ಚಿತ್ರ ನಟ ಜಗ್ಗೇಶ್ ಮತ್ತು ಬೀದಿನಾಟಕ

ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಯಾವ ಗಾಡ್‌ಫಾದರ್‍ ನೆರವೂ ಇಲ್ಲದೆ ತನ್ನದೇ ಆದ ಒಂದು ಹೊಸ ಟ್ರೆಂಡನ್ನು ಹುಟ್ಟುಹಾಕಿದ ಪ್ರತಿಭಾವಂತ ಜಗ್ಗೇಶ್. ಒಂದು ಕಾಲದಲ್ಲಿ ಆತ ಅಂಗಲಾಚಿದರೂ ಪತ್ರಿಕೆಗಳಲ್ಲಿ ಒಂದೇ ಒಂದು ಫೋಟೋ ಮತ್ತು ಸಂದರ್ಶನ ಕೂಡ ಬರುತ್ತಿರಲಿಲ್ಲ. ಅಂದು ಕಾನಿಷ್ಕ ಹೋಟೆಲ್ ಬಳಿ ಸಿನಿಮಾದಲ್ಲಿ ಅವಕಾಶಕ್ಕೆ ಕೈಚಾಚಿ ಹಪಹಪಿಸುತ್ತಿದ್ದ ವ್ಯಕ್ತಿಗಳಲ್ಲಿ ಜಗ್ಗೇಶ್ ಸಹಾ ಒಬ್ಬರು. ಆದರೆ ಈ ಹಠಮಾರಿ ಗಾಂಧೀನಗರದ ಚಕ್ರವ್ಯೂಹ ಭೇದಿಸಿದ ಯಾವ ಗಾಡ್‌ಫಾದರ್‍ ನೆರವಿಲ್ಲದೆ.

ಇಂದು ಜಗ್ಗೇಶ್ ಸೆಟ್ ಮೇಲೆ ಏನೇ ಮಾಡಿದರೂ ಶುಕ್ರವಾರದ ಸಿನಿಮಾ ಸಂಚಿಕೆಗಳಲ್ಲಿ ಕಲರ್‌ಫೋಟೊ ಸಮೇತ ಬರುತ್ತದೆ. ಎಷ್ಟಾಗಲೀ ಶಂಖದಿಂದ ಬಂದರೇ ತೀರ್ಥ ಅಲ್ಲವೆ.

ಮೊನ್ನೆ ಆದದ್ದೂ ಅದೇ. ಜೇಡ್‌ಗಾರ್ಡನ್‌ನಲ್ಲಿ ‘ರುಸ್ತುಂ’ ಶೂಟಿಂಗ್ ನಡೆದಿತ್ತು. ನಾಯಕಿ ಸ್ವಾತಿ ಕುಣಿಯಲನುವಾಗುತ್ತಿದ್ದಳು. ನರ್ತಕಿಯರ ಹಿಂಡು ನೃತ್ಯದ ರಿಹರ್‍ಸಲ್ ನಡೆಸಿದ್ದರು. ಜಗ್ಗೇಶ್ ಮೊದಲು ಮಾತಿಗೆ ಸಿಕ್ಕರು. ಇಂದಿನ ಕಾಲೇಜ್ ಯುವಕ-ಯುವತಿಯರ ಡ್ರೆಸ್ ಬಗ್ಗೆ, ಅವರ ಕಂಗ್ಲಿಷ್ ಮಾತಿನ ವೈಖರಿಯ ಬಗ್ಗೆ, ವ್ಯಾಖ್ಯಾನ ತಮ್ಮದೇ ಟಿಪಿಕಲ್ ಶೈಲಿಯಲ್ಲಿ ಬಣ್ಣಿಸಿದರು ಮಲ್ಲೇಶ್ವರ ಅಡ್ಡೆಯಲ್ಲಿ ಯುವಜನಾಂಗದ ಮಾತಿನ ಶೈಲಿ ಮುಂದೆ ನನ್ನ ಡೈಲಾಗ್ಸ್ ಸಪ್ಪೆ ಎಂದು ಹೇಳಿ ಸುಮ್ಮನಾಗಿದ್ದರೆ ಚೆನ್ನಿತ್ತು.

“ಮುಂಚೆ ನೋಡಿ ಬೀದಿನಾಟಕಗಳಿಗೆ ಜನ ಉತ್ಸಾಹದಿಂದ ಬರ್‍ತಿದ್ದರು. ಈಗ ಬೀದಿ ನಾಟಕವಾಡಿದರೆ ಕೇಳೋರಿಲ್ವಂತೆ. ಬೀದಿನಾಟಕ ತನ್ನ ಸ್ವಂತಿಕೆ ಕಳಕೊಂಡಿದೆ. ಮುಂಚೆ ಅದೆಷ್ಟು ಜನ ಸೇರೋರು” ಅಂದಾಗ ನಾನು ಕೇಳಿದೆ.

“ನೀವು ಬೀದಿನಾಟಕ ಆಡಿಲ್ಲ. ಒಂದು ಬೀದಿನಾಟಕವೂ ನೋಡಿಲ್ಲ. ಯಾವ ಆಧಾರದ ಮೇಲೆ ಈ ಮಾತು ಹೇಳ್ತಿದೀರಿ” ಅಂದೆ.

“ನಿನ್ನೆ ಡಾ. ನಾಗೇಂದ್ರಪ್ರಸಾದ್ ಬಂದಿದ್ರು-ಅವರು ಹೇಳಿದ್ರು” ಅಂದ್ರು.

“ಆ ಹುಡುಗನ ಮಾತು ನೆಚ್ಕೊಂಡು ನೀವು ಹೀಗೆ ಹೇಳೋದು ಸರಿ ಅಲ್ಲ. ನಿಮಗೀಗ ಹೆಸರಿದೆ. ನೀವು ಹೇಳಿದ್ದು ಪ್ರಿಂಟ್ ಆಗುತ್ತೆ ಅನ್ನೋ ಕಾರಣಕ್ಕೆ ಈ ಥರಾ ಹೇಳಿಕೆ ನೀಡಬಾರದು. ಈ ನಾಗೇಂದ್ರಪ್ರಸಾದ್ ನಮ್ಮ ಅಭಿನಯ ತರಂಗದಲ್ಲಿದ್ದ ಹುಡುಗ. ಆ ವ್ಯಕ್ತಿ ಡಾ. ಕಂಬಾರ, ಅನಂತಮೂರ್ತಿ, ವೆಂಕಟೇಶಮೂರ್ತಿ, ಸಿದ್ದಲಿಂಗಯ್ಯನವರ ಥರದ ಡಾಕ್ಟರಲ್ಲ. ಆತ ಒಬ್ಬ ಅಳಲೆಕಾಯಿ ಪಂಡಿತ. ಚಿತ್ರರಂಗದವರು ಸಾಹಿತ್ಯದ ಡಾಕ್ಟರ್‍ ಅಂತ ಭಾವಿಸಿದೀರಿ. ಹೀಗಾಗಿಯೇ ಆತ ಜಯಶ್ರೀದೇವಿಯವರ ಕಂಪನೀಲಿ ಆಸ್ಥಾನ ಕವಿಯಾಗಿರುವುದು. ನನ್ನ ಜತೆ ಕೆಲವು ಬೀದಿನಾಟಕದಲ್ಲಿ ಭಾಗವಹಿಸಿದ ಮಗು ಅವನು. ಆಮೇಲೆ ತರಂಗದ ವಿದ್ಯಾರ್ಥಿಗಳನ್ನು ಕ್ಲಾಸ್‌ಗೆ ಚಕ್ಕರ್‍ ಹಾಕಿಸಿ ರೇಡಿಯೋ ನಾಟಕ-ಗೀಟಕ ಅಂತ ಕರ್‍ಕೊಂಡು ಹೋದವನು. ತರಂಗದಲ್ಲಿದ್ದಾಗ್ಲೇ ಚಿಕ್ಕ-ಪುಟ್ಟ ಪತ್ರಿಕೆಗಳಲ್ಲಿ ವಿಮರ್ಶೆಗಳು ಬರೀತೀನೀಂತ ಸಿನಿಮಾ ಛಾನ್ಸ್‌ಗೆ ಕೈ ಒಡ್ಡುತ್ತಿದ್ದವ್ನು. ಬೀದಿನಾಟಕದ ಬಗ್ಗೆ ಅವನು ಹೇಳಿದ್ದು ಇರ್‍ರೆಲವೆಂಟ್” ಎಂದೆ.

“ಆತ ಹೇಳಿದ ಮತ್ತೆ”

“ಇನ್ನೊಂದು ಸಲ ಸಿಕ್ಕಾಗ ಕೇಳಿ? ಯಾವ ಬೀದಿನಾಟಕ ಆಡಿದಾನೆ ಆಡಿಸಿದಾನೆ ಈಚೆಗೆ ಅಂತ”. ಅವನ ಗೆಳೆಯ ಒಬ್ಬ ಇವತ್ತೂ ಬೀದಿನಾಟಕ ಮಾಡ್ತಾನೆ, ಕೃಷ್ಣಮೂರ್ತಿ ಅಂತ. ಅದ್ಭುತವಾದ ಟೈಮಿಂಗ್ಸ್ ಇರೋ ನಟ. ವಾಯ್ಸ್ ರೇಂಜ್ ಅನ್ನೋದು ಆತನಿಂದ ಕಲೀಬೇಕು. ಮುಂಚೆ ಬೀದಿಲಿ ತರಕಾರಿ ಮಾರ್‍ತಿದ್ದ ವ್ಯಕ್ತಿ ಆತ. ‘ಮಿಸ್ ಸೇವಂತಿ’ ‘ಅಗ್ನಿ ಮತ್ತು ಮಳೆ’ಲಿ ಅದ್ಭುತವಾಗಿ ಅಭಿನಯಿಸಿದವ. ನಿರ್ದೇಶಕ ಬಸವಲಿಂಗಯ್ಯ, ಪ್ರಮೋದ್ ಶಿಗ್ಗಾಂವ್ ಯಾವುದೆ ನಾಟಕ ಮಾಡಲಿ ಆ ‘ಕಿಟ್ಟಿ’ ಬೇಕು ಅಂತಾರೆ”.

“ನಂಗೊತ್ತಿರಲಿಲ್ಲ ಮೂರ್ತಿಗಳೇ-ಆ ಕಿಟ್ಟೀನ ನನ್ನ ಹತ್ರ ಕಳಿಸಿ. ಮುಂದಿನ ತಿಂಗಳು ಒಂದು ಚಿತ್ರ ಮಾಡ್ತಿದೀನಿ. ಅದರಲ್ಲಿ ಮುಖ್ಯ ಪಾತ್ರ ಕೊಡ್ತೀನಿ. ನಂಗೆ ಗೊತ್ತಿರಲಿಲ್ಲ ಯಾವ್ಯಾವ ಪ್ರತಿಭೆ ಎಲ್ಲೆಲ್ಲಿ ಇರುತ್ತೆ” ಅಂತ ತಮ್ಮ ಸ್ಪಷ್ಟ ಅನಿಸಿಕೆ ಬಿಚ್ಚಿಟ್ಟರು.

“ಜಗ್ಗೇಶ್, ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಬಂದಿರುವವರು ಬಹಳ ಜನ. ಟೀವಿ, ಸಿನಿಮಾಗೆ ವಾಲಿದವರು ನಾಟಕ ಮರೀತಿದಾರೆ ಅನ್ನೋ ಆಪಾದನೆ ನಿರಂತರವಾಗಿದೆ. ಅಂಥ ವೇಳೇಲಿ ತಾವು ಬೀದಿನಾಟಕ ಮಾಡದೆ ಇದ್ರೂ ಚಿಂತೆಯಿಲ್ಲ-ಬೀದಿ ಚಳವಳಿಗೆ ಮಾರಕವಾಗೋ ಹಾಗೆ ಅಭಿಪ್ರಾಯ ರೂಪಿಸುವ ಯತ್ನ ಬೇಡ. ಹಾಗೆ ಮಾಡುವವರನ್ನು “ಯಾಂಟಿ ಥಿಯೇಟರ್‌”ನವರು ಅನ್ನಬೇಕಾಗುತ್ತೆ.

“ಸಿನಿಮಾ ಬೇರೆ-ನಾಟಕ ಬೇರೆ. ಆದ್ರೆ ಬೀದೀಲಿ ಯಾವುದೋ ಕೆಲಸಕ್ಕೆ ಹೊರಟಿರೋ ಜನಗಳನ್ನು ೧/೨ ಘಂಟೆ, ೩/೪ ಘಂಟೆ ನಾಟಕ ನೋಡೋಕೆ ಹಿಡಿದಿಟ್ಕೊಳ್ಳೋದು ಒಂದು ಛಾಲೆಂಜ್. ಯಾವ ಗಿಮಿಕ್ಸೂ ಇಲ್ಲದೆ ಜನಮನವನ್ನ ಗೆಲ್ಲೋದು ಸಾಮಾನ್ಯವಲ್ಲ ಅಂತ ನಾನೂ ಒಪ್ತೀನಿ.”

“ಸಿ.ಜಿ.ಕೆ ‘ಬೆಲ್ಜಿ’ ಅಂಥ ಬೀದಿ ನಾಟಕ ಬರೆದು ನಿರ್ದೇಶಿಸಿದ್ದರು. ‘ಅಲ್ಲೇ ಇದ್ದವರು’ ಹಾರ್‍ಸ್ ಷೂಷೇಪ್‌ನಲ್ಲಿ ಆಡಿದಾಗ ಶಶಿಧರ್‍ ಅಡಪ ಸಜಸ್ಟೀವ್ ಸೆಟ್ಸ್ ಮಾಡಿದ್ದರು ಅಂಥೋವನ್ನೂ ನೀವು ಯಾವಾಗ್ಲಾರೂ ನೋಡಬೇಕು ಜಗ್ಗೇಶ್”

“ಖಂಡಿತಾ ಬೀದಿನಾಟಕವಿದ್ದಾಗ ಹೇಳಿ. ನಾನೂ ಬಂದು ನೋಡ್ತೀನಿ”.

“ಗ್ರಾಮಾಂತರ ಪ್ರದೇಶದಲ್ಲಿ ಇವತ್ತೂ ಬೀದಿ ನಾಟಕವಿದೆ ಅಂತ ತಮಟೆ ಹೊಡೆದ ತಕ್ಷಣ ನೂರಾರು ಜನ ಸೇರ್‍ತಾರೆ. ಟೀವಿ, ಸಿನಿಮಾದಲ್ಲಿ ಹೆಣ್ಣು ಮಕ್ಕಳು ಅಭಿನಯಿಸಿದರೆ ಹಣ, ಹೆಸರು, ಪ್ರಚಾರ ಎಲ್ಲ ಬರತ್ತೆ. ಬೀದಿನಾಟಕಗಳ್ಲಿ ಮಾಡಿದರೆ ಏನು ಬರುತ್ತೆ? ಆದ್ರೂ ಅಭಿನಯಿಸ್ತಾರೆ ಅಂದ್ರೆ ನಾಟಕ ಬಗ್ಗೆ-ಅಭಿನಯದ ಬಗ್ಗೆ ಅವರಿಗೆ ಒಲವಿದೆ ಅಂತ ಲೆಕ್ಕ” ಅಂದೆ.

ಪರಾಕು ಪಂಪು ಪ್ರವೀಣನ ಮಾತು ನಂಬಿ ಆದ ಪ್ರಮಾದಕ್ಕೆ ಜಗ್ಗೇಶ್ ಅವರ ಮೊಗದಲ್ಲಿ ಪಶ್ಚಾತ್ತಾಪವಿತ್ತು.

ಆನಂತರ ಜೇಡ್ ಗಾರ್ಡನ್ನಿನಲ್ಲಿರುವ ಓಪನ್ ಏರ್‍ ಥಿಯೇಟರ್‍ ನೋಡಹೋದೆವು. ಎಲ್ಲ. ನಮ್ಮ ಸಂಸ ರಂಗಮಂದಿರವನ್ನೂ ಮೀರಿಸುವಂತಿರುವ ಓಪನ್ ಏರ್‍ ಥಿಯೇಟರ್‍ ಅದು. ಆ ಇಂಟಿಮೇಟ್ ಥಿಯೇಟರ್‌ನಲ್ಲಿ ಒಂದು ಮೇಜರ್‍ ನಟಕವಾಡಬೇಕೆಂಬ ಮನಸಾದುದು ನಿಜ.
*****
(೫-೧೦-೨೦೦೧)