ಗೃಹಭಂಗ – ೮

– ೪ –

ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಕುರುಬರಹಳ್ಳಿಯಿಂದ ಎರಡು ಗಾಡಿ ಸೋಗೆಯ ಜೊತೆಗೆ ಇಬ್ಬರು ಗಂಡಾಳುಗಳು ಬಂದರು. ಅವರು ಈ ಬಿಟ್ಟ ಊರಿನೊಳಗೆ ಬರಲಿಲ್ಲ. ರಾಮಸಂದ್ರದ ಕುಳವಾಡಿ ಶ್ಯಾನುಭೋಗರ ಮನೆಯ ಮುಂದಿದ್ದ ಬಿದಿರುಗಳನ್ನು ಗಾಡಿಗೆ ತುಂಬಿ ತಂದ. ಅಮ್ಮನ ಗುಡಿಯ ಹಿಂಭಾಗದ ತೋಪಿನ ಹತ್ತಿರದ ಬಯಲಿನಲ್ಲಿ ಮಧ್ಯಾಹ್ನದ ಹೊತ್ತಿಗೆ ಒಂದು ಶೆಡ್ಡು ತಯಾರಾಯಿತು. ಮೇಷ್ಟರೇ ಏರಿ ಮೇಲಿನ ಗುಡಿಗೆ ಬಂದು ಇವರ ಮನೆಯ ಬೀಗದ ಕೈ ಒಯ್ದು ಪಾತ್ರೆ ಪರಟಿ ದಿನಸಿ ಬಟ್ಟೆ ಬರೆ ಮೊದಲಾಗಿ ತಮಗೆ ತಿಳಿದ ಸಮಾನುಗಳನ್ನು ಗಾಡಿಗೆ ತುಂಬಿ ಕಳಿಸಿದರು. ಆ ದಿನ ಸಂಜೆಯ ಒಳಗೆ ಊರು ಪೂರ್ತಿಯಾಗಿ ಖಾಲಿಯಾಗುತ್ತಿತ್ತು.

ವಿಶ್ವನಿಗೆ ಜ್ವರ ಒಂದೇಸಮನಾಗಿತ್ತು. ಆದರೆ ಗೆಡ್ಡೆಗಳು ಕಾಣಿಸಿಕೊಳ್ಳಲಿಲ್ಲ. ಪಾರ್ವತಿ ರಾಮಣ್ಣರಿಗೆ, ಜ್ವರ ಬಂದ ಇಪ್ಪತ್ತುನಾಲ್ಕು ಗಂಟೆಯೊಳಗೇ ಗೆಡ್ಡೆ ಹುಟ್ಟಿತ್ತು. ವಿಶ್ವನಿಗೆ ಜ್ವರ ಬಂದು ಎರಡು ದಿನವಾಗಿದೆ. ಆದರೂ ಗೆಡ್ಡೆ ಕಂಡಿಲ್ಲ. ಅಯ್ಯನವರು ಕುಡಿಸುತ್ತಿರುವ ಔಷಧಿಯ ಪರಿಣಾಮವಿರಬಹುದು. ಅಥವಾ ಜ್ವರ ಕಂಡಮೇಲೆ ನಿಧಾನಮಾಡದೆ ಹೊಸ ಸಾವು ಇಷ್ಟಕ್ಕೇ ನಿಲ್ಲುತ್ತದೆಂದು ಹೇಳಬಲ್ಲವರಿಲ್ಲ. ಅಯ್ಯನವರು ಹೇಳುತ್ತಿದ್ದರು: ‘ನಂಜವ್ವಾ, ಇದು ಈಸ್ವರದೇವರ ಗುಡಿ. ಇದರೊಳಕ್ಕೆ ಮಾರಿ ಹ್ಯಂಗೆ ಬಂದಾಳು? ಅದ್ಕೇ ವಿಶ್ವಣ್ಣಂಗೆ ಗೆಡ್ಡೆ ಬಂದಿಲ್ಲ. ನೀನು ಹ್ಯದರ್‌ಬ್ಯಾಡ.’

ನಂಜಮ್ಮ ಒಂದು ಮಾತೂ ಆಡಲಿಲ್ಲ. ಕಲ್ಲುತುಂಡಿನಂತೆ ಸುಮ್ಮನೆ ದೂರದಲ್ಲಿ ಕೂತು ವಿಶ್ವನನ್ನೇ ನೋಡುತ್ತಾ, ಬೆಳಕು ಹರಿಯುವತನಕ ಕಣ್ಣು ಮುಚ್ಚದೆ ಕುಳಿತಿದ್ದಳು. ಬೆಳಗಾಗುವ ವೇಳೆಗೆ ಅಯ್ಯನವರು ಆಯಾಸದಿಂದ ಬಳಲಿಹೋಗಿದ್ದರು. ಇಡೀ ನೆನ್ನೆ ಮತ್ತು ಮೊನ್ನೆ ಎಲ್ಲ, ಅವರ ಹೊಟ್ಟೆಗೆ ಏನೂ ಬಿದ್ದಿರಲಿಲ್ಲ. ಮೊನ್ನೆ ರಾತ್ರಿ ಗಾಡಿಯ ಪ್ರಯಾಣದಲ್ಲಿ ಕಳೆದ ಸ್ವಲ್ಪ ನಿದ್ರೆ ಬಿಟ್ಟರೆ ಅವರು ಮತ್ತೆ ಕಣ್ಣು ಮುಚ್ಚಿರಲಿಲ್ಲ. ಅವರ ಸರಿಯಾದ ವಯಸ್ಸು ಈ ಊರಿನಲ್ಲಿ ಯಾರಿಗೂ ಗೊತಿಲ್ಲ. ಆದರೂ ಎಪ್ಪತ್ತೈದನ್ನು ಮೀರಿರುವುದರಲ್ಲಿ ಸಂದೇಹವಿಲ್ಲ. ಶರೀರ ಎರಡು ದಿನದಿಂದ ಒಂದೇಸಮನೆ ದುಡಿದಿತ್ತು. ಕಂಬವನ್ನೊರಗಿ ಕುಳಿತಿದ್ದ ಅವರು, ತಮಗೇ ತಿಳಿಯದಂತೆ ನೆಲಕ್ಕೆ ಉರುಟಿಕೊಂಡರು. ಹಾಗೆಯೇ ನಿದ್ದೆ ಹೋದರು. ನರಸಿ ಮಾತನಾಡಿದಳು: ‘ಅವ್ವಾರೇ, ನಂಗೆ ದೇವ್ರು ಮಕ್ಳು ಕೊಡ್ಳಿಲ್ಲ. ಮಕ್ಳಿಲ್ಲ ಅಂತ ಚಿಂತೆ ಮಾಡ್ತಿದ್ದೆ. ಮಕ್ಳಾದ್ರೂ ಚಿಂತೆಯಾಯ್ತದೆ.’

ನಂಜಮ್ಮ ಸುಮ್ಮನೆ ಕೂತಿದ್ದಳು. ಅಷ್ಟರಲ್ಲಿ ಮೇಷ್ಟರು ಬಂದು, ಅಯ್ಯನವರ ಹತ್ತಿರವೇ ಇದ್ದ ನಂಜಮ್ಮನ ಮನೆಯ ಬೀಗದ ಕೈಯನ್ನು ಒಯ್ದರು. ನಂಜಮ್ಮ ಒಂದೇ ಸಮನೆ ಕೂತಿದ್ದಳು. ಮತ್ತೆ ಮಾತಾಡಲು ನರಸಿಗೂ ತಿಳಿಯಲಿಲ್ಲ. ಆದರೆ ಅವಳು ತಪ್ಪದೆ ಮಗುವಿಗೆ ಔಷಧಿ ಹಾಕುತ್ತಿದ್ದಳು. ಅದರ ತಲೆ ಅವಳ ತೊಡೆಯ ಮೇಲೆಯೇ ಇತ್ತು. ಸ್ವಲ್ಪ ಹೊತ್ತಿನಲ್ಲಿ ಮೇಷ್ಟರ ಹೆಂಡತಿ ಬಂದರು. ಅವರು ಕಣ್ಣಿನಲ್ಲಿ ನೀರು ಹಾಕಿಕೊಂಡರೂ ನಂಜಮ್ಮ ಅಳಲಿಲ್ಲ.

‘ಏಳಿ ನಮ್ಮ ಶೆಡ್ಡಿಗೆ ಹೋಗಾಣ. ಮಡಿ ಉಟ್ಕಳಿ. ಒಂದಿಷ್ಟು ಉಪ್ಪಿಟ್ಟು ಕೆದಕಿದೀನಿ. ನೀವು ನೆನ್ನೆ ಎಲ್ಲ ಏನೂ ತಿಂದಿಲ್ಲ.’
ತಾನು ಬರುವುದಿಲ್ಲವೆಂದು ನಂಜಮ್ಮ ತಲೆಯಾಡಿಸಿದಳು. ಮೇಷ್ಟರ ಹೆಂಡತಿ ಸುಮ್ಮನೆ ಹಿಂತಿರುಗಿ ಹೋಗಿ, ತಾವೇ ಒಂದು ಚರುಕಿನಲ್ಲಿ ಉಪ್ಪಿಟ್ಟು ತಂದರು. ನಂಜಮ್ಮ ಮುಖ ತೊಳೆಯಲೂ ಸಹ ಮೆಲೆ ಏಳಲಿಲ್ಲ. ನರಸಿ ಕೇಳಿದಳು: ‘ಚಿನ್ನಯ್ಯಾರು ಎಲ್ಲಿ?’
‘ರಾತ್ರಿ ಮಶಾಣದಿಂದ ಬಂದಮೇಲೆ ನಮ್ಮ ಶೆಡ್ಡಿನ ಹೊರಗೆ ಗೋಣೀಚೀಲ ಹಾಕ್ಕಂಡು ಮಲೀಕಂಡ್ರು. ಈಗ ತಾನೇ ಅವರಿಗೆ ಉಪ್ಪಿಟ್ಟು ಕೊಟ್ಟು ಬಂದೆ.’
‘ಮಗ ಇಲ್ಲೈತೆ ಅಂತ ಅವ್ರಿಗೆ ಗೊತ್ತಿಲ್ವುರಾ?’
‘ಗೊತ್ತಿದೆ. ನಮ್ಮನೆಯೋರೇ ಹೇಳಿದ್ರು. ಈಗ ಬರ್‌ಭೌದು.’
‘ಅಮ್ಮಾರೇ, ಈ ನರಸಿ ಕೆಟ್ಟ ಮಾತಡ್ತಾಳೆ ಅನ್‌ಬ್ಯಾಡ್ರಿ. ನನ್ನಂತ ಸೂಳೆಗೆ ಮಕ್ಕಳಾದ್ರೆ ಅವುಕ್ಕೆ ಕಷ್ಟ ಸುಖ ಅಂದ್ರೆ ಯಾವನೂ ಬರಾಕಿಲ್ಲ. ಅವು ಯಾರಿಗೆ ಉಟ್ಟುದ್ವು ಅಂತ ಯಾವನ್ಗೂ ಗೊತ್ತಿಲ್‌ದ ಮ್ಯಾಲೆ ಯಾಕೆ ಬತ್ತಾನೆ? ಈ ಚಿನ್ನಯ್ಯ ತನ್ನ ಹ್ವಟ್ಟೇಲಿ ಉಟ್ಟಿದ ಮಗಾ ನೋಡಾಕೆ ಬರ್ದೆ ಉಪ್ಪಿಟ್ಟು ತಿಂತವ್ನಾ?’

ಮಾತನಾಡಬೇಡವೆಂದು ನಂಜಮ್ಮ ನರಸಿಗೆ ಕೈಸನ್ನೆ ಮಾಡಿದಳು. ಮೇಷ್ಟರ ಹೆಂಡತಿ ನಂಜಮ್ಮನಿಗೆ ಹೇಳಿದರು: ‘ನೋಡಿ, ಈ ಗ್ರಾಮದೇವತೆ ಮಾರಮ್ಮ, ಸುಂಕ್ಲಮ್ಮ, ಇವೆಲ್ಲ ಒಳ್ಳೇವಲ್ಲ. ಇವು ಹಾಳು ಮಾಡ್ತವೆಯೇ ಹೊರತು ಕಾಪಾಡೂ ದೇವರಲ್ಲ. ಎಂಥ ಕಷ್ಟವಾದ್ರೂ ಶೃಂಗೇರಿ ಶಾರದಮ್ನೋರು ಪರಿಹಾರ ಮಾಡ್ತಾರೆ. ವಿಶ್ವನಿಗೆ ಹುಶಾರಾದ್ರೆ ಈ ಸಲ ನವರಾತ್ರೀಗೆ ನಿನ್ನ ಸನ್ನಿಧಿಗೆ ಬಂದು ಕುಂಕುಮಾರ್ಚನೆ ಮಾಡುಸ್ತೀನಿ ಅಂತ ಹರಕೆ ಕಟ್ಕಳಿ. ಖಂಡಿತಾ ಹುಶಾರಾಗುತ್ತೆ. ನಿಮಗೆ ಸೂತಕ. ನೀವೇನೂ ಮಾಡ್‌ಬ್ಯಾಡಿ. ನಾನು ಮನೆಗೆ ಹೋಗಿ ಮಡಿಸೀರೆ ಉಟ್ಕಂಡು ನಿಮ್ಮ ಹೆಸರಿನಲ್ಲಿ ನಾಲ್ಕಾಣೆ ಪಾವ್‌ಲಿ ಕಟ್ಟಿ ಇಡ್ತೀನಿ.’
ಬೇಡವೆಂದು ನಂಜಮ್ಮ ತಲೆ ಅಲ್ಲಾಡಿಸಿದಳು.
‘ಅದ್ಯಾಕೆ ಹಾಗಂತೀರಿ?’
‘ಯಾವ ದೇವರೂ ಏನೂ ಮಾಡುಲ್ಲ. ದೇವರು ಗೀವರೆಲ್ಲ ಸುಳ್ಳು. ಆಯುಸ್ಸಿದ್ರೆ ಬದುಕುತ್ತೆ. ಇಲ್‌ದಿದ್ರೆ ಇಲ್ಲ.
ನರಸಿ ಎಂದಳು: ‘ನಂಜವ್ವಾರೇ, ಕ್ವಾಪದಲ್ಲಿ ಹಂಗನ್‌ಬ್ಯಾಡಿ. ತಪ್ಪಾಯ್ತು ಅನ್ನಿ. ಹರಕೆ ಕಟ್ಸಿ.’

‘ತಪ್ಪೂ ಇಲ್ಲ ಗಿಪ್ಪೂ ಇಲ್ಲ. ಯಾವ ದೇವರ ಹರಕೆಯೂ ಬ್ಯಾಡ’-ನಂಜಮ್ಮ ಖಂಡಿತವಾಗಿ ಅಂದುಬಿಟ್ಟಳು. ಮತ್ತೊಮ್ಮೆ ಅವರಿಬ್ಬರೂ ಬಲವಂತ ಮಾಡಿದಮೇಲೆ-‘ನಿಮಗೆ ತಿಳಿದ ಹಾಗೆ ಮಾಡಿ’ ಎಂದಳು. ಮೇಷ್ಟರ ಹೆಂಡತಿ ಹೊರಟುಹೋದರು. ಅಷ್ಟರಲ್ಲಿ ಗುಡಿಯ ಹತ್ತಿರಕ್ಕೆ ಒಬ್ಬೊಬ್ಬರಾಗಿ ಎಷ್ಟೋ ಜನ ಊರಿನವರು ಬರತೊಡಗಿದರು. ಎಲ್ಲರಿಗೂ ಅವರವರ ಶೆಡ್ಡನ್ನು ವ್ಯವಸ್ಥೆಗೊಳಿಸಿಕೊಳ್ಳುವ ಕೆಲಸ. ಆದರೆ ನಂಜಮ್ಮನಿಗೆ ಸಮಾಧಾನ ಹೇಳಬಂದವರು ಪೇಚಾಡಿದರು. ಪಾರ್ವತಿಯ ರೂಪ ಗುಣಗಳನ್ನು ಹೊಗಳಿದರು. ರಾಮಣ್ಣನ ಬುದ್ಧಿಶಕ್ತಿಯನ್ನು ಕೊಂಡಾಡಿದರು. ಬದುಕಿದ್ದರೆ ಮುಂದೆ ಅಮಲ್ದಾರಿ ಮಾಡುವ ಬುದ್ಧಿ ಇದ್ದ ಹುಡುಗ, ಇಂಥ ಬುದ್ಧಿವಂತರು ಈ ಪ್ರಪಂಚದಲ್ಲಿರಬ್ಯಾಡ್‌ದು, ತನ್ನ ತಾವ್‌ಲೇ ಇರ್‌ಬೇಕು ಅಂತ ಸಿವ ಎಳ್ಕಂಡ್‌ಬುಟ್ಟ. ಅಸೀ ಮೈಲಿ ಪಾರ್ವತಮ್ಮುನ್ನ ಹ್ವಸ ಸೀರೆ ಉಡಿಸಿ ಕರ್ಕಂಡ್ ಹ್ವಾಗ್‌ಬ್ಯಾಡ್‌ದಾಗಿತ್ತು. ಅಮ್ಮನ ಕಣ್ಣು ಮದ್ಲು ಆ ಉಡುಗೀಮ್ಯಾಲೇ ಬಿದ್ದುಬಿಡ್ತು-ಎಂದು ಎಲ್ಲರೂ ತಮಗೆ ತಿಳಿದಂತೆ ಮತನಾಡಿದರು. ಊರಿನಲ್ಲಿ ಇನ್ನೂ ಎಂಟು ಜನಕ್ಕೆ ಪ್ಲೇಗು ಆಗಿದೆಯಂತೆ. ನೆನ್ನೆ ರಾತ್ರಿಯೇ ನಾಲ್ಕು ಜನ, ಈ ದಿನ ಬೆಳಿಗ್ಗೆ ಇಬ್ಬರು ಸತ್ತರಂತೆ. ಊರ ಹೊರಗಿನ ದೇವಸ್ಥಾನದಲ್ಲಿದ್ದ ನಂಜಮ್ಮನಿಗಾಗಲಿ ನರಸಿಗಾಗಲಿ ಇದು ತಿಳಿದಿರಲಿಲ್ಲ. ಬಂದವರೆಲ್ಲ ಒಬ್ಬೊಬ್ಬರಾಗಿ ಹೋದರು. ಸರ್ವಕ್ಕ ಒಬ್ಬಳೇ ನಂಜಮ್ಮನ ಜೊತೆಗೆ ಉಳಿದಳು.

ನಂಜಮ್ಮ, ಸರ್ವಕ್ಕ, ಕಷ್ಟ ಸುಖಗಳಲ್ಲಿ ಒಬ್ಬರಿಗೊಬ್ಬರು ಆಗಿದ್ದ ಗೆಳತಿಯರು. ಸರ್ವಕ್ಕನೂ ವಯಸ್ಸಿಗೆಬಂದ ಮಗಳನ್ನು ಕಳೆದುಕೊಂಡವಳು. ತನ್ನ ಮಗಳ ಸಾವಿನ ಸಂಗಡವೇ ಅವಳಿಗೆ ನರಸಿಯ ನೆನಪಾಯಿತು. ಅದೇ ನರಸಿ ಈಗ ಇಲ್ಲಿ ಕೂತಿದಾಳೆ. ನಂಜಮ್ಮನವರ ಮಗ ಅವಳ ತೊಡೆಯ ಮೇಲಿದೆ. ಅದು ತನ್ನ ಮಗುವೇ ಅಲ್ಲವೇನೋ ಎಂಬಂತೆ ನಂಜಮ್ಮನವರು ದೂರ ಕೂತಿದ್ದಾರೆ. ನರಸಿ ಎಂದರೆ ಸರ್ವಕ್ಕನ ಮೈಕೈ ಎಲ್ಲ ಉರಿಯುತ್ತದೆ. ಉಳಿದ ಸಮಯದಲ್ಲಾಗಿದ್ದರೆ ಸರ್ವಕ್ಕ ಅವಳಿಗೆ ಕೆರದಲ್ಲಿ ಹೊಡೆಯುತ್ತಿದ್ದಳು. ಆದರೆ ಈಗ ಏನೂ ಅರ್ಥವಾಗದೆ ಸುಮ್ಮನೆ ಕುಳಿತುಬಿಟ್ಟಳು. ನಂಜಮ್ಮನನ್ನು ಬಿಟ್ಟು ಹೋಗಲು ಅವಳಿಗೆ ಮನಸ್ಸಿಲ್ಲ. ಏನಾದರೂ ಮಾತನಾಡಲೂ ತೋಚುತ್ತಿಲ್ಲ.

ಅಷ್ಟರಲ್ಲಿ ಮಗು ಗಟ್ಟಿಯಾಗಿ ಉಸಿರಾಡಲು ಪ್ರಾರಂಭಿಸಿತು. ಜ್ವರ ತುಂಬ ರೇಗಿದಂತೆ ಆಯಿತು. ‘ಅವ್ವಾರೇ, ಜ್ವರಕ್ಕೆ ನನ್ನ ತ್ವಡೆ ಎಲ್ಲಾ ಸುಡ್ತಾವೆ. ಮಗ ಗಟ್ಟಿಯಾಗಿ ಉಸುರು ಬಿಡ್ತೈತೆ. ನಂಗ್ ಹ್ಯದ್‌ರಿಕೆಯಾಯ್ತೈತೆ. ನೋಡಿ’-ನರಸಿ ಎಂದಳು.
‘ನಾನು ಕೈಯಿಂದ ಮುಟ್ಟುಲ್ಲ. ನೀವೇ ನೋಡಿ ಸರ್ವಕ್ಕ’-ನಂಜಮ್ಮ ಬಾಯಿಬಿಟ್ಟಳು.
ಸರ್ವಕ್ಕ ಹತ್ತಿರ ಹೋಗಿ ಮಗುವಿನ ಹೊದಿಕೆಯೊಳಗೆ ಕೈಯಿಟ್ಟು ನೋಡುತ್ತಾಳೆ: ಮೈ ಬೆವರುತ್ತಿತ್ತು. ಅವಳ ಅಂಗೈ ಸ್ಪಷ್ಟವಾಗಿ ಒದ್ದೆಯಾಯಿತು. ಇದರ ಅರ್ಥ ಅವಳಿಗೂ ತಿಳಿಯಲಿಲ್ಲ. ಸಮಾನ್ಯಸಮಯದಲ್ಲಾಗಿದ್ದರೆ ನಂಜಮ್ಮನಿಗೆ ತಿಳಿಯುತ್ತಿತ್ತೇನೋ. ಆದರೆ ಈಗ ಏನೂ ಗೊತ್ತಾಗುತ್ತಿಲ್ಲ. ನರಸಿ ಅಯ್ಯನವರನ್ನು ಕೂಗಿದಳು. ಅವರಿಗೆ ಗಾಢನಿದ್ರೆ. ಸರ್ವಕ್ಕನೇ ಅವರ ಭುಜ ಹಿಡಿದು ಅಲುಗಿಸಿದಮೇಲೆ ಎದ್ದುಕೂತರು. ಒಂದು ನಿಮಿಷ ಕಣ್ಣು ಹೊಸಕಿಕೊಂಡು ಸುತ್ತಮುತ್ತ ನೋಡಿದಮೇಲೆ ಇವರಿಗೆ ಸರ್ವಕ್ಕನ ಮಾತು ಅರ್ಥವಾಯಿತು. ಅವರೂ ಮಗುವಿನ ಎದೆಗೆ ಕೈಯಿಟ್ಟು ನೋಡಿ ಹೇಳಿದರು: ಮೈ ಬೆವರ್‌ತೈತೆ. ಜ್ವರ ಇಳಿಯಾಕೆ ಮುಂಚೆ ಹಿಂಗೇ ಆಗಾದು. ಗೆಡ್ಡೆ ಪಡ್ಡೆ ಬಂದಿಲ್ಲ. ನಂಜವ್ವಾ, ವಿಶ್ವಣ್ಣ ಬಚಾವಾದ, ಬಚಾವಾಯ್ತು ಜೀವ.’

ನಂಜಮ್ಮ ಮೂಕಲಂತೆ ಮಗುವನ್ನು ನೋಡುತ್ತಲೇ ಕುಳಿತಿದ್ದಳು. ‘ಸದ್ಯ ಸಿವ ಕಣ್ ಬಿಟ್ಟು ನೋಡ್ದ’-ಸರ್ವಕ್ಕ ಎಂದಳು. ಮಗು ಹಾಗೆಯೇ ಬೆವರುತ್ತಿತ್ತು. ಸ್ವಲ್ಪ ಹೊತ್ತಿಗೆ ಜ್ವರ ಎಷ್ಟೋ ಕಡಿಮೆಯಾಯಿತು. ಅಷ್ಟರಲ್ಲಿ ರೇವಣ್ಣಶೆಟ್ಟಿ ಅಲ್ಲಿಗೆ ಬಂದ. ನಂಜಮ್ಮ ಇದುವರೆಗೆ ಒಂದು ಸಲವೂ ಅವನ ಕೈಲಿ ಮಾತನಾಡಿರಲಿಲ್ಲ. ಅವನೂ ನಂಜಮ್ಮನನ್ನು ನೇರವಾಗಿ ಮಾತನಾಡಿಸಿರಲಿಲ್ಲ. ಮಗುವಿನ ಮೈ ಬೆವರುತ್ತಿರುವುದನ್ನು ಕೇಳಿದ ಅವನೂ ಮೈ ಮುಟ್ಟಿ ನೋಡಿ, ‘ಬಚಾವಾಯ್ತು’ ಎಂದ. ‘ನಂಜಮ್ನೋರೇ, ಈ ಗ್ರಾಮಕ್ಕೇ ಬುದ್ಧಿ ಹೇಳೂ ತಿಳುವಳಿಕೆ ಇರೋರು ನೀವು. ನಿಮಗೆ ಯಾರು ಏನು ಸಮಾಧಾನ ಹೇಳ್‌ಭೌದು?’-ಎಂದು ತನಗೆ ತಿಳಿದಂತೆ ಮಾತನಾಡಿ ಹೆಂಡತಿಯ ಕಡೆಗೆ ತಿರುಗಿ, ‘ಅಯ್ನೋರಿಗೆ ಎಲ್ಡು ದಿನ್‌ದಿಂದ ಬಿನ್ನವಿಲ್ಲ ಅಂತ ಕಾಣ್ತೈತೆ. ಮನೆಗೆ ಹ್ವಾಗಿ ಮುದ್ದೆ ತ್ವಳಸ್ಕಂಡು ತಂದು ಮಡಗು’ ಎಂದು ಹೇಳಿ ಅವಳನ್ನು ಕರೆದುಕೊಂಡು ತಾನೂ ಮನೆಗೆ ಹೋದ. ಅಯ್ಯನವರು ಬಲವಂತ ಮಾಡಿ ನಂಜಮ್ಮನನ್ನು ಎಬ್ಬಿಸಿ ಮುಖ ತೊಳೆಸಿದರು. ಮೇಷ್ಟರ ಹೆಂಡತಿ ತಂದಿದ್ದ ಉಪ್ಪಿಟ್ಟು ಪಾತ್ರೆಯಲ್ಲೇ ಇತ್ತು. ‘ಇನ್ನು ವಿಶ್ವಣ್ಣನ ನಿಗಾ ನೀನು ತಗಾಬೇಕು. ಕೆಲ್ಸ ಮಾಡಾಕೆ ಸಗುತಿ ಇಲ್ದೆ ಇದ್ರೆ ಹ್ಯಂಗೆ? ನೀನ್ ತಿನ್ನವ್ವ’-ಎಂದರೂ ಅವಳು ಕೇಳಲಿಲ್ಲ. ಕೊನೆಗೆ ಅಯ್ಯನವರು ಗದರಿಸಿಕೊಂಡರು. ನರಸಿ ಬಲವಂತ ಮಾಡಿದಳು. ನಂಜಮ್ಮ ಒಂದು ಪಿಡಚೆ ಉಪ್ಪಿಟ್ಟು ತೆಗೆದು ಬಾಯಿಗಿಟ್ಟುಕೊಂಡು ನುಂಗಲಾರದೆ ಎದ್ದು ಹೋಗಿ ಉಗುಳಿ ಬಂದು ಪಾತ್ರೆಯನ್ನು ಅತ್ತ ಸರಿಸಿದಳು. ಅಯ್ಯನವರು ತಮ್ಮ ಸಾಮಾನಿನ ಮಧ್ಯದ ಒಂದು ಪುಟ್ಟ ಡಬ್ಬಿಯನ್ನು ಹುಡುಕಿ ತೆಗೆದು, ಅದರಲ್ಲಿದ್ದ ಎರಡು ಚಿಟಿಕೆ ಕಪ್ಪು ಬಣ್ಣದ ಪುಡಿಯನ್ನು ಹಿಡಿದು, ‘ಇದನ್ನ ಹೊಟ್ಟೆಗೆ ತಗ’ ಎಂದರು.
‘ಇದೇನು ಅಯ್ನೋರೇ?’
‘ಶಿವನ ಪ್ರಸಾದ. ಕಾಶಿಯಿಂದ ತಂದಿದ್ದೆ. ಉಳ್ದಿತ್ತು. ಇದ ತಗಾ. ನಿನ್ನ ಗ್ರಾಚಾರ ಕಳೀತದೆ. ಮಗು ಹ್ಯಂಗೂ ಬೆವರ್ತಿದೆ. ಜ್ವರ ಇಳ್‌ದಾವೆ.’
ನಂಜಮ್ಮ ಅದನ್ನು ಸುಮ್ಮನೆ ನುಂಗಿದಳು. ಒಂದು ತರಹ ಕಹಿ, ಒಗಚು, ಸಿಹಿಗಳ ಮಿಶ್ರಣವಾಗಿತ್ತು. ಮತ್ತೆ ಕಂಬವನ್ನೊರಗಿ ಮಗುವನ್ನೇ ನೋಡುತ್ತಾ ಕೂತುಕೊಂಡಳು. ಅಷ್ಟರಲ್ಲಿ ಚೆನ್ನಿಗರಾಯರು ಬಂದರು.
‘ಈಟಾತಂಕಾ ಏನ್ಮಾಡ್ತಿದ್ರಿ ಸ್ಯಾನುಬಾಗ್ರೆ?’-ನರಸಿ ಅವರನ್ನು ಕೇಳಿದಳು.
‘ಬರಾಣ ಅಂತ ಹ್ವರ್‌ಟಿದ್ದೆ. ಯಾರ್ಯಾರೋ ಬಂದು ಸಮಾಧಾನ ಹೇಳುಕ್ಕೆ ಅಂತ ನಿಲ್ಲಿಸ್ಕಂಡ್ರು. ಹಾಗೇ ಕೂತ್ಕಂಡೆ.’
‘ವಾರೆ, ಹುಟ್ಟಿಸಿದ ಗಂಡೇ’-ನರಸಿ ಅಂದದಕ್ಕೆ ಅವರು ಅವಳನ್ನು ಮಿಕಮಿಕನೆ ನೋಡಿದರು.
‘ನರಸವ್ವಾ, ಏನೂ ಮಾತಾಡ್‌ಬ್ಯಾಡ’-ಅಯ್ಯನವರೆಂದರು.

ಹತ್ತು ನಿಮಿಷದಲ್ಲಿ ನಂಜಮ್ಮನ ಕಣ್ಣು ತೂಗುತ್ತಿತ್ತು. ಕಂಬವನ್ನೊರಗಿ ಕೂತಿದ್ದ ಅವಳು ಹಾಗೆಯೇ ಮಂಡಿಗೆ ತಲೆ ಕೊಟ್ಟುಕೊಂಡಳು. ನೆನ್ನೆ ರಾತ್ರಿ ಹೊತ್ತು ತಂದಿದ್ದ ಹಾಸಿಗೆಯನ್ನು ಹತ್ತಿರವೇ ಹಾಸಿ, ಅಯ್ಯನವರು ಅವಳ ಭುಜ ಹಿಡಿದು ಮಲಗಿಸಿ, ಮೇಲೆ ಒಂದು ಹಳೆಯ ದುಪ್ಪಟಿ ಹೊದ್ದಿಸಿದರು. ಮತ್ತೆ ಎರಡು ನಿಮಿಷದಲ್ಲಿ ಅವಳಿಗೆ ಗಾಢನಿದ್ರೆ ಬಂದುಬಿಟ್ಟಿತು.
‘ಅಯ್ಯಾರೇ ನೀವು ನಂಜಮ್ಮಾರಿಗೆ ಕೊಟ್ಟುದ್ದೇನು?’-ನರಸಿ ಕೇಳಿದಳು.
‘ನಿದ್ದೆ ಬರಾ ಔಸ್ತಿ. ಕಾಶೀಲಿ ಇದ ತಿಂತಾರೆ. ಅಲ್ಲಿಂದ ಬರೂವಾಗ ತಂದಿದ್ದೆ. ಹಳೇದು ಒಂದೀಟಿತ್ತು.’
‘ಹಾಗಾರೆ ನಂಗೊಂದಿಷ್ಟು ಕೊಡ್ರೀ’-ಚೆನ್ನಿಗರಾಯರು ಕೇಳಿದರು.
‘ಅದು ಗಂಡಸರು ತಗಾಳಾದಲ್ಲ. ನಂಜವ್ವನಿಗೆ ರಾತ್ರಿ ಕಳೆದು ನಾಳೆಗಂಟ ಎಚ್ಚರವಾಗಾಕಿಲ್ಲ. ನೀವು ಇಲ್ಲೇ ಇರಿ. ನಿಮಗೆ ಇಲ್ಲಿಗೇ ಬಿನ್ನ ತಂದು ಮಡಗೂ ಹಂಗೆ ಮೇಷ್ಟರ ಹೆಂಗಸ್ರಿಗೆ ಏಳಿಕಳುಸ್ತೀನಿ’-ಎಂದು ಚೆನ್ನಿಗರಾಯರಿಗೆ ಆಶ್ವಾಸನೆಯಿತ್ತ ಅಯ್ಯನವರು ನರಸಿಗೆ ಹೇಳಿದರು. ‘ನರಸವ್ವಾ, ಇನ್ನು ಹೆದರಿಕೆಯಿಲ್ಲ ಮಗಾನ ಕೆಳಗೆ ಮನಗ್ಸು. ನೀನು ಮನಿಗೆ ಹ್ವಾಗಿ ಏನಾರ ಹ್ವಟ್ಟೆಗೆ ಮಾಡ್ಕ. ರಾತ್ರಿಯೆಲ್ಲ ನಿಂಗೂ ನಿದ್ದೆ ಇಲ್ಲ. ಮನೆಗೆ ಹ್ವಾಗಿ ಮನೀಕ್ಕ.’
‘ಅಯ್ಯಾರೇ, ಉಡ್ಗ ಉಳ್ಕಂಡ್ರೆ ಸಾಕು. ಇನ್ನೂ ಎಲ್ಡು ದಿನ ಹಿಂಗೇ ಇರ್ತೀನಿ.’
‘ಮನೀಗ್ ಹ್ವಾಗಿ ಊಟ ನಿದ್ದೆ ಮಾಡ್ಕಂಡ್ ಬಾ.

ಒಂದು ಪುಟ್ಟ ಕಂಬಳಿಯನ್ನು ಮಡಿಸಿ ಅಯ್ಯನವರು ಕೊಟ್ತರು. ಅದರ ಮೇಲೆ ಮಗುವಿನ ತಲೆಯನ್ನಿಟ್ಟು ನರಸಿ ಎದ್ದು ಮನೆಗೆ ಹೋದಳು. ನಂಜಮ್ಮನಿಗೆ ಎಚ್ಚರವಾಗಲೇ ಇಲ್ಲ. ಮಧ್ಯಾಹ್ನದ ಹೊತ್ತಿಗೆ ಕುರುಬರಹಳ್ಳಿಯ ಗುಂಡೇಗೌಡರಾದಿಯಾಗಿ ಹತ್ತಾರು ಜನ ಗುಡಿಯ ಹತ್ತಿರ ಬಂದರು. ಗಟ್ಟಿಯಾಗಿ ಮಾತನಾಡಿ ಸದ್ದು ಮಾಡಬಾರದೆಂದು ಅಯ್ಯನವರು ಹೇಳಿದುದರಿಂದ ಎಲ್ಲರೂ ಚೆನ್ನಿಗರಾಯರನ್ನೇ ಹೊರಗೆ ಕರೆದುಕೊಂಡು ಹೋಗಿ ಸಮಾಧಾನ ಹೇಳಿದರು. ‘ನಾವೂ ಕಂಡ ಬುದ್ಧಿಯೆಲ್ಲ ಖರ್ಚುಮಾಡಿಬಿಟ್ವು ಕಣ್ರೀ, ಮುಂಡೇವು ಉಳ್ಕಳ್ಲಿಲ್ಲ’-ಎಂದು ಹೇಳುವಾಗ ಚೆನ್ನಿಗರಾಯರಿಗೆ ಕಣ್ಣೀರು ಬರುತ್ತಿತ್ತು.
ಇಲ್ಲಿ ನಡೆದ ಕೆಟ್ಟ ಸಮಾಚಾರವನ್ನು ಸೂರ್ಯನಾರಾಯಣನಿಗೆ ಬರೆದು ‘ಕ್ಷೇಮ’ ಬರೆಯುವ ಜಾಗದಲ್ಲಿ ಕಪ್ಪುಬಣ್ಣ ಮಾಡಿ ಮೇಷ್ಟರು ಕಾರ್ಡನ್ನು ಪೋಸ್ಟಿಗೆ ಕಳಿಸಿದರು.

– ೫ –

ಇಬ್ಬರು ಮಕ್ಕಳೂ ಸತ್ತು ಇಂದಿಗೆ ಆರು ದಿನಗಳಾಗಿವೆ. ನಂಜಮ್ಮ ತನ್ನ ಶೆಡ್ಡಿಗೆ ಬಂದಿದ್ದಾಳೆ. ಈಗ ಶೆಡ್ಡಿನಲ್ಲಿ ಅವಳು ಮತ್ತು ಚೆನ್ನಿಗರಾಯರು, ಇಬ್ಬರೇ. ಜ್ವರ ಪೂರ್ತಿಯಾಗಿ ಬಿಟ್ಟು ವಿಶ್ವ ಹುಷಾರಾಗಿದ್ದಾನೆ. ‘ಸೂತಕದ ಮನೆಗೆ ಅವನು ಬರಾದು ಬ್ಯಾಡ. ಹತ್ತು ದಿನ ಕಳೆಯಾಗಂಟ ನಮ್ಮ ಗುಡೀಲೇ ಮಡಿಕ್ಕಂಡಿರ್ತೀನಿ’-ಎಂದು ಮಾದೇವಯ್ಯನವರು ಹೇಳಿದುದರಿಂದ ಅವನನ್ನು ಅಲ್ಲಿಯೇ ಬಿಟ್ಟಿದ್ದಾಳೆ. ಇಲ್ಲಿಗೆ ಕರೆದುತರಲು ಅವಳಿಗೇ ಹೆದರಿಕೆ. ಬೆಳಗ್ಗೆ, ಮಧ್ಯಾಹ್ನ, ಗುಡಿಗೆ ಹೋಗುತ್ತಾಳೆ. ತನಗೆ ಸೂತಕವೆಂಬ ನೆನಪಾಗಿ ಈಗ ಅವಳು ಗುಡಿಯ ಒಳಗೆ ಹೋಗುವುದಿಲ್ಲ. ವಿಶ್ವನಿಗೂ ಸೂತಕವಿದ್ದರೂ ಅವನು ಹುಡುಗ, ಎದ್ದುಕೂರುವ ಶಕ್ತಿಯಿದ್ದರೂ ಅವನನ್ನು ಅಯ್ಯನವರು ಯಾವಾಗಲೂ ಮಲಗಿಸಿರುತ್ತಾರೆ. ಗುಡಿಯ ಬಾಗಿಲಿನಲ್ಲಿ ಕೂತು ಅವನನ್ನು ನೋಡಿಕೊಂಡು, ಅಯ್ಯನವರ ಕೈಲಿ ಸಹ ಮಾತನಾಡದೆ ಅವಳು ಶೆಡ್ಡಿಗೆ ಹಿಂತಿರುಗುತ್ತಾಳೆ. ಪಾರ್ವತಿ ರಾಮಣ್ಣರಿಗೆ ತಂದಿದ್ದ ಹೇಮಾದಿ ಪಾನಕದ ಶೀಶೆಗಳನ್ನು, ಜ್ವರ ಬಿಟ್ಟಿದ್ದರೂ ಅಯ್ಯನವರು ಅವನಿಗೆ ಕುಡಿಸುತ್ತಿದ್ದಾರೆ.

ಹೆತ್ತ ತಾಯಿಯ ಎದುರಿಗೆ ಮಕ್ಕಳು ಯಾಕೆ ಸಾಯುತ್ತವೆ? – ಎಂಬ ಪ್ರಶ್ನೆ ಅವಳನ್ನು ಸದಾ ಬಾಧಿಸುತ್ತಿದೆ. ಎಷ್ಟು ಯೋಚಿಸಿದರೂ ಉತ್ತರ ಹೊಳೆಯುತ್ತಿಲ್ಲ. ಒಂದು ದಿನ ಅಯ್ಯನವರನ್ನೇ ಕೇಳಿದಳು. ಅವರು ಹೇಳಿದರು: “ಅವ್ವಾ, ಇದು ದೇವರ ಮಾಯ. ಕೃಷ್ಣ ಸಣ್ಣೋನಾಗಿದ್ದಾಗ ಅವನ ಅವ್ವುನ್ನ ಥರ ಥರಾವರಿಯಾಗಿ ಪರೀಕ್ಷೆ ಮಾಡಿದ್ನಂತೆ. ಅವ್ನು ಉಪಾಸ ಇದ್ರೆ ಅವ್ಳೂ ಉಪಾಸ ಮಾಡಿದ್ಲು. ಆವ್ನು ಹಾಲು ಕುಡಿಯೂ ತನಕ ಅವ್ಳು ನೀರೂ ಕುಡೀತಿರ್ನಿಲ್ಲ. ಈ ತಾಯಿಪ್ರೇಮ ಇನ್ನೂ ಪರೀಕ್ಷೆ ಮಾಡ್ಬೇಕು ಅಂತ ಒಂದು ದಿನ ಕೇಳಿದ್ನಂತೆ: ‘ಅವ್ವಾ, ನಾನ್ ಸತ್ಹೋದ್ರೆ ನೀನ್ ಏನ್ ಮಾಡ್ತೀಯಾ?’
“ಮಗಾ, ನಿನ್ನ ಬಿಟ್ಟು ನಾನಿರ್ತೀನಾ? ಹಿದ್‌ಗುಟ್ಟೇ ನಾನೂ ಸಾಯ್ತೀನಿ’ – ಅಂದಳು.
“ನಿಜವಾ?’ -ಅಂತ ಕೇಳ್ದ.
“ನಿನ್ನಾಣೆಗೂ ನನ್ನ ಕಂದ’ -ಅಂತ ಆಣೆ ಮಾಡಿದ್ಲು.
“ಒಂದು ದಿನ ಅವ್ನು ಹತ್ರುದಲ್ಲೇ ಇದ್ದ ಮಡೂನ ಒಳಕ್ಕೆ ಕಾಲು ಜಾರಿ ಬಿದ್ದುಬಿಟ್ಟ. ಒಂದ್ ಸಲ ಮುಳುಗಿ ಮತ್ತೆ ಮೇಲಕ್ಕೆ ಎದ್ದಹಂಗೆ ಮಾಡಿ, ‘ಅವ್ವಾ, ಮ್ಯಾಲುಕ್ಕೆ ಯಳ್ಕ. ನೀನೂ ನೀರಿಗೆ ಬಾ. ನಾನು ಸಾಯ್‌ತಿದೀನಿ. ಬದುಕುಸ್ಕ’ ಅಂತ ಬಡಕಂಡ ಬಾಯಿಗೆಲ್ಲ ನೀರು ಹೋಯ್ತಿತ್ತು. ಗೋಪಮ್ಮ ದಡದಲ್ಲೇ ನಿಂತ್ಕಂಡು, ‘ಯಾರಾದ್ರೂ ನನ್ನ ಮಗೂನ ಯಳ್ಕ ಬನ್ರಪ್ಪಾ’ ಅಂತ ಕಿರುಚ್ಕಂಡ್ಳು. ಯಾರೂ ಬರ್ನಿಲ್ಲ. ಉಟ್ಟಿದ್ದ ಸೀರೇನೇ ಬಿಚ್ಚಿ, ಒಂದ್ ದಡ ಹಿಡ್ಕಂಡಿ, ಇನ್ನೊಂದು ಕಡೆ ಅವ್ನಿಗೆ ಎಸೆದ್ಲು. ಅದು ಸಿಕ್ಲಿಲ್ಲ. ‘ಅವ್ವಾ, ಅವ್ವಾ’ ಅಂತ ಕೂಕ್ಕಳ್ತಾಲೇ ಅವ್ನು ನೀರಿಗೆ ಮುಳುಗಿಬಿಟ್ಟ. ಸತ್ತೇ ಹ್ವಾಗಿಬಿಟ್ಟ. ಗೋಪಮ್ಮ ಸೀರೆ ಸುತ್ಕಂಡು ದಡದಲ್ಲೇ ಕುಂತ್ಕಂಡು ಅತ್ಲೂ ಅತ್ಲೂ, ಓಟೊಂತರ ಅತ್ಲು. ತಾನೂ ನೀರಿಗೆ ಬಿದ್ದು ಸಾಯಾಕೆ ಹೆದ್ರಿಕೆಯಾಯ್ತು. ವಳಿಕ್ಕೆ ಮಾತ್ರ ಬೀಳ್ಲಿಲ್ಲ. ಮಗನ್ನ ನುಂಗಿ ಹಾಕಿದ ಗಂಗಾಮಾತೇನ ಬಯ್‌ದ್ಳು. ಬಾಯಿ ಬಾಯಿ ಬಡಕಂಡ್ಳು. ದಡದಲ್ಲೇ ಕೂತ್‌ಳು. ನೀರಿಗೆ ಮಾತ್ರ ಬೀಳ್ಲಿಲ್ಲ. ಒಂದು ದಿನ ಕಳೀತು, ಎಲ್ಡು ದಿನ ಕಳೀತು, ಗೋಪಮ್ಮ ದಿನಾ ಬಂದು ಮಡೂನ ದಡದಲ್ಲಿ ಕುಂತು ಅಳ್ತಿದ್ಲು. ನೀರಿಗೆ ಮಾತ್ರ ಬೀಳ್ಲಿಲ್ಲ. ಮೂರನೇ ದಿನ ಕೃಷ್ಣನೇ ನೀರಿನೊಳಗಿನಿಂದ ಎದ್ದು ಬಂದು -‘ಅವ್ವಾ, ಈಟೇನಾ ನಿನ್ನ ಪ್ರೇಮ? ನಾನು ಸತ್ರೂ ನೀನು ಸಾಯ್‌ಲಿಲ್ಲ. ಇನ್ನುಮ್ಯಾಲೆ ತಾಯಿ ಎದುರಿಗೆ ಹೆತ್ತ ಮಕ್ಳು ಸಾಯಲಿ’ ಅಂತ ಶಾಪ ಕೊಟ್ಟ. ಅದುಕ್ಕೆ ಹಿಂಗೆ ಆಯ್ತಂತೆ.”

ಈ ಮಾತನ್ನು ಕೇಳಿದ ನಂಜಮ್ಮನಿಗೆ ಗೋಪಿಯ ಮೇಲೆ ವಿಪರೀತ ಸಿಟ್ಟು ಬಂತು. ಅವಳೊಬ್ಬಳು ನಿಶ್ಚಿಂತೆಯಿಂದ ಮಡುವಿಗೆ ಧುಮುಕಿದ್ದರೆ ಪ್ರಪಂಚದಲ್ಲಿ ತಾಯಿಯ ಕಣ್ಣೆದುರಿಗೆ ಮಕ್ಕಳು ಸಾಯುವುದೇ ಇರುತ್ತಿರಲಿಲ್ಲ. ಗೋಪಿ ಎಷ್ಟಾದರೂ ಮನುಷ್ಯಳು. ಶ್ರೀಕೃಷ್ಣ, ದೇವರು. ಮನುಷ್ಯತಾಯಿಯ ಪ್ರೇಮಪರೀಕ್ಷೆ ಮಾಡುಕ್ಕೇ ಅವನು ಹೀಗೆ ಮಾಡಿದ. ದೇವತಾಯಿ ಆಗಿದ್ದರೆ ಸತ್ತೇಬಿಡ್ತಿದ್ದಳೋ ಏನೋ! ಆದರೆ ದೇವತೆಗೆ ಸಾವೇ ಇಲ್ಲ. ಅವಳ ಮಗನಿಗೂ ಸಾವಿಲ್ಲ. ಆಗ ಈ ಕಥೆ ನಡೆಯುತ್ತಿರಲಿಲ್ಲ.

ಶೆಡ್ಡಿಗೆಬಂದ ಮೇಲೂ ಅವಳ ಮನಸ್ಸು ಇದನ್ನೆ ಚಿಂತಿಸುತ್ತಿತ್ತು. ಇದೇನು ಬರಿ ಕಥೆಯೋ ಅಥವಾ ನಿಜವೋ?-ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿತು. ಕಥೆಯಾಗಿದ್ದರೂ ಇರಬಹುದು. ಪಾರ್ವತಿ ರಾಮಣ್ಣ ಸತ್ತುದಕ್ಕೆ ತಾನೇಕೆ ಸಾಯಲಿಲ್ಲ?-ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿತು. ಅದು ಹುಟ್ಟಿದ ತಕ್ಷಣ ಅವಳಿಗೆ ಆಶ್ಚರ್ಯವಾಯಿತು. ಜೊತೆಗೆ, ತಾನೂ ಸಾಯಬೇಕೆಂಬ ಬಲವಾದ ನಿಶ್ಚಯ ಮನಸ್ಸಿನಲ್ಲಿ ಮೂಡಿತು. ಅಷ್ಟು ಹೊತ್ತಿಗೆ ರಾತ್ರಿ ಎಂಟು ಗಂಟೆ. ಚೆನ್ನಿಗರಾಯರು ಹೊಗೆಸೊಪ್ಪು ಅಗಿಯುತ್ತಾ ಶೆಡ್ಡಿನ ಎದುರಿನ ಕಲ್ಲು ಚಪ್ಪಡಿಯ ಮೇಲೆ ಕುಳಿತಿದ್ದರು. ನಂಜಮ್ಮ ಒಳಗೆ ಹಾಸಿಗೆ ಹಾಕಿ ಮಲಗಿಬಿಟ್ಟಳು. ನಿದ್ರೆ ಮಾತ್ರ ಬರಲಿಲ್ಲ. ತಾನು ಈ ದಿನ ಸಾಯಬೇಕು. ಪಾರ್ವತಿ ರಾಮಣ್ಣರನ್ನು ಹಿಂಬಾಲಿಸಬೇಕು ಎಂಬ ನಿಶ್ಚಯ ಅವಳನ್ನು ಬಲವಾಗಿ ಹಿಡಿಯಿತು. ತಾನು ದೃಢ ಮನಸ್ಸಿನಿಂದ ಸತ್ತರೆ ದೇವರು ತನ್ನನ್ನೂ ಬದುಕಿಸಿ, ತನ್ನ ಇಬ್ಬರು ಮಕ್ಕಳನ್ನೂ ವಾಪಸ್ಸು ಕೊಡುತ್ತಾನೆಯೋ ಎಂಬ ಒಂದು ಆಶಾಪೂರಿತ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿತು. ಅವಳು ನೋಡಿದ ಯಕ್ಷಗಾನ ನಾಟಕಗಳಲ್ಲಿ, ಕಲಿತಿದ್ದ ಹಾಡುಗಳಲ್ಲಿ, ಓದಿದ್ದ ಪುರಾಣಗಳಲೆಲ್ಲಾ ಆಗುತ್ತಿದ್ದುದು ಹೀಗೆ. ತನಗೂ ಯಾಕೆ ಹಾಗೆ ಆಗಬಾರದು? ಆದರೆ ಇಬ್ಬರು ಮಕ್ಕಳೂ ಒಂದೇ ದಿನ ಸತ್ತ ದಿನದಿಂದ ಅವಳಿಗೆ ದೇವರು ಪುರಾಣಗಳಲ್ಲಿ ನಂಬಿಕೆ ಹಾಳಾಗಿತ್ತು. ಗೋಪಿ ಕೃಷ್ಣನಿಗಾಗಿ ಸಾಯಲು ಹಿಂಜರಿದಳೋ ಬಿಟ್ಟಳೋ ನನಗೆ ಅದು ಬ್ಯಾಡ. ಈಗ ನನ್ನ ಮಕ್ಕಳು ಸತ್ತಿವೆ. ಈ ಆರು ದಿನ ಅವಿಲ್ಲದೆ ನಾನು ನರಕ ಅನುಭವಿಸಿದೀನಿ. ಈ ನರಕ ಬ್ಯಾಡ. ನಾನೂ ಸಾಯಬೇಕು.

ಅಷ್ಟರಲ್ಲಿ ಅವಳ ಗಂಡ ಒಳಗೆ ಬಂದು ಮಲಗಿದ್ದರು. ಅವರ ಗೊರಕೆಯೂ ಸ್ಪಷ್ಟವಾಗಿ ಕೇಳುತ್ತಿತ್ತು. ನಂಜಮ್ಮ ಮೇಲೆ ಎದ್ದಳು. ಆಗಲೇ ಹತ್ತು ಹನ್ನೊಂದು ಗಂಟೆಯಾಗಿರಬಹುದು. ಅವಳು ಶೆಡ್ಡಿನ ಬಾಗಿಲು ಹಾಕಿಕೊಂಡು ಹೊರಗೆ ಬಂದಳು. ಎಲ್ಲಿಗೆ ಹೋಗುವುದು? ಹೇಗೆ ಸಾಯುವುದು?-ಎಂದು ವ್ಯಕ್ತವಾಗಿ ಯೋಚಿಸದೆಯೇ ಮನಸ್ಸು ಅವಳನ್ನು ಏರಿ ಇಳಿಸಿ, ಅವಳ ಇಬ್ಬರು ಮಕ್ಕಳನ್ನೂ ಭಸ್ಮ ಮಾಡಿದ ಶ್ಮಶಾನದ ಕಡೆಗೆ ಕರೆದೊಯ್ದಿತು. ಹೆಣ ಸುಡುವಾಗ ಅವಳು ಹೋಗಿರಲಿಲ್ಲ. ಹೆಂಗಸರು ಶ್ಮಶಾನಕ್ಕೆ ಹೋಗಬಾರದಂತೆ. ಈಗ ನೇರವಾಗಿ ಅಲ್ಲಿಗೆ ಹೋದಳು. ಯಾವ ಭಯವೂ ಇಲ್ಲ. ಅಳುಕು ಅಂಜಿಕೆಗಳಿಲ್ಲ. ಗಾಳಿ, ದೆವ್ವ ಪಿಶಾಚಿಗಳ ಯೋಚನೆ ಮನಸ್ಸಿನಲ್ಲಿ ಸುಳಿಯಲಿಲ್ಲ. ಕತ್ತಲೆಯಲ್ಲಿಯೂ, ಎರಡು ಹೆಣಗಳನ್ನು ಸುಟ್ಟ ಜಾಗ ಕಾಣುತ್ತಿತ್ತು. ಅವರ ಇಬ್ಬರು ಮಕ್ಕಳಲ್ಲದೆ ಸಧ್ಯದಲ್ಲಿ ಮತ್ತೆ ಯಾವ ಬ್ರಾಹ್ಮಣ ಹೆಣವೂ ಬಿದ್ದಿರಲಿಲ್ಲ. ಆದುದರಿಂದ ಈಗ ಕಾಣುತ್ತಿದ್ದ ಎರಡು ಜಾಗಗಳು ಅವಳ ಮಕ್ಕಳವೇ. ಅವುಗಳಲ್ಲಿ ಪಾರ್ವತಿಯದು ಯಾವುದು, ರಾಮಣ್ಣನದು ಯಾವುದು ಎಂಬುದು ಮಾತ್ರ ತಿಳಿಯಲಿಲ್ಲ. ಅದು ತಿಳಿದಾದರೂ ಏನಾಗಬೇಕು ಎಂಬ ಯೋಚನೆ ಬಂತು. ಮೂರನೇ ದಿನ ಎರಡು ಕಡೆಗಳಲ್ಲಿಯೂ ಬೂದಿ ಎತ್ತಿದ ಸಂಸ್ಕಾರ ಮುಗಿದಿತ್ತು. ಆದರೂ ಅವಳು ಬಾಗಿ ಎರಡರಲ್ಲಿಯೂ ಒಂದೊಂದು ಹಿಡಿ ಬೂದಿಯನ್ನು ತೆಗೆದು ತನ್ನ ಸೆರಗಿಗೆ ಕಟ್ಟಿಕೊಂಡಳು. ಶ್ಮಶಾನದ ಹತ್ತಿರದಲ್ಲಿ ಒಂದು ಕೊಳವಿದೆ. ಹೆಣ ಸುಟ್ಟಮೇಲೆ ಶವವಾಹಕರು, ಸಂಸ್ಕಾರಕರ್ತೃಗಳು ಸ್ನಾನ ಮಾಡಿ ಬರುವುದು ಅದರಲ್ಲಿಯೇ. ಉಳಿದಂತೆ ಅದನ್ನು ಯಾರೂ ಉಪಯೋಗಿಸುವುದಿಲ್ಲ. ಹೀಗಾಗಿ ನೀರು ಸ್ವಲ್ಪ ಮಟ್ಟಿಗೆ ಮಲೆತಿರುತ್ತದೆ. ತಾನು ಕೊಳಕ್ಕೆ ಬೀಳಬೇಕು. ಮೆಟ್ತಿಲಿನ ಎದುರು ಭಾಗದ ನಾಲಿಗೆಕಲ್ಲಿನ ಮೇಲೆ ನಿಂತು ಧುಮುಕಬೇಕು. ಹಾಗೆಯೇ ಕಣ್ಣು ಮುಚ್ಚಿದಳು. ಕಪ್ಪು ಮಬ್ಬಾಗಿದ್ದ ಕತ್ತಲೆಯು ಗಾಢ ಕತ್ತಲೆಯಾಯಿತು. ನರನರಗಳು ಉಬ್ಬಿದಂತಾಗಿ ಎರಡು ಕ್ಷಣ ಸ್ವಾಧೀನ ತಪ್ಪಿದವು. ಕೈ ಕಾಲು ಮೈಗಳೆಲ್ಲ ಹಿಡಿತ ತಪ್ಪಿ ನಡುಗಿದವು. ಬಾವಿಯ ನೀರು ಕಲಕಿ ಮೂಲೆ ಮೂಲೆಗೂ ಬಡಿಯುತು. ಆದರೆ ಕ್ರಮೇಣ ನರಗಳು ಶಾಂತವಾದುವು. ಶರೀರದ ನಡುಕ ನಿಂತಿತು. ಯಾವ ಯೋಚನೆ ಭಾವನೆಗಳೂ ಇಲ್ಲದೆ ಸಕವ ವ್ಯಾಪಾರವೂ ಸತ್ತಂತೆ ಆಗಿ, ಮನಸ್ಸು ಶೂನ್ಯವಾಯಿತು. ಸಾವು ಎಂದರೆ ಇದೇಯೆ?, ಇಷ್ಟೇಯೆ? ಅಲ್ಲಿ ಯಾರೂ ಇಲ್ಲ. ಪಾರ್ವತಿ, ರಾಮಣ್ಣ, ಕೊನೆಗೆ ತಾನೂ-ಏನೂ ಇಲ್ಲ. ಅರ್ಧ ಹೆಜ್ಜೆ ಮುಂದೆ ಇಟ್ಟು ನೀರಿಗೆ ಧುಮುಕುವುದೊಂದೇ ಉಳಿದಿದೆ. ಅದು ಸ್ವಲ್ಪವೂ ಕಷ್ಟವಿಲ್ಲದೆ ಪ್ರಯತ್ನವೇ ಬೇಡದೆ ನಿರಾಯಾಸವಾಗಿ ನಡೆದುಹೋಗುವ ಹೆಜ್ಜೆ.

ಆ ಹೆಜ್ಜೆಯನ್ನಿಡುವ ಮೊದಲು ಒಂದು ಸಲ, ಈ ಊರಿನಲ್ಲಿ ಉಳಿದವರ ನೆನಪು ಬಂತು. ಇನ್ನು ಉಳಿದಿರುವವರು ಇಬ್ಬರು: ಗಂಡ. ಅವರ ಪಾಡು ಅವರಿಗೆ. ವಿಶ್ವ? ವಿಶ್ವನ ನೆನಪು ಬಂದ ತಕ್ಷಣ ಮನಸ್ಸು ವಿಚಲಿತವಾಯಿತು. ಅವನು ಪ್ಲೇಗುಮಾರಿಯಿಂದ ಸಾಯಲಿಲ್ಲ; ಉಳಿದುಕೊಂಡಿದ್ದಾನೆ. ಅವನನ್ನು ಸಾಕುವವರಾರು? ಅಯ್ಯನವರೇ ಅವನಿಗೆ ದಿಕ್ಕು ಎಂದು ಮನಸ್ಸು ನುಡಿಯಿತು. ಮಕ್ಕಳು ಸತ್ತ ದುಖಃಕ್ಕೆ ನಂಜಮ್ಮ ಪ್ರಾಣ ಕಳಕೊಂಡಿದ್ದಾಳೆ ಅಂತ ತಿಳಿದ ಅಯ್ಯನವರು ಎಂದಿಗೂ ಅವನ ಕೈಬಿಡುಲ್ಲ-ಎಂಬ ಭರವಸೆ ಹುಟ್ಟಿತು. ಆದರೆ ತಾನಿಲ್ಲದೆ ಅವನು ತಬ್ಬಲಿಯಾಗುತ್ತಾನೆ. ಅಯ್ಯನವರು ಏನು ಮಾಡಿದರೂ ಅವನಿಗೆ ತಾಯಿ ಇದ್ದ ಹಾಗೆ ಎಲ್ಲಿ ಆಗುತ್ತೆ? ಪಾರ್ವತಿ ರಾಮಣ್ಣರಿಗೆ ರೋಗ ತಗುಲಿದಾಗ ತನಗೂ ಯಾಕೆ ತಗುಲಲಿಲ್ಲ? ವಿಶ್ವನನ್ನು ಸಾಕುಕ್ಕೆ ಅಂತಲೇ ನನ್ನನ್ನು ದೇವರು ಬದುಕಿಸಿದನೇನೋ. ನನ್ನಿಂದ ಸಾಕಿಸಿಕೋಬೇಕು ಅಂತಲೇ ಅವನನ್ನು ಉಳಿಸಿದನೇನೋ. ವಿಶ್ವನ ಮುಖ ನೆನಪಿಗೆ ಬಂತು. ಪಾರ್ವತಿಯ ಅಗಲವಾದ ತುಂಬುಮುಖ, ರಾಮಣ್ಣನ ಬುದ್ಧಿಶಕ್ತಿ, ಎರಡೂ ಅವನದು. ಅವರಿಬ್ಬರ ಪರವಾಗಿ ಅವನು ಉಳ್‌ಕೊಂಡಿದಾನೆ. ತಾನು ಪ್ರಾಣ ಕಳಕೊಂಡರೆ ಏನು ದಾರಿ?

ಈ ಯೋಚನೆಯೊಡನೆ ಅವಳು ನಾಲಿಗೆಕಲ್ಲಿನ ಮೇಲೆಯೇ ಕುಕ್ಕುರುಗಾಲಿನಲ್ಲಿ ಕುಳಿತಳು. ತಾನು ಮದುವೆಯಾಗಿ ಈ ಊರಿಗೆ ಬಂದದ್ದು, ಈ ಮಕ್ಕಳು ಹುಟ್ಟಿದ್ದು, ಎಲ್ಲವೂ ನೆನಪಿಗೆ ಬಂದುವು. ಮಧ್ಯೆ ಆದ ಕಷ್ಟಸುಖಗಳು. ಮಳೆ ಬೆಳೆ ಇಲ್ಲದೆ ಊರಿಗೇ ಬಂದ ಬರ. ಪಾರ್ವತಿ ರಾಮಣ್ಣ ಎಷ್ಟು ಸಮಾಧಾನದಿಂದ ಹಸಿವು ಸಹಿಸಿಕೊಳ್ಳುತ್ತಿದ್ದರು! ಅಷ್ಟು ಒಳ್ಳೆಯೋರು ಅಂತಲೇ ದೇವರು ಕರಕೊಂಡ. ವಿಶ್ವ ಹಸಿವು ತಡೆಯಲಾರದೆ ತನ್ನನ್ನು ಹಿಡಿದು ಹೊಡೆಯುತ್ತಿದ್ದ. ಅವನ ಸ್ವಭಾವವೇ ಹಾಗೆ. ಧೈರ್ಯ, ಸಿಟ್ಟು, ದುಡುಕು, ಊಟದಲ್ಲಿ ಮುಂದು. ಆದರೆ ಅಪ್ಪನ ಹಾಗೆ ತನ್ನ ಒಡಲು ಮಾತ್ರ ತುಂಬಿಕೊಳ್ಳುವ ನೀಚಬುದ್ಧಿಯಿಲ್ಲ. ತಿಪ್ಪೆಯ ಮೇಲೆ ಸುತ್ತಿ ಗಣಿಕೆಹಣ್ಣು ಬಿಡಿಸಿಕೊಂಡು ಬಂದರೂ ಅಮ್ಮನಿಗೆ ಅಣ್ಣ ಅಕ್ಕಯ್ಯರಿಗೆ ಕೊಡದೆ ಯಾವತ್ತೂ ತಿಂದವನಲ್ಲ. ಅವನನ್ನು ಹೀಗೆ ಬಿಟ್ಟು ತಬ್ಬಲಿಯಾಗಿ ಮಾಡಿ ನಾನು ಸತ್ತು, ಬರುವ ಭಾಗ್ಯವೇನು? ಈಗ ಸತ್ತು ಆ ಲೋಕಕ್ಕೆ ಹೋದರೂ ಅಲ್ಲಿ ಪಾರ್ವತಿ ರಾಮಣ್ಣ, ಇಬ್ಬರೂ, ‘ಅಮ್ಮ, ನೀನು ವಿಶ್ವನನ್ನು ಹೀಗೆ ಬಿಟ್ಟು ಬಂದೆಯಲ್ಲ, ಅವನ ಗತಿ ಏನು? ನಿನಗೆ ಅಷ್ಟೂ ಬುದ್ಧಿ ಇರಲಿಲ್ಲವೆ?’ ಅಂದ್ರೆ ಏನು ಹೇಳುವುದು?

ತನಗೇ ತಿಳಿಯದಂತೀದ್ದು ಅವಳು ನಾಲಿಗೆಕಲ್ಲಿನಿಂದ ಹಿಂದೆ ನಡೆದಳು. ಕಲ್ಲು ಮುಳ್ಳುಗಳನ್ನು ನೋಡಿಕೊಂಡು, ಬಂದ ದಾರಿಯಲ್ಲಿಯೇ ನಡೆದು ಶ್ಮಶಾನಕ್ಕೆ ಬಂದಳು. ಪಾರ್ವತಿ ರಾಮಣ್ಣರನ್ನು ಸುಟ್ಟ ಜಾಗಗಳ ನಡುವೆ ಸ್ವಲ್ಪ ಹೊತ್ತು ನಿಂತಿದ್ದಳು. ಅಲ್ಲಿಂದ ಹೊರಟು ತೋಟದ ಮಾರ್ಗವಾಗಿ ನಡೆದು ಕೆರೆಯ ಏರಿ ಹತ್ತಿದಳು. ಆದರೆ ಶೆಡ್ಡಿಗೆ ಹೋಗಲು ಬಲಕ್ಕೆ ತಿರುಗದೆ, ಹೆಜ್ಜೆಗಳು ದೇವಸ್ಥಾನದ ಕಡೆಗೆ ಎಡಕ್ಕೆ ತಿರುಗಿದವು. ಏರಿಯ ಮೇಲಿನ ದಾರಿ ಕತ್ತಲೆಯಲ್ಲಿಯೂ ಸ್ಪಷ್ಟವಾಗಿ ಕಾಣುತ್ತಿತ್ತು. ಎತ್ತಿನ ಗಾಡಿಗಳು ಹೋಗಿ ಬರುವಷ್ಟು ಅಗಲವಾದ ಏರಿ ಅದು. ದೇವಸ್ಥಾನದ ಹತ್ತಿರ ಬರುವ ಹೊತ್ತಿಗೆ ಅಯ್ಯನವರು ಒಳಗೆ ಕೂತು ಹಾಡುತ್ತಿರುವುದು ಕೇಳಿಸುತ್ತಿತ್ತು. ಅವಳು ಒಳಗೆ ಹೋದಾಗ ಹರಳೆಣ್ಣೆಯ ಹಣತೆ ದೇವಸ್ಥಾನದ ನಡು ಅಂಕಣದಲ್ಲಿ ಉರಿಯುತ್ತಿತ್ತು. ವಿಶ್ವ ಹಾಸಿಗೆಯ ಮೇಲೆ ಮಲಗಿ ನಿದ್ದೆ ಮಾಡುತ್ತಿತ್ತು. ಅದಕ್ಕೆ ಕಂಬಳಿ ಹೊದೆಸಿ, ಅದೇ ಹಾಸಿಗೆಯ ಒಂದು ಪಕ್ಕದಮೇಲೆ ಕುಳಿತು ಅಯ್ಯನವರು ಬಲಗೈಲಿ ಏಕತಾರಿ ಮೀಟಿಕೊಂಡು ಹಾಡುತ್ತಿದ್ದರು:
ಹಳ್ಳ ಕೊಳ್ಳದ ಬಳಿ ತನುವು ತಂಪಿದ ಬಳಿ
ಗುಳ್ಳದ ಹಣ್ಣು ಫಲಮಾದುದು
ಗುಳ್ಳದ ಹಣ್ಣು ನೆಲಕುದುರಿ ಬೀಳುವಾಗ
ಅದರ ಬಳ್ಳಿಗೆ ಹೇಳಿ ಹೋಯಿತೆ ಒಂದು ಮಾತ……

ಬಾಗಿಲಲ್ಲಿ ಬಂದು ನಿಂತ ಆಕೃತಿಯನ್ನು ಗಮನಿಸಿದ ಅಯ್ಯನವರು ಈ ಕಡೆಗೆ ತಿರುಗಿ ನೋಡಿದರು. ಅವಳ ಗುರುತು ಸಿಕ್ಕಿ ಹೇಳಿದರು: ‘ಸಂಜೆ ತಾನೇ ಬಂದಿದ್ದೆ. ಈಗ ಮತ್ತೆ ಬಂದೆಯಲ್ಲವ್ವಾ. ಯಾಕೆ ಬಂದೆ? ಏನೂ ಯೇಚ್ನೆ ಬ್ಯಾಡ. ವಿಶ್ವಣ್ಣ ಕಲ್ಲುಗುಂಡಿನ ಹಂಗೆ ಅವ್ನೆ. ಇನ್ನುಮ್ಯಾಲೆ ಅವನನ್ನ ವಿಶ್ವಣ್ಣ ಅನ್ನಬ್ಯಾಡ. ಗುಂಡಣ್ಣ ಅನ್ನು. ಗುಂಡಿನ ಹಂಗೆ ಬೆಳೀತಾನೆ.’
ಅಯ್ಯನವರ ಬಾಯಹರಕೆ ದೊಡ್ಡದು. ಅವರ ಮಾತೇ ಸರಿ. ಇನ್ನು ಮೇಲೆ ಅವನನ್ನು ಗುಂಡಣ್ಣ ಅಂತಲೇ ಕೂಗಬೇಕು-ಎಂದು ಮನಸ್ಸಿನಲ್ಲಿ ಮಾಡಿಕೊಂಡ ಅವಳು, ‘ಏನೂ ಇಲ್ಲ. ಹೋಗ್ತೀನಿ’ಎಂದಳು.
‘ಈಗ ಯಾಕೆ ಬಂದೆ?’
‘ಸುಮ್ನೆ ಬಂದೆ.’
‘ಬೇಕಾದ್ರೆ ಇಲ್ಲೇ ಇರು. ಆದ್ರೆ ನೋಡವ್ವ, ಜನದ ಬಾಯಿ ಒಂದೇ ತರ ಇರಾಕಿಲ್ಲ. ನೀನು ಮನೆಗೆ ಹ್ವಾಗು.’
‘ಹೋಗ್ತೀನಿ’-ಎಂದು ಹೊರಟಳು.
‘ವಸೀ ದೂರ ಬಂದು ಕಳುಸ್ತೀನಿ ತಾಳವ್ವ.’
‘ಬ್ಯಾಡಿ ಬ್ಯಾಡಿ. ಮಗು ಒಂದೇ ಮಲಗಿದೆ’-ಎಂದು ಹೇಳಿ ಬೇಗ ಬೇಗ ನಡೆದು ಅವಳು ಏರಿಯ ಮೇಲಕ್ಕೆ ಬಂದಳು. ಶೆಡ್ಡಿನ ಹತ್ತಿರಕ್ಕೆ ಬರುವ ಮೊದಲು ಸೆರಗಿಗೆ ಕಟ್ಟಿಕೊಂಡಿದ್ದ ಬೂದಿಯ ನೆನಪಾಯಿತು. ಏರಿಯ ಎಡಗಡೆ ಇಳಿದು ಸೆರಗಿನ ಗಂಟು ಬಿಚ್ಚಿ ಕೆರೆಯ ನೀರಿಗೆ ಅದನ್ನು ಕದಡಿ- ‘ಗಂಗಮ್ಮತಾಯಿ, ಇದು ನಿನ್ನ ಹೊಟ್ಟೆಯ ಒಳಕ್ಕೆ ಸೇರಿಕೊಳ್ಳಲಿ’ ಎಂದು ಹೇಳಿ ಮತ್ತೆ ಏರಿ ಹತ್ತಿ ನಡೆದು ಶೆಡ್ಡಿಗೆ ಬಂದು ಮಲಗಿದಳು.

– ೬ –

ಆ ದಿನ ಬೆಳಿಗ್ಗೆ ಅವಳು ದೇವಸ್ಥಾನಕ್ಕೆ ಹೋಗಿ ವಿಶ್ವನನ್ನು ನೋಡಿಕೊಂಡು ಬಂದು ತನ್ನ ಶೆಡ್ಡಿನಲ್ಲಿ ಕೂತಿದ್ದಳು. ಇವತ್ತಿಗೆ ಏಳನೆಯ ದಿನ. ಕ್ರಮವಾಗಿ ಶುರುವಾಗಿದ್ದರೆ ರಾಮಣ್ಣನ ತಿಥಿ ಕೆಲಸ ಇವತ್ತಿನಿಂದ ಶುರುವಾಗಬೇಕು. ಏನು ಶಾಸ್ತ್ರವೋ ಏನು ಸುಡುಗಾಡೋ, ಅವಳು ಆ ಬಗೆಗೆ ಹೆಚ್ಚಾಗಿ ಯೋಚಿಸಿಯೂ ಇಲ್ಲ. ಯಾರೂ ಜ್ಞಾಪಿಸಿಯೂ ಇಲ್ಲ. ಪಾರ್ವತಿಯ ಕೆಲಸ ಅವಳ ಗಂಡನದು.

ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ನಂಜಮ್ಮ ಮಂಡಿಗೆ ತಲೆ ಕೊಟ್ಟು ಶೆಡ್ಡಿನ ಒಳಗೆ ಕೂತಿದ್ದಳು. ಚೆನ್ನಿಗರಾಯರು ಎಲ್ಲೋ ಹೋಗಿದ್ದರು. ಬಿಳಿಯ ಬಟ್ಟೆ ಉಟ್ಟ ಯಾರೋ ಮನೆಗೆ ಬಂದಂತೆ ಆಯಿತು. ಕತ್ತೆತ್ತಿ ನೋಡುತ್ತಾಳೆ: ಬಂದವನು ಸೂರ್ಯನಾರಾಯಣ, ಪಾರ್ವತಿಯ ಯಜಮಾನರು. ಎಡಗೈಲಿ ಮಗು ರತ್ನನ ಕೈ ಹಿಡಿದಿದ್ದಾನೆ. ಕಂಕುಳಿಗೆ ನೇತುಹಾಕಿದ ಒಂದು ದೊಡ್ದ ಚೀಲ. ಬಲಗೈಲಿ ಹಿಡಿದಿದ್ದ ದೊಡ್ದದೊಂದು ತೂಕವಾದ ಬಿದಿರುಬುಟ್ಟಿ. ಬಂದವರಿಗೆ ನಂಜಮ್ಮ ಹುಳಿತುಕೊಳ್ಳಿ ಎಂದೂ ಹೇಲಲಿಲ್ಲ. ಅಳಿಯ ಬಂದರೆ ಲಜ್ಜೆ ಮರ್ಯಾದೆಗಳಿಂದ ಎದ್ದು ಒಳಗೂ ಹೋಗಲಿಲ್ಲ. ಸೂರ್ಯನಾರಾಯಣನೇ ರತ್ನನಿಗೆ-‘ಅಜ್ಜೀ ಹತ್ರುಕ್ಕೆ ಹೋಗು ಮಗು’ ಎಂದ.

ಮಗು ಈ ಅಜ್ಜಿಯ ಗುರುತು ಮರೆತಿರಲಿಲ್ಲ. ನೇರವಾಗಿ ಹತ್ತಿರ ಬಂದು ಅವಳ ಭುಜವನ್ನು ಮುಟ್ಟಿತು. ಅದರ ಕೈ ಹಿಡಿದುಕೊಂಡು ಅವಳು ತೊಡೆಯ ಮೇಲೆ ಕೂರಿಸಿಕೊಂಡಳು. ಸೂರ್ಯನಾರಾಯಣ ಬುಟ್ಟಿಯ ಬಾಯಿ ತೆಗೆದು-‘ಇದನ್ನ ತೆಗೆದಿಡಿ. ಶಖೆಗೆ ಬಾಡಿಹೋಗುತ್ತೆ’ ಎಂದು ಒಂದೊಂದಾಗಿ ಹೊರಗೆ ತೆಗೆದಿಟ್ಟ. ಗಮಗಮಿಸುವ ಮಲ್ಲಿಗೆ ಹೂವಿನ ಪೊಟ್ಟಣ. ಚಿಗುರು ವೀಳ್ಯದೆಲೆ ಕಟ್ಟು. ಕಿತ್ತಲೆ ಹಣ್ಣು, ಬಾಳೆಹಣ್ಣಿನ ಚಿಪ್ಪು. ಹೋಟೆಲು ತಿಂಡಿಯ ಕಾಗದದ ಪೊಟ್ಟಣಗಳು. ಅವನ್ನು ನೋಡುನೋಡುತ್ತಾ ನಂಜಮ್ಮನಿಗೆ ತಡೆಯಲಾಗಲಿಲ್ಲ. ರತ್ನನನ್ನು ತಬ್ಬಿಕೊಂಡು ಒಂದು ಸಲ ಬಿಕ್ಕಳಿಸಿದಳು. ಕಕ್ಕಾವಿಕ್ಕಿಯಾದ ಸೂರ್ಯನಾರಾಯಣ ಕತ್ತೆತ್ತಿ ನೋಡಿದ. ನಂಜಮ್ಮ ಮಗುವನ್ನು ಅಲ್ಲಿಯೇ ಬಿಟ್ಟು ಎದ್ದು ಅಡಿಗೆಯ ಭಾಗದ ಮರೆಗೆ ಹೊರಟುಹೋದಳು. ಅವನಿಗೆ ಏನೂ ತಿಳಿಯಲಿಲ್ಲ. ಒಳಗಿನಿಂದ ಬಿಕ್ಕಿಬಿಕ್ಕಿ ಅಳುವುದು ಮಾತ್ರ ಕೇಳುತ್ತಿತ್ತು.
‘ಅಮ್ಮಾ, ಏನು ಸಮಾಚಾರ? ಯಾಕೆ ಅಳ್ತೀರಿ?’-ಅವನು ಕೇಳಿದ.

ಅವಳು ಉತ್ತರ ಹೇಳಲಿಲ್ಲ. ತಾನೇ ಎದ್ದು ಅಡಿಗೆಯ ಭಾಗದ ಹತ್ತಿರ ಬಂದು ಕೇಳಲು ಅವನಿಗೆ ಸಂಕೋಚ. ಏನೂ ತಿಳಿಯದೆ ಸುಮ್ಮನೆ ಕೂತುಬಿಟ್ಟ. ಆದರೆ ಅವನ ಮನಸ್ಸಿನಲ್ಲಿಯೂ ಒಂದು ವಿಧವಾದ ಅವ್ಯಕ್ತ ಶಂಕೆ ಭೀತಿಗಳು ಹುಟ್ಟಿದುವು. ಅರ್ಧ ಗಂಟೆ ಹೀಗೆಯೇ ಕಳೆಯಿತು. ಸೂರ್ಯನಾರಾಯಣನೇ-‘ಅಮ್ಮಾ, ನನ್ನ ಕೈಲಿ ಬಾಯಿಬಿಟ್ಟು ಮಾತಾಡಬಾರದೇ?’ ಎಂದ. ನಂಜಮ್ಮ ಮಾತಾಡಲಿಲ್ಲ. ಅಲ್ಲಿಂದ ಬಂದು ಶೆಡ್ಡಿನ ಹೊರಗೆ ಹೋದಳು. ಹತ್ತಿರದ ಇನ್ನೊಂದು ಶೆಡ್ಡಿನ ಹತ್ತಿರ ಆಡುತ್ತಿದ್ದ ಒಬ್ಬ ಹುಡುಗನನ್ನು ಕೂಗಿ-‘ಮರಿ, ಮೇಷ್ಟರ ಶೆಡ್ಡಿಗೆ ಹೋಗಿ ನಾನು ಕರ್ದೆ ಅಂತ ಈಗಲೇ ಕರ್ಕಂಡ್‌ಬಾ ಹೋಗು’ ಎಂದು ಹೇಳಿಕಳಿಸಿದಳು. ಹುಡುಗ ಓಡಿಹೋದ. ಐದು ನಿಮಿಷದಲ್ಲೇ ಮೇಷ್ಟರು ಬಂದರು. ‘ಯಾಕೆ, ಹೇಳಿಕಳ್ಸಿದ್ರಂತೆ?’-ಎಂದು ಕೇಳಿದ ಅವರಿಗೆ, ‘ನಮ್ಮ ಶೆಡ್ಡಿಗೆ ಹೋಗಿ ನೋಡಿ’ ಎಂದು ಹೇಳಿದ ಅವಳು ಅಲ್ಲಿ ನಿಲ್ಲದೆ ಏರಿಯ ಕಡೆಗೆ ನಡೆದು ದೇವಸ್ಥಾನಕ್ಕೆ ಹೊರಟುಹೋದಳು.

ಏನೂ ಗೊತ್ತಾಗದೆ ಮೇಷ್ಟರು ಶೆಡ್ಡಿಗೆ ಬಂದು ನೋಡುತ್ತಾರೆ, ಸೂರ್ಯನಾರಾಯಣ ಬೆಪ್ಪು ಹಿಡಿದವನಂತೆ ಕುಳಿತಿದ್ದಾನೆ. ಅವನ ಎದುರಿಗೆ ಹಣ್ಣು, ಹೂವು, ವೀಳ್ಯೆದೆಲೆ, ತಿಂಡಿಗಳ ಪೊಟ್ಟಣಗಳು.
ಮಗು ರತ್ನ ತಂದೆಯ ಭುಜ ಹಿಡಿದುಕೊಂಡು ನಿಂತಿದೆ. ‘ಯಾವಾಗ ಬಂದ್ರಿ? ನನ್ನ ಕಾಗದ ತಲ್ಪ್‌ಲಿಲ್ವೆ?’
‘ಯಾವ ಕಾಗದ? ಇಲ್ವಲ.’
‘ಇವತ್ತಿಗೆ ಐದು ದಿನವಾಯ್ತು ಬರ್‌ದು.’
ನಮ್ಮೂರಿಗೆ ಪೋಸ್ಟ್ ಬರೂದು ವಾರಕ್ಕೊಂದು ದಿನ.’
ಮೇಷ್ಟರು ಬಾಯಿ ಬಿಟ್ಟು ಮಾತನಾಡಲಿಲ್ಲ. ‘ನಂಗೇನೂ ತಿಳಿತಾ ಇಲ್ಲ. ಅದೇನು ಮಾತಾಡಿ ವೆಂಕಟೆಶಯ್‌ನೋರೇ’-ಸೂರ್ಯನಾರಾಯಣನೇ ಕೇಳಿದ.
‘ಬಾಯಿಬಿಟ್ಟು ಹ್ಯಾಗೆ ಹೇಳ್ಲಿ?’
‘ಇಲ್ಲ ಹೇಳಿ’-ಎನ್ನುವಾಗ ಅವನ ಧ್ವನಿಯಲ್ಲಿ ಆತಂಕ ಒಡೆಯುತ್ತಿತ್ತು.
‘ಪಾರ್ವತಮ್ಮ, ರಾಮಣ್ಣ, ಇಬ್ರೂ ಹೋಗಿಬಿಟ್ರು. ಇವತ್ತಿಗೆ ಏಳನೇ ದಿನ.’
‘ಏನು?’- ಬಿಟ್ಟ ಬಾಯಿ ಬಿಟ್ಟಂತೆಯೇ ಅವನು ಕೇಳಿದ.
‘ಪ್ಲೇಗು. ಊರಿಗೆ ಬಂದ ಮಾರಿ ಇವರ ಮನೆಗೇ ಮೊದಲು ಬಡೀತು. ಅಕ್ಕ ತಮ್ಮ ಇಬ್ರೂ ಒಂದೇ ದಿನ ಒಬ್ಬರ ಹಿಂದೆ ಒಬ್ರು ಹೊರಟ್ಹೋದ್ರು. ವಿಶ್ವ ಸುಧಾರಿಸ್ಕತ್ತಾ ಇದಾನೆ’-ಎಂದು ಅವರು ಎಲ್ಲವನ್ನೂ ವರ್ಣಿಸಿದರು.

ಸೂರ್ಯನಾರಾಯಣ ಮೂಕನಂ,ತೆ ಕೂತು ಕೇಳುತ್ತಿದ್ದ. ಎಲ್ಲವನ್ನೂ ಹೇಳಿ ಮುಗಿಸಿದ ಮೇಷ್ಟರು-‘ಗ್ರಾಚಾರ ಕಣ್ರೀ, ಹಣಬರಹ ಯಾರು ತಪ್ಸುಕಾಗುತ್ತೆ?’ ಎಂದಾಗ ಅವನಿಗೆ ತಡೆಯಲಾಗಲಿಲ್ಲ. ಅದುಮಿ ಹಿಡಿದುಕೊಂಡರೂ ಒಳಗಿನಿಂದ ಅಳು ಉಕ್ಕಿ ಬಂತು. ಬಿಕ್ಕಿ ಬಿಕ್ಕಿ ಅಳುತ್ತಾ ತಡೆತಡೆದು ಉಸಿರು ಬಿಟ್ಟ. ತಂದೆಯೇ ಅಳುವುದನ್ನು ಕಂಡ ರತ್ನ ತಾನೂ ಅಳಲು ಪ್ರಾರಂಭಿಸಿತು. ಅದಕ್ಕೆ ಏನು ತಿಳಿಯಿತೋ ಏನು ಬಿಟ್ಟಿತೋ!
‘ವೆಂಕಟೇಶಯ್ನೋರೇ, ನಾನು ನತದೃಷ್ಟ’-ಎಂದು ಮಗುವನ್ನು ಎಳೆದು ತಬ್ಬಿಕೊಂಡು ಅವನು ತನ್ನ ಮುಖವನ್ನು ಅದರ ಬೆನ್ನಿನಲ್ಲಿ ಹುದುಗಿಸಿಕೊಂಡ.
ಮುಂದೆ ಆಡಲು ಮೇಷ್ಟರಿಗೆ ಏನೂ ತಿಳಿಯಲಿಲ್ಲ. ಹತ್ತು ನಿಮಿಷ ಸುಮ್ಮನೆ ಕೂತಿದ್ದ ಅವರು-‘ಏಳಿ, ನಮ್ಮನೆಗೆ ಹೋಗಾಣ’ ಎಂದರು.
‘ಇಲ್ಲ. ಈಗ ಏನೂ ಬ್ಯಡ. ನಾನು ವಾಪಸು ಹೊರಡ್ತೀನಿ.’
‘ಹೊರ್‌ಡೋರಂತೆ. ಬನ್ನಿ, ಮಗೂಗಾದ್‌ರೂ ಏನಾದ್ರೂ ಒಂದಿಷ್ಟು ಹೊಟ್ಟೆಗೆ ಬೀಳಬೇಕಲ್ಲ’- ಎಂದು ಬಲವಂತ ಮಾಡಿ ಅವನನ್ನು ಎಬ್ಬಿಸಿ ಶೆಡ್ಡಿನ ಬಾಗಿಲು ಹಾಕಿ, ಬೀಸುವ ಕಲ್ಲಿನ ಮೇಲೆ ಇಟ್ಟಿದ್ದ ಬೀಗ ಮೆಟ್ಟಿಕೊಂಡು ಹೊರಟರು. ಅವರ ಶೆಡ್ಡಿಗೆ ಹೋದಮೇಲೆ ಸೂತಕದ ರತ್ನನಿಗೆ ಒಂದು ಮುತ್ತಗದೆಲೆ ಹಾಕಿ ಮೇಷ್ಟರ ಹೆಂಡತಿ ಊಟಕ್ಕೆ ಇಕ್ಕಿದರು. ಸೂರ್ಯನಾರಾಯಣ ಒಂದು ಲೋಟ ಕಾಫಿಯನ್ನೂ ಮುಟ್ಟಲಿಲ್ಲ. ರತ್ನನ ಊಟವಾದಮೇಲೆ ಅವನೇ ಎಲೆ ತೆಗೆದು ಎಸೆದು ಗೋಮಯ ಹಾಕಿ-‘ನಡೀರಿ, ದೇವಸ್ಥಾನಕ್ಕೆ ಹೋಗಿ ಮಗೂನ ನೋಡಿಕೊಂಡು ಬರಾಣ’ ಎಂದ. ಇಬ್ಬರೂ ಕೆರೆಯ ಏರಿಯ ಕಡೆಗೆ ಹೊರಟರು. ಸೂರ್ಯನಾರಾಯಣ ರತ್ನನನ್ನು ಎತ್ತಿಕೊಂಡ.

ಇವರು ದೇವಸ್ಥಾನಕ್ಕೆ ಹೋಗುವ ಹೊತ್ತಿಗೆ ನಂಜಮ್ಮ ಶೆಡ್ಡಿಗೆ ಹಿಂತಿರುಗಿದ್ದಳು. ಮೇಷ್ಟರು ಮನೆಗೆ ಒಬ್ಬ ಹುಡುಗನನ್ನು ಕಳಿಸಿ ಬೀಗದ ಕೈ ತರಿಸಿಕೊಂಡಳು. ಅಲ್ಲಿಯ ತನಕ ಚೆನ್ನಿಗರಾಯರ ಊಟ ಮೇಷ್ಟರ ಮನೆಯಲ್ಲೇ ಆಗುತ್ತಿತ್ತು. ಅವರ ಹೆಂಡತಿ ಶೆಡ್ಡಿಗೆ ತಂದು ಇಡುತ್ತಿದ್ದ ಅನ್ನವನ್ನು ನಂಜಮ್ಮ ಒಂದು ತುತ್ತು ತಿಂದರೆ ತಿನ್ನುತ್ತಿದ್ದಳು; ಇಲ್ಲದಿದ್ದರೆ ನಾಯಿಗೆ ಹಾಕಿಬಿಡುತ್ತಿದ್ದಳು. ಈಗ ಬಾಗಿಲು ತೆಗೆದು ಒಳಗೆ ಬಂದರೆ ಸೂರ್ಯನಾರಾಯಣ ತಂದು ಒಟ್ಟಿಗೆ ಇಟ್ಟಿದ್ದ ಹಣ್ಣು ಹೂವು ತಿಂಡಿಗಳು ಅಲ್ಲೇ ಇದ್ದುವು. ಅವುಗಳನ್ನು ನೋಡಲಾರದೆ ಅವಳು ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡು ಒಳಗೆ ಹೋದಳು. ಶ್ಯಾನುಭೋಗಿಕೆಯ ಲೆಕ್ಕದ ಪುಸ್ತಕಗಳನ್ನಿಡುವ ದೊಡ್ಡ ಪೆಟ್ಟಿಗೆಯಲ್ಲಿ ಪಾರ್ವತಿಯ ಮದುವೆಯ ಸೀರೆಗಳು, ಸೂರ್ಯನಾರಾಯಣನೇ ಇಟ್ಟಿದ್ದ ಬೆಂಡೋಲೆ, ಬೇಸರಿ, ಬೆಳ್ಳಿಯ ಬಳೆಗಳಿದ್ದುವು. ಎಲ್ಲವನ್ನೂ ಹೊರಕ್ಕೆ ತೆಗೆದು ಒಂದು ಬಿಳಿಯ ಚೌಕದಲ್ಲಿ ಕಟ್ಟಿ ಇಟ್ಟಳು.

ಒಂದು ಗಂಟೆಯ ಹೊತ್ತಿಗೆ ಅವರು ದೇವಸ್ಥಾನದಿಂದ ಹಿಂತಿರುಗಿ ಬಂದರು. ಸೂರ್ಯನಾರಾಯಣ ಸುಮ್ಮನೆ ನಿಂತಿದ್ದ. ಮೇಷ್ಟರೇ-‘ಅವರು ಹೊರಡ್ತಾರಂತೆ. ನಾಳೆ ಎಲ್ಲ ಏರ್ಪಾಡೂ ಮಾಡ್ಕಂಡು ನಾಡಿದ್ದು ಒಂಬತ್ತನೇ ದಿನದಿಂದಲಾದ್ರೂ ಕರ್ಮ ಶುರುಮಾಡ್‌ಬೇಕು’ ಎಂದರು. ನಂಜಮ್ಮ ಅದಕ್ಕೆ ಏನೂ ಹೇಳಲಿಲ್ಲ. ತಾನು ಕಟ್ಟಿಟ್ಟಿದ್ದ ಗಂಟನ್ನು ತಂದು ಮುಂದೆ ಇಟ್ಟು-‘ಇದು ಅವಳ ಸೀರೆ ವಡವೆ, ನಿಮಗೆ ಸೇರಿದ್ದು. ಚೀಲಕ್ಕೆ ಹಾಕ್ಕಳಿ’ ಎಂದಳು.

ಅವನಿಗೆ ಇದನ್ನು ಕಂಡು ಕಣ್ಣಿನಲ್ಲಿ ನೀರು ತುಂಬಿಕೊಂಡಿತು. ‘ಅಮ್ಮ, ನನ್ನ ಮುಖ್ಯ ಪದಾರ್ಥವೇ ಹೋದಮೇಲೆ ಇದನ್ನ ತಗಂಡು ಹೋಗಿ ಏನು ಮಾಡ್ಲಿ? ನಂಗೆ ಬ್ಯಾಡ’-ಎಂದ.
‘ಧಾರೆ ಎರೆದ ತಕ್ಷಣ ಅವ್ಳು ನಿಮ್ಮ ವಸ್ತುವಾಗಿಹೋದ್ಲು. ಅವ್ಳ ಸೀರೆ ವಡವೆ ನಮ್ಮನ್ಲಿ ಇಟ್ಕಂಡು ಏನು ಮಾಡ್ಲಿ? ಅದು ಕಣ್ಣಿಗೆ ಬೀಳ್ತಿದ್ರೆ ನಂಗೂ ತಡೆಯುಕ್ಕಾಗುಲ್ಲ.’

ಮೇಷ್ಟರೂ ಹೇಳಿದಮೇಲೆ ಅವನು ಅದನ್ನು ತೆಗೆದು ತನ್ನ ಕೈಚೀಲಕ್ಕೆ ಹಾಕಿಕೊಂಡ. ತಾನು ನಿಂತಲ್ಲಿಯೇ ಬಾಗಿ ನೆಲಮುಟ್ಟಿ ಅತ್ತೆಮ್ಮನಿಗೆ ನಮಸ್ಕರಿಸಿ ಮಗುವನ್ನೂ ಮಕಾಡೆ ಮಲಗಿಸಿ ಅಡ್ಡ ಬೀಳಿಸಿ ಒಂದು ಕೈಲಿ ಚೀಲ, ಇನ್ನೊಂದು ಕೈಲಿ ಮಗುವಿನ ಕೈಹಿಡಿದುಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ ಹೊರಟುಹೋದ. ಮೋಟಾರು ರಸ್ತೆಯ ತನಕ ಮೇಷ್ಟರೂ ಹೋದರು.

ಈಗ ರಸ್ತೆಯಲ್ಲಿ ಒಟ್ಟು ಮೂರು ಮೋಟಾರುಗಳು ತಿರುಗುತ್ತಿವೆ. ಮೊದಲಿಯಾರಿ ಬಸ್ಸಿನ ಜೊತೆಗೆ ಸಿ.ಪಿ.ಸಿ. ಕಂಪನಿಯವು ಎರಡು ನಡೆಯುತ್ತಿವೆ. ರಸ್ತೆಗೆ ಹೋದ ಹತ್ತು ನಿಮಿಷಕ್ಕೇ ಅವರಿಗೆ ತಿಪಟೂರಿನ ಕಡೆಯ ಬಸ್ಸು ಸಿಕ್ಕಿತು. ಬಸ್ಸು ಹತ್ತಿಸಿ ಹಿಂತಿರುಗಿ ಬರುವ ಹೊತ್ತಿಗೆ ನಂಜಮ್ಮ ಮೇಷ್ಟರ ಶೆಡ್ಡಿನಲ್ಲಿದ್ದಳು. ಮೇಷ್ಟರು ಅವಳ ಕೈಲಿ ಎಂದರು: ‘ಪಾರ್ವತಮ್ಮನ ಕೆಲಸ ಅವ್ರು ನಾಡಿದ್ದಿನಿಂದ ಮಾಡಿ ಚುಟುಕದಲ್ಲಿ ಮುಗುಸ್ತಾರಂತೆ. ರಾಮಣ್ಣ ಮುಂಜಿಯಾಗಿದ್ದ ಹುಡುಗ. ಎಂಥಾದದ್ರೂ ಶಾಸ್ತ್ರ ಅಂತ ಮಾಡಲೇಬೇಕು. ಈ ಜೋಯಿಸರ ಕೈಗೆ ಸಿಕ್ಕಿಹಾಕ್ಕಂಡ್ರೆ ಬೋಳಿಸಿಬಿಡ್ತಾರೆ. ಮನುಷ್ಯನ ಕಷ್ಟ ಸುಖ ಏನೂ ನೋಡುಲ್ಲ. ಎಲ್ಲಾ ಯಜಮಾನಿಕೇನೂ ನನಗೆ ಬಿಟ್ಟುಬಿಡಿ. ಒಂದು ಇಪ್ಪತ್ತೈದು ರೂಪಾಯೀಲಿ ಎಲ್ಲಾನೂ ಮುಗುಸ್ತೀನಿ. ಇಲ್ಲಿ ನಾವು ಏನು ಮಾಡಿದ್ರೂ ಅಲ್ಲಿ ಸತ್ತ ಜೀವಕ್ಕೆ ಏನೂ ಆಗುಲ್ಲ. ಬರೀ ನಮ್ಮ ಕರ್ಮ ಕಳ್ಕಳುಕ್ಕೆ ಅಂತ ನಾವು ಮಾಡೂದು.’
‘ಈಗ ದುಡ್ಡಿಗೇ ತೊಂದರೆಯಾಗಿದೆ. ನೀವೇ ಒಂದು ಹೆಜ್ಜೆ ಕುರುಬರ ಹಳ್ಳಿಗೆ ಹೋಗಿ ಬನ್ನಿ. ಗುಂಡೇಗೌಡ್ರು ಇಂಥ ಸಮಯ ಅಂದ್ರೆ ಇಲ್ಲ ಅನ್ನುಲ್ಲ. ಮುಂದಿನ ವರ್ಷ ಕಂದಾಯಕ್ಕೆ ಹಾಕ್ಕಂಡ್ರೆ ಆಗುತ್ತೆ.’
ಮೇಷ್ಟರು ಆಗಲೇ ಕುರುಬರಹಳ್ಳಿಗೆ ಹೊರಟರು. ನಂಜಮ್ಮ ತನ್ನ ಶೆಡ್ಡಿಗೆ ಬಂದಳು.

– ೭ –

ಅದೇ ದಿನ ಸಂಜೆಯ ಹೊತ್ತಿಗೆ ಗಾಡಿಯಲ್ಲಿ ಕುಳಿತು ಅಕ್ಕಮ್ಮ, ಕಲ್ಲೇಶ, ಇಬ್ಬರೂ ಬಂದರು. ಅಕ್ಕಮ್ಮ ಒಂದೇಸಮನೆ ಅಳುತ್ತಿದ್ದಳೆಂಬುದು ಗಾಡಿಯಿಂದ ಇಳಿಯುವಾಗಲೇ ಕಾಣುತ್ತಿತ್ತು. ಕಲ್ಲೇಶನ ಮುಖವೂ ಮ್ಲಾನವಾಗಿತ್ತು. ಶೆಡ್ಡಿನ ಒಳಗೆ ಬಂದ ಅಕ್ಕಮ್ಮ ಅಳುತ್ತಲೇ ಎಂದಳು: ‘ನಂಜಾ, ನಾವೆಲ್ಲಾ ಸತ್ತುಹೋಗಿದ್ದೆವೆ? ಇವತ್ತಿಗೆ ಏಳು ದಿನ ಆಯ್ತಂತಲ. ನಮಗೆ ಹೇಳಿಕಳುಸ್ಲೇಬ್ಯಾಡ್‌ವೇನೆ?’
ಈ ಸಮಯದಲ್ಲಿ ತನ್ನ ತೌರಿನ ಬಂಧುಗಳನ್ನು ಕಂಡ ನಂಜಮ್ಮನಿಗೂ ಅಳು ಬಂತು. ಆದರೆ ಸಮಾಧಾನ ಮಾಡಿಕೊಂಡು ಹೇಳಿದಳು: ‘ಯಾವ ಸಂತೋಷದ ಸಮಾಚಾರ ಅಂತ ಹೇಳಿಕಳುಸ್ಲಿ ಹೇಳು.’
‘ಕಷ್ಟ ಸುಖ ಅಂದ್ರೆ ನಾವು ಆಗ್‌ಲೇಬ್ಯಾಡವೆ? ನಾವೇನು ದೂರವಾಗಿಬಿಟ್ಟೆವೆ? ಏಳು, ಒಂದೆರಡು ತಿಂಗಳು ಊರಲ್ಲಿ ಇದ್ದು ಬರುವಂತೆ. ಇದೆಲ್ಲ ಸ್ವಲ್ಪ ಮರೆಯುತ್ತೆ’-ಕಲ್ಲೇಶ ಎಂದ.

ನಂಜಮ್ಮ ತಕ್ಷಣ ತೌರಿಗೆ ಹೋಗುವ ಸಾಧ್ಯತೆಯಂತೂ ಇಲ್ಲ. ವಿಶ್ವ ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾನೆ. ನಾಡಿದ್ದಿನಿಂದ ಚುಟಕದಲ್ಲಾದರೂ ರಾಮಣ್ಣನ ಕರ್ಮವಾಗಬೇಕು. ಅಲ್ಲದೆ ತೌರಿಗೆ ಹೋಗಲು ಅದೇನೋ ಅವಳಿಗೇ ಇಷ್ಟವಿಲ್ಲ. ಅವಳು ಅಲ್ಲಿಗೆ ಹೋಗಿ ವರ್ಷಗಳೇ ಆಗಿಹೋಗಿವೆ. ಆದರೆ ಕಲ್ಲೇಶ ಬಲವಂತ ಮಾಡಿದ. ಅವನು, ಅಕ್ಕಮ್ಮ, ಇಬ್ಬರೂ ದೇವಸ್ಥಾನಕ್ಕೆ ಹೋಗಿ ವಿಶ್ವನನ್ನು ನೋಡಿಕೊಂಡು ಬಂದರು. ಅಕ್ಕಮ್ಮ, ಉಳಿದುಕೊಂಡ ಆ ಒಬ್ಬ ಮರಿಮಗನನ್ನು ತಬ್ಬಿ ಕಣ್ಣೀರು ಹಾಕಿದಳು.

ಹನ್ನೊಂದನೆಯ ದಿನ ಸೂತಕ ಕಳೆಯುವ ತನಕ ಇಬ್ಬರೂ ಅಲ್ಲಿಯೇ ಉಳಿದರು. ಅಕ್ಕಮ್ಮ ಕಲ್ಲೇಶರಿಗೆ ಮೂರನೆಯ ದಿನ ಸೂತಕ ಹೋಗಿದ್ದುದರಿಂದ ಅಕ್ಕಮ್ಮ ಈ ಶೆಡ್ಡಿನಲ್ಲೇ ಅಡಿಗೆ ಶುರುಮಾಡಿದಳು. ಕಲ್ಲೇಶ ರೇವಣ್ಣಶೆಟ್ಟಿಯ ಶೆಡ್ಡು ಹುಡುಕಿಕೊಂಡು ಹೋದ.
ಅಕ್ಕಮ್ಮ ನಂಜುವಿಗೆ ಹೇಳಿದಳು: ‘ನೋಡು, ಕಂಟಿ ಈಗಲೂ ಊರಲ್ಲಿರುಲ್ಲ. ಮೊದ್‌ಲಿತ್ತಲ್ಲ ಆ ಕುದುರೆ, ಅವನು ಕಾಶಿಗೆ ಹೋದ ನಾಲ್ಕು ವರ್ಷಕ್ಕೆ ಸತ್ತುಹೋಯ್ತು. ಈಗ ಇನ್ನೊಂದು ಕುದುರೆ ತಗಂಡಿದಾನೆ. ಎಲ್ಲೆಲ್ಲೋ ತಿರುಗ್ತಿರ್ತಾನೆ. ಕಾಶಿಯಿಂದ ಬಂದ ಮೇಲೆ ಎಂಥೆಂಥೆದೋ ಇನ್ನೂ ಹೊಸ ಮಂತ್ರ ತಂತ್ರ ಕಲ್ತುಕಂಡಿದಾನಂತೆ. ಮಾಟ ಮದ್ದು ಅಂತ ಚನ್ನರಾಯಪಟ್ಣ, ಶಾಂತಿಗ್ರಾಮ, ಹಾಸನ, ಅರಕಲುಗೂಡು ಆ ಕಡೆಯೋರೆಲ್ಲ ಕರ್ಕಂಡು ಹೋಗ್ತಾರೆ. ಅವ್ನು ಊರು ಬಿಟ್ಟು ಇಪ್ಪತ್ತು ದಿನವಾಯ್ತು.’
ಆಮೇಲೆ ಹೇಳಿದಳು: “ಕುರುಬರಹಳ್ಳೀ ನಿಂಗೇಗೌಡ ಅನ್ನೋನ ಮಗಳ್ನ ನಮ್ಮೂರ ಕೋಳಿ ಚಿಕ್ಕಣ್ಣನ ತಮ್ಮಂಗೆ ಕೊಟ್ಟಿಲ್ವೆ? ನಿಂಗೇಗೌಡ ನೆನ್ನೆ ದಿನ ನಮ್ಮೂರಿಗೆ ಬಂದಿದ್ನಂತೆ. ಇವತ್ತು ಬೆಳಿಗ್ಗೆ ಚಿಕ್ಕಣ್ಣನೇ ಬಂದು-‘ನಿಮ್ಮ ಮಮ್ಮಗಳ ಎಲ್ಡು ಮಕ್ಳೂ ತೀರ್ಕಂಡ್ವಂತೆ. ಯಲ್ಲಾ ಊರು ಬಿಟ್ಟವ್ರಂತೆ. ನೀವು ಹ್ವಾಗಾಕಿಲ್ವಾ?’ ಅಂತ ಕೇಳ್ದ. ನಂಗೆ ಇದೇನು ಸುಳ್ಳೋ ನಿಜವೋ ಅನ್ನುಸ್ತು. ನಮ್ಮ ಬೀಗ್ರೇ ಅಂದ್ರು ಕಣವ್ವ ಅಂದ. ಕಲ್ಲೇಶ ಆಗಲೇ ಹೊನ್ನನಿಗೆ ಹೇಳಿ ಗಾಡಿ ಕಟ್ಟುಸ್ದ. ಹ್ವರಟೇಬಿಟ್ವು.”
‘ಅಣ್ಣಯ್ಯಂಗೆ ಇನ್ನೆಲ್ಲೂ ಹೆಣ್ಣು ಹುಡುಕ್‌ಲಿಲ್ವೆ?’
“ಕಂಟಿ ಒಂದು ಕಡೆ ಗೊತ್ತುಮಾಡಿದ್ದ. ಆನೆಕೆರೆ ಹತ್ರದ ಆಲನಹಳ್ಳೀದು. ಈ ಉಮ್ಮೆಮರಳಿಗೆ ಗೊತ್ತಾಗಿ ಅವ್ಳು ಒಳಗೇ ಕದ್ದು ಅಪ್ಪುಂಗೆ ಕಾಗದ ಬರದಿದ್ಲು ಅಂತ ಕಾಣುತ್ತೆ. ಅವಳ ಅಪ್ಪ ಬಂದು ಕಲ್ಲೇಶನ ಕೈ ಹಿಡ್‌ಕಂಡು ಕಣ್ಣೀರು ಹಾಕ್ತಾ, ‘ನಿನ್ನ ಕಷ್ತಕಾಲದಲ್ಲಿ ಮಗ ಅಂತ ತಿಳ್ಕಂಡು ನಾನು ಸೇವೆಮಾಡಿದೀನಿ. ದೇವ್ರು ಕೊಡ್‌ಲಿಲ್ಲ, ಮಕ್‌ಳಾಗ್ಲಿಲ್ಲ. ಇನ್ನೊಂದು ಮದ್ವೆ ಮಾಡ್ಕಬ್ಯಾಡ’ ಅಂದ. ಅಲ್ಲೀತಂಕ ಮಾಡ್ಕತೀನಿ ಅಂತಿದ್ದ ಇವ್ನು ಮನಸ್ಸು ಬದಲಾಯಿಸಿಬಿಟ್ಟ. ನಂಗೆ ಮದ್ವೆ ಬ್ಯಾಡ ಅಂದ್ಬಿಟ್ಟ. ನಾನು, ಕಂಟಿ, ಎಷ್ಟು ಹೇಳಿದ್ರೂ ಕೇಳ್ಲಿಲ್ಲ.”
ಮೇಷ್ಟರ ನಿರ್ದೇಶನದಲ್ಲಿ ರಾಮಣ್ಣನ ಕರ್ಮ ಇಪ್ಪತ್ತೈದು ರೂಪಾಯಿಯಲ್ಲೇ ಮುಗಿಯಿತು. ಸೂತಕ ಕಳೆದಮೇಲೆ ನಂಜಮ್ಮ ವಿಶ್ವನನ್ನು ಎತ್ತಿಕೊಂಡು ಬಂದಳು. ಅವನು ಈಗ ಎದ್ದು ನಿಧಾನವಾಗಿ ಹೆಜ್ಜೆ ಇಡುವಂತೆ ಆಗಿದ್ದ. ಮೈ ಕೈ ತುಂಬಿಕೊಂಡು ಬಸವನಂತೆ ಬೆಳೆದಿದ್ದ ಹುಡುಗ ಈಗ ಬಡಕಲು ಕರುವಿನಂತೆ ಇಳಿದುಹೋಗಿದ್ದ. ಇವರು ಬಂದ ಬೆಳಿಗ್ಗೆಯೇ ಊರಿನಿಂದ ತಂದಿದ್ದ ಗಾಡಿಯನ್ನು ವಾಪಸು ಕಳಿಸಿಬಿಟ್ಟರು. ಈಗ ಕಲ್ಲೇಶ ಮತ್ತೆ ಕೇಳಿದ: ‘ನಂಜಾ, ಒಂದು ಕಮಾನು ಗಾಡಿ ಬಾಡಿಗೆಗೆ ಮಾಡ್ತೀನಿ. ನಡಿ ಊರಿಗೆ ಹೋಗಾಣ.’

ಹೋಗಬಾರದೆಂದು ಅವಳ ಮನಸ್ಸು. ಆದರೆ ಒರಟುತನ ಮಾಡಬಾರದು. ಅತ್ತಿಗೆ ಕೆಟ್ಟವಳಾಗಿರಬಹುದು. ಅಣ್ಣ ತನಗೇನು ಕೆಟ್ಟದ್ದು ಮಾಡಿಲ್ಲ. ಹೆಣ್ಣು ಕೊಡಿ ಅಂತ ಕೇಳಿದರು. ನಾನು ಇಲ್ಲ ಅಂದೆ. ಸಿಟ್ಟುಮಾಡಿಕೊಂಡು ಮದುವೆಗೆ ಬರಲಿಲ್ಲ. ಈಗ ಅವರೇ ಬಂದು ಕರೀತಿದಾರೆ. ಯಾಕೆ ಹೋಗಬಾರದು? ಆದರೆ ಅದು ಕಂದಾಯದ ವಸೂಲಿಯ ಕಾಲ. ಇಷ್ಟು ದಿನವೂ ಆ ಕಡೆ ಗಮನವೇ ಕೊಟ್ಟಿಲ್ಲ. ತಾನು ತೌರಿಗೆ ಹೋದರೆ ಗಂಡ ಒಬ್ಬರೇ ಇಲ್ಲಿ ಇರುವುದೂ ಇಲ್ಲ; ಸರ್ಕಾರದ ಕೆಲಸ ಮಾಡುವುದೂ ಇಲ್ಲ. ಅವಳು ಹೇಳಿದಳು: ‘ಅಕ್ಕಮ್ಮ, ಇಲ್ಲಿ ಇರ್ಲಿ. ಈ ಕಿಸ್ತಿನ ವಸುಲಿ ಇರ್ಸಾಲು ಆದಮೇಲೆ ನಾನು ಅಕ್ಕಮ್ಮನ ಜೊತೆ ಬತ್ತೀನಿ. ಆಮೇಲೆ ಹತ್ತು ಹದಿನೈದು ದಿನ ಇದ್ದು ಮುಂದಿನ ಕಿಸ್ತಿನ ವಸೂಲಿ ಶುರುವಾಗೂ ಹೊತ್ತಿಗೆ ವಾಪಸು ಬಂದುಬಿಡಬೇಕು.’
ಕಲ್ಲೇಶ ಒಬ್ಬನೇ ನಡಿಗೆಯಲ್ಲಿ ಊರಿಗೆ ಹಿಂತಿರುಗಿದ.

ಅಧ್ಯಾಯ ೧೪
– ೧ –

ಆ ಬಾರಿ ಗಂಡಸಿ, ದುದ್ದದ ಕಡೆ ಹಳ್ಳಿಗಳಿಗೆ ಹೋದ ಗಂಗಮ್ಮ ಅಪ್ಪಣ್ಣಯ್ಯರು ಒಂದೂವರೆ ತಿಂಗಳ ನಂತರ ಊರಿಗೆ ಹಿಂತಿರುಗಿದರು. ಆದರೆ ಎಲ್ಲರೂ ಊರು ಬಿಟ್ಟಿದ್ದಾರೆಂಬ ಸಮಾಚಾರ ಇನ್ನೂ ಊರಿಗೆ ಹತ್ತು ಮೈಲಿ ದೂರದಲ್ಲಿರುವಾಗಲೇ ತಿಳಿಯಿತು. ಊರಿಗೆ ಬಂದರೆ ಗಳು, ಸೋಗೆ ಹೊಂದಿಸಿ ಶೆಡ್ಡು ಹಾಕಬೇಕು. ಪಾತ್ರೆ ಪರಟಿಗಳೆಲ್ಲ, ಬಿಟ್ಟ ಊರಿನ ಗುಡಿಯ ಕೋಣೆಯಲ್ಲಿವೆ. ಬಾಗಿಲು ತೆಗೆದು ಅವನ್ನು ತರಬಹುದೋ ಬಾರದೋ ಎಂಬ ಅನುಮಾನ ಬೇರೆ. ಈ ತೊಂದರೆಯೇ ಬೇಡವೆಂದ ಅವರು ಪುನಃ ಪಶ್ಚಿಮಾಭಿಮುಖವಾಗಿ ಹೊರಟುಬಿಟ್ಟರು. ಈ ಹಿಂದೆ ತಾಗಲಾಡದ ಸುತ್ತುಗಳನ್ನೆಲ್ಲ ತಿರುಗಿ ಹಬ್ಬನಘಟ್ಟ, ಹಾರನಹಳ್ಳಿಗಳ ಸೀಮೆಯನ್ನೆಲ್ಲ ಸುತ್ತಿ ನಿಧಾನವಾಗಿ ಊರು ಮುಟ್ಟುವ ಹೊತ್ತಿಗೆ ಮೂರು ತಿಂಗಳು ಕಳೆದಿತ್ತು. ಎರಡು ಹದ ಮಳೆಯಾಗಿ ಎಲ್ಲರೂ ಶೆಡ್ಡು ಬಿಟ್ಟು ಊರಿಗೆ ಹಿಂತಿರುಗಿದ್ದರು.

ಇಬ್ಬರು ಮೊಮ್ಮಕ್ಕಳೂ ಒಂದೇ ದಿನ ಸತ್ತದ್ದನ್ನು ಕೇಳಿದ ಗಂಗಮ್ಮನಿಗೆ ಸೊಸೆಯನ್ನು ಬೈಯಬೇಕೆನ್ನಿಸುವಷ್ಟು ಕೋಪ ಬಂತು. ಆದರೆ ಅವಳ ಎದುರು ನಿಂತು ಬಾಯಿ ತೆರೆಯಲು ಒಂದು ವಿಧವಾದ ಭಯ. ಸೊಸೆಯ ಮನೆಗೆ ಹೋದಾಗ ಅವಳಿಗೇ ತಿಳಿಯದಂತೆ ಅಳು ಬಂದುಬಿಟ್ಟಿತು. ‘ಆ ಹೆಂಡರು ಸತ್ತೋನಿಗೆ ಹೆಣ್ಣು ಕೊಟ್ರೆ ಅದು ಉಳಿಯುತ್ತಾ? ಆಗ ನನ್ನಾದ್ರೂ ಹೇಳಿ ಕೇಳಿ ನೀನು ಮದುವೆ ಗೊತ್ತು ಮಾಡ್‌ದ್ಯಾ?’-ಎಂದು ತನ್ನ ದುಃಖವನ್ನು ಪ್ರಕಟಿಸಿದಳು. ಇಬ್ಬರು ಮಕ್ಕಳೂ ಬದುಕಿದ್ದಾಗ ಅವಳಿಗೂ ಅವರಿಗೂ ಹೆಚ್ಚು ಸಂಪರ್ಕ ಇರಲಿಲ್ಲ. ಅವಳು ಆಗಾಗ್ಗೆ ಊರು ಬಿಟ್ಟು ಹೋಗುತ್ತಿದ್ದಳು. ಊರಿನಲ್ಲಿದ್ದಾಗ ಇವರ ಮನೆಗೆ ಬರುತ್ತಿರಲಿಲ್ಲ. ಮಕ್ಕಳು ಅವಳ ಮನೆಗೆ ಹೋಗುತ್ತಿರಲಿಲ್ಲ. ಒಂದೊಂದು ದಿನ ಸೊಪ್ಪಿನ ಮಡಿಯ ಹತ್ತಿರವೋ ಕೆರೆಯ ಹತ್ತಿರವೋ ಪಾರ್ವತಿ ಸಿಕ್ಕಿದರೆ, ‘ನಿಮ್ಮಮ್ಮ ವಸೂಲಿಗೆ ಹೋಗಿದ್ಲಂತಲಾ ಕುರುಬರಹಳ್ಳಿಗೆ, ಮಸೀಕಾಣಿಕೆ ಎಷ್ಟು ಸಿಕ್ತಂತೆ?’ ಎಂದು ಕೇಳುತ್ತಿದ್ದಳು. ‘ನಂಗೇನು ಗೊತ್ತಜ್ಜಿ?’ ಎಂದು ಅವಳು ಉತ್ತರ ಕೊಡುವುದರಲ್ಲಿ ಅಜ್ಜಿ ಮೊಮ್ಮಗಳ ಪ್ರೀತಿ ಮುಗಿಯುತ್ತಿತ್ತು. ‘ನೀನು ಇಂಗ್ಲೀಷ್ ಓದಿ ಶೇಕ್‌ದಾರಿಕೆ ಮಾಡ್ತೀಯಂತೆ. ನಂಗೊಂದು ಕೆಂಪಿನ ಪಟ್ಟೆಸೀರೆ ತಂದ್‌ಕೊಡ್ತೀ ಏನೋ?’ ಎಂದರೆ, ‘ಆಗ್ಲಿ ಕಣಜ್ಜಿ’ ಎಂದು ರಾಮಣ್ಣ ಹೇಳುವುದರಲ್ಲಿ ಸಂಭಾಷಣೆ ಕೊನೆಯಾಗುತ್ತಿತ್ತು. ಆದರೆ ಈಗ ಅವಲಿಗೆ ಅದೇಕೋ ಅವರಿಬ್ಬರ ನೆನಪು ಕಾದಲು ಶುರುವಾಯಿತು. ಮೂರು ನಾಲ್ಕು ದಿನ ಮೊಮ್ಮಕ್ಕಳನ್ನು ನೆನೆಸಿಕೊಂಡು ಸೊಸೆಯನ್ನು ಬೈಯುವ ಮೂಲಕ ತನ್ನ ದುಃಖವನ್ನು ವ್ಯಕ್ತಪಡಿಸುತ್ತಾ ಅವಳೂ ಗುಡಿಗೆ ಬಂದವರ ಹತ್ತಿರ ಪೇಚಾಡಿಕೊಂಡಳು. ಹೆಚ್ಚು ದುಃಖಪಟ್ಟವನು ಅಪ್ಪಣ್ಣಯ್ಯ. ಪಾರ್ವತಿಯ ಮದುವೆಯಲ್ಲಿ ಅವನು ಮೈ ಮುರಿದು ದುಡಿದಿದ್ದ. ಅದರಿಂದಲೋ ಏನೋ, ಅವನಿಗೆ ಅವಳ ಮೇಲೆ ತುಂಬ ಪ್ರೀತಿ ಹುಟ್ಟಿತ್ತು. ರಾಮಣ್ಣ ಅವನ ಕ್ಲಾಸಿಗೇ ಮೊದಲನೆಯವನಾಗಿ ಓದುತ್ತಾನೆಂದು ಕೇಳಿದುದರಿಂದ ಅವನ ಮೇಲೆ ಅಭಿಮಾನ ಹುಟ್ಟಿತ್ತು. ಶೇಕ್‌ದಾರರಿಗೇ ಲೆಕ್ಕ ಬರೆದುಕೊಟ್ಟಿದ್ದ ಹುಡುಗ ಅವನು. ಇಂಗ್ಲಿಷ್ ಕಲಿತು ಮುಂದೆ ಶೇಕ್‌ದಾರಿ ಮಾಡಬಹುದು. ಹೆಚ್ಚಾಗಿ ಅವನೊಡನೆ ಮಾತನಾಡಿರದಿದ್ದರೂ, ಅವು ತನ್ನವೇ ಮಕ್ಕಳು ಎಂಬ ಭಾವ ಅವನಲ್ಲಿ ಅದು ಹೇಗೋ ಬೆಳೆದಿತ್ತು. ಈಗ ಅಪ್ಪಣ್ಣಯ್ಯ ಹೋಗಿ ಅತ್ತಿಗೆಯ ಮುಂದೆ ನಿಂತು ಕಣ್ಣೀರು ಹಾಕಿ-‘ನಾವು ಪಾಪಿ ಮುಂಡೇಮಕ್ಳು. ಉಳಿಸ್ಕಳೂದು ಹಣೇಲಿ ಬರೀಲಿಲ್ಲ’ ಎಂದ.

ಆ ಬಾರಿ ಮಳೆ ಬೆಳೆ ಚೆನ್ನಾಗಿ ಆಗಿತ್ತು. ಪಹಣಿ ಲೆಕ್ಕ ಬರೆದು ಮುಗಿದಿತ್ತು. ಒಂದು ದಿನ ಮೇಷ್ಟರ ಹೆಂಡತಿ ಬಂದು ನಂಜಮ್ಮನಿಗೆ ಹೇಳಿದರು: ‘ನೋಡಿ, ಶೃಂಗೇರಿ ಶಾರದಮ್‌ನೋರ ದರ್ಶನಮಾಡಿ ಕುಂಕುಮಾರ್ಚನೆ ಮಾಡುಸ್ತೀನಿ ಅಂತ ನಾನು ನಿಮ್ಮ ವಿಶ್ವನ ಹೆಸರಿನಲ್ಲಿ ಹರಕೆಗಟ್ಟಿದ್ನಲ. ಅದು ನಮ್ಮನೆ ದೇವರಗೂಡಲ್ಲೇ ಇದೆ. ಇನ್ನು ಎಂಟು ದಿನಕ್ಕೆ ನವರಾತ್ರಿ ಬರುತ್ತಲಾ, ಆಗ ನೀವು ಮಗು ಕರ್ಕಂಡು ಹೋಗಿ ಬಂದುಬಿಡಿ. ನಾನು ಹರಕೆ ಕಟ್ಟಿದ ದಿನವೇ ಅವನಿಗೆ ಜ್ವರ ಇಳೀತು. ದೇವರ ಹರಕೆ ನಿಲ್ಲುಸ್ಕಾಬಾರ್ದು.’

ತಾವು ಶೃಂಗೇರಿಗೆ ಹೋಗಿಬರಬೇಕೆಂದು ನಂಜಮ್ಮ ನಿಶ್ಚಯಿಸಿದಳು. ಯಾವ ದೇವರ ಶಕ್ತಿ ಹೇಗಿರುತ್ತೆಯೋ! ಅದನ್ನು ಮರೆತು ಕೂತರೆ ನಾಳೆ ಏನಾದರೂ ಆಪತ್ತು ಬರಬಹುದು. ನನಗಿರೂದು ವಿಶ್ವ ಒಂದೇ ಬಳ್ಳಿ. ಹೋಗಲೇಬೇಕು. ಅಲ್ಲಿಗೆ ಹೋಗುವ ಮಾರ್ಗವನ್ನು ಮೇಷ್ಟರು ಹೇಳಿದರು. ತಿಪಟೂರಿನಿಂದ ರೈಲು ಹತ್ತಿ ತರೀಕೆರೆಯಲ್ಲಿ ಇಳಿಯಬೇಕು. ಮಧ್ಯೆ ಬೀರೂರಿನಲ್ಲಿ ಬೇರೆ ಗಾಡಿಗೆ ಬದಲಾಯಿಸಬೇಕು. ರಾತ್ರಿ ತರೀಕೆರೆ ಸ್ಟೇಷನ್ನಿನಲ್ಲಿ ಮಲಗಿದ್ದು, ಬೆಳಿಗ್ಗೆ ಹೊರಡುವ ಸಣ್ಣ ರೈಲಿನಲ್ಲಿ ನರಸಿಂಹರಾಜಪುರಕ್ಕೆ ಹೋಗಬೇಕು. ಅಲ್ಲಿಂದ ಶೃಂಗೇರಿಗೆ ಮೋಟಾರಿದೆ. ಕೊಪ್ಪದ ಮೇಲೆ ಹೋಗುತ್ತೆ. ತಿಪಟೂರಿನಿಂದ ತರೀಕೆರೆಗೆ ಒಬ್ಬರಿಗೆ ಹದಿನೈದಾಣೆ. ಅಲ್ಲಿಂದ ನರಸಿಂಹರಾಜಪುರಕ್ಕೆ ಆರೂ ಮುಕ್ಕಾಲಾಣೆ. ಮುಂದೆ ಮೋಟಾರಿಗೆ ಎರಡು ರೂಪಾಯಿ. ಶೃಂಗೇರಿಯಲ್ಲಿ ಯಾತ್ರಾರ್ಥಿಗಳಿಗೆ ಇಳಿದುಕೊಳ್ಳಲು ಛತ್ರವಿದೆ. ಮಠದಲ್ಲಿ ಎರಡು ಹೊತ್ತೂ ಭೋಜನ ಸೌಕರ್ಯವಿದೆ.

ವಿಶ್ವನ ಜೊತೆ ತಾನು ಹೊರಡುವುದಂತೂ ಸರಿಯೆ. ರೈಲು ಪ್ರಯಾಣಮಾಡಿ, ದೂರ ದೇಶ ತಿರುಗಿರುವ ಯಾರಾದರೂ ಒಬ್ಬರು ಜೊತೆಗೆ ಬೇಕು. ಈಗ ಅಷ್ಟೊಂದು ದುಡ್ಡು ಹೊಂದಿಸುವುದೂ ಕಷ್ಟ. ಕುಂಕುಮಾರ್ಚನೆಗೆ ಐವತ್ತು ರೂಪಾಯಿ ಕೊಡಬೇಕು. ಅಪ್ಪಣ್ಣಯ್ಯ ತಾನೇ ಬಂದು ಒಂದು ದಿನ ಗುಟ್ಟಿನಲ್ಲಿ ಹೇಳಿದ: ‘ಯಾರಿಗೂ ಹೇಳ್‌ಬ್ಯಾಡಿ. ನನ್ನ ಹತ್ರ ಇಪ್ಪತ್ತು ರೂಪಾಯಿ ಇದೆ. ಕೊಟ್ಟಿರ್ತೀನಿ. ಆಮ್ಯಾಲೆ ನಾನು ಕೇಳಿದಾಗ ಕೊಡೂರಂತೆ. ಜೊತೆಗೆ ನಾನೂ ಬತ್ತೀನಿ.’ ದೇಶಾವರಿ ಮಾಡುವಾಗ ಸಿಕ್ಕಿದ ರಾಗಿ ಕಾಳುಗಳನ್ನು ಅವರು ಅಲ್ಲಲ್ಲಿಯೇ ಮಾರಿಬಿಡುತ್ತಿದ್ದರು. ಕೆಲವು ಸಲ ಅಪ್ಪಣ್ಣಯ್ಯ ತಾಯಿಗೆ ಕಾಣದಂತೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಮಾರಿ ಎಲೆ ಹೊಗೆಸೊಪ್ಪಿನ ದುಡ್ಡು ಮಾಡಿಕೊಳ್ಳುತ್ತಿದ್ದ.

ಇಪ್ಪತ್ತು ರೂಪಾಯಿಯಲ್ಲಿ ಎಲ್ಲವೂ ಸಾಕಾಗುವುದಿಲ್ಲ. ಮಗಳ ಮದುವೆ, ನಂತರ ಆದ ಕೆಲಸಗಳು, ಹೀಗೆ ನಂಜಮ್ಮ ಇದ್ದಬದ್ದದ್ದನ್ನೆಲ್ಲ ಖರ್ಚುಮಾಡಿದ್ದಳು. ಕುರುಬರಹಳ್ಳಿಯವರನ್ನು ಎಷ್ಟೆಂದು ಕೇಳುವುದು? ಅಪ್ಪಣ್ಣಯ್ಯ ಹೇಳಿದ: ‘ಇಲ್ಲಿಂದ ತಿಪಟೂರಿಗೆ ನಡ್ಕಂಡೇ ಹೋಗ್‌ಭೌದು. ನರಸಿಂಹರಾಜಪುರದ ತಂಕ ರೈಲು ಆಗುತ್ತೆ. ಮುಂದಕ್ಕೆ ಮೋಟಾರು ದಾರೀನ ಮತ್ತೆ ನಡೀಭೌದು. ಇಪ್ಪತ್ತು ರೂಪಾಯಿ ಸಾಕಾಗುತ್ತೆ.’

ಅಷ್ಟು ದುಡ್ಡು ಸಾಕು. ನಂಜಮ್ಮ, ವಿಶ್ವ, ಅಪ್ಪಣ್ನಯ್ಯ ಹೊರಡುವುದೆಂದು ತೀರ್ಮಾನಿಸಿದರು. ಆದರೆ ಚೆನ್ನಿಗರಾಯರು ಬಿಟ್ಟಾರೆಯೆ? ತಾವೂ ಬರುವುದಾಗಿ ಹಟ ಹಿಡಿದರು. ಮತ್ತೆ ದುಡ್ದು ಹೊಂದಿಸುವುದೆಲ್ಲಿ? ಅಲ್ಲದೆ ಅವರು ಇವರ ಹಾಗೆ ನಡೆಯುತ್ತಾರೆಂಬ ಭರವಸೆ ಇಲ್ಲ. ‘ನಾನೆಲ್ಲೋ ದುಡ್ಡು ತತ್ತೀನಿ ನಿಂಗ್ಯಾಕೆ?’-ಎಂದರು. ‘ಯಾರ ಹತ್ರವೂ ಕಂದಾಯದ ರಶೀತಿ ಬರ್‌ದು ತರಕೂಡದು’-ಅವಳು ನಿರ್ಬಂಧ ಹಾಕಿದಳು. ‘ಇಲ್ಲ’ವೆಂದು ಅವರು ಒಪ್ಪಿಕೊಂಡರು. ಅಂತೂ ಎಲ್ಲಿ ದುಡ್ಡು ಹೊಂದಿಸಿಕೊಂಡರೋ ಏನೋ, ಅವರ ಖರ್ಚೇ ಬೇರೆ. ಇವರು ಮೂವರ ಖರ್ಚೇ ಬೇರೆ. ನಂಜಮ್ಮ ಐದು ಸೇರು ಹುರಿಟ್ಟು ಬೀಸಿದಳು. ತಾವು ದೇಶಾವರಿ ಮಾಡಿ ತಂದಿದ್ದ ಪೈಕಿ ಅಪ್ಪಣ್ಣಯ್ಯ ಎಂಟು ಸೇರು ಭತ್ತವನ್ನು ಅಮ್ಮನಿಗೆ ಕಾಣದಂತೆ ತಂದುಕೊಟ್ಟ. ಅವಲಕ್ಕಿ ಹಾಕಿಸಿ ನಂಜಮ್ಮ ಅದನ್ನೂ ಕಟ್ಟಿಕೊಂಡಳು. ಯಾತ್ರೆಗೆ ಹೊರಡಲು ಗಂಗಮ್ಮನಿಗೂ ಆಶೆ. ಆದರೆ ಈ ಸೊಸೆಯ ಜೊತೆ ಹೋಗುವುದು ಬೇಡ. ಮಗನನ್ನೂ ಹೋಗಬೇಡವೆಂದಳು. ಆದರೆ ಖರ್ಚೆಲ್ಲ ಅತ್ತಿಗೆ ಕೊಡುವಾಗ ಯಾಕೆ ಹೋಗಬಾರದೆಂದು ಅವನು ಉತ್ತರ ಹೇಳಿ ಹೊರಟ.

ಪ್ಲೇಗು ಹುಶಾರಾದ ಈ ಆರು ತಿಂಗಳಿನಲ್ಲಿ ನಂಜಮ್ಮ ವಿಶ್ವನಿಗೆ ಸಾಕಷ್ಟು ಹಾಲು ತುಪ್ಪದ ಆರೈಕೆ ಮಾಡಿದ್ದಳು. ಅವನು ಮೊದಲಿನಿಂದಲೂ ಶಕ್ತಿವಂತ ಹುಡುಗ. ಒಂದು ದಿನ ಬೆಳಗಿನ ಜಾವಕ್ಕೆ, ಎಂದರೆ ಹಿಂದೆ ಅವಳು ಮುತ್ತುಗದ ಎಲೆಗೆ ಹೊರಡುತ್ತಿದ್ದುದಕ್ಕಿಂತ ಮುಂಚೆ, ನಂಜಮ್ಮ ವಿಶ್ವ ಅಪ್ಪಣ್ಣಯ್ಯರು ರೊಟ್ಟಿ ಚಟ್ನಿಗಳನ್ನು ಕಟ್ಟಿಕೊಂಡು ಹೊರಟರು. ಮೋಟಾರಿನವನು ಗುರುತಿರುವುದರಿಂದ ತಾವು ಅದರಲ್ಲಿ ತಿಪಟೂರಿಗೆ ಬಂದು ಇವರನ್ನು ಕೂಡಿಕೊಳ್ಳುವುದಾಗಿ ಚೆನ್ನಿಗರಾಯರು ಎಂದರು. ರೊಟ್ಟಿಯ ಬುತ್ತಿ, ಹುರಿಟ್ಟು, ಅವಲಕ್ಕಿ, ಬೆಲ್ಲ, ಹುಣಿಸೆಹಣ್ಣು, ನಾಲ್ಕು ಸುಲಿದ ತೆಂಗಿನಕಾಯಿ, ಎರಡು ಸೇರು ಅಕ್ಕಿ, ಎರಡು ಪಾತ್ರೆ ಒಂದೆರಡು ಬಟ್ಟೆಗಳನ್ನು, ಒಂದು ಪುಟ್ಟ ಗೋಣೀಚೀಲಕ್ಕೆ ತುಂಬಿ ಕಟ್ಟಿ ತಲೆಯಮೇಲೆ ಇಟ್ಟುಕೊಂಡು ಅಪ್ಪಣ್ಣಯ್ಯ ಹೊರಟ. ತನ್ನ ಎರಡು ಸೀರೆ ರೌಕೆ, ವಿಶ್ವನ ಬಟ್ಟೆ, ಎರಡು ದುಪ್ಪಟಿ ಒಂದು ಜಮಖಾನಗಳ ಸಣ್ಣ ಗಂಟನ್ನು ಕಂಕುಳಲ್ಲಿ ಇರುಕಿಕೊಂಡು, ಇನ್ನೊಂದು ಕೈಯಲ್ಲಿ ವಿಶ್ವನ ಕೈಹಿಡಿದು ನಂಜಮ್ಮ ನಡೆದಳು. ಬೆಳಕು ಹರಿಯುವ ಹೊತ್ತಿಗಾಗಲೇ ಅವರು ಒಂದು ಹರಿದಾರಿ ನಡೆದಿದ್ದರು. ವಿಶ್ವ ಅಮ್ಮನ ಕೈಬಿಟ್ಟು ಚಿಕ್ಕಪ್ಪನಿಗಿಂತ ಮುಂದೆ ಓಡುತಿದ್ದ. ‘ಅಮ್ಮ ನೋಡು, ನಿನಗಿಂತ ನಾನು ಶಕ್ತಿಯಾಗಿಲ್ವೋ?’ -ಎಂದು ಕೇಳುತ್ತಿದ್ದ. ಆರು ಮೈಲಿ ಕಳೆದಮೇಲೆ ದಾರಿಯಲ್ಲಿ ಸಿಕ್ಕಿದ ಒಂದು ಕಟ್ಟೆಯ ಹತ್ತಿರ ಕೂತು ಮೂವರೂ ರೊಟ್ಟಿ ಚಟ್ನಿ ತಿಂದರು. ಇನ್ನು ಎರಡು ಮೂರು ಮೈಲಿ ನಡೆಯುವ ಹೊತ್ತಿಗೆ ವಿಶ್ವನ ನಡಿಗೆ ನಿಧಾನವಾಗುತ್ತಿತ್ತು. ಈಗ ಮತ್ತೆ ಅಮ್ಮನ ಕೈಹಿಡಿದು ಹೆಜ್ಜೆ ಹಾಕಲು ಶುರುಮಾಡಿದ. ಕಾಲು ನೋಯುತ್ತದೆನ್ನಲು ಅವನಿಗೇ ಮರ್ಯಾದೆಗೆ ಕಮ್ಮಿ. ಅಷ್ಟರಲ್ಲಿ ಅವರ ಹಿಂದಿನಿಂದ ಬಂದ ಮೋಟಾರು ಭರ್ ಎಂದು ಮುಂದೆ ಹೋಯಿತು.
‘ಅವ್ನು ಹಿಂದ್‌ಗಡೆ ಸೀಟಿನಾಗೆ ಕೂತಿದ್ದ ನೋಡಿದ್ರಾ?’-ಅಪ್ಪಣ್ಣಯ್ಯ ಕೇಳಿದ.
‘ಇಲ್ಲ.’
‘ಅಮ್ಮ, ಮೋಟ್ರುನೋರು ಅಣ್ಣೂನ್ನ ಹಾಗೇ ಕೂರಿಸ್ಕತಾರಲ, ನನ್ನೂ ಯಾಕೆ ಕೂರಿಸ್ಕಳುಲ್ಲ?’-ವಿಶ್ವ ಕೇಳಿದ.
‘ಹೂಂ. ಹಾಗೇ ಕೂರಿಸ್ಕತಾರೆ! ಬ್ಯಾಳೆಕಾಳು ತೊಸ್ಸೆ, ಅವನವ್ವನಾ…..’-ಅಪ್ಪಣ್ಣಯ್ಯ ಉತ್ತರ ಹೇಳಿದ.
‘ಹೋಗಲಿ ಬಿಡಿ’-ಎಂದು ನಂಜಮ್ಮ ಸಮಧಾನ ಹೇಳುತ್ತಿದ್ದರೂ ಅವನು ಮುಂದುವರಿಸಿದ: ‘ನೀವೇನೇ ಹೇಳಿ. ನಮ್ಮ ಚಿನ್ನಯ್ಯ ಅಂದ್ರೆ ನೀಚಮುಂಡೇಮಗ. ಚಿಕ್ಕಂದ್ನಿಂದ್ಲೂ ಅಷ್ಟೆ. ತಾನಾಯ್ತು ತನ್ನ ವಡ್ಳಾಯ್ತು. ಇಂಥಾ ನನ್‌ಮಕ್ಳಿಗೆ ಯಕ್‌ಡ ತಗಂಡು ಹ್ವಡೀಬೇಕು. ಇವರವ್ವನ……’
‘ಅಪ್ಪಣ್ಣಯ್ಯ, ದೇವರ ಯಾತ್ರೆಗೆ ಹೋಗ್ತಿದೀವಿ. ನಮ್ಮ ಬಾಯಲ್ಲಿ ಕೆಟ್ಟ ಮಾತು ಯಾಕೆ ಬರ್‌ಬೇಕು? ಹೋಗ್‌ಲಿ ಬಿಡಿ’-ಎಂದ ನಂಜಮ್ಮ ವಿಶ್ವನಿಗೆ, ಮರೀ, ನಾನು ನಿಂಗೆ ಹೇಳ್‌ಕೊಟ್ಟಿದ್ನಲಾ, ಭಜ ಗೋವಿಂದಂ ಭಜ ಗೋವಿಂದಂ, ಅದ ಹೇಳು ನೋಡಾಣ. ಶೃಂಗೇರಿಗೆ ಹೋಗ್ತೀವಲ್ಲ, ಆ ಮಠದ ಶಂಕರಾಚಾರ್ಯರು ಹೆಣೆದಿದ್ದು ಅದು’ ಎಂದಳು.
ವಿಶ್ವ ರಾಗವಾಗಿ ನಿಧಾನವಾಗಿ ಹೇಳಲು ಶುರುಮಾಡಿದ. ಅವನು ತಪ್ಪಿದ ಕಡೆ ಅಮ್ಮ ತಿದ್ದುತ್ತಿದ್ದಳು. ಅಪ್ಪಣ್ಣಯ್ಯನ ಬಾಯಿಗೆ ಏನಾದರೂ ಬೇಕಿತ್ತು. ಮತ್ತೆ ಏನೂ ತೋಚದೆ ಜೇಬಿಗೆ ಕೈಹಾಕಿ ವೀಳ್ಯೆದೆಲೆ ಚೀಲ ತೆಗೆದು ಅರ್ಧ ಎಲೆಗೆ ಸುಣ್ಣ ತೀಡಿ ಒಂದು ಗೋಟು ಅಡಿಕೆಯೊಡನೆ ಹಾಕಿಕೊಂಡು, ಅದರಮೇಲೆ ಒಂದು ತುಂಡು ಹೊಗೆಸೊಪ್ಪು ಪುಡಿಮಾಡಿ ತುಂಬಿಕೊಂಡ. ಸ್ವಲ್ಪ ಹೊತ್ತಿನಲ್ಲೇ ಬಾಯಿತುಂಬ ತಂಬುಲದ ರಸ ತುಂಬಿಕೊಂಡಿತು. ಉದ್ದಕ್ಕೂ ಉಗುಳಿಕೊಂಡು ನಡೆದ.

ರೈಲು ತಿಪಟೂರಿಗೆ ಬರುತ್ತಿದ್ದುದು ಒಂದು ಗಂಟೆಗೆ. ಮಧ್ಯೆ ಒಂದು ಸಲ ಸುಧಾರಿಸಿಕೊಂಡರೂ ಇವರು ನಡುನಡುವೆ ಹತ್ತಿರದ ಕಾಲುದಾರಿ ಹಿಡಿದುದರಿಂದ ಹನ್ನೆರಡು ಗಂಟೆಗೇ ಸ್ಟೇಷನ್ ಮುಟ್ಟಿದರು. ಈ ಮೂವರೂ ಮತ್ತೆ ಒಂದು ಸಲ ರೊಟ್ಟಿ ಚಟ್ನಿ ತಿಂದರು. ಅಷ್ಟರಲ್ಲಿ ಅರಳೀಕಟ್ಟೆ ಹತ್ತಿರದ ಮಾಧವಭಟ್ಟರ ಹೋಟೆಲಿನಲ್ಲಿ ಊಟ ಮಾಡಿಕೊಂಡು ಚೆನ್ನಿಗರಾಯರು ಅಲ್ಲಿಗೆ ಬಂದರು. ಎರಡೂವರೆ ಟಿಕೆಟ್ಟನ್ನು ಅಪ್ಪಣ್ಣಯ್ಯ ತಂದ. ತಮ್ಮದನ್ನು ಚೆನ್ನಿಗರಾಯರು ತೆಗೆದುಕೊಂಡರು.

ರಾತ್ರಿ ತರೀಕೆರೆ ಸ್ಟೇಷನ್ನಿನ ನಲ್ಲಿಯಲ್ಲಿ ನೀರು ಹಿಡಿದುಕೊಂಡು ಇವರು ಮೂವರೂ ರೊಟ್ಟಿಚಟ್ನಿ ತಿಂದರು. ಚೆನ್ನಿಗರಾಯರು ಊರು ನೋಡಿಕೊಂಡು ಬರುವುದಾಗಿ ಹೇಳಿ ಹೋದರು. ‘ಅವ್ನೀಗ ಎಲ್ಲಿಗ್ಹೋದ ಗೊತ್ತಾ?’-ಅಪ್ಪಣ್ಣಯ್ಯ ಕೇಳಿದ. ‘ಎಲ್ಲಿಗಾದ್ರೂ ಹೋಗ್ಲಿ, ನಮಗೆ ಆ ಮಾತು ಬ್ಯಾಡಿ ಸುಮ್ನಿರಿ’-ನಂಜಮ್ಮ ಹೇಳಿದಳು. ಜಮಖಾನ ಹಾಕಿಕೊಂಡು ವಿಶ್ವನ ಜೊತೆ ನಂಜಮ್ಮ ಸ್ಟೆಷನ್ನಿನ ಒಂದು ಮೂಲೆಯಲ್ಲಿ ಮಲಗಿದಳು. ಇವರ ತಲೆಯ ಕಡೆಯಲ್ಲಿ ಒಂದು ಗೋಣಿತಟ್ಟು ಹಾಸಿ ದುಪಟಿ ಹೊದೆದು ಚೀಲದ ಗಂಟನ್ನು ತಲೆ ಹಾಸಿಗೆ ಮಾಡಿಕೊಂಡು ಅಪ್ಪಣ್ಣಯ್ಯ ಮಲಗಿದ. ತಕ್ಷಣ ಮೂವರಿಗೂ ನಿದ್ರೆ ಹೊತ್ತಿತು. ಭೋಜನ ಮುಗಿಸಿ ಹಿಂತಿರುಗಿದ ಚೆನ್ನಿಗರಾಯರು ತಮ್ಮನ ಮಗ್ಗುಲಲ್ಲಿ ಒಂದು ಪಂಚೆ ಹಾಸಿಕೊಂಡು ಪವಡಿಸಿದರು.

ಮರುದಿನ ಬೆಳಿಗ್ಗೆಯ ಹೊತ್ತಿಗೆ ಇವರ ಬುತ್ತಿಯಲ್ಲಿ ಇನ್ನೂ ಹತ್ತು ರೊಟ್ಟಿ ಉಳಿದಿತ್ತು. ಮೊನ್ನೆ ರಾತ್ರಿ ಮಾಡಿದ ಅದು ಕಟುಕಾಗಿದ್ದರೂ ನೀರಿನಲ್ಲಿ ನೆನೆಸಿಕೊಂಡು ತಿನ್ನಬಹುದಾಗಿತ್ತು. ಆದರೆ ಚಟ್ನಿ ಹಳಸಿಹೋಗಿತ್ತು. ಹೋಟೆಲಿನಲ್ಲಿ ಒಂದು ಆಣೆಗೆ ಸಾಂಬಾರು ತರುವುದಾಗಿ ಅಪ್ಪಣ್ಣಯ್ಯ ಹೇಳಿದ. ಚೆನ್ನಿಗರಾಯರು ಅಷ್ಟರಲ್ಲಿ ಮುಖ ತೊಳೆದು ಹೋಟೆಲು ಹೊಕ್ಕಿದ್ದರು. ವಿಶ್ವ ಬಾಯಿ ಬಾಯಿ ಬಿಡುತ್ತಿತ್ತು. ನಂಜಮ್ಮ ಹೇಳಿದಳು: ‘ಒಂದಾಣೆಗೆ ಸಾಂಬಾರು ತನ್ನಿ, ಹಾಗೆಯೇ ವಿಶ್ವನಿಗೆ ಒಂದು ಇಡ್ಲಿ, ಎರಡು ಖಾಲಿ ದೋಸೆ ತನ್ನಿ. ಒಟ್ಟು ಮೂರಾಣೆಯಾಗುತ್ತೆ.’

ನರಸಿಂಹರಾಜಪುರದ ಸಣ್ಣ ರೈಲು ಹೊರಟದ್ದೇ ತಡ, ವಿಶ್ವನಿಗೆ ಏನೋ ಒಂದು ವಿಧವಾದ ಹಿಗ್ಗು. ಕಿಟಿಕಿಯ ಹೊರಗೆ ಎಷ್ಟೊಂದು ಮರಗಳು! ಒಂದರ ಪಕ್ಕದಲ್ಲಿ ಒಂದರಂತೆ ಎಣಿಸುವುದಕ್ಕೇ ಆಗದಂತಹ ಹೆಮ್ಮರಗಳು. ಅವುಗಳಿಗೆ ಹಬ್ಬಿದ ಹಸುರು ಬಳ್ಳಿಗಳು. ಆಗ ತಾನೇ ಮಳೆಗಾಲ ಕಳೆದು ಆಶ್ವಯುಜದಲ್ಲಿ ಎಲ್ಲೆಲ್ಲಿಯೂ ಮರಗಿಡಗಳು ಕಳಕಳಿಸುತ್ತಿದ್ದವು. ವಿಶ್ವ ನೋಡುನೋಡುತ್ತಿರುವಂತೆಯೇ ಒಂದು ದೊಡ್ಡ ಪ್ರಾಣಿ ನಡೆದುಹೋಯಿತು. ತನ್ನ ಪುಸ್ತಕದಲ್ಲಿ ನೋಡಿದ್ದ ಚಿತ್ರದ ನೆನಪಿನಿಂದ ಅದು ಆನೆ ಎಂದು ಅವನು ಗುರುತು ಹಿಡಿದುಬಿಟ್ಟ. ‘ಅಮ್ಮ, ಕಾಡು ಅಂದ್ರೆ ಇದೇ ಏನಮ್ಮ?’-ಎಂದು ಕೇಳಿದ. ಇದೇ ಹೌದು ಎಂದು ಅಮ್ಮನಿಗೆ ಅರ್ಥವಾಯಿತು. ಆದರೆ ಅವಳು ಸಹ ಇದುವರೆಗೂ ಇಷ್ಟು ದಟ್ಟವಾದ ಮರಗಿಡಗಳನ್ನು ನೋಡಿರಲಿಲ್ಲ.
ಅಪ್ಪಣ್ಣಯ್ಯ ಹೇಲಿದ: ‘ಈ ಕಡೆಗೆಲ್ಲ ಹೀಗೆಯೇ. ಶಿವಮೊಗ್ಗದ ಆಚೆಗೆ ಹೋದರೆ ಇನ್ನೂ ಭಯಂಕರ ಕಾಡು.’
‘ನೀವು ಶಿವಮೊಗ್ಗಕ್ಕೆ ಯಾವಾಗ ಹೋಗಿದ್ರಿ?’
ಅದೇನೋ ನೆನಪಾಗಿ ಅಪ್ಪಣ್ಣಯ್ಯ ಸುಮ್ಮನಾಗಿಬಿಟ್ಟ. ತಕ್ಷಣ ನಂಜಮ್ಮನಿಗೂ ಅದು ಜ್ಞಾಪಕಕ್ಕೆ ಬಂತು. ತಾನು ಹಾಗೆ ಕೇಳಬಾರದಾಗಿತ್ತೆಂದು ಅವಳಿಗೂ ಎನ್ನಿಸಿತು. ಇದೇ ಅತ್ತಿಗೆಯನ್ನು ಕಾಲಿನಿಂದ ಒದೆದು, ಪೋಲೀಸರು ಹಿಡಿದುಕೊಂಡು ಹೋಗುತ್ತಾರೆಂದು ಹೆದರಿ ತಾನು ಈ ಹಿಂದೆ ಈ ಭಾಗಗಳಲೆಲ್ಲಸುತ್ತಿದ್ದ ನೆನಪಿನಿಂದ ಅವನು ಮಂಕಾಗಿ ಕಿಟಿಕಿಯ ಹೊರಗೆ ನೋಡುತ್ತಾ ಕುಳಿತ. ಚೆನ್ನಿಗರಾಯರು ಹೊಗೆಸೊಪ್ಪು ಉಜ್ಜುತ್ತಿದ್ದರು.
ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಸಣ್ಣ ರೈಲು ನರಸಿಂಹರಾಜಪುರ ಮುಟ್ಟಿದಾಗ ಬಸ್ಸಿನ ಏಜೆಂಟರುಗಳು ಬಂದು- ‘ಶೃಂಗೇರಿ ಶೃಂಗೇರಿ. ಅರ್ಜೆಂಟ್ ಶೃಂಗೇರಿ’ ಎಂದು ಮುತ್ತಿಕೊಂಡರು.
‘ನೀವು ಮೋತಾರಿಗೆ ಬತ್ತೀರೋ ನಡ್ಕಂಡ್ ಬತ್ತೀರೋ?’-ಚೆನ್ನಿಗರಾಯರು ಕೇಳಿದರು.
‘ಮೋಟಾರಿಗೆ ಬರುಕ್ಕೆ ದುಡ್ಡೆಲ್ಲಿದೆ?’-ಅಪ್ಪಣ್ಣಯ್ಯ ಉತ್ತರ ಹೇಳಿದ.
‘ನಂಗೆ ಕಾಲು ಉಳಿಕಿಬಿಟ್ಟಿದೆ. ನಾನು ಮೋಟಾರ್ನಲ್ಲಿ ಹೋಗ್ತೀನಿ. ಮದ್ಲೇ ಹೋಗಿ ಛತ್ರದಲ್ಲಿ ಕೇಳಿ ಜಾಗ ಮಾಡಿರ್ತೀನಿ. ನೀವು ಹಿಂದ್‌ಗಡಿಂದ ಬನ್ನಿ’-ಎಂದು ಅವರು ಮುಂದೆ ನಡೆದರು.
“ಚಿನ್ನಯ್ಯ ಸ್ವಲ್ಪ ನಿಂತ್ಕಳೋ. ಅತ್ತಿಗಮ್ಮುನ್ನೂ ವಿಶ್ವುನ್ನೂ ಕರ್ಕಂಡ್‌ಹೋಗೋ. ಮೂರು ರೂಪಾಯಾಗುತ್ತೆ. ವಿಶ್ವುಂಗೆ ಅರ್ಧ ಚಾರ್ಜು. ‘ನಾವು ಬದವ್ರು, ಹುಡುಗನ್ನ ತ್ವಡೇಮ್ಯಾಲೆ ಕೂರಿಸ್ಕತ್ತೀವಿ, ಚಾರ್ಜು ಮಾಫಿ ಮಾಡಿ’ ಅಂತ ಕೇಳಿದ್ರೆ ಅವ್ನುನ್ನ ಹಾಗೇ ಕೂರುಸ್ಕಾಭೌದು. ನಾನು ಹಿಂದ್ಗಡಿಂದ ನಡ್ಕಂಡ್ ಬತ್ತೀನಿ”-ಅಪ್ಪಣ್ಣಯ್ಯ ಕೂಗಿ ಹೇಳಿದ.
‘ನನ್ನ ಹತ್ರ ದುಡ್ಡಿಲ್ಲ. ಅವಳ ಹತ್ರ ಇದ್ರೆ ಬರ್ಲಿ’-ಎಂದು ಅವರು ಮುಂದೆ ಮುಂದೆ ನಡೆದರು. ನೂರುಗಟ್ಟಲೆ ಇಳಿದ ಪ್ರಯಾಣಿಕರ ಗುಂಪು ಓಡಿ ಓಡಿ ಹೋಗಿ ಬಸ್ಸುಗಳಿಗೆ ತುಂಬಿಕೊಳ್ಳುತ್ತಿತ್ತು. ಚೆನ್ನಿಗರಾಯರೂ ಹತ್ತಿ ಜಾಗ ಮಾಡಿಕೊಂಡರು.
ಒಣಗಿದ ರೊಟ್ಟಿಯನ್ನು ನೀರಿನಲ್ಲಿ ನೆನೆಸಿ ಈ ಮೂವರೂ ತಿಂದರು. ಅಲ್ಲಿಗೆ ರೊಟ್ಟಿಯ ಬುತ್ತಿ ಮುಗಿಯಿತು. ಅದು ಸಾಲಲಿಲ್ಲ. ನಂಜಮ್ಮ ಬೆಲ್ಲ ಹುಣಿಸೆ ಗೊಜ್ಜಿನಲ್ಲಿ ಒಂದೂವರೆ ಪಾವಿನಷ್ಟು ಹುರಿಟ್ಟು ಕಲಸಿದಳು. ಆಮೇಲೆ ವಿಶ್ವನ ಜೇಬಿಗೆ ಅವಲಕ್ಕಿ ತುಂಬಿ ಒಂದು ಮುರುಕು ಬೆಲ್ಲ ಕೊಟ್ಟಳು. ಅಪ್ಪಣ್ಣಯ್ಯ ಅತ್ತಿಗೆಯ ಗಂಟನ್ನೂ ತನ್ನ ಗೋಣೀಚೀಲಕ್ಕೆ ಹಾಕಿ ಕಟ್ಟಿ ತಲೆಯ ಮೇಲೆ ಇಟ್ಟುಕೊಂಡು ಹೊರಟ. ವಿಶ್ವನ ಕೈ ಹಿಡಿದು ಅವಳು ನಡೆದಳು.

– ೨ –

ಅಂತಹ ಕಾದನ್ನು ಅವಳು ಈ ಹಿಂದೆ ನೋಡಿಲ್ಲ. ಮರ, ಗಿಡ, ಹಸಿರೆಂದರೆ ಅವಳಿಗೆ ಯಾವಾಗಲೂ ಆಶೆ. ಒಂದು ತೆರನದ ಅಲೌಕಿಕ ಆಕರ್ಷಣೆ. ಮುತ್ತುಗದ ಎಲೆ ತರಲು ಚೋಳನ ಗುಡ್ಡಕ್ಕೆ ಹೋದಾಗ, ಊರ ಸುತ್ತ ಪೈರು ಬೆಳೆದು ಹೊಲ ಗದ್ದೆಗಳೆಲ್ಲ ತುಂಬು ಹಸಿರಿನಿಂದ ಕೂಡಿದಾಗ ಸುತ್ತಲೂ ನೋಡುತ್ತಾ ನಿಂತುಬಿಡುತ್ತಿದ್ದಳು. ಇಲ್ಲಿ ಎಲ್ಲೆಲ್ಲಿಯೂ ಕಾಡು-ಭಾರಿಭಾರಿಯಾದ ಹೆಮ್ಮರಗಳ ಕಾಡು. ಎನೊ ಒಂದು ರೀತಿಯ ಭಾವ ಮನಸ್ಸನ್ನು ಆಕ್ರಮಿಸಿಬಿಡುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ಅದು ಅಂತರಂಗವನ್ನು ಕಲಕುತ್ತಿತ್ತು. ಮನಸ್ಸನ್ನು ಮುದಗೊಳಿಸುವ ಆ ಹಸಿರೇ ಮಕ್ಕಳಿಬ್ಬರ ನೆನಪನ್ನೂ ಹೊಡೆದೆಬ್ಬಿಸುತ್ತಿತ್ತು. ಈ ತೇಗದ ಎಲೆಗಳು ಎಷ್ಟು ಅಗಲವಾಗಿವೆ! ಒಂದೊಂದು ಎಲೆಯಮೇಲೆಯೇ ಬಡಿಸಿಕೊಂಡು ಊಟ ಮಾಡಬಹುದು. ಮುತ್ತುಗದೆಲೆ ಇಷ್ಟು ಅಗಲವಾಗಿದ್ದರೆ ಹಚ್ಚುವ ಕಷ್ಟವೇ ಇಲ್ಲ. ಮುತ್ತುಗದೆಲೆ ತರಲು ಬರುತ್ತಿದ್ದಾಗ ದೊಡ್ಡ ಎಲೆಗಳನ್ನು ಕಂಡರೆ ರಾಮಣ್ಣ ನಿಧಿ ಕಂಡವನಂತೆ-‘ಅಮ್ಮ, ನೋಡಿಲ್ಲಿ ಎಷ್ಟು ದೊಡ್ಡ ಎಲೆ’ ಎಂದು ಕೂಗಿಕೊಂಡು ಓಡಿ ಹೋಗಿ ಕುಯ್ದುಕೊಳ್ಳುತ್ತಿದ್ದ. ಎಲೆ ತುಂಬ ದೊಡ್ಡದಾದರೆ ಹಚ್ಚಿಸಲು ಸರಿಯಲ್ಲ. ಊರಗಲವಾಗಿಬಿಡುತ್ತೆ. ಮುತ್ತುಗದ ರಸ ಸಿಡಿದು ಅವನ ಶರಟೆಲ್ಲ ಕರೆಯಾಗಿತ್ತು. ಅದಕ್ಕೆಂತಲೇ ಬೇರೆ ಒಂದು ಹರಕಲು ಶರಟಿತ್ತು.

ಪಾರ್ವತಿ ಎಲೆಗೆ ಬರುತ್ತಿದ್ದಾಗ ಬಾಯಿಯಲ್ಲಿ ಎನದರೂ ಗುನುಗಿಕೊಳ್ಳುತ್ತಿದ್ದಳು. ಹಾಡು ಹಸೆ ಎಂದರೆ ಅವಳಿಗೆ ಎಷ್ಟು ಆಶೆ! ತನಗೆ ಬರುತ್ತಿದ್ದುದನ್ನೆಲ್ಲ ಅವಳು ಕಲಿತಿದ್ದಳು. ಹನ್ನೆರಡು ವರ್ಷವಾಗುವ ಹೊತ್ತಿಗೇ ರಾಗಿಬೀಸುವುದನ್ನು ತನ್ನಿಂದ ಪೂರ್ತಿ ಬಿಡಿಸಿಬಿಟ್ಟಿದ್ದಳು. ಬೆಳಗಿನಜಾವ ಬೀಸುವಾಗ ಅವಳು ರಾಗವಾಗಿ ಹಾಡು ಹೇಳುತ್ತಿದ್ದುದನ್ನು ಕೇಳುವುದೇ ಒಂದು ಚಂದ. ಮೇಷ್ಟರು ಹೇಳಿದ್ದರು: ಅವಳ ಗಂಡನಿಗೆ ಹಾಡು ಹಸೆ ಅಂದರೆ ಬಹಳ ಇಷ್ಟವಂತೆ. ಸೂರ್ಯನಾರಾಯಣ ಹಾರ್ಮೋನಿಯಂ ಶೃತಿ ಇಟ್ಟುಕೊಂಡು ಭಾರತದ ಪದ್ಯಗಳನ್ನು ರಾಗವಾಗಿ ಹೇಳುತ್ತಿದ್ದರೆ, ಕೇಳಿದವರ ಕಣ್ಣಿನಲ್ಲಿ ನೀರು ಬರುತ್ತಿತ್ತಂತೆ. ಅದಲ್ಲದೆ ಎಷ್ಟೋ ಶ್ಲೋಕಗಳು ದೇವರನಾಮಗಳು ಬರುತ್ತಿತ್ತಂತೆ. ಮನೆಯಲ್ಲಿ ಕೂತು ದಿನಾ ಭಾರತ ಓದಿಕೊಳ್ಳುತ್ತಿದ್ದನಂತೆ. ಅವನ ಸ್ವಭಾವ ತುಂಬ ಒಳ್ಳೆಯದು. ಕೋಪವಿಲ್ಲ, ತಾಪವಿಲ್ಲ. ಹೊಟ್ಟೆಯಲ್ಲಿ ಹುಟ್ಟಿದ ರತ್ನನ ಎಷ್ಟು ನಿಗವಾಗಿ ನೋಡಿಕೊಳ್ಳುತ್ತಿದ್ದ! ಗಂಡಸು ಅಂದರೆ ಹಾಗಿರಬೇಕು. ಅಂಥವನ ಜೊತೆ ಸಂಸಾರ ಮಾಡುಕ್ಕೆ ನಮ್ಮ ಪದಾರ್ಥಕ್ಕೆ ಯೋಗವಿರಲಿಲ್ಲವೋ ಏನೋ! ಅವಳ ಮನಸ್ಸು, ಸೂರ್ಯನಾರಾಯಣನ ಸಂಗಡ ತನ್ನ ಗಂಡ ಚೆನ್ನಿಗರಾಯರನ್ನು ಹೋಲಿಸುತ್ತಿತ್ತು. ಹೇಸಿಗೆ ಎನಿಸಿ, ಅದೆಲ್ಲ ಅವರವರ ಪೂರ್ವ ಜನ್ಮದ ಫಲ ಎಂದುಕೊಂಡು ಮನಸ್ಸು ಬೇರೆ ದಿಕ್ಕಿನಲ್ಲಿ ತೋಡಗುತ್ತಿತ್ತು.
ಕಾಡನ್ನು ನೋಡುನೋಡುತ್ತ ವಿಶ್ವ ಹಿಗ್ಗಿ ಹೀರೇಕಾಯಿಯಾಗುತ್ತಿದ್ದ.
‘ಅಮ್ಮ ನೋಡಲ್ಲಿ, ನಮ್ಮೂರ ತೋಪಿನ ಹುಳಿಮಾವಿನ ಮರಕ್ಕಿಂತ ದೊಡ್ಡದಾಗಿದೆ’- ಎನ್ನುವನು. ತಕ್ಷಣ-‘ಅದರ ಪಕ್ಕದ್ದು ನೋದು ಆಕಾಶದೆತ್ತರ ಇದೆ’ ಎಂದು ದೃಷ್ಟಿಯನ್ನು ಮುಂದೆ ತಿರುಗಿಸಿ, ನೋಡು, ಆ ಕೋತಿ ತಿಮ್ಮಣ್ಣ, ಮೂತಿ ಯಾಕೆ ಹಾಗಿದೆ? ನಮ್ಮೂರ ಕೋತಿ ತಿಮ್ಮಣ್ಣ ಇದಕ್ಕಿಂತ ಚೆನ್ನಾಗಿದೆ ಅಲ್ವಾ’? ಎಂದು ಕೇಳುತ್ತಿದ್ದ.
‘ಇದು ಕಾಡುಕೋತಿ ಮಗು.’
‘ಹಾಗಾದ್ರೆ ನಮ್ಮೂರಲ್ಲಿರೋದು ಎಂಥಾ ಕೋತಿ?’
‘ಊರ ಕೋತಿ.’
‘ಹಾಗಾದ್ರೆ ಊರೊಳಗೆ ಇರೂದೇ ಇಲ್ವಲ? ಅದು ತ್ವಾಟದ ಕೋತಿ’-ಎಂದು ತಾನೇ ಉತ್ತರ ಹೇಳುವನು.
ರಸ್ತೆಯಲ್ಲಿ ಹೋಗುತ್ತಾ ಹೋಗುತ್ತ ಅವರಿಗೆ ಒಂದೆರಡು ಹಾವುಗಳೂ ಕಂಡವು. ಹಾವೆಂದರೆ ಅವರು ಕಾಣದ ಜಂತುವಲ್ಲ. ರಾಮಸಂದ್ರದಲ್ಲೂ ಇವೆ. ಇಲ್ಲಿ ಇಷ್ಟೊಂದು ಕಾಡಿರುವುದರಿಂದ ತುಂಬ ಇವೆ. ಎಚ್ಚರವಾಗಿ ನಡೆಯಬೇಕು. ಮಲೆನಾಡಿನಲ್ಲಿ ಹೆಬ್ಬಾವು ಇರುತ್ತವಂತೆ. ಒಬ್ಬೊಬ್ಬ ಮನುಷ್ಯನನ್ನೇ ನುಂಗುತ್ತವಂತೆ. ಮರದ ಕೊರಡಿನ ಹಾಗೆ ಬಿದ್ದಿರುತ್ತವಂತೆ.

ಒಂದೇಸಮನೆ ಅಮ್ಮನ ಕೈ ಹಿಡಿದುಕೊಂಡು ನಡೆದ ವಿಶ್ವನಿಗೆ ಬೇಸರವಾಗಿ ಕೈ ಕೊಡವಿಕೊಂಡು ಒಬ್ಬನೆ ನಡೆಯುತ್ತಿದ್ದ. ಒಮ್ಮೆ ಇಪ್ಪತ್ತು ಮಾರು ಮುಂದೆ ಓಡಿಬಿಡುತ್ತಿದ್ದ. ಇನ್ನೊಮ್ಮೆ ಹತ್ತು ಹೆಜ್ಜೆ ಹಿಂದೆ ಉಳಿಯುತ್ತಿದ್ದ. ಒಂದು ಬಾರಿ ಅಮ್ಮ ಅವಳ ಯೋಚನೆಯಲ್ಲೇ ಮುಲುಗಿ ಹೆಜ್ಜೆ ಹಾಕುತ್ತಿದ್ದಳು. ಅಪ್ಪಣ್ಣಯ್ಯ ಎಂದಿನಂತೆ ಇವರಿಗಿಂತ ಹತ್ತು ಮಾರು ಮುಂದೆ ಮುಂದೆ ನಡೆಯುತ್ತಿದ್ದ. ಇದ್ದಕ್ಕಿದ್ದಹಾಗೆಯೆ ಏನೋ ಎನ್ನಿಸಿ ನಂಜಮ್ಮ ತಿರುಗಿ ನೋಡುತ್ತಾಳೆ: ವಿಶ್ವನೇ ಇಲ್ಲ. ಅವಳಿಗೆ ಎದೆ ಜಗ್ ಎಂದಿತು. ಹಾಡಿನಲ್ಲಿ ಹುಲಿ ಕಿರುಬಗಳು ಇರುತ್ತವಂತೆ-ಎಂಬುದು ಮೊದಲಬಾರಿಗೆ ನೆನಪಿಗೆ ಬಂತು. ಹಾವು ಹುಳುಗಳ ಕಾಟವೂ ಕಮ್ಮಿಯಿಲ್ಲ. ‘ಅಪ್ಪಣ್ಣಯ್ಯ, ವಿಶ್ವ ಎಲ್ಲೋ ಕಾಣುಲ್ಲ ನೋಡಿ’-ಎಂದು ಕೂಗಿದಳು. ಇಬ್ಬರೂ ಹಿಂತಿರುಗಿ ನೋಡಿಕೊಂಡು ಹೊರಟರು. ಒಂದು ಫರ್ಲಾಂಗ್ ಹಿಂದೆ ರಸ್ತೆಯ ದಡದ ಒಂದು ಪುಟ್ಟ ತೇಗದ ಮರ ಹತ್ತಿ ಅವನು ‘ಕೀ ಕೀ ಕಲ, ಕೀ ಕೀ ಕಲ’-ಎಂದು ಎದುರು ಬದಿಯ ಮರದ ಮೇಲಿದ್ದ ಕೋತಿಗಳನ್ನು ಅಣಕಿಸುತ್ತಿದ್ದಾನೆ. ‘ಹೇಳ್ದೆ ಕೇಳ್ದೆ ಅದ್ಯಾಕೋ ಹೀಗೆ ಮಾಡ್ದೆ?’-ಎಂದು ಕೇಳಿದರೆ, ‘ಆ ಕೋತಿ ತಿಮ್ಮಣ್ಣ ನನ್ನ ಆಡ್ಕತಲ’ ಎಂದು ಉತ್ತರಕೊಟ್ಟ.
ಆಗಿನಿಂದ ಅವನನ್ನು ಹಿಂದೆ ಬಿಡದೆ ಮುಂದೆ ಮುಂದೆಯೇ ನಡೆಸಿಕೊಂಡು ಹೊರಟಳು.
ಅಪ್ಪಣ್ಣಯ್ಯನಿಗೆ ಕಾಡಿನ ಸೌಂದರ್ಯ ಗಿಂವ್ದದರ್ಯವೆಂಬುದು ತಿಳಿಯುತ್ತಿರಲಿಲ್ಲ. ಈ ಹಾಳು ಕಾಡಿಗಿಂತ ನಮ್ಮ ಬಯಲು ಸೀಮೆಯೇ ಚನ್ನ. ಇಲ್ಲಿ ಬರೀ ಬತ್ತ. ರಾಗಿಯೇ ಇಲ್ಲ. ಮುದ್ದೆ ತಿನ್ನದೆ ಕೈಕಾಲಿನಲ್ಲಿ ಶಕ್ತಿ ಹ್ಯಾಗೆ ಬರುತ್ತೆ? ಮಲೆಸೀಮೆಯೋರು ನಮ್ಮಷ್ಟು ಶಕ್ತಿಯಾಗಿರೂಲ್ಲವಂತೆ-ಎಂಬ ಯೋಚನೆಯ ಜೊತೆಗೆ ಅವನಿಗೂ ತನ್ನ ಜೀವನದ ಹಿಂದಿನ ಎಲ್ಲ ಘಟನೆಗಳ ನೆನಪಾಗುವುದು. ಅವನ ಮಗಳು ಜಯಲಕ್ಷ್ಮಿಗೆ ಪಾರ್ವತಿಯದೇ ವಯಸ್ಸು. ಎರಡನೆಯ ರಾಮಕೃಷ್ಣ ಅವಳಿಗಿಂತ ತುಂಬ ಚಿಕ್ಕವನು. ಮೂರನೆಯದು ಎಂಥದೋ! ರಾಮಕೃಷ್ಣ ನಿಜವಾಗಿಯೂ ನಂಗೇ ಹುಟ್ಟಿದ್ದು. ನಮ್ಮಮ್ಮ ಮಾತ್ರ, ಅಲ್ಲ ಅಂದ್ಳಲ್ಲ. ಅಲ್ಲಿಗೆ ಹೋಗಿದ್ದ ನಂಗೆ ಅದು ಗೊತ್ತಿಲ್‌ವೆ? ಅದೇನಾದ್ರೂ ಸ್ಕೂಲು ಗೀಲಿಗೆ ಹೋಗ್‌ತಿದೆಯೋ ಇಲ್ಲವೋ? ಮಂತ್ರ ಕಲಿಸಿ ಜೋಯಿಸಿಗೆ ಮಾಡುಸ್ತೀವಿ ಅಂದ್ರಂತೆ ಅವರು. ಇಷ್ಟು ಹೊತ್ತಿಗೆ ಅದು ಒಂದೇ ಹೋಗಿ ಹಳ್ಳೀಕಡೆ ದಾನ ಗೀನ ತರ್ತಿರ್‌ಭೌದು. ಅವ್ಳು ಈಗ ಹ್ಯಾಗಿದಾಳೋ. ನನ್ನೇನಾದ್ರೂ ಜ್ಞಾಪಿಸ್ಕತಿದಾಳೋ ಇಲ್ವೋ. ನಾನು ತಾಳಿ ಕಿತ್ಕಂಡು ಕಳಿಸಬಾರದಾಗಿತ್ತು. ಕತ್ತೆಮುಂಡೆ, ಅವ್ಳೂ ಒಂದಿಷ್ಟು ಎಲೆ ಪಲೆ ಹಚ್ಚಿ ಉಪ್ಪು ಮೆಣಸಿನಕಾಯಿ ಖರ್ಚು ಹೊಂದಿಸಿದ್ರೆ ಹ್ಯಾಗಾದ್ರೂ ಸುಖವಾಗಿರ್‌ಭೌದಾಗಿತ್ತು. ಇವುಕ್ಕ್ಯಾಕೆ ಬೆಳಗ್ಗೆದ್ರೆ ಕಾಫಿ? ಬಿಳಿ ಅನ್ನ, ತೊಗರಿಬೇಳೆ ಸಾರು ಕಾಪಿ ಬೇಕು ಅಂದ್ರೆ ದಿನಾ ಅದ್‌ಹ್ಯಾಗೆ ಆಗುತ್ತೆ? ಇವಳಪ್ಪ ಗಂಟು ಮಾಡಿ ಕೊಟ್ಟಿದ್ನೇ? ಆದ್ರೂ ಆ ಮುಂಡೆ ನನ್ನ ಬಿಟ್ಟು ಹೋಗಬಾರ್‌ದಾಗಿತ್ತು-ಎಂದುಕೊಳ್ಳುತ್ತಲೇ ಅವನಿಗೆ ತನ್ನ ಒಂಟಿತನದ ಅನುಭವವಾಗುವುದು. ಏನೋ ಒಂದು ವಿಧವಾದ ಬೇಸರ, ಜೀವನದಲ್ಲಿ ಸುಖವಿಲ್ಲವೆಂಬ ಭಾವ ‘ಕೇಳುಸ್ತೇ’-ಹಿಂದೆ ಬರುತ್ತಿದ್ದ ಅತ್ತಿಗೆಯನ್ನು ಅವನು ಕೇಳಿದ.
‘ಏನಂದ್ರಿ?’
‘ಆ ಹುಡುಗೀಗೂ ಇಷ್ಟೊತ್ತಿಗೆ ಮದ್ವೆ ಗಿದ್ವೆ ಮಾಡಿರ್ತಾರಾ?’
‘ಯಾರಿಗೆ ಅಂತೀರಿ?’

ಇಂಥವಳು ಎಂದು ನಿರ್ದಿಷ್ಟವಾಗಿ ಬಾಯಿಬಿಟ್ಟು ಹೇಳಲು ನಾಚಿಕೆಯಾಗಿ ಅವನು ಸುಮ್ಮನಾದ. ‘ಯಾವ ಹುಡುಗಿಗೆ?’-ಎಂದು ಅತ್ತಿಗೆಯೇ ಇನ್ನೊಂದು ಸಲ ಕೇಳಿದುದಕ್ಕೆ, ‘ಯಾರಿಗೂ ಇಲ್ಲ ಬಿಡಿ. ನಂಗೆ ರೇವಣ್ಣಶೆಟ್ಟಿ ಮನೆ ರುದ್ರಾಣಿ ಜ್ಞಾಪಕವಾಯ್ತು’ ಎಂದ.
‘ರುದ್ರಾಣಿ ಸತ್ತು ಎಷ್ಟು ವರ್ಷವಾಯ್ತು! ಇದೇನು ಹೀಗಂತೀರಾ?’=ಎಂದುದಕ್ಕೆ ಅವನು ಉತ್ತರ ಹೇಳಲಿಲ್ಲ. ತನ್ನ ಯೋಚನೆಯಲ್ಲೆ ಒಳಸರಿದಿದ್ದ ಅವಳ ಮನಸ್ಸು ಅವನ ಮಾತಿನ ಹಿನ್ನೆಲೆಯನ್ನು ಊಹಿಸಿಕೊಳ್ಳಲಿಲ್ಲ. ಅವರು ಮತ್ತೆ ಮೌನವಾಗಿ ನಡೆಯಲು ಶುರುಮಾಡಿದರು. ಅವನು ಹತ್ತು ಮಾರು ಮುಂದೆ. ಅವಳು ಅಷ್ಟು ಹಿಂದೆ. ತನ್ನ ಪಾಡಿಗೆ ಏನಾದರು ಹರಟಿಕೊಳ್ಳುತ್ತಾ ವಿಶ್ವ ಒಂದೊಂದು ಸಲ ಚಿಕ್ಕಪ್ಪನಿಗಿಂತ ಮುಂದೆ ಹೋಗುವನು. ಇಲ್ಲದಿದ್ದರೆ ಇಬ್ಬರಿಗೂ ಮಧ್ಯೆ ನಡೆಯುವನು. ಬೇಸರವೆನಿಸಿದರೆ ಅಮ್ಮನ ಕೈ ಹಿಡಿದುಕೊಂಡು, ‘ಕಥೆ ಹೇಳಮ್ಮ’ ಎನ್ನುವನು.

ಮಧ್ಯ ಒಂದು ಸಲ ಕೂತು ಸುಧಾರಿಸಿಕೊಂಡು ಅವರು ರಾತ್ರಿ ಏಳು ಗಂಟೆಯ ಹೊತ್ತಿಗೆ, ಹದಿನಾಲ್ಕು ಮೈಲಿಯ ಕೊಪ್ಪವನ್ನು ಮುಟ್ಟಿದರು. ಒಂದು ಪಾತ್ರೆಯಲ್ಲಿ ಅವಲಕ್ಕಿ ನೆನಸಿ ಸೆಲ್ಲ ಹಾಕಿ, ಇನ್ನೊಂದರಲ್ಲಿ ಹುರಿಟ್ಟು ಕಲಸಬಹುದು. ಅಥವಾ ಯಾವುದಾದರೂ ಮರದ ಕೆಳಗೆ ಮೂರು ಕಲ್ಲು ಹೂಡಿ ಒಂದಿಷ್ಟು ಅನ್ನ ಬೇಯಿಸಿ ಹೋಟೆಲಿನಿಂದ ಎರಡಾಣೆ ಸಾರು ತರಬಹುದು-ಎಂದು ನಂಜಮ್ಮ ಯೋಚಿಸಿದಳು.
‘ಮಲ್ನಾಡು ಕಡೆ ಸಾವ್ಕಾರ್ರಮನ್ಲಿ ಎಷ್ಟು ಜನ ಬಂದ್ರೂ ಅನ್ನ ಹಾಕ್ತಾರೆ. ಹೋಗಿ ಊಟ ಮಾಡ್ಕಂಡ್ ಬರಾಣ’-ಅಪ್ಪಣ್ಣಯ್ಯ ಸೂಚಿಸಿದ.
ಅತ್ತಿಗೆ-‘ಯಾರ ಮನೆಗೂ ಊಟಕ್ಕೆ ಹೋಗೂದು ಬ್ಯಾಡ’ಎಂದಳು.
‘ಹಾಗಾದ್ರೆ ನಾನೂ ವಿಶ್ವ ಹೋಗಿ ಊಟ ಮಾಡ್ಕಂಡ್ ಬತ್ತೀವಿ. ನಿಮಗೆ ಕಲ್ಲು ಹೂಡಿಕೊಟ್ಟು ಹೋಟಲಲ್ಲಿ ಹುಳಿ ತಂದುಕೊಡ್ತೀನಿ.’
‘ಯಾರು ಹೋಗೂದೂ ಬ್ಯಾಡ. ನಾವು ತಂದ ಪದಾರ್ಥ ತಿನ್ನಾಣ.’
ಕೊನೆಗೆ ಅವಳು ಹೇಳಿದಂತೆಯೇ ಆಯಿತು. ಅಪ್ಪಣ್ಣಯ್ಯ ಕಲ್ಲು ಹೂಡು ಪುಳ್ಳೆ ತಂದು ಕೊಟ್ಟ. ಅವಳು ಅನ್ನ ಮಾಡಿದಳು. ಎರಡಾಣೆ ಕೊಟ್ಟಿದ್ದಕ್ಕೆ ಹೋಟೆಲಿನವರು ಅರ್ಧ ಕೊಳದಪ್ಪಲೆಗಿಂತ ಹೆಚ್ಚು ಹುಳಿ ಕೊಟ್ಟರು. ಮೂರು ಜನಕ್ಕೂ ಹೊಟ್ಟೆ ತುಂಬ ಊಟವಾಯಿತು. ಒಂದು ಅಂಗಡಿಯ ಜಗುಲಿಯ ಮೇಲೆ ಮಲಗಿದ್ದು ಬೆಳಗ್ಗೆ ಎದ್ದು ಹುರಿಟ್ಟು ಕಲಸಿದರು. ಒಂದು ತೆಂಗಿನಕಾಯಿ ಒಡೆದು ಅಪ್ಪಣ್ಣಯ್ಯ ಹೋಟೆಲಿಗೆ ಹೋಗಿ ಈಳಿಗೆ ಮಣೆಯಲ್ಲಿ ಒಂದು ಹೋಳು ತುರಿದುಕೊಂಡು ಬಂದ. ನೆನಸಿದ ಅವಲಕ್ಕಿಗೆ ಕಾಯಿತುರಿ ಬೆಲ್ಲ ಬೆರೆಸಿದರು. ಮೂವರೂ ಹೊಟ್ಟೆ ತುಂಬ ತಿಂದು ಉಳಿದ ನೆನೆದ ಅವಲಕ್ಕಿಯನ್ನು ವಿಶ್ವನಿಗೆಂದು ಇಟ್ಟುಕೊಂಡು ಮತ್ತೆ ಹೆಜ್ಜೆ ಹಾಕಿದರು. ಮೊನ್ನೆ ಊರಿನಿಂದ ತಿಪಟೂರಿಗೆ ಹದಿನಾರು ಮೈಲಿ, ನೆನ್ನೆ ನರಸಿಂಹರಾಜಪುರದಿಂದ ಕೊಪ್ಪಕ್ಕೆ ಹದಿನಾಲ್ಕು ಮೈಲಿ ಒಂದೇಸಮನೆ ನಡೆದದ್ದರಿಂದ ವಿಶ್ವನ ಎರಡು ತೊಡೆಗಳಲ್ಲೂ ನೋವು ಕಾಣಿಸಿಕೊಂಡಿತ್ತು. ಅವನ ಅಮ್ಮನ ಎರಡು ಹೆಜ್ಜೆಗಳೂ ನೋಯುತ್ತಿದ್ದುವು. ಆದರೆ ನಡೆಯದೆ ವಿಧಿಯಿಲ್ಲ. ‘ಕಾಲು ನೋಯುತ್ತೆ ಏನೋ ಮರಿ?’-ಎಂದು ಕೇಳಿದುದಕ್ಕೆ ವಿಶ್ವ, ‘ಗಂಡ್‌ಹುಡುಗುರ್ಗೆ ನೋಯುಲ್ಲ’ ಎಂದು ಮುಂದೆ ಓಡಿದ. ಅಲ್ಲಿಗೆ ಆರು ಮೈಲಿ ಹರಿಹರಪುರವಂತೆ. ಅಲ್ಲಿಯೂ ಶೃಂಗೇರಿಯ ಮಠವೇ ಇದೆಯಂತೆ. ನಿಧಾನವಾಗಿ ನಡೆದು ಹತ್ತುಗಂಟೆಯ ಹೊತ್ತಿಗೆ ಹರಿಹರಪುರ ಮುಟ್ಟಿದರು. ನದಿಯ ಸ್ನಾನ ದೇವರ ದರ್ಶನವಾದಮೇಲೆ ಮಠದಲ್ಲಿ ಊಟವಾಯಿತು. ಇವರಂತೆಯೇ ಬಂದಿದ್ದ ಸುಮಾರು ನೂರು ಜನ ಬ್ರಾಹ್ಮಣ ಮುತ್ತೈದೆಯರು ಊಟಕ್ಕೆ ಸೇರಿದ್ದುದರಿಂದ ನಂಜಮ್ಮನಿಗೆ ಸಂಕೋಚವೆನಿಸಲಿಲ್ಲ. ಊಟವಾದ ಮೇಲೆ ವಿಶ್ವ ತೂಕಡಿಸಲು ಶುರುಮಾಡಿದ. ಮುಂದೆ ಶೃಂಗೇರಿ ಹನ್ನೆರಡು ಮೈಲಿಯಂತೆ. ನಂಜಮ್ಮನ ಕಾಲು ನೋವು ಇನ್ನೂ ಹೆಚ್ಚಾಗಿತ್ತು. ರಾತ್ರಿ ಅಲ್ಲಿಯೇ ಉಳಿದಿದ್ದು ಬೆಳಿಗ್ಗೆ ಹೋಗುವುದೆಂದು ಅವರು ನಿಶ್ಚಯಿಸಿದರು. ಒಂದು ಸಾಲೆಯಲ್ಲಿ ವಿಶ್ವನನ್ನು ಮಲಗಿಸಿದರು. ಅವನ ಹತ್ತಿರ ಚಿಕ್ಕಪ್ಪನೂ ಮಲಗಿಕೊಂಡ. ಎದುರಿಗೆ ಹರಿಯುತ್ತಿದ್ದ ಹೊಳೆಯ ಹತ್ತಿರ ಕುಳಿತುಕೊಳ್ಳಬೇಕೆಂದು ನಂಜಮ್ಮನಿಗೆ ಆಶೆಯಾಯಿತು. ಮರಳಿನಲ್ಲಿ ನಡೆದು ಹೋಗಿ ನದಿಯ ನೀರಿನಲ್ಲಿ ಎರಡು ಹೆಜ್ಜೆಗಳನ್ನೂ ಮುಳುಗಿಸಿಕೊಂಡು ಅವಳು ಒಂದು ಕಲ್ಲಿನ ಮೇಲೆ ಕುಳಿತಳು. ಕಾಲಿಗೆ, ಹಾ ಎನಿಸುವಷ್ಟು ಹಿತವಾಗಿತ್ತು. ರಾಮಣ್ಣ ಪಾರ್ವತಿಯರ ನೆನಪು ಮನಸ್ಸನ್ನು ಆಕ್ರಮಿಸಿಬಿಟ್ಟಿತ್ತು. ಅವೂ ಬದುಕಿದ್ದು ಇಲ್ಲಿಗೆಲ್ಲ ಬಂದಿದ್ದರೆ ಎಷ್ಟು ಸಂತೋಷಪಡುತ್ತಿದ್ದವೋ! ಮಾತಾಡಿಕೊಂಡು ಜೊತೇಲಿ ನಡೀಭೌದಾಗಿತ್ತು. ನಾನೊಂದು ಪಾಪಿ-ಎಂದು ಕಣ್ಣೀರು ಒರೆಸಿಕೊಂಡು ಅವಳು, ಸಂಜೆಯ ಹೊತ್ತಿಗೆ ವಿಶ್ವ ಅಪ್ಪಣ್ಣಯ್ಯರು ಬಂದು ಕೂಗುವತನಕ ಹಾಗೆಯೇ ಕುಳಿತಿದ್ದಳು.

– ೩ –

ಇವರು ಮುಟ್ಟುವ ಹೊತ್ತಿಗೆ ಶೃಂಗೇರಿ ಚೆನ್ನಿಗರಾಯರಿಗೆ ಹಳೆಯದಾಗಿತ್ತು. ಮಠ, ಉಗ್ರಾಣ, ಪಾಕಶಾಲೆ, ಊಟಕ್ಕೆ ಬಡಿಸುವ ಎಷ್ಟು ತೊಟ್ಟಿಗಳಿವೆ, ಒಂದೊಂದು ತೊಟ್ಟಿಯಲ್ಲೂ ಎಷ್ಟೆಷ್ಟು ಜನರು ಕೂರಬಹುದು, ಯಾವ ತೊಟ್ಟಿಗೆ ಬಡಿಸುವವರು ಬೇಗ ಬರುತ್ತಾರೆ, ಎಂಬುದೇ ಅಲ್ಲದೆ ಹೊಳೆಯ ಆಚೆಯ ನರಸಿಂಹವನ, ಕಾಲಭೈರವಗುಡ್ದ, ಮೊದಲಾಗಿ ಎಲ್ಲವನ್ನೂ ತಿಳಿದು ಮುಗಿಸಿದ್ದರು. ಅವರು ಬಂದ ತಕ್ಷಣ ಛತ್ರದಲ್ಲಿ ಪ್ರತ್ಯೇಕ ಕೋಣೆಗೋಸ್ಕರ ಪ್ರಯತ್ನವೇನೋಪಟ್ಟರು. ಸಾವಿರ ಸಾವಿರ ಜನಗಳು ಬರುತ್ತಿದ್ದ ನವರಾತ್ರಿ ಕಾಲದಲ್ಲಿ ಎಂತೆಂತಹ ದೊಡ್ಡವರಿಗೇ ಜಾಗ ಸಿಕ್ಕದಿರುವಾಗ ಚೆನ್ನಿಗರಾಯರಿಗೆ ಸಿಕ್ಕುವುದು ಸಾಧ್ಯವಿರಲಿಲ್ಲ. ಪಾರುಪತ್ಯೆಗಾರರನ್ನು ಕಾಡಿ ಬೇಡಿದುದಕ್ಕೆ ಮಹಡಿ ಹತ್ತುವ ಮೆಟ್ಟಿಲಿನ ಕೆಳಗಿನ ಜಾಗವನ್ನು ಕೊಟ್ಟರು. ಹತ್ತಿ ಇಳಿಯುವವರ ದಢ ದಢ ಸದ್ದು ಇದ್ದರೂ ಅಷ್ಟಾದರೂ ಜಾಗ ಸಿಕ್ಕಿತು. ಛತ್ರದ ಕಾವಲುಗಾರ ಹತ್ತಿರವೇ ಇರುತ್ತಿದ್ದುದರಿಂದ ಅವರ ಪಂಚೆಯ ಗಂಟನ್ನು ನಿರ್ಭಯವಾಗಿ ಅಲ್ಲಿ ಇಟ್ಟು ಹೋಗಬಹುದಾಗಿತ್ತು.

ನಂಜಮ್ಮ ಬೆಳಗಿನ ಒಂಬತ್ತು ಗಂಟೆಯ ಶೃಂಗೇರಿ ತಲುಪಿದ ತಕ್ಷಣ ಪತಿದೇವರ ದರ್ಶನವಾಯಿತು. ಛತ್ರದಲ್ಲಿ ಅವರ ಜೊತೆಯೇ ತಮ್ಮ ಸಾಮಾನನ್ನೂ ಇಟ್ಟು, ವಿಶ್ವ ಅಪ್ಪಣ್ಣಯ್ಯರೊಡನೆ ಅವಳು ಮಠದ ಹತ್ತಿರಕ್ಕೆ ಬಂದಳು. ಹೊಳೆಯಲ್ಲಿ ಮಡಿ ಉಟ್ಟು ಒಗೆದ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸಿಕೊಂಡು ಹೋಗಿ ದೇವಸ್ಥಾನಗಳನ್ನೆಲ್ಲ ನೋಡಿದಳು. ಕುಂಕುಮಾರ್ಚನೆಗೆ ಆಗಲೇ ಹೊತ್ತಾಗಿಹೋಗಿದ್ದುದರಿಂದ ನಾಳೆ ಬೆಳಿಗ್ಗೆ ಮಾಡಿಸಿದರಾಯಿತೆಂದು ತೀರ್ಮಾನಿಸಿದಳು. ಮಧ್ಯಾಹ್ನ ಊಟವಾದ ಮೇಲೆ ಇವರು ಮೂವರೂ ದೋಣಿಯಲ್ಲಿ ಕೂತು ಹೊಳೆದಾಟಿ ನರಸಿಂಹವನಕ್ಕೆ ಹೊರಟರೆ ಜೊತೆಗೆ ಚೆನ್ನಿಗರಾಯರೂ ಸೇರಿಕೊಂಡರು. ‘ನಮ್ಮುನ್ನ ಬಿಟ್ತು ನೀನೊಬ್ನೇ ಮೋಟಾರಲ್ಲಿ ಬಂದೆಯಲ, ನೀನು ನಮ್ಮ ಜೊತೆ ಬರ್‌ಬ್ಯಾಡ’-ಎಂದು ವಿಶ್ವ ಅಪ್ಪನನ್ನು ದಬಾಯಿಸಿತು. ಅಪ್ಪಣ್ಣಯ್ಯನೂ ವಿಶ್ವನ ಜೊತೆ ಸೇರಿ ಮಾತನಾಡುತ್ತಿದ್ದ. ನಂಜಮ್ಮನೇ-‘ಯಾರೂ ಒಂದು ಮಾತೂ ಆಡಬೇಡಿ. ವಿಶ್ವ, ನೀನು ಜಾಣನಲ್ಲ ನೋಡು’ ಎಂದು ಗದ್ದರಿಸಿದಳು.

ನರಸಿಂಹವನಕ್ಕೆ ಹೋದರೆ ಅದೆಷ್ಟು ಗುಲಾಬಿ ಹೂವುಗಳು! ಇಷ್ಟೊಂದು ಗುಲಾಬಿಯ ಗಿಡಗಳನ್ನು ಇದುವರೆಗೆ ಮನಸ್ಸಿನಲ್ಲಿಯೂ ಕಲ್ಪಿಸಿಕೊಂಡಿರಲಿಲ್ಲ. ಭಕ್ತಾದಿಗಳು ಅವನ್ನು ಕೈತುಂಬ ಕುಯ್ದು ತೆಗೆದುಕೊಂಡು ಹೋಗಿ ಶಾರದಮ್ಮನವರಿಗೆ ಒಪ್ಪಿಸುತ್ತಾರಂತೆ. ಯಾರು ಬೇಕಾದರೂ ಕುಯ್ದು ಗುಡಿಗೆ ಒಯ್ಯಬಹುದು. ವಿಶ್ವ ಓಡಿಹೋಗಿ ಎರಡು ಹೂವು ಕುಯ್ದು, ಬೆರಳಿಗೆ ಮುಳ್ಳು ಚುಚ್ಚಿಕೊಂಡರೂ ಲೆಕ್ಕಿಸದೆ ತಂದು ಅಮ್ಮನಿಗೆ ಕೊಟ್ಟು, ‘ನೀನು ಮುಡ್ಕಳಮ್ಮ’ಎಂದಿತು. ‘ಇದು ನಾವು ಮುಡ್ಕಬಾರ್ದು ಮಗು. ದೇವರಿಗೆ’-ಎಂದು ಅವಳು ಅದನ್ನು ಕೈಲಿ ಹಿಡಿದುಕೊಂಡಳು. ತಕ್ಷಣ ಮಗಳ ನೆನಪಾಯಿತು. ಪಾರ್ವತಿಯದು ಒತ್ತಾಗಿ ಉದ್ದವಾದ ಕೂದಲು. ಬಾಚಿ ಹೆರಳು ಹಾಕಿದರಂತೂ ದೃಷ್ಟಿಯಾಗುವಷ್ಟು ದಪ್ಪನಾಗುತ್ತಿತ್ತು. ಸುರುಗಿ ಹೂವಿನ ಕಾಲದಲ್ಲಿ ರಾಮಣ್ಣ ನಸುಕಿನಲ್ಲಿಯೇ ಹೋಗಿ ಮರ ಹತ್ತಿ ಒಂದೊಂದು ಜೋಳಿಗೆ ಅರಳು ಮೊಗ್ಗು ತರುತ್ತಿದ್ದ. ಪಾರ್ವತಿ ಆಶೆಯಿಂದ ಅದನ್ನು ದಪ್ಪ ದಂಡೆಯಾಗಿ ಕಟ್ಟುತ್ತಿದ್ದಳು. ಅವಳು ಮೈನೆರೆದಮೇಲಂತೂ ಒಂದು ದಿನ ಹೆರಳು ಹಾಕಿ ಸುರಗಿ ದಂಡೆ ಮುಡಿಸಿದಾಗ ಎಷ್ಟು ಚೆನ್ನಾಗಿ ಕಾಣುತ್ತಿದ್ದಳೋ! ಅವನ ಸ್ಕೂಲಿನ ಕಾಂಪೌಂಡಿನಿಂದ ರಾಮಣ್ಣ ಒಂದು ದಿನ ಎರಡು ಗುಲಾಬಿ ಹೂವು ಕಿತ್ತು ತಂದಿದ್ದ. ಅದನ್ನು ಮುಡಿದರೂ ಚನ್ನಾಗಿ ಕಾಣುತ್ತಿದ್ದಳು. ಅಕ್ಕ ತಮ್ಮ ಅಂದರೆ ಒಬ್ಬರಿಗೊಬ್ಬರು ಅಷ್ಟು ಅಂತಃಕರಣ ಇಟ್ಟುಕೊಂಡಿದ್ದರು.

ಗುಲಾಬಿ ಹೂಗಳನ್ನು ನೋಡಿದ ನಂಜಮ್ಮನಿಗೆ ಮನಸ್ಸು ಮುದುಡಿಹೋದರೂ ಅವರೊಡನೆ ಅಲ್ಲೆಲ್ಲ ಸುತ್ತಿದಳು. ದೊಡ್ಡ ಗುರುಗಳು ತಪಸ್ಸು ಮಾಡುತ್ತಿದ್ದ ಗವಿ, ಭೈರವನ ಬೆಟ್ಟ, ಮೊದಲಾಗಿ ಚೆನ್ನಿಗರಾಯರು ಎಲ್ಲವನ್ನೂ ತಿಳಿಯ ಹೇಳಿದರು. ಹಿಂತಿರುಗುವಾಗ ಒಂದು ಒದ್ದೆ ಚೌಕದ ತುಂಬ ಗುಲಾಬಿ ಹೂವುಗಳನ್ನು ಕುಯ್ದು ತಂದು ಅವಳು ಅಮ್ಮನವರ ಗುಡಿಗೆ ಕೊಟ್ಟಳು.

ಮರುದಿನ ಬೆಳಿಗ್ಗೆ ಕುಂಕುಮಾರ್ಚನೆಗೆಂದು ಸ್ವಲ್ಪಮೊದಲೇ ಹೊರಟರು. ದೇವರ ಕೆಲಸವಾಗುವತನಕ ವಿಶ್ವನೂ ಉಪವಾಸವಿರಬೇಕು. ಆಗಲೇ ಬೆಳಿಗ್ಗೆ ಏಳೂವರೆ ಗಂಟೆಯ ಹೊತ್ತು. ಹೊರಗೆ ಹೋಗಿದ್ದ ಚೆನ್ನಿಗರಾಯರು ಛತ್ರಕ್ಕೆ ಹಿಂತಿರುಗಿದರು. ಪಂಚೆಯ ಸೆರಗಿನಲ್ಲಿ ದಪ್ಪನಾದ ಹದಿನೈದು ಇಪ್ಪತ್ತು ಹಾಗಲಕಾಯಿ ಇತ್ತು.
‘ಇದುನ್ನ ಯಾಕೆ ತಂದ್ಯೊ?’-ಅಪ್ಪಣ್ಣಯ್ಯ ಕೇಳಿದ.
‘ಒಳ್ಳೇ ಚನ್ನಾಗಿದೆ. ಒಂದೂವರೆ ಆಣೆಗೆ ಇಷ್ಟೊಂದು ಕೊಟ್ರು. ಇದರಲ್ಲಿ ಗೊಜ್ಜು ಮಾಡೇ’-ಅವರು ಹೆಂದತಿಗೆ ಆಜ್ಞಾಪಿಸಿದರು.
‘ನಿಮಗೇನು ಹುಡುಗಾಟವೇ? ನಾವೀಗ ದೇವಸ್ಥಾನಕ್ಕೆ ಹೊರಟಿದೀವಿ.’
‘ಅಲ್ಲಿಂದ ಬಂದಮೇಲೆ ಮಾಡು. ನನ್ನ ಹತ್ರ ಇರೂ ಟಿಫನ್‌ಕ್ಯಾರಿಯರ್ನಲ್ಲಿ ತಗಂಡು ಹೋಗಿ ಅಲ್ಲಿ ಸಮಾರಾಧನೆ ಊಟದ ಜೊತೆಗೆ ಹಾಕ್ಕತ್ತೀನಿ. ಅವರು ಬಡಿಸೂ ಸಾರು ಹುಳಿ, ಉಪ್ಪು ಖಾರವಾಗಿರುಲ್ಲ.’
‘ಸಾವಿರಾರು ಜನ ಊಟ ಮಾಡುತ್ತೆ. ನೀವು ಹೀಗೆ ತಗಂಡು ಹೋಗಿ ಮಧ್ಯೆ ಹಾಕ್ಕಂಡ್ರೆ ಯಾರಾದ್ರೂ ನಗುಲ್ವೆ?’
‘ಅದ್ಯಾವ್‌ನು ನಗ್ತಾನೆ-ಅವನವ್ವನ.’
‘ಪುಣ್ಯಕ್ಷೇತ್ರಕ್ಕೆ ಬಂದಿದೀರಿ. ಕೆಟ್ತ ಮಾತ್ಯಾಕಾಡ್ತೀರಿ?’
ಅಪ್ಪಣ್ಣಯ್ಯ ಅಂದ: ‘ಇಲ್ಲಿ ವಲೆ ಎಲ್ಲಿದೆ, ಅದಕ್ಕೆ ಅರೆಯೂದೆಲ್ಲಿ ತಿರುವೂದೆಲ್ಲಿ? ಹಾಗಲಕಾಯಿ ಗೊಜ್ಜು ನೀನು ಇಲ್ಲೇ ಬಯಸಬೇಕೇನೋ?’
‘ಛತ್ರದಲ್ಲಿ ಒರಳುಕಲ್ಲಿದೆ. ಇಲ್ಲೇ ಮೂರು ಇಟ್ಟಿಗೆ ಇಟ್ಕಂಡ್ರೆ ಆಗುತ್ತೆ. ಕಾವಲುಗಾರುಂಗೆ ಕೇಳಿದ್ರೆ ಒಂದೆರಡು ಸೌದೆ ಕೊಡ್ತಾನೆ.’
‘ಅಮ್ಮ, ಅಲ್ಲಿ ಮಾಡ್‌ಬ್ಯಾಡ ಕಣಮ್ಮ’-ವಿಶ್ವ ಹೇಳಿತು.
‘ಮುಂಡ್ಹೆತ್ತುದ್ದೇ, ಹಾಗಂತ ಹೇಳ್ಕೊಡ್ತೀ ಏನೋ ನಿನ್ನವ್ವನ……’
ಛತ್ರದ ಕಾವಲುಗಾರನಿಗೆ ಇದು ಕೇಳಿತು. ‘ಇಲ್ಲಿ ಕೆಟ್ಟ ಮಾತಾಡಕೂಡ್ದು ಕಣ್ರಿ. ಪಾರುಪತ್ತೆಗಾರ್ರಿಗೆ ಗೊತ್ತಾದ್ರೆ ಓಡಿಸಿಬಿಡ್ತಾರೆ’- ಎಂದು ಅವನು ಎಚ್ಚರಿಕೆಯಿತ್ತ. ಅಲ್ಲಿ ಇಟ್ಟಿಗೆ ಹೂಡಿ ಸೌದೆ ಗಲೀಜು ಮಾಡಕೂಡದೆಂದೂ ಹೇಳಿದ. ಚೆನ್ನಿಗರಾಯರಿಗೆ ನಿರಾಶೆಯಾಯಿತು. ಹಾಗಲಕಾಯಿ ಗೊಜ್ಜು ಎಂದರೆ ಅವರಿಗೆ ಅಷ್ಟೊಂದು ಪ್ರೀತಿ. ರಾಮಸಂದ್ರದಲ್ಲಿ ಇಂಥಾ ಒಳ್ಳೆಯ ಹಾಗಲಕಾಯಿ ಸಿಕ್ಕುವುದಿಲ್ಲ. ಇಲ್ಲಿ ಸಿಕ್ಕಿದರೂ ಪ್ರಯೋಜನವಾಗಲಿಲ್ಲ. ‘ಹಾಳು ಪಾರುಪತ್ತೆಗಾರನ’- ಎಂದು ಬೈದುಕೊಂಡು ಸುಮ್ಮನಾದರು.

ಕುಂಕುಮಾರ್ಚನೆ ಮಾಡಿಸುವಾಗ ನಂಜಮ್ಮನಿಗೆ ಒಂದು ತೆರನಾದ ಮನಶ್ಯಾಂತಿ ಸಿಕ್ಕಿತು. ಶಾರದಮ್ಮನವರನ್ನು ಅವಳು ಇದುವರೆಗೂ ಪಟದಲ್ಲಿ ನೋಡಿದ್ದಳು. ನೆನ್ನೆ ಮಧ್ಯಾಹ್ನ ಬಂದ ತಕ್ಷಣ ಇಲ್ಲಿಗೆ ಬಂದು ನೋಡಿದ್ದಳು. ಆಗ ಇನ್ನೂ ಅಲಂಕಾರ ಮಾಡಿರಲಿಲ್ಲ. ಈಗ ಅದೆಷ್ಟೋ ಜನ ಭಕ್ತರು ಒಟ್ಟಿಗೆ ಕುಂಕುಮಾರ್ಚನೆ ಮಾಡಿಸುತ್ತಿದ್ದಾರೆ. ಅಮ್ಮನವರು ಅಂದರೆ ಅದೇನು ಕಳೆ, ಅದೇನು ಗಂಭೀರ. ರಾಮಸಂದ್ರದ ಕಾಳಮ್ಮನ ಮುಖ ನೋಡಿದರೆ ಹೆದರಿಕೆಯಾಗುತ್ತೆ. ಆದರೆ ಶಾರದಮ್ಮನವರ ಮುಖ ನೋಡಿದರೆ ಎಂಥ ಹೆದರಿಕೆಯೂ ಹೋಗುತ್ತೆ. ಅಮ್ಮನವರ ಕೃಪೆಯಿಂದಲೇ ವಿಶ್ವ ಉಳಿದುಕೊಂಡದ್ದು. ಇನ್ನು ಮೇಲೆ ಕಷ್ಟ ಸುಖ ಜಡ್ಡು ಜಾಪತ್ತು ಏನಿದ್ದರೂ ಇವರೊಬ್ಬರಿಗೇ ಹರಕೆ ಕಟ್ಟಬೇಕು. ಉಳಿದ ಯಾವ ದೇವರೂ ಬೇಡ-ಎಂದು ತೀರ್ಮಾನಿಸಿದ ಅವಳು ವಿಶ್ವನನ್ನು ಮೂರು ಬಾರಿ ಅಡ್ದಗೆಡವಿ ತಾನೂ ಪ್ರದಕ್ಷಿಣೆ ನಮಸ್ಕಾರ ಮಾಡಿದಳು. ಹರಕೆಯ ಹಣ ನಾಲ್ಕು ಆಣೆಯ ಪಾವಲಿಯನ್ನೂ ಡಬ್ಬಗಡಿಗೆಗೆ ಹಾಕಿ, ಅವರು ಕೊಟ್ಟ ಪ್ರಸಾದದ ಕುಂಕುಮವನ್ನು ಇಸಿದುಕೊಂಡಳು. ಅಪ್ಪಣ್ಣಯ್ಯನೂ ಭಕ್ತಿಯಿಂದ ಪ್ರದಕ್ಷಿಣೆ ನಮಸ್ಕಾರ ಹಾಕಿದ.

ಮರುದಿನ ಇವರು ಎದ್ದು ಶೌಚ ಮುಗಿಸಿದ್ದರು. ಬೆಳಿಗ್ಗೆ ಏಳು ಗಂಟೆಯ ಸಮಯವಾಗಿತ್ತು. ಸ್ನಾನಕ್ಕೆ ಹೊಳೆಗೆ ಹೋಗಬೇಕು. ವಿಶ್ವ ಛತ್ರದ ಹೊರಗೆ ಎಲ್ಲೋ ಇರಬೇಕು. ಅವನನ್ನು ನೋಡಿದರೆ ಇಲ್ಲ. ಚೆನ್ನಿಗರಾಯರೇನೋ ಹೊಳೆಯ ಕಡೆ ಹೋಗುತ್ತೇನೆಂದು ಹೇಳಿ ಹೋಗುತ್ತಾರೆ; ಹಿಂತಿರುಗುವ ಹೊತ್ತು ಗೊತ್ತಿಲ್ಲ. ಅವರನ್ನು ಕಾಯುವ ಅಗತ್ಯವು ಇಲ್ಲ. ಜನಗಂಗುಳಿಯಲ್ಲಿ ಈ ಹುಡುಗ ಎಲ್ಲಿ ಹೋಯಿತೋ ಎಂದು ನಂಜಮ್ಮ ಅಪ್ಪಣ್ಣಯ್ಯ ಇಬ್ಬರೂ ಯೋಚಿಸುತ್ತಿರುವಷ್ಟರಲ್ಲಿ ಅವನೇ ಅಳುತ್ತಾ ಬಂದು ಅಮ್ಮನ ಸೆರಗು ಹಿಡಿದು-‘ನಂಗೆ ದ್ವಾಸೆ ಕೊಡ್ಸು ಬಾ’-ಎಂದು ಜಗ್ಗಿದ.
‘ಮಡಿ ಉಟ್ಕಂಡಮೇಲೆ ಹುರಿಟ್ಟುಕಲಸಿಕೊಡ್ತೀನಿ ಮರಿ’ – ಎಂದರೆ, ‘ಹ್ಞೂ, ಅಣ್ಣ ದ್ವಾಸೆ ತಿಂತಿದಾನೆ. ನಂಗೂ ಕೊಡ್ಸು’ ಎಂದು ಹಟ ಮಾಡಿದ.
‘ಈಗ ನೀನೆಲ್ಲಿಗೆ ಹೋಗಿದ್ಯೋ?’-ಅಪ್ಪಣ್ಣಯ್ಯ ಕೇಳಿದ.
“ಅಣ್ಣ ಒಬ್ನೇ ಹೋಟ್ಳಿಗೆ ಹೋಗ್ತಿದ್ದ. ನಾನೂ ಹಿಂದ್‌ಗಡೆ ಹೋದೆ. ಅವ್ನು ಕೂತ್ಕೊಂಡು, ಎರಡು ದ್ವಾಸೆ ಕೊಡಿ ಅಂತ ಕೇಳ್ದ. ಆಮ್ಯಾಲೆ ನನ್ನ ನೋಡಿ, ‘ನೀನ್ಯಾಕೆ ಬಂದ್ಯೋ?’ ಎಂದ. ‘ನಂಗೂ ದ್ವಾಸೆ ಕೊಡ್ಸು’ ಅಂದೆ. ‘ನನ್ಹತ್ರ ದುಡ್ದಿಲ್ಲ, ನಿಮ್ಮಮ್ಮನ್ನ ಕೈಲಿ ಹುರಿಟ್ಟು ಇಸ್ಕಂಡ್ ತಿನ್ಹೋಗು’ ಅಂದ. ‘ನಂಗೆ ದ್ವಾಸೆ ಕೊಡುಸ್ದೇ ಇರು, ಆಗಲ್ಲ’ ಅಂತ ನಾನೂ-‘ನಂಗೂ ದ್ವಾಸೆ ಕೊಡ್ರೀ’ ಅಂತ ಹೋಟ್ಳುನೋರುನ್ನ ಕೇಳ್ದೆ. ಅದುಕ್ಕೆ, ‘ಇದ್ಯಾವುದೋ ಹುಡ್ಗ ಕೇಳ್ತಿದೆ. ಆಮ್ಯಾಲೆ ನನ್ನ ದುಡ್ದು ಕೇಳ್‌ಬ್ಯಾಡಿ ಕಣ್ರೀ’ ಅಂತ ಅಣ್ಣ ಅಂದ. ಹೋಟ್ಲುನೋರು ನನ್ನ ಗದರಿಸ್ಕಂಡ್ ಓಡುಸ್‌ಬಿಟ್ರು.”
‘ಇಲ್ಲಿ ಅವಲಕ್ಕಿ ಹುರಿಟ್ಟಿನ ಪಾಲಿಗೂ ಬತ್ತಾನೆ. ಅಲ್ಲಿ ಕದ್ದು ಹೋಟ್ಳಿಗೂ ಹೋಗ್ತಾನೆ. ನೋಡಿದ್ರಾ ಆ ಕಳ್ಳ ಲೌಡಿಮಗುನ್ನ’- ಅಪ್ಪಣ್ಣಯ್ಯ ಎಂದ.
‘ಏನಾದ್ರೂ ಆಕ್ಕಳ್ಳಿ. ನೀವು ಮಾತಾಡ್‌ಬ್ಯಾಡಿ. ಮಗೂನ ಕರ್ಕಂಡ್ ಹೋಗಿ ಒಂದಾಣಿ ದೋಸೆ ಕೊಡ್ಸಿ.’
ಅಮ್ಮ ಒಂದಾಣಿ ಕೊಟ್ಟಳು. ಚಿಕ್ಕಪ್ಪ ಹೋಗಿ ತಿನ್ನಿಸಿಕೊಂಡು ಬಂದ. ಆಮೇಲೆ ಇವರು ಮೂವರೂ ಸ್ನಾನಕ್ಕೆ ಹೊಳೆಗೆ ಹೋದರು. ಮೀನುಗಳಿರುವ ಕಡೆ ಸ್ನಾನ ಮಾಡಬೇಕೆಂದು ವಿಶ್ವನಿಗೆ ಆಶೆ. ಅಷ್ಟು ದಪ್ಪದ ಮೀನುಗಳನ್ನು ಅವನಾಗಲಿ ಅವನ ಅಮ್ಮನಾಗಲಿ ನೋಡಿರಲಿಲ್ಲ. ಅಂಥದನ್ನು ರಾಮನಾಥಪುರದಲ್ಲಿ ತಾನು ನೋಡಿರುವುದಾಗಿ ಅಪ್ಪಣ್ಣಯ್ಯ ಎಂದ. ಏನಾದರೂ ತಿಂಡಿ ಎರಚಿದರೆ ಮೀನುಗಳು ದಂಡು ಕಟ್ಟಿಕೊಂಡು ಬರುತ್ತಿದ್ದ ರಭಸವನ್ನು ಎಷ್ಟು ನೋಡಿದರೂ ವಿಶ್ವನಿಗೆ ತೃಪ್ತಿಯಿಲ್ಲ. ತನ್ನ ಚಡ್ಡೀಜೇಬಿಗೆ ಹಾಕಿಸಿಕೊಂಡಿದ್ದ ಅವಲಕ್ಕಿಯನ್ನೆಲ್ಲ ಅವನು ಮೀನುಗಳಿಗೇ ಎರಚಿದ.

ಸ್ನಾನಘಟ್ಟದಿಂದ ಸ್ವಲ್ಪ ಮೇಲ್ಭಾಗದ ಮರಗಳ ಹತ್ತಿರ ಹೋಗಿ ಮೊದಲು ನಂಜಮ್ಮ ಸ್ನಾನ ಮಾಡಿ ಬಟ್ಟೆ ಒಗೆದಳು. ನಂತರ ವಿಶ್ವನ ಜೊತೆಗೆ ಅಪ್ಪಣ್ಣಯ್ಯ ಇಳಿದ. ಆದರೆ ಅದಾವ ಮಾಯದಲ್ಲೋ ವಿಶ್ವ ಅವರಿಬ್ಬರ ಕಣ್ಣನ್ನೂ ತಪ್ಪಿಸಿಬಿಟ್ಟಿದ್ದ. ಎರಡೇ ನಿಮಿಷದಲ್ಲಿ ಅವನು ಸೆಳೆತಕ್ಕೆ ಸಿಕ್ಕಿ ಕೆಳಭಾಗಕ್ಕೆ ಹೋಗುತ್ತಿದ್ದ. ಆದರೆ ಈಜು ಬಲ್ಲವನಾದುದರಿಂದ ನೀರಿನಲ್ಲಿ ಮುಳುಗಿರಲಿಲ್ಲ. ‘ಮಗು ಮುಳಿಕ್ಕಳ್ತಿದೆ ಹಿಡ್ಕಳ್ರಪ್ಪಾ’-ನಂಜಮ್ಮ ಉಸಿರು ಕಟ್ಟಿದಂತೆ ಕೂಗಿದಳು. ಹಿಂದೆಯೇ ಅಪ್ಪಣ್ಣಯ್ಯ ಈಜುಬಿದ್ದು ನುಗ್ಗಿದ. ಆದರೆ ಅಷ್ಟರಲ್ಲಿ ವಿಶ್ವ ಎಷ್ಟೋ ಮುಂದೆ ಹೋಗಿಬಿಟ್ಟಿದ್ದ. ಒಂದೇ ಉಸಿರಿಗೆ ಕೈ ಬಗೆದು ಮುಂದೆ ಸಾಗಿದ ಅಪ್ಪಣ್ಣಯ್ಯ ವಿಶ್ವನನ್ನು ಹಿಡಿದ. ವಿಶ್ವನೂ ಕೈ ಬಗೆಯುತ್ತಿದ್ದ. ಅಂತೂ ಇಬ್ಬರೂ ದಡ ಮುಟ್ಟಿದರು. ನಂಜಮ್ಮನ ಹೋದ ಜೀವ ಬಂತು. ದಡದಲ್ಲಿಯೇ ಓಡಿ, ಅವರು ಬರುವ ಜಾಗಕ್ಕೆ ಬಂದಳು. ಅಷ್ಟರಲ್ಲಿ ಈ ದೃಷ್ಯವನ್ನು ಕಂಡ ಎಷ್ಟೋ ಜನ ಗುಂಪುಗಟ್ಟಿದರು.
ದಡ ಮುಟ್ಟಿದ ವಿಶ್ವ-‘ಅಮ್ಮ, ಕೆರೇಲಾದ್ರೆ ಹ್ಯಾಗೆ ಬೇಕಾದ್ರೂ ಈಜಾಡ್‌ಭೌದು. ಹ್ವಳೇಲಿ ಎತ್ತೆತ್ಲಗೋ ಯಳ್ಕಂಡ್ ಹೋಗಿಬಿಡುತ್ತೆ’ ಎಂದ.
ಅವಳಿಗೆ ತಡೆಯಲಾರದಷ್ಟು ಸಿಟ್ಟು ಬಂತು. ಹಿಡಕಂಡು ಬೆನ್ನಿನ ಮೇಲೆ ಬಲವಾಗಿ ನಾಲ್ಕು ಬಾರಿಸಿದಳು. ‘ನಂಗೆ ಈಜಾಡಬೇಕು ಅನ್ನಿಸ್ತು, ಬಿದ್ದೆ’-ಎಂದು ಅವನು, ತನ್ನನ್ನು ತಾನು ಸಮರ್ಥಿಸಿಕೊಂಡ.
‘ಇನ್ನೂ ಕ್ಯಳಗಡೆ ಹ್ವಾಗಿದ್ರೆ ಸುಳಿಗೆ ಸಿಕ್‌ಹಾಕ್ಕಬೇಕಾಗಿತ್ತು’-ಹತ್ತಿರದಲ್ಲಿಯೇ ಇದ್ದ ಒಬ್ಬರು ಎಂದರು.

ಅವರು ಶೃಂಗೇರಿಯಲ್ಲಿ ಒಟ್ಟು ಆರು ದಿನ ಇದ್ದರು. ದಿನವೂ ಬೆಳಿಗ್ಗೆ ಅಮ್ಮನವರಿಗೆ ಕುಂಕುಮಾರ್ಚನೆಯಾಗುವುದರಿಂದ ಹಿಡಿದು ರಾತ್ರಿ ಸ್ವಾಮಿಗಳು ಸಿಂಹಾಸನ ಏರುವ ತನಕ ನೋಡಿದರು. ಚಂಡೀ ಹೋಮವಾದ ಮರುದಿನವೇ ಊರಿಗೆ ಹೊರಟರು. ‘ಇರೂ ದುಡ್ಡು ಲೆಕ್ಕ ಹಾಕಿ. ತಿಪಟೂರು ತನಕ ರೈಲು ಚಾರ್ಜು ಆದರೆ ಸಾಕು. ದುಡ್ಡಿದ್ದರೆ ಚೆನ್ನಯ್ಯನ ಜೊತೆ ನೀವು ವಿಶ್ವ ಮೋಟಾರಲ್ಲಿ ನಾಡಿದ್ದು ಬನ್ನಿ. ನಾನು ಇವತ್ತೇ ಹೊರಟು ನರಸಿಂಹರಾಜಪುರಕ್ಕೆ ನಡಕಂಡು ಬರ್ತೀನಿ’-ಎಂದು ಅಪ್ಪಣ್ಣಯ್ಯ ಹೇಳಿದ. ಹಾಗೆ ಮಾಡಿದ್ದರೂ ಆಗುತ್ತಿತ್ತು. ಬಸ್ಸಿಗೆ ಮೂರು ರೂಪಾಯಿ ಖರ್ಚು ಮಾಡಿದರೆ, ದಾರಿಯಲ್ಲಿ ವಿಶ್ವ ಏನಾದರೂ ಕೇಳಿದರೆ ಕೊಡಿಸಲು ಚಿಲ್ಲರೆ ಕಾಸಿಗೆ ಸೊನ್ನೆ ಬೀಳುತ್ತಿತ್ತು. ಅಲ್ಲದೆ ಅಂತಹ ಕಾಡನ್ನು ಮತ್ತೆ ನೋಡುವೆನೋ ಇಲ್ಲವೋ! ತನಗೇ ತಿಳಿಯದಂತೆ ಅವಳು ಕಾಡನ್ನು ಅಷ್ಟೊಂದು ಪ್ರೀತಿಸತೊಡಗಿದ್ದಳು. ಕಾಲು ನೋಯ್ದರೂ ನಡೆಯುವುದಕ್ಕೆ ವಿಶ್ವನೇನೂ ಹೆದರುವವನಲ್ಲ. ಸರಿ, ಮೂವರೂ ನಡದೇ ಹೊರಟರು. ಗಂಟನ್ನು ಅಪ್ಪಣ್ಣಯ್ಯ ಹೊತ್ತ. ತಾನು ಕೊಂಡಿದ್ದ ಶಾರದಮ್ಮನವರ ಮೂರು ಪಟಗಳನ್ನು ಸುತ್ತಿ ಅವಳು ಕೈಲಿ ಹಿಡಿದುಕೊಂಡಳು.

ದಾರಿಯಲ್ಲಿ ನಂಜಮ್ಮನ ಮನಸ್ಸು ಪ್ರಸನ್ನವಾಗಿತ್ತು. ತನ್ನ ಇಬ್ಬರು ಮಕ್ಕಳೂ ಸಾಯುವುದು ದೇವರ ಇಚ್ಛೆಯಾಗಿತ್ತೇನೋ! ದೇವರ ಇಚ್ಛೆ ತಪ್ಪಿಸುವುದು ಯಾರಿಗೆ ಸಾಧ್ಯ? ಎಂಬ ಭಾವ ಅವಳಲ್ಲಿ ಬರುತ್ತಿತ್ತು. ವಿಶ್ವ ಹೊಳೆಯಲ್ಲಿ ಸೆಳೆಯಲ್ಪಟ್ಟು ಬದುಕಿ ಬಂದಿದ್ದಾನೆ. ಅವನಿಗೆ ಕಂಟಕವಿತ್ತೇನೋ; ಕಳೆದಂತೆ ಆಗಿದೆ. ಊರಿಗೆ ಹೋದಮೇಲೆ ತನ್ನ ಅಪ್ಪನಿಗೆ ಹೇಳಿಕಳಿಸಿ ಸರಿಯಾಗಿ ವಿಶ್ವನ ಜನ್ಮಭವಿಷ್ಯ ಬರೆಸಬೇಕು ಎಂದು ಯೋಚಿಸುತ್ತಿದ್ದಳು. ಅಪ್ಪಣ್ಣಯ್ಯ ಯಾಕೋ ತುಂಬ ಮಂಕಾಗಿದ್ದ. ಶೃಂಗೇರಿಯಲ್ಲಿ ಸಹ ಅದೇನೋ ಯೋಚಿಸುವವನಂತೆ ಮೌನಿಯಾಗಿದ್ದ. ಅವನು ಹೀಗೆ ತನ್ನ ಜೊತೆ ಇದ್ದುದೇ ಇಲ್ಲ. ಸದಾ ಅವರಮ್ಮನ ಜೊತೆ ಇರುತ್ತಿದ್ದ; ದೇಶಾವರಿ ಸಂಚಾರ ಮಾಡುತ್ತಿದ್ದ. ಸಂಕೋಚದಿಂದ ಹೀಗಿರಬಹುದೆಂದು ನಂಜಮ್ಮ ಸುಮ್ಮನಿದ್ದುಬಿಟ್ಟಳು.

ನರಸಿಂಹರಾಜಪುರಕ್ಕೆ ಬಂದು ಅನ್ನ ಮಾಡಿ ಹೋಟೆಲಿನಿಂದ ಹುಳಿ ತಂದು ಊಟ ಮುಗಿಸುವ ಹೊತ್ತಿಗೆ ನಾಡಿದ್ದು ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಉಳಿದಿದ್ದ ಅನ್ನವನ್ನು ಪಾತ್ರೆಯಲ್ಲಿ ಹಾಕಿ ಕಟ್ಟಿ ಇಟ್ಟಿದ್ದರು. ಅಷ್ಟರಲ್ಲಿ ಚೆನ್ನಿಗರಾಯರ ಮೋಟಾರು ಬಂತು. ವಿಶ್ವ ಅಪ್ಪನ ಮುಖ ಕಂಡ ತಕ್ಷಣ-‘ಅಮ್ಮ, ಅನ್ನಾನ ಅವ್ನಿಗೆ ಕೊಡ್‌ಕೂಡ್‌ದು. ಅವ್ನ್ಯಾಕೆ ನಂಗೆ ದ್ವಾಸೆ ಕೊಡುಸ್ದೆ ಒಬ್ನೇ ತಿಂದ-’ ಎಂದ. ಆ ಮಾತು ಇನ್ನಾರಿಗಾದರೂ ಕೇಳಿದರೆ ಏನೆಂದುಕೊಂಡಾರು ಎಂಬ ಅಂಜಿಕೆ ಅಮ್ಮನಿಗೆ. ಅವರ ರೈಲಿಗೆ ಇನ್ನೂ ಹೊತ್ತಿತ್ತು. ಇವರ ಅನ್ನವನ್ನು ಚೆನ್ನಿಗರಾಯರೇನೂ ಕೇಳಲಿಲ್ಲ. ಸ್ಟೇಷನ್ ಹತ್ತಿರ ಹೋಟೆಲಿನಲ್ಲಿ ಊಟವಿತ್ತು.

ರಾತ್ರಿ ತರೀಕೆರೆಯಲ್ಲಿ ನಾಲ್ಕೂ ಜನರೂ ಮಲಗಿದರು. ಮರುಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ರೈಲು ಬರುವ ಮುಂಚೆ ನಂಜಮ್ಮ ಅನ್ನ ಮಾಡಿದಳು. ಅಪ್ಪಣ್ಣಯ್ಯ ಹುಳಿ ತಂದ. ಚೆನ್ನಿಗರಾಯರು ಈಗಲೂ ಇವರ ಜೊತೆ ಊಟ ಮಾಡಲಿಲ್ಲ.

ಆ ಬೆಳಿಗ್ಗೆಯಿಂದಲೂ ಅಪ್ಪಣ್ಣಯ್ಯ ಹೆಚ್ಚು ಮಂಕಾಗಿದ್ದ. ರೈಲು ಹತ್ತಿದ ಮೇಲೂ ಸಪ್ಪಗೆ ಕುಳಿತಿದ್ದ. ಅವನ ಅಣ್ಣನೇ ಕೊಡಲು ಬಂದರೂ ಒಂದು ಸಲ ಹೊಗೆಸೊಪ್ಪು ಸಹ ಹಾಕಿಕೊಳ್ಲಲಿಲ್ಲ. ಬೀರೂರಿನಲ್ಲಿ ಗಾಡಿ ಬದಲಾಯಿಸಿದಮೇಲೆ ಅವನ ಮುಖದಾಲ್ಲಿ ಇನ್ನೂ ಚಿಂತೆ ಕಾಣುತ್ತಿತ್ತು. ಯಾಕೆ ಎಂದು ಮಾತನಾಡಿಸಬೇಕೆಂದು ನಂಜಮ್ಮನಿಗೆ ಎನ್ನಿಸಿದರೂ ಗಂಡನ ಎದುರಿಗೆ ಕೇಳಬಾರದೆಂದು ಸುಮ್ಮನಾದಳು. ಕಡೂರು ಸ್ಟೇಷನ್ನಿನಲ್ಲಿ ನೀರು ತುಂಬಿಕೊಳ್ಳಲು ಗಾಡಿ ತುಂಬ ಹೊತ್ತು ನಿಲ್ಲುತ್ತದೆಂದು ಅಕ್ಕಪಕ್ಕದವರು ಹೇಳಿದರು. ವಡೆ ಬೋಂಡ ಹುಡುಕಿಕೊಂಡು ಚೆನ್ನಿಗರಾಯರು ಕೆಳಗೆ ಇಳಿದರು. ಅಪ್ಪಣ್ಣಯ್ಯ ಅತ್ತಿಗೆಗೆ ಹೇಳಿದ: ‘ತಿಪಟೂರಿನಿಂದ ನೀವು ವಿಶ್ವ ಮೋಟಾರಲ್ಲಿ ಹೋಗೂವಷ್ಟು ದುಡ್ಡಿದೆಯೆ?’
‘ಯಾಕೆ?’
‘ನೀವು ಹೋಗಿ. ನಾನು ಇಲ್ಲೇ ನುಗ್ಗೀಕೆರೆಗೆ ಹೋಗಿಬತ್ತೀನಿ.’
ಅನಿರೀಕ್ಷಿತವಾದರೂ ನಂಜಮ್ಮನಿಗೆ ಈ ಮಾತಿನಿಂದ ಸಂತೋಷವಾಯಿತು. ಇನ್ನಿಲ್ಲದ ರೀತಿಯಲ್ಲಿ ಹೊಡೆದು ಬಡಿದು, ಹೆಂಡತಿಯ ಮಾಂಗಲ್ಯ ಕಿತ್ತುಕೊಂಡು ಇಷ್ಟು ವರ್ಷಗಳಾಗಿವೆ. ಈಗ ಇವನು ಹೋದರೆ ಅವರು ಮಾತನಾಡಿಸುತ್ತಾರೆಯೋ ಇಲ್ಲವೋ? ಏನೋ ಅವ್ವನ ಮಾತು ಕೇಳಿಕೊಂಡು ಅಪ್ಪಣ್ಣಯ್ಯ ಹಾಗೆ ಮಾಡಿದ. ಈಗಲಾದರೂ ಸಂಸಾರ ಒಂದಾದರೆ ಚನ್ನ- ಎಂದು ಅವಳು ಯೋಚಿಸುತ್ತಿರುವಾಗ ಅವನೇ, ‘ಹುಡುಗ್ರನ್ನಾದ್ರೂ ನೋಡಬೇಕು ಅನ್ನುಸ್ತಿದೆ’ ಎಂದ.

ನಂಜಮ್ಮ ದುಡ್ಡು ಎಣಿಸಿ ನೋಡಿದಳು. ಒಟ್ಟು ಎರಡು ರೂಪಾಯಿ, ಎರಡೂವರೆ ಆಣೆ ಇತ್ತು. ತನಗೆ ವಿಶ್ವನಿಗೆ ಮೋಟಾರಿನಲ್ಲಿ ಒಟ್ಟು ಹನ್ನೆರಡಾಣೆ ಸಾಕು. ಒಂದು ರೂಪಾಯಿ ತೆಗೆದು ಅಪ್ಪಣ್ಣಯ್ಯನ ಕೈಗೆ ಕೊಟ್ಟು -‘ಹೋಗಿ ನೋಡ್ಕಂಡು ಬನ್ನಿ. ಜಯಲಕ್ಷ್ಮಿಗೆ ಈಗ ಮದುವೆಯ ವಯಸ್ಸು. ತಂದೆ ಅನ್ನಿಸ್ಕೊಂಡೋರು ಮಕ್ಕಳ ನಿಗಾ ನೋಡ್ದೆ ಇದ್ರೆ ಯಾರು ನೋಡಬೇಕು? ರಾಮಕೃಷ್ಣ ಸ್ಕೂಲಿಗೆ ಹೋಗ್ತಾ ಇದಾನೋ ಅಥವಾ ಬರೀ ದಾನದ ಹಳ್ಳಿ ಸುತ್‌ತಾ ಇದಾನೋ! ನೋಡ್ಕಂಡು ಬನ್ನಿ’ ಎಂದಳು.

ಗೋಣೀಚೀಲದ ಗಂಟು ಬಿಚ್ಚಿ ಅಪ್ಪಣ್ಣಯ್ಯ ತನ್ನ ಅಂಗಿ ಪಂಚೆಗಳನ್ನು ತೆಗೆದುಕೊಳ್ಳುವಾಗ ಚೆನ್ನಿಗರಾಯರು ಹಿಂತಿರುಗಿದರು. ‘ಎಲ್ಲಿಗ್ಹೋಗ್ತಿಯೋ?’-ಅವರು ಕೇಳಿದರು. ‘ನುಗ್ಗೀಕೆರೆಗೆ’-ಎಂದು ಅವನು ಏನೂ ಯೋಚಿಸದೆ ಹೇಳಿಬಿಟ್ತ. ಆದರೆ ಅದನ್ನು ಹೇಳಬಾರದಾಗಿತ್ತೆಂಬ ಅರಿವು ಅವನಿಗೆ ಬರುವ ಮೊದಲೇ ಶ್ಯಾನುಭೋಗರು-‘ಬಿಟ್ಟ ಹೆಂಡ್ತಿ ನೋಡುಕ್ಕೆ ಹೊರಟೆ ಏನೋ ಕೆಟ್ತರಾಮ?’ ಎಂದು ಕೇಳಿದರು. ಅಷ್ಟರಲ್ಲಿ ರೈಲು ಹೊರಟಿತು. ಅಪ್ಪಣ್ಣಯ್ಯ ಉತ್ತರ ಕೊಡಲಿಲ್ಲ. ಬೇಗ ಬೇಗ ಇಳಿದ.

ಮಧ್ಯಾಹ್ನ ಮೂರು ಗಂಟೆಗೆ ತಿಪಟೂರು ಮುಟ್ಟಿದ ಅವರು ಸಂಜೆ ಆರರ ಹೊತ್ತಿಗೆ ಊರು ಸೇರಿದರು. ರಾತ್ರಿಗೆ ಸ್ವಲ್ಪ ಅನ್ನವಿತ್ತು. ಅವಳು ಮತ್ತೆ ಅಡಿಗೆ ಮಾಡಲಿಲ್ಲ. ಅಮ್ಮನವರ ಪ್ರಸಾದ ಮತ್ತು ಪಟವನ್ನು ಕೊಟ್ಟುಬರಲು ಆಗಲೇ ಮೇಷ್ಟರ ಮನೆಗೆ ಹೋದಳು.

ಶೃಂಗೇರಿಯಿಂದ ತಂದ ಮನಶ್ಯಾಂತಿಯನ್ನು ಅವಳು ಉಳಿಸಿಕೊಳ್ಳುವುದು ಕಷ್ಟವಾಯಿತು. ಅಪ್ಪಣ್ಣಯ್ಯ ಹೆಂಡತಿಯ ಊರಿಗೆ ಹೋದ ಸಂಗತಿಯನ್ನು ಚೆನ್ನಿಗರಾಯರಿಂದ ತಿಳಿದ ಗಂಗಮ್ಮ ಮರುದಿನ ಮಧ್ಯಾಹ್ನ ಬಂದು- ‘ಮತ್ತೆ ಅವರಿಬ್ಬರಿಗೂ ಪ್ರಸ್ತ ಮಾಡಿಸ್ಬೇಕು ಅಂತ ಕಳುಸ್ದೆ ಏನೇ ತಲೆಹಿಡುಕ ಮುಂಡೆ?’ ಎಂದು ಎರಡು ಗಂಟೆ ನಡುಬೀದಿಯಲ್ಲಿ ನಿಂತು ಬೈದಳು. ನಂಜಮ್ಮ ಮಾತಿಗೆ ಹೋಗಲಿಲ್ಲ. ಅಜ್ಜಿಯನ್ನು ದಬಾಯಿಸುತ್ತೇನೆಂದು ಹೊರಟ ವಿಶ್ವನನ್ನು ಹಿಡಿದು ಒಳಗೆ ಕೂರಿಸಿದಳು. ಅತ್ತೆ ಸಹಸ್ರನಾಮ ಮುಗಿಸಿ ಹೋದಮೇಲೆ ಒಂದು ಪ್ರಶ್ನೆ ಅವಳ ಮನಸ್ಸನ್ನು ಕಾಡುತ್ತಿತ್ತು; ನಮ್ಮ ಪಾಡಿಗೆ ನಾವು ಇರ್ತೀವಿ ಅಂದ್‌ರೂ ದೇವರು ಯಾಕೆ ಹೀಗೆಲ್ಲ ಮಾಡುಸ್ತಾನೆ? ನಾನು ಬ್ಯಾಡ ಅಂದ್ರೂ ಯಾಕೆ ಇವರು ಬಂದು ಜಗಳ ಕಾಯ್ತಾರೆ? ಮಾದೇವಯ್ಯನವರನ್ನು ಕೇಳಿದರೂ ಇದಕ್ಕೆ ಸರಿಯಾದ ಉತ್ತರ ಸಿಕ್ಕಲಿಲ್ಲ. ‘ನಮ್ಮುನ್ನ ಪರೀಕ್ಷೆ ಮಾಡಾಕೆ ಶಿವ ಹಿಂಗೆ ಮಾಡ್ತಾನೆ’-ಎಂದು ಅವರೇನೋ ಶ್ರದ್ಧಾಪೂರ್ವಕ ನುಡಿದರು. ಇದೆಂತಹ ಪರೀಕ್ಷೆ? ಯಾಕೆ ಇದೆಲ್ಲ ಪರೀಕ್ಷೆ ಮಾಡಬೇಕು ಶಿವ?-ಎಂದು ಅವಳು ಮನಸ್ಸಿನಲ್ಲಿ ಕೇಳಿಕೊಳ್ಳುತ್ತಿದ್ದಳು.

ನಾಲ್ಕೈದು ದಿನಗಳ ಮೆಲೆ ಒಂದು ದಿನ ಸರ್ವಕ್ಕ ಬಂದಿದ್ದಾಗ ಹೇಳಿದಳು: ‘ನಂಜಮ್ಮಾರೇ, ನಿಮ್ಮ ಅಜ್ಜಿ ಪಾರ್ವತಮ್ಮುಂಗೆ ಚಿನ್ನದ ಶ್ಯಾವಂತಿಗೆ ಹೂವು ಕೊಟ್ಟಿತ್ತಲಾ, ಅದ ಏನ್ ಮಾಡಿದ್ರಿ?’
ಅದು ಅವಳಿಗೆ ನೆನಪಿಲ್ಲ. ಪಾರ್ವತಿಯ ಒಡವೆಗಳನ್ನೆಲ್ಲ ಸೂರ್ಯನಾರಾಯಣನಿಗೆ ಕೊಟ್ಟಾಗ ಅದನ್ನೂ ಹಾಕಿದ್ದೆನೇನೋ ಎಂಬ ಅನಿಮಾನ ಬಂತು. ಆದರೆ ತನಗೆ ಜ್ಞಾಪಕವಿರುವ ಮಟ್ಟಿಗೆ ಹಾಕಿಲ್ಲ. ಈಗ ಮನೆಯಲ್ಲಿ ಹುಡುಕಿ ನೋಡಬೇಕು. ಆದರೆ ಮಗಳಿಗೆ ಸಂಬಂಧಿಸಿದ ಯಾವ ವಸ್ತುವನ್ನೂ ಹುಡುಕುವುದಾಗಲಿ ಕಣ್ಣಿನಿಂದ ನೋಡುವುದಾಗಲಿ ಅವಳಿಗೆ ಬೇಕಿರಲಿಲ್ಲ. ರಾಮಣ್ಣನ ಬಟ್ಟೆಗಳನ್ನು ಸಹ ಹೊಲೆಯರ ಮರಿಯನ ಮಗನಿಗೆ ಕೊಟ್ಟುಬಿಟ್ಟಿದ್ದಳು.
‘ನಂಗೆ ಗೊತ್ತಿಲ್ಲ. ಯಾಕೆ ಸರ್ವಕ್ಕ?’
‘ನೀವು ಶೃಂಗೇರಿಗೆ ಹೋಗಾಕೆ ಮದ್ಲು ನಿಮ್ಮ ಯಜಮಾನ್ರು ಅದುನ್ನ ಕಾಶಿಂಬಡ್ಡಿಗೆ ಐವತ್ತು ರೂಪಾಯಿಗೆ ಖರೂದಿ ಮಾರಿದ್ರಂತೆ.’
‘ನಿಮಗೆ ಯಾರು ಹೇಳಿದ್ರು?’
‘ಶಿವೇಗೌಡನ ಮಗಳು. ಹಿಂದಿನ ಕಾಲ್‌ದಾಗೆ ಮಾಡಿದ್ದು. ತುಂಬ ವೈನಾಗೈತೆ ಅಂತ ಅವ್ಳು ಹಾಕ್ಯತಾ ಅವ್ಳೆ.’
ತನ್ನ ಗಂಡನ ಶೃಂಗೇರಿ ಯಾತ್ರೆ ಎಲ್ಲ ಅವಳಿಗೆ ನೆನಪಾಯಿತು. ಮನಸ್ಸು ಸಿಟ್ಟಿನಿಂದ ಕುದಿಯಿತು. ಆದರೆ ಎರಡು ನಿಮಿಷದಲ್ಲಿ ತನಗೆ ತಾನೇ ಸಮಾಧಾನ ತಂದುಕೊಂಡಳು. ಈಗ ಆಗೂದು ಆಗಿದೆ. ಇನ್ನು ಅವರನ್ನ ಬೈದ್ರೆ ಏನು ಬಂತು? ಅವರ ಸ್ವಭಾವ ತಿದ್ದುಕ್ಕೆ ಯಾರಿಗೂ ಆಗುಲ್ಲ- ಎಂದು ಯೋಚಿಸಿ, ‘ಹೋಗ್ಲಿ ಬಿಡಿ ಸರ್ವಕ್ಕ. ಅದು ಮನೇಲಿದ್ರೆ ನಂಗೆ ಕಣ್ಣಲ್ಲಿ ನೋದುಕ್ಕೆ ಆಗ್ತಿರ್ಲಿಲ್ಲ’ ಎಂದು ಆ ಮಾತನ್ನು ಅಲ್ಲಿಗೆ ಮುಗಿಸಿದಳು.

– ೪ –

ಕಡೂರಿನಿಂದ ಒಂಬತ್ತು ಮೈಲಿ ದೂರದ ನುಗ್ಗೀಕೆರೆಗೆ ಹೋಗುವಾಗ ಅಪ್ಪಣ್ಣಯ್ಯನ ಮನಸ್ಸಿನಲ್ಲಿ ನಾನಾ ವಿಧವಾದ ಯೋಚನೆಗಳು. ಈಗ ಹುಡುಗರು ಹ್ಯಾಗೆ ಕಾಣ್ತಾರೆ? ಅವ್ಳು ನನ್ನ ಮಾತಾಡುಸ್ತಾಳೋ ಇಲ್ವೋ? ಮನೆ ಅಂದ್ರೆ ಒಂದು ಗಂಡು ದಿಕ್ಕು ಬೇಕು. ‘ಇಲ್ಲೇ ಇದ್‌ಬಿಡಿ. ನೀವೂ ಹಳ್ಳೀಲಿ ದಾನ ಪಾನ ತರೂರಂತೆ’-ಅಂದ್ರೆ ಏನು ಮಾಡೂದು? ಇಲ್ಲಿಂದ ಹೋಗುವಾಗ ಅವ್ಳು ಬಸುರಿಯಾಗಿದ್ಲು. ಎಂಥ ಮಗುವಾಗಿದ್ಯೋ ಏನೋ! ಒಂದು ತೆರನಾದ ಭಯವೂ ಅವನ ಮನಸ್ಸನ್ನು ಆವರಿಸಿತ್ತು. ‘ಇಲ್ಲಿಗ್ಯಾಕೆ ಬಂದೆ ನಡಿ’-ಅಂದ್‌ಬಿಟ್ರೆ ಏನ್ ಮಾಡೂದು? ಈಗಲೇ ವಾಪಸ್ ಹೊರಟುಹೋಗಿಬಿಡ್ಳೇ?-ಎಂದುಕೊಂಡು ಅವನು ನುಗ್ಗೀಕೆರೆ ತಲುಪುವ ವೇಳೆಗೆ ಸಂಜೆ ಆರು ಗಂಟೆಯಾಗಿತ್ತು. ಅವರು ಈಘ ಎಲ್ಲಿದ್ದಾರೆ ಎಂದು ವಿಚಾರಿಸಿದಾಗ ತಿಳಿಯಿತು: ಈ ಊರು ಬಿಟ್ಟು ಮೂರು ನಾಲ್ಕು ವರ್ಷದ ಮೇಲೆ ಆಯಿತಂತೆ. ಅಲ್ಲಿ ಜೀವನ ನಡೆಯುಲ್ಲ ಅಂತ ದೊಡ್ಡ ಊರು ಕಡೂರಲ್ಲೇ ಇದಾರಂತೆ. ಪೇಟೆಬೀದಿ ಗಂಗಾಧರಪ್‌ನೋರ ಅಂಗಡಿ ಹಿಂಭಾಗದಲ್ಲೇ ಅವರ ಮನೆಯಂತೆ.
‘ಅಲ್ಲಿ ಜೀವನಕ್ಕೆ ಏನ್ ಮಾಡ್ತಾರೆ?’
‘ನಂಗೇನು ಗೊತ್ತು? ನೀವು ಅವ್ರಿಗೇನಾಗಬೇಕು?’-ಅವರು ನಕ್ಕು ಕೇಳಿದರು.
ತನ್ನ ಗುರುತು ಹೇಳಲು ಅವನಿಗೆ ಇಷ್ಟವಾಗಲಿಲ್ಲ. ಆದುದರಿಂದ ಮುಂದೆ ಯಾವ ಪ್ರಸ್ನೆಯನ್ನೂ ಕೇಳದೆ ಅಲ್ಲಿಂದ ಹೊರಟು ದಾರಿಯ ಕೆರೆ ಏರಿಯ ಈಚೆ ಕಡೆಗೆ ಸಿಕ್ಕುವ ವಡ್ಡರಹಳ್ಳಿಗೆ ಬಂದ. ಪರಸ್ಥಳದವರೆಂದು ಹೇಳಿ ಒಂದು ಮನೆಯಲ್ಲಿ ಜೋಳದ ಹಿಟ್ತು ಇಸಿದುಕೊಂಡು ರೊಟ್ಟಿ ತಟ್ಟಿ ತಿಂದು ರಾತ್ರಿ ಮಲಗಿದ್ದು, ಉಳಿದ ರೊಟ್ಟಿಯನ್ನು ಬೆಳಿಗ್ಗೆ ತಿಂದು ಮತ್ತೆ ಕಡೂರು ಕಡೆಗೆ ಕಾಲು ಹಾಕಿದ.
ಕಡೂರು ಅವನು ಕಾಣದ ಊರಲ್ಲ. ಹಿಂದೆ ಬಂದು ಹೋಗಿದ್ದ. ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಅಲ್ಲಿಗೆ ಬಂದು ಪೇಟೆಬೀದಿ ಗಂಗಾಧರಪ್ಪನವರ ಅಂಗಡಿಯನ್ನು ವಿಚಾರಿಸಿಕೊಂಡು ಹೋದ. ಅಂಗಡಿಯ ಪಕ್ಕದಲ್ಲಿ ಒಂದು ಪುಟ್ಟ ಗಲ್ಲಿ. ಅದರಲ್ಲಿ ಹೋದರೆ ಹಿಂಭಾಗದಲ್ಲಿ ಒಂದು ಸಣ್ಣ ಮಂಗಳೂರು ಹೆಂಚಿನ ಮನೆ. ಬಾಗಿಲಿಗೆ ಗಾಜಿನ ಮಣಿಗಳ ತೋರಣ ಹಾಕಿದ್ದ ಅದು, ಇವರು ಇರುವ ಮನೆಯೋ ಅಲ್ಲವೋ ಎಂದು ಅನುಮಾನಪಡುತ್ತಾ ಅವನು ನಿಂತಿದ್ದಹಾಗೇ ಒಳಗಿನಿಂದ ಒಬ್ಬ ಹುಡುಗಿ ಬಂದಳು. ಹದಿನಾಲ್ಕು ಹದಿನೈದು ವಯಸ್ಸಿನ ಅವಳ ಕೈಲಿ ಪುಸ್ತಕಗಳಿದ್ದವು. ಮಿಣ ಮಿಣ ಮಿಂಚುವ ಸೀರೆ ಉಟ್ಟಿದ್ದಳು. ಮುಖಕ್ಕೆ ಪೌಡರ್ ಹಾಕಿದ್ದ ಅವಳನ್ನು ನೋಡಿದ ಒಂದು ನಿಮಿಷದಲ್ಲಿ ಗುರುತು ಸಿಕ್ಕಿತು: ಜಯಲಕ್ಷ್ಮಿ. ತನ್ನ ಹಿರೀ ಮಗಳು.
‘ಇದೇ ಏನೇ ಮನೆ?-ಇವನು ಕೇಳಿದುದಕ್ಕೆ ಹುಡುಗಿ ಗುರುತು ಸಿಕ್ಕದವಳಂತೆ ನೋಡಿ, ‘ಯಾರು ನೀವು?’ ಎಂದಳು.
‘ಗುರ್ತೇ ಸಿಕ್ಲಿಲ್ವೆ? ನಿಮ್ಮಣ್ಣಲ್ವೇ?’
‘ಯಾವೂರಣ್ಣಾ?’-ಎನ್ನುತ್ತಾ ಅವಳು ಒಳಗೆ ಹೊರಟುಹೋದಳು.
‘ಎಲಾ ಇವಳವ್ವನ’-ಮನಸ್ಸಿನಲ್ಲಿಯೇ ಎಂದುಕೊಂಡು ಅವನೂ ಒಳಗೆ ಹೋದರೆ ಒಳಗಿನ ವೈಭವವೇನು! ಮೆತ್ತೆ ಹಾಕಿದ ಕುರ್ಚಿ. ಗೋಡೆಗೆಲ್ಲ ಪಟಗಳು. ಮೇಜದ ಮೇಲೆ, ಹೋಟೆಲಿನಲ್ಲಿ ಇರುವಂಥ ರೇಡಿಯೋ. ಅವನ ಹೆಂಡತಿ, ರೇಷ್ಮೆ ಸೀರೆ ಉಟ್ಟು ಹೆರಳು ಹಾಕಿಕೊಂಡು ಕುರ್ಚಿಯ ಮೇಲೆ ಕೂತಿದಾಳೆ. ಮುಖವೆಲ್ಲ ಪೌಡರು. ಈಗ ಎಷ್ಟು ಚೆನ್ನಾಗಿ ಕಾಣ್ತಿದಾಳೆ ಅವಳು. ತೊಡೆಯ ಮೇಲೆ ಎರಡು ವರ್ಷದ ಒಂದು ಹೆಣ್ಣು ಮಗು. ಹತ್ತಿರದ ಇನ್ನೊಂದು ದೊಡ್ಡ ಕುರ್ಚಿಯ ಮೇಲೆ ಆರಾಮವಾಗಿ ಒರಗಿಕೊಂಡು, ಸುಮಾರು ನಲವತ್ತು ವರ್ಷದ ಒಬ್ಬ ದೊಡ್ಡ ಮನುಷ್ಯರು ಸಿಗರೇಟು ಸೇದುತ್ತಿದ್ದಾರೆ. ಅವರ ಬೆರಳುಗಳಲ್ಲಿ ಹೊಳೆಯುವ ಉಂಗುರಗಳೇನು, ಕೊರಳಿನ ಚೈನು, ಕೈಗೆ ಬಂಗಾರದ ಗಡಿಯಾರವೇನು!
‘ಇದೆಯಾ ಮನೆ? ನಾನು ನುಗ್ಗೀಕೆರೆಗೆ ಹೋಗಿ ಬಂದೆ?’-ಅಪ್ಪಣ್ಣಯ್ಯ ಕೇಳಿದ.
ಸಾತು ದಿಗ್ಭ್ರಮೆ ಹಿಡಿದವಳಂತೆ ಒಂದು ಕ್ಷಣ ಆವನನ್ನೇ ನೋಡುತ್ತಾ ಮಂಕಾಗಿಬಿಟ್ಟಳು. ಆದರೆ ಅವನ ಮತ್ತೆ ಮಾತನಾಡಲು ಬಾಯಿತೆರೆಯುವ ಮೊದಲೇ-‘ಯಾರು ನೀವು ಇಲ್ಲಿಗ್ಯಾಕೆ ಬಂದ್ರಿ?’ ಎಂದಳು.
‘ನನ್ನ ಯಾರು ಅಂತಿ ಏನೆ?’
‘ಇವ್ನುನ್ನ ಮನೆಯಿಂದ ಕಳ್ಸಿ’-ಎಂದು ಹೇಳಿ ಅವಳು ಪಕ್ಕದ ರೂಮಿಗೆ ಹೊರಟುಹೋದಳು.

‘ಯಾವನೋ ನೀನು?’-ಎಂದು ಆ ಗಂಡಸು ಕೇಳಿದ ರೀತಿಗೇ ಅಪ್ಪಣ್ಣಯ್ಯ ಹೆದರಿಬಿಟ್ಟ. ಅಲ್ಲಿ ನಿಲ್ಲದೆ ಒಂದೇ ಏಟಿಗೆ ಹಿಂತಿರುಗಿದವನು, ಹಿಂಭಾಗದಿಂದ ನಾಯಿ ಓಡಿಸಿಕೊಂಡು ಬಂದವನಂತೆ ಧಪಧಪನೆ ಕಾಲು ಹಾಕುತ್ತಾ ಓಡಿದ. ತಾನು ಎತ್ತ ಹೋಗುತ್ತಿದೀನಿ, ಯಾವ ದಿಕ್ಕಿನಲ್ಲಿ ಹೋಗುತ್ತಿದೀನಿ ಎಂಬ ಪರಿವೆಯೂ ಇಲ್ಲದೆ ಓಡಿದ ಅವನು ಸುಸ್ತಾಗಿ ದೊಡ್ಡ ದೊಡ್ಡ ಹೆಜ್ಜೆ ಹಾಕತೊಡಗಿದ. ಸ್ವಲ್ಪ ಹೊತ್ತಾದಮೆಲೆ ದೂರದಲ್ಲಿ ಒಂದು ಊರು ಕಾಣಿಸಿತು. ‘ಅದು ಯಾವೂರು?’-ಎಂದು ಕೇಳಿದುದಕ್ಕೆ ಯಾರೋ, ‘ಬೀರೂರು’ ಎಂದರು. ಬೇಗ ಬೇಗ ನಡೆದು ಅಲ್ಲಿಗೆ ಬಂದ. ತಿಪಟೂರಿಗೆ ಹೋಗುವ ರೈಲು, ಇನ್ನೇನು ಈಗ ಬರುತ್ತೆ ಎಂದು ಯಾರೋ ಹೇಳಿದರು. ಸ್ಟೇಷನ್ನಿಗೆ ಹೋಗಿ ಟಿಕೇಟು ತೆಗೆದುಕೊಂಡು ರೈಲು ಬಂದಮೇಲೆ ಕುಳಿತರೆ ಹಾಳು ರೈಲು ಮತ್ತೆ ಕಡೂರಿಗೇ ಬಂದು ನಿಂತಿತು. ಅವರು ತನ್ನನ್ನು ಹುಡುಕಿದರೆ ಏನು ಗತಿ ಎಂಬ ಭಯದಿಂದ ತನ್ನ ಕಡೆಯ ಕಿಟಿಕಿಯನ್ನು ಮುಚ್ಚಿ, ರೈಲು ಹೊರಡುವ ತನಕ ಮೈಗೂಡರಿಸಿಕೊಂಡು ಕೂತಿದ್ದ. ತಿಪಟೂರು ಮುಟ್ಟುವತನಕ ಹೆದರಿಕೆ ಇದ್ದೇ ಇತ್ತು. ಸ್ಟೇಷನ್ನಿನಲ್ಲಿ ಇಳಿದು, ಹತ್ತಿರ ಉಳಿದಿದ್ದ ಐದು ಆಣೆಗೆ ಖಾಲಿ ದೋಸೆ ತಿಂದು ಊರ ಕಡೆ ಹೆಜ್ಜೆ ಹಾಕುವಾಗ- ‘ಅವನು ಯಾರಿರಭೌದು?’-ಎಂಬ ಜಿಜ್ಞಾಸೆ ಮೂಡಿತು. ‘ಆ ಸೂಳೆಮಗುನ್ನ ಇಟ್ಕಂಡಿದಾಳೆ ಈ ಕತ್ತೆಮುಂಡೆ’- ಎಂಬ ಉತ್ತರ ಹೆಚ್ಚು ಕಷ್ಟವಿಲ್ಲದೆ ಹೊಳೆಯಿತು. ಹಾಗೆಯೇ ಹಿಂತಿರುಗಿ ಹೋಗಿ ಅವಳನ್ನು ಕಸಪೊರಕೆಯಿಂದಲಾದರೂ ಹೊಡೆಯಬೇಕೆಂದು ಮನಸ್ಸು ತವಕಿಸಲು ಮೊದಲುಮಾಡಿತು. ಆದರೆ ಆ ಕಡೆಗೆ ಹೆಜ್ಜೆ ತಿರುಗಿಸುವುದಕ್ಕೆ ಭಯವಾಗುತ್ತಿದೆ.

ಮಧ್ಯೆ ಎಲ್ಲೂ ನಿಲ್ಲದೆ ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಊರಿಗೆ ಬಂದು ಹನುಮಂತರಾಯನ ಗುಡಿಯ ಬಾಗಿಲು ಬಡಿದು- ‘ನಾನು’ ಎಂದಾಗ ಅವನ ಅಮ್ಮ ಬಾಗಿಲನ್ನೇನೋ ತೆಗೆದಳು. ಸೀಮೆ ಎಣ್ಣೆ ಬುಡ್ಡಿ ಹೊತ್ತಿಸಿದಮೇಲೆ ಇವನು ಒಳಗೆ ಹೋಗಿ ಕೂರುವುದೇ ತಡ, ಕೇಳಿದಳು: ‘ಮತ್ತೆ ಆ ಸೂಳೆ ಹುಡಿಕ್ಕಂಡು ಹೋಗಿದ್ಯಲಾ, ಅವಳ ಸೆಜ್ಜೆಮನೆಗೆ ನಿನ್ನ ಸೇರ್ಸುಲ್ಲ ಅಂದ್ಲೇನೋ?’

ಅಪ್ಪಣ್ಣಯ್ಯ ಮಾತನಾಡಲಿಲ್ಲ. ಅಮ್ಮನೇ-‘ಭಂಡಗೆಟ್ಟ ಸೂಳೇಮಗನೇ, ನಾಚಿಕೆಯಾಗುಲ್ವೇನೋ? ಶೃಂಗೇರಿ ಯಾತ್ರೆಗೆ ಹೋಗ್ತೀನಿ ಅಂತ ಸುಳ್ ಹೇಳಿ ಅವಳ ಹತ್ರ ಹಾದರ ಮಾಡುಕ್ಕೆ ಹೋಗಿದ್ಯಾ? ಈ ದೇವರ ಗುಡಿ ವಳೀಕ್ ಬಂದ್ ಕೂತಿದೀಯಲ, ಬೆಳಿಗ್ಗೆ ಅಣ್ಣಾಜೋಯಿಸರನ್ನ ಕರೆಸಿ ನಿಂಗೆ ಬಹಿಷ್ಕಾರ ಹಾಕುಸ್ತೀನಿ ತಾಳು. ಬಿಟ್ಟ ಹೆಂಡ್ತಿ ಕೂಡುಕ್ ಹೋಗಿದ್ದ ಕೆಟ್ಟರಾಮ.’
ಅಪ್ಪಣ್ಣಯ್ಯನಿಗೆ ವಿಪರೀತ ಕೋಪ ಬಂತು. ‘ಸುಮ್ನೆ ಬಾಯಿ ಮುಚ್ಕತ್ತೀಯೋ ಇಲ್ವಮ್ಮ?’-ಎಂದ.
‘ನಾನ್ಯಾಕೆ ಬಾಯಿ ಮುಚ್ಕಬೇಕೋ ಭಂಡ? ಗಂಜಲು ಮೂಸಿಕಂಡು ಹೋದ್ಯಲೋ ವಾಸನೆ ಹಿಡ್ಕಂಡು, ನಾಯಿಮುಂಡೆ ಹೆತ್ತುದ್ದೇ…..’

ಅವಳು ಬೈಯುವುದನ್ನು ಕೇಳುಕೇಳುತ್ತಾ ಅವನಿಗೆ ಮೈಕೈ ಉರಿಯುವಷ್ಟು ಕೋಪ ಬಂತು. ‘ಬಾಯಿ ಮುಚ್ಕತ್ತಿಯೋ ಇಲ್ವೋ’-ಎಂದು ಇನ್ನೊಂದು ಸಲ ಕಿರುಚಿದ. ಅವಳು ಇನ್ನೂ ಜೋರಾಗಿ ಬೈಯಲು ಶುರುಮಾಡಿದಳು. ಅವನ ಎದುರಿಗೇ ಈಚಲು ಕಸಪೊರಕೆ ಇತ್ತು. ಎದ್ದು ಅದನ್ನು ತೆಗೆದುಕೊಂಡು ಅಮ್ಮನ ಮುಖ ಮೋರೆ ಬೆನ್ನು ಮೈ ಕೈಗಳನ್ನು ನೋಡದೆ ರಪರಪನೆ ಇಪ್ಪತ್ತು ಮೂವತ್ತು ಏಟು ರಾಚಿದ. ‘ಅಯ್ಯಯ್ಯಪ್ಪೋ, ನನ್ನ ಸಾಯಿಸ್ತಾನಲೋ ಇವ್ನು’-ಎಂದು ಅವಳು ಊಳಿಟ್ತ ಸದ್ದಿಗೆ ಏಳು ಎಂಟು ಜನ ಎದ್ದು ಬಂದರು. ಇನ್ನೂ ನಾಲ್ಕು ಜನ ಸೇರಿದರು. ಗಂಗಮ್ಮನೇ ಅಣ್ಣಾಜೋಯಿಸರನ್ನು ಕರೆಸಿದಳು. ಅಯ್ಯಾಶಾಸ್ತ್ರಿಗಳೂ ಬಂದರು.
ಹೆತ್ತ ತಾಯೀನ ಕಸಪೊರಕೇಲಿ ಹೊಡೆಯುವಂಥ ಮಹಾಪಾಪ ಉಂಟೆ?’-ಅಯ್ಯಾಶಾಸ್ತ್ರಿಗಳು ಕೇಳಿದರು.
‘ನೂರ ಒಂದು ರೂಪಾಯಿ ದಂಡ ಕೊಟ್ತು ಪ್ರಾಯಶ್ಚಿತ್ತ ಮಾಡಿಸಿಕೋಬೇಕು’- ಅಣ್ಣಾಜೋಯಿಸರು ತೀರ್ಪು ಹೇಳಿದರು.
‘ನಂತಾವ ಒಂದು ಕೂದ್‌ಲೂ ಕಿತ್ಕಳಾಕಾಗುಲ್ಲ ಹೋಗ್ರುಲೇ’- ಅಪ್ಪಣ್ಣಯ್ಯ ರೇಗಿ ಅಂದ.

ಇಂಥವನನ್ನು ದೇವಸ್ಥಾನದಲ್ಲಿ ಇಟ್ಟುಕೊಳ್ಳುವುದು ಹೇಗೆ? ಅವನಿಗೆ ಬಹಿಷ್ಕಾರ ಹಾಕಿ ಆ ಕ್ಷಣವೇ ಅಲ್ಲಿಂದ ಹೊರಡಿಸಿದರು. ‘ಇವ್ನು ಈ ಊರೇ ಬಿಡಬೇಕು’-ಎಂದು ಅಣ್ಣಾಜೋಯಿಸರ ವಾದ. ‘ಈ ಊರೇನು ನಿಮ್ಮಪ್ಪನ ಜಾಗೀರಿಯಲ್ಲ ಕಣ್‌ಲೇ ಜೋಯಿಸ!’-ಅಪ್ಪಣ್ಣಯ್ಯ ಹೇಳಿದ. ಅವನಿಗೆ ಇಷ್ಟೊಂದು ಧೈರ್ಯ ಬಂದದ್ದನ್ನು ಇದುವರೆಗೆ ಯಾರೂ ಕಂಡಿರಲಿಲ್ಲ. ಎಲ್ಲರೂ ಸ್ತಬ್ಧರಾದರು. ಅವನೇ ತನ್ನ ಬಟ್ಟೆ ಬರೆಗಳನ್ನು ಜೋಡಿಸಿಕೊಂಡು ಹೊರಟುಹೋದ. ‘ಈ ಸೂಳೇಮಗನ ಕೈಗೆ ಹುಳಬೀಳ’-ಎಂದು ಅವನ ಅಮ್ಮ ಶಾಪ ಹಾಕುತ್ತಿದ್ದಳು.
ಅತ್ತಿಗೆಯ ಮನೆಗೆ ಹೋಗಬೇಕೆಂದು ಅವನಿಗೆ ಮನಸ್ಸಾಯಿತು. ನುಗ್ಗೀಕೆರೆಯ ವಿಷಯ ಕೇಳಿದರೆ ಏನು ಹೇಳುವುದು?- ಎಂಬ ಯೋಚನೆಯಾಗಿ ಅಲ್ಲಿಗೆ ಹೋಗಲಿಲ್ಲ. ಸದ್ದು ಮಾಡದಂತೆ ನಡೆದು ಮಾದೇವಯ್ಯನವರ ಗುಡಿಯ ಜಗುಲಿಗೆ ಹೋಗಿ ಮಲಗಿ ರಾತ್ರಿಯನ್ನು ಕಳೆದ. ಮತ್ತೆ ಸುಮಾರು ಒಂದು ತಿಂಗಳು ಅವನು ಊರಿನಲ್ಲಿರಲೇ ಇಲ್ಲ.

ನೆನ್ನೆ ರಾತ್ರಿ, ನಡೆದ ಸಂಗತಿ ನಂಜಮ್ಮನಿಗೆ ತಿಳಿಯಿತು. ಅವನು ಹೆಂಡತಿಯ ಊರಿಗೆ ಹೋಗಿದ್ದ ಸಂಗತಿಯನ್ನು ಊರಿಗೆ ಬಂದ ತಕ್ಷಣ ಹೋಗಿ ಅಮ್ಮನಿಗೆ ಮುಟ್ಟಿಸಿದ ತನ್ನ ಗಂಡನ ಬಗೆಗೆ ಅವಳಿಗೆ ವಿಪರೀತ ಕೋಪ ಬಂತು. ಆದರೆ ಅವರನ್ನು ಕೇಳಿ ಪ್ರಯೋಜನವಿಲ್ಲ. ಗಂಗಮ್ಮ ಆ ಮಗನನ್ನೇ ಅಲ್ಲದೆ ಅವಳನ್ನೂ ಮನಸ್ಸಿಗೆ ಬಂದ ಹಾಗೆ ಬೈದುಕೊಂಡು ತಿರುಗುತ್ತಿದ್ದಳು. ಅದಕ್ಕೂ ನಂಜಮ್ಮ ಉಭ ಶುಭ ಅನ್ನಲಿಲ್ಲ. ಅಜ್ಜಿ ಬೀದಿಯಲ್ಲಿ ಸಿಕ್ಕಿ ಏನಾದರೂ ಅಂದರೂ, ಅವರ ಕೈಲಿ ಮಾತಾಡಕೂಡದೆಂದು ವಿಶ್ವನಿಗೆ ಹೇಳಿದಳು.

ಒಂದು ತಿಂಗಳಾದಮೇಲೆ ಒಂದು ದಿನ ಅಪ್ಪಣ್ಣಯ್ಯ ಅತ್ತಿಗೆಯ ಮನೆಗೆ ಬಂದ. ಚೆನ್ನಿಗರಾಯರು ಮನೆಯಲ್ಲಿರಲಿಲ್ಲ. ಅವನು ಹೇಳಿದ: ‘ಈ ಬೋಸುಡಿ ಮುಂಡೇ ಜೊತೆ ಇಲ್ದೆ ಇದ್ರೆ ನನ್ನ ಕೈಲೇನು ಜೀವನ ಮಾಡುಕ್ಕಾಗುಲ್ವೆ? ಹಿರೀಸಾವೆ ಸುತ್ತ ಹಳ್ಳೀಕಡೆಗೆ ಹೋಗಿ ಒಂದೂವರೆ ಪಲ್ಲ ರಾಗಿ, ಅವರೇಕಾಳು. ಮೆಣಸಿನಕಾಯಿ ಎಲ್ಲ ಗುಡ್ಡೆ ಹಾಕ್ಕಂಡ್ ಬಂದಿದೀನಿ. ನಂದು ಇಪ್ಪತ್ತು ರೂಪಾಯಿ ಇಸ್ಕಂಡಿದ್ರಲ, ಕೊಡಿ. ಒಂದೆರಡು ಪಾತ್ರೆ ಕೊಂಡ್ಕತೀನಿ.’
‘ಎಲ್ಲಿರ್ತೀರಿ?’
‘ಕುರುಬರಹಟ್ಟಿ ಬೀರೇಗೌಡನ ದನದ ಕೊಟ್ಟಿಗೆ ಜಗುಲೀಮ್ಯಾಲೆ ಒಂದು ಕ್ವಾಣೆ ಇದೆಯಲ. ಅವ್ನುನ್ನ ಕೇಳ್ದೆ. ನೀವು ಮಾರಾಯರ ಹಾಗೆ ಅಲ್ಲಿ ಅಡಿಗೆ ಮಾಡ್ಕಂಡು ಉಂಡ್ಕಂಡಿರಿ ಅಂತ ಬೀರೇಗೌಡ ಹೇಳಿದಾನೆ.’
ಮೂರು ದಿನಗಳಲ್ಲಿ ನಂಜಮ್ಮ ಅವನ ದುಡ್ಡು ಹೊಂದಿಸಿಕೊಟ್ಟಳು. ಕಂಬನಕೆರೆಯ ಸಂತೆಗೆ ಹೋಗಿ ಅವನು ಅಲ್ಯೂಮಿನಿಯಂ ಚೆಟ್ಟಿ, ಡಬರಿ, ಲೋಟ, ಒಂದು ಗಡಿಗೆ, ಒಂದು ಹಿಟ್ಟು ತೊಳಸುವ ಮಡಕೆ, ಒಂದು ಮಂದಲಿಗೆಗಳನ್ನು ತಂದ. ಊರಿನಲ್ಲಿದ್ದ ದಿನ ಮುದ್ದೆ ತೊಳೆಸಿಕೊಳ್ಳುತ್ತಿದ್ದ. ಅದಕ್ಕೆ ಹುಳಿ ಮಾಡುತ್ತಿದ್ದುದು ಅಪರೂಪ. ಅತ್ತಿಗೆಯ ಮನೆಗೆ ಬಂದು ಎರಡು ಹೊತ್ತುಗೂ ಆಗುವಷ್ಟು ಇಸಿದುಕೊಂಡು ಹೋಗುತ್ತಿದ್ದ. ಒಂದೊಂದು ದಿನ ಇಲ್ಲಿಯೇ ಪೂರ್ತಿ ಊಟವನ್ನೂ ಮಾಡುತ್ತಿದ್ದ. ಅವನನ್ನು ಮನೆಗೆ ಸೇರಿಸುತ್ತಿರುವುದಕ್ಕೆ ಇವಲಿಗೆ ಬಹಿಷ್ಕಾರ ಹಾಕಬೇಕೆಂದು ಗಂಗಮ್ಮ ಜೋಯಿಸರಿಗೆ ಹೇಳಿದಳು. ಆದರೆ ಸರ್ಕಾರದ ಆಹಾರದ ಲೆಕ್ಕ ಬರೆಯುವ ಅವಳು ಸ್ವತಃ ಶೃಂಗೇರಿ ಯಾತ್ರೆ ಮಾಡಿ ಬಂದಿದಾಳೆ. ಅವಳ ಬಗೆಗೆ ಜೋಯಿಸರಿಗೇ ಭಯ ಹುಟ್ತಿತ್ತು. ಅವರಿಬ್ಬರಲ್ಲಿ ಯಾರೂ ಶೃಂಗೇರಿಯ ದಿಕ್ಕನ್ನೂ ಕಂಡಿರಲಿಲ್ಲ.
ಒಂದು ದಿನ ನಂಜಮ್ಮ ಅಪ್ಪಣ್ಣಯ್ಯನನ್ನು ಕೇಳಿದಳು: ‘ನುಗ್ಗೀಕೆರೇಲಿ ಅವರು ಏನಂದ್ರು?’
‘ಆ ಮುಂಡೇರು ಆ ಊರಲ್ಲಿ ಇಲ್ವೇ ಇಲ್ಲ.’
‘ಎಲ್ಲಿಗೆ ಹೋಗಿದಾರೆ ಅಂತ ಯಾರೂ ಹೇಳ್‌ಲಿಲ್ವೆ?’
‘ಹೇಳೂದೇನು, ಕಡೂರಲ್ಲಿ ಯಾವನೋ ಸಾವ್ಕಾರುನ್ನ ಮಡೀಕಂಡಿದಾಳೆ ಹೊಲೆಮಾದಿಗಮುಂಡೆ’-ಎಂದು ಅವನು, ತಾನು ಕಂಡದ್ದನ್ನು ಪೂರ್ತಿಯಾಗಿ ವಿವರಿಸಿದ.
ಅದನ್ನು ಕೇಳಿದ ನಂಜಮ್ಮನ ಮನಸ್ಸು ಮುದುಡಿಹೋಯಿತು. ಈ ಮನೆಗೆ ತಾವಿಬ್ಬರು ಸೊಸೆಯರಾಗಿ ಬಂದೆವು. ಇಬ್ಬರಲ್ಲಿ ಯಾರೂ ತಮ್ಮ ಹೆಂಡಂದಿರನ್ನು ವಿವೇಕದಿಂದ ಬಾಳಿಸಲಿಲ್ಲ. ತಮಗೇ ವಿವೇಕದಿಂದ ಬಾಳುವುದು ಗೊತ್ತಿಲ್ಲದವರು ಹೆಂಡಂದಿರನ್ನು ಏನು ಬಾಳಿಸುತ್ತಾರೆ? ಆದರೆ ಅಣ್ಣನಿಗಿಂತ ತಮ್ಮ ಉತ್ತಮ. ಒಳ್ಳೆಯ ಮಾತನಾಡಿದರೆ ಹೇಳಿದ ಹಾಗೆ ಕೇಳುತ್ತಾರೆ. ಮೈಮುರಿದು ದುಡಿಯುತ್ತಾರೆ. ಸಾತು ವಿವೇಕವಾಗಿದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲವೇನೋ!- ಎಂಬ ಯೋಚನೆ ಬಂತು. ಆದರೆ ಕಷ್ಟ ಅನುಭವಿಸುಕ್ಕೆ ಎಲ್ಲರಿಗೂ ಒಂದೇ ಥರ ಶಕ್ತಿ ಇರುಲ್ಲ. ಈ ಅತ್ತೆ, ಈ ಗಂಡನ ಮಾತು, ಭಾಷೆ, ಇವಲ್ಲ ಸಹಿಸ್ಕಂಡಿರಕ್ಕೂ ಎಲ್ರಿಗೂ ಆಗುಲ್ಲ. ತಾಯಿಯ ಮಾತು ಕೇಳಿಯೇ ಅಪ್ಪಣ್ಣಯ್ಯ, ತಾನೇ ಕಟ್ಟಿದ್ದ ಗುಡಿಸಲಿಗೆ ಬೆಂಕಿ ಹಾಕಿ ಸುಟ್ಟು, ಹೆಂಡತಿಯ ತಾಳಿ ಕಿತ್ಕಂಡುಬಿಟ್ರು. ಆದರೂ ಈ ಮನೆಗೆ ಬಂದ ಇನ್ನೊಬ್ಬ ಸೊಸೆ, ತನ್ನ ಓರಗಿತ್ತಿ, ಹೀಗೆ ಮಾಡಬಾರದಾಗಿತ್ತು-ಎಂದು ಮನಸ್ಸಿನಲ್ಲೇ ಕೊರಗಿಕೊಂಡು ಅಪ್ಪಣ್ಣಯ್ಯನನ್ನು ಕೇಳಿದಳು: ‘ಈ ವಿಷಯ ಯಾರಿಗಾದ್ರೂ ಹೇಳಿದೀರಾ?’
‘ಇಲ್ಲ.’
‘ಹೇಳ್‌ಬ್ಯಾಡಿ. ನಮ್ಮ ಮರ್ಯಾದೆಯೇ ಹೋಗುತ್ತೆ.’
‘ಆ ಮುಂಡೇರ ಮಾತ ನನ್ನ ನಾಲಿಗೇಲಿ ನುಡುದ್ರೆ ಹೇಲು ತಿಂದಷ್ಟು ಅಸಹ್ಯವಾಗುತ್ತೆ. ನಾನು ಆಡುಲ್ಲ.’
‘ಹಾಗಲ್ಲ. ಒಂದೊಂದು ಸರ್ತಿ ಸಿಟ್ಟು ಬಂದಾಗ ನಿಮಗೆ ಏನು ಆಡ್ತೀನಿ ಏನು ಆಡುಲ್ಲ ಅಂತ ಜ್ಞಾಪಕವೇ ಇರುಲ್ಲ. ಖಂಡಿತ ಇದ ಯಾರ ಕೈಲೂ ಹೇಳುಲ್ಲ ಅಂತ ದೇವರಮೆಲೆ ಆಣೆ ಇಟ್ಟು ಹೇಳಿ.’
ಶೃಂಗೇರಿ ಶಾರದಮ್‌ನೋರ ಆಣೆಗೂ ಹೇಳುಲ್ಲ’- ಎಂದು ಅವನು, ಗೋಡೆಯ ಮೇಲೆ ತೂಗುಹಾಕಿದ್ದ ಶಾರದಮ್ಮನವರ ಪಟವನ್ನು ಮುಟ್ಟಿ ಹೇಳಿದ.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.