ಮಗು ಚಿತ್ರ ಬರೆಯಿತು

ಕಾರವಾರ ಮುಂಬೈ ಹೆದ್ದಾರಿಯ ಪಕ್ಕದಲ್ಲಿದ್ದ ಹಳಿಯಾಳದ ಕಾರ್ಮೆಲ್ ಸ್ಕೂಲಿನ ಚಿಣ್ಣರ ಪ್ರಾರ್ಥನೆ ಗಲಾಟೆ ಬಾಯಿಪಾಠ ಪ್ರತಿಧ್ವನಿಸುವಷ್ಟು ಸನಿಹದಲ್ಲೇ ಇರುವ ನಲವತ್ತು ವರ್ಷಗಳಷ್ಟು ಹಳೆಯದಾದ ಗಜಾಕೋಕ್ ಚಾಳಿನ ಮೂರನೇ ನಂಬರಿನ ಮನೆಯಲ್ಲಿ ಮದುವೆಯಾಗಿ ಆಗಷ್ಟೇ ನಾಲ್ಕು ವರ್ಷ ತುಂಬಿದ ಇಪ್ಪತ್ತೈದರ ಮಾಲತಿ ಅಂದು ಬೆಳಿಗ್ಗೆ ಏಳರ ಹೊತ್ತಿಗೆ ಎದ್ದಿದ್ದಳು. ಅವಳ ಎರಡೂವರೆ ವರ್ಷದ ಹಸೀ ತುಂಟ ಮಗ ವಿವೇಕ ರಾತ್ರಿ ಮೂತ್ರ ಮಾಡಿದ್ದ ಗೊದಡಿಯನ್ನು ತೊಳೆಯಲೆಂದು ಹೊರತಂದಾಗ, ನಲ್ಲಿಯ ಇದಿರು ವಾರಕ್ಕೊಮ್ಮೆ ಬರುವ ಚಾಳಿನ ಜನರಿಂದ ‘ಕುಡಿಯುವ ನೀರು’ ಎಂದೇ ಕರೆಸಿಕೊಳ್ಳುವ ಮುನ್ಸಿಪಾಲಿಟಿ ನೀರಿಗಾಗಿ ಬಿಸಿಲಿಗೆ ಬಣ್ಣಗೆಟ್ಟ ಕೊಡಗಳ ದೊಡ್ಡ ಕ್ಯೂ ಇತ್ತು. ಮತ್ತೊಂದೆಡೆಯಲ್ಲಿ ಆಗ ಮಾತ್ರ ಎದ್ದು ತಮ್ಮದೇ ಬಾಗಿಲುಗಳ ಮುಂದೆ ಆಕಳಿಸುತ್ತ ನಿಂತಿದ್ದ ತಂತಮ್ಮ ಮಾಲಿಕರ ಸುಪರ್ದಿಯಲ್ಲಿ ಪ್ಲಾಸ್ಟಿಕ್ ಮಗ್ಗುಗಳನ್ನು ತೇಲಿಸಿ ಕೊಂಡು ಬೋರ್‍ವೆಲ್ ನೀರು ತುಂಬಿ ಕೂತ ಪುಟ್ಟ ಪುಟ್ಟ ನೀಲಿ ಕೆಂಪು ಬಾಲ್ದಿಗಳ ಸಣ್ಣ ಕ್ಯೂ ಪಾಯಿಖಾನೆಯ ಎತ್ತರದ ಮೆಟ್ಟಿಲುಗಳ ಮೇಲೆ ಸೇರಿಕೊಂಡಿತ್ತು.

ತನ್ನದೂ ಒಂದೆರಡು ಕೊಡಗಳನ್ನು ನಲ್ಲಿ ಬಳಿಯ ಕ್ಯೂದಲ್ಲಿಟ್ಟು ಬಂದ ಮಾಲತಿ, ಗೊದಡಿಯನ್ನು ಒಂದೆರಡು ಬಾರಿ ಖಾಲಿ ನೀರಿನಲ್ಲಿ ಅದ್ದಿ ತೆಗೆದಳು. ಮೂಸಿ ನೋಡುತ್ತ ಮೂತ್ರದ ಪರಿಮಳ ಹೊರಟು ಹೋಗಿದೆಯೆಂದು ಖಾತ್ರಿಪಡಿಸಿಕೊಂಡಳು. ಮಜ್ಜೆಯಾಗಿದ್ದ ಹಸಿ ಗೊದಡಿಯನ್ನು ಒಂದು ಟೀ ಚಮಚದಷ್ಟು ಹಳದೀ ನಿರಮಾ ಪೌಡರ ಗರಡಿದ ಅಗಲ ಟಬ್ಬಿನಲ್ಲಿ ಅದ್ದಿಟ್ಟಳು. ಒಳಗಡೆ ಮೋರಿಯ ಮೂಲೆಯ ನಳದಲ್ಲೇ ತುಂಬಿಟ್ಟ ಜಿನ್ ತಗಡಿನ ಡ್ರಮ್ಮಿನಿಂದ ನೀರು ಅಚ್ಚಿ ಹೊರತಂದಳು. ಆಗ ಮಾಲತಿ ಕಂಕುಳಲ್ಲಿ ಹೊಲಿಗೆ ಬಿಟ್ಟಿದ್ದ ನಲವತ್ತೈದು ರೂಪಾಯಿಯ ನೈಟಿಯಲ್ಲಿದ್ದಳು. ಚೂರು ಕೈ ಎತ್ತಿದರೂ ಅಲ್ಲಲ್ಲೇ ಸುಳಿದಾಡುವ ಚಾಳಿನ ಮಂದಿಗೆ ಎಲ್ಲಿ ತನ್ನ ಬ್ರಹ್ಮಾಂಡದ ತುಂಡು ಕಂಡುಬಿಡುತ್ತದೊ ಎಂಬ ಹುಷಾರಿಯೊಂದಿಗೆ ಹಾಗಾಗೇ ಮುದುಡಿಕೊಳ್ಳುತ್ತ ಮಾಲತಿ, ಹೊಟ್ಟೆಯ ಭಾಗದ ನೈಟಿಯನ್ನೆತ್ತಿ ಒಳ ಧರಿಸಿದ ಲಂಗದ ಕಟ್ಟಿಗೆ ತುಸುವೇ ಸಿಕ್ಕಿಸಿಕೊಂಡಳು.

ಆ ಚಾಳು ಮನೆಗಳ ಮುಂದೆಯೇ ಪುಟ್ಟ ಕಾಲುವೆಯಂತಿರುವ ಗಟಾರದಲ್ಲಿ ಮೋರಿಯ ನೀರಷ್ಟೇ ಹರಿಯುತ್ತಿತ್ತು. ಅಲ್ಲೇ ಅದರಂಚಿಗೇ ವಸ್ತ್ರ ಒಗೆಯಲೆಂದು ಹಾಕಿಸಿದ್ದ, ಮಧ್ಯದಲ್ಲಿ ಸರೀ ಎರಡು ಭಾಗವಾಗಿ ಸೀಳಿಕೊಂಡ ಎರಡು ಎರಡು ಅಡಿಗಳ ಹುರುಬುರುಕಾದ ಕಪ್ಪು ಪರ್ಸಿಕಲ್ಲಿನ ಮೇಲೆ ಅಮ್ಮನ ಹದಿನೆಂಟು ಮೊಳದ ಕಾಟನ್ ಸೀರೆಯ ದಪ್ಪ ಗೊದಡಿಯನ್ನು ಕುಸುಬುತ್ತ ಕೂತುಬಿಟ್ಟಿದ್ದಳು ಮಾಲತಿ.

ಎರಡೇ ಚಾ ಪಾತ್ರೆ ಹಿಡಿದೊ ಇಲ್ಲವೇ ರಾತ್ರಿ ಬಳ್ಳಿಗೆ ಒಣ ಹಾಕಿದ ಬಟ್ಟೆಯನ್ನು ಎಳೆದೊಯ್ಯಲೆಂದೊ ಹೊರಬಂದ ಹೆಂಗಸರೆಲ್ಲ ‘ನಮ್ಮ ಪುಟ್ಟ ಹೇಗಿದ್ದಾನೆ? ಆರಾಮು ಇದ್ದಾನೊ? ಮಲಗಿದ್ದಾನೊ?’ ಎಂದೆಲ್ಲ ಪ್ರಶ್ನಿಸಿ ಮರೆಯಾಗುತ್ತಿದ್ದರು. ಮಾಲತಿ ಎಲ್ಲರ ಜತೆ ಹಲ್ಲು ಗಿಂಜಿ ತಲೆಯಾಡಿಸುತ್ತ ಆಗಾಗ ನಲ್ಲಿಯೆಡೆ ಕಿವಿಗೊಟ್ಟು ನೀರು ಬರುವ ಶಬ್ದಕ್ಕಾಗಿ ಆಲಿಸುತ್ತಿದ್ದಳು. ಆದರೂ ರಾತ್ರಿಯಿಂದ ಅವಳ ತಲೆಯಲ್ಲಿ ಹೊಕ್ಕಿ ಕೂತ ಟ್ರಂಕಿನ ಹುಳು ಮತ್ತೆ ತನ್ನದೇ ಕೊರೆತ ಶುರುಮಾಡಿಬಿಟ್ಟಿತ್ತು.

ಅಷ್ಟರಲ್ಲೇ ಮೈ ಮುರಿಯುತ್ತ ಹೊರ ಬಂದು ತನ್ನದೂ ಒಂದು ಬಾಲ್ದಿಯನ್ನು ಪಾಯಿಖಾನೆಯ ಕ್ಯೂನಲ್ಲಿ ಇಟ್ಟು ಬಂದ ನೀಲಿ ಗೇರೆ ಗೇರೆಯ ಪಾಯಿಜಾಮ-ಬಿಳೀ ಸ್ಲಿವ್ ಲೆಸ್ ಬನಿಯನ್ನು ಧರಿಸಿದ್ದ ಹೆಡ್ ಪೋಸ್ಟ್ ಆಫೀಸಿನಲ್ಲಿ ಡಿಸ್‌ಪ್ಯಾಚರ್ ಆಗಿರುವ ಸಪೂರಕ್ಕಿದ್ದ ಅನಂತಮೂರ್ತಿ. ಅವರ ಈ ಮುದ್ದಿನ ಮಡದಿ ಮಾಲತಿ, ಇಂದು ಬೆಳಿಗ್ಗೆ-ಬೆಳಿಗ್ಗೆಯೇ ಎದ್ದು ವಸ್ತ್ರ ತೊಳೆಯಲು ಕೈ ಹಾಕಿ ಕೂತದ್ದು ಅವನ ಮನಸ್ಸಿಗೆ ಕಿರಿಕಿರಿ ಎನ್ನಿಸಿ ಎಲ್ಲಿಂದಲೋ ಕೋಪ ಉಕ್ಕಿ ಬಂದುಬಿಟ್ಟಿತು. ಬಾಯಲ್ಲಿ ತುಂಬಿದ್ದ ಎಂಜಲನ್ನು ಗಟಾರದಲ್ಲಿಯೇ ಪಚ್ ಅಂತ ಉಗುಳಿದ ತೆಂಕಣಕೇರಿಯ ಈ ಅನಂತಮೂರ್ತಿ ಅಂಕೋಲೆಕರ ‘ಏನು? ಹೊತ್ತಲ್ಲದ ಹೊತ್ತಲ್ಲಿ ಈವತ್ತು ವಸ್ತ್ರ ಹಿಡಿದು ಕೂತುಬಿಟ್ಟಿ, ಬುದ್ದಿ-ಗಿದ್ದಿ ಉಂಟೋ ನಿಂಗೆ?’ ಎಂದು ವಿನಾಕಾರಣ ಮುಖ ಗಂಟಿಕ್ಕಿ ತನ್ನ ಕುರುಚಲು ದಾಡಿ ಕೆರೆಯುತ್ತ ಸಿಡುಕಿಬಿಟ್ಟ. ಆ ವೇಳೆಯಲ್ಲಿ ಹೊರಗಡೆ ಇದ್ದ ಚಾಳಿನ ಕೆಲ ಮಂದಿಯೆಲ್ಲ ಕಂಡೂ ಕಾಣದಂತೆ ಕೇಳಿಯೂ ಕೇಳದಂತೆ ಇದ್ದುಬಿಟ್ಟರು.

ಅಷ್ಟೇ ಹೊತ್ತಿಗೆ ಹತ್ತಿರದ ಕಹಿ ಬೇವಿನ ಮರದ ಮೇಲೆ ಕಾಗೆ-ಗುಬ್ಬಿಗಳಾದಿಯಾಗಿ ಹೊರಡಿಸಿದ ಇಂಚರಗಳಿಗೆ ಜೀವದಾನ ಪಡೆದವನಂತೆ ಅಲ್ಲಿಯೇ ಒಳಗಡೆ ಚಾಪೆಗೆ ಮೋರೆಯೊತ್ತಿ ಎದೆಗೆ ಅಂಗಿಯೊಂದನ್ನೇ ತೊಟ್ಟು ಮಲಗಿದ, ಅನಂತನ ಕುಮಾರ ಕಂಠೀರವ ವಿವೇಕ ಮಗ್ಗಲು ಬದಲಿಸುತ್ತಿದ್ದ. ತುಂಬಿಕೊಂಡು ಹೊಳೆಯುವ ಗುಲಾಬಿ ಬಣ್ಣದ ಆತನ ಬಲಗೆನ್ನೆಯ ಮೇಲೆ ಚಾಪೆಯ ವತ್ತುಗೆರೆಗಳು ಮುದ್ದಾಗಿ ಮೂಡಿದ್ದವು.

ರಾತ್ರಿ ಮೂತ್ರ ಮಾಡುತ್ತಿದ್ದ ಕಾರಣದಿಂದ ನೆಲಕ್ಕೆ ಚಾಪೆಯ ಮೇಲೆ ಗೊದಡಿ ಹಾಸಿಕೊಂಡು ವಿವೇಕನನ್ನು ಮಲಗಿಸಿಕೊಂಡು ಒರಗಿದ್ದಳು ಮಾಲತಿ. ಮೇಲೆ ಮಂಚದ ಗಾದಿಯಲ್ಲಿ ಅನಾಥನಂತೆ ಬಿದ್ದುಕೊಂಡ ಅನಂತ ‘ಪುಟ್ಟನಿಗೆ ನಿದ್ದೆ ಹತ್ತಿದ ನಂತರ ಮೇಲೆ ಬಾ’ ಎಂದು ನವಿರಾಗಿ ಸೊಂಟ ತಿವಿದು ಹೇಳಿದ್ದು ಮರೆತೇ ಹೋಗಿ ಟ್ರಂಕು ಕೈಬಿಟ್ಟು ಹೋದ ಬಗ್ಗೆಯೇ ಯೋಚಿಸುತ್ತ ಯಾವಾಗ ನಿದ್ದೆಗೆ ಜೋತು ಬಿದ್ದಳೊ ಅವಳಿಗೇ ಗೊತ್ತಾಗಲಿಲ್ಲ.
ಅನಂತನ ಈ ನಸುಕಿನ ಸಿಡುಕಿಗೆ ಕಾರಣವೇನೆಂದು ಮಾಲತಿಗೆ ಥಟ್ಟನೆ ಹೊಳೆದು ಹೋದರೂ ಅದನ್ನೆಲ್ಲ ಯೋಚಿಸಲು ವೇಳೆಯೇ ಇಲ್ಲದಂತೆ ಅವಳ ಮನಸ್ಸಿನ ತುಂಬೆಲ್ಲ ಆ ಟ್ರಂಕಿನ ರೂಪವೇ ತುಂಬಿಕೊಂಡು ಬಿಟ್ಟಿತ್ತು. ಮದುವೆಯಲ್ಲಿ ಅಪ್ಪ ಕೊಟ್ಟ ಅಜ್ಜನ ಕಾಲದ ಗಟ್ಟಿ-ಮುಟ್ಟಾದ ಟ್ರಂಕಾಗಿತ್ತದು. ಅದೀಗ ಗಜಾಕೋಶ್ ಚಾಳಿನ ಈ ಮನೆಗೆ ಪ್ರವೇಶ ಪಡೆದ ಮೇಲೆ ಸಂಸಾರದ ಹೊಸ ಬಟ್ಟೆಗಳನ್ನೆಲ್ಲ ಡಾಂಬರು ಗುಳಿಗೆಯ ಘಮದೊಂದಿಗೆ ಬಚ್ಚಿಟ್ಟು ಕಾಯ್ದುಕೊಂಡ ಟ್ರಂಕಾಗಿತ್ತದು. ಹೊಸದಾಗಿ ಮನೆ ಮಾಡಿದಾಗ ಅದರ ಮೇಲೆಯೇ ಬೆಡ್ ಶೀಟು ಹಾಸಿ ಎಷ್ಟೋ ದಿನಗಳವರೆಗೆ ಖುರ್ಚಿಯ ಹಾಗೆ ಕೂತುಕೊಳ್ಳಲು ಬಳಸುತ್ತಿದ್ದ ಟ್ರಂಕಾಗಿತ್ತದು. ಇದೀಗ ಅದು ಕೆಲಸದ ಬೂಬುವಿನ ಪಾಲಾಗಿ ಹೋಗಿತ್ತು.

ಪಾಯಿಖಾನೆಯ ಪ್ರಮುಖ ಕೆಲಸ ಮುಗಿಸಿ ಒಳಬಂದ ಅನಂತ ಮೋರಿಯ ಮೂಲೆಗೆ ಬಾಲ್ದಿ ಜರಿದು ರಿನ್ ಸೋಪಿನಿಂದ ಕೈ-ಕಾಲು ತೊಳಕೊಳ್ಳುತ್ತಲೇ ತಣ್ಣೀರಿನ ಸ್ನಾನಕ್ಕಿಳಿದುಬಿಟ್ಟ. ತೆಂಕಣಕೇರಿಯಿಂದಲೇ ಮಾಡಿಸಿ ತಂದ ಈಳಿಗೆ ಮಣೆಯ ಮೇಲೆ ಕೂತು ಉಪ್ಪಿಟ್ಟಿಗೆ ಈರುಳ್ಳಿ ಹಸಿ ಮೆಣಸು ಹೆಚ್ಚುತ್ತಿದ್ದ ಮಾಲತಿ ತಡೆಯಲಾರದೇ ‘ಅಷ್ಟು ಛೊಲೋ ಟ್ರಂಕೂ’ ಎಂದೇಬಿಟ್ಟಳು. ಡ್ರಮ್ಮಿನಲ್ಲಿಯ ತಣ್ಣೀರನ್ನು ಅಚ್ಚಿ-ಅಚ್ಚಿ ಸುರಿದುಕೊಳ್ಳುತ್ತ ಕಣ್ಣು ಮುಚ್ಚಿ ‘ಅಹಹಾ’ ಎಂದುಲಿಯುತ್ತ ತೆಂಕಣಕೇರಿಯ ಬಾವಿಕಟ್ಟೆಯ ತೆಂಗಿನ ಗಿಡದ ಅಡಿಯಲ್ಲಿ ನಿಂತು ಮೀಯುತ್ತಿರುವಂತೆ ಭ್ರಮಿಸುತ್ತಿದ್ದ ಅನಂತನಿಗೆ ಒಮ್ಮೆಲೇ ಚಾಳಿನ ಕೃತಿಮ ಲೋಕ ತೆರೆದುಕೊಂಡುಬಿಟ್ಟಂತೆನಿಸಿತು. ‘ಟ್ರಂಕಿನ ಕಾಳಜಿ ನಿಲ್ಲಿಸಿ ವಿವೇಕನ ಕಾಳಜಿ ಮಾಡು, ಮೊನ್ನೆ ಏನಾದರೂ ತುಸು ಹೆಚ್ಚು-ಕಮ್ಮಿಯಾಗಿದ್ದರೆ, ಊರಲ್ಲಿದ್ದ ಅವನ ಅಜ್ಜ-ಅಜ್ಜಿಗೆ ಏನು ಉತ್ತರ ಕೊಡಬೇಕಿತ್ತು ನಾನು’ ಎಂದು ಬಿರುಸಾಗಿ ಅಂದುಬಿಟ್ಟ ಅನಂತ.

ತಪ್ಪೆಲ್ಲ ತನ್ನ ಕರಾಮತ್ತಿನಿಂದಲೇ ಘಟಿಸಿದ್ದರಿಂದ ಮಾಲತಿ ಈತ ಏನು ಅಂದರೂ ಅನ್ನಿಸಿಕೊಳ್ಳಬೇಕು ಎಂಬಂತೆ ಈರುಳ್ಳಿಗಾಗಿ ಕಣ್ಣೀರು ಸುರಿಸುತ್ತ ಅರ್ಧ ಕಣ್ಣು ತೆರೆದು ಪುಟ್ಟ ಚಡ್ಡಿ ತೊಟ್ಟು ಗೊಮ್ಮಟನಂತೆ ಮೀಯುತ್ತಿರುವ ಗಂಡನನ್ನೇ ಮಿಕಿ-ಮಿಕಿ ನೋಡುತ್ತ ಸುಮ್ಮನಾಗಿಬಿಟ್ಟಳು. ಉಪ್ಪಿಟ್ಟು ತಿಂದವನೇ ಅನಂತ ಡ್ರೆಸ್ಸು ಹಾಕಿಕೊಂಡ. ನೆಲಕ್ಕೆ ಬಿದ್ದ ಮಗನ ಪಾದಗಳನ್ನು ಚಾಪೆಯಲ್ಲಿ ಎತ್ತಿಡುತ್ತ ಗೋಡೆಗೆ ಗೀಚಿಟ್ಟ ಮಗನ ನವ್ಯಕಲೆಯನ್ನೊಮ್ಮೆ ಹಸ್ತದಲ್ಲಿ ನೇವರಿಸಿ ಚಪ್ಪಲಿ ಮೆಟ್ಟಿ ಹೊರಟ. ಆ ಕೂಡಲೇ ಒಂಟಿಯಾದ ಮಾಲತಿಗೆ ಆ ದಿನ ನಡೆದದ್ದೆಲ್ಲ ದಿನಮಡಚಿ ಬಿದ್ದಂತೆ ಚಿತ್ರಗಳು ಕಣ್ಣ ಮುಂದೆಯೇ ತೆರೆದುಕೊಂಡು ವಿಚಿತ್ರವಾಗಿ ಹೃದಯ ನಡುಗಿಸಿಬಿಟ್ಟಿತು.

ಚಾಳಿನ ಎಲ್ಲ ಮನೆಗಳ ಪೈಕಿ ಐದನೇ ಮನೆಯ ಕಲವೇಕರ ಮೌಸಿಯ ಮನೆಯಲ್ಲಿ ಮಾತ್ರ ಒಂದು ಪೊರ್ಟೆಬಲ್ ಟೀವಿ ಇತ್ತು. ಮಾಲತಿಗೊ ಚಿಕ್ಕಂದಿನಿಂದ ರಾಜಕುಮಾರನ ಸಿನೆಮಾಗಳ ಹುಚ್ಚು. ಅಂದು ಅದೇ ಟಿವಿಯಲ್ಲಿ ರಾಜಕುಮಾರನ ‘ಬಂಗಾರದ ಮನುಷ್ಯ’ ಪ್ರಸಾರವಾಗಲಿತ್ತು. ಮಾಲತಿ ಆಗಷ್ಟೇ ಮಲಗಿ ಬಿಟ್ಟಿದ್ದ ವಿವೇಕನನ್ನು ಹೊತ್ತೊಯ್ಯಲಾರದೇ ಸಿನೆಮಾವನ್ನು ಬಿಡಲಾರದೇ ಧರ್ಮ ಸಂಕಟಕ್ಕೆ ಸಿಲುಕಿಬಿಟ್ಟಳು. ಅನಂತನೊ ಭಾನುವಾರದ ಸ್ನೇಹಿತರನ್ನು ಹುಡುಕಿಕೊಂಡು ಹೊರಗೆ ನಡೆದುಬಿಟ್ಟಿದ್ದ. ವಿವೇಕನನ್ನು ಮಂಚದಲ್ಲಿಯೇ ಬಿಟ್ಟು ಇನ್ನೊಂದೆರಡು ಚಾದರ ದಪ್ಪವಾಗಿ ಹೊದೆಸಿ, ಬೀಳದಂತೆ ಗಾದಿ ಯಡಿ ತಲೆದಿಂಬನ್ನಿಟ್ಟು ಕೀಲಿ ಹಾಕಿಯಾದರೂ ಈವತ್ತು ಸಿನೆಮಾ ನೋಡಲೇಬೇಕೆಂದುಕೊಂಡಳು.

ಬಹು ದಿನಗಳಿಂದ ಟ್ರಂಕು ಶುದ್ಧಿ ಮಾಡುವ ಕಾರ್ಯಕ್ರಮವನ್ನು ಮುಂದೂಡುತ್ತ ಬಂದು, ಅಂದೇ ಬೆಳಿಗ್ಗೆ ಅದರಲ್ಲಿದ್ದ ಬಟ್ಟೆಗಳನ್ನೆಲ್ಲ ಹಳೇ ದೋತರವೊಂದರಲ್ಲಿ ಗಂಟು ಕಟ್ಟಿ, ಜಿರಲೆಯ ಮನೆಯಾಗಿರುವ ಟ್ರಂಕಿನ ಹೊಲಸನ್ನೆಲ್ಲ ತೊಳೆದು ಬಾಗಿಲು ಹೊರಗೆ ಬಿಸಿಲಲ್ಲಿಟ್ಟದ್ದು ಕಣ್ಣಿಗೆ ಬಿದ್ದು ಅದನ್ನು ಹಾಗೇ ಎತ್ತಿ ಒಳಗಿಟ್ಟು ಮತ್ತೂ ಚೂರು ಗಾಳಿಗೆ ಆರಲಿ ಎಂದು ಮುಚ್ಚಳ ತೆರೆದು ಗೋಡೆಗೆ ಆನಿಸಿಟ್ಟು ಸದ್ದು ಮಾಡದೇ ಬಾಗಿಲು ಜಗ್ಗಿ ಕೀಲಿ ಹಾಕಿ ಎದ್ದಿದ್ದಾನೊ ಮತ್ತೆ? ಎಂದು ಎರಡೆರಡು ಬಾರಿ ಬಾಗಿಲಿಗೆ ಕಿವಿ ಹಚ್ಚಿ ಆಲಿಸಿ ನಿಶ್ಚಿಂತೆಯಿಂದ ನಡೆದಿದ್ದಳು ಮಾಲತಿ. ಮಾಲತಿಯೊಬ್ಬಳನ್ನೇ ಕಂಡ ಕಲವೇಕರ ಮೌಸಿ ‘ಪುಟ್ಟನನ್ನು ಅವನ ಬಾಬನ ಜತೆ ಬಿಟ್ಟು ಬಂದಿದ್ದಿಯೇನು?’ ಎಂದು ಕೇಳಿದರೂ ಮಾಲತಿಯೇನೂ ಹಾಗೆಲ್ಲ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.

ಇಲ್ಲಿ ತಾಯಿ ಬಂಗಾರದ ಮನುಷ್ಯನ ಸಾಮ್ರಾಜ್ಯದಲ್ಲಿ ಒಂದಾಗಿ ತೇಲ ಹತ್ತಿದ್ದೇ ತಡ, ಅಲ್ಲಿ ತಡೆಯಲಾರದ ಸೆಖೆಯಿಂದ ವಿವೇಕ ಎದ್ದು ಕೂತು ಬಿಟ್ಟ. ಆಯಿಯನ್ನು ಕಾಣದೇ ಕ್ಷಣ ಕಣ್ಣು ತಿಕ್ಕಿ ಅತ್ತಂತೆ ನಟಿಸಿದ. ನಿಧಾನ ಬೀಳದಂತೆ ಮಂಚವಿಳಿದು ಒಳಗೆ ಅಡಿಗೆ ಖೋಲಿಯಲ್ಲೆಲ್ಲ ಆಯಿಗಾಗಿ ಹುಡುಕಿದ. ಬಹಳ ಹೊತ್ತು ಆಯಿ ಸಿಗದೇ ಈಗ ನಿಜಕ್ಕೂ ಗಾಬರಿಯಾದ ವಿವೇಕ ಹತ್ತು ನಿಮಿಷ ಬಾಗಿಲು ಬಡಿಯುತ್ತ ನಿಂತು ಅತ್ತ. ಆಯಿಯ ಸುಳಿವೇ ಇಲ್ಲದೇ, ಅವನಿಗೆ ರಾಶಿ ಹೊತ್ತು ಬರೀ ‘ಹ್ಞೂ…ಹ್ಞೂ’ ಎಂದು ಅಳುವುದೂ ಸಹ ಬೇಸರ ತರಿಸಿಬಿಟ್ಟಿತು. ದೇವರ ಮುಂದೆ ಗುಪ್ಪೆಯಾಗಿದ್ದ ಬಾಳೆಹಣ್ಣು ಆಗಲೇ ಹಸಿದಿದ್ದ ವಿವೇಕನ ಕಣ್ಣಿಗೆ ರಾಚಿ ಅನಾಥಪ್ರಜ್ಞೆಯಲ್ಲೂ ಪುಟ-ಪುಟನೆ ಓಡಿ ಧೈರ್ಯದಿಂದ ಒಂದೆರಡು ಬಾಳೆಹಣ್ಣು ಕಿತ್ತು ಸಿಪ್ಪೆ ಸಮೇತ ಅರ್ಧಂಬರ್ಧ ತಿಂದು ಅಲ್ಲಲ್ಲಿ ಬಿಸಾಕಿ ನೆಲಕ್ಕೆ ತಿಕ್ಕಿ-ತಿಕ್ಕಿ ಆಟವಾಡತೊಡಗಿದ.

ಹೊಟ್ಟೆಯ ಬದಿ ಸ್ವಲ್ಪ ತಂಪೆನಿಸಿದ ಕೂಡಲೇ ಅತ್ತು ಏನೂ ಪ್ರಯೋಜನವಿಲ್ಲವೆಂದು ತಿಳಿದಂತೆ ಸುಮ್ಮನಾದವನಿಗೆ ಹೊಸ ಆಟಿಕೆಯಂತೆ ಬಾಯಿ ತೆರೆದು ಕೂತ ಟ್ರಂಕು ಮನಸ್ಸಿಗೆ ಮುದ ಕೊಟ್ಟುಬಿಟ್ಟಿತು. ಟ್ರಂಕಿನ ಬಳಿ ಹೋಗಿ ಕೂತು ಮುಚ್ಚಳ ಹಾಕುವುದು ತೆಗೆವುದು ಮಾಡಿ ಆಟವಾಡತೊಡಗಿದ. ಸ್ವಲ್ಪ ಹೊತ್ತು ಮುಚ್ಚಳ ಇಳಿಸಿ ಟ್ರಂಕಿನ ಮೇಲೆ ‘ಎಬಿ‌ಎಬಿ’ ಎನ್ನುತ್ತ ಆಯಿ ಹೇಳಿಕೊಡುತ್ತಿದ್ದ ಶೈಲಿಯಲ್ಲೇ ಹೇಳಿಕೊಳ್ಳುತ್ತ ಬರೆಬರೆದು ಹಣ್ಣಿನ ತುದಿಗೆ ಬಡಿದುಕೊಂಡ ಗೋಡೆ ಸುಣ್ಣವನ್ನು ಕಣ್ಣರಳಿಸಿ ನೋಡುತ್ತ ಬಾಯಿಗೆ ತುರುಕಿದ. ಆ ಆಟವೂ ಬೋರೆನಿಸಿಬಿಟ್ಟಿತವನಿಗೆ. ಈಗ ಟ್ರಂಕು ಇಳಿದು ನಿಂತು ಮುಚ್ಚಳ ತೆರೆದ. ಕೈಯಲ್ಲಿ ಚೂರು ಬಾಳೆಹಣ್ಣು ಹಿಡಿದುಕೊಂಡೇ ಆಯಿಯನ್ನೇ ಮರೆತು ಶಿಸ್ತು ಟ್ರಂಕಿನೊಳಗೇ ಇಳಿದು ಕೂತುಬಿಟ್ಟ. ಒಂದೂವರೆ ಅಡಿ ಅಗಲದ ಎರಡೂವರೆ ಅಡಿ ಉದ್ದದ ಆಯತಾಕಾರದ ಟ್ರಂಕು ಮಾಟವಾಗಿ ತನಗೇ ನಿರ್ಮಿಸಿದ ಮನೆಯಂತೆ ಭಾಸವಾಗುತ್ತ ಹೋದ ಹಾಗೆ ಆ ದುಃಖದಲ್ಲೂ ಕ್ಷಣ ನಕ್ಕು ಅದರೊಳಗೇ ಕಾಲು ಮಡಚಿ ಮೇಲ್ಮುಖ ಮಾಡಿ ಮಲಗಿ, ತೆರೆದು ನಿಂತ ಮುಚ್ಚಳಕ್ಕೆ ಕಾಲಿನಿಂದ ಧಡಾ-ಭಡಾ ಒದೆಯತೊಡಗಿದ. ಒದೆದ ಹೊಡೆತಕ್ಕೆ ಟ್ರಂಕಿನ ಮುಚ್ಚಳ ಮುಚ್ಚಿಕೊಂಡು ಗ ಆಕಾರದ ಮುಚ್ಚಳದ ಕೊಂಡಿ ಕೆಳಗಿನ ಭಾಗದ ಕೊಂಡಿಗೆ ಬಿದ್ದು, ಪ್ಯಾಕ್ ಆಗಿಬಿಟ್ಟಿತು.

ಒಮ್ಮೆಲೇ ಒಳಗೆ ಆವರಿಸಿಕೊಂಡ ಕಗ್ಗತ್ತಲೆಗೆ ಮತ್ತು ಕೈ ಕಾಲು ವತ್ತಿ ಹಿಡಿದು ತುಂಬಿದ ಹಾಗೆ ಬಂಧಿಯಾದ ಮಾತೇ ಬರದ ಪುಟ್ಟ ವಿವೇಕ ಭಯಭೀತನಾಗಿ ಟ್ರಂಕಿನೊಳಗಿಂದಲೇ ಮತ್ತೆ ದಡ-ಬಡ ಬಡಿದುಕೊಳ್ಳ ಹತ್ತಿದ. ಆ ತುಂಟ ಪೋರನಿಗೆ ಏನಾಯಿತಿದು ಏನಾಗುತ್ತಿದೆಯಿದು ಎಂದೇ ತಿಳಿಯಲಿಲ್ಲ. ಇತ್ತ ಮಾಲತಿ ಬಂಗಾರದ ಮನುಷ್ಯನಲ್ಲಿ ಎಂಥ ಪರಿ ಮುಳುಗಿಹೋಗಿದ್ದಳೆಂದರೆ ಹಾಡು ಹತ್ತಿದಾಗ ಮಾತ್ರ ಕೊಂಚ ಮಗನ ನೆನಪಾಯಿತವಳಿಗೆ. ಮಲಗಿದ್ದಾನು ಬಿಡು ಎಂಬ ಹುಂಬ ಧೈರ್ಯ ಬಂದರೂ ಓಡಿ ಹೋಗಿ ಬಾಗಿಲಿಗೆ ಕಿವಿ ಹಚ್ಚಿ ಆಲಿಸಿ ಎದ್ದಿಲ್ಲ ಎಂದು ಖಾತ್ರಿಪಡಿಸಿಕೊಂಡು ಮತ್ತೆ ಟೀವಿ ಪೆಟ್ಟಿಗೆಯಲ್ಲೇ ಲೀನವಾಗಿಬಿಟ್ಟಳು.

ಅತ್ತ ವಿವೇಕ ಅಷ್ಟಷ್ಟು ಹೊತ್ತಿಗೆ ಕೈ-ಕಾಲು ಹಂದಾಡಿಸುತ್ತ ಸುಸ್ತಾದ ಮೇಲೆ ದನಿ ತೆಗೆಯಲೂ ಶಕ್ತಿ ಉಳಿಯದೇ ಸುಮ್ಮನೇ ಗೋಣು ಅಡ್ಡ ಹಾಕಿ ಮಲಗಿಬಿಟ್ಟವನಿಗೆ ಉಸಿರಾಡಲೂ ತ್ರಾಸಾಗಿ ಪ್ರಜ್ಞೆ ತಪ್ಪಿ ಹೋಗುವ ಹೊತ್ತಿಗೆ ಸಿನೆಮಾ ಮಧ್ಯೆಯೇ ಜಾಹಿರಾತು ಶುರುವಾಗಿಬಿಟ್ಟು ಎಂಥದೋ ಅವ್ಯಕ್ತ ಕಳವಳ ಆವರಿಸಿಕೊಂಡಿತ್ತು ಮಾಲತಿಗೆ. ಅಲ್ಲಿ ಕೂಡಲಾರದವಳಂತೆ ಓಡಿ ಬಂದವಳೇ ಗಡಬಡಿಸಿ ಬಾಗಿಲು ತೆರೆದಳು. ಏಳಲಿಲ್ಲಪ್ಪ ಸಧ್ಯ ಅನ್ನಿಸಿದರೂ ಯಾಕಿವತ್ತು ಇಷ್ಟೊತ್ತು ಮಲಗಿಬಿಟ್ಟ ಎಂದುಕೊಳ್ಳದಿರಲಿಲ್ಲ.

ಮಂಚದ ಬಳಿ ಓಡಿದವಳಿಗೆ ವಿವೇಕನ ಸುಳಿವೇ ಕಾಣದೇ ಎದೆ ಧಸಕ್ಕೆಂದಿತು. ಮಂಚದಿಂದ ಕೆಳಗೆಲ್ಲಾದರೂ ಬಿದ್ದುಗಿದ್ದನೊ, ಖುರ್ಚಿಗಳ ಬುಡದಲ್ಲೇನಾದರೂ ಆಡುತ್ತ ಮತ್ತೆ ಮಲಗಿಬಿಟ್ಟಿದ್ದಾನೊ ಎಂದು ಯೋಚಿಸುತ್ತ ಒಳಗೆ ಗ್ಯಾಸು ಕಟ್ಟಿ ಹಾಗೇ ಮೋರಿಯ ಮೂಲೆಯಲ್ಲೆಲ್ಲಾ ಕಣ್ಣಾಡಿಸುತ್ತ ಮಾಲತಿ ಗಾಬರಿಗೊಂಡಳು. ಬಾಳೆಹಣ್ಣಿನ ತುಂಡುಗಳು ಅಲ್ಲಲ್ಲಿ ಬಿದ್ದು ನೆಲಕ್ಕೆ ತಿಕ್ಕಿ ಆಡಿದ ಹಾಗಿತ್ತು. ಅವನಿಗೆ ಹೊದಿಸಿದ್ದ ಚಾದರು ಮಾತ್ರ ನೆಲದಲ್ಲಿ ಉದ್ದಕ್ಕೆ ಹಾವಿನಂತೆ ಚಾಚಿಕೊಂಡು ಬಿದ್ದಿತ್ತು. ‘ವಿವೇಕ..ಚಿಂಟೂ.. ಪಾಪು… ಚಿನ್ನಾ’ ಎಂತೆಲ್ಲ ಬಡಬಡಿಸುತ್ತ ಮನೆಯೆಲ್ಲ ಒಂದು ಮಾಡಿ ಮಳ್ಳಿಯಂತೆ ಓಡಾಡಿದ ಮಾಲತಿಗೆ ಒಮ್ಮೆಲೇ ದುಃಖ ಉಮ್ಮಳಿಸಿ ಬಂದು ಬಾಗಿಲ ಬಳಿ ಓಡಿ ಆಚೀಚೆ ಮನೆಯವರನ್ನು ಕೂಗಿಕೊಂಡಿದ್ದಳು. ಅವರೆಲ್ಲ ಬರುವುದರೊಳಗೆ ಹಿಂತಿರುಗಿದ ಮಾಲತಿಗೆ ತಾನು ಬಾಗಿಲ ಕೀಲಿ ಹಾಕಿ ಹೋಗುವಾಗ ಟ್ರಂಕಿನ ಮುಚ್ಚಳ ತೆಗೆದಿಟ್ಟು ಹೋದದ್ದು ನೆನಪಾಗಿಬಿಟ್ಟಿತು. ಊಹಿಸಲಾರದ ಭಯಕ್ಕೆ ಎದೆಕೊಟ್ಟವಳಂತೆ ನಡುಗುವ ಕೈಗಳಿಂದ ಟ್ರಂಕಿನ ಚಿಲಕ ತೆಗೆದು ಮುಚ್ಚಳ ಮೇಲಕ್ಕೆ ತಳ್ಳಿ ಹೃದಯ ವಿದ್ರಾವಕವಾಗಿ ಹಸಿರುಗಟ್ಟಿದ ಮಗನನ್ನು ನೋಡಲಾರದೇ ಅಯ್ಯೋ ಎಂದು ಕಿರುಚುತ್ತ ತಲೆ ತಿರುಗಿ ಬಿದ್ದುಬಿಟ್ಟಳು.

ಅಷ್ಟರೊಳಗೆ ಚಾಳಿನ ಗಂಡಸರೆಲ್ಲ ಸೇರಿ ಆಗಿರುವುದನ್ನು ಊಹಿಸಿ ಮಗು ನಿಧಾನ ಉಸಿರಾಡುತ್ತಿದ್ದುದನ್ನು ಗಮನಿಸಿದವರೇ ಒಬ್ಬರು ಹಸ್ತ ತಿಕ್ಕುತ್ತ ಇನ್ನೊಬ್ಬರು ಪಾದ ತಿಕ್ಕುತ್ತ ಕೊನೇ ಮನೆಯ ಫಡ್ನೀಸನ ಲೂನಾ ಬಿಟ್ಟುಕೊಂಡು ಹಿಂದೊಬ್ಬರು ವಿವೇಕನನ್ನೆತ್ತಿ ಕೂತು ಸುಂಯನೆ ಹೋದಾಗ ಮಾಲತಿ ಮನುಷ್ಯರ ಅವಸ್ಥೆಯಲ್ಲೇ ಇರಲಿಲ್ಲ.

ಶಿವಾಜಿಮೂರ್ತಿಯ ಕೆಳಗಿನ ಸಿಮೆಂಟು ಕಟ್ಟೆಯ ಮೇಲೆ ಗೆಳೆಯರ ಜತೆ ಹರಟೆ ಹೊಡೆದು ಮುಗಿಸಿ ಆಗಲೇ ಸಾವಕಾಶ ಮನೆಯ ಬದಿ ಹೆಜ್ಜೆ ಹಾಕುತ್ತಿದ್ದ ಅನಂತ ಸುದ್ದಿ ಕೇಳಿದವನೇ ಶಾಕ್ ಟ್ರೀಟ್‌ಮೆಂಟ್ ಕೊಟ್ಟವರಂತೆ ಹೌಹಾರಿದ. ಒಂದೇ ಉಸಿರಲ್ಲಿ ಆಸ್ಪತ್ರೆಗೆ ನಡೆದುಬಿಟ್ಟ. ಅವನ ಬೆನ್ನಿಗೇ ಮಾಲತಿ ರಸ್ತೆಯಲ್ಲಿ ಹೆಜ್ಜೆಯನ್ನೂ ಊರದೇ ತೇಲಾಡುತ್ತಲೇ ಆಸ್ಪತ್ರೆ ಮುಟ್ಟಿದಳು. ಆಗಲೇ ವಿವೇಕನಿಗೆ ಉಸಿರಾಟ ಸರಾಗವಾಗುವಂತೆ ಚಿಕಿತ್ಸೆ ನೀಡಿ ಸಲೈನ್ ಹಚ್ಚಿ ಮಲಗಿಸಿದ್ದ ದಿವೇಕರ ಡಾಕ್ಟರು ‘ಇನ್ನು ಸ್ವಲ್ಪ ಹೊತ್ತು ಲೇಟಾಗಿದ್ದರೆ ಮಗುವಿನ ಪ್ರಾಣಕ್ಕೇ ಅಪಾಯವಿತ್ತು’ ಎನ್ನುತ್ತ ದೊಡ್ಡವರ ಈ ರೀತಿಯ ನಿಷ್ಕಾಳಜಿಗೆ ಬೇಸರ ಪಟ್ಟುಕೊಂಡರು. ಡಾಕ್ಟರು ಔಷಧಿ-ಇಂಜೆಕ್ಷನ್ನುಗಳ ಚೀಟಿ ಬರೆದುಕೊಟ್ಟದ್ದನ್ನು ಫಡ್ನೀಸನೇ ಹಳಿಯಾಳದ ತುಂಬ ಲೂನಾ ಓಡಿಸಿ ಚೀಟಿಯಲ್ಲಿರುವ ಪ್ರತಿಯೊಂದನ್ನೂ ಹುಡುಕಾಡಿ ಅನಂತನ ಕೈಯಲ್ಲೇ ತಂದುಕೊಟ್ಟಾಗ ಅನಂತ ತನ್ನ ಕಿಸೆ ಮುಟ್ಟಿ ನೋಡಿಕೊಳ್ಳುತ್ತ ‘ನಂತರ ಕೊಡ್ತೇನೆ’ ಎಂದುಸುರಿದ. ದಿನವೂ ಪಾಯಿಖಾನೆಗೆ ಕ್ಯೂ ನಿಂತಾಗ ಪರಸ್ಪರ ಒಂದೂ ಮಾತಾಡದೇ ಬಗ್ಗಿ ಬಗ್ಗಿ ಲುಂಗಿಯ ತುದಿಗೆ ಸಿಂಬಳ ತೆಗೆದುಕೊಳ್ಳುತ್ತ ನಿಲ್ಲುತ್ತಿದ್ದ ಕೊನೇ ಮನೆಯ ಈ ಫಡ್ನೀಸನೇ ದೇವರಂತೆ ಒದಗಿ ಬಂದು ಮಗನ ಪ್ರಾಣ ಉಳಿಸುತ್ತಾನೆಂದು ಅನಂತನಿಗೆ ಕನಸು-ಮನಸಿನಲ್ಲೂ ಅನ್ನಿಸಿರಲಿಲ್ಲ.

‘ನಿನ್ನಿಂದಲೇ ಇಷ್ಟೆಲ್ಲಾ ಆದದ್ದು’ ಎಂದು ಮಡದಿಯನ್ನು ಬೈದುಬಿಡಬೇಕೆನ್ನಿಸಿದರೂ ಅವಳ ಸ್ಥಿತಿಯನ್ನೇ ನೋಡಿ ಕಂಗಾಲಾಗಿ ಮತ್ತೆ ಅವಳನ್ನೇ ಸಂತೈಸುತ್ತ ಅನಂತ ಸುಮ್ಮನುಳಿದ. ಎಚ್ಚರ ಬಂದವರಂತೆ ವಿವೇಕ ಸಣ್ಣ ದನಿ ತೆಗೆದು ನರಳಿದಾಗ ಚಾಳಿನ ಗಂಡಸರೆಲ್ಲ ನಿಟ್ಟುಸಿರು ಬಿಟ್ಟು ಮನೆಗೆ ಹೊರಡಲನುವಾದರು. ಡಾಕ್ಟರು ಕೂತ ಸ್ಥಳದ ಮೇಲ್ಭಾಗದಲ್ಲಿ ಗೋಡೆಗೆ ‘ನಾನು ಬರಿ ಚಿಕಿತ್ಸಕ ಮಾತ್ರ, ಗುಣಪಡಿಸುವವ ಅವನೇ’ ಎಂದು ಬರೆದುಕೊಂಡ ಬೋರ್ಡು ಗಾಳಿಗೆ ನೇತಾಡುತ್ತಿತ್ತು.

ಇತ್ತ ಚಾಳಿನ ಹೆಂಗಸರೆಲ್ಲ ರಸ್ತೆಯಲ್ಲೇ ಒಟ್ಟಾಗಿ ನಿಂತು ದೇವರಲ್ಲಿ ಮೊರೆಯಿಡುತ್ತ ವಿವೇಕನ ತುಂಟತನವನ್ನೆಲ್ಲ ಬಿಂಬಿಸುವ ವರ್ಣಮಯ ಚಿತ್ರವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಬಾಗಿಲಿಗೆ ಹಾಕಿದ ಗೇಟನ್ನು ಆ ಕಡೆಯಿಂದ ಹತ್ತಿ ಈ ಕಡೆ ಇಳಿದು ಗಟಾರ ದಾಟಿ ಸೀದಾ ರಸ್ತೆಗೆ ಓಡುತ್ತಿದ್ದವನನ್ನು ಒಮ್ಮೆ ತಾವ್ಯಾರೋ ಹಿಡಿದು ತಂದದ್ದು, ಪ್ರತಿ ಸಾರಿ ಪಾಳಿಗಿಟ್ಟ ಕೊಡಗಳನ್ನು ಹಿಂದಿನದು ಮುಂದೆ, ಮುಂದಿನದು ಹಿಂದೆ ಮಾಡಿಟ್ಟು ಆಟವಾಡುತ್ತಿದುದು, ಪಕ್ಕದ ಕುಷ್ಟಗಿ ಅಂಕಲ್ ಸಾಕಿದ ನಾಯಿಮರಿ ಸಿಕ್ಕರೆ ಅದನ್ನು ಗಟ್ಟಿಯಾಗಿ ಹಿಡಿದು ಕೂತು ಅದರ ಬಾಯಲ್ಲೆಲ್ಲ ಕೈ ಹಾಕಿ ತನ್ನ ಬಿಸ್ಕೀಟು ತಿನ್ನಿಸುತ್ತ ಅದನ್ನು ಹಿಂಡಿ-ಕಿವಿಚಿ ಸತಾಯಿಸುತ್ತಿದುದು- ಒಂದೇ ಎರಡೇ.

‘ಎಲ್ಲ ಆರಾಮು’ ಎಂದು ತಲೆಯಾಡಿಸುತ್ತ ಮನೆಗೆ ತಿರುಗಿ ಬಂದ ಅವರವರ ಗಂಡಂದಿರ ಬಳಿ ಹೆಂಗಸರೆಲ್ಲ ಪಿಸು-ಪಿಸು ಸುದ್ಧಿ ಕೇಳಿಕೊಳ್ಳುತ್ತಿರುವಾಗಲೇ ‘ಮನೆಯಲ್ಲಿರುವ ಹಾಲು-ಬ್ರೆಡ್ಡು ತರ್‍ತೇನೆ’ ಎಂದು ಚಾಳಿನ ಗಂಡಸರ ಹಿಂದೆಯೇ ಬಂದು ಮನೆ ಹೊಕ್ಕ ಮಾಲತಿ ಅಲ್ಲಿಯೇ ನಿಂತಿದ್ದ ಬೂಬುವನ್ನು ಕರೆದು ‘ನನ್ನ ಮಗನನ್ನೇ ತಿಂದು ಕೂಡಲು ಮಾಡಿತ್ತಿದು, ಇದು ನನಗೆ ಬೇಡಾ….’ ಎಂದು ದೊಡ್ಡದಾಗಿ ಅಳುತ್ತ ಟ್ರಂಕನ್ನೆತ್ತಿ ಅಳುತ್ತ ರಾದ್ಧಾಂತ ಮಾಡಿಬಿಟ್ಟಳು. ಚಾಳಿನ ಹೆಂಗಸರ ಸಮಾಧಾನಕ್ಕೂ ಬಗ್ಗದೇ ಪುನಃ ಪುನಃ ಅದನ್ನೇ ಆವೇಶದಿಂದ ಹೇಳತೊಡಗಿದಾಗ ಬೂಬುವಿಗೆ ಎಂಥದೂ ಅರ್ಥವಾಗದೇ ಟ್ರಂಕನ್ನೆತ್ತಿಕೊಂಡು ನಿಧಿ ಸಿಕ್ಕವಳಂತೆ ಹೋಗಿಬಿಟ್ಟಳು.

ಮನೆಯ ಬಿಳೀ ಗೋಡೆಯ ಕೆಳಭಾಗದ ತುಂಬ ವಿವೇಕನ ಪುಟ್ಟ ಧೂಳು ಪಾದದ ಅಚ್ಚಿನ ಜತೆ ಸಿಕ್ಕ ಸಿಕ್ಕ ಕಡೆ ಪೆನ್ನು ಪೆನ್ಸಿಲ್ಲುಗಳಿಂದ ಬಿಡಿಸಿದ್ದ ಚಿತ್ತಾರದ ಗೆರೆಗಳು ಪೂರ್ತಿಯಾಗದೇ ಇದೀಗ ಪ್ರಾರಂಭದ ಹಂತದಲ್ಲಿರುವಂತೆ ಉಳಿದು ಪೂರ್ತಿಗೊಳ್ಳಲು ಕಾದು ಕೂತಂತೆ ಕಾಣುತ್ತಿದ್ದವು. ಗೋಡೆ ಚಿತ್ತಾರಗಳ ನಂಟೋ ಎಂಬಂತೆ ನಡೆದದ್ದೆಲ್ಲ ಸುಳ್ಳು ಮಾಡಿ ಬಹುಬೇಗ ವಿವೇಕ ಮೊದಲಿನಂತಾಗಿ ಮನೆಗೆ ಬಂದಿದ್ದ.

ಕಾಟಿನ ಅಡಿಯಲ್ಲಿ ಕಟ್ಟಿಟ್ಟ ಬಿಳೀ ದೋತಿಯ ಹೊಸ ಬಟ್ಟೆಗಳ ದೊಡ್ಡ ಗಂಟು ಕೂತಲ್ಲೇ ಅಣಕಿಸಿದಂತಾಗಿ ಮಾಲತಿಗೆ ಎಲ್ಲಿಲ್ಲದ ಧೈರ್ಯ ಬಂದುಬಿಟ್ಟಿತು. ಈ ಬಗ್ಗೆ ಕಲವೇಕರ ಮೌಸಿಗೆ ಕೇಳಿ ನೋಡಿದಾಗ ‘ನೀನೇ ಕೈ ಎತ್ತಿ ಕೊಟ್ಟದ್ದನ್ನು ಮತ್ತೆ ಯಾವ ಮುಖದಿಂದ ಕೇಳಲು ಹೋಗ್ತಿ?’ ಅಂದುಬಿಟ್ಟಳು.

ಮಧ್ಯಾಹ್ನ ಊಟಕ್ಕೆ ಬಂದ ಅನಂತನಿಗೆ ‘ಗಂಟಿನಲ್ಲಿ ಹೊಸ ವಸ್ತ್ರವೆಲ್ಲ ಹಾಳಾಗ್ತ ಬಿದ್ದಿದೆ ಈಗ’ ಎಂದು ಪಾತ್ರೆ ಕುಟ್ಟಿ ಬಡಿಸಿದಳು ಮಾಲತಿ. ವಿವೇಕ ಈಗ ಮುದ್ದು ಮುದ್ದಾಗಿ ಬಾಬನ ಹತ್ತಿರ ಎರಡು ತುತ್ತು ಉಂಡು ಅನ್ನದಗುಳನ್ನು ಗದ್ದಕ್ಕೆ ಬಡಿದುಕೊಂಡೇ ಕಾಟಿನ ಕೆಳಗೆ ಹೊಕ್ಕಿ ವಸ್ತ್ರದ ಗಂಟಿನ ಮೇಲೆ ಬಿದ್ದು ಉರುಳಾಡುತ್ತಿದ್ದ. ‘ಟ್ರಂಕೇನಾದರೂ ಪರತ್ತು ಕೇಳಲು ಹೋದರೆ ಕಾಲು ಮುರೀತೇನೆ ಕಾಲು’ ಎಂದು ದೊಡ್ಡ ಕಣ್ಣು ಬಿಟ್ಟು ಮಾಲತಿಯನ್ನೊಮ್ಮೆ ಹೆದರಿಸಿದವನೇ ಅನಂತ ಪೋಸ್ಟಿಗೆ ತೆರಳಿದ. ‘ನನ್ನ ಅಪ್ಪ ಕೊಟ್ಟದ್ದದು, ನನಗೆ ಬೇಕು’ ಎಂಬ ಮೊಂಡು ಯೋಚನೆ ಹತ್ತಿದ ಮಾಲತಿ ವಿವೇಕನನ್ನು ಎತ್ತಿಕೊಂಡೇ ಚಾಳಿನ ಹಿಂದೆ ಇಳಿದು ಬೂಬುವಿನ ಜೋಪಡಿಗೆ ಹೋಗಿ ‘ನಮ್ಮ ಟ್ರಂಕು… ನಮ್ಮ ಟ್ರಂಕೂ…’ ಎಂದು ಬಡಬಡಿಸಿದವಳಿಗೆ ಬೂಬು, ‘ಮತ್ತೆ… ನೀವೂ… ಆ ದಿನ…’ ಎಂದೆಲ್ಲ ಬೆ.ಬೆ…ಬೆ… ಮಾಡಿದ್ದಕ್ಕೆ ಮಾಲತಿಗೆ ಸಿಟ್ಟು ಜರ್ರನೆ ಏರಿ ಕೂತಿತ್ತು.

ಮತ್ತದೇ ಆವೇಶದಲ್ಲಿ ‘ಬೇಸರದಿಂದ ಆ ಹೊತ್ತಿನಲ್ಲಿ ಆಡಿದ್ದೆಲ್ಲ ಸತ್ಯವೇನು? ನೀನೇ ಟ್ರಂಕು ಕದ್ದಿದ್ದಿ ಅಂತ ಪೊಲೀಸು ಕಂಪ್ಲೆಂಟು ಕೊಡ್ತೇವೆ’ ಎಂದು ಎಲ್ಲಿಂದಲೋ ಒತ್ತರಿಸಿದ ಧಿಮಾಕಿನಿಂದ ಗದರಿಯೇ ಬಿಟ್ಟಳು. ಆದರೆ ತನ್ನ ಬಾಯಲ್ಲಿ ಬಂದಂತಹ ‘ಪೊಲೀಸು-ಕಂಪ್ಲೆಂಟು’ ಎಂಬ ಬಹು ಎತ್ತರದ ಪದಗಳಿಗೆ ತಾನೇ ಭಯಭೀತಳಾಗಿ ಸರಸರನೆ ನಡುಗುವ ಕಾಲುಗಳಲ್ಲಿ ಚಾಳಿಗೆ ಓಡಿ ಬಂದಿದ್ದಳು.

ಅನಂತ ದಿನಾ ಬರುವುದಕ್ಕಿಂತ ಅಂದು ಅರ್ಧ ತಾಸು ತಡವಾಗಿ ಬಂದ. ಅವನ ಹಿಂದಿಯೇ ಪೆಚ್ಚು ಮುಖ ಮಾಡಿ ಟ್ರಂಕು ಹೊತ್ತು ಬಂದ ಬೂಬುಳನ್ನು ನೋಡಿ ಲೆಕ್ಕ ಹಾಕಿದ ಅನಂತ, ಮಾಲತಿಯ ಮೈಮೇಲೆ ಏರಿಯೇ ಹೋದವನಂತೆ ‘ಕತ್ತೆ, ಮನುಷ್ಯಳೇ ನೀನು?’ ಎಂದು ಬೂಬುವಿನ ಮುಂದೆಯೇ ಹೆಂಡತಿಯನ್ನು ಝಾಡಿಸಿಬಿಟ್ಟ. ಇದು ಅನಂತನ ಕೋಪದ ಪರಮಾವಧಿ ಎಂದು ಅರ್ಥ ಮಾಡಿಕೊಂಡ ಮಾಲತಿಗೆ ಅಳುವೇ ಬಂದುಬಿಟ್ಟಿತು. ಬೂಬು ಕಕ್ಕಾಬಿಕ್ಕಿಯಾಗಿ ನಿಂತೇ ಇರುವಾಗಲೇ ರಸ್ತೆಯಲ್ಲಿ ಚಕ್ಕಡಿಯೊಂದು ಐದು ಅಡಿ ಸೈಜಿನ ನೀಲಿ ಬಣ್ಣದ ಸುಂದರ ಕಬ್ಬಿಣದ ಕಪಾಟನ್ನು ಇಳಿಸುತ್ತಿತ್ತು. ‘ನಿನ್ನ ಹೊಸ ಬಟ್ಟೆ ಗಂಟು ಹೊರಲು ಈಗ ಕಪಾಟು ಬಂದಿದೆ ಇಡ್ಲಿಕ್ಕೆ ಜಾಗ ಮಾಡು ಜಾಗಾ’ ಎನ್ನುತ್ತ ಅನಂತ ಮಾಲತಿಯನ್ನೇ ಸಂತೈಸಿ ರಸ್ತೆಯತ್ತ ಓಡಿದ. ಚಾಳಿನ ಗಂಡಸರನೇಕರು ಕರೆಯದಿದ್ದರೂ ಲುಂಗಿ ಮೇಲಕ್ಕೆ ಕಟ್ಟಿಕೊಳ್ಳುತ್ತ ಬಂದು ಕಪಾಟು ಒಳತರಲು ಕೈ ಹಚ್ಚಿದರು.

ಹೆಂಗಸರೆಲ್ಲ ತಂತಮ್ಮ ಮನೆಯ ಬಾಗಿಲ ಮುಂದೆ ಬಳ್ಳಿಗೆ ಹಾರಾಡುವ ಒಣಗಿದ ಬಟ್ಟೆಗಳನ್ನು ಬರ್ರನೆ ಎಳೆದುಕೊಂಡು ಪುಟ್ಟ ರಥವನ್ನು ನಿಂತು ನೋಡುವಂತೆ ನೋಡಿದರು. ಎಷ್ಟೇ ಪ್ರಯಾಸ ಪಟ್ಟರೂ ಕಪಾಟಿನ ಒಂದು ಮೂಲೆ ಗಟಾರದ ಕೊಚ್ಚೆಗೆ ತಾಗಿಯೇ ಬಿಟ್ಟದ್ದನ್ನು ಕಂಡು ನೆರೆಯ ಶಿರ್ಶಿಕರ ವೈನಿಯೇ ಒಂದು ಚಂಬು ನೀರು ತಂದು ಕಪಾಟಿನ ಮೂಲೆ ತೊಳೆದಳು. ಮಾಲತಿಗೊ ಲಾಟರಿ ಹೊಡೆದಷ್ಟು ಖುಷಿ. ಮಕ್ಕಳಂತೆ ಕುಣಿದಾಡಿ ಹೊಸ ಜೀವವೊಂದನ್ನು ತನ್ನ ಸನಿಹದ ಬದುಕಿಗೆ ಬರಮಾಡಿಕೊಳ್ಳುವಂತೆ ಇದ್ದಲ್ಲೇ ಉಲ್ಲಸಿತಳಾದಳು. ಬೂಬೂನೇ ಕಪಾಟು ಇಡುವ ಜಾಗೆ ಗುಡಿಸಿ ವರೆಸಿದಳು. ಚಿಕ್ಕ ನೀಲ ಕಪಾಟು ಈಗ ಹೊರಕೋಣೆಯಲ್ಲಿಯೇ ಕಾಟಿನ ಬಾಜು ತನ್ನೆರಡೂ ಗಿಡ್ಡ ಕಾಲುಗಳೂರಿಕೊಂಡು ಚೌಕ ಮನುಷ್ಯನ ಹಾಗೆ ಚಾಳಿನ ಆಕರ್ಷಣೆಯ ಕೇಂದ್ರವಾಗಿಬಿಟ್ಟಿತು. ಕಪಾಟಿನ ಹಿಂದೆ ಗೋಡೆಗೆ ಬರೆದ ವಿವೇಕನ ಬಣ್ಣದ ಪೆನ್ಸಿಲ್ಲಿನ ಗೋಲ ಗೋಲ ಚಿತ್ರ ಮಾತ್ರ ಚೂರು ಚೂರೇ ಹಣಕಿ ಹಾಕಿದಂತೆ ಅಲ್ಲಷ್ಟು ಇಲ್ಲಷ್ಟು ಕಾಣುತ್ತಿತ್ತು.

‘ಮೊದಲು ಇದಕ್ಕೆ ಡಾಂಬರು ಗುಳಿಗೆ ತಂದು ಹಾಕಿ’ ಎಂದು ಒಬ್ಬರೆಂದರೆ ‘ಲಕ್ಷ್ಮಣ ರೇಖೆ ಎಳೆದುಬಿಡಿ’ ಅಂದರು ಇನ್ನೊಬ್ಬರು. ಡ್ರಾವರು ಮತ್ತು ಲಾಕರಿನ ಚಾವಿಗಳಲ್ಲಿ ಒಂದರ ಚಾವಿ ಇನ್ನೊಂದಕ್ಕೆ ಹಾಕುತ್ತ ತೆಗೆಯಲು ಬರದೇ ಅನಂತ ಗಡಿಬಿಡಿಗೆ ಬಿದ್ದ. ನಂತರ ಅಲ್ಲಿದ್ದ ನಂಬರು ಓದಿಕೊಂಡು ‘ಓಹೋ! ನಂಬರು ಬೇರೆ ಉಂಟು’ ಎಂದು ನಕ್ಕು ಸರಿಯಾದ ಚಾವಿ ಹಾಕಿ ತೆರೆದು, ಆಭರಣ ಇಡುವ ಜಾಗ, ಮಹತ್ವದ ಕಾಗದಪತ್ರ ಇಡುವ ಭಾಗವನ್ನೆಲ್ಲ ಹೆಮ್ಮೆಯಿಂದ ತೋರಿಸಿದ. ‘ಮಾಲತಿಗೆ ತೋರಿಸಿ ಮೊದಲು’ ಎಂದು ಹಿಂದೆ ಸರಿದು ನಿಂತರು ಕಲವೇಕರ ಮೌಸಿ.

‘ಪ್ಯಾಂಟು ಉದ್ದಕ್ಕೆ ತೂಗಿ ಬಿಡಲು ಜಾಗೆ ಚಿಕ್ಕದು’ ಎಂದೆಲ್ಲ ಅನ್ನುತ್ತಿದ್ದವರಿಗೆ ‘ಹೇಳಿ ಮಾಡಿಸಿದರೆ ಹೌದು ಹಾಗೇ ಮಾಡಿಸಬಹುದಿತ್ತು’ ಎಂದು ಕುರುಬಿದ ಅನಂತ. ಗುಂಪಿನಲ್ಲಾರೊ ‘ಚಾವಿ ಈ ತುಂಟನ ಕೈಗೆ ಸಿಗುವ ಹಾಗೆ ಇಡಬೇಡಿ’ ಅಂದುಬಿಟ್ಟರು. ಅದೇ ಅಚ್ಛಾ ಸಂದರ್ಭವೆಂಬಂತೆ ಹೇಗೊ ತಪ್ಪಿಸಿಕೊಂಡು ಹೊರ ಹೋಗಿ ಬೂಬು ತಂದಿಟ್ಟ ಟ್ರಂಕಿನ ಮೇಲೆ ಹತ್ತಿ ಕೂತು ಪ್ರಾಣಮಿತ್ರನಂತೆ ಅವಚಿ ಹಿಡಿದು ಬಡಬಡ ಸದ್ದು ಮಾಡುತ್ತಿರುವ ವಿವೇಕನನ್ನು ಎತ್ತಿಕೊಂಡೇ ಒಳಬಂದ ಫಡ್ನೀಸನ ಹೆಂಡತಿ ‘ಈ ಕಿಲಾಡಿ ಕಪಾಟಿನಲ್ಲೂ ಜಾಗ ಹುಡುಕಿ ಕೂತು ಬಿಡಲು ತಯಾರಿ’ ಅಂದಿದ್ದಕ್ಕೆ ‘ಹೆ… ಹೆ… ಇಲ್ಲ ಇಲ್ಲ’ ಎಂದು ಎಲ್ಲ ನಕ್ಕುಬಿಟ್ಟರು. ಅರಿಸಿಣ ಕುಂಕುಮ ಹಚ್ಚಿ ಕಪಾಟಿಗೆ ಊದಿನಕಡ್ಡಿ ಬೆಳಗಲಾಯಿತು. ಅಲ್ಲಿ ನಿಂತವರಿಗೆಲ್ಲ ಸಕ್ಕರೆ ಹಂಚುತ್ತಿದ್ದಾಗ ‘ಬರೀ ಸಕ್ಕರೆಯಲ್ಲಿ ಮುಗಿಸಿ ಬಿಡಬೇಡಿ, ನಮಗೆ ಪಾರ್ಟಿ ಬೇಕು ಪಾರ್ಟಿ’ ಎಂದು ಎಲ್ಲಿಂದಲೋ ಒಂದು ದನಿ ಹುಟ್ಟಿಬಿಟ್ಟಿತು.

ಎಲ್ಲ ಒಬ್ಬೊಬ್ಬರಾಗಿ ಕರಗಿ ಹೋದ ಮೇಲೆ ಕೊನೆಯದಾಗಿ ಹೊರಟು ನಿಂತ ಬೂಬುವಿಗೆ ಅನಂತ ‘ಈ ಟ್ರಂಕು ನಿನಗೇ ಇರ್‍ಲಿ’ ಎಂದು ತಾನೇ ಎತ್ತಿ ಅವಳ ಮೇಲೆ ಹೊರಿಸಿಬಿಟ್ಟ. ಅದಾಗಲೇ ಮಾಲತಿ ಗಂಟು ಬಿಚ್ಚಿ ಕೂತು ತನ್ನೆಲ್ಲ ಹೊಸ ಸೀರೆಗಳನ್ನು ಬೇರೆ-ಬೇರೆ ಖಾನೆಯಲ್ಲಿ ಪೇರಿಸಿಡುತ್ತಿದ್ದಳು. ಬಾಗಿಲು ಮುಂದೆ ಮಾಡಿ ಅನಂತ ಏಕಾಂತದಲ್ಲಿ ಕಪಾಟಿನ ಅಸ್ತಿತ್ವವನ್ನು ಆನಂದಿಸುತ್ತ ದೂರದಲ್ಲೇ ನಿಂತು ಬೇರೆ ಬೇರೆ ಕೋನದಿಂದ ಅಳೆದ.

ಖೋಲಿಗೇ ಈಗ ಒಂದು ಹೊಸ ಕಳೆ ಬಂದಂತೆನಿಸಿದ ಮಾಲತಿಗೆ ಆನಂದಾತಿರೇಕದಿಂದ ಏನು ಹೇಳಬೇಕೆಂದೇ ತಿಳಿಯದೇ ‘ಟ್ರಂಕಾದರೆ ಕಾಟಿನಡಿ ಹಿಡೀತಿತ್ತು, ಇದು ನೋಡಿ ರೂಮು ಚಿಕ್ಕದಾಗುವ ಹಾಗೆ ಎಷ್ಟು ಜಾಗ ತಿಂದು ಕೂತಿದೆ’ ಎಂದು ಮುಟ್ಟಿ ಮುಟ್ಟಿ ನೋಡಿದಳು. ಹೀಗೆ ಬಾಯಿಬಿಟ್ಟ ಮಡದಿಯನ್ನು ಅನಂತ ದೊಡ್ಡ ದೊಡ್ಡ ಕಣ್ಣು ಬಿಟ್ಟು ತಿಂದುಬಿಡುವವನಂತೆ ನೋಡಿದ.

ಹೊಸ ವಸ್ತ್ರದ ರಾಶಿಯ ಮೇಲೆಯೇ ಕೂತು ಆಡುತ್ತಿರುವ ಮಗನನ್ನು ‘ಕಪಾಟಿನಲ್ಲೂ ಹೊಕ್ಕಿ ಕೂಡುವುದಿದೆಯೋ ಬಡ್ಡೀ ಮಗನೇ’ ಎನ್ನುತ್ತ ಮುದ್ದಿನಿಂದ ಮೇಲೆತ್ತಿ ಅನಂತ ಅವನನ್ನು ಕಪಾಟಿನ ನೆತ್ತಿಯ ಮೇಲೆಯೇ ಕೂಡಿಸಿಬಿಟ್ಟ. ಆಗ ಕೇಕೆ ಹಾಕಿ ನಕ್ಕ ವಿವೇಕ ಆಯಿ-ಬಾಬಾರಿಗಿಂತ ಎತ್ತರದಲ್ಲಿರುವ ತನ್ನನ್ನು ತಾನೇ ಒಮ್ಮೆ ನೋಡಿಕೊಂಡು ಬೆಚ್ಚಿ ಬಿದ್ದು ತೀರ್ಥ ಪ್ರೋಕ್ಷಣೆ ಮಾಡಿದಂತೆ ಮೂತ್ರ ಮಾಡಿಬಿಟ್ಟ. ಕಪಾಟಿನ ಎರಡೂ ಬಾಗಿಲುಗಳ ಮೇಲೆ ಉದ್ದಕ್ಕೆ ಕೆಳಗಿಳಿಯುತ್ತಿದ್ದ ಮುದ್ದಾದ ಮುತ್ತಿನ ಹನಿಯ ಗೆರೆಗಳು ಕಪಾಟೇ ನಿಂತು ಕಣ್ಣೀರಿಡುತ್ತಿದ್ದಂತೆ ಕಾಣುತ್ತಿತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.