‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂದರೆ ಟೈಗರ್‍ ಪ್ರಭಾಕರ್‍

ಬಹಳಷ್ಟು ಮಂದಿಯ ‘ಟೀಕಾಸ್ತ್ರ’ಕ್ಕೆ ಬದುಕಿನುದ್ದಕ್ಕೂ ಗುರಿಯಾಗಿದ್ದ ವ್ಯಕ್ತಿ ಟೈಗರ್‍ ಪ್ರಭಾಕರ್‍-ತಪ್ಪೋ ಸರಿಯೋ ತನಗನ್ನಿಸಿದ್ದನ್ನು ರಾಜಾರೋಷವಾಗಿ ಅಬ್ಬರಿಸಿ ಹೇಳುತ್ತ ಬಂದಿದ್ದ ನಟ ಪ್ರಭಾಕರ್‍ ಅವರಲ್ಲಿ ‘ಗುಡ್-ಬ್ಯಾಡ್-ಅಗ್ಲಿ’ಯ ಎಲ್ಲ ಗುಣಗಳೂ ರಾರಾಜಿಸಿದ್ದವು.

ಅದೊಂದು ರೀತಿಯ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂದರೂ ತಪ್ಪಲ್ಲ.

ನಾನವರನ್ನು ಮೊದಲು ಕಂಡದ್ದು ಒಬ್ಬ ಎಕ್ಸ್‌ಟ್ರಾ ನಟನಾಗಿ. ಆನಂತರ ಪೋಷಕನಟನ ಪಾತ್ರಕ್ಕೆ ಪ್ರಮೋಷನ್. ನಂತರ ಸ್ಟಂಟ್ ಕಲಾವಿದರಾಗಿ ಎಲ್ಲರ ಗಮನ ಸೆಳೆದರು. ಅವರ ಮಾತು ಒಂದು ರೀತಿ ಹುಲಿಯ ಗರ್ಜನೆಯೇ. ಎಲ್ಲ ಕಲಾವಿದರಿಗೂ ಒಂದೊಂದು ಟೈಟ್ಲ್ ಜನರೇ ನೀಡುತ್ತ ಬಂದಿದ್ದಾರೆ. ಹಲವೊಮ್ಮೆ ಜನರಿಂದ ಬಿರುದು ಬಾವಲಿ ಬರುವುದು ತಡವಾದೀತೆಂದು ತಾವೇ ಹೆಸರಿನ ಹಿಂದೆ ಬಿರುದು ಅಂಟಿಸಿಕೊಂಡ ನಾಯಕ ಶಿಖಾಮಣಿಗಳೂ ನಮ್ಮಲ್ಲಿದ್ದಾರೆ.

ಆದರೆ ಪ್ರಭಾಕರ್‍ ಆಳು-ಆಕಾರ ಮಾತಿನ ಗತ್ತುಗಾರಿಕೆ ನೋಡಿಯೇ ಜನ ‘ಟೈಗರ್‍ ಪ್ರಭಾಕರ್‍’ ಎಂಬ ಬಿರುದು ದಯಪಾಲಿಸಿದರು.

ಪರಿಚಯವಾದ ದಿನದಿಂದ ಇಂದಿನವರೆಗೆ ತಾವೆಷ್ಟೇ ಎತ್ತರ ಬೆಳೆದರೂ ಅದೇ ಆತ್ಮೀಯತೆಯಿಂದ ಮಾತುಕತೆಯಾಡುತ್ತಿದ್ದುದು ಅವರ ವಿಶೇಷ.

ಜಯಮಾಲಾ ಅವರನ್ನು ಮದುವೆಯಾದಾಗಿನ ಅವರ ಖುಷಿ ಹೇಳತೀರದು. ‘ಚೆಂದುಳ್ಳಿ ಚೆಲುವೆ’ ನಾಟಕ ಕ್ಯಾಸೆಟ್‌ಗೆ ರೂಪಾಂತರಿಸಿ ‘ಹೆಣ್ಣು-ಕಣ್ಣು’ ಎಂದು ಹೆಸರಿಸಿದಾಗ ಜಯಮಾಲಾ ಅದರ ನಾಯಕಿ. ಆ ಕ್ಯಾಸೆಟ್‌ನಲ್ಲೇ ಜಯಮಾಲಾ ಮೊದಲಿಗೆ ಹಾಡಿದ್ದೂ ಸಹ. ಅದನ್ನು ಕೇಳಿ ಸಂಭ್ರಮಗೊಂಡ ಪ್ರಭಾಕರ್‍ ಖಂಡಿತಾ ಕ್ಯಾಸೆಟ್ ಬಿಡುಗಡೆಗೆ ಬಂದೇ ಬರುವೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಎಂದಿದ್ದರು. ಅನಿರೀಕ್ಷಿತವಾಗಿ ಷೂಟಿಂಗ್ ಬಿದ್ದುದರಿಂದ ಬರಲಾಗದೆ ಕ್ಯಾಸೆಟ್ ಕುರಿತ ಸೊಗಸಾದ ‘ಮೆಚ್ಚುಗೆ ಪತ್ರ’ ಜಯಮಾಲಾ ಅವರ ಮೂಲಕವೇ ಕಳಿಸಿದ್ದರು.

ಪ್ರಭಾಕರ್‍-ಜಯಮಾಲಾ ನಿರ್ಮಿಸಿದ ‘ಮಹೇಂದ್ರ ವರ್ಮ’ ಚಿತ್ರಕ್ಕಾಗಿ ಬಾಲಕಲಾವಿದೆಯೊಬ್ಬಳು ಬೇಕು ಎಂದರು ಪ್ರಭಾಕರ್‍. ಆ ಮಗುವನ್ನು ಆಯ್ಕೆ ಮಾಡಲು ಬಿಂಬಕ್ಕೆ ಬಂದವರು ಜಯಮಾಲಾ. ಅವರು ಆರಿಸಿದ ಪುಟಾಣಿ ದೀಪು. ಇಂದವಳು ಈ ಟಿ.ವಿ. ಪುಟಾಣಿ ಡಾಟ್‌ಕಾಮ್‌ನ ನಿರೂಪಕಿ. ಹಾಗೆ ನೋಡಿದರೆ ಬಹಳಷ್ಟು ಚಾನೆಲ್‌ಗಳಿರುವುದರಿಂದ ನಿರೂಪಕಿಯರು ಹೆಚ್ಚಿದ್ದಾರೆ. ಆದರೆ ಅತ್ಯಂತ ಕಿರಿವಯಸ್ಸಿನ ಚಾಲೋಕಿನ ನಿರೂಪಕಿ ಎಂದರೆ ದೀಪು ಮಾತ್ರ. ಅದರಿಂದಲೇ ಸೋನಿ ಟೀವಿಯಲ್ಲಿ ಅಭಿನಯಿಸಲೂ ಅವಳಿಗೀಗ ಕರೆ ಬಂದಿದೆ.

ಮತ್ತೊಂದು ಸಂದರ್ಭದಲ್ಲಿ ಪ್ರಭಾಕರ್‌ನ ನಾನು ಕಾಣಲು ಹೋದಾಗ ನನ್ನೊಂದಿಗೆ ದೀಪು ಸಹಾ ಬಂದಿದ್ದಳು. ಆ ಹೊತ್ತಿಗೆ ಜಯಮಾಲಾ ಅವರಿಂದ ಬೇರೆಯಾಗಿ ಕ್ಯಾಮರಾಮನ್ ರಾಮಚಂದ್ರ ಅವರ ಕೈಹಿಡಿದಾಗಿತ್ತು. ದೀಪೂನ ನೋಡಿ ಅಂದು ಪ್ರಭಾಕರ್‍ ಹೇಳಿದರು.

‘ಅರೆ! ನಮ್ಮ ಚಿತ್ರದಲ್ಲಿ ಮಾಡಿದ್ದ ಪುಟಾಣಿ ಈಗೆಷ್ಟು ಎತ್ತರ ಬೆಳೆದಿದ್ದಾಳೆ. ವಾರೆವಾ! ಎಂದು ಹೇಳುತ್ತ, ಹಾಗೆ ನಿಲ್ಲು, ಹೀಗೆ ನಿಲ್ಲು ಎಂದು ನಿಲ್ಲಿಸಿ ಕ್ಯಾಮರಾಮನ್ ದೃಷ್ಟಿಕೋನದಲ್ಲಿ ವೀಕ್ಷಿಸಿ ‘ಮೂರ್ತಿ ಸರ್‍, ದೀಪುದು ಫೆಂಟಾಸ್ಟಿಕ್ ಫಿಗರ್‍, ಕನ್ನಡದ ಶ್ರೀದೇವಿ ಆಗ್ತಾಳಿವಳು ಎನ್ನುವುದರಲ್ಲಿ ಅನುಮಾನವೇ ಇಲ್ಲ’ ಎಂದರು.

‘ನೀವು ಅವಳ ಜತೆಯೂ ಹೀರೋ ಪಾತ್ರ ಮಾಡುವ ಉತ್ಸಾಹದಲ್ಲಿದ್ದ ಹಾಗಿದೆ’ ಎಂದು ತಮಾಷೆ ಮಾಡಿದೆ.

ಜೀವನದಲ್ಲಿ ತುಂಬಾ ನೊಂದಿದ್ದರಿಂದಲೋ ಏನೋ ಅವರಿಗೆ ಹಾಸ್ಯ ತಮಾಷೆ, ವಿಡಂಬನೆ ತುಂಬ ಪ್ರಿಯವೆನ್ನಿಸುತ್ತಿತ್ತು.

ಅವರಲ್ಲಿದ್ದ ಒಂದೇ ದೋಷವೆಂದರೆ ಹೆಣ್ಣನ್ನು ಬಟ್ಟೆ ಬದಲಿಸಿದಂತೆ ಬದಲಿಸುತ್ತಿದ್ದುದು. ನಟರಾಗಿ ನಾಯಕನಾಗಿ ಖಳನಾಯಕನಾಗಿ ಹೀರೋ ನಿರ್ದೇಶಕನಾಗಿ ನಿರ್ಮಾಪಕನಾಗಿ ‘ಆಲ್ ಇನ್ ಆಲ್’ಆದ ಪ್ರಭಾಕರ್‍ ಒಂದಲ್ಲ ಎರಡಲ್ಲ ಮೂರು ಮದುವೆಯಾದರೂ ‘ಹೆಣ್ಣಿನ ಹಂಬಲ’ ಬಿಡದೇ ನಾಲ್ಕನೆ ಮದುವೆಗೂ ರೆಡಿ ಎಂದು ಮೀಸೆ ತಿರುವುತ್ತಿದ್ದರು. ಅಂತಹ ಇನ್ನೊಂದು ದುರಂತಕ್ಕೆ ಅಣಿಯಾಗುವ ಮೊದಲು ಮೃತ್ಯದೇವತೆ ತಾನಾಗಿ ಬಂದು ಅವರ ಕೈಹಿಡಿದಿದ್ದರಿಂದ ಪ್ರಭಾಕರ್‍ ಬದುಕಿಗೆ ಇತಿಶ್ರೀ ಹಾಡಿದರು.

೯-೧೦ ವರ್ಷಗಳಿಂದ ಪ್ರಭಾಕರ್‍ ತುಂಬಾ ನೋವು ತಿಂದರು. ಗ್ಯಾಂಗರಿನ್‌ನಿಂದಾಗಿ ಕಾಲೊಳಗಿನ ಹುಳುಗಳೂ ಅವರ ಮಾಂಸ ತಿನ್ನುತ್ತಿತ್ತು. ಇಂಥ ಪ್ರಸಂಗ ಬಂದಾಗ ಕಾಲು ಕತ್ತರಿಸುವುದು ವಾಡಿಕೆ. ಆದರೆ ಸಾಯುವವರೆಗೆ ‘ಕುಂಟ ಪ್ರಭಾಕರ್‍’ ಎನಿಸಿಕೊಳ್ಳುವುದು ಅವರಿಗೆ ಸುತರಾಂ ಇಷ್ಟವಿರಲಿಲ್ಲ. ತನ್ನ ಮಾಂಸ ಹುಳುಗಳಿಗೆ ಆಹಾರವಾಗದಿರಲೆಂದು ಬೇರೆ ಪ್ರಾಣಿಯ ಮಾಂಸದ ತುಂಡುಗಳನ್ನೂ ಕಾಲಿಗೆ ತುರುಕುತ್ತಿದ್ದರು. ಅಂಥ ಯಮಯಾತನೆ ಸಹಿಸುವುದು ಕಷ್ಟ ಎಂಬ ಕಾರಣಕ್ಕೇ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಗುಂಡು ಸೇವನೆ ಅನಿವಾರ್ಯವಾಗಿ ಊಟ ಮಾಡುವುದೇ ಅಪರೂಪವಾಯಿತು.

ಟೈಗರ್‍ ಕಾಡಿನಲ್ಲಿ ನಿತ್ಯ ತನ್ನ ಆಹಾರಕ್ಕಾಗಿ ಪ್ರಾಣಿಗಳ ಬೇಟೆ ಆಡುವಂತೆ, ಕಾಲಿನ ಹುಳುಗಳಿಗೆ ಮಾಂಸದ ಬೇಟೆ ಪ್ರಭಾಕರ್‍ ನಿತ್ಯ ಆಡಬೇಕಾಗಿ ಬಂದದ್ದು ದುರ್ದೈವ. ೨೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಈ ವೀರ, ಧೀರನ ಬಗ್ಗೆ ಡಿ. ರಾಜೇಂದ್ರ ಬಾಬು, ಸುಂದರನಾಥ್ ಸುವರ್ಣ, ವಿಷ್ಣುವರ್ಧನ್, ಡಾ.ರಾಜ್ ಮುಂತಾದವರೆಲ್ಲ ತುಂಬ ಒಳ್ಳೆ ಮಾತನಾಡಿದ್ದಾರೆ.

ಟೈಗರ್‍ ಪ್ರಭಾಕರ್‍ ಅವರ ವೈಯಕ್ತಿಕ ಅಂಶಗಳು – ಅವರ ವೈಯಕ್ತಿಕ ತೆವಲುಗಳು ತುಂಬ ವಿಚಿತ್ರ. ಅವರು ಹೆಣ್ಣನ್ನು ಕಾಣುತ್ತಿದ್ದ ರೀತಿ ಮತ್ತು ಮಾತು ತುಂಬ ಹೇಸಿಗೆ ಎನಿಸುತ್ತಿತ್ತು. ಅವರ ಚಿತ್ರಗಳೆಲ್ಲ ಕಡಕಡೆಗೆ ‘ಬ್ಲೂ ಫಿಲಂ’ ಪ್ರತಿ ರೂಪವೆನಿಸಿದ್ದು ನಿಜ.

ಆದರೆ ಕನ್ನಡದ ಈ ಭಾರಿ ವಿಲನ್‌ನ ‘ಹೃದಯ ಮಾತ್ರ’ ಬೆಣ್ಣೆಯಾಗಿತ್ತು ಎಂಬುದರಲ್ಲಿ ಏನೇನೂ ಅನುಮಾನವಿಲ್ಲ.
*****
(೩೦-೩-೨೦೦೧)