ಪಾರಿಜಾತದ ಪ್ರೀತಿ

ನಿಮ್ಮ ಕನಸನು ಬಿಟ್ಟು
ಆಚೆ ಬಾರೆವು ನಾವು
ಹೀಗೆ ತಡೆದರೆ ನೀವು ತಬ್ಬಿ ಹಿಡಿದು,

ನಿಮ್ಮ ಪ್ರೀತಿಯ ನಮಗೆ
ಒಂದಂಗುಲದ ಜಾಗ
ಕನಸಿನಂತಃಪುರದ ತೋಟದೊಳಗೆ.

ಇಲ್ಲಂತು ತನು-ಮನಕೆ
ಏಳು ಮಲ್ಲಿಗೆ ತೂಕ
ಹೂವ ಎಸಳೇ ಭಾರ, ಹೊರಲಾಗದು.

ನಮ್ಮ ನಡು ಬಳ್ಳಿ,
ನಿಮ್ಮ ಬಾಹುಗಳಲ್ಲಿ
ಸಿಂಗರದ ಅರಮನೆಯ ತೋಟದಲ್ಲಿ

ನಿಮ್ಮ ಬೆರಳಿನ ಸ್ಪರ್ಷ
ನೆಟ್ಟಲ್ಲಿ ಮಲ್ಲಿಗೆ ಸುರಿದು
ತಾಗಿದರೆ ಮೈಯೊಳಗೆ ಮಿಂಚು ಹೊಡೆದು,

ಹುಣ್ಣಿಮೆಯ ಚಂದಿರನ ಸುತ್ತ ತಾರೆಯ ಸಂತೆ
ಬೆಳದಿಂಗಳೇ ಧಗೆ!
ಧಗೆ, ನೀವಿರದ ರಾತ್ರಿಗಳು.

ಕನಸು ನಿಮ್ಮದು, ಅಲ್ಲಿ
ರಾಗ ನುಡಿಸಲು ನಾವು(?)
ಮುದ್ದಿಸಲು, ಮೋಹಿಸಲು;
ಅರಸು ನೀವು(?)

ಸಿಂಗರದ ಅರಮನೆಯ
ಅಂತಃಪುರದ ಸುಖ
ಅರಸಿ ಕಂಡದ್ದೆಲ್ಲ ಅಂಕುಡೊಂಕು.
ನಮಗೂ ಬೀಳುತ್ತವೆ
ರಂಗು ರಂಗಿನ ಕನಸು
ನಮ್ಮ ಮನೆಯಂಗಳದಿ ಪುಟ್ಟ ತೋಟ.

ಬೆಲಿ ಕಟ್ಟೆವು ನಾವು
ಹಬ್ಬುವುದು ಹರಡುವುದು
ಹುಚ್ಚು ಕಾಡಿನ ಹಾಗೆ ದೂರ ದೂರ

ನಿಮಗೂ ತಿಳಿದಿದೆ ನಮ್ಮ ಪಾರಿಜಾತದ ಪ್ರೀತಿ
ಬೆಳಕ ಬೆನ್ನಿಗೆ ಇರುವ ಏಳು ಬಣ್ಣ
ನಿಮ್ಮ ಕನಸನು ಬಿಟ್ಟು ಆಚೆ ಬಂದಿದ್ದೇವೆ
ತಡೆಯಲಾರಿರಿ ಇನ್ನು ಅಡ್ಡಗಟ್ಟಿ.
*****