ಹೂಬೇಲಿ

ಎಂದಿನಂತೆಯೆ ದಿನದ ದಾರಿಯಲಿ ಸಾಗುತಿರೆ

ಅನಿರೀಕ್ಷಿತಂ ಬಳ್ಳಿ ಗೊಂಚಲವು ಕೈಚಾಚಿ
ಬಣ್ಣ ಬಣ್ಣದ ಹೂಗಳನುರಾಗದಲಿ ನಾಚಿ

ಗಾಳಿ ಸುಳಿಯಲಿ ಬಂದು ಕಿವಿಮಾತನುಸುರುತಿರೆ
ನಿಂತು ಬಿಡುವೆನು ನಾನು. ಈ ಪರಿಯ ಸೊಬಗಿನಲಿ

ಅರಸದಿದ್ದರು ಕಾಲ ತೊಡಕುವೀ ಹೂಬೇಲಿ
ಯಾವ ಜನುಮದ ನೇಹ ನಲುಮೆಯಾವೇಶದಲಿ

ಎದೆಯನೊಪ್ಪಿಸಲಿತ್ತೊ! ಮುಳ್ಳು ಮಂಚದೊಳಲ್ಲಿ
ನವುರು ಹೂಹಾಸಿಗೆಯಲೊರಗಿ ಪಾತರಗಿತ್ತಿ

ಚಂಚಲತ ಚೈತನ್ಯವಡೆದಂತೆಹಾರುತಿದೆ!
ಜೇಡಹುಳು ತಂತು ತಂತುವನೇರಿ ಇಳಿಯುತಿದೆ-

ಇಂತೆಲ್ಲವನು ನನ್ನ ದೃಷ್ಟಿಪಥದಲಿ ಬಿತ್ತಿ

ಸೊಂಪೇರಿ ಬೆಳೆದು ನಿಂತಿಹುದಿದೋ ಹೂಬೇಲಿ
ಹಾದಿಹೋಕರು ನಸುವೆ ನೋಡಬಹುದೇ ಹೊರಳಿ?
*****