ಸೃಷ್ಟಿ ನೋಂತು ನಿಂತಿದೆ!


ಗಿಡದ ರೆಂಬೆ ಕೊಂಬೆಗಳಲಿ ಚಿಗುರು ಕಣ್ಣ ತೆರೆದಿದೆ
ಎಲ್ಲಿ ನೋಡಿದಲ್ಲಿ ಚೆಲುವು ಗೆಲ್ಲುಗಂಬ ನಿಲಿಸಿದೆ!
ಹೊಸತು ಆಸೆ ಮೂಡಿದೆ
ಹರುಷ ಲಾಸ್ಯವಾಡಿದೆ
ಓ! ವಸಂತ ನಿನಗನಂತ ಆಲಿಂಗನ ಸಂದಿದೆ
ಸೃಷ್ಟಿ ನೋಂತು ನಿಂದಿದೆ!


ಎಂದೂ ಅಗಲಿ ಹೋದ ನಿನಗೆ ನಮ್ಮ ನೆನಪು ಬಾರದೆ?
ಮಾಗಿ ಕೊರೆದ ಗಾಯವಿನ್ನು ಇಹುದು ಮನದಿ ಮಾಯದೆ!
ಜೀವ ಕುಲವು ತಪಿಸಿದೆ
ನೂರು ಬಾರಿ ಶಪಿಸಿದೆ
ಪಾದರಸದ ತೆರದಿ ಜಾರಿ ಕಂಡ ಕಡೆಗೆ ಹರಿದಿದೆ
ತನ್ನತನವ ಮರೆದಿದೆ!


ತಳಿರ ತಳ್ಕೆಯಲ್ಲಿ ಮುದ್ದು ಕೋಗಿಲೆಯದೊ ಕುಳಿತಿದೆ
ಅದರ ಉದರದೊಂದು ಉಸಿರು ಹಾಸಿ ಬೀಸಿ ಬರುತಿದೆ;
ಓಹೊ!
ಎಲ್ಲೊ ಕಂಡ ಹಾಗಿದೆ
ಆಹಾ
ಎಂದೊ ಕೇಳಿದಂತಿದೆ
ಇಂದು ಜಾಡ್ಯ ಹರಿದು ಇಳೆಗೆ ರೋಮಾಂಚನ ತಂದಿದೆ!
-ಸಮರ ತೂರ್‍ಯದಂತಿದೆ!
ಏನು ಅಂದ ಬಿಸವಂದವೊ ನಿನ್ನ ಮಧುರ ಮೈತ್ರಿಯು!
ನೃತ್ಯ ಹಾಡು, ಸೊಗದ ಕೋಡು; ಧನ್ಯಳೀ ಧರಿತ್ರಿಯು;
ಹೇಮಂತನ ತ್ಯಾಗವೂ
ಈ ವಸಂತ ಭೋಗವೂ
ಬದುಕಿಗೆಂದೆ ಬಿಜಯಗೈಯೆ ಪ್ರೀತಿ ಸಮಾಯೋಗವು!
-ಹಾಗು ಹೀಗು ಹೇಗೆಯು.
ಬನದ ಬಯಕೆ ಮಾಗಿದೆ
ಚೈತ್ರೋದಯವಾಗಿದೆ
ಬಾ ವಸಂತ ನಿನಗನಂತ ಅಲಿಂಗನ ಸಂದಿದೆ!
-ಸೃಷ್ಟಿ ನೋಂತು ನಿಂದಿದೆ!
*****