ಮಧುರಚೆನ್ನರ ನೆನಪಿಗೆ

ಜಾನಪದ ಜೀವನದ ಸಂಗೀತಕೆದೆಯೋತು
ಹೂವು ಹೂವಿನ ಜೇನು ತೊಳೆಯ ಬಿಡಿಸಿ
ಹೊಸ ಬೆಳೆಯ ಕಸುವಾಗಿ ಸ್ನೇಹರಸದೊಳು ಮಾಗಿ
ಸುಗ್ಗಿ ಮಾಡಿದಿರಂದು ನಾಡನಲಿಸಿ!

ಅಂದಿನಿಂದೆನ್ನೆದೆಗೆ ಮೂಡಿಹುದು ಮಳೆಬಿಲ್ಲು
ಆಡಿಹವು ನಿಮೂರ ನವಿಲಹೆಜ್ಜೆ!
ಕಾಳರಾತ್ರಿಯು ಬೆಳಗು ಬೈಗುಗಳು ದಾಟಿದವು
ಕಂಡೆ ನಾ ನಿಸ್ಸಿಮ ನಯದ ಓಜೆ!

ದೇಹ ಮೊಂಬತ್ತಿಯೋಲು ಮುಡಿದ ಬೆಳಕಿನ ಕುಡಿಗೆ
ಕರಗಿ ಮಿದುವಾಗಿತ್ತು ಅಂತರಂಗ ;
ಬೆಳ್ಮುಗಿಲ ಕನಸುಗಳು ಸಚ್ಚಿದಾಕಾಶದಲಿ
ದೇವತಾಪೃಧಿವಿ ಮೈದಡವಿದಾಗ !

ಹರಿಗಡಿದ ಬಾಳಿನೊರತೆಯ ತೋಡೆ ಪ್ರೀತಿ ಜಲ
ಸೆಲೆಯೊಡೆದು ಬರೆ ಮಧುರಗೀತವಾಗಿ
ಹಲವನೆಲ್ಲವನುಳಿದು ಹಾಡಿ ಮೀಸಲುಗವಿತೆ
ಚೆಲುವನಲ್ಲಿಯೆ ಬೆರೆತೆ ಬಯಕೆ ಮಾಗಿ !

“ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ”-
ಮೌನ ಕೋಗಿಲೆಯದನೆ ಧ್ಯಾನಿಸಿತ್ತು !
ಸೂರ್ಯಕಾಂತಿಯ ಚಿತ್ತವದರ ಸುಳಿವಿಗೆ ಹೊರಳಿ
ಬೆಳಗಿನೊಳಗಿನ ಬೆಳಕು ಹೀರುತಿತ್ತು !

ಇಲ್ಲಿ ಊರಿದ ಬೀಜವಲ್ಲಿ ಹಣ್ಣಾಗಿತ್ತು
ಆಕಾಶದಡವಿಯಲಿ ಕೊಂಬೆ ಚಾಚಿ !
ಮರದ ನೆರಳಲಿ ತನ್ನ ನೆರಳನರಸಲು ಬಹುದೆ ?
ಅರಿತವರಿಗಂತದುವೆ ಆತ್ಮಸೂಚಿ !

ತನುವು ನಿಸದಿಗೆಗಲ್ಲು ಮನವು ಮಾಸತಿಕಲ್ಲು
ನಿಮ್ಮ ಸಾಧನೆಯೊಂದು ವೀರಗಲ್ಲು !
ಭಾವ ದೇವಾಲಯದಿ ನಿತ್ಯ ನಂದಾದೀಪ
ಶರಣು ಶರಣೆಂಬುದೇ ಕೊನೆಯ ಸೊಲ್ಲು !
*****

ಕೀಲಿಕರಣ: ಎಂ ಎನ್ ಎಸ್ ರಾವ್
ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್‍ ಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.