ಹೀರೋ ಆಗಲು ಹೊರಟ ಚಿತ್ರ ನಿರ್ದೇಶಕ ಮಹೇಂದರ್‌ಗೊಂದು ಕಿವಿ ಮಾತು

ಕನ್ನಡದ ಸಮರ್ಥ ನಿರ್ದೇಶಕರ ಸಾಲಿನಲ್ಲಿ ನಿಂತಿರುವ ವ್ಯಕ್ತಿ ಎಸ್. ಮಹೇಂದರ್‍. ಅವರ ಹಲವು ಚಿತ್ರಗಳ ಸಖತ್ ಹಿಟ್ ಆಗಿವೆ-ಹಲವು ಪುಸ್ ಎಂದು ಪಂಚರಾಗಿವೆ, ಈ ನಿರ್ದೇಶಕರು ಪ್ರೀತಿ-ಪ್ರೇಮ ದೃಶ್ಯಗಳನ್ನು ಕಲಾತ್ಮಕವಾಗಿ ಚಿತ್ರಿಸಿ ಸೆಂಟಿಮೆಂಟಿನ ಕಣ್ಣಾಮುಚ್ಚಾಲೆಯಿಂದ ಪ್ರೇಕ್ಷಕರ ಕಣ್ಣಂಚಿನಲ್ಲಿಯೂ ಕಂಬನಿ ಮೂಡುವಂತೆ ಮಾಡಿದ್ದಾರೆ.

ಗ್ರಾಮೀಣ ಜೀವನದ ಸೊಗಡನ್ನು, ಅಲ್ಲಿನ ಕಿತಾಪತಿಗಳ ಕುರುಕ್ಷೇತ್ರವನ್ನು ಅವರು ಚೆನ್ನಾಗಿ ಬಲ್ಲರು. ಬ್ರಹ್ಮಚಾರಿಯಾಗಿದ್ದ ಮಹೇಂದರ್‍ ಬದುಕಿನಲ್ಲಿ ಪ್ರೀತಿಯ ತಂಗಾಳಿ ತೇಲಿಬರಲು ಕಾರಣಳು ಬೆಡಗಿನ ತಾರೆ – ಶೃತಿ. ಅದು ಬಗೆಬಗೆಯ ಸುದ್ದಿಯಾಗಿ ಗಾಸಿಪ್ ಆಗಿ ವಿವಿಧ ರೂಪ ತಾಳಿ ಸ್ವರ, ಅಪಸ್ವರಗಳು ರಾಗರಾಗವಾಗಿ ತೇಲಿ ಕಡೆಗೂ ಶೃತಿ ಸೇರಿದಾಗ ವಿವಾಹದ ಸಂಭ್ರಮ.

ಮಹೇಂದರ್‍ ಕಲಾಶಿಕ್ಷಣವನ್ನು ಅಕಾಡೆಮಿಕ್ ಆಗಿ ಕಲಿತವರಲ್ಲ. ಭಾವನೆಗಳು ಸುಳಿದಾಗ ಅವರು ಹಿಡಿದ ಕುಂಚ ಬಣ್ಣದೊಡನೆ ಕಣ್ಣಾಮುಚ್ಚಾಲೆಯಾಡಿ ಕಾಗದದ ಮೇಲೆ, ಕ್ಯಾನ್‌ವಾಸಿನ ಮೇಲೆ ರಂಗಿನೋಕುಳಿ ಚೆಲ್ಲಿ ವೈವಿಧ್ಯಮಯ ಚಿತ್ರಗಳನ್ನು ರಚಿಸಿ ಕಲಾವಿದ (ಪೈಯಿಂಟರ್‍) ಎಂದೇ ಹೆಸರಾದರು.

ಆ ರಂಗದಲ್ಲೇ ಖ್ಯಾತರಾಗುವ ಕನಸು ಅವರದಾಗಿತ್ತು. ವಿದೇಶಕ್ಕೆ ಅವರನ್ನು ಆಹ್ವಾನಿಸಿದ ವ್ಯಕ್ತಿ ತೀರಿಕೊಂಡಾಗ ಅವರ ಕನಸುಗಳು ನುಚ್ಚುನೂರಾಗಿ ತಾವು ಬರೆದ ಎಲ್ಲ ಚಿತ್ರಗಳನ್ನು ಖುದ್ದಾಗಿ ಅಗ್ನಿಗೆ ಆಹುತಿ ಮಾಡಿದರು. ಕಲಾವಿದನ ನೋವು ಆ ಘಳಿಗೆಯಲ್ಲಿ ಹೇಗಿರಬಹುದು ಎಂಬುದನ್ನು ಬಲ್ಲವರು ಮಾತ್ರ ಬಲ್ಲವರು.

ಇವರ ಈ ಕತೇ ಕೇಳಿದಾಗ ಕರ್ನಾಟಕದ ಹೆಮ್ಮೆಯ ಕಲಾವಿದರಾದ ಪಿ.ಸುಬ್ಬರಾಯರು ನೆನಪಾಗುತ್ತಿದ್ದಾರೆ. ‘ಪಿ. ಸುಬ್ಬರಾವ್ ಕರ್ನಾಟಕದ ಆಧುನಿಕ ಚಿತ್ರಕಾರರಾಗಿ ಹೆಸರಾಗುವುದರಲ್ಲಿ ಸಂಶಯವೇ ಇಲ್ಲ’ ಎಂದಿದ್ದವರು ಅ.ನ.ಕೃ. ಅವರ ಮೆಚ್ಚಿಗೆಯ ನುಡಿಯಿಂದ ಉಬ್ಬಿಹೋಗಿದ್ದರು ಪಿ.ಸುಬ್ಬರಾವ್.

ಪೂನಾದಲ್ಲಿ ಗೊಂದಲೇಕರ್‍ ಅವರ ಶಿಷ್ಯರಾಗಿ, ಕಲಾವಿದರಾಗಿ ರೂಪುಗೊಂಡ ಪಿ.ಎಸ್.ರಾವ್, ಕಲಾಮಂದಿರದ ಕಲಾ ಶಾಲಾ ನಿರ್ವಹಿಸುವ ಹೊಣೆ ಹೊತ್ತರು ಹಲವು ವರ್ಷ. ಆಗ ಡಾ. ರಾಜೀವ್ ತಾರಾನಾಥ್, ನವರತ್ನರಾಮ್, ನಾನು ಅವರ ಕೈಕೆಳಗೆ ಚಿತ್ರಕಲೆ ಅಭ್ಯಸಿಸಿದೆವು.

ಕ್ಯಾನ್‌ವಾಸ್ ಕಾಸ್ಟ್ಲಿ ಎಂಬ ಕಾರಣಕ್ಕೆ ಅವರು ತಮ್ಮ ಬಹುಪಾಲು ಚಿತ್ರಗಳನ್ನು ಪ್ಲೈವುಡ್ ಮೇಲೆ ರಚಿಸಿದರು. ಒಂದಕ್ಕಿಂತ ಒಂದು ಅದ್ಭುತ ಎನ್ನುವಂಥ ಕಲ್ಪನಾ ಚಿತ್ರಗಳವು. ಅವನ್ನು ‘ಅಬ್‌ಸ್ಟ್ರಾಕ್ಟ್’ ಕೃತಿಗಳು ಎನ್ನುವುದಕ್ಕಿಂತ ತುಂಬ ‘ಸಾಂಕೇತಿಕ ಚಿತ್ರಗಳು’ ಎಂದರೂ ತಪ್ಪಾಗಲಿಕ್ಕಿಲ್ಲ.

ಇಲ್ಲಿಂದ ಧಾರವಾಡಕ್ಕೆ ತೆರಳಿದ ನಂತರ ಒಮ್ಮೆ ಬಂದು “ಮೂರ್ತಿ, ನಾನು ರಷ್ಯಾಗೆ ಹೋಗುವ ಕಲಾವಿದರ ಪಟ್ಟಿಯಲ್ಲಿದ್ದೇನೆ” ಎಂದು ಸಂಭ್ರಮಿಸಿದ್ದರು.

ಅವರು ಆಯ್ಕೆ ಆಗಿದ್ದು ನಿಜ. ಆದರೆ ಈ ವಿಚಿತ್ರ ಜಗತ್ತಿನಲ್ಲಿ ಲಾಬಿ ಮಾಡುವವರು ಅತಿ. ಅಂಥ ಪರಿಣಾಮದಿಂದಾಗಿ ಅವರು ಹೋಗಲಾಗಲಿಲ್ಲ. ಮತ್ತೊಮ್ಮೆ ಸಿಕ್ಕಿದಾಗ ಕೇಳಿದೆ. ‘ನಾನು ಹೋಗ್ತಿಲ್ಲ ನನ್ನ ಪೆಯಿಂಟಿಂಗ್ ಹೋಗ್ತಿದೆ’ ಎಂದು ನೊಂದು ನುಡಿದರು.

ಆಸೆ-ನಿರಾಸೆಯಾದಾಗ ಯಾರೇನು ಮಾಡಿಕೊಳ್ಳುತ್ತಾರೆ ಎಂದು ಹೇಳುವುದೂ ಕಷ್ಟ. ಪಿ.ಎಸ್. ರಾವ್ ದೆಹಲಿಗೆ ತೆರಳಿದರು. ವರ್ಷ ಕಳೆದಿರಬಹುದು. ಒಂದು ಬೆಳಿಗ್ಗೆ ಪತ್ರಿಕೆಯೊಂದರಲ್ಲಿ ಸಣ್ಣ ಸುದ್ದಿ ಬಂದಿತ್ತು.

‘ದೆಹಲಿಯಲ್ಲಿ ಕಲಾವಿದ ಪಿ.ಎಸ್.ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು. ಕರ್ನಾಟಕದ ಆಧುನಿಕ ಚಿತ್ರಕಲಾ ಪಂಥಕ್ಕೆ ನಾಂದಿ ಹಾಡಿದ ವ್ಯಕ್ತಿಗೆ ದೊಡ್ಡ ಪ್ರಮಾಣದಲ್ಲಿ ಒಂದು ಶ್ರದ್ಧಾಂಜಲಿಯೂ ನಡೆಯಲಿಲ್ಲ. ಇದು ಕನ್ನಡ ಜನ ಸರಕಾರ ಕನ್ನಡ ಕಲಾವಿದರ ಬಗ್ಗೆ ತೋರುವ ಪ್ರೀತಿ.

ಮಹೇಂದರ್‍ ತಮ್ಮ ಪೆಯಿಂಟಿಂಗ್‌ಗಳನ್ನು ಸುಟ್ಟರು ಎಂಬ ಸುದ್ದಿ ಓದಿದಾಗಲೂ ಪಿ.ಎಸ್.ರಾವ್ ಘಟನೆ ನೆನಪಾಗಿತ್ತು. ಅನಂತರ ಮಹೇಂದರ್‍ ಚಿತ್ರರಂಗಕ್ಕೆ ನುಗ್ಗಿದರು. ನಿರ್ದೇಶಕರಾಗಿ ಹೆಸರಾದರು. ಒಂದಾದ ಮೇಲೊಂದು ಚಿತ್ರ ತೆಗೆದು ಜನಪ್ರಿಯರೂ ಆದರು. ಅನಂತರ ಎಲ್ಲ ಹೀರೋ ಆಗುತ್ತಿರುವುದನ್ನು ನೋಡಿ ತಾವೂ ಏಕೆ ಹೀರೋ ಆಗಬಾರದೆಂದು ಕನಸಿದರು. ಜನಪ್ರಿಯ ತಾರೆ ಶೃತಿ ತಮ್ಮ ಮಡದಿಯೇ ಆಗಿರುವಾಗ ಅವಳೊಂದಿಗೆ ನಾಯಕನಾಗಬಯಸಿ, ಗಟ್ಟಿಮೇಳ ತೆರೆಗಿತ್ತರು. ಅವರೆಷ್ಟೇ ಸಮರ್ಥ ನಿರ್ದೇಶಕರಿರಬಹುದು. ಮೊದಲ ಬಾರಿ ಹೀರೋ ಆಗಿ ಮಿಂಚ ಹೊರಟಾಗ ನಾನಾ ಮುಜುಗರಗಳು ಅವರನ್ನು ಕಾಡಿದೆ.

ನಿರ್ದೇಶಕನಾಗಿ ಇರುವ ‘ಕಾನ್‌ಫಿಡೆನ್ಸ್’ ನಟರಾಗಿ ಇರುವುದು ಸಾಧ್ಯವಿಲ್ಲ. ಆದರಿಂದಾಗಿಯೇ ಬಹಳೆಡೆ ಮುಖಭಾವ ಬ್ಲಾಂಕ್ ಎನಿಸುತ್ತದೆ – ಭಾವದ ಅಭಾವದಿಂದ ಫೇಸ್ ‘ವುಡನ್’ ಎನ್ನಿಸುತ್ತಿದೆ. ಆದರೆ ಚಕಮಕಿಯ ಮಾತಿನಿಂದ ಮಹೇಂದರ್‍ ಗೆದ್ದಿದ್ದಾರೆ. ಹೀರೋ ಇಮೇಜ್ ಉಳಿಸಿಕೊಳ್ಳಲು ಡಾನ್ಸಿಂಗ್, ಫೈಟಿಂಗ್ ಎಲ್ಲಾ ತುರುಕುವ ಸಾಹಸ ಮಾಡಿ ಸುಸ್ತಾಗಿದ್ದಾರೆ.

ಇಷ್ಟಂತೂ ನಿಜ. ಮನೆಮಂದಿ ಎಲ್ಲ ಕೂತು ನೋಡಬಹುದಾದ ಸದಭಿರುಚಿ ಚಿತ್ರ ನೀಡಲು ಶ್ರಮಿಸಿದ್ದಾರೆ. ಇಂಥ ವ್ಯಕ್ತಿ ವಸ್ತು ವೈವಿಧ್ಯಕ್ಕೆ ತಡಕಬೇಕಿಲ್ಲ. ಅವರೊಬ್ಬ ಚಿತ್ರ ಕಲಾವಿದರೂ ಆಗಿರುವುದರಿಂದ ‘ವಿನ್ಸಂಟ್ ವ್ಯಾನ್‌ಗೋ’ ಅಂಥ ಕಲಾವಿದರ ಬದುಕು ಆಧರಿಸಿದ ‘ಲಸ್ಟ್ ಫಾರ್‍ ಲೈಫ್’ ನಂಥ ಚಿತ್ರ ತೆಗೆವ ಮನಸೇಕೆ ಮಾಡಬಾರದು ಎಂಬ ಮಾತನ್ನು ಅವರಿಗೂ ಹೇಳಿ ಆಗಿದೆ.

ಮಹೇಂದರ್‍ ತಾವು ಬರೆದ ಪೈಂಟಿಂಗ್‌ಗಳನ್ನು ಸುಟ್ಟರೂ, ಶೃತಿಯೊಂದಿಗೆ ಪ್ರೀತಿ ಅರಳಿದಾಗ ಮತ್ತೆ ಬ್ರಷ್ ಹಿಡಿದು ಅವಳ ರೂಪು ಚಿತ್ರ (ಪೊಟ್ರೇಟ್) ಬರೆದೆ ಎಂದರು ಈ ಪ್ರಸ್ತಾಪ ಮಾಡಿದಾಗ.

ಮಹೇಂದರ್‍ ಚಿತ್ರಕಲಾವಿದರೂ ಆದುದರಿಂದ, ಕಲಾವಿದರ ಬದುಕಿನ ಬಗೆಗೂ ಚಿತ್ರ ತೆಗೆವ ಮನಸ್ಸು ಮಾಡಿ ಎಂದು ವಿನಂತಿಸಬಹುದಷ್ಟೆ.

ಹಾಗೆ ಆರ್ಡರ್‍ ಮಾಡಲು ನಾವ್ಯಾರು? ಅಪ್ರತಿಮ ಕಲಾವಿದೆ ಶೃತಿ. ಬಾಳಸಂಗಾತಿ ಮಾತ್ರವಲ್ಲ. ನಿರ್ಮಾಪಕಿಯೂ ಆಗಿರುವುದರಿಂದ ‘ಶೃತಿ’ ಕೂಡ ಈ ದಿಕ್ಕಿನಲ್ಲಿ ಚಿಂತಿಸಬಹುದು. ಏನಂತೀರಿ ಶೃತಿ?
*****
(೧೬-೦೩-೨೦೦೧)