ನಶ್ಯ

ನಶ್ಯದಲ್ಲಿ ನಾನಾ ನಮೂನೆಗಳಿವೆ.
ಬಣ್ಣ, ದರ, ತರತಮ ಘಮಘಮ
ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ-
ಮದ್ರಾಸಿನಾರ್ಮುಗಂ ನಶ್ಯ,
ಬೆಂಗ್ಳೂರು ಮಗಳಗೌರಿ ನಶ್ಯ,
ಹಳ್ಳಿಹಳ್ಳಿಯ ದೇಶೀನಶ್ಯ, ಕೆಲವರಿಗಂತು
ಪ್ಯಾರಿಸ್, ಕೊನೇಪಕ್ಷ ಲಂಡನ್
ಪಿಸ್ತೂಲ್ ಛಾಪಿನ ನಶ್ಯವಾದರೂ ಅವಶ್ಯ.

ಅವರವರ ಕಸಬು ಅಂತಸ್ತು
ಸ್ಟೇಟಸ್ಸಿಗನುಗುಣವಾಗಿ ಅವರವರ ಬ್ರ್ಯಾಂಡು.
ಅದಕ್ಕೆ ತಕ್ಕ, ಹಸಿ, ಬಿಸಿ,
ತನಿ ಬೆಚ್ಚ, ಉಗುರು ಬೆಚ್ಚಗಿನ ಸುಖ
ಶೀತೋಷ್ಣ ಪರಿಣಾಮಗಳು.

ಒಂದೊಂದು ಬ್ರ್ಯಾಂಡಿನವರಿಗೆ ಒಂದೊಂದು
ಕುಲಗೋತ್ರ ಜಾತಿವರ್ಣ ಮತಗಳುಂಟು,
ನಶ್ಯದ ನಡಾವಳಿಯಲ್ಲಿ ಭೇದವುಂಟು.
ನಿಮಗಿಷ್ಟು ತಿಳಿದಿರಲಿ ಸಾಕು:
ಒಂದು ಬ್ರ್ಯಾಂಡಿಗೂ ಇನ್ನೊಂದಕ್ಕೂ ನೀರಿನ ಬಳಕೆಯಿಲ್ಲ,
ಹೆಣ್ಣುಗಂಡಿನ ಸಂಬಂಧವಂತು ಖಂಡಿತಾ ಇಲ್ಲ.

ಕೆಲವರು ಸೇದುತ್ತಾರೆ; ಕೆಲವರು ಹಾಕಿಕೊಳ್ಳುತ್ತಾರೆ.
ಕೆಲವರು ಮುದ್ದಾಂ ಭರ್ತಿಮಾಡಿಕೊಂಬರು,
ಸರಿಗಮದ ಸಿಂಫನಿಯೊಳೇರಿಸಿಕೊಂಬವರು ಕೆಲವರು.

ಅದೊಂದು ಬಗೆಯ ನಶ್ಯಕ್ಕೆ
(ಹೆಸರು ನೆನಪಿಲ್ಲ)
ಕೆಲ ಮುದುಕರ ಪಂಚೇಂದ್ರಿಯ ಬೆಚ್ಚಗಾಗಿ
ಹನುಮಾನ್ ಚೆಡ್ಡಿ ಹಾಕಿ ಫುಟ್‌ಬಾಲ್‌ನಾಡಿದಂತೆ,
ಸರಿಕ ಮುದುಕಿಯರು ಷೋಡಶಿಯರಾಗಿ
ಹಸ್ತಾಕ್ಷರಕ್ಕೆ ಸುತ್ತುವರಿದಂತೆ
ಕನಸಾಗುವುದಂತೆ!
ಈ ನಶ್ಯದ ವ್ಯವಹಾರ ರಹಸ್ಯವಂತೆ!

ಇನ್ನು ಕೆಲ ಭಯಂಕರರಿದ್ದಾರೆ:
ಆ ಮಾತು ಈ ಮಾತು, ಮಾತು ಮಾತಿನ ಮದ್ಯೆ
ಸುತ್ತ ಕೂತವರಿಗೆ ಗೊತ್ತಾಗದಂತೆ
ಡಬ್ಬಿಯ ತೂತಿಗೆ ಬೆರಳು ಸೇರಿಸಿ
ನಿಧನಿಧಾನ ನಿಮ್ಮೆದುರಿಗೊಂದು ಸವಾಲೆಸೆದು,
ಎಳೆಯುತ್ತಾರೆ ಜುರುಕಿ;
ಆಹ! ಬಯಲಾಯಿತೋ ಪರಮಸತ್ಯದ
ಬುರುಕಿ!
ದೇಶೀ ಅರುಂಧತಿಯರೆಲ್ಲ ನಗ್ನರಾಗಿ
ಕಾಕಟೇಲ್ ಸುರಕೊಂಡು ಲಂಡನ್ ಹೋಟಲಲಿ
ಕ್ಯಾಬರಿಸುವರು!
ಇದು ಸ್ವಲ್ಪ ತುಟ್ಟೀ ನಶ್ಯ,

ಕೆಲವರು,
ಮಿದ್ದಿ, ಹದಮಾಡಿ ಬೆವರಲ್ಲದ್ದಿ ಮೂಗಿನಲ್ಲಿ
ಮೊಗಮ್ಮಾಗಿ ಗಮ್ಮಂತ ತುಂಬಿ
ಚಿಟಿಕೆ ಹೊಡೆದರೋ
ಹಠಯೋಗದಲ್ಲಿ ಸಟ್ಟಂತ ಉಸಿರೇರಿಸಿ,
ಬ್ರಾಹ್ಮರಂಧ್ರದ ಪಟಲ ಛಟ್ಟಂತ ಸಿಡಿದು
ಕುಂಡಲನಿಯ ಬುಡಬೆದರಿ
ಷಟ್‌ಚಕ್ರ್ದ ಸಹಸ್ರಾರು ದಳದ
ಹೃದಯಾರವಿಂದವರಳಿ
ನಶ್ಯದ ಡಬ್ಬಿಯಷ್ಟು ಸ್ಪಷ್ಟವಾಗಿ
ಜೀವಾತ್ಮ ಪರಮಾತ್ಮ ನಡುವಿನಾತ್ಮಕ ಟೊಂಕದಾತ್ಮಗಳೆಲ್ಲ
ಕಾಣಿಸುತ್ತವಂತೆ!
ಇದೇ ಶಾತ್ಶತ ಸತ್ಯ
ಇದಕ್ಕೆ ಸ್ಪಷಲ್ ನಶ್ಯ ಅಗತ್ಯ.

ನನಗೆ ಮಾತ್ರ
ನಶ್ಯ ಏರಿಸಿದಾಗ ಟಸಪಸ ಹತ್ತೆಂಟು
ಸೀ ಸೀ ಸೀ ಸೀನು ಬಂದು
ಮುಖ ಒದ್ದೆಯಾಗಿ
ಕಣ್ಣಲ್ಲಿ ನೀರು ಬರುತ್ತದೆ!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.