ಸಂಸ್ಕಾರ – ೪

“ಅಲ್ಲವೆ, ಅಲ್ಲವೆ, ಅಲ್ಲವೆ…” ಎಂದು ಮಂಜಯ್ಯ ಒಪ್ಪಿ, “ಸ್ನಾನ ಮಾಡಿದ್ದೀರ, ಆಚಾರ್ಯರೆ?” ಎಂದು ಕೇಳಿದರು.
ದಾಸಾಚಾರ್ಯನಿಗೆ ಮುಖ ಚಿರೋಟಿಯಗಲ ಹರಡಿ ಹರ್ಷವಾಯಿತು.
“ಓಹೊ. ನದಿಯಲ್ಲಿ ಮಾಡಿಯೇ ಇತ್ತ ಬಂದೆ” ಎಂದ.
“ಹಾಗಿದ್ದರೆ ಏನನ್ನಾದರೂ ತೆಗೆದುಕೊಳ್ಳಿ, ಆಚಾರ್ಯರೆ.”
“ನನಗೇನೂ ನಿಮ್ಮಲ್ಲಿ ಆಹಾರ ಸ್ವೀಕರಿಸಲು ಅಡ್ಡಿಯಿಲ್ಲ. ಆದರೆ ನಮ್ಮ ಅಗ್ರಹಾರದ ಕಿಡಿಗೇಡಿಗಳಿಗೇನಾದರೂ ತಿಳಿದರೆ ನನ್ನ ಬ್ರಾಹ್ಮಣಾರ್ಥಕ್ಕೆ ಮುಟ್ಟುಗೋಲು ಹಾಕಿಬಿಡುತ್ತಾರಲ್ಲ, ಮಂಜಯ್ಯ?”
ಆರ್ತನಾಗಿ ದಾಸಾಚಾರ್ಯ ಹೇಳಿದ ಮಾತಿಗೆ ಮಂಜಯ್ಯನವರು ಗುಟ್ಟಾಗಿ ಹತ್ತಿರ ಬಂದು, ಇನ್ನೊಬ್ಬ ಅಗ್ರಹಾರದ ಬ್ರಾಹ್ಮಣ ತಮ್ಮಲ್ಲಿ ತಿನ್ನಲು ಬಂದನಲ್ಲ ಎಂದು ಅತಿಹರ್ಷರಾಗಿ:
“ನೀವು ಇಲ್ಲಿ ಉಂಡಿರೆಂದು ನಾವು ಯಾಕೆ ಹೇಳಬೇಕು ಆಚಾರ್ಯರೆ? ಏಳಿ, ಏಳಿ. ಕಾಲು ತೊಳೆದುಕೊಳ್ಳಿ. ಏ ಇವಳೇ, ಇಲ್ಲೊಂದಷ್ಟು ಉಪ್ಪಿಟ್ಟು…”
ಉಪ್ಪಿಟ್ಟಿನ ಶಬ್ದವೆತ್ತಿದೊಡನೆಯೇ ದಾಸಾಚಾರ್ಯನ ಹೊಟ್ಟೆಯೊಳಗೆ ಗೊ ಗೊ ಗೊಟg ಎಂದು ಕರುಳು ಹೊರಳಿತು. ಆದರೆ ಬೇಯಿಸಿದ ಪದಾರ್ಥವನ್ನು ಮುಟ್ಟಲು ದಾಸಾಚಾರ್ಯ ಹೆದರಿ:
“ಬೇಡಿ, ಬೇಡಿ, ನನ್ನ ಆರೋಗ್ಯಕ್ಕೆ ಉಪ್ಪಿಟ್ಟು ಸರಿಬರೋದಿಲ್ಲ. ಒಂದಿಷ್ಟು ಖಾಲಿ ಅವಲಕ್ಕಿ, ಬೆಲ್ಲ, ಹಾಲಾದರೆ ಸಾಕು” ಎಂದರು.
ಮಂಜಯ್ಯನವರಿಗೆ ಅರ್ಥವಾಗಿ ನಗೆ ಬಂದು ಆಚಾರ್ಯರಿಗೆ ಕಾಲು ತೊಳೆಯಲು ನೀರುಕೊಟ್ಟು, ಗುಟ್ಟಾಗಿ ಅಡಿಗೆಮನೆಯಲ್ಲಿ ಕೂರಿಸಿ ಖುದ್ದಾಗಿ ತಾವೇ ಕೂತು ಉಪಚರಿಸುತ್ತ ಹಾಲು, ಬೆಲ್ಲ, ಅವಲಕ್ಕಿ, ಬಾಳೆಹಣ್ಣು, ಜೇನುತುಪ್ಪ ತಿನ್ನಿಸಿದರು. ತಿಂದಹಾಗೆ ಹಿಗ್ಗುತ್ತ ಬಂದಿದ್ದ ದಾಸಾಚಾರ್ಯನಿಗೆ ಕೊನೆಯಲ್ಲಿ ಒತ್ತಾಯ ಮಾಡಿ ’ಒಂದು ಚಮಚಕ್ಕೇನೆಂದು’ ಒಂದು ಚಮಚ ಉಪ್ಪಿಟ್ಟು ತಿನ್ನಿಸಿದರು. ಮತ್ತೆ ನಾಲ್ಕು ಚಮಚ ಉಪ್ಪಿಟ್ಟನ್ನು ಖುಷಿಯಿಂದ ಮಂಜಯ್ಯನವರ ಹೆಂಡತಿ ಬಡಿಸಿದರೆ ’ಪರಮಾತ್ಮ’ ಎಂದು ಹೊಟ್ಟೆ ಉಜ್ಜಿಕೊಳ್ಳುತ್ತ ದಾಸಾಚಾರ್ಯ ’ಬೇಡ’ ಎನ್ನಲಿಲ್ಲ. ದಾಕ್ಷಿಣ್ಯಕ್ಕೆ ಅನ್ನಲೇಬೇಕಾದಂತೆ ’ಸಾಕು ಸಾಕು, ನಿಮಗಿರಲಿ’ ಎಂದು ಕೆಯನ್ನು ಎಲೆಗೆ ಅಡ್ಡ ಮಾಡುವಂತೆ ನಟಿಸಿದ ಅಷ್ಟೆ.

ಅಧ್ಯಾಯ : ಒಂಬತ್ತು

ಬೆಳ್ಳಿಯ ಬದಲು ಅವತ್ತು ಚಿನ್ನಿ ಸಗಣಿ ಎತ್ತಲು ಬಂದಳು. ಕಾರಣ, ’ಬೆಳ್ಳಿಯ ಅಪ್ಪ ಅವ್ವ ಎಲ್ಡೂ ಜಡ ತಗುಲಿ ಮಲಗಿಬಿಟ್ಟಿವೆ’ ಎಂದಳು-ಅಗ್ರಹಾರದ ಹೆಂಗಸರಿಗೆ. ತಮ್ಮ ಪಾಡೇ ತಮಗಾದ ಬ್ರಾಹ್ಮಣ ಹೆಂಗಸರು ಚಿನ್ನಿಯ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆದರೆ ಚಿನ್ನಿ ಗೊಬ್ಬರವೆತ್ತುತ್ತ ಯಾರು ಕೇಳಿಸಿಕೊಳ್ಳಲಿ ಬಿಡಲಿ, ತಮ್ಮ ಕೇರಿಯ ಕಥೇನ ಆಡಿಕೊಂಡಳು. ’ಚೌಡ ಸತ್ತ, ಅವನ ಹೊಲತಿಯೂ ಸತ್ತಿತು, ಗುಡೀಗೆ ಬೆಂಕಿಯಿಟ್ಟು ಅವರ್‍ನ ಸುಟ್ಟದಾಯ್ತವ್ವ. ದಯ್ಯಕ್ಕೆ ಕ್ವಾಪ ಬಂದಯ್ತೋ ಏನು ಕತೆಯೋ.’ ಗರುಡಾಚಾರ್ಯರ ಹೆಂಡತಿ ಸೀತಾದೇವಿ ಸೊಂಟದ ಮೇಲೆ ಕೆಯಿಟ್ಟು ತನ್ನ ಮಗನ ಬಗ್ಗೆಯೇ ಚಿಂತಿಸುತ್ತಿದ್ದಳು : ಮಿಲಿಟರಿ ಸೇರಿದ ಪರದೇಶಿಗೆ ಏನಾದರೂ ಆದರೆ ಏನು ಗತಿ? ಚಿನ್ನಿ ದೂರದಲ್ಲಿ ನಿಂತು: “ಅವ್ವಾ ಅವ್ವಾ, ಬಾಯಿಗಷ್ಟು ಕವಳಾ ಎಸೀರವ್ವಾ” ಎಂದು ಬೇಡಿದಳು. ಸೀತಾದೇವಿ ಒಳಗೆ ಹೋಗಿ ಎಲೆ, ಅಡಿಕೆ, ಹೊಗೆಸೊಪ್ಪನ್ನ ಎಸೆದು ಅಲ್ಲೇ ನಿಂತಳು-ಹಿಂದಿನದೇ ಯೋಚನೆಯಲ್ಲಿ. ಚಿನ್ನಿ ಹೊಗೆಸೊಪ್ಪು ಎಲೆಯಡಿಕೆಯನ್ನು ತನ್ನ ಮಡಿಲಿಗೆ ಸಿಕ್ಕಿಸಿಕೊಳ್ಳುತ್ತ:
“ಅವ್ವಾ, ಯಾಪಟ್ಟು ಇಲಿಗಳು ಹೆಂಗೆ ಹೊಂಟವೆ ಹ್ವರಗೆ! ಒಳ್ಳೇ ದಿಬ್ಬಣಕ್ಕೆ ಹ್ವಂಟಂಗೆ. ಏನು ಕಾರುಭಾರೋ ಅವಕ್ಕೆ” ಎಂದು ಬುಟ್ಟಿಯಲ್ಲಿ ಸಗಣಿ ಹೊತ್ತು ನಡೆದಳು.
ಗುಡಿಗೆ ಹಿಂದಕ್ಕೆ ಬಂದವಳು ಬೆಳ್ಳಿಗಷ್ಟು ಹೊಗೆಸೊಪ್ಪನ್ನು ಮುರಿದು ಕೊಡುವ ಎಂದು ಅವಳ ಗುಡಿ ಕಡೆ ನಡೆದಳು. ದೂರದಿಂದಲೇ ಬೆಳ್ಳಿಯ ಗುಡಿಯಲ್ಲಿ ಅವಳ ಅಪ್ಪ ಅವ್ವ ಕಿರುಚುವುದು ಕೇಳಿತು. ’ಅಯ್ಯಾ! ಜಡ ಬಂದರೆ ಯಾಪಟ್ಟು ಕಿರುಚುತಾನೆ ಅವ. ಇವನನ್ನೂ ದಯ್ಯ ಮೆಟ್ಟಿತೊ ಕಾಣೆ’ ಎಂದು ’ಬೆಳ್ಳೀ’ ಎಂದು ಕರೆಯುತ್ತ ಬಂದು ನೋಡಿದರೆ ಬೆಳ್ಳಿ ಅಪ್ಪ ಅವ್ವನ ಬಳಿ ತಲೆ ಮೇಲೆ ಕೆ ಹೊತ್ತು ಕೂತಿದ್ದಳು. “ಅಗ್ರಹಾರದಾಗೂ ಹೆಂಗೆ ಇಲಿ ದಿಬ್ಬಣ ಹೊಂಟವೆ” ಎಂದು ಹೇಳಬಂದಳು. ಅವಾಕ್ಕಾಗಿ ನಿಂತಳು. ಹೊಗೆಸೊಪ್ಪನ್ನು ಮುರಿದು “ತಗ ಬಾಯಿಗೆ. ಅವ್ವ ಕೊಟ್ಟರು” ಎಂದು ಕೂತಳು. ಬೆಳ್ಳಿ ಹೊಗೆಸೊಪ್ಪನ್ನು ತಿಕ್ಕಿ ಬಾಯಿಗೆ ಹಾಕಿಕೊಂಡು:
“ಪಿಳ್ಳಗಿವತ್ತು ಮೆ ಮೇಲೆ ಗಣಾ ಬಂದರೆ ಕ್ಯಾಳಬೇಕು. ನಂಗ್ಯಾಕೊ ಭಯವಾತೆತೆ ಕಣೇ. ಇಲಿ ಹಿಂಗೆ ಹೊಲೇರ ಗುಡೀಗೆ ದಂಡು ಬರೋದೆಂದ್ರೇನು, ಚೌಡ ಅವನ ಹೊಲತಿ ಲP ಎಂದು ಪರಾಣ ಬಿಡೋದೆಂದ್ರೇನು, ನನ್ನಪ್ಪ ಅವ್ವನನ್ನ ಹೀಗೆ ದಯ್ಯ ಮೆಟ್ಟೋದೆಂದ್ರೇನು-ಕ್ಯಾಳಬಾಕು” ಎಂದಳು.
“ಅಂii, ನಿಂದೊಂದು. ಸುಮ್ಕಿರು” ಎಂದು ಚಿನ್ನಿ ಬೆಳ್ಳಿಗೆ ಸಮಾಧಾನ ಹೇಳಿದಳು.
ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಸೂರ್ಯ, ಧಗಧಗನೆ ನೆತ್ತಿಯ ಮೇಲೆ ಪಶುಪತಿ ಕೋಪದಲ್ಲಿ ತೆರೆದ ಹಣೆಗಣ್ಣಿನಂತೆ ಉರಿದು, ಹಸಿವಿನಿಂದ ಅರ್ಧಜೀವರಾದ ಬ್ರಾಹ್ಮಣರನ್ನು ದಿಙ್ಮೂಢರನ್ನಾಗಿ ಮಾಡಿ ಕುಕ್ಕರಿಸಿದ. ಪ್ರಾಣೇಶಾಚಾರ್ಯರ ಆಗಮನವನ್ನು ನಿರೀಕ್ಷಿಸುತ್ತ, ಪೆದ್ದು ಪೆದ್ದಾಗಿ ಬೀದಿಯ ಝಳ ಝಳ ಬಿಸಿಲನ್ನು ನೋಡುತ್ತ ಕೂತ ಕಣ್ಣುಗಳ ಎದುರು ಬಿಸಿಲು ಕುದುರೆಗಳು ನರ್ತಿಸಿದವು. ಉತ್ಕಟವಾಗಿದ್ದ ಭೀತಿ ಮತ್ತು ಹಸಿವು ಹೊಟ್ಟೆಯಲ್ಲಿ ಗುಮ್ಮನಂತೆ ಅಡಗಿ, ನಿರಾಕಾರವಾದ ಕಳವಳ ಮಾತ್ರವಾಗಿ-ಮಾರುತಿಯ ಅಪ್ಪಣೆಯನ್ನು ಪಡೆಯಹೋದ ಪ್ರಾಣೇಶಾಚಾರ್ಯರ ವ್ಯಕ್ತಿತ್ವದ ಸುತ್ತ ಬ್ರಾಹ್ಮಣರ ಜೀವಗಳು ಬಾವಲಿಗಳಂತೆ ನೇತು ಬಿದ್ದವು. ಏನೋ ಭರವಸೆ : ಇನ್ನೊಂದು ರಾತ್ರೆ ನಾರಣಪ್ಪನ ಹೆಣವನ್ನಿಟ್ಟುಕೊಂಡಿರಬೇಕಾದ ಪ್ರಮೇಯ ಬರಲಿಕ್ಕಿಲ್ಲವೆಂಬ ನಂಬಿಕೆ. ಉಗ್ರಾಣದ ಅಕ್ಕಿಯ ಗೋಣಿಯಲ್ಲಿ ಸತ್ತುಬಿದ್ದಿದ್ದ ಇಲಿಯನ್ನು ಬಾಲದಿಂದೆತ್ತಿ, ಸೆರಗಿನಿಂದ ಮೂಗು ಮುಚ್ಚಿಕೊಂಡು ಹೊರಗೆಸೆಯಲೆಂದು ಹೋದ ಸೀತಾದೇವಿ, ಗವ್ವೆಂದು ಒಂದು ಹದ್ದು ಈಸಿ ಬಂದು ತಮ್ಮ ಮನೆಯ ಸೂರಿನ ಮೇಲೆ ಬಂದು ಕೂತಿದ್ದು ಕಂಡು, “ಅಯ್ಯಯ್ಯೋ, ಇವರೇ ಇವರೇ” ಎಂದು ಕಿರುಚಿದಳು. ಹದ್ದು ಹೀಗೆ ಮನೆಯ ಮೇಲೆ ಬಂದು ಕೂರೋದು ಸಾವಿನ ಶಕುನ. ಹಿಂದೆ ಎಂದೂ ಹೀಗಾದ್ದಿಲ್ಲ. ಗರುಡಾಚಾರ್ಯ ಓಡಿಬಂದು ಹದ್ದನ್ನು ನೋಡಿ ಕುಸಿದುಬಿಟ್ಟ. ಸೀತಾದೇವಿ “ಅಯ್ಯೋ, ನನ್ನ ಮಗನಿಗೆ ಏನಾಗಿಬಿಟ್ಟಿತೋ….” ಎಂದು ಅಳಲು ಪ್ರಾರಂಭಿಸಿದಳು. ಗರುಡಾಚಾರ್ಯ ತಾನು ಹಿಂದಿನ ದಿನ ಮಾರುತಿಗೆ ಬಂಗಾರ ಸೇರಲೆಂದು ದಾಸಾಚಾರ್ಯ ಹೇಳಿದ ಮಾತನ್ನು ಮನಸ್ಸಿನೊಳಗೆ ನಿರಾಕರಿಸಿದ್ದರಿಂದ ಹೀಗಾಗಿರಬೇಕೆಂದು ಅತ್ಯಂತ ಭಯದಲ್ಲಿ ಹೆಂಡತಿಯ ಕೆ ಹಿಡಿದು ಎದ್ದು ಒಳಗೆ ಬಂದು, ಕಾಣಿಕೆಯನ್ನು ದೇವರ ಎದುರಿಟ್ಟು, ನಮಸ್ಕಾರ ಮಾಡಿ “ತಪ್ಪಾಯಿತಪ್ಪ. ನಿನ್ನ ಬಂಗಾರ ನಿನಗೇ ಇರಲಿ, ಮನ್ನಿಸಿಬಿಡು” ಎಂದು ಪ್ರಾರ್ಥಿಸಿದ. ಮತ್ತೆ ಹೊರಗೆ ಬಂದು ಹದ್ದನ್ನು ಹಾರಿಸಲೆಂದು ’ಉ ಉ’ ಎಂದ. ಸೀತಾದೇವಿ ಎಸೆದಿದ್ದ ಇಲಿಯನ್ನು ಸೂರಿಗೆತ್ತಿಕೊಂಡು ಹೋಗಿ ಉಣ್ಣುತ್ತಿದ್ದ ಹದ್ದು ನಿರ್ಭಯವಾಗಿ, ನಾಚಿಕೆಗೆಟ್ಟ ನೆಂಟನ ಹಾಗೆ, ಕೂತೇ ಬಿಟ್ಟಿತು. ಗರುಡಾಚಾರ್ಯ ಕಣ್ಣುಕುಕ್ಕುವ ಬಿಸಿಲಿನಲ್ಲಿ ಕತ್ತೆತ್ತಿ ನೋಡುತ್ತಾನೆ-ಏನು ನೋಡೋದು-ಹದ್ದು, ಹದ್ದು, ಹದ್ದು, ಆಕಾಶದ ನೀಲಿಯ ತುಂಬ ತೇಲಾಡುವ, ಓಲಾಡುವ, ವೃತ್ತವೃತ್ತ ಸುತ್ತಿ ಕೆಳಗೆ ಬರುತ್ತಿರುವ ಹದ್ದುಗಳು. “ಇವಳೇ, ನೋಡೇ ಇಲ್ಲಿ” ಎಂದು ಕೂಗಿದ. ಸೀತಾದೇವಿ ಓಡಿಬಂದು ಹಣೆಗೆ ಕೆ ಮಾಡಿ ಕಣ್ಣುಗಳನ್ನೆತ್ತಿ ’ಉ’ ಎಂದು ನಿಟ್ಟುಸಿರೆಳೆದಳು. ಅವರು ನೋಡುತ್ತಿದ್ದಂತೆ ತಮ್ಮ ಮನೆಯ ಮೇಲೆ ಕೂತ ಹದ್ದು ನರ್ತಕಿಯಂತೆ ಕತ್ತು ಕೊಂಕಿಸಿ, ಸುತ್ತ ನೋಡಿ, ’ಭg’ ಎಂದು ಅವರ ಕಾಲಬುಡಕ್ಕೆ ಎಗರಿ, ಉಗ್ರಾಣದಿಂದ ಹಿತ್ತಲಿಗೆ ಓಡಿಬರುತ್ತಿದ್ದ ಇಲಿಯೊಂದನ್ನು ಕುಕ್ಕಿ, ಮತ್ತೆ ಹಾರಿ ಮನೆಯ ಮೇಲೇ ಕೂತಿತು. ದಂಪತಿಗಳ ಪ್ರಾಣ ಒಂದು ಕ್ಷಣ ಜೊತೆಯಾಗಿ ಎಂದೂ ಕಂಪಿಸದ ಹಾಗೆ ಕಂಪಿಸಿ-ಇಬ್ಬರೂ ಕೂತುಬಿಟ್ಟರು. ಆಕಾಶದಲ್ಲಿ ಹಾರಾಡುತ್ತಿದ್ದ ಹದ್ದುಗಳಲ್ಲಿ ಒಂದು ಇಳಿದು ನಾರಣಪ್ಪನ ಮನೆಯ ಮೇಲೆ ಕೂತಿತು. ಕತ್ತನ್ನು ಎತ್ತಿ ಅದರ ದೆತ್ಯ ರೆಕ್ಕೆಗಳನ್ನು ಪಟಪಟನೆ ಬಡಿದು, ಸಮತೂಕಕ್ಕೆ ಬಂದು, ಅಗ್ರಹಾರವನ್ನೆಲ್ಲ ಹದ್ದುಗಣ್ಣಿನಲ್ಲಿ ಈಕ್ಷಿಸಿತು. ತದನಂತರ ಹಾರುತ್ತಿದ್ದ ಹದ್ದುಗಳೆಲ್ಲ ಇಳಿದು ಮನೆಗೆ ಎರಡೆರಡರಂತೆ ಮೊದಲೇ ನಿಶ್ಚಯಮಾಡಿಕೊಂಡವಂತೆ ಬಂದು ಕೂತವು. ’ರವ್ವನೆ’ನೇ ಕೆಳಗೆ ಹಾರುವುವು; ಇಲಿಯೊಂದನ್ನು ಕೊಕ್ಕಿನಿಂದೆತ್ತಿ ಸೂರಿನ ಮೇಲೆ ಕೂತು ಕುಕ್ಕುತ್ತ ತಿನ್ನುವುವು-ಸ್ಮಶಾನದಲ್ಲಿರಬೇಕಾದ ರಣಹದ್ದುಗಳು ಹೀಗೆ, ಪ್ರಳಯಕಾಲದಲ್ಲೆಂಬಂತೆ ಅಗ್ರಹಾರಕ್ಕೆ ಎರಗಿದ್ದನ್ನು ಕಂಡು ಅಗ್ರಹಾರದ ಸಮಸ್ತರೂ ಬಾಯಿಬಡಿದವರಂತೆ ಬಂದು ಬೀದಿಯಲ್ಲಿ ನೆರದರು. ಎಲ್ಲರ ಮನೆಯ ಮೇಲೂ ಹದ್ದುಗಳು ತಂಗಿದ್ದು ಕಂಡು ಸೀತಾದೇವಿ, ’ಇದು ಬರೀ ನನ್ನ ಮಗನ ಕ್ಷೇಮದ ಬಗ್ಗೆ ಶಕುನವಲ್ಲ’ ಎಂದು ಸಮಾಧಾನಿತಳಾದಳು. ವಾಚ್ಯಾತೀತವಾದ ಭಯದಿಂದ ಅಗ್ರಹಾರದ ಬ್ರಾಹ್ಮಣರು, ಹೆಂಗಸರು, ಮಕ್ಕಳು ನಿಂತಿದ್ದು ಎರಡು ಕ್ಷಣ ಮಾತ್ರ : ಮೊದಲು ದುರ್ಗಾಭಟ್ಟ ಹದ್ದುಗಳನ್ನು ಹೆದರಿಸಲೆಂದು ’ಹೋ ಹೋ ಹೋ’ ಎಂದು ಕೂಗಿದ. ನಡೆಯಲಿಲ್ಲ. ಎಲ್ಲ ಬ್ರಾಹ್ಮಣರು ಒಕ್ಕೊರಲಿನಿಂದ ಕೂಗಿದರು. ಅದೂ ನಡೆಯಲಿಲ್ಲ. ಉಪ್ಪಿಟ್ಟು ತಿಂದು ಆಗತಾನೆ ಪ್ರಸನ್ನನಾಗಿ ಹಿಂದೆ ಬಂದ ದಾಸಾಚಾರ್ಯನಿಗೊಂದು ಉಪಾಯ ಹೊಳೆಯಿತು. ’ಜಾಗಟೆ ತಂದು ಬಾರಿಸಿ’ ಎಂದ. ಹುಡುಗರಿಗೆ ಗೆಲುವಾಗಿ, ದೇವರ ಮನೆಯೊಳಕ್ಕೆ ಓಡಿ, ಕಂಚಿನ ಜಾಗಟೆಗಳ ಜೊತೆ ಶಂಖವನ್ನೂ ತಂದರು. ಮಹಾಮಂಗಳಾರತಿಯ ವೇಳೆಯಲ್ಲಿ ಮಾಡುವ ಭಯಂಕರ ಮಂಗಳಶಬ್ದ ಮಧ್ಯಾಹ್ನದ ರುದ್ರಮೌನವನ್ನು ರಣಭೇರಿಯಂತೆ ನುರಿದು ನುಚ್ಚುನೂರು ಮಾಡಿತು. ಐದಾರು ಮೆಲಿ ವಿಸ್ತೀರ್ಣದಲ್ಲಿದ್ದ ಅಗ್ರಹಾರದ ಜನರಿಗೆ ದೂರ್ವಾಸವನದಲ್ಲಿ ನಗಾರಿ, ಪೂಜೆ, ಮಂಗಳಾರತಿ ನಡೆಯುತ್ತಿರಬೇಕೆಂಬ ಭ್ರಾಂತಿಯನ್ನು ಕವಿಸಿತು. ರಣಹದ್ದುಗಳು ಆಶ್ಚರ್ಯಪಟ್ಟವರಂತೆ ಅತ್ತ ಇತ್ತ ನೋಡಿ, ರೆಕ್ಕೆಗಳನ್ನು ಬಿಚ್ಚಿ, ಇಲಿಗಳನ್ನು ಕಚ್ಚಿಕೊಂಡು ಹಾರಿದವು. ಆಕಾಶದಲ್ಲಿ ತೇಲುತ್ತ ಹೊಳೆಯುವ ಚುಕ್ಕೆಗಳಾದುವು. ’ನಾರಾಯಣ’ ಎಂದು ಸುಸ್ತಾದ ಬ್ರಾಹ್ಮಣರು ಚಾವಡಿ ಏರಿ, ಹೊದ್ದ ವಸ್ತದಿಂದ ಮೂಗು ಮುಚ್ಚಿಕೊಂಡು, ಬೆವರೊರಸಿಕೊಂಡರು. ಸೀತಾದೇವಿ ಮತ್ತು ಅನಸೂಯ ಅವರ ಗಂಡಂದಿರ ಬಳಿ ಹೋಗಿ, “ಬಂಗಾರದ ವಿಷಯ ಹಾಳಾಗಲಿ. ಕಂಡವರ ಆಸ್ತಿ ನಮಗೇಕೆ. ಮೊದಲು ಶವವನ್ನು ತೆಗೆದು ಸಂಸ್ಕಾರ ಮಾಡಿ. ನಾರಣಪ್ಪನ ಪ್ರೇತವೇ ಈ ಹದ್ದುಗಳನ್ನು ಕರೆಯುತ್ತಿದೆ” ಎಂದು ಕಣ್ಣೀರಿಟ್ಟು ಬೇಡಿದರು. ಗಾಳಿ ಬೀಸುತ್ತಿರಲಿಲ್ಲವಾದ್ದರಿಂದ ಮನೆಮನೆಯಲ್ಲೂ ಮಡುವುಗಟ್ಟಿ ನಿಂತ ಧಗೆ, ಭೀತಿ, ಹಸಿವಿನಲ್ಲಿದ್ದವರನ್ನು ನಿರಾಕಾರ ಪ್ರೇತದಂತೆ ಕಾಡಿತು. ಜನ್ಮಜನ್ಮಾಪಿ ಕಳೆದುಕೊಳ್ಳಲಾರದ ಅಶುಚಿಯಲ್ಲಿದ್ದಂತೆನಿಸಿ, ನೇಮ ನಿಷ್ಠೆಯ ಬ್ರಾಹ್ಮಣರು ಕಂಗಾಲಾದರು.ಮಧ್ಯಾಹ್ನದ ಉರಿ ಏರಿ ಮರದ ನೆರಳಿನಲ್ಲಿ ಕೂತಿದ್ದ ಚಂದ್ರಿಗೆ ತುಂಬ ದಣಿವಾಯಿತು. ಮಡಿಲಿನಲ್ಲಿದ್ದ ರಸಬಾಳೆಹಣ್ಣಿಗೆ ಕೆಹಾಕಿದವಳು ಗುಡಿಯಲ್ಲಿ ಪ್ರಾಣೇಶಾಚಾರ್ಯರು ಹಸಿದು ಪೂಜೆಯಲ್ಲಿ ಕೂತಿದ್ದಾಗ ತಾನೇನು ತಿನ್ನುವುದೆಂದು ಸುಮ್ಮನಾದಳು. ದೂರದಿಂದ ಶಂಖ ಜಾಗಟೆಯ ಧ್ವನಿ ಕೇಳಿ ಆಶ್ಚರ್ಯವಾಯಿತು : ಸುತ್ತ ಕಣ್ಣು ಹಾಯಿಸಿದಳು. ಗಾಳಿ ನಿಶ್ಚಲವಾಗಿ ಮರದೆಲೆಗಳೂ ಅಲುಗುತ್ತಿರಲಿಲ್ಲ. ಅಲ್ಲಾಡುವುದೆಂದರೆ ದೂರದ ಶುಭ್ರ ತಿಳಿನೀಲಿಯಲ್ಲಿ ಓಲಾಡುವ ಹದ್ದುಗಳು ಮಾತ್ರ. ಪ್ರಾಣೇಶಾಚಾರ್ಯರು ಮತ್ತೊಂದು ಕೊಡ ನೀರನ್ನು ಬಳಬಳನೆ ಮೆಗೆ ಸುರಿದುಕೊಂಡದ್ದು ಕಂಡು ’ನನ್ನಿಂದೆಷ್ಟು ತೊಂದರೆ’ ಎಂದು ಯಾತನೆಯಾಯಿತು. ಅವಳು ಅರಿಯುವುದರೊಳಗೆ ಕೆ ಬಾಳೆಹಣ್ಣೊಂದನ್ನು ಸುಲಿದು ನಾಜೂಕಾಗಿ, ತೆರೆದ ಅವಳ ಬಾಯಲ್ಲಿಟ್ಟಿತು ’ನನಗೆ ದೋಷವಿಲ್ಲ” ಎಂದು ಸಮಾಧಾನ ಹೇಳಿಕೊಂಡಳು. ತಿರುಗಿ ತಿರುಗಿ ಹದ್ದುಗಳು ಹಟಹಿಡಿದು ಬಂದು ಕೂತವು! ಬ್ರಾಹ್ಮಣರು ಮತ್ತೆ ಹೊರಬಂದು ಜಾಗಟೆ ಬಾರಿಸಿ ಶಂಖ ಊದಿದರು. ಸಂಜೆಯವರೆಗೂ ಈ ಕಾಳಗ ನಡೆಯಿತು. ದಣಿದವರೆಂದರೆ ಬ್ರಾಹ್ಮಣರು ಮಾತ್ರ; ಆರ್ತರಾಗಿ ಕಾದರೂ ಪ್ರಾಣೇಶಾಚಾರ್ಯರ ಸುಳಿವೇ ಇಲ್ಲವಲ್ಲ! ಇನ್ನೊಂದು ರಾತ್ರೆಯನ್ನು ಹೇಗೆ ಕಳೆಯುವುದಪ್ಪ ಎಂಬ ಉತ್ಕಟ ಸಂಕಟ ಮರಳಿ-ಅಗ್ರಹಾರದಲ್ಲಿ ಕತ್ತಲಾಗಿ-ಹದ್ದುಗಳು ಮರೆಯಾದವು.

ಅಧ್ಯಾಯ : ಹತ್ತು

ಪ್ರಸಾದಕ್ಕೆಂದು ಕಾಯುತ್ತ ಕೂತ ಪ್ರಾಣೇಶಾಚಾರ್ಯರು ಕಂಗೆಟ್ಟರು. ’ಸಂಸ್ಕಾರವಿಲ್ಲದೆ ಶವ ಕೊಳೆಯುತ್ತಿದೆ; ಮಾರುತಿ, ಎಷ್ಟು ಹೊತ್ತು ನಿನ್ನ ಪರೀಕ್ಷೆ’ ಎಂದು ಯಾಚಿಸಿದರು. ’ಕೂಡದು ಎಂದು ನಿನ್ನ ಮತವಾದರೆ ಎಡ ಪ್ರಸಾದವನ್ನಾದರೂ ದಯಮಾಡು’ ಎಂದು ಬೇಡಿದರು. ಕಾಡಿದರು. ದೇವರನ್ನು ಒಲಿಸುವ ಪ್ರೇಮಭಾವದ ಕೀರ್ತನೆಗಳನ್ನು ಹಾಡಿದರು. ಮಗುವಾದರು. ಹೆಂಡತಿಯಾದರು. ತಾಯಿಯಾದರು. ಮತ್ತೆ ದೇವರನ್ನು ದೂರುವ ಅವನ ನೂರೊಂದು ತಪ್ಪುಗಳನ್ನು ಹೇಳಿ ಕೊಂಡಾಡುವ ಕೀರ್ತನೆಗಳನ್ನೆಲ್ಲ ನೆನೆದರು. ಆಳೆತ್ತರದ ಮಾರುತಿ ಅಂಗೆ ಮೇಲೆ ಲಕ್ಷ್ಮಣನ ಪ್ರಾಣವನ್ನುಳಿಸುವ ಸಂಜೀವಿನಿ ಮೂಲಿಕೆಯುಳ್ಳ ಪರ್ವತವನ್ನೆತ್ತಿ ನಿಶ್ಚಲ ನಿಂತ. ಉದ್ದಂಡ ಎರಗಿ ಪ್ರಾಣೇಶಾಚಾರ್ಯರು ಹಲುಬಿದರು. ಸಂಜೆಯಾಯಿತು. ಕತ್ತಲಾಯಿತು. ನೀಲಾಂಜನದ ಬೆಳಕಿನಲ್ಲಿ ಪುಷ್ಪಾಲಂಕೃತ ಮಾರುತಿ ಜಗ್ಗಲಿಲ್ಲ; ಎಡ ಪ್ರಸಾದವನ್ನೂ ಕೊಡಲಿಲ್ಲ, ಬಲ ಪ್ರಸಾದವನ್ನೂ ಕೊಡಲಿಲ್ಲ. ’ಧರ್ಮಶಸ್ತದಲ್ಲೂ ನನಗೆ ಉತ್ತರ ಸಿಗಲಿಲ್ಲ, ನಿನ್ನಿಂದಲೂ ಸಿಗಲಿಲ್ಲ-ನಾನು ಅಪಾತ್ರನೇನು ಹಾಗಾದರೆ’ ಎಂದು ಸಂಶಯಪಟ್ಟರು. ’ಯಾವ ಮುಖದಿಂದ ನನ್ನ ಮೇಲೆ ನಂಬಿಕೆಯಿಟ್ಟವರನ್ನು ಹೋಗಿ ನೋಡಲಿ’ ಎಂದು ಅವಮಾನಿತರಾದರು. ’ನನ್ನನ್ನೇ ಪರೀಕ್ಷಿಸುತ್ತಿದ್ದೀಯಲ್ಲ’ ಎಂದು ಮಾರುತಿಯನ್ನು ಬಯ್ದರು. ಕತ್ತಲು ಗಾಢವಾದಂತೆ, ಇದು ಕೃಷ್ಣಪಕ್ಷ ಎಂದು ಅರಿತು-ಇದನ್ನು ನನ್ನ ಪರೀಕ್ಷೆಯೆಂದು ಅರಿಯಬೇಡಪ್ಪ, ಕೊಳೆಯುತ್ತಿರುವ ಶವವನ್ನು ನೆನಪಿಟ್ಟುಕೊ-ಎಂದು ಬುದ್ಧಿ ಹೇಳಿದರು. ಮಾರುತಿ ಯಾವುದಕ್ಕೂ ಜಗ್ಗದೆ ಪರ್ವತದ ಕಡೆ ಮುಖ ತಿರುಗಿಸಿ ನಿಂತ. ಆಚಾರ್ಯರಿಗೆ ಥಟ್ಟನೆ ತನ್ನ ಹೆಂಡತಿಗೆ ಔಷಧ ಕೊಡಬೇಕೆಂದು ನೆನಪಾಯಿತು. ಕಣ್ಣುಗಳಲ್ಲಿ ನೀರು ಬರುವುದೊಂದು ಬಾಕಿ-ನಿರಾಶೆಯಿಂದ ಎದ್ದು ನಿಂತರು. ಕಾಲು ಕೂತು ಮರಗಟ್ಟಿತ್ತು. ಕ್ಷೀಣರಾಗಿ ಮೆಲ್ಲಮೆಲ್ಲನೆ ನಡೆದರು.
ಸ್ವಲ್ಪ ದೂರ ನಡೆದಮೇಲೆ ದಟ್ಟವಾದ ಕತ್ತಲಿನ ಕಾಡಿನಲ್ಲಿ ಹಿಂದಿನಿಂದ ಹೆಜ್ಜೆ ಸಪ್ಪಳವಾದಂತಾಗಿ ನಿಂತರು. ಕೆಬಳೆಯ ಶಬ್ದ. ಆಲಿಸಿದರು. ’ಯಾರು?’ ಎಂದರು. ಕಾದರು.
’ನಾನು’ ಎಂದಳು. ಸಂಕೋಚದಲ್ಲಿ ಸಣ್ಣಗಾಗಿ ಚಂದ್ರಿ.
ಪ್ರಾಣೇಶಾಚಾರ್ಯರಿಗೆ ಒಮ್ಮೆಲೆ ಕಾಡು ಕತ್ತಲಿನಲ್ಲಿ ಹೀಗೆ ಹೆಣ್ಣೊಬ್ಬಳು ಬಳಿ ನಿಂತಿರುವುದರಿಂದ ಒಂದು ತರಹವಾಯಿತು. ಏನಾದರೂ ಅನ್ನಬೇಕೆಂದು ಮಾತು ಹುಡುಕಿ, ತನ್ನ ಪಾಡು ನೆನೆದು ದುಃಖವಾಗಿ, ’ಮಾರುತಿ, ಮಾರುತಿ…’ ಎನ್ನುತ್ತ ನಿಂತರು.
ಚಂದ್ರಿಗೆ ಅವರ ಮೃದುವಾದ, ಗದ್ಗದಿತವಾದ ಧ್ವನಿ ಕೇಳಿ ತುಂಬ ಮರುಕ ಉಕ್ಕಿತು. ಪಾಪ. ಹಸಿದು, ಕಂಗೆಟ್ಟು, ತನಗಾಗಿ ಒದ್ದಾಡಿ ಬಡವಾಗಿದ್ದಾನೆ ಬ್ರಾಹ್ಮಣ. ಅವರ ಕಾಲನ್ನು ಭದ್ರವಾಗಿ ಹಿಡಿದು ನಮಸ್ಕಾರ ಮಾಡಬೇಕೆನ್ನಿಸಿತು. ಮರುಕ್ಷಣವೇ ಮುಂದೆ ಬಂದು ಬಿದ್ದಳು. ಕತ್ತಲೆಯಲ್ಲಿ ಕಣ್ಣು ಕಾಣಿಸದಿದ್ದರಿಂದ ಉಮ್ಮಳದಲ್ಲೆಂಬಂತೆ ಅವಳು ಬಾಗಿದ್ದರಿಂದ, ಪಾದದ ಬದಲು ಅವರ ಮೊಣಕಾಲು ಅವಳ ಎದೆಗೆ ತಾಕಿತು. ಮುಗ್ಗರಿಸಿದ ವೇಗಕ್ಕೆ ಕುಪ್ಪಸದ ಗುಂಡಿಗಳು ಹರಿದವು. ಅವಾಕ್ಕಾಗಿ ಅವರ ತೊಡಿಯ ಮೇಲೆ ತಲೆಯಿಟ್ಟು ಕಾಲುಗಳನ್ನು ತಬ್ಬಿಕೊಂಡಳು. ಉಕ್ಕಿಬಂದ ಭಕ್ತಿ, ಹೆಣ್ಣಿನ ಸುಖವನ್ನೇ ಕಾಣದ ಬ್ರಾಹ್ಮಣ ಎನ್ನುವ ಮರುಕ, ಈ ಅಗ್ರಹಾರದಲ್ಲಿ ನೀವಲ್ಲದೆ ನನ್ನ ಹಿತಚಿಂತಕರು ಯಾರೂ ಇಲ್ಲ ಎನ್ನುವ ನಿಸ್ಸಹಾಯಕತೆ-ಒಟ್ಟಿಗೇ ಕೂಡಿ ಅತ್ತಳು. ಪ್ರಾಣೇಶಾಚಾರ್ಯರಿಗೆ ಪಶ್ಚಾತ್ತಾಪ, ಥಟ್ಟನೇ ಪರಕೀಯಳಾದ ಯೌವನದ ಹೆಣ್ಣೊಬ್ಬಳ ಬಿಗಿಯಾದ ಸ್ಪರ್ಶದಿಂದ ತಬ್ಬಿಬ್ಬೆನಿಸಿ ಆಶೀರ್ವದಿಸಲೆಂದು ಬಾಗಿ ಕೆ ನೀಡಿದರು. ಚಾಚಿದ ಕೆಗೆ ಅವಳ ಬಿಸಿ ಉಸಿರು, ಕಣ್ಣೀರು ತಾಗಿ, ರೋಮಾಂಚದ ಮಾರ್ದವ ಉಕ್ಕಿ, ಅವಳ ಚೆಲ್ಲಿದ ಕೂದಲನ್ನು ಸವರಿದರು. ಆಶೀರ್ವಾದದ ಸಂಸ್ಕೃತ ಮಾತು ಬಾಯಿಂದ ಹೊರಡಲಿಲ್ಲ. ತನ್ನ ತಲೆಗೂದಲಿನ ಮೇಲೆ ಅವರ ಕೆ ಆಡಿದ್ದರಿಂದ ಚಂದ್ರಿಗೆ ಇನ್ನಷ್ಟು ಆವೇಗವಾಗಿ, ಅವರ ಕೆಗಳನ್ನು ಭದ್ರವಾಗಿ ಹಿಡಿದು, ಎದ್ದುನಿಂತು, ಪಾರಿವಾಳದ ಹಾಗೆ ಡವಗುಟ್ಟುತ್ತಿದ್ದ ತನ್ನ ಎದೆಗಳಿಗೆ ಒತ್ತಿಕೊಂಡಳು.
ತನ್ನ ಕೆಗಳೆಂದೂ ಸ್ಪರ್ಶಿಸದ ಪುಷ್ಟವಾದ ಮೊಲೆಗಳನ್ನು ಮುಟ್ಟಿದ ಕ್ಷಣ ಪ್ರಾಣೇಶಾಚಾರ್ಯರಿಗೆ ಬವಳಿ ಬಂದಂತಾಯಿತು. ಕನಸಿನಲ್ಲೆಂಬಂತೆ ಮೊಲೆಗಳನ್ನು ಒತ್ತಿದರು. ಕೂಡಲೇ ಚಂದ್ರಿ, ಕಾಲು ಬತ್ತಿಬಂದ ಆಚಾರ್ಯರನ್ನು ಅವಚಿಕೊಂಡು ಮೆತ್ತಗೆ ಕೂರಿಸಿದಳು. ಆಚಾರ್ಯರಿಗೆ ಇಷ್ಟು ಹೊತ್ತೂ ಮನಸ್ಸಿಗೆ ಬಾರದಿದ್ದ ಹೊಟ್ಟೆಯ ಹಸಿವು ಜಗ್ಗನೆ ಎದ್ದು, ಸಂಕಟವಾಗಿ ’ಅಮ್ಮ’ ಎಂದರು. ಚಂದ್ರಿ ಅವರನ್ನು ಎದೆಗಾನಿಸಿಕೊಂಡು, ಮಡಿಲಿನಿಂz ರಸಬಾಳೆಹಣ್ಣುಗಳನ್ನು ತೆಗೆದು, ಸುಲಿದು ತಿನ್ನಿಸಿದಳು. ನಂತರ ತನ್ನ ಸೀರೆಯನ್ನು ಬಿಚ್ಚಿ ಹಾಸಿ ಪ್ರಾಣೇಶಾಚಾರ್ಯರನ್ನು ತಬ್ಬಿಕೊಂಡು ಮಲಗಿ ಗಳಗಳನೆ ಅತ್ತುಬಿಟ್ಟಳು.

ಭಾಗ ಎರಡು ಅಧ್ಯಾಯ : ಒಂದು

ಆಚಾರ್ಯರಿಗೆ ಎಚ್ಚರವಾದಾಗ ನಡುರಾತ್ರೆ. ಅವರ ತಲೆ ಚಂದ್ರಿಯ ತೊಡೆಗಳ ಮೇಲಿತ್ತು. ಕೆನ್ನೆ ಅವಳ ನಗ್ನ ಕಿಪ್ಪೊಟ್ಟೆಗೆ ಒತ್ತಿಕೊಂಡಿತ್ತು. ಚಂದ್ರಿ ತನ್ನ ಬೆರಳುಗಳಿಂದ ಅವರ ತಲೆ ಕಿವಿ ಕೆನ್ನೆಗಳನ್ನು ಸವರುತ್ತಿದ್ದಳು.
ತಾನೇ ತನಗೆ ಥಟ್ಟನೆ ಅಪರಿಚಿತನಾಗಿಬಿಟ್ಟಂತಾಗಿ ಕಣ್ಣುಬಿಟ್ಟು ಆಚಾರ್ಯರು ಯೋಚಿಸಿದರು. ಎಲ್ಲಿದ್ದೇನೆ? ಇಲ್ಲಿಗೆ ಹೇಗೆ ಬಂದೆ? ಇದು ಯಾವ ಕತ್ತಲು? ಇದು ಯಾವ ಕಾಡು? ಇವಳು ಯಾರು?
ತನ್ನ ಬಾಲ್ಯಕ್ಕೊಮ್ಮೆಗೆ ಮಗುಚಿಕೊಂಡುಬಿಟ್ಟಂತೆನಿಸಿ ಅಮ್ಮನ ತೊಡಿಯ ಮೇಲೆ ಮಲಗಿ ದಣಿವು ಕಳೆದುಕೊಳ್ಳುತ್ತಿದ್ದುದು ಮರುಕಳಿಸಿತು. ಬೆರಗಿನಿಂದ ನೋಡಿದರು: ಗರಿ ಬಿಚ್ಚಿದ ನವಿಲಿನಂತಹ ಅಕ್ಷಯ ನಕ್ಷತ್ರದ ರಾತ್ರಿ; ಸಪ್ತ‌ಋಷಿಗಳ ಮಂಡಲ; ವಸಿಷ್ಠರ ಪಕ್ಕದಲ್ಲಿ ನಾಚಿ ಮಿನುಗುವ ಅರುಂಧತಿ. ಕೆಳಗೆ ಹುಲ್ಲಿನ, ಹಸಿಮಣ್ಣಿನ, ವಿಷ್ಣುಕಾಂತಿಯ, ಸುಗಂಧಿಯ, ಹೆಣ್ಣನ ಬೆವರಿದ ಮೆಯ ವಾಸನೆ. ಕತ್ತಲು ಆಕಾಶ, ನೆಮ್ಮದಿಯಿಂದ ನಿಂತ ವೃಕ್ಷಗಳು. ಕನಸೋ ಎಂದು ಕಣ್ಣುಜ್ಜಿಕೊಂಡರು. ಎಲ್ಲಿಂದ ಇಲ್ಲಿಗೆ ಬಂದೆ, ಎಲ್ಲಿಗೆ ಹೋಗಬೇಕೆಂದು ಬಂದು ಮರೆತುಬಿಟ್ಟೆ ಎಂದು ಕಳವಳಿಸಿದರು. ’ಚಂದ್ರಿ’ ಎಂದು ಕರೆದು ಪೂರ್ಣ ಎಚ್ಚರವಾದರು. ಆಲಿಸಿದರು. ಕಾಡಿನಲ್ಲಿ, ಮೌನದಲ್ಲಿ, ಗುಟ್ಟುಗಳನ್ನು ಹೇಳುತ್ತಿರುವಂತಹ ಚಿಲಿಪಿಲಿ ಎನ್ನುವ ಕತ್ತಲು. ಚಿಲಿಪಿಲಿ ಎನ್ನುವ ಶಬ್ದ. ’ಮಿಣP’ ’ಮಿಣP’ ಎನ್ನುವ ಬೆಳಕಾಗಿ, ರಾಶಿರಾಶಿಯಾದ ಮಿಣುಕುಹುಳುಗಳು ತೇರಿನಂತೆ ಏರಿಬಂದು ಪೊದೆಯಿಂದ ಹೊರಗೆ ಪ್ರತ್ಯಕ್ಷವಾದವು. ಕಣ್ಣು ತುಂಬುವಂತೆ, ಕಿವಿ ತುಂಬುವಂತೆ ಆಲಿಸುತ್ತ ನೋಡಿದರು : ಸುತ್ತಲೂ ಮಿಣುಕು ಹುಳುಗಳ ರಾಶಿರಾಶಿ ತೇರು. ’ಚಂದ್ರೀ’ ಎಂದು ಅವಳ ಹೊಟ್ಟೆಯನ್ನು ಮುಟ್ಟಿ ಎದ್ದು ಕೂತರು.
ಪ್ರಾಣೇಶಾಚಾರ್ಯರು ತನ್ನನ್ನೆಲ್ಲಿ ಬೆದುಬಿಡುವರೋ, ಹಳಿದು ಬಿಡುವರೋ ಎಂದು ಚಂದ್ರಿಗೆ ಭಯ. ಅಲ್ಲದೆ ತಾನು ಫಲವತಿಯಾಗಿರಬಹುದೇನೋ ಎನ್ನುವ ಆಸೆ. ತಾನು ಪುಣ್ಯಾತಗಿತ್ತಿಯಾದೆ ಎನ್ನುವ ಕೃತಜ್ಞತೆ. ಆದರೆ ಅವಳು ಮಾತಾಡಲಿಲ್ಲ.
ಪ್ರಾಣೇಶಾಚಾರ್ಯರೂ ಬಹಳ ಹೊತ್ತು ಮಾತಾಡಲಿಲ್ಲ. ಕೊನೆಗೆ ಎದ್ದು ನಿಂತು ಅಂದರು:
“ಚಂದ್ರಿ, ಏಳು ಹೋಗುವ. ನಾಳೆ ಬೆಳಿಗ್ಗೆ ಬ್ರಾಹ್ಮಣರು ಸೇರಿದಾಗ ಹೀಗಾಯಿತೆಂದು ಹೇಳಿಬಿಡುವ. ನೀನೇ ಹೇಳಿಬಿಡು. ಅಗ್ರಹಾರಕ್ಕೆ ಒಂದು ನಿಶ್ಚಯ ಮಾಡಿ ಹೇಳುವ ಅಧಿಕಾರಾನ್ನ ನಾನು…”
ಏನು ಹೇಳುವುದು ಸರಿಯೆಂದು ತಿಳಿಯದೆ ಪ್ರಾಣೇಶಾಚಾರ್ಯರು ತತ್ತರಿಸಿ ನಿಂತರು :
“ಕಳೆದುಕೊಂಡೆ. ನಾಳೆ ನನಗೆ ಧೆರ್ಯ ಬಾರದಿದ್ದರೆ ನೀನೇ ಹೇಳಿಬಿಡಬೇಕು. ನನ್ನ ಮಟ್ಟಿಗೆ ಸಂಸ್ಕಾರ ಮಾಡಲು ನಾನು ಸಿದ್ಧ. ಉಳಿದ ಬ್ರಾಹ್ಮಣರಿಗೆ ಹೇಳುವ ಅಧಿಕಾರ ನನಗೆ ಇಲ್ಲ. ಅಷ್ಟೆ.”
ಮಾತನ್ನಾಡಿಬಿಟ್ಟಮೇಲೆ ಪ್ರಾಣೇಶಾಚಾರ್ಯರಿಗೆ ತಮ್ಮ ದಣಿವೆಲ್ಲ ಕಳೆದುಬಿಟ್ಟಂತಾಯಿತು.ಒಟ್ಟಿಗೆ ಹೊಳೆ ದಾಟಿ, ನಾಚಿಕೆಯಾದ್ದರಿಂದ ಪ್ರಾಣೇಶಾಚಾರ್ಯರನ್ನು ಮುಂದೆ ಬಿಟ್ಟು ತಾನು ಹಿಂದಾಗಿ, ಅಗ್ರಹಾರವನ್ನು ಸೇರಿದಮೇಲೆ ಚಂದ್ರಿಗೆ ಕಳವಳವಾಯಿತು : ತಾನು ಮಾಡಿದ್ದೆಲ್ಲ ಹೀಗಾಗುತ್ತದಲ್ಲ! ಒಳ್ಳೆ ಬುದ್ಧಿಯಿಂದ ಬಂಗಾರ ಕೊಟ್ಟೆ; ಹಾಗಾಯ್ತು. ಈಗ ಅವರ ಸಂಸ್ಕಾರ ಮಾಡಲಿಕ್ಕೆಂದು ಪ್ರಯತ್ನಿಸುತ್ತಿದ್ದ ಆಚಾರ್ಯರನ್ನ… ಆದರೆ ಸ್ವಭಾವತಃ ಸುಖಿಯಾದ ಚಂದ್ರಿಗೆ ಆತ್ಮಾವಹೇಳನದ ಪದ್ಧತಿಯ ಮಾತುಗಳ ಪರಿಚಯವಿರಲಿಲ್ಲ. ಕತ್ತಲೆಯಲ್ಲಿ ಅಗ್ರಹಾರದ ಬೀದಿ ನಡೆಯುತ್ತಿದ್ದಂತೆ ಆ ಕತ್ತಲಿನ ಕಾಡಿನಲ್ಲಿ – ನಿಂತದ್ದು , ಬಾಗಿದ್ದು , ಕೊಟ್ಟಿದ್ದು , ಕೊಂಡದ್ದು , ಬಚ್ಚಿಟ್ಟುಕೊಂಡ ಪರಿಮಳದ ಹೂವಿನಂತೆ ಧನ್ಯಭಾವವನ್ನು ಮಾತ್ರ ತರುತ್ತದೆ. ಪಾಪ ಆಚಾರ್ಯರಿಗೆ ಹೀಗೆನ್ನಿಸುತ್ತದೋ, ಇಲ್ಲವೋ. ಇನ್ನು ಅವರ ಜಗುಲಿಗೆ ಮತ್ತೆ ಹೋಗಿ ಅವರ ಮನಸ್ಸಿಗೆ ನೋವುಂಟುಮಾಡಬಾರದು. ಅಲ್ಲದೆ ತನ್ನ ಬಾಳಿಗೆ ಅಕಸ್ಮಾತ್ತಾಗಿ ನುಗ್ಗಿ ಬಂದ ಈ ಅದೃಷ್ಟವನ್ನ ಆಚಾರ್ಯರು ಹೇಳಿದ ಹಾಗೆ ಅಗ್ರಹಾರದ ಗೊಡ್ಡು ಬ್ರಾಹ್ಮಣರ ಎದುರಿನಲ್ಲಿ ಹೇಳಿ, ಬೀದಿಗೆಳೆದು, ಆಚಾರ್ಯರ ಮಾನ ಕಳೆಯುವಂಥವಳೇ ತಾನು? ಸರಿ- ಆದರೆ ಈಗ ನನ್ನ ಗತಿ? ಆಚಾರ್ಯರಲ್ಲಿಗೆ ಹೋಗೋದು ಸರಿಯಲ್ಲ; ಈಗ ಶವವಾದ ತನ್ನ ಯಜಮಾನನ ಮನೆಗೆ ಹೋಗಲು ಭಯ. ಏನು ಮಾಡಲಿ?ಎಷ್ಟೆಂದರೂ ತನ್ನ ಕೂಡ ಸಹವಾಸ ಮಾಡಿದವರಲ್ಲವೆ ಎಂದು ಧೆರ್ಯ ತಂದುಕೊಂಡಳು. ಅಲ್ಲಿಗೆ ಹೋಗಿ ನೋಡೋದು, ಧೆರ್ಯವಾದರೆ ಚಾವಡಿಯಲ್ಲಿ ಮಲಗಿರೋದು, ಇಲ್ಲವೆ ಆಚಾರ್ಯರ ಜಗುಲಿಗೇ ಮತ್ತೆ ಬರೋದು, ಏನು ಮಾಡಲಿಕ್ಕಾಗುತ್ತೆ ಆಪತ್ತಿನಲ್ಲಿ-ಎಂದು ವಾದಿಸಿಕೊಂಡು ಸೀದ ತನ್ನ ಮನೆಗೆ ಹೋದಳು. ಚಪ್ಪರದ ಕೆಳಗೆ ನಿಂತು ಆಲಿಸಿದಳು. ನಾಯಿ ಬೊಗಳಿದ ಶಬ್ದ ಕೇಳಿ ಎಲ್ಲ ರಾತ್ರೆಯ ಹಾಗೆ ಇದೂ ಒಂದು ರಾತ್ರೆ ಎನ್ನಿಸಿ ಚಾವಡಿಯ ಮೆಟ್ಟಿಲನ್ನು ಹತ್ತಿದಳು. ಚಾಚಿದ ಕೆಗೆ ಬಾಗಿಲು ತೆರೆದದ್ದು ತಿಳಿದು : ’ಅಯ್ಯೋ ಪರಮಾತ್ಮ, ನರಿ ನಾಯಿಯೇನಾದರೂ ನುಗ್ಗಿ ಅವನ ಶವವನ್ನು…’ ಎಂದು ತಾಪವಾಗಿ ಭಯವನ್ನೆಲ್ಲ ಮರೆತು, ಕ್ಷಣದಲ್ಲಿ ಒಳನುಗ್ಗಿ, ಅಭ್ಯಾಸಬಲದಿಂದ ಗೂಡಿನಲ್ಲಿದ್ದ ಬೆಂಕಿಪೊಟ್ಟಣ ತೆರೆದು ಲಾಟೀನು ಹತ್ತಿಸಿದಳು. ದುರ್ವಾಸನೆ. ಸತ್ತು ಕೊಳೆಯುತ್ತಿದ್ದ ಇಲಿ. ತನಗಾಗಿ ಅಗ್ರಹಾರದಲ್ಲೆಲ್ಲ ನಿಷ್ಠುರ ಕಟ್ಟಿಕೊಂಡ ನಾರಣಪ್ಪನ ಶವವನ್ನ ಅನಾಥವಾಗಿಬಿಟ್ಟೆನಲ್ಲ ಎಂದು ದುಃಖವಾಗಿ ಮಹಡಿ ಹತ್ತಿ ಹೋದಳು. ಲೋಭಾನದ ಹೊಗೆ ಹಾಕಬೇಕೆಂದುಕೊಂಡಳು. ಹೆಣನಾರುತ್ತಿತ್ತು. ಬಾತುಕೊಂಡು ವಿಕಾರವಾಗಿ ವಿರೂಪವಾದ ಶವದ ಮುಖ ಕಂಡು ಹೊಟ್ಟೆಯೆಲ್ಲ ಕಲಿಸಿ, ಕಿಟಾರನೆ ಕಿರುಚಿ ಹೊರಕ್ಕೋಡಿದಳು. ಅಲ್ಲಿ ಮೇಲಿರುವುದಕ್ಕೂ, ತನ್ನನ್ನು ಒಲಿದಿದ್ದವನಿಗೂ ಯಾವ ಸಂಬಂಧವೂ ಇಲ್ಲ, ಇಲ್ಲ ಎಂದು ಅವಳ ಜೀವ ಕೂಗಿತು. ಲಾಟೀನು ಹಿಡಿದು ಆವೇಶದಲ್ಲೆಂಬಂತೆ ಚಂದ್ರಿ ಒಂದೇ ವೇಗದಲ್ಲಿ ಮೆಲಿ ನಡೆದು ಗೌಡರ ಕೇರಿಗೆ ಹೋದಳು. ತಮ್ಮ ಮನೆಗೆ ಕೋಳಿ ಮೊಟ್ಟೆಯನ್ನು ತಂಡುಕೊಡುತ್ತಿದ್ದ ಗಾಡಿ ಶೇಷಪ್ಪನ ಮನೆಯನ್ನು ಅಂಗಳದಲ್ಲಿ ಕಟ್ಟಿದ ಬಿಳಿಯ ಎತ್ತುಗಳಿಂದ ಗುರುತಿಸಿ ಒಳಕ್ಕೆ ಹೋದಳು. ಎತ್ತುಗಳು ಅಪರಿಚಿತ ರೂಪವೊಂದನ್ನು ಕಂಡು ಎದ್ದು ನಿಂತು ಬು ಎಂದು ಉಸಿರಾಡಿ ಹಗ್ಗವನ್ನು ಜಗ್ಗಿದುವು. ನಾಯಿ ಬೊಗಳಿತು. ಶೇಷಪ್ಪ ಎದ್ದು ಬಂದ. ಚಂದ್ರಿ ಆತುರವಾಗಿ ನಡೆದದ್ದನ್ನು ವಿವರಿಸಿ, “ನೀನು ಗಾಡಿಕಟ್ಟಿಕೊಂಡು ಬಂದು ಹೆಣವನ್ನು ಶ್ಮಶಾನಕ್ಕೆ ಸಾಗಿಸಬೇಕು, ಮನೆಯಲ್ಲಿಯೇ ಕಟ್ಟಿಗೆಯಿದೆ-ಸುಟ್ಟುಬಿಡಬಹುದು” ಎಂದು ಕೇಳಿದಳು.
ಹೆಂಡವನ್ನು ಹೀರಿ ಮಜದಲ್ಲಿ ನಿದ್ದೆ ಮಾಡಿದ್ದ ಶೇಷಪ್ಪ ಗಾಬರಿಯಾಗಿ,
“ಚಂದ್ರಮ್ಮ ಸಾಧ್ಯವಿಲ್ಲವ್ವ. ಬ್ರಾಂಬ್ರ ಶವಾನ ನಾನು ಮುಟ್ಟಿ ನರಕಕ್ಕೆ ಹೋಗಲ? ಅಷ್ಟೆಶ್ವರ್ಯ ಕ್ವಟ್ಟರೂ ಬ್ಯಾಡಮ್ಮ…ಭಯವಾದರೆ ಈ ಬಡವನ ಗುಡಿಸಲಲ್ಲಿ ಮಲಗಿದ್ದು ನಸುಕಿನಲ್ಲಿ ಎದ್ದು ಹೋಗಿರವ್ವ” ಎಂದು ಉಪಚರಿಸಿದ.
ಚಂದ್ರಿ ಮಾತನ್ನಾಡದೆ ಬೀದಿಗೆ ಬಂದು ನಿಂತಳು. ಏನು ಮಾಡಲಿ? ಒಂದೇ ಒಂದು ಯೋಚನೆ ಅವಳಿಗೆ ಸ್ಪಷ್ಟವಾಯಿತು: ಅಲ್ಲಿ ಅದು ಕೊಳೆಯುತ್ತಿದೆ. ನಾರುತ್ತಿದೆ. ಬಾತುಕೊಂಡಿದೆ. ಅದು ತಾನು ಒಲಿದ ನಾರಣಪ್ಪನಲ್ಲ. ಬ್ರಾಹ್ಮಣನೂ ಅಲ್ಲ. ಶೂದ್ರನೂ ಅಲ್ಲ. ಹೆಣ. ಕೊಳೆಯುವ ನಾರುವ ಹೆಣ.
ಸೀದ ನಡೆದು ಮುಸಲ್ಮಾನರಿದ್ದ ಕೇರಿಗೆ ಹೋದಳು. ಹಣ ಕೊಡುವೆನೆಂದಳು. ಬಂಗಡೇ ಮೀನಿನ ವ್ಯಾಪಾರ ಮಾಡುತ್ತಿದ್ದ ಅಹ್ಮz ಬ್ಯಾರಿ-ಕೆಯಲ್ಲಿ ಒಮ್ಮೆ ಕಾಸಿಲ್ಲದಾಗ ಎತ್ತುಗಳನ್ನು ಕೊಳ್ಳಲು ಸಾಲ ಕೊಟ್ಟ‌ಒಡೇರು ಅವರು ಎಂದು ನೆನೆದು- ಎಗ್ಗಿಲ್ಲದೆ ಗುಟ್ಟಾಗಿ ಗಾಡಿ ಕಟ್ಟಿಕೊಂಡು ಬಂದು ಶವವನ್ನೂ ಕಟ್ಟಿಗೆಯನ್ನೂ ಒಟ್ಟಿಗೇ ತುಂಬಿ, ಯಾರಿಗೂ ಪತ್ತೆಯಾಗದಂತೆ ಮಸಣಕ್ಕೊಯ್ದು, ಕತ್ತಲೆಯಲ್ಲಿ ಧಗಧಗ ಬೆಂಕಿಯೆಬ್ಬಿಸಿ ಬೂದಿಮಾಡಿ ನಡೆದುಬಿಟ್ಟ- ಹೆ ಹೆ ಎಂದು ಎತ್ತಿನ ಬಾಲ ತಿರುಪಿ. ಚಂದ್ರಿ ಎರಡು ತೊಟ್ಟು ಕಣ್ಣೀರು ಹಾಕಿ, ಮನೆಗೆ ಹಿಂದಕ್ಕೆ ಬಂದು, ಚೀಲದಲ್ಲಿ ತನ್ನದೊಂದಿಷ್ಟು ರೇಷ್ಮೆಯ ಸೀರೆಗಳನ್ನು, ಪೆಟ್ಟಿಗೆಯಲ್ಲಿದ್ದ ನಗದು ಹಣವನ್ನು ಮತ್ತು ಆಚಾರ್ಯರು ಹಿಂದಕ್ಕೆ ಕೊಟ್ಟ ಬಂಗಾರವನ್ನು ಗಂಟುಕಟ್ಟಿಕೊಂಡು ಹೊರಬಂದಳು. ಪ್ರಾಣೆಶಾಚಾರ್ಯರನ್ನು ಎಬ್ಬಿಸಿ ಅವರ ಕಾಲಿಗೆರಗಿ ಹೋಗಬೇಕೆಂಬ ತನ್ನ ಆಸೆಯನ್ನು ಅದುಮಿಕೊಂಡು, ಬೆಳಿಗ್ಗೆ ಕುಂದಾಪುರಕ್ಕೆ ಮೋಟಾರು ಹಿಡಿಯುವುದೆಂದು ಮೋಟಾರಿನ ದಾರಿಯ ಕಡೆ ಕಾಡುದಾರಿಯಲ್ಲಿ ಗಂಟು ಹಿಡಿದು ನಡೆದುಬಿಟ್ಟಳು.

ಅಧ್ಯಾಯ : ಎರಡು

ಇತ್ತ ಪಾರಿಜಾತಪುರದಲ್ಲಿ ಸಾಹುಕಾರ ಮಂಜಯ್ಯನ ವಿಶಾಲವಾದ ಮಹಡಿಯಲ್ಲಿ ಶ್ರೀಪತಿ, ಗಣೇಶ, ಗಂಗಣ್ಣ, ಮಂಜುನಾಥ ಮತ್ತು ನಾಲ್ಕೆದು ಅಗ್ರಹಾರದ ಯುವಕರು ಗುಲೇಬಕಾವಲಿ ನಾಟಕದ ತಯಾರಿಕೆಯಲ್ಲಿ ತೊಡಗಿದ್ದರು. ಅವರ ನಡುವೆ ಇದ್ದ ಹಾರ್ಮೋನಿಯಂ ನಾರಣಪ್ಪ ತಮ್ಮ ನಾಟಕ ಕಂಪೆನಿಯ ಉಪಯೋಗಕ್ಕೆಂದು ಕೊಟ್ಟಿದ್ದು. ಪ್ರತಿ ನಾಟಕಕ್ಕೂ ಅವನು ಹಾಜರಿರಲೇ ಬೇಕು. ಅವನ ಪ್ರೋತ್ಸಾಹವಿಲ್ಲದಿದ್ದರೆ ಪಾರಿಜಾತ ಮಂಡಳಿ ಹುಟ್ಟುತ್ತಿರಲೇ ಇರಲಿಲ್ಲ. ಹುರಿದುಂಬಿಸಿದವ ಅವ; ಅಲ್ಲದೆ ಯುವಕರು ಒಟ್ಟು ಮಾಡಿದ ದುಡ್ಡಿಗೆ ತನ್ನದಷ್ಟು ಸೇರಿಸಿ ಶಿವಮೊಗ್ಗೆಯಿಂದ ಸೀನರಿಗಳನ್ನು ತಂದುಕೊಟ್ಟವ ಅವ. ನಾಟಕದ ಗತ್ತು ಇತ್ಯಾದಿಗಳ ಬಗ್ಗೆಯೂ ಸೂಚನೆ ಕೊಡುತ್ತಿದ್ದವನೂ ಅವನೆ… ಆಸುಪಾಸಿನಲ್ಲೆಲ್ಲ ಗ್ರಾಮೊಫೋ ಇದ್ದುದೆಂದರೆ ಅವನ ಹತ್ತಿರ. ಹಿರಣ್ಣಯ್ಯನ ಕಂಪನಿಯ ನಾಟಕ ಹಾಡುಗಳ ಪ್ಲೇಟುಗಳೆಲ್ಲ ಅವನ ಹತ್ತಿರವಿದ್ದವು. ಅದನ್ನೆಲ್ಲ ಈ ಯುವಕರಿಗೆ ಕೀಕೊಟ್ಟು ತಿರುಗಿಸಿ ಕೇಳಿಸಿದ್ದ. ಅಷ್ಟಿಷ್ಟು ಕಾಂಗ್ರೆ ವಿಷಯಗಳನ್ನು ಅಲ್ಲಿಂದ ಇಲ್ಲಿಂದ ಕಿವಿಯ ಮೇಲೆ ಹಾಕಿಕೊಂಡು ಬಂದು ಯುವಕರಿಗೆ ಖಾದಿ ಜುಬ್ಬ ಪಾಯಜಾಮ, ಬಿಳಿ ಟೋಪಿಯ ಫ್ಯಾಶ ಕಲಿಸಿದ್ದ. ಈಗ ಯುವಕರಿಗೆಲ್ಲ ಅವನ ಸಾವಿನಿಂದಾಗಿ ತುಂಬ ವ್ಯಥೆಯಾಗಿದೆ. ಆದರೆ ಹಿರಿಯರ ಭಯದಿಂದ ಎಲ್ಲ ಸುಮ್ಮನಿದ್ದಾರೆ. ಎಲ್ಲ ಬಾಗಿಲುಗಳನ್ನೂ ಜಡಿದು ಪಾಸಿಂU ಷೋ ಸಿಗರೇಟು ಹತ್ತಿಸಿ ಸೇದುತ್ತ ಅರೆಮನಸ್ಸಿನಲ್ಲಿ ಪ್ರಾಕ್ಟೀಸು ನಡೆದಿತ್ತು. ಯಕ್ಷಗಾನದ ಮೇಲೆ ಮರ್ಜಿಯಿದ್ದ ಶ್ರೀಪತಿಗೆ ಈ ನಾಟಕದಲ್ಲಿ ಪಾತ್ರವಿರದಿದ್ದರೂ ಬಣ್ಣ ಹಾಕಿ ನಡೆಯುವ ಸಮಸ್ತ ಕ್ರಿಯೆಯೂ ಅವನಿಗೆ ಖಯಾಲಿ. ’ಪ್ರಾಕ್ಟೀಸು’ ನಡೆಯುತ್ತಿದ್ದಂತೆ ಒಂದು ಮರಿಗೆಯ ತುಂಬ ತುಂಬಿಟ್ಟ ಒಗ್ಗರಣೆ ಅವಲಕ್ಕಿ, ಕಡಾಯಿ ತುಂಬ ಬಿಸಿಬಿಸಿ ಕಾಫಿಯ ಸೇವನೆಯೂ ನಡೆದಿತ್ತು. ರಾತ್ರಿ ಹನ್ನೆರಡು ಗಂಟೆಯವರೆಗೂ ನಡುನಡುವೆ ನಾರಣಪ್ಪನನ್ನು ನೆನೆಯುತ್ತ ಅವಲಕ್ಕಿ ಕಾಫಿಯ ಸೇವನೆ ಮಾಡುತ್ತ, ’ಪ್ರಾಕ್ಟೀಸು’ ಸಾಗಿತು. ಮುಗಿದ ಮೇಲೆ ನಾಗರಾಜ ಗಣೇಶನಿಗೆ ಕಣ್ಣುಮಿಟುಕಿಸಿದ. ಗಣೇಶ ಪಕ್ಕದಲ್ಲಿ ಕೂತಿದ್ದ ಸ್ತೀಪಾತ್ರದ ಮಂಜುನಾಥನನ್ನು ಚೂಟಿದ. ಮಂಜುನಾಥ ಅದನ್ನು ಮಾಲೇರರ ಗಂಗಣ್ಣನಿಗೆ ದಾಟಿಸಿದ. ಗಂಗಣ್ಣ ಶ್ರೀಪತಿಯ ಪಂಚೆಯನ್ನು ಹಿಡಿದು ಜಗ್ಗಿದ. ಈ ಒಳ ಸಂಜ್ಞೆಯಾದ ಮೇಲೆ ಉಳಿದ ತರುಣರನ್ನು ಇವತ್ತಿನ ’ಪ್ರಾಕ್ಟೀಸು’ ಸಾಕೆಂದು ಸಾಗಿಸಿದ್ದಾಯಿತು. ಎಲ್ಲ ಹೋಗಿಯಾದ ಮೇಲೆ ನಾಗರಾಜ ಬಾಗಿಲನ್ನು ಮುಚ್ಚಿ ಲಗುಬಗೆಯಿಂದ ಟ್ರಂಕಿನ ಮುಚ್ಚಳ ತೆರೆದು ಎರಡು ಸೀಸೆ ಸಾರಾಯಿಯನ್ನು ಎತ್ತಿ ಹಿಡಿದ. ನಮ್ಮ ಮಾಸ್ತರರಾದ ನಾರಣಪ್ಪನ ನೆನಪಿಗೆ ಎಂದು ತಮ್ಮ ನೆಚ್ಚಿನ ನಟ ಹಿರಣ್ಣಯ್ಯನ ಹಾಡನ್ನು ಮೆಲುಕುಹಾಕಿದ. ಆಮೇಲಿಂದ ಗುಟ್ಟಾಗಿ ಸೀಸೆಗಳನ್ನು ಒಂದು ಚೀಲದಲ್ಲಿ ಇಟ್ಟಿದ್ದಾಯಿತು. ಬಾಳೆಲೆಯಲ್ಲಿ ಅವಲಕ್ಕಿಯನ್ನು ಕಟ್ಟಿಕೊಂಡದ್ದಾಯಿತು. ಮೆತ್ತಗೆ ಸದ್ದಾಗದಂತೆ ಗ್ಲಾಸುಗಳನ್ನು ತುಂಬಿಕೊಂಡದ್ದಾಯಿತು. ’ರೆಡಿ’ ಎಂದ ನಾಗರಾಜ. ’ರೆಡಿ’ ಎಂದರು ಉಳಿದವರು. ಒಬ್ಬೊಬ್ಬರಾಗಿ ಮೆಟ್ಟಿಲನ್ನು ಇಳಿಯುತ್ತಿದ್ದಂತೆ ಮಂಜುನಾಥ ’ಹೋಲ್ಡಾ’ ಎಂದು ಕತ್ತರಿಸಿದ ಒಂದು ಲಿಂಬೆಹಣ್ಣನ್ನು ಜೇಬಿಗೆ ಹಾಕಿಕೊಂಡ.
ತರುಣರು ಮೆತ್ತಗೆ ಬಾಗಿಲೆಳೆದುಕೊಂಡು ಅಗ್ರಹಾರ ದಾಟಿ, ತಮ್ಮ ಕಳ್ಳತನದ ವ್ಯಾಪಾರಕ್ಕೆ ಹಿಗ್ಗುತ್ತ ಕದ್ದಿಂಗಳಿನಲ್ಲಿ ಶ್ರೀಪತಿಯ ಬ್ಯಾಟರಿ ಬೆಳಕಿನಲ್ಲಿ ಹೊಳೆಯ ಕಡೆ ನಡೆದರು. “ಏನು ಮಾರಾಯ, ನಿಮ್ಮ ಗುರುಗಳು ಒಂದು ಬಾಟ್ಲಿ ಕುಡಿದೂ ಲಯ ತಪ್ಪದ ಹಾಗೆ ತಬಲ ನುಡಿಸುತ್ತಿದ್ದರಲ್ಲ” ಎಂದು ನಾರಣಪ್ಪನನ್ನ ನಾಗರಾಜ ದಾರಿಯಲ್ಲಿ ಸ್ಮರಿಸಿದ. ವಿಶಾಲವಾದ ಮರಳಿನ ರಾಶಿಯ ಮೇಲೆ ಬಂದು ಸುಸ್ತಾಗಿ ಕೂತು, ನಡುವೆ ಬಾಟ್ಲಿ ಗ್ಲಾಸು ಅವಲಕ್ಕಿಗಳನ್ನಿಟ್ಟುಕೊಂಡರು. ತಾವು ಐವರೇ ಈ ಲೋಕಕ್ಕೆಲ್ಲ ಇದ್ದಂತೆ ಅನ್ನಿಸಿ, ನಕ್ಷತ್ರಸಾಕ್ಷಿಯಲ್ಲಿ, ಅಗ್ರಹಾರದ ತಮ್ಮ ವಾಮನತ್ವವನ್ನು ಸಾರಾಯಿಯಿಂದ ಕಳೆದುಕೊಂಡು ತ್ರಿವಿಕ್ರಮರಾಗಲು ಸನ್ನದ್ಧತೆ ನಡೆಸಿದರು. ಹೊಳೆ ಜುಳುಜುಳು ಎಂದು ಅವರ ಮಾತಿನ ನಡುವಿನ ಮೌನದಲ್ಲಿ ಹರಿದು ಯುವಕರಿಗೆ ತಮ್ಮ ಏಕಾಂತದ ಬಗ್ಗೆ ಧೆರ್ಯವನ್ನು ಹೇಳಿತು.
ಸರಾಯಿ ಹಿತವಾಗಿ ನೆತ್ತಿಗೇರುತ್ತಿದಂತೆ ಶ್ರೀಪತಿ ಗದ್ಗದಿತನಾಗಿ ಎಂದ :
“ನಮ್ಮ ಅಪ್ಪನೊಬ್ಬ ಸತ್ತನಲ್ಲಯ್ಯ”
“ಹೌದಲ್ಲಯ್ಯ”, ನಾಗರಾಜ ಅವಲಕ್ಕಿಗೆ ಕೆಹಾಕಿ ಹೇಳಿದ : “ನಮ್ಮ ಕಂಪನಿಯ ಒಂದು ಕಂಬವೇ ಮುರಿದಂತೆ ನಮಗೆ, ಅವನ ಹಾಗೆ ತಬಲದ ಮೇಲೆ ತಾಳ ಹಿಡಿಯುವವರು ಯಾರು ಈ ಆಸುಪಾಸಿನಲ್ಲಿ?”
ಎಷ್ಟು ನಿಂಬೆಹಣ್ಣನ್ನು ಹಿಂಡಿಕೊಂಡಿದ್ದರೂ ತಲೆಗೇರಿಬಿಟ್ಟಿದ್ದ ಮಂಜುನಾಥ ಏನನ್ನೋ ಹೇಳಲು ಯತ್ನಿಸುತ್ತ, “ಚಂದ್ರಿ, ಚಂದ್ರಿ” ಎಂದ.
ಶ್ರೀಪತಿಗೆ ಹುರುಪಾಯಿತು. “ಯಾರು ಏನೇ ಅನ್ನಲಿ, ಯಾವ ಬ್ರಾಹ್ಮಣ ಏನೇ ಬೊಗಳಲಿ-ಗೊತ್ತಾಯ್ತ-ಆಣೆ ಹಾಕಿ ಹೇಳ್ತೀನಿ-ಏನೂಂತೀರ?-ಚಂದ್ರಿಯಂಥ ಚಲುವೆ, ಗಟ್ಟಿಗೆ, ಒಳ್ಳೆಯ ಹೆಂಗಸು ಈ ನೂರು ಮೆಲಿಯಲ್ಲಿ ಇದ್ದಳಾ ಎಣಿಸಿಬಿಡಿ. ಇದ್ದರೆ ಜಾತಿ ಬಿಟ್ಟುಬಿಡುವೆ. ಸೂಳೆಯಾದರೆ ಏನಯ್ಯ? ನಾರಣಪ್ಪನಿಗೆ ಅವಳ ಹೆಂಡತಿಗಿಂತ ಹೆಚ್ಚಾಗಿ ನಡಕೊಂಡಳೊ ಇಲ್ಲವೊ ಹೇಳಿ ನೋಡುವ. ಅವನು ಕುಡಿದು ವಾಂತಿ ಮಾಡಿಕೊಂಡರೆ ಬಾಚಿದಳು. ಅಲ್ಲದೆ ನಮ್ಮ ವಾಂತೀನೂ ಬಾಚಿದಳಲ್ಲಯ್ಯ! ಅರ್ಧರಾತ್ರೆ ಅವನು ಬಂದು ಎಬ್ಬಿಸಲಿ-ತುಟಿಪಿಟಕ್ಕೆನ್ನದೆ-ನಗ್ತನಗ್ತ ಅಡಿಗೆ ಮಾಡಿ ಬಡಿಸ್ತಿದ್ದಳು. ಯಾವ ಬ್ರಾಹ್ಮಣ ಹೆಂಗಸು ಅಷ್ಟು ಮಾಡ್ತಾಳಯ್ಯ? ಎಲ್ಲ ಪಿರಿಪಿರಿ ಮುಂಡೇರು. ಥv” ಎಂದ.
ಮಂಜುನಾಥ ತನಗೆ ಗೊತ್ತಿದ್ದ ಮೂರು ಇಂಗ್ಲಿ ಶಬ್ದಗಳಲ್ಲಿ ಒಂದಾದ ’ಯ’, ’ಯ’ ಎಂದ.
“ಕುಡಿದದ್ದೆ ಮಂಜುನಾಥನಿಗೆ ಇಂಗ್ಲಿ ಬಂದುಬಿಡ್ತದೆ-” ಎಂದು ನಾಗರಾಜ ನಕ್ಕ.
ಮಾತು ಮತ್ತೆ ಹುಡುಗೀರ ಕಡೆ ಹೊರಳಿತು. ಶೂದ್ರ ಹೆಣ್ಣುಗಳಲ್ಲಿ ಯಾವು ಯಾವುವು ಚೆನ್ನಾಗಿವೆಯೆಂದು ಲೆಖ್ಖ ಹಾಕಿದರು. ಬೆಳ್ಳಿ ಮತ್ತು ತನ್ನ ವಿಷಯ ನಾರಣಪ್ಪನೊಬ್ಬನಿಗೆ ಮಾತ್ರ ತಿಳಿದಿತ್ತಾದ್ದರಿಂದ ಶ್ರೀಪತಿ ಸಮಾಧಾನದಿಂದ ಅವರ ಮಾತು ಕೇಳಿದ. ಬೆಳ್ಳಿ ಇವರ ಕಣ್ಣಿಗೆ ಬೀಳದಿದ್ದುದು ಹೆಚ್ಚು. ಬಿದ್ದರೂ ಹೊಲತಿಯೆಂದು ಹೆದರುತ್ತಾರೆ, ಲಾಯಕ್ಕೇ ಆಯಿತು.
ಇನ್ನೊಂದು ಸೀಸೆಯ ಗಿದ್ನ ತೆರೆಯುತ್ತಿದ್ದಂತೆ ಶ್ರೀಪತಿ :
“ನಮ್ಮ ದೋಸ್ತು ಸತ್ತು ಸಂಸ್ಕಾರಾ ಇಲ್ಲದೆ ಕೊಳೀತಾ ಬಿದ್ದಿರೋವಾಗ ನಮ್ಮದೆಂತಹ ಮಜವಯ್ಯ” ಎಂದು ಅಳಲು ಪ್ರಾರಂಭಿಸಿದ. ಎಲ್ಲ ಯುವಕರಿಗೂ ಅಳು ಸಾಂಕ್ರಾಮಿಕವಾಗಿ ಅವನಿಂದ ಹರಡಿತು. ಒಬ್ಬರನ್ನೊಬ್ಬರು ತಬ್ಬಿಕೊಂಡರು.
ಶ್ರೀಪತಿ ಹೇಳಿದ :
“ಯಾರು ಯಾರು ಗಂಡಸರು ಇಲ್ಲಿ ಹೇಳಿ.”
’ನಾನು ನಾನು ನಾನು ನಾನು’ ಎಂದು ನಾಲ್ವರೂ ಉದ್ಗರಿಸಿದರು. ಹೆಣ್ಣಿನ ಪಾತ್ರದ ಹೆಣ್ಣಿನ ಮುಖದ ಮಂಜುನಾಥನಿಗೆ ನಾಗರಾಜ “ಛೆ ಛೇ, ನೀನು ಸದಾರಮೆ, ನೀನು ಶಕುಂತಳೆ” ಎಂದು ಮುತ್ತುಕೊಟ್ಟ.
“ನೀವು ಗಂಡಸರಾದರೆ ನನ್ನದೊಂದು ಮಾತು. ಒಪ್ಪಿದರೆ ’ಭೇ’ ಎನ್ನುವೆ. ಗೊತ್ತಾಯ್ತ. ನಮ್ಮ ಗೆಳೆಯ ಅವ. ಅವನು ಕೊಟ್ಟಿದ್ದಕ್ಕೆ ನಾವೇನು ಅವನಿಗೆ ಕೊಟ್ಟಿದ್ದೇವೆ? ಆ ಶವಾನ್ನ ಪತ್ತೆಯಾಗದಂತೆ ಸಾಗಿಸಿ ಸುಟ್ಟುಬಿಡುವ ಏನೆನ್ನುತ್ತೀರಿ? ಏಳಿ” ಎಂದು ಶ್ರೀಪತಿ ಹುರಿದುಂಬಿಸಿ ಮಾತನ್ನಾಡಿ ಎಲ್ಲರ ಗ್ಲಾಸಿಗೂ ಸರಾಯಿ ತುಂಬಿಸಿದ. ಎಲ್ಲರೂ ಅದನ್ನು ಗಟಗಟನೆ ಕುಡಿದು, ಯೋಚಿಸದೆ ಬ್ಯಾಟರಿಯ ಬೆಳಕನ್ನು ಚೆಲ್ಲುತ್ತ ನಡೆದ ಶ್ರೀಪತಿಯ ನೇತೃತ್ವದಲ್ಲಿ ಓಲಾಡುತ್ತ ಓಲಾಡುತ್ತ ಹೊಳೆ ದಾಟಿದರು. ಕದ್ದಿಂಗಳಿನಲ್ಲಿ ಒಂದು ಪಿಳ್ಳೆಯೂ ಕಾಣಲಿಲ್ಲ. ಕುಡಿದ ಸರಾಯಿ ನೆತ್ತಿಗೇರಿ, ಉನ್ಮಾದದಿಂದ ಅಗ್ರಹಾರವನ್ನು ಹೊಕ್ಕು, ನಾರಣಪ್ಪನ ಮನೆಗೆ ಹೋಗಿ ಬಾಗಿಲು ದೂಡಿದರು. ನೇರ ನಿರ್ಭಯ ಒಳಕ್ಕೆ ಹೋದರು. ಸರಾಯಿಯ ಪ್ರಭಾವದಲ್ಲಿ ದುರ್ನಾತ ಲೆಖ್ಖಕ್ಕೆ ಬರದೆ ಸೀದ ಮಹಡಿ ಹತ್ತಿದರು. ಶ್ರೀಪತಿ ಬ್ಯಾಟರಿ ಬಿಟ್ಟ. ಎಲ್ಲಿ? ಎಲ್ಲಿ? ನಾರಣಪ್ಪನ ಶವವೇ ಪತ್ತೆಯಿಲ್ಲ. ಐವರಿಗೂ ಇದ್ದಕ್ಕಿದ್ದಂತೆ ಪ್ರಾಣಭಯವಾಯಿತು. “ಹಾ! ನಾರಣಪ್ಪ ಪ್ರೇತವಾಗಿ ನಡೆದುಬಿಟ್ಟ” ಎಂದ ನಾಗರಾಜ. ಅವನು ಅಂದದ್ದೆ ತಡ ಸರಾಯಿ ಸೀಸೆಯ ಚೀಲವನ್ನಲ್ಲೇ ಎಸೆದು, ಬಿದ್ದೆವೋ ಕೆಟ್ಟೆವೋ ಎನ್ನುತ್ತ ಐವರೂ ಹೊರಗೆ ಓಡಿಬಿಟ್ಟರು.
ನಿದ್ದೆ ಬಾರದೆ ’ಢರ್ರೆ’ನ್ನುವ ಬಾಗಿಲು ತೆರೆದು ಶಪಿಸಲೆಂದು ಅಗ್ರಹಾರದ ಬೀದಿಗೆ ಬಂದಿದ್ದ ಅರೆಮರಳು ಲಕ್ಷ್ಮೀದೇವಮ್ಮ “ಪ್ರೇತಗಳನ್ನು ನೋಡಿರೋ ನೋಡಿರೋ” ಎಂದು ಕಿರುಚಿ “ಹೇಂii” ಎಂದು ತೇಗಿದಳು.

ಅಧ್ಯಾಯ : ಮೂರು

ರಾತ್ರೆ ಬಹಳ ಹೊತ್ತಾದಮೇಲೂ ಪ್ರಾಣೇಶಾಚಾರ್ಯರು ಬರದಿದ್ದುದನ್ನು ಕಂಡು ಕಂಗಾಲಾದ ಬ್ರಾಹ್ಮಣರು ಬಾಗಿಲು ಕಿಟಕಿಗಳನ್ನೆಲ್ಲ ಭದ್ರವಾಗಿ ಮುಚ್ಚಿ, ಕರುಳನ್ನು ಕಿತ್ತು ಬಾಯಿಗೆ ತರುವ ನಾತದಲ್ಲಿ ಮೂಗು ಮುಚ್ಚಿಕೊಂಡು ಮಲಗಿದರು, ನಿದ್ದೆ ಬರಲಿಲ್ಲ. ಹಸಿವಿನಲ್ಲಿ, ಭೀತಿಯಲ್ಲಿ ತಣ್ಣನೆಯ ನೆಲದ ಮೇಲೆ ಹೊರಳಿದರು. ಇನ್ನೊಂದು ಲೋಕದಿಂದೆಂಬಂತೆ ರಾತ್ರೋ ರಾತ್ರಿ ಹೆಜ್ಜೆಗಳ ಸಪ್ಪಳ, ಗಾಡಿಯ ಗಾಲಿಯ ಶಬ್ದ, ಲಕ್ಷ್ಮೀದೇವಮ್ಮನ ಈಳಿಡುವ ನಾಯಿಯ ಹಾಗಿನ ದಾರುಣವಾದ ಕೂಗು, ತೇಗು-ಪ್ರಾಣ ಕಂಪಿಸಿದಂತೆ, ಅಗ್ರಹಾರ ನಿರ್ಜನ ಅರಣ್ಯವಾದಂತೆ, ಕಾಯುವ ದೆವ ಕೆಬಿಟ್ಟ ಹಾಗೆ ಎಂದೆಲ್ಲ ಅನ್ನಿಸಿ ಮನೆಮನೆಯಲ್ಲೂ ಮಕ್ಕಳು, ತಾಯಿ, ತಂದೆಯವರು ಒಂದೊಂದು ಮುದ್ದೆಯಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಕತ್ತಲಲ್ಲಿ ನಡುಗಿದರು. ಕತ್ತಲು ಕಳೆದು ಸೂರ್ಯರಶ್ಮಿ ಸೂರಿನ ತೂತುಗಳಿಂದ ಇಳಿದು, ಕತ್ತಲಿನ ಮನೆಗಳಲ್ಲಿ ಬೆಳಕಿನ ಪುಟ್ಟಪುಟ್ಟ ವೃತ್ತಗಳಾಗಿ ಧೆರ್ಯವನ್ನು ತಂದಮೇಲೆ ಎಲ್ಲರೂ ಮೆತ್ತಗೆ ಎದ್ದು, ಅಗಳಿ ಸರಿಸಿ ಬಾಗಿಲುಗಳಿಂದ ಇಣುಕಿದರು. ಹದ್ದು, ರಣಹದ್ದು. ಮತ್ತೆ ಮನೆಮನೆಯ ಮೇಲೂ ಕಾಗೆಗಳನ್ನು ಅಟ್ಟುತ್ತ ಪಟ್ಟುಹಿಡಿದು ಕೂತ ಹದ್ದು. ಉಸ್ಸೆಂದರು. ಚಪ್ಪಾಳೆ ತಟ್ಟಿದರು. ಏನು ಮಾಡಿದರೂ ಜಗ್ಗದಿದ್ದುದನ್ನು ಕಂಡು ಹತಾಶರಾಗಿ ಶಂಖಗಳನ್ನೂದಿ ಕಂಚಿನ ಗಂಟೆ ಬಾರಿಸಿದರು. ದ್ವಾದಶಿಯ ಹಾಗೆ ಬೆಳಗಿನ ಜಾವ ಮಂಗಳ ಸ್ವರ ಕೇಳಿ ಪ್ರಾಣೇಶಾಚಾರ್ಯ ಹೊರಗೆ ಬಂದು ನೋಡಿ ವಿಹ್ವಲಿತರಾದರು : ತನಗೆ ಪತ್ತೆಯಾಗದ ಗಡಿಬಿಡಿಯಲ್ಲಿ, ಏನು ಮಾಡಲಿ ಏನು ಮಾಡಲಿ ಎಂದು ಬೆರಳುಗಳನ್ನು ಮುರಿಯುತ್ತ ಒಳಗಿನಿಂದ ಹೊರಕ್ಕೆ, ಹೊರಗಿನಿಂದ ಒಳಕ್ಕೆ ಸಂಚರಿಸಿದರು. ಊಟದ ಮನೆಯಲ್ಲಿ ನರಳುತ್ತಿದ್ದ ಹೆಂಡತಿಗೆ ಯಥಾರೀತಿ ಔಷಧಿಯನ್ನು ಕೊಡುವಾಗ ಕೆ ನಡುಗಿ ಔಷಧಿ ಚೆಲ್ಲಿತ್ತು. ಸ್ವಪ್ನದಲ್ಲಿ ರುಯ್ಯನೆ ತಳವಿಲ್ಲದ ಪಾತಾಳಕ್ಕೆ ಕಂತುತ್ತಿದ್ದೇನೆ ಎನ್ನುವ ಅನುಭವವಾದಾಗ ಸರಕ್ಕನೆ ನಿದ್ದೆಯಲ್ಲಿ ಕಾಲುಗಳನ್ನು ಮೇಲಕ್ಕೆಳೆದುಕೊಂಡು ಮಡಚಿಕೊಳ್ಳುವಂತಹ ಅನುಭವವಾಯಿತು. ತನ್ನ ಕರ್ತವ್ಯದ, ಗೃಹಸ್ಥಧರ್ಮದ, ಆತ್ಮತ್ಯಾಗದ ಸಂಕೇತವಾಗಿದ್ದ ಜರ್ಜರಳಾದ ಹೆಂಡತಿಯ ಗುಳಿಬಿದ್ದ ಕಣ್ಣುಗಳ ದೃಷ್ಟಿ, ದಿಕ್ಕಿಲ್ಲದ ನೋಟವನ್ನು, ಅವಳ ತುಟಿಗೆ ಮದ್ದನ್ನು ಹಿಡಿದಾಗ ಕಂಡು ಕಾಲು ಶತಮಾನದ ರೋಗಿ-ವೆದ್ಯಬಾಂಧವ್ಯದ ಪಶ್ಚಾತ್ತಾಪದ ಸವೆದ ಹಾದಿಯ ಕೊನೆಯಲ್ಲೊಂದು ಪಾತಾಳ ಕಂಡಂತಾಯಿತು. ಹೇಸಿಗೆಯಲ್ಲಿ ಕಂಪಿಸಿದರು. ಮೂಗಿಗಡರಿದ್ದ ದುರ್ನಾತವೆಲ್ಲ ಈ ಮೂಲದಿಂದಲೇ ಬರುತ್ತಿದೆಯೇನೋ ಎಂದು ಭ್ರಮಿಸಿದರು. ಅವಚಿಕೊಂಡಿದ್ದ ತಾಯಿಯ ಹೊಟ್ಟೆಯಿಂದ ಟೊಂಗೆಯಿಂದ ಟೊಂಗೆಗೆ ಹಾರುವಾಗ ಕೆ ತಪ್ಪಿದ ಮಂಗನ ಮರಿಯಂತೆ- ತಾನು ಇಷ್ಟರವರೆಗೆ ಅವಚಿಕೊಂಡಿದ್ದ ಸಂಸ್ಕಾರ ಕರ್ಮಗಳಿಂದ ಕಳಚಿಬಿದ್ದೆ ಎನ್ನಿಸಿತು. ನಿರ್ಜೀವಿಯಾಗಿ, ದೆನ್ಯದ ಭಿಕ್ಷುಕಿಯಾಗಿ ಅಲ್ಲಿ ಹಾಸಿಗೆ ಹಿಡಿದು ಮಲಗಿದ್ದ ಹೆಂಡತಿಯನ್ನು ರಕ್ಷಿಸುವುದಕ್ಕೆಂದು ಧರ್ಮವನ್ನು ನಾನಾಗಿ ಅವಚಿಕೊಂಡೆನೋ ಅಥವಾ ಸಂಸ್ಕಾರದಿಂದ ಕರ್ಮದಿಂದ ಬಂದ ಧರ್ಮ ಕೆಹಿಡಿದು ನನ್ನನ್ನು ಈ ದಾರಿಯಲ್ಲಿ ನಡೆಸಿತೋ ಎಂದು ಅನುಮಾನವಾಯಿತು.ಇವಳನ್ನು ಮದುವೆಯಾದಾಗ ನನಗೆ ಹದಿನಾರು ವರ್ಷ. ಅವಳಿಗೆ ಹನ್ನೆರಡು ವರ್ಷ. ಸನ್ಯಾಸಿಯಾಗಬೇಕು. ಇಲ್ಲವೆ ತ್ಯಾಗದ ಬಾಳನ್ನು ನಡೆಸಬೇಕೆಂಬ ಹುಳಿ ಛಲದ ಬಾಲಕ ಬೇಕೆಂದೇ ಹುಟ್ಟಿನಿಂದ ರೋಗಿಯಾಗಿದ್ದ ಅವಳನ್ನು ಮದುವೆಯಾದೆ. ಕೃತಜ್ಞರಾದ ಮಾವನ ಮನೆಯಲ್ಲೆ ಅವಳನ್ನು ಬಿಟ್ಟು, ಕಾಶಿಗೆ ಹೋಗಿ ವೇದಾಂತಶಿರೋಮಣಿಯಾಗಿ ಹಿಂದಕ್ಕೆ ಬಂದೆ. ನಿಷ್ಕಾಮಕರ್ಮದ ಜೀವನಾನ್ನ ನಡೆಸಲಿಕ್ಕೆ ತನಗೆ ತಾಕತ್ತುಂಟೋ ಇಲ್ಲವೋ ಎಂದು ಪರೀಕ್ಷಿಸಲಿಕ್ಕೆಂದು ಭಗವಂತ ಇಲ್ಲಿ ಇವಳನ್ನು ರೋಗಿಯಾಗಿ ಮಾಡಿ ನನ್ನ ಕೆಯಲ್ಲಿಟ್ಟಿದ್ದಾನೆಂದು ತಿಳಿದು ಹರ್ಷದಿಂದ ಅವಳ ಸೇವೆಯಲ್ಲಿ ತೊಡಗಿದೆ. ತಾನೇ ಅಡಿಗೆ ಮಾಡಿ, ಅವಳಿಗೆ ರವೆ ಗಂಜಿ ಮಾಡಿ ಕುಡಿಸಿ, ದೇವರ ಪೂಜೆ ಇತ್ಯಾದಿಗಳನ್ನು ಸಾಂಗವಾಗಿ ನಡೆಸಿ, ನಿತ್ಯ ಸಾಯಂಕಾಲ ರಾಮಾಯಣ, ಭಾರತ-ಭಾಗವತಾದಿಗಳನ್ನು ಬ್ರಾಹ್ಮಣರಿಗೆ ಓದಿ ವಿವರಿಸಿ ತನ್ನ ತಪಸ್ಸನ್ನು ಜಿಪುಣನಂತೆ ಕೂಡಿಸುತ್ತ ಬಂದೆ. ಈ ತಿಂಗಳು ಲಕ್ಷ ಗಾಯತ್ರಿ, ಮುಂದಿನ ತಿಂಗಳು ಇನ್ನೊಂದು ಲಕ್ಷ ಗಾಯತ್ರಿ, ಏಕಾದಶಿ ಇನ್ನೆರಡು ಲಕ್ಷ-ಕೋಟಿಕೋಟಿ ಹೀಗೆ ತುಳಸಿಮಣಿಸರದಲ್ಲಿ ಮಣಿಮಣಿಗೆ ತಪಸ್ಸಿನ ಲೆಖ್ಖ ಮಾಡಿದೆ. ಒಬ್ಬ ಸ್ಮಾರ್ತ ಪಂಡಿತ ಒಮ್ಮೆ ಬಂದು ವಾದಿಸಿದ್ದ : ಸಾತ್ವಿಕರಿಗೆ ಮಾತ್ರ ಮೋಕ್ಷಪ್ರಾಪ್ತಿ ಎನ್ನುವ ಭೇದಭಾವದ ನಿಮ್ಮ ಮತ ನಿರಾಶಾವಾದವಲ್ಲವೆ? ಅದಕ್ಕೆ ಆಚಾರ್ಯರು ತರ್ಕಮಾಡಿದ್ದರು : ನಿರಾಶಾ ಎಂದರೆ ಏನು? ಯಾವುದಕ್ಕಾದರೂ ಆಸೆ ಪಟ್ಟು ಅದು ಸಿಗದೇ ಹೋಗೋದು ತಾನೆ? ತಾಮಸ ಪ್ರವೃತ್ತಿಗೆ ಮೋಕ್ಷದ ಆಸೆಯೇ ಇಲ್ಲದ್ದರಿಂದ ಅವನಿಗೆ ಮೋಕ್ಷಪ್ರಾಪ್ತಿಯಾಗದೇ ಹೋಗೋದು ನಿರಾಶಾ ಅಲ್ಲ. ನಾನು ಸಾತ್ವಿಕ ಆಗುತ್ತೇನೆ ಎಂಬೋದು ಸುಳ್ಳು; ನಾನು ಸಾತ್ವಿಕ ಆಗಿದ್ದೇನೆ ಎಂಬೋದು ಮಾತ್ರ ನಿಜ. ಪರಮಾತ್ಮನ ದಯಾಕ್ಕೆ ಹಲುಬೋರು ಈ ಸಾತ್ವಿಕ ಸ್ವಭಾವದವರು ಮಾತ್ರ.

ಹಾಗೇ ತಾನು ಸಾತ್ವಿಕನಾಗಿ ಹುಟ್ಟಿದ್ದೇನೆ, ಈ ರೋಗಗ್ರಸ್ತ ಹೆಂಡತಿ ತನ್ನ ಸಾತ್ವಿಕತೆಯ ಯಜ್ಞಭೂಮಿ ಎಂದು ತಿಳಿದು ಅವರು ಮೋಕ್ಷದ ಕೃಷಿಯಲ್ಲಿ ತೊಡಗಿದ್ದರು. ಹಾಗೇ ನಾರಣಪ್ಪ ತಮ್ಮ ಸಾತ್ವಿಕತೆಗೊಂದು ಪರೀಕ್ಷೆ ಎಂದು ತಿಳಿದಿದ್ದರು. ಈಗ ಅವರಿಗೆ ತನ್ನ ಸರ್ವಸ್ವ ನಂಬಿಕೆಗಳು ಬುಡಮೇಲಾಗಿ ಹದಿನಾರನೇ ವಯಸ್ಸಿನಲ್ಲಿ ತಾನು ಹೊರಟಲ್ಲಿಗೇ ಹಿಂದಕ್ಕೆ ಬಂದಂತೆ ಅನ್ನಿಸುತ್ತಿದೆ. ಎಲ್ಲಿ ದಾರಿ?
ಪಾತಾಳದ ಅಂಚಿಗೆ ಒಯ್ಯದಂತಹ ದಾರಿ ಎಲ್ಲಿ? ಕಸಿವಿಸಿಯಾಗಿ ಹೆಂಡತಿಯ ಪಕ್ಕದಲ್ಲಿ ಕೂತು ಸ್ನಾನ ಮಾಡಿಸಲೆ ಎಂದು ನಿತ್ಯದಂತೆ ಎತ್ತಿ, ಶಂಖ ಜಾಗಟೆಗಳ ಅಪದ್ಧ ಕ್ರಿಯೆಯಿಂದ ಬಾಧಿತರಾಗಿ, ಬಚ್ಚಲಿಗೆ ತೆಗೆದುಕೊಂಡು ಹೋಗಿ ನೀರನ್ನು ಹೊಯ್ಯುವಾಗ ಅವಳ ಬತ್ತಿದ ಎದೆ, ಗುಜ್ಜು-ಮೂಗು, ಮೋಟು-ಜಡೆ ಕಂಡು ಅಸಹ್ಯವಾಯಿತು. ಹದ್ದುಗಳನ್ನು ಅಟ್ಟಲೆಂದು ಶಂಖಜಾಗಟೆಗಳ ಮಂಗಳ ಶಬ್ದ ಮಾಡುತ್ತಿದ್ದ ಬ್ರಾಹ್ಮಣರಿಗೆ ’ನಿಲ್ಲಿಸಿ ನಿಲ್ಲಿಸಿ’ ಎಂದು ಕಿರುಚಿಬಿಡಬೇಕೆನ್ನಿಸಿತು. ಪ್ರಥಮ ಬಾರಿಗೆ ತನ್ನ ಕಣ್ಣಿಗೆ ಸುಂದರ-ಅಸುಂದರದ ಕಲ್ಪನೆ ಬರಹತ್ತಿದೆ. ಈ ತನಕ ಕಾವ್ಯದಲ್ಲಿ ಓದಿದ್ದ ಸೌಂದರ್ಯವನ್ನ ಅವರು ಜೀವನದಲ್ಲಿ ಅಪೇಕ್ಷಿಸಿದ್ದಿಲ್ಲ. ಸುಗಂಧವೆಲ್ಲ ದೇವರ ಮುಡಿಯನ್ನು ಸೇರುವ ಹೂವಿನದ್ದು, ಸ್ತೀಸೌಂದರ್ಯವೆಲ್ಲ ನಾರಾಯಣನ ಪಾದಸೇವೆಯನ್ನು ಮಾಡುವ ಲಕ್ಷ್ಮಿಯದ್ದು, ರತಿಯೆಲ್ಲ ವಸ್ತಾಪಹರಣದ ಕೃಷ್ಣನದ್ದು ಎಂದುಕೊಂಡಿದ್ದರು. ಅವೆಲ್ಲದರಲ್ಲಿ ಒಂದು ಪಾಲು ಈಗ ತನಗೂ ಬೇಕೆನ್ನಿಸುತ್ತಿದೆ. ಹೆಂಡತಿಯ ಮೆಯನ್ನು ಒರೆಸಿ, ಹಾಸಿಗೆ ಮಾಡಿ ಮಲಗಿಸಿ ಮತ್ತೆ ಚಿಟ್ಟೆಗೆ ಬಂದರು. ಶಂಖ ಜಾಗಟೆಗಳ ಶಬ್ದ ಗಕ್ಕನೆ ನಿಂತು ಕಿವಿ ಗೊಯ್ಯೆಂದು ಮೌನದ ಮಡುವಿಗೆ ಇಳಿದಂತಾಯಿತು. ಇಲ್ಲಿಗೆ ಯಾಕೆ ಬಂದೆ? ಚಂದ್ರಿ ಇಲ್ಲಿದ್ದಾಳೋ ಎಂದು ಬಯಸಿ ಬಂದೆನೆ? ಆದರೆ ಚಂದ್ರಿ ಅಲ್ಲಿ ಇರಲಿಲ್ಲ. ಹಾಸಿಗೆ ಹಿಡಿದವಳು, ಕಾಡಿನಲ್ಲಿ ಗಕ್ಕನೆ ನನ್ನ ಕೆಯನ್ನು ಮೊಲೆಗೊತ್ತಿಕೊಂಡವಳು-ಇಬ್ಬರೂ ನನ್ನನ್ನು ಬಿಟ್ಟುಹೋದರೆ? ಪ್ರಥಮ ಬಾರಿಗೆ, ಅತಂತ್ರ ಅನಾಥ ಭಾವ ಅವರ ಅಂತರಂಗವನ್ನು ಹೊಕ್ಕಿತು.
*****
ಮುಂದುವರೆಯುವುದು

ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.