್ತದೆ. ಆದರೆ, ನಗರದ ಭೂಮಿಯಲ್ಲಿ ಲಕ್ಷಕ್ಕೆ ೩೦-೪೦ ಅಡಿಗಳ ಸೈಟು ಕೂಡಾ ಬರುವುದಿಲ್ಲ ಎಂಬ ಅಂಶ ನಮ್ಮ ರೈತರಿಗೆ ಇನ್ನೂ ಆಳವಾಗಿ ಮನದಟ್ಟಾಗಬೇಕಾಗಿದೆ. ಇದು ಅರ್ಥವಾಗಿರುವ ಮತ್ತು ಕೃಷಿಯ ಬಗ್ಗೆ ಆಸಕ್ತಿ ಇರುವ ರೈತರು ಮಾತ್ರ ಇದರಿಂದ ಭೀತರಾಗಿದ್ದಾರೆ. ತಮ್ಮ ಈಗಿರುವ ಊರುಗಳಿಂದ ೩೦-೪೦ ಕಿ.ಮೀ. ಹೋದರೂ ಕೃಷಿಯೋಗ್ಯ ಜಮೀನು ಸಿಗುವುದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿದೆ. ಈಗ ಸಿಗುತ್ತಿರುವ ಜಮೀನು ಏನಿದ್ದರೂ ಕೃಷಿಗೆ ಅಯೋಗ್ಯವಾದ ಜಮೀನು ಎಂಬ ಸತ್ಯವೂ ಅವರಿಗೆ ಗೊತ್ತಿದೆ.

ಭೂಮಿ ಮತ್ತು ವಸತಿಗೆ ಸಂಬಂಧಪಟ್ಟ ಯೋಜನೆಗಳೆಲ್ಲವೂ ಅಧಿಕಾರಸ್ಥ ರಾಜಕಾರಣಿಗಳು ಮತ್ತು ಖಾಸಗಿ ಸಂಸ್ಥೆಗಳ ಕೀಲ್ ಮೇಲೆಯೇ ನಡೆಯುತ್ತವೆ. ಸರ್ಕಾರದ ಬಾಬತ್ತಿನಲ್ಲಿ ಭೂಮಿ ವಶಪಡಿಸಿಕೊಂಡು ಖಾಸಗಿಯವರಿಗೆ ಕೊಟ್ಟರೆ, ಆ ತಿಮಿಂಗಲಗಳು ನೇರವಾಗಿ ಮಾರ್ಕೆಟ್ ರೇಟ್ ಕೊಟ್ಟು ಕೊಳ್ಳುವ ಕೆಲಸ ತಪ್ಪುತ್ತದೆ. ಸಂಬಂಧಪಟ್ಟ ಮಂತ್ರಿಗಳಿಗೆ, ಸರ್ಕಾರಕ್ಕೆ ಒಂದಷ್ಟು ದುಡ್ಡು ದೊಡ್ಡದಾಗೇ ಚೆಲ್ಲಿದರೆ ಮುಗಿಯಿತು. ಒಂದು ಕೋಟಿ ಲಂಚ ಕೊಟ್ಟರೂ, ಐದು ಕೋಟಿ ಮಿಗುತ್ತದಲ್ಲ! ಇದು ಖಾಸಗಿಯವರ ಲೆಕ್ಕಾಚಾರ.

ಜಪಾನೀ ಟೌನ್‌ಶಿಪ್ ಬಂದರೆ, ಒಂದು ಪಕ್ಷ ಅವರು ನೇರವಾಗೇ ಹಣ ಕೊಟ್ಟುಕೊಳ್ಳುತ್ತಾರೆ ಎಂದು ಭಾವಿಸೋಣ. ಮೊದಲಿಗೆ, ಅನೇಕ ಹಳ್ಳಿಗಳು ಸಂಪೂರ್ಣ ನಿರ್ನಾಮವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಜಪಾನೀಯರ ಶಕ್ತಿ ಮತ್ತು ಹಣದ ಪ್ರಭಾವದ ಕಾರಣಕ್ಕಾಗಿ ಬೆಂಗಳೂರಿನ ಕನ್ನಡ ಮತ್ತು ಕನ್ನಡಿಗರ ಪ್ರಭಾವ ಪೂರ್ಣವಾಗಿ ಕುಗ್ಗಿ ಪಾತಾಳಕ್ಕೆ ಹೋಗಲಿದೆ. ಈ ಉಪನಗರದಲ್ಲಿ ಆ ಜನ ತಮ್ಮದೇ ಆದ ವಿದ್ಯೆ, ಮನರಂಜನೆ, ಸಂಸ್ಕೃತಿ ಬೆಳೆಸಿಕೊಳ್ಳುವುದರಿಂದ ಇಲ್ಲೆಲ್ಲ ಸಹಜವಾಗಿ ಕನ್ನಡವೇ ಇರುವುದಿಲ್ಲ. ಕರ್ನಾಟಕ ಸರ್ಕಾರದ ಈಗಿನ ಶಿಕ್ಷಣ ನೀತಿಯಿಂದಾಗಿ ಅವರ್‍ಯಾರೂ ಕನ್ನಡ ಕಲಿಯುವುದೂ ಇಲ್ಲ. ಈಗಿರುವ ಸ್ಥಿತಿಯಲ್ಲಿ ಕರ್ನಾಟಕದಲ್ಲಿ ಒಂದು ಹಳ್ಳಿ ಕಣ್ಮರೆಯಾದರೆ ಕನ್ನಡಕ್ಕೆ ಹತ್ತು ಗಾಯಗಳಾದಂತೆ. ಕೆ.ಎಸ್.ಆರ್.ಟಿ.ಸಿಯಲ್ಲಿ ಜವಾನರ ಅಥವಾ ಡ್ರೈವರ್‌ರ ಕೆಲಸಕ್ಕೆ ಕನ್ನಡದ ಪರೀಕ್ಷೆ ಕಡ್ಡಾಯ ಮಾಡುವ ಬಗ್ಗೆ ತಲೆಕೆಡಿಸಿಕೊಳ್ಳುವ ಕನ್ನಡ ಹೋರಾಟಗಾರರು ಈ ಟೌನ್‌ಷಿಪ್‌ಗಳ ಅಪಾಯದ ಬಗ್ಗೆ ಮಾತೇ ಆಡದಿರುವುದು ಆಶ್ಚರ್ಯ. ಬೆಂಗಳೂರು, ಮೈಸೂರು ರಸ್ತೆಯಲ್ಲಾಗುವ ಈ ರೀತಿಯ ಟೌನ್‌ಷಿಪ್‌ಗಳಿಂದಾಗಿ ಕ್ರಮೇಣ ಮೈಸೂರು ಕೂಡಾ ತನ್ನ ಕನ್ನಡತನವನ್ನು ಕಳೆದುಕೊಳ್ಳುತ್ತದೆ. ಏಕೆಂದರೆ, ಸಂಸ್ಕೃತಿಗಳು ತಮಗಿಂತ ಭೌತಿಕವಾಗಿ ಬಲಿಷ್ಠವಾಗಿರುವವರ ಮುಂದೆ ಸಾಮಾನ್ಯವಾಗಿ ಮಂಕಾಗಿ ಕ್ರಮ ಕ್ರಮೇಣ ಕರಗಿಹೋಗುತ್ತವೆ. ಆ ಬಗ್ಗೆ ಒಂದು ಪ್ರಜ್ಞಾಪೂರ್ವಕವಾದ ಚಳವಳಿ ಆದಾಗ ಮಾತ್ರ ಸಂಸ್ಕೃತಿ ಉಳಿಯುತ್ತದೆ. ಇದಕ್ಕಾಗಿಯಾದರೂ ನಾವು ಈ ಬಗ್ಗೆ ದನಿ ಎತ್ತಬೇಕಾಗಿದೆ.

ಆದರೆ, ಇಲ್ಲಿ ಅಡಕವಾಗಿರುವ ಪ್ರಶ್ನೆಗಳು ನಿಜವಾಗಿಯೂ ಜಟಿಲವಾದದ್ದು. ಅಂತಾರಾಷ್ಟ್ರೀಯ ಬಂಡವಾಳವನ್ನು ಹಾತೊರೆದು ಕರೆಯುತ್ತಿರುವ ಈಗಿನ ಆರ್ಥಿಕ ನೀತಿಯ ಹಿನ್ನೆಲೆಯಲ್ಲಿ ಇವನ್ನು ಪರೀಕ್ಷಿಸಬೇಕು. ಈಗ ನಾಡಿನ ಅಭಿವೃದ್ಧಿಗೆ, ಈಗಿರುವ ಅಭಿವೃದ್ಧಿ ಮಾದರಿಗಳ ಕಾರಣಕ್ಕಾಗಿ ಹೊರಗಿನ ಬಂಡವಾಳ ಬೇಕು. ಅಂಥ ಬಂಡವಾಳವನ್ನು ನಿರಾಕರಿಸಿ ನಾಡನ್ನು ಆರ್ಥಿಕವಾಗಿ ಕಟ್ಟುವ ಆರ್ಥಿಕ ಏಕಾಂತತೆ ಕಾರ್ಯಕ್ರಮಗಳು ಈಗ ತುಂಬ ಅಪ್ರಸ್ತುತ ಎಂಬಂತೆ ಕಾಣುತ್ತಿವೆ. ಹೀಗಾಗಿ, ಈ ಬಂಡವಾಳಕ್ಕೆ ಸಾಮಾಜಿಕ ಅಥವಾ ಸಾಂಸ್ಕೃತಿಕ ನಿಯಂತ್ರಣ ಖಂಡಿತವಾಗಿ ಬೇಕೇಬೇಕು. ಸಾಂಸ್ಕೃತಿಕ ನಿಯಂತ್ರಣವಿರದ ಬಂಡವಾಳ ಇಡೀ ಸಮಾಜವನ್ನೆ ನಿರ್ಮೂಲನ ಮಾಡುತ್ತದೆ. ಈಗಿನ ಆರ್ಥಿಕ ನೀತಿಯಲ್ಲಿ ಈ ಸಾಮಾಜಿಕ ಅಥವಾ ಸಾಂಸ್ಕೃತಿಕ ನಿಯಂತ್ರಣದ ಅಂಶವೇ ಇಲ್ಲ. ರಾಜಕೀಯ ನಿಯಂತ್ರಣ ಕೂಡ ಇಲ್ಲವಾಗಿದೆ. ಇದು ಎಲ್ಲೀತನಕ ಹೋಗಿದೆ ಎಂದರೆ ಈ ಜಪಾನಿ ಉಪನಗರದ ಇಡೀ ಯೋಜನೆಯನ್ನು ಖಾಸಗಿ ಕಂಪನಿಗಳೇ ಪೂರ್ಣವಾಗಿ ರೂಪಿಸಿ ನಾಮಕಾವಸ್ತೆ ರೀತಿಯಲ್ಲಿ ಸರ್ಕಾರದಿಂದ ಎಸ್ ಎನ್ನಿಸುತ್ತದೆ. ಈ ಅಪಾಯದಿಂದ ನಾವು ಪಾರಾಗಬೇಕು. ಆದ್ದರಿಂದ, ಜಪಾನೀ ಉಪನಗರದ ಕಲ್ಪನೆ ಏನಿದೆ, ಅದರಲ್ಲಿ ಕನ್ನಡ ಮತ್ತು ಕನ್ನಡಿಗರ ಹಿತರಕ್ಷಣೆ ಕಾಯುವ ನಿರ್ದಿಷ್ಟ ನಿಯಂತ್ರಕಗಳು ಇರದಿದ್ದರೆ ಆ ಇಡೀ ಯೋಜನೆಗೆ ಅವಕಾಶ ಕೊಡಕೂಡದು.

ಇದರರ್ಥ ಕರ್ನಾಟಕದಲ್ಲಿ ಹೊರಗಿನವರು ಬಂದು ಸೇರಲೇಬಾರದು ಎಂದಲ್ಲ. ಸುಬ್ಬಣ್ಣನವರೇ ತಮ್ಮ ಪತ್ರದಲ್ಲಿ ಟಿಬೆಟಿಯನ್ನರ ಪ್ರಸ್ತಾಪ ಮಾಡಿದ್ದಾರೆ. ಟಿಬೆಟಿಯನ್ನರು ತಮ್ಮತನ ಉಳಿಸಿಕೊಂಡೂ ಸ್ಥಳೀಕರ ಜತೆಯಲ್ಲಿ ಸೌಹಾರ್ದದಿಂದ ಇದ್ದಾರೆ. ಆದರೆ, ಏಷ್ಯಾದಲ್ಲಿ ಜಪಾನೀಯರು ಹಾಗಲ್ಲ. ಅವರು ಏಷ್ಯದ ಅಮೇರಿಕನ್ನರು ಎಂಬ ಬಗ್ಗೆ ಸಂಶಯವೇ ಬೇಡ. ದಕ್ಷಿಣ ಏಷ್ಯಾದ ಅನೇಕ ದೇಶಗಳನ್ನು ಈಗಾಗಲೆ ಅವರು ಕುಲಗೆಡಿಸಿಹಾಕಿದ್ದಾರೆ. ಥಾಯ್‌ಲೆಂಡನ್ನು ಸೂಳೆಗೇರಿಯನ್ನಾಗಿ ಮಾಡುವುದರಲ್ಲಿ ಜಪಾನೀಯರ ಪಾತ್ರ ತೀರಾ ದೊಡ್ಡದು. ಬಾಲ ವೇಶ್ಯಾವೃತ್ತಿಗಂತೂ ಅವರದು ವಿಶೇಷ ಪ್ರೋತ್ಸಾಹ. ಥಾಯ್‌ಲೆಂಡಿನ ವಿಮಾನ ನಿಲ್ದಾಣಗಳಲ್ಲಿ ಗುಂಪು ಪ್ರವಾಸ ಯೋಜನೆಯಲ್ಲಿ ಬರುವ ಹಾರ ಹಾಕಿಕೊಂಡ ಮುದುಕರು ಥಾಯ್ ವೇಶ್ಯೆಯರ ಜತೆ ವರ್ತಿಸುವುದನ್ನು ನೋಡಿಯೇ ತಿಳಿಯಬೇಕು.

ಹೀಗಾಗಿ, ನಾವು ಹೊರಗಿನ ಎಲ್ಲರ ಬಗ್ಗೆ ಸಾರಾಸಗಟಾಗಿ ವಿಷ ಕಕ್ಕಬಾರದು. ಆದರೆ, ಕನ್ನಡ ಮತ್ತು ಕರ್ನಾಟಕತ್ವಗಳನ್ನೆ ನಾಶಮಾಡುವ ಬೆಳವಣಿಗೆಯನ್ನು ಉಗ್ರವಾಗಿ ವಿರೋಧಿಸಲೇಬೇಕು. ಹಾಗೆ ನೋಡಿದರೆ, ಇದು ಬರೀ ಕರ್ನಾಟಕದ ಪ್ರಶ್ನೆ ಅಲ್ಲ. ಸುಬ್ಬಣ್ಣ ಬರೆಯುತ್ತಾರೆ-“ಅನೇಕ ರೀತಿಗಳಿಂದ ಈ ದೇಶ, ಕಳೆದ ೪೫ ವರ್ಷಗಳ ಕೆಲವೇ ಹೆಮ್ಮೆಯ ಗಳಿಕೆಗಳನ್ನು ನಾಶಮಾಡಲು ಹೊರಟಂತಿದೆ, ಈಚಿನ ದಿನಗಳಲ್ಲಿ ಗಟ್ಟಿಯಾದ ಜನಾಭಿಪ್ರಾಯ ರೂಪುಗೊಂಡು ಭಾರೀ ಪ್ರತಿಭಟನೆ ಬಾರದಿದ್ದರೆ, ನಮ್ಮ ಈಗಿನ ಸರ್ಕಾರ ರಾಷ್ಟ್ರವನ್ನು ‘ನಂಬಿಕೆ ಕ್ರಯ’ಕ್ಕೆ ಹಾಕಿ ಕೊಟ್ಟೇ ಬಿಡುತ್ತದೆ, ಸಂದೇಹವೇ ಇಲ್ಲ.

ಕನ್ನಡ ಉಳಿಯಲು, ಭಾರತ ಉಳಿಯಲು ಬಂಡವಾಳಶಾಹಿಗೆ ಸಾಂಸ್ಕೃತಿಕ, ಸಾಮಾಜಿಕ ನಿಯಂತ್ರಣ ಹಾಕಲೇಬೇಕಾಗಿದೆ. ಬಂಡವಾಳದ ಕ್ರಿಯಾಶೀಲತೆ ಕುಗ್ಗಿಸುವಂಥ ನೌಕರಶಾಹೀ ರೆಡ್ ಟೆಪಿಸಂ ಬೇಡ, ಸರಿ. ಆದರೆ, ಈ ನಾಡು ಒಂದು ಆರೋಗ್ಯಕರ ಸಮಾಜವಾಗಿ ಉಳಿಯಬೇಕು. ಅದಕ್ಕಾಗಿ ಕನ್ನಡಿಗರು ದನಿ ಎತ್ತಬೇಕಾಗಿದೆ. ಗುಟ್ಟಾದ, ಅಷ್ಟು ಗುಟ್ಟಲ್ಲದ ಡೀಲ್‌ಗಳಲ್ಲಿ ಕರ್ನಾಟಕ ನಾಶವಾಗದಂತೆ ನೋಡಿಕೊಳ್ಳಬೇಕಾಗಿದೆ.
*****
ಲಂಕೇಶ್ ಪತ್ರಿಕೆ ಆಗಸ್ಟ್ ೧೨, ೧೯೯೨ರಲ್ಲಿ ಪ್ರಕಟ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.