ಭವ – ೩

ಅಧ್ಯಾಯ ೮

ಅದೊಂದು ಭೀಕರ ಅಮಾವಾಸ್ಯೆಯ ದಿನ.
ಅವತ್ತು ಸರೋಜಳನ್ನು ಕೊಂದು ಹಾಕಿಬಿಟ್ಟದ್ದು. ಹಾಗೆಂದು ತಾನು ಅವನ ಕೊರಳಿನ ತಾಯಿತ ಕಾಣುವ ತನಕ ತಿಳಿದದ್ದು.

ಪಂಡಿತ ನಿತ್ಯ ಸಂಜೆ ಬರಲು ತೊಡಗಿದ್ದ. ಸದಾಚಾರದ ಯಾವ ಸಂಕೋಚವೂ ಅವನಲ್ಲಿ ಉಳಿದಿರಲಿಲ್ಲ. ಅವಳಿಗೆ ಸಂಗೀತ ಕಲಿಸುತ್ತಿದ್ದೇನೆಂಬುದು ಅವನಿಗೊಂದು ನೆವ. ಮತ್ತೆ ಮನೆಯ ಹಿತ್ತಲನಲ್ಲಿ ಅವನ ಗಿಡಮೂಲಿಕೆಗಲನ್ನು ಬೆಳೆಸಿಕೊಳ್ಳುವ ಕಾರ್ಯಕ್ರಮ ಬೇರೆ. ಹಿತ್ತಲಿನಲ್ಲಿ ಕೆಮ್ಮಣ್ಣಿನ ಒಂದು ಗುಂಡಿಯಿತ್ತು. ಆಳೆತ್ತರ ಅಗೆದು ತೆಗೆದರೂ ಇನ್ನೂ ಅದರಲ್ಲಿ ಕೆಮ್ಮಣ್ಣು ಉಳಿದಿತ್ತು. ಅವನೇ ಸ್ವತಃ ಇನ್ನಷ್ಟು ಕೆಮ್ಮಣ್ಣು ಅಗೆದು ಗುಂಡಿಯ ಮೇಲೆ ಒಟ್ಟಿದ್ದ. ಅದನ್ನು ನಿತ್ಯ ಯಥೋಚಿತವಾಗಿ ತಾನು ನೆಟ್ಟ ಹೊಸ ಹೊಸ ಮೂಲಿಕೆಗಳ ಬುಡಕ್ಕೆ ಹಾಕುತ್ತಿದ್ದ. ಈ ಆಗಂತುಕ ವನಸ್ಪತಿಗೆ ನಿತ್ಯ ಬೇಕಾದಷ್ಟು ನೀರನ್ನು ತಪ್ಪದೆ ಹೊಯ್ಯುವುದು ಸರೋಜಳ ಕೆಲಸ.

ಬಾಣಲೆಯಲ್ಲಿ ಅವಳು ಕೆಮ್ಮಣ್ಣು ಹೊರುವುದನ್ನು ಶಾಸ್ತಿಗಳು ಕಂಡದ್ದುಂಟು. ತನ್ನೊಳಗಿಂದ ಸೀಳಿಕೊಂಡು ಅಟ್ಟಹಾಸದಿಂದ ಅಬ್ಬರಿಸಿದ್ದ ಉಳುವ ಧ್ವನಿ ಬರಬರುತ್ತ ಒಂದು ವಿಕಾರವಾದ ಶ್ರುತಿಯಂತೆ, ನಾಡಿಯ ಬಡಿತದಂತೆ, ಸಣ್ಣಗೆ ಅವರಲ್ಲಿ ನರಳುತ್ತಲೇ ಮಿಡಿದಿತ್ತು.

ಒಂದು ದಿನ ಸಂಜೆ, ಹಿತ್ತಲಿನಲ್ಲಿ ಆ ಪಂಡಿತ ಪಂಚೆಯನ್ನು ಎತ್ತಿ ಕಟ್ಟಿಕೊಂಡು ನಿಂತು, ಸರೋಜಳ ಕಿವಿಗೆ ಮಾತ್ರವೆಂಬಂತೆ, ಇದು ವಿಷ್ಣುಗಂಧಿ, ಇದು ಭೃಂಗ ಎಂದು ವಿವರಿಸುತ್ತ ಅವಳ ಸನಿಯದಲ್ಲಿ ತನ್ನ ಗಂಧ ಸೂಸುತ್ತ ಇದ್ದ. ಅವಳ ಅಂಗೈ ಮೇಲೆ ಗಿಡಮೂಲಿಕೆಗಳ ಎಲೆಗಳನ್ನು ಇಟ್ಟು ವಿವರಿಸುತ್ತ, ಅದನ್ನು ತಾನೇ ಅವಳ ಕೈಮೇಲೆ ತಿಕ್ಕಿ, ಮೂಸು ಎನ್ನುತ್ತ, ಬಾಯಿಗೊಯ್ದು ನೆಕ್ಕು ಎನ್ನುತ್ತ ಇದ್ದವನು ತಾನು ಬಂದು ದೆವ್ವದಂತೆ ನಿಂತರೂ ಲೆಖ್ಖಕ್ಕೆ ತೆಗೆದುಕೊಂಡಿರಲಿಲ್ಲ. ಕೂದಲು ತುಂಬಿದ ನೇರವಾದ ಅವನ ಕಾಲುಗಳನ್ನು ಕಂಡು ತನ್ನ ಎದೆ ಬಡಿದುಕೊಳ್ಳತೊಡಗಿತ್ತು. ಈಳಾಟದ ಕ್ರೂರ ತಂಬೂರಿಯಂತೆ ತನ್ನ ಇಡೀ ಶರೀರ ಕಂಪಿಸತೊಡಗಿತ್ತು.

ತಾನು ಹೀಗೇ ನಿರ್ವೀರ್ಯನಾಗುತ್ತ ಹೋಗಿದ್ದೆ. ಅವನು ದೇವರ ಮನೆಯಲ್ಲಿ ಕೂತು ಅವಳ ಶ್ರುತಿಗೆ ತನ್ನ ಶ್ರುತಿ ಸೇರಿಸಿ, ಎರಡು ಶರೀರಗಳೂ ಗಂಡು-ಹೆಣ್ಣು ದನಿಗಳ ಸಮ್ಮಿಶ್ರವಾಗಿ ಅಲೆ ಅಲೆಯಾಗಿ ವಿಸ್ತರಿಸಿ ಉತ್ಕಟವಾಗುತ್ತ ಹೋಗುವುದನ್ನು ಕೇಳಿಸಿಕೊಳ್ಳುತ್ತ ತನಗೆ ಕಾಮೋದ್ರೇಕವಾಗಿ ಬಿಡುವುದೂ ಇತ್ತು. ಆಗ ತಾನು ಸೀದ ರಾಧೆಯ ಬಳಿ ಹೋಗುವುದು. ಆದರೆ ಅಲ್ಲಿಯೂ ನಪುಂಸಕತ್ವ ತನ್ನನ್ನು ಆವರಿಸಿಬಿಡುವುದು.
ರಾಧೆ ಅವಳು ನಂಬಿದ ಭೂತಕ್ಕೆ ಹರಕೆ ಹೇಳಿಕೊಂಡು ನಿತ್ಯ ದೇವರಿಗೆ ತುಪ್ಪದ ದೀಪ ಹಚ್ಚಿಡಲು ಪ್ರಾರಂಭಿಸಿದ್ದಳು. ಅವಳ ಪ್ರಾರ್ಥನೆ ಶಾಸ್ತಿಗಳಿಗೆ ಸಂತಾನ ಪ್ರಾಪ್ತವಾಗಲೆಂದು. ಅವರನ್ನು ಕಾಡುವ ದೆವ್ವ ಅವರ ಮೆನೆಯಿಂದ ತೊಲಗಲಿ ಎಂದು. ಸರೋಜ ಅವಳ ಶೀತಲವಾದ ಸಂಕಲ್ಪದಿಂದ ಪಾರಾಗಿ ಸತೀತ್ವದಲ್ಲಿ ಅರಳಿಕೊಂಡು ಅವಳ ಜಡ ಗರ್ಭದಲ್ಲಿ ಶಾಸ್ತಿಗಳ ಪುರುಷತ್ವಕ್ಕೆ ಎಡೆಮಾಡಿಕೊಡಲಿ ಎಂದು. ಇದು ಶಾಸ್ತಿಗಳಿಗೆ ಮನವರಿಕೆಯಾಗಿತ್ತು.

ನಾಳೆ, ನಾಳೆ, ನಾಳೆ – ಮಾಯವಿಯಾದ ಪಂಡಿತನನ್ನು ದೂಷಿಸಿ, ಅವನ ಮುಖಕ್ಕೆ ಉಗಿದು ಅಟ್ಟಿಬಿಡುತ್ತೇನೆಂದು ಅವರು ಧೈರ್ಯ ತಂದುಕೊಳ್ಳುವರು; ಮತ್ತೆ ಮತ್ತೆ ಅಧೀರರಾಗಿ ಬಿಡುವರು. ಆದರೆ ರೋಮಮಯ ಎದೆ ಮತ್ತು ಕಾಲುಗಳ ಆ ಪಂಡಿತ ಮಾತ್ರ ತ್ರಿವಿಕ್ರಮನಂತೆ ಬೆಳೆಯತೊಡಗಿದ್ದ. ಪಂಡಿತ ದೇವರ ಕೋಣೆಯಲ್ಲಿ ಸರೋಜಳ ಜೊತೆ ಕೂತಿರುವುದನ್ನು ಕಂಡದ್ದೇ ’ಸಂಗೀತ ಕಲಿಸಿಕೊಟ್ಟು ಸಾಯಲಿ’ ಎಂದು ತನ್ನ ನಿಶ್ಚಯವನ್ನು ಬಿಟ್ಟುಕೊಡುವರು.

ಒಂದು ದಿನ ಅರ್ಧ ರಾತ್ರಿಯಲ್ಲಿ ಮನೆಗೆ ಬಂದು ನೋಡಿದರೆ ಪಂಡಿತ ತನ್ನ ಮನೆಯ ಕಛೇರಿಯಲ್ಲಿ ಮಲಗಿ ನಿದ್ದೆಹೋಗಿದ್ದ. ತಾನು ನಿಲ್ಲಿಸಬೇಕಾದಲ್ಲಿ ಅವನ ಆ ದರಿದ್ರ ಕಾರನ್ನು ನಿಲ್ಲಿಸಿದ್ದ. ಕೋಣೆಯಲ್ಲಿ ಸರೋಜ ಶೀತಲವಾಗಿ ಸಮಾಧಾನವಾಗಿ ನಿದ್ದೆ ಹೋಗಿದ್ದಳು.

ಪಂಡಿತ ಸರೋಜಳ ಜೊತೆ ಸಂಭೋಗ ಮಾಡಿದ್ದರೆ ಹೇಗೆ ಮಾಡಿರುತ್ತಿದ್ದ ಎಂದು ಉದ್ರೇಕಗೊಂಡು, ಸರೋಜಳನ್ನು ನಿದ್ದೆಯಿಂದ ಎಬ್ಬಿಸಿ ಭೋಗಿಸಿದ್ದರು. ಮುಗಿದದ್ದೇ, ಅವಳು ಎದ್ದು ಹೋಗಿ ಸ್ನಾನ ಮಾಡಿ ಬಂದಿದ್ದಳು. ತನಗೆ ಅವಳನ್ನು ಕೊಂದು ಹಾಕಿಬಿಡಬೇಕೆನ್ನಿಸಿತ್ತು. ಅವಳ ಪಕ್ಕ ಮಲಗಲಾರದೆ ಇನ್ನೊಂದು ಕೋಣೆಯಲ್ಲಿ ಚಾಪೆಯ ಮೇಲೆ ಮಲಗಿದ್ದರು- ನಾನೇ ಈ ಮನೆಯಲ್ಲಿ ದೆವ್ವವಾಗಿ ಬಿಡುತ್ತಿದ್ದೇನೆ ಎಂದು ಹಲ್ಲು ಕಡೆಯುತ್ತ, ಇಡೀ ರಾತ್ರೆ ಪಂಡಿತ ನಿದ್ದೆಯಲ್ಲಿ ಹಂದುವುದನ್ನೂ ಗಮನಿಸುತ್ತ ತನ್ನ ಕರಾಳ ಇರುಳನ್ನು ಕಳೆದಿದ್ದರು.

ಬೆಳಗ್ಗೆ ಮಂಪರಿನಲ್ಲಿದ್ದ ತಾನು ಏಳುವುದರ ಒಳಗೆ ಸರೋಜ ಮಾಡಿಕೊಟ್ಟ ಕಾಫಿಯನ್ನು ಕುಡಿದಿರಬೇಕು. ಕಛೇರಿಯಲ್ಲಿ ಅವನು ಮಲಗಿದ್ದ ಹಾಸಿಗೆಯನ್ನು ಸರೋಜ ಮಾಡಿಕೊಟ್ಟ ಕಾಫಿಯನ್ನು ಕುಡಿದಿರಬೇಕು. ಕಛೇರಿಯಲ್ಲಿ ಅವನು ಮಲಗಿದ್ದ ಹಾಸಿಗೆಯನ್ನು ನೀಟಾಗಿ ಮಡಿಸಿತ್ತು. ಸರೋಜಳೇ ಮಡಿಸಿಟ್ಟಿರಬೇಕು. ಪಂಡಿತ ಈಗಾಗಲೇ ಉಡುಪಿಯನ್ನು ಸೇರಿ ಸ್ನಾನ ಮಾಡಿ ತನ್ನ ಗಂಧವನ್ನು ಬಳಿದುಕೊಂಡು ತನ್ನ ವಶೀಕರಣ ವಿದ್ಯೆಯ ವ್ರತದಲ್ಲಿ ನಿರತನಾಗಿ ಧ್ಯಾನ ಮಾಡುತ್ತಿರಬೇಕು ಎಂದು ಊಹಿಸಿದರು.

ಅವರ ಮನೆಯ ಬೆನ್ನಿಗೆ ದೊಡ್ಡದೊಂದು ಗುಡ್ಡ. ಗುಡ್ಡದ ಮೇಲೆ ಚಿರತೆಗಳು ಓಡಾಡಿಕೊಂಡಿದ್ದ ದಟ್ಟ ಅರಣ್ಯ. ಮನೆಯ ಮುಂದೆ ದೊಡ್ಡ ಅಂಗಳ. ಅಂಗಳ ದಾರಿ ಅರ್ಧ ಮೈಲು ದೂರದಲ್ಲಿ ಅವರ ತೋಟ. ಇನ್ನೆಷ್ಟೋ ಅವರ ತೋಟಗಳು, ಗದ್ದೆಗಳು ಹೀಗೆಯೇ ಊರಿನ ಆಸುಪಾಸಿನಲ್ಲಿ. ಮನೆಯ ಹತ್ತಿರ ಆಳುಕಾಳು ಸಹ ಸುಳಿಯದು. ಆಸ್ತಿಯ ವಹಿವಾಟೆಲ್ಲ ಒಬ್ಬ ಮ್ಯಾನೇಜರಿನದು. ಆಳುಗಳು ಬಿಡಾರದ ಬಳಿಯೇ ಅವನಿಗೊಂದು ಸಾದಾ ಹೆಂಚಿನ ಮನೆ. ಶಾಸ್ತಿಗಳು ಇವತ್ತು ಬಿಡಾರಗಳಿಗೆ ಹೋಗಿ ’ಆಳುಗಳನ್ನು ಕೆಲಸಕ್ಕೆ ಇನ್ನೂ ಯಾಕೆ ಅಟ್ಟಿಲ್ಲ’ವೆಂದು ಮ್ಯಾನೇಜರನ್ನು ಗದರಿಸಿ ತನ್ನ ಉಳಿದ ತೋಟಗದ್ದೆಗಳನ್ನು ನೋಡಿ ಬರಲು ಹೋದರು.

ರಾಧೆಯ ಮನೆಗೆ ಹೋಗಿ ಒಂದಿಷ್ಟು ಬಾಳೆ ಹಣ್ಣು ತಿಂದು ಬಿಸಿ ಹಾಲು ಕುಡಿದರು. ಅವಳು ಮಾಡಿದ ದೋಸೆಯನ್ನು ತಾನು ತಿನ್ನುತ್ತೇನೆಂದರೆ ’ನನ್ನ ಮನೆಯಲ್ಲಿ ಅದೆಲ್ಲ ಆಗದು ಎಂದು ಅವಳು ನಕ್ಕುಬಿಟ್ಟಳು. ತನ್ನ ಮಡಿಯನ್ನು ಅವಳು ಕಾಯುವುದು ನೋಡಿ ಹಾಗಾದರೆ ತಾನಿನ್ನೂ ಪಿಶಾಚಿಯಾಗಿಲ್ಲ ಎಂದುಕೊಂಡು ಶಾಸ್ತಿಗಳು ವಿಕಾರವಾಗಿ ನಕ್ಕರು. ಅವರು ವಿಕಾರವಾಗಿ ನಕ್ಕದ್ದು ನೋಡಿ ರಾಧೆ ದೇವರ ಕೋಣೆಗೆ ಹೋಗಿ ಉರಿಯುವ ಬತ್ತಿ ತಳ್ಳಿ ದೀಪವನ್ನು ಇನ್ನಷ್ಟು ಬೆಳಸಿ, ’ಕಾಪಾಡು’ ಎಂದು ಬೇಡಿಕೊಂಡಳು. ಶಾಸ್ತಿಗಳಿಗೆ ಹಸಿವಾಗಲೇ ಇಲ್ಲ. ಅಲ್ಲಿ ಇಲ್ಲಿ ಸುತ್ತಾಡಿಕೊಂಡಿದ್ದು ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಮನೆಗೆ ಬಂದರು. ಅಂಗಳದಲ್ಲಿ ಕೊರಗನೊಬ್ಬ ನಿಂತಿದ್ದು ನೋಡಿ, ‘ಇಲ್ಲಿ ನಿನಗೇನು ಕೆಲಸ ದನ ಮೇಯಿಸಿಕೊಂಡಿರೋದು ಬಿಟ್ಟು’ ಎಂದು ಗದರಿಸಿದರು. ‘ಅಮ್ಮ ತಂಗಳು ಕೊಡುತ್ತೇನೆ ಎಂದರು’, ಅಂದು ಅವನು ಬಾಗಿ ನಮಸ್ಕರಿಸಿದ. ತನಗೆ ಮಾಡಿಟ್ಟ ಅನ್ನವನ್ನೂ ಹುಳಿಯನ್ನೂ ಸರೋಜ ಅವನಿಗೆ ಸುರಿದು ಒಳಹೋದಳು. ಶಾಸ್ತಿ ಇನ್ನೇನು ಪಂಡಿತ ಬಂದು ಬಿಡುವ ಹೊತ್ತೆಂದು ಅಂದುಕೊಳುತ್ತಿದ್ದಂತೆ, ತನ್ನ ಒಳಗೆ ಈಳಿಡುವುದಕ್ಕೆ ಶುರುವಾದ್ದನ್ನು ಗಮನಿಸಿ, ಅದು ಆವೇಶಗೊಳ್ಳಲು ಕಾಯುತ್ತ, ಕಛೇರಿಯಲ್ಲಿ ಕೂತರು. ‘ಇವತ್ತು ಕೊನೆ’ ಎಂದು ಸಂಕಲ್ಪ ಮಾಡಿಕೊಂಡರು. ಹಲ್ಲಿ ಶಕುನವಾಯಿತು. ಆಗ ದೊಡ್ಡ ಗಡಿಯಾರ ನಾಲ್ಕು ಗಂಟೆಗಳನ್ನು ಗವ್ವೆನ್ನುವ ತನ್ನ ಮಿದುಳೊಳಗೆ ಬಡಿಯುತ್ತ ಹೋದದ್ದು ನೆನಪಾಗುತ್ತದೆ. ಇದ್ದಕ್ಕಿದ್ದಂತೆ ಬಚ್ಚಲಿನಲ್ಲಿ ವಾಂತಿ ಮಾಡುವ ಧ್ವನಿ ಕೇಳಿಸಿತು. ಎದ್ದು ಹೋಗಿ ನೋಡಿದರೆ ಸರೋಜ ವಾಂತಿಯಾಗದೆ ವಾಂತಿಮಾಡಲು ಪ್ರಯತ್ನಿಸುತ್ತಿದ್ದಾಳೆ. ಕಣ್ಣು ಕತ್ತಲೆ ಕಟ್ಟಿದಂತಾಗಿ “ಮುಂಡೇ ಬಸುರಾಗಿಬಿಟ್ಟೆಯಾ?” ಎಂದು ದೆವ್ವದಂತೆ ಕೇಳಿದರು. ಅವಳು ಬಾಗಿ ನಿಂತವಳು ಕತ್ತನ್ನು ಹಂದಿಸಿದ್ದು, ವಾಂತಿಯನ್ನು ಹೊರತರಲೆಂದೋ, ಅಥವಾ ಹೌದೆಂದು ತನಗೆ ಉತ್ತರಿಸಲೋ ಎಂದು ಎಲ್ಲ ಮುಗಿದ ಮೇಲೆ ಅವರು ಯೋಚಿಸಿದ್ದಿದೆ. ಆದರೆ ಅವತ್ತು ಅವಳು ಹೌದೆಂದು ಉತ್ತರಿಸಿದಂತೆ ಮಾತ್ರ ಕಂಡಿತ್ತು. ಸರೋಜ ನೇರವಾಗಿ ನಿಂತು, ಚೊಂಬಿನಿಂದ ನೀರು ತೆಗೆದುಕೊಂಡು ಬಾಯಿ ಮುಕ್ಕಳಿಸಿದ್ದಳು. ತನಗೆದುರಾಗಿ ಆಗ ಹೇಗೆ ನಿಂತುಬಿಟ್ಟಳು!”ಆ ಮುಂಡೇ ಮಗ ಪಂಡಿತನಿಗೆ ಬಸುರಾಗಿ ಬಿಟ್ಟೆಯಾ ಹಾದರಗಿತ್ತಿ?” ಎಂದು ಊಳಿಡುತ್ತ ತನ್ನ ಒಳಗಿನ ದೆವ್ವ ವಿಕಾರವಾಗಿ ನಗಲು ಪ್ರಾರಂಭಿಸಿತ್ತು. ಸರೋಜ ಆಗ ನಿರ್ವಿಕಾರವಾಗಿ ಶಾಂತವಾಗಿ ನಿಂತದ್ದಲ್ಲವೆ? ಉಸಿರಾಟದಲ್ಲಿ ಏರಿ ಇಳಿಯುವ ಅವಳ ಎಡ ಮೊಲೆಯ ಮೇಲೆ ಅವಳು ತೊಟ್ಟ ತಾಯಿತ ಇತ್ತಲ್ಲವೆ? ಯಾಕೆ ತಾನು ಅಷ್ಟು ಪೂರ್ಣವಾಗಿ ಆ ಕ್ಷಣದಲ್ಲಿ ಮೈಮರೆತುಬಿಟ್ಟೆ? ಅವಳ ನಿರ್ಲಕ್ಷ್ಯದ ಕಣ್ಣುಗಳ ದಿವ್ಯ ಲಾವಣ್ಯವನ್ನು ಕಂಡು ತಡೆದುಕ್ಕೊಳ್ಳಲಾರದೆ ಹೋಗಿಬಿಟ್ಟನೆ? ಅಥವಾ ಆ ಕಣ್ಣುಗಳು ’ಅದನ್ನು ಕೇಳಲು ಯಾವ ಮುಂಡೇ ಮಗನೋ ನೀನು?’ ಎನ್ನುತ್ತಿದ್ದಂತೆ ನನಗೆ ಭಾಸವಾಯಿತೆ? ಅಥವಾ ಮುಂದಿನ ಭೀಕರ ಕ್ರಿಯೆಗೆ ಸಜ್ಜಾಗಲು ಭವದ ತನ್ನ ಈ ಶರೀರ ಹಾಗೆಂದುಕೊಂಡಿತೆ?

ಹಂಡೆಯ ಮೇಲೆ ಮುಚ್ಚಿದ ಭಾರವಾದ ಮಣೆಯನ್ನು ಎತ್ತಿಕೊಂಡುಬಿಟ್ಟೆ. ಆಗ ಅವಳು ತನ್ನ ನೆತ್ತಿಯ ಮೇಲೆ ತನ್ನ ಎರಡು ಕೈಗಳನ್ನು ಎತ್ತಿ ಇಟ್ಟುಕೊಂಡು ತಲೆಬಾಗಿಸಿದ್ದಳು. ಆದರೆ ಅದು ಯಾಚನೆಯಂತಾಗಲೀ, ಭಯಗೊಂಡಂತಾಗಲೀ ತನಗೆ ಅನ್ನಿಸಲಿಲ್ಲ. ಕಣ್ಣಿ ಬಿಚ್ಚಲು ಹೋದಾಗ ಹಸುಗಳು ಕತ್ತನ್ನಲ್ಲಾಡಿಸಿ ಕೊಸರಿಕೊಳ್ಳುವಂತೆ ಅವಳು ಮಾಡಿದ್ದು ಕಂಡಿತ್ತು. ಮುಂದೇನು ಅರಿಯುವುದರ ಒಳಗೆ ಎರಡು ಮೂರು ಸಾರಿ ಅವಳನ್ನು ಜಪ್ಪಿದ್ದರು. ರಕ್ತ ಝಲ್ಲೆಂದು ತನ್ನ ಮುಖದ ಮೇಲೆ ಚಿಮ್ಮಿತ್ತು. ಕುಸಿದು ಬಿದ್ದ ಅವಳನ್ನು ತನ್ನ ಎರಡು ಕೈಗಳಲ್ಲೂ ಎತ್ತಿ, ದೆವ್ವದಂತೆ ಅಟ್ಟಹಾಸದಲ್ಲಿ ಎರಡು ಕಾಲುಗಳನ್ನೂ ದಾಪು ಹಾಕಿ ಇಡುತ್ತ ಬಚ್ಚಲಿನಿಂದ ಹಿತ್ತಲಿಗೆ ಬಂದಿದ್ದರು. ಕೆಮ್ಮಣ್ಣಿನ ಹಸಿ ಗುಂಡಿಯಲ್ಲಿ ಸತ್ತವಳಂತೆ ತನ್ನ ತೋಳುಗಳಲ್ಲಿ ಚೆಲ್ಲಿಕೊಂಡ ಅವಳನ್ನು ಬಿಸಾಡಿ, ಊಳಿಡುತ್ತ ಒಳಬಂದು, ತನ್ನ ಬಟ್ಟೆ ಬದಲಾಯಿಸಿ, ರಕ್ತದಿಂದ ಒದ್ದೆಯಾದ ತನ್ನ ಬಟ್ಟೆಗಳನ್ನು ಕೆಮ್ಮಣ್ಣು ಗುಂಡಿಯಲ್ಲಿ ಬಿದ್ದುಕೊಂಡಿದ್ದ ಅವಳ ಮೇಲೆಸೆದು, ತಾನು ಕಾರು ಹತ್ತಿ ವೇಗವಾಗಿ ಚಲಿಸಿಬಿಟ್ಟದ್ದು. ತಲೆಯ ಹಿಂಭಾಗದಲ್ಲಿ ಪೆಟ್ಟುತಿಂದು ಎಚ್ಚರ ತಪ್ಪಿದ ಅವಳು ಸತ್ತಿರಬಹುದೇ ಎಂಬ ಅನುಮಾನ ತನಗೇಕೆ ಆಗ ಆಗಲೇ ಇಲ್ಲ? ದುರ್ದೈವಶಾತ್ ಹಾಗೇನಾದರೂ ಆಗಿದ್ದರೆ, ಮತ್ತೆ ಪೆಟ್ಟು ತಿಂದು ಅವಳು ಸತ್ತೇ ಹೋಗಿರುತ್ತಿದ್ದಳು.ಇನ್ನೇನು ಪಂಡಿತ ಬಂದುಬಿಡುತ್ತಾನೆ. ನೋಡಿ ಬಿಡುತ್ತಾನೆ. ಪೋಲೀಸಿಗೆ ದೂರು ಕೊಡುತ್ತಾನೆ ಎಂದುಕೊಳ್ಳುತ್ತ, ಅವನನ್ನೂ ಸಾಯಿಸಿ ಗುಂಡಿಗೆಸೆದು ಬಿಡುವುದೆಂದು ಕೇರಳಕ್ಕೆ ಹೋಗೆ ಅಲ್ಲಷ್ಟು ದಿನ ಇದ್ದು ಬಿಡುವುದೆಂದು ಕಾಸರಗೋಡಿನ ಕಡೆ ಹೋಗುತ್ತಿದ್ದವರು ಕಾರನ್ನು ಹಿಂದಕ್ಕೆ ತಿರುಗಿಸಿ ಮತ್ತೆ ಮನೆಗೆ ಅವರು ಬಂದಾಗ ರಾತ್ರಿ ಎಂಟು ಗಂಟೆಯಾಗಿಬಿಟ್ಟಿತ್ತು. ಅಮಾವಾಸ್ಯೆಯ ಕತ್ತಲು ಕವಿದುಬಿಟ್ಟಿತ್ತು. ಬೀಗ ಹಾಕಿ ಹೋಗಲು ತಾನು ಆವೇಶದಲ್ಲಿ ಮರೆತೇ ಬಿಟ್ಟಿದ್ದೆ. ಮನೆಯ ಒಳಗೆ ಬಂದರೆ ಗವ್ವೆಂದಿತ್ತು. ಪಂಡಿತ ಬಂದು ಹೋಗಿಬಿಟ್ಟಿರಬಹುದೆ? ಇನ್ನೇನು ಬಂದುಬಿಡಬಹುದೆ? ಎಂದುಕೊಳ್ಳುತ್ತ, ಕತ್ತಲಿನಲ್ಲಿ ಸೀದ ಕೆಮ್ಮಣ್ಣಿನ ಗುಂಡಿಗೆ ಹೋಗಿ ಮೇಲೆ ಒಟ್ಟು ಮಡಿದ ಕೆಮ್ಮಣ್ಣನ್ನೆಲ್ಲ ಒಂದು ಗಂಟೆಯ ಕಾಲ ಹಾರೆಯಿಂದ ಎಳೆದೆಳೆದು ಬುಸುಗುಡುತ್ತ ಹೊಂಡ ತುಂಬಿಸಿದ್ದರು. ಹೆಣವನ್ನು ಮುಚ್ಚಿಯಾಯಿತು; ನಾಳೆ ಬೆಳಿಗ್ಗೆ ಎದ್ದು, ನೆಲಸಮವಾಗುವಂತೆ ಇನ್ನಷ್ಟು ಮಣ್ಣು ಮುಚ್ಚಿ, ಅಲ್ಲೊಂದು ಹಲಸಿನ ಸಸಿ ನೆಟ್ಟು ಬಿಡುವುದು ಎಂದುಕೊಂಡು ಮನೆಯ ಎದುರು ಕತ್ತಿಯನ್ನು ಹಿಡಿದು ಕೂತರು. ಪಂಡಿತನನ್ನು ಸಾಯಿಸಲು ಕಾದರು. ನಡುರಾತ್ರೆಯಾದರೂ ಪಂಡಿತ ಬರಲೇ ಇಲ್ಲ. ಅರೆ, ಮಾಯಾವಿ ಬಂದುಬಿಟ್ಟು ಹೋಗಿರಬಹುದೇ? ಪೋಲೀಸಿಗೆ ದೂರುಕೊಟ್ಟುಬಿಡುವನೆ? ಎಂದು ತವಕಿಸುತ್ತ ನಿದ್ದೆ ಮಾಡದೆ ಕಾದರು. ಯಾರೂ ಬರಲಿಲ್ಲ. ಪೋಲೀಸರು ಬರಲಿಲ್ಲೆಂದು ಸಮಾಧಾನವಾಯಿತು.ಬೆಳಗಾದ ಮೇಲೆ ಗುಂಡಿಯ ಹೊರಗೆ ಇನ್ನೂ ಉಳಿದಿದ್ದ ಕೆಮ್ಮಣ್ಣನ್ನು ಎಳೆದು ಹಾಕಿ, ಮನೆಗೆ ಭದ್ರವಾದ ಬೀಗ ಹಾಕಲು ಮರೆಯಲಿಲ್ಲ. ಕಾರು ನಡೆಸಿಕೊಂಡು ಸೀದಾ ಮಂಗಳೂರಿಗೆ ಹೋಗಿ ಅಲ್ಲೊಂದು ಹೋಟೆಲಲ್ಲಿ ಉಳಿದರು. ಆತಂಕದಲ್ಲಿ ಎರಡು ದಿನ ಕಾದು ತಾನು ಕ್ಷೇಮವಾಗಿದ್ದೇನೆಂದು ಆಶ್ಚರ್ಯಪಡುತ್ತ ಮನೆಗೆ ಹಿಂದಿರುಗಿದ್ದರು. ಕೆಮ್ಮಣ್ಣು ಗುಂಡಿ ತಾನು ಮುಚ್ಚಿದಂತೆಯೇ ಇತ್ತು. ಅಂಗಳದಲ್ಲಿ ಪಂಡಿತನ ಕಾರಿನ ಚಕ್ರದ ಗುರುತಿತ್ತು. ತಾನು ಕೊಲೆ ಮಾಡಿದ ನಂತರ ಮನೆ ಬಿಟ್ಟು ಹೋದ ಹೊತ್ತಿನಲ್ಲಿ ಅವನು ಬಂದು ಹೋಗಿರುವ ಗುರುತೆ? ಎಂದು ಅನುಮಾನಿಸುತ್ತ ಅವರು ದೇವರ ಕೋಣೆಗೆ ಹೋದರು. ಅಲ್ಲಿ ಅವರ ತಿಜೋರಿಯ ಬಾಗಿಲು ತೆರೆದಿತ್ತು. ಅದರೊಳಗೆ ಬಂಗಾರವಿಟ್ಟ ಟ್ರಂಕಿರಲಿಲ್ಲ. ಕೊಲೆ ಮಾಡಿಬಿಟ್ಟಿದ್ದರ ಆತಂಕ ಮಾಯವಾಗಿ ಪಂಡಿತನ ಮೇಲಿನ ಕ್ರೋಧ ಊಳಿಡಲು ತೊಡಗಿತ್ತು. ಕಳುವು ಮಾಡಿ ನಡೆದುಬಿಟ್ಟ ಮಯಾವಿ, ಅವನ ಕಣ್ಣಿದ್ದದ್ದು ಬಂಗಾರದ ಮೇಲೇ ಹೊರತು ಸರೋಜಳ ಮೇಲಲ್ಲ. ಆದರೆ ಬಸಿರೂ ಮಾಡಿಬಿಟ್ಟ ಮಾಯಾವಿ – ಎಂದು ವ್ಯಾವಹಾರಿಕವಾಗಿ ಲೆಖ್ಖಾಚಾರ ಹಾಕುತ್ತ, ಅವನೇ ಕೊಲೆ ಮಾಡಿ ಬಿಟ್ಟನೆಂದು ದೂರುಕೊಟ್ಟು ಬಿಡಲೆ ಎಂದು ವಿಚಾರ ಮಾಡುತ್ತ ಕಾರುಬಿಟ್ಟುಕೊಂಡು ಉಡುಪಿಗೆ ಹೋಗಿ ಪಂಡಿತನ ಅಂಗಡಿಯೆದುರು ನಿಲ್ಲಿಸಿದರು. ಅಂಗಡಿ ಬಾಗಿಲು ಹಾಕಿತ್ತು. ‘ಎಲ್ಲಿ?’ ಎಂದು ಕೆಂಪಾದ ತನ್ನ ಕಣ್ಣು ತೆರೆದು ಪಕ್ಕದ ಅಂಗಡಿಯವನನ್ನು ಕೇಳಿದರು. “ಆವತ್ತು ಒಂದು ಸಾಯಂಕಾಲ, ಮೂರು ದಿನಗಳ ಕೆಳಗೆ, ಹೌದು ಅಮಾವಾಸ್ಯೆ ದಿನ ಬುಧವಾರದ ಸಾಯಂಕಾಲ ಅವರು ಹೋದವರು ಮತ್ತೆ ಬಂದಿಲ್ಲ. ನಿಮ್ಮ ಮನೆಗೇ ಹೋದದ್ದು. ಎಂದುಕೊಂಡಿದ್ದೆ.” ಎಂದು ಅಂಗಡಿಯ ಕಾಮತ ತನ್ನ ಮಾತಲ್ಲೊಂದು ಇಂಗಿತವಿದ್ದಂತೆ ಹುಸಿಯಾಗಿ ನಕ್ಕಿದ್ದನೆ? ಅವನೂ ತನ್ನ ವಾರಿಗೆಯವನೇ. ಮಕ್ಕಳು ಮರಿ ಪಡೆದು ಸುಖವಾಗಿದ್ದು ಲಾರಿಯನ್ನೂ ಇಟ್ಟವ ಆತ. ಅವನಿಗೆ ತಾನೊಬ್ಬ ಕೊಲೆಗಾರ ಎಂದು ಅನ್ನಿಸಿರಲಿಲ್ಲೆಂದು ಸಮಾಧಾನವಾಗಿತ್ತು. ತನ್ನಲ್ಲೊಬ್ಬ ಗಿರಾಕಿಯನ್ನು ಮಾತ್ರ ಕಂಡು. “ಹೈದರಾಬಾದು ಕಡೆಯ ಒಳ್ಳೆಯ ತೊಗರಿ ಬೇಳೆ ತರಿಸಿದ್ದೇನೆ. ಒಂದು ಚೀಲ ಮಾತ್ರ ಉಳಿದಿದೆ. ಎತ್ತಿಸಿ ನಿಮ್ಮ ಕಾರಿಗೆ ಹಾಕಿಸಲ” ಎಂದಿದ್ದ.

ಬೇಡವೆಂದು ಸೀದ ತಾನು ರಾಧೆಯ ಮನೆಗೆ ಹೋಗಿದ್ದೆ. ಇಷ್ಟು ದಿನ ಕಾಣಿಸಿಕೊಳ್ಳದ ತನ್ನನ್ನು ಉಪಚರಿಸುತ್ತ ರಾಧೆ ಹಣೆ ಮುಟ್ಟಿ ’ಅಯ್ಯೋ ಜ್ವರ’ವೆಂದು, ಹಾಸಿಗೆ ಹಾಸಿ ತನ್ನನ್ನು ಮಲಗಿಸಿದ ಮೇಲೆ ತಾನು ಪ್ರಥಮ ಬಾರಿಗೆ ರಾಧೆಗೊಂದು ಸುಳ್ಳು ಹೇಳಿದ್ದು: “ಮೂರು ದಿನಗಳ ಕೆಳಗೆ ನನ್ನ ದರಿದ್ರದವಳು ಪಂಡಿತನ ಜೊತೆ ಓಡಿಹೋಗಿಬಿಟ್ಟಳು. ಹಾದರಗಿತ್ತಿ ತಿಜೋರಿಯಲ್ಲಿದ್ದ ಬಂಗಾರವನ್ನೂ ಲಪಟಾಯಿಸಿ ಬಿಟ್ಟಳು” ಎಂದಿದ್ದರು. ಪಂಡಿತನ ಮೇಲೆ ಕೊಲೆಯ ದೂರು ಕೊಡವುದೂ ಬೇಡ, ಕ್ರಿಮಿನಲ್ ಸೂಟಿನ ಉಪದ್ವ್ಯಾಪವೂ ಬೇಡ ಎಂದು ಸುಸ್ತಾದ ತನ್ನ ವ್ಯವಹಾರ ಬುದ್ಧಿಗೆ ಹೊಳೆದಿತ್ತು. ಮನೆಗೆ ಬಂದು ಗದ್ದೆಯಿಂದ ಮಣ್ಣು ತರಿಸಿ ಕೆಮ್ಮಣ್ಣುಗುಂಡಿಯನ್ನು ಪೂರ್ಣ ಮುಚ್ಚಿಸಿದರು. ಅದರ ನಡುವೆಯೊಂದು ಹಲಸಿನ ಸಸಿ ತಂದು ಸ್ವತಃ ನೆಟ್ಟರು. “ಇದರ ತೊಳೆ ಜೇನುತುಪ್ಪಕ್ಕೆ ಸಮನಾಗಿರುವುದಂತೆ” ಎಂದು ಕಂಡ ಕಂಡವರಿಗೆ ಹೇಳಿದರು. ಉರಿಮುಖದ ಶಾಸ್ತಿಗಳ ಥಟ್ಟನೇ ಕಾಣಿಸಿಕೊಂಡ ಸ್ನೇಹಪರತೆಗೆ ಜನ ಬೆರಗಾದರು.

ಅಧ್ಯಾಯ ೯

ಶಾಸ್ತಿಗಳು ಟ್ಯಾಕ್ಸಿಯಿಂದಿಳಿದು ಸಿಳ್ಳೆ ಹಾಕುತ್ತ ಸುಖಿಸುತ್ತಿದ್ದ ಡ್ರೈವರಿಗೆ ಕಾಯುವಂತೆ ಹೇಳಿ ತನ್ನ ಚೀಲ ತೆಗೆದುಕೊಂದು ರಾಧೆಯ ಮನೆಗೆ ಹೋದರು. “ಇಗೋ ಮದ್ರಾಸಿನಿಂದ ನಿನಗೆಂದು ತಂದ ಸೀರೆ” ಎಂದು ಕೊಟ್ಟರು. ರಾಧೆಗೆ ಸಂತೋಷವಾದರೂ ಶಾಸ್ತಿಗಳು ಅನ್ಯಮನಸ್ಕರಾಗಿರುವುದು ಕಂಡು “ಏನು ಸಮಾಚಾರ?” ಎಂದು ಕೇಳಿದಳು. ತನ್ನ ಉತ್ತರದ ಸಮಾಧಾನ ಶಾಸ್ತಿಗಳಿಗೆ ಆಶ್ಚರ್ಯ ಹುಟ್ಟಿಸಿತ್ತು. “ನಿನಗೊಂದು ಸುಳ್ಳು ಹೇಳಿದ್ದೆ ಎಂದುಕೊಂಡಿದ್ದೆ. ಆದರೆ ಅದೇ ನಿಜವಿದ್ದೀತು ಎಂದು ನಲವತ್ತೈದು ವರ್ಷಗಳ ನಂತರ ಅನ್ನಿಸಕ್ಕೆ ಶುರುವಾಗಿದೆ” ಎಂದು ತನ್ನ ಸದ್ಯದ ಅತಂತ್ರ ಸ್ಥಿತಿಯನ್ನು ಸವಿವರವಾಗಿ ಹೇಳಿದ್ದರು. “ರೋಷದಲ್ಲಿ ನಾನವಳ ಕತ್ತಿನಲ್ಲಿ ನೋಡುತ್ತಿದ್ದ ತಾಯಿತವನ್ನು ಮತ್ತೆ ಕಂಡು, ಅದೊಂದು ಮತ್ತೆ ಸತ್ತು ಹುಟ್ಟಲು ನನಗೊಂದು ಸಂಜ್ಞೆಯಾಗಿ ಬಿಟ್ಟಿತು” ಎಂದು ನಿಟ್ಟುಸಿರೆಳೆದಿದ್ದರು: “ಆದರೆ ಅವನು ನನ್ನ ಮಗನೋ, ಪಂಡಿತನ ಮಗನೋ ಹೇಗೆ ಹೇಳಲಿ? ಮಹಾದೇವಿಗೆ ಮಗಳು ಹುಟ್ಟಿದ ಮೇಲೆ ನನಗೇ ಸರೋಜ ಬಸಿರಾದ್ದೋ ಏನೋ ಎಂದು ಅನುಮಾನವಾಗಿತ್ತು. ನಾನವಳನ್ನು ಕೊಂದು ನನ್ನ ಮಗುವನ್ನೂ ಕೊಂದಂತಾಗಿ ರೌರವ ನರಕದಲ್ಲಿ ನರಳಬೇಕಾದೀತೆಂದು ಹೀಗೆಲ್ಲ ವೇಷ ಕಟ್ಟಿಕೊಂಡು ಪುರಾಣ ಪ್ರವಚನಗಳಲ್ಲಿ ಜೀವ ಸವೆಸುತ್ತ ಬಂದೆ. ಆದರೂ ಈ ದೆವ್ವ ಹೊಕ್ಕ ಶರೀರ ಏನೂ ಕಲಿಯದೇ ಉಳಿದೇ ಬಿಟ್ಟಿತು. ಮಗಳನ್ನು ಸಾಯಿಸಬಹುದಾದಷ್ಟು ನನಗೆ ಸಿಟ್ಟು ಬಂದಿತ್ತಲ್ಲವೆ? ನನಗೇ ಅವಳು ಹುಟ್ಟಿದ್ದು ಹೌದೋ ಎಂದೂ ಅನ್ನಿಸಿತ್ತಲ್ಲವೆ? ಆದರೆ ಅವಳು ನನ್ನಿಂದ ಪಾರಾದಳು. ಈಗ ಮಹಾದೇವಿಗೆ ನನ್ನನ್ನು ಸಾಯಿಸಬೇಕೆನ್ನುವಷ್ಟು ರೋಷ ಉಕ್ಕುತ್ತದೆ. ನನಗೂ ಉಕ್ಕುತ್ತದೆ. ಆದರೆ ನಿನ್ನ ಜೊತೆ ಹೀಗೆ ಮಾತಾಡಿಕೊಂಡಿರುವ ನಾನು ಯಾರು? ಮಗನೆಂದು ಅನುಮಾನವಾಗಿ ಅವನು ಕುಟ್ಟವಲಕ್ಕಿ ತಿನ್ನುವುದು ನೋಡುತ್ತ ಕರುಳು ಹಿಂಡುವಷ್ಟು ವಾತ್ಸಲ್ಯಭಾವ ಹುಟ್ಟಿದ ಈ ನಾನು ಯಾರು?” ಶಾಸ್ತಿಗಳ ಗಂಟಲು ಆರ್ದ್ರವಾಯಿತು. ಹೀಗೆ ತಾನು ಆರ್ದ್ರವಾಗಿಬಿಟ್ಟು ರಾಧೆಯ ಕಾರುಣ್ಯ ಪಡೆದು ತನ್ನ ನರಕವನ್ನು ದಿಟ್ಟಿಸಿ ನೋಡಲಾರದ ಹೇಡಿಯಾಗಬಾರದು ಎಂದುಕೊಂಡರು. ರಾಧೆಯ ಕಡೆ ಉತ್ತರ ನಿರೀಕ್ಷಿಸುತ್ತ ನೋಡಿದರು. “ನಾನು ನಿಮಗೆ ಹೇಳಿರಲಿಲ್ಲ. ಇಲ್ಲೆಲ್ಲ ಆಳು ಕಾಳುಗಳು ನೀವೇ ಹೆಂಡತಿಯನ್ನು ಕೊಂದು ಕೆಮ್ಮಣ್ಣು ಗುಂಡಿಯಲ್ಲಿ ಹುಗಿದಿರಿ ಎಂದುಕೊಳ್ಳುತ್ತಿದ್ದರಂತೆ. ಅದಕ್ಕೆ ಅಲ್ಲಿ ನೆಟ್ಟ ಹಲಸಿನ ಮರದಲ್ಲಿ ಫಲ ಬಿಡುತ್ತಿಲ್ಲ ಎನ್ನುತ್ತಾರಂತೆ. ನಿಮಗೆ ನೋವಾಗಬಾರದೆಂದು ನಾನು ಹೇಳಲಿಲ್ಲ” ಎಂದು ರಾಧೆ ನಿಟ್ಟುಸಿರಿಟ್ಟು, “ದೇವರೇ ನಿಮ್ಮನ್ನು ಕಾಪಾಡಿದ” ಎಂದು ಹಾಲು ಹಣ್ಣು ತರಲು ಹೋದಳು. ಮತ್ತೆ ಬಂದವಳು ಕೆಳಗೆ ಕೂತು ಶಾಸ್ತಿಗಳ ಕಾಲೊತ್ತಲು ತೊಡಗಿದಳು. ಬೇಡವೆಂದು ಕಾಲೆಳೆದುಕೊಂಡ ಶಾಸ್ತಿಗಳು, “ಅವನು ಕೆಮ್ಮಣ್ಣು ಗುಂಡಿಯಿಂದ ಅವಳನ್ನೂ, ತಿಜೋರಿಯಿಂದ ಭಂಗಾರವನ್ನೂ ಎತ್ತಿಕೊಂಡು ಹೋಗಿ ಅರ್ಧ ಸತ್ತವಳನ್ನು ಮತ್ತೆ ಬದುಕಿಸಿರಬೇಕು ಅಲ್ಲವ? ಅವನು ಕಳ್ಳನಲ್ಲವೆನ್ನಿಸತ್ತೆ. ಎಲ್ಲ ಬಂಗಾರವೂ ಅವಳು ಹೊಳಯ ಪಾಲಾದಾಗ ಅವಳ ಹತ್ತಿರವೇ ಉಳಿದಿತ್ತಂತೆ. ಆದರೆ ಯಾಕೆ ಅವನೂ ಅವಳನ್ನು ಬಿಟ್ಟುಬಿಟ್ಟ ಹಾಗಾದರೆ? ಅಥವಾ ಅವನು ಸತ್ತು ಅವಳು ಅತಂತ್ರಳಾಗಿ ತ್ರಿಪಾಠಿಗಳ ಮನೆ ಸೇರಿದಳೇ? ಮಗನಿಗೆ ಐದು ವರ್ಷಳಾಗುವ ತನಕವಾದರೂ ಪಂಡಿತನ ಜೊತೆಯೇ ಅವಳು ಬಾಳ್ವೆ ಮಾಡಿರಬೇಕು. ಕುಂಕುಮವಿಟ್ಟುಕೊಂಡೇ ಅವಳು ತ್ರಿಪಾಠಿಗಳ ಆಶ್ರಯ ಪಡೆದಿದ್ದೆಂದು ಕೇಳಿದೆ” ಎಂದರು. ಒಂದಷ್ಟು ಹೊತ್ತು ಮೌನವಾದರು. “ನನಗೆ ಹಾಗೆ ಅನ್ನಿಸಬಾರದು ಆದರೂ ಅನ್ನಿಸತ್ತೆ. ಪಂಡಿತನ ಮಗನೇ ಅವನಾಗಿರಬಹುದಲ್ಲವೆ? ಅಥವಾ ಅದು ನಾನೇ ದೆವ್ವದಂತೆ ಊಳಿಡುತ್ತ ಅವನನ್ನು ಹುಟ್ಟಿಸಿರಬಹುದು. ನನಗೀಗ ಏನೂ ತೋಚದು. ಅಥವಾ ಅದು ಅವಳೋ ಅವಳ ಹಾಗಿನ ಇನ್ನು ಯಾರೋ?” ಎಂದು ದೇವರೇ ಈ ಅಂತರ ಪಿಶಾಚಿತ್ವದ ಅನುಮಾನಗಳಿಂದ ನನ್ನನ್ನು ಪಾರು ಮಾಡು ಎಂದು ಮೌನವಾಗಿ ಪ್ರಾರ್ಥಿಸಿದರು. ರಾಧೆ ಅವರ ಪಕ್ಕಬಂದು ಕೂತು ಅವರ ಕೈಗಳನ್ನು ಮುದ್ದಾಗಿ ಹಿಡಿದು, “ನಿಮ್ಮ ಮಗನೆಂದೇ ತಿಳಿದುಕೊಳ್ಳಿ” ಎಂದಳು.
“ಹಾಗೆ ಒಂದು ಕ್ಷಣ ಎನಿಸತ್ತೆ. ಇನ್ನೊಂದು ಕ್ಷಣ ಪಂಡಿತ ಅವನನ್ನು ಹುಟ್ಟಿಸಿದ ಎಂದು ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗಾಗುತ್ತೆ” ಎಂದು ಶಾಸ್ತಿಗಳು ಹಾಲನ್ನು ಕುಡಿಯದೆ ಎದ್ದರು. “ಯಾಕೆ?” ಎಂದು ರಾಧೆ ಕೇಳಿದರೆ “ಇನ್ನು ಮುಂದೆ ಏಕಾದಶಿ ದಿನ ಹಾಲನ್ನೂ ಬಿಟ್ಟು ಬಿಡುತ್ತೇನೆ” ಎಂದರು.

ಅಧ್ಯಾಯ ೧೦

ಶಾಸ್ತಿಗಳನ್ನು ಕಾಡುವ ದೆವ್ವದಿಂದ ಅವರಿಗೆ ಸದ್ಯದಲ್ಲೇ ಬಿಡುಗಡೆಯಾಗುವ ಚಿಹ್ನೆಗಳು ರಧೆಗೆ ಕಂಡವು. ಅವರ ಮುಕ್ತಿಗೆ ಅತ್ಯಂತ ಅಗತ್ಯವಾದ ಗುಟ್ಟೊಂದನ್ನು ಅವಳು ತನ್ನ ಹೃದಯದಲ್ಲಿ ಒಂದು ವರ್ಷದಿಂದ ಬಚಿಟ್ಟುಕೊಂಡಿದ್ದಳು. ಇನ್ನೇನು ಕೆಲವೇ ದಿನಗಳಲ್ಲಿ ಅವರಿಗದನ್ನು ಬಯಲು ಮಾಡಬಹುದೆಂದು ಆಶಿಸುತ್ತ ಅವರ ಕಡೆ ನೋಡಿದಳು. ರಾಧೆಯ ಬೆಳ್ಳಗಾದ ಕೂದಲನ್ನೂ ಇನ್ನೂ ಸುಕ್ಕಾಗದೆ ಮುದ್ದಾಗಿಯೇ ಉಳಿದ ಮುಖವನ್ನೂ ನೋಡುತ್ತ ಶಾಸ್ತಿಗಳು ಅಕ್ಕೆರೆಯಿಂದ ಹೇಳಿದರು:
“ಮತ್ತೆ ನಾನು ಯಾಕೆ ಮಹಾದೇವಿಯನ್ನು ಮದುವೆಯಾದೆನೊ. ನಿನ್ನ ಒತ್ತಾಯವಿತ್ತು ಎನ್ನು. ನಾನು ಏನು ಭಾವಿಸಿದೆನೆಂದರೆ, ನನಗೊಂದು ಸಂತಾನವಾದರೆ ನನ್ನ ಪೀಡೆಗಳೆಲ್ಲ ನಿವಾರಣೆಯಾಗಿ ನಾನು ಪ್ರಸನ್ನನಾಗುವೆನೆಂದು ಭಾವಿಸಿದ್ದೆ. ಸರೋಜ ತನ್ನ ಸೌಂದರ್ಯದ ನಿರ್ಲಕ್ಷ್ಯದಲ್ಲಿ ನನ್ನನ್ನು ಪೀಡಿಸಿದ್ದು. ಆದರೆ ಮಹಾದೇವಿ ಮೊದಲಿನಿಂದಲೂ ನನ್ನಂತೆಯೇ ಕಣ್ಣು ಕೆಕ್ಕರಿಸಿ ಎದುರು ಬಿದ್ದವಳು. ಸರೋಜಳ ಹಾಗೆ ಅವಳಲ್ಲ. ನೀನೆಂದರೆ ಮಹಾದೇವಿಗೆ ಕಂಡರೆ ಆಗದು. ನನ್ನ ಮಗಳೋ? ಅದು ನನ್ನ ಮಗಳೇ ಅನ್ನು, ಹಠಮಾರಿ. ಅದು ಯಾರೋ ಕ್ರಾಂತಿ ಮಾಡುವ ಬೆಪ್ಪನನ್ನು ಮದುವೆಯಾಗಿ, ತನ್ನ ಜನ್ಮಕ್ಕೆ ಕಾರಣನಾದ ನನ್ನಂತ ಕುಲೀನರನ್ನೆಲ್ಲ ನಿರ್ನಾಮ ಮಾಡಿಬಿಡಬೇಂದು ಆಗೀಗ ಆಸೆಯಾದ್ದಿದೆ ಎನ್ನು. ಆದರೆ ಯಾವ ಕ್ಷಣದಲ್ಲಿ ನಾನು ಏನಾಗಿ ಬಿಡುತ್ತೇನೋ? ನನಗೆ ನಿಶ್ಚಯವಿಲ್ಲ. ಈ ಭವದಿಂದ ನನ್ನಂಥವರಿಗೆ ಮುಕ್ತಿಯಿಲ್ಲವೆನ್ನಿಸುತ್ತದೆ. ಆದರೆ ಸರೋಜ ನನ್ನ ಕೈಯಿಂದ ಸಾಯಲಿಲ್ಲವಲ್ಲ? ನನಗೆ ಮಗಳು ಹುಟ್ಟಿದ್ದೇ, ಸರೋಜ ನನ್ನಿಂದಲೇ ಬಸುರಾಗಿರಬೇಕೆಂದು ನಾನು ತುಂಬ ಯಾತನೆ ಪಡುತ್ತ ಭವದಿಂದ ಪಾರಾಗಲೆಂದು ದೇವರ ಕಡೆ ತಿರುಗಿದ್ದೆ. ಯಾವ ದೇವರಿಂದ ಸಮಾಧಾನ ಸಿಕ್ಕೀತು ಹೇಳು. ಎಲ್ಲ ಇರುವುದು ಇಲ್ಲಿ” ಎಂದು ತನ್ನ ಹಣೆ ಮುಟ್ಟಿ ತೋರಿಸಿ ತಾನು ಮಾತಾಡಿದ್ದೆ. ಆದರೆ ಮತ್ತೆ ಪುರಾಣಿಕನಂತೆ ಅಭ್ಯಾಸಗತವಾದ ಮಾತುಗಳನ್ನೇ ಆಡಿಬಿಟ್ಟಿದ್ದೆ ಎಂದು ಅನ್ನಿಸಿತ್ತು. ತಾನು ಟ್ಯಾಕ್ಸಿಯಲ್ಲಿ ಮನೆ ಸೇರಿ ಒಳಗೆ ಹೋದದ್ದೇ ಮಹಾದೇವಿ ತನ್ನ ಮೇಲೆ ವಿನಾಕಾರಣ ಎಗರುವಳೆಂದು ನಿರೀಕ್ಷಿಸಿರಲಿಲ್ಲ. ದುರ್ಬಲ ಹೆಂಗಸು ತನ್ನನ್ನು ತಿಂದು ಬಿಡುವಂತೆ ಎದುರು ನಿಂತದ್ದನ್ನು ನೋಡಿ, ಅವಳ ಕುರೂಪದ ಮುಖದಲ್ಲಿ ಅರಳಿಕೊಂಡ ಹೊಳ್ಳೆಗಳ ಮೂಗನ್ನ ಕಂಡು ಶಾಸ್ತಿಗಳಿಗೆ ತಾನೇ ಚಕಿತಗೊಳ್ಳುವಂತೆ, ಕರುಣೆಯುಕ್ಕಿಬಿಟ್ಟಿತ್ತು
.
ಮಹಾದೇವಿ ರಾಧೆಯ ಶ್ರೀಮಂತಿಕೆಯನ್ನೂ, ಅವಳು ತನ್ನ ಮೊಮ್ಮಗಳಿಗೆ ಮಾಡಿಸಿಕೊಟ್ಟ ಚಿನ್ನದ ಬಳೆಗಳನ್ನೂ ಎತ್ತಿಕೊಂಡು ಜಗಳ ಶುರು ಮಾಡಿದ್ದಳು. ‘ನಿಮ್ಮ ಕೊಲೆಗಡುಕ ಬುದ್ಧಿಯಿಂದ’ ಎಂದು ಪ್ರತಿ ವಾಕ್ಯ ಶುರು ಮಾಡಿ ತಾನು ಕಳೆದುಕೊಂಡ ಮಗಳ ಬಗ್ಗೆ ರೋಷದಲ್ಲಿ ಕಿರುಚತೊಡಗಿದ್ದಳು. ಶಾಸ್ತಿಗಳು ತಾನೆಂದೆಂದೂ ಅವಳನ್ನು ಮುಟ್ಟಿ ಸಂತೈಸಲು ಹೋದದ್ದಿಲ್ಲ. ಆದರೆ ಅವಳು ಕೊಸರಿಕೊಂಡರೂ ಇವತ್ತು ಮಹಾದೇವಿಯನ್ನು ತಬ್ಬಿ ಹಿಡಿದರು. ತನ್ನನ್ನು ಯಥಾಪ್ರಕಾರ ಚಚ್ಚಿ ಬಿಡುತ್ತಾರೆ ಎಂದು ಮಹಾದೇವಿ ನಿರೀಕ್ಷಿಸಿರಬೇಕು. ‘ಮಹಾದೇವಿ’ ಎಂದು ಮೃದುವಾಗಿ ಮತ್ತೆ ಮತ್ತೆ ಕರೆದರು. “ನಾನು ಕೊಲೆ ಮಾಡಲಿಲ್ಲ ಮಹಾದೇವಿ. ಆಳುಗಳು ತಿಳಿದದ್ದು ತಪ್ಪು. ನಾನೂ ಹಾಗೆ ತಿಳಕೊಂಡಿದ್ದೆ. ನಿನ್ನೆ ರೈಲಿನಲ್ಲಿ ಸತ್ಯ ತಿಳಿಯಿತು” ಎಂದರು. ಮಹಾದೇವಿಗೆ ಇದರಿಂದ ಏನೂ ಅರ್ಥವಾಗದೆಂದು ತನಗೆ ಗೊತ್ತಿತ್ತು. ಆದರೆ ಅವಳು ತನ್ನಿಂದ ಮುಟ್ಟಿಸಿಕೊಂಡ ಮಾರ್ದವದಿಂದಾಗಿ ಬಿಕ್ಕಲು ಶುರುಮಾಡಿದ್ದಳು. ಅವಳನ್ನು ತಡವುತ್ತ ತಾನು ಹೇಳಿದ್ದೆ: “ನಮ್ಮ ಮಗಳನ್ನು ಪತ್ತೆ ಮಾಡಿ ತರುತ್ತೇನೆ. ಅಳಬೇಡ” ಸೆರಗಿನಲ್ಲಿ ಮೂಗನ್ನು ಒರೆಸುತ್ತ ಚಕಿತಳಾದಂತೆ ಕಂಡ ಮಹಾದೇವಿ ಒಳಗೆ ಹೋದಳು. ತಾನು ಗುಣಮುಖನಾಗುತ್ತಿರುವ ಭರವಸೆ ಸಣ್ಣಗೆ ಶಾಸ್ತಿಗಳಿಗೆ ತೋರಿದಂತಾಯಿತು. ಮನೆಯ ಎದುರು ಅಡ್ಡಾದಿಡ್ಡಿ ಬೆಳೆದುಕೊಂಡು, ಪ್ರಾತಃಕಾಲ ತನ್ನ ಎಲ್ಲ ಕೋಮಲವಾದ ಹೂವುಗಳನ್ನೂ ನೆಲದ ಮೇಲೆ ಚೆಲ್ಲಿಕೊಂಡು, ಆರಾಮಾಗಿ ಬಿಡುವ ಅಷ್ಟಾವಕ್ರ ಪಾರಿಜಾತದ ಮರವನ್ನು ನೋಡಿದರು. ಸರೋಜ ತನ್ನ ಬೆರಳಿನ ಬಿಸಿ ತಾಗಿ ಪಾರಿಜಾತ ಮಲಿನವಾಗಬಾರದೆಂದು, ಉಗುರಿನ ತುದಿಯಿಂದ ಅವನ್ನು ಒಂದೊಂದಾಗಿ ಎತ್ತಿ, ಬಾಳೆ ದೊನ್ನೆಯಲ್ಲಿ ಶೇಖರಿಸಿ, ಹಿತ್ತಲಿನಲ್ಲಿ ಬೆಳೆದುಕೊಂಡ ಒಂದು ಹುತ್ತಕ್ಕೆ ಸುರಿಯುತ್ತಿದ್ದಳು. ಈ ನೆನಪಿನ ಜೊತೆಯೇ ಬಾಧೆಯಾಯಿತು. ಹೊಳೆ ಪಾಲಗುವಾಗ ಯಾಕೆ ಅವಳ ಹಣೆಯಲ್ಲಿ ಕುಂಕುಮವಿತ್ತು? ಕೊರಳಲ್ಲಿ ತಾಳಿಯಿತ್ತು? ಪಂಡಿತ ಹಾಗಾದರೆ ಸಾಯಲಿಲ್ಲವೋ? ಅಥವಾ ಖಾಸಾ ಕೈಹಿಡಿದವನು ಸತ್ತಿರಲಿಕ್ಕಿಲ್ಲ ಎಂದೋ? ಹೀಗೂ ಎನ್ನಿಸಿಬಿಟ್ಟು ತಾನು ಗುಣಮುಖನಾಗುವ ಚಿಹ್ನೆ ಕಾಣದೆ ಶಾಸ್ತಿಗಳು ಬಳಲುತ್ತ ಸ್ನಾನದ ಮನೆಗೆ ಹೋದರು. ಅದು ಸರೋಜಳನ್ನು ಹಣೆಯ ಮೇಲೆ ಜಪ್ಪಿದ ಸ್ನಾನದ ಮನೆಯಾಗಿರಲಿಲ್ಲ. ಅದನ್ನು ಕೆಡವಿಸಿ ಇನ್ನೊಂದು ಜಾಗದಲ್ಲಿ ಹೊಸ ಸ್ನಾನದ ಮನೆ ಕಟ್ಟಿಸಿಕೊಂಡಿದ್ದರು.

ಭಾಗ : ೨
ಅಧ್ಯಾಯ ೧

ಮೊದಮೊದಲು ಗವಿಯ ಅಂತರಾಳದಿಂದ ಎಂಬತೆ ಒಂದೊಂದೇ ಎರಡೆರಡೇ ಮೊಳಕೆಗಳಂತಹ ನಾದ, ಆಗೊಂದು ಈಗೊಂದು ಸ್ಪುಟವಾಗಿ ಹೊರಬಂದಂತಿದ್ದ ಗಂಟೆಯ ಶಬ್ದ, ಮತ್ತೆ ಓ ಓ ಓ ಎನ್ನುವ ಮಂದರ ನಾದ, ಮತ್ತೆ ಪುಟ್ಟ ಪುಟ್ಟ ಗೆಜ್ಜೆಗಳಿಂದ ಹೊರಟಂತಿರುವ ಕಿಲ ಕಿಲ ಶಬ್ದ. ನಾದವೆಲ್ಲವೂ ತನಗೇ ತಾನು ಒಳಗಿನಿಂದ ಮಾಡಿಕೊಂಡಂತೆ, ತನಗಾಗಿ ಮಾತ್ರ ಮಾಡಿಕೊಂಡಂತೆ. ಇನ್ನು ಇನ್ನೂ ಒಳಗೊಳಗೇ ಹೋಗುವಂತೆ ಸಂಚರಿಸುತ್ತ ಹುಡುಕುವ ತಳಾತಳದ ನಾದ. ಮುಗಿಯಿತೆನ್ನುವಷ್ಟರಲ್ಲೇ ಇನ್ನೊಂದು ಇನ್ನೂ ಆಳದ ಕುಂಡಲಿನಿಯಿಂದ ಎದ್ದಂತಿದ್ದ ನಾದ. ನಾದಕ್ಕೆ ಸಿಗಬೇಕಾದ್ದು ಸಿಕ್ಕಂತಾಯಿತೋ? ಇಗೊ ಇಗೋ ಎನ್ನಿಸುವಂತೆ ಮತ್ತೆ ಪುಟ್ಟ ಪುಟ್ಟ ಗಂಟೆಗಳ ದಿಗ್ಭ್ರಮೆ. ಅಥವಾ ಸಂಭ್ರಮವೊ? ಟಿಬೆಟನ್ ಲಾಮಾರ ಗುಹ್ಯ ಸಮಾಜ ತಂತ್ರದ ಪಠಣವನ್ನು ತನ್ನ ವಾಕ್‌ಮನ್‌ನಲ್ಲಿ ಕೇಳಿಸಿಕೊಳ್ಳುತ್ತ, ಟಿಬೆಟನ್ನರ ಬಾರ್ದೊ ಥ್ರೋಟ್ರೋಲ್‌ನ ಇಂಗ್ಲಿಷ್ ಭಾಷಾಂತರವನ್ನು ಓದುತ್ತ, ತನ್ನ ಬಾರ್ದೊ ಸ್ಥಿತಿಗೆ ಓದಿದ್ದನ್ನು ಸಮೀಕರಿಸಿಕೊಳ್ಳುತ್ತ ದಿನಕರ ಚಾಪೆಯ ಮೇಲೆ ದಿಂಬಿಗೊರಗದಂತೆ ಕೂತಿದ್ದ. ನಾರಾಯಣ ತಂತ್ರಿಯದು ವಿಶಾಲವಾದ ಮನೆ. ಹಾಸಿಗೆಗಳನ್ನು ಹಾಸಿ ಅವನ್ನು ಬಿಳಿ ಬಟ್ಟೆಯಿಂದ ಮುಚ್ಚಿ, ಬಿಳಿ ಬಟ್ಟೆಯನ್ನು ಸುತ್ತಿದ ದೊಡ್ಡ ಒರಗು ದಿಂಬುಗಳನ್ನಿಟ್ಟ ಹಜಾರದಲ್ಲಿ ದಿನಕರ ಮೂಲೆಯಲ್ಲಿ ಚಾಪೆ ಮೇಲೆ ದಿಂಬಿಗೊರಗದೆ ನೇರ ಕೂತಿದ್ದನ್ನು ಕಂಡು ಸೀತಮ್ಮ, “ನಿನಗೇನಾಗಿದೆ? ಹಾಸಿಗೆ ಮೇಲೆ ಕೂರು”ಎಂದರು. ದಿನಕರ ಸುಮ್ಮನೇ ನಕ್ಕದ್ದು ಕಂಡು,”ಅಯ್ಯೋ ನಿನಗೆ ಕನ್ನಡ ಅರ್ಥವಾಗಲ್ಲ ಅನ್ನೋದು ಮರೆತೇ ಹೋಗುತ್ತೆ. ಏಳು ಸ್ನಾನ ಮಾಡಿ ಬಾ. ನಿನಗೆ ತಿಂಡಿ ಬಡಿಸುತ್ತೇನೆ. ಇನ್ನೇನು ಅವರು ಎದ್ದು ಬಿಡುತ್ತಾರೆ. ಮೊಮ್ಮಗ ನಿನ್ನನ್ನು ಕಂಡಿದ್ದೇ ಹಾರಾಡಿ ಉಪದ್ರವ ಮಾಡ್ತಾನೇಂತ ಅವನನ್ನ ಫೋನಿಗಂಟಿಕೊಂಡಿರಲಿ ಅಂತ ಸುಮ್ಮನಿದ್ದೇನೆ – ಹೇಳಿಲ್ಲ. ಏಳು ಏಳು” ಎಂದು ಸ್ನಾನ ಮಾಡಬೇಕೆಂದು ತಲೆಗೆ ನೀರು ಸುರಿದು ಕೊಳ್ಳುವ ಹಾವ ಭಾವ ಮಾಡಿತೋರಿಸಿದರು. ದಿನಕರ ಅವರು ಕೊಟ್ಟ ಶುಭ್ರವಾದ ಟವಲನ್ನೂ ಪಿಯರ್‍ಸ್ ಸೋಪನ್ನೂ ಇಸಿದುಕೊಂಡ. ಅಮ್ಮನಿಗೆ ಪಿಯರ್‍ಸ್ ಸೋಪು ತನಗಿಷ್ಟವೆಂಬುದು ಇಪ್ಪತೈದು ವರ್ಷಗಳ ನಂತರವೂ ಇನ್ನೂ ನೆನಪಿದೆಯಲ್ಲ ಎಂದು ಆಶ್ಚರ್ಯವಾಯಿತು. “ಅಂತೂ ನನಗೆ ಇನ್ನೊಂದು ಅಮ್ಮ ಇದೆಯೆಂದಾಯಿತು” ಎಂದು ಹಾಸ್ಯದಲ್ಲಿ ಹಿಂದಿಯಲ್ಲಿ ಹೇಳಿದ, ಅಮ್ಮನಿಗೆ ಅರ್ಥವಾಗುವುದಿಲ್ಲ ಎಂಬುದನ್ನು ಮರೆತು. ಅದೇ ಹಾಸ್ಯದಲ್ಲಿ ಸೀತಮ್ಮ”ಏನೋ, ಬೆಳಗಾಗಿ ಎದ್ದು ಸಾಬರ ಭಾಷೆಯಲ್ಲಿ ನನ್ನ ಹತ್ತಿರ ಮಾತಾಡ್ತಿದಿಯಲ್ಲೋ” ಎಂದರು. “ತ್ರಿಪಾಠಿಗಳು ಅಂಥ ಮಡಿ ಬ್ರಾಹ್ಮಣರು – ಈ ಭಾಷೆಯಲ್ಲಿ ಯಾಕೆ ಮಾತಾಡ್ತಾರೇಂತ ನನ್ನ ಮಂಕು ಬುದ್ಧಿಗೆ ಆಶ್ಚರ್ಯವೋ ಆಶ್ಚರ್ಯ” ಎಂದು ಆಡಬಾರದಾಗಿದ್ದ ಮಾತು ಎಂಬಂತೆ ಸೀರೆಯ ಸೆರಗಿನಿಂದ ಬಾಯಿಯನ್ನು ಮುಚ್ಚಿಕೊಂಡು ನಗುತ್ತ ಮತ್ತೆ ತಮ್ಮ ಅಡುಗೆ ಮನೆ ಹೊಕ್ಕರು. ದಿನಕರ ಸ್ನಾನ ಮುಗಿಸಿ ಬರುವುದರಲ್ಲಿ ಮನೆ ತುಂಬ ಸಡಗರವೋ ಸಡಗರ. ನಾರಯಣ ತಂತ್ರಿಯ ಮಗ ದಿಢೀರನೆ ದಿನಕರನ ಕಾಲಿಗೆ ಸಾಷ್ಟಾಂಗ ಬಿದ್ದು ಕುಣಿದಾಡತೊಡಗಿದ್ದ. “ನೀನು ಮನೇಗೆ ಬಂದಿದಿ ಅನ್ನೋದನ್ನು ತನ್ನ ಪಟಾಲಮ್ಮಿಗೆಲ್ಲ ಹೇಳಿ ಕೊಚ್ಚಿಕೊಂಡು ಹೇಗೆ ಈ ಮಾಣಿ ತನ್ನ ಬೇಳೆ ಬೇಯಿಸಿಕೊಳ್ಳತ್ತೆ ನೋಡ್ತಾ ಇರು” ಎಂದು ಸೀತಮ್ಮ ಲೇವಡಿ ಮಾಡುತ್ತ ನಿಂತದ್ದನ್ನು ಕಂಡು, ನಾರಾಯಣ ತಂತ್ರಿ ತಾಯಿಕಡೆ ನೋಡಿ ಕಣ್ಣು ಮಿಟುಕಿಸಿದ, ದಿನಕರನಿಗೆ ಮುಜುಗರವಾಗಬಾರದು ಎಂದು. ನಾರಾಯಣ ತಂತ್ರಿಯಲ್ಲಾದ ಬದಲಾವಣೆಗಳನ್ನು ದಿನಕರ ಗಮನಿಸಿದ. ಇವನನ್ನು ಖಂಡಿತ ತಾನು ಗುರುತು ಹಿಡಿಯುತ್ತಿರಲಿಲ್ಲ. ತೋರವಾಗಿಬಿಟ್ಟಿದ್ದಾನೆ. ಸಾರ್ವಜನಿಕ ಮನುಷ್ಯನಂತೆ ಮಾತನ್ನು ಲೆಖ್ಖಾಚಾರ ಮಾಡಿ ಬಳಸುತ್ತಾನೆ. ಹಳೆಯ ಗೆಳೆಯನ ಚೂಟಿಯಾಗಲೀ, ತುಂಟತನವಾಗಲೀ ಉಳಿದಂತೆ ಕಾಣುವುದಿಲ್ಲ. ದಿನಕರನಿಗೆ ಕೊಂಚ ವ್ಯಥೆಯಾಯಿತು – ಅಮ್ಮ ಸಿಕ್ಕರೂ ಬಂಧು ಸಿಗಲಾರ ಎಂದು. ಒಂದು ಕ್ಷಣದಲ್ಲೇ ನಾರಾಯಣ ತಂತ್ರಿಯನ್ನು ನೋಡಿದವನಿಗೆ ತಾನು ಮಾಡಿಕೊಂಡು ಬಂದ ನಿರ್ಧಾರ ಕುಸಿದಿತ್ತು. ತನ್ನನ್ನು ಕಾಡುತ್ತಿರುವ ಒಂದು ದೊಡ್ಡ ಗುಟ್ಟನ್ನು ಅವನಿಗೆ ಹೇಳಬೇಕೆಂದಿದ್ದ. ಆದರೆ ಈ ಸಾರ್ವಜನಿಕನಾಗಿಬಿಟ್ಟ ಯಶಸ್ವಿ ಲಾಯರಿಗೆ ಅದನ್ನು ಹೇಳಲಾರನೇನೋ ಎಂದು ಕಸಿವಿಸಿ ಪಡುತ್ತಲೇ ತನ್ನೊಳಗೇ ಮುಂದಿನ ಮಾತುಗಳನ್ನು ಸಿದ್ಧಪಡಿಸಿಕೊಳ್ಳುತ್ತಾ ಹೋದ: “ನೋಡು ನಾರಾಯಣ, ನನ್ನ ಜೀವನದಲ್ಲಿ ಪವಿತ್ರವಾದ್ದು ಏನೂ ಉಳಿದಿಲ್ಲವೆನ್ನಿಸಿ ಈ ಬಟ್ಟೆ ತೊಟ್ಟು ಹೊರಟಿದ್ದೇನೆ. ನನ್ನನ್ನು ಸಾಕಿದ್ದ ತಾಯಿತಂದೆಯರು ಸತ್ತ ಮೇಲೆ ಅವರ ಮಕ್ಕಳು ಶುದ್ಧ ವ್ಯಾಪಾರಿಗಳಾಗಿ ಬಿಟ್ಟರು. ತ್ರಿಪಾಠಿಗಳು ಖರ್ಚು ಮಾಡಲು ಬಿಡದೆ ನನ್ನದಾಗಿ ಉಳಿದೇ ಬಿಟ್ಟಿದ್ದ ಬಂಗಾರದ ಮೇಲೆ ಕಣ್ಣು ಹಾಕಿದರು. ನನಗೆ ಹೇಸಿಗೆಯಾಗಿ ಅವರು ಬಯಸಿದಷ್ಟನ್ನು ಅವರಿಗೆ ಕೊಟ್ಟುಬಿಟ್ಟೆ. ನನ್ನನ್ನು ಬೆಳೆಸಿದವರು ಇಲ್ಲವಾದ ಮೇಲೆ ಆ ಮನೆಗೆ ಹೋಗುವುದೇ ಕಡಿಮೆಯಾಯಿತು. ತ್ರಿಪಾಠಿಗಳ ಶ್ರಾದ್ಧಕ್ಕಷ್ಟೇ ನಾನೀಗ ಹೋಗುವುದು. ಇಂಗ್ಲೆಂಡಲ್ಲಿ ಓದು ಮುಗಿಸಿ ಬಂದವನು ದೆಹಲಿ ಸೇರಿ ಪ್ರಸಿದ್ಧನಾಗುತ್ತ ಹೋಗಿ ಠೊಳ್ಳಾಗುತ್ತಲೂ ಹೋದೆ. ಸಾರ್ವಜನಿಕವಾಗಿ ಬೇಕಾದ್ದನ್ನು ಸರಾಗವಾಗಿ ಆಡಿ ಬಿಟ್ಟು, ಯಾರನ್ನಾದರೂ ಮೋಡಿ ಮಾಡುವ ಮನುಷ್ಯನಾಗಿ ಬಿಟ್ಟೆ. ನನ್ನ ಬೇರುಗಳು ಎಲ್ಲಿ ತಿಳಿಯಲಾರದೆ, ಹುಡುಕಿದರೂ ಅವು ಸಿಗದವು ಎನ್ನಿಸಿ, ಒಂಟಿಯಾಗಿ ಇರಲಾರದೆ ಲೋಲುಪನಾದೆ. ನನ್ನ ಪ್ರೇಯಸಿಯರು ಈಗ ಎಲ್ಲೆಲ್ಲೂ ಇದಾರೆ. ಇಂಗ್ಲೆಂಡಿನಲ್ಲಿ, ಲಕ್ನೋದಲ್ಲಿ, ದೆಹಲಿಯಲ್ಲಿ – ಹೀಗೆ ಪ್ರೀತಿ ಮಾಡಿದ್ದೂ ಬಳಲಿಕೆಯಲ್ಲಿ ಕೊನೆಯಾಗತೊಡಗಿತು. ಒಂದು ಪ್ರೀತಿಯಿಂದ ಇನ್ನೊಂದನ್ನು ಮುಚ್ಚಿಡುತ್ತ, ಒಟ್ಟಾಗಿ ಹಲವು ಹೆಣ್ಣುಗಳನ್ನು ನಿರ್ವಹಿಸುವುದು ಬಾಧೆಯಾಗುತ್ತ ಹೋಯಿತು. ಅದೊಂದು ಬಿಡಲಾರದ ಚಟವೂ ಆಯಿತು. ಈ ನನ್ನ ಉದ್ಯೋಗವೂ ಶುರುವಾದದ್ದು ಹರಿದ್ವಾರದಲ್ಲಿ. ನನ್ನ ಇಪ್ಪತ್ತನೇ ವಯಸ್ಸಿನಲ್ಲೇ. ನಿನ್ನ ಜೊತೆ ಇದ್ದಾಗಲೇ. ನಿನ್ನ ತಾಯಿಯಲ್ಲಿ ನಾನು ಕಳಕೊಂಡ ತಾಯನ್ನು ಕಾಣುತ್ತ ನಾನು ಹೊಸ ಹುಟ್ಟು ಪಡೆಯುತ್ತಿದ್ದಾಗಲೇ. ಅಂಥ ಪವಿತ್ರವಾದ ದಿನಗಳಲ್ಲೂ ನಾನು ಒಂದು ದೊಡ್ಡ ರಹಸ್ಯವನ್ನು ಯಾವ ಪಶ್ಚಾತ್ತಾಪವೂ ಇಲ್ಲದಂತೆ ಬೆಳೆಸಿಕೊಳ್ಳುತ್ತ ಸುಖವನ್ನೂ ಪಟ್ಟೆ. ಅಂದರೆ ಅದರ ಅರ್ಥ ಏನು ಎಂದು ತಿಳಿಯಲು….” ಇತ್ಯಾದಿ ಮಾತುಗಳಲ್ಲಿ ಬಳಸೀ ಬಳಸೀ ವಿಷಯಕ್ಕೆ ಹೇಗೆ ಬರುವುದೆಂದು ತನ್ನನ್ನು ಸಿದ್ಧಪಡಿಸಿಕೊಳ್ಳುತ್ತಿದ್ದ ದಿನಕರ ಹತಾಶೆಯಲ್ಲಿ ತನ್ನ ಹಳೆ ಗೆಳೆಯನ ಕಡೆ ನೋಡಿದ. ನಾರಾಯಣ ತಂತ್ರಿ ಅತಿಶಯವಾದ ಸೌಜನ್ಯದಿಂದ ದಿನಕರನ ಮುಖಸ್ಥಿತಿ ಮಾಡಲು ತೊಡಗಿದ್ದ. ತನ್ನ ಗೆಳೆಯನೂ ಯಾವುದೋ ದುಃಖವನ್ನು ಮರೆಯಲು ಇಂಥ ಗಂಟಲನ್ನು ಸಿದ್ಧಪಡಿಸಿಕೊಂಡಿದ್ದಾನೆ ಎಂದು ದಿನಕರನಿಗೆ ಅನುಮಾನವಾಯಿತು.

ಅಧ್ಯಾಯ ೨

ಬಚ್ಚಲಿನ ಒಲೆಯಲ್ಲಿ ಬಿಸಿ ಬೂದಿಯ ಮೇಲೆ ಬಾಡಿಸಿದ ಬಾಳೆಲೆ. ಅದರದ್ದೆ ಆದ ಸುವಾಸನೆಯ ಈ ಕುಡಿಯೆಲೆಯ ಮೇಲೆ ಹಲಸಿನೆಲೆಯ ಕೊಟ್ಟೆಯಲ್ಲೇ ಬೇಯಿಸಿದ ಕಡುಬು. ಅದರ ಮೇಲೆ ಹಸುವಿನ ತುಪ್ಪ, ಮೂರು ಬಗೆಯ ಚಟ್ನಿಗಳು. ಬಾಳೆಲೆಯ ದೊನ್ನೆಯಲ್ಲೇ ಪ್ರತ್ಯೇಕವಾಗಿ ಕೆನೆ ಮೊಸರು. ಪಕ್ಕದಲ್ಲೇ ಬಿಸಿ ಬಿಸಿ ಕಾಫಿ. ಈ ಪದಾರ್ಥಗಳ ಹೆಸರು ಗೊತ್ತಿಲ್ಲದ ದಿನಕರ ರುಚಿಪಡುತ್ತ ತಿನ್ನಲು ಕೂತ. ಸ್ನಾನ ಮಾಡಿ ಬಂದ ತಂತ್ರಿ ಮತ್ತು ಅವರ ಮಗ ಗೋಪಾಲತಂತ್ರಿಯೂ ಅವನ ಜೊತೆ ಕೂತು ಅವನಿಗಿಂತ ಹೆಚ್ಚಾಗಿ ಬಡಿಸಿಕೊಂಡರು. ಭಾನುವಾರವಾದ್ದರಿಂದ ಕೋರ್ಟಿನ ಕೆಲಸವಿಲ್ಲದ ನಾರಾಯಣತಂತ್ರಿ ಆರಾಮವಾಗಿರುವಂತೆ ಕಂಡಿತು. ಗೋಪಾಲ ಮಾತ್ರ ತನ್ನ ಗೆಳೆಯರಿಗೂ ತನ್ನ ಹಿಂಬಾಲಕರಿಗೂ ದಿನಕರನ ವಿಷಯ ಹೇಳಲು ತವಕಿಸುತ್ತ ಕೂತಿದ್ದ. ಹಿತ್ತಲಿನಿಂದ ‘ಅಮ್ಮ’ ಎಂದು ಕರೆದಿದ್ದು ಕೇಳಿಸಿತು. ‘ಯಾರು ಚಂದ್ರಪ್ಪನ? ಸ್ವಲ್ಪ ಇರು, ಎಂದು ಸೀತಮ್ಮ ಹಿತ್ತಲಿಗೆ ಹೋದರು. ಒಳಗೆ ಬಂದು ಒಂದು ಬಾಳೆಲೆ ಮೇಲೆ ಕಡಬು ಚಟ್ನಿಗಳನ್ನು ಬಡಿಸಿಕೊಂಡು ಮತ್ತೆ ಹಿತ್ತಲಿಗೆ ಹೋಗುವಾಗ ಮಗನಿಗೆ “ನೀನು ಮನೇಲಿ ಇರ್‍ತೀಯ ಅಂತ ಕೇಳಲಿಕ್ಕೆ ಚಂದ್ರಪ್ಪ ಬಂದಿದಾನೆ. ಗಂಗೂಬಾಯಿ ಯಾಕೊ ನಿನ್ನನ್ನ ನೋಡಬೇಕಂತೆ. ಬರಲಿ ಎಂದೆ” ಎನ್ನುತ್ತ ಹಿತ್ತಲಿಗೆ ಚಂದ್ರಪ್ಪನಿಗದನ್ನು ತಿನ್ನಲು ಕೊಡಲು ಹೋದರು. ಮಡಿ ಮುಸುರೆಗಳಲ್ಲಿ ನಿಷ್ಟೆಯವರಾದ ಸೀತಮ್ಮ ಚಂದ್ರಪ್ಪನಿಗಾಗಲೀ, ಗಂಗೂಬಾಯಿಗಾಗಲೀ, ಅವಳ ಮಗ ಪ್ರಸಾದನಿಗಾಗಲೀ ಒಳಗೆ ಬಡಿಸರು; ಆದರೆ ಏನಾದರೂ ತಿನ್ನಲು ಕೊಡದೆಯೊ ಉಪಚಾರ ಮಾಡದೆಯೊ ಕಷ್ಟ ಸುಖ ಕೇಳದೆಯೊ ಎಂದೆಂದೂ ಅವರನ್ನು ಹಿಂದೆ ಕಳಿಸರು. ಗಂಗೂಬಾಯಿಗೆ ಮನೆಗೇ ಬರುವಂತೆ ಅಜ್ಜಿ ಹೇಳಿದಳೆಂಬುದು ಗೋಪಾಲನಿಗೆ ಇಷ್ಟವಾದಂತೆ ಕಾಣಲಿಲ್ಲ. ಮಗನ ಮುಖ ಸಿಂಡರಿಸಿದ್ದನ್ನು ಕಂಡು ನಾರಾಯಣ ತಂತ್ರಿ ಕಳೆಗುಂದಿದ. ಅಪ್ಪ ಮಗನ ನಡುವೆ ಅದೇನು ನಡೆಯುತ್ತಿದೆ ದಿನಕರನಿಗೆ ತಿಳಿಯಲಿಲ್ಲ. ಮಗುವಾಗಿದ್ದಾಗ ಅವನು ಹಠಮಾರಿಯಾಗಿದ್ದನೆಂದು ದಿನಕರನಿಗೆ ನೆನಪಿದೆ, ಅವನನ್ನು ಹೇಗಾದರೂ ನಿದ್ದೆ ಮಾಡಿಸಲೆಂದು ಹುಡುಗಿಯಾಗಿದ್ದ ಗಂಗೂ ಮಾಡುತ್ತಿದ್ದ ಚತುರೋಪಾಯಗಳೂ ಅವನಿಗೆ ನೆನಪಿವೆ. ವಾತಾವರಣ ಬಿಗಿಯಾದ್ದನ್ನು ಲೆಕ್ಕಿಸದೆ ಸೀತಮ್ಮ ಹಿತ್ತಲಿಗೆ ಹೋಗಿ ಸರಿಯಾಗಿ ಮಾತನಾಡಲಾರದ, ಮಂದಬುದ್ಧಿಯ ಚಂದ್ರಪ್ಪನ ಜೊತೆ ಕಷ್ಟಸುಖ ಹಂಚಿಕೊಳ್ಳುತ್ತ ಮಾತಾಡತೊಡಗಿದರು. ಹಸು ಎಷ್ಟು ಹಾಲು ಕೊಡುತ್ತಿದೆ? ಆ ಬಿಳಿ ಹಸುವಿಗೆ ಗಬ್ಬ ನಿಂತಿತೆ? ಹೋರಿಕರುಗಳ ಮಾರಾಟವಾಯಿತೆ? ಎಷ್ಟು ಸಿಕ್ಕಿತು? ಗಂಗೂಬಾಯಿಯ ಸ್ಕೂಲಿನ ರಜ ಎಲ್ಲಿವರೆಗೆ? ಪ್ರಸಾದ ಯಾಕೆ ಇತ್ತ ಕಡೆ ಮುಖ ಹಾಕುತ್ತಲೇ ಇಲ್ಲ? ಅವನ ಸಂಗೀತ ಅಭ್ಯಾಸ ಹೇಗೆ ನಡೆದಿದೆ? ದೇವಸ್ಥಾನದಲ್ಲಿ ರಾಮನವಮಿ ದಿವಸ ಅವನು ಹಾಡಿದ್ದು ಎಷ್ಟು ಚೆಂದಾಗಿತ್ತು – ಹೀಗೆ ಸೀತಮ್ಮ ಈ ವಾರದಲ್ಲಿ ಅದೆಷ್ಟು ಬಾರಿಯೋ ಕೇಳಿದ್ದೇ ಕೇಳುತ್ತಿರುವಾಗ ಚಂದ್ರಪ್ಪನಿಗೆ ಯಾವ ಉತ್ತರವನ್ನೂ ಅವರು ನಿರೀಕ್ಷಿಸಿರಲಿಲ್ಲ. ಅವನನ್ನು ತಣಿಸುವುದು ಮಾತ್ರ ಅವರ ಮಾತಿನ ಗುರಿಯಾಗಿತ್ತು. ಚಂದ್ರಪ್ಪನೂ, ಸೀತಮ್ಮನ ಅಕ್ಕರೆಯ ಮಾತುಗಳಿಂದ ತಣಿದು ಬಾಯಿ ಬಿಟ್ಟು ಕೇಳಿಸಿಕೊಳ್ಳುತ್ತಾನೆ. ಅವನು ಬಾಯಿ ಬಿಟ್ಟೇ ತನ್ನ ಕಡೆ ನೋಡುವುದನ್ನು ಗಮನಿಸಿ ಸೀತಮ್ಮ, “ಯಾಕೆ ಚಂದ್ರಪ್ಪ ಕಡುಬು ರುಚಿಯಾಗಿಲ್ಲವ? ಒಂದಿಷ್ಟು ಮೊಸರು ತರಲ? ನಿನ್ನದೇ ತುಂಗೆಯ ಹಾಲಿನ ಮೊಸರು. ಚಾಕಲ್ಲಿ ಕತ್ತರಿಸಬೇಕು, ಅಷ್ಟು ಗಟ್ಟಿ ಮೊಸರು” ಎಂದು ಸೀತಮ್ಮ ಅಂದದ್ದು ಚಂದ್ರಪ್ಪನಿಗೆ ಅರ್ಥವಾಯಿತು. ಅವನು ತಲೆಯಲ್ಲಾಡಿಸುತ್ತ “ಇಲ್ಲಮ್ಮ” ಎಂದು ಕಡುಬನ್ನು ತಿನ್ನತೊಡಗಿದ. ಹಿತ್ತಲಿನಲ್ಲಿ ಬಲಿತು ಬಿದ್ದಿದ್ದ ತೆಂಗಿನ ಕಾಯನ್ನು ಸೀತಮ್ಮ ಎತ್ತಿತಂದು, “ಚಂದ್ರಪ್ಪ ಇದನ್ನು ಸುಲಿದುಕೊಡುತ್ತೀಯಾ?” ಎಂದರು. ಅವರಿಗೆ ಈ ಕಾಯಿಯನ್ನು ಸುಲಿಯುವುದೇನೂ ಬೇಕಿರಲಿಲ್ಲ. ಆದರೆ ಕತ್ತಿ ಹಿಡುದು ಮಾಡುವ ಇಂಥ ಕೆಲಸಗಳೆಂದರೆ ಚಂದ್ರಪ್ಪ ಖುಷಿಯಾಗಿ ಬಿಡುತ್ತಾನೆಂದು ಅವರಿಗೆ ಗೊತ್ತು. ಮನೆಯಲ್ಲಿ ಅವನು ಪ್ರಸಾದನ ಸೈಕಲ್ಲನ್ನು ಒಂದು ಕಣ ಧೂಳಿಲ್ಲದಂತೆ ಶುಭ್ರವಾಗಿ ಒರಸಿ, ಆಯಿಲ್ ಬಿಟ್ಟು, ಸೈಕಲ್ಲಿನ ಹ್ಯಾಂಡಲ್ಗೆ ಅವನೇ ಕಟ್ಟಿದ ಚಂಡುಹೂವಿನ ಸರವನ್ನೂ ಸುತ್ತುತ್ತಾನೆ – ಪ್ರತಿದಿವಸವೂ ಹಬ್ಬ ಹರಿದಿನಗಳಲ್ಲಿ ಮಾವಿನೆಲೆಯನ್ನು ತಂದು ತಮ್ಮ ಮನೆಗೆ ತೋರಣ ಕಟ್ಟುವುದೂ ಅವನೇ. ಸೀತಮ್ಮ ಒಳಬಂದವರು ತನ್ನೊಡನೆ ಮಾತಾಡಲೆಂದು ಅಡುಗೆ ಮನೆಯಲ್ಲೇ ಕಾದ್ದಿದ್ದ ಗೋಪಾಲನನ್ನು ಸಿಟ್ಟಿನಲ್ಲಿ ನೋಡಿದರು. ಅವನು ಏನು ಹೇಳಲಿಕ್ಕೆ ಕಾದಿದ್ದಾನೆ ಎಂಬುದು ಅವರಿಗೆ ಗೊತ್ತಿತ್ತು. ಗೋಪಾಲ ಅಳುಬುರುಕ ಮುಖ ಮಾಡಿಕೊಂಡು ಹೇಳಿದ: “ಅಪ್ಪ ಬೇಕಾದರೆ ಅಲ್ಲೇ ಹೋಗಲಿ. ಅವಳು ಇಲ್ಲಿ ಬರೋದು ಬೇಡ. ಊರವರೆಲ್ಲ ಏನು ಆಡಿಕೋತಾರೆ ನಿನಗೆ ಗೊತ್ತುಂಟಲ್ಲ.” “ಆಡೋವರ ಬಾಯೀನ ಮುಚಿಸಲಿಕ್ಕೆ ಆಗುತ್ತೇನೋ? ಅವರಿಂದ ನಮಗೇನಾಗಬೇಕು ಹೇಳು. ನಿನ್ನ ದರಿದ್ರ ರಾಜಕೀಯಕ್ಕಷ್ಟು ಬೆಂಕಿ ಹಾಕಿತು. ಇಲ್ಲಿನ ಬ್ರಾಹ್ಮಣರು ಓಟು ಕೊಡಲ್ಲಾಂತ ನಿನ್ನ ಚಿಂತೆಯಲ್ಲವ? ನಿನ್ನನ್ನು ಕಣ್ಣು ಬಿಟ್ಟು ನೋಡದೆ ನಿನ್ನ ಅಮ್ಮ ಹೆತ್ತವಳೇ ಸತ್ತದ್ದು ಗೊತ್ತ? ಈ ಗಂಗೂನೇ ನಿನ್ನ ಎತ್ತಿ ಆಡಿಸಿದವಳು. ಅವಳು ನಿನ್ನ ತಾಯಿಗೆ ಸಮ ಅನ್ನೋದನ್ನ ಮರೀಬೇಡ. ಎಲ್ಲಿ ಏಳು, ಹೋಗು. ಕೆಟ್ಟ ಯೋಚನೆ ಮಾಡಿದ್ದಕ್ಕೆ ತಪ್ಪಾಯ್ತೂಂತ ದೇವರಿಗೆ ನಮಸ್ಕಾರ ಮಾಡಿ ಬಾ. ತಗೋ, ಈ ರೂಪಾಯಿ ಕಾಣಿಕೇನ ದೇವರ ಎದುರಿನ ತಿರುಪತಿ ಹುಂಡಿಗೆ ಹಾಕಿ ಬಾ” ಎಂದು ಸೊಂಟಕ್ಕೆ ಸಿಕ್ಕಿಸಿಕೊಂಡ ಚಿಲ್ಲರೆಯಲ್ಲಿ ಒಂದು ರೂಪಾಯಿ ಕೊಟ್ಟರು. ಇನ್ನೂ ಚಿಲ್ಲರೆ ಹಣ ಸೊಂಟದಲ್ಲಿತ್ತು: ಮನೆಗೆ ಬಂದ ಭಿಕ್ಷುಕರಿಗೆ ಹಾಕಲಿಕ್ಕೆ ಅಂತ ಸೊಂಟದಲ್ಲಿ ಸದಾ ಸೀತಮ್ಮ ಚಿಲ್ಲರೆ ಹಣ ಇಟ್ಟುಕೊಳ್ಳುವುದು. ಗೋಪಾಲ ಸಣ್ಣ ಬಾಲನಂತೆ ಅವರು ಕೊಟ್ಟ ರೂಪಾಯನ್ನು ತೆಗೆದುಕೊಂಡು ನಿಟ್ಟುಸಿರು ಬಿಡುತ್ತ ದೇವರ ಕೋಣೆಗೆ ಹೋಗುವುದನ್ನು ಕಂಡು ಸೀತಮ್ಮ ತಣಿದು ತಾವೂ ಸಿಟ್ಟುಸಿರು ಬಿಟ್ಟರು.

ಅಧ್ಯಾಯ ೩

ನಾರಾಯಣ ತಂತ್ರಿಯ ಜೊತೆ ಮಾತು ಮುಗಿಸಿ ಮಹಡಿಯಿಂದ ಕೆಳಗಿಳಿಯುತ್ತಿದ್ದ ಗಂಗೂ ಅಳುತ್ತಿರುವವಳಂತೆ ಕಂಡಿತು. ಅವಳನ್ನು ಇಪ್ಪತ್ತೈದು ವರ್ಷಗಳ ನಂತರವೂ ನೋಡಿ ದಿನಕರನಿಗೆ ಎದೆ ಹೊಡೆದುಕೊಳ್ಳತೊಡಗಿತು. ನಾರಾಯಣ ತಂತ್ರಿಯೂ ಮುಖ ಕೆಳಗೆ ಹಾಕಿ ಅವಳ ಹಿಂದಿಂದ ಉಪ್ಪರಿಗೆಯ ಹಳೆಯ ಕಾಲದ ಕಡಿದಾದ ಮೆಟ್ಟಿಲುಗಳನ್ನು ಇಳಿಯುತ್ತಿದ್ದ. ಸ್ವಾಧೀನ ತಪ್ಪದಂತೆ ಕಂಬಿಯನ್ನು ಹಿಡಿದು. ಗಂಗೂ ಇನ್ನೂ ಸಪೂರವಾಗಿಯೇ ಉಳಿದು, ಕಪ್ಪು ಬಿಳಿ ಮಿಶ್ರಿತ ತಲೆಗೂದಲನ್ನು ಗಂಟುಕಟ್ಟಿ, ಎರಡು ಕೈಗಳಿಂದಲೂ ಸೆರಗನ್ನು ಜಗ್ಗಿ ಹಿಡಿದು ಲಾವಣ್ಯವತಿಯಾದ ಪ್ರೌಢೆಯಾಗಿ ಕಾಣುತ್ತಿದ್ದಾಳೆ. ಅವಲಂಬನವಿಲ್ಲದೆ ಕೆಳಗಿಳಿದು ಬಂದವಳು ತನ್ನ ಕಾಲಿಗೆ ಎರಗಿ ’ಬಂದಿರ?’ ಎಂದಳು. ಇನ್ನೂ ಅವಳ ಬಳೆಯ ಹುಚ್ಚು ಬಿಟ್ಟಂತಿರಲಿಲ್ಲ. ಎರಡು ಕೈಗಳಲ್ಲೂ ಎಷ್ಟೊಂದು ಗಾಜಿನ ಬಳೆಗಳನ್ನು ತೊಟ್ಟು, ಅದಕ್ಕೆ ಹೊಂದುವ ಬಣ್ಣದ ಸೀರೆ ಕುಪ್ಪಸಗಳನ್ನು ತೊಟ್ಟಿದ್ದಾಳೆ. ಸೀತಮ್ಮ ಒಳಗಿನಿಂದ ಬಂದು ಹಿತವಾಗಿ ಮಾತನ್ನಾಡಲು ತೊಡಗಿದ್ದರಿಂದ ದಿನಕರನಿಗೆ ತನ್ನ ಭಾವನೆಗಳನ್ನು ತೋರಗೊಡದಂತೆ ಇರುವುದು ಸಾಧ್ಯವಾಯಿತು. ನಾರಾಯಣ ತನ್ನ ಭಾವನೆಗಳನ್ನೆಲ್ಲ ಗಮನಿಸುತ್ತ ಕೈಗಳನ್ನು ಹಿಂದಕ್ಕೆ ಕಟ್ಟಿ ನಿಂತಿದ್ದ. ಈ ಬಟ್ಟೆ ತೊಟ್ಟು ತಾನು ಬಿಟ್ಟುಕೊಟ್ಟುಬಿಟ್ಟೆನೆಂದು ತಿಳಿದಿದ್ದ ತನ್ನ ನೈಜ ವ್ಯಕ್ತಿತ್ವ ಬದಲಾಗಿಲ್ಲವೆಂದು ದಿನಕರ ಯೋಚಿಸುತ್ತ, ಸಜ್ಜನಿಕೆಗಾಗಿ ಏನಾದರು ಹೇಳಬೇಕೆಂದು ’ಹೇಗಿದ್ದೀರಿ’ ಇತ್ಯಾದಿ ಹಿಂದಿಯಲ್ಲಿ ಹೇಳಿದ. ಆಗಲೂ ಗಂಗೂಗೆ ಹೈಸ್ಕೂಲಿನಲ್ಲಿ ಕಲಿತ ಹಿಂದಿ ಗೊತ್ತಿತ್ತು. ಎಷ್ಟು ಸರಸವಾಗಿ ಮಾತಾಡುತ್ತಿದ್ದವಳು ಈಗ ಸೀತಮ್ಮನ ಮಾತು ಕೇಳಿಸಿಕೊಳ್ಳುತ್ತ ಸುಮ್ಮಗೆ ನಿಂತಿದ್ದಳು. “ನಮ್ಮ ಗಂಗು ಸಾಮಾನ್ಯಳಲ್ಲ” ಸೀತಮ್ಮ ಹೇಳತೊಡಗಿದ್ದರು. “ಅವಳಿಗೆ ವಯಸ್ಸಾದ್ದು ಕಾಣುತ್ತ ನೋಡು. ಹರಿದ್ವಾರದಲ್ಲಿ ಇದ್ದಂತೆಯೆ ಇದಾಳಲ್ಲವ? ಬೆಳ್ಳಗಾದ ಕೂದಲಿಗೆ ಬಣ್ಣ ಹಾಕಿಕೊ ಎಂದರೆ ಇವಳು ಕೇಳ್ತಾಳಾ? ವೈರಾಗ್ಯ ಬಂದು ಬಿಟ್ಟಿದೆ. ಕಾಲೇಜು ಗೀಲೇಜೆಲ್ಲ ಮುಗಿಸಿ ಮೇಡಮ್ಮೂ ಆಗಿಬಿಟ್ಟಿದ್ದಾಳೆ. ಸ್ಕೂಲಿಂದ ಬರುವಾಗ ಯಾವಾಗಲೂ ಒಂದು ಹಿಂಡು ಮಕ್ಕಳು ಅವಳ ಹಿಂದೆ . ಕಿಂದರ ಜೋಗಿ ಇವಳು. ಇವಳಿಗೆ ಮಾತ್ರ ವೈರಾಗ್ಯವೋ ಅಂದರೆ ಇವಳ ಮಗನಿಗೂ ವೈರಾಗ್ಯವೇ. ಶುಕಮುನಿ ಹಾಗೆ ಅವನು. ನಮ್ಮ ಕುಲಶೇಖರ ಗೋಪಾಲನಂತೆ ಅವನು ಅಲ್ಲವೇ ಅಲ್ಲ. ಅಂಗಿ ಸಹ ಹಾಕಲ್ಲ ಅವನು. ಬಿಳೀ ಪಂಚೆಯುಟ್ಟುಕೊಂಡು ಬಿಳೀ ಧೋತ್ರ ಹೊದ್ದುಕೊಂಡು, ಇಷ್ಟುದ್ದದ ಗಡ್ಡ ಬಿಟ್ಟುಕೊಂಡು, ಅವನು ಹಾಡೋದು ಕೇಳಬೇಕು ನೀನು. ತ್ಯಾಗರಾಜರೇ ಮತ್ತೆ ಹುಟ್ಟಿಬಂದಂತೆ ಕಾಣತ್ತೆ. ನಮ್ಮ ಗಂಗೂ ಪುಣ್ಯಾತಗಿತ್ತಿ”. ಸೀತಮ್ಮನ ಮಾತಿನಿಂದ ಗಂಗೂ ಪ್ರಸನ್ನಳಾದಂತೆ ಕಂಡಳು. ತನಗರ್ಥವಾಗದ ಭಾಷೆಯಲ್ಲಿ ಹೀಗೆ ಎಲ್ಲರನ್ನೂ ಸಂತೈಸುವ ಸೀತಮ್ಮನನ್ನು ನೋಡುತ್ತ ದಿನಕರ ಬೆರಗಾದ.

ಅಧ್ಯಾಯ ೪

“ಸುರತ್ಕಲ್ಲಿನ ಹತ್ತಿರ ಬೀಚು ತುಂಬ ಚೆನ್ನಾಗಿರುತ್ತದೆ. ಹೋಗೋಣ ಬಾ” ಎಂದು ಸಂಜೆಯಾಗುತ್ತಿದ್ದಂತೆ ನಾರಾಯಣ ದಿನಕರನಿಗೆ ಹೇಳಿದ. ತಾನೇ ಡ್ರೈವ್ ಮಾಡಿದ. ನಾರಾಯಣ ಅನ್ಯಮನಸ್ಕನಾಗಿ ಇದ್ದ. ಏನೋ ಮಾತಾಡಲು ತಾನು ಕಾದಿರುವಂತೆಯೇ ಅವನೂ ಕಾದಿದ್ದಾನೆಂದೂ ದಿನಕರನಿಗೆ ಅನುಮಾನವಾಯಿತು. ಚುನಾವಣೆ ಬಗ್ಗೆ ತಾನು ಮಾಡಿದ ಟೀವಿ ಕಾರ್ಯಕ್ರಮ, ಸೌತ್ ಆಫ್ರಿಕಾ ಬಗ್ಗೆ ತಾನು ಮಾಡಿದ ವರದಿ, ಅಲ್ಲಿ ಇಲ್ಲಿ ತಾನು ಬರೆಯುತ್ತಿದ್ದ ಲೇಖನಗಳು, ಇತ್ಯಾದಿಗಳನ್ನು ಎತ್ತಿ ನಾರಾಯಣ ಮೆಚ್ಚುಗೆಯಲ್ಲಿ ಮಾತಾಡುತ್ತಿದ್ದುದು ಏನನ್ನೋ ಮುಕ್ತವಾಗಿ ಹೇಳಲಾರದೆ ಮುಚ್ಚಿಕೊಳ್ಳುವ ಉಪಾಯದಂತೆ ಕಾಣುತ್ತಿತ್ತು. ಬೀಚಿನ ಶುಭ್ರವಾದ ಮರಳಿನ ರಾಶಿಯ ಮೇಲೆ ನಡೆಯುತ್ತ, ಸಮುದ್ರ ಅಲೆ‌ಅಲೆಯಾಗಿ ಏರಿ ಬಂದು ಹಿಮ್ಮೆಟ್ಟುವುದನ್ನು ಸುಖಿಸುತ್ತ ಇಬ್ಬರೂ ಮೌನವಾಗಿದ್ದಾಗ ನಾರಾಯಣ ತನ್ನ ಕಡೆ ತಿರುಗಿ ಕೈ ಹಿಡಿದು ಹೇಳಿದ. “ಅದೇನೋ ನಿನಗೆ ಹೇಳಲೇ ಬೇಕಾಗಿದೆ. ಈ ಇಪ್ಪತ್ತ್ಯೆದು ವರ್ಷಗಳಿಂದಲೂ ನಿನಗೆ ಹೇಳಬೇಕೆಂದುಕೊಂಡು, ಹೇಳಲಾರದೆ, ನಿನ್ನನ್ನ ನೋಡದೇ ಇರುವುದೇ ವಾಸಿ ಎಂದುಕೊಂಡು ಇದ್ದುಬಿಟ್ಟಿದ್ದೆ. ನೀನು ಯಾಕೆ ಬಂದಿಯೋ ಎನ್ನಿಸಿತು ನಿನ್ನ ನೋಡಿದಾಗ. ಆದರೆ ಇವತ್ತು ಬೆಳಿಗ್ಗೆ ಗಂಗು ಬಂದು ಹೋದಮೇಲೆ ನಿನ್ನ ಹತ್ತಿರ ಮಾತಾಡಿ ಬಿಡುವ ನಿಶ್ಚಯ ಮಾಡಿಬಿಟ್ಟೆ” ಎಂದು ಸುಮ್ಮನಾದ. ಇಬ್ಬರೂ ಕೆಲವು ಹೊತ್ತು ಏನೂ ಮಾತಾಡದೆ ಸಮುದ್ರ ನೋಡುತ್ತ ನಿಂತುಬಿಟ್ಟರು. ಸೂರ್ಯ ಅಸ್ತಮಿಸುತ್ತ ಆಕಾಶವನ್ನೆಲ್ಲ ಕ್ಷಣಕ್ಷಣಕ್ಕೂ ಬದಲಾಗುವ ಬಣ್ಣಗಳಿಂದ ತೊಯ್ಯುತ್ತಿದ್ದ. ಬೀಚಿನ ಮೇಲೆ ಬಲೆಗಳನ್ನು ಹರಡಿಕೊಂಡಿದ್ದ ಮೀನುಗಾರರಲ್ಲದೆ ಬೇರೆ ಯಾರೂ ಇರಲಿಲ್ಲ. ದಿನಕರ ಮರಳಿನ ಮೇಲೆ ಕೂತು ಮುಂದಿನದನ್ನು ಕಾಯುತ್ತ ಮರಳನ್ನು ಗುಪ್ಪೆ ಮಾಡಲು ತೊಡಗಿದ್ದ. ನಲವತ್ತೈದು ವಯಸ್ಸಿನ ತಾನು ಬಾಲನಾಗುತ್ತಿದ್ದೇನೆ ಎನ್ನಿಸಿತು. ಏನನ್ನಾದರು ಕೇಳಿಸಿಕೊಳ್ಳಬಲ್ಲೆ. ಹೇಳಬಲ್ಲೆ ಎನ್ನಿಸಿತ್ತು. ನಾರಾಯಣನೂ ತನ್ನ ಸಾರ್ವಜನಿಕ ಕ್ಷೇತ್ರದಲ್ಲಿ ಜಾಗರೂಕತೆಯಿಂದ ಬಳಸುವ ಇಂಗ್ಲಿಷಿನಿಂದ ಮುಕ್ತನಾಗಿ, ತನಗರಿವಾಗದಂತೆ ಕನ್ನಡ ಬೆರೆಸಿ ತನಗೇ ಮಾತನಾಡಿಕೊಳ್ಳುತ್ತಿರುವಂತೆ ಸಹಜವಾಗಿ ಬಿಟ್ಟಿದ್ದ. ಆದರೂ ಬಳಸಿ ಬಳಸಿ ಹೇಳಬೇಕಾದ್ದನ್ನು ಸುತ್ತುತ್ತಿದ್ದ. ದಿನಕರನಿಗೆ ತಾನೇ ಹೇಳಿಬಿಡಬೇಕೆನ್ನಿಸಿತು. ಆದರೆ ನಾರಾಯಣನ ತುಮುಲದಲ್ಲಿ ತನ್ನ ಮಾತು ಉಚಿತವಾಗಿ ಕಾಣಲಾರದೆಂದು ಸುಮ್ಮನಾದ. ಬಣ್ಣಗಳನ್ನೆಲ್ಲ ಕಳೆದುಕೊಳ್ಳುತ್ತ ಆಕಾಶ ತನ್ನದೇ ಆದ ವ್ಯಸನಕ್ಕೆ ಚಿರಕಾಲದಿಂದಲೂ ಹಿಂತಿರುಗುತ್ತಲೇ ಇರುವಂತೆ ಕಂಡಿತು. “ದಿನಕರ, ನನ್ನ ಹೆಂಡತಿ ಸತ್ತಮೇಲೆ ನಾನು ಮತ್ತೆ ಮದುವೆಯಾಗಲೇ ಇಲ್ಲ. ನಮ್ಮ ಮನೆಯಲ್ಲಿ ಹೊರಗೆಲಸಕ್ಕೆಂದು ಸೇರಿದ ಗಂಗೂ ಮನೆಯವಳೇ ಆದಳು. ಗೋಪಾಲನನ್ನು ಬೆಳೆಸಿದಳು. ಆಗಲೇ ಅವಳಿಗೊಂದು ಸೋದರಿಕೆಯ ಸಂಬಂಧವಾಗಿ ಬಿಟ್ಟಿತ್ತು. ಅವಳ ತಾಯಿ ವೇಶ್ಯಾವೃತ್ತಿಯಲ್ಲಿದ್ದವಳು. ಅನುಕೂಲವಾಗತ್ತೇಂತ ಮಂದಬುದ್ಧಿಯವನೊಬ್ಬನಿಗೆ, ಅಂದರೆ ತನ್ನ ತಮ್ಮನೊಬ್ಬನಿಗೆ, ಅವಳನ್ನು ಕೊಟ್ಟು ಮದುವೆ ಮಾಡಿದ್ದಳು. ಹೀಗೆ ಅವಳ ಕೈಹಿಡಿದವನೇ ಇವತ್ತು ಬೆಳಿಗ್ಗೆ ನನಗೆ ಹೇಳಲೆಂದು ಬಂದದ್ದು. ಅವನು ಹಸುವಿನಂತಹ ಮನುಷ್ಯ. ಹಸುಗಳನ್ನು ನೋಡಿಕೊಂಡೇ ಇದ್ದುಬಿಟ್ಟಿದ್ದಾನೆ. ಗಂಗೂಗೆ ತಾಯಿಯ ವೃತ್ತಿ ಸರಿಕಾಣದೆ ನಮ್ಮ ಮನೆ ಸೇರಿದ್ದು. ಆಗ ಅವಳು ಹೈಸ್ಕೂಲು ಮುಗಿಸಿದ್ದಳು ಬೇರೆ. ಹರಿದ್ವಾರದಿಂದ ಹಿಂದೆ ಬಂದವನು ಅವಳನ್ನು ಕಾಲೇಜಿಗೆ ಸೇರಿಸಿ ಓದಿಸಿದೆ. ಕಾಡುವ ಅವಳ ತಾಯಿ ಸತ್ತು ಅವಳಿಗೆ ಬಿಡುಗಡೆಯದಂತೆಯೂ ಆಗಿತ್ತು…” ನಾರಾಯಣ ಮಾತು ನಿಲ್ಲಿಸಿದ. ದಿನಕರ ಮರಳನ್ನು ತೋಡಿ, ಈಗ ಒದ್ದೆ ಮರಳನ್ನು ಎತ್ತಿ ಅವುಗಳನ್ನು ಶಿವಲಿಂಗಗಳಾಗಿ ಮಾಡಲು ತೊಡಗಿದ್ದ. ತಾನು ನಾರಾಯಣನಿಗೆ ಹೇಳಬೇಕೆಂದು ಇದ್ದುದನ್ನು ಹೇಳುವುದು ಸಾಧ್ಯವೇ ಇಲ್ಲ ಎಂದು ಅವನಿಗೆ ಅನ್ನಿಸುತ್ತಿದ್ದಾಗಲೇ ನಾರಾಯಣ ದಿಢೀರನೆ ಹೇಳಿಬಿಟ್ಟ: “ಹರಿದ್ವಾರದಲ್ಲಿ ನಾನು ಅವಳ ಜೊತೆ ಸಂಬಂಧವಿಟ್ಟುಕೊಂಡಿದ್ದೇನೆಂದು ನಿನಗೆ ಗೊತ್ತಿರಲಿಲ್ಲ. ನೀನು ಇಟ್ಟುಕೊಂಡಿದ್ದೀಯೆಂದು ನನಗೂ ತಿಳಿದಿರಲಿಲ್ಲ.” ದಿನಕರನಿಗೆ ಹಗುರಾಗಿ ಬಿಟ್ಟಿತು. “ಆದರೆ ಅವಳನ್ನು ಮೊದಲು ಪಡೆದವನು ನಾನು. ಅವಳು ಇನ್ನೂ ಕುಮಾರಿಯಾಗಿದ್ದಳು” ಎಂದು ಹೇಳಬೇಕೆಂದು ಕ್ಷಣ ಅನ್ನಿಸಿ, ತನಗೆ ಹಾಗೆ ಅನ್ನಿಸಿದ್ದರ ಹಿಂದಿರುವ ಪಶುತ್ವಕ್ಕೆ ನಾಚಿ ಸುಮ್ಮನೇ ಕೇಳಿಸಿಕೊಂಡ. “ಬಂದವನೇ ಕಾಲೇಜು ಸೇರಿಸಿದೆ ಎಂದೆನಲ್ಲ? ಸ್ವಲ್ಪ ದಿನಗಳಲ್ಲಿ ಅವಳು ಬಸುರಾಗಿದ್ದಾಳೆಂದು ತಿಳಿಯಿತು. ನನಗೆ ದಿಗಿಲಾಯಿತು. ಆದರೆ ಅವಳ ಗಂಡನಿಗೇ ಮಗು ಹುಟ್ಟಿದ್ದೆಂದು ಜನ ತಿಳಿಯುತ್ತಾರೆ ಎಂದೂ ಸಮಾಧಾನ ಪಟ್ಟೆ. ನಾನು ಸ್ವಾಭಾವಿಕವಾಗಿ ಪ್ರಾಕ್ಟಿಕಲ್ ಮನುಷ್ಯ. ಕಾಲೇಜಲ್ಲಿ ಓದುವುದು ಕಷ್ಟವಾಗುತ್ತೆ, ಬಸಿರು ತೆಗೆಸಿಕೊಳ್ಳಬೇಕೆಂದು ಅವಳು ಹಠ ಮಾಡಿದಳು. ನನಗೂ ಒಳಗೊಳಗೇ ಹಾಗೆನ್ನಿಸಿದರೂ ಬೇಡವೆಂದೆ. ಆದರೆ ಗರ್ಭವತಿಯಾದ ಗಂಗೂ ನನ್ನನ್ನು ಎಷ್ಟು ಪ್ರೀತಿಸಲು ಶುರು ಮಾಡಿದ್ದಳೆಂದರೆ ನನಗವಳ ಮೇಲೆ ನನ್ನ ಮೊದಲ ಹೆಂಡತಿಯಲ್ಲಿ ಇಲ್ಲದಿದ್ದ ಮೋಹ ಬೆಳೆಯತೊಡಗಿತ್ತು. ಅವಳ ನಿಸ್ಸಹಾಯಕತೆ ಕಂಡು ಈ ಮೋಹ ಪ್ರೀತಿಯಾಗಿ ಬೆಳೆಯಿತು. ನಾನು ಅವಳಿಗೆ ಒಂದು ಮನೆಯನ್ನು ಕೊಂಡುಕೊಟ್ಟೆ. ಅದೇ ಒಂದು ಪುಟ್ಟ ತೋಟವೂ ಕೊಟ್ಟಿಗೆಯೂ ಮನೆಯ ಹಿತ್ತಲಿನಲ್ಲಿ ಇರುವಂತೆ ನೋಡಿಕೊಂಡೆ. ಅದರ ಹಿಂದೆ ಅಮ್ಮನ ಒತ್ತಾಯವೂ ಇತ್ತು – ಎನ್ನು. ಆಗಲೇ ಐವತ್ತು ಸಾವಿರ ಖರ್ಚುಮಾಡಿ ನಾನು ಕೊಂಡ ಆ ಜಾಗಕ್ಕೀಗ ಇಪ್ಪತ್ತು ಲಕ್ಷಕೊಟ್ಟು ತಗೊಳ್ಳುವವರಿದ್ದಾರೆ. ಮಂಗಳೂರು ಬೊಂಬಾಯಿಯಾಗಿ ಬಿಟ್ಟಿದೆ. “ಇರಲಿ. ಅವಳ ಗರ್ಭ ನಿಂತು ನಾಲ್ಕೈದು ತಿಂಗಳಾಗುತ್ತಿದ್ದಂತೆ, ಶಿಶು ಅವಳನ್ನು ಒದೆಯಲು ಶುರು ಮಾಡಿದಂತೆ ಈ ಗರ್ಭವನ್ನು ತಾನು ತೆಗೆಸಿಕೊಳ್ಳುವುದೇ ಸರಿ ಎಂದು ಮತ್ತೆ ಕಾಡಲು ತೊಡಗಿದಳು. ಒಂದು ರಾತ್ರೆ ಅವಳ ಪಕ್ಕದಲ್ಲಿ ನಾನು ಮಲಗಿದ್ದಾಗ ಬಿಕ್ಕುತ್ತ ಹೇಳಿದಳು – ಅದೇ ನಿನ್ನ ಅವಳ ಪ್ರೀತಿಯ ವಿಷಯ. ಈ ಗರ್ಭ ನಿಮ್ಮದೋ ಗೊತ್ತಿಲ್ಲ, ಅವರದೂ ಇರಬಹುದು ಎಂದುಬಿಟ್ಟಳು. ನಿಮಗೆ ಇಷ್ಟವಿಲ್ಲದಿದ್ದರೆ ನನ್ನನ್ನು ತೊರೆದುಬಿಡಿ ಎಂದು ಅತ್ತಳು. “ನನಗೆ ನಿನ್ನಮೇಲೂ ಅವಳ ಮೇಲೂ ಭಯಂಕರ ಕೋಪ ಹುಟ್ಟಿಬಿಟ್ಟಿತ್ತು. ನಿನಗಿಂತ ಹೆಚ್ಚಾಗಿ ಅವಳ ಮೇಲೆ. ಅವಳನ್ನು ಜಪ್ಪಿ ಕೊಂದು ಬಿಡಬೇಕು ಎಂದೂ ಅನ್ನಿಸಿತ್ತು. ಆದರೆ ಲಾಯರಿನ ವಿವೇಕ ನನ್ನನ್ನು ತಡೆದಿರಬಹುದು. ಅಥವಾ ನನ್ನ ಪೂರ್ವಜರು ಮಡಿದ ಪುಣ್ಯ. ಇರಲಿ. ಎಂಥ ಮಾಯಾವಿ ಅವಳು ಎನ್ನಿಸಿತು. ಹರಿದ್ವಾರದಲ್ಲಿ ನಿನ್ನ ಮೇಲಿನ ಪ್ರೀತಿಯನ್ನು ನನ್ನಿಂದ ಮುಚ್ಚಿಡಲು ಸಧ್ಯವಾಯಿತಲ್ಲ ಅವಳಿಗೆ, ಎಂದು ಹೆಣ್ಣಿನ ಮಾಯೆಯ ಬಗ್ಗೆಯೇ ಯೋಚಿಸುತ್ತ, ಯೋಚಿಸುತ್ತ ಸಂಕಟವಾಗತೊಡಗಿತು. “ಕೆಲವು ದಿನ ಅವಳನ್ನು ನೋಡುವುದನ್ನೇ ಬಿಟ್ಟುಬಿಟ್ಟೆ. ಒಂದು ದಿನ ಅವಳ ಮೇಲಿನ ನನ್ನ ಮೋಹವನ್ನು ಕಳೆದುಕೊಳ್ಳಲಾರದೆ ಅವಳ ಹತ್ತಿರ ಹೋದೆ. ಕಾಮಾತುರರಿಗೆ ಭಯವೂ ಇಲ್ಲ, ಲಜ್ಜೆಯೂ ಇಲ್ಲವೆನ್ನುತ್ತಾರೆ. ಅವಳ ಇಷ್ಟದಂತೆ ಗರ್ಭ ತೆಗೆಸಲೆಂದು ರಹಸ್ಯವಾಗಿ ಬೆಂಗಳೂರಿಗೆ ಅವಳನ್ನು ಕರೆದುಕೊಂಡು ಹೋದೆ. ಒಬ್ಬ ಡಾಕ್ಟರನ್ನು ಪತ್ತೆ ಮಡಿ ಮಾತೂ ಆಡಿದೆ. “ಆದರ ಹಿಂದಿನ ರಾತ್ರೆ ಹೋಟೆಲಿನ ಕೋಣೆಯೊಂದರಲ್ಲಿ ಅವಳು ನನ್ನ ಪಕ್ಕ ಮಗುವಿನಂತೆ ನಿದ್ರಿಸುತ್ತಿದ್ದಾಗ ನನ್ನ ಮನಸ್ಸಿನಲ್ಲಿ ಆದದ್ದನ್ನು ಯಾರಿಗೂ ನಾನು ಹೇಳಿಕೊಳ್ಳಲಾರೆ. ನನ್ನ ದೇವರೆ ಅದಕ್ಕೆ ಕಾರಣ ಎಂದುಕೊಂಡಿದ್ದೇನೆ. “ಥಟ್ಟನೆ ಅನ್ನಿಸಿತು: ಈ ಮಗು ನನ್ನದಾದರೆ ಏನಂತೆ? ದಿನಕರನದಾದರೆ ಏನಂತೆ? ಅದೂ ಒಂದು ಮಗು. ನಾನೂ ಒಂದು ಮಗುವಾಗಿ ಇದ್ದಂತೆ ಅದೂ ಒಂದು ಮಗು. ಅವಳ ಗರ್ಭದಲ್ಲಿ ಸಂಚರಿಸುತ್ತ ಬೆಳೆಯುತ್ತಿರುವ ಮಗು – ಅದು. ಅದು ಹುಟ್ಟಿಕೊಂಡು ಬೆಳೆಯಲಿ. ನನ್ನದೇ ಎಂದುಕೊಂಡುಬಿಡುತ್ತೇನೆ. “ಹೀಗೆ ಅನ್ನಿಸಿದ್ದೇ ಅವಳನ್ನು ಎಬ್ಬಿಸಿ ಹೇಳಿದೆ. ನನ್ನನ್ನು ಅಪ್ಪಿ ಅವಳು ಖುಷಿಯಲ್ಲಿ ಬಿಕ್ಕಿದಳು. ಮಾರನೇ ದಿವಸವೇ ಅವಳನ್ನು ಹಿಂದಕ್ಕೆ ಕರೆತಂದೆ. ನನ್ನನ್ನು ನೋಡಿದ್ದೇ ಅಮ್ಮನಿಗೆ ಏನೆನ್ನಿಸಿತೊ? ದೇವರ ಪೂಜೆ ಮಾಡದೆ ನೀನು ಅದೆಷ್ಟು ದಿವಸವಾಯಿತು? ಸ್ನಾನ ಮಾಡಿ ಪೂಜೆ ಮಾಡು ಎಂದರು. ನನ್ನಲ್ಲಾದ ಬದಲಾವಣೆಯಲ್ಲಿ ಅಮ್ಮನ ಅನುಗ್ರಹವೂ ಇದೆಯೆಂದು ನನಗನ್ನಿಸುತ್ತದೆ.”
ಆಕಾಶದಲ್ಲಿ ಸೂರ್ಯನ ಕಾಮಕೇಳಿ ಕೊನೆಗೊಂಡು ಚಂದ್ರನ ಅನುಗ್ರಹವಾಗಿತ್ತು. ಆಕಾಶ ನೆಮ್ಮದಿಯಲ್ಲಿ ಪ್ರಶಾಂತವಾದಂತೆ ಕಾಣುತ್ತಿದ್ದ ಹಾಗೆಯೇ, ಸಮುದ್ರದಲ್ಲಿ ಸಾವಿರಾರು ಶ್ವೇತಾಶ್ವಗಳು ರಣರಂಗದಲ್ಲಿ ನುಗ್ಗಿದಂತೆ ಬಿಳಿ ನೊರೆಯ ಅಲೆಗಳು ನುಗ್ಗಿ, ಚಾಚಿಕೊಂಡ ಗೆಳೆಯರ ಕಾಲುಗಳನ್ನು ಒದ್ದೆ ಮಾಡಿದವು. ದಿನಕರ ಮೊದಲು ಎದ್ದುನಿಂತ. ಇನ್ನೂ ಗಾಢವಾದ ಚಿಂತೆಯಲ್ಲಿದ್ದ ನಾರಾಯಣ ತನ್ನ ತೋರವಾದ ಮೈಯನ್ನು ಎರಡು ಕೈಗಳನ್ನು ಊರಿ ಎದ್ದು ನಿಂತ. ಅವನ ಕತ್ತಿನಲ್ಲಿದ್ದ ರುದ್ರಾಕ್ಷಿಯನ್ನು ದಿನಕರ ॒ಅಮನಿಸುತ್ತಿದ್ದಂತೆ ದಿನಕರನ ಕತ್ತಿನಲ್ಲಿದ್ದ ತಾಯಿತವನ್ನು ನಾರಾಯಣ ತಂತ್ರಿ ಗಮನಿಸಿದ. “ಯಾವಾಗಿನಿಂದಲೂ ಈ ತಾಯಿತ ನಿನ್ನ ಕತ್ತಿನಲ್ಲಿದೆಯಲ್ಲವೆ?” ನಾರಾಯಣ ಹೇಳಿಕೊಂಡ ಘಟನೆಯ ಭಾರದಲ್ಲಿ ತಾನೇನು ಮಾತಾಡಬೇಕೆಂದು ಹೊಳೆಯದೇ ಗೌರವದ ಮೌನದಲ್ಲಿದ್ದ ದಿನಕರನಿಗೆ ನಾರಾಯಣನ ಪ್ರಶ್ನೆಯಿಂದ ಹಗುರೆನ್ನಿಸಿತು. “ಅದು ಮಾತೃರಕ್ಷೆ. ಹೊಳೆಗೆ ಸ್ನಾನಕ್ಕೆಂದು ಹೋಗುವ ಮುಂಚೆ ಮುದ್ದಿಸಿ ನನಗಿದನ್ನು ತಾಯಿ ಕಟ್ಟಿದರು. ನೋಡು, ನನ್ನ ಯಾತನೆಗೆ ಉತ್ತರವೇ ಇಲ್ಲ. ಸಾಯಬೇಕೆಂದು ನಿರ್ಧಾರ ಮಾಡಿ ಇದನ್ನು ತನ್ನ ಕೊರಳಿಂದೆತ್ತಿ ನನಗೆ ಹಾಕಿದರೋ? ಅವರು ಕಾಲು ಜಾರಿ ಸತ್ತಿರಬಹುದೋ? ನನ್ನ ತಂದೆ ಯಾರು? ಅಮ್ಮನ ಕೊರಳಲ್ಲಿ ಕರಿಮಣಿ ಸರವೂ ಹಣೆಯಲ್ಲಿ ಕುಂಕುಮವೂ ಇತ್ತೆನ್ನುತ್ತಾರೆ. ಅಂದರೆ ನನ್ನ ತಂದೆಯನ್ನು ಅವರು ಬಿಟ್ಟಿರಲೇ ಬೇಕು. ಯಾಕೆ ಬಿಟ್ಟರು? ಟ್ರಂಕಿನಲ್ಲಿದ್ದ ಬಂಗಾರ ಯಾರದು? ನನ್ನ ಅಪ್ಪನದೆ? ಅಮ್ಮನದೆ? ಪಾಪದ ಬಂಗಾರ ಅದಿರಬೇಕು. ನನ್ನನ್ನು ಸಾಕಿದವರ ಮಕ್ಕಳ ದುರಾಸೆಯನ್ನು ಅದು ಬೆಳೆಸಿತು. ಮತ್ತೆ ನಾನು ಮದುವೆಯಾದವಳ ಭಂಡತನಕ್ಕದು ಕಾರಣವಾಯಿತು. “ಇವತ್ತಿನ ಬೆಲೆಯಲ್ಲಿ ಒಂದು ಕೋಟಿಗೂ ಹೆಚ್ಚಿನ ಬೆಲೆಯ ಚಿನ್ನ ಅದರಲ್ಲಿತ್ತು ಎನ್ನಿಸುತ್ತದೆ. ನನ್ನ ಅಮ್ಮ ಅದನ್ನು ಹಾರಿಸಿ ತಂದಿರಬೇಕು ಎನ್ನಿಸಿ ಕೆಲವು ಸಾರಿ ಯಾತನೆಯಾಗುತ್ತದೆ. ಹಾಳು ಚಿನ್ನ. ಅದರಲ್ಲಿ ಅರ್ಧದಷ್ಟು ಕಳಕೊಂಡು ಈಗ ಹಗುರಾಗಲು ತೊಡಗಿದ್ದೇನೆ ಎನ್ನು. ಅದು ಇನ್ನೊಂದು ದೊಡ್ಡ ಕಥೆಯೇ – ಈಗ ಬೇಡ” ಎಂದು ದಿನಕರ ನಡೆಯುತ್ತ ಆ ಕಥೆಯನ್ನೇ ಹೇಳತೊಡಗಿಬಿಟ್ಟ: “ತ್ರಿಪಾಠಿಗಳನ್ನು ನೋಡಿದ್ದೀಯಲ್ಲ. ಹಣೆಗೆ ಕುಂಕುಮ ಹಚ್ಚಿ, ನೀಟಾಗಿ ಮುಂಡನ ಮಾಡಿಸಿಕೊಂಡು, ದೊಡ್ಡ ಬಿಳಿ ಮೀಸೆಯಲ್ಲಿ ಜರಿ ಶಾಲು ಹೊದ್ದು, ಕೋಲು ಹಿಡಿದು ಅವರ ಆ ಕುರ್ಚಿಯಲ್ಲಿ ಕೂತಿರುತ್ತಿದ್ದರು. ಜಬರದಸ್ತಿನ ಅವರು ಈಗಲೂ ನನ್ನ ಕಣ್ಣಿಗೆ ಕಟ್ಟುತ್ತಾರೆ. ದೊಡ್ಡ ದನಿ ಅವರದು. ಕೂತಲ್ಲಿಂದಲೇ ಜಬರದಸ್ತಿನಲ್ಲಿ ಎಲ್ಲ ಕೆಲಸವನ್ನೂ ಮಾಡಿಸುತ್ತಿದ್ದುದು. ಫ್ಯೂಡಲ್ ಲಾರ್ಡೇ. ಆದರೆ ಮಹಾ ದಾನಿ. ತಾನು ಕಟ್ಟಿಸಿದ ಚತ್ರದಲ್ಲಿ ಬಂದವರಿಗೆಲ್ಲ ಅನ್ನದಾನವಾಗಬೇಕು ಪ್ರತಿನಿತ್ಯ. ಅಮ್ಮನ ಟ್ರಂಕಿನಲ್ಲಿದ್ದ ಒಂದು ಚೂರು ಬಂಗಾರವೂ ಖರ್ಚಾಗದಂತೆ ನನ್ನನ್ನು ಹಣ ಖರ್ಚು ಮಾಡಿ ಇಂಗ್ಲಿಷ್ ಶಾಲೆಗಳಲ್ಲಿ ಬೆಳೆಸಿದರು. ನನ್ನ ವಾರಿಗೆಯ ಅವರ ಮಗನನ್ನು ಮಾತ್ರ ತನ್ನಂತೆಯೇ ತ್ರಿಪಾಠಿ ಮಾಡಲು ಯತ್ನಿಸುತ್ತ ಅವನಿಗೆ ಸಂಸ್ಕೃತ ಕಲಿಸಿದರು. ಅವನಿಗೆ ಮೊದಲಿನಿಂದಲೂ ನನ್ನನ್ನು ಕಂಡರೆ ಆಗದು. ನನ್ನ ತಾಯಿಯನ್ನು ಗುಪ್ತವಾಗಿ ಹೀಯಾಳಿಸಿ ನನ್ನನ್ನು ಅಳಿಸುತ್ತಿದ್ದ. ತನಗಿಂತ ನಾನೆಂದರೆ ತನ್ನ ತಂದೆಗೆ ಹೆಚ್ಚು ಪ್ರೀತಿಯೆಂದು ನನ್ನನ್ನು ದ್ವೇಷಿಸುತ್ತಿದ್ದ. ತ್ರಿಪಾಠಿಗಳೂ ಹಾಗೆಯೇ. ಸರ್ವರನ್ನೂ ಅಷ್ಟೊಂದು ಜಬರದಸ್ತಿನ ಕರುಣೆಯಲ್ಲಿ ಕಾಣುತ್ತಿದ್ದವರು ಮಗನನ್ನು ನಿಷ್ಕರುಣೆಯಿಂದ ದಂಡಿಸುತ್ತಿದ್ದರು. “ಆದರೆ ನಾನು ಆಕ್ಸ್‌ಫರ್ಡಿಗೆ ಓದಲೆಂದು ಹೋಗುವ ಮುಂಚೆಯೇ ತ್ರಿಪಾಠಿಗಳ ವರ್ಚಸ್ಸು ಇಳಿಮುಖವಾಗಿತ್ತು. ಚತ್ರದಲ್ಲಿ ಪ್ರತಿನಿತ್ಯದ ಅನ್ನ ಸಂತರ್ಪಣೆಯನ್ನು ಅವರ ಮಗ ನಿಲ್ಲಿಸಿಬಿಟ್ಟಿದ್ದ. ತ್ರಿಪಾಠಿಗಳು ಮುದಿಸಿಂಹದಂತೆ ತಮ್ಮ ಹಳೆಯ ಕುರ್ಚಿಯಲ್ಲಿ ದಂಡ ಹಿಡಿದು ಕೂತು ವಿಷಣ್ಣರಾಗುತ್ತ ಹೋದರು. “ತ್ರಿಪಾಠಿಗಳು ಇಚ್ಛಾಮರಣಿಗಳು ಇರಬಹುದು ಎಂದು ನನಗೀಗ ಅನ್ನಿಸುತ್ತಿದೆ. ಒಂದು ಬೆಳಿಗ್ಗೆ ಗಂಗೆಯಲ್ಲಿ ಸ್ನಾನ ಮಾಡಿ ಬಂದವರು ದೇವರ ಕೋಣೆಯಲ್ಲಿ ನೆಟ್ಟನೆ ಕೂರಲಾರದೆ ಒಂದು ಮಣೆಗೆ ಒರಗಿ ಕೂತರು. ತನ್ನಂತೆಯೇ ಜುಟ್ಟು ಬಿಟ್ಟು ಸಂಸ್ಕೃತ ಬಲ್ಲವನಾಗಿದ್ದ ಮಗನನ್ನು ಕರೆಯಲಿಲ್ಲ. ಆದರೆ ಕ್ರಾಪಿನಲ್ಲಿ ಆಧುನಿಕನಾಗಿಬಿಟ್ಟಿದ್ದ ನನ್ನನ್ನು ಕರೆದು, ‘ಸ್ನಾನವಾಗಿದ್ದರೆ ಪಟ್ಟೆ ಮಡಿಯುಟ್ಟುಕೊಂಡು ಬಾ’ ಎಂದರು. ಅಮ್ಮ ಸತ್ತ ಮೇಲೆ ನನ್ನ ಎಂಟನೇ ವರ್ಷದಲ್ಲಿ ಅವರೇ ನನ್ನ ಕಿವಿಯಲ್ಲಿ ಗಾಯಿತ್ರಿ ಉಪದೇಶಿಸಿ ಉಪನಯನ ಮಾಡಿಸಿದಾಗ ಉಡಲೆಂದು ಕೊಟ್ಟಿದ್ದ ಪಟ್ಟೆ ಮಡಿಯನ್ನು ಹೊದ್ದುಕೊಂಡು, ಹಿಂದಿನ ನವರಾತ್ರಿಯಲ್ಲಿ ಅವರು ಕೊಟ್ಟಿದ್ದ ಜರಿ ರೇಷ್ಮೆಯ ಧೋತ್ರವನ್ನುಟ್ಟು ಅವರ ಎದುರು ಕೂತೆ. ನನ್ನದು ಇಂಪಾದ ಸ್ವರ – ಒಳ್ಳೆಯ ಗಾಯಕಿಯಾಗಿದ್ದ ನನ್ನ ತಾಯಿಯಿಂದ ನಾನು ಪಡೆದಿದ್ದಿರಬೇಕು ಎನ್ನುತ್ತಾರೆ. ಆದಿಶಂಕರರು ರಚಿಸಿದ ಸ್ತೋತ್ರಗಳನ್ನೆಲ್ಲ ವಾಚನ ಮಾಡು ಎಂದರು. ನಾನು ಬಾಯಿಗೆ ಕಲಿತದ್ದನ್ನು ಪಠಿಸುವ ಮುಂಚೆ ಏನೋ ನೆನೆಸಿಕೊಂಡು ತನ್ನ ಚೀಲದಲ್ಲಿರುವ ’ಬೀಗದ ಕೈಯನ್ನು ತೆಗೆದುಕೊಂಡು ಬಾ’ ಎಂದರು. ತಂದು ಅವರಿಗೆ ಕೊಟ್ಟೆ. ದೊಡ್ಡ ಕೀಗೊಂಚಲಿನಿಂದ ಒಂದು ಬೀಗದ ಕೈಯನ್ನು ಬಿಡಿಸಿ ನನಗೆ ಕೊಟ್ಟರು. “ನಿನ್ನ ತಾಯಿಯ ಚಿನ್ನ ನನ್ನ ಪುಟ್ಟ ತಿಜೋರಿಯಲ್ಲಿದೆ. ಅದರ ಕೀ ಇದು. ಜೋಪಾನ, ದುರಾಸೆಯ ನನ್ನ ಮಗನಿಗಿದು ಸಿಗದಂತೆ ಇಟ್ಟುಕೋ. ಇಂಗ್ಲೆಂಡಿಗೆ ಹೋಗುವಾಗ ಇದನ್ನು ಇಲ್ಲಿ ಬಿಡಬೇಡ. ಹಿಂದೆ ಬಂದವನು ಈ ಮನೆಯಲ್ಲಿ ಬೆಳದದ್ದಕ್ಕೆ ನನ್ನ ಕಾಣಿಕೆಯಾಗಿ ಗಂಗಾ ನದಿಯ ದಂಡೆಯ ಮೇಲಿನ ನಮ್ಮ ಹಿರಿಯರು ಕಟ್ಟಿಸಿದ ದೇವಸ್ಥಾನದ ಅಚ್ಚುಕಟ್ಟನ್ನು ಉತ್ತೀರ್ಣಗೊಳಿಸು. ಇಂಗ್ಲೆಂಡಿನಲ್ಲಿ ಅಭಕ್ಷ್ಯ ಭೋಜನ, ಅಪೇಯಪಾನ ಮಾಡಬೇಡ. ಹಿಂದೆ ಬಂದು ಕುಲೀನಳಾದ ಹೆಣ್ಣನ್ನು ಕೈಹಿಡಿದು ಸದ್ಗೃಹಸ್ಥನಾಗು’ ಎಂದು ನಮಸ್ಕರಿಸಿದ ನನ್ನನ್ನು ಆಶೀರ್ವದಿಸಿದರು. “ನಾನು ಶಂಕರರ ಸ್ತೋತ್ರಗಳನ್ನು ಪಠಿಸುತ್ತಿದ್ದಾಗ, ಕಣ್ಣು ಮುಚ್ಚಿದವರು ಮತ್ತೆ ಕಣ್ಣುತೆರೆಯಲಿಲ್ಲ. “ನಾನು ಇಂಗ್ಲೆಂಡಿಂದ ಬಂದ ಮೇಲೆ ದೇವಸ್ಥಾನವನ್ನು ದುರಸ್ತಿಗೊಳಿಸಿದೆ. ಅದೂ ಅವರ ಮಗನಿಗೆ ಬೇಕಾಗಿರಲಿಲ್ಲ. ತ್ರಿಪಾಠಿಗಳು ಕಟ್ಟಿಸಿದ ಛತ್ರ ಕ್ರಮೇಣ ಹೋಟೆಲಾಗತೊಡಗಿತ್ತು. ಅಲ್ಲಿ ಇಳಿದುಕೊಂಡವರು ಕಾಣಿಕೆಯೆಂಬ ನೆವದಲ್ಲಿ ದಿನಕ್ಕಿಷ್ಟೆಂದು ಹಣ ಕೊಡಬೇಕಾಗಿತ್ತು. ಬಿಸಿ ನೀರಿಗೆ ಬೇರೆ ಹಣ ಕೊಡಬೇಕಾಗಿತ್ತು. “ನನಗೆ ದುಃಖವಾಯಿತು. ಒಂದು ದಿನ ತ್ರಿಪಾಠಿಗಳ ಈ ಹಿರಿಯ ಮಗ ಒಂದು ಲೆಖ್ಕದ ಪುಸ್ತಕ ತಂದು, ಹಳದಿಯಾಗಿಬಿಟ್ಟ ಹಳೆಯ ಹಾಳೆಗಳ ಮೇಲೆ ತಾನೇ ಬರೆದದ್ದನ್ನು ತನ್ನ ತಂದೆ ಬರೆದದ್ದೆಂದು ಕೃತಕವಾಗಿ ನಗುತ್ತ ಹೇಳಿದ: ’ನಿನ್ನನ್ನು ಸಾಕಿ ಸಲುಹಲು ಆದ ಖರ್ಚು ಇದು’ “ಸುಮಾರು ಹತ್ತು ಲಕ್ಷದ ವೆಚ್ಚವನ್ನು ನನ್ನ ಎದಿರು ಇಟ್ಟಿದ್ದ. ನನಗೆ ಭಯಂಕರ ಹೇಸಿಗೆಯಾಗಿ ಮೈನಡುಗತೊಡಗಿತ್ತು. ತಿಜೋರಿಯಲ್ಲಿದ್ದ ಟ್ರಂಕನ್ನು ತೆರೆದು “ನಿನ್ನ ತಂದೆ ಬರೆದಿಟ್ಟ ಲೆಖ್ಖ ಇದೆಂದು ಸುಳ್ಳು ಬೊಗಳಿ, ಅವರ ಆತ್ಮಕ್ಕೆ ಅಪಚಾರ ಮಾಡಬೇಡ. ಎಷ್ಟು ಬೇಕೋ ಅಷ್ಟು ತೆಗೆದುಕೊಂಡು ಬಿಡು” ಎಂದೆ. ಅವನು ಅಧೀರನಾಗಿ ಬಿಟ್ಟದ್ದು ಕಂಡು ನಾನೇ ಚಿನ್ನದ ಕೆಲವು ಗಟ್ಟಿಗಳನ್ನು ಮಾರಿ ಅವನಿಗೆ ಹತ್ತು ಲಕ್ಷ ಕೊಟ್ಟುಬಿಟ್ಟೆ. ಇನ್ನೂ ಉಳಿದಿದ್ದ ಬಂಗಾರದ ರಾಶಿಯನ್ನು ತೆಗೆದುಕೊಂಡು ಅಲ್ಲಿ ನಿಲ್ಲದೆ ದೆಹಲಿಗೆ ಹೋಗಿಬಿಟ್ಟೆ”. ನಾರಾಯಣ ಹೂಂಗುಟ್ಟದೆ ಜೊತೆಗೆ ನಡೆಯುತ್ತಿದ್ದುದು ಭಾಸವಾಗಿ, ದಿನಕರನಿಗೆ ತನ್ನ ಬಗ್ಗೆ ನಾಚಿಕೆಯಾಯಿತು. ಗಂಗೂ ಮಗ ನಿನ್ನ ಮಗನೂ ಇರಬಹುದು. ಆದರೆ ಅವನನ್ನು ನನ್ನ ಮಗನೆಂದೂ ತಿಳಿದು ಬೆಳೆಸಿದೆ ಎಂದು ಹೇಳಿಕೊಂಡ ಅವನ ಪರಮ ಉದಾತ್ತವಾದ ತ್ಯಾಗ ಭಾವನೆಗೆ ಇದು ನನ್ನ ಪ್ರತಿಕ್ರಿಯೆಯೆ? ಬಂಗಾರವನ್ನು ಕೊಟ್ಟುಬಿಟ್ಟೆನೆಂದು ಕೊಚ್ಚಿಕೊಳ್ಳುವುದೆ? ನಾರಾಯಣನ ಕಾಲುಮುಟ್ಟಿ ನಮಸ್ಕರಿಸಬೇಕು ಎಂದುಕೊಳ್ಳುತ್ತಿದ್ದಂತೆ ತನಗೆ ಆಶ್ಚರ್ಯವಾಗುವಂತೆ ನಾರಾಯಣ ಇನ್ನೇನೋ ಅಪ್ರಕೃತವಾದ ಮಾತನ್ನು ಕೇವಲ ಲಾಯರಾಗಿ ಹೇಳಿಬಿಡುವುದೆ?: “ಬಂಗಾರವನ್ನೇನೂ ನೀನು ಕೊಡಬೇಕಾಗಿರಲಿಲ್ಲ. ಅವನು ತೋರಿಸಿದ ಲೆಖ್ಖ ತ್ರಿಪಾಠಿಗಳ ಕೈಬರಹವಲ್ಲ, ಫೋರ್ಜರಿ ಎಂದು ನೀನು ವಾದಿಸಬೇಕಾಗಿತ್ತು. ಅವನು ಕೋರ್ಟಿಗೆ ಏನಾದರು ಹೋಗಿದ್ದರೆ ಅವನ ವಾದ ನಿಲ್ಲುತ್ತಿರಲಿಲ್ಲ. ಹೋಗಲಿ – ಅವನು ಈ ಹಣವನ್ನು ಅವನ ತಮ್ಮಂದಿರ ಜೊತೆ ಹಂಚಿಕೊಂಡನೊ ಇಲ್ಲವೊ ನೀನು ತಿಳಿಯಬೇಕಿತ್ತು. ಪಿತ್ರಾರ್ಜಿತ ಹಣ ಅದು”. ಅಷ್ಟು ದೊಡ್ಡ ಮಾತುಗಳನ್ನಾಡಿ ತನ್ನನ್ನು ಸಂಕಟಕ್ಕೆ ಸಿಕ್ಕಿಸಿದ ನಾರಾಯಣನಿಗೆ ಸದಾ ಇರುವಂತೆ ಕಾಣುವ ಲೌಕಿಕ ವ್ಯವಹಾರಜ್ಞತೆಯಿಂದ ದಿನಕರನಿಗೆ ಹಗುರಾಯಿತು. ಆದರೆ ಇಂಥವನೂ ಉದಾತ್ತತೆಯಲ್ಲಿ ಹೊರಳಿಬಿಡಬಲ್ಲ ಮನುಷ್ಯನೆಂಬುದು ತನ್ನನ್ನು ನಾಚಿಸಿತ್ತು. ಹೀಗೆ ನಾಚುವ ತಾನು ಏನಾದರೂ ಅವರ ಕಾಲುಮುಟ್ಟಿ ನಮಸ್ಕರಿಸಿದ್ದರೆ ಅದು ತನ್ನ ಆತ್ಮಾಭಿಮಾನವನ್ನು ಬೆಳೆಸಿಕೊಳ್ಳುವ ಕ್ರಿಯೆಯಾಗುತ್ತಿತ್ತೇ ಹೊರತು ಸತ್ಯಕ್ಕೆ ಎದುರಾಗಿ ಹೊರಳಿಕೊಳ್ಳುವ ಒಳ ಬದುಕಿನ ಚಿಹ್ನೆಯಾಗುತ್ತಿರಲಿಲ್ಲ. ನಿಜವಾಗಿ ಅವನು ಗಂಗೂ ಜೊತೆಗಿನ ತನ್ನ ಹರಿದ್ವಾರದ ಪ್ರಣಯ ಹೇಳಿಕೊಳ್ಳುವಾಗ ನನ್ನ ಒಳಗಿಂದ ಅನ್ನಿಸುತ್ತಿದ್ದುದಾದರೂ ಏನು? ಪಶ್ಚಾತ್ತಾಪವೇ? ಅರೆ ತಿಳಿಯದವಳು ಎಂದು ಮೊದಲಿನ ಸಲ ತಾನು ಬಲಾತ್ಕಾರ ಮಾಡಿದಾಗ ಕಂಡ ಗಂಗೂ ಎಷ್ಟು ಬೇಗ ನನಗೇ ಕಲಿಸಲು ಪ್ರಾರಂಭಿಸಿದ್ದಳು? ತನ್ನಿಂದ ಕೌಮಾರ್ಯ ಕಳೆದುಕೊಂಡವಳು ಮದುವೆಯ ಸುಖ ಕಂಡಿದ್ದ ಅವನಿಂದ ಕಲಿತದ್ದನ್ನು ತನಗೇ ಕಲಿಸಲು ತೊಡಗಿದ್ದಳೆ? ಅವಳನ್ನು ಕೂಡಿದ ಸಮಯಗಳನ್ನು ನೆನೆಸಿಕೊಳ್ಳಲು ದಿನಕರ ಶುರು ಮಾಡಿದ್ದ. ತಾಯಿಯೂ ಮಗನೂ ದೇವರ ದರ್ಶನಕ್ಕೆ ಹೋಗಿದ್ದಾಗ ಬೇಗ ಬೇಗ ಗೋಪಾಲನನ್ನು ಮಲಿಗಿಸಿಯೋ, ತ್ರಿಪಾಠಿಗಳ ಮಗನ ಜೊತೆ ಆಡಲು ಬಿಟ್ಟೋ, ಯಾರೂ ಹೋಗದ ಮನೆಯ ಅಟ್ಟದ ಮೂಲೆಯಲ್ಲಿ ತ್ರಿಪಾಠಿಗಳ ಮಂತ್ರ ಪಠನ ಕೇಳುತ್ತಿದ್ದಂತೆಯೇ ತಾವು ಅವಸರದಲ್ಲಿ ಕೂಡುವುದು. ಆ ಜಾಗದಲ್ಲಿ ಈ ನಾರಾಯಣನನ್ನೂ ತಾನಿಲ್ಲದಾಗ ಅವಳು ಕೂಡಿರಬಹುದೆ? ಮತ್ತೆ ಎಲ್ಲರೂ ಒಬ್ಬರ ಪಕ್ಕ ಒಬ್ಬರು ಸಾಲಾಗಿ ಮಲಗಿದ್ದಾಗ ತನ್ನ ಜೊತೆ ಗಂಗಾತಟದಲ್ಲಿ ಸುತ್ತಾಡಿ ಬರುತ್ತೇನೆಂದು ಹೇಳಿ, ಅಂಥ ಛಳಿಯಲ್ಲೂ ತ್ರಿಪಾಠಿಗಳ ಪೂರ್ವಿಕರು ಕಟ್ಟಿಸಿದ ದೇವಸ್ಥಾನದ ಬಾಗಿಲು ತೆರೆದು, ಗಣೇಶನನ್ನು ಕೆತ್ತಿದ ಕಲ್ಲು ಗೋಡೆಯ ಕೆಳಗೆ ಕೂಡುವುದು, ಕುಂಕುಮ ಗಂಧಗಳ ವಾಸನೆಯ ಎಣ್ಣೆಯಿಂದ ಒದ್ದೆಯಾದ ಕಲ್ಲಿನ ಮೇಲೆ. ಮತ್ತೆ ಕಾಶಿಯಲ್ಲಿ ಅವಳ ಇಷ್ಟದಂತೆ ತಾನೂ ಅವರ ಜೊತೆ ಹೋದಾಗ ತನ್ನ ಕಿರು ಕೋಣೆಯಲ್ಲೇ, ಹರಕು ಚಾಪೆಯ ಮೇಲೇ. ರಾತ್ರೆ ಎಲ್ಲರೂ ನಿದ್ದೆ ಮಾಡುವಾಗ, ತಾಯಿ ಜೊತೆ ಮಲಗುವ ನಾರಾಯಣನ ಜೊತೆ ಎಲ್ಲಿ ಅವಳು ಕೂಡಿದ್ದೋ? ಅವಳ ಗುಪ್ತ ಸಮಯಗಳೆಲ್ಲ ನನ್ನವು ಮಾತ್ರ ಎಂದುಕೊಂಡಿದ್ದೆ. ಮತ್ತೆ ಯಾವ ಸಮಯವನ್ನು ನನ್ನ ಕಣ್ಣು ತಪ್ಪಿಸಿ ಅವನ ಜೊತೆ ಕಳೆದಳು ಹಾಗಾದರೆ? ಹರಿದ್ವಾರದಲ್ಲಿ? ಕಾಶಿಯಲ್ಲಿ? ಮಥುರಾದಲ್ಲಿ? ಬೆಳಗಿನ ಜಾವ ತಾನು ಎದ್ದು ಛತ್ರದಲ್ಲಿ ಇಳಿದು ಕೊಂಡವರಿಗೆ ಬಕೇಟಿನಲ್ಲಿ ಬಿಸಿನೀರು ಸರಬರಾಜು ಮಾಡಬೇಕು. ಚಳಿಯಲ್ಲಿ ಗಂಗಾಸ್ನಾನ ಮಾಡಲಾರದ ಮುದುಕರು ಮಕ್ಕಳು ಇರುತ್ತಿದ್ದರು. ಮತ್ತೆ ಎಲ್ಲರಿಗೂ ಮಧ್ಯಾಹ್ನದ ಊಟ ಬಡಿಸುವಾಗ? ಕಾಲೇಜಿನ ಆ ರಜಾದಿನಗಳಲ್ಲಿ ತಾನೇ ವಹಿಸಿಕೊಂಡಿದ್ದ ಕೆಲಸಗಳು ಇವು. ಅವು ಈ ನಾರಾಯಣನ ಗುಪ್ತ ಸಮಯಗಳಾಗಿರಬಹುದು. ಮತ್ತೆ ತನ್ನ ಸಹಪಾಠಿಗಳ ಮನೆಗೆ ತಾನು ಹೋಗಿರಬಹುದಾದ ಕ್ಷಣಗಳಲ್ಲೇ? ‘ನನ್ನ ಜೊತೆಯೇ ಇದ್ದು ನಿಮಗೆ ಬೇಜಾರಾಗಿರಬಹುದು. ಅಡ್ಡಾಡಿ ಬನ್ನಿ. ಕಾದಿರುತ್ತೇನೆ’ ಎಂದು ಅವಳು ಹೇಳಿದ್ದು ನೆನಪಾಗುತ್ತದೆ. ಆದರೆ ಮನೆಯಲ್ಲೇ ಇದ್ದಾಗ ಮಾತ್ರ ತನ್ನ ಕಣ್ಣು ತಪ್ಪಿಸಿ ಇರಲು ಅವಳನ್ನು ತಾನು ಬಿಟ್ಟದ್ದಿಲ್ಲ. ಗಂಗು ಅವಳ ಗುಟ್ಟನ್ನು ಬಸುರಿಯಾಗಿ ನಾರಾಯಣನಿಗೆ ಹೇಳಿಬಿಟ್ಟಾಗ ಅವನ ಕಣ್ಣು ತಪ್ಪಿಸಿ ಅವಳು ತನ್ನನ್ನು ಕೂಡಿದ ವಿವರಗಳನ್ನು ಹೀಗೆಯೇ ನಾರಾಯಣ ಚಿಂತಿಸಿ ಯಾತನೆ ಪಟ್ಟಿರಬೇಕು. ತನ್ನ ಕಾಮಚೇಷ್ಟೆಯ ವಿವರಗಳನ್ನು ಅವನು, ಅವನ ಕಾಮಚೇಷ್ಟೆಯ ವಿವರಗಳನ್ನು ಈಗ ತಾನು ಯೋಚಿಸುವಾಗ ತಾನಾಗಲೀ ಅವನಾಗಲೀ ಹೊರಳಿಕೊಂಡು, ಸಂಸಾರದ ಭ್ರಮಾತ್ಮಕ ಮಾಯೆಯನ್ನು ತಿಳಿಯುವುದಿಲ್ಲ. ಬದಲಾಗಿ ಇನ್ನಷ್ಟು ಕಾಮಜ್ವರದಿಂದ ಪೀಡಿತರಾಗುತ್ತೇವೆ. ಹುಡುಕಿ ತಡಕಿ ಅದನ್ನೇ ಮೆಲುಕು ಹಾಕುತ್ತೇವೆ. ಮತ್ತೆ ಇನ್ನೊಂದು ಹೆಣ್ಣನ್ನು ಕೂಡುವ ತನಕ ಪ್ರೇತದಂತೆ ಅಲೆಯುತ್ತಿರುತ್ತೇವೆ. ಹೀಗೆ ಎಂದುಕೊಳ್ಳುತ್ತಲೇ ತಾನು ಬಯಸಬಾರದ ಗಂಗೂನ್ನ ಬಯಸಿ ಸ್ನೇಹಿತನಿಗೆ ದ್ರೋಹ ಬಗೆಯುವಂತೆ ತನ್ನ ರಕ್ತ ಚಲಿಸಿತ್ತು. ರಹಸ್ಯದ ಕತ್ತಲಲ್ಲಿ ಅವಳು ತನ್ನನ್ನು ತೀವ್ರವಾಗಿ ಪಡೆದು ಬಿಕ್ಕುತ್ತಿದ್ದ ನೆನಪಾಗಿತ್ತು. ಅವಳ ನಡುಪ್ರಾಯದ ಲಾವಣ್ಯ ಈಗಲೂ ಅವಳು ಮೆಟ್ಟಿಲನ್ನು ಇಳಿದುಬರುವಾಗ ತನ್ನನ್ನು ಕಂಪಿಸುವಂತೆ ಮಾಡಿತ್ತು. ಅವಳು ತನ್ನ ಪ್ರಥಮಳು; ಸ್ತೀಸುಖವನ್ನು ತನ್ನಲ್ಲಿ ಅರಳಿಸಿ ವಾಸನೆಯಾಗಿ ಉಳಿದೇ ಬಿಟ್ಟವಳು. ಇದನ್ನು ಸಮುದ್ರತೀರದಲ್ಲಿ ನೆನೆದು, ಭವದಿಂದ ತನಗೆ ಬಿಡುಗಡೆಯಿಲ್ಲ ಎಂದು ನಿಟ್ಟುಸಿಟ್ಟಿದ್ದ. ಈ ತನ್ನ ನಿಟ್ಟುಸಿರೂ ದುಃಖದ್ದಲ್ಲ, ಬಳಲಿಕೆಯಿಂದಾಗಿತ್ತು. ಬಳಲಿಕೆಯಲ್ಲಿ ಕುಗ್ಗುತ್ತಿರುವ ಬಯಕೆಯಿಂದಾಗಿತ್ತು. ನಾರಾಯಣ ತನ್ನ ಲಾಯರುತನದಿಂದ ಬಿಡುಗಡೆಯಾಗಿ ಮತ್ತೆ ಮಾತಾಡತೊಡಗಿದ್ದ. ಹಿತವಾದ ಚಂದ್ರನ ಬೆಳಕಿನಲ್ಲಿ ಶುಭ್ರವಾದ ಮರಳಿನ ದಂಡೆಯ ಮೇಲೆ ಈ ಮಾತುಗಳನ್ನು ಕನಸಿನಲ್ಲಿ ಕೇಳಿಸಿಕೊಳ್ಳುತ್ತಿರುವಂತೆ ಶುರುವಾಗಿ ದಿನಕರ ಮತ್ತೆ ವಿಚಲಿತನಾದ.

ಅಧ್ಯಾಯ ೬

“ಗಂಗೂ ಮಗನ ಹೆಸರು ಪ್ರಸಾದ ಎಂದು. ಯಾರ ಮಗನೆಂದು ತಿಳಿಯದ್ದರಿಂದ ಹರಿದ್ವಾರದ ಪ್ರಸಾದ ಎಂದು ಹೆಸರಿಟ್ಟೆವು” ನಾರಾಯಣ ತಿಳಿಹಾಸ್ಯದಲ್ಲಿ ಹೇಳಿದ ಈ ಮಾತು ದಿನಕರನನ್ನು ಒಳಪಡಿಸುವಂತೆ ಇತ್ತು. ಇಪ್ಪತ್ತೈದು ವರ್ಷಗಳ ನಂತರವೂ ನಿನಗೂ ಈ ಹೆಸರು ಒಪ್ಪಿಗೆಯಾಗಬಹುದು ಎನ್ನುವಂತೆ ಸಜ್ಜನಿಕೆಯ ಲೌಕಿಕತೆಯ ಧ್ವನಿ ಅದರಲ್ಲಿತ್ತು. ದಿನಕರ ಈ ಮಾತಿಗಾಗಿ ನಾರಾಯಣನನ್ನು ಗೌರವಿಸಿದ. ತನ್ನನ್ನು ಗೆಳೆಯ ಮೀರಿದ್ದಾನೆಂದು ಸಮಾಧಾನವಾಯಿತು.ಆದರೆ ಮುಂದಿನ ಮಾತುಗಳು ತನ್ನನ್ನು ಚಿರದುಃಖಕ್ಕೆ ತಳ್ಳಿದ್ದವು: “ಪ್ರಸಾದನಿಗೆ ಐದು ವರ್ಷಗಳಾಗುವ ತನಕ ಗಂಗು ಮತ್ತು ನಾನು ನಿರಾತಂಕವಾಗಿ, ಆದರೆ ರಹಸ್ಯವಾಗಿ ಅವಳ ಮನೆಯಲ್ಲೇ ಕೂಡುತ್ತಿದ್ದೆವು. ಚಂದ್ರಪ್ಪ ನಮಗೆ ರಕ್ಷೆಯಾಗಿ ಬಿಟ್ಟಿದ್ದ. ನಾನೂ ಅವಳೂ ಕೋಣೆಯಲ್ಲಿದ್ದಾಗ ಅವನು ಗೇಟಿನ ಹೊರಗೆ ಸೌದೆ ಒಡೆಯುತ್ತಲೋ, ಬಾವಿಯಿಂದ ಹೂದೋಟಕ್ಕೆ ನೀರು ಸೇದಿ ಹಾಕುತ್ತಲೋ ಇರುತ್ತಿದ್ದ. ಯಾರಾದರೂ ಬಂದು ಕೇಳಿದರೆ ಗಂಗೂ ಇಲ್ಲ ಎಂದು ಬಿಡುತ್ತಿದ್ದ. ಆ ಮಂದ ಬುದ್ಧಿಗೂ ಅಷ್ಟು ಅರಿವಾಗುತ್ತದೆ ಎಂದು ನನಗೆ ಸಂಕಟವಾಗುತ್ತಿತ್ತು. ಗಂಗೂಗೆ ಏನನ್ನಿಸುತಿತ್ತೋ. ಅವನ ಉಪಕಾರವನ್ನು ಹೇಗೆ ತೀರಿಸುವುದು ಎಂದು ನಮಗೆ ಗೊತ್ತಾಗುತ್ತಿರಲಿಲ್ಲ. ಪ್ರಸಾದ ಬೆಳೆಯುತ್ತಿದ್ದಂತೆ ಆತಂಕಗಳು ಹೆಚ್ಚಾದವು. ನಮ್ಮ ಪ್ರೀತಿ ಅವಸರದ್ದಾಗಿಬಿಟ್ಟಿತು. ಮುಗಿದರೆ ಸಾಕು ಎಂದು ಅವಳಿಗೆ ಅನ್ನಿಸುತ್ತಿದೆಯೆಂದು ನನ್ನ ಏಕಾಗ್ರತೆ ಕಡಿಮೆಯಾಯಿತು. ನಿನ್ನ ಯೋಚನೆಯೂ ಆಗುತ್ತಿತ್ತು. ಆದರೆ ಸುಖಪಟ್ಟಾದ ಮೇಲೆ ನೀನು ಗಂಗೂನ್ನ ಹಂಚಿಕೊಂಡಿರಲಿಲ್ಲ. ನಮ್ಮ ಪಾಲಿಗೆ ಕಣ್ಮರೆಯಾಗಿ ಬಿಟ್ಟಿದ್ದಿ. ಪ್ರಸಾದ ಮಾತ್ರ ನಿನ್ನ ನೆನಪು ತರುತ್ತಿದ್ದ. “ಪ್ರಸಾದ ಬೆಳೆಯುತ್ತಿದ್ದಂತೆ ಅಸ್ವಸ್ಥನಾದ. ಶಾಲೆಯಲ್ಲಿ ಮಕ್ಕಳು ಅವನನ್ನು ಹಂಗಿಸುತ್ತಿದ್ದರು. ನನ್ನ ಮಗ ಗೋಪಾಲನೂ ಅಸ್ವಸ್ಥನಾದ. ತಾನೇ ಬೆಳೆಸಿದ ಮಗುವನ್ನು ಅವಳು ನೋಡಬಂದರೆ ಅವನು ಅವಳನ್ನು ಕಂಡದ್ದೇ ಕಿರಿಕಿರಿಯಾಗುತ್ತಿದ್ದ. ನನ್ನ ಅಮ್ಮ ಗದರಿಸಿದರೆ ಮಾತ್ರ ಸುಮ್ಮನಾಗುತ್ತಿದ್ದ. ಅಮ್ಮನ ರಕ್ಷೆಯಲ್ಲಿ ನಾನು ಅನೈತಿಕವಾಗಿ ನಡೆದುಕೊಳ್ಳುತ್ತಿದ್ದೇನೆ ಎಂದು ಆಗಾಗ ಅನ್ನಿಸುತ್ತಿತ್ತು. ಆದರೆ ಹೀಗೆಲ್ಲ ಅನ್ನಿಸುವುದರಿಂದ ಏನೂ ಪ್ರಯೋಜನವಿಲ್ಲ. ಮಾಯೆಯಿಂದ ನಾವು ಹಾಗೆಲ್ಲ ಬಿಡುಗಡೆ ಪಡೆಯುವುದಿಲ್ಲ. ನಾನು ಪ್ರಸಿದ್ಧನಾಗುತ್ತ ಹೋದಂತೆ ಎಲ್ಲರೂ ನನ್ನನ್ನು ಒಪ್ಪಿಕೊಂಡು ಬಿಟ್ಟಂತೆ ಕಾಣಿಸಿತು. ನಮ್ಮ ಸಂಬಂಧ ಎಲ್ಲರಿಗೆ ಗೊತ್ತಿದ್ದ ಗುಟ್ಟಾಯಿತು. “ಪ್ರಸಾದ ಮನೆಯಲ್ಲಿದಾಗ ನಾನು ಹೋಗುತ್ತಿರಲಿಲ್ಲ. ಆದರೆ ಕ್ರಮೇಣ ಕದ್ದು ಮುಚ್ಚಿ ಕೂಡುವುದು ಕಠಿಣವಾಗುತ್ತ ಹೋಯಿತು. ಈ ಹತ್ತು ವರ್ಷಗಳಿಂದ ಹೀಗೆ. ನಾವು ನಿರಾಯಾಸವಾಗಿ ಕೂಡಿ ಹತ್ತು ವರ್ಷಗಳ ಮೇಲಾಗಿರಬಹುದು. ಅದಕ್ಕೆ ಕಾರಣ, ಒಂದು ದಿನ ಪ್ರಸಾದ ಬಾಯಿಬಿಟ್ಟು ತಾಯಿಗೆ ಹೇಳಿದ್ದು: ‘ಅವನು ನನ್ನ ಅಪ್ಪನಾದರೆ ನಿನ್ನನ್ನು ಮದುವೆಯಾಗಲಿ’ ಎಂದುಬಿಟ್ಟನಂತೆ. ಆದರೆ ಅದು ನನಗೆ ಸಾಧ್ಯವಿರಲಿಲ್ಲ ಎಂದುಕೊಂಡೆ. ನರಳಿದೆ. ಆದರೆ ನರಳಿ ಯಾವ ಪ್ರಯೋಜನ ಹೇಳು. “ಪ್ರಸಾದ ಸ್ಕೂಲಿಗೆ ಹೋಗುವುದೇ ಬಿಟ್ಟುಬಿಟ್ಟ. ಮನೆಯಲ್ಲಿ ಮಂಕಾಗಿ ಕೂತಿರುವುದಕ್ಕೆ ಶುರು ಮಾಡಿದ. ಗಂಗೂ ತುಂಬ ಒಳ್ಳೆಯ ಟೀಚರೆಂದು ಹೆಸರು ಮಾಡಿದ್ದಳು. ಮಗನ ದುಃಖವನ್ನು ಹೊಟ್ಟೆಯಲ್ಲಿಟ್ಟುಕೊಂಡು ನರಳತೊಡಗಿದಳು. ಆದರೆ, ನರಳುತ್ತಿದ್ದರೆ ನರಳುತ್ತಲೇ ಇರುತ್ತೇವೆ. ಏನೂ ಬದಲಾಗಲ್ಲ. ನನ್ನನ್ನು ಹೇಗೆ ಅವಳು ಬಿಟ್ಟಾಳು ಹೇಳು? “ಆದರೆ ಎಲ್ಲ ಬದಲಾಗಲು ಪ್ರಾರಂಭವಾಯಿತು. ಪ್ರಸಾದ ಸಂಗೀತ ಕಲಿಯಲು ತೊಡಗಿದ. ಸಂಗೀತದಲ್ಲಿ ಅವನು ಬೆಳೆಯುತ್ತಲೇ ಹೋದ. ಆದರೆ ಯಾರಿಗೂ ಅವನು ಹಾಡಲು ಮಾತ್ರ ಒಲ್ಲ. ಒಮ್ಮೊಮ್ಮೆ ನಮ್ಮ ಮನೆಗೆ ಬಂದು ಅಮ್ಮನಿಗೆ ಮಾತ್ರ ಭಜನೆಗಳನ್ನು ಹಾಡುವನು. ಆದರೆ ಸ್ವತಃ ತನ್ನ ತಾಯಿಗೇ ಹಾಡುತ್ತಿರಲಿಲ್ಲ. ನಾನು ಎದುರು ಬಂದರಂತೂ ಹಾಡುವುದನ್ನು ನಿಲ್ಲಿಸಿ ಬಿಡುತ್ತಿದ್ದ. “ಆದರೆ, ವಿಚಿತ್ರವೆಂದರೆ ಮನೆಯಲ್ಲಿ ತನ್ನ ಕೋಣೆಯಲ್ಲಿ ಕೂತು ಅವನು ಗಂಟೆಗಟ್ಟಳೆ ಹಾಡಿಕೊಳ್ಳುತ್ತಿದ್ದುದು ಚಂದ್ರಪ್ಪನ ಎದುರಿಗೆ ಮಾತ್ರ. ಏನೂ ಅರಿಯನೆಂದು ಮೂಕಪಶುವೆಂದು ನಾವು ತಿಳಿದ ಚಂದ್ರಪ್ಪ ಪ್ರಸಾದನ ಎದುರು ಬಾಯ್ಬಿಟ್ಟು ಕೂತು ಗಂಟೆಗಟ್ಟಳೆ ಕೇಳಿಸಿಕೊಳ್ಳುತ್ತಿದ್ದ. ಹಾಡುವುದಕ್ಕೆ ಮುಂಚೆ, ಹಾಡಿಯಾದ ಮೇಲೆ ಪ್ರಸಾದ ಚಂದ್ರಪ್ಪನಿಗೂ, ತನ್ನ ತಂಬೂರಿಗೂ ನಮಸ್ಕಾರ ಮಾಡುತ್ತಿದ್ದ. “ಪ್ರಸಾದನ ವೈರಾಗ್ಯ ಬೆಳೆಯುತ್ತಾ ಹೋಗಿರಬೇಕು. ಆಮೇಲಿಂದ ನನ್ನನ್ನು ಕಂಡರೂ ಸಹಿಸಿಕೊಳ್ಳುವವನಂತೆ ಕಾಣತೊಡಗಿದ. ಅವನು ನನ್ನ ಕಂಡು ಮುಗುಳ್ನಕ್ಕನೆಂದರೆ ನಾನು ದಿನವೆಲ್ಲ ಗೆಲುವಾಗಿ ಬಿಡುತ್ತಿದ್ದೆ. ನನ್ನ ಸ್ವಂತ ಮಗನ ಉಪಟಳಗಳನ್ನು ಮರೆತುಬಿಡುತ್ತಿದ್ದೆ. ಪ್ರಸಾದ ನನ್ನ ಪಾಲಿಗೆ ನನ್ನ ಅಮ್ಮ ಹೇಳುವಂತೆ ಪವಿತ್ರನಾದ ಶುಕಮುನಿಯಾಗಿಬಿಟ್ಟ.


ಮುಂದುವರೆಯುವುದು

“ಬರಹ”ಕ್ಕೆ ಇಳಿಸಿದವರು: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.