ಹಗಲುಗನಸು

ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ.
ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು;
ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು;
ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ
ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ
ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ
ಏಕಾಂಗಿ ಚಿಟ್ಟೆ; ಅಲುಗುತ್ತಿವ ಎಲೆ ರವುದೆ
ಗಾಳಿ ತಣ್ಣನೆ ಬೀಸೆ, ಮೌನದೇಕಾಂತದಲಿ
ನಲ್ಲ ಕಿವಿಯಲಿ ಮೆಲ್ಲನುಸುರಿ ಸೈತಿಡುವಂತೆ.
ತಳಿರಿಡಿದ ಜೊಂಪದಲಿ ಮೈಹುದುಗಿ ಕುಳಿತಿಹುದು
ತಂದ್ರಿಯಲಿ ಹೊಂಬಕ್ಕಿ; ಬಿಸಿಲ ಕೋಲನು ಹಿಡಿದು
ನಲಿದಾಡುತಿದೆ ಮನಸು ಹಸುಳೆ-ಹಂಬಲದಂತೆ-
ಈ ಇರವನೊಂದು ಚಣ ಮರೆತು ಬಹುದೂರದಲಿ
ಹಗಲುಗನಸಿನ ಸ್ವರ್ಣಮಂದಿರದ ಛಾಯೆಯಲಿ.
*****