ಪತ್ರಾಯಣ

ಪಾತ್ರಧಾರಿಗಳು: ಕೊರ್ಮ (ನಿರ್ದೇಶಕ), ಶೀಲಾ (ಚಿತ್ರ ನಟಿಯಾಗುವ ಕನಸು ಹೊತ್ತ ಲಲನೆ), ಕುಂಭಕೋಣಂ (ಚಿತ್ರ ನಿರ್ಮಾಪಕ), ಪೋಸ್ಟ್‌ಮ್ಯಾನ್.
(ರಂಗ ಮಧ್ಯದಲ್ಲೊಂದು ದೊಡ್ಡ ಕೆಂಪು ಡಬ್ಬವಿದೆ.   ಬಲಭಾಗದಲ್ಲಿ ಶೀಲಾ ಇದ್ದಾಳೆ.  ಎಡಭಾಗದಲ್ಲಿ ಕೊರ್ಮ ಇರುವ)
ಕೊರ್ಮ:  (ಕಾಗದ ಬರೆಯುವಂತೆ ಹೇಳಿಕೊಂಡು…_  ಏಯ್ ಚೆಲುವಿ, ಅದೆಷ್ಟು ಸುಂದರಿ ನೀನು… ನಿನ್ನ ವನಪು-ವಯ್ಯಾರ, ಬೆಡಗಿನ ನಡಿಗೆ, ಬಳುಕುವ ಸೊಂಟ ಇಂಪಾದ ಕಂಠ…ಓಹ್… ನನ್ನ ಮುಂದಿನ ಚಿತ್ರಕ್ಕೆ ನಿನ್ನೇ ಹೀರೋಯಿನ್ ಮಾಡಬೇಕು ಎಂದು ಕೊಂಡೆ…ಹೌದು…ನಿನ್ನನ್ನು ಕಂಡದ್ದು ನನ್ನ ಗೆಳೆಯನ ಮದುವೆಯಲ್ಲಿ…. ಪಡ್ಡೆ ಹುಡುಗರ ನಿದ್ದೆಗೆಡಿಸಬಲ್ಲೆ.  ಮೋಹಕ ನಗೆ ನಿನ್ನದು…  ಅದಕ್ಕೆ ಕದ್ದು ಕ್ಲಿಕ್ಕಿಸಿದ ಫೋಟೋ ಕಳಿಸಿರುವೆ… ನಿಜಕ್ಕೂ ನಿಂದು ಫೋಟೋಜಿನಿಕ್ ಫೇಸ್.  ಸಿನಿಮಾ ನಟಿಯಾಗುವ ಕನಸಿದೆಯೇ ಕೋಮಲೆ?
(ಪೋಸ್ಟ್‌ಮ್ಯಾನ್ ಕುಣಿಯುತ್ತಲೇ ಬಂದು ಓದಿ, ಶೀಲಾಗೆ ಕಾಗದ ನೀಡುವ.  ತಕ್ಷಣ ಕಾಗದ ಬರೆಯುವಂತೆ ಮೈಮ್ ಮಾಡುವಳು.  ಸಾಲುಗಳನ್ನೇ ಬಾಯಲ್ಲಿ ಹೇಳುತ್ತಾ ಬಳುಕುವಳು)
ಶೀಲಾ: ನಲ್ಮೆಯ ನಿರ್ದೇಶಕ ಕೊರ್ಮ ಅವರಿಗೆ….
ನಿಮ್ಮ ಪತ್ರದಿಂದ ಪುಳಕಿತಳಾದೆ.  ನಿಜಕ್ಕೂ ಇದು ನನ್ನ ಕನಸಿಗೊಂದು ಏಣಿ…  ಹೌದು!  ನಾನು ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಮೆರೆಯಲೇ ಬೇಕು.  ನಿಮ್ಮ ಕಣ್ಣಿಗೆ ನಾನು ಬಿದ್ದದ್ದು ನನ್ನ ಪೂರ್ವಜನ್ಮದ ಪುಣ್ಯ.  ನೀವು ನನ್ನ ಪಾಲಿನ ಅದೃಷ್ಟ ದೇವತೆ.  ಇಂಥ ಅವಕಾಶ ಬೇಡವೆಂದರೆ ‘ದಡ್ಡಿ’ ಎಂದಾರು.  ಹೇಳಿ ನನ್ನ ಪ್ರೀತಿ ಪಾತ್ರ ನಿರ್ದೇಶಕರೆ….  ಷೂಟಿಂಗ್‌ಗೆ ಎಂದು ಬರಲಿ?
ಎಂದು – ನಿಮ್ಮ
ಶೀಲಾ
(ಕಾಗದ ಮಡಿಸಿದಂತೆ ಮೈಮ್ ಮಾಡಿ ಪೋಸ್ಟ್ ಮಾಡುವಳು.  ಹಿಂದಿದ್ದ ಪೋಸ್ಟ್‌ಮ್ಯಾನ್ ನಂತರ ಕಾಗದ ಹಿಡಿದು ಕಾಮಿಕಲ್ ಹೆಜ್ಜೆ ಹಾಕುತ್ತಾ ಕೊರ್ಮನಿಗೆ ನೀಡಿ ಹೋಗುವ.  ಕೊರ್ಮ ಕಾಗದ ಓದುತ್ತ)
ಕೊರ್ಮ: (ಓದಿಕೊಂಡು-ಬರೆಯುವಂತೆ ಆಕ್ಟ್ ಮಾಡುವ)  ನಟೀಮಣಿ, ನಿನ್ನ ಅಕ್ಷರ ಮುತ್ತು.  ನೀನು ಮುತ್ತು ರತ್ನಗಳನ್ನು ಮೀರಿಸಿದ ಅಪ್ಸರೆ.  ಖಂಡಿತಾ ಕನ್ನಡ ಚಿತ್ರರಂಗಕ್ಕೇ ಒಂದು ಆಸ್ತಿ ಎನ್ನವಂತೆ ಮಾಡಬಲ್ಲೆ ನಾನು ನಿಮ್ಮನ್ನ.  ಕಲ್ಪನಾ, ಮಂಜುಳ, ಪ್ರೇಮ, ವಿಜಯಲಕ್ಷ್ಮಿ, ಮುಂತಾದವರನ್ನು ನಿಮ್ಮ ಮುಂದೆ ನಿವ್ವಾಳೀಸಬೇಕು.  ಲೀಸಾ ರೆ, ಪ್ರಿಯಾಂಕ, ಜೂಲಿ, ಖುಶ್‌ಬು, ಕಾಜೋಲ್, ಕರಿಷ್ಮಾ ಕಪೂರ್‍ ಮುಂತಾದವರನ್ನು ಕನ್ನಡಕ್ಕೆ ಏಕೆ ಕರೆತರಬೇಕು?  ನೀವು ನನ್ನ ಚಿತ್ರದಲ್ಲಿ ಅಭಿನಯಿಸಿದಲ್ಲಿ ಹ್ಯಾಟ್ರಿಕ್ ಹೀರೋಯಿನ್ ಆಗುವುದರಲ್ಲಿ ಸಂಶಯವಿಲ್ಲ.  ಚಿತ್ರದಲ್ಲಿ ಶೈನ್ ಆಗಲು ಡೆಡಿಕೇಶನ್ ಮುಖ್ಯ.  ಆದರೆ, ಅಪ್ಪ-ಅಮ್ಮಂದಿರು ಹಾಜರಿದ್ದು, ಕಾಟಕೊಟ್ಟರೆ ನನಗೆ ಟೆನ್‌ಷನ್ ಆದೀತು.  ನಿಮ್ಮ ಫ್ರಾಂಕ್ ಒಪಿನಿಯನ್ ಬರೀತೀರಲ್ಲ?  ಏನಂತೀರಿ ಶೀಲಾ.
ಎಂದು ನಿನ್ನವ
ಕೊರ್ಮ
(ಕಾಗದ ಮಡಿಚಿ-ಕುಣಿಯುತ್ತಾ ಹೋಗಿ ಪೋಸ್ಟ್ ಡಬ್ಬದಲ್ಲಿ ಕಾಗದ ಹಾಕುವ.   ಪೋಸ್ಟ್‌ಮ್ಯಾನ್ ಕಾಗದ ಹೊತ್ತು ಶೀಲಾಗೆ ನೀಡುವ.  ಅವಳು ಓದಿ ಕಾಗದ ಬರೆದಂಥೆ ಮೈಮ್)
ಶೀಲಾ:  ನನ್ನ ಕನಸಿನ ದೊರೆ,
       ನಮ್ಮಿಬ್ಬರ ನಡುವೆ ಬಹುವಚನದ ಅಡ್ಡಗೋಡೆ ಬೇಡ-ಶೀಲು ಎನ್ನಿ ಸಾಕು.  ನಿಜ ಹೇಳಬೇಕೆಂದರೆ ನನ್ನ ತಂದೆ-ತಾಯಿಗೆ ನಾನು ಹೀರೋಯಿನ್ ಆಗುವುದು ಇಷ್ಟವಿಲ್ಲ.  ಆದ್ದರಿಂದ ಅವರನ್ನು ಪ್ರಮಾಣವಾಗಿ ಸೆಟ್‌ಗೆ ಕರೆತರುವುದಿಲ್ಲ… ಅವರ ಚಿಂತೆ ಬಿಡಿ…. ‘ಹೊರಡು’ ಎಂದು ಗ್ರೀನ್ ಸಿಗ್ನಲ್ ನಿಮ್ಮಿಂದ ಸಿಕ್ಕಿದ ಮರುಘಳಿಗೆ ಹಾಯ್ ಹಾಯ್ ಎಂದು ಹಾರಿಬರುವೆ ನಾನು-ಕಾಯುತ್ತಿರುವೆ ಆ ಶುಭ ಗಳಿಗೆಗೆ.
ಎಂದು ಬರಲಿ?
ಬರುವಾಗ ಏನೇನು ತರಲಿ?
ಎಂದು ನಿಮ್ಮವಳು
-ಶೀಲಾ
(ಶೀಲಾ ಕಾಗದ ಮಡಚಿ ಪೋಸ್ಟ್ ಡಬ್ಬಕ್ಕೆ ಹಾಕುವಳು.  ಪೋಸ್ಟ್‌ಮ್ಯಾನ್ ಪತ್ರ ಕೊರ್ಮನಿಗೆ ತಲುಪಿಸುವ.  ಕಾಗದ ಓದಿ ಉತ್ತರ ಬರೆಯ ತೊಡಗುವ)
ಕೊರ್ಮ:  ನನ್ನ ಪ್ರೀತಿಯ ಚಕೋರಿ ಶೀಲಾ,
ಷೂಟಿಂಗ್ ಒಂದು ತಿಂಗಳಾದೀತು.  ಅಲ್ಲಿ ಬಂದು ‘ಹೋಂ ಸಿಕ್’ ಆದರೆ ಕಾನ್‌ಸನ್‌-ಟ್ರೇಷನ್ ಇರುವುದಿಲ್ಲ.  ಒಂದು ತಿಂಗಳೂ ಮನೆ-ಮಠ ಮರೆತು ಬಾ… ಬೋರ್‍ ಆಗದಂತೆ ಕಂಪನಿ ಕೊಡಲು ನಾನಿರುವೆ… ನಿನ್ನಂತ ಕಗ್ಗಲ್ಲನ್ನು ಸುಂದರ ಶಿಲ್ಪವಾಗಿಸುವ ಶಿಲ್ಪಿ ನಾನು ಎಂಬುದು ಮರೆಯದಿರು.  ಅದರಿಂದಾಗಿ ನಾನು ಕನಸಿದಂತೆ ನೀನು ನಡೆದುಕೊಳ್ಳುವುದು ಅನಿವಾರ್ಯ.   ಊಟಿ, ಕುಲು ಮನಾಲಿ ಮುಂತಾದುವೆಲ್ಲ ಷೂಟಿಂಗ್ ಸ್ಪಾಟ್ಸ್ ಹೊಚ್ಚ ಹೊಸ ಬೆಚ್ಚನೆಯ ಅನುಭವಗಳು ನಿನ್ನದಾಗಿಸುವ ಹೊಣೆ ನನ್ನದು… ಏ ಹೀರೋಯಿನ್, ನಿನ್ನ ಭಾರೀ ಸ್ಟಾರ್‍ ಮಾಡುವುದರಿಂದ ನನಗೇನು ಲಾಭವಾದೀತು ಎಂದು ಒಂದು ಕ್ಷಣವಾದರೂ ಚಿಂತಿಸಿರುವೆಯಾ ಗಿಣಿ… ಅಪ್ಪಣೆ ಕೊಡಿಸು
-ಕೊರ್ಮ
(ಕೊರ್ಮ ಕಾಗದ ಪೋಸ್ಟಿಸುವ.  ಪೋಸ್ಟ್‌ಮ್ಯಾನ್ ಆ ಕಾಗದ ಶೀಲಾಗೆ ನೀಡುವ.  ಅವಳು ಓದಿ ಬರೆಯತೊಡಗುವಳು)
ಶೀಲಾ:  ನನ್ನ ಗಿಣಿ ಎಂದಿರುವ ನೀವು ನನ್ನ ಪಾಲಿನ ಭಾಗ್ಯದ ಗಣಿ,
ನನ್ನ ಮಿರು ಮಿರುಗುವ ತಾರೆ ಮಾಡಹೊರಟ ನೀವು ನನ್ನ ಪಾಲಿನ ರಾಜಕುಮಾರ…. ನಿನ್ನೆ ರಾತ್ರಿ ಕನಸಿನಲ್ಲಿ ಬಿಳಿ ಕುದುರೆಯ ಮೇಲೆ ಬಂದ ನೀವು ನನ್ನ ಪ್ರೀತಿಯಿಂದ ಒಪ್ಪಿ-ಅಪ್ಪಿ-ಪಪ್ಪಿ ನೀಡಿದ್ದನ್ನು ನಾನು ಸಾಯುವವರೆಗೆ ಮರೆಯಲಾರೆ… ನಮ್ಮಿಬ್ಬರ ಪ್ರೀತಿಗೆ ಲಾಭ-ನಷ್ಟಗಳ ತಕ್ಕಡಿ ಏಕೆ ಬೇಕು?  ಹೇಗೆ ಹೇಳಲಿ?  ನನ್ನ ಸರ್ವಸ್ವವೂ ನಿಮಗೇ ಮೀಸಲು…  ಅರ್ಥವಾಯಿತಲ್ಲವೆ?
ಎಂದೆಂದೂ ನಾನು ನಿಮ್ಮವಳೆ ದೊರೆ
-ಶೀಲಾ
(ಕಾಗದ ಪೋಸ್ಟಿಸುವಳು.  ಆ ಪತ್ರದ ರವಾನೆ ಕೊರ್ಮನಿಗೆ.  ಆತ ಓದಿ ಬರೆಯತೊಡಗುವ)
ಕೊರ್ಮ: ನನ್ನ ಬಂಗಾರಿ,
ಕುಂಭಕೋಣಂ ಎಂಬ ಟೊಣಪ ನಿರ್ಮಾಪಕ ಲಕ್ಷಲಕ್ಷ ಅಡ್ವಾನ್ಸ್ ನೀಡಲು ಬರುವೆ ಎಂದಿರುವ.  ಅದು ಕೋಟಿ ಕೋಟಿ ವೆಚ್ಚದ ಚಿತ್ರ.  ಆದರೆ, ಆತನಿಗೆ ಪರಭಾಷಾ ನಟಿಯ ವ್ಯಮೋಹ.  ನನಗದು ಸುತಾರಾಂ ಇಷ್ಟವಿಲ್ಲ.  ಶೀಲಾ ಎಂಬ ಕರ್ಪೂರದ ಬೊಂಬೆಯಾದ ನೀನೇ ಹೀರೋಯಿನ್ ಆಗಬೇಕೆಂಬುದು ನನ್ ಹಠ.  ಏನು ಮಾಡಲಿ?  ಏನೂ ತೋಚುತ್ತಿಲ್ಲ.  ಹುಚ್ಚು ಹಿಡಿದಂತಾಗಿ ತಲೆ ಕೆರೆದುಕೊಳ್ಳುವಂತಾಗಿದೆ.  ಈ ಗಿರಾಕಿ ಬಿಟ್ಟರೆ ಇಂಥ ಸೌಂಡ್ ಪಾರ್ಟಿ ಇನ್ನು ನನಗೆ ಸಿಗುವುದಿಲ್ಲ.  ಏನು ಮಾಡಲಿ ಲೌಲಿ?  ಈ ಚಿತ್ರದಲ್ಲಿ ಆಗದಿದ್ದರೆ ಮುಂದಿನ ಚಿತ್ರಲ್ಲೊಂದು ಅವಕಾಶ ಮಾಡುವೆ.  ಆಗಬಹುದೆ ಸುಂದರಿ?
          ಎಂದು ನಿನ್ನ ಪ್ರೀತಿಯ
              – ಕೊರ್ಮ
(ಕಾಗದ ಪೋಸ್ಟ್ ಮಾಡುವ ಪೋಸ್ಟ್‌ಮ್ಯಾನ್‌ನಿಂದ ಅದು ಶೀಲಾಗೆ ರವಾನೆ.  ಅವಳೂ ಓದಿ ಬರೆಯತೊಡಗುವಳು)
ಶೀಲಾ:  ಏ ತುಂಟ!
ತಮಾಷೆ ಮಾಡ್ತಿದೀಯಾ?  ನಾನೇ ಹೀರೋಯಿನ್ ಅಂತ ಫ್ರೆಂಡ್ಸ್‌ಗಳಲ್ಲಿ ಹೇಳಿ ಆಗಿದೆ.  ಅಪ್ಪ-ಅಮ್ಮ ಸಹಾ ಹಣದ ರಾಶಿ ಬರುವುದಾದರೆ ಹೀರೋಯಿನ್ ಆಗು ಎಂದಿದ್ದಾರೆ.  ಈಗ ನೀವು ನಂಗೆ ಛಾನ್ಸ್ ಕೊಡದಿದ್ರೆ ಸೂಸೈಡ್ ಮಾಡ್ಕೋತೀನಷ್ಟೆ.  ಹೇಳು ನನ್ನ ಸರದಾರ.  ಹೀರೋಯಿನ್ ಮಾಡ್ತಿರೋ ಸೂಸೈಡ್ ಮಾಡಿಕೊಳ್ಳಲೋ?
ನಿಮ್ಮ ಕಾಗದಕ್ಕೆ ಕಾದಿರುವ
– ಶೀಲಾ
(ಪೋಸ್ಟ್ ಮಾಡುವಳು.  ಆ ಪತ್ರ ಕೊರ್ಮನಿಗೆ ತಲುಪಿಸುವ ಪೋಸ್ಟ್‌ಮ್ಯಾನ್)
ಕೊರ್ಮ:  ಲೇ ತುಂಟಿ……
ಕಾಗದದಲ್ಲೇ ಬಾಂಬ್ ಹಾಕಿ ಬಿಟ್ಟಿದ್ದಿ-ಸೂಸೈಡ್‌ಗಿದು ಸಕಾಲವಲ್ಲ.  ಸ್ಟಾರ್‍ ಆದಮೇಲೆ ಸೂಸೈಡ್ ಮಾಡ್ಕೊಂಡ್ರೆ ಫ್ರಂಟ್‌ಪೇಜ್ ನ್ಯೂಸ್… ಅಂಡರ್‌ಸ್ಟ್ಯಾಂಡ್
-ನಿನ್ನ ಕೊರ್ಮ
(ಕಾಗದ ಇಲ್ಲಿಂದ ಅಲ್ಲಿಗೆ)
ಶೀಲಾ:  ನನ್ನ ಪ್ರೀತಿ ಪಾತ್ರ ನಲ್ಲ.
ನೀನಿಲ್ಲದೆ ನಾನಿಲ್ಲ.  ಆದ್ದರಿಂದ ನಾಳೆಯೇ ಬರುತ್ತಿರುವೆ?  ಎಲ್ಲಿ ಬರಲಿ – ಹೇಗೆ ಬರಲಿ?  ಬರೀರಿ ಪ್ಲೀಸ್ ಈ ಜನ್ಮದಲ್ಲಿ ಮಾತ್ರವಲ್ಲ ಮುಂದಿನ ಜನ್ಮದಲ್ಲೂ ನಿಮ್ಮವಳೇ ಆದ
-ಶೀಲಾ
(ಕಾಗದ ಅಲ್ಲಿಂದ ಇಲ್ಲಿಗೆ-ಕೊರ್ಮ ಓದಿ ನಂತರ ಬರೆವ)
ಕೊರ್ಮ:  ನನ್ನ ಪ್ರೀತಿಯ ಮೆಲ್ಲುಸಿರೆ,
ಬರುವುದಿದ್ದರೆ ನಾಡಿದ್ದೇ ಗಾಂಧೀನಗರ ‘ಹೊಟೇಲ್ ಕಿತಾಪತಿ’ಯ ರೂಂ ನಂಬರ್‍ ೧೧೧ಕ್ಕೆ ಬಾ ಸಂಜೆ ೬ ಗಂಟೆಗೆ.  ನಮ್ಮ ನಿರ್ಮಾಪಕ ಕುಂಭಕೋಣಂ ಸಹಾ ಬಂದಿರುತ್ತಾರೆ.  ಅಂದೇ ಹೀರೋಯಿನ್ ಡಿಸೈಡ್ ಮಾಡಬೇಕಿದೆ.  ನಿನ್ನ ಬ್ಯೂಟಿಫುಲ್ ಬಾಡಿ ಲಾಂಗ್ವೇಜ್‌ನಿಂದ ಮೋಡಿ ಮಾಡುವ ರೀತಿ ವಸ್ತ್ರ ವಿನ್ಯಾಸವಿರಲಿ, ಕುಂಭಕೋಣಂ ಕ್ಲೀನ್ ಬೋಲ್ಡ್ ಆಗುವಂತಿರಲಿ ನಿನ್ನ ನೋಟ-ಮೈಮಾಟ…. ಓಕೆ.
(ಕಾಗದ ಅಲ್ಲಿಂದ ಪೋಸ್ಟ್‌ಮ್ಯಾನ್ ಮೂಲಕ ಶೀಲಾಗೆ ರವಾನೆ.  ಶೀಲಾ ಕಾಗದ ಓದಿಕೊಂಡು ಒಳಗೆ ತೆರಳುವಳು.  ಪೋಸ್ಟ್‌ಮ್ಯಾನ್ ಪೋಸ್ಟ್ ಡಬ್ಬದ ಫ್ಲಾಟ್ ತಿರುಗಿಸುವ.  ಅದೊಂದು ಹೊಟೇಲ್ ಕೋಣೆ.  ಅಲ್ಲಿಗೆ ಶೀಲಾ ಬರುವಳು ಕೊರ್ಮನಿಗೆ ಖುಷಿ!)
ಶೀಲಾ:  ಹಾಯ್ ಡಿಯರ್‍
ಕೊರ್ಮ:  ಹಾಯ್ ಶೀಲಾ ಡಾರ್ಲಿಂಗ್
ಶೀಲಾ:  ಹ್ಯಾಗಿದೆ ಗೆಟಪ್ಪು?
ಕೊರ್ಮ:  ಫಸ್ಟ್‌ಕ್ಲಾಸ್… ಒಳಗೆ ಬಾ… ನೋಡು ನನ್ನ ಸೆಟಪ್ಪು…  ಬಾ ಇಂಟ್ರೊಡ್ಯೂಸ್ ಮಾಡಿಸ್ತೀನೆ ನಮ್ಮ ಕುಂಭಕೋಣಂನ… ಹೀರೋಯಿನ್ ಆಗಲೇಬೇಕು ಅನ್ನೋದಾದ್ರೆ ಅವರನ್ನು ಒಪ್ಪಿಸೋ ಜವಾಬ್ದಾರಿ ನಿನ್ನ ಕೈಲಿದೆ.
ಶೀಲಾ:  ಡೋಂಟ್‌ವರಿ… ಚಿಟಕಿ-ಚಿಟಕೀಲಿ ಒಪ್ಪಿಸ್ತೀನಿ (ಸ್ಟೈಲಿಷ್ ಆಗಿ ನಡೆವಳು)
ಕೊರ್ಮ:  ಓ ಕೆ ಡಿಯರ್‍… (ಇಬ್ಬರೂ ಒಳಗೆ ನಡೆವರು ಬ್ರಿಸ್ಕ್ ಮ್ಯೂಸಿಕ್ ಒಂದು ಕ್ಷಣದ ನಂತರ ಕೊರ್ಮ ಆಚೆ ಬರುವ)  ಪ್ರೊಡ್ಯೂಸರ್‍ ಏನೋ ಖುಷಿಯಾದ ಶೀಲಾಳ ಬೊಂಬಾಟ್ ಫಿಗರ್‍ ನೋಡಿ… ಬಂದೆ ಒಂದ್ನಿಮಿಷ ಅಂತ ಈಚೆ ಬಂದೆ… ಮುಂದೇನಾಗುತ್ತೊ?  ಗಾಡ್ ಒನ್ಲಿ ನೋಸ್….
(ಅತ್ತಿತ್ತ ಅಡ್ಡಾಡುತ್ತಿರುವ ಬಿರುಸಿನ ಸಂಗೀತ ದಢಿಯಾ ಕುಂಭಕೋಣಂ ಈಚೆ ಬಂದು)
ಕುಂಭಕೋಣಂ:  ಕೊರ್ಮಾಜಿ… ಪೊಣ್ಣು ರೊಂಬ ನಲ್ಲ ಇರಕು… ಇವಳೇ ಇರಲಿ ಈರೋಯಿನ್… ವಂಗೋವಾಂಗೋ ಎಂದು (ಒಳಗೆ ತೆರಳುವ ನಂತರ ಈಚೆ ಬರುವಳು ಶೀಲಾ)
ಕೊರ್ಮ:  ಛೇ.. ಛೆ.. ನೀನು ಯಾಕೆ ಬಂದೆ ಈಚೆ… ಪ್ರೊಡ್ಯೂಸರ್‍ ಒಳಗಿದ್ದಾರೆ….
ಶೀಲಾ:  ಡಾಲಿಂðಗ್ ನಾನೇ ಹೀರೋಯಿನ್ ಅಂತ ಅವರು ಹೇಳಿ ಆಯಿತು – ಪ್ರೀತಿಗೆ ಈ ಸರ ಕೊಟ್ಟಿದ್ದೂ ಆಯಿತು.
ಕೊರ್ಮ:  ವೆರಿ ಗುಡ್.. ನಡಿ ನಡಿ ಹಾಗೆ ಇನ್ನೂ ಸ್ವಲ್ಪ ವಿಚಾರಿಸ್ಕೋತಿರು.  ಸ್ವೀಟ್ಸ್‌ಗೆ ಆರ್ಡರ್‍ ಮಾಡಿ ಬರ್‍ತೀನಿ.
ಶೀಲಾ:  ಬೇಗ ಬನ್ನಿ (ಒಳಗೆ ಹೋಗುವಳು)
ಕೊರ್ಮ: ಸದ್ಯ.  ಇವಳಿಂದ ನಾನೀಗ ಕಾಸ್ಟ್ಲಿ ಬಜೆಟ್ ಫಿಲಂ ಡೈರಕ್ಟ್ರರ್‍..
ನಂಗೂ ಒಂದು ಚಾನ್ಸ್… ಅವಳಿಗೂ ಒಂದು ಚಾನ್ಸ್… ಪ್ರೊಡ್ಯೂಸರ್‌ಗೆ ದಿಲ್ ಖುಷ್… ಅಂದ್ಮೇಲೆ ‘ಪಂಗನಾಮ ಪ್ರೊಡಕ್ಷನ್’ ಮುಹೂರ್ತದ ಡೇಟ್ ಫಿಕ್ಸ್ ಮಾಡಿ ಬಿಡ್ತೀನಿ ಈಗಲೇ ‘ಸ್ವೀಟ್ಸ್’ ತಂದು.
(ಎಂದು ಹೊರಡುವ.  ಖುಷಿಯ ಸಂಗೀತ ತೇಲಿ ಬರುತ್ತಿದೆ.  ಒಂದು ಕ್ಷಣಾನಂತರ ಹೀರೋಯಿನ್ ಗತ್ತು-ಗಮ್ಮತ್ತಿನಲ್ಲಿ ಈಚೆ ಬರುವಳು.  ಶೀಲಾ ಕಣ್ಣಿಗೆ ಕೂಲಿಂಗ್ ಗ್ಲಾಸ್ ಇದೆ..)
ಶೀಲಾ:  ಎಲ್ಲಿ ನಮ್ಮ ಡೈರಕ್ಟರ್‍… ಸುತ್ತಾ ನೋಡಿ ಬರ್‍ಲಿ-ಬರ್‍ಲಿ (ಎಂದು ಜನರಿಗೆ ಹಾಯ್ ಹಾಯ್ ಎಂದು ವಿಶ್ ಮಾಡುತ್ತಿರುವಳು)
ಕುಂಭಕೋಣಂ:  (ಈಚೆ ತಲೆ ಹಾಕಿ) ಡೈರೆಕ್ಟರ್‍ ಅಪ್ಪರು ವರಾಂ… ನೀ ವಾ ವುಳ್ಳೆ… ನೀಂದಾ ನಂಬೋ ಹೀರೋಯಿನ್ (ಎಂದಾಗ ಟಾಟಾ ಹೇಳಿ ಒಳಗೆ ತೆರಳುವಳು ಶೀಲಾ)
*****
(೨೩-೧೧-೨೦೦೧)