ಪ್ರೀತಿಯ ಹುಡುಗ

ಹಾಗೆ ಪ್ರೀತಿಯ ಹುಡುಗ,
ಏನೇನೋ ಮಾತುಗಳು – ಬೇಕಾಬಿಟ್ಟಿ.
ಎಲ್ಲಿಲ್ಲದ ಕಾಳಜಿ ದೇಶದ ಬಗ್ಗೆ
ಅಡಿಗೆಯ ಉಪ್ಪು ಹುಳಿ ಖಾರದ ಬಗ್ಗೆ

ಅವನು ಹಾಗೇ!

ಭುಜಕ್ಕೆ ಭುಜ ತಾಗಿ ಮೈಯ್ಯೆಲ್ಲ ನಡುಗಿದರೂ
ಏನೂ ಆಗದಹಾಗೆ ಮತ್ತೂ ಹತ್ತಿರ ಸರಿದು
ಏನೂ ತಿಳಿಯದಹಾಗೆ ಗುಂಪಲ್ಲಿ ಮುತ್ತಿಟ್ಟು,
ಸಹಜ ಎನ್ನುವ ಹಾಗೆ ಕಿವಿಯೊಳಗೆ ಹೇಳಿದ್ದೇನೋ…..
(ಅದು ಅಲ್ಲೇ ಮರೆತಿತ್ತು)

ಕೆನ್ನೆಯಂಚಿನ ಮೇಲೆ
ಸುಳಿದ ಬೆಚ್ಚನೆ ಉಸಿರು
ಅಲ್ಲೇ ಹಾಗೇ ಜೀಕು ಹಾಕುತ್ತಾ
ರೋಮ ರೋಮದಲ್ಲೂ ಸುಯ್‌ಗುಡುತ್ತಾ…..
ಅದೊಂದು ಮಧುರ ನೆನಪು.

ಆಮೇಲೆ;
ಅವನು ಅಲ್ಲಿ ಹಾಗೇ ತಣ್ಣಗೆ.
ಮತ್ತೆ ಅರಳಿಸಲಾರ
ಮತ್ತೆ ಹೊರಳಿಸಲಾರ
ಅವನು ಹಾಗೇ!

‘ಪ್ರೀತಿಯ ಹುಡುಗ’ ಹಾಗೇ
ಮತ್ತೊಬ್ಬನೂ ಅವನ ಹಾಗೆ
‘ಪ್ರೀತಿಯ ಹುಡುಗ’.

ಅವನೂ ಹಾಗೇ!
ಪ್ರೀತಿಯ ಹುಡುಗನ ಹಾಗೆ.
*****