ನೂರು ವರ್ಷದ ಏಕಾಂತ – ೧

ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್
ಕನ್ನಡಕ್ಕೆ: ಎ. ಎನ್. ಪ್ರಸನ್ನ

ಪಾತ್ರಗಳು

ಕಾದಂಬರಿಯಲ್ಲಿ ಬರುವ ಪಾತ್ರಗಳು ನೂರಾರು.

ಹೆಸರುಗಳು-ಅವುಗಳ ಪರಸ್ಪರ ಸಂಬಂಧ ಓದುವ ಗತಿಯಲ್ಲಿ ಕೊಂಚ ಗಲಿಬಿಲಿಯುಂಟು ಮಾಡಿಬಿಡಬಹುದು. ಆದುದರಿಂದ ವಂಶವೃಕ್ಷದ ಮೂಲಕ ಸಂಬಂಧಗಳನ್ನು ವಿವರಿಸಲಾಗಿದೆ..

ಹೊಸೆ ಅರ್ಕಾದಿಯೋ ಬ್ಯುಂದಿಯಾ
ಉರ್ಸುಲಾ ಇಗ್ವಾರಾನ್
ಇವರಿಂದ
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ
ಹೊಸೆ ಅರ್ಕಾದಿಯೋ
ಅಮರಾಂತ
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ
ರೆಮಿದಿಯೋಸ್ ಮೊಸ್ಕೋತೆ
ಇವರಿಂದ
ಅವ್ರೇಲಿಯಾನೋ ಹೊಸೆ
[ಪಿಲರ್ ಟೆರ್ನೆಳಾಳಿಂದ]
೧೭ ಅವ್ರೇಲಿಯಾನೋಗಳು
[ಬೇರೆ ಬೇರೆಯವರಿಂದ]

ಹೊಸೆ ಅರ್ಕಾದಿಯೋ
ರೆಬೇಕ
ಅರ್ಕಾದಿಯೋ
[ಪಿಲರ್ ಟೆರ್ನೆಳಾಳಿಂದ]

ಅಮರಾಂತ
——
ಅರ್ಕಾದಿಯೋ
ಸಾಂತ ಸೋಫಿಯಾ ಪಿಯದಾದ್
ಇವರಿಂದ
ಸುಂದರಿ ರೆಮಿದಿಯೋಸ್
ಅವ್ರೇಲಿಯಾನೋ ಸೆಗುಂದೋ
ಹೊಸೆ ಅರ್ಕಾದಿಯೋ ಸೆಗುಂದೋ
ಅವ್ರೇಲಿಯಾನೋ ಸೆಗುಂದೋ
ಫೆರ್ನಾಂಡ ದೆಲ್ ಕಾರ್ಪಿಯೋ
ಇವರಿಂದ
ರೆನಾಟ ರೆಮಿದಿಯೋಸ್ [ಮೆಮೆ]
ಹೊಸೆ ಅರ್ಕಾದಿಯೋ
ಅಮರಾಂತ ಉರ್ಸುಲಾ

ರೆನಾಟ ರೆಮಿದಿಯೋಸ್
[ಮಾರಿಸಿಯೋ ಬಾಬಿಲೋನಿಯಾ]
ಇವರಿಂದ

ಅವ್ರೇಲಿಯಾನೋ
ಅಮರಾಂತ ಉರ್ಸುಲಾ
ಗ್ಯಾತ್ಸನ್
[ಅವ್ರೇಲಿಯಾನೋ]
ಇವರಿಂದ

ಅವ್ರೇಲಿಯಾನೊ
* * *

ಎಷ್ಟೋ ವರ್ಷಗಳಾದ ಮೇಲೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತನ್ನ ಎದುರು ಗುಂಡಿಕ್ಕಿ ಕೊಲ್ಲಲು ಸಿದ್ಧರಾಗಿ ನಿಂತ ತಂಡದವರನ್ನು ನೋಡುತ್ತ, ಹಿಂದೆಂದೋ ಒಂದು ದಿನ ಮಧ್ಯಾಹ್ನ ತನ್ನ ತಂದೆ ಐಸ್ ನೋಡಲು ಕರೆದುಕೊಂಡು ಹೋದದ್ದನ್ನು ನೆನಪಿಸಿಕೊಂಡ. ಆಗಿನ ಕಾಲದಲ್ಲಿ ಮಕೋಂದೋ ಇಪ್ಪತ್ತು ಮನೆಗಳಿದ್ದ ಒಂದು ಸಣ್ಣ ಹಳ್ಳಿಯಾಗಿತ್ತು. ಅದು ಇದ್ದದ್ದು ಭಾರಿ ಗಾತ್ರದ ಇತಿಹಾಸಪೂರ್ವ ಮೊಟ್ಟೆಗಳಂತೆ ಬಿಳುಪಾದ ನುಣ್ಣನೆಯ ಕಲ್ಲುಗಳಿದ್ದ ತಿಳಿನೀರು ಹರಿಯುವ ನದಿಯ ದಡದಲ್ಲಿ. ಪ್ರಪಂಚದ ಹುಟ್ಟು ಇತ್ತೀಚೆಗಷ್ಟೆ ಆಗಿದ್ದು, ಎಷ್ಟೋ ವಸ್ತುಗಳಿಗೆ ಹೆಸರಿರಲಿಲ್ಲ ಮತ್ತು ಅವುಗಳನ್ನು ಗುರುತು ಹಿಡಿಯಲು ಕೈ ಮಾಡಿ ತೋರಿಸಬೇಕಾಗಿತ್ತು. ಪ್ರತಿ ವರ್ಷವೂ ಜಿಪ್ಸಿಗಳ ಸಂಸಾರವೊಂದು ಹಳ್ಳಿಯ ಹತ್ತಿರ ಬೀಡು ಬಿಟ್ಟು ಪೀಪಿಗಳನ್ನು ಊದಿ, ತಮಟೆ ಬಡಿದು ಹೊಸ ಆವಿಷ್ಕಾರಗಳನ್ನು ತೋರಿಸುತ್ತಿತ್ತು. ಮೊದಲು ಅವರು ಆಯಸ್ಕಾಂತವನ್ನು ತಂದರು. ಭಾರಿ ಗಾತ್ರದ ಅಡ್ಡಾದಿಡ್ಡಿ ಬೆಳೆದ ಗಡ್ಡದ ಮತ್ತು ಒರಟು ಕೈಗಳಿದ್ದ ಒಬ್ಬ ಜಿಪ್ಸಿ ತಾನು ಮೆಲ್‌ಕಿಯಾದೆಸ್ ಎಂದು ತಿಳಿಸಿ, ಸಾರ್ವಜನಿಕ ಪ್ರದರ್ಶನವೊಂದನ್ನು ಮಾಡುತ್ತ ಅದು ಪ್ರಪಂಚದ ಎಂಟನೇ ಅದ್ಭುತವೆಂದೂ ಮತ್ತು ಅದನ್ನು ತಾನು ಮೆಸಿಡೋನಿಯಾದ ರಸವಾದಿಗಳಿಂದ ಕಲಿತದ್ದೆಂದೂ ಹೇಳಿದ. ಅವನು ಭಾರಿ ಗಾತ್ರದ ಲೋಹದ ಇಟ್ಟಿಗೆಗಳನ್ನು ಎಳೆದುಕೊಳ್ಳುತ್ತ ಮನೆಯಿಂದ ಮನೆಗೆ ಹೋದ. ಮನೆಯಲ್ಲಿದ್ದ ಪಾತ್ರೆ ಪಡಗ ಇತ್ಯಾದಿಗಳು ಉರುಳಿ ಬಿದ್ದದ್ದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಅಲ್ಲದೆ ಸ್ಕ್ರೂಗಳು ಹಾಗೂ ಮೊಳೆಗಳು ತೊಲೆಗಳಿಂದ ಹೊರ ಬರಲು ಪ್ರಯತ್ನಿಸಿ ಸೀಳಿದವು. ಎಷ್ಟೋ ದಿನಗಳ ಹಿಂದೆ ಕಳೆದು ಹೋದ ವಸ್ತುಗಳು ಅವುಗಳನ್ನು ಹುಡುಕುತ್ತಿದ್ದ ಸ್ಥಳಗಳಿಂದ ಹೊರಗೆ ಬಂದು ಕಾಣಿಸಿಕೊಂಡು ದಡಬಡಿಸಿ ಮೆಲ್‌ಕಿಯಾದೆಸ್‌ನ ಮಾಂತ್ರಿಕ ಇಟ್ಟಿಗೆಯ ಹಿಂದೆ ಹೋದವು. “ವಸ್ತುಗಳಿಗೆ ಜೀವವಿರುತ್ತೆ, ಅವುಗಳ ಆತ್ಮವನ್ನು ಎಚ್ಚರಿಸಬೇಕಷ್ಟೆ ಎಂದು ಜಿಪ್ಸಿ ಒರಟು ದನಿಯಲ್ಲಿ ಹೇಳಿದ. ಯಾವಾಗಲೂ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಅಂಕೆಯಿಲ್ಲದ ಕಲ್ಪನಾಶಕ್ತಿ, ಸಹಜ ಪ್ರತಿಭೆ, ಪವಾಡ ಹಾಗೂ ಮಾಂತ್ರಿಕ ಅಂಶಗಳನ್ನೂ ಮೀರಿ ಹೋಗುತ್ತಿದ್ದರಿಂದ ಆ ಆವಿಷ್ಕಾರದಿಂದ ಭೂಮಿಯೊಳಗಿಂದ ಬಂಗಾರವನ್ನು ಹೊರಗೆ ತೆಗೆಯಬಹುದು ಎಂದು ಯೋಚಿಸಿದ. ಪ್ರಾಮಾಣಿಕ ಮನುಷ್ಯನಾದ ಮೆಲ್‌ಕಿಯಾದೆಸ್ ಅವನನ್ನು ಎಚ್ಚರಿಸುತ್ತ, “ಇದು ಆ ಕೆಲಸಕ್ಕೆ ಬರಲ್ಲ” ಎಂದ. ಆದರೆ ಆ ಸಮಯದಲ್ಲಿ ಜಿಪ್ಸಿಯ ಪ್ರಾಮಾಣಿಕತೆಯನ್ನು ಹೊಸೆ ಅರ್ಕಾದಿಯೋ ಬ್ಯುಂದಿಯಾ ಒಪ್ಪಲಿಲ್ಲ. ಅವನು ಎರಡು ಆಯಸ್ಕಾಂತದ ಲೋಹದ ಇಟ್ಟಿಗೆಗಳನ್ನು ತನ್ನ ಹೇಸರಗತ್ತೆ ಮತ್ತು ಒಂದು ಜೊತೆ ಮೇಕೆಯನ್ನು ಕೊಟ್ಟು ಕೊಂಡ. ಮನೆಯ ಹಿಡುವಳಿ ಹೆಚ್ಚಿಸುವುದಕ್ಕೆ ಆ ಪ್ರಾಣಿಗಳನ್ನು ಅವಲಂಬಿಸಿದ್ದ ಅವನ ಹೆಂಡತಿ ಉರ್ಸುಲಾ ಇಗ್ವಾರಾನ್‌ಗೆ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ. ಅವನು, “ಬಹಳ ಬೇಗ ನಮ್ಮ ಮನೆಯಲ್ಲಿ ಬಂಗಾರ ಸಿಗತ್ತೆ, ನೆಲಕ್ಕೂ ಹಾಸುವಷ್ಟು” ಎಂದ. ಅನಂತರ ಕೆಲವು ತಿಂಗಳು ತಾನು ಹೇಳಿದ್ದು ಸತ್ಯ ಎಂದು ತೋರಿಸಲು ಸಾಕಷ್ಟು ಕಷ್ಟಪಟ್ಟ. ಅವನು ಮೆಲ್‌ಕಿಯಾದೆಸ್ ಹೇಳುತ್ತಿದ್ದ ಮಂತ್ರಗಳನ್ನು ಪಠಿಸುತ್ತ ನದಿಯ ಪಕ್ಕದಲ್ಲಿ ಇಂಚಿಂಚು ಬಿಡದಂತೆ ಸುತ್ತಾಡಿದ. ಹಾಗೆ ಮಾಡಿದಾಗ ಅವನಿಗೆ ಸಿಕ್ಕ ಒಂದೇ ವಸ್ತುವೆಂದರೆ ಹದಿನೈದನೆ ಶತಮಾನಕ್ಕೆ ಸೇರಿದ, ಒಂದಕ್ಕೊಂದು ಅಂಟಿಕೊಂಡಿದ್ದ ತುಕ್ಕು ಹಿಡಿದ ಕವಚ ಮತ್ತು ಅದರೊಳಗೆ ಕಲ್ಲು ತುಂಬಿದ್ದ ಒಂದು ಬುರುಡೆ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತು ಈ ಕೆಲಸಕ್ಕೆಂದು ಅವನ ಜೊತೆಗಿದ್ದ ನಾಲ್ವರು ಆ ಕವಚವನ್ನು ಬೇರ್ಪಡಿಸಿದಾಗ ಅವರಿಗೆ ಅದರೊಳಗೆ ಕಂಡದ್ದು ಪುಡಿ ಪುಡಿಯಾದ ಅಸ್ಥಿಪಂಜರ ಮತ್ತು ಅದರ ತಲೆಯಲ್ಲಿ ಇದ್ದ ಒಂದು ತಾಮ್ರದ ಪದಕ ಮತ್ತು ಕತ್ತಿನ ಸುತ್ತ ಇದ್ದ ಹೆಂಗಸಿನ ಕೂದಲು.

ಮಾರ್ಚ್‌ನಲ್ಲಿ ಜಿಪ್ಸಿಗಳು ತಿರುಗಿ ಬಂದರು. ಈ ಸಲ ಅವರು ದೂರದರ್ಶಕ ಮತ್ತು ಒಂದು ಡ್ರಮ್ಮಿನ ಗಾತ್ರದ ಭೂತಗನ್ನಡಿಯನ್ನು ತಂದು, ಅವು ಆಮ್‌ಸ್ಟರ್‌ಡ್ಯಾಂನ ಯಹೂದಿಗಳು ಇತ್ತೀಚೆಗೆ ಕಂಡು ಹಿಡಿದಿದ್ದೆಂದು ಪ್ರದರ್ಶಿಸಿದರು. ಅವರು ಜಿಪ್ಸಿ ಹುಡುಗಿಯೊಬ್ಬಳನ್ನು ಹಳ್ಳಿ ಅಂಚಿನಲ್ಲಿ ನಿಲ್ಲಿಸಿದರು. ದೂರದರ್ಶಕವನ್ನು ಟೆಂಟ್ ಮುಂಭಾಗದಲ್ಲಿಟ್ಟರು. ಐದು ರಿಯಲ್ಸ್ ದುಡ್ಡಿಗೆ ದೂರದರ್ಶಕದಲ್ಲಿ ನೋಡಿ ಜಿಪ್ಸಿ ಹುಡುಗಿಯನ್ನು ಕೈಯಳತೆಯ ಅಂತರದಲ್ಲಿ ಇರುವ ಹಾಗೆ ನೋಡಬಹುದಾಗಿತ್ತು. “ವಿಜ್ಞಾನ ದೂರವನ್ನು ಅಳಿಸಿ ಹಾಕಿದೆ” ಎಂದು ಮೆಲ್‌ಕಿಯಾದೆಸ್ ಘೋಷಿಸಿದ. ಇನ್ನು ಸ್ವಲ್ಪ ಕಾಲದಲ್ಲೇ ಮನೆಯಿಂದ ಆಚೆ ಹೋಗದೆಯೇ ಜಗತ್ತಿನಲ್ಲಿ ಎಲ್ಲಾದರೂ ಸರಿಯೆ, ಏನಾಗುತ್ತಿದೆಯೆಂದು ನೋಡಬಹುದು ಎಂದ. ಮಟಮಟ ಮಧ್ಯಾಹ್ನ ಉರಿ ಬಿಸಿಲಿನ ಸೂರ್ಯನಿರುವಾಗ ಅಗಾಧ ಭೂತಗನ್ನಡಿಯ ಪ್ರಯೋಗವನ್ನು ನಿಬ್ಬೆರಗಾಗಿಸುವ ರೀತಿಯಲ್ಲಿ ತೋರಿಸಿದ. ರಸ್ತೆಯ ಮಧ್ಯದಲ್ಲಿ ಅವರು ತಂದಿಟ್ಟ ಒಣಗಿದ ಹುಲ್ಲಿನ ಗುಪ್ಪೆಯ ಮೇಲೆ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಿ ಅದನ್ನು ಉರಿಸಿದ. ಆಯಸ್ಕಾಂತದ ಪ್ರಕರಣದಿಂದ ಇನ್ನೂ ಸಮಾಧಾನಗೊಳ್ಳದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಈ ಹೊಸ ಆವಿಷ್ಕಾರವನ್ನು ಯುದ್ಧದ ಉಪಕರಣವನ್ನಾಗಿ ಉಪಯೋಗಿಸುವುದಾಗಿ ಕಲ್ಪಿಸಿದ. ಅದನ್ನು ಒಪ್ಪದ ಮೆಲ್‌ಕಿಯಾದೆಸ್ ಅವನಿಗೆ ತಿಳಿಸಿ ಹೇಳಲು ಪ್ರಯತ್ನಿಸಿದ. ಆದರೆ ಕೊನೆಗೆ ಆ ಆಯಸ್ಕಾಂತದ ಇಟ್ಟಿಗೆಗಳು ಮತ್ತು ಮೂರು ವಸಾಹತು ಕಾಲದ ನಾಣ್ಯಗಳಿಗೆ ಬದಲಾಗಿ ಭೂತಗನ್ನಡಿಯನ್ನು ಕೊಟ್ಟ. ಉರ್ಸುಲಾ ಭಯಗೊಂಡು ಅತ್ತಳು. ಸಣ್ಣ ಪೆಟ್ಟಿಗೆಯಲ್ಲಿದ್ದ ಆ ನಾಣ್ಯಗಳನ್ನು ಅವಳ ತಂದೆ ಇಡೀ ಜೀವನದಲ್ಲಿ ದುಂದು ಮಾಡದೆ ಉಳಿಸಿದ್ದು ಮತ್ತು ಅವಳು ಅದನ್ನು ತನ್ನ ಹಾಸಿಗೆಯ ಕೆಳಗೆ ಹೂತಿಟ್ಟು, ಉಪಯೋಗಿಸಲು ಸರಿಯಾದ ಸಮಯಕ್ಕಾಗಿ ಕಾದಿದ್ದಳು. ತನ್ನ ಜೀವನವನ್ನೇ ಪಣಕ್ಕಿಟ್ಟು ಅದರೊಂದಿಗೆ ನಡೆಸುವ ವಿವಿಧ ರೀತಿಯ ಪ್ರಯೋಗಳ ಆಲೋಚನೆಯಲ್ಲೇ ಮುಳುಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವಳನ್ನು ಸಮಾಧಾನಗೊಳಿಸುವ ಗೊಡವೆಗೆ ಹೋಗಲಿಲ್ಲ. ಶತ್ರುಗಳ ಮೇಲೆ ಗಾಜಿನ ಪರಿಣಾಮವನ್ನು ತೋರಿಸುವ ಪ್ರಯತ್ನದಲ್ಲಿದ್ದಾಗ ಅವನು ಸೂರ್ಯಕಿರಣಗಳು ಒಗ್ಗೂಡುವ ಸ್ಥಳದಲ್ಲಿ ನಿಂತಿದ್ದರಿಂದ ಮೈಯೆಲ್ಲ ಸುಟ್ಟು ಹೋಗಿ ಅದು ಗುಣವಾಗುವುದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಅವಳು ಇಂತಹ ಅಪಾಯಕಾರಿ ಆವಿಷ್ಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಒಮ್ಮೆ ಅವನು ತಮ್ಮ ಮನೆಗೇ ಬೆಂಕಿಯಿಡಲು ಸಿದ್ಧನಾಗಿದ್ದ. ಅವನು ತನ್ನ ರೂಮಿನಲ್ಲಿ ಕುಳಿತು ಆ ಅವಿಷ್ಕಾರದ ಸಾಧ್ಯತೆಗಳನ್ನು ಲೆಕ್ಕ ಹಾಕುತ್ತಿದ್ದ. ಕೊನೆಗೆ ಅದನ್ನು ಉಪಯೋಸುವುದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಮತ್ತು ಅದರ ಬಗ್ಗೆ ತನಗಿರುವ ನಂಬಿಕೆಯನ್ನು ಕುರಿತಂತೆ ಒಂದು ಕಿರು ಹೊತ್ತಿಗೆಯನ್ನು ಹೊರತಂದ. ತಾನು ಅನೇಕ ಪ್ರಯೋಗಗಳನ್ನು ಕುರಿತು ಮತ್ತು ಅದರ ಬಗ್ಗೆ ಪುಟಗಟ್ಟಲೆ ವಿವರಣಾತ್ಮಕ ಚಿತ್ರಗಳನ್ನು ಬರೆದು ಒಬ್ಬ ವ್ಯಕ್ತಿಯ ಸಂಗಡ ಅದನ್ನು ಸರ್ಕಾರಕ್ಕೆ ಕಳಿಸಿಕೊಟ್ಟ. ಆ ವ್ಯಕ್ತಿ ಪರ್ವತಗಳನ್ನು ದಾಟಿ, ಕಂದರಗಳಲ್ಲಿ ದಾರಿ ತಪ್ಪಿ, ನದಿಗಳನ್ನು ದಾಟಿ ಕೊನೆಗೆ ನಿರಾಶನಾಗುವ ಮತ್ತು ಪ್ಲೇಗ್ ರೋಗಕ್ಕೆ ತುತ್ತಾಗುವ ಹಾಗೂ ಕಾಡು ಪ್ರಾಣಿಗಳಿಗೆ ಬಲಿಯಾಗುವ ಹಂತದಲ್ಲಿದ್ದಾಗ ಹೇಸರಗತ್ತೆಗಳ ಮೇಲೆ ಟಪಾಲು ಒಯ್ಯುವ ದಾರಿ ಕಂಡುಕೊಂಡ. ರಾಜಧಾನಿಯನ್ನು ತಲುಪುವುದೇ ದುಸ್ಸಾಧ್ಯವಾದ ಸಂಗತಿಯಾಗಿದ್ದರೂ, ಸರ್ಕಾರ ಆದೇಶ ಕೊಟ್ಟ ಕೂಡಲೇ ಆ ಹೊಸ ಆವಿಷ್ಕಾರದ ಪ್ರಯೋಗಗಳನ್ನು ಮಿಲಿಟರಿಯವರಿಗೆ ತೋರಿಸುವುದಲ್ಲದೆ ಸೌರಯುದ್ಧದ ಬಗ್ಗೆ ತರಬೇತಿ ಕೊಡುವುದಾಗಿ ಹೇಳಿದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಉತ್ತರಕ್ಕಾಗಿ ಕೆಲವು ವರ್ಷ ಕಾದ. ಕೊನೆಗೆ ಕಾಯುವುದರಿಂದ ಸುಸ್ತಾಗಿ ಮೆಲ್‌ಕಿಯಾದೆಸ್‌ಗೆ ತನ್ನ ಯೋಜನೆ ವ್ಯರ್ಥವಾದದ್ದನ್ನು ಹೇಳಿದ. ಆಗ ಜಿಪ್ಸಿತನ್ನ ಪ್ರಾಮಾಣಿಕತೆಯನ್ನು ಕುರಿತು ಸರಿಯಾದ ಪುರಾವೆ ಒದಗಿಸಿದ. ಭೂತಗನ್ನಡಿಯನ್ನು ಹಿಂದಕ್ಕೆ ತೆಗೆದುಕೊಂಡು, ಬದಲಿಗೆ ಚಿನ್ನದ ನಾಣ್ಯಗಳನ್ನು ಹಾಗೂ ಕೆಲವು ಪೋರ್ಚುಗೀಸ್ ನಕ್ಷೆಗಳನ್ನು ಅಲ್ಲದೆ ನೌಕಾಯಾನದಲ್ಲಿ ಉಪಯೋಗಿಸುವ ಕೆಲವು ಉಪಕರಣಗಳನ್ನೂ ಕೂಡ ಕೊಟ್ಟ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಕಾಂಪಾಸ್ ಮತ್ತು ಸೆಕ್ಸ್‌ಟೆಂಟ್‌ಗಳನ್ನು ಉಪಯೋಗಿಸಲು ಸಾಧ್ಯವಾಗುವಂತೆ ತನ್ನ ಕೈಯಿಂದಲೇ ಸನ್ಯಾಸಿ ಹೆರ್‌ಮನ್ ಸಿದ್ಧಪಡಿಸಿದ್ದನ್ನು ಬರೆದು ಕೊಟ್ಟ. ಹೊಸೆ ಅರ್ಕಾದಿಯೋ ತನ್ನ ಪ್ರಯೋಗಗಳಿಗೆ ಯಾರೂ ಅಡ್ಡಿಪಡಿಸಬಾರದು ಎಂಬ ಕಾರಣದಿಂದ ಮನೆಯ ಹಿಂದೆ ಇದ್ದ ಒಂದು ರೂಮಿನಲ್ಲಿ ಇಡೀ ಮಳೆಗಾಲವನ್ನು ಒಬ್ಬನೇ ಕಳೆದ. ಸಾಂಸಾರಿಕ ವಿಷಯಗಳಿಗೆ ಸಂಪೂರ್ಣ ಹೊರತಾಗಿದ್ದು ರಾತ್ರಿಯ ಹೊತ್ತಿನಲ್ಲಿ ಅಂಗಳದಲ್ಲಿ ನಿಂತು ಮೇಲಿನ ನಕ್ಷತ್ರಗಳ ಬೆನ್ನು ಹತ್ತಿದ್ದ. ನಡು ಮಧ್ಯಾಹ್ನವನ್ನು ಅರಿಯುವ ಸರಿಯಾದ ಕ್ರಮವನ್ನು ಸಿದ್ಧಪಡಿಸುವ ಕೆಲಸದಲ್ಲಿ ಅವನು ಸೂರ್ಯನ ಝಳಕ್ಕೆ ಸಿಕ್ಕು ಸಾಯುವುದರಲ್ಲಿದ್ದ. ತನ್ನ ಬಳಿಯಿದ್ದ ಉಪಕರಣಗಳನ್ನು ಬಳಸುವ ಮತ್ತು ಹೊಂದಿಸಿಕೊಳ್ಳುವ ರೀತಿಯಲ್ಲಿ ಪರಿಣತನಾದ ಮೇಲೆ, ಕಾಣದ ಸಮುದ್ರಗಳಲ್ಲಿ ನೌಕಾಯಾನ ಮಾಡುವ ಅರಿಯದ ಪ್ರದೇಶಗಳಲ್ಲಿ ಸಂಚರಿಸುವ ಮತ್ತು ಅದ್ಭುತ ವಸ್ತುಗಳೊಡನೆ ಸಂಬಂಧ ಏರ್ಪಡಿಸಿಕೊಳ್ಳುವ ಬಗೆಯನ್ನು ಅವನು ಮನೆಯಲ್ಲೇ ಕುಳಿತು ಅವಕಾಶವೊಂದನ್ನು ಪರಿಕಲ್ಪಿಸಿದ. ಅವನು ತನಗೆ ತಾನೇ ಮಾತನಾಡಿಕೊಳ್ಳುವ ಅಭ್ಯಾಸ ಮಾಡಿಕೊಂಡಿದ. ಯಾರ ಬಗ್ಗೆಯೂ ಗಮನ ಕೊಡದೆ ಮನೆಯಲ್ಲಿ ನಡೆದಾಡುತ್ತಿದ್ದದ್ದು, ಉರ್ಸುಲಾ ಬೆನ್ನು ಬಗ್ಗಿಸಿ ತೋಟದಲ್ಲಿ ದುಡಿಯುತ್ತ, ಬಾಳೆ, ಗೆಡ್ಡೆ, ಗೆಣಸುಗಳನ್ನು ಬೆಳೆಯುತ್ತಿದ್ದದ್ದು ಆ ಅವಧಿಯಲ್ಲಿಯೇ. ಆದರೆ ಇದ್ದಕ್ಕಿದ್ದ ಹಾಗೆ ಯಾವ ಮುನ್ಸೂಚನೆಯೂ ಇಲ್ಲದೆ ಜ್ವರದ ತಾಪದ ಹಾಗೆ ಇದ್ದ ಅವನ ಚಟುವಟಿಕೆಗೆ ಅಡ್ಡಿ ಬಂತು. ಆಗ ಅವನು ಇನ್ನೊಂದು ಸಂಗತಿಯಿಂದ ಆಕರ್ಷಿತನಾದ. ತಾನು ಅರ್ಥಮಾಡಿಕೊಳ್ಳುತ್ತಿದ್ದ ರೀತಿಗೆ ಅಷ್ಟಾಗಿ ಬೆಲೆ ಕೊಡದೆ ಗಾಬರಿಗೊಂಡಂತೆ ಸಣ್ಣದಾಗಿ ಗುಣಿಗುಣಿಸುತ್ತ ಯಾವುದೋ ಮೋಡಿಗೆ ಸಿಕ್ಕ ಹಾಗೆ ಅವನು ಹಲವಾರು ದಿನಗಳನ್ನು ಕಳೆದ. ಕೊನೆಗೆ ಡಿಸೆಂಬರ್‌ನ ಮಂಗಳವಾರ ಊಟದ ಸಮಯದಲ್ಲಿ ತನ್ನೊಳಗಿದ್ದ ಎಲ್ಲ ಹಿಂಸೆಯ ಭಾರವನ್ನು ಹೊರಗೆ ಹಾಕಿದ. ದೀರ್ಘ ಸಮಯದ ಕಟ್ಟೆಚ್ಚರ ಮತ್ತು ಕಲ್ಪನೆಯ ಹುಚ್ಚಿನಿಂದ ಜರ್ಜರಿತನಾದ ತಮ್ಮ ತಂದೆ ತಾನು ಕಂಡು ಹಿಡಿದಿದ್ದನ್ನು ಉತ್ಸಾಹ ಬೆರೆತ ಗಾಂಭೀರ್ಯದಿಂದ ತಿಳಿಸಿದ್ದನ್ನು ಅವನ ಮಕ್ಕಳು ತಮ್ಮ ಜೀವನವಿಡೀ ನೆನಪಿಟ್ಟುಕೊಳ್ಳುವಂತೆ ಆಯಿತು:
“ಭೂಮಿ ಗುಂಡಗಿದೆ, ಕಿತ್ತಲೆಯ ಹಾಗೆ.”
ಉರ್ಸುಲಾ ತಾಳ್ಮೆ ಕಳೆದುಕೊಂಡು, “ನಿಮ್ಗೆ ಹುಚ್ಚು ಹಿಡೀಬೇಕು ಅಂತಿದ್ರೆ, ನಿಮ್ಮಷ್ಟಕ್ಕೆ ನೀವು ಹಿಡಿಸಿಕೊಳ್ಳಿ. ಆದರೆ ನಿಮ್ಮ ಜಿಪ್ಸಿ ಆಲೋಚನೆಗಳನ್ನ ಮಕ್ಕಳ ತಲೇಲಿ ತುರುಕಬೇಡಿ” ಎಂದು ಕೂಗಿದಳು.
ಅವಳು ಹತಾಶೆಯಿಂದ ವ್ಯಗ್ರಗೊಂಡು ಉಪಕರಣವೊಂದನ್ನು ಗೋಡೆಗೆ ಚಚ್ಚಿದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಸಮಾಧಾನದಿಂದಿದ್ದು ಮತ್ತೊಂದನ್ನು ನಿರ್ಮಿಸಿ, ಸ್ಥಳೀಯರನ್ನು ತನ್ನ ರೂಮಿಗೆ ಕರೆದು ಅವರ ಮುಂದೆ ಪ್ರದರ್ಶಿಸಿ ವಿವರಿಸಿದ. ಒಂದು ಸ್ಥಳದಿಂದ ಪೂರ್ವ ದಿಕ್ಕಿನಲ್ಲೇ ಯಾನ ಮಾಡಿದರೆ ಮತ್ತೆ ಅದೇ ಸ್ಥಳಕ್ಕೆ ತಲುಪುವುದಾಗಿ ಹೇಳಿ ಜೊತೆಗೆ ಅವರಿಗೆ ಅರ್ಥವಾಗದ ಅನೇಕ ಅಂಶಗಳನ್ನು ತಿಳಿಸಿದ. ಇಡೀ ಹಳ್ಳಿಗೆ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ತಲೆ ಕೆಟ್ಟಿದೆ ಎಂದು ಮನದಟ್ಟಾಯಿತು. ಇದನ್ನು ಸರಿಪಡಿಸಲು ಮೆಲ್‌ಕಿಯಾದೆಸ್ ಹಿಂತಿರುಗಿ ಬಂದ. ಅವನು ಸಾರ್ವಜನಿಕವಾಗಿ ಆ ವ್ಯಕ್ತಿಯ ಬುದ್ಧಿಶಕ್ತಿಯನ್ನು ಹೊಗಳಿದ. ಈಗಾಗಲೇ ಕಾರ್ಯರೂಪದಲ್ಲಿ ಸಿದ್ಧವಾದ ಸಂಗತಿಯನ್ನು ಕೇವಲ ಖಗೋಳ ಶಾಸ್ತ್ರದ ಆಲೋಚನೆಗಳಿಂದ ರೂಪಿಸಿದ್ದಾಗಿ ತಿಳಿಸಿದ್ದಲ್ಲದೆ ತನ್ನ ಮೆಚ್ಚುಗೆಯ ಕುರುಹಾಗಿ ಅವನಿಗೊಂದು ಕೊಡುಗೆ ಕೊಟ್ಟ. ಮುಂದೆ ಆ ಕೊಡುಗೆ ಇಡೀ ಹಳ್ಳಿಯ ಭವಿಷ್ಯದ ಮೇಲೆ ಅತೀವ ಪರಿಣಾಮವನ್ನು ಉಂಟುಮಾಡಿತು. ಅದು ರಸವಾದಿಗಳ ಲ್ಯಾಬೊರೇಟರಿ.
ಆ ವೇಳೆಗೆ ಮೆಲ್‌ಕಿಯಾದೆಸ್ ಆಶ್ಚರ್ಯವೆನಿಸುವ ವೇಗದಲ್ಲ್ಲಿ ವಯಸ್ಸಾದವನಾಗಿದ್ದ. ಅವನು ಮೊದಮೊದಲು ಅಲ್ಲಿಗೆ ಬಂದಾಗ ಸುಮಾರು ಹೊಸೆ ಅರ್ಕಾದಿಯೋ ಬ್ಯುಂದಿಯಾನ ವಯಸ್ಸಿನವನಂತೆ ಕಂಡಿದ್ದ. ಕುದುರೆಯೊಂದರ ಕಿವಿ ಹಿಡಿದು ಕೆಳಕ್ಕುರುಳಿಸುವಂಥ ಅಗಾಧ ಶಕ್ತಿಯನ್ನು ಅರ್ಕಾದಿಯೋ ಬ್ಯುಂದಿಯಾ ಇನ್ನೂ ಉಳಿಸಿಕೊಂಡಿದ್ದ. ಆದರೆ ಜಿಪ್ಸಿ ಬಿಡದ ಕಾಯಿಲೆಗಳಿಗೆ ಸಿಕ್ಕು ಕೃಶನಾಗಿದ್ದ. ವಾಸ್ತವವಾಗಿ ಅದು ಲೆಕ್ಕವಿಲ್ಲದಷ್ಟು ಸಲ ಅವನು ಪ್ರಪಂಚ ಸುತ್ತುವಾಗ ಉಂಟಾದ ಅನೇಕ ಬಗೆಯ ಕಾಯಿಲೆಗಳ ಪರಿಣಾಮವಾಗಿತ್ತು. ಹೊಸೆ ಅರ್ಕಾದಿಯೋ ಬ್ಯುಂದಿಯಾನ ಲ್ಯಾಬೊರೇಟರಿಯನ್ನು ನಿರ್ಮಿಸಲು ಸಹಾಯ ಮಾಡುವಾಗ ಅವನೇ ಹೇಳಿದ ಹಾಗೆ, ಸಾವು ಅವನ ಪ್ಯಾಂಟನ್ನು ಮೂಸಿ ನೋಡುತ್ತ ಎಲ್ಲಂದರಲ್ಲಿ ಹಿಂಬಾಲಿಸಿತ್ತು. ಅವನು ಮನುಷ್ಯ ಸಮುದಾಯಕ್ಕೆ ಆಗೀಗ ಆಕ್ರಮಿಸುವ ಪ್ಲೇಗ್ ಮುಂತಾದ ಹಾನಿಕಾರಕ ರೋಗಗಳಿಂದ ತಪ್ಪಿಸಿಕೊಂಡಿದ್ದ. ಪರ್ಶಿಯಾದಲ್ಲಿನ ಚರ್ಮ ರೋಗ, ಮಲಯಾದಲ್ಲಿ ಒಸಡು ರೋಗ, ಅಲೆಗ್ಸಾಂಡ್ರಿಯಾದ ಕುಷ್ಠ ರೋಗ, ಜಪಾನ್‌ನಲ್ಲಿ ಉಂಟಾದ ತೀವ್ರ ನಿಶ್ಯಕ್ತಿ, ಮಡಗಾಸ್ಕರ್‌ನ ಪ್ಲೇಗ್ ಮತ್ತು ಸಿಸಿಲಿಯ ಭೂಕಂಪ ಮತ್ತು ಮೆಗಲಾನ್ ಕೊಲ್ಲಿಯಲ್ಲಿ ಉಂಟಾದ ನೌಕಾಘಾತ ಇವುಗಳಿಂದ ಪಾರಾಗಿದ್ದ. ನಾಸ್ಟರ್‌ಡಾಮಸ್‌ನ ಸೂತ್ರವನ್ನು ಹೊಂದಿದವನಂತೆ ಕಾಣುತ್ತಿದ್ದ. ಆ ವಿಚಿತ್ರ ವ್ಯಕ್ತಿ ವಿಷಾದದಿಂದ ಕೂಡಿ ಮಂಕಾಗಿದ್ದ ಏಷ್ಯಾದವನಂತೆ ಕಾಣುತ್ತಿದ್ದ ಅವನಿಗೆ ವಸ್ತುಗಳ ಮತ್ತೊಂದು ಪಕ್ಕದಲ್ಲಿ ಏನಿದೆ ಎನ್ನುವುದರ ಅರಿವಿರುವ ಹಾಗೆ ತೋರುತ್ತಿತ್ತು. ಅವನು ಹರಡಿದ ರೆಕ್ಕೆಯಂತಿದ್ದ ಹ್ಯಾಟ್ ಮತ್ತು ಶತಮಾನಗಳ ಕಿಮಟು ಹಿಡಿದ ಹಾಗಿದ್ದ ವೆಲ್‌ವೆಟ್‌ನ ಸೊಂಟಪಟ್ಟಿಯನ್ನು ತೊಟ್ಟುಕೊಂಡಿರುತ್ತಿದ್ದ. ಅವನಲ್ಲಿ ಅಪಾರ ಪ್ರಬುದ್ಧತೆ ಮತ್ತು ಅತೀವ ನಿಗೂಢತೆ ಇದ್ದರೂ ಮಾನವೀಯತೆಯ ಮಿಡುಕಿತ್ತು ಮತ್ತು ಅವನ ನೆಲಕ್ಕಂಟಿದ ಜಾಯಮಾನ ದಿನನಿತ್ಯದ ಸಣ್ಣ ಸಮಸ್ಯೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿತ್ತು. ಮುದಿತನದ ಕಾಯಿಲೆಗಳಿಂದ ಗೋಳಾಡುತ್ತಿದ್ದರೂ ಸಣ್ಣ ಸಣ್ಣ ಆರ್ಥಿಕ ತೊಂದರೆಗಳನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ. ಅವನು ನಗುವುದನ್ನು ನಿಲ್ಲಿಸಿ ಬಹಳ ವರ್ಷಗಳಾಗಿತ್ತು. ಏಕೆಂದರೆ ಅವನ ಊದಿಕೊಂಡ ಒಸಡುಗಳು ಹಲ್ಲುಗಳನ್ನು ಹೊರಗೆ ಬರುವಂತೆ ಮಾಡಿತ್ತು. ಆ ಉಸಿರುಗಟ್ಟಿಸುವ ಮಟಮಟ ಮಧ್ಯಾಹ್ನದಲ್ಲಿ ಜಿಪ್ಸಿ ತನ್ನೆಲ್ಲ ಗುಟ್ಟುಗಳನ್ನು ತಿಳಿಸಿದಾಗ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಅದು ಆತ್ಮೀಯ ಸ್ನೇಹದ ಆರಂಭವೆಂದು ಖಾತ್ರಿಯಾಯಿತು. ಮಕ್ಕಳು ಅವನ ಅದ್ಭುತ ಕಥೆಗಳಿಂದ ಖುಷಿಯಾಗಿದ್ದರು. ಆಗ ಐದು ವರ್ಷಕ್ಕಿಂತ ಹೆಚ್ಚಿಗೆ ಇರದ ಅವ್ರೇಲಿಯಾನೋ, ಆ ದಿನ ಮಧ್ಯಾಹ್ನ ಲೋಹದ ಕಿಟಕಿಗೆ ಒರಗಿಕೊಂಡು ಕುಳಿತು, ಅದರಿಂದ ತೂರಿ ಬರುವ ನಲುಗುವ ಬೆಳಕು ತನ್ನ ಒಳದನಿಯನ್ನು ಉದ್ದೀಪಿಸಿ, ವಿಷಣ್ಣ ಕನಸುಗಳ ಎಲ್ಲೆಗಳನ್ನು ಕುರಿತು ಅವನು ಹೇಳುತ್ತಿದ್ದ ನೋಟವನ್ನು ಜೀವನ ಪರ್ಯಂತ ನೆನಪಿಟ್ಟುಕೊಂಡಿದ್ದ. ಹಾಗೆ ಮಾಡುವಾಗ ಅವನ ಹಣೆಯ ಮೇಲೆ ಬೆಂಕಿಯಿಂದ ಕರಗಿದ ಗ್ರೀಸ್ ಹರಿಯುತ್ತಿತ್ತು. ಅವನ ಅಣ್ಣ ಹೊಸೆ ಅರ್ಕಾದಿಯೋ ಆ ಮಹತ್ವಪೂರ್ಣ ದೃಶ್ಯವನ್ನು ಅನುವಂಶೀಯವಾದ ನೆನಪು ಎನ್ನುವಂತೆ ತನ್ನ ಸಂತತಿಯವರಿಗೆ ತಿಳಿಸುತ್ತಿದ್ದ. ಆದರೆ ಉರ್ಸುಲಾಗೆ ಆ ನೆನಪಿನ ಬಗ್ಗೆ ಕೆಟ್ಟೆನಿಸಿತ್ತು. ಅವಳು ಆ ರೂಮನ್ನು ಪ್ರವೇಶಿಸುತ್ತಿದ್ದ ಹಾಗೆ ಮೆಲ್‌ಕಿಯಾದೆಸ್ ಅಜಾಗರೂಕತೆಯಿಂದ ಪಾದರಸದ ರಾಸಾಯನಿಕ ತುಂಬಿದ್ದ ಫ್ಲಾಸ್ಕನ್ನು ಒಡೆದಿದ್ದ.
“ಅದಕ್ಕೆ ದೆವ್ವದ ವಾಸನೆ ಇದೆ” ಎಂದಳು.
“ಇಲ್ಲವೇ ಇಲ್ಲ” ಎಂದು ಮೆಲ್‌ಕಿಯಾದೆಸ್ ಅವಳನ್ನು ಸರಿಪಡಿಸಿ, “ಈಗಾಗಲೇ ದೆವ್ವಕ್ಕೆ ಗಂಧಕದ ವಾಸನೆ ಇದೆ ಅಂತ ತಿಳ್ಕೊಂಡಿದೀವಿ, ಆದ್ರೆ ಇದಕ್ಕೆ ಕೊಂಚ ಕಿಮಟು ವಾಸನೆ” ಎಂದ.
ಅವನು ಎಂದಿನ ಉಪದೇಶದ ಹಾಗೆ ರಸಗಂಧಕದ ಗುಣಗಳ ಬಗ್ಗೆ ವಿವರಿಸುತ್ತ ಹೋದಾಗ ಉರ್ಸುಲಾ ಅದಕ್ಕೆ ಗಮನ ಕೊಡದೆ ಮಕ್ಕಳನ್ನು ಪ್ರಾರ್ಥನೆಗೋಸ್ಕರ ಕರೆದುಕೊಂಡು ಹೋದಳು. ಮೆಲ್‌ಕಿಯಾದೆಸ್‌ನ ನೆನಪಿಗೆ ಹೊಂದಿಕೊಂಡ ಹಾಗೆ ಒಳಗಿಳಿದ ಆ ವಾಸನೆ ಜೀವನವಿಡೀ ಅವಳ ಮನಸ್ಸಿನಲ್ಲಿತ್ತು.
ಲ್ಯಾಬೊರೇಟರಿ ಮೂಲದಲ್ಲಿ ಹಳೆಯ ನೀರಿನ ಪೈಪ್ ಆಗಿತ್ತಷ್ಟೆ. ಅಲ್ಲಿ ಸ್ಪರ್ಶ ಮಣಿಯ ಮರುರೂಪದ ನೀಳ ಕತ್ತಿನ ಗಾಜಿನ ಬೀಕರ್[ಕೊಕ್ಕು ಪಾತ್ರೆ[ಗಳು, ಫನಲ್[ಲಾಳಿಕೆ]ಗಳು, ಮಡಕೆಗಳು, ರೆಟಾರ್ಟ್[ಭಟ್ಟಿ ಪಾತ್ರೆ]ಗಳು ಹಾಗೂ ಶೋಧಕಗಳಿದ್ದವು. ಯಹೂದಿ ಮೇರಿ ವಿವರಿಸಿದ ರೀತಿಯಲ್ಲಿ ಜಿಪ್ಸಿಗಳು ನವೀನ ಮಾದರಿಯ ಭಟ್ಟಿ ಇಳಿಸುವ ಸಲಕರಣೆಯನ್ನು ರೂಪಿಸಿದ್ದರು. ಈ ಎಲ್ಲ ಉಪಕರಣಗಳೊಂದಿಗೆ ಮೆಲ್‌ಕಿಯಾದೆಸ್ ಏಳು ಗ್ರಹಗಳಿಗೆ ಅನ್ವಯವಾಗುವ ಹಾಗೆ ಏಳು ಬಗೆಯ ಲೋಹಗಳು, ಮೋಸಸ್ ಹಾಗೂ ರೋಸಿಮಸ್ಸರ ಬಂಗಾರದ ಮೊತ್ತವನ್ನು ದ್ವಿಗುಣಗೊಳಿಸುವ ಸೂತ್ರ, ಸ್ಪರ್ಶಶಿಲೆಗಳ ನಿರ್ಮಾಣವನ್ನು ಕೈಗೊಳ್ಳುವವರಿಗೆ ವ್ಯಾಖ್ಯಾನಿಸಲು ಅನುಕೂಲವಾಗಲು, ಟಿಪ್ಪಣಿ ಮತ್ತು ನಕ್ಷೆಗಳನ್ನು ಬಿಟ್ಟು ಹೋದ. ಬಂಗಾರ ದ್ವಿಗುಣಗೊಳಿಸುವ ಸೂತ್ರದ ಸರಳತೆಗೆ ಮಾರುಹೋಗಿ, ಹೂತಿಟ್ಟಿದ್ದ ನಾಣ್ಯಗಳನ್ನು ಹೊರಗೆ ತೆಗೆದು, ಸಾಧ್ಯವಾದಷ್ಟು ಹೆಚ್ಚಿಗೆ ಮಾಡಲು ಬಿಡುವಂತೆ ಉರ್ಸುಲಾಳನ್ನು ಕೆಲವು ವಾರ ಓಲೈಸಿದ. ಅವನು ಪಟ್ಟು ಹಿಡಿದಿದ್ದಕ್ಕೆ ಎಂದಿನಂತೆ ಉರ್ಸುಲಾ ಒಪ್ಪಿದಳು. ಅನಂತರ ಹೊಸೆ ಅರ್ಕಾದಿಯೋ ಬ್ಯುಂದಿಯಾ ಪಾತ್ರೆಯಲ್ಲಿ ಮೂರು ನಾಣ್ಯಗಳನ್ನು ಹಾಕಿ, ತಾಮ್ರದ ಚೂರು, ಹರಿದಳ, ಗಂಧಕ ಮತ್ತು ಸೀಸದಿಂದ ಮಿಶ್ರಣ ಮಾಡಿದ. ಅವುಗಳನ್ನೆಲ್ಲ ಹರಳೆಣ್ಣೆಯಲ್ಲಿ ಗಟ್ಟಿಯಾದ ದ್ರವವಾಗುವ ತನಕ ಕುದಿಸಿದ. ಅದು ಬಂಗಾರಕ್ಕಿಂತ ಹೆಚ್ಚಾಗಿ ಕಂದು ಬಣ್ಣದ ಪಾಕವಾಯಿತು. ಆ ಒಂದು ಅಪಾಯಕಾರಿ ಮತ್ತು ಹತಾಶೆಯ ಭಟ್ಟಿ ಇಳಿಸುವ ಪ್ರಕ್ರಿಯೆಯಲ್ಲಿ, ಅವು ಏಳು ಗ್ರಹಗಳ ಲೋಹದೊಂದಿಗೆ ಕರಗಿ ಪಾದರಸದ ಜೊತೆಯಲ್ಲಿ ಗಟ್ಟಿಯಾಗಿ ಬೆರೆಯಿತು. ಉರ್ಸುಲಾಳಿಗೆ ಪಿತ್ರಾರ್ಜಿತವಾಗಿ ದೊರೆತ ಬೆಲೆಯುಳ್ಳದ್ದೆಲ್ಲ, ಮೂಲಂಗಿಯ ಎಣ್ಣೆ ಕಡಿಮೆ ಇದ್ದಿದ್ದರಿಂದ ಹಂದಿಯ ಕೊ&;ಛಿoಠಿಥಿ;ನಲ್ಲಿ ಕುದಿಸಿದಾಗ ಸುಟ್ಟು, ದೊಡ್ಡ ಚಕ್ಕೆಗಳಾಗಿ ಮಡಿಕೆಯ ತಳಕ್ಕೆ ಅಂಟಿಕೊಂಡವು.

ಜಿಪ್ಸಿಗಳು ವಾಪಸು ಬಂದಾಗ ಉರ್ಸುಲಾ ಇಡೀ ಹಳ್ಳಿಯನ್ನು ಅವರ ವಿರುದ್ಧ ಎತ್ತಿ ಕಟ್ಟಿದಳು. ಆದರೆ ಭಯಕ್ಕಿಂತ ಕುತೂಹಲ ದೊಡ್ಡದು. ಅವರು ಕಿವುಡುಗೊಳಿಸುವಷ್ಟು ಶಬ್ದ ಮಾಡುತ್ತ ಎಲ್ಲ ರೀತಿಯ ಸಂಗೀತ ವಾದ್ಯ ನುಡಿಸುತ್ತಿದ್ದಾಗ ದಳ್ಳಾಳಿಯೊಬ್ಬ ಅವರು ಕಂಡು ಹಿಡಿದ ಅದ್ಭುತವೊಂದರ ಪ್ರದರ್ಶನದ ಬಗ್ಗೆ ಸಾರಿದ. ಪ್ರತಿಯೊಬ್ಬರೂ ಆ ಟೆಂಟ್‌ಗೆ ಹೋಗಿ ಸುಕ್ಕಿಲ್ಲದ ಮತ್ತು ಹೊಳೆಯುವ ಹಲ್ಲುಗಳಿದ್ದ, ಚೇತರಿಸಿಕೊಂಡು ಈಗ ಹರೆಯದವನಂತಿದ್ದ ಮೆಲ್‌ಕಿಯಾದೆಸ್‌ನನ್ನು ಒಂದು ಸೆಂಟ್ ಕೊಟ್ಟು ನೋಡಿದರು. ಈ ಮೊದಲು ಉಬ್ಬಿದ ಒಸಡುಗಳ ಗುಳಿ ಬಿದ್ದ ಕೆನ್ನೆಗಳ ಮತ್ತು ನಡುಗುತ್ತಿದ್ದ ತುಟಿಗಳಿದ್ದ ಮೆಲ್‌ಕಿಯಾದೆಸ್‌ನನ್ನು ನೋಡಿ ನೆನಪಿದ್ದವರಿಗೆ, ಆ ಜಿಪ್ಸಿಯ ಅಲೌಕಿಕ ಶಕ್ತಿಯ ಬಗ್ಗೆ ಭಯ ಉಂಟಾಯಿತು. ಮೆಲ್‌ಕಿಯಾದೆಸ್ ತನ್ನ ಹಲ್ಲುಗಳನ್ನು ಒಸಡುಗಳಿಂದ ಹೊರಗೆ ತೆಗೆದು ಒಂದು ಕ್ಷಣ ತೋರಿಸಿದಾಗ ಆ ಭಯ ತೀರ ಹೆಚ್ಚಾಯಿತು [ಆ ಒಂದು ಕ್ಷಣ ಅವನು ಹಿಂದಿನ ವರ್ಷಗಳ ಹಾಗೆ ದೈನ್ಯಾವಸ್ಥೆಯಲ್ಲಿದ್ದ]. ಅವನು ಮತ್ತೆ ಅದನ್ನು ಇಟ್ಟುಕೊಂಡು, ಗಳಿಸಿದ ಯೌವನವನ್ನು ಮೆರೆಸಿ ನಕ್ಕ. ಮೆಲ್‌ಕಿಯಾದೆಸ್‌ನ ಜ್ಞಾನ ತಡೆಯಲಾರದ ಮಟ್ಟ ತಲುಪಿದೆ ಎಂದು ಹೊಸೆ ಅರ್ಕಾದಿಯೋ ಬ್ಯುಂದಿಯಾ ಕೂಡ ಭಾವಿಸಿದ. ಆದರೆ ಜಿಪ್ಸಿ ಹುಸಿ ಹಲ್ಲುಗಳು ಕೆಲಸ ಮಾಡುವ ರೀತಿಯನ್ನು ವಿವರಿಸಿದಾಗ ಸಂತೋಷಗೊಂಡ. ಅವನಿಗೆ ಅದು ಸರಳವೂ ಅಸಾಧಾರಣವಾಗಿಯೂ ಕಂಡು ಬಂದು, ತಾನು ಮಾಡುತ್ತಿದ್ದ ರಸವಾದಿಗಳ ಪ್ರಯೋಗಗಳಲ್ಲಿ ಎಲ್ಲ ಆಸಕ್ತಿಯನ್ನು ಇದ್ದಕ್ಕಿದ್ದ ಹಾಗೆ ಕಳೆದು ಕೊಂಡ. ಅವನ ಮನಸ್ಸು ಕೆಟ್ಟು ಹೊಸ ಸಂದಿಗ್ಧದಲ್ಲಿ ಸಿಲುಕಿತು. ಹೊತ್ತಿಗೆ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಇಡೀ ದಿನ ಮನೆಯಲ್ಲಿ ಸುಮ್ಮನೆ ಓಡಾಡುತ್ತ ಕಳೆಯುತ್ತಿದ್ದ. ಅವನು ಉರ್ಸುಲಾಗೆ, “ಪ್ರಪಂಚದಲ್ಲಿ ನಂಬಲು ಸಾಧ್ಯವಾಗದಂಥ ಸಂಗತಿಗಳು ನಡೀತಿವೆ. ಅಲ್ಲಿ ಹೊಳೆಯಾಚೆ ಎಲ್ಲ ರೀತಿಯ ಮಾಂತ್ರಿಕ ಉಪಕರಣಗಳಿವೆ. ನಾವಿಲ್ಲಿ ಕತ್ತೆಗಳ ಥರ ಇದೀವಿ” ಎಂದ. ಮಕೋಂದೋ ಅಸ್ತಿತ್ವಕ್ಕೆ ಬಂದ ದಿನದಿಂದ ಅವನನ್ನು ನೋಡಿದವರಿಗೆ ಅವನೆಷ್ಟು ಬದಲಾಗಿದ್ದಾನೆಂದು ಆಶ್ಚರ್ಯಗೊಂಡರು. ಹರೆಯದ ಅಧಿಕಾರದಿಂದ ಜನರಿಗೆ, ಮಕ್ಕಳು ಹಾಗೂ ಪ್ರಾಣಿಗಳನ್ನು ಬೆಳೆಸುವುದಕ್ಕೆ ತಕ್ಕ ಸೂಚನೆಗಳನ್ನು ಕೊಡುತ್ತಿದ್ದ. ಅಲ್ಲದೆ ಎಲ್ಲರ ಜೊತೆ ಕೆಲಸದಲ್ಲಿ ಜೊತೆಗೂಡುತ್ತಿದ್ದ. ಅವನ ಮನೆ ಇಡೀ ಹಳ್ಳಿಯಲ್ಲಿ ಒಳ್ಳೆಯ ಮನೆಯಾದ್ದರಿಂದ ಇತರರು ಅದೇ ರೀತಿಯಲ್ಲಿ ಕಟ್ಟಿದ್ದರು. ಅದರಲ್ಲಿ ಒಪ್ಪವಾಗಿ ಬೆಳಕು ಬೀಳುವ ಪಡಸಾಲೆ, ಚೆಂದದ ಹೂಗಳಿರುವ ತಾರಸಿಯ ಹಾಗಿರುವ ಊಟದ ಮನೆ, ಎರಡು ಮಲಗುವ ರೂಮುಗಳು, ಭಾರಿ ಮರವಿರುವ ಅಂಗಳ, ಅಂದದ ತೋಟ, ಕುರಿ, ಮೇಕೆ, ಹಂದಿಗಳ ಸಹ ಬಾಳ್ವೆಗೊಂದು ನೆಮ್ಮದಿಯ ಸ್ಥಾನವಿತ್ತು. ಆ ಮನೆಯಲ್ಲಿ ಮತ್ತು ಇತರ ಎಲ್ಲ ಕಡೆ ನಿಷಿದ್ಧವಾಗಿದ್ದ ಪ್ರಾಣಿಯೆಂದರೆ ಕಾದಾಡುವ ಹುಂಜಗಳು.
ಉರ್ಸುಲಾಗೆ ತನ್ನ ಗಂಡನಷ್ಟೇ ಕೆಲಸ ಮಾಡುವ ಸಾಮರ್ಥ್ಯವಿತ್ತು. ಚುರುಕಾದ ಸಣ್ಣ ಆಕೃತಿಯ ಮುರುಟಿಗೊಳ್ಳದ ನರಗಳ, ಕಠೋರಳಾದ, ಎಂದೂ ಯಾವ ಕ್ಷಣದಲ್ಲೂ ಹಾಡೊಂದನ್ನು ಗುಣಿಗುಣಿಸದ ಆ ಹೆಂಗಸು ಬೆಳಿಗ್ಗೆಯಿಂದ ಸರಿ ರಾತ್ರಿಯವರೆಗೂ ಗಂಜಿ ಹಾಕಿದ ಒಳಲಂಗದ ಸಣ್ಣನೆ ಪಿಸುಗುಟ್ಟುವಿಕೆಯ ಜೊತೆ ಎಲ್ಲ ಕಡೆಗೂ ಇರುವ ಹಾಗೆ ಕಾಣುತ್ತಿದ್ದಳು. ಅವಳಿಂದಾಗಿ ನಡೆದಾಡುವ ನೆಲ, ಸುಣ್ಣ ಬಳಿಯದ ಗೋಡೆಗಳು, ಅವರೇ ತಯಾರು ಮಾಡಿದ ಒರಟು ಮರದ ಸಾಮಾನು ಸರಂಜಾಮುಗಳು ಯಾವಾಗಲೂ ಶುಭ್ರವಾಗಿರುತ್ತಿದ್ದವು. ಅವರು ಬಟ್ಟೆಯನ್ನು ಇಡುತ್ತಿದ್ದ ಪೆಟ್ಟಿಗೆ ಹದವಾದ ತುಳಸಿಯ ವಾಸನೆಯನ್ನು ಬೀರುತ್ತಿತ್ತು.
ಇಡೀ ಹಳ್ಳಿಯಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾನಷ್ಟು ಸಾಹಸಪೂರ್ಣ ಮನುಷ್ಯ ಮತ್ತೊಬ್ಬನಿರಲಿಲ್ಲ. ಅವನು ಮನೆಗಳಿಗೆ ಕೊಟ್ಟ ಸ್ಥಳಗಳು ಹೇಗಿತ್ತೆಂದರೆ ಯಾರೇ ಆಗಲಿ ಸಮನಾದ ಪ್ರಯತ್ನದಿಂದ ನೀರನ್ನು ಪಡೆಯಬಹುದಾಗಿತ್ತು. ಒಳ್ಳೆಯ ಪರಿಜ್ಞಾನದಿಂದ ರಸ್ತೆಗಳನ್ನು ಸಾಲುಗಟ್ಟಿಸಿದ ರೀತಿಯಿಂದ ಬೇಸಿಗೆಯಲ್ಲಿ ಇತರ ಮನೆಗಳಿಗಿಂತ ಹೆಚ್ಚು ಸೂರ್ಯನ ಶಾಖ ತಟ್ಟುತ್ತಿರಲಿಲ್ಲ. ಮುನ್ನೂರು ಜನರಿರುವ ಮಕೋಂದೋ ಹಿಂದೆಂದೂ ಇರದ ರೀತಿಯಲ್ಲಿ ಸುವ್ಯವಸ್ಥಿತವಾಗಿ ಮತ್ತು ಕಷ್ಟಪಟ್ಟು ದುಡಿಯುವವರ ಹಳ್ಳಿಯಾಗಿತ್ತು. ಆ ಹಳ್ಳಿಯಲ್ಲಿ ಮೂವತ್ತು ವರ್ಷ ದಾಟಿದವರು ಮತ್ತು ಸತ್ತವರು ಯಾರೂ ಇರಲಿಲ್ಲ.
ಅವನು ಆ ಹಳ್ಳಿ ಹುಟ್ಟಿದಾಗಿಂದ ಬಲೆಗಳನ್ನು ಮತ್ತು ಪಂಜರಗಳನ್ನು ನಿರ್ಮಿಸಿದ್ದ. ಅಲ್ಪ ಕಾಲದಲ್ಲಿಯೇ ಅವನು ತನ್ನ ಮನೆಯಲ್ಲಲ್ಲದೆ ಎಲ್ಲರ ಮನೆಯಲ್ಲಿಯೂ ಕನೇರಿ ಹಕ್ಕಿ, ಜೇನು ಹುಳುಗಳನ್ನು ತಿನ್ನುವ ಹಕ್ಕಿ, ರಾಬಿನ್ ಹಕ್ಕಿಮುಂತಾದವುಗಳನ್ನು ತುಂಬಿದ್ದ. ಅನೇಕ ಬಗೆಯ ಪಕ್ಷಿಗಳಿಂದ ಉಂಟಾಗುತ್ತಿದ್ದ ವಾದ್ಯ ಗೋಷ್ಠಿಯಿಂದ ರೇಜಿಗೆಗೊಳ್ಳುತ್ತಿದ್ದ ಉರ್ಸುಲಾ ವಾಸ್ತವ ಪ್ರಜ್ಞೆಯನ್ನು ಕಳೆದುಕೊಳ್ಳಬಾರದು ಎನ್ನುವಂತೆ ಕಿವಿಗಳಿಗೆ ಹತ್ತಿ ಇಟ್ಟುಕೊಳ್ಳುತ್ತಿದ್ದಳು. ಮೊದಲ ಬಾರಿ ಮೆಲ್‌ಕಿಯಾದೆಸ್‌ನ ತಂಡದವರು ಬಂದು, ತಲೆನೋವಿಗೆ ಗಾಜಿನ ಗುಂಡೊಂದನ್ನು ಮಾರಲು ಪ್ರಯತ್ನಿಸಿದಾಗ, ಅವರೆಲ್ಲರಿಗೂ ಅರೆನಿದ್ದೆಯಲ್ಲಿ ಮುಳುಗಿದ್ದ ಹಳ್ಳಿಯೊಂದನ್ನು ಕಂಡ ಅನುಭವವಾಗಿತ್ತು. ಅಲ್ಲದೆ ಅವರು ಹಕ್ಕಿಗಳ ಉಲಿಯಿಂದ ಅಲ್ಲಿಗೆ ಬರುವ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಾಯಿತೆಂದು ಒಪ್ಪಿಕೊಂಡರು.
ಆಯಸ್ಕಾಂತಗಳಿಂದ ಉಂಟಾದ ಉಮೇದು, ಖಗೋಳ ಶಾಸ್ತ್ರದ ಲೆಕ್ಕಾಚಾರಗಳು, ಲೋಹಪರಿವರ್ತನೆಯ ಕನಸುಗಳು ಮತ್ತು ಪ್ರಪಂಚದ ಅದ್ಭುತಗಳನ್ನು ಕಂಡು ಹಿಡಿಯುವ ತವಕದಲ್ಲಿ ಅವನಿಗೆ ಸಾಮೂಹಿಕ ಪ್ರಜ್ಞೆಯಲ್ಲಿನ ತುಡಿತ ಸ್ವಲ್ಪದರಲ್ಲಿಯೇ ಕಾಣೆಯಾಯಿತು. ಶುಭ್ರ ತೊಡಿಗೆಯ ಚಟುವಟಿಕೆಯ ಹೊಸೆ ಅರ್ಕಾದಿಯೋ ಬ್ಯುಂದಿಯಾ ಈಗ ಸೋಮಾರಿಯ ಹಾಗೆ ಕಾಣುತ್ತ, ಉಡುಪಿನ ಬಗ್ಗೆ ಗಮನವಿಲ್ಲದವನಾಗಿದ್ದ. ಅವನ ಅಡ್ಡಾದಿಡ್ಡಿ ಬೆಳೆದ ಗಡ್ಡವನ್ನು ಉರ್ಸುಲಾ ಅಡಿಗೆ ಮನೆಯ ಚಾಕು ಉಪಯೋಗಿಸಿ, ಕಷ್ಟಪಟ್ಟು ಕತ್ತರಿಸಿದಳು. ಅನೇಕರು ಅವನು ಯಾವುದೊ ವಿಲಕ್ಷಣ ಶಕ್ತಿಯ ಪ್ರಭಾವಕ್ಕೆ ಸಿಲುಕಿದ್ದಾನೆಂಬ ಅಭಿಪ್ರಾಯಕ್ಕೆ ಬಂದಿದ್ದರು. ಅವನಿಗೊಂದು ರೀತಿಯ ಹುಚ್ಚು ಹಿಡಿದಿದೆ ಎಂದು ನಂಬಿದವರೂ ಕೂಡ, ತನ್ನ ಉಪಕರಣಗಳಿಂದ ಸ್ಥಳವೊಂದನ್ನು ತೆರವು ಮಾಡಿಕೊಳ್ಳಲು ಬಂದು, ಸುತ್ತಲಿದ್ದ ಗುಂಪಿಗೆ ಮಕೋಂದೋ ಮಹತ್ತರ ಆವಿಷ್ಕಾರಗಳನ್ನು ಮಾಡಲು ಅವಕಾಶ ಕೊಡಿ ಎಂದು ಕೇಳಿದಾಗ, ಅವರು ಮಾಡುತ್ತಿದ್ದ ಕೆಲಸ ಮತ್ತು ಸಾಂಸಾರಿಕ ವಿಷಯಗಳನ್ನು ಬಿಟ್ಟು ಬಂದು ಅವನಿಗೆ ನೆರವಾಗುತ್ತಿದ್ದರು.
ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಆ ಪ್ರದೇಶದ ಭೌಗೋಳಿಕ ಜ್ಞಾನ ಸ್ವಲ್ಪವೂ ಇರಲಿಲ್ಲ. ಪೂರ್ವಕ್ಕೆ ಬೇಧಿಸಲಾಗದ ಪರ್ವತ ಶ್ರೇಣಿ ಇದೆಯೆಂದು ಮತ್ತು ಅದರ ಆಚೆ ಪುರಾತನ ಪಟ್ಟಣವಾದ ರಿಯೋ‌ಅಕ ಇದೆಯೆಂದು ಗೊತ್ತಿತ್ತು. ಹಿಂದೆ ಅಲ್ಲಿ ಅವನ ಅಜ್ಜ ಮೊದಲನೆ ಅವ್ರೇಲಿಯಾನೋ ಬ್ಯುಂದಿಯಾ ಹೇಳಿದ ಹಾಗೆ ಸರ್ ಫ್ರಾನ್ಸಿಸ್ ಡ್ರೇಕ್ ಮೊಸಳೆಗಳನ್ನು ಕೋವಿಯಿಂದ ಬೇಟೆಯಾಡಲು ಹೋಗಿ, ಅನಂತರ ಅವುಗಳೊಂದನ್ನು ರಿಪೇರಿ ಮಾಡಿ ಹುಲ್ಲು ತುಂಬಿ ಎಲಿಜ಼ಬೆತ್ ರಾಣಿಗೆ ಕೊಟ್ಟಿದ್ದ. ಹಿಂದೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ತನ್ನ ಸಂಗಾತಿಗಳು, ಹೆಂಡಿರು ಮಕ್ಕಳು, ಪ್ರಾಣಿಗಳು ಮತ್ತು ಎಲ್ಲ ಬಗೆಯ ಸಾಂಸಾರಿಕ ಉಪಕರಣಗಳ ಜೊತೆ, ಸಮುದ್ರಕ್ಕೆ ಹೋಗುವ ದಾರಿಯನ್ನು ಹುಡುಕಲು ಪರ್ವತಗಳನ್ನು ದಾಟಿದ್ದ ಮತ್ತು ಇಪ್ಪತ್ತಾರು ತಿಂಗಳಾದ ಮೇಲೆ ಅವನು ಆ ಉದ್ದೇಶಿತ ಹುಡುಕಾಟ ಕೈಬಿಟ್ಟು ಹಿಂತಿರುಗಿ ಹೋಗುವ ಪ್ರಮೇಯ ಉಂಟಾಗದಿರಲೆಂದು, ಮಕೋಂದೋವನ್ನು ಅಸ್ತಿತ್ವಕ್ಕೆ ತಂದ. ಇದರಿಂದ ಅವನು ಬಂದ ಮಾರ್ಗದಲ್ಲಿ ಆಸಕ್ತಿ ಹೊಂದಿರಲಿಲ್ಲ. ಏಕೆಂದರೆ ಅವನಿಗೆ ಭೂತಕಾಲಕ್ಕೆ ಹೋಗಲು ಮಾತ್ರ ಸಾಧ್ಯವಾಗುತ್ತಿತ್ತು. ಅಲ್ಲಿಂದ ದಕ್ಷಿಣಕ್ಕೆ ಹಸಿರಿನಿಂದ ಕೂಡಿದ ಜೌಗು ಪ್ರದೇಶವಿತ್ತು ಮತ್ತು ಆ ಜೌಗಿನ ವಿಸ್ತಾರಕ್ಕೆ ಎಲ್ಲೆ ಎನ್ನುವುದೇ ಇರಲಿಲ್ಲ. ಪಶ್ಚಿಮದಲ್ಲಿ ಜೌಗು ಪ್ರದೇಶದ ಜೊತೆ ಸಮುದ್ರದ ವಿಸ್ತಾರವಿದ್ದು ಅದರಲ್ಲಿ ಮೃದು ಚರ್ಮದ ತಿಮಿಂಗಿಲ ಜಾತಿಯ ಪ್ರಾಣಿಗಳಿದ್ದವು. ಅವಕ್ಕೆ ಹೆಣ್ಣಿನ ತಲೆ ಹಾಗೂ ಮುಂಡಗಳಿದ್ದು ತಮ್ಮ ಚೆಲುವಾದ ವಕ್ಷಸ್ಥಳಗಳಿಂದ ನಾವಿಕರನ್ನು ಆಕರ್ಷಿಸುತಿದ್ದವು. ಜಿಪ್ಸಿಗಳು ಆ ಮಾರ್ಗದಲ್ಲಿ ಆರು ತಿಂಗಳು ಕ್ರಮಿಸಿ ಹೇಸರಗತ್ತೆಗಳ ಮೇಲೆ ಟಪಾಲು ಸಾಗಿಸುವ ಸ್ಥಳವನ್ನು ತಲುಪಿದರು. ಹೊಸೆ ಅರ್ಕಾದಿಯೋ ಬ್ಯುಂದಿಯಾನ ಪ್ರಕಾರ ಆಧುನಿಕ ಸಂಸ್ಕೃತಿಯ ಸಂಪರ್ಕವಿರುವ ಮಾರ್ಗವೆಂದರೆ ಉತ್ತರಕ್ಕಿರುವ ಮಾರ್ಗ. ಅದ್ದರಿಂದ ಅವನು ದಾರಿ ತೆರವು ಮಾಡಿಕೊಡುವ ಉಪಕರಣಗಳನ್ನು ಮತ್ತು ಬೇಟೆಯಾಡುವ ಆಯುಧಗಳನ್ನು ಮಕೋಂದೋ ಅಸ್ತಿತ್ವಕ್ಕೆ ಬಂದಾಗ ಇದ್ದ ಅದೇ ಜನರಿಗೆ ಕೊಟ್ಟ. ಅಲ್ಲದೆ ದಿಕ್ಕು ಸೂಚಿಸುವ ಉಪಕರಣ ಮತ್ತು ನಕ್ಷೆಗಳನ್ನು ಗೋಣಿ ಚೀಲದಲ್ಲಿ ಹಾಕಿಬಿಟ್ಟು ಎಗ್ಗಿಲ್ಲದ ಸಾಹಸದಲ್ಲಿ ತೊಡಗಿದ.
ಪ್ರಾರಂಭದ ದಿನಗಳಲ್ಲಿ ಅವರಿಗೆ ಹೇಳಿಕೊಳ್ಳುವಂಥ ಯಾವ ಅಡಚಣೆಯೂ ಉಂಟಾಗಲಿಲ್ಲ. ನದಿಯ ದಡದ ಕಲ್ಲು ಬಂಡೆಗಳ ಪಕ್ಕದಲ್ಲಿ ಹಿಂದೆ ಯೋಧನ ಕವಚ ಸಿಕ್ಕಿದ್ದ ಸ್ಥಳ ತಲುಪಿ ಅಲ್ಲಿಗೆ ಕಾಣುತ್ತಿದ್ದ ಕಾಡು ಕಿತ್ತಲೆ ಮರಗಳ ಜಾಡಿನಲ್ಲಿದ್ದ ಕಾಡಿಗೆ ಹೋದರು. ಮೊದಲನೆ ವಾರದ ಕೊನೆಗೆ ಅವರು ಒಂದು ಜಿಂಕೆಯನ್ನು ಕೊಂದು ಬೇಯಿಸಿದರು. ಆದರೆ ಅದರ ಅರ್ಧದಷ್ಟನ್ನು ಮಾತ್ರ ತಿಂದು, ಉಳಿದಿದ್ದನ್ನು ಮುಂದಿನ ದಿನಗಳಿಗೆ ಇಡುವುದು ಎಂದು ಯೋಚಿಸಿದರು. ಈ ಮುನ್ನೆಚ್ಚರಿಕೆಯಿಂದ ಅವರು ನೀಲಿ ಬಣ್ಣದ ಮಾಂಸ ಮತ್ತು ಒಗರಾಗಿರುವ ಗಿಣಿಯನ್ನು ತಿನ್ನುವ ಅಗತ್ಯವನ್ನು ಮುಂದೂಡಿದರು. ಅನಂತರ ಹತ್ತು ದಿನ ಅವರಿಗೆ ಸೂರ್ಯನ ಮುಖದರ್ಶನವಾಗಲಿಲ್ಲ. ಉಲ್ಕಾಪಾತದ ಬೂದಿಯ ಹಾಗೆ ಕಾಲು ಕೆಳಗಿನ ನೆಲ ಮೃದುವಾಗಿ ಒದ್ದೆಯಾಗಿತ್ತು. ಸುತ್ತಲೂ ಒತ್ತಾಗಿ ಗಿಡ ಗಂಟೆಗಳು ಹಬ್ಬಿದ್ದವು. ಅಲ್ಲದೆ ಹಕ್ಕಿಗಳ ಉಲಿ, ಕೋತಿಗಳ ಕೀರಲು ಧ್ವನಿ ಇನ್ನಷ್ಟು ಮತ್ತಷ್ಟು ದೂರವಾಗಿದ್ದವು. ಅವರಿಗೆ ಇಡೀ ಪ್ರಪಂಚ ಎಂದೂ ಮುಗಿಯದ ವಿಷಾದದಂತೆ ಕಂಡಿತು. ಸಾಹಸವನ್ನು ಕೈಗೊಂಡ ಅವರಿಗೆ ಸ್ವರ್ಗವೆನಿಸುವ ಆ ತೇವದ ಸ್ಪರ್ಶ ಮತ್ತು ಅಗಾಧ ಮೌನದಲ್ಲಿ ಗತಕಾಲದ ನೆನಪುಗಳು ತುಂಬಿ ಬಂದು ಪರವಶವಾದರು. ಅವರ ಬೂಟುಗಳು ಹೊಮ್ಮುತ್ತಿದ್ದ ಎಣ್ಣೆಯ ಹರಹಿನಲ್ಲಿ ಹೂತುಗೊಳ್ಳುತ್ತ, ಅವರ ಮಚ್ಚುಗಳು ಕೆಂಪು ಲಿಲ್ಲಿ ಹೂಗಳನ್ನು ಹಾಗೂ ತಾಪ ಸಹಿಸುವ ಓತಿಕ್ಯಾತದಂತಹ ಜಂತುಗಳನ್ನು ಧ್ವಂಸಮಾಡುತ್ತಿದ್ದಂತೆ, ಮೂಲ ಪಾಪಕ್ಕಿಂತ ಮುಂಚಿನ ದಿನಕ್ಕೆ ಹೋಗುತ್ತಿದ್ದರು. ಇಡೀ ಒಂದು ವಾರ ಮಾತನಾಡದೆ ನಿದ್ದೆಯಲ್ಲಿ ನಡೆದವರಂತೆ ವಿಷಾದ ತುಂಬಿದ ಜಗತ್ತಿನಲ್ಲಿ ಬೆಳಕು ಹೊಮ್ಮಿಸುವ ಹುಳುಗಳ ಪ್ರತಿಫಲಿತ ಕ್ಷೀಣ ಬೆಳಕಿನಲ್ಲಿ ಮುಂದೆ ಹೋದರು. ಅವರ ಎದೆಗೂಡು ಉಸಿರುಗಟ್ಟಿಸುವ ರಕ್ತದ ವಾಸನೆಯಿಂದ ತುಂಬಿ ಹೋಗಿತ್ತು. ಅವರಿಗೆ ವಾಪಸು ಬರಲಾಗಲಿಲ್ಲ. ಏಕೆಂದರೆ ಅವರು ತೆರವು ಮಾಡಿಕೊಂಡು ಹೋದ ಮಾರ್ಗ ಬಹು ಬೇಗನೆ ಅವರ ಕಣ್ಣೆದುರೇ ಹೊಸ ಬೆಳೆಯಿಂದ ಮುಚ್ಚಿ ಹೋಗುವಂತಿತ್ತು. ಹೊಸೆ ಅರ್ಕಾದಿಯೋ ಬ್ಯುಂದಿಯಾ, “ಆಗಲಿ ಬಿಡಿ. ನಮ್ಮ ಬುಡವನ್ನೇ ಕಳೆದುಕೊಳ್ಳದಿರೋದು ಮುಖ್ಯ” ಎಂದ. ತನ್ನಲ್ಲಿದ್ದ ಕೈವಾರ[ಕಾಂಪಾಸ್] ನೋಡಿಕೊಂಡು ಸುತ್ತಲಿದ್ದ ಇತರರಿಗೆ ಆ ಪ್ರದೇಶದಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಕಾಣದ ಉತ್ತರಕ್ಕೆ ಹೋಗಲು ಮಾರ್ಗದರ್ಶನ ಕೊಟ್ಟ. ಅದೊಂದು ನಕ್ಷತ್ರಗಳಿಲ್ಲದ ಹೆಪ್ಪುಗಟ್ಟಿದ ರಾತ್ರಿ. ಆದರೆ ಆ ಕತ್ತಲೊಳಗೂ ಹೊಸದಾದ ತಿಳಿಗಾಳಿ ತುಂಬಿತ್ತು. ನಡೆದು ಸುಸ್ತಾಗಿ ಹಾಸಿಗೆಗಳನ್ನು ಅಣಿಮಾಡಿಕೊಂಡು ಆ ಎರಡು ವಾರದಲ್ಲಿ ಅವರು ಮೊದಲ ಸಲ ಮಲಗಿ ಗಾಢ ನಿದ್ದೆ ಮಾಡಿದರು. ಅವರು ಎದ್ದಾಗ ಸೂರ್ಯನಾಗಲೇ ಆಕಾಶದಲ್ಲಿ ಎತ್ತರದಲ್ಲಿದ್ದ. ಅವರಿಗೆ ಆಶ್ಚರ್ಯದಿಂದ ಮಾತುಗಳೇ ಹೊರಡಲಿಲ್ಲ. ಅವರ ಎದುರಿಗೆ ಸೊರಗಿ ಹುಡಿಯಾದ ತೆಂಗಿನ ಮರಗಳು ಮತ್ತು ಜರ್ರ್ರ್ರಿ ಗಿಡಗಳಿಂದ ಸುತ್ತುವರಿದಿದ್ದ ಮೌನದ ಮುಂಜಾವಿನಲ್ಲಿ ಜೀರ್ಣವಾದ ಸ್ಪೇನಿನ ವ್ಯಾಪಾರಿ ಹಡಗೊಂದು ಕಾಣಿಸಿತು. ಅದು ಒಂದು ಪಕ್ಕಕ್ಕೆ ವಾಲಿಕೊಂಡು ಇನ್ನೂ ಸರಿಯಾಗಿ ನಿಂತಿದ್ದ ಅದರ ಮರದ ಕಂಬಗಳಿಂದ ಚಿಂದಿಯಾದ ಹಾಯಿಗಳು ನೇತಾಡುತ್ತಿದ್ದವು. ಹಾಯಿ ಕಟ್ಟಿದ್ದ ಹಗ್ಗಗಳ ಮೇಲೆ ಗಿಡ-ಬಳ್ಳಿಗಳು ಬೆಳೆದಿದ್ದವು. ಪಾಚಿಗಟ್ಟಿ ಮತ್ತು ಮುದ್ದೆಯಾದ ಚಿಪ್ಪಿನ ಪ್ರಾಣಿಗಳಿದ್ದ ಆ ಹಡಗನ್ನು ದಡದ ಕಲ್ಲುಗಳಿಗೆ ಕಟ್ಟಲಾಗಿತ್ತು. ಕಾಲದ ಪ್ರಭಾವದಿಂದ ಮತ್ತು ಹಕ್ಕಿಗಳ ಬಳಕೆಯಿಂದ ಸಂರಕ್ಷಿಸಲ್ಪಟ್ಟ ಇಡೀ ಹಡಗು ತನ್ನದೇ ಆದ ಏಕಾಂತ ಮತ್ತು ವಿಸ್ಮೃತಿಯನ್ನು ತುಂಬಿಕೊಂಡ ಹಾಗೆ ಕಾಣುತ್ತಿತ್ತು. ಆ ಸಾಹಸಿಗರು ಎಚ್ಚರಿಕೆಯಿಂದ ನಡೆಸಿದ ಹುಡುಕಾಟದಲ್ಲಿ ದೊರಕಿದ್ದು ಅಗಾಧ ಪ್ರಮಾಣದ ಹೂಗಳು ಮಾತ್ರವಲ್ಲದೆ ಬೇರೆ ಏನೂ ಇರಲಿಲ್ಲ.
ಹಡಗು ಸಿಕ್ಕಿದ್ದರಿಂದ ಸಮುದ್ರ ಸಮೀಪದಲ್ಲಿದೆ ಎಂಬ ಅರಿವಿನಿಂದ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಉತ್ಸಾಹ ಉಕ್ಕಿತು. ಲೆಕ್ಕವಿಲ್ಲದಷ್ಟು ತ್ಯಾಗ ಮತ್ತು ಸಂಕಷ್ಟಗಳ ಬೆಲೆ ತೆತ್ತು ಹುಡುಕಿದರೂ ಸಿಗದ ಸಮುದ್ರ ಮತ್ತು ನಿಭಾಯಿಸಲಾಗದ ವಸ್ತುವಾಗಿ, ಹುಡುಕದೆಯೂ ಸಿಕ್ಕ ಸಮುದ್ರ, ತನ್ನ ವಿಧಿಯ ಹುಚ್ಚಾಟವೆಂದು ಭಾವಿಸಿದ. ಅನೇಕ ವರ್ಷಗಳ ನಂತರ ಎಂದಿನಂತೆ ಟಪಾಲು ಸೇವೆ ಪ್ರಾರಂಭವಾದ ಮೇಲೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಆ ಪ್ರದೇಶದಲ್ಲಿ ಹಾದು ಹೋದ. ಆಗ ಅವನಿಗೆ ಕಂಡದ್ದು, ಗಸಗಸೆ ಗಿಡಗಳ ವಿಸ್ತಾರದ ನಡುವೆ ಸುಟ್ಟು ಹೋಗಿದ್ದ ಹಡಗಿನ ಹೊರ ಚೌಕಟ್ಟು ಮಾತ್ರ. ತನ್ನ ತಂದೆ ಹೇಳಿದ್ದು ಕೇವಲ ಅವರ ಕಲ್ಪನೆಯ ಫಲವಲ್ಲ ಎಂದು ಅರಿವಾದ ಅವನಿಗೆ ಆ ಹಡಗು ಭೂಭಾಗಕ್ಕೆ ತಲುಪಿದ್ದು ಹೇಗೆ ಎಂದು ಸೋಜಿಗವಾಯಿತು. ಆದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಹಡಗಿದ್ದ ಸ್ಥಳದಿಂದ ನಾಲ್ಕು ದಿನಗಳ ಪ್ರಯಾಣದ ನಂತರ ಸಮುದ್ರವನ್ನು ತಲುಪಿದ. ಆದರೆ ಬೂದಿಮಯವಾಗಿ ಕೊಳಕಾಗಿದ್ದ ಸಮುದ್ರವನ್ನು ಕಂಡು ಅದು ಇಷ್ಟೊಂದು ಅಪಾಯ ಮತ್ತು ಸಾಹಸವನ್ನು ಅಪೇಕ್ಷಿಸುವ ಮಟ್ಟದಲ್ಲಿಲ್ಲ ಎನ್ನಿಸಿ ಅವನ ಕನಸುಗಳು ಪುಡಿಯಾದವು.
“ದೇವರೇ, ಏನು ಗತಿ! ಮಕೋಂದೋ ನೀರಿನಿಂದ ಸುತ್ತುವರೆದಿದೆ.”
ತನ್ನ ಸಾಹಸಪೂರ್ಣ ಪ್ರಯಾಣದಿಂದ ಹಿಂತಿರುಗಿದ ನಂತರ ಸುಮ್ಮನೆ ಬರೆದ ನಕ್ಷೆಗಳಿಂದ ಸ್ಫೂರ್ತಿಗೊಂಡ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಮಕೋಂದೋ ಒಂದು ಪರ್ಯಾಯ ದ್ವೀಪವೆಂಬ ಆಲೋಚನೆ ಬಹಳ ದಿನಗಳ ತನಕ ಇತ್ತು. ಕೊಂಚವೂ ಸಾಮಾನ್ಯ ಜ್ಞಾನವಿಲ್ಲದೆ ಆ ಪ್ರದೇಶವನ್ನು ಆರಿಸಿಕೊಂಡದ್ದಕ್ಕಾಗಿ ಅವನು ಅವುಗಳನ್ನು ತನಗೆ ತಾನೆ ಶಿಕ್ಷೆ ಕೊಡುವ ರೀತಿ ಎನ್ನುವ ಹಾಗೆ ರೋಷದಿಂದ, “ನಾವೆಂದೂ ಎಲ್ಲಿಗೂ ಹೋಗಕ್ಕಾಗಲ್ಲ. ಇಡೀ ಜೀವನ ವಿಜ್ಞಾನದ ಅನುಕೂಲಗಳು ಸಿಗದೆ ನಾವಿಲ್ಲೆ ಕೊಳೆತು ಹೋಗ್ತೇವೆ” ಎಂದು ಉರ್ಸುಲಾಗೆ ಹೇಳಿದ. ಆ ನಿಜ ಸಂಗತಿ ಅನೇಕ ತಿಂಗಳು ಲ್ಯಾಬೊರೇಟರಿ ಆಗಿದ್ದ ಅವನ ಚಿಕ್ಕ ರೂಮಿನಲ್ಲೆ ಸುತ್ತಾಡುತ್ತಿತ್ತು. ಅನಂತರ ಮಕೋಂದೋವನ್ನೇ ಒಳ್ಳೆಯ ಪ್ರದೇಶಕ್ಕೆ ಕೊಂಡೊಯ್ಯುವ ಆಲೋಚನೆ ಅವನಲ್ಲಿ ಹುಟ್ಟಿತು. ಆ ವೇಳೆಗಾಗಲೇ ಉರ್ಸುಲಾ ಅವನು ತಾಪಯುಕ್ತವಾಗಿ ರೂಪಿಸುತ್ತಿದ್ದ ವಿನ್ಯಾಸವನ್ನು ನಿರೀಕ್ಷಿಸಿದ್ದಳು. ಅವಳು ಕಾರ್ಯನಿರತವಾದ ಇರುವೆಯ ಹಾಗೆ ಇಡೀ ಹಳ್ಳಿಯ ಹೆಂಗಸರನ್ನು ತಮ್ಮ ಗಂಡಂದಿರ ಅಭಿಪ್ರಾಯವನ್ನು ವಿರೋಧಿಸುವಂತೆ ಮುಂಚೆಯೇ ತಯಾರು ಮಾಡಿದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ತನ್ನ ಯೋಜನೆ ಯಾವ ಪ್ರತಿರೋಧಗಳಿಂದ, ಯಾವ ಗಳಿಗೆಯಲ್ಲಿ ಅಥವಾ ಯಾವ ನೆಪ, ನಿರಾಸೆ ಮತ್ತು ತಪ್ಪಿಸಿಕೊಳ್ಳುವ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ ಎನ್ನುವುದು ತಿಳಿಯದೆ, ಕೊನೆಗೆ ಅದು ಕೇವಲ ತನ್ನ ಭ್ರಮೆಯಲ್ಲದೆ ಮತ್ತೇನೂ ಅಲ್ಲ ಎಂದುಕೊಂಡ. ಅವನು ಆ ದಿನ ಬೆಳಿಗ್ಗೆ ಹಿಂದುಗಡೆಯ ತನ್ನ ರೂಮಿನಲ್ಲಿ ಲ್ಯಾಬೊರೇಟರಿಯ ವಸ್ತುಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತ, ಊರು ಬಿಡುವ ತನ್ನ ಯೋಜನೆಯನ್ನು ಗುಣುಗುಣಿಸುತ್ತಿದ್ದಾಗ ಉರ್ಸುಲಾ ಅವನ ಕಡೆ ಮುಗ್ಧ ಕಣ್ಣುಗಳಿಂದ ನೋಡಿದಳಲ್ಲದೆ, ಅವನ ಬಗ್ಗೆ ಅನುಕಂಪವಾಯಿತು. ಅವನು ಮಾಡುತ್ತಿದ್ದ ಕೆಲಸವನ್ನು ಮುಗಿಸುವುದಕ್ಕೆ ಬಿಟ್ಟಳು. ತನಗೆ ಹಳ್ಳಿಯ ಜನರ ಬೆಂಬಲವಿಲ್ಲ ಎನ್ನುವುದು ಅವನಿಗೆ ತಿಳಿದಿದೆ ಎಂದು ಗೊತ್ತಿದ್ದ ಅವಳು [ಅವನು ಹಾಗೆಂದು ಸಣ್ಣಗೆ ಹೇಳಿಕೊಳ್ಳುತ್ತಿದ್ದನ್ನು ಕೇಳಿಸಿಕೊಂಡಿದ್ದಳು] ಅವನು ಪೆಟ್ಟಿಗೆಗಳಿಗೆ ಮೊಳೆ ಹೊಡೆದು ಅದರ ಮೇಲೆ ಮಸಿಯಿಂದ ಹೆಸರು ಬರೆಯುವುದಕ್ಕೆ ಅಡ್ಡಿ ಮಾಡದೆ ಸುಮ್ಮನಿದ್ದಳು. ಅವನು ಬಾಗಿಲಿಂದ ಆಚೆ ಅವುಗಳನ್ನು ತೆಗೆದುಕೊಂಡು ಹೋಗಲು ಶುರು ಮಾಡಿದಾಗ ಅವನೇನು ಮಾಡುತ್ತಿದ್ದಾನೆಂದು ಕೇಳುವ ಧೈರ್ಯ ಮಾಡಿದಳು. ಅವನು ಕಹಿ ಬೆರೆತ ಧ್ವನಿಯಲ್ಲಿ, “ಯಾರಿಗೂ ಹೋಗೋದು ಬೇಕಿಲ್ಲವಾಗಿದೆ. ಆದ್ರೆ ನಮ್ಮಷ್ಟಕ್ಕೆ ನಾವು ಹೋಗೋಣ” ಎಂದ. ಉರ್ಸುಲಾ ಉದ್ವೇಗಗೊಳ್ಳಲಿಲ್ಲ.
“ನಾವು ಹೋಗೋದಿಲ್ಲ. ನಾವು ಇಲ್ಲೇ ಇರೋದು. ಏಕೆಂದರೆ ಇಲ್ಲೇ ನಮಗೊಬ್ಬ ಮಗ ಹುಟ್ಟಿದ್ದು” ಎಂದಳು.
“ಇಲ್ಲಿ, ಈ ತನಕ ಯಾರೂ ಸತ್ತಿಲ್ಲ. ಊರಿನಲ್ಲಿ ಯಾರೇ ಆದ್ರೂ ಸಾಯದಿದ್ರೆ, ಆ ಊರು ನಮ್ಮದಾಗಲ್ಲ.”
ಉರ್ಸುಲಾ ಸಣ್ಣಗೆ ದೃಢವಾಗಿ, “ಉಳಿದೋರೆಲ್ಲ ಇಲ್ಲಿ ಇರೋದಕ್ಕೆ ನಾನು ಸಾಯಬೇಕಾದ್ರೆ, ನಾನು ಸಾಯ್ತೀನಿ” ಎಂದು ಹೇಳಿದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾ ತನ್ನ ಹೆಂಡತಿ ಅಷ್ಟು ಗಟ್ಟಿ ಮನಸ್ಸು ಮಾಡಿದ್ದಾಳೆ ಎಂದು ಭಾವಿಸಿರಲಿಲ್ಲ. ತಾನು ಭರವಸೆ ಕೊಡುತ್ತಿರುವುದು ನಂದನವನದಂತಹ ಪ್ರದೇಶವೆಂದೂ ಅಲ್ಲಿ ಮಂತ್ರದಂಥ ನೀರನ್ನು ಸಿಂಪಡಿಸಿದರೆ ಸಾಕು, ಮರಗಿಡಗಳು ಬೇಕೆಂದಾಗ ಫಲ ಬಿಡುತ್ತವೆಂದೂ ಮತ್ತು ಎಲ್ಲ ರೀತಿಯ ನೋವುಗಳನ್ನು ಉಪಶಮನ ಮಾಡುವುದಕ್ಕೆ ಸೂಕ್ತ ಉಪಕರಣಗಳಿವೆ ಎಂದು ತಾನು ಕಲ್ಪಿಸಿದ್ದನ್ನು ಪ್ರಯೋಗಿಸಿ ಅವಳಿಗೆ ಮೋಡಿ ಮಾಡಲು ನೋಡಿದ. ಆದರೆ ಉರ್ಸುಲಾ ಅವನು ಪುಸಲಾಯಿಸಿದ್ದಕ್ಕೆ ಸೊಪ್ಪು ಹಾಕಲಿಲ್ಲ.
“ನಿಮ್ಮ ಹುಚ್ಚುಚ್ಚು ಲೆಕ್ಕಾಚಾರಾನೆಲ್ಲ ಬಿಟ್ಟು ಮಕ್ಕಳ ಬಗ್ಗೆ ತಲೆ ಕೆಡಿಸಿಕೊಳ್ಳೋದು ಒಳ್ಳೇದು … ಅವರಿರೋ ಸ್ಥಿತೀನ ನೋಡಿ, ಕತ್ತೆಗಳ ಥರ ಓಡಾಡಿಕೊಂಡಿದಾರೆ” ಎಂದಳು.
ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವಳ ಮಾತುಗಳನ್ನು ಅಕ್ಷರಃ ತೆಗೆದುಕೊಂಡ. ಕಿಟಕಿಯಿಂದ ಆಚೆ ನೋಡಿದ ಅವನಿಗೆ ಬಿಸಿಲು ಬಿದ್ದ ತೋಟದಲ್ಲಿ ಬರಿಗಾ;ಲಲ್ಲಿದ್ದ ಮಕ್ಕಳು ಕಾಣಿಸಿದರು. ಉರ್ಸುಲಾ ಹೇಳಿದಂತೆ ಆ ಕ್ಷಣದಿಂದ ಅವರು ಅಸ್ತಿತ್ವಕ್ಕೆ ಬಂದ ಹಾಗೆ ಭಾವಿಸಿದ. ಅವನಲ್ಲೇನೋ ಉಂಟಾಗಿ ಕಾಲದ ನೆಲೆಯಿಂದ ಬುಡಮೇಲು ಮಾಡಿತು. ಅಲ್ಲದೆ ಅವನನ್ನು ನೆನಪಿನ ಉಗ್ರಾಣಕ್ಕೆ ಸೆಳೆದುಕೊಂಡು ಹೋಯಿತು. ಬಾಕಿ ಇರುವ ತನ್ನ ಜೀವಮಾನದಲ್ಲಿ ಆ ಊರನ್ನು ಬಿಟ್ಟು ಹೋಗದೆ ಕ್ಷೇಮವಾಗಿ ಇರಬಹುದಾದ್ದರಿಂದ ಉರ್ಸುಲಾ ಮನೆಯ ಕಸ ಗುಡಿಸುವುದಕ್ಕೆ ಪ್ರಾರಂಭಿಸುತ್ತಿದ್ದ ಹಾಗೆ ಅವನು ತನ್ನಲ್ಲೇ ಐಕ್ಯನಾಗಿ ನಿಂತ. ಮಕ್ಕಳ ಬಗ್ಗೆ ಯೋಚಿಸುತ್ತಿದ್ದ ಹಾಗೆ ಅವನ ಕಣ್ಣುಗಳು ಹನಿಗೂಡಿದವು. ಅವನು ತನ್ನ ಮುಂಗೈನಿಂದ ಕಣ್ಣೊರೆಸಿಕೊಂಡು ದೀರ್ಘವಾಗಿ ಉಸಿರುಬಿಟ್ಟ.
“ಆಗಲಿ ನೋಡೋಣಂತೆ, ಪೆಟ್ಟಿಗೆಯಿಂದ ಸಾಮಾನುಗಳನ್ನ ಹೊರಗೆ ತೆಗೆಯಕ್ಕೆ ನನಗೆ ಸಹಾಯ ಮಾಡಿ ಅಂತ ಹೇಳು ಅವರಿಗೆ” ಎಂದ.
ದೊಡ್ಡವನಾದ ಹೊಸೆ ಅರ್ಕಾದಿಯೋಗೆ ಆಗ ಹದಿನಾಲ್ಕು ವರ್ಷ. ದಪ್ಪಗೂದಲಿನ ಚೌಕು ಮುಖದ ಅವನಿಗೆ ಅಪ್ಪನ ಗುಣವಿತ್ತು. ದೈಹಿಕ ಸಾಮರ್ಥ್ಯ ಮತ್ತು ಪ್ರಗತಿಯ ಬಗ್ಗೆ ಅವನಿಗೆಷ್ಟೇ ತುಡಿತವಿದ್ದರೂ ಕಲ್ಪನಾಶಕ್ತಿ ಕಡಿಮೆ ಇತ್ತು. ಅವನು ಹುಟ್ಟಿದ್ದು ಅವರು ಪರ್ವತಗಳನ್ನು ದಾಟುತ್ತಿದ್ದ ಕಷ್ಟದ ಕಾಲದಲ್ಲಿ, ಮಕೋಂದೋ ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ. ಅವನಿಗೆ ಪ್ರಾಣಿಯ ಸ್ವರೂಪ ಇರದೆ ಇದ್ದದ್ದಕ್ಕೆ ದೇವರಿಗೆ ನಮಿಸಿದ್ದರು. ಮಕೋಂದೋದಲ್ಲಿ ಹುಟ್ಟಿದ ಮೊದನೆ ಮಗು ಅವ್ರೇಲಿಯಾನೋ. ಮಾರ್ಚ್‌ಗೆ ಅವನಿಗೆ ಆರು ವರ್ಷವಾಗುತ್ತದೆ. ಅವನು ಮೌನಿ ಮತ್ತು ಅಂತರ್ಮುಖಿಯಾಗಿದ್ದ. ಅವನು ಅಮ್ಮನ ಗರ್ಭದಲ್ಲಿ ಇರುವಾಗಲೇ ಅತ್ತಿದ್ದ ಮತ್ತು ಹುಟ್ಟಿದಾಗ ಕಣ್ಣು ಬಿಟ್ಟುಕೊಂಡಿದ್ದ. ಹೊಕ್ಕುಳ ಬಳ್ಳಿಯನ್ನು ಕತ್ತರಿಸುತ್ತಿದ್ದಾಗ ಅವನು ಕತ್ತನ್ನು ಅತ್ತಿತ್ತ ಅಲ್ಲಾಡಿಸುತ್ತ ಸುತ್ತ ಇದ್ದವರನ್ನು ಮತ್ತು ವಸ್ತುಗಳನ್ನು ಕುತೂಹಲದಿಂದ ನೋಡುತ್ತಿದ್ದ. ತನ್ನನ್ನು ನೋಡಲು ಅವರಿವರು ತುಂಬ ಹತ್ತಿರ ಬಂದಾಗ ಅವನು, ಮಳೆಯ ಹೊಡೆತಕ್ಕೆ ಸಿಕ್ಕು ಇನ್ನೇನು ಬೀಳುವ ಹಾಗಿದ್ದ ತೆಂಗಿನ ಗರಿಗಳನ್ನು ನೋಡುತ್ತಿದ್ದ. ಉರ್ಸುಲಾಗೆ ಆ ನೋಟದ ಸಾಂದ್ರತೆ, ಅವ್ರೇಲಿಯಾನೋ ಮೂರು ವರ್ಷದವನಾಗಿದ್ದಾಗ ಅವನು ಅಡುಗೆ ಮನೆಗೆ ಬಂದು ತಾನು ಮಾಡುತ್ತಿದ್ದ ಸಾರಿನ ಪಾತ್ರೆಯನ್ನು ಸ್ಟೋವ್‌ನಿಂದ ಎತ್ತಿ ಟೇಬಲ್ ಮೇಲೆ ಇಡುವಾಗ ಮತ್ತೆ ನೆನಪಾಯಿತು. ಬಾಗಿಲಲ್ಲೇ ಇದ್ದ ಮಗು ಗಲಿಬಿಲಿಗೊಂಡು, “ಅದೀಗ ಚೆಲ್ಲುತ್ತೆ” ಎಂದ. ಪಾತ್ರೆಯನ್ನು ಭದ್ರವಾಗಿ ಟೇಬಲ್ಲಿನ ಮಧ್ಯದಲ್ಲಿ ಇಟ್ಟಿದ್ದರೂ ಮಗು ಆ ರೀತಿ ಹೇಳಿದ ಕೂಡಲೇ ಯಾವುದೋ ಒಳಶಕ್ತಿ ಅದನ್ನು ತಳ್ಳುತ್ತಿರುವಂತೆ ಅದು ಅಂಚಿನ ಕಡೆ ಜರುಗಿ ನೆಲದ ಮೇಲೆ ಬಿದ್ದು ಒಡೆದು ಹೋಯಿತು. ದಿಗಿಲುಗೊಂಡ ಉರ್ಸುಲಾ ಗಂಡನಿಗೆ ಹೇಳಿದಳು. ಆದರೆ ಅವನು ಅದೊಂದು ಸಹಜವಾದ ಸಂಗತಿ ಎಂದು ವ್ಯಾಖ್ಯಾನಿಸಿದ. ಅವನು ಯಾವಾಗಲೂ ಇದ್ದದ್ದು ಹಾಗೆಯೇ. ಮಕ್ಕಳ ಬಗ್ಗೆ ಎಳ್ಳಷ್ಟೂ ಗಮನವಿರಲಿಲ್ಲ. ಏಕೆಂದರೆ ಅವನು ಬಾಲ್ಯ ಒಂದು ಮಾನಸಿಕ ಅಸಂಪೂರ್ಣತೆಯ ಅವಧಿ ಎಂದು ಪರಿಗಣಿಸಿದ್ದ. ಅಲ್ಲದೆ ಯಾವಾಗಲೂ ತನ್ನದೇ ಆದ ಭ್ರಮಾತ್ಮಕ ಆಲೋಚನೆಗಳಲ್ಲಿ ಮುಳುಗಿರುತ್ತಿದ್ದ.
ಲ್ಯಾಬೊರೇಟರಿಯ ಸಾಮಾನುಗಳನ್ನು ಬಿಚ್ಚಿಡಲು ಮಕ್ಕಳನ್ನು ಕರೆದ. ಮಧ್ಯಾಹ್ನದಿಂದ ಅವರ ಜೊತೆ ತನ್ನ ವೇಳೆಯನ್ನು ಕಳೆದ. ಪ್ರತ್ಯೇಕವಾಗಿದ್ದ ಆ ಚಿಕ್ಕ ರೂಮಿನ ಗೋಡೆಗಳ ಮೇಲೆ ವಿಚಿತ್ರವಾದ ನಕ್ಷೆಗಳು ಮತ್ತು ಡ್ರಾಯಿಂಗ್‌ಗಳು ಹರಡಿಕೊಳ್ಳುತ್ತಿದ್ದ ಹಾಗೆ ಅವನು ಅವರಿಗೆ ಓದುವುದನ್ನು, ಬರೆಯುವುದನ್ನು, ಲೆಕ್ಕ ಮಾಡುವುದನ್ನು ಕಲಿಸಿದ ಮತ್ತು ಪ್ರಪಂಚದ ಅದ್ಭುತಗಳ ಬಗ್ಗೆ ತನ್ನ ಕಲ್ಪನೆಯ ಮಿತಿಯನ್ನು ಅತಿಯಾಗಿ ವಿಸ್ತರಿಸಿ ತಿಳಿಸಿದ. ಇದರಿಂದ ಮಕ್ಕಳು ಆಫ್ರಿಕಾದ ದಕ್ಷಿಣದ ತುದಿಯ ಭಾಗದ ಜನರು ಅದೆಷ್ಟು ಬುದ್ಧಿವಂತರೆಂದರೆ ಅವರಿಗೆ ಕುಳಿತುಕೊಂಡು ಯೋಚಿಸುವುದೊಂದೇ ಕೆಲಸ ಮತ್ತು ಬರಿಗಾಲಲ್ಲಿ ಏಜಿಯನ್ ಸಮುದ್ರವನ್ನು ದಾಟಲು ದ್ವೀಪದಿಂದ ದ್ವೀಪಕ್ಕೆ ಹಾರುತ್ತ ಸಲೋನಿಕ್ ಬಂದರಿನ ತನಕ ಹೋಗಬಹುದು ಎನ್ನುವುದನ್ನು ಕಲಿತರು. ಹಾಗೆ ಕಳೆದ ಕಲಿಕೆಯ ವಿಭ್ರಮೆಯಂಥ ಸಮಯದ ನೆನಪುಗಳು ಹುಡುಗರ ಮನಸ್ಸಿನಲ್ಲಿ ನೆಲೆಗೊಂಡದ್ದು ಎಷ್ಟೆಂದg, ಅನೇಕ ವರ್ಷಗಳ ನಂತರ ತನ್ನನ್ನು ಗುಂಡಿಕ್ಕಿ ಕೊಲ್ಲಲು ಸಾಲು ನಿಂತ ತಂಡಕ್ಕೆ ಸೈನ್ಯದ ಅಧಿಕಾರಿ ಅಪ್ಪಣೆ ಕೊಡುವ ಒಂದು ಸೆಕೆಂಡಿನ ಮುಂಚೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಆ ದಿನ ಮಾರ್ಚ್ ತಿಂಗಳ ಒಂದು ಮಧ್ಯಾಹ್ನ ತನ್ನ ತಂದೆ ಹೇಳುತ್ತಿದ್ದ ಭೌತಶಾಸ್ತ್ರದ ಪಾಠವೊಂದನ್ನು ನಿಲ್ಲಿಸಿ, ಬಿಟ್ಟಕಣ್ಣು ಬಿಟ್ಟುಕೊಂಡು ಗಾಳಿಯಲ್ಲಿ ಕೈಯನ್ನು ಎತ್ತಿ ಹಿಡಿದು ದೂರದಿಂದ ಕೇಳಿಬರುತ್ತಿದ್ದ ಜಿಪ್ಸಿಗಳ ಹಾಡುಗಳು, ಪೀಪಿ-ತಮಟೆಗಳ ದನಿಯನ್ನು ಕೇಳಿಸಿಕೊಳ್ಳುತ್ತ ನಿಂತಿದ್ದನ್ನು ಮತ್ತೊಮ್ಮೆ ಪರಿಭಾವಿಸಿದ. ಅವರು ಹಳ್ಳಿಗೆ ಮತ್ತೆ ಮತ್ತೆ ಬರುತ್ತಿದ್ದರು. ಮೆಂಫಿಲ್ ಯೋಗಿಗಳು ಕಂಡು ಹಿಡಿದ ಇತ್ತೀಚಿನ ಹಾಗೂ ಚಕಿತಗೊಳಿಸುವಂಥದನ್ನು ಕುರಿತು ಅವರು ಪ್ರಚಾರ ಮಾಡುತ್ತಿದ್ದರು.
ಆ ಜಿಪ್ಸಿಗಳು ಹೊಸಬರು. ತಮ್ಮ ಭಾಷೆ ಮಾತ್ರ ತಿಳಿದಿದ್ದ ಹದಿವಯಸ್ಸಿನ ಗಂಡು-ಹೆಣ್ಣುಗಳು. ಸುಂದರವಾಗಿದ್ದ ಅವರ ಮೈಚರ್ಮ ಎಣ್ಣೆ ಸವರಿದಂತಿತ್ತು ಮತ್ತು ಅವರ ಕೈಗಳು ಸಾಕಷ್ಟು ಚುರುಕಾಗಿದ್ದವು. ಅವರ ಹಾಡು ಕುಣಿತಗಳು ಸಂತೋಷದ ಉನ್ಮಾದವನ್ನು ಹುಟ್ಟು ಹಾಕಿತು. ಎಲ್ಲ ಬಗೆಯ ಬಣ್ಣ ಹಚ್ಚಿದ್ದ ಗಿಣಿಗಳು ಇಟಲಿಯ ಇಂಪಾದ ರಾಗವನ್ನು ಹಾಡುತ್ತಿದ್ದವು. ಅಲ್ಲದೆ ಟಾಂಬರಿನ್ ನಾದಕ್ಕೆ ನೂರು ಚಿನ್ನದ ಮೊಟ್ಟೆ ಇಡುವ ಕೋಳಿಯೊಂದಿತ್ತು. ಜೊತೆಗೆ ಮನಸ್ಸಿನಲ್ಲಿರುವುದನ್ನು ಓದಲು ಕಲಿತಿದ್ದ ಕೋತಿಯಿತ್ತು. ಯಾರೊಬ್ಬರ ಕೆಟ್ಟ ನೆನಪುಗಳನ್ನು ಮರೆಸುವಂಥ ಮೆಷಿನ್ ಹಾಗೂ ಸಮಯದ ಪರಿವೆ ಅಳಿಸುವಂಥ ಒಂದು ಪೋಲ್ಟೀಸ್ ಇತ್ತು. ಅಲ್ಲದೆ ಇತರೆ ಸಾವಿರ ಆವಿಷ್ಕಾರಗಳನ್ನು ಕಂಡ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಅವೆಲ್ಲವನ್ನೂ ತಾನು ನೆನಪಿಟ್ಟುಕೊಳ್ಳುವಂತೆ ಮನಸ್ಸಿನ ಮೆಷಿನ್ ಕಂಡು ಹಿಡಿಯಬೇಕೆಂಬ ಆಲೋಚನೆ ಬಂದಿರಬೇಕು. ಅವರು ಚಿಟಿಕೆ ಹೊಡೆಯುವುದರಲ್ಲಿ ಹಳ್ಳಿಯನ್ನು ಬದಲಾಯಿಸಿಬಿಟ್ಟರು. ಮಕೋಂದೋ ಮೂಲದವರಿಗೆ ಆ ಉತ್ಸಾಹದ ಜಾತ್ರೆಯ ಗೊಂದಲದಲ್ಲಿ ಅವರದೇ ರಸ್ತೆಗಳಲ್ಲಿ ಕಳೆದು ಹೋದಂತಾಯಿತು.
ಜನದಟ್ಟಣಿಯಲ್ಲಿ ಕಳೆದು ಹೋಗದಂತೆ ಒಂದೊಂದು ಕೈಯಲ್ಲಿ ಒಂದೊಂದು ಮಗುವನ್ನು ಹಿಡಿದುಕೊಂಡು ಹೋಗುತ್ತ ಹೊಸೆ ಅರ್ಕಾದಿಯೋ ಬ್ಯುಂದಿಯಾ ಬಂಗಾರದ ಹಲ್ಲುಗಳನ್ನು ಕಟ್ಟಿಸಿಕೊಂಡಿದ್ದ ದೊಂಬರಾಟದವರನ್ನು ಮತ್ತು ಆರು ಕೈಗಳಿಂದ ಆಡುತ್ತಿದ್ದ ಗಾರುಡಿಗನಿಗೆ ಡಿಕ್ಕಿ ಹೊಡೆದ. ಇದ್ದ ಗುಂಪಿನ ಜನರ ವಿಶ್ವಾಸ ಮತ್ತು ಗೊಬ್ಬರ ಮಿಶ್ರಣದ ಉಸಿರುಗಟ್ಟಿಸುವ ವಾಸನೆಯಲ್ಲಿ ಹುಚ್ಚನ ಹಾಗೆ ಅವನು ಎಲ್ಲಂದರಲ್ಲಿ ಅಲೆದಾಡಿದ. ಅವನು ಎಣೆಯಿಲ್ಲದ ಗುಟ್ಟುಗಳನ್ನು ಮತ್ತು ಅಸಂಬದ್ಧ ದುಃಸ್ವಪ್ನಗಳನ್ನು ತಿಳಿಸಲು ಮೆಲ್‌ಕಿಯಾದೆಸ್‌ನನ್ನು ಹುಡುಕುತ್ತ್ತಿದ್ದ. ತನ್ನ ಭಾಷೆಯನ್ನು ತಿಳಿಯದ ಅನೇಕ ಜಿಪ್ಸಿಗಳನ್ನು ಅವನ ಬಗ್ಗೆ ಕೇಳಿದ. ಕೊನೆಗೆ ಅವನು ಮೆಲ್‌ಕಿಯಾದೆಸ್ ಟೆಂಟ್ ಹಾಕಿಕೊಳ್ಳುತ್ತಿದ್ದ ಸ್ಥಳಕ್ಕೆ ಬಂದ ಮತ್ತು ಅಲ್ಲಿ ಮಿತಭಾಷಿಯಾದ ಅರ್ಮೇನಿಯಾದವನು ಅದೃಶ್ಯವಾಗುವಂತಹ ದ್ರವವೊಂದನ್ನು ಸ್ಪಾನಿಷ್ ಭಾಷೆಯಲ್ಲಿ ಮಾರಾಟ ಮಾಡುತ್ತಿದ್ದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ನೋಡುತ್ತಿದ್ದ ಗುಂಪಿನ ಮಧ್ಯೆ ನುಸುಳಿಕೊಂಡು ಅವನ ಹತ್ತಿರ ಹೋಗುತ್ತಿದ್ದಂತೆ, ಅವನು ಒಂದು ಗ್ಲಾಸಿನ ತುಂಬ ಇದ್ದ ತೆಳು ಹಳದಿ ಬಣ್ಣದ ವಸ್ತುವೊಂದನ್ನು ಒಂದೇ ಗುಟುಕಿಗೆ ಕುಡಿದ. ಅನಂತರ ಹೊಸೆ ಅರ್ಕಾದಿಯೋ ಬ್ಯುಂದಿಯಾನಿಗೆ ತನ್ನ ಪ್ರಶ್ನೆ ಕೇಳಲು ಸಾಧ್ಯವಾಯಿತು. ಆ ಜಿಪ್ಸಿ ಕ್ರಿಮಿನಾಶಕ ವಸ್ತುವಿನ ಕಲಸು ಮಾಡುವ ಮೊದಲು ಅವನನ್ನು ಭಯ ಹುಟ್ಟಿಸುವ ನೋಟದಿಂದ ಬಿಗಿದು ಕಟ್ಟಿದ. ಆಗ ಮೇಲೆದ್ದ ಹೊಗೆಯಲ್ಲಿ ಅವನ ಧ್ವನಿ ಪ್ರತಿಫಲಿತವಾಯಿತು: “ಮೆಲ್‌ಕಿಯಾದೆಸ್ ಸತ್ತು ಹೋಗಿದ್ದಾನೆ.” ಅವರಿವರು ಕರೆದ ಕಡೆ ಹೋಗಲು ಗುಂಪು ಚದುರುವ ತನಕ ಕೇಳಿದ ಸುದ್ದಿಯಿಂದ ವಿಚಲಿತಗೊಂಡು ದಹಿಸುತ್ತಿದ್ದ ಸಂಕಟವನ್ನು ನಿಗ್ರಹಿಸುತ್ತ ಹೊಸೆ ಅರ್ಕಾದಿಯೋ ಬ್ಯುಂದಿಯಾ, ಕ್ರಿಮಿನಾಶಕ ವಸ್ತುವಿನ ಕಲಸು ಪೂರ್ತಿಯಾಗಿ ಆವಿಯಾಗುವ ತನಕ ಅಲ್ಲೆ ನಿಂತಿದ್ದ. ಸಿಂಗಪೂರ್‌ನ ಸಮುದ್ರದ ತೀರದಲ್ಲಿ ಜ್ವರದ ತಾಪಕ್ಕೆ ತುತ್ತಾಗಿ ಮೆಲ್‌ಕಿಯಾದೆಸ್ ಸತ್ತನೆಂದು ಇತರೆ ಜಿಪ್ಸಿಗಳು ಹೇಳಿದರಲ್ಲದೆ ಅವನ ದೇಹವನ್ನು ಜಾವಾ ಸಮುದ್ರದಾಳಕ್ಕೆ ಎಸೆಯಲಾಯಿತೆಂದು ತಿಳಿಸಿದರು. ಆದರೆ ಹುಡುಗರಿಗೆ ಆ ಸುದ್ದಿಯಲ್ಲಿ ಆಸಕ್ತಿ ಇರಲಿಲ್ಲ. ಟೆಂಟ್‌ನ ಹೊರಗೆ ಪ್ರಚುರಪಡಿಸಿದಂತೆ ಮೆಂಫಿಲ್ ಯೋಗಿಗಳು ಮಾಡಿದ್ದ ಸಾಲಮನ್ ರಾಜನದೆಂದು ಹೇಳಲಾಗಿದ್ದ ವಿಶೇಷವನ್ನು ತೋರಿಸಬೇಕೆಂದು ತಮ್ಮ ತಂದೆಯನ್ನು ಒತ್ತಾಯಿಸಿದರು. ಅವರು ಎಷ್ಟು ಬಲವಂತಮಾಡಿದರೆಂದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಮೂವತ್ತು ರೇಲ್ಸ್ ಕೊಟ್ಟು ಅವರನ್ನು ಟೆಂಟ್‌ನ ಮಧ್ಯ ಭಾಗಕ್ಕೆ ಕರೆದುಕೊಂಡು ಹೋದ. ಅಲ್ಲಿ ದೈತ್ಯಾಕಾರದ ತಲೆ ಬೋಳಿಸಿದ ಎದೆಯ ತುಂಬ ಕೂದಲಿದ್ದ ಮನುಷ್ಯನೊಬ್ಬನಿದ್ದ. ಮೂಗಿಗೆ ತಾಮ್ರದ ಮೂಗುತಿ ;ತ್ತು ಮೊಣಕಾಲಿಗೆ ಕಬ್ಬಿಣದ ಚೈನ್ ಹಾಕಿದ್ದ ಅವನು ದೊಡ್ಡ ಪೆಟ್ಟಿಗೆಯೊಂದನ್ನು ಕಾಯುತ್ತಿದ್ದ. ಆ ಮನುಷ್ಯ ಪೆಟ್ಟಿಗೆಯನ್ನು ತೆಗೆದಾಗ ಅದು ದೀರ್ಘವಾಗಿ ವಿಚಿತ್ರ ಶಬ್ದ ಮಾಡಿತು. ಅದರೊಳಗೆ ಅಸಂಖ್ಯಾತ ಸೂಜಿ ಮೊನೆಗಳಿದ್ದ ಒಂದು ಭಾರಿ ಗಾತ್ರದ ಪಾರದರ್ಶಕ ವಸ್ತುವಿದ್ದು, ಅದರ ಮೇಲೆ ಬಿದ್ದ ಸಂಧ್ಯಾ ಕಿರಣಗಳು ಬಣ್ಣದ ಚಿಕ್ಕೆಗಳಾಗಿ ತುಂಡಾಗುತ್ತಿದ್ದವು. ಮಕ್ಕಳು ತಕ್ಷಣವೇ ಅದರ ಬಗ್ಗೆ ವಿವರಣೆ ಕೇಳುತ್ತಾರೆಂದು ಹೊಸೆ ಅರ್ಕಾದಿಯೋ ಬ್ಯುಂದಿಯಾ ತಲೆ ಕೆಡಿಸಿಕೊಳ್ಳದೆ ಪಿಸುಗುಟ್ಟಿದ:
“ಅದು ಪ್ರಪಂಚದ ಅತಿ ದೊಡ್ಡ ವಜ್ರ.”
“ಅಲ್ಲ, ಅದು ಐಸ್” ಎಂದು ಜಿಪ್ಸಿ ಪ್ರತಿಯಾಗಿ ಹೇಳಿದ.
ಹೊಸೆ ಅರ್ಕಾದಿಯೋ ಬ್ಯುಂದಿಯಾ ಅರ್ಥವಾಗದೆ ಆ ವಸ್ತುವಿನ ಕಡೆ ಕೈ ಚಾಚಿದ. ಆದರೆ ಆ ಧಡಿಯ ಅದನ್ನು ದೂರ ಜರುಗಿಸಿದ. “ಅದನ್ನು ಮುಟ್ಟೋದಕ್ಕೆ ಮತ್ತೆ ಐದು ರೇಲ್ಸ್” ಎಂದ. ಅಷ್ಟು ಕೊಟ್ಟು ಹೊಸೆ ಅರ್ಕಾದಿಯೋ ಬ್ಯುಂದಿಯಾ ಐಸ್ ಮೆಲೆ ಕೈಯಿಟ್ಟ. ಕೆಲವು ನಿಮಿಷ ಹಾಗೆಯೇ ಇದ್ದ ಅವನಿಗೆ ಆ ನಿಗೂಢವಾದದ್ದರ ಸ್ಪರ್ಶದಿಂದ ಅವನ ಹೃದಯ ಹರ್ಷಾತಿರೇಕಗಳಿಂದ ತುಂಬಿ ಬಂತು. ಏನು ಹೇಳಬೇಕೆಂದು ತಿಳಿಯದೆ ಮಕ್ಕಳಿಗೆ ಆ ಅನುಭವ ಆಗಲೆಂದು ಮತ್ತೆ ಹತ್ತು ರೇಲ್ಸ್ ಕೊಟ್ಟ. ಚಿಕ್ಕವನಾದ ಹೊಸೆ ಅರ್ಕಾದಿಯೋ ಅದನ್ನು ಮುಟ್ಟಲು ಒಪ್ಪಲಿಲ್ಲ. ಆದರೆ ಅವ್ರೇಲಿಯಾನೋ ಒಂದು ಹೆಜ್ಜೆ ಮುಂದಿಟ್ಟು, ಅದರ ಮೇಲೆ ಕೈಯಿಟ್ಟವನು ತಕ್ಷಣವೇ ಹಿಂದಕ್ಕೆ ತೆಗೆದುಕೊಂಡ. ‘ಅದು ಕುದೀತಿದೆ\’ ಎಂದು ಚಕಿತಗೊಂಡು ಹೇಳಿದ. ಆದರೆ ಅವನ ತಂದೆ ಅವನನ್ನು ಸರಿಪಡಿಸಿದ. ಎದುರಿಗಿದ್ದ ಪವಾಡಕ್ಕೆ ದೊರಕಿದ ಪುರಾವೆಗೆ ಮಾರುಹೋಗಿ ತನ್ನ ಪ್ರಯತ್ನಗಳಿಗೆ ಉಂಟಾದ ಅಡಚಣೆ ಮತ್ತು ಮೆಲ್‌ಕಿಯಾದೆಸ್‌ನ ದೇಹ ನಾಯಿನರಿಗಳಿಗೆ ಆಹಾರವಾದದ್ದನ್ನು ಮರೆತ. ಇನ್ನೊಂದು ಐದು ರೇಲ್ಸ್ ಕೊಟ್ಟು ಪವಿತ್ರ ಗ್ರಂಥಗಳ ಮೇಲೆ ಕೈಯಿಟ್ಟು ಪ್ರಮಾಣ ಮಾಡುವವನಂತೆ ಹೇಳಿದ:
“ಇದು ನಮ್ಮ ಕಾಲದಲ್ಲಿ ಆಗಿರೋ ಅತ್ಯಂತ ಶ್ರೇಷ್ಠವಾದ ನಿರ್ಮಾಣ.”

ಹದಿನಾರನೆ ಶತಮಾನದಲ್ಲಿ ದರೋಡೆಕಾರ ಸರ್ ಫ್ರಾನ್ಸಿಸ್ ಡ್ರೇಕ್ ರಿಯೋ‌ಅಕವನ್ನು ಆಕ್ರಮಣ ಮಾಡಿದಾಗ ಮೊಳಗಿದ ಗಂಟೆಗಳಿಂದ ಮತ್ತು ಫಿರಂಗಿಗಳ ಶಬ್ದದಿಂದ ಉರ್ಸುಲಾ ಇಗ್ವಾರಾನಳ ಮುತ್ತಜ್ಜಿಯ ಅಮ್ಮ ತನ್ನ ಮೇಲೆ ಹಿಡಿತ ಕಳೆದುಕೊಂಡು ಎಷ್ಟು ಭಯಗೊಂಡಿದ್ದಳೆಂದರೆ ಅವಳು ಉರಿಯುತ್ತಿದ್ದ ಸ್ಟೋವ್ ಮೇಲೆ ಕುಳಿತು ಬಿಟ್ಟಳು. ಅದರಿಂದ ಉಂಟಾದ ಸುಟ್ಟ ಗಾಯ ಅವಳನ್ನು ಇಡೀ ಜೀವನ ಪರ್ಯಂತ ಕೆಲಸಕ್ಕೆ ಬಾರದವಳನ್ನಾಗಿ ಮಾಡಿತು. ಅವಳಿಗೆ ದಿಂಬು ಹಾಕಿಕೊಂಡು ಒಂದು ಕಡೆ ಮಾತ್ರ ಕುಳಿತುಕೊಳ್ಳಲು ಸಾಧ್ಯವಾಗುತ್ತಿತ್ತು. ಅವಳ ನಡಿಗೆಯಲ್ಲೂ ವಿಚಿತ್ರ ಬದಲಾವಣೆ ಉಂಟಾಗಿತ್ತೆಂದು ಕಾಣುತ್ತದೆ. ಏಕೆಂದರೆ ಅವಳು ಹೊರಗೆಲ್ಲೂ ಹೆಜ್ಜೆ ಇಡಲಿಲ್ಲ. ಎಲ್ಲ ಬಗೆಯ ಸಾರ್ವಜನಿಕ ಚಟುವಟಿಕೆಯನ್ನು ತೊರೆದಳು. ಅವಳಿಗೆ ತನ್ನ ಮೈಯಿಂದ ಸುಟ್ಟ ವಾಸನೆ ಹೊರಡುತ್ತದೆ ಎಂಬ ತೀವ್ರವಾದ ಭಾವನೆಯಿತ್ತು. ಬೆಳಕಿರುವಾಗ ಅವಳು ಅಂಗಳದಲ್ಲಿ ಕುಳಿತಿರುತ್ತಿದ್ದಳು. ಏಕೆಂದರೆ ಇಂಗ್ಲಿಷರು ಮತ್ತು ಅವರ ಭಯಂಕರ ನಾಯಿಗಳು ಕಿಟಕಿಯಿಂದ ತೂರಿ ಬಂದು, ಕಾದ ಕಬ್ಬಿಣದ ಬರೆ ಹಾಕುತ್ತಾರೆಂಬ ಕನಸು ಬೀಳುವುದೆಂದು ಅವಳು ಮಲಗುವ ಧೈರ್ಯ ಮಾಡುತ್ತಿರಲಿಲ್ಲ. ವ್ಯಾಪಾರಿಯಾದ ಅವಳ ಗಂಡನಿಂದ ಅವಳಿಗೆ ಇಬ್ಬರು ಮಕ್ಕಳಿದ್ದರು. ಅವನು ತನ್ನ ಸಂಪತ್ತಿನ ಅರ್ಧ ಭಾಗವನ್ನು ಅವಳ ಭಯ ನಿವಾರಣೆಗೆ ಮತ್ತು ಔಷಧೋಪಚಾರಗಳಿಗೆ ವೆಚ್ಚ ಮಾಡಿದ್ದ. ಕೊನೆಗೆ ತನ್ನ ಉದ್ಯೋಗವನ್ನೂ ಬಿಟ್ಟು, ಸಂಸಾರವನ್ನು ಸಮುದ್ರದಿಂದ ದೂರ ಶಾಂತಿಪೂರ್ಣ ಇಂಡಿಯನ್ನರು ಇರುವ ಬೆಟ್ಟದ ತಪ್ಪಲಿಗೆ ಕರೆದುಕೊಂಡು ಹೋದ. ಅಲ್ಲಿ ತನ್ನ ಹೆಂಡತಿಗೆ ಅವಳ ಕನಸಿನ ದರೋಡೆಕಾರರು ಬಾರದಿರುವಂತೆ ಕಿಟಕಿಗಳಿರದ ಬೆಡ್ ರೂಮನ್ನು ಕಟ್ಟಿಸಿದ.
ಆ ಹಳ್ಳಿಯ ಮೂಲೆಯಲ್ಲಿ ಕೆಲವು ಕಾಲ ತಂಬಾಕು ಬೆಳೆಯುವ ದಾನ್ ಹೊಸೆ ಅರ್ಕಾದಿಯೋ ಬ್ಯುಂದಿಯಾ ಎಂಬ ಸ್ಥಳೀಯ ಮನುಷ್ಯನೊಬ್ಬನಿದ್ದ. ಉರ್ಸುಲಾಳ ಮುತ್ತಜ್ಜನ ಅಪ್ಪ ಅವನ ಜೊತೆ ಹೊಂದಾಣಿಕೆ ಮಾಡಿಕೊಂಡ ಕೆಲವೇ ವರ್ಷಗಳಲ್ಲಿ ಇಬ್ಬರೂ ಸ್ಥಿತಿವಂತರಾದರು. ಅನೇಕ ಶತಮಾನಗಳ ನಂತರ ಸ್ಥಳೀಯ ಪ್ಲಾಂಟರ್‌ನ ಮರಿಮಗ ಅರಗೊನೀಸ್ ವ್ಯಾಪಾರಿಯ ಮರಿಮಗಳನ್ನು ಮದುವೆಯಾದ. ಆದ್ದರಿಂದ ಪ್ರತಿ ಬಾರಿಯೂ ಉರ್ಸುಲಾಗೆ ಗಂಡನ ಹುಚ್ಚು ವಿಚಾರಗಳಿಂದ ತಲೆ ಕೆಟ್ಟಾಗ, ಮುನ್ನೂರು ವರ್ಷದ ವಿಧಿಯ ಆಟವನ್ನು ಆಲೋಚಿಸುತ್ತ ಸರ್ ಫ್ರಾನ್ಸಿಸ್ ಡ್ರೇಕ್ ರಿಯೋ‌ಅಕವನ್ನು ಆಕ್ರಮಿಸಿದ ಆ ದಿನವನ್ನು ಶಪಿಸುತ್ತಾಳೆ. ಅದು ಅವಳಿಗೆ ಕೊಂಚ ಸಮಾಧಾನ ಕೊಡುವ ರೀತಿ. ಆದರೆ ಸಾಯುವ ತನಕ ಇರುವ ಪ್ರೇಮಕ್ಕಿಂತ ತೀಕ್ಷ್ಣವಾದ ಅನುಬಂಧ ಅವರಲ್ಲಿತ್ತು. ಅವರಿಬ್ಬರು ಸಂಬಂಧಿಗಳಾಗಿದ್ದರು. ಒಳ್ಳೆಯ ಅಭ್ಯಾಸ ಮತ್ತು ದುಡಿತದಿಂದ ಆ ಪ್ರದೇಶದಲ್ಲಿನ ಅತ್ಯುತ್ತಮ ಹಳ್ಳಿಗಳಲ್ಲಿ ಒಂದು ಎಂದು ಹೆಸರು ಮಾಡಿದ ವಂಶಜರಿದ್ದ ಆ ಪುರಾತನ ಹಳ್ಳಿಯಲ್ಲಿ ಅವರಿಬ್ಬರು ಒಟ್ಟಿಗೆ ಬೆಳೆದರು. ಅವರು ಹುಟ್ಟಿದಾಗಲೇ ಅವರಿಬ್ಬರ ಮದುವೆಯನ್ನು ನಿರೀಕ್ಷಿಸಬಹುದಾಗಿದ್ದರೂ ತಾವು ಒಬ್ಬರನ್ನೊಬ್ಬರು ಮದುವೆಯಾಗಬೇಕೆಂಬ ಅಭಿಲಾಷೆಯನ್ನು ಅವರು ಪ್ರಕಟಿಸಿದಾಗ ಅದನ್ನು ತಪ್ಪಿಸಲು ಕೆಲವು ಸಂಬಂಧಿಗಳು ಪ್ರಯತ್ನಿಸಿದರು. ಶತಮಾನಗಳಿಂದ ಎರಡು ಸಮುದಾಯದ ಆರೋಗ್ಯವಂತರಾದ ಅವರಿಗೆ, ತಾವು ಉಡದಂಥ ಪ್ರಾಣಿಗಳ ಹುಟ್ಟಿಗೆ ಕಾರಣವಾಗುತ್ತೇವೆಂಬ ಭಯವಿತ್ತು. ಅದಕ್ಕಾಗಲೇ ಒಂದು ಭಯಂಕರವಾದ ನಿದರ್ಶನವಿತ್ತು. ಉರ್ಸುಲಾಳ ಚಿಕ್ಕಮ್ಮ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಚಿಕ್ಕಪ್ಪನನ್ನು ಮದುವೆಯಾಗಿದ್ದಳು. ಅವರ ಮಗ ಜೀವನವಿಡೀ ದೊಗಲೆ ಪೈಜಾಮ ಹಾಕಿಕೊಂಡು ಬ್ರಹ್ಮಚಾರಿಯಾಗಿಯೇ ನಲವತ್ತೆರಡು ವರ್ಷ ಕಳೆದು ರಕ್ತ ಸೋರಿ ಸತ್ತಿದ್ದ. ಅವನಿಗೆ ಹುಟ್ಟುವಾಗಲೇ ತುದಿಯಲ್ಲಿ ಸಣ್ಣ ಕೂದಲ ಗೊಂಚಲಿರುವ ಒಂದು ಬಾಲವಿದ್ದು ಅದರ ಜೊತೆಗೇ ಬೆಳೆದಿದ್ದ. ಯಾವ ಹೆಂಗಸಿಗೂ ನೋಡಲು ಬಿಡದಿದ್ದ ಹಂದಿಯ ಬಾಲದಂತಿದ್ದ ಅದನ್ನು ಕೈಗತ್ತಿಯಿಂದ ಕತ್ತರಿಸಿ ಸ್ನೇಹಿತನೊಬ್ಬ ಉಪಕಾರ ಮಾಡಿದ. ಹತ್ತೊಂಬತ್ತು ವರ್ಷದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಒಂದೇ ಒಂದು ಕೊಂಕು ಮಾತಿನಿಂದ ಅದನ್ನು ಉಡಾಯಿಸಿ, “ಬಾಲವಿದ್ದರೇನಂತೆ, ಮಾತಾಡಿದರೆ ಸಾಕು. ಉಳಿದದ್ದು ಬೇಕಿಲ್ಲ” ಎಂದ. ಬಾಣ, ಬಿರುಸು, ವಾದ್ಯ ಗೋಷ್ಠಿಗಳಿಂದ ಕೂಡಿದ ಸಂಭ್ರಮದಲ್ಲಿ ಅವರಿಬ್ಬರೂ ಮದುವೆಯಾದರು. ಅದು ಮೂರು ದಿನಗಳ ತನಕ ನಡೆಯಿತು. ಉರ್ಸುಲಾಳ ತಾಯಿ ಅವಳನ್ನು ಕೆಟ್ಟ ಮಕ್ಕಳ ವಿಷಯದಲ್ಲಿ ಹೆದರಿಸದಿದ್ದರೆ, ಅವರು ಆಗಿನಿಂದಲೇ ಸಂತೋಷವಾಗಿರುತ್ತಿದ್ದರು. ಮದುವೆಯನ್ನು ಸಾಂಗಮಾಡುವುದನ್ನೂ ಒಪ್ಪದಿರುವಂತೆ ಅವಳಿಗೆ ಉಪದೇಶಿಸಿದ್ದಳು. ಮಲಗಿರುವಾಗ ತನ್ನ ದಡೂತಿ ಗಂಡ, ಹಟದಿಂದ ತನ್ನ ಮೇಲೆ ಅತ್ಯಾಚಾರ ನಡೆಸುತ್ತಾನೆಂಬ ಭಯದಿಂದ, ಅವಳು ಮಲಗುವ ಮುಂಚೆ ತನ್ನ ತಾಯಿ ಹಾಯಿಬಟ್ಟೆಯಿಂದ ಹೊಲಿದುಕೊಟ್ಟಿದ್ದ ಒಳ‌ಉಡುಪನ್ನು ತೊಡುತ್ತಿದ್ದಳು. ಮತ್ತು ಅದರ ಜೊತೆ ಕುಣಿಕೆ ಇರುವ, ಮುಂಭಾಗವನ್ನು ಮುಚ್ಚುವ ಅಡ್ಡಡ್ಡವಾದ ಚರ್ಮದ ಪಟ್ಟಿಯನ್ನು ಹಾಕಿಕೊಳ್ಳುತ್ತಿದ್ದಳು. ಇದೇ ರೀತಿಯಲ್ಲಿ ಅವರು ಹಲವಾರು ತಿಂಗಳನ್ನು ಕಳೆದರು. ಹಗಲಲ್ಲಿ ಅವನು ಕಾಳಗದ ಹುಂಜಗಳನ್ನು ನೋಡಿಕೊಳ್ಳುತ್ತಿದ್ದ ಮತ್ತು ಅವಳು ತಾಯಿಯ ಜೊತೆ ಕಸೂತಿ ಹಾಕುತ್ತಿದ್ದಳು. ರಾತ್ರಿ ಒಬ್ಬರನ್ನೊಬ್ಬರು ಸಂಕಟದ ತುಡಿತದಲ್ಲಿ ಎಳೆದೆಳೆದು ಹೊರಳಾಡುತ್ತಿದ್ದರು. ಇದು ಸಂಭೋಗಕ್ಕೆ ಪರ್ಯಾಯ ಎನ್ನುವ ಹಾಗೆ ತೋರಿದರೂ, ಜನರಿಗೆ ಅವರಲ್ಲೇನೋ ಅಸಹಜವಾದದ್ದಿದೆ ಎಂಬ ಸೂಚನೆ ಸಿಕ್ಕು, ಗಂಡ ಷಂಡನಾದದ್ದರಿಂದ ಮದುವೆಯಾಗಿ ಒಂದು ವರ್ಷವಾದರೂ ಉರ್ಸುಲಾ ಇನ್ನೂ ಕನ್ಯೆಯಾಗಿಯೇ ಉಳಿದಿದ್ದಾಳೆ ಎನ್ನುವ ವದಂತಿ ಹಬ್ಬಿತು.
“ನೋಡು, ಜನ ಏನು ಮಾತಾಡಿಕೊಳ್ತಿದಾರೆ” ಎಂದು ಅವನು ಶಾಂತನಾಗಿ ಹೇಳಿದ.
“ಅವರು ಬೇಕಾದ್ದನ್ನು ಹೇಳಲಿ. ಅದು ನಿಜ ಅಲ್ಲ ಅಂತ ನಮಗೆ ಗೊತ್ತು” ಎಂದಳು ಅವಳು.
ಅದೇ ರೀತಿಯಲ್ಲಿಯೇ ಅವರು ಇನ್ನೂ ಆರು ತಿಂಗಳು ಹೊಸೆ ಅರ್ಕಾದಿಯೋ ಬ್ಯುಂದಿಯಾ ಪ್ರುಡೆನ್ಸಿಯೋ ಅಗುಲರ್ ವಿರುದ್ಧ ಹುಂಜದ ಕಾಳಗದಲ್ಲಿ ಗೆಲ್ಲುವ ತನಕ ಕಳೆದರು. ಸೋತ ಪ್ರುಡೆನ್ಸಿಯೋ ತನ್ನ ಹುಂಜದ ರಕ್ತದಿಂದ ರೋಷಗೊಂಡು ತಾನು ಹೇಳುವುದು ಅಲ್ಲಿ ನೆರೆದಿರುವ ಎಲ್ಲರಿಗೂ ಕೇಳಿಸಲಿ ಎನ್ನುವಂತೆ ಹೊಸೆ ಅರ್ಕಾದಿಯೋ ಬ್ಯುಂದಿಯಾನಿಂದ ದೂರ ಸರಿದು ನಿಂತ.
“ಅಭಿವಂದನೆ! ಗೆದ್ದಿರೋ ಹುಂಜ ನಿಮ್ಮ ಹೆಂಡತೀಗೆ ದೊಡ್ಡ ಉಪಕಾರ ಮಾಡ್ಬಹುದು” ಎಂದ.
ಹೊಸೆ ಅರ್ಕಾದಿಯೋ ಬ್ಯುಂದಿಯಾ ಹುಂಜವನ್ನು ಸಮಾಧಾನದಿಂದ ಎತ್ತಿಕೊಂಡು ಅಲ್ಲಿದ್ದವರೆಲ್ಲರಿಗೆ, “ನಾನು ಮತ್ತೆ ಬರ್ತೀನಿ” ಎಂದು ಹೇಳಿ, ಪ್ರುಡೆನ್ಸಿಯೋ ಕಡೆ ತಿರುಗಿ, “ಮನೆಗೆ ಹೋಗಿ ಆಯುಧ ತೊಗೊಂಡು ಬಾ. . . ನಾನು ನಿನ್ನನ್ನ ಮುಗಿಸಿ ಬಿಡ್ತೀನಿ” ಎಂದ.
ಹತ್ತು ನಿಮಿಷಗಳ ನಂತರ ತನ್ನಜ್ಜನಿಗೆ ಸೇರಿದ ಭರ್ಜಿ ಹಿಡಿದುಕೊಂಡು ಬಂದ. ಊರಿನ ಅಧ ಜನ ಹುಂಜದ ಕಾಳಗದ ಅಖಾಡಾದ ಬಳಿ ನೆರೆದಿದ್ದರು. ಅದರ ಬಾಗಿಲ ಹತ್ತಿರ ಪ್ರುಡೆನ್ಸಿಯೋ ಅವನಿಗಾಗಿ ಕಾದು ನಿಂತಿದ್ದ. ಅವನಿಗೆ ತನ್ನನ್ನು ರಕ್ಷಿಸಿಕೊಳ್ಳಲು ಏನೂ ಸಮಯವಿರಲಿಲ್ಲ. ಮೊದಲನೆ ಅವ್ರೇಲಿಯಾನೋ ಬ್ಯುಂದಿಯಾ ಹೋರಿಯಷ್ಟು ಬಲದಿಂದ ಆ ಪ್ರದೇಶದ ಚಿರತೆಗಳಿಗೆ ಗುರಿಯಿಟ್ಟು ಮುಗಿಸಿದ ಹಾಗೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಎಸೆದ ಭರ್ಜಿ ಅವನ ಎದೆಯನ್ನು ಸೀಳಿತ್ತು. ಆ ದಿನ ರಾತ್ರಿ ಜನರೆಲ್ಲ ಸತ್ತು ಬಿದ್ದ ಹೆಣವನ್ನು ಕಾದು ಕುಳಿತಿದ್ದಂತೆ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಬೆಡ್‌ರೂಮಿನಲ್ಲಿ ಮಾಮೂಲಿನಂತೆ ಉರ್ಸುಲಾ ಚರ್ಮದ ಪಟ್ಟಿಯ ಒಳ‌ಉಡುಪನ್ನು ಹಾಕಿಕೊಳ್ಳುತ್ತಿದ್ದಳು. ಅವನು ಅವಳ ಕಡೆ ಭರ್ಜಿ ತೋರಿಸಿ, “ತೆಗಿ ಅದನ್ನ” ಎಂದು ಅಬ್ಬರಿಸಿದ. ಆಗ ಉರ್ಸುಲಾಗೆ ಅವನ ಉದ್ದೇಶದ ಬಗ್ಗೆ ಅನುಮಾನವಾಗಲಿಲ್ಲ. “ಏನಾಗುತ್ತೋ ಅದಕ್ಕೆ ನೀನೆ ಜವಾಬ್ದಾರ” ಎಂದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಭರ್ಜಿಯನ್ನು ನೆಲಕ್ಕೆ ನೆಟ್ಟ. “ನೀನು ಬಾಲ ಇರೋವನ್ನು ಹೆತ್ತರೆ, ಬಾಲ ಇರೋವನ್ನೇ ನಾವು ಬೆಳೆಸೋಣ. ಆದರೆ ನಿನ್ನಿಂದಾಗಿ ಈ ಊರಿನಲ್ಲಿ ಇನ್ನು ಯಾರೂ ಸಾಯೋದು ಬೇಡ” ಎಂದ. ಅಂದು ಚಂದ್ರನಿದ್ದ ಜೂನ್ ತಿಂಗಳ ಚೆಂದದ ರಾತ್ರಿ. ಅವರು ಬೆಡ್‌ರೂಮಿನಲ್ಲಿ ಪ್ರುಡೆನ್ಸಿಯೋನ ಸಂಬಂಧಿಗಳ ಅಳಲನ್ನು ತುಂಬಿಕೊಂಡು ಸುಳಿದಾಡುತ್ತಿದ್ದ ತಂಗಾಳಿಯನ್ನು ಗಮನಿಸದೆ, ಇಡೀ ರಾತ್ರಿ ಎಚ್ಚರವಿದ್ಡು ಹಾಸಿಗೆಯಲ್ಲಿ ಲಲ್ಲೆಯಾಡುತ್ತಿದ್ದರು.
ಅದನ್ನು ಪರಸ್ಪರ ಗೌರವದ ಸೆಣೆಸಾಟವೆಂದು ಪರಿಗಣಿಸಿದರೂ ಅವರಿಬ್ಬರ ಮನಸ್ಸಿನಲ್ಲಿ ಒಂದು ರೀತಿಯ ನೋವು ಉಳಿದಿತ್ತು. ಅದೊಂದು ರಾತ್ರಿ ಅವಳು ನಿದ್ದೆ ಬಾರದೆ ನೀರು ಕುಡಿಯುವುದಕ್ಕೆ ಎದ್ದು ಅಂಗಳಕ್ಕೆ ಹೋದಾಗ ಅಲ್ಲಿ ಮಡಕೆಯ ಪಕ್ಕದಲ್ಲಿ ಪ್ರುಡೆನ್ಸಿಯೋ ಅಗಿಲರ್‌ನನ್ನು ಕಂಡಳು. ಸಪ್ಪಗಿದ್ದ ಅವನು ಹುಲ್ಲಿನ ಕಟ್ಟಿನಿಂದ ಎದೆಯಲ್ಲಿ ಆದ ತೂತನ್ನು ಮುಚ್ಚಲು ಪ್ರಯತ್ನಿಸುತ್ತಿದ್ದ. ಅವಳಿಗೆ ಹೆದರಿಕೆಯಾಗಲಿಲ್ಲ. ಅನುಕಂಪ ಮೂಡಿತು. ವಾಪಸು ಹೋಗಿ ಅವಳು ಕಂಡದ್ದನ್ನು ಗಂಡನಿಗೆ ಹೇಳಿದಳು. ಆದರೆ ಅವನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. “ಇದರರ್ಥ ಏನು ಅಂದ್ರೆ, ನಮ್ಗೆ ಮನಸ್ಸಿನ ಭಾರನ ತಡೆದುಕೊಳ್ಳಕ್ಕೆ ಆಗ್ತಾ ಇಲ್ಲ ಅಂತ” ಎಂದ. ಎರಡು ದಿನಗಳ ನಂತರ ಉರ್ಸುಲಾ ಬಾತ್ ರೂಮಿನಲ್ಲಿ ಹುಲ್ಲಿನ ಕಟ್ಟಿನಿಂದ ಎದೆಯ ಮೇಲೆ ಉಂಟಾಗಿದ್ದ ರಕ್ತದ ಕಲೆಗಳನ್ನು ಉಜ್ಜಿ ತೊಳೆಯುತ್ತಿದ್ದ ಪ್ರುಡೆನ್ಸಿಯೋನನ್ನು ಕಂಡಳು. ಇನ್ನೊಂದು ರಾತ್ರಿ ಅವನು ಮಳೆಯಲ್ಲಿ ಓಡಾಡುತ್ತಿದ್ದದ್ದನ್ನು ನೋಡಿದಳು. ಹೆಂಡತಿಯ ಭ್ರಮೆಗಳಿಂದ ಕಿರಿಕಿರಿಗೊಂಡ ಹೊಸೆ ಅರ್ಕಾದಿಯೋ ಬ್ಯುಂದಿಯಾ ಭರ್ಜಿ ತೆಗೆದುಕೊಂಡು ಅಂಗಳಕ್ಕೆ ಹೋದ. ಅಲ್ಲಿ ಸೆಪ್ಪೆ ಮುಖದ ಸತ್ತವನಿದ್ದ.
“ನೀನು ನರಕಕ್ಕೆ ಹೋಗು. ಮತ್ತೆ ಮತ್ತೆ ನೀನು ವಾಪಸು ಬಂದರೆ ಅಷ್ಟು ಸಲವೂ ನಾನು ನಿನ್ನ ಕೊಂದು ಹಾಕ್ತಿನಿ.”
ಪ್ರುಡೆನ್ಸಿಯೋ ಹೋಗಲಿಲ್ಲ. ಅಲ್ಲದೆ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಭರ್ಜಿ ಬೀಸುವ ಧೈರ್ಯವಾಗಲಿಲ್ಲ. ಅನಂತರ ಅವನೆಂದೂ ನೆಮ್ಮದಿಯಿಂದ ನಿದ್ದೆ ಮಾಡಲಿಲ್ಲ. ಅವನು ಮಳೆಯಲ್ಲಿ ನಿಂತು ತೀರ ದೀನನಾಗಿ ತನ್ನ ಕಡೆ ಬೀರುತ್ತಿದ್ದ ನೋಟ, ಬದುಕಿರುವ ತನ್ನವರ ಬಗ್ಗೆ ಅತೀವ ಕಾಳಜಿ ಮತ್ತು ಹುಲ್ಲಿನ ಕಟ್ಟನ್ನು ನೀರಲ್ಲಿ ನೆನೆಸಲು ಆತಂಕದಿಂದ ಮನೆಯಲ್ಲಿ ಸುತ್ತಾಡುವ ರೀತಿ ಅವನನ್ನು ಹಿಂಸೆಗೆ ಗುರಿಪಡಿಸಿತ್ತು. “ಅವನು ತುಂಬ ಸಂಕಟ ಪಡ್ತಿರಬೇಕು. ಅವನೀಗ ತೀರ ಒಂಟಿಯಾಗಿದಾನೆ” ಎಂದು ಉರ್ಸುಲಾಗೆ ಹೇಳಿದ. ಅವಳಿಗೆ ಸತ್ತವನು ಮಡಿಕೆಯ ಮುಚ್ಚಳಗಳನ್ನು ತೆಗೆಯುತ್ತಿದ್ದಾಗ ಅವನೇನು ಹುಡುಕುತ್ತಿದ್ದಾನೆಂದು ಅರಿವಾದ ಮೇಲೆ, ಮನೆಯಲ್ಲಿ ಎಲ್ಲಂದರಲ್ಲಿ ನೀರು ತುಂಬಿದ ಮಡಕೆಗಳನ್ನು ಇಟ್ಟಳು. ಒಂದು ದಿನ ತನ್ನ ರೂಮಿನಲ್ಲಿಯೇ ಅವನು ಗಾಯವನ್ನು ತೊಳೆದುಕೊಳ್ಳುತ್ತಿದ್ದಾಗ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ತಡೆದುಕೊಳ್ಳಲಾಗಲಿಲ್ಲ.
“ಆದದ್ದಾಯ್ತು. . ನಾವು ಈ ಊರು ಬಿಟ್ಟು ಹೋಗ್ತೀವಿ. ಎಷ್ಟು ದೂರ ಆಗುತ್ತೋ ಅಷ್ಟು. ಮತ್ತೆ ನಾವು ವಾಪಸು ಬರಲ್ಲ. ಈಗ ಸಮಾಧಾನದಿಂದ ಹೋಗು.”
ಅವರು ಪರ್ವತಗಳನ್ನು ದಾಟಲು ಹೊರಟಿದ್ದು ಈ ಕಾರಣಕ್ಕಾಗಿ. ಹೊಸೆ ಅರ್ಕಾದಿಯೋ ಬ್ಯುಂದಿಯಾನ ಅನೇಕ ಸ್ನೇಹಿತರು, ಅವನಂತೆಯೇ ಹರೆಯದವರು ಈ ಸಾಹಸದಿಂದ ಪುಳಕಿತರಾಗಿ ಹೆಂಡತಿ ಮಕ್ಕಳ ಸಮೇತ ಮನೆಮಾರುಗಳನ್ನು ಬಿಟ್ಟು, ಗಂಟು ಮೂಟೆ ಕಟ್ಟಿಕೊಂಡು, ಯಾರೂ ಭರವಸೆ ಕೊಟ್ಟಿರದ ಪ್ರದೇಶದ ಕಡೆ ಹೊರಟರು. ಹೊಸೆ ಅರ್ಕಾದಿಯೋ ಬ್ಯುಂದಿಯಾ ತಾನು ಹೊರಡುವ ಮುಂಚೆ ಭರ್ಜಿಯನ್ನು ಅಂಗಳದಲ್ಲಿ ನೆಟ್ಟ ನಂತರ, ಹೀಗೆ ಮಾಡಿದರೆ ಪ್ರುಡೆನ್ಸಿಯೋಗೆ ನೆಮ್ಮದಿ ಸಿಗಬಹುದು ಎಂಬ ನಂಬಿಕೆಯಿಂದ ಒಂದೊಂದಾಗಿ ಹುಂಜಗಳ ಹೊಟ್ಟೆಯನ್ನು ಸೀಳಿದ. ಉರ್ಸುಲಾ ತಾನು ಮದುವಣಗಿತ್ತಿಯಾಗಿ ತೊಟ್ಟಿದ್ದ ಉಡುಪಿನ ಜೊತೆಗೆ ಒಂದಿಷ್ಟು ಪಾತ್ರೆ ಪಡಗ ಮತ್ತು ಪಿತ್ರಾರ್ಜಿತವಾಗಿ ಬಂದ ಬಂಗಾರದ ನಾಣ್ಯಗಳಿದ್ದ ಕಿರುಪೆಟ್ಟಿಗೆ ಮಾತ್ರ ತೆಗೆದುಕೊಂಡಳು. ಅವರು ಯಾವುದೇ ಕಾರ್ಯಸೂಚಿಯನ್ನು ನಿಗದಿಪಡಿಸಿಕೊಂಡಿರಲಿಲ್ಲ. ತನಗೆ ಗೊತ್ತಿದ್ದ ಜನರನ್ನು ಕಾಣಲು ಬಯಸದೆ ಮತ್ತು ಯಾವ ಕುರುಹನ್ನು ಬಿಡಲು ಇಷ್ಟಪಡದೆ ಅವರು ರಿಯೋ‌ಅಕಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಹೋಗಲು ಪ್ರಯತ್ನಿಸಿದರು. ಅದೊಂದು ಅಸಂಗತವಾದ ಪಯಣ. ಹದಿನಾಲ್ಕು ತಿಂಗಳ ನಂತರ ಕೋತಿಯ ಮಾಂಸ ಮತ್ತು ಬೇಯಿಸಿದ ಹಾವು ತಿಂದು ಹೊಟ್ಟೆ ಕೆಟ್ಟ ಉರ್ಸುಲಾ ಎಲ್ಲ ರೀತಿಯಲ್ಲಿ ಸಾಮಾನ್ಯ ಮನುಷ್ಯನ ಅಂಗಗಳನ್ನು ಹೊಂದಿದ ಗಂಡು ಮಗುವಿಗೆ ಜನ್ಮ ಕೊಟ್ಟಳು. ತಾನು ಮಲಗಿದ್ದ ಹಾಸಿಗೆಯನ್ನು ಇಬ್ಬರು ಭುಜದ ಮೇಲೆ ಹೊತ್ತುಕೊಂಡು ಸಾಗಿದಂತೆ ಅವಳು ಅರ್ಧದಾರಿಯನ್ನು ಸವೆಸಿದ್ದಳು. ಏಕೆಂದರೆ ಅವರ ಕಾಲುಗಳು ಊತುಕೊಂಡಿದ್ದಲ್ಲದೆ, ಉಬ್ಬಿದ ರಕ್ತನಾಳಗಳು ಗುಳ್ಳೆಗಳ ಹಾಗೆ ತುಂಬಿಕೊಂಡಿದ್ದವು. ಮಕ್ಕಳ ತಳಕ್ಕಿಳಿದ ಹೊಟ್ಟೆಯನ್ನು ಮತ್ತು ಕಾಂತಿ ಹೀನ ಕಣ್ಣುಗಳನ್ನು ನೋಡಿದರೆ ಕನಿಕರ ಉಂಟಾದರೂ ಅವರು ಪ್ರಯಾಣವನ್ನು ದೊಡ್ಡವರಿಗಿಂತ ಸಮರ್ಥವಾಗಿ ನಿಭಾಯಿಸಿದ್ದರು. ಅವರಿಗೆ ಅದು ತಮಾಷೆಯಾಗಿ ಕಂಡಿತ್ತು. ಅವರು ದಾಟುವುದಕ್ಕೆ ಹೊರಟು ಸುಮಾರು ಎರಡು ವರ್ಷಗಳ ನಂತರ ಒಂದು ದಿನ ಬೆಳಿಗ್ಗೆ ಪರ್ವತ ಶ್ರೇಣಿಯ ಪಶ್ಚಿಮ ಇಳಿಜಾರುಗಳನ್ನು ನೋಡಿದ ಮೊದಲ ಮನುಷ್ಯರಾದರು. ಮೋಡದ ತುದಿಗಳಿಂದ ಅವರು ಪ್ರಪಂಚದ ಮತ್ತೊಂದು ಕಡೆ ಹಬ್ಬಿದ ನೀರು ಜಿನುಗುವ ಜೌಗು ವಿಸ್ತಾರವನ್ನು ನೋಡಿದರು. ಅವರಿಗೆ ಸಮುದ್ರ ಸಿಗಲಿಲ್ಲ. ದಾರಿಯಲ್ಲಿ ತಮಗೆ ಭೇಟಿಯಾದ ಕೊನೆಯ ಇಂಡಿಯನ್ನರಿಂದ ದೂರವಾಗಿ ಜೌಗಿನ ಪ್ರದೇಶದಲ್ಲಿ ಹಲವು ತಿಂಗಳು ಸಾಗಿದ ನಂತರ ಒಂದು ರಾತ್ರಿ ಕೊರೆಯುವ ಗಾಜಿನ ಹಾಗೆ ಹರಿಯುವ ನದಿಯ ನೀರಿನ ದಡದಲ್ಲಿ ಬೀಡುಬಿಟ್ಟರು. ವರ್ಷಗಳ ನಂತರ ಎರಡನೆ ಆಂತರಿಕ ಯುದ್ಧದಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ರಿಯೋ‌ಅಕದವರನ್ನು ಚಕಿತಗೊಳಿಸುವುದಕ್ಕೋಸ್ಕರ ಅದೇ ಮಾರ್ಗದಲ್ಲಿ ಆರು ದಿನ ಪ್ರಯಾಣ ಮಾಡಿದ ಮೇಲೆ ಅದು ಹುಚ್ಚುತನವೆಂದು ಅರ್ಥವಾಗಿತ್ತು. ಆದರೆ ಆ ದಿನ ನದಿಯ ದಡದಲ್ಲಿ ಬೀಡು ಬಿಟ್ಟಾಗ ಜೊತೆಯಲ್ಲಿದ್ದವರ ಮುಖದಲ್ಲಿ ಅಪಘಾತಕ್ಕೆ ಸಿಕ್ಕ ಹಡಗಿನ, ಅನ್ಯಮಾರ್ಗವಿರದವರಿಗೆ ಇರುವ ಛಾಯೆಯಿತ್ತು. ದಿನಗಳು ಕಳೆಯುತ್ತಿದ್ದಂತೆ ಅಂಥವರ ಸಂಖ್ಯೆ ಹೆಚ್ಚಾಗಿತ್ತು. ಅವರೆಲ್ಲರೂ ವಯಸ್ಸು ಹೆಚ್ಚಾಗಿ ಸಾಯಲು ಸಿದ್ಧರಿದ್ದರು. ಅವರು ಹಾಗೆಯೆ ಮಾಡಿದರು ಕೂಡ. ಆ ದಿನ ರಾತ್ರಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ತಾವಿದ್ದ ಸ್ಥಳದಲ್ಲಿ ಕನ್ನಡಿ ಗೋಡೆಗಳಿರುವ ನಗರವೊಂದು ಉದ್ಭವಗೊಂಡಂತೆ ಕನಸು ಕಂಡ. ಅದು ಎಂಥ ನಗರವೆಂದು ಕೇಳಿದ. ಅದಕ್ಕೆ ಅವರು ತಿಳಿಸಿದ ಹೆಸರನ್ನು ಅವನೆಂದೂ ಕೇಳಿರಲಿಲ್ಲ ಮತ್ತು ಅದಕ್ಕೊಂದು ಅರ್ಥವೂ ಇರಲಿಲ್ಲ. ಆದರೆ ಅದಕ್ಕೆ ಅಲೌಕಿಕ ಶಕ್ತಿಯ ಪ್ರತಿಧ್ವನಿ ಇತ್ತು. ಅದು ಮಕೋಂದೋ. ಮಾರನೆಯ ದಿನ ತನ್ನ ಜನರಿಗೆ ಎಂದಿಗೂ ತಮಗೆ ಸಮುದ್ರ ಸಿಗುವುದಿಲ್ಲ ಎಂದು ತಿಳಿಸಿದ. ಅವನು ಅವರಿಗೆ ನದಿಯ ಪಕ್ಕದ ತಂಪಾದ ಸ್ಥಳದಲ್ಲಿ ಮರಗಳನ್ನು ಕಡಿದು ತೆರವು ಮಾಡಲು ಅಪ್ಪಣೆ ಕೊಟ್ಟ. ಅವರು ಅಲ್ಲಿ ಮಕೋಂದೋವನ್ನು ಅಸ್ತಿತ್ವಕ್ಕೆ ತಂದರು.
ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಐಸ್ ಕಂಡು ಹಿಡಿಯುವ ತನಕ ತಾನು ಕನಸಿನಲ್ಲಿ ಕಂಡ ಕನ್ನಡಿ ಮನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಗ ಅದರ ಆಳದ ಕಲ್ಪನೆ ತನಗಾಯಿತೆಂದು ಭಾವಿಸಿದ. ಸ್ವಲ್ಪ ದಿನದಲ್ಲಿ ಅವರಿಗೆ ನೀರಿನಂಥ ಸಾಮಾನ್ಯ ವಸ್ತುವಿನಿಂದ ದೊಡ್ಡ ಪ್ರಮಾಣದ ಐಸ್ ಬ್ಲಾಕುಗಳನ್ನು ತಯಾರಿಸಲು ಸಾಧ್ಯವಾಗುವುದೆಂದು ಮತ್ತು ಅದರಿಂದ ಹಳ್ಳಿಯಲ್ಲಿ ಹೊಸ ಮನೆಗಳನ್ನು ಕಟ್ಟಬಹುದೆಂದು ಭಾವಿಸಿದ. ಬಾಗಿಲುಗಳ ಹಿಡಿಕೆ ಮತ್ತು ತಿರುಪುಗಳು ಶಾಖದಿಂದ ಸುರುಟಿ ಹೋಗದೆ ಕುದಿತದ ಮಕೋಂದೋ ಆಗಿರದೆ ತಂಪಾದ ಪಟ್ಟಣವಾಗುವುದೆಂದು ತಿಳಿದ. ಐಸ್ ಫ್ಯಾಕ್ಟರಿಯನ್ನು ನಿರ್ಮಿಸುವ ಪ್ರಯತ್ನವನ್ನು ಅವನು ಮುಂದುವರಿಸದೇ ಇರುವುದಕ್ಕೆ ಅವನಿಗೆ ತನ್ನ ಮಕ್ಕಳ, ಅದರಲ್ಲೂ ಆರಂಭದಿಂದಲೂ ರಸವಾದದಲ್ಲಿ ಆಸಕ್ತಿಯಿದ್ದ ಅವ್ರೇಲಿಯಾನೋನ ವಿದ್ಯಾಭ್ಯಾಸದ ಬಗ್ಗೆ ಉತ್ಸುಕನಾಗಿದ್ದ. ಲ್ಯಾಬೊರೇಟರಿಯ ಧೂಳು ಹೊಡೆದಿದ್ದರು. ಮೆಲ್‌ಕಿಯಾದೆಸ್‌ನ ಟಿಪ್ಪಣಿಗಳನ್ನು ಯುಕ್ತವಾಗಿ, ಸಮಾಧಾನವಾಗಿ, ಹೊಸತೆಂಬ ಉಮೇದಿಲ್ಲದೆ ಪರಾಮರ್ಶಿಸಿ, ಶಾಂತ ರೀತಿಯಿಂದ ಮಡಿಕೆಯ ತಳದಲ್ಲಿ ಅಂಟಿಕೊಡಿದ್ದ ಉರ್ಸುಲಾಳ ಚಿನ್ನವನ್ನು, ಅದರ ಜೊತೆಗಿದ್ದ ರದ್ದಿಯಿಂದ ವಿಂಗಡಿಸಿದರು. ದೊಡ್ಡವನಾದ ಹೊಸೆ ಅರ್ಕಾದಿಯೋ ಇದರಲ್ಲಿ ಭಾಗವಹಿ;ಸಲಿಲ್ಲ. ತನ್ನ ತಂದೆ ನೀರಿನ ಪೈಪ್ ಕುರಿತು ಮೈಮನಸ್ಸುಗಳನ್ನು ತೊಡಗಿಸಿಕೊಂಡಿದ್ದಾಗ ವಯಸ್ಸಿಗಿಂತ ಹೆಚ್ಚಿಗೆ ಬೆಳೆದಿದ್ದ ಅವನು ಬೆರಗು ಬಡಿಸುವಂಥ ಹರೆಯದವನಾಗಿದ್ದ. ಆಗಲೇ ಅವನ ಧ್ವನಿ ಗಡುಸಾಗಿತ್ತು. ಮೇಲ್ದುಟಿಯ ಮೇಲೆ ಮೀಸೆ ಚಿಗುರೊಡೆದಿತ್ತು. ಒಂದು ದಿನ ರಾತ್ರಿ ಅವನು ಮಲಗಲು ಬಟ್ಟೆ ಕಳಚುತ್ತಿದ್ದಾಗ ಉರ್ಸುಲಾ ಅವನ ರೂಮಿಗೆ ಹೋದ ತಕ್ಷಣ ಅತೀವ ಸಂಕೊಚ ಮತ್ತು ನಾಚಿಕೆ ಉಂಟಾಯಿತು. ಅವಳು ತನ್ನ ಗಂಡನೊಬ್ಬನನ್ನು ಬಿಟ್ಟು ಬತ್ತಲಾಗಿದ್ದ ಇನ್ನೊಬ್ಬನನ್ನು ಕಂಡದ್ದು ಆಗಲೇ. ಅಲ್ಲದೆ ಅವನು ಜೀವನ ನಡೆಸಲು ಸನ್ನದ್ಧನಾಗಿ ಅತಿಯಾದ ಆಕಾರ ಹೊಂದಿದವನಂತೆ ಕಂಡ. ಅಲ್ಲದೆ ಮೂರನೆ ಬಾರಿ ಗರ್ಭಿಣಿಯಾದ ಅವಳಿಗೆ ಮದುವೆಯಾದ ಹೊಸತರಲ್ಲಿದ್ದ ಭಯ ಮತ್ತೆ ಆವರಿಸಿತು.
ಸುಮಾರು ಆ ಸಮಯಕ್ಕೆ ಹೊಲಸು ನಾಲಗೆಯ, ಆಕರ್ಷಕವಾಗಿದ್ದವಳೊಬ್ಬಳು ಮನೆಗೆಲಸಕ್ಕೆಂದು ಬಂದಳು. ಅವಳಿಗೆ ಕಾರ್ಡುಗಳಿಂದ ಭವಿಷ್ಯ ಓದುವುದು ತಿಳಿದಿತ್ತು. ಉರ್ಸುಲಾ ತನ್ನ ಮಗನ ಬಗ್ಗೆ ಕೇಳಿದಳು. ತನ್ನ ಸಂಬಂಧಿಗೆ ಹಂದಿಯ ಬಾಲವಿರುವ ಹಾಗೆ, ಅವನಿಗಿದ್ದ ಅಗಾಧ ಆಕಾರ ಅಸಹಜವೆಂಬ ಭಾವನೆ ಅವಳಿಗಿತ್ತು. ಆ ಹೆಂಗಸು ಫಳಾರನೆ ಗಾಜು ಒಡೆದ ಹಾಗೆ ನಕ್ಕಿದ್ದು ಎಲ್ಲ ಕಡೆ ಪ್ರತಿಧ್ವನಿಸಿತು. “ಹಾಗಲ್ಲ. ಅವನಿಗೆ ತುಂಬಾ ಅದೃಷ್ಟ ಇದೆ” ಎಂದಳು. ಅವಳು ತನ್ನ ಮುನ್ಸೂಚನೆಯನ್ನು ಸ್ಥಿರಪಡಿಸುವುದಕ್ಕಾಗಿ ಕಾರ್ಡುಗಳನ್ನು ತಂದು ಅಡುಗೆ ಮನೆ ಪಕ್ಕದ ಉಗ್ರಾಣದಲ್ಲಿ ಹೊಸೆ ಅರ್ಕಾದಿಯೋನ ಜೊತೆಗೂಡಿ ಬಾಗಿಲು ಹಾಕಿಕೊಂಡಳು. ಅವಳು ತೋಚಿದ್ದನ್ನು ಹೇಳುತ್ತ ಮರಗೆಲಸದ ಬೆಂಚಿನ ಮೇಲೆ ಕಾರ್ಡುಗಳನ್ನು ಇಟ್ಟಳು. ಪಕ್ಕದಲ್ಲಿ ಸುಮ್ಮನೆ ನಿಂತಿದ್ದ ಆ ಹುಡುಗನಿಗೆ ಬೇಸರವಾಯಿತು. ಇದ್ದಕ್ಕಿದ್ದ ಹಾಗೆ ಅವಳು ಅವನನ್ನು ಮುಟ್ಟಿದಳು. ಅವಳಿಗೆ, “ಯಜಮಾನ್ರೇ” ಎಂದಷ್ಟೇ ಹೇಳಲು ಸಾಧ್ಯವಾದದ್ದು. ಹೊಸೆ ಅರ್ಕಾದಿಯೋಗೆ ತನ್ನ ನರನಾಡಿಗಳಲ್ಲಿ ಎಂಥದೋ ನೊರೆ ತುಂಬಿಕೊಳ್ಳುತ್ತಿದೆ ಎನ್ನಿಸಿ ಹೆದರಿಕೆಯಿಂದ ಅಳುಬರುವಂತಾಯಿತು. ಅವಳು ಬೇರೆ ಬಗೆಯಲ್ಲಿ ವರ್ತಿಸಲಿಲ್ಲ. ಇಡೀ ರಾತ್ರಿ ಹೊಸೆ ಅರ್ಕಾದಿಯೋ ಅವಳನ್ನು ಹುಡುಕುತ್ತಿದ್ದ. ಏಕೆಂದರೆ ಅವಳ ಕಂಕುಳದಿಂದ ಹೊಮ್ಮಿದ ವಾಸನೆ ಅವನ ಚರ್ಮದಾಳಕ್ಕೂ ಇಳಿದಿತ್ತು. ಅವನು ಅವಳ ಜೊತೆ ಯಾವಾಗಲೂ ಇರಬೇಕೆಂದು ಇಷ್ಟಪಟ್ಟ. ಅವಳು ತನ್ನ ತಾಯಿಯಂತೆ ಇರಬೇಕೆಂದೂ ಮತ್ತು ತಾವಿಬ್ಬರೂ ಉಗ್ರಾಣದಿಂದ ಹೊರಗೆ ಹೋಗಬಾರದೆಂದು ಅಲ್ಲದೆ ಅವಳು ತನ್ನನ್ನು, “ಯಜಮಾನ್ರೇ” ಎಂದು ಕರೆಯಬೇಕೆಂದು ಬಯಸಿದ. ಒಂದು ದಿನ ತಡೆಯಲಾಗದೆ ಅವಳನ್ನು ಹುಡುಕಿಕೊಂಡು ಅವಳ ಮನೆಗೆ ಹೋದ. ಒಂದೂ ಮಾತಾಡದೆ, ಏನೂ ಅರ್ಥವಾಗದವನಂತೆ ಸುಮ್ಮನೆ ಹಾಲ್‌ನಲ್ಲಿ ಕುಳಿತಿದ್ದ. ಆ ಕ್ಷಣ ಅವನಿಗೆ ಅವಳು ಬೇಕು ಎನ್ನಿಸಲಿಲ್ಲ. ವಾಸನೆ ಮೂಡಿಸಿದ್ದ ಕಲ್ಪನೆಗಿಂತ ಅವಳು ತೀರ ಬೇರೆಯಾಗಿ, ಒಂದು ರೀತಿಯಲ್ಲಿ ಬೇರೊಬ್ಬ ವ್ಯಕ್ತಿಯ ಹಾಗೆ ಕಂಡಳು. ಅವನು ಕಾಫಿ ಕುಡಿದು ಖಿನ್ನನಾಗಿ ಹೊರಬಿದ್ದ. ಆ ದಿನ ರಾತ್ರಿ ಎಚ್ಚರವಾದಾಗ ಉಂಟಾದ ಭಯದಲ್ಲಿ ತೀರ ಆತಂಕಗೊಂಡು ಅವಳು ಬೇಕೆನ್ನಿಸಿತು. ಆದರೆ ಅವಳು ಉಗ್ರಾಣದಲ್ಲಿ ಇದ್ದಂತೆ ಇರದೆ ಆ ದಿನ ಮಧ್ಯಾಹ್ನ ಇದ್ದಂತೆ ಇರಬೇಕೆಂದು ಬಯಸಿದ.
ಅವನ ತಾಯಿಯ ಜೊತೆ ಇದ್ದ ಅವಳು ಕೆಲವು ದಿನಗಳ ನಂತರ ಅವನನ್ನು ತನ್ನ ಮನೆಗೆ ಕರೆದಳು. ಕಾರ್ಡುಗಳನ್ನು ತೋರಿಸುವ ನೆಪದಿಂದ ಬೆಡ್‌ರೂಮಿಗೆ ಕರೆದುಕೊಂಡು ಹೋದಳು. ಅಲ್ಲಿ ಅವನ ಜೊತೆ ತೀರ ಸಲಿಗೆಯಿಂದ ನಡೆದುಕೊಂಡದ್ದರಿಂದ ಪ್ರಾರಂಭದಲ್ಲಿ ಅವನಿಗೆ ನಡುಕ ಉಂಟಾದರೂ ಕ್ರಮೇಣ ಮರುಳುಗೊಂಡ. ಅವನಿಗೆ ಸಂತೋಷಕ್ಕಿಂತ ಹೆದರಿಕೆ ಹೆಚ್ಚಾಯಿತು. ಆ ದಿನ ರಾತ್ರಿ ಬಂದು ತನ್ನನ್ನು ನೋಡುವಂತೆ ಹೇಳಿದಳು. ಅದು ತನಗೆ ಸಾಧ್ಯವಿಲ್ಲ ಎಂದು ಗೊತ್ತಿದ್ದರಿಂದ ಅಲ್ಲಿಂದ ತಪ್ಪಿಸಿಕೊಂಡರೆ ಸಾಕೆಂದು ಅವನು ಒಪ್ಪಿಕೊಂಡ. ಆದರೆ ಆ ದಿನ ಕುದಿತದ ರಾತ್ರಿಯಲ್ಲಿ ತನ್ನ ಕೈಯಲ್ಲಿ ಆಗದಿದ್ದರೂ ಅವಳನ್ನು ಕಾಣಲೇ ಬೇಕು ಎಂದು ತವಕಿಸಿದ. ಕತ್ತಲಲ್ಲಿ ತನ್ನ ತಮ್ಮನ ಶಾಂತವಾದ ಉಸಿರಾಟವನ್ನು, ಪಕ್ಕದ ರೂಮಿನಲ್ಲಿದ್ದ ತನ್ನ ತಂದೆಯ ಒಣ ಕೆಮ್ಮನ್ನು, ಅಂಗಳದಲ್ಲಿದ್ದ ಕೋಳಿಗಳ ಆಸ್ತಮಾವನ್ನು, ಸೊಳ್ಳೆಗಳ ಗುಯ್ ಗುಟ್ಟುವಿಕೆಯನ್ನು, ತನ್ನ ಹೃದಯದ ಬಡಿತವನ್ನು, ತನಗೆ ಈವರೆಗೆ ಗೊತ್ತಿರದ ಪ್ರಪಂಚದ ಶಬ್ದಗಳನ್ನು ಕೇಳಿಸಿಕೊಳ್ಳುತ್ತ, ಮಲಗಿದ್ದವನೆದ್ದು, ತಡವಿ ನೋಡಿ ಬಟ್ಟೆ ಹಾಕಿಕೊಂಡು ರಸ್ತೆಗಿಳಿದ. ಅವಳು ಹೇಳಿದಂತೆ ಬಾಗಿಲನ್ನು ಸುಮ್ಮನೆ ಹಾಕಿರದೆ ಅಗುಳಿ ಹಾಕಿರಲೆಂದು ಅವನ ಅಂತರಾಳದ ಅಪೇಕ್ಷೆಯಾಗಿತ್ತು. ಆದರೆ ಅದು ತೆರೆದಿತ್ತು. ಅವನು ಬೆರಳ ತುದಿಯಿಂದ ತಳ್ಳಿದ. ಅದರ ತಿರುಗಣಿಗಳು ತಿರುಗಿದಾಗ ಉಂಟಾದ ವಿಚಿತ್ರ ನರಳುವಿಕೆ ಅವನೊಳಗೆ ಪ್ರತಿಧ್ವನಿಸಿ ಹೆಪ್ಪುಗಟ್ಟಿತು. ಮನೆಯೊಳಗೆ ಅಡ್ಡಲಾಗಿ ಕಾಲಿಟ್ಟು ಶಬ್ದ ಮಾಡದಂತೆ ಪ್ರಯತ್ನಿಸುತ್ತ ನಡೆದ ಕ್ಷಣದಿಂದ ಅವನಿಗೆ ಆ ವಾಸನೆ ಬಡಿಯಿತು. ಅವನು ಆ ಹೆಂಗಸಿನ ಮೂವರು ಅಣ್ಣತಮ್ಮಂದಿರ ಕಾಣದ ಹಾಸಿಗೆಯ ದಾರಿಯಲ್ಲಿ ಮತ್ತು ಆ ಹಾಲ್‌ನ ಕತ್ತಲಲ್ಲಿ ಏನನ್ನೂ ನಿರ್ಧರಿಸಲಾಗದೆ, ಬೆಡ್‌ರೂಮಿನ ಬಾಗಿಲು ತಳ್ಳಲು ಜಾಗರೂಕತೆ ವಹಿಸಿ, ಹಾಸಿಗೆಯ ಬಗ್ಗೆ ತಪ್ಪು ಮಾಡಬಾರದೆಂದು ಮುಂದೆ ನಡೆದ. ಅವನಿಗೆ ಅದು ಸಿಕ್ಕಿತು. ಅವನು ಕಲ್ಪನೆಗಿಂತಲೂ ಕೆಳಮಟ್ಟದಲ್ಲಿದ್ದ ಹಾಸಿಗೆಯ ಹಗ್ಗಗಳಿಗೆ ತಾಕಿಸಿಕೊಂಡ. ಅದುವರೆಗೂ ಗೊರಕೆ ಹೊಡೆಯುತ್ತಿದ್ದವನೊಬ್ಬ ಮಗ್ಗುಲಾಗಿ, “ಅವತ್ತು ಬುಧವಾರ” ಎಂದ. ಅವನು ಬೆಡ್‌ರೂಮಿನ ಬಾಗಿಲನ್ನು ತಳ್ಳಿದಾಗ ಅದರ ಬಾಗಿಲು ಸಮವಾಗಿರದ ಬಾಗಿಲ ಮೇಲೆ ಉಜ್ಜುವುದನ್ನು ಅವನಿಗೆ ತಡೆಯಲಾಗಲಿಲ್ಲ. ಸಂಪೂರ್ಣ ಕತ್ತಲಿದ್ದರಿಂದ ಹಳೆಯದೆಲ್ಲ ಒತ್ತರಿಸಿ ಬಂದದ್ದರ ಜೊತೆಗೆ ದಿಕ್ಕಿನ ಪ್ರಜ್ಞೆ ಕಳೆದು ಹೋಗಿದೆ ಎಂದು ಅವನಿಗೆ ಮನವರಿಕೆಯಾಯಿತು. ಆ ಇಕ್ಕಟ್ಟಾದ ರೂಮಿನಲ್ಲಿ ಮಲಗಿದ್ದವರೆಂದರೆ ತಾಯಿ, ಇನ್ನೊಬ್ಬ ಮಗಳು, ಅವಳ ಗಂಡ ಮತ್ತು ಅವರ ಇಬ್ಬರು ಮಕ್ಕಳು ಹಾಗೂ ಅಲ್ಲಿ ಇರದೆ ಹೋಗಿರಬಹುದಾದ ಆಕೆ. ಎಲ್ಲ ಕಡೆ ಆ ವಾಸನೆ ತನ್ನ ಚರ್ಮದ ಮೇಲಿರುವಷ್ಟು ಖಚಿತವಾಗಿ ಇರದಿದ್ದರೆ ಆ ದಿಕ್ಕಿನಲ್ಲಿ ಹೋಗಬಹುದಿತ್ತು. ಅವನು ಬಹಳ ಹೊತ್ತಿನ ತನಕ ತಾನು ಹೇಗೆ ಇಂಥ ಸಂದಿಗ್ಧ ಕೂಪಕ್ಕೆ ಸಿಕ್ಕಿಕೊಂಡೆ ಎಂದುಕೊಳ್ಳುತ್ತಿದ್ದಂತೆ, ಕತ್ತಲಲ್ಲಿ ಕೈಯೊಂದು ಬೆರಳುಗಳನ್ನು ಹರಡಿ ಆಡಿಸುತ್ತ ಅವನ ಮುಖವನ್ನು ಸ್ಪರ್ಶಿಸಿತು. ಅವನಿಗೆ ಆಶ್ಚರ್ಯವಾಗಲಿಲ್ಲ. ಅವನಿಗೆ ತಿಳಿಯದಂತೆ ಅವನು ಅದನ್ನು ನಿರೀಕ್ಷಿಸುತ್ತಿದ್ದ. ಅವನು ಆ ಕೈಗೆ ಒಪ್ಪಿಸಿಕೊಳ್ಳುತ್ತ ತೀರ ಬಳಲಿಕೆಯಿಂದ ಆ ಸ್ಥಳಕ್ಕೆ ಹೋದ ಮೇಲೆ ಅವನ ಬಟ್ಟೆಗಳನ್ನು ಕಳಚಿದ ನಂತರ, ಅವನನ್ನು ಆಲೂಗಡ್ಡೆಯ ಚೀಲದ ಹಾಗೆ ಅತ್ತಿತ್ತ ಓಲಾಡಿಸುತ್ತ ತಳ್ಳಿದ ಅ ತಳವಿರದ ಕತ್ತಲಲ್ಲಿ, ಆ ಹೆಂಗಸಿನ ವಾಸನೆ ಇರಲಿಲ್ಲ ಮತ್ತು ಕೈಗಳು ನಿರುಪಯುಕ್ತವಾಗಿದ್ದವು. ಆದರೆ ಅಮೋನಿಯಾ ವಾಸನೆ ಇತ್ತು. ಅವನು ಅವಳ ಮುಖವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದ. ಅವನಿಗೆ ಉರ್ಸುಲಾಳ ಮುಖ ಎದುರಾಯಿತು. ಗೊಂದಲದಲ್ಲಿ ಸಿಲುಕಿದ ಅವನಿಗೆ ಬಹಳ ದಿನಗಳಿಂದ ಬಯಸಿಯೂ ಅದು ತನ್ನಿಂದ ಎಂದಿಗೂ ಸಾಧ್ಯವಿಲ್ಲ ಎಂದುಕೊಂಡದ್ದು ಲಭಿಸಿದೆ ಎಂಬ ಅರಿವಿದ್ದರೂ ತನ್ನ ತಲೆ ಎಲ್ಲಿದೆ, ಕಾಲುಗಳು ಎಲ್ಲಿವೆ ಅಥವಾ ಯಾರ ತಲೆ, ಯಾರ ಕಾಲು ಗೊತ್ತಾಗದೆ, ತಾನೇನು ಮಾಡುತ್ತಿದ್ದೇನೆಂದು ತಿಳಿಯಲಿಲ್ಲ. ಮೂತ್ರ ಪಿಂಡಗಳಲ್ಲಿ ಉಂಟಾಗುತ್ತಿದ್ದ ನುಣುಪು ಚಲನೆಗಳಲ್ಲಿ, ಕರುಳುಗಳ ಹೊರಳಾಟದಲ್ಲಿ, ಭಯ ಮತ್ತು ದಿಗ್ಭ್ರಮೆಯಿಂದ ಓಟ ಕೀಳಬೇಕೆನ್ನುವ ಹಾಗೂ ಅದೇ ವೇಳೆಗೆ ಎಲ್ಲ ಕಳೆದು ಹೋದ ಮೌನದಲ್ಲಿ ಮತ್ತು ಹೆದರಿಕೆಯ ಏಕಾಂತದಲ್ಲಿಯೇ ಎಂದೆಂದಿಗೂ ಇರಬೇಕೆನ್ನುವ ಸ್ಥಿತಿಯಲ್ಲಿದ್ದ.
ಅವಳ ಹೆಸರು ಪಿಲರ್ ಟೆರ್‍ನೆರಾ. ಗುಳೆ ಹೊರಟು ಮಕೋಂದೋವಿಗೆ ಬಂದವರಲ್ಲಿ ಅವಳೂ ಒಬ್ಬಳು. ಅವಳ ಮನೆಯವರು ಅವಳ ಮೇಲೆ ಅತ್ಯಾಚಾರ ಮಾಡಿದವನಿಂದ ದೂರವಿಡಲು ಅವಳನ್ನು ಎಳೆದುಕೊಂಡು ಬಂದಿದ್ದರು. ಆದರೆ ಅವನು ಅವಳಿಗೆ ಇಪ್ಪತ್ತೆರಡು ಆಗುವವರೆಗೂ ಸುಮ್ಮನಿದ್ದ ಮತ್ತು ಅವಳ ಜೊತೆಗಿನ ಸಂಬಂಧವನ್ನು ಬಹಿರಂಗಗೊಳಿಸಲು ಮನಸ್ಸು ಮಾಡಿರಲಿಲ್ಲ. ಏಕೆಂದರೆ ಅವನೊಬ್ಬ ಬೇರೆ ರೀತಿಯ ಮನುಷ್ಯ. ಆದರೆ ತನ್ನ ಸಂಬಂಧ ಒಂದು ನೆಲೆಗೆ ಬಂದ ಮೇಲೆ ಕೊನೆಯ ತನಕ ಅವಳ ಹಿಂದೆಯೇ ಇರುತ್ತೇನೆ ಎಂದು ಭರವಸೆ ಕೊಟ್ಟಿದ್ದ. ಭೂಮಿಯಿಂದ ಇಲ್ಲವೆ ಸಮುದ್ರದಿಂದ ಮೂರು ದಿನ, ಮೂರು ತಿಂಗಳು, ಮೂರು ವರ್ಷದಲ್ಲಿ ಬರುವನೆಂದು ತನ್ನ ಕಾರ್ಡುಗಳು ಆಶ್ವಾಸನೆ ಕೊಟ್ಟಂತೆ ಅವಳು ಗಿಡ್ಡ:ಎತ್ತರ, ಕೆಂಪು;ಕೆಂಚು ಕೂದಲಿನವರಲ್ಲಿ ಹುಡುಕುತ್ತ ಅವನಿಗಾಗಿ ಕಾದು ಸೋತಿದ್ದಳು. ಕಾಯುವುದರ ಜೊತೆ ಅವಳು ತನ್ನ ತೊಡೆಗಳ ಬಲ, ಮೊಲೆಗಳ ದೃಢತೆ ಮತ್ತು ಮೃದುವಾದ ನಡತೆಯನ್ನು ಕಳೆದುಕೊಂಡಿದ್ದಳು. ಆದರೆ ಹೃದಯದ ಹುಚ್ಚಾಟವನ್ನು ಹಾಗೆಯೇ ಉಳಿಸಿಕೊಂಡಿದ್ದಳು. ಆ ಆಟದಿಂದ ಹುಚ್ಚೇರಿದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಪ್ರತಿ ರಾತ್ರಿಯೂ ಆ ರೂಮಿನ ನಿಗೂಢತೆಯಲ್ಲಿ ಅವಳನ್ನೇ ಅನುಸರಿಸುತ್ತಿದ್ದ. ಅವಳಿಟ್ಟ ಹೆಜ್ಜೆಯಲ್ಲಿ ಹೆಜ್ಜೆ ಹಾಕುತ್ತಿದ್ದ. ಕೆಲವು ಸಲ ಅದರ ಬಾಗಿಲು ಹಾಕಿರುವುದು ಕಂಡುಬರುತ್ತಿತ್ತು. ತಾನು ಒಮ್ಮೆ ಬಾಗಿಲು ಬಡಿಯಲು ಧೈರ್ಯ ಮಾಡಿದರೆ ಕೊನೆಯ ತನ;ಕ ಬಡಿಯಬೇಕೆಂದು ಅವನಿಗೆ ಗೊತ್ತಿತ್ತು. ಸ್ವಲ್ಪ ಸಮಯವಾದ ಮೇಲೆ ಅವನಿಗಾಗಿ ಅವಳು ಬಾಗಿಲು ತೆಗೆಯುತ್ತಿದ್ದಳು. ಹಗಲಿನಲ್ಲಿ ಕನಸು ಕಾಣಲು ಮಲಗಿ, ಹಿಂದಿನ ದಿನ ರಾತ್ರಿ ನಡೆದದ್ದನ್ನು ನೆನಪಿಸಿಕೊಳ್ಳುತ್ತ ಗುಟ್ಟಾಗಿ ಖುಷಿಪಡುತ್ತಿದ್ದ. ಆದರೆ ಅವಳು ಮನೆಗೆ ಬಂದು ಗೆಲುವಿನಿಂದ ಹರಟುತ್ತ ತನ್ನ ಬಗ್ಗೆ ಉಪೇಕ್ಷೆಯಿಂದಿರುವಾಗ ಅವನು ತನ್ನ ಉದ್ವೇಗವನ್ನು ಮುಚ್ಚಿಡಬೇಕಾದ ಪ್ರಯತ್ನ ಮಾಡಬೇಕಾಗಿರಲಿಲ್ಲ. ಏಕೆಂದರೆ ಆ ಹೆಂಗಸಿನ ಸ್ಫೋಟಕ ನಗುವಿಗೆ ಬಾತು ಕೋಳಿಗಳು ಗಾಬರಿಯಿಂದ ಕಾಲು ಕೀಳುವುದಕ್ಕೂ ಮತ್ತು ಅವಳಲ್ಲಿದ್ದ ಅಗೋಚರ ಶಕ್ತಿಯೊಂದು ಅವನೊಳಗಿನ ಉಸಿರಾಟ ಹಾಗೂ ಹೃದಯದ ಬಡಿತವನ್ನು ನಿಯಂತ್ರಿಸುವ ಬಗೆ ಹೇಗೆಂದು ಕಲ್ಪಿಸಿಕೊಳ್ಳುವುದಕ್ಕೂ ಸಮಯವಿರಲಿಲ್ಲ. ಅದು ಅವನಿಗೆ ಗಂಡಸರು ಏಕೆ ಸಾಯಲು ಹೆದರುತ್ತಾರೆ ಎಂದು ತಿಳಿಯಲು ಅವಕಾಶ ಮಾಡಿತ್ತು. ಅವನು ಎಷ್ಟರಮಟ್ಟಿಗೆ ತನ್ನೊಳಗೇ ಸೇರಿ ಹೋಗಿದ್ದನೆಂದರೆ ಉಳಿದವರೆಲ್ಲ ತನ್ನ ತಂದೆ ಮತ್ತು ತಮ್ಮ ರದ್ದಿಯಿಂದ ಉರ್ಸುಲಾಳ ಚಿನ್ನವನ್ನು ಪ್ರತ್ಯೇಕಿಸಿದ ಸುದ್ದಿಯನ್ನು ಹೇಳಿ ಹುಟ್ಟಿಸಿದ್ದ ಸಂತೋಷ ಎಂಥದೆಂದು ಕೂಡ ಅವನಿಗೆ ಅರ್ಥವಾಗಿರಲಿಲ್ಲ.
ಅವರು ಯಶಸ್ವಿಯಾಗಿದ್ದರು. ಅಪಾರ ಶ್ರಮವಹಿಸಿ ಅವರು ಪಟ್ಟು ಹಿಡಿದಿದ್ದರಿಂದ ಉರ್ಸುಲಾಳಿಗೆ ಸಂತೋಷವಾಗಿತ್ತು. ಜನರು ಲ್ಯಾಬೊರೇಟರಿ ನುಜ್ಜಾಗುವಂತೆ ನುಗ್ಗುತ್ತಿದ್ದರೆ ಅವಳು ರಸವಾದವನ್ನು ಕಂಡು ಹಿಡಿದಿದ್ದಕ್ಕೆ ದೇವರಿಗೆ ನಮಿಸಿದಳು. ಅದರ ಸಂಭ್ರಮದ ಆಚರಣೆಗೆ ಪಟಾಕಿಯನ್ನು ತಂದು ಕೊಟ್ಟರು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಆಗಷ್ಟೇ ಕಂಡು ಹಿಡಿದಂತೆ ಮರಳಿ ಪಡೆದ ಬಂಗಾರವನ್ನು ನೋಡಲು ಅನುವುಮಾಡಿಕೊಟ್ಟ. ಎಲ್ಲರಿಗಿಂತ ಕೊನೆಗೆ ಇತ್ತೀಚಿನ ದಿನಗಳಲ್ಲಿ ಲ್ಯಾಬೊರೇಟರಿಯಲ್ಲಿ ಕಾಣಿಸಿಕೊಳ್ಳದಿದ್ದ ಹಿರಿಮಗನ ಮುಂದೆ ನಿಂತ. ಹಳದಿಯಂಥ ವಸ್ತುವನ್ನು ಅವನ ಕಣ್ಣು ಮುಂದಿಟ್ಟು, “ಇದು ಹೇಗೆ ಕಾಣುತ್ತೆ ನಿಂಗೆ” ಎಂದ. ಹೊಸೆ ಅರ್ಕಾದಿಯೋ ಪ್ರಾಮಾಣಿಕವಾಗಿ ಉತ್ತರಿಸಿದ, “ನಾಯಿ ಹೇಲಿನ ಹಾಗಿದೆ.”
ಅವನ ತಂದೆಯ ಬಲವಾದ ಹೊಡೆತಕ್ಕೆ ರಕ್ತ ಮತ್ತು ಕಣ್ಣೀರು ಎರಡೂ ಕಾಣಿಸಿ ಕೊಂಡಿತು. ಆ ದಿನ ರಾತ್ರಿ ಕತ್ತಲಲ್ಲಿ ಪಿಲರ್ ಟೆರ್‍ನೆರಾ ಬಾಟಲಿ ಮತ್ತು ಹತ್ತಿ ಹುಡುಕಿ ಊದಿದ್ದಕ್ಕೆ ಕಾವು ಕೊಟ್ಟಳು. ಅವನಿಗೆ ಕಿರಿಕಿರಿಯಾಗದಂತೆ ತನಗೆ ಇಷ್ಟವಾದ ಎಲ್ಲ ಬಗೆಯಲ್ಲಿ ನಡೆದುಕೊಂಡು ಸಂಗಸುಖದಲ್ಲಿ ಅವನಿಗೆ ನೋವುಂಟಾಗದಂತೆ ನೋಡಿಕೊಂಡಳು. ತಮಗೇ ತಿಳಿಯದ ಪರಿಸ್ಥಿತಿಯಲ್ಲಿ ಅವರು ಪರಸ್ಪರ ಪಿಸುಗುಡುತ್ತಿದ್ದರು.
“ನಿನ್ನ ಜೊತೆ ನಾನೊಬ್ಬನೇ ಇರಲಿಕ್ಕೆ ಇಷ್ಟ. ಇಷ್ಟರಲ್ಲಿ ಎಲ್ರಿಗೂ ಹೇಳಿ ಬಿಡ್ತೀನಿ. ಹೀಗೆ ಕದ್ದು-ಮುಚ್ಚಿ ಭೇಟಿಯಾಗೋದನ್ನ ನಿಲ್ಲಿಸಬಹುದು.”
ಅವಳು ಅವನ ಉದ್ವೇಗವನ್ನು ಕಡಿಮೆ ಮಾಡಲು ಹೋಗಲಿಲ್ಲ.
“ಹಾಗಾದರೆ ತುಂಬ ಒಳ್ಳೇದು…ನಾವಿಬ್ಬರೇ ಇದ್ರೆ ಲೈಟ್ ಉರಿಯೋದಕ್ಕೆ ಬಿಟ್ಟು ಬಿಡೋಣ. ಯಾಕೆಂದರೆ ಯಾರೂ ಅಡ್ಡಿ ಬರದ ಹಾಗೆ ಒಬ್ಬರನ್ನೊಬ್ಬರು ನೋಡಬಹುದು. ನನಗಿಷ್ಟ ಬಂದಷ್ಟು, ನಂಗೆ ಬೇಕಾದಷ್ಟು ನಾನು ಸುಖಿಸಬಹುದು. ನೀನು ನನ್ನ ಕಿವೀಲಿ ನಿನಗೆ ಅನ್ನಿಸಿದ್ದನ್ನೆಲ್ಲ ಹೇಳಬಹುದು.”
ತಂದೆಯ ಮೇಲೆ ಉಂಟಾದ ತೀವ್ರ ರೋಷ ಆ ಸಂಭಾಷಣೆ ಮತ್ತು ಅಂಕೆಯಿಲ್ಲದ ಪ್ರೀತಿಯ ಸಾಧ್ಯತೆ ಅವನಲ್ಲಿ ಧೈರ್ಯವನ್ನು ಹುಟ್ಟಿಸಿತ್ತು. ಅವನು ಯಾವುದೇ ಸಿದ್ಧತೆ ಮಾಡಿಕೊಳ್ಳದೆ ದಿಢೀರನೆ ತಮ್ಮನಿಗೆ ಹೇಳಿದ. ಪ್ರಾರಂಭದಲ್ಲಿ ಅವ್ರೇಲಿಯಾನೋಗೆ ತನ್ನ ಅಣ್ಣನ ಸಾಹಸದಲ್ಲಿ ತೊಂದರೆ ಮತ್ತು ಅಪಾಯ ಕಂಡುಬಂತು. ಆದರೆ ಅದರಲ್ಲಿರುವ ಸಂಭ್ರಮ ಅವನಿಗೆ ಅರ್ಥವಾಗಲಿಲ್ಲ. ಕ್ರಮೇಣ ಅವನು ಆತಂಕಕ್ಕೆ ಒಳಗಾದ. ಅಪಾಯದ ವಿವರಗಳ ಬಗ್ಗೆ ಯೋಚಿಸಿದ. ತನ್ನಣ್ಣನ ಯಾತನೆ ಮತ್ತು ಸುಖದಲ್ಲಿ ತನ್ನನ್ನು ಗುರುತಿಸಿಕೊಂಡ. ಅದರಿಂದ ಅವನಿಗೆ ಭಯ ಮತ್ತು ಸಂತೋಷ ಉಂಟಾಯಿತು. ಕಾದ ಕಲ್ಲಿದ್ದಲ ಹಾಗಿರುವ ಹಾಸಿಗೆಯಲ್ಲಿ ಒಬ್ಬನೇ ಮಲಗಿ ತನ್ನಣ್ಣನಿಗಾಗಿ ಕಾಯುತ್ತ ಬೆಳಗಿನಜಾವದವರೆಗೂ ಎಚ್ಚರವಾಗಿರುತ್ತಿದ್ದ. ಅನಂತರ ಮಾತಾಡಿಕೊಳ್ಳುತ್ತ ಏಳಬೇಕಾದ ಸಮಯಕ್ಕೆ ಏಳುತ್ತಿದ್ದರು. ಅದರಿಂದ ಅವರಿಬ್ಬರಿಗೂ ನಿದ್ದೆಯ ಮಂಪರು ಇರುತ್ತಿತ್ತು. ರಸವಾದ ಮತ್ತು ಅಪ್ಪನ ಜ್ಞಾನದ ಬಗ್ಗೆ ನಿರಾಸಕ್ತಿ ಮೂಡಿ ಏಕಾಂತವನ್ನು ಬಯಸಿದರು. ‘ಈ ಹುಡುಗರಿಗೆ ತಲೆ ಕೆಟ್ಟಿದೆ. ಹೊಟ್ಟೇಲಿ ಹುಳು ಇರಬೇಕು\’ ಎಂದು ಉರ್ಸುಲಾ ಗಂಧಕಮೂಲಿಕೆಯ ಮಾಲ್ಟ್ ಮಾಡಿಕೊಟ್ಟಳು. ಅವರು ಅದನ್ನು ಕುಡಿದು ಒಂದೇ ದಿನ ಹನ್ನೊಂದು ಸಲ ಹಿತ್ತಲಿಗೆ ಹೋದರು. ಬಿದ್ದ ಗುಲಾಬಿ ಬಣ್ಣದ ಹುಳುಗಳನ್ನು ಅವರು ತುಂಬ ಉತ್ಸಾಹದಿಂದ ಎಲ್ಲರಿಗೂ ತೋರಿಸಿದರು. ಇದರಿಂದ ಅವರಿಗೆ ಬೇರೆ ಕಡೆ ಇದ್ದ ಮನಸ್ಸು ಮತ್ತು ತೂಕಡಿಕೆ ಕುರಿತಂತೆ ಉರ್ಸುಲಾಗೆ ಮೋಸಮಾಡಲು ಅನುಕೂಲವಾಯಿತು. ತನ್ನದೇ ಎನ್ನುವಂತೆ ತನ್ನಣ್ಣನ ಅನುಭವವನ್ನು ಅವ್ರೇಲಿಯಾನೋ ಜೀವಿಸುತ್ತಿದ್ದ. ಹಾಗೊಂದು ದಿನ ಅವನು ಎಲ್ಲವನ್ನೂ ವಿವರವಾಗಿ ಹೇಳುತ್ತಿದ್ದಂತೆ ಮಧ್ಯೆ ತಡೆದು, “ಹೇಗನ್ನಿಸುತ್ತೆ ಆಗ?” ಎಂದ. ಹೊಸೆ ಅರ್ಕಾದಿಯೋ ತಕ್ಷಣ ಉತ್ತರಿಸಿದ:
“ಅದು ಭೂಕಂಪದ ಹಾಗೆ.”
ಯಾವುದೋ ಜನವರಿ ಗುರುವಾರ ಬೆಳಗಿನ ಜಾವ ಎರಡು ಗಂಟೆಗೆ ಅಮರಾಂತ ಹುಟ್ಟಿದಳು. ಯಾರೊಬ್ಬರೂ ಬರುವುದಕ್ಕೆ ಮುಂಚೆ ಉರ್ಸುಲಾ ಜಾಗರೂಕತೆಯಿಂದ ಮಗುವನ್ನು ನೋಡಿದಳು. ಅವಳು ಹಗುರಾಗಿ ಒದ್ದೊದ್ದೆಯಾಗಿದ್ದಳು. ಆದರೆ ಎಲ್ಲ ಅಂಗಗಳು ಮನುಷ್ಯರಿಗೆ ಇರುವ ಹಾಗಿದ್ದವು. ಅವ್ರೇಲಿಯಾನೋಗೆ ಮನೆ ತುಂಬ ಜನರು ಸೇರುವ ತನಕ ಮಗು ಕುರಿತು ಗಮನವಿರಲಿಲ್ಲ. ಗೊಂದಲ ಮುತ್ತಿ ಹನ್ನೊಂದು ಗಂಟೆಯಿಂದಲೇ ಹಾಸಿಗೆಯಲ್ಲಿಲ್ಲದ ತನ್ನಣ್ಣನನ್ನು ಹುಡುಕಿಕೊಂಡು ಹೊರಟ. ಇದ್ದಕ್ಕಿದ್ದ ಹಾಗೆ ಹೊರಟ ಅವನಿಗೆ ಪಿಲರ್ ಟೆರ್‍ನೆರಾಳ ಬೆಡ್‌ರೂಮಿನಿಂದ ಅವನನ್ನು ಹೊರಗೆ ಸೆಳೆಯುವುದು ಹೇಗೆ ಎಂದು ಯೋಚಿಸಲೂ ಸಮಯವಿರಲಿಲ್ಲ. ಸಾಕಷ್ಟು ಗಂಟೆಗಳ ಕಾಲ ಅವಳ ಮನೆಯನ್ನು ಸುತ್ತು ಹಾಕಿ ಶಿಳ್ಳೆ ಹೊಡೆದು ಕೊನೆಗೆ ಬೆಳಗಾಗುವುದು ಹತ್ತಿರವಾಗುತ್ತಿದ್ದಂತೆ ಮನೆಗೆ ಹೋಗುವ ಒತ್ತಡ ಮೂಡಿತು. ತಾಯಿಯ ರೂಮಿನಲ್ಲಿ ಹುಟ್ಟಿದ ಮಗುವಿನ ಜೊತೆ ಮುಗ್ಧತೆ ತುಳುಕುತ್ತಿದ್ದ ಮುಖದ ಹೊಸೆ ಅರ್ಕಾದಿಯೋನನ್ನು ಕಂಡ.
ಉರ್ಸುಲಾ ನಲವತ್ತು ದಿನಗಳ ವಿಶ್ರಾಂತಿಯನ್ನು ಪೂರೈಸುತ್ತಿದ್ದ ಹಾಗೆಯೇ ಜಿಪ್ಸಿಗಳು ವಾಪಸು ಬಂದರು. ಅವರು ಐಸ್ ತಂದ ಅದೇ ಗಾರುಡಿಗ ಮತ್ತು ದೊಂಬರಾಟದವರಾಗಿದ್ದರು. ಮೆಲ್‌ಕಿಯಾದೆಸ್‌ನ ತಂಡದವರಂತೆ ಪ್ರಗತಿಯ ಹರಿಕಾರರಾಗಿರದೆ ತಮಾಷೆ ಒದಗಿಸುವವರೆಂದು ಬಹಳ ಬೇಗನೆ ತೋರಿಸಿಕೊಂಡರು. ಅವರು ಐಸ್ ತಂದರು. ಮನುಷ್ಯ ಜೀವನಕ್ಕೆ ಅದರ ಪ್ರಯೋಜನದ ಬಗ್ಗೆ ಪ್ರಚಾರ ಕೊಡದೆ ಸರ್ಕಸ್ಸಿನ ಕುತೂಹಲಕರ ವಸ್ತುವೆನ್ನುವ ರೀತಿಯಲ್ಲಿ ನಡೆದುಕೊಂಡರು. ಈ ಸಲ ಇತರ ಕುಶಲ ವಸ್ತುಗಳ ಜೊತೆಯಲ್ಲಿ ಹಾರುವ ಜಮಖಾನವನ್ನು ತಂದಿದ್ದರು. ಅವರು ಅದನ್ನು ಮನರಂಜನೆಯ ವಸ್ತುವೆಂದಲ್ಲದೆ ಸಾರಿಗೆ ಅಭಿವೃದ್ಧಿಗೊಳಿಸುವ ಸಾಧನವನ್ನಾಗಿ ಪ್ರಸ್ತುತಪಡಿಸಲಿಲ್ಲ. ಜನರೆಲ್ಲ ಹಳ್ಳಿಯ ಮನೆಗಳ ಮೇಲೆ ಹಾರುವ ಅವಕಾಶಕ್ಕಾಗಿ ತಮ್ಮ ಮನೆಯಲ್ಲಿ ಹೂತಿಟ್ಟಿದ್ದ ಕೊನೆಯ ಚಿನ್ನದ ತುಂಡುಗಳನ್ನು ಅಗೆದು ತೆಗೆದರು. ಸಂತೋಷ ತರುವ ಸಾಮೂಹಿಕ ಅಶಿಸ್ತಿನ ಆವರಣದಲ್ಲಿ ಹೊಸೆ ಅರ್ಕಾದಿಯೋ ಮತ್ತು ಪಿಲರ್ ಟೆರ್‍ನೆರಾ ನಿರಾತಂಕವಾಗಿ ಹಲವು ಗಂಟೆಗಳನ್ನು ಕಳೆದರು. ಆ ಗುಂಪಿನಲ್ಲಿ ಸಂತೋಷದಿಂದ ಇದ್ದವರೆಂದರೆ ಆ ಪ್ರೇಮಿಗಳು. ಅವರಿಗೆ ಗುಟ್ಟಾಗಿ ಕಳೆದ ರಾತ್ರಿಗಳಲ್ಲಿ ಕೇವಲ ಸಂತೋಷಕ್ಕಿಂತ ಪ್ರೀತಿಯೇ ಹೆಚ್ಚು ಆಳವಾದ ಆರಾಮು ಕೊಡುವ ಅನುಭವವೇನೋ ಎನ್ನುವ ಅನುಮಾನ ಉಂಟಾಯಿತು. ಆದರೆ ಪಿಲರ್ ಟೆರ್‍ನೆರಾ ತನ್ನ ಸಂಗದಲ್ಲಿ ಹೊಸೆ ಅರ್ಕಾದಿಯೋ ತೋರಿಸಿದ ಉತ್ತೇಜನದಿಂದ ಸಂದರ್ಭ ಮತ್ತು ರೀತಿಗಳ ಗೊಂದಲದಲ್ಲಿ ಸಿಕ್ಕು ತನ್ನನ್ನು ಸಂಪೂರ್ಣ ಸಮರ್ಪಿಸಿಕೊಂಡಿದ್ದಳು.
“ನೀನೀಗ ನಿಜಕ್ಕೂ ಗಂಡಸು\’ ಎಂದು ಅವನಿಗೆ ಹೇಳಿದಳು. ಅವಳ ಮಾತಿನ ಅರ್ಥ ತಿಳಿಯದೆ ಹೋದದ್ದರಿಂದ ಅವಳು ಬಿಡಿಸಿ ಹೇಳಿದಳು.
“ನೀನು ಅಪ್ಪನಾಗ್ತೀಯ.”
ಹೊಸೆ ಅರ್ಕಾದಿಯೋಗೆ ಕೆಲವು ದಿನ ಮನೆಯಿಂದ ಹೊರಗೆ ಹೋಗುವ ಧೈರ್ಯವಾಗಲಿಲ್ಲ. ಅಡುಗೆ ಮನೆಯಿಂದ ಅವಳ ಮಾದಕ ನಗೆ ಕೇಳಿಸಿದರೆ ಸಾಕು ಉರ್ಸುಲಾಳ ದಯೆಯಿಂದ ಅಲ್ಲಿನ ಕುಶಲ ವಸ್ತುಗಳಿಗೆ ಮರುಹುಟ್ಟು ಬಂದದ್ದರಿಂದ ಲ್ಯಾಬೊರೇಟರಿಗೆ ಓಡಿ ಹೋಗಿ ತಲೆ ತಪ್ಪಿಸಿಕೊಳ್ಳುತ್ತಿದ್ದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅಂಕೆ ತಪ್ಪಿದ ಮಗನನ್ನು ಸಂತೋಷದಿಂದ ಬರಮಾಡಿಕೊಂಡು ತಾನು ಕೊನೆಗೂ ಕೈಗೊಂಡಿದ್ಡ ಸ್ಪರ್ಶಮಣಿಗಳನ್ನು ಹುಡುಕುವ ಕೆಲಸದಲ್ಲಿ ಅವನನ್ನು ತೊಡಗಿಸಿದ. ಒಂದು ಮಧ್ಯಾಹ್ನ ಲ್ಯಾಬೊರೇಟರಿ ಕಿಟಕಿಯ ಎತ್ತರದಲ್ಲಿ ಜಿಪ್ಸಿಯನ್ನು ಕೂರಿಸಿಕೊಂಡು ಹಾರಿ ಹೋಗುತ್ತಿದ್ದ ಹಾರುವ ಜಮಖಾನದ ಬಗ್ಗೆ ಅವನಿಗೆ ಉತ್ಸಾಹ ಬಂತು. ಅನೇಕ ಹಳ್ಳಿಯ ಹುಡುಗರು ಅದರ ಕಡೆ ಕೈ ಬೀಸಿದರೂ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅದರ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ‘ಅವರು ಕನಸು ಕಾಣಲಿ. ವೈಜ್ಞಾನಿಕ ಸವಲತ್ತುಗಳಿಂದ ಕೆಟ್ಟದಾಗಿರೋ ಜಮಖಾನ ಬಿಟ್ಟು ನಾವು ಅವರಿಗಿಂತ ಚೆನ್ನಾಗಿ ಹಾರಾಡೋಣ\’ ಎಂದ. ಆಸಕ್ತಿಯ ಸೋಗು ಹಾಕಿದ್ದ ಹೊಸೆ ಅರ್ಕಾದಿಯೋಗೆ ಸ್ಪರ್ಶಮಣಿಯ ಶಕ್ತಿ ಏನೆಂದು ಅರ್ಥವಾಗಲಿಲ್ಲ. ಅವನಿಗೆ ಅದು ಸರಿಯಾಗಿ ಮಾಡಿರದ ಬಾಟಲ್ ಥರ ಕಾಣುತ್ತಿತ್ತು. ಅವನಿಗೆ ತನ್ನ ಮಾನಸಿಕ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವನಿಗೆ ತನ್ನ ತಂದೆ ಪ್ರಯತ್ನಗಳಲ್ಲಿ ಸೋಲನ್ನು ಕಂಡಾಗ ಆಗುತ್ತಿದ್ದಂತೆ ಅವನಿಗೂ ಮನಃಕ್ಲೇಶ ಉಂಟಾಯಿತು. ರಸವಾದವನ್ನು ಮನಸ್ಸಿಗೆ ತೀರ ಹಚ್ಚಿಕೊಂಡಿದ್ದಾನೆ ಎಂದು ಭಾವಿಸಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನನ್ನು ಲ್ಯಾಬೊರೇಟರಿ ಕೆಲಸದಿಂದ ಮುಕ್ತಗೊಳಿಸಿದ. ಅವ್ರೇಲಿಯಾನೋಗೆ ತನ್ನ ಅಣ್ಣನ ಪರಿಸ್ಥಿತಿಗೆ ಸ್ಪರ್ಶಮಣಿ ಮೂಲವಲ್ಲವೆಂದು ಗೊತ್ತಿತ್ತು. ಆದರೆ ಈ ವಿಷಯದ ಬಗ್ಗೆ ಅವನ ನಂಬಿಕೆಯನ್ನು ಗಳಿಸದೆ ಹೋದ. ಅವನು ಹಿಂದಿದ್ದ ತನ್ನ ಸ್ವಪ್ರೇರಣೆಯನ್ನು ಕಳೆದುಕೊಂಡಿದ್ದ. ಸ್ನೇಹಿತನಾಗಿ ಮಾತಿಗೆ ಲಾಯಕ್ಕಾಗಿದ್ದ ಅವನು ಅಂತರ್ಮುಖಿ ಮತ್ತು ಪ್ರತಿಧೋರಣೆಯ ವ್ಯಕ್ತಿಯಾಗಿದ್ದ. ಏಕಾಂತದಲ್ಲಿರಲು ತವಕಿಸುತ್ತ ಪ್ರಪಂಚದ ವಿರುದ್ಧ ದ್ವೇಷದಿಂದ ಸಿಡಿದು, ಅದೊಂದು ರಾತ್ರಿ ಹಾಸಿಗೆಯಿಂದ ಎದ್ದವನು, ಪಿಲರ್ ಟೆರ್‍ನೆರಾಳ ಮನೆಗೆ ಹೋಗದೆ ಜಾತ್ರೆಯ ಸಂಭ್ರಮದಲ್ಲಿ ಸೇರಿಕೊಳ್ಳಲು ಹೋದ. ಅಲ್ಲಿದ್ದ ಎಲ್ಲ ಬಗೆಯ ವಿಲಕ್ಷಣ ಯಂತ್ರಗಳಲ್ಲಿ ಸುತ್ತು ಹಾಕಿ ಯಾವುದರಲ್ಲೂ ಆಸಕ್ತಿ ಹೊಂದದೆ ಅದಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಗುರುತಿಸಿದ. ಅವಳು ಮಗುವಿನ ಹಾಗಿದ್ದು ಸರಗಳನ್ನು ಹಾಕಿಕೊಂಡಿದ್ದ ಹರೆಯದ ಜಿಪ್ಸಿ ಹುಡುಗಿ. ಹೊಸೆ ಅರ್ಕಾದಿಯೋ ತನ್ನ ಇಡೀ ಜೀವನದಲ್ಲಿ ಅಂಥ ಚೆಲುವೆಯನ್ನು ನೋಡಿರಲಿಲ್ಲ. ಅವಳು ತನ್ನ ತಂದೆ ತಾಯಿಗೆ ಅವಿಧೇಯನಾಗಿದ್ದರಿಂದ ಹಾವಾಗಿ ಪರಿವರ್ತನೆ ಹೊಂದಿದ ಮನುಷ್ಯನ ವಿಷಾದಪೂರ್ಣ ಅವಸ್ಥೆಯನ್ನು ನೋಡುತ್ತಿದ್ದವರ ಗುಂಪಿನಲ್ಲಿ ಇದ್ದಳು.
ಹೊಸೆ ಅರ್ಕಾದಿಯೋ ಆ ಕಡೆ ಗಮನ ಕೊಡಲಿಲ್ಲ. ಹಾವಿನ ಮನುಷ್ಯನೊಂದಿಗೆ ದುಃಖಪೂರ್ಣ ಪ್ರಶ್ನಾವಳಿ ಜರುಗುತ್ತಿದ್ದಂತೆ ಗುಂಪಿನಲ್ಲಿ ಅವನು ದಾರಿ ಮಾಡಿಕೊಂಡು ಜಿಪ್ಸಿ ಹುಡುಗಿಯ ಹಿಂದೆ ಬಂದು ಅವಳ ಬೆನ್ನಿಗೆ ಒತ್ತಿಕೊಂಡು ನಿಂತ. ಅವಳು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಹೊಸೆ ಅರ್ಕಾದಿಯೋ ಮತ್ತಷ್ಟು ಜೋರಾಗಿ ಅವಳ ಬೆನ್ನಿಗೆ ಒತ್ತಿದ. ಆಗವಳಿಗೆ ಅವನ ಸ್ಪರ್ಶದ ಅನುಭವವಾಯಿತು. ಅವಳು ಅಲ್ಲಾಡದೆ ಆಶ್ಚರ್ಯ ಮತ್ತು ಭಯದಿಂದ ಆತುಕೊಂಡು ನಂಬಲಾಗದೆ ನಿಂತು ಕೊನೆಗೆ ಮುಖ ತಿರುಗಿಸಿ ಅವನ ಕಡೆ ಮೋಹಕ ನಗುವಿನಿಂದ ನೋಡಿದಳು. ಆ ಘಳಿಗೆಯಲ್ಲಿ ಇಬ್ಬರು ಜಿಪ್ಸಿಗಳೂ ಹಾವಿನ ಮನುಷ್ಯನನ್ನು ಬೋನಿನೊಳಗೆ ಹಾಕಿ ಅವನನ್ನು ಟೆಂಟ್‌ನೊಳಕ್ಕೆ ತೆಗೆದುಕೊಂಡು ಹೋದರು. ಆ ಪ್ರದರ್ಶನವನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಹೇಳಿದಳು: ಮಹನೀಯರೆ ಮತ್ತು ಮಹಿಳೆಯರೆ, ನಾವೀಗ ನೋಡಬಾರದ್ದನ್ನು ನೋಡಿದ ಶಿಕ್ಷೆಗಾಗಿ, ನೂರೈವತ್ತು ವರ್ಷಗಳಿಂದ ಪ್ರತಿ ರಾತ್ರಿ ಈ ಸಮಯಕ್ಕೆ ಸರಿಯಾಗಿ ಹೆಂಗಸೊಬ್ಬಳು ತನ್ನ ತಲೆಯನ್ನು ಕತ್ತರಿಸಿಕೊಳ್ಳಲೇಬೇಕಾದಂಥ ಒಂದು ಘೋರವಾದದ್ದನ್ನು ತೋರಿಸಲಿದ್ದೇವೆ. ಹೊಸೆ ಅರ್ಕಾದಿಯೋ ಮತ್ತು ಜಿಪ್ಸಿ ಹುಡುಗಿ ತಲೆ ಕತ್ತರಿಸುವುದನ್ನು ನೊಡಲಿಲ್ಲ. ಅವಳ ಟೆಂಟ್‌ಗೆ ಹೋಗಿ ಬಟ್ಟೆಗಳನ್ನು ಕಳಚುತ್ತ ಅತೀವ ಆತಂಕದಲ್ಲಿ ಪರಸ್ಪರ ಮುತ್ತಿಟ್ಟರು. ತಾನು ಗಂಜಿ ಮಾಡಿದ ಲೇಸ್‌ಗಳಿದ್ದ ಬಟ್ಟೆಯನ್ನು ಅವಳು ಬಿಚ್ಚಿದಾಗ ಹೆಚ್ಚು ಕಮ್ಮಿ ಅವಳ ಮೈಮೇಲೆ ಏನೂ ಇರಲಿಲ್ಲ. ಸಣ್ಣ ಆಕೃತಿಯ ಅವಳಿಗೆ ಪುಟ್ಟ ಮೊಲೆಗಳಿದ್ದವು. ಅವಳ ಕಾಲುಗಳು ಹೊಸೆ ಅರ್ಕಾದಿಯೋನ ಕೈಗಳಿಗೆ ಸಮನಾಗಿರಲಿಲ್ಲ. ಅವಳ ಪುಟ್ಟ ಆಕಾರ, ಹದವಾದ ಕಾವು ಮತ್ತು ತಕ್ಷಣದ ತೀರ್ಮಾನಗಳು ಅದನ್ನು ಸರಿದೂಗಿದವು. ಆದರೂ ಹೊಸೆ ಅರ್ಕಾದಿಯೋ ಅವಳಿಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಏಕೆಂದರೆ ಅವರಿದ್ದದ್ದು ಜಿಪ್ಸಿಗಳು ವ್ಯಾಪಾರಕ್ಕಾಗಿ ವಸ್ತುಗಳನ್ನು ತೆಗೆದುಕೊಂಡು ಹೋಗುವ ಒಂದು ಬಗೆಯ ಎಲ್ಲರ ಬಳಕೆಯ ಟೆಂಟ್ ಆಗಿತ್ತು. ಜೊತೆಗೆ ಚದುರಂಗದಾಟಕ್ಕೆ ಹಾಸಿಗೆಯನ್ನು ಪಣಕ್ಕಿಡುತ್ತಿದ್ದರು. ಮಧ್ಯದಲ್ಲಿ ಇಳಿ ಬಿಟ್ಟಿದ್ದ ದೀಪ ಸುತ್ತಲೆಲ್ಲ ಬೆಳಕು ಬೀರಿತ್ತು. ಮುದ್ದಾಟದ ನಡುವೆ ಏನು ಮಾಡಬೇಕೆಂದು ತಿಳಿಯದೆ ಹೊಸೆ ಅರ್ಕಾದಿಯೋ ಬೆತ್ತಲೆ ಮೈ ಚಾಚಿದರೆ, ಅವಳು ಅವನನ್ನು ಹುರಿದುಂಬಿಸಲು ಪ್ರಯತ್ನಿಸುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಮಾಂಸಲವಾಗಿದ್ದ ಜಿಪ್ಸಿ ಹೆಂಗಸೊಬ್ಬಳು ಗಂಡಸೊಬ್ಬನ ಜೊತೆ ಬಂದಳು. ಅವನು ಅಲೆಮಾರಿಯೂ ಆಗಿರಲಿಲ್ಲ ಮತ್ತು ಆ ಹಳ್ಳಿಯವನೂ ಆಗಿರಲಿಲ್ಲ. ಹಾಸಿಗೆಯ ಬಳಿ ಬಂದ ಅವರಿಬ್ಬರೂ ಬಟ್ಟೆ ಬಿಚ್ಚಲು ಪ್ರಾರಂಭಿಸಿದರು. ಅವಳು ವಿಶೇಷ ಉದ್ದೇಶವಿರದೆ ಹೊಸೆ ಅರ್ಕಾದಿಯೋನ ದೊಡ್ಡ ಗಾತ್ರದ ಗುಪ್ತಾಂಗವನ್ನು ಕನಿಕರ ತುಂಬಿದ ನೋಟದಿಂದ ನೋಡಿದಳು.
“ದೇವರು ಈಗಿರೋ ಹಾಗೇನೇ ಇಟ್ಟಿರಲಿ” ಎಂದು ಕಣ್ಣರಳಿಸಿದಳು.

ಹೊಸೆ ಅರ್ಕಾದಿಯೋನ ಸಂಗಾತಿ ತಮ್ಮಷ್ಟಕ್ಕೆ ತಮ್ಮನ್ನು ಬಿಡಲು ಅವರಿಗೆ ಹೇಳಿದಳು. ಅವರು ಹಾಸಿಗೆ ಹತ್ತಿರ ನೆಲದ ಮೇಲೆ ಮಲಗಿದರು. ಅವರ ಉದ್ವೇಗ ಹೊಸೆ ಅರ್ಕಾದಿಯೋನ ಮೇಲೆ ಪ್ರಭಾವ ಬೀರಿತು. ಪ್ರಥಮ ಸಂಗದಲ್ಲಿ ಹುಡುಗಿಯ ಮೂಳೆಗಳು ಕೊಂಡಿಗಳನ್ನು ಕಳಚಿಕೊಂಡಂತಾಗಿ ಆಟದ ವಸ್ತುಗಳಿದ್ದ ಪೆಟ್ಟಿಗೆಯ ಹಾಗೆ ಶಬ್ದ ಮಾಡಿದವು. ಅವಳ ಚರ್ಮ ಸೀಳುವಂತೆ ಬೆವರು ಮೂಡಿ ಕಣ್ಣಲ್ಲಿ ನೀರು ಬಂದು ಇಡೀ ದೇಹ ನೋವಿನ ಮುಲುಗಾಟವನ್ನು ಹೊಮ್ಮಿಸಿತಲ್ಲದೆ ಎಂಥದೋ ಮಣ್ಣಿನ ವಾಸನೆ ಸೂಸಿತು. ಅವಳು ಆಘಾತವನ್ನು ದೃಢವಾಗಿ ಧೈರ್ಯದಿಂದ ಸಹಿಸಿಕೊಂಡದ್ದು ಮೆಚ್ಚಬೇಕಾದ ಸಂಗತಿ. ಹೊಸೆ ಅರ್ಕಾದಿಯೋಗೆ ಗಾಳಿಯಲ್ಲಿ ತೇಲಿದಂತಾಗಿ, ಪೋಲಿ ಬಡಬಡಿಕೆಗಳು ಹೃದಯದಿಂದ ಪುಟಿದೆದ್ದು ಅವಳ ಕಿವಿಯನ್ನು ಸೇರಿದ ಮೇಲೆ ಮತ್ತೆ ಅವು ಅವಳ ಬಾಯಿಂದ ಅವಳದೇ ಭಾಷೆಯಲ್ಲಿ ಹೊರಬಂದವು. ಆ ದಿನ ಗುರುವಾರ. ಶನಿವಾರ ರಾತ್ರಿ ಹೊಸೆ ಅರ್ಕಾದಿಯೋ ತಲೆಗೆ ಕೆಂಪು ಬಟ್ಟೆ ಸುತ್ತಿಕೊಂಡು ಆ ಜಿಪ್ಸಿಯ ಜೊತೆ ಹೊರಟ.
ಅವನು ಕಾಣದೇ ಹೋದದ್ದನ್ನು ಗಮನಿಸಿದ ಉರ್ಸುಲಾ ಹಳ್ಳಿಯಲ್ಲೆಲ್ಲ ಹುಡುಕಿದಳು. ಜಿಪ್ಸಿ ಕ್ಯಾಂಪಿನಲ್ಲಿ ಉಳಿದದ್ದೆಲ್ಲ ಒಂದು ರದ್ದಿ ಗುಂಡಿ ಮತ್ತು ಅಲ್ಲಲ್ಲಿ ಹೊಗೆಯಾಡುತ್ತಿದ್ದ ಬೆಂಕಿ ಒಟ್ಟು ಮಾಡಿದ ಸ್ಥಳಗಳು. ಅಳಿದುಳಿದ ವಸ್ತುಗಳಲ್ಲಿ ಮಣಿಗಳನ್ನು ಹುಡುಕುತ್ತಿದ್ದವನೊಬ್ಬ, ತಾನು ಹಿಂದಿನ ರಾತ್ರಿ ಅವನನ್ನು ಹಾವಿನ ಮನುಷ್ಯನಿದ್ದ ಟೆಂಟನ್ನು ತಳ್ಳುತ್ತಿದ್ದ ತಿರುಗಾಟದವರ ಸಂಗಡ ನೋಡಿದ್ದಾಗಿ ಹೇಳಿದ. ‘ಅವನು ಜಿಪ್ಸಿ ಆಗಿ ಬಿಟ್ಟಿದಾನೆ\’ ಎಂದು ಅವನು ಕಾಣದೆ ಹೋದದ್ದರ ಬಗ್ಗೆ ಕಿಂಚಿತ್ ಆತಂಕ ತೋರಿಸಿರದ ಗಂಡನಿಗೆ ಕೂಗಿ ಹೇಳಿದಳು.
ಸಾವಿರ ಸಲ ಗಾರೆಯನ್ನು ಅರೆದು ಮತ್ತೆ ಬಿಸಿ ಮಾಡಿ ಅರೆದು ಮಾಡುತ್ತಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ, “ಹಾಗಾಗಿದ್ರೆ ಬಹಳ ಒಳ್ಳೇದು. ಅದರಿಂದಲಾದ್ರೂ ಅವನು ಮನುಷ್ಯನಾಗೋದನ್ನ ಕಲೀತಾನೆ” ಎಂದ.
ಜಿಪ್ಸಿಗಳು ಎಲ್ಲಿಗೆ ಹೋದರೆಂದು ಉರ್ಸುಲಾ ಕೇಳಿದಳು. ಅವರಿವರು ಹೇಳಿದ ಕಡೆ ಹೋಗುತ್ತ ಅವಳು ಇನ್ನೂ ಅವರನ್ನು ತಲುಪಲು ಸಾಧ್ಯವಿದೆ ಎಂದುಕೊಂಡಳು. ಅವಳು ಹಳ್ಳಿಯಿಂದ ಬಹಳ ದೂರ ಹೋಗುತ್ತಿದ್ದಂತೆ ವಾಪಸು ಹೋಗುವುದನ್ನು ಮರೆತು ಬಿಟ್ಟಳು. ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಬೆಳಿಗ್ಗೆ ಎಂಟರ ತನಕ ತನ್ನ ಹೆಂಡತಿ ಇಲ್ಲದಿರುವುದು ತಿಳಿಯಲಿಲ್ಲ. ಗೊಬ್ಬರ ಹಾಸಿನಲ್ಲಿ ಇತರೆ ವಸ್ತುಗಳನ್ನು ಬೆಚ್ಚಗಾಗಿಸಲು ಹಾಕಿ, ಅಳುತ್ತಿದ್ದ ಅಮರಾಂತಳಿಗೆ ಏನಾಗಿದೆ ಎಂದು ನೋಡಲು ಹೋದಾಗಲೇ ಅವನಿಗೆ ಗೊತ್ತಾದದ್ದು. ಕೆಲವೇ ಗಂಟೆಗಳಲ್ಲಿ ಇತರೆ ಆಯುಧಗಳಿಂದ ಸಿದ್ಧರಾದ ಜನರ ಗುಂಪನ್ನು ಒಟ್ಟು ಮಾಡಿದ. ಅಮರಾಂತಳನ್ನು ನೋಡಿಕೊಳ್ಳುತ್ತೇನೆಂದು ಬಂದವಳಿಗೆ ವಹಿಸಿಕೊಟ್ಟು ಉರ್ಸುಲಾಳನ್ನು ಹುಡುಕಾಡುತ್ತ ಎಲ್ಲೆಂದರಲ್ಲಿ ಅಲೆದಾಡಿದ. ಅವರ ಜೊತೆ ಅವ್ರೇಲಿಯಾನೋ ಹೋದ. ಕೆಲವು ಇಂಡಿಯನ್ನರು ಅವರಿಗೆ ಅರ್ಥವಾಗದ ಭಾಷೆಯಲ್ಲಿ ಸನ್ನೆ ಮಾಡುತ್ತ ತಾವು ಯಾರನ್ನೂ ನೋಡಿಲ್ಲವೆಂದರು. ಮೂರು ದಿನಗಳ ವ್ಯರ್ಥ ಪ್ರಯತ್ನವಾದ ಮೇಲೆ ಅವರು ಹಳ್ಳಿಗೆ ಹಿಂತಿರುಗಿದರು.
ಕೆಲವು ವಾರಗಳ ತನಕ ತನಗೆ ವಿರಹದ ಭಾವ ಮುತ್ತುವುದಕ್ಕೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವಕಾಶ ಮಾಡಿಕೊಟ್ಟ. ತಾಯಿಯ ಹಾಗೆ ಅಮರಾಂತಳಿಗೆ ಸ್ನಾನ ಮಾಡಿಸಿ ಬಟ್ಟೆ ಹಾಕಿ ದಿನಕ್ಕೆ ನಾಲ್ಕು ಸಲ ಊಟ ಮಾಡಿಸುವುದಕ್ಕಾಗಿ ಕರೆದುಕೊಂಡು ಹೋಗಿ ರಾತ್ರಿ ಉರ್ಸುಲಾಗೆ ಹಾಡಲು ಬಾರದಿದ್ದ ಹಾಡುಗಳನ್ನು ಹಾಡುತ್ತಿದ್ದ. ಕೆಲವು ಸಂದರ್ಭಗಳಲ್ಲಿ ಪಿಲರ್ ಟೆರ್‍ನೆರಾ ಉರ್ಸುಲಾ ಬರುವ ತನಕ ಮನೆಗೆಲಸವನ್ನೆಲ್ಲ ಮಾಡುವುದಾಗಿ ಮುಂದೆ ಬಂದಳು. ಜರುಗಿದ ದುರದೃಷ್ಟದಿಂದ ಅವ್ರೇಲಿಯಾನೋನ ಸ್ವಭಾವಜನ್ಯ ಶಕ್ತಿ ಹೆಚ್ಚು ಜಾಗೃತವಾಗಿತ್ತು. ಅವಳು ಬರುವುದನ್ನು ಕಂಡಾಗ ಅವನಲ್ಲಿ ಅತೀಂದ್ರಿಯ ಶಕ್ತಿ ಮಿನುಗಿಂದಾಯಿತು. ತನ್ನಣ್ಣ ತಪ್ಪಿಸಿಕೊಂಡಿರುವುದಕ್ಕೂ ಮತ್ತು ತನ್ನ ತಾಯಿ ಕಾಣೆಯಾಗಿರುವುದಕ್ಕೂ ವಿವರಿಸಲಾಗದ ರೀತಿಯಲ್ಲಿ ಇವಳೇ ಕಾರಣ ಎಂದು ತಿಳಿಯಿತು. ಅವಳನ್ನು ಮಾತಾಡಿಸದೆ, ತೀವ್ರ ಪ್ರಕೋಪದಿಂದ ನಡೆದುಕೊಂಡು ಮತ್ತೆ ಮನೆಗೆ ಬಾರದೆ ಇರುವ ಹಾಗೆ ಮಾಡಿದ.
ಕಾಲ ಎಲ್ಲವನ್ನೂ ಸರಿದೂಗಿಸುತ್ತದೆ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತು ಅವನ ಮಗನಿಗೆ ಲ್ಯಾಬೊರೇಟರಿಗೆ ಹೋಗಿ ಧೂಳು ಹೊಡೆದು ನೀರಿನ ಪೈಪ್ ಸರಿಮಾಡಿ ಗೊಬ್ಬರದ ಹಾಸಿನಲ್ಲಿ ಅನೇಕ ತಿಂಗಳು ನಿದ್ದೆ ಹೊಡೆಯವುದಕ್ಕೆ ಬಿಟ್ಟಿದ್ದ ವಸ್ತುಗಳನ್ನು ಮತ್ತೆ ಹೊಂದಿಸುತ್ತ ತೊಡಗಿಸಿಕೊಂಡದ್ದು ಯಾವಾಗ ಎಂದು ಅವರಿಬ್ಬರಿಗೂ ತಿಳಿದಿರಲಿಲ್ಲ. ಬಟ್ಟಿಯ ತೊಟ್ಟಿಯಲ್ಲಿ ಪಾದರಸದ ಆವಿ ತುಂಬಿಕೊಂಡಿದ್ದ ಚಿಕ್ಕ ರೂಮಿನಲ್ಲಿ ಅಮರಾಂತಳೂ ಕೂಡ ತಂದೆ ಮತ್ತು ಅಣ್ಣ ತನ್ಮಯರಾಗಿ ಮಾಡುತ್ತಿದ್ದ ಕೆಲಸವನ್ನು ಕುತೂಹಲದಿಂದ ನೋಡಿದಳು. ಉರ್ಸುಲಾ ಹೋಗಿ ಎಷ್ಟೋ ತಿಂಗಳಾದ ಮೇಲೆ ಕೆಲವು ವಿಚಿತ್ರ ಸಂಗತಿಗಳು ಜರುಗಲು ಶುರುವಾಯಿತು. ಬಹಳ ದಿನಗಳ ಹಿಂದೆ ಪೆಟ್ಟಿಗೆಯಲ್ಲಿ ಇಟ್ಟಿದ್ದ ಖಾಲಿ ಫ್ಲಾಸ್ಕ್ ಜರುಗಿಸಲಾರದಷ್ಟು ಭಾರವಾಗಿತ್ತು. ಟೇಬಲ್ ಮೇಲೆ ಇಟ್ಟಿದ್ದ ಪಾತ್ರೆಯಲ್ಲಿನ ನೀರು ಯಾವ ಉರಿಯೂ ಇಲ್ಲದೆ ಕುದಿಯುವುದಕ್ಕೆ ಪ್ರಾರಂಭಿಸಿ, ಅರ್ಧ ಗಂಟೆಯಲ್ಲಿ ಪೂರ್ತಿಯಾಗಿ ಆವಿಯಾಯಿತು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತು ಅವನ ಮಗ ವಿವರಿಸಲಾಗದೆ ಬೆರಗಿನಿಂದ ನೋಡಿ, ಅದು ಆ ವಸ್ತುವಿನಿಂದ ಉಂಟಾದದ್ದು ಎಂದು ವ್ಯಾಖ್ಯಾನಿಸಿದರು. ಒಂದು ದಿನ ಅಮರಾಂತಳಿದ್ದ ತೊಟ್ಟಿಲು ತನ್ನಷ್ಟಕ್ಕೆ ಜರುಗಲು ಪ್ರಾರಂಭಿಸಿದಾಗ ಅದನ್ನು ತಡೆ ಹಿಡಿಯಲು ಗಾಬರಿಗೊಂಡು ಅವಸರದಿಂದ ಅವ್ರೇಲಿಯಾನೋ ಬಂದರೂ, ಅದು ಇಡೀ ರೂಮಿನಲ್ಲಿ ಒಂದು ಸುತ್ತು ಹಾಕಿತು. ಆದರೆ ಅವನ ತಂದೆ ಅದರಿಂದ ವಿಚಲಿತನಾಗಲಿಲ್ಲ. ತೊಟ್ಟಿಲನ್ನು ಅದರ ಸ್ಥಾನದಲ್ಲಿಟ್ಟು ಟೇಬಲ್ಲಿಗೆ ಅದನ್ನು ಕಟ್ಟಿದ. ಅವನಿಗೆ ಬಹಳ ದಿನಗಳಿಂದ ಕಾದಿದ್ದ ಸಂಗತಿ ಇನ್ನೇನು ಎದುರಾಗಲಿದೆ ಎನ್ನಿಸಿತು. ಆ ಸಂದರ್ಭದಲ್ಲಿ ಅವ್ರೇಲಿಯಾನೋಗೆ ಅವನು ಹೇಳಿದ್ದು ಕೇಳಿಸಿತು:
“ನೀನು ದೇವರಿಗೆ ಹೆದರದಿದ್ರೆ ಪರವಾಗಿಲ್ಲ, ಲೋಹಗಳಿಂದಾಗಿ ಅವನಿಗೆ ಹೆದರು.”
ಇದ್ದಕ್ಕಿದ್ದ ಹಾಗೆ ಕಾಣೆಯಾಗಿ ಎರಡು ತಿಂಗಳಾದ ಮೇಲೆ ಉರ್ಸುಲಾ ವಾಪಸು ಬಂದಳು. ಅವಳು ಹೆಚ್ಚು ಉತ್ಸಾಹದಿಂದ ಹಳ್ಳಿಯಲ್ಲಿ ಇರುವವರಿಗೆ ಗೊತ್ತಿರದ ಹೊಸ ಬಟ್ಟೆ ತೊಟ್ಟು ಬಂದಿದ್ದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಆ ಅನಿರೀಕ್ಷಿತವನ್ನು ತಡೆದುಕೊಳ್ಳುವುದಕ್ಕೆ ಆಗಲಿಲ್ಲ. “ಇದೇನಿದು….ಹೀಗಾಗತ್ತೆ ಅಂತ ನಂಗೆ ಗೊತ್ತಿತ್ತು” ಎಂದ. ನಿಜಕ್ಕೂ ಅವನು ಅದನ್ನು ನಂಬಿದ್ದ. ಏಕೆಂದರೆ ದೀರ್ಘಕಾಲ ವಸ್ತುಗಳನ್ನು ಪರಿಪರಿಯಾಗಿ ಹೊಂದಿಸುತ್ತ ತನ್ನಷ್ಟಕ್ಕೆ ತಾನು ಕೂಡಿಹಾಕಿಕೊಂಡಿದ್ದಾಗ ಅವನ ಬಹಳ ದಿನದ ಬಯಕೆಯ ಪವಾಡ, ತತ್ವ ಶಾಸ್ತ್ರಜ್ಞರ ಹಾಗಿರಲಿಲ್ಲ. ಲೋಹಗಳು ಜೀವಿಸುವ ಹಾಗೆ ಅವುಗಳ ಉಸಿರಾಟವನ್ನು ಸರಳಗೊಳಿಸುವುದಾಗಲಿ, ಬಾಗಿಲಿನ ತಿರುಗಣಿ ಮತ್ತು ಬೀಗಗಳು ಬಂಗಾರವಾಗಿ ಪರಿವರ್ತಿತವಾಗುವುದಾಗಲಿ ಆಗಿರಲಿಲ್ಲ. ಈಗಷ್ಟೆ ಆದಂತೆ ಆಗಲೆಂದು ಅವನ ಹೃದಯದಾಳದ ಕೋರಿಕೆಯಿತ್ತು: ಅದು ಉರ್ಸುಲಾ ವಾಪಸು ಬರುವುದು. ಆದರೆ ಅವಳು ಅವನ ಉತ್ಸಾಹದಲ್ಲಿ ಭಾಗಿಯಾಗಲಿಲ್ಲ. ಒಂದು ಗಂಟೆಯ ಹೊತ್ತು ಎಲ್ಲಿಗೋ ಹೋಗಿ ಬಂದವಳಂತೆ ಅವಳು ಅವನಿಗೊಂದು ಸಾಂಪ್ರದಾಯಿಕ ಮುತ್ತು ಕೊಟ್ಟು ಹೇಳಿದಳು:
“ಬಾಗಿಲ ಹೊರಗೆ ನೋಡು.”
ಹೊಸೆ ಅರ್ಕಾದಿಯೋ ಬ್ಯುಂದಿಯಾ ಹೊರಗೆ ಬಂದು ಜನರ ಭಾರಿ ಗುಂಪನ್ನು ಕಂಡು ಉಂಟಾದ ಅತೀವ ಆಶ್ಚರ್ಯದಿಂದ ಹೊರಬರಲು ಅವನಿಗೆ ಸಾಕಷ್ಟು ಸಮಯ ಹಿಡಿಯಿತು. ಅವರು ಜಿಪ್ಸಿಗಳಾಗಿರಲಿಲ್ಲ. ಅವರು ತಮ್ಮಂತೆ ಉದ್ದ ಕದಲಿನ ಕಪ್ಪು ಚರ್ಮದ ತಮ್ಮ ಭಾಷೆಯನ್ನೇ ಆಡುವ ಮತ್ತು ತಮ್ಮ ಹಾಗೆಯೇ ನೋವು ಕಂಡ ಗಂಡಸರು, ಹೆಂಗಸರಾಗಿದ್ದರು. ಅವರು ತಿನ್ನುವ ಪದಾರ್ಥದ ಮೂಟೆಗಳನ್ನು ಹೊತ್ತಿದ್ದರು. ಪೀಠೋಪಕರಣ ಹಾಗೂ ಪಾತ್ರೆ ಪಡಗ ಮತ್ತು ಮನೆಬಳಕೆಯ ಸಾಮಾನುಗಳಿರುವ ಎತ್ತಿನ ಗಾಡಿಗಳಿದ್ದವು. ಜೊತೆಗೆ ಹೆಚ್ಚು ಗಡಿಬಿಡಿ ಇರದೆ ನಿತ್ಯ ಬಳಕೆಯ ಸರಳ ಶುದ್ಧವಾದ ಮಣ್ಣಿನ ಸಾಮಾನುಗಳು. ಅವರು ಎರಡು ದಿನಗಳ ನಡಿಗೆಯ ದೂರದ ಜೌಗು ಪ್ರದೇಶ ಆಚೆಯ ಭಾಗದಿಂದ ಬಂದವರು. ಅಲ್ಲಿ ಪ್ರತಿ ದಿನವೂ ಟಪಾಲು ಬರುವ ಊರುಗಳಿದ್ದವು. ಅಲ್ಲದೆ ಒಳ್ಳೆಯ ಜೀವನಕ್ಕೆ ಬೇಕಾಗುವ ವಸ್ತುಗಳ ಬಗ್ಗೆ ಅವರಿಗೆ ಪರಿಚಯವಿತ್ತು. ಉರ್ಸುಲಾಗೆ ಜಿಪ್ಸಿಗಳು ಸಿಕ್ಕಿರಲಿಲ್ಲ. ಆದರೆ ಅವಳು ಪ್ರಯೋಗಗಳಿಂದ ತಲೆ ಕೆಡಿಸಿಕೊಂಡಿದ್ದ ತನ್ನ ಗಂಡ ಕಂಡು ಹಿಡಿಯಲು ಸಾಧ್ಯವಾಗದೇ ಹೋದದ್ದನ್ನು ಪತ್ತೆ ಮಾಡಿದ್ದಳು.

ಪಿಲರ್ ಟೆರ್‍ನೆರಾಳ ಮಗನನ್ನು ಅವನು ಹುಟ್ಟಿದ ಎರಡು ವಾರಗಳ ನಂತರ ಅವನ ತಾತಂದಿರ ಮನೆಗೆ ತರಲಾಯಿತು. ತನ್ನ ವಂಶದ ಕುಡಿಯೊಂದು ದಿಕ್ಕಿಲ್ಲದೆ ಅಲೆಯುವುದನ್ನು ಸಹಿಸಿಕೊಳ್ಳಲಾಗದ ಹೊಸೆ ಅರ್ಕಾದಿಯೋನ ಬಲವಂತಕ್ಕೆ ಉರ್ಸುಲಾ ಗೊಣಗುಟ್ಟಿಕೊಂಡೇ ಒಪ್ಪಿಕೊಂಡಳು. ಆದರೆ ಮಗುವಿಗೆ ಎಂದಿಗೂ ನಿಜಾಂಶ ತಿಳಿಯಬಾರದು ಎನ್ನುವ ಷರತ್ತು ಹಾಕಿದ್ದ. ಮಗುವಿಗೆ ಹೊಸೆ ಅರ್ಕಾದಿಯೋ ಎಂಬ ಹೆಸರಿಟ್ಟಿದ್ದರೂ ಗೊದಲಕ್ಕೆ ಅವಕಾಶವಿರದ ಹಾಗೆ ಕೇವಲ ಅರ್ಕಾದಿಯೋ ಎಂದು ಕರೆಯತೊಡಗಿದ್ದರು. ಅ ದಿನಗಳಲ್ಲಿ ಊರಿನಲ್ಲಿ ಎಷ್ಟೊಂದು ಚಟುವಟಿಕೆ ಮತ್ತು ಮನೆಯಲ್ಲಿ ಕೆಲಸ ಕಾರ್ಯಗಳು ಇದ್ದುವೆಂದರೆ ಮಕ್ಕಳ ಆರೈಕೆಯ ಬಗ್ಗೆ ಗಮನ ಕಡಿಮೆಯಾಗಿತ್ತು. ಅವುಗಳನ್ನು ನೋಡಿಕೊಳ್ಳುವುದಕ್ಕೆ ಕೆಲವು ವರ್ಷಗಳ ಹಿಂದೆ ಬುಡಕಟ್ಟಿನವರಿಗೆ ಹಬ್ಬಿದ್ದ, ಮರೆವಿನ ರೋಗದಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ತನ್ನ ಅಣ್ಣನ ಜೊತೆ ಬಂದಿದ್ದ ಇಂಡಿಯನ್ ಹೆಂಗಸು ವಿಸಿಟಾಸಿಯೋನ್‌ಗೆ ಒಪ್ಪಿಸಲಾಗಿತ್ತು. ಅವರಿಬ್ಬರೂ ಸೌಮ್ಯವಾಗಿದ್ದು ಸಹಾಯ ಮಾಡಲು ಎಷ್ಟು ಉತ್ಸುಕರಾಗಿದ್ದರೆಂದರೆ, ಉರ್ಸುಲಾ ಮನೆಗೆಲಸವನ್ನು ಅವರಿಗೆ ಒಪ್ಪಿಸಿದ್ದಳು. ಇದರಿಂದಾಗಿ ಅರ್ಕಾದಿಯೋ ಮತ್ತು ಅಮರಾಂತಳಿಗೆ ಸ್ಪ್ಯಾನಿಷ್‌ಗಿಂತ ಗುಜರಾತಿ ಭಾಷೆಯನ್ನು ಮಾತನಾಡುವುದಕ್ಕೆ ಸಾಧ್ಯವಾಯಿತು. ಅಲ್ಲದೆ ರುಚಿಕರ ಪ್ರಾಣಿಗಳ ವ್ಯವಹಾರದಲ್ಲಿ ಮುಳುಗಿ ಹೋಗಿ, ಪುರುಸೊತ್ತಿರದ ಉರ್ಸುಲಾಗೆ ತಿಳಿಯದ ಹಾಗೆ, ಹಲ್ಲಿಯ ರಸ ಮತ್ತು ಜೇಡರ ಮೊಟ್ಟೆಗಳನ್ನು ತಿನ್ನುವುದನ್ನು ಕಲಿತಿದ್ದರು. ಉರ್ಸುಲಾಳ ಸಂಪರ್ಕಕ್ಕೆ ಬಂದವರು ಆ ಊರಿನ ಫಲವತ್ತಾದ ಭೂಮಿ ಮತ್ತು ನೀರಿನ ಸೌಕರ್ಯವನ್ನು ಕುರಿತು ಸುದ್ದಿ ಹಬ್ಬಿಸಿದರು. ಹೀಗಾಗಿ ಈ ಮೊದಲು ಹಳ್ಳಿಯಾಗಿದ್ದದ್ದು ಅಂಗಡಿ-ಮುಂಗಟ್ಟು, ಸ್ಟೋರು, ವರ್ಕ್ ಶಾಪ್‌ಗಳಿಂದ ಚಟುವಟಿಕೆಯ ಊರಾಯಿತು. ಅದರ ಮುಖಾಂತರ ಖಾಯಂ ಮಾರ್ಗವಾಗಿ ಅರಬರು ದೊಗಲೆ ಪ್ಯಾಂಟು ಮತ್ತು ಕಿವಿಯಲ್ಲಿ ರಿಂಗ್‌ಗಳನ್ನು ಮತ್ತು ಗಾಜಿನ ಮಣಿಗಳನ್ನು ಇಟ್ಟುಕೊಂಡು ಬಂದರು. ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಒಂದು ನಿಮಿಷವೂ ವಿಶ್ರಾಂತಿ ಇರಲಿಲ್ಲ. ತನ್ನ ಕಲ್ಪನೆಯ ಪ್ರಪಂಚಕ್ಕಿಂತ ಅದ್ಭುತವೆನಿಸಿದ ವಾಸ್ತವಿಕತೆಯಿಂದ ಬೆರಗುಗಂಡು, ರಸವಾದದ ಲ್ಯಾಬೊರೇಟರಿಯ ಬಗ್ಗೆ ಆಸಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡ. ತಿಂಗಳುಗಟ್ಟಲೆ ಅಂಕಿ ಅಂಶಗಳೊಡನೆ ಶ್ರಮಿಸಿ ಒಟ್ಟು ಮಾಡಿದ್ದ ವಸ್ತುಗಳನ್ನು ತೀವ್ರವಾಗಿ ಅಲಕ್ಷಿಸಿದ. ಅವನು ಮತ್ತೆ ಈ ಮೊದಲಿನ ದಿನಗಳಲ್ಲಿ ನಿರ್ಧರಿಸುತ್ತಿದ್ದ ಊರಿನ ರಸ್ತೆಗಳ ವಿನ್ಯಾಸ ಮತ್ತು ಹೊಸ ಮನೆಗಳು ಕಟ್ಟುವ ಸ್ಥಳಗಳ ಜೊತೆಗೆ, ಯಾರೊಬ್ಬರಿಗೂ ಇತರ ಎಲ್ಲರಿಗೂ ದೊರಕದ ಸವಲತ್ತುಗಳು ಸಿಗದ ಹಾಗೆ ಕ್ರಿಯಾಶೀಲನಾದ. ಹೊಸದಾಗಿ ತಲೆ ಎತ್ತುತ್ತಿದ್ದವುಗಳ ಬಗ್ಗೆ ಅವನೆಷ್ಟು ಅಧಿಕಾರ ರೂಢಿಸಿಕೊಂಡಿದ್ದನೆಂದರೆ ಅವನೊಂದಿಗೆ ಚರ್ಚಿಸದೆ ಅಡಿಪಾಯವನ್ನಾಗಲೀ, ಗೋಡೆಗಳನ್ನಾಗಲೀ ಕಟ್ಟುತ್ತಿರಲಿಲ್ಲ. ಅಲ್ಲದೆ ಭೂಮಿಯ ವಿತರಣೆ ಅವನಿಗೆ ಮಾತ್ರ ಸಂಬಂಧಿಸಿದ್ದು ಎಂದು ನಿರ್ಧಾರವಾಗಿತ್ತು. ಹಿಂದೆ ಅಲೆಮಾರಿ ತಂಡವಾಗಿದ್ದು ಈಗ ಅದೃಷ್ಟ ಮತ್ತು ಅವಕಾಶಗಳ ಸುವ್ಯವಸ್ಥೆಯ ಜೊತೆ ಡೊಂಬರಾಟದ ಜಿಪ್ಸಿಗಳು ಬಂದಾಗ ಅವರನ್ನು ಸ್ವಾಗತಿಸಲಾಯಿತು. ಏಕೆಂದರೆ ಹೊಸೆ ಅರ್ಕಾದಿಯೋ ಅವರ ಜೊತೆ ಬರುತ್ತಾನೆಂಬ ತಿಳುವಳಿಕೆ ಇತ್ತು. ಆದರೆ ಅವನು ಬರಲಿಲ್ಲ. ಅಷ್ಟೇ ಅಲ್ಲ, ಉರ್ಸುಲಾ ಆಲೋಚಿಸಿದ ಹಾಗೆ ತಮ್ಮ ಮಗನ ಬಗ್ಗೆ ಹೇಳಲು ಶಕ್ಯವಿದ್ದ ಒಬ್ಬನೇ ಒಬ್ಬನಾದ ಹಾವಿನ ಮನುಷ್ಯನೂ ಅವರೊಂದಿಗಿರಲಿಲ್ಲ. ಆದ್ದರಿಂದ ಜಿಪ್ಸಿಗಳು ಬಿಡಾರ ಹೂಡುವುದಕ್ಕಾಗಲೀ ಮತ್ತೆಂದೂ ಬರುವುದಕ್ಕಾಗಲೀ ಅವಕಾಶ ಕೊಡಲಿಲ್ಲ. ಕಾರಣ ಅವರು ಕಾಮ ವಿಕಾರ ಮತ್ತು ವಕ್ರ ಬುದ್ಧಿಯನ್ನು ತರುತ್ತಾರೆಂದು ನಂಬಿದರು. ಆದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ತಮ್ಮ ಹಳ್ಳಿ ಅಷ್ಟೊಂದು ಉದ್ಧಾರವಾಗುವುದಕ್ಕೆ, ತನ್ನ ಪುರಾತನ ತತ್ವ ಜ್ಞಾನ ಮತ್ತು ಆಶ್ಚರ್ಯ ಹುಟ್ಟಿಸುವ ಆವಿಷ್ಕಾರಗಳಿಂದ ಉಪಕಾರ ಮಾಡಿದ ಮೆಲ್‌ಕಿಯಾದೆಸ್ ತಂಡಕ್ಕೆ ಮಾತ್ರ, ಯಾವಾಗಲೂ ಬಾಗಿಲು ತೆರೆದೇ ಇರುತ್ತದೆ ಎನ್ನುವುದನ್ನು ಬಾಯಿ ಬಿಟ್ಟು ಹೇಳಿದ್ದ. ಆದರೆ ಅಲೆಮಾರಿಗಳ ಪ್ರಕಾರ, ಮನುಷ್ಯ ಜ್ಞಾನದ ಮಿತಿ ಮೀರಿದ್ದರಿಂದ ಮೆಲ್‌ಕಿಯಾದೆಸ್ ತಂಡದವರು ಈ ಭೂಮಿಯ ಮೇಲೆಯೇ ಇಲ್ಲ, ಎಂದು.

ಸಧ್ಯಕ್ಕೆ ಅದ್ಭುತರಮ್ಯಗಳ ಲೋಕದಿಂದ ಬಿಡುಗಡೆ ಹೊಂದಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಸ್ವಲ್ಪ ಸಮಯದಲ್ಲಿಯೇ ಒಂದು ಗೊತ್ತಾದ ಕ್ರಮ ಮತ್ತು ಕೆಲಸವನ್ನು ವ್ಯವಸ್ಥೆಗೊಳಿಸಿದ. ಅದರಲ್ಲಿ ಒಂದಕ್ಕೆ ಮಾತ್ರ ಪರವಾನಗಿ ಕೊಟ್ಟ. ಅದು ಆರಂಭದಿಂದಲೂ ಜೊತೆಗಿದ್ದು ತಮ್ಮ ಸುಮಧುರ ಕಂಠದಿಂದ ಅವನಿಗೆ ಗೆಲುವು ತಂದು ಕೊಟ್ಟಿದ್ದ ಪಕ್ಷಿಗಳಿಗೆ ಪಂಜರದಿಂದ ಬಿಡುಗಡೆ. ಅವುಗಳ ಜಾಗದಲ್ಲಿ ಸಂಗೀತ ಹೊಮ್ಮಿಸುವ ಗಡಿಯಾರವನ್ನು ಪ್ರತಿಯೊಂದು ಮನೆಗೂ ತಂದಿಟ್ಟ. ಅವು ಅರಬರು ಗಿಣಿಗಳಿಗೆ ಪ್ರತಿಯಾಗಿ ಕೊಟ್ಟ ಕುಸುರಿ ಕೆಲಸ ಮಾಡಿದ ಮರದ ಗಡಿಯಾರಗಳು. ಅವುಗಳನ್ನು ಹೊಸೆ ಅರ್ಕಾದಿಯೋ ಬ್ಯುಂದಿಯಾ ಎಷ್ಟರಮಟ್ಟಿಗೆ ಸಂಯೋಜಿಸಿದನೆಂದರೆ ಪ್ರತಿ ಅರ್ಧಗಂಟೆಗೊಂದು ಸಲ ಇಡೀ ಊರಿನಲ್ಲಿ ಒಂದಕ್ಕೊಂದು ಮೇಳೈಸಿ ಹೊಮ್ಮುವ ನಾದತರಂಗ ತಾರಕಕ್ಕೇರುವುದಲ್ಲದೆ, ಸರಿಮಧ್ಯಾಹ್ನದ ಸಮಯಕ್ಕೆ ವಾಲ್ಟ್ಜ್ ಸಂಗೀತಕ್ಕೆ ಸರಿಸಮನಾಗಿತ್ತು. ಆಗಿನ ವರ್ಷಗಳಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ರಸ್ತೆಗಳಲ್ಲಿ ಗೇರುಬೀಜಕ್ಕೆ ಬದಲಾಗಿ ಬಾದಾಮಿ ಮರಗಳನ್ನು ನೆಡುವುದಕ್ಕೆ ತೀರ್ಮಾನಿಸಿದ್ದ. ಜೊತೆಗೆ ಚಿರಂಜೀವಿಗಳಾಗುವುದರ ಬಗೆಯನ್ನು ಕಂಡು ಹಿಡಿದಿದ್ದರೂ ಅದನ್ನು ಯಾರಿಗೂ ಹೇಳಿರಲಿಲ್ಲ. ಅನೇಕ ವರ್ಷಗಳ ನಂತರ ಮಕೋಂದೋದಲ್ಲಿ ಜಿಂಕ್ ಶೀಟ್ ತಾರಸಿಯ ಮರದ ಮನೆಗಳಾದ ಮೇಲೆ, ಅಲ್ಲಲ್ಲಿ ಅರ್ಧಂಬರ್ಧ ಕಡಿದು ಹಾಕಿದ ಬಾದಾಮಿ ಮರಗಳಿದ್ದರೂ, ಅವುಗಳನ್ನು ನೆಡಿಸಿದವರು ಯಾರೆಂದು ಯಾರಿಗೂ ತಿಳಿದಿರಲಿಲ್ಲ. ತನ್ನ ತಂದೆ ಊರನ್ನು ಒಂದು ಕ್ರಮದಲ್ಲಿ ಇಡುತ್ತಿದ್ದರೆ ಮತ್ತು ತನ್ನ ತಾಯಿ ದಿನಕ್ಕೆ ಎರಡು ಸಲ ಮರದ ಕಡ್ಡಿಗಳಿಗೆ ಜೋಡಿಸಿ ಮನೆಯಿಂದ ಹೋಗುತ್ತಿದ್ದ ಬೇಯಿಸಿದ ಮಾಂಸದ ತುಂಡು ಹಾಗೂ ಮೀನುಗಳನ್ನು ಮಾರಿ ಸಂಪತ್ತನ್ನು ಹೆಚ್ಚಿಸುತ್ತಿದ್ದg, ಅವ್ರೇಲಿಯಾನೋ ಆಗೀಗ ಕೇಳುವವರಿಲ್ಲದಂತಿದ್ದ ಲ್ಯಾಬೊರೇಟರಿಗೆ ಹೋಗಿ ಬೆಳ್ಳಿಗೆ ಸಂಬಂಧಿಸಿದ ಕುಶಲ ಕೆಲಸವನ್ನು ತನ್ನದೇ ಪ್ರಯೋಗಗಳಿಂದ ಕಲಿಯುತ್ತಿದ್ದ. ಅವನು ಬೆಳೆಯುತ್ತಿದ್ದ ಗತಿಯೂ ಎಷ್ಟು ಹೆಚ್ಚಿತ್ತೆಂದರೆ, ಅತಿ ಬೇಗನೆ ಅವನ ಅಣ್ಣನ ಬಟ್ಟೆಗಳು ಅವನಿಗೆ ಸರಿಹೋಗದೆ ತಂದೆಯ ಬಟ್ಟೆಗಳನ್ನು ತೊಟ್ಟುಕೊಳ್ಳಬೇಕಾಯಿತು. ಆದರೆ ವಿಸಿಟಾಸಿಯೋನ್ ಹೊಲಿಗೆ ಬಿಚ್ಚಿ ಪ್ಯಾಂಟು ಮತ್ತು ಶರಟುಗಳನ್ನು ಹೊಲಿಯಬೇಕಾಗಿತ್ತು. ಏಕೆಂದರೆ ಅವ್ರೇಲಿಯಾನೋ ಬೇರೆಯವರಂತೆ ಬೊಜ್ಜು ಬೆಳೆಸಿರಲಿಲ್ಲ. ಅವ್ರೇಲಿಯಾನೋ ತನ್ನ ತಾರುಣ್ಯದಿಂದಾಗಿ ಮೊದಲಿದ್ದ ಮೃದು ಧ್ವನಿಯನ್ನು ಕಳೆದುಕೊಂಡಿದ್ದ ಮತ್ತು ಅದು ಅವನನ್ನು ಸಾಕಷ್ಟು ಮೌನಿಯಾಗಿ ಹಾಗೂ ಏಕಾಂತ ಬಯಸುವಂತೆ ಮಾಡಿತ್ತು. ಆದರೆ ಇನ್ನೊಂದು ರೀತಿಯಲ್ಲಿ ಅವನ ಕಣ್ಣುಗಳಿಗೆ ಬಾಲ್ಯದಲ್ಲಿ ಇದ್ದ ಗಂಭೀರತೆಯನ್ನು ಮತ್ತೆ ತಂದು ಕೊಟ್ಟಿತ್ತು. ಅವನು ಲ್ಯಾಬೊರೇಟರಿಯಲ್ಲಿ ಬೆಳ್ಳಿಗೆ ಸಂಬಂಧಿಸಿದ ಪ್ರಯೋಗಗಳಲ್ಲಿ ಎಷ್ಟೊಂದು ತನ್ಮಯನಾಗಿದ್ದನೆಂದರೆ ಊಟಕ್ಕೆ ಕೂಡ ಹೋಗುತ್ತಿರಲ್ಲಿಲ್ಲ. ಅವನು ಕೇವಲ ತನ್ನಷ್ಟಕ್ಕೇ ಇದ್ದು ಬಿಡುತ್ತಿದ್ದದ್ದನ್ನು ಕಂಡು ಹೊಸೆ ಅರ್ಕಾದಿಯೋ ಬ್ಯುಂದಿಯಾ ಬಹುಶಃ ಅವನಿಗೆ ಹೆಣ್ಣಿನ ಅವಶ್ಯಕತೆ ಇರಬಹುದೆಂದು ತಿಳಿದು ಅವನಿಗೆ ಮನೆಯ ಬೀಗದ ಕೈ ಮತ್ತು ಒಂದಿಷ್ಟು ಹಣ ಕೊಟ್ಟ. ಅವ್ರೇಲಿಯಾನೋ ಅದನ್ನು ಮ್ಯೂರಿ‌ಏಟಿಚ್ ಆಸಿಡ್‌ನಿಂದ ಲ್ಯಾಬೊರೇಟರಿಯ ಬೀಗದ ಕೈಗಳಿಗೆ ಬಂಗಾರದ ಹೊರಪದರ ಕೊಟ್ಟು ಅಂದವಾಗಿಸಲು ಉಪಯೋಗಿಸಿದ. ಅವನ ಅತಿರೇಕಗಳು ಅರ್ಕಾದಿಯೋ ಮತ್ತು ಅಮರಾಂತರಿಗೆ ಹೋಲಿಸಿದರೆ ಲೆಕ್ಕಕ್ಕೆ ಇಡವ ಹಾಗಿರಲಿಲ್ಲ. ಅವರಿನ್ನೂ ಇಂಡಿಯನ್‌ರ ಗಡಿಯಾರಗಳನ್ನು ಬಚ್ಚಿಟ್ಟುಕೊಳ್ಳುವುದು ಮತ್ತು ಸ್ಪ್ಯಾನಿಷ್ ಬೇಡವೆಂದು ಹಟತೊಟ್ಟು ಗುಜರಾತಿ ಭಾಷೆಯನ್ನು ಮಾತ್ರ ಮಾತನಾಡುವುದರಲ್ಲಿ ಮಗ್ನರಾಗಿದ್ದರು. “ನೀವೇನೂ ಗೊಣಗುಟ್ಟೋದು ಬೇಡ” ಎಂದ ಉರ್ಸುಲಾ, “ಮಕ್ಕಳು ಅಪ್ಪನ ಹುಚ್ಚುತನದಿಂದ ಕಲೀತಾರೆ” ಎಂದಳು. ಅವಳು ತನ್ನ ಅದೃಷ್ಟವನ್ನು ಹಳಿಯುತ್ತಿದ್ದಳು. ಏಕೆಂದರೆ ಮಕ್ಕಳ ನಡವಳಿಕೆ ಹಂದಿಯ ಬಾಲದಷ್ಟೆ ಭಯವಾದದ್ದೆಂದು ಅವಳಿಗೆ ನಂಬಿಕೆಯಾಗಿತ್ತು. ಅವ್ರೇಲಿಯಾನೋನ ರೀತಿ ಅವಳನ್ನು ಅನಿಶ್ಚಯತೆಯಿಂದ ಬಿಗಿದು ಹಾಕಿತ್ತು.
“ಯಾರೋ ಬರ್ತಿದಾರೆ” ಎಂದ.
ಅವನು ಹಾಗೆ ಭವಿಷ್ಯ ನುಡಿದಾಗ, ಅವಳು ಯಾವಾಗಲೂ ಮಾಡುವಂತೆ ಅದನ್ನು ಮನೆಯಾಕೆಯ ಸಹಜ ತರ್ಕಕ್ಕೆ ಒಳಪಡಿಸಿ, ಛೇದಿಸಲು ಪ್ರಯತ್ನಿಸಿದಳು. ಯಾರಾದರೂ ಬರುವುದು ಸಾಮಾನ್ಯವಾಗಿತ್ತು. ಪ್ರತಿದಿನ ಯಾವ ರೀತಿಯ ಸಂಶಯಕ್ಕೆ ಅಥವ ನಿಗೂಢ ಆಲೋಚನೆಗಳಿಗೆ ಆಸ್ಪದವಿಲ್ಲದ ಹಾಗೆ ಡಜನ್‌ಗಟ್ಟಲೆ ಜನರು ಮಕೋಂದೋಗೆ ಬರುತ್ತಾರೆ. ಹೀಗಿದ್ದರೂ ಎಲ್ಲ ತರ್ಕವನ್ನು ಮೀರಿ, ಅವ್ರೇಲಿಯಾನೋ ತನ್ನ ಭವಿಷ್ಯದ ಬಗ್ಗೆ ನಂಬಿಕೆ ಹೊಂದಿದ್ದ.
“ಯಾರು ಅಂತ ನಂಗೊತ್ತಿಲ್ಲ” ಎಂದವನು ಮತ್ತೆ, “ಯಾರಾದರೂ ಸರಿಯೆ, ಅವರಿನ್ನೇನು ಬರ್ತಿದಾರೆ.”
ನಿಜಕ್ಕೂ, ಆ ಭಾನುವಾರ ರೆಬೇಕ ಬಂದಳು. ಅವಳಿಗಾಗ ಕೇವಲ ಹನ್ನೊಂದು ವರ್ಷ. ಅವಳು ತನ್ನೊಂದಿಗೆ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಯಾರದೋ ಕಾಗದವೊಂದನ್ನು ತಲುಪಿಸಲು ತುಂಬ ಕಷ್ಟಪಟ್ಟು ಗುಪ್ತ ವ್ಯವಹಾರ ಮಾಡುವವರ ಜೊತೆಗೆ ಮನಾರ್ನಿಂದ ಪ್ರಯಾಣ ಕೈಗೊಂಡಿದ್ದಳು. ಆದರೆ ಅಂತಹ ಅಪೇಕ್ಷೆ ಹೊಂದಿದ್ದ ವ್ಯಕ್ತಿ ಯಾರೆಂದು ಅವರು ಹೇಳುತ್ತಿರಲಿಲ್ಲ. ಅವಳ ಬಳಿ ಇದ್ದ ಸಾಮಾನುಗಳೆಂದರೆ ಒಂದು ಸಣ್ಣ ಟ್ರಂಕ್, ಕೈಯಿಂದ ಬರೆದ ಹೂಗಳ ಚಿತ್ರವಿದ್ದ ತುಯ್ದಾಡುವ ಚಿಕ್ಕ ಕುರ್ಚಿ ಮತ್ತು ಟೊಳ ಟೊಳ ಶಬ್ದ ಮಾಡುತ್ತಿದ್ದ ಅವಳ ತಂದೆ ತಾಯಿಯ ಮೂಳೆಗಳಿದ್ದ ಒಂದು ಕ್ಯಾನ್‌ವಾಸ್ ಬ್ಯಾಗ್. ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಬರೆದ ಕಾಗದ ಆರ್ದ್ರ ಮಾತುಗಳಿದ್ದ ತುಂಬಿತ್ತು. ಎಲ್ಲೋ ಬಹಳ ದೂರದಲ್ಲಿದ್ದರೂ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಮೇಲೆ ಪ್ರೀತಿ ಇದ್ದವನೊಬ್ಬ ಬರೆದಿದ್ದರಲ್ಲಿ, ಅನಾಥಳಾದ ಉರ್ಸುಲಾಳ ಸಂಬಂಧಿ ಮತ್ತು ತನ್ಮೂಲಕ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಸಂಬಂಧಿ, ಮೋಕ್ಷ ಹೊಂದಿದ ಗೆಳೆಯ ನಿಕನೋರ್ ಉಲ್ಲಾ ಹಾಗೂ ಅವನ ಮಡದಿ ಮಾಂಟಿಲ್ಲರ ಮಗಳು ರೆಬೇಕಳನ್ನು ಮಾನವೀಯತೆಯ ದೃಷ್ಟಿಯಿಂದ ಕಳಿಸಿದ್ದಾಗಿಯೂ ಮತ್ತು ಅವಳ ಬಳಿ ಇರುವ ಅವಳ ತಂದೆ ತಾಯಿಯ ಪಾರ್ಥಿವ ವಸ್ತುಗಳಿಗೆ ಕ್ರೈಸ್ತ ಸಂಸ್ಕಾರ ದೊರಕುವುದೆಂಬ ಆಶಯ ವ್ಯಕ್ತಪಡಿಸಿದ್ದ. ಆ ಹೆಸರುಗಳು ಮತ್ತು ಅದಕ್ಕೆ ಸಹಿ ಹಾಕಿದವನ ಹೆಸರು ಸ್ಪಷ್ಟವಾಗಿತ್ತು. ಆದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾಗಾಗಲೀ ಉರ್ಸುಲಾಗಾಗಲೀ ಆ ಹೆಸರಿನ ಸಂಬಂಧಿಗಳು ತಮಗಿದ್ದರೆಂದು ನೆನಪಾಗಲಿಲ್ಲ. ಅಲ್ಲದೆ ಆ ಕಾಗದ ಬರೆದವನು ಮತ್ತು ಅದಕ್ಕಿಂತ ಹೆಚ್ಚಾಗಿ ಮನಾರೆ ಎನ್ನುವ ಹಳ್ಳಿ ಇರುವುದು ಕೂಡ. ಆ ಹುಡುಗಿಯಿಂದ ಬೇರೆ ಇನ್ನಾವ ವಿಷಯವನ್ನು ಪಡೆಯುವುದು ಅಸಾಧ್ಯವಾಗಿತ್ತು. ಅವಳು ಬಂದ ಸಮಯದಿಂದ ಬಾಯಲ್ಲಿ ಬೆರಳಿಟ್ಟುಕೊಂಡು ಎಲ್ಲರನ್ನೂ ಬಿಡುಗಣ್ಣಿನಿಂದ ನೋಡುತ್ತ ಅವರೆಲ್ಲ ತನಗೇನು ಕೇಳುತ್ತಿದ್ದಾರೆ ಎನ್ನುವುದನ್ನು ಲೆಕ್ಕಿಸದೆ ತುಯ್ದಾಡುವ ಕುರ್ಚಿಯಲ್ಲಿ ಕುಳಿತಳು. ಅವಳು ಹೆಚ್ಚು ಉಪಯೋಗಿಸಿದ್ದ ಕಪ್ಪು ಬಣ್ಣ ಹಾಕಿದ ಅಡ್ಡ ಪಟ್ಟಿಯಿದ್ದ ಬಟ್ಟೆ ತೊಟ್ಟುಕೊಂಡು ಚರ್ಮದ ಬೂಟುಗಳನ್ನು ಹಾಕಿಕೊಂಡಿದ್ದಳು. ಅವಳ ಕಿವಿಗಳ ಹಿಂದಕ್ಕೆ ಕೂದಲನ್ನು ಕಪ್ಪು ರಿಬ್ಬನ್‌ನಿಂದ ಕಟ್ಟಿತ್ತು. ಬೆವರಿನಿಂದ ಮಾಸಿದ ಚಿತ್ರಗಳಿದ್ದ ಗಿಡ್ಡ ಅಂಗಿಯನ್ನು ಉಟ್ಟಿದ್ದಳು. ದೃಷ್ಟಿ ದೋಷ ನಿವಾರಣೆಗೆಂದು ಬಲಗೈಗೆ ಮಾಂಸಾಹಾರಿ ಪ್ರಾಣಿಯ ಹಲ್ಲಿದ್ದ ಚರ್ಮದ ಕಡಗ ಹಾಕಿಕೊಂಡಿದ್ದಳು. ಹಸಿರಿನ ಅಂಶವಿದ್ದ ಮೈ ಚರ್ಮ, ಡ್ರಮ್ಮಿನ ಹಾಗೆ ಬಿರುಸಾಗಿದ್ದ ಹೊಟ್ಟೆ ಇವುಗಳು ಅವಳ ಆರೋಗ್ಯ ಸರಿಯಿಲ್ಲವೆಂದು ಸಾರುತ್ತಿದ್ದವು. ಜೊತೆಗೆ ಹಸಿವಿನಿಂದ ಅವಳು ತನ್ನ ವಯಸ್ಸಿಗಿಂತ ಹಿರಿಯವಳಾಗಿ ಕಾಣುತ್ತಿದ್ದಳು. ಅವರು ಅವಳಿಗೆ ತಿನ್ನಲಿಕ್ಕೆ ಕೊಟ್ಟಾಗ ಪ್ಲೇಟನ್ನು ಮಂಡಿಯ ಮೇಲಿಟ್ಟುಕೊಂಡು ಕುಳಿತಳು. ಅವಳು ಕಿವುಡಿಯೇನೋ ಎಂದು ಕೂಡ ಅನುಮಾನಿಸಿದರು. ಆದರೆ ಇಂಡಿಯನ್‌ರು ತಮ್ಮ ಭಾಷೆಯಲ್ಲಿ ನೀರೇನಾದರೂ ಬೇಕೆಂದು ಕೇಳಿದಾಗ, ಆ ಧ್ವನಿಯನ್ನು ಗುರುತಿಸುವಂತೆ ನೋಡಿ ಅವಳು ಹೌದೆಂದು ತಲೆ ಹಾಕಿದಳು.
ಅವರು ಅವಳನ್ನು ತಮ್ಮಲ್ಲಿ ಇರಿಸಿಕೊಂಡರು. ಏಕೆಂದರೆ ಅದನ್ನು ಬಿಟ್ಟು ಅವರೇನೂ ಮಾಡುವಂತಿರಲಿಲ್ಲ. ಅವರು ಅವಳನ್ನು ರೆಬೇಕ ಎಂದು ಕರೆಯಲು ನಿರ್ಧರಿಸಿದರು. ಏಕೆಂದರೆ ಆ ಕಾಗದದ ಪ್ರಕಾರ ಅದು ಅವಳ ತಾಯಿಯ ಹೆಸರಾಗಿತ್ತು. ಅಲ್ಲದೆ ಅವ್ರೇಲಿಯಾನೋ ತಾಳ್ಮೆ ವಹಿಸಿ ಎಲ್ಲ ಸಂತರ ಹೆಸರನ್ನು ಓದಿ ಹೇಳಿದರೂ ಅವಳಿಂದ ಪ್ರತಿಕ್ರಿಯೆ ಸಿಗಲಿಲ್ಲ. ಯಾರೊಬ್ಬರೂ ಅಲ್ಲಿಯ ತನಕ ಮಕೋಂದೋದಲ್ಲಿ ಸತ್ತಿರಲಿಲ್ಲವಾದ್ದರಿಂದ ಅಲ್ಲಿ ಸ್ಮಶಾನವಿರಲಿಲ್ಲ. ಆದ್ದರಿಂದ ಹೂಳಲು ಸರಿಯಾದ ಸ್ಥಳಕ್ಕಾಗಿ ಕಾದು ಅವರು ಮೂಳೆಗಳ ಚೀಲವನ್ನು ಹಾಗೆಯೇ ಇಟ್ಟರು. ಅದು ಬಹಳ ಕಾಲದ ತನಕ ಓಡಾಡುವವರಿಗೆಲ್ಲ ಅಡ್ಡವಾಗುತ್ತಿತ್ತು ಮತ್ತು ವಿಚಿತ್ರವಾಗಿ ಕರಕಲು ಶಬ್ದ ಮಾಡುತ್ತ ಯಾರೂ ನಿರೀಕ್ಷಿಸದೇ ಇರುವ ಸ್ಥಳಗಳಲ್ಲೆಲ್ಲ ಇರುತ್ತಿತ್ತು. ರೆಬೇಕ ಬಂದು ಬಹಳ ದಿನಗಳಾಗಿ ಕ್ರಮೇಣ ಮನೆಯವಳಾಗಿ ಬಿಟ್ಟಳು. ಅವಳು ಬೆರಳು ಚೀಪುತ್ತ ಮನೆಯ ಯಾವುದೋ ಒಂದು ಮೂಲೆಯಲ್ಲಿ ತುಯ್ದಾಡುವ ಕುರ್ಚಿಯಲ್ಲಿ ಕುಳಿತಿರುತ್ತಿದ್ದಳು. ಗಡಿಯಾರಗಳ ಸಂಗೀತವಲ್ಲದೆ ಬೇರೇನೂ ಅವಳ ಗಮನ ಸೆಳೆಯುತ್ತಿರಲಿಲ್ಲ. ಅರ್ಧಗಂಟೆಗೊಂದು ಸಲ ಕೇಳಿಸುತ್ತಿದ್ದ ಅದರ ನೆಲೆಯನ್ನು ಗಾಳಿಯಲ್ಲೆಲ್ಲೋ ಹುಡುಕುತ್ತ ಬೆದರುಗಣ್ಣಿನಿಂದ ನೋಡುತ್ತಿದ್ದಳು. ಕೆಲವು ದಿನಗಳವರೆಗೆ ಅವಳು ಏನನ್ನಾದರೂ ತಿನ್ನುವಂತೆ ಮಾಡುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ಅವಳು ಹಸಿವೆಯಿಂದ ಸಾಯಲಿಲ್ಲವೇಕೆ ಎಂದು ಅವರಿಗೆ ಇಂಡಿಯನ್‌ರು ಬರುವ ತನಕ ತಿಳಿಯದ ಸಂಗತಿಯಾಗಿತ್ತು. ಅವರಿಗಾದರೆ ಎಲ್ಲ ತಿಳಿದಿತ್ತು. ಅವರು ಇಡೀ ಮನೆಯಲ್ಲಿ ಕಳ್ಳಹೆಜ್ಜೆಯಿಟ್ಟು ಓಡಾಡಿ, ರೆಬೇಕ ಮನೆಯ ಅಂಗಳದ ತೇವದ ಮಣ್ಣು ಮತ್ತು ಉಗುರಿನಿಂದ ಗೋಡೆಯಲ್ಲಿ ಕೆರೆದ ಹೆಕ್ಕಳವನ್ನು ಮಾತ್ರ ತಿನ್ನುತ್ತಾಳೆಂದು ಕಂಡು ಹಿಡಿದರು. ಅವಳನ್ನು ಬೆಳೆಸಿದ ತಂದೆ ತಾಯಿಯರೋ ಅಥವಾ ಯಾರೇ ಆದರೂ ಅವಳು ಹೀಗೆ ಗುಟ್ಟಾಗಿ ಮತ್ತು ಅಪರಾಧ ಪ್ರಜ್ಞೆಯಿಂದ ಯಾರಿಗೂ ಕಾಣದ ಹಾಗೆ ಮಾಡುತ್ತಿದ್ದಕ್ಕಾಗಿ ಬೈಯುತ್ತಿದ್ದದ್ದು ಇದರಿಂದ ಸ್ಪಷ್ಟವಾಯಿತು. ಅಂದಿನಿಂದ ಅವಳ ಮೇಲೆ ಅವರು ಹೆಚ್ಚಿನ ನಿಗಾ ಇಟ್ಟರು. ಅಂಗಳವನ್ನು ಸೆಗಣಿಯಿಂದ ಸಾರಿಸಿ, ಗೋಡೆಗೆ ಮೆಣಸಿನ ಪುಡಿ ಬಳಿದು, ಅವಳ ದುರಭ್ಯಾಸವನ್ನು ತಪ್ಪಿಸಲು ನೋಡಿದರು. ಆದರೆ ಅವಳು ಹೇಗೋ ಮಣ್ಣನ್ನು ಹುಡುಕುವುದರಲ್ಲಿ ಜಾಣತನವನ್ನು ತೋರಿಸುತ್ತಿದ್ದಳು. ಇದರಿಂದ ಉರ್ಸುಲಾ ಇನ್ನೂ ಹೆಚ್ಚಿನ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಯಿತು. ತಟ್ಟೆಯೊಂದರಲ್ಲಿ ಕಿತ್ತಲೆ ಹಣ್ಣಿನ ರಸದ ಜೊತೆ ಭೇದಿಯ ಔಷಧಿ ಹಾಕಿ, ಇಡೀ ರಾತ್ರಿ ಮಂಜು ಬೆರೆಯಲು ಬಿಟ್ಟು, ಮಾರನೆಯ ದಿನ ಖಾಲಿ ಹೊಟ್ಟೆಯಲ್ಲಿದ್ದ ಅವಳಿಗೆ ಕೊಟ್ಟಳು. ಮಣ್ಣು ತಿನ್ನುವುದಕ್ಕೆ ಅದು ಔಷಧಿಯೆಂದು ಅವಳಿಗೆ ಯಾರೂ ಹೇಳಿರದಿದ್ದರೂ ಖಾಲಿ ಹೊಟ್ಟೆಯಲ್ಲಿ ಕಹಿ ಪದಾರ್ಥ ಹೊಟ್ಟೆಗೆ ಹೋದರೆ ಜಠರ ಸರಿಯಾಗಿ ಕೆಲಸ ಮಾಡುವುದೆಂದು ಅವಳ ಅನ್ನಿಸಿಕೆ. ಮಣ್ಣು ತಿನ್ನುವ ದುರಭ್ಯಾಸ ಅದರಿಂದ ಹೋಗುವುದೆಂದು ಉರ್ಸುಲಾಗೆ ಯಾರೂ ಹೇಳಿರಲಿಲ್ಲ. ಆದರೆ ಕಡ್ಡಿಯಂತಿದ್ದರೂ ರೆಬೇಕಳ ಪ್ರತಿರೋಧ ಎಷ್ಟಿತ್ತೆಂದರೆ ಅವಳನ್ನು ಕಟ್ಟಿ ಹಾಕಿ ಆ ಔಷಧಿಯನ್ನು ಕುಡಿಸಬೇಕಾಯಿತು. ಆವೇಶ ಭರಿತಳಾಗಿ ಅರಚುವುದನ್ನೋ, ಒದೆಯುವುದನ್ನೋ, ಉಗುಳುವುದನ್ನೋ ಒಂದು ತಪ್ಪಿದರೆ ಮತ್ತೊಂದನ್ನು ಮಾಡುತ್ತಿದ್ದ ಅವಳಿಂದ ಅವರು ತಪ್ಪಿಸಿಕೊಳ್ಳಬೇಕಾಯಿತು. ಇದನ್ನು ಕಂಡು ಜಿಗುಪ್ಸೆಗೊಂಡ ಇಂಡಿಯನ್‌ರ ಪ್ರಕಾರ, ಅವರ ಭಾಷೆಯಲ್ಲಿ ಆ ಮಾತುಗಳೆಲ್ಲ ಕಲ್ಪಿಸಿಕೊಳ್ಳಲೂ ಅಸಹ್ಯವಾದಂಥವು. ಉರ್ಸುಲಾಗೆ ಅದು ಗೊತ್ತಾದ ಮೇಲೆ ಅವಳು ಹೊಡೆಯುವುದಕ್ಕೆ ಶುರುಮಾಡಿದಳು. ಅವಳು ಕೊಟ್ಟ ಭೇದಿಯ ಔಷಧಿಯೋ ಹೊಡೆಯುತ್ತಿದ್ದದ್ದೋ ಅಥವಾ ಎರಡೂ ಸೇರಿ ಉಂಟಾದ ಪರಿಣಾಮವೋ ಹೇಗೋ, ನಿಜ ಸಂಗತಿಯೆಂದರೆ ಒಂದೆರಡು ವಾರಗಳಲ್ಲಿ ರೆಬೇಕ ಗುಣಹೊಂದುವ ಸೂಚನೆ ಕೊಟ್ಟಳು. ಹಿರಿಯಕ್ಕಳಂತೆ ಅವಳು ಅರ್ಕಾದಿಯೋ ಹಾಗೂ ಅಮರಾಂತಳೊಂದಿಗೆ ಆಟವಾಡುತ್ತಿದ್ದಳು. ತಟ್ಟೆಯನ್ನು ಸರಿಯಾಗಿ ಉಪಯೋಗಿಸಿಕೊಂಡು ಹೊಟ್ಟೆ ತುಂಬ ಊಟಮಾಡುತ್ತಿದ್ದಳು. ಅವಳು ಇಂಡಿಯನ್‌ರ ಭಾಷೆಯನ್ನು ಮಾತನಾಡುವಷ್ಟೇ ಸಲೀಸಾಗಿ ಸ್ಪ್ಯಾನಿಷ್ಷನ್ನು ಮಾತಾಡುತ್ತಾಳೆಂದು ಕ್ರಮೇಣ ಗೊತ್ತಾಯಿತು. ಅವಳಿಗೆ ಕೈಗೆಲಸ ಮಾಡಲು ತುಂಬ ಉತ್ಸಾಹ ಇದೆಯೆಂದೂ ಮತ್ತು ಅವಳೇ ಸೃಷ್ಟಿಸಿದ ತಮಾಷೆ ಪದಗಳಿಂದ ಗಡಿಯಾರದ ವಾಲ್ಟ್ಜ್ ಸಂಗೀತದ ಜೊತೆಗೆ ಹಾಡಲು ಸಾಧ್ಯ ಎನ್ನುವುದು ಕೂಡ. ಅವಳನ್ನು ಇಡೀ ಸಂಸಾರದ ಒಬ್ಬ ಸದಸ್ಯೆಯೆಂದು ಪರಿಗಣಿಸಲು ಬಹಳ ಕಾಲ ಹಿಡಿಯಲಿಲ್ಲ. ಅವಳು ಉರ್ಸುಲಾಗೆ ಆಕೆಯ ಸ್ವಂತ ಮಕ್ಕಳಿಗಿಂತಲೂ ಹೆಚ್ಚು ಅಕ್ಕರೆಯವಳಾದಳು. ಅವಳು ಅರ್ಕಾದಿಯೋ ಮತ್ತು ಅಮರಾಂತರನ್ನು ತಮ್ಮ, ತಂಗಿಯೆಂದೂ, ಅವ್ರೇಲಿಯಾನೋನನ್ನು ಅಂಕಲ್ ಎಂದೂ ಮತ್ತು ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ಅಜ್ಜನೆಂದೂ ಕರೆಯುತ್ತಿದ್ದಳು. ಹೀಗಾಗಿ ಇತರರಂತೆ ಅವಳು ರೆಬೇಕ ಬ್ಯುಂದಿಯಾ ಎನ್ನುವ ಹೆಸರಿಗೆ ಯೋಗ್ಯಳಾದಳು. ಅವಳಿಗೆ ದೊರಕಿದ ಅದೊಂದನ್ನೇ ಅವಳು ಸಾಯುವ ತನಕ ಗೌರವದಿಂದ ಉಳಿಸಿಕೊಂಡಿದ್ದಳು.

ರೆಬೇಕಳಿಗೆ ಮಣ್ಣು ತಿನ್ನುವ ದುರಭ್ಯಾಸ ವಾಸಿಯಾದ ಮೇಲೆ ಒಂದು ದಿನ ಅವಳು ಇತರ ಮಕ್ಕಳ ಜೊತೆ ಮಲಗಿದ ನಂತರ ಅವರೊಂದಿಗೆ ಮಲಗಿದ್ದ ಇಂಡಿಯನ್ ಹೆಂಗಸು ಮೂಲೆಯಿಂದ ಬಿಟ್ಟು ಬಿಟ್ಟು ಬರುತ್ತಿದ್ದ ವಿಚಿತ್ರ ಶಬ್ದ ಕೇಳಿ ಅಕಸ್ಮಾತ್ ಎಚ್ಚರಗೊಂಡಳು. ಯಾವುದಾದರೂ ಪ್ರಾಣಿ ರೂಮಿನೊಳಗೆ ಬಂತೋ ಹೇಗೆ ಎಂದು ಗಾಬರಿಗೊಂಡು ನೋಡಿದಾಗ, ತುಯ್ದಾಡುವ ಕುರ್ಚಿಯಲ್ಲಿ ಕುಳಿತಿದ್ದ ರೆಬೇಕ ಬೆರಳು ಚೀಪುತ್ತಿರುವುದು ಕಾಣಿಸಿತು. ಆ ಕತ್ತಲೆಯಲ್ಲಿ ಅವಳ ಕಣ್ಣುಗಳು ಬೆಕ್ಕಿನ ಕಣ್ಣುಗಳ ಹಾಗೆ ಹೊಳೆಯುತ್ತಿದ್ದವು. ಅವಳ ದುರದೃಷ್ಟಕ್ಕೆ ಮಮ್ಮಲ ಮರುಗಿದ ವಿಸಿಟಾಸಿಯೋನ್‌ಗೆ ಆ ಕಣ್ಣುಗಳಲ್ಲಿ ತೀರ ಕೆಟ್ಟ ಕಾಯಿಲೆಯ ಸೂಚನೆ ಕಾಣಿಸಿತು. ಆ ಕಾಯಿಲೆ ಒಡ್ಡಿದ ಭಯ, ರಾಜಕುಮಾರಿ ಮತ್ತು ರಾಜಕುಮಾರರಾಗಿದ್ದ ಅವರ ಪುರಾತನ ಸಾಮ್ರಾಜ್ಯವನ್ನು ಅವಳು ಮತ್ತು ಅವಳ ಸಹೋದರ ಎಂದೆಂದಿಗೂ ತ್ಯಜಿಸುವಂತೆ ಮಾಡಿತ್ತು. ಅದು ನಿದ್ದೆ ಬಾರದ ರೋಗ.

ಇಂಡಿಯನ್ ಕತಾವುರೆ ಬೆಳಿಗ್ಗೆಯೇ ಮನೆಯಿಂದ ಹೊರಗೆ ಹೋಗಿದ್ದ. ಅವನ ತಂಗಿ ಮನೆಯಲ್ಲಿಯೇ ಉಳಿದಿದ್ದಳು. ಏಕೆಂದರೆ ಪ್ರಪಂಚದ ಯಾವ ಮೂಲೆ ಹೊಕ್ಕರೂ ಆ ದರಿದ್ರ ಕಾಯಿಲೆ ಬೆನ್ನಟ್ಟುವ ವಿಧಿಯಾಟವನ್ನು ನಂಬುವ ಅವಳ ಹೃದಯ ಅವಳಿಗೆ ಹೇಳಿತ್ತು. ಯಾರಿಗೂ ವಿಸಿಟಾಸಿಯೋನಳ ಆತಂಕ ಅರ್ಥವಾಗಲಿಲ್ಲ. “ನಾವು ಮಲಗದಿದ್ರೆ ಒಳ್ಳೇದೇ ಆಯ್ತು” ಎಂದು ತಮಾಷೆ ಮಾಡಿದ ಹೊಸೆ ಅರ್ಕಾದಿಯೋ ಬ್ಯುಂದಿಯಾ, “ಆ ರೀತಿಯಿಂದ ನಾವು ಜೀವನದಲ್ಲಿ ಮತ್ತಷ್ಟನ್ನ ಪಡೀಬಹುದು” ಎಂದ. ಆದರೆ ಆ ಇಂಡಿಯನ್ ಹೆಂಗಸು ಆ ಕಾಯಿಲೆಗೆ ಸಂಬಂಧಿಸಿದ ಭಯಾನಕವಾದದ್ದನ್ನು ವಿವರಿಸಿದಳು. ದೇಹಕ್ಕೆ ದಣಿವಾಗುವುದೇ ಅರಿವಾಗುವುದಿಲ್ಲವಾದ್ದರಿಂದ, ನಿದ್ದೆ ಬರುವ ಸಾಧ್ಯತೆಯಿಲ್ಲದೆ, ಅದಕ್ಕಿಂತ ಹೆಚ್ಚು ಕಠೋರವಾದ ಪರಿಣಾಮ ಉಂಟಾಗುತ್ತದೆ; ಅದು ನೆನಪಿನ ನಾಶ. ಅವಳ ಮಾತಿನ ಅರ್ಥವೇನೆಂದರೆ ಅದರ ಪ್ರಭಾವಕ್ಕೆ ಒಳಗಾದವನಿಗೆ ಬಾಲ್ಯದ ನೆನಪು ಅಳಿಸಿ ಹೋಗಲು ಪ್ರಾರಂಭವಾಗುತ್ತದೆ. ಅನಂತರ ಹೆಸರುಗಳು ಮತ್ತು ವಸ್ತುಗಳ ಪರಿಗಣನೆ, ಕೊನೆಗೆ ಜನರ ಗುರುತು, ಅಲ್ಲದೆ ತನ್ನ ಬಗ್ಗೆಯೇ ಅರಿವು ಕಡಿಮೆಯಾಗುವುದರ ಜೊತೆಗೆ ಭೂತಕಾಲವೇ ಇಲ್ಲದೆ ಹೋಗುವ ಪೆದ್ದನಾಗುತ್ತಾನೆ. ಹೊಸೆ ಅರ್ಕಾದಿಯೋ ಬ್ಯುಂದಿಯಾ ನಗುತ್ತ ಇದೊಂದು ಇಂಡಿಯನ್‌ರ ಮೂಢನಂಬಿಕೆಯಿಂದ ಹುಟ್ಟಿಕೊಂಡ ಕಾಯಿಲೆ ಎಂದು ತಿಳಿದ. ಆದರೆ ಕ್ಷೇಮವಾಗಿರಲು ಬಯಸಿದ ಉರ್ಸುಲಾ ರೆಬೇಕಳನ್ನು ಇತರೆ ಮಕ್ಕಳಿಂದ ದೂರವಿರಿಸಿದಳು.

ಕೆಲವು ವಾರಗಳದ ಮೇಲೆ, ವಿಸಿಟಾಸಿಯೋನ್ ತಿಳಿಸಿದ ಭಯ ಕರಗಿತೆಂದು ತೋರಿದರೂ ಹೊಸೆ ಅರ್ಕಾದಿಯೋ ಬ್ಯುಂದಿಯಾ ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿದ. ಎಚ್ಚರದಿಂದಿದ್ದ ಉರ್ಸುಲಾ ವಿಷಯವೇನೆಂದು ಕೇಳಿದಳು. ಅದಕ್ಕೆ, “ನಾನು ಪ್ರುಡೆನ್ಸಿಯೋ ಬಗ್ಗೆ ಯೋಚ್ನೆ ಮಾಡ್ತಿದೀನಿ” ಎಂದ. ಅವರಿಬ್ಬರೂ ಅರೆಗಳಿಗೆ ಕಣ್ಣು ಮುಚ್ಚಲಿಲ್ಲ. ಆದರೆ ಮಾರನೆಯ ದಿನ ಎಷ್ಟು ಹಗುರೆನಿಸಿತ್ತೆಂದರೆ ಕಳೆದ ಕೆಟ್ಟ ರಾತ್ರಿಯನ್ನು ಮರೆತು ಬಿಟ್ಟಿದ್ದರು. ಇಡೀ ರಾತ್ರಿ ಉರ್ಸುಲಾಳ ಹುಟ್ಟು ಹಬ್ಬಕ್ಕೆ ಕೊಡಬೇಕೆಂದು ಪದಕವೊಂದನ್ನು ಮಾಡುತ್ತ ಲ್ಯಾಬೊರೇಟರಿಯಲ್ಲಿ ಕಳೆದಿದ್ದರೂ ಕೂಡ ತಾನು ಆರಾಮಾಗಿದ್ದೇನೆಂದು ಊಟದ ಸಮಯದಲ್ಲಿ ಅವ್ರೇಲಿಯಾನೋ ಹೇಳಿz. ಅವರಿಗೆ ಮೂರು ದಿನವಾದರೂ ಮಲಗಬೇಕಾದ ವೇಳೆಯಲ್ಲಿ ನಿದ್ದೆ ಬರುತ್ತಿಲ್ಲವೆಂದು ತೀವ್ರವಾಗಿ ಅನ್ನಿಸಲೇ ಇಲ್ಲ. ಅನಂತರ ಅವರಿಗೆ ನಿದ್ದೆ ಇಲ್ಲದೆ ತಾವು ಐವತ್ತು ಗಂಟೆಗಳನ್ನು ಕಳೆದದ್ದು ಅರಿವಾಯಿತು.

“ಮಕ್ಕಳು ಕೂಡ ಮಲಗಿಲ್ಲ” ಎಂದು ವಿಧಿಯನ್ನು ನೆಚ್ಚಿದ ಇಂಡಿಯನ್ ಹೆಂಗಸು, “ರೋಗ ಮನೆಯೊಳಗೆ ಹೊಕ್ಕ ಮೇಲೆ ಯಾರೂ ತಪ್ಪಿಸಿಕೊಳ್ಳುವಂತಿಲ್ಲ” ಎಂದಳು.

ಅವರಿಗೆ ನಿಜವಾಗಲೂ ನಿದ್ದೆ ಬಾರದ ರೋಗ ಬಡಿದಿತ್ತು. ತನ್ನ ತಾಯಿಯಿಂದ ಸಸ್ಯಗಳ ಔಷಧವನ್ನು ತಿಳಿದಿದ್ದ ಉರ್ಸುಲಾ ಯಾವುದೋ ಕಷಾಯ ಮಾಡಿ ಎಲ್ಲರಿಗೂ ಕುಡಿಯಲು ಕೊಟ್ಟಳು. ಆದರೆ ಅವರಿಗೆ ನಿದ್ದೆ ಬರಲಿಲ್ಲ. ಅಲ್ಲದೆ ನಿಂತುಕೊಂಡೇ ಕನಸು ಕಾಣುತ್ತ ಇಡೀ ದಿನ ಕಳೆದರು. ಅಂತಹ ಭ್ರಾಮಕ ಸ್ಥಿತಿಯಲ್ಲಿ ಅವರು ತಮ್ಮ ಕನಸುಗಳಲ್ಲಿನ ಚಿತ್ರಗಳನ್ನು ಕಂಡದ್ದಷ್ಟೆ ಅಲ್ಲದೆ ಇತರರ ಕನಸುಗಳ ಚಿತ್ರಗಳನ್ನೂ ಕಂಡರು. ಅದೊಂದು ರೀತಿ ಮನೆಯಲ್ಲಿ ಬರುವ ಜನರಿಂದ ತುಂಬಿರುವ ಹಾU. ಅಡುಗೆ ಮನೆಯಲ್ಲಿ ತುಯ್ದಾಡುವ ಕುರ್ಚಿಯಲ್ಲಿ ಕುಳಿತ ರೆಬೇಕ, ತನ್ನಂತೆಯೇ ಕಾಣುವ ಬಿಳಿ ಶರಟು ಹಾಕಿಕೊಂಡು ಅzರ ಕಾಲರನ್ನು ಬಂಗಾರದ ಗುಂಡಿಗಳಿಂದ ಮುಚ್ಚಿದವನೊಬ್ಬ, ಗುಲಾಬಿ ಹೂ ಗುಚ್ಛವೂಂದನ್ನು ತನಗಾಗಿ ತರುತ್ತಿರುವ ಕನಸು ಕಂಡಳು. ಅವನ ಜೊತೆ ಬಂದ ಹೆಂಗಸು ಗುಲಾಬಿ ಹೂವೊಂದನ್ನು ತೆಗೆದು ಅವಳ ಕೂದಲಿಗೆ ಸಿಕ್ಕಿಸಿದಳು. ಅವರು ರೆಬೇಕಳ ತಂದೆ-ತಾಯಿಯೆಂದು ಉರ್ಸುಲಾಗೆ ತಿಳಿಯಿತು. ಅವರನ್ನು ಗುರುತು ಹಿಡಿಯಲು ಅವಳೆಷ್ಟೇ ಪ್ರಯತ್ನಪಟ್ಟರೂ ಅವರನ್ನು ಇದುವರೆಗೂ ತಾನು ನೋಡಿಲ್ಲ ಎನ್ನುವ ನಂಬಿಕೆ ಅವಳಿಗೆ ಖಚಿತವಾಯಿತು. ಈ ಮಧ್ಯೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ತನ್ನನ್ನು ತಾನೇ ಕ್ಷಮಿಸದಾದ. ಏಕೆಂದರೆ ಮನೆಯಲ್ಲಿ ಬೇಯಿಸಿದ ಮಾಂಸ ಊರಿನಲ್ಲಿ ಇನ್ನೂ ಮಾರಾಟವಾಗುತ್ತಿತ್ತು. ಮಕ್ಕಳು ಹದಿವಯಸ್ಸಿನವರು ಮತ್ತು ಪ್ರಾಯಕ್ಕೆ ಬಂದವರು ಖುಷಿಯಿಂದ, ನಿದ್ದೆ ಬಾರದ ಸ್ಥಿತಿಯ ಹಸಿರು ಹುಂಜ ಮತ್ತು ವಿಶೇಷವಾದ ಪಿಂಕ್ ಮೀನಿನ ರುಚಿಯನ್ನು ಸವಿದರು. ಇದರಿಂದಾಗಿ ಸೋಮವಾರದ ಬೆಳಗು ಎಲ್ಲರನ್ನು ಎಚ್ಚರದಲ್ಲಿ ಕಂಡಿತು. ಪ್ರಾರಂಭದಲ್ಲಿ ಯಾರಿಗೂ ಅದು ವಿಶೇಷವೆನಿಸಲಿಲ್ಲ. ಅದಕ್ಕೆ ವಿರುದ್ಧವಾಗಿ ಮಾಡುವುದಕ್ಕೆ ಮಕೋಂದೋದಲ್ಲ್ಲಿ ಬೇಕಾದಷ್ಟು ಇದ್ದದ್ದರಿಂದ ನಿದ್ದೆ ಬರುತ್ತಿಲ್ಲವೆಂದು ಸಂತೋಷವಾಯಿತು. ಅವ;ರೆ; ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆಂದರೆ ಬಹಳ ಬೇಗನೆ ಅವರಿಗೆ ಮಾಡಲು ಏನೂ ಉಳಿಯಲಿಲ್ಲ. ಅಲ್ಲದೆ ಬೆಳಗಿನ ಜಾವದ ಮೂರು ಗಂಟೆಗೆ ಗಡಿಯಾರಗಳಿಂದ ಹೊರಡುವ ವಾಲ್ಟ್ಸ್ ಸಂಗೀತದ ನಾದದ ಸ್ವರಗಳನ್ನು ಎಣಿಸುತ್ತ ಕೈಕಟ್ಟಿ ನಿಂತಿರುವುದನ್ನು ಕಾಣಬಹುದಿತ್ತು. ದಣಿವಿನಿಂದ ಅಲ್ಲದಿದ್ದರೂ ಕೇವಲ ಹಳೆಯ ನೆನಪಿನಿಂದ ನಿದ್ದೆ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಿ ಸೋತಿದ್ದರು. ಅವರು ಗುಂಪುಗೂಡಿ ಕೊನೆಯಿಲ್ಲದೆ ಮಾತನಾಡುತ್ತ, ಮತ್ತೆ ಮತ್ತೆ ಅದೇ ಜೋಕುಗಳನ್ನು ಗಂಟೆಗಟ್ಟಲೆ ಹೇಳುತ್ತ, ಬಲಿಸುವುದಕ್ಕಾಗಿ ಎಳೆಯದರಲ್ಲೆ ಬೀಜ ತೆಗೆದ ಹುಂಜದ ಕೊನೆಯಿಲ್ಲದ ಆಟವಾಡುತ್ತ ಕಳೆಯುತ್ತಿದ್ದರು. ಆ ಕಥೆಯಲ್ಲಿ ನಿರೂಪಕ ಅಂತಹ ಹುಂಜದ ಕಥೆ ಹೇಳಬೇಕೆನ್ನುತ್ತಿರಾ ಎಂದದ್ದಕ್ಕೆ, ಅವರು ಹೌದು ಎಂದು ಉತ್ತರ ಕೊಟ್ಟರೆ, ನಿರೂಪಕ ತಾನು ಅವರನ್ನು ಹೌದು ಎಂದು ಹೇಳಲು ಕೇಳಲಿಲ್ಲವೆಂದೂ, ಆದರೆ ಅಂತಹ ಹುಂಜದ ಕಥೆ ಹೇಳಬೇಕೆನ್ನುತ್ತೀರಾ ಎಂದದ್ದಕ್ಕೆ, ಇಲ್ಲ ಎಂದು ಉತ್ತರ ಕೊಟ್ಟರೆ ನಿರೂಪಕ ತಾನು ಅವರನ್ನು ಇಲ್ಲ ಎಂದು ಹೇಳಲು ಕೇಳಲಿಲ್ಲವೆಂದೂ, ಆದರೆ ಅಂತಹ ಹುಂಜದ ಕಥೆ ಹೇಳಬೇಕೆನ್ನುತ್ತೀರಾ ಎಂದದ್ದಕ್ಕೆ, ಅವರು ಮೌನವಾಗಿದ್ದರೆ ನಿರೂಪಕ ತಾವು ಅವರನ್ನು ಮೌನವಾಗಿರಲು ಕೇಳಲಿಲ್ಲವೆಂದೂ, ಆದರೆ ಅಂತಹ ಹುಂಜದ ಕಥೆ ಹೇಳಬೇಕೆನ್ನುತ್ತೀರಾ ಎಂದದ್ದಕ್ಕೆ, ಯಾರೂ ಅಲ್ಲಿಂದ ಹೊರಡುವ ಹಾಗಿರಲಿಲ್ಲ, ಏಕೆಂದರೆ ನಿರೂಪಕ ಅವರಿಗೆ ಹೊರಡಿ ಎನ್ನಲಿಲ್ಲವೆಂದೂ, ಆದರೆ ಅಂತಹ ಹುಂಜದ ಕಥೆ ಹೇಳಬೇಕೆನ್ನುತ್ತೀರಾ ಎಂದು ಉದ್ರಿಕ್ತರಾಗುತ್ತ, ಇಡೀ ರಾತ್ರಿಗಳನ್ನು ಕಳೆಯುತ್ತಿದ್ದರು.

ಇಡೀ ಊರಿಗೆ ನಿದ್ದೆ ಬಾರದ ರೋಗ ತಗುಲಿದೆ ಎಂದು ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ತಿಳಿದ ಮೇಲೆ ಅವನು ಸಂಸಾರಗಳ ಮುಖ್ಯಸ್ಥರನ್ನು ಒಟ್ಟು ಮಾಡಿ ತಾನು ಅದರ ಬಗ್ಗೆ ತಿಳಿದುಕೊಂಡಿರುವುದನ್ನು ವಿವರಿಸಿದ. ಅವರೆಲ್ಲರೂ ಆ ಜೌಗು ಪ್ರದೇಶದ ಇತರೆ ಊರುಗಳಿಗೆ ಅದು ಹಬ್ಬದ ಹಾಗೆ ಕೈಗೂಳ್ಳುವ ಕ್ರಮದ ಬಗ್ಗೆ ಒಮ್ಮತಕ್ಕೆ ಬಂದರು. ಅದಕ್ಕಾಗಿ ಅವರು ಗಿಣಿಗಳಿಗೆ ಬದಲಾಗಿ ಅರಬರು ಕೊಟ್ಟಿದ್ದ ಗಂಟೆಗಳನ್ನು ಮೇಕೆಗಳ ಕೊರಳಿನಿಂದ ತೆಗೆದರು. ಅವರು ಆ ಗಂಟೆಗಳನ್ನು ಊರಿನ ಮುಂಬಾಗಿಲಿನಲ್ಲಿ ಪಹರೆಯವರ ವಿನಂತಿ ಮತ್ತು ಉಪದೇಶಗಳನ್ನು ಕೇಳದೆ ಊರೊಳಗೆ ಪ್ರವೇಶ ಮಾಡಲೇಬೇಕೆಂದು ಒತ್ತಾಯಿಸುವವರ ಉಪಯೋಗಕ್ಕೆಂದು ಕಟ್ಟಿದರು. ಮಕೋಂದೋದ ರಸ್ತೆಗಳಲ್ಲಿ ಓಡಾಡುವ ಅಪರಿಚಿತರು ಗಂಟೆ ಬಾರಿಸುತ್ತ ಹೋಗಬೇಕಿತ್ತು. ಏಕೆಂದರೆ ರೋಗಿಗಳಿಗೆ ಅವರು ಆರೋಗ್ಯವಂತರೆಂದು ತಿಳಿಯಬೇಕಾಗಿತ್ತು. ಊರಿನಲ್ಲಿರುವ ಅವರು ಏನನ್ನಾದರೂ ಕುಡಿಯುವುದಕ್ಕಾಗಲೀ, ತಿನ್ನುವುದಕ್ಕಾಗಲೀ ನಿಷೇಧವಿತ್ತು. ಏಕೆಂದರೆ ರೋಗ ಬಾಯಿಯ ಮುಖಾಂತರ ಹರಡುತ್ತದೆ ಎನ್ನುವುದರ ಬಗ್ಗೆ ಅನುಮಾನವಿರಲಿಲ್ಲ. ಅಲ್ಲದೆ ಎಲ್ಲ ತಿಂಡಿ-ತೀರ್ಥಗಳು ನಿದ್ದೆ ಬಾರದ ರೋಗದಿಂದಾಗಿ ಕಲುಷಿತಗೊಂಡಿದ್ದವು. ಈ ವಿಧಾನದಿಂದ ಅವರು ರೋಗವನ್ನು ಆ ಊರಿನ ಪರಿಧಿಯಷ್ಟಕ್ಕೇ ಸೀಮಿತಗೊಳಿಸಿದರು. ಈ ಕ್ರಮ ಎಷ್ಟೊಂದು ಯಶಸ್ವಿಯಾಯಿತೆಂದರೆ ಆಗಿನ ತುರ್ತು ಪರಿಸ್ಥಿತಿಯನ್ನು ಸಹಜವೆಂದು ಪರಿಗಣಿಸಲಾಯಿತು. ಜೀವನದ ಲಯ ಮತ್ತೆ ಸರಿಹೋಗುವ ವ್ಯವಸ್ಥೆಯಾಯಿತಲ್ಲದೆ ನಿದ್ದೆ ಮಾಡುವಂಥ ಕೆಲಸಕ್ಕೆ ಬಾರದ ವಿಷಯದ ಬಗ್ಗೆ ಅನಂತರ ಯಾರೂ ಕೂಡ ತಲೆ ಕೆಡಿಸಿಕೊಳ್ಳಲಿಲ್ಲ.

ಕೆಲವು ತಿಂಗಳ ಕಾಲ ನೆನಪು ಮಾಸದಂತೆ ರಕ್ಷಿಸಿಕೊಳ್ಳುವ ಸೂತ್ರವೂಂದನ್ನು ಕಂಡು ಹಿಡಿದವನು ಅವ್ರೇಲಿಯಾನೋ. ಅವನು ಅದನ್ನು ಕಂಡು ಹಿಡಿದದ್ದು ಆಕಸ್ಮಿಕವಾಗಿ. ನಿದ್ದೆ ಬಾರದ ಸ್ಥಿತಿಗೆ ಒಳಗಾದ ಮೊದಲಿಗರಲ್ಲಿ ಒಬ್ಬನಾದ ಅವನು ಬೆಳ್ಳಿ ಸಂಬಂಧಿತ ಕೆಲಸದಲ್ಲಿ ಸಂಪೂರ್ಣ ಪರಿಣತಿ ಗಳಿಸಿದ. ಒಂದು ದಿನ ಅವನು ಲೋಹಗಳನ್ನು ಹದ ಮಾಡುವ ಸಣ್ಣ ಅಡಿಗಲ್ಲನ್ನು ಹುಡುಕುತ್ತಿದ್ದ, ಅವನಿಗೆ ಅದರ ಹೆಸರು ನೆನಪಾಗಲಿಲ್ಲ. ಅವನ ತಂದೆ ಅದಕ್ಕೆ “ಅಡಿಗಲ್ಲು” ಎಂದು ಹೇಳಿದರು. ಅವ್ರೇಲಿಯಾನೋ ಸಣ್ಣ ಚೀಟಿಯ ಮೇಲೆ ‘ಅಡಿಗಲ್ಲು\’ ಎಂದು ಬರೆದು ಅದಕ್ಕೆ ಅಂಟಿಸಿದ. ಈ ವಿಧಾನದಿಂದ ಇನ್ನು ಮುಂದೆ ಅದನ್ನು ಮರೆಯವುದಿಲ್ಲವೆಂದು ಅವನಿಗೆ ಖಚಿತವಾಯಿತು. ಅವನಿಗೆ ಅದು ಮರೆವಿನ ಮೊದಲ ದಾಖಲಾತಿ ಎಂದು ತಿಳಿದಿರಲಿಲ್ಲ. ಏಕೆಂದರೆ ಆ ವಸ್ತುವಿನ ಹೆಸರು ನೆನಪಿಟ್ಟುಕೊಳ್ಳುವುದು ಕಠಿಣವಾಗಿತ್ತು. ಆದರೆ ಕೆಲವು ದಿನಗಳ ನಂತೆ ಲ್ಯಾಬೊರೇಟರಿಯಲ್ಲಿನ ಹೆಚ್ಚು ಕಡಿಮೆ ಪ್ರತಿಯೊಂದು ವಸ್ತುವಿನ ಹೆಸರನ್ನು ನೆನಪಿಸಿಕೊಳ್ಳುವುದೂ ಕಷ್ಟವೆಂದು ಗೊತ್ತಾಯಿತು. ಅನಂತರ ಅವನು ಒಂದೊಂದಕ್ಕೂ ಅದರ ಮೇಲೆ ಆಯಾ ಹೆಸರನ್ನು ಬರೆದ. ಇದರಿಂದ ಅವನು ಮಾಡಬೇಕಾದದ್ದು ಏನೆಂದರೆ ಅದರಲ್ಲಿದ್ದದ್ದನ್ನು ಓದುವುದು ಮಾತ್ರ. ಅವನ ತಂದೆ ತಮ್ಮ ಬಾಲ್ಯದ ಅತಿ ಮುಖ್ಯವಾದ ಘಟನೆಗಳನ್ನು ಮರೆತೆನೆಂದು ಗಾಬರಿಯಾದಾಗ ಅವ್ರೇಲಿಯಾನೋ ತನ್ನ ವಿಧಾನವನ್ನು ವಿವರಿಸಿದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅದನ್ನು ಇಡೀ ಮನೆಗೆ ಜಾರಿಗೊಳಿಸಿದ. ಆನಂತರ ಇಡೀ ಹಳ್ಳಿಯಲ್ಲಿ ಎಲ್ಲರೂ ಹಾಗೆ ಮಾಡಲು ಒತ್ತಾಯಿಸಿದ. ಇಂಕ್ ಬ್ರಷ್‌ನಿಂದ ಪ್ರತಿಯೊಂದಕ್ಕೂ ಅದರ ಹೆಸರು ಬರೆದ. ಟೇಬಲ್, ಕುರ್ಚಿ, ಬಾಗಿಲು, ಗೋಡೆ, ಹಾಸಿಗೆ, ತಟ್ಟೆ. ಅವನು ಕೊಟ್ಟಿಗೆಗೆ ಹೋಗಿ ಪ್ರಾಣಿಗಳ ಹಾಗೂ ಗಿಡಗಳ ಹೆಸರನ್ನು ಬರೆದ. ಹಸು, ಮೇಕೆ, ಹಂದಿ, ಕೋಳಿ, ಮರಗೆಣಸು, ಬಾಳೆಹಣ್ಣು. ನೆನಪು ಅಳಿಸಿ ಹೋಗುವ ವಿವಿಧ ಸಾಧ್ಯತೆಗಳನ್ನು ಲೆಕ್ಕಹಾಕುತ್ತಿದ್ದ ಅವನಿಗೆ ಮುಂದೊಂದು ದಿನ ವಸ್ತುಗಳ ಮೇಲೆ ಬರೆದ ಹೆಸರುಗಳಿಂದ ಅವುಗಳನ್ನು ಗುರುತಿಸಬಹುದಾದರೂ ಅವುಗಳ ಉಪಯೋಗ ಯಾರಿಗೂ ನೆನಪಾಗದಿರಬಹುದು ಎಂದುಕೊಂಡ. ಅನಂತರ ಅವನು ಮತ್ತಷ್ಟು ವಿಶದವಾಗಿ ವ್ಯಕ್ತಪಡಿಸಿದ. ಅವನು ಹಸುವೊಂದಕ್ಕೆ ತಗುಲಿ ಹಾಕಿದ ಬರಹ, ಮಕೋಂದೋದವರಿಗೆ ನೆನಪಿನ ನಾಶದ ವಿರುದ್ಧ ಹೋರಾಡಲು ಅತ್ಯುತ್ತಮ ಪುರಾವೆ ಒದಗಿಸಿತು. ಇದು ಹಸು, ಅದು ಹಾಲು ಕೊಡಬೇಕಾದರೆ ಪ್ರತಿ ದಿನ ಬೆಳಿಗ್ಗೆ ಹಾಲು ಕರೆಯಬೇಕು. ಕಾಫಿ ಪುಡಿಯೊಂದಿಗೆ ಬೆರೆಸಿ ಕಾಫಿ ಮಾಡಲು ಹಾಲನ್ನು ಕಾಯಿಸಬೇಕು. ಈ ರೀತಿ ಅವರು ಜಾರಿ ಹೋಗುತ್ತಿದ್ದ ವಾಸ್ತವದಲ್ಲಿ ಸೆರೆ ಹಿಡಿದ ಪದಗಳಿಂದಾಗಿ ಬದುಕುತ್ತಿದ್ದರು. ಆದರೆ ಅವುಗಳ ಮೌಲ್ಯವನ್ನು ಮರೆತ ಕೂಡಲೆ ಅದು ತಪ್ಪಿ ಹೋಗುತ್ತಿತ್ತು.

ಜೌಗು ಪ್ರದೇಶಕ್ಕೆ ಹೋಗುವ ದಾರಿಯ ಮಧ್ಯದಲ್ಲಿ ಅವರು ‘ಮಕೋಂದೋ\’ ಎಂಬ ಬೋರ್ಡ್ ಹಾಕಿದರು ಮತ್ತು ಮುಖ್ಯ ರಸ್ತೆಯಲ್ಲಿ ‘ದೇವರಿದ್ದಾನೆ\’ ಎಂದು ಮತ್ತೊಂದು. ಪ್ರತಿಯೊಂದು ಮನೆಯಲ್ಲಿಯೂ ವಸ್ತುಗಳ ಹೆಸರು ಮತ್ತು ಅವುಗಳ ಭಾವಗಳ ಸೂತ್ರಗಳನ್ನು ಬರೆಯಲಾಗಿತ್ತು. ಇಡೀ ವ್ಯವಸ್ಥೆಗೆ ಎಷ್ಟೊಂದು ಎಚ್ಚರ ಮತ್ತು ನೈತಿಕ ಸ್ಥೈರ್ಯ ಬೇಕಿತ್ತೆಂದರೆ ಅವರಲ್ಲಿ ಅನೇಕರು ಕಲ್ಪಿತ ವಾಸ್ತವಕ್ಕೆ ಒಳಗಾಗಿದ್ದರು. ಅದು ಕೂಡ ಅವರೇ ನಿರ್ಮಿಸಿಕೊಂಡದ್ದು. ಅದರ ಆಚರಣೆ ಕಷ್ಟವಾದರೂ ಅದರಿಂದ ಅನುಕೂಲವಿತ್ತು. ಅದರ ನಿಗೂಢತೆಯನ್ನು ಜನಪ್ರಿಯಗೊಳಿಸಲು ಕಾರ್ಡುಗಳಿಂದ ಭವಿಷ್ಯವನ್ನು ಓದಿ ತಿಳಿಸುತ್ತಿದ್ದಂತೆ, ಭೂತವನ್ನು ಓದುವ ತಂತ್ರವನ್ನು ಪರಿಕಲ್ಪಿಸಿಕೊಂಡ ಪಿಲರ್ ಟೆರ್‍ನೆರಾಳ ಕೊಡುಗೆ ತುಂಬ ಹೆಚ್ಚಿಗೆ ಇತ್ತು. ನಿದ್ದೆ ಬಾರದವರು ಇಂತಹ ಕಾರ್ಡುಗಳಿಂದ ಕಟ್ಟಿದ ಅನಿರ್ದಿಷ್ಟವಾದ ಪರ್ಯಾಯ ಪ್ರಪಂಚಲ್ಲಿ ಇರತೊಡಗಿದರು. ಅದರಲ್ಲಿ ತಂದೆಯೊಬ್ಬನನ್ನು ಏಪ್ರಿಲ್‌ನಲ್ಲಿ ಬಂದ ಕಪ್ಪಗಿನ ಮನುಷ್ಯನೆಂದೂ, ತಾಯಿಯನ್ನು ಎಡಗೈಗೆ ಬಂಗಾರದ ಕಡಗ ಹಾಕಿಕೊಂಡಿದ್ದ ಹೆಂಗಸೆಂದೂ, ಅಲ್ಲದೆ ಹುಟ್ಟಿದ ದಿನವನ್ನು ಹಿಂದಿನ ಮಂಗಳವಾರ ಗುಲ್ಮ ಮರದಲ್ಲಿ ಬಣ್ಣದ ಗರಿಗಳ ಪಕ್ಷಿ ಹಾಡಿದ ದಿನವೆಂದೂ ನೆನಪಿಸಿಕೊಳ್ಳಲಾಗುತ್ತಿತ್ತು. ಕ್ರಮೇಣ ಈ ಸಾಧಾರಣ ವಿಧಾನಗಳು ನಿಷ್ಫಲವಾಗುತ್ತಿದ್ದಂತೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಹಿಂದೆ ತಾನು ಜಿಪ್ಸಿಗಳ ಅದ್ಭುತ ಆವಿಷ್ಕಾರಗಳನ್ನು ನೆನಪಿನಲ್ಲಿ ಇಟ್ಟುಕೂಳ್ಳಲು ಉದ್ದೇಶಿಸಿದ್ದ ನೆನಪಿನ ಮೆಷಿನ್ ನಿರ್ಮಿಸಲು ನಿರ್ಧರಿಸಿದ. ಪ್ರತಿದಿನ ಬೆಳಿಗ್ಗೆ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಆ ತನಕ ಪಡೆದುಕೊಂಡಿರುವ eನವನ್ನೆಲ್ಲ ಪುನರಾವಲೋಕನ ಮಾಡುವ ಸಾಧ್ಯತೆಯ ಸೂತ್ರವನ್ನು ಆ ಉಪಕರಣ ಹೊಂದಿತ್ತು. ಅವನು ಅದನ್ನು ತಿರುಗಣಿಯಂತೆ ಸುತ್ತುವ ಪದಕೋಶವನ್ನು, ಅಕ್ಷದ ಮೇಲಿನ ವ್ತಕ್ತಿಯೊಬ್ಬ ಸನ್ನೆ ಕೋಲು ಆಡಿಸಿದಾಗ, ಅತ್ಯಲ್ಪ ಕಾಲದಲ್ಲಿ ಜೀವನದ ಅಗತ್ಯ ಅಂಶಗಳೆಲ್ಲ ಅವನ ಕಣ್ಣ ಮುಂದೆ ಹಾದು ಹೋಗುವ ಹಾಗೆ ಪರಿಕಲ್ಪಿಸಿದ. ಅವನು ಅಂತಹ ಸುಮಾರು ಹದಿನಾಲ್ಕು ಸಾವಿರದಷ್ಟನ್ನು ಬರೆಯಲು ಸಫಲನಾದಾಗ ಜೌಗು ಪ್ರದೇಶದ ರಸ್ತೆಯಲ್ಲಿ ಹಗ್ಗದಿಂದ ಕಟ್ಟಿದ್ದ ಉಬ್ಬಿದ ಸೂಟ್‌ಕೇಸನ್ನು ಹೊತ್ತುಕೊಂಡು, ಕಪ್ಪು ಬಟ್ಟೆ ಹೊದಿಸಿದ, ಸಣ್ಣಗೆ ಗಂಟೆ ಶಬ್ದ ಮಾಡುತ್ತಿದ್ದ ಗಾಡಿಯೊಂದನ್ನು ಎಳೆಯುತ್ತಿದ್ದ ವಯಸ್ಸಾದ ವಿಚಿತ್ರ ಮನುಷ್ಯನೊಬ್ಬ ಕಾಣಿಸಿಕೊಂಡ. ಅವನು ನೇರವಾಗಿ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಮನೆಗೆ ಹೋದ.

ವಿಸಿಟಾಸಿಯೋನ್ ಬಾಗಿಲು ತೆರೆದಾಗ ಅವನನ್ನು ಗುರುತಿಸಲಿಲ್ಲ ಮತ್ತು ಮರೆವಿನ ಮರಳಿನಲ್ಲಿ ಕುಸಿದು ಹೋಗುತ್ತಿದ್ದ ಆ ಊರಿನಲ್ಲಿ ಯಾವುದನ್ನೂ ಮಾರುವಂತಿಲ್ಲ ಎನ್ನು?ಜಜಿ;ದನ್ನು ಅರಿಯದ ಅವಳು ಅವನು ಏನನ್ನೋ ಮಾರಲು ಬಂದವನು ಎಂದು ತಿಳಿದಳು. ಅವನು ವ;ಪ್ಪಿನಿಂದ ಕುಗ್ಗಿಹೋದ ವ್ಯಕ್ತಿಯಾಗಿದ್ದ. ಅವನ ಧ್ವನಿ ಉಡುಗಿ ಅಸ್ಪಷ್ಟವಾಗಿದ್ದರೂ ಮತ್ತು ಅವನ ಕೈಗಳಿಗೆ ವಸ್ತುಗಳಿರುವುದು ಅರಿವಾಗದಿದ್ದರೂ ಅವನು ಜನರಿಗೆ ನಿದ್ದೆ ಬರುವ ಹಾಗೂ ನೆನಪುಗಳಿರುವ ಪ್ರದೇಶದಿಂದ ಬಂದವನೆಂದು ಸುಸ್ವಷ್ಟವಾಗಿತ್ತು. ಅವನು ಹಜಾರದಲ್ಲಿ ಕಪ್ಪು ಬಣ್ಣದ ಹ್ಯಾಟ್‌ನಿಂದ ಗಾಳಿ ಬೀಸಿಕೊಳ್ಳುತ್ತ ಗೋಡೆಗಳ ಮೇಲೆ ಅಂಟಿಸಿದ ಗುರುತಿನ ವಿವರಗಳನ್ನು ಕನಿಕರದಿಂದ ಓದುತ್ತ ಕುಳಿತಿದ್ದನ್ನು ಹೊಸೆ ಅರ್ಕಾದಿಯೋ ಬ್ಯುಂದಿಯಾ ನೋಡಿದ. ಹಿಂದೆಂದೋ ತಾನು ಕಂಡಿರಬಹುದಾದ ಮತ್ತು ಈಗ ಅವನ ನೆನಪಿಲ್ಲದೆ ಹೋದರೂ ಅವನಲ್ಲಿ ಹೆಚ್ಚಿನ ಆತ್ಮೀಯತೆಯನ್ನು ವ್ಯಕ್ತಪಡಿಸಿದ. ಆದರೆ ಆಗಂತುಕನಿಗೆ ಅವನ ಕಷ್ಟದ ಅರಿವಿತ್ತು. ಅವನಿಗೆ ತನ್ನನ್ನು ತಾನೇ ಮರೆತಂತೆ ಅನ್ನಿಸಿತು. ಅದು ವಾಸಿಯಾಗದ ಹೃದಯದಾಳದ ಮರೆವಲ್ಲ. ಅದು ಬೇರೆ ರೀತಿಯ ಮರೆವು. ಹೆಚ್ಚು ಕ್ರೂರ ಹಾಗೂ ಮಾರ್ಪಡಿಸಲಾಗದ್ದು. ಅವನಿಗೆ ಅದು ತಿಳಿದಿತ್ತು. ಏಕೆಂದರೆ ಅದು ಸಾವಿನ ಮರೆವು ಎಂದು ಅನಂತರ ಅವನಿಗೆ ಗೊತ್ತಾಯಿತು. ಎಂತೆಂಥದೋ ವಸ್ತುಗಳನ್ನು ಒತ್ತೊತ್ತಿ ಇಟ್ಟಿದ್ದ ಸೂಟ್‌ಕೇಸನ್ನು ತೆಗೆದು ಅದರೊಳಗಿದ್ದ ಕೆಲವು ಫ್ಲಾಸ್ಕ್‌ಗಳಿದ್ದ ಸಣ್ಣ ಪೆಟ್ಟಿಗೆಯನ್ನು ಹೊರತೆಗೆದ. ಅವನು ಹೊಸೆ ಅರ್ಕಾದಿಯೋ ಬ್ಯುಂದಿಯಾನಿಗೆ ತೆಳು ಬಣ್ಣದೊಂದನ್ನು ಕುಡಿಯಲು ಕೊಟ್ಟ. ತಕ್ಷಣವೇ ಅವನ ನೆನಪಿನಲ್ಲಿ ಬೆಳಕು ಹೊಳೆಯಿತು. ಅಳು ಉಕ್ಕಿ ಅವನ ಕಣ್ಣುಗಳು ಹನಿಗೂಡುವುದಕ್ಕೆ ಮೊದಲೆ ವಸ್ತುಗಳ ಮೇಲೆ ಬರೆದ ಹೆಸರುಗಳು, ಗೋಡೆಗಳ ಮೇಲಿನ ಅರ್ಥವಿಲ್ಲದ ಬರಹ ಇವುಗಳಿಂದ ನಾಚಿ ತಾನು ಅಸಂಗತವಾದ ರೂಮಿನಲ್ಲಿರುವುದನ್ನು ಗಮನಿಸಿದ ಮತ್ತು ಸಂತೋಷದ ಝಳಪಿನಿಂದ ಹೊಸಬನನ್ನು ಗುರುತಿಸಿದ. ಅವನು ಮೆಲ್‌ಕಿಯಾದೆಸ್ ಆಗಿದ್ದ.

ನೆನಪು ವಾಪಸು ಬಂದದ್ದನ್ನು ಮಕೋಂದೋ ಆಚರಿಸುತ್ತಿದ್ದ ಹಾಗೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತು ಮೆಲ್‌ಕಿಯಾದೆಸ್ ತಮ್ಮ ಹಳೆಯ ಸ್ನೇಹಕ್ಕಂಟಿದ ಧೂಳನ್ನು ಕೊಡವಿದರು. ಆ ಜಿಪ್ಸಿಗೆ ಆ ಊರಿನಲ್ಲೇ ಇರುವ ಮನಸ್ಸಿತ್ತು. ಅವನು ನಿಜವಾಗಿಯೂ ಸಾವನ್ನು ಮುಟ್ಟಿ ಬಂದಿದ್ದ. ಅವನು ಹಿಂತಿರುಗಿ ಬಂದದ್ದೇಕೆಂದರೆ ಅವನಿಗೆ ಏಕಾಂತ ಸಹಿಸುವುದು ಅಸಾಧ್ಯವಾಗಿತ್ತು. ತನ್ನ ತಂಡದಿಂದ ನಿರಾಕರಿಸಲ್ಪಟ್ಟು ಜೀವನಕ್ಕೆ ಪ್ರಾಮಾಣಿಕನಾದ ಅವನು ಸಾವು ಕಾಣದ ಊರೊಂದರಲ್ಲಿ ವಿಶಿಷ್ಟ ಲ್ಯಾಬೊರೇಟರಿಯ ಪ್ರಕ್ರಿಯೆಗಳಲ್ಲಿ ಸಂಪೂರ್ಣ ತೊಡಗಿಕೊಳ್ಳುವುದಕ್ಕೆ, ಪ್ರಪಂಚದಲ್ಲಿ ಎಲ್ಲೋ ಮೂಲೆಯಲ್ಲಿರುವ ಸ್ಥಳದಲ್ಲಿ ಆಶ್ರಯ ಪಡೆಯಲು ನಿರ್ಧರಿಸಿದ್ದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅಂಥದೊಂದು ಆವಿಷ್ಕಾರದ ಬಗ್ಗೆ ಕೇಳಿರಲಿಲ್ಲ. ಅವನು ಮತ್ತು ಅವನ ಇಡೀ ಸಂಸಾರ ಕೊನೆಯಿಲ್ಲದ ಕಾಲದುದ್ದಕ್ಕೂ ಮಿರುಗುವ ಬಣ್ಣದ ಲೋಹಕ್ಕೆ ಅಂಟಿಕೊಂಡಿದ್ದವರು. ಅದರಿಂದ ಅವನು ದಂಗು ಬಡಿದು ಮೂಕನಾದ. ಆ ದಿನ ಹಳೆಯ ರೀತಿಯಲ್ಲಿ ಮಾಡಿದ ಛಾಯಾಚಿತ್ರದಲ್ಲಿ, ಹೊಳೆವ ಬಿಳಿಗೂದಲ ಹೊಸೆ ಅರ್ಕಾದಿಯೋ ಬ್ಯುಂದಿಯಾ, ತಾಮ್ರದ ಗುಂಡಿಯಿಂದ ಶರಟಿಗೆ ಕಾಲರ್ ಹಾಕಿಕೊಂಡು ಸೌಮ್ಯ ಬೆರೆತ ಬೆರಗಿನ ಭಾವವನ್ನು ಪ್ರಕಟಿಸಿದ್ದನ್ನು ನೋಡಿ ಉರ್ಸುಲಾ ನಗುತ್ತ, ಅದನ್ನು ‘ಬೆದರಿದ ಜನರಲ್\’ ಎಂದು ವಿವರಿಸಿದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಭಾವಚಿತ್ರ ತೆಗೆದ ಆ ಡಿಸೆಂಬರ್‌ನ ದಿನ ನಿಜಕ್ಕೂ ಬೆದರಿದ್ದನೇಕೆಂದರೆ ಅವನ ಹೆಸರು ಲೋಹದ ಫಲಕದ ಮೇಲೆ ಉಳಿದು ನಿಧಾನವಾಗಿ ಜನರು ಸೊರಗಿ ಹೋಗುತ್ತಾರೆಂದು. ಆದರೆ ಪದ್ಧತಿಯಲ್ಲಿ ತಿರುಗು ಮುರುಗು ಮಾಡಿದ ಉರ್ಸುಲಾ ಅವನ ತಲೆಯೊಳಗಿಂದ ಈ ವಿಷಯ ತೊಲಗುವಂತೆ ಮಾಡಿದಳಲ್ಲದೆ ಹಳೆಯ ಕಹಿಯನ್ನೆಲ್ಲ ಮರೆತು ಮೆಲ್‌ಕಿಯಾದೆಸ್‌ನನ್ನು ಮನೆಯಲ್ಲಿ ಇರುವುದಕ್ಕೆ ಬಿಡಲು ನಿರ್ಧರಿಸಿದಳು. ಆದರೆ ಅವಳು ಮನೆಯ ಭಾವ ಚಿತ್ರ ತೆಗೆಯುವುದಕ್ಕೆ ಅನುಮತಿ ಕೊಡಲಿಲ್ಲ. ಏಕೆಂದರೆ (ಅವಳ ಮಾತಿನ ಪ್ರಕಾರ) ಅವಳು ತನ್ನ ಮೊಮ್ಮಕ್ಕಳ ದೃಷ್ಟಿಯಲ್ಲಿ ನಗೆಪಾಟಲಾಗುವುದು ಬೇಡವಾಗಿತ್ತು. ಆ ದಿನ ಬೆಳಿಗ್ಗೆ ಅವರಿಗೆ ಒಳ್ಳೆಯ ಬಟ್ಟೆ ತೊಡಿಸಿ, ಮುಖಕ್ಕೆ ಪೌಡರ್ ಹಚ್ಚಿ ಮೆಲ್‌ಕಿಯಾದೆಸ್‌ನ ಅದ್ಭುತ ಕ್ಯಾಮೆರಾದ ಎದುರು ಅಲ್ಲಾಡದೆ ಎರಡು ನಿಮಿಷ ನಿಂತುಕೊಳ್ಳಲು ಅನುವಾಗುವಂತೆ ಒಂದೊಂದು ಚಮಚ ಸಿರಪ್ ಕುಡಿಯಲು ಕೊಟ್ಟಿದ್ದಳು. ಇಡೀ ಸಂಸಾರದ ಇದ್ದ ಒಂದೇ ಒಂದು ಛಾಯಾಚಿತ್ರದಲ್ಲಿ ಕಪ್ಪು ವೇಷವನ್ನು ಹಾಕಿಕೊಂಡ ಅವ್ರೇಲಿಯಾನೋ, ಅಮರಾಂತ ಮತ್ತು ರೆಬೇಕರ ನಡುವೆ ನಿಂತಿದ್ದ. ವರ್ಷಗಳ ನಂತರ ಅವನು ಗುಂಡಿಕ್ಕುವ ತಂಡದೆದುರು ನಿಂತಾಗ ಅದೇ ಠೀವಿ, ಗತ್ತು ಮತ್ತು ನೋಟವನ್ನು ಹೊಂದಿದವನಾಗಿದ್ದ. ಆದರೂ ಅವನಿಗೆ ತನ್ನ ದುರ್ವಿಧಿಯ ಸುಳಿವು ಸಿಕ್ಕಿರಲಿಲ್ಲ. ಅವನೊಬ್ಬ ಪರಿಣಿತ ಅಕ್ಕಸಾಲಿಗನಾಗಿದ್ದ. ಅವನು ಸೂಕ್ಷ್ಮತರ ಕೆಲಸಕ್ಕೆ ಇಡೀ ಜೌಗು ಪ್ರದೇಶದಲ್ಲೆಲ್ಲ ಹೆಸರುವಾಸಿಯಾಗಿದ್ದ. ವರ್ಕ್‌ಶಾಪಿನಲ್ಲಿ ಮೆಲ್‌ಕಿಯಾದೆಸ್‌ನ ಸಂಗಡ ಇದ್ದ ಅವನು ಉಸಿರಾಡುತಿದ್ದದ್ದೂ ಕೇಳಿಸುತ್ತಿರಲಿಲ್ಲ. ಅವನ ತಂದೆ ಮತ್ತು ಮೆಲ್‌ಕಿಯಾದೆಸ್‌ರಿಂದ ಫ್ಲಾಸ್ಕ್‌ಗಳು, ಟ್ರೇಗಳು ಹಾಗೂ ಚೆಲ್ಲಿದ ಆಸಿಡ್ ಮತ್ತು ಬೆಳ್ಳಿಯ ರಾಸಾಯನಿಕಗಳು ಹೊಸ ತಿರುವುಗಳನ್ನು ಪಡೆಯುತ್ತ, ಪ್ರತಿಕ್ಷಣವೂ ಬೇರೆಯದಕ್ಕೆ ಹೊರಳುವ ಸದ್ದು ಗದ್ದಲದ ನಡುವೆ, ನಾಸ್ಟರ್‌ಡಾಮಸ್‌ನ ಭವಿಷ್ಯ ನುಡಿಗಳ ವ್ಯಾಖ್ಯಾನ ಮಾಡುತ್ತಿದ್ದರು. ತಾನು ಮಾಡುತ್ತಿದ್ದ ಕೆಲಸದ ಬಗ್ಗೆ ಸಮರ್ಪಣಾ ಮನೋಭಾವದಿಂದ ಮತ್ತು ಗಮನವಿಟ್ಟು ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳಿಂದ ಅವ್ರೇಲಿಯಾನೋಗೆ ಸ್ವಲ್ಪ ಕಾಲದಲ್ಲಿಯೇ ರುಚಿಕರವಾದ ಮಾಂಸದ ತಿನಿಸುಗಳನ್ನು ಮಾರಿ ಸಂಪಾದಿಸುತ್ತಿದ್ದ ಉರ್ಸುಲಾಗಿಂತ ಹೆಚ್ಚು ಹಣ ಸಂಪಾದಿಸಲು ಸಾಧ್ಯವಾಯಿತು. ಆದರೆ ಬೆಳೆದು ದೊಡ್ಡವನಾದ ಅವನಿಗೆ ಹೆಣ್ಣಿನ ಸಂಗ ಇಲ್ಲದಿರುವುದು ವಿಚಿತ್ರವೆನಿಸಿತು. ನಿಜ, ಅವನಿಗೆ ಯಾರೂ ಇರಲಿಲ್ಲ.

ಕೆಲವು ತಿಂಗಳಿನ ನಂತರ ಪುರಾತನ ಅಲೆಮಾರಿ ಹಾಗೂ ಆಗಾಗ ಮಕೋಂದೋ ಮೂಲಕ ತಾನು ಸಂಯೋಜಿಸಿದ ಹಾಡುಗಳನ್ನು ಹಂಚುತ್ತ ಹಾದು ಹೋಗುತ್ತಿದ್ದ ಸುಮಾರು ಇನ್ನೂರು ವರ್ಷದ ಫ್ರಾನ್ಸಿಸ್ಕೋ ಕಾಣಿಸಿಕೊಂಡ. ಅವನು ಮನಾರ್‌ನಿಂದ ಜೌಗು ಪ್ರದೇಶದ ಅಂಚಿನ ನಡುವೆ ನಡೆದ ಮಾರ್ಗದಲ್ಲಿದ್ದ ಅನೇಕ ಊರುಗಳಲ್ಲಿ ನಡೆಯುತ್ತಿದ್ದುದ್ದನ್ನು ವಿಸ್ತಾರವಾಗಿ ಹೇಳಿದ. ಇದರಿಂದ ಯಾರಿಗಾದರೂ ಸಂದೇಶ ಕಳಿಸಬೇಕಾದಲ್ಲಿ ಅಥವಾ ಸಾರ್ವಜನಿಕರಿಗೆ ತಿಳಿಸಬೇಕಾದ ಘಟನೆಯಿದ್ದಲ್ಲಿ, ಹಾಗೆ ಮಾಡಬೇಕೆನ್ನುವರು ಎರಡು ಸೆಂಟ್ ಕೊಟ್ಟು ಅದನ್ನು ಪಟ್ಟಿಯಲ್ಲಿ ಸೇರಿಸಬೇಕೆಂದು ಹೇಳಿದ. ಹೀಗೆಯೇ ಉರ್ಸುಲಾ ತನ್ನ ಮಗ ಹೊಸೆ ಅರ್ಕಾದಿಯೋನ ಬಗ್ಗೆ ಏನಾದರೂ ಹೇಳುತ್ತಾನೆಂಬ ನಿರೀಕ್ಷೆಯಿಂದ ಅವನ ಹಾಡುಗಳನ್ನು ಕೇಳುತ್ತಿದ್ದಾಗ ತನ್ನ ತಾಯಿಯ ಸಾವಿನ ಬಗ್ಗೆ ತಿಳಿದದ್ದು. ಅವನು ಅದನ್ನು ಕರೆದಿದ್ದ, ಏಕೆಂದರೆ ಹಿಂದೊಂದು ಸಲ ಅವನು ಆಶು ಸ್ವರ್ಧೆಯಲ್ಲಿ ದೆವ್ವವೊಂದನ್ನು ಸೋಲಿಸಿದ್ದ. ಯಾರಿಗೂ ಹೆಸರು ಗೊತ್ತಿರದಿದ್ದ ಅದು ನಿದ್ದೆ ಬಾರದ ರೋಗದ ದಿನಗಳಲ್ಲಿ ಮಕೋಂದೋದಿಂದ ಕಾಣೆಯಾಗಿತ್ತು. ಅನಂತರ ಅವನು ಒಂದು ರಾತ್ರಿ ಕತಾವುರೆಯ ಅಂಗಡಿಯಲ್ಲಿ ಕಾಣಿಸಿಕೊಂಡ. ಪ್ರಪಂಚದಲ್ಲಿ ಏನಾಗಿದೆ ಎಂದು ತಿಳಿಯುವುದಕ್ಕಾಗಿ ಇಡೀ ಊರು ಅವನು ಹೇಳುವುದನ್ನು ಕೇಳಲು ಹೋಯಿತು. ಆ ಸಂದರ್ಭದಲ್ಲಿ ಹೆಂಗಸೊಬ್ಬಳು ಅವನ ಜೊತೆ ಬಂದಿದ್ದಳು. ಅವಳೆಷ್ಟು ದಡೂತಿ ಹೆಂಗಸೆಂದರೆ ತುಯ್ದಾಡುವ ಕುರ್ಚಿಯಲ್ಲಿ ಕುಳಿತಿದ್ದ ಅವಳನ್ನು ನಾಲ್ಕು ಜನ ಇಂಡಿಯನ್ನರು ಹೊತ್ತುಕೊಂಡು ಬಂದಿದ್ದರು. ಜೊತೆಗೆ ಅವಳಿಗೆ ಬಿಸಿಲಿಗೆ ಕೊಡೆ ಹಿಡಿದು, ಎಲ್ಲೋ ದೃಷ್ಟಿ ನೆಟ್ಟ, ಹರೆಯದ ಐರೋಪ್ಯ ಹಾಗೂ ನೀಗ್ರೋ ಮಿಶ್ರ ಜನಾಂಗದ ಹುಡುಗಿಯೊಬ್ಬಳಿದ್ದಳು. ಆ ರಾತ್ರಿ ಅವ್ರೇಲಿಯಾನೋ ಕತಾವುರೆಯ ಅಂಗಡಿಗೆ ಹೋದ. ಸುತ್ತ ವೃತ್ತಾಕಾರದಲ್ಲಿದ್ದವರ ಮಧ್ಯೆ ಕುಳಿತ ಅವನು ಗೋಸುಂಬೆಯಂತೆ ಕಂಡ. ಅವನು ಗಯಾನಾದಲ್ಲಿ ಸರ್ ವಾಲ್ಟರ್ ರ್‍ಯಾಲಿ ಕೊಟ್ಟಿದ್ದ ಅಕಾರ್ಡಿಯನ್ ಬಾರಿಸುತ್ತ, ಹಳೆಯದಾದ, ಈಗ ಚಾಲ್ತಿಯಲ್ಲಿ ಇರದ ರಾಗದಲ್ಲಿ ಸುದ್ದಿಯನ್ನು ಹಾಡುತ್ತಿದ್ದ. ಅದರ ಲಯಕ್ಕೆ ಅನುಗುಣವಾಗಿ ನಡೆಯುತ್ತಿದ್ದ ಅವನ ಭಾರಿ ಪಾದಗಳಲ್ಲಿ ಪೆಟ್ಲುಪ್ಪಿನಿಂದಾಗಿ ಬಿರುಕುಗಳಿತ್ತು. ಜನರು ಬಂದು ಹೋಗಿ ಮಾಡುತ್ತಿದ್ದ ಹಿಂದಿನ ಬಾಗಿಲ ಎದುರು ತುಯ್ದಾಡುವ ಕುರ್ಚಿಯಲ್ಲಿ ಮೌನವಾಗಿ ಕುಳಿತ ಹೆಂಗಸು ಗಾಳಿ ಬೀಸಿಕೊಳ್ಳುತ್ತಿದ್ದಳು. ಕಿವಿಯಲ್ಲಿ ಗುಲಾಬಿ ಹೂ ಸಿಕ್ಕಿಸಿಕೊಂಡ ಕತಾವುರೆ ನೆರೆದವರಿಗೆ ಕಬ್ಬಿನ ಹಾಲನ್ನು ಕೊಡುತ್ತ ಆ ಸಂದರ್ಭದ ಲಾಭ ಪಡೆದು, ಜನರ ಬಳಿ ಹೋಗಿ ಯುಕ್ತವಲ್ಲದ ಜಾಗಗಳ ಮೇಲೆಲ್ಲ ಕೈ ಇಡುತ್ತಿದ್ದ. ಮಧ್ಯ ರಾತ್ರಿಯ ಹೊತ್ತಿಗೆ ಸೆಖೆ ತಡೆಯದಂತಾಯಿತು. ತಮ್ಮ ಸಂಸಾರಕ್ಕೆ ಸಂಬಂಧಿಸಿದ ಯಾವುದನ್ನೂ ಕೇಳಿಸಿಕೊಳ್ಳದೆ ಅವ್ರೇಲಿಯಾನೋ ಕೊನೆಯ ತನಕ ಸುದ್ದಿಗಳನ್ನು ಕೇಳಿಸಿಕೊಂಡ. ಅವನು ಹೊರಡಲೆದ್ದಾಗ ಆ ಹೆಂಗಸು ಕೈಯಿಂದ ಅವನಿಗೆ ಸನ್ನೆ ಮಾಡಿದಳು.

‘ನೀವೂ ಒಳಗೆ ಹೋಗಿ, ಅದಕ್ಕೆ ಇಪ್ಪತ್ತು ಸೆಂಟ್ ಅಷ್ಟೇ\’ ಎಂದಳು ಅವ್ರೇಲಿಯಾನೋ ಅವಳು ಹಿಡಿದುಕೊಂಡಿದ್ದ ಪೆಟ್ಟಿಗೆಗೆ ಒಂದು ನಾಣ್ಯ ಎಸೆದು ಏಕೆಂದು ತಿಳಿಯದೆ ರೂಮಿನೊಳಗೆ ಹೋದ. ಚಿಕ್ಕ ಮೊಲೆಗಳಿದ್ದ ಹರೆಯದ ಹ;ಡುಗಿಯೊಬ್ಬಳು ಹಾಸಿಗೆಯಲ್ಲಿ ಬೆತ್ತಲಾಗಿದ್ದಳು. ಅವ್ರೇಲಿಯಾನೋಗಿಂತ ಮುಂಚೆ ಆ ರಾತ್ರಿ ಅರವತ್ತು ಜನ ಆ ರೂಮನ್ನು ಹಾದು ಹೋಗಿದ್ದರು. ಬಹಳಷ್ಟು ಬಳಕೆಯಾಗಿ, ಬೆವರು ಬಿಸಿಯುಸಿರು ಸೇರಿಕೊಂಡು ರೂಮೊಳಗಿನ ಗಾಳಿ ಹೊಲಸಾಗಿತ್ತು. ಒದ್ದೆಯಾಗಿದ್ದ ಶೀಟನ್ನು ಎತ್ತಿ ಅವ್ರೇಲಿಯಾನೋಗೆ ಒಂದು ಕಡೆ ಹಿಡಿಯಲು ಹೇಳಿದಳು. ಅದು ಕ್ಯಾನ್‌ವಾಸ್ ತುಂಡಿನಷ್ಟು ಭಾರವಾಗಿತ್ತು. ಅವರು ಅದನ್ನು ಕೊನೆಯಿಂದ ತಿರುಗಿಸಿ ಸಹಜ ಭಾರ ಬರುವವರೆಗೂ ಹಿಂಡಿದರು. ಅವರು ಹಾಸಿದ್ದನ್ನು ತಿರುಗಿಸಿದರು. ಇನ್ನೊಂದು ಕಡೆಯಿಂದ ನೀರು ಜಿನುಗಿತು. ಅವ್ರೇಲಿಯಾನೋಗೆ ಹೀಗೆ ಮಾಡುವ ಕ್ರಿಯೆ ಮುಗಿಯುವುದಿಲ್ಲವೇನೋ ಎಂಬ ಆತಂಕ ಉಂಟಾಯಿತು. ಅವನಿಗೆ ಪ್ರೇಮಿಸುವ ಬಗ್ಗೆ ಅದರ ಯಾಂತ್ರಿಕ ಸೂತ್ರಗಳು ಗೊತ್ತಿತ್ತು. ಆದರೆ ಅವನಿಗೆ ಉಂಟಾದ ಮಂಡಿಯ ದುರ್ಬಲತೆಯಿಂದ ನಿಂತಿರಲು ಸಾಧ್ಯವಾಗಲಿಲ್ಲ. ಅಲ್ಲದೆ ಮುಖದ ಮೇಲೆ ದಪ್ಪ ಮೊಡವೆಗಳಿದ್ದರೂ ಒಳಗಿನಿಂದ ಉಕ್ಕಿ ಬಂದ ಮರುಕವನ್ನು ಹೊರಗೆ ಹಾಕುವ ಒತ್ತಡವನ್ನು ಅವನಿಗೆ ತಡೆಯಲಾಗಲಿಲ್ಲ. ಹಾಸಿಗೆಯನ್ನು ಸರಿ ಮಾಡಿದ ಮೇಲೆ ಹುಡುಗಿ ಬಟ್ಟೆ ಕಳಚಲು ಹೇಳಿದಾಗ ಗೊಂದಲಗೊಂಡು ಹೇಳಿದ: “ಅವರು ಒಳಗೆ ಬರುವಂತೆ ಮಾಡಿದ್ರು. ತಟ್ಟೇಲಿ ಇಪ್ಪತ್ತು ಸೆಂಟ್ಸ್ ಹಾಕಲು ಹೇಳಿ ಅವಸರ ಪಡಿಸಿದ್ರು.” ಹುಡುಗಿಗೆ ಅವನ ಗೊಂದಲ ಅರ್ಥವಾಯಿತು. ಅವಳು ಮೃದುವಾಗಿ, “ನೀನು ವಾಪಸು ಹೋಗೋವಾಗ ಮತ್ತೆ ಇಪ್ಪತ್ತು ಸೆಂಟ್ಸ್ ಹಾಕಿದ್ರೆ ಇನ್ನೂ ಸ್ವಲ್ಪ ಹೊತ್ತು ಇಲ್ಲಿರಬಹುದು” ಎಂದಳು. ಅವ್ರೇಲಿಯಾನೋ ಬಟ್ಟೆ ಕಳಚಿದ. ಆದರೆ ಬೆತ್ತಲೆ ಸ್ಥಿತಿಯನ್ನು ತನ್ನ ಸೋದರನೊಂದಿಗೆ ಹೋಲಿಸಿಕೊಳ್ಳಬೇಕಾದ ಆಲೋಚನೆಯನ್ನು ದೂರ ತಳ್ಳಲಾಗಲಿಲ್ಲ. ಆ ಹುಡುಗಿ ಎಷ್ಟೇ ಪ್ರಯತ್ನಿಸಿದರೂ ಅವನು ಹೆಚ್ಚು ಹೆಚ್ಚು ವಿಮನಸ್ಕನಾದ ಮತ್ತು ತೀವ್ರ ಒಬ್ಬಂಟಿತನವನ್ನು ಅನುಭವಿಸಿದ. ‘ನಾನು ಇನ್ನೊಂದು ಇಪ್ಪತ್ತು ಸೆಂಟ್ಸ್ ಕೊಡುತ್ತೇನೆ\’ ಎಂದು ಕಂಗೆಟ್ಟು ಹೇಳಿದ. ಅವಳು ಅವನಿಗೆ ಮೌನವಾಗಿ ವಂದಿಸಿದಳು. ಅವಳ ಬೆನ್ನು ಒರಟಾಗಿತ್ತು. ಚರ್ಮ ಮೂಳೆಗೆ ಒತ್ತಿಕೊಂಡಿತ್ತು. ಅಸಾಧ್ಯ ಸುಸ್ತಿನಿಂದ ಕಷ್ಟಪಟ್ಟು ಉಸಿರಾಡುತ್ತಿದ್ದಳು. ಎರಡು ವರ್ಷಗಳ ಹಿಂದೆ ಅಲ್ಲಿಂದ ಬಹಳ ದೂರದಲ್ಲಿ ಬಂದ ಅವಳು ಉರಿವ ಮೇಣದ ಬತ್ತಿಯನ್ನು ಆರಿಸದೆ ಮಲಗಿದ್ದಳು. ಸುತ್ತಲೂ ಬೆಂಕಿ ಹೊತ್ತಿಕೊಂಡು ಅವಳಿಗೆ ಎಚ್ಚರವಾಯಿತು. ಅವಳನ್ನು ಬೆಳೆಸಿದ ಅಜ್ಜಿಯೊಡನೆ ಇದ್ದ ಮನೆ ಸುಟ್ಟ್ಟು ಬೂದಿಯಾಯಿತು. ಅಂದಿನಿಂದ ಅವಳ ಅಜ್ಜಿ ಅವಳನ್ನು ಊರಿಂದೂರಿಗೆ ಕರೆದುಕೊಂಡು ಹೋಗಿ, ಸುಟ್ಟು ಹೋದ ಮನೆಗಾದ ಮೌಲ್ಯವನ್ನು ಸರಿದೂಗಿಸಲು, ಇಪ್ಪತ್ತು ಸೆಂಟ್ಸ್ ಕೊಟ್ಟವರ ಜೊತೆ ಮಲಗುವಂತೆ ಮಾಡುತ್ತಿದ್ದಳು. ಆ ಹುಡುಗಿಯ ಲೆಕ್ಕಾಚಾರದಂತೆ ಇನ್ನೂ ಹತ್ತು ವರ್ಷ ಪ್ರತಿ ದಿನ ರಾತ್ರಿ ಎಪ್ಪತ್ತು ಜನ ಗಂಡಸರನ್ನು ನಿಭಾಯಿಸಬೇಕಾಗಿತ್ತು. ಜೊತೆಗೆ ಪ್ರಯಾಣದ ವೆಚ್ಚ, ಇಬ್ಬರ ಊಟ-ತಿಂಡಿ ಹಾಗೂ ತುಯ್ದಾಡುವ ಕುರ್ಚಿಯನ್ನು ಹೊರುವ ಇಂಡಿಯನ್‌ರಿಗೆ ಕೊಡಬೇಕಾದದ್ದು, ಇವುಗಳನ್ನು ತೂಗಿಸಬೇಕಾಗಿತ್ತು. ಆಕೆ ಎರಡನೆ ಸಲ ಬಾಗಿಲು ಬಡಿದಾಗ ಏನೂ ಮಾಡದೆ ಆಳು ಬಂದಂತಾಗಿ ಅವ್ರೇಲಿಯಾನೋ ರೂಮಿನಿಂದ ಆಚೆ ಹೊರಟ. ಆ ಹುಡುಗಿಯ ಬಗ್ಗೆ ಅಪೇಕ್ಷೆ ಮತ್ತು ಮರುಕದಿಂದ ಅವನು ಆ ರಾತ್ರಿ ಇಡೀ ನಿದ್ದೆ ಮಾಡಲಿಲ್ಲ. ಅವಳನ್ನು ಪ್ರೀತಿಸುವ ಮತ್ತು ರಕ್ಷಿಸುವ ಅತೀವ ಬಯಕೆ ಉಂಟಾಯಿತು. ನಿದ್ದೆ ಬರದೆ ಮತ್ತು ಜ್ವರದ ತಾಪದಿಂದ ಸೊರಗಿ ಶಾಂತಚಿತ್ತನಾಗಿ ಬೆಳಗಿನ ಸಮಯಕ್ಕೆ ಅವಳ ಅಜ್ಜಿಯಿಂದ ಅವಳನ್ನು ಬಿಡುಗಡೆ ಮಾಡುವುದಕ್ಕೆ ಮತ್ತೆ ಪ್ರತಿ ರಾತ್ರಿ ಎಪ್ಪತ್ತು ಜನರಿಗೆ ಕೊಡುವ ತೃಪ್ತಿಯನ್ನು ತಾನು ಅನುಭವಿಸುವುದೆಂದು ಅವಳನ್ನು ಮದುವೆಯಾಗಲು ನಿರ್ಧರಿಸಿದ. ಆದರೆ ಬೆಳಿಗ್ಗೆ ಹತ್ತು ಗಂಟೆಗೆ ಅವನು ಕತಾವುರೆಯ ಅಂಗಡಿಗೆ ಹೋದಾಗ ಅವಳು ಊರುಬಿಟ್ಟು ಹೊರಟು ಹೋಗಿದ್ದಳು.
ಕಾಲ ಅವನ ಹುಚ್ಚು ನಿರ್ಧಾರವನ್ನು ತಗ್ಗಿಸಿತ್ತಾದರೂ ಅವನ ಭಗ್ನಭಾವ ಹೆಚ್ಚಾಯಿತು. ಅದನ್ನು ಮರೆಯಲು ಅವನು ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡ. ತನ್ನ ಅಪ್ರಯೋಜಕವಾದ ನಾಚಿಕೆಯನ್ನು ಮರೆಮಾಚುವುದಕ್ಕೆ ಇಡೀ ಜೀವನ ಹೆಂಗಸರ ಸಂಗವಿರದ ಮನುಷ್ಯನಾಗಿರಲು ಮನಸ್ಸು ಮಾಡಿದ. ಈ ಮಧ್ಯೆ ಮೆಲ್‌ಕಿಯಾದೆಸ್ ಮಕೋಂದೋದಲ್ಲಿ ಫಲಕಗಳ ಮೇಲೆ ಮುದ್ರಿಸಬಹುದಾದ ಎಲ್ಲವನ್ನೂ ಮುದ್ರಿಸಿದ ಮತ್ತು ಹಳೆಯ ಲ್ಯಾಬೊರೇಟರಿಯನ್ನು ಹೊಸೆ ಅರ್ಕಾದಿಯೋ ಬ್ಯುಂದಿಯಾನ ವಿದಿತ್ರ ಆಲೋಚನೆಗಳಿಗೆ ಬಿಟ್ಟು ಕೊಟ್ಟ. ಅವನು ಅದನ್ನು ದೇವರು ಇರುವುದಕ್ಕೆ ವೈಜ್ಞಾನಿಕ ಪುರಾವೆ ಪಡೆಯಲು ಉಪಯೋಗಿಸಬೇಕೆಂದು ತೀರ್ಮಾನಿಸಿದ. ದೇವರು ಇದ್ದದ್ದೇ ಆದರೆ, ಒಂದು ಸಂಕೀರ್ಣ ಪ್ರಕ್ರಿಯೆಯಿಂದ ಮನೆಯ ವಿವಿಧ ಭಾಗಗಳಲ್ಲಿ ಒಂದರ ಮೇಲೊಂದು ಮೇಳೈಸಿದ ಚಿತ್ರಗಳನ್ನು ತೆಗೆಯುವುದರ ಮೂಲಕ, ಆದಷ್ಟು ಬೇಗ ದೇವರ ಛಾಯಾಚಿತ್ರ ತೆಗೆಯಬಹುದೆಂಬ ಭರವಸೆ ಹೊಂದಿದ್ದ. ಹಾಗಾಗದಿದ್ದರೆ ಅವನಿರುವ ನಂಬಿಕೆಗೆ ಇತಿಶ್ರೀ ಹೇಳಬೇಕೆಂದುಕೊಂಡ. ಮೆಲ್‌ಕಿಯಾದೆಸ್ ನಾಸ್ಟರ್‌ಡಾಮಸ್‌ನ ವ್ಯಾಖ್ಯಾನಗಳಲ್ಲಿ ಮತ್ತಷ್ಟು ಮುಳುಗಿದ. ರಾತ್ರಿ ಬಹಳ ಹೊತ್ತಿನ ತನಕ ಉಸಿರಾಡಲು ಕಷ್ಟಪಡುತ್ತ ಮೊದಲಿನ ಚುರುಕನ್ನು ಕಳೆದುಕೊಂಡು ಸೊರಗಿದ ಕೈಗಳಿಂದ ಬರೆಯುತ್ತಿದ್ದ. ಅದೊಂದು ದಿನ ಅವನಿಗೆ ಮಕೋಂದೋದ ಭವಿಷ್ಯ ಕಂಡಂತಾಯಿತು. ಗಾಜಿನ ಮನೆಗಳಿದ್ದ ಅದರಲ್ಲಿ ಬ್ಯುಂದಿಯಾ ಮನೆತನದ ಹೇಳಹೆಸರಿರಲಿಲ್ಲ. “ಅದೆಲ್ಲ ಶುದ್ಧ ತಪ್ಪು. ನಾನು ಕನಸು ಕಂಡ ಹಾಗೆ ಅದು ಗಾಜಿನ ಮನೆಗಳಲ್ಲ. ಐಸ್‌ನ ಮನೆಗಳು. ಅಲ್ಲದೆ ಯಾರಾದರೊಬ್ಬ ಬ್ಯುಂದಿಯಾ ಯಾವಾಗಲೂ ಇದ್ದೇ ಇರುತ್ತಾನೆ” ಎಂದು ಹೊಸೆ ಅರ್ಕಾದಿಯೋ ಬ್ಯುಂದಿಯಾ ಅಬ್ಬರಿಸಿದ. ಉರ್ಸುಲಾ ಓವನ್ ಇಟ್ಟುಕೊಂಡು ಬೇಯಿಸಿದ ಮಾಂಸದ ತಿನಿಸಿನ ವ್ಯವಹಾರವನ್ನು ವಿಸ್ತರಿಸಿಕೊಂಡು ದುಂದುವೆಚ್ಚವಾಗುತ್ತಿದ್ದ ಆ ಮನೆಯಲ್ಲಿ ವಿವೇಕ ಉಳಿಸಿಕೊಳ್ಳಲು ಸೆಣೆಸುತ್ತಿದ್ದಳು. ಬುಟ್ಟಿಗಟ್ಟಲೆ ಮಾಂಸ, ಬ್ರೆಡ್ ಮತ್ತು ಎಂಥೆಂಥದೋ ತಿನಿಸುಗಳು ಆ ಜೌಗು ಪ್ರದೇಶದ ರಸ್ತೆಗೆ ಬಂದಕೊಡಲೆ ಕೆಲವೇ ಗಂಟೆಗಳಲ್ಲಿ ಕಾಣೆಯಾಗುತ್ತಿತ್ತು. ಉರ್ಸುಲಾಗೆ ವಿಶ್ರಾಂತಿ ಪಡೆಯಲು ಹಕ್ಕಿದೆ ಎನ್ನುವಷ್ಟು ವಯಸ್ಸಾಗಿದ್ದರೂ ಅವಳು ಸಾಕಷ್ಟು ಚಟುವಟಿಕೆಯಿಂದಿದ್ದಳು. ತನ್ನ ಉದ್ಯಮದಲ್ಲಿ ನಿರತಳಾಗಿದ್ದ ಅವಳು ಒಂದು ದಿನ ಮಧ್ಯಾಹ್ನ ಇಂಡಿಯನ್ ಹೆಂಗಸು ನಾದಿದ ಹಿಟ್ಟಿಗೆ ಸಿಹಿ ಬೆರೆಸಲು ಸಹಾಯ ಮಾಡುತ್ತಿದ್ದಾಗ ವಿಮನಸ್ಕಳಾಗಿ ಅಂಗಳದ ಕಡೆ ನೋಡಿದಳು. ಅವಳಿಗೆ ಸಂಜೆ ಸೂರ್ಯನ ಬೆಳಕಲ್ಲಿ ಕಸೂತಿ ಮಾಡುತ್ತಿದ್ದ ಇಬ್ಬರು ಹರೆಯದ, ಸುಂದರವಾದ ಅಪರಿಚಿತ ಹುಡುಗಿಯರು ಕಂಡರು. ಅವರು ರೆಬೇಕ ಮತ್ತು ಅಮರಾಂತ. ತಮ್ಮ ಅಜ್ಜಿಗಾಗಿ ದು:ಖ ಸೂಚಕ ಉಡುಪನ್ನು ಕಟ್ಟುನಿಟ್ಟಾಗಿ ಮೂರು ವರ್ಷ ಧರಿಸಿದ್ದ ಅವರು ಅದನ್ನು ತೆಗೆದ ಮೇಲೆ ಹೊಳೆಯುವ ಬಟ್ಟೆಗಳು ಅವರಿಗೆ ಬೇರೆಯೇ ಸೊಬಗನ್ನು ತಂದುಕೊಟ್ಟಿದ್ದವು. ನಿರೀಕ್ಷೆಗೆ ವ್ಯತಿರಿಕ್ತವಾಗಿ ರೆಬೇಕ ಹೆಚ್ಚು ಸುಂದರಳಾಗಿದ್ದಳು. ಅವಳಿಗೆ ತೆಳು ಕಂದು ಬಣ್ಣ ಮತ್ತು ದೊಡ್ಡ ಸೌಮ್ಯ ಕಣ್ಣುಗಳು ಹಾಗೂ ಅಗೋಚರ ದಾರದಿಂದ ಕಸೂತಿ ಮಾಡುತ್ತಿದ್ದ ಮಾಂತ್ರಿಕ ಕೈಗಳಿದ್ದವು. ಚಿಕ್ಕವಳಾದ ಅಮರಾಂತಳಿಗೆ ಅಷ್ಟೊಂದು ಲಾಸ್ಯವಿರಲಿಲ್ಲ. ಆದರೆ ಆಂತರ್ಯದಲ್ಲಿ ಅವಳ ಅಜ್ಜಿಯ ಬಿಗುವಿನಿಂದ ಕೂಡಿದ ಸಹಜವಾದ ವಿಶೇಷತೆ ಇತ್ತು. ಅವರ ಪಕ್ಕದಲ್ಲಿ ಆಗಲೇ ತನ್ನ ತಂದೆಯ ಭೌತಿಕ ಕ್ಷಮತೆಯನ್ನು ತೋರುತ್ತಿದ್ದ ಅರ್ಕಾದಿಯೋ ಮಗುವಿನ ಹಾಗೆ ಕಂಡ. ಅವನು ಓದು, ಬರಹ ಹೇಳಿಕೊಡುತ್ತಿದ್ದ ಅವ್ರೇಲಿಯಾನೋನ ಜೊತೆಗೆ ಬೆಳ್ಳಿಗೆ ಸಂಬಂಧಿಸಿದ ಕೆಲಸಗಳನ್ನು ಕಲಿಯಲು ಪ್ರಾರಂಭಿಸಿದ್ದ. ಉರ್ಸುಲಾಗೆ ಮನೆ ಜನರಿಂದ ತುಂಬುತ್ತಿದೆಯೆಂದೂ ಮತ್ತು ತನ್ನ ಮಕ್ಕಳು ಮದುವೆಯಾಗಿ ಅವರಿಗೇ ಮಕ್ಕಳಾಗುವ ಸ್ಥಿತಿಯಲ್ಲಿದ್ದಾರೆಂದೂ, ಅವರೆಲ್ಲ ಸ್ಥಳದ ಅಭಾವದಿಂದ ಚದುರಿಹೋಗಬಹುದೆಂದು ಅರಿವಾಯಿತು. ಅನಂತರ ಅವಳು ವರ್ಷಗಟ್ಟಲೆ ಕಷ್ಟಪಟ್ಟು ಕೂಡಿಟ್ಟ ಹಣ ಮತ್ತು ಗಿರಾಕಿಗಳ ಹೊಂದಾಣಿಕೆಯಿಂದ ಮನೆಯನ್ನು ವಿಸ್ತರಿಸುವುದನ್ನು ಕೈಗೊಂಡಳು. ಆಗೀಗ ಬಂದು ಹೋಗುವವರಿಗೆ ಮತ್ತು ದೈನಂದಿನ ಬಳಕೆಗೆ ಅದಕ್ಕಿಂತ ಹೆಚ್ಚು ಅನುಕೂಲವಾಗಿ ತಂಪಾಗಿರುವ ಒಂದು ಸ್ಥಳ ಹಾಗೂ ಅತಿಥಿಗಳ ಜೊತೆ ಸೇರಿ, ಒಟ್ಟಿಗೆ ಹನ್ನೆರಡು ಜನ ಊಟ ಮಾಡಲು ಸಾಧ್ಯವಾಗುವಂತೆ ಟೇಬಲ್ ಇರುವ ಡೈನಿಂಗ್ ರೂಮು, ಕಿಟಕಿಗಳಿರುವ ಒಂಬತ್ತು ಬೆಡ್‌ರೂಮುಗಳು, ವಿಸ್ತಾರದ ಕಟಾಂಜನದಲ್ಲಿ ಜರ್ರ್ರಿ ಗಿಡ ಮತ್ತು ಏಕದಳ ಗಿಡಗಳಿರುವ ಕುಂಡಗಳಿದ್ದು ಮಧ್ಯಾಹ್ನದ ಉರಿಬಿಸಿಲಿನಿಂದ ರಕ್ಷಣೆ ಹೊಂದಿದ ಗುಲಾಬಿ ಹೂವಿನ ಒಳಾಂಗಣಗಳಿದ್ದವು. ಪಿಲರ್ ಟೆರೆರಾ ಒಳಗೆ ಕುಳಿತು ಹೊಸೆ ಅರ್ಕಾದಿಯೋನ ಭವಿಷ್ಯವನ್ನು ಹೇಳಿದ್ದ ಉಗ್ರಾಣವನ್ನು ಕೆಡವಿಸಿದಳು. ಅದರ ಬದಲಿಗೆ ಆಹಾರದ ಕಾಳುಕಡ್ಡಿ ಎಂದಿಗೂ ಕಡಿಮೆಯಾಗಬಾರದೆಂದು ಅದರ ಎರಡರಷ್ಟು ದೊಡ್ಡದನ್ನು ಕಟ್ಟಿಸಿದಳು. ಅವಳು ಮರದ ನೆರಳಿನಲ್ಲಿ ಹೆಂಗಸರಿಗೊಂದು ಮತ್ತು ಗಂಡಸರಿಗೊಂದು ಬಚ್ಚಲು ಮನೆಯನ್ನು ಕಟ್ಟಿಸಿದಳು. ಹಿತ್ತಲಲ್ಲಿ ದೊಡ್ಡದಾದ ಕುದುರೆ ಲಾಯ, ಬೇಲಿಹಾಕಿದ ಕೋಳಿಗೂಡು, ಆಕಳುಗಳಿಗೆ ಕೊಟ್ಟಿಗೆ ಮತ್ತು ಹಾರಾಡುವ ಪಕ್ಷಿಗಳು ಕುಳಿತು ವಿಶ್ರಾಂತಿ ಪಡೆಯಲು ಒಂದು ಹೊರಗಿನ ಜಾಗವನ್ನು ಕೂಡ. ತನ್ನ ಗಂಡನ ಭ್ರಾಮಕ ಸ್ಥಿತಿಯನ್ನು ತಾನು ಪಡೆದವಳಂತೆ, ಡಜನ್ ಗಟ್ಟಲೆ ಗಾರೆಯವರು ಮತ್ತು ಮರಗೆಲಸದವರನ್ನು ಉಪಯೋಗಿಸಿಕೊಂಡು ಯಾವ ಮಿತಿಗಳನ್ನೂ ಲಕ್ಷಿಸದೆ, ದೀಪದ ಮತ್ತು ಶಾಖದ ಉಗಮ ಸ್ಥಾನಗಳನ್ನು ನಿಗದಿ ಪಡಿಸಿದಳು. ಇವೆಲ್ಲದರಿಂದ ಪುರಾತನ ಕಟ್ಟಡ ಸಾಮಾನು ಸರಂಜಾಮು ಹಾಗೂ ಉಪಕರಣಗಳಿಂದ ತುಂಬಿ ಹೋಯಿತು. ಜೊತೆಗೆ ಎಲ್ಲೆಂದರಲ್ಲಿ ತಮ್ಮ ಜೊತೆ ಕೊಂಡೊಯ್ಯುತ್ತಿದ್ದ ಟೊಳಗೊಟ್ಟುವ ಮೊಳೆಗಳ ಮೂಟೆಯಿಂದ ಸುಸ್ತಾಗಿ ತಮ್ಮ ತಂಟೆಗೆ ಬರಬೇಡಿರೆಂದು ಹೇಳುವ ಬೆವರಿಳಿವ ಕೆಲಸಗಾರರಿಂದ ತುಂಬಿತ್ತು. ಗಾರೆ ಮತ್ತು ಸುಣ್ಣ ತುಂಬಿದ ಗಾಳಿಯನ್ನು ಉಸಿರಾಡುವ ತೊಂದರೆಯಲ್ಲಿ ಭೂಮಿಯ ಗರ್ಭದಿಂದ ಇಡೀ ಊರಿಗೆ ದೊಡ್ಡದಾದ ಮತ್ತು ಆ ಜೌಗು ಪ್ರದೇಶದಲ್ಲಿ ಹಿಂದೆಂದೂ ಇರದಂಥ ಅತ್ಯಂತ ತಂಪಾದ ಮನೆ ನಿರ್ಮಾಣವಾಗುತ್ತಿರುವ ಸಂಗತಿ ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ. ಎಲ್ಲರಿಗಿಂತ ಹೆಚ್ಚಾಗಿ ಅನಾಹುತಗಳ ನಡುವೆ ದೈವೇಚ್ಛೆಯನ್ನು ಎದುರಿಸಲು ಪ್ರಯತ್ನಿಸುತ್ತಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಏನೂ ಅರ್ಥವಾಗಲಿಲ್ಲ. ಮನೆಯ ಮುಂಭಾಗಕ್ಕೆ ನೀಲಿ ಬಣ್ಣವನ್ನು ಬಳಿಯಬೇಕೆಂದು ತಿಳಿಸಲು ಉರ್ಸುಲಾ, ಅವನನ್ನು ಭ್ರಾಮಕ ಸ್ಥಿತಿಯಿಂದ ಹೊರಗೆಳೆದು ಹೇಳಿದಳು. ಅವಳು ಅವನಿಗೆ ಅಧಿಕೃತವಾದ ದಾಖಲೆಯನ್ನು ತೋರಿಸಿದಳು. ತನ್ನ ಹೆಂಡತಿ ಏನು ಹೇಳುತ್ತಿದ್ದಾಳೆಂದು ತಿಳಿಯದೆ ಆ ಕಾಗದಕ್ಕೆ ಮಾಡಿದ ಸಹಿಯನ್ನು ಪರೀಕ್ಷಿಸಿದ.
ಅವನು,”ಯಾರಿವ್ನು?” ಎಂದು ಕೇಳಿದ.
“ಮ್ಯಾಜಿಸ್ಟ್ರೇಟ್, ಅವನು ಸರ್ಕಾರ ಕಳಿಸಿದ ಅಧಿಕಾರಿ ಅಂತಾರೆ” ಎಂದಳು ಉರ್ಸುಲಾ. ಮ್ಯಾಜಿಸ್ಟ್ರೇಟ್ ದಾನ್ ಅಪೋಲಿನರ್ ಮೊಸ್ಕೋತೆ ಮಕೋಂದೋಗೆ ಸದ್ದಿಲ್ಲದೆ ಬಂದಿದ್ದ. ಅವನು ಗಿಣಿಯನ್ನು ಕೊಟ್ಟು ಸಾಕಷ್ಟು ದೋಚಿದ ಅರಬರು ಕಟ್ಟಿಸಿದ ಹೊಟೆಲ್ ಜಾಕೊಬ್‌ನಲ್ಲಿ ಉಳಿದುಕೊಂಡಿದ್ದ. ಮಾರನೆಯ ದಿನ ಅವನು ಬ್ಯುಂದಿಯಾರ ಮನೆಯಿಂದ ಎರಡು ಬ್ಲಾಕ್‌ಗಳು ಆಚೆಯ ರಸ್ತೆಯಲ್ಲಿ ಒಂದು ರೂಮನ್ನು ಬಾಡಿಗೆ ಹಿಡಿದ. ಜಾಕೊಬ್‌ನಿಂದ ಖರೀದಿಸಿದ ಕುರ್ಚಿ ಮತ್ತು ಟೇಬಲ್‌ನ್ನು ಅಲ್ಲಿ ಇಟ್ಟು, ರಿಪಬ್ಲಿಕ್‌ನ ಫಲಕವನ್ನು ಗೋಡೆಯ ಮೇಲೆ ಮೊಳೆ ಹೊಡೆದು ತೂಗುಹಾಕಿದ ಮತ್ತು ಬಾಗಿಲ ಮೇಲೆ ‘ಮ್ಯಾಜಿಸ್ಟ್ರೇಟ್\’ ಎಂದು ಬರೆದ. ಅವನು ಹೊರಡಿಸಿದ ಮೊದಲನೆ ಆರ್ಡರ್ ಎಂದರೆ ರಾಷ್ಟ್ರೀಯ ಸ್ವಾತಂತ್ರ್ಯದ ಸಮಾರಂಭದ ಆಚರಣೆಗಾಗಿ ಎಲ್ಲಾ ಮನೆಗಳಿಗೂ ಬಿಳಿ ಬಣ್ಣ ಬಳಿಸಬೇಕು ಎಂದು. ಅದರ ಪ್ರತಿಯನ್ನು ಹಿಡಿದುಕೊಂಡು ಹೊಸೆ ಅರ್ಕಾದಿಯೋ ಬ್ಯುಂದಿಯಾ ಬಂದಾಗ ಅವನು ತನ್ನ ಚಿಕ್ಕ ಆಫೀಸಿನಲ್ಲಿ ಮಧ್ಯಾಹ್ನದ ನಿದ್ದೆ ಮಾಡುತ್ತಿದ್ದದ್ದು ಕಾಣಿಸಿತು. ಅವನನ್ನು “ಇದನ್ನು ನೀನು ಬರೆದಿದ್ದಾ?” ಎಂದು ಕೇಳಿದ. ಸಾಕಷ್ಟು ಅನುಭವಸ್ಥನಾಗಿ ಮೆತ್ತಗಿದ್ದ ಒರಟು ಬಣ್ಣದ ದಾನ್ ಅಪೋಲಿನರ್ ಮೊಸ್ಕೋತೆ, “ಹೌದು” ಎಂದ. “ನಿಂಗ್ಯಾರು ಕೊಟ್ಟ್ರು ಅಧಿಕಾರ?” ಎಂದು ಮತ್ತೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕೇಳಿದ. ದಾನ್ ಅಪೋಲಿನರ್ ಮೊಸ್ಕೋತೆ ಟೇಬಲ್ ಡ್ರಾನಿಂದ ಕಾಗದವೊಂದನ್ನು ತೆಗೆದು ಅವನಿಗೆ ತೋರಿಸಿ, “ನಾನು ಈ ಊರಿಗೆ ಮ್ಯಾಜಿಸ್ಟ್ರೇಟ್ ಆಗಿ ನೇಮಕವಾಗಿದೀನಿ” ಎಂದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅದರ ಕಡೆ ನೋಡಲೂ ಇಲ್ಲ.
“ನಮ್ಮ ಊರ್‍ನಲ್ಲಿ ನಾವು ಕಾಗದದ ತುಂಡಿನಿಂದ ಆರ್ಡರ್ ಮಾಡೋದಿಲ್ಲ” ಎಂದು ಸಮಾಧಾನದಿಂದ ಹೇಳಿ, “ನಿಮಗೆ ಇದು ಸರಿಯಾಗಿ ತಿಳಿದಿರ್‍ಲಿ. ಅಲ್ದೆ ನಮ್ಗೆ ಯಾರೂ ಜಡ್ಜ್‌ಗಳು ಬೇಕಾಗಿಲ್ಲ. ಯಾಕಂದ್ರೆ ನ್ಯಾಯ ಸಿಗಬೇಕಾದದ್ದು ಇಲ್ಲಿ ಯಾವ್ದೂ ಇಲ್ಲ” ಎಂದ.
ಅವನು ದಾನ್ ಅಪೋಲಿನರ್ ಮೊಸ್ಕೋತೆಯನ್ನು ನೋಡುತ್ತ ಧ್ವನಿ ಏರಿಸದೆ ತಾವು ಹೇಗೆ ಹಳ್ಳಿಯನ್ನು ಹುಟ್ಟು ಹಾಕಿದ್ದು, ಭೂಮಿಯ ವಿತರಣೆ ಮಾಡಿದ್ದು, ರಸ್ತೆಗಳನ್ನು ನಿರ್ಮಿಸಿದ್ದು ಮತ್ತು ಸರಕಾರಕ್ಕೆ ತೊಂದರೆ ಕೊಡದೆ ಮತ್ತು ಯಾರಿಂದಲೂ ತೊಂದರೆಗೆ ಸಿಲುಕದೆ ಅಗತ್ಯವಾದ ಅಭಿವೃದ್ಧಿಯನ್ನು ಮಾಡಿಕೊಂಡಿದ್ದನ್ನು ವಿವರಿಸಿದ.
“ನಮ್ಮೂರ್‍ನಲ್ಲಿ ನಾವು ಎಷ್ಟು ಶಾಂತಿಯಿಂದ ಇದ್ದೇವೆಂದರೆ ಇಲ್ಲಿ ಯಾರಿಗೂ ಸಹಜವಾದ ಸಾವು ಉಂಟಾಗಿಲ್ಲ”. ಎಂದ. ಅಲ್ಲದೆ, “ನಿಮಗೆ ಕಾಣೋ ಹಾಗೆ, ನಮ್ಗಿನ್ನೂ ಸ್ಮಶಾನ ಅನ್ನೋದೇ ಇಲ್ಲ.” ಅಲ್ಲಿ ಸರಕಾರ ಸಹಾಯ ಮಾಡಲಿಲ್ಲವೆಂದು ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಅದಕ್ಕೆ ವಿರುದ್ದವಾಗಿ ಶಾಂತಿಯುತವಾಗಿರಲು ಅವರನ್ನು ಅವರಷ್ಟಕ್ಕೆ ಬಿಟ್ಟಿದ್ದಕ್ಕೆ ಸಂತೋಷಪಟ್ಟಿದ್ದರು. ಮತ್ತು ಅವರನ್ನು ಹಾಗೆಯೇ ಬಿಡುತ್ತಾರೆಂದು ತಾನು ಭಾವಿಸಿದ್ದಾಗಿ ಹೇಳಿದ. ಏಕೆಂದರೆ ಅವರು ಊರನ್ನು ಹುಟ್ಟು ಹಾಕಿದ್ದು ಹೊರಗಿನವನೊಬ್ಬ ಬಂದು ಏನು ಮಾಡಬೇಕೆಂದು ಹೇಳಲಿ, ಎಂದಲ್ಲ. ಬಿಳಿಯ ಪ್ಯಾಂಟು ಹಾಕಿಕೊಂಡು ಜಾಕೆಟ್ ತೊಟ್ಟಿದ್ದ ದಾನ್ ಅಪೋಲಿನರ್ ಅವನ ಮಾತಿನ ಅವಧಿಯುದ್ದಕ್ಕೂ ತನ್ನ ಸಮಚಿತ್ತವನ್ನು ಕಳೆದುಕೊಳ್ಳಲಿಲ್ಲ.
“ನೋಡಿ ನೀವು ಎಲ್ಲರ ಹಾಗೆ ಇಲ್ಲಿ ಇರೋದಕ್ಕೆ ಇಷ್ಟಪಟ್ಟರೆ ಸಂತೋಷ” ಎಂದು ಹೇಳಿ ಮುಂದುವರೆಸಿದ ಹೊಸೆ ಅರ್ಕಾದಿಯೋ ಬ್ಯುಂದಿಯಾ, “ಆದರೆ ನೀವು ಇಲ್ಲಿ ಮನೆಗಳಿಗೆ ನೀಲಿ ಬಣ್ಣ ಬಳಿಯ ಬೇಕೆಂದು ಜನಗಳಿಗೆ ಒತ್ತಾಯಿಸಿ ಎಲ್ಲ ಏರುಪೇರು ಉಂಟುಮಾಡೋ ಹಾಗಿದ್ರೆ ಎಲ್ಲಿಂದ ಬಂದ್ರೋ ಅಲ್ಲಿಗೆ ಗಂಟು ಮೂಟೆ ಕಟ್ಟಿಕೊಂಡು ಹೊರಡಿ. ಯಾಕಂದ್ರೆ ನನ್ನ ಮನೆ ಕೊಕ್ಕರೆಯ ಹಾಗೆ ಬೆಳ್ಳಗಿರುತ್ತೆ.”
ದಾನ್ ಅಪೋಲಿನರ್ ಮೊಸ್ಕೋತೆ ಬಿಳುಚಿಕೊಂಡ. ಅವನು ಒಂದು ಹೆಜ್ಜೆ ಹಿಂದಕ್ಕಿಟ್ಟು ಅವಡುಗಚ್ಚಿ, “ನನ್ನ ಹತ್ತಿರ ಆಯುಧ ಇದೆ” ಎಂದ.
ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಅವನು ಕುದುರೆಗಳನ್ನು ಹಿಡಿದೆಳೆದು ಉರುಳಿಸುತ್ತಿದ್ದ ಶಕ್ತಿ ಕೈಗಳಿಗೆ ಯಾವಾಗ ಮರುಕಳಿಸಿತೆಂದು ತಿಳಿಯಲಿಲ್ಲ. ಅವನು ದಾನ್ ಅಪೋಲಿನರ್ ಮೊಸ್ಕೋತೆಯ ಕತ್ತಿನಪಟ್ಟಿ ಹಿಡಿದು ತನ್ನ ಕಣ್ಣುಗಳ ಎತ್ತರಕ್ಕೆ ಹಿಡಿದೆತ್ತಿದ.
“ನಾನಿಷ್ಟೇ ಮಾಡಿದೀನಿ, ಹೀಗೆ ನಿಮ್ಮನ್ನೆತ್ತಿಕೊಂಡು ಸುತ್ತಬಹುದು. ಸಾಯಿಸಿ, ಜೀವಮಾನದುದ್ದಕ್ಕೂ ನಿಮ್ಮನ್ನು ನಾನು ಹೊರೋದು ಬೇಡ.”

ಆ ರೀತಿ ಕತ್ತಿನ ಪಟ್ಟಿಯನ್ನು ಹಿಡಿದು ಅವನನ್ನು ರಸ್ತೆಯ ಮಧ್ಯಕ್ಕೆ ಎಳೆದುಕೊಂಡು ಹೋಗಿ ನಿಲ್ಲಿಸಿದ. ಒಂದು ವಾರದ ನಂತರ ಬರಿಗಾಲಿನಿಂದ ಆರು ಜನ ಬಂದೂಕು ಧಾರಿಗಳಾದ ಸೈನಿಕರ ಸಮೇತ ವಾಪಸು ಬಂದ. ಮತ್ತು ಅವನ ಜೊತೆಗೆ ಎತ್ತಿನ ಗಾಡಿಯಲ್ಲಿ ಹೆಂಡತಿ ಮತ್ತು ಏಳು ಜನ ಹೆಣ್ಣು ಮಕ್ಕಳಿದ್ದರು. ಅನಂತರ ಬಂದ ಇನ್ನೆರಡು ಗಾಡಿಗಳಲ್ಲಿ ಪೀಠೋಪಕರಣ, ಇತರೆ ಸಾಮಾನು ಮತ್ತು ಪಾತ್ರೆ ಪಡಗಗಳಿದ್ದವು. ಅವನು ತನ್ನ ಸಂಸಾರವನ್ನು ಹೊಟೆಲ್ ಜಾಕೊಬ್‌ನಲ್ಲಿ ತಂಗಲು ಬಿಟ್ಟು, ಮನೆಯೊಂದನ್ನು ಹುಡುಕಲು ತೊಡಗಿದ ಮತ್ತು ಸೈನಿಕರ ರಕ್ಷಣೆಯೊಂದಿಗೆ ಮತ್ತೆ ತನ್ನ ಆಫೀಸು ತೆರೆದ. ಮಕೋಂದೋದ ಸಂಸ್ಥಾಪಕರು, ಆಕ್ರಮಣಕಾರರನ್ನು ಹೊಡೆದೋಡಿಸಲು, ತಮ್ಮ ಮಕ್ಕಳ ಜೊತೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಹೇಳಿದಂತೆ ಕೇಳಲು ಸಿದ್ಧರಾದರು. ಆದರೆ ಅವನು ಅದರ ವಿರುದ್ಧವಾಗಿದ್ದ. ಏಕೆಂದರೆ ಅವನು ಹೇಳಿದ ಹಾಗೆ ಯಾರಿಗೇ ಆಗಲಿ ಮನೆಯವರ ಎದುರು ತೊಂದರೆ ಕೊಡುವುದು ಗಂಡಸುತನವಲ್ಲ. ಅಲ್ಲದೆ ದಾನ್ ಅಪೋಲಿನರ್ ಹೆಂಡತಿ ಮಕ್ಕಳ ಜೊತೆ ವಾಪಸು ಬಂದಿದ್ದ. ಆದ್ದರಿಂದ ಇಡೀ ಪ್ರಕರಣವನ್ನು ಅವನು ಹಿತವಾಗಿ ಮುಕ್ತಾಯ ಮಾಡಲು ನಿರ್ಧರಿಸಿದ.
ಅವ್ರೇಲಿಯಾನೋ ಅವನ ಜೊತೆ ಹೋದ. ಆ ವೇಳೆಗೆ ಅವನು ತುದಿಗೆ ಮೇಣ ಹಚ್ಚಿದ ಕಪ್ಪು ಮೀಸೆ ಬಿಡಲು ಪ್ರಾರಂಭಿಸಿದ್ದ ಮತ್ತು ಅವನಿಗೆ ಯುದ್ಧzಲ್ಲಿ ವಿಶಿಷ್ಟವೆನಿಸುವ ಗಡಸು ಧ್ವನಿ ಇತ್ತು. ಆಯುಧಗಳಿಲ್ಲದೆ, ಗಾರ್ಡ್‌ಗಳನ್ನು, ಲಕ್ಷಿಸದೆ ಅವರು ಮ್ಯಾಜಿಸ್ಟ್ರೇಟ್ ಆಫೀಸಿಗೆ ಹೋದರು. ದಾನ್ ಅಪೋಲಿನರ್ ಮಸ್ಕೊಟೆ ತಾಳ್ಮೆ ಕಳೆದುಕೊಳ್ಳಲಿಲ್ಲ. ಅವನು ಅಲ್ಲಿದ್ದ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಅವರನ್ನು ಪರಿಚಯಿಸಿದ. ಅವಳಲ್ಲೊಬ್ಬಳು ತನ್ನ ತಾಯಿಯ ಹಾಗೆ ಕಪ್ಪಗಿದ್ದು ಹದಿನಾರರ ಆಂಪೆರೋ ಮತ್ತು ನಸುಗೆಂಪು ಬಣ್ಣದ ಹಸಿರುಗಣ್ಣಿನ ಒಂಬತ್ತರ ಚೆಲುವಿನ ಹುಡುಗಿ ರೆಮಿದಿಯೋಸ್, ಅವರು ಸುಂದರವಾಗಿದ್ದು ಹಾಗೂ ಒಳ್ಳೆಯ ನಡತೆಯವರಾಗಿದ್ದರು. ಗಂಡಸರು ಬಂದ ಕೂಡಲೆ ಅವರ ಪರಿಚಯವಾಗುವುದಕ್ಕಿಂತ ಮುಂಚೆಯೇ ಕುಳಿತು ಕೊಳ್ಳುವುದಕ್ಕೆ ಕುರ್ಚಿಗಳನ್ನು ಕೊಟ್ಟು ನಿಂತುಕೊಂಡಿದ್ದರು.
“ಒಳ್ಳೇದು, ನೀವು ಇಲ್ಲಿ ಇರಬಹುದು. ಆದರೆ ಬಂದೂಕು ಹಿಡಿದುಕೊಂಡ ದಾಂಡಿಗರಿಂದಲ್ಲ, ನಿಮ್ಮ ಹೆಂಡತಿ ಮಕ್ಕಳ ಕಾರಣದಿಂದ”.
ದಾನ್ ಅಪೋಲಿನರ್ ಮಸ್ಕೆತೆ ರೋಷಗೊಂಡ. ಆದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನಿಗೆ ಮಾತನಾಡಲು ಅವಕಾಶ ಕೊಡಲಿಲ್ಲ. “ನಾವು ಎರಡು ನಿಬಂಧನೆಗಳನ್ನು ಮಾತ್ರ ಮಾಡ್ತೇವೆ” ಎಂದು ಮುಂದುವರಿಸುತ್ತ, “ಮೊದಲನೇದು ಪ್ರತಿಯೊಬ್ಬರೂ ತಮಗಿಷ್ಟವಾದ ಬಣ್ಣವನ್ನು ತಮ್ಮ ಮನೆಗೆ ಬಳಿಸಬಹುದು. ಎರಡನೇದು, ಸೈನಿಕರು ಇಲ್ಲಿಂದ ಜಾಗ ಖಾಲಿ ಮಾಡಬೇಕು. ನಾವಿಲ್ಲಿ ಒಂದು ಗೊತ್ತಾದ ಕ್ರಮವನ್ನ ನಿಮಗೆ ಗ್ಯಾರೆಂಟಿ ಕೊಡ್ತೀವಿ” ಎಂದ. ಮ್ಯಾಜಿಸ್ಟ್ರೇಟ್ ಬಲಗೈಯನ್ನು ಎತ್ತಿ, “ಹಾಗಾದರೆ ಮಾತು ಕೊಡುತ್ತೀರಾ?” ಎಂದ.
“ಶತ್ರುವಿನ ಮಾತು” ಎಂದ ಹೊಸೇ ಆರ್ಕೆಡೊ ಬ್ಯುಂದಿಯಾ ಮುಂದುವರಿದು ಕಹಿಯಾಗಿ, ” ಯಾಕಂದ್ರೆ ನಾನು ನಿನಗೆ ಒಂದು ವಿಷಯ ಹೇಳಲೇಬೇಕು. ನೀನು ಮತ್ತು ನಾನು ಶತ್ರುಗಳು.”

ಆ ದಿನ ಮಧ್ಯಾಹ್ನವೇ ಸೈನಿಕರು ಊರನ್ನು ಬಿಟ್ಟು ಹೋದರು. ಸ್ವಲ್ಪ ದಿನಗಳ ನಂತರ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವರಿಗೆ ಒಂದು ಮನೆ ಹುಡುಕಿಕೊಟ್ಟ. ಆದರೆ ಅವ್ರೇಲಿಯಾನೋನನ್ನು ಬಿಟ್ಟು ಉಳಿದವರೆಲ್ಲ ನೆಮ್ಮದಿಯಿಂದ ಇದ್ದರು. ವಯಸ್ಸಿನ ಕಾರಣದಿಂದ ತನ್ನ ಮಗಳಾಗಬಹುದಾಗಿದ್ದ ಮ್ಯಾಜಿಸ್ಟ್ರೇಟ್‌ನ ಕಿರಿಯ ಮಗಳು ರೆಮಿದಿಯೋಸ್‌ಳ ರೂಪ ಅವನ ದೇಹದ ಯಾವುದೋ ಭಾಗವನ್ನು ಕೊರೆಯುತ್ತಿತ್ತು. ಅದೊಂದು ಇಂದ್ರಿಯ ಸಂಬಂಧಿತ ಭಾವನೆ. ಅದು ನಡೆಯುವಾಗ ಶೂನಲ್ಲಿ ಸೇರಿಕೊಂಡ ಕಲ್ಲಿನ ಚೂರಿನಂತೆ ಅವನನ್ನು ಕಾಡುತ್ತಿತ್ತು.

ಕೊಕ್ಕರೆಯ ಹಾಗೆ ಬಿಳಿಯಾದ ಹೊಸ ಮನೆಯ ಉದ್ಘಾಟನೆ ನೃತ್ಯ ಸಮಾರಂಭದಿಂದ ಆಯಿತು. ಅದೊಂದು ಮಧ್ಯಾಹ್ನ ಹರೆಯದವರಾಗಿ ಬದಲಾಗಿದ್ದ ರೆಬೇಕ ಮತ್ತು ಅಮರಾಂತರನ್ನು ಕಂಡ ಉರ್ಸುಲಾಗೆ ಆಲೋಚನೆಯೊಂದು ಬಂದಿತ್ತು. ಬಂದು ಹೋಗುವವರನ್ನು ಎದುರುಗೊಳ್ಳಲು ಆ ಹುಡುಗಿಯರಿಗೆ ಸರಿಯಾದ ಸ್ಥಳ ಇರಬೇಕು ಎನ್ನುವುದೇ ಹೊಸದಾಗಿ ಮನೆ ಕಟ್ಟುವುದಕ್ಕೆ ಮುಖ್ಯ ಕಾರಣ ಎನ್ನಬಹುದು. ಮನೆಯ ರಿಪೇರಿ ಕೆಲಸ ನಡೆಯದ್ದಿದ್ದಾಗ ವೈಭವಕ್ಕೆ ಏನೂ ಕಡಿಮೆಯಾಗಬಾರದೆಂದು ಅವಳು ಜೀತದಾಳಿನ ಹಾಗೆ ಕೆಲಸ ಮಾಡುತ್ತಿದ್ದಳು ಮತ್ತು ಅದು ಮುಗಿಯುವ ವೇಳೆಗೆ ಅಲಂಕಾರಕ್ಕೆ ಅಗತ್ಯವಾದ ಟೇಬಲ್‌ಗಳು ಹಾಗೂ ಇಡೀ ಊರಿನ ಜನರು ನಿಬ್ಬೆರಗಾಗುವಂತೆ, ಹರೆಯದವರ ಉತ್ಸಾಹ ಉಕ್ಕಿಸುವಂತೆ ಪಿಯಾನೋಗೆ ಆರ್ಡರ್ ಕೊಟ್ಟಳು. ಅವರು ಅದನ್ನು ಬಿಡಿಭಾಗಗಳಾಗಿ ಇತರೇ ವಸ್ತುಗಳಾದ, ವಿಯನ್ನಾದ ಪೀಠೋಪಕರಣ, ಬೊಹಿಮಿಯಾದ ಹರಳು, ಇಂಡಿಯಾ ಕಂಪನಿಯ ಟೇಬಲ್, ಹಾಲೆಂಡಿನ ಟೇಬಲ್ ಕ್ಲಾತ್ ಮತ್ತು ವಿವಿಧ ಬಗೆಯ ದೀಪ, ಕ್ಯಾಂಡಲ್ ಸ್ಟಿಕ್ಕರ್‌ಗಳು ಪರದೆಯ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬಿ ತಲುಪಿಸಿದರು. ಇವುಗಳನ್ನೆಲ್ಲಾ ಆಮದುಪಡಿಸಿದ ಕಂಪನಿ ಪಿಯಾನೋವನ್ನು ಸಂಘಟಿಸಿ ಕೊಡಲು ಇಟಾಲಿಯಿಂದ ಪರಿಣಿತ ಪಿಯತ್ರೋ ಕ್ರೆಪ್ಸಿಯನ್ನು ಕಳುಹಿಸಿದ್ದರು. ಅವನು ಪಿಯಾನೋ ಕೊಂಡವರಿಗೆ ಟ್ಯೂನ್ ಮಾಡುವ ರೀತಿ, ಅದು ಕೆಲಸ ಮಾಡುವ ಬಗೆ ಮತ್ತು ಆರು ಕಾಗದದ ಸುರುಳಿಯಲ್ಲಿ ಮುದ್ರಿಸಿದ ಆಧುನಿಕ ಸಂಗೀತಕ್ಕೆ ಸರಿಯಾಗಿ ಡ್ಯಾನ್ಸ್ ಮಾಡುವುದನ್ನು ಹೇಳಿಕೊಡಬೇಕಾಗಿತ್ತು.

ಕೆಂಗೂದಲ ಹರೆಯದ ಚೆಲುವ ಪಿಯತ್ರೋ ಕ್ರೆಪ್ಸಿ ಒಳ್ಳೆಯ ನಡತೆಯವನಾಗಿದ್ದ. ತಾನು ತೊಡುವ ಬಟ್ಟೆಯ ಬಗ್ಗೆ ಎಷ್ಟು ಗಮನ ಉಳ್ಳವನಾಗಿದ್ದರೆಂದರೆ ಉಸಿರು ಗಟ್ಟಿಸುವ ಉರಿಬಿಸಿಲಿನಲ್ಲಿ ಕೂಡ ಕಪ್ಪನೆಯ ಕೋಟು ಹಾಕಿಕೊಂಡು ಬೆವರು ಸುರಿಸುತ್ತ ಕೆಲಸ ಮಾಡುತ್ತಿದ್ದ. ಅವನು ಸಭ್ಯತೆಯ ಕಾರಣದಿಂದ ಮನೆಯವರಿಂದ ಸಾಕಷ್ಟು ದೂರವಿದ್ದ. ಅವ್ರೇಲಿಯಾನೋ ಬೆಳ್ಳಿಯ ಕೆಲಸದಲ್ಲಿ ತನ್ಮಯನಾಗುವ ರೀತಿಯಂತೆಯೇ ನಡುಮನೆಯಲ್ಲಿ ಕೆಲವು ವಾರಗಳ ಕಾಲ ಬಾಗಿಲು ಹಾಕಿಕೊಂಡು ಕಳೆದ. ಒಂದು ದಿನ ಬೆಳಿಗ್ಗೆ ಬಾಗಿಲು ತೆಗೆಯದೆ, ಮಾಂತ್ರಿಕವಾದದ್ದನ್ನು ನೋಡಲು ಯಾರನ್ನೂ ಕರೆಯದೆ, ಅವನು ಪಿಯಾನೋದಲ್ಲಿ ಕಾಗದದ ಸುರುಳಿಯಲ್ಲಿದ್ದ ಮೊದಲಿನದನ್ನು ನುಡಿಸಿದ. ಅದರ ಸಂಮೋಹನ ಸಂಗೀತಕ್ಕೆ ಕಿರಿಕಿರಿಯನ್ನು ಉಂಟುಮಾಡುವ ಮರಗೆಲಸದ ಶಬ್ದ ಹಾಗೂ ಹೊಡೆತಗಳು ಸುಮ್ಮನಾದವು. ಅವರೆಲ್ಲರೂ ನಡುಮನೆಗೆ ಓಡಿದರು. ಹೊಸೆ ಅರ್ಕಾದಿಯೋ ಬ್ಯುಂದಿಯಾನಿಗಂತೂ ಮಿಂಚು ಹೊಡೆದ ಹಾಗೆ ಕಂಡಿತು. ಅದು ಸಂಗೀತದ ಮಾಧುರ್ಯದಿಂದಲ್ಲ, ಪಿಯಾನೋದ ಕೀಗಳು ತಮ್ಮಷ್ಟಕ್ಕೆ ಕೆಲಸ ಮಾಡುತ್ತಿದ್ದ ರೀತಿಗಾಗಿ. ಅವನು ಕಾಣಿಸಿಕೊಳ್ಳದೆ ನುಡಿಸುವಾತನ ಛಾಯಾಚಿತ್ರ ತೆಗೆಯುವ ಉದ್ದೇಶದಿಂದ ಮೆಲ್‌ಕಿಯಾದೆಸ್‌ನ ಕ್ಯಾಮೆರಾವನ್ನು ಅಣಿಗೊಳಿಸಿದ. ಆ ದಿನ ಇಟಲಿಯವನು ಅವರ ಜೊತೆ ಊಟಮಾಡಿದ. ಬಡಿಸುತ್ತಿದ್ದ ರೆಬೇಕ ಮತ್ತು ಅಮರಾಂತರಿಗೆ ಉಂಗುರ ಹಾಕಿಕೊಳ್ಳದ, ನೀಳ ಕೈಯಿನ, ಚೆಲುವನಾದ ಅವನು ಪಾತ್ರೆಗಳನ್ನು ನಿಭಾಯಿಸುತ್ತಿದ್ದ ರೀತಿಯಿಂದ ಕಿರಿಕಿರಿ ಉಂಟಾಯಿತು. ನಡುಮನೆಯ ಪಕ್ಕದ ಹಜಾರದಲ್ಲಿ ಹೇಗೆ ನರ್ತಿಸಬೇಕೆಂದು ಪಿಯತ್ರೋ ಕ್ರೆಪ್ಸಿ ಅವರಿಗೆ ಹೇಳಿ ಕೊಟ್ಟ. ತನ್ನ ಮಕ್ಕಳು ಪಾಠ ಕಲಿಯುತ್ತಿರುವಾಗ ಒಂದು ಕ್ಷಣವೂ ರೂಮಿನಿಂದ ಕದಲದೆ ನೋಡುತ್ತಿದ್ದ ಉರ್ಸುಲಾಳ ಎದುರು ಅವರನ್ನು ಮುಟ್ಟದೆ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುವುದನ್ನು ಕಲಿಸಿ ಕೊಟ್ಟ. ಅಂತಹ ದಿನಗಳಲ್ಲಿ ಪಿಯತ್ರೋ ಕ್ರೆಪ್ಸಿ ಬಿಗಿಯಾದ ಪ್ಯಾಂಟು ತೊಟ್ಟು, ನರ್ತನಕ್ಕೆ ಅಗತ್ಯವಾದ ಶೂ ಹಾಕಿಕೊಂಡಿರುತ್ತಿದ್ದ, ಹೊಸೆ ಅರ್ಕಾದಿಯೋ ಬ್ಯುಂದಿಯಾ, “ನೀನು ತುಂಬ ಯೋಚನೆ ಮಾಡಬೇಕಾಗಿಲ್ಲ. ಅವನು ಯೋಗ್ಯ” ಎಂದು ಅವಳಿಗೆ ಹೇಳಿದ. ಆದರೆ ಅವಳು ಕಲಿಕೆ ಮುಗಿದು ಇಟಲಿಯವನು ಮಕೋಂದೋ ಬಿಡುವ ತನಕ ಎಚ್ಚರಿಕೆಯಿಂದ ಇದ್ದಳು. ಅನಂತರ ಅವರು ಪಾರ್ಟಿಯನ್ನು ವ್ಯವಸ್ಧೆಗೊಳಿಸಲು ಪ್ರಾರಂಭಿಸಿದರು. ಅದರಲ್ಲಿ ಊರಿನ ಸಂಸ್ಥಾಪಕರ ಮನೆಯವರು ಇರುವಂಥ ಪಟ್ಟಿಯನ್ನು ಉರ್ಸುಲಾ ಸಿದ್ಧಪಡಿಸಿದಳು. ಆದರೆ ಆ ವೇಳೆಗೆ ತಂದೆ ಯಾರೆಂದು ಅರಿಯದವರಿಂದ ಇನ್ನಿಬ್ಬರು ಮಕ್ಕಳಾಗಿದ್ದ ಪಿಲರ್ ಟೆರ್‍ನೆರಾಳ ಸಂಸಾರ ಮಾತ್ರ ಅದರಲ್ಲಿತ್ತು. ಅದೊಂದು ಸ್ನೇಹ ಭಾವದ ಘನವಾದ ಪಟ್ಟಿಯಾಗಿದ್ದು ಅದರಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಊರಿನ ಸಂಸ್ಥಾಪನೆಗಾಗಿ ಹೊರಡುವ ಮುಂಚಿನ ಹಳೆಯ ಗೆಳೆಯರಿದ್ದರು. ಅವ್ರೇಲಿಯಾನೋ ಮತ್ತು ಆರ್ಕೆಡಿಯಾ ಚಿಕ್ಕವರಾಗಿದ್ದ ಕಾಲದಿಂದಲೂ ಒಡನಾಡಿಗಳಾಗಿದ್ದ ಅವರ ಮಕ್ಕಳು ಹಾಗೂ ಮೊಮ್ಮಕ್ಕಳಿಬ್ಬರ ಜೊತೆಗೆ, ರೆಬೇಕ ಮತ್ತು ಅಮರಾಂತರ ಸಂಗಡ ಕಸೂತಿ ಮಾಡಲು ಬರುತ್ತಿದ್ದ ಅವರ ಹೆಣ್ಣುಮಕ್ಕಳು ಕೂಡ ಇದ್ದರು. ಕೇವಲ ಇಬ್ಬರು ಪೋಲೀಸರನ್ನು ಇಟ್ಟುಕೊಂಡು ಆಡಳಿತ ನಿರ್ವಹಿಸುವ ಕೆಳಮಟ್ಟಕ್ಕೆ ಇಳಿದ ದಾನ್ ಅಪೋಲಿನರ್ ಮೊಸ್ಕೋತೆ ಕೂಡ ಅದರಲ್ಲಿ ಸೇರಿದ್ದ. ಮನೆಯ ಖರ್ಚಿಗೆ ನೆರವಾಗಲು ಅವನ ಇಬ್ಬರು ಹೆಣ್ಣು ಮಕ್ಕಳು ಹೊಲಿಗೆ ಅಂಗಡಿ ತೆರೆದು ಅದರಲ್ಲಿ ಹೂವಿನ ಮತ್ತು ಇತರೇ ಸೂಕ್ಷ್ಮ ರೀತಿಯ ವಿನ್ಯಾಸಗಳನ್ನು ಮಾಡುತ್ತಿದ್ದರು. ಅಲ್ಲದೆ ಆರ್ಡರ್‌ಗೆ ತಕ್ಕಹಾಗೆ ಪ್ರೇಮ ಪತ್ರಗಳನ್ನು ಬರೆಯುತ್ತಿದ್ದರು. ಆದರೆ ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದುದಲ್ಲz, ಸುಂದರವಾಗಿದ್ದು, ನರ್ತನ ಮಾಡುವುದರಲ್ಲಿ ಪಳಗಿದ್ದರೂ ಕೂಡ ಪಾರ್ಟಿಗಳಿಗೆ ಅವರನ್ನು ಪರಿಗಣಿಸುತ್ತಿರಲಿಲ್ಲ.

ಉರ್ಸುಲಾ ಮತ್ತು ಹುಡುಗಿಯರು ಪೀಠೋಪಕರಣ ಮತ್ತು ಬೆಳ್ಳಿಯ ಸಾಮಾನುಗಳ ಕಟ್ಟನ್ನು ಬಿಚ್ಚಿ ಬೋಳಾದ ಗೋಡೆಗಳಿಗೆ ಹೊಸ ಜೀವ ಬರುವಂತೆ ಗುಲಾಬಿ ಹೂವುಗಳು ತುಂಬಿರುವ ದೋಣಿಗಳಿರುವ ಹುಡುಗಿಯರ ಚಿತ್ರಗಳನ್ನು ನೇತುಹಾಕಿದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ದೈವದ ಇರುವಿಕೆಯ ಹುಡುಕಾಟದಲ್ಲಿ ಜೊತೆಗೆ ಅವನಿಲ್ಲ ಎಂದು ಮನದಟ್ಟಾಗಿಸಿಕೊಂಡು ಪಿಯಾನೋದ ಭಾಗಗಳನ್ನು ಬಿಡಿಸಿ ಅದರೊಳಗೆ ಮಾತ್ರಿಕ ಶಕ್ತಿ ಎಲ್ಲಿ ಅಡಗಿದೆ ಎಂದು ಕಂಡು ಹಿಡಿಯಲು ಪ್ರಯತ್ನಿಸಿದ. ಪಾರ್ಟಿಗೆ ಎರಡು ದಿನ ಮುಂಚೆ ಅಳಿದುಳಿದ ಕೀಗಳು ಮತ್ತು ಸುತ್ತಿಗೆಗಳು ಹಿಂದಕ್ಕೊಮ್ಮೆ ಮುಂದಕ್ಕೊಮ್ಮೆ ಸುರಳಿ ಸುತ್ತುವ ತಂತಿಗಳಲ್ಲಿ ಬೆರೆತು ಹೋದ ಮೇ, ಆ ಸಾಧನವನ್ನು ಮತ್ತೆ ಮೊದಲಿನಂತೆ ಮಾಡುವುದರಲ್ಲಿ ಶಕ್ತನಾದ. ಆಗಿನ ದಿನಗಳಲ್ಲಿ ಆಶ್ಚರ್ಯ ಹುಟ್ಟಿಸುವ ಹೆಚ್ಚಿನ ಸಂಗತಿಗಳಿರಲಿಲ್ಲ. ಆದರೆ ಗೊತ್ತಾದ ದಿನಕ್ಕೆ ಸರಿಯಾಗಿ ದೀಪಗಳನ್ನು ಹೊತ್ತಿಸಲಾಗಿತ್ತು. ಇನ್ನೂ ತೇವದ ಮತ್ತು ಬಿಳಿ ಬಣ್ಣದ ವಾಸನೆ ಇದ್ದ ಮನೆಯ ಪ್ರವೇಶ ಮಾಡಲಾಯಿತು. ಸಂಸ್ಥಾಪಕರ ಮಕ್ಕಳು ಮೊಮ್ಮಕ್ಕಳು ಅಂಗಳದಲ್ಲಿ ಜರ್ರ್ರಿ ಗಿಡಗಳನ್ನು, ಪ್ರಶಾಂತವಾದ ರೂಮುಗಳನ್ನು ಹಾಗೂ ಗುಲಾಬಿ ಹೂವಿನ ತೋಟವನ್ನು ನೋಡಿದರು. ಅವರು ನಡುಮನೆಯಲ್ಲಿ ಬಿಳಿಯ ಬಟ್ಟೆಯನ್ನು ಹೊದಿಸಿದ ತಮಗೆ ತಿಳಿಯದ ಉಪಕರಣದ ಎದುರು ಬಂದು ಸೇರಿದರು. ಅವರಲ್ಲಿ ಜೌಗು ಪ್ರದೇಶದ ಊರುಗಳಲ್ಲಿ ಆಗಲೇ ಜನಪ್ರಿಯವಾಗಿದ್ದ ಪಿಯೊನೋದ ಪರಿಚಯವಿದ್ದವರಿಗೆ ಕೊಂಚ ನಿರಾಸೆ ಆಯಿತು. ಉರ್ಸುಲಾಗೆ ಹೆಚ್ಚಿನ ನಿರಾಸೆಯಾಯಿತು. ಏಕೆಂದರೆ ಅಮರಾಂತ ಮತ್ತು ರೆಬೇಕ ನರ್ತಿಸಲು ಸಾಧ್ಯವಾಗುವಂತೆ ಕಾಗದದ ಸುರುಳಿಗಳನ್ನು ಪಿಯಾನೋದಲ್ಲಿ ಅನುವು ಮಾಡಿಟ್ಟಾಗ ಅದು ಕೆಲಸ ಮಾಡಲಿಲ್ಲ. ಅಷ್ಟು ಹೊತ್ತಿಗಾಗಲೆ ಹೆಚ್ಚು ಕಡಿಮೆ ಕುರುಡನಾಗಿದ್ದ ಮೆಲ್‌ಕಿಯಾದೆಸ್ ಕಾಲಾತೀತವಾದ eನದಿಂದ ಅದನ್ನು ಸರಿಪಡಿಸಲು ತೊಡಗಿದ. ಕೊನೆಗೆ ಆಕಸ್ಮಿಕವಾಗಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅದರಲ್ಲಿ ಯಾವುದೋ ಒಂದಕ್ಕೆ ಚಾಲನೆ ಕೊಟ್ಟಾಗ ಅದರಿಂದ ಮೊದಲು ದೊಡ್ಡದಾದ ಮತ್ತು ಅನಂತರ ಮಿಳಿತಗೊಂಡ ಸ್ವರಗಳ ಸಂಗೀತ ಹೊರಟಿತು. ಅದು ಕ್ರಮವಿಲ್ಲದೆ ಜೋಡಣೆಯಾದ ತಂತಿಗಳ ನಾದವಾಗಿತ್ತು. ಆದರೆ ಸಮುದ್ರವನ್ನು ಹುಡುಕುತ್ತ ಪರ್ವತಗಳನ್ನು ಹತ್ತಿಳಿದ ಇಪ್ಪತ್ತೊಂದು ಜನರ ಸಂತತಿಯವರು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಅಲ್ಲದೆ ಬೆಳಗಿನ ತನಕ ನರ್ತನ ನಡೆದಿತ್ತು.

ಪಿಯತ್ರೋ ಕ್ರೆಪ್ಸಿ ಪಿಯಾನೋ ರಿಪೇರಿ ಮಾಡಲು ವಾಪಸು ಬಂದ. ರೆಬೇಕ ಮತ್ತು ಅಮರಾಂತ ಅದರ ತಂತಿಗಳನ್ನು ಕ್ರಮದಲ್ಲಿಡಲು ಸಹಾಯ ಮಾಡುವುದರ ಜೊತೆ ಅದರ ನಾದದಲ್ಲಿ ತಮ್ಮ ನಗುವನ್ನು ಸೇರಿಸಿದರು. ಅದು ಎಷ್ಟೊಂದು ಹಿತವಾಗಿ ಮತ್ತು ಯುಕ್ತವಾಗಿತ್ತೆಂದರೆ ಉರ್ಸುಲಾ ಅವರ ಮೇಲಿನ ಪರಿವೀಕ್ಷಣೆಯನ್ನು ಕೈಬಿಟ್ಟಳು. ಅವನು ಮತ್ತೆ ಹೊರಡುವ ಸಂದರ್ಭದಲ್ಲಿ ಪರಿಷ್ಕೃತಗೊಂಡ ಪಿಯಾನೋ ಜೊತೆಗೆ ವಿದಾಯದ ನರ್ತನವನ್ನು ಏರ್ಪಡಿಸಲಾಗಿತ್ತು ಮತ್ತು ಅದರಲ್ಲಿ ರೆಬೇಕಳ ಆಧುನಿಕ ನರ್ತನವನ್ನು ಪ್ರದರ್ಶಿಸಿದ. ಅರ್ಕಾದಿಯೋ ಮತ್ತು ಅಮರಾಂತ ಲಾಸ್ಯದಲ್ಲಿ ಅವರನ್ನು ಸರಿಗಟ್ಟಿದರು. ಆದರೆ ಬಾಗಿಲಿನ ಹತ್ತಿರ ನಿಂತು ನೋಡುತ್ತಿದ್ದ ಕೆಲವರು ಅರ್ಕಾದಿಯೋನ ಹಿಂಭಾಗ ಹೆಂಗಸಿನ ಹಾಗೆ ಇದೆ ಎಂದು ಹೇಳಿದ್ದರಿಂದ ಇಡೀ ಸಮಾರಂಭಕ್ಕೆ ಅಡ್ಡಿಯಾಯಿತು. ಪಿಲರ್ ಟೆರ್‍ನೆರಾ ಅವರನ್ನು ತರಾಟೆಗೆ ತೆಗೆದುಕೊಂಡು ಜಗಳವಾಡುತ್ತ, ಕೂದಲು ಕಿತ್ತುತ್ತಿದ್ದಳು. ಮಧ್ಯ ರಾತ್ರಿಯ ಸಮಯಕ್ಕೆ ಪಿಯತ್ರೋ ಕ್ರೆಪ್ಸಿ ಚಿಕ್ಕದಾದ ಭಾವಪೂರ್ಣ ಭಾಷಣದ ನಂತರ ಮತ್ತೆ ಬರುವುದಾಗಿ ಮಾತು ಕೊಟ್ಟು ಹೊರಟ. ರೆಬೇಕ ಬಾಗಿಲ ತನಕ ಅವನ ಜೊತೆ ಹೋದಳು. ಮತ್ತು ವಾಪಸು ಬಂದು ದೀಪವಾರಿಸಿದ ನಂತರ ಅವಳು ಅಳುವುದಕ್ಕೆ ತನ್ನ ರೂಮಿಗೆ ಹೋದಳು. ಅವಳ ಅಳು ಅನೇಕ ದಿನಗಳ ಕಾಲ ಮುಂದುವರಿಯಿತು. ಅದಕ್ಕೆ ಕಾರಣ ಅಮರಾಂತಳಿಗೂ ಕೂಡ ತಿಳಿಯಲಿಲ್ಲ. ಅವಳ ಏಕಾಂತ ವಾಸ ಅಸಹಜವಾಗಿರಲಿಲ್ಲ. ಅವಳು ಆತ್ಮೀಯವಾಗಿ ಕಂಡರೂ ಒಂಟಿಯಾಗಿ ನಿಗೂಢವಾಗಿದ್ದಳು. ಅವಳು ಗಟ್ಟಿ ಮೈಯಿನ ಯುವತಿಯಾಗಿದ್ದಳು. ಆದರೆ ತಾನು ಆ ಮನೆಗೆ ಬಂದಾಗ ಇದ್ದ ಕೈಗಳು ಮುರಿದು ಹೋದರೂ ರಿಪೇರಿ ಮಾಡದ ಕುರ್ಚಿಯನ್ನು ಈಗ ಉಪಯೋಗಿಸಬೇಕೆಂದು ಅವಳು ಒತ್ತಾಯ ಮಾಡುತ್ತಿದ್ದಳು. ಆ ವಯಸ್ಸಿನಲ್ಲಿಯೂ ಸಹ ಅವಳಿಗೆ ಬೆರಳು ಚೀಪುವ ಅಭ್ಯಾಸ ಇತ್ತೆಂದು ಯಾರೂ ಕಂಡು ಹಿಡಿದಿರಲಿಲ್ಲ. ಈ ಕಾರಣದಿಂದ ಅವಳು ಬಚ್ಚಲು ಮನೆಯ ಬಾಗಿಲು ಹಾಕಿಕೊಳ್ಳುವುದನ್ನು ಮತ್ತು ಗೋಡೆಗೆ ಮುಖಮಾಡಿ ಮಲಗುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಮಳೆ ಬಿದ್ದ ದಿನ ಅಂಗಳದಲ್ಲಿ ಗೆಳತಿಯರ ಜೊತೆ ಕಸೂತಿ ಹಾಕುತ್ತ ಕುಳಿತ ಅವಳಿಗೆ ಮಾತಿನ ಎಳೆ ತಪ್ಪಿ ಹೋಗಿ, ಒದ್ದೆ ಮಣ್ಣು ಮತ್ತು ತೋಟದ ಮಣ್ಣಿನಲ್ಲಿದ್ದ ಎರೆ ಹುಳುಗಳನ್ನು ಕಂಡಾಗ ಹಳೆಯ ನೆನಪುಗಳು ಉಕ್ಕಿ ಬಂದು ಅವಳ ಗಲ್ಲದ ಮೇಲೆ ಉಪ್ಪು ನೀರು ಇಳಿಯುತಿತ್ತು. ಇತ್ತೀಚೆಗೆ ಕಿತ್ತಲೆ ಹಣ್ಣಿನ ರಸದ ರುಚಿಗೆ ಮಾರುಹೋದ ಅವಳಿಗೆ ಅಳು ಬಂದಾಗ ಅದರ ಅಪೇಕ್ಷೆ ಉಕ್ಕೇರುತಿತ್ತು. ಅವಳು ಮತ್ತೆ ಮಣ್ಣನ್ನು ತಿನ್ನಲು ಪ್ರಾರಂಭಿಸಿದಳು. ಅವಳು ಕೇವಲ ಕುತೂಹಲದಿಂದ ಹಾಗೆ ಮಾಡಿದ್ದಳು. ತೀವ್ರ ಅಪೇಕ್ಷೆಗೆ ಕೆಟ್ಟ ರುಚಿ ಮದ್ದು, ನಿಜ. ಆದರೆ ನಿಜವಾಗಿಯೂ ಬಾಯಿಯಲ್ಲಿ ಮಣ್ಣು ಇರುವುದನ್ನು ಅವಳಿಗೆ ತಡೆಯಲಾಗುತ್ತಿರಲಿಲ್ಲ. ಸ್ವಲ್ಪ ಸ್ವಲ್ಪವಾಗಿ ಹೆಚ್ಚುತ್ತಿದ್ದ ಆತಂಕದಿಂದ, ಮೂಲ ಖನಿಜಗಳ ರುಚಿ ತಂದು ಕೊಡುವ, ಮೊದಲಿನ ಆಹಾರದ ಸಮಾಧಾನವನ್ನು ಪಡೆಯಲು ತನ್ನ ಪ್ರಯತ್ನವನ್ನು ಮುಂದುವರಿಸಿದಳು. ಸಂತೋಷ ಮತ್ತು ರೇಜಿಗೆಯಿಂದ ಗೊಂದಲಗೊಂಡ ಅವಳು, ಇಷ್ಟಿಷ್ಟೆ ಮಣ್ಣನ್ನು ಜೇಬಿನಲ್ಲಿ ತುಂಬಿಕೊಂಡು ಯಾರಿಗೂ ಕಾಣದ ಹಾಗೆ ತಿನ್ನುತ್ತಿದ್ದಳು. ಹಾಗೆ ಮಾಡುತ್ತಿದ್ದಾಗ ತನ್ನ ಗೆಳತಿಯರಿಗೆ ಅವಳು ಇತರೆ ಗಂಡಸರ ಬಗ್ಗೆ ಮಾತನಾಡುತ್ತ, ಗೋಡೆಯ ಸುಣ್ಣ ತಿನ್ನುವುದನ್ನು ಬಿಟ್ಟು ಬಿಡುವುದಕ್ಕೆ ಅವರು ಅರ್ಹರಲ್ಲ ಎಂದು ಹೇಳುತ್ತಿದ್ದಳು. ಕೈಗಳ ತುಂಬ ಮಣ್ಣು ತುಂಬಿಕೊಂಡಿದ್ದನ್ನು ತೋರಿಸಲು ತಕ್ಕವನಾದ ಮನುಷ್ಯ ತೀರ ಅಪರೂಪವಾಗಿದ್ದು, ಅಂಥವನು ಪ್ರಪಂಚದ ಬೇರೆ ಕಡೆಯಲ್ಲಿ ಚರ್ಮದ ಶೂಗಳನ್ನು ಹಾಕಿಕೊಂಡು ನಡೆಯುವ ನೆಲ ಅವಳಿಗೆ ಅವನ ರಕ್ತದ ಲವಣದ ರುಚಿಯನ್ನು ರವಾನಿಸುತ್ತಿದೆಯೇನೋ ಎನ್ನುವಂತಿತ್ತು. ಅದು ಅವಳ ನಾಲಗೆಯಲ್ಲಿ ಆ ರುಚಿಯನ್ನು ಉಳಿಸಿ ಸಮಾಧಾನ ತರುತ್ತಿತ್ತು. ಒಂದು ಮಧ್ಯಾಹ್ನ ಆಂಪೆರೋ ಮೊಸ್ಕೋತೆ ಮನೆಯನ್ನು ನೋಡಲು ಅನುಮತಿ ಕೇಳಿದಳು. ಅವಳ ಅನಿರಿಕ್ಷಿತವಾದ ಉದ್ದೇಶದಿಂದ ಉತ್ಸಾಹವಿಲ್ಲದೆ ಕೊಂಚ ಬಿಗುವಿನಿಂದಲೆ ಅಮರಾಂತ ಮತ್ತು ರೆಬೇಕ ಅವಳನ್ನು ಉಪಚರಿಸಿದರು. ಬದಲಾದ ತಮ್ಮ ಮನೆಯನ್ನು ಅವಳಿಗೆ ತೋರಿಸಿದರು. ಹಾಗೂ ಪಿಯಾನೋವನ್ನು ಕೇಳಿಸಿದರು. ಅಲ್ಲದೆ ಅವಳಿಗೆ ಕಿತ್ತಲೆ ಹಣ್ಣಿನ ರಸ ಮತ್ತು ಬಿಸ್ಕತ್ತುಗಳನ್ನು ಕೊಟ್ಟರು. ಆಂಪರೋ ಮಸ್ಕೆತೆ ಅಲ್ಲಿ ಇದ್ದಷ್ಟು ಸಮಯ ಘನತೆಯಿಂದ ನಡೆದುಕೊಂಡು ಉರ್ಸುಲಾಳ ಮೇಲೆ ಒಳ್ಳೆಯ ಪ್ರಭಾವ ಬೀರಿದಳು. ಎರಡು ಗಂಟೆಗಳ ಸಮಯ ನಡೆಯುತ್ತಿದ್ದ ಪರಸ್ಪರ ಮಾತುಗಳು ಮುಗಿಯುತ್ತಿದ್ದ ಹಾಗೆ ಅಮರಾಂತಳ ಗಮನ ಬೇರೆ ಕಡೆ ಇದ್ದಾಗ ಅವಳು ರೆಬೇಕಳಿಗೆ ಒಂದು ಕಾಗದ ಕೊಟ್ಟಳು. ಅದರ ಮೇಲಿದ್ದ ಕುಮಾರಿ ರೆಬೇಕ ಬ್ಯುಂದಿಯಾ ಎಂಬ ಹಸಿರು ಬಣ್ಣದಲ್ಲಿ ಬರೆದ ಅಕ್ಷರಗಳನ್ನು ನೋಡಿದ ಅವಳಿಗೆ, ಪಿಯಾನೋದ ಕಾರ್ಯ ವೈಖರಿಯನ್ನು ಬರೆದು ತಿಳಿಸಿದ ಪದಗಳು ಇದ್ದ ರೀತಿಯಲ್ಲಿಯೇ ಕಂಡಿತು. ಅವಳು ಅದನ್ನು ಮಡಚಿ ಎದೆಯ ಬಳಿ ಇಟ್ಟುಕೊಂಡು ಆಂಪೆರೋ ಮಸ್ಕೋತೆ ಕಡೆ ಕೃತಜ್ಞತೆಯಿಂದ ನೋಡಿದಳು ಹಾಗೂ ಅದಕ್ಕಾಗಿ ತೃಪ್ತಿಯನ್ನು ವ್ಯಕ್ತಪಡಿಸಿದಳು.

ಆಂಪೆರೋ ಮಸ್ಕೋತೆ ಮತ್ತು ರೆಬೇಕ ಬ್ಯುಂದಿಯಾರಲ್ಲಿ ಉಂಟಾದ ದಿಢೀರ್ ಸ್ನೇಹದಿಂದ ಅವ್ರೇಲಿಯಾನೋನಲ್ಲಿ ಆಸೆಗಳು ಮರುಹುಟ್ಟು ಪಡೆದವು. ರೆಮಿದಿಯೋಸ್‌ಳ ನೆನಪು ಅವನನ್ನು ಕಾಡುವುದನ್ನು ಬಿಟ್ಟಿರಲಿಲ್ಲ. ಆದರೆ ಅವನಿಗೆ ಅವಳನ್ನು ಕಾಣುವ ಅವಕಾಶ ಸಿಕ್ಕಿರಲಿಲ್ಲ. ಅವನು ಊರಿನಲ್ಲಿ ತನ್ನ ಸ್ನೇಹಿತರಾದ ಮ್ಯಾಗ್ನಿಫಿಕೋ ವೀಸ್‌ಬಾಲ್ ಹಾಗೂ ಗೆರಿನೆಲ್ಡೊ ಮಾರ್ಕೆಜ್ (ಇವರು ಇದೇ ಹೆಸರಿನ ಸಂಸ್ಥಾಪಕರ ಮಕ್ಕಳು) ಜೊತೆಯಲ್ಲಿ ಓಡಾಡುವಾಗ ಹೊಲಿಗೆ ಅಂಗಡಿಯ ಕಡೆ ನೋಡುತ್ತಿದ್ದ ಅವನಿಗೆ ಅವಳ ಅಕ್ಕಂದಿರು ಮಾತ್ರ ಕಾಣುತ್ತಿದ್ದರು. ಅವನಿಗೆ ಆಂಪೊರೋ ಮೊಸ್ಕೋತೆ ಮನೆಗೆ ಬಂದಿದ್ದು ಒಳ್ಳೆಯ ಸೂಚನೆಯಂತೆ ಕಂಡಿತು. ಅವ್ರೇಲಿಯಾನೋ ತನ್ನಷ್ಟಕ್ಕೆ ಮೆಲು ಧ್ವನಿಯಲ್ಲಿ, “ಇವಳ ಜೊತೆ ಅವಳು ಬರುತ್ತಾಳೆ.” ಎಂದುಕೊಂಡ. “ಅವಳು ಬರುತ್ತಾಳೆ” ಎಂದು ಹಲವಾರು ಸಲ ತೀರ ನಂಬಿಕೆಯಿಂದ ತನಗೆ ತಾನೇ ಹೇಳಿಕೊಂಡದ್ದಕ್ಕೆ, ಒಂದು ದಿನ ಮಧ್ಯಾಹ್ನ ಅವಳು ತನ್ನ ಕರೆಯನ್ನು ಮನ್ನಿಸಿದ್ದಾಳೆ ಎಂದು ಅವನಿಗೆ ಖಚಿತವಾಯಿತು. ಅದರಂತೆಯೇ ಸ್ವಲ್ಪ ಹೊತ್ತಿನಲ್ಲಿ ಅವನಿಗೆ ಮಗುವಿನಂತಹ ಧ್ವನಿ ಕೇಳಿಸಿತು. ಅವನು ಕತ್ತೆತ್ತಿ ನೋಡಿದಾಗ ಬಾಗಿಲ ಹತ್ತಿರ ಬಿಳಿ ಶೂ ಮತ್ತು ತಿಳಿಗೆಂಪಿನ ಉಡುಗೆ ತೊಟ್ಟಿದ್ದ ಅವಳನ್ನು ಕಂಡು ಅವನ ಹೃದಯ ನಿಂತಂತಾಯಿತು.
ಆಂಪೆರೋ ಮಸ್ಕೋತೆ, “ನೀನು ಅಲ್ಲಿ ಹೋಗುವಂತಿಲ್ಲ ರೆಮೆದಿಯೋಸ್, ಅವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಹಜಾರದಲ್ಲಿ ನಿಂತು ಹೇಳಿದಳು.
ಆದರೆ ಅವಳಿಗೆ ಉತ್ತರಿಸಲು ಅವ್ರೇಲಿಯಾನೋ ಅವಕಾಶ ಕೊಡಲಿಲ್ಲ. ಅವನು ಬೋಗುಣಿಯಿಂದ ಹೊರಗೆ ಬಂದ ಸಣ್ಣ ಮೀನನ್ನು ಹಿಡಿದು ಕೊಂಡು, “ಒಳಗೆ ಬನ್ನಿ” ಎಂದ.
ಒಳಗೆ ಹೋದ ರೆಮಿದಿಯೋಸ್ ಅವನನ್ನು ಮೀನಿನ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದಳು. ಆಸ್ತಮಾ ಹೆಚ್ಚಾದ ಕಾರಣದಿಂದ ಅವ್ರೇಲಿಯಾನೋ ಅವಳಿಗೆ ಉತ್ತರ ಕೊಡಲಿಲ್ಲ. ಅವಳು ತನ್ನ ತಂದೆಗೆ ತೋರಿಸುತ್ತಿದ್ದ ಗೌರವದಂತೆ ಪ್ರತಿ ಪ್ರಶ್ನೆಗೆ ಮುಂಚೆ ‘ಸರ್\’ ಎನ್ನುತ್ತಿದ್ದಳು. ಅವನು ಆ ಹೊಳಪು ಕಣ್ಣುಗಳ ಮಿರುಗುವ ಮೈ ಬಣ್ಣದ ಅವಳ ಪಕ್ಕದಲ್ಲಿ ಇರಬೇಕೆಂದು ತೀವ್ರವಾಗಿ ಬಯಸಿದ್ದ. ಮೂಲೆಯಲ್ಲಿ ಡೆಸ್ಕಿನ ಮೇಲೆ ಕುಳಿತ ಮೆಲ್‌ಕಿಯಾದೆಸ್ ಬೇರೆಯವರಿಗೆ ಅರ್ಥವಾಗದ್ದನ್ನು ಏನನ್ನೋ ಬರೆಯುತ್ತಿದ್ದ. ಸಣ್ಣ ಮೀನೊಂದನ್ನು ಕೊಡುತ್ತೇನೆ ಎಂದು ಅವಳಿಗೆ ಹೇಳಲು ಮಾತ್ರ ಅವ್ರೇಲಿಯಾನೋಗೆ ಸಾಧ್ಯವಾಯಿತು. ಅವಳಿಗೆ ಗಾಬರಿಯಾಗಿ ಸಾಧ್ಯವಾದಷ್ಟು ವೇಗವಾಗಿ ವರ್ಕ್‌ಶಾಪ್‌ನಿಂದ ಓಡಿದಳು. ಅವ್ರೇಲಿಯಾನೋ ಆ ದಿನ ಮಧ್ಯಾಹ್ನ ಅವಳನ್ನು ಭೇಟಿಯಾಗಬೇಕೆಂದು ಅಲ್ಲಿಯ ತನಕ ಕಾಯ್ದಿಟ್ಟುಕೊಂಡಿದ್ದ ತಾಳ್ಮೆಯನ್ನು ಕಳೆದುಕೊಂಡ. ಇದರಿಂದಾಗಿ ಅವನು ಕೆಲಸವನ್ನು ನಿರ್ಲಕ್ಷಿಸಿದ. ಮನಸ್ಸನ್ನು ಕೇಂದ್ರೀಕರಿಸುವ ಪ್ರಯತ್ನದಲ್ಲಿ ಅವಳು ಕಾಣಲಿ ಎಂದು ತೀವ್ರವಾಗಿ ಬಯಸಿದ. ಆದರೆ ಅವಳು ಉತ್ತರಿಸಲಿಲ್ಲ. ಅವನು ಅವಳನ್ನು ಅವಳ ಅಕ್ಕಂದಿರ ಅಂಗಡಿಯಲ್ಲಿ, ಅವರ ಮನೆಯ ಕಿಟಕಿಯ ಹತ್ತಿರ, ಹಾಗೂ ಅವಳ ತಂದೆಯ ಆಫೀಸಿನಲ್ಲಿ ಕಾಣಲು ಪ್ರಯತ್ನಿಸಿದ. ಆದರೆ ಅವನಲ್ಲಿ ಮಡುಗಟ್ಟಿದ ಅವಳ ಆಕಾರವನ್ನು ಏಕಾಂತದಲ್ಲಿ ಮಾತ್ರ ಕಾಣಲು ಸಾಧ್ಯವಾಯಿತು. ರೆಬೇಕಳ ಜೊತೆ ಪಿಯಾನೋದ ಸಂಗೀತವನ್ನು ಕೇಳುತ್ತ ಗಂಟೆಗಟ್ಟಲೆ ಕಳೆಯುತ್ತಿದ್ದ. ಪಿಯತ್ರೋ ಕ್ರಿಪ್ಸಿ ಹೇಗೆ ನರ್ತಿಸಬೇಕೆಂದು ಕಲಿಸಿದ್ದರಿಂದ ಅವಳು ಆ ಸಂಗೀತವನ್ನು ಕೇಳುತ್ತಿದ್ದಳು. ಆದರೆ ಸಂಗೀತ ಮತ್ತು ಅದರೊಂದಿಗೆ ಪ್ರತಿಯೊಂದೂ ರೆಮಿದಿಯೋಸಳನ್ನು ನೆನಪಿಸುತ್ತಿದ್ದರಿಂದ ಅವ್ರೇಲಿಯಾನೋ ಅದನ್ನು ಕೇಳುತ್ತಿದ್ದ.

ಇಡೀ ಮನೆ ಪ್ರೇಮದಿಂದ ತುಂಬಿ ಹೋಗಿತ್ತು. ಕೊನೆ ಮೊದಲಿಲ್ಲದ ಕಾವ್ಯದಿಂದ ಅವ್ರೇಲಿಯಾನೋ ಅದನ್ನು ವ್ಯಕ್ತಪಡಿಸಿದ್ದ. ಅವನು ಅದನ್ನು ರೆಮಿದಿಯೋಸ್ ಕಾಣಿಸಿಕೊಂಡಳೇನೋ ಎನ್ನುವಂತೆ ಮೆಲ್‌ಕಿಯಾದೆಸ್ ಕೊಟ್ಟ ಚರ್ಮದ ಹಾಳೆಯಲ್ಲಿ, ಬಚ್ಚಲು ಮನೆ ಗೋಡೆಯಲ್ಲಿ, ಹಾಗೂ ಕೈ ಮೇಲೆ ಬರೆಯುತ್ತಿದ್ದ: ಮಧ್ಯಾಹ್ನ ಎರಡು ಗಂಟೆಯ ನಿದ್ದೆಗಣ್ಣಿನ ರೆಮಿದಿಯೋಸ್, ಮೃದುವಾದ ಗುಲಾಬಿ ಉಸುರಿನ ರೆಮಿದಿಯೋ;ಸ್, ಚಿಕ್ಕ ಹುಳುಗಳ ಆಂತರ್ಯದ ರೆಮಿದಿಯೋಸ್, ಬೆಳಗಿನ ಹೊಗೆಯಾಡುವ ಬ್ರೆಡ್‌ನಲ್ಲಿನ ರೆಮಿದಿಯೋಸ್, ಎಲ್ಲಂದರಲ್ಲಿರುವ ರೆಮಿದಿಯೋಸ್ ಹಾಗೂ ಎಂದೆಂದಿಗೂ ಇರುವ ರೆಮಿದಿಯೋಸ್. ರೆಬೇಕ ಕಸೂತಿ ಹಾಕುತ್ತ ತನ್ನ ಪ್ರಿಯತಮನಿಗಾಗಿ ಮಧ್ಯಾಹ್ನ ನಾಲ್ಕು ಗಂಟೆಗೆ ಕಾದಿರುತ್ತಿದ್ದಳು. ಅವಳಿಗೆ ಅಂಚೆಯವನ ಹೇಸರಗತ್ತೆ ಎರಡು ವಾರಕ್ಕೊಂದು ಸಲ ಬರುತ್ತೆಂದು ಗೊತ್ತಿತ್ತು. ಆದರೂ ಎಂದಾದರೊಂದು ದಿನ ಅದು ತಪ್ಪಾಗಿ ಬರುವುದೆಂಬ ನಂಬಿಕೆಯಿಂದ ಯಾವಾಗಲೂ ಕಾದಿರುತ್ತಿದ್ದಳು. ಆದರೆ ಅದಕ್ಕೆ ವಿರುದ್ಧವಾಗಿ ಬರಬೇಕಾದ ದಿನ ಹೇಸರಕತ್ತೆ ಬರಲಿಲ್ಲ. ನಿರಾಸೆಯಿಂದ ಹುಚ್ಚಿಯಂತಾಗಿ ರೆಬೇಕ ಮಧ್ಯರಾತ್ರಿಯಲ್ಲಿ ಎದ್ದು ತೋಟದಲ್ಲಿನ ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಗಪಗಪನೆ ಮುಕ್ಕಿದಳು. ನೋವು ಹಾಗೂ ರೋಷದಿಂದ ಅಳುತ್ತ ಎರೆಹುಳುಗಳನ್ನು ಮತ್ತು ಆಮೆಚಿಪ್ಪುಗಳನ್ನು ಜಗಿದಳು. ಅನಂತರ ಬೆಳಗಿನ ಜಾವದ ತನಕ ವಾಂತಿ ಮಾಡಿದಳು. ಅವಳಿಗೆ ತೀವ್ರವಾದ ಜ್ವರ ಬಂದು ಪ್ರಜ್ಞೆ ತಪ್ಪಿತು. ಹೃದಯ ಭಾರವಾಯಿತು. ಉರ್ಸುಲಾ ಗಾಬರಿಗೊಂಡು ಅವಳ ಪೆಟ್ಟಿಗೆಯನ್ನು ಬಲವಂತದಿಂದ ತೆಗೆದಾಗ ಅದರ ತಳದಲ್ಲಿ ನಸುಗೆಂಪು ರಿಬ್ಬನ್‌ನಿಂದ ಕಟ್ಟಿದ ಸುವಾಸನೆಯ ಹದಿನಾರು ಕಾಗದಗಳು ಹಾಗೂ ಒಣಗಿದ ಹೂ ಮತ್ತು ಎಲೆಗಳಲ್ಲದೆ ಮುಟ್ಟಿದರೆ ಪುಡಿಯಾಗುವ ಚಿಟ್ಟೆಗಳು ಹಳೆಯ ಪುಸ್ತಕದಲ್ಲಿ ಕಂಡವು.

ಅವ್ರೇಲಿಯಾನೋಗೆ ಮಾತ್ರ ಅಂಥ ನಿರಾಸೆಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿತ್ತು. ಆ ದಿನ ಮಧ್ಯಾಹ್ನ ಉರ್ಸುಲಾ ಉನ್ಮತ್ತಳಾಗುತ್ತಿದ್ದ ರೆಬೇಕಳನ್ನು ತಡೆಯುವ ಪ್ರಯತ್ನದಲ್ಲಿದ್ದಾಗ ಅವ್ರೇಲಿಯಾನೋ ತನ್ನ ಸ್ನೇಹಿತರಾದ ಮ್ಯಾಗ್ನಿಫಿಕೋ ವೀಸ್‌ಬಾಲ್ ಮತ್ತು ಗೆರಿನೆಲ್ಡೊ ಮಾರ್ಕೆಜ್‌ರ ಜೊತೆ ಕತಾವುರತೆಯ ಅಂಗಡಿಗೆ ಹೋದ. ಅದನ್ನು ಆಗಲೇ ಮರದ ರೂಮುಗಳಿಂದ ಅಭಿವೃದ್ಧಿಗೊಳಿಸಲಾಗಿತ್ತು. ಅದರಲ್ಲಿ ಒಣಗಿದ ಹೂಗಳ ವಾಸನೆಯ ಹೆಂಗಸೊಬ್ಬಳು ವಾಸಮಾಡುತ್ತಿದ್ದಳು. ಅಲ್ಲಿ ಗುಂಪೊಂದು ಅಕಾರ್ಡಿಯನ್ ಮತ್ತು ಡ್ರಮ್ಮುಗಳನ್ನು ಉಪಯೋಗಿಸಿಕೊಂಡು ಸಾಕಷ್ಟು ವರ್ಷಗಳ ಕಾಲ ಮಕೋಂದೋದಲ್ಲಿ ಕಾಣದ ಫ್ರಾನ್ಸಿಸ್ಕೋನ ಹಾಡುಗಳನ್ನು ನುಡಿಸುತ್ತಿದ್ದರು. ಆ ಮೂವರು ಸ್ನೇಹಿತರು ಕಸಿಮಾಡಿದ ಕಬ್ಬಿನ ರಸವನ್ನು ಕುಡಿದರು. ಅವ್ರೇಲಿಯಾನೋನ ಒಡನಾಡಿಗಳಾದ ವೀಸ್‌ಬಾಲ್ ಮತ್ತು ಮಾರ್ಕೆಜ್ ಪ್ರಾಪಂಚಿಕ ವಿಷಯದಲ್ಲಿ ನುರಿತವರಾಗಿದ್ದರು. ಅವರು ತೊಡೆಯ ಮೇಲೆ ಹೆಂಗಸರನ್ನು ಕೊಡಿಸಿಕೊಂಡು ನಿಧಾನವಾಗಿ ಕುಡಿಯತೊಡಗಿದರು. ಅವರಲ್ಲಿ ಸೊರಗಿದ ಮತ್ತು ಬಂಗಾರದ ಹಲ್ಲನ್ನು ಕಟ್ಟಿಸಿಕೊಂಡಿದ್ದವಳೊಬ್ಬಳು ಅವ್ರೇಲಿಯಾನೋನನ್ನು ನೇವರಿಸಿದಳು. ಅದು ಅವನನ್ನು ನಡುಗುವಂತೆ ಮಾಡಿತು. ಅವನು ಅವಳನ್ನು ದೂರ ಸರಿಸಿದ. ಅವನಿಗೆ, ತಾನು ಕುಡಿದಷ್ಟೂ ರೆಮಿದಿಯೋಸ್‌ಳ ನೆನಪು ಹೆಚ್ಚುವುದೆಂದು ಗೊತ್ತಾಯಿತು. ಆದರೆ ಅದಕ್ಕಿಂತ ಉತ್ತಮವಾಗಿ ಅವಳ ನೆನಪಿನ ನೋವನ್ನು ತಡೆಯಲು ಅವನಿಗೆ ಸಾಧ್ಯವಾಗಲಿಲ್ಲ. ಅವನಿಗೆ ತಾನು ಯಾವಾಗಿನಿಂದ ತೇಲುತ್ತಿದ್ದೇನೆ ಎಂದು ತಿಳಿಯಲಿಲ್ಲ. ತನ್ನ ಸ್ನೇಹಿತರು ಮತ್ತು ಹೆಂಗಸರು ಹೊಳೆಯುವ ಬೆಳಕಲ್ಲಿ ತೇಲುತ್ತ ಅದೇನೋ ಪದಗಳನ್ನು ಉಚ್ಛರಿಸುತ್ತ, ಮುಖಭಾವಕ್ಕೆ ಸಂಬಂಧವಿಲ್ಲದ ಸನ್ನೆಗಳನ್ನು ಮಾಡುತ್ತಿದ್ದದ್ದು ಕಾಣಿಸಿತು. ಕ್ಯಾಡಿಲಿನೋ ಅವನ ಹೆಗಲ ಮೇಲೆ ಕೈ ಹಾಕಿ, “ಹನ್ನೊಂದಾಗುತ್ತಿದೆ” ಎಂದು ಹೇಳಿದ. ಅವ್ರೇಲಿಯಾನೋ ಕತ್ತು ತಿರುಗಿಸಿ ಕಿವಿಯಲ್ಲಿ ಹೂ ಇಟ್ಟುಕೊಂಡಿದ್ದ ಕಳೆಗೆಟ್ಟ ಒಂದು ಮುಖವನ್ನು ನೋಡಿದ. ಆಗ ಅವನಿಗೆ ಮರೆವಿನ ದಿನಗಳಲ್ಲಿ ಆದ ಹಾಗೆ ನೆನಪು ಅಳಿಸಿಹೋಯಿತು. ಅಂದೊಂದು ಬೆಳಗಿನ ಜಾವ ತೀರ ಹೊಸದಾದ ರೂಮಿನಲ್ಲಿ, ಕೂದಲನ್ನು ಕೆಳಗೆ ಬಿಟ್ಟುಕೊಂಡು, ಬರಿಗಾಲಲ್ಲಿ, ಕೈಯಲ್ಲೊಂದು ದೀಪ ಹಿಡಿದುಕೊಂಡು ಪಿಲರ್ ಟೆರ್‍ನೆರಾ ನಿಂತಿದ್ದನ್ನು ಕಂಡು ನಂಬದೆ ಆಶ್ಚರ್ಯಗೊಂಡ ಅವನು ಅದನ್ನು ಮರಳಿ ಪಡೆದ.
“ಅವ್ರೇಲಿಯಾನೋ”
ಅವ್ರೇಲಿಯಾನೋ ತಲೆ ಎತ್ತಿದ. ಅವನಿಗೆ ತಾನು ಅಲ್ಲಿಗೆ ಬಂದದ್ದು ಹೇಗೆ ಎಂದು ತಿಳಿಯಲಿಲ್ಲ. ಆದರೆ ತನ್ನ ಗುರಿ ಏನು ಎನ್ನುವುದು ತಿಳಿದಿತ್ತು. ಏಕೆಂದರೆ ಅವನು ಅದನ್ನು ಚಿಕ್ಕಂದಿನಿಂದ ಹೃದಯದಾಳದಲ್ಲಿ ಇಟ್ಟುಕೊಂಡಿದ್ದ.
ಅವನು, “ನಾನು ನಿನ್ನ ಜೊತೆ ಮಲಗಲು ಬಂದಿದ್ದೇನೆ.” ಎಂದ.

ಅವನ ಬಟ್ಟೆಯೆಲ್ಲ ವಣ್ಣು ಮತ್ತು ವಾಂತಿಯಿಂದ ಮಲಿನಗೊಂಡಿತ್ತು. ತನ್ನ ಇಬ್ಬರು ಮಕ್ಕಳ ಜೊತೆ ಒಂಟಿಯಾಗಿದ್ದ ಪಿಲರ್ ಟೆರ್‍ನೆರಾ ಅವನಿಗೆ ಯಾವ ಪ್ರಶ್ನೆಯನ್ನು ಕೇಳಲಿಲ್ಲ. ಅವನನ್ನು ಹಾಸಿಗೆಗೆ ಕರೆದುಕೊಂಡು ಹೋದಳು. ಒದ್ದೆ ಬಟ್ಟೆಯಿಂದ ಅವನ ಮುಖವನ್ನು ಒರೆಸಿ, ಬಟ್ಟೆಯನ್ನು ಕಳಚಿದಳು. ಅನಂತರ ತನ್ನ ಬಟ್ಟೆಯನ್ನು ತೆಗೆದು, ಒಂದು ಪಕ್ಷ ಮಕ್ಕಳು ಎದ್ದರೆ ತಮ್ಮನ್ನು ನೋಡದಿರಲಿ ಎಂದು ಸೊಳ್ಳೆ ಪರದೆಯನ್ನು ಇಳಿಬಿಟ್ಟಳು. ಅವಳು ತನ್ನನ್ನು ಬಿಟ್ಟ ಗಂಡಸರಿಂದ, ಕಾರ್ಡುಗಳ ಗೊಂದಲದಲ್ಲಿ ಮನೆಗುರುತು ಮರೆತ ಲೆಕ್ಕವಿಲ್ಲದಷ್ಟು ಗಂಡಸರಿಂದ ಸೋತು ಹೋಗಿ, ತನ್ನ ಜೊತೆ ಇರುವ ಗಂಡಸಿಗಾಗಿ ಕಾಯುತ್ತಿದ್ದಳು. ಕಾದಿರುವ ಅವಧಿಯಲ್ಲಿ ಅವಳ ಮೈ ಚರ್ಮ ಸುಕ್ಕಾಗಿತ್ತು, ಮೊಲೆಗಳು ಸುರುಟಿದ್ದವು. ಮತ್ತು ಅವಳ ಹೃದಯದ ಕಾವು ನಂದಿಹೋಗಿತ್ತು. ಆ ಕತ್ತಲಲ್ಲಿ ಅವಳು ಅವ್ರೇಲಿಯಾನೋಗಾಗಿ ತಡಕಾಡಿ ಅವನ ಹೊಟ್ಟೆಯ ಮೇಲೆ ಕೈಯಿಟ್ಟು ತಾಯಿಯ ಹಾಗೆ ಮೃದುವಾಗಿ ಅವನ ಕೆನ್ನೆಯ ಮೇಲೆ ಮುತ್ತಿಟ್ಟಳು. “ನತದೃಷ್ಟ ಮಗುವೇ” ಎಂದು ಅವಳು ಪಿಸುನುಡಿದಳು. ಅವ್ರೇಲಿಯಾನೋ ನಡುಗಿದ. ಶಾಂತಚಿತ್ತನಾಗಿ, ಕೊಂಚವೂ ನಲುಗದ ಆಲೋಚನೆಯಿಂದ ಮಡುಗಟ್ಟಿದ ದುಃಖದಿಂದ ಆಚೆಗೆ ಬಂದ. ಅವನಿಗೆ ಇಸ್ತ್ರಿ ಮಾಡಿದ ಬಟ್ಟೆ ಹಾಕಿಕೊಂಡು, ಪ್ರಾಣಿಯ ವಾಸನೆ ಸೂಸುವ ರೆಮಿದಿಯೋಸ್ ಜೌಗು ಪ್ರದೇಶದಂತೆ ಬದಲಾದದ್ದು ಕಂಡಿತು. ಅವನು ತಿಳಿದೆದ್ದಾಗ ಅಳುತ್ತಿದ್ದ. ಮೊದಲು ಬಿಡಿಬಿಡಿಯಾದ ಬಿಕ್ಕುಗಳಿದ್ದವು ಅನಂತರ ಒಳಗಿನ ಎಲ್ಲವನ್ನೂ ಹೊರಗೆ ಹಾಕಿದ. ಅವಳು ಅವನ ಕೂದಲಲ್ಲಿ ಬೆರಳಾಡಿಸಿ ಕಾದಳು. ಅನಂತರ ಪಿಲರ್ ಟೆರ್‍ನೆರಾ, “ಯಾರವಳು” ಎಂದು ಕೇಳಿದಳು. ಅವ್ರೇಲಿಯಾನೋ ಅವಳಿಗೆ ಯಾರೆಂದು ತಿಳಿಸಿದ. ಬೇರೆ ಸಮಯದಲ್ಲಿ ಕೊಕ್ಕರೆಗಳನ್ನು ಹೆದರಿಸುವಂತಿದ್ದ ಅವಳು ಈಗ ಮಕ್ಕಳು ಕೂಡ ಎಚ್ಚರವಾಗದ ಹಾಗೆ ನಕ್ಕಳು. “ಅವಳನ್ನು ಉದ್ದೀಪನಗೊಳಿಸಬೇಕು” ಎಂದು ಅಣಕಿಸಿದಳು. ಆದರೆ ಆ ಅಣಕಿನಲ್ಲಿ ಅವ್ರೇಲಿಯಾನೋಗೆ ಆಗಾಧವಾದ ಹೃದಯವಂತಿಕೆ ಕಾಣಿಸಿತು. ಅವನು ರೂಮಿನಿಂದ ಹೊರಗೆ ಹೊರಟಾಗ ತನ್ನ ಗಂಡಸುತನದ ಬಗ್ಗೆ ಇದ್ದ ಅನುಮಾನ ಮತ್ತು ಅನೇಕ ತಿಂಗಳುಗಳ ಕಾಲದ ಹೃದಯದ ಭಾರವನ್ನು ಹೊರಗೆ ಹಾಕಿದ. ಪಿಲರ್ ಟೆರ್‍ನೆರಾ ಅವನಿಗೆ ಮಾತು ಕೊಟ್ಟಳು.
“ನಾನು ಆ ಹುಡುಗಿಯ ಹತ್ತಿರ ಮಾತಾಡ್ತೀನಿ. ನಾನು ಅವಳಿಗೆ ಏನು ತಿನ್ನಲು ಕೊಡ್ತೀನಿ, ನೋಡ್ವಂತೆ” ಎಂದಳು.

ಅವಳು ತನ್ನ ಮಾತನ್ನು ಉಳಿಸಿಕೊಂಡಳು. ಆದರೆ ಅದು ಕೆಟ್ಟ ಗಳಿಗೆಯಾಗಿತ್ತು. ಮನೆ ಹಳೆಯ ದಿನಗಳ ಶಾಂತಿಯನ್ನು ಕಳೆದುಕೊಂಡಿತ್ತು. ತನ್ನ ಕೂಗಾಟದಿಂದ ಗುಟ್ಟಾಗಿ ಇಟ್ಟುಕೊಳ್ಳಲು ಸಾಧ್ಯವಾಗದೆ ಹೋದ ರೆಮಿದಿಯೋಸ್‌ಳ ಮೋಹದ ಬಗ್ಗೆ ತಿಳಿದಾಗ ಅಮರಾಂತಳಿಗೆ ಅತೀವವಾದ ಜ್ವರ ಬಂದಿತ್ತು. ಅವಳು ಕೂಡ ಪ್ರೇಮದ ಏಕಾಂತದಲ್ಲಿ ನರಳುತ್ತಿದ್ದಳು. ಅವಳು ಬಚ್ಚಲ ಮನೆಯಲ್ಲಿ ಬಾಗಿಲು ಹಾಕಿಕೊಂಡು ತನ್ನೊಳಗಿನ ತಳಮಳಕ್ಕೆ ಹೊರದಾರಿ ಹುಡುಕಲು ಭಾವಪೂರ್ಣವಾದ ಕಾಗದಗಳನ್ನು ಬರೆಯುತ್ತಿದ್ದಳು. ಅವುಗಳನ್ನು ಪೆಟ್ಟಿಗೆಯ ತಳದಲ್ಲಿ ಬಚ್ಚಿಡುತ್ತಿದ್ದಳು. ಉರ್ಸುಲಾಗೆ ಕಾಯಿಲೆ ಬಿದ್ದ ಇಬ್ಬರು ಹುಡುಗಿಯರನ್ನು ನೋಡಿಕೊಳ್ಳುವ ಶಕ್ತಿ ಇರಲಿಲ್ಲ. ಅದೆಷ್ಟೋ ಹೊತ್ತಿನ ತನಕ ಪ್ರಶ್ನೆಗಳನ್ನು ಕೇಳಿದರು. ಅಮರಾಂತಳ ನಿತ್ರಾಣದ ಕಾರಣ ತಿಳಿದುಕೊಳ್ಳಲು ಅವಳಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಏನೋ ಹೊಳೆದು, ಬಲವಂತವಾಗಿ ಪೆಟ್ಟಿಗೆಯನ್ನು ತೆಗೆದಳು. ಅಲ್ಲಿ ಕಂಬನಿಯಿಂದ ಇನ್ನೂ ಒದ್ದೆಯಾಗಿದ್ದ ಪಿಯತ್ರೋ ಕ್ರೆಪ್ಸಿಗೆ ಕಳುಹಿಸಿದ ನಸುಗೆಂಪು ರಿಬ್ಬನ್‌ನಿಂದ ಕಟ್ಟಿದ ಹಾಗೂ ತಾಜಾ ಹೂವಿನ ಜೊತೆಯಲ್ಲಿದ್ದ ಕಾಗದಗಳನ್ನು ಕಂಡಳು. ರೋಷದಿಂದ ಅಳುತ್ತಾ ಪಿಯಾನೋವನ್ನು ಕೊಂಡುಕೊಳ್ಳಬೇಕೆಂದು ತನಗೆ ಹೊಳೆದ ಆ ದಿನಗಳನ್ನು ಶಪಿಸಿದಳು. ಆನಂತರ ಅವಳು ಕಸೂತಿ ತರಗತಿಗೆ ನಿರ್ಬಂಧ ಹಾಕಿದಳು. ಮತ್ತು ಯಾರೂ ಸಾಯದಿದ್ದರೂ ಕೂಡ ಅವರಿಬ್ಬರು ಹೆಣ್ಣು ಮಕ್ಕಳ ಆಸೆ ಕೊನೆಗೊಳ್ಳುವ ತನಕ ವಿಸ್ತೃತವಾದ ಸೂತಕವನ್ನು ಆಚರಣೆಗೆ ತಂದಳು. ಪಿಯತ್ರೋ ಕ್ರೆಪ್ಸಿಯ ಸಂಗೀತದ ವಾದ್ಯಗಳನ್ನು ರಿಪೇರಿ ಮಾಡುವ ಸಾರ್ಮಥ್ಯವನ್ನು ಮೆಚ್ಚಿಕೊಂಡಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನ ಬಗ್ಗೆ ತನ್ನ ಮೊದಲಿನ ಭಾವನೆಯನ್ನು ಬದಲಾಯಿಸಿದರೂ ಕೂಡ ಯಾವುದೇ ಉಪಯೋಗಕ್ಕೆ ಬರಲಿಲ್ಲ. ಪಿಲರ್ ಟೆರ್‍ನೆರಾ ಅವ್ರೇಲಿಯಾನೋಗೆ ರೆಮಿದಿಯೋಸ್ ಮದುವೆಯ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆಂದು ಹೇಳಿದರೂ ಸಹ ಆ ಸುದ್ದಿ ತನ್ನ ತಂದೆತಾಯಿಗಳಿಗೆ ಹೆಚ್ಚಿನ ತೊಂದರೆ ಉಂಟುಮಾಡುವುದೆಂದು ಅವನಿಗೆ ತೋರಿತ್ತು. ಔಪಚಾರಿಕತೆಯ ಮಾತುಕತೆಗೆಂದು ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತು ಉರ್ಸುಲಾರನ್ನು ನಡುಮನೆಗೆ ಕರೆದಾಗ ತಮ್ಮ ಮಗ ಹೇಳಿದ್ದು ಕೇಳಿ ಕಲ್ಲಿನಂತಾದರು. ಹೊಸೆ ಅರ್ಕಾದಿಯೋ ಬ್ಯುಂದಿಯಾನಿಂದ ಹುಡುಗಿಯ ಹೆಸರನ್ನು ಕೇಳಿ ಕೆಂಪಾಗಿ, “ಪ್ರೀತಿ ಅನ್ನೋದು ಒಂದು ರೋಗ” ಎಂದು ಕೂಗಾಡಿ, “ಊರಿನಲ್ಲಿ ಎಷ್ಟೊಂದು ಚೆಂದದ ಹುಡುಗಿಯರು ಇರೋವಾಗ ನನ್ನ ಶತ್ರು ಮಗಳನ್ನೇ ಮದುವೆಯಾಗಬೇಕು ಅಂತ ನಿನಗನ್ನಿಸಿದೆ” ಎಂದ. ಆದರೆ ಉರ್ಸುಲಾಗೆ ಒಪ್ಪಿಗೆ ಆಯಿತು. ಅವಳು ಮೊಸ್ಕೋತೆ ಅಕ್ಕತಂಗಿಯರನ್ನು ಅವರ ನಾಜೂಕು, ಒಳ್ಳೆಯ ನಡತೆ, ನಾಚಿಕೆ, ರೂಪ, ಕೆಲಸದ ಸಾಮರ್ಥ್ಯ ಇವುಗಳಿಗಾಗಿ ಮೆಚ್ಚಿಕೊಂಡಳು. ಅಲ್ಲದೆ ತನ್ನ ಮಗನ ಬಗ್ಗೆ ಹೆಮ್ಮೆ ಆಯಿತು. ಹೊಸೆ ಅರ್ಕಾದಿಯೋ ಬ್ಯುಂದಿಯಾ ತನ್ನ ಹೆಂಡತಿಯ ಉತ್ಸಾಹಕ್ಕೆ ವಶನಾಗಿ ಒಂದು ಷರತ್ತನ್ನು ಹಾಕಿದ. ತನಗೆ ಬೇಕಾಗಿದ್ದ ರೆಬೇಕಳನ್ನು ಪಿಯತ್ರೋ ಕೆಪ್ಸಿ ಮದುವೆಯಾಗಬೇಕು ಮತ್ತು ಅಮರಾಂತಳಿಗೆ ಆದ ನಿರಾಶೆಯ ಉಪಶಮನಕ್ಕೆ ಅವಳನ್ನು ಉರ್ಸುಲಾ ಆ ಪ್ರದೇಶದ ರಾಜಧಾನಿಗೆ ಸುತ್ತಾಡಲು ಅವಳಿಗೆ ಸಮಯವಾದಾಗ ಕರೆದುಕೊಂಡು ಹೋಗಬೇಕು. ಈ ವಿಷಯದ ಬಗ್ಗೆ ತಿಳಿದ ಕೂಡಲೇ ರೆಬೇಕಳ ಆರೋಗ್ಯ ಸುಧಾರಿಸಿತು. ಅವಳು ತನ್ನ ಪ್ರಿಯಕರನಿಗೆ ಯಾವ ಮಧ್ಯವರ್ತಿಗಳ ಸಹಾಯವೂ ಇಲ್ಲದೇ ತಾನು ತನ್ನ ತಂದೆತಾಯಿಯರ ಅಭಿಪ್ರಾಯವನ್ನು ಒಪ್ಪಿಕೊಂಡಿರುವುದಾಗಿ ಹೇಳಿ ಪತ್ರ ಬರೆದು ಅಂಚೆಗೆ ಹಾಕಿದಳು. ಅಮರಾಂತ ಈ ನಿರ್ಧಾರವನ್ನು ಒಪ್ಪಿಕೊಂಡಿರುವಂತೆ ನಟಿಸಿದಳು ಮತ್ತು ಸ್ವಲ್ಪ ಸ್ವಲ್ಪವಾಗಿ ಜ್ವರದಿಂದ ಸುಧಾರಣೆ ಹೊಂದಿದಳು. ಆದರೆ ರೆಬೇಕ ತನ್ನ ಹೆಣದ ಮೇಲೆ ಮಾತ್ರ ಮದುವೆಯಾಗುತ್ತಾಳೆ ಎಂದು ತನಗೆ ತಾನೇ ಹೇಳಿಕೊಂಡಳು.

ಅನಂತರದ ಶನಿವಾರ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕಪ್ಪು ಸೂಟು, ಮಿರುಗುವ ಕಾಲರ್, ಮತ್ತು ಮೊದಲ ಬಾರಿಗೆ ರಾತ್ರಿ ಪಾರ್ಟಿಯಲ್ಲಿ ಹಾಕಿಕೊಂಡ ಜಿಂಕೆ ಚರ್ಮದ ಶೂಗಳನ್ನು ತೊಟ್ಟು ರೆಮಿದಿಯೋಸ್ ಮೊಸ್ಕೋತೆಯನ್ನು ಕೇಳಲು ಅವರ ಮನೆಗೆ ಹೋದ. ಏಕಕಾಲಕ್ಕೆ ಉಂಟಾದ ಸಂತೋಷ ಮತ್ತು ಆತಂಕದಿಂದ ಮ್ಯಾಜಿಸ್ಟ್ರೇಟ್ ಮತ್ತು ಅವನ ಹೆಂಡತಿ ಅವರನ್ನು ಬರಮಾಡಿಕೊಂಡರು. ಏಕೆಂದರೆ ಅವರಿಗೆ ಅವನ ಅನೀರಿಕ್ಷಿತ ಆಗಮನದ ಕಾರಣ ಗೊತ್ತಿರಲಿಲ್ಲ. ಅವರಿಗೆ ಅವನು ವಧುವಿನ ಹೆಸರಿನ ಗೊಂದಲದಲ್ಲಿ ಸಿಲುಕಿರಬಹುದು ಎನ್ನಿಸಿತು. ಈ ತಪ್ಪನ್ನು ನಿವಾರಿಸುವ ಉದ್ದೇಶದಿಂದ ಇನ್ನೂ ಮಲಗಿದ್ದ ರೆಮಿದಿಯೋಸ್‌ಳನ್ನು ಎಬ್ಬಿಸಿ ಅವಳನ್ನು ಹಜಾರಕ್ಕೆ ಎತ್ತಿಕೊಂಡು ಬಂದಿದ್ದಳು. ಅವರು ಅವಳನ್ನು ಮದುವೆ ಆಗಬೇಕೆಂದು ನಿರ್ಧಾರ ಮಾಡಿರುವುದು ನಿಜವೇ ಎಂದು ಕೇಳಿದಾಗ, ಅವಳು ಹೂಂಕರಿಸಿ ತನಗೆ ಅವರು ನಿದ್ದೆ ಮಾಡಲು ಮಾತ್ರ ಬಿಟ್ಟರೆ ಸಾಕು ಎಂದೆನಿಸಿತ್ತು. ಅವರ ಸಂಕಟವನ್ನು ಅರ್ಥಮಾಡಿಕೊಂಡ ಹೊಸೆ ಅರ್ಕಾದಿಯೋ ಬ್ಯುಂದಿಯಾ, ಅವ್ರೇಲಿಯಾನೋನ ಸಂಗಡ ವಿಷಯವನ್ನು ಸ್ವಷ್ಟಪಡಿಸಿಕೊಳ್ಳಲು ಹೋದ. ಅವನು ವಾಪಸು ಬಂದಾಗ ಮೊಸ್ಕೋತೆಯ ಮನೆಯವರು ಬಟ್ಟೆ ಬದಲಾಯಿಸಿ ಪೀಠೋಪಕರಣಗಳನ್ನು ಸರಿಯಾಗಿಟ್ಟು ಮತ್ತು ವಾಜ್‌ಗಳಲ್ಲಿ ಹೂಗಳನ್ನಿಟ್ಟು ಹಿರಿಯ ಹೆಣ್ಣು ಮಕ್ಕಳ ಜೊತೆ ಕಾದಿದ್ದರು. ಇಡೀ ಸಂದಭ ಉಂಟುಮಾಡಿದ ಮುಜುಗರ ಮತ್ತು ಬಿಗಿಯಾದ ಕಾಲರ್ ಕೊಡುತ್ತಿದ್ದ ತೊಂದರೆಗಳ ನಡುವೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ತಾವು ಪ್ರಸ್ತಾಪ ಮಾಡುತ್ತಿರುವುದು ರೆಮಿದಿಯೋಸ್‌ಳ ಬಗ್ಗೆ ಎನ್ನುವುದನ್ನು ಸ್ಥಿರಪಡಿಸಿದ. “ಇದಕ್ಕೆ ಏನೂ ಅರ್ಥವಿಲ್ಲ” ಎಂದ ದಾನ್ ಅಪೋಲಿನರ್ ಮೊಸ್ಕೋತೆ, “ನಮಗೆ ಇನ್ನೂ ಆರು ಜನ ಮದುವೆ ಆಗಬೇಕಾದ ಹೆಣ್ಣುಮಕ್ಕಳಿದಾರೆ. ಜಂಟಲ್‌ಮನ್ ಆದ ಮತ್ತು ಕಷ್ಟಪಟ್ಟು ಕೆಲಸ ಮಾಡುವ ನಿಮ್ಮ ಮಗನನ್ನು ಮದುವೆ ಆಗಲು ಅವರಲ್ಲಿ ಯಾರೇ ಆದರೂ ಒಪ್ತಾರೆ. ಆದರೆ ಅವ್ರೇಲಿಯಾನೋ ಇನ್ನೂ ಹಾಸಿಗೆಯಲ್ಲಿ ಉಚ್ಚೆ ಹೊಯ್ಯುವ ರೆಮಿದಿಯೋಸ್‌ಳನ್ನು ಇಷ್ಟಪಟ್ಟಿದಾನೆ” ಎಂದ. ವಿಚಿತ್ರವಾದ ರೆಪ್ಪೆಗಳಿದ್ದ ಅವನ ಹೆಂಡತಿ ಅವನ ತಪ್ಪಿಗೆ ಛೀಮಾರಿ ಹಾಕಿದಳು. ಅವರು ಹಣ್ಣಿನ ಹೋಳುಗಳನ್ನು ತಿಂದು ಮುಗಿಸುವ ಹೊತ್ತಿಗೆ ಅವ್ರೇಲಿಯಾನೋನ ನಿರ್ಧಾರವನ್ನು ಒಪ್ಪಿಕೊಂಡರು. ಆದರೆ ಶ್ರೀಮತಿ ಮೊಸ್ಕೋತೆ ಉರ್ಸುಲಾಳ ಸಂಗಡ ಪ್ರತ್ಯೇಕವಾಗಿ ಮಾತನಾಡಬೇಕೆಂದು ಬಯಸಿದಳು. ಗಂಡಸರ ವಿಷಯದಲ್ಲಿ ತನ್ನನ್ನು ಸಿಕ್ಕಿ ಹಾಕಿಸುತ್ತಿದ್ದಾರೆಂದು ವಿರೋಧ ವ್ಯಕ್ತಪಡಿಸುತ್ತಿದ್ದ ಉರ್ಸುಲಾ ಏನೆಂದು ತಿಳಿಯದೆ ಮಾರನೆಯ ದಿನ ಅವರ ಮನೆಗೆ ಹೋದಳು. ಅರ್ಧ ಗಂಟೆಯಾದ ಮೇಲೆ ವಾಪಸು ಬಂದ ಅವಳು ರೆಮಿದಿಯೋಸ್ ಇನ್ನು ದೊಡ್ಡವಳಾಗಿಲ್ಲ ಎಂಬ ಸುದ್ದಿಯನ್ನು ತಂದಳು. ಅವ್ರೇಲಿಯಾನೋ ಅದನ್ನು ಗಂಭೀರವಾದ ಅಡಚಣೆ ಎಂದು ಪರಿಗಣಿಸಲಿಲ್ಲ. ಅವನು ಸಾಕಷ್ಟು ಕಾದಿದ್ದ ಅಲ್ಲದೆ ತನ್ನ ವಧು ಸಿದ್ಧವಾಗುವವರೆಗೂ ಕಾಯಲು ಸಿದ್ಧನಿದ್ದ.

ಮೆಲ್‌ಕಿಯಾದೆಸ್ ಸತ್ತದ್ದು ಹೊಸದಾಗಿ ಉಂಟಾದ ಅವರ ಸಾಮರಸ್ಯಕ್ಕೆ ಅಡ್ಡಿ ಉಂಟುಮಾಡಿತ್ತು. ಅವರಿಗೆ ಅಂಥ ಘಟನೆಯೊಂದರ ನಿರೀಕ್ಷೆ ಇತ್ತು. ಆದರೆ ಸಂದರ್ಭದ ನಿರೀಕ್ಷೆ ಇರಲಿಲ್ಲ. ಅವನು ವಾಪಸು ಬಂದ ಕೆಲವು ತಿಂಗಳುಗಳಾದ ಮೇಲೆ ಅವನ ಮುದಿತನದ ವೇಗ ಎಷ್ಟು ಹೆಚ್ಚಾಗುತ್ತಿತ್ತು ಎಂದರೆ ಅವನನ್ನು ಕೆಲಸಕ್ಕೆ ಬಾರದವನಂತೆ, ಬೆಡ್‌ರೂಮಿನಲ್ಲಿ ತಿರುಗಾಡುವ ನೆರಳುಗಳಂತೆ, ಕಾಲು ಎಳೆದುಕೊಂಡು ಹಳೆಯ ಒಳ್ಳೆಯ ದಿನಗಳನ್ನು ನೆನಪಿಸಿಕೊಂಡು ಗಟ್ಟಿಯಾಗಿ ಹೇಳಿಕೊಳ್ಳುತ್ತ ಮತ್ತು ಎಂದಾದರೊಂದು ಒಂದು ದಿನ ಹಾಸಿಗೆಯಲ್ಲಿ ಸಾಯುವ ತನಕ ಯಾರೂ ಯೋಚನೆ ಮಾಡದ, ನೆನಪಿಸಿಕೊಳ್ಳದ ತಾತ ಮುತ್ತಾತಂದಿರಂತೆ ಪರಿಗಣಿಸಿದರು. ಪ್ರಾರಂಭದಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಛಾಯಾಚಿತ್ರ ತೆಗೆಯುವ ಉಪಕರಣದ ನಾವೀನ್ಯತೆ ಮತ್ತು ನಾಸ್ತರ್ಡಾಮಸ್‌ನ ಭವಿಷ್ಯ ವಾಣಿಯ ಬಗ್ಗೆ ಉತ್ಸಾಹಗೊಂಡು ಅವನ ಕೆಲಸದಲ್ಲಿ ಸಹಾಯ ಮಾಡಿದ್ದ. ಆದರೆ ಸ್ವಲ್ಪ ಸ್ವಲ್ಪವಾಗಿ ಅವನ ಜೊತೆ ಮಾತುಕತೆ ಕಷ್ಟವಾಗುತ್ತಿದ್ದಂತೆ ಅವರನ್ನು ಏಕಾಂತಕ್ಕೆ ಬಿಟ್ಟು ಬಿಟ್ಟ. ಅವನಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ ಮತ್ತು ಕಿವಿ ಕೇಳುತ್ತಿರಲಿಲ್ಲ. ಅಲ್ಲದೆ ತಾನು ಯಾವುದೋ ಕಾಲದ ಮನುಕುಲದವರ ಜೊತೆ ಮಾತನಾಡುತ್ತಿದ್ದೇನೆ ಎಂಬಂತೆ ಎದುರಿಗಿದ್ದವರ ಜೊತೆ ಮಾತನಾಡಿ ಅವರಲ್ಲಿ ಗೊಂದಲ ಉಂಟುಮಾಡುತ್ತಿದ್ದ. ಕೇಳಿದ ಪ್ರಶ್ನೆಗಳಿಗೆ ಹಲವು ಭಾಷೆಗಳ ಮಿಶ್ರಣದಲ್ಲಿ ಉತ್ತರಿಸುತ್ತಿದ. ಅವನು ಜನರ ಮಧ್ಯೆ ನಡೆಯುತ್ತಿದ್ದರೂ ಕೂಡ ಗಾಳಿಯಲ್ಲಿ ತಡಕಾಡುತ್ತಾ, ಸಾಮಾನುಗಳಿಗೆ ಎಡವದೆ ಸಲೀಸಾಗಿ ನಡೆದಾಡುತ್ತ, ಯಾವುದೋ ಸ್ವಭಾವಜನ್ಯವಾದ ಮುನ್ನರಿವುಳ್ಳ ಶಕ್ತಿ ಇದ್ದವನ ಹಾಗೆ ತೋರುತ್ತಿದ್ದ. ಅದೊಂದು ರಾತ್ರಿ ಹಾಸಿಗೆಯ ಪಕ್ಕದಲ್ಲಿ ಗ್ಲಾಸಿನ ನೀರಿನಲ್ಲಿ ಇಟ್ಟಿದ್ದ ಕಟ್ಟಿಸಿಕೊಂಡ ಹಲ್ಲನ್ನು ಹಾಕಿಕೊಳ್ಳಲು ಮರೆತ ಮತ್ತು ಅನಂತರ ಅವನು ಅದನ್ನು ಎಂದೂ ಹಾಕಿಕೊಳ್ಳಲಿಲ್ಲ. ಉರ್ಸುಲಾ ಮನೆಯನ್ನು ದೊಡ್ಡದಾಗಿ ಮಾಡಿದಾಗ ಅವನಿಗಾಗಿ ಅವ್ರೇಲಿಯಾನೋನ ವರ್ಕ್‌ಶಾಪ್‌ನ ಪಕ್ಕದಲ್ಲಿ ರೂಮೊಂದನ್ನು ಕಟ್ಟಿಸಿದಳು. ಅದು ಮನೆಯ ಗದ್ದಲದಿಂದ ದೂರವಾಗಿದ್ದು ಚೆನ್ನಾಗಿ ಬೆಳಕು ಬೀಳುವಂತಿತ್ತು. ಅದರಲ್ಲಿದ್ದ ಧೂಳಿನಿಂದ ಕೂಡಿ ಗೆದ್ದಲು ಹತ್ತಿದ್ದ ಪುಸ್ತಕಗಳನ್ನು ಯಾರಿಗೂ ತಿಳಿಯದನ್ನು ಬರೆದ ಕಾಗದಗಳ ಕಟ್ಟನ್ನು ಅವಳೇ ಒಪ್ಪಮಾಡಿದಳು. ಅಲ್ಲಿದ್ದ ಕಟ್ಟಿಸಿದ ಹಲ್ಲು ಇಟ್ಟಿದ್ದ ನೀರಿನ ಗ್ಲಾಸ್‌ನಲ್ಲಿ ಹುಟ್ಟಿದ ಯಾವುದೋ ಗಿಡದ ಹಳದಿ ಹೂಗಳಿದ್ದವು. ಹೊಸ ಜಾಗ ಮೆಲ್‌ಕಿಯಾದೆಸ್‌ಗೆ ಪ್ರಿಯವಾಗಿತ್ತು. ಏಕೆಂದರೆ ಅವನು ಯಾರಿಗೂ ಕಾಣಿಸಿಕೊಳ್ಳುತ್ತಿರಲಿಲ್ಲ, ಡೈನಿಂಗ್ ರೂಂನಲ್ಲಿಯೂ ಸಹ. ಅವನು ಅವ್ರೇಲಿಯಾನೋನ ವರ್ಕ್‌ಶಾಪ್‌ಗೆ ಮಾತ್ರ ಹೋಗುತ್ತಿದ್ದ. ಅಲ್ಲೆ ಗಂಟೆಗಟ್ಟಲೆ ಯಾವುದೋ ನಿಗೂಢವಾದದ್ದನ್ನು ತಾನು ತಂದುಕೊಂಡಿದ್ದ ಮೆದುವಾದ ಚರ್ಮದ ಹಾಳೆಯ ಮೇಲೆ ಬರೆಯುತ್ತಿದ್ದ. ಅಲ್ಲಿ ದಿನಕ್ಕೆ ಎರಡು ಸಲ ವಿಸಿಟಾಸಿಯೋನ್ ತಂದು ಕೊಟ್ಟ ಊಟ ಮಾಡುತ್ತಿದ್ದ ಮತ್ತು ಕೊನೆಯ ದಿನಗಳಲ್ಲಿ ಹಸಿವು ಇಂಗಿಹೋಗಿ ಕೇವಲ ತರಕಾರಿಯನ್ನು ತಿನ್ನುತ್ತಿದ್ದ. ಅವನ ಚರ್ಮದ ಮೇಲೆ ಉಪಯೋಗಿಸದೆ ಬಿಟ್ಟ ಹಳೆಯ ಕಾಲದ ವಸ್ತುವಿನ ಮೇಲೆ ಮೆತ್ತಿಕೊಳ್ಳುವ ಹಾಗೆ ಲೇಪವೊಂದು ಉಂಟಾಯಿತು. ಮತ್ತು ಅವನ ಉಸಿರಾಟ ಮಲಗಿದ ಪ್ರಾಣಿಯ ವಾಸನೆಯಂತೆ ಕಂಡಿತ್ತು. ಅವ್ರೇಲಿಯಾನೋ ಕವನ ಬರೆಯುವ ತನ್ಮಯತೆಯಲ್ಲಿ ಮೆಲ್‌ಕಿಯಾದೆಸ್‌ನನ್ನು ಮರೆತ. ಆದರೆ ಒಂದು ಸಂದರ್ಭದಲ್ಲಿ ಮೆಲ್‌ಕಿಯಾದೆಸ್ ತನಗೆ ತಾನೇ ಹೇಳಿಕೊಳ್ಳುತ್ತಿದುದ್ದರ ಅರ್ಥ ತನಗೆ ಆಯಿತು ಎಂದುಕೊಂಡ. ಅವನು ಅದರ ಬಗ್ಗೆ ಗಮನಕೊಟ್ಟ. ಆದರೆ ವಾಸ್ತವವಾಗಿ ಆ ಕಬ್ಬಿಣದ ಕಡಲೆಯಂತಿದ್ದ ಪಂಕ್ತಿಗಳಲ್ಲಿ ಅವನಿಗೆ ಎದ್ದು ಕಾಣುತ್ತಿದ್ದ ಪದ ಎಂದರೆ ಇಕ್ವಿನೋ, ಇಕ್ವಿನೋ, ಇಕ್ವಿನೋ ಹಾಗೂ ಅಲೆಗ್ಜಾಂಡರ್ ವಾನ್ ಹೊಂಬೊಲ್ಡ್ ಎಂಬ ಹೆಸರು. ಅವ್ರೇಲಿಯಾನೋಗೆ ಅವನ ಬೆಳ್ಳಿಗೆ ಸಂಬಂಧಿತ ಕೆಲಸದಲ್ಲಿ ಅರ್ಕಾದಿಯೋ ಸಹಾಯ ಮಾಡಲು ತೊಡಗಿದಾಗ ಕೊಂಚ ಹತ್ತಿರದವನಾದ. ಮೆಲ್‌ಕಿಯಾದೆಸ್ ಅವನು ಪಡುತ್ತಿದ್ದ ಶ್ರಮದ ಮಧ್ಯೆ ಮಾತನಾಡಿಸಲು ಆಗಾಗ ಸ್ಪ್ಯಾನಿಷ್ ಪದಗಳನ್ನು ಉಪಯೋಗಿಸುತ್ತಿದ್ದ. ಆದರೆ ಅವು ವಾಸ್ತವಕ್ಕೆ ದೂರವಾಗಿದ್ದವು. ಅದೊಂದು ದಿನ ಅವನು ಭಾವಾತಿರೇಕಕ್ಕೆ ಒಳಗಾz. ಅನೇಕ ವರ್ಷಗಳ ನಂತರ ತನ್ನನ್ನು ಗುಂಡಿಕ್ಕಿ ಕೊಲ್ಲಲು ಸಿದ್ಧರಾದ ತಂಡದ ಎದುರು ನಿಂತಾಗ ಅವನಿಗೆ ಅರ್ಥವಾಗದಿದ್ದ, ಮೆಲ್‌ಕಿಯಾದೆಸ್ ಗಟ್ಟಿಯಾಗಿ ಹೇಳಿದ, ಅನೇಕ ಪುಟಗಳಲ್ಲಿದ್ದ, ಲಯಬದ್ಧವಾದ ಹಾಡುಗಳನ್ನು ತಾನು ನಡುಗುತ್ತ ಕೇಳಿಸಿಕೊಂಡಿದ್ದು ನೆನಪಾಗುತ್ತದೆ.. ಅನಂತರ ಬಹಳ ದಿನಗಳಾದ ಮೇಲೆ ನಸುನಕ್ಕ ಅವನು ಸ್ವಾನಿಷ್‌ನಲ್ಲಿ ಹೇಳಿದ : “ನಾನು ಸತ್ತ ಮೇಲೆ ನನ್ನ ರೂಮಿನಲ್ಲಿ ಮೂರು ದಿನಗಳ ತನಕ ಪಾದರಸವನ್ನು ಹೊತ್ತಿಸಿರಿ.” ಅರ್ಕಾದಿಯೋ ಅದನ್ನು ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಹೇಳಿದ ಮೇಲೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನಿಂದ ಹೆಚ್ಚಿನ ವಿವರವನ್ನು ಪಡೆಯಲು ನೋಡಿದ. ಆದರೆ ಅವನಿಗೆ ಸಿಕ್ಕಿದ್ದು ಒಂದೇ ಒಂದು ಉತ್ತರ : “ನಾನು ಅಮರತ್ವವನ್ನು ಕಂಡುಕೊಂಡಿದ್ದೇನೆ.” ಮೆಲ್‌ಕಿಯಾದೆಸ್‌ನ ಉಸಿರಾಟದಲ್ಲಿ ವಾಸನೆ ಪ್ರಾರಂಭವಾದ ಮೇಲೆ ಅರ್ಕಾದಿಯೋ ಗುರುವಾರದ ಬೆಳಿಗ್ಗೆ ಸ್ನಾನ ಮಾಡಿಸಲು ಅವನನ್ನು ನದಿಗೆ ಕರೆದುಕೊಂಡು ಹೋಗುತ್ತಿದ್ದ. ಅದರಿಂದ ಅವನಿಗೆ ಕೊಂಚ ಉತ್ತಮವಾದ ಹಾಗೆ ಕಂಡಿತು. ಅವನು ಬಟ್ಟೆ ಕಳಚಿ ಹುಡುಗರ ಜೊತೆ ನೀರಿಗೆ ಇಳಿಯುತ್ತಿದ್ದ ಮತ್ತು ಅವನ ನಿಗೂಢವಾದ ಗ್ರಹಣ ಶಕ್ತಿ ಆಳವಾದ ಮತ್ತು ಅಪಾಯದ ಸ್ಥಳಗಳಿಂದ ದೂರವಿರುವಂತೆ ಮಾಡುತ್ತಿತ್ತು. ಅದೊಂದು ಸಲ ಅವನು, “ನಾವು ನೀರಿನಿಂದಲೇ ಬಂದದ್ದು” ಎಂದ. ಅದೊಂದು ದಿನ ರಾತ್ರಿ ಅವನು ಬಹಳ ಕಷ್ಟಪಟ್ಟು ಪಿಯಾನೋವನ್ನು ಸರಿಪಡಿಸುವ ಪ್ರಯತ್ನದಲ್ಲಿದ್ದದ್ದನ್ನು ಬಿಟ್ಟರೆ ಯಾರೂ ಅವನನ್ನು ನೋಡಿ ಬಹಳ ದಿನಗಳಾಗಿತ್ತು. ಅವನು ಅರ್ಕಾದಿಯೋ ಜೊತೆ ನದಿಗೆ ಹೋಗುತ್ತಿದ್ದಾಗ ಕಂಕುಳಲ್ಲಿ ಸೋರೆ ಬುರುಡೆ ಮತ್ತು ಟವಲಿನಲ್ಲಿ ತಾಳೆ ಎಣ್ಣೆಯ ಸೋಪನ್ನು ಇಟ್ಟುಕೊಂಡು ಹೋಗುತ್ತಿದ್ದ. ಅದೊಂದು ಗುರುವಾರ ಅವನನ್ನು ಕರೆಯುವುದಕ್ಕೆ ಮುಂಚೆ ಅವ್ರೇಲಿಯಾನೋಗೆ ಅವನು ಹೇಳಿದ್ದು ಕೇಳಿಸಿತ್ತು. “ನಾನು ಸಿಂಗಪೂರ್‌ನ ಮರಳಿನ ರಾಶಿಯಲ್ಲಿ ಜ್ವರದಿಂದ ಸತ್ತಿದ್ದೇನೆ”. ಆ ದಿನ ಅವನು ನೀರಿನೊಳಗೆ ಸುಳಿ ಇರುವ ಕಡೆಗೆ ಹೋದ ಮತ್ತು ಮಾರನೆಯ ದಿನ ಕೆಲವು ಮೈಲಿಗಳ ಆಚೆ ನೀರಿನ ತಿರುವಿನಲ್ಲಿ ಕಾಣುವ ತನಕ ಯಾರಿಗೂ ಸಿಕ್ಕಿರಲಿಲ್ಲ. ಅವನ ಹೊಟ್ಟೆಯ ಮೇಲೆ ರಣಹದ್ದೊಂದು ಕುಳಿತಿತ್ತು. ಉರ್ಸುಲಾ ತನ್ನ ತಂದೆ ಸತ್ತಿದ್ದಕ್ಕಿಂತ ಹೆಚ್ಚಾಗಿ ದುಃಖಿತಳಾದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನನ್ನು ಹೂಳುವುದನ್ನು ವಿರೋಧಿಸಿದ. ಅವನು, “ಅವನು ಅಮರ. ಅಲ್ಲದೆ ತನ್ನ ಪುನರುತ್ಥಾನದ ಸೂತ್ರವನ್ನು ತಾನೇ ಹೇಳಿದ್ದಾನೆ” ಎಂದ. ಅವನು ಮರೆತು ಹೋದ ವಾಟರ್ ಪೈಪನ್ನು ತಂದ ಮತ್ತು ಒಂದು ಕೆಟಲ್ ಒಳಗೆ ಪಾದರಸವನ್ನು ದೇಹದ ಪಕ್ಕದಲ್ಲಿ ಕುದಿಯಲು ಇಟ್ಟ. ಅದು ಕೊಂಚ ಕೊಂಚವಾಗಿ ನೀಲಿ ಗುಳ್ಳೆಗಳನ್ನು ಎಬ್ಬಿಸುತ್ತಾ ತುಂಬಿಕೊಂಡಿತು. ಮುಳುಗಿ ಸತ್ತ ಮನುಷ್ಯನೊಬ್ಬನನ್ನು ಹೂಳದಿದ್ದರೆ ಅದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದನ್ನು ನೆನಪಿಸಲು ದಾನ್ ಅಪೋಲಿನರ್ ಮೊಸ್ಕೋತೆ ಪ್ರಯತ್ನಪಟ್ಟ. ಆದರೆ, “ಬೇಕಿಲ್ಲ ಯಾಕೆ ಅಂದ್ರೆ ಅವನು ಬದುಕಿದ್ದಾನೆ” ಎನ್ನುವುದು ಹೊಸೆ ಅರ್ಕಾದಿಯೋನ ಉತ್ತರವಾಗಿತ್ತು. ಅವನು ಹಚ್ಚಿಟ್ಟಿದ್ದ ಪಾದರಸ ಎಪ್ಪತ್ತೆರಡು ಗಂಟೆಗಳ ಕಾಲ ಉರಿದು ಅದರ ಹೊಗೆ ತುಂಬಿ ದೇಹ ಉಬ್ಬಲು ಪ್ರಾರಂಭಿಸಿ ಮನೆಯೆಲ್ಲ ಮಾರಕ ಹನಿಗಳಿಂದ ತುಂಬಿ ಹೋಗಿತ್ತು. ಆಗ ಮಾತ್ರ ಅವನು ಹೂಳುವುದಕ್ಕೆ ಅನುಮತಿ ಕೊಟ್ಟ. ಆದರೆ ಸಾಮಾನ್ಯ ರೀತಿಯಲ್ಲಲ್ಲ. ಮಕೋಂದೋಗೆ ಉಪಕಾರ ಮಾಡಿದವರಿಗೆ ಕಾಯ್ದಿಟ್ಟ ರೀತಿಯಲ್ಲಿ. ಅದು ಆ ಊರಿನಲ್ಲಿ ನಡೆದ ಮತ್ತು ಅತ್ಯಂತ ಹೆಚ್ಚು ಜನರು ಸೇರಿದ ಮೊದಲನೆ ಹೂಳುವಿಕೆಯಾಗಿತ್ತು. ಒಂದು ಶತಮಾನದ ನಂತರ ಮಹಾನ್ ತಾಯಿಯ ಅಂತಿಮ ಯಾತ್ರೆ ಅದನ್ನು ಮೀರಿಸಿತ್ತು. ಮುಂದೆ ಸ್ಮಶಾನವಾಗಲಿದ್ದ ಸ್ಥಳದ ಮಧ್ಯದಲ್ಲಿ ಅವನನ್ನು ಹೂಳಿದರು ಮತ್ತು ಅವನ ಬಗ್ಗೆ ಗೊತ್ತಿದ್ದ ಒಂದೇ ಒಂದು ಸಂಗತಿಯಾದ ಮೆಲ್‌ಕಿಯಾದೆಸ್ ಎಂಬ ಹೆಸರನ್ನು ಕಲ್ಲಿನ ಮೇಲೆ ಬರೆದರು. ಅವನಿಗಾಗಿ ಒಂಬತ್ತು ದಿನಗಳ ಜಾಗರಣೆ ಮಾಡಿದರು. ಇದಕ್ಕಾಗಿ ಜನರು ಸೇರಿ ಕಾಫಿ ಕುಡಿಯುವ, ಜೋಕುಗಳನ್ನು ಹೇಳುವ ಮತ್ತು ಇಸ್ಪೀಟು ಆಡುವ ಗದ್ದಲದಲ್ಲಿ ಅಮರಾಂತ ಪಿಯತ್ರೋ ಕ್ರೆಪ್ಸಿಗೆ ತನ್ನ ಪ್ರೇಮದ ಬಗ್ಗೆ ತಿಳಿಸಿ ಹೇಳುವ ಅವಕಾಶ ಸಿಕ್ಕಿತು. ಆದರೆ ಅವನು ಕೆಲವೇ ವಾರಗಳ ಹಿಂದೆ ರೆಬೇಕಳಿಗೆ ಕೊಟ್ಟ ವಾಗ್ದಾನದ ವಿಧಿಗಳನ್ನು ಪೂರೈಸಿದ್ದ. ಅರಬ್ಬರು ಗಿಳಿಗಳಿಗೆ ಬದಲಾಗಿ ಅನೇಕ ವಹಿವಾಟುಗಳನ್ನು ಮಾಡಿದ್ದ ಸ್ಥಳದಲ್ಲಿ ಸಂಗೀತ ವಾದ್ಯಗಳು ಮತ್ತು ಆಟದ ಸಾಮಾನುಗಳ ಅಂಗಡಿಯನ್ನು ತೆರೆದಿದ್ದ. ಜನರು ಅದನ್ನು ಟರ್ಕಿಗಳ ರಸ್ತೆ ಎಂದು ಕರೆದರು. ತಲೆಯ ಮೇಲೆ ಗುಂಗುರುಗಳಿದ್ದ ಚರ್ಮದ ಟೋಪಿಯನ್ನು ಹಾಕಿಕೊಂಡು, ಹೆಂಗಸರು ತಡೆಯಲಾಗದೆ ನಿಟ್ಟುಸಿರು ಬಿಡುವಂತೆ ಮಾಡುತ್ತಿದ್ದ. ಇಟಲಿಯವನು ಅಮರಾಂತಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲದ ಚಂಚಲ ಮನಸ್ಸಿನ ಹುಡುಗಿ ಎಂದು ಭಾವಿಸಿದ.
“ನಂಗೊಬ್ಬ ತಮ್ಮನಿದಾನೆ. ಅವ್ನು ಅಂಗಡೀಲಿ ನಂಗೆ ಸಹಾಯ ಮಾಡ್ತಾನೆ” ಎಂದ.

ಅಮರಾಂತ ಅವಮಾನಿತಗೊಂಡಳು ಮತ್ತು ತಾನು ಸತ್ತು ಬಾಗಿಲಿಗೆ ಅಡ್ಡವಾಗಿ ಬಿದ್ದರೂ ಸರಿಯೇ ತನ್ನ ಸಹೋದರಿಯ ಮದುವೆಯನ್ನು ತಪ್ಪಿಸುವುದಾಗಿ ಪಿಯತ್ರೋ ಕ್ರೆಪ್ಸಿಗೆ ಹೇಳಿದಳು. ಅವಳ ನಾಟಕೀಯ ವರಸೆಯನ್ನು ಕಂಡ ಇಟಲಿಯವ ಅದನ್ನು ರೆಬೇಕಳಿಗೆ ಹೇಳದೇ ಇರಲಾಗಲಿಲ್ಲ. ಇದೇ ಕಾರಣದಿಂದಾಗಿಯೇ ಉರ್ಸುಲಾ ಕೆಲಸದಿಂದಾಗಿ ಮುಂದೆ ಹಾಕುತ್ತಿದ್ದ ಅಮರಾಂತಳ ವಿವಾಹ ಒಂದೇ ವಾರದೊಳಗೆ ಸಿದ್ಧವಾಯಿತು. ಅಮರಾಂತ ಯಾವ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ. ಆದರೆ ರೆಬೇಕಳಿಗೆ ವಿದಾಯ ಹೇಳುವಾಗ ಅವಳ ಕಿವಿಯಲ್ಲಿ ಪಿಸುಗುಟ್ಟಿದಳು.
“ನೀನು ತುಂಬಾ ಆಸೆ ಇಟ್ಟುಕೊಳ್ಳಬೇಡ. ಅವರು ನನ್ನನ್ನು ಈ ಭೂಮಿಯ ಕೊನೇ ತನಕ ದಬ್ಬಿದರೂ ನಾನು ಮದುವೇನ ತಪ್ಪಿಸಲಿಕ್ಕೆ ಯಾವುದಾದರೊಂದು ದಾರಿ ಹುಡುಕಿಯೇ ಹುಡುಕ್ತೀನಿ. ಕೊನೆಗೆ ನಿನ್ನನ್ನ ಕೊಲ್ಲಬೇಕಾಗಿ ಬಂದರೂ ಸರಿಯೇ.”

ಉರ್ಸುಲಾ ಮನೆಯಲ್ಲಿ ಇರದಿದ್ದರಿಂದ ಒಂದು ರೂಮಿನಿಂದ ಮತ್ತೊಂದು ರೂಮಿಗೆ ಕಾಣದೆ ನಡೆದಾಡುವ ಮೆಲ್‌ಕಿಯದೆಸ್‌ನಿಂದಾಗಿ ಆ ಮನೆ ತೀರಾ ದೊಡ್ಡದಾಗಿ ಮತ್ತು ಬಿಕೋ ಎನ್ನಿಸುತ್ತಿತ್ತು. ಇಂಡಿಯನ್ ಹೆಂಗಸು ಬೇಕರಿಯನ್ನು ನೋಡಿಕೊಂಡರೆ ರೆಬೇಕ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಳು. ಸಂಜೆಯಾದೊಡನೆ ಸುಗಂಧವನ್ನು ಹರಡುತ್ತಾ, ಯಾವುದಾದರೊಂದು ಆಟದ ಸಾಮಾನನ್ನು ಉಡುಗೊರೆಯಾಗಿ ತರುತ್ತಿದ್ದ ಪಿಯತ್ರೋ ಕ್ರೆಪ್ಸಿಯನ್ನು ಅವನ ವಧು ನಡುಮನೆಯಲ್ಲಿ ಯಾರಿಗೂ ಅನುಮಾನ ಬಾರದ ಹಾಗೆ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆಗೆದು ಎದುರುಗೊಳ್ಳುತ್ತಿದ್ದಳು. ಅದೊಂದು ಅನಗತ್ಯವಾದ ಸಂರಕ್ಷಣೆಯಾಗಿತ್ತು. ಏಕೆಂದರೆ ಆ ಇಟಲಿಯವನು ಎಷ್ಟು ಗೌರವಪೂರ್ಣವಾಗಿ ನಡೆದುಕೊಳ್ಳುತ್ತಿದ್ದನೆಂದರೆ ಇನ್ನೊಂದು ವರ್ಷದಲ್ಲಿ ತನ್ನ ಹೆಂಡತಿಯಾಗುವವಳ ಕೈಯನ್ನು ಕೂಡ ಮುಟ್ಟುತ್ತಿರಲಿಲ್ಲ. ಅವನು ತರುತ್ತಿದ್ದ ಸಾಮಾನುಗಳಿಂದ ಮನೆಯೆಲ್ಲಾ ತುಂಬಿ ಹೋಗಿತ್ತು. ಕೀ ಕೊಟ್ಟರೆ ಕುಣಿದಾಡುವ ಹುಡುಗಿ, ಮ್ಯೂಜಿಕ್ ಬಾಕ್ಸ್‌ಗಳು, ನೆಗೆದಾಡುವ ಕೋತಿಗಳು, ಓಡುವ ಕುದುರೆಗಳು, ವಾದ್ಯ ನುಡಿಸುವ ವಿದೂಷಕರು: ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಮೆಲ್‌ಕಿಯಾದೆಸ್‌ನ ಸಾವಿನಿಂದ ಉಂಟಾಗಿದ್ದ ಮಂಕನ್ನು ನಿವಾರಿಸಿ ಅವನನ್ನು ಮತ್ತೆ ರಸವಾದಿಯಾಗುವಂತೆ ಮಾಡಿದ್ದು, ಪಿಯತ್ರೋ ಕ್ರೆಪ್ಸಿ ತಂದ ಯಾಂತ್ರಿಕ ಪ್ರಾಣಿಗಳನ್ನು ಕುರಿತ ಗ್ರಂಥ. ಅವನು ಆ ದಿನಗಳಲ್ಲಿ ಹೊಟ್ಟೆ ಬಿರಿದ ಪ್ರಾಣಿಗಳು ಹಾಗೂ ಪೆಂಡ್ಯುಲಮ್ ಸೂತ್ರವನ್ನು ಉಪಯೋಗಿಸಿ ಉಪಕರಣಗಳನ್ನು ಪರಿಪೂರ್ಣಮಾಡುವ ತನ್ನದೆ ಪ್ರಪಂಚದಲ್ಲಿ ಇರುತ್ತಿದ್ದ. ಅವ್ರೇಲಿಯಾನೋ ರೇಮಿಡಿಯೋಸ್‌ಗೆ ಓದು ಬರಹ ಕಲಿಸುವ ಸಲುವಾಗಿ ವರ್ಕ್‌ಶಾಪನ್ನು ನಿರ್ಲಕ್ಷಿಸಿದ. ಮೊದಮೊದಲು ಚಿಕ್ಕವಳಾದ ಅವಳು ಪ್ರತಿ ದಿನ ಮಧ್ಯಾಹ್ನ ತಾನು ಸ್ನಾನ ಮಾಡಿ ಬಟ್ಟೆ ಹಾಕಿಕೊಂಡು, ಬಂದು ಹೋಗುವವರನ್ನು ಎದುರುಗೊಳ್ಳಲು ನಡುಮನೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ, ಆಟದ ಸಾಮಾನುಗಳನ್ನು ಇಷ್ಟಪಡುತ್ತಿದ್ದಳು. ಆದರೆ ಅವ್ರೇಲಿಯಾನೋನ ತಾಳ್ಮೆ ಕೊನೆಗೂ ಗೆದ್ದಿತು. ಅವಳು ಅನೇಕ ಗಂಟೆಗಳ ಕಾಲ ಪದಗಳ ಅರ್ಥವನ್ನು ಅಭ್ಯಾಸ ಮಾಡುತ್ತಾ, ಬಣ್ಣದ ಪೆನ್ಸಿಲ್‌ನಲ್ಲಿ ಅಂಗಳದಲ್ಲಿ ಹಸು ನಿಂತಿರುವ ಮನೆ ಹಾಗೂ ಬೆಟ್ಟಗಳ ಹಿಂದಿನ ಸೂರ್ಯನ ಕಿರಣಗಳನ್ನು ಹಳದಿ ಬಣ್ಣದಲ್ಲಿ ಬರೆಯುತ್ತಾ ಕಾಲ ಕಳೆಯುತ್ತಿದ್ದಳು.

ರೆಬೇಕ ಮಾತ್ರ ಅಮರಾಂತಳ ಬೆದರಿಕೆಯಿಂದ ಅಸುಖಿಯಾಗಿದ್ದಳು. ಅವಳ ಸ್ವಭಾವ, ಧಿಮಾಕು ತಿಳಿದಿತ್ತು. ಅಲ್ಲದೆ ಅವಳ ಸಿಟ್ಟಿನ ಭಯವಿತ್ತು. ಅವಳು ಮನಸ್ಸು ಗಟ್ಟಿಮಾಡಿ ಇಡೀ ರಾತ್ರಿ ಮಣ್ಣು ತಿನ್ನದೇ ಬೆರಳು ಚೀಪುತ್ತಾ ಕಳೆಯುತ್ತಿದ್ದಳು. ಈ ಅನಿಶ್ಚಯಕ್ಕೊಂದು ಪರಿಹಾರ ಹುಡುಕಬೇಕೆಂದು ತನ್ನ ಭವಿಷ್ಯವನ್ನು ಓದಲು ಪಿಲರ್ ಟೆರ್‍ನೆರಾಳನ್ನು ಕರೆದಳು. ಮಾಮೂಲಿನ ಏರುಪೇರುಗಳ ನಂತರ ಪಿಲರ್ ಟೆರ್‍ನೆರಾ ಹೇಳಿದಳು:
“ನಿನ್ನ ತಂದೆತಾಯೀನ ಹೂಳುವ ತನಕ ನಿಂಗೆ ಒಳ್ಳೆಯದಾಗೋದಿಲ್ಲ.”

ರೆಬೇಕ ನಡುಗಿದಳು, ಚಿಕ್ಕ ಹುಡುಗಿಯಾಗಿದ್ದ ತಾನು ಒಂದು ಟ್ರಂಕ್, ತುಯ್ದಾಡುವ ಕುರ್ಚಿ ಮತ್ತು ಒಳಗೆ ಏನಿದೆ ಎಂದು ತಿಳಿಯದ ಮೂಟೆಯನ್ನು ತೆಗೆದುಕೊಂಡು ಈ ಮನೆಗೆ ಬಂದದ್ದನ್ನು ಕನಸಿನಲ್ಲಿ ಎನ್ನುವಂತೆ ನೆನಪಿಸಿಕೊಂಡಳು. ಅವಳಿಗೆ ಕಾಲರ್‌ಗೆ ಬಂಗಾರದ ಗುಂಡಿ ಹಾಕಿಕೊಂಡು ನೆತ್ತಿಯ ಮೇಲೆ ಕೂದಲು ಕಡಿಮೆ ಇದ್ದ ಬಿಳಿಬಟ್ಟೆಯ ಮನುಷ್ಯನೊಬ್ಬ ನೆನಪಾz. ಅಲ್ಲದೆ ಸುಗಂಧಲೇಪಿತ, ವಜ್ರಗಳನ್ನು ಧರಿಸಿದ್ದ ತರುಣಿಯೊಬ್ಬಳು ನೆನಪಾದಳು. ಅವಳ ಜೊತೆಗೆ ಅದರುವ ಕೈಗಳ, ಒಬ್ಬರಿಗೊಬ್ಬರಿಗೆ ಅಜಗಜಾಂತರವಿದ್ದ ಮನುಷ್ಯನೊಬ್ಬ, ಅವಳಿಗೆ ಹೂ ಮುಡಿಸುತ್ತಿದ್ದ ಮತ್ತು ಮಧ್ಯಾಹ್ನದ ಸಮಯದಲ್ಲಿ ಅವಳನ್ನು ಊರಿನ ರಸ್ತೆಗಳಲ್ಲಿ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದ.
“ನಂಗೇನೂ ತಿಳಿಯೋದಿಲ್ಲ” ಎಂದಳು.
ಪಿಲರ್ ಟೆರ್‍ನೆರಾ ಏನೂ ಸಂಬಂಧವಿಲ್ಲದಂತೆ, “ನನಗೂ ಅಷ್ಟೆ. ಆದರೆ ಕಾರ್ಡುಗಳು ಹಾಗೆ ಹೇಳುತ್ವೆ” ಎಂದಳು.

ರೆಬೇಕ ಅದರ ನಿಗೂಢತೆಯಲ್ಲಿ ಎಷ್ಟು ಮುಳುಗಿದ್ದಳೆಂದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಅದನ್ನು ತಿಳಿಸಿದಳು. ಕಾರ್ಡುಗಳ ಭವಿಷ್ಯವನ್ನು ನಂಬಿದ್ದಕ್ಕಾಗಿ ಅವಳನ್ನು ಬೈದ. ಆದರೆ ಅವನು ಮೌನವಾಗಿ ಮನೆಯ ಟ್ರಂಕು, ಕಪಾಟು, ಹಾಸಿಗೆಯ ಕೆಳಗೆ ಮೂಳೆಗಳ ಮೂಟೆಯನ್ನು ಹುಡುಕಿದ. ಮನೆಯನ್ನು ಮತ್ತೆ ಕಟ್ಟಿದ ಮೇಲೆ ತಾನು ಅದನ್ನು ನೋಡದೆ ಇರುವುದನ್ನು ನೆನಪಿಸಿಕೊಂಡ. ಅವನು ಗಾರೆಯವರನ್ನು ಕರೆಸಿ ಗುಟ್ಟಾಗಿ ಕೇಳಿದ. ಅವರಲ್ಲಿ ಒಬ್ಬ ಕೆಲಸಕ್ಕೆ ಅಡ್ಡಿ ಬರುತ್ತಿದ್ದರಿಂದ ಅದನ್ನು ಬೆಡ್‌ರೂಂ ಗೋಡೆಯಲ್ಲಿ ಸೇರಿಸಿ ಕಟ್ಟಿದ್ದಾಗಿ ಹೇಳಿದ. ಕೆಲವು ದಿನ ಗೋಡೆಗೆ ಕಿವಿ ಹಚ್ಚಿ ಕೇಳಿಸಿಕೊಂಡ ಮೇಲೆ ಕ್ಲಿಕ್ ಕ್ಲಿಕ್ ಶಬ್ದ ಕೇಳಿಸಿತು. ಆ ಗೋಡೆಯನ್ನು ಒಡೆದಾಗ ಅಲ್ಲಿ ಮೂಳೆಗಳ ಮೂಟೆ ಇತ್ತು. ಅವರು ಆ ದಿನವೇ ಸ್ಮಶಾನದಲ್ಲಿ ಮೆಲ್‌ಕಿಯಾದೆಸ್‌ನನ್ನು ಹೂಳಿದ ಪಕ್ಕದಲ್ಲಿ ಕಲ್ಲು ನೆಡದೆ ಹೂಳಿದರು. ಆಗ ಪ್ರುಡೆನ್ಸಿಯೋನ ನೆನಪಿನ ಭಾರದಿಂದ ಇದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನಿಂದ ಮುಕ್ತನಾಗಿ ಮನೆಗೆ ಹಿಂತಿರುಗಿದ. ಆನಂತರ ಅಡುಗೆ ಮನೆಯಲ್ಲಿದ್ದ ರೆಬೇಕಳ ಹಣೆಗೆ ಮುತ್ತಿಟ್ಟ.
“ನಿನ್ನ ತಲೆಯಿಂದ ಕೆಟ್ಟ ಯೋಚನೆಗಳನ್ನು ತೆಗೆದು ಹಾಕು. ಇನ್ಮೇಲೆ ನೀನು ಸುಖವಾಗಿ ಇರ್‍ತೀಯಾ” ಎಂದು ಹೇಳಿದ.

ಅರ್ಕಾದಿಯೋ ಹುಟ್ಟಿದ ಮೇಲೆ ಉರ್ಸುಲಾ ಮನೆಗೆ ಪಿಲರ್ ಟೆರ್‍ನೆರಾಳಿಗೆ ಒಡ್ಡಿದ ನಿರ್ಬಂಧ ರೆಬೇಕಳ ಸ್ನೇಹದಿಂದ ತೆರವಾಯಿತು. ಅವಳು ಯಾವ ಸಮಯದಲ್ಲಾದರೂ ಅವಳ ಮನೆಗೆ ಬರಬಹುದಾಗಿತ್ತು. ಅಲ್ಲಿ ಅವಳು ತುಂಬಾ ಕಷ್ಟಕರ ಕೆಲಸಗಳಲ್ಲಿ ತನ್ನೆಲ್ಲ ಶಕ್ತಿಯನ್ನು ತೊಡಗಿಸಿಕೊಂಡಳು. ಕೆಲವು ಸಲ ಅವಳು ವರ್ಕ್‌ಶಾಪ್‌ಗೆ ಹೋಗಿ ಅರ್ಕಾದಿಯೋಗೆ ಛಾಯಾಚಿತ್ರ ತೆಗೆಯುವ ಉಪಕರಣದ ಪ್ಲೇಟುಗಳನ್ನು ಒಪ್ಪವಾಗಿಡಲು ಸಹಾಯ ಮಾಡುತ್ತಿದ್ದಳು. ಕೊನೆಗೆ ಅದು ಅವನನ್ನು ಗೊಂದಲಕ್ಕೆ ಸಿಲುಕಿಸುತ್ತಿತ್ತು. ಆ ಹೆಂಗಸಿನಿಂದ ಅವನಿಗೆ ಕಿರಿಕಿರಿಯಾಗುತ್ತಿತ್ತು. ಅವಳ ಕಂದು ಮೈ ಬಣ್ಣ, ಹೊಗೆಯ ವಾಸನೆಯ ಉಸಿರಾಟ ಮತ್ತು ವಿಚಿತ್ರ ನಗು ಅವನ ಏಕಾಗ್ರತೆಗೆ ಭಂಗವನ್ನು ಉಂಟುಮಾಡುಡುತ್ತ್ತಿತ್ತು ಮತ್ತು ವಸ್ತುಗಳಿಗೆ ಮೈ ಕೈ ತಾಕಿಸಿಕೊಳ್ಳುತ್ತಿದ್ದ. ಒಮ್ಮೆ ಅವ್ರೇಲಿಯಾನೋ ಅತೀವ ತಾಳ್ಮೆಯಿಂದ ಬೆಳ್ಳಿಯ ಕೆಲಸವನ್ನು ಮಾಡುತ್ತಿದ್ದುದನ್ನು ಮೆಚ್ಚುಗೆಯಿಂದ ಬಗ್ಗಿ ನೋಡುತ್ತಿದ್ದಳು. ಇದ್ದಕ್ಕಿದ್ದಂತೆ ಆ ಡಾರ್ಕ್ ರೂಂನಲ್ಲಿ ಪಿಲರ್ ಟೆರ್‍ನೆಲಾಳನ್ನು ನೋಡುವುದಕ್ಕೆ ಮುಂಚೆ ಅರ್ಕಾದಿಯೋ ಡಾರ್ಕ್ ರೂಮಿನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ಅವ್ರೇಲಿಯಾನೋ ಕಣ್ಣೆತ್ತಿ ನೋಡಿದಾಗ ಅವಳ ಅಲೋಚನೆ ಬೆಳಂ ಬೆಳಗಿನಂತೆ ಸ್ಪಷ್ಟವಾಗಿ ಕಂಡಿತು.
“ಅದೇನು ಹೇಳು” ಎಂದ.
ಅವಳು ಬೇಸರಗೊಂಡು ತುಟಿ ಕಚ್ಚಿದಳು.
“ನೀನು ಯುದ್ಧದಲ್ಲಿ ಎತ್ತಿದ ಕೈ. ನೀನು ಕಣ್ಣಿಟ್ಟ ಕಡೆ ಗುಂಡು ಹಾಕ್ತಿಯಾ” ಎಂದಳು.
ಅವಳ ಭವಿಷ್ಯದಿಂದ ಅವನಿಗೆ ನಿರಾಳವಾಯಿತು ಅವನು ಏನೂ ಆಗಿಲ್ಲ ಎನ್ನುವಂತೆ ಮತ್ತೆ ಮೊದಲಿನ ಹಾಗೆ ತನ್ನ ಕೆಲಸದಲ್ಲಿ ಮಗ್ನನಾದ. ಅವನ ಧ್ವನಿಯಲ್ಲಿ ದೃಢತೆ ಇತ್ತು.
“ನಾನು ಅವನನ್ನು ಗುರುತು ಹಿಡಿತೀನಿ. ಅವನಿಗೆ ನನ್ನ ಹೆಸರು ಗೊತ್ತು.”

ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಅವನು ಹುಡುಕುತ್ತಿದ್ದದ್ದು ಸಿಕ್ಕಿತ್ತು. ಅವನು ಗಡಿಯಾರವನ್ನು ಕುಣಿಯುವ ಹುಡುಗಿಯ ಬೊಂಬೆಗೆ ತಗುಲಿ ಹಾಕಿದ. ಅದು ನಿಲ್ಲದೆ ಮೂರು ದಿನಗಳ ಕಾಲ ಅದರ ಸಂಗೀತದ ಲಯಕ್ಕೆ ನರ್ತಿಸಿತು. ಅವನು ಮಾಡುತ್ತಿದ್ದ ಇತರೆ ಕೆಲಸಗಳಿಗಿಂತ ಅದನ್ನು ಕಂಡು ಹಿಡಿದಿದ್ದರಿಂದ ಅವನಿಗೆ ಉತ್ಸಾಹ ಉಂಟಾಯಿತು. ಅವನು ಊಟ, ನಿದ್ದೆಯನ್ನು ಬಿಟ್ಟು ಕೇವಲ ರೆಬೇಕಳ ಕಟ್ಟೆಚ್ಚರ ಮಾತ್ರ ಅವನನ್ನು ಸುಧಾರಣೆಯಾಗದಂಥ ಚಿತ್ತ ಭ್ರಮಣೆಯಿಂದ ತಡೆಯಿತು. ಅವನು ಇಡೀ ರಾತ್ರಿ ರೂಮಿನಲ್ಲಿ ತನ್ನಷ್ಟಕ್ಕ್ಕೆ ತಾನು ಮಾತನಾಡಿಕೊಳ್ಳುತ್ತ, ಪೆಂಡ್ಯುಲಂ ಸೂತ್ರವನ್ನು, ಎತ್ತಿನ ಗಾಡಿ, ಕುಂಟೆ ಮತ್ತು ಚಲನೆಯಲ್ಲಿರುವ ಯಾವುದಕ್ಕೇ ಆದರೂ ಅಳವಡಿಸುವುದು ಹೇಗೆಂದು ವಿವರಿಸುತ್ತಿದ್ದ. ಎಳ್ಳಷ್ಟೂ ನಿದ್ದೆ ಇಲ್ಲದೆ ಜ್ವರದಿಂದ ಎಷ್ಟು ಸುಸ್ತಾಗಿದ್ದನೆಂದರೆ ಅದೊಂದು ಬೆಳಿಗ್ಗೆ ತನ್ನ ಬೆಡ್‌ರೂಮಿಗೆ ಬಂದ ಬಿಳಿಯ ಗಡ್ಡದಾತನನ್ನು ಗುರುತು ಹಿಡಿಯಲಿಲ್ಲ. ಅವನು ಪ್ರುಡೆನ್ಸಿಯೋ ಆಗಿದ್ದ. ಅವನು ಸತ್ತವರಿಗೂ ಕೂಡ ವಯಸ್ಸಾಗುತ್ತದೆಂದು ತಿಳಿದು ಹಳೆಯ ನೆನಪಿನಿಂದ ಬೆದರಿದ. “ಪ್ರುಡೆನ್ಸಿಯೋ ನೀನು ಬಹಳ ದೂರದಿಂದ ಬಂದಿದೀ” ಎಂದ. ಅವನು ಸತ್ತು ಬಹಳ ವರ್ಷಗಳಾದ ಮೇಲೆ ಬದುಕಿದ್ದವರ ಮೇಲಿನ ಅಪೇಕ್ಷೆ ಎಷ್ಟು ತೀವ್ರವಾಗಿತ್ತೆಂದರೆ, ಇನ್ನೊಬ್ಬರೊಡನೆ ಒಡನಾಟದ ಅಗತ್ಯ ಎಷ್ಟಿತ್ತೆಂದರೆ, ಇತರೆ ಸತ್ತವರ ಸಾಮೀಪ್ಯ ಸಾವಿನೊಡನೆ ಎಷ್ಟು ಭಯಾನಕವಾಗಿತ್ತೆಂದರೆ, ಪ್ರುಡೆನ್ಸಿಯೋ ಕೊನೆಗೆ ತನ್ನ ಪ್ರಮುಖ ಶತ್ರುವನ್ನು ಪ್ರೀತಿಸುವಂತಾಗಿದ್ದ. ಅವನು ಸಾಕಷ್ಟು ಸಮಯವನ್ನು ಹುಡುಕಾಟದಲ್ಲಿ ಕಳೆದ. ರಿಯೋ‌ಅಕದಲ್ಲಿ ಹಾಗೂ ಮೇಲ್ಕಣಿವೆಯಲ್ಲಿ ಸತ್ತವರು ಮತ್ತು ಜೌಗುಪ್ರದೇಶದಿಂದ ಬಂದವರ ಬಗ್ಗೆ ಕೇಳಿದ. ಆದರೆ ಮೆಲ್ಕಿಯಾದೆಸ್ ಸಾವಿನ ನಕ್ಷೆಯ ಮೇಲೆ ಒಂದು ಕಪ್ಪು ಚುಕ್ಕೆಯನ್ನು ಇಡುವ ತನಕ ಮಾಕಾಂದೋ ಸಾವನ್ನು ಅರಿಯದ ಊರಾದ್ದರಿಂದ ಅವನ ಬಗ್ಗೆ ಯಾರು ಏನನ್ನು ಹೇಳಲು ಸಾಧ್ಯವಾಗಲಿಲ್ಲ. ಹೊಸೆ ಅರ್ಕಾದಿಯೋ ಬ್ಯುಂದಿಯಾ, ಪ್ರುಡೆನ್ಸಿಯೋ ಅಗಿಲಾರ್ ಜೊತೆ ಬೆಳಗಿನ ತನಕ ಮಾತನಾಡಿದ. ಎಚ್ಚರವಾಗಿದ್ದರಿಂದ ಕೆಲವು ಗಂಟೆಗಳ ನಂತರ ಸುಸ್ತಾದ ಅವನು ಅವ್ರೇಲಿಯಾನೋನ ವರ್ಕ್‌ಶಾಪ್‌ಗೆ ಹೋಗಿ, “ಇವತ್ತು ಯಾವ ದಿನ” ಎಂದ. ಅವ್ರೇಲಿಯಾನೋ, “ಮಂಗಳವಾರ” ಎಂದು ಹೇಳಿದ. ಹೊಸೆ ಅರ್ಕಾದಿಯೋ ಬ್ಯುಂದಿಯಾ, “ನಾನು ಹಾಗೇ ಅಂದುಕೊಂಡಿದ್ದೆ. ಆದರೆ ತಕ್ಷಣ ನಂಗೆ ಗೊತ್ತಾಯ್ತು. ಇವತ್ತಿನ್ನೂ ಸೋಮವಾರ ಅಂತ. ಆಕಾಶವನ್ನ ನೋಡು, ಗೋಡೆಗಳನ್ನು ನೋಡು, ಜರ್ರ್ರಿ ಗಿಡಗಳನ್ನು ನೋಡು, ಇವತ್ತು ಕೂಡ ಸೋಮವಾರ.” ಅವನ ಹುಚ್ಚುತನದ ಬಗ್ಗೆ ಅರಿವಿದ್ದ ಅವ್ರೇಲಿಯಾನೋ ಅವರ ಬಗ್ಗೆ ಗಮನ ಕೊಡಲಿಲ್ಲ. ಮಾರನೆಯ ದಿನ ಬುಧವಾರ, ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತೆ ವರ್ಕ್‌ಶಾಪಿಗೆ ಹೋದ. ಅವನು, “ಇದೆಲ್ಲ ಕುಲಗೆಟ್ಟು ಹೋಗಿದೆ” ಎಂದು ಹೇಳಿ, “ಗಾಳೀನ ನೋಡು. ಸೂರ್ಯನ ಬೆಳಕನ್ನು ನೋಡು, ಎಲ್ಲಾ ನಿನ್ನೆ ಮೊನ್ನೆ ಥರ ಇದೆ. ಇವತ್ತು ಕೂಡ ಸೋಮವಾರ” ಎಂದ. ಆ ದಿನ ರಾತ್ರಿ ಅವನು ಪ್ರುಡೆನ್ಸಿಯೋ ಅವ್ರೇಲಿಯಾನೋಗಾಗಿ, ಮೆಲ್‌ಕಿಯಾದೆಸ್‌ಗಾಗಿ, ರೇಬೇಕಾಳನ್ನು ಹೆತ್ತವರಿಗಾಗಿ, ತನ್ನ ತಂದೆತಾಯಿಗಾಗಿ ಮತ್ತು ಸಾವಿನಲ್ಲಿ ಈಗ ಒಬ್ಬಂಟಿಯಾಗಿರುವ ತನಗೆ ನೆನಪಿಗೆ ಬಂದ ಎಲ್ಲರಿಗಾಗಿ ಅಳುತ, ಅಂಗಳದಲ್ಲಿ ಕುಳಿತುಕೊಂಡಿದ್ದನ್ನು ಪಿಯತ್ರೋ ಕ್ರೆಪ್ಸಿ ಕಂಡ. ಅವನು ಬಿಗಿಯಾಗಿ ಕಟ್ಟಿದ ಹಗ್ಗದ ಮೇಲೆ ಹಿಂಗಾಲುಗಳಲ್ಲಿ ನಡೆಯುವ ಯಾಂತ್ರಿಕ ಕರಡಿಯನ್ನು ಅವನಿಗೆ ಕೊಟ್ಟ. ಆದರೆ ಅವನ್ನು ಮುತ್ತಿಕೊಂಡ ಭಾವನೆಯಿಂದ ಬಿಡಿಸಲು ಸಾಧ್ಯವಾಗಲಿಲ್ಲ. ಕೆಲವು ದಿನಗಳ ಹಿಂದೆ ಹೇಳಿದ್ದ ಮನುಷ್ಯರು ಹಾರಾಡುವುದಕ್ಕೆ ಸಹಾಯ ಮಾಡುವಂಥ ಪೆಂಡ್ಯುಲಮ್ ನಿರ್ಮಿಸುವ ಸಾಧ್ಯತೆ ಏನಾಯಿತೆಂದು ಅವನನ್ನು ಕೇಳಿದ. ಅದಕ್ಕೆ ಅವನು ಪೆಂಡ್ಯುಲಮ್ ಯಾವುದನ್ನೇ ಆದರೂ ಗಾಳಿಯಲ್ಲಿ ಎತ್ತಿ ಹಿಡಿಯುವುದಲ್ಲದೆ ತನ್ನನ್ನೇ ಎತ್ತುವುದಕ್ಕೆ ಆಗುವುದಿಲ್ಲ. ಅದ್ದರಿಂದ ಅದು ಸಾಧ್ಯವಿಲ್ಲ, ಎಂದು ಉತ್ತರಿಸಿದ. ಗುರುವಾರ ಅವನು ಉತ್ತ ನೆಲದಂತೆ ನೋವಿನ ಮುಖದಿಂದ ವರ್ಕ್‌ಶಾಪ್‌ನಲ್ಲಿ ಕಾಣಿಸಿಕೊಂಡ. ಅವನು ಬಿಕ್ಕಳಿಸುತ್ತಾ, “ಕಾಲದ ಮೆಷಿನ್ ಕೈಕೊಟ್ಟಿದೆ. ಉರ್ಸುಲಾ ಮತ್ತು ಅಮರಾಂತ ಕೂಡ ಎಲ್ಲೊ ಹೋಗಿದಾರೆ” ಎಂದ. ಅವನು ಬೈದು ಅದನ್ನು ನಿರ್ಲಕ್ಷಿಸಿದ. ಸಮಯ ಗತಿಸಿದ್ದನ್ನು ಸೂಚಿಸಲು ಏನಾದರೂ ವ್ಯತ್ಯಾಸ ಕಾಣುವುದೇ ಎಂದು ವಸ್ತುಗಳನ್ನು ನಿರೀಕ್ಷಿಸುತ್ತಾ ಆರು ಗಂಟೆ ಕಳೆದ. ಅವನು ಹಾಸಿಗೆಯಲ್ಲಿ ಕಣ್ಣು ಬಿಟ್ಟುಕೊಂಡು ಮಲಗಿ ಪ್ರುಡೆನ್ಸಿಯೋ, ಮೆಲ್‌ಕಿಯಾದೆಸ್ ಮತ್ತು ಸತ್ತ ಎಲ್ಲರನ್ನು ಕರೆಯುತ್ತಾ ಅವರು ತನ್ನ ಸಂಕಟವನ್ನು ಅರ್ಥಮಾಡಿಕೊಳ್ಳು?ಜಜಿ;ರೆಂದು ಆ ರಾತ್ರಿ ಕಳೆz. ಆದರೆ ಯಾರೂ ಬರಲಿಲ್ಲ. ಶುಕ್ರವಾರ ಎಲ್ಲರಿಗಿಂತ ಮುಂಚೆ ಎದ್ದು ಹೆ;ರಗಿನ ಪ್ರಕೃತಿಯನ್ನು ನೋಡಿದ ಅವನಿಗೆ ಆ ದಿನ ಸೋಮವಾರ ಎನ್ನುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಅವನು ಒಂದು ಬಾಗಿಲಿನಿಂದ ಕಂಬಿಯನ್ನು ಸೆಳೆದುಕೊಂಡು ಇನ್ನಿಲ್ಲದ ಶಕ್ತಿಯಿಂದ ಹೊಸದಾದ ಲ್ಯಾಬೋರೇಟರಿಯ ಉಪಕರಣಗಳು, ಛಾಯಾಚಿತ್ರದ ಉಪಕರಣ, ಬೆಳ್ಳಿ ಕೆಲಸದ ವರ್ಕ್‌ಶಾಪ್ ಎಲ್ಲವನ್ನೂ ದೆವ್ವ ಹಿಡಿದವನ ಹಾಗೆ ಸ್ವಲ್ಪವೂ ಅರ್ಥವಾಗದ ಭಾಷೆಯಲ್ಲಿ ಏನೇನೋ ಕೂಗಾಡುತ್ತಾ ಎಲ್ಲವನ್ನೂ ಚಚ್ಚಿಹಾಕಿದ. ಅವನು ಮನೆಯ ಇತರೆ ಭಾಗವನ್ನು ನಾಶಮಾಡುವುದರಲ್ಲಿದ್ದಾಗ ಅವ್ರೇಲಿಯಾನೋ ಅಕ್ಕಪಕ್ಕದವರನ್ನು ಸಹಾಯಕ್ಕಾಗಿ ಕೂಗಿ ಕರೆದ. ಅವನನ್ನು ಹಿಡಿದೆಳೆಯುವುದಕ್ಕೆ ಹತ್ತು ಜನ, ಬಿಗಿದು ಕಟ್ಟುವುದಕ್ಕೆ ಹದಿನಾಲ್ಕು ಜನ ಬೇಕಾಯಿತು. ಇಪ್ಪತ್ತು ಜನ ಏನನ್ನೋ ಹೇಳುತ್ತಾ ಬಾಯಲ್ಲಿ ಜೊಲ್ಲು ಸುರಿಸುತ್ತಿದ್ದ ಅವನನ್ನು ಎಳೆದುಕೊಂಡು ಹೋಗಿ ಅಂಗಳದ ಮರದ ಹತ್ತಿರ ಬಿಟ್ಟುಹೋದರು. ಉರ್ಸುಲಾ ಮತ್ತು ಅಮರಾಂತ ವಾಪಸು ಬಂದಾಗ ಮಳೆಯಲ್ಲಿ ತೊಯ್ದು ಹೋಗಿ ಮುಗ್ಧನ ಹಾಗೆ ಕಾಣುತ್ತಿದ್ದ ಅವನನ್ನು ಕೈಕಾಲುಗಳನ್ನು ಸೇರಿಸಿ ಕಟ್ಟಿಹಾಕಿದ್ದರು. ಅವನನ್ನು ಮಾತನಾಡಿಸಿದಾಗ ಅವರಿಗೆ ತಿಳಿಯದ ಹಾಗೆ ಏನನ್ನೋ ಹೇಳುತ್ತಾ ಅವರನ್ನು ಗುರುತಿಸಲಾಗದೆ ನೋಡಿದ. ಉರ್ಸುಲಾ ಹಗ್ಗದ ಗುರುತುಗಳಾಗಿದ್ದ ಅವನ ಮುಂಗೈ ಮತ್ತು ಮಂಡಿಗಳನ್ನು ಬಿಚ್ಚಿ, ಸೊಂಟಕ್ಕೆ ಕಟ್ಟಿದ್ದನ್ನು ಮಾತ್ರ ಹಾಗೆಯೇ ಬಿಟ್ಟಳು. ಅನಂತರ ಅವರು ಮಳೆ, ಬಿಸಿಲು ಅವನ ಮೇಲೆ ಬೀಳದಿರಲಿ ಎಂದು ತೆಂಗಿನ ಗರಿಗಳ ಚಪ್ಪರ ಕಟ್ಟಿದರು.

ಮಾರ್ಚ್ ತಿಂಗಳ ಒಂದು ಭಾನುವಾರ ಫಾದರ್ ನಿಕನೋರ್ ನಡುಮನೆಯಲ್ಲಿ ವ್ಯವಸ್ಥೆಗೊಳಿಸಿದ ಸ್ಥಳದಲ್ಲಿ ಅವ್ರೇಲಿಯಾನೋ ಬ್ಯುಂದಿಯಾ ಮತ್ತು ರೆಮಿದಿಯೋಸ್‌ಳ ಮದುವೆಯಾಯಿತು. ರೆಮಿದಿಯೋಸ್ ದೊಡ್ಡವಳಾದ ಮೇಲೆ ಕೂಡ ಹುಡುಗುತನದ ಅಭ್ಯಾಸಗಳನ್ನು ಬಿಡದಿದ್ದರಿಂದ ಮೊಸ್ಕೋತೆ ಮನೆಯಲ್ಲಿ ನಾಲ್ಕು ವಾರಗಳ ಕಾಲ ಚರ್ಚೆಯಾಗಿ ಕೊನೆಗೆ ಹೀಗೆ ನೆರವೇರಿತು. ಅವಳ ತಾಯಿ ಅವಳಿಗೆ ಹರೆಯಕ್ಕೆ ಬಂದ ಮೇಲೆ ಆಗುವ ಬದಲಾವಣೆಗಳನ್ನು ತಿಳಿಸಿ ಹೇಳಿದ್ದರು. ಫೆಬ್ರವರಿಯ ಒಂದು ಮಧ್ಯಾಹ್ನ ಕೂಗುತ್ತಾ ಓಡಿಬಂದ ಅವಳು ಅವ್ರೇಲಿಯಾನೋನ ಸಂಗಡ ಹಜಾರದಲ್ಲಿ ಕುಳಿತು ಮಾತನಾಡುತ್ತಿದ್ದ ತನ್ನ ಅಕ್ಕಂದಿರಿಗೆ ತನ್ನ ಒಳ‌ಉಡುಪಿಗೆ ಚಾಕಲೇಟ್ ರೀತಿಯ ಅಂಟು ಕಲಸು ಮೆತ್ತಿಕೊಂಡಿದ್ದನ್ನು ತೋರಿಸಿದಳು. ಒಂದು ತಿಂಗಳಿನ ನಂತರ ಮದುವೆ ಎಂದು ಒಪ್ಪಲಾಯಿತು. ಅವಳಿಗೆ ಸ್ನಾನ ಮಾಡುವುದು ಹೇಗೆ, ಬಟ್ಟೆ ಹಾಕಿಕೊಳ್ಳುವುದು ಹೇಗೆ ಅಲ್ಲದೆ ಮನೆಗೆಲಸದ ಪ್ರಾಥಮಿಕ ಅಂಶಗಳನ್ನು ಕಲಿಸಿಕೊಡುವುದಕ್ಕೆ ಏನೂ ಸಮಯ ಸಾಕಾಗುವಂತಿರಲಿಲ್ಲ. ಹಾಸಿಗೆಯಲ್ಲಿ ಉಚ್ಚೆ ಹುಯ್ಯುವುದನ್ನು ತಪ್ಪಿಸಲು ಬಿಸಿ ಇಟ್ಟಿಗೆಯ ಮೇಲೆ ಉಚ್ಚೆ ಹೊಯ್ಯುವಂತೆ ಮಾಡಿದರು. ದಾಂಪತ್ಯದ ಗುಪ್ತ ವಿಷಯಗಳ ಬಗ್ಗೆ ಅವಳಿಗೆ ಮನದಟ್ಟು ಮಾಡುವುದಕ್ಕೆ ಸಾಕಷ್ಟು ಸಮಯ ಹಿಡಿಯಿತಾದರೂ, ಅದರಿಂದ ಬೆರಗಾಗಿ ತಬ್ಬಿಬ್ಬಾದ ಅವಳು, ಮೊದಲ ರಾತ್ರಿಗೆ ಸಂಬಂಧಿಸಿದ ವಿವರಗಳ ಬಗ್ಗೆ ಎಲ್ಲರ ಜೊತೆ ಮಾತನಾಡಲು ಇಷ್ಟಪಟ್ಟಳು. ಇದರಿಂದಾಗಿ ಪ್ರಾಪಂಚಿಕ ವಿಷಯಗಳ ಬಗ್ಗೆ ಚಿಕ್ಕವಳಾದರೂ ಮದುವೆಯ ಸಮಾರಂಭದ ಹೊತ್ತಿಗೆ ಅವಳ ಅಕ್ಕಂದಿರಷ್ಟೆ ತಿಳುವಳಿಕೆ ಪಡೆದಿದ್ದಳು. ಸಂಗೀತದ ಬ್ಯಾಂಡುಗಳು, ಪಟಾಕಿಗಳ ಸಂಭ್ರಮದಲ್ಲಿ ಹೂವಿನಿಂದ ಉದ್ದಕ್ಕೂ ಅಲಂಕೃತವಾದ ರಸ್ತೆಯಲ್ಲಿ ದಾನ್ ಅಪೋಲಿನರ್ ಮೊಸ್ಕೋತೆ ತನ್ನ ಮಗಳ ಕೈ ಹಿಡಿದು ಕರೆದುಕೊಂಡು ಬಂದ. ಅವಳು ಕಿಟಕಿಯಲ್ಲಿ ನಿಂತು ಶುಭ ಕೋರಿದವರಿಗೆಲ್ಲ ನಸುನಕ್ಕು ಕೈ ಬೀಸಿ ಕೃತಜ್ಞತೆ ತಿಳಿಸಿದಳು. ವರ್ಷಗಳ ತರುವಾಯ ತನ್ನನ್ನು ಗುಂಡಿಕ್ಕಿ ಕೊಲ್ಲುವ ತಂಡದವರ ಎದುರು ನಿಂತಾಗ ಹಾಕಿಕೊಂಡಿದ್ದ ಕಪ್ಪು ಡ್ರೆಸ್ ಮತ್ತು ಲೋಹದ ಪಟ್ಟೆಗಳಿದ್ದ ಚರ್ಮದ ಶೂ ಹಾಕಿಕೊಂಡಿದ್ದ ಅವ್ರೇಲಿಯಾನೋ ತೀರಾ ಗಂಭೀರನಾಗಿದ್ದ ಮತ್ತು ಬಾಗಿಲಿನ ಹತ್ತಿರ ವಧುವನ್ನು ಎದುರುಗೊಂಡಾಗ ಅವನ ಗಂಟಲು ತುಂಬಿ ಬಂದಿತ್ತು. ಅವಳು ತುಂಬಾ ವಿವೇಚನೆಯಿಂದ ನಡೆದುಕೊಂಡಳಲ್ಲದೇ ಉಂಗುರವನ್ನು ತೊಡಿಸುವ ಪ್ರಯತ್ನದಲ್ಲಿ ಅವ್ರೇಲಿಯಾನೋ ಅದನ್ನು ಕೆಳಗೆ ಬೀಳಿಸಿದರೂ ಗಾಂಭೀರ್‍ಯವನ್ನು ಕಳೆದುಕೊಳ್ಳಲಿಲ್ಲ. ಆಗ ಉಂಟಾದ ಗೊಂದಲದಲ್ಲಿ ಉಂಗುರ ನೆಲಕ್ಕೆ ಬಿದ್ದು ಉರುಳುವ ಮುಂಚೆ ಅವನು ತನ್ನ ಕಾಲಿನಿಂದ ಅದನ್ನು ತಡೆದು ನಾಚಿಕೆಯಿಂದ ಹಿಂತಿರುಗಿಸುವ ತನಕ ಅವಳು ಮೆಹಂದಿಯಿಂದ ಸಿಂಗರಿಸಿದ ತನ್ನ ಕೈಯನ್ನು ಚಾಚಿ ಹಾಗೆಯೇ ಹಿಡಿದಿದ್ದಳು. ಆ ಚಿಕ್ಕ ಹುಡುಗಿ ಸಮಾರಂಭದಲ್ಲಿ ಏನಾದರೂ ತಪ್ಪು ಮಾಡುವಳೇನೋ ಎಂದು ಅವಳ ತಾಯಿ ಹಾಗೂ ಅಕ್ಕಂದಿರು ಭಯದಿಂದ ಎಷ್ಟು ಆತಂಕಗೊಂಡಿದ್ದರೆಂದರೆ ಕೊನೆಗೆ ಮುತ್ತಿಕ್ಕಿಸಿಕೊಳ್ಳಲು ಅವರೇ ಅವಳನ್ನು ಎತ್ತಿ ಹಿಡಿಯಬೇಕಾಯಿತು. ಆ ದಿನದಿಂದ ಯಾವುದೇ ಕಷ್ಟದ ಸಂದರ್ಭದಲ್ಲಿಯೂ ತಾಳ್ಮೆ ಹಾಗೂ ಜವಾಬ್ದಾರಿಯ ಭಾವನೆ ಅವಳಲ್ಲಿದ್ದದ್ದು ವ್ಯಕ್ತವಾಯಿತು. ಅವಳು ತಾನೇ ಮುಂದುವರೆದು ಮದುವೆಯ ಕೇಕಿನ ದೊಡ್ಡ ತುಂಡನ್ನು ಪ್ಲೇಟ್‌ನಲ್ಲಿ ಫೋರ್ ಜೊತೆ ಇಟ್ಟುಕೊಂಡು ಹೊಸೆ ಅರ್ಕಾದಿಯೋ ಬ್ಯುಂದಿಯಾನ ಹತ್ತಿರ ಹೋದಳು. ತೆಂಗಿನ ಗರಿಗಳ ನೆರಳಿನಲ್ಲಿ ಮರಕ್ಕೆ ಕಟ್ಟಿಹಾಕಿ ಬಿಸಿಲು ಮಳೆಯಿಂದ ಬಣ್ಣಗೆಟ್ಟು ಮರದ ಸ್ಟೋಲಿನ ಮೇಲೆ ಕುಳಿತಿದ್ದ ಭಾರಿ ಆಕಾರದ ಮುದುಕ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕೃತಜ್ಞತೆಯಿಂದ ನಸುನಕ್ಕು, ತಿಳಿಯಲಾರದ ಏನನ್ನೋ ಹೇಳುತ್ತ, ಕೇಕ್ ತಿಂದ. ಸೋಮವಾರ ಬೆಳಗಿನವರೆಗೂ ನಡೆದ ಆ ಗದ್ದಲದ ಸಮಾರಂಭದಲ್ಲಿ ಅತ್ಯಂತ ಅಸುಖಿಯಾಗಿದ್ದವಳೆಂದರೆ ರೆಬೇಕ ಬ್ಯುಂದಿಯಾ. ಅವಳಿಗೆ ಆಶಾಭಂಗವಾಗಿತ್ತು. ಉರ್ಸುಲಾ ವ್ಯವಸ್ಥೆ ಮಾಡಿದಂತೆ ಅವಳ ಮದುವೆ ಆ ದಿನವೇ ನಡೆಯಬೇಕಿತ್ತು. ಆದರೆ ಶುಕ್ರವಾರ ಅವನ ತಾಯಿ ಸಾಯುವ ಸ್ಥಿತಿಯಲ್ಲಿದ್ದಾಳೆ ಎಂದು ಕಾಗದ ಬಂದು ಮದುವೆಯನ್ನು ಮುಂದಕ್ಕೆ ಹಾಕಲಾಯಿತು. ಕಾಗದ ಬಂದ ಒಂದು ಗಂಟೆಯ ನಂತರ ಪಿಯತ್ರೋ ಕ್ರೆಪ್ಸಿ ಊರಿಗೆ ಹೊರಟ. ಶನಿವಾರ ರಾತ್ರಿ ಬಂದ ಅವನ ತಾಯಿ ದಾರಿಯಲ್ಲಿ ಅವನಿಗೆ ಸಿಗಲಿಲ್ಲ. ಅವ್ರೇಲಿಯಾನೋನ ಮದುವೆಯಲ್ಲಿ ಆಕೆ ತನ್ನ ಮಗನ ಮದುವೆಗೆಂದು ಸಿದ್ಧಮಾಡಿಕೊಂಡಿದ್ದ ದು:ಖದ ಹಾಡೊಂದನ್ನು ಹಾಡಿದಳು. ಪಿಯತ್ರೋ ಕ್ರೆಪ್ಸಿ ತನ್ನ ಮದುವೆಯ ಹೊತ್ತಿಗೆ ಬರಬೇಕೆಂಬ ಪ್ರಯತ್ನದಲ್ಲಿ ಒಂದಾದ ನಂತರ ಒಂದರಂತೆ ಐದು ಕುದುರೆಗಳನ್ನು ಕಟ್ಟಿಸಿಕೊಂಡು ಪ್ರಯಾಣ ಮಾಡಿ, ಭಾನುವಾರ ರಾತ್ರಿ ಹರಡಿ ಬಿದ್ದಿದ್ದ ಕಸ ಎತ್ತಿಹಾಕಲು ಬಂದ. ಆಮೇಲೆ ಕೂಡ ಆ ಕಾಗದ ಬರೆದವರು ಯಾರೆಂದು ಕಂಡುಹಿಡಿಯಲಾಗಲಿಲ್ಲ. ಉರ್ಸುಲಾ ಮತ್ತೆ ಮತ್ತೆ ಕೇಳಿ ಹಿಂಸೆ ಕೊಟ್ಟಿದ್ದಕ್ಕೆ ರೋಷಗೊಂಡು ಅಳುತ್ತಾ ಅಮರಾಂತ ಮರಗೆಲಸದವರು ಇನ್ನೂ ಬಿಚ್ಚದ ಮದುವೆಯ ಮಂಟಪದ ಎದುರು ತಾನು ನಿರಪರಾಧಿ ಎಂದು ಆಣೆ ಇಟ್ಟು ಹೇಳಿದಳು.

ಮದುವೆಯನ್ನು ಅಧಿಕೃತಗೊಳಿಸಲು ಜೌಗು ಪ್ರದೇಶದಿಂದ ದಾನ್ ಅಪೋಲಿನರ್ ಮೊಸ್ಕೋತೆ ಕರೆದುಕೊಂಡು ಬಂದಿದ್ದ ವಯಸ್ಸಾಗಿದ್ದ ಫಾದರ್ ನಿಕನೋರ್ ರೇಯ್ನಾ ತನ್ನ ಆಡಳಿತ ಇಲಾಖೆಯವರ ಕೃತಘ್ನತೆಯಿಂದ ರೋಸಿ ಹೋಗಿದ್ದ. ಡೊಳ್ಳು ಹೊಟ್ಟೆಯ ಸುಕ್ಕಾದ ಚರ್ಮದ ಕಡ್ಡಿಯಂತಿದ್ದ ಅವನ ಮುಖದಲ್ಲಿ ದೈವಿಕ ಕಳೆಯಿತ್ತು. ಅದು ಒಳ್ಳೆಯತನದಿಂದ ಬಂದಿರದೆ ಸರಳತೆಯಿಂದ ಬಂದಿತ್ತು. ಅವನು ಮದುವೆ ಸಮಾರಂಭ ಮುಗಿದ ಕೊಡಲೆ ಚರ್ಚಿಗೆ ವಾಪಸು ಹೋಗಲು ಯೋಜಿಸಿದ್ದ. ಆದರೆ ಮಕೋಂದೋದವರ ವಿಲಕ್ಷಣ ನಡವಳಿಕೆಯಿಂದ ಸೋಜಿಗಗೊಂಡ. ಅವರು ಅನೇಕ ತೊಂದರೆಗಳ ಮಧ್ಯೆ ಸಹಜ ನ್ಯಾಯಕ್ಕೆ ಒಳಗಾಗಿ ಅಭಿವೃದ್ಧಿ ಹೊಂದುತ್ತಿದ್ದರು. ಅವರು ತಮ್ಮ ಮಕ್ಕಳಿಗೆ ಅಧಿಕೃತ ನಾಮಕರಣ ಮಾಡುತ್ತಿರಲಿಲ್ಲ ಮತ್ತು ಹಬ್ಬಗಳ ಪವಿತ್ರತೆಯನ್ನು ಗಮನಿಸುತ್ತಿರಲಿಲ್ಲ. ದೇವರ ಅಗತ್ಯ ಅಲ್ಲಿ ಇರುವಷ್ಟು ಬೇರೆಲ್ಲಿಯೂ ಇಲ್ಲವೆಂದು ಭಾವಿಸಿ, ಉಪಪತ್ನಿಯರಿಗೆ ನ್ಯಾಯ ದೊರಕಿಸುವ ಮತ್ತು ಸಾಯಲಿರುವವರಿಗೆ ಸಂಸ್ಕಾರ ಮಾಡುವುದಕ್ಕೆಂದು ಒಂದು ವಾರ ಅಲ್ಲಿರಲು ನಿರ್ಧರಿಸಿದ. ಆದರೆ ಯಾರೂ ಅವನಿಗೆ ಗಮನ ಕೊಡಲಿಲ್ಲ. ಪಾದ್ರಿ ಇಲ್ಲದೆ ತಾವು ಅದೆಷ್ಟೋ ವರ್ಷ ಕಳೆದು ಆತ್ಮಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ದೈವದೊಡನೆ ನೇರವಾಗಿ ಮಾಡುತ್ತಿದ್ದುದಾಗಿಯೂ ಹಾಗೂ ಮೂಲ ಪಾಪದ ಕೆಡುಕನ್ನು ತೊರೆದಿರುವುದಾಗಿಯೂ ಅವರು ಹೇಳುತ್ತಿದ್ದರು. ಹೊರಗಡೆ ಅವರಿಗೆ ಉಪದೇಶ ಮಾಡಿ ಸುಸ್ತಾದ ಫಾದರ್ ನಿಕನೋರ್ ಧರ್ಮ ಶ್ರದ್ಧೆ ಇಲ್ಲದ ಕಡೆಗೆ ದೈವವನ್ನು ಗೌರವಿಸಲು ರೋಮ್‌ನಿಂದ ಜನರು ಬರುವಂತಾಗಲೆಂದು ಪ್ರಪಂಚದಲ್ಲೇ ದೊಡ್ಡದಾದ ಮನುಷ್ಯಾಕಾರದ ಸಂತರು ಮತ್ತು ಗಾಜಿನ ಕಿಟಕಿಗಳಿರುವ ಚರ್ಚ್ ಕಟ್ಟಬೇಕೆಂದು ತೀರ್ಮಾನಿಸಿದ. ಅವನು ತಾಮ್ರದ ಬೊಗಸೆಯನ್ನು ಹಿಡಿದು ದೇಣಿಗೆಗಾಗಿ ಹೊರಟ. ಜನರೇನೊ ಸಾಕಷ್ಟು ಹಣ ಕೊಟ್ಟರು. ಆದರೆ ಅವನಿಗೆ ಇನ್ನೂ ಹೆಚ್ಚಿಗೆ ಬೇಕಾಗಿತ್ತು. ಏಕೆಂದರೆ ಚರ್ಚಿನ ಗಂಟೆ ನೀರಲ್ಲಿ ಮುಳುಗಿದವನನ್ನು ಮೇಲಕ್ಕೆ ಎತ್ತುವಷ್ಟು ದೊಡ್ಡದಾಗಿರಬೇಕಿತ್ತು. ಅವನ; ಧ್ವನಿ ಉಡುಗುವ ತನಕ ಬಿನ್ನವಿಸಿಕೊಂಡ. ಅವನ ಮೈ ಮೂಳೆಗಳು ಅದರಿಂದ ತುಂಬಿ ಹೋಯಿತು. ಬಾಗಿಲಿಗಾಗುವಷ್ಟು ಹಣ ಒಟ್ಟುಗೂಡಿಸಲು ಸಾಧ್ಯವಾಗದಿದ್ದಕ್ಕೆ ಒಂದು ಶನಿವಾರ ತೀರ ಹತಾಶೆಗೊಳಗಾದ. ನಿದ್ದೆ ಬಾರದ ದಿನಗಳಲ್ಲಿ ಅದೊಂದು ಭಾನುವಾರ ಚೌಕದಲ್ಲಿದ್ದ ಸ್ಥಳವನ್ನು ಉತ್ತಮಗೊಳಿಸಿ, ಒಂದು ಸಣ್ಣ ಗಂಟೆಯನ್ನು ಹಿಡಿದುಕೊಂಡು, ಊರಿನಲ್ಲಿ ತಿರುಗಿ ಜನರನ್ನು ಸಾಮೂಹಿಕ ಪ್ರಾರ್ಥನೆಗೆ ಬನ್ನಿರೆಂದು ಕರೆದ. ಕೆಲವರು ಕುತೂಹಲದಿಂದ ಮತ್ತು ಕೆಲವರು ಹಳೆಯ ನೆನಪಿನಿಂದ ದೇವರು ತನ್ನ ವೈಯಕ್ತಿಕ ಅವಮಾನವೆಂದು ಪರಿಗಣಿಸುವುದಿಲ್ಲವೆಂದು ಹೋದರು.. ಇದರಿಂದಾಗಿ ಎಂಟು ಗಂಟೆಯ ಹೊತ್ತಿಗೆ ಇಡೀ ಊರಿನ ಅರ್ಧ ಜನರು ಚೌಕದ ಬಳಿ ಸೇರಿದಾಗ, ಫಾದರ್ ನಿಕನೋರ್ ಜನರು ಹೆಚ್ಚಾಗಿ ಬಿನ್ನವಿಸಿಕೊಂಡಿದ್ದರಿಂದ ಕುಗ್ಗಿದ ಧ್ವನಿಯಲ್ಲಿ ಸುವಾರ್ತೆಗಳನ್ನು ವಿವರಿಸಿದ. ಎಲ್ಲ ಮುಗಿದ ಮೇಲೆ ನೆರೆದವರು ಚದುರಲು ಪ್ರಾರಂಭಿಸಿದಾಗ ಅವನು ಕೈಗಳನ್ನು ಎತ್ತಿ ಗಮನಸೆಳೆದು, “ಒಂದು ನಿಮಿಷ .. ನಾವೀಗ ದೇವರಿದ್ದಾನೆ ಎನ್ನುವುದಕ್ಕೆ ಪುರಾವೆಯನ್ನು ನೋಡೋಣ” ಎಂದ.

ಸಾಮೂಹಿಕ ಪ್ರಾರ್ಥನೆಯ ಸಭೆಗೆ ಸಹಾಯ ಮಾಡಿದ ಹುಡುಗನೊಬ್ಬ ಒಂದು ಕಪ್ಪಿನಲ್ಲಿ ಹೊಗೆಯಾಡುತ್ತಿದ್ದ ಚಾಕಲೇಟ್ ತಂದುಕೊಟ್ಟಿದ್ದನ್ನು ಉಸಿರಾಡುವುದಕ್ಕೆ ಬಿಡದೆ ಕುಡಿದ. ಅನಂತರ ಅವನು ಕರ್‌ಚೀಫಿನಿಂದ ತುಟಿ ಒರೆಸಿಕೊಂಡು, ಕೈ ಅಗಲಿಸಿ, ಕಣ್ಣು ಮುಚ್ಚಿದ. ಆ ಕೂಡಲೆ ಫಾದರ್ ನಿಕನೋರ್ ನೆಲದ ಮೇಲಿಂದ ಆರು ಇಂಚು ಮೇಲೆ ಹೋದ. ಅದು ಎಲ್ಲರಿಗೂ ಒಪ್ಪಿಗೆಯಾಗುವ ಕ್ರಮವಾಯಿತು. ಅವನು ಮನೆಗಳ ಮುಂದೆ ನಿಂತು ಚಾಕಲೇಟ್ ಕುಡಿದು ಮೇಲೇಳುವ ಪ್ರದರ್ಶನ ಮಾಡುತ್ತ ಹೋಗುತ್ತಿದ್ದಂತೆ ಅವನ ಸಹಾಯಕ ಚೀಲದಲ್ಲಿ ಎಷ್ಟು ಹಣ ಸಂಗ್ರಹಿಸಿದನೆಂದರೆ ಒಂದೇ ತಿಂಗಳಲ್ಲಿ ಅವನು ಚರ್ಚ್ ಕಟ್ಟುವ ಕೆಲಸವನ್ನು ಪ್ರಾರಂಭಿಸಿದ. ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ಬಿಟ್ಟರೆ ಬೇರೆ ಯಾರೂ ಈ ಪ್ರದರ್ಶನದ ಹಿಂದಿರುವ ದೈವಿಕ ಮೂಲವನ್ನು ಅನುಮಾನಿಸಲಿಲ್ಲ. ಅವನು ಮುಖಮುದ್ರೆಯನ್ನು ಬದಲಿಸದೆ ತಾನಿದ್ದ ಮರದ ಹತ್ತಿರ ಆ ಪ್ರದರ್ಶನವನ್ನು ನೋಡಲು ನೆರೆದ ಜನಸಂದಣಿಯನ್ನು ನೋಡಿದ. ಅವನು ನಿಂತ ಕುರ್ಚಿಯ ಮೇಲೆ ಕೊಂಚ ಸೆಟೆದು, ಫಾದರ್ ನಿಕನೋರ್ ಕುಳಿತ ಕುರ್ಚಿಯೊಡನೆ ಮೇಲೇರಿದ್ದನ್ನು ನೋಡಿ ಭುಜ ಕೊಡವಿದ.
ಹೊಸೆ ಅರ್ಕಾದಿಯೋ ಬ್ಯುಂದಿಯಾ ಏನನ್ನೋ ಹೇಳಿದ.
ಫಾದರ್ ನಿಕನೋರ್ ಕೈಗಳನ್ನೆತ್ತಿದಾಗ ಕುರ್ಚಿಯ ನಾಲ್ಕು ಕಾಲುಗಳು ಒಂದೇ ಸಮಯಕ್ಕೆ ಮತ್ತೆ ನೆಲಕ್ಕೆ ಊರಿದವು.
ಮತ್ತೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಏನನ್ನೋ ಹೇಳಿದ.
ಇದರಿಂದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಮಾತನಾಡುವ ಭಾಷೆ ಲ್ಯಾಟಿನ್ ಎಂದು ಗೊತ್ತಾಯಿತು. ಫಾದರ್ ನಿಕನೋರ್ ಮಾತ್ರ ಅವನ ಜೊತೆ ಮಾತಾಡಲು ಸಾಧ್ಯವಿದುದ್ದರಿಂದ ಈ ಅವಕಾಶವನ್ನು ಉಪಯೋಗಿಸಿಕೊಂಡು ಅನುಮಾನಿಸಿದ ಅವನ ಮನಸ್ಸಿನೊಳಗೆ ನಂಬಿಕೆಯನ್ನು ತೂರಿಸಲು ಪ್ರಯತ್ನಿಸಿದ. ಅವನು ಪ್ರತಿ ದಿನ ಮಧ್ಯಾಹ್ನ ಮರದ ಪಕ್ಕದಲ್ಲಿ ಕುಳಿತು ಲ್ಯಾಟಿನ್‌ನಲ್ಲಿ ಉಪದೇಶ ಮಾಡುತ್ತಿದ್ದ. ಆದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಒತ್ತಿ ಹೇಳುವ ಉಪಾಯ ಮತ್ತು ಚಾಕಲೇಟಿನಿಂದ ಆಗುವ ಬದಲಾವಣೆಗಳನ್ನು ಮತ್ತೆ ಮತ್ತೆ ತಿರಸ್ಕರಿಸುತ್ತ, ಛಾಯಾಚಿತ್ರದ ಉಪಕರಣದಿಂದ ತೆಗೆದ ದೇವರ ಭಾವಚಿತ್ರ ಮಾತ್ರ ಪುರಾವೆಯಾಗುತ್ತೆಂದು ತಗಾದೆ ಮಾಡಿದ. ಫಾದರ್ ನಿಕನೋರ್ ಕೆಲವು ಮಾದರಿಗಳು, ಚಿತ್ರಗಳು ಮತ್ತು ಕ್ರಿಸ್ತನ ಮುಖವಿರುವ ಬಟ್ಟೆಯನ್ನು ತಂದು ತೋರಿಸಿದರೂ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವೆಲ್ಲ ಕುಶಲ ವಸ್ತುಗಳೆಂದು ತಿರಸ್ಕರಿಸಿದ್ದಲ್ಲದೆ ಅವುಗಳಿಗೆ ವೈeನಿಕ ಬುನಾದಿ ಇಲ್ಲವೆಂದು ಹೇಳಿದ. ಅವನೆಷ್ಟು ಬಿಗಿಯಾಗಿದ್ದ್ದನೆಂದರೆ ಫಾದರ್ ನಿಕನೋರ್ ಅವನಿಗೆ ಉಪದೇಶ ಹೇಳುವುದನ್ನು ಬಿಟ್ಟ್ಟು ಕೇವಲ ಮಾನವೀಯ ಭಾವನೆಯಿಂದ ಅವನ ಬಳಿ ಹೋಗುತ್ತಿದ್ದ. ಆಗ ಹೊಸೆ ಅರ್ಕಾದಿಯೋ ಬ್ಯುಂದಿಯಾ ತಾನೇ ಮುಂದಾಗಿ ವಿವೇಚನಾಪೂರ್ಣ ಉಪಾಯಗಳಿಂದ ಅವನ ನಂಬಿಕೆಗಳನ್ನು ದೂರಮಾಡಲು ಪ್ರಯತ್ನಿಸಿದ. ಅದೊಂದು ಸಂದರ್ಭದಲ್ಲಿ ಫಾದರ್ ನಿಕನೋರ್ ಚದುರಂಗದಂಥದನ್ನು ತಂದು ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ಆಟಕ್ಕೆ ಕರೆದಾಗ ಅವನು ಒಪ್ಪಲಿಲ್ಲ. ಏಕೆಂದರೆ ಅವನ ಪ್ರಕಾರ ಇಬ್ಬರು ಶತ್ರುಗಳು ಪರಸ್ಪರ ಒಪ್ಪಿಕೊಳ್ಳುವಂಥ ನಿಯಮಾವಳಿಗಳು ಇರುವುದಕ್ಕೆ ಸಾಧ್ಯ ಎನ್ನುವುದು ಅವನಿಗೆ ಅರ್ಥವಾಗುವಂತಿರಲಿಲ್ಲ. ಆಟವನ್ನು ಆ ರೀತಿ ಆಡಿದ್ದನ್ನು ಕಂಡಿರದ ಫಾದರ್ ನಿಕನೋರ್ ಮತ್ತೆ ಅದನ್ನು ಆಡಲಿಲ್ಲ. ಹೊಸೆ ಅರ್ಕಾದಿಯೋ ಬ್ಯುಂದಿಯಾನ ಸರಳತೆಗೆ ಬೆರಗಾಗಿ ಅವರು ಅವನನ್ನು ಮರಕ್ಕೆ ಕಟ್ಟಿ ಹಾಕಲು ಹೇಗೆ ಸಾಧ್ಯವಾಯಿತು ಎಂದು ಕೇಳಿದ.
ಅವನು, “ಏಕೆಂದರೆ ನಾನೊಬ್ಬ ತಲೆ ತಿರುಕ” ಎಂದು ಉತ್ತರಿಸಿದ.

ಅನಂತರ ತನ್ನ ನಂಬಿಕೆಯ ಬಗ್ಗೆ ವಿಶ್ವಾಸ ಹೊಂದಿದ್ದ ಫಾದರ್ ಮತ್ತೆ ಅವನ ಬಳಿ ಹೋಗದೆ ಚರ್ಚ್ ಕಟ್ಟುವುದನ್ನು ಶೀಘ್ರಗೊಳಿಸಲು ತನ್ನನ್ನು ತೊಡಗಿಸಿಕೊಂಡ. ರೆಬೇಕಳಿಗೆ ತನ್ನ ಆಸೆಗಳು ಮರುಹುಟ್ಟು ಪಡೆದ ಹಾಗೆ ಕಾಣಿಸಿತು. ಅವಳ ಭವಿಷ್ಯ ಅದರ ಕೆಲಸ ಪೂರೈಸುವುದನ್ನು ಅವಲಂಬಿಸಿತ್ತು. ಏಕೆಂದರೆ ಒಂದು ಭಾನುವಾರ ಅವನು ಮನೆಯವರೆಲ್ಲರ ಜೊತೆ ಊಟ ಮಾಡುತ್ತ ಕುಳಿತಾಗ ಫಾದರ್ ನಿಕನೋರ್ ಚರ್ಚ್ ಕಟ್ಟುವುದು ಮುಗಿದ ಮೇಲೆ ಅಲ್ಲಿನ ಧಾರ್ಮಿಕ ವಿಧಿಗಳ ಮಹತ್ವವನ್ನು ಕುರಿತು ಹೇಳಿದಾಗ ಅಮರಾಂತ, “ರೆಬೇಕ ಎಲ್ಲರಿಗಿಂತ ಅದೃಷ್ಟವಂತೆ” ಎಂದಳು. ಅವಳು ಹೇಳಿದ್ದು ಏನೆಂದು ರೆಬೇಕಳಿಗೆ ಅರ್ಥವಾಗದಿದ್ದಾಗ ತನ್ನ ಮುಗ್ಧ ನಗುವಿನಿಂದ ಅವಳು “ಚರ್ಚನ್ನು ನಿನ್ನ ಮದುವೆಯಿಂದ ಉದ್ಘಾಟನೆ ಮಾಡ್ತೀಯಾ” ಎಂದು ವಿವರಿಸಿದಳು.
ರೆಬೇಕ ಯಾವುದೇ ರೀತಿಯ ಟೀಕೆಯನ್ನು ಮುಂಚೆಯೇ ತಡೆ ಹಿಡಿಯಲು ಪ್ರಯತ್ನಿಸಿದಳು. ಚರ್ಚ್ ಕಟ್ಟುತ್ತಿದ್ದರ ಪ್ರಗತಿ ನೋಡಿದರೆ ಅದು ಮುಗಿಯಲು ಇನ್ನೂ ಹತ್ತು ವರ್ಷ ಬೇಕಾಗಿತ್ತು. ಫಾದರ್ ನಿಕನೋರ್ ಅದಕ್ಕೆ ಒಪ್ಪಲಿಲ್ಲ. ಅದರಲ್ಲಿ ನಂಬಿಕೆ ಇಟ್ಟವರ ಔದಾರ್ಯ ಅವನನ್ನು ಆಶಾವಾದಿಯನ್ನಾಗಿ ಮಾಡಿತ್ತು. ರೋಷಗೊಂಡು ಸುಮ್ಮನಾದ ರೇಬೇಕಾ ಊಟ ಮುಗಿಸಲಿಲ್ಲ. ಉರ್ಸುಲಾಗೆ ಅಮರಾಂತಳ ಆಲೋಚನೆ ಯುಕ್ತವೆಂದು ತೋರಿ ಕೆಲಸದ ಗತಿ ಹೆಚ್ಚಾಗಲೆಂದು ಸಾಕಷ್ಟು ಹಣವನ್ನು ಕೊಟ್ಟಳು. ಆ ರೀತಿಯ ಕೊಡುಗೆ ಮತ್ತೊಂದು ಲಭಿಸಿದರೆ ಮುಂದಿನ ಮೂರು
ವರ್ಷದಲ್ಲಿ ಚರ್ಚ್ ಸಿದ್ಧವಾಗುವುದೆಂದು ಫಾದರ್ ನಿಕನೋರ್ ಭಾವಿಸಿದ. ಅಂದಿನಿಂದ ರೆಬೇಕ ಅಮರಾಂತಳಿಗೆ ಏನೂ
ಹೇಳಲಿಲ್ಲ. ತಾನು ಆಸಕ್ತಿ ವಹಿಸಿ ಮಾಡಿದ ಪ್ರಯತ್ನಕ್ಕೆ ಅದಕ್ಕಿರಬೇಕಾದ ಮುಗ್ಧತೆ ಇರಲಿಲ್ಲವೆಂದು ಅವಳಿಗೆ ಖಚಿತವಾಗಿತ್ತು. “ನಾನದನ್ನು ಗಂಭೀರವಾಗಿ ಮಾಡಿರ್‍ಲಿಲ್ಲ” ಎಂದು ಅಮರಾಂತ ಆ ರಾತ್ರಿ ನಡೆದ ತೀವ್ರವಾದ ವಾಗ್ವಾದದಲ್ಲಿ ಹೇಳಿದಳು. “ಇದರಿಂದಾಗಿ ನಾನು ನಿನ್ನನ್ನು ಇನ್ನು ಮೂರು ವರ್ಷ ಕೊಲ್ಲುವಂತಿಲ್ಲ” ಎಂದಳು. ಆ ಸವಾಲನ್ನು ರೆಬೇಕ ಒಪ್ಪಿದಳು.

ಪಿಯತ್ರೋ ಕ್ರೆಪ್ಸಿಗೆ ಹೊಸದಾಗಿ ಮದುವೆಯನ್ನು ಮುಂದೆ ಹಾಕಿದ್ದು ತಿಳಿದಾಗ ನಿರಾಸೆಯಾಯಿತು. ಆದರೆ ರೆಬೇಕ ಅವನ ಬಗ್ಗೆ ಇಟ್ಟಿದ್ದ ನಿಷ್ಠೆಯ ಅಂತಿಮ ಪುರಾವೆಯನ್ನು ತೋರಿಸಿದಳು. “ನೀನು ಯಾವಾಗ ಹೇಳಿದರೆ ಆಗ ಓಡಿ ಹೋಗೋಣ” ಎಂದಳು. ಅವಳ ಹಾಗೆ ಅವನು ಪುಟಿದೇಳುವ ಸ್ವಭಾವದವನಾಗಿರಲಿಲ್ಲ. ಅವಳ ಮಾತಿಗೆ ಗೌರವ ಕೊಡಬೇಕಲ್ಲದೆ ಹುಚ್ಚಾಟ ಮಾಡಬಾರದೆಂದು ತಿಳಿಸಿದ. ಅನಂತರ ರೆಬೇಕ ಹೆಚ್ಚು ಧೈರ್ಯ ತೆಗೆದುಕೊಳ್ಳಲು ಪ್ರಾರಂಭಿಸಿದಳು. ಜೋರಾಗಿ ಗಾಳಿ ಬೀಸಿ ನಡುಮನೆಯಲ್ಲಿ ದೀಪ ಆರಿ ಹೋದಾಗ ಕತ್ತಲಲ್ಲಿ ಪ್ರೇಮಿಗಳಿಬ್ಬರೂ ಮುತ್ತಿಡುವುದನ್ನು ಉರ್ಸುಲಾ ನೋಡಿ ಬಿಟ್ಟಳು. ಪಿಯತ್ರೋ ಕ್ರೆಪ್ಸಿ ಅವಳಿಗೆ ಆಧುನಿಕ ದೀಪಗಳ ಕನಿಷ್ಠ ಗುಣಮಟ್ಟದ ಬಗ್ಗೆ ಗೊಂದಲಗೊಂಡ ವಿವರಣೆಯನ್ನು ಕೊಟ್ಟ. ಅಲ್ಲದೆ ಒಳ್ಳೆಯ ದೀಪಗಳನ್ನು ವ್ಯವಸ್ಥೆಗೊಳಿಸಲು ಅವಳಿಗೆ ಸಹಾಯ ಮಾಡಿದ. ಆದರೆ ಎಣ್ಣೆ ಕೈ ಕೊಡುತ್ತಿತ್ತು ಅಥವಾ ಬತ್ತಿ ಸರಿ ಇರುತ್ತಿರಲಿಲ್ಲ. ರೆಬೇಕ ಅವನ ತೊಡೆಯ ಮೇಲೆ ಕುಳಿತಿದ್ದನ್ನು ಉರ್ಸುಲಾ ಕಂಡಳು. ಈ ಸಲ ಅವಳು ಯಾವ ವಿವರಣೆಯನ್ನೂ ಒಪ್ಪಲಿಲ್ಲ. ಬೇಕರಿಯ ಜವಾಬ್ದಾರಿಯನ್ನು ಇಂಡಿಯನ್ ಹೆಂಗಸಿಗೆ ಬಿಟ್ಟುಕೊಟ್ಟಳು. ಆ ಹದಿ ವಯಸ್ಸಿನವರು ಭೇಟಿಯಾದಾಗ ಎದುರಿಗೇ ತುಯ್ದಾಡುವ ಕುರ್ಚಿಯಲ್ಲಿ ಕುಳಿತಿರುತ್ತಿದ್ದಳಲ್ಲದೆ ಅವಳು ತಾನು ಹುಡುಗಿಯಾಗಿದ್ದ ರೀತಿಯ ಹಳೆ ವರಸೆಗಳಿಗೆ ಆಸ್ಪದ ಕೊಡುತ್ತಿರಲಿಲ್ಲ. ಭೇಟಿಯ ಸಮಯದಲ್ಲಿ ಕುಳಿತು ಬೇಸರದಿಂದ ಆಕಳಿಸುತ್ತಿದ್ದ ಉರ್ಸುಲಾಳನ್ನು ನೋಡಿ ರೆಬೇಕ, “ಪಾಪದ ಅಮ್ಮ” ಎಂದು ತೋರಿಕೆಯ ರೋಷವನ್ನು ವ್ಯಕ್ತಪಡಿಸುತ್ತಿದ್ದಳು. “ಅವಳು ಸತ್ತ ಮೇಲೆ ಕೊಡೊ ಸನ್ಮಾನ ತೊಗೊಳ್ಳೋದಕ್ಕೆ ಆ ಕುರ್ಚಿಯಲ್ಲೇ ಕುತ್ಕೊಂಡು ಹೋಗ್ತಾಳೆ.” ಮೂರು ತಿಂಗಳ ಅವಧಿಯಲ್ಲಿ ಉಸ್ತುವಾರಿಯಲ್ಲಿ ನಡೆದ ಪ್ರೇಮ ಮತ್ತು ತಾನು ಹೋಗಿ ನೋಡುತ್ತಿದ್ದ ಕಟ್ಟಡದ ಕೆಲಸದ ಆಮೆ ನಡಿಗೆಯ ಪ್ರಗತಿ ಇವುಗಳಿಂದ ಬೇಸತ್ತು ಪಿಯತ್ರೋ ಕ್ರೆಪ್ಸಿ ಚರ್ಚ್ ಕಟ್ಟಿ ಮುಗಿಸಲು ಬೇಕಾದ ಹಣವನ್ನು ತಾನೇ ಕೊಟ್ಟ. ಅಮರಾಂತಳೇನೊ ತಾಳ್ಮೆ ಕಳೆ;ದುಕೊಳ್ಳಲಿಲ್ಲ. ಕಸೂತಿ ಮಾಡುವುದಕ್ಕೆ ಬರುತ್ತಿದ್ದ ಹುಡುಗಿಯರ ಜೊತೆ ಮಾತಾಡುತ್ತ ಹೋಗಿ ಹೊಸ ದಾರಿಗಳನ್ನು ಹುಡುಕಲು ತೊಡಗಿದಳು, ಎಲ್ಲಕ್ಕಿಂತ ಹೆಚ್ಚು ಸರಿಯಾದದ್ದು ಎನಿಸುವ ಉಪಾಯ ಒಂದು ತಪ್ಪಿನಿಂದ ಹಾಳಾಯಿತು. ಅದೇನೆಂದರೆ ರೆಬೇಕಳ ಬೆಡ್‌ರೂಮಿನ ಬೀರುವಿನಲ್ಲಿ ಮದುವೆಯ ಬಟ್ಟೆಗಳ ಜೊತೆ ಇಟ್ಟಿದ್ದ ನುಸಿ ಗುಳಿಗೆಗಳನ್ನು ತೆಗೆದು ಬಿಟ್ಟಿದ್ದಳು. ಅವಳು ಅವುಗಳನ್ನು ಚರ್ಚ್ ಕಟ್ಟಡ ಸಿದ್ಧವಾಗುವುದಕ್ಕೆ ಎರಡು ತಿಂಗಳು ಮುಂಚೆ ಮಾಡಿದ್ದಳು. ಆದರೆ ಮದುವೆ ಹತ್ತಿರ ಬರುತ್ತಿದ್ದರಿಂದ ರೆಬೇಕ ಎಷ್ಟು ತಾಳ್ಮೆಗೆಟ್ಟಿದ್ದಳೆಂದರೆ ಅಮರಾಂತ ಭಾವಿಸಿದ್ದಕ್ಕಿಂತ ಮುಂಚೆಯೇ ಮದುವೆಯ ಉಡುಪುಗಳನ್ನು ಸಿದ್ಧಗೊಳಿಸಿಕೊಳ್ಳುವುದೆಂದು ತೀರ್ಮಾನಿಸಿದಳು. ಅವಳು ಉಡುಪುಗಳನ್ನು ತೆಗೆದು ಮೊದಲು ಪೇಪರ್, ಅನಂತರ ಅದರ ಮೇಲೆ ಸುತ್ತಿದ್ದ್ದ ಬಟ್ಟೆಯನ್ನು ಬಿಚ್ಚಿದಾಗ ಮದುವೆಯ ಬಟ್ಟೆಯ ದಾರ, ಹೊಲಿಗೆಗಳನ್ನಲ್ಲದೆ ಕಿತ್ತಲೆ ಬಣ್ಣದ ಉಡುಪುಗಳನ್ನು ಕೂಡ ಹುಳುಗಳು ತೂತು ಕೊರೆದಿದ್ದವು. ಅವಳಿಗೆ ಮುಷ್ಟಿಯಷ್ಟು ನುಸುಗುಳಿಗೆಯನ್ನು ಸುತ್ತಿಟ್ಟಿದ್ದರ ಖಾತರಿ ಇದ್ದರೂ ನಡೆದ ಅನಾಹುತ ಎಷ್ಟು ಸಹಜವಾಗಿತ್ತೆಂದರೆ ಅವಳು ಯಾರನ್ನೂ ತೆಗಳುವ ಹಾಗಿರಲಿಲ್ಲ. ಮದುವೆಗೆ ಒಂದು ತಿಂಗಳಿಗಿಂತ ಕಡಿಮೆ ಇತ್ತು. ಆದರೆ ಒಂದು ವಾರದೊಳಗೆ ಹೊಸ ಬಟ್ಟೆಗಳನ್ನು ಹೊಲಿಸಿ ಕೊಡುವುದಾಗಿ ಆಂಪೆರೋ ಮೊಸ್ಕೋತೆ ಆಶ್ವಾಸನೆ ಕೊಟ್ಟ. ಆ ದಿನ ಮಧ್ಯಾಹ್ನ ಮಳೆ ಬರುತ್ತಿದ್ದ ಸಮಯದಲ್ಲಿ ಹೊಲಿಸಿ ಪರೀಕ್ಷೆಗಾಗಿ ಆಂಪೆರೋ ರೆಬೇಕಳಿಗೆ ಹೆಣೆದ ಬಟ್ಟೆಗಳನ್ನು ತಂದಾಗ ಅಮರಾಂತಳಿಗೆ ಇನ್ನೇನು ಪ್ರಜ್ಞೆ ತಪ್ಪುವ ಹಾಗಾಯಿತು. ಅವಳಿಗೆ ಗಂಟಲಿನೊಳಗೆ, ಬೆನ್ನ ಹುರಿಯಲ್ಲಿ ಮಂಜು ಇಳಿದಂತಾಯಿತು. ಅನೇಕ ತಿಂಗಳ ಕಾಲ ಅವಳು ಆ ವೇಳೆಗಾಗಿ ಹೆದರಿದ್ದಳು. ಒಂದು ವೇಳೆ ರೆಬೇಕಳ ಮದುವೆ ತಪ್ಪಿಸಲು ತಾನು ಕಲ್ಪಿಸಿಕೊಳ್ಳವಂಥ ಪ್ರಯತ್ನಗಳನ್ನು ಮಾಡಿ ಸೋತರೆ ಕೊನೆ ಗಳಿಗೆಯಲ್ಲಿ ಅವಳಿಗೆ ವಿಷ ಕೊಡುವ ಧೈರ್ಯ ತನಗೆ ಬಂದೇ ಬರುತ್ತೆಂದು ತಿಳಿದಿದ್ದಳು. ಆ ಮಧ್ಯಾಹ್ನ ರೆಬೇಕ ಬಟ್ಟೆ ತೊಟ್ಟು ಸೆಖೆಯಿಂದ ಉಸಿರುಗಟ್ಟಿದಂತಾಗಿ ಒದ್ದಾಡುತ್ತಿರುವಾಗ ತೀರ ತಾಳ್ಮೆಯಿಂದ ಆಂಪೆರೋ ಮೊಸ್ಕೋತೆ ಅಲ್ಲಲ್ಲಿ ಸೂಜಿಗಳನ್ನು ನೆಡುತ್ತಿದ್ದಾಗ, ಅಮರಾಂತ ತನ್ನ ಕಸೂತಿ ಕೆಲಸದಲ್ಲಿ ತುಂಬ ತಪ್ಪುಗಳನ್ನು ಮಾಡಿದಳಲ್ಲದೆ, ಸೂಜಿಯಿಂದ ಬೆರಳು ಚುಚ್ಚಿಕೊಂಡಳು. ಆದರೂ ಆ ದಿನ ಮದುವೆಗೆ ಮುಂಚಿನ ಕೊನೆಯ ಶುಕ್ರವಾರವೆಂದು ಮತ್ತು ಕಾಫಿಗೆ ವಿಷ ಬೆರೆಸಿ ಕೊಡುವ ವಿಧಾನವನ್ನು ಅನುಸರಿಸುವುದೆಂದು ಕೊರೆಯುವ ಮನಸ್ಸಿನಿಂದ ನಿಧರಿಸಿದಳು.

ಅನಿರೀಕ್ಷಿತವಾದ ಮತ್ತೊಂದು ದೊಡ್ಡ ಘಟನೆ ಜರುಗಿ ಮತ್ತೆ ಅದೆಷ್ಟೋ ಸಮಯ ಮುಂದಕ್ಕೆ ಹಾಕಬೇಕಾಯಿತು. ಮದುವೆಗೆ ಒಂದು ವಾರ ಇರುವುದಕ್ಕೆ ಮುಂಚೆ ನಡುರಾತ್ರಿ ಹೊಟ್ಟೆಯಲ್ಲಿ ಏನೋ ಸಿಡಿದು ಎಚ್ಚರಗೊಂಡ ರೆಮಿದಿಯೋಸ್ ತಾನು ಕುಡಿದ ಬಿಸಿ ಮಾಂಸದ ಸಾರನ್ನು ಕಾರಿಕೊಂಡು, ಒದ್ದೆ ಮುದ್ದೆಯಾಗಿ, ಅನಂತರ ಮೂರು ದಿನಗಳಾದ ಮೇಲೆ ತನ್ನ ರಕ್ತದಿಂದಲೇ ವಿಷ ಉಣಿಸಿಕೊಂಡು ಸತ್ತಳು. ಇದರಿಂದ ಅಮರಾಂತ ಸಂದಿಗ್ಧಕ್ಕೊಳಪಟ್ಟಳು. ರೆಮಿದಿಯೋಸ್‌ಳ ಸಾವಿಗೆ ತಾನು ಕಾರಣನೆನ್ನುವ ಅಪರಾಧಿ ಭಾವನೆ ಮುತ್ತಿ ರೆಬೇಕಳಿಗೆ ತಾನು ವಿಷ ಹಾಕದ ಹಾಗೆ ಬೇರೇನಾದರೂ ಭಯಾನಕವನ್ನು ಮಾಡಲು ದೇವರನ್ನು ಪರಿಪರಿಯಿಂದ ಕೇಳಿಕೊಂಡಿದ್ದ್ಟಳು. ಅವಳು ಅಂಥದೊಂದು ತಡೆಯನ್ನು ಅಪೇಕ್ಷಿಸಿರಲಿಲ್ಲ. ರೆಮಿದಿಯೋಸ್ ಮನೆಗೆ ಗೆಲುವನ್ನು ತಂದಿದ್ದಳು. ಅವಳು ಗಂಡನ ಜೊತೆ ವರ್ಕ್‌ಶಾಪ್‌ನ ಪಕ್ಕದ ರೂಮಿನಲ್ಲಿದ್ದು ಅದನ್ನು ತನ್ನ ಚಿಕ್ಕಂದಿನ ಗೊಂಬೆಗಳಿಂದ ಸಿಂಗರಿಸಿದ್ದಳಲ್ಲದೆ ಅವಳ ಚುರುಕುತನ ಬೆಡ್‌ರೂಮಿನ ನಾಲ್ಕು ಗೋಡೆಯಿಂದಾಚೆ ಆರೋಗ್ಯಪೂರ್ಣ ಹವೆಯಂತೆ ಅಂಗಳದ ಗಿಡಗಳ ಜೊತೆ ಹಬ್ಬಿತ್ತು. ಅವಳು ಬೆಳಗಾಗುತ್ತಲೇ ಹಾಡಲು ಶುರು ಮಾಡುತ್ತಿದ್ದಳು. ರೆಬೇಕ ಮತ್ತು ಅಮರಾಂತರ ವಾಗ್ವಾದದ ನಡುವೆ ಬಾಯಿ ಹಾಕಲು ಧೈರ್ಯ ವಹಿಸುತ್ತಿದ್ದವಳೆಂದರೆ ಅವಳೊಬ್ಬಳೇ. ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ನೋಡಿಕೊಳ್ಳುವುದರಲ್ಲಿ ಅವಳು ಸುಸ್ತಾಗಿದ್ದಳು. ಅವನಿಗೆ ಊಟ ಕೊಡುವುದು, ದಿನದ ಅಗತ್ಯಗಳನ್ನು ಪೂರೈಸುವುದು, ಸೋಪಿನಿಂದ ತೊಳೆದು ಬ್ರಷ್ ಮಾಡುವುದು, ತಲೆ ಬಾಚುವುದು ಮತ್ತು ಗಡ್ಡ ಗಂಟಾಗದಂತೆ ನೋಡಿಕೊಳ್ಳುವುದು, ತೆಂಗಿನ ಗರಿಗಳನ್ನು ಒಪ್ಪವಾಗಿಡುವುದು ಮತ್ತು ಅದರ ಮೇಲೆ ಅತಿರೇಕದ ವಾತಾವರಣಕ್ಕೆಂದು ನೀರು ಸೋರದ ಕ್ಯಾನ್‌ವಾಸ್ ಹಾಕುವುದನ್ನು ಮಾಡುತ್ತಿದ್ದಳು. ಅವಳು ಅಂತಿಮ ತಿಂಗಳುಗಳಲ್ಲಿ ಅವನ ಜೊತೆ ಲ್ಯಾಟಿನ್ ಭಾಷೆಯಲ್ಲಿ ರೂಢಿಗತವಾದದ್ದನ್ನು ಮಾತನಾಡುವಷ್ಟು ಶಕ್ತಳಾಗಿದ್ದಳು. ಅವ್ರೇಲಿಯಾನೋ ಮತ್ತು ಪಿಲರ್ ಟೆರ್‍ನೆರಾರ ಮಗನನ್ನು ಮನೆಗೆ ಕರೆದುಕೊಂಡು ಬಂದು ಅವ್ರೇಲಿಯಾನೋ ಹೊಸೆ ಎಂದು ಹೆಸರಿಟ್ಟಾಗ ಅವನನ್ನು ತನ್ನ ಹಿರಿಯ ಮಗನೆಂದು ಕಾಣುವುದಾಗಿ ರೆಮಿದಿಯೋಸ್ ನಿರ್ಧರಿಸಿದ್ದಳು. ಅವಳ ತಾಯ್ತನದ ಭಾವನೆ ಉರ್ಸುಲಾಳನ್ನು ಬೆರಗುಗೊಳಿಸಿತ್ತು. ಅವ್ರೇಲಿಯಾನೋ ಅವಳಲ್ಲಿ ತನ್ನ ಬದುಕಿಗೊಂದು ಅರ್ಥವನ್ನು ಕಂಡುಕೊಂಡಿದ್ದ. ಅವನು ಇಡೀ ದಿನ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ರೆಮಿದಿಯೋಸ್ ಅವನಿಗೆ ಕಾಫಿ ತಂದು ಕೊಡುತ್ತಿದ್ದಳು. ಅವರಿಬ್ಬರೂ ಪ್ರತಿ ದಿನ ಸಂಜೆ ಅರ್ಕಾದಿಯೋ ಮೊಸ್ಕೋತೆಯ ಮನೆಗೆ ಹೋಗುತ್ತಿದ್ದರು. ಅವನು ಮಾವನ ಜೊತೆ ಎಂದೂ ಮುಗಿಯದ ಚದುರಂಗದಂಥ ಆಟವಾಡುತ್ತಿದ್ದ. ರೆಮಿದಿಯೋಸ್‌ಳ ಅಕ್ಕಂದಿರು ಮತ್ತು ತಾಯಿಯ ಜೊತೆ ಉಪಯುಕ್ತ ವಿಷಯಗಳ ಬಗ್ಗೆ ಮಾತಾಡುತ್ತಿದ್ದರು. ಬ್ಯುಂದಿಯಾ ಮನೆಯವರ ಜೊತೆಗೆ ಅರ್ಕಾದಿಯೋ ಮೊಸ್ಕೋತೆಗಿದ್ದ ಸಂಬಂಧ ಊರಿನಲ್ಲಿ ಅವನ ಅಧಿಕಾರವನ್ನು ಭದ್ರಗೊಳಿಸಿತು. ಆಗಾಗ ಆ ಪ್ರದೇಶದ ರಾಜಧಾನಿಗೆ ಹೋಗಿ ಬರುತ್ತಿದ್ದ ಅವನು, ಸರ್ಕಾರ ಸ್ಕೂಲೊಂದನ್ನು ಕಟ್ಟಿಸುವಂತೆ ಮಾಡಲು ಸಮರ್ಥನಾದ ಮತ್ತು ತನ್ನ ವಿದ್ಯಾಭ್ಯಾಸದಲ್ಲಿ ತನ್ನ ತಾತನಷ್ಟೇ ಉತ್ಸಾಹ ಹೊಂದಿದ್ದ ಅರ್ಕಾದಿಯೋನನ್ನು ಅದಕ್ಕೆ ಉಸ್ತುವಾರಿಯಾಗುವಂತೆ ಮಾಡಿದ. ರಾಷ್ಟ್ರೀಯ ಸ್ವಾತಂತ್ರೋತ್ಸವದ ಹೊತ್ತಿಗೆ ಬಹುತೇಕ ಮನೆಗಳಿಗೆ ನೀಲಿ ಬಣ್ಣ ಬಳಿಯುವಂತೆ ಮತ್ತೆ ಮತ್ತೆ ಹೇಳಿ ಪುಸಲಾಯಿಸಿ ಯಶಸ್ವಿಯಾದ. ಫಾದರ್ ನಿಕನೋರ್ ಒತ್ತಾಯಿಸಿದಂತೆ ಕತಾವುರೆಯ ಅಂಗಡಿಯನ್ನು ಹಿಂದುಗಡೆ ರಸ್ತೆಗೆ ಬದಲಾಯಿಸಿದ ಮತ್ತು ಊರಿನ ಮಧ್ಯದಲ್ಲಿ ಅವ್ಯವಹಾರಗಳನ್ನು ಮಾಡುತ್ತಿದ್ದ ಸಂಸ್ಥೆಗಳನ್ನು ಮುಚ್ಚಿಸಿದ. ಅದೊಂದು ಸಲ ಬಂದೂಕುಧಾರಿ ಪೋಲೀಸರ ಜೊತೆ ಬಂದು ಅವರಿಗೆ ವ್ಯವಸ್ಥೆಯ ಪಾಲನೆಯನ್ನು ಒಪ್ಪಿಸಿಕೊಟ್ಟ. ಆಗ ಊರಿನಲ್ಲಿ ಯಾರೂ ಬಂದೂಕುಧಾರಿಗಳು ಇರಬಾರದೆಂಬ ಒಪ್ಪಂದವನ್ನು ನೆನಪಿಸಿಕೊಳ್ಳಲಿಲ್ಲ. ಅವ್ರೇಲಿಯಾನೋ ತನ್ನ ಮಾವನ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡ. ‘ನೀನು ಅವನಷ್ಟೇ ದಡೂತಿಯಾಗ್ತೀಯ\’ ಎಂದು ಅವನ ಸ್ನೇಹಿತರು ಹೇಳುತ್ತಿದ್ದರು. ಅವನ ನಿಧಾನಗತಿಯ ಜೀವನ ಶೈಲಿಯಿಂದ ಗಲ್ಲದ ಮೇಲಿನ ಮೂಳೆಗಳು ಉಬ್ಬಿ ಕಣ್ಣಿಗೆ ಹೆಚ್ಚಗೆ ಹೊಳಪು ತಂದಿತಷ್ಟೇ ಹೊರತು ಮೈ ಭಾರ ಹೆಚ್ಚಿಸಲಿಲ್ಲ. ಅಥವಾ ಅವನ ಸ್ವಭಾವವನ್ನು ಬದಲಿಸಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಏಕಾಂತ ಧ್ಯಾನದಿಂದ ಅವನ ತುಟಿಯಂಚು ಮತ್ತು ನಿರ್ಧಾರಗಳು ಕಠಿಣವಾದವು. ಅವನು ಮತ್ತು ಅವನ ಹೆಂಡತಿ ಪರಸ್ಪರ ಸಂಸಾರಗಳಲ್ಲಿ ಎಷ್ಟೊಂದು ತೀವ್ರವಾದ ಆತ್ಮೀಯತೆ ಬೆಳೆಸಲು ಸಾಧ್ಯವಾಯಿತೆಂದರೆ ರೆಮಿದಿಯೋಸ್ ತನಗೆ ಮಗುವಾಗಲಿದೆ ಎಂದು ಹೇಳಿದಾಗ ರೆಬೇಕ ಮತ್ತು ಅಮರಾಂತ ಗಂಡು ಮಗುವಾದರೆ ನೀಲಿ ಬಣ್ಣದ ಅಥವಾ ಹೆಣ್ಣಾದರೆ ನೇರಳೆ ಬಣ್ಣದ ಉಣ್ಣೆ ಬಟ್ಟೆಗಳನ್ನು ಹೆಣೆಯುವುದಕ್ಕಾಗಿ ಪರಸ್ಪರ ಜಗಳವಾಡುವುದಿಲ್ಲವೆಂದು ಹೇಳಿದರು. ಕೆಲವು ವರ್ಷಗಳಾದ ನಂತರ ಅರ್ಕಾದಿಯೋ ಗುಂಡಿಕ್ಕುವ ತಂಡದ ಎದುರು ನಿಂತಾಗ ನೆನಪಿಸಿಕೊಂಡವರಲ್ಲಿ ಅವಳು ಕೊನೆಯ ವ್ಯಕ್ತಿಯಾಗಿದ್ದಳು.

ಉರ್ಸುಲಾ ಸೂತಕವನ್ನು ಘೋಷಿಸಿ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ತೀರ ಅಗತ್ಯವಾದ ಕಾರಣಗಳಿಗಲ್ಲದೆ ಯಾರೂ ಹೊರಗೆ ಹೋಗಿಬರದಂತೆ ಮಾಡಿದಳು. ಒಂದು ವರ್ಷದ ತನಕ ಯಾರೂ ಗಟ್ಟಿಯಾಗಿ ಮಾತಾಡಬಾರದೆಂದು ನಿರ್ಬಂಧಿಸಿ ನಿಬಂಧನೆ ಮಾಡಿ ಅವಳ ದೇಹವನ್ನು ಛಾಯಾಚಿತ್ರ ಉಪಕರಣವಿದ್ದಲ್ಲಿ ಕಪ್ಪು ರಿಬ್ಬನ್ ಕಟ್ಟಿದ ರೆಮಿದಿಯೋಸ್ ಭಾವಚಿತ್ರ ಮತ್ತು ಪಕ್ಕದಲ್ಲಿ ಸದಾ ಉರಿಯುವ ಎಣ್ಣೆಯ ದೀಪವನ್ನು ಇಟ್ಟಳು. ಆರದಂತೆ ನೋಡಿಕೊಳ್ಳುವ ಮುಂದಿನ ಜನಾಂಗದವರಿಗೆ ಬಿಳಿ ಬೂಟು ಸ್ಕರ್ಟ್ ತೊಟ್ಟುಕೊಂಡು ತಲೆಗೆ ಪಟ್ಟಿಯನ್ನು ಕಟ್ಟಿಕೊಂಡ ಹುಡುಗಿಯನ್ನು ನೋಡಿ ಅವಳಿಗೂ ಮತ್ತು ಅವಳ ಮುತ್ತಜ್ಜಿಗೂ ಹೋಲಿಕೆಯನ್ನು ಕಲ್ಪಿಸಿಕೊಳ್ಳಲು ಅಸಾಧ್ಯವಾಗುವಂತಿತ್ತು, ಅವ್ರೇಲಿಯಾನೋ ಹೊಸೆಯ ಯೋಗಕ್ಷೇಮವನ್ನು ಅಮರಾಂತ ನೋಡಿಕೊಳ್ಳುತ್ತಿದ್ದಳು. ಅವನು ತನ್ನ ಏಕಾಂತದಲ್ಲಿ ಭಾಗಿಯಾಗಲು ಮತ್ತು ರೆಬೇಕಳ ಕಾಫಿಯಲ್ಲಿ ವಿಷ ಬೆರೆಸುವ ಆಲೋಚನೆಯಿಂದ ಮುಕ್ತಳಾಗಲು ಅವನನ್ನು ಮಗನಾಗಿ ದತ್ತು ತೆಗೆದುಕೊಂಡಳು. ಸಾಯಂಕಾಲದ ಹೊತ್ತು ಹ್ಯಾಟ್‌ಗೆ ಒಂದು ಕಪ್ಪು ರಿಬ್ಬನ್ ಸುತ್ತಿಕೊಂಡು ಪಿಯತ್ರೋ ಕ್ರೆಪ್ಸಿ, ಕೈಗಳುದ್ದದ ತನಕ ಕಪ್ಪು ಡ್ರೆಸ್ ಹಾಕಿಕೊಂಡು ಒಳಗಿಂದೊಳಗೆ ರಕ್ತ ಕಾರಿ ಸಾಯುವಂತಿದ್ದ ರೆಬೇಕಳ ಮೌನ ಭೇಟಿಗೆ ಬರುತ್ತಿದ್ದ. ಮದುವೆಯ ದಿನ ಗೊತ್ತುಪಡಿಸಿಕೊಳ್ಳುವ ವಿಷಯವೇ ತೀರ ಅಸಂಬದ್ಧವೆಂದು ತೋರಿ, ಸಧ್ಯದ ಸಂಬಂಧವೇ ನಿರಂತರವೆನಿಸಿ, ಬಸವಳಿದ ಅವರ ಪ್ರೇಮದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಕೇವಲ ಹಿಂದಿನ ದಿನಗಳಲ್ಲಿ ಪರಸ್ಪರ ಮುತ್ತಿಕ್ಕಲು ದೀಪವಾರಿಸುವ ಉಪಾಯ ಹುಡುಕುತ್ತಿದ್ದ ಅದೇ ಪ್ರೇಮಿಗಳನ್ನು, ಸಾವಿನ ಇಷ್ಟಕ್ಕೆ ಬಿಟ್ಟು ಬಿಟ್ಟಿದ್ದ್ದರು. ಎಲ್ಲ ನೀತಿ ಮತ್ತು ಸಂಪೂರ್ಣ ನೈತಿಕ ನಿರ್ನಾಮದಿಂದ ರೆಬೇಕ ಮತ್ತೆ ಮಣ್ಣು ತಿನ್ನಲು ಪ್ರಾರಂಭಿಸಿದಳು.

ಇದ್ದಕ್ಕಿದ್ದಂತೆ ಸೂತಕದ ಅವಧಿ ಮುಂದುವರೆದು ಹೆಣಿಗೆ ದಿನಗಳು ಮತ್ತೆ ಪ್ರಾರಂಭವಾದಾಗ ರಣ ಬಿಸಿಲಿನ ಮಧ್ಯಾಹ್ನದ ಎರಡು ಗಂಟೆಗೆ ಮುತ್ತಿದ್ದ ನಿಶ್ಯಬ್ದವನ್ನು ಮುರಿದು ಯಾರೋ ಮುಂಬಾಗಿಲನ್ನು ತಳ್ಳಿದರು. ಅದರ ರಭಸ ಎಷ್ಟಿತ್ತೆಂದರೆ ಅಂಗಳದಲ್ಲಿ ಹೆಣೆಯುತ್ತ ಕುಳಿತಿದ್ದ ಅಮರಾಂತ ಮತ್ತು ಅವಳ ಗೆಳತಿಯರು, ಬೆಡ್‌ರೂಮಿನಲ್ಲಿ ಬೆರಳು ಚೀಪುತ್ತ ಕುಳಿತಿದ್ದ ರೆಬೇಕ, ಅಡುಗೆ ಮನೆಯಲ್ಲಿದ್ದ ಉರ್ಸುಲಾ, ವರ್ಕ್‌ಶಾಪ್‌ನಲ್ಲಿದ್ದ ಅವ್ರೇಲಿಯಾನೋ ಮತ್ತು ಒಂಟಿ ಮರದ ಕೆಳಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ, ಎಲ್ಲರಿಗೂ ಭೂಕಂಪದಿಂದ ಮನೆ ಬೀಳುತ್ತಿದೆ ಎನ್ನಿಸಿತು. ದೈತ್ಯಾಕಾರದ ಮನುಷ್ಯನೊಬ್ಬ ಬಂದಿದ್ದ. ಬಾಗಿಲಿನಿಂದ ಅವನ ಭುಜಗಳು ಹಾಯುವಂತಿರಲಿಲ್ಲ. ಅವನು ಕೋಣದಂಥ ಕತ್ತಿನಲ್ಲಿ ಒಂದು ಮೆಡಲ್ ಹಾಕಿಕೊಂಡಿದ್ದ. ಅವನ ಎದೆ ಮತ್ತು ಕೈಗಳು ಬಗೆ ಬಗೆಯ ಹಚ್ಚೆಯಿಂದ ತುಂಬಿಹೋಗಿತ್ತು. ಅವನ ಬಲಗೈಯಲ್ಲಿ ತಾಮ್ರದ ಕಡಗವಿತ್ತು, ಹೊರಗಿನ ಉಪ್ಪುಪ್ಪು ಗಾಳಿಯಿಂದ ಮೈ ಚರ್ಮ ಕಂದಾಗಿತ್ತು, ಚಿಕ್ಕದಾಗಿ ಕತ್ತರಿಸಿದ ಕೂದಲಿತ್ತು, ಕಬ್ಬಿಣದ ವಸಡುಗಳ ಮುಖದಲ್ಲಿ ವಿಷಾದದ ಕಿರುನಗೆ ಇತ್ತು. ಹಾಕಿಕೊಂಡಿದ್ದ ಬೆಲ್ಟ್, ಕುದುರೆಗೆ ಕಟ್ಟಿದ ಎರಡರಷ್ಟು ದಪ್ಪವಿತ್ತು ಮತ್ತು ಬೂಟುಗಳಿಗೆ ಕಬ್ಬಿಣ ಲಾಳಗಳಿದ್ದು ನಡೆದರೆ ನೆಲ ಅದುರುತ್ತಿತ್ತು. ಅವನು ಕೈಯಲ್ಲಿ ನೇತಾಡುವ ಬ್ಯಾಗ್‌ಗಳನ್ನು ಹಿಡಿದು ನಡುಮನೆ, ಹಜಾರ ದಾಟಿ ಗಿಡಗಳಿದ್ದ ಅಂಗಳಕ್ಕೆ ಹೋಗಿ ಅಮರಾಂತ ಮತ್ತು ಅವಳ ಗೆಳತಿಯರಿಗೆ ಸೂಜಿಗಳನ್ನು ಗಾಳಿಯಲ್ಲಿ ಹಿಡಿದಂತೆಯೇ ಮರಗಟ್ಟುವಂತೆ ಮಾಡಿದ. ಬೆಡ್‌ರೂಮಿನ ಪಕ್ಕದಲ್ಲಿ ಹಾದು ಹೋದವನನ್ನು ಕಂಡ ರೆಬೇಕಳಿಗೆ, “ಹಲ್ಲೊ” ಎಂದ. ತೀರ ಗಮನವಿಟ್ಟು ಬೆಳ್ಳಿಯ ಕೆಲಸದಲ್ಲಿ ತೊಡಗಿದ್ದ ಅವ್ರೇಲಿಯಾನೋಗೆ, “ಹಲ್ಲೊ” ಎಂದ. ಅವನು ಎಲ್ಲೂ ನಿಲ್ಲಲಿಲ್ಲ. ಪ್ರಂಪಚದ ಆ ಕಡೆಯಿಂದ ಶುರುವಾದ ಅವನ ನಡೆದಾಟ, ನೇರವಾಗಿ ಅಡುಗೆ ಮನೆಗೆ ಹೋಗಿ ನಿಂತಾಗ ಕೊನೆಯಾಯಿತು. ಅವನು, “ಹಲ್ಲೊ” ಎಂದ. ಬಿಟ್ಟ ಬಾಯಿ ಬಿಟ್ಟ ಹಾಗೆ ನಿಂತುಕೊಂಡ ಉರ್ಸುಲಾ ಅವನ ಕಡೆ ನೋಡಿ, ಅಳು ಉಕ್ಕಿ ಅವನ ಕುತ್ತಿಗೆಯ ಸುತ್ತ ಕೈ ಹಾಕಿ ಸಂತೋಷದಿಂದ ಅತ್ತಳು. ಅವನು ಹೊಸೆ ಅರ್ಕಾದಿಯೋ. ಅಲ್ಲಿಂದ ಅವನು ಹೋದಾಗ ಎಷ್ಟು ಬಡವನಾಗಿದ್ದನೋ ವಾಪಸು ಬಂದಾಗಲೂ ಅಷ್ಟೇ ಬಡವನಾಗಿದ್ದರಿಂದ ಅವನ ಕುದುರೆ ಬಾಡಿಗೆ ಎರಡು ಪೇಸೋವನ್ನು ಅವಳು ಕೊಡಬೇಕಾಯಿತು. ಅವನು ಆಡಿದ ಸ್ಪ್ಯಾನಿಷ್ ಭಾಷೆ ನಾವಿಕರ ಧಾಟಿಯದಾಗಿತ್ತು. “ಎಲ್ಲಿಗೆ ಹೋಗಿದ್ದಿ” ಎಂದು ಅವರು ಕೇಳಿದ್ದಕ್ಕೆ, “ಎಲ್ಲೋ ದೂರ” ಎಂದು ಉತ್ತರಿಸಿದ. ಅವರು ತೋರಿಸಿದ ಕಡೆ ಹಾಸಿಗೆ ಉರುಳಿಸಿ ಮೂರು ದಿನ ಮಲಗಿದ. ಅವನು ಎದ್ದ ಮೇಲೆ ಹದಿನಾರು ಹಸಿ ಮೊಟ್ಟೆಗಳನ್ನು ತಿಂದು ನೇರವಾಗಿ ಕತಾವುರೆಯ ಅಂಗಡಿಗೆ ಹೋದಾಗ ಅಲ್ಲಿ ಅವನ ಅಗಾಧ ಆಕಾರ ಹೆಂಗಸರಲ್ಲಿ ಕುತೂಹಲದಿಂದ ಕೂಡಿದ ಭಯ ಹುಟ್ಟಿಸಿತು. ಅವನಿಗೆ ಹಾಡು ಹಾಕಲು ಹೇಳಿ ಎಲ್ಲರಿಗೂ ಮದ್ಯ ಕೊಡಿಸಿದ. ಐದು ಜನರ ಜೊತೆ ಒಟ್ಟಿಗೆ ಕುಸ್ತಿ ಮಾಡುತ್ತೇನೆಂದು ಹೇಳಿದಾಗ ಅವರು, “ಹಾಗೆ ಮಾಡುವಂತಿಲ್ಲ”ಎಂದರು. ಅವನ ಕೈಯನ್ನೂ ಜರುಗಿಸಲು ಆಗುವುದಿಲ್ಲವೆಂದು ಅವರಿಗೆ ಖಾತ್ರಿಯಾಗಿತ್ತು. ಶಕ್ತಿ ಮತ್ತು ಪವಾಡಗಳ ಬಗ್ಗೆ ನಂಬಿಕೆ ಇರದ ಕತಾವುರೆ ಅವನಿಗೆ ತನ್ನ ಕೌಂಟರನ್ನು ಜರುಗಿಸಲು ಸಾಧ್ಯವಿಲ್ಲ ಎಂದು ಹನ್ನೆರಡು ಪೇಸೋ ಬೆಟ್ ಕಟ್ಟಿದ. ಹೊಸೆ ಆರ್ಕೆಡೊ ಅದನ್ನು ಅದರ ಸ್ಥಳದಿಂದ ಕಿತ್ತು ತಲೆಯ ಮೇಲಿಟ್ಟುಕೊಂಡು ಬಂದು ರಸ್ತೆಯಲ್ಲಿಟ್ಟ. ಅದನ್ನು ವಾಪಸು ತರುವುದಕ್ಕೆ ಹನ್ನೊಂದು ಜನರು ಬೇಕಾಯಿತು. ಅವನು ಪಾರ್ಟಿಯ ಭರದಲ್ಲಿ ನೀಲಿ ಮತ್ತು ಕೆಂಪು ಬಣ್ಣದಲ್ಲಿ ಅನೇಕ ಭಾಷೆಗಳಲ್ಲಿ ಬರೆದಿದ್ದ ಪೂರ್ತಿ ಹಚ್ಚೆಗಳಿದ್ದ ತನ್ನ ಮರ್ಮಾಂಗವನ್ನು ತೋರಿಸಿದ. ಅವನನ್ನು ಮುತ್ತಿ ಜಮಾಯಿಸಿದ ಹೆಂಗಸರಿಗೆ, “ಯಾರು ಎಲ್ಲರಿಗಿಂತ ಹೆಚ್ಚು ಕೊಡ್ತೀರಿ” ಎಂದು ಕೇಳಿದ. ಹೆಚ್ಚು ಹಣವಿದ್ದವಳೊಬ್ಬಳು ಇಪ್ಪತ್ತು ಪೇಸೋ ಕೊಡುತ್ತೇನೆಂದಳು. ಅನಂತರ ಅವನು ಒಂದು ಸಲಕ್ಕೆ ಹತ್ತು ಪೇಸೋವಂತೆ ಲಾಟರಿ ಹಾಕಲು ಸೂಚಿಸಿದ. ಏಕೆಂದರೆ ತುಂಬ ಬಯಸುವ ಹೆಂಗಸೊಬ್ಬಳು ಒಂದು ರಾತ್ರಿಗೆ ಎಂಟು ಪೇಸೋ ಪಡೆಯುತ್ತಿದ್ದಳು. ಆದರೆ ಅವರೆಲ್ಲರಿಗೆ ಅದು ಒಪ್ಪಿಗೆಯಾಯಿತು. ಹದಿನಾಲ್ಕು ಕಾಗದದ ಚೀಟಿಯಲ್ಲಿ ಅವರ ಹೆಸರುಗಳನ್ನು ಬರೆದು ಒಂದು ಹ್ಯಾಟ್‌ನಲ್ಲಿ ಹಾಕಿದರು. ಮತ್ತು ಒಬ್ಬೊಬ್ಬರೂ ಒಂದೊಂದು ಚೀಟಿ ತೆಗೆದರು. ಕೊನೆಯ ಎರಡು ಚೀಟಿಗಳು ಉಳಿದಾಗ ಅವು ಯಾರವೆಂದು ತಿಳಿಯಿತು.
“ತಲಾ ಐದು ಪೇಸೋ ಹೆಚ್ಚಿಗೆ ಕೊಡಿ. ನಂಗೆ ಇಬ್ಬರೂ ಬೇಕು” ಎಂದ ಹೊಸೆ ಅರ್ಕಾದಿಯೋ.

ಅವನು ಜೀವನ ಮಾಡುತ್ತಿದ್ದದ್ದು ಅದೇ ರೀತಿ. ಅವನು ಪ್ರಪಂಚವನ್ನು ಅರವತ್ತ್ಯೆದು ಸಲ ಸುತ್ತಿ, ದೇಶವಿರದ ವ್ಯಕ್ತಿ ಎಂದು ನಾವಿಕರ ಗುಂಪಿನ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದ. ಆ ರಾತ್ರಿ ಅವನ ಜೊತೆ ಮಲಗಿದ ಹೆಂಗಸರು, ಹಿಂದೆ ಮುಂದೆ, ಕಾಲು ತುದಿಯಿಂದ ಕುತ್ತಿಗೆಯ ತನಕ ಒಂದಿಷ್ಟೂ ಬಿಡದೆ ಮೈಯೆಲ್ಲ ಹಚ್ಚೆ ಹುಯಿಸಿಕೊಂಡಿದ್ದ ಅವನನ್ನು, ಇತರರು ನೋಡಲಿ ಎಂದು ಬೆತ್ತಲೆಯಾಗಿ ಹಜಾರಕ್ಕೆ ಕರೆದುಕೊಂಡು ಬಂದರು. ಅವನಿಗೆ ಮನೆಯವರ ಜೊತೆ ಸೇರಿ ಒಬ್ಬನಾಗುವುದರಲ್ಲಿ ಜಯ ಸಿಕ್ಕಲಿಲ್ಲ. ಇಡೀ ದಿನ ಮಲಗಿ ರಾತ್ರಿ ಕೆಂಪು ದೀಪದ ಸ್ಥಳದಲ್ಲಿ ತನ್ನ ಶಕ್ತಿಯ ಬಗ್ಗೆ ಬಾಜಿ ಕಟ್ಟುತ್ತಿದ್ದ. ಅಪರೂಪದ ಸಂದರ್ಭಗಳಲ್ಲಿ ಉರ್ಸುಲಾ ಅವನನ್ನು ಟೇಬಲ್ ಬಳಿ ಕುಳಿತುಕೊಳ್ಳುವಂತೆ ಮಾಡಿದಾU, ಅವನು ಮುಖ್ಯವಾಗಿ ದೂರದ ದೇಶದಲ್ಲಿ ತನ್ನ ಸಾಹಸವನ್ನು ಕುರಿತು ಹೇಳುವಾಗ, ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದ. ಅವನಿದ್ದ ನೌಕೆ ಒಂದು ಸಲ ಅಪಘಾತಕ್ಕೆ ಒಳಗಾಗಿತ್ತು. ಎರಡು ವಾರ ಜಪಾನ್ ಸಮುದ್ರದಲ್ಲಿ ಎಲ್ಲೆಂದರಲ್ಲಿ ಹೋಗಿ ಸೂರ್ಯನ ತಾಪಕ್ಕೆ ಸಿಕ್ಕು ಉಪ್ಪುಪ್ಪಾಗಿ ಬೆಂದು ಹೋದ ಜೊತೆಗಾರರ ದೇಹವನ್ನೇ ಅವನು ತಿನ್ನುತ್ತಿದ್ದಾಗ ಸಿಹಿ ಬೆರೆತ ವಿಚಿತ್ರ ರುಚಿ ಕಂಡಿತ್ತು. ನಡುಮಧ್ಯಾಹ್ನದ ಪ್ರಕಾಶದಲ್ಲಿ ಒಂದು ದಿನ ಬಂಗಾಳ ಕೊಲ್ಲಿಯಲ್ಲಿ ಕೊಂದ ಮೊಸಳೆಯ ಹೊಟ್ಟೆಯಲ್ಲಿ ಹೆಲ್‌ಮೆಟ್, ಮನುಷ್ಯನೊಬ್ಬನ ಆಯುಧ, ಬಕಲ್‌ಗಳು ಸಿಕ್ಕಿದ್ದವು. ಕ್ಯಾರಿಬಿಯನ್‌ನಲ್ಲಿ ಬಿರುಗಾಳಿಗೆ ಸಿಕ್ಕು ಚಿಂದಿಯಾದ ಹಾಯಿಗಳು, ಸಮುದ್ರ ಜಂತುಗಳು ತಿಂದಿದ್ದ ಪಟಸ್ತಂಭವಿತ್ತು. ಜೊತೆಗೆ ಇನ್ನೂ ಗಾಡೆಲೋಪ್‌ನ ದಾರಿಯನ್ನು ಹುಡುಕುತ್ತಿದ್ದ ವಿಕ್ಟರ್ ಹ್ಯೂಸ್‌ನ ನೌಕೆಯ ನಕಲಿನ ದೆವ್ವದಾಕಾರವನ್ನು ನೋಡಿದ್ದ. ಹೊಸೆ ಅರ್ಕಾದಿಯೋ ಬರೆಯದೇ ಇದ್ದ, ಅವನ ಸಾಹಸ ಮತ್ತು ದುಸ್ಸಾಹಸಗಳ ಕಾಗದಗಳನ್ನು ಓದುತ್ತಿರುವರೇನೋ ಎನ್ನುವಂತೆ, ಉರ್ಸುಲಾ ಅವುಗಳನ್ನು ಹೇಳಿಕೊಂಡು ಟೇಬಲ್‌ನಲ್ಲಿ ಕುಳಿತು ಅಳುತ್ತಿದ್ದಳು. “ಮಗನೆ, ನಿನಗಾಗಿ ಇಲ್ಲಿ ಮನೆಯಲ್ಲಿ ಅಷ್ಟೊಂದಿದೆ… ಮಿಕ್ಕ ಹಂದಿಗಳಿಗೆ ಹಾಕುವಷ್ಟು” ಎಂದು ಬಿಕ್ಕುತ್ತಿದ್ದಳು. ಆದರೆ ಜಿಪ್ಸಿಗಳು ಕರೆದುಕೊಂಡು ಹೋದ ಅದೇ ಹುಡುಗ ಈಗ ಊಟಕ್ಕೆ ಅಧ ಹಂದಿ ತಿನ್ನುವ ಹಾಗಾಗಿದ್ದಾನೆ ಮತ್ತು ಅವನು ಹೂಸಿದರೆ ಹೂಗಳು ಅದುರುತ್ತವೆಂದು ಅವಳಿಗೆ ತಿಳಿದಿರಲಿಲ್ಲ. ಸಂಸಾರದ ಇತರರಿಗೂ ಹೆಚ್ಚು ಕಡಿಮೆ ಹೀಗೆಯೇ ಆಯಿತು. ಅಮರಾಂತ ಅವನ ಲೈಂಗಿಕ ದಾಹದ ಬಗ್ಗೆ ತನ್ನ ಜಿಗುಪ್ಸೆಯನ್ನು ಮುಚ್ಚಿಡಲಾಗಲಿಲ್ಲ. ಪರಸ್ಪರ ಸಂಬಂಧದ ಮೂಲವನ್ನರಿಯದ ಅವರ ವಿಶ್ವಾಸವನ್ನು ಪಡೆಯುವ ಅರ್ಕಾದಿಯೋ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿರಲಿಲ್ಲ. ಬಾಲ್ಯದಲ್ಲಿ ತಾವಿಬ್ಬರೂ ಒಟ್ಟಿಗೆ ರೂಮಿನಲ್ಲಿ ಮಲಗುತ್ತಿದ್ದ ದಿನಗಳನ್ನು ಮರುಜೀವಿಸಲು ಅವೆಲಿಯಾನೋ ಪ್ರಯತ್ನಿಸಿz. ಆದರೆ ಸಮುದ್ರ ಸಂಬಂಧಿತ ಜೀವನದಲ್ಲಿ ನೆನಪಿಟ್ಟುಕೊಳ್ಳಬೇಕಾದ ಲೆಕ್ಕವಿಲ್ಲದಷ್ಟು ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಒತ್ತಡದಿಂದ ತುಂಬಿ ಹೋಗಿ ಅರ್ಕಾದಿಯೋ ಅವನೆಲ್ಲ ಮರೆತು ಬಿಟ್ಟಿದ್ದ. ಅದರ ಮೊದಲ ಪ್ರಭಾವಕ್ಕೆ ಒಳಗಾದವಳೆಂದರೆ ರೆಬೇಕ. ಅವನು ತನ್ನ ಬೆಡ್ ರೂಮು ದಾಟಿ ಹೋದ ದಿನ ಅವನ ಗೊರಕೆ ಇಡೀ ಮನೆಯಲ್ಲಿ ಕೇಳುವಂತಿದ್ದು ಪಿಯತ್ರೋ ಕೆಪ್ಸಿ ಕೇವಲ ಸೊಗಸುಗಾರನೆಂದು ಭಾವಿಸಿದಳು. ಅವಳು ಯಾವುದೇ ಕಾರಣದಿಂದ ಅವನ ಹತ್ತಿರ ಹೋಗಲು ಪ್ರಯತ್ನಿಸುತ್ತಿದ್ದಳು. ಯಾವುದೋ ಸಂದರ್ಭದಲ್ಲಿ ಅವಳ ದೇಹದ ಕಡೆ ನಾಚಿಕೆಯಿಲ್ಲದೆ ನೋಡಿ, “ತಂಗಿ, ನೀನೂ ಕೂಡ ಹೆಣ್ಣು” ಎಂದ. ರೆಬೇಕಳಿಗೆ ಮೈಮೇಲಿನ ಸ್ತಿಮಿತ ತಪ್ಪಿಹೋಯಿತು. ಅವಳು ಮೊದಲಿನ ರೀತಿಯಲ್ಲೇ ಮಣ್ಣು ಮತ್ತು ಗೋ;ಡೆಯ ಹೆಕ್ಕಳವನ್ನು ತಿನ್ನಲು ಪ್ರಾರಂಭಿಸಿದಳು. ಜೊತೆಗೆ ಅದೆಷ್ಟು ಆತಂಕದಿಂದ ಬೆರಳು ಚೀಪುತ್ತಿದ್ದಳೆಂದರೆ, ಹೆಬ್ಬೆಟ್ಟು ಮರಗಟ್ಟಿ ಹೋಯಿತು. ಅವಳು ಹಸಿರು ಬಣ್ಣದಂಥದನ್ನು ವಾಂತಿ ಮಾಡಿದ್ದರಲ್ಲಿ ಸತ್ತ ಜಿಗಣೆಗಳಿದ್ದವು. ರಾತ್ರಿಯಲ್ಲಿ ಎಚ್ಚರದಿಂದಿದ್ದು ಜ್ವರದಿಂದ ನಡುಗುತ್ತ, ತೀರ ಉದ್ರೇಕಗೊಳ್ಳದಂತೆ ತನ್ನೊಳಗೇ ಹೊಡೆದಾಡುತ್ತ, ಬೆಳಗಿನ ಹೊತ್ತು ಹೊಸೆ ಅರ್ಕಾದಿಯೋ ಇಡೀ ಮನೆ ಅದುರುವಂತೆ ಬಂದು ಮನೆಯಲ್ಲಿ ಮಲಗುವ ತನಕ ಕಳೆಯುತ್ತಿದ್ದಳು. ಒಂದು ಮಧ್ಯಾಹ್ನ ಎಲ್ಲರೂ ಸಣ್ಣ ನಿದ್ದೆಯಲ್ಲಿದ್ದಾಗ ತಡೆಯಲಾಗದೆ ಅವನ ಬೆಡ್‌ರೂಮಿಗೆ ಹೋದಳು. ಅವನು ತೊಲೆಗೆ ನೇತುಹಾಕಿದ್ದ ಹಡಗಿನ ಮೂಲೆಗೆ ತಗುಲಿ ಹಾಕುವುದನ್ನು ಹಾಸಿಗೆ ಮಾಡಿ ಅದರ ಮೇಲೆ ಸಣ್ಣ ಚಡ್ಡಿಯಲ್ಲಿ ಮೈ ಚಾಚಿದ್ದ. ಅವನ ಅಗಾಧವಾದ ಬೆತ್ತಲೆಯ ಆಕಾರವನ್ನು ನೋಡಿ ವಾಪಸು ಹೋಗುವ ಮನಸ್ಸಾಯಿತು. ಆದರೆ, “ನೀವಿದೀರಿ ಅಂತ ಗೊತ್ತಿರ್‍ಲಿಲ” ಎಂದು ಸಣ್ಣಗೆ ಯಾರೂ ಎದ್ದೇಳದ ಹಾಗೆ ಹೇಳಿದಳು. “ಇಲ್ಲಿ ಬನ್ನಿ” ಎಂದ. ಅವಳು ಹಾಗೆಯೇ ಮಾಡಿದಳು. ಹೊಸೆ ಅರ್ಕಾದಿಯೋ ಬೆರಳ ತುದಿಯಿಂದ ಅವಳ ಮೊಳಕಾಲು, ಮೀನಕಂಡ, ಹಾಗೂ ತೊಡೆಯನ್ನು ತಟ್ಟುತ್ತ, “ಚಿಕ್ಕ ತಂಗಿ, ಚಿಕ್ಕ ತಂಗಿ” ಎಂದು ಮುಲುಗುಟ್ಟುತ್ತಿರುವಾಗ ಅವಳು ಬೆವರಿನ ಕೊರೆತದಿಂದ, ಕರುಳುಗಳಲ್ಲೇನೋ ಗಂಟು ಹಾಕಿದಂತಾಗಿ, ಹಾಸಿಗೆ ಹತ್ತಿರ ನಿಂತಳು. ಬಿರುಗಾಳಿಯಂಥ ಶಕ್ತಿಯೊಂದು ತನ್ನ ಸೊಂಟವನ್ನೆತ್ತಿ ಬಗೆದು ಒಳಗಿನದೆಲ್ಲವನ್ನೂ ಸೂರೆ ಹೊಡೆದು, ಹಕ್ಕಿಯಂತೆ ಜಾಡಾಯಿಸಿದಾಗ, ಸಾಯುವುದನ್ನು ತಪ್ಪಿಸಿಕೊಳ್ಳಲು ಅವಳು ಅತೀವ ಶ್ರಮ ಪಡಬೇಕಾಯಿತು. ಬ್ಲಾಟಿಂಗ್ ಪೇಪರಿನಂತೆ ಚಿಮ್ಮಿದ ರಕ್ತವನ್ನು ಹೀರಿಕೊಂಡ ಆವಿ ಹೊಮ್ಮಿಸುತ್ತಿದ್ದ ಹಾಸಿಗೆಯಲ್ಲಿದ್ದ ಅವಳು ತಾನು ತಡೆದುಕೊಳ್ಳಲಾಗದಂಥ ನೋವಿನ, ವಿವರಿಸಲಾಗದ ಸಂತೋಷದಲ್ಲಿ ಕೊಚ್ಚಿ ಹೋಗುವ ಮುಂಚೆ ಜನ್ಮ ತಳೆದದ್ದಕ್ಕಾಗಿ ದೇವರಿಗೆ ವಂದಿಸಿದಳು.

ಮೂರು ದಿನಗಳ ನಂತರ ಐದು ಗಂಟೆಯ ಪ್ರಾರ್ಥನೆಯ ಸಮಯದಲ್ಲಿ ಅವರು ಮದುವೆಯಾದರು. ಹಿಂದಿನ ದಿನ ಹೊಸೆ ಅರ್ಕಾದಿಯೋ ಪಿಯತ್ರೋ ಕ್ರೆಪ್ಸಿಯ ಅಂಗಡಿಗೆ ಹೋಗಿದ್ದ. ಸಂಗೀತ ವಾದ್ಯದ ಪಾಠ ಮಾಡುತ್ತಿದ್ದ ಅವನು ಪಕ್ಕಕ್ಕೆ ಕರೆದು ಮಾತನಾಡಿಸಲಿಲ್ಲ. “ನಾನು ರೆಬೇಕಳನ್ನು ಮದುವೆ ಆಗ್ತಿದೀನಿ” ಎಂದು ಅವನಿಗೆ ಹೇಳಿದ. ಪಿಯತ್ರೋ ಕ್ರೆಪ್ಸಿ ಬಿಳುಚಿಕೊಂಡು ವಾದ್ಯವನ್ನು ವಿದ್ಯಾರ್ಥಿಯೊಬ್ಬನಿಗೆ ಕೊಟ್ಟು ತರಗತಿಯನ್ನು ಮುಕ್ತಾಯ ಮಾಡಿz. ಅನಂತರ ಅವರು ಸಂಗೀತ ವಾದ್ಯ ಮತ್ತು ಯಾಂತ್ರಿಕ ಬೊಂಬೆಗಳಿದ್ದ ರೂಮಿನಲ್ಲಿ ಇಬ್ಬರೇ ಇದ್ದಾಗ ಪಿಯತ್ರೋ ಕ್ರೆಪ್ಸಿ ಹೇಳಿದ:
“ಅವಳು ನಿನ್ನ ತಂಗಿ”
“ನಂಗೆ ಅದು ಬೇಕಿಲ್ಲ”
ಪಿಯತ್ರೋ ಕ್ರೆಪ್ಸಿ ಸುವಾಸನೆ ಬೀರುತ್ತಿದ್ದ ಕರ್ಚೀಫ್‌ನಿಂದ ಹುಬ್ಬನ್ನು ಒರೆಸಿಕೊಂಡ.
“ಅದು ಸಹಜವಲ್ಲ” ಎಂದು ಮುಂದುವರೆಸಿ,” ಅಲ್ದೆ ಅದು ಕಾನೂನಿಗೆ ವಿರುದ್ಧವಾದ್ದು.”
ಹೊಸೆ ಅರ್ಕಾದಿಯೋಗೆ ವಾಗ್ವಾದಕ್ಕಿಂತ ಹೆಚ್ಚಾಗಿ ಪಿಯತ್ರೋ ಕ್ರೆಪ್ಸಿ ಬಿಳುಚಿಕೊಂಡಿದ್ದರಿಂದ ಅಸಹನೆಯುಂಟಾಯಿತು.
“ಅದನ್ನೆಲ್ಲ ಬಿಟ್ಟು ಹಾಕಿ… ರೆಬೇಕಳನ್ನು ಏನೂ ಕೇಳ್ಬೇಡಿ ಅಂತ ಹೇಳೋದಕ್ಕೆ ಬಂದಿದೀನಿ” ಎಂದ.
ಪಿಯತ್ರೋ ಕ್ರೆಪ್ಸಿಯ ಕಣ್ಣುಗಳು ಹನಿಗೂಡಿದ್ದು ಕಂಡ ಅವನ ಗಡಸು ಧ್ವನಿ ಮೆತ್ತಗಾಯಿತು.
“ಇಲ್ನೋಡಿ. ನಿಮ್ಗೆ ಆ ಮನೆಯವ್ರು ಇಷ್ಟವಿರೋದಾದ್ರೆ ಅಮರಾಂತ ಇದಾಳೆ” ಎಂದು ಬೇರೆಯದೇ ಧ್ವನಿಯಲ್ಲಿ ಹೇಳಿದ.

ಫಾದರ್ ನಿಕನೋರ್ ಭಾನುವಾರದ ತನ್ನ ಉಪದೇಶದಲ್ಲಿ ಹೊಸೆ ಅರ್ಕಾದಿಯೋ ಮತ್ತು ರೆಬೇಕ ಅಣ್ಣ ತಂಗಿಯರಲ್ಲವೆಂದು ಹೇಳಿದರು. ಅಂಥ ಅವಮರ್ಯಾದೆಯನ್ನು ಎಂದೂ ಕ್ಷಮಿಸದ ಉರ್ಸುಲಾ ಚಚ್ನಿಂದ ಅವರು ಬಂದ ಮೇಲೆ ಮನೆಯೊಳಗೆ ಕಾಲಿಡದಂತೆ ಮಾಡಿದಳು. ಅವಳ ಮಟ್ಟಿಗೆ ಅವರು ಸತ್ತ ಹಾU. ಅವರು ಸ್ಮಶಾನದಿಂದ ಕೊಂಚ ದೂರದಲ್ಲಿ ಬಾಡಿಗೆಗೆ ತೆಗೆದುಕೊಂಡ ಮನೆಯಲ್ಲಿ ಹೊಸೆ ಅರ್ಕಾದಿಯೋನ ಹಾಸಿಗೆ ಬಿಟ್ಟರೆ ಬೇರೆ ಯಾವ ಪೀಠೋಪಕರಣಗಳೂ ಇರಲಿಲ್ಲ. ಮದುವೆಯ ದಿನ ರಾತ್ರಿ ರೆಬೇಕಳ ಚಪ್ಪಲಿಯಲ್ಲಿದ್ದ ಚೇಳು ಅವಳ ಕಾಲನ್ನು ಕಚ್ಚಿತ್ತು. ಅದರಿಂದ ಅವಳ ಮಾತು ಉಡುಗಿತ್ತು. ಆದರೆ ಇಡೀ ರಾತ್ರಿಯ ಕಾಮಕೇಳಿಯನ್ನು ಅದು ನಿಲ್ಲಿಸಲಿಲ್ಲ. ಒಂದೇ ರಾತ್ರಿ ಎಂಟು ಸಲ ಕೂಗಿಕೊಂಡಿದ್ದಕ್ಕಾಗಿ ಊರಿನವರೆಲ್ಲ ಎಚ್ಚರವಾಗಿ ಅಕ್ಕಪಕ್ಕದವರು ಬೆರಗಾಗಿದ್ದರು. ಮತ್ತೆ ಮಾರನೆ ದಿನ ಮಧ್ಯಾಹ್ನದ ಮಲಗುವ ಸಮಯದಲ್ಲೂ ಮೂರು ಸಲ ಹಾಗೆಯೇ ಆಗಿದ್ದಕ್ಕೆ, ಅಷ್ಟೊಂದು ಪ್ರೇಮಾವೇಶ ಸತ್ತವರ ಶಾಂತಿಯನ್ನು ಕಲಕದಿರಲಿ ಎಂದು ಪ್ರಾರ್ಥಿಸಿದರು.

ಅವ್ರೇಲಿಯಾನೋ ಮಾತ್ರ ಅವರ ಬಗ್ಗೆ ಆಸ್ಥೆ ವಹಿಸಿ, ಅವರಿಗೆ ಕೆಲವು ಪೀಠೋಪಕರಣಗಳನ್ನು ತಂದು ಕೊಟ್ಟಿದ್ದಲ್ಲದೆ, ಹೊಸೆ ಅರ್ಕಾದಿಯೋಗೆ ವಾಸ್ತವದ ಆರಿವಾಗಿ ಮನೆಯಂಗಳದ ಪಕ್ಕದ ಯಾರಿಗೂ ಸೇರಿರದ ಸ್ಥಳದಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ತನಕ ಸಹಾಯವಾಗಲೆಂದು ಒಂದಿಷ್ಟು ಹಣ ಕೊಟ್ಟ. ಆದರೆ ಅಮರಾಂತಳಿಗೆ ತಾನು ಕನಸು ಕಂಡಿರದಂಥ ಸಮಾಧಾನ ದೊರಕಿದರೂ ರೆಬೇಕಳ ಮೇಲಿನ ದ್ವೇಷ ಕಡಿಮೆಯಾಗಲಿಲ್ಲ. ಪಿಯತ್ರೋ ಕ್ರೆಪ್ಸಿ ತನಗುಂಟಾದ ಅವಮಾನವನ್ನು ಹೇಗೆ ನಿವಾರಿಸಬೇಕೆಂದು ತಿಳಿಯದೆ, ತನ್ನ ಸೋಲನ್ನು ಮರೆತು ಶಾಂತಚಿತ್ತನಾಗಿ, ಉರ್ಸುಲಾ ಆಸಕ್ತಿವಹಿಸಿದ್ದರಿಂದ ಪ್ರತಿ ಮಂಗಳವಾರ ರಾತ್ರಿ ಅವರ ಮನೆಯಲ್ಲಿ ಊಟ ಮಾಡುವುದನ್ನು ಮುಂದುವರಿಸಿದ. ಅವರ ಮನೆಯ ಗೌರವ ಸೂಚಕವಾಗಿ ಅವನಿನ್ನೂ ಹ್ಯಾಟ್‌ಗೆ ಕಪ್ಪನೆ ರಿಬ್ಬನ್ ಕಟ್ಟಿಕೊಂಡಿರುತ್ತಿದ್ದ. ಅವನು ಉರ್ಸುಲಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಲು ಪೋರ್ಚುಗೀಸ್‌ನ ಪ್ರಖ್ಯಾತ ಶಿಲೆ, ಟರ್ಕಿಯ ಮುರಬ್ಬ ಹಾಗೂ ಯಾವುದೋ ಸಂದರ್ಭದಲ್ಲಿ ಮನೀಲಾದ ಶಾಲ್ ಮುಂತಾದ ಬೆಲೆ ಬಾಳುವ ಉಡುಗೊರೆಗಳನ್ನು ಕೊಟ್ಟು ಸಂತೋಷಪಡುತ್ತಿದ್ದ. ಅಮರಾಂತ ಅವನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಅವಳಿಗೆ ಅವನ ಅಗತ್ಯಗಳು ಮುಂಚೆಯೇ ತಿಳಿದಿರುತ್ತಿತ್ತು. ಅಂಗಿಯ ತೋಳಿನಲ್ಲಿನ ದಾರಗಳನ್ನು ಎಳೆದು ತೆಗೆಯುತ್ತಿದ್ದಳು. ಅವನ ಇನಿಷಿಯಲ್ಸ್‌ಗಳನ್ನು ಹಾಕಿ ಒಂದು ಡಜನ್ ಕರ್ಚೀಫ್‌ಗೆ ಕಸೂತಿ ಹಾಕುತ್ತ ಹಜಾರದಲ್ಲಿ ಕುಳಿತಾಗ ಅವಳ ಜೊತೆಗೆ ಇರುತ್ತಿದ್ದ. ಅವಳೊಬ್ಬಳು ಹುಡುಗಿ ಎಂದುಕೊಂಡಿದ್ದ ಪಿಯತ್ರೋ ಕ್ರೆಪ್ಸಿಗೆ ಅವಳ ಬಗ್ಗೆ ತಿಳುವಳಿಕೆ ಉಂಟಾಯಿತು. ಅವಳ ನಡತೆಯಲ್ಲಿ ಅಷ್ಟು ನಯವಂತಿಕೆ ಕಾಣದಿದ್ದರೂ ಅವಳಿಗೆ ವಸ್ತುಗಳ ಬಗ್ಗೆ ಒಳ್ಳೆಯ ಅಭಿರುಚಿಯಿತ್ತು ಅಲ್ಲದೆ ನಿಗೂಢವಾದ ಮಾಧುರ್ಯವಿತ್ತು. ಪಿಯತ್ರೋ ಕ್ರೆಪ್ಸಿ ಒಂದು ಮಂಗಳವಾರ ಯಾರಿಗೂ ಅನುಮಾನ ಬಾರದಿರುವಂತೆ, ತನ್ನನ್ನು ಮದುವೆಯಾಗೆಂದು ಅವಳನ್ನು ಕೇಳಿದ. ಇದು ಈಗಲ್ಲದಿದ್ದರೆ, ಸಧ್ಯದಲ್ಲಿ ಆಗಲಿ ಎಂದ. ಅವಳು ಮಾಡುತ್ತಿರುವ ಕೆಲಸವನ್ನು ನಿಲ್ಲಿಸಲಿಲ್ಲ. ಲಜ್ಜೆಯಿಂದ ಕಿವಿ ಕೆಂಪಾಗಿ, ಅದು ಕಡಿಮೆಯಾಗುವ ತನಕ ಸುಮ್ಮನಿದ್ದು, ಅನಂತರ ಪ್ರಬುದ್ಧತೆ ಪಡೆದ ಧ್ವನಿಯಿಂದ, “ಓಹೋ ಅದಕ್ಕೇನು ಪಿಯತ್ರೋ ಕ್ರೆಪ್ಸಿ….. ಆದರೆ ನಾವಿಬ್ರೂ ಒಬ್ಬರನ್ನೊಬ್ಬರು ಹೆಚ್ಚು ಅರ್ಥಮಾಡಿಕೊಂಡ ಮೇಲೆ…. ಅವಸರದ ಕೆಲಸಗಳು ಒಳ್ಳೇದಲ್ಲ” ಎಂದು ಹೇಳಿದಳು.

ಉರ್ಸುಲಾಗೆ ಗೊಂದಲವಾಯಿತು ಪಿಯತ್ರೋ ಕ್ರೆಪ್ಸಿಯ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದರೂ ಎಲ್ಲರಿಗೂ ತಿಳಿದಿದ್ದಂತೆ ರೆಬೇಕಳ ಜೊತೆ ಹೊಂದಿದ್ದ ಸಾಕಷ್ಟು ಲಂಬಿಸಿದ್ದ ಸಂಬಂಧದಿಂದ, ಅವನ ನಿರ್ಧಾರ ನೈತಿಕ ದೃಷ್ಟಿಯಿಂದ ಒಳ್ಳೆಯದೋ, ಕೆಟ್ಟದೋ ಎಂದು ಅವಳಿಗೆ ತಿಳಿಯಲಿಲ್ಲ. ಅವಳ ಅನುಮಾನ ಯಾರಿಗೂ ಸರಿತೋರದ ಕಾರಣ, ಕೊನೆಗೆ ಅದು ನಿಜ ಸ್ಥಿತಿಯೆಂದು ಒಪ್ಪಿಕೊಂಡಳು. ಕೊನೆಗೆ ಮನೆಯ ಯಜಮಾನ ಅವ್ರೇಲಿಯಾನೋ, “ಮದುವೆ ವಿಷಯ ಮಾತಾಡುವುದಕ್ಕೆ ಈಗ ಸಮಯ ಸರಿಯಿಲ್ಲ” ಎಂದು ಅಸ್ವಷ್ಟವಾಗಿ ಹೇಳಿ ಅವಳನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸಿದ.

ಉರ್ಸುಲಾಗೆ ಕೆಲವು ತಿಂಗಳ ನಂತರ ಆ ಅಭಿಪ್ರಾಯ ಅರ್ಥವಾಯಿತು. ಮದುವೆಯ ವಿಷಯಕ್ಕೆ ಮಾತ್ರವಲ್ಲ. ಯುದ್ಧವಿಲ್ಲದ ಬೇರೆ ಯಾವುದಕ್ಕಾದರೂ ಅವ್ರೇಲಿಯಾನೋಗೆ ಪ್ರಾಮಾಣಿಕವಾಗಿ ಹೇಳಲು ಸಾಧ್ಯ ಎಂದು ತಿಳಿಯಿತು. ಅವನಿಗೂ ಕೂಡ ಗುಂಡಿಕ್ಕುವ ತಂಡದೆದುರು ನಿಂತಾಗ, ಅವನನ್ನು ಆ ಸ್ಥಿತಿಗೆ ತಂದ ಸೂಕ್ಷ್ಮವಾದ ಹಾಗೂ ಕೈ ಮೀರಿದ ಘಟನಾವಳಿಗಳು, ಆಕಸ್ಮಿಕಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಲಿಲ್ಲ. ರೆಮಿದಿಯೋಸ್ ಸತ್ತದ್ದರಿಂದ ಅವನು ಭಾವಿಸಿದಂತೆ ಹತಾಶನಾಗಿರಲಿಲ್ಲ. ಆದರೆ ಅದೊಂದು ರೀತಿಯ ವಿಚಿತ್ರ ಕಿರಿಕಿರಿಯಂತಿದ್ದು ಕ್ರಮೇಣ ನಿರಾಸಕ್ತಿಯ ಏಕಾಂತದುನ್ಮಾದಕ್ಕೆ ಬದಲಾಗಿ, ಹಿಂದೆ ಹೆಂಗಸಿನ ಸಂಗ ಇರದಿರುವ ಕಾಲದಲ್ಲಿ ಇದ್ದಂತೆ ಇರತೊಡಗಿದ. ಅನಂತರ ಮತ್ತೆ ಕೆಲಸದಲ್ಲಿ ತೀವ್ರವಾಗಿ ಮಗ್ನನಾz. ಆದರೆ ಮಾವನೊಡನೆ ಆಟವಾಡುತ್ತಿದ್ದ ರೂಢಿಯನ್ನು ಮುಂದುವರೆಸಿದ. ದುಃಖದಲ್ಲಿ ಮುಳುಗಿದ್ದ ಆ ಮನೆಯಲ್ಲಿ ಪ್ರತಿ ಸಂಜೆಯ ಮಾತುಕತೆ ಅವರಿಬ್ಬರ ಸ್ನೇಹವನ್ನು ಭದ್ರವಾಗಿಸಿತು. ಅವನ ಮಾವ, “ಇನ್ನೊಂದು ಸಲ ಮದುವೆಯಾಗು ಅವ್ರೇಲಿಯಾನೋ… ನೀನು ಆರಿಸಿಕೊಳ್ಳಲಿಕ್ಕೆ ನನಗಿನ್ನೂ ಆರು ಹೆಣ್ಣು ಮಕ್ಕಳಿದ್ದಾರೆ” ಎಂದ. ಚುನಾವಣೆ ಸಮೀಪಿಸುತ್ತಿದ್ದಂತೆ ಒಂದು ಸಲ, ಆಗಿಂದಾಗ್ಗೆ ಮಾಡುತ್ತಿದ್ದ ತಿರುಗಾಟದ ನಂತರ, ದಾನ್ ಅಪೋಲಿನರ್ ಮೊಸ್ಕೋತೆ ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ತಲೆ ಕೆಡಿಸಿಕೊಂಡಿದ್ದ. ಉದಾರವಾದಿಗಳು ಯುದ್ಧ ಹೂಡುವುದಕ್ಕೆ ಮನಸ್ಸು ಮಾಡಿದ್ದರು. ಆ ದಿನಗಳಲ್ಲಿ ಅವ್ರೇಲಿಯಾನೋಗೆ ಸಂಪ್ರದಾಯವಾದಿಗಳು ಮತ್ತು ಉದಾರವಾದಿಗಳ ನಿಲುವಿನ ವ್ಯತ್ಯಾಸದ ಬಗ್ಗೆ ಗೊಂದಲವಿದ್ದುದರಿಂದ ಅವನ ಮಾವ ಅವುಗಳ ಸ್ಥೂಲ ವ್ಯತ್ಯಾಸದ ಪಾಠ ಹೇಳಿದರು. ಉದಾರವಾದಿಗಳು ಕೆಟ್ಟವರೆಂದೂ, ಮುಕ್ತರಾದವರೆಂದೂ, ಪಾದ್ರಿಗಳನ್ನು ನೇತು ಹಾಕಬೇಕೆಂದಿದ್ದಾರೆಂದೂ, ಮದುವೆ ಹಾಗೂ ವಿವಾಹ ವಿಚ್ಛೇದನಗಳನ್ನು ಜಾರಿಗೆ ತರಬೇಕೆಂದಿದ್ದಾರೆಂದೂ, ನ್ಯಾಯ ಸಮ್ಮತವಾದ ಮಕ್ಕಳಿಗಿರುವ ಹಕ್ಕುಗಳನ್ನು ಹಾದರಕ್ಕೆ ಹುಟ್ಟಿದ ಮಕ್ಕಳಿಗೂ ಮಾನ್ಯವಾಗುವಂತೆ ಉದ್ದೇಶಿಸಿದ್ದಾರೆಂದೂ, ಸ್ವತಂತ್ರ ರಾಜ್ಯಗಳಾಗಿ ದೇಶವನ್ನು ತುಂಡರಿಸುವುದರ ಮೂಲಕ ಅತ್ಯುನ್ನತ ಅಧಿಕಾರದಿಂದ ದೂರಮಾಡಬೇಕೆಂದಿದ್ದಾರೆಂದೂ ತಿಳಿಸಿದ. ಇದಕ್ಕೆ ಪ್ರತಿಯಾಗಿ ದೇವರಿಂದ ನೇರವಾಗಿ ಅಧಿಕಾರ ಪಡೆಯುವ ಸಂಪ್ರದಾಯವಾದಿಗಳು, ಸಾರ್ವಜನಿಕ ನಿಯಮ ಹಾಗೂ ಸಂಸಾರದ ನೈತಿಕತೆ ಹೊಂದಿರುವ ವ್ಯವಸ್ಥೆಯ ಉದ್ದೇಶವುಳ್ಳವರೆಂದು ಹೇಳಿದ. ಅವರು ಕ್ರೈಸ್ತನಲ್ಲಿ ನಂಬಿಕೆಯನ್ನು, ಅಧಿಕಾರದ ತತ್ವಗಳನ್ನು ರಕ್ಷಿಸುವರೆಂದೂ, ದೇಶವನ್ನು ಸ್ವತಂತ್ರ ರಾಜ್ಯಗಳಾಗಿ ತುಂಡಾಗುವುದಕ್ಕೆ ಅನುಮತಿ ಕೊಡುವರಲ್ಲವೆಂದೂ ತಿಳಿಸಿದ. ಮಾನವೀಯ ಭಾವನೆಗಳಿಂದ ಅವ್ರೇಲಿಯಾನೋಗೆ ಮಕ್ಕಳ ಹಕ್ಕಿನ ಬಗ್ಗೆ ಉದಾರವಾದಿಗಳ ದೃಷ್ಟಿಕೋನ ಕುರಿತು ಸಹಾನುಭೂತಿ ಉಂಟಾಯಿತಾದರೂ ಕೈಕೈ ಮಿಲಾಯಿಸಲು ಸಾಧ್ಯವಾಗದಂಥ ವಿಷಯಗಳಿಗಾಗಿ ಜನರು ಯುದ್ಧ ಹೂಡುವುದರ ಅತಿರೇಕ ಅರ್ಥವಾಗಲಿಲ್ಲ. ಅವನ ಮಾವ, ನ್ಯಾಯವಾದಿಯ ಸಂಗಡ ಬಂದೂಕು ಹಿಡಿದ ಆರು ಜನ ಸೈನಿಕರನ್ನು, ರಾಜಕೀಯದ ಬಗ್ಗೆ ಉತ್ಸಾಹವಿಲ್ಲದ ಊರೊಂದರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಕಳಿಸಿಕೊಟ್ಟಿದ್ದು ಉತ್ಪ್ರೇಕ್ಷೆ ಎನ್ನಿಸಿತು. ಅವರು ಅಲ್ಲಿಗೆ ಹೋದದ್ದಷ್ಟೇ ಅಲ್ಲದೆ ಮನೆ ಮನೆಗೆ ಹೋಗಿ, ಬೇಟೆಯ ಆಯುಧಗಳು, ಅಡುಗೆ ಮನೆ ಚಾಕುಗಳನ್ನೂ ಸಹ ಮುಟ್ಟುಗೋಲು ಹಾಕಿಕೊಂಡ ನಂತರ, ಇಪ್ಪತ್ತೊಂದಕ್ಕಿಂತ ಹೆಚ್ಚಿಗೆ ಇದ್ದ ಸಂಪ್ರದಾಯವಾದಿ ಅಭ್ಯರ್ಥಿಗಳ ಹೆಸರಿರುವ ನೀಲಿ ಬಣ್ಣದ ಓಟಿನ ಚೀಟಿ ಹಾಗೂ ಉದಾರವಾದಿ ಅಭ್ಯರ್ಥಿಗಳ ಹೆಸರಿರುವ ಕೆಂಪು ಬಣ್ಣದ ಓಟಿನ ಚೀಟಿಗಳನ್ನು ಹಂಚಿದರು. ಚುನಾವಣೆಗಿಂತ ಮುಂಚೆ ಮದ್ಯದ ವ್ಯಾಪಾರದ ನಿಷೇಧ ಹಾಗೂ ಒಂದೇ ಮನೆಯವರಲ್ಲದೆ ಮೂರು ಜನ ಒಟ್ಟಾಗಿ ಸೇರುವುದರ ವಿರುದ್ಧದ ಕಟ್ಟಳೆಯನ್ನು ದಾನ್ ಅಪೋಲಿನರ್ ಖುದ್ದಾಗಿ ಓದಿದ. ಯಾವ ಅಹಿತಕರ ಘಟನೆಯೂ ಇಲ್ಲದೆ ಚುನಾವಣೆ ನೆರವೇರಿತು. ಭಾನುವಾರ ಬೆಳಿಗ್ಗೆ ಎಂಟು ಗಂಟೆಗೆ ಆರು ಜನ ಸೈನಿಕರ ಮೇಲ್ವಿಚಾರಣೆಯಲ್ಲಿ ಮರದ ಓಟಿನ ಪೆಟ್ಟಿಗೆಯನ್ನು ಚೌಕದಲ್ಲಿ ಇಡಲಾಗಿತ್ತು. ಓಟು ಮಾಡುವುದು ಮುಕ್ತವಾಗಿತ್ತು ಮತ್ತು ಅವ್ರೇಲಿಯಾನೋ ತನ್ನ ಮಾವನ ಜೊತೆ ಇದ್ದು, ಯಾರೊಬ್ಬರೂ ಎರಡನೇ ಸಲ ಓಟು ಮಾಡದಂತೆ ನೋಡಿಕೊಂಡ. ಮಧ್ಯಾಹ್ನ ನಾಲ್ಕು ಗಂಟೆಗೆ ಚೌಕದಲ್ಲಿ ಡ್ರಮ್ ಬಾರಿಸಿ ಮತ ಚಲಾವಣೆಯ ಕಾಲ ಮುಗಿದಿದ್ದನ್ನು ಪ್ರಚುರ ಪಡಿಸಿ ಮತ ಪೆಟ್ಟಿಗೆಗೆ ದಾನ್ ಅಪೋಲಿನರ್ ಸಹಿ ಮಾಡಿ ಗುರುತು ಹಾಕಿ, ಸೀಲ್ ಹಾಕಿದ. ಆ ದಿನ ರಾತ್ರಿ ಅವನು ಅವ್ರೇಲಿಯಾನೋ ಜೊತೆಗೆ ಆಟವಾಡುತ್ತಿದ್ದಾಗ ಓಟುಗಳ ಎಣಿಕೆಗಾಗಿ ಪೆಟ್ಟಿಗೆಯ ಸೀಲನ್ನು ಒಡೆಯಲು ನ್ಯಾಯವಾದಿಗೆ ಆeಪಿಸಿದ. ಅಲ್ಲಿ ನೀಲಿ ಬಣ್ಣದಷ್ಟೆ ಕೆಂಪು ಬಣ್ಣದವುಗಳಿದ್ದವು. ಆದರೆ ನ್ಯಾಯವಾದಿ ಕೆಂಪು ಬಣ್ಣದ ಹತ್ತನ್ನು ಮಾತ್ರ ಬಿಟ್ಟು ಉಳಿದದ್ದಕ್ಕೆ ನೀಲಿ ಬಣ್ಣದವುಗಳಿಂದ ಸರಿ ಮಾಡಿದ. ಮಾರನೆ ದಿನ ಅವರು ಮತ್ತೆ ಪೆಟ್ಟಿಗೆಯನ್ನು ಹೊಸದಾಗಿ ಸೀಲ್ ಮಾಡಿ ಎಲ್ಲಕ್ಕಿಂತ ಮುಂಚೆ ಅದನ್ನು ಪ್ರಾಂತೀಯ ಮುಖ್ಯ ಸ್ಥಳಕ್ಕೆ ಕಳಿಸಿಕೊಟ್ಟರು. ಅವ್ರೇಲಿಯಾನೋ, “ಉದಾರವಾದಿಗಳು ರೊಚ್ಚಿಗೇಳ್ತಾರೆ” ಎಂz. ದಾನ್ ಅಪೋಲಿನರ್ ಆಟವಾಡುತ್ತಿದ್ದರ ಕಡೆ ಗಮನಕೊಟ್ಟ. ಅವನು, “ಓಟಿನ ಚೀಟಿ ಬದಲಾಯಿಸಿದ್ದಕ್ಕೆ ನೀನು ಹೇಳ್ತಿರೋದಾದ್ರೆ, ಅವ್ರು ಮಾಡಲ್ಲ” ಎಂದ. “ಅವ್ರು ತಗಾದೆ ಮಾಡದೆ ಇರ್‍ಲಿ ಅಂತ ನಾವು ಸ್ವಲ್ಪ ಕೆಂಪು ಚೀಟಿಗಳನ್ನು ಬಿಟ್ಟಿದೀವಿ.” ವಿರೋಧ ಪಕ್ಷದಲ್ಲಿ ಇರುವುದರ ಅನಾನುಕೂಲ ಅವ್ರೇಲಿಯಾನೋಗೆ ಗೊತ್ತಾಯಿತು. “ನಾನು ಉದಾರವಾದಿ ಆಗಿದ್ದಿದ್ರೆ ಓಟಿನ ಚೀಟಿ ವಿಷಯಕ್ಕೆ ಜಗಳಕ್ಕೆ ಹೋಗ್ತಿದ್ದೆ” ಎಂದ. ಅವನ ಮಾವ ಕನ್ನಡಕದ ಮೇಲುಗಡೆಯಿಂದ ಅವನನ್ನು ನೋಡಿದ.

ಅವನು, “ಅದೆಲ್ಲ ಇಲ್ಲ-, ನೀನು ಉದಾರವಾದಿಯಾಗಿದ್ರೆ, ನನ್ನ ಅಳಿಯ ಆಗಿದ್ರೂ ಕೂಡ, ನಿಂಗೆ ಮತ ಪತ್ರ ಬದಲಾಯಿಸಿದ್ದು ಗೊತ್ತಾಗ್ತಿರ್‍ಲಿಲ್ಲ” ಎಂದ.

ಊರಿನಲ್ಲಿ ಚುನಾವಣೆ ಫಲಿತಾಂಶ ಘೋಷಿಸಿದ್ದರಿಂದ ಆಕ್ರೋಶ ಉಂಟಾಗದೆ ಸೈನಿಕರು ಆಯುಧಗಳನ್ನು ಹಿಂತಿರುಗಿಸದೆ ಇದ್ದರಿಂದ ಉಂಟಾಗಿತ್ತು. ಹೆಂಗಸರ ಗುಂಪೊಂದು ಅಡುಗೆ ಚಾಕುಗಳನ್ನು ಹಿಂತಿರುಗಿಸುವಂತೆ ಅವನ ಮಾವನಿಗೆ ಹೇಳಲು ಅವ್ರೇಲಿಯಾನೋನನ್ನು ಕೇಳಿಕೊಂಡರು. ಆದರೆ ದಾನ್ ಅಪೋಲಿನರ್ ಮೊಸ್ಕೋತೆ ಉದಾರವಾದಿಗಳು ಯುದ್ಧಕ್ಕೆ ಸಿದ್ಧರಾಗುತ್ತಿದ್ದಾರೆನ್ನುವುದರ ಪುರಾವೆಗಾಗಿ ಸೈನಿಕರು ಅದನ್ನು ತೆಗೆದುಕೊಂಡಿದ್ದಾರೆಂದು ಅವನಲ್ಲಿ ವಿಶ್ವಾಸವಿಟ್ಟು ಗುಟ್ಟಾಗಿ ವಿವರಿಸಿದ. ಆ ಮಾತಿನಲ್ಲಿದ್ದ ತಿರಸ್ಕಾರ ಅವನನ್ನು ಬೆರಗಾಗಿಸಿತು. ಅವನೇನೂ ಹೇಳಲಿಲ್ಲ. ಆದರೆ ಅದೊಂದು ರಾತ್ರಿ ಗೆರಿನೆಲ್ಡೊ ಮಾರ್ಕೆಜ್ ಮತ್ತು ಮ್ಯಾಗ್ನಿಫಕೊ ವೀಸ್‌ಬಾಲ್ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಅವನು ಉದಾರವಾದಿಯೋ ಸಂಪ್ರದಾಯವಾದಿಯೋ ಎಂದು ಕೇಳಿದ್ದಕ್ಕೆ ಅವ್ರೇಲಿಯಾನೋ ಅನುಮಾನಿಸಲಿಲ್ಲ.
“ನಾನೇನಾದ್ರೂ ಆಗಬೇಕಿದ್ರೆ, ಉದಾರವಾದಿಯಾಗ್ತೀನಿ. ಏಕೆಂದರೆ ಸಂಪ್ರದಾಯವಾದಿಗಳು ಕುತಂತ್ರಿಗಳು” ಎಂದ.

ಮಾರನೆ ದಿನ ಸ್ನೇಹಿತರ ಒತ್ತಾಯದಿಂದ ಪಿತ್ತಜನಕಾಂಗದಲ್ಲಿ ನೋವಿನ ಶುಶ್ರೂಷೆಗೆಂಬ ಸೋಗಿನೊಂದಿಗೆ ಡಾಕ್ಟರ್ ಅಲಿರಿಯೋ ನೋಗ್ವೇರಾ ಬಳಿಗೆ ಹೋದ. ಅವನಿಗೆ ಕಪಟೋಪಾಯ ಅರ್ಥವಾಗಲಿಲ್ಲ. ಡಾಕ್ಟರ್ ಆಲಿರಿಯೊ ಕೆಲವು ವರ್ಷಗಳ ಹಿಂದೆ ಔಷಧಿ ಪೆಟ್ಟಿಗೆ ಮತ್ತು ಯಾರಿಗೂ ನಂಬಿಕೆಯಾಗದ ವೈದ್ಯಕೀಯ ಉದ್ದೇಶದಿಂದ ಬಂದಿದ್ದ. ವಾಸ್ತವವಾಗಿ ಅವನೊಬ್ಬ ಆಷಾಡಭೂತಿ ಆಗಿದ್ದ. ಪ್ರತಿಷ್ಠೆ ಇಲ್ಲದ ಡಾಕ್ಟರ್ ಎಂಬ ಅವನ ಮುಗ್ಧ ಮುಖದ ಹಿಂದೆ ಉಗ್ರವಾದಿಯೊಬ್ಬ ಅಡಗಿದ್ದ. ಅಲ್ಲಿ ಐದು ವರ್ಷಗಳ ಕಾಲ ಕಾರ್ಯಕರ್ತನ ಮಟ್ಟದಲ್ಲಿ ಇದ್ದದ್ದರಿಂದ ಉಂಟಾಗಿದ್ದ ಕಲೆಗಳನ್ನು ಅವನ ಕಾಲಿನ ಬೂಟುಗಳು ಮರೆ ಮಾಡಿದ್ದವು. ಸಂಯುಕ್ತ ರಾಷ್ಟ್ರವಾದಿಗಳ ಮೊದಲನೆ ಆಂದೋಳನದಲ್ಲಿ ಸೆರೆ ಸಿಕ್ಕ ಅವನು ತಾನು ಎಲ್ಲಕ್ಕಿಂತ ಹೆಚ್ಚು ದ್ವೇಷಿಸುತ್ತಿದ್ದ ನಿಲುವಂಗಿಯನ್ನು ತೊಟ್ಟು ಮರೆಮಾಚಿಕೊಂಡು ಕುರಾಶೊಗೆ ಪಲಾಯನ ಮಾಡಿದ. ಅಲ್ಲಿಂದ ತಲೆತಪ್ಪಿಸಿಕೊಂಡು ಅನೇಕ ವರ್ಷಗಳನ್ನು ಕಳೆದ ನಂತರ ಕ್ಯಾರಿಬಿಯಾದಲ್ಲಿ ತಲೆಮರೆಸಿಕೊಂಡವರನ್ನು ಕುರಾಶೋಗೆ ತರುತ್ತಾರೆಂಬ ಸುದ್ದಿಯನ್ನು ಕೇಳಿ ಕಳ್ಳ ಸಾಗಾಣೆಕಾರರ ಹಡಗಿನಲ್ಲಿ ಬೂಟುಗಳಲ್ಲಿ ಸಕ್ಕರೆ ಗುಳಿಗೆಗಳನ್ನು ಹಾಗೂ ತಾನೇ ಕಳ್ಳ ರುಜು ಮಾಡಿದ ಲೀಪ್ ಜಿಗ್ ವಿಶ್ವವಿದ್ಯಾಲಯದ ಡಿಪ್ಲಮೋ ಸರ್ಟಿಫಿಕೇಟ್ ಹಿಡಿದುಕೊಂಡು ರಿಯೋ‌ಅಕ ತಲುಪಿದ. ಅವನು ನಿರಾಶೆಯಿಂದ ತತ್ತರಿಸಿದ. ಸಿಡಿಮದ್ದಿನ ಹಾಗೆ ಸ್ಫೋಟಿಸುವುದೆಂದು ತಲೆ ಮರೆಸಿಕೊಂಡಿದ್ದ ಸಂಯುಕ್ತ ರಾಷ್ಟ್ರವಾದಿಗಳು ರೂಪಿಸಿದ್ದು, ಚುನಾವಣೆಯಲ್ಲಿ ಭ್ರಮೆಯಾಗಿ ಕರಗಿಹೋಯಿತು. ಅವನು ನಿರಾಸೆಯಿಂದ ಅತ್ತ. ಸೋಲಿನಿಂದ ಘಾಸಿಗೊಂಡು, ಕ್ಷೇಮವಾದ ಸ್ಥಳಕ್ಕಾಗಿ ಕಾತರಿಸಿ, ಮುದಿತನವನ್ನು ಎದುರು ನೋಡುತ್ತ, ಢೋಂಗಿ ಹೋಮಿಯೋಪತಿ ಡಾಕ್ಟರಾದ ಅವನು ಮಕೋಂದೋದಲ್ಲಿ ಆಶ್ರಯ ಪಡೆದ. ಚೌಕದ ಒಂದು ಭಾಗದಲ್ಲಿ ಬಾಟಲುಗಳಿಂದ ತುಂಬಿದ ಸಣ್ಣ ರೂಮನ್ನು ಬಾಡಿಗೆ ಹಿಡಿದು, ಬೇರೆಲ್ಲವನ್ನೂ ಪ್ರಯತ್ನಿಸಿ ಸೋತ ತೀವ್ರ ಪ್ರಮಾಣದ ಕಾಯಿಲೆಯವರು, ಸಕ್ಕರೆ ಗುಳಿಗೆಗಳಲ್ಲಿ ಸಮಾಧಾನ ಹೊಂದುತ್ತಿದ್ದರಿಂದ ಅನೇಕ ವರ್ಷ ಬದುಕಿದ್ದ. ಅವನೊಳಗಿದ್ದ ಹೋರಾಟದ ಪ್ರವೃತ್ತಿ ದಾನ್ ಅಪೋಲಿನರ್ ಮೊಸ್ಕೋತೆ ಪ್ರಮುಖನಾಗಿರುವ ತನಕ ಸುಪ್ತವಾಗಿತ್ತು. ಅವನು ಹಳೆಯದನ್ನು ನೆನಪಿಸಿಕೊಳ್ಳುತ್ತ ಆಸ್ತಮ ವಿರುದ್ಧ ಹೋರಾಡುತ್ತ ಕಾಲ ಕಳೆದ. ಚುನಾವಣೆ ಹತ್ತಿರಕ್ಕೆ ಬಂದಿದ್ದು ಮತ್ತೆ ಬುಡಮೇಲು ಮಾಡುವ ಗೋಜಲಿಗೆ ಅವನನ್ನು ತಳ್ಳಿತು. ಅವನು ರಾಜಕೀಯದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲದ ಯುವಜನರನ್ನು ಸಂಪರ್ಕಿಸಿ ಗುಟ್ಟಾಗಿ ಪ್ರಚೋದನೆ ಉಂಟುಮಾಡಲು ಪ್ರಯತ್ನಿಸಿದ. ಓಟಿನ ಪೆಟ್ಟಿಗೆಯಲ್ಲಿ ಕಂಡು ಬಂದ ಕೆಂಪು ಓಟಿನ ಚೀಟಿಗಳನ್ನು ಕುರಿತು ದಾನ್ ಅಪೋಲಿನರ್ ಮೊಸ್ಕೋತೆಯ ಬಗ್ಗೆ ಯುವಜನರಲ್ಲಿ ಕುತೂಹಲ ಉಂಟಾಗುವಂತೆ ಮಾಡಿದ್ದು ಅವ್ರೇಲಿಯಾನೋನ ಯೋಜನೆಯ ಒಂದು ಭಾಗ. ಚುನಾವಣೆ ಕೇವಲ ಒಂದು ತಮಾಷೆ ಎಂದು ತಿಳಿಸುವ ಸಲುವಾಗಿ ತನ್ನ ಶಿಷ್ಯರಿಗೆ ಮತ ಚಲಾಯಿಸಲು ಹೇಳಿದ. ಅವನು, “ಹಿಂಸೆಯೊಂದೇ ಸರಿಯಾದ ಮಾರ್ಗ” ಎಂದು ಹೇಳುತ್ತಿದ್ದ. ಅವ್ರೇಲಿಯಾನೋನ ಅನೇಕ ಸ್ನೇಹಿತರಿಗೆ ಸಂಪ್ರದಾಯವಾದಿ ವ್ಯವಸ್ಥೆಯನ್ನು ನಿರ್ಮೂಲ ಮಾಡುವ ಅಲೋಚನೆ ಇದ್ದರೂ ಯಾರಿಗೂ ಅಂಥ ಯೋಜನೆಯಲ್ಲಿ ಅವನನ್ನು ಸೇರಿಸಿಕೊಳ್ಳುವ ಧ್ಯೆರ್ಯ ಬಾರದೇ ಇರುವುದಕ್ಕೆ, ಮ್ಯಾಜಿಸ್ಟ್ರೇಟ್ ಜೊತೆಗಿದ್ದ ಅವನ ಬಾಂಧವ್ಯವಲ್ಲದೆ ಅವನ ಏಕಾಂತ ಮತ್ತು ನುಣುಚಿಕೊಳ್ಳುವ ಸ್ವಭಾವ ಕಾರಣವಾಗಿತ್ತು. ಅದೂ ಅಲ್ಲದೆ ತನ್ನ ಮಾವನ ಸೂಚನೆಯಂತೆ ಅವನು ನೀಲಿ ಮತ ಹಾಕಿದ್ದನೆಂದು ತಿಳಿದ ವಿಷಯವಾಗಿತ್ತು. ಆದ್ದರಿಂದ ಅವನು ತನ್ನ ರಾಜಕೀಯ ಭಾವನೆಗಳನ್ನು ವ್ಯಕ್ತಪಡಿಸಿದ್ದು ಆಕಸ್ಮಿಕವಾಗಿ ಮತ್ತು ಇಲ್ಲದಿದ್ದ ಹಲ್ಲಿನ ನೋವಿನ ನಿವಾರಣೆಗೆ ಎಂದು ಡಾಕ್ಟರ್ ಹತ್ತಿರ ಬರುವಂತೆ ಮಾಡಿದ್ದು ಕೇವಲ ಕುತೂಹಲ ಮತ್ತು ವಿಚಿತ್ರವಾದ ನಡತೆಯಾಗಿತ್ತು. ಅವನು ಕರ್ಪೂರದ ವಾಸನೆ ತುಂಬಿಕೊಂಡ ಗುಹೆಯಂತಿದ್ದ ಸ್ಥಳದಲ್ಲಿ ಉಸಿರಾಡಿದಾಗ ಪುಪ್ಫಸದಿಂದ ಶೀಟಿ ಹೊಡೆದಂತೆ ಕೇಳಿಸುತ್ತಿದ್ದ ಕೊಳಕು ಮನುಷ್ಯನ ಎದುರು ನಿಂತುಕೊಂಡಿದ್ದ. ಬೇರೆ ಯಾವುದೇ ಪ್ರಶ್ನೆಯನ್ನು ಕೇಳುವುದಕ್ಕೆ ಮುಂಚೆ ಕಿಟಕಿಯ ಹತ್ತಿರ ಕರೆದುಕೊಂಡು ಹೋಗಿ ಡಾಕ್ಟರ್ ನೋಗ್ವೇರಾ ಅವನ ಕಣ್ಣಿನ ಕೆಳರೆಪ್ಪೆಯನ್ನು ಪರೀಕ್ಷಿಸಿದ. ಅವರು ಆಗಲೆ ತಿಳಿಸಿ ಹೇಳಿದ್ದರ ಹಿನ್ನೆಲೆಯಲ್ಲಿ, “ಅಲ್ಲಲ್ಲ” ಎಂದು ಅವ್ರೇಲಿಯಾನೋ ಹೇಳಿz. ಅವನು ಬೆರಳಿನಿಂದ ತನ್ನ ಲಿವರ್ ಒತ್ತಿ ತೋರಿಸಿ, “ಇಲ್ಲಿ ನೋವು. ನನಗೆ ನಿದ್ದೆ ಮಾಡಕ್ಕೆ ಬಿಡ್ತಿಲ್ಲ”ಎಂದ. ಅವನು ತುಂಬ ಸೆಖೆ ಎಂಬ ಕಾರಣ ಹೇಳಿ ಕಿಟಕಿಯನ್ನು ಮುಚ್ಚಿದ ಮತ್ತು ಸರಳವಾದ ರೀತಿಯಲ್ಲಿ ಸಂಪ್ರದಾಯವಾದಿಗಳನ್ನು ಕೊಲ್ಲುವುದು ರಾಷ್ಟ್ರ ಭಕ್ತಿಯ ಕರ್ತವ್ಯ ಎಂದು ವಿವರಿಸಿದ. ಕೆಲವು ದಿನಗಳ ಕಾಲ ಅವ್ರೇಲಿಯಾನೋ ತನ್ನ ಅಂಗಿಯ ಜೇಬಿನಲ್ಲಿ ಗುಳಿಗೆಗಳಿರುವ ಸಣ್ಣ ಶೀಸೆಯನ್ನು ಇಟ್ಟುಕೊಂಡಿರುತ್ತಿದ್ದ. ಪ್ರತಿ ಎರಡು ಗಂಟೆಗೊಂದು ಸಲ ಅಂಗೈಯಲ್ಲಿ ಮೂರು ಗುಳಿಗೆಗಳನ್ನು ಇಟ್ಟುಕೊಂಡು ಬಾಯಿಗೆ ಹಾಕಿಕೊಂಡು ನಾಲಿಗೆಯ ಮೇಲೆ ನಿಧಾನವಾಗಿ ಕರಗಲು ಬಿಡುತ್ತಿದ್ದ. ಹೋಮಿಯೋಪತಿಯಲ್ಲಿ ಅವನಿಗಿದ್ದ ನಂಬಿಕೆಯನ್ನು ದಾನ್ ಅಪೋಲಿನರ್ ಮೊಸ್ಕೋತೆ ಗೇಲಿ ಮಾಡುತ್ತಿದ್ದ. ಆದರೆ ಆ ಯೋಜನೆಯಲ್ಲಿ ಇದ್ದವರು ಯಾರೇ ಆಗಲಿ ತಮ್ಮ ರೀತಿ ಇರುವವರನ್ನು ಗುರುತಿಸುತ್ತಿದ್ದರು. ಇದರಲ್ಲಿ ಹೆಚ್ಚು ಕಡಿಮೆ ಸಂಸ್ಥಾಪಕರ ಮಕ್ಕಳೆಲ್ಲರೂ ಸೇರಿಕೊಂಡಿದ್ದರೂ ಸಹ ಯಾವ ರೀತಿಯ ಕ್ರಮವನ್ನು ತಾವು ರೂಪಿಸುತ್ತಿರುವುದೆಂದು ಖಚಿತವಾಗಿ ತಿಳಿದಿರಲಿಲ್ಲ. ಅವನಿಗೆ ಸಂಪ್ರದಾಯವಾದಿಗಳನ್ನು ನಿರ್ಮೂಲ ಮಾಡುವ ತುರ್ತಿನ ಬಗ್ಗೆ ಮನದಟ್ಟಾಗಿದ್ದರೂ ಇಡೀ ಯೋಜನೆ ಭಯ ಹುಟ್ಟಿಸಿತ್ತು. ಡಾಕ್ಟರ್ ನೋಗ್ವೇರಾ ವೈಯಕ್ತಿಕವಾಗಿ ಕೊಲೆ ಮಾಡುವ ರಹಸ್ಯ ಹೊಂದಿದ್ದ. ಅವನ ವ್ಯವಸ್ಥೆಯ ಕ್ರಮದಲ್ಲಿ ಕಾರ್ಯವನ್ನು ಸರಪಳಿಯಂತೆ ಹೊಂದಾಣಿಕೆ ಮಾಡುತ್ತ, ಇಡೀ ದೇಶವನ್ನು ಆವರಿಸಿ ಒಂದೇ ಬಾರಿಗೆ ಸಂಪ್ರದಾಯವಾದಿಗಳ ಬೇರನ್ನೇ ಕಿತ್ತೊಗೆಯುವ ಹಾಗೆ ಅದರ ಆಡಳಿತದ ಎಲ್ಲಾ ಕಾರ್ಯಕರ್ತರನ್ನು ಅವರ ಸಂಸಾರವನ್ನು ಮಕ್ಕಳ ಸಮೇತ ಅಳಿಸಿ ಹಾಕುವುದಿತ್ತು. ದಾನ್ ಅಪೋಲಿನರ್ ಮೊಸ್ಕೋತೆ, ಅವಳ ಹೆಂಡತಿ ಮಕ್ಕಳು ಅವನ ಪಟ್ಟಿಯಲ್ಲಿ ಇದ್ದರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಅವ್ರೇಲಿಯಾನೋ ಉದ್ವೇಗವಿಲ್ಲದೆ, “ನೀವು ಉದಾರವಾದಿಗಳೂ ಅಲ್ಲ, ಏನೂ ಅಲ್ಲ… ಕೊಲೆಗಾರರು ಅಷ್ಟೇ” ಎಂದ.
ಡಾಕ್ಟರ್ ಅಷ್ಟೇ ಸಮಾಧಾನದಿಂದ, “ಹಾಗಿದ್ರೆ ಆ ಬಾಟಲ್ ವಾಪಸು ಕೊಡಿ. ನಿಮಗದು ಬೇಕಿಲ್ಲ” ಎಂದ.
ಆರು ತಿಂಗಳ ನಂತರ ಡಾಕ್ಟರ್, ತಾನು ಕೆಲಸ ಮಾಡುವವನಲ್ಲ ಏಕೆಂದರೆ ಭವಿಷ್ಯವಿಲ್ಲದ, ಎದೆಗಾರಿಕೆ ಇಲ್ಲದ ಭಾವನಾತ್ಮಕ ವ್ಯಕ್ತಿ ಎಂದು ಪರಿಗಣಿಸಿ ತನ್ನನ್ನು ಕೈಬಿಟ್ಟಿದ್ದಾನೆಂದು ತಿಳಿಯಿತು. ಅವನು ತಮ್ಮ ಗುಟ್ಟನ್ನು ರಟ್ಟು ಮಾಡುತ್ತಾನೆ ಎಂಬ ಭಯದಿಂದ ಅವನ ಮೇಲೆ ಕಣ್ಣಿಟ್ಟಿದ್ದರು. ತಾನು ಬಾಯಿ ಬಿಡುವುದಿಲ್ಲವೆಂದು ಅವರನ್ನು ಅವ್ರೇಲಿಯಾನೋ ಶಾಂತಗೊಳಿಸಿದ. ಆದರೆ ಮೊಸ್ಕೋತೆ ಸಂಸಾರವನ್ನು ಅವರು ಕೊಲ್ಲಲು ಹೋದಾಗ ಅವನು ಬಾಗಿಲಲ್ಲೆ ನಿಂತಿದ್ದ. ಅವನ ಖಚಿತ ನಿರ್ಧಾರದಿಂದ ಅದನ್ನು ಅನಿರ್ದಿಷ್ಟ ಕಾಲ ಮುಂದೆ ಹಾಕಬೇಕಾಯಿತು. ಆ ದಿನಗಳಲ್ಲಿಯೇ ಉರ್ಸುಲಾ ಪಿಯತ್ರೋ ಕ್ರೆಪ್ಸಿ ಮತ್ತು ಅಮರಾಂತರ ಮದುವೆಯ ಬಗ್ಗೆ ಅವನ ಅಭಿಪ್ರಾಯವನ್ನು ಕೇಳಿದ್ದು. ಅವನು ಅಂತಹ ವಿಷಯಗಳನ್ನು ಅಲೋಚಿಸುವುದಕ್ಕೆ ಕಾಲ ಸರಿಯಾಗಿಲ್ಲ ಎಂದು ಉತ್ತರಿಸಿದ ಒಂದು ವಾರದ ತನಕ ಶರಟಿನೊಳಗೆ ಹಳೆಯ ರೀತಿಯ ನಾಟಿ ಪಿಸ್ತೂಲನ್ನು ಇಟ್ಟುಕೊಂಡು ಒಡಾಡುತ್ತಿದ್ದ ಮತ್ತು ತನ್ನ ಸ್ನೇಹಿತರ ಮೇಲೆ ಕಣ್ಣಿಟ್ಟಿದ್ದ. ಮಧ್ಯಾಹ್ನದ ಸಮಯದಲ್ಲಿ ಹೊಸೆ ಅರ್ಕಾದಿಯೋ ಮತ್ತು ರೆಬೇಕರ ಜೊತೆ ಕಾಫಿ ಕುಡಿಯುತ್ತಿದ್ದ ಮತ್ತು ತಮ್ಮ ಮನೆಯನ್ನು ಸರಿಯಾಗಿಡಲು ಪ್ರಾರಂಭಿಸಿದ್ದ. ಏಳು ಗಂಟೆಯ ನಂತರ ಮಾವನ ಜೊತೆ ಡಾಮಿನೋ ಆಟವಾಡುತ್ತಿದ್ದ. ಊಟದ ಸಮಯದಲ್ಲಿ ಈಗಾಗಲೇ ಹೆಚ್ಚಿಗೆ ಬೆಳೆದವನಾಗಿದ್ದ ಮತ್ತು ಇನ್ನೇನು ಶುರುವಾಗುವುದರಲಿದ್ದ ಯುದ್ಧದಿಂದ ಉತ್ಸಾಹಗೊಂಡಿದ್ದಂತೆ ಕಂಡ ಅರ್ಕಾದಿಯೋ ಜೊತೆ ಹರಟೆ ಹೊಡೆಯುತ್ತಿದ್ದ. ಅರ್ಕಾದಿಯೋನ ಸ್ಕೂಲಿನಲ್ಲಿ ಅವನಿಗಿಂತ ಹೆಚ್ಚಿಗೆ ವಯಸ್ಸಾಗಿ ಮಾತನಾಡಲು ಸರಿಯಾಗಿ ಬರದ ವಿದ್ಯಾರ್ಥಿಗಳ ಮೇಲೆ ಉದಾರವಾದಿಗಳ ಪ್ರಭಾವ ಹೆಚ್ಚಾಗಿತ್ತು. ಫಾದರ್ ನಿಕನೋರ್‌ನ್ನು ಶೂಟ್ ಮಾಡುವ, ಚರ್ಚನ್ನು ಶಾಲೆಯಾಗಿ ಪರಿವರ್ತಿಸುವ ಮತ್ತು ಮುಕ್ತ ಪ್ರೇಮದ ಮಾತುಗಳು ಚಲಾವಣೆಗೆ ಬಂದಿತ್ತು. ಅವ್ರೇಲಿಯಾನೋ ಅವನ ಆವೇಗವನ್ನು ಕಡಿಮೆ ಮಾಡಲು ಪ್ರಯತ್ನಿಸಿದ. ವಿವೇಕ ಮತ್ತು ಯುಕ್ತತೆಯನ್ನು ರೂಢಿಸಿಕೊಳ್ಳಲು ಹೇಳಿದ. ಅವನು ವಿಚಾರಕ್ಕೆ ವಾಸ್ತವ ಪ್ರಜ್ಞೆಗೆ ಕುರುಡಾಗಿದ್ದರಿಂದ, ಅವ್ರೇಲಿಯಾನೋ ಸಾರ್ವಜನಿಕವಾಗಿ ಅವನ ರೀತಿಯನ್ನು ಖಂಡಿಸಿದ. ಆನಂತರ ಅವ್ರೇಲಿಯಾನೋ ಸುಮ್ಮನೆ ಕಾದ. ಡಿಸೆಂಬರ್‌ನ ಮೊದಲನೆ ವಾರದಲ್ಲಿ ವರ್ಕ್‌ಶಾಪಿಗೆ ನುಗ್ಗಿ ಬಂದ ಉರ್ಸುಲಾ ಕೂಗಿದಳು.
“ಯುದ್ಧ ಶುರುವಾಯ್ತು!”

ವಾಸ್ತವವಾಗಿ ಯುದ್ಧ ಪ್ರಾರಂಭವಾಗಿ ಆಗಲೇ ಮೂರು ತಿಂಗಳಾಗಿತ್ತು. ನಿಜಕ್ಕೂ ಸೈನಿಕಶಾಸನವನ್ನು ಇಡೀ ದೇಶಕ್ಕೆ ವಿಸ್ತರಿಸಲಾಗಿತ್ತು. ಅದನ್ನು ಮುಂಚೆಯೇ ತಿಳಿದ ವ್ಯಕ್ತಿಯೆಂದರೆ ದಾನ್ ಅಪೋಲಿನರ್ ಮೊಸ್ಕೋತೆ. ಆದರೆ ಅವನು ಸೈನಿಕ ತುಕಡಿ ಹೊರಡುವ ತನಕ ಆ ಸುದ್ದಿಯನ್ನು ಹೆಂಡತಿಗೂ ಹೇಳಲಿಲ್ಲ. ಅವರು ನಿಶ್ಯಬ್ದವಾಗಿ ಹೇಸರಗತ್ತೆಗಳನ್ನು ಹೂಡಿ ಎಳೆದು ತಂದ ಎರಡು ಲಘು ಫಿರಂಗಿಗಳನ್ನು ಊರಿಗೆ ತಂದು ಸ್ಕೂಲನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡರು. ಬೆಳಿಗ್ಗೆ ಆರು ಗಂಟೆ ಕರ್ಫ್ಯೂ ವಿಧಿಸಲಾಯಿತು. ಮೊದಲಿಗಿಂತ ಹೆಚ್ಚು ತೀವ್ರವಾಗಿ ಒಂದೊಂದಾಗಿ ಮನೆಗಳನ್ನು ಶೋಧಿಸಿದ್ದಲ್ಲz, ಈ ಬಾರಿ ಕೃಷಿಯ ಉಪಕರಣಗಳನ್ನೂ ತೆಗೆದುಕೊಂಡು ಹೋದರು. ಡಾಕ್ಟರ್ ನಿಕನೋರ್‌ನನ್ನು ಹೊರಗೆಳೆದು, ಚೌಕದ ಮರಕ್ಕೆ ಕಟ್ಟಿಹಾಕಿ, ಯಾವುದೇ ನ್ಯಾಯಾಂಗ ವಿಚಾರಣೆ ಇಲ್ಲದೆ ಶೂಟ್ ಮಾಡಿದರು. ಫಾದರ್ ನಿಕನೋರ್ ತನ್ನ ನೆಲದಿಂದೇಳುವ ಯಾಂತ್ರಿಕ ಶಕ್ತಿಯಿಂದ ಮತ್ತು ಬಂದೂಕಿನ ತುದಿಯಿಂದ ತಲೆಯನ್ನು ಬಗೆದು ತೋರಿಸುವ ಕ್ರಿಯೆಗಳಿಂದ ಅವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ. ಉದಾರವಾದಿಗಳ ಉತ್ಸಾಹವನ್ನು ಸದ್ದಿಲ್ಲದ ಉಗ್ರತೆಯೆಂದು ನಂದಿಸಲಾಯಿತು. ಕಳೆಗುಂದಿ, ನಿಗೂಢತೆಯಿಂದ ಕೂಡಿದ ಅವ್ರೇಲಿಯಾನೋ ಮಾವನ ಜೊತೆ ಆಟವಾಡುವುದನ್ನು ಮುಂದುವರಿಸಿದ. ದಾನ್ ಅಪೋಲಿನರ್ ಮೊಸ್ಕೋತೆಗೆ ಈಗ ಊರಿನಲ್ಲಿ ಸಿವಿಲ್ ಮತ್ತು ಮಿಲಿಟರಿ ನಾಯಕನೆಂಬ ಹೆಸರಿದ್ದರೂ, ಅವನು ಮತ್ತೆ ಪ್ರಮುಖನೆಂದು ಅವನಿಗೆ ತಿಳಿದಿತ್ತು. ಸೈನ್ಯದ ಕ್ಯಾಪ್ಟನ್ ನಿರ್ಧಾರ ತೆಗೆದುಕೊಂಡ ನಂತರ ಪ್ರತಿದಿನ ಬೆಳಿಗ್ಗೆ ಅವನು ಸಾರ್ವಜನಿಕ ನಿಯಮಗಳನ್ನು ರಕ್ಷಿಸುವುದಕ್ಕೆ ತೆರಿಗೆ ವಸೂಲುಮಾಡುತ್ತಿದ್ದ. ಅವನ ಅಧಿಕಾರದ ವಲಯದಲ್ಲಿದ್ದ ನಾಲ್ವರು ಸೈನಿಕರು ತನ್ನ ಮನೆಯ ಹುಚ್ಚು ನಾಯಿಯಿಂದ ಕಡಿಸಿಕೊಂಡ ಹೆಂಗಸೊಬ್ಬಳನ್ನು ಎಳೆದು ತಂದು, ಬಂದೂಕಿನ ತುದಿಯಿಂದ ಚುಚ್ಚಿ ಕೊಂದರು. ಒಂದು ಭಾನುವಾರ ಅವ್ರೇಲಿಯಾನೋ ಗೆರಿನೋಲ್ಡೋನ ಮನೆಗೆ ಹೋಗಿ ಎಂದಿನ ಧಾಟಿಯಲ್ಲಿ ಸಕ್ಕರೆಯಿಲ್ಲದ ಕಾಫಿ ಕೇಳಿದ. ಅವರಿಬ್ಬರೂ ಅಡುಗೆ ಮನೆಯಲ್ಲಿ ಇಬ್ಬರೇ ಇದ್ದಾಗ ಹಿಂದೆಂದೂ ಕೇಳದಿದ್ದ ಅಧಿಕಾರ ಯುಕ್ತ ಧ್ವನಿಯಲ್ಲಿ ಅವ್ರೇಲಿಯಾನೋ, “ಹುಡುಗರನ್ನು ರೆಡಿ ಮಾಡಿಕೋ… ನಾವು ಯುದ್ಧಕ್ಕೆ ಹೊರಟಿದ್ದೀವಿ” ಎಂz. ಗೆರಿನೆಲ್ಡೊ ಮಾರ್ಕೆಜ್ ಅವನನ್ನು ನಂಬಲಿಲ್ಲ.
“ಯಾವ ಆಯುಧಗಳಿಂದ?” ಅವನು ಕೇಳಿದ.
“ಅವರದ್ದು” ಎಂದು ಅವ್ರೇಲಿಯಾನೋ ಉತ್ತರಿಸಿದ.

ಮಂಗಳವಾರ ನಡುರಾತ್ರಿಯ ಹುಚ್ಚೆದ್ದ ಕಾರ್ಯಾಚರಣೆಯಲ್ಲಿ ಅವ್ರೇಲಿಯಾನೋ ಬ್ಯುಂದಿಯಾನ ನೇತೃತ್ವದಲ್ಲಿ ಚಾಕು ಚೂರಿ ಹಿಡಿದ ಮೂವತ್ತು ವರ್ಷದೊಳಗಿರುವ ಇಪ್ಪತ್ತೊಂದು ಜನ ರಕ್ಷಣಾದಳದವರನ್ನು ತಬ್ಬಿಬ್ಬಾಗಿಸಿ ಅವರಿಂದ ಆಯುಧಗಳನ್ನು ವಶಪಡಿಸಿಕೊಂಡು ಹೊರಗಿನಂಗಳದಲ್ಲಿ ಅವರ ಕ್ಯಾಪ್ಟನ್ ಮತ್ತು ಆ ಹೆಂಗಸನ್ನು ಕೊಂದ ನಾಲ್ಕು ಜನ ಸೈನಿಕರನ್ನು ಕೊಚ್ಚಿ ಹಾಕಿದರು.

ಅದೇ ದಿನ ರಾತ್ರಿ ಗುಂಡಿಕ್ಕುವ ತಂಡದ ಶಬ್ದ ಕೇಳುತ್ತಿದ್ದಾಗ ಅರ್ಕಾದಿಯೋನನ್ನು ಊರಿನ ಸಿವಿಲ್ ಮತ್ತು ಮಿಲಿಟರಿ ನಾಯಕನೆಂದು ಹೆಸರಿಸಲಾಯಿತು. ಮದುವೆಯಾದ ವಿರೋಧಿಗಳಿಗೆ ಅವರಷ್ಟಕ್ಕೆ ಅವರನ್ನು ಬಿಟ್ಟ ತಮ್ಮ ಹೆಂಡತಿಯರಿಂದ ಬೀಳ್ಕೊಡುಗೆ ಪಡೆಯಲೂ ಸಮಯವಿರಲಿಲ್ಲ. ಭಯದಿಂದ ಮುಕ್ತರಾದ ಜನರ ಚಪ್ಪಾಳೆ ಸಂಭ್ರಮದೊಡನೆ ಮನಾರ್‌ಗೆ ಹೊರಟಿದ್ದಾನೆ ಎಂಬ ವರದಿಯಿದ್ದ ಆಂದೋಳನದ ಜನರಲ್ ವಿಕ್ಟೋರಿಯೋ ಮೆದೀನಾನ ಸೈನ್ಯಕ್ಕೆ ಸೇರಲು ಹೊರಟರು. ಹೊರಡುವ ಮುಂಚೆ ಅವ್ರೇಲಿಯಾನೋ ದಾನ್ ಅಪೋಲಿನರ್ ಮೊಸ್ಕೋತೆಯನ್ನು ಹೊರಗೆ ಕರೆದು, “ಸಮಾಧಾನದಿಂದಿರಿ ಮಾವಯ್ಯ, ಹೊಸ ಸರ್ಕಾರ ನಿಮ್ಮ ಮತ್ತು ನಿಮ್ಮ ಮನೆಯವರ ಕ್ಷೇಮಕ್ಕೆ ಗ್ಯಾರಂಟಿ ಕೊಡುತ್ತೆ” ಎಂದ. ಬಗಲಿಗೆ ಬಂದೂಕು ಉದ್ದನೆ ಶೂ ಹಾಕಿಕೊಂಡಿದ್ದ ಪ್ರತಿ ರಾತ್ರಿ ಒಂಬತ್ತರ ತನಕ ಆಟವಾಡುತ್ತಿದ್ದ ಸಂಚುಕೋರನನ್ನು ಗುರುತು ಹಿಡಿಯುವುದಕ್ಕೆ ದಾನ್ ಅಪೋಲಿನರ್ ಮೊಸ್ಕೋತೆಗೆ ಕಷ್ಟವಾಯಿತು.
“ಇದು ಹುಚ್ಚಾಟ” ಎಂದು ಚಕಿತಗೊಂಡು ಹೇಳಿದ.
“ಹುಚ್ಚಲ್ಲ” ಎಂದು ಮುಂದುವರಿದ ಅವ್ರೇಲಿಯಾನೋ, “ಯುದ್ಧ… ಅಲ್ದೆ, ಇನ್ಮೇಲೆ ನನ್ನನ್ನ ಅವ್ರೇಲಿಯಾನೋ ಅಂತ ಕರೀಬೇಡಿ. ನಾನೀಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ.”

ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮುವ್ವತ್ತೆರಡು ದಂಗೆಗಳನ್ನು ವ್ಯವಸ್ಥೆಗೊಳಿಸಿದ ಮತ್ತು ಎಲ್ಲದರಲ್ಲೂ ಸೋತ. ಅವನಿಗೆ ಹದಿನೇಳು ಜನ ಹೆಂಗಸರಿಂದ ಹದಿನೇಳು ಗಂಡು ಮಕ್ಕಳಾಗಿದ್ದರು ಮತ್ತು ಕೊನೆಯವನಿಗೆ ಮುವ್ವತ್ತೈದು ವರ್ಷವಾಗುವ ಮುಂಚೆ ಅವರೆಲ್ಲರನ್ನು ಒಬ್ಬೊಬ್ಬರನ್ನಾಗಿ ಹಿಡಿದು ಕೊಲ್ಲಲಾಯಿತು. ಅವನ ಮೇಲೆಯೇ ನಡೆದ ಹದಿನಾಲ್ಕು ಹತ್ಯೆಯ ಪ್ರಯತ್ನ ಎಪ್ಪತ್ಮೂರು ಸಲ ಸೈನಿಕರು ಹೊಂಚು ಹಾಕಿ ಕೊಲ್ಲಲು ಮಾಡಿದ ಪ್ರಯತ್ನದಿಂದ ಮತ್ತು ಗುಂಡಿಕ್ಕುವ ತಂಡದವರಿಂದ ಪಾರಾಗಿದ್ದ. ಅವನು ತನ್ನ ಆಫೀಸಿನಲ್ಲಿ ಕಾಫಿಯಲ್ಲಿ ಬೆರೆಸಿದ, ಕುದುರೆಯೊಂದನ್ನು ಸಾಯಿಸಲು ಸಾಕಾಗುವಂಥ ವಿಷಕ್ಷಾರವನ್ನು ಕುಡಿದು ಬದುಕುಳಿದ. ಅವನು ಗಣರಾಜ್ಯದ ಅಧ್ಯಕ್ಷರ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ನಿರಾಕರಿಸಿದ. ಅವನು ಕ್ರಾಂತಿ ಸೈನ್ಯದ ಪ್ರಧಾನ ಸೈನ್ಯಾಧಿಕಾರಿಯ ಮಟ್ಟಕ್ಕೆ ಬೆಳೆದ. ಅವನ ಕಾರ್ಯವಿಸ್ತಾರ ಈ ಕೊನೆಯಿಂದ ಮತ್ತೊಂದು ಕೊನೆಯ ತನಕ ಹಬ್ಬಿತ್ತು. ಅವನು ಸರ್ಕಾರ ಎಲ್ಲರಿಗಿಂತ ಹೆಚ್ಚು ಭಯಗೊಂಡಿದ್ದ ವ್ಯಕ್ತಿಯಾಗಿದ್ದ. ಅವನು ಯಾರಿಗೂ ತನ್ನ ಫೋಟೋ ತೆಗೆಯಲು ಬಿಡುತ್ತಿರಲಿಲ್ಲ. ಯುದ್ಧ ಮುಗಿದ ಮೇಲೆ ಕೊಟ್ಟ ಜೀವನ ಪರ್ಯಂತ ಪಿಂಚಣಿಯನ್ನು ಅವನು ಒಪ್ಪಲಿಲ್ಲ. ಕೊನೆಯ ದಿನಗಳ ತನಕ ಅವನು ಮಕೋಂದೋದ ತನ್ನ ವರ್ಕ್‌ಶಾಪ್‌ನಲ್ಲಿ ತಯಾರಿಸುತ್ತಿದ್ದ ಸಣ್ಣ ಚಿನ್ನದ ಮೀನುಗಳಿಂದ ಜೀವನ ನಡೆಸುತ್ತಿದ್ದ. ಅವನು ಯಾವಾಗಲೂ ತಂಡದ ಮುಖ್ಯಸ್ಥನಾಗಿ ಹೋರಾಟ ನಡೆಸುತ್ತಿದ್ದರೂ ಇಪ್ಪತ್ತು ವರ್ಷದ ಜನರ ಹೋರಾಟವನ್ನು ಕೊನೆಗೊಳಿಸಿದ ನೀರ್ಲಾಂದಿಯಾ ಒಪ್ಪಂದಕ್ಕೆ ಸಹಿ ಮಾಡಿದ ಸಂದರ್ಭವನ್ನು ಬಿಟ್ಟರೆ ಅವನಿಗೆ ವಿಶೇಷವಾದ ಆಘಾತವಾಗಿರಲಿಲ್ಲ. ಅವನು ತನಗೆ ತಾನೆ ಎದೆಗೆ ಗುಂಡಿಕ್ಕಿಕೊಂಡಾಗ ಅದು ಯಾವ ಪ್ರಮುಖ ಅಂಗಕ್ಕೆ ಹಾನಿಮಾಡದೆ ಬೆನ್ನಿನ ಮೂಲಕ ಆಚೆ ಬಂದಿತ್ತು. ಇವೆಲ್ಲದರ ಕೊನೆಗೆ ಉಳಿದದ್ದು, ಅವನ ಹೆಸರಿನ ರಸ್ತೆಯೊಂದು ಮಾತ್ರ. ಆದರೆ ವಯಸ್ಸಾಗಿ ಸಾಯುವ ಮುಂಚೆ ತಾನು ಆ ದಿನ ಬೆಳಿಗ್ಗೆ ಇಪ್ಪತ್ತೊಂದು ಜನರೊಡನೆ ಜನರಲ್ ವಿಕ್ಟೋರಿಯೋನ ಸೈನ್ಯಕ್ಕೆ ಸೇರಲು ಹೊರಟಾಗ ಆಂಥದೇನನ್ನೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ.
ಅವನು ಹೊರಡುವ ಮುಂಚೆ ಅರ್ಕಾದಿಯೋಗೆ ಹೇಳಿದ್ದಿಷ್ಟೆ: “ಮಕೋಂದೋ ನೋಡಿಕೊಳ್ಳೋದನ್ನ ನಿಂಗೆ ಬಿಡ್ತಿದೀವಿ. ಒಳ್ಳೆ ರೀತೀಲಿ ಕೊಡ್ತಿದೀವಿ. ಸಾಧ್ಯವಾದ್ರೆ ನಾವು ವಾಪಸು ಬಂದಾಗ ಇದಕ್ಕಿಂತ ಚೆನ್ನಾಗಿರೋ ಹಾಗೆ ಮಾಡು.”

ಅರ್ಕಾದಿಯೋ ಆ ಸೂಚನೆಗೆ ವೈಯಕ್ತಿಕ ವ್ಯಾಖ್ಯಾನ ಕೊಟ್ಟ. ಅವನು ಸೈನ್ಯಾಧಿಕಾರಿಗಳಿಗಿರುವಂತೆ ಹೆಣಿಗೆ ಹಾಕಿದ ಮತ್ತು ಭುಜಕೀರ್ತಿ ಇರುವ ಸಮವಸ್ತ್ರವನ್ನು ಮೆಲ್‌ಕಿಯಾದೆಸ್‌ನ ಪುಸ್ತಕಗಳಿಂದ ಸ್ಫೂರ್ತಿಗೊಂಡು ರೂಪಿಸಿದ ಮತ್ತು ಕೊಂದು ಹಾಕಿದ ಕ್ಯಾಪ್ಟನ್‌ನ ಬಂಗಾರದ ಕಟ್ಟು ಹಾಕಿದ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡಿರುತ್ತಿದ್ದ. ಅವನು ಎರಡು ಫಿರಂಗಿಗಳನ್ನು ಊರ ಮುಂಬಾಗಿಲಲ್ಲಿ ಇಟ್ಟು, ತನ್ನ ಪ್ರತಿಪಾದನೆಗಳಿಂದ ಉತ್ತೇಜಿತರಾದ ಹಳೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ತೊಡುವಂತೆ ಹೇಳಿ, ಹೊರಗಿನವರಿಗೆ ಬಿಗಿಯಾದ ಬಂದೋಬಸ್ತ್‌ನಲ್ಲಿ ಇದೆ ಎಂಬ ಅಭಿಪ್ರಾಯ ಮೂಡುವುದಕ್ಕಾಗಿ ರಸ್ತೆಗಳಲ್ಲಿ ತಿರುಗಾಡುವಂತೆ ಮಾಡಿದ. ಅದರಿಂದ ತಪ್ಪೆನಿಸುವ ಎರಡು ಅಂಶಗಳಿದ್ದವು. ಸರ್ಕಾರ ಆ ಸ್ಥಳದ ಮೇಲೆ ಆಕ್ರಮಣ ನಡೆಸಲು ಹತ್ತು ತಿಂಗಳ ತನಕ ಧೈರ್ಯವಹಿಸಲಿಲ್ಲ ಮತ್ತು ಹಾಗೆ ಮಾಡಿದಾಗ ಅದು ಎಷ್ಟು ದೊಡ್ಡ ಸೈನಿಕರ ತಂಡವನ್ನು ಕಳಿಸಿತೆಂದರೆ ಪ್ರತಿರೋಧವನ್ನು ಅರ್ಥ ಗಂಟೆಯಲ್ಲಿ ಅಡಗಿಸಲಾಯಿತು. ತನ್ನ ಆಡಳಿತದ ಮೊದಲನೆ ದಿನದಿಂದಲೇ ಕಟ್ಟಳೆಗಳನ್ನು ಹೊರಡಿಸುವ ಬಗ್ಗೆ ತನಗಿರುವ ಬಲವನ್ನು ಅರ್ಕಾದಿಯೋ ತೋರಿಸಿಕೊಂಡ. ಪ್ರತಿ ದಿನ ನಾಲ್ಕು ಕಟ್ಟಳೆಗಳನ್ನು ಜಾರಿಗೊಳಿಸುತ್ತಿದ್ದ ಮತ್ತು ತಲೆಯೊಳಗೆ ಬಂದದ್ದೆಲ್ಲವನ್ನೂ ವ್ಯವಸ್ಥೆಗೊಳಿಸುತ್ತಿದ್ದ. ಹದಿನೆಂಟು ವರ್ಷ ದಾಟಿದವರಿಗೆ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸಿದ. ಸಂಜೆ ಆರರ ನಂತರ ರಸ್ತೆಯಲ್ಲಿ ಓಡಾಡುವ ಪ್ರಾಣಿಗಳು ಸಾರ್ವಜನಿಕ ಸ್ವತ್ತುಗಳೆಂದು ಘೋಷಿಸಿದ. ಅಲ್ಲದೆ ವಯಸ್ಸಾದವರಿಗೆ ತೋಳಿನ ಸುತ್ತ ಕೆಂಪು ಪಟ್ಟಿ ಕಟ್ಟಿಕೊಳ್ಳಬೇಕೆಂದು ವಿಧಿಸಿದ. ಫಾದರ್ ನಿಕನೋರ್‌ನನ್ನು ಪಾದ್ರಿಯ ಆಡಳಿತದ ವಲಯದಲ್ಲಿ ಪ್ರತ್ಯೇಕವಾಗಿರಿಸಿ, ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಹೇಳುವುದನ್ನು ಅಥವಾ ಗಂಟೆ ಬಾರಿಸುವುದನ್ನು ಉದಾರವಾದಿಗಳ ವಿಜಯಕ್ಕಲ್ಲದೆ ಉಳಿದಂತೆ ನಿಷೇಧಿಸಿದ. ತನ್ನ ಗುರುಗಳ ಬಗ್ಗೆ ಯಾರೂ ಅನುಮಾನಿಸಬಾರದೆಂದು ಗುಂಡಿಕ್ಕುವ ತಂಡವನ್ನು ಚೌಕದಲ್ಲಿ ವ್ಯವಸ್ಥೆಗೊಳಿಸಿದ ಮತ್ತು ಅಲ್ಲಿ ನಿಲ್ಲಿಸಿದ ಒಂದು ಬೆದರು ಗೊಂಬೆಗೆ ಅವರಿಂದ ಗುಂಡು ಹೊಡೆಸಿz. ಪ್ರಾರಂಭದಲ್ಲಿ ಯಾರೂ ಅವನನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಎಷ್ಟಾಗಲಿ ಅವರೆಲ್ಲ ಹರೆಯಕ್ಕೆ ಬರುತ್ತಿದ್ದ ಆಡುವ ಹುಡುಗರಾಗಿದ್ದರು. ಆದರೆ ಒಂದು ದಿನ ಅರ್ಕಾದಿಯೋ ಕತಾವುರೆಯ ಅಂಗಡಿಗೆ ಹೋದಾಗ ಗುಂಪಿನಲ್ಲಿದ್ದ ತುತ್ತೂರಿ ಊದುವನೊಬ್ಬ ಅವನನ್ನು ತಮಾಷೆಯೊಂದಿಗೆ ಬರಮಾಡಿದ್ದು ಗಿರಾಕಿಗಳು ನಗುವಂತೆ ಮಾಡಿತು. ಅರ್ಕಾದಿಯೋ ಅಧಿಕಾರಿ ಅಗೌರವ ತೋರಿಸಿದ್ದಕ್ಕಾಗಿ ಅವನಿಗೆ ಗುಂಡಿಟ್ಟು ಕೊಲ್ಲಿಸಿದ. ವಿರೋಧಿಸಿದ ಜನರನ್ನು ಸ್ಕೂಲಿನಲ್ಲಿ ಕಟ್ಟಿದ್ದ ಗೂಟಗಳಿಗೆ ಕಟ್ಟಿ ಕೇವಲ ಬ್ರೆಡ್ ಮತ್ತು ನೀರು ಕೊಟ್ಟಿದ್ದ. ಪ್ರತಿ ಬಾರಿ ಅವನ ಹೊಸದಾದ ಅತಿರೇಕದ ಕೆಲಸದ ಬಗ್ಗೆ ತಿಳಿದಾಗ ಉರ್ಸುಲಾ “ನೀನೊಬ್ಬ ಕೊಲೆಗಾರ” ಎಂದು ಅವನ ಮುಖಕ್ಕೆ ರಾಚುತ್ತಿದ್ದಳು. “ಅವ್ರೇಲಿಯಾನೋಗೆ ಇವೆಲ್ಲ ಗೊತ್ತಾದರೆ ನಿನ್ನನ್ನ ಶೂಟ್ ಮಾಡ್ತಾನೆ ಅದರಿಂದ ನಂಗೆ ಹಿಡಿಸಲಾರದಷ್ಟು ಸಂತೋಷವಾಗತ್ತೆ” ಎನ್ನುತ್ತಿದ್ದಳು. ಆದರೆ ಅದರಿಂದ ಏನೂ ಉಪಯೋಗವಾಗಲಿಲ್ಲ. ಅರ್ಕಾದಿಯೋ ಅನಗತ್ಯವಾದ ಭರಾಟೆಯಿಂದ ಹಿಡಿತವನ್ನು ಬಿಗಿ ಮಾಡುವುದನ್ನು ಮುಂದುವರಿಸಿ ಮಕೋಂದೋ ಅಲ್ಲಿಯವರೆಗೆ ಕಂಡರಿಯದಷ್ಟು ಕ್ರೂರ ಆಡಳಿತಗಾರನಾದ. ಯಾವುದೋ ಸಂದರ್ಭದಲ್ಲಿ ದಾನ್ ಅಪೋಲಿನರ್ ಮೊಸ್ಕೋತೆ, “ಈಗ ಆಗಿರೋ ವ್ಯತ್ಯಾಸವನ್ನು ಅನುಭವಿಸಲಿ. ಇದು ಉದಾರವಾದಿಗಳ ಸ್ವರ್ಗ” ಎಂದ. ಅರ್ಕಾದಿಯೋಗೆ ಇದು ತಿಳಿಯಿತು. ಅವನು ಸೈನಿಕರೊಂದಿಗೆ ಹೋಗಿ ಅವನ ಮನೆಯ ಸಾಮಾನು ಸರಂಜಾಮನ್ನು ಚಿಂದಿ ಮಾಡಿ ಹೆಣ್ಣು ಮಕ್ಕಳಿಗೂ ತದಕಿದ. ಅಲ್ಲದೆ ದಾನ್ ಅಪೋಲಿನರ್ ಮೊಸ್ಕೋತೆಯನ್ನು ದರದರ ಎಳೆದ. ಉರ್ಸುಲಾ ಅವನ ವಿರುದ್ಧ ಕೂಗಿ ಅಬ್ಬರಿಸುತ್ತ ಕೈಯಲ್ಲಿ ಚಾವಟಿ ಹಿಡಿದು ಕೇಂದ್ರ ಕಾರ್ಯಾಗಾರಕ್ಕೆ ಬಂದಾಗ ಅರ್ಕಾದಿಯೋ ಗುಂಡಿಕ್ಕುವ ತಂಡಕ್ಕೆ ತಾನೇ ಆರ್ಡರ್ ಕೊಡಲು ಸಿದ್ಧನಾಗುತ್ತಿದ್ದ.
“ನಿಂಗೆಷ್ಟು ಧೈರ್ಯ, ಸೂಳೆ ಮಗನೆ!” ಎಂದು ಅಬ್ಬರಿಸಿದಳು.
ಅರ್ಕಾದಿಯೋ ಪ್ರತಿಕ್ರಿಸುವ ಮುಂಚೆಯೇ ಒಂದು ಸಲ ಬಾರಿಸಿದಳು. “ಇದಕ್ಕೆ ನಿಂಗೆಷ್ಟು ಧೈರ್ಯ…. ನೀನು ಕೊಲೆಗಡುಕ… ನನ್ನನ್ನು ಕೊಂದು ಬಿಡು. ಪಾಪಿಯ ಮಗ ನೀನು. ನಿನ್ನಂಥ ರಾಕ್ಷಸನ್ನ ಬೆಳೆಸಿದೆ ಅಂತ ನಾಚ್ಕೆ ಪಡೋದು ತಪ್ಪುತ್ತೆ” ಎಂದು ಕೂಗಿದಳು. ಅವನನ್ನು ಅಂಗಳದ ತನಕ ಅಟ್ಟಿಸಿಕೊಂಡು ಹೋಗಿ ಹಿಗ್ಗಾಮುಗ್ಗಾ ಚಾವಟಿಯಿಂದ ಬಾರಿಸಿದಳು. ಅಲ್ಲಿ ಅವನು ಬಸವನ ಹುಳುವಿನ ಹಾಗೆ ಸುರುಳಿ ಸುತ್ತಿ ಉರುಳಿದ. ಹಿಂದಿನ ದಿನ ತಮಾಷೆಗಾಗಿ ಬೆದರುಗೊಂಬೆಗೆ ಗುಂಡು ಹೊಡೆದು ಚೂರು ಚೂರು ಮಾಡಿದ ಅದೇ ಕಂಬಕ್ಕೆ ಕಟ್ಟಿ ಹಾಕಿದ್ದ ದಾನ್ ಅಪೋಲಿನರ್ ಮೊಸ್ಕೋತೆಗೆ ಪ್ರಜ್ಞೆ ತಪ್ಪಿತ್ತು. ಉರ್ಸುಲಾ ತಮ್ಮ ಬೆನ್ನು ಹತ್ತುವಳೆಂಬ ಭಯದಿಂದ ತಂಡದ ಹುಡುಗರು ಕಾಲು ಕಿತ್ತರು. ಆದರೆ ಉರ್ಸುಲಾ ಅವರ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ಅವಳು ಚಿಂದಿಯಾದ ಸಮವಸ್ತ್ರದಲ್ಲಿ ರೋಷದಿಂದ ಕುದ್ದು ನರಳುತ್ತಿದ್ದ ಅರ್ಕಾದಿಯೋನನ್ನು ಅಲ್ಲಿಯೇ ಬಿಟ್ಟಳು. ಕಟ್ಟಿದ್ದ ದಾನ್ ಅಪೋಲಿನರ್ ಮೊಸ್ಕೋತೆಯನ್ನು ಬಿಚ್ಚಿ ಮನೆಗೆ ಕರೆದುಕೊಂಡು ಹೋದಳು. ಕೇಂದ್ರ ಕಾರ್ಯಾಗಾರವನ್ನು ಬಿಡುವ ಮುಂಚೆ ಅಲ್ಲಿದ್ದ ಕೈದಿಗಳಿಗೆ ಬಿಡುಗಡೆ ಮಾಡಿದಳು.

ಆ ಸಮಯದಿಂದ ಊರನ್ನು ಆಳಿದವಳು ಅವಳು. ಭಾನುವಾರದ ಸಾಮೂಹಿಕ ಪ್ರಾರ್ಥನಾ ಸಭೆಯನ್ನು ಮರುಸ್ಥಾಪಿಸಿದಳು, ಕೆಂಪು ಪಟ್ಟಿ ಕಟ್ಟಿಕೊಳ್ಳುವುದನ್ನು ನಿಲ್ಲಿಸಿದಳು. ಅಲ್ಲದೆ ಹುಚ್ಚುಚ್ಚಾದ ಕಟ್ಟಳೆಗ;ನ್ನು ವಜಾ;iಡಿದಳು. ಎಷ್ಟು ಶಕ್ತಿ ಇದ್ದರೂ ಅವಳು ತನ್ನ ದುರದೃಷ್ಟಕ್ಕಾಗಿ ಕಣ್ಣೀರಿಟ್ಟಳು. ಅವಳೆಷ್ಟು ಏಕಾಂಗಿಯಾಗಿದ್ದಳೆಂದರೆ, ಮರದ ಕೆಳಗಿದ್ದು ಮರೆತು ಹೋದ ಗಂಡನ ಜೊತೆಯನ್ನು ಬಯಸಿದಳು. “ನೋಡಿ ನಾವೆಲ್ಲಿಗೆ ಬಂದಿದೀವಿ” ಎಂದು ಜೂನ್ ತಿಂಗಳ ಮಳೆ ಚಪ್ಪರವನ್ನು ಕೆಳಗುರುಳಿಸುವುದೆಂಬ ಭಯ ಹುಟ್ಟಿಸಿದಾಗ ಹೇಳಿ, “ಖಾಲಿ ಮನೆ ಕಡೆ ನೋಡಿ. ಮಕ್ಕಳೆಲ್ಲ ಎಲ್ಲಂದರಲ್ಲಿ ಚದುರಿ ಹೋಗಿ, ಈಗ ಮತ್ತೆ ನಾವಿಬ್ಬರೇ, ಮೊದಲಿದ್ದ ಹಾಗೆ” ಎಂದಳು. ಯಾವುದರ ಅರಿವಿರದ ಕೂಪದಲ್ಲಿ ಮಳುಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ, ಅವಳ ಆಲೋಚನೆಗಳಿಗೆ ಕಿವುಡಾಗಿದ್ದ. ಅವನು ತನ್ನ ಹುಚ್ಚುತನದ ಪ್ರಾರಂಭದ ದಿನಗಳಲ್ಲಿ, ತನ್ನ ದೈನಂದಿನ ಅಗತ್ಯಗಳನ್ನು ಪಟಪಟನೆ ಲ್ಯಾಟಿನ್ ಪದಗಳಲ್ಲಿ ಹೇಳುತ್ತಿದ್ದ. ಅಮರಾಂತ ತಂದು ಕೊಟ್ಟ ಊಟ ಮಾಡುತ್ತ ಅವಳಿಗೆ ತನ್ನನ್ನು ಹೆಚ್ಚು ಕಾಡುವುದೇನು ಎನ್ನುವುದನ್ನು ಸ್ವಷ್ಟ ಹಾಗೂ ಸರಳವಾಗಿ ಹೇಳುತ್ತಿದ್ದ. ಅವಳು ಕೊಡುತ್ತಿದ್ದ ಚೀಪುವ ವಸ್ತು ಮತ್ತು ಸಾಸುವೆ ಮಸಾಲೆ ಲೇಪವನ್ನು ಸುಮ್ಮನೆ ತೆಗೆದುಕೊಳ್ಳುತ್ತಿದ್ದ. ಆದರೆ ಉರ್ಸುಲಾ ತನ್ನ ವಿಚಾರಗಳನ್ನು ತಿಳಿಸಲು ಹೋಗುವಷ್ಟರಲ್ಲಿ ಅವನು ವಾಸ್ತವದಿಂದ ಎಲ್ಲ ಸಂಪರ್ಕವನ್ನು ಕಳೆದುಕೊಂಡಿದ್ದ. ಅವನನ್ನು ಸ್ಟೂಲಿನ ಮೇಲೆ ಕೂಡಿಸಿ ಇಷ್ಟಿಷ್ಟೆ ಸ್ನಾನಮಾಡಿಸುತ್ತ, ಸಂಸಾರದ ವಿಷಯವನ್ನು ತಿಳಿಸುತ್ತಿದ್ದಳು. “ಅವ್ರೇಲಿಯಾನೋ ಯುದ್ಧಕ್ಕೆ ಹೋಗಿ ನಾಲ್ಕು ತಿಂಗಳಾಯ್ತ. ಅವನ ಬಗ್ಗೆ ಏನೂ ತಿಳಿದಿಲ್ಲ” ಎಂದು ಅವನ ಬೆನ್ನಿಗೆ ಸೋಪು ಹಚ್ಚಿ ಉಜ್ಜುತ್ತ ಹೇಳುವಳು. “ಹೊಸೆ ಅರ್ಕಾದಿಯೋ ನಿಮಗಿಂತ ಎತ್ತರವಾಗಿ ಭಾರಿ ಮೈಕಟ್ಟಿನವನಾಗಿ ವಾಪಸು ಬಂದಿದ್ದಾನೆ. ಮೈ ಮೇಲೆಲ್ಲ ಹಚ್ಚೆ. ಆದರೆ ಅವನು ನಾವೆಲ್ಲ ನಾಚ್ಕೆ ಪಡೋ ಹಾಗೆ ಮಾಡಿದಾನಷ್ಟೆ”. ಕೆಟ್ಟ ಸುದ್ದಿಯಿಂದ ಅವನಿಗೆ ಬೇಸರವಾಯಿತೆಂದು ಅವಳಿಗನ್ನಿಸಿತು. ಅನಂತರ ಅವಳು ಅವನಿಗೆ ಸುಳ್ಳು ಹೇಳಲು ನಿರ್ಧರಿಸಿದಳು. ಅವನ ಮಲದ ಮೇಲೆ ಬೂದಿ ಎರಚಿ ಸಲಿಕೆಯಿಂದ ಅದನ್ನು ಎತ್ತಿ ಹಾಕುವಾಗ, “ನೀನು ನಾನು ಹೇಳಿದ್ದನ್ನ ನಂಬೋದಿಲ್ಲ… ಹೊಸೆ ಅರ್ಕಾದಿಯೋ, ರೆಬೇಕ ಮದುವೆಯಾಗಲಿ ಅಂತ ದೇವರ ಇಷ್ಟವಿತ್ತು. ಈಗವರು ಸಂತೋಷವಾಗಿದ್ದಾರೆ.” ಅವಳು ತೋರಿಕೆಯ ಮಾತುಗಳ ಬಗ್ಗೆ ಎಷ್ಟು ಪ್ರಾಮಾಣಿಕಳಾಗಿದ್ದಳೆಂದg, ಸುಳ್ಳುಗಳಿಂದ ತನಗೆ ತಾನೆ ಸಮಾಧಾನ ಪಟ್ಟುಕೊಂಡಳು. ಅವಳು, “ಅರ್ಕಾದಿಯೋ ಈಗ ಗಂಭೀರವಾಗಿದ್ದಾನೆ, ತುಂಬ ಧೈರ್ಯಶಾಲಿ. ಅಲ್ದೆ ಯೂನಿಫಾರಂನಲ್ಲಿ ತುಂಬ ಚೆನ್ನಾಗಿ ಕಾಣ್ತಾನೆ.” ಅದೆಲ್ಲ ಸತ್ತವನ ಮುಂದೆ ಹೇಳಿದಂತಾಯಿತು. ಏಕೆಂದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಆಗಲೆ ಯಾವುದೂ ಕಾಡದಂಥ ಸ್ಥಿತಿಯಲ್ಲಿದ್ದ. ಅವಳು ಹೇಳುತ್ತಿದ್ದ ಪ್ರತಿಯೊಂದಕ್ಕೂ ಅವನು ಶಾಂತವಾಗಿರುವಂತೆ, ಅಲಕ್ಷ್ಯದಿಂದಿರುವಂತೆ ಕಾಣುತ್ತಿದ್ದ. ಅವನು ಸ್ಟೂಲ್‌ನಿಂದ ಜರುಗಲೇ ಇಲ್ಲ. ಕಾಣದಾಚೆಯ ಶಕ್ತಿಯೊಂದು ಅವನನ್ನು ಮರಕ್ಕೆ ಹಾಕಿದಂತೆ, ಯಾವ ಬಂಧವೂ ಬೇಕಿರz, ಬಿಸಿಲು-ಮಳೆಗೆ ತೆರೆದುಕೊಂಡು ಅಲ್ಲಿಯೇ ಇದ್ದ. ಮಳೆ ಬೀಳುವುದು ಮುಗಿಯದೆ ಆಗಸ್ಟ್‌ನ ಹಬ್ಬದಲ್ಲಿ ಉರ್ಸುಲಾಳಿಗೆ ತನಗೆ ಸತ್ಯವೆಂದು ತೋರಿದ ಸುದ್ದಿಯನ್ನು ಅವನಿಗೆ ತಿಳಿಸಲು ಸಾಧ್ಯವಾಯಿತು.
ಅವಳು “ನಾವಿನ್ನೂ ಅದೃಷ್ಟಶಾಲಿಗಳು ಅಂದ್ರೆ ನೀವು ನಂಬ್ತೀರಾ?….. ಅಮರಾಂತ ಮತ್ತು ಇಟಲಿಯ ಪಿಯಾನೋದವನು ಮದುವೆ ಆಗ್ತಿದ್ದಾರೆ” ಎಂದಳು.

ಉರ್ಸುಲಾ ನೋಡಿಕೊಂಡಂತೆ ಅಮರಾಂತ ಮತ್ತು ಪಿಯತ್ರೋ ಕ್ರೆಸ್ಪಿ ಅವಳ ಸ್ನೇಹ ಗಾಢವಾಯಿತು. ಈಗವಳಿಗೆ ಅವರಿಬ್ಬರ ಭೇಟಿಯ ಮೇಲೆ ಕಣ್ಣಿಸುವುದು ಅನಗತ್ಯವೆನಿಸಿತು. ಇಟಲಿಯವನು ಸಂಜೆಯ ಸಮಯಕ್ಕೆ ಗುಂಡಿಗೆ ಹೂ ಸಿಕ್ಕಿಕೊಂಡು ಬಂದು ಅಮರಾಂತಳಿಗೆ ಪೆತ್ರಾರ್ಚ್‌ನ ಸಾನೆಟ್ಟುಗಳನ್ನು ಅನುವಾದ ಮಾಡುತ್ತಿದ್ದ. ಅವರು ಮುಂಭಾಗದಲ್ಲಿ ಸುತ್ತಲಿನ ಹೂ ಹಸಿರಿನ ಇಕ್ಕಟ್ಟಿನಲ್ಲಿ ಕುಳಿತು, ಯುದ್ಧದ ಕೆಟ್ಟ ಸುದ್ದಿಗಳನ್ನು ಅಲಕ್ಷಿಸಿ, ಸೊಳ್ಳೆಗಳು ಅವರಿಗೆ ನಡುಮನೆಗೆ ಹೋಗುವಂತೆ ಮಾಡುವ ತನಕ ಅವನು ಓದುತ್ತಿದ್ದ ಮತ್ತು ಅವಳು ಲೇಸಿನ ಹೊಲಿಗೆ ಮಾಡುತ್ತಿದ್ದಳು. ಅಮರಾಂತಳ ಸೂಕ್ಷ್ಮತೆ ಮತ್ತು ಮಾಧುರ್ಯ ಅವನೊಳಗೆ ಕಾಣದ ನೇಯ್ಗೆಯನ್ನು ಹೆಣೆಯುತ್ತಿದ್ದವು. ಎಂಟು ಗಂಟೆಗೆ ಹೊರಡಬೇಕಾದ್ದರಿಂದ ಅವನು ತನ್ನ ಉಂಗುರವಿರದ ಬೆರಳುಗಳಿಂದ ಅವುಗಳನ್ನು ಅತ್ತ ಸರಿಸುತ್ತಿದ್ದ. ಅವರ ಹತ್ತಿರ ಪಿಯತ್ರೋ ಕ್ರೆಸ್ಪಿಗೆ ಇಟಲಿಯಿಂದ ಬಂದ ಒಂದು ಫೋಟೋ ಆಲ್ಬಂ ಇತ್ತು. ಅದರಲ್ಲಿ ನಿರ್ಜನ ಪಾರ್ಕ್‌ನಲ್ಲಿ ಕುಳಿತ ಪ್ರೇಮಿಗಳು, ಹೃದಯ ಭೇದಿಸಿದ ಬಾಣ, ಬಂಗಾರದ ರಿಬ್ಬನ್ ಕಟ್ಟಿ ಹಿಡಿದ ಪಾರಿವಾಳ ಮುಂತಾದವುಗಳ ಕಾರ್ಡುಗಳಿದ್ದವು. ಅವನು ಕಾರ್ಡುಗಳನ್ನು ನೋಡುತ್ತ, “ನಾನು ಫ್ಲಾರೆನ್ಸ್‌ನಲ್ಲಿರೋ ಈ ಪಾರ್ಕ್‌ಗೆ ಹೋಗಿದೀನಿ. ಅಂಗೈಯಲ್ಲಿ ಕಾಳುಗಳನ್ನು ಹಿಡಿದುಕೊಂಡರೆ ಪಕ್ಷಿಗಳು ಬಂದು ತಿನ್ನುತ್ವೆ” ಎನ್ನುತ್ತಾನೆ. ಒಂದೊಂದು ಸಲ ವೆನಿಸ್ಸಿನ ವಾಟರ್ ಕಲರ್ ನೋಡಿದಾಗ ಅದರ ಹಂಬಲ ನುಗ್ಗಿ ಬಂದು ಅಲ್ಲಿನ ಹಸಿ ಮಣ್ಣು, ಮೀನಿನ ವಾಸನೆ ಹೂವಿನ ಸುಗಂಧವಾಗಿ ಪರಿವರ್ತಿತವಾಗುತ್ತಿತ್ತು. ಅಮರಾಂತ ನಿಟ್ಟುಸಿರು ಬಿಟ್ಟು ಸರ್ವನಾಶವಾದ ಪುರಾತನ ಪಟ್ಟಣಗಳ ಅವಶೇಷಗಳಿರುವ ಪ್ರದೇಶದಲ್ಲಿ, ಮಗುವಿನಂತೆ ಮಾತಾಡುವ ಚೆಲುವಾದ ಗಂಡು ಹೆಣ್ಣುಗಳನ್ನು ಕುರಿತು ಕನಸು ಕಾಣುತ್ತಿದ್ದಳು. ಅದನ್ನು ಹುಡುಕುತ್ತ ಸಮುದ್ರವನ್ನು ದಾಟಿ ರೆಬೇಕಳ ಮೋಹ ಪರವಶತೆಯ ಗೊಂದಲದಲ್ಲಿದ್ದ ಪಿಯತ್ರೋ ಕ್ರೆಸ್ಪಿಗೆ ಪ್ರೇಮ ದೊರಕಿತು. ಅಭಿವೃದ್ಧಿ ಸಂತೋಷದ ಜೊತೆಗೂಡಿತು. ಅವನ ಅಂಗಡಿ ಬೆಳೆದು ಇಡೀ ಬ್ಲಾಕನ್ನು ಆಕ್ರಮಿಸಿತ್ತು ಮತ್ತು ಕ್ಯಾರಿಲೋನ ವಾದ್ಯಗೋಷ್ಠಿಯ ಜೊತೆ ಗಂಟೆಯನ್ನು ತಿಳಿಸುವ ಫ್ಲಾರೆನ್ಸ್‌ನ ಬೆಲ್ ಟವರ್‌ನ ಮರುನಿರ್ಮಾಣದ ಭ್ರಮಾ ಕೇಂದ್ರವಾಗಿತ್ತಲ್ಲz, ಸರೆಂಟೋದ ಮ್ಯೂಸಿಕ್ ಬಾಕ್ಸ್ಸ್‌ಗಳು ಹಾಗೂ ತೆಗೆದಾಗ ಪಂಚಸ್ವರದ ಸಂಗೀತವನ್ನು ಹೊಮ್ಮಿಸುವ ಚೀನದ ಕಾಂಪ್ಯಾಕ್ಟ್‌ಗಳು ಮತ್ತು ಬಯಸಿದ ರೀತಿಯ ವಾದ್ಯದುಪಕರಣಗಳು ಮತ್ತು ಯಾಂತ್ರಿಕ ಗೊಂಬೆಗಳಿದ್ದವು. ಅವನ ತಮ್ಮ ಬ್ರುನೋ ಕ್ರೆಸ್ಪಿ ಅಂಗಡಿ ನೋಡಿಕೊಳ್ಳುತ್ತಿದ್ದ. ಏಕೆಂದರೆ ಪಿಯತ್ರೋ ಕ್ರೆಪ್ಸಿಗೆ ಸಂಗೀತ ಪಾಠಶಾಲೆಯನ್ನು ನಡೆಸುವುದಕ್ಕಷ್ಟೆ ಸಮಯ ಸಾಕಾಗುತ್ತಿತ್ತು. ಅವನಿಂದಾಗಿ ಥಳಕಿನಿಂದ ಮಿರುಗುತ್ತ ಟರ್ಕಿಗಳ ರಸ್ತೆ ಯಾರಿಗೇ ಆದರೂ ಅರ್ಕಾದಿಯೋನ ಹುಚ್ಚಾಟ ಮತ್ತು ಯುದ್ಧದ ಭೀಕರತೆಯನ್ನು ಮರೆಸುವಂಥ ಸಂಗೀತ ಸುಧೆ ಒದಗಿಸಿತು. ಉರ್ಸುಲಾ ಭಾನುವಾರದ ಪ್ರಾರ್ಥನಾ ಸಭೆಯನ್ನು ಮತ್ತೆ ಪ್ರಾರಂಭಿಸಲು ಆರ್ಡರ್ ಮಾಡಿದಾಗ ಪಿಯತ್ರೋ ಕ್ರೆಪ್ಸಿ ಚರ್ಚ್‌ಗೆ ಜರ್ಮನಿಯ ಹಾರ್ಮೋನಿಯಂ ಒಂದನ್ನು ಕೊಡುಗೆಯಾಗಿ ಕೊಟ್ಟ ಮತ್ತು ಮಕ್ಕಳ ಸಮೂಹ ಗೀತೆಯನ್ನು ವ್ಯವಸ್ಥೆಗೊಳಿಸಿದ. ಅಲ್ಲದೆ ಫಾದರ್ ನಿಕನೋರ್‌ನ ಮತಾಚರಣೆಗಳನ್ನು ಉಜ್ವಲಗೊಳಿಸುವಂಥ ಗ್ರೆಗೇರಿಯದ ರೆಪರ್ಟರಿಯನ್ನು ನಿರ್ಮಿಸಿದ. ಅವನು ಅಮರಾಂತಳಿಗೆ ಗಂಡನಾಗುವುದರ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಅವರು ಭಾವತೀವ್ರvಗೆ ಒಳಗಾಗದೆ ಸಹಜ ಪ್ರೇಮದ ಸೆಳವಿಗೆ ತಮ್ಮನ್ನು ತಾವು ಬಿಟ್ಟು ಕೊಟ್ಟು ಮದುವೆಯ ದಿನಾಂಕವನ್ನು ಮಾತ್ರ ಗೊತ್ತು ಮಾಡಬೇಕಾದ ಹಂತ ತಲುಪಿದ್ದರು. ಅವರು ಯಾವ ಅಡೆತಡೆಗಳನ್ನು ಎದುರಿಸಲಿಲ್ಲ. ರೆಬೇಕಳ ಮದುವೆಯನ್ನು ಮತ್ತೆ ಮತ್ತೆ ಮುಂದಕ್ಕೆ ಹಾಕುತ್ತ ಅವಳ ವಿಧಿಯನ್ನು ತಿರುಚಿದ್ದಕ್ಕಾಗಿ ತನ್ನನ್ನೇ ತಾನು ಹಳಿದುಕೊಂಡ ಉರ್ಸುಲಾ ಮತ್ತಷ್ಟು ದುಃಖಕ್ಕೆ ಸಿದ್ಧಳಿರಲಿಲ್ಲ. ಮನಸ್ಸು ನೋಯಿಸುತ್ತಿದ್ದ ಯುದ್ಧ, ಅವ್ರೇಲಿಯಾನೋ ಇಲ್ಲದೇ ಇರುವುದು, ಅರ್ಕಾದಿಯೋನ ದೌರ್ಜನ್ಯ ಹಾಗೂ ಹೊಸೆ ಅರ್ಕಾದಿಯೋ ಮತ್ತು ರೆಬೇಕರನ್ನು ಹೊರಹಾಕಿದ್ದರಿಂದ, ರೆಮಿದಿಯೋಸ್‌ಳ ಸಾವಿನ ಶೋಕದ ತೀವ್ರತೆ ಕಡಿಮೆಯಾಗಿತ್ತು. ಇನ್ನೇನು ಮದುವೆ ಜರುಗಲಿದ್ದುದರಿಂದ ಅವ್ರೇಲಿಯಾನೋ ಹೊಸೆ ತನ್ನಲ್ಲಿ ಪುತ್ರ ಸದೃಶ ಭಾವನೆಗಳನ್ನು ಹುಟ್ಟಿಸಿದ್ದಾಗಿ ಪಿಯತ್ರೋ ಕ್ರೆಪ್ಸಿ ತಿಳಿಸಿ, ಅವನನ್ನು ಅವರ ಹಿರಿಯ ಮಗನಂತೆ ಕಾಣುವುದಾಗಿ ಹೇಳಿದ. ಎಲ್ಲವೂ ಸರಳವಾಗಿ ಸಾಗುತ್ತಿದೆ ಎಂದು ಅಮರಾಂತ ಭಾವಿಸುವಂತಾಯಿತು. ಆದರೆ ರೆಬೇಕಳಂತೆ ಕೊಂಚವೂ ಆತಂಕವನ್ನು ತೋರ್ಪಡಿಸಿಕೊಳ್ಳಲಿಲ್ಲ. ಅವಳು ಟೇಬಲ್ ಕ್ಲಾತ್‌ಗಳನ್ನು ಡ್ರೈ ಮಾಡಿದಷ್ಟೇ, ವಿಶೇಷವಾದ ಲೇಸ್‌ಗಳನ್ನು ಹೊಲಿದಷ್ಟೇ ಹಾಗೂ ನವಿಲುಗಳ ಕಸೂತಿ ಮಾಡಿದಷ್ಟೇ ತಾಳ್ಮೆಯಿಂದಿದ್ದ ಪಿಯತ್ರೋ ಕ್ರೆಪ್ಸಿಗೆ, ಹೃದಯದೊತ್ತಡವನ್ನು ಇನ್ನು ತಡೆದುಕೊಳ್ಳಲು ಅಸಾಧ್ಯವಾಗುವ ತನಕ ಕಾದಳು. ಅಕ್ಟೋಬರ್‌ನ ದುರ್ವಿಧಿಯ ಮಳೆಯೊಂದಿಗೆ ಆ ದಿನ ಬಂತು. ಅವಳ ತೊಡೆಯ ಮೇಲಿದ್ದ ಹೊಲಿಗೆಯ ಬುಟ್ಟಿಯನ್ನು ತೆಗೆದುಕೊಳ್ಳುತ್ತ, “ನಾವು ಮುಂದಿನ ತಿಂಗಳು ಮದುವೆಯಾಗೋಣ” ಎಂದ. ಅವನ ಕೈಗಳ ತಣ್ಣನೆಯ ಸ್ವರ್ಶದಿಂದ ಅವಳು ಕಂಪಿಸಲಿಲ್ಲ. ಅವಳು ಎಳೆಯ ಪ್ರಾಣಿಯಂತೆ ಮೆತ್ತಗೆ ಕೈ ಎಳೆದುಕೊಂಡು ಮತ್ತೆ ತನ್ನ ಕೆಲಸ ಪ್ರಾರ;ಂಭಿಸಿದಳು.
ಅವಳು ನಗುತ್ತ, “ಪೆದ್ದನ ಹಾಗೆ ಆಡ್ಬೇಡ ಪಿಯತ್ರೋ ಕ್ರೆಸ್ಪಿ, ನಾನು ಸತ್ತರೂ ನಿನ್ನ ಮದುವೆ ಆಗಲ್ಲ” ಎಂದಳು.

ಪಿಯತ್ರೋ ಕ್ರೆಸ್ಪಿ ತನ್ನ ಮೇಲಿನ ಹಿಡಿತ ಕಳೆದುಕೊಂಡ. ಹತಾಶನಾಗಿ ತನ್ನ ಬೆರಳುಗಳನ್ನು ತಿರುಚಿಕೊಂಡು ಅತ್ತ. ಆದರೆ ಅವಳನ್ನು ಕರಗಿಸಲಾಗಲಿಲ್ಲ. ಅಮರಾಂತ, “ನಿನ್ನ ಸಮಯಾನ ಹಾಳು ಮಾಡಿಕೊಳ್ಬೇಡ” ಎಂದಷ್ಟೇ ಹೇಳಿದಳು. “ನೀನು ನನ್ನನ್ನು ನಿಜವಾಗ್ಲೂ ಪ್ರೀತಿಸೋದಾದರೆ, ಇನ್ನೊಂದು ಸಲ ಈ ಮನೆಯೊಳಗೆ ಕಾಲಿಡಬೇಡ” ಎಂದಳು. ಉರ್ಸುಲಾ ಅವಮಾನದಿಂದ ತನಗೆ ಹುಚ್ಚು ಹಿಡಿಯುವುದೆಂದು ತಿಳಿದಳು. ಪಿಯತ್ರೋ ಕ್ರೆಪ್ಸಿ ಇನ್ನಿಲ್ಲದಷ್ಟು ರೀತಿಯಲ್ಲಿ ಕೇಳಿ ನೋಡಿದ. ಅವನು ಕಲ್ಪಿಸಲು ಅಸಾಧ್ಯವಾದ ಮಟ್ಟದ ತೇಜೋವಧೆಯನ್ನು ಅನುಭವಿಸಿದ. ಅವನು ಅದೊಂದು ಮಧ್ಯಾಹ್ನ ಅವಳ ಮಡಿಲಲ್ಲಿ ತಲೆಯಿಟ್ಟು ಅತ್ತ. ಅವನನ್ನು ಸಮಾಧಾನಪಡಿಸುವುದಕ್ಕೆ ಏನು ಬೇಕಾದರೂ ಮಾಡಲು ಸಿದ್ಧಳಿದ್ದಳು. ಅವನು ಮಳೆಯ ದಿನಗಳಲ್ಲಿ ಛತ್ರಿ ಹಿಡಿದುಕೊಂಡು ಮನೆಯ ಹತ್ತಿರ ತಿರುಗಾಡುತ್ತ ಅಮರಾಂತಳ ಬೆಡ್‌ರೂಮಿನ ದೀಪ ಬೆಳಗುವುದಕ್ಕಾಗಿ ಕಾಯುತ್ತಿz. ಅಂತಹ ಸಂದರ್ಭದಲ್ಲಿ ಎಂದೂ ಇಲ್ಲದಷ್ಟು ಸೊಗಸಾಗಿ ಡ್ರೆಸ್ ಮಾಡಿಕೊಂಡಿರುತ್ತಿದ್ದ. ಅವನ ನೊಂದ ಸಾಮ್ರಾಟನ ಮುಖಭಾವಕ್ಕೆ ಯಾವುದೋ ವಿಚಿತ್ರ ವರ್ಚಸ್ಸು ಬಂದಿತ್ತು. ಹಿಂದೆ ಅಂಗಳದಲ್ಲಿ ಅವಳ ಜೊತೆ ಹೊಲಿಗೆ ಮಾಡುತ್ತಿದ್ದವರಿಗೆ ಅವಳನ್ನು ಪ್ರೇರೇಪಿಸುವಂತೆ ಕೇಳಿಕೊಂಡ. ತನ್ನ ವ್ಯಾಪಾರವನ್ನು ಕಡೆಗಣಿಸಿದ. ಅವನು ತನ್ನ ಅಂಗಡಿಯ ಹಿಂಭಾಗದಲ್ಲಿ ಇಡೀ ದಿನ ಅವಳಿಗಾಗಿ ಆವೇಶ ಪೂರ್ಣ ಕಾಗದಗಳನ್ನು ಬರೆದು, ಹೂವಿನ ಪಕಳೆಗಳು ಮತ್ತು ಒಣಗಿದ ಚಿಟ್ಟೆಗಳನ್ನು ಅಮರಾಂತಳಿಗೆ ಕಳಿಸಿಕೊಡುತ್ತಿದ್ದರೆ, ಅವಳು ಅವನ್ನು ಬಿಚ್ಚಿ ನೋಡದೆ ಹಿಂದಿರುಗಿಸುತ್ತಿದ್ದಳು. ಕೊನೆಗೆ ಅವನು ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಜಿಥರ್ ನುಡಿಸುತ್ತಿದ್ದ. ಅವನೊಂದು ರಾತ್ರಿ ಹಾಡಿದ. ಇಡೀ ಭೂಮಂಡಲದಲ್ಲಿ ಪ್ರೇಮವನ್ನು ಅವನಷ್ಟು ಅನುಭವಿಸಿದವರು ಬೇರೆ ಯಾರಿಲ್ಲ ಎಂದು ನಂಬುವ ಹಾಗೆ ಜಿಥರ್ ಜೊತೆಗೂಡಿ ಹಾಡಿದಾಗ ಮಕೋಂದೋ ಸೋಜಿಗಗೊಂಡು ಎಚ್ಚರಗೊಂಡಿತು. ಆಗ ಪಿಯತ್ರೋ ಕ್ರೆಪ್ಸಿ ಅಮರಾಂತಳದನ್ನು ಬಿಟ್ಟು ಊರಿನಲ್ಲಿ ಎಲ್ಲ ಕಿಟಕಿಗಳಲ್ಲಿ ದೀಪ ಬೆಳಗಿದ್ದನ್ನು ಕಂಡ. ನವೆಂಬರ್ ಎರಡನೆ ತಾರೀಖು, ಆಲ್ ಸೋಲ್ಸ್ ಡೇ ದಿನ ಅವನ ತಮ್ಮ ಅಂಗಡಿಯ ಬಾಗಿಲು ತೆಗೆದಾಗ ಎಲ್ಲ ದೀಪಗಳು ಉರಿಯುತ್ತಿದದ್ದನ್ನು, ಎಲ್ಲ ಮೂಸಿಕ್ ಬಾಕ್ಸ್‌ಗಳು ತೆಗೆದದ್ದನ್ನು, ಎಲ್ಲ ಗಡಿಯಾರಗಳು ಶಬ್ದಮಾಡುತ್ತಿದ್ದುದನ್ನು ಮತ್ತು ಈ ಎಲ್ಲ ಹುಚ್ಚೆದ್ದ ವಾದ್ಯಗೋಷ್ಠಿಯ ಮಧ್ಯೆ ಕುಳಿತ ಪಿಯತ್ರೋ ಕ್ರೆಪ್ಸಿ, ಬ್ಲೇಡ್‌ನಿಂದ ತನ್ನ ಮಣಿಕಟ್ಟನ್ನು ಸೀಳಿಕೊಂಡು, ಕೈಯನ್ನು ಸಾಂಬ್ರಾಣಿಯ ಬೋಗುಣಿಯಲ್ಲಿ ತುರುಕಿದ್ದನ್ನು ಕಂಡ.

ಉರ್ಸುಲಾ ರಾತ್ರಿಯ ಜಾಗರಣೆ ತಮ್ಮ ಮನೆಯಲ್ಲಿ ನಡೆಯುವುದೆಂದು ಆಜ್ಞೆ ಹೊರಡಿಸಿದಳು. ಫಾದರ್ ನಿಕನೋರ್ ಧಾರ್ಮಿಕ ಸಮಾರಂಭ ಮತ್ತು ಪವಿತ್ರವಾದ ಸ್ಥಳದಲ್ಲಿ ಹೂಳುವುದರ ವಿರುದ್ಧವಾಗಿದ್ದ. ಆದರೆ ಉರ್ಸುಲಾ ಅವನಿಗೆ ಸರಿಸಾಟಿಯಾಗಿ ನಿಂತು, “ಒಂದು ರೀತೀಲಿ ನೀವಾಗಲಿ, ನಾನಾಗಲೀ ಅವನನ್ನು ಅರ್ಥಮಾಡಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಅವನೊಬ್ಬ ಋಷಿ” ಎಂದದ್ದಲ್ಲದೆ, “ಹಾಗಾದ್ರೆ ನಿಮ್ಮ ಇಷ್ಟಕ್ಕೆ ವಿರೋಧವಾಗಿ ಅವನನ್ನು ಮೆಲ್‌ಕಿಯಾದೆಸ್‌ನ ಗೋರಿ ಪಕ್ಕದಲ್ಲಿ ಹೂಳ್ತೀನಿ” ಎಂದಳು. ಅವಳು ಇಡೀ ಊರಿನ ಬೆಂಬಲದೊಂದಿಗೆ ಅದ್ದೂರಿಯ ಶವ ಸಂಸ್ಕಾರವನ್ನು ಮಾಡಿದಳು. ಅಮರಾಂತ ರೂಮಿನಿಂದ ಹೊರಗೆ ಬರಲಿಲ್ಲ. ಅವಳಿಗೆ ತನ್ನ ಹಾಸಿಗೆಯಲ್ಲಿ ಉರ್ಸುಲಾಳ ಅಳು, ಮನೆಗೆ ನುಗ್ಗಿ ಬಂದ ಅಸಂಖ್ಯಾತರ ನಡಿಗೆ ಹಾಗೂ ಪಿಸುಮಾತುಗಳು, ಶೋಕಿಸುವವರ ಮುಲುಗಾಟ ಕೇಳಿಸಿತು. ಆ ನಂತರ ತುಳಿತಕ್ಕೆ ಸಿಕ್ಕ ಹೂಗಳ ವಾಸನೆಯ ಮೌನ ಆವರಿಸಿತು. ಅವಳು ಬಹಳ ಸಮಯದ ತನಕ ಪಿಯತ್ರೋ ಕ್ರೆಪ್ಸಿಯ ಸಂಜೆಯ ಸುಗಂಧವನ್ನು ಆಸ್ವಾದಿಸುತ್ತಿದ್ದಳು. ಆದರೆ ಯಾವುದೇ ಭಾವಾವೇಶಕ್ಕೆ ಒಳಗಾಗದ ಶಕ್ತಿ ಅವಳಲ್ಲಿತ್ತು. ಉರ್ಸುಲಾ ಅವಳನ್ನು ಅಲಕ್ಷಿಸಿದಳು. ಅಮರಾಂತ ಅಡುಗೆ ಮನೆಗೆ ಹೋಗಿ ಒಲೆಯ ಕೆಂಡದಲ್ಲಿ ಕೈಯಿಟ್ಟಾಗ ಅದೆಷ್ಟು ಘಾಸಿಯಾಯಿತೆಂದರೆ ಅವಳಿಗೆ ಯಾವುದೇ ನೋವು ಉಂಟಾಗದೆ ಸುಟ್ಟ ಮಾಂಸದ ಕಮರು ವಾಸನೆ ಹರಡಿದಾಗ ಕೂಡ ಉರ್ಸುಲಾ ಅವಳ ಕಡೆ ಕರುಣೆಯಿಂದ ನೋಡಲಿಲ್ಲ. ಅದು ಅವಳು ತನ್ನ ಪಶ್ಚಾತ್ತಾಪಕ್ಕೆ ಮಾಡಿಕೊಂಡ ಮೂರ್ಖಶಮನ. ಅವಳು ಅನೇಕ ದಿನ ಕೈಯನ್ನು ಮೊಟ್ಟೆಯ ಲೋಳೆ ಇರುವ ತಂಬಿಗೆಯಲ್ಲಿ ಇಟ್ಟುಕೊಂಡು ಮನೆಯಲ್ಲಿ ಓಡಾಡುತ್ತಿದ್ದಳು. ಗಾಯ ವಾಸಿಯಾದ ಮೇಲೆ ಅದರ ಗುರುತುಗಳನ್ನು ಅವಳ ಹೃದಯದ ಮೇಲೆ ಬಿಟ್ಟು ಹೋಗಿದ್ದವು. ಆ ದುರಂತದ ಹೊರಗೆ ಕಾಣುವಂತಿದ್ದ ಕುರುಹೆಂದರೆ ಸುಟ್ಟಿದ್ದ ಕೈ ಸುತ್ತ ಅವಳು ಕಟ್ಟಿಕೊಂಡಿರುತ್ತಿದ್ದ ಕಪ್ಪನೆ ಬ್ಯಾಂಡೇಜ್ ಪಟ್ಟಿ ಮತ್ತು ಅವಳು ಸಾಯುವ ತನಕ ಅದನ್ನು ಕಟ್ಟಿಕೊಂಡಿದ್ದಳು.

ಅರ್ಕಾದಿಯೋ ಪಿಯತ್ರೋ ಕ್ರೆಸ್ಪಿಗೆ ಅಧಿಕೃತ ಸಂತಾಪದ ಕಟ್ಟಳೆಯನ್ನು ಹೊರಡಿಸಿ ಅಪರೂಪದ ಉದಾರತೆಯನ್ನು ವ್ಯಕ್ತಪಡಿಸಿದ. ಎಲ್ಲೆಲ್ಲೋ ತಿರುಗುತ್ತಿದ್ದ ಕುರಿ ಹಿಂತಿರುಗಿತೆಂದು ಉರ್ಸುಲಾ ಭಾವಿಸಿದಳು. ಆದರೆ ಅವಳ ಎಣಿಕೆ ತಪ್ಪಾಗಿತ್ತು. ಅವಳು ಅರ್ಕಾದಿಯೋನನ್ನು ಅವನು ಯೂನಿಫಾರಂ ಹಾಕಿಕೊಂಡ ಕಾಲದಿಂದ ಮುಂಚೆಯೇ ಕಳೆದುಕೊಂಡಿದ್ದಳು. ಅವಳು ಯಾವುದೇ ವಿಶೇಷ ಅಥವಾ ತಾರತಮ್ಯವಿಲ್ಲದೆ ರೆಬೇಕಳನ್ನು ಬೆಳೆಸಿದಂತೆ ಅವನನ್ನು ಮಗನಾಗಿ ಬೆಳೆಸಿದೆನೆಂದು ತಿಳಿದುಕೊಂಡಿದ್ದಳು. ಇಷ್ಟಿದ್ದರೂ ನಿದ್ದೆ ಬಾರದ ಅವಧಿಯಲ್ಲಿ, ಉರ್ಸುಲಾಳ ಜನ ಹಿತದ ಚಟುವಟಿಕೆಗಳಲ್ಲಿ, ಹೊಸೆ ಅರ್ಕಾದಿಯೋನ ಉನ್ಮಾದದ ಅವಧಿಯಲ್ಲಿ, ಅವ್ರೇಲಿಯಾನೋನ ರಸವಾದದ ಪರವಶತೆಯಲ್ಲಿ ಮತ್ತು ರೆಬೇಕ ಹಾಗೂ ಅಮರಾಂತರ ಸೆಣೆಸಾಟದಲ್ಲಿ ಅವನೊಬ್ಬ ಭಯಗೊಂಡವನಲ್ಲದೆ ಏಕಾಂತದಲ್ಲಿದ್ದವನಾಗಿದ್ದ. ಅವ್ರೇಲಿಯಾನೋ ಅಪರಿಚಿತನಿಗೆ ಮಾಡುವಂತೆ ಇತರ ವಿಷಯಗಳ ಬಗ್ಗೆ ಯೋಚಿಸುತ್ತ ಅವನಿಗೆ ಓದುವುದನ್ನು ಮತ್ತು ಬರೆಯುವುದನ್ನು ಹೇಳಿಕೊಟ್ಟಿದ್ದ. ವಿಸಿಟಾಸಿಯೋನ್‌ಗೆ ತೆಗೆದುಕೊಳ್ಳಬಹುದಾದಂಥ ತನ್ನ ಬಟ್ಟೆಗಳನ್ನು ಅವನಿಗೆ ಕೊಟ್ಟಿದ್ದ. ಅರ್ಕಾದಿಯೋ ತುಂಬ ದೊಡ್ಡದಾದ ಶೂಗಳಿಂದ, ತೇಪೆ ಹಾಕಿದ ಪ್ಯಾಂಟ್‌ಗಳಿಂದ, ಹೆಂಗಸಿನಂಥ ಹಿಂಭಾಗದಿಂದ ಚಿಂತೆಗೀಡಾಗಿದ್ದ. ವಿಸಿಟಾಸಿಯೋನ್ ಮತ್ತು ಕತಾವುರೆ ಜೊತೆ ಅವರ ಭಾಷೆಯಲ್ಲಿ ಮಾತನಾಡುತ್ತಿದ್ದುದಕ್ಕಿಂತ ಚೆನ್ನಾಗಿ ಬೇರೆ ಯಾರ ಸಂಗಡವೂ ಸಾಧ್ಯವಾಗುತ್ತಿರಲಿಲ್ಲ. ಮೆಲ್‌ಕಿಯಾದೆಸ್‌ಗೆ ಮಾತ್ರ ಅವನ ಬಗ್ಗೆ ನಿಜವಾದ ಕಾಳಜಿಯಿದ್ದು, ಗ್ರಹಿಸಲು ಅಸಾಧ್ಯವಾದ ಪಠ್ಯವನ್ನು ಕೇಳುವಂತೆ ಮಾಡುತ್ತಿದ್ದನಲ್ಲದೆ, ಛಾಯಾಚಿತ್ರ ತೆಗೆಯುವ ಕಲೆಗಾರಿಕೆಯ ಬಗ್ಗೆ ತಿಳಿಸಿ ಹೇಳುತ್ತಿದ್ದ. ಅವನು ಗುಟ್ಟಾಗಿ ಅತ್ತಿದ್ದೆಷ್ಟು ಮತ್ತು ಎಲ್ಲವನ್ನು ನಿರ್ಲಕ್ಷಿಸಿ ಮೇಲ್ಕಿಯಾದೆಸ್‌ನನ್ನು ಮತ್ತೆ ಅಸ್ತಿತ್ವಕ್ಕೆ ತರಲು ಅವನ ಬರಹಗಳನ್ನು ವ್ಯರ್ಥವಾಗಿ ಅಭ್ಯಸಿಸಿದ್ದನ್ನು ಯಾರೂ ಕಲ್ಪಿಸಿಕೊಳ್ಳಲಿಲ್ಲ. ಅವನನ್ನು ಗಮನಕ್ಕೆ ತೆಗೆದುಕೊಂಡು ಗೌರವ ಕೊಡುತ್ತಿದ್ದ ಸ್ಕೂಲು ಮತ್ತು ಲೆಕ್ಕವಿಲ್ಲದಷ್ಟು ಕಟ್ಟಳೆಗಳ ಅಧಿಕಾರ ಹಾಗೂ ಯೂನಿಫಾರಂ, ಅವನನ್ನು ಹಿಂದಿನ ಕಹಿಯ ಭಾರದಿಂದ ಬಿಡುಗಡೆ ಮಾಡಿತ್ತು. ಅದೊಂದು ದಿನ ರಾತ್ರಿ ಕತಾವುರೆಯ ಅಂಗಡಿನಲ್ಲಿ, “ನಿನ್ನ ಹೆಸರಿನ ಕೊನೇಲಿ ಇದೆಯಲ್ಲ, ಅದಕ್ಕೆ ನಿಂಗೆ ಯೋಗ್ಯತೆ ಇಲ್ಲ” ಎಂದು ಯಾರೋ ಒಬ್ಬ ಹೇಳುವ ಧೈರ್ಯ ಮಾಡಿದ. ಆದರೆ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಅರ್ಕಾದಿಯೋ ಅವನನ್ನು ಕೊಲ್ಲಿಸಲಿಲ್ಲ.
“ನನ್ನ ಹೆಚ್ಚುಗಾರಿಕೆ ಅಂದರೆ, ನಾನೊಬ್ಬ ಬ್ಯುಂದಿಯಾ ಅಲ್ಲ”

ಅವನ ತಂದೆ ಯಾರೆಂಬ ಗುಟ್ಟು ಗೊತ್ತಿದ್ದವರು ಅವನಿಗೆ ಅದು ತಿಳಿದಿದೆ ಎಂದುಕೊಂಡರು. ಆದರೆ ಅವನಿಗೆ ಗೊತ್ತಿರಲಿಲ್ಲ. ಕತ್ತಲ ಕೋಣೆಯಲ್ಲಿ ಅವನ ರಕ್ತ ಕುದಿಯುವಂತೆ ಮಾಡಿದ ಅವನ ತಾಯಿ ಪಿಲರ್ ಟೆರ್‍ನೆರಾ ಮೊದಲು ಹೊಸೆ ಅರ್ಕಾದಿಯೋ ಮತ್ತು ಅನಂತರ ಅವ್ರೇಲಿಯಾನೋಗೆ ಆಗಿದ್ದಂತೆ ಅವನಿಗೆ ತಡೆಯಲಾಗದ ಹುಚ್ಚು ಹಿಡಿಸಿದ್ದಳು. ಅವಳು ತನ್ನ ಸೊಬಗನ್ನು ಮತ್ತು ಮೋಹಕ ನಗುವನ್ನು ಕಳೆದುಕೊಂಡಿದ್ದರೂ ಅವನು ಅವಳನ್ನು ಹುಡುಕುತ್ತ ಅವಳ ಹೊಗೆಯಂಥ ವಾಸನೆಯಿಂದ ಕಂಡು ಹಿಡಿಯುತ್ತಿದ್ದ. ಯುದ್ಧಕ್ಕೆ ಸ್ವಲ್ಪ ಕಾಲದ ಮುಂಚೆ ಒಂದು ಮಧ್ಯಾಹ್ನ ತನ್ನ ಹಿರಿಯ ಮಗನಿಗಾಗಿ ಸ್ಕೂಲಿಗೆ ಬರಲು ಎಂದಿಗಿಂತ ತಡವಾಯಿತು. ಅರ್ಕಾದಿಯೋ ರೂಢಿಯಾದಂತೆ ಮಧ್ಯಾಹ್ನದ ನಿದ್ದೆ ಮಾಡುವ ಮುಂಚೆ ವಸ್ತುಗಳನ್ನು ವ್ಯವಸ್ಥೆಗೊಳಿಸಿದ ರೂಮಿನಲ್ಲಿ ಅವಳಿಗಾಗಿ ಕಾಯುತ್ತಿದ್ದ. ಮಗು ಅಂಗಳದಲ್ಲಿ ಆಟವಾಡುತ್ತಿದ್ದರೆ ಪಿಲರ್ ಟೆರ್‍ನೆರಾ ಆ ಮೂಲಕವೇ ಹಾದುಹೋಗಬೇಕೆಂದು ತಿಳಿದ ಅವನು, ಆತಂಕದಿಂದ ಅದುರುತ್ತ ಹಾಸಿಗೆಯಲ್ಲಿ ಕಾಯುತ್ತಿದ್ದ. ಅವಳು ಬಂದಳು. ಅರ್ಕಾದಿಯೋ ಅವಳ ಸೊಂಟವನ್ನು ಹಿಡಿದು ಹಾಸಿಗೆಗೆ ಎಳೆಯಲು ಪ್ರಯತ್ನಿಸಿದ. ಅವಳು ಬೆದರಿ, “ನನ್ನ ಕೈಲಾಗಲ್ಲ… ನನ್ನ ಕೈಲಾಗಲ್ಲ…. ನಿಂಗೊತ್ತಿಲ್ಲ, ನಿನ್ನನ್ನ ಸಂತೋಷಪಡಿಸೋದು ನಂಗೆಷ್ಟು ಇಷ್ಟ ಅಂತ. ಆದರೆ ನಂಗೆ ದೇವರು ಸಾಕ್ಷಿ. ನನ್ನ ಕೈಲಾಗಲ;” ಎಂದಳು. ಅರ್ಕಾದಿಯೋ ವಂಶಪಾರಂಪರ್ಯವಾಗಿ ಬಂದ ಅಗಾಧ ಶಕ್ತಿಯಿಂದ ಅವಳ ಸೊಂಟ ಹಿಡಿದೆಳೆದಾಗ ಅವಳ ಸ್ವರ್ಶದಿಂದ ಇಡೀ ಪ್ರಪಂಚ ಮಾಯವಾದಂತಾಯಿತು. “ದೊಡ್ಡ ಗೌರಮ್ಮನ ಥರ ಆಡ್ಬೇಡ . . ಇಷ್ಟಕ್ಕೂ ಊರ್‍ನೊರಿಗೆಲ್ಲ ಗೊತ್ತು, ನೀನೊಬ್ಬಳು ಹಾದರಗಿತ್ತಿ ಅಂತ” ಎಂದ. ಅವಳು ತನ್ನ ದುರ್ವಿಧಿ ಉಂಟುಮಾಡಿದ ಜಿಗುಪ್ಸೆಯನ್ನು ತಡೆದುಕೊಂಡಳು.
ಅವಳು, “ಮಕ್ಕಳಿಗೆ ಗೊತ್ತಾಗಿ ಬಿಡತ್ತೆ… ಇವತ್ತು ರಾತ್ರಿ ನೀನು ಬಾರ್‌ನ ಬಾಗಿಲು ಹಾಕಿರದಿದ್ದರೆ ಸಾಕು” ಎಂದು ಪಿಸು ನುಡಿದಳು.

ಆ ದಿನ ರಾತ್ರಿ ಅರ್ಕಾದಿಯೋ ಜ್ವರದಿಂದ ತಾಪದ ಹಾಗೆ ಕಾಯುತ್ತ ಹಾಸಿಗೆಯಲ್ಲಿ ನಿದ್ದೆ ಮಾಡದರೆ ಬೆಳಗಿನ ಜಾವದಲ್ಲಿ ಕೇಳಿ ಬರುತ್ತಿದ್ದ ಮಿಡತೆ ಮತ್ತು ಪಕ್ಷಿಗಳ ಧ್ವನಿಯಲ್ಲಿ ಕಾದ. ಇದ್ದಕ್ಕಿದ್ದ ಹಾಗಿ ಆತಂಕ ಬದಲಾಗಿ ರೋಷಗೊಳ್ಳುತ್ತಿದ್ದಂತೆ ಬಾಗಿಲು ತೆರೆಯಿತು. ಕ್ಲಾಸ್ ರೂಮಿನಲ್ಲಿ ಅತ್ತಿತ್ತ ಬೆಂಚುಗಳಿಗೆ ಎಡವಿಕೊಂಡು ನಡೆದಾಡುತ್ತ ಕೊನೆಗೆ ಆ ನೆರಳುಗಳ ನಡುವೆ ಭಾರಿ ಮೈಯೊಂದು ಮತ್ತು ತನ್ನದಲ್ಲದ ಹೃದಯವೊಂದು ಒತ್ತೊತ್ತಿ ಬಿಡುತ್ತಿದ್ದ ಗಾಳಿಯನ್ನು ಉಸಿರಾಡುತ್ತಿದ್ದನ್ನು, ಅರ್ಕಾದಿಯೋ ಕೆಲವು ತಿಂಗಳ ನಂತರ ಗುಂಡಿಕ್ಕುವ ತಂಡದ ಎದುರು ನಿಂತಾಗ ಮರುಜೀವಿಸಿದ. ಅವನು ಕೈ ಚಾಚಿದಾಗ ಕತ್ತಲಲ್ಲಿ ಎತ್ತೆತ್ತಲೋ ಆಡುತ್ತಿದ್ದ, ಒಂದು ಬೆರಳಿಗೆ ಎರಡು ಉಂಗುರವಿದ್ದ ಕೈ ಸಿಕ್ಕಿತು. ಅವನು ಅದರಲ್ಲಿನ ನಾಳಗಳನ್ನು ಸ್ವರ್ಶಿಸಿದ. ಕೊಂಚ ತೇವಗೊಂಡ ಅಂಗೈಯಲ್ಲಿದ್ದ ಆಯುಷ್ಯ ರೇಖೆ ಹೆಬ್ಬೆರಳಿನ ಹತ್ತಿರ ಸಾವು ಸೂಚಿಸಿ ತುಂಡಾಗಿತ್ತು. ಆಗ ಅವನಿಗೆ ತಾನು ಕಾಯುತ್ತಿದ್ದವಳು ಇವಳಲ್ಲವೆಂದು ತಿಳಿಯಿತು. ಏಕೆಂದರೆ ಅವಳಲ್ಲಿ ಹೊಗೆಯ ವಾಸನೆ ಇರಲಿಲ್ಲ. ಹೂವಿನ ಸುಗಂಧವಿತ್ತು. ಗಂಡಸಿನಂಥ ತನ್ನ ಮೊಲೆತೊಟ್ಟುಗಳನ್ನು ಕಿಚ್ಚೆಬ್ಬಿಸಿದ್ದಳು. ಅವಳಲ್ಲಿ ಅನುಭವವಿಲ್ಲದ ಉತ್ಸಾಹಭರಿತ ಮಾಧುರ್ಯವಿತ್ತು. ಕನ್ಯೆಯಾಗಿದ್ದ ಅವಳಿಗೆ ಸಾಮಾನ್ಯವಲ್ಲದ ಸಾಂತ ಸೋಫಿಯಾ ದೆಲಾ ಪಿಯದಾದ್ ಎಂಬ ಹೆಸರಿತ್ತು. ಅವಳು ಮಾಡುತ್ತಿದ್ದುದ್ದನ್ನು ಮಾಡಲು ಪೀಲರ್ ಟೆರ್‍ನೆರಾ ಅವಳಿಗೆ ಐವತ್ತು ಪೇಸೋ ಕೊಟ್ಟಿದ್ದಳು. ಅದು ಅವಳು ತನ್ನ ಇಡೀ ಜೀವಮಾನದಲ್ಲಿ ಉಳಿಸಿದ ಅರ್ಥದಷ್ಟು. ತನ್ನ ತಂದೆಯ ಸಣ್ಣ ಕಿರಾಣಿ ಅಂಗಡಿನಲ್ಲಿ ಕೆಲಸ ಮಾಡುತ್ತಿದ್ದ ಅವಳನ್ನು ಅನೇಕ ಬಾರಿ ಗಮನಿಸಿದ್ದರೂ ಸರಿಯಾಗಿ ನೋಡಿರಲಿಲ್ಲ. ಏಕೆಂದರೆ ಯುಕ್ತವಾದ ಸಮಯದಲ್ಲಿ ಮಾತ್ರವಲ್ಲದೆ ಉಳಿದಂತೆ ಇಲ್ಲದಿರುವಂತಿರುವ ಗುಣ ಅವಳಲ್ಲಿತ್ತು. ಆದರೆ ಆ ದಿನದಿಂದ ಅವನು ಅವಳ ಬೆಚ್ಚನೆ ಕಂಕುಳಲ್ಲಿ ಬೆಕ್ಕಿನ ಹಾಗೆ ಹುದುಗಿಕೊಂಡಿರುತ್ತಿದ್ದ. ಅವಳು ತಂದೆ ತಾಯಿಯ ಒಪ್ಪಿಗೆ ಪಡೆದು ಮಧ್ಯಾಹ್ನ ಮಲಗುವ ಹೊತ್ತಿನಲ್ಲಿ ಹೋಗುತ್ತಿದ್ದಳು. ಪಿಲರ್ ಟೆರ್‍ನೆರಾ ಅವಳ ತಂದೆ ತಾಯಿಗೆ ತಾನು ಉಳಿಸಿದ ಇನ್ನರ್ಧವನ್ನು ಕೊಟ್ಟಿದ್ದಳು. ಆನಂತರ ಸರ್ಕಾರದ ಸೇನೆ ಅವರು ಪ್ರೇಮಿಸಿದ ಸ್ಥಳವನ್ನು ಕೆಡವಿದ ಮೇಲೆ ಅವರು ಡಬ್ಬ ಮತ್ತು ಮೂಟೆಗಳಿದ್ದ ಸ್ಟೋರಿನ ಹಿಂಭಾಗವನ್ನು ನೋಡಿಕೊಂಡರು. ಸರಿ ಸುಮಾರು ಅರ್ಕಾದಿಯೋನನ್ನು ಮಿಲಿಟರಿ ಮತ್ತು ಸಿವಿಲ್ ನಾಯಕನನ್ನಾಗಿ ನೇಮಿಸುವ ಹೊತ್ತಿಗೆ ಅವರಿಗೊಬ್ಬಳು ಮಗಳಿದ್ದಳು.

ಈ ವಿಷಯವನ್ನು ತಿಳಿದ ಸಂಬಂಧಿಗಳೆಂದರೆ ಆ ಕಾಲದಲ್ಲಿ ಒಡನಾಟದಿಂದ ಆತ್ಮೀಯತೆಯನ್ನು ಪಾಲಿಸಿಕೊಂಡಿದ್ದ ಹೊಸೆ ಅರ್ಕಾದಿಯೋ ಮತ್ತು ರೆಬೇಕ. ಹೊಸೆ ಅರ್ಕಾದಿಯೋ ಸಂಸಾರದ ನೊಗಕ್ಕೆ ಗೋಣು ಕೊಟ್ಟಿದ್ದ. ರೆಬೇಕಳ ದೃಢ ಸ್ವಭಾವ, ಬೆಂಬಿಡದ ಮಹತ್ವಾಕಾಂಕ್ಷೆ ಗಂಡನ ಅಗಾಧ ಶಕ್ತಿಯನ್ನು ಮೀರಿ ಸೋಮಾರಿ ಹಾಗೂ ಲಂಪಟನಾದ ಅವನನ್ನು ಸಿಕ್ಕಾಪಟ್ಟೆ ಕೆಲಸ ಮಾಡುವ ಪ್ರಾಣಿಯನ್ನಾಗಿ ಪರಿವರ್ತಿಸಿತ್ತು. ಅವರು ತಮ್ಮ ಮನೆಯನ್ನು ಸರಳ ಮತ್ತು ಶುಭ್ರವಾಗಿಟ್ಟಿದ್ದರು. ರೆಬೇಕ ಬೆಳಿಗ್ಗೆ ಮುಂಬಾಗಿಲು ತೆರೆದಾಗ ಸ್ಮಶಾನದಿಂದ ಬೀಸಿ ಬರುವ ಗಾಳಿ ಕಿಟಕಿಗಳಿಂದ ತೂರಿ ಬಂದು, ಬಾಗಿಲು ಮುಖಾಂತರ ಹಾದು ಹೋಗಿ, ಸುಣ್ಣ ಬಳಿದ ಗೋಡೆ ಮತ್ತು ಪೀಠೋಪಕರಣಗಳ ಮೇಲೆ ಸತ್ತವರ ಕಲೆಗಳನ್ನು ಉಂಟುಮಾಡುತ್ತಿದ್ದವು. ಅವಳ ಮಣ್ಣು ತಿನ್ನುವ ಬಯಕೆ, ತಂದೆ-ತಾಯಿಯ ಟೊಳ್ಳೆನ್ನುವ ಮೂಳೆಗಳು, ಪಿಯತ್ರೋ ಕ್ರೆಪ್ಸಿಯ ನಿರುತ್ಸಾಹವನ್ನು ಕಂಡು ತಾಳ್ಮೆಗೆಡುತ್ತಿದ್ದ ಅವಳ ರಕ್ತ, ಎಲ್ಲವೂ ನೆನಪಿನ ಮೂಲೆಯನ್ನು ಸೇರಿತ್ತು. ಅವಳು ಯುದ್ಧದ ಮುಜುಗರದಿಂದ ಬಿಡಿಸಿಕೊಂಡು ಅಲಮಾರಿನಲ್ಲಿದ್ದ ಪಿಂಗಾಣಿ ಮಡಿಕೆಗಳು ಅದುರಲು ಪ್ರಾರಂಭಿಸುವ ತನಕ ಇಡೀ ದಿನ ಕಿಟಕಿಯ ಹತ್ತಿರ ಕುಳಿತು ಕಸೂತಿ ಕೆಲಸ ಮಾಡುತ್ತಿದ್ದಳು. ಅನಂತರ ಎದ್ದು ಮೊದಲು ಬೇಟೆ ನಾಯಿಗಳು ಅನಂತರ ಭಾರಿ ಹಿಮ್ಮಡಿ ಮೊಳೆಗಳಿದ್ದ ಪಾದರಕ್ಷೆ ತೊಟ್ಟು ಡಬಲ್ ಬ್ಯಾರಲ್ ಬಂದೂಕು ಹಿಡಿದು ಒಮ್ಮೊಮ್ಮೆ ಜಿಂಕೆಯನ್ನು ಹೊತ್ತುಕೊಂಡು ಅಥವಾ ಯಾವಾಗಲೂ ಹತ್ತಾರು ಮೊಲ ಹಾಗೂ ಬಾತುಕೋಳಿಗಳನ್ನು ತರುವ ಅವನು ಕಾಣಿಸಿಕೊಳ್ಳುವ ಮುಂಚೆ ಅಡುಗೆಯನ್ನು ಬಿಸಿ ಮಾಡುತ್ತಿದ್ದಳು. ಒಂದು ದಿನ ಅರ್ಕಾದಿಯೋ ತನ್ನ ಆಳ್ವಿಕೆಯ ಪ್ರಾರಂಭದ ದಿನಗಳಲ್ಲಿ ಅವರ ಮನೆಗೆ ಅನಿರೀಕ್ಷಿತವಾಗಿ ಬಂದಿದ್ದ. ಅವನು ಆ ಮನೆಯನ್ನು ಒಟ್ಟಾಗಿನಿಂದ ನೋಡಿರಲಿಲ್ಲ. ಆ ವರ್ಷ ಅವನೆಷ್ಟು ಸ್ನೇಹಪರ ಮತ್ತು ಹತ್ತಿರದವನೆಂದು ಕಂಡನೆಂದರೆ ಅವರು ಅವನನ್ನು ಊಟಕ್ಕೆ ಕರೆದರು.

ಅವರೆಲ್ಲ ಕಾಫಿ ಕುಡಿಯುತ್ತಿದ್ದಾಗಷ್ಟೆ ಅರ್ಕಾದಿಯೋ ತಾನು ಅಲ್ಲಿಗೆ ಬಂದ ಉದ್ದೇಶವನ್ನು ತಿಳಿಸಿದ್ದು. ಹೊಸೆ ಅರ್ಕಾದಿಯೋ ವಿರುದ್ಧ ಅವನಿಗೆ ಆಪಾದನೆ ಬಂದಿತ್ತು. ಅವನು ತನ್ನ ಭೂಮಿಯಲ್ಲಿ ಉಳಿವುದನ್ನು ಪ್ರಾರಂಭಿಸಿದ ನಂತರ ಅಕ್ಕಪಕ್ಕದ ಭೂಮಿಗೆ ಹೋಗಿ ಕಟ್ಟಡ ಹಾಗೂ ಬೇಲಿಗಳನ್ನು ಕೆಡವಿ ಬಲವಂತವಾಗಿ ಆಕ್ರಮಿಸಿಕೊಂಡಿದ್ದಾನೆಂದು ಹೇಳಲಾಗಿತ್ತು. ಅವನು ಹಾಳುಗೆಡವದಿದ್ದ ರೈತರಿಂದ ಪ್ರತಿ ಶನಿವಾರ ತನ್ನ ನಾಯಿ ಮತ್ತು ಭಾರಿ ಬಂದೂಕು ಹಿಡಿದು ಕರ ವಸೂಲು ಮಾಡುತ್ತಿದ್ದ. ಏಕೆಂದರೆ ಅವರ ಭೂಮಿಯ ಬಗ್ಗೆ ಅವನಿಗೆ ಆಸಕ್ತಿ ಇರಲಿಲ್ಲ. ಅವನು ಅದನ್ನು ನಿರಾಕರಿಸಲಿಲ್ಲ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಸಂಸ್ಥಾಪನೆಯ ಕಾಲದಲ್ಲಿ ವಿತರಣೆ ಮಾಡಿದ್ದನ್ನು ತಾನು ಅತಿಕ್ರಮಿಸಿದ ಭೂಮಿಯ ಮೇಲಿನ ಹಕ್ಕಿಗೆ ಆಧಾರ ಮಾಡಿಕೊಂಡಿದ್ದ. ಅಲ್ಲದೆ ತನ್ನ ಸಂಸಾರಕ್ಕೆ ಸೇರಿದ ಭೂಮಿಯನ್ನು ಕೊಟ್ಟುಬಿಟ್ಟದ್ದರಿಂz, ಆಗಿನಿಂದಲೂ ತಮ್ಮ ತಂದೆ ಹುಚ್ಚುಚ್ಚಾಗಿ ಆಡುತ್ತಿದ್ದರೆಂದು ಪ್ರಮಾಣಿಸಲು ಸಾಧ್ಯವಿದೆ ಎಂದು ಅವನ ಭಾವನೆಯಿತ್ತು. ಯಾವುದೇ ನ್ಯಾಯ ಒದಗಿಸಲು ಅರ್ಕಾದಿಯೋ ಬಂದಿಲ್ಲವಾದ್ದರಿಂದ ಅದೊಂದು ಅನಗತ್ಯವಾದ ಆಪಾದನೆ ಎಂದು ತೋರಿತು. ಅವನು ಹೊಸೆ ಅರ್ಕಾದಿಯೋಗೆ ಒಂದು ರಿಜಿಸ್ಟರ್ ಮಾಡುವ ಆಫೀಸ್ ಸ್ಥಾಪಿಸಿ ತಾನು ಅತಿಕ್ರಮಿಸಿದ ಭೂಮಿಯನ್ನು ನ್ಯಾಯಸಮ್ಮತವಾಗುವಂತೆ ಮಾಡುವುದಕ್ಕೆ ಒಂದು ಷರತ್ತು ಹಾಕಿ ಅದರಂತೆ ಸ್ಥಳೀಯ ಸರ್ಕಾರಕ್ಕೆ ಕಾಣಿಕೆಯನ್ನು ಪಡೆಯಲು ತಾನು ವಹಿಸಿಕೊಟ್ಟಿರುವುದಾಗಿ ವ್ಯವಸ್ಥೆ ಮಾಡು ಎಂದು ಸೂಚಿಸಿದ. ಅವರು ಒಪ್ಪಂದವನ್ನು ಮಾಡಿಕೊಂಡರು. ಅನೇಕ ವರ್ಷಗಳ ನಂತರ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಆಸ್ತಿಯ ಪತ್ರಗಳನ್ನು ನೋಡಿದಾಗ, ಬೆಟ್ಟ ಮತ್ತು ತನ್ನ ಜಮೀನಿನ ನಡುವೆ, ಸ್ಮಶಾನವನ್ನೂ ಒಳಗೊಂಡಂತೆ, ದಿಗಂತದವರೆಗಿನ ಭೂಮಿಯೆಲ್ಲ ಅವನ ಹೆಸರಲ್ಲಿತ್ತು. ಅಲ್ಲದೆ ಅರ್ಕಾದಿಯೋ ತನ್ನ ಹನ್ನೊಂದು ತಿಂಗಳ ಅವಧಿಯ ಆಳಿಕೆಯಲ್ಲಿ ಜನರಿಂದ ಕಾಣಿಕೆಗಳನ್ನು ವಸೂಲು ಮಾಡುತ್ತಿದ್ದನಲ್ಲದೆ ಹೊಸೆ ಅರ್ಕಾದಿಯೋನ ಸ್ಮಶಾನದಲ್ಲಿ ಸತ್ತವರನ್ನು ಹೂಳುವುದಕ್ಕೂ ಶುಲ್ಕ ತೆಗೆದುಕೊಳ್ಳುತ್ತಿದ್ದದ್ದು ಕಂಡು ಬಂತು.

ಇಡೀ ಊರಿಗೆ ಗೊತ್ತಿದ್ದ ವಿಷಯ ಉರ್ಸುಲಾಳಿಗೆ ತಿಳಿಯಲು ಅನೇಕ ತಿಂಗಳುಗಳು ಬೇಕಾಯಿತು. ಏಕೆಂದರೆ ಅವಳ ಯಾತನೆಯನ್ನು ಹೆಚ್ಚಿಸಬಾರದೆಂದು ಜನರು ಅದನ್ನು ಅವಳಿಂದ ಮುಚ್ಚಿಟ್ಟಿದ್ದರು. ಪ್ರಾರಂಭದಲ್ಲಿ ಅವಳಿಗೆ ಅನುಮಾನ ಉಂಟಾಗಿತ್ತು. ತನ್ನ ಗಂಡನ ಬಾಯಲ್ಲಿ ಕುಂಬಳಕಾಯಿ ರಸವನ್ನು ಚಮಚದಿಂದ ಹಾಕಲು ಪ್ರಯತ್ನಿಸುತ್ತ, “ಅರ್ಕಾದಿಯೋ ಮನೆ ಕಟ್ಟಿಸ್ತಿದಾನೆ” ಎಂದು ವಿಚಿತ್ರ ಹೆಮ್ಮೆಯಿಂದ ಹೇಳಿದಳು. ಆದರೂ ತನಗೆ ತಿಳಿಯದೆ ನಿಟ್ಟುಸಿರು ಬಿಡುತ್ತ, “ಅದ್ಯಾಕೋ ಗೊತ್ತಿಲ್ಲ. ಇದರಲ್ಲೇನೋ ನಂಗೆ ಅಡ್ಡ ವಾಸನೆ ಹೊಡೀತಿದೆ” ಎಂದಳು. ಅನಂತರ ಅರ್ಕಾದಿಯೋ ಮನೆ ಕಟ್ಟಿದ್ದಲ್ಲದೆ ವಿಯನ್ನಾದ ಪೀಠೋಪಕರಣಗಳಿಗೆ ಆರ್ಡರ್ ಕೊಟ್ಟಿರುವುದು ಗೊತ್ತಾದಾಗ ಅವನು ಸಾರ್ವಜನಿಕರ ಹಣವನ್ನು ಉಪಯೋಗಿಸುತ್ತಿರುವುದು ಖಾತ್ರಿಯಾಯಿತು. ಆ ದಿನ ಭಾನುವಾರ ಪ್ರಾರ್ಥನೆ ಮುಗಿದ ಮೇಲೆ ತನ್ನ ಆಫೀಸರ್‌ಗಳ ಜೊತೆ ಕಾರ್ಡ್ಸ್ ಆಡುತ್ತಿದ್ದ ಅವನನ್ನು ನೋಡಿ, “ನಮ್ಮ ಮನೆತನಕ್ಕೆ ನೀನೊಂದು ಪೀಡೆ” ಎಂದು ಅಬ್ಬರಿಸಿದಳು. ಅವನು ಅವಳನ್ನು ಕಣ್ಣೆತ್ತಿ ನೋಡಲಿಲ್ಲ. ಆಗಲೇ ಅವಳಿಗೆ ಅವನು ಆರು ತಿಂಗಳ ಮಗು ಮತ್ತು ಈಗ ಮತ್ತೆ ಬಸುರಾಗಿರುವ ಸಾಂತ ಸೋಫಿಯಾ ದೆಲಾ ಪಿಯದಾದ್ ಜೊತೆ ಮದುವೆಯಿಲ್ಲದೆ ವಾಸ ಮಾಡುತ್ತಿದ್ದದ್ದು ತಿಳಿದದ್ದು. ಅವಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಇದ್ದಲ್ಲಿಗೇ, ಸಧ್ಯದ ಸ್ಥಿತಿಯನ್ನು ತಿಳಿಸಿ ಬರೆಯಲು ನಿರ್ಧರಿಸಿದಳು. ಆದರೆ ಶೀಘ್ರಗತಿಯಲ್ಲಿ ಉಂಟಾಗುತ್ತಿದ್ದ ಘಟನೆಗಳು ಅವಳನ್ನು ಹಾಗೆ ಮಾಡದಂತೆ ಮಾಡಿ ಆ ಆಲೋಚನೆ ಬಂದದ್ದಕ್ಕೆ ಪರಿತಪಿಸುವಂತಾಯಿತು. ಯುದ್ಧ ಅಲ್ಲಿಯ ತನಕ ಯಾವುದೋ ಅಸ್ಪಷ್ಟವಾಗಿ ದೂರದ ವಿಷಯವನ್ನು ನಿರೂಪಿಸುವ ಪದವಾಗಿದ್ದದ್ದು ವಾಸ್ತವದ ನಿಜಸ್ಥಿತಿಯಾಯಿತು. ಫೆಬ್ರವರಿ ಕೊನೆ೦i;ಲ್ಲಿ ವಯಸ್ಸಾದ ಹೆಂಗಸೊಬ್ಬಳು ಕಸಬರಿಕೆಗಳನ್ನು ಹೇರಿಕೊಂಡ ಕತ್ತೆಯ ಸವಾರಿ ಮಾಡುತ್ತ ಮಕೋಂದೋಗೆ ಬಂದಳು. ಪಾಪದ ಪ್ರಾಣಿಯಂತೆ ಕಂಡ ಅವಳನ್ನು ಆಗಿಂದಾಗ್ಗೆ ಜೌಗು ಪ್ರದೇಶದಿಂದ ಸಾಮಾನುಗಳನ್ನು ಮಾರಲು ಬರುವರಲ್ಲಿ ಒಬ್ಬರೆಂದು ಯಾವ ಪ್ರಶ್ನೆಯನ್ನೂ ಕೇಳದೆ ಕಾವಲುಗಾರರು ಮುಂದೆ ಹೋಗಲು ಬಿಟ್ಟರು. ಅವಳು ನೇರವಾಗಿ ಸಿಪಾಯಿಗಳ ಕಟ್ಟಡಕ್ಕೆ ಹೋದಳು. ಹಿಂದೆ ಕ್ಲಾಸ್ ರೂಮಾಗಿದ್ದು ಈಗ ಸುತ್ತಿಟ್ಟ ಹಾಸಿಗೆ ಚಾಪೆಗಳಿದ್ದ, ಎಲ್ಲಂದರಲ್ಲಿ ಬಂದೂಕು ಮತ್ತು ಬೇಟೆಯ ಶಾಟ್‌ಗನ್‌ಗಳು ಹರಡಿ ರಕ್ಷಣ ಸ್ಥಳವಾಗಿ ಪರಿವರ್ತಿತವಾದ ಜಾಗದಲ್ಲಿ ಅವಳನ್ನು ಅರ್ಕಾದಿಯೋ ಬರಮಾಡಿಕೊಂಡ. ಆ ಮುದುಕಿ ತನ್ನ ಗುರುತು ತಿಳಿಸುವುದಕ್ಕಿಂತ ಮೊದಲು ಸೆಟೆದು ನಿಂತು ಸೆಲ್ಯೂಟ್ ಮಾಡಿದಳು.
“ನಾನು ಕರ್ನಲ್ ಗ್ರಿಗೇರಿಯೋ ಸ್ಟಿವೆನ್ಸನ್”

ಅವನು ಕೆಟ್ಟ ಸುದ್ದಿಯನ್ನು ತಂದಿದ್ದ. ಅವನ ಪ್ರಕಾರ ಉದಾರವಾದಿಗಳ ವಿರೋಧದ ಅಂತಿಮ ಕೇಂದ್ರಗಳನ್ನು ನೆಲಸಮ ಮಾಡಲಾಗಿತ್ತು. ಹೋರಾಡುತ್ತಲೇ ಹಿಂತಿರುಗುತ್ತ ರಿಯೋ‌ಅಕ ಬಳಿ ಇದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಬಿಟ್ಟು ಬಂದಾಗ ಅವನು ಅರ್ಕಾದಿಯೋಗೆ ಒಂದು ಸಂದೇಶವನ್ನು ಕಳಿಸಿದ್ದ. ಉದಾರವಾದಿಗಳ ಆಸ್ತಿ ಮತ್ತು ಜೀವ ರಕ್ಷಣೆಯ ಷರತ್ತನ್ನು ಹಾಕಿ ಯಾವ ಪ್ರತಿರೋಧವೂ ಇರದೆ ಶರಣಾಗಿ ಊರನ್ನು ಒಪ್ಪಿಸಬೇಕು. ನೋಡಿದರೆ ಮರುಕ ಬರುವ ಹಾಗಿದ್ದ ತಲೆಮರೆಸಿಕೊಂಡಿದ್ದ ಸಂದೇಶ ತಂದವನನ್ನು ಅರ್ಕಾದಿಯೋ ತೀಕ್ಷಣವಾಗಿ ನೋಡಿದ.
ಅವನು, “ಅದೇನಿದ್ರೂ ನೀವು ಅಷ್ಟಿಷ್ಟನ್ನಾದರೂ ಬರವಣಿಗೇಲಿ ತಂದಿರಬೇಕಲ್ಲ” ಎಂದ.
ಆಗಂತುಕ, “ಅದು ಬೇಡ ಅಂತ, ಆ ಥರದ್ದೇನೂ ನಾನು ತಂದಿಲ್ಲ. ಸಧ್ಯದ ಪರಿಸ್ಥಿತೀಲಿ ಅನುಮಾನ ಬರುವಂಥದೇನನ್ನೂ ಇಟ್ಟುಕೊಳ್ಳಲಿಕ್ಕೆ ಆಗಲ್ಲ ಅನ್ನೋದು, ಯಾರಿಗೂ ತಿಳಿಯತ್ತೆ” ಎಂದ.
ಅವನು ಮಾತನಾಡುತ್ತಿದ್ದ ಹಾಗೆಯೇ ಒಳಗೆ ಕೈ ಹಾಕಿ ಚಿನ್ನದ ಸಣ್ಣ ಮೀನೊಂದನ್ನು ತೆಗೆದ. ಅವನು, “ಇದು ಸಾಕು ಅಂತ ಕಾಣತ್ತೆ” ಎಂದ. ಅದೊಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತಯಾರಿಸಿದ ಚಿನ್ನದ ಸಣ್ಣ ಮೀನುಗಳಲ್ಲಿ ಒಂದೆಂದು ಅರ್ಕಾದಿಯೋಗೆ ಕಂಡಿತು. ಆದರೆ ಅಂಥದನ್ನು ಯುದ್ಧಕ್ಕೆ ಮುಂಚೆ ಯಾರೇ ಆದರೂ ಕೊಂಡಿರಬಹುದಿತ್ತು ಅಥವಾ ಕದ್ದಿರಬಹುದಾಗಿತ್ತು ಮತ್ತು ಅದಕ್ಕೆ ಅಭಯ ವಸ್ತುವಾಗುವ ಯೋಗ್ಯತೆ ಇರಲಿಲ್ಲ. ತನ್ನನ್ನು ಗುರುತಿಸಲಿ ಎಂದು ಸಂದೇಶ ತಂದವನು ಮಿಲಿಟರಿ ರಹಸ್ಯವನ್ನು ಮುರಿದಿದ್ದ. ಅವನು ಕುರಾಶೋಗೆ ಹೋಗಿ ಅಲ್ಲಿ ಕ್ಯಾರಿಬಿಯಾದ ಎಲ್ಲ ಕಡೆಯಿಂದ, ದೇಶ ಬಿಟ್ಟು ಬಂದವರನ್ನು ಸೇರಿಸಿಕೊಂಡು ಜೊತೆಗೆ ಆಯುಧ ಹಾಗೂ ಇತರ ಸಾಮಗ್ರಿಗಳನ್ನು ಕೂಡಿಸಿಕೊಂಡು, ವರ್ಷದ ಕೊನೆಯ ವೇಳೆಗೆ ಅವರ ಮೇಲೆ ಎರಗುವ ಪ್ರಯತ್ನದಲ್ಲಿರುವ ತನ್ನ ಧ್ಯೇಯವನ್ನು ತಿಳಿಸಿದ. ಆ ಯೋಜನೆಯಲ್ಲಿ ನಂಬಿಕೆಯಿಟ್ಟ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ, ಬೇರೆ ಯಾವುದೇ ಅರ್ಥವಿಲ್ಲದ ತ್ಯಾಗಕ್ಕೆ ಆ ವೇಳೆಯಲ್ಲಿ ಒಪ್ಪಿಗೆ ಇರಲಿಲ್ಲ. ಆದರೆ ಅರ್ಕಾದಿಯೋ ಅದಕ್ಕೆ ಕಿವಿಗೊಡಲಿಲ್ಲ. ಅವನು ತಾನು ಯಾರೆಂಬ ಪುರಾವೆ ಒದಗಿಸುವ ತನಕ ಖೈದಿಯನ್ನು ಬಂದಿಯಾಗಿಟ್ಟಿದ್ದ ಮತ್ತು ಸಾಯುವವರೆಗೂ ಊರನ್ನು ರಕ್ಷಿಸಲು ನಿರ್ಧರಿಸಿದ.

ಅವನು ಬಹಳ ಕಾಲ ಕಾದಿರಬೇಕಾಗಿರಲಿಲ್ಲ. ಉದಾರವಾದಿಗಳ ಸೋಲಿನ ಸುದ್ದಿ ಹೆಚ್ಚು ಹೆಚ್ಚು ನಿಖರವಾಯಿತು. ಮಾರ್ಚ್ ಕೊನೆಯ ವೇಳೆಗೆ ಅಕಾಲದಲ್ಲಿ ಬಿದ್ದ ಮಳೆಯ ಬೆಳಗಿನ ಜಾವ ಹಿಂದಿನ ವಾರಗಳ ಉದ್ರಿಕ್ತ ಭರಿತ ಶಾಂತ ವಾತಾವರಣವನ್ನು ಸೀಳಿಕೊಂಡು ಕಹಳೆ ಮತ್ತು ಚರ್ಚ್ ಗೋಪುರವನ್ನು ಉರುಳಿಸಿದ ಫಿರಂಗಿಯ ಶಬ್ದಗಳು ಕೇಳಿ ಬಂದವು. ವಾಸ್ತವವಾಗಿ, ವಿರೋಧಿಸಬೇಕೆಂಬ ಅರ್ಕಾದಿಯೋನ ನಿರ್ಧಾರ ಹುಚ್ಚುತನವಾಗಿತ್ತು. ಅವನ ಹತ್ತಿರ ಐವತ್ತು ಜನರು ಮಾತ್ರ ಇದ್ದು, ಒಬ್ಬೊಬ್ಬರ ಬಳಿ ಇಪ್ಪತ್ತು ಸಿಡಿಮದ್ದುಗಳ ಸರಕಿತ್ತು. ಆದರೆ ಅವರಲ್ಲಿ ದೊಡ್ಡ ದೊಡ್ಡ ಘೋಷಣೆಗಳನ್ನು ಕೇಳಿ ಉತ್ಸುಕರಾದ ಅವನ ಹಳೆಯ ವಿದ್ಯಾರ್ಥಿಗಳಲ್ಲಿ, ಅಸಫಲಗೊಳ್ಳುವ ಉದ್ದೇಶಕ್ಕೆ ಬಲಿದಾನದ ನಿರ್ಧಾರವಿತ್ತು. ಬೂಟುಗಳ ಶಬ್ದ, ಪರಸ್ಪರ ವಿರೋಧಿ ಅಪ್ಪಣೆಗಳು, ಫಿರಂಗಿ ಶಬ್ದಕ್ಕೆ ನಡುಗಿದ ಭೂಮಿ, ಎತ್ತೆತ್ತಲೋ ಗುಂಡಿಕ್ಕಿದ ಶಬ್ದ ಮತ್ತು ಅರ್ಥವಿಲ್ಲದೆ ಮೊಳಗುತ್ತಿದ್ದ ಕಹಳೆಯ ನಡುವೆ ಕರ್ನಲ್ ಸ್ವಿವೆನ್ಸನ್ ಆಗಿರಬಹುದಾದವನು ಅರ್ಕಾದಿಯೋಗೆ, “ಇಲ್ಲಿ ಬಂದಿಖಾನೆಯಲ್ಲಿ ನನ್ನನ್ನು ಹೆಂಗಸಿನ ಬಟ್ಟೆಯಲ್ಲಿ ಅಗೌರವವಾಗಿ ಸಾಯುವಂತೆ ಮಾಡಬೇಡಿ” ಎಂದು ಅವಕಾಶಕ್ಕೆ ಕಾದು ಹೆಳಿದ. ಅಲ್ಲದೆ, “ನಾನು ಸಾಯಬೇಕು….. ಹೋರಾಡುತ್ತ ಸಾಯಬೇಕು”ಎಂದ. ಅವನಿಗೆ ಒಪ್ಪಿಸಲು ಸಾಧ್ಯವಾಯಿತು. ಅರ್ಕಾದಿಯೋ ಅವನಿಗೆ ಒಂದು ಆಯುಧ ಮತ್ತು ಇಪ್ಪತ್ತು ಸಿಡಿಮದ್ದುಗಳನ್ನು ಕೊಡಲು ಅಪ್ಪಣೆ ಕೊಟ್ಟ ಮತ್ತು ಆ ಮನೆಯ ಜೊತೆ ಮುಖ್ಯ ಕೇಂದ್ರವನ್ನು ರಕ್ಷಿಸಿಕೊಳ್ಳಲು ಐದು ಜನರನ್ನು ಬಿಟ್ಟು ಉಳಿದವರ ಜೊತೆ ಪ್ರತಿರೋಧಿಸಲು ಹೊರಟ. ಅವನಿಗೆ ಜೌಗು ಪ್ರದೇಶಕ್ಕೆ ಹೋಗುವ ದಾರಿಯನ್ನು ತಲುಪಲಾಗಲಿಲ್ಲ. ಅಡ್ಡ ತಡೆಗಳನ್ನೆಲ್ಲ ಕಿತ್ತೊಗೆಯಲಾಗಿತ್ತು ಮತ್ತು ರಕ್ಷಣೆಗಾರರು ಹೊರಬಂದು ರಸ್ತೆಗಳಲ್ಲೆ ಹೊಡೆದಾಡುತ್ತಿದ್ದರು. ಮೊದಲು ಅವರು ತಮ್ಮ ಬಳಿ ಇದ್ದ ಬಂದೂಕಿನ ಗುಂಡುಗಳನ್ನು ಉಪಯೋಗಿಸಿದರು. ಅನಂತರ ಬಂದೂಕಿಗೆದುರಾಗಿ ಪಿಸ್ತೂಲುಗಳನ್ನು ಮತ್ತು ಕೊನೆಗೆ ಕೈಕೈ ಮಿಲಾಯಿಸಿದರು. ಸೋಲು ಸನ್ನಿಹಿತವೆಂದು ಕಂಡಾಗ ಕೆಲವು ಹೆಂಗಸರು ದೊಣ್ಣೆ ಮತ್ತು ಅಡಿಗೆ ಮನೆ ಚಾಕುಗಳನ್ನು ಹಿಡಿದು ರಸ್ತೆಗಿಳಿದರು. ಆ ಗೊಂದಲದಲ್ಲಿ ಅವನಿಗೆ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಎರಡು ಪಿಸ್ತೂಲುಗಳನ್ನು ಹಿಡಿದು ನೈಟ್‌ಗೌನ್ ಹಾಕಿಕೊಂಡು ಹುಚ್ಚಿಯಂತೆ ತನ್ನನ್ನು ಹುಡುಕುತ್ತಿದ್ದ ಅಮರಾಂತ ಕಂಡಳು. ಅವನು ಹೋರಾಟದಲ್ಲಿ ಆಯುಧವಿಲ್ಲದಂತೆ ಆಗಿದ್ದ ಸೈನಿಕನೊಬ್ಬನಿಗೆ ತನ್ನ ಬಂದೂಕು ಕೊಟ್ಟು, ಮನೆಗೆ ಕರೆದುಕೊಂಡು ಹೋಗಲು ಅಮರಾಂತಳ ಜೊತೆ ಹತ್ತಿರದ ರಸ್ತೆಗೆ ಹೊರಟ. ಉರ್ಸುಲಾ ಪಕ್ಕದ ಮನೆಯ ಎದುರು ಫಿರಂಗಿಯಿಂದ ಉಂಟಾದ ಹಳ್ಳವನ್ನು ಲೆಕ್ಕಿಸದೆ ಬಾಗಿಲ ಹತ್ತಿರ ನಿಂತು ಕಾಯುತ್ತಿದ್ದಳು. ಮಳೆ ನಿಲ್ಲುತ್ತಿದ್ದರೂ ರಸ್ತೆಗಳು ಕರಗಿದ ಸೋಪಿನಂತೆ ಜಾರುವಂತಿದ್ದವು ಮತ್ತು ಆ ಕತ್ತಲಲ್ಲಿ ಅಂತರಗಳನ್ನು ಊಹಿಸಬೇಕಾಗಿತ್ತು. ಅಮರಾಂತಳನ್ನು ಉರ್ಸುಲಾ ಬಳಿ ಬಿಟ್ಟು ಮೂಲೆಯಲ್ಲಿ ನಿಂತು ನಿಲ್ಲಿಸದೆ ಗುಂಡು ಹೊಡೆಯುತ್ತಿದ್ದ ಇಬ್ಬರು ಸೈನಿಕರನ್ನು ಎದುರಿಸಲು ಹೋದ. ಅನೇಕ ವರ್ಷ ಕಪಾಟಿನಲ್ಲಿ ಇಟ್ಟಿದ್ದ ಹಳೆಯ ಪಿಸ್ತೂಲುಗಳು ಉಪಯೋಗಕ್ಕೆ ಬರಲಿಲ್ಲ. ಉರ್ಸುಲಾ ತನ್ನ ದೇಹದಿಂದ ಅರ್ಕಾದಿಯೋನನ್ನು ರಕ್ಷಿಸುತ್ತ ಮನೆಯ ಕಡೆ ಹಿಡಿದೆಳೆದಳು.
“ದೇವರನ್ನ ನೆನೆಸಿಕೊಂಡು ಬಾ. ಈ ಹುಚ್ಚಾಟ ಇನ್ನು ಸಾಕು.”
ಸೈನಿಕರು ಅವರ ಕಡೆ ಗುರಿ ಇಟ್ಟರು.
ಅವರಲ್ಲೊಬ್ಬ, “ಅವನನ್ನು ಕೈ ಬಿಟ್ಟು ಬಿಡಿ….. ಇಲ್ದಿದ್ರೆ ನಾವು ಜವಾಬ್ದಾರರಲ್ಲ” ಎಂದು ಕೂಗಿದ.

ಅರ್ಕಾದಿಯೋ ಉರ್ಸುಲಾಳನ್ನು ಪಕ್ಕಕ್ಕೆ ತಳ್ಳಿ ಶರಣಾಗತನಾದ. ಸ್ವಲ್ಪ ಸಮಯದ ನಂತರ ಗುಂಡು ಹೊಡೆಯುವುದು ನಿಂತು ಗಂಟೆಗಳು ಮೊಳಗುವುದಕ್ಕೆ ಪ್ರಾರಂಭವಾಯಿತು. ಅರ್ಧ ಗಂಟೆಯ ಒಳಗೆ ಪ್ರತಿರೋಧವನ್ನು ನೆಲಸಮ ಮಾಡಲಾಗಿತ್ತು. ಆ ಆಕ್ರಮಣದಲ್ಲಿ ಅರ್ಕಾದಿಯೋನ ಸಂಗಡಿಗರು ಯಾರೂ ಉಳಿದಿರಲಿಲ್ಲ. ಆದರೆ ಸಾಯುವ ಮುಂಚೆ ಅವರು ಮುನ್ನೂರು ಸೈನಿಕರನ್ನು ಕೊಂದಿದ್ದರು. ಕೊನೆಯದಾಗಿ ಉಳಿದದ್ದು ಶಕ್ತಿಯುತ ಕೇಂದ್ರವಾದ ಸಿಪಾಯಿಗಳ ವಾಸಸ್ಥಾನ. ತಮ್ಮ ಮೇಲೆ ಆಕ್ರಮಣವಾಗುವುದಕ್ಕಿಂತ ಮುಂಚೆ ಕರ್ನಲ್ ಗ್ರಿಗೇರಿಯೋ ಸ್ಟಿವನ್ಸನ್ ಆಗಿರಬಹುದಾದವನು ಖೈದಿಗಳನ್ನು ಬಿಡುಗಡೆ ಮಾಡಿದ ಮತ್ತು ತಮ್ಮ ಸಂಗಡಿಗರಿಗೆ ಹೊರಗೆ ರಸ್ತೆಗೆ ಹೋಗಿ ಕಾದಾಡುವಂತೆ ಅಪ್ಪಣೆ ಕೊಟ್ಟ. ಅವನು ಇಪ್ಪತ್ತು ಸಿಡಿಮದ್ದುಗಳನ್ನು ಇಟ್ಟುಕೊಂಡಿದ್ದ ಸಿಪಾಯಿಗಳಿಂದ ಆಯಕಟ್ಟು ಸ್ಥಳಗಳು ಚೆನ್ನಾಗಿ ರಕ್ಷಿತವಾಗುತ್ತಿದೆ ಎಂದು ಭಾವಿಸಲು ಕಾರಣವಾಗಿತ್ತು. ಆಕ್ರಮಣಕಾರರು ಫಿರಂಗಿಯಿಂದ ಅದನ್ನು ಚೂರು ಚೂರು ಮಾಡಿದರು. ಆ ಕಾರ್ಯಾಚರಣೆಯನ್ನು ನಿರ್ವಹಿಸಿದ ಕ್ಯಾಪ್ಟನ್ ಆ ರದ್ದಿಯಲ್ಲಿ ಯಾರೂ ಇಲ್ಲದಿರುವುದಕ್ಕೆ ಮತ್ತು ಚಿಂದಿಯಾದ ಖಾಲಿ ಬಂದೂಕನ್ನು ಬಿಗಿಯಾಗಿ ಹಿಡಿದುಕೊಂಡು ಒಳ‌ಉಡುಪಿನಲ್ಲಿ ಸತ್ತ ಒಬ್ಬ ಮನುಷ್ಯನನ್ನು ಕಂಡು ಚಕಿತನಾದ. ಅವನಿಗೆ ಹೆಂಗಸಿನ ಹಾಗೆ ತಲೆಗೂದಲಿತ್ತು. ಅವನು ಕುತ್ತಿಗೆಯ ಹತ್ತಿರ ಅದನ್ನು ಬಾಚಣಿಕೆಯಿಂದ ಹಿಡಿದು ನಿಲ್ಲಿಸಿದ್ದ ಮತ್ತು ಅವನ ಕತ್ತಿಗೆಯಲ್ಲಿದ್ದ ಚೈನ್‌ನಲ್ಲಿ ಚಿನ್ನದ ಸಣ್ಣ ಮೀನೊಂದಿತ್ತು. ತನ್ನ ಬೂಟುಗಾಲಿಂದ ಉರುಳಿಸಿ ಅವನ ಮುಖದ ಮೇಲೆ ಬೆಳಕು ಬಿಟ್ಟಾಗ ಕ್ಯಾಪ್ಟನ್‌ಗೆ ತಬ್ಬಿಬ್ಬಾಯಿತು. ಅವನು, “ದೇವರೇ” ಎಂದು ಸೋಜಿಗಗೊಂಡು ಕೂಗಿದ. ಉಳಿದವರು ಅವನ ಬಳಿ ಬಂದರು.
“ನೋಡಿ ಈ ಮನುಷ್ಯ ಸಿಕ್ಕಿದ್ದೆಲ್ಲಿ … ಇವನು ಗ್ರಿಗೇರಿಯೋ ಸ್ಟಿವನ್ಸನ್”

ಬೆಳಿಗ್ಗೆ ಅವಸರದ ಸೈನಿಕ ನ್ಯಾಯಾಸ್ಥಾನದ ವಿಚಾರಣೆಯ ನಂತರ ಅರ್ಕಾದಿಯೋನನ್ನು ಸ್ಮಶಾನದ ಗೋಡೆಗೆ ಒರಗಿಸಿ ಗುಂಡಿಕ್ಕಲಾಯಿತು. ತನ್ನ ಜೀವಿತದ ಕೊನೆ ಎರಡು ಗಂಟೆಯಲ್ಲಿ ಬಾಲ್ಯದಿಂದಲೂ ತನಗೆ ಕಾಡಿದ್ದ ಭಯ ಮಾಯವಾದದ್ದು ಹೇಗೆ ಎಂದು ಅವನಿಗೆ ಅರ್ಥವಾಗಲಿಲ್ಲ. ನಿರುದ್ವೇಗದಿಂದ ಇತ್ತೀಚಿನ ತನ್ನ ಪರಾಕ್ರಮವನ್ನು ಕುರಿತು ಕೊಚ್ಚಿಕೊಳ್ಳುವುದರ ಬಗ್ಗೆಯೂ ಯೋಚಿಸದೆ, ತನ್ನ ಮೇಲಿನ ಆಪಾದನೆಗಳನ್ನು ಕೇಳಿಸಿಕೊಂಡ. ಅವನು ಉರ್ಸುಲಾ ಬಗ್ಗೆ ಯೋಚಿಸುತ್ತ ಆ ಸಮಯದಲ್ಲಿ ಅವಳು ಹೊಸೆ ಅರ್ಕಾದಿಯೋ ಬ್ಯುಂದಿಯಾನ ಜೊತೆ ಮರದ ಕೆಳಗೆ ಕುಳಿತು ಕಾಫಿ ಕುಡಿಯುತ್ತಿರಬೇಕು ಎಂದುಕೊಂಡ. ಅವನು ಇನ್ನೂ ಹೆಸರಿಲ್ಲದ ತನ್ನ ಎಂಟು ತಿಂಗಳ ಮಗಳು ಮತ್ತು ಆಗಸ್ಟ್‌ನಲ್ಲಿ ಹುಟ್ಟಲಿರುವ ಮಗುವಿನ ಬಗ್ಗೆ ಯೋಚಿಸಿದ. ಹಿಂದಿನ ದಿನ ಮಾರನೆ ದಿನಕ್ಕೆಂದು ಜಿಂಕೆಯೊಂದಕ್ಕೆ ಉಪ್ಪು ಸವರುವ ಮುಂಚೆ ಬಿಟ್ಟು ಬಂದ ಸಾಂತ ಸೋಫಿಯಾ ದೆಲಾ ಪಿಯದಾದ್ ಅವನಿಗೆ ನೆನೆಪಾದಳು. ಅವಳ ಭುಜದ ತನಕ ಇಳಿಬೀಳುವ ತಲೆಗೂದಲು ಮತ್ತು ಕೃತಕವೇನೋ ಎನ್ನಿಸುವಂತಿದ್ದ ಅವಳ ರೆಪ್ಪೆಗಳು ಅವನನ್ನು ಕಾಡಿತು. ಅವನು ನಿರ್ಭಾವದಿಂದ ತನ್ನ ಜನರ ಬಗ್ಗೆ ಯೋಚಿಸುತ್ತ, ತನ್ನ ಜೀವನದ ಲೆಕಾಚಾರವನ್ನು ಮುಕ್ತಾಯಗೊಳಿಸುತ್ತ ತಾನು ತೀರ ದ್ವೇಷಿಸುತ್ತಿದ್ದವರನ್ನು ನಿಜವಾಗಲೂ ಎಷ್ಟು ಪ್ರೀತಿಸುತ್ತಿದ್ದೆ ಎನ್ನುವುದು ಅವನಿಗೆ ತಿಳಿಯುತ್ತ ಬಂತು. ಮಿಲಿಟರಿ ವಿಚಾರಣೆಯ ಅಧ್ಯಕ್ಷರು ತಮ್ಮ ಅಂತಿಮ ಭಾಷಣ ಪ್ರಾರಂಭಿಸಿದಾಗ ಎರಡು ಗಂಟೆ ಕಳೆದಿದೆ ಎಂದು ಅವನಿಗೆ ಗೊತ್ತಾಯಿತು. ಅಧ್ಯಕ್ಷರು, “ಒಂದು ಪಕ್ಷ ಆಪಾದಿತನ ಮೇಲಿನ ಖಚಿತಗೊಂಡ ಆಪಾದನೆಗಳ ಸ್ವರೂಪ ತೀವ್ರವಾಗಿರದಿದ್ದರೂ ಅವನ ಬೇಜವಾಬ್ದಾರಿತನ ಮತ್ತು ದೋಷಪೂರ್ಣ ಧಾರ್ಷದಿಂದ ತನ್ನ ಕೆಳಗಿನವರ ಸಾವಿಗೆ ಕಾರಣನಾಗಿದ್ದಷ್ಟಕ್ಕೇ ಅವನಿಗೆ ಮರಣದಂಡನೆ ವಿಧಿಸಲು ಸಾಕಾಗುತ್ತದೆ” ಎಂದ. ಮುರಿದು ಬಿದ್ದ ಸ್ಕೂಲ್‌ನಲ್ಲಿ ಎಲ್ಲಿ ತನಗೆ ಅಧಿಕಾರದ ರಕ್ಷಣೆಯಿತ್ತೋ ಮತ್ತು ಆ ರೂಮಿನ ಸ್ವಲ್ಪ ದೂರದಲ್ಲೇ ಪ್ರೇಮದ ಅನಿಶ್ಚಿತತೆಯ ಅರಿವಾಗಿತ್ತೋ ಅಲ್ಲಿ ಸಾವಿನ ಔಪಚಾರಿಕತೆ ಅಸಂಬದ್ಧವೆನಿಸಿತು. ಸಾವಿನ ಬಗ್ಗೆ ಅವನಿಗೆ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಜೀವನದ ಬಗ್ಗೆ ಆಲೋಚನೆಯಿತ್ತು. ಆದ್ದರಿಂದ ಅವನು ತಮ್ಮ ನಿರ್ಧಾರವನ್ನು ತಿಳಿಸಿದಾಗ ಅವನಿಗೆ ಉಂಟಾದ ಭಾವನೆ ಭಯವಲ್ಲ: ಮನೋವ್ಯಥೆ. ತನ್ನ ಕೊನೆಯ ಕೋರಿಕೆಯನ್ನು ಕೇಳುವ ತನಕ ಅವನು ಮಾತಾಡಲಿಲ್ಲ.
ಅವನು ಸದೃಢ ದನಿಯಲ್ಲಿ, “ನನ್ನ ಮಗಳಿಗೆ ಉರ್ಸುಲಾ ಅಂತ ಹೆಸರಿಡಕ್ಕೆ ನನ್ನ ಹೆಂಡತೀಗೆ ತಿಳಿಸಿ” ಎಂದವನು ಮಾತು ನಿಲ್ಲಿಸಿ, ಮತ್ತೆ ಅದನ್ನೇ ಹೇಳಿದ: “ಉರ್ಸುಲಾ, ಅವಳ ಅಜ್ಜಿಯ ಹಾಗೆ, ಅವಳಿಗೆ ಇನ್ನೂ ಹೇಳಿ: ಹುಟ್ಟಲಿರೋ ಮಗು ಗಂಡಾದರೆ ಅದಕ್ಕೆ ಹೊಸೆ ಅರ್ಕಾದಿಯೋ ಅಂತ. ಅಂಕಲ್ ಹಾಗಲ , ಅಜ್ಜನ ಹಾಗೆ.

ಅವನನ್ನು ದಂಡನೆಗೆ ಗುರಿಪಡಿಸುವ ಗೋಡೆಯ ಬಳಿ ಕರೆದುಕೊಂಡು ಹೋಗುವ ಮುಂಚೆ ಫಾದರ್ ನಿಕನೋರ್ ಅವನಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದ. ಅರ್ಕಾದಿಯೋ, “ನಾನು ಪರಿತಾಪ ಪಡುವಂಥದೇನೂ ಇಲ್ಲ” ಎಂದು ಹೇಳಿ ಒಂದು ಕಪ್ ಬ್ಲಾಕ್ ಕಾಫಿ ಕುಡಿದು ಗುಂಡಿಕ್ಕುವ ತಂಡದವರ ಅಪ್ಪಣೆಗೆ ಒಪ್ಪಿಸಿಕೊಂಡ. ದಿಢೀರನೆ ಕೊಲ್ಲುವುದರಲ್ಲಿ ನಿಷ್ಣಾತನಾದ ಆ ತಂಡದ ನಾಯಕನ ಹೆಸರು ಕ್ಯಾಪ್ಟನ್ ಕಾರ್ನಿಸಿರೋ, ಅಂದರೆ ಕೊಲೆಗಾರ ಎಂದು ಅದರ ಅರ್ಥ. ಹಾಗೆ ಇದ್ದದ್ದು ಕಾಕತಾಳೀಯವಾಗಿತ್ತು. ನಿಲ್ಲದೆ ಸುರಿಯುತ್ತಿದ್ದ ಸಣ್ಣ ಮಳೆಯಲ್ಲಿ ಸ್ಮಶಾನದ ಕಡೆ ಹೊರಟಾಗ ದಾರಿಯಲ್ಲಿ ಅರ್ಕಾದಿಯೋ ದಿಗಂತದಲ್ಲಿ ಬುಧವಾರದ ಉಜ್ವಲ ಬೆಳಗನ್ನು ಕಂಡ. ಆ ಮಂಜಿನಲ್ಲಿ ಅವನ ಮನೋವ್ಯಥೆ ಮಾಯವಾಗಿ ಅದರ ಸ್ಥಳದಲ್ಲಿ ಕುತೂಹಲ ಮೂಡಿತು. ಅವನಿಗೆ ಗೋಡೆಗೆ ಬೆನ್ನನ್ನು ತಗುಲಿಸಿ ನಿಲ್ಲಲು ಅವರು ಆeಪಿಸಿದಾಗ, ಬಾಗಿಲನ್ನು ಪೂರ್ತಿ ತೆಗೆದು ಒದ್ದೆ ಕೂದಲಲ್ಲಿ ನೇರಳೆ ಬಣ್ಣದ ಹೂಗಳ ಬಟ್ಟೆ ಹಾಕಿಕೊಂಡಿದ್ದ ರೆಬೇಕ ಕಾಣಿಸಿದಳು. ಅವಳು ತನ್ನನ್ನು ಗುರುತಿಸಲು ಸಾಧ್ಯವಾಗುವ ಹಾಗೆ ಪ್ರಯತ್ನಿಸಿದ. ಗೋಡೆಯ ಕಡೆ ಹಾಗೆಯೇ ನೋಡಿದ ರೆಬೇಕ ಮರಗಟ್ಟಿ, ಮಾತಿಲ್ಲದೆ, ಪ್ರತಿಕ್ರಿಯಿಸಲೂ ಸಾಧ್ಯವಾಗದೆ ಅರ್ಕಾದಿಯೋಗೆ ವಿದಾಯ ಸೂಚಿಸಿದಳು. ಅರ್ಕಾದಿಯೋ ಕೂಡ ಅವಳಿಗೆ ಹಾಗೆಯೇ ಮಾಡಿದ. ಆ ಸಮಯದಲ್ಲಿ ಹೊಗೆಯುಗುಳುವ ಬಂದೂಕುಗಳು ಅವನ ಕಡೆ ಗುರಿ ಇಟ್ಟಿದ್ದವು ಮತ್ತು ಅವನಿಗೆ ಮೇಲ್‌ಕಿಯಾದೆಸ್ ತರಿಸಿದ್ದ ಪೋಪ್ ಗುರುವಿನ ನಿರೂಪಣೆಯ ಮಾತುಗಳು ಕೇಳಿಸಿತು ಹಾಗೂ ಇನ್ನೂ ಕನ್ಯೆಯಾಗಿದ್ದ ಸಾಂತ ಸೋಫಿ ದೆಲಾ ಪಿಯದಾದ್ ಕ್ಲಾಸ್ ರೂಮಿನಲ್ಲಿ ನಡೆದು ಬಂದು ಕರಗಿದ ಹೆಜ್ಜೆ ಸಪ್ಪಳ ಕೇಳಿಸಿತು. ಅಲ್ಲದೆ ರೇಮಿಡಿಯೋಸ್‌ಳ ಶವದ ಮೂಗಿನ ಹೊಳ್ಳೆಗಳಲ್ಲಿದ್ದ ಅಂಥದೇ ಕೊರೆಯುವ ಬಿಗಿತ ತನ್ನ ಮೂಗಿನಲ್ಲೂ ಇರುವಂತೆ ತೋರಿತು. ಅವನು, “ಅಯ್ಯೋ ದೇವರೆ, ಇದೇನಾಯಿತು. ಒಂದು ವೇಳೆ ಹೆಣ್ಣು ಮಗು ಹುಟ್ಟಿದರೆ ಅದಕ್ಕೆ ರೆಮಿದಿಯೋಸ್ ಅಂತ ಹೆಸರಿಡಿ ಅನ್ನೋದನ್ನ ಹೇಳಕ್ಕೆ ಮರೆತು ಬಿಟ್ಟೆ” ಎಂದು ಯೋಚಿಸುವಷ್ಟಾಯಿತು. ಅನಂತರ ಎಲ್ಲವೂ ಒಟ್ಟೊಟ್ಟಿಗೆ ಒಟ್ಟುಗೂಡಿ ಅಂದರೆ ತನ್ನ ಜೀವಮಾನದಲ್ಲಿ ಅತೀವ ಯಾತನೆಗೆ ಒಳಪಡಿಸಿದ ಎಲ್ಲ ಭಯವನ್ನು ಮತ್ತೆ ಅನುಭವಿಸಿದ. ಕ್ಯಾಪ್ಟನ್ ಗುಂಡು ಹೊಡೆಯಲು ಅಪ್ಪಣೆ ಕೊಟ್ಟ. ತನ್ನ ತೊಡೆಗಳಿಗೆ ಕಾವು ಹುಟ್ಟಿಸಿದ ದ್ರವ ಎಲ್ಲಿಂದ ಇಳಿದು ಬರುತ್ತಿದೆ ಎನ್ನುವುದು ಅರ್ಥವಾಗದೆ ಎದೆ ಸೆಟೆಸಿ ಕತ್ತೆತ್ತುವುದಕ್ಕೂ ಅವನಿಗೆ ಸಮಯ ಸಾಲದೇ ಹೋಯಿತು.
ಅವನು, “ಸೂಳೆ ಮಕ್ಕಳು…. ಉದಾರವಾದಿ ಪಾರ್ಟಿ ಚಿರಾಯುವಾಗಲಿ” ಎಂದ.

ಮೇ ತಿಂಗಳಿಗೆ ಯುದ್ಧ ಮುಗಿಯಿತು. ದಂಗೆ ಪ್ರಾರಂಭಿಸಿದವರಿಗೆ ನಿರ್ದಾಕ್ಷಿಣ್ಯವಾದ ಶಿಕ್ಷೆಗೆ ಗುರಿಪಡಿಸಲಾಗುವುದೆಂದು ಸರ್ಕಾರ ಅಬ್ಬರದ ಘೋಷಣೆ ಹೊರಡಿಸುವ ಎರಡು ವಾರಗಳ ಮುಂಚೆ ದೆವ್ವ ಬಿಡಿಸುವ ಇಂಡಿಯನ್‌ನಂತೆ ಮರೆಮಾಚಿಕೊಂಡು, ಇನ್ನೇನು ಪಶ್ಚಿಮದ ಸರಹದ್ದನ್ನು ತಲುಪುವುದರಲ್ಲಿದ್ದಾಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಸೆರೆ ಸಿಕ್ಕ. ಅವನ ಜೊತೆ ಯುದ್ಧಕ್ಕೆ ಹೋದ ಇಪ್ಪತ್ತೊಂದು ಜನರಲ್ಲಿ ಹದಿನಾಲ್ಕು ಜನ ಹೋರಾಟದಲ್ಲಿ ಸತ್ತರು, ಆರು ಜನ ಗಾಯಗೊಂಡರು ಮತ್ತು ಸೋಲಿನ ಕೊನೆಯ ಕ್ಷಣದ ತನಕ ಜೊತೆಗಿದ್ದವನೆಂದರೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್. ಅವನನ್ನು ಸೆರೆ ಹಿಡಿದಿದ್ದನ್ನು ಮಕೋಂದೋದಲ್ಲಿ ವಿಶೇಷ ಘೋಷಣೆಯೊಂದಿಗೆ ಪ್ರಚಾರ ಮಾಡಲಾಯಿತು. ಉರ್ಸುಲಾ ತನ್ನ ಗಂಡನಿಗೆ, “ಅವನಿನ್ನೂ ಬದುಕಿದಾನೆ. ಅವನ ಶತ್ರುಗಳು ಅವನನ್ನು ಕ್ಷಮಿಸಲಿ ಅಂತ ನಾವು ದೇವರಿಗೆ ಕೇಳಿಕೊಳ್ಳೋಣ” ಎಂದಳು. ಅವಳು ಮೂರು ದಿನ ಅತ್ತ ನಂತರ ಒಂದು ಮಧ್ಯಾಹ್ನ ಅಡುಗೆ ಮನೆಯಲ್ಲಿ ಹಾಲಿನ ಸಿಹಿ ಪದಾರ್ಥವೊಂದನ್ನು ಕದಡುತ್ತಿದ್ದಾಗ ತನ್ನ ಮಗನ ಧ್ವನಿ ಸ್ವಷ್ಟವಾಗಿ ಕೇಳಿಸಿತು. “ಅದು ಅವ್ರೇಲಿಯಾನೋ” ಎಂದು ಕೂಗುತ್ತ ತನ್ನ ಗಂಡನಿಗೆ ತಿಳಿಸಲು ಮರದ ಕಡೆ ಓಡಿದಳು. “ಅದು ಹೇಗೆ ಪವಾಡ ಆಯ್ತೊ ಗೊತ್ತಿಲ್ಲ. ಆದೆ ಅವನು ಬದುಕಿದಾನೆ. ಇಷ್ಟರಲ್ಲೆ ನಾವು ಅವನನ್ನು ನೋಡ್ತೀವಿ” ಎಂದಳು. ಅವಳು ಅದನ್ನು ನಿಜವೆಂದೇ ತಿಳಿದುಕೊಂಡಳು. ಅವಳು ಮನೆಯ ನೆಲವನ್ನೆಲ್ಲ ತಿಕ್ಕಿ ಶುಚಿಗೊಳಿಸಿ, ಪೀಠೋಪಕರಣಗಳ ಸ್ಥಾನಗಳನ್ನು ಬದಲಾಯಿಸಿದಳು. ಒಂದು ವಾರದ ನಂತರ ಯಾವುದೇ ಘೋಷಣೆಯ ಬೆಂಬಲವಿಲ್ಲದೆ ಬಂದ ಗಾಳಿಸುದ್ದಿ, ಭವಿಷ್ಯ ನುಡಿದಿದ್ದಕ್ಕೆ ನಾಟಕೀಯ ಖಾತರಿಯನ್ನು ಒದಗಿಸಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಮರಣದಂಡನೆ ವಿಧಿಸಲಾಗಿತ್ತು ಮತ್ತು ಜನರು ಪಾಠ ಕಲಿಯುವಂತೆ ಅದನ್ನು ಮಕೋಂದೋದಲ್ಲಿ ಜಾರಿಗೊಳಿಸುವುದಿತ್ತು. ಒಂದು ಸೋಮವಾರ ಬೆಳಿಗ್ಗೆ ಹತ್ತು ಮೂವತ್ತಕ್ಕೆ ಅವ್ರೇಲಿಯಾನೋ ಹೊಸೆಗೆ ಅಮರಾಂತ ಬಟ್ಟೆ ಹೊಲಿಯುತ್ತಿದ್ದಾಗ ಅವಳಿಗೆ ದೂರದ ಸೈನಿಕರ ಶಬ್ದ ಮತ್ತು ಕಹಳೆಯ ಮೊಳಗು ಕೇಳುವ ಒಂದು ಸೆಕೆಂಡಿನ ಮುಂಚೆ ರೂಮಿಗೆ ಧಾವಿಸಿ ಬಂದ ಉರ್ಸುಲಾ, “ಅವನನ್ನು ಕರ್‍ಕೂಂಡು ಬರ್‍ತಿದಾರೆ” ಎಂದು ಕೂಗಿದಳು. ಸೈನಿಕರು ಬಂದೂಕಿನ ತುದಿಯಿಂದ ಒತ್ತೊತ್ತಿ ಬರುತ್ತಿದ್ದ ಜನರನ್ನು ನಿಯಂತ್ರಿಸಲು ಶ್ರಮಿಸಿದರು. ಉರ್ಸುಲಾ ಮತ್ತು ಅಮರಾಂತ ಮೂಲೆಗೆ ಓಡಿ, ಜನರ ಮಧ್ಯೆ ದಾರಿ ಮಾಡಿಕೊಂಡು ಹೋಗಿ ಅವನನ್ನು ನೋಡಿದರು. ಅವನು ತಿರುಪೆಯವನಂತೆ ಕಂಡ. ಬಟ್ಟೆ ಹರಿದು ಹೋಗಿ, ಗಂಟು ಕಟ್ಟಿದ ತಲೆಗೂದಲು ಮತ್ತು ಗಡ್ಡಗಳಿದ್ದ ಅವನು ಬರಿಗಾಲಲ್ಲಿದ್ದ. ಸುಡುತ್ತಿದ್ದ ಧೂಳಿನ ಕಡೆ ಅವನ ಗಮನವಿರಲಿಲ್ಲ. ಸವಾರಿ ಮಾಡುತ್ತಿದ್ದ ಅಧಿಕಾರಿಯ ಕುದುರೆಯ ತಲೆಗೆ ಕಟ್ಟಿದ ಹಗ್ಗಕ್ಕೆ ಅವನ ಎರಡೂ ಕೈಗಳನ್ನು ಹಿಂಬದಿಗೆ ಕಟ್ಟಿತ್ತು. ಅವನ ಜೊತೆಗೆ ಸೋತ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನನ್ನು ಎಳೆದು ತಂದಿದ್ದರು. ಅವರಿಬ್ಬರು ಬೇಸರಗೊಂಡಿರಲಿಲ್ಲ. ಅವರು ಸೈನಿಕರ ವಿರುದ್ಧ ಮಾಡುತ್ತಿದ್ದ ಘೋಷಣೆಗಳಿಂದ ವಿಚಲಿತರಾದಂತೆ ಕಂಡರು.

ಆ ಗೊಂದಲದ ನಡುವೆ ಉರ್ಸುಲಾ, “ಮಗನೇ” ಎಂದು ಕೂಗಿದಳು. ತನ್ನನ್ನು ತಡೆಯಲು ಪ್ರಯತ್ನಿಸಿದ ಸೈನಿಕನ ಕಪಾಳಕ್ಕೆ ಬಾರಿಸಿದಳು. ಅಧಿಕಾರಿಯ ಕುದುರೆ ಹಿಂಗಾಲುಗಳ ಮೇಲೆ ನಿಂತುಕೊಂಡಿತು. ಆಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ನಿಂತ. ಬಳಸುತ್ತಿದ್ದ ತನ್ನ ತಾಯಿಯ ಕೈಗಳಿಂದ ತಪ್ಪಿಸಿಕೊಂಡು ನೆಟ್ಟ ದೃಷ್ಟಿಯಿಂದ ಅವಳನ್ನೇ ನೋಡಿದ.
ಅವನು, “ಈಗ ಮನೆಗೆ ಹೋಗಮ್ಮ. ಜೈಲಿನಲ್ಲಿ ನನ್ನನ್ನು ನೋಡಕ್ಕೆ ಅಧಿಕಾರಿಗಳಿಂದ ಅನುಮತಿ ತೊಗೊಂಡು ಬಾ” ಎಂದ.

ಅವನು ಏನು ಮಾಡಬೇ;ಕೆಂದು ನಿರ್ಧರಿಸಲಾಗದೆ ಎರಡು ಹೆಜ್ಜೆ ಉರ್ಸುಲಾಳ ಹಿಂದೆ ನಿಂತಿದ್ದ ಅಮರಾಂತಳ ಕಡೆ ನೋಡಿದ. ಅನಂತರ ನಗುತ್ತ “ನಿನ್ನ ಕೈಗೆ ಏನಾಗಿದೆ?” ಎಂದು ಕೇಳಿದ. ಅವಳು ಕಪ್ಪು ಬ್ಯಾಂಡೇಜ್ ಇದ್ದ ಕೈ ಮೇಲೆತ್ತಿ, “ಸುಟ್ಟಿದೆ” ಎಂದು ಹೇಳಿ ಕುದುರೆಗಳು ಬೀಳಿಸದಿರಲಿ ಎಂದು ಉರ್ಸುಲಾಳನ್ನು ಪಕ್ಕಕ್ಕೆ ಕರೆದುಕೊಂಡು ಹೋದಳು. ಸೈನಿಕರು ಮುಂದೆ ಹೊರಟರು. ಒಂದು ವಿಶೇಷ ರಕ್ಷಣಾದಳದವರು ಖೈದಿಗಳನ್ನು ಸುತ್ತುವರಿದು ಅವರನ್ನು ಜೈಲಿಗೆ ಕರೆದುಕೊಂಡು ಹೋದರು.

ಮುಸ್ಸಂಜೆಯಲ್ಲಿ ಉರ್ಸುಲಾ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಜೈಲಿನಲ್ಲಿ ಭೇಟಿ ಮಾಡಿದಳು. ಅವಳು ದಾನ್ ಅಪೋಲಿನರ್ ಮೊಸ್ಕೋತೆಯ ಮುಖಾಂತರ ಅನುಮತಿ ಪಡೆಯಲು ಪ್ರಯತ್ನಿಸಿದ್ದಳು. ಆದರೆ ಎಲ್ಲ ಕಡೆ ಮಿಲಿಟರಿ ಇದ್ದ ಕಾರಣ ಅವನು ತನ್ನ ಅಧಿಕಾರವನ್ನು ಕಳೆದುಕೊಂಡಿದ್ದ. ಫಾದರ್ ನಿಕನೋರ್ ತೀವ್ರ ಜ್ವರದಿಂದ ಹಾಸಿಗೆಯಲ್ಲಿದ್ದ. ಮರಣದಂಡನೆಗೆ ಗುರಿಯಾಗದ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ನ ತಂದೆತಾಯಿ ಅವನನ್ನು ಭೇಟಿಯಾಗಲು ಪ್ರಯತ್ನಿಸಿದಾಗ ಸೈನಿಕರು ಬಂದೂಕು ತುದಿಯಿಂದ ಅವರನ್ನು ಹೊರಗಟ್ಟಿದರು. ಯಾರೇ ಮಧ್ಯೆ ಪ್ರವೇಶಿಸುವ ಅಸಾಧ್ಯತೆಯನ್ನು ಮನಗಂಡು, ತನ್ನ ಮಗನಿಗೆ ಮುಂಜಾನೆ ಗುಂಡಿಕ್ಕುತ್ತಾರೆಂದು ಖಚಿತಗೊಂಡ ಉರ್ಸುಲಾ ಅವನಿಗೆ ಕೊಡಬೇಕೆಂದಿದ್ದ ವಸ್ತುಗಳನ್ನು ಸುತ್ತಿಕೊಂಡು ಒಬ್ಬಳೇ ಜೈಲಿಗೆ ಹೋದಳು.

“ನಾನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಅಮ್ಮ” ಎಂದು ಹೇಳಿದಳು.

ಕಾವಲುಗಾರರು ಅವಳ ದಾರಿಗಡ್ಡವಾದರು. “ಏನಾದ್ರೂ ಸರಿ ನಾನು ಹೋಗೋಳೆ” ಎಂದು ಅವರಿಗೆ ಎಚ್ಚರಿಕೆ ಕೊಟ್ಟಳು. ಅವಳು, “ನಿಮ್ಗೆ ಶೂಟ್ ಮಾಡಿ ಅಂತ ಆರ್ಡರ್ ಇದ್ರೆ ಈಗ್ಲೆ ಶುರು ಮಾಡಿ” ಎಂದಳು. ಅವಳು ಕಾವಲುಗಾರನೊಬ್ಬನನ್ನು ಪಕ್ಕಕ್ಕೆ ತಳ್ಳಿ, ಈ ಮೊದಲು ಕ್ಲಾಸ್ ರೂಮು ಆಗಿದ್ದಲ್ಲಿಗೆ ಹೋದಳು. ಅಲ್ಲಿ ಅರ್ಧಂಬರ್ಧ ಬಟ್ಟೆ ಹಾಕಿಕೊಂಡಿದ್ದ ಸೈನಿಕರು ಆಯುಧಗಳಿಗೆ ಎಣ್ಣೆ ಸವರುತ್ತಿದ್ದರು. ಸಮವಸ್ತ್ರ ಹಾಕಿಕೊಂಡು, ದಪ್ಪ ಕನ್ನಡಕದ, ಕೆಂಚು ಮುಖದ ಅಧಿಕಾರಿಯೊಬ್ಬ ಅವರಿಗೆ ಸುಮ್ಮನಿರಲು ಸನ್ನೆ ಮಾಡಿದ. ಉರ್ಸುಲಾ “ನಾನು ಕರ್ನಲ್ ಅವ್ರೇಲಿಯಾನೋನ ಬ್ಯುಂದಿಯಾನ ಅಮ್ಮ” ಎಂದು ಮತ್ತೆ ಹೇಳಿದಳು.
ಅವನು ಸ್ನೇಹಿತನ ಹಾಗೆ ಸಣ್ಣಗೆ ನಗುತ್ತ, “ನೀವು ಹೇಳಿದ್ದು…. ನೀವು ಮಿಸ್ಟರ್ ಅವ್ರೇಲಿಯಾನೋ ಬ್ಯುಂದಿಯಾನ ಅಮ್ಮ ಅಂತ ಇರ್‍ಬೇಕು” ಎಂದು ಅವಳನ್ನು ಸರಿಪಡಿಸಿದ.
ಉರ್ಸುಲಾಗೆ ಅವನ ಮಾತಿನಲ್ಲಿ ಮಲೆನಾಡು ಜನರಲ್ಲಿ ಬೇರೂರಿದ್ದ ಧೋರಣೆಯನ್ನು ಗಮನಿಸಿದಳು.
ಅವಳು ಒಪ್ಪಿಕೊಳ್ಳುತ್ತ, “ನೀವು ಹೇಳಿದ ಹಾಗೆ ಮಿಸ್ಟರ್.. ನಾನು ಅವನನ್ನ ನೋಡೋಕಾದ್ರೆ ಸಾಕು.”

ಸಾಯಲಿರುವ ಖೈದಿಗಳ ಭೇಟಿಯನ್ನು ಮೇಲಿನ ಅಪ್ಪಣೆ ಪ್ರಕಾರ ನಿಷೇಧಿಸಿದ್ದರೂ ಆ ಅಧಿಕಾರಿ ಅವಳಿಗೆ ಹದಿನೈದು ನಿಮಿಷಗಳ ಭೇಟಿಗೆ ಅವಕಾಶ ಕೊಡುವ ಜವಾಬ್ದಾರಿ ವಹಿಸಿದ. ಉರ್ಸುಲಾ ಅವನಿಗೆ ಗಂಟಿನಲ್ಲಿ ಏನಿದೆ ಎಂದು ತೋರಿಸಿದಳು. ಶುಭ್ರವಾದ ಬಟ್ಟೆ, ತನ್ನ ಮಗ ಮದುವೆಯಲ್ಲಿ ಹಾಕಿಕೊಂಡಿದ್ದ ಬೂಟು ಮತ್ತು ಅವನು ವಾಪಸು ಬರುತ್ತಾನೆಂದು ತಾನು ಭಾವಿಸಿದ ದಿನ ಮಾಡಿಟ್ಟಿದ್ದ ಸಕ್ಕರೆ ಮಿಠಾಯಿಯನ್ನು ತೋರಿಸಿದಳು. ಬಂದೀಖಾನೆಯನ್ನಾಗಿ ಉಪಯೋಗಿಸಿದ ರೂಮಿನಲ್ಲಿ ಕಂಕುಳಲ್ಲಿ ಗಾಯವಾದ್ದರಿಂದ ಕೈಗಳನ್ನು ಅಗಲಿಸಿ ಮಂಚದ ಮೇಲೆ ಮೈ ಚಾಚಿದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಉರ್ಸುಲಾ ಕಂಡಳು. ಅವರು ಅವನಿಗೆ ಶೇವ್ ಮಾಡಿಕೊಳ್ಳಲು ಬಿಟ್ಟಿದ್ದರು. ಕೊನೆಯಲ್ಲಿ ಕೊಂಚ ತಿರುಚಿದ್ದ ಅವನ ದಪ್ಪ ಮೀಸೆ ಕೆನ್ನೆಯ ಮೂಳೆಯನ್ನು ಎದ್ದು ತೋರಿಸುತ್ತಿದ್ದವು. ಅವನು ಅಲ್ಲಿಂದ ಹೊರಟಾಗ ಇದ್ದದ್ದಕ್ಕಿಂತ ಕಳೆಗುಂದಿದ್ದ್ದ, ಕೊಂಚ ಎತ್ತರವಾಗಿದ್ದ, ಅಲ್ಲದೆ ಎಂದಿಗಿಂತಲೂ ಹೆಚ್ಚು ಏಕಾಂತದಲ್ಲಿ ಇದ್ದಂತೆ ಕಂಡಿತು. ಅವನಿಗೆ ಮನೆ ಬಗ್ಗೆ ಎಲ್ಲ ವಿವರಗಳೂ ಗೊತ್ತಿತ್ತು: ಪಿಯತ್ರೋ ಕ್ರೆಪ್ಸಿಯ ಆತ್ಮಹತ್ಯೆ, ಅರ್ಕಾದಿಯೋನ ಹುಚ್ಚಾಟದ ಆಳ್ವಿಕೆ, ಮರದ ಕೆಳಗೇ ಇರುವ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಎದೆಗಾರಿಕೆ ಮತ್ತು ಅವ್ರೇಲಿಯಾನೋ ಹೊಸೆಯನ್ನು ಬೆಳೆಸುವುದಕ್ಕೆ ಅಮರಾಂತ ತನ್ನ ಕನ್ಯತ್ವದ ವೈಧವ್ಯವನ್ನು ಮುಡುಪಾಗಿಟ್ಟಿರುವುದು ಅವನಿಗೆ ತಿಳಿದಿತ್ತು, ಅಲ್ಲದೆ ಅವನು ಈಗ ಮಾತನಾಡುವುದರ ಜೊತೆಗೇ ಓದುವುದನ್ನು ಮತ್ತು ಬರೆಯುವುದನ್ನು ಕಲಿತಿರುವುದು ಕೂಡ ತಾನು ರೂಮೊಳಗೆ ಕಾಲಿಟ್ಟಾಗಿನಿಂದ ಮಗನ ಪ್ರಬುದ್ಧತೆ, ಅವನ ಆಧಿಪತ್ಯದ ಪ್ರಭೆ ಮತ್ತು ಅವನ ಚರ್ಮದಿಂದ ಹೊರಡುತ್ತಿದ್ದ ವಿಧಾಯಕ ಶಕ್ತಿಯ ಮಿರುಗು ಉರ್ಸುಲಾಳ ಅನುಭವಕ್ಕೆ ಬಂತು. ಅವನಿಗೆ ಎಲ್ಲವೂ ತಿಳಿದಿರುವುದರಿಂದ ಅವಳಿಗೆ ಆಶ್ಚರ್ಯವಾಯಿತು. ಅವನು, “ನಿಂಗೆ ಗೊತ್ತಿz. ಲಾಗಾಯ್ತಿನಿಂದ್ಲೂ ನಾನೊಬ್ಬ ಮಂತ್ರವಾದಿ” ಎಂದು ಜೋಕ್ ಮಾಡಿದ. ಅನಂತರ ಗಂಭೀರನಾಗಿ, “ಇವತ್ತು ಬೆಳಿಗ್ಗೆ ಅವರು ನನ್ನನ್ನ ಇಲ್ಲಿಗೆ ತಂದಾಗ, ಇದೆಲ್ಲ ಆಗಿ ಹೋಗಿರೋದು ಅಂತ ಅನ್ನಿಸ್ತು” ಎಂದ. ವಾಸ್ತವವಾಗಿ ಅವನ ಪಕ್ಕದಲ್ಲಿ ಜನರ ಗುಂಪು ಹುಯಿಲೆಬ್ಬಿಸುತ್ತಿದ್ದಾಗ ಅವನು ಬೇರೆ ಆಲೋಚನೆಗಳ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸುತ್ತಿದ್ದ, ಊರು ಬದಲಾಗಿರುವ ರೀತಿಗೆ ಬೆರಗುಗೊಂಡಿದ್ದ. ಬಾದಾಮಿ ಮರದ ಎಲೆಗಳು ಉದುರಿದ್ದವು. ಮನೆಗಳಿಗೆ ಮೊದಲು ನೀಲಿ ನಂತರ ಕೆಂಪು ಬಣ್ಣ ಬಳಿದು ಕೊನೆಗೆ ಹೇಳಲಾರದಂಥ ಬಣ್ಣವಾಗಿತ್ತು.
ಉರ್ಸುಲಾ, “ನೀನು ಏನು ಅಂದ್ಕೊಂಡಿದ್ದೆ?” ಎಂದು ನಿಟ್ಟುಸಿರು ಬಿಟ್ಟು, “ಕಾಲ ಸರಿದು ಹೋಗತ್ತೆ” ಎಂದಳು.
ಅವ್ರೇಲಿಯಾನೋ, “ಅದರ ರೀತಿ ಹಾಗೇನೇ” ಎಂದು ಒಪ್ಪಿದ. “ಆದರೆ ಹೀಗಲ್ಲ.” ಎಂದ.
ಹೀಗೆ ಬಹಳ ಸಮಯದಿಂದ ನಿರೀಕ್ಷಿಸಿದ ಪರಸ್ಪರ ಪ್ರಶ್ನೆಗಳನ್ನು ಮತ್ತು ಎದುರು ನೋಡುತ್ತಿದ್ದ ಉತ್ತರಗಳನ್ನು ಕೂಡ ತಯಾರು ಮಾಡಿಟ್ಟುಕೊಂಡಿದ್ದ ಭೇಟಿ ಮಾಮೂಲಿನ ದೈನಂದಿನ ಮಾತುಕತೆಯಲ್ಲಿ ಮಂಕಾಯಿತು. ಕಾವಲುಗಾರ ಭೇಟಿ ಮುಗಿಯಿತೆಂದು ಹೇಳಿದಾಗ ಅವ್ರೇಲಿಯಾನೋ ಮಂಚದ ಕೆಳಗಿಂದ ಬೆವರಂಟಿದ ಕಾಗದಗಳನ್ನು ಹೊರಗೆ ತೆಗೆದ. ಅವು ಅವನು ಬರೆದ ಕವನಗಳು, ರೆಮಿದಿಯೋಸ್‌ಳಿಂದ ಸ್ಫೂತಿ ಪಡೆದ ಕವನಗಳು. ಅವನು ಅಲ್ಲಿಂದ ಹೊರಟಾಗ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ. ಜೊತೆಗೆ ಆಗಾಗ ಯುದ್ಧ ನಿಂತಾಗ ಬರೆದವೂ ಇದ್ದವು. ಅವನು, “ಇವನ್ನ ಯಾರೂ ಓದಲ್ಲ ಅಂತ ಮಾತುಕೊಡು” ಎಂದ. ಉರ್ಸುಲಾ ಮಾತುಕೊಟ್ಟು ಅವನಿಗೆ ಮುತ್ತಿಟ್ಟು ವಿದಾಯ ಹೇಳಲು ಎದ್ದು ನಿಂತಳು.
ಅವಳು, “ನಿನಗಾಗಿ ನಾನೊಂದು ರಿವಾಲ್ವರ್ ತಂದಿದೀನಿ” ಎಂದು ಪಿಸುಗುಟ್ಟಿದಳು.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕಾವಲುಗಾರನಿಗೆ ನೋಡಲು ಆಗುವುದಿಲ್ಲ ಎನ್ನುವುದನ್ನು ಗಮನಿಸಿ, ಅವನು ಕೆಳದನಿಯಲ್ಲಿ, “ಅದರಿಂದ ನನಗೇನೊ ಉಪಯೋಗವಾಗಲ್ಲ… ಇರ್‍ಲಿ, ಅದನ್ನು ಇಲ್ಲಿ ಕೊಡು. ನೀನು ಹೊರಗೆ ಹೋಗುವಾಗ ಹುಡುಕಿದರೆ….” ಉರ್ಸುಲಾ ಕುಪ್ಪಸದೊಳಗಿಂದ ಅದನ್ನು ತೆಗೆದು ಮಂಚದ ಮೇಲಿನ ಹಾಸಿಗೆಯ ಕೆಳಗಿಟ್ಟಳು. ಅವನು ಶಾಂತ ರೀತಿಯಿಂದ, “ನೀನೇನೂ ನಂಗೆ ಹೇಳ್ಬೇಡ” ಎಂದು ಒತ್ತುಕೊಟ್ಟು ಹೇಳಿದ. “ನೀನು ನನ್ನನ್ನ ಯಾವಾಗಲೋ ಶೂಟ್ ಮಾಡಿದಾರೆ ಅನ್ನೋ ಥರ ಇರು.” ಉರ್ಸುಲಾ ಅಳುವುದನ್ನು ತಡೆ ಹಿಡಿಯಲು ತುಟಿ ಕಚ್ಚಿದಳು.
ಅವಳು, “ಆ ಗಾಯಕ್ಕೆ ಸ್ವಲ್ಪ ಕಾವು ಕೊಡು” ಎಂದಳು.
ಅವಳು ಮಧ್ಯದಲ್ಲಿ ಒಮ್ಮೆ ತಿರುಗಿ ರೂಮಿನಿಂದ ಹೊರಗೆ ಹೋದಳು. ಬಾಗಿಲು ಹಾಕುವ ತನಕ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಯೋಚಿಸುತ್ತ ನಿಂತಿದ್ದ. ಅವನಿಗೆ ಚಿಕ್ಕಂದಿನಿಂದಲೂ ಮುಂದಾಗುವುದರ ಸೂಚನೆ ತನಗೆ ಉಂಟಾಗುವುದೆಂಬ ಅರಿವು ಮೂಡಿದಾಗಿನಿಂದಲೂ, ತನ್ನ ಸಾವಿನ ಬಗ್ಗೆ ನಿರ್ದಿಷ್ಟವಾಗಿ ಯಾವುದೇ ಅನುಮಾನವಿಲ್ಲದ ಬದಲಾವಣೆಗೆ ಆಸ್ಪದವಿಲ್ಲದಂಥ ಸೂಚನೆ ಸಿಗುತ್ತದೆ ಎಂದುಕೊಂಡಿದ್ದ. ಆದರೆ ಸಾಯುವುದಕ್ಕೆ ಇನ್ನು ಕೆಲವೇ ಗಂಟೆಗಳಿದ್ದರೂ ಅಂಥ ಕುರುಹು ಕಂಡಿರಲಿಲ್ಲ. ಅದೊಂದು ಸಲ ಸುಂದರಿಯಾದ ಹೆಣ್ಣೊಬ್ಬಳು ಅವನಿದ್ದ ತುಕುರಿಂಕ ಕ್ಯಾಂಪ್‌ಗೆ ಬಂದು ಕಾವಲುಗಾರರಿಗೆ ಅವನನ್ನು ಭೇಟಿಮಾಡಲು ಅನುಮತಿ ಕೇಳಿದಳು. ಅವರು ಅವಳನ್ನು ಒಳಗೆ ಬಿಟ್ಟರು. ಏಕೆಂದರೆ ಕೆಲವು ಅತಿರೇಕದ ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಪ್ರಖ್ಯಾತ ಯೋಧರ ಬಳಿಗೆ ವಂಶದ ಕುಡಿಗಳನ್ನು ಉತ್ತಮ ಪಡಿಸಿಕೊಳ್ಳುವುದಕ್ಕೆ ಕಳಿಸುತ್ತಿದ್ದ ಸಂಗತಿ ಅವರಿಗೆ ತಿಳಿದಿತ್ತು. ಆ ರಾತ್ರಿ ಆ ಹುಡುಗಿ ಅವನ ರೂಮಿಗೆ ಬಂದಾಗ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮಳೆಯಲ್ಲಿ ಕೊಚ್ಚಿ ಹೋದವನ ಬಗ್ಗೆ ಕವನವೊಂದನ್ನು ಬರೆಯುತ್ತಿದ್ದ. ಅವನು ಆ ಕಾಗದವನ್ನು ತನ್ನ ಕವನಗಳನ್ನು ಇಟ್ಟಿದ್ದ ಬೀಗ ಹಾಕಿದ ಡ್ರಾ ಕಡೆ ತಿರುಗಿ ಅವಳಿಗೆ ಬೆನ್ನು ಮಾಡಿದ. ಆಗಲೇ ಅವನಿಗೆ ಅದರ ವಾಸನೆ ಬಡಿದದ್ದು. ಅವನು ತಲೆ ತಿರುಗಿಸದೆ ಡ್ರಾದೊಳಗಿದ್ದ ಪಿಸ್ತೂಲನ್ನು ತೆಗೆದುಕೊಂಡ.
ಅವನು, “ದಯವಿಟ್ಟು ಶೂಟ್ ಮಾಡಬೇಡಿ” ಎಂದ.
ಕೈಯಲ್ಲಿ ಪಿಸ್ತೂಲ್ ಹಿಡಿದು ತಿರುಗಿದಾಗ ಆ ಹುಡುಗಿ ಏನು ಮಾಡಬೇಕೆಂದು ತಿಳಿಯದೆ ತನ್ನಲ್ಲಿದ್ದದ್ದನ್ನು ಕೆಳಗಿಳಿಸಿದ್ದಳು. ಇದೇ ರೀತಿಯಲ್ಲಿ ಅವನು ಹನ್ನೊಂದರಲ್ಲಿ ನಾಲ್ಕು ಬಗೆಯ ಬಲೆಗಳನ್ನು ತಪ್ಪಿಸಿಕೊಂಡಿದ್ದ. ಇದಕ್ಕೆ ವಿರುದ್ಧವಾಗಿ ಅದೊಂದು ರಾತ್ರಿ ಕ್ರಾಂತಿಕಾರಿಗಳ ಕೇಂದ್ರಕ್ಕೆ ಎಂದೂ ಸಿಕ್ಕಿಹಾಕಿಕೊಳ್ಳದೆ ಬಂದವನೊಬ್ಬ ಅವನ ಆತ್ಮೀಯ ಗೆಳೆಯ ಕರ್ನಲ್ ಮ್ಯಾಗ್ನಿಷಿಕೊ ವೀಸ್‌ಬಾಲ್‌ನನ್ನು ತಿವಿದು ಕೊಂದಿದ್ದ. ಬೆವರು ಸುರಿಸಿ ಜ್ವರದಿಂದ ವಾಸಿಯಾಗಲಿ ಎಂದು ಅವನು ಕೊಟ್ಟ ಹಾಸಿಗೆಯಲ್ಲಿ ಮಲಗಿದ್ದ, ಅದೇ ರೂಮಿನಲ್ಲಿ ಕೆಲವೇ ಗಜಗಳ ದೂರದಲ್ಲಿ ಮಲಗಿದ್ದ ಕರ್ನಲ್ ಅವ್ರೇಲಿಯಾನೋಗೆ ಅದು ಗೊತ್ತಾಗಲೇ ಇಲ್ಲ. ಅವನು ತನಗಾಗುತ್ತಿದ್ದ ಮುನ್ಸೂಚನೆಗಳನ್ನು ಒಂದು ಕ್ರಮದಲ್ಲಿಡಲು ಸೋತಿದ್ದ. ಅವು ಇದ್ದಕ್ಕಿದ್ದ ಹಾಗೆ ಅಲೌಕಿಕವಾದ ಸರಳತೆಯ ತರಂಗಗಳಾಗಿ ಆ ಕ್ಷಣದ ಅಪ್ಪಟವಾದ ನಂಬಿಕೆಯ ಹಾಗೆ ಬಂದರೂ ಅವುಗಳನ್ನು ಗ್ರಹಿಸುವುದು ಸಾಧ್ಯವಾಗುತ್ತಿರಲಿಲ್ಲ. ಕೆಲವು ಸಂದರ್ಭಗಳಲ್ಲಿ ಅವು ಎಷ್ಟು ಸಹಜವಾಗಿರುತ್ತಿದ್ದವು ಎಂದರೆ ಅದು ಪೂರ್ಣಗೊಂಡ ಮೇಲೆ ಅವುಗಳನ್ನು ಗುರುತಿಸಬೇಕಾಗುತ್ತಿತ್ತು. ಅನೇಕ ಸಲ ಅವು ಮೂಢನಂಬಿಕೆಗಳ ತುಣುಕುಗಳಲ್ಲದೆ ಬೇರೇನೂ ಆಗುತ್ತಿರಲಿಲ್ಲ. ಆದರೆ ಅವರು ಅವನಿಗೆ ಮರಣ ದಂಡನೆ ವಿಧಿಸಿ, ಅವನ ಕೊನೆಯ ಕೋರಿಕೆ ಏನೆಂದು ತಿಳಿಸಲು ಕೇಳಿದಾಗ, ಅವನಿಗೆ ಉತ್ತರ ಕೊಡಲು ಪ್ರೇರೇಪಿಸಿದ ಮುನ್ಸೂಚನೆಯನ್ನು ಅರಿಯಲು ಯಾವ ತೊಂದರೆ ಆಗಲಿಲ್ಲ.
ಅವನು, “ನಾನು ತೀರ್ಪನ್ನು ಮಕೋಂದೋದಲ್ಲಿ ಜಾರಿಗೊಳಿಸಬೇಕು ಅಂತ ಕೇಳಿಕೊಳ್ತೀನಿ” ಎಂದ.
ಮಿಲಿಟರಿ ವಿಚಾರಣೆಯ ಅಧ್ಯಕ್ಷರಿಗೆ ಕೋಪ ಬಂತು. ಅವರು, “ನಿನ್ನ ಜಾಣತನ ತೋರಿಸಬೇಡ. ಇದೆಲ್ಲ ಇನ್ನಷ್ಟು ಸಮಯ ಸಿಕ್ಕಲಿ ಅಂತ ಮಾಡಿದ ಟ್ರಿಕ್ಕು” ಎಂದ. ಕರ್ನಲ್, “ಅದನ್ನ ಪೂರೈಸೋದು ಬಿಡೋದು ನಿಮಗೆ ಬಿಟ್ಟಿದ್ದು, ಆದರೆ ಅದು ನನ್ನ ಕೊನೆ ಆಸೆ” ಎಂದ.

ಅಂದಿನಿಂದ ಮುನ್ಸೂಚನೆಗಳು ಅವನಿಗೆ ಕೈ ಕೊಟ್ಟಿದ್ದವು. ಆ ದಿನ ಉರ್ಸುಲಾ ಜೈಲಿನಲ್ಲಿ ಅವನನ್ನು ಭೇಟಿಯಾದಾಗ ಸಾಕಷ್ಟು ಯೋಚಿಸಿದ ನಂತರ ಅವನು ಬಹುಶ: ಆ ವೇಳೆಯಲ್ಲಿ ತನ್ನ ಸಾವಿನ ಘೋಷಣೆ ಆಗುವುದಿಲ್ಲ ಏಕೆಂದರೆ ಅದು ಯಾವುದೇ ಆಕಸ್ಮಿಕವಲ್ಲದೆ ಕೇವಲ ಜಾರಿಗೊಳಿಸುವವರ ಇಷ್ಟವನ್ನು ಅವಲಂಬಿಸುತ್ತದೆ ಎಂದು ತೀರ್ಮಾನಿಸಿದ. ಅವನು ಇಡೀ ರಾತ್ರಿ ಗಾಯಗಳ ನೋವಿನಿಂದ ಎಚ್ಚರವಾಗಿದ್ದ. ಬೆಳಗಾಗುವುದಕ್ಕೆ ಸ್ವಲ್ಪ್ಲ ಸಮಯದ ಮುಂಚೆ ಅವನಿಗೆ ಹೆಜ್ಜೆ ಸಪ್ಪಳ ಕೇಳಿಸಿತು. ಅವನು ‘ಅವರು ಬರುತ್ತಿದ್ದಾರೆ\’ ಎಂದು ತನಗೆ ತಾನೆ ಹೇಳಿಕೊಂಡು ಯಾವ ಕಾರಣವೂ ಇಲ್ಲದೆ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಬಗ್ಗೆ ಯೋಚಿಸಿದಾಗ ಅದೇ ಕ್ಷಣದಲ್ಲಿ ಮಂಕು ಬೆಳಕಿನ ಮರದ ಕೆಳಗಿದ್ದವನು ಅವನ ಬಗ್ಗೆ ಯೋಚಿಸುತ್ತಿದ್ದ. ಅವನಿಗೆ ಭಯವಾಗಲೀ ಹಳೆಯ ನೆನಪುಗಳ ಒತ್ತಡವಾಗಲಿ ಉಂಟಾಗಲಿಲ್ಲ. ಆದರೆ ಈ ಕೃತಕವಾದ ಸಾವು ತಾನು ಪೂರೈಸದೇ ಬಿಟ್ಟ ಎಷ್ಟೋ ವಿಷಯಗಳನ್ನು ನೋಡದಂತೆ ಮಾಡುತ್ತದೆ ಎನ್ನುವ ಆಲೋಚನೆ ಬಂದು ರೋಷ ಉಕ್ಕಿತು. ಬಾಗಿಲು ತೆರೆಯಿತು ಮತ್ತು ಕಾವಲುಗಾರನೊಬ್ಬ ಕಾಫಿಯ ಲೋಟ ಹಿಡಿದುಕೊಂಡು ಬಂದ. ಮಾರನೆ ದಿನವೂ ಅದೇ ಸಮಯಕ್ಕೆ ಕಂಕುಳಲ್ಲಿನ ಗಾಯದಿಂದ ತೀವ್ರ ಯಾತನೆ ಪಡುತ್ತಿರುವಾಗ ಹಾಗೆಯೇ ರೀತಿ ಆಯಿತು. ಗುರುವಾರ ಅವನು ಕಾವಲುಗಾರರ ಜೊತೆ ಸಕ್ಕರೆ ಮಿಠಾಯಿ ಹಂಚಿಕೊಂಡ ಮತ್ತು ತನಗೆ ಬಿಗಿಯಾಗಿದ್ದ ಶುಭ್ರ ಬಟ್ಟೆ ಮತ್ತು ಚರ್ಮದ ಬೂಟುಗಳನ್ನು ಹಾಕಿಕೊಂಡ. ಶುಕ್ರವಾರ ಸಹಿತ ಅವರು ಅವನನ್ನು ಕೊಂದಿರಲಿಲ್ಲ.
ವಾಸ್ತವವಾಗಿ ಅವರಿಗೆ ತೀರ್ಪನ್ನು ಜಾರಿಗೊಳಿಸುವ ಧೈರ್ಯವಾಗಿರಲಿಲ್ಲ. ಊರಿನಲ್ಲಿದ್ದ ದಂಗೆಯ ಲಕ್ಷಣ ಮಿಲಿಟರಿ ಜನರಿಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಮುಗಿಸುವುದರಿಂದ ಕೇವಲ ಮಕೋಂದೋದಲ್ಲಿ ಅಲ್ಲದೆ ಇಡೀ ಜೌಗುಪ್ರದೇಶದಲ್ಲಿ ರಾಜಕೀಯ ಪರಿಣಾಮ ಉಂಟುಮಾಡುವುದೆಂದು ಯೋಚಿಸುವಂತೆ ಮಾಡಿತು. ಆದ್ದರಿಂದ ಅವರು ಅಲ್ಲಿನ ರಾಜಧಾನಿಯ ಅಧಿಕಾರಿಗಳ ಜೊತೆ ವಿಚಾರ ವಿನಿಮಯ ಮಾಡಿದರು. ಅವರು ಉತ್ತರಕ್ಕಾಗಿ ಇನ್ನೂ ಕಾದಿದ್ದಾಗ ಶನಿವಾರ ರಾತ್ರಿ ಕ್ಯಾಪ್ಟನ್ ರಾಕ್ ಕಾರ್ನಿಸಿರೋ ಕೆಲವು ಅಧಿಕಾರಿಗಳ ಜೊv, ಕತಾವುರೆ ಬಳಿಗೆ ಹೋದ. ಕೇವಲ ಒಬ್ಬಳೇ ಒಬ್ಬ ಹೆಂಗಸು ಒಂದು ರೀತಿ ಹೆದರಿಸಿದ ಮೇಲೆ ಅವನನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಲು ಒಪ್ಪಿದಳು. ಅನಂತರ ಅವಳು, “ಸಾಯ್ತಾನೆ ಅಂತ ಗೊತ್ತಿರೋ ಮನುಷ್ಯನ ಜೊತೆ ಮಲಗಕ್ಕೆ ಯಾರಿಗೂ ಇಷ್ಟ ಇರಲ್ಲ” ಎಂದು ಬಾಯಿ ಬಿಟ್ಟು ಹೇಳಿದಳು. ಜೊತೆಗೆ, “ಅದು ಹ್ಯಾಗೆ ಆಗತ್ತೆ ಅಂತ ಗೊತ್ತಿಲ್ಲ. ಆದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಶೂಟ್ ಮಾಡುವ ಆಫೀಸರ್‌ನ, ಅಲ್ದೆ ತಂಡದ ಇತರೆ ಸೈನಿಕರನ್ನು ಒಬ್ಬೊಬ್ಬರನ್ನಾಗಿ, ಯಾರೂ ತಪ್ಪಿಸಿಕೊಳ್ಳಲಿಕ್ಕೆ ಆಗ್ದೆ, ಭೂಮಿ ಮೇಲೆ ಎಲ್ಲೇ ಬಚ್ಚಿಟ್ಟುಕೊಂಡರೂ ಈಗಲ್ಲದಿದ್ರೆ ಆಮೇಲೆ ಕೊಂದು ಹಾಕ್ತಾರೆ” ಎಂದಳು. ಕ್ಯಾಪ್ಟನ್ ರಾಕ್ ಕಾರ್ನಿಸಿರೋ ಅದನ್ನು ಇತರೆ ಅಧಿಕಾರಿಗಳಿಗೆ ಹೇಳಿದ. ಅವರು ಮೇಲಿನವರಿಗೆ ತಿಳಿಸಿದರು. ಭಾನುವಾರ, ಯಾರೂ ಬಾಯಿ ಬಿಟ್ಟು ಹೇಳದಿದ್ದರೂ, ಮಿಲಿಟರಿ ಕಾರ್ಯಾಚರಣೆ ಅಂದಿನ ದಿನಗಳ ಭಾವತೀವ್ರತೆಯ ಶಾಂತ ಸ್ಥಿತಿಯನ್ನು ಕಲಕದಿದ್ದರೂ ಅಧಿಕಾರಿಗಳಿಗೆ ಮರಣ ದಂಡನೆಯನ್ನು ಜಾರಿಗೊಳಿಸುವುದನ್ನು ಮುಂದೆ ಹಾಕಲು ಯಾವುದೇ ನೆಪವನ್ನು ಉಪಯೋಗಿಸಿಕೊಳ್ಳುವುದಕ್ಕೆ ಸಿದ್ಧ ಎನ್ನುವುದು ಇಡೀ ಊರಿಗೆ ತಿಳಿದಿತ್ತು. ಸೋಮವಾರ ಟಪಾಲ್‌ನಲ್ಲಿ ಅಧಿಕೃತವಾದ ಆರ್ಡರ್ ಬಂತು. ಇಪ್ಪತ್ನಾಲ್ಕು ಗಂಟೆಯೊಳಗೆ ಮರಣ ದಂಡನೆಯನ್ನು ಜಾರಿಗೊಳಿಸಬೇಕು. ಆ ದಿನ ರಾತ್ರಿ ಅಧಿಕಾರಿಗಳು ಹೆಸರಿನ ಚೀಟಿಗಳನ್ನು ಬರೆದು ಟೋಪಿಯಲ್ಲಿ ಹಾಕಿದರು ಮತ್ತು ಚೀಟಿ ಎತ್ತಿದಾಗ ಕ್ಯಾಪ್ಟನ್ ರಾಕ್ ಕಾರ್ನಿಸಿರೋಗೆ ದುರ್ವಿಧಿ ಕಾದಿದೆ ಎನ್ನುವುದನ್ನು ಸೂಚಿಸುವ ಅವನ ಹೆಸರಿತ್ತು. ಅವನು ಕಹಿಯಾಗಿ, “ದುರದೃಷ್ಟಕ್ಕೆ ಯಾವುದೇ ಮುಲಾಜಿಲ್ಲ” ಎಂದ. ಜೊತೆಗೆ, “ನಾನೊಬ್ಬ ಹಲ್ಕಾ ನನ್ಮಗ. ಹಲ್ಕಾ ನನ್ಮಗನಾಗೇ ಸಾಯ್ತೀನಿ” ಎಂದ. ಬೆಳಗಿನ ಜಾವ ಐದು ಗಂಟೆಗೆ ಅವನೊಂದು ತಂಡವನ್ನು ಆರಿಸಿ ಅಂಗಳದಲ್ಲಿ ವ್ಯವಸ್ಥೆಗೊಳಿಸಿ ದಂಡನೆಗೆ ಗುರಿಯಾದ ಮನುಷ್ಯನನ್ನು ಪೂರ್ವಸೂಚನೆ ಕೊಡುವಂತೆ ಮಾತಿನಲ್ಲಿ ಎಬ್ಬಿಸಿದ.
ಅವನು, “ಬ್ಯುಂದಿಯಾ, ನಮ್ಮ ಟೈಂ ಬಂದಿದೆ. ಹೋಗೋಣ ಏಳಿ” ಎಂದ.
ಕರ್ನಲ್, ” ಸರಿ ಹಾಗಾದರೆ . . ನಾನು ಗಾಯದ ಗುಳ್ಳೆಗಳು ಒಡೀತಿರೋ ಕನಸು ಕಾಣ್ತಿದ್ದೆ” ಎಂದು ಉತ್ತರಿಸಿದ.
ಅವ್ರೇಲಿಯಾನೋನನ್ನು ಶೂಟ್ ಮಾಡುತ್ತಾರೆಂದು ಗೊತ್ತಾದ ಮೇಲೆ ರೆಬೇಕ ಬೆಳಗಿನ ಜಾವ ಮೂರು ಗಂಟೆಗೆ ಎದ್ದಳು. ಅವಳು ಬೆಡ್‌ರೂಮಿನ ಕತ್ತಲೆಯಲ್ಲೆ ಕುಳಿತಿದ್ದ ಮಂಚ ಹೊಸೆ ಅರ್ಕಾದಿಯೋನ ಗೊರಕೆಯಿಂದ ಅಲ್ಲಾಡುತ್ತಿದಂತೆ ಅರ್ಧ ತೆರೆದ ಕಿಟಕಿಯಿಂದ ಸ್ಮಶಾನದ ಕಡೆ ನೋಡುತ್ತಿದ್ದಳು. ಅವಳು ಇಡೀ ವಾರ ಬೇರೆ ಬೇರೆ ಸಂದರ್ಭಗಳಲ್ಲಿ ಪಿಯತ್ರೋ ಕ್ರೆಪ್ಸಿಯ ಕಾಗದಗಳಿಗಾಗಿ ಬೆಂಬಿಡದೆ ಕಾಯುತ್ತಿದ್ದ ಹಾಗೆ ಕಾಯುತ್ತಿದ್ದಳು. ಹೊಸೆ ಅರ್ಕಾದಿಯೋ ಅವಳಿಗೆ, “ಅವನನ್ನ ಇಲ್ಲಿ ಶೂಟ್ ಮಾಡಲ್ಲ. ಆ ತಂಡದಲ್ಲಿ ಯಾರ್‍ಯಾರು ಇದ್ರು ಅಂತ ಯಾರಿಗೂ ಗೊತ್ತಾಗದಂತೆ ಸೈನಿಕರ ವಸತಿಯಲ್ಲೆ ಶೂಟ್ ಮಾಡಿ, ಅಲ್ಲೆ ಹೂತು ಹಾಕ್ತಾರೆ” ಎಂದು ಹೇಳಿದ. ಅವಳಿಗೆ ಬರುವ ದಾರಿ ಯಾವುದೆಂದು ಮುಂಚೆಯೇ ತಿಳಿದಂತಿದ್ದು, ವಿದಾಯ ಹೇಳಲು ಬಾಗಿಲು ತೆರೆಯುತ್ತೇನೆಂದು ಖಚಿತವಾಗಿದ್ದಳು. ಹೊಸೆ ಅರ್ಕಾದಿಯೋ, “ಹೆದರಿಕೊಂಡಿರೋ ಆರು ಜನ ಸೈನಿಕರ ಜೊತೇಲಿ, ಅಲ್ಲದೆ ಊರಿನ ಜನ ಎಲ್ಲಾದಕ್ಕೂ ತಯಾರು ಅಂತ ಗೊತ್ತಿರ್‍ಬೇಕಾದ್ರೆ ಅವನನ್ನ ರಸ್ತೇಲಿ ಕರ್‍ಕೊಂಡು ಬರಲ್ಲ” ಎಂದು ಮತ್ತೆ ಹೇಳಿದ. ತನ್ನ ಗಂಡನ ಮಾತನ್ನು ಒಪ್ಪದೆ ರೆಬೇಕ ಕಿಟಕಿಯ ಹತ್ತಿರ ಇದ್ದಳು.
ಅವಳು, “ಅವರೆಷ್ಟು ಪೆದ್ದರು ಅಂತ ನಿಂಗೇ ಗೊತ್ತಾಗತ್ತೆ” ಎಂದಳು.

ಮಂಗಳವಾರ ಬೆಳಿಗ್ಗೆ ಐದು ಗಂಟೆಗೆ ಹೊಸೆ ಅರ್ಕಾದಿಯೋ ಕಾಫಿ ಕುಡಿದು ನಾಯಿಗಳನ್ನು ಹೊರಗೆ ಬಿಟ್ಟ ಮೇಲೆ ರೆಬೇಕ ಕಿಟಕಿಯ ಬಾಗಿಲು ಮುಚ್ಚಿ, ತಾನು ಕೆಳಗೆ ಬೀಳದ ಹಾಗೆ ಮಂಚದ ಅಂಚನ್ನು ಹಿಡಿದುಕೊಂಡಳು. ಅವಳು, “ಅವನನ್ನ ಕರೆದುಕೊಂಡು ಬರ್‍ತಿದಾರೆ” ಎಂದು ನಿಟ್ಟುಸಿರಿಟ್ಟು, “ಅವನೆಷ್ಟು ಚೆನ್ನಾಗಿದಾನೆ” ಎಂದಳು. ಹೊಸೆ ಅರ್ಕಾದಿಯೋ ಕಿಟಕಿಯಿಂದ ನೋಡಿ ಮುಂಜಾವಿನ ಬೆಳಕಿನಲ್ಲಿ ಕಂಪಿಸುತ್ತಿದ್ದ ಅವನನ್ನು ಕಂಡ. ಅವನಾಗಲೇ ಗೋಡೆಗೆ ಬೆನ್ನು ತಗುಲಿಸಿದ್ದ ಮತ್ತು ಕಂಕುಳಿನ ಗಾಯ ಕೆಳಗಿಳಿಸಲು ಬಿಡದಿದ್ದರಿಂದ ಕೈಗಳನ್ನು ಕುಂಡಿಯ ಮೇಲೆ ಇಟ್ಟುಕೊಂಡಿದ್ದ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಮನುಷ್ಯ ಎಷ್ಟು ಕುಗ್ಗಿ ಹೋಗ್ತಾನೆ” ಎಂದವನು, “ಎಷ್ಟು ಕುಗ್ಗಿ ಹೋಗ್ತಾನೆ ಅಂದ್ರೆ, ನರಪೇತಲರೂ ಕೂಡ ಅವನನ್ನ ಕೊಲ್ಲಬಹುದು. ಅದಕ್ಕೆ ಅವನೇನೂ ಮಾಡಕ್ಕಾಗಲ್ಲ” ಎಂದ. ಅವನು ಎಷ್ಟು ರೋಷದಿಂದ ಮತ್ತೆ ಅದನ್ನೇ ಹೇಳಿದನೆಂದರೆ ಅದು ಉರಿಯ ಹಾಗೆ ಕಂಡಿತು ಮತ್ತು ಅದು ಕ್ಯಾಪ್ಟನ್ ರೋಕ್ ಕಾರ್ನಿಸಿರೋ ಅಂತಃಕರಣ ಮಿಡಿಯಿತು. ಏಕೆಂದರೆ ಪ್ರಾರ್ಥಿಸುತ್ತಿದ್ದಾನೆ ಎಂದು ಅವನು ತಿಳಿದುಕೊಂಡ. ತಂಡದವರು ಗುರಿ ಇಟ್ಟಾU, ಆ ರೋಷ ತೀವ್ರವಾದ ಕಹಿಯಾದ ವಸ್ತುವಿನಂತಾಗಿ, ನಾಲಗೆ ಸತ್ತು, ಕಣ್ಣು ಮುಚ್ಚುವಂತೆ ಮಾಡಿತು. ಆಗ ಬೆಳಗಿನ ಬೆಳ್ಳಿ ಬೆಳಕು ಕಾಣೆಯಾಯಿತು ಮತ್ತು ಅವನು ತಾನು ಮತ್ತೆ ಚಡ್ಡಿ ಹಾಕಿಕೊಂಡು, ಕತ್ತಿನ ಸುತ್ತ ಟೈ ಕಟ್ಟಿಕೊಂಡವನಂತೆ ಕಂಡ ಹಾಗೂ ಒಂದು ಅಮೋಘವಾದ ಮಧ್ಯಾಹ್ನ, ತನ್ನ ತಂದೆ ಟೆಂಟ್‌ನೊಳಕ್ಕೆ ಕರೆದುಕೊಂಡು ಹೋದ ಮೇಲೆ ಐಸ್ ನೋಡಿದ್ದನ್ನು ಕಂಡ. ಅವನಿಗೆ ಗಟ್ಟಿಯಾದ ಕೂಗು ಕೇಳಿಸಿದಾಗ ತಂಡದವರಿಗೆ ಅದು ಕೊನೆಯ ಅಪ್ಪಣೆ ಎಂದುಕೊಂಡ. ಅವನು ಹೊಳೆಯುವ ಗುಂಡುಗಳು ಧಾವಿಸಿ ಬರುವುದನ್ನು ನಿರೀಕ್ಷಿಸಿ ತೀವ್ರಭಾವದಿಂದ ಕಣ್ಣು ಬಿಟ್ಟಾಗ ಕಂಡದ್ದು, ಗಾಳಿಯಲ್ಲಿ ಕೈಗಳನ್ನು ಮೇಲಕ್ಕೆ ಎತ್ತಿದ್ದ ರಾಕ್ ಕಾರ್ನಿಸಿರೋ ಮತ್ತು ಭಾರಿ ಶಾಟ್ ಗನ್ನಿನ ಗುಂಡು ಹೊಡೆಯಲು ಸಿದ್ಧನಾಗಿ ರಸ್ತೆ ದಾಟುತ್ತಿದ್ದ ಹೊಸೆ ಅರ್ಕಾದಿಯೋ.
ಕ್ಯಾಪ್ಟನ್ ಹೊಸೆ ಅರ್ಕಾದಿಯೋಗೆ, “ಶೂಟ್ ಮಾಡಬೇಡಿ., ದೇವರ ಅನುಗ್ರಹದ ಹಾಗೆ ನೀವು ಬಂದಿದೀರಿ” ಎಂದ.
ಅಲ್ಲೇ ಇನ್ನೊಂದು ಯುದ್ಧ ಶುರುವಾಯಿತು. ಕ್ಯಾಪ್ಟನ್ ರಾಕ್ ಕಾರ್ನಿಸಿರೋ ಮತ್ತು ಅವನ ಆರು ಜನ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಜೊತೆ ರಿಯೋ‌ಅಕದಲ್ಲಿ ಮರಣ ದಂಡನೆಗೆ ಗುರಿಯಾದ ಕ್ರಾಂತಿಕಾರಿ ಜನರಲ್ ವಿಕ್ಟೋರಿಯಾ ಮೆದೀನಾನ ಬಿಡುಗಡೆಗಾಗಿ ಹೊರಟರು. ಅವರು ಮಕೋಂದೋ ಕಂಡು ಹಿಡಿಯಲು ಹೊಸೆ ಅರ್ಕಾದಿಯೋ ಬ್ಯುಂದಿಯಾ ಪರ್ವತಗಳನ್ನು ದಾಟಿದ ಜಾಡು ಹಿಡಿದು ಹೊರಟರೆ ಸಮಯ ಉಳಿಸಬಹುದೆಂದು ಆಲೋಚಿಸಿದರು. ಆದರೆ ಒಂದು ವಾರದೊಳಗೆ ಅದು ಅಸಾಧ್ಯವಾದ ಕೆಲಸವೆಂದು ಅವರಿಗೆ ಮನದಟ್ಟಾಯಿತು. ಆದ್ದರಿಂದ ಅವರು ಗುಂಡಿಕ್ಕುವ ತಂಡದವರ ಬಳಿ ಇದ್ದ ಅಲ್ಪ ಸ್ವಲ್ಪ ಮದ್ದುಗುಂಡುಗಳೊಂದಿಗೆ ಅಪಾಯಕಾರಿ ಆದ ಬೆಟ್ಟ ಗುಡ್ಡಗಳ ಮಾರ್ಗದಲ್ಲಿ ಹೋಗಬೇಕಾಗಿತ್ತು. ಅವರು ಊರಿನ ಹತ್ತಿರ ಬಿಡಾರ ಹೂಡುತ್ತಿದ್ದರು ಮತ್ತು ಅವರಲ್ಲೊಬ್ಬ ಮರೆಮಾಚಿಕೊಂಡು ಬಂಗಾರದ ಸಣ್ಣ ಮೀನನ್ನು ಹಿಡಿದುಕೊಂಡು ಹಾಡೆ ಹಗಲಿನಲ್ಲಿ ತಲೆಮರೆಸಿಕೊಂಡಿದ್ದ ಉದಾರವಾದಿಗಳನ್ನು ಸಂಪರ್ಕಿಸಲು ಹೋಗುತ್ತಿದ್ದ. ಅವರು ಮಾರನೆಯ ದಿನ ಬೆಳಿಗ್ಗೆ ಬೇಟೆಯಾಡುವುದಕ್ಕೆ ಹೋಗಿ ವಾಪಸು ಬರುತ್ತಿರಲಿಲ್ಲ. ಪರ್ವತಗಳ ಒಂದು ತುದಿಯಿಂದ ರಿಯೋ‌ಅಕವನ್ನು ಕಂಡಾಗ ಜನರಲ್ ವಿಕ್ಟೋರಿಯೋ ಮೆದೀನಾನನ್ನು ಶೂಟ್ ಮಾಡಲಾಗಿತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಸಂಗಾತಿಗಳು ಅವನನ್ನು ಕ್ಯಾರಿಬಿಯನ್ ತೀರದ ಜನರಲ್ ಮಟ್ಟದ ಕ್ರಾಂತಿಕಾರಿ ಸೈನಿಕರ ಪ್ರಧಾನನೆಂದು ಘೋಷಿಸಿದರು. ಅವನು ಹುದ್ದೆಯನ್ನು ಒಪ್ಪಿಕೊಂಡ ಆದರೆ ಬಡ್ತಿಯನ್ನು ನಿರಾಕರಿಸಿz. ಅಲ್ಲದೆ ಸಂಪ್ರದಾಯವಾದಿಗಳು ಅಧಿಕಾರದಲ್ಲಿರುವ ತನಕ ಅದನ್ನು ಒಪ್ಪಿಕೊಳ್ಳುವುದಿಲ್ಲವೆಂಬ ನಿಲುವು ತೆಗೆದುಕೊಂಡ. ಅವರು ಮೂರು ತಿಂಗಳಲ್ಲಿ ಸಾವಿರ ಜನರಿಗೆ ಆಯುಧಗಳನ್ನು ಒದಗಿಸುವುದರಲ್ಲಿ ಯಶಸ್ವಿಯಾದರು. ಆದರೆ ಅವರನ್ನೆಲ್ಲ ನಿರ್ನಾಮ ಮಾಡಲಾಯಿತು. ಬದುಕುಳಿದವರು ಪೂರ್ವದ ಗಡಿಯನ್ನು ತಲುಪಿದರು. ಅವರ ಬಗ್ಗೆ ಕೇಳಿ ಬಂದ ಸಂಗತಿಯೆಂದರೆ ಅವರು ಆಂಟಿಲೆಸ್‌ದ ದ್ವೀಪಗಳಿಂದ ಬಂದು ಕಾಬೊದೆಲಾವೆಲ್ಲಾದಲ್ಲಿ ಇದ್ದಾರೆ ಎಂದು. ಅನಂತರ ಸರ್ಕಾರದಿಂದ ಎಲ್ಲ ಕಡೆ ಟೆಲಿಗ್ರಾಂ ಮೂಲಕ ಸಂದೇಶವೊಂದನ್ನು ಕಳಿಸಲಾಯಿತು ಮತ್ತು ರಾಷ್ಟ್ರವ್ಯಾಪಿಯಾದ ಪ್ರಕಟಣೆಯಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಸಾವಿನ ಬಗ್ಗೆ ಉತ್ಸಾಹದ ಹೇಳಿಕೆ ಇತ್ತು. ಆದರೆ ಎರಡು ದಿನಗಳ ನಂತರ ಮುಂಚಿನದಕ್ಕಿಂತ ಮುಂದಾಗಿ ಆನೇಕ ಟೆಲಿಗ್ರಾಂಗಳು ದಕ್ಷಿಣ ಪ್ರಾಂತಗಳಲ್ಲಿ ದಂಗೆ ಎದ್ದಿರುವುದನ್ನು ತಿಳಿಸಿದವು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಪ್ರಗಾಥೆ ಶುರುವಾದದ್ದು ಹೀಗೆ. ಏಕಕಾಲದಲ್ಲಿ ಮತ್ತು ಪರಸ್ಪರ ವ್ಯತಿರಿಕ್ತವಾದ ಸುದ್ದಿಗಳು ಅವನು ವಿಲಾನುವಾದಲ್ಲಿ ಗೆದ್ದನೆಂದೂ, ಗಾಳಮಾಯದಲ್ಲಿ ಸೋತನೆಂದೂ, ಮೋಟಿಲೋ ಇಂಡಿಯನ್‌ರಿಂದ ನಾಶಗೊಂಡನೆಂದೂ, ಜೌಗು ಪ್ರದೇಶದಲ್ಲಿ ಸತ್ತನೆಂದು ಮತ್ತು ಉರುಮಿತದಲ್ಲಿ ಮತ್ತೆ ಎದ್ದನೆಂದೂ ತಿಳಿಸಿದವು. ಆ ವೇಳೆಯಲ್ಲಿ ಕಾಂಗ್ರೆಸ್‌ನಲ್ಲಿ ಭಾಗವಹಿಸಲು ಮಾತುಕತೆ ನಡೆಸುತ್ತಿದ್ದ ಉದಾರವಾದಿ ನಾಯಕರು ತಮ್ಮ ಪಾರ್ಟಿಯನ್ನು ಪ್ರತಿನಿಧಿಸದ ಅವನನ್ನು ‘ಸಾಹಸಿ\’ ಎಂದು ಹೆಸರಿಸಿದರು. ರಾಷ್ಟ್ರೀಯ ಸರ್ಕಾರ ಅವನನ್ನು ದರೋಡೆಕೋರರ ಪಟ್ಟಿಯಲ್ಲಿ ಸೇರಿಸಿ ಅವನ ತಲೆ ಒಪ್ಪಿಸಿದವರಿಗೆ ಐದು ಸಾವಿರ ಪೇಸೋ ಘೋಷಿಸಿತ್ತು. ಹದಿನಾರು ಸೋಲಿನ ತರವಾಯ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಎರಡು ಸಾವಿರ ಇಂಡಿಯನ್ನರು ಮತ್ತು ರಕ್ಷಣಾದಳದವರೊಡನೆ ನಿದ್ದೆ ಮಾಡುತ್ತಿದ್ದ ರಿಯೋ‌ಅಕವನ್ನು ತ್ಯಜಿಸಿ, ಆಶ್ಚರ್ಯಗೊಳ್ಳುವಂತೆ ಗಾಜಿರಾಗೆ ಹೋದ. ಅಲ್ಲಿ ತನ್ನ ಕೇಂದ್ರ ಸ್ಥಾನವನ್ನು ಸ್ಥಾಪಿಸಿ ಆಳ್ವಿಕೆಯ ವಿರುದ್ಧ ಪೂರ್ಣ ಯುದ್ಧವನ್ನು ಸಾರಿದ. ಸರ್ಕಾರದಿಂದ ಅವನಿಗೆ ಬಂದ ಮೊದಲನೆ ಟೆಲಿಗ್ರಾಂನಲ್ಲಿ ಅವನು ತನ್ನ ಸೈನಿಕರೊಡನೆ ಪೂರ್ವದ ಗಡಿಗಳಿಗೆ ಹೋಗದಿದ್ದರೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನನ್ನು ನಲವತ್ತೆಂಟು ಗಂಟೆಗಳಲ್ಲಿ ಶೂಟ್ ಮಾಡುವುದಾಗಿ ತಿಳಿಸಿತ್ತು. ಆಗ ದಂಡ ನಾಯಕನಾಗಿದ್ದ ಕರ್ನಲ್ ರೋಕ್ ಕಾರ್ನಿಸಿರೋ ಗಾಬರಿಯಿಂದ ಟೆಲಿಗ್ರಾಮನ್ನು ನೋಡಿ ಅವನಿಗೆ ಕೊಟ್ಟ. ಅವನು ಅದನ್ನು ಸಂತೋಷದಿಂದ ಓದಿದ.
ಅವನು, “ಎಷ್ಟು ಚೆನ್ನಾಗಿದೆ. ಈಗ ಮಕೋಂದೋದಲ್ಲೊಂದು ಟಲಿಗ್ರಾಫ್ ಆಫೀಸ್ ಇದೆ” ಎಂದ ಆಶ್ಚರ್ಯದಿಂದ.
ಅವನ ಉತ್ತರ ಖಚಿತವಾಗಿತ್ತು. ಇನ್ನು ಮೂರು ತಿಂಗಳಲ್ಲಿ ಮಕೋಂದೋದಲ್ಲಿ ತನ್ನ ಕೇಂದ್ರ ಸ್ಥಾನವನ್ನು ಸ್ಥಾಪಿಸಲು ನಿರೀಕ್ಷಿಸಿದ್ದ. ಅವನಿಗೆ ಆ ವೇಳೆಯಲ್ಲಿ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಜೀವಂತವಾಗಿರುವುದು ಕಂಡು ಬರದಿದ್ದರೆ, ಆ ಸಮಯದಲ್ಲಿ ಜನರಲ್‌ಗಳಿಂದ ಪ್ರಾರಂಭಿಸಿ, ಸೆರೆ ಹಿಡಿದ ಎಲ್ಲ ಆಫೀಸರ್‌ಗಳನ್ನು ತಾನು ಶೂಟ್ ಮಾಡುವುದಾಗಿಯೂ ಮತ್ತು ಯುದ್ಧದ ಉಳಿದ ಕಾಲದಲ್ಲಿ ಹಾಗೆಯೇ ಮಾಡುವಂತೆ ತನ್ನ ಕೆಳಗಿನವರಿಗೆ ಅಪ್ಪಣೆ ಕೊಡುವುದಾಗಿಯೂ ಹೇಳಿದ. ಅವನು ವಿಜೇತನಾಗಿ ಮೂರು ತಿಂಗಳ ನಂತರ ಮಕೋಂದೋವನ್ನು ಪ್ರವೇಶಿಸಿದಾಗ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನಿಂದ ಅವನಿಗೆ ಪ್ರಥಮ ಆಲಿಂಗನ ಸಿಕ್ಕಿತು.

ಮನೆಯ ತುಂಬ ಮಕ್ಕಳಿದ್ದರು. ಉರ್ಸುಲಾ ಸಾಂತ ಸೋಫಿಯಾ ದೆಲಾ ಪಿಯದಾದ್‌ಳನ್ನು ಅವಳ ಮೊದಲನೆ ಮಗಳು ಮತ್ತು ಅರ್ಕಾದಿಯೋನನ್ನು ಶೂಟ್ ಮಾಡಿದ ಐದು ತಿಂಗಳ ನಂತರ ಹುಟ್ಟಿದ ಇಬ್ಬರು ಅವಳಿ ಮಕ್ಕಳ ಜೊತೆ ಸೇರಿಸಿಕೊಂಡಿದ್ದಳು. ಅವನ ಇಷ್ಟಕ್ಕೆ ವ್ಯತಿರಿಕ್ತವಾಗಿ ಹೆಣ್ಣು ಮಗುವಿಗೆ ರೆಮಿದಿಯೋಸ್ ಎಂದು ಹೆಸರಿಟ್ಟಳು. ಅವಳದು, “ಅವನ ಮನಸ್ಸಿನಲ್ಲಿ ಇದ್ದದ್ದು ಇದೇ ಅಂತ ನಂಗೆ ಸರಿಯಾಗಿ ಗೊತ್ತು” ಎನ್ನುವ ತಾಕೀತು. “ನಾವು ಅವಳನ್ನು ಉರ್ಸುಲಾ ಅಂತ ಕರೆಯಲ್ಲ. ಯಾಕೆಂದರೆ ಆ ಹೆಸರಿನೋರು ತುಂಬ ಕಷ್ಟ ಅನುಭವಿಸಬೇಕಾಗುತ್ತೆ”. ಅವಳ ಮಕ್ಕಳಿಗೆ ಹೊಸೆ ಅರ್ಕಾದಿಯೋ ಸೆಗುಂದೋ ಮತ್ತು ಅವ್ರೇಲಿಯಾನೋ ಸೆಗುಂದೋ ಎಂದು ಹೆಸರಿಟ್ಟರು. ಅಮರಾಂತ ಎಲ್ಲರನ್ನೂ ನೋಡಿಕೊಳ್ಳುತ್ತಿದ್ದಳು. ಅವಳು ಹಜಾರದಲ್ಲಿ ಮರದ ಸಣ್ಣ ಕುರ್ಚಿಗಳನ್ನು ಹಾಕಿ ಅಕ್ಕಪಕ್ಕ ಸಂಸಾರದ ಮಕ್ಕಳನ್ನು ಸೇರಿಸಿ ಒಂದು ಶಿಶುಶಾಲೆಯನ್ನು ತೆರೆದಳು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅಬ್ಬರ ಮತ್ತು ವಾದ್ಯಗಳೊಂದಿಗೆ ವಾಪಸು ಬಂದಾಗ ಮಕ್ಕಳ ಸಮೂಹ ಗೀತೆ ಅವರನ್ನು ಸ್ವಾಗತಿಸಿತು. ಕ್ರಾಂತಿಕಾರಿ ಅಧಿಕಾರಿಯಂತೆ ಬಟ್ಟೆ ತೊಟ್ಟಿದ್ದ ಅಜ್ಜನ ಹಾಗೆ ಎತ್ತರವಿದ್ದ ಅವ್ರೇಲಿಯಾನೋ ಹೊಸೆ ಅವನಿಗೆ ಮಿಲಿಟರಿ ಗೌರವ ಸೂಚಿಸಿದ.
ಎಲ್ಲ ಸುದ್ದಿಗಳು ಒಳ್ಳೆಯದಾಗಿರಲಿಲ್ಲ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಹೊರಟು ಒಂದು ವರ್ಷದ ಮೇಲೆ ಹೊಸೆ ಅರ್ಕಾದಿಯೋ ಮತ್ತು ರೆಬೇಕ ಅರ್ಕಾದಿಯೋ ಕಟ್ಟಿಸಿದ ಮನೆಯಲ್ಲಿದ್ದರು. ದಂಡನೆ ಜಾರಿಗೊಳಿಸುವುದನ್ನು ತಡೆಯುವುದಕ್ಕೆ ಅವನು ಮಧ್ಯೆ ಪ್ರವೇಶಿಸಿದ್ದು ಯಾರಿಗೂ ಗೊತ್ತಿರಲಿಲ್ಲ. ಜೌಕದ ಬಳಿಯ ಮೂಲೆಯ ಸ್ಥಾನದಲ್ಲಿ, ರಾಬಿನ್ ಹಕ್ಕಿಗಳ ಗೂಡುಗಳಿದ್ದ, ಬಾದಾಮಿ ಮರದ ನೆರಳಲ್ಲಿದ್ದ ಹೊಸ ಮನೆಯೊಳಗೆ, ಭೇಟಿಗಾಗಿ ಬರುವವರಿಗೆ ಸತ್ಕರಿಸುವ ದೊಡ್ಡ ಬಾಗಿಲು ಮತ್ತು ಬೆಳಕಿಗಾಗಿ ನಾಲ್ಕು ಕಿಟಕಿಗಳಿದ್ದ ಮನೆಯನ್ನು ವ್ಯವಸ್ಥೆಗೊಳಿಸಿದರು ಮೊಸ್ಕೋತೆಯ ಇನ್ನೂ ಮದುವೆಯಾಗದ ನಾಲ್ಕು ಹೆಣ್ಣು ಮಕ್ಕಳು ಸೇರಿದಂತೆ ರೆಬೇಕಳ ಹಳೆಯ ಸ್ನೇಹಿತರು. ಕೆಲವು ವರ್ಷಗಳಿಂದ ನಿಂತು ಹೋಗಿದ್ದ ಕಸೂತಿ ಕೆಲಸಗಳನ್ನು ಮತ್ತೊಮ್ಮೆ ಬೆಗೊನಿಯಾ ಗಿಡಗಳಿದ್ದ ಮುಂಬಾಗಿಲ ಬಳಿ ಪ್ರಾರಂಭಿಸಿದರು. ಒತ್ತುವರಿ ಮಾಡಿಕೊಂಡ ಭೂಮಿಯಿಂದ ಹೊಸೆ ಅರ್ಕಾದಿಯೋ ಲಾಭಗಳಿಸುವುದು ಮುಂದುವರೆಯಿತು. ಅದರ ಒಡೆತನವನ್ನು ಸಂಪ್ರದಾಯವಾದಿ ಸರ್ಕಾರ ಮಾನ್ಯ ಮಾಡಿತ್ತು. ಪ್ರತಿ ಮಧ್ಯಾಹ್ನ ಅವನು ಬೇಟೆ ನಾಯಿಗಳು ಮತ್ತು ಡಬಲ್ ಬ್ಯಾರಲ್ ಶಾಟ್‌ಗನ್ ಜೊತೆ ಕುದುರೆಯ ಜೀನಿನ ಮೇಲೆ ಮೊಲಗಳ ಮಾಲೆ ತರುವುದನ್ನು ನೋಡಬಹುದಿತ್ತು. ಬಿರುಗಾಳಿಯ ಭಯವಿದ್ದ ಒಂದು ಸೆಪ್ಟೆಂಬರ್‌ನ ಮಧ್ಯಾಹ್ನ ಎಂದಿಗಿಂತ ಮುಂಚೆ ಮನೆಗೆ ಬಂದ. ಊಟದ ಮನೆಯಲ್ಲಿದ್ದ ರೆಬೇಕಳನ್ನು ನೋಡಿ ನಸುನಕ್ಕು, ಅಂಗಳದಲ್ಲಿ ನಾಯಿಗಳನ್ನು ಕಟ್ಟಿ ಹಾಕಿ, ಅನಂತರ ಉಪ್ಪು ಸವರಲು ಮೊಲಗಳನ್ನು ಅಡುಗೆ ಮನೆಯಲ್ಲಿ ಇಳಿಬಿಟ್ಟು, ಬಟ್ಟೆ ಬದಲಾಯಿಸಲು ಮಲಗುವ ಕೋಣೆಗೆ ಹೋದ. ಆ ಮೇಲೆ ರೆಬೇಕ ತನ್ನ ಗಂಡ ಬೆಡ್‌ರೂಮಿಗೆ ಹೋದ ಮೇಲೆ ತಾನು ಚಿಲಕ ಹಾಕಿಕೊಂಡ ಬಚ್ಚಲು ಮನೆಯಲ್ಲಿ ಇದ್ದೆನೆಂದೂ ಹಾಗೂ ಯಾವುದೇ ಶಬ್ದ ಕೇಳಲಿಲ್ಲವೆಂದು ಹೇಳಿಕೆ ಕೊಟ್ಟಳು. ಆ ಹೇಳಿಕೆಯನ್ನು ನಂಬಲು ಕಷ್ಟವಾಗಿದ್ದರೂ ಬೇರೆ ಇನ್ನು ಯಾವ ಸಾಧ್ಯತೆ ಇರಲಿಲ್ಲ ಮತ್ತು ತನ್ನನ್ನು ಸಂತೋಷ?ಜಜಿ;ಗಿಟ್ಟಿದ್ದವನನ್ನು ರೆಬೇಕ ಕೊಲೆ ಮಾಡಲು ಯಾವ ಉದ್ದೇಶವೂ ಕಾಣಲಿಲ್ಲ. ಬಹುಶಃ ಮಕೋಂದೋದಲ್ಲಿ ಬಗೆಹರಿಯದೆ ಹೋದ ರಹಸ್ಯ ಅದೊಂದೇ. ಹೊಸೆ ಅರ್ಕಾದಿಯೋ ಮಲಗುವ ಕೋಣೆಯ ಬಾಗಿಲು ಹಾಕಿಕೊಂಡ ಕೂಡಲೆ ಮನೆಯಲ್ಲಿ ಪಿಸ್ತೂಲಿನಿಂದ ಹೊಡೆದ ಧ್ವನಿ ಪ್ರತಿಧ್ವನಿಸಿತು. ರಕ್ತದ ಹನಿಯೊಂದು ಮುಚ್ಚಿದ ಬಾಗಿಲ ಕೆಳಗಿನಿಂದ ಹೊರಬಂದು ಹಜಾರವನ್ನು ದಾಟಿ, ರಸ್ತೆಗೆ ಹೋಗಿ ಸಮವಿರದ ಜಗಲಿಗಳ ಮೇಲೆ ನೇರವಾಗಿ ಮುಂದೆ ಹೋಗಿ, ಮೆಟ್ಟಲುಗಳನ್ನಿಳಿದು, ದಿಬ್ಬಗಳನ್ನು ಹತ್ತಿ, ಟರ್ಕಿಗಳ ರಸ್ತೆಯಲ್ಲಿ ಹೋಗಿ ತಿರುವಿನಲ್ಲಿ ಬಲಕ್ಕೆ ತಿರುಗಿ, ಮತ್ತೆ ಎಡಕ್ಕೆ ಹೋಗಿ, ಬ್ಯುಂದಿಯಾ ಮನೆಯ ಹತ್ತಿರ ಸಮಕೋನ ಮಾಡಿ, ಮುಚ್ಚಿದ ಬಾಗಿಲ ಕೆಳಗೆ ಹೋಗಿ, ಅಂಗಳ ದಾಟಿ ಜಮಖಾನಗಳಿಗೆ ಕಲೆಯಾಗದಿರಲೆಂದು ಗೋಡೆಯ ಅಂಚಿನಲ್ಲೆ ಮತ್ತೊಂದು ಹಜಾರಕ್ಕೆ ಹೋಗಿ, ಡೈನಿಂಗ್ ಟೇಬಲ್‌ನ್ನು ತಪ್ಪಿಸಲು ದೊಡ್ಡ ವಕ್ರರೇಖೆ ಮಾಡಿಕೊಂಡು ಮಂಟಪದ ಬೆಗೋನಿಯಾ ಗಿಡಗಳ ಪಕ್ಕದಲ್ಲಿ ಹೋಗಿ, ಅವ್ರೇಲಿಯಾನೋ ಹೊಸೆಗೆ ಗಣಿತದ ಪಾಠವನ್ನು ಹೇಳಿಕೊಡುತ್ತಿದ್ದ ಅಮರಾಂತಳಿಗೆ ಕಾಣದಂತೆ ಅವಳ ಕುರ್ಚಿಯನ್ನು ದಾಟಿ ಉಗ್ರಾಣದ ಮುಖಾಂತರ ಅಡುಗೆ ಮನೆಯಲ್ಲಿ ಬ್ರೆಡ್ ಮಾಡಲು ಮೂವತ್ತಾರು ಮೊಟ್ಟೆಗಳನ್ನು ಒಡೆಯುವುದಕ್ಕೆ ಸಿದ್ಧವಾಗುತ್ತಿದ್ದ ಉರ್ಸುಲಾಳ ಬಳಿಗೆ ಬಂದಿತು.
ಉರ್ಸುಲಾ, “ಓಹ್ ದೇವರೆ!” ಎಂದು ಕೂಗಿದಳು.
ಅವಳು ರಕ್ತದ ಜಾಡನ್ನು ಹಿಡಿದು ಹಿಂದಕ್ಕೆ ಅದರ ಮೂಲವನ್ನು ಹುಡುಕುತ್ತ ಉಗ್ರಾಣದ ಮುಖಾಂತರ ಹೊರಟು ಬೆಗೊನಿಯಾ ಗಿಡಗಳ ಪಕ್ಕದಲ್ಲಿ ಮೂರು, ಮೂರು : ಆರು, ಆರು, ಮೂರು : ಒಂಬತ್ತು ಎಂದು ಹೇಳುತ್ತಿದ್ದ ಅವ್ರೇಲಿಯಾನೋ ಹೊಸೆ ಇದ್ದಲ್ಲಿ ಮತ್ತು ಊಟದ ಮನೆಯನ್ನು ಹಾಗೂ ಹಜಾರವನ್ನು ದಾಟಿ ನೆಟ್ಟಗೆ ರಸ್ತೆಗಿಳಿದಳು. ಅನಂತರ ಅವಳು ಮೊದಲು ಬಲಕ್ಕೆ ಆ ಮೇಲೆ ಎಡಕ್ಕೆ ತಿರುಗಿ, ತಾನು ಬೇಕರಿ ವಸ್ತುಗಳನ್ನು ಮಾಡುವಾಗ ಹಾಕಿಕೊಳ್ಳುವ ಕೆಲಸದ ಉಡುಗೆಯಲ್ಲಿ, ಮನೆಯಲ್ಲಿ ಉಪಯೋಸುವ ಚಪ್ಪಲಿಗಳನ್ನು ಹಾಕಿಕೊಂಡಿದ್ದನ್ನು ಮರೆತು, ಟರ್ಕಿಗಳ ರಸ್ತೆ ಸೇರಿ ಚೌಕಕ್ಕೆ ಬಂದು, ತಾನು ಅಲ್ಲಿಯ ತನಕ ಹೋಗಿರದ ಮನೆಯ ಬಾಗಿಲು ಒಳಗೆ ಹೋಗಿ, ಅವಳು ಮಲಗುವ ಕೋಣೆಯ ಬಾಗಿಲನ್ನು ತಳ್ಳಿ ತೆರೆದಳು. ಅವಳಿಗೆ ಸುಟ್ಟ ಸಿಡಿಮದ್ದಿನ ವಾಸನೆಯಿಂದ ಉಸಿರುಗಟ್ಟಿದಂತಾಯಿತು. ಆಗ ತಾನೆ ಮಂಡಿಯ ತನಕ ಚರ್ಮದ ಬೂಟನ್ನು ತೆಗೆದು ನೆಲದ ಮೇಲೆ ಬೋರಲಾಗಿದ್ದ ಹೊಸೆ ಅರ್ಕಾದಿಯೋನನ್ನು ಕಂಡಳು. ಅವಳಿಗೆ ಅವನ ಕಿವಿಯಿಂದ ಹೊರಗೆ ಸೂಸುತ್ತಿದ್ದು ಈಗ ನಿಂತಿದ್ದ ರಕ್ತದ ಜಾಡಿನ ಮೂಲ ಕಾಣಿಸಿತು. ಅವರಿಗೆ ಅವನ ಮೈಮೇಲೆ ಬೇರೆ ಯಾವ ಗಾಯ ಕಾಣಲಿಲ್ಲ ಅಥವಾ ಆಯುಧವನ್ನು ಪತ್ತೆ ಹಚ್ಚಲಾಗಲಿಲ್ಲ. ಅಲ್ಲದೆ ಅವರಿಗೆ ಮೃತದೇಹದಿಂದ ವಾಸನೆಯನ್ನೂ ತೆಗೆಯಲಾಗಲಿಲ್ಲ. ಅವರು ಮೊದಲು ಮೂರು ಸಲ ಅದನ್ನು ಸೋಪಿನಿಂದ ತೊಳೆದರು ಮತ್ತು ಬ್ರಶ್‌ನಿಂದ ಉಜ್ಜಿದರು. ಅನಂತರ ಉಪ್ಪು ಮತ್ತು ದ್ರಾಕ್ಷಾರಸದಲ್ಲಿ ಉಜ್ಜಿದ ಮೇಲೆ ಬೂದಿ ಹಾಗೂ ನಿಂಬೆ ಹಣ್ಣಿನಿಂದ ತಿಕ್ಕಿದರು. ಕೊನೆಗೆ ಅವನನ್ನು ಒಂದು ಡ್ರಮ್ಮು ಉಪ್ಪಿನ ನೀರಿನಲ್ಲಿಟ್ಟು ಹಾಗೆಯೇ ಆರು ಗಂಟೆ ಕಾಲ ಬಿಟ್ಟರು. ಅವರು ಅವುಗಳನ್ನು ಎಷ್ಟು ಉಜ್ಜಿದರೆಂದರೆ ಅವನ ಮೈ ಮೇಲಿನ ಹಚ್ಚೆ ಮಂಕಾಗಲು ಶುರುವಾಯಿತು. ಅವನನ್ನು ಹದಗೊಳಿಸಲು ಮೆಣಸು, ಜೀರಿಗೆ ಕಾಳು, ಗುಲ್ಮ ಜಾತಿ ಎಲೆಗಳಿಂದ ಕೂಡಿ ಇಡೀ ದಿನ ಕುದಿಸಲು ಯೋಚಿಸುವ ಹೊತ್ತಿಗೆ ಅವನ ದೇಹ ಕೊಳೆಯಲಾರಂಭಿಸಿತ್ತು. ಮತ್ತು ಅವರು ಅವಸರದಿಂದ ಅವನನ್ನು ಹೂಳಬೇಕಾಯಿತು. ಅವರು ಅವನನ್ನು ಏಳು ಅಡಿ ಉದ್ದ, ನಾಲ್ಕು ಅಡಿ ಅಗಲದ ವಿಶೇಷ ಶವ ಪೆಟ್ಟಿಗೆಯಲ್ಲಿಟ್ಟು ಕಬ್ಬಿಣದ ಪಟ್ಟಿ ಮತ್ತು ಸ್ಟೀಲ್ ಬೋಲ್ಟ್‌ಗಳಿಂದ ಭದ್ರಗೊಳಿಸಿದರು. ಇಷ್ಟಾಗಿಯೂ ಶವಯಾತ್ರೆ ಹೊರಟ ರಸ್ತೆಗಳಲ್ಲಿ ದುರ್ವಾಸನೆಯನ್ನು ಗ್ರಹಿಸಬಹುದಾಗಿತ್ತು. ದೇಹ ಊದಿಕೊಂಡು ಬಿಗಿಯಾಗಿದ್ದು, ಫಾದರ್ ನಿಕೊನರ್ ಹಾಸಿಗೆಯಲ್ಲಿ ಮಲಗಿಕೊಂಡೇ ಅವನಿಗೆ ಆಶೀರ್ವಾದ ಮಾಡಿದ. ಅದರ ಮುಂದಿನ ತಿಂಗಳುಗಳಲ್ಲಿ ಸ್ಮಶಾನದ ಸುತ್ತ ಗೋಡೆ ಕಟ್ಟಿ ಮಧ್ಯದಲ್ಲಿ ಬೂದಿ, ಮರದ ಪುಡಿ, ಸುಣ್ಣ ಇವುಗಳನ್ನು ಒತ್ತಿಟ್ಟಿದ್ದರೂ ಅನೇಕ ವರ್ಷಗಳ ಕಾಲ ಬಾಳೆ ತೋಟದ ಕಂಪನಿಯ ಎಂಜಿನಿಯರುಗಳು ಸ್ಮಶಾನವನ್ನು ಕಾಂಕ್ರೀಟ್‌ನಿಂದ ಮುಚ್ಚುವ ತನಕ ಅದರಿಂದ ಪುಡಿಯ ವಾಸನೆ ಹೊಡೆಯುತ್ತಲೇ ಇತ್ತು. ಅವರು ಅವನ ದೇಹವನ್ನು ತೆಗೆದುಕೊಂಡು ಹೋದ ಕೂಡಲೆ ಉರ್ಸುಲಾ ಬಾಗಿಲು ಹಾಕಿಕೊಂಡಳು. ಬದುಕಿದ್ದರೂ ಸತ್ತಂತಿದ್ದ ಅವಳು ಜಗತ್ತಿನ ಎಲ್ಲ ಆಕರ್ಷಣೆಯ ಬಗ್ಗೆ ಸಂಪೂರ್ಣ ನಿರ್ಲಕ್ಷಗೊಂಡಳು. ಅವಳು ತೀರ ಮುದುಕಿಯಾದ ಮೇಲೆ ಹಳೆಯ ಬೆಳ್ಳಿ ಶೂ, ಚಿಕ್ಕ ಹೂಗಳಿಂದ ಮಾಡಿದ ಹ್ಯಾಟ್ ಹಾಕಿಕೊಂಡು ರಸ್ತೆಯಲ್ಲಿ ಕಾಣಿಸಿಕೊಂಡಳು. ಆ ದಿನಗಳಲ್ಲಿ ಊರಿನಲ್ಲಿ ಅಲೆಮಾರಿ ಯಹೂದಿ ಹಾದು ಹೋಗಿ ಎಷ್ಟು ಉರಿಬಿಸಿಲು ಉಂಟಾಗಿತ್ತೆಂದರೆ, ಸಾಯುವುದಕ್ಕಾಗಿ ಹಕ್ಕಿಗಳು ಕಿಟಕಿಯ ಬಾಗಿಲುಗಳನ್ನು ಒಡೆದು ರೂಮುಗಳಿಗೆ ಬರುತ್ತಿದ್ದವು. ಅವಳು ಬದುಕಿದ್ದಂತೆ ಕೊನೆಯ ಸಲ ಯಾರಾದರೂ ಕಂಡಿದ್ದೆಂದರೆ ತನ್ನ ಮನೆಯ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಿದ್ದ ಕಳ್ಳನೊಬ್ಬನನ್ನು ಒಂದೇ ಸಲಕ್ಕೆ ಗುಂಡಿಟ್ಟು ಕೊಂದಾಗ. ಅವಳ ಸೇವಕಿ ಮತ್ತು ವಿಶ್ವಾಸದ ಆರ್ಗೆನೀಡಳನ್ನು ಬಿಟ್ಟರೆ ಅನಂತರ ಬೇರೆ ಯಾರಿಗೂ ಅವಳ ಸಂಪರ್ಕವಿರಲಿಲ್ಲ. ಅದೊಂದು ಸಲ ತನ್ನ ಸಂಬಂಧಿ ಎಂದು ಹೇಳಿಕೊಳ್ಳುತ್ತಿದ್ದ ಬಿಷಪ್‌ಗೆ ಕಾಗದಗಳನ್ನು ಬರೆಯುತ್ತಿದ್ದಳೆಂದು ಗೊತ್ತಾಯಿತು. ಆದರೆ ಅವಳಿಗೆ ಪ್ರತ್ಯುತ್ತರವೇನಾದರೂ ಬಂತೇ ಹೇಗೆ ಎಂದು ತಿಳಿಸಲಿಲ್ಲ. ಊರು ಅವಳನ್ನು ಮರೆತು ಬಿಟ್ಟಿತು.

ಜಯಭೇರಿ ಹೊಡೆದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಹಿಂದಿರುಗಿದ್ದರೂ ಇದ್ದ ಪರಿಸ್ಥಿತಿಯಿಂದ ಉತ್ಸಾಹಗೊಂಡಿರಲಿಲ್ಲ. ಸರ್ಕಾರದ ತುಕಡಿಗಳು ಯಾವ ವಿರೋಧವೂ ಇಲ್ಲದೆ ಬಿಟ್ಟುಹೋಗಿದ್ದರು ಮತ್ತು ಇದರಿಂದ ಉದಾರವಾದಿ ಜನ ಸಮುದಾಯದಲ್ಲಿ ವಿಜಯದ ಭ್ರಮೆ ಆವರಿಸಿ ಎಲ್ಲವನ್ನೂ ನಾಶಮಾಡುವುದು ಸರಿಯಲ್ಲವೆಂದು ಕಂಡಿತಾದರೂ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಎಲ್ಲರಿಗಿಂತ ಚೆನ್ನಾಗಿ ತಿಳಿದಿದೆ ಎಂದು ಕ್ರಾಂತಿಕಾರರಿಗೆ ಗೊತ್ತಿತ್ತು. ಆ ವೇಳೆಯಲ್ಲಿ ತನ್ನ ಆeವರ್ತಿಯಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚಿಗೆ ಜನರು ಮತ್ತು ಕಡಲ ತೀರದ ಎರಡು ರಾಜ್ಯಗಳು ಹಿಡಿತದಲ್ಲಿದ್ದರೂ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತಾವು ಸಮುದ್ರದ ವಿರುದ್ಧ ಇದ್ದ ಹಾಗೆ ಭಾವಿಸುತ್ತಿದ್ದ ಮತ್ತು ತೀರ ಗೊಂದಲಗೊಂಡು ಫಿರಂಗಿಯಿಂದ ಕೆಳಗುರುಳಿಸಿದ ಚರ್ಚನ್ನು ಮರುಸ್ಥಾಪಿಸಲು ಅಪ್ಪಣೆಕೊಟ್ಟ. ಆಗ ಕಾಯಿಲೆ ಬಿದ್ದಿದ್ದ ಫಾದರ್ ನಿಕನೋರ್ ಹಾಸಿಗೆಯಿಂದ, “ಇದ ಅರ್ಥವಿಲ್ಲದ್ದು. ಕ್ರೈಸ್ತನ ಬಗ್ಗೆ ನಂಬಿಕೆ ಇದ್ದೋರು ಚರ್ಚ್ ಕೆಡವ್ತಾರೆ. ಗಾರೆ ಕೆಲಸದೋರು ಅದನ್ನ ಕಟ್ತಾರೆ.” ಇವುಗಳಿಂದ ತಪ್ಪಿಸಿಕೊಳ್ಳುವ ಹೊರದಾರಿಗಾಗಿ ಯಾವುದಾದರೊಂದು ಕಾರಣವನ್ನು ಹುಡುಕುತ್ತ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಊಟದ ಸಮಯದಲ್ಲಿ ಇತರ ದಂಡನಾಯಕರ ಜೊತೆ ಚರ್ಚಿಸುತ್ತ, ಟೆಲಿಗ್ರಾಫ್ ಆಫೀಸಿನಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದ ಮತ್ತು ಪ್ರತಿ ಬಾರಿಯೂ ಯುದ್ಧ ನಿರ್ಣಾಯಕವಾಗದ ಸ್ಥಿತಿಯಲ್ಲಿದೆ ಎಂಬ ಖಚಿತ ಅಭಿಪ್ರಾಯ ಹೊಂದಿರುತ್ತಿದ್ದ. ಉದಾರವಾದಿಗಳ ಜಯದ ಬಗ್ಗೆ ಹೊಸ ಸುದ್ದಿಗಳು ಬಂದಾಗ ಅವನ್ನು ಉತ್ಸಾಹದ ಹೇಳಿಕೆಗಳೊಂದಿಗೆ ಆಚರಿಸಲಾಗುತ್ತಿತ್ತು. ಆದರೆ ಅವನು ಅದರ ವಾಸ್ತವದ ಪ್ರಮಾಣವನ್ನು ನಕ್ಷೆಯ ಮೇಲೆ ಗುರುತಿಸುತ್ತಿದ್ದ ಮತ್ತು ಅವನ ಸೈನಿಕರು ಕಾಡಿನೊಳಗೆ ನುಗ್ಗುತ್ತ ಮಲೇರಿಯಾ ಹಾಗೂ ಸೊಳ್ಳೆ ವಿರುದ್ಧ ರಕ್ಷಿಸಿಕೊಳ್ಳುತ್ತಿದ್ದಾರೆಂದು ಮನಗಂಡ. ಅವನು ತನ್ನ ಅಧಿಕಾರಿಗಳಿಗೆ, “ನಾವು ಸುಮ್ಮನೆ ಸಮಯಾನ ಹಾಳು ಮಾಡ್ತಿದೀವಿ.” ಎಂದು ತಕರಾರು ಹೂಡಿ, “ಕಾಂಗ್ರೆಸ್‌ನಲ್ಲಿ ಸೀಟಿಗೆ ಅಂತ ಸೂಳೆ ಮಕ್ಕಳು, ಕಾಲು ಹಿಡೀತಿರೋವಾಗ ನಾವು ಸಮಯಾನ ಹಾಳು ಮಾಡ್ತಿದೀವಿ” ಎಂದ. ಸಾವನ್ನು ಎದುರು ನೋಡುತ್ತ ಹಾಸಿಗೆಯಲ್ಲಿ ಅಂಗಾತ ಮಲಗಿದ್ದ ರೂಮಿನಲ್ಲೆ ಎಚ್ಚರವಾಗಿದ್ದು, ಲಾಯರುಗಳನ್ನು ಕಲ್ಪಿಸಿಕೊಳ್ಳುತ್ತಿದ್ದ. ಅವರು ಕಪ್ಪು ಉಡುಗೆ ತೊಟ್ಟು ಅಧ್ಯಕ್ಷರ ಅರಮನೆಯಿಂದ ಹೊರಟು ಮಂಜಿನಂತೆ ಕೊರೆಯುವ ಮುಂಜಾವಿನಲ್ಲಿ ಕೋಟ್ ಕಾಲರಿನಿಂದ ಕಿವಿಯನ್ನು ಮುಚ್ಚಿಕೊಂಡು, ಕೈಗಳನ್ನು ಉಜ್ಜುತ್ತ, ಪಿಸುಗುಟ್ಟುತ್ತ, ಮಂಕು ಬಡಿದ ಮುಂಜಾವಿನ ಕೆಫೆಗಳಲ್ಲಿ ಅಧ್ಯಕ್ಷರು ಹೌದು ಎಂದದ್ದಕ್ಕೆ ಅರ್ಥವೇನು, ಇಲ್ಲ ಎಂದದ್ದಕ್ಕೆ ಅರ್ಥವೇನು ಮತ್ತು ಅಧ್ಯಕ್ಷರು ಬೇರೆ ಏನಾದರೂ ಹೇಳಿದಾಗ ಅದು ಏನೆಂದು ಅವರು ಊಹಿಸುತ್ತಿದ್ದರು. ತೊಂಬತ್ತೈದು ಡಿಗ್ರಿ ಉಷ್ಣಾಂಶದಲ್ಲಿ ಸೊಳ್ಳೆಗಳನ್ನು ಓಡಿಸುತ್ತ, ಭಯಭರಿತ ಬೆಳಗು ಹತ್ತಿರವಾಗುತ್ತಿದ್ದಂತೆ ತಾನು ಸಮುದ್ರಕ್ಕೆ ನೆಗೆಯಿರಿ ಎಂದು ಜನರಿಗೆ ಅಪ್ಪಣೆಕೊಡಬೇಕಾದದ್ದನ್ನು ಯೋಚಿಸುತ್ತಿದ್ದ.

ಒಂದು ಅನಿಶ್ಚಯದ ರಾತ್ರಿಯಲ್ಲಿ ಪಿಲರ್ ಟೆರ್‍ನೆರಾ ಸೈನಿಕರ ಜೊತೆ ಹಾಡುತ್ತಿದ್ದಾಗ ತನ್ನ ಭವಿಷ್ಯವನ್ನು ಅವಳ ಕಾರ್ಡಿನಲ್ಲಿ ಓದಿ ಹೇಳಲು ಕೇಳಿದ. ಅವಳು ಮೂರು ಸಲ ಕಾರ್ಡುಗಳನ್ನು ಹರವಿ, ಎತ್ತಿ, “ನಿನ್ನ ಬಾಯಿ ಬಗ್ಗೆ ಜೋಪಾನ” ಎಂದಷ್ಟೇ ಹೇಳಿದಳು. “ಹಾಗಂದ್ರೆ ಏನು ಅಂತ ನಂಗೊತ್ತಿಲ;. ಆದ್ರೆ ಇರೋದು ಸ್ಪಷ್ಟ ಇದೆ. ಬಾಯಿ ಜೋಪಾನ.” ಎರಡು ದಿನಗಳ ನಂತರ ಸೇವಕನಿಗೆ ಯಾರೋ ಕಪ್ಪು ಕಾಫಿ ಇದ್ದ ಮಗ್ ಕೊಟ್ಟರು. ಅವನು ಅದನ್ನು ಬೇರೆಯವನಿಗೆ ರವಾನಿಸಿದ. ಅವನು ಮತ್ತೊಬ್ಬನಿಗೆ. ಹೀಗೆ ಕೈಯಿಂದ ಕೈಗೆ ಬದಲಾಗಿ ಕೊನೆಗೆ ಅದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಆಫೀಸನ್ನು ತಲುಪಿತು. ಅವನು ಕಪ್ಪು ಕಾಫಿಯನ್ನು ಕೇಳಿರಲಿಲ್ಲ. ಆದರೆ ಅದು ಅಲ್ಲಿದ್ದದ್ದರಿಂದ ಕರ್ನಲ್ ಕುಡಿದ. ಅದರಲ್ಲಿದ್ದ ವಿಷದ ಪ್ರಮಾಣ ಒಂದು ಕುದುರೆಯನ್ನು ಕೊಲ್ಲಲು ಸಾಕಾಗಿತ್ತು. ಅವನನ್ನು ಮನೆಗೆ ಕರೆದುಕೊಂಡು ಹೋದಾಗ ಬಾಗಿ ಬಿಗಿದುಕೊಂಡಿದ್ದ ಮತ್ತು ನಾಲಗೆ ಹಲ್ಲುಗಳಿಂದ ಚಾಚಿಕೊಂಡಿತ್ತು. ಉರ್ಸುಲಾ ಜೊತೆಜೊತೆಯಾಗಿ ಅವನ ಸಾವಿನ ಜೊತೆ ಹೋರಾಡಿದಳು. ಅವನಿಗೆ ವಾಂತಿಮಾಡುವ ಔಷಧಿಯಿಂದ ಹೊಟ್ಟೆ ಖಾಲಿ ಮಾಡಿ, ಬೆಚ್ಚನೆ ರಗ್ಗುಗಳಿಂದ ಹೊದಿಸಿ, ಎರಡು ದಿನ ಮೊಟ್ಟೆ ಕೊಟ್ಟು ಮಂಜುಗಟ್ಟುತ್ತಿದ್ದ ಅವನ ಮೈ ಮೊದಲಿನ ಉಷ್ಣಾಂಶವನ್ನು ಮತ್ತೆ ಪಡೆಯುವಂತೆ ಮಾಡಿದಳು. ನಾಲ್ಕನೆ ದಿನದ ಹೊತ್ತಿಗೆ ಅವನು ಅಪಾಯದಿಂದ ಪಾರಾಗಿದ್ದ. ಅವನ ಇಚ್ಛೆಗೆ ವಿರುದ್ಧವಾಗಿ, ಉರ್ಸುಲಾ ಮತ್ತು ಅವನ ಅಧಿಕಾರಿಗಳು ಒತ್ತಾಯಿಸಿದ್ದರಿಂದ ಇನ್ನೊಂದು ವಾರ ಅವನು ಹಾಸಿಗೆಯಲ್ಲಿದ್ದ. ಆಗಲೇ ಅವನಿಗೆ ತನ್ನ ಕವನಗಳನ್ನು ಸುಟ್ಟು ಹಾಕಿಲ್ಲ ಎಂದು ಗೊತ್ತಾಗಿದ್ದು. ಉರ್ಸುಲಾ ಅವನಿಗೆ, “ನಾನು ಅವಸರ ಮಾಡಬಾರದು ಅಂತಿದ್ದೆ. ಅವತ್ತು ರಾತ್ರಿ ಒಲೆ ಹೊತ್ತಿಸಲಿಕ್ಕೆ ಹೋದಾಗ ಅವರು ದೇಹಾನ ತರೋವರ್‍ಗೂ ಕಾಯೋದು ಒಳ್ಳೇದು ಅಂತ ನಂಗೆ ನಾನೇ ಹೇಳ್ಕೊಂಡೆ” ಎಂದು ವಿವರಿಸಿದಳು. ಗುಣಮುಖನಾಗುವ ಪ್ರಕ್ರಿಯೆಯಲ್ಲಿದಾಗ ರೆಮಿದಿಯೋಸ್‌ಳ ಧೂಳು ಹಿಡಿದ ಬೊಂಬೆಗಳಿಂದ ಸುತ್ತುವರಿದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತನ್ನ ಕವನಗಳನ್ನು ಓದುತ್ತ ಹಳೆಯ ದಿನಗಳನ್ನು ನೆನಪು ಮಾಡಿಕೊಂಡ. ಅವನು ಮತ್ತೆ ಬರೆಯಲು ಪ್ರಾರಂಭಿಸಿದ. ಅನೇಕ ಗಂಟೆಗಳ ಕಾಲ, ಭವಿಷ್ಯವಿರದ ಯುದ್ಧದ ಕೌತುಕದ ಅಂಚಿನಲ್ಲಿ ಸಮತೋಲವಿರಿಸಿಕೊಳ್ಳುತ್ತ ಸಾವಿನ ದಡದ ತನ್ನ ಅನುಭವಗಳನ್ನು ಲಯಬದ್ಧ ಕಾವ್ಯದಲ್ಲಿ ರೂಪಿಸಿದ. ಆ ಮೇಲೆ ಅವನಿಗೆ ಮುಂದಿನದನ್ನು ಮತ್ತು ಹಿಂದಿನದನ್ನು ಪರೀಕ್ಷಿಸಲು ಸಾಧ್ಯವಾಗುವಷ್ಟು ಸ್ಪಷ್ಟವಾದ ಆಲೋಚನೆಗಳು ಬಂದವು. ಒಂದು ರಾತ್ರಿ ಅವನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನನ್ನು ಕೇಳಿದ:
“ಹಳೆ ಸ್ನೇಹಿತ ನೀನು. ಒಂದು ವಿಷಯ ಹೇಳು: ನೀನು ಯಾಕೆ ಹೋರಾಟ ಮಾಡ್ತಿದೀಯ?”
“ಇನ್ನೇನು ಕಾರಣ ಇರಕ್ಕೆ ಸಾಧ್ಯ? ಮಹಾನ್ ಉದಾರವಾದಿ ಪಾರ್ಟಿಗಾಗಿ” ಎಂದು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಹೇಳಿದ.
“ನೀನೇ ಅದೃಷ್ಟವಂತ. ಯಾಕೆ ಅಂತ ನಿನಗ್ಗೊತ್ತಿದೆ. ನನ್ನ ವಿಷಯ ಹೇಳೋದಾದ್ರೆ ನಂಗೆ ಈಗಷ್ಟೆ ಗೊತ್ತಾಗ್ತಿದೆ. ನಾನು ಪ್ರತಿಷ್ಠೆಗೋಸ್ಕರ ಹೋರಾಡ್ತಿದೀನಿ” ಎಂದ ಅವನು.
“ಅದು ಕೆಟ್ಟದ್ದು” ಎಂದ ಕರ್ನಲ್ ಗೆರಿನೊಲ್ಡೊ ಮಾರ್ಕೆಜ್.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಅವನು ಹೇಳಿದ್ದು ತಮಾಷೆಯಂತೆ ಕಂಡಿತು. ಅವನು, “ಏನೇ ಆದ್ರೂ ಯಾಕೆ ಹೋರಾಡ್ತಿರೋದು ಅಂತ ಗೊತ್ತಿಲ್ದೆ ಇರೋದಕ್ಕಿಂತ ಒಳ್ಳೇದು.” ಎಂದು ಅವನ ಕಣ್ಣಲ್ಲಿ ಕಣ್ಣಿಟ್ಟು ನಗುತ್ತ ಹೇಳಿದ:
“ಅಥವಾ ನಿನ್ನ ಹಾಗೆ. ಯಾರಿಗೂ, ಯಾವ ಅರ್ಥ ಇರದಿರೋದಕ್ಕೆ ಹೋರಾಡೋದು.”

ದೇಶದ ಒಳಭಾಗದ ಆಯುಧ ಹೊಂದಿದ ಗುಂಪುಗಳನ್ನು ಸಂಪರ್ಕಿಸಲು ಪಾರ್ಟಿಯ ನಾಯಕರು ಅವನನ್ನು ದರೋಡೆಕೋರ ಎಂದು ಸಾರ್ವಜನಿಕವಾಗಿ ಹೆಸರಿಸಿದ್ದನ್ನು ಸರಿಮಾಡುವ ತನಕ ಅವನ ಪ್ರತಿಷ್ಠೆ ತಡೆ ಹಿಡಿಯಿತು. ಆದರೂ ಆ ರೀತಿಯ ಸೂಕ್ಷ್ಮತೆಯನ್ನು ದೂರ ಮಾಡಿದ ಕೂಡಲೆ ಯುದ್ಧದ ವಿಷವೃತ್ತವನ್ನು ಭೇದಿಸುವುದು ಸಾಧ್ಯವೆಂದು ಅವನಿಗೆ ಗೊತ್ತಿತ್ತು. ಗುಣಮುಖವಾಗುವ ದಿನಗಳು ಅವನಿಗೆ ಎಲ್ಲದರ ಪರಾಮರ್ಶೆಗೆ ಕಾಲಾವಕಾಶ ಒದಗಿಸಿತ್ತು. ಅನಂತರ ಅವನು ಉರ್ಸುಲಾ ಹೂತಿಟ್ಟಿದ್ದರಲ್ಲಿ ಉಳಿದಿದ್ದ ಮತ್ತು ಉಳಿಸಿದ್ದ ಹಣವನ್ನು ತನಗೆ ಕೊಡುವಂತೆ ಮಾಡುವುದರಲ್ಲಿ ಯಶಸ್ವಿಯಾದ. ಅವನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನನ್ನು ಮಕೋಂದೋದ ಸಿವಿಲ್ ಮತ್ತು ಮಿಲಿಟರಿ ನಾಯಕನನ್ನಾಗಿ ಮಾಡಿ, ಒಳಪ್ರದೇಶದಲ್ಲಿರುವ ಕ್ರಾಂತಿಕಾರಿಗಳನ್ನು ಸಂಪರ್ಕಿಸಲು ಹೋದ.

ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಆತ್ಮೀಯನಾಗಿದ್ದಷ್ಟೇ ಅಲ್ಲದೆ ಉರ್ಸುಲಾ ಅವನನ್ನು ಮನೆಯವನಂತೆ ಭಾವಿಸಿದ್ದಳು. ಸಂಕೋಚದ ಸ್ವಭಾವದ ಒಳ್ಳೆಯ ನಡತೆಯವನಾದ ಅವನು ಸರ್ಕಾರಕ್ಕಿಂತ ಯುದ್ಧಕ್ಕೆ ಹೆಚ್ಚು ಹೊಂದಿಕೊಳ್ಳುವವನಾಗಿದ್ದ. ಅವನ ರಾಜಕೀಯ ಸಲಹೆಗಾರರು ಸೈದ್ಧಾಂತಿಕ ಜಾಲದಲ್ಲಿ ಅವನನ್ನು ಸಿಲುಕಿಸುತ್ತಿದ್ದರು. ಆದರೆ ಅವನು ಬಂಗಾರದ ಸಣ್ಣ ಮೀನುಗಳನ್ನು ಮಾಡುತ್ತಾ ವಯಸ್ಸಾದ ಮೇಲೆ ಸಾಯಬೇಕೆಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕನಸು ಕಂಡ ಹಾಗೆ, ಮಕೋಂದೋಗೆ ಗ್ರಾಮೀಣ ಶಾಂತತೆಯ ವಾತಾವರಣವನ್ನು ಕೊಟ್ಟ. ಅವನು ತನ್ನ ತಂದೆತಾಯಿಯ ಮನೆಯಲ್ಲಿದ್ದರೂ ವಾರಕ್ಕೆ ಎರಡು, ಮೂರು ಬಾರಿ ಉರ್ಸುಲಾಳ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡುತ್ತಿದ್ದ. ಅವನು ಅವ್ರೇಲಿಯಾನೋ ಹೊಸೆಗೆ ಆಯುಧಗಳ ಬಳಕೆಗೆ ನಾಂದಿಯಿಟ್ಟು ಪ್ರಾರಂಭಿಕ ಮಿಲಿಟರಿ ಆದೇಶಗಳನ್ನು ಕಲಿಸಿಕೊಟ್ಟು, ಉರ್ಸುಲಾ ಒಪ್ಪಿಗೆ ಪಡೆದು ಅವನೊಬ್ಬ ಮನುಷ್ಯನಾಗಲಿ ಎಂದು ಕೆಲವು ತಿಂಗಳ ಕಾಲ ಸೈನಿಕರ ವಾಸಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ಎಷ್ಟೋ ವರ್ಷಗಳ ಕೆಳಗೆ ಅವನನ್ನು ಬಹಳ ಚಿಕ್ಕವನಾಗಿರುವಾಗ ಅಮರಾಂತಳ ಬಗ್ಗೆ ತನ್ನ ಪ್ರೇಮವನ್ನು ಪ್ರಕಟಿಸಿದ್ದ. ಆ ದಿನಗಳಲ್ಲಿ ಅವಳು ಪಿಯತ್ರೋ ಕ್ರೆಪ್ಸಿಯ ಬಗ್ಗೆ ಏಕಮುಖ ಮೋಹದಿಂದ ಎಂತಹ ಭ್ರಮೆಯಲ್ಲಿದ್ದಳೆಂದರೆ ಅವನನ್ನು ನೋಡಿ ನಕ್ಕು ಬಿಟ್ಟಿದ್ದಳು. ಗೆರಿನೆಲ್ಡೊ ಮಾರ್ಕೆಜ್ ಕಾದಿದ್ದ. ಒಂದು ಸಂದರ್ಭದಲ್ಲಿ ಅವನು ಜೈಲಿನಿಂದ ತನ್ನ ತಂದೆಯ ಇನಿಯಲ್ಸ್ ಇರುವ ಒಂದು ಡಜನ್ ಕರ್ಚಿಫನ್ನು ಕಸೂತಿ ಮಾಡಿಕೊಡಬೇಕೆಂದು ಒಂದು ಕೋರಿಕೆ ಕಳಿಸಿದ್ದ. ಅವನು ಅವಳಿಗೆ ಹಣ ಕಳಿಸಿದ. ಒಂದು ವಾರದ ನಂತರ ಅಮರಾಂತ ಹಣದ ಜೊತೆ ಒಂದು ಡಜನ್ ಕರ್ಚಿಫ್ ಅವನಿಗಾಗಿ ತಂದಳು ಮತ್ತು ಅವರು ಕೆಲವು ಗಂಟೆಗಳ ಕಾಲ ಹಿಂದಿನದನ್ನು ಕುರಿತು ಮಾತನಾಡಿದರು. ಅವಳು ಹೊರಟಾಗ ಗೆರಿನೆಲ್ಡೊ ಮಾರ್ಕೆಜ್, “ನಾನು ಇಲ್ಲಿಂದ ಆಚೆ ಹೋದ ಮೇಲೆ ನಿನ್ನನ್ನ, ಮದುವೆಯಾಗ್ತೀನಿ” ಎಂದ. ಅಮರಾಂತ ನಕ್ಕಳು ಆದರೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವಾಗ ಅವನನ್ನು ಕುರಿತು ಯೋಚಿಸುತ್ತಿದ್ದಳು ಮತ್ತು ಪಿಯತ್ರೋ ಕ್ರೆಪ್ಸಿಯ ಬಗ್ಗೆ ಇರುವ ಮೋಹಕ್ಕೆ ಜೀವ ತುಂಬಲು ಪ್ರಯತ್ನಿಸುತ್ತಿದ್ದಳು. ಖೈದಿಗಳನ್ನು ಭೇಟಿಮಾಡುವ ದಿನವಾದ ಶನಿವಾರಗಳಲ್ಲಿ ಅವಳು ಗೆರಿನೆಲ್ಡೊ ಮಾರ್ಕೆಜ್‌ನ ತಂದೆತಾಯಿಗಳ ಮನೆಯ ಮುಂದೆ ನಿಂತುಕೊಳ್ಳುತ್ತಿದ್ದಳು ಮತ್ತು ಅವರ ಜೊತೆ ಜೈಲಿಗೆ ಹೋಗುತ್ತಿದ್ದಳು. ಅಂಥ ಒಂದು ಶನಿವಾರ ಆ ಸಂದರ್ಭಕ್ಕೆಂದು ಕಸೂತಿ ಮಾಡಿದ ಕರ್ಚೀಫ್‌ನಲ್ಲಿ ಅವಳನ್ನು ಅಡುಗೆ ಮನೆಯಲ್ಲಿ ಉತ್ತಮವಾದ ಬಿಸ್ಕತ್‌ಗಳನ್ನು ಎತ್ತಿಕೊಳ್ಳಲು ಅವುಗಳಿಗಾಗಿ ಕಾಯುತ್ತ ಒಲೆಯ ಹತ್ತಿರ ನಿಂತಿದ್ದು ಮತ್ತು ಅವುಗಳನ್ನು ಕಸೂತಿ ಮಾಡಿದ ಕರ್ಚಿಫ್‌ನಲ್ಲಿ ಸುತ್ತಿಕೊಂಡ ಅಮರಾಂತಳನ್ನು ಕಂಡು ಉರ್ಸುಲಾಗೆ ಸೋಜಿಗವಾಯಿತು.
ಅವಳು, “ಅವನನ್ನ ಮದ್ವೆ ಮಾಡ್ಕೋ. ಇನ್ನೊಬ್ಬ ಅಂಥೋನು ಸಿಗೋದು ಕಷ್ಟ” ಎಂದಳು.
ಅಮರಾಂತ ಅಸಂತೋಷ ವ್ಯಕ್ತಪಡಿಸಿದಳು.
ಅವಳು, “ನಾನೇನು ಗಂಡಸರನ್ನ ಹುಡುಕಿಕೊಂಡು ತಿರುಗಬೇಕಾದ್ದಿಲ್ಲ” ಎಂದು ಹೇಳಿ ಮುಂದುವರಿಸಿ, “ಈ ಬಿಸ್ಕತ್‌ಗಳನ್ನು ಗೆರಿನೆಲ್ಡೋಗೆ ತೊಗೊಂಡು ಹೋಗ್ತಿದೀನಿ. ಇಷ್ಟರಲ್ಲೆ ಅವನನ್ನ ಶೂಟ್ ಮಾಡ್ತಾರಲ್ಲ ಅಂತ ಅಯ್ಯೋ ಪಾಪ ಅನ್ಸತ್ತೆ” ಎಂದಳು.

ಅವಳು ಯೋಚಿಸದೆ ಹಾಗೆ ಹೇಳಿದ್ದಳ. ಆದರೆ ಆ ಸಮಯದಲ್ಲಿ ಕ್ರಾಂತಿಕಾರಿ ಸೈನಿಕರು ರಿಯೋ‌ಅಕ ಒಪ್ಪಿಸದಿದ್ದರೆ ಗೆರಿನೆಲ್ಡೊ ಮಾರ್ಕೆಜ್‌ನನ್ನು ಶೂಟ್ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿ ಬೆದರಿಸಿತ್ತು. ಇದರಿಂದ ಭೇಟಿಯ ಸಂದರ್ಭಗಳು ನಿಂತು ಹೋಯಿತು. ಅವಳಿಗೆ ರೆಮಿದಿಯೋಸ್ ಸತ್ತಾಗ ಆದಂತೆ ಮತ್ತೊಂದು ಸಲ ತನ್ನ ಅಜಾಗರೂಕತೆಯ ಮಾತುಗಳು ಇನ್ನೊಂದು ಸಾವಿಗೆ ಕಾರಣವಾಗಿದೆ ಎನ್ನುವುದು ತುಂಬಿ ಬಂದು ಅಪರಾಧಿ ಭಾವನೆ ಮುತ್ತಿ ಬಾಗಿಲು ಹಾಕಿಕೊಂಡು ಅತ್ತಳು. ಅವಳ ತಾಯಿ ಸಾಂತ್ವನ ಮಾಡಿದಳು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವನ ದಂಡನೆಯನ್ನು ತಡೆಯಲು ಏನಾದರೂ ಮಾಡುವನೆಂಬ ಭರವಸೆ ಕೊಟ್ಟಳು ಮತ್ತು ಯುದ್ಧ ಮುಗಿದ ಮೇಲೆ ಗೆರಿನೆಲ್ಡೊ ಮಾರ್ಕೆಜ್‌ನನ್ನು ಆಕರ್ಷಿಸಲು ತಾನೇ ಮುಂದಾಗುತ್ತೇನೆಂದು ಮಾತು ಕೊಟ್ಟಳು. ಅವಳು ತನ್ನ ವಾಗ್ದಾನವನ್ನು ಕಲ್ಪಿಸಿಕೊಂಡ ಸಮಯಕ್ಕಿಂತ ಮುಂಚೆಯೇ ಪೂರೈಸಿದಳು. ಗೆರಿನೆಲ್ಡೊ ಮಾರ್ಕೆಜ್ ಸಿವಿಲ್ ಮತ್ತು ಮಿಲಿಟರಿ ನಾಯಕ ಎನ್ನುವ ಹೊಸದಾದ ಹುದ್ದೆಯೊಂದಿಗೆ ತನ್ನ ಮನೆಗೆ ಬಂದಾಗ ಅವಳು ಅವನನ್ನು ಮಗನಂತೆ ಬರಮಾಡಿಕೊಂಡಳು. ಅವನು ಹೆಚ್ಚು ಸಮಯವಿರುವಂತೆ ಹೊಗಳಿಕೆಯ ಮಾತುಗಳನ್ನು ಹೇಳುತ್ತಿದ್ದಳು. ಅಮರಾಂತಳನ್ನು ಮದುವೆಯಾಗುತ್ತೇನೆಂದು ಹೇಳಿದ್ದು ಅವನಿಗೆ ನೆನಪಾಗಲಿ ಎಂದು ಮನಸಾರೆ ಪ್ರಾರ್ಥಿಸಿದಳು. ಅವಳ ಬೇಡಿಕೆಗಳಿಗೆ ಉತ್ತರ ದೊರಕಿತು. ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಮಧ್ಯಾಹ್ನದ ಊಟಕ್ಕೆ ಬಂದಾಗ ಬೆಗೋನಿಯಾ ಗಿಡಗಳಿರುವ ಹೊರಾಂಗಣದಲ್ಲಿ ಅಮರಾಂತಳ ಜೊತೆ ಚದುರಂಗದ ರೀತಿಯ ಚೀನೀಯರ ಆಟವನ್ನು ಆಡುತ್ತಿದ್ದ. ಉರ್ಸುಲಾ ಅವನಿಗೆ ಹಾಲು, ಕಾಫಿ, ಬಿಸ್ಕತ್ತು ತಂದುಕೊಟ್ಟು ಅವರಿಗೆ ತೊಂದರೆಯಾಗದಿರಲಿ ಎಂದು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಅಮರಾಂತ ನಿಜವಾಗಲೂ ತನ್ನ ಹೃದಯದಲ್ಲಿ ಹರೆಯದ ಉತ್ಕಟತೆಯನ್ನು ಮರೆತ ಬೂದಿಯಾಳದಲ್ಲಿ ಮತ್ತೆ ಕಿಡಿ ಹೊತ್ತಿಸುವ ಪ್ರಯತ್ನವನ್ನು ಮಾಡುತ್ತಿದ್ದಳು. ಅವಳು ತಡೆಯಲಸಾಧ್ಯವಾದ ಆತಂಕದಿಂದ ಅವನು ಊಟಕ್ಕೆ ಬರುವ ದಿನಗಳಿಗಾಗಿ, ಮಧ್ಯಾಹ್ನದ ಚೀನೀ ಚದುರಂಗದಾಟಕ್ಕಾಗಿ ಕಾಯುತ್ತಿದ್ದಳು ಮತ್ತು ಅವನಿಗೆ ಗೊತ್ತಾಗದಂತೆ ಬೆರಳುಗಳು ಅದುರುತ್ತ ಕಾಯಿಗಳನ್ನು ನಡೆಸುತ್ತಿದ್ದ ಹಾಗೆ ಸಮಯ ಹಾರಿ ಹೋಗುತ್ತಿತ್ತು. ಆದರೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಅವಳನ್ನು ಮದುವೆಯಾಗುವ ತನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿದಾಗ ಅವಳು ತಿರಸ್ಕರಿಸಿದಳು.
ಅವಳು “ನಾನು ಯಾರನ್ನೂ ಮದ್ವೆ ಆಗಲ್ಲ, ಅದರಲ್ಲೂ ನಿನ್ನನ್ನು. ನೀನು ಅವ್ರೇಲಿಯಾನೋನ ಎಷ್ಟು ಪ್ರೀತಿಸ್ತಿದೀಯ ಅಂದ್ರೆ, ಅವನನ್ನ ಮದ್ವೆ ಮಾಡಿಕೊಳಕ್ಕೆ ಆಗಲ್ಲ ಅಂತ ನನ್ನನ್ನ ಮದ್ವೆ ಮಾಡ್ಕೋ ಬೇಕು ಅಂತ ಇದೀಯ” ಎಂದಳು.
ಕರ್ನಲ್ ಗೆರಿನೆಲ್ಡೋ ಮಾರ್ಕೆಜ್ ತಾಳ್ಮೆ ಇದ್ದ ವ್ತಕ್ತಿ, ಅವನು, “ನಾನು ಕೇಳ್ತಾನೇ ಇರ್‍ತೀನಿ, ಈಗಲ್ಲದಿದ್ದರೆ ಸಧ್ಯದಲ್ಲೆ ನಿನ್ನನ್ನ ಒಪ್ಪಿಸ್ತೀನಿ” ಎಂದ. ಅವನು ಮನೆಗೆ ಬರುವುದನ್ನು ಮುಂದುವರಿಸಿದ. ಅವಳು ಬೆಡ್‌ರೂಮಿನಲ್ಲಿ ಬಾಗಿಲು ಹಾಕಿಕೊಂಡು, ಕಣ್ಣೀರು ಉಕ್ಕದಂತೆ ಶ್ರಮಿಸುತ್ತ ಅವನು ಉರ್ಸುಲಾಗೆ ಹೇಳುವ ಯುದ್ಧದ ಬಗ್ಗೆ ಇತ್ತೀಚಿನ ಸುದ್ದಿ ಕೇಳಬಾರದೆಂದು ಕಿವಿಯಲ್ಲಿ ಬೆರಳು ಹಾಕಿಕೊಳ್ಳುತ್ತಿದ್ದಳು. ಅವಳಿಗೆ ಅವನನ್ನು ನೋಡಬೇಕೆಂದು ಜೀವ ಬಿಡುತ್ತಿದ್ದರೂ ಹೊರಗೆ ಹೋಗಿ ಅವನನ್ನು ಭೇಟಿ ಮಾಡದಷ್ಟು ಶಕ್ತಿಯಿತ್ತು.

ಆ ಸಮಯದಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಎರಡು ವಾರಕ್ಕೊಂದು ಸಲ ಮಕೋಂದೋಗೆ ವಿವರವಾದ ವರದಿಯನ್ನು ಕಳಿಸುತ್ತಿದ್ದ. ಆದರೆ ಊರು ಬಿಟ್ಟು ಹೋಗಿ ಎರಡು ತಿಂಗಳಾದ ಮೇಲೆ ಉರ್ಸುಲಾಗೆ ಒಂದೇ ಒಂದು ಸಲ ಬರೆದ. ಒಬ್ಬ ವಿಶೇಷ ದೂತ ಸೀಲ್ ಮಾಡಿ ಒಳಗೆ ಕರ್ನಲ್ ಬರೆದ ಕಾಗದವಿದ್ದ ಕವರನ್ನು ಮನೆಗೆ ತಂದುಕೊಟ್ಟ. ಅದರಲ್ಲಿ, ‘ಅಪ್ಪನನ್ನು ಸರಿಯಾಗಿ ನೋಡ್ಕೋ. ಯಾಕೆಂದ್ರೆ ಅವ್ನು ಸಾಯ್ತಾನೆ’ ಎಂದಿತ್ತು. ಉರ್ಸುಲಾಗೆ ಗಾಬರಿಯಾಯಿತು. ಅವಳು, “ಅವ್ರೇಲಿಯಾನೋಗೆ ಗೊತ್ತಿರೋದ್ರಿಂದ ಅವನು ಹಾಗೆ ಹೇಳ್ತಾನೆ.” ಎಂದು ಹೇಳಿದಳು. ಅವನು ಎಂದಿನಂತೆ ಭಾರವಾಗಿದ್ದ, ಅಲ್ಲದೆ ಬಾದಾಮಿ ಗಿಡದ ಕೆಳಗೆ ಸುದೀರ್ಘ ಕಾಲ ಕಳೆದು, ಮೈ ಭಾರವನ್ನು ತನಗೆ ಇಷ್ಟ ಬಂದ ಹಾಗೆ ಏಳು ಜನ ಎತ್ತದ ಹಾಗೆ ಹೆಚ್ಚಿಸಿಕೊಳ್ಳುವ ವಿಶೇಷ ಸಾಮರ್ಥ್ಯವನ್ನು ಪಡೆದಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ಅವಳು ಇತರರ ಸಹಾಯ ಪಡೆದು ಅವನ ಬೆಡ್‌ರೂಮಿನ ಹಾಸಿಗೆಗೆ ಎಳೆದು ತರಬೇಕಾಯಿತು. ಎಳೆ ನಾಯಿಕೊಡೆಗಳ, ಹಳೆಯ ಮತ್ತು ಹೊರಗಿನ ಸಾಂದ್ರತೆಯ ವಾಸನೆ ಗಾಳಿ, ಮಳೆ ಬಿಸಿಲಿನ ಹೊಡೆತಕ್ಕೆ ಸಿಕ್ಕ ಮುದುಕ ಉಸಿರಾಡುತ್ತಿದ್ದ ಬೆಡ್‌ರೂಮಿನ ಗಾಳಿಯಲ್ಲಿ ಸೇರಿಕೊಂಡಿತು. ಮಾರನೆಯ ದಿನ ಅವನು ಹಾಸಿಗೆಯಲ್ಲಿ ಇರಲಿಲ್ಲ. ಅವನ ಶಕ್ತಿ ತೀರ ಕುಂದಿರದಿದ್ದರೂ ಹೊಸೆ ಅರ್ಕಾದಿಯೋ ಬ್ಯುಂದಿಯಾ ತಡೆಯುವ ಸ್ಥಿತಿಯಲ್ಲಿರಲಿಲ್ಲ. ಅವನು ಬಾದಾಮಿ ಮರದ ಹತ್ತಿರ ವಾಪಸು ಹೋಗಿದ್ದ. ಇದು ಅವನ ಬಯಕೆಗೆ ಕಾರಣವಾಗಿರದೆ ದೇಹದ ಅಭ್ಯಾಸದ ಬಲ ಕಾರಣವಾಗಿತ್ತು. ಉರ್ಸುಲಾ ಅವನನ್ನು ಊಟ ಹಾಕಿ ನೋಡಿಕೊಂಡಳು. ಅವ್ರೇಲಿಯಾನೋ ಕುರಿತ ಸುದ್ದಿ ತಿಳಿಸುತ್ತಿದ್ದಳು. ಆದರೆ ವಾಸ್ತವವಾಗಿ ಬಹಳ ಕಾಲದ ತನಕ ಅವನ ಜೊತೆ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಾದ ವ್ಯಕ್ತಿಯೆಂದರೆ ಪ್ರುಡೆನ್ಸಿಯೋ ಅಗಿಲಾರ್. ಸಾವಿನ ಭಾವನೆಯಿಂದ ಜರ್ಜರಿತನಾದ ಅವನ ಜೊತೆ ಮಾತನಾಡಲು ಪ್ರುಡೆನ್ಸಿಯೋ ಅಗಿಲಾರ್ ದಿನಕ್ಕೆ ಎರಡು ಸಲ ಬರುತ್ತಿದ್ದ. ಅವರು ಹುಂಜಗಳ ಕಾದಾಟದ ಬಗ್ಗೆ ಮಾತನಾಡುತ್ತಿದ್ದರು. ಭಾರಿ ಹುಂಜಗಳನ್ನು ಹುಟ್ಟಿಸುವ ಫಾರಮ್ ಒಂದನ್ನು, ಗೆಲ್ಲುವ ಸುಖಕ್ಕಾಗಿ ಮತ್ತು ತೀರ ಬೇಸರ ತರುವ ಭಾನುವಾರಗಳಂದು ಏನಾದರೂ ಮಾಡಬೇಕು ಎನ್ನುವ ಉದ್ದೇಶದಿಂದ ಮಾತನಾಡುತ್ತಿದ್ದರು. ಪ್ರುಡೆನ್ಸಿಯೋ ಅವನನ್ನು ಶುಚಿಗೊಳಿಸುತ್ತಿದ್ದ, ಊಟ ಮಾಡಿಸುತ್ತಿದ್ದ ಮತ್ತು ಯುದ್ಧದಲ್ಲಿ ಕರ್ನಲ್ ಆಗಿರುವ ತನಗೆ ಗೊತ್ತಿರದ ಅವ್ರೇಲಿಯಾನೋ ಎನ್ನುವನೊಬ್ಬನ ಬಗ್ಗೆ ತುಂಬ ಒಳ್ಳೆಯ ಸುದ್ದಿಗಳನ್ನು ತರುತ್ತಿದ್ದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಒಬ್ಬನೇ ಇರುವಾಗ ಕೊನೆಯಿರದ ರೂಮುಗಳ ಕನಸು ಕಾಣುತ್ತ ಸಮಾಧಾನಗೊಳ್ಳುತ್ತಿದ್ದ. ಅವನು ಮಂಚದಿಂದ ಎದ್ದು ಬಾಗಿಲು ತೆಗೆದು ಅಂಥದೇ ರೂಮಿನಲ್ಲಿ ಅದೇ ಕಬ್ಬಿಣದ ಹಿಂಬದಿ ಇರುವ ಮಂಚ, ಅದೇ ಹಗ್ಗದ ಕುರ್ಚಿ ಮತ್ತು ಗೋಡೆಯ ಮೇಲೆ ವರ್ಜಿನ್ ಆಫ್ ಪೆಲ್ಪ್ ಚಿತ್ರವಿರುವ ಕನಸು ಕಂಡ. ಆ ರೂಮಿನಿಂದ ಅವನು ಅದೇ ರೀತಿ ಇರುವ ಇನ್ನೊಂದು ರೂಮಿಗೆ ಹೋಗುತ್ತಾನೆ ಮತ್ತು ಅದೇ ರೀತಿ ಇರುವ ಮತ್ತೊಂದಕ್ಕೆ. ಹೀಗೆಯೇ ಮುಗಿಯದ ತನಕ ಹೋಗುವಂತೆ ಕನಸು ಕಂಡ. ಪ್ರುಡೆನ್ಸಿಯೋ ಅಗಿಲಾರ್ ಭುಜದ ಮೇಲೆ ಕೈ ಇಡುವ ತನPವನು ರೂಮಿಂದ ರೂಮಿಗೆ ಸಮಾನಾಂತರದ ಕನ್ನಡಿಗಳು ಇರುವ ಕಡೆ ಹೋಗಲು ಇಷ್ಟಪಟ್ಟ. ಅನಂತರ ಅವನು ರೂಮಿಂದ ರೂಮಿಗೆ ನಡೆದುಕೊಂಡು ಬಂದ ರೀತಿಯಲ್ಲೆ ಹಿಂದಕ್ಕೆ ಹೋಗಿ, ವಾಸ್ತವದ ರೂಮಿನಲ್ಲಿ ಪ್ರುಡೆನ್ಸಿಯೋನನ್ನು ಕಾಣುತ್ತಾನೆ. ಆದರೆ ಒಂದು ರಾತ್ರಿ ಅವನನ್ನು ಹಾಸಿಗೆಗೆ ಕರೆದುಕೊಂಡು ಹೋಗಿ ಎರಡು ವಾರಗಳ ನಂತರ ಪ್ರುಡೆನ್ಸಿಯೋ ಅಗಿಲಾರ್ ಮಧ್ಯದಲ್ಲಿ ರೂಮೊಂದರಲ್ಲಿ ಅವನ ಭುಜವನ್ನು ಮುಟ್ಟಿದ್ದಕ್ಕೆ, ಅದು ವಾಸ್ತವದ ರೂಮೆಂದು ಅವನು ಅಲ್ಲೆ ಶಾಶ್ವತವಾಗಿ ಇದ್ದು ಬಿಟ್ಟ. ಅದರ ಮಾರನೆ ದಿನ ಬೆಳಿಗ್ಗೆ ಉರ್ಸುಲಾ ಅವನಿಗೆ ಬೆಳಗಿನ ಉಪಹಾರವನ್ನು ತರುತ್ತಿರುವಾಗ ಹಾಲ್‌ನಲ್ಲಿ ಅವಳಿಗೊಬ್ಬ ಮನುಷ್ಯ ಕಂಡ. ಅವನು ಕುಳ್ಳಗೆ, ದಪ್ಪಗೆ, ಕಪ್ಪು ಸೂಟ್ ಹಾಕಿಕೊಂಡು, ಹ್ಯಾಟ್ ಕೂಡ ಕಪ್ಪಾಗಿತ್ತು ಮತ್ತು ಅವನು ಅದನ್ನು ಕಣ್ಣಿನ ಹತ್ತಿರಕ್ಕೆ ಎಳೆದುಕೊಂಡಿದ್ದ. ಉರ್ಸುಲಾ, “ದೇವರೇ ಇದೇನು, ನಾನು ಅವನ್ನ ಮೆಲ್‌ಕಿಯಾದೆಸ್ ಅಂತ ಪ್ರಮಾಣ ಮಾಡಿ ಹೇಳ್ತೀನಿ” ಎಂದುಕೊಂಡಳು. ಅವನು ಕತಾವುರೆ, ವಿಸಿಟೋಸಿಯೋನ್‌ಯ ಸೋದರ. ನಿದ್ದೆ ಬಾರದ ರೋಗಕ್ಕೆ ಹೆದರಿ ಮನೆಯಿಂದ ಓಡಿ ಹೋಗಿದ್ದ ಮತ್ತು ಅವನ ಬಗ್ಗೆ ಯಾವ ಸುದ್ದಿಯೂ ಇರಲಿಲ್ಲ. ವಿಸಿಟಾಸಿಯೋನ್ ಅವನಿಗೆ, “ಮತ್ತೆ ಬಂದದ್ದು ಯಾತಕ್ಕೆ” ಎಂದು ಕೇಳಿದ್ದಕ್ಕೆ ಅವನು ಅವನದೇ ಆದ ಸಮಾಧಾನದ ಉತ್ತರ ಕೊಟ್ಟ.
“ನಾನು ರಾಜನ ಅಪರಕರ್ಮ ಮಾಡಕ್ಕೆ ಬಂದಿದೀನಿ.”
ಅನಂತರ ಅವರು ಹೊಸೆ ಅರ್ಕಾದಿಯೋ ಬ್ಯುಂದಿಯಾನ ರೂಮಿಗೆ ಹೋಗಿ ಅವರ ಕೈಲಾದಷ್ಟು ಅಲುಗಾಡಿಸಿದರು, ಕಿವಿಯಲ್ಲಿ ಕೂಗಿದರು, ಮೂಗಿನ ಹೊಳ್ಳೆಯ ಹತ್ತಿರ ಕನ್ನಡಿ ಇಟ್ಟರು. ಆದರೆ ಅವನನ್ನು ಎಚ್ಚರಗೊಳಿಸುವುದಕ್ಕೆ ಆಗಲಿಲ್ಲ. ಆ ಮೇಲೆ ಸ್ವಲ್ಪ ಸಮಯದ ನಂತರ ಮರಗೆಲಸದವನು ಶವಪಟ್ಟಿಗೆಗಾಗಿ ಅಳತೆ ತೆಗೆದುಕೊಳ್ಳುತ್ತಿದ್ದಾಗ ಕಿಟಕಿಯ ಮುಖಾಂತರ ಚಿಕ್ಕ ಹಳದಿ ಹೂಗಳ ಸಣ್ಣ ಮಳೆ ಬೀಳುತ್ತಿರುವುದನ್ನು ಕಂಡರು. ಇಡೀ ರಾತ್ರಿ ಮೌನವಾಗಿ ಊರಿನಲ್ಲಿ ಸುರಿಯಿತು ಮತ್ತು ಅವು ತಾರಸಿಗಳನ್ನು ಆವರಿಸಿದವು ಹಾಗೂ ಬಾಗಿಲುಗಳಿಗೆ ಮೆತ್ತಿಕೊಂಡವು ಮತ್ತು ಹೊರಗೆ ಮಲಗಿದ್ದ ಪ್ರಾಣಿಗಳಿಗೆ ಮೃದುಸ್ವರ್ಶ ಮಾಡಿದವು. ಆಕಾಶದಿಂದ ಅದೆಷ್ಟು ಹೂಗಳು ಬಿದ್ದಿದ್ದವೆಂದರೆ ಮಾರನೆ ದಿನ ಬೆಳಿಗ್ಗೆ ರಸ್ತೆಗಳಿಗೆಲ್ಲ ಮೆತ್ತನೆಯ ಕುಶನ್ ಹಾಸಿತ್ತು ಮತ್ತು ಸಲಿಕೆ ಮತ್ತು ಕುಂಟೆಗಳಿಂದ ಪಕ್ಕಕ್ಕೆ ತಳ್ಳಿ ಶವಯಾತ್ರೆಗೆ ಅನುಕೂಲ ಮಾಡಿಕೊಡಬೇಕಾಯಿತು.

ಅಮರಾಂತ ತುಯ್ದಾಡುವ ಹಗ್ಗದ ಕುರ್ಚಿಯಲ್ಲಿ ಕುಳಿತು, ಮಾಡುತ್ತಿದ್ದ್ದ ಕೆಲಸವನ್ನು ನಿಲ್ಲಿಸಿ, ಅದನ್ನು ತೊಡೆಯ ಮೇಲಿಟ್ಟುಕೊಂಡು, ಗಲ್ಲಕ್ಕೆ ಸೋಪು ಹಚ್ಚಿಕೊಂಡ ಅವ್ರೇಲಿಯಾನೋ ಹೊಸೆ ಮೊಟ್ಟ ಮೊದಲನೆ ಸಲ ಶೇವ್ ಮಾಡಿಕೊಳ್ಳಲು ರೇಜರನ್ನು ಆಡಿಸುತ್ತಿದ್ದದ್ದನ್ನು ನೋಡಿದಳು. ಅವನ ಮೊಡವೆಗಳಲ್ಲಿ ರಕ್ತ ಸೋರಿತು ಮತ್ತು ಅವನು ಮೀಸೆಗೆ ಅಂದವಾದ ಆಕಾರ ಕೊಡಲು ಹೋಗಿ ಮೇಲ್ದುಟಿಯನ್ನು ಕತ್ತರಿಸಿಕೊಂಡ. ಅವೆಲ್ಲ ಮುಗಿದ ಮೇಲೆ ಅವನು ಮೊದಲಿನಂತೆಯೇ ಕಂಡ. ಆದರೆ ಹೆಚ್ಚಿಗೆ ಶ್ರಮ ತೆಗೆದುಕೊಂಡ ಈ ಪ್ರಕ್ರಿಯೆ ಆ ಕ್ಷಣದಿಂದ ತನಗೆ ಹೆಚ್ಚಿಗೆ ವಯಸ್ಸಾಗುತ್ತಿದೆ ಎಂಬ ಭಾವನೆಯನ್ನು ಅಮರಾಂತಳಲ್ಲಿ ಮೂಡಿಸಿತು.

ಅವಳು, “ನಿನ್ನ ವಯಸ್ನಲ್ಲಿ ಅವ್ರೇಲಿಯಾನೋ ಹೇಗೆ ಕಾಣ್ತಿದ್ನೋ ಹಾಗೇನೇ ಕಾಣ್ತಿದೀಯ. ಈಗ್ನೋಡು ನೀನೊಬ್ಬ ಗಂಡಸು” ಎಂದಳು.

ಅವನು ಹಾಗೆ ಬದಲಾಗಿ ಬಹಳ ದಿನಗಳಾಗಿತ್ತು. ಅದೆಷ್ಟೋ ದಿನಗಳ ಹಿಂದೆ ಅವನು ಇನ್ನೂ ಮಗು ಎಂದು ತಿಳಿದ ಅಮರಾಂತ ಯಾವಾಗಲು ಮಾಡುತ್ತಿದ್ದ ಹಾಗೆ ಬಾತ್ ರೂಮಿನಲ್ಲಿ ಅವನೆದುರು ಬಟ್ಟೆ ಕಳಚುತ್ತಿದ್ದಳು. ಅವನನ್ನು ಬೆಳೆಸುವುದನ್ನು ಪಿಲರ್ ಟೆರ್‍ನೆರಾ ತನಗೆ ವಹಿಸಿಕೊಟ್ಟಾಗಿಂದಲೂ ಅವಳು ಹಾಗೆ ಮಾಡುತ್ತಿದ್ದಳು. ಮೊದಲನೆ ಸಲ ಅವಳನ್ನು ನೋಡಿದಾಗ ಅವನ ಗಮನ ಸೆಳೆದ ಒಂದೇ ಅಂಶವೆಂದರೆ ಅವಳ ಮೊಲೆಗಳ ನಡುವೆ ಇದ್ದ ಹೆಚ್ಚಿನ ಆಳ. ಅವನು ಎಷ್ಟು ಮುಗ್ಧನಾಗಿದ್ದನೆಂದರೆ ಅವಳಿಗೆ ಏನಾಗಿದೆ ಎಂದು ಕೇಳಿದ್ದ. ಅಮರಾಂತ ತನ್ನ ಬೆರಳುಗಳ ತುದಿಯಿಂದ ಮೊಲೆಗಳೊಳಗೆ ಒತ್ತಿ, “ಅವರು ತುಂಡು ಮಾಡಿ ಹಾಕಿದ್ದಾರೆ” ಎಂದು ಉತ್ತರಿಸಿದಳು. ಅದಾದ ನಂತರ ಪಿಯತ್ರೋ ಕ್ರೆಪ್ಸಿಯ ಆತ್ಮಹತ್ಯೆಯಿಂದ ಸುಧಾರಿಸಿಕೊಂಡ ಮೇಲೆ ಮತ್ತೆ ಅವ್ರೇಲಿಯಾನೋನ ಸಂಗಡ ಸ್ನಾನ ಮಾಡುವಾಗ ಅವಳು ಅಷ್ಟೊಂದು ಗಮನ ಕೊಡಲಿಲ್ಲ. ಆದರೆ ಕಂದು ಮೊಲೆತೊಟ್ಟಿನ ಸಿರಿಮೊಲೆಗಳ ನೋಟದಿಂದ ಅವನು ವಿಚಿತ್ರವಾಗಿ ಕಂಪಿಸಿದ. ಅವನು ಅವಳನ್ನು ದಿಟ್ಟಿಸುತ್ತಾ, ಇಂಚಿಂಚಾಗಿ ಅವಳ ಸಖ್ಯದ ಮಾಂತ್ರಿಕತೆಯನ್ನು ಕಂಡುಕೊಂಡ ಮತ್ತು ಅವಳ ಮೈ ಚರ್ಮ ನೀರಿಗೆ ಸೋಂಕಿದಾಗ ನಲುಗುವಂತೆ ತನ್ನ ಚರ್ಮವೂ ನಲುಗುವ ಹಾಗೆ ಪರಿಕಲ್ಪಿಸಿದ. ಚಿಕ್ಕ ಮಗುವಾಗಿದ್ದ ಕಾಲದಿಂದಲೂ ತನ್ನ ಹಾಸಿಗೆಯನ್ನು ಬಿಟ್ಟ ಅಮರಾಂತಳ ಹಾಸಿಗೆಯಲ್ಲಿ ಮಲಗಿ ಕತ್ತಲೆಯ ಭಯದಿಂದ ಪಾರಾಗುವ ಅಭ್ಯಾಸ ಅವನಿಗಿತ್ತು. ಆದರೆ ತನ್ನ ಬೆತ್ತಲೆ ಅರಿವಾದ ದಿನದಿಂದ ಅವಳ ಸೊಳ್ಳೆ ಪರದೆಯೊಳಗೆ ನುಸುಳುವುದಕ್ಕೆ ಕತ್ತಲೆಯ ಭಯ ಕಾರಣವಾಗಿರದೆ, ಮುಂಜಾವಿನ ಹೊತ್ತಿನಲ್ಲಿ ಅಮರಾಂತಳ ಬಿಸಿಯುಸಿರನ್ನು ಅನುಭವಿಸಬೇಕೆಂಬ ತೀವ್ರವಾದ ಅಪೇಕ್ಷೆಯಾಗಿತ್ತು. ಅವಳು ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ನನ್ನು ನಿರಾಕರಿಸಿದ ಸಮಯದಲ್ಲಿ ಒಂದು ದಿನ ಬೆಳಗಿನ ಜಾವದಲ್ಲಿ ಅವ್ರೇಲಿಯಾನೋಗೆ ಉಸಿರಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನಿಸಿ ಎಚ್ಚರವಾಯಿತು. ಅವನಿಗೆ ಅಮರಾಂತಳ ಬೆರಳುಗಳು ಆತಂಕದ ಬೆಚ್ಚಗಿನ ಕಂಬಳಿ ಹುಳುಗಳಂತೆ ಅವನ ಹೊಟ್ಟೆಯ ಮೇಲೆ ಹುಡುಕಾಟ ನಡೆಸುತ್ತಿದ್ದದ್ದು ಅರಿವಿಗೆ ಬಂತು. ಮಲಗಿದವನಂತೆ ತೋರಿಸಿಕೊಂಡು ಹೆಚ್ಚು ಅನುಕೂಲವಾಗಲೆಂದು ಭಂಗಿ ಬದಲಾಯಿಸಿದ ಮತ್ತು ಅವನಿಗೆ ಕಪ್ಪು ಪಟ್ಟಿಯಿಲ್ಲದ ಕೈಯೊಂದು ಅವನ ಆತಂಕದ ಸಮುದ್ರದೊಳಗೆ ಮೀನು ಡೈವ್ ಹೊಡೆದ ಹಾಗೆ ಭಾಸವಾಯಿತು. ಅವರು ತಮಗೆ ತಿಳಿದಿದ್ದದ್ದನ್ನು ಗಮನಕ್ಕೆ ತೆಗೆದುಕೊಳ್ಳದಂತೆ ಕಂಡರೂ ಒಬ್ಬರಿಗೆ ತಿಳಿದದ್ದು ಮತ್ತೊಬ್ಬರಿಗೆ ತಿಳಿದಿದೆ ಎಂದು ಗೊತ್ತಿತ್ತು. ಅಂದಿನ ರಾತ್ರಿಯಿಂದ ಅವರು ಒಬ್ಬರನ್ನೊಬ್ಬರು ಅತಿಕ್ರಮಿಸುವುದರಲ್ಲಿ ಸಹಭಾಗಿಗಳಾಗಿದ್ದರು. ಅವ್ರೇಲಿಯಾನೋ ಹೊಸೆಗೆ ಚೌಕದಲ್ಲಿದ್ದ ಗಡಿಯಾರದ ಹನ್ನೆರಡು ಗಂಟೆ ಹೊಡೆದದ್ದನ್ನು ಕೇಳದ ಹೊರತು ಮಲಗುವುದಕ್ಕೆ ಆಗುತ್ತಿರಲಿಲ್ಲ ಮತ್ತು ಹೆಚ್ಚಾಗುತ್ತಿದ್ದ ವೇದನೆಯಿಂದ ಅವನು ನಿದ್ದೆಯಲ್ಲಿ ನಡೆದು ಬಂದು ಸೊಳ್ಳೆ ಪರದೆಯ ಒಳಗೆ ನುಸುಳುವ ತನಕ ಒಂದು ಕ್ಷಣವೂ ಅವಳಿಗೆ ಸಮಾಧಾನವಿರುತ್ತಿರಲಿಲ್ಲ. ಅನಂತರ ಅವರು ಬೆತ್ತಲೆ ಮಲಗಿ ಸಾಕೆನಿಸುವಷ್ಟು ಪರಸ್ಪರ ನೇವರಿಸುತ್ತಿದ್ದರಲ್ಲದೆ ಮನೆಯ ಮೂಲೆ ಮೂಲೆಗಳಿಗೆ ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಹೋಗುತ್ತಿದ್ದರು ಮತ್ತು ದಿನದ ಯಾವುದೇ ಸಮಯದಲ್ಲಾದರೂ ಬೆಡ್‌ರೂಮಿನ ಬಾಗಿಲು ಹಾಕಿಕೊಂಡು ಎಂದಿಗೂ ಉದ್ವೇಗ ಇಳಿಯದ ಸ್ಥಿತಿಯಲ್ಲಿರುತ್ತಿದ್ದರು. ಒಂದು ದಿನ ಮಧ್ಯಾಹ್ನ ಉರ್ಸುಲಾ ಉಗ್ರಾಣಕ್ಕೆ ಹೋದಾಗ ಮುತ್ತಿಕ್ಕುವುದರಲ್ಲಿದ್ದ ಅವರನ್ನು ಇನ್ನೇನು ಕಂಡುಬಿಡುತ್ತಿದ್ದಳು. ಅವಳು ಸಹಜವಾಗಿ, “ನಿನ್ನ ಚಿಕ್ಕಮ್ಮನನ್ನು ತುಂಬ ಪ್ರೀತಿಸ್ತೀಯಲ್ವಾ?” ಎಂದದ್ದಕ್ಕೆ ಅವ್ರೇಲಿಯಾನೋ ಹೊಸೆ ಹೌದೆಂದು ಉತ್ತರಿಸಿದ. ಅವಳು, “ಅದು ನಿಂಗೆ ಒಳ್ಳೇದು” ಎಂದು ಹೇಳಿ ಬ್ರೆಡ್‌ಗೆ ಬೇಕಾದ ಹಿಟ್ಟನ್ನು ಅಳೆದು ಅಡುಗೆ ಮನೆಗೆ ಹೋದಳು. ಆ ಘಟನೆ ಅಮರಾಂತಳನ್ನು ಅವಳ ವಿಕಲ್ಪದಿಂದ ಹೊರಗೆ ತಂದಿತು. ಅವಳಿಗೆ ತಾನು ಅತಿರೇಕಕ್ಕೆ ಹೋಗಿರುವೆನೆಂದೂ ಮಗುವಿನ ಜೊತೆ ಮುತ್ತಿಡುವ ಆಟವಾಡುತ್ತಿಲ್ಲವೆಂದೂ, ವಯಸ್ಸು ಮೀರಿದ ಉದ್ರೇಕದಲ್ಲಿ ಹೊರಳಾಡುತ್ತಿದ್ದೇನೆಂದು ತಿಳಿಯಿತು. ಅವಳು ಅದನ್ನು ಹಠಾತ್ ನಿಲ್ಲಿಸಿದಳು. ಆ ವೇಳೆಗೆ ಮಿಲಿಟರಿ ಟ್ರೈನಿಂಗ್ ಮುಗಿಸುತ್ತಿದ್ದ ಅವ್ರೇಲಿಯಾನೋ ಹೊಸೆಗೆ ವಾಸ್ತವದ ಅರಿವಾಯಿತು ಮತ್ತು ಅವನು ಸೈನಿಕರ ಸ್ಥಳದಲ್ಲಿ ಮಲಗಲು ಪ್ರಾರಂಭಿಸಿದ. ಶನಿವಾರಗಳಂದು ಅವನು ಇತರೆ ಸೈನಿಕರ ಜೊತೆ ಕತಾವುರೆಯ ಅಂಗಡಿಗೆ ಹೋಗುತ್ತಿದ್ದ. ಅವನು ತನ್ನ ದಿಢೀರ್ ಏಕಾಂತಕ್ಕಾಗಿ, ಮುಂಚಿತವಾಗಿ ಬಂದ ತಾರುಣ್ಯಕ್ಕೆ ಜೀವರಸವಿಲ್ಲದ ಹೂಗಳ ವಾಸನೆಯ ಹೆಂಗಸರನ್ನು ಕತ್ತಲಲ್ಲಿ ಆದರ್ಶೀಕರಿಸುತ್ತ ಸಾಂತ್ವನವನ್ನು ಹುಡುಕುತ್ತಿದ್ದ ಮತ್ತು ಅತೀವ ತುಡಿತದಿಂದ ಅಮರಾಂತಳ ಹಾಗೆ ಅವರು ಬದಲಾದಂತೆ ಕಲ್ಪಿಸಿಕೊಳ್ಳುತ್ತಿದ್ದ.

ಸ್ವಲ್ಪ ಸಮಯ ಕಳೆದ ಮೇಲೆ ಯುದ್ಧದ ಬಗ್ಗೆ ಪರಸ್ಪರ ವಿರುದ್ಧವಾದ ವರ್ತಮಾನಗಳು ಬರಲು ಪ್ರಾರಂಭವಾಯಿತು. ಕ್ರಾಂತಿಕಾರರ ಪ್ರಗತಿಯನ್ನು ಸರ್ಕಾರ ಒಪ್ಪಿಕೊಂಡರೂ ಮಕೋಂದೋದಲ್ಲಿದ್ದ ಅಧಿಕಾರಿಗಳಿಗೆ ಶಾಂತಿಯ ಮಾತುಕತೆ ಪ್ರಾರಂಭವಾಗಲಿದೆ ಎನ್ನುವ ಗುಪ್ತ ವರದಿಗಳು ಬಂದಿತ್ತು. ಏಪ್ರಿಲ್ ಒಂದರ ಸಮಯಕ್ಕೆ ವಿಶೇಷ ಬೇಹುಗಾರನೊಬ್ಬ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಬಳಿಗೆ ಬಂದು ತನ್ನ ಗುರುತು ಹೇಳಿಕೊಂಡ. ಅವನು ಪಾರ್ಟಿಯ ನಾಯಕರು ಒಳ ಪ್ರದೇಶದ ಕ್ರಾಂತಿಕಾರ ನಾಯಕರ ಜೊತೆ ಸಂಪರ್ಕ ಹೊಂದಿದ್ದಾರೆ ಮತ್ತು ಯುದ್ಧ ನಿಲ್ಲಿಸುವುದರ ಬದಲಿಗೆ ಕಾಂಗ್ರೆಸ್‌ನಲ್ಲಿ ಅಲ್ಪ ಸಂಖ್ಯಾತರನ್ನು ಪ್ರತಿನಿಧಿಸುವಂತೆ, ಇನ್ನೇನು ಮೂರು ಕ್ಯಾಬಿನೆಟ್ ಹುದ್ದೆಯನ್ನು ಕೊಡುವ ಏರ್ಪಾಡು ಆಗಲಿದೆ ಹಾಗೂ ಅಸ್ತ್ರಗಳನ್ನು ವಿಸರ್ಜಿಸುವ ಕ್ರಾಂತಿಕಾರರಿಗೆ ಕ್ಷಮೆ ಕೊಡಲಾಗುತ್ತದೆ ಎನ್ನುವುದನ್ನು ದೃಢಪಡಿಸಿದ. ಬೇಹುಗಾರ ಯುದ್ಧ ನಿಲ್ಲಿಸುವುದರ ಬಗ್ಗೆ ಸಹಮತವಿಲ್ಲದೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಗುಪ್ತವಾದ ಆರ್ಡರನ್ನು ತಂದಿದ್ದ. ಕರ್ನಲ್ ಗೆರೆನೆಲ್ಡೊ ಮಾರ್ಕೆಜ್ ತನ್ನಲ್ಲಿದ್ದವರಲ್ಲಿ ಅತ್ಯುತ್ತಮವಾದ ಐದು ಜನರನ್ನು ಆರಿಸಿಕೊಂಡು ಅವರ ಜೊತೆ ದೇಶವನ್ನು ಬಿಡಲು ಸಿದ್ಧನಾಗಬೇಕಾಯಿತು. ಆ ಆರ್ಡರನ್ನು ಅತ್ಯಂತ ಗುಪ್ತವಾಗಿ ನೆರವೇರಿಸಲಾಗುತ್ತಿತ್ತು. ಈ ಏರ್ಪಾಡು ಪ್ರಕಟಣೆಯಾಗುವುದಕ್ಕೆ ಒಂದು ವಾರದ ಮುಂಚೆ ಮತ್ತು ವೈರುಧ್ಯತೆಯಿಂದ ಕೂಡಿದ ಗಾಳಿಮಾತುಗಳ ಮಧ್ಯೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಕರ್ನಲ್ ರಾಕ್ ಕಾರ್ನಿಸಿರೋ ಸೇರಿ ಹತ್ತು ಜನ ನಂಬಿಕಸ್ಥ ಅಧಿಕಾರಿಗಳ ಜೋತೆಯಲ್ಲಿ ಮಧ್ಯ ರಾತ್ರಿಯ ನಂತರ ಮಕೋಂದೋಗೆ ನುಸುಳಿ ಕಾವಲುಗಾರರನ್ನು ಕಳಿಸಿ, ಅಸ್ತ್ರಗಳನ್ನು ಹೂತು ಹಾಕಿ, ಅವರ ಖಾತೆಗಳನ್ನು ನಾಶಮಾಡಿದ, ಮುಂಜಾವಿನ ಹೊತ್ತಿಗೆ ಮತ್ತು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಮತ್ತು ಅವನ ಐದು ಜನ ಅಧಿಕಾರಿಗಳ ಜೊತೆ ಊರಿನಿಂದ ಹೊರಟಿದ್ದರು. ಅದೆಷ್ಟು ಶೀಘ್ರ ಮತ್ತು ಗುಪ್ತವಾಗಿತ್ತೆಂದರೆ ಕೊನೆಯ ಕ್ಷಣದ ತನಕ ಉರ್ಸುಲಾಗೆ ಅದರ ಬಗ್ಗೆ ಗೊತ್ತಾಗಲಿಲ್ಲ. ಯಾರೋ ಒಬ್ಬ ಅವಳ ಬೆಡ್‌ರೂಮಿನ ಕಿಟಕಿಯನ್ನು ತಟ್ಟಿ ಪಿಸುದನಿಯಲ್ಲಿ, “ನೀವು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ನೋಡ್ಬೇಕು ಅಂತಿದ್ರೆ ಈಗಿಂದೀಗ ಬಾಗಿಲ ಹತ್ತಿರ ಬನ್ನಿ” ಎಂದ. ಉರ್ಸುಲಾ ಹಾಸಿಗೆಯಿಂದ ಚೆಂಗನೆದ್ದು ರಾತ್ರಿ ಉಡುಪಿನಲ್ಲೇ ಬಾಗಿಲಿಗೆ ಹೋದಳು ಮತ್ತು ಅವಳಿಗೆ ಮಾತಿಲ್ಲದೆ ಧೂಳೆಬ್ಬಿಸಿ ಊರು ಬಿಡುತ್ತಿದ್ದ ಕುದುರೆ ಸವಾರರನ್ನು ಮಾತ್ರ ನೋಡಲು ಸಾಧ್ಯವಾಯಿತು. ಮಾರನೆಯ ದಿನ ಅವಳಿಗೆ ಅವ್ರೇಲಿಯಾನೋ ಹೊಸೆ ತನ್ನ ತಂದೆಯ ಜೊತೆಯಲ್ಲಿ ಹೋಗಿದ್ದಾನೆಂದು ತಿಳಿದು ಬಂತು.

ಸರ್ಕಾರ ಜಂಟಿ ಹೇಳಿಕೆಯನ್ನು ಪ್ರಕಟಿಸಿ ಹತ್ತು ದಿನಗಳಾದ ನಂತರ ಮತ್ತು ವಿರೋಧಿಗಳು ಯುದ್ಧ ಮುಗಿಯಿತೆಂದು ಘೋಷಿಸಿದ ಮೇಲೆ ಪಶ್ಚಿಮದ ಗಡಿಯಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ದಂಗೆ ಎದ್ದಿರುವ ಸುದ್ದಿ ಬಂತು. ಅವನ ಚಿಕ್ಕ ಗಾತ್ರದ ಮತ್ತು ಅಸಮರ್ಪಕ ಶಸ್ತ್ರ ಹೊಂದಿದ ಸೈನಿಕರನ್ನು ಒಂದು ವಾರದೊಳಗೆ ಚದುರಿಸಲಾಯಿತು. ಆದರೆ ಆ ವರ್ಷದಲ್ಲಿ ಉದಾರವಾದಿಗಳು ಮತ್ತು ಸಂಪ್ರದಾಯವಾದಿಗಳು ದೇಶದ ಜನತೆಗೆ ತಮ್ಮಿಬ್ಬರಲ್ಲಿ ಹೊಂದಾಣಿಕೆ ಇದೆ ಎಂದು ತಿಳಿಯಪಡಿಸಲು ಪ್ರಯತ್ನಿಸುತ್ತಿದ್ದಾಗ ಅವನು ಏಳು ಬಾರಿ ದಂಗೆ ಏಳಲು ಯತ್ನಿಸಿದ. ಒಂದು ರಾತ್ರಿ ಅವನು ರಿಯೋ‌ಅಕ ಮೇಲೆ ಹಡಗಿನಿಂದ ಗುಂಡಿನ ಮಳೆ ಸುರಿಸಿದ ಮತ್ತು ಕಾವಲುಗಾರನನ್ನು ಹಾಸಿಗೆಯಿಂದ ಹಿಡಿದೆಳೆದ ಮತ್ತು ಪ್ರತೀಕಾರಕ್ಕಾಗಿ ಊರಿನ ಹದಿನಾಲ್ಕು ಜನ ಹೆಸರುವಾಸಿ ಉದಾರವಾದಿಗಳಿಗೆ ಗುಂಡಿಕ್ಕಿದ. ಅವನು ಎರಡು ವಾರದ ತನಕ ಗಡಿಯಲ್ಲಿನ ಕಸ್ಟಮ್ಸ್ ಕೇಂದ್ರವನ್ನು ಸ್ವಾಧೀನದಲ್ಲಿ ಇಟ್ಟಿಕೊಂಡಿದ್ದ ಮತ್ತು ಅಲ್ಲಿಂದ ಇಡೀ ದೇಶಕ್ಕೆ ಯುದ್ಧದ ಕರೆ ಕೊಟ್ಟ. ಅವನ ಮತ್ತೊಂದು ಸಾಹಸವಾದ ರಾಜಧಾನಿಯ ಹೊರವಲಯದಲ್ಲಿ ಸಾವಿರ ಮೈಲಿಗಳಿಗಿಂತ ಹೆಚ್ಚು ಕೃಷಿ ಮಾಡದ ಪ್ರದೇಶವನ್ನು ದಾಟಿ ಯುದ್ಧವನ್ನು ಘೋಷಿಸುವ ಹುಚ್ಚು ಪ್ರಯತ್ನ ವ್ಯರ್ಥವಾಯಿತು. ಒಂದು ಸಂದರ್ಭದಲ್ಲಿ ಅವನು ಮಕೋಂದೋದಿಂದ ಹದಿನೈದು ಮೈಲಿಗಳ ದೂರದಲ್ಲಿದ್ದರೂ ಸರ್ಕಾರ ಗಸ್ತು ತಿರುಗುವುದನ್ನು ಏರ್ಪಡಿಸಿದ್ದರ ಕಾರಣ ಪರ್ವತದಲ್ಲಿ ಅಡಗಿಕೊಳ್ಳಬೇಕಾಯಿತು. ಅದು ಅನೇಕ ವರ್ಷಗಳ ಹಿಂದೆ ಅವನ ತಂದೆ ಸ್ಪೇನ್ ಯುದ್ಧ ನೌಕೆಯ ಪಳೆಯುಳಿಕೆಗಳನ್ನು ಕಂಡ ಪ್ರದೇಶಕ್ಕೆ ಸಮೀಪದಲ್ಲಿತ್ತು.

ಸುಮಾರು ಆ ಸಮಯದಲ್ಲಿ ವಿಸಿಟಾಸಿಯೋನ್ ಸತ್ತಳು. ನಿದ್ದೆ ಬಾರದ ಸ್ಥಿತಿಯ ಭಯದಿಂದ ಸಿಂಹಾಸನವನ್ನು ತೊರೆದು ಬಂದ ಅವಳಿಗೆ ಸಹಜವಾಗಿ ಸಾಯುವ ಸಂತೋಷ ಲಭಿಸಿತು. ಹಾಸಿಗೆಯ ಕೆಳಗೆ ಹೂತಿಟ್ಟಿದ್ದ ಇಪ್ಪತ್ತು ವರ್ಷದ ಕೂಲಿ ಹಣವನ್ನು ತೋಡಿ ಹೊರಗೆ ತೆಗೆಯಬೇಕೆಂದು ಮತ್ತು ಅದನ್ನು ಯುದ್ಧ ಮುಂದುವರಿಸುವುದಕ್ಕಾಗಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಕಳಿಸಬೇಕೆಂದು ಅವಳ ಅಂತಿಮ ಇಚ್ಛೆಯಾಗಿತ್ತು. ಆದರೆ ಉರ್ಸುಲಾ ತೋಡುವ ಗೋಜಿಗೆ ಹೋಗಲಿಲ್ಲ. ಏಕೆಂದರೆ ಆ ದಿನಗಳಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಪ್ರಾಂತೀಯ ರಾಜಧಾನಿಯ ಬಳಿ ಭೂಮಿಗೆ ಇಳಿಯುವಾಗ ಕೊಲ್ಲಲ್ಪಟ್ಟನೆಂಬ ವದಂತಿ ಇತ್ತು. ಇದರ ಅಧಿಕೃತ ಪ್ರಕಟಣೆಯನ್ನು ಎರಡು ವರ್ಷದೊಳಗೆ ಇದು ನಾಲ್ಕನೇ ಬಾರಿ ನಿಜವೆಂದು ಪರಿಗಣಿಸಲಾಗಿತ್ತು. ಏಕೆಂದರೆ ಅದಾದ ಆರು ತಿಂಗಳ ಕಾಲ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಬಗ್ಗೆ ಏನೂ ಕೇಳಿಬಂದಿರಲಿಲ್ಲ. ಉರ್ಸುಲಾ ಮತ್ತು ಅಮರಾಂತ ಕಳೆದ ಅವಧಿಗೆ ಹೊಸದಾದ ದುಃಖಸೂಚಕವನ್ನು ಸೇರಿಸಿಕೊಂಡಾಗ ಇದ್ದಕ್ಕಿದ್ದಂತೆ ಅನಿರೀಕ್ಷಿತ ಸುದ್ದಿ ಬಂತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬದುಕಿದ್ದಾನೆ ಆದರೆ ಸರ್ಕಾರಕ್ಕೆ ತೊಂದರೆ ಕೊಡುವುದನ್ನು ನಿಲ್ಲಿಸಿದ್ದಾನೆ ಮತ್ತು ಅವನು ಕ್ಯಾರಿಬಿಯಾದ ಇತರ ಗಣತಂತ್ರಗಳಾಗಿ ಜಯ ಪಡೆದ ಸಂಯುಕ್ತ ರಾಷ್ಟ್ರದವರ ತತ್ವ ಒಪ್ಪಿ ಅವರ ಜೊತೆ ಸೇರಿದ್ದಾನೆ ಮತ್ತು ಅವನು ತನ್ನ ದೇಶದಿಂದ ದೂರ, ಮತ್ತಷ್ಟು ದೂರದಲ್ಲಿ, ಬೇರೆ ಬೇರೆ ಹೆಸರುಗಳಲ್ಲಿ ಕಾಣಿಸಿಕೊಳ್ಳುತ್ತಾನೆ, ಎಂದು. ಆ ಸಮಯದಲ್ಲಿ ಅವನಿಗೆ ಮಧ್ಯ ಅಮೆರಿಕದ ಸಂಯುಕ್ತರಾಷ್ಟ್ರವಾದಿ ಶಕ್ತಿಗಳನ್ನು ಒಗ್ಗೂಡಿಸಿ ಅಲಸ್ಯದಿಂದ ಪಟಗೋನಿಯಾವರೆಗಿನ ಸಂಪ್ರದಾಯವಾದಿ ಆಳ್ವಿಕೆಗಳನ್ನು ನಿರ್ನಾಮ ಮಾಡಬೇಕೆಂಬ ಆಲೋಚನೆ ಇತ್ತು. ಅವನು ಅಲ್ಲಿಂದ ಹೊರಟ ಮೇಲೆ ಅವನಿಂದ ನೇರವಾಗಿ ಮೊದಲ ಬಾರಿಗೆ ಉರ್ಸುಲಾಳನ್ನು ತಲುಪಿದ ವಸ್ತುವೆಂದರೆ ಕ್ಯೂಬಾದ ಸ್ಯಾಂತಿಯಾಗೋದಿಂದ ಬಂದ ಮಾಸಲಾಗಿದ್ದ ಒಂದು ಪತ್ರವಾಗಿತ್ತು.

ಅವಳು “ನಮಗೆ ಅವನೆಂದಿಗೂ ದಕ್ಕಲ್ಲ” ಎಂದು ಅದನ್ನು ಓದಿದ ಉರ್ಸುಲಾ ಹೇಳಿದಳು.” ಅವನು ಈ ದಾರಿ ಹಿಡಂಡು ಹೋದ್ರೆ, ಕ್ರಿಸ್‌ಮಸ್ ಕಳೆಯೋದಕ್ಕೆ ಅವನ್ಗೆ ಆಗೋದೇ ಇಲ್ಲ.”
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.