ದಿವ್ಯ

‘ಈ ಅಕ್ಕನಿಗೆ ಮಕ್ಕಳೆಂದರೆ ನಾವು ಮೂರು ಜನ. ಕುಂಟೆಕೋಣನ ಹಾಗೆ ಬೆಳೆದಿರೋ ಈ ತಮ್ಮನಾದ ನಾನು, ಅಲ್ಲಿ ಆಡಿಕೊಂಡಿರೋ ಎರಡು ಹೆಣ್ಣುಮಕ್ಕಳು. ನಮ್ಮ ಅಮ್ಮ ಸತ್ತಮೇಲೆ ಅವಳ ಮದುವೆ ಆಗೋತನಕ ನನ್ನನ್ನ ಬೆಳೆಸಿದಳು; ಆ ಮಕ್ಕಳ ಅಮ್ಮ ಸತ್ತ ಮೇಲೆ ಆ ಮಕ್ಕಳನ್ನೂ ಬೆಳೆಸಿದಳು.

ತಕಲಿ ತಿರುಗಿಸುತ್ತ ಕೇಶವ ಅಕ್ಕನನ್ನು ಎದುರಿಗಿಟ್ಟುಕೊಂಡು ಹೀಗೆ ಮಾತು ಶುರುಮಾಡುವುದು. ಎದುರು ಕೂತವರು ನಿಮಿತ್ಯ ಕೇಳಲು ಬಂದ ಯಾರೋ ಅಪರಿಚಿತರು ಎಂದು ಕೇಶವನಿಗೆ ಎಗ್ಗಿಲ್ಲ.

‘ಗಂಡನಿಗೆ – ಈ ಪ್ರಾಂತದ ದೊಡ್ಡ ಜೋಯಿಸರೆಂದೇ ಪ್ರಸಿದ್ಧರು ಅವರು, ಮೈಸೂರಿನಿಂದಲೂ ಅವರ ಹತ್ತಿರ ಜಾತಕ ಬರೆಸಲೆಂದು ಬಂದವರುಂಟು – ಅಂಥ ಗಂಡನಿಗೆ ಇವಳು ಎರಡನೇ ಸಂಬಂಧ . ದೊಡ್ಡಮನೆ ಅವರದ್ದು; ಅವರ ಮನೆ ಕಣಜ ಖಾಲಿಯಾದದ್ದಿಲ್ಲ; ಪರಸ್ಥಳದವರು ಬಂದರೆ ಅವರ ಮನೇಲಿ ಪಾಯಸದ ಊಟ ಬಡಿಸದೇ ಕಳಿಸಿದ್ದಿಲ್ಲ.

ಆಯಿತಾ? ಮೊದಲನೆಯ ಹೆಂಡತಿ – ಅವರು ತನ್ನ ತಾಯಿಯ ಕಡೆಯ ದೂರದ ಸಂಬಂಧ, ಮೂರು ದಿನಗಳ ಸೂತಕದ ಸಂಬಂಧವೆಂದು ಕೇಳಿದೀನಿ – ಎರಡು ಹೆಣ್ಣು ಹೆತ್ತು, ಅಲ್ಲಿ ನೋಡಿ, ಆ ಮರದ ಕೆಳಗೆ ನಿಂತಿದ್ದಾರಲ್ಲ, ಆ ಎರಡು ಹೆಣ್ಣುಗಳನ್ನೇ ಹೆತ್ತು, ಸತ್ತಿದ್ದು. ಪುಣ್ಯಾತಗಿತ್ತಿ: ಕೊಟ್ಟಿಗೆಯ ಕೆಲಸ ಮುಗಿಸಿ, ಸ್ನಾನ ಮಾಡಿ, ದೇವರ ಪೂಜೆಗೆ ಎಲ್ಲ ಅಣಿಮಾಡಿ, ಸ್ನಾನ ಮುಗಿಸಿ ಬಂದ ಗಂಡನಿಗೆ ದೇವರ ಮನೆ ಎದುರು ಬಾಗಿಲಲ್ಲಿ ಕಾದು ಮಣೆ ಹಾಕಿ, ಕರ್ಪೂರ, ಗಂಧ, ಅರಿಸಿನ ಕುಂಕುಮ, ಹರಿವಾಣದಲ್ಲಿ ಹೂವು ಪತ್ರೆ, ಐದು ದೀಪದಕುಡಿಯ ಆರತಿತಟ್ಟೆ, ಪಂಚಪಾತ್ರೆಯಲ್ಲಿ ಗಂದೋದಕ ಎಲ್ಲ ಓರಣವಾಗಿ ಇದೆಯೇ ಎಂದು ಮತ್ತೊಮ್ಮೆ ಮಗದೊಮ್ಮೆ ಕಣ್ಣುಹಾಯಿಸಿ ಗಮನಿಸಿ – ಆಯಿತಾ? ಅಡುಗೆ ಮನೆಗೆ ಅವರು ಹೋದರೆಂದರೆ…… ಸಾಕ್ಷಾತ್ ಅನ್ನಪೂರ್ಣೆ ಅವರು – ಸಾರಿಸಿ ರಂಗೋಲಿ ಹಾಕಿದ ಶುಭ್ರವಾದ ಕೋಡೋಲೆಯನ್ನು ಕ್ಷಣದಲ್ಲಿ ಹೊತ್ತಿಸಿ, ಅಗ್ನಿಗೆ ಕೈಮುಗಿದಾಯಿತೊ, ಆಮೇಲೆ, ಗಂಡನ ಪೂಜೆಯ ಮಂತ್ರಗಳನ್ನು ಕೇಳಿಸಿಕೊಳ್ಳುತ್ತ, ನೈವೇದ್ಯ ಸಿದ್ಧವಾಯಿತ ಎಂದು ಗಂಡನಿಂದ ಕೇಳಿಸಿಕೊಳ್ಳದಂತೆ ಒಂದು ಬಾಳೆ ಎಲೆಯಲ್ಲಿ ನೈವೇದ್ಯಕ್ಕೆಂದು ಬೇಯಿಸಿದ ಪದಾರ್ಥಗಳನ್ನು ದೇವರಿಗೇ ರುಚಿ ಎನ್ನಿಸಬೇಕು, ಹಾಗೆ ಅಲಂಕರಿಸಿ, ದೇವರ ಮುಂದಿಟ್ಟು, ಅವತ್ತೊಂದು ತ್ರಯೋದಶಿ ದಿನ, ಅಡುಗೆ ಮನೆಯಲ್ಲಿ ಹಾಯೆಂದು ಕೂತ ಪುಣ್ಯಾತಿಗಿತ್ತಿ ಹಾಗೇ ತೂಕಡಿಸಿ, ಮುಚ್ಚಿದ ಕಣ್ಣನ್ನು ಬಿಚ್ಚಲಿಲ್ಲ’.

ಹೀಗೇ ಬಾಳಗರೆ ಕೇಶವ ಭಾವುಕವಾಗಿ ತಾನು ಸ್ವತಃ ಕಾಣದ್ದನ್ನು ಕಂಡವನಂತೆಯೇ ವಿವರಿಸುವಾಗ ಅವನ ಅಕ್ಕ ಅಕ್ಕಿ ಆರಿಸುತ್ತ ಕೂತು ಕೇಳಿಸಿಕೊಳ್ಳುತ್ತಾಳೆ.

ಜಗತ್ತಿನಲ್ಲಿ ಯಾರೂ ಹೆಸರು ಹಿಡಿದು ಕರೆಯದ ಈ ಮಡಿಹೆಂಗಸು ಈಗ ಮನೆಯವರಿಗೆ ಏಕವಚನದ ಅಕ್ಕುವೂ, ಪರರಿಗೆ ಬಹುವಚನದ ಅಕ್ಕಯ್ಯ, ಅಕ್ಕಮ್ಮನೂ ಆಗಿದ್ದಳು. ಯಾವ ಕಾಲದಲ್ಲೋ ಸತ್ತು ಹೋಗಿದ್ದ ಅವಳ ಅಪ್ಪ ಅಮ್ಮಂದಿರಿಗೆ ಮಾತ್ರ ಅವಳು ಸಾವಿತ್ರಿ. ಈ ಹೆಸರಿನಿಂದ ಅವಳು ಕರೆಸಿಕೊಂಡು ಅದೆಷ್ಟು ವರ್ಷಗಳೇ ಆಗಿ ಹೋದವೋ. ಗಂಡ ಹೇಗೂ ಹೆಸರು ಹಿಡಿದು ಕರೆದವನಲ್ಲ. ಅತ್ತೆಯೋ ಮಾವನೋ ಕರೆಯಬಹುದಿತ್ತು ಎಂದು ಅನ್ನುವಂತೆಯೂ ಇಲ್ಲ. ಆ ಪುಣ್ಯಾತ್ಮರನ್ನು ಇವಳು ಕಣ್ಣಾರೆ ಕಂಡವಳೂ ಅಲ್ಲ. ಧಾರೆ ಎರೆಸಿಕೊಂಡದ್ದು ಯಾರೋ ದೂರದ ದೊಡ್ಡಪ್ಪನಿಂದ.

ಹೆಬ್ಬೆರಳು ತೋರುಬೆರಳುಗಳ ಸನ್ನಿಧಿಯಲ್ಲಿ ಮೃದುವಾದ ಹತ್ತಿಯ ಉಂಡೆಯನ್ನು ತುಸುತುಸುವೇ ತಳ್ಳುವ ಕೈಚಳಕ ಖುಷಿಕೊಡುತ್ತಿದ್ದಂತೆ, ಬುಗುರಿಯಂತೆ ತಿರುಗುವ ತಕಲಿಯಲ್ಲಿ ಅದು ಹದವಾಗಿ ನೂಲಾಗುವುದನ್ನು ನೋಡುತ್ತ ಕೇಶವ ಅಕ್ಕರೆಯ ತನ್ನ ಮಾತುಗಳ ಮೂಲಳಾದ ಅಕ್ಕನ ಮುಖವನ್ನೂ ನೋಡುವುದುಂಟು. ಅಕ್ಕಿಯಲ್ಲಿ ಕಲ್ಲು ಆರಿಸುತ್ತ ಕೂತ ಅಕ್ಕ, ಮುಂದೆ ತನ್ನ ಗುಣಗಾನ ಶುರುವಾಗದಂತೆ, ಎದುರು ಕೂತವರು ಬ್ರಾಹ್ಮಣರಾಗಿದ್ದರೆ ಮಾತ್ರ, ತಮ್ಮನನ್ನು ಅಣಕಿಸುವ ಸಲಿಗೆಯಲ್ಲಿ ಗೊಣಗುತ್ತಾಳೆ. ಹೀಗವಳು ಮುಖವೆತ್ತಿ ಗೊಣಗುವಾಗ ಕಣ್ಣಿಟ್ಟು ಕಲ್ಲು ಆರಿಸಬೇಕಿಲ್ಲ; ಅವಳ ಬೆರಳುಗಳಿಗೇ ಕಲ್ಲು ಪತ್ತೆಯಾಗುತ್ತದೆ.

‘ನಮ್ಮ ಕೇಶವನಿಗೆ ಎಲ್ಲಾನೂ ಚೆಂದ; ಅವನ ಕಣ್ಣಿಗೆ ಎಲ್ಲವೂ, ಏನೋ ಅಂತಾರಲ್ಲ ಹಾಗೆ, ಹಾ, ದೂರದ ಬೆಟ್ಟದ ಹಾಗೆ, ನುಣ್ಣಗೆ…… ಹೆಂಡತಿ ಸತ್ತಮೇಲೆ ನನ್ನಿಂದ ಒಂದು ಗಂಡು ಹುಟ್ಟೀತೆಂದು ಆಸೆ ಪಟ್ಟು ತಾನೇ ಆ ಮಹಾರಾಯರು ಮದುವೆಯಾದ್ದು; ಅಲ್ಲವ, ತಿಳಿದವರು ನೀವು, ಹೇಳಿ? ಯಾವ ಸುಖವನ್ನೂ ಆ ಪುಣ್ಯಾತ್ಮನಿಂದ ನಾನು ಪಡೆಯಲಿಲ್ಲ’.

ಮಂಗಳೂರಿನಲ್ಲಿ ಅವರು ಇಟ್ಟುಕೊಂಡಿದ್ದ ಸೂಳೆಯ ಬಗ್ಗೆ ಅವಳು ಯಾರೊಡನೆಯೂ ಮಾತಾಡುವುದಿಲ್ಲ. ತಾನು ಯಾವ ಸುಖವನ್ನೂ ಗಂಡನಿಂದ ಪಡೆಯಲಿಲ್ಲ ಎಂದು ಹೇಳಿಯಾದ ಮೇಲೆ ಒಂದು ಕ್ಷಣ ಅವಳು ಮೌನವಾಗಿ ಅದನ್ನು ತನಗಾಗಿ ಮಾತ್ರ ನೆನೆದು ಮಾತು ಮುಂದುವರಿಸುತ್ತಾಳೆ.

ತಮಗೆ ಮೊದಲಿನವಳಿಂದ ಹುಟ್ಟಿದ ಆ ಎರಡು ಹೆಣ್ಣುಗಳನ್ನು ಈ ಬಡಪಾಯಿಯ ಮಡಿಲಿಗೆ ಹಾಕಿ, ಒಂಟಿ ಬಾಳಲಾರದವಳನ್ನು ತವರು ಸೇರುವಂತೆ ಮಾಡಿದರು. ಅಷ್ಟೊಂದು ದೈವಭಕ್ತರಾಗಿದ್ದ ಆ ಪುಣ್ಯಾತ್ಮ ಸತ್ತದ್ದೋ ಭಯಂಕರವಾಗಿ. ಯಾರದೋ ಮನೆಗೆ ಶ್ರಾದ್ಧ ಮಾಡಿಸಲೆಂದು ಹೋಗುವಾಗ ಪ್ರವಾಹದಲ್ಲಿ ದೋಣಿ ಮಗುಚಿ ಈಜಲಾರದೆ ಕೈಸೋತು ಅವರು ಹರಿ ಹರಿ ಎಂದು ಹೋದದ್ದು. ಆ ದೊಡ್ಡ ಮನೆಯಲ್ಲಿ ಎರಡು ಚಿಕ್ಕ ಮಕ್ಕಳ ಜೊತೆ ದೆವ್ವದಂತೆ ಒಂಟಿ ಇರಲಾರದೆ, ಬೇರೆ ಗತಿ ಕಾಣದೆ ತಮ್ಮನ ಮನೆ ಸೇರಿ ಈ ಮಕ್ಕಳನ್ನು ಸಾಕಬೇಕಾಯಿತು, ಎಂದು ಅಕ್ಕನ ಪುರಾಣ ಯಥಾವತ್ ಶುರುವಾಗುತ್ತಿದ್ದಂತೆ,
ತಕಲಿಯನ್ನು ಕೆಳಗಿಟ್ಟು, ಅಕ್ಕ ಹೇಳದೆ ಬಿಟ್ಟಿದ್ದನ್ನು ತನ್ನ ಮೌನದಲ್ಲಿ ಸ್ವೀಕರಿಸಿ, ತನ್ನ ಸೊಂಪಾದ ಜುಟ್ಟನ್ನು ಬಿಚ್ಚಿ, ಸಡಿಲಾಗಿ ಕಟ್ಟಿ ಕೇಶವ ನಗುತ್ತಾನೆ.

‘ಓಹೋ ಹಾಗೋ, ಮಾರಾಯರೇ ಕೇಳಿ, ಪ್ರತಿ ವಾರ ಇವಳು ತನ್ನ ಸವತಿಯ ಮಕ್ಕಳಿಗೆ ಎಣ್ಣೆ ಸ್ನಾನ ತಪ್ಪಿಸಿದವಳಲ್ಲ. ದ್ವಾದಶಿಯ ದೋಸೆ ತಪ್ಪಿಸಿದವಳಲ್ಲ. ಹೋಳಿಗೆ ಮಾಡದ ಹಬ್ಬವಿಲ್ಲ. ಉಪ್ಪಿನಕಾಯಿ ತುಪ್ಪ ಬಡಿಸದ ಗಂಜಿಯಿಲ್ಲ. ನನ್ನ ದೊಡ್ಡ ಭಾಗವತರಾಟದವರ ಜುಟ್ಟನ್ನೂ ಎಣ್ಣೆಹಾಕಿ ಸಿಕ್ಕುಬಿಡಿಸಿ ಬಾಚುವರು ಯಾರು ಕೇಳಿ? ಎರಡು ಮಕ್ಕಳಿಗೂ ಕುಮಾರವ್ಯಾಸನನ್ನು ಬಾಯಿಪಾಠ ಮಾಡಿಸುವುದು ಯಾರು ಕೇಳಿ? ಈ ಮಕ್ಕಳು ಈ ಮನೆ ಬಿಟ್ಟು ಹೋಗುವುದೇ ಕಮ್ಮಿ. ಎಲ್ಲೋ ವರ್ಷಕ್ಕೊಮ್ಮೆ ಯಾರದೋ ಮನೆಯ ಮದುವೆಗೆ ಕರೆದರೆ ಮಾತ್ರ ಹೋಗುವುದು. ಈ ಆಸುಪಾಸಿನಲ್ಲಿ ಹೆಚು ಬ್ರಾಮಣರಿಲ್ಲ; ಇರುವುದು ಎಂದರೆ ಅದೊಂದೇ ಸಾಹುಕಾರರ ಮನೆ. ಅಲ್ಲಿಗೆ ನಿತ್ಯ ಪೂಜೆಗೆ ನಾನು ಮಾತ್ರ ಹೋಗುವುದು. ನಮಗೆ ಅನ್ನದಾತರು ಅವರು. ಏನೋ ಹೇಳಲು ಹೋಗಿ ಮರೆತೇಬಿಟ್ಟೆನಲ್ಲ…… ಅದೇ, ಮಳೆಗಾಲದಲ್ಲಿ ಸೋರುವ ಈ ಹುಲ್ಲಿನ ನಮ್ಮ ಪೂರ್ವಿಕರ ಮನೆಯಲ್ಲೇ, ಅವಳ ತಂದೆಯ ಮನೆ ಹೆಂಚಿನದು ಎನ್ನಿ, ಬೆಳೆದಿರುವ ನಮ್ಮ ದೊಡ್ಡ ಹುಡುಗಿ ಗೌರಿಗೆ ಗೊತ್ತಿಲ್ಲದ ಹಾಡು ಹಸೆ ಇದೆಯೆ? ಅದನ್ನೆಲ್ಲ ತಾಯಿಗಿಂತ ಹೆಚ್ಚಾಗಿ ಹೇಳಿ ಕೊಟ್ಟದ್ದು ಯಾರು ಕೇಳಿ? ಹೋಗಲಿ ನನಗೇನು ಅಕ್ಕನೊಂದು ಹೊರೆಯೋ? ಪ್ರತಿವರ್ಷ ಈ ಮನೆಗೆ ಹುಲ್ಲು ಹೊದೆಸುವ ಖರ್ಚು ಯಾರದು ಕೇಳಿ?’.

ಇವೆಲ್ಲವೂ ಸ್ವಂತ ಸುಖ ಸೌಭಾಗ್ಯದ ಕಥೆಯೇ ಎನ್ನುವಂತೆ ಹಿಗ್ಗಲು ಹವಣಿಸುವ ತಮ್ಮನನ್ನು ಕರುಣೆಯಿಂದ ನೋಡಿ, ತಲೆಯ ಮೇಲೆ ಕೆಂಪುಸೆರಗನ್ನು ಎಳೆದುಕೊಳ್ಳುತ್ತ, ಮೇಲೇಳುತ್ತ:
‘ನಿಮಿತ್ಯ ಹೇಳಿ ಕಳಿಸು; ಎಷ್ಟು ಹೊತ್ತಾಯ್ತು ಅವರು ಬಂದು; ಪಾನಕ ಮಾಡಿ ತರುವೆ….’ ಎಂದು ಅಕ್ಕ ಯಜಮಾನಿಕೆಯಲ್ಲಿ ಇವನೊಬ್ಬ ಅರಿಯದ ಹುಡುಗ ಎನ್ನುವಂತೆ ತಾಯಿ ತಂದೆಯರನ್ನು ಕಳೆದುಕೊಂಡ ತಮ್ಮನನ್ನು ಗದರಿಸಿದರೆ,
‘ಕವಡೆ ಚೀಲ ಬಿಚ್ಚಲು ಒಳ್ಳೆಯ ಮುಹೂರ್ತಕಾಗಿ ಕಾಯ್ತಾ ಇದ್ದೀನಿ ಮಹಾರಾಯತಿ’ ಎಂದು, ಹುಲ್ಲಿನ ಮನೆಯಿಂದಾಗಿ ಪರ್ಣಕುಟಿ ನೆನಪಾಗಿ, ಕಿಷ್ಕಿಂಧೆಯಲ್ಲಿ ರಾಮನ ವನವಾಸದ ಯಾವುದೋ ಕಥೆ ಕೇಶವ ಪ್ರಾರಂಭಿಸುತ್ತಾನೆ. ಬಂದವರಿಗೆ ತಾವು ಬಂದ ಕಾರಣ ಮರೆಯಬೇಕು ಹಾಗೆ.

ಮಕ್ಕಳ ಹೆಸರು ಗಂಗೆ-ಗೌರಿ; ಗಂಗೆಗೆ ಹದಿನೆರಡು ವರ್ಷ, ಗೌರಿಗೆ ಹತ್ತೊಂಬತ್ತೋ ಇಪ್ಪತ್ತೋ ಇದ್ದರೂ ಅಕ್ಕ ಹೇಳುವುದು ಹದಿನೇಳೊ ಹದಿನೆಂಟೊ ಎಂದು- ಅವಳಿಗಿನ್ನೂ ತಾವು ಮದುವೆ ಮಾಡಿಲ್ಲವೆಂದು ಚಿಂತೆ ಅವಳಿಗೆ. ಅವರು ಕೇಶವನ ಮನೆ ಸೇರಿ ಹತ್ತು ವರ್ಷಗಳಾಗಿವೆ. ದೊಡ್ಡವಳು ತಾಯಿಯನ್ನು ಕಳೆದುಕೊಂಡದ್ದು ತನ್ನ ಒಂಬತ್ತನೇ ವಯಸ್ಸಿನಲ್ಲಿ ಇರಬೇಕು. ಆಗ ಹತ್ತಿರವಿದ್ದ ಶಾಲೆಯಲ್ಲಿ ಕಲಿತ ಅಷ್ಟಿಷ್ಟನ್ನು ಈಗ ಅವಳು ತನ್ನ ತಂಗಿಗೆ ಹೇಳಿಕೊಡುತ್ತಾಳೆ. ಒಬ್ಬಳನ್ನು ಬಿಟ್ಟು ಇನ್ನೊಬ್ಬಳು ಇರುವುದೇ ಇಲ್ಲ.

ಅಕ್ಕುವಿನ ಕಣ್ಣುತಪ್ಪಿಸಿ ಅಮಟೇಮರ ಹುಣಸೇ ಮರಗಳನ್ನು ಹತ್ತಿ ಕಾಯಿಗಳನ್ನು ಕಿತ್ತು ತಿನ್ನುವುದು, ಮರದ ಪೊಟರೆಗಳಲ್ಲಿ ಯಾವ ಹಕ್ಕಿ ಎಲ್ಲಿ ಗೂಡುಕಟ್ಟಿದೆ ಹುಡುಕಿ ನಿತ್ಯ ಮರಿಗಳು ಎಷ್ಟೆಷ್ಟು ಬಲಿತಿವೆ ಎಂದು ನೋಡಿಬರುವುದು, ಈ ಮರಿಗಳಿಗೆಲ್ಲ ಮುದ್ದುಮುದ್ದಾದ ಹೆಸರಿಟ್ಟು ಅವುಗಳ ಬಗ್ಗೆ ಕಥೆ ಕಟ್ಟಿ ಒಬ್ಬರಿಗೊಬ್ಬರು ಹೇಳಿಕೊಂಡು ನಗುವುದು, ಅವುಗಳು ಹಾರಿಹೋದ ದಿನ ತಮ್ಮನ್ನು ಅಕ್ಕು ಬಯ್ಯುವಂತೆ ಅವುಗಳನ್ನು ಬಯ್ಯುವುದು-
ಗಂಗೆ ಗೌರಿಯರು ಹೀಗೆ ತಮ್ಮದೇ ಲೋಕದಲ್ಲಿ ಮಗ್ನರಾಗಿರುವಾಗ ಅಕ್ಕುವಿನ ಗೌರಿಯ ‘ಪೂಜೆ’ ಶುರುವಾಗಿಬಿಡುತ್ತದೆ.

‘ಪ್ರಾಯಕ್ಕೆ ಬಂದು ಈಗಾಗಲೇ ಮದುವೆಯಾಗಿ ಮಕ್ಕಳನ್ನು ಹೆರಬೇಕಾದ ನೀನೇ ಹೀಗೆ ಗಂಡುಬೀರಿಯಂತೆ ಅಲೆಯುತ್ತ ನಿನ್ನ ತಂಗಿಯನ್ನು ಬಳೆಸಿದರೆ ಹೇಗೇ; ನಿನಗಾಗ್ತ ಇರುವ ವಯಸ್ಸನ್ನು ಎಷ್ಟು ದಿನ ನಾನು ಮುಚ್ಚಿಡಲೇ….’

ಅಕ್ಕನ ಇತ್ಯಾದಿ ಮಾತು ಕೇಳಿಸಿಕೊಂಡವರು‌ಅವಳೊಬ್ಬ ಮುದುಕಿ ಎಂದು ಭಾವಿಸಬೇಕು. ತನ್ನ ಇಪ್ಪತ್ತನೇ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಅವಳಿಗೆ ಈಗ ನಲವತ್ತು ವರ್ಷಕ್ಕಿಂತ ಹೆಚ್ಚಾಗಿಲ್ಲ. ( ‘ನಿನ್ನ ಈಗಿನ ವಯಸ್ಸಿನಲ್ಲಿ ಅಮ್ಮನಿಗೆ ನೀನು ಹುಟ್ಟಿದ್ದು’ ಎಂದು ಕೇಶವ ಅಕ್ಕಯ್ಯನಿಗೆ ಹಾಸ್ಯ ಮಾಡಲು ಹೇಳುತ್ತಾನೆ.) ಇನ್ನೂ ಮದುವೆಯಾಗದ ಅವಳ ತಮ್ಮ ಕೇಶವನಿಗೆ ಇಪ್ಪತ್ತ ಐದು ವರ್ಷ. ( ಹೀಗೆ ಅಕ್ಕು ಬಿಡಿಸಿ ‘ಇಪ್ಪತ್ತ ಐದು ಎಂದಾಗಲೆಲ್ಲ ಕೇಶವ ಇನ್ನೊಂದು ವರ್ಷದಲ್ಲಿ ಆದಿ ಶಂಕರರು ಕಾಲವಾದದ್ದು ಎನ್ನುತ್ತಾನೆ.)
ಕೆಲವೊಮ್ಮೆ ವೇದಾಂತಿಯ ಹಾಗೂ, ಕೆಲವೊಮ್ಮೆ ಶುದ್ಧ ಹಡೆಯಂತೆಯೂ ಮಾತಾಡುವ ಈ ತಮ್ಮನಿಗೆ ಇನ್ನೂ ಮದುವೆಯಾಗಿಲ್ಲ. ಅದೊಂದು ಕೊರಗು ಅಕ್ಕುಗೆ. ಹೋಗಲಿ ಅವನು ಗಂಡಸಲ್ಲವ ಎಂದರೆ ಈ ಗೌರಿ ಯಾವತ್ತೋ ಮೈನೆರೆದಳು, ಎಷ್ಟು ದಿನ ಅದನ್ನು ಮುಚ್ಚಿಡುವುದು ಸಾಧ್ಯ? ಬಂದು ಹೋಗುವವರ ಕಣ್ಣಿಗೆ ಹೊಡೆಯುವಂತೆ ಅವಳು ಬೆಳೆದಿದ್ದಾಳೆ. ಆದರೂ ಅವಳಿಗೆ ಮದುವೆಯಾಗಿಲ್ಲ, ಆಯಿತಾ? ಇಷ್ಟು ಬೆಳೆದು ನಿಂತ ಹುಡುಗಿ ಇನ್ನೂ ಎಳಸು ಎಳಸಾಗಿ ಆಡುತ್ತಾಳೆ ಚಿಗುರೆಯಂತೆ ಕುಣಿದಾಡುತ್ತಾಳೆ.

ಕೇಶವ ಲಂಗದಲ್ಲಿ ನೋಡಿದ ಹುಡುಗಿ ಈ ಗೌರಿ. ಸ್ನಾನ ಮಾಡುವಾಗ ‘ಮಾವಾ, ಸ್ವಲ್ಪ ಬೆನ್ನು ಉಜ್ಜೊ’ ಎಂದು ನಾಚಿಕೆಯಿಲ್ಲದೆ ಈ ಹುಡುಗಿ, ಗಜ ಗೌರಿಯೇ, ಕೇಶವನನ್ನು ಕರೆದಾಗ ಬಂದ ನಗು ನುಂಗಿ ‘ನಾಚಿಕೆಯಿಲ್ಲದ ಗಂಡುಬೀರಿ’ ಎಂದು ಅಕ್ಕು ಗದರಿಸುತ್ತಾಳೆ. ಅಕ್ಕನ ಸಂಚಿಗೆ ಇವೆಲ್ಲವೂ ವಿಘ್ನಗಳೇ. ಮುಂಚಿನಿಂದ ಮಾವನನ್ನು ಬಹುವಚನದಲ್ಲಿ ಕರೆಯಲು ಎಷ್ಟು ಕೇಳಿಕೊಂಡರೂ ಅಕ್ಕನ ಅಣತಿ ನಡೆದಿರಲಿಲ್ಲ. ಹೀಗೆ ಆಟ ಆಡುತ್ತ ತನ್ನ ಜೊತೆ ಬೆಳೆದ ಕೇಶವನನ್ನು ಈ ಗಂಡುಬೀರಿ ಮದುವೆಯಾಗಲು ಒಪ್ಪದಿದ್ದರೆ ಇನ್ನೆಲ್ಲಿ ಅವಳಿಗೆ ಗಂಡು ನೋಡಬೇಕು ತಿಳಿಯದು. ಬಡವರ ಹೆಣ್ಣೆಂದು ಕಂಡವರಿಗೆ ಕೊಟ್ಟು ಮದುವೆ ಮಾಡುವುದು ಸರಿಯೆ?

ಮಾವನ ಮಗಳೇ ಮುತ್ತಿನ ಚೆಂಡೇ ಎಂದು ಒಂದು ಹಸೆ ಹಾಡೇ ಇರುವಾಗ,
ತಮ್ಮ ಜನದಲ್ಲಿ ಅಕ್ಕನ ಮಗಳನ್ನೇ ತಂದುಕೊಳ್ಳುವುದು ರೂಢಿಯಲ್ಲಿರುವಾಗ,
ಇವಳು ಹಾಗೆ ನೋಡಿದರೆ ಸ್ವಂತ ಅಕ್ಕನ ಮಗಳೂ ಅಲ್ಲದಿರುವಾಗ ಜಾತಕ ಕೂಡಿ
ಬರುವಾಗ,
(ಕೇಶವನಿಗೆ ಗೊತ್ತಾಗದಂತೆ ಅಕ್ಕ ಜಾತಕ ನೋಡಿಸಿಯಾಗಿದೆ)
ಕಸ ಮುಸುರೆ, ದನಗಳಿಗೆ ಕಲಕಚ್ಚು, ಬಂದು ಹೋಗುವವರಿಗೆ ಪಾನಕ ಪರಿವಾರ, ಯಾವ ತಿಥಿಯಲ್ಲಿ ಯಾವ ನಕ್ಷತ್ರದಲ್ಲಿ ವಿಶೇಷವಾಗಿ ದೇವರಿಗೆ ಯಾವ ಕಾರ್ಯವಾಗಬೇಕು ಇತ್ಯಾದಿ ದಿನ ಕೆಲಸದಲ್ಲಿ ಮಗ್ನಳಾದ ಅಕ್ಕ ಸತತ ಚಿಂತಿಸುವುದು ಇದನ್ನೇ…ಯಾವತ್ತು ತನಗೆ ಬಾಣಂತನ ಮಾಡುವ ಭಾಗ್ಯ ಒದಗೀತು ಎಂದು. ವಿಧವೆಯಾದ ಮೇಲೆ ರಾತ್ರೆಯ ಊಟಬಿಟ್ಟ ಅಕ್ಕು ಪ್ರತಿ ಶುಕ್ರವಾರ ಉಪವಾಸದ ವ್ರತವನ್ನೂ ಹಿಡಿದಿದಾಳೆ.

ಗೌರಿಯೋ ತಾನೊಂದು ಹೆಣ್ಣು ಎಂಬುದನ್ನೇ ಮನಸ್ಸಿಗೇ ತಂದುಕೊಳ್ಳದೆ ಗಂಗೆಯ ಜೊತೆ ಆಟದಲ್ಲಿ ಮಗ್ನಳು. ಅವರಿಬ್ಬರ ನಡುವೆ ಹಲವು ಭಾಷೆಗಳೇ ಇದ್ದವು. ಯಾರಿಗೂ ತಿಳಿಯದ ಅವರ ಸಂಜ್ಞಾ ಭಾಷೆಯಲ್ಲಿ ಎರಡು ಕೈಗಳ ಪ್ರತಿ ಬೆರಳಿಗೂ ಒಂದೊಂದು ಅರ್ಥ. ಮಡಿಸಿ ತೋರಿದರೆ ಒಂದು ಅರ್ಥ, ಬಿಚ್ಚಿ ಒಂದು ಅರ್ಥ. ಎತ್ತಿ ಒಂದೊಂದು ಹುಬ್ಬಿಗೆ ಒಂದೊಂದು ಅರ್ಥ. ಜಡೆಯನ್ನೆತ್ತಿ ಎಡಭುಜದ ಮೇಲೆ ಬಿಟ್ಟುಕೊಂಡರೆ ಒಂದು ಅರ್ಥ. ಬಲ ಭುಜದ ಮೇಲೆ ಅದನ್ನು ಇಳಿಬಿಟ್ಟರೆ ಇನ್ನೊಂದು ಅರ್ಥ. ಗಿಂಜುವ ಹಲ್ಲಿಗೆ, ತುರಿಸುವ ಕತ್ತಿಗೆ, ಮಿಟುಕುವ ಕಣ್ಣಿಗೆ, ಯಾಕೆ ಕಾಲು ಬೆರಳುಗಳಿಗೂ ಈ ಭಾಷೆ ಬೆಳೆದಿತ್ತು.

ಇದೂ ಸಾಲದಾದರೆ ಸಭಾಷೆ. ಗೌರಿ ಗಸೌರಸಿ; ಗಂಗೆ ಗಸಂಗಸೆ; ಅಕ್ಕ ಅಸಕಸ್ಕ…. ಅಸಕಸ್ಕನಸಿಗಸೆ ಹಸೇಳಸಬಸೇಡಸ ಎಂದರೆ ಅಕ್ಕನಿಗೆ ಹೇಳಬೇಡ…..

ಇದರಿಂದ ಅಕ್ಕ ರೋಷಾವೇಷದಲ್ಲಿ ಹೊಡೆಯಬಂದರೆ, ಚೋಟುದ್ದದ ಗಂಗೆ,
‘ಅಕ್ಕಾ ನೀವು ಮಡಿಯಲ್ಲಿದ್ದೀರಿ, ಮಸುಟ್ಟಸುವಸಹಸಾಗಸೆ ಇಲ್ಲ’ ಎಂದು ಜೋರಾಗಿ ನಗುವಳು; ಓಡಿಹೋಗುವಳು. ಸೀರೆಯುಡಲು ಶುರುಮಾಡಿದ ಗೌರಿಯೂ ಅವಳ ಉದ್ದನೆಯ ಜಡೆಯನ್ನು ಕಪ್ಪು ಸರ್ಪದಂತೆ ಬೆನ್ನ ಮೇಲೆ ಜೋಲಾಡಿಸುತ್ತ ತಂಗಿಯ ಹಿಂದೆ ನಡೆದುಬಿಡುವಳು.
ಗುಡ್ಡದಲ್ಲಿ ನಡೆದಾಡುತ್ತ ಗಂಗೆ ಕೇಳುವಳು.

‘ಗೌರಕ್ಕ, ನಿನಗೆ ಮಾವಯ್ಯ ನಿನ್ನೆ ಹೇಳಿದ ಕಥೆ ಇಷ್ಟವಾಯಿತ?’
ಹಿಂದಿನ ದಿನ ಚಾವಡಿಯಲ್ಲಿ ಒಂದು ತಾಳೆಮದ್ದಲೆ ಪ್ರಸಂಗ ನಡೆದಿತ್ತು. ಕೇಶವ ಕಚ-ದೇವಯಾನಿ ಕಥೆಯನ್ನು ಸ್ವಾರಸ್ಯವಾಗಿ ವಿವರಿಸಿದ್ದ. ಗೌರಿ ತಲೆಯಾಡಿಸುತ್ತ:
‘ನನಗೆ ಕಚ ಇಷ್ಟಾನೇ ಆಗಲಿಲ್ಲ. ದೇವಯಾನಿಗೆ ಅವ ಮೋಸ ಮಾಡ್ತಾನೆ ಅಲ್ವೇನೆ?’ ಎನ್ನುವಳು.
ಗಂಗೆಗೆ ತನ್ನ ಅಕ್ಕನದು ವೇದವಾಕ್ಯ. ತನಗೂ ಹಾಗೇ ಎನ್ನಿಸಿತ್ತು ಎಂದುಕೊಳ್ಳುವಳು. ಕಾಕೆಯ ಹಣ್ಣನ್ನು ಕೀಳುತ್ತ ನಿಂತ ಅಕ್ಕನಿಗೆ ಇನ್ನು ಏನೋ ಹೇಳಲು ಕಾಯುವಳು.ಗೌರಿ ಒಂದು ಕಾಕೆಯ ಹಣ್ಣನ್ನು ಬಾಯಿಗೆ ಎಸೆದು ರುಚಿನೋಡಿ ಸೆರಗಿನಲ್ಲಿದ್ದ ಎಲ್ಲ ಹಣ್ನನ್ನೂ ಗಂಗೆಗೆ ಕೊಡುವಳು. ಅರ್ಧ ಮಾತ್ರ ತೆಗೆದುಕೊಂಡು ಉಳಿದರ್ಧದಲ್ಲಿ ಅಕ್ಕನ ಸೆರಗಿನಲ್ಲೇ ಗಂಗೆ ಬಿಡುವಳು. ದೇವಯಾನಿ ರಾಕ್ಷಸರ ಗುರುವಿನ ಮಗಳಲ್ಲವೆ? ಕೇಶವ ಮಾವನೇ ಇನ್ನೊಂದು ಪ್ರಸಂಗದಲ್ಲಿ ವಾದಿಸಿ ಗೆದ್ದದ್ದನ್ನು ಅಕ್ಕನಿಗೆ ನೆನಪು ಮಾಡುವಳು.
‘ರಾಕ್ಷಸರದ್ದು ಯಾವಾಗಲೂ ಯಾಕೆ ತಪ್ಪೂಂತ ? ಅವರೂ ಆಸೆಬುರುಕರೇ, ಆದರೆ ದೇವತೆಗಳೂ ಅವರಷ್ಟೇ ಆಸೆಬುರುಕರು ಅಲ್ಲವ? ಯಾರ ದೊಡ್ಡಸ್ತಿಕೆ ಏನಿದೆ ಈ ವ್ಯಾಜ್ಯಗಳಲ್ಲಿ. ಮೋಸಾನ್ನ ಇಬ್ಬರೂಮಾಡುವಾಗ ಯಾಕೆ ದೇವರು ದೇವತೆಗಳ ಪರಾನೇ ವಹಿಸೋದು?’

ತಂಗಿಯ ಮಾತನ್ನು ಒಪ್ಪಿ ಗೌರಿ ಹೇಳುವಳು:
‘ಅದಕ್ಕೇ ದೇವರ ಮರ್ಜಿ ತಿಳಿಯೋಕೆ ಆಗಲ್ಲ. ಅವನೇನು ನಮ್ಮ ಮಿತ್ರನೋ ಶಟ್ರ್ಹುವೋ ಹಾಗೆಲ್ಲ ಅರ್ಥವಾಗೋಕೆ?’. ಅಂತ ಕೇಶವಮಾವ ಹೇಳಿ ವಾದದಲ್ಲಿ ನುಣಿಚಿಕೊಳ್ಳೋಕೆ ನೋಡಿದರೆ ಬಿಡಬೇಕಲ್ಲ ವಾದಕ್ಕೆ ಕೂತಿದ್ದ ಪ್ರತಿವಾದಿ ಭಯಂಕರ ಪುಟ್ಟೇಗೌಡರು. ಹೊರಗೆ ಧಡಧಡ ನಡೆದು, ಹೊಗೆಸೊಪ್ಪು ಉಗುಳಿ, ಒಳಗೆ ಬಂದು, ಚಕ್ಕಳಮಕ್ಕಳ ಹಾಕಿ ಕೂತು, ಶುರುಮಾಡಿಬಿಟ್ಟರಲ್ಲ ವಾದಾನ್ನ. ದಗಾಕೋರ ವಿಷ್ಣು ವಾಮನನಾಗಿ ಬಂದು ಬಲಿಗೆ ಮೋಸಮಾಡಿದ್ದು ಸರೀನ? ಇವೆಲ್ಲ ಬ್ರಾಂಬ್ರು ಮಾಡಿಕೊಂಡ ಕಥೆಗಳಲ್ವ?’
ಅಕ್ಕ ತಂಗಿಯರು ಆಡಿಕೊಳ್ಳದ ವಿಷಯವೇ ಇಲ್ಲವೆನ್ನಬಹುದು. ಎರಡು ನಾಯಿಗಳ ಸಂಭೋಗ ನೋಡಿ ಗಂಗೆ ಕೇಳುವಳು.

‘ಇವುಗಳ ಅಂಡು ಯಾಕೆ ಗಂಟು ಹಾಕಿಕೊಂಡಿದೆಯೇ? ಪಾಪ, ಬಿಡಿಸಿಕೊಳ್ಳಲಿಕ್ಕೆ ಹೋಗಿ ಎಳಕೊಳ್ತಿದಾವೆ. ನೋವಾಗಲ್ವೇನೆ?’

ಎಲ್ಲ ಪ್ರಾಣಿಗಳಿಗೂ ಮಕ್ಕಳಾಗುವುದು ಹೇಗೆ, ಅದರ ಸುಖವೇನು ಕಷ್ಟವೇನು ಇತ್ಯಾದಿ ಗೌರಿ ವಿವರಿಸುವಳು. ಮೈನೆರೆದಾದ ಮೇಲೆ ಗೌರಿ ತನ್ನ ದೇಹದಲ್ಲಿ ಕುತೂಹಲಿಯಾಗಿ ಮನೆಯಲ್ಲಿ ಇದ್ದ ಪುಸ್ತಕಗಳನ್ನೆಲ್ಲಾ ಓದಿದ್ದಳು. ಅವಳ ಗತಿಸಿದ ತಂದೆ ಜ್ಯೋತಿಷಿ ಮಾತ್ರವಲ್ಲದೆ ಆಯುರ್ವೇದದ ಪಂಡಿತರೂ ಆಗಿದ್ದರಿಂದ ಅವರ ಮನೆಯಲ್ಲಿ ಆರೋಗ್ಯ ಮಾಹಿತಿಗೆ ಸಂಬಂಧ ಪಟ್ಟ ಪುಸ್ತಕಗಳೂ, ಗೋಪಾಲಕೃಷ್ಣರಾಯರು ಸಂಪಾದಿಸಿ ತರುತ್ತಿದ್ದ ಕಾಮಜೀವನಕ್ಕೆ ಸಂಬಂಧಿಸಿದ ‘ಕಲಿಯುಗ’ ಪತ್ರಿಕೆಯ ಹಳೆಯ ಸಂಚಿಕೆಗಳೂ ಇದ್ದವು. ಗಂಡ ಸತ್ತಮೇಲೆ ಈ ಎಲ್ಲ ಪುಸ್ತಕಗಳನ್ನೂ ತಂದು ಒಂದು ಹಿತ್ತಾಳೆಯ ನುಗ್ಗುನುಗ್ಗಾದ ಪೆಟ್ಟಿಗೆಯಲ್ಲಿ ಅಕ್ಕು ಜೋಪಾನ ಮಾಡಿದ್ದಳು.

ಕೇಶವಮಾವ ಹೇಳಿದ ಇನ್ನೊಂದು ಪ್ರಸಂಗ ಗಂಗೆಗೆ ನೆನಪಾಗುವುದು. ಮಾವನನ್ನು ನಟಿಸಿ ಅಣುಕಿಸುವಂತೆ ಗೌರಿಯ ಬಾಯಿಂದಲೂ ಅದನ್ನು ಮತ್ತೆ ಕೇಳಿಸಿಕೊಳ್ಳಲು ಆಸೆಯಾಗಿ ಅಕ್ಕನನ್ನು ಪೀಡಿಸುವಳು. ಗೌರಿ ಶುರುಮಾಡುವಳು:
ಎರಡು ಮೃಗಗಳಾಗಿ ಒಬ್ಬ ಋಷಿ ಮತ್ತು ಅವನ ಪತ್ನಿ ಕಾಡಿನಲ್ಲಿ ರತಿಕ್ರೀಡೆಯಲ್ಲಿ ತೊಡಗಿದ್ದಾಗ,
(ಮಾನವನಂತೆಯೇ ಕೈಗಳು ಗಾಳಿಯಲ್ಲಿ ಕ್ರೀ ಶಬ್ದದ ದೀರ್ಘಕ್ಕೆ ಸರಿಯಾಗಿ ಅಲೆಯಬೇಕು)
ಮೃಗಯಾ ವಿಹಾರದಲ್ಲಿ
(ಅಣಕಿಸುವ ಉಮೇದಿಯಲ್ಲಿ ಗೌರಿಯ ಎರಡು ದೀರ್ಘಗಳೂ ಮಾವನದಕ್ಕಿಂತ ಹೆಚ್ಚು ದೀರ್ಘಿಸುತ್ತವೆ)
ಮೈಮರೆತಿದ್ದ ಪಾಂಡುಮಹಾರಾಜ ಎರಡು ಮೃಗಗಳು ಒಟ್ಟಿಗೇ ಸಿಕ್ಕಲಿ ಎಂದು ಗುರಿಮಾಡಿ ಬಾಣಬಿಟ್ಟ. ಬಿಟ್ಟಿದ್ದೇ ಬಾಣ ಅದು ಶರವೇಗದಲ್ಲಿ ಹೋಗಿ ನಾಟಿದ್ದು….
(ಈಗ ಥೇಟು ಮಾವನದಂತೆಯೇ ಗೌರಿಯ ತೋರು ಬೆರಳು ಅಳಿಲೊಂದನ್ನು ತೋರಿ ಅವಳ ಕಣ್ಣು ಚೂಪಾಗುತ್ತವೆ.)
ಗಂಡು ಮೃಗದ ಮುಂಗಾಲುಗಳ ಅಪ್ಪುಗೆಯ ಆವೇಗದಲ್ಲಿ ಸುಖಿಸುತ್ತಿದ್ದ ಹೆಣ್ಣು ಮೃಗವನ್ನೇ. ರತಿಸುಖದ ಉತ್ಕಟತೆಯಲ್ಲಿದ್ದಾಗಲೇ….
(ಪುರಾಣ ಹೇಳುವ ಮಾವನ ಪ್ರವಚನ ಭಂಗಿಯಲ್ಲೇ ಈಗ ಗೌರಿಯ ಕಣ್ಣು ಮುಚ್ಚಿರುತ್ತವೆ)
ಹೆಣ್ಣು ಮೃಗ ಪ್ರಾಣಬಿಟ್ಟಿತು. ಬಿಡುವಾಗ ತನ್ನ ನಿಜವಾದ ಮನುಷ್ಯ ರೂಪವನ್ನು ತಾಳಿತು. ಗಾಯಗೊಂಡು ರತಿಭಂಗವಾದ ಗಂಡುಮೃಗವೂ ತನ್ನ ಮೀಸೆಗಡ್ಡಗಳ ನಿಜರೂಪಕ್ಕೆ ಬಂದು ಕಣ್ಣು ಕೆಕ್ಕರಿಸಿ ಪಾಂಡುವನ್ನು ನೋಡಿದಾಗ ಪಾಂಡುವಿಗೆ ಅರಿವಾದ್ದು….ಏನದು ಅರಿವಾದ್ದು?….
(ಪ್ರವಚನದ ಆವೇಶದಲ್ಲಿ ಮಾವ ಪಟಪಟಪಟನೆ ತಾಳಕುಟ್ಟುವಂತೆ ಗೌರಿ ಕಲ್ಲುಗಳನ್ನು ಕುಟ್ಟಿ ಹುಬ್ಬೆತ್ತಿ ನಟಿಸಿ ಗಂಗೆಯನ್ನು ನಗಿಸುತ್ತಾಳೆ.)
ಅವರು ಕೇವಲ ನರಮನುಷ್ಯ ಮಾತ್ರರಲ್ಲ, ಪರಮ ಪಾವನರಾದ ಋಷಿಗಳು ಎಂದು ತಿಳಿಯದೆ ತಾನವರನ್ನು ಕೊಂದುಬಿಟ್ಟೆನಲ್ಲ ಎಂದು ಪಶ್ಚಾತ್ತಾಪ ಒಂದು ಕಡೆಯಾದರೆ, ಮಹೀಶನಲ್ಲವೆ? ಅವನಿಗೆ ಸಿಟ್ಟೂ ಬರುತ್ತದೆ ಎಂದು ಕುಮಾರ ವ್ಯಾಸ ಹೇಳ್ತಾನೆ.
ಸಿಟ್ಟಾಗಿ ಏನಂತಾನೆ ರಾಜ ?
ಮೃಗವಹರೆ ಮಾನಿಸರ್? ಅಕಟ ಪಾಪಿಗಳಿದೆತ್ತಣ ? ತಪವಿದೆತ್ತಣ ?
ಹೀಗೆ ಎಂದಾಗ ತಾಪಸ ಕೋಪದಲ್ಲಿ ಬುಸುಗುಟ್ಟಿ ಶಾಪಕೊಡುತ್ತಾನೆ:
ಪಾಪಿ ನಾನೋ, ನೀನೋ ? ನಿನ್ನಯ ಲಲನೆಯನು ನೀ ಕೂಡಿದಾಗಲೇ ಮರಣ ನಿನಗಹುದು.
ಇನ್ನು ತನಗೆ ಎಂದೆಂದೂ ರತಿ ಸುಖ ಇಲ್ಲೆಂದು ಶೋಕತಪ್ತನಾಗಿ, ಜೀತೇಂದ್ರಿಯನಾಗಿ ಬಾಳಲೆಂದು ರಾಜ ಇನ್ನೂ ತರುಣಿಯರಾದ ತನ್ನ ಎರಡು ಹೆಂಡಿರನ್ನೂ ಕಟ್ಟಿಕೊಂಡು ಕಾಡಿಗೆ ಹೋದ….
ಅವನ ನಾರಿಯರು ಮರುಗಿದರಂತೆ: ಹೇಗದನ್ನು ನುಡಿದು ತೋರಿಸುತ್ತಾನೆ ನೋಡಿ ನಮ್ಮ ನಾರಣಪ್ಪ! ಅವನು ಯಾವ ಶಬ್ದಕ್ಕೂ ಅಂಜುವವನಲ್ಲ. ಪ್ರಾಕೃತ ಅವನು. ನಮಗೇ ನಾವು ಹೇಗೆ ಅಂದುಕೋತೇವೆ ಈ ಮಹಾಕವಿಗೆ ಗೊತ್ತು. ಶಾಪ ಕೊಟ್ಟವರು ಋಷಿಗಳಾದರೇನು? ಈ ಹೆಂಗಳೆಯರ ಪಾಲಿಗೆ ಅವರು ಮುದಿಹಾರುವರು.

ಯಾವನೋ ಮುದಿಹಾರುವನ ತನಿಬೇಂಟೆ ನಮ್ಮ ಸುಖವನ್ನು ನಾಶಮಾಡಿತಲ್ಲಾ ಎಂದುಕೊತಾರಂತೆ ಅವರು.
ಹೀಗಿರುವಾಗ …. ಒಂದಾನೊಂದು ದಿನ, ಮಧುಮಾಸ ಪ್ರಾಪ್ತವಾಗಿದೆ….(ಕುಸುಮ ಸಮಯ ಎನ್ನುತ್ತಾನೆ ನಮ್ಮ ಕುಮಾರವ್ಯಾಸ)
ಎಂಥ ಮಧುಮಾಸ ಅದು? ಯೋಗಿಗೆತ್ತಿದ ಖಡುಗಧಾರೆ, ವಿಯೋಗಿಗೆತ್ತಿದ ಸಬಳ, ವೇದಾಧ್ಯಯನ ನಿರತರಾದವರಿಗೆ ಎದೆಶೂಲ, ಆದರೆ ಭೋಗಿಗಳ ಕುಲದೈವವಂತೆ ಈ ಕುಸುಮ ಸಮಯ….
ಆಯಿತಾ, ಕೇಳು ಜನಮೇಜಯ ಧರಿತ್ರೀ ಪಾಲ
ಆ ವಸಂತದೊಳೊಮ್ಮೆ ಮಾದ್ರೀದೇವಿ ವನದೊಳಾಡುತಿರ್ದಳೂ ….
ಅವಳನ್ನು ನೋಡಿ ಅರಸ ಬೆರಗಾದಾ….
ಸರ್ವಾಂಗ ಶೃಂಗಾರದ ಈ ತರುಣಿ ಊರ್ವಶಿಯೋ? ರಂಭೆಯೋ? ಶಿವ ಶಿವಾ ಎಂದು ಬೆರಗಾದಾ….
ಈ ಅರಸನ ಪಾಡನ್ನು ಕುಮಾರವ್ಯಾಸ ವರ್ಣಿಸುವುದಾದರೂ ಹೇಗೆ?
ಮನ್ಮಥನ ಹೂಬಾಣ ಐದು ಮಾತ್ರವಲ್ಲ. ರಾಜನ ರೋಮಗಳ ಎಂಟು ಕೋಟಿಯಲಿ ಅವು ತೂಗಿ ನೆಟ್ಟಂತಾಗಿ ಅರಸನ ಪ್ರಜ್ಞಾಸಾಗರ ಇಳಿದಿಳಿದು ಹೋಯಿತಂತೆ.
ಹಿಂದಾದ್ದನೆಲ್ಲ ಕ್ಷಣಮಾತ್ರದಲ್ಲಿ ರಾಜ ಮರೆತು ಬಿಟ್ಟಾ….
ಕುಂತಿಗೆ ತಿಳಿಯದಂತೆ ಮಾದ್ರಿ ಬಳಿ ಮೆಲ್ಲಮೆಲ್ಲನೆ ಸಾರಿದಾ….
ಅವಳ ಸೆರಗನ್ನು ಹಿಡಿದೆಳೆದಾ….
ಬೇಡ ಬೇಡವೆಂದು ಕಾಲಿಗೆ ಬಿದ್ದ ತರುಣಿಯ ತುರುಬು ಹಿಡಿದೆತ್ತಿ ಅವಳು ಹೆಣಗುತ್ತಿದ್ದಂತೆ ಒಡನೆ ಝೋಂಪಿಸಿದಾ….
ಶಂಬರಾರಿಯ ಬಾಣವಲ್ಲವೆ ? ಹರಿತ ಗಿರಿತನಗಳ ಡೊಂಬಿನ ಆಗಮದ ನೀತಿಗೀತಿಯ ಅದು ಕೊಂಬುದೆ?
ಏನು ಹೇಳ್ತಾನೆ ಕೇಳಿ ನಮ್ಮ ಹಲಗೆ ಬಳಪವಪಿಡಿಯದೊಂದಗ್ಗಳಿಕೆಯ ಕುಮಾರವ್ಯಾಸ?
ಒತ್ತಂಬರದಿ ಹಿಡಿದು, ಅಬಲೆಯನು ಕೂಡಿದನು ಕಳವಳಿಸಿ.
ಅಹಾ ಎಂಥ ಮಾತು! ಕಳವಳಿಸಿ ಕೂಡಿದನು!
ಆ ಸುಖದ ಝೋಂಪಿನಲಿ,
ಕೇಳಿ, ಆ ಸುಖದ ಝೋಂಪಿನಲಿ, ಇಂಥ ಶಬ್ದಗಳೆಂದರೆ ನಮ್ಮ ನಾರಣಪ್ಪನಿಗೆ ಬಲು ಪ್ರೀತಿ; ಮತ್ತೆ ಮತ್ತೆ ಬಳಸುತ್ತಾನೆ….
ಮೈ ಮರೆಯಿತು….ಮುಖ ಓಸರಿಸಿತು…. ಕಣ್ಣುಗಳು ಮುಚ್ಚಿಕೊಂಡವು….ತೆಕ್ಕೆ ಸಡಲಿತು….ನಿಟ್ಟುಸಿರು ಸೂಸಿತು….ತರುಣಿಯ ಉರ ಉರದಲಿ ತನ್ನ ಕದಪನಿಟ್ಟು ಹಾಗೆಯೇ ಒರಗಿದನು.
ಅಂದರೆ ಇನ್ನೇನು ಕೊಡಬೇಕು….ಅಷ್ಟರಲ್ಲೆ ಪಾಂಡು ಮಹಾರಾಜ ಪ್ರಾಣವನ್ನು ಬಿಟ್ಟಾ….
(ಅಂದರೇನು ತನಗೆ ತಿಳಿಯದೆಂದು ಗಂಗೆಯ ಪ್ರಶ್ನಾರ್ಥಕ ಕಣ್ಣಿಗೆ ಗೌರಿ ತಾರಮ್ಮಯ್ಯದ ಸನ್ನೆ ಮಾಡುತ್ತಾಳೆ)
ಮಕ್ಕಳನ್ನು ಮಾಡಲು ಋಷಿಗಳು ಯಾಕೆ ಮೃಗಗಳಾಗಿ ಕಾಡಿನಲ್ಲಿ ಕೂಡಬೇಕೆಂಬ ಕುತೂಹಲ ಗಂಗೆಗೆ.
‘ಗೌರಕ್ಕ, ಗೌರಕ್ಕ ಈ ನಾಯಿಗಳೂ ವೇಷ ಹಾಕ್ಕೊಂಡ ಋಷಿಗಳು ಇರಬಹುದಲ್ವೇನೆ?’
ತಂಗಿಗೆ ಅರ್ಥವಾಗಲೇಬೇಕೆಂಬ ಹಠ ಗೌರಿಗಿಲ್ಲ. ತಾನು ಓದಿ ತಿಳಿದಿದ್ದನ್ನು ಹೇಳುವಳು:
‘ನೋಡು ಗಂಗಾ, ಈ ಮನುಷ್ಯನ ದೇಹದಲ್ಲಿರುವಾಗ ನಮಗೆ ಪರಮ ಸುಖ ಸಾಧ್ಯವಿಲ್ಲಾಂತ ಅಪ್ಪನ ಟ್ರಂಕಿನಲ್ಲಿರೋ ಒಂದು ಪುಸ್ತಕದಲ್ಲಿ ಹೇಳಿದೆ. ಅದಕ್ಕೇ ಮೃಗಗಳಾಗಿ ಋಷಿಗಳು ಕೂಡುವುದಂತೆ. ಮತ್ತೆ ದೇವರನ್ನ ಕಾಣಬೇಕೆಂದರೂ ಈ ದೇಹದಲ್ಲಿರುವಾಗ ಸಾಧ್ಯಾವಿಲ್ಲಂತಲೇ ಕಣ್ಣುಮುಚ್ಚಿ ದೇಹಾನ್ನ ಬಿಸಾಕಿ ದೇವರಲ್ಲಿ ಒಂದಾಗೋದಂತೆ- ರಾಮಕೃಷ್ಣ ಪರಮಹಂಸರು ಹಾಗೇ ದೇವರನ್ನ ಕಂಡು ಮಾತೂ ಆಡ್ತಿದ್ದರಂತೆ. ಕುದುರೆಯಾಗಿ, ಬೆಕ್ಕಾಗಿ, ಹಕ್ಕಿಯಾಗಿ, ಹಂದಿಯಾಗಿ, ಮಂಗನಾಗಿ, ಶಂಕರಾಚಾರ್ಯರಿಗೆ ಚಂಡಾಲನೂ ಆಗಿ ಹೇಗೆ ದೇವರು ಪ್ರತ್ಯಕ್ಷನಾಗಿ ಕಾಣಿಸಿಕೊಳ್ತಾನೆ ಹೇಳಕ್ಕೆ ಅಗಲ್ಲೆ ಅಂತ ಕೇಶವಮಾವ ಹೇಳೊದನ್ನ ಪುಟ್ಟೇಗೌಡರುಸತ ವಾದ ಮಾಡದೆ ಒಪ್ಪಿಕೋತಾರೆ….’
ಗಂಗೆ ಹೂ ಹೂ ಎನ್ನುತ್ತಾ ಎದುರು ಕಂಡ ಮಾವಿನ ಮರವನ್ನು ಲಂಗಮೇಲಕ್ಕೆತ್ತಿಕಟ್ಟಿ ಹತ್ತುವಳು. ಗೌರಿ ಜೋಕೆ ಎನ್ನುತ್ತ ಅವಳು ಎಸೆಯುವ ಮಾವಿನಕಾಯಿಗೆ ಸೆರಗೊಡ್ಡಿ ನಿಲ್ಲುವಳು.
ಒಂದು ದಿನ ಗೌರಿಯೂ ಬೆಚ್ಚುವಂತಾಯಿತು. ಥಟ್ಟನೆ ಎರಡು ಹಾವುಗಳು ಒಂದಕ್ಕೊಂದು ಹೆಣೆದು ಕೊಂಡು ಎಣೆಯಾಡುವುದನ್ನು ಇಬ್ಬರೂ ಒಟ್ಟಿಗೇ ಕಂಡರು. ಗೌರಿಗೆ ಕಣ್ಣನ್ನು ಆ ದೃಶ್ಯದಿಂದ ಕೀಳಲಾಗಲಿಲ್ಲ. ಯಾರೊ ಋಷಿಗಳಿಗೆ ಅತಿಸುಖದ ಆಸೆಯಿರಬಹುದೆಂದು ಹೇಳಲು ಹೊರಟ ಗಂಗೆ ಅಕ್ಕನ ಮುಖ ನೋಡಿ ಸುಮ್ಮನಾದಳು. ಗೌರಿ ಸಾವರಿಸಿಕೊಂಡು, ಹಾವುಗಳು ಎಣೆಯಾಡುವುದನ್ನು ನೋಡಬಾರದಂತೆ ಕಣೇ, ಎಂದು ತಂಗಿಯನ್ನು ಸರಸರನೆ ಎಳೆದುಕೊಂಡು ಹೋದಳು.

ಒಂದು ದಿನ ಮುಂಜಾನೆ. ಯಾರಿಗೂ ಇನ್ನು ಸ್ನಾನವಾಗಿಲ್ಲ. ಗುಡ್ಡದ ಮೇಲೆ ಸಂಜೆ ಕಣ್ಣಿಗೆ ಬಿದ್ದಿದ, ಅದರೆ ಸಂಜೆ ಕೊಯ್ಯಬಾರದೆಂದು ಬಿಟ್ಟುಬಂದಿದ್ದ ಒಂದು ಮೊಟ್ಟಿನ ಸಂದಿಯಲ್ಲಿ ಗುಪ್ತವಾಗಿ ಯಥೇಷ್ಟವಾಗಿ ಬೆಳೆದುಕೊಂಡ ಮತ್ತಿಸೊಪ್ಪು ತರಲು ಹೋದಾಗ ಅದು ಕಾಣಿಸಿತು. ಮತ್ತಿ ಸೊಪ್ಪಿನ ಬುಡದಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತ ಅದು ಕಾಲು ಚಾಚಿ ಮಲಗಿತ್ತು.

ಜಿಂಕೆಯ ಹಾಗೆ ಕಾಣುವ ಪ್ರಾಣಿ ಅದು. ಅಕ್ಕರೆ ಉಕ್ಕಿ ಗಂಗೆ ಬಿಕ್ಕುತ್ತ ಅದನ್ನು ಮುಟ್ಟಿದಳು. ಅದು ಕಣ್ಣುಗಳನ್ನು ತೆರೆದು ಏದುಸಿರು ಬಿಡುತ್ತ ಗುರುತು ಹಿಡಿದಂತೆ ತನ್ನನ್ನು ನೋಡುತ್ತಿದೆಯೆಂದು ಗಂಗೆಗೆ ಭಾಸವಾಗಿ ತಮ್ಮ ಕೊಟ್ಟಿಗೆಯಲ್ಲಿ ಹುಟ್ಟಿದ ಕರುವನ್ನು ಅಕ್ಕು ಎತ್ತಿಕೊಳ್ಳುವಂತೆ ಎತ್ತಿಕೊಂಡಳು. ಅರ್ಧದೂರ ಗೌರಿ ಅರ್ಧದೂರ ಗಂಗೆ ಅದನ್ನು ಎತ್ತಿ ಮನೆಗೆ ತಂದರು.

ಮರಿ ನೋವಿನಲ್ಲಿರುವಂತೆ ಕಂಡಿತು- ಅದರ ಏದುಸಿರಿನ ಗಂಟಲಿನಿಂದ ಯಾವ ದನಿಯೂ ಹೊರಡಲಿಲ್ಲ. ಆದರೆ ಅದರ ಬೊಗಸೆ ಕಣ್ಣುಗಳ ನೋಟ ಮಾತ್ರ ತನ್ನ ಜನುಮಾಂತರಗಳ ಹಿಂದಿನ ನೆನೆಪು ಅದಕ್ಕೆ ಥಟ್ಟನೇ ಆಗಿಬಿಟ್ಟಂತೆ ಇತ್ತು.

‘ಮನೆ ಕೆಲಸ ಸಾಲದು ಅಂದ್ರೆ ಇದೊಂದು ಕೆಲಸ ಬೇರೆ ನನಗೆ’ ಎಂದು ಅಕ್ಕು ಬಯುತ್ತಲೇ ಅದರ ಶುಶ್ರೂಶೆಗೆ ಮುಂದಾದಳು. ಕೇಶವ ಅದು ಜಿಂಕೆಯ ಮರಿಯಲ್ಲವೆಂದ; ಅದೇನು ತನಗೆ ತಿಳಿಯದು ಎಂದ. ಪುಟ್ಟೇಗೌಡನಿಗೆ ತೋರಿಸಿದ. ಬೇಟೆಯ ಹುಚ್ಚಿನ ಪುಟ್ಟೇಗೌಡನೂ ಅದನ್ನು ನೋಡಿ ಆಶ್ಚರ್ಯಪಟ್ಟ. ಮರಿಯ ಮೂತಿ, ಮೂತಿಗಿಂತ ಹೆಚ್ಚಾಗಿ ಅದರ ಕಣ್ಣಿನ ನೋಟ – ಅವನಾದರೂ ಈವರೆಗೆ ಕಂಡ ಯಾವ ಪ್ರಾಣಿಯಲ್ಲೂ ಕಂಡಿರಲಿಲ್ಲ.

ಕೇಶವ ತನಗೆ ಗೊತ್ತಿರುವ ಮದ್ದುಗಳನ್ನೆಲ್ಲ ಅರೆದು ಅದಕ್ಕೆ ಕುಡಿಸಿದ. ಮಂತ್ರಿಸಿದ ಯಂತ್ರವೊಂದನ್ನು ಅದರ ಕೊರಳಿಗೆ ಕಟ್ಟಿದ. ನಿತ್ಯ ದೇವರ ತೀರ್ಥ ಕುಡಿಸಿದ.

ದೇವಲೋಕದ ಅತಿಥಿಯೆಂಬಂತೆ ಉಪಚರಿಸಿಕೊಳ್ಳುತ್ತ ಮನೆಯವರ ಅರ್ಧದ ಹಾಲು ಕುಡಿದು ದಿನೇ ದಿನೇ ಅದು ಬೆಳೆದು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪುರಾಣವಾಯಿತು.
ಒಂದು ವಾರದ ಉಪಚಾರದಲ್ಲೆ ಅದು ಚೇತರಿಸಿಕೊಂಡಿತ್ತು. ಚೇತರಿಸಿಕೊಂಡಿದ್ದೇ ಈ ಮರಿ ಅತ್ತಿತ್ತ ಸುಳಿದಾಡಿ, ಗಂಗೆ ಗೌರಿಯರನ್ನು ಮೂಸಿ, ಒಮ್ಮೆಗೇ ಚಂಗನೆ ಅದೆಷ್ಟು ಎತ್ತರ ಹಾರಿತೆಂದರೆ ಹಿತ್ತಲಿನ ಸೂರು ಅದರ ತಲೆಗೆ ತಾಕಿತು. ಆಮೇಲಿಂದ, ನಿಂತಲ್ಲಿ ನಿಲ್ಲುವ ಮೃಗ ಅದಲ್ಲ. ಗಂಗೆ ಇದನ್ನು ನೋಡಿ ಈ ಲೋಕದಲ್ಲೇ ಉಳಿಯಲಿಲ್ಲ. ಕೇಶವನಂತೂ ಈ ಮರಿ ಲೋಕದ್ದಲ್ಲವೇ ಅಲ್ಲ ಎಂದು ಮನೆಗೆ ಬಂದವರಿಗೆಲ್ಲ ಹೇಳತೊಡಗಿದ. ಕಾಡಿನಲ್ಲಿ ತಪಸ್ಸು ಮಾಡ್ತಾ ಇರೊ ಋಷಿಯೊಬ್ಬನ ಮಗ ಇದು ಇರಬಹುದಲ್ಲವ ಎಂದರೆ, ಕೇಶವ “ಯಾಕಿರಬಾರದು”? ಎಂದು ಗಂಗೆಯ ಕಲ್ಪನೆಗೆ ಗರಿ ಮೂಡಿಸಿದ.
ಅಕ್ಕಯ್ಯ ಮಾತ್ರ ಇಂಥ ಊಹೆಗಳಿಗೆ ಸೊಪ್ಪು ಹಾಕದಿದ್ದರೂ ಗಾಬರಿಯಾದಳು; ಇದನ್ನು ಸಾಕುವುದು ತಪ್ಪಾದರೆ, ನಮಗೆ ಕೆಟ್ಟದಾದರೆ? ನಮ್ಮದಲ್ಲದ್ದನ್ನು ನಾವು ಬಯಸಬಾರದಲ್ಲವೆ? ಎಂದು ಚಿಂತಿಸುತ್ತ, ಸೀತೆಯನ್ನೇ ಮರುಳುಗೊಳಿಸಿದ ಮಾಯಾಮೃಗದಂತೆ ಇದು ಇರಬಹುದೆಂದು ಶಂಕಿಸುತ್ತ, ಎಳೆಯನಂತೆ ಆಡುವ ತಮ್ಮನನ್ನು ಬಯುತ್ತ ಹಾಲು ಅನ್ನ ತಿನ್ನಿಸಿ ಪ್ರಾಣಿಯನ್ನು ಮುದ್ದಿನಲ್ಲೇ ಸಾಕಿದಳು.
ಹೀಗೆ ಚಂಗನೆ ನೆಗೆಯುವ ಪ್ರಾಣಿ ಗಂಗೆಯ ಕೈಯಿಂದ ಹುಲ್ಲು ತಿನ್ನುತ್ತ ಮೂತಿಯೆತ್ತಿದಾಗ ಅವಳ ಪ್ರಕಾರ ಮಾತಾಡುತ್ತ, ಬಾಲ ನಿಮಿರಿಸಿದಾಗ ನಗುತ್ತ,
ಅಂಬೆಗಾಲಿನ ಮಗುವಿನಂತೆ ಬಾಯಿ ಕಳೆದು ಬಾಯಿಗೆ ಮಿಳ್ಳೆಯಿಂದ ಹಾಲು ಸುರಿಸಿಕೊಳ್ಳುತ್ತ ತುಂಟು ಆಟದಲ್ಲಿ ಅವಳಿಗೆ ಹಾಯುತ್ತ, ಅವಳ ಮಗ್ಗುಲಲ್ಲೆ ರಾತ್ರೆ ಚಾಪೆಯ ಮೇಲೆ ಮಲಗುತ್ತ, ಅವಳ ಕೆನ್ನೆಯನ್ನು ನೆಕ್ಕುತ್ತ ಕೆಲವು ದಿನಗಳು ಮನೆಯ ಸಾಕಿದ ಪ್ರಾಣಿಯಂತಿತ್ತು.
ಅಂಗಳ ದಾಟಲು ಕೂಡ ಗಂಗೆಗಾಗಿ ರತ್ನ ಗಂಧಿ ಬೇಲಿಯ ಬಳಿ ಕಾಯುತ್ತಿದ್ದ ಗೂಢವಾದ ಕಾಡಿನ ಈ ಅತಿಥಿ ಒಂದು ದಿನ ಬೆಳಿಗ್ಗೆ ಎಲ್ಲರ ಕಣ್ಣಿದಿರಿಗೆ, ದೂರದಲ್ಲಿ ಏನನ್ನೋ ಕಾಣುತ್ತಿರುವಂತೆ ಕಿವಿನಿಮಿರಿಸಿ ಕತ್ತೆತ್ತಿ ನೋಡುತ್ತ ನಿಂತೇ ಇದ್ದದ್ದು, ಎಲ್ಲರೂ ನೋಡುನೋಡುತ್ತಿದ್ದಂತೆಯೇ, ಎಳೆಬಿಸಿಲನ್ನು ಕುಡಿದು ಉನ್ಮತ್ತವಾದಂತೆ, ಏನೋ ಥಟ್ಟನೆ ನೆನಪಾಗಿಬಿಟ್ಟಂತೆ, ನಾಗಾಲೋಟದಲ್ಲಿ ಗುಡ್ಡದ ಮೇಲೆ ಕ್ಷಣದಲ್ಲಿ ಓಡಿ ಮಾಯವಾಗಿಬಿಟ್ಟಿತು.


ಗುಡ್ಡದಲ್ಲಿ ಎಲ್ಲೆಲ್ಲೂ, ದಭೆದಭೆಗಳ ಅಡಿಯಲ್ಲಿ, ಹುಲಿಹೆಜ್ಜೆಗಳ ಜಾಡಿನಲ್ಲಿ, ಬಿದಿರಿನ ಹಿಂಡಲುಗಳಲ್ಲಿ, ಅಬ್ಬರಿಗಳ ಅಂಚಿನಲ್ಲಿ, ತಳದಲ್ಲಿ, ಅಲೆದು‌ಅಲೆದು ಹುಡುಕಿದ್ದಾಯಿತು; ಗಿರಿಜಾ ಗಿರಿಜಾ ಎಂದು ಗಂಗೆ ಅದನ್ನು ಕೂಗಿ ಕೂಗಿ ಕರೆದದ್ದಾಯಿತು. ಆದರೆ ಕಾಡಿನ ಗೂಢ ಅತಿಥಿ ಮಾಯವಾಗಿ ಬಿಟ್ಟಿತು.
ಗಂಗೆ ಅತ್ತಳು. ಊಟ ಬಿಟ್ಟಳು. ಅತ್ತು ಅತ್ತು ಮಲಗಿದಳು ಎರಡು ದಿನಗಳಲ್ಲಿ ಅವಳ ಕಣ್ಣುಗಳು ಕೆಂಪಾಗಿ ಮೈ ಸುಡತೊಡಗಿತು.

ಏರಿದ ಜ್ವರದಲ್ಲಿ ಗಿರಿಜಾ ಗಿರಿಜಾ ಎಂದು ಕಣ್ಮರೆಯಾದ ತನ್ನ ವಸ್ತುವನ್ನು ಕರೆಯುತ್ತಲೇ ಇದ್ದಳು. ಕರೆದು ಕರೆದು ಅವಳ ಗಂಟಲು ಒಣಗಿ ಅವಳ ಮಾತು ನಿಂತಿತು. ಆದರೂ ಸನ್ನೆ ಮಾಡಿ ಕರೆಯುವಳು. ಮೃತ್ಯುಂಜಯ ಜಪ ಮಾಡುತ್ತ ಕೇಶವ ಇಡೀ ಹಗಲು ಇಡೀ ರಾತ್ರೆ ಅವಳ ಪಕ್ಕದಲ್ಲೆ ಕೂತಿದ್ದ. ಬೆಳಗಾಯಿತು. ಕೋಳಿ ಮೂರು ಸಾರಿ ಕೂಗಿದ್ದು ಕೇಳಿತು.

ಇನ್ನೂ ಆಳದ ನಿದ್ದೆಗೆ ಜಾರುವಾಗ ಶ್ವಾಸವನ್ನು ಎಳೆದುಕೊಳ್ಳುವಂತೆ ಗಂಗೆ ನಿಧಾನ ಎಳೆದುಕೊಂಡಳು; ಮತ್ತೆ ಬಿಟ್ಟಳು. ಎಚ್ಚರಾಗುವ ಹಕ್ಕಿಗಳ ಸಂಭ್ರಮದ ಚಿಲಿಪಿಲಿಯನ್ನು, ಗೂಡು ಬಿಡುವ ರೆಕ್ಕೆಗಳ ಅವಸರವನ್ನು ಆಲಿಸುತ್ತ ಪಕ್ಕದಲ್ಲೇ ಕೂತಿದ್ದ ಗೌರಿ ಹೀಗೇ ಅವಳು ಹೊರಟೇ ಹೋಗಿಬಿಟ್ಟಿದ್ದನ್ನು ಅರಿತಳು. ತೆರೆದಿದ್ದ ತಂಗಿಯ ನೀಳವಾದ ರೆಪ್ಪೆಯ ಕಣ್ಣುಗಳನ್ನು ಮುಚ್ಚಿದಳು. ಮಾಯವಾದ ದಿವ್ಯಮೃಗದ ಕಣ್ಣುಗಳೇ ಅವಳವು. ಎಲ್ಲ ಅತ್ತರೂ ಗೌರಿ ಅಳಲಿಲ್ಲ.

ಗಂಗೆ ಸತ್ತ ಮೇಲೆ ಗೌರಿಯ ಚರ್ಯೆ ಬದಲಾಗುತ್ತ ಹೋಯಿತು. ಗಂಭೀರಳಾದಳು. ತನ್ನಲ್ಲೇ ಅಡಗಿ ಮೊಗ್ಗಾದಂತೆ ಕಾಣತೊಡಗಿದ ಅವಳು ಬಯ್ಗಳದಲ್ಲೆ ಎಲ್ಲರ ಪಾಲನೆ ಮಾಡುವ ಅಕ್ಕಯ್ಯನಿಗೆ ಸಮಸ್ಯೆಯಾದಳು. ಕೀಟಲೆಗಳ ಮೂಲಕ ರಮಿಸುವ ಕೇಶವನಿಗೆ ರಹಸ್ಯವಾದಳು.
ಈಗ ನಿಧಾನ ನಡೆಯುವಳು; ಬಿಸಿಲಿನಲ್ಲಿ ತಲೆ ಒಣಗಿಸಿಕೊಳ್ಳುತ್ತ ಎಲ್ಲೋ ಏನೋ ನೋಡುವವಳಂತೆ ನಿಲ್ಲುವಳು. ಜಡೆ ಹಾಕಳು. ಹೂ ಮುಡಿಯಳು, ಸದಾ ಓಡಾಡಿಕೊಂಡೇ ಇರುತ್ತಿದ್ದವಳು ಕೇಶವನ ದೀರ್ಘವಾದ ಪೂಜೆಯ ವೇಳೆಯಲ್ಲಿ ಕಣ್ಣು ಮುಚ್ಚಿ ಕೂತಿರುವಳು. ಅಕ್ಕಯ್ಯನಿಗೆ ಎದುರಾಡಳು. ರಾತ್ರೆ ಊಟವಾದ ಮೇಲೆ ಹಿತ್ತಲಿನಲ್ಲಿ ಮಾಯವಾಗುವಳು. ಹಾಸಿಗೆ ಹಾಸಿಕೊಳ್ಳದೆ ಗಿರಿಜ ಮಲಗುತ್ತಿದ್ದ ಚಾಪೆಯ ಮೇಲೆ ಮಲಗುವಳು.
ಅಕ್ಕು ಏನೇನೋ ಹರಕೆ ಹೇಳಿಕೊಂಡಳು: ಏಳ್ರಾಟದ ಶನಿಗೆ, ಪಶುಪತಿಯಾದ ಶಿವನಿಗೆ, ಸತ್ಯನಾರಾಯಣನಿಗೆ, ಊರಿನ ಮಾರಿಗೆ, ಮನೆಯ ದೇವರಿಗೆ, ಧರ್ಮಸ್ಥಳದ ಮಂಜುನಾಥನಿಗೆ, ಅಣ್ಣಪ್ಪನಿಗೆ, ಅಶ್ವತ್ಥ ವೃಕ್ಷದ ಬುಡದ ನಾಗನಿಗೆ, ತಿರುಪತಿಯ ತಿಮ್ಮಪ್ಪನಿಗೂ – ಗೌರಿಯ ಭ್ರಮೆಯನ್ನು ಕಳೆಯಪ್ಪ, ಅವಳೊಂದು ಗಂಡನ ಮನೆ ಸೇರುವಂತೆ ಕರುಣಿಸಪ್ಪ, ಎಂದು.

ಗೌರಿಗೆ ಭ್ರಮೆ ಇರಬಹುದೆಂದು ಸರ್ಪಗಣ್ಣಿನ ಅಕ್ಕು ತಿಳಿಯಲು ಅವಳದೇ ತರ್ಕದಿಂದ ಹುಟ್ಟಿದ ಕಾರಣವಿತ್ತು. ಗೌರಿಗೆ ಗೊತ್ತಿಲ್ಲದಂತೆ ಒಂದು ಬೆಳದಿಂಗಳಿನ ರಾತ್ರಿ ಅವಳ ಬೆನ್ನ ಹಿಂದೆಯೇ ನಡೆದು ಕಂಡದ್ದು ಶುದ್ಧಸಂಸಾರಿಯಾದ ಅವಳಿಗೆ ವಿಚಿತ್ರವೆನ್ನಿಸಿತ್ತು. ಗೌರಿ ಸಂಪಗೆಯ ಮರದ ಅಡಿ ನಿಂತು ತಾನು ಬಡಿಸಿಕೊಂಡು ತಂದ ಹಾಲನ್ನವನ್ನು ಮರದ ಬುಡದಲ್ಲಿಟ್ಟು ಕಾದಳು. ಅಲ್ಲಿಗೊಂದು ಕಪ್ಪುಬೆಕ್ಕು ಸದ್ದಿಲ್ಲದೆ ಬಂತು. ಅಕ್ಕುಗೆ ಹೆದರಿಕೆಯಾಗುವಂತೆ ಅವಳನ್ನು ಅದು ನೋಡಿತು. ಬೆಕ್ಕು ಮತ್ತು ಗೌರಿ ಎದುರುಬದಿರಾಗಿ ಏನೋ ಒಬ್ಬರಿಗೊಬ್ಬರು ಹೇಳಿಕೊಳ್ಳುವಂತೆ ಗಹನವಾಗಿ ನಿಂತರು. ಬೆಕ್ಕು ಮತ್ತು ಮನುಷ್ಯ ಪ್ರಾಣಿಯ ಸರ್ವೇಸಾಮಾನ್ಯವಾದ ಅಡುಗೆ ಮನೆ ಒಲೆ ಎದುರಿಗಿನ ಸಮಾಗಮದಂತೆ ಕಾಣಲಿಲ್ಲ. ಹಾಲು ಕದಿಯಲು ನಿತ್ಯ ಬರುವ, ಇಲಿಗಳನ್ನು ಹಿಡಿಯುವ ತಮ್ಮ ಅಕ್ಕರೆಯ ಬಯ್ಗಳದ ಬೆಕ್ಕು ಅದಾಗಿರಲಿಲ್ಲ. ಯಾವುದೋ ಗೂಢದಿಂದ ಪ್ರತ್ಯಕ್ಷವಾದ ಕಡುಕಪ್ಪು ಬಣ್ಣದ ಬೆಕ್ಕು ಅದಾಗಿತ್ತು. ಅದು ದೆವ್ವ ಎಂದುಕೊಂಡು ನಡುಗುತ್ತ ಅಕ್ಕು ನೋಡಿದಳು. ಗೌರಿ ಹಿಂದಕ್ಕೆ ತಿರುಗಿ ಅಕ್ಕುವನ್ನು ನೋಡಿದರೂ ಏನೂ ಹೇಳದೆ ನಿತ್ಯದ ತನ್ನ ಕೆಲಸವೆಂಬಂತೆ ಬೆಕ್ಕಿನ ಕಡೆ ತಿರುಗಿ ನಿಂತಳು.

ಆಮೇಲೆ ಬೆಕ್ಕು ತುಂಬ ಇಷ್ಟವಾದಂತೆ ಬಾಳೆಲೆಯನ್ನು ನೆಕ್ಕಿನೆಕ್ಕಿ ಹಾಲನ್ನವನ್ನು ತಿಂದಿತು. ಕಾಡಿನ ದಿಕ್ಕಿನಲ್ಲಿ ತರಗೆಲೆ ತುಳಿದ ಸದ್ದೂ ಆಗದಂತೆ ಓಡಿತು.

ಇದೇನು, ಎತ್ತ, ಕೇಳಲಾರದೆ ಗೌರಿಯಲ್ಲಿ ಯಾವುದೊ ದೆವ್ವವೋ ದೇವತೆಯೋ ಹೊಕ್ಕಿದೆ ಎಂದು ಭೀತಳಾದ ಅಕ್ಕು ಹಿಂತಿರುಗಿ ನೋಡದೆ ಸರಸರನೆ ಮನೆಗೆ ಬಂದಳು. ಗೌರಿ ಮನೆ ಚಿಟ್ಟೆಯ ಮೆಟ್ಟಿಲು ಹತ್ತುತ್ತ ತುಂಬ ಶಾಂತವಾಗಿ, ‘ಅಕ್ಕು ಯಾಕೆ ಇನ್ನು ಮಲಗಿಲ್ಲ. ಹೋಗಿ ಮಲಗು’ ಎಂದಳು. ಅದು ಅವಳ ಎಂದಿನ ಧ್ವನಿಯಾಗಿರಲಿಲ್ಲ. ಅಕ್ಕುವನ್ನು ಏನೂ ಅರಿಯದ ಒಂದು ಮಗುವೋ ಎನ್ನುವಂತೆ ಅವಳು ಕಂಡಂತಿತ್ತು.
ಅಕ್ಕು ಸರಸರನೆ ಅಡುಗೆಯ ಮನೆಗೆ ಹೋಗಿ ಮುಷ್ಟಿಯಲ್ಲಿ ಒಂದಿಷ್ಟು ಉಪ್ಪು ಪೊರಕೆಯ ಚೂರು ತಂದಳು. ಗೌರಿಯ ಮುಖಕ್ಕೆ ಅದನ್ನು ಸುಳಿದಳು. ಸದಾ ಉರಿಯುವ ಬಚ್ಚಲಿನ ಒಲೆಗೆ ಅದನ್ನು ಎಸೆದು ಸೊಂಟದ ಮೇಲೆ ಕೈಯಿಟ್ಟು ಕಾದಳು. ಅದು ಚಟಪಟಗುಟ್ಟುವುದರಿಂದ ಕೊಂಚ ಸಮಾಧಾನಗೊಂಡು ಜಪ ಮಾಡುತ್ತ ಮಲಗಿದಳು.

ಮಾರನೆ ದಿನದಿಂದ ಅಕ್ಕು ತನಗೆ ತಲೆ ಸುತ್ತಿ ಬರುತ್ತಿದೆ ಎಂದು ಮಲಗಿಬಿಟ್ಟಳು ಕೊಟ್ಟಿಗೆ ಕೆಲಸದಿಂದ ಹಿಡಿದು ಅಡಿಗೆ ಇತ್ಯಾದಿ ಎಲ್ಲವನ್ನೂ ಕೇಶವನ ಸಹಾಯವನ್ನೂ ತೆಗೆದುಕೊಳ್ಳದೆ ಗೌರಿಯೇ ಮಾಡುವುದು ನೋಡಿ ಅವಳಿಗೆ ಕಷ್ಟವಾದರೂ ಸಮಾಧಾನವೂ ಆಯಿತು. ಆದರೆ ಯಥಾಪ್ರಕಾರ ಗೌರಿ ಕತ್ತಲಾಗುತ್ತಿದ್ದಂತೆಯೇ ಅದೊಂದು ಪೂರ್ವನಿಶ್ಚಿತ ಭೇಟಿ ಎಂಬಂತೆ ಹಿತ್ತಲಿನ ಸಂಪಗೆ ಮರದ ಬುಡದಡಿ ನಡೆದು ಬಿಡುವಳು. ಪ್ರತಿ ಸಂಜೆಯೂ ಅವಳು ಹೊರಗೆ ಹೋಗುವುದನ್ನು ಅಕ್ಕು ಗಮನಿಸಿ ಇನ್ನಷ್ಟು ಆತಂಕಗೊಂಡಳು. ಮದುವೆಯಾಗದ ಹುಡುಗಿಯೆಂಬುದು ದೆವ್ವದ ಕಾಟಕ್ಕೆ ಸುಲಭವಾದ ಕಾರಣವಾಗಿರಬಹುದೆಂದು ಇನ್ನಷ್ಟು ಗಾಬರಿಯಾಯಿತು. ಗಂಡಸರನ್ನು ಮೋಹಿನಿ ಕಾಡುವಂತೆ ಗೌರಿಯನ್ನು ಯಾವುದಾದರೂ ಬ್ರಹ್ಮರಾಕ್ಷಸ ಹಿಡಿದುಬಿಟ್ಟಿದ್ದರೆ ಅವಳ ಮೈ ಇಳಿದು ಹೋಗುವುದು ಖಂಡಿತ. ಅವಳ ಗರ್ಭ ಒಣಗಿ ಹೋಗುವುದು ನಿಶ್ಚಿತ.
ಅಕ್ಕು ಶುಶ್ರೂಶೆಯನ್ನು ಗೌರಿ ಸ್ವಂತ ಮಗಳಂತೆ ಮಾಡಿದಳು. ತನ್ನ ತಂದೆಯ ಕಾಲದಿಂದ ಮನೆಯಲ್ಲಿ ಜೋಪಾನವಾಗಿ ಕಾದಿಟ್ಟ, ಸರ್ವರೋಗ ನಿವಾರಿಣಿಯೆಂದು ಪ್ರಸಿದ್ಧವಾದ ಉಂಡೆಯೊಂದನ್ನು ತೆಯ್ದು, ಜೇನು ತುಪ್ಪದಲ್ಲಿ ಅದನ್ನು ಕಲಸಿ, ನೆಕ್ಕಿಸಿ, ಬೆನ್ನಿಗೆ ಬಿಸಿನೀರಿನ ಶಾಕಕೊಟ್ಟು ಕೊಂಚ ಹೊತ್ತು ಮಲಗಿಸಿ, ಮತ್ತೆ ಎಬ್ಬಿಸಿ, ಮಣೆ ಮೇಲೆ ಕೂರಿಸಿ, ‘ನಿನಗೆ ಉಷ್ಣವಾಗಿದೆ’ ಎಂದು ಗದರಿಸಿ, ಪುಸಲಾಯಿಸಿ, ಅವಳ ಬೋಳುತಲೆಗೆ ತೆಂಗಿನ ಎಣ್ನೆ ಹಚ್ಚಿ, ಎರೆದು, ಅವಳ ಕಿರಿಕಿರಿಗೆ ಕಿವಿಗೊಡದೆ, ಮತ್ತೇನೋ ಕೆಲಸವಿರುವಂತೆ ಗುಡ್ಡದ ಕಡೆ ನಡೆದುಬಿಡುವುದು. ಅವಳು ಹೊರ ಹೋದದ್ದೇ ಅಕ್ಕು ತನಗೇನೂ ಆಗಿಲ್ಲವೆಂಬಂತೆ ಎದ್ದು ಕೂತು ತನ್ನ ತಮ್ಮನನ್ನು ಪೀಡಿಸತೊಡಗುವಳು- ಗೌರಿಯನ್ನು ಅವನೇ ಮದುವೆಯಾಗಬೇಕೆಂದು.


ಮುಂಚಿನಿಂದಲೂ ಅಕ್ಕು ಈ ವಿಷಯವನ್ನು ಬಗೆಬಗೆಯಾಗೆ ಎತ್ತಿದ್ದಿದೆ. ಆದರೆ ಪ್ರತಿಸಾರಿಯೂ ಅದನ್ನೊಂದು ತಮಾಷೆಯೆಂಬಂತೆ ಗೌರಿಯೂ ಗಂಗೆಯೂ ಕೇಶವನೂ ಅಕ್ಕುವನ್ನೆ ಹಾಸ್ಯ ಮಾಡುತ್ತಿದ್ದರು.
‘ಮದುವೆಯಾಗೋ ಹುಡುಗಿ ಮನೆಗೆ ನಾನು ದಿಬ್ಬಣದಲ್ಲಿ ಹೋಗೋದು ಹೇಗೆ ಸಾಧ್ಯವೇ? ಮದುವೆಯಾಗೋ ಹೆಣ್ಣು ಇಲ್ಲೇ ವಕ್ಕರಿಸಿದ್ದಾಗ?’
ಮುಷ್ಟಿ ಮಾಡಿದ ಬಲಗೈಯನ್ನು ಮೇಲಕ್ಕೆತ್ತಿ ಆಡಿಸುತ್ತ ಯಕ್ಷಗಾನದ ವೇಷದಂತೆ ಸವಾಲು ಹಾಕಿ, ಹಿಂದಕ್ಕೆ ಸರಿದು, ಮತ್ತೆ ಮುಂದೆ ಬಂದು ಅಕ್ಕುವಿನ ಮುಖಕ್ಕೆ ಎದುರಾಗಿ ಕೇಶವ ನಿಲ್ಲುವನು. ಮುಖವನ್ನೇ ದಿಟ್ಟಿಸುತ್ತ, ಎತ್ತಿದ ಬಲಮುಷ್ಟಿಯನ್ನು ಭಾವಯುಕ್ತವಾಗಿ ಇಳಿಸಿ, ಎಡ ಅಂಗೈ ಮೇಲೆ ಗುದ್ದುತ್ತ ರಾಗವಾಗಿ ಹೇಳುವನು.
‘ಅಕ್ಕಯ್ಯ ನಾನು ಕಾಶೀಗೆ ಹೊರಟು ನಿಂತಾಗ ನನಗೊಂದು ಕೊಡೇನೂ ಹೊದೆಯಲೊಂದು ಅಂಗವಸ್ತವನ್ನೂ ಯಥಾವತ್ತಾಗಿ ಕೊಟ್ಟು, “ಕಾಶಿಗೆ ಹೋಗಬೇಡಪ್ಪ, ನಮ್ಮ ಹುಡುಗಿಯ ಪಾಣಿಗ್ರಹಣ ಮಾಡಿ, ಕನ್ಯಾಸೆರೆಯಿಂದ ನನ್ನನ್ನು ಬಿಡಿಸಿ ಪುಣ್ಯವಂತನಾಗಪ್ಪ” ಎಂದು ಮತ್ತೆ ಹಿಂದಕ್ಕೆ ನನ್ನ ಸಾಕ್ಷಾತ್ ಅಕ್ಕಯ್ಯನಾದ ನೀನೇ, ಈ ಕೇಶವ ನಾಮಧೇಯನಾದ ವರಕುಮಾರನನ್ನ ಕರಕೊಂಡು ಬರೋದೇನೇ?’
ಗೌರಿ ತನ್ನ ಎರಡು ಕೈಗಳನ್ನೂ ಸೊಂಟದ ಮೇಲಿಟ್ಟು ಯಕ್ಷಗಾನದ ಹೆಣ್ಣು ಪಾತ್ರದಂತೆ ವಯ್ಯಾರದಲ್ಲಿ ವಾದಕ್ಕೆ ನಿಲ್ಲುವಳು:
‘ಈ ಮಾವನನ್ನ ಬಹುವಚನದಲ್ಲೇ ಕರೆಯೋಕೆ ನನಗೆ ಬರಲ್ವಲ್ಲೇ ಅಕ್ಕಯ್ಯನೆಂಬ ನಮ್ಮ ದೇವೀ. ಮತ್ತೆ ಭಾಗ್ಯವಂತಳಾಗಬೇಕೆಂದು ನನ್ನ ದೇವಿಯಾದ ನೀವೇ ಬಯಸುವ ನಾನೇನಾದರೂ ಇವನನ್ನ ಮದುವೆ ಆದದ್ದೇ ಆದರೆ ಜುಟ್ಟು ಕತ್ತರಿಸ್ತಾನಾ? ಅಂಗಿ ಹಾಕ್ಕೋತಾನಾ? ಪಟ್ಟಣಗಳ ಬೀದಿಗಳ ಮೇಲೆ ಈ ಗೊಡ್ಡು ವೈದಿಕನ ಜತೆ ನಾನು ಹೇಗೆ ಅಡ್ಡಾಡಬಹುದು ಹೇಳು ದೇವಿ?’
‘ದರಿದ್ರ ಬುದ್ಧಿಯ ಹುಡುಗಿ. ಪೇಟೇ ಶೂದ್ರನನ್ನೋ, ಜೈಲಿಗೆ ಹೋಗಿ ಬಂದು ಮಡಿಮೈಲಿಗೆ ಎಲ್ಲ ಬಿಟ್ಟ ಕಾಂಗ್ರೇಸ್‌ನವನನ್ನೋ ಮದುವೆಯಾಗು ಹಾಗಾದರೆ’
‘ಜೈಲಿಗೆ ಹೋಗಿರೋ ನಮ್ಮ ಸಾಹುಕಾರ್ರಿಗೆ ವಯಸ್ಸಾಗಿಬಿಟ್ಟಿದೆಯಲ್ಲೇ ಅಕ್ಕಯ್ಯನೆಂಬ ನಮ್ಮ ದೇವಿ. ಮುದುಕನನ್ನ ಆಗು ಅಂತಿಯಾ, ಮಂಗಳೂರಿನಲ್ಲಿ ಅವರಿಗೆ ಯಾರೋ ಇದಾರೇಂತ ಈ ಅಧಿಕ ಪ್ರಸಂಗಿಯಾದ ನಿಮ್ಮ ತಮ್ಮನೇ ಹೇಳ್ತಿದ್ದ.’
‘ಈ ಬಜಾರೀನ್ನ ಈ ಪುರೋಹಿತ ಭಟ್ಟ ಮದುವೆಯಾದರೆ, ಗಂಡನನ್ನ ಮಾರಿ ಒಂದು ಮೂಟೆ ಮಂಡಕ್ಕಿ ಕೊಂಡುಬಿಟ್ಟಾಳು ಅಕ್ಕಯ್ಯ.’ ಅಳು ನಟಿಸುತ್ತ ಕೇಶವ ಸ್ವಸ್ವರೂಪ ಧಾರಿಯಾಗಿ ಹೇಳುವನು.
ಪುಟ್ಟ ಗಂಗೆಯೂ ಈ ಹಾಸ್ಯದಲ್ಲಿ ಭಾಗಿಯಾಗುವಳು:
‘ಅಕ್ಕಯ್ಯ ಅಕ್ಕಯ್ಯ ದಮ್ಮಯ್ಯಕಣೆ ಅಕ್ಕಯ್ಯ, ಮಾವಯ್ಯನನ್ನ ನಾನೇ ಮದುವೆಯಾಗ್ತೇನೆ ….ಅವನು ಎಷ್ಟು ಚೆನ್ನಾಗಿ ಬೆನ್ನು ಉಜ್ಜುತ್ತಾನೆ, ಎಷ್ಟು ಒಳ್ಳೆ ಪೆಟ್ಲು ಮಾಡಿಕೊಡ್ತಾನೆ, ಎಷ್ಟು ಚೆನ್ನಾಗಿ ಹೂ ಕಟ್ತಾನೆ, ಎಷ್ಟು ಜೋರಾಗಿ ಕಾಲನ್ನ ಮೇಲಕ್ಕೆತ್ತಿ ಕೈ ಮೇಲೇನೇ ನಡೀತಾನೆ, ದಾಸರ ಪದ ಹಾಡ್ತಾನೆ. ತನ್ನ ಪಾಣೀ ಪಂಚೆ ಜೊತೆ ನನ್ನ ಲಂಗಾನೂ ಒಗೆದು ಕೊಡ್ತಾನೆ ಬೇಕಾದರೆ, ಅಂಟುವಾಳದ ಕಾಯೀನಲ್ಲಿ ಅಲ್ಲ, ಬಾರು ಸೋಪಿನಲ್ಲಿ.’
ಯಾವಾಗಲೋ ಪೇಟೆಯಿಂದ ಬರುವಾಗ ಕೇಶವ ಸೋಪು ಕೊಂಡು ತಂದದ್ದು ಯಾಕೆಂದು ಯಾವ ಅನವಶ್ಯಕ ಖರ್ಚಿಗೂ ಅವಕಾಶ ಕೊಡದ ಅಕ್ಕು ಪುಕಾರು ಎತ್ತಿದ್ದನ್ನು ಘಾಟಿ ಹುಡುಗಿ ಗಂಗೆ ಕೇಳಿಸಿಕೊಂಡು ಬಿಟ್ಟಿದ್ದಳು. ಅಕ್ಕುವೂ ನಗು ತಡೆಯಲಾರದೆ,
‘ಇಷ್ಟು ವಯಸ್ಸಾದರೂ ಮಕ್ಕಳಾಟ ಬಿಡದ ನಿಮ್ಮ ದುರ್ಬುದ್ಧಿಗೆ ಏನನ್ನಲಿ’ ಎಂದು ಬಯುತ್ತ ಒಳಗೆ ನಡೆದು ಬಿಡುವಳು.

ಮಾಗಿ ಕಾಲದ ಒಂದು ಏಕಾದಶಿ. ಮನೆಯಲ್ಲಿ ಒಲೆಹಚ್ಚಿರಲಿಲ್ಲ. ಅಕ್ಕು ಹಿಂದೆ ಫಲಾಹಾರ ಮಾಡುತ್ತಿದ್ದವಳು ಅವತ್ತು ನೀರನ್ನು ಸಹ ಮುಟ್ಟಿರಲಿಲ್ಲ. ಇನ್ನು ಮುಂದೆ ಉಗುಳನ್ನು ನುಂಗುವುದಿಲ್ಲವೆಂಬ ವ್ರತಹಿಡಿದಿದ್ದಳು.
ಆದರೆ ಅಕ್ಕು ಹಿಂದಿನವಾರ ಮಡಿಯಲ್ಲಿ ಕುಟ್ಟಿಟ್ಟಿದ್ದ ಅವಲಕ್ಕಿಯನ್ನು ನೆನೆಸಿ, ಅದಕಷ್ಟು ಮೊಸರನ್ನೂ ಮಾವಿನಮಿಡಿ ಉಪ್ಪಿನ ಕಾಯಿಯ ಖಾರವಾದ ರಸವನ್ನೂ ಬೆರೆಸಿ ಗೌರಿಯೂ ಕೇಶವನೂ ತಿನ್ನುತ್ತ ಊಟದ ಮನೆಯಲ್ಲೇ ಚಾಪೆಯ ಮೇಲೆ ಮಲಗಿಕೊಂಡು ಅಕ್ಕುವಿನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದರು; ಉಪ್ಪಿನಕಾಯಿ ರಸಕ್ಕೆ ಅಕ್ಕುವಿನ ವ್ರತಭಂಗ ಮಾಡುವ ಶಕ್ತಿ ಇರಬಹುದೇ ಎಂಬ ಕೆಟ್ಟ ಕುತೂಹಲದಿಂದ. ಇದರ ಗುಮಾನಿಯಾದ ಅಕ್ಕು ಡೃತಿಗೆಡದೆ ‘ ಕಾಯಿಸಿದ ಹಾಲನ್ನ ಮುಚ್ಚಿಟ್ಟಿದೀಯ? ಅಥವಾ ಬೆಕ್ಕಿನ ಬಾಯಿಯ ಪಾಲಾಯ್ತ ಅದು, ನಿನ್ನೆ ಹಾಗೆ?’ ಎಂದು ಮಕ್ಕಳನ್ನು ಗದರಿಸುವಂತೆ ಕೇಳಿದಳು. ಗೌರಿ ಮಾವನ ಮುಖ ನೋಡಿದಳು; ಮಾವ ಹುಬ್ಬುಗಳನ್ನು ಯಕ್ಷಗಾನದ ಹಾಸ್ಯಗಾರ ವೇಷದಂತೆ ವಿಶೇಷವಾಗಿ ಎತ್ತಿ ಮುಖ ಆಡಿಸಿದ. ಅಕ್ಕು ಗಮನಿಸಿದರೂ ಸೊಪ್ಪು ಹಾಕದೆ ಶ್ರೀರಾಮಚಂದ್ರ ಎಂದು ಕಣ್ಣುಮುಚ್ಚಿದಳು.
ಇನ್ನೂ ಸೂರ್ಯ ನೆತ್ತಿಗೇರಿರಲಿಲ್ಲ; ಏಕಾದಶಿಯಾದ್ದರಿಂದ ಅಡುಗೆ ಕೆಲಸವಿಲ್ಲ. ಗುಡ್ಡ ಹತ್ತಿ ಹೋಗಲು ಗೌರಿ ಅಣಿಯಾಗುವುದನ್ನು ಅಕ್ಕಯ್ಯ ಗಮನಿಸಿದಳು. ಸೆರಗನ್ನು ಸೊಂಟಕ್ಕೆ ಸಿಕ್ಕಿಸಿದಳೆಂದರೆ ಗೌರಿಯ ಸರ್ಕೀಟು ಶುರುವಾಯಿತೆಂದು ಅರ್ಥ. ಅವಳು ಮೆಟ್ಟಿಲಿಳಿಯುವುದನ್ನು ಕಾದು ಅಕ್ಕು ಎದೆನೋವೆಂದು ನರಳಿದಳು. ಪರವಾಗಿಲ್ಲ, ಹೋಗಬಹುದೆಂದು ಗೌರಿಗೆ ಕೇಶವ ಕಣ್ಸನ್ನೆ ಮಾಡಿದ. ಗೌರಿ ನಡೆದು ಬಿಟ್ಟಳು.ಸ್
ಸಾಮಾನ್ಯವಾಗಿ ಅಕ್ಕು ಮಾತು ತಮ್ಮನ ಜೊತೆ, ಅವನು ಒಬ್ಬನೇ ಇದ್ದಾಗ ಶುರುವಾಗುವುದು- ಅವಳ ಕುಪ್ಪಸವಿಲ್ಲದ ಇನ್ನೂ ಹರೆಯದ ಬೆನ್ನನ್ನು ತೋರುವುದರಿಂದ.
‘ಕಪ್ಪು ಮಚ್ಚೆ ಕಾಣಿಸುತ್ತ ತಮ್ಮಯ್ಯ, ಅದು ಯಮಧರ್ಮರಾಯ ಸಧ್ಯವೇ ನಾನು ಬಂದು ನಿನ್ನನ್ನ ಕರಕೊಂಡು ಹೋಗ್ತೇನೆ ಅಂತ ಅವನ ಬೆರಳಲ್ಲಿ ಈ ಬೆನ್ನನ್ನು ಮುಟ್ಟಿ ಸನ್ನೆ ಮಾಡಿ ಹೋಗಿರೋದು. ಯಾವತ್ತು ಈ ಮಾರಾಯ ಬಂದು ಈ ವಿಧವೆಗೆ ಮುಕ್ತಿ ಕೊಡ್ತಾನೋ ಗೊತ್ತಿಲ್ಲ. ಅಷ್ಟರಲ್ಲಿ ನಿಂದೂ ಗೌರೀದೂ ಮದುವೆಯಾಗಿ ಬಿಟ್ಟಿದ್ದರೆ ಸಮಾಧಾನವಾಗಿ ಕಣ್ಣು ಮುಚ್ಚಿ ಯಮಧರ್ಮರಾಯನಿಗೆ ಕರಕೊಂಡು ಹೋಗೋ ಮಾರಾಯ ಎಂದು ಬಿಡ್ತಿದ್ದೆ. ನನಗೆ ಅಂಥ ಪುಣ್ಯ ದಕ್ಕುವ ಹಾಗೆ ಮಾಡಬಾರ್ದ? ಎಂಥ ಕಣ್ಣಿಲ್ಲದ ಮಕ್ಕಳ ಜೊತೆ ನಾನು ಬದುಕಬೇಕಾಯ್ತೊ? ನಾನೇನು ಪಡಕೊಂಡು ಬಂದೆನೊ?’


ಗೌರಿ ಗುಡ್ಡ ಹತ್ತಿ ನಡೆದಾದ ಮೇಲೆ ಅಕ್ಕುವಿನ ಈ ಪುರಾಣ ಶುರುವಾದದ್ದೇ ಕೇಶವ ಏನೇನೋ ಮಾಡಿ ಅಕ್ಕು ಕಿರಿಕಿರಿ ಮರೆಯಲು ಪ್ರಯತ್ನಿಸಿದ. ಅವನಿಗೆ ಏನೋ ಹೇಳಬೇಕಿತ್ತು. ಅದು ಅವ್ಯಕ್ತವನ್ನು ಕುರಿತಾದ ಮಾತಾದ್ದರಿಂದ ತನ್ನ ನಿತ್ಯದ ಅಕ್ಕುಗೆ ಹೇಗೆ ಹೇಳುವುದು ಅವನಿಗೆ ತಿಳಿಯದು. ತಾಯಿ ಸತ್ತಮೇಲೆ ತನ್ನ ತುರಿಕಜ್ಜಿಯನ್ನು ಬೇವಿನೆಲೆ, ತುಳಸಿಗಳ ಮದ್ದಿನಲ್ಲಿ ಗುಣಮಾಡಿದ ಅಕ್ಕಯ್ಯ ಅವಳು. ಅಂಡು ತೊಳೆದವಳು. ಇವತ್ತಿಗೂ ತಾನೊಂದು ಕಜ್ಜಿಬುರುಕ ತಮ್ಮಯ್ಯನೇ ಅವಳ ಪಾಲಿಗೆ.
ಅಕ್ಕುಗೆ ಗೌರಿಯೂ ಪ್ರತಿ ತಿಂಗಳೂ ಮುಟ್ಟಾಗುವ, ತನ್ನ ಪಾಲನೆಗೆ ಬಂದ ಸವತಿಯ ಮಗಳು. ಅವಳ ಬಗ್ಗೆ ವಿಶೇಷವಾದ್ದನ್ನು ಅಕ್ಕುಗೆ ಹೇಗೆ ಹೇಳಬಹುದು ಅವನಿಗೆ ತೋಚುವುದಿಲ್ಲ.
ಕೇಶವ ನಾಗಂದಿಗೆಯಿಂದ ಪೂರ್ವ ಕಾಲದ ತಾಳೆಗರಿಗಳ ಕಟ್ಟನ್ನು ಬಿಚ್ಚಿ ಏನನ್ನು ಹುಡುಕುತ್ತಿದ್ದೇನೆಂದು ತಿಳಿಯದೆ ಹುಡುಕುತ್ತ ಕೂತ. ತಾಳೆಗರಿಗಳನ್ನು ಓದುವ ತಮ್ಮಯ್ಯ, ಸದಾ ಪಗಡೆಯಾಡುವ ಹುಚ್ಚಿನ ಹಡೆಯಾಗಿ ಕಾಣದೆ, ಅಕ್ಕಯ್ಯನಿಗೆ ಕೊಂಚ ವಿಶೇಶವಾಗಿ ಕಾಣುವುದಿತ್ತು ಒಮ್ಮೊಮ್ಮೆ.
ಆಮೇಲೆ ಪಂಚಾಂಗವನ್ನು ಬಿಚ್ಚಿದ. ಕವಡೆಗಳನ್ನು ಚೀಲದಿಂದ ತೆಗೆದ . ಬೆರಳುಗಳಲ್ಲಿ ಏನೇನೊ ಎಣಿಸುತ್ತ ಕೂತ. ಅಕ್ಕಯ್ಯನಿಗೆ ತನ್ನ ತಮ್ಮಯ್ಯ ಗಳಿಸಿಕೊಂಡ ಈ ವಿಶೇಷ ವ್ಯಕ್ತಿತ್ವದ ಚರ್ಯೆಗಳು ಇವತ್ತು ಗಮನಕ್ಕೆ ಬಂದಂತೆ ಕಾಣಲಿಲ್ಲ.
ಕೇಶವ ಪಂಚಾಂಗವನ್ನು ಸುತ್ತಿಟ್ಟು ಮನೆಯ ಹೊರಗೆ ನಡೆದ.

ಕೇಶವ ಮನೆಯಿಂದ ಹೊರಗೆ ಬಂದು ಉಣಗೋಲ ಬಳಿ ನಿಂತ. ಒಳಗಿನಿಂದ ಅಕ್ಕು ನರಳುವುದು ಕೇಳಿಸಿತು. ಕೇಳಿಸಬೇಕೆಂಬುದೇ ಅವಳ ಉದ್ದೇಶವಾದ್ದರಿಂದ ಸುಮ್ಮನೆ ಆಲಿಸುತ್ತಿದ್ದು, ಆಕಾಶದಲ್ಲೊಂದು ಬಿಳಿ ಹೊಟ್ಟೆಯ ಗರುಡ ಕಾಣಿಸಿದಂತಾಗಿ, ಅಂಗೈ ಮುಂಗೈ ತಂದು ಮುದ್ರೆ ಮಾಡಿ, ಎಡಗಣ್ಣು ಮುಚ್ಚಿ, ಬಲಗಣ್ಣಿಗೆ ಮುದ್ರೆ ಹಿಡಿದು ಗರುಡ ವಾಹನನನ್ನು ಸ್ತುತಿಸಿದ.
ಅಗಾಧ ನೀಲಿಯಲ್ಲಿ ಗರುಡ ನಿರಾಯಾಸ ತೇಲುತ್ತಿತ್ತು. ಇರುವಲ್ಲೇ ಮತ್ತೆ ಮತ್ತೆ ಬರುವಂತೆ ಸುತ್ತುತ್ತ, ಬಿಚ್ಚಿದ ರೆಕ್ಕೆಯ ನಿರಾತಂಕದಲ್ಲಿ ವಾಯುದೇವನಿಗೆ ತಾನು ಹೊತ್ತವನನ್ನು ಒಡ್ಡುತ್ತ.
ಕೇಶವ ಶ್ರೀಹರಿ, ಶ್ರೀಹರಿ ಎಂದು ಖುಷಿಗೊಳ್ಳುತ್ತ ಕ್ಷಣದಲ್ಲಿ ಹುಡುಗನಾಗಿಬಿಟ್ಟ. ಬೇಲಿ ಮೇಲಿನ ಕಳ್ಳಿಯ ಎಲೆಯೊಂದನ್ನು ಕಿತ್ತು ಅದನ್ನು ಅದರ ಬೆನ್ನಿನಲ್ಲಿ ಮುರಿದ. ಮುರಿದಲ್ಲಿ ಅಂಟಾದ ಹಾಲು ಜಿನುಗಿತು.
ಗಂಗೆ ಸತ್ತ ಮೇಲೆ ಯಾವ ಆಟವನ್ನೂ ಮನೆಯಲ್ಲಿ ಆಡಿಲ್ಲ. ಪಗಡೆಯಾಡಿಲ್ಲ, ಕವಡೆಯಾಡಿಲ್ಲ, ಚಿನ್ನಿದಾಂಡು ಆಡಿಲ್ಲ, ಸರಿಬೆಸ ಆಡಿಲ್ಲ, ಕಳ್ಳಿಯ ಎಲೆಯಿಂದ ಕನ್ನಡಿ ಮಾಡಿಲ್ಲ. ತಾಯಿ ಸತ್ತ ಮೇಲೆ ಅಕ್ಕುವಿನ ಪಾಲನೆಯಲ್ಲಿ ತಾನು ಕಲಿತ ಆಟಗಳೇ ಇವು.
ಬಲಿತ ಕಳ್ಳಿಯ ಹಾಲು ಯಥೇಚ್ಛ ಜಿನುಗಿದ ನಂತರ ಮುರಿದ ಎಲೆಯ ತುದಿಗಳನ್ನು ಎರಡು ಕೈಗಳ ಬೆರಳುಗಳಲ್ಲಿ ಹಿಡಿದು ನಾಜೂಕಾಗಿ ಮುಂದೆ ತಳ್ಳಿದ. ಗಂಗೆಗಿದು ಬಹಳ ಇಷ್ಟ. ತುದಿಗಾಲಲ್ಲಿ ನಿಂತು ಆತಂಕದಲ್ಲಿ ಅವಳೇ ನೋಡುತ್ತಿದ್ದಾಳೆ ಎನ್ನಿಸಿತು. ಈ ಗಂಗೆಯ ಕಣ್ಣಿಗೆ ಋಷಿಸದೃಶ ಮಾಂತ್ರಿಕತೆಯಲ್ಲಿ, ಜಿನುಗುತ್ತಿದ್ದ ಹಾಲನ್ನು ಕನ್ನಡಿಯಾಗುವಂತೆ, ನಿಧಾನವಾಗಿ , ಅವಳು ತಾಳಿಕೊಳ್ಳಲಾರದ ಸಮಾಧಾನದಲ್ಲಿ ಪುಸಲಾಯಿಸಿದ. ಕಳ್ಳಿ ಕನ್ನಡಿಯಾಯಿತು. ಈ ಪುಟಾಣಿ ಕನ್ನಡಿ ಆಕಾಶದ ಬೆಳಕಿಗೆ ಎದುರಾಗಿ ದಿವ್ಯವಾದ ಬಣ್ಣಗಳನ್ನು ಮೆರೆದು ಗಂಗೆಯ ನೋಟದ ಜಲದಲ್ಲಿ ಪ್ರತಿಬಿಂಬಿತವಾಗುವುದು. ಕೇಶವ ಶ್ರೀಹರಿ ಎಂದುಕೊಂಡು ಬಣ್ಣದ ರೇಖುಗಳನ್ನೆ ದಿಟ್ಟಿಸುತ್ತ ಮೇಲೆ ನೋಡಿದ. ಅರೆ, ಗರುಡ ಇರುವಲ್ಲೇ ಇದ್ದಾನೆ.
ಗೌರಿಯ ಚಿತ್ತದ ಕನ್ನಡಿ ಅವ್ಯಕ್ತವಾದ್ದನ್ನು ಹೀಗೇ ಪ್ರತಿಫಲಿಸಿಕೊಂಡಿರಬಹುದು. ತನಗೆ ಕ್ಷಣಮಾತ್ರವಾದರೆ ಅವಳಿಗೆ ನಿತ್ಯವಾಗಿ. ಅಕ್ಕುಗೆ ಹೇಗಿದನ್ನು ಹೇಳುವುದೆಂದು ಬೆರಗಾಗುತ್ತ ಇನ್ನು ಬೆಳಗಲಾರದಂತೆ ರಾಡಿರಾಡಿ ಬಣ್ಣವಾಗಿಬಿಟ್ಟ ಕನ್ನಡಿ ನೋಡಿದ. ಏನೂ ಅರಿಯದಾದ.
ಕನ್ನಡಿ ಒಡೆಯಿತು. ಕಳ್ಳಿಯ ಹಾಲು ಕೈಗಂಟದಂತೆ ಜೋಕೆಯಾಗಿ ಗಿಡದ ಮೇಲದನ್ನು ಬಿಸಾಕಿ, ಖುಷಿಯಲ್ಲಿ ಜುಟ್ಟನ್ನು ಬಿಚ್ಚಿದ. ಕೂದಲನ್ನು ಕೊಡವಿ ಮತ್ತದನ್ನು ನೆತ್ತಿಯ ಮೇಲೆ ಊರ್ಧ್ವಮುಖಿಯಾಗಿ ನಿಲ್ಲುವಂತೆ ಕಟ್ಟಿದ. ಭಾಗವತರಾಟದ ನಾರದಮುನಿ ತಾನೆಂದುಕೊಂಡು ಉಲ್ಲಸಿತನಾಗಿ ಶ್ರೀಹರಿ ಶ್ರೀಹರಿ ಎನ್ನುತ್ತ ಒಳಗೆ ಬಂದ. ಅಕ್ಕು ಮಾಧ್ಯಾಹ್ನಿಕದ ನೆನಪು ಮಾಡಿದಳು .

ಚಳಿಗಾಲವಾದ್ದರಿಂದ ಬಲು ಮೋಜಿನಿಂದ ಕೇಶವ ತಲೆಯಮೇಲೆ ಬಿಸಿ ನೀರನ್ನು ಹೊಯ್ದುಕೊಳ್ಳಲು ತೊಡಗಿದ. ಹಂಡೆಯಲ್ಲಿ ತಾಂರದ ಚೊಂಬು ಬೇಗಬೇಗ ಗುಳುಗುಳು ಗೊಳ್ಳೂತ್ತ ಮುಳುಗುವ ಸಂಭ್ರಮದ ಶಬ್ದವನ್ನು ಅಕ್ಕು ಆಲಿಸಿದಳು. ಇಗೋ, ಮೈಯುಜ್ಜಿಕೊಳ್ಳುವಾಗ ಭಾಗವತರಾಟದ ಹಾಡನ್ನು ಬೇರೆ ಹಾಡಿಕೊಳ್ಳುತ್ತಿದ್ದಾನೆ. ಗಂಗೆಯ ಸಾವಿನ ನಂತರ ಅವನು ಹೀಗೆ ಖುಷಿಯಲ್ಲಿರುವುದನ್ನು ಅಕ್ಕು ಕಂಡಿಲ್ಲ. ಹಾಡುಮುಗಿದದ್ದೇ ಹಂಹೇಚಿವ ಸ್ತುತಿ ಶುರುಮಾಡಿಬಿಟ್ಟ. ಸ್ನಾನದ ಪ್ರಾರಂಭದಲ್ಲೇ ಪಂಚ ನದಿಗಳ ಸ್ತುತಿ ಮಾಡಬೇಕಿತ್ತಲ್ಲ- ಏನಿವತ್ತು ವಿಶೇಷ ತಿಳಿಯಲಿಲ್ಲ. ಮಾಣಿಗೇನಾದರೂ ತಲೆಕೆಟ್ಟಿತೆ? ತನ್ನ ಸ್ನಾನಕ್ಕೆ ನೀರುಳಿಸದೇ ಬರುವ ಮಾಣಿಯಲ್ಲ. ಬಚ್ಚಲಿಗೆ ಬೇಕಾದ ನೀರನ್ನೆಲ್ಲ ಸೇದಿ ಎತ್ತಿಹಾಕೋದು ನಿತ್ಯ ಕೇಶವ ಗೌರಿಯರೇ.
ಅವನು ಬಾಲನಿದ್ದಾಗ ಅಕ್ಕುವೇ ಅವನ ಮೈ ಒರೆಸಬೇಕು. ಪಾಣಿಪಂಚೆಯಿಂದ ಒರೆಸುವಾಗ ಅವನು ಹಾಯ್ ಹಾಯ್ ಎಂದು ಕುಣಿದಾಡಿದರೆ ಎಲ್ಲೆಲ್ಲೋ ನೋಡಬಾರದ, ನೋಡಲಾರದ ಆಯ ಸ್ಥಳಗಳಲ್ಲಿ ಗಾಯವಾಗಿದೆ ಎಂದು ಅರ್ಥ. ಅವಳ ಕಣ್ಣಿಗೆ ಮಾತ್ರ ಬೀಳುತ್ತಿದ್ದ ಗಾಯಗಳು. ತಂದೆಯ ಕಣ್ಣಿಗೆ ಈ ಗಾಯಗಳು ಬಿದ್ದದ್ದೇ ಆದರೆ, ಚಡಿ‌ಏಟು ನಿಶ್ಚಿತ. ಹೀಗಾಗಿ ಅಕ್ಕ ತಮ್ಮರ ನಡುವಿನ ಗುಟ್ಟುಗಳು ಈ ಗಾಯಗಳು. ಈಗಲೂ ನೆನೆಸಿದರೆ ಅವನನ್ನು ನಾಚಿಸುವ ಗಾಯಗಳು. ಗೌರಿಯನ್ನೂ ನಾಚಿಸುವ ಅವಳ ತುಂಟಾಟದ ಗಾಯಗಳು ಕೇಶವನಿಗೆ ಮಾತ್ರ ಗೊತ್ತಾಗ ಹೋಗಿ ಅಕ್ಕುಗೆ ಈಗ ದಿಕ್ಕುಕಾಣದಾಗಿದೆ.
ಉಪನಯನವಾಗುವ ತನಕ ಇವ ಮಂಗನೇ. ಹಡಬೆ ನಾಯನ್ನು ಓಣಿ ಓಣಿ ಅಟ್ಟಿ ಓಡಿಸಬೇಕು. ಎಮ್ಮೆಯ ಮೇಲೆ ಕೂತು ಸವಾರಿಯಾಗಬೇಕು. ಚಾಟರಿಬಿಲ್ಲಿನಿಂದ ಗುರಿಯಿಟ್ಟು ಹೊಡೆದು ಮಾವಿನ ಕಾಯಿ ಬೀಳಿಸಬೇಕು. ಕಂಡಕಂಡ ಮರ ಹತ್ತಬೇಕು. ಜೋನಿಬೆಲ್ಲ ಕದ್ದು ತಿನ್ನಬೇಕು….. ಅಡುಗೆ ಮನೆಯಿಂದ ಕೊಬ್ಬರಿ ಕದಿಯಬೇಕು…..
ಆದರೆ ಉಪನಯನವಾದನಂತರ ಮಾಣಿ ಎಷ್ಟು ಬದಲಾಗಿಬಿಟ್ಟ. ಮನೆಯಲ್ಲಿ ಕಡುಕೋಪಿ ಅಪ್ಪನಿಂದ ಪೂಜಾವಿಧಿಗಳನ್ನೆಲ್ಲ ಕಲಿತದ್ದೇ ಉಡುಪಿಗೆ ಹೋಗಿ ಮಠದ ಪಂಡಿತ ಸುಬ್ಬಣ್ಣಾಚಾರ್ಯರಿಂದ ಸಂಸ್ಕೃತ ಕಲಿತು ವೇದಪಾರಂಗತನಾದ. ಅಪ್ಪ ಬೇಡವೆಂದರೂ ಕೇಳದೆ ತನ್ನ ತೆವಲಿಗಾಗಿ ಮತ್ತೂರಿಗೆ ಹೋಗಿ ಗಮಕ ಕಲಿತ. ಅಪ್ಪ ಕಾಲವಾದ್ದೇ ಭಾಗವತನಾಗಿ ಊರಿಂದೂರು ಅಲೆದ. ಅವನ ಹುಚ್ಚಿಗೆ ಸಣ್ಣಜುಟ್ಟು ಸಾಲದು; ಅವನು ಬಾಲನಿದ್ದಾಗ ತಾನೇ ಮಾಡಿಸಿಕೊಟ್ಟ ಕೆಂಪು ಹರಳಿನ ಒಂಟಿಯೇಬೇಕು ಕಿವಿಗೆ. ಅದೆಷ್ಟು ಚೆನಾಗಿ ಒಪ್ಪುತ್ತದೆ ಅವನ ಕಿವಿಗೆ. ನೋಡಿದರೆ ಯಾರಾದರೂ ಬಡವರ ಮಾಣಿ ಎನ್ನಲು ಸಾಧ್ಯವೆ? ಒಮ್ಮೆ ಹೇಳಿಕೊಟ್ಟರೆ ಸಾಕು ಏನನ್ನಾದರೂ ಕಲಿತುಬಿಡುವ ಮಾಣಿಯಿದು…… ಪಾಪ ಈಗ ಮದುವೆಯಾಗದೆ ಒಣಗುತ್ತಿದೆ. ಹುಡುಗಿಯರ ಜೊತೆ ಚನ್ನಮಣಿಯಾ‌ಆಟ, ಸಂಜೆಯಾದರೆ ತಾಳಮದ್ದಲೆ, ನಿಮಿತ್ಯ ಕೇಳಲು ಬಂದವರ ಜೊತೆ ಕಾಡುಹರಟೆ…… ಅಚನಿಗೆ ಕಾಲ ಹೋದದ್ದೇ ತಿಳಿದಂತೆ ಕಾಣದು. ಪಡಪೋಸಿ ತಿಳಿಯದ ಬೋಳೆಭಟ್ಟ…..
ಅಂತ ಅವಳೇನೋ ಅಂದುಕೊಡಿರೋದು. ಸೊಗಸುಗಾರ ಗಂಡಿಗೆ ಏನೇನು ತೆವಲಿರುತ್ತೋ… ದೇವರೇ ಕಾಪಾಡಬೇಕು. ತನ್ನ ಕಣ್ಣಿಗೆ ಬೀಳದ ಸಂಗತಿಯೇ? ಆ ಸೇಳೆಗಾರ್ತಿ ಜಲಜ ಇವನೆಂದರೆ ಕಣ್ಣಲ್ಲೇ ತಿಂದುಬಿಡುವಂತೆ ನೋಡತ್ತೆ. ಇವನೂ ಬಾಯಲ್ಲಿ ಬೆರಳಿಟ್ಟರೆ ಕಚ್ಚಬಾರದ ಮಾಣಿಯೇನಲ್ಲ. ಕಚ್ಚೆಹರಕ ಬ್ರಾಹ್ಮಣರನ್ನು ಅಕ್ಕು ಕಾಣದವಳೇ? ಪೌರೋಹಿತ್ಯದ ನೆವಹೇಳಿ ಊರೂರು ಸುತ್ತುತ್ತಿದ್ದ ತನ್ನ ಗಂಡ ಮಹಾರಾಯನನ್ನ ಸ್ನಾನಮಾಡಿದ್ಡ್ ಹೊರತು, ಎಷ್ಟೇ ಸೇಳೆ ಮಾಡಲಿ, ಮುಟ್ಟಲು ಅವಳು ಬಿಟ್ಟವಳಲ್ಲ. ಮುದಿ ಗಂಡನೇ ಹಾಗಿದ್ದಾಗ, ಪ್ರಾಯಕ್ಕೆ ಬಂದವಕ್ಕೆ ಜಾತಿಯೇ, ನೀತಿಯೇ- ಕನ್ಯಾಮಾಸದ ನಾಯಿಗಳಂತೆ ಅವು.

೧ ೦

ಸ್ನಾನವಾದದ್ದೇ ಕೇಶವ ಜಪಕ್ಕೆ ಕೂತ. ಅಕ್ಕುಗೆ ತಾನು ಅಪರೂಪನಾಗಿ ತೋರಬೇಕು ಎಂದು ದಿನಕ್ಕಿಂತ ಹೆಚ್ಚು ಗಾಯತ್ರಿ ಜಪ ಮಾಡಿದ. ಕತ್ತಲೆಯ ನಡುಮನೆಯಲ್ಲಿ ಅವಳು ನೆಲದ ಮೇಲೆ ಮಲಗಿದ್ದಳು. ಅಕ್ಕು ಸದಾ ತಂಪು ಹುಡುಕುವ ಪ್ರಾಣಿ; ಅವಳು ಮಾಡುವ ಊಟ ಕೂಡ ಆರಿರಬೇಕು. ಚಳಿಗಾಲದಲ್ಲೂ ಸ್ನಾನಕ್ಕೆ ತಣ್ಣೀರು ಬೇಕು. ಈಗ ಹುಷಾರಿಲ್ಲೆಂದು ಗೌರಿಯ ಬಲವಂತಕ್ಕೆ ಬಿಸಿನೀರು ಸ್ನಾನಮಾಡುತ್ತಾಳೆ. ಗೌರಿಗಾಗಿ ಹುಷಾರು ಕೆಡಿಸಿಕೊಂಡ ಮೇಲೆ ಅವಳು ಹೇಳಿದಂತೆ ಕೇಳದೆ ವಿಧಿಯಿಲ್ಲವಲ್ಲ.
ಕೇಶವ ಚಾವಡಿಗೆ ಹೋಗಿ ಇರಲಿ ಎಂದು ರಾತ್ರೆಮಾತ್ರ ಹಚ್ಚುವ ಲಾಟೀನನ್ನು ಹಾಡು ಹಗಲೇ ಹಚ್ಚಿದ. ಹುಲ್ಲಿನ ಸೂರಿನಿಂದ ಮೇಲೆ ಸೂರ್ಯನಿದ್ದಾನೆಂದು ಮಾತ್ರ ತೋರುವ, ಕಿಟಕಿಯಿಲ್ಲದ, ತಂಪಾದ, ಹಿತವಾದ ಕತ್ತಲಿನ ನಡುಮನೆಗೆ ಬಂದ. ಯಾವುದೋ ಕಾಲದಲ್ಲಿ ಬಾಣಂತಿಯರು ಕಂಬಳಿ ಹೊದ್ದು ಮಲಗುತ್ತಿದ್ದ ಕೋಣೆಯಂತೆ, ಅದು. ತನ್ನ ಕಾಲದಲ್ಲಿ ಗೌರಿಯ ಬಾಣಂತನವನ್ನು ಇಲ್ಲೇ ಮಾಡಬೇಕೆಂಬ ಆಸೆ ಅಕ್ಕುಗೆ…… ಪಾಪದ ಈ ಅಕ್ಕುಗೆ. ಅಕ್ಕುವನ್ನು ಅಮ್ಮ ಹೆತ್ತದ್ದು ಅವಳ ತವರಿನಲ್ಲಂತೆ. ತನ್ನನ್ನು ಹೆತ್ತದ್ದು ಮಾತ್ರ ಇಲ್ಲಿಯೇ ಅಂತ. ಅಮ್ಮನ ಅಮ್ಮ ಹೆರಿಗೆ ಮಾಡಿಸಲು ಇಲ್ಲಿಗೇ ಬಂದಿದ್ದರಂತೆ…….
ಅಕ್ಕುಗೆ ಲಾಟೀನು ಕಂಡು ಆಶ್ಚರ್ಯವಾಯಿತು. ಎಷ್ಟು ಅಶ್ಚರ್ಯವಾಯಿತೆಂದರೆ ಈ ದುಬಾರಿ ಕಾಲದಲ್ಲಿ ಹಗಲಿಗೇ ಯಾಕೆ ಲಾಟೀನೊ ಎಂದು ಬಯ್ಯಲೂ ಬಾಯಿಬರದೆ ಕಣ್ಣುಜ್ಜಿಕೊಳ್ಳುತ್ತ ಎದ್ದು ಕೂತಳು.
ಮಾತು ಹೇಗೆ ಶುರುಮಾಡುವುದು ತಿಳಿಯದೆ ಕೇಶವ ‘ತೀರ್ಥ ಕೊಡಲ’ ಎಂದ.
‘ನಿನಗೇನು ತಲೆ ಕೆಟ್ಟಿದೆಯ? ನಂದಿನ್ನೂ ಸ್ನಾನ ಆಗಿಲ್ಲ ಅಂತ ಗೊತ್ತಿಲ್ಲವ?’ ಅಕ್ಕು ನಗುತ್ತ ಹೇಳಿದಳು.
ಕೇಶವ ಅವಳ ಎದುರು ದೀರ್ಘ ಸಂಭಾಷಣೆಗೆ ಕೂರುವಂತೆ ಚಕ್ಕಳಮಕ್ಕಳ ಹಾಕಿ ಕೂತದ್ದನ್ನು ಅಕ್ಕು ಗಮನಿಸಿದಳು. ಮಾತೇ ಬಾರದವನಂತೆ ತಡವರಿಸುತ್ತ,
‘ಅಕ್ಕು’ ಎಂದನು.
ರಹಸ್ಯವಾದ್ದೇನನ್ನೋ ಹೇಳಲು ಹೊರಟವನಂತೆ ಕೇಶವ ಕಂಡ. ತನ್ನ ಗಂಡನ ಮನೆಯಿಂದ ತಂದು ಜೋಪಾನ ಮಾಡಿದ ಹಿತ್ತಾಳೆಯ ಲಾಟೀನಿನ ಮೊಗ್ಗಿನಂತಹ ಬೆಳಕಿನಲ್ಲಿ ತಾನು ಈಚಿನ ದಿನಗಳಲ್ಲಿ ಅವನನ್ನು ನೋಡದಂತೆ ನೋಡಿದಳು. ಇನ್ನೂ ಒದ್ದೆಯಾದ ಜುಟ್ಟು ಬೆನ್ನಿನ ಮೇಲೆ ಚೆಲ್ಲಿದೆ. ಲಂಗೋಟಿಯಲ್ಲದೆ ಬೇರೇನೂ ಮೈಮೇಲೆ ಇಲ್ಲ. ಲಾಟೀನಿನ ಬೆಳಕಲ್ಲಿ ಅವನು ತನ್ನನ್ನು ನೋಡುವ ಕಣ್ಣುಗಳು ಹೊಳೆಯುತ್ತಿವೆ. ನೋಡಲು ಒಳ್ಳೆ ಶುಕಮುನಿಯ ಹಾಗೇ ಕಂಡ ತಮ್ಮಯ್ಯನ ಮೇಲೆ ಅಕ್ಕರೆ ಉಕ್ಕಿತು.
‘ಅದೇನು ಹೇಳೋ ತಮ್ಮಯ್ಯ’ ಎಂದಳು.
ಅವಳ ಅಕ್ಕರೆಯ ದನಿಯಿಂದ ಉತ್ತೇಜಿತನಾಗಿ ಒಂದು ದೊಡ್ಡ ಗುಟ್ಟು ಹೇಳುವಂತೆ ಪಿಸುಗುಟ್ಟಿದ:
ಅಕ್ಕು ಅದೀಗ ಬರಿ ನಮ್ಮನೇ ವಸ್ತುವಲ್ಲ; ಈಗದು ದೇವರ ಕೂಸು’
‘ಏನೆಂದಳು ಆ ಗಂಡುಬೀರಿ ನಿನಗೆ?’
ಅಕ್ಕು ಅವನನ್ನು ನೆಲಕ್ಕಪ್ಪಳಿಸುವಂತೆ ಕೇಳಿದ್ದಳು. ಆದರೆ ಕೇಶವ ತನ್ನ ಮಾತಿಗೆ ಸೊಪ್ಪುಹಾಕದವನಂತೆ ಗಂಭೀರವಾಗಿರುವುದನ್ನು ಕಂಡು ಅಕ್ಕು ಕೊಂಚ ಸಡಿಲಾಗಿ ಆಪ್ತವಾಗಿ ಹೇಳಿದಳು:
‘ತಂಗಿ ಸತ್ತದ್ದೇ ಅವಳು ಹಾಗಾಗಿರೋದು ಕಣೋ. ಅದೇನೋ ಅವಳನ್ನು ಖಂಡಿತ ಹೊಕ್ಕುಬಿಟ್ಟಿದೆ. ಗುಡ್ಡದ ಮೇಲೊಂದು ಬಿದಿರು ಹಿಂಡಲು ಇದೆಯಲ್ಲ ಅದರ ಪಕ್ಕ ನಡೆದು ಬರುವಾಗ ನಮ್ಮ ಅಮ್ಮ ಒಂದು ಸಾರಿ ಇದ್ದಕ್ಕಿದ್ದಂತೆ ಎಷ್ಟು ಬೆಚ್ಚಿದ್ದರಂತೆ ಅಂದ್ರೆ ಮೂರು ಹಗಲು ಮೂರು ರಾತ್ರಿ ಅವರಿಗೆ ಜ್ವರ ಬಿಟ್ಟಿರಲಿಲ್ಲ. ನಮ್ಮ ಅಪ್ಪ ಸುಳಿದು ಹಾಕಿ ಅವಳನ್ನ ಉಳಿಸಿಕೊಂಡದ್ದು ನನಗಿನ್ನೂ ನೆನಪಿದೆ. ಬಿದಿರು ಹಿಂಡಲ್ಲಿ ಒಂದು ಚೌಡಿ ಇದೆ. ಅದಕ್ಕೆ ಮೈಲಿಗೆಯಾಗಿರಬೇಕು. ಗೌರಿಗೇನಾದರೂ ಮುಟ್ಟು ಮೈಲಿಗೆಯ ಎಗ್ಗಿದೆಯ? ಅವಳ ಅಪ್ಪನನ್ನ ಬಹಳ ದೊಡ್ಡ ಜೋಯಿಸರು ಅಂತ ನೀನೇನೋ ಹೊಗಳ್ತೀಯ; ನನಗೆ ಗೊತ್ತಿಲ್ದೆ ಇರೋದ ಹೊರಗಿನ ಅವರ ಎಲ್ಲ ವ್ಯವಹಾರ?…….. ತಂದೆಯ ಮಗಳಲ್ಲವೇ ಅವಳು’.
ಕೇಶವ ಅಕ್ಕುವಿನ ಒಳಗನ್ನು ಮುಟ್ಟಿ ಹುಡುಕುವಂತೆ ಸಂಕಲ್ಪ ಮಾಡಿ ಜಪದಲ್ಲಿ ಕೂರುವಂತೆ ಕೂತಿದ್ದ. ಅವಳ ಮಾತನ್ನು ಕಿವಿಮೇಲೆ ಹಾಕಿಕೊಳ್ಳದೆ ಮುಂದುವರಿದ ಲಾಟೀನಿನ ದೀಪವನ್ನೆ ನೋಡುತ್ತ. ಯಾರಿಗೋ ಸಂಬಂಧಪಟ್ಟ ವೃತ್ತಾಂತವೆಂಬಂತೆ. ಪ್ರವಚನವಾಗದಂತೆ ಮಾತಾಡುವುದೇನೂ ಅವನಿಗೆ ಸುಲಭವಲ್ಲ.

… … …

ವಾರದ ಹಿಂದೆ ಒಂದು ಸಂಜೆ. ಅವನಿಗೂ ಅವಳು ಎಲ್ಲಿ ಹೋಗುತ್ತಾಳೆಂಬ ಕುತೂಹಲ. ಹಿಂಬಾಲಿಸಿದ. ಅವಳಿಗೆ ತಿಳಿಯದಂತೆ. ಮೊಟ್ಟುಗಳ ಸಂದಿ ಅಡಗುತ್ತ. ಹಕ್ಕಿಯ ಬೆನ್ನಟ್ಟುವ ಮಾಳಬೆಕ್ಕಿನಂತೆ. ತಾನೆಲ್ಲಿದೀನಿ, ಎಲ್ಲಿ ಹೋಗ್ತ ಇದೀನಿ ಏನೂ ಗೊತ್ತಿಲ್ಲದವಳಂತೆ ಅವಳು ಕಾಲು ಕೊಂಡಲ್ಲಿ ನಡೀತ ಇದ್ದಳು. ಗಾಳೀಲಿ ತೇಲಿಹೋಗೋ ಅಪ್ಸರೆಯ ಥರ. ಏನೋ ಕೆಲಸ ಇಟ್ಟುಕೊಂಡು ನಾವು ಹೋಗ್ತೀವಲ್ಲ, ಆ ಥರಾ ಅಲ್ಲವೇ ಅಲ್ಲ. ಮುಳ್ಳು ಕಲ್ಲು ನೋಡದೆ. ಮುಖಾನ್ನ ಅಕಾಶಕ್ಕೆ ಎತ್ತಿ.
(ತಾನು ಕಂಡದ್ದನ್ನು ಮತ್ತೆ ಕಾಣುತ್ತಿರುವಂತೆ ಕ್ಷಣ ಸುಮ್ಮನಾಗಿ, ಅಕ್ಕು ಮೌನದಿಂದ ಉತ್ತೇಜಿತನಾಗಿ ಮುಂದುವರಿದ)
ಅವಳ ಬೆನ್ನಿಗೆ ಸೂರ್ಯ; ಮುಳುಗುತಾ ಮುಳುಗುತಾ ಇರೋ ಸೂರ್ಯ. ಅವನ ಕಿರಣ ಅವಳ ಕೂದಲ ಮೇಲೆ ಬಿದ್ದು ಹೊಳೀತಿತ್ತು. ಸೊಂಟಕ್ಕೆ ಸೀರೆ ಸೆರಗು ಸಿಕ್ಕಿಸಿ ನಡೀತ ಇದ್ದವಳು ಒಳ್ಳೆ ವನದೇವತೆ ಹಾಗೆ ಕಾಣ್ತಾ ಇದ್ದಳು. ಅವಳ ಮುಖದ ಲಾವಣ್ಯ ಭಾಸವಾದಂತಾಗಿ ಅವನು ದಂಗಾದ ಅಂದರೆ ಅವಳ ಹಿಂದೆ ಕದ್ದು ಹೋಗೋದು ಸಾಧ್ಯವಾಗಲಿಲ್ಲ. ಅಲ್ಲೇ ನಿಂತು ಬಿಟ್ಟ. ಹತ್ತಿರ ಇದ್ದ ಕಲ್ಲು ಬಂಡೆಯೊಂದರ ಮೇಲೆ ಕೂತು ಬಿಟ್ಟ. ಪಂಚಾಕ್ಷರಿ ಜಪ ಮಾಡ್ತ ಕೂತ. ಕಣ್ಣು ಮುಚ್ಚಿ ಕೂತ.
ಕಂತುತ್ತಾ ಇದ್ದ ಸೂರ್ಯ ಇನ್ನೇನು ಕಂತಿಬಿಡಬೇಕು. ಅಷ್ಟರಲ್ಲಿ ಅವಳು ಹಿಂದಕ್ಕೆ ಬರೋದು ಕಾಣಿಸಿತು. ಅದೊಂದು ಅಪರೂಪದ ದೃಶ್ಯವೇ ಸರಿ. ಅವಳ ಮುಖ ಸೂರ್ಯನಿಗೆ ಎದುರಾಗಿದೆ. ಅವಳ ಕಣ್ಣುಗಳು ಹೊಳೆಯುತ್ತಿವೆ. ತುಂಬ ಸುಖಪಟ್ಟಂತೆ ಆ ಕಣ್ಣುಗಳು ಕಾಣುತ್ತಿವೆ. ಎಷ್ಟು ತನ್ಮಯವಾಗಿವೆ ಆ ಕಣ್ಣುಗಳು ಎಂದರೆ ಇದು ಒಳಗೆ ಅದು ಹೊರಗೆ ಎನ್ನಿಸದಂತೆ ಅವು ಎಲ್ಲವನ್ನೂ ಕಾಣುತ್ತಿವೆ.
ಹತ್ತಿರ ಬಂದವಳು ವಿಶೇಷವಾದ್ದನ್ನು ನೋಡುವವಳಂತೆ ಹಣೆಗೆ ಕೈಯಡ್ಡ ಮಾಡಿದಳು; ಇಲ್ಲದ ಬಿಸಿಲನ್ನು ನಟಿಸುತ್ತ ಕಣ್ಣುಗಳನ್ನು ಚೂಪಿಸಿ ಕೇಶವನನ್ನು ನೋಡಿದಳು.
‘ಅದೇನು ಮಾಡ್ತಾ ಇದ್ದಿಯೋ ಒಬ್ಬನೆ? ಪಟ್ಟಾಂಗ ಹೊಡೆಯೊಕೆ ಯಾರೂ ಸಿಗಲಿಲ್ವ?’
ಎಂದಿನ ಬಾಲೆಯಂತೆ ಹಾಸ್ಯ ಮಾಡಿದಳು ಎಂದು ಹಗುರಾಯಿತು. ಹೀಗೆ ಪ್ರಸನ್ನಳಾಗಿ ಬಿಟ್ಟವಳನ್ನು ಮುಟ್ಟಿ ಬೆನ್ನು ತಡವಬೇಕು ಎನ್ನಿಸಿತು. ಆದರೆ ಅಷ್ಟು ಸಲಿಗೆ ಸಾಧ್ಯವಾಗದಂತೆ ಅವಳ ಮುಖ ಕಂಡಿತು.
ಅವಳೇ ಕೇಶವನ ಜುಟ್ಟನ್ನು ಹಿಡಿದು ಎಳೆದು ಬಿಡುವುದೆ? ಇಷ್ಟುದ್ದ ಜುಟ್ಟಿನ ತುದಿಯನ್ನು ಬಿಗಿಯಾಗಿ ಹಿಡಿದು ಎಳೆಯುತ್ತ,
‘ಇಗೋ ನಿನ್ನ ಜುಟ್ಟು ನನ್ನ ಕೈಯಲ್ಲಿದೆ- ಜೋಕೆ’ ಎಂದು ಜೋರಾಗಿಯೇ ಎಳೆದಳು.
ಕೇಶವ ಗಂಭೀರವಾಗಿ, ಸ್ವಲ್ಪ ಕೂತುಕೋ ಎಂದು ಬಂಡೆಯಮೇಲೆ ತನಗೆ ಎದುರಾಗಿ ಅವಳನ್ನು ಕೂರಿಸಿಕೊಂಡು ಶ್ರೀಹರಿಯನ್ನು ನೆನೆದು ಒಂದು ಕ್ಷಣ ಕಾದು ಹೇಳಿದ:
‘ನಿನಗೀಗ ಕಾಣ್ತಾ ಇದೆ ಅಲ್ವ?’
ಗೌರಿ ನಾಚಿದಳೆ? ಹಾಗೆನ್ನಿಸುವಂತೆ ನೋಡಿದ್ದಳು
‘ಹಕ್ಕೀಲಿ, ಮರದಲ್ಲಿ, ಝರಿಯಲ್ಲಿ, ನೀರಲ್ಲಿ….’
‘ಅದೇನು ಹೇಳ್ತಿದೀಯೋ?’
ಅದು ನಿರಾಕರಣೆಯ ಪ್ರಶ್ನೆಯಾಗಿರಲಿಲ್ಲ; ಅವಳ ಧ್ವನಿಯಲ್ಲಿ ತುಂಟತನವಿದ್ದರೂ ಗೌರಿ ಅಕ್ಕರೆಯಿಂದ ಮಾವನ ಕೈ ಹಿಡಿದು ಒತ್ತಿದ್ದಳು. ಗಂಗೆಯ ಹೆಸರನ್ನು ಬಾಯಿಬಿಟ್ಟು ಹೇಳಬೇಕಾಗಿ ಬರಲಿಲ್ಲ. ಕೇಶವ ಉತ್ತೇಜಿತನಾಗಿ ಶುಕನ ಕಥೆಯನ್ನು ಮತ್ತೆ ಹೇಳಿದ್ದ. ತನಗೇ ಎನ್ನುವಂತೆ ಯಾಕೆ ಹೇಳಿಕೊಂಡಿದ್ದನೋ? ಅವಳಿಗೇನು ಗೊತ್ತಿರದ ಕಥೆಯೇ ಅದು? ತನ್ನ ಮಾತಿನ ಧ್ವನಿ ಮತ್ತು ಸರಣಿಯನ್ನು ಪ್ರವಚನದ ಗತ್ತಿಗೆ ಏರಿಸಿಕೊಂಡಿದ್ದೇ ಏನನ್ನಾದರೂ ಹೇಳುವ ಸ್ವಾತಂತ್ರ್ಯವನ್ನು ಕೇಶವ ಗಳಿಸಿಕೊಂಡಿದ್ದ.
ಗೌರಿಯ ಜೊತೆ ಅಂತಹ ಒಪ್ಪಂದವೂ ಅವನಿಗಿತ್ತು. ಗಂಗೆಯ ಜೊತೆ ಇನ್ನೂ ಇದು ಹೆಚ್ಚಿತ್ತು. ಅಂತಹ ಏರಿಕೆಯ ಮಾತಿನ ಸ್ವಾತಂತ್ರ್ಯ ಕಿಂಚಿತ್ತಾದರೂ ಅವನಿಗೆ ಇಲ್ಲದೆ ಇದ್ದದ್ದು ಭಾವ ಜಿಪುಣ ಅಕ್ಕು ಜೊತೆ ಮಾತ್ರ.
‘ಈ ಬ್ರಹ್ಮಾಂಡದಲ್ಲಿ ವೈರಾಗ್ಯ ಅನ್ನೋದು ತೋರುವ ಮುನ್ನವೇ ಇನ್ನೂ ಬಾಲಕನಾದ ಶುಕನದಲ್ಲಿ ಅದು ತೋರಿತ್ತು…..’
ಅವನ ಕಣ್ಣುಗಳು ಮುಚ್ಚಿದ್ದವು. ಗೌರಿಯ ಕಣ್ಣುಗಳು ಅವನ ಮುಖದ ಮೇಲೆ ನೆಟ್ಟಿರುವ ನಿರೀಕ್ಷೆಯಲ್ಲಿ ಮುಂದಿನ ಮಾತುಗಳು ಹುಟ್ಟಿದ್ದವು.
‘….ಯಾವ ಕರ್ಮವಾಗಲೀ, ಕಾಷ್ಠ ವ್ಯಸನಗಳಾಗಲೀ ಇನ್ನೂ ತಟ್ಟದ ಬಾಲಕ ಎಲ್ಲವನ್ನೂ ಮೀರಿ ಪರ್ಣಕುಟಿಯಿಂದ ಹೊರಟೇ ಹೋದ. ಆಗ ವೇದವ್ಯಾಸರು, ಎಷ್ಟಾದರೂ ಕವಿ ಹೃದಯವಲ್ಲವೇ ಅವರದು?-ಆದ್ದರಿಂದ ಇನ್ನೂ ವ್ಯಸನಗಳಿಂದ ಪಾರಾಗದ ಮಹಾ ಋಷಿಗಳು, ಎಲ್ಲ ತಂದೆಯರ ಹಾಗೆ ಮಗನಿಗಾಗಿ ಹಲುಬುತ್ತ ‘ಪುತ್ರಾ’ ಎಂದು ಕೂಗುತ್ತ ದಶದಿಕ್ಕುಗಳಲ್ಲೂ ಬಾಲನಿಗಾಗಿ ಹುಡುಕಾಡುತ್ತಿದ್ದಾಗ ದಿಕ್ಕುದಿಕ್ಕುಗಳಲ್ಲಿ ಬೆಳೆದು ನಿಂತ ಮರಗಳು, ದೂರದ ಗುಡ್ಡಬೆಟ್ಟಗಳು ಪ್ರತಿಧ್ವನಿಸುತ್ತ ಓ ಗೊಟ್ಟುವಂತೆ. ಹೀಗೆ ಸರ್ವಭೂತ ಹೃದಯದಲ್ಲಿ ಶುಕ ಒಂದಾಗಿರುವುದನ್ನು ತಂದೆಯಾದ ವೇದವ್ಯಾಸರು ಅರಿತರು.
ಈ ಶುಕಮುನಿಯನ್ನು ಭಾಗವತ ಛಾಯಾಶುಕ ಎನ್ನುತ್ತದೆ. ಇದ್ದಾಗಲೂ ಅವನು ಶುಕನ ಛಾಯೆಯೇ; ತ್ರಿಕಾಲ ಜ್ಞಾನಿಗೆ ಈಗ ಇರುವಂತೆ ಕಾಣುವುದೂ, ಮುಂದೆ ಇರದೆ ಇರುವುದೂ ಒಂದೇ ಅಲ್ಲವೆ? ಇರುವುದೂ ಇಲ್ಲದೇ ಇರುವುದೂ-ಎರಡೂ ಮಾಯೆಯಲ್ಲವೆ?’
ಗೌರಿ ಕೇಶವನ ಕೈಯನ್ನು ಅಕ್ಕರೆಯಿಂದ ಅದುಮಿಕೊಂಡಿದ್ದೇ ನಾಚುತ್ತ ನಕ್ಕಳು:
‘ಶುರುವಾಗಿ ಬಿಟ್ಟಿತಲ್ಲ ಮಾವಯ್ಯನ ಪ್ರಸಂಗ’


ಗೌರಿ ನಿತ್ಯದವಳಾಗಿದ್ದೇ ಸತ್ಯದವಳಾದ ಈ ಬೆರಗನ್ನು ಅಕ್ಕಯ್ಯನಿಗೆ ತನ್ನ ಮಾತುಗಾರಿಕೆಯೆಂದೇ ತೋರತೊಡಗಿದ ಮಾತುಗಳಲ್ಲಿ ಹೇಳಲಾರದೆ ಹೋಗಿ ಕೇಶವ ಅಷ್ಟೇನೂ ಪೆಚ್ಚಾಗಲಿಲ್ಲ. ಕೊಂಚ ಬೆರಗಿನಲ್ಲಿ, ಹೆಚ್ಚು ಅನುಮಾನದಲ್ಲಿ, ಯಾವ ಭಾವಾವೇಶಕ್ಕೂ ಆಸ್ಪದ ಕೊಡದ ಈ ಮಹಾ ಜಿಪುಣ ಅಕ್ಕು ‘ಸಾಕಿನ್ನು ನಿನ್ನ ಪುರಾಣ’ ಎಂದು ತನ್ನ ನೈಜ ಭಾವನೆಯನ್ನು ತೋರಗೊಡದಂತೆ ಮುಖ ತಿರುಗಿಸಿದ್ದಳು.ಆದರೆ ಹಾಗೆ ಅನ್ನುವಾಗ ಅವಳ ಧ್ವನಿಯಲ್ಲಿ ಎಲ್ಲೋ ತನ್ನ ಮಾತಿಗೆ ಅಷ್ಟೊ ಇಷ್ಟೊ ಸಿಕ್ಕವಳಂತೆ ತೋರಿದಳಲ್ಲವೆ?
ಕೇಶವ ಲಾಟೀನಿನ ದೀಪವನ್ನು ಕೊಂಚ ದೊಡ್ಡ ಮಾಡಿದ. ಹೊಗೆಯಾಯಿತು. ಸಣ್ಣ ಮಾಡಿದ. ಇಲ್ಲ ತಮ್ಮಯ್ಯನಿಗೆ ಮಾತೆಂದರೆ ಮುದ ಎಂದಷ್ಟೆ ಈ ಅಕ್ಕುಗೆ ತೋರಿರಬೇಕು.
‘ಲಾಟೀನು ಆರಿಸೋ….ಅದೇನು ಆಡ್ತಿದೀಯ ದೀಪದ ಜೊತೆ?’
ಮತ್ತೆ ಅಕ್ಕುಗೆ ಸಣ್ಣ ತಮ್ಮಯ್ಯನಾಗಿಬಿಟ್ಟೆನಲ್ಲ ಎಂದು ಪೆಚ್ಚಾಗಿ ಕೇಶವ ಎದ್ದು ನಿಂತ.


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.