ದಿಲ್ಲಿಯಲ್ಲಿ ಕ್ಯಾಬರಿ

ದಿಲ್ಲಿಯ ನೋಡಿರೇ,
ಬಾರಿನ ಏರಿಯ ಮೇಲೆ ಹಾರಿಹಾರಿ ಕುಣಿವ
ದಿಲ್ಲಿಯೆಂಬ ಕ್ಯಾಬರಿಯ ನೋಡಿರೇ,
ಭಾರತ ಭಾಗ್ಯವಿಧಾತನ
ಸೌಭಾಗ್ಯವತಿಯ ನೋಡಿರೇ,

ವಿದೇಶದ ದೀಬೆಸ್ಟಿನಿಂದ ವಮುದಿ
ಮುಚ್ಚಿಕೊಂಡು, ಹದಿ ಹರೆಯದ
ಬೆದೆ ಅಭಿನಯಿಸುವ
ಗೋಲಮಾಲಿಯ ನೋಡಿರೇ,

ಬೆಲೆಯುಳ್ಳ ನಕಲಿ ನಗೆಯನ್ನ
ವಿದೇಶೀ ವಿನಿಮಯದ ಸರಬರಾಜಿನಲ್ಲಿ
ಹರಾಜು ಮಾಡುವ
ಗಾಂಧೀ ಬಜಾರಿಯ ನೋಡಿರೇ,

ಜಗತ್ತಿನೆಲ್ಲ ಕೆಮರಾಗಳಿಗೆ
ಮೋಜಿನ ಪೋಜು ಕೊಟ್ಟು
ಪೋಲಿಕಥೆ ಪಾರ್ಟಿ ಜೋಕಿನಲ್ಲಿ
ತಾಜಾಬಿಸಿ ಮಾರುವ ಹೊಯ್ಮಾಲಿಯ ನೋಡಿರೇ,

ಗಾಯದಂಥ ಬಾಯಿ ತೆಗೆದು
ಹಾಯೆಂದು ಹಾಡುತ್ತ
ಹ್ಯಾಗೆಂದರೆ ಹಾಗೆ ತತ್ವ ಜಡಿಯುತ್ತ
ನಾಲಗೆಯ ರೀಲು ಬಿಡುತ್ತ
ಅತ್ತ ಸ್ಲಮ್ಮಿಗರಿಗೂ ಇತ್ತ ಬಿರ್‍ಲಾರಿಗೂ
ಕೈತಟ್ಟಿ ಅಂಗೈಯೊಳಗೆ,
ಒಬ್ಬೊಬ್ಬರಿಗೊಂದೊಂದು ಕೈಲಾಸ ತೋರುವ
ಬಾ ಚಾ ಬಜಂತ್ರಿಯ ನೋಡಿರೇ,

ನಕ್ಕರೆ ನಗುತ್ತ ಇಲ್ಲವೆ ಕುಣಿಯುತ್ತ
ಹಾಗಾದರೊಂದು ಪರಿ ಹೀಗಾದರೊಂದು ಪರಿ
ತುರಿಸಿ ಕೆರೆದದ್ದನ್ನ, ಲಾಗ ಹಾಕಿದ್ದನ್ನ
ಚರಿತ್ರೆ ಮಾಡುತ್ತ ಮೊಗಲಾಯಿ ದರ್ಬಾರು
ಮೆರೆವ ಮಾರಾಣಿಯ ನೋಡಿರೇ,

ಹೀಗೆಯೇ ಕುಣಿಯುತ್ತ ಕುಣಿಯುತ್ತ
ಪಿಟ್ಟೆನ್ನಿಸಿ ಕಟ್ಟಿದ ಕಾಚದ
ಸೊಂಟದ ಸೊನ್ನೆಯನ್ನೆತ್ತಿ
ಗಿ ಆಕಾರದಲ್ಲಿ ಕಾಲೆತ್ತಿ
‘ಖುಷಿಗಳ ಪ,ಪು ಮಾಡುತ್ತೇನೆ ಬಾ ರಾಜಾ
ಕಿಡಿ ತಾಗಿಸಿ ನೋಡು ಸಿಡಿಯುವ ಮಜಾ”
ಎಂದು ಕೂತವರ ಕರೆದರೆ, ಅರೆ ಅರೇ
ಎಲ್ಲರೂ ಸುಮ್ಮನಾಗಿದ್ದಾಗೊಬ್ಬ ಒರಟು ಆಸಾಮಿ
ಬಂದು ಉರಿವ ಸಿಗರೇಟನ್ನ ಹೊಕ್ಕುಳಲ್ಲೂರಿದರೆ,
ಹೊಟ್ಟೆ ಧಡಾರೆನೆ ಸಿಡಿದು, ಕರುಳು ಹೊರಬಂದು
ಒದ್ದಾಡುತ್ತಿದ್ದರೆ ಕೂತವರ್‍ಯಾರೂ ಸಮೀಪ ಬರದೆ
ನಾನು ಉಧೋ ಉಧೋ ತಾಯಿ ಭಾರತಾಂಬೀ ಎಂದು
ಕಿರುಚಿ ಅಳುತ್ತ ಹತ್ತು ರೂಪಾಯಿ ಕೊಡಹೋದರೆ
ಯಾರೋ ನನ್ನನ್ನೆತ್ತಿ
ಬಾರಿನಿಂದ ಹೊರಗೊಯ್ದರು-

ಅವಳ ಗತಿ ಏನಾಯ್ತು ನೋಡಿರೇ…
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.