ಶ್ರೀಮುಖ

ತಾಯ ಶ್ರೀಮುಖ ಕಂಡು ಮನವು ನೆಮ್ಮದಿಗೊಂಡು
ಎದೆ ಹಿಗ್ಗಿ ಸಂತಸದಿ ಹಾಡುತಿಹುದು;
ಅವಳ ಕರುಣೆಯ ಕೊಂಡು ವಾತ್ಸಲ್ಯ ಸವಿಯುಂಡು
ಮಮತೆಯಲಿ ಅದನಿದನು ಬೇಡುತಿಹುದು.

ಇಲ್ಲಿ ಎದಗುದಿಯಿಲ್ಲ ಕವಡುಗಂಟಕವಿಲ್ಲ
ಭಾವ ಪಾವನ, ಲಾಲಿ ಹಾಲಿನೊಡಲು;
ಅಕ್ಕರದಿ ಮೈದಡವಿ ತಕ್ಕೈಸಿ ಮುದಗೊಂಡು
ಹದುಳದಲಿ ಹರಸುತಿಹ ತಾಯ ಮಡಿಲು.

ತಪ್ಪಿರಲಿ ಒಪ್ಪಿರಲಿ ಸೆರಗಿನಲಿ ಮುಚ್ಚಿ,
ದುಗುಡವಿರೆ ನಗೆಯ ಬೆಳದಿಂಗಳವ ಹೊಚ್ಚಿ,
ಕಂಟಕವ ದೂರಿಟ್ಟು ಸಂತವಿಸಿ ಕಾಯೆ,
ಎಂಟೆದೆಯ ಬಂಟನಾಗುವ ತೆರದಿ ತಾಯೆ!
*****