ಶಾಮಣ್ಣ – ೨

ದ್ವಿತೀಯಾಶ್ವಾಸಂ

ಕಾಲ ಅನಂತವಾಹಿನಿ. ಅದು ಮುಂದು ಮುಂದಕ್ಕೆ ಪ್ರವಹಿಸುತ್ತಲೇ ಇರುತ್ತದೆ. ಬ್ರಹ್ಮಾಂಡದ ಯಾವ ಶಕ್ತಿಗೂ ಅದನ್ನು ತಡೆಯುವ ಶಕ್ತಿ ಇಲ್ಲ. ಕಾಲ ಎಲ್ಲ ಒಳ್ಖೆಯದೂ ಕೆಟ್ಟದ್ದೂ ಎಲ್ಲವನ್ನು ಅರಗಿಸಿಕೊಲ್ಲುತ್ತದೆ. ಪ್ರತಿಯೊಂದು ಸಚರಾಚರ ಭೌತ ವಸ್ತುಗಳೊಳಗೆ ಸೂಕ್ತವಾದ ಬದಲಾವಣೆ ಮಾಡುತ್ತ ನಿರಂತರ ಚಲನೆ ಹೊಂದಿರುವ ಕಾಲವನ್ನು ಭೌತವಿಜ್ಞಾನಿಗಳು ಬಿಲ್ಲಿನಿಂದ ಚಿಮ್ಮಿದ ಬಾಣಕ್ಕೆ ಹೋಲಿಸಿರುವುದು ಸರಿಯಾಗಿದೆ. ಕಾಲ ಸ್ತಬ್ದವಾಗುವುದು ಆಯಾ ವ್ಯಕ್ತಿಗಳ ದೇಹದಲ್ಲಿ ಆವತ್ತಿನವರೆಗೆ ಪ್ರಾಣಪಕ್ಷಿ ವಾಸಮಾಡುತ್ತಿದ್ದು ಕೊನೆಗೊಮ್ಮೆ ಅದು ಹೇಳದೆ ಕೇಳದೆ ಪುರ್ರನೆ ಹಾರಿಹೋದೊಡನೆಯೆ, ಆದರೆ ಪ್ರಾಣಕಳೆದುಕೊಂಡ ವ್ಯಕ್ತಿಯ ಬದುಕು ಹಲವರ ಬಾಯಲ್ಲಿ ಒಂದು ಚಲನೆ ಪಡೆಯುತ್ತದೆ. ಅವನು ಹಂಗಿದ್ದ; ಹಿಂಗಿದ್ದ ಅಂತ ಮಾತಾಡಿಕೊಳ್ಳುತ್ತರೆ. ಭಾಷೆಯ ರೂಪ ಅವಧರಿಸಿ ಅವನು ಬದುಕುಳಿಯುತ್ತಾನೆ. ನಂತರ ಸತ್ತವನ ಯೊಗ್ಯತೆಗೆ ತಕ್ಕಂತೆ ಅವನ ಕಥೆಯೂ ಭೂತಕಾಲದ ದಫ್ತರು ಸೇರಿಬಿಡುತ್ತದೆ. ಆದ್ದರಿಂದ ಪ್ರಾಚೀನರು ‘ಕಾಲೋ ಅಶ್ವೋವಹತಿ’ ಎಂದು ಕಾಲವನ್ನು ನಿರಂತರವಾಗಿ ಸಂಚರಿಸುವ ಕುದುರೆಗೆ ಹೋಲಿಸಿದರು. ‘ಸಪ್ತರಶ್ಮೀ’ ಅಂತ ಅದಕ್ಕೆ ಏಳು ಕಿರಣಗಳನ್ನು ಸೃಷ್ಟಿಸಿದರು. ಸಹಸ್ರಾಕ್ಷೋ ಅಂತ ಸಾವಿರ ಕಣ್ಣುಗಳಿವೆ ಎಂದು ಹೇಳಿದರು. ಅಜರೋ ಅಂತ ಅದಕ್ಕೆ ಮುಪ್ಪಿಲ್ಲವೆಂದು ಘೋಷಿಸಿದರು. ಭೂರಿ ಶೀತಾಃ ಅಂತ ಅದರ ವೀರ್ಯಸಮೃದ್ಧಿತನಕ್ಕೆ ಪ್ರಾಮಾಣಪತ್ರ ದಯಪಾಲಿಸಿದರು. ಮತ್ತೂ ಮುಂದುವರೆದು ಕಾಲೇನ ಆಗತೇನ ಇಮಾಃ ಸರ್ವಾ ಪ್ರಜಾ ನಂದತಿ ಎಂದು ಹೇಳುವುದರ ಮೂಲಕ ದ್ವಂದಾತೀತವಾದ ಅನುಭವವನ್ನು ಕಾಲ ನೀಡುತ್ತದೆ ಎಂದು ಸಾರಿದರು. ಅದಕ್ಕೆ ದೈವಸ್ತಾನ ನೀಡಿ ಕಾಲಭೈರವ ಎಂದು ಹೆಸರಿಟ್ಟರು. ಕಾಲಭೈರವ ಉಗ್ರ ಶಾಸಕ. ಅವನಿಗೆ ಶಿಕ್ಷಿಸುವುದೂ ಗೊತ್ತು, ಶಿಕ್ಷಣ ಕೊಡುವುದೂ ಗೊತ್ತು. ಅಣಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಕಾಮ್ಯ; ಈಶತ್ವ ವಶಿತ್ವವೆಂಬುವೇ ಮೊದಲಾದವರನ್ನು ತೇದು ಕುಡಿದ ವಂಶದಿಂದ ಬಂದವನಾದ ಶಾಮಾಶಾಸ್ತ್ರಿಯ ಬದುಕನ್ನೂ, ಕಾರ್ಲಮಾರ್ಕ್ಸ್, ಏಂಗೆಲ್ಸ್, ಚೆಗುವೆರಾ ಇವರೇ ಮೊದಲಾದ ಎಡಪಂಥದವರನ್ನು ಅರೆದು ಕುಡಿದು ಅನ್ನನಾಳದಲ್ಲಿ ಪ್ರತಿಷಾಪಿಸಿಕೊಂಡಿರುವ ಕಾಂರೇಡ್ ರಘುರಾಮನ ಬದುಕನ್ನು ಹೇಗೆ ರೂಪಿಸಿದ ಎಂದು ಯೋಚಿಸುವುದು ಈ ಪೂರ್ವಾರ್ಧ ಕಥಾನಕದಲ್ಲಿ ಮುಖ್ಯ.

ಸಂಸ್ಕೃತ ಕಳೇಬರದಮೇಲೆ ಪದ್ಮಾಸನ ಹಾಕಿ ಪ್ರಾಣಾಯಾಮ, ಧ್ಯಾನ ಮಾಡುವ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಎಂಬ ಮೇಡ್ ಇನ್ ಇಂಡಿಯಾ ಅಥವಾ ಸನ್ ಆಫ್ ಇಂಡಿಯಾ ಎಂಬುವನು ಹೊಸಪೇಟೆಯ ಅಗ್ರಹಾರ ನಿವಾಸಿ ವೇದಾಂತಿ ರಾಜಗೋಪಾಲಾಚಾರ್ಯರ ಮೊಮ್ಮಗಳಾದ ವರಲಕ್ಷ್ಮಿ ಎಂಬ ಕನ್ಯಾಮಣಿಯನ್ನು ಶಾಸ್ಥ್ರೋಕ್ತವಾಗಿ ಮದುವೆ ಮಾಡಿಕೊಂಡು ಸುಖವಾಗಿ ಜೀವಿಸುತ್ತಿದ್ದ ಎಂದು ಹೇಳಿದರೆ ಮುಗಿಯುವುದಿಲ್ಲ. ಹಾಗೆಯೇ ಈ ಕಾದಂಬರಿಯ ಇನ್ನೊಂದು ಮುಖವಾದ ಕಾಮ್ರೇಡ್ ರಘುರಾಮನು ತನ್ನ ಸೋದರಮಾವ ರುದ್ರನಾಯಕನ ಏಕಮಾತ್ರ ಪುತ್ರಿ ಅನಸೂಯಾಳನ್ನು ಗಾಂಧರ್ವ ವಿವಾಹವಾಗಿ ಸುಖೀ ಜೀವನ ನಡೆಸುತ್ತಿದ್ದ ಎಂದು ಸರಳವಾಗಿ ಹೇಳಿ ಕಾದಂಬರಿಕಾರನಾದ ನಾನು ನನ್ನ ಆತ್ಮಸಾಕ್ಷಿಗಾಗಲೀ, ಓದುಗರಿಗಾಗಲೀ ಮೋಸ ಮಾಡಲಾರೆ. ಈ ಕಾಲದಲ್ಲಿ ಓದುಗರೇನು ಮುಗ್ಧರೆನ್ನುವಂತಿಲ್ಲ. ನೀವು ಲೇಖಕರಿಗಿಂತ ಜಾಣರಿರುತ್ತೀರಿ. ಲೇಖಕರಿಗೆ ಗೊತ್ತಿಲ್ಲದ ಅನೇಕ ಸಂಗತಿಗಳು ನಿಮಗೆ ಗೊತ್ತಿರುತ್ತದೆ.ಓದುವ ಪ್ರತಿಯೊಂದು ಸಂಗತಿಯನ್ನು ಬದುಕಿನ ಸಹಜ ಘಟನಾವಳಿಗಳೊಂದಿಗೆ ತಾಳೆಹಾಕಿ ನೋಡುತ್ತೀರಿ. ಸಾಹಿತ್ಯದ ಪ್ರತಿಯೊಂದು ಅಂಗೋಪಾಂಗವನ್ನು ಪರಿಪೂರ್ಣ ಸಮಾಜದ ಮಗ್ಗುಲಿರಿಸಿ ತಾಳೆಹಾಕಿ ನೋಡುತ್ತೀರಿ. ಸರಿ ಇದ್ದರೆ “ಪರವಾ ಇಲ್ಲಪಾ” ಅಂತೀರಿ. ಇಲ್ಲದಿದ್ದರೆ ಡೋಂಗಿ ಗುರುತಿಸಿ ಆ ಲೇಖಕನನ್ನು ಭೂತದ ಕೊಚ್ಚೆಗೆಸೆದು ಬಿಡುತ್ತೀರಿ. ಆದ್ದರಿಂದ ಸಮಾಜದ ಎರಡು ಭಿನ್ನ ಧೃವಗಳಂತಿರುವ ಶಾಮ ಮತ್ತು ರಘುರವರ ವಿವಾಹೋತ್ತರ ಬದುಕನ್ನು ಅತ್ಯಂತ ಸಹಜವಾಗಿ; ಪ್ರಾಮಾಣಿಕವಾಗಿ ಚಿತ್ರಿಸುವ ಅಗತ್ಯ ಮತ್ತು ಜವಾಬ್ದಾರಿ ನನಗಿದೆ. ವಿವಾಹವೆಂಬುದು ಬದುಕಿನ ಒಂದು ಅರ್ಥಪೂರ್ಣ ಆರಂಭ. ಮದುವೆಯಾಗಿ ಎಲ್ಲರೂ ಸುಖವಾಗಿದ್ದರು ಎಂದು ಹುಸಿ ಸುಳ್ಳು ಹೇಳುವ ಧೈರ್ಯ ನನಗಿಲ್ಲ. ಹಾಗೆ ಹೇಳಿಬಿಟ್ಟೆನೆಂದರೆ ಸತ್ತು ಅತ್ತ ವೈಕುಂಠದಲ್ಲೂ ಇಲ್ಲದೆ, ಇತ್ತ ನರಕದಲ್ಲೂ ಇಲ್ಲದೆ ಕೊತ್ತಲೂರಿನ ರಂಗ ಕಲಾವಿದೆಯರ ಓಣಿಯ ಪಾತಾಳ ಗಂಗೆಯ ಹುಣಸೇ ಮರದಲ್ಲಿ ಪ್ರೇತವಾಗಿ ಜೋತುಬಿದ್ದು ತೂಗಾಡುತ್ತಿರುವ ಶಾಮಾಶಾಸ್ತ್ರಿ ಎಂಬ ಬ್ರಹ್ಮ ಪಿಶಾಚಿ ಕಥೆಗಾರನಾದ ನನ್ನನ್ನು ಒಂದು ಕೈ ನೋಡಿಕೊಳ್ಳದೆ ಇರಲಾರದು. ಅದು ಅಲ್ಲದೆ ಅವರ ನನ್ನ ಖಾಸಾ ದೋಸ್ತು. ಅವನು ನನಗಿಂತ ಮೂರುವರೆ ತಿಂಗಳು ದೊಡ್ಡವನು. ಅವನೂ ನಾನೂ ಒಂದೇ ಗ್ರವುಂಡಿನಲ್ಲಿ ಆಡಿ ಬೆಳೆದವರು. ಅವನಂತೆ ನಾನೂ ಒಂದೆರಡು ಕಥೆ ಕವಿತೆ ಬರೆದು ಹಲವು ಹುಡುಗಿಯರ ಹೃದಯ ಗೆಲ್ಲಲು ವಿಫಲನಾದವನು. ವಿರಹದುರಿಯ ಶಮನಕ್ಕಾಗಿ ಕಾವ್ಯ ಕನ್ನಿಕೆಯೆಂಬ ತಿಳಿಗೊಳದಲ್ಲಿ ನಿರ್ನಾಮ ಆದವನು. ಅವನ ಬದುಕಿನ ವಿವಿದ ಅವಸ್ಥೆಗಳನ್ನು ಗಮನಿಸುತ್ತ, ಪ್ರತಿಯೊಂದು ಅವಸ್ಥೆಗೆ ಸಾಹಿತ್ಯದ ಗರಂ ಮಸಾಲೆ ಹಚ್ಚಿ ಕಥೆ ಬರೆದರೆ ಹೇಗೆ? ಕವಿತೆ ಬರೆದರೆ ಹೇಗೆ? ಕಾದಂಬರಿ ಬರೆದರೆ ಹೇಗೆ ಎಂಬ ಗೊಂದಲಕ್ಕೀಡಾದವನು. ಕೊನೆಗೆ ಏನೂ ಬರೆಯಲಾಗದೆ ಬದುಕಿನ ನಲವತ್ತು ಆಷಾಢಗಳನ್ನು ಕಳೆದವನು. ಅವನ ಬದುಕಿನ ಪ್ರತಿಯೊಂದು ಪಂಚಾಯ್ತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಾನು ನನ್ನ ಪ್ರೀತಿಯ ಹಾಗು ಅಂಜುಬುರುಕ ಗೆಳೆಯ ಶಾಮಾಶಾಸ್ತ್ರಿಯು ಮದುವೆ ಆದ ನಂತರ ಸುಖವಾಗಿದ್ದ ಎಂದು ಹೇಳಿಬಿಟ್ಟಲ್ಲಿ ಅವನು ಖಂಡಿತ ಕ್ಷಮಿಸುವುದಿಲ್ಲ. ಶೂದ್ರನಾಗಿ ಹುಟ್ಟಿರುವ, ಯಾವ ಸೂಕ್ಷ್ಮ ಸಂವೇದನೆಗಳನ್ನು ರೂಢಿಸಿಕೊಳ್ಳದೆ ಕೇವಲ ಚತುಷ್ಪಾದಿಯಂತೆ ಏನೋ ಒಂದು ನಾಲ್ಕು ಸಾಲು ಕನ್ನಡವನ್ನು ಸಲೀಸಾಗಿ ಬರೆಯಬಲ್ಲ ನಿನ್ನಂತೆ ಎಲ್ಲರೂ ಸುಖವಾಗಿದ್ದಾರೇನು? ಎಂದು ಅವನ ಪ್ರೇತವೇ ಒಂದು ದಿನ ನನ್ನ ಮನೆ ಬಾಗಿಲಿಗೆ ಬಂದು ಟಪ್ ಟಪ್ ಎಂದು ಕದ ತಟ್ಟಿಬಿಡಬಹುದು. ಇನ್ನೊಂದು ತಮಗ ಅರಿಕೆ ಮಾಡಿಕೊಳ್ಳಬೇಕಿರುವ ಸಂಗತಿ ಎಂದರೆ ಅವನ ಹೆಂಡತಿ ನನ್ನ ಪಿತಾಶ್ರೀಗೆ ಮನೆ ಮಾರಿ ಎಲ್ಲಿಗೋ ಹೋಗಿ ಒಂದು ಅರ್ಥವಾಗದ ಖಾಯಿಲೆಯಿಂದ ನರಳುತ್ತಿದ್ದಳೆಂಬುದು. ಬ್ರಾಹ್ಮಣರು ವಾಸವಾಗಿದ್ದ ಮತ್ತು ಬ್ರಾಹ್ಮಣ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿರುವೀ ಮನೆಯ ವಾಸ್ತುವಿನ ಬಗ್ಗೆ ತಲೆ ಕೆಡೆಸಿಕೊಂಡು ಹತ್ತಾರು ವಾಸ್ತು ಶಾಸ್ತ್ರಿಗಳು ಮನೆಗಳಿಗಡ್ಡಾಡಿ ಈ ಸದರೀ ಮನೇಲಿರೋ ಯಾರೂ ಉದ್ದಾರವಾಗುವುದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಬಂದು ಒಂದು ಪುಲ್ಲಿಂಗ ಜಾತಿಯ ಸಂತಾನ ಹೀನ ನಮ್ಮಜ್ಜಿ ಎಲ್ಲ ಪ್ರವರ ವಿವರಿಸಿ “ತಗೋಬ್ಯಾಡಾಂದ್ರೆ ತಗೋಬ್ಯಾಡ”ವೆಂದು ಪಟ್ಟು ಹಿಡಿದು ಕೂತಿದ್ದುಂಟು. ಶೃಂಗೇರಿಗೆ ಹೋಗಿ ಕೇಶ ತೆಗೆಸಿಕೊಂಡು, ನೂಲಿನ ಸೀರೆ ಉಟ್ಟು ಅಂತರ್ಧಾನಗೊಂಡ ಪತಿ ಶಾಮನ ಫೋಟೋದೆದರು ಕೂತು ‘ನನ್ ಬಾಯಿಗೆ ಮಣ್ಣು ಹಾಕಿ ಹೋದೆಯಲ್ಲೋ, ನಿನಗೆ ಕೈಹಿಡಿಯೋಕೆ ನಾನು ಯಾವ ಜನುಮದಲ್ಲಿ ಯಾವ ಪಾಪ ಮಾಡಿದ್ದೆನೋ ಎಂದು ಬಾಯಿಬಾಯಿ ಬಡಿದುಕೊಳ್ಳುವಾಗ್ಗೆ ಭೂತ ಬಿಡಿಸಲೆಂದು ನಮ್ಮಜ್ಜಿ ಹೋಗಿ ನಿಂತಿದ್ದಳು. ಅದೇ ಹೊತ್ತಿಗೆ ವ್ಯಾಸ ಪೀಠದಲ್ಲಿದ್ದ ಕಿಲುಬು ಹೊತ್ತಿಗೆಯಲ್ಲಿ ಕಳೆದುಕೊಂಡಿದ್ದ ಕಣ್ಣುಗಳನ್ನು ಭೂತಗನ್ನಡಿಗಳ ಸಹಾಯದಿಂದ ಹುಡುಕಾಡುತ್ತಿದ್ದ ಜರ್ಝರಿತ ದೇಹದ ಅಲುಮೇಲಮ್ಮ “ಏನೇ ಬಾಯಿಗೆ ಬಂದಂತೆ ಮಾತಾಡ್ತಿ. ರಾಮ ರಾಮ ಸತ್ತಿರೋ ತನ್ನ ಗಂಡನ್ನ ಬಾಯಿಗೆ ಬಂದಂಗ ಬಯ್ತಿದಾಳಲ್ಲ ದೇವರೇ!” ಎಂದು ದಿಗ್ಗನೆ ಎದ್ದು ಊರುಗೋಲಿನ ಆಸರೆಯಲ್ಲಿ ಪಡಸಾಲೆಗೆ ಬಂದು, ಅಟವಾಳಿಯ ಮುಖ್ಯ ಕಂಭಕ್ಕಾತು ನಿಂತಿದ್ದ ಕೆದರು ತಲೆಯ ನಮ್ಮಜ್ಜಿ ಕಡೆ ಕಣ್ಣುಹಾಯಿಸದೇ (ಅವಿದ್ದರೆ ತಾನೆ) ಜ್ಞಾಪಕ ಬಲದಿಂದ ಸೀದ ಖಾಲಿ ಹಣೆ ಬಡಿದುಕೊಳ್ಳಿತ್ತಿರ್ದ ಸೊಸೆ ಬಳಿಗೆ ಸಾರ್ದುದು ಹೆಂಗಿತ್ತಪ್ಪ ಅಂದರೆ ಹಗಲುಗುರುಡಿ ಗಾಂಧಾರಿ ಕುರುಕ್ಷೇತ್ರದ ರಣರಂಗದಲ್ಲಿ ‘ಸತ್ತ ಮಗಂದಿರ್ ಸತ್ತರ್ ನೀನೆಮಗುಳ್ಳೊಡೆ’ಎಂದು ಕೂಗುತ್ತ ಬಂದಂತಿತ್ತು. ಆಕೆ ಒಂದೊಂದು ಹೆಜ್ಜೆ ಇಡುತ್ತಿದ್ದುದು ಹೇಗಿತ್ತಪ್ಪ ಅಂದರೆ ಜಲಮಹಾನುಭಾವ ನಾಭಿಯೊಳಗುಳಿದ ಕಮಲ ಒದ್ದಾಡುವಂತಿತ್ತು. ತನ್ನ ವೃದ್ದಾಪ್ಯದ ಬದುಕಿನ ದುರ್ಬಲ ಊರುಗೋಲಿನಂತಳಿದುಳಿದಿರುವ ಕೇಶವಿಹೀನೆ ವಿಧವೆ ಸೊಸೆಯನ್ನು ಸ್ವೀಕರಿಸಲಾಗದೆ; ತಿರಸ್ಕರಿಸಲಾಗದೆ, ಗಂಟಲುಗ್ರಾಣದಲ್ಲಿ ಪೇರಿಸಿಟ್ಟ ಹಲವು ಮಾತಿನ ಲಡ್ಡುಗೆಗಳಿಗೆ ದ್ವನಿರೂಪ ಕೊಡಲಾಗದೆ, ಹಾಗೆ ನಡೆಯುತ್ತ ಬಂದು ಕೋಡುಬಳೆಯ ಡಬ್ಬವನ್ನೇ ತನ್ನ ಸೊಸೆ ಎಂದು ಭಾವಿಸಿ “ವೈಕುಂಠವಾಸಿಯಾಗಿರೋ ನನ್ನ ಮಗನನ್ನು ಬೈದು ನರಕಕ್ಕೆ ಹೋಗಬೇಡ ವರಲಕ್ಶ್ಮಿ” ಎಂದು ಪರಿಪರಿಯಾಗಿ ವಿನಂತಿಸಿಕೊಂಡದ್ದುಂಟು. ಸಿಂಬಳ ಕೊರೆದೆಸೆದ ಸವಂಡನಾಗಲಿ ಶಬ್ದವೇದಿ ವಿದ್ಯಾಪಾರಂಗತಳಂತೆ ಅತ್ತೆರಡು ಹೆಜ್ಜೆ ಇರಿಸಿ, ಮಾಡಿಕೊಂಡ ಪತ್ನಿಯಾದ ನೀನು ಸರಿಯಾಗಿದ್ದಲ್ಲಿ ಅವನ್ಯಾಕೆ ಸಾಯ್ತಿದ್ದ’ ಎಂಬೊಂದು ಮಾತು ಆಡುವುದರ ಮೂಲಕ ಪರಮ ಸಾಧ್ವಿಯಾದ ವರಲಕ್ಶ್ಮಿಯ ಹೃದಯವೆಂಬ ದೇಗುಲದಲ್ಲಿ ಬಿರುಗಾಳಿ ಎಬ್ಬಿಸಿದ್ದುಂಟು. ಜಗಳವಾಡುವಾಗೆಲ್ಲ ತುರುಬು ಕಟ್ಟಿಕೊಂಡಿದ್ದರೆ (ಕಪ್ಪುಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ ದೂರದಲ್ಲಿ ಗಿರಿಯಮೇಲೆ ಇಳಿದಂತೆ ಇರುಳಾಮಾಲೆ) ಒಂದೇಟಿಗೆ ಬಿಚ್ಚಿ ಮುಖದ ಹಿಂದೆ ಪ್ರಭಾವಳಿಯಂತೆ ಇಳಿ ಬಿಟ್ಟುಕೊಂಡು ಭಲೈ ಸಾರಥಿ ನಾನು ದಾರೆಂದರೆ ಎಂದು ಗಡಗಡ ಗುಡುಗುತ್ತಿದ್ದಳು. ಕಪ್ಪುಗುರುಳು ಇಳಿಬಿಟ್ಟಿದ್ದರೆ ಅದರೊಳಗಿದು ಸಿಗಿಸಿ ಇದರೊಳಗದು ಸಿಗಿಸಿ ‘ಬರ್ರಲೆ ಒಂದು ಕೈ ನೋಡ್ಕೋತೀನಿ’ ಎಂದು ಎದುರಾಳಿಗೆ ಸವಾಲ್ ಹಾಕುತ್ತಿದ್ದಳು. ಕಟ್ಟಲೆಂದೋ ಬಿಚ್ಚಲೆಂದೋ ಕೈಗಳನ್ನು ಹಿಂದಕ್ಕೆ ಹಾಕಿದಳು. ಆದರೆ ಅವು ಅಲ್ಲಿದ್ದರೆ ತಾನೆ! ತಾನೆ ಮುಂಡೆಯಾಗಿರುವುದು, ಶೃಂಗೇರಿಯ ಹದಿಹರೆಯದ ಚಿಗುರುಮೀಸೆಯ ಹಜಾಮನ ಅಮೃತಹಸ್ತದಿಂದ ಮಂಡೆ ತೆಗೆದಿರುವುದು ಆ ಕ್ಷಣ ನೆನಪಾಯಿತು. ರೋಮಾಂಚನ, ಕೋಪ ಇವೆರಡೂ ಒಟ್ಟೊಟ್ಟಿಗೆ ಬಂದವು. ದಿಗ್ಗನೆ ಎದ್ದು, “ಯಾರ್ಯಾರ್ನೋ ಬಿಟ್ಟು ಯಾರ ಯಾರ್ನೋ ಕರಕೊಳ್ತಾನಲ್ಲ ಆ ದೇವ್ರು” ಅಂತ ಗೊಣಗಿದಳು. “ನಾನ್ಯಾಕೆ ನರಕಕ್ಕೆ ಹೋಗ್ಲಿ ಅತ್ತೆಮ್ಮ … ಸಾಯ್ಲಿ ಅಂತ ನಾನೇನಾದ್ರು ನನ್ನ ಪತಿ ದೇವ್ರಿಗೆ ವಿಷಕೊಟ್ಟನೇನು? ನನ್ನಂಥ ಪರಮ ಪತಿವ್ರತೆಯಾದ ಹೆಂಡತೀನ ಇಟ್ಟುಕೊಂಡು ಮಾಡಬಾರದ್ದನ್ನ ಮಾಡಿ ಪ್ರತಿ ದಿನ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ರಲ್ಲ … ಆ ನಿನ್ ಮಗ್ನೀಗೆ ಬುದ್ಧಿಹೇಳಬೇಕಾಗಿತ್ತು; ಆಗ ನಿಮ್ಮ ನಾಲಿಗೆ ಬಿದ್ದು ಹೋಗಿತ್ತೇನು?” ಎಂದು ಅಶ್ರುಧಾರೆಯಿಂದ ವಕ್ಷಸ್ಥಳಕ್ಕೆ ಅಭಿಷೇಕ ಮಾಡಿದಳು. ಇದಕ್ಕೆ ಏನು ಉತ್ತರ ಕೊಡಬೇಕೆಂದು ವೃದ್ಧೆಗೆ ಆ ಕ್ಷಣ ಹೊಳೆಯಲಿಲ್ಲ. ಆದರೆ ಆಕಾರವಿಲ್ಲದ ಇಟ್ಟಿಗೆಗಳಿಂದಲೇ ಸುಂದರ ಗೋಡೆ ಕಟ್ಟುವ ನುರಿತ ಬೇಲ್ದಾರನಂತೆ ಮುಖರಹಿತ ಮಾತುಗಳನ್ನೇ ಕುಪ್ಪೆ ಮಾಡಿಕೊಂಡು “ನೀನ್ಯಾವ ಪತಿವ್ರತೆಯೇ … ಒಂದುದಿನವಾದರೂ ಕೈ ಹಿಡಿದ ಗಂಡನ ಯೋಗಕ್ಷೇಮ ವಿಚಾರಿಸಿದ್ದುಂಟಾ…. ಸತ್ತೆಯಾ ಬದುಕಿದಿಯಾ ಎಂದು ಕೇಳಿದ್ದುಂಟಾ … ಇರೋವಷ್ಟು ಕಾಲ ಅವನನ್ನು ಉರಿಸಿಕೊಂಡು ತಿಂದೆಯಲ್ಲೇ …” ಎಂದು ದೃಷ್ಟಾಂತಗಳ ಸರಮಾಲೆಯನ್ನೇ ಪೋಣಿಸಿದಳು. ಅತ್ತೆಯಾಡಿದ ಮಾತುಗಳನ್ನು ಕೇಳಿ ಆ ನಲವತ್ತರಾಸುಪಾಸಿನ ಆಕೆಯ ಹೃದಯದಲ್ಲೆದ್ದ ಚಂಡ ಮಾರುತ ದಾವಾನಲದ ರೂಪ ಪಡೆಯಿತು. “ಅಯ್ಯಯ್ಯೊ … ಈ ಮುದುಕಿ ಬಾಯಿಗೆ ಬಂದಂಗೆ ಮಾತಾಡ್ತಿದೆಯಲ್ಲ್ರಪ್ಪೋ! ನಾನ್ಯಾವ ಕರ್ಮ ಮಾಡಿದ್ದೆನೋ ಇಂಥ ಅತ್ತೆ ಪಡೆಯೋಕೆ! ನಾನ್ಯಾವ ಪಾಪ ಮಾಡಿದ್ದೆನೋ ಈ ಮನೆ ತುಂಬಿಕೊಳ್ಳೋಕೆ! ಈ ಹೊಟ್ಟೇಲಿ ಅವೊಂದೆರಡು ಹುಟ್ಟಿರದಿದ್ದಲ್ಲಿ ಅವತ್ತೇ ತುಂಗಾನದೀಲಿ ಬಿದ್ದು ಆತ್ಮಹತ್ಯೆ ಮಾಡ್ಕೊಳ್ತಿದ್ದೆ … ಇನ್ನೂ ಏನು ಅನುಭವಿಸೋದಿದೆಯೋ ಈ ಅತ್ತೆ ಎಂಬ ರಾಕ್ಷಸಿ ಕೈಯಲ್ಲಿ .. ಓಹ್! ತಿರುಪತಿ ವೆಂಕಟರಮಣನೇ ಈ ಕೂಡಲೆ ನನಗಾದ್ರು ಸಾವು ಕೊಡು, ಇಲ್ಲವಾದಲ್ಲಿ ಈ ಮುದುಕಿನಾದ್ರು ನಿನ್ನ ಪಾದಾರವಿಂದಕ್ಕೆ ಸೇರಿಸ್ಕೋ … ನನ್ನಂಥ ಪರಮ ಭಕ್ತೆಯ ಬದುಕಿನೊಂದಿಗೆ ಚೆಲ್ಲಾಟವಾಡೋದ್ನ ಇನ್ನಾದ್ರೂ ಸಾಕು ಮಾಡೋ ಜಗದ್ರಕ್ಷಕನೇ! ಈಕೆಯಂತೆ ನಾನೇನು ಯೌವನದಲ್ಲಿ ಗಂಡನನ್ನು ಕಳೆದುಕೊಂಡು ಚೆಲ್ಲಾಟವಾಡ್ತಿಲ್ವಲ್ಲ …” ಎಂಬಿವೇ ಮೊದಲಾದ ಮಾತುಗಳು ಮಾವಿನಗುಂಡೆ ಜಲಪಾತದಂತೆ ದುಮ್ಮಿಕ್ಕಿದವು. ಇದನ್ನೆಲ್ಲ ಕೇಳಿಸಿಕೊಂಡು ಮುದುಕಿ ರಾಮಾ …ರಾಮಾ ಅಂತ ಶ್ರವಣೇಂದ್ರಿಯಗಳ ಮೇಲೆ ಕರಕಮಲಗಳನ್ನು ಇರಿಸಿಕೊಂಡಿತು. ಈ ದುಷ್ಟೆಯಾಡಿದ ಮಾತುಗಳನ್ನು ಓಣಿಯಲ್ಲಿ ಯಾರಾದ್ರು ಕೇಳಿಸಿಕೊಂಡರೇನೋ! ಓಯ್ …ಅಂತೂ ನನ್ನ ಕಣ್ಣುಗಳನ್ನು ನುಂಗಿ ನೀರು ಕುಡಿದೆಯಾ ತುಲಸೀ ರಾಮಾಯಣವೇ … ಆಟವಾಳಿಗೆಯಲ್ಲಿ ಯಾರೋ ಅಜ್ಞಾತವ್ಯಕ್ತಿ ನಿಂತಿರುವಂತಿದೆ, ಗುರುತಿಸಲಕ್ಕಾಗುತ್ತಿಲ್ಲವಲ್ಲಾ … ನಾರಾಯಣ … ಹೀಗೆ ಯೋಚಿಸುತ್ತ ಮಂಗಳ ಗೌರಿಯಂತಿದ್ದ ವೃದ್ಧೆ ಚಾಮುಂಡಿಯಂತಾಗಿಬಿಟ್ಟಿತು. ಕೂಡಲೆ ಸೊಸೆಯ ದುರ್ಬಲ ನೂಲಿನಡುಗೆಗೆ ಕೈ ಹಾಕಿ “ಏನು ಮಾತಾಡ್ದೇಯೇ ರಾಜಗೋಪಾಲಾಚಾರಿ ಮೊಮ್ಮಗಳೇ … ನನ್ನ ಏನಂತ ತಿಳ್ಕೊಂಡೀಯಾ? ನಿನ್ನಂತೆ ನಾನೇನಾದ್ರು ಮೊಲೆ ತೊರಿಸ್ಕೊಳ್ತಾ ಅಡ್ಡಾದ್ದುಂಟಾ … ಅದೇನು ಕಂಡು ನನ್ ಪಾತಿವ್ರತ್ಯಕ್ಕೆ ಕಳಂಕ ತರುವಂಥ ಮಾತಾಡ್ದಿ… ಹೇಳಿ ಮುಂದಕ್ಕೆ ಹೋಗು” ಎಂದು ಹಿಡಿದುಕೊಂಡುಬಿಟ್ಟಳು.

ಪರಮಗ್ನೌ ಪುದೀಪ್ತೇತು ಪ್ರಾಣಾನಾಂ ಪರಿವರ್ಜನಂ

ನ ಚಾರಿ ಜನ ಸಂಸರ್ಗೇ ಮುಹೂರ್ತಮಪಿ ಸೇವನಂ … ಎಂದು ಮುಂತಾಗಿ ತಾತಶ್ರೀ ಪದೇ ಪದೇ ಹೇಳುತ್ತಿರ್ದುದು ಸ್ಮರಣೆಗೆ ತಂದುಕೊಂಡ ವರಲಕ್ಷ್ಮಿಯ ಅಂಗೋಪಾಂಗಗಳೆಲ್ಲ ಕಿಡಿಕಿಡಿ ಕಾರತೊಡಗಿದವು. ಗರಿವಳಿದ ಪಾವಿನಂತೆ ಬುಸುಗುಟ್ಟತೊಡಗಿದಳು. ಅಲುಮೇಲಮ್ಮನೆಂಬ ಝಳದ ಝಾಡಿಗೆ ಹೆದರಿ ವರಲಕ್ಷ್ಮಿ ಎಂಬ ಸೂರ್ಯನಳುಕುವನೇನು?

“ಏನ್ರಮ್ಮಾ, ಅತ್ತೆ ಅಂತ ಬೆಲೆ ಕೊಟ್ಟರೆ ನಾಲಿಗೆ ಉದ್ದ ಬಿಡುವಿ ಏನು? ನನ್ನ ಗಂಡನ ಹೊರತಾಗಿ ಬೇರೊಬ್ಬ ಪರಪುರುಷನಿಗೆ ನಾ ನನ್ನ ಮೊಲೆ ತೋರಿಸಿದ್ದೇ ನಿಜವಾದಲ್ಲಿ ಏಗಲೇ ನನ್ನ ತಲೆ ಸಿಡಿದು ಸಾವಿರ ಚೂರಾಗಲೀ … ಅದಾರಿಗೆ ನನ್ನ ಮೊಲೆಗಳನ್ನು ತೋರಿಸಿದೆ … ಹೇಳ್ರಿ, ಹೇಳಿದ ಹೊರತು ಬಿಡೋದಿಲ್ಲ.”

ದೇಹಕ್ಕೆ ತೊಲೆಯೊಡನೆ ಸಂಧಾನವೇನು? ಗಕ್ಕನೆ ತಾನು ವೃದ್ಧೆಯ ವಲ್ಕಲವನ್ನು ಗಟ್ಟಿಯಗಿ ಹಿಡಿದುಕೊಂಡಳು.

ನಮ್ಮಜ್ಜಿ ಹ್ಹಾ ಹ್ಹೂ ಅಂತ ಅನ್ನುವಷ್ಟರಲ್ಲಿ ಆ ಸಿಕ್ಸ್ಟೀ ಪ್ಲಸ್ಸೂ ಮತ್ತು ಫಾರ್ಟೀ ಪ್ಲಸ್ಸೂ ಪರಸ್ಪರ ಹಿಡಿದುಕೊಂಡು ಕೆಳಗಡೆ ಉರುಳಿದರು.
ಕುರುಕುಲಾಕ್ಷ್ಮಾಪಾಲ ಚೂಡಾಮಣಿಯೂ. ಫಣಿರಾಜ ಕೇತನೂ ಪರಸ್ಪರ ಮಲ್ಲಯುದ್ಧಕ್ಕೆ ತೊಡಕಿರುವಂತೆ ಆ ಕ್ಷಣ ಗೋಚರಿಸಿತು.
ತಾನಿನ್ನು ಮಧ್ಯ ಪ್ರವೇಶಿಸಿ ಅತ್ತೆ ಸೊಸೆಯರ ಜಗಳ ಬಿಡಿಸದಿದ್ದಲ್ಲಿ ಆ ವೃದ್ಧ ಅಲುಮೇಲಮ್ಮನವರ ಜರ್ಝರಿತ ದೇಹದಿಂದ ಪ್ರಾಣಪಕ್ಷಿ ಹಾರಿ ಹೋಗುವುದರಲ್ಲಿ ಸಂಶಯವಿಲ್ಲವೆಂದು ನಮ್ಮಜ್ಜಿ ಆ ಕ್ಷಣ ಯೋಚಿಸಿ ಕೂಡಲೆ ಕಚ್ಚೆ ಬಿಗಿಯಿತು. ತನಗೂ ಒಂದು ಗಂಡು ಮಗುವನ್ನು ಆ ದಯಾಮಯನಾದ ಭಗವಂತನು ಅಂದು ದಯಪಾಲಿಸಿದ್ದಲ್ಲಿ ತಾನು ಈ ಹೊತ್ತಿಗೆ ಎಷ್ಟು ಸಾರಿ ಜಗಳವಾಡುತ್ತಿದ್ದೆನೋ? ತನಗೇನಾದರೂ ಸೊಸೆಯಾದವಳು ಹೀಗೆ ಮಾತಾಡಿದ್ದಲ್ಲಿ ಅವಳ ನಾಲಿಗೆಯನ್ನು ಕಿತ್ತು ಎಲೆಅಡಿಕೆ ಚೀಲದಲ್ಲಿ ಇಟ್ಟುಕೊಂಡು ಬಿಡದೆ ಇರುತ್ತಿರಲಿಲ್ಲವು. ಸಮುದ್ರಕ್ಕೆ ಪಡಿ ಸಮುದ್ರವು, ಸಿಡಿಲ ಪೊಟ್ಟಣದಂಥ ವರಲಕ್ಷ್ಮಿಯ ಧೃತರಾಷ್ಟ್ರಾಲಿಂಗನದಿಂದ ಅಶ್ವತ್ಥಾಲ ಮರದಂಥ ಮುದುಕಿಯನ್ನು ರಕ್ಷಿಸದಿದ್ದಲ್ಲಿ ಆ ಮನೆ ದೇವರಾದ ಹಳೇಕೋಟೆ ವೀರಭದ್ರ ದೇವರು ತನ್ನನ್ನು ಕ್ಷಮಿಸಲಾರನು ಎಂದು ಮುಂತಾಗಿ ಯೋಚಿಸುತ್ತಾ ಜಗದೇಕಮಲ್ಲಿಯಾದ ನಮ್ಮಜ್ಜಿಯು ಕೂಡಲೆ ಸುಂಟರಗಾಳಿಯಂತೆ ಸುಳಿದು ಅಲುಮೇಲಜ್ಜಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ….
ಆಗ ಆ ಮುದುಕಿಯು “ಏಯ್ ಯಾರೆ ಅದು? … ಓಹ್ ನೀನಾ …. ನಿಂಗವ್ವ, ಶೂದ್ರ ಹೆಂಗಸಾದ ನೀನು ಬ್ರಾಹ್ಮಣ ಹೆಂಗಸಾದ ನನ್ನನ್ನು ಮುಟ್ಟುವುದೆಂದರೇನು? ಮುಟ್ಟಿದ್ದೂ ಅಲ್ಲದೆ ಬಿಗಿಯಾಗಿ ಅಪ್ಪಿ ನನ್ನ ಮಡಿಯುಡಿಯನ್ನೆಲ್ಲ ಹಾಳುಮಾಡಿ ಬಿಟ್ಟೆಲ್ಲೇ …” ಎಂದು ಆಕಾಶಕ್ಕೂ ಭೂಮಿಗೂ ಏಕಾಗಿ ಅಬ್ಬರಿಸಲು ….
ನಮ್ಮಜ್ಜಿಗೆ ಸಿಟ್ಟು ಬಂದು “ಯಾವ್ದೇ ಮಡಿ? ಏನೋ ಸೊಸೀ ಕೈಲಿ ಸಾಯ್ತಾಳಂತ ಬುಡುಸಿಕೊಳ್ಳಾಕ್ ಬಂದ್ರೆ ಮಡಿ ಹಾಳಾಯಂತೀಯಲ್ಲೇ” ಎಂದು ಕೊಸರಿ ದೂರ ತಳ್ಳಲು
“ಇದು ನಮ್ ಅತ್ತೆ ಸೊಸೆ ಜಗಳ …. ಇವತ್ತು ಹೊಡೆದಾಡ್ತೀವಿ …. ನಾಳೆ ಒಂದಾಗ್ತೀವಿ … ಅದನ್ಯಾರೆ ನೀನು ಕೇಳೊಕೆ?” ಎಂದು ಅಲುಮೇಲಮ್ಮ ಗುಡುಗಲು ….
ನಮ್ಮಜ್ಜಿಗೆ ದಿಕ್ಕೇ ತೊಚದಂತಾಗಿ … “ಯ್ಯೋನ್ರೇ ವಡದಾಡಿ ಸತ್ತೋಗ್ತಾರಂತ ಬಂದ್ರೆ ನನ್ಬಾಯೀಗೆ ಮಣ್ಣಾಕ್ತೀರಾ…. ಮಾಡ್ಕೆಂಡ ಗಂಡ್ರೂನು ನುಂಗಿ ನೀರ್ಕುಡುದ ಮುಂಡೇರು ನೀವು …”ಎಂದು ತನ್ನ ಅಗ್ಗಿಣೀ ಗೋಳದಂಥ ತನ್ನ ಬಾಯಿ ಪ್ರದರ್ಶಿಸಿತು. ಊರಿನ ಎಲ್ಲ ತರಲೆಗಳನ್ನು ನೋವೇ ಮೊದಲಾದ ತಾಪತ್ರಯಗಳನ್ನು ತನ್ನ ಮೈ ಮೆಲೆಳೆದುಕೊಂಡು ವೀರಾವೇಶ ಪ್ರಕಟಿಸುವುದು ನಮ್ಮಜ್ಜಿ ವ್ಯಕ್ತಿತ್ವದ ಪ್ರಧಾನ ಅಂಗ. ಮಧ್ಯೆ ಪ್ರವೇಶಿಸುವುದರ ಮೂಲಕ ಸಣ್ಣ ಜಗಳವನ್ನು ದೊಡ್ಡದು ಮಾಡುವುದರಲ್ಲಿ; ದೊಡ್ಡ ಜಗಳವನ್ನು ಸಣ್ಣದು ಮಾಡುವುದರಲ್ಲಿ ನಮ್ಮಜ್ಜಿ ವಿಶ್ವವಿಖ್ಯಾತಳು. ಸಮಾಜದ ರಿಪೇರಿ ಮಾಡಲು ಹೋಗಿ ತನಗೇ ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಮಾಜವನ್ನು ಮತ್ತಷ್ಟು ಹದಗೆಡೆಸಿ ತನೊಬ್ಬಳಿದ್ದಾಗ ಮರುಗುತ್ತಿದ್ದುಂಟು. ತನ್ನ ಬಾಯಿಯಿಂದ ಬಿಡುತ್ತಿದ್ದ ಪ್ರತಿಯೊಂದು ವಾಗ್ ಬಾಣವನ್ನು ಸಮರ್ಥಿಸಲು ಏನೆಲ್ಲ ರಂಪಾಟ ಮಾಡುತ್ತಿದ್ದಳು. ಆದರೆ ಈ ಸಂದರ್ಭದಲ್ಲಿ ತನಗರಿವಿಲ್ಲದಂತೆ ಸಿಕ್ಕಿಹಾಕಿಕೊಂಡಳು.

“ಏನೀ ಮುದುಕೀ …. ನಾವು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಹೆಂಗಸರೂ ಅಂತ ಎಂಥೆಂಥ ಮಾತಾಡ್ತಿರುವೆಯಲ್ಲ… ನಮ್ಮ ಗಂಡನನ್ನು ನುಂಗಿ ನೀರುಕುಡಿದವರೂಂತ ಅಪವಾದ ಹೊರಿಸುತ್ತಿರುವಿಯಲ್ಲ … ನೀನೂ ನಮ್ಮ ಹಾಗೆ ಯೌವನದಲ್ಲಿ ಗಂಡನನ್ನು ಕಳೆದುಕೊಂಡವಳಲ್ಲವೇನು?” ಸೊಸೆ ಹೇಗೋ ಪತ್ತೆ ಮಾಡಿ ಹೇಳಿದ್ದ ಸಂಗತಿಯನ್ನು ನೆನಪು ಮಾಡಿಕೊಂಡು ಏರು ದನಿಯಲ್ಲಿ ಅಲುಮೇಲಮ್ಮ ನುಡಿದುಬಿಟ್ಟಿತು.ವರಲಕ್ಷ್ಮಿ ತನ್ನತ್ತೆಯವರ ಸಮಯ ಪ್ರಜ್ಞೆಯ ಬಗ್ಗೆ ಮುಖದ ತುಂಬ ಮೆಚ್ಚಿಗೆ ಸೂಚಿಸಿದಳು.

ಆಕೆಯ ಮಾತಿನಿಂದ ನಮ್ಮಜ್ಜಿ ಒಂದು ಕ್ಷಣ ವಿಚಲಿತಗೊಂಡಿತು. ತನ್ನ ಬದುಕಿನ ಪುರಾತನ ಸಂಗತಿಗಳನು ಒಳಗೊಳಗೇ ಸಂಗ್ರಹಿಸಿ ಬಿಟ್ಟಿರುವರಲ್ಲ! ದೀಪ ನುಂಗೋ ಅತ್ತೆಗೆ ದೀವಟಿಗೆ ನುಂಗೋ ಸೊಸೆ ತಕ್ಕುದಾಗಿ ಗಂಟುಬಿದ್ದಿರುವಳಲ್ಲ.

“ನಿಮ್ಮ ಮಾತಿಗೆ ನನ್ ಶಾಟಾನೂ ಜುಮ್ಮೆನ್ನೊದಿಲ್ಲೇ … ದೊಡ್ಡ ಮನುಶ್ಶೋಳಾಗೋದ್ಕೂ ಮೊದ್ಲು ನನ್ನ ಗಂಡ ಗೊಟಕ್ಕೆಂದಿದ್ದೂ ನಿಜ . ನಾನು ಗಂಡಸಿನಂಗ ಎದೆಸೆಟೆಸಿ ಬದುಕಿದ್ದು ಖರೇವು… ಹರೇದಾಗ ಮಿಂಡ್ರೂನ ಮಾಡಿದ್ದೂ ಖರೇವು… ಇಲ್ಲದಿದ್ರೆಲ್ಲಿ ಈಟೊಂದು ಆಸ್ತಿ ಸಂಪಾಸ್ಲಿಕ್ಕಾಗ್ತಿತ್ತು … ನನ್ತಂಗೀ ಮಕ್ಳೂನೇ ನನ್ ಮೆಕ್ಳೂಂತ ತಿಳಕೊಂಡು ಪಾನಲೆ (ಪಾಲನೆ) ಪೋಣಣೆ (ಪೋಷಣೆ) ಮಾಡಲೂಕಾಗ್ತಿತ್ತೂ … ನಿಮ್ಮಂಗೆ ನಾನೂ ಮಂಡೆ ಭೋಳಿಸ್ಕೊಂಡು ಮುಂಡೆಯಾಗಿ ಮೂಲಿ ಕೂಕೊಂಡಿದ್ರೆ ಈಟೆಲ್ಲ ಮಾಡಲಾಕಾಗುತ್ತಿತ್ತೇನು! … ಅಲಲಲಾ … ಯೋಳಾಕ ಬಂದುಬಿಟ್ರು ಹಳೇ ಪುಣಾರಾನ (ಪುರಾಣಾನ) … ಯಿನ್ನೊಂದು ಮಾತು ಯ್ಯೋಳ್ತೀನಿ ನೆಪ್ಪಿಟ್ಕಳ್ರಭೇ … ಭೋಸೂಢೇರಾ … ನೂರೊಂದು ರ್‍ವಾಗ ಬೊಡುಕೊಂಡು ಮೊಣ್ಣೆತ್ತಿನ ಅಮಾಸಿ ದಿನ ಗೊಟಕ್ಕಂದ್ನಲ್ಲಾ ಆ ನಿಮ್ಮಾವ ಪರಮೇಸೂರ ಶಾತಿರಿ … ಆ ಶಾತಿರೀನೂ ನನ್ನತ್ರ ಮಲಕ್ಕೊಂಡು ವ್ಯೋನೋ ಕಿಸಿಲಾರ್ದೆ ಹೋದವನೇ …” ನಜಭಜ ಜಂಜರಂ ಬಗೆಗೊಳ್ಳುತ್ತಿರೆ ಚಂಪಕಮಾಲಾ ಎಂದವರ್ ಎಂದು ಮುಂತಾಗಿ ಆರಂಭಿಸುತ್ತಲೆ ಆ ಮಾದ್ಗೂಕ್ಯ ಗೋತ್ರದ ಅತ್ತೆ ಸೊಸೆಯರೆಂಬ ಸಾಹಸ ಗರ್ವಾಲಂಕೃತರೀರ್ವರು ಒಂದು ಕ್ಷಣ ಮೌನವೆಂಬ ವೈಶಂಪಾಯನ ಸರೋವರಂ ಪೊಕ್ಕು ಮರುಕ್ಷಣ ರಸೆಯಿಂ ಕಾಲಾಗ್ನಿರುದ್ರಂ ಪೊರಮೊಡೆವಂತೆ ಹೊರಬಂದು ಕೋಪಾರುಕ್ತನೇತ್ರರಾಗಿ “ಅಯ್ಯೋ … ಅಯ್ಯೋ… ಅಯ್ಯಯ್ಯೋ … ವೈಕುಂಠ ವಾಸಿಗಳಾಗಿರೋ ನಮ್ಮ ವಂಶದ ಹಿರಿಯರ ಮೇಲೆ ಗುರುತರ ಆಪಾದನೆ ಹೊರಿಸುತ್ತಿರುವುದಲ್ಲಾ ಈ ಮುದುಕಿ … ಕಲಿಕಾಲದಲ್ಲಿ ಪಾಪಿಗಾಳಿಗೆ ದೀರ್ಘಾಯುಷ್ಯವನ್ನು ದಯಪಾಲಿಸಿರುವ ಓ ವೆಂಕಟರಮಣನೇ … ನಿನ್ನ ದಡ್ಡತನವನ್ನು ಎಷ್ಟೆಂದು ವರ್ಣಿಸುವುದು … ಇರಲಿ … ಬಯ್ದವರ ಹೆಸರ ಮಗನಿಡಬೇಕೆಂದು ದಾಸವರೇಣ್ಯರೇ ಹೇಳಿದ್ದಾರೆ … ಈ ಶೂದ್ರ ಮುದುಕಿ ಎದುರು ತತ್ವ ಜ್ಞಾನದ ಕಿನ್ನರಿ ಭಾರಿಸುವುದರಿಂದೇನು ಉಪಯೋಗ?… ” ಎಂದು ಅಲುಮೇಲಮ್ಮನಿಗೆ ಕೆಮ್ಮು ದಮ್ಮು ಒಂದೇಟಿಗೆ ಒತ್ತರಿಸಿ ಬಂದಿತು. ಸೊಸೆ ವರಲಕ್ಶ್ಮಿ ಮಾತಿನ ಸಾರಥ್ಯವನ್ನು ತಾನು ವಹಿಸಿಕೊಂಡಳು. “ಅತ್ತೆಮ್ಮಾ ಇಂಥ ಅನಾಗರೀಕರ ಎದುರು ಮಾತಾಡಿ ನಾಲಿಗೆ ಮೈಲಿಗೆ ಮಾಡಿಕೊಳ್ಳುವುದೇಕೆ?” ಎಂದು ತನ್ನ ವಜ್ರಾಯುಧದಂಥ ಬಾಚಿ ಹಲ್ಲುಗಳನ್ನು ಝಳಪಿಸಿದಳು. “ಅಮ್ಮಾ ತಾಯಿ … ಏನೆಲ್ಲ ಮಾತಾಡಿ ಪುಣ್ಯ ಕಟ್ಟಿಕೊಂಡಿದ್ದು ಸಾಕಮ್ಮಾ … ನಿನ್ನ ಮಾತು ಮಾಡಿರುವ ಮೈಲಿಗೆ ತೊಳೆಯಲು ಸಾಕ್ಷಾತ್ ಶೃಂಗೇರಿ ಜಗದ್ಗುರುಗಳೇ ಬರಬೇಕು … ದಯವಿಟ್ಟು ಇನ್ನು ಹೊರಡಮ್ಮಾ ಹೊರಡು” ಎಂದು ಅಂಜಲೀಬದ್ಧಳಾಗಿ ಕೇಳಿಕೊಂಡಳು.

“ಅಲಲಲಾ ತಾಟಗಿತ್ತೀ …. ನಿನ್ಮಡಿ ಆಚಾರಕ್ಕೆ ಬೆಂಕಿ ಬೀಳ್ಲಿ … ಆ ಸತ್ತ ನಿನ್ಗಂಡ ಶಾಮಣ್ಣ ನನ್ ಮೊಮ್ಮಗ ಜತಿಗಾರಾಂತ ಈ ಮಾತ್ನ ಯ್ಯೋಳ್ತಿದ್ದೀನಿ… ಗ್ವಂಡನ್ನ ಕಳಕೊಂಡಿದ್ದಾಯ್ತು … ಸೋಬಾಗ್ಯಾನೆಲ್ಲ ಕಳಕೊಂಡಿದ್ದಾಯ್ತು …ಮಾ ಮರುವಾದಸ್ತರಂಗ ಅದೆಂಗ ಬೊದುಕ್ತೀಯೋ ಬೊದುಕಲೇ ಲವುಡೀ … ನಾನೂ ನೋಡ್ತೀನಿ … ಮಂಡೆ ಬೋಳಿಸ್ಕೊಂಡ ಮಾತ್ರಕ್ಕೆ ನಿನ್ನ ಪತಿವ್ರತೀ ಅಂತಾರ್‌ಯೋನೇ … ವಳಗಿಂದು ಬೋಳಿಸ್ಕೋಬೇಕು ವಳಗಿಂದು … ವರ್ಷೋಪ್ಪತ್ನಲ್ಲಿ ನೀನು ಹಾದಿಬುಟ್ಟು ನಡೀಲಿಲ್ಲಾಂದ್ರೆ ಮೂಗಿಗೆ ಕವಡೆ ಕಟ್ಕೋತೀನಿ… ” ಎಂದು ನಮ್ಮಜ್ಜಿ ಮಾಡಿದ ಶಪಥಕ್ಕೆ ಕುಲಗಿರಿಗಳ್ ಅಲ್ಲಾಡಿದವು.

“ವಿಧವೆ ವರಲಕ್ಶ್ಮಿ ಹಾದಿ ತಪ್ಪದಂತೆ ನೋಡು ಜಗದ್ರಕ್ಷಕನೇ … ನಿಂಗಮ್ಮಜ್ಜಿ ಮೂಗಿಗೆ ಕವಡೆ ಕಟ್ಟಿಕೊಳ್ಳದಂತೆ ನೋಡಿಕೊಂಡು ಇರುವೆ ಎಂಬತ್ನಾಲ್ಕುಕೋಟಿ ಜೀವರಾಶಿಯ ಪ್ರಾಣ ಕಾಪಾಡು ಭಗವಂತನೇ” ಎಂದು ಕದನ ಕುತೋಹಲಿಗಳಾದ ದೇವಾನ್ ದೇವತೆಗಳು ತ್ರಿಪುರಾಂತಕನನ್ನು ಬೇಡಿಕೊಳ್ಳುತ್ತಿರುವಾಗ ….

ನಮ್ಮಜ್ಜಿಯು ಒಂದೊಂದು ಹೆಜ್ಜೆಗೆ ಭೂಮಿಯನ್ನು ಗಡ್‌ಗಡಾ ನಡಗಿಸುತ್ತ ಅಲ್ಲಿಂದ ವಾಪಸಾದಳು. ಎಂಬಲ್ಲಿಗೆ ಈ ಪ್ರಕರಣ ಈ ಪುರಾಣ ಮುಕ್ತಾಯವಾಗಲಿಲ್ಲವೆಂದು ಹೇಳುವುದಕ್ಕೆ ವೀಕ್ಷಕ ವಿವರಣಾಕಾರನಾದ ನನ್ನ ಮನಸ್ಸಿಗೆ ನೋವಾಗುತ್ತಿದೆ. ಸಹೃದಯ ವಾಚಕರಾದ ನಿಮ್ಮ ಮನಸ್ಸಿಗೂ ನೋವನ್ನುಂಟು ಮಾಡುವುದಕ್ಕೆ ಶತಕೋಟಿ ಕ್ಷಮೆ ಯಾಚಿಸುತ್ತಿರುವೆನು.

ಮುಂದೇನಾಯ್ತು ಅಂತ ನೀವು ಕೇಳ್ತಿದೀರಂತ ತಿಳಕೊಂಡು ನಾನು ಹೇಳ್ತಿದೀನಿ. ದಯವಿಟ್ಟು ಆಲಿಸುವಂಥವರಾಗಿ.

ತುರ್ತು ಪರಿಸ್ಥಿತಿ ಎಂಬುದು ಹಂಗ ಬಂದು ಹಿಂಗ ಹೋದ ಮೇಲೆ ದೇಶದ ಜೀವನ ಶೈಲಿಯಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಬದಲಾವಣೆಗಳಾಗಿರುವುದನ್ನು ನಿಮಗೆ ಬಿಡಿಸಿ ಹೇಳುವ ಅಗತ್ಯವಿಲ್ಲ. ಸಾಕು ನಾಯಿಗಳ ಬೆಲೆಯೂ ಜಾಸ್ತಿಯಾಗಿರುವಂತೆ ನಾಯಿಗೆ ತಿನ್ನಿಸುವ ಬಿಸ್ಕತ್ತುಗಳನ್ನು ವಿದೇಶೀ ವಿನಿಮಯದ ನೆಪದಲ್ಲಿ ಅಮೇರಿಕಾದಿಂದ ತರಿಸಿಕೊಳ್ಳುವುದು ನಿಮಗೆ ಗೊತ್ತಿರಲು ಸಾಕು. ಫ್ಯೂಡಲಿಸಮ್ಮೂ; ಕ್ಯಾಪಿಟಲಿಸಮ್ಮೂ ಇಂಥವೆಲ್ಲ ಸಮಾಜವಾದದ ನೆಪದಲ್ಲಿ ಚೂಚು ಚೂರಾಗಿವೆ; ಪ್ರತಿಯೊಬ್ಬರ ಮನಸ್ಸಿನಲ್ಲಿ ವಾಸಮಾಡಲಾರಂಭಿಸಿವೆ. ಹೊರಗಡೆ ಮುಗ್ಧನಂತೆ ಕಾಣುವ ಮನುಷ್ಯ ಒಳಗಡೆ ಕ್ರೌರ್ಯ ರೂಢಿಸಿಕೊಂಡಿದ್ದಾನೆ. ಮುಗುಳ್ನಗೆಯನ್ನು ಅಸ್ತ್ರದಂತೆ ಬಳಸಿಕೊಂಡಿದ್ದಾನೆ. ನಯವಿನಯದಿಂದ ನಿರಾತಂಕವಾಗಿ ಬೇಟೆಯಾಡುತ್ತಿದ್ದಾನೆ. ಪ್ರತಿಯೊಂದು ಹೆಜ್ಜೆಯನ್ನು ಸುಪಿರಿಯಾರಿಟಿ ಕಾಂಪ್ಲೆಕ್ಸಿನಿಂದ ಇಡುತ್ತಿದ್ದಾನೆ. ಪ್ರತಿಕ್ಷಣ ಕ್ರಯ, ವಿಕ್ರಯದ ಬಗ್ಗೆ ಆಲೋಚಿಸುತ್ತಿದ್ದಾನೆ. ಇಂಥದ್ದೊಂದು ಆಲೋಚನಾಕ್ರಮದ ಒಂದು ಚಿಕ್ಕ ಘಟಕ ನಮ್ಮಪ್ಪ.

ನಮ್ಮಪ್ಪ ಸ್ವಾತಂತ್ರ ಪೂರ್ವದಲ್ಲಿ ಹಗರಿ ಸಾಲಿನಲ್ಲಿ ತಾನು ಮಾಡಿದ ತುಡುಗಿನ ಕಾರಣಕ್ಕೆ ಊರಿಂದೂರಿಗೆ ಅಲೆದೂ ಅಲೆದು ನಿಂಗಮ್ಮಜ್ಜಿಯ ತಂಗಿಯ ದ್ವಿತೀಯ ಪುತ್ರಿಯನ್ನು ಮದುವೆಯಾಗಿ ಒಂದುಕಡೆ ನೆಲೆ ನಿಂತವನು. ಪರಿಸರವನ್ನು ಪಂಚೇಂದ್ರಿಯಗಳ ತುಡುಗಿನಿಂದ ಮೇದು ದಕ್ಕಿಸಿಕೊಂಡವನು. ಭಯದಿಂದ ಹುಸಿ ವಾತಾವರಣವನ್ನು ನಿರ್ಮಿಸಿಕೊಂಡು ಅದರಲ್ಲಿ ಎಲ್ಲರನ್ನೂ ಕೂಡಿಟ್ಟವನು. ತನಗೆ ಹೆದರುತ್ತಿದ್ದವರೇ ತನ್ನನ್ನು ಹೆದರಿಸಲು ಪ್ರಯತ್ನಿಸುತ್ತಾರೆ ಎಂದು ಅರಿವಾದಾಗ ತನ್ನ ಕುಟುಂಬದ ಸಹಸದಸ್ಯರನ್ನು ತನಗಿಷ್ಟ ಬಂದಂತೆ ಕುಣಿಸತೊಡಗಿದಂಥವನು. ಆದರೆ ಇಷ್ಟೆಲ್ಲ ಇರುವ ನಮ್ಮಪ್ಪನಿಗೆ ಅನಾದಿ ಕಾಲದಿಂದ ತಿರುಗಿ ಬಿದ್ದ ಗಂಡುಗಲಿ ಎಂದರೆ ನಮ್ಮ ನಿಂಗಮ್ಮಜ್ಜಿ ಎಂದು ಹೇಳಬೇಕಾಗಿಲ್ಲ. ತಂಗಿಯ ಮಗಳನ್ನು ಕೊಟ್ಟು ಮನ್ತನಕ್ಕೆ ಇಟ್ಟುಕೊಂಡ ಕ್ಷಣದಿಂದ ಅದಕ್ಕು ಆತಗೂ ಎಣ್ಣೆಶೀಗೆಕಾಯಿ ಸಂಭಂಧ. ತಲಾ ಒಂದೊಂದು ತೊಡೆ ತಟ್ಟುವವರೇ; ತಲಾ ಒಂದೊಂದು ವಿಶೇಷಾಲಂಕೃತ ಮಾತುಗಳನ್ನು ಎರಚಾಡುತ್ತಿದ್ದವರೇ , ಪ್ರತೀ ಸೋಲನ್ನು ಗೆಲುವೆಂದು ಭಾವಿಸಿದಂಥವರೇ.

“ಏನೋ ಬ್ರಾಂಬ್ರು … ಗಂಡನ್ನ ಕಳೆದುಕೊಂಡಿರೋ ವಿಧವೆಯರು. ಅವರ ಬದುಕು ನಿಸೂರಾಗುವುದಾದರೆ ತಾನಾ ಮನೆಯನ್ನು ಕೊಂಡುಕೊಳ್ಳುವುದರಲ್ಲಿತಪ್ಪೇನು” ಎಂದೋ?; ಅದ್ಭುತ ಘಟನಾವಳಿಗಳ ಸರಮಾಲೆ ಹೊಂದಿರುವ ಮನೆಗೆ ತಾನು ವಾರಸುದಾರನಾದಲ್ಲಿ ಸಮಾಜದಲ್ಲಿ ತನ್ನ ವರ್ಚಸ್ಸು ಹೆಚ್ಚುತ್ತದೆ ಎಂದೋ; ಜೇಬಿನಲ್ಲಿ ಘಟ್ಟಿ ಐದು ರುಪಾಯಿಇಲ್ಲದಿದ್ದರೂ ಆ ಭಯಂಕರ ಆತ್ಮ ವಿಶ್ವಾಸಿ ಆ ಮನೆಯನ್ನು ಖರೀದಿಸಲು ಕಂಕಣಬದ್ಧನಾಗಿದ್ದ. ಈ ಬಗ್ಗೆ ನಾನೂನೂವೆ ಒಳಗೊಳಗೆ ಖುಷಿಪಟ್ಟಂಥವನೇ ಆಗಿದ್ದೆ. ಎಷ್ಟಿದ್ದರೂ ಅದು ನನ್ನ ಖಾಸಾ ಗೆಳೆಯನ ಮನೆ ಅಲ್ಲವೆ?

“ಲೋ ತಮ್ಮಾ ಹಾಲಪ್ಪೋ … ಈಗೇನಾತಂಥೀಯಾ? ಆಗಬಾರದ್ದೆಲ್ಲ ಆಗಿ ಹೋತೂ; ಅನ್ನಬಾರದ್ದನ್ನೆಲ್ಲ ಅಂದುಬಿಟ್ರು ಕಣಪ್ಪಾ… ಅವು ಹೆಂಗಸ್ರಲ್ವೇ ಅಲ್ಲ. ಲವುಡೇರು ಗಂಡ್ರಿಲ್ಲ ಈಟುರಿತಾರ… ಇದ್ದಿದ್ದ್ರೆ ಯೇಟುರಿತಿದ್ದ್ರೋ … ನಾನೊಂದ ಮಾತಾಡ್ತೀನಿ … ತಗದುಹಾಕ್ಬಾರ್ದು. ನಿಂಗೆ ತಾಯಂದ್ರು ನಾನೇ … ಅತ್ತೆ ಅಂದ್ರೂ ನಾನೇ … ಆ ಬ್ರಾಂಬ್ರು ಮನಿ ತಂಟೆಗೆ ಹೋಗಬ್ಯಾಡ …” ಎಂದು ನಿಂಗಮ್ಮಜ್ಜಿ ಒಂದೇ ಉಸಿರಿಗೆ ಹೇಳೋದನ್ನೆಲ್ಲ ಹೇಳಿ ಕೋಳೋದನ್ನು ಕೇಳಲಿಕ್ಕಾಗದೆ … ನತದೃಷ್ಟ ಬ್ರಾಹ್ಮಣ ವಿಧವೆಯರನ್ನು ಬಯ್ಯುತ್ತ ಬಯ್ಯುತ್ತ ಒಳಗಡೆ ಬಿರುಗಾಳಿಯಂತೆ ಹೋಗಿ ಬರೀ ಮಾತಿನಿಂದ ಅವರೆಂಥೋರು? ಇವರೆಂಥೋರು? ಎಂದು ಅಷ್ಟಾದಶ ಪುರಾಣ ಒರೆಯತೊಡಗಿತು.

ಮೊದಮೊದಲು ‘ಟೋಪಿ’ ಸೇದುತ್ತಿದ್ದ ನಮ್ಮಪ್ಪ ಇಂದಿರಾಗಾಂಧಿ ಪದಚ್ಯುತಳಾದ ಮೇಲೆ ಎರಡ್ರುಪಾಐ ಕೇಜಿ ಸಕ್ರೀ ಎಂಬ ಸಂತೊಷದ ಭರದಲ್ಲಿ ‘ಆನೆ’ ಸೇದಲಾರಂಭಿಸಿದ. ಇಂದಿರಾ ಗಾಂಧಿಯ ಕಗ್ಗೊಲೆಯ ನೋವನ್ನು ತಾಳಲಾರದೆ ‘ಚಾರ್ಮಿನಾರ್’ಗೆ ಬಂದ. ರಸಾಯನಿಕ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರತೊಡಗಿದ ಮೇಲೆ ‘ಬರಕ್ಲೀ’ಗೆ ಬಂದ. ರಾಜೀವ್ ಗಾಂಧಿಯನ್ನು ಒಬ್ಬ ಯಕಃಶ್ಚಿತ್ ಮಹಿಳೆ ಕೊಲೆಮಾಡುವುದೆಂದರೇನು ಎಂದು ಯೋಚಿಸುತ್ತ ಯೋಚಿಸುತ್ತಾ ಗಣೇಶನ ಮೊರೆ ಹೊಕ್ಕ. ಇಂಥಪ್ಪ ಛಪ್ಪನ್ನಾರು ಅಸಂತುಷ್ಟ ನೋವುಗಳಿಂದಾಗಿ ಆತನ ಸಣ್ಣ ಕರುಳಲ್ಲಿ ವೃಣ ತೊಂದರೆ ಕೊಡಗಿತು. ಏಕಕಾಲಕ್ಕೆ ಅಲೊಪತಿ ಮತ್ತು ಹೋಮಿಯೋಪತಿ ಬಳಸತೊಡಗಿ ಮತ್ತಷ್ಟು ತೊಂದರೆಗೀಡಾಗಿ ತನ್ನ ವಂಶದ ಭೀಕರ ಹಿರಿಯರನ್ನು ಅವರ ಘನ ಕಾರ್ಯಗಳನ್ನು ಕಂಡ ಕಂಡವರಿಗೆಲ್ಲ ಅಪೂರ್ವ ಲವಲವಿಕೆಯಿಂದಲೂ; ವಿಚಿತ್ರಾವೇಶದಿಂದಲೂ ವಿವರಿಸತೊಡಗಿದ. ಆ ಸಂದರ್ಭದಲ್ಲಿಯೇ ಸುಮಾರು ಹತ್ತನ್ನೆರಡು ವರ್ಷಗಳ ಹಿಂದೆ ಮಾಯವಾಗಿ, ಆಗಷ್ಟೆ ಎಳ್ಳುನೀರು ಬಿಡಿಸಿಕೊಂಡಿದ್ದ ಬಸಪ್ಪನೆಂಬ ನಮ್ಮ ಸಂಬಂಧಿಕನೋರ್ವ ಸಾಧು ವೇಶದಲ್ಲಿ ಪ್ರತ್ಯಕ್ಷನಾಗಿ ‘ಮಾವಾ, ಈ ದೇಹ ನಶ್ವರ, ಈ ಬದುಕು ನಶ್ವರ ಇದರಿಂದ ಮುಕ್ತಿ ಪಡೆಯಬೇಕಾದರೆ ಕಾವಿ ಉಡು … ಗಾಂಜಾ ಸೇದು’ ಎಂದು ಪುಸಲಾಯಿಸತೊಡಗಿದ್ದು. ಎಂಥೆಂಥೋರ ಯಾವ ಬಣ್ಣದ ಮಾತುಗಳನ್ನು ಎಂದೂ ಕಿವಿ ಮೇಲೆ ಹಾಕಿಕೊಳ್ಳದಂಥ ನಮ್ಮಪ ಆತನ ಥಳುಕಿಲ್ಲದ ಮಾತುಗಳಿಗೆ ಮರುಳಾಗಿಬಿಡುವುದೆ? ಬಸಪ್ಪನನ್ನು ಹಿಂದೊಮ್ಮೆ ನಮ್ಮಪ್ಪ ಹಿಗ್ಗಾಮುಗ್ಗಾ ಒದ್ದೋಡಿಸಿದ್ದುಂಟು. ಕೆಲವು ದಿನಗಳಲ್ಲಿ ನಮ್ಮಪ್ಪನೆಂಬ ಕುರುಕುಲ ವಿಲಯೋತ್ಪಾತಕೇತು ಕಾವಿ ತೊಡುವುದರ ಬಗ್ಗೆ; ಗಾಂಜಾ ಸೇದುವ ಬಗ್ಗೆ ಮುನ್ಸೂಚನೆ ಕೊಡತೊಡಗಿದ.ಈ ಸಂದರ್ಭದಲ್ಲಿಯೇ ನಿಂಗಮ್ಮಜ್ಜಿಯ ಮಾತು ಕೇಳಿಸಿಕೊಂಡಿದ್ದು. ಮೊದಲೇ ಅವರಿಬ್ಬರ ಜಾಯಮಾನ ಪರಸ್ಪರ ವಿರುದ್ಧ. ಆತ ವತಿ ಅಂದರೆ ಆಕೆ ಪ್ರೇತಿ ಅನ್ನುವಂಥವಳು. “ನೋಡಬಾರದ್ಯಾಕೆ … ನಾನು ನಮ್ಮಪ್ಪನ ಮಗನಾಗಿದ್ದಲ್ಲಿ ಆ ಮನೆಯನ್ನು ಕ್ರಯಕ್ಕೆ ಕೊಂಡುಕೊಳ್ಳುತ್ತೇನೆ” ಎಂದು ಗಣೇಶನ ಹೊಗೆಯನ್ನು ತನ್ನ ಹೆಂಡತಿ ದೊಡ್ಡಮ್ಮನ ಕಾಲರುಳಿನಂಥ ಮುಖಕ್ಕೆ ಬಿಟ್ಟು ಮೊದಲೆ ಅಸಹಾಯ ಶೂರ ಪರಾಕ್ರಮಿಯೂ; ಬಾಯೊಳಗೆ ತಾಂಬೂಲದುಂಡೆಯೊಡಲಲ್ಲಿ ತರಾವರಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಂಥವಳೂ ಆದ ನಿಂಗಮ್ಮಜ್ಜಿ ಆ ಕ್ಷಣ ರುದ್ರಾವತಾರ ತಾಳಿ “ಎಲವೋ ದುರುಳ … ಯಿಂದಿಗೆ ನನ್ನ ನಿನ್ನ ರುಣ ತೀರ್ತು …ನಿನ್ನ ದಾರಿ ನಿನ್ಗೆ … ನನ್ನ ದಾರಿ ನನ್ಗೆ …” ಎಂದು ಹೇಷಾರವ ಮಾಡಿದಳು, ಅಷ್ಟದಿಕ್‌ಪಾಲಕರನ್ನು ದುರುಗುಟ್ಟಿ ನೋಡಿ.
“ಯ್ಯೋನಲೋ ಸಾಕಿ ಸಲವಿದ ನನ್ನ ಮಾತ್ನೇ ಧಿಕ್ಕರಿಸ್ತೀಯಾ … ನಿನ್ ಚಲುವಿಕೆಗೆ ಮಳ್ಳಾಗಿ ಮೊಗಳ್ನಕೊಟ್ಟಿದ್ಕೆ ಸರ್‍ಯಾಗಿಯೇ ಮಾತಾಡ್ತೀ … ನೀನು ಯಾವೂರ ಕಾಗೆ ಎಬ್ಬಿಸಾಕೆ ಹ್ವಾದ್ರೆ ನಂಗೇನು? ನಂಗೆ ನನ್ಮೊಗ್ಳೂ …ಮೊಮ್ಮಕ್ಳೂ ಮುಕ್ಯಾ …” ಎಂದು ಆಕೆ ತನ್ನ ಡೊಂಕು ಕಾಲಿಗೆ ಅಡರಿಕೊಂಡಿದ್ದ ರಾಂಪುರದ ಹದಿನೆಂಟು ಮೊಳದ ಸೀರೆಯನ್ನು ಸ್ವಲ್ಪ ಮೇಲೆತ್ತಿ ಕಟ್ಟಿಕೊಂಡಳು.

ಅದೇ ಹೊತ್ತಿಗೆ ಅಡುಗೆ ಮನೆಯಿಂದ ನಮ್ಮಪ್ಪನ ಧರುಮ ಪತನಿಯೂ; ಮುತ್ತಾನ ಸೂಳೆ ಗಿರಿಜೆಯೂ ಎಲೆ ಅಡಿಕೆ ಹಾಕಿಕೊಳ್ಳುವುದನ್ನು ಬಿಟ್ಟು ಎದ್ದು ಬಂದು ಬಿಟ್ಟರು, ಎರಡು ನಮೂನೆಯ ಸುಂಟರಗಾಳಿಗಳು ಒಂದಾದಂತೆ.
“ಯ್ಯೋನೆ … ಬಾಯಿಗೆ ಬೊಂದಂತೆ ಮಾತಾಡ್ತಿ! … ನಾವೇನಾರ ಆಗಲಿ … ಯಣ್ಣು ಮೂಳಾದ ನಿಂಗ್ಯಾಕೆ ಬೇಕೆ? … ನನ್ನ ಗಂಡನ್ನ ಕಾಗೆ ಎಬ್ಬಿಸಾಕೆ ಹೋತಾನೆಂತೀಯ … ನಿನ್ನ ನಾಲ್ಗೆ ಸೇದಿಹೋಗ! ಎಂದು ನಮ್ಮವ್ವನೂ …
ಅದ್ಯಾವ ಜನುಮದಾಗ ಅದೇನಾಗಿ ವುಟ್ಟಿದ್ದೆಭೇ ಅತ್ತೆ … ಗಂಡಸರಂದ್ರೆ ಭಯ ಇಲ್ಲ ಭೀತಿ ಇಲ್ಲ …” ಎಂದು ನಮ್ಮಪ್ಪನ ಪ್ರಿಯತಮೆಯೂ …

ಆಗ ನಮ್ಮಜ್ಜಿ ಚಕ್ರವ್ಯೂಹದಲ್ಲಿ ಸಿಕ್ಕಿ ನತದೃಷ್ಟ ಅಭಿಮನ್ಯುವಿನಂತಾದಳು.

ಮುಧೋಳದ ಬೇಟೆ ನಾಯಿಗಳಂತೆ ನಿಂತಿರುವ ಅವರ ಪೈಕಿ ಮೊದಲು ಯಾರನ್ನು ಎದುರಿಸುವುದು? ಸಿಂಹ ವಿಷ್ಟರದ ಮೇಲೆ ಕದನ ಕುತೋಹಲಿಯಾಗಿರುವ ಅಳಿಯನಿಗಾದರೂ ಬುದ್ಧಿಬೇಡವೆ?… ತಾನು ಬೆಳಗಾಗೆ ಎದ್ದು ಯಾರ ಮುಖ ನೋಡಿದನೆಂಬುವುದರ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲದೆ … “ನನ್ನ ಅತ್ತೆ ಅಂತೀಯೇನೆ ಬಿಕನಾಸಿ ಮುಂಡೆ … ಇಟಗಂಡ ಸೂಳೆಯಾಗಿದ್ದೇ ಯೀಟು ಮಾತಾಡ್ತೀ … ಯಿನ್ನು ಯೀ ಭಾಡಖಾವು ಕಟ್ಟಿಕೊಂಡಿದ್ರೆ ಯಿನ್ನೇಟು ಮಾತಾಡ್ತಿದ್ದೆಯೇ” ಎಂದು ಮಾತಾಡದಿದ್ದಲ್ಲಿ ನಮ್ಮಪ್ಪನಿಗೆ ಸಿಟ್ಟು ಬರುತ್ತಿರಲಿಲ್ಲ.
ಹಾಯಟೆಕ್ ಧೂಮಕೇತುವಿನಂತೆ ಎದ್ದು ಭದ್ಧ ಭ್ರುಕುಟಿಯಾಗಿ ಮುಖವನ್ನು ಗುಗ್ಗುಳ ಮಾಡಿಕೊಂಡನು. “ಯೇನೆ ಮುದಿ ಕತ್ತೆಯೇ … ಹೆಂಡ್ತಿಗಿಂತ ಹೆಚ್ಚಾಗಿಟ್ಟುಕೊಂಡಿರೋಳ್ನ ಸೂಳೆ ಅಂತಿದ್ದೀಯಲ್ಲ! ನಿನ್ನ ಮ್ಯ್ಯಾಗ ಎಷ್ಟಿದ್ದೀತು ಕೊಬ್ಬು? … ಮೊದ್ಲು ನಿನ ಮೈಯೊಳಗಿನ ಎಲುಬು ಮುರುದೇ ನಾನು ಮನೆ ತಂಟೆಗೋಗೋದು” ಎಂದು ತೋಳೇರಿಸಿದನು.

ಅದೆಲ್ಲಿ ತಮ್ಮ ವಂಶದ ಮೋಟುಗೂಟದಂಥ ನಿಂಗವ್ವ ನಿರ್ನಾಮವಾಗಿ ಬಿಡುವಳೊ ಎಂದೂಹಿಸಿ ಆಕೆಯ ತಂಗಿ; ತಂಗಿಯ ಇನ್ನೊಬ್ಬ ಮಗಳು; ಮತ್ತಿನ್ಯಾರ್ಯಾರೋ ಎಲ್ಲಿಂದಲೋ ಬಂದು ಕೋಟೆಯಂತೆ ರಕ್ಷಣೆ ಒದಗಿಸಿದರು. ಹವುದೋ … ಅಲ್ಲವೋ ಎಂಬಂತೆ ಮಾತಾಡುತ್ತ ಆಕೆಯನ್ನು ಜೋಪಾನವಾಗಿ ನಡೆಸಿಕೊಂಡು ಹೋದರು.

ಅಂದು ನಡೆದ ಆ ಜಗಳ ಬಹು ದೊಡ್ಡ ಘಟನೆಗೆ ಸುಶ್ರಾವ್ಯವಾಗಿ ನಾಂದಿ ಹಾಡಿತು. ಇತಿಹಾಸ ಪ್ರಸಿದ್ಧ ದ್ವಿದಳ ಧಾನ್ಯವೊಂದು ಅಂದು ವಿಭಜನೆಗೊಂಡದ್ದು ಮತ್ತೆ ಕೂಡಲೇ ಇಲ್ಲ.

ನಿಂಗಮ್ಮಜ್ಜಿ ತನ್ನ ಸಂಗಡಿಗರೊಂದಿಗೆ ಬೇರೊಂದು ಮನೆ ಮಾಡಿ, ಬೇರೊಂದು ಒಲೆ ಹೂಡಿಬಿಟ್ಟಿತು. ಅದು ಹೂಡಿದ ಒಲೆಯಲ್ಲಿ ಅರಷಡ್ವರ್ಗಗಳು ಧಗಧಗಿಸತೊಡಗಿದವು. ಪ್ರತಿದಿನ ಕಾಲು ಕೆದರಿ ಜಗಳ ತೆಗೆಯ ತೊಡಗಿತು.
ಅಂಥ ಜಗಳದಲ್ಲಿ ಉಲ್ಲೇಖಾರ್ಹವಾದುದೆಂದರೆ ಶಾಸ್ತ್ರಿಗಳ ಮನೆ ಬಗ್ಗೆ ಅದು ಹಬ್ಬಿಸಿದ ರೋಚಕ ಕಥೆಗಳು … ಕರ್ಮ ಕಾಂಡಗಳು … ಒಂದೇ ಎರಡೇ … ಅದರ ಜೊತೆಗೆ ಅಕ್ಕಪಕ್ಕದ ಮನೆಯವರನ್ನೂ ಪೈಪೋಟಿಗಿಳಿಸಿ ಪುಣ್ಯ ಕಟ್ಟಿಕೊಂಡಳು. ಆ ಮನೆಯೊಳಗೆಲ್ಲೋ ಗುಪ್ತ ನಿಧಿ ಎಂದು ಹೇಗೋ ಹಬ್ಬಿದ ಸುದ್ದಿಯನ್ನು ದಡ್ಡತನಕ್ಕೆ ಹೆಸರಾದ ಅಕ್ಕಪಕ್ಕದ ಮನೆಯವರು ನಂಬಿಬಿಟ್ಟರು. ಹಾಲಪ್ಪ ಕೊಡೋ ರಖಮ್ಮಿಗಿಂತ ಎರಡರಷ್ಜ್ಟು, ಮೂರರಷ್ಟು ಕೊಡುವುದಾಗಿ ಹೇಳುತ್ತ ಶಾಸ್ತ್ರಿಗಳ ಸ್ಥಿರ, ಚರ ಸಂಪತ್ತಿನ ಉತ್ತರಾಧಿಕಾರಿಗಳ ಬಗೆಗೆ ದಟ್ಟಂಡಿ ದಾರಂಡಿ ಅಲೆಯತೊಡಗಿದರು.

ಹಾಗೆ ಬಂದವರನ್ನು ನೋಡಿದಾಗಲೆಲ್ಲ ಆ ಸಾಧ್ವಿಮಣಿ ಸೊಸೆ ‘ಅಸಂತುಷ್ಟಾ ದ್ವಿಜಾ ನಷ್ಟಾಃ’ ಎಂದು ಆರ್ಯೋಕ್ತಿಯನ್ನು ನೆನಪು ಮಾಡಿಕೊಳ್ಳುತ್ತಿದ್ದಳು. ಮನೆಯ ಸುತ್ತ ವಾಸಿಸುವ ಅಷ್ಟದಿಗ್ಗಜಗಳೆಲ್ಲ ತಿಳುವಳಿಕೆ ಇಲ್ಲದವರೆಂದು ವರಲಕ್ಷ್ಮಿಗೆ ಗೊತ್ತು. ಪರಪುರುಷರನ್ನು ಮನೆ ಒಳಗಡೆ ಬಿಟ್ಟುಕೋಬೇಡ ಎಂದು ಅತ್ತೆ ಮಂಚದ ಮೇಲಿಂದಲೇ ಕೂಗುತ್ತಿದ್ದರೂ, ಸೊಸೆ ಬಂದಂಥವರನ್ನು ಅಟವಾಳಿಗೆ ವರೆಗೆ ಬಿಟ್ಟುಕೊಳ್ಳುತ್ತಿದ್ದಳು., ‘ಅಜ್ಞಃ ಸುಖಮಾರಾಧ್ಯ’ ಎಂಬ ಪ್ರಾಚೀನರ ಮಾತನ್ನು ನೆನಪು ಮಾಡಿಕೊಳ್ಳುತ್ತಲೇ ಕೋಸುಂಬರಿ ಪಾನಕ ನೀಡಿ ಸತ್ಕರಿಸುತ್ತಿದ್ದಳು. ‘ವೃಕ್ಷ ಮೂಲಾನಿ ದೂರತಃ ಪರಿವರ್ಜಯೇತ್’ ಎಂಬ ಮಾತಿನಂತೆ ದೂರ ನಿಲ್ಲುತ್ತಿದ್ದಳು. ಸಾರಿಗೆ ವಗ್ಗರಣೆ ಹಾಕಿದಂತೆ; ವಗ್ಗರಣೆಯಲ್ಲಿ ಇಂಗು ಹಾಕಿದಂತೆ ಎಷ್ಟು ಬೇಕೋ ಅಷ್ಟು ಮಾತಾಡುತ್ತಿದ್ದಳು. ‘ನೋಡೋಣ’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡುತ್ತಿದ್ದಳು. ‘ದೀರ್ಘಾಯುಷ್ಮಾನ್‌ಭವ’ ಎಂದು ಆಶೀರ್ವಾದ ಮಾಡಿ ಸಾಗಹಾಕುತ್ತಿದ್ದಳು. ಮನೆ ಕ್ರಯಕ್ಕೆ ಕೊಂಡು ಆಕೆ ಉಡಿ ತುಂಬ ಹಣ ತುಂಬಲು ಬಂದವರು ಆಕೆ ಭಾಷೆಯನ್ನಾಗಲೀ ಮಾತಿನ ಅರ್ಥವನ್ನಾಗಲೀ ಅರ್ಥಮಾಡಿಕೊಳ್ಳುವಲ್ಲಿ ಸೋತು ಒಂಥರಾ ಮುಖ ಮಾಡಿಕೊಂಡು ಹೋಗುತ್ತಿದ್ದರು.

ಅವರು ಅತ್ತ ಹೋಗುತ್ತಲೆ ಇತ್ತ ಅತ್ತೆ ಸೊಸೆಯರ ನಡುವೆ ಜಟಾಪಟಿ; ಗಂಡಾಗುಂಡಿಯೂ ಯಥಾಲಾಪದೊಂದಿಗೆ ಶುರುವಾಗುತ್ತಿತ್ತು. ಅತ್ತೆ ಅಲುಮೇಲಮ್ಮ ವ್ಯಾಸಪೀಟಕ್ಕೆ ಕೈಕೊಟ್ಟು ಅದು ಮುರಿಯುವಂತೆ ಮೇಲೆದ್ದು ಗರ್ವಾಲಂಕೃತಳಾಗಿ ಬರುತ್ತಿರುವಾಗಲೇ ಸೊಸೆ ವರಲಕ್ಷ್ಮಿ ‘ರಾಮರಾಮಾ, ಯಾವ ಮುಖ ಹೊತ್ತು ಈಶೂದ್ರರ ನಡುವೆ ಬದುಕುವುದೋ ಕೃಷ್ಣ ಕೃಷ್ನಾ’ ಎಂದು ಜಗಳದ ಮಂಜ್ರಾ ಆರಂಭಿಸುತ್ತಿದ್ದಳು.

“ಮನೆ ಮಾರೋದು ಬೇಡ … ಮಾಮನವರು ಶ್ರದ್ಧಾಭಕ್ತಿಯಿಂದ ವಿಷ್ಣುಪುರಾಣ ಮನನ ಮಾಡಿಕೊಂಡ ಪವಿತ್ರ ಜಾಗ ಇದು. ಇದನ್ನು ಮಾರಿದವರಿಗೆ ಒಳ್ಳೇದಾಗಲ್ಲ … ಮೊಮ್ಮಕ್ಕಳಾದರೂ ಪಾಪಲೇಶವಿಲ್ಲದೆ ಬದುಕೋದು ಬೇಡವೇ” ಅಲುಮೇಲಮ್ಮ ತನ್ನೆಡಗೈಯನ್ನು ಟೊಂಕಕ್ಕೆ ದತ್ತುಕೊಟ್ಟು ಬಲಗೈಯನ್ನು ಪ್ರತಿಭಾ ಪ್ರಹ್ಲಾದ್ರವರ ದೇಹದಂತೆ ತಿರುಗಿಸುತ್ತ ಹೇಳಲು …
“ಯಾವತ್ತು ಈ ಶೂದ್ರಕೇರಿಲಿರೋ ಮನೇಲಿ ವಸಿಸಲಿಕ್ಕೆ ಹತ್ತಿದ್ರೋ ಅವತ್ತೆ ಫಲ್ಗುಣೀ ನದೀಲಿ ಪಿಂಡ ಪ್ರದಾನ ಮಾಡ್ದಂತಾಯ್ತು ಕಣ್ರತ್ತೆ. ಈ ರಂಡೇಮುಖಾನ ಹೊತ್ತು ಈ ತಾಮಸಾಹಾರಿಗಳ ನಡುವೆ ಹೆಂಗತ್ತೆ ಬದುಕೋದು? ನೀವಂತೂ ಇಂದೋ ನಾಳ್ಯೋ ವೈಕುಂಟಕ್ಕೆ ಪಯಣ ಮಾಡಲಿರೋರು … ಬಾಳಕಾಲ ಬದುಕಿರೋ ನನ್ನ ಗತಿ ಏನು! … ಈ ತಾಮಸಿಗಳು ಹರಿದು ಮುಕ್ಕದೆ ಬಿಟ್ಟಾರೇನು! ಇದ್ಕೊಂದು ಮನಿ ಮಾರದಿದ್ರೆ ಮಕ್ಕಳ ಕೈಯಲ್ಲಿ ಗೋಪಾಳ ಬುಟ್ಟಿ ಕೊಡೋದೆ” ವರಲಕ್ಷ್ಮಮ್ಮ ಮೈಕೇಲ್ ಜಾಕ್ಸನ್‌ನಂತೆ ಇಡೀ ಮೈ ಒನೆಯುತ್ತ ನಾಲಿಗೆಗೆ ಆದಿಶಕ್ತಿ ಸ್ವರೂಪ ಕೊಟ್ಟು ಉತ್ತರ ಕೊಡಲು …
ಇದರಿಂದ ವೃದ್ಧೆ ಕ್ರುದ್ಧೆಯಾಗಿ “ಅದೇನೆ ಹಂಗಾಡ್ತಿದೀಯಾ? … ನನ್ ಮಗ ಶಾಮೂ ನಿನಗಾಗಲೀ ನಿನ್ನ ಮಕ್ಕಳಿಗಾಗಲೀ ಮಾಡಿರುವ ಅನ್ಯಾಯವಾದರೂ ಏನೆ?” ಎಂದು ಕರಾಟೇಕಲಿಯಂತೆ ಬಲಗೈಯ ತುದಿ ಬೆರಳುಗಳಿಂದ ಸೊಸೆಯ ಮುಂದಿನ ಬಾಚಿಹಲ್ಲುಗಳಿಗೆ ತಿವಿದಳು.
ದಂತಪಂಕ್ತಿ ಜುಮ್ಮೆಂದು ಬಿಟ್ಟವು ಆ ಕ್ಷಣ. ಕೋಪವೆಂಬುದು ಕೆಂಪು ರಕ್ತಕಣಗಳಲ್ಲಿ ಪ್ರವಹಿಸಿತು. ತಿವಿದೂ ತಿವಿದೂ ಹಲ್ಲುದುರಿಸಿ ಅಕಾಲ ವೃದ್ಧಾಪ್ಯ ತುರುಕಲು ಅತ್ತೆ ನಿರ್ಧರಿಸಿರುವಳೆಂದು ಬಗೆದು ವರಲಕ್ಷ್ಮಿ-
“ಅದೇನು ಅತ್ತೆ … ಹಂಗ ತಿವೀತೀರಲ್ಲ … ನಿಮ್ಮವೇನು ಕೈಯ್ಯೋ … ನಾಗರಹಾವಿನ ಹೆಡೆಯೋ … ನಿನ್ನ ಮಗ ನಿನಗೂ, ನನ್ನ ಮಕ್ಕಳಿಗೂ ಮಾಡಿರುವ ಅನ್ಯಾಯ ಒಂದೇ ಎರಡೇ … ಅವರು ಬದುಕಿರುವಾಗಲೂ ಸುಖ ಕಾಣ್ಲಿಲ್ಲ … ಸತ್ತ ಮೇಲೂ ಸುಖ ಕಾಣಲಿಲ್ಲ … ಅವರು ಮಾಡಿರೋ ಅನ್ಯಾಯ ಇಡಿ ತಾಲ್ಲೂಕಿಗೆ ಗೊತ್ತು … ಬಿಡಿಸಿ ಹೇಳಿ ನಾನ್ಯಾವ ನರಕಕ್ಕೆ ಹೋಗ್ಲಿ …” ಎಂದು ತಲೆಯ ಮೇಲಿದ್ದ ಸೆರಗನ್ನು ತೊಂಕಕ್ಕೆ ಸಿಕ್ಕಿಸಿಕೊಂಡು ಮುಂದುವರಿದು ಹೇಳಿದಳು-
“ಇದು ನನ್ನ ಗಂಡನ ಆಸ್ತಿ … ನಾನು ಬೇಕಾದ್ದು ಮಾಡ್ತೀನಿ … ಅದನ್ನು ಕೇಳೊಕೆ ನೀವ್ಯಾರು ಅಂತೀನಿ? … ”
ಸೊಸೆಯಾಡಿದ ಈ ಮಾತಿನಿಂದ ಅತ್ತೆಮ್ಮನ ತಾಯ್ತನ ವಿಲಿವಿಲನೆ ಒದ್ದಾಡಿತು. ತಾನು ಬದುಕುತ್ತಿರುವ ಕ್ರಮಕ್ಕೆ ತಾನೇ ಅಸಹ್ಯ ಪಟ್ಟುಕೊಂಡಳು.
“ನನ್ನ ಯಾರು ಅಂತೀಯ್ಹೇನೆ? ಇಂಥ ಮಾತಾಡೋಕೆ ಎಷ್ಟು ಧೈರ್ಯ ಕಣೆ ನಿನಗೆ … ಸತ್ಕುಲಸಂಜಾತೆಯಾಗಿದ್ರೆ ಇಂಥ ಮಾತು ನಿನ್ನ ಬಾಯಿಂದ ಬರುತ್ತಿದ್ದವೇನು!
“ಹ್ಹಾಂ … ನನ್ನ ಕುಲಕ್ಕೇ ಅವಮಾನ ಮಾಡುತ್ತೀರಲ್ಲಾ … ಅಯ್ಯಯ್ಯೋ … ತಾತನವರೇ ನನ್ನನ್ನು ಈ ದರಿದ್ರದವರ ಮನೆ ತುಂಬಿಸಿ ಎಷ್ಟು ಅನ್ಯಾಯ ಮಾಡಿದ್ದೀರಲ್ಕ್ಲಾ …” ಅಂಜಲೀಬದ್ಧಳಾಗಿ ವೈಕುಂಠದ ಕಡೆ ಆರ್ತತೆಯಿಂದ ನೋಡಿದಳು.

“ಎಂಥ ಸೊಸೆ ಗಂಟುಬಿದ್ದಿರುವಳಲ್ಲ ರಾಮ ರಾಮಾ … ನಮ್ಮನ್ನ ದರಿದ್ರದವರು ಅಂತೀಯಾ …ನಿನಗೆ ರೌರವ ನರಕ ಪ್ರಾಪ್ತವಾಗಲೀ … ನೀನು ದರಿದ್ರ … ನಿನ್ನ ಅಪ್ಪ ದರಿದ್ರ … ನಿನ್ನ ಒಡಹುಟ್ಟಿದವರು ದರಿದ್ರದವರು…” ಅಲುಮೇಲಮ್ಮ ಲಟಲಟಾಂತ ಲಟ್ಟಿಗೆ ತೆಗೆದಳು.

ವರಲಕ್ಷ್ಮಿಯ ದೇಹವೆಂಬುದು ಧಗಧಗ ಉರಿಯತೊಡಗಿತು. ಕುಪ್ಪಳಿಸಿ ಎಗರಿ ಅತ್ತೆಯ ದುರ್ಬಲ ಸೆರಗು ಹಿಡಿದುಕೊಂಡಳು.

“ಅದೇನು ಕಂಡು ನಮ್ಮ ವಂಶದವರನ್ನ ದರಿದ್ರ ಅಂತೀಯ ಮುದುಕೀ … ನಿನ್ನ ಗಂಡ ಅಂದ್ರೆ ನಮ್ಮ ಮಾವನಂತೆ ಅಮೇಧ್ಯ ತಿಂದು ಭ್ರಷ್ಟರಾದವರುಂಟೇನು? … ಮದ್ಯ ಸೇವಿಸಿ ಕುಲಗೌರವ ಹಾಳುಮಾಡಿದವರುಂಟೇನು?” ತನ್ನ ಹಿಡಿತ ಮತ್ತು ಜಗ್ಗಾಟವನ್ನು ಭದ್ರಪಡಿಸುತ್ತ ಮುಂದುವರಿದು ಹೇಳಿದಳು ” ಆ ಮಾತು ವಾಪಸ್ಸು ತೊಕ್ಕೊಳ್ಳದಿದ್ದರೆ ಬಿಡೋದಿಲ್ಲ”

ಆಕೆಯ ಹಿಡಿತಕ್ಕೆ ವೃದ್ದೆ ಅಲ್ಲಾಡಿ ಹೋದರೂ ವಿಚಲಿತಳಾಗಲಿಲ್ಲ.

“ನಿನ್ನ ಅಣ್ಣ ತಮ್ಮಂದಿರು ಮಾಡಬಾರದ ಪಾಪ ಮಾಡಿ ಅಕಾಲ ಮರಣಕ್ಕೆ ತುತ್ತಾದುದು ನನಗೆ ಗೊತ್ತಿಲ್ಲಾಂಥ ಅಂದುಕೊಂಡಿರುವೆಯೇನೆ? ಇನ್ನು ನಿಮ್ಮ ತಾತನವರ ಬಗೆಗೆ …”ಎಂದಿನ್ನೇನೋ ಹೇಳುವಷ್ಟರಲ್ಲಿ …
“ನಮ್ಮ ತಾತನವರ ಬಗೆಗೇನಾದರೂ ಒಂದು ಮಾತು ಆಡಿದಿರೀ ಅಂದ್ರ ನಿಮ್ಮ ನಾಲಿಗೆಗೆ ಹುಳು ಬೀಳ್ತವೆ… ಎಷ್ಟೊ ಪಾಪಾತ್ಮಗಳಿಗೆ ಮುಕ್ತಿ ದಯಪಾಲಿಸಿದ ಧರ್ಮಾತ್ಮರು ಅವರು … ಅವರೇನು … ನಿಮ್ಮ ಮಾವನವರಂತೆ ಮಲಗಿದಲ್ಲೇ ಮಲ ಮೂತ್ರ ಬಳಿಸಿಕೊಂಡು ವಿಲವಿಲನೆ ಒದ್ದಾಡಿ ಸಾಯಲಿಲ್ವಲ್ಲಾ … ಅವರ ಹಾಗೆ ತಾತನವರೇನು ಪೋಲೀಸರ ಕೂಡ ಒಡೆಸಿಕೊಂಡು ಜಾತಿಭ್ರಷ್ಟರಾಗಿದ್ದಿಲ್ಲಲ್ಲ …” ಎಂದು ತನ್ನ ಬಾಯಲ್ಲಿದ್ದ ಲಾಲಾರಸವನ್ನು ತುಂತುರು ಹನಿಗಳಾಗಿ ಮಾರ್ಪಡಿಸಿ ಅತ್ತೆಯವರ ಮುಖದ ಸುಕ್ಕುಗಳ ಮೇಲೆಲ್ಲ ಅಲಂಕಾರ ಮಾಡಿದಳು.
ವೃದ್ಧೆ ವರಲಕ್ಷ್ಮಿ ಮಾಡಿದ ಒಂದೊಂದು ಮಾತುಗಳಿಂದ ಜರ್ಝರಿತಳಾಗಿಬಿಟ್ಟಳು.
ಇದು ಲಕ್ಷಾಗೇಹಕ್ಕಿದು, ವಿಶಮ ವಿಶಾನ್ನಕ್ಕಿಳಿದು; ನಾಡ ಜೂದಿಗಿಂದು, ಪಂಚಾಲಿ ಪ್ರಪಂಚಕಿದು … ಎಂದು ಮೊದಲಾಗಿ ಭೀಮನು ಗದಾದಂಡದಿಂದ ದುರ್ಯೋಧನನ ಮೈಗೆ ತದಕುತ್ತ ಮೂದಲಿಸಿದನಲ್ಲ ಹಾಗೆ …
ಸೊಸೆ ವಕ್ಷಸ್ಥಳದ ಮೇಲಿದ್ದ ಹಿಡಿತವನ್ನು ಬಿಗಿಗೊಳಿಸಿದರೆ, ಅತ್ತೆಯೂ ಎಗರಿ ಸೊಸೆಯ ಕಿವಿಗಳೆರಡನ್ನು ಎರಡೂ ಕೈಗಳಿಂದ ಕಪಿಮುಷ್ಟಿ ಚುರುಕುಗೊಳಿಸಿದಳು.
“ಅಯ್ಯಯ್ಯೋ … ನಿನ್ನ ಗಂಡ ಕುಡಿದಿರೋವ್ರು ಅನ್ನೊ ಕಾರಣಕ್ಕಾಗಾದರೂ ಬಿಡಬಾರ್ದೇನೇ … ತಾಯಿ ಎದೆ ಹಾಲು ಕುಡಿದೋಳಾಗಿದ್ರೆ ಹೀಗೆ ಹಿಡಿದುಕೊಳ್ತಿದ್ದೆ ಏನೇ? … ಅದ್ಕೆ ನಿನ್ನ ಮೊಲೆಗಳು ಹಾಲಿಲ್ಲದೆ ಗೊಡ್ಡು ಬಿದ್ದಿರೋದು” ಮುದುಕಿ ನಾಲಿಗೆಯಿಂದ ಕುಟುಕಿತು.
ಕೆಣಕಿದಳು ಸೀಸಕವೆ ರವಿಕಾಂತವಾಗಿ ದಿನೇಶನನು ಕೆಣಕಿದ ವೋಲ್.
“ಅಯ್ಯಯ್ಯೋ … ಚಿತೆ ಏರೋ ವಯಸ್ಸಿನಲ್ಲೂ ಹೇಗೆ ಮಾತಾಡ್ತಿದೆಯಲ್ಲಾ ಈ ಮುದಿ ರಾಕ್ಷಸಿ … ನನ್ನ ಹಾಗೆ ಎರಡು ಹಡೆದುಕೊಂಡಿದ್ರೆ ಇನ್ನೆಷ್ಟು ಮಾತಾಡ್ತಿತ್ತೋ … ಹೊಟ್ಟೇಲಿ ಎರಡು ಮಕ್ಕಳನ್ನು ಇಟ್ಟ ಆ ದೇವರು ಆ ದೇವರು ಮೊಲೇಲಿ ಎರಡು ಮಿಳ್ಳೆ ಹಾಲು ಇಡಲಿಲ್ಲವಲ್ಲಾ … ಇದರಲ್ಲಿ ನನ್ನ ತಪ್ಪೇನಿದೆ ಮುದುಕಿ… ನನ್ನ ಕಿವಿಗಳನ್ನು ಒಳ್ಳೆ ಮಾತಿಂದ ಬಿಡ್ತೀಯೋ ಇಲ್ವೋ …”
ನೀನು ಮೊದಲು ಬಿಡು ಅಂತ ಈಕೆ
ನೀನು ಮೊದಲು ಬಿಡು ಅಂತ ಆಕೆ …
ಯಾರೂ ಸೋಲಲೊಲ್ಲರು!
ಯಾರೂ ಗೆಲ್ಲಲೊಲ್ಲರು!
ಇಂಥ ವಿಷಮ ಪರಿಸ್ಥಿತಿಯಲ್ಲಿ ದೇವರು ಸಹಾಯ ಮಾಡದೆ ಇನ್ನಾರು ಸಹಾಯ ಮಾಡಲು ಸಾಧ್ಯ!
ಆರನೆ ಇಂದ್ರಿಯಗಳು ಜಾಗೃತಗೊಂಡು ಬೆಲ್ ಹೊಡೆಯುವುದಕ್ಕೂ ಮೊದಲೆ ಶಿವರಾಮಶಾಸ್ತ್ರಿ ತಲೆನೊಯ್ಯುವುದೆಂತಲೂ; ಅಶ್ವಥ್‌ನಾರಾಯಣ ಹೊಟ್ಟೆ ನೋಯುವುದೆಂಥಲೂ ನೆಪಒಡ್ಡಿ ಸಂಥೆಯೊಳಗೋಂದು ಮನೆಮಾಡಿ ಶಬ್ದಂಕ್ಕಂಜದೆ ಆಕಳಿಸುತ್ತ ಕೂತಿದ್ದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಗಳಿಸಿದ್ದ ಚನ್ನವೀರಪ್ಪ ಮಾಸ್ತರರ ಪರಮಿಷನ್ ಗಿಟ್ಟಿಸಿಕೊಂಡು ತರಗೆಲೆಗಳೇ ಓಡುತ್ತಿರುವವೋ ಎಂಬಂತೆ ಓಡುತ್ತಬಂದು ಅಮ್ಮಾ; ಅಜ್ಜೀ ಎನ್ನುತ್ತ ಒಳಪ್ರವೇಶಿಸಲು ಅವರಿಬ್ಬರು ತಮ್ಮ ಪಟ್ಟು ಸಡಲಿಸಿ; ಉದಕದಲ್ಲಿ ಅಗ್ನಿ ಬಿಡುಗಡೆಗೊಳ್ಳುವಂತೆ; ಔಷಧದಿಂದ ವ್ಯಾಧಿ ಬಿಡುಗಡೆ ಗೊಳ್ಳುವಂತೆ ಮಂತ್ರ ಪ್ರಯೋಗದಿಂದ ವಿಷ ಬಿಡುಗಡೆಗೊಳ್ಳುವಂತೆ ಅವರಿಂದ ಇವರು, ಇವರಿಂದ ಅವರು ಬಿಡುಗಡೆಗೊಂಡು ರಾಮಾ; ಕೃಷ್ಣಾ ಅಂತ ಭವನ್ನಾಮ ಸ್ಮರಣೆ ಗೈಯುತ್ತ ಪಡಸಾಲೆಯ ಮೂಲೆಗಳನ್ನು ತಲಾ ಒಬ್ಬೊಬ್ಬರು ಆಕ್ರಮಿಸಿಕೊಂಡು ಕೂತುಕೊಳ್ಳಲು ಅದೇ ಪಡಸಾಲೆಯ ಇನ್ನೊಂದು ಮೂಲೆಯಲ್ಲಿ ನಿಘೂಡವಾಗಿ ವಾಸಿಸುತ್ತಿದ್ದ ಶಾಮಾಶಾಸ್ತ್ರಿಯ ಆತ್ಮವು ನಿಟ್ಟುಸಿರು ಬಿಟ್ಟಿತು. ಹಾಂಗೆ ಬಂದು ನೋಡಿಕ್ಕೊಂಡು ಹೀಂಗೆ ಹೋಗಿ ಬಿಡಬೇಕೆಂದು ಯೋಚಿಸಿ ಕೆಲ ಸಮಯದ ಹಿಂದೆ ಬಂದಿತ್ತು. ಬೆಳ್ಳಿ ತೆರೆಯ ಮೇಲಿನ ಘಟನೆಗಳನ್ನು ನೋಡಿ ಆನಂದಿಸಿ; ಉದ್ಗರಿಸಬಹುದಾಗಿತ್ತೇ ವಿನಃ ಚಲನಶೀಲ ಕಥೆಯೊಂದಿಗೆ ತಾದ್ಯಾತ್ಮ ಹೊಂದುವುದು ಸಾಧ್ಯವಿಲ್ಲವೆಂದು ಸತ್ತ ಮರು ಘಳಿಗೆಯೇ ಶಾಮಾಶಾಸ್ತ್ರಿಗೆ ಅರ್ಥವಾಗಿತ್ತು. ದೇಹ ತ್ಯಜಿಸಿದವರಿಗಿರುವ ಒಂದು ಅನುಕೂಲವೆಂದರೆ ಲೀಲಾಜಾಲವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವುದು; ಯಾವುದೇ ರಹದಾರಿಯ ಹಂಗು ಇರುವುದಿಲ್ಲ. ವಿಸರ್ಜನಾಂಗಗಳಿಗೆ ಪೂರ್ಣ ಪ್ರಮಾಣದ ವಿಶ್ರಾಂತಿ, ಹೀಗಾಗಿ ಸೂಕ್ಷ್ಮ ಪ್ರವೃತ್ತಿಯ ಶಾಸ್ತ್ರಿ ನಗುತ್ತಿದ್ದ; ಮರುಗುತ್ತಿದ್ದ … ಆದರೆ ಅವನ ಯಾವುದೇ ಸಂವೇದನೆಗೆ ಬದುಕಿರುವ ಯಾರೂ ಭಾಧ್ಯಸ್ಥರಾಗಿರಲಿಲ್ಲ … ಆದರೆ ಆಸ್ತಿಗೆ ಸಂಭಂಧಿಸಿದಂತೆ ಸಂಭಂದ ಕಡಿದುಕೊಳ್ಳುವುದು ಸತ್ತನಂತರವೂ ಅಸಾಧ್ಯವೆಂಬುದಕ್ಕೆ ಅವನೇ ಸಾಕ್ಷಿ; ಯಾವ ಜೀವ ಇರದಿದ್ದರೂ ಪ್ರೇತದಂತೆ ಮನುಷ್ಯರ ಸಂಭಂದಗಳನ್ನು ವಿಘಟಿಸುವ; ಬೆಸೆಯುವ ಚರಾಸ್ತಿ ಎಂಬ ಸವರ್ಣ ಧೀರ್ಘ ಸಂದಿ ಬಗ್ಗೆ ಅವನು ಅಷ್ಟು ತಲೆ ಕೆಡೆಸಿಕೊಂಡುದುದಿಲ್ಲ. ಅವನನ್ನು ಕಾಡತೊಡಗಿದುದು ಸ್ಥಾವರಲಿಂಗೋಪಾದಿಯಲ್ಲಿ ಗ್ರಾಮದ ನಕ್ಷೆಯಲ್ಲಿ ಶಾಶ್ವತ ಸ್ಥಾನ ಪಡೆದಿರುವ ಮನೆ ಎಂಬ ಸ್ಥಿರಾಸ್ತಿ – ‘ಈ ಮನೆಯಲ್ಲಿ ವಾಸಿಸುವುದು ಪೂರ್ಣಾವಧಿ ಬದುಕನು ಬದುಕುತ್ತಾರೆ ಎಂಬುದಕ್ಕೆ ನಾನೇ ಸಾಕ್ಷಿ ಕಣಯ್ಯಾ’ ಎಂದು ಪರಮೇಶ್ವರ ಶಾಸ್ತ್ರಿಗಳು ತಮ್ಮ ಬದುಕಿನ ಎಂಬತ್ನಾಲ್ಕು ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ಮಾನವ ಲೋಕವನ್ನು ಉದ್ಧೇಶಿಸಿ ಮಾತನಾಡುತ್ತಾ ಅಪ್ಪಣೆ ಕೊಡಿಸಿದ್ದರು. ಅವರೇ ಇಂಥವರು ನೂರಾರು ವಸಂತಗಳನ್ನು ಕಂಡರೆ ಮನುಕಲವನ್ನು ಕಾಪಾಡುವವರ್ಯಾರು? ಎಂಬ ಲೆಕ್ಕಾಚಾರದಿಂದ ಮೃತ್ಯು ಅವರ ಹೃದಯದ ಬಾಗಿಲು ತಟ್ಟಿತ್ತು. ಅವರ ಮಾತನ್ನು ಸುಳ್ಳು
ಮಾಡಲೆಂದಲ್ಲವೆ ತಾನು ಅಲ್ಪಾಯುಷಿಪಟ್ಟವನ್ನೇರಿದ್ದು? ಪ್ರತಿ ಕ್ಷಣ ಮೃತ್ಯುವನ್ನು ಆಲಂಗಿಸಿದ್ದು. ಕಾಡಿ ಬೇಡಿ ದಿನಕ್ಕೊಂದು ಚೂರು ಚೂರು ಸಾಯತೊಡಗಿದ್ದು. ಬ್ರಾಹ್ಮಣ್ಯವನ್ನು ತಾನು ಇಷ್ಟೊಂದು ದ್ವೇಶಿಸಬಹುದೆಂದು ಹತ್ತಿರದವರ್ಯಾರೂ ಅಂದುಕೊಂಡಿರಲಿಲ್ಲ. ಇಂಥ ಕಥೆ ಕಾದಂಬರಿಗಳನ್ನು ಓದಬೇಡಾಂತ ನಾರಾಯಣ ಪ್ರಾಗ್ ಜೋತಿಷಿ ಕೈಲಿದ್ದ ಸಂಸ್ಕಾರವನ್ನು ಕಿತ್ತೆಸೆದದ್ದುಂಟು. ‘ಬ್ರಾಹ್ಮಣರು ಬರೆದಿರೋದ್ನ ಓದದಿದ್ರೆ ಹೇಗಯ್ಯಾ’ ಎಂದು ತಾನು ಸಮರ್ಥಿಸುದ್ದುಂಟು. “ಇಂಗ್ಲೀಷ್ ಕಲ್ತ ಕೂಡ್ಲೆ ಬ್ರಾಹ್ಮಣ್ಯ ಬಿಡುತ್ತಾರೆಂಬುದಕ್ಕೆ ಅದ್ನ ಬರೆದವರೇ ಸಾಕ್ಷಿ ಕಣಪ್ಪ. ಕಿರಸ್ತಾನರ ಹುಡುಗೀನ ಮದುವೆಯಾಗಿ ಕಟ್ಟಾ ಸಂಪ್ರದಾಯಸ್ತರ ವಿರೋಧ ಕಟ್ಟಿಕೊಂಡ … ” ಹೀಗೆ ನುಡಿದ ಪ್ರಾಗ್ಜೊತಿಷಿ ಅವರ ದೂರದ ಸಂಬಂಧಿಯಂತೆ ತಮ್ಮವರು ಎಂಬ ಅಭಿಮಾನವಾದರೂ ಇರುವುದು ಬೇಡವೆ? ಇದರಿಂದ ತನಗೆ ಸಿಟ್ತು ಬಂದಿತ್ತು. ‘ಎಂಥ ಮಾತಾಡ್ತಿದೀ ನಾರಾಯಣ? … ಒಬ್ಬ ಲೇಖಕನ ಸಂವೇದನಾ ಶೀಲತೆ ಒಬ್ಬ ಲೇಖಕ ಓಡುಗನಾದ ಮಾತ್ರ ಅರ್ಥವಾಗುತ್ತದೆ ಎಂಬುದಕ್ಕೆ ನಾನೇ ನಿದರ್ಶನ ನೋಡು. ಸಂಸ್ಕಾರ ಓದದೆ ಮಾತಾಡ್ತಿದೀಯಲ್ಲ! ಕಾದಂಬರಿಯಲ್ಲಿರೋ ಕ್ರಾಂತಿಕಾರಿ ನಾರಾಯಣಪ್ಪನ ಹೆಸರಿಟ್ಟುಕೊಂಡು ಹೀಗೆ ಮಾತಾಡೋದು ಯಾವ ನ್ಯಾಯವಪ್ಪಾ … ಕಟ್ಟಾ ಸಂಪ್ರಯಸ್ಥರೂ; ವಿವೇಕಿಗಳೂ ಆದ ಪ್ರಾಣೇಶಾಚಾರ್ಯರು ಶೂದ್ರ ಹೆಂಗಸು ಚಂದ್ರಿಯನ್ನು ಸಂಭೋಗಿಸಿ ಸನಾತನತೆಯ ಲಕ್ಷ್ಮಣ ರೇಖೆ ದಾಟಿದ್ದು ಕ್ರಾಂತಿ ಅಲ್ಲವೇನು?” ಎಂದು ತಾನು ಸ್ದ್ವೋಪಜ್ಞತೆಯನ್ನು ಪ್ರದರ್ಶಿಸುದ್ದುಂಟು. ಅದಕ್ಕೆ ನಾರಾಯಣ ಅದ್ಭುತನಗೆ ನಕ್ಕು ” ಆ ನಿಮ್ಮ ಪ್ರಾಣೇಚಾರ್ಯರಿಗೆ ತಮ್ಮ ಸಂಭೋಗ ತೀಟೆ ತೀರಿಸಿಕೊಳ್ಳಲು ಶೂದ್ರ ಮಹಿಳೆ ಚಂದ್ರಿಕೆಯೇ ಬೇಕಾಯ್ತೇನು?” ಎಂದಾಡಿದ್ದುಂಟು. ಇಂಥ ಮಾತಾಡುತ್ತಿದ್ದ ಪ್ರಾಗ್ಜೋತಿಷಿ ತುಂಬ ಬುದ್ಧಿವಂಥನಿದ್ದ. ಸಮರ್ಥ ವೈದ್ಯ ಶವ ಪ್ರರೀಕ್ಷೆ ಮಾಡುವ ರೀತಿಯಲ್ಲಿ ಒಂದು ಕೃತಿಯನ್ನು ಓದಿ ಅರಗೈಸಿಕೊಳ್ಳುತ್ತಿದ್ದ. ಬಹುತೇಕ ಸಂದರ್ಭದಲ್ಲಿ ಅವನು ತುಸು ಹೆಚ್ಚು ಮಾತಾಡುತ್ತಿದ್ದುದು ತನ್ನೊಂದಿಗೆ ಮಾತ್ರ. ಅವನ ಅಂತರಂಗದಲ್ಲಿರುತ್ತಿದ್ದ ವೈಚಾರಿಕ ಕೊಂಪೆಯನ್ನು ಸಮಯ ಸಂದರ್ಭ ನೋಡಿ ಲೂಟಿ ಮಾಡುತ್ತಿದ್ದುದೆಂದರೆ ತಾನು ಮಾತ್ರ. ಅವನ ವರ್ತನೆ ಕೆಲವೊಮ್ಮೆ ತನಗೆ ಇರುಸುಮುರುಸಾಗುತ್ತಿದ್ದುದುಂಟು. ಎಲಾ? ಇವನು ಎಲ್ಲ ಬಿಟ್ಟು ಬಿಟ್ಟಿದ್ದಾನಲ್ಲವೆಂದು ದಿಗ್ಭ್ರಮೆಗೊಳ್ಳುತ್ತಿದ್ದುದುಂಟು. ಅವನನ್ನು ಹತ್ತಿರವಿಟ್ಟುಕೊಳ್ಳಲಾರದೆ ದೂರವಿಡಲಾರದೆ ಒದ್ದಾಡುತ್ತಿದ್ದ ಸಂದರ್ಭದಲ್ಲಿಯೇ ಅವನು ಯಾರನ್ನೋ ರಕ್ಷಿಸಲಿಕ್ಕೆ ಹೋಗಿ ಅವರನ್ನು ಬದುಕಿಸಿ ತಾನು ಸತ್ತಿದ್ದ. ಸಾಯುವ ಒಂದು ಕ್ಷಣ ಹಿಂದೆ ಮೈ ಎಲ್ಲ ಸುಟ್ಟು ಕರಟಿದ್ದರೂ ಅವನು ನಗುನಗುತ್ತ ಮಾತಾಡಿಸಿದ್ದ. ಮತಾವ ಕೃತಿ ಓದಿದೆಯೋ? ಎಂದು ಕೇಳಿದ್ದ. ಕೃತಿಯ ಉದ್ದೇಶಕ್ಕೆ ಓದುಗನನ್ನು ಬಲಿ ತೆಗುದುಕೊಳ್ಳುವ ಲೇಖಕನ ಬಗ್ಗೆ ಎಚ್ಚರದಿಂದಿರಬೇಕೆಂದು ತೊದಲಿದ್ದ. ವೈಯಕ್ತಿಕ ಬದುಕನ್ನು ಅರ್ಥ ಮಾಡಿಕೊಳ್ಳುವ ಉದ್ದೇಶಕ್ಕೆ ಕೃತಿಯ ನೆರವು ಪಡೆಯುವುದು ಯಾಕೆ? ಎಂದು ಪ್ರಶ್ನಿಸಿದ್ದ. ನಿನ್ನನ್ನು ನೀನು ಅರ್ಥಮಾಡಿಕೋಽಽ ಸಮಾಜದಲ್ಲಿ ; ಕುಟುಂಬದಲ್ಲಿ ನಿನ್ನ ಪಾತ್ರ ಅರ್ಥಮಾಡಿಕೋ ಎಂದು ಹೇಳುತ್ತ ಅವಧೂತನಂತೆ ಕಣ್ಣು ಮುಚ್ಚಿದ್ದ. ಅವನ ಸಾವು ತನ್ನನ್ನು ಕಾಡಿದ್ದು ನಿಜ, ಅವನ ಮಾತುಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗದೆ ತಾನು ಒದ್ದಾಡಿದ್ದು ಸತ್ಯ. ಕುಟುಂಬದಲ್ಲಾಗಲೀ; ಸಮಾಜದಲ್ಲಾಗಲೀ ತನ್ನ ಅಸ್ತಿತ್ವದ ದೌರ್ಬಲ್ಯದ ಬಗ್ಗೆ ಯೋಚಿಸುತ್ತ ಕಂಗಾಲಾಗಿದ್ದು ನಿಜ. ತನ್ನನ್ನು ತಾನು ತನ್ನೊಳಗೆ ಮರೆಮಾಚಿಕೊಳ್ಳುವುದಕ್ಕಾಗದೆ ತಾನು ಕಲಿಬಾರದಿದ್ದನ್ನೆಲ್ಲ ಕಲಿತದ್ದು ನಿಜ, ಘನಘೋರ್ ನರಕ ಯಾತನೆಯ ಸುಳಿಗೆ ಸಿಲುಕಿ ಪ್ರಜ್ಞೆ ಕಳೆದುಕೊಂಡು ಹಳಹಳಿಸುತ್ತ ಮಲಗಿದ್ದ ತಾನು ಸತ್ತದ್ದೇ ತಿಳಿದಿರಲಿಲ್ಲ, ಬಹುದಿನಗಳವರೆಗೆ … ತನ್ನವರೆಂಬುವವರ ಆಳ ಎತ್ತರಗಳನ್ನು ಅಳೆದು ಮೂಕ ವಿಸ್ಮಿತಗೊಳಿಸುವುದಕ್ಕೆ ಸಾದ್ಯವಾದದ್ದು ಪಾಳುಗೋಡೆಯಂಥ ದೇಹವನ್ನು ಸುಟ್ಟು ಸುಡುಗಾಡಿಗೆ ಕಳಿಸಿದ ನಂತರವೇ. ಕೆಟ್ಟದಾಗಿ ಬಾಲ್ಯ ಕಳೆಯುತ್ತಿರುವ ತನ್ನ ಮುದ್ದು ಮಕ್ಕಳ ಮುಖದ ವಿಷಣ್ಣತೆಯನ್ನು ನೋಡಿದಾಗ, ಗತಕಾಲದ ಒಂದೊಂದು ನೆನಪಿನ ಗಾಢ ಆಸರೆಯೊಂದಿಗೆ ಬದುಕುತ್ತಿರುವ ತನ್ನ ವೃದ್ಧ ಮಾತೆಯನ್ನು ನೋಡಿದಾಗ; ಪಾತಿವ್ರತದ ಮುಖವಾಡದೊಳಗೆ ಸದಾ ಅವಿತುಕೊಂಡಿದ್ದು ವಿಲವಿಲನೆ ಒದ್ದಾಡಿದ ಹೆಂಡತಿಯನ್ನು ನೋಡಿದಾಗಲೆಲ್ಲ ದುಃಖ ಧುಮ್ಮಿಕ್ಕಿ ಬರುವುದು. ತುಸು ಸ್ವಾಂತನ ತರುವ ನೆನಪೆಂದರೆ ತಂಬಾಕಿಯ ಉಂಡೆಯನ್ನು ದವಡೆಯೊಳಗೆ ಆತ್ಮಲಿಂಗೋಪಾದಿಯಲ್ಲಿ ಇಟ್ಟುಕೊಂಡು ಭೀಕರ ವಾಸ್ತವದ ಮೇಲೆ ಪದ್ಮಾಸನ ಹಾಕಿಕೊಂಡಿದ್ದು, ತನ್ನನ್ನು ಹೆತ್ತ ಮಗನಿಗಿಂತ ಹೆಚ್ಚಾಗಿ; ಕಟ್ಟಿಕೊಂಡ ಗಂಡನಿಗಿಂತ ಹೆಚ್ಚಾಗಿ ಅನುಗಾಲ ನೋಡಿಕೊಂಡ ಅನಸೂಯಾಳದ್ದು. ಅವಳ ಋಣವನ್ನು ಪೆಂಡೆ ಪೆಂಡೆ ಕಟ್ಟಿಕೊಂಡೇ ದೇಹದಿಂದ ನುಣುಚಿಕೊಂಡೆನಲ್ಲ ತಾನು!

“ಶಾಸ್ತ್ರಿ … ಅಳಬ್ಯಾಡೋ ಆ ಯಮ ಎಂಭೋನು ನಿನ್ನ ಪಿರಾಣನ ಅದೆಂಗ ಹೊಯ್ತಾನ ನಾನೊಂದು ಕೈ ನೋಡ್ಕಂತೀನಿ” ಎಂದು ಆಕೆ ತನ್ನ ತೊಡೆ ಮೇಲೆ ತಲೆ ಇರಿಸಿಕೊಂಡು ಮಾತ್ರೆಗಳನ್ನು ನುಂಗಿಸುತ್ತಿದ್ದಳು. ಔಷದವನ್ನು ಕುಡಿಸುತ್ತಿದ್ದಳು. ತನ್ನ ಜೀವಚ್ಛವವನ್ನು ಬಚ್ಚಲಿಗೆ ಎತ್ತೊಯ್ದು ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು. ಬಟ್ಟೆ ಬರೆ ತೊಡಿಸಿ; ಮಂಚದ ಮೇಲೆ ಮಲಗಿಸಿ ಓದಲು ಪುಸ್ತಕಗಳನ್ನು; ಪತ್ರಿಕೆಗಳನ್ನು ಪಕ್ಕದಲ್ಲಿಡುತ್ತಿದ್ದಳು. ತಾನು ಅಂಥ ಅವಸ್ಥೆಯಲ್ಲಿದ್ದಾಗ ಕುಂ. ವೀರಭದ್ರಪ್ಪನೂ ಬಂದು ನೋಡಿಕೊಂಡು ಹೋಗಿದ್ದುದಿಲ್ಲ; ಎರಡು ಗುಟುಕು ಎಳೆನೀರು ಕುಡಿಸಿದ್ದುದಲ್ಲ. ಶವ ಸಂಸ್ಕಾರದ ಬಗ್ಗೆ ಮಾತಾಡಿದ್ದ. ಪ್ರಪಂಚದ ವಿಭೂತಿ ಪುರುಷರು ಹೇಗೆ ಹೇಗೆ ಸತ್ತರು? ಹೇಗೆ ಹೇಗೆ ಶವ ಸಂಸ್ಕಾರ ಮಾಡಿಸಿಕೊಂಡು ಇತಿಹಾಸದಲ್ಲಿ ಅಜರಾಮರರಾದರು ಎಂದು ವರ್ಣಿಸಿದ್ದ. ನಮ್ಮ ದೇಶದಲ್ಲಿ ಸಹಜ ಮರಣಗಳು ಬೆಲೆ ಕಳೆದುಕೊಂಡಿವೆ ಎಂದೂ ದುರ್ಮರಣಕ್ಕೀಡಾದವರು ತಮ್ಮ ಜನಪ್ರಿಯತೆಯನ್ನು ಮುಂದುವರಿಸಿಕೊಂಡು ಬರುತ್ತಿರುವರೆಂದೂ; ಸಾಯುವ ಕ್ಷಣದಲ್ಲಿ ಅಲೌಕಿಕವಾದ ಥ್ರಿಲ್ ಅನುಭವಿಸುತ್ತಾರೆ ಮತ್ತು ವಿತರಿಸುತ್ತಾರೆಂದೂ ವಿಚಿತ್ರ ತರ್ಕ ಮಾಡಿದ್ದ. ನಾನು ಬರೆಯಬಹುದಾದ ಕಾದಂಬರಿ, ನೀನು ಸಾಯುವ ಕ್ರಮವನ್ನವಲಂಬಿಸಿರುವುದೆಂದು ಹೇಳಿದ್ದ. ಅವನು ಹಾಗೆ ಮಾತಾಡದಿದ್ದಲ್ಲಿ ತಾನಿನ್ನು ಒಂದಿಷ್ಟು ಕಾಲ ಬದುಕುತ್ತಿದ್ದನೇನೋ! ಅವನಿಂದ ಕಾದಂಬರಿ ಬರೆಯಿಸಿಕೊಳ್ಳಬೇಕೆಂದೇನೋ ತಾನು ಆ ಪರಿ ಸತ್ತಿದ್ದು.

ಆತ್ಮವೂ ನಿಟ್ಟುಸಿರಿಟ್ಟಿತು. ಸುಂಟರ ಗಾಳಿಯನ್ನು ಹುಟ್ಟು ಹಾಕುವಂತಿತ್ತಾ ನಿಟ್ಟುಸಿರು. ಅದಕ್ಕೇ ಇರಬೇಕು ನಾನು ಬರೆಯುತ್ತಿದ್ದ ಶಾಮಣ್ಣ ಕಾದಂಬರಿಯ ಹಸ್ತಪ್ರತಿಯ ಹಾಳೆಗಳು ಇದ್ದಕ್ಕಿದ್ದಂತೆ ಚಲ್ಲಾಪಿಲ್ಲಿಯಾಗುತ್ತಿದ್ದುದು. ಚಲಿಸದ ಫ್ಯಾನನ್ನೋ! ಮುಚ್ಚಿದ ಕಿಟಕಿ; ಬಾಗಿಲುಗಳನ್ನೋ; ಹೆಂಡತಿಯ ಬಿಸಿಯುಸಿರನ್ನೋ ಬಯ್ಯುತ್ತಿದ್ದೆ. ಯಾವ ಚಿಮುಟಿಗೂ ಅವನ ವ್ಯಕ್ತಿತ್ವ ಸಿಕ್ಕದಾಗಿತ್ತು. ಅಕ್ಷರದ ಅಭಯಹಸ್ತಕ್ಕೆ ನಿಲುಕದೆ ದೂರ ಬಹುದೂರ ಸರಿದುಬಿಡುತ್ತಿದ್ದ ಮೃಗಜಲದಂಥ ಅವನ ಸತ್ತ ನಂತರವೇ ಅರ್ಥವಾದದ್ದು. ಜೇಡರ ಬಲೆಯಂಥ ಅವನ ನೆನಪಿನಿಂದ ನಾನು ಬಿಡುಗಡೆಯಾಗಬೇಕಾದರೆ ಅವನ ಕರುಳಿಗೆ ಸಂಬಂಧಿಸಿದ ಎಲ್ಲರೂ ನನ್ನ ಕಣ್ಣ ಪರಿಧಿಯಿಂದ ಬಹು ದೂರ ಹೋಗಿಬಿಡಬೇಕು, ಅಪ್ಪ ಅವರ ಚರಾಸ್ತಿ ಕೊಳ್ಳುವುದರ ಮೂಲಕ ಅವರವರ ದಾರಿ ಹಿಡಿಯಬೇಕು. ಕಣ್ಣಿಗೆ ಕಂಡಿದ್ದೆಲ್ಲ ತನ್ನದಾಗಬೇಕೆಂಬ ಹಠದ ಅಪ್ಪ ನನ್ನ ಆಲೋಚನೆಯ ಚದುರಂಗದಾಟಕ್ಕೆ ದಾಳವಾಗಿದ್ದ. ಆ ಅದ್ಭುತ ದಾಳದ ಚಲನೆಗೆ ನನ್ನ ಶಕ್ತಿಯ ಅಗತ್ಯವಿರಲಿಲ್ಲ. ತನ್ನ ಪಾಡಿಗೆ ತಾನು ನಿರಂತರವಾಗಿ; ನಿರ್ವಿರಾಮವಾಗಿ ಚಲಿಸುವ ದಾಳ ಅದಾಗಿತ್ತು. ರಕ್ತ ಹಂಚಿಕೊಂಡಿರುಚ ನೆಪದಲ್ಲಿ ಅದರೊಂಡಿಗೆ ನಾನೂ ಕದನ ಕುತೋಹಲತನದಿಂದ ನಾನೂ ಚಲಿಸುತ್ತಿದ್ದೆ. ಜಮೀನ್ದಾರಿಕೆ ಗತ್ತು ಠೇಂಕಾರಗಳನ್ನು ಮತ್ತದರ ವರಸೆಗಳನ್ನು ಕಲಿಸುವುದಕ್ಕಾಗಿಯೇ ಅಪ್ಪ ಸದಾ ನನ್ನನ್ನು ತನ್ನ ಹಿಂದಿಟ್ಟುಕೊಂಡಿದ್ದ. ಈಶ್ವರನ ಮುಂದೆ ಬಸವನಂತೆ; ಮಾಕಾಂಬಳಮ್ಮನ ಹಿಂದಿನ ಬನ್ನಿ ಮರದಂತೆ; ಚಹದಂಗಡಿ ಮುಂದಿನ ಬೀಡಿ ಅಂಗಡಿಯಂತೆ ಒಮ್ಮೊಮ್ಮೆ ನನ್ನ ಅಂತರಂಗ ಮಸೀದಿಯಂತೆ ಬಿಕೋ ಎನ್ನುತ್ತಿತ್ತು. ಬಿಕೋತನವನ್ನು ಧ್ಯಾನಮುದ್ರೆಯಿಂದ ಪರಿಗ್ರಹಗೊಳಿಸುತ್ತಿದ್ದೆ.

ಹಗಲೆಲ್ಲ ಹೊಲ ಮೇರೆಗಳಲ್ಲಿ; ತಿಟ್ಟೆ ತಗ್ಗುಗಳಲ್ಲಿ ತಿರುಗಾಡಿ ಹೊಟ್ಟೆ ತುಂಬಿಸಿಕೊಂಡು ತಮ್ತಮ್ಮ ಕೊಟ್ಟಿಗೆಗಳಿಗೆ ಮರಳುವಾಗ ಎಬ್ಬಿಸಿದ ಧೂಳು ಆ ಸಂಜೆಯ ಹೊಂಬೆಳಕಲ್ಲಿ ಕಾವ್ಯಮಯವಾಗಿತ್ತು. ಎದ್ದಿದ್ದ ಅದು ನಿಧಾನವಾಗಿ ನೆಲವನ್ನು ತಬ್ಬಿಕೊಳ್ಳುವ ಕ್ಷಣಾದಲ್ಲಿ ಅಪ್ಪ ಅವರ ಮನೆಗೆ ಹೊರಡುವಾಗ ಸಂಗಡ ನನ್ನನ್ನೂ ಕರೆದೊಯ್ದು – ಅದಕ್ಕೂ ಮೊದಲು ನಿಂಗಮ್ಮಜ್ಜಿ “ಅಲಲಲಾ” ಅಂತು. ಆಗ್ರಾಕ್ಕೆ ಹೋಗಿ ಗೂಬೆ ತಂದಂಗಾಯ್ತಲ್ಲಾ ಅಂತು. ಇದೆಲ್ಲ ನೋಡಾಕೆ ಯಾಕೆ ಬೊದಕಿರಬೇಕಪ್ಪಾ … ಎಂದು ನಿಟ್ಟುಸಿರುಬಿಟ್ಟಿತು. ಇದನ್ನೆಲ್ಲ ಲೆಕ್ಕಿಸದೆ ನಾವು ಅವರ ಮನೆಗೆ ಹೋದೆವು. ಪ್ರಾಚೀನ ಸ್ಮಾರಕದಂತಿದ್ದ ಆ ಮನೆಯನ್ನು ಪ್ರವೇಶಿಸಿದ್ದು ನನ್ನ ಬದುಕಿನ ಅಪರೂಪದ ಕ್ಷಣಗಳಲ್ಲಿ ಒಂದು. ನಾವು ಹೋಗುತ್ತಲೆ ಅಲುಮೇಲಮ್ಮಜ್ಜಿ “ರಾಮ ರಾಮ” ಅಂತ ಮರೆಗೆ ಸರಿದುಕೊಂಡರೆ ವರಲಕ್ಷಮ್ಮ “ಶಿವ ಶಿವ” ಆಂತ ಹೊರಗೆ ಕಾಣಿಸಿಕೊಂಡಳು. ಗೌರವದಿಂದ ಮಾತಾಡಿಸಿ ಕೂಡ್ರಲು ಪೀಠ ಹಾಕಿದಳು. ನಾವು ಕೂತುಕೊಂಡ ನಂತರ ಕಾಫಿ ತಂದುಕೊಟ್ಟಳು. ಹತ್ತಿರ ಬಂದ ಪರಮೇಶ ಅಶ್ವಥ್ ನಾರಾಯಣರ ಮೈದಡವಿದ ಅಪ್ಪ, ಬಾಗಿಲ ಪರದೆಯ ಮರೆಯಲ್ಲಿ ಆಕೆ ತಮ್ಮ ಸಮಸ್ಯೆಗಳ ಬಗ್ಗೆ ಮಾತಾಡತೊಡಗಿದಳು. ಪುರುಷ ಪ್ರಧಾನ ಸಮಾಜವ್ಯವಸ್ಥೆಯ ವಿರುದ್ಧ ನೊಂದ ಮಹಿಳೆ ನಿರ್ಭಿಡೆಯಿಂದ ಮಾತಾಡುತ್ತಿರುವಂತೆ ಭಾಸವಾಯಿತು. ಸೊಸೆಯಾಡುತ್ತಿದ್ದುದನ್ನೆಲ್ಲ ಮರೆಯಲ್ಲಿ ಅಡಗಿದ್ದ ಮುದುಕಿ ಗುಟ್ಟಾಗಿ ಕೇಳಿಸಿಕೊಳ್ಳುತ್ತಿದ್ದುದು ಅದು ಪ್ರ್ತಿಕ್ರಿಯಿಸಿದಾಗ ಬಯಲಿಗೆ ಬಿತ್ತು.

‘ನಮೋ ಸ್ವ್ತನಂತಾಯ ಸಹಸ್ರ ಮೂರ್ತಯೆ’ ಅಂತ ಒಂದು ನಿಟ್ಟುಸಿರು ಬಿಟ್ಟಿತು. ಸಹಸ್ರ ಪಾದಾಕ್ಷಿ ಶಿರೋರು ಬಾಹುವೇ ಅಂತ ಗಂಟಲು ಸರಿಪಡಿಸಿಕೊಂಡಿತು. ಶ್ರೀ ಸಹಸ್ರ ಕೋಟಿ ಯುಗ ಧಾರಿಣೀ ನಮಃ ಅಂತ ಮಾತು ಆರಂಭಿಸಿ ಬಿಟ್ಟಿತು.
“ಯಾವ ಜನ್ಮದಲ್ಲಿ ಯಾವ ಪಾಪ ಮಾಡಿದ್ವೋ ಹಾಲಣ್ಣನವ್ರೇ … ಈ ನರಜನ್ಮದಲ್ಲಿ ಇದನ್ನೆಲ್ಲ ಅನುಭವಿಸೋಕೆ! ನೀವು ನೋಡದೆ ಇರೋದೇನಿದೆ? ಅವರನೂ ಕಳೆದುಕೊಂಡೆ ಇದ್ದೊಬ್ಬ ಮಗನನ್ನೂ ಕಳಕೊಂಡೆ … ಮೊಮ್ಮಕ್ಕಳನ್ನು ಆಡಿಸೋ ಭಾಗ್ಯನೂ ಕಳಕೊಂಡು ಹೇಗಪ್ಪಾ ಬದುಕೋದು”
ಅತ್ತೆಯಾಡಿದ ಮಾತು ಕೇಳಿ ಸೊಸೆ ತನ್ನ ಮುಖದಲ್ಲಿ ಪುಜಾಂ ದ್ರವಿಣಂ ಬ್ರಹ್ಮವರ್ಚಸ್ಸು ಆವಹಿಸಿಕೊಂಡು, “ಹಾಲಣ್ಣಾ, ಮಾವನವರು ಬೇರೆ ಅಲ್ಲ ನೀವು ಬೇರೆ ಅಲ್ಲ ಅಂತ ಒಂದು ಮಾತು ಹೇಳ್ತೀನಿ … ನಾನು ಪಟ್ಟ ಕಷ್ಟದಲ್ಲಿ ಇವರು ತಿಲ ಮಾತ್ರ ಕಷ್ಟಪಟ್ಟಿರುವರೇನು? ದೈನಾತಿ ದೈನ್ಯದಿಂದ ಬದುಕಿದ್ದನ್ನು ನೀವೇ ಕಣ್ಣಾರೆ ನೋಡಿರುವಿರಿ … ಅವರು ಮಾಡಿದ ಕರ್ಮಕ್ಕೆ ನಮ್ಮನ್ನೆಲ್ಲ ಬಲಿ ಮಾಡಿ ಅವರು ಹೊರಟು ಹೋದರು. ಈ ಪುಟಗೋಸಿ ಮನೆ ಇರೋ ನೆಪಕ್ಕೆ ಇಲ್ಲೆ ಇದ್ದುಕೊಂಡು ಅದ್‌ಹೇಗ್ರಿ ಮಕ್ಕಳನ್ನು ಜೋಪಾನ ಮಾಡ್ಲಿ … ನಾನೇನು ಇವರನ್ನು ಕೈಬಿಡ್ತೀನಾ … ಅತ್ತೆ ಅಂದ್ರೂ ಇವರೇ … ತಾಯಿ ಅಂದ್ರೂ ಇವರೇ ಅಲ್ವಾ?”
“ನನ್ನ ತಾಯಿ ಅಂತ ತಿಳಿದುಕೊಂಡವಳಾಗಿದ್ರೆ ಗಂಡ ಸತ್ತ ಒಂದು ವಾರಕ್ಕೆ ಕೋರ್ಟು ಕಛೇರಿ ಅಂಥ ಅಲೆದು ಈ ಮನೇ ಮಠನೆಲ್ಲ ನಿನ್ನ ಹೆಸರಿಗೆ ಮಾಡಿಸ್ಕೊಳ್ಳುತ್ತಿದ್ದೇ ಏನು?”
“ನಾನು ಧೈರ್ಯದಿಂದ ಅಡ್ಡಾಡಿ ಮಾಡಿಸಿಕೊಳ್ಳದಿದ್ದಲ್ಲಿ ಇರೋ ಒಂದು ಮನೆ ಆ ದುಗ್ಗಾಣಿ ಸೂಳೆಯ ಪಾಲಾಗ್ತಿತ್ತು … ನಾನೂ ನನ್ನ ಮಕ್ಕಳೂ ಕೆರೆನೋ ಭಾವೀನೋ ನೋಡಿಕೊಳ್ಳಬೇಕಿತ್ತು” ಎಂದು ವರಲಕ್ಷ್ಮಮ್ಮ ಸೆರಗನ್ನು ಮೈತುಂಬ ಹೊದ್ದು ಎರಡು ಕಣ್ಣುಗಳನ್ನು ಮಾತ್ರ ಪಿಳಿಪಿಳಿ ಬಿಡತೊಡಗಿದಳು.
ಅತ್ತೆ ಸೊಸೆಯರಿಬ್ಬರಾಡಿದ ಮಾತುಗಳನ್ನು ತೂಗಿ ನೋಡಿದೆ. ಸಮರ್ಥನೀಯವಾಗಿದ್ದವು. ಎಲ್ಲ ಆಸರೆಗಳಿಂದ ವಂಚಿತಗೊಳ್ಳುತ್ತ್ತಿರುವ ಅಸಹಾಯಕತೆಯಿಂದ ಅಲುಮೇಲಮ್ಮಜ್ಜಿ ವಿಲವಿಲನೆ ಒದ್ದಾಡುತ್ತಿದ್ದಳು. ಎಲ್ಲ ಸಂಭಂಧಗಳನ್ನು ಕಡಿದುಕೊಂಡು ಕರುಳ ಕುಡಿಗಳೊಂದಿಗೆ ಬದುಕನ್ನು ಜೋಡಿಸುವ ಒತ್ತಡದಿಂದ ವರಲಕ್ಷ್ಮಮ್ಮ ವೈಧವ್ಯ ಪ್ರಾಪ್ತವಾದ ಮರುಕ್ಷಣದಿಂದ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಕಠೋರವಾಗಿ ವರ್ತಿಸುತ್ತಿದ್ದಳು.
ಬೆಣ್ಣೆ ತೂಗುವ ಪ್ರಾಣಿ ಬುದ್ಧಿಯ ಜಾಟಗೆರೆ ಸತ್ಯಪ್ಪನ ಸಹಾಯ ಹಸ್ತ ಯಾಚಿಸಿದ್ದು ಈಕೆ ಮಾಡಿದ ದೊಡ್ಡ ತಪ್ಪು. ಜಿಡ್ಡು ಹಸ್ತದ ಸತ್ಯಪ ಎಂಥವನೆಂಬುದು ಸಮಸ್ತ ಊರಿಗೆಲ್ಲ ಗೊತ್ತಿರುವ ಸಂಗತಿ. ಮಹಾ ದೈವಾಂಶ ಸಂಭೂತನಂತೆ ಸೂರ್ಯೋದಯಕ್ಕೆ ಪೂರ್ವದಿಂದಲೇ ವರ್ತಿಸುವುದಕ್ಕೆ ಶುರು ಮಾಡುವ ಆ ಸಜ್ಜನ ಮೈಬಗ್ಗಿಸಿ ಎಂದೂ ದುಡಿದವನಲ್ಲ. ಈ ಕಡೆಯ ಕಸವನ್ನು ಆ ಕಡೆ ಹಾಕಿದವನಲ್ಲ. ಆದರೂ ಎಲ್ಲರಿಗಿಂತ ಸುಖವಾಗಿರುವ ನರಮಾನ್ನವನೆಂದರೆ ಅವನೊಬ್ಬನೆ.
‘ಆಗಿರೊದಾದರೂ ಏನು? ಸ್ವಲ್ಪ ತಡಿ’ ಅಂತ ಓಣಿಯ ಕೆಲವರು ಆಕೆಯನ್ನು ಅವನ ಬಳಿಗೆ ಹೋಗದಂತೆ ತಡೆಯಲೆತ್ನಿಸಿದರು. ನಿಷ್ಟುರವಾದಿ ವರಲಕ್ಶ್ಮಿ ಯಾರ ಮಾತನ್ನೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ, ಯಾವ ಗಾಳಿಗೂ; ಯಾವ ಚಳಿಗೂ ಹೆದರದೆ ನೀರಿನಲ್ಲಿ ಮುಳುಗಿದವಳಂತೆ ವರ್ತಿಸಿದಳು. ಇವರೂ ಸಹಾಯ ಮಾಡೊಲ್ಲ! ಮಾಡಬೇಕೆಂದೋರನ್ನೂ ಬಿಡೊದಿಲ್ಲ ಎಂದು ಗೊಣಗಿದಳು. ಅವನು ಮಹಾ ಕಚ್ಚೆ ಹರುಕ … ಅದ್ಯೇನೆ ಅವನು ಆ ಹೆಸರಿಟ್ಟುಕೊಂಡಿರೋದು ಎಂದೊಬ್ಬರಾಡಿದ ಮಾತು ಕೇಳಿದ ಮರು ದಿನವೇ ತನ್ನ ದೂರದ ಸಂಭಂದಿ ವೆಂಕಟರಮಣಪ್ಪನೊಂದಿಗೆ ಶೃಂಗೇರಿಗೆ ಹೋಗಿ ಕೇಶವಿಹೀನಳಾಗಿ ಊರಿಗೆ ಮರಳಿದ್ದಳು. ನಿಲುಗನ್ನಡಿ ಮುಂದೆ ಕಾಲು ತಾಸು ನಿಂತುಕೊಂಡು ತನ್ನೀ ರೂಪ ಯಾವ ಗಂಡಸಿನಲ್ಲೂ ಕಾಮವಾಂಛೆಯನ್ನುಂಟು ಮಾಡಲಾರದೆಂಬ ಆತ್ಮವಿಶ್ವಾಸ ತಳೆದಿದ್ದಳು. ಯಾವ್ಯಾವ ಪೌರಾಣಿಕ ಹೆಂಗಸನ್ನು ತಡೆವಿ ಯಾವ್ಯಾವ ಪೌರಾಣಿಕ ಪುರುಷ ಶಾಪಕ್ಕೀಡಾದನು ಎಂಬಿವೇ ಮೊದಲಾದ ಕಥೆಗಳನ್ನು ಬಾಯಿಪಾಠ ಮಾಡಿಕೊಂಡಿದ್ದ ಸತ್ಯಪ್ಪ ಪ್ರಯಾಣ ಮಾಡುವಾಗಲೆಲ್ಲ ನೆನಪು ಮಾಡಿಕೊಳ್ಳುತ್ತ ಮತ್ತು ಪ್ರಸ್ತಾಪಿಸುತ್ತ ಪವಿತ್ರ ವಿಧವೆಯನ್ನು ಕಟ್ಟಿಕೊಂಡು ಈ ಊರಿನಿಂದ ಆ ಊರಿಗೆ; ಆ ಊರಿನಿಂದ ಈ ಊರಿಗೆ ಅಲೆದಾಡಿದ. ಕೆಲವು ಕಡೆ ಒಂದೆರಡು ರಾತ್ರಿ ಆತ ಆಕೆಯೊಡನೆ ಒಂಟಿಯಾಗಿ ಕಳೆದಿರುವುದುಂಟು. ಆದರೆ ಜಖಂ ಮಾಡುದುದಿಲ್ಲ. ಅಕ್ಕಾ; ಅಮ್ಮಾ; ತಾಯಿ; ತಂಗೀ ಎಂದು ಸಂಭೋದಿಸುವವನು ಜಖಂ ಮಾಡುವುವುದಾದರೂ ಹೇಗೆ? ಕಾಮವಾಂಛೆಗೆ ಸಂಬಂಧಿಸಿದಂತೆ ಉತ್ತಮಪುರುಷದಲ್ಲಿ ಹೇಳುವುದಾದರೆ ಮೇಲುಪ್ಪರಿಗೆ ಮನೆಯ ಸತ್ಯಪ್ಪನೆಂಬ ದ್ವಿಪಾದಿಯು ಪರಾಕಾಷ್ಟೆ ತಲುಪಿದಾಗ ಗಾರ್ಧಬಿಣಿ, ಮಹಿಷಿಣಿಯೇ ಮೊದಲಾದ ಚತುಷ್ಪಾದಿಗಳನ್ನು ಬಿಟ್ಟಲ್ಲಿ ಯಾವುದೇ ನಿಷ್ಪ್ರಯೋಜಕ ವಾದ್ಯದಲ್ಲೂ ಅಪರೂಪದ ನಾದ ಹೊರಡಿಸಿ ಸವಿಯಬಲ್ಲ ಮಹಾ ಚತುರ ಸತ್ಯಪ್ಪ ಪ್ರತಿವಾಕ್ಯದಲ್ಲಿ ಗೌರವ ವಿಶೇಷಣಗಳನ್ನು ನಿರಾತಂಕವಾಗಿ ಪ್ರಯೋಗಿಸುತ್ತಿದ್ದುದುದನ್ನು ನೋಡಿ ಜನ ದಿಗ್ಭ್ರಮಿತರಾಗಿದ್ದುಂಟು. ಒಪ್ಪಂದದ ಮೇರೆಗೆ ಒಂದು ಕೈನೋಡಿಕೊಂಡಿರುತ್ತಾನೆಂದು ವಿನಾಕಾರಣ ಆಡಿಕೊಂಡರು. ಆ ಬಗ್ಗೆ ಪ್ರಸ್ತಪಿಸಿದರೆ ಸತ್ಯಪ್ಪನ ಮನಸ್ಸಾಕ್ಷಿ ಖಂಡಿತ ಇಲ್ಲ ಎಂದು ಹೇಳುತ್ತದೆ. ಹೌದು! ಅದು ಹೇಳುವುದು ಸರಿ! ಕೀ|| ಶೇ|| ಪರಮೇಶ್ವರ ಶಾಸ್ತ್ರಿಗಳು ಅವನ ದರಿದ್ರ ನೋಡಲಾರದೆ ಕೇವಲ ನೂರ ಒಂದು ರುಪಾಯಿಗೆ ತೆಂಗಿನಕಾಯಿ ಮಂತ್ರಿಸಿ ಅವನ ಮನೆಯ ತಲೆ ಬಾಗಿಲಿಗೆ ಕಟ್ಟದಿದ್ದಲ್ಲಿ ಅವೆನೆಲ್ಲಿ ಈ ಮಟ್ಟಕ್ಕೆ ತಲುಪುತ್ತಿದ್ದ? ಆ ನೆನಪಿಗೆ ಅವನು ಶಾಸ್ತ್ರಿಗಳ ಭಾವಚಿತ್ರವನ್ನು ಪಡಸಾಲೆಗೆ ನೇತು ಹಾಕಿಕೊಂಡಿರುವನು. ’ಏನಯ್ಯಾ? … ನಮ್ಮ ಮೊಮ್ಮಕ್ಕಳಾದ ಶಾಮಾಶಾಸ್ತ್ರಿಗಳ ವಿವಾಹ ಮಹೋತ್ಸವಕ್ಕೆ ಕಾಣಿಕೆ ಏನು ಕೊಡುತ್ತೀಯಾ?’ ಎಂದು ಶಾಸ್ತ್ರಿಗಳು ಕೇಳಿದ್ದಕ್ಕೆ ಸಾವಿರದಾ ಒಂದು ಎಂದುಬಿಟ್ಟಿದ್ದನು. ಹಾಗೆಯೇ ತಳಿರು ಚಪ್ಪರದ ಕೆಳಗೆ ಕಾಣಿಕೆ ಒಪ್ಪಿಸಿ ಪರಮಾನ್ನ, ಪುಳಿಯೋಗರೆ ಉಂಡು ಹತ್ತು ಹೆಜ್ಜೆಗೊಮ್ಮೆ ಡೆಗುತ್ತ ಮರಳಿ ಮನೆತುಂಬ ಧನ್ಯತಾಭಾವ ಪಸರಿಸಿದ್ದನು. ಹೀಗಾಗಿ ಸತ್ಯಪ್ಪ ವೈಯಕ್ತಿಕವಾಗಿ ಎಷ್ಟೇ ಬ್ರಷ್ಟನಿದ್ದರೂ ಶಾಸ್ತ್ರಿಗಳ ಕುಟುಂಬದ ಸರ್ವ ಸದಸ್ಯರ ಮೇಲೆ ಎಣೆ ಇಲ್ಲದಷ್ಟು ಗೌರವ ಇಟ್ಟುಕೊಂಡಿದ್ದನು. ‘ನಿಮ್ಮ ಮದುವೆಗೆ ಯಾರೂ ಕೊಡದಷ್ಟು ಕಾಣಿಕೆ ಕೊಟ್ಟಿರೋನು ಕಣಪ್ಪ … ಅದಕ್ಕೆ ಒಂದು ಮಾತ್ನ ಕೇಳ್ತಿದ್ದೀನಿ. ಇದೆಲ್ಲ ನಿಮ್ಮಂಥ ಬ್ರಾಂಬ್ರಿಗೆ ಸರಿಹೋಗಲ್ಲ ಬಿಟ್ ಬಿಡಿ’ ಎಂದು ಜಿಲ್ಲಾ ಮುಖ್ಯ ಸ್ಥಳದ ಮುಖ್ಯ ಬೀದಿಯಲ್ಲಿ ಶಾಮಾಶಾಸ್ತ್ರಿಗೆ ಬುದ್ಧಿ ಹೇಳಿದಂಥವನು ಮತ್ತು ಅವನಿಂದ “ಏನಪ್ಪ ನಿನ್ನ ತಿಪಟೂರುಕಡೆ ಬುದ್ಧಿ ನನ್ನ ಹತ್ರ ತೋರಿಸಬೇಡಪ್ಪ … ನಿನ್ನ ಎಲೆಯೊಳಗೆ ಕತ್ತೆ ಸತ್ತಿರೊದ್ನ ಬಿಟ್ಟು ನನ್ನ ಎಲೇಲಿರೊ ನೊಣದ ಬಗ್ಗೆ ಹೇಳೋಕೆ ಬಂದಿದ್ದೀಯ” ಎಂದು ಮುಂತಾಗಿ ವಾಮಾಚಾರವಾಗಿ ಬಯ್ಯಿಸಿಕೊಂಡವನು. ನನ್ನ ಮುಂದೆ ನನಗಿಂತ ಚಿಕ್ಕವರು ಸಾಯೋದನ್ನು ನೋಡಲಿಕ್ಕಾಗದೆ ಬುದ್ಧಿ ಹೇಳಿದೆ ಎಂದೊಂದು ದಿನ ಪಶ್ಚಾತ್ತಾಪಪಟ್ಟ ತಿಪಟೂರು ಮೂಲದ ಮೇಲುಪ್ಪರಿಗೆ ಮನೆಯ ಸತ್ಯಪ್ಪ ಶವಸಂಸ್ಕಾರಕ್ಕೆಂದು ಓಡಿ ಬಂದಾಗ ಕಣ್ಣ ತುಂಬ ನೀರು ತಂದುಕೊಂಡಿದ್ದನು. ದೈವಾಂಶ ಸಂಭೂತರಾದ ಬ್ರಾಹ್ಮಣ ವಂಶದಲ್ಲಿ ಹುಟ್ಟಿದ ಶಾಮಾ ಶಾಸ್ತಿಗಳು ಸತ್ತ ಮೇಲೆ ಶೂದ್ರರಿಗಿಂತ ಅತ್ತತ್ತವಾಗಿ ಶವ ಸಂಸ್ಕಾರ ಮಾಡಿಸಿಕೊಳ್ಳಬೇಕಾಗಿ ಬಂದಿತಲ್ಲ … ಅವರೇನು ಪಾಪ ಮಾಡಿದ್ರು? … ಇದನ್ನೆಲ್ಲ ಅನುಭವಿಸೋಕೆ ನೀನಿನ್ನು ಬದುಕಿದ್ದೀಯಲ್ಲ ತಾಯಿ” ಎಂದು ವರಲಕ್ಶ್ಮಮ್ಮನೆದುರು ಸ್ವಾಂತನ ಹೇಳಿದ್ದನು. “ಅವರು ಸತ್ತು ಲೌಕಿಕ ವ್ಯವಹಾರ ಚುಕ್ತಾ ಮಾಡಿಕೊಂಡ್ರು … ನಮ್ಮದಿನ್ನು ಯಾವತ್ತೋ” ಎಂದು ನಿಟ್ಟುಸಿರುಬಿಟ್ಟ ಆಕೆಗೆ “ಹೆದರಬೇದ ತಾಯಿ ನೀವು ಗಂಡಸಿನಂತೆ ಬದುಕುವಂತಾಗಬೇಕು. ಇದ್ಕೆ ನನ್ನಿಂದ ಯಾವ ಸಹಾಯವನ್ನದ್ರೂ ಪಡೀಬೌದು” ಎಂದು ಹೇಳಿ ಬಂದಿದ್ದನು. ಇಷ್ಟೊಂದು ಹಿನ್ನೆಲೆ ಇರುವ ಸತ್ಯಪ್ಪ ವರಲಕ್ಶ್ಮಮ್ಮನ ಕಡೆಗೆ ಕೆಟ್ಟ ಕಣ್ಣಿನಿಂದ ನೋಡುವವನಾದರೂ ಹೇಗೆ?

ಈತನ ಪ್ರತ್ನಕ್ಕಿಂತ ಮುಖ್ಯವಾಗಿ ವರಲಕ್ಶ್ಮಮ್ಮ ಬ್ರಾಹ್ಮಣಳಾಗಿದ್ದುದು; ಗಂಡನನ್ನು ಕಳೆದುಕೊಂದ ಕೆಲವೇ ದಿನಗಳಲ್ಲಿ ಕೇಶವಿಹೀನಳಾಗಿ ನಾರುಮಡಿಯುಟ್ಟಿದ್ದುದು ತುಂಬಾ ಸಹಾಯಾಕ್ಕೆ ಬಂದಿತು. ಅದೂ ಅಲ್ಲದೆ ಪ್ರತಿಯೊಂದು ಆಫೀಸು, ಕಛೇರಿಗಳಲ್ಲಿ ಎಲ್ಲಿ ನೋಡಿದರೂ ಬ್ರಾಂಹ್ಮಣ ಸಂಜಾತರೇ ತುಂಬಿಕೊಡಿದ್ದುದು ಹೆಚ್ಚಿನ ಸಹಾಯಕ್ಕೆ ಬಂದಿತು. ಸತ್ಯಪ್ಪನ ಸುಗಂಧಯುಕ್ತ ಮಾತುಗಳು ಬೇರೆ .. ಇದೆಲ್ಲ ಒಳ್ಳೆಯ ಪರಿಣಾಮ ಬೀರದೆ ಇರಲಿಲ್ಲ. ಅಯ್ಯೋ ಪಾಪ ಎನ್ನುವವರೆಷ್ಟೋ? ನಾವು ನಮ್ಮವರಿಗೆ ಸಹಾಯ ಮಾಡದಿದ್ರೆ ಹೇಗ್ರಿ ಎನ್ನುವವರೆಷ್ಟೊ? ಹೀಗಾಗಿ ಕೊಡಲೀಲಿ ಹೋಗೋ ಕೆಲಸ ಉಗರಿಂದಾಯಿತು.

ಅಂದ ಮಾತ್ರಕ್ಕೆ ಸತ್ಯಪ್ಪ ವರಲಕ್ಷ್ಮಮಗಷ್ಟೇ ನಿಷ್ಠನಾಗಿರಲಿಲ್ಲ. “ಹೀಗೆಲ್ಲ ಮಾಡ್ತಾ ಇದ್ದೀನಿ ಅಮ್ಮಾ … ಇದ್ಕೆ ನಿಮ್ಮ ಅಭ್ಯಂತರವಿಲ್ಲವಷ್ಟೆ” ಅಂತ ಮಾತೋಶ್ರೀ ಅಲುಮೇಲಮ್ಮನವರನ್ನು ಸಂಧಿಸಿದ್ದ. ಅವನ ಮುಖದರ್ಶನ ಮಾಡಿಕೊಳ್ಳುತ್ತಲೆ ಆಕೆ ವಯ್ಯವಯ್ಯಂತ ವಾಂತಿ ಮಾಡಿಕೊಂಡು ಬಿಟ್ಟಿದ್ದಳು. ಸೂತಕ ಹೋಗಲಾಡಿಸಲಿಕ್ಕೇನು ಮಾಡುವುದಪ್ಪಾ ಅಮ್ಮಾ … ಎಂದು ಪೇಚಾಡಿದ್ದಳು. ಇದರಿಂದ ತಿಲಮಾತ್ರ ಬೇಸರಕ್ಕೀಡಾಗಲಿಲ ಸತ್ಯಪ್ಪ … ದೊಡ್ಡವರು ಯಾವಾಗ್ಲೂ ಹೀಗೆಯೇ ಎಂದುಕೊಂಡುಬಿಟ್ಟ …
“ನನ್ ಮಾತ್ರ ಅಪಾರ್ಥ ಮಾಡ್ಕೋಬೇಡಿ ಅಮ್ಮಾ … ಹಿರೇ ಶಾಸ್ತ್ರಿಗಳ ಋಣದಲ್ಲಿರೋನು ನಾನು … ತಾಯಿ ಸಮಾನರಾದ ನಿಮ್ಮ ಮನ ನೋಯ್ಸಿ ನಾನ್ಯಾವ ನರಕಕ್ಕೆ ಹೋಗ್ಲಿ … ವರಲಕ್ಷಮ್ಮನವರಿಗೂ ಹಕ್ಕಿರುವಂತೆ ಯಾವತ್ತೂ ಆಸ್ತಿಮೇಲೆ ನಿಮ್ಗೂ ಹಕ್ಕಿದೆ. ಎಷ್ಟಿದ್ರೂ ನೀವು ಶಾಮಣ್ಣನ್ನ ಹೆತ್ತೋರು” ಎಂದು ತೂಕದ ಮಾತುಗಳನ್ನಾಡಿದ.
ಅದರಿಂದ ಅಲುಮೇಲಮ್ಮ ಎಷ್ಟೊ ಕರದಿಬಿಟ್ಟಳು.
“ಅರ್ಥ ಆಯ್ತಪ್ಪಾ… ನೀನು ಹೇಳೋದು ಲೌಕಿಕವಾಗಿ ಸರಿ ಇರಬೌದು … ಕಾಗದ ಪತ್ರಗಳಿಗೆ ಸಹಿ ಹಾಕಿ ನಾನ್ಯಾವ ನರಕಕ್ಕೆ ಹೋಗ್ಲಿ … ಬೇಡ … ಬೇಡ … ಹೆಂಡತಿ ಅಂಬೋಳೆ ಎಲ್ಲಾ ಅನುಭವಿಸ್ಲಿ … ನನಗೆ ನನ್ನ ಮಗನ ಕವಡೆ ಕಾಸುಬೇಡ” ನೊಂದ ಮನಸ್ಸಿನಿಂದ ಬಿಲ್ಕುಲ್ ನುಡಿದಿಬಿಟ್ಟಿದ್ದಳು ಆ ವೃದ್ಧೆ.
ಪ್ರಾರಬ್ಧ ಬಗೆಹರಿಯಿತೆಂದು ಸತ್ಯಪ್ಪ ಮನೆಗೆ ಮರಳಿದವನೆ ತಲೆ ಸ್ನಾನ ಮಾಡಿ ಅಂದು ಶನಿವಾರವಾದ್ದರಿಂದ ಹನುಮಂತ ದೇವರ ಗುಡಿಗೆ ಹೋಗಿ ತುಪ್ಪದ ದೀಪ ಮುಡಿಸಿ ಶಿರಸಾಷ್ಟಾಂಗ ಪ್ರಣಾಮ ಸಲ್ಲಿಸಿ ” ನನ್ನದೇನೇ ತಪ್ಪಿದ್ರು ಹೊಟ್ಟೇಲಿ ಹಾಕಿಕೊಂಡು ಕಾಪಾಡು ಪ್ರಾಣದೇವರೇ” ಎಂದು ನಿರುಮ್ಮಳವಾಗಿದ್ದುಬಿಟ್ಟಿದ್ದನು.

ಅತ್ತೆ ಸೊಸೆಯರ ನಡುವೆ ರಾಜಿ ಕುದುರಿಸಲು ಅಪ್ಪ ಹಲವು ರೀತಿಯ ಪ್ರಯತ್ನ ಮಾಡಿದ. ವಿಧವೆಯರು ನಿಟ್ಟುಸಿರು ಬಿಡುವಂತಾಗಬಾರದೆಂಬುದೇ ಆತನ ಧ್ಯೇಯವಾಗಿತ್ತು. “ರಂಡಮುಂಡೇರು ಕಣ್ಣೀರು ಹಾಕಿದ್ರೆ ಈ ದೇಶಕ್ಕೆ ಒಳ್ಳೇದಾಗೋದಿಲ್ಲ” ಅಂತ ಆತ ಮಾತು ಮಾತಿಗೆ ಅಂತಿದ್ದ. ಆದರೆ ನಮ್ಮವರೇ ಆಗಿದ್ದ ಮುವ್ವರು ರಂಡೆಮುಂಡೆಯರಿಗೂ ಆತನಿಗೂ ಆಗುತ್ತಿರಲಿಲ್ಲ. ಅವರ ಹೆಸರು ಎತ್ತಿದರೆ ಮುಂಗುಸಿಯಂತೆ ಸರ್‍ಪರ್ ಸದ್ದು ಮಾಡುತ್ತಿದ್ದುದು ವಿಚಿತ್ರವಾಗಿತ್ತು.

ವಂಶ ಸರ್ವನಾಶಣವಾಗಬಾರದೆಂಬ ಸದುದ್ದೇಶದಿಂದನಿಂಗಮ್ಮಜ್ಜಿ ಆ ಮನೆಯನ್ನು ನಮ್ಮ ಅಪ್ಪ ಯಾ ತನ್ನ ಏಕಮಾತ್ರ ಅಳಿಯ (ಅಳಿಯ ಅಂದರೂ ಅವನೆ; ಮಗ ಅಂದರು ಅವನೆ) ಖರೀದಿಸದಂತೆ ರಚಿಸಿದ್ದ ಅನೇಕ ವ್ಯೂಹಗಳನ್ನು ಲೀಲಾಜಾಲವಾಗಿ ಭೇದಿಸಿ ಮುನ್ನಡೆಯುತ್ತಿದ್ದ ಆ ಧೀರ್ಘ ಕಾಯನನ್ನು (ಅಭಿಮನ್ಯು ಕಾಳಗದಲ್ಲಿ ಸೈಂಧವನ ಪಾತ್ರ ಮಾಡಿ ಫೇಮೋಸಾಗಿದ್ದ) ತಡೆಯುವವರಾರು? ಅತ್ತೆ ಸೊಸೆಯರ ನಡುವೆ ರಾಜಿಕುದುರಿಸಲು ಸತ್ಯಪ್ಪನ ನೆರವು ಪಡೆದರೆ ವಾಸಿ ಎಂದು ಸಂಸಾರ ಸಾಗರಕ್ಕೆ ರೋಸಿ ಭೋಧೆ ಸ್ವೀಕರಿಸಲು ಗುರುಸಾಂತಪ್ಪ ಸಲಹೆ ಮಾಡಿದ ಕೋಡಿಹಳ್ಳಿ ದೊಂಬಿ ಖಟ್ಲೆಯಲ್ಲಿ ತನ್ನ ವಿರುದ್ಧ ಸಾಕ್ಷಿ ನುಡಿದಿದ್ದ ಸತ್ಯಪ್ಪನ ಬಳಿಗೆ ಹೋಗುವುದಾದರೂ ಎಂತ್? “ಲೇ ತಿಪಟೂರುಕಡೆಯ ಕೊಳೆತ ತೆಂಗಿನಕಾಯಿಯೇ … ನನ್ ವಿರುದ್ಧ ಸಾಕ್ಷಿ ಹೇಳುವಷ್ಟು ಧೈರ್ಯ ಬಂತು ನಿನಗೆ… ತಿಂಗಳೊಪ್ಪತ್ತಿನಲ್ಲಿನಿನ್ನ ಊರಿನಿಂದ ಓಡಿಸದಿದ್ದರೆ ನಾನು ಶರಣನ್ನ ಮಗ್ನೇ ಅಲ್ಲ” ಎಂದು ಆತ ಶಪಥ ಮಾಡಿದ್ದುದು ನನ್ನ ನೆನಪಿನಲ್ಲಿತ್ತು. ಜಮೀನ್ದಾರಿಕೆ ನಶಿಸಿಹೋಗಿ ಅದರ ಗತ್ತು ಮಾತ್ರ ಉಳಿದುಕೊಂಡಿರುವ ಅಪ್ಪನಿಗೆ ಆ ತಾಕತ್ತು ಇಲ್ಲವೆಂದು ನನಗೆ ಆಗಿನಿಂದಲೇ ಗೊತ್ತು! ನಾನು ಅಂದುಕೊಂಡಿದ್ದಂತೆ ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. “ಅವನ ಕರುಮಕ್ಕೆ ಅವನೋಗ್ತಾನೆ ಬುಡು” ಅಂತ ಅಜ್ಜಿಯೇ ಸಮಾಧಾನ ಹೇಳಿತ್ತು. ಈ ಕಾರಣದಿಂದ ಅಪ್ಪ ಒಲ್ಲದ ಮನಸ್ಸಿನಿಂದ ಅನುಕೂಲ ಸಿಂಧು ಸತ್ಯಪ್ಪನ ಬಳಿಗೆ ತಾನಾಗಿಯೇ ಹೋಗುವುದು ಸಾಧ್ಯವಿರಲಿಲ್ಲ. ಅವಧೂತ ಗುಸಾಂತಪ್ಪ (ಗುಪ್ತರೋಗಗಳ ತಂಗುದಾಣವೆಂದು ಹೆಸರಾದ)ನೇ ಗಾಂಜಾ ಕೊಳ್ಳುವ ನೆಪದಲಿ ಮೇಲುಪ್ಪರಿಗೆ ಮನೆ ತಲುಪಿದ. ಎರಡು ಚೀಟಿ ಕೊಂಡು ಸೊಂಟದ ಮೂಲೆಯಲ್ಲಿ ಭದ್ರಪಡಿಸಿಕೊಂಡ. ಭವಬಂಧನದ ಬಗ್ಗೆ ರಾಜಕಾರಣದ ಬಗ್ಗೆ ಮಾತಾಡುತ್ತಡುತ್ತ ಶಾಸ್ತ್ರಿಗಳ ಮನೆ ತಗಾದೆ ತಲುಪಿದ. ನತದೃಷ್ಟೆ ವಿಧವೆಯರ ಬಗೆಗೂ ಮಾತೆದ್ದಿದ. ಮುತ್ತು ಪೋಣಿಸಿದಂತೆ ಖರೀದಿದಾರ ಹಾಲಪ್ಪನ ಬಗೆಗೂ ಸಹ ಏನು ಮಾಡಲೂ ಹಿಂಜರಿಯದ ಹಾಲಪ್ಪನೆಂಬ ಪ್ರವಾಹ ವಿರುದ್ಧ ಈಜುವುದು ದಡ್ಡನಲ್ಲದ ಸತ್ಯಪ್ಪ ಅಪ್ಪನ ಪರೋಪಕಾರೀ ಬುದ್ಧಿಯನ್ನು ಹಾಡಿ ಹೊಗಳಿದ. ಅಂತಹ ಒಬ್ಬ ಪರಾಕ್ರಮಿ ತನಗೆ ಶರಣಾಗಬೇಕೆಂದೇ ಕೊಲ್ಲೂರುಸ್ವಾಮಿಗಳಿಂದ ಮಂತ್ರಿಸಿ ತಂದುಕಟ್ಟಿದ್ದ, ಗಣೇಶನನ್ನು ಹೋಲುವ ಎಕ್ಕೆ ಗಿಡದ ಬೊಡ್ಡೆ ಇದ್ದ ತೊಲೆ ಕಡೆ ಭಕ್ತಿಪೂರ್ವಕವಾಗಿ ನೋಡಿ ಸಮಾಧಾನದ ಉಸಿರು ಬಿಟ್ಟು ಅದಕ್ಕೇನು ತಾತ … ಇದ್ಕೇನು ತಾತ ಅಂತ ನಯಸ್ಸಾಗಿ ಮಾತಾಡಿದ. ಅಜಾತಶತ್ರು ಹಾಲಪ್ಪನ ಮನೆಗೆ ಖುದ್ದು ತಾನೇ ಹೋಗುವುದಾಗಿ ವಚನ ನೀಡಿದ. “ತಪ್ಪಿಸಿಕೊಂಡೀಯಾ” ಅಂದಿದ್ದಕ್ಕೆ “ತಿಪಟೂರು ಕಡ್ಯೋರು ಎಂದು ಕೊಟ್ಟ ಮಾತಿಗೆ ತಪ್ಪೋದಿಲ್ಲ ತಾತಾ” ಎಮ್ದು ಸಮರ್ಥಿಸಿಕೊಂಡ.

ಬೋದಿ ವೃಕ್ಷದಂಥ ಗುರುಸಾಂತಪ್ಪ ನೀಡಿದ ಮಾಹಿತಿ ಆಧಾರದ ಮೇಲೆ ಮುಖ್ಯವಾಗಿ ಹೃದಯ ಬಡಿತ ಹೆಚ್ಚಿಸಿಕೊಂಡ ಈಕೈಕ ವ್ಯಕ್ತಿ ಎಂದರೆ ನಾನೆ. ಪುಸ್ತಕಗಳನ್ನು ಓದುತ್ತ ಲೇಖಕನಾದವನಲ್ಲ ನಾನು. ಮನುಷ್ಯನ ಮೇಲೆ ನಿಗಾ ಇಡುವುದೆಂದರೆ ಮೃಷ್ಟನ್ನ ಭೋಜನ ಮಾಡಿದಂಥ ಅನುಭವ ನೆನಪಾಗುವುದು. ಅಪ್ರತಿಮ ಸಾಹಿತಿಗಳೆಂದರೆ, ಕ್ರಾಂತಿಕಾರಿಗಳೆಂದರೆ ಮನುಷ್ಯರೆ. ಒಬ್ಬ ಓದಿದಂತೆಯೇ ಲೆಕ್ಕ. ಆದರೆ ನನಗೆ ಭಾರತೀಯ ಮನುಷ್ಯನ ಜಾಯಮಾನ. ನನಗಾಗಲೀ; ನನ್ನ ಬರಹವಾಗಳಿ ಇದಕ್ಕೆ ಹೊರತಲ್ಲ. ಭಾರತೀಯ ಮನುಷ್ಯನು ಕೆಟ್ಟವನು, ಒಳ್ಳೆಯವನು ಅಂತ ನಾನು ವಿಭಜಿಸಲು ಹೋಗುವುದಿಲ್ಲ. ಇಡೀ ದೇಹವೆಂಭೋ ದೇಹಕ್ಕೆ ಕುಷ್ಟರೋಗ ಹತ್ತಿರುವಾಗ ಒಂಚೂರು ಬೆರಳು ಆರೋಗ್ಯಕರವಾಗಿರಬೇಕೆಂದು ಊಹಿಸುವುದು ಎಷ್ಟು ಅಸಂಜಸ? ಸುಲಭವಾಗಿ ಬದುಕಲಿಕ್ಕೆ ಭಾರತದ ಮನುಷ್ಯ ಒಳದಾರಿ ಕಂಡುಕೊಳ್ಳುವುದರಲ್ಲಿ ಚಾಣಾಕ್ಷ. ಇನ್ನೊಬ್ಬರನ್ನು ಬಲಿ ಕೊಟ್ಟಾದರೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳದೆ ಇರಲಾರ. ಇಂಥವರ ಪೈಕಿ ಮೇಲುಪ್ಪರಿಗೆ ಮನೆಯ ಸತ್ಯಪ್ಪನೂ ಒಬ್ಬ. ಈತನ ಅವಗುಣಗಳನ್ನು ಲೇಖಕನಾಗಿ ನಾನು ತುಂಬ ಇಷ್ಟಪಡುವೆನು. ನಾನೀತನನ್ನು ಮೈ ಎಲ್ಲ ಕಣ್ಣಾಗಿ ಗಮನಿಸುತ್ತ ಬಂದಿರುವೆನು. ಈತನ ಬಗೆಗಿನ ಉಪಕಥೆಗಳನ್ನು ಕೇಳುತ್ತ ಬಂದಿರುವೆನು. ಪ್ರತಿಯೊಂದು ಕಥೆಗೂ ರೋಮಾಂಚನದ ಕಾಣಿಕೆ ನೀಡಿರುವೆನು. ಸದ್ವಿನಿಯದಿಂದಲೇ ಮಾಡಲ್ಪಟ್ಟಂಥ ಸತ್ಯಪ್ಪನ ಬಗ್ಗೆ ಆಲೋಚಿಸುವಾಗ ನನಗೆ ಪಂಚತಂತ್ರದ ಒಂದು ಮಾತು ನೆನಪಿಗೆ ಬರುತ್ತದೆ. ಅದೂ ಮಿತ್ರ ಭೇದಕ್ಕೆ ಸಂಬಂಧಿಸಿದ್ದು.ಅವನು ಹೇಳಿದ್ದಾನೆ ಮುಖಂ ಪದ್ಮದಲಾಕಾರಂ ಅಂದರೆ ಮುಖವು ಪದ್ಮದಳದಂತೆ ಸೊಗಸಾಗಿರುತ್ತದೆ. ವಾಣಿ ಚಂದನ ಶೀತಲಾ ಅಂದರೆ ಮಾತು ಚಂದನದಂತೆ ತಂಪು ನೀಡುತ್ತದೆ. ಹೃದಯಂ ಕರ್ತರೀತುಲ್ಯಂ ಅಂದರೆ ಅವನ ಹೃದಯವು ಕತ್ತರಿಯಂತೆ ಇರುತ್ತದೆ. ಪಂಚತಂತ್ರದ ಕರ್ತೃ ಸತ್ಯಪ್ಪನಂಥವನನ್ನು ನೋಡೇ ಈ ಶ್ಲೋಕ ರಚಿಸಿದ್ದಾನೆಂದು ಹೇಳಬಹುದು. ಸತ್ಯಪ್ಪ ದುಷ್ಟ ಅಂಥ ಗೊತ್ತಿದ್ದರೂ ಅವನ ಸ್ನೇಹವನ್ನು ದೂರ ಮಾಡುವುದು ಎಂಥವರಿಗೂ ಸಾದ್ಯವಿಲ್ಲ. ಅವನ ಬಗ್ಗೆ ಸಾವಿರ ಕೆಟ್ಟ ಮಾತನ್ನಾಡುವವರೆಲ್ಲ ಅವನ ಬಳಿ ಬಾಲಕ್ಕೆ ಬೆಣ್ಣೆ ಹಚ್ಚಿಕೊಂಡು ಕುಂಯ್ ಕುಂಯ್ ರಾಗಾಲಾಪನೆ ಮಾಡುತ್ತ ಬೀಸುತ್ತಲೇ ಇರುತ್ತಾರೆ. ಆದರೆ ನಮ್ಮ ತೀರ್ಥರೂಪ ಮಾತ್ರ ಇದಕ್ಕೆ ಅಪವಾದ. ಅಂದ ಮಾತ್ರಕ್ಕೆ ನಮ್ಮ ತೀರ್ಥರೂಪ ಮಹಾ ಸಜ್ಜನನೆಂದರ್ಥವಲ್ಲ. ಆತ ಹೌದೆಂದರೆ ಹೌದು ಅಲ್ಲ ಅಂದರೆ ಅಲ್ಲ. ಮಾತು ಏಕ್ಮಾರ್ ದೋ ತುಕಡಾ. ನನ್ನ ತಾತ ಮುತ್ತಾತ ಜಮೀನ್ದಾರರಾಗಿದ್ದರು ಅನ್ನೋ ಕಾರಣಕ್ಕೆ ಅದರ ಗತ್ತನ್ನು ಮಾತ್ರ ಉಳಿಸಿಕೊಂಡಿದ್ದ ನನ್ನಪ್ಪ ಅದನ್ನು ತನ್ನ ಪ್ರತಿ ನಡುವಳಿಕೆಯಲ್ಲೂ ಪ್ರಕಟಿಸುತ್ತಿದ್ದ. ಎಲ್ಲರೂ ತನ್ನ ಅಡಿಯಾಳಗಿರಬೇಕೆಂದುಕೊಳ್ಳುತ್ತಿದ್ದ. ಏಷ್ಟೊ ಸಂದರ್ಭದಲ್ಲಿ ಹಾಗಾಗದಿದ್ದಾಗ ಒಳಗೊಳಗೇ ಕೆಟ್ಟದಾಗಿ ನರಳುತ್ತಿದ್ದ. ಹೆಂಡಿರು ಮಕ್ಕಳ ಮೆಲೆ ಕೋಪ ಹರಿಸುತ್ತಿದ್ದ. ಸದೆಯುತ್ತಿದ್ದ. ಹೀಗಾಗಿ ಅವನ ದೇಹದ ಸಣ್ಣ ಕರುಳಿನಲ್ಲಿ ಹೈಡ್ರೋಕ್ಲೋರಿಕ್ ಆಯ್ಸಿಡ್ ಅಗತ್ಯಕ್ಕಿಂತ ಹೆಚ್ಚಾಗಿ ಸ್ರವಿಸಿ ಅಲ್ಲೊಂದು ಇಲ್ಲೊಂದು ಹುಣ್ಣು ಮಾಡಿತ್ತು. ಅದು ಆತನ ಕೋಪಕ್ಕೆ ಕಳಸಪ್ರಾಯವಾಗಿತ್ತು. ‘ಲೇ ಬಣಜಿಗ ನೀನೆ ನನ್ನ ಮನೆ ಬಾಗ್ಲಿಗೆ ಬರೋಹಂಗ ಮಾಡ್ತೀನಿ’ ಅಂತ ಹಿಂದೆ ಒಮ್ಮೆ ಶಪಥ ಮಾಡಿದ್ದ. ಇಷ್ಟು ಟೈಮಿಗೆ ಸರ್ಯಾಗಿ ಸತ್ಯಪ್ಪ ಬರುವನೆಂದು ಗುರುಸಾಂತಪ್ಪ ವಿನಯಪೂರ್ವಕವಾಗಿ ಹೇಳಿದಾಗ ಸಹಜವಾಗಿ ಅಪ್ಪ ಉಬ್ಬಿ ಹೋದ. ಎದುರಾಳಿಯನು ಮಣಿಸುವದ್ರಲ್ಲಿ ಆತ ತುಂಬ ನಿಷ್ಣಾತನಾಗಿದ್ದ. ದಿಗ್ಭ್ರಮೆ ಎಂಬ ಬಲೆಯಲ್ಲಿ ಕೆಡವಿ ಮೂಕ ಪಶು ಚೇತರಿಕೊಳ್ಳದಂತೆ ಮಾಡಿ ಬಿಡಲು ಆತವೇನು ಮಾರಕಾಸ್ತ್ರಗಳನ್ನು ಉಪಯೋಗಿಸುತ್ತಿರಲಿಲ್ಲ. ಸಂಬೋಧನೆಗೆ ಅಗತ್ಯವಾದ ಧ್ವನಿಗೆ ಸ್ವಲ್ಪ ಗತ್ತು ಸೇರಿಸುತ್ತಿದ್ದ. ಗರಿಗರಿ ರೇಶಿಮೆ ಅಂಗಿ ಪರಮಸುಖ್ ಪಂಚೆಯನ್ನು ತೊಡುತ್ತಿದ್ದ. ನುಣ್ಣಗೆ ಬೋಳಿಸಿದ ಮುಖಕ್ಕೆ ಆಫ್‌ಘಾನ್ ಸ್ನೋ ಪೌಡರ್ ಹಚ್ಚುತ್ತಿದ್ದ. ಗಂಧೆಣ್ಣೆ ಹಚ್ಚಿ ಡಬ್ಬಲ್ ಕ್ರಾಪ್ ಬಾಚುತ್ತಿದ್ದ. ಹತ್ತು ಬೆರಳುಗಳ ಪೈಕಿ ನಾಲ್ಕು ಬೆರಳುಗಳಿಗೆ ಉಂಗುರ ತೊಡುತ್ತಿದ್ದ. ಅಲ್ಲದೆ ಘಮಘಮ ಎಣ್ಣೆಯಲ್ಲಿ ಅದ್ದಿ ಒಂಚೂರು ಅರಳೆಯನ್ನು ಬಲಗಿವಿಯ ಮೂಲೆಯಲ್ಲಿ ಅಡಗಿಸಿಟ್ಟು ಉನ್ನತಾಸನದ ಮೇಲೆ ಹನಿಡ್ಯೂ ಸಿಗರೇಟು ಹಚ್ಚಿ ಭಲೆ ಸ್ಟೈಲಿನಿಂದ ಕೂಡುತ್ತಿದ್ದ. ಶ್ರೀಕೃಷ್ಣ ಪಾಂಡವೀಯಂ ಸಿನಿಮಾದಲ್ಲಿ ದುರ್ಯೋಧನ ಪಾತ್ರಧಾರಿ ಎನ್‌ಟಿಆರ್‌ಗೆ ನಮ್ಮಪ್ಪನನ್ನು ತೀರ ಸಹಜವಾಗಿಯೇ ನನ್ನಂಥವರು ಹೋಲಿಸುತ್ತಿದ್ದುದುಂಟು. ಆ ದಿನ ಅಪ್ಪ ಅದೇರೀತಿ ಕೂತುಕೊಂಡ ಕಾಲು ಗಂಟೆಯನಂತರ ಬಿಜಯಂಗೈದ ಮೇಲುಪ್ಪರಿಗೆ ಮನೆ ಸತ್ಯಪ್ಪ ಇದಕೆ ತದ್ವಿರುದ್ಧವಾಗಿದ್ದ. ನಿರ್ಗತಿಕನಂತಿದ್ದ. ವಿಷೇಶ ಗೌರವ ಸೂಚಕವಾಗಿ ಮಾತಾಡುತ್ತ ಬಂದ ಅವನನು ಅಪ್ಪ ನೀಚ ಸ್ಠಾನದಲ್ಲಿ ಕುಳ್ಳರಿಸಿದ. ನನ್ನ ಆಶೀರ್ವಾದದಿಂದಲೇ ನಿನಗೆ ಒಂದು ತುತ್ತು ಕೂಳು ಸಿಗುತ್ತಲಿರುವುದು ಎಂಬ ಧಿಮಾಕಿನಿಂದಲೇ ಅಲ್ಲಡಿಸುತ್ತಿದ್ದ. ತನಗೆ ಶರಣಾದವರಿಗೆ ತುತ್ತು ಪ್ರಸಾದ ಕರುಣಿಸುವುದರಲ್ಲಿ ಅಪ್ಪನ ಒಂದು ಕೈ ಮುಂದು. ಮನೆಯಲ್ಲಿ ಕೂಳು ದುರ್ಬಲವಾಗಿದ್ದರೂ ಪ್ರಸಾದ ಮಾತ್ರ ಅಲಂಕೃತವಾಗಿರುತ್ತಿತ್ತು. ಅದೂ ಅಲ್ಲದೆ ಅಪರೂಪಕ್ಕೆ ಸತ್ಯಪ್ಪ ಬಂದಿದ್ದಾನಂತ ಅವ್ವ ಘಮಘಮ ಪರಿಮಳ ಕಾರುವಂಥ ಉಪ್ಪಿಟ್ಟು ಮಾಡಿದ್ದಳು. ತಿನ್ನೊದು ತಿಂದಾಮೇಲೆ, ಕುಡಿಯೋದು ಕುಡಿದಾದ ಮೇಲೆ ಮಾಅತು ಶಾಸ್ತ್ರಿಗಳ ಮನೆ ವಿಷಯಕ್ಕೆ ಬಂತು. ಎಂಥಾ ಮನೆ? ಎನ್ಕಥೆ? ಅಂಥ ಹೊಗಳಿದರು. ಹಾಗೆಯೇಆ ಮನೆಯ ಪೂರ್ವೇತಿಹಾಸ ಕೆದರಿದರು. ನಮ್ಮಪ್ಪನಾಗಲೀ, ಸತ್ಯಪ್ಪನಾಗಲೀ ಸ್ಥಳಿಯರಾಗಿರಲಿಲ್ಲ. ನೂರು ಮೈಲಿ ದುಉರದೂರಗಳಿಂದ ತಲಾ ಒಂದೊಂದು ತುಗುಡು ಮಾಡಿ ಅದರಿಂದ ಬಚಾವಾಗಲು ಸದರೀ ಉರಿಗೆ ಬಂದು ಯಾರದೋ ಆಸ್ತಿ ಮೇಲೆ ವಿಜಯ ಪತಾಕೆ ಹಾರಿಸಿದಂಥವರು. ತುಡುಗಿನ ವಿಷಯದಲ್ಲಿ ನಮ್ಮಪ್ಪ ಒಂದು ಹೆಜ್ಜೆ ಮುಂದು. ಸರ್ಕಲ್ ಇನ್ಸೆಕ್ಟರ್ ಮಗಳನ್ನ ಲವ್ ಮಾಡಿ ಓಡಿ ಬಂದಿರೋ ನಮ್ಮಪ್ಪನ ಬಗ್ಗೆ ಬರೆದರೆ ತ್ರಿಶಂಕು ಸ್ಥಿತೀಲಿರೋ ಶಾಮನ ಆತ್ಮ ವಿಲಿವಿಲಿ ಒದ್ದಾಡುವುದು ಗ್ಯಾರಂಟಿ. ‘ನಿಮ್ಮಪ್ಪನ ಘನ ಕಾರ್ಯಗಳ ಬಗ್ಗೆ ನಾನೊಂದು ಕಾದಂಬರಿ ಬರೀತೀನಿ ನೋಡ್ತಿರು’ ಎಂದು ಆತ ಅಂತಿದ್ದುದು ನೆನಪಾಗುತ್ತದೆ. ಬೇರೆಯವರ ಬಗ್ಗೆ ಅಷ್ಟು ಆಸಕ್ತಿ ಇರದಿದ್ದ ಅವನಿಗೆ ಮೇಲುಪ್ಪರಿಗೆ ಮನೆ ಸತ್ಯಪ್ಪನ ಬಗ್ಗೆ ಅಷ್ಟು ಗೊತ್ತಿಲ್ಲ. ನಾನು ಶೋಧಿಸಿರುವ ಪ್ರಕಾರ ಆತ ತಿಪಟೂರಿನಲ್ಲಿ ತೆಂಗಿನಕಾಯಿ ಸಗಟು ವ್ಯಾಪಾರಿಯಾಗಿದ್ದ. ಆತನ ಇಬ್ಬರುಹೇಂಅತಿಯರೂ ಅನುಮಾನಸ್ಪದವಾಗಿ ಸತ್ತಿದ್ದರು. ಭೈರಪ್ಪನವರ ಸಾಕ್ಷಿ ಕಾದಂಬರಿಯ ನಾಯಕನಂತಿದ್ದ ಆತ ಸದರೀ ಊರಿಂದ ಮೇಲುಪ್ಪರಿಗೆ ಮನೆಯ ಶಾಂತಪ್ಪ ತೆಂಗಿನಕಾಯಿ ಖರೀದಿಗೆ ತಿಪಟೂರಿಗೆ ಹೋದಾಗಲೆಲ್ಲ ಸತ್ಯಪ್ಪನ ಮನೇಲಿ ಉಳಕೊಳ್ತಿದ್ದ. ನ್ಯಾಸ್ತ ಬೆಳೆಸಿದ. ಗಇ ನ್ಯಾಸ್ತ ಅದು. ಸದರೀ ಊರಿಗೂ ಬರ್ತಿದ್ದ.. ಹೋಗ್ತಿದ್ದ. ಒಂದು ದಿನ ಶಾಂತಪ್ಪ ಅರಗಿಣಿಯಂಥ ಹೆಂಡತಿಯನ್ನೂ; ಲಕ್ಷ ಸುಮಾರುಆಸ್ತಿಯನ್ನು ಬಿಉಹೇಳದೇ ಕೇಳದೆ ಪರಲೋಕಕ್ಕೆ ಹೊರಟುಹೋದ. ಮಣ್ಣಿಗೆ ಅಂತ ಬಂದ ತಿಪಟೂರಿನ ಸತ್ಯಪ್ಪ ಮೇಲುಪ್ಪರಿಗೆ ಮನೆ ಸತ್ಯಪ್ಪನಾದ. ಆ ಕಡೆಯೂ ತಲೆ ಅಲ್ಲಾಡಿಸುವುದೂ ಈ ಕಡೆಯೂ ತಲೆ ಅಲ್ಲಾಡಿಸುವುದು, ಕಸುಬು ಮಾಡಿಕೊಂಡ. ಅಂದರಿಕಿ ಮಂಚಿವಾಡು ಅನ್ನಿಸಿಕೊಂಡ. ಇಷ್ಟು ಈತನ ಸಂಕ್ಷಿಪ್ತ ಚರಿತ್ರೆಯು.
ಅಪ್ಪನೂ ಸತ್ಯಪ್ಪನೂ ಹೇಳೋದನ್ನೆಲ್ಲ ಹೇಳಿದರು, ಕೇಳೊದನ್ನೆಲ್ಲ ಕೇಳಿದರು. ಹ್ಳುತ್ತ ಕೇಳುತ್ತ ಅದ್ಭುತ ಮಿತ್ರರಾಗಿ ಮಾರ್ಪಾಡು ಹೊಂದಿಬಿಟ್ಟಿದ್ದರು.

“ಹಾಲಪ್ಪಣ್ಣಾ … ಈಗ ನನ್ನ ಮನಸ್ಸಿಗೆ ಹಾಲು ಅನ್ನ ಊಟ ಮಾಡ್ದೊಷ್ಟು ಸಂತೋಷ ಆಯ್ತು ಕಣಪ್ಪಾ … ನಿಮ್ಮ ಬಲವಂದಿದ್ರೆ ಇಡೀ ಊರ್‍ನೇ ಬೆಂಕಿ ಪೊಟ್ಟಣದಲ್ಲಿಟ್ಟು ನಿಮ್ಗೆ ನಜರೊಪ್ಪಿಸೇನು ಕಣಣ್ಣಾ … ಆ ಮನೇಲಿ ಹುಟ್ಟಿದ್ದ್ರಿಂದ್ಲೆ ತಾನೆ ದುರ್ಗಪ್ಪ ಹಾಲು ಮೊಸರ್ನಲ್ಲಿ ಕೈಕಾಲು ತೊಳೀತಿರೋದು. ಆ ಮನೇಲಿವಾಸ ಮಾಡಿದ ಮೇಲೆ ತಾನೆ ಪರಮೇಶ್ವರ ಶಾಸ್ತ್ರಿಗಳ ನಾಲಿಗೆಗೆ ದೈವೀ ಶಕ್ತಿ ಲಭಿಸಿದ್ದು … ಆ ಮನೇಲಿ ಇಲಿ ಹೋದ್ರೆ ಹುಲಿ ಆಗ್ತದೆ ಕಣಪ್ಪಾ … ನೋಡ್ತಿದೀರಲ್ಲಾ ಆ ಅತ್ತೆ ಸೊಸೆ ಆಡ್ತಿರೋದ್ನ … ನೀವೇನುಚ್ ಚಿಂತೆ ಮಾಡಬೇಡಿ … ಅವರಿಬ್ರು ನಾನು ಹಾಕ್ದ ಗೆರೆ ದಾಟೋದಿಲ್ಲ. ನಿಟ್ಟುಸಿರು ಬಿಡ್ದ ಹಾಗೆ ಆ ಮನೇನ ನಿಮಗೆ ಕೊಡಿಸೋ ಹಾಗೆ ಮಾಡ್ತೀನಿ … ನಿಮ್ಮಂಥ ದೊಡ್ಡ ಮನಸ್ಸು ಈ ಊರಲ್ಲಿ ಯಾರಿಗೆದ್ದೀತು ಹಾಲಣ್ಣ? … ಬೇರೆಯವರಾಗಿದ್ರೆ ಹೀಗೆ ಯೋಚಿಸ್ತಿದ್ದ್ರಾ? …” ಇನ್ನೂ ಏನೇನೋ ತಿಪಟೂರು ತೆಂಗಿನಕಾಯಿಯಂಥ ಮಾತುಗಳನ್ನು ನಿರರ್ಗಳವಾಗಿ ಹೊಡೆದ.
ಆ ಮಾತುಗಳನ್ನು ಕೇಳುತ್ತಿದ್ದ ನನಗೆ ಹಂಪಿ ವಿರೂಪಾಕ್ಷ ದೇವಾಲಯದ ಪ್ರಾಂಗಣದಲ್ಲಿರುವ ಶ್ರೀಕೃಷ್ಣ ದೇವರಾಯನನ್ನು ಹಾಡಿ ಹೊಗಳುವ ಶಿಲಾಶಾಸನ ನೆನಪಾಯಿತು.

ಶ್ರೀಕೃಷ್ಣ ಭೂಪಾಲನಂತೆಯೇ ನಮ್ಮ ಅಪ್ಪಾಜಿ ಉಬ್ಬಿಹೋದ. ಮೊದಲೇ ಜಮೀನ್ದಾರೀ ಮನಸ್ಸಿನ ವ್ಯಕ್ತಿ.
ಅಲ್ಲಿಂದ ಹೋದ ಸತ್ಯಪ್ಪ ಅತ್ತೆ ಸೊಸೆಯರಿಗೆ ಏನು ಮೋಡಿ ಮಾಡಿದನೋ? ಏನೋ! “ನೀನು ಹೆಂಗೆ ಹೇಳ್ತೀಯೋ ಹಂಗೆ ಕೇಳ್ತೀವಿ” ಎಂದಿಬ್ಬರು ರಾಜಿಗೆ ಬಂದುಬಿಟ್ಟಿದ್ದೊಂದು ಸೋಜಿಗ. ಹಾಗೆ ಒಪ್ಪಿಕೊಂಡಿದ್ದೂ ಅಲ್ಲದೆ ಪರಮಾನ್ನ; ಅನ್ನ ಹುಳಿ ಸಮಾರಾಧನೆ ಮಾಡಿದರಂತೆ … ತಾಂಬೂಲ ಸ್ರಕ್ಚಂದನ ನೀಡಿ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ಅಂತ ಶರಣಾಗತ ಭಾವೋನ್ಮುಖರಾಗಿ ಬೀಳ್ಕೊಟ್ಟರಂತೆ.
ಅವರಿಬ್ಬರನ್ನು ಹೇಗೆ ಒಂದು ಮಾಡಿದಿ ಅಂತ ಒಬ್ಬರು ಯಾರೋ ಕೇಳಿದ್ದಕ್ಕೆ ಸತ್ಯಪ್ಪ ಬಾದಾಮು ಕಲ್ಲರಿನ ಅಂಗಿ ಎತ್ತಿ ವೃಕೋದರದ ತಪ್ಪಲಲ್ಲಿ, ಎಂದರೆ ಎರಡುವರೆ ದಶಕದಿಂದ ಸೊಂಟಕ್ಕೆ ಕಟ್ಟಲ್ಪಟ್ಟಿರುವ ಉಡುದಾರಕ್ಕೆ ಕಟ್ಟಲ್ಪಟ್ಟು; ಒಂದೊಂದು ಹೆಜ್ಜೆಗೆ ಒಂದೊಂದು ರೀತಿಯಲ್ಲಿ ನರ್ತನಂಗೈಯುವ ಎರಡೂವರೆ ಇಂಚುದ್ದದ ತಾಯಿತವನ್ನು ತೋರಿಸಿದನಂತೆ. ಅದನ್ನು ಸಾಕ್ಷಾತ್ ಕಲಿಯುಗದ ಯೋಗವಾಸಿಷ್ಠ್ರೆರೆಂದೇ ಹೆಸರಾಗಿದ್ದ ಪರಮೇಶ್ವರ ಶಾಸ್ತ್ರಿಗಳೇ ಮಂತ್ರಿಸಿ ತಮ್ಮ ಕೈಯಾರೆ ಕಟ್ಟಿರುವರಂತೆ … ಅವರು ಕಟ್ಟಿರದಿದ್ದಲ್ಲಿ ಕೀ.ಶೇ.ಶಾಂತಪ್ಪನ ಹುಲಿಯಂಥ ಭಾವಮೈದುನರೈವರು ಕೊಟ್ಟೂರು ಕೆರೆಯ ತೂಬಿನಲ್ಲಿ ಸತ್ಯಪ್ಪನನ್ನು ಬಚ್ಚಿಟ್ಟುಬಿಡುತ್ತಿದ್ದರಂತೆ… ಅದು ಸೊಂಟದಲ್ಲಿವವರೆಗೆ ಯಾರೂ ತಾನ ಸ್ಯಾಟವನ್ನು ಹರಿದುಕೊಳ್ಳುವುದು ಸಾಧ್ಯವಿಲ್ಲವಂತೆ… ಮುಟ್ಟು ನಿಂತಿರುವ ಯಾರಾದರೂ ಅದನ್ನು ಸ್ಪರ್ಶಿಸಿದರೆ ಸುಟ್ಟುಭಸ್ಮವಾಗುವರಂತೆ… ಆದ್ದರಿಂದ ಆತ್ಮಲಿಂಗೋಪಾದಿಯಲ್ಲಿರುವ ಅದನ್ನು ತಾನು ಪ್ರಾಣಕಿಂತ ಹೆಚ್ಚಾಗಿ ಕಾಪಾಡಿಕೊಳ್ಳುತ್ತಿರುವನಂತೆ… ಹೀಗೆ ಒಂದು ಪುರಾಣವನ್ನೇ ಬಿಚ್ಚುವ ಸತ್ಯಪ್ಪ ಸದಾ ದೇಶಾವರಿ ನಗೆಯನ್ನು ಮುಖದ ತುಂಬ ಮೆತ್ತಿಕೊಂಡಿರುವನು… ಅಂತೂ ಅವನ ಪ್ರಭಾವದಿಂದಾಗಿಯೋ; ಆತ ಕಟ್ಟಿಕೊಂಡಿರುವ ತಾಯಿತದ ನಿಘೂಡ ಶಕ್ತಿಯ ಪ್ರಭಾವದಿಂದಾಗಿಯೋ ವಿಶಿಷ್ಟ ಚಕ್ಕು ಬಂದಿಯ ಕೀ.ಶೇ.ಶಾಮಾಶಾಸ್ತ್ರಿಯ ಪಿತ್ರಾರ್ಜಿತ ಮನೆ ಅಪ್ಪನಿಗೆ ಇಂತಿಷ್ಟೂಂತ ವಿಲೇವಾರಿಯಾಯಿತು.

“ಗೃಹಾಂತ ದ್ರವ್ಯ ಸಂಘಾತಾ” ಹಣವನ್ನು! ಸಂಪಾದಿಸುವುದು ಒಳ್ಳೆಯ ಮನೆಯನ್ನು ಕಟ್ಟುವುದಕ್ಕಾಗಿ ಅಂತ ವಿಷ್ಣುಪುರಾಣ ಸಾರಿ ಸಾರಿ ಹೇಳಿದೆ. ಆದರೆ ವಿಧವೆಯರು ಹಣಕ್ಕಾಗಿ ಮನೆಯನ್ನೇ ಮಾರಿದ್ದು ಎಂಥ ವಿಚಿತ್ರ! ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಅಗಲಿಸಿತೆಂಬುದಕ್ಕೆ ಅತ್ತೆ ಸೊಸೆಯರಿಬ್ಬರೂ ಬಂದ ಹಣ ಹಂಚಿಕೊಳ್ಳಲು ಕಚ್ಚಾಡದೇ ಇರಲಿಲ್ಲ. ಬಂದ ಹಣಕ್ಕೇನು ಗೊತ್ತು? ಇವರಲ್ಲಿ ಒಳ್ಳೆಯವರ್‍ಯಾರು ಕೆಟ್ಟವರ್‍ಯಾರೂಂತ. ಯಾರ ಹತ್ತಿರ ಬಲ ಇರುತ್ತೋ ಅವರನ್ನು ಸೇರೋದು ಅದರ ಜಾಯಮಾನ. ‘ನಾಂತರಜ್ಜಾ ಶ್ರೀಯೋ ಜಾತು ಪ್ರಿಯೈರಾಸಾಂ ನಭೂಯತೆ’ ಸಂಪತ್ತಿಗೆ ನೀಚ ಮತ್ತು ಉತ್ತಮ ಎಂಬ ತರತಮ ಭೇಧವಿರುವುದಿಲ್ಲ. ಸಂಪತ್ತು ನಮ್ಮನ್ನು ಪ್ರೀತಿಸ್ತಿದೆ ಅಂತ ಮೂರ್ಖರು ಮಾತ್ರ ತಿಳಕೊಂಡಿರ್‍ತಾರೆ … ಚಪಳೆ ಸೊಡರ ಕುಡಿಯುಂ ಪೋಳ್ವಲ್ ಅಂಥ ನಮ್ಮ ಮಾರ್ಗ ಕವಿ ನಯಸೇನ ಹೇಳಿರೋದು ಅಕ್ಷರಶಃ ನಿಜ. ಅದು ಯಾರೊಬ್ಬರ ಜೇಬಿನಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ತೊಗೊಳ್ಳೋ ಜಾಯಮಾನದ್ದಲ್ಲ. ಪಟಾಕಿಯಂತೆ ನಿಶ್ಶಬ್ದವಾಗಿ ಚಟಚಟ ಸಿಡಿಯುತ್ತಲೇ ಇರುತ್ತದೆ. ತನಗೆ ಆಶ್ರಯ ನೀಡಿದವರಿಗೆ ಹೊಸ ಹೊಸ ಪ್ರೇರಣೆಗಳನ್ನು ನೀಡುತ್ತಲೇ ಇರುತ್ತದೆ. ಹೆಣಗಳ ಹಿಂದೆ ಸದ್ದು ಮಾಡುವ ರೀತಿಯಲ್ಲಿ; ಮಂಗಳಾರತಿ ತಟ್ಟೆ ಮೇಲೂ ಶಬ್ದ ಮಾಡುತ್ತದೆ, ಮನುಷ್ಯ ಮನುಷ್ಯನ ನಡುವೆ ಸಮಾಜ ಸಮಾಜಗಳ ನಡುವೆ ದೇಶ ದೇಶಗಳ ನಡುವೆ ಗೆರೆ ಎಳೀತದೆ; ಗೋಡೆ ಕಟ್ಟುತ್ತದೆ, ಇನ್ನೇನೆಲ್ಲ ಮಾಡುತ್ತದೆ ಮಾಡಿಸುತ್ತದೆ. ಪ್ರಪಂಚದಾದ್ಯಂತ ಅದು ಒಂದೇ ಭಾಷೆಯಲ್ಲಿ ಮಾತಾಡುತ್ತದೆ. ಎಂಥೆಂಥವರನ್ನೂ ಮಣ್ಣು ಮುಕ್ಕಿಸಿದ ಅದಕ್ಕೆ ಈ ವಿಧವೆಯರು ಯಾವ ಲೆಕ್ಕ?

“ನನ್ನ ಪಾಲಿಗೆ ಬರೋದನ್ನು ಕೊಟ್ಟು ಬಿಡು ವರಲಕ್ಶ್ಮೀ … ಮುದುಕೀನ ಗೋಳು ಹುಯ್ಕೊಂಡರೆ ನಿನಗೆ ಒಳ್ಳೇದಾಗೋದಿಲ್ಲ” ನೀರು ತುಂಬಿದ ತಾಮ್ರದ ತಂಬಿಗೆಯನ್ನು ನೆಲದ ಮೇಲೆ ಕುಕ್ಕಿ ಮುದುಕಿ ತಲೆಗೆ ಕೈಹೊತ್ತು ಕೂತುಬಿಟ್ಟಿತು.
“ಅಯ್ಯೋ ರಾಮ ರಾಮ … ಈ ವಯಸ್ಸಿನಲ್ಲಿ ಹಣ ತಗೊಂಡೇನು ಮಾಡ್ತಿದ್ದೀತು ಇದು?” ಗಟ್ಟಿಯಾಗಿಯೇ ಗೊಣಗಿದಳು ಸೊಸೆ.
“ನಾನೇನಾರ ಮಾಡ್ಕೋತೀನೇ … ಅದನ್ನ ಕೇಳೊಕೆ ನೀನ್ಯಾರೆ?”
“ನಾನ್ಯಾರಂತೀರಲ್ಲ … ನಾನು ನಿಮ್ಮ ಸೊಸೆ.”
“ನನ್ ಮಗ ಯಾವತ್ತು ಸತ್ನೋ … ಅವತ್ತೇ ನನ್ನ ನಿನ್ನ ಋಣ ತೀರ್‍ತು.”
“ಎಹ್ಟು ಹಗುರಾಗಿ ಮಾತಾಡ್ತಿದೀರಲ್ಲ … ನಾನು ನಿಮ್ಮ ಸೊಸೆ ಅಲ್ವೇ?”
“ಸೊಸೆ ಆಗಿದ್ರೆ … ಇಡೀ ಗಂಟು ನನ್ನ ಕೈಲಿ ಕೊಟ್ಟು ಹಿರೇಳಾದ ನಾನು ಹೇಳ್ದಂಗೆ ಕೇಳ್ಕೊಂಡು ಬಿದ್ದಿರ್‍ತಿದ್ದಿ ಕಣೆ”
“ಬಿದ್ದಿರೋಕೆ ನಾನೇನು ನಾಯಿಯಲ್ಲ”
“ಹಾಗಿದ್ರೆ ಕೊಟ್ಟು ಬಿಡು ನನ್ನ ಪಾಲಿಂದು”
“ತಗೊಂಡೇನ್ಮಾಡ್ತೀರಂತ”
“ಹಾಳುಭಾವಿಗೆ ಬೀಳ್ತೀನಿ ಕಣೇ”
ಹಣ ಹಂಚಿಕೊಳ್ಳುವ ವಿಷಯದಲ್ಲಿ ಅತ್ತೆ ಸೊಸೆಯರ ಜಗಳ ಯಶಸ್ವಿಯಾಗಿ ಒಂದು ದಿನ ಪೂರೈಸಿತು. ಒಂದೆರಡು ವರ್ಷಗಳಲ್ಲಿ ವೈಕುಂಠವಾಸಿಯಾಗಲಿರುವ ಅತ್ತೆಗೆ ಇಡೀ ಗಂಟು ಕೊಡುವುದೆಂದರೇನು? ಕೊಟ್ಟಲ್ಲಿ ಅದು ಮತ್ತಿನ್ನಾರ ಬಾಯಿಗಿಡುವುದೋ? ಬದುಕಿರೋವಷ್ಟು ಕಾಲ ಮೊಮ್ಮಕ್ಕಳೊಂದಿಗೆ ಆಡಿಕೊಂಡಿದ್ದು ಪ್ರಾಣ ಬಿಡುವುದಕ್ಕೇನಾಗಿದೆ ಧಾಡಿ! ಕೊನೆಗಾಲಕ್ಕೆ ಬಾಯಲ್ಲಿ ಗಂಗಾಜಲ ಬಿಡಲಿಕ್ಕಾದರೂ ತಾವು ಬೇಡವೇನು? ಸೊಸೆ ವರಲಕ್ಷ್ಮಿ ಪರಿಪರಿಯಾಗಿ ಯೋಚಿಸಿದರೂ ಅತ್ತೆ ರಾಜಿಯಗುವ ಲಕ್ಷಣ ಕಂಡು ಬರಲಿಲ್ಲ. ತನ್ನ ಪಾಲಿಂದು ತನ್ನ ಹಸ್ತಗತವಾಗದ ಹೊರತು ಜಪ್ಪಯ್ಯ ಅಂದರೂ ಕದಲದೆ ಇರುವ ಅತ್ತೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ವರಲಕ್ಷ್ಮಮ್ಮ ಮತ್ತೆ ಮೇಲುಪ್ಪರಿಗೆ ಸತ್ಯಪ್ಪನ ಸಹಾಯ ಯಾಚಿಸಿದಳು. ಅದರಲ್ಲಿ ನೀನೆಷ್ಟು ಪರ್ಸೆಂಟು ಕಮೀಷನ್ ಹೊಡೆದೆ ಎಂದು ಒಂದೆರಡು ದಿನಗಳಿಂದ ಅವರಿವರು ಒಂದೇ ಸಮನೆ ಕೇಳುತ್ತಿದ್ದುದರಿಂದ ಸತ್ಯಪ್ಪ ಶಿವಪುರದ ಗವಿಮಠದಲ್ಲಿ ಕಳೆದ ವಾರದಿಂದ ನಡೆಯುತ್ತಿದ್ದ ಕೊಟ್ಟೂರೇಶ್ವರ ಪುರಾಣ ಕೇಳಲು ನಾಳೆಯೇ ಹೊರಡಬೇಕೆಂದು ನಿಶ್ಚಯಿಸಿ ಒಂದು ವಿಭೂತಿ ಉಂಡೆಯನ್ನು ನೂರು ರುಪಾಯಿ ಸಂಗಡ ಖಲ್ಲೀ ಜೇಬಿನಲ್ಲಿ ಇಟ್ಟುಕೊಂಡಿದ್ದ. ಅಷ್ಟರೊಳಗೆ ಶಾಸ್ತ್ರಿಗಳ ಮನೆ ಬೆಳಗಿದ ಸೊಸೆ ಬಂದು ಎಂದುಬಿಡುವುದೇ! ಧರ್ಮಸಂಕಟಕ್ಕಿಟ್ಟುಕೊಂಡಿತು ಆತನಿಗೆ. ಯೋಚಿಸುತ್ತ ಯೋಚಿಸುತ್ತ ಅದನ್ನು ಎರಡು ಮೂರು ಕಡೆ ಎತ್ತಿಟ್ಟೂ ಎತ್ತಿಟ್ಟೂ ಒಪ್ಪಿಕೊಂಡ. ಸದರೀ ಪಟ್ಟಣದಲ್ಲಿ ತಾನು ಮತ್ತಷ್ಟು ಭದ್ರವಾಗಿ ನೆಲೆಗೊಳ್ಳುವಂತಾಗಲು ಹಾಲಪ್ಪನ ಸ್ನೇಹವನ್ನು ಗಟ್ಟಿಗೊಳಿಸಿಕೊಳ್ಳಲು ಇದೇ ಸುವರ್ಣಾವಕಾಶವೆಂದು ಬಗೆದ. ಇನ್ನು ಮೂರು ವರ್ಷಗಳಲ್ಲಿ ಬರಲಿರುವ ಪಂಚಾಯ್ತಿ ಚುನಾವಣೆಗಳಲ್ಲಿ ಹನ್ನೊಂದನೆ ವಾರ್ಡಿನಲ್ಲಿ ಸಾಗುವಾನಿ ಮರದಂತಿರುವ ಹಾಲಪ್ಪನವರ ಸಹಾಯ, ಸಹಕಾರ ಇರದಿದ್ದಲ್ಲಿ ಆದೀತೇನು? ಹನ್ನೊಂದನೆಯ ವಾರ್ಡಿನಲ್ಲಿ ಹರಿಯೋ ಹಾವು ಕೂಡ ಹಾಲಪ್ಪನವರ ಹೆಸರು ಕೇಳಿದೊಡನೆ ಒಂದೈದು ನಿಮಿಷ ರೆಸ್ಟ್ ತಗೊಂಡೇ ಮುಂದುವರಿಯಬೇಕು.

ಸತ್ಯಪ್ಪ ಅಂದುಕೊಂಡಂತೆ ಹಾಲಪ್ಪನನ್ನು ಭೇಟಿಯಾದ, ಉಭಂ ಶುಭಂ ಹೇಳಿದ. ಹಾಗೆಯೆ ಅತ್ತೆ ಸೊಸೆಯರ ನಡುವೆ ಉದ್ಭವಿಸಿರುವ ಹೊಸ ಸಮಸ್ಯೆ ಬಗೆಗೂ, ಸತ್ಯಪ್ಪ ಮತ್ತು ಹಾಲಪ್ಪ ಬೇರೆ ಬೇರೆ ಅವಧಿಯಲ್ಲಿ ಅತ್ತೆ ಸೊಸೆಯರೀರ್ವರನ್ನು ಅಲಾಯಿದಾಗಿ ಬೆಟ್ಟಿಯಾಗಿ ಕೂಲಂಕುಷ ಚರ್ಚೆ ನಡೆಸಿದರು. ಹಣವೇ ಸರ್ವ ದುಃಖಕ್ಕೆ ಮೂಲವೆಂದು ಕಾವಿ ನಿಲುವಂಗಿ ತೊಟ್ಟ ಕ್ಷಣದಿಂದ ಏರು ದನಿಯಲ್ಲಿ ಮಾತಾಡುವ ಗುರುಸಾಂತಪ್ಪನೂ ನದಿಯನ್ನು ಹಳ್ಳ ಸೇರಿಕೊಳ್ಳುವಂತೆ ನಡುವೆ ಸೇರಿಕೊಂಡ. ಒಂದೇ ದೇಹದ ಮೂರು ಮುಖಗಳಂತೆ ಅವರು ನಡೆದೂ ನಡೆದೂ ಸದರೀ ಮನೆಯನ್ನು ತಲುಪಿದರು.

ಆಗಲೇ ಸಾಕಷ್ಟು ಮಾತುಗಳನ್ನು ಕಂಠಪಾಠ ಹಾಕಿದ್ದ ವರಲಕ್ಷ್ಮಮ್ಮ ಬಾಗಿಲಲ್ಲಿ ಕಂಡಳು. ಪರೀಕ್ಷಾರ್ಥವಾಗಿ ಪರಮ ಸಾಧ್ವಿ ಅನಸೂಯಳ ಸ್ತನ್ಯಪಾನ ಮಾಡಲು ಬಂದಿರುವ ತ್ರಿಮೂರ್ತಿಗಳಂತೆ ಅವರು ಗೋಚರಿಸಿದರು. ಎದೆ ತುಂಬ ಸೆರಗು ಹೊದ್ದು ಸ್ವಾಗತಿಸಿ ಆಟವಾಳಿಗೆಯಲ್ಲಿ ಚಾಪೆ ಹಾಸಿ ಕೂಡ್ರಿಸಿ ಕುಡಿಯಲೆಂದು ಒಂದು ತಂಬಿಗೆ ನೀರು ಒಂದು ಲೋಟ ಇಟ್ಟಳು. ನಡೆದೂ ನಡೆದೂ ಸುಸ್ತಾಗಿದ್ದ ಅವರು ದಾಹಪರಿಹಾರಾರ್ಥವಾಗಿ ನೀರು ಕುಡಿದು ಎರಡು ಗುಟುಕು ಗಂಟಲಲ್ಲಿರಿಸಿಕೊಂಡು ವಿಷಪ್ರಾಶನ ಮಾಡಿದ ಪರಮೇಶ್ವರನಂತೆ ಮುಖ ಸಿಂಡರಿಸಿಕೊಂಡರು. ಮಹಾ ಸಾಧ್ವಿಯೂ ವ್ಯವಹಾರ ಕುಶಲಿಯೂ ಆದ ಆಕೆ ಬೇಕೆಂದೇ ಹಿಂದೂ ಮಹಾ ಸಾಗರವೆ ನೆಲೆ ಪಡೆದಿರುವ ಬಸವನ ಬಾವಿಯ ನೀರು ಅದರಲ್ಲಿ ತುಂಬಿದ್ದಳು. ಮನೆ ಕೊಡೋದು ಕೊಟ್ಟಾಗಿದೆ, ಪಡೆಯೋದು ಪಡೆದಾಗಿದೆ ಇನ್ನು ಇವರ ಮುಲಾಜು ಯಾಕೆ ಎಂಬ ಭಾವನೆಗಿಂತ ಮುಖ್ಯವಾಗಿ ತಾವು ದೂರದ ಬಾವಿಯಿಂದ ಸಿಹಿನೀರು ತರಲಾರದಷ್ಟು ಅಬಲೆಯರು ಎಂಬುದನ್ನು ಸಾಬೀತುಪಡಿಸಲಿಕ್ಕಾಗಿ ಇರಬಹುದು. ಅದೇ ಉಪ್ಪು ನೀರನ್ನು ಕುಡಿದೂ ಕುಡಿದೂ ಗಂಟಲ ತುರಿ ಹೆಚ್ಚಿಸಿಕೊಂಡ ವಯೋವೃದ್ಧೆಯೂ, ಜ್ಞಾನವೃದ್ಧೆಯೂ ಆದ ಅಲುಮೇಲಮ್ಮಜ್ಜಿ ಒಂದೇ ಸಮನೆ ಕೊಕ್ ಕೊಕ್ ಕೆಮ್ಮುತ್ತ ತಾವಿನ್ನೂ ಬದುಕಿರುವ ಸೂಚನೆ ನೀಡಿತಲ್ಲದೆ, ಗೀರ್ವಾಣ ಭಾಷಾ ಸದೃಶವಾದ ಸದ್ದಿನ ಮೂಲಕ ಪಂಚಾಯ್ತಿ ನೆಪದಲ್ಲಿ ತನಗೇನಾದರೂ ಅನ್ಯಾಯ ಮಾಡಿದಲ್ಲಿ ರೌರವ ನರಕ ಪ್ರಾಪ್ತವಾಗುತ್ತದೆ ಎಂಬ ಸೂಚನೆಯನ್ನೂ ನೀಡುತ್ತ ಹೊರಬಂದಿತು. ವೈರಾಗ್ಯ ಶತಕದ ಈ ಮುಂದಿನ ಶ್ಲೋಕವೇ ವೃದ್ಧೆಯ ರೂಪ ಧರಿಸಿ ನಡೆದು ಬರುತ್ತಿರುವುದೆಂಬಂತೆ ಸೊಸೆಗೆ ಗೋಚರಿಸಿತು.
ವಲೀಭೀರ್ಮು ಖಿಮಾಕ್ರಾಂತಂ, ಅಂದರೆ ಸುಕ್ಕುಗಳಿಂದಲೇ ತುಂಬಿರುವ ಮುಖ
ಪಲಿತೈರಂ ಶಿರಃ, ಅಂದರೆ ನರೆ ಕೂದಲಿಂದ ತುಂಬಿರುವ ತಲೆ
ಗಾತ್ರಾಣಿ ಶಿಥಿಲಾಯಂತೇ, ಅಂದರೆ ಶಿತಿಲಾಥಿ ಶಿಥಿಲವಾಗಿರುವ ಅಂಗಾಂಗಳು
ತೃಷ್ಣೈಕಾ ತರುಣಾಯಂತೇ, ಅಂದರೆ ಆಸೆಯೊಂದೇ ಯೌವನದಿಂದ ಕೂಡಿದೆ
‘ಬರ್ರಿ ಅತ್ತೆಮ್ಮ ಬರ್ರಿ’ ನಾಟಕೀಯವಾಗಿ ಸ್ವಾಗತಿಸಿದ ವರಲಕ್ಷ್ಮಿ ಕೂಡ್ರಲೊಂದು ಮಣೆ ಹಾಕಿ ಅದರ ಮೇಲೆ ದರ್ಭೆ ಚಾಪೆಯ ತುಂಡನ್ನು ಹೊದ್ದಿಸಿ ವಿಧೇಯತೆಯಿಂದಲೇ ಮಾಡಲ್ಪಟ್ಟಿರುವಳಂತೆ ತುಸು ದೂರದಲ್ಲಿ ನಿಂತಳು.
ಆಕೆಯು ತಾಲೀಮು ನೀದಿದ್ದರಿಂದ ಇಬ್ಬರು ಮಕ್ಕಳು ಖಟ್ಲಿಗೆ ಹೊಸ ತಿರುವು ನೀಡುವ ಸಾಕ್ಷಿಗಳಂತೆ ಒಂದೊಂದೆ ಹೆಜ್ಜೆ ಇಕ್ಕುತ್ತ ಬಂದು ತನ್ನನ್ನು ಹೆತ್ತಾಕಿಯ ಎರಡೂ ಪಕ್ಕದಲ್ಲಿ ನಿಂತವು. ಭಲೆ ಭಲೆ ಎಂಬಂತೆ ಆಕೆ ಮಕ್ಕಳ ಮೈದಡವಿದಳು.
ಸ್ವಲ್ಪ ಹೊತ್ತು ಮೌನವೆಂಬುದು ತಂತಾನೆ ನೆಲೆಸಿತು. ತ್ರಿಮೂರ್ತಿಗಳು ಮೊದಲು ಪರಸ್ಪರ ಮುಖ ನೋಡಿಕೊಂಡರು. ನಂತರ ಅವರಿಬ್ಬರ ಮುಖ ನೋಡಿದರು, ನಿಟ್ಟುಸಿರು ಬಿಟ್ಟರು. ನಂತರ ತಾವಿಲ್ಲಿಗೆ ಹೊರಡುವ ಮುನ್ನ ಸೇವಿಸಿದ ಆಹಾರ ನೆನಪಿಸಿಕೊಂಡರು. ಮುಖ ಕಿವಿಚಿಕೊಂಡರು. ಹೋಬ್ಬ ಅಂತ ತಲಾ ಒಂದೊಂದು ಡೇಗುಗಳನ್ನು ಡೇಗಿ ವಾತಾವರಣಕ್ಕೆ ವಿಶೇಶ ಮುದ ನೀಡಿದರು.
ಯಾರು ಮೊದಲು ಮಾತು ಆರಂಭಿಸಬೇಕೆಂಬುದೇ ಪ್ರಮುಖ ಸಮಸ್ಯೆಯಾಯಿತು.
‘ಏನಮ್ಮಾ ನಿಮ್ಮ ಸಮಸ್ಯೆ? ಸಿರಿಯ ಸಂಪದದಿಂದ ಬಾಳ್ವವ ಮರಣ ಮದ್ದನು ಕುಡಿಯಬಹುದೆ?… ಚಂಚಲೆಯಾದ ಲಕ್ಷ್ಮಿಯ ಕಾರಣದಿಂದ ನೀವಿನಿತು ಜಗಳವಾಡ್ವದು ನ್ಯಾಯವೇನ್ರಮ್ಮಾ? ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಂಡು ನ್ಯಾಯದಿಂ ಸಾಮರಸ್ಯದಿಂ ಬಾಳ್ವುವುದೇಕಾಗಬಾರದ್ರಮ್ಮಾ?” ಸ್ವಲ್ಪ ಹೊತ್ತಿನ ಹಿಂದೆ ಎಳೆದಿದ್ದ ಗಾಂಜಾದ ನಿಶೆಯಿಂದಾಗಿ ಗುರುಸಾಂತಪ್ಪ ವಿಶಿಷ್ಟ ರೀತಿಯಲ್ಲಿ ಭಾಷಾ ಪ್ರಯೋಗ ಮಾಡಿ ಗಡ್ಡ ನೀವಿಕೊಂಡ.
ತ್ರಿಮೂರ್ತಿಗಳ ಪೈಕಿ ಉಳಿದಿಬ್ಬರು ನೆಮ್ಮದಿಯಿಂದ ಉಸಿರುಬಿಟ್ಟರಾದರೂ ಅವಧೂತನಾಡಿದ ಮಾತಿನ ತಳಬುಡ ಅರ್ಥವಾಗಲಿಲ್ಲ.
“ಹ್ಯಾಗ್ರಿ ತಾತ? … ಸಾಮರಸ್ಯದಿಂದ ಬಾಳುವೆ ಮಾಡೂದು? ಅವರೊಂದಿಗೆ ನಾನೂ ಮಕ್ಕಳನ್ನು ಕಟ್ಟಿಕೊಂಡು ತುಂಬಿದ ಕೆರೇಲಿ ಬಿದ್ದಿದ್ರೆ ಅತ್ತೆಮ್ಮ ನೆಮ್ಮದಿಯಿಂದ ಇರುತ್ತಿದ್ದರೇನೋ…” ಸೆರಗನ್ನು ಬಯಿಗಡ್ಡ ಇಟ್ಟುಕೊಂಡು ಬಿಕ್ಕಿದಳು.
ಪೀಠ ನಿರಾಕರಿಸಿ ಅದರ ಪಕ್ಕ ಕೂತಿದ್ದ ಮುದುಕಿ ಗಂಟಲಲ್ಲಿದ್ದ ಕಫವನ್ನು ಬಾಯಿಗೆ ತಂದುಕೊಂಡುರುಳಾಡಿಸಿ ಮತ್ತೆ ನುಂಗಿ ಅದರಿಂದ ಹೊಸ ತೇಜಸ್ಸು ಪಡೆದು ನಿಗಿನಿಗಿ ಉರಿಯುತ್ತ …
ಇನ್ನಾದ್ರೂ ಸಾಕು ಮಾಡೇ ನಾಟಕದ ಮಾತಾಡೋದನ್ನು … ಕೆರೆ ಭಾವಿ ನೋಡ್ಕೊಳ್ಳೋಳಾಗಿದ್ರೆ ಇನ್ನೂ ಬದುಕಿರೋ ನನಗೆ ದ್ರೋಹ ಮಾಡುತಿದ್ದೆಯೇನು? ಯಾವತ್ತು ಈ ಮನೆ ಮಾರಿದೆಯೋ ಅವತ್ತೆ ನನ್ನ ನಿನ್ನ ಋಣ ತೀರ್‍ತು…” ಕೈ ಅಡ್ಡ ಅಡ್ಡ ತಿರುವಿ ಮಾತಾಡಿತು.
“ಛೇ! ಛೇ! ಎಂಥ ಮಾತಾಡ್ತೀರಲ್ಲ ನೀವು … ನಿಮ್ಮ ಒಪ್ಪಿಗೆ ಇಲ್ದೆ ನಾನೀಮನೆ ಮಾರಿದ್ದೇನು! ಈ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳ್ತೇನಿ … ನಿಮ್ಮ ಒಪ್ಪಿಗೆ ದೊರೆತ ಮೇಲಲ್ವೆ ಮನೆ ವಿಲೇವಾರಿ ಮಾಡಿದ್ದು … ಈಗೇನಾಯ್ತು … ತಡೀರಿ …” ಮಕ್ಕಳನ್ನು ಎರಡು ದಿಕ್ಕೆಗೆ ದೂಡಿ ದುಡುದುಡು ಒಳಗೆ ಓಡಿ.. ದಟ್‌ಪುಟ್ ಸದ್ದು ಮಾಡುತ್ತ ಪೆಟಾರಿ ತೆಗೆದು “ಮುಚ್ಚಿ” ಸುಂಟರಗಾಳಿಯಂತೆ ಹೊರ ಬಂದು ಕೈಯಲ್ಲಿದ್ದ ಹಣದ ಕಂತೆಯನ್ನು ತ್ರಿಮೂರ್ತಿಗಳ ಮುಂದಕ್ಕೆ ಕುಕ್ಕಿ ಮುಂದುವರಿದು ಈ ಪ್ರಕಾರವಾಗಿ ಹೇಳಿದಳು,
“ಹಾಲಪ್ಪಣ್ಣಾ … ನಿಮ್ಮ ಹಣ ತೊಗೊಂಡು ಈ ಮನೇನ ಮುದುಕಿ ಹೆಸರೀಗೆ ಬರೆದುಕೊಟ್ ಬಿಡಿ … ನಾನೀ ಕ್ಷಣನೇ ನಾನೂ ನನ್ ಮಕ್ಳೂ ವಿಷಪ್ರಾಷನ ಮಾಡಿ ಸತ್ತು ಹೋಗ್ತೀವಿ. ಈ ಮುದುಕಿ ಮುಂದೊಂದು ದಿನ ಸತ್ತ ಮೇಲೆ ಮನೆಯೊಳ್ಗೆ ಸಮಾಧಿ ಮಾಡಿ ಬೃಂದಾವನ ಕಟ್ಟಿಸಿ ಉಸ್ತುವಾರಿ ನೊಡ್ಕೊಳ್ಳೋಕೆ ಸಂಪ್ರದಾಯಸ್ಥ ಬ್ರಾಹ್ಮಣರನ್ನು ನೇಮಿಸಿಬಿಡಿ …” ಇಷ್ಟು ಅಂದದ್ದೇ ಎರಡು ಕಣ್ಣುಗಳಿಂದ ಎರಡು ವಿಧದ ಜಲಪಾತ ಸುರಿಯುತ್ತ ಗಂಡ ಸತ್ತ ಮೇಲೆ ಬದುಕಿರಬಾರ್ದೂ ಅಂತ ಬದುಕಿನ ಒಂದೊಂದು ರೋಚಕ ಕ್ಷಣಗಳಿಗೆ ಒಂದೊಂದು ಹೊಸ ರೂಪ ಕೊಡತೊಡಗಿದಳು.
“ನೋಡಿದ್ರ್ಯಾ … ನೋಡಿದ್ರ್ಯಾ … ಇವ್ಳು ಈ ಮುದಿ ಅತ್ತೆ ಮೇಲಿಟ್ತಿರೋ ಪ್ರೀತೀನ …” ಎಂದು ಹೇಳುತ್ತಲೇ ಎದ್ದು ನಿಂತು ಮೊಣಕಾಲಿಗೆ ಮುಂಗೈಯೂರಿ ಇನ್ನೊಂದು ಮುಂಗೈಯನ್ನು ಮೇಲೆತ್ತಿ ತಿರುವುತ್ತ “ನಾನು ಸಮಾಧಿ ಆಗಿ ಅದ್ರ ಮೇಲೆ ಬೃಂದಾವನ ಎದ್ರೆ ಸಂತೋಷ ಪಡ್ತಾ ನೀನಿಲ್ಲೇ ಇರುವಿಯಂತೆ … ಹೇಳಿದ್ನೋ ಬಿಟ್ಟಿದ್ನೋ … ಅಂತೂ ಮನೆ ಮಾರಿ ಪುಣ್ಯ ಕಟ್ಟಿಕೊಂಡೆಯಲ್ಲ … ನನ್ಗೆ ಬರೋದನ್ನ ನನಗೆ ಕೊಟ್ಟುಬಿಡು … ”
ಮುದುಕಿಗೆ ಯಾಕೆ ಹಣದ ವ್ಯಾಮೋಹ ಬಂತೆಂಬುದರ ತಳಬುಡ ತ್ರಿಮೂರ್ತಿಗ್ಳಿಗೆ ಅರ್ಥವಾಗಲಿಲ್ಲ. ..
ಪ್ರಳಯ ಸ್ಥಾನದಲ್ಲಿ ಹಾಲಪ್ಪನೇ ಮಾತಾಡಿದ.
“ಮಾರಿದ್ದಾಯ್ತು ನಾನು ತಗೊಂಡಿದ್ದಾಯ್ತು … ಇನ್ಯಾಕೆ ಇದ್ರ ಬಗ್ಗೆ ಚರ್ಚೆ …”
ಸ್ಥಿತಿಸ್ಥಾನದಲ್ಲಿದ್ದ ಸತ್ಯಪ್ಪ ಪುಡಾರಿ ಗತ್ತಿನಲ್ಲಿ ನಿರ್ಧರಿಸಂತೆ ಮಾತಾಡಿದ.
“ನೀವಿಬ್ರು ಭಾರತದ ಕುಟುಂಬ ವ್ಯವಸ್ಥೆಯ ಎರಡು ಆದರ್ಶ ಮಾದರಿಗಳು … ಹನ್ನೊಂದನೇ ವಾರ್ಡಿಗೆ ಎರಡು ಕಣ್ಣುಗಳಿದ್ದ ಹಾಗೆ … ಮತ್ತೆ … ಮ…ತ್ತೆ” ಕಂಠಪಾಠ ಮಾಡಿದ್ದ ಮುಂದಿನ ಮಾತುಗಳ ‘ಫೀಜು’ನಡುವೆ ಎಗರಿಹೋಯಿತು.
ಸೃಷ್ಟಿ ಸ್ಥಾನದ ಗುರುಸಾಂತಪ್ಪಗೆ ಜವಾರಿ ಭಾಷೆಯಲ್ಲಿಯೇ ಮಾತಾಡಿದರೆ ಇವರಿಗೆ ರಾಮಬಾಣವಾದೀತು ಎಂದು ಊಹಿಸಿದ.
“ವೋಗ್ರವ್ವಾ … ವೋಗ್ರಿ … ದೇಸದಾಗೆಲ್ಲೂ ಇಲ್ಲದೆ ಅತ್ತೆ ಸೊಸೀ ನೀವೇ ಐದೀರೋ ಹೆಂಗೆ … ಹಿಂಗ ಕಿತ್ತಾಡೊರ್ನ ನನ್ನ್ಯಾ ದೇಸದಾಗೂ ನೋಡಿಲ್ಲ ಬುಡ್ರಿ … ಕಿಸಿಲಾರದ ರೊಕ್ಕಕ್ಕ ಹಿಂಗ ಕಿತ್ತಾಡಿದ್ರೆ ದೇವ್ರು ಮೆಚ್ತಾನೇನು? ನಿಮ್ಗೂ ಕೆಲಸ ಬೊಗಸೆ ಇಲ್ಲಾಂದ್ರೆ ನಮ್ಗೂ ಇಲ್ಲಾಂತ ತಿಳ್ದೀರೋ ಹೇಗೆ? ನೀವು ಮೇಲಾಗಿ ಬ್ರಾಂಬ್ರು … ಒಳ್ಳೆದು ಕೆಟ್ಟದ್ದು ತಿಳ್ದಂಥೋರು. ನಿಮ್ಮಂಥೊರು ನಮ್ಮಂಥೊರ್ಗೆ ಬುದ್ಧಿ ಹೇಳ್ಬೇಕು … ಅದು ಬಿಟ್ಟು ನಿಮ್ಮ ನ್ಯಾಯ ಬಗೆ ಹರ್ಸಕ್ಕೆ ನಾವೇ ಬರ್ಬೇಕಾ … ಏಯ್ ಹಾಲಪ್ಪ … ಈಟು ವಯಸ್ಸಾದ್ರು ನಿಂಗಿನ್ನು ಆಸ್ತಿ ಮಾಡೋ ಹುಚ್ಚು ಬಿಡ್ಲಿಲ್ಲ … ಇದ್ನೆಲ್ಲ ಸತ್ತಾಗ ಹಿಂದು ಒಯ್ತಿ ಯೇನು? ಈ ಮನಿ ನಡುವಳಿಕೆಗೆ ನಿನ್ಗೆ ಹತ್ತಿ ಬರೋವಂಗಕಾಣುವಲ್ದು. ನಿನ್ನ ರೊಕ್ಕ ನೀನು ತಗೋ … ಹೊಂಟು ಬಿಡೋಣ” ಎಂದು ಒಂದೇ ಉಸಿರಿಗೆ ಮಾತಾಡಿ ಗಾಂಜಾದ ಗುಳಿಗೆಯೊಂದನ್ನು ಬಾಯಿಗೆ ಹೊಕ್ಕಂಡು ದವಡೇಲಿ ಪ್ರತಿಷ್ಟಾಪಿಸಿ ಬಿಟ್ಟನು.

ತನ್ನ ಸಂಭಂದೀ ಮಾತುಗಳಿಂದ ಹಾಲಪ್ಪ ಒಂದು ಕ್ಷಣ ದಿಗ್ಭ್ರಮೆಗೊಂಡ.ಚೇತರಿಸಿಕೊಂಡು” ಹೋಗ್ಲಿ ಬಿಡು ಗುರುಸಾಂತ … ಪ್ರಪಂಚ ಅರೀದ ಹೆಣ್ಮಕ್ಕಳ ಮಾತಿಗೆ ಬೇಸರ ಮಾಡ್ಕೊಂಡ್ರೆ ಹೆಂಗೆ? … ಸಂಪತ್ತಿನ ವಿಷಯದಾಗ ಎಂಥೆಂಥ ದೇವಾನುದೇವತೆಗಳೇ ಜಗಳಾಡಿದ್ದಾರೆ… ಇನ್ನು ಈ ಹೆಣ್ಣು ಮಕ್ಕಳ ಪಾಡೇನು?” ಎಂದು ವರಲಕ್ಷ್ಮಿ ಕಡೆ ತಿರುಗಿ “ನೀನೂ ನನ್ತಂಗಿ ಇದ್ದಂಗೆ ಅಂತ ತಿಳ್ದು ಹೇಳ್ತೀನಿ … ನಿನ್ ಮನಸ್ಸಿನಾಗದೇನೈತೆ ಹೇಳಿ ಬಿಡು ತಾಯಿ” ಎಂದ.
ಶೂದ್ರರಾಡುತಿರುವ ಗ್ರಾಮ್ಯ ಭಾಷೆಯಿಂದ ತನ್ನ ಕಿವಿ ಸಂಸ್ಕಾರವೇ ಹಾಳಾಯಿತೆಂಬಂತೆ ಮುಖ ಮಾಡಿದ್ದ ಅತ್ತೆ ಕಡೆ ನೋಡಿದ ವರಲಕ್ಷ್ಮಿ ತಾನೂ ಗ್ರಾಮ್ಯ ಭಾಷೆಯಲ್ಲಿಯೇ ಮಾತಾಡಿ ತ್ರಿಮೂರ್ತಿಗಳ ಕೃಪೆಗೆ ಪಾತ್ರಳಾಗಬೇಕೆಂದು ಯೋಚಿಸಿದಳು.

“ಹೇಳೋದೇನೈತ್ರಿ ತಂದೆ?… ನಾನು ಮೊದ್ಲೇ ಗಂಡ ಸತ್ತಾಕೆ. ಇರೋ ಎಲ್ಡು ಮಕ್ಕಳನ್ನು ಕಟ್ಟಿಕೊಂಡು ಒಳ್ಳೇದು ಕೆಟ್ಟದ್ದೂ ನೋಡ್ಕೋತ ಬಾಳಿ ಬದುಕಬೇಕಾಗಿರೋಳು. ಈ ಅತ್ತೆಗೀ ವಯಸ್ನಲ್ಲಿ ನೋಡ್ಕೊಳ್ಳೋರು ಯಾರಿದ್ದಾರೆ … ಅಕೀಗೆ ಮಗ ಅಂದ್ರೂ ನಾನೇ ಸೊಸೆ ಅಂದ್ರೂ ನಾನೇ … ತೆಪ್ಪಗೆ ನಮ್ಮ ಜೊತೆ ಬಂದು ಬೇಕಾದ್ದು ಮಾಡಿಸಿಕೊಂಡು ತಿಂದು ಬಿಡ್ಲಿ… ಕೊನೆಗಾಲಕ್ಕೆ ನಾನಗದೆ ಬೇರೆ ಯಾರಾದಾರೂ? …” ಅನಸೂಯಳೊಂದಿಗೆ ವಾರಕ್ಕೊಂದು ಸಾರಿಯಾದರೂ ಜಗಳ ಆಡೀ ಆಡೀ ಗ್ರಾಮ್ಯ ಭಾಷೆ ರೂಡಿಸಿಕೊಂಡಿದ್ದರಿಂದ ಈ ಪ್ರಕಾರವಾಗಿ ಸಲೀಸಾಗಿ ಮಾತಾಡಿದ್ದಳು. ಆಕೆಯ ಅಸ್ಖಲಿತ ಮಾತುಗಳನ್ನು ಕೇಳಿ ತ್ರಿಮೂರ್ತಿಗಳು ತಲೆದೂಗಿದರು.

ಆದರೆ ಮುದುಕಿ ಅದುವರೆಗೆ ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡು ಬಿಟ್ಟಿತ್ತು. ಇಂಥ ಸೊಸೆಯನ್ನು ಹುಡುಕಿ ತಂದುಕಟ್ಟಿದ ಆಕೆಯ ಮಾಮಾಶ್ರೀಯನ್ನು ಮನಸ್ಸಿನಲ್ಲಿ ಕಣ್ಣುಮುಚ್ಚಿ ಶಪಿಸುತ್ತಿತ್ತು. ತನ್ನ ಪ್ರಾರಬ್ಧವೇ ಸೊಸೆಯ ರೂಪಧರಿಸಿ ಬಂದು ಕಾಡುತ್ತಿರುವುದೆಂದೂ … ಇದರಿಂದ ಬಿಡುಗಡೆಯಾಗಿ ಯಾವುದಾದರೂ ಪವಿತ್ರ ನದಿ ಹುಡುಕಿಕೊಂಡು ಹೋಗಿ ದೇಹ ತ್ಯಜಿಸಬೇಕೆಂದೂ ಕೃತು ನಿಶ್ಚಯ ಮಾಡಿತು.
ತಾನಿದುವರೆಗೆ ಈ ಶನಿಯೊಂದಿಗೆ ಬಾಳುವೆ ಸಾಗಿಸಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಸ್ವಲ್ಪೇ ಸದ್ದು ಮಾಡುತ್ತ …
ಚಂದ್ರೋದ್ಭಾಸಿತ ಶೇಖರೇ ಸ್ಮರಹರೇ ಗಂಗಾಧರೇ ಶಂಕರೇ ಸರ್ಪೈ| ರ್ಬೂಷಿತ ಕರ್ಣಕಂಠಕಂ ಹರೇ ನೇತ್ರೋತ್ಥ ವೈಶಾನರೇ! ದಂತಿತ್ವಕೃತ ಸುಂದರಾಂಬಧರೇ ತ್ರೈಲೋಕ್ಯಸಾರೇ ಹರೇ ಮೋಕ್ಷಾರ್ಥಂ ಕುರು ಚಿತ್ತ ಯಮಲಾಮ್ಮಂತ್ರೈಸ್ತು ಕಿ ಕಮ್ರ್ಮಭಿಃ ಕ್ಷಂತವ್ಯೋ … ಎಂದು ಸರ್ವಾಪರಾಧವನ್ನು ಕ್ಷಮಿಸುವಂತೆ ಪರಮೇಶ್ವರನನ್ನು ಪ್ರಾರ್ಥಿಸಿ ಸ್ವಲ್ಪ ಸ್ವಲ್ಪೇ ಕಿವಿಗಳ ಮೇಲಿದ್ದ ಕೈಗಳನ್ನೂ; ರೆಪ್ಪೆಗಳನ್ನೂ ಬಿಚ್ಚಿ ವಾಯು ಮಂಡಲದ ಸಮಸ್ತ ಪ್ರಾಣಶಕ್ತಿಯನ್ನು ಕುಂಡಲಿನೀ ಬಾಂಡಲೆಗೆ ತುಂಬಿಕೊಳ್ಳಲಿರುವಳಂತೆ ನಿಡಿದಾಗಿ ಉಸಿರೆಳೆದುಕೊಳ್ಳುತ್ತಿರುವಾಗ ಗುರುಸಾಂತಪ್ಪನು ಇದೇ ಸುಸಮಯವೆಂದೂಹಿಸಿಕೊಂಡು …
“ವಯಸ್ಸಗ ಚಿಕ್ಕವಳಾಗಿದ್ರೂ ವರಲಕ್ಷ್ಮಮ್ಮ ಮುತ್ತಿನಂಗ ಮಾತಾಡಿದ್ಳು ಬಿಡಿ … ನಮ್ಮಂಥ ಗುರುಬೋಧ ತಗೊಂಡೋರು ಹಿಂಗೆ ಮಾತಾಡ್ಲಿಕ್ಕೆ ಸಾಧ್ಯವಿಲ್ಲ. ಅಜ್ಜಿ ಸೊಸೀ ಮಾತ್ನ ಕೇಳಿಸಿಕೊಳ್ತೋ ಇಲ್ವೋ … ಕೇಳಿಸಿಕೊಂಡಿದ್ರೆ ನಂ ಪುಣ್ಯ …” ಎಂದು ಹವಿಸ್ಸು ಎರೆದನು.
ಅಲುಮೇಲಮ್ಮ ಬಾಗಿರ್ದ ಸೊಂಟಮಂ ತುಸುವೇ ಮೇಲೆತ್ತಿ ಕಣ್ಣುಗಳಿಂದ ಪ್ರಜ್ವಲಿಸುತ್ತ “ಏನ್ರೋ ನೀವು ಮಾತಾಡ್ತಿರೋದು? ನ್ಯಾಯ ಹೇಳೊ ಲಕ್ಷಣವೇನಿದು? ಈಗ್ಲೆ ಇಷ್ಟು ಮಾತಾಡ್ತಿರೋ ಇವಳು ನನ್ನ್ ಜುಟ್ಟ ಇವಳ ಕೈಗೆ ಸಿಕ್ಕ ಮೇಲೆ ಹುರಿದು ಮುಕ್ಕದೆ ಬಿಡುವಳೇನು? … ಬಂಗಾರದಂಥ ನನ್ನ ಮಗನನ್ನೇ ನುಂಗಿ ಆಚಮನ ಮಾಡಿಧೋಳಿಗೆ ನಾನ್ಯಾವ ಲೆಕ್ಕ … ನನ್ನ ಹಣೇಲಿ ವಿಧಿ ಬರೆದಂತಾಗ್ತದೆ … ನನ್ನ ದಾರಿ ನಾನು ನೋಡ್ಕೋತೀನಿ … ” ಲತಗು ಪುಟುಗು ಲಟ್ಟಿಗೆ ಮುರಿದದ್ದು ವಾದಕ ಶ್ರುತಿಪಡಿಸಿಕೊಳ್ಳಲು ತಬಲದ ಮೇಲೆ ಸದ್ದು ಮಾಡುವಂಥ ಸದ್ದಾಯಿತು.
ತ್ರಿಮೂತಿಗಳು ಅಸಹಾಯಕತೆಯಿಂದ ವರಲಕ್ಶ್ಮಿಯ ಮುಖ ನೋಡಿದರು. ಆಕೆಯೂ ನಿಟ್ಟುಸಿರುಬಿಟ್ಟು ತುಟಿಗಳನ್ನು ಎಡಕ್ಕೂ ಬಲಕ್ಕೂ ಹೊರಳಾಡಿಸಿ ಅಸಂತೃಪ್ತಿ ಸೂಚಿಸಿದಳು. ತುಸು ಹೊತ್ತು ಆ ಮುವ್ವರು ಚರ್ಚಿಸಿ ತಮ್ಮ ನಿರ್ಧಾರವನ್ನು ವರಲಕ್ಶ್ಮಿಗೆ ಸೂಚಿಸಿದರು. ಆಕೆ ಭಾರವಾದ ಉಸಿರು ಬಿಟ್ಟು ಒಪ್ಪಿದಳು. ಸೃಷ್ಟಿ ಮತ್ತು ಸ್ಥಿತಿಗಳ ಸಲಹೆಯಂತೆ ಲಯ ಪ್ರಸ್ತಾಪಿಸುವುದೆಂದು ತೀರ್ಮಾನವಾಯಿತು.
“ಅಮ್ಮಾ … ತಾಯಿ … ಜಗನ್ಮಾತೆ … ಆದಿಶಕ್ತಿ …” ಎಂದು ಪಲ್ಲವಿ ಹಾಡಿ ಲಯ ಮುಂದುವರಿದು ಹೇಳಿತು. “ನೀವು ನಮ್ಗೆಲ್ಲ ತಾಯಿ ಇದ್ದಂತೆ … ಈ ಇಳಿವಯಸ್ಸಿನಲ್ಲಿ ನೀವು ದುಡ್ಡು ತಗೊಂಡೇನ್ಮಾಡ್ತೀರೋ ದೇವ್ರೀಗೆ ಗೊತ್ತು! ನೀವು ಮನಸ್ಸಿಗೆ ನೋವು ನೋವು ಮಾಡ್ಕೊಂಡ್ರೆ ನಮಗಾಗ್ಲಿ; ನಿಮ್ಮ ಸೊಸೆ ಮೊಮ್ಮಕ್ಕಳಿಗಾಗ್ಲಿ ಒಳ್ಳೆದಾಗೊಲ್ಲ… ಅದ್ಕೆ ನಾವೆಲ್ರು ಒಂದು ನಿರ್ಧಾರಕ್ಕೆ ಬಂದಿದೀವಿ… ಅದನ್ನು ನೀವು ದೊಡ್ಡ ಮನಸ್ಸು ಮಾಡಿ ಒಪ್ಕೋಬೇಕು.”
“ನೋಡಪ್ಪಾ … ಎಂದೂ ಇಲ್ಲದ ಹೊಗಳಿಕೆಗೆ ಉಬ್ಬೋಳಲ್ಲ ನಾನು… ಅದೇನು ಹೇಳಬೇಕೆಂತಿಯೋ ಅದನ್ನು ಬಿಚ್ಚಿ ಹೇಳಿ ಬಿಡಪ್ಪಾ!” ತಾನು ಹೊತ್ತಿರುವ ಆಕಾಶ ಎಲ್ಲಿ ಕದಲಿ ಹೋಗುವುದೋ ಎಂದು ತಲೆಗೆ ಒಂದು ಕೈ ಇಟ್ಟು ಹೇಳಿತು.
ಶ್ರೀಕೃಷ್ಣ ಪರಮಾತುಮ ಅರ್ಜುನನಿಗೆ ಭಗವದ್ಗೀತೆ ಉಪದೇಶಿಸಿದ ರೀತಿಯಲ್ಲಿ ಲಯದ ಬೆನ್ನುಬು ನಿಸೂರು ಮಾಡಿಕೊಂಡು ಅಲಮೇಲಮ್ಮಜ್ಜಿ ಪಕ್ಕದಲ್ಲಿದ್ದ ಈಶಾನ್ಯದ ಕಡೆ ದೃಷ್ಟಿ ನೆಟ್ಟು-
“ನಮ್ಗೂ ನಿಮ್ ವಯಸ್ನಾಕಿ ಅಕ್ಕ ಅದಾಳ … ನಿಮ್ಮೆದುರೂಗೆ ಹೊರಗೊಂದು ಒಳಗೊಂದು ಮಾತಾಡಿದ್ರೆ ದೇವ್ರು ಮೆಚ್ಚಾಣಿಲ್ಲ . ನಿಮ್ಗೂ ನಾಕು ಮಂದಿಗೆ ಜ್ಞಾನ ಹೇಳೊವಷ್ಟು ಬುದ್ಧಿ ಐತೆ. ನಮ್ಮಂಥ ಮೂಳಗಳಿಂದ ಹೇಳಿಸಿಕೊಳ್ಳೋದು ಸರಿ ಅಲ್ಲ … ನಾವೆಲ್ರು ಒಂದು ತೀರ್ಮಾನಕ್ಕೆ ಬಂದೀವಿ … ಅದೇನಪಾಂದ್ರೆ ವರಲಕ್ಷ್ಮಮ್ಮನಿಂದ ಹತ್ತು ಸಾವ್ರ ಕೊಡಿಸಿಬಿಡ್ತೀವಿ … ರಾಮಾ ಕೃಷ್ಣಾ ಅಂತ ನಿಮ್ಮ ದಾರಿ ನೀವು ನೋಡ್ಕೊಂಡು ನಮ್ಮನ್ನಿಲ್ಲಿಂದ ಬಿಡುಗಡೆ ಮಾಡಿ ಪುಣ್ಯ ಕಟ್ಟಿಕೊಳ್ಳ್ರಿ” ಎಂದು ತುಸು ವ್ಯಂಗಭರಿತ ದ್ವನಿಯಲ್ಲಿ ಹೇಳಿದ್ದನ್ನು ಕೇಳಿ ಮುದುಕಿ ಯಜ್ಞಕುಂಡದಂತೆ ಧಗ್ಗೆಂದಿತು.
“ಏನ್ರೋ ಮುಟ್ಠಾಳರ… ನನ್ನೇನಂತ ತಿಳಿದುಕೊಂಡಿರೋ … ನಾನೇನು ಭಿಕ್ಷೆ ಕೇಳ್ತಿದೀನ? ಸರೀಗರ್ಧ ಕೊಟ್ಟ್ರೆ ಸರಿ … ಇಲ್ಲಾಂದ್ರೆ ನಾನೀ ಮನೆ ಬಿಟ್ಟು ಕದಲೋದಿಲ್ಲ ಎಂದು ಪದ್ಮಾಸನ ಹಾಕಿಬಿಟ್ಟಿತು.
ಅದನ್ನು ಕೇಳಿ ರೊಚ್ಚಿಗೆದ್ದ ವರಲಕ್ಷ್ಮಿ ತನ್ನಿಬ್ಬರು ಮಕ್ಕಳನ್ನು ಹಿಗ್ಗಾಮುಗ್ಗಾ ಸದೆಬಡಿಯತೊಡಗಿದಳು. “ಹಾಳಾದೋವೆ … ಈ ದರಿದ್ರದೋಳ ಹೊಟ್ಟೀಲಿ ಯಾಕೆ ಹುಟ್ಟಿದ್ರೋ? … ನಿಮ್ಮಪ್ಪನ ಹಿಂದೆ ನೀವೂ ಸಾಯಬಾರ್ದಾಗಿತ್ತೆ? … ಇಲ್ಲಾ … ನಾನಿನ್ನು ಬದುಕಿರೊದಿಲ್ಲ … ಇನ್ನು ಇಪ್ಪತ್ನಾಲ್ಕು ತಾಸ್ನಲ್ಲಿ ವಿಷ ಕುಡ್ದು ಪ್ರಾಣ ಬಿಡ್ಲಿಲ್ಲ ನಾನು ನಮ್ಮಪ್ಪನ ಮಗಳೇ ಅಲ್ಲ ” ಎಂದು ಒಂದು ಕಣ್ಣು ಮೂಗಿನಿಂದ ಒಂದೇ ಸಮನೆ ಹಳ್ಳ ತೋಡಗಿದಳು … ಆ ಮೂರನೆ ಇಯತ್ತೆ ಒಂದನೇ ಇಯತ್ತೆ ಕಂದಮ್ಮಗಳು ಆಕಾಶ ಬೀಳುವಂತೆ ಹೋ ಎಂದು ಅಳತೊಡಗಲು ಇಡೀ ಓಣಿಗೆ ಓಣಿಯೇ ಮನೆಯ ಸುತ್ತ ನೆರೆಯಿತು.
ಪ್ರೇಕ್ಷಕರ ಎದುರಿಗೆ ಮುಂದಿಟ್ಟ ಕಾಲು ಹಿಂದಿಟ್ಟರಾಗುವುದೇನು!

ಮುದುಕಿ ದಿಗ್ಗನೆದ್ದು ಹೋಗಿ ಆಕೆಯ ಧಾಳಿಗೆ ತುತ್ತಾಗಿರ್ದ ತನ್ನ ಮೊಮ್ಮಕ್ಕಳನ್ನು ಬಿಡಿಸಿ ಎದೆಗವುಚಿಕೊಂಡಿತು.

” ಅದ್ಯಾಕೆ ಹಂಗ ಮಕ್ಕಳನ್ನು ದನಕ್ಕೆ ಬಡಿದ ಹಾಗೆ ಶೂದ್ರರ ಥರ ಬಡೀತೀಯಾ? … ನೀನು ಮಾಡಿರೋ ತಪ್ಪಿಗೆ ಇವನ್ಯಾಕೆ ದಂಡಿಸ್ತಿದೀಯಾ? … ಒಳ್ಳೆ ಕುಟುಂಬದಿಂದ ಬಂದಿರೋಳಾಗಿದ್ರೆ ಹಿಂಗ ಹೊಡೀತಿದ್ದೆ ಏನೆ!…” ಎಂದು ಮಾತಿನ ಮೊನೆಗೆ ಬ್ರಾಹ್ಮಣಿಕೆ ಲೇಪಿಸಿ ಪ್ರಯೋಗಿಸಿತು. …

“ಅತ್ತೆ … ಮರ್ಯಾದೆ ಕೊಟ್ಟು ಮರ್ಯಾದೆ ತೊಗೊಳ್ರಿ … ನನ್ನ ಮಕ್ಕಳ್ನ ನಾನೇನಾದ್ರೂ ಮಾಡ್ತೀನಿ … ಅದ್ನ ಕೇಳೋಕೆ ನೀವ್ಯಾರು?”
“ನಾವ್ವ್ಯಾರಂತೀ ಏನೆ? …” ನಿನ್ನ ನಾಲಿಗೆಗೆ ಹುಳ ಬೀಳ್ಲಿ … ನಾನು ಹೆತ್ತೋನ್ನಲ್ವೇನೆ ನೀನು ಕಟ್ಕೊಂಡು ನಾಲ್ಕಾಲ ಬಾಳುವೆ ಮಾಡಿದ್ದು? ಹಿಂಸೆಯ ಅರ್ಥ ಮಾಡ್ಕೊಂಡಿದ್ದೆ ಅವ್ನು ನಿನ್ನ ಕಟ್ಟ್ಕೊಂಡ ಮೇಲೆ”
“ಏನೆಲ್ಲ ಮಾತಾಡಿ ನನ್ನ ತಲೆ ಕೆಡಿಸಬೇಡ್ರಿ … ನಿಮ್ಮ ಮಗನ್ನ ಮದ್ವೆ ಮಾಡ್ಕೊಂಡು ಅನುಭವಿಸಿದ್ದು ಅಷ್ಟರಲ್ಲೆ ಇದೆ … ನನ್ನಂಥ ಪತಿವ್ರತೆಗೆ ದ್ರೋಹ ಮಾಡಿ ಯಾವತ್ತು ನಿಮ್ಮ ಮಗ ಆ ಕುಲಟೆ ಅನಸೂಯಳ ಸೆರಗಲ್ಲಿ ಬಿದ್ನೋ ಅವತ್ತೆ ನನ್ನ ನರಕ ನಾನು ಕಂಡುಕೊಂಡ …”
“ಪಾತಿವ್ರತ್ಯದ ನೆಪದಲ್ಲಿ ನೀನು ಅವನನ್ನು ಕುಂತರೂ ಸೇರಲಿಲ್ಲ. ನಿಂತೂ ಸೆರಲಿಲ್ಲ. ಬ್ರಾಹ್ಮಣಿಕೆ ಜೊತೆಗೆ ಪಾತಿವ್ರತ್ಯ ಸೇರ್ಕೊಂಡ್ರೆ ಏನಾಗ್ತದೆ ಎಂಬುದಕ್ಕೆ ನೀನೇ ಸಾಕ್ಷಿ ಕಣೆ … ನಿನು ಸರಿಯಾಗಿದ್ರೆಯಾಕೆ ನನ್ನ ಮಗ ಅನಸೂಯಾಳ ಸೆರಗಿಗೆ ಬೀಳ್ತಿದ್ದ … ನಿನ್ಕಿಂತ ಅವಳೆ ಎಷ್ಟೋ ವಾಸಿ ಅಂತ ನನಗೀಗ ಅನ್ನಿಸ್ತಾ ಇದೆ ಕಣೆ.”
ವರಲಕ್ಷ್ಮಿ ಅಸಹಾಯಕತೆಯಿಂದ ಎದೆಎದೆ ಬಡಿದುಕೊಂಡು ಅಳತೊಡಗಿದಳು … ಆಕೆಯ ರೋಧನದ ಬಗ್ಗೆ ತಲೆಕೆಡೆಸಿಕೊಳ್ಳದೆ ಮುದುಕಿ ವಿಜಯದ ನಗೆ ಬೀರುತ್ತ, ತನ್ನ ಗೊಡವೆಗೆ ಬಂದವರಿಗೆ ಉಳಿಗಾಲವಿಲ್ಲ ಎಂಬ ದೃಷ್ಟಿ ಬೀರುತ್ತ ಸೊಂಟದ ಮೂಲೆಯಿಂದ ಭಾರತ ಸರಕಾರದ ಚಲಾವಣೆಯ ಎರಡು ನೋಟುಗಳನ್ನು ತೆಗೆದು ಮೊಮ್ಮಕ್ಕಳ ಕೈಲಿ ಇರಿಸುತ್ತ, “ಅಷ್ಟಾವಧಾನಿ ಗೋವಿಂದರಾಯರಂಗಡಿಗೆ ಹೋಗಿ ಏನಾದ್ರು ಕೊಂಡುಕೊಳ್ಳಿ” ಎಂದು ಹೇಳಿತು. ಅವು ಏಳು ಕೊಪ್ಪರಿಗೆ ಚಿನ್ನವೇ ದೊರಕಿತೆಂದೆಂಬ ರೀತಿಯಲ್ಲಿ ಹಣ ಹಿಡಿದುಕೊಂಡು ಅಮರಕೋಶದ ಶ್ಲೋಕದ ಜೊತೆಗೆ ಬಾಬಾ ಬ್ಲಾಕ್ ಶೀಪ್ ಕವಿತೆ ಬೆರೆಸಿ ವಿಚಿತ್ರ ರೀತಿಯಲ್ಲಿ ಉಷಾಉತ್ತಪ್ಪ ಥರ ಹಾಡುತ್ತ ಅಂಗಡಿ ಕಡೆ ಓಡಿದವು …

ತನ್ನ ಹದಿನೆಂಟ್ಯ್ ಅಕ್ಷೋಹಿಣಿ ಸೈನ್ಯವೇ ತನ್ನಿಂದ ದೂರವಾಯಿತೆಂಬ ಮತ್ತಷ್ಟು ಅಸಹಾಯಕತೆಯಿಂದ ನಲುಗಿ ಹೋದ ವರಲಕ್ಷ್ಮಿಯನ್ನು ಸಂತೈಸಲು ತಾ ಮುಂದು ನಾ ಮುಂದು ಅಂತ ಮೂರಡಿ ದೂರದಿಂದಲೇ ಪ್ರಯತ್ನಿಸಿದರು. ದುಃಖವೆಂಬುದು ಎಷ್ಟು ಹೊತ್ತು ಇರಲು ಸಾಧ್ಯ! ಸ್ವಲ್ಪ ಹೊತ್ತಿನಲ್ಲಿ ಒಂದು ತಹಬಂದಿಗೆ ತಂದಿತು.

“ಹಂಗಂದ್ರೆ ಎಷ್ಟು ಕೊಡಿಸ ಬೇಕಂತೀರಿ ಅಮ್ಮಾ” ಎಂದು ನಮ್ಮಪ್ಪನೇ ಕೇಳಿದ.
“ಮೂವತ್ತು ಸಾವಿರ … ಅದ್ಕೂ ಒಂದು ದಮ್ಮಡಿ ಇದ್ರೆ ಮುಟ್ಟೋಳಲ್ಲ ನಾನು” ವಿಜಯದ ಉತ್ತುಂಗ ಶಿಖಿರದಲ್ಲಿ ವಿರಾಜಮಾನಳಾಗಿದ್ದ ಅಲುಮೇಲಮ್ಮಜ್ಜಿ ಅಶರೀರವಾಣಿಯಂತೆ ನುಡಿಯಿತು.

“ಅಷ್ಟೊಂದು ತಗೊಡೇನ್ಮಾಡ್ತೀರಿ? … ಕಾಲ ಬೇರೆ ಸುಮಾರೈತಿ … ಒಂದು ಹೋಗಿ ಇನ್ನೊಂದಾಗಿ ಬಿಟ್ಟ್ರೇನ್ಮಾಡ್ತೀರಿ?… ಅದ್ಕೆ ಯೋಚ್ನೆ ಮಾದಿ ಓಂದು ನಿರ್ಧಾರಕ್ಕೆ ಬನ್ನಿ” ವರಲಕ್ಷ್ಮಿ ಪರ ಹೃದಯ ಕರಗಿ ಹಾಲಪ್ಪ ಮೆಲು ದನಿಯಲ್ಲಿ ಕೇಳಿಕೊಂಡ.
“ನಾನು ಅದ್ನೆಲ್ಲ ದಾರೀಲಿ ಹೋಗೋ ಶೂದ್ರರ ದೇವತೆಗೆ ಕೊಡ್ತೀನಪ್ಪಾ … ಅದ್ನೆಲ್ಲ ಏನು ಕೇಳೊದು! ನೋಡು ತಮ್ಮಾ… ನಾನು ಬದುಕ್ನಲ್ಲಿ ನಾನಾ ಕಷ್ಟ ಅನುಭವಿಸಿದೋಳು…. ಪಾಪ ಎಷ್ಟು ಮಾಡಿದ್ದೀನೋ! ಪುಣ್ಯ ಎಷ್ಟು ಮಾಡಿದ್ದೀನೋ!… ಕಾಶೀ, ಕೇದಾರ, ಬದರೀಗೆ ಹೋಗಬೇಕೂಂತಿದ್ದೀನಿ … ಗಂಗೋತ್ರಿಲಿ ದೇಹ ತ್ಯಾಗ ಮಾಡಿ ಲೌಕಿಕ ವ್ಯಾಪಾರ ಮುಗಿಸಬೇಕೆಂದು ದೃಢ ನಿಶ್ಚಯ ಮಾಡಿದ್ದೀನಿ… ಇದೆಲ್ಲ ಶೂದ್ರರಾದ ನಿಮಗೆ ಹೇಗೆ ಅರ್ಥ ಆದೀತು… ಇದ್ನೆಲ್ಲ ಕಟ್ಕೊಂಡು ನೀವು ಮಾಡೊದ್ದರು ಏನಿದೆ? ನಾನೇನು ಬೇರೆಯವರ ಸೊತ್ತಿಗೆ ಆಸೆ ಪಡ್ತಾ ಇಲ್ವಲ್ಲ… ಇದೆಲ್ಲ ನನ್ನ ಗಂಡ ಸಂಪಾದಿಸಿದ್ದು ಕಣ್ರಪ್ಪಾ… ನ್ಯಾವವಾಗಿ ಇದೆಲ್ಲ ನನಗೆ ಸೇರಬೇಕಾದದ್ದೇ. ನಾನೇನು ಆಕೆ ಗಂಡನ ಆಸ್ತೀಲಿ ಪಾಲು ಕೇಳ್ತಿಲ್ವಲ್ಲ… “ಅಲೌಕಿಕ ಜ್ಞಾನದೊಂದಿಗೆ ಲೌಕಿಕ ಜ್ಞಾನವನ್ನೂ ಬೆರೆಸಿ ಪಟಪಟನೆ ಮಾತಾಡಿದಳು.

“ಯಾವ ಪುರುಷಾರ್ಥಕ್ಕೆಂಥ ಮೂವತ್ತು ಸಾವಿರ ಕೊಡೋದು… ಊರು ಹೋಗು ಅನ್ನೋ ವಯಸ್ಸು; ಸುಡುಗಾಡು ಬಾ ಅನ್ನೋ ವಯಸ್ಸು … ಅಬ್ಬಾ ಇದರ ಆಸೆಯೇ … ಈ ಕೊನೆಗಾಲದಲ್ಲೂ ಹೇಗೆ ಕಾಡ್ತಿದೆಯಲ್ಲ… ವರಲಕ್ಷ್ಮಿ ಎದೆಯನ್ನು ದಬ್ ಅಂತ ಗುದ್ದಿಕೊಂಡಳು.
ಎರಡು ನಮೂನೆಯ ಹರತಾಳಗಳ ನಡುವೆ ತ್ರಿಮೂರ್ತಿಗಳು ನ್ಯಾಯ ಬಗೆಹರಿಸಲಾಗದೆ ಬಸವಳಿದವು. ಮುಂದಿರಿಸಿದ ಕಾಲು ಹಿಂದಿರಿಸುವಂತಿಲ್ಲ. ತಾವು ಹನ್ನೊಂದನೆ ವಾರ್ಡಿನ ಮಂದಿಗೆ ಒಂದಲ್ಲಾ ಒಂದು ರೀತಿಯಲ್ಲಿ ಬೇಕಾದವರು! ನ್ಯಾಯ ಬಗೆ ಹರಿಸದೆ ಹೋದಲ್ಲಿ ಜನರಾದರು ಏನೆಂದುಕೊಂಡಾರು! ಹನ್ನೊಂದನೆ ವಾರ್ಡನ್ನೇ ಮೂಲ ಬಂಡವಾಳವನ್ನಾಗಿ ಇಟ್ಟು ಭವಿಷ್ಯತ್ತಿನಲ್ಲಿ ಸಾಕಷ್ಟು ಬೇಯಿಸಿಕೊಳ್ಳುವುದಿದೆ! ಅವರೆಲ್ಲ ಕದನ ಕುತೋಹಲಿಗಳಾಗಿ ನೆರೆದಿರುವವರು.

ತ್ರಿಮೂರ್ತಿಗಳು ಸೋಲರಿಯದ ಛಲದಂಕ ಮಲ್ಲರಂತೆ ತತ್‌ಕ್ಷ್ಣಣ ಕಾರ್ಯೋನ್ಮುಖರಾದರು. ತಾಸು ಪರ್ಯಂತ ಸಂಧಾನ ನಡೆಸೀ, ನಡೆಸೀ … ದೇವರ ದಯೆಯೋ ಎಂಬಂತೆ… ಒಂದು ಹಂತ ತಲುಪಿದರು. ವೇದ ಪಾರಾಯಣಂಗಳ ಫಲದಿಂದಾಗಿಯೋ … ಗಂಗಾದಿ ತೀರ್ಥಸ್ನಾನ ಫಲದಿಂದಾಗಿಯೋ … ಕೃರ್ಛಾಧಿ ತಪಸ್ಸಿನ ಫಲದಿಂದಾಗಿಯೊ ಎಂಬಂತೆ ಅಲುಮೇಲಮ್ಮನೇ ಐದು ಸಾವಿರ ಕಡಿಮೆ ಮಾಡಿಕೊಳ್ಳಲು ಬೇಷರತ್ತಾಗಿ ಒಪ್ಪಿಕೊಂಡಳು. ಸೊಸೆಯೂ ಅದಕ್ಕೆ ಸಮ್ಮತಿಸಿದಳು. ತನ್ನ ತಪೋ ಶಕ್ತಿಯ ಸಿಂಹ ಪಾಲನ್ನೇ ಧಾರೆ ಎರೆದುಕೊಡಲಿರುವವಳಂತೆ ಸಾವಿರ ಎಣಿಸಿಕೊಟ್ಟಳು. “ಹೋಗಿ ಬರ್‍ತೀವಮ್ಮಾ … ಇನ್ನು ಮುಂದೆ ನೀವು ನಿಮ್ಮ ನಿಮ್ಮ ಸಂಬಂಧ ಉಳಿಸಿಕೊಳ್ತೀರೋಬಿಡ್‌ತೀರೋ… ಅದು ನಿಮ್ಗೆ ಸೇರಿದ್ದು… ಇದರಲ್ಲಿ ನಮ್ಮಿಂದೇನಾದ್ರು ತಪ್ಪಾಗಿದ್ರೆ ಹೊಟ್ಟೇಲಿ ಹಾಕ್ಕೊಳ್ಳ್ರಿ” ಎಂದು ಹೇಳಿ ತ್ರಿಮೂರ್ತಿಗಳು ತಂತಮ್ಮ ಅಂಡು ಕೆಳಗೆ ಹಾಕಿಕೊಂಡಿದ್ದ ಟವೆಲ್ಲುಗಳನ್ನು ಕೊಡವಿ ಹೆಗಲಮೇಲಿಳಿಬಿಟ್ಟುಕೊಂಡು ಹೊರನಡೆದವು.

ಹೊರಗಡೆ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತ ನಿಂತಿದ್ದ ಮಹಾನ್ ಜನತೆಯನ್ನು ಉದ್ದೇಶಿಸಿ “ಇಲ್ಲಿ ಏನು ಕರಡಿ ನರಿ ಕುಣಿತಾವೇನು? ಎಲ್ಲ ಮುಗೀತಲ್ಲ … ಇನ್ನು ನೀವು ನಿಮ್ಮ ಮನೆಗೆ ನೀವು ಹೊರಡ್ರಿ” ಎಂದು ಹೇಳಿದ ಅಪ್ಪನ ಕಂಚಿನ ಕಂಠಕ್ಕೆ ಬೆಲೆ ಕೊಟ್ಟುಅವರೆಲ್ಲ ಹಣಕ್ಕೂ ಮನುಷ್ಯರಿಗೂ ಇರುವ ಅನೂಹ್ಯ ಸಂಬಂಧ ಕುರಿತು ತಲಾ ಒಂದೊಂದು ಮಾತಾಡುತ್ತ ಅಲ್ಲಿಂದ ಕಾಲು ಕಿತ್ತರು.

ಮಾಘ ಶುದ್ಧ ಪಂಚಮಿಯಂದು ನಾವು ಆ ಮನೆ ಪ್ರವೇಶ ಮಾಡುವುದಕ್ಕೂ ಮೊದಲು ಸಾಕಷ್ಟು ವಿದ್ಯಮಾನಗಳು ನಡೆದವು. ಈಷ್ಟೆಲ್ಲ ಜಗಳ ಆಡಿದ ಅತ್ತೆ ಸೊಸೆಯರಿಬ್ಬರು ತಲಾ ಒಂದೊಂದು ಉತ್ತರಾದಿ; ದಕ್ಷಿಣಾದಿ ದಾರಿ ಹಿಡಿಯುವರೆಂದು ಜಗಳ ಹರಿದ ಮರುಕ್ಷಣ ಅಂದುಕೊಂಡಿದ್ದೆ. ಕಥೆಗಾರನಾಗಿ ಅವರ ಪೂರ್ವೋತ್ತರ ಬದುಕಿನ ಬಗ್ಗೆ; ಶೇಷಾಯುಷ್ಯ ಕಳೆಯುವ ಬಗ್ಗೆ ಸಾಕಷ್ಟು ಆತಂಕಗೊಂಡು ಆಲೋಚಿಸಿದ್ದೆ. ಆದರೆ ನನ್ನ ಸೃಜನಶೀಲಾತ್ಮಕ ಊಹೆ, ಆತಂಕಗಳೆಲ್ಲ ತಲೆಕೆಳಗಾದವು.

ವಿಚಿತ್ರವೇನೆಂದರೆ ಅತ್ತೆ ಸೊಸೆಯರಿಬ್ಬರು ನಂತರ ದಿನಗಳಲ್ಲಿ ತುಂಬ ಅನ್ಯೋನ್ಯವಾಗಿದ್ದರು. ದೂರದ ಸಂಬಂದಿಯೋರ್ವನು ಹಚ್ಚಿಕೊಟ್ಟಿದ್ದರಿಂದಾಗಿಯೇ ಅಲುಮೇಲಮ್ಮಜ್ಜಿ ಜಿದ್ದಾಜಿದ್ದಿ ಆಡಿತೆಂದು ಅರ್ಥವಾಯಿತು. ನೀಳಕಾಯದ; ಪರಮ ಸಾತ್ವಿಕ ತೇಜಸ್ಸಿನ ಮುಖದ ಆ ದೂರದ ಸಂಬಂಧಿ ನನ್ನ ನೀಳ್ಗಥೆಯ ಯಾವ್ಯ್ದೋ ಮೂಲೆಯ ಪಾತ್ರವೆಂದು ನನಗರ್ಥವಾಯಿತು. ಈ ಬಗ್ಗೆ ನಾನು ತಲೆ ಕೆಡೆಸಿಕೊಳ್ಳದೆ ಇರಲಿಲ್ಲ. ತನ್ನ ಮಗಳನ್ನು ಶಾಮನಿಗೆ ಗಂಟು ಹಾಕಲು ಪ್ರಯತ್ನಿಸಿದ ಹರಪನಹಳ್ಳಿ ಅಗ್ರಹಾರದ ಕಡೆಯ ಶಾನುಭೋಗ ಶಿವರಾಮರಾಯರು ಅಂತ ಕೆಲವರೆಂದರೆ; ಮತ್ತೆ ಕೆಲವರು ಒಂದು ಕಾಲದಲ್ಲಿ ಅಲುಮೇಲಮ್ಮನನ್ನು ಮಾಡಿಕೊಳ್ಳಬೇಕೆಂದು ತಲೆಕೆಡೆಸಿಕೊಂಡಿದ್ದ ಸೂಲದೇವರಹಳ್ಳಿ ಶಾನುಭೋಗರ ಮಗ ಶೀನಪ್ಪ ಅಲಿಯಾಸ್ ಶ್ರೀನಿವಾಸಾಚಾರ್ಯರೆಂದು ಆಡಿಕೊಂಡರು.

ಅಲುಮೇಲಮ್ಮನವರಿಂದ ತಿರಸ್ಕೃತಗೊಂಡ ನಂತರ ಶೀನಪ್ಪ ಶ್ರೀನಿವಾಸಾಚಾರ್ಯರಾಗಿದ್ದೊಂದು ದೊಡ್ಡ ಕಥೆ. ಹೆಂಡತಿ ತೀರಿಕೊಂಡ ನಂತರ ರಮಣ ಮಹರ್ಷಿಗಳ ಆಶ್ರಮದಲ್ಲಿದ್ದು ಮೂರು ತಿಂಗಳಕಾಲ ಮೌನೋಪಾಸನೆ ಮಾಡಿದನಂತೆ, ಉಪಾಸನೆ ಪೂರ್ಣಗೊಂಡ ಕ್ಷಣವೇ ಅಲುಮೇಲಮ್ಮ ಶಂಖ ಚಕ್ರ, ಗದಾ ಹಸ್ತೆಯಾಗಿ ಮಹಾಲಕ್ಷ್ಮಿ ರೂಪದಲ್ಲಿ ದರುಶನ ನೀಡಿದಳಂತೆ. ಅದೂ ಅರೆ ಜಾಗೃತಾವಸ್ಥೆಯಲ್ಲಿ ಬಿದ್ದ ಕನಸಿನಲ್ಲಿ… ಪ್ರತಿ ಶನಿವಾರ ಗೋಧೂಳಿ ಮಹೂರ್ತದಲ್ಲಿ ಪ್ರಾಣ ದೇವರ ದೇವಸ್ಥಾನದಲ್ಲಿ ಬಂದು ಅಲುಮೇಲಮ್ಮಜ್ಜಿಯನ್ನು ಕಂಡು ಮಮ್ಮಲನೆ ಮರುಗಿ ಮಾತಾಡಿಸಿಕೊಂಡು ಹೋಗುತ್ತಿದ್ದನಂತೆ… ಅಕಾಲ ಮರಣಕ್ಕೆ ತುತ್ತಾಗಿದ್ದವವರ ಕೈ ಹಿಡಿದು ಏನು ಸಾಧಿಸಿದೆ? ದೀರ್ಘಾಯುಷಿಯಾದ ನನ್ನ ಕೈ ಹಿಡಿಯಬಾರದಿತ್ತೆ? ಅಂತ ಮಮ್ಮಲನೆ ಮರುಗುತ್ತಿದ್ದನಂತೆ… ಇದೆಲ್ಲ ಜನರು ನನ್ನ ಕಿವಿಗೆ ಬೀಳುವ ಹಾಗೆ ಮಾತಾಡಿಕೊಳ್ಳುತ್ತಿದ್ದರು.

ಇದರಲ್ಲಿ ಹಾಲೆಷ್ಟೊ? ನೀರೆಷ್ಟೋ? ಆದರೆ ಸಾಮಾನ್ಯ ಜನರು ಮಾತ್ರ ನನಗಿಂತ ಹೆಚ್ಚು ಸೃಜನಶೀಲರಾಗಿದ್ದುದು ನಿಜ. ಮುಂದೆ ಯಾರ್ಯಾರ ನಡುವೆ ಏನೇನು ನಡೆಯಿತೋ ಏನೋ…! ತೆರೆಮರೆಯಲ್ಲಿ ಹಲವರು ಮುದುಕಿಯ ಹಣ ಲಪಟಾಯಿಸಲು ಪ್ರಯತ್ನಿಸಿರಬಹುದು. ಅಷ್ಟರಲ್ಲಿ ಮುದುಕಿ ಎಚ್ಚತ್ತುಕೊಂಡಿರಬಹುದು. ಆಕೆ ಮುಂದೆ ಸೊಸೆಯ ಸಾನ್ನಿಧ್ಯವೇ ಪರಮ ಪುಣ್ಯ ಕ್ಷೇತ್ರವೆಂದು ಭಾವಿಸಿರಬಹುದು! ಮೊಮ್ಮಕ್ಕಳೇ ಸಾಕ್ಷಾತ್ ದೈವ ಸ್ವರೂಪವೆಂದೇ ಭಾವಿಸಿರಬಹುದು. ಅಂತೂ ಅದೇ ಮನೆಯಲ್ಲಿ ಮಾಘಮಾಸದವರೆಗೆ ಅತ್ತೆ ಸೊಸೆ ತಮ್ಮ ಕರುಳ ಕುಡಿಗಳೊಂದಿಗೆ ಅನ್ಯೋನ್ಯವಾಗಿದ್ದರು. ಹನ್ನೊಂದನೇ ವಾರ್ಡಿನಲ್ಲಿ ನಡೆಯುತ್ತಿದ್ದ ಅತ್ತೆ ಸೊಸೆ ಜಗಳವನ್ನು ತಾವು ನಯವಾದ ಮಾತುಗಳಿಂದ ಬಗೆಹರಿಸುತ್ತಿದ್ದರು. ಮುಂದೊಂದು ದಿನ ಅವರೆಲ್ಲ ಯಾವುದೋ ಊರಿಗೆ ಪ್ರಯಾಣ ಬೆಳೆಸಿದರು. ಪ್ರಾಯಶಃ ಹೊಸಪೇಟೆ ಇರಬಹುದು. ಹನ್ನೊಂದನೇ ವಾರ್ಡಿನ ಅನೇಕ ಹಿರಿಯರೊಂದಿಗೆ ನಮ್ಮಪ್ಪನೇ ನಿಲ್ದಾಣಕ್ಕೆ ಹೋಗಿ ಬಸ್ಸು ಹತ್ತಿಸಿ ಬಂದನು.

ಮಾಘ ಮಾಸದ ಐದನೆ ದಿನದಂದು ಆ ಮನೆ ಸೇರಿಕೊಂಡೋಡನೆ ನನ್ನನ್ನು ಶಾಮಾಶಾಸ್ತ್ರಿಯ ನೆನಪು ಆವರಿಸಿತು. ಅವನ ಮರಣಾನಂತರ ಸಂಭವಿಸಿದ ಅನೇಕ ಘಟನೆಗಳನ್ನು ಇದಕ್ಕೆ ಪೂರಕವಾಗಿಯೇ ನಾನು ಪ್ರಸ್ತಾಪಿಸಿರುವುದು. ಪ್ರಾಣಕ್ಕಿಂತ ಹೆಚ್ಚಗಿ ಪ್ರೀತಿಸುತ್ತಿದ್ದ ತಾಯಿ, ಪುರಾಣಗಳಲ್ಲಿ ಕಂಡರಿಯದ ಪತಿವ್ರತೆಯಾದ ಹೆಂಡತಿ, ಸಿನಿಮಾ ಬಾಲನಟರಂತಿದ್ದ ಇಬ್ಬರು ಗಂಡು ಮಕ್ಕಳು, ಕೈ ತುಂಬ ಪಗಾರ ಕೊಡುತ್ತಿದ್ದ ನೌಕರಿ, ಇಷ್ಟೆಲ್ಲ ಇದ್ದು ಸುಖವಾಗಿ ಬದುಕಲು ಯಾಕೆ ಅವನಿಂದ ಸಾಧ್ಯವಾಗಲಿಲ್ಲ? ಆ ಅನಸೂಯಳ ಗೊಡವೆಗೆ ಯಾಕೆ ಹೋಗಬೇಕಿತ್ತು? ಇಂಥ ಎಷ್ಟೋ ಬ್ರಹ್ಮಗಂಟುಗಳನ್ನು ಬಿಡಿಸದಿದ್ದಲ್ಲಿ; ಬದುಕಿನೊಳಗೆ ಮೊಟ್ಟೆ ಇಡುತ್ತಿದ್ದ ನಿಗೂಡ ಒಗಟುಗಳನ್ನು ಭೇದಿಸುವುದು ನನ್ನ ಜವಾಬ್ದಾರಿ. ನನ್ನ ಪರಮಾಪ್ತ ಗೆಳೆಯನಾದ ಅವನ ಬಗ್ಗೆ ನೀವು ಅಪಾರ್ಥ ಕಲ್ಪಿಸಿಕೊಳ್ಳಲು ದಾರಿಯಾಗಬಹುದು! ಅವನ ಮತ್ತು ನನ್ನ ನಡುವೆ ಒಂದು ಅಂತರ ಇತ್ತು. ಒಂದು ನಿರ್ದಿಷ್ಟ ದೂರದಿಂದಲೇ ಅವನ್ನು ಗ್ರಹಿಸುವ ಪ್ರಯತ್ನ ನಡೆಸಿದ್ದೆ. ಇಂಥ ಒಬ್ಬ ತನ್ನನ್ನು ಗ್ರಹಿಸುತ್ತಿದ್ದಾನೆಂದು ಅವನು ಅರ್ಥ ಮಾಡಿಕೊಂಡನೇನೋ? ಅಥವಾ ಸಾಹಿತ್ಯದ ಬಗೆಗಿನ ಅಭಿರುಚಿ ಆ ಅಂತರವನ್ನು ಅಳಿಸಿ ಹಾಕಿತೇನೋ? ಅಂತೂ ಹಂತ ಹಂತವಾಗಿ ನಾವಿಬ್ಬರು ಒಂದಾದೆವು. ನನಗೆ ಎಷ್ಟೋ ಸಂದರ್ಭಗಳಲ್ಲಿ ಗೆಳೆಯನಿಂತ ಹೆಚ್ಚಗಿ ಸೋದರನಂತೆ ವರ್ತಿಸುತ್ತಿದ್ದ. ನಾನು ಅಷ್ಟೆ. ಕ್ರಮೇಣ ಅವನ ಬದುಕಿನಲ್ಲಿ ಕಾಣಿಸಿಕೊಂಡ ತಿರುವುಗಳು ನನ್ನನ್ನು ಮೂಕವಿಸ್ಮಿತಗೊಳಿಸಿದವು. ಸರಿತಪ್ಪುಗಳ ಬಗ್ಗೆ ನನ್ನಿಂದ ಯೋಚಿಸುವುದಾಗಲಿಲ್ಲ … ಕೆಲವೊಮ್ಮೆ ನಾನು ಅವನನ್ನು ತಿದ್ದಲು ಪ್ರಯತ್ನಿಸಿದ್ದುಂಟು. ಅವನು ಪ್ರತಿಕ್ಷಣ ಸೋಲುತ್ತಿದ್ದಾನಲ್ಲ ಎಂದು ಮಮ್ಮಲನೆ ಮರುಗುತ್ತಿದ್ದುದುಂಟು. ಆದರೆ ಸೋಲು ಅವನದಾಗಿರಲಿಲ್ಲ. ನನ್ನದಾಗಿರುತ್ತಿತ್ತು. ಅದೂ ಅಲ್ಲದೆ ನೂರಾರು ಕಿಲೋ ಮೀಟರು ದೂರದೂರಿನಲ್ಲಿದ್ದು ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ನನಗೆ ಅವನನ್ನು ಪೂರ್ಣ ಹಚ್ಚಿಕೊಳ್ಳುವುದು ಸಾಧ್ಯವಾಗದೆ ಹೋಯಿತು. ಪ್ರತಿ ಸಾರಿ ಬಂದಾಗಲೆಲ್ಲ ವಿಷಾದಕ್ಕೆ ತುತ್ತ್ತಾಗುತ್ತಲೋ, ವೇದನೆಯ ನಿಟ್ಟುಸಿರು ಬಿಡುತ್ತಲೋ, ಕೆಟ್ಟದಾಗಿ ಬಂಡಾಯದ ಬಗ್ಗೆ ಯೋಚಿಸುತ್ತಲೋ ಹೋಗಿಬಿಡುತ್ತಿದ್ದೆ. ನನಗೆ ಅರ್ಥವಾಗದಷ್ಟು ಅವನ ಬದುಕಿನ ವಿದ್ಯಮಾನಗಳು ಒಂದು ಕ್ಷಣ ಪ್ರಖರವಾಗಿ ಕೋರೈಸಿ ಮತ್ತೆ ಅಂತರ್ಧಾನವಾಗಿಬಿಡುತ್ತಿದ್ದವು. ಬೆಳಕಿಗೆ ಮಬ್ಬು ಕವಿದು ವಿವೇಚನಾ ಶಕ್ತಿ ಕಳೆದುಕೊಳ್ಳುತ್ತಿದ್ದ ಕಣ್ಣುಗಳಾಳದಿಂದ ಸ್ತ್ರೀಮೂರ್ತಿಯೊಂದು ಮೂಡತೊಡಗಿತ್ತು. ಅದು ಎಲ್ಲ ಮಾನವೀಯ ಸಂದೇಶಗಳಿಗಿಂತ ಮಿಗಿಲಾಗಿತ್ತು. ಈ ಎಲ್ಲ ಸಿಕ್ಕುಸಿಕ್ಕಾಗಿರುವ ಅನುಭವಗಳನ್ನು ಒಂದೊಂದಾಗಿ ಬಿಡಿಸಿ ಅವಕ್ಕೆಲ್ಲ ಅಕ್ಷರ ರೂಪ ಕೊಟ್ಟು ದೃಶ್ಯಾವಳಿಯಾಗಿರುವ ಕೆಲಸವನ್ನು ಮುಂದೆ ಮಾಡಲಿರುವೆ ಎಂಬಲ್ಲಿಗೆ ಕುಂ. ವೀ. ಎಂಬ ಹುಲುನರವಿರಚಿತ ಶಾಮಣ್ಣ ಎಂಬ ಕಥಾನಕದ ದ್ವಿತೀಯಾಶ್ವಾಸಂ ಸಮಾಪ್ತಿಯಾದುದು.

ಜಯಮಂಗಳಮ್ ನಿತ್ಯ ಶುಭಮಂಗಳಂ
*****
ಮುಂದುವರೆಯುವುದು

ಕೀಲಿಕರಣ: ಎಂ ಎನ್ ಎಸ್ ರಾವ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.