ರೂಟ್ ಒನ್, ಕೆ.ಎಸ್.ಸಿ., ಕನ್ನಡ ತಂತ್ರಾಂಶ ಮತ್ತು ‘ವಾಸು’

‘ಚೀರಿ ಹೇಳುವುದನ್ನೇ ರೂಪಕದಲ್ಲಿ ಹೇಳು, ಹೇಳುವುದನ್ನೇ ಕ್ರಿಯೆಯಲ್ಲಿ ಮೂಡಿಸು’ ಸಾಮಾನ್ಯವಾಗಿ ಸಂವೇದನಾಶೀಲರಾದ ನಮ್ಮ ಹಿರಿಯ ಸಾಹಿತಿಗಳು ಹೇಳುವ ಮಾತು.

ನ್ಯೂಜೆರ್ಸಿಯ ರೂಟ್ ಒನ್, ಅಂದರೆ ಅದು ಇತ್ತ ಟರ್ನ್‌ಪೈಕಿನಂತೆ ಹೈವೇ ಅಲ್ಲದ, ಪಟ್ಟಣಗಳ ಒಳರಸ್ತೆಯೂ ಅಲ್ಲದ, ಆದರೂ ವೇಗದ ರಸ್ತೆ. ಹೈವೇ ಮೇಲೆ ಹೋಗುತ್ತಿದ್ದರೆ ಅಕ್ಕ-ಪಕ್ಕ ಕಾಡೋ, ಬಯಲೋ ಬಿಟ್ಟರೆ ವಿಶೇಷವಾಗಿ ಏನೂ ಕಾಣುವುದಿಲ್ಲ. ಹೈವೇ ಮೇಲೆ, ಮುಂದಿನ ವಾಹನದ ಮೇಲೆ ಕಣ್ಣು ನೆಟ್ಟಿರುತ್ತದೆ. ಮನಸ್ಸಿನಲ್ಲಿ ನಿಮ್ಮ ವೈಯಕ್ತಿಕ ಸಮಸ್ಯೆಗಳೋ, ಟೋಲ್‌ಗೆ ಕೊಡಲು ಬೇಕಾದ ದುಡ್ಡಿದೆಯೋ ಇಲ್ಲವೋ ಎಂಬ ಆತಂಕವೋ, ಹೀಗೆ ಇನ್ನೇನೋ ತುಂಬಿರುತ್ತದೆ. ರೂಟ್ ೧, ಹಾಗಲ್ಲ, ಊರುಗಳ ಮಧ್ಯೆಯೇ ಹಾದು ಹೋಗುವುದರಿಂದ ಅಕ್ಕ-ಪಕ್ಕ ಹತ್ತಾರು ಆಕರ್ಷಣೆಗಳು. ಝಗಮಗಿಸುವ ನಿಯಾನ್ ಫಲಕ ಹೊತ್ತ ರೆಸ್ಟೊರೆಂಟುಗಳು, ನೈಟ್ ಕ್ಲಬ್ಬುಗಳು, ಗ್ಯಾಸ್ ಸ್ಟೇಶನ್‌ಗಳು. ದಾರಿ ತಪ್ಪಿಸುವ, ತಪ್ಪಿದರೆ ತಮಗೆ ತೋಚಿದ್ದನ್ನು ತೋರಿಸುವ ಗವಾಕ್ಷಿಗಳು. ಇತ್ಯಾದಿಗಳ ಮಧ್ಯ ವೇಗದ ಮಿತಿ ಕಾಪಾಡುತ್ತ, ರಸ್ತೆಯ ಕಡೆ ನಿಗಾ ಇಡುತ್ತಾ ನಿಮ್ಮ ಕಾರು ಓಡಿಸಬೇಕು. ನಾನು, ಗೋಪಿ (ಗೋಪಿನಾಥ್ ತಾತಾಚಾರ್) ‘ಕೆ.ಎಸ್.ಸಿ’ ಮುಂದೆ ಏನು ಮಾಡಬಹುದು ಎಂಬುದರ ಕುರಿತು ಚರ್ಚಿಸುತ್ತಾ ಹೊರಟಿದ್ದೆವು. ಸುದೈವವಶಾತ್ ಗೋಪಿ ಕೈಯಲ್ಲಿ ಚಕ್ರವಿತ್ತು. ಎಡಿಸನ್‌ನಲ್ಲಿ ಸೇರುವುದು ಎಂದು ಹರೀಶ್ ಕಡ್ಲಬಾಳು ಮತ್ತು ಸತೀಶ್ ಕುಮಾರ್ ಮಾತು ಕೊಟ್ಟಿದ್ದರು. ಕೊಟ್ಟಂತೆ ನಡೆದರು.

ಎಡಿಸನ್‌ನ ದೋಸಾ ಕ್ಯಾಂಪಿನಲ್ಲಿ ವಡೆ, ದೋಸೆಯ ಸಮಾರಾಧನೆ ಮತ್ತು ಕೊಂಚ ಬಿರುಸಿನ ಚರ್ಚೆಯ ನಂತರ ‘ಕೆ.ಎಸ್.ಸಿ.’ಯ ತಂಡ ಹೊರಟಿತು ವಾಸು ಅವರ ಮನೆಗೆ, ಅದೇ ‘ನಮ್ಮ ಬರಹ’ದ ಶೇಷಾದ್ರಿ ವಾಸು ಅವರ ಮನೆಗೆ. ‘ವಾಸು’ ಜೊತೆ ಆ ಮೊದಲು ಒಂದೆರಡು ಈ-ಮೈಲ್ ವಿನಿಮಯ, ಮತ್ತು ಅದೇ ದಿನ ಅವರನ್ನು ಭೇಟಿಯಾಗುವ ಕುರಿತು ಫೋನಿನ ಮಾತುಕತೆಯಾಗಿತ್ತಾದರೂ, ಅವರ ವ್ಯಕ್ತಿತ್ವದ ಬಗ್ಗೆ ಸಂಪೂರ್ಣ ಕಲ್ಪನೆ ನನಗೆ ದಕ್ಕಿರಲಿಲ್ಲ. ಹಿರಿಯರದು ತಮಿಳು ಮೂಲ, ‘ವಾಸು’ ಮಾತ್ರ ಕನ್ನಡಿಗರಲ್ಲಿ ಕನ್ನಡಿಗ, ಬೆಂಗಳೂರಿನ ಐ.ಐ.ಎಸ್.ಸಿ. ಯಲ್ಲಿ ವಿದ್ಯಾಭ್ಯಾಸ ಇತ್ಯಾದಿ ಚಿತ್ರಗಳು ಮನಸ್ಸಿನಲ್ಲಿ ಇದ್ದವು. ಶೇಖರ್ ಇವರನ್ನು ಓರ್ವ ಸಾಂಸ್ಕೃತಿಕ ಚಳುವಳಿಗಾರ ಎಂದು ಕರೆಯುವುದೂ ನನ್ನ ಮನಸ್ಸಿನಲ್ಲಿ ಇತ್ತು. ಸಂಪ್ರದಾಯದ ಮೌಲ್ಯಗಳಲ್ಲಿ ಗಟ್ಟಿ ನಿಂತ ಮೃದುಭಾಷಿ, ಸಾಧಕ, ಎಂಬ ಚಿತ್ರ ಪೂರ್ಣಗೊಂಡಿದ್ದು ಭೇಟಿಯಾದ ನಂತರವೇ.

‘ದೇಸಿ’(ಅಮೇರಿಕನ್ ಭಾರತೀಯರ ಪರಿಭಾಷೆಯಲ್ಲಿ ಬಳಸುವ ಅರ್ಥದಲ್ಲಿ, ಸಾಹಿತ್ಯಿಕ ಪರಿಭಾಷೆಯ ಅರ್ಥದಲ್ಲಿ ಅಲ್ಲ, ನನ್ನ ಗ್ರಹಿಕೆಯಲ್ಲಿ ಇವೆರಡರ ನಡುವೆ ಸೂಕ್ಷ್ಮ ವ್ಯತ್ಯಾಸಗಳಿವೆ) ಪಟ್ಟಣವೇ ಆದ ಎಡಿಸನ್‌ನಲ್ಲಿ-‘ದೇಸಿ’ ಈ ಊರಿನಲ್ಲಿ ಸುತ್ತುವಾಗ, ಇನ್ನೊಬ್ಬನ ನೆಲದಲ್ಲಿ ನುಗ್ಗಿ ತನ್ನದೇ ನೆಲೆ ಸ್ಥಾಪಿಸಿರುವ ಅಭಿಮಾನ, ನುಗ್ಗಿದ್ದೇನಲ್ಲ ಎನ್ನುವ ಮುಜುಗುರ, ಇಲ್ಲಿ ಬಂದರೂ ಅಲ್ಲಿನವನೇ ಆಗುಳಿದೆನಲ್ಲಾ ಅನ್ನುವ ಹತಾಶೆ ಎಲ್ಲವನ್ನೂ ಒಟ್ಟೊಟ್ಟಿಗೆ ಅನುಭವಿಸುತ್ತಿರುತ್ತಾನೆ. ಆ ಮೂಲಕ ಜಾಗತೀಕರಣದ ಪಾಶ್ಚಿಮಾತ್ಯರ ಜೊತೆಗಿನ ವಹಿವಾಟಿನಲ್ಲಿ ಈ ‘ದೇಸಿ’ ಒಂದರ್ಥದಲ್ಲಿ ಸೋತರೂ ಗೆದ್ದಿರುತ್ತಾನೆ, ಗೆದ್ದರೂ ಸೋತಿರುತ್ತಾನೆ- ದೋಸೆಯ ನಂತರ, ದೇವರ ಚಿತ್ರಗಳಿಂದ ಅಲಂಕೃತದೊಂಡಿದ್ದ ಗೋಡೆಯ ವಾಸು ಅವರ ಅಪಾರ್ಟ್ಮೆಂಟ್ನಲ್ಲಿ ಕೂತಾಗ ಟಿ.ವಿ.ಯ ಪರದೆ ಮೇಲೆ ಮೂಡುತ್ತಿದ್ದ ಕೆಟ್ಟ ಅಮೇರಿಕನ್ ಕಾರ್ಯಕ್ರಮ ಒಟ್ಟೂ ನನ್ನ ಅಂದಿನ ಅನುಭವ ಪ್ರಪಂಚಕ್ಕೆ ಒಗ್ಗುತ್ತಿರಲಿಲ್ಲ. ಅದನ್ನು ಗಮನಿಸಿಯೋ ಏನೋ ವಾಸು ಅವರ ಪತ್ನಿ ತುರ್ತಾಗಿ ಅದನ್ನು ಆರಿಸಿದರು. ‘ಕನ್ನಡ ತಂತ್ರಾಂಶ’ದ ವಿಷಯಕ್ಕೆ ಸಂಬಂಧಿಸಿದಂತೆ ಕೆ.ಎಸ್.ಸಿ. ತಂಡ ಒಟ್ಟಾರೆ ಯಾವ ಬಗೆಯ ಚಟುವಟಿಕೆಯನ್ನು ಮಾಡಬಹುದು, ‘ಕನ್ನಡ ತಂತ್ರಾಂಶ’ದ ತತ್‌ಕ್ಷಣದ ಅಗತ್ಯಗಳೇನು ಈ ಕುರಿತು ‘ವಾಸು’ ಅವರೊಡನೆ ಸಮಾಲೋಚಿಸಲು ನಾವಲ್ಲಿ ಸೇರಿದ್ದೆವು. ‘ಕನ್ನಡ ತಂತ್ರಾಂಶ’ದ ಕುರಿತಂತೆ ನನಗೆ ಹಲವು ಸಮಸ್ಯೆಗಳ ಅರಿವಿದೆಯಾದರೂ, ವಿಸ್ತಾರವಾಗಲಿ, ಆಳವಾದ ಜ್ಞ್ಯಾನವಾಗಲಿ ಇಲ್ಲ. ನನ್ನದು ಮೂಲತಃ ಆಕಡೆಮಿಕ್ ಆದ, ಸಾಹಿತ್ಯಿಕ, ಸಾಂಸ್ಕೃತಿಕ, ಅವ್ಯಕ್ತ ಆಬ್ಸ್ಟ್ರ್ಯಾಕ್ಟ್ ನೆಲೆಯಲ್ಲಿ ಆಲೋಚಿಸುವ ಮನಸ್ಸು. ಪ್ರಶ್ನೆಗಳನ್ನು ಹೊರತು ಪಡಿಸಿ ಹೆಚ್ಚಾಗಿ ಮೂಕನಾಗಿದ್ದೆನೆನೋ.

ವಾಸು ಮಾತ್ರ ಉತ್ಸಾಹದಿಂದ ಮಾತಾಡಿದರು, ‘ತುಂಗಾ’ ಫಾಂಟಿನಲ್ಲಿದ್ದ ದೋಷಗಳನ್ನು ಯುನಿಕೋಡ್‌ನ ಹೊಸ ಅವೃತ್ತಿಯಲ್ಲಿ ತಿದ್ದಲಾಗಿದೆ, ‘ಬರಹ’ದಲ್ಲಿ ಇದೀಗ ಫಾಂಟ್ ಪರಿವರ್ತಕ ಸಲಕರಣೆ ಇದೆ, ‘ದಟ್ಸ್ ಕನ್ನಡ’, ‘ಕನ್ನಡ ಪ್ರಭ’ದ ಪುಟಗಳನ್ನು ಈಗ ಸುಲಭವಾಗಿ ‘ಬರಹ’ದಲ್ಲಿ ಮತ್ತು ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಕತ್ತರಿಸಿ ಅಂಟಿಸಬಹುದು, ಇದರಿಂದ ಪ್ರಿಂಟ್ ಮಾಡಲು ಅನುಕೂಲ, ಕನ್ನಡ ತಂತ್ರಾಂಶದಲ್ಲಿ ಈ ವರೆಗೆ ಏನು ಲಭ್ಯವಿದೆ, ಏನು ಬೇಕಾಗಿದೆ? ಚಾಲ್ತಿಯಲ್ಲಿರುವ ಯೋಜನೆಗಳು ಯಾವವು? ಇತ್ಯಾದಿಗಳ ಒಂದು ಸಮಗ್ರ ಪಟ್ಟಿಯಾಗಬೇಕು, ‘ಕನ್ನಡ’ ಗೇಮ್‌ಗಳನ್ನು, ಪದಬಂಧ ಇತ್ಯಾದಿಗಳನ್ನು ಸೃಜನಶೀಲವಾಗಿ ನಿರ್ಮಿಸಬೇಕು, ಕರ್ನಾಟಕದ ಸಮಸ್ಯೆಗಳನ್ನು ಕುರಿತಂತೆ ಪ್ರಮುಖವಾದ ಸಮಿತಿಗಳ ವರದಿಯ ಉಗ್ರಾಣವಾಗಬೇಕು, ಕನ್ನಡದ ಟೆಕ್ಸ್ಟ್‌ನಿಂದ ಸ್ಪೀಚ್‌ಗೆ ವರ್ಗಾಯಿಸಲು ಅವಶ್ಯವಾದ ತಂತ್ರಜ್ಯಾನ ಲಭ್ಯವಿದೆ, ಇತ್ಯಾದಿ ಮಾತುಗಳು, ಸಲಹೆಗಳನ್ನು ನಮ್ಮೆಲ್ಲರೆದುರು ಹೇಳುತ್ತಾ ಸಾಗಿದರು. ‘ಕನ್ನಡ ತಂತ್ರಾಂಶ’ಕ್ಕೆ ಸಂಬಂಧಿಸಿದಂತೆ ದೊಡ್ಡ ಕಂಪನಿಗಳನ್ನೂ ಹಾಗು ಕೇಂದ್ರ-ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಕಿವಿಗಳನ್ನು ತಲುಪಲು ಒತ್ತಡ ನಿರ್ಮಿಸಬಹುದಾದ ಚಟುವಟಿಕೆಗಾರರ (ಪ್ರೆಶರ್ ಆಕ್ಟಿವಿಸ್ಟ್) ತಂಡವೊಂದಿದೆಯೆ? ನಾವು ನಿರ್ಮಿಸಬಹುದೆ? ಎಂದು ಆಲೋಚನೆ ಸಾಗಿತು. ಸ್ಪಷ್ಟ ಉತ್ತರಗಳು ಸಿಗಲಿಲ್ಲ. ‘ಕನ್ನಡ ಗಣಕ ಪರಿಷತ್’ ಈಗಾಗಲೇ ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಕನ್ನಡಿಗರು ಅವರನ್ನು ಬೆಂಬಲಿಸಿ ನಮ್ಮೆಲ್ಲರ ಆಶಯವಾಗಿರುವ ‘ಕನ್ನಡ ತಂತ್ರಾಂಶ ಅಭಿವೃದ್ಧಿ’ಯನ್ನು ಬಲಗೊಳ್ಳಿಸಬೇಕು ಎಂದು ನನಗನ್ನಿಸುತ್ತದೆ.

ವಾಸು ಮತ್ತವರ ಪತ್ನಿಯಿಂದ ಬೀಳ್ಕೊಟ್ಟು ಗೋಪಿ ಅವರ ಮನೆಗೆ ಹೋಗುವಾಗ ದಾರಿಯಲ್ಲಿ (ಮತ್ತೆ ಅದೇ ರೂಟ್ ಒನ್, ಅದೇ ವೇಗ, ಝಗಮಗಿಸುವ ನಿಯಾನ್ ಫಲಕ ಹೊತ್ತ ಗ್ಯಾಸ್ ಸ್ಟೇಶನ್‌ಗಳು, ರೆಸ್ಟೊರೆಂಟುಗಳು, ಗವಾಕ್ಷಿಗಳು) ಎಲ್ಲೇ, ಇದ್ದರೂ, ಯಾವುದೇ ವೃತ್ತಿಯಲ್ಲಿದ್ದರೂ, ಮೇಲ್ವರ್ಗದ ನಾವೆಲ್ಲ ಬೇಡಿ ಬಯಸುವ ಇಂದಿನ ‘ಇಂಡಿಜ್ಯುವಲಿಸ್ಟಿಕ್’ ದಿನಗಳಲ್ಲಿ ‘ವಾಸು’ ನಮಗೆ ಏಕೆ ಮತ್ತು ಹೇಗೆ ಒಂದು ಮಾದರಿ ಎಂದು ಕೊಂಚ ಭಾವೋತ್ಕಟತೆಯಲ್ಲಿ ಗೋಪಿನಾಥರೆದುರು ನಾನು ಹೇಳುತ್ತಿದ್ದೆ.

ರೂಟ್ ಒನ್‌ನ ಮೇಲೆ ರೂಪಕ ಮತ್ತು ಕ್ರಿಯೆಯಾಗಿ ‘ಬರಹ’ದ ವಾಸು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.