ಸಂಸ್ಕಾರ – ೬

ಮಠ ಬಿಟ್ಟು ನಿರಾಶರಾಗಿ ಗರುಡಾಚಾರ್ಯ ಲಕ್ಷ್ಮಣಾಚಾರ್ಯ ಇತ್ಯಾದಿ ಬ್ರಾಹ್ಮಣರು ಹರಿ ಹರಿ ಎಂದು ಪದ್ಮನಾಭಾಚಾರ್ಯ ಜ್ವರ ಏರಿ ಮಲಗಿದ್ದ ಅಗ್ರಹಾರಕ್ಕೆ ಬಂದರು. ಅಲ್ಲಿ ಬಂದು ನೋಡುವಾಗ ಪದ್ಮನಾಭಾಚಾರ್ಯನಿಗೆ ಧ್ಯಾಸ ತಪ್ಪಿಹೋಗಿತ್ತು. ಅಗ್ರಹಾರದ ಬ್ರಾಹ್ಮಣನೊಬ್ಬ ಪದ್ಮನಾಭಾಚಾರ್ಯನ ಹೆಂಡತಿಗೆ ಈ ವಿಷಯವನ್ನು ತಿಳಿಸಲೆಂದು ಆತುರದಿಂದ ಅವಳ ತೌವರಿಗೆ ಓಡಿದ್ದ. ಇನ್ನೊಬ್ಬ ಯುವಕ ಡಾಕ್ಟರನ್ನು ಕರೆದುಕೊಂಡು ಬರಲೆಂದು ಪೇಟೆಗೆ ಹೋಗಿದ್ದ. ಗರುಡಾಚಾರ್ಯನಿಗೆ ಇದರಿಂದ ಭೀತಿಯಾಯಿತು. ಮಠದಲ್ಲಿ ಗುಂಡಾಚಾರ್ಯ ಜ್ವರ ಬಂದು ಮಲಗಿದ; ಕೆಮರದಲ್ಲಿ ದಾಸಾಚಾರ್ಯ ಮಲಗಿದ; ಇಲ್ಲಿ ನೋಡಿದರೆ ಪದ್ಮನಾಭಾಚಾರ್ಯನ ನಾಲಗೆ ಬಿದ್ದುಹೋಗಿದೆ-ಅಗ್ರಹಾರಕ್ಕೆ ಏನೋ ಗಂಡಾಂತರ ಒದಗಿದೆ ಎಂಬುದು ನಿರ್ವಿವಾದ. ನಾರಣಪ್ಪನ ಶವಸಂಸ್ಕಾರಕ್ಕೆ ಅಡ್ಡಿ ಬಂದ ಗರುಡಾಚಾರ್ಯನನ್ನು ಎಲ್ಲರ ಎದಿರು ಲಕ್ಷ್ಮಣಾಚಾರ್ಯ ಹಳಿದ. ಆದರೆ ಎಲ್ಲರೂ ಇದು ಬೆದಾಡುವ ಕಾಲವಲ್ಲ, ತ್ವರೆಯಾಗಿ ಹೋಗಿ ಅವನ ಸಂಸ್ಕಾರ ಮುಗಿಸಿ ದೇವರಿಗೆ ತಪ್ಪುಕಾಣಿಕೆ ಕಟ್ಟಿ ಎಂದು ಬೋಧಿಸಿದರು. ಮನಸ್ಸಿಲ್ಲದ ಮನಸ್ಸಿನಿಂದ ಪದ್ಮನಾಭಾಚಾರ್ಯನನ್ನು ಅಲ್ಲೆ ಬಿಟ್ಟು ಹೊರಟದ್ದಾಯಿತು. ಆದರೆ ಹೊರಡುವ ಮುಂಚೆ ಗರುಡಾಚಾರ್ಯ ಅಗ್ರಹಾರದವರಿಗೆ ಕೆಮುಗಿದು, ’ದಯಮಾಡಿ ಬಂದ ಡಾಕ್ಟರನ್ನು ಮಠಕ್ಕೆ ಕರೆದುಕೊಂಡು ಹೋಗಿ ಗುಂಡಾಚಾರ್ಯನಿಗೂ ಅಷ್ಟು ಮದ್ದು ಕೊಡಿಸಿಬಿಡಿ’ ಎಂದು ಪ್ರಾರ್ಥಿಸಿದ. ದಾರಿಯಲ್ಲೊಬ್ಬನಿಗೂ ಮಾತಾಡುವ ಧೆರ್ಯವಿಲ್ಲ. ಮಂಕು ಕವಿದುಬಿಟ್ಟಿತು. ಗರುಡಾಚಾರ್ಯ ಮನಸ್ಸಿನಲ್ಲೇ ಮಾರುತಿಗೆ ತಪ್ಪುಕಾಣಿಕೆ ಕಟ್ಟುತ್ತೇನೆ, ಮನ್ನಿಸಿಬಿಡು ಎಂದು ಪ್ರಾರ್ಥಿಸಿದ. ಹೀಗೆ ಭಾರವಾದ ಮನಸ್ಸಿನಿಂದ ನಡೆದು ನಡೆದು ಕೆಮರಕ್ಕೆ ಬಂದು ನೋಡಿದರೆ-ಏನು ನೋಡುವುದು? ದಾಸಾಚಾರ್ಯನ ಬೂದಿ, ಪ್ರಾಣೇಶಾಚಾರ್ಯರ ಹೆಂಡತಿ ತೀರಿಕೊಂಡ ಸುದ್ದಿ. ಬ್ರಾಹ್ಮಣರಿಗೆಲ್ಲ ಇದರಿಂದ ದಿಗ್ಭ್ರಮೆಯಾಗಿ ಬಿಟ್ಟಿತು. ತಾವು ತಿಳಿದಿದ್ದ ಲೋಕ ಅಸ್ತವ್ಯಸ್ತವಾಗಿಬಿಟ್ಟಿತು. ಕತ್ತಲಿನಲ್ಲೊಂದು ಭೂತದ ದರ್ಶನವಾದಂತಾಯಿತು. ಮಕ್ಕಳ ಹಾಗೆ ಗೋಡೆಗೊರಗಿ ಕಣ್ಣೀರು ತುಂಬಿ ಕೂತುಬಿಟ್ಟರು. ಹಿರಿಯರಾದ ಸುಬ್ಬಣ್ಣಾಚಾರ್ಯರು ಸಮಾಧಾನ ಹೇಳಿದರು, ಧೆರ್ಯ ಹೇಳಿದರು. ಬಹಳ ಹೊತ್ತು ಮಂಕಾಗಿ ಕೂತಿದ್ದು, ಗರುಡಾಚಾರ್ಯ ಕ್ಷೀಣವಾದ ಧ್ವನಿಯಲ್ಲಿ ಕೇಳಿದ : ನಮ್ಮ ಅಗ್ರಹಾರದಲ್ಲಿ ಇನ್ನೂ ಇಲಿಗಳು ಬೀಳುತ್ತಿವೆಯೆ? ಸುಬ್ಬಣ್ಣಾಚಾರ್ಯರು ’ನಿಮ್ಮ ಅರ್ಥ ಏನು?’ ಎಂದರು. ’ಏನಿಲ್ಲ, ಹದ್ದುಗಳು ಮನೆಯ ಮೇಲೆ ಕೂತಿದ್ದಾವೆ’ ಎಂದ ಗರುಡಾಚಾರ್ಯ. ’ಸಂಸ್ಕಾರ ಮಾಡಿ ಮುಗಿಸಿ ಎಲ್ಲ ಮಂಗಳವಾಗುತ್ತದೆ’ ಎಂದರು ಸುಬ್ಬಣ್ಣಾಚಾರ್ಯ. ’ನಾನು ಅಗ್ರಹಾರಕ್ಕೆ ಹೋಗುವುದಿಲ್ಲ’ ಎಂದ ಗರುಡಾಚಾರ್ಯ. ಉಳಿದ ಬ್ರಾಹ್ಮಣರೂ ಪಿಸುಗುಟ್ಟಿದರು: ’ಆ ಕೊಳೆತ ಹೆಣದ ಸಂಸ್ಕಾರ ಮಾಡೋದು ಹೇಗೆ, ನಾಲ್ಕು ಗಾಡಿ ಸೌದೆಗೂ ಅದನ್ನು ಸುಡುವುದು ಶಕ್ಯವಿಲ್ಲ.’ ಲಕ್ಷ್ಮಣಾಚಾರ್ಯ ’ಏಳಿ’ ಎಂದ. ಗರುಡಾಚಾರ್ಯ ’ನನಗೆ ಸುಸ್ತಾಗಿದೆ-ನೀವೇ ಯಾರಾದರೂ ಮಾಡಿರಿ’ ಎಂದ. ’ವ್ಯವಹಾರಜ್ಞರಾದ ನೀವೇ ಹೀಗೆ ಭಯದಿಂದ ಮಂಕಾಗಿಬಿಟ್ಟರೆ ಉಳಿದವರ ಗತಿ ಏನು’ ಎಂದರು ಸುಬ್ಬಣ್ಣಾಚಾರ್ಯ. ’ನನಗೆ ಕೂಡಲ್ಲ’ ಎಂದ ಗರುಡಾಚಾರ್ಯ. ’ಏಳಿ ಏಳಿ’ ಎಂದ ಲಕ್ಷ್ಮಣಾಚಾರ್ಯ; ’ಅಗ್ರಹಾರದಲ್ಲಿ ಯಾರೂ ಇಲ್ಲ, ದನಕರುಗಳ ಗತಿ ಏನು, ಅವನ್ನು ಕೊಟ್ಟಿಗೆಯಲ್ಲಿ ಕಟ್ಟುವವರಿಲ್ಲ, ಹಾಲು ಕರೆಸುವವರಿಲ್ಲ’ ಎಂದು ಬೇಡಿದ. ’ಹೌದು ಹೌದು ಹೌದು’ ಎಂದರು ಉಳಿದ ಬ್ರಾಹ್ಮಣರು. ’ಹರಿಹರಿ’ ಎನ್ನುತ್ತ ಹೊರಟರು. ದಾರಿಯುದ್ದಕ್ಕೂ ರಾಘವೇಂದ್ರಸ್ತೋತ್ರ ಮಾಡುತ್ತ ನಡೆದರು.

ಪಂಜುರ್ಲಿಗೆ ಕೋಳಿ ಬಲಿಕೊಟ್ಟು ಮುಂದಿನ ಅಮಾಸೆ ಕುರಿ ಕೊಡುತ್ತೇವೆಂದು ಹರಕೆ ಹೇಳಿಕೊಂಡರೂ, ಬೆಳ್ಳಿಯ ಅಪ್ಪ ಅವ್ವ ಪ್ರಾಣೇಶಾಚಾರ್ಯರ ಹೆಂಡತಿ ತೀರಿದ ರಾತ್ರಿಯೇ ಪ್ರಾಣಬಿಟ್ಟವು. ಬೆಳ್ಳಿ ಕೂಗಿಕೊಂಡದ್ದು ಕೇಳಿ ಅಕ್ಕಪಕ್ಕದ ಹೊಲೆಯರೆಲ್ಲ ಕೂಡಿದರು. ಕತ್ತಲಲ್ಲಿ ಕಪ್ಪು ನಗ್ನದೇಹಗಳು ಅವಾಕ್ಕಾಗಿ ಗುಡಿಯ ಸುತ್ತ ಕೂತು ಅರ್ಧಗಂಟೆ ಅತ್ತವು. ನಂತರ ಸೋಗೆಯ ಗುಡಿಗೆ ಬೆಂಕಿ ಕೊಟ್ಟಿದ್ದಾಯಿತು. ಕ್ಷಣದಲ್ಲಿ ಬೆಂಕಿ ಹತ್ತಿ ಉರಿದು ಹೊಲೆಯ ಹೊಲತಿಯರನ್ನು ನೆಕ್ಕತೊಡಗಿತು. ಭೀತಳಾಗಿ ನಿಂತಿದ್ದ ಬೆಳ್ಳಿ ದಿಕ್ಕುದಿವಾಣಿ ಲೆಕ್ಕೆಸದೆ ಪಾಳ್ಯವನ್ನು ಬಿಟ್ಟು, ಇಲಿಗಳ ಹಾಗೆ ಕತ್ತಲಲ್ಲಿ ಓಡಿಬಿಟ್ಟಳು.

ಮಾಲೇರರ ಪುಟ್ಟ ಪ್ರಾರಬ್ಧದಂತೆ ಬೆನ್ನು ಹತ್ತಿಬಿಟ್ಟಿದ್ದ. ನಿಂತರೆ ನಿಲ್ಲುವ; ಕೂತರೆ ಕೂರುವ; ಜೋರು ನಡೆದರೆ ಜೋರಾಗಿ, ನಿಧಾನ ನಡೆದರೆ ನಿಧಾನವಾಗಿ-ಅಂತೂ ಬೆನ್ನು ಬಿಡ. ಪ್ರಾಣೇಶಾಚಾರ್ಯರಿಗೆ ಅತ್ಯಂತ ಕಸಿವಿಸಿಯಾಗತೊಡಗಿತು. ಈಗಷ್ಟು ಹೊತ್ತು ಕಣ್ಣು ಮುಚ್ಚಿ ಕೂತು ತನ್ನ ಪಾಡಿನ ಬಗ್ಗೆ ಚಿಂತಿಸಬೇಕೆಂದರೆ ಈ ಪುಟ್ಟ ಹಡೆಯ ಹಾಗೆ ವಟವಟ ಎನ್ನುತ್ತಿದ್ದಾನೆ. ತಾನು ಆಸ್ಪದ ಕೊಡದಿದ್ದರೂ ತನ್ನ ಸಖ್ಯಕ್ಕಾಗಿ ಆತುಬಿದ್ದಿದ್ದಾನೆ. ತಾನು ವೇದಾಂತಶಿರೋಮಣಿ ಪ್ರಾಣೇಶಾಚಾರ್ಯನೆಂದು ಗೊತ್ತಿಲ್ಲದಿರುವುದರಿಂದ ಸಾಮಾನ್ಯ ಹಾರುವನೊಬ್ಬನ ಜೊತೆ, ಸಂಭಾವನೆಗೆ ಹೊರಟ ಬಡಬ್ರಾಹ್ಮಣನ ಜೊತೆ ಹೇಗೆ ನಡೆದುಕೊಳ್ಳಬೇಕೋ ಹಾಗೆ ನಡೆದುಕೊಳ್ಳುತ್ತಿದ್ದಾನೆ. ಮೆಟ್ಟಿಲ್ಲದೆ ಇಷ್ಟು ದೂರ ನಡೆಯುವುದು ಸರಿಯಲ್ಲವೆಂದು ಬುದ್ಧಿ ಹೇಳಿದ. ಮೂರು ರೂಪಾಯಿಗೆ ತೀರ್ಥಹಳ್ಳಿಯಲ್ಲಿ ಕೆಯಲ್ಲಿ ಹೊಲಿದ ಜೋಡು ಸಿಗುತ್ತದೆ ಎಂದು ಹೇಳಿದ. ಸುಖ ಮುಖ್ಯವೋ ದುಡ್ಡು ಮುಖ್ಯವೋ ಎಂದು ಬೋಧಿಸಿದ. ನನ್ನ ಜೋಡು ನೋಡಿ. ವರ್ಷವಾಯಿತು, ಸವೆದೇ ಇಲ್ಲ ಎಂದು ಬಿಚ್ಚಿ ತೋರಿಸಿದ. ’ನನಗೆ ಮಾತು ಬೇಕು’ ಎಂದ. ’ಎಲ್ಲಿ ಒಂದು ಒಗಟು ಬಿಡಿಸಿರಿ ನೋಡುವ’ ಎಂದ. ಏರಿ ಬಂದ ಕೋಪವನ್ನು ಹಿಡಿದುಕೊಂಡು ಸುಮ್ಮನಾದರು ಪ್ರಾಣೇಶಾಚಾರ್ಯರು. ’ಒಂದು ನದಿ, ಒಂದು ದೋಣಿ, ಒಬ್ಬ ಮನುಷ್ಯ. ಅವನ ಜೊತೆಗೆ ಒಂದು ಕಟ್ಟು ಹುಲ್ಲು, ಒಂದು ಹುಲಿ, ಒಂದು ದನ. ಒಂದೊಂದನ್ನಾಗಿ ದೋಣಿಯಲ್ಲಿ ದಾಟಿಸಬೇಕು. ಹಸು ಹುಲ್ಲನ್ನು ತಿನ್ನದಂತೆ ನೋಡಿಕೋಬೇಕು. ಹುಲಿ ಹಸುವನ್ನು ತಿನ್ನದಂತೆ ನೋಡಿಕೋಬೇಕು. ಹೀಗೆ ಈ ದಡದಿಂದ ಆ ದಡಕ್ಕೆ ಮೂರನ್ನೂ ಸಾಗಿಸಬೇಕು. ನಿಮ್ಮ ಬುದ್ಧಿ ಎಷ್ಟು ಚುರುಕು ನೋಡುವ’-ಎಂದು ಒಗಟನ್ನು ಹೇಳಿಬಿಟ್ಟು ಪರಮಾನಂದದಿಂದ ಬೀಡಿ ಹತ್ತಿಸಿದ. ಎಷ್ಟು ಸಿಟ್ಟು ಬಂದಿದ್ದರೂ ಪ್ರಾಣೇಶಾಚಾರ್ಯರಿಗೆ ಒಗಟು ಮನಸ್ಸನ್ನು ಕಾಡತೊಡಗಿತು. ’ಹೊಳೆಯಲಿಲ್ಲವೇ? ಹೊಳೆಯಲಿಲ್ಲವೇ?’ ಎಂದು ಪುಟ್ಟ ರೇಗಿಸುತ್ತ ನಡೆದ. ಪ್ರಾಣೇಶಾಚಾರ್ಯರಿಗೆ ಉತ್ತರ ಹೊಳೆಯಿತು. ಆದರೆ ಹೇಳಲು ಬಿಗುಮಾನ. ಒಗಟನ್ನು ಬಿಡಿಸಿದರೆ ಪುಟ್ಟನಿಗೆ ಸ್ನೇಹಹಸ್ತವನ್ನು ಕೊಟ್ಟಂತೆ. ಬಿಡಿಸದಿದ್ದರೆ ತನ್ನನ್ನು ಅವ ಪೆದ್ದನೆಂದು ತಿಳಿಯುತ್ತಾನೆ. ಈಗ ತಾನೇನು ನಿಶ್ಚಯ ಮಾಡಬೇಕೆಂದು ಸಂದಿಗ್ಧಕ್ಕಿಟ್ಟುಕೊಂಡಿತು. ಅವನ ಕಣ್ಣಿನಲ್ಲಿ ಪೆದ್ದನಾಗಿ ಒಂದು ದಡ್ಡ ಪದಾರ್ಥವಾಗಿ ಬಿಡುವ ತೀರ್ಮಾನ ಮಾಡಿಬಿಡಲೇ ಎಂದು ಯೋಚಿಸಿದರು. ’ಹೊಳೆಯಿತೆ?’ ಎಂದ ಪುಟ್ಟ ಬೀಡಿಯನ್ನೆಳೆಯುತ್ತ. ಮಾತನ್ನಾಡಲು ಇಷ್ಟವಾಗದೆ ಪ್ರಾಣೇಶಾಚಾರ್ಯ ಇಲ್ಲವೆಂಬಂತೆ ತಲೆಯಾಡಿಸಿದರು. ’ಹೋ ಹೋ ಹೋ’ ಎಂದು ಪುಟ್ಟ ಬಿದ್ದು ಬಿದ್ದು ನಕ್ಕು ಒಗಟನ್ನು ಬಿಡಿಸಿದ. ಅವನಿಗೆ ಇದರಿಂದಾಗಿ ಪೆದ್ದ ಬ್ರಾಹ್ಮಣನ ಬಗ್ಗೆ ವಿಪರೀತ ಆದರ ಹುಟ್ಟಿತು. ’ಇನ್ನೊಂದು ಒಗಟು’ ಎಂದ. ಬೇಡ ಎಂದರು ಪ್ರಾಣೇಶಾಚಾರ್ಯ. ’ಹೋಗಲಿ, ನೀವೇ ಒಂದು ಹೇಳಿಬಿಡಿ, ನನ್ನನ್ನು ಸೋಲಿಸಿಬಿಡಿ, ಮುಯ್ಯಿ’ ಎಂದ. ’ನನಗೆ ಗೊತ್ತಿಲ್ಲ’ ಎಂದರು ಪ್ರಾಣೇಶಾಚಾರ್ಯ. ’ಪಾಪ’ ಎನ್ನಿಸಿತು ಪುಟ್ಟನಿಗೆ. ಇನ್ನಷ್ಟು ದೂರ ಏನು ಮಾತಾಡುವುದೆಂದು ತಿಳಿಯದೆ ಪುಟ್ಟನಿಗೆ ನಾಲಗೆ ಕಡಿತವಾಗಹತ್ತಿತು. ’ಆಚಾರ್ಯರೆ, ನಿಮಗೆ ಗೊತ್ತ? ಕುಂದಾಪುರದ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿದ್ದ ಶ್ಯಾಮ ಪಾಪ ತೀರಿಕೊಂಡನಂತೆ’ ಎಂದು ಹೊಸದೊಂದು ಸಂಗತಿ ಪ್ರಾರಂಭಿಸಿದ. ’ಛೆ ಪಾಪ. ತಿಳಿಯದು’ ಎಂದರು ಪ್ರಾಣೇಶಾಚಾರ್ಯ. ’ಹಾಗಾದರೆ ನೀವು ಊರುಬಿಟ್ಟು ಬಹಳ ಸಮಯವಾಗಿರಬೇಕು’ ಎಂದ ಪುಟ್ಟ. ಎದಿರು ಕವಲೊಡೆದ ದಾರಿಯನ್ನು ಕಂಡು ಪ್ರಾಣೇಶಾಚಾರ್ಯರಿಗೆ ಹರ್ಷವಾಯಿತು. ’ನಿಮ್ಮ ಪ್ರಯಾಣ ಯಾವ ಮುಖವಾಗಿ’ ಎಂದು ನಿಂತು ಪುಟ್ಟನನ್ನು ಕೇಳಿದರು. ಈ ಮುಖವಾಗಿ ಎಂದು ಅವನು ಒಂದು ದಾರಿ ತೋರಿಸಿದ. ’ನನ್ನದು ಈ ದಾರಿ’ ಎಂದು ಇನ್ನೊಂದು ಕಾಲುದಾರಿಯನ್ನು ತೋರಿಸಿದರು. ’ಎರಡೂ ಮೇಳಿಗೆಗೇ ಹೋಗುವುದು, ಸ್ವಲ್ಪ ಬಳಸು ಅಷ್ಟೇ- ನನಗೇನೂ ಅವಸರವಿಲ್ಲ… ನಿಮ್ಮ ಜೊತೆಯೇ ಬಂದುಬಿಡುವೆ’ ಎಂದುಬಿಟ್ಟ. ಚೀಲದಿಂದ ಕಾಯಿ ಬೆಲ್ಲವನ್ನು ತೆಗೆದು ತಿನ್ನಿರಿ ಎಂದು ಕೊಟ್ಟು, ತಾನು ತಿನ್ನಲು ಪ್ರಾರಂಭಿಸಿದ. ಪ್ರಾಣೇಶಾಚಾರ್ಯರಿಗೆ ಹಸಿವಾದ್ದರಿಂದ ಪುಟ್ಟನ ಬಗ್ಗೆ ಕೃತಜ್ಞರಾದರು. ಎಲ್ಲಿ ಹೋದರೂ, ಏನಾದರೂ ಮನುಷ್ಯಸಂಗ ಪ್ರಾರಬ್ಧದಂತೆ ಬೆನ್ನು ಹತ್ತಿದ್ದು ಎನ್ನಿಸಿತು.

ಪುಟ್ಟ ಕಾಯಿ ಬೆಲ್ಲವನ್ನು ತಿನ್ನುತ್ತ ಇನ್ನಷ್ಟು ಆಪ್ತವಾಗಿ ಮಾತಾಡತೊಡಗಿದ. “ನಿಮಗೆ ಮದುವೆಯಾಗಿರಬೇಕಲ್ಲವೆ? ಆಗದೆ ಇರುತ್ತದ? ನಾನೊಬ್ಬ ಪೆಕ್ರನ ಹಾಗೆ ಕೇಳುತ್ತಿದ್ದೇನೆ. ಎಷ್ಟು ಮಕ್ಕಳೋ? ಮಕ್ಕಳೇ ಇಲ್ಲವೆ? ಪಾಪ. ನನಗೆ ಎರಡು ಮಕ್ಕಳು. ಎರಡೂ ಗಂಡು, ನಮ್ಮವಳನ್ನು ಕುಂದಾಪುರದಿಂದ ತಂದದ್ದು ಎಂದು ಹೇಳಿದೆ ಅಲ್ಲವೆ? ಒಂದು ವಿಷಯ ನೋಡಿ-ನಗಬೇಕೋ, ಅಳಬೇಕೋ ನನಗೆ ತಿಳಿಯದು. ಅವಳಿಗೆ ಅಪ್ಪ ಅಮ್ಮನೆಂದರೆ ಪ್ರಾಣ. ತಿಂಗಳಿಗೆ ತಪ್ಪಿದರೆ ಎರಡು ತಿಂಗಳಿಗೆ ತೌರಿಗೆ ಹೋಗಬೇಕೆಂದು ಹಟ ಹಿಡಿಯುತ್ತಾಳೆ. ಬಸ್ಸಿನ ಖರ್ಚು ಎರಡು ರೂಪಾಯಿ ಕೊಟ್ಟು ಈ ಕಾಲದಲ್ಲಿ ಯಾರಿಗೆ ಕಳಿಸಲು ಸಾಧ್ಯ ಹೇಳಿ. ಹೇಳಿದರೆ ಕೇಳುವುದೇ ಇಲ್ಲ. ಎರಡು ಮಕ್ಕಳಾದರೂ ಬುದ್ಧಿಯೇ ಬಂದಿಲ್ಲ. ತುಂಬ ಎಳಸು, ಪ್ರಾಯವೂ ಕಮ್ಮಿ ಎನ್ನಿ. ನಮ್ಮ ಅತ್ತೆ ಸ್ವಲ್ಪ ಕಟಿಪಿಟಿಯ ಹೆಂಗಸು, ಆದರೆ ಮಾವನವರ ಬುದ್ಧಿ ದೊಡ್ಡದು. ಎಷ್ಟೆಂದರೂ ವ್ಯವಹಾರ ಬಲ್ಲವರು ಅವರು. ನಮ್ಮ ಅತ್ತೆ ಅಂದದ್ದುಂಟು-ನನ್ನ ಮಗಳಿಗೆ ಏಟು ಕೊಡಲು ಅಳಿಯನಿಗೇನು ಹಕ್ಕು ಅಂತ. ಆದರೆ ಮಾವನವರ ಬಾಯಿಂದ ಒಂದು ದಿನ ಅಂಥ ಮಾತು ಬಂದಿಲ್ಲ. ಏಟು ಹೊಡೆದರೂ ಇವಳಿಗೆ ಬುದ್ಧಿ ಬಂದಿಲ್ಲ. ತೌರಿಗೆ ಕಳಿಸದಿದ್ದರೆ ಬಾವಿಗೆ ಹಾರಿಕೊಳ್ಳುತ್ತೇನೆಂತ ಹೆದರಿಸುತ್ತಾಳೆ. ಏನು ಮಾಡಬೇಕೋ ತಿಳಿಯದು. ಇದೊಂದು ಕೆಟ್ಟಚಾಳಿ ಬಿಟ್ಟರೆ ಉಳಿದ್ದದ್ದರಲ್ಲೆಲ್ಲ ಅವಳದ್ದು ಬಲುವೆನ. ಒಂದು ಅಡಿಗೆ ಮಾಡಲಿ, ಪಾತ್ರೆ ತೊಳೆಯಲಿ, ಎಲ್ಲದರಲ್ಲೂ ಬಲು ಅಚ್ಚುಕಟ್ಟು. ಇದೊಂದು ಬಿಟ್ಟರೆ. ನೀವೇನು ಹೇಳುತ್ತೀರಿ ಇದಕ್ಕೆ…”

ಪ್ರಾಣೇಶಾಚಾರ್ಯರು ಉತ್ತರ ಹೊಳೆಯದೆ ನಕ್ಕರು. ಪುಟ್ಟನೂ ನಕ್ಕ. “ಹೆಂಗಸಾ ಮರ್ಜಿ ತಿಳಿಯೋದು; ನೀರಿನಲ್ಲಿ ಮೀನಿನ ದಾರಿ ಅರಿಯೋದು ಒಂದೇ – ಅಂತ ಅದಕ್ಕೆ ಹಿರಿಯರು ಹೇಳೋದು ಅಲ್ಲವೆ?” ಎಂದ.
“ನಿಜ, ನಿಜ” ಎಂದರು ಪ್ರಾಣೇಶಾಚಾರ್ಯರು.

ಅಂತೂ ಪುಟ್ಟನ ಮಾತು ಸ್ವಲ್ಪ ಕಾಲ ನಿಂತಿತು. ತನ್ನ ಹೆಂಡತಿಯ ಮರ್ಜಿಯನ್ನವನು ಶಬ್ದಾತೀತ ಪ್ರಪಂಚದಲ್ಲಿ ಹುಡುಕುತ್ತಿರಬೇಕು ಎನ್ನಿಸಿತು ಆಚಾರ್ಯರಿಗೆ. ಈಗ ತನ್ನ ಒಗಟು ಇದು. ಇದನ್ನು ನಾನು ಮೊದಲು ಕೂಲಂಕಷವಾಗಿ ನೋಡಲಿಲ್ಲ. ನನ್ನ ಬಾಳಿನ ತೀರ್ಮಾನದ ಗಳಿಗೆ-ನಾರಣಪ್ಪನ ಜೊತೆ, ಮಹಾಬಲನ ಜೊತೆ, ನನ್ನ ಹೆಂಡತಿ ಜೊತೆ, ಅಗ್ರಹಾರದ ಉಳಿದ ಬ್ರಾಹ್ಮಣರ ಜೊತೆ, ಒಟ್ಟು ನಾನು ಆತಿದ್ದ ಧರ್ಮದ ಜೊತೆ-ನನ್ನ ಸಂಬಂಧಸರ್ವಸ್ವವೂ ತೀರ್ಮಾನವಾಗಬೇಕಾಗಿದ್ದ ಗಳಿಗೆ ನಿರಪೇಕ್ಷಿತವಾಗಿ ಉದ್ಭವವಾದ ಆ ಕಾಡಿನ ಕತ್ತಲಿನಲ್ಲಿ, ನಾನು ಥಟ್ಟನೆ ತಿರುಗಿಬಿಟ್ಟೆ. ಅದರ ಪರಿಣಾಮ ನನ್ನ ಮಾತ್ರಕ್ಕೆ ಹೇಗೋ ಹಾಗೆ ಅಗ್ರಹಾರಕ್ಕೂ ಅಗಾಧವಾಗಿಬಿಟ್ಟಿತು. ಅಂದರೆ ನನ್ನ ನಿಶ್ಚಯದ ಪ್ರಶ್ನೆ ಬರಿ ನನ್ನ ನಿಶ್ಚಯದ ಪ್ರಶ್ನೆಯಲ್ಲ-ನನ್ನ ಅಗ್ರಹಾರವನ್ನೂ ಒಳಪಡಿಸಿಬಿಟ್ಟ ಪ್ರಶ್ನೆ. ಇದೆ ಸಂದಿಗ್ಧದ, ಆತಂಕದ, ಧರ್ಮಸಂಕಟದ ಮೂಲ. ನಾರಣಪ್ಪನ ಶವಸಂಸ್ಕಾರದ ಪ್ರಶ್ನೆ ಬಂದಾಗ ನಾನು ನನ್ನ ವೆಯಕ್ತಿಕ ದೃಷ್ಟಿಯಿಂದ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಿಲ್ಲ. ಧರ್ಮಶಾಸ್ತ್ರಕ್ಕೆ ದೇವರಿಗೆ ಗಂಟುಬಿದ್ದೆ. ಧರ್ಮಶಾಸ್ತ್ರವನ್ನು ನಾವು ಸೃಷ್ಟಿಸಿರಲೂ ಇದೇ ಕಾರಣ ತಾನೇ? ನಮ್ಮ ವೆಯಕ್ತಿಕ ನಿಶ್ಚಯಗಳಿಗೂ ಸಮಾಜಕ್ಕೂ ಇಷ್ಟೊಂದು ಗಾಢವಾದ ಸಂಬಂಧವಿರುವುದರಿಂದ ತಾನೇ? ಕಾರಣ-ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ ನಾವು ಪಿತೃಗಳನ್ನು, ಗುರುಗಳನ್ನು, ದೆವವನ್ನು, ಮಾನವ ಕುಟುಂಬವನ್ನು ಒಳಮಾಡುತ್ತೇವೆ. ಆ ಕಾರಣದಿಂದ ಧರ್ಮಸಂಕಟ. ಆದರೆ ಚಂದ್ರಿಯ ಜೊತೆ ನಾನು ಮಲಗಿಬಿಟ್ಟಾಗ ಈ ಧರ್ಮಸಂಕಟದ ಅನುಭವವಾಯಿತೆ? ಅದು ಅಳೆದು ಹೊಯ್ದು ತೂಗಿ ಮಾಡಿದ ನಿಶ್ಚಯವಾಗಿತ್ತೇ? ಈಗ ಅದು ಅತ್ಯಂತ ಮಸುಕುಮಸುಕಾಗಿ ಅಸ್ಪಷ್ಟವಾಗಿಬಿಟ್ಟಿದೆ. ಆ ನಿಶ್ಚಯ ಅಥವಾ ಆ ಕ್ರಿಯೆ ನನ್ನನ್ನು ನನ್ನ ಭೂತಲೋಕದಿಂದ, ಬ್ರಾಹ್ಮಣರ ಲೋಕದಿಂದ, ಹೆಂಡತಿಯ ಬಾಳಿನಿಂದ, ನನ್ನ ನಂಬಿಕೆಗಳಿಂದ ಕೊರೆದು ತೆಗೆದುಬಿಟ್ಟಿತು. ಪರಿಣಾಮ ಈಗ ನಾನೊಂದು ಗಾಳಿಯಲ್ಲಿ ತಂತುವಾಗಿ ಮಿಡಿಯುತ್ತಿರುವುದು.
ಇದರಿಂದ ಬಿಡುಗಡೆ? ಬಿಡುಗಡೆ?
“ಆಚಾರ್ಯರೇ” ಎಂದ ಪುಟ್ಟ.
“ಏನಪ್ಪ”
“ಇನ್ನಷ್ಟು ಕಾಯಿಬೆಲ್ಲ ಬೇಕ?”
“ಕೊಡು” ಎಂದರು ಪ್ರಾಣೇಶಾಚಾರ್ಯರು. ಪುಟ್ಟ ಕಾಯಿಬೆಲ್ಲವನ್ನು ಕೊಟ್ಟು “ಇಲ್ಲದಿದ್ದರೆ ದಾರಿ ಕಳೆಯೋದು ಕಷ್ಟ ಅಲ್ಲವೆ? ಮನಸ್ಸಿಗೆ ಬೇಜಾರಾಗುತ್ತಿದ್ದರೆ ಇನ್ನೊಂದು ಒಗಟು ಹೇಳುತ್ತೇನೆ ಬಿಡಿಸಿ. ’ಆಡುತ್ತೆ, ಓಡುತ್ತೆ, ನಿಂತ್ಕೊಂಡು ನೋಡುತ್ತೆ’ ಏನು ಹೇಳಿ” ಎಂದು ಮತ್ತೊಂದು ಬೀಡಿ ಹತ್ತಿಸಿದ.
ಆದ್ದರಿಂದ ನನ್ನ ಆತಂಕ ಸರ್ವಸ್ವದ ಮೂಲವಿರುವುದು ಪ್ರಾಯಶಃ ಕನಸಿನಲ್ಲಿ ಎಂಬಂತೆ ನಾನು ಚಂದ್ರಿಯ ಜೊತೆ ಸಂಭೋಗ ಮಾಡಿಬಿಟ್ಟಿದ್ದರಲ್ಲಿ. ಪರಿಣಾಮ ಈಗಿನ ತ್ರಿಶಂಕು ಸ್ಥಿತಿ. ಸ್ವೇಚ್ಛೆಯಿಂದ, ಖುದ್ದಾಗಿ, ಸಂಪೂರ್ಣ ಎಚ್ಚರದಲ್ಲಿ, ಪರಿಪೂರ್ಣ ನಿಶ್ಚಯದಲ್ಲಿ ಒಂದು ಕ್ರಿಯೆಯನ್ನು ಮಾಡುವುದರ ಮೂಲಕ ಮಾತ್ರ ಇದರಿಂದ ಬಿಡುಗಡೆ. ಈಗ ನಾನು ಗಾಳಿಯಲ್ಲೊಂದು ತಂತು. ಗಾಳಿ ಕೊಟ್ಟ ಆಕಾರವನ್ನು ತಳೆಯುವ ಮೋಡ. ಬರಿಯೊಂದು ವಸ್ತುವಾಗಿಬಿಟ್ಟ ನಾನು ನಿಶ್ಚಿತ ಕ್ರಿಯೆಯ ಮೂಲಕ ಮನುಷ್ಯನಾಗುತ್ತೇನೆ. ನನ್ನ ಜೀವನಕ್ಕೆ ನಾನೇ ಜವಾಬ್ದಾರನಾಗಿ ಬಿಡುತ್ತೇನೆ. ಅಂದರೆ…ಅಂದರೆ…ಕಾಲು ಕೊಂಡಲ್ಲಿಗೆ ಹೋಗಿಬಿಡುವುದೆಂಬ ನಿರ್ಧಾರವನ್ನು ತ್ಯಜಿಸಿ ಬಸ್ಸು ಹಿಡಿದು ಕುಂದಾಪುರಕ್ಕೆ ಹೋಗಿ ಚಂದ್ರಿಯ ಜೊತೆ ಇದ್ದುಬಿಡುತ್ತೇನೆ. ಹಾಗೆ ನನ್ನ ಸಂಕಟವನ್ನೆಲ್ಲ ಕೊನೆ ಮಾಡಿಬಿಡುತ್ತೇನೆ. ಪೂರ್ಣ ಎಚ್ಚರದಲ್ಲಿ ನನ್ನನ್ನು ನಾನು ಪುನಃ ಸೃಷ್ಟಿಸಿಕೊಳ್ಳುತ್ತೇನೆ…
“ಹೊಳೆಯಿತೇ?” ಎಂದ ಪುಟ್ಟ ನಗುತ್ತ.
“ಆಡುವುದು ಮೀನು, ಓಡುವುದು ನೀರು, ನಿಂತುಕೊಂಡು ನೋಡುವುದು ಕಲ್ಲು” ಎಂದರು ಪ್ರಾಣೇಶಾಚಾರ್ಯರು.
“ವ್ಹಾರೆವಾ ಭೇ. ಗೆದ್ದಿರಿ. ನಮ್ಮೂರಿನಲ್ಲಿ ನನ್ನನ್ನು ಏನೆಂದು ಕರೀತಾರೆ ಗೊತ್ತೇ? ಒಗಟಿನ ಪುಟ್ಟ ಅಂತ. ನಾನು ಭಾರೀ ಸರಕು ಇಟ್ಟಿದ್ದೇನೆ. ಒಂದು ನೂರು ಮೆಲಿ ನನ್ನ ಜೊತೆ ನಡೆಯಿರಿ ಬೇಕಾದರೆ, ಮೆಲಿಗೊಂದರಂತೆ ಒಗಟನ್ನು ಹಾಕುತ್ತ ಹೋಗುತ್ತೇನೆ” ಎಂದು ಪುಟ್ಟ ಬೀಡಿಯನ್ನು ಎಸೆದ.

ಬಿಸಿಲಿನಲ್ಲಿ ನಡೆದು ದೂರ್ವಾಸಪುರವನ್ನು ಗರುಡ, ಲಕ್ಷ್ಮಣ ಇತ್ಯಾದಿ ಬ್ರಾಹ್ಮಣರು ಮುಟ್ಟುವಾಗ ಬಿಸಿಲು ಇಳಿಮುಖವಾಗಿತ್ತು. ಹೆದರುತ್ತ ಅಗ್ರಹಾರಕ್ಕೆ ಕಾಲಿಟ್ಟೊಡನೆ ಮನೆಗಳ ಮೇಲೆ ಹದ್ದುಗಳಿಲ್ಲದಿರುವುದನ್ನು ಕಂಡು ಅವರಿಗಿಷ್ಟು ಸಮಾಧಾನವಾಯಿತು. ಲಕ್ಷ್ಮಣಾಚಾರ್ಯ ಮೆಲ್ಲಗೆ ’ಮನೆಯ ದನಕರು ಏನಾಗಿವೆಯೋ ನೋಡಿಬರುತ್ತೇನೆ, ನೀವು ಮುಂದೆ ಹೋಗಿ’ ಎಂದದ್ದಕ್ಕೆ ಗರುಡಾಚಾರ್ಯ ರೇಗಿ ’ಮೊದಲು ಸಂಸ್ಕಾರದ ಕೆಲಸ, ಆಮೇಲೆ ನಿನ್ನ ಗೃಹಕೃತ್ಯ’ ಎಂದು ಗದರಿಸಿದ. ಲಕ್ಷ್ಮಣಾಚಾರ್ಯನಿಗೆ ಎದುರುತ್ತರ ಕೊಡುವ ಧೆರ್ಯವಾಗಲಿಲ್ಲ. ಎಲ್ಲರೂ ಕೂಡಿ ಪ್ರಾಣೇಶಾಚಾರ್ಯರ ಮನೆಗೆ ಬಂದರು. ಪಾಪ ಅವರ ದುಃಖಕ್ಕಷ್ಟು ಸಮಾಧಾನ ಹೇಳಬೇಕೆಂದು ಎಲ್ಲರಿಗೂ ಅನ್ನಿಸಿತು. ಆದರೆ ಕರೆದರೆ ಒಳಗಿನಿಂದ ಉತ್ತರವಿಲ್ಲ. ಮನೆಯೊಳಕ್ಕೆ ಹೋದರೆ ಇಲಿ ಸತ್ತ ನಾತ. ಇದರಿಂದಾಗಿ ಯಾರಿಗೂ ತಮ್ಮ ತಮ್ಮ ಮನೆಯೊಳಕ್ಕೆ ಹೋಗುವ ಧೆರ್ಯವಾಗಲಿಲ್ಲ. ಅಗ್ರಹಾರದ ಬೀದಿಗೆ ಬಂದೊಡನೆ ಮೌಢ್ಯ ಕವಿದುಬಿಟ್ಟಿತು. ಅಗ್ರಹಾರವಂತೂ ಹಾಳುಸುರಿಯುತ್ತಿತ್ತು.’ಈಗೇನು ಮಾಡುವ’ ಎಂದು ಎಲ್ಲರೂ ಒಟ್ಟಾಗಿ ಚಿಂತಿಸಿದರು. ’ಶವಸಂಸ್ಕಾರ’ ಎಂದ ಒಬ್ಬ ಬ್ರಾಹ್ಮಣ. ಆದರೆ ನಾರಣಪ್ಪನ ಮನೆಯೊಳಕ್ಕೆ ಹೋಗಿ ಕೊಳೆತು ವಿಕಾರವಾಗಿರಬಹುದಾದ ಹೆಣವನ್ನು ನೋಡುವ ಧೆರ್ಯ ಯಾರಿಗೂ ಆಗಲಿಲ್ಲ. ಉಪಾಯ ಹೊಳೆದ ಗರುಡಾಚಾರ್ಯ, ’ಪ್ರಾಣೇಶಾಚಾರ್ಯರು ನದಿಗೋ ಎಲ್ಲಿಗೋ ಹೋಗಿರಲಿಕ್ಕೆ ಸಾಕು, ಅವರು ಬರುವವರೆಗೆ ಕಾಯುವ’ ಎಂದ. ಲಕ್ಷ್ಮಣಾಚಾರ್ಯ, ’ಕಳೆಯಲಿಕ್ಕೆ ಕಾಲವಿಲ್ಲ. ಶವಸಂಸ್ಕಾರದ ಸಿದ್ಧತೆಯಾದರೂ ನಡೆಸುವ’ ಎಂದ. ’ಕಟ್ಟಿಗೆ’ ಎಂದ ಒಬ್ಬ ಬ್ರಾಹ್ಮಣ. ’ಮಾವಿನ ಮಾರ ಕಡಿಸಬೇಕು’ ಎಂದ ಇನ್ನೊಬ್ಬ. ’ಕೊಳೆತು ಹೋದ ಹೆಣ ಹಸಿ ಸೌದೆಯಲ್ಲಿ ಎಲ್ಲಿ ಉರಿಯಲಿಕ್ಕೆ ಶಕ್ಯ?’ ಎಂದ ಮತ್ತೊಬ್ಬ. ’ಅವನ ಮನೆಯ ಕಟ್ಟಿಗೆಯಿಂದಲೇ ಸುಟ್ಟರಾಯಿತು” ಎಂದ ಲಕ್ಷ್ಮಣಾಚಾರ್ಯ. ’ನಿನ್ನ ಮನೆಯ ಕಟ್ಟಿಗೆಯನ್ನು ಕೇಳಲಿಲ್ಲವಲ್ಲ’ ಎಂದು ಗರುಡ ಹೀಯಾಳಿಸಿದ. ಆದರೆ ನಾರಣಪ್ಪನ ಮನೆಯನ್ನು ಸುತ್ತಿ ಹಿತ್ತಲಿಗೆ ಹೋಗಿ ನೋಡಿದರೆ ಸಾಕಷ್ಟು ಕಟ್ಟಿಗೆ ಇರಲಿಲ್ಲ. ’ಚಂದ್ರೀ’, ’ಚಂದ್ರೀ’ ಎಂದು ಕೂಗಿದರೆ ಉತ್ತರವಿಲ್ಲ. ’ಕುಂದಾಪುರಕ್ಕೆ ಓಡಿರಬೇಕು, ಊರು ಹಾಳುಮಾಡಿದ ಮಾರಿ’ ಎಂದುಕೊಂಡರು ಬ್ರಾಹ್ಮಣರು. ’ಇನ್ನೇನು ಮಾಡಲಿಕ್ಕೆ ಶಕ್ಯ? ಪ್ರತಿ ಮನೆಯಿಂದ ಒಂದೊಂದು ಹೊರೆ ಸೌದೆಯನ್ನೆತ್ತಿ ಸ್ಮಶಾನಕ್ಕೆ ಒಯ್ದುಬಿಡಿರಿ’ ಎಂದ ಗರುಡಾಚಾರ್ಯ. ಎಲ್ಲರೂ ಒಪ್ಪಿ ಹಿತ್ತಲಿನಿಂದ ಒಂದೊಂದು ತಲೆಹೊರೆ ಸೌದೆಯನ್ನು ಹೊತ್ತು ಎರಡು ಮೆಲಿಯಾಚೆಯಿದ್ದ ಸ್ಮಶಾನಕ್ಕೆ ಒಯ್ದರು. ಮತ್ತೆ ಅಗ್ರಹಾರಕ್ಕೆ ಮರಳಿದರೆ ಪ್ರಾಣೇಶಾಚಾರ್ಯರ ಪತ್ತೆಯೇ ಇಲ್ಲ. ’ಹೆಣ’ ಎಂದ ಒಬ್ಬ ಬ್ರಾಹ್ಮಣ. ’ಪ್ರಾಣೇಶಾಚಾರ್ಯರು ಬರಲಿ’ ಎಂದ ಗರುಡ. ’ಸರಿ’ ಎಂದ ಲಕ್ಷ್ಮಣಾಚಾರ್ಯ. ಎಲ್ಲರಿಗೂ ದಿಗಿಲು-ಒಳಕ್ಕೆ ಹೋಗಿ ನೋಡಲು. ’ಪ್ರಾಣೇಶಾಚಾರ್ಯರಿಗೆ ತಿಳಿಸದೆ ದುಡುಕುವುದು ಸರಿಯಲ್ಲ’ ಎಂದ ಗರುಡ. ’ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡುಬಿಟ್ಟು ಕಾಯುವ’ ಎಂದು ಬ್ರಾಹ್ಮಣರು ನಾರಣಪ್ಪನ ಮನೆಯ ಎದುರು ಮಡಕೆಯಲ್ಲಿ ಬೆಂಕಿ ಹೊತ್ತಿಸಿ, ಬೊಂಬುಗಳನ್ನು ತಂದು ಚಟ್ಟ ಕಟ್ಟುತ್ತ ಕೂತರು-ಪ್ರಾಣೇಶಾಚಾರ್ಯರಿಗೆ ಕಾದು.

ಮಧ್ಯಾಹ್ನ ಸುಮಾರು ಮೂರು ಗಂಟೆಯಾಗುವ ಹೊತ್ತಿಗೆ ಪ್ರಾಣೇಶಾಚಾರ್ಯರು ಪುಟ್ಟನ ಜೊತೆ ಮೇಳಿಗೆಯ ಕೆರೆಯನ್ನು ತಲ್ಪಿದರು. ಗಾಡಿ ದಾರಿಯಲ್ಲಿ ನಡೆದು ಬರುವಾಗ ಕೆಂಪು ಧೂಳಿನಿಂದ ಮೆಯೆಲ್ಲ ಮಲಿನವಾಗಿತ್ತು. ಕೆರೆಯಲ್ಲಿ ಕೆಕಾಲನ್ನು ತೊಳೆದುಕೊಳ್ಳಲೆಂದು ಇಳಿದಾಗ ಪುಟ್ಟ, “ಅಲ್ಲ. ಎಷ್ಟೆಲ್ಲ ಹರಟಿದೆ. ನನ್ನ ಸ್ವಂತದ ವಿಷಯಾನ್ನ ನಿಮಗೆ ಹೇಳಲೇ ಇಲ್ಲವಲ್ಲ” ಎಂದ. ಮುಖವನ್ನು ತೊಳೆದುಕೊಳ್ಳುತ್ತಿದ್ದಾಗ ಆಚಾರ್ಯರಿಗೆ ಎಲ್ಲಾದರೂ ಮೇಳಿಗೆಯಲ್ಲಿ ಪರಿಚಯದವರು ಕಣ್ಣಿಗೆ ಬಿದ್ದುಬಿಟ್ಟರೆ ಎಂದು ಭಯವಾಯಿತು. ಮತ್ತೆ ಭೀತಿ ಹುಟ್ಟಿಬಿಟ್ಟಿತಲ್ಲ ಎಂದು ಕಸಿವಿಸಿಗೊಂಡರು. ಒಂದು ಸಮಾಧಾನ : ಮೇಳಿಗೆಯ ಬ್ರಾಹ್ಮಣರೆಲ್ಲ ಸ್ಮಾರ್ತರು, ಆದ್ದರಿಂದ ಅಪರಿಚಿತರು. ಜಾತ್ರೆಯ ಗಡಿಬಿಡಿಯಲ್ಲಿ ತನ್ನನ್ನು ಗಮನಿಸುವವರಾದರೂ ಯಾರು? ಆದರೆ ಎಷ್ಟು ಸಮಾಧಾನ ಹೇಳಿಕೊಂಡರೂ ಭೀತಿ. ಜಾತ್ರೆಗೆಂದು ಪರಿಚಯದವರು ಯಾರಾದರೂ ಬಂದೇ ಬಂದಿರುತ್ತಾರೆ. ಆದರೆ ಏನೇ ಆಗಲಿ : ನಿಶ್ಚಯಿಸಿಬಿಟ್ಟ ಮೇಲೆ ತನಗಿನ್ನೆಲ್ಲಿಯ ಭೀತಿ? ಆದರೂ ಭೀತಿಯಿರುವುದು ನಿಜ. ನಿಷ್ಕಾರಣವಿದ್ದರೆ ಯಾಕೆ ಈ ಭೀತಿ? ಇದರ ಮೂಲ ಹುಡುಕಬೇಕು. ಬೇರುಸಹಿತ ಈ ಭೀತಿಯನ್ನು ಕಿತ್ತೆಸೆದು ಬಿಡಬೇಕು. ನಾರಣಪ್ಪ ಹೇಗೆ ರಾಜಾರೋಷವಾಗಿ ಚಂದ್ರಿಯ ಜೊತೆ ಅಗ್ರಹಾರದ ನಡುವೆ ನಿಂತು ಬಾಳ್ವೆ ನಡೆಸಿದ? ನಾನು ಚಂದ್ರಿಯನ್ನು ಸೇರಿದರೂ ಒಳಗೆ ಮುಖ ಮುಚ್ಚಿಕೊಂಡಿರುತ್ತೀನೋ ಏನೋ! ಥೂ ಅದೆಂತಹ ಬಾಳು ಎನ್ನಿಸಿತು.
“ಅಲ್ಲ, ನಿಮ್ಮ ಹತ್ತಿರ ಇಷ್ಟೆಲ್ಲ ಯಾಕೆ ಹರಟುತ್ತಿದ್ದೇನೆಂದು ನಿಮಗೆ ಅನ್ನಿಸಿರಬಹುದಲ್ಲವೆ? ’ಏನು ಇವ ಸಿಕ್ಕರೆ ಬಿಡ’, ಅಂತ. ಹೇಳ್ತೀನಿ ಕೇಳಿ. ನೀವು ಹೆಚ್ಚು ಹರಟುವವರಲ್ಲವಾದರೂ ನಿಮಗೆ ಜನ ಬೇಕು, ಮಾತು ಬೇಕು. ನಿಮ್ಮದು ಸಾಧುಸ್ವಭಾವ. ಪಾಪದ ಜನ.” ಮುಖ ಒರೆಸಿಕೊಳ್ಳುತ್ತ ಪುಟ್ಟ ಹೇಳಿದ. “ಹೌದೋ ಅಲ್ಲವೋ ಹೇಳಿ. ಮುಖ ನೋಡಿ ಹೇಳಿಬಿಡುತ್ತೇನೆ ನಾನು : ಯಾರು ಎಂಥ ಜನ ಅಂತ. ನಿಮ್ಮ ಹತ್ತಿರ ಯಾಕೆ ಮುಚ್ಚುಮರೆ? ನಾನೇನು ಕಳಪೆ ಜನಾಂತ ನೀವು ತಿಳಿದುಕೊಂಡಿಲ್ಲವೆಂದು ಅಂದುಕೊಂಡಿದ್ದೇನೆ. ನಾನು ಮಾಲೇರರವ ಎಂದೆ ಅಲ್ಲವೆ? ಇನ್ನೂ ಬೇಕಾದರೆ ಹೇಳುವೆ. ನನ್ನ ತಂದೆಯವರು ಕುಲೀನ ಬ್ರಾಹ್ಮಣರು. ಇಟ್ಟುಕೊಂಡ ನನ್ನ ತಾಯಿಯನ್ನು ಹೆಂಡತಿಗಿಂತ ಚೆನ್ನಾಗಿ ನೋಡಿಕೊಂಡರು. ನನಗೆ ಮುಂಜಿಯನ್ನೂ ಮಾಡಿಸಿದರು. ನೋಡಿ ಬೇಕಾದರೆ” ಎಂದು ಜನಿವಾರವನ್ನು ಅಂಗಿಯ ಒಳಗಿನಿಂದ ಎಳೆದು ತೋರಿಸಿದ. “ಹಾಗಾಗಿ ನನ್ನ ಮಿತ್ರರೆಲ್ಲ ಬ್ರಾಹ್ಮಣರೆ. ನಡೆಯಿರಿ. ಹೋಗುವ” ಎಂದ. ಕೆರೆಯ ಕಟ್ಟೆಯನ್ನು ಏರುತ್ತಿದ್ದಂತೆ “ಜನ ಎಂಬೋದಕ್ಕೂ ನಾನು ಮಾಡುವುದಕ್ಕೂ ಸರಿಯಾಗಿದೆ. ನನ್ನ ಒಂದು ಹೆಸರು ಒಗಟಿನ ಪುಟ್ಟ; ಇನ್ನೊಂದು ಹರಟೇ ಪುಟ್ಟ. ಒಟ್ಟಿನಲ್ಲಿ ನನಗೆ ಜನ ಬೇಕು” ಎಂದು ನಕ್ಕ.

ಜಾತ್ರೆಯ ಗಡಿಬಿಡಿಯಲ್ಲಿ ಮೇಳಿಗೆಗೆ ಕಳೆಯೇರಿಬಿಟ್ಟಿತ್ತು. ಕನ್ಯಾ, ವೃಶ್ಚಿಕ, ಮಿಥುನ ಇತ್ಯಾದಿ ಚಿತ್ರಗಳಿಂದ ತೇರಿನ ಶಿಖರ ಸರ್ವಾಲಂಕೃತವಾಗಿ ಊರಿನ ಮಧ್ಯೆ ಬಂದು ನಿಂತಿತ್ತು. ದಪ್ಪದಪ್ಪನೆಯ ಎರಡು ಮಿಣಿಗಳು ಹಾದಿಯುದ್ದಕ್ಕೂ ತೇರಿಗೆ ಬಿಗಿದುಬಿದ್ದಿದ್ದವು. ರಥವನ್ನು ಕೊಟ್ಟಿಗೆಯಿಂದ ಎಳೆದು ಅರ್ಧದಾರಿ ತಂದು ಭಕ್ತಾದಿಗಳು ಹಣ್ಣುಕಾಯಿ ಅರ್ಚನೆಗೆಂದು ಬಿಟ್ಟಿದ್ದರು. ಏಣಿಯನ್ನೇರಿ ರಥದೊಳಕ್ಕೆ ಕೂತಿದ್ದ ಪೂಜಾರಿಗೆ ಭಕ್ತಾದಿಗಳು ಕೊಟ್ಟ ಹಣ್ಣುಕಾಯಿಯನ್ನೆಲ್ಲ ಒಬ್ಬ ಬ್ರಾಹ್ಮಣ ಯುವಕ ಹತ್ತಿ ಇಳಿದು ಅರ್ಚನೆಗೆ ಒಪ್ಪಿಸುತ್ತಿದ್ದ. ರಥದ ಸುತ್ತ ಒಂದು ದೊಡ್ಡ ಗುಂಪೇ ಹಣ್ಣುಕಾಯಿಗಳನ್ನು ಹಿಡಿದು ಕಾದಿತ್ತು. ಪ್ರಾಣೇಶಾಚಾರ್ಯರು ಗುಂಪಿನಲ್ಲೆಲ್ಲ ತನ್ನ ಪರಿಚಯದವರು ಯಾರಾದರೂ ಇದ್ದಾರೋ ಎಂದು ಆತಂಕದಿಂದ ಹುಡುಕಿದರು. ಎಳ್ಳು ಬೀರಿದರೆ ಕೆಳಕ್ಕೆ ಬೀಳದ ಗುಂಪಿನ ಮಧ್ಯೆ ಪುಟ್ಟ ಆಚಾರ್ಯರ ಕೆ ಹಿಡಿದು ನಡೆಸಿಕೊಂಡು ಅಂಗಡಿಯೊಂದಕ್ಕೆ ಹೋಗಿ ತೆಂಗಿನಕಾಯಿ ಹಣ್ಣುಗಳನ್ನು ಕೊಂಡ. ’ಗುಂಪು ಖಾಲಿಯಾದ ಮೇಲೆ ಪೂಜೆ ಮಾಡಿಸಿದರಾಯಿತು. ಈಗ ಸ್ವಲ್ಪ ಸುತ್ತಾಡಿಬರುವ, ಆಚಾರ್ರೆ’ ಎಂದ. ಗುಂಪಿನಿಂದ ಹೊರಬಂದರೆ ಪೀಪಿಗಳ ಶಬ್ದ; ಪ್ರತಿಯೊಬ್ಬ ಹಳ್ಳಿಯ ಹುಡುಗನ ಬಾಯಲ್ಲೂ ತಾಯಿತಂದೆಯರಿಂದ ಕಾಡಿ ಪಡೆದ ಬಿಲ್ಲೆಯಿಂದ ಕೊಂಡ ವಿಧವಿಧ ನಾದದ ಪೀಪಿ. ಕರ್ಪೂರ ಊದುಬತ್ತಿಯ ವಾಸನೆ. ಹೊಸ ಬಟ್ಟೆಯ ವಾಸನೆ. ಬೆಲೂನು ಮಾರುವವನ ಹಾಡು. ಮೂಲೆಯೊಂದರಲ್ಲಿ ಬೊಂಬಾಯಿ ಪೆಟ್ಟಿಗೆ. ಬಿಲ್ಲೆ ಕೊಟ್ಟರೆ ಕಂಡಿಯಿಂದ ಅವನು ಗೆಜ್ಜೆ ಕಟ್ಟಿದ ಪೆಟ್ಟಿಗೆಯನ್ನು ತಟ್ಟುತ್ತ ಕುಣಿಯುತ್ತ ತೋರಿಸುತ್ತಾನೆ : “ದಿಲ್ಲಿಯ ಪಟ್ನ ನೊಡು, ಅಠಾರ ಕಛೇರಿ ನೋಡು, ಬೆಂಗ್ಳೂರು ಪೇಟೆ ನೋಡು, ಮೆಸೂರು ಅರಸರ ನೋಡು, ಆಹಾ ದರ್ಬಾರು ಮೋಜು ನೋಡು, ತಿರುಪತಿಯ ಒಡೆಯ ನೋಡು, ಆಹಾ ಬೊಂಬಾಯಿ ಸೂಳೆ ನೋಡು, ಆಹಾ ಬೊಂಬಾಯಿ ಸೂಳೆ ನೋಡು” ಗೆಜ್ಜೆಯ ಕುಣಿತ ನಿಲ್ಲುತ್ತದೆ. ’ಬೊಂಬಾಯಿ ಪೆಟ್ಟಿಗೆ-ಪೆಟ್ಟಿಗೆ-ಬರೀ ಒಂದು ಬಿಲ್ಲೆ, ಬಿಲ್ಲೆ’ ಎಂದು ಕೂಗುತ್ತಾನೆ. ಪುಟ್ಟನಿಗೆ ಸುಮ್ಮನೇ ನೋಡಿ ನಡೆದುಬಿಡೋದು ಸಾಧ್ಯವಾಗಲಿಲ್ಲ. “ಆಚಾರ್ರೆ, ನಾನು ನೋಡಬೇಕು” ಎಂದ. ’ಆಗಲಿ’ ಎಂದರು ಪ್ರಾಣೇಶಾಚಾರ್ಯರು, “ಬಿಟ್ಟೆಲ್ಲೂ ಹೋಗಬೇಡಿ. ಇಲ್ಲೇ ಇರಿ” ಎಂದು ಪುಟ್ಟ ಕರಿಯ ಪರದೆಯನ್ನು ಮುಖಕ್ಕೆಳೆದುಕೊಂಡು, ಕಂಡಿಯಲ್ಲಿ ನೋಡುತ್ತ ಕೂತ. ’ಈಗ ಇವನನ್ನಿಲ್ಲೆ ಬಿಟ್ಟು ಹೋಗಿಬಿಡಲೆ?’ ಎನ್ನಿಸಿತು ಆಚಾರ್ಯರಿಗೆ, ಮತ್ತೆ ಪಾಪ ಎನ್ನಿಸಿತು. ಆದರೆ ಇವನನ್ನು ಕಟ್ಟಿಕೊಂಡಿದ್ದರೆ ಶಾಂತಿಯಿಲ್ಲ, ನಾನೀಗ ಒಂಟಿಯಾಗಿರಬೇಕೆಂದು-ನಡೆದುಬಿಟ್ಟರು. ಸ್ವಲ್ಪ ದೂರ ಹೋಗುವುದರಲ್ಲೇ ’ಆಚಾರ್ರೇ’ ಎಂದು ಕೂಗಿದ್ದು ಕೇಳಿಸಿತು. ತಿರುಗಿ ನೋಡಿದರೆ ಪುಟ್ಟ. ” ನೀವು ಕಳೆದೇ ಹೋಗಿಬಿಟ್ಟಿರಿ ಎಂದುಕೊಂಡೆ. ಆದರೆ ಬೊಂಬಾಯಿ ಪೆಟ್ಟಿಗೆಯವ ನೀವು ಹೋದ ಮಾರ್ಗ ತೋರಿಸಿದ, ನಡೆಯಿರಿ” ಎಂದ. ಪ್ರಾಣೇಶಾಚಾರ್ಯರಿಗೆ ಮೆಪರಚಿಕೊಳ್ಳುವಂತಾಯಿತು. ಬೆದುಬಿಡಲೆ ಎನ್ನಿಸಿತು. ಆದರೆ ಕೇಳದೆ, ಬೇಡದೆ, ನಿರಪೇಕ್ಷಿತವಾಗಿ ಸ್ನೇಹಹಸ್ತವನ್ನಿತ್ತ ಒಂದು ಕಂಡರಿಯದ ಮನುಷ್ಯ ಪ್ರಾಣಿಯನ್ನು ಹೇಗಾದರೂ ನೋಯಿಸಲಿಕ್ಕೆ ಶಕ್ಯ? ಅನುಭವಿಸಿಬಿಡು ಎಂದುಕೊಂಡರು. “ಆಹಾ ನೋಡಿ” ಎಂದ ಪುಟ್ಟ. ದೊಂಬರ ಆಟ ನಡೆದಿತ್ತು. ಸರ್ಪಶರೀರದ ಮಾಟವಾದ ದೇಹದ ಚೆಲುವೆಯೊಬ್ಬಳು ಕೆಕಾಲುಗಳನ್ನು ಚೆಲ್ಲಿ ಬರಿ ಹೊಟ್ಟೆಯ ಮೇಲೆ ಸಮತೂಕ ತಪ್ಪದಂತೆ ಬಿದಿರುಗಣೆಯ ಮೇಲೆ ಮಲಗಿ ತೂಗಿದಳು. ದೊಂಬ ತಮ್ಮಟೆ ಬಾರಿಸಿದ. ಇನ್ನೊಂದು ಕ್ಷಣದಲ್ಲಿ, ಗಳದ ಮೇಲೆ ತೂಗಿದ ಚೆಲುವೆ ಸರ್ರೆಂದು ಕೆಳಗಿಳಿದು ಕುಣಿಯುತ್ತಿದ್ದಳು. ಜನ ಬಿಲ್ಲೆಗಳನ್ನು ಎಸೆದರು. ಪುಟ್ಟನೂ ಒಂದು ಬಿಲ್ಲೆಯನ್ನೆಸೆದ. ದೇವಸ್ಥಾನದ ಸಮೀಪಕ್ಕೆ ಬರುತ್ತಿದ್ದಂತೆ ಎರಡು ಪಕ್ಕದಲ್ಲೂ ಕೆಮೋಟಾದವರು, ಕಾಲುಮೋಟಾದವರು, ಕಣ್ಣಿಲ್ಲದವರು, ಮೂಗಿನ ಜಾಗದಲ್ಲಿ ಬರಿ ಎರಡು ಹೊಳ್ಳೆಯುಳ್ಳವರು, ವಿಧವಿಧದ ಅಂಗವಿಹೀನರು ನೆಲದಲ್ಲಿ ಹೊರಳುತ್ತ ಬೇಡುತ್ತಿದ್ದರು. ಅತ್ಯಂತ ಆಕರ್ಷಕವಾಗಿ ಅಂಗವಿಹೀನನಾದವನಿಗೆ ಬಿಲ್ಲೆಯನ್ನೆಸೆಯುತ್ತ ಪುಟ್ಟ ನಡೆದ. ಮುಂದೆ ಹೆಂಗಸರ ಬಣ್ಣ ಬಣ್ಣದ ಟೇಪುಗಳನ್ನೆಲ್ಲ ಇಳಿಬಿಟ್ಟಿದ್ದ ಹೊತ್ತುತಿರುಗುವ ಒಂದು ಅಂಗಡಿಯಲ್ಲಿ ಒಂದು ಗಜ ಟೇಪನ್ನು ಹೆಂಡತಿಗೆಂದು ಕೊಂಡ. ’ಅವಳಿಗೆ ಇದು ಆಸೆ’ ಎಂದ. ಎರಡು ಬಣ್ಣದ ತಗಡಿನ ಪೀಪಿಗಳನ್ನು ಮಕ್ಕಳಿಗೆಂದು ಕೊಂಡು ಊದಿನೋಡಿದ. ’ನಡೆಯುವ’ ಎಂದ. ಪ್ರಾಣೇಶಾಚಾರ್ಯರಿಗೆ ಗದ್ದಲದ ನಡುವೆ, ಸಂಭ್ರಮದ ನಡುವೆ ಅತಂತ್ರವಸ್ತುವಾಗಿ ಭೇತಾಳನಂತೆ ಅಲೆಯುತ್ತಿರುವ ಅನುಭವವಾಯಿತು. ಪುಟ್ಟನಿಗೊಂದು ಸೋಡಾ ಅಂಗಡಿ ಕಂಡದ್ದೆ “ಬನ್ನಿ. ಒಂದು ಕ್ರ ಕುಡಿಯುವ” ಎಂದ. “ಇಲ್ಲ, ನಾನು ಕುಡಿಯುವುದಿಲ್ಲ” ಎಂದರು ಪ್ರಾಣೇಶಾಚಾರ್ಯರು. ಕೊಂಕಣಿಯೊಬ್ಬನ ಸೋಗೆ ಹಚ್ಚಿದ ಸೋಡಾ ಅಂಗಡಿಯಲ್ಲಿ ಪರೀಕ್ಷಿಸಿ ಪುಟ್ಟ ಅಚ್ಚಕೆಂಪು ಬಣ್ಣದ ನೀರಿರುವ ಬಾಟ್ಲಿಯೊಂದನ್ನು ತೋರಿಸಿ ’ಒಂದು ಕ್ರ’ ಎಂದ. ಆ ಅಂಗಡಿಯ ತುಂಬೆಲ್ಲ ನಾಚಿಕೆಯಿಂದ ಬಾಟ್ಲಿಯ ಗಮಗಮ ಸೋಡಾ ಕ್ರಗಳನ್ನು ಕುಡಿಯುವ ಹೆಗ್ಗಡತಿಯರು, ಗೌಡರು, ಮಕ್ಕಳು. ಎಣ್ಣೆ ಹಾಕಿ ನುಣ್ಣಗೆ ಬಾಚಿದ ತಲೆ. ಮುಡಿದ ಚೆಂಡುಹೂ. ಉಟ್ಟ ಹೊಸ ಸೀರೆ. ಗೌಡರ ಮೆಮೇಲೆ ಹೊಸ ಅಂಗಿ. ಕ್ರಶ್ಶಿನ ಬಾಟ್ಲಿಯ ಗೋಲಿಯನ್ನು ತಳ್ಳುವಾಗ ಬರುವ ’ಕುಂಂii,ಗೊಯಿP’ ಎನ್ನುವ ಶಬ್ದ; ಸಿಹಿಯಾದ ಬಣ್ಣದ ಗ್ಯಾ ಇರುವ ನೀರು ಕುಡಿದ ಮೇಲೆ ’ಗರP’ ಎಂದು ಬರುವ ತೇಗು-ಅದೊಂದು ಅಪೇಕ್ಷೆ, ಅನುಭವ, ತೃಪ್ತಿಯ ಸಂಗತಿ. ಜಾತ್ರೆ ಕೊಡುವ ಅನೇಕ ಸುಖಗಳಲ್ಲಿ ಇದೂ ಒಂದು. ಎಲ್ಲರೂ ಇದನ್ನು ಮೊದಲೇ ಅಪೇಕ್ಷಿಸಿ ಬೇಕಾದಷ್ಟು ಕಾಸನ್ನು ಅದಕ್ಕೆಂದು ತೆಗೆದಿಟ್ಟುಬಿಟ್ಟಿರುತ್ತಾರೆ. ಈ ಎಲ್ಲ ಸಾಮಾನ್ಯ ಸುಖಗಳ ಲೋಕದಿಂದ ಹೊರಗೆ ನಿಂತು ಪ್ರಾಣೇಶಾಚಾರ್ಯರು ನೆರೆದವರನ್ನೆಲ್ಲ ನೋಡಿದರು. ’ಗರP’ ಎಂದು ತೇಗಿ ಪುಟ್ಟನಿಗೆ ಮುಖ ಅಗಲವಾಯಿತು. “ಬನ್ನಿ ಹೋಗುವ” ಎಂದ. “ನೀವೇನೂ ತೆಗೆದುಕೊಳ್ಳಲೇ ಇಲ್ಲವಲ್ಲ” ಎಂದ.
ಹೀಗೆ ಗದ್ದಲದಲ್ಲಿ, ಸಂಭ್ರಮದಲ್ಲಿ, ಬೆಲೂನು, ಪೀಪಿ, ಮಿಠಾಯಿ, ಕ್ರಶ್ಶಿನ ಶಬ್ದ, ದೇವಸ್ಥಾನದ ಗಂಟೆಗಳ ನಾದ, ಹೆಂಗಸರ ಬಳೆಯ ಅಂಗಡಿಯ ವೆಭವದ ನಡುವೆ, ಭ್ರಮಿತರಂತೆ ಪ್ರಾಣೇಶಾಚಾರ್ಯರು ಪುಟ್ಟನನ್ನು ಅನುಸರಿಸಿ ನಡೆದರು. ಎಲ್ಲಿ ನೋಡಿದರೂ ತತ್ಪರವಾದ ಕಣ್ಣುಗಳು. ತನ್ನದೊಬ್ಬನದ್ದು ಮಾತ್ರ ಯಾವುದರಲ್ಲೂ ತತ್ಪರವಾಗಲಾರದ ಕಣ್ಣುಗಳು. ಪುಟ್ಟ ಸರಿ. ಇವನನ್ನು ನಾನು ಸಂಧಿಸಿದ್ದೂ ವಿಧಿಯಿರಬೇಕು. ನಾನು ಮಾಡಿದ ನಿಶ್ಚಯ ಪೂರ್ಣವಾಗಲು ಪುಟ್ಟನಂತೆ ಜೀವನದಲ್ಲಿ ತತ್ಪರನಾಗಿಬಿಡುವ ಯೋಗ್ಯತೆಯಿರಬೇಕು. ಚಂದ್ರಿಯದು ಇದೇ ಲೋಕ. ನಾನು ಅಲ್ಲೂ ಇಲ್ಲ, ಇಲ್ಲೂ ಇಲ್ಲ. ದ್ವಂದ್ವಕ್ಕೆ ಸಿಕ್ಕಿಕೊಂಡುಬಿಟ್ಟೆ. ಕಾಫಿ, ಮಸಲೆದೋಸೆಯ ವಾಸನೆ ಬಂತು. ಪುಟ್ಟ ನಿಂತ, ಆಚಾರ್ಯರೂ ನಿಂತರು.
“ಬನ್ನಿ, ಒಂದಿಷ್ಟು ಕಾಫಿ ಕುಡಿಯುವ” ಎಂದ ಪುಟ್ಟ.
“ನನಗೆ ಬೇಡ” ಎಂದರು ಪ್ರಾಣೇಶಾಚಾರ್ಯರು.
“ಇದು ಬ್ರಾಹ್ಮಣರ ಹೋಟೆಲು. ಜಾತ್ರೆಗೆಂದು ತೀರ್ಥಹಳ್ಳಿಯಿಂದ ಬಂದದ್ದು. ದೋಷವಿಲ್ಲ. ಒಳಗೆ ಮಡಿಬ್ರಾಹ್ಮಣರಿಗೆಂದು ಪ್ರತ್ಯೇಕ ಸ್ಥಳವಿದೆ.”
“ಬೇಡ. ನನಗೆ ಕಾಫಿ ಬೇಡ.”

“ಅದೆಲ್ಲ ಆಗದು. ನಾನು ಕುಡಿಸುವೆ ನಿಮಗೆ ಕಾಫಿ, ಬನ್ನಿ” ಎಂದು ಪುಟ್ಟ ಕೆಹಿಡಿದು ಒಳಗೆ ಕರೆದುಕೊಂಡು ಹೋದ. ಪ್ರಾಣೇಶಾಚಾರ್ಯರು ಮಣೆಯ ಮೇಲೆ ಒಲ್ಲದೆ ಕೂತರು, ಇಲ್ಲಿ ಯಾರಾದರೂ ನನ್ನ ಪರಿಚಯದವರು ಇದ್ದಿರಬಹುದೋ ಎಂದು ಭೀತಿಯಿಂದ ಹುಡುಕಿದರು. ವೇದಾಂತ ಶಿರೋಮಣಿಯೊಬ್ಬ ಹೋಟೇಲು ಕಾಫಿ ಕುಡಿಯೋದು ಕಣ್ಣಿಗೆ ಬಿದ್ದು ಬಿಟ್ಟರೆ…ಥv ಈ ಭೀತಿಯಿಂದ ಮೊದಲು ಪಾರಾಗಬೇಕೆಂದು ತಮ್ಮನ್ನು ಶಪಿಸಿಕೊಂಡರು. ಪುಟ್ಟ ಸ್ವಲ್ಪ ದೂರದಲ್ಲಿ ಹೋಗಿ ಕೂತು ಪ್ರಾಣೇಶಾಚಾರ್ಯರ ಬ್ರಾಹ್ಮಣ್ಯಕ್ಕೆ ಗೌರವ ತೋರಿಸಿದ. ’ಎರಡು ಸ್ಪೆಷ ಕಾಫಿ’ ಎಂದ ಎದುರು ನಿಂತ ಮಾಣಿಗೆ. ಎರಡಾಣೆ ಕೊಟ್ಟು, ಲೋಟಾದಲ್ಲಿ ಬಂದ ಕಾಫಿಯನ್ನು ಕುಡಿಯುತ್ತ ’ಹಾಳು ಜಾತ್ರೆ ಕಾಫಿ’ ಎಂದ. ಪ್ರಾಣೇಶಾಚಾರ್ಯರಿಗೆ ದಾಹವಾಗಿದ್ದರಿಂದ ಕಾಫಿ ಕುಡಿದು ಸಮಾಧಾನವೇ ಆಯಿತು. ಹುರುಪು ಬಂತು. ಹೊರಬಂದರು. “ನೀವು ಬೇಕಾದರೆ ದೇವಸ್ಥಾನದಲ್ಲಿ ಹೋಗಿ ಊಟ ಮಾಡಿ. ಇವತ್ತು ಆರುಗಂಟೆಯ ತನಕ ಊಟದ ಸಂತರ್ಪಣೆ ನಡೆಯುತ್ತದೆ ಬ್ರಾಹ್ಮಣರಿಗೆ” ಎಂದ ಪುಟ್ಟ. ಎಷ್ಟೋ ದಿನಗಳಿಂದ ಊಟವೇ ಇಲ್ಲದ್ದರಿಂದ ಪ್ರಾಣೇಶಾಚಾರ್ಯರಿಗೆ ಥಟ್ಟನೆ ಬಿಸಿಬಿಸಿ ಅನ್ನ ಸಾರಿನ ಊಟ ಮಾಡಬೇಕೆಂಬ ಅಪೇಕ್ಷೆಯಾಯಿತು. ಆದರೆ ಫಕ್ಕನೆ, ತನಗೀಗ ಸೂತಕವಲ್ಲವೆ, ದೇವಸ್ಥಾನದಲ್ಲಿ ಹೋಗಿ ಊಟ ಮಾಡುವಂತಿಲ್ಲ. ಮೆಲಿಗೆ ಮಾಡಿದರೆ ರಥ ಮುಂದಕ್ಕೆ ಚಲಿಸುವುದಿಲ್ಲವೆನ್ನುತ್ತಾರೆ ಎಂಬ ನಂಬಿಕೆ ನೆನಪಾಯಿತು. ಆದರೆ ನಾರಣಪ್ಪ ಗಣಪತಿಯ ಮೀನನ್ನು ಹಿಡಿದು ಜಯಿಸಿಕೊಳ್ಳಲಿಲ್ಲವೇ? ತನಗೆ ಹಾಗೆ ಬ್ರಾಹ್ಮಣ್ಯವನ್ನು ಸಂಪೂರ್ಣ ಧಿಕ್ಕರಿಸಿ ನಡೆಯುವ ಧೆರ್ಯವಿಲ್ಲ ಎನ್ನಿಸಿತು. ಹಾಗಾದರೆ ಚಂದ್ರಿಯನ್ನು ಕೂಡಿ ಬದುಕುತ್ತೇನೆಂಬ ನಿಶ್ಚಯಕ್ಕೆ ಯಾವ ಬೆಲೆ ಎಂದು ಮನಸ್ಸು ಹೀಯಾಳಿಸಿತು. ನಿಶ್ಚಯವೆಂದರೆ ಪೂರ್ಣ ನಿಶ್ಚಯವಾಗಬೇಕು. ಕಟ್ಟಿಕೊಂಡರೆ ಸಂಪೂರ್ಣ ಕಟ್ಟಿಕೊ. ಬಿಟ್ಟರೆ ಪೂರ್ಣ ಬಿಡು. ದ್ವಂದ್ವಾತೀತನಾಗುವ ದಾರಿ ಅದು. ಭೀತಿಯಿಂದ ಪಾರಾಗುವ ದಾರಿ ಅದು. ಮಹಾಬಲ ಹೇಗೆ ನಿಶ್ಚಯಿಸಿಬಿಟ್ಟ…

“ಸ್ವಲ್ಪ ನಿಲ್ಲಿ ಆಚಾರ್ರೆ. ಅಲ್ಲಿ ನೋಡಿ” ಎಂದ ಪುಟ್ಟ. ದೂರದಲ್ಲೊಂದು ದಿಬ್ಬದ ಮೇಲೆ ಪರವಶರಾದಂತೆ ಕಾಣುವ ಒಂದು ಶೂದ್ರರ ಗುಂಪಿತ್ತು. “ಬನ್ನಿ. ಅಲ್ಲಿಗೆ ಹೋಗಿ ನೋಡುವ. ಕೋಳಿ ಅಂಕವಿರಬೇಕು” ಎಂದ ಪುಟ್ಟ. ಪ್ರಾಣೇಶಾಚಾರ್ಯರಿಗೆ ಎದೆ ಜಗ್ಗೆಂದಿತು. ಆದರೂ ಪುಟ್ಟನ ಕೂಡ ನಡೆದರು-ವಿಧಿಗೆ ತಲೆಬಾಗಿ. ಗುಂಪಿನಿಂದ ಸ್ವಲ್ಪದೂರ ನಿಂತು ನೋಡಿದರು. ಹೆಂಡದ ವಾಸನೆಯಿಂದ ಅವರಿಗೆ ವಾಕರಿಕೆ ಬಂತು. ಕಾಲಿಗೆ ಕತ್ತಿ ಕಟ್ಟಿದ್ದ ಎರಡು ಹುಂಜಗಳು ’ರ’, ’ರ’ ಎಂದು ರೆಕ್ಕೆ ಬಡಿದು ಚೂರಿಯಿಂದ ತಿವಿದುಕೊಳ್ಳುತ್ತ ಪರಸ್ಪರ ಎಗರಾಡುವುದನ್ನು ನೋಡುತ್ತ ಜನ ಕುಕ್ಕುರುಗಾಲಿನಲ್ಲಿ ಕೂತಿದ್ದರು-ತುದಿಗಾಲಿನ ಮೇಲೆ, ಬಾಯಿ ಬಿಟ್ಟು, ಸುತ್ತುಗಟ್ಟಿ. ಅಷ್ಟು ತತ್ಪರ, ತೀಕ್ಷ್ಣ, ಕಠೋರ ದೃಷ್ಟಿಯನ್ನು ಪ್ರಾಣೇಶಾಚಾರ್ಯರು ಜನ್ಮಾಪಿ ಕಂಡೇ ಇರಲಿಲ್ಲ. ಪಂಚಪ್ರಾಣವೇ ಇತ್ತು ಕೂತವರ ಕಣ್ಣಿನ ನೋಟದಲ್ಲಿ-ಪ್ರಾಣ ಮತ್ತು ಎರಡು ಹುಂಜಗಳು. ಇಲ್ಲ. ನಾಲ್ಕು ರೆಕ್ಕೆ, ನಾಲ್ಕು ಕತ್ತಿಗಳು. ಕೊP ಕೊP ಕೊP ಕೊP-ಸುತ್ತ ನಲವತ್ತು ಕಣ್ಣುಗಳು. ಕೆಂಪು ಕಿರೀಟದ ಹುಂಜಗಳ ಹೊಳೆಯುವ ಚೂರಿಗಳು. ಬಿಸಿಲು ಪಳಪಳP. ಚಮಕು. ಚಕಮಕಿ. ಆಹಾ ಚಮತ್ಕಾರ. ಬಡಿಯಿತು. ಬಡಿಯಿತು. ಏರಿ ಕೂತಿತು. ಪ್ರಾಣೇಶಾಚಾರ್ಯರಿಗೆ ದಿಗಿಲಾಗಿಬಿಟ್ಟಿತು. ಒಂದು ರಾಕ್ಷಸಲೋಕಕ್ಕೆ ಥಟ್ಟನೇ ಬಂದುಬಿಟ್ಟಂತೆನ್ನಿಸಿತು. ಚಂದ್ರಿಯೊಡನೆ ಬಾಳಲು ನಿಶ್ಚಯಿಸಿದ ಅಧೋಲೋಕದ ಆಳದ ಕತ್ತಲೆಯಲ್ಲೆಲ್ಲೋ ಗುಹೆಯಲ್ಲೆಲ್ಲೋ ಈ ಪರವಶ ಪ್ರಾಣಿಗಳ ಕಣ್ಣಿನ ಕಠೋರ ತತ್ಪರತೆಯೂ ಒಂದಂಶವಾದರೆ ಅಲ್ಲಿ ಬ್ರಾಹ್ಮಣನಾದ ತಾನು ಬಾಡಿ ಬಳಲಿಹೋಗಿ ಬಿಡಬಹುದೆಂದು ಪರಮಭೀತರಾಗಿ ಕೂತುಬಿಟ್ಟರು. ಎರಡು ಹುಂಜಗಳ ಒಡೆಯರು ತಮ್ಮ ಹುಂಜಗಳನ್ನು ಹುರಿದುಂಬಿಸುತ್ತ ಮಾಡುತ್ತಿದ್ದ ಶಬ್ದ ಮನುಷ್ಯನ ಗಂಟಲಿನಿಂದ ಬಂದದ್ದಲ್ಲ ಎನ್ನಿಸಿತು. ಈ ಎಲ್ಲ ಕ್ರೂರ ತೀಕ್ಷ್ಣ ಭಾವಗಳ ಲೋಕದಲ್ಲಿ ಬದುಕುವ ಸಾಮರ್ಥ್ಯ ತನಗೆ ಖಂಡಿತಾ ಇಲ್ಲವೆಂದು ಖಚಿತವಾಯಿತು. ಕಾಮದ ಒಂದು ಪಾ ಮಾರ್ದವವಾದರೆ, ಇನ್ನೊಂದರಲ್ಲಿ ಈ ರಾಕ್ಷಸ ಛಲವಿರಬೇಕು. ನಾರಣಪ್ಪ ತನ್ನನ್ನು ಧಿಕ್ಕರಿಸಿ ನಡೆದ ಆ ದಿನ ತನ್ನ ವ್ಯಕ್ತಿತ್ವವೆಲ್ಲ ಕಂತಿದಂತಾಗಿ ಅನುಭವಿಸಿದ್ದ ಪುಕ್ಕಲು ಮರುಕಳಿಸಿತು. ಎರಡು ಹುಂಜಗಳನ್ನೂ ಬಡಿದಾಟದಿಂದ ಬಲಾತ್ಕಾರವಾಗಿ ಬಿಡಿಸಿ ಗಾಯವಾಗಿ ಬರುತ್ತಿದ್ದ ಜಾಗಗಳನ್ನು ಹೊಲಿದು ಮತ್ತೆ ಕಾಳಗಕ್ಕೆ ಬಿಟ್ಟರು. ಈ ಮಧ್ಯೆ ಗೆಲುವಿನಿಂದ ನೋಡುತ್ತಿದ್ದ ಪುಟ್ಟ ಒಬ್ಬ ಅಪರಿಚಿತನ ಜೊತೆ ಪಂಥ ಕಟ್ಟಿದ್ದ. ’ಈ ಹುಂಜ ನನ್ನದು’ ಎಂದು ಪುಟ್ಟ. ’ಇದು ಗೆದ್ದರೆ ಎರಡಾಣೆ’ ಎಂದ ಅಪರಿಚಿತ. ತನ್ನದು ಗೆದ್ದರೆ ನಾಲ್ಕಾಣೆ ಎಂದ ಪುಟ್ಟ. ಎಂಟಾಣೆ ಎಂದ ಅವ. ಹತ್ತಾಣೆ ಎಂದ ಪುಟ್ಟ. ಹನ್ನೆರಡಾಣೆ ಅಂದ ಅವ. ’ನೋಡುವ’ ಎಂದ ಪುಟ್ಟ. ಪ್ರಾಣೇಶಾಚಾರ್ಯರು ಆತಂಕದಿಂದ ಕಾದರು. ಈ ಹಡೆ ಹುಡುಗ ಕೆಯಲ್ಲಿರುವ ದುಡ್ಡನ್ನೆಲ್ಲ ಕಳೆದುಕೊಂಡರೆ ಏನು ಗತಿ? ಆದರೆ ಪರಮಾಶ್ಚರ್ಯ. ಪುಟ್ಟನೇ ಗೆದ್ದ. ಆದರೆ ಪುಟ್ಟ ಅಲ್ಲಿಂದ ಹೊರಡಲು ಎದ್ದಕೂಡಲೇ ಸೋತಿದ್ದವನು ’ಇನ್ನೊಂದು ಪಂತ’ ಎಂದ. ’ಬೇಡ’ ಎಂದ ಪುಟ್ಟ. ಅವನು ಕುಡಿದುಬಿಟ್ಟಿದ್ದರಿಂದ ಪುಟ್ಟನಿಗೆ ಹೊಡೆಯಲು ಬಂದ. ಪ್ರಾಣೇಶಾಚಾರ್ಯರು ತಡೆದರು. ಬ್ರಾಹ್ಮಣನನ್ನು ಕಂಡು ಅವ ಕೋಪವನ್ನು ನುಂಗಿಕೊಂಡ. ಎಲ್ಲರೂ ’ಏನು’, ’ಏನು’ ಎಂದು ಏರಿಬರುವುದರೊಳಗೆ ಪ್ರಾಣೇಶಾಚಾರ್ಯರು ಪುಟ್ಟನನ್ನೆಳೆದುಕೊಂಡು ನಡೆದುಬಿಟ್ಟರು.

ಹನ್ನೆರಡಾಣೆ ಗಳಿಸಿ ಹಿರಿಹಿರಿ ಹಿಗ್ಗಿದ ಪುಟ್ಟ. ಇದರಿಂದೇನೂ ಅಪ್ರತಿಭನಾದಂತೆ ಕಾಣಲಿಲ್ಲ. ಪ್ರಾಣೇಶಾಚಾರ್ಯರಿಗೆ ಮಾತ್ರ ಥಟ್ಟನೆ ಪುಟ್ಟನ ಬಗ್ಗೆ ವಾತ್ಸಲ್ಯಭಾವ ಮೂಡಿತು. ನನಗೊಬ್ಬ ಮಗನಿದ್ದಿದ್ದರೆ ಪ್ರೀತಿಯಿಂದ ಸಲಹಬಹುದಿತ್ತು ಎನ್ನಿಸಿತು.
“ಹೌದು ಪುಟ್ಟ, ನಾವಿನ್ನು ದಾರಿ ಹಿಡಿಯುವ” ಎಂದರು ಪ್ರಾಣೇಶಾಚಾರ್ಯರು-ತಮ್ಮ ಸ್ನೇಹವನ್ನು ಅಲ್ಲಿಗೇ ಮುಕ್ತಾಯಗೊಳಿಸಲು ಯತ್ನಿಸುತ್ತ.
“ಯಾವ ದಿಕ್ಕಿಗೆ ತಮ್ಮ ಪ್ರಯಾಣ?” ಎಂದು ಪುಟ್ಟ ಮುಖ ಸಣ್ಣಗೆ ಮಾಡಿಕೊಂಡ. ನನ್ನಿಂದ ಏನನ್ನು ಅಪೇಕ್ಷಿಸಿ ಇವ ಹೀಗೆ ಗಂಟುಬಿದ್ದಿದ್ದಾನೆ ಎಂದು ಆಚಾರ್ಯರಿಗೆ ಅನುಮಾನವಾಯಿತು.
“ಹೀಗೆ. ನಿಶ್ಚಿತವಿಲ್ಲ” ಎಂದರು.
“ಅಷ್ಟು ದೂರ ನಿಮ್ಮನ್ನು ಕಳಿಸಿಬರುವೆ ಹಾಗಾದರೆ. ದೇವಸ್ಥಾನದಲ್ಲಿ ಊಟ ಮಾಡಿ ಹೋದರಾಯಿತಲ್ಲ” ಎಂದ ಒತ್ತಾಯಪೂರ್ವಕವಾಗಿ ಪುಟ್ಟ. ಫಜೀತಿಗಿಟ್ಟುಕೊಂಡಿತಲ್ಲ ಎಂದು ಪ್ರಾಣೇಶಾಚಾರ್ಯರು :
“ನಾನೊಬ್ಬ ಸೋನೆಗಾರನನ್ನು ನೋಡಬೇಕು” ಎಂದರು.
“ಯಾಕೆ?” ಎಂದ ಪುಟ್ಟ ಅಷ್ಟಿಷ್ಟಕ್ಕೆ ಜಗ್ಗದೆ.
“ನನ್ನದೊಂದು ಬಂಗಾರದ ಚೂರು ಮಾರುವುದಿದೆ.”
“ಯಾಕೆ? ಸದ್ಯಕ್ಕೆ ಖರ್ಚಿಗೆ ಕಾಸಿಲ್ಲದಿದ್ದರೆ ಈ ಹನ್ನೆರಡಾಣೆ ತಗೊಳ್ಳಿರಿ ಕೆಗಡವಾಗಿ. ಇನ್ನೊಮ್ಮೆ ಕೊಡುವಿರಂತೆ”.
ಇಂತಹ ಮನುಷ್ಯನಿಂದ ಪಾರಾಗುವುದಾದರೂ ಹೇಗೆಂದು ಪ್ರಾಣೇಶಾಚಾರ್ಯರು ದಿಕ್ಕೆಟ್ಟರು. ಕಾಲಿಗೆ ತೊಡರಿಕೊಳ್ಳುವ ಬಳ್ಳಿಯಂತೆ ಇವನ ಕರುಳು.
“ಇಲ್ಲ ಪುಟ್ಟ. ಅಷ್ಟಿಷ್ಟು ಹಣವಲ್ಲ ಬೇಕಾಗಿರೋದು. ಕುಂದಾಪುರಕ್ಕೆ ಬಸ್ಸು ಹಿಡಿಯಬೇಕು. ಹಾಗೆ ಹೀಗೇಂತ ಇನ್ನೊಂದಷ್ಟು ಖರ್ಚಿನ ಬಾಬತ್ತಿದೆ” ಪ್ರಾಣೇಶಾಚಾರ್ಯರು ಅವನ ಪಟ್ಟಿನಿಂದ ತಪ್ಪಿಸಿಕೊಳ್ಳಲಾರದೆ ಎಂದರು.
“ಓ ಹಾಗೋ. ಬನ್ನಿ ಹಾಗಾದರೆ, ನನಗೊಬ್ಬ ಸೋನೆಗಾರನಿಲ್ಲಿ ಪರಿಚಯ. ಏನು ಮಾರುವುದಿದೆ?”
“ಯಜ್ಞೋಪವೀತಕ್ಕೆ ಹಾಕಿದ ಪವಿತ್ರದ ಉಂಗುರ”. ವಿಧಿಯಿಲ್ಲದೆ ಪ್ರಾಣೇಶಾಚಾರ್ಯರು ಹೇಳಿಕೊಂಡರು.
“ಎಲ್ಲಿ ತೋರಿಸಿ?” ಎಂದು ಪುಟ್ಟ ಕೆಯೊಡ್ಡಿದ. ಜನದ ಗುಂಪಿನಲ್ಲಿ ನಾಚುತ್ತ ಪ್ರಾಣೇಶಾಚಾರ್ಯರು ಯಜ್ಞೋಪವೀತದ ಉಂಗುರವನ್ನು ಬಿಚ್ಚಿಕೊಟ್ಟರು. ಪುಟ್ಟ ಅದನ್ನು ಕೆಯಲ್ಲಿ ಹಿಡಿದು ಪರೀಕ್ಷಿಸಿ “ಸುಮಾರು ಹದಿನೆದು ರೂಪಾಯಿಗಿಂತ ಕಮ್ಮಿ ಹೇಳಿದರೆ ಒಪ್ಪಿಕೊಳ್ಳಬೇಡಿ” ಎಂದ. ಇಬ್ಬರೂ ಕೇರಿಯೊಂದನ್ನು ಹೊಕ್ಕು ಸೋನೆಗಾರನ ಮನೆಗೆ ಹೋದರು. ಮರದ ಪೆಟ್ಟಿಗೆಯೊಂದರ ಎದುರು ಅರದಿಂದ ಉಂಗುರ ಒಂದನ್ನು ಉಜ್ಜುತ್ತ ಕೂತ ಸೋನೆಗಾರ ಬೆಳ್ಳಿಕಟ್ಟಿನ ಕನ್ನಡಕವನ್ನು ನೇರ ಮಾಡಿಕೊಂಡು, ’ಏನು?’ ಅಂದ ಪುಟ್ಟನನ್ನು ಕಂಡು. “ಏನು, ಪುಟ್ಟಯ್ಯನವರ ಕಾಲು ನಮ್ಮಲ್ಲಿಗೆ ಬೆಳೆಸಿತಲ್ಲ” ಎಂದು ಉಪಚರಿಸಿದ. ಉಂಗುರವನ್ನು ಕೊಟ್ಟಿದ್ದಾಯಿತು. ಸೋನೆಗಾರ ಅದನ್ನು ಗುಲಗಂಜಿ ತಕ್ಕಡಿಯಲ್ಲಿ ತೂಗಿ, ಒರೆ ಹಚ್ಚಿ ನೋಡಿ, ’ಹತ್ತು ರೂಪಾಯಿ’ಯೆಂದ. ಪುಟ್ಟ “ಹದಿನೆದಕ್ಕೆ ಕಡಿಮೆಯಾದರೆ ಮಾತೇ ಬೇಡ” ಎಂದ. ವ್ಯವಹಾರದ ಮಾತಿನಿಂದ ಆಚಾರ್ಯರಿಗೆ ಕಸಿವಿಸಿಯಾಯಿತು. “ಬಂಗಾರದ ಬೆಲೆ ಇಳಿದಿದೆ” ಎಂದ ಸೋನೆಗಾರ. “ಅದೆಲ್ಲ ನನಗೆ ಲೆಕ್ಕವಿಲ್ಲ. ಹದಿನೆದು ಕೊಡುತ್ತೀರೋ ಇಲ್ಲವೋ” ಎಂದು ಆಚಾರ್ಯರ ಮುಖ ನೋಡಿ ತನ್ನ ವ್ಯವಹಾರಜ್ಞತೆಯನ್ನು ಮೆಚ್ಚಿರೆಂದು ಹುಬ್ಬು ಹಾರಿಸಿದ. ಆಚಾರ್ಯರು ಅದಕ್ಕೆ “ಹತ್ತಾದರೆ ಹತ್ತು. ನನ್ನ ಖರ್ಚಿಗಷ್ಟು ಈಗ ಸಾಕು” ಎಂದು ಚರ್ಚೆ ಮಾಡಲು ಇಷ್ಟವಾಗದೆ ಅಂದುಬಿಟ್ಟರು. ಪುಟ್ಟನಿಗೆ ಪೆಚ್ಚಾಯಿತು. ಸೋನೆಗಾರನ ಮುಖ ಅಗಲವಾಯಿತು. ಹತ್ತು ರೂಪಾಯಿಯನ್ನು ಎಣಿಸಿಕೊಟ್ಟು ಕೆಮುಗಿದ. ಪ್ರಾಣೇಶಾಚಾರ್ಯರು ’ಉಪಕಾರವಾಯಿತು’ ಎಂದು ಹೊರ ಬಂದರು.
ಹೊರಬಂದದ್ದೇ ತಡ ಪುಟ್ಟ ಪರಚಿಕೊಳ್ಳಲು ಪ್ರಾರಂಭಿಸಿದ-ಒಳ್ಳೆ ಕೆಹಿಡಿದ ಹೆಂಡತಿಯ ಹಾಗೆ : “ಏನೋ ನಿಮಗೆ ಉಪಕಾರ ಮಾಡೋಣ ಅಂತ ಹೋದರೆ ನನ್ನ ಮಾನಾನೇ ಕಳೆದಿರಲ್ಲರಿ. ನನ್ನ ಮಾತಿಗೆ ಇನ್ನು ಅವನ ಹತ್ತಿರ ಬೆಲೆಯೇ ಇಲ್ಲ-ಹೋಗಲಿ-ಆದರೆ ಐದು ರೂಪಾಯಿಗೆ ನಿಮಗೇ ನಾಮವಲ್ಲ! ಕಲಿಯುಗದಲ್ಲಿ ನಿಮ್ಮ ಹಾಗೆ ಬೆಪ್ಪರಾಗಿರಕೂಡದು, ತಿಳಿಯಿತ? ಅಕ್ಕಸಾಲಿಗಳು ಸ್ವತಃ ಅಕ್ಕನ ಬಂಗಾರವನ್ನೇ ಕದೀತಾರಂತೆ, ಕೇಳಿದೀರ?”
“ಹಣದ ಆತುರವಿತ್ತು. ದುಡುಕಿಬಿಟ್ಟೆ ಕ್ಷಮಿಸು.”

ಪ್ರಾಣೇಶಾಚಾರ್ಯರು ವಿನಯದಿಂದ ಪುಟ್ಟನ ಮನಸ್ಸನ್ನು ನೋಯಿಸಲು ಇಚ್ಛಿಸದೆ ಎಂದರು. ಪುಟ್ಟ ಮೆತ್ತಗಾಗಿ :
“ನಿಮ್ಮನ್ನು ನೋಡಿದ ಕೂಡಲೆ ತಿಳಿಯಿತು. ನೀವು ಬಹಳ ಸಾಧು ಅಂತ. ನಿಮ್ಮೊಬ್ಬರನ್ನೆ ಎಲ್ಲಿಗೂ ಕಳುಹಿಸಬಾರದು. ನಿಮ್ಮನ್ನು ಬಸ್ಸುಹತ್ತಿಸಿ ನಾನು ಹಿಂದಕ್ಕೆ ಹೋಗುವೆ. ಈಗ ನಾನು ಹೇಳಿದ ಹಾಗೆ ಮಾಡಿ. ನಮ್ಮ ಪೆಕಿಯ ಜನ ಒಂದಿದೆ. ಅವರನ್ನು ನಾನು ನೋಡಿ ಬರಬೇಕು. ಜೊತೆಗೆ ಬನ್ನಿ. ಮತ್ತೆ ದೇವಸ್ಥಾನಕ್ಕೆ ಹೋಗಿ ಊಟ ಮಾಡಿ. ಚಿಂತೆಯಿಲ್ಲ. ಸಾಯಂಕಾಲದವರೆಗೂ ಅಲ್ಲಿ ಪಂಕ್ತಿಯ ಮೇಲೆ ಪಂಕ್ತಿ ಊಟ. ಮತ್ತೆ ರಾತ್ರೆ ಇಲ್ಲೆ ಎಲ್ಲಾದರೂ ಮಲಗಿದ್ದು ಬೆಳಿಗ್ಗೆ ಎದ್ದು ಐದು ಮೆಲಿ ನಡೆದರೆ ತೀರ್ಥಹಳ್ಳಿ. ಅಲ್ಲಿಂದ ಆಗುಂಬೆಗೆ ಬಸ್ಸಿದೆ. ಟ್ಯಾಕ್ಸಿಯಲ್ಲಿ ಘಟ್ಟ ಇಳಿದರೆ ನೇರ ಕುಂದಾಪುರಕ್ಕೆ ಬಸ್ಸು” ಎಂದ.
ಕುಂದಾಪುರದಿಂದ ದಾರಿ ಖರ್ಚಿಗೆಂದು ಉಂಗುರ ಮಾರಿ ಬಂದ ಹಣವನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಆಚಾರ್ಯರು ’ಸರಿ’ ಎಂದರು. ’ಹಣ ಜೋಕೆ’ ಎಂದು ಪುಟ್ಟ ಎಚ್ಚರಿಸಿದ.
ಊಟಕ್ಕೆ ಹೋಗಿದ್ದಾಗ ಮೆತ್ತಗೆ ಇವನಿಂದ ಜಾರಿಬಿಟ್ಟರಾಯಿತು ಎಂದುಕೊಂಡರು. ಯಾವ ಅಪೇಕ್ಷೆಯೂ ಇಲ್ಲದೆ ತನ್ನ ಜೀವನದಲ್ಲಿ ಒಳಗಾಗಲೆತ್ನಿಸುವ ಪುಟ್ಟನನ್ನು ಕಂಡು ಅವರಿಗೆ ಇದು ಖಂಡಿತ ಪ್ರಾರಬ್ಧಕರ್ಮದಿಂದ ಉಂಟಾದ ಸನ್ನಿವೇಶ ಎನ್ನಿಸಿತು. ಯಾವ ಜನ್ಮದ ಋಣವೋ ಹೀಗೆ ತೀರುತ್ತಿರಬಹುದು. ಒಟ್ಟು ಮನುಷ್ಯನ ಸಹವಾಸದಿಂದ ಬಿಡುಗಡೆಯಿಲ್ಲ. ಕಾಲಿಗೆ ಬಳಸಿಕೊಳ್ಳುವ ಬಳ್ಳಿ. ನನ್ನ ಬಾಳು ನನ್ನದೆಂದು ಯಾವ ಮುಖದಲ್ಲಿ ಹೇಳಲಿಕ್ಕೆ ಸಾಧ್ಯ.

“ಹೀಗೆ ಬನ್ನಿ” ಎಂದು ಪುಟ್ಟ ಜನ ಕಿಕ್ಕಿರಿದ ದೇವಸ್ಥಾನದ ಮಾರ್ಗವಾಗಿ ಒಂದು ಓಣಿಗೆ ಕರೆದುಕೊಂಡು ಹೋದ. ನಡೆಯುತ್ತ ನಡೆಯುತ್ತ ಅವರು ಒಂದು ನಿರ್ಜನವಾದ ಪ್ರದೇಶಕ್ಕೆ ಬಂದುಬಿಟ್ಟರು. ಅಲ್ಲೊಂದು ಹಳ್ಳ. ಹಳ್ಳ ದಾಟಲು ಬಿದಿರಿನ ಬೊಂಬಿನ ಸಾರ. ಬೇಲಿ ದಾಟಿ ಗದ್ದೆಗೆ ಬಂದರು. ಗದ್ದೆಯಂಚಲ್ಲಿ ನಡೆಯುತ್ತಿದ್ದಂತೆ ಪ್ರಾಣೇಶಾಚಾರ್ಯರಿಗೆ ಕೋಳಿ ಅಂಕದ ನೆನಪಾಯಿತು. ಹೇಗೆ ಒಂದು ಹುಂಜ ಇನ್ನೊಂದನ್ನೇರಿ ರೆಕ್ಕೆಗಳ ಕೋಲಾಹಲದಲ್ಲಿ ನುರಿಯಿತು-ಹರಿದು, ಪರಚಿ, ಒಳಕ್ಕೆ ಒಳಕ್ಕೆ ಬಿಸಿಲಿನಲ್ಲಿ ಚೂಪಾಗಿ ಹೊಳೆದ ಚೂರಿ. ಮತ್ತ ಆ ಕಣ್ಣುಗಳು. ಹೆಂಡದ ವಾಸನೆ ಎಳೆದು ಹೊಯ್ದು ಬಿಡಿಸಿದರೂ ಅಂಗಾತ ಮಲಗಿಸಿಕೊಂಡು ಗಾಯವನ್ನು ಹೊಲಿಯುತ್ತಿದ್ದಾಗಲೂ ಕೊP ಕೊP ಎಂದು ತುಯ್ಯುತ್ತಿದ್ದುವು. ಛಲದ ದುರಾಶೆಯ ರಾಕ್ಷಸಲೋಕ. ಅಲ್ಲಿ ನಾನು ಅತಂತ್ರ ಪಿಶಾಚಿಯಂತಿದ್ದೆ. ಗಾಬರಿಪಟ್ಟೆ : ನನ್ನ ನಿಶ್ಚಯದ ಕ್ರಿಯೆಯಿಂದ ಆ ಲೋಕಕ್ಕೆ ನಾನು ಮಾರ್ಪಟ್ಟರೆ? ಮತ್ತೆ ಆ ದೊಂಬರ ಹುಡುಗಿ. ಸ್ಫುಟವಾಗಿ ಎದ್ದುಕಾಣಿವಂತೆ ಬಿಗಿಯಾದ ಬಟ್ಟೆತೊಟ್ಟು, ಬಿದಿರುಗಳದ ತುದಿಯಲ್ಲಿ ಆಕಾಶದಲ್ಲಿ ತುಯ್ದ ಕಸರತ್ತು. ಸರ್ರನಿಳಿದುಬಿಟ್ಟಳು. ಕುಣಿದಳು. ತಳ್ಳಿದರೆ ಕುಂಂii ಗೊಯಿಂP ಎನ್ನುವ ಗೋಲಿ. ಬಣ್ಣದ ನೀರು, ಗರಕ್ಕೆಂಬ ತೇಗು, ಅಪೇಕ್ಷೆ, ಅನುಭವ, ತೃಪ್ತಿ. ತತ್ಪರವಾದ ಕಣ್ಣುಗಳು. ಕಣ್ಣುಗಳು, ಬಣ್ಣಬಣ್ಣದ ಟೇಪು ಬೆಲೂನುಗಳ ಮಧ್ಯೆ, ತೇರಿನ ಶಿಖರದ ಸುತ್ತ, ನನ್ನ ಬೆನ್ನ ಹಿಂದೆ, ಎರಡು ಪಕ್ಕಗಳಲ್ಲಿ. ರೆಕ್ಕೆ-ಚೂರಿ-ಕೊಕ್ಕು-ಉಗುರುಗಳ ಸುತ್ತ ಕಣ್ಣುಗಳು. ತದ್ರೂಪ, ತತ್ಪರ. ಅಪೇಕ್ಷೆ ತೃಪ್ತಿಗಳ ಅದ್ವೆತ. ತತ್ತ್ವಮಸಿ. ತತ್ತ್ವಮಸಿ. ನನಗೆ ದಿಗಿಲು : ಪ್ರೇತತ್ವ ಕಳೆದು ರಾಕ್ಷಸತ್ವ ಪ್ರಾಪ್ತವಾಗುವ ದಿಗಿಲು.
“ನಾವು ಈಗ ಎಲ್ಲಿಗೆ ಹೋಗುತ್ತಿದ್ದೇವೆ. ಗೊತ್ತೋ?” ಪುಟ್ಟ ಬೀಡಿ ಹತ್ತಿಸಿ ತುಂಟನಗು ನಗುತ್ತ ಕೇಳಿದ.

ಪ್ರಾಣೇಶಾಚಾರ್ಯರು ಗೊತ್ತಿಲ್ಲವೆಂದು ತಲೆಯಾಡಿಸಿದರು.
“ನಿಮ್ಮ ಮರ್ಜೀನ್ನ ಬೇಕಾದರೆ ಒಪ್ಪಿದೆ, ಮಾರಾಯರೆ. ಎಲ್ಲಿಗೆ ಯಾಕೆ ಕೇಳದೆ ನಡಿ ಎಂದರೆ ನಡೆದುಬಿಡುತ್ತೀರಿ. ನಾನೂ ಸ್ವಲ್ಪ ಹಾಗೆಯೇ, ಮಾರಾಯರೆ. ಒಂದು ಸಾರಿ ನನ್ನ ಮಿತ್ರನೊಬ್ಬನ ಸಂಗಡ ಹೀಗೇ ನಾನು ಶಿವಮೊಗ್ಗಕ್ಕೂ ಹೋಗಿಬಿಟ್ಟೆ. ಪುಟ್ಟ ಹೋದರೆ ಹೋದಲ್ಲೆ ಅಂತ ನಮ್ಮ ಮಾವಂದಿರಿಗೆ ಅಷ್ಟು ಅಸಮಾಧಾನ. ’ಪುಟ್ಟನೊ? ನಮ್ಮ ಪುಟ್ಟ ಬಿಟ್ಟರೆ ಸಿಗ; ಸಿಕ್ಕರೆ ಬಿಡ’ ಎನ್ನುತ್ತಾರೆ ಅವರು”.
“ಯಾರೋ ನಿಮ್ಮ ಪೆಕಿಯವರ ಮನೆಗೆ ಎಂದಿರಿ ಅಲ್ಲವೆ?”
“ಆಚಾರ್ರೆ, ನನ್ನನ್ನು ಏಕವಚನದಲ್ಲೆ ಕರೀರಿ. ನೀವು ನನ್ನ ಬಹುವಚನದಲ್ಲಿ ಕರೆಯೋದು ನನ್ನ ಆಯಸ್ಸಿಗೆ ಒಳ್ಳೆದಲ್ಲ”.
“ಆಗಲಿ.”
“ಇಲ್ಲೇ ಒಂದು ತೋಟ. ಆ ಅದೇ ನೋಡಿ. ಅದನ್ನು ಗುತ್ತಿಗೆಗೆ ಹಿಡಿದು ನಮ್ಮ ಪೆಕಿಯವಳೊಬ್ಬಳು ಇದ್ದಾಳೆ. ಒಬ್ಬಂಟಿಯಾಗಿ. ಬಲು ಧೆರ್ಯದ ಹೆಂಗಸು. ಕೆತೊಳೆದು ಮುಟ್ಟಬೇಕು, ಅಂತಹ ರೂಪು. ನನಗೆ ದೂರದ ಸಂಬಂಧ. ನಿಮ್ಮಂತಹ ವೆದಿಕ ಬ್ರಾಹ್ಮಣರೆಂದರೆ ಬಲು ಮರ್ಯಾದೆ. ಅವಳಿಗಷ್ಟು ಮುಖ ತೋರಿಸಿಬಿಟ್ಟು ನಡೆದುಬಿಡುವ. ಇಲ್ಲದಿದ್ದರೆ ’ಏನೊ ಪುಟ್ಟ ಬಂದಿದ್ದಿಯಂತೆ, ಮುಖ ತೋರಿಸಿ ಇದ್ದೀಯೋ ಸತ್ತೀಯೋ ಎಂದು ವಿಚಾರಿಸಲಿಕ್ಕೂ ನಿನಗೆ ಅವಸರವಾಗಿಬಿಟ್ಟಿತ ಎನ್ನುತ್ತಾಳೆ. ನೋಡಿ, ಯಾರ ಮನಸ್ಸನ್ನೂ ನೋಯಿಸಲಿಕ್ಕೆ ಇಷ್ಟವಿಲ್ಲ. ಮನುಷ್ಯನ ಜೀವ ಅಂದರೆ ಈಗಲೋ, ಇನ್ನೊಂದು ಘಳಿಗೆಯೋ. ಯಾಕೆ ಯಾರನ್ನ ನೋಯಿಸಬೇಕು ಹೇಳಿ. ಅದಕ್ಕೆ ನಾನು ಎಲ್ಲದಕ್ಕೆ ಹಾ ಎಂದುಬಿಡುವೆ. ಆದರೂ ನೋಡಿ ಮಾರಾಯರೇ, ನನ್ನ ಹೆಂಡತಿಯೊಬ್ಬಳು ಮಾತ್ರ ತಿಂಗಳಿಗೊಮ್ಮೆ ತೌರಿಗೆ ಹೋಗಬೇಕೆಂದು ದುಂಬಾಲುಬೀತ್ತಾಳೆ. ಮೊದಮೊದಲು ಹಾ ಎಂದೆ. ಆಮೇಲೆ ಉಹೂ ಎಂದೆ. ಹೊಡೆದು ನೋಡಿದೆ. ಮತ್ತೆ ಅಯ್ಯೋ ಎನಿಸುತ್ತದೆ, ಹಾಡು ಕೇಳಿರಬೇಕು ನೀವು : ’ಮಡದಿಯ ಹೊಡೆದಾನು! ಮನದೊಳಗೆ ಮರುಗ್ಯಾನು! ಒಳಗೋಗಿ ಕಾಲು ಹಿಡಿದಾನು! ಒಳಗೋಗಿ ಕಾಲ ಹಿಡಿದು ತಾ ಕೇಳ್ಯಾನು! ನಾನ್ಹೆಚ್ಚೊ ನಿನಗೆ ತವರ್ಹೆಚ್ಚೊ’-ಹಾಗೆ ನಾನು.”

’ಇಕೊ ಬಂದುಬಿಟ್ಟೆವು’ ಎಂದು ತೋಟದ ಮೇಲಕ್ಕಿದ್ದ ಹೆಂಚು ಹೊದೆಸಿದ ಮನೆಗೆ ಬಂದರು. ’ಇದ್ದಾಳೊ ಇಲ್ಲವೋ. ಜಾತ್ರೆಗೆ ಹೋಗಿರಲಿಕ್ಕೂ ಸಾಕು’ ಎಂದು ಪುಟ್ಟ, ’ಪದ್ಮಾವತೀ’ ಎಂದು ಕರೆದ. ಜಗುಲಿಯ ಮೇಲೆ ಚಾಪೆಯ ಮೇಲೆ ಕೂತ ಪ್ರಾಣೇಶಾಚಾರ್ಯರಿಗೆ ’ಬಂದೆ’ ಎನ್ನುವ ಹೆಣ್ಣಿನ ಕೋಮಲಧ್ವನಿ ಕೇಳಿಸಿತು. ಆಪ್ಯಾಯಮಾನವಾದ ಧ್ವನಿ. ಭಯ. ಇವಳು ಯಾರು? ಪುಟ್ಟ ನನ್ನನ್ನು ಇಲ್ಲಿ ಯಾಕೆ ಕರೆದುಕೊಂಡು ಬಂದ. ’ಬಂದಿರಾ’ ಎಂದು ಉಪಚಾರ ಹೇಳಿತು ಅದೇ ಧ್ವನಿ. ಪ್ರಾಣೇಶಾಚಾರ್ಯರು ಬೆಚ್ಚಿ ತಿರುಗಿ ನೋಡಿದರು. ಹೊಸಿಲನ್ನು ದಾಟಿ ಕಂಬವನ್ನು ಎತ್ತಿದ ಕೆಯಿಂದ ಹಿಡಿದು ನಿಂತಿದ್ದಳು. ತನ್ನ ಕಣ್ಣು ತಿರುಗಿದ ಕ್ಷಣ ಎದೆಯ ಮೇಲೆ ಸೆರಗೆಳೆದುಕೊಂಡಳು. ’ಯಾರನ್ನು ಕರೆದುಕೊಂಡು ಬಂದಿದ್ದೇನೆ ನೋಡು. ಆಚಾರ್ಯರು’ ಎಂದ ಪುಟ್ಟ. ’ಬಂದಿರಾ’ ಎಂದಳು ಮತ್ತೊಮ್ಮೆ ನಾಚಿ. ’ಒಂದಿಷ್ಟು ಗಂಗಾಮೃತ ಕೊಡಲೆ?’ ಎಂದಳು. ’ಹಾಲುಹಣ್ಣಾದರೂ ತೆಗೆದುಕೊಳ್ಳಿ’ ಎಂದು ಆಗ್ರಹ ಮಾಡಿ ಒಳಕ್ಕೆ ಹೋದಳು. ಪ್ರಾಣೇಶಾಚಾರ್ಯರ ಮೆಬೆವತುಬಿಟ್ಟಿತು. ಅನುಮಾನವೇ ಇಲ್ಲ : ಮಾಲೇರರವಳು. ಒಂಟಿಯಾಗಿರುವವಳು. ನನ್ನನ್ನಿಲ್ಲಿ ಯಾಕೆ ಪುಟ್ಟ ಕರೆದುಕೊಂಡು ಬಂದ? ಪುಟ್ಟನ ಮಾತೇ ಇಲ್ಲ. ವಟಗುಟ್ಟುತ್ತಿದ್ದವ ಸುಮ್ಮನಾಗಿಬಿಟ್ಟಿದ್ದಾನೆ. ತನ್ನ ಬೆನ್ನಿನ ಹಿಂದೆ ಎರಡು ಕಣ್ಣುಗಳು ನೋಡುತ್ತಿವೆ ಎಂದು ದಿಗಿಲಾಯಿತು. ಆ ನೋಡುವ ಕಣ್ಣುಗಳಿಗೆ ತಾನು ಬಚ್ಚಿಟ್ಟ ಪದಾರ್ಥವಾಗಿಬಿಟ್ಟಿದ್ದೇನೆ ಎನ್ನಿಸಿತು. ತಿರುಗಿ ನೋಡಲು ಹೆದರಿಕೆ. ಆಸೆ. ಆ ಕಣ್ಣುಗಳು ಏನನ್ನು ಹೇಳುವುವೊ? ಕಣ್ಣು ಕಣ್ಣನ್ನು ಸಂಧಿಸಿದ ಕೂಡಲೆ ಅಮೂರ್ತವಾದದ್ದು ಏನು ರೂಪ ತಾಳಿಬಿಡುವುದೋ? ನೀಳವಾದ ಕಪ್ಪು ಕಣ್ಣುಗಳು. ಎದೆಯ ಇಳಿಬಿಟ್ಟ ಕೃಷ್ಣಸರ್ಪದ ಜಡೆ. ಗಳದ ಮೇಲೆ ತೂಗಿದ ಹುಡುಗಿ. ಚೂರಿ-ರೆಕ್ಕೆ-ಕೊಕ್ಕು-ಪುಕ್ಕ. ಕಾಡಿನಲ್ಲಿ ಕತ್ತಲಿನಲ್ಲಿ ಒಡ್ಡಿದ ಪುಷ್ಟ ಮೊಲೆ. ಬೆಳ್ಳಿಯ ಮಣ್ಣಿನ ಬಣ್ಣದ ನಗ್ನ ಮೊಲೆ. ಎಲ್ಲವನ್ನೂ ಬಿಚ್ಚಿಟ್ಟ ಪದಾರ್ಥದಂತೆ ನೋಡಿಬಿಡುವ ರೆಪ್ಪೆ ಮಿಟುಕದ ಕಣ್ಣು ಬೆನ್ನಿನ ಹಿಂದೆ. ಕೃಷ್ಣಸರ್ಪದ ಕಣ್ಣಿಗೆ ಪಕ್ಷಿ ಪರವಶ. ಭೀತಿ. ತಿರುಗಿದರು. ನಿಜ. ತಟ್ಟೆಯನ್ನು ಕೆಯಲ್ಲಿ ಹಿಡಿದು ಕದ್ದು ನೋಡುತ್ತಿದ್ದ ಕಣ್ಣುಗಳು. ಬಾಗಿಲಿನಿಂದ ಇಣುಕಿ ನೋಡುತ್ತಿದ್ದ ಕಣ್ಣುಗಳು ಸರ್ರೆಂದು ಕತ್ತಲಿಗೆ ಹೋದವು. ಬಳೆ ಸದ್ದಾಯಿತು. ಮತ್ತೆ ಬೆಳಕಿಗೆ ಬಂದಳು. ನೆಮ್ಮದಿ. ದೇಹದಲ್ಲಿ ಆಸೆಯನ್ನು ಕೊರೆಯುತ್ತ ತಿರುಗಿದ ಒಂದು ನಿರೀಕ್ಷೆ. ತಟ್ಟೆಯನ್ನಿಡಲು ಬಗ್ಗಿದಾಗ ಜಾರಿದ ಸೆರಗು, ಮುಂದಕ್ಕೊಡ್ಡಿದ ಮೊಲೆ. ಭಾರವಾಗಿ ನೋಡಿದ ಬೇಡಿದ ಕಣ್ಣು. ಎದೆಯಲ್ಲಿ ಬೆಂಕಿಯ ಸಂಚಾರ. ಅವರ ಕಣ್ಣುಗಳು ಕುದಿಯುತ್ತ ನೋಡಿದುವು. ಬೆನ್ನಿನ ಹಿಂದಿನ ಕಣ್ಣುಗಳಿಗೆ ಬಿಚ್ಚಿಟ್ಟ ಪದಾರ್ಥವಾಗಿಬಿಟ್ಟ ಭಾವನೆ ಮಾಯವಾಯಿತು. ಈಗ ತಾವೇ ಆ ಕಣ್ಣುಗಳು. ತತ್ತ್ವಮಸಿ. ’ಯಾವ ಕಡೆಯವರೊ’ ಎಂದಳು, ತೇಜಸ್ವಿಗಳಂತೆ ಕಾಣುತ್ತಿದ್ದ ಆಚಾರ್ಯರನ್ನು ನೋಡಿ ಪದ್ಮಾವತಿ. ’ಕುಂದಾಪುರದವರು’ ಎಂದ ಪುಟ್ಟ. ’ಶೀನಪ್ಪಯ್ಯನವರ ಪರಿಚಯವಿದೆ’ ಎಂದು ಸುಳ್ಳು ಹೇಳಿದ. ’ದೇವಸ್ಥಾನದ ವೆವಾಟು ನೋಡುತ್ತಾರೆ’ ಎಂದು ಇನ್ನೊಂದು ಸುಳ್ಳು ಹೇಳಿದ. ’ವಸೂಲಿ ಕೆಲಸಕ್ಕೆ ಈ ಪ್ರಾಂತಕ್ಕೆ ಬಂದವರು’ ಎಂದು ತನಗಿನ್ನೊಂದು ಹೊಸ ವ್ಯಕ್ತಿತ್ವವನ್ನೇ ಕೊಟ್ಟುಬಿಟ್ಟ. ಅಪರಿಚಿತರ ಕಣ್ಣುಗಳಲ್ಲಿ ಹೊಸ ರೂಪ, ಹೊಸ ವೇಷ. ನಾನು ನಿಜವಾಗಿ ಯಾರೆಂದು ಅನುಮಾನ ಬರುವಷ್ಟು ಒಂದು ದಿನದಲ್ಲೇ ಬೇರೆ ಬೇರೆ ವ್ಯಕ್ತಿಯಾಗಿಬಿಟ್ಟೆ. ಆಗಲಿ. ನಡದದ್ದು ನಡೆಯಲಿ. ಕಾಯುತ್ತ ಕೂತರು. ನುರಿದ ಪಕ್ಷಿ, ನುರಿಸಿಕೊಂಡ ಪಕ್ಷಿ. ಚೂರಿ. ಹಸಿಹಸಿ ಪ್ರಾಣವನ್ನು ಮುಟ್ಟಿಬಿಟ್ಟಂತೆ. ಕಿಟಾರನೆ ಕಿರುಚಿ ನಿಶ್ಚೇಷ್ಟಿತಳಾಗಿ ಬಿದ್ದ ಭಾಗೀರತಿ. ಮತ್ತೆ ಬೆಂಕಿಯಲ್ಲಿ ಧಗಧಗನೆ ಉರಿದ ತನ್ನ ತಪೋಭೂಮಿ. ಕಳೆದುಕೊಂಡೆ. ಭ್ರಷ್ಟನಾದೆ. ಈ ಕಣ್ಣುಗಳಿಗೆ ಬಿದ್ದು ಪ್ರೇತತ್ವದ ತ್ಯಾಗ, ಪ್ರಾಯಶಃ.

ಪದ್ಮಾವತಿ ತನ್ನ ಕಣ್ಣಿಗೆ ನೇರವಾಗಿ ಸಿಕ್ಕದಂತೆ ಹೋಗಿ ಬಾಗಿಲಿನ ಬುಡದಲ್ಲಿ ಕೂತಳು. ಹಾಗೆ ಕೂತು ತನ್ನನ್ನವಳು ನೋಡುತ್ತಿದ್ದಾಳೆಂದು ಪ್ರಾಣೇಶಾಚಾರ್ಯರಿಗೆ ಮತ್ತೆ ಕಸಿವಿಸಿಯಾಗತೊಡಗಿತು. ಕತ್ತನ್ನು ಧೆರ್ಯ ತಂದು ತಿರುಗಿಸಿದರು. ಎದೆ ಹೊಡೆದುಕೊಳ್ಳುತ್ತಿತ್ತು. ಪದ್ಮಾವತಿ ಎದ್ದು ಎಲೆಯಡಿಕೆ ತಟ್ಟೆಯನ್ನು ತಂದಿಟ್ಟಳು. ಪುಟ್ಟ ಎಲೆಗೆ ಸುಣ್ಣ ಹಚ್ಚಿ ಬೆರಳುಗಳ ಸಂದಿ ಸಿಕ್ಕಿಸಿ, ಅಡಿಕೆಯನ್ನು ಬಾಯಲ್ಲಿ ಎಸೆದು ಮಾತಿಗೆ ಪ್ರಾರಂಭಿಸಿದ. ಪದ್ಮಾವತಿ ಮತ್ತೆ ಬಾಗಿಲಿನ ಬುಡದಲ್ಲಿ ಕೂತಳು. ಪುಟ್ಟ ಹೇಳಿದ :
“ಆಚಾರ್ರು ದಾರಿಯಲ್ಲಿ ಸಿಕ್ಕರು. ಹಾಗೆ ಹರಟುತ್ತ ಬಂದೆವು. ಕುಂದಾಪುರದ ಮಾರ್ಗವಾಗಿ ಹೊರಟವರು ಇವರು. ನಾನು ಹೇಳಿದೆ-ಇವತ್ತು ರಾತ್ರೆ ಇಲ್ಲೆ ತಂಗಿದ್ದು ನಾಳೆ ತೀರ್ಥಹಳ್ಳಿಗೆ ಹೋಗಿ ಬಸ್ಸು ಹಿಡಿದರಾಯಿತು ಅಂತ, ಅಲ್ಲವೆ?”
ಪದ್ಮಾವತಿ ನಾಚಿಕೆಯಲ್ಲಿ ಒತ್ತಾಯಪಡಿಸುತ್ತ ಅಂದಳು :
“ಖಂಡಿತ. ಇಲ್ಲೆ ರಾತ್ರಿ ಮಲಗಿದ್ದು ಹೋದರಾಯಿತು”.
ಪ್ರಾಣೇಶಾಚಾರ್ಯರಿಗೆ ಮೂರ್ಛೆ ಬಂದಂತಾಯಿತು. ಕಿವಿ ಗವ್ವೆಂದು ಕೆ ಬೆವತಿತು. ಬೇಡ. ಬೇಡ. ಇವತ್ತು ಬೇಡ. ನಾಳೆ ನಿಶ್ಚಯಮಾಡಿ ಬಿಡಬೇಕಾದ ಗಳಿಗೆ ಈ ಕ್ಷಣದಲ್ಲೇ ಪ್ರಾಪ್ತವಾಗಿಬಿಡಬಹುದೆಂದು ನಾನು ಎಣಿಸಿರಲಿಲ್ಲ. ಇವತ್ತು ಬೇಡ. ನನಗೆ ಸೂತಕ. ಹೆಂಡತಿಯನ್ನು ಸುಟ್ಟು ಬಂದಿದ್ದೇನೆ. ನಾರಣಪ್ಪನ ಶವವನ್ನಿನ್ನೂ ತೆಗೆದಿಲ್ಲ. ಕೊಳೆಯುತ್ತಿದೆ. ಹದ್ದುಗಳು ಮನೆಯ ಮೇಲೆ ಬಂದು ಕೂತಿವೆ. ಹೇಳಿಬಿಡಬೇಕು. ಸತ್ಯ ನುಡಿದುಬಿಡಬೇಕು. ಇಲ್ಲಿಂದೆದ್ದು ಧಾವಿಸಿಬಿಡಬೇಕು. ಅಂತರ್ಧಾನವಾಗಿಬಿಡಬೇಕು. ಆದರೆ ದೇಹ ಅಲ್ಲೆ ಗಟ್ಟಿಯಾಗಿ, ಪದ್ಮಾವತಿ ನಿರೀಕ್ಷೆಯಲ್ಲಿ ನೋಡುತ್ತಿರುವ ಪದಾರ್ಥವಾಗಿ ಕೂತುಬಿಟ್ಟಿತು. ಪುಟ್ಟ ಹೇಳಿದ :
“ಸರಿ ಹಾಗಾದರೆ. ಇವರದ್ದಿನ್ನೂ ಊಟವಾಗಿಲ್ಲ. ದೇವಸ್ಥಾನದಲ್ಲಿ ಊಟ ಮಾಡಿಬರುತ್ತಾರೆ. ಇಲ್ಲಿಗೆ ಧರ್ಮಸ್ಥಳದ ಮೇಳ ಬಂದಿದೆಯಲ್ಲವೆ? ನೋಡಲು ಹೋಗುತ್ತೀಯ?”
“ಇಲ್ಲವಪ್ಪ. ಸಾಯಂಕಾಲ ಹೋಗಿ ದೇವರ ದರ್ಶನ ಮಾಡಿ ಬಂದುಬಿಡುವೆ. ನಿಮಗಾಗಿ ಕಾಯುವೆ”.

ತಾನು ಹಾ ಹೂ ಎನ್ನದೆ ಪುಟ್ಟ-ಪದ್ಮಾವತಿಯರ ನಡುವೆ ತನ್ನ ಬಾಳಿನ ನಿಶ್ಚಯವಾಗಿಬಿಟ್ಟಿತು. ’ಏಳಿರಿ’ ಎಂದ ಪುಟ್ಟ. ಆಚಾರ್ಯರು ಎದ್ದು ನಿಂತರು. ಪದ್ಮಾವತಿಯನ್ನು ನೋಡಿದರು. ಸ್ನಾನ ಮಾಡಿ ಎಣ್ಣೆ ಹಾಕದ ಕೂದಲು. ಮಾಂಸದಿಂದ ಪುಷ್ಟವಾದ ತೊಡೆ, ನಿತಂಬ, ಎದೆ, ನೀಳ, ಎತ್ತರ ರೂಪ. ಕಣ್ಣುಗಳಲ್ಲಿ ಹೊಳಪು. ನಿರೀಕ್ಷೆ. ಕಾದಿದೆ. ಪುಷ್ಪವತಿಯಾಗಿ ಐನೀರಿನ ಸ್ನಾನ ಮಾಡಿರಬೇಕು. ಉಸಿರಿಗೆ ಮೊಲೆಗಳು ಉಬ್ಬಿ ತಗ್ಗುತ್ತಿವೆ. ಒತ್ತಿಕೊಂಡರೆ ಕತ್ತಲಿನಲ್ಲಿ ಪುಟಿಯುತ್ತವೆ. ಹುಲ್ಲಿನ ಸುಗಂಧಿಯ ವಾಸನೆ. ತೇರು ತೇರು ಮಿಣುಕುಹುಳ. ಬೆಂಕಿ-ಕಟ್ಟಿಗೆಗೆ ಹತ್ತಿ, ಮತ್ತೆ ಕೆಕಾಲಿಗೆ ಹತ್ತಿ, ಹೊಟ್ಟೆಯಲ್ಲಿ ಪಚಪಚ ಬೆಂದು, ಚೀರಿ, ಸಿಡಿದು, ಬುರುಡೆಯನ್ನು ಚಳ್ಳನೆ ಸೀಳಿ ಎದೆಗೆ ನಾಲಗೆ ಚಾಚಿದ ಅಗ್ನಿ. ಇನ್ನೂ ಸುಡದ ನಾರಣಪ್ಪನ ಶವ. ಮಹಾಬಲ ಹೇಗೆ ಗುಡಿಗುಡಿ ಸೇದುತ್ತ ಚಾವಡಿಯ ಮೇಲೆ ಕೂತುಬಿಟ್ಟ. ಬಿದಿರು ಗಳದ ಮೇಲೆ ತೂಗಿತು, ತುಯ್ಯಿತು. ಯಾಜ್ಞವಲ್ಕ್ಯರು ಕರೆದು ಹೇಳಿದರು : ಪ್ರೀತಿ. ಯಾರ ಮೇಲೆ ಪ್ರೀತಿ, ಹೆಂಡತಿಯೆಂಬ ಪ್ರೀತಿ, ನನ್ನ ಮೇಲೇ ನನ್ನ ಪ್ರೀತಿ, ದೇವರೆಂಬ ಪ್ರೀತಿ, ನನ್ನ ಮೇಲೆ ನನ್ನ ಪ್ರೀತಿ. ಮೂಲ ಹುಡುಕುವೆ. ಗೆಲ್ಲುವೆ. ನೋಡಿದರು, ಮೆಚ್ಚಿದರು, ದೋಣಿಯಲ್ಲಿ ವ್ಯಾಸ ಕಮಂಡಲ ಹಿಡಿದು ಹುಟ್ಟಿದ. ನಡೆದುಬಿಟ್ಟ. “ಹೋಗಿ ಬನ್ನಿ ಹಾಗಾದರೆ. ನಾನು ಕಾದಿರುವೆ” ಎಂದಳು ಪದ್ಮಾವತಿ. ಮುಖ್ಯವಾಗಿ ಮಾರುತಿ ಕೆಕೊಟ್ಟುಬಿಟ್ಟ. ಮಹಾಬಲ ಮೋಸ ಮಾಡಿದ. ನಾರಣಪ್ಪ ರಚ್ಚು ತೀರಿಸಿಕೊಂಡ. ಬ್ರಾಹ್ಮಣರು ಬಂಗಾರಕ್ಕಾಗಿ ಆಸೆಪಟ್ಟರು. ಚಂದ್ರಿ ಕತ್ತಲಲ್ಲಿ ನಿಂತಳು-ಕೊಟ್ಟಳು-ನಡೆದುಬಿಟ್ಟಳು. ಭಾಗೀರತಿ ಚೀರಿ ಸತ್ತುಬಿಟ್ಟಳು. ಪುಟ್ಟ ಬೆನ್ನಿನ ಮೇಲೆ ಕೆಯಿಟ್ಟ. ಗದ್ದೆಯಂಚಲ್ಲಿ ನಿಲ್ಲಿಸಿದ. “ಏನೆನ್ನುತ್ತೀರಿ” ಎಂದ. “ನಾನು ಊಹಿಸಿದಂತೆಯೇ ಆಯಿತು” ಎಂದ. “ಅದು ಕಳಪೆ ಜನವೆಂದು ತಿಳಿಯಬೇಡಿ, ಮಾರಾಯರೆ. ಶೂದ್ರರಾರೂ ಸುತ್ತಮುತ್ತ ಸುಳಿದಿದ್ದಿಲ್ಲ. ಅಂತಿಂಥ ಸಾಮಾನ್ಯ ಬ್ರಾಹ್ಮಣರಿಗೂ ಒಪ್ಪುವ ಜೀವವಲ್ಲ. ದುಡ್ಡಿಗಲ್ಲ, ಕಾಸಿಗಲ್ಲ. ನೀವೇ ನೋಡಲಿಲ್ಲವೆ? ತೋಟವಿದೆ. ಋಷಿಗಳಿಗೂ ಮನಸ್ಸಾಗಿ ಬಿಡಬೇಕು-ಹಾಗಿದ್ದಾಳೆ. ಮತ್ತೆಲ್ಲಿ ನೀವು ನಾನು ಅಂದ ಸುಳ್ಳನ್ನು ಬಯಲು ಮಾಡಿಬಿಡುತ್ತೀರೋ ಎಂದು ಕಂಗಾಲಾಗಿದ್ದೆ. ಒಪ್ಪಿಗೆಯಾಯಿತು ತಾನೆ? ಈ ಪುಟ್ಟ ಸ್ನೇಹಕ್ಕೆ ಏನನ್ನಾದರೂ ಮಾಡುವವ. ಪರೋಪಕಾರಿ ಪುಟ್ಟ ಎಂಬೋದು ನನ್ನ ಬಿರುದು” ಎಂದು ನಗುತ್ತ ಬೆನ್ನು ತಟ್ಟಿದ.

ಗದ್ದೆ ದಾಟಿ, ಬೇಲಿ ದಾಟಿ, ಸಾರ ಹಾಯ್ದು, ಓಣಿಯಲ್ಲಿ ನಡೆದು ಮತ್ತೆ ಜಾತ್ರೆಯ ಗದ್ದಲಕ್ಕೆ. ತೇರಿನ ಸುತ್ತ ಜನ. ಸೋಡದಂಗಡಿಯ ಸುತ್ತ ಜನ. ಮಂಗನನ್ನು ಕುಣಿಸುವವನ ಸುತ್ತ ಜನ. ಮಕ್ಕಳ ಪೀಪಿ. ಬೆಲೂನು. ಈ ನಡುವೆ ಒಬ್ಬ ಬೇತಾಳ, ಪಿಶಾಚಿ. ಡಂಗುರ ಸಾರುತ್ತ ಒಬ್ಬ ಜನಸಂದಣಿಯ ನಡುವೆ ನಿಂತು ಕೂಗಿ ಕೂಗಿ ಹೇಳಿದ : ’ಶಿವಮೊಗ್ಗೆಯಲ್ಲಿ ಪ್ಲೇಗು ಮಾರಿಖಾಹಿಲೆ: : ಶಿವಮೊಗ್ಗೆಗೆ ಹೋಗೋರು ಇದ್ದರೆ ತೀರ್ಥಹಳ್ಳೀಲಿ ಇನಾಕ್ಯುಲೇಷ ಮಾಡಿಸಿಕೋಬೇಕು; ಮುನಿಸಿಪಾಲಿಟಿಯಿಂದ ಈ ಎಚ್ಚರಿಕೆ’. ಜನ ಕುತೂಹಲದಿಂದ ಕೇಳಿ ಮತ್ತೆ ಸೋಡ ಕುಡಿದರು. ಮಂಗನ ಕುಣಿತಕ್ಕೆ ಗಹಗಹಿಸಿ ನಕ್ಕರು. ಒಬ್ಬ ಉರ್ದು-ಕನ್ನಡದಲ್ಲಿ ಮಾತಾಡುವ ದ್ವಿಭಾಷಾಚತುರ ನೆರೆದಿದ್ದವರಿಗೆ ಮದ್ದನ್ನು ಮಾರುತ್ತಿದ್ದ : “ಬರೆ ಒಂದಾಣೆ, ಏP ಆಣಾ ಏP ಆಣಾ. ಹೊಟ್ಟೆ ನೋವಿಗೆ, ಕಿವಿನೋವಿಗೆ, ಬಹು ಮೂತ್ರಕ್ಕೆ, ಕಾಲುವಾತಕ್ಕೆ, ಮಕ್ಕಳ ಖಾಹಿಲೆಗೆ, ಮುಟ್ಟಿನ ದೋಷಕ್ಕೆ, ಕಜ್ಜಿಗೆ, ಸೀತ ಜ್ವರಕ್ಕೆ ಈ ಮಾತ್ರೆ. ಮಲೆಯಾಳಿ ಪಂಡಿತರು ಮಂತ್ರಿಸಿ ಮಾಡಿದ ಈ ಮಾತ್ರೆ ಕೇವಲ ಒಂದಾಣೆ. ಏP ಆಣಾ ಏP ಆಣಾ…” ಬೊಂಬಾಯಿ ಪೆಟ್ಟಿಗೆಯವ ಕುಣಿಯುತ್ತಿದ್ದ. “ತಿರುಪತಿ ತಿಮ್ಮಪ್ಪ ನೋಡು! ಬೊಂಬಾಯಿ ಸೂಳೆ ನೋಡು.” ಮೇಲೆ ಮರದ ರೆಂಬೆಯೊಂದಕ್ಕೆ ಮತ್ತು ಕೆಳಗೆ ನೆಲಕ್ಕೆ ಬಿಗಿದಿದ್ದ ದಪ್ಪನೆಯ ಮಿಣಿಯ ಇಳಿಜಾರಿನಲ್ಲೊಬ್ಬದೊಂಬ ಜರ್ರನೆ ಜಾರಿಬಿಟ್ಟು ನಿಂತು, ಸಲಾಮು ಮಾಡಿದ. ಬೆಲೂನನ್ನು ಬೇಡಿದ ಒಬ್ಬ ಹುಡುಗನನ್ನ ತಾಯಿ ಹೊಡೆದಳು. ಹುಡುಗ ಅತ್ತ. ಕಾಫಿ ಹೋಟಲಿನಿಂದ ಗ್ರಾಮಾಫೋ ಹಾಡು. ಬ್ಯಾರಿಯ ಅಂಗಡಿಯಲ್ಲಿ ಬಣ್ಣಬಣ್ಣದ ಮಿಠಾಯಿ. ಗೌಡರ, ಹೆಗ್ಗಡತಿಯರ ರಾಗವಾದ ಮಾತು. ತೇರಿನ ಮೇಲೆ ಬಡಬಡ ಮಂತ್ರ. ಸ್ಮಾರ್ತ ಬ್ರಾಹ್ಮಣರ ವಟವಟ ಮಾತು. ಈಗ ಇಲ್ಲಿ ಏತನ್ಮಧ್ಯೆ ನಿಶ್ಚಯಿಸಬೇಕು. ತಾನು ಇಪ್ಪತ್ತೆದು ವರ್ಷದ ಸಂಸ್ಕಾರವನ್ನು ಬಿಟ್ಟು ಈ ಲೋಕದವನಾಗಿಬಿಡುವ ನಿರ್ಧಾರ ಮಾಡಬೇಕು. ಇಲ್ಲ. ಮೊದಲು ನಾರಣಪ್ಪನ ಶವಸಂಸ್ಕಾರವಾಗಬೇಕು. ಆಮೇಲೆ ನಿಶ್ಚಯ. ಗುರುಗಳ ಅಪ್ಪಣೆ ಪಡೆದು ಇವತ್ತು ಗರುಡ ಲಕ್ಷ್ಮಣರು ಬಂದಿರುತ್ತಾರೆ. ಗುರುಗಳು ಬೇಡವೆಂದಿದ್ದರೆ ನಾನೇನು ಹೇಳಬೇಕು. ಮತ್ತದೇ ಸಂಕಟ.

ದೇವಸ್ಥಾನದ ಸಮೀಪದಲ್ಲಿ ನಿಂತರು. ಕುರುಡನೊಬ್ಬ ಶ್ರುತಿಪೆಟ್ಟಿಗೆ ಹಿಡಿದು ’ಹೇಗೆ ಮೆಚ್ಚಿಸಲು ಅರ್ಚಿಸಲಿ ನಿನ್ನ’ ಎಂದು ದಾಸರ ಪದವನ್ನು ಹಾಡುತ್ತಿದ್ದ. ಪುಟ್ಟ ಅವನ ತಟ್ಟೆಗೆ ಬಿಲ್ಲೆ ಹಾಕಿದ್ದನ್ನು ಕಂಡು, ಮೋಟು ಕೆಕಾಲಿನ ಇನ್ನೊಬ್ಬ ಭಿಕ್ಷುಕ ತೆವಳುತ್ತ ಬಂದು ಮೊಂಡುಕೆಯನ್ನು ಆಡಿಸುತ್ತ ’ಕೆಕಾಲಿಲ್ಲದವ’, ’ಕೆಕಾಲಿಲ್ಲದವ’ ಎಂದು ಗೋಗರೆದು, ಅಂಗಾತ ಮಲಗಿ, ಕಾಲೆತ್ತಿ ಕೆಯೆತ್ತಿ ಬಡಿದುಕೊಳ್ಳುತ್ತ, ಬೆರಳುಗಳು ಕೊಳೆತು ಗುಜ್ಜಾದ ಜಾಗಗಳನ್ನು ಪ್ರದರ್ಶಿಸಿದ. ಪ್ರಾಣೇಶಾಚಾರ್ಯರಿಗೆ ತೊನ್ನಿನಲ್ಲಿ ಕರಗಿಹೋಗುತ್ತಿದ್ದ ದೇಹವನ್ನು ಕಂಡು ನಾರಣಪ್ಪನ ಸಂಸ್ಕಾರವಿಲ್ಲದ ಕೊಳೆಯುವ ಹೆಣ ಮರುಕಳಿಸಿತು. ಪುಟ್ಟ ಇನ್ನೊಂದು ಬಿಲ್ಲೆಯೊಗೆದ. ಇನ್ನಷ್ಟು ದೇಹಗಳು ಮಗುಚುತ್ತ ತೆವಳುತ್ತ ಹೊಟ್ಟೆ ಹೊಡೆದುಕೊಳ್ಳುತ್ತ ಬಾಯಿ ಬಡಿದುಕೊಳ್ಳುತ್ತ ನುಗ್ಗಿ ಬಂದವು. ’ಹೋಗುವ, ಹೋಗುವ’ ಎಂದರು ಆಚಾರ್ಯರು.

“ನೀವು ಹೋಗಿ ಊಟ ಮಾಡಿ ಬನ್ನಿ” ಎಂದ ಪುಟ್ಟ.
“ನೀನೂ ಬಾ” ಎಂದರು ಪ್ರಾಣೇಶಾಚಾರ್ಯರು. ಥಟ್ಟನೇ ಅವರಿಗೆ ಜೊತೆಯಲ್ಲೊಬ್ಬನಿಲ್ಲದೆ ದೇವಸ್ಥಾನದ ಪ್ರಾಂಗಣದಲ್ಲಿ ಊಟಕ್ಕೆ ಕೂತ ಬ್ರಾಹ್ಮಣರ ಕಣ್ಣಿಗೆ ಬೀಳಲು ದಿಗಿಲಾಯಿತು. ಜೊತೆಗೆ ಪುಟ್ಟನಿಲ್ಲದೆ ಕದಲಲಾರೆ ಎನ್ನಿಸಿತು. ಹೀಗೇ ಒಂಟಿಯಾಗಿರಲಾರೆ ಎಂದೆನ್ನಿಸಿದ್ದೆ ಇಲ್ಲ ಅವರಿಗೆ ಈ ಮುಂಚೆ.
“ಒಳ್ಳೆ ಹೇಳುತ್ತೀರಿ. ಮಾಲೇರರವ ನಾನೆಂಬುದನ್ನು ಮರತೇಬಿಟ್ಟಿರ” ಎಂದ ಪುಟ್ಟ ಅದಕ್ಕೆ.
“ಚಿಂತೆಯಿಲ್ಲ, ಬಾ” ಎಂದರು.

“ಹಾಸ್ಯ ಮಾಡುತ್ತೀರೊ ಹೇಗೆ? ಈ ಮೇಳಿಗೆ ತುಂಬ ನನ್ನ ಪರಿಚಯದವರು ಮಾರಾಯರೆ. ಇಲ್ಲವಾದರೆ ಒಂದು ಕೆನೋಡಿಬಿಡುತ್ತಿದ್ದೆ. ಓಂii, ನಾನು ಇದನ್ನ ಮಾಡಿದ್ದಿಲ್ಲವೆಂದುಕೊಳ್ಳಬೇಡಿ. ಉಡುಪಿಯಲ್ಲಿ ಚೌಕಿಯ ಊಟಮಾಡಿದ್ದುಂಟು. ಅಲ್ಲಿ ಕೇಳೋವರು ಯಾರು? ಓಂii, ಸೋನೆಗಾರನ ಹುಡುಗನೊಬ್ಬ ಸುಳ್ಳು ಹೇಳಿ ಮಠದಲ್ಲಿ ಕೆಲಸಕ್ಕೆ ಸೇರಿದ್ದು ಗೊತ್ತಲ್ಲವೆ ನಿಮಗೆ. ಹಾಗೆ ನೋಡಿದರೆ ನಮಗೇನು ಜನಿವಾರವಿಲ್ಲವೆ? ಮಾತಿಗೆ ಹೇಳಿದೆ ಅಷ್ಟೆ. ನಿಮ್ಮ ಜೊತೆ ಊಟಮಾಡುವಷ್ಟು ಸೊಕ್ಕಿನವನಲ್ಲಪ್ಪ ನಾನು. ನೀವು ಹೋಗಿಬನ್ನಿ. ನಾನು ಇಲ್ಲೇ ಕಾದಿರುವೆ. ”
*****
ಮುಂದುವರೆಯುವುದು

ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.