ಚಿತ್ರ ನಿರ್ದೇಶಕರು ಮತ್ತು ಪ್ರಶಸ್ತಿಗಳು

ಮಿಸ್ಟರ್‍ ಎಂಕಣ್ಣ ಇದ್ದಕ್ಕಿದ್ದಂತೆ ಮೊನ್ನೆ ನಮ್ಮ ಮನೆಗೆ ಓಡೋಡಿ ಬಂದ. ಚಲನಚಿತ್ರ ನಿರ್ದೇಶಕರ ಸಂಘದ ೧೬ನೇ ವಾರ್ಷಿಕೋತ್ಸವದ ಆಹ್ವಾನ ಅವನ ಕೈಲಿತ್ತು.

ಆ ಆಹ್ವಾನ ಪತ್ರಿಕೆ ನನಗೂ ಬಂದಿದೆ. ೨೪ ಮಂದಿಗೆ ಪ್ರಶಸ್ತಿ ನೀಡುತ್ತಿದ್ದಾರೆ. ಸಹಸ್ರಮಾನದ ನಟ ಎಂದು ಡಾ.ರಾಜ್ ಅವರಿಗೂ, ಶತಮಾನದ ನಿರ್ಮಾಪಕಿ ಎಂದು ಪಾರ್ವತಮ್ಮ ರಾಜ್‌ಕುಮಾರ್‍ ಅವರಿಗೂ ರಜತ ಫಲಕ ಪ್ರಶಸ್ತಿ ನೀಡ್ತಿದಾರೆ. ಹೊಸ ಪ್ರತಿಭೆಗಳನ್ನ-ಅರ್ಹ ಪ್ರಾಜ್ಞರನ್ನ ಗುರುತಿಸಿ ಗೌರವಿಸ್ತಿರೋದು ಸಂತೋಷವಲ್ಲವೆ?” ಎಂದೆ.

“ಅದು ಸಂತೋಷವೆ. ಆದರೆ ಲೆಟರ್‌ಹೆಡ್‌ನಲ್ಲಿ ಎಸ್.ವಿ.ರಾಜೇಂದ್ರಸಿಂಗ್‌ಬಾಬು ಅವರೇ ಪ್ರೆಸಿಡೆಂಟ್ ಅಂತ ಇದೆ. ಭಾರತ್ ೨೦೦೦ ಹಗರಣದ ನಂತರ ಅವರು ರಾಜೀನಾಮೆ ನೀಡಿದರಲ್ಲವೆ?”

“ಯಾರು ಇರ್‍ಲಿ ಬಿಡ್ಲಿ-ಒಂದು ಒಳ್ಳೆ ಕೆಲಸ ಆಗ್ತಿದೆ ಅಂತ ಸಂತೋಷಪಡು ಎಂಕಣ್ಣ” ಅಂದೆ.

ತಕ್ಷಣ ಜೇಬಿನಿಂದ ಒಂದು ಕಾಗದ ತೆಗೆದು ನನ್ನ ಕೈಗಿತ್ತ ಎಂಕಣ್ಣ ‘ನನ್ನ ಗೆಳೆಯನಿಗಂತೂ ಇದರಿಂದ ಪರಮ ಸಂತೋಷವಾಗಿದೆ. ಛತ್ರಿ ಚಾಮಣ್ಣ ಅಂತ ಅವನ ಹೆಸರು. ಮಳೆ, ಬಿಸಿಲನ್ನೆಂದೂ ಲೆಕ್ಕಿಸುವವನಲ್ಲ ಅವನು. ಸದಾ ಅವನ ಕಂಕಳಲ್ಲಿ ಒಂದು ಛತ್ರಿ ಇರುತ್ತೆ. ಅದರಿಂದ ಅವನ್ನ ನಾವು ಛತ್ರಿ ಚಾಮಣ್ಣ ಅಂತೀವಿ. ವ್ಯವಹಾರದಲ್ಲಿ ಅವನು ಸಖತ್ ಛತ್ರಿಯೂ ಹೌದು. ಓದಿ ನೋಡು ಅವನ ಸಂತೋಷಕ್ಕೆ ಕಾರಣ’ ಎಂದ.

ಕಾಗದ ಜೋರಾಗೇ ಓದ ತೊಡಗಿದೆ ನಾನು.

ಪ್ರಿಯ ವೆಂಕಣ್ಣನವರೆ, ನಿರ್ದೇಶಕರ ಸಂಘದ ಸದಸ್ಯನಾಗಲೇಬೇಕೆಂದು ನಿರ್ಧರಿಸಿದೆ. ಏಕೆಂದರೆ ನನ್ನ ಪರಮಪೂಜ್ಯ ಗುರುಗಳಾದ ಪುಟ್ಟಣ್ಣನವರು ಕನಸಿದ ಸಂಘ ಅದು. ಈಗ ಅವರನ್ನು ಎಲ್ಲ ಹಾಡಿ ಹೊಗಳುತ್ತಾರೆ. ಆದರೆ ಇದ್ದಾಗ ಎಷ್ಟು ಗೌರವ ತೋರಿದ್ದೇವೆ ನಾವು. ‘ಚಿತ್ರಾ’ದವರು ಮೊದಲ ಬಾರಿಗೆ ‘ಪಡುವಾರಹಳ್ಳಿ ಪಾಮಡವರು’ಗೆ ವಿಚಾರ ಸಂಕಿರಣ ಏರ್ಪಡಿಸದಿದ್ದಲ್ಲಿ ಎಲ್ಲ ವಿಚಾರ ಸಂಕಿರಣಗಳು ಕಲಾತ್ಮಕ ಚಿತ್ರಗಳ ಗುತ್ತಿಗೆಯೇ ಆಗುತ್ತಿತ್ತು.

ಅಂದಿನಿಂದ ನಾನವರನ್ನು ಬಲ್ಲೆ. ನಾನೆಂದೂ ಸುಳ್ಳು ಹೇಳುವವನಲ್ಲ. ಕಣಗಾಲರು ಬಿಸಿಲಲ್ಲಿ ನಿಂತಾಗ ಇದೇ ಛತ್ರಿಯಿಂದ ಅವರಿಗೆ ನೆರಳು ಒದಗಿಸಿದವನು ನಾನು. ಬಾಯಾರಿಕೆ ಎಂದಾಗ ಫಾಂಟಾ-ನೀರು-ಎಳೆನೀರು ಸಪ್ಲೈ ಮಾಡಿದ ಕೈ ಇದು. ಪುಟ್ಟಣ್ಣನವರ ಪ್ರೇಯಸಿ ಕೈ ಕೊಟ್ಟಾಗ ಕಣಗಾಲರು ‘ಹೆಡ್ಡನ ಹಟ್ಟಿ’ಯಲ್ಲಿ ನೊಂದು ಕುಳಿತರು. ಆಗ ಅವರ ಮನಕ್ಕೆ ಸಾಂತ್ವನ ನೀಡಿದವನು ನಾನು. ಆಗಲೇ ಅವರು ನನ್ನಿಂದ ಮತ್ತೆ ಮತ್ತೆ ‘ನಾನೇ ಸಾಕಿದಾಗಿಣಿ’ ಹಾಡಿಸುತ್ತಿದ್ದುದು. ಹಾಡು ಕೇಳುತ್ತ ಭಾವುಕರಾಗಿ ಕಣೀರ ಕೋಡಿ ಹರಿಸಿದಾಗ ಕರ್ಛೀಪ್ ನೀಡುತ್ತಿದ್ದವನು ನಾನೇ.

ಮುಂಚಿನಿಂದಲೂ ಅಷ್ಟೆ. ಸೆಟ್ ಮೇಲೆ ನನ್ನನ್ನವರು ಕರೆಯುತ್ತಿರಲಿಲ್ಲ. ಆದರೂ ನಾನು ಮಾತ್ರ ಏಕಲವ್ಯನಂತೆ ದೂರ ನಿಂತೇ ಅವರ ಮಾತಿನ ರೀತಿ, ನೀತಿ, ಚಿತ್ರೀಕರಣದ ಧಾಟಿ ಎಲ್ಲ ಅಭ್ಯಾಸ ಮಾಡಿದೆ.

ಕಲ್ಪನಾ ನಂತರ ಕಣಗಾಲರ ಕಣ್ಣು ಆರತಿಯತ್ತ ಹೊರಳಿದಾಗ ಹೇಗೆ ಆ ಕಗ್ಗಲ್ಲನ್ನು ಸುಂದರಶಿಲ್ಪ ಮಾಡಿದರು ಎಂಬುದನ್ನು ನಾನು ಬಲ್ಲೆ. ಪದ್ಮಾವಾಸಂತಿಯನ್ನು ಪರಿಚಯಿಸಿದ ರೀತಿ, ಆಕೆಯನ್ನು ಕಲಾವಿದೆಯಾಗಿ ರೂಪಿಸಲು ವಹಿಸಿದ ಶ್ರಮ ನಾನು ಕಣ್ಣಾರೆ ಕಂಡವ, ವಿಷ್ಣು, ಅಂಬರೀಷ್, ಶ್ರೀಧರ್‍, ಜೈ ಜಗದೀಶ್ ಇವರೆಲ್ಲ ಕಣಗಾಲರ ಕೈಲಿ ಕಲಾವಿದರಾಗುವ ಹಂತದಲ್ಲಿ ಏನೇನು ಬೈಸಿಕೊಂಡರು ಎಂಬ ಬೈಗುಳದ ಪಟ್ಟಿ ನನ್ನ ಪರ್ಸನಲ್ ಡೈರಿಯಲ್ಲಿದೆ. ಕಲ್ಲು ಹೂವಾಗಿ ಅರಳಬೇಕೆಂದರೆ ಕಣಗಾಲ್ ಪುಟ್ಟಣ್ಣನವರಿರಬೇಕು ಎಂಬ ದಿನ ಬಂದಾಗಲೇ ನಿರ್ದೇಶಕರಿಗೂ ಸ್ಟಾರ್‍ ವ್ಯಾಲ್ಯೂ ಬಂದದ್ದು.

ಅದರಿಂದ ನಾನು ಈಗ ಒಂದು ಚಿತ್ರ ನಿರ್ದೇಶಿಸಲೇಬೇಕೆಂದು ಹಠ ತೊಟ್ಟಿರುವೆ. ಚಿತ್ರದ ಮೂಲಕ ಮಹತ್ತರವಾದುದನ್ನು ಹೇಳಲೇಬೇಕೆಂಬ ಆಶಯವೇನಿಲ್ಲ. ಆದರೆ ಮುಂದಿನ ಬಾರಿ ನಾನೊಂದು ಪ್ರಶಸ್ತಿ ಗಳಿಸಲೇಬೇಕು. ಅದು ಕಷ್ಟವೇನಲ್ಲ ಎಂಬುದನ್ನು ನಿರ್ದೇಶಕರ ಸಂಘದ ಪ್ರಶಸ್ತಿಗಳನ್ನು ನೋಡಿ ಮನಗಂಡೆ.

ಈ ಸಂಸ್ಥೆ ಪ್ರಕಾರ ಚಿತ್ರ ಫ್ಲಾಪ್ ಆದರೂ ಚಿಂತೆಯಿಲ್ಲ. ಸದಭಿರುಚಿ ಚಿತ್ರವಾದರೆ ಅದಕ್ಕೊಂದು ಪ್ರಶಸ್ತಿ ಇದೆ. ಬರವಣಿಗೆಯಲ್ಲಿ ಮಾಸ್ಟರ್‍ ಎನಿಸಿದ ನನಗೆ ಚಿತ್ರ ಕಥಾ ರಚನೆ ಲೀಲಾಜಾಲ. ಸ್ವಲ್ಪ ಗುಡ್ ಎನ್ನುವಂತಿದ್ದರೂ ಅದಕ್ಕೊಂದು ಪ್ರಶಸ್ತಿ ಇಟ್ಟಿದ್ದಾರೆ. ಮೊದಲ ಚಿತ್ರ ನಿರ್ದೇಶಕರಿಗೊಂದು ಪ್ರಶಸ್ತಿ ಇರುವುದರಿಂದ ನನ್ನ ಕನಸು ನನಸಾಗುವುದು ಕಷ್ಟವಲ್ಲ. ತಾಯಿ ಪಾತ್ರವೇ ಹೈಲೈಟಾಗುವಂತಿದ್ದರೆ ಅದಕ್ಕೊಂದು ಪ್ರಶಸ್ತಿ ಕೊಡುತ್ತಾರೆ. ಅಂಥ ಕತೆಗಳು ನನ್ನತಲೆ ತುಂಬ ತುಂಬಿ ತುಳುಕಿವೆ. ತೀರಾ ಹೊಸಬನಾದರೆ ತಗೊಳ್ಳಿ ಎಂದು ಅವರಿಗೊಂದು ಪ್ರಶಸ್ತಿ ಎಂದ ಮೇಲೆ ನನಗಲ್ಲದೆ ಇನ್ನಾರಿಗೆ ಬಂದೀತು ಪ್ರಶಸ್ತಿ?

ವೆಂಕಣ್ಣನವರೇ, ನಾನು ರಾಜಕೀಯ ರಂಗದಲ್ಲೂ ಹೆಚ್ಚು ಪಳಗಿದವನಾದುದರಿಂದ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಏನೇನು ಮಾಡಬೇಕು ಎಂಬುದನ್ನು ತುಂಬ ಚೆನ್ನಾಗಿ ಬಲ್ಲೆ.

ನಿರ್ದೇಶಕರ ಸಂಘದ ಮೆಂಬರ್‌ಷಿಪ್ ಸಿಗುವುದು ಕಷ್ಟವೆನಿಸಿದರೂ ನಾನೇನೂ ಚಿಂತಿಸುವುದಿಲ್ಲ. ಮೊದಲ ಚಿತ್ರ ಚೆನ್ನಾಗಿ ನಿರ್ದೇಶನ ಮಾಡಿದವರಿಗೆ ಅರವಿಂದನ್ ಅವಾರ್ಡ್ ಇದ್ದೇ ಇದೆಯಲ್ಲವೆ? ತಾಂತ್ರಿಕ ತಜ್ಞರನ್ನು ನನ್ನೊಂದಿಗೆ ಹಾಕಿಕೊಂಡರೆ ನನ್ನ ಕೆಲಸವೂ ಹಗುರ. ಅವಾರ್ಡೂ ಗ್ಯಾರಂಟಿ. ಪರಿಸರ, ರಾಷ್ಟ್ರೀಯ ಭಾವೈಕ್ಯತೆ, ಏಡ್ಸ್ ಕುರಿತು ಚಿತ್ರ ಮಾಡಿದರೆ ಕೇಂದ್ರ ಸರ್ಕಾರದ ಪ್ರಾದೇಶಿಕ ಪ್ರಶಸ್ತಿಗೇನೂ ಮೋಸವಿಲ್ಲ.

ಇದೆಲ್ಲಾ ಒಂದು ಪಕ್ಕಕ್ಕಿಟ್ಟು – ಒಂದು ಮಕ್ಕಳ ಚಿತ್ರ ಮಾಡಿದರೆ ಮುಗೀತು. ಪ್ರೊ. ಬಿಕೆಸಿ ಮಕ್ಕಳ ಚಿತ್ರಗಳಿಗೆ ವಿಶೇಷ ಅವಾರ್ಡ್ ಇರುತ್ತೆ ಅಂದಿದ್ದಾರೆ.

ವಿಷ್ಣುವರ್ಧನ್ ಅವರು ತಮಗೆ ಬಂದ ಪ್ರಶಸ್ತಿ ನಿರ್ದೇಶಕರಿಗೆ ಹೋಗಬೇಕು ಎಂದವರಲ್ಲವೆ? ಆದರಿಂದ ಈ ಬಾರಿ ಅವರ ಕೈಕಾಲ್ ಹಿಡಿದೇ ಕಾಲ್‌ಷೀಟ್ ಗಿಟ್ಟಿಸುವೆ. ಎಷ್ಟಾಗಲೀ ಅವರೂ ಕಣಗಾಲ್ ಗರಡಿ ವಸ್ತಾದಿಗಳಲ್ಲವೆ? ಅವರು ಕಾಲ್‌ಷೀಟ್ ಕೊಟ್ಟರೆ ಅವರ ಇಮೇಜ್ ಹಿಮಾಲಯದೆತ್ತರಕ್ಕೆ ಬೆಳೆಯುತ್ತೆ. ನಿರ್ದೇಶಕ ಅವಾರ್ಡ್ ನಂಗೇ ಬರುತ್ತೆ. ಅಕಸ್ಮಾತ್ ಬರದಿದ್ದರೆ ನಿಮಗೆ ಬಂದ ಶ್ರೇಷ್ಠನಟ ಪ್ರಶಸ್ತಿ ನಂಗೇ ಕೊಡಿ ಓಪನ್ ಸ್ಟೇಜನಲ್ಲಿ. ನಾನು ನಿಮ್ಮ ಕಾಲಿಗೆ ಬಿದ್ದು ಸ್ವೀಕರಿಸ್ತೀನಿ ಅಂತೀನಿ. ಅಂದ್ಮೇಲೆ ಅವಾರ್ಡ್ ಬರೋದು ಡಬ್ಬಲ್ ಗ್ಯಾರಂಟಿ ಆಯಿತಲ್ವೆ? ದಯಮಾಡಿ ನನ್ನ ಬಗ್ಗೆ ಸಿಕ್ಕಸಿಕ್ಕವರೆದುರು ಎರಡು ಒಳ್ಳೆ ಮಾತಾಡಿ. ನಿಮ್ಮಿಂದ ನಾನು ಬಯಸುವುದು ಇಷ್ಟು ಮಾತ್ರ.

ತಮ್ಮವ
ಛತ್ರಿ ಚಾಮಣ್ಣ

ಎಂದು ಓದಿ ಮುಗಿಸಿದಾಗ ನಾನು ಸುಸ್ತು. ಮಿ. ಎಂಕಣ್ಣ ಕಾಗದ ಜೇಬಿಗೆ ಸೇರಿಸುತ್ತ ಒಂದು ಆಹ್ವಾನ ಪತ್ರಿಕೆ ನೋಡೇ ಇಷ್ಟು ಕನಸು ಕಟ್ತಿದಾನಲ್ಲ ಚಾಮಣ್ಣ ಇಂಥವರೇ ಜಾಸ್ತಿ ಆದರೆ ಚಿತ್ರರಂಗದ ಗತಿ ಏನು?” ಎಂದು ಗೊಣಗುತ್ತಲೇ ತೆರಳಿದ.
(೫-೫-೨೦೦೦)
***

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.