ಮುಚ್ಚಂಜೆ

ಒಂದರಗಳಿಗೆಯ
ಬಂಧುರ ಸ್ಪರ್‍ಶಕೆ
ಮಂದಾನಿಲನೈತಂದಿಹನು;
ಹಗಲಿನ ಬಿಸಿಲಿಗೆ
ಮಾಗಿದ ಬನಗಳ
ಫಲಗಳ ಸೊಂಪಿನಲೀಜಿಹನು.

ರವಿಯದೊ ಬಿದ್ದನು!
ಕವಿಯಿದೊ ಎದ್ದನು
ತಂಗಾಳಿಯ ಜತೆ ಕೇಳಿಯಲಿ-
ನೀಲಾಂಗಣದಲಿ
ಮೋಡದ ಪುತ್ಥಳಿ
ತೂಕಡಿಸುತ್ತಿರೆ ನಿದ್ದೆಯಲಿ.

ಕ್ಷಿತಿಜದ ವರ್‍ತುಲ
ಕನ್ನೆಯ ಕೆನ್ನೆಯ
ಕಿತ್ತಿಳೆ ಹಣ್ಣಿನ ಬಣ್ಣವಿದು;
ಗುಂಗುರು ಗುಂಗುರು
ಮುಂಗುರುಳಂತೆಯೆ
ಮುಚ್ಚಂಜೆಯ ಮುಂಜೆರಗಿಹುದು.

ಒಂದೊಂದಾಗಿಯೆ
ತಾರಗಳಿಣಕಿರೆ
ಬಾನಿಗೆ ಹೊಸ ಚಿಗುರೊಡೆದಂತೆ!
ದೇವ ಕಣಗಿಲೆಯು
ಎಲೆಗಳನುದುರಿಸಿ
ಕೊಂಬೆಗೆ ಹಿಡಿ ಹೂ ತಳೆದಂತೆ.

ತಳಿರಂಗೈಯಲಿ
ಕುಳಿತಿಹ ಕೋಗಿಲೆ
ಯಾವುದೊ ಛಂದಕೆ ಕುಕಿಲುತಿದೆ.
ಮತ್ತೊಂದೆಡೆಯಲಿ
’ಟುವ್ವಿ’ಯ ಸವಿಯುಲಿ
ತಿರೆಯಾನಂದವ ಸಾರುತಿದೆ.

ಮುಚ್ಚಂಜೆಯ ತೆರೆ-
ಯಾಚೆಗೆ ಕನಸಿನ
ಲೋಕವು ನಾಕವ ತೆರೆದಿಹುದು;
ತುಂಬಿದ ಚಂದಿರ
ಸ್ವಪ್ನದಿ ಸುಂದರ
ಮಾಯಾ ಮಂದಿರ ರಚಿಸುವದು.

ಹಗಲಿರುಳೆರಡರ
ಬಂಧುರ ಮಿಲನದಿ
ಮಿಸುಕಾಡದ ನಸು ಬೆಳಕಿಹುದು;
ದಿನವಿಡಿ ಬಳಲಿಕೆ
ಸಂಜೆಯ ಅಲಸಿಕೆ
ವಿಲಸತ್ ಪ್ರಭೆಯಲಿ ಕರಗಿಹುದು.
*****