ಚುಕ್ಕಿ ಎಂಬ ಚಂದ್ರನಿಗೊಂದು ಕಿವಿಮಾತು

ನನ್ನ ಚಂದ್ರನ ಕಣ್ಣಲ್ಲಿ ಹೊಳೆವ ನಕ್ಷತ್ರಗಳು
ತುಟಿಯ ತುಂಬಾ ತೊದಲು,
ಆಳಬೇಡ ಕಂದ,
ಅತ್ತರೆ ಸುರಿವ ಮುತ್ತಿನ ಜೊತೆ
ಜಾರೀತು ತಾರೆಗಳು

ಕೇಳು ರಾಜಕುಮಾರ,
ಏಳು ಸಮುದ್ರಗಳನೀಸಿ
ಏಳು ಪರ್ವತಗಳ ದಾಟಿ
ತಂದುಕೊಡಲಾರೆ
ಮಲ್ಲಿಗೆ ತೂಕದ ರಾಜಕುಮಾರಿಯನ್ನ

ಅದೆಲ್ಲ ಹಳೆಯ ಕಥೆ,
ಪುಟ್ಟ ಪ್ರಪಂಚದ ಕಿಟಕಿಗಿಟ್ಟ
ಬಣ್ಣದ ಗಾಜು

ಹೇಗೆ ಹೇಳಲಿ ನಿನಗೆ
ನಕ್ಷತ್ರದೊಳಗಿನ ಬೆಂಕಿಯ ಕಥೆ,
ಕಡಲ ತಳಕ್ಕೆ ಹುಟ್ಟುವ ಮುತ್ತಿನ ಕಥೆ,
ಹೂವಿನೆದೆಯಲ್ಲಿ ಅರಳುವ ಪರಿಮಳದ ಕಥೆ!
ತಿಳಿಯುವುದಾದರೂ ಹೇಗೆ ನಿನಗೆ,
ಸದ್ದಿಲ್ಲದೇ ಸರಿದುಹೋದ
ನೆನಪಿಗೂ ಸಿಕ್ಕದೇ ಮಗ್ಗುಲಾದ
ಇಂಥಾ ಎಷ್ಟೋ ಮಾತುಗಳು.

ಇಷ್ಟು ತಿಳಿದರೆ ಸಾಕು –
ತಾರೆಗಳ ಬೆಳಕು, ಮುತ್ತುಗಳ ಹೊಳಪು,
ಹೂವಿನಂಥಾ ಮನಸ್ಸು
ನಿನಗಿದ್ದರೂ ಚಂದ, ನನಗಿದ್ದರೂ ಚಂದ;
ಎಲ್ಲರಿಗೂ ಇದ್ದರೆ ಎಷ್ಟು ಚಂದ!!
*****