ನನ್ನ ಹಿಮಾಲಯ – ೨

ಕುಲುನಲ್ಲಿ ಇರೋಣವೋ ಮನಾಲಿಗೆ ಹೋಗೋಣವೋ? ಆತಂಕ ಹೆಚ್ಚಾಯಿತು. ಜನ ನಮಗೆ ಸಹಾಯವಾಗಲಿ ಅಂತ ಹೇಳಿದ ಪ್ರಾಮಾಣಿಕ ಉತ್ತರಗಳು ನಮ್ಮ ಗೊಂದಲವನ್ನು ಹೆಚ್ಚು ಮಾಡಿದವು.

ಮತ್ತೆ ಬಸ್ಸು. ಬಸ್ಸಿನೊಳಗೂ ಹೊರಗೂ ಕತ್ತಲೆ. ಎದುರಿಗೆ ಬರುವ ವಾಹನಗಳು ಬರೀ ದೀಪಗಳು. ಕೆಳಗೆ ತಿರುವಿನಲ್ಲಿ ಮೇಲೇರುತ್ತಿರುವ ಜೋಡಿ ದೀಪಗಳು. ಎದುರಿನಿಂದ ಇಳಿದು ಬಂದು ಕ್ಷಣ ಕಣ್ಣು ಕೋರೈಸಿ ಪಕ್ಕದಲ್ಲಿ ಸಾಗಿಹೋಗುವ ದೀಪಗಳು. ಆಗಾಗ ಯಾವು ಯಾವುದೋ ಹಳ್ಳಿಗಳ ಮಿಣಿಕು ದೀಪ ಗುಂಪುಗಳು. ಗೊತ್ತೇ ಇಲ್ಲದಂತೆ ನಿಶ್ಚಿಂತ ನಿದ್ದೆ.

ಆಗ ಮಧ್ಯರಾತ್ರಿಯಾಗಿತ್ತು. ನಾವು ಕುಲು ಬಸ್ ಸ್ಟ್ಯಾಂಡಿನಲ್ಲಿದ್ದೆವು. ಜ್ಞಾಪಕ ಬಂದರೆ ಈಗ ಅಲ್ಲೇ ಇದ್ದೇನೆ ಅನ್ನಿಸುತ್ತದೆ.

ಕೇವಲ ನಾಲ್ಕು ದಿನಗಳಷ್ಟೆ ಕಳೆದದ್ದೆ ನಾನು ಶಿವಮೊಗ್ಗ ಬಿಟ್ಟು? ನಾನು ಬೇರೆ ಯಾರೋ ಆಗಿಬಿಟ್ಟಿದ್ದೇನೆಯೇ? ಚಳಿ. ಕತ್ತಲು. ಆಗುಂಬೆ ಊರಿನ ಬಸ್ ಸ್ಟ್ಯಾಂಡಿನ ಥರ. ನಿಧಾನವಾಗಿ ನಮ್ಮ ಸುತ್ತ ನಾಲ್ಕಾರು ಜನ ಬಂದವು. ಎಲ್ಲವೂ ಸ್ವೆಟರು ಕೋಟು ಟೋಪಿಗಳು. ಜೇಬಿನಲ್ಲಿ ಕೈ ಬಚ್ಚಿಟ್ಟುಕೊಂಡವರು. ಎದೆಯ ಮೇಲೆ ಕೈಕಟ್ಟಿಕೊಂಡವರು. ನಾವು ನಮ್ಮ ನಮ್ಮಲ್ಲೆ ಮತ್ತು ನಾವೆಲ್ಲ ಆ ಜನದ ಜೊತೆ, ಆ ಜನವೆಲ್ಲ ತಮ್ಮತಮ್ಮಲ್ಲೆ ಮತ್ತು ನಮ್ಮೆಲ್ಲರ ಜೊತೆ ಒಟ್ಟಾಗಿ ಪ್ರಶ್ನೆ ಕೇಳುತ್ತ ಉತ್ತರ ಹೇಳುತ್ತ ಒಬ್ಬರಿಗೊಬ್ಬರು ಹೇಗೆ ಅರ್ಥವಾದೆವೋ ಗೊತ್ತಿಲ್ಲ. ಧಾರಿಣಿ, ಚಂದ್ರಾ, ಶ್ಯಾಮಲಾ ನಮ್ಮ ಚೀಲಗಳ ರಾಶಿಯ ಹತ್ತಿರ ಪುಟ್ಟ ಗುಂಪಾಗಿ ಮುದುರಿ ನಿಂತಿದ್ದರು.

ನೀವು ಎಲ್ಲಿಂದ ಬಂದಿರಿ ಹೋಟೆಲಿದೆಯಾ ಎಷ್ಟು ಜನ ಇದ್ದೀರಿ ಹೋಗಲಿ ಛತ್ರ ಎಲ್ಲಿಗೆ ಹೋಗಬೇಕು ಬಾಡಿಗೆ ಎಷ್ಟು ಬ್ಯಾಂಗಲೂರ್ ಸೆ ಎಲ್ಲಿದೆ ಹತ್ತು ಜನ ರಾಯ್ ಸನ್‌ಗೆ ಇಲ್ಲವೆ ಮನಾಲಿಗೆ ಹೋಗಬೇಕಿತ್ತೆ ಎಲ್ಲ ಭರ್ತಿಯೆ ಇದು ಸೀಸನ್ ಹೋ ತ್ರೆಕಿಂಗ್ ವಾಲಾಗಳಾ – ಒಟ್ಟು ಇತ್ಯರ್ಥ ಕುಲುನಲ್ಲಿ ಜಾಗ ಸಿಗುವುದು ಕಷ್ಟ. ಇಲ್ಲೆ ಹತ್ತಿರ ಒಂದು ಹೋಟೆಲಿದೆ ಹೋಗಿ ಕೇಳಿ ನೋಡಿ.

ನಾನು ಮತ್ತು ಶ್ರೀನಾಥ ಹೋದೆವು. ಕೇಳಿದೆವು. ನೋಡಿದೆವು. ಚೆನ್ನಾಗಿರಲಿಲ್ಲ. ಮುನ್ನೂರು ರೂಪಾಯಿ ಕೇಳಿದ. ಕಡಮೆಗೆ ಒಪ್ಪಲೇ ಇಲ್ಲ. ಸದ್ಯ ಜಾಗ ಸಿಕ್ಕಿತಲ್ಲ. ರಾತ್ರಿ ಸುರಕ್ಷಿತವಾಗಿ ಕಳೆಯಬಹುದಲ್ಲ. ಒಪ್ಪಿಬಿಟ್ಟೆವು.

ಆದರೆ ಬಂದು ಉಳಿದವರಿಗೆ ಹೇಳಿದರೆ ಮೂರ್ತಿ ಆನೆ ಪಟಾಕಿಯ ಸರ ಆಗಿ ಸಿಡಿ ಸಿಡಿ ಸಿಡಿದು ಸಿಡಿದುಬಿದ್ದ. ನನ್ನನ್ನೂ ಶ್ರೀನಾಥನನ್ನೂ ಬಯ್ದ. ನಿಮಗೆ ಬುದ್ಧಿ ಇದೆಯಾ. ಆ ಹೋಟೆಲಿನವನು ಮನುಷ್ಯನಾ ಅಂತೆಲ್ಲ ಬಯ್ದ. ರಸ್ತೆಯಲ್ಲೆ. ನಮ್ಮ ಜೊತೆ ಬಂದ ಹೋಟೆಲು ಹುಡುಗನನ್ನೂ. ಒಬ್ಬಿಬ್ಬರು ಪೋಲೀಸರು ಬಂದರು. ಪಾಪ. ಪೋಲೀಸರು ಅನ್ನುವ ಹಾಗೇ ಇರಲಿಲ್ಲ. ಹೋಟೆಲ ಹುಡುಗನನ್ನು ಬಯ್ದರು. ಗೋಗರೆದರು. ಕೈ ಮುಗಿದರು. ಉಪಯೋಗ ಮಾತ್ರ ಇಲ್ಲ.

ಪೋಲೀಸು ನಮಗೇ ಹೇಳಿದ. ಒಂದು ಕೆಲಸ ಮಾಡಿ. ಏನು? ಹೀಗೇ ಸೀದಾ ಹೋಗಿ. ಹೋದರೆ? ಮಾತಾ ಮಂದಿರ ಸಿಗುತ್ತದೆ. ನೀವು ಅಲ್ಲಿ ರಾತ್ರಿ ಕಳೆಯಬಹುದು. ಮುಫ್ತ್. ಎಷ್ಟು ದೂರ? ಎರಡು ಕಿಲೋಮೀಟರ್. ಏನೂ ಭಯ ಇಲ್ಲವೆ? ಛೆ ಏನೇನೂ ಇಲ್ಲ. ನಮ್ಮ ಹತ್ತು ಜನರದ್ದು ಹನ್ನೆರಡು ಮಾತು. ಮೂರ್ತಿಗೆ ಎಲ್ಲಿಲ್ಲದ ಹುರುಪು ಬಂದು ನಾಯಕನಾಗಿಬಿಟ್ಟ. ಮಾತಾ ಮಂದಿರವೆ? ಎಲ್ಲಿದೆ ಅಂದಿರಿ? ಹೀಗೆ. ಸೀದ ಹೋಗಿ. ದಾರಿ ತಪ್ಪುವ ಭಯ ಇಲ್ಲ. ಮೇನ್ ರಸ್ತೆಯಲ್ಲೆ ಇದೆ. ಕಾಂಪೌಂಡಿಗೆ ಗೇಟು ಇದೆ. ಅದರ ಮೆಲೆ ಸಿಂಹದ ಬೊಂಬೆ ಇವೆ. ಭಯ ಏನೂ ಇಲ್ಲ.

ಎಷ್ಟೊಂದು ಚಳಿ ಇದೆ. ರಾತ್ರಿಯ ಒಂದು ಗಂಟೆ. ಮೂರ್ತಿಯ ಹುರುಪು ನನಗೂ ಬಂತು. ಅಥವ ಆಯಾಸ ಏನೂ ಆಗಿಲ್ಲ ಅನ್ನುವ ತೋರಿಕೆಯೋ? ಮೂರ್ತಿಯಂತೆಯೇ ನಡೆದು ಅವನ ನಿರ್ಧಾರ ಸುಳ್ಳು ಅಂತ ತೋರಿಸುವ ಗುಟ್ಟು ಆಸೆಯೋ? ಎಲ್ಲರೂ ನಮ್ಮ ನಮ್ಮ ಭಾರ ಹೊತ್ತು ನಡೆದೆವು.

ಇಷ್ಟು ಹೊತ್ತು ಗಮನಿಸಿಯೇ ಇರಲಿಲ್ಲ. ಬೆಳದಿಂಗಳು ಇದೆ. ಮಂಕಾಗಿ. ಮಲಗಿದ ಮನೆಗಳನ್ನು ದಾಟಿದೆವು. ಐದೆ ನಿಮಿಷ. ಊರ ಹೊರಗಿದ್ದೆವು. ರಸ್ತೆ ಪಕ್ಕದಲ್ಲೆ ನದಿ ಇದೆ. ಬಿಯಾಸ್. ಎಷ್ಟೊಂದು ರಭಸವಾಗಿ ಹರಿಯುತ್ತಿದೆ. ಶಬ್ದ. ಸದ್ದು. ಅಲ್ಲ. ಮೊರೆತ. ಹೌದು ಮೊರೆತ. ಎಂದೂ ನದಿಯ ಇಂಥ ಮೊರೆತ ಕೇಳಿರಲಿಲ್ಲ. ವ್ಯಾಸ ಅನ್ನುವುದರ ತದ್ಭವ ಬಿಯಾಸ್ ಅಂದುಕೊಂಡಿದ್ದೆ. ಅಲ್ಲವಂತೆ. ಆದರೇನು. ನನ್ನ ಮಟ್ಟಿಗೆ ಅದೇ ವ್ಯಾಸ. ಪದಕ್ಕೆ ನಾನು ಕೊಡುವುದೇ ಅರ್ಥ, ನನ್ನ ಮಟ್ಟಿಗೆ. ಬೆಳ್ಳನೆ ನೀರಿನ ಮೇಲೆ ಬೆಳದಿಂಗಳು. ರಸ್ತೆಯ ನಾಲ್ಕೆ ಅಡಿ ಆಚೆ ನಮ್ಮ ಪಕ್ಕದಲ್ಲೆ ಆರ್ಭಟಿಸುವ ಮೊರೆಯುವರವ್ಹಸದಿಂದ ನುಗ್ಗಿ ಹರಿಯುವ ಬಿಯಾಸ್-ವ್ಯಾಸ. ಆಗ ಗೊತ್ತಿರಲಿಲ್ಲ. ಹಿಮಾಲಯದ ನಮ್ಮ ನಡಿಗೆಯ ಉದ್ದಕ್ಕೂ ಒಂದಲ್ಲ ಒಂದು ನದಿ., ಹೆಸರು ಯಾವುದಾದರೂ ಸರಿನದಿ, ನಮ್ಮ ಜೊತೆಗೇ ಇರುತ್ತದೆ ಎಂದು. ನನಗೆ ಗೊತ್ತಿಲ್ಲ. ಹೆಗೋ ನನ್ನ ತುಂಬು ನೊರೆ ನೊರೆ ಮೊರೆಯುವ ಆರ್ಭಟಿಸುವ ನದಿ ಮತ್ತು ಬೆಳದಿಂಗಳು ತುಂಬಿ ಬಿಟ್ಟವು. ನದಿಯ ಶೃತಿಗೆ ಹೆಜ್ಜೆ ಹಾಕುತ್ತ ನದಿಯ ವಿರುದ್ಧ ದಿಕ್ಕಿಗೆ ನಡೆದೆವು. ಚಳಿ, ನದಿ, ಮೊರೆತ, ಬೆಳದಿಂಗಳು. ನಡು ರಾತ್ತ್ರಿ. ನಡೆದೆವು.

ನನ್ನೊಳಗೆ ಕ್ರಮೇಣ ಭಯ ಶುರುವಾಯಿತು. ಆತಂಕ ಹೆಚ್ಚಾಯಿತು. ಎಲ್ಲರಿಗೂ ಹಾಗೇ ಆಯಿತೋ ಏನೋ. ಗೊತ್ತಿಲ್ಲದ ಊರು. ಊರು ದಾಟಿ ನಟ್ಟಿರುಳಿನಲ್ಲಿ. ಜೊತೆಗೆ ಹೆಂಗಸರಿದ್ದಾರೆ. ಗೊತ್ತಿಲ್ಲದ ಊರಿನಲ್ಲಿ. ಊರು ದಾಟಿ ನಡೂರಾತ್ರಿ ಹೆಂಗಸರನ್ನು ಕಟ್ಟಿಕೊಂಡು, ಆಕರ್ಷಿಸುವ ಭಯ ಹುಟ್ಟಿಸುವ ನದಿಯ ಪಕ್ಕದಲ್ಲಿ, ಇನ್ನೊಂದು ಪಕ್ಕದಲ್ಲಿ ಗುಡ್ಡ ಇಟ್ಟುಕೊಂಡು, ಬೆಳದಿಂಗಳಲ್ಲಿ ವಿಚಿತ್ರವಾಗಿ ಕಾಣುವ ಮರಗಳ ಕಪ್ಪು ಅಸ್ಪಷ್ಟ ನೆರಳಿನಲ್ಲಿ ಗೊತ್ತಿಲ್ಲದ ಆಶ್ರಮ ಹುಡುಕಿಕೊಂಡು ನಡೆಯುತ್ತಿದ್ದೇವಲ್ಲ. ಎಂದೆಂದೂ ಕನಸಿನಲ್ಲೂ ಕಂಡಿರದ ಜಾಗ. ಇಲ್ಲಿಡುವ ಒಂದೊಂದು ಹೆಜ್ಜೆಯೂ ಹೊಸದು. ಬೈದೆವು ಮೂರ್ತಿಯನ್ನು. ಧಾರಿಣಿಯೂ ಗಂಡನನ್ನು ಬೈದರು.

ಅರ್ಧ ಗಂಟೆ ನಡೆದೆವು. ಎಷ್ಟು ಹೊತ್ತು ಬೈಯಲು ಸಾಧ್ಯ. ಸುಮ್ಮನೆ ನಡೆದೆವು. ಎಷ್ಟು ಹೊತ್ತು ಸುಮ್ಮನೆ ನಡೆಯಲು ಸಾಧ್ಯ. ಬೈದೆವು. ಪೋಲೀಸ ನಿಜ ಹೇಳಿದನೆ? ಎಲ್ಲಿದೆ ಮಠ? ನಡಿಗೆ ನಿಧಾನವಾಯಿತು. ಎಲ್ಲಿದೆ ಸಿಂಹದ ಗೇಟು? ಚೀಲಗಳು ಪೆಟ್ಟಿಗೆಗಳು ಭಾರವಾದವು.

ಕೂತಿರಿ ಬರುತ್ತೇವೆ ಅಂತ ರಾಜು ಮತ್ತು ಮೂರ್ತಿ ಮುಂದೆ ನಡೆದರು. ಈಗ ಏನೇನೂ ನೆನಪಿಲ್ಲ. ಶಿವಮೊಗ್ಗೆ. ದೆಹಲಿ. ನನ್ನ ಹೆಸರು. ಏನೇನೂ. ಬರೀ ನದಿಯ ಮೊರೆತ. ಟಾರು ರಸ್ತೆಯ ಅಂಚು. ಬೆಳದಿಂಗಳು. ಆತಂಕ. ಮಲಗಲು ಬೆನ್ನಿಗೆ ನೆಲ ಬೇಕು ಅನ್ನುವ ಆಸೆ. ಕೂರುವುದು ಬೇಡ ಅಂತ ನಡೆದೆವು. ನಾಲ್ಕು ಹೆಜ್ಜೆ ಹೋಗುವುದರೊಳಗೆ ಮತ್ತೆ ಅನುಮಾನ ಬಂದು ಕೂತೆವು.ಸಿಂಹದ ಗೇಟಿನ ಆಶ್ರಮ ಸಿಕ್ಕಿತೋ ಇಲ್ಲವೋ ಜಾಗ ಕೊಡಲು ಅವರು ಒಪ್ಪಿದರೋ ಇಲ್ಲವೋ? ಸುಮ್ಮನೆ ಕೂತು ಕಾಯುವುದೆ ವಾಸಿ ಅವರಿಗೆ. ಮತ್ತೆ ಕುಲುಗೇ ಹಿಂತಿರುಗಬೇಕೋ ಏನೋ. ಆ ಹೋಟೆಲಿಗೆ. ಹಾಗಾದರೆ ನಡೆಯುವುದು ಯಾಕೆ?

ಬಂದರು. ಇಲ್ಲೆ ಇದೆಯಂತೆ ಆಶ್ರಮ. ಇನ್ನೂ ಸ್ವಲ್ಪ ದೂರ. ಸಿಕ್ಕಿಬಿಟ್ಟಿತು. ಪುಟ್ಟ. ಅಲ್ಲ, ಸಾಕಷ್ಟೆ ದೊಡ್ಡ ಪಡಸಾಲೆ. ಅಲ್ಲಿಗೆ ಹತ್ತಲು ಏಳೆಂಟು ಮೆಟ್ಟಿಲು. ಪಡಸಾಲೆಯಲ್ಲಿ ಬೆಳದಿಂಗಳ ಬೆಳಕು. ದೊಡ್ಡ ದೊಡ್ಡ ಚಾಪೆಯ ಸುರುಳಿಗಳು. ಬಿಡಿಸಿದಷ್ಟೂ ಮುಗಿಯುವುದೇ ಇಲ್ಲ. ನಾನು ಎಂದೂ ಅಷ್ಟು ದಪ್ಪನೆ ಅಷ್ಟು ಮೃದುವಾದ ಅಷ್ಟು ದೊಡ್ಡ ಚಾಪೆಗಳನ್ನು ನೋಡಿರಲೇ ಇಲ್ಲ. ಯಾರನ್ನಾದರೂ ಕೇಳಬೇಕಾಗೊತ್ತೋ ಏನೋ. ಕೇಳಲು ಯಾರೂ ಇಲ್ಲವಲ್ಲ. ಇದು ಮಠ ಅಲ್ಲ. ಬರೀ ಮೊಗಸಾಲೆ. ಮಠ ಎಲ್ಲಿದೆಯೋ. ಇದ್ದರೆ ಇರಲಿ ಬಿಡಿ. ಚಾಪೆ ಇದೆ. ಮಲಗೋಣ. ರಾತ್ರಿ ಎರಡೂವರೆ ದಾಟಿದೆ. ಚಳಿ ಜಾಸ್ತಿ ಆಗುತ್ತಿದೆ. ಸಾಮಾನೆಲ್ಲ ರಾಶಿ ಹಾಕಿ ಚಾಪೆ ಮೇಲೆ ಮೈ ಚೆಲ್ಲಿ ಗೋಡೆ ಮೇಲೆ ಬಿದ್ದಿದ್ದ ಬೆಳದಿಂಗಳು ನೋಡುತ್ತ ನದಿಯ ಮೊರೆತ ಕೇಳುತ್ತ ನಿದ್ದೆ ಬಂದುಬಿಟ್ಟಿತು.

ಬರವಣಿಗೆಯ ಹತ್ತನೆಯ ದಿನ

ನಿಜವಾಗಿ ಹೊಸತಾದ್ದೆಲ್ಲ ಅಪರಿಚಿತವಾಗಿಯೇ ಇರುತ್ತದೆ. ಹಿಮಾಲಯದಲ್ಲಿನ ಮೊದಲ ಮುಂಜಾವೂ ಅಷ್ಟೆ. ಹೊಸ ಜಾಗ. ಹೊಸ ನಿದ್ರೆ. ಹೊಸ ಎಚ್ಚರ. ನದಿಯ ಮೊರೆತ. ಎಚ್ಚರವಾಗುತ್ತಿದ್ದ ಮೂರ್ತಿ ಎಚ್ಚರದ ಮುಲುಗು ಮುಲುಗುತ್ತಿದ್ದ. ಶ್ಯಾಮಲಾ ಮಲಗಿದಲ್ಲೆ ಏನೇನೋ ಹೇಳುತ್ತಿದ್ದಳು. ನಾವೆಲ್ಲ ನಿದ್ದೆಯಲ್ಲಿ ಮಾತು ಕಳುದುಕೊಂಡಿಲ್ಲ ಅನ್ನುವುದು ನಮಗೇ ಸ್ಪಷ್ಟ ಮಾಡಿಕೊಳ್ಳುವ ಹಾಗೆ. ಅಪರಿಚಿತ ಜಾಗದ ಅಪರಿಚಿತ ಹಗಲನ್ನು ಹೇಗೆ ಏನು ಮಾಡಬೇಕೆಂದು ತಿಳಿಯದೆ ಸುಮ್ಮನೆ ಆಡಿದ ಮಾತುಗಳು. ಏನೇನೋ. ಚೀಲಗಳಲ್ಲಿ ಪೆಟ್ಟಿಗೆಗಳಲ್ಲಿ ಏನೇನನ್ನೋ ತಡಕುವ ಶಬ್ದ. ಆಚೆ ಹಕ್ಕಿಗಳ ಸದ್ದು. ಸೂರ್ಯ ಇಲ್ಲ. ಬೂದಿ ಬೆಳಕು. ಮೋಡ ಕವಿದ ಚಳಿ.

ನಾನು ಮತ್ತು ರಾಜು ಬೆಳಗಿನ ಮುಖ್ಯ ಕೆಲಸಗಳಿಗೆ ಹೊರಟೆವು. ನಮ್ಮ ಪಡಸಾಲೆ ರಸ್ತೆಗೇ ಅಂಟಿದ್ದ ಗುಡ್ಡದ ಮೈಕೊರೆದು ಮಾಡಿದ್ದು. ಮೆಟ್ಟಿಲು ಇನ್ನೂ ಮೇಲಕ್ಕಿತ್ತು. ಅಲ್ಲೆಲ್ಲೋ ಮಠ ಇರಬೇಕು. ಸಿಂಹ ಇತ್ತು. ಕತ್ತಲಲ್ಲಿ ಕಂಡಿರಲಿಲ್ಲ. ಎದುರಿಗೇ ರಸ್ತೆ. ರಸ್ತೆಯ ಆಚೆ ಮರಗಳ ಸಾಲು. ಸಾಲಿನ ಆಚೆ ಬಿಯಾಸ್. ಅಲ್ಲಿ ಒಂದು ಶೆಡ್ಡು. ಹುಹುಹು ಅನ್ನುತ್ತ. ಇನ್ನೂ ಮಲಗೇ ಇದ್ದವರನ್ನು ಬಿಟ್ಟು ಸರಿಯಾದ ಜಾಗ ಹುಡುಕಿ ಹೊರಟೆವು. ಎಲ್ಲೂ ಸಿಗಲಿಲ್ಲ. ಗುಡ್ಡ ಹತ್ತಲಾಗುವುದಿಲ್ಲ. ನದಿಯ ಪಕ್ಕದಲ್ಲಿ ಮರೆಯಿಲ್ಲ. ಇಂಥ ಸುಂದರ ನದಿಯ ಜಾಗವನ್ನು ಗಲೀಜು ಮಾಡಬೇಕೆ? ಗಲೀಜು ಮಾಡದೆ ಬದುಕುವುದು ಹೇಗೆ?

ರಾಜು ಹೇಳಿದ್ದು-ರಾತ್ರಿ ಶ್ರೀನಾಥನಿಗೆ ಬೆಳದಿಂಗಳಲ್ಲಿ ನದಿಯ ಫೋಟೋ ತೆಗೆಯುವ ಆಸೆ ಹುಟ್ಟಿತಂತೆ. ಅನಂತನನ್ನೂ ಗೌಡರನ್ನೂ ರಾಜುವನ್ನೂ ಕರೆದುಕೊಂಡು ನದಿಯ ಹತ್ತಿರ ಹೋಗಿ ಕ್ಯಾಮರಾ ಇಟ್ಟು ಸುಮಾರು ಮುವ್ವತ್ತು ನಿಮಿಷ ಎಕ್ಸ್ ಪೋಸ್ ಮಾಡಿ ನದಿಯ ಫೊಟೋ ತೆಗೆದನಂತೆ. ಬೆಳದಿಂಗಳು ನದಿ ಇವನ್ನ ನನಗಿಂತ ಬೇರೆಥರ ಅವರೆಲ್ಲ ನೋಡಿದರೆಂದು ಒಂದು ಥರ ಹೊಟ್ಟೆಕಿಚ್ಚಾಯಿತು.

ವಾಪಸ್ಸು ಬರುವ ಹೊತ್ತಿಗೆ ನಮ್ಮ ಪಡಸಾಲೆ ಹತ್ತಿರ ಯಾರೋ ಒಬ್ಬ ಠಳಾಯಿಸುತ್ತಿದ್ದ. ನಮ್ಮನ್ನು ಬೈಯಲು ಬಂದವನೋ ಏನೋ. ಇಲ್ಲ. ಮಠದ ಮನುಷ್ಯನಂತೆ. ನೀವು ರಾತ್ರಿ ಬಂದಾಗ ನಮಗೆ ಗೊತ್ತಾಗಲೇ ಇಲ್ಲ. ನಿಮಗೆಷ್ಟು ತೊಂದರೆ ಆಯಿತೋ ಅಂತ ಅವನು ಪೇಚಾಡಿ ನಿಮ್ಮ ಅನುಮತಿ ಕೇಳದೆ ನಾವು ಉಳಿದು ಬಿಟ್ಟೆವಲ್ಲ ಅಂತ ನಾವು ಪೇಚಾಡಿ ಕೊನೆಗೆ ಅವನೇ ಅತಿ ತಪ್ಪಿತಸ್ಥನಂತೆ ‘ದಯವಿಟ್ಟು ಚಹ ಕುಡಿಯಿರಿ’ ಅಂತ ನಮ್ಮನ್ನು ಬೇಡಿಕೊಂಡು-ಅಹಾ, ಜನ ಎಷ್ಟು ಒಳ್ಳೆಯವರು.

ಚಂದ್ರಳಿಗೂ ಹಾಗೇ ಅನ್ನಿಸಿತು. ಶ್ರೀನಾಥನಿಗೂ, ಮಠಗಳನ್ನು ದ್ವೇಷಿಸುವ ಮೂರ್ತಿಗೂ. ನನಗೂ. ಎಷ್ಟೊಂದು ಉಪಕಾರ ಮಾಡಿದರು ಆ ಜನ. ನಮಗೆಂದೇ ವಿಶೇಷವಾಗಿ ಅನ್ನ ಮಾಡಿ, ಸಿಹಿ ಮಾಡಿ ಬಡಿಸಿದರು. ಮಾತಾಜಿ ನಮ್ಮ ಜೊತೆ ಫೊಟೋ ತೆಗೆಸಿಕೊಂಡರು. ಆ ಮಠ ಸ್ಥಾಪನೆ ಮಾಡಿದವರು ಬಹಳ ಹಿಂದೆ ಕರ್ನಾಟಕದಿಂದಲೇ ಬಂದವರು ಅಂತ ಹೇಳಿದರು. ನಮಗೆಲ್ಲ ನಾವು ವಿ ಐ ಪಿಗಳು ಅನ್ನಿಸುವ ಹಾಗೆ ಮಾಡಿಬಿಟ್ಟರು.

ನಾವು ಬ್ರಿಂಗ್ಟಾದಿಂದ ಇಳಿಯುತ್ತಿದ್ದಾಗ ಜಲಪಾತದ ಪಕ್ಕದಲ್ಲಿ ಶರ್ಮನ ಸಂಸಾರ ನಮ್ಮನ್ನು ಕಂಡು, ಕರೆದು, ಅವರ ತಿಂಡಿಯನ್ನು ಹಂಚಿಕೊಟ್ಟಾಗ ಮತ್ತೆ ಅನ್ನಿಸಿತು-ಜನ ಎಷ್ಟು ಒಳ್ಳೆಯವರು.

ಜಾನಾಕ್ಕೆ ಏರುತ್ತಿದ್ದಾಗ ಮಹಾರಾಷ್ಟ್ರದ ಹುಡುಗನಿಗೆ ವಾಂತಿಯಾಯಿತು. ಅಲ್ಲಿದ್ದವರೆಲ್ಲ ನಾಮುಂದು ತಾಮುಂದು ಎಂದು ತಮ್ಮಲ್ಲಿದ್ದ ಔಷಧಗಳನ್ನು ಕೊಟ್ಟು ಉಪಚರಿಸಲು ಮುಂದಾದರು. ಜನ ಎಷ್ಟು ಒಳ್ಳೆಯವರು.

ಅಹಮದಾಬಾದಿನ ಹುಡುಗಿ ಮಲಾನಾದಲ್ಲಿ ಜ್ವರ ಬಂದು ನಡುಗಿದಾಗ ಬಂಗಾಳದ ಅಜಯ ಅವಳನ್ನೂ ಅವಳ ಚೀಲದ ಹೊರೆಯನ್ನೂ ಹೊತ್ತು ನಡೆದ. ಜನ ಎಷ್ಟು ಒಳ್ಳೆಯವರು.

ಹೌದಲ್ಲವಾ ಅಂತ ಚಂದ್ರಳನ್ನು ಇಂದು ಬಾರಿ ಕೇಳಿದೆ. ಅವಳು ಬಹಳ ಚೆನ್ನಾಗಿ ಹೇಳಿದಳು. ಇಲ್ಲಿ ನಾವೆಲ್ಲ ಒಂದೇ ಸಮಾನ ಅನ್ನುವ ಹಾಗೆ ಇರುತ್ತೇವೆ. ಒಂದೇ ಸಮಾನ ಅನ್ನುವ ಹಾಗೆ ಕಷ್ಟ ಪಡುತ್ತಿದ್ದೇವೆ. ನಡೆದು ನಡೆದು ಸುಸ್ತಾಗುತ್ತಿದ್ದೇವೆ. ನೋಡಿ ಖುಷಿ ಪಡುತ್ತಿದ್ದೇವೆ. ಮತ್ತೆ ಅದರಿಂದ ಎಲ್ಲರೂ ಒಂದೇ ಅನ್ನಿಸುತ್ತೆ. ಆಮೇಲೆ ಇದು ಸ್ವಲ್ಪ ಕಾಲದ ಬದುಕು. ಒಂದು ವಾರ ಕಳೆದ ಮೇಲೆ ಯಾರು ಯಾರು ಎಲ್ಲೆಲ್ಲೋ. ನಮ್ಮ ನಮ್ಮ ಊರಿಗೆ ಹೋಗಿಬಿಡುತ್ತೇವೆ. ಹಾಗಾಗಿ ಎಲ್ಲರೂ ಸಾಧ್ಯವಾದಷ್ಟು ಒಳ್ಳೆಯವರಾಗೇ ಇರಲು ಪ್ರಯತ್ನಿಸುತ್ತೇವೆ. – ಒಳ್ಳೆಯತನಕ್ಕೂ ಅದು ಕಾಣಿಸಿಕೊಳ್ಳುವುದಕ್ಕೂ ಎಷ್ಟೊಂದು ಕಂಡೀಷನ್ನುಗಳು.

ನಿಜವಾಗಲೂ ನಮ್ಮ ಒಳ್ಳೆತನ ನಮ್ಮ ಸಂತೋಷ ಹೀಗೇ ಮೇಲೆ ಮೇಲೆ ತೇಲುವುದು ಅಷ್ಟೇನೋ ಏನೋ. ಈಗ ಯೋಚನೆ ಮಾಡಿದರೆ ಅನ್ನಿಸುತ್ತದೆ. ನಡೆಯುತ್ತಿರುವಾಗ, ನೋಡಿ ಖುಷಿಪಡುತ್ತಿರುವಾಗ, ಮಾತನಾಡಿಸಿದವರನ್ನು ಸೌಜನ್ಯದಿಂದ ಕೇಳುತ್ತಿರುವಾಗ, ಒಳ್ಳೆಯವನಾಗಿರುವಾಗ ನನ್ನ ಒಳಗೇ ಗುಟ್ಟಾಗಿ ಎಷ್ಟೊಂದೆಲ್ಲ ಇದ್ದವು.

ಬರವಣಿಗೆಯ ಹನ್ನೊಂದನೆಯ ದಿನ

ಒಳಗಿರುವ ಗುಟ್ಟುಗಳು. ಗುಟ್ಟುಗಳು ಇವೆ ಎಂದು ಗೊತ್ತಿರುವುದು. ಇವೆರಡನ್ನೂ ದಾಟಿ ಸುಮ್ಮನೆ ಬರೀ ಇರುವ ಕ್ಷಣಗಳು ಕೆಲವು ಇರುತ್ತವಲ್ಲ ಅಂಥವನ್ನು ಪಡೆಯುವ ಆಸೆ ತುಂಬ ಅದಮ್ಯವಾಗಿರುತ್ತದೆ.

ಒಂದು ಸಾರಿ ಕೊಡಚಾದ್ರಿಗೆ ಹೋಗಿದ್ದೆವು. ನಾನು ಮತ್ತು ರಾಜು ಇಬ್ಬರೂ ದಾರಿ ತಪ್ಪಿಬಿಟ್ಟೆವು. ಕಾಡು ದಟ್ಟವಾಗಿತ್ತು. ಮಳೆಗಾಲದಲ್ಲಿ ನೀರು ಬೆಟ್ಟದಿಂದ ಕೆಳಗಿಳಿಯುವ ಜಾಡು ಕಾಣಿಸಿತು. ಇಳಿದೆವು. ಕಾಲು ಊರಲು ಗಟ್ಟಿಯಾದ ಜಾಗವಿಲ್ಲ. ಬರೀ ಕೆಂಪು ಧೂಳುಮಣ್ಣು. ಸೂರ್ಯನ ಬೆಳಕು ಇಲ್ಲ. ದಿಕ್ಕು ತಿಳಿಯುವುದು ಕಷ್ಟ. ತುಂಬ ಕಡಿದಾದ ಇಳಿಜಾರು. ಕೈಗೆ ಅಲ್ಲಲ್ಲೆ ಮರಗಳ ಅವಲಂಬನೆ. ಆಮೇಲೆ ಕಲ್ಲುಗಳು ಕಂಡವು. ನುಣ್ಣನೆ ಕಲ್ಲು, ದಪ್ಪ ಕಲ್ಲು, ಉರುಟು ಕಲ್ಲು, ಸಣ್ಣ ಕಲ್ಲುಗಳು, ಕೆಲವು ನಯವಾದ ಬಂಡೆಗಳು. ಕಲ್ಲುಗಳೇ ತುಂಬಿದ ಒಂದು ಮಳೆ ನೀರಿನ ದಾರಿ. ಅಲ್ಲಿ ಇಳಿಯುವುದು ಸುಲಭ ಅನ್ನಿಸಿತು. ಕುಕ್ಕರುಗಾಲಿನಲ್ಲಿ ಕೂತು, ಬೆನ್ನು ಒಂದು ಬಂಡೆಗೆ ಒತ್ತಿ, ಕಾಲಿಗೆ ಸಿಗದ ಇನ್ನೊಂದು ಬಂಡೆಗೆ ಕಾಲು ಇಳಿಬಿಟ್ಟು, ಹೆಜ್ಜೆ ಇಡುತ್ತ, ಹೆಜ್ಜೆ ಇಟ್ಟಾಗ ಕೈ ಆಧಾರವಾಗಿ ಹಿಡಿದಿದ್ದ ಕಲ್ಲು ಕೈಗೇ ಕಿತ್ತು ಬಂದು, ಹೆದರಿ, ಇಳಿದೆವು. ಬೆತ್ತದ-ಮುಳ್ಳು-ಮೈ-ಕೋಲುಗಳ ಪೊದೆ. ಕೈಗೆ ಚುಚ್ಚದೆ, ಮೈಗೆ ಚುಚ್ಚದೆ, ಹಾಗೆ, ಹುಷಾರಾಗಿ ಇಳಿದೆವು. ಒಂದು ನಾನ್ನೂರು ಅಡಿ. ನೀರಿನ ಶಬ್ದ ಕೇಳಿಸಿತು. ಹತ್ತಿರದಲ್ಲೇ ಎಲ್ಲೋ ಇದೆ. ಕಿವಿ ತೋರಿಸಿದ ದಾರಿಯಲ್ಲಿ ಸಾಗಿದೆವು. ನಾಲ್ಕು ಅಲ್ಲ ಆರು ಹಂತಗಳಲ್ಲಿ, ತುಂಬ ಚನ್ನಾಗಿ, ನಮಗೆ ಒಂದು ಚೂರೂ ಭಯ ಹುಟ್ಟಿಸದಹಾಗೆ, ಧುಮುಕುತ್ತಿರುವ ಜಲಪಾತ. ಮೇಲೆ ಎಲ್ಲೋ ನಮಗಾಗಿ ಕಾಯುತ್ತಿದ್ದ ಎಲ್ಲರನ್ನೂ ಮರೆತುಬಿಟ್ಟೆವು. ತಣ್ಣನೆ ಹೊಸ ನೀರಿನಲ್ಲಿ ಕೈಗೆ ಮೈಗೆ ಆದ ತರಚು ಗಾಯಗಳೆಲ್ಲ ಉರಿದು ಆಮೇಲೆ ಹಿತವಾದವು. ಜಲಪಾತದ ಬಂಡೆಗಳಲ್ಲಿ ಪಾಚಿ ಇರಲಿಲ್ಲ. ಜಾರಿಕೆ ಇರಲಿಲ್ಲ. ಮೈಮೇಲೆಲ್ಲ ಸುರಿಯುತ್ತಿರುವ ನೀರಿನಲ್ಲಿ ನೆನೆದುಕೊಂಡು, ಜಲಪಾತದಲ್ಲೆ ಸ್ವಲ್ಪ ದೂರ ಮೇಲಕ್ಕೆ ಹತ್ತಿದೆವು. ರಾಜುಗೆ ಮೈಮೇಲಿನ ಬಟ್ಟೆಗಳನ್ನೆಲ್ಲ ತೆಗೆದು ದಿಕ್ಕೇ ಅಂಬರವಾಗಿ ಸ್ನಾನ ಮಾಡಬೇಕೆನ್ನಿಸಿತು. ನನಗೆ ಯಾಕೆ ಸಂಕೋಚ? ನನ್ನ ಆಸೆ ಇನ್ನೂ ಹಾಗೇ ಉಳಿದಿದೆ. ನೀರಿನಲ್ಲಿ ಸುಮ್ಮನೆ ಮಲಗಿಬಿಟ್ಟೆ. ಸುರಿಯುವ ನೀರಿಗೆ ತಲೆ ಕೊಟ್ಟು ಕೂತುಬಿಟ್ಟೆ. ತಲೆಮೇಲೆ ಬೀಳುವ ನೀರಿನ ಮೃದು ಹೊಡೆತ ಮೈಯೊಳಗೆಲ್ಲ ಎಂಥ ಶಬ್ದ ಹುಟ್ಟಿಸುತ್ತದಲ್ಲ. ಸಂಜೆ ಐದಾಗುತ್ತಿತ್ತು. ಆ ಅದ್ಭುತ ಮನುಷ್ಯ ದೇನಾಶ್ರೀಯನ್ನು ಅವರಣ್ಣ ಡಾಕ್ಟರನ್ನೂ, ಚಿತ್ರದುರ್ಗದ ಪಂಕಜ, ಶಿಕಾಪುರದ ಬಸವರಾಜ ಅವರನ್ನೆಲ್ಲ ಕರೆದುಕೊಂಡು ಬಂದು ಈ ಜಲಪಾತವನ್ನು ತೋರಿಸಬೇಕು ಅನ್ನುವ ಆಸೆ ಹುಟ್ಟಿತು. ಹೊರಟೆವು ಬಂದ ದಾರಿಯಲ್ಲೆ. ಕಾಯುತ್ತಿದ್ದ ಅವರನ್ನು ಕರಕೊಂಡು ಬಂದೆವು. ಅವತ್ತು ಕತ್ತಲು ಕವಿಯುವವರೆಗೂ ಆ ನೀರು ಜಾಡಿನಲ್ಲಿ ನಾಲ್ಕು ಸಾರಿ ಓಡಾಡಿ, ಜಲಪಾತದಲ್ಲಿ ಎರಡೆರಡು ಸಾರಿ ನಡೆದು ರಾತ್ರಿ ಮಲಗಿದರೆ-

ಕಲ್ಲಿಗೆ ಒತ್ತಿದ್ದ ಅಂಗೈ, ಬಂಡೆಗೆ ಒರಗಿದ್ದ ಬೆನ್ನು, ಭಾರ ತಡೆದಿದ್ದ ತೋಳು, ಮೇಲಕ್ಕೆ ನನ್ನ ಮೈಯನ್ನು ತಳ್ಳಲು ದುಡಿದ ತೊಡೆ, ಮುಳ್ಳಲ್ಲಿ ತರಚಿಸಿಕೊಂಡ ಕತ್ತು, ಬಂಡೆಗಳ ಆಕಾರವೆಲ್ಲ ತುಂಬಿಕೊಂಡ ಕಣ್ಣು, ಬೆವರು, ಮೈಯ ಪ್ರತೀ ಕಣವೂ ಏನೇನೋ ಅನುಭವ ಪಡೆದಿದ್ದವಲ್ಲ- ನನ್ನ ಇಡೀ ಮೈ ಕನಸು ಕಂಡಿತು. ನಾನು ಮಲಗಿದ್ದು ಹೌದಾದರೂ ತುಂಬ ಒಳ್ಳೆಯ ನಿದ್ದೆ ಬಂದರೂ ಎಚ್ಚರಕ್ಕಿಂತ ಸ್ಪಷ್ಟವಾಗಿ ನಾನು ಬಂಡೆ ಬಿರುಕುಗಳಲ್ಲಿ ಮರದ ತೊಗಟೆಗಳಲ್ಲಿ ತುಂತುರು ನೀರಿನಲ್ಲಿ ಕರಗಿ ಹೋದಹಾಗೆ, ಅವೆಲ್ಲ ನನ್ನೊಳಗೇ ತುಂಬಿಕೊಂಡೇ ಇರುವ ಹಾಗೆ- ಅಂಥ ಇಡೀ ಮೈ ಪಡೆದ, ಕಂಡ ಕನಸು ಬಿದ್ದೇ ಇಲ್ಲ ಮತ್ತೆ ಯಾವತ್ತೂ. ನಾನು ಇರಲೆ ಇಲ್ಲ. ಅನುಭವ ಬರೀ ಅದು ಮಾತ್ರ ಇತ್ತು. ಈಗ ನೆನಪು ಅಷ್ಟೆ.
ಹಾಗೆ ಹಿಮಾಲಯದಲ್ಲಿ ನನಗೆ ಅನ್ನಿಸಲೆ ಇಲ್ಲ. ಕಣ್ಣು ಏನೇನೋ ನೋಡುತ್ತಿತ್ತು. ಮೈ ನಡೆಯುತ್ತಿತ್ತು. ಜನ ಒಳ್ಳೆಯವರಾಗಿದ್ದರು. ನಾನು ಒಳ್ಳೆಯವನಾಗಿದ್ದೆ. ಆದರೆ ನನ್ನೊಳಗಿನ ನಾನು ಹಾಗೇ ಇತ್ತು.

ನಾವು ಬ್ರಿಂಗ್ಟಾದಿಂದ ಜಾರಿಗೆ ಹೋಗುವಾಗ ನನಗೆ ಚಂದ್ರಳ ಮೇಲೆ ತುಂಬ ಸಿಟ್ಟು ಬಂದಿತ್ತು. ಮೂರ್ತಿಯ ಮೇಲೆ ಸಿಟ್ಟು ಬಂದಿತ್ತು. ಮೂರ್ತಿ ಧಾರಿಣಿಯನ್ನು ನೋಡಿಕೊಂಡಷ್ಟು ಚೆನ್ನಾಗಿ ನಾನು ಚಂದ್ರಳನ್ನು ನೋಡಿಕೊಳ್ಳುವುದಿಲ್ಲವೆಂದು ಅವಳ, ಚಂದ್ರಳ, ಆಪಾದನೆ. ಮೂರ್ತಿಯನ್ನು ನೋಡಿ, ಧಾರಿಣಿಗೆ ಎಷ್ಟೊಂದು ಗಮನಕೊಡುತ್ತಾರೆ, ನಿಮ್ಮ ಹಾಗಲ್ಲ ಎಂದು ಎರಡು ಮೂರು ಬಾರಿ ಹೇಳಿದ್ದಳು. ಮೂರ್ತಿಗಾದರೂ ಯಾಕೆ ಇಂಥ ಜಂಬ, ಹೆಮ್ಮೆ-ಇಡೀ ಜಗತ್ತಿನಲ್ಲಿ ತಾವೇ ಆದರ್ಶ ದಂಪತಿಗಳು ಅಂತ. ದೆಹಲಿಗೆ ಬರುತ್ತ ರೈಲಿನಲ್ಲಿ ತಿಮ್ಮೇಗೌಡರಿಗೂ ಮೂರ್ತಿಗೂ ಪ್ರೀತಿ ಪ್ರೇಮ ದಾಂಪತ್ಯದ ವಿಷಯದಲ್ಲಿ ಬಿಸಿಯಾದ ಚರ್ಚೆ ಆಗಿತ್ತು.

ಬ್ರಿಂಗ್ಟಾದಿಂದ ಒಂದೇ ಸಮನೆ ಇಳಿಜಾರು ಹಾದಿ. ನಡೆಯುವುದೇನೋ ಸುಲಭ. ಒಂದು ಆರಡಿ ಅಗಲದ ಮಣ್ಣು ದಾರಿ. ಬಲಗಡೆ ಹತ್ತು ಸಾವಿರಕ್ಕಿಂತ ಹೆಚ್ಚು ಅಡಿಗಳಷ್ಟು ಆಳದ ಕೊಳ್ಳ. ಅಲ್ಲಿ ಹರಿಯುವ ನದಿ ಪೆನ್ಸಿಲು ಗೆರೆಯ ಹಾಗೆ. ಎಡಗಡೆಗೆ ಮೈಗೇ ತಗಲುವಂತಿರುವ ಬೆಟ್ಟದ ಮೈ. ಎದುರಿಗೆ ಒಂದು ಕುರಿ ಬಂದರೂ ನಿಂತು ನಿಧಾನವಾಗಿ ದಾರಿ ಮಾಡಿಕೊಂಡು ಪರಸ್ಪರ ಸಾಗಬೇಕು. ಕಣ್ಣು ಕಾಣಬಲ್ಲಷ್ಟು ದೂರವೂ ಬೆಟ್ಟಗಳ ಸಾಲು. ಬೆಟ್ಟಗಳ ಬೆನ್ನಲ್ಲಿ ಸುಮ್ಮನೆ ಇಳಿಯುತ್ತ ಬಿದ್ದಿರುವ ಕಾಲುದಾರಿ.

ಇಳಿಜಾರು ದಾರಿಯಲ್ಲಿ ಬೇಗ ನಡೆಯಬೇಕೆಂಬ ಉತ್ಸಾಹ ಹುಟ್ಟುತ್ತದೆ. ಬೆಟ್ಟಗಳಲ್ಲಿ ನಡೆಯುವುದಕ್ಕೆ ಒಂದು ರೀತಿಯ ಲಯ ಬೇಕು. ತುಂಬ ಜೋರಾಗಿ ನಡೆದರೂ ಆಯಾಸ. ನಿಧಾನವಾಗಿ ನಡೆದರೂ ಆಯಾಸ. ಆದರೆ ಒಬ್ಬೊಬ್ಬರ ಲಯವೂ ಬೇರೆಯೇ. ನ್ನ ಮತ್ತು ಚಂದ್ರಳ ನಡಿಗೆ ಹಾಗೆ ಹೊಂದುವುದಿಲ್ಲ. ಅವಳ ಬಲವಂತಕ್ಕೆ ಹೊಂದಿಕೊಂಡೆ. ಒಂಬತ್ತು ಗಂಟೆಯಿಂದ ನಡೆಯುತ್ತಲೇ ಇದ್ದೇವೆ. ಬ್ರಿಂಗ್ಟಾ ಗುಡ್ಡದ ತುದಿಯಲ್ಲಿ ಸೌದೆ ಪುರಳೆ ಹರಡಿಕೊಂಡು ಟೀ ಮಾಡುತ್ತಿದ್ದ ಮನುಷ್ಯನನ್ನು ದಾಟಿದ ಮೇಲೆ ಮತ್ತೆ ಅಂಥವರು ಸಿಕ್ಕೇ ಇಲ್ಲ. ಮದ್ಯಾಹ್ನ ಹನ್ನೆರಡು ಗಂಟೆಹೊತ್ತಿಗೆ ಇಳಿದು ಇಳಿದು ಬೇಸರ ಬಂದರೂ ಇನ್ನೂ ದಾರಿ ಮುಗಿದಿಲ್ಲ. ಎಲ್ಲ ಇಬ್ಬರಿಬ್ಬರ ಒಬ್ಬೊಬ್ಬರ ಮೂರು ಜನ ನಾಲ್ಕು ಜನರ ಗುಂಪಾಗಿ ಒಡೆದು ಹೋಗಿದ್ದಾರೆ.

ನಾನು ಮತ್ತು ಚಂದ್ರ ಸುಮ್ಮ ಸುಮ್ಮನೆ ಆಹಾ ಅದೆಷ್ಟು ಚೆನ್ನ ಇದೆಷ್ಟು ಚೆನ್ನ ಅಂದುಕೊಳ್ಳುತ್ತ ನಡೆಯುತ್ತಿದ್ದೆವು. ಆಗ ಅಲ್ಲೆ ಒಂದು ತಿರುವಿನಲ್ಲಿ ಶ್ರೀನಾಥ, ರಾಜು ಮತ್ತು ಶ್ಯಾಮಲಾ ಸಿಕ್ಕಿದರು. ಅವರಿಗೆ ಒಂದು ಹಾವು ಕಂಡಿತಂತೆ. ಅದು ಯಾವ ಕಲ್ಲು ಸಂದಿಗೆ ಹೋಗಿ ಸೇರಿಕೊಂಡಿತು. ಅದು ನಿಜವಾಗಲೂ ಹಾವು ಹೌದೇ ಅಂತ ಸಂಶೋಧನೆ ಮಾಡುತ್ತಿದ್ದರು. ನಾನು ಚಂದ್ರ ಮುಂದೆ ನಡೆದೆವು. ಇನ್ನೂ ಒಂದು ಗಂಟೆ.

ಯಾಕೋ ಯಾರೂ ಕಾಣಲೇ ಇಲ್ಲ. ಹೊಟ್ಟೆ ಹಸಿಯತೊಡಗಿತು. ನಮ್ಮ ಗುಂಪಿನವರು ಯಾರಾದರೂ ಸಿಗುತ್ತಾರೋ ಅಂತ ನೋಡಿದೆವು. ಯಾರೂ ಇಲ್ಲ. ಒಂದು ಮರ ಇತ್ತು. ಸ್ವಲ್ಪ ನೆರಳಿತ್ತು. ಅಲ್ಲಿ ಕೊಹಿಲಿಗೆ ಹೊರಟ ಗುಂಪಿನವರು ಇಬ್ಬರು ಇದ್ದರು. ಅವರ ಜೊತೆ ಊಟಕ್ಕೆ ಕೂತೆವು.

ಊಟವೆಂದರೆ ಎಂಥ ಊಟ. ಹಿಮಾಲಯದಲ್ಲಿ ನನಗೆ ತಿಳಿಯಿತು. ರುಚಿ ಅನ್ನುವುದು ಬರೀ ಸುಳ್ಳು. ಬರೀ ಲಕ್ಷುರಿ. ನಡೆಯುವುದಕ್ಕೆ ಶಕ್ತಿ ಬೇಕು. ಶಕ್ತಿಬರಲು ಹೊಟ್ಟೆಗೆ ಏನಾದರೂ ಬೇಕು. ಹೊಟ್ಟೆಯಷ್ಟೇ ಮುಖ್ಯ. ಕೇವಲ ಹೊಟ್ಟೆ ಮಾತ್ರ. ನಾಲಗೆ ಅನ್ನುವುದು ಬರೀ ನಾಲ್ಕಂಗುಲ ಚರ್ಮದ ಚೂರು. ಚಪಾತಿಗಳಿದ್ದವು. ಬೆಳಿಗ್ಗೆ ಕಟ್ಟಿಕೊಟ್ಟಾಗ ತುಂಬ ಬಿಸಿ ಇದ್ದವು. ಈಗ ಅವೆಲ್ಲ ಹಳೆಯ ಟೈರಿನ ಚೂರುಗಳು. ತಿಂದಷ್ಟೂ ಮುಗಿಯದು. ನಾಲಗೆಗೆ ಎಂಥ ತಿರಸ್ಕಾರ. ಆದರೂ ತಿನ್ನಬೇಕು. ಚಪಾತಿಗೆ ಧಾರಾಳವಾಗಿ ಹಾಕಿದ್ದ ಎಣ್ಣೆಯಲ್ಲ, ಅಥವ ಡಾಲ್ಡಾನೋ, ಚಳಿಗೆ ದಪ್ಪಗೆ ಬೆಳ್ಳಗೆ ಹೆಪ್ಪುಗಟ್ಟಿತ್ತು. ಪಲ್ಯಕ್ಕೆ ಹಾಕಿದ್ದ ಆಲೂಗಡ್ಡೆಯೆಲ್ಲ ಸಣ್ಣ ಸಣ್ಣ ಜಲ್ಲಿ ಕಲ್ಲುಗಳ ಹಾಗಿದ್ದವು. ಬೇಯಿಸಿದ ಮೊಟ್ಟೆ ಕ್ರಿಕೆಟ್ಟಿನ ಚೆಂಡಿನಂತಿತ್ತು. ನಾಲಗೆ ಇರುವುದನ್ನು ಮರೆತು ಅವನ್ನು ಸಾಧ್ಯವಾದಷ್ಟು ನೇರವಾಗಿ ಹೊಟ್ಟೆಗೆ ಕಳಿಸಬೇಕು. ಜೊತೆಗೇ ಇದ್ದ ಕೊಹಲಿ ಹುಡುಗರ ಹೆಸರು ಮರೆತಿದೆ. ಚಂದ್ರಳಿಗಂತೂ ಹಿಮಾಲಯದ ಆಹಾರಕ್ಕೆ ಹೊಂದಿಕೊಳ್ಳುವುದು ಆಗಲೇ ಇಲ್ಲ. ಗೊಣಗದೆ ತಿನ್ನು ಅಂತ ನಾನು.

ನಾವಿರುವುದು ಕಣಿವೆಯಲ್ಲಿ. ಇಂಥದ್ದು ಆಗಲೆ ಒಂದೆರಡು ದಾಟಿದ್ದೆವು. ಇಲ್ಲಿಂದ ಮುಂದೆ ಇನ್ನೂ ಪೀನಿ ಅನ್ನುವ ಹಳ್ಳಿ ತಲುಪಬೇಕು. ಅಲ್ಲಿಂದ ಜಾರಿಗೆ. ಇಷ್ಟು ಹೊತ್ತೂ ಕಾಣುತ್ತಿದ್ದ ಹಾಗೆ ಉದ್ದಕ್ಕೆ ರಸ್ತೆ ಮೈಚಾಚಿ ಬಿದ್ದಿಲ್ಲ.

ನಾವು ಇಲ್ಲಿ ಕೂತು ಅರ್ಧಗಂಟೆಯಾಗುತ್ತ ಬಂತು. ಯಾಕೆ ನಮ್ಮವರು ಯಾರೂ ಕಾಣುತ್ತಿಲ್ಲ. ನಾನು ಮದುವೆಯಾಗಬೇಕಿದ್ದ ಇನ್ನೊಬ್ಬ ಹುಡುಗಿ ಒಂದು ಕ್ಷಣ ಸುಮ್ಮನೆ ಮನಸ್ಸಿನಲ್ಲಿ ನೆರಳಾಗಿ ಹಾದು ಹೋದಳು. ಯಾರು ಬರದಿದ್ದರೇನು? ನಾವಿಬ್ಬರು ಇದ್ದೀವಲ್ಲ. ಅವರಿಗೆ ಯಾಕೆ ಕಾಯುವುದು? ಹೋಗೋಣ. ಹಾಗಂತ ನಾನು ಅಂದೆನೋ ಚಂದ್ರ ಅಂದಳೋ. ಆ ಭಾವದಲ್ಲಿ ಇಬ್ಬರೂ ಹೊರಟೆವು. ಹುಡುಗರಿಬ್ಬರು ಅಲ್ಲೆ ಉಳಿದರು.

ಹೊರಟಾಗಲೇ ಅನುಮಾನ .ನಮ್ಮ ಬೆನ್ನಿಗಿದ್ದ ಬೆಟ್ಟದ ಮೇಲೆ ಅಲ್ಲಿ ದೂರದಲ್ಲಿ ಒಂದು ರಸ್ತೆ ಕಾಣುತ್ತದಲ್ಲ ಅದರಲ್ಲಿ ಹೋಗಬೇಕಿತ್ತು ಏನೋ. ಅದು, ಆಸರೆ, ಮೇಲಕ್ಕೆ ಏರುವ ರಸ್ತೆಯಂತೆ ಇದೆ. ಅಲ್ಲಿ ಯಾರೂ ನಡೆಯುತ್ತಲೂ ಇಲ್ಲ. ಹಿಮಾಲಯದಲ್ಲಿ ಕಣ್ಣಿಗೆ ಕಾಣುವ ದೂರ ಮೋಸ ಮಾಡುತ್ತದೆ. ಇಲ್ಲೆ ಇದೆ ಅಂತನ್ನಿಸುವ, ಕಣ್ಣೆದುರಿಗೇ ಕಾಣುವ ಜಾಗಕ್ಕೆ ತಲುಪಲೂ ಗಂಟೆಗಟ್ಟಲೆ ನಡೆಯಬೇಕು. ಅದೇ ಸರಿಯಾದ ದಾರಿಯಾಗಿದ್ದರೂ ಮತ್ತೆ ಅಲ್ಲಿಗೆ ಹೋಗುವ ಪ್ರಶ್ನೆಯೇ ಇಲ್ಲ.

ಸುಮ್ಮನೆ ಕೆಳಕ್ಕೆ ಕೆಳಕ್ಕೆ ನಡೆದೆವು. ಸೂರ್ಯ ಎಲ್ಲಿ ಹೋದನೋ. ಮೋಡ ಇಲ್ಲಿಯೂ ಕವಿಯುತ್ತಿದೆ. ನಿಶ್ಚಲತೆ ಹೆಚ್ಚಾಗುತ್ತಿದೆ. ದಾರಿಯ ಮೇಲೆ ಚಾಕ್‌ಲೆಟ್ಟಿನ ಕಾಗದದ ತುಂಡುಗಳೂ ಇಲ್ಲ. ನಮಗಿಂತಲೂ ಮೊದಲೇ ಯಾರೂ ಈ ದಾರಿಯಲ್ಲಿ ಹೋದಂತಿಲ್ಲ. ತುಂಬ ನಿರ್ಜನವಾಗಿದೆ.

ದಾರಿ ಇದೆಯಾ ಇದೆಯಾ ಅಂತ ಚಂದ್ರ ಕೇಳುತ್ತಿದ್ದಳು. ನನ್ನ ಒಳಗೇ ಚಂದ್ರಳ ಮೇಲೆ ಸಿಡುಕು ಬೆಳೆಯುತ್ತಿತ್ತು. ದಾರಿ ಇದಲ್ಲ ಅಂತ ನನ್ನೊಳಗೇ ಅನ್ನಿಸುತ್ತಿತ್ತು. ಆದರೆ ಈಗ ಇರುವ ಕಡೆಯಿಂದ ಬೇರೆ ಇನ್ನೆಲ್ಲಿಗೂ ಹೋಗುವ ಹಾಗೂ ಇಲ್ಲ. ತಪ್ಪು ಮಾಡಿಬಿಟ್ಟೆವು. ಜನರ ಗುಂಪಿನಿಂದ ಬೇರೆ ಆಗದಿದ್ದರೆ ದಾರಿ ತಪ್ಪುತ್ತಿರಲಿಲ್ಲವೇನೋ. ಅಥವಾ ದಾರಿ ತಪ್ಪಿದ್ದರೂ ಜನ ಜೊತೆಗೆ ಇರುತ್ತಿದ್ದರು.

ಕವಲು ಕಾಣಿಸಿತು. ನಮ್ಮ ಎದುರು ನೆಲದ ಮೇಲೆ ಬಿದ್ದ ದೊಡ್ಡ ಬಂಡೆ. ಅದರ ಮೇಲೆ ಅಸ್ಪಷ್ಟವಾದ ಬಾಣದ ಗುರುತು. ಖುಷಿ ಆಯಿತು. ದಾರಿ ಸಿಕ್ಕಿತು. ಬಾ ಬೇಗ ಬೇಗ ಅಂತ ಅವಸರ ಮಾಡಿದೆ.ಆದರೆ ಬಾಣಗಳ ಗುರುತು ಎಡಕ್ಕೂ ಇದೆ ಬಲಕ್ಕೂ ಇದೆ ಅನ್ನಿಸುತ್ತಿದೆ. ಬಲಗಡೆಯದು ಇಳಿಯುವ ದಾರಿ. ಕಲ್ಲು ಬಂಡೆಗಳ ದಾರಿ. ಎಡಗಡೆಯದು ಸುಮ್ಮನೆ ಅಲ್ಲೆ ಸುತ್ತುವ ದಾರಿಯ ಹಾಗಿದೆ. ಬಂಡೆಗಳ ದಾರಿ ಕಡಿದಾಗಿದೆ.

ದಾರಿ ಹೌದೆ ಅಂತ ನೋದಲು ಒಬ್ಬನೇ ಹೋದೆ. ಅಥವಾ ನೋಡಿ ಬನ್ನಿ ಆಮೇಲೆ ಬರುತ್ತೇನೆ ಅಂತ ಚಂದ್ರ ಹೇಳಿದಳೋ. ಅಲ್ಲೆ ಕುಳಿತಳು. ಬಂಡೆಗಳ ದಾರಿಯಲ್ಲಿ ಇಳಿದೆ. ಕೂತು ಬಂಡೆಗೆ ಮೈ ಊರಿ ಇಳಿದೆ. ಇಳಿಯುತ್ತ ಇಳಿಯುತ್ತ ಇದ್ದಂತೆ ಈ ದಾರಿ ಎಲ್ಲಿಗೂ ಹೋಗುವುದಿಲ್ಲ. ಅನ್ನಿಸಿತು. ಕನಸಿನಲ್ಲಿ ಕಾಣುವ ದಾರಿಯ ಥರ. ಮುಂದೆ ಹೋದಷ್ಟೂ ಇಕ್ಕಟ್ಟಾಗುತ್ತಿದೆ. ಚಂದ್ರ ಕೂಡ ಕಾಣುತ್ತಿಲ್ಲ. ಅವಳ ಧ್ವನಿ ಕೇಳಿಸಿತು. ದಾರಿ ಇದೆಯಾ? ದಾರಿ ಇದೆಯಾ?

ವಾಪಸ್ಸು ಬಂದೆ.

ಕಳೆದುಹೋಗಿಬಿಟ್ಟೆವು ಅನ್ನಿಸಿತು. ಮೋಡಗಳು ಬಿಗಿದುಕೊಂಡುಬಿಟ್ಟಿದ್ದವು. ಜೋರಾಗಿ ಕೂಗಬೇಕು ಅನ್ನಿಸಿತು. ರಾಜೂ ರಾಜೂ ಅಂತ ಇಬ್ಬರೂ ಕೂಗಿದೆವು. ರಾಜು ಅನ್ನುವ ಹೆಸರು ಕೂಗುವುದು ಸುಲಭ. ವಿಶಾಲ ಹಿಮಾಲಯದಲ್ಲಿ ನಮ್ಮ ಧ್ವನಿ ಎಷ್ಟು ದೂರ ಕೇಳಿಸೀತು. ನಿಶ್ಚಲ ಮದ್ಯಾಹ್ನ ಗೋಡೆಯಹಾಗಿತ್ತು. ಮತ್ತೆ ಮತ್ತೆ ಕೂಗಿದೆವು. ನಮ್ಮ ಕೂಗು ಕೇಳಿಸುವಷ್ಟು ದೂರದಲ್ಲಿ ಯಾರೂ ಇಲ್ಲ. ಅಂತ ನಮಗೆ ಗೊತ್ತಾಗಿತ್ತು.

ಮಳೆ ಬಂದರೆ ಅನ್ನುವ ಯೋಚನೆ ಬಂತು. ಎಡಗಡೆಯ ಜಾಡಿನಲ್ಲಿ ನಡೆದೆವು. ಸ್ವಲ್ಪ ದೂರ ನಡೆಯುವುದು. ನಿಲ್ಲುವುದು, ಕೂಗುವುದು, ಇದು ದಾರಿ ಇರಬಹುದು ಅಂತ ನಡೆಯುವುದು, ನಡೆಯುತ್ತಿದ್ದಂತೆ ಅನುಮಾನ ಪಡುವುದು, ನಿಲ್ಲುವುದು, ಕೂಗುವುದು.

ಒಂದು ದೊಡ್ದ ಬೋರೆ ಕಾಣಿಸಿತು, ನೂರಿನ್ನೂರು ಎತ್ತರದ್ದು. ಅದರ ಮೇಲೆ ಒಂದೆರಡು ಮರಗಳು. ಒಂದು ಮನೆ, ಎತ್ತರ ಕಂಬಗಳ ಮೇಲೆ ಒಂದು ವೇದಿಕೆ ಮಾಡಿ ಅದರ ಮೇಲೆ ಮರಗಳ ಹಲಗೆಗಳಿಂದ ಕಟ್ಟಿದ ಮನೆ. ಅಲ್ಲಿ ಯಾರೋ ಹೆಂಗಸು ಬಾಗಿಲಲ್ಲಿ ನಿಂತ ಹಾಗೆ ಅಥವ ಹೊರಗೆ ಬರುತ್ತಿರುವ ಹಾಗೆ ಕಾಣುತ್ತಿದೆ. ಒಬ್ಬ ಮುದುಕಿ ಕೂತಿದ್ದಾಳೆ. ಇನ್ನೊಬ್ಬ, ಯಜಮಾನ ಇರಬೇಕು, ಜಗಲಿಯ ಮೇಲೆ.

ನಾನು ಕೆಳಗಿನಿಂದ ಗಟ್ಟಿಯಾಗಿ ‘ಪೀನಿ, ಪೀನೀ’ ಅಂತ ಕೂಗಿದೆ. ‘ಕೆಳಗೆ ಕೆಳಗೆ’ ಅಂತ ಅವನು ಅಲ್ಲಿಂದ ಹೇಳಿದ. ಕೆಳಗೆ ಇಳಿಯಲು ದಾರಿಯೇ ಇಲ್ಲ. ‘ನಹಿ, ನಹಿ, ನೀಚೇ, ನೀಚೇ’ ಅಂದ. ನಡೆದೆವು. ಅವನು ಹೇಳಿದ ಕಡೆ ದಾರಿ ಥರ ಇದೆ ಅಂತ ನಂಬಿ, ತಿರುವಿನಲ್ಲಿ ಮನೆ ಮರೆಯಾಯಿತು. ಅವನ ಧ್ವನಿ ಮತ್ತೆ ಕೇಳಿಸಿತು. ‘ಅಲ್ಲಲ್ಲ, ಅಲ್ಲಿ, ಅಲ್ಲಿ, ಕೆಳಗೆ, ಕೆಳಗೆ,’ ಅವನು ನಮಗೆ ಕಾಣುತ್ತಿಲ್ಲ. ನಾವು ಅವನಿಗೆ ಕಾಣುತ್ತಿದ್ದೇವೆ. ಅವನ ಧ್ವನಿಯಲ್ಲಿ ಕೋಪ ಇದ್ದಹಾಗಿತ್ತು. ಇವರಿಗೆ ಇಷ್ಟೂ ಅರ್ಥವಾಗುವುದಿಲ್ಲವಲ್ಲ ಅಂತ ಜಾಗ ಚೆನ್ನಾಗಿ ಗೊತ್ತಿರುವವನ ಕೋಪವೆ? ಅಲ್ಲೆ, ಅಲ್ಲಿ ಅಂದರೆ ಎಲ್ಲಿ ಅಂತ? ನಾವು ನಡೆಯುತ್ತಿದ್ದ ದಾರಿ ಬಿಟ್ಟು ದಾರಿಯೇ ಇಲ್ಲದ ಮುಳ್ಳುಪೊದೆಗಳತ್ತ ಹೆಜ್ಜೆ ಹಾಕಿದಾಗ ಧ್ವನಿ ಅವನದು ಸುಮ್ಮನಾಯಿತು.

ನಾವು ಅವನ ಮನೆಗೇ ಹೋಗಬೇಕಿತ್ತೆ? ನೂರಿನ್ನೂರು ಅಡಿ ಏರಿ? ಇಲ್ಲ. ಹೀಗೇ ಹೋಗಿ ಅಂದನಲ್ಲ. ಹೋಗೋಣ , ಹೋದೆವು. ಎದುರಿಗೆ ದೊಡ್ದ ಪೈನ್ ಮರಗಳ ಕಾಡು ಒಂದು ಕಾಣಿಸಿತು.

ಮತ್ತೆ ಮುಂದಿನ ಅರ್ಧ ಗಂಟೆ ಹೊತ್ತಿನಲ್ಲಿ ಏನೇನೆಲ್ಲ ಆಯಿತು ಅದನ್ನು ಬರೆಯಲು ಸಾಧ್ಯವೇ ಇಲ್ಲ. ಒಂದೊಂದು ಕ್ಷಣದಲ್ಲೂ ಹತ್ತು ಹತ್ತು ಭಾವಗಳು ಮನಸ್ಸಿನಲ್ಲಿ ಹುಟ್ಟಿ ಒಂದರೊಳಗೊಂದು ಬರೆಯುತ್ತಿದ್ದರೆ ಹೇಳುವುದು ಏನನ್ನ? ಹೇಗೆ?

ಮರಗಳ ಗುಂಪು ಕಾಣಿಸಿತು ಅಂತನ್ನುವ ಹೊತ್ತಿಗೇ ಧೋ ಧೋ ಮಳೆ ಶುರುವಾಯಿತು ಹನಿ ಬೀಳುತ್ತಿದೆ ಅನ್ನುವುದು ಗೊತ್ತಾಗುವ ಕ್ಷಣದಲ್ಲೆ ಇಬ್ಬರೂ ನಮಗೆ ಗೊತ್ತಿಲ್ಲದೆ ಓಡುತ್ತಿದ್ದಂತೆ ಆಲಿಕಲ್ಲುಗಳು ಜೋರಾಗಿ ಅಬ್ಬಾ ಅಷ್ಟು ಜೋರಾಗಿ ಬೀಸುವುದು ಸಾಧ್ಯವೇ ಅನ್ನಿಸುವಂತೆ ಗಾಳಿ ಬೀಸಿತು. ಶಬ್ದ. ರಪ ರಪ ಮಳೆಹನಿಗಳ ಏಟು. ಆಲಿಕಲ್ಲು.

ಪೈನ್ ಮರಗಳಿಗೆ ನೆರಳು ಇಲ್ಲ. ಆದರೂ ಬಯಲಿಗಿಂತ ಅಲ್ಲಿರುವುದು ವಾಸಿ. ಸುಮ್ಮನೆ ಮಳೆಗೆ ಗಾಳಿಗೆ ಆಲಿಕಲ್ಲಿಗೆ ಮೈ ಒಡ್ಡಿ ಭಯಪಡುವುದಲ್ಲದೆ ಬೇರೇನು ಮಾಡಬಹುದು. ಬೆಟ್ಟಕ್ಕೆ ಶಕ್ತಿ ಇದೆ. ದೃಡವಾಗಿ ನಿಂತಿದೆ. ಮಳೆಗೆ ಶಕ್ತಿ ಇದೆ. ಬೆಟ್ತವನ್ನು ಕರಗಿಸುವ ಹಾಗೆ ಹೊಯ್ಯುತ್ತಿದೆ. ಗಾಳಿಗೆ ಶಕ್ತಿ ಇದೆ. ಬೆಟ್ಟವನ್ನೂ ಕಾಡನ್ನೂ ನೆಲವನ್ನಾಗಿ ಮಾಡಲು ಬೀಸುತ್ತಿದೆ. ಈ ಶಕ್ತಿಗಳಿಗೆ ನಾನು ಮತ್ತು ಚಂದ್ರ ಇರುವುದು ಲೆಕ್ಕಕ್ಕೇ ಇಲ್ಲ. ನಾವು ಅಂದರೆ ಬರೀ ಮೈ. ಬರೀ ಮನಸ್ಸು. ತುಂಬ ಭಯ. ಈಗ ಹಿಮಾಲಯ ಕಾಣುತ್ತಿಲ್ಲ. ಆಕಾಶ ಕಾಣುತ್ತಿಲ್ಲ. ಆಕಾರ ಕಾಣುತ್ತಿಲ್ಲ. ಕಣ್ಣೆದುರಿಗೆ ಸುತ್ತಲೂ ಕಂಬಿಗಳ ಹಾಗೆ ಪೈನ್ ಮರದ ಕಾಂಡಗಳು. ನನ್ನ ಮೈಯೊಳಗೆ ನಾನು. ಚಂದ್ರಳೊಳಗೆ ಚಂದ್ರ. ಅಂಗಿಯೊಳಗೆ ಬೆವರಿದ ಮೈ. ಬೆವರಿಗೆ ಬೆರೆತ, ನೆನೆದ ಅಂಗಿಯಿಂದ ಇಳಿದು ಮೈ ಒದ್ದೆ ಮಾಡುವ ಮಳೆಯ ನೀರು. ಎರಡೆ ನಿಮಿಷದಲ್ಲಿ ನೆಲಕಾಣದಂತೆ ಹರಡಿಕೊಂಡ ಆಲಿಕಲ್ಲುಗಳು. ಮಳೆಗೆ ಕರುಣೆ ಇಲ್ಲ. ಬೆಟ್ಟಕ್ಕೆ ಕರುಣೆ ಇಲ್ಲ. ಗಾಳಿಗೆ ಕರುಣೆ ಇಲ್ಲ. ನಾನು ಯಾಕೆ ಇಲ್ಲಿಗೆ ಬಂದೆ? ಚಂದ್ರ ಯಾಕೆ ನನ್ನ ಜೊತೆ ಇದ್ದಾಳೆ? ಏನಾದರೂ ಆದರೆ? ಏನಾದರೂ ಅಂದರೆ ಏನು? ಸತ್ತು ಹೋಗುತ್ತೇವಾ? ಇಲ್ಲಿಂದ ತಪ್ಪಿಸಿಕೊಳ್ಳಬೇಕು. ಹೇಗೆ? ಯಾವಾಗ? ಪಾರಾಗುತ್ತೇವಾ? ಈ ಮಳೆ ನಿಲ್ಲುತ್ತದೆಯೇ? ಚಂದ್ರ ನನ್ನ ಜೊತೆ ಇರಬಾರದಾಗಿತ್ತು. ಯಾಕೆ, ಅವಳ ಜವಾಬ್ದಾರಿ ಈಗ ನನಗೆ ಬೇಡವಾಗಿದೆಯಾ? ನಮ್ಮ ಜೊತೆ ಇನ್ನು ಯಾರಾದರೂ ಇರಬೇಕಾಗಿತ್ತು ಯಾರು? ಯಾರಾದರೂ ಇದ್ದು ತಾನೆ ಏನಾಗುತ್ತಿತ್ತು? ಏನು ಮಾಡುತ್ತಿದ್ದರು? ನಾನಿದ್ದು ಚಂದ್ರಳಿಗೆ ಏನು ಮಡಬಲ್ಲೆ. ಅವಳಿದ್ದು ನನಗೆ ಏನು? ನಾನು ಏನು ಮಾಡಲಿ? ಬೇರೆ ಯಾರಾದರೂ ಇದ್ದು ಅವರು ನನಗಿಂತ ಬೇರೆ ಥರ ಇರಲು ಆಗಿದ್ದರೆ ಆಗ ಚಂದ್ರಳಿಗೆ ನನ್ನ ಬಗ್ಗೆ ಏನನ್ನಿಸುತ್ತಿತ್ತು. ನನಗೇ ನನ್ನ ಬಗ್ಗೆ ಏನನ್ನಿಸುತ್ತಿತ್ತು?

ಹೆದರ ಬೇಡ ಮಳೆ ನಿಲ್ಲುತ್ತೆ. ಇಲ್ಲೆ ಎಲ್ಲೋ ಹಳ್ಳಿ ಇರಬೇಕು. ಹೋಗೋಣ. ನಮಗೆ ಯಾರಾದರೂ ಸಿಗುತ್ತಾರೆ. ಹೀಗಂತ ಚಂದ್ರಳಿಗೆ ಹೇಳುತ್ತಿದ್ದೆ. ಆದರೆ ನನಗೇ ಹೆದರಿಕೆ ಆಗಿತ್ತು. ಏನೂ ಆಗುವುದಿಲ್ಲ ಅಂತಲೂ ಅನ್ನಿಸುತ್ತಿತ್ತು. ಶಿವಮೊಗ್ಗದ ನಮ್ಮ ಮನೆ, ಮನೆಯಲ್ಲಿ ನಮ್ಮ ರೂಮು, ರೂಮಿನಲ್ಲಿ ನಮ್ಮ ಮಂಚ, ಅದರ ಮೇಲೆ ದಿಂಬಿಗೊರಗಿ, ಕಿಟಕಿ ಪಕ್ಕದಲ್ಲಿ. ಓದುತ್ತ ನಾನು ಇರುತ್ತಿದ್ದ ಚಿತ್ರ ಮನಸ್ಸಿಗೆ ಬರುತ್ತಿತ್ತು. ಏನಾದರೂ ಆದರೆ? ಇಲ್ಲ. ಏನೂ ಆಗುವುದಿಲ್ಲ, ಹೌದೆ?

ಸುಳ್ಳು, ಇದೆಲ್ಲ ಸುಳ್ಳು, ಯಾಕೆಂದರೆ ನಮಗೆ ನಿಜವಾಗಿ ಶುದ್ಧ ಭಯವನ್ನು ಪಡುವುದಕ್ಕೂ ಬರುವುದಿಲ್ಲ. ನನ್ನ ಒಳಗೇ ಎಲ್ಲೋ ವಿಶ್ವಾಸ ಇತ್ತು. ಕೊನೆಯ ಪಕ್ಷ ಮಳೆ ಕಡಿಮೆ ಆದರೆ ಇಲ್ಲೆ ಒಂದೆರಡು ಕಿಲೋ ಮೀಟರ್ ಅಳತೆಯಲ್ಲಿ ಹಳ್ಳಿ ಇದೆ. ಅಥವ ನಮಗೆ ‘ಕೆಳಗೆ ಕೆಳಗೆ’ ಅಂತ ಹೇಳಿದ ಮುದುಕನ ಮನೆ ಇದೆ ಅನ್ನುವ ವಿಶ್ವಾಸ. ಜನ ಇದ್ದಾರೆ. ಜನ ಅಂದರೆ ಅವರೂ ಜನವೆ. ಯಾರೂ ಯಾರೆಂದರೆ ಯಾರೂ ಇಲ್ಲದೆ ಬರೀ ಶಕ್ತಿಗಳಿಗೇ ನಮ್ಮನ್ನು ಒಡ್ಡಿಕೊಂಡು ಅನುಭವಿಸುವ ಶುದ್ಧ ಭಯ ಹೇಗಿರಬಹುದೊ.

ಸುಳ್ಳು. ಯಾಕೊ ನನ್ನ ಮನಸ್ಸಿಗೆ ಇನ್ನೂ ಧೈರ್ಯವಾಗಿಲ್ಲ. ಗಾಳಿಗೆ ಮಳೆಗೆ ಚಳಿಗೆ ಮೈ ಒಡ್ಡಿ ಎಲ್ಲ ತೆರೆದುಕೊಂಡು ಬಿದ್ದಿರುವ ಬೆಟ್ಟ ಮತ್ತು ಬೀಸುತ್ತಿರುವ ಗಾಳಿ ಬೀಳುತ್ತಿರುವ ಮಳೆ ಎಲ್ಲ ಸುಮ್ಮನೆ ಇವೆ. ಹಾಗೆ ಸುಮ್ಮನೆ ಇರುವುದು ಮಾತ್ರ ನಿಜ, ಭಯವೋ ಕರುಣೆಯೋ ಇತ್ಯಾದಿ ಭಾವನೆಗಳು ಬರೀ ಸುಳ್ಳು. ಶುದ್ಧ ಭಯ, ಶುದ್ಧ ಪ್ರೀತಿ ಇಂಥವೆಲ್ಲ ಸಿಗಲಿ ಎಂದು ಹಾರೈಸುವುದೇ ತಪ್ಪು ಮತ್ತು ಸುಳ್ಳು. ಹೌದೆ?

ಬರವಣಿಗೆಯ ಹನ್ನೆರಡನೆಯ ದಿನ

ಹಿಮಾಲಯಕ್ಕೆ ಮಾನವೂ ಇಲ್ಲ ಅವಮಾನವೂ ಇಲ್ಲ. ಮಾನವೆಂದರೆ ಅಳತೆಯೆಂದು ಅರ್ಥವಂತೆ. ಅಳತೆ ಇರುವುದು ನನಗೆ, ನಮಗೆ. ಅವಮಾನ ಇರುವುದೂ ನನಗೆ. ಅದಕ್ಕೇ ಹಿಮಾಲಯಕ್ಕೆ ಅವಮಾನ ಮಾಡುತ್ತಿದ್ದೇವೆ. ಅದರ ಎತ್ತರ ಅಳೆದು, ಅಗಲ ಲೆಕ್ಕ ಹಾಕಿ, ಫೋಟೋ ತೆಗೆದು ಮಾನದಲ್ಲಿ ಬಂಧಿಸುತ್ತೇವೆ. ನಮ್ಮ ಅಳತೆಗೆ ಅದನ್ನು ಕುಗ್ಗಿಸಿ ಆಲ್ಬಮ್ಮಿನ ಫ್ರೇಮಿನಲ್ಲಿ ಕಟ್ಟಿಹಾಕುತ್ತೇವೆ. ಸಿನಿಮಾದಲ್ಲಿ ನೋಡುವ ಹಿಮಾಲಯ ಹಿಮಾಲಯ ಅಲ್ಲ. ಬಡಪಾಯಿ ಕ್ಯಾಮೆರಾ ಹಿಡಿದದ್ದು ಹಿಮಾಲಯ ಅಲ್ಲ. ಹಿಮಾಲಯವನ್ನು ನೋಡದೆ ಕಲ್ಪಿಸಿಕೊಂಡದ್ದು ಹಿಮಾಲಯ ಅಲ್ಲ. ನನಗೇನಾದರೂ ಪ್ರಪಂಚದ ಮೇಲೆಲ್ಲ ನಡೆಸುವಂಥ ಅಧಿಕಾರ ಇದ್ದಿದ್ದರೆ ಹಿಮಾಲಯದ ಫೋಟೋ ತೆಗೆಯುವುದನ್ನು ನಿಷೇಧಿಸುತ್ತಿದ್ದೆ.

ಹಿಮಾಲಯದಲ್ಲಿ ನೋಡಿದ್ದು ನಡೆದಿದ್ದು ಅನುಭವಿಸಿದ್ದು ಏನು? ದೂರ ಅನ್ನುವ ಮಾತಿಗೆ ಅಲ್ಲಿ ಅರ್ಥ ಇಲ್ಲ. ಎತ್ತರ ಅನ್ನುವ ಮಾತಿಗೆ ಅರ್ಥ ಇಲ್ಲ. ವಿಶಾಲ ಅನ್ನುವ ಮಾತಿಗೆ ಅರ್ಥ ಇಲ್ಲ. ನೋಡಿ ನೋಡಿ ಕಣ್ಣಿನ ಮಿತಿ, ನಡೆದು ನಡೆದು ಕಾಲಿನ ಮಿತಿ, ನನ್ನ ಮಿತಿ ನನಗೆ ಗೊತ್ತಾಗುತ್ತಿದೆ.

ಹಿಮಾಲಯದಲ್ಲಿ ನಡೆದ ಪ್ರತಿ ದಿನವೂ ಪ್ರತಿ ಕ್ಷಣದ ನೋಟವೂ ಬಿಸಿಲೂ ಮೋಡವೂ ಮರಗಳೂ ಬೇರೆ ಬೇರೆಯಾಗಿರುತ್ತಿದ್ದವು. ಹಾಗೆ ಬೇರೆ ಬೇರೆ ಎಂದು ಅನುಭವಕ್ಕೆ ಬಂದು ಇದ್ದರೂ ಮಾತಿನಲ್ಲಿ ಬೇರೆ ಬೇರೆ ಎಂದು ಗೊತ್ತಾಗುವ ಹಾಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಈ ಪ್ರತಿಕ್ಷಣ ಹೊಸತರ ಜೊತೆಗೇ ನನ್ನ ಒಳಗಿನ ಜೇಡರ ಬಲೆಗಳು, ಹರಿದ ಕಾಗದದ ಚೂರುಗಳು, ಹಂದಿ ಜಿಂಕೆಗಳನ್ನು ಮಾತಿನಲ್ಲಿ ಹೊರಗೆಳೆದು ಒಣಗಿ ಹಾಕುವುದು ಹೇಗೆ? ನನ್ನೊಳಗೆ ಇವೆಲ್ಲ ಇರುವ ಹಾಗೆ ಗೌಡರ ಮನಸ್ಸಿನೊಳಗೂ ಚಂದ್ರಳ ಒಳಗೂ ಎಲ್ಲರ ಒಳಗೂ ಇರಬಹುದಲ್ಲವೆ? ಆದರೆ ಅದು ಹೇಗೆ ನಾವು ನಮ್ಮ ಒಳಗನ್ನು ಬಚ್ಚಿಟ್ಟುಕೊಂಡು ಶಾಂತ ಸರೋವರವಾಗಿ ಎಲ್ಲವನ್ನೂ ನೋಡುತ್ತೇವೆ. ಅಥವ ಒಳಗೆ ಅದೆಲ್ಲ ಇರುವುದರಿಂದಲೇ ಒಳಗೇನೂ ಇಂಥವಿಲ್ಲದ ಹಿಮಾಲಯ ಇಷ್ಟವೋ?

ಅಥವ ಹಿಮಾಲಯ ನನ್ನ ಕಣ್ಣಿಗೆ ಕಂಡದ್ದು ಬರೀ ಸುಂದರವಾಗಿಯೋ. ಹಿಮಾಲಯ ಏನನ್ನೂ ಬಚ್ಚಿಟ್ಟು ಕೊಳ್ಳುವುದಿಲ್ಲ. ಆದರೆ ಇರುವುದೆಲ್ಲ ಕಾಣುವುದೂ ಇಲ್ಲ. ಕಂಡಷ್ಟೆ ಸಾಕೋ. ಸಾಕು ಅಂದುಕೊಂಡರೂ ಕಾಣದೆ ಇರುವುದನ್ನು ಕಾಣಲಾಗದ ಮಿತಿಯ ಬಗ್ಗೆ ಯಾಕೆ ತಳಮಳ ತಹತಹ. ‘ನನ್ನ ಈ ಗಡ್ಡ ಹಿಮಾಲಯದ ಗುಡ್ಡ’ ಅಂತೆಲ್ಲ ಸುಮ್ಮನೆ ತಲೆಗೆ ಹೊಳೆದ ಪದಗಳನ್ನೆಲ್ಲ ಸೇರಿಸಿ ಪದ್ಯ ಮಾಡಿ ಹಾಡುವ ಗೌಡರ ಮನಸ್ಸಿನೊಳಗೆ ಏನೇನೆಲ್ಲ ಇರಬಹುದು. ಯಾವಾಗಲೂ ಮಾತೇ ಆಡದ ಅನಂತನ ಮನಸ್ಸಿನೊಳಗೆ ಏನೆಲ್ಲ ನಡೆದಿದೆ. ನನ್ನವಳಾದ ಚಂದ್ರ ನನಗೆಷ್ಟು ಗೊತ್ತು. ಇರುವುದೆಲ್ಲವ ಬಿಟ್ಟು – ಬಿಡುವುದೇನು ಬಂತು. ಇರುವುದೆಲ್ಲ ತಿಳಿದದ್ದಾದರೂ ಸಿಕ್ಕಿದ್ದಾದರೂ ಎಲ್ಲಿ? ತಿಳಿದಷ್ಟರಿಂದ ಇರದುದನ್ನೆಲ್ಲ ಊಹೆ ಮಾಡುವುದು ಎಷ್ಟು ನಿಜ. ತಿಳಿಯದೆ ಬಿಡುವುದಾದರೂ ಹೇಗೆ? ಸಿಗಲಿ. ಮೊದಲು ಸಿಗಲಿ. ಅಂದರೆ ಎಲ್ಲಿ ಸಿಗುತ್ತದೆ. ಸಿಗುವುದನ್ನು ಇರುವಂತೆ ಮಾಡಿಕೊಳ್ಳಲು ಯಾಕೆ ಭಯ. ಯಾಕೆ ಹಿಮಾಲಯದಂಥ ಅಡ್ಡಿ. ನನ್ನ ಒಳಗಿನ ಹಿಮಾಲಯ. ಹೇಗೆ ಸಂಚರಿಸಲಿ? ಅಲ್ಲೆಲ್ಲೊ ಉತ್ತರದಲ್ಲಿ ಹಿಮಾಲಯ ಇರುವುದೂ ಗೊತ್ತಿಲ್ಲದಂತೆ ಇಷ್ಟು ವರ್ಷ ಸುಮ್ಮನೆ ಬದುಕಿರಲಿಲ್ಲವೆ? ಹಾಗೇ ನನ್ನೊಳಗೂ ಹಿಮಾಲಯದಂಥದ್ದು ಏನೇನೋ ಇರುವುದನ್ನೆಲ್ಲ ಇಲ್ಲ ಅಂದುಕೊಂಡು, ಅಥವ ಸುಮ್ಮನೆ ಇದೆ, ಇದ್ದರೆ ಇರಲಿ ಅಂತ ಅವಜ್ಞೆ ಮಾಡಿ ಇದ್ದರೆ ಸಾಕೊ.

ಹಿಮಾಲಯಕ್ಕೆ ದಾರಿ ಇದೆ. ಅಲ್ಲಿ ನಡೆಯಲು ನಂಬುವುದಕ್ಕೆ ಅರ್ಹವಾದ ನೆರವು ಇದೆ. ರೈಲು, ಬಸ್ಸು, ದಾರಿಯುದ್ದಕ್ಕೂ ಟೆಂಟು, ಬೆಳಗ್ಗೆ ಟೀ, ದಾರಿಗೆ ಕಟ್ಟಿಕೊಡುವ ಊಟ, ರಾತ್ರಿಗೆ ಕಂಬಳಿ – ಇವೆಲ್ಲ ನೆರವನ್ನು ನೆಚ್ಚಿ ಕಂಡದ್ದು ಬರಿ ಸುಳ್ಳೆ? ನನ್ನೊಳಗಿನ ಚಾರಣಕ್ಕೆ ಯಾವ ನೆರವು ಯಾವ ನಂಬಿಕೆ? ಇರುವುದನ್ನೆಲ್ಲ ನೋಡದೆ ಇರುವುದೇ ಹೇಳದೆ ಇರುವುದೇ ಕ್ಷೇಮವೋ? ಕ್ಷೇಮ ಬೇಡ ಅನ್ನುವ ಧೈರ್ಯ ಬಂದೀತು ಯಾವಾಗ?

ಮತ್ತೆ ಬರವಣಿಗೆಯ ಮೊದಲನೆಯ ದಿನ

ಹೃಷೀಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ದಿನಕ್ಕೆ ಎರಡು ಸಾರಿ ರಾಮ ಝೂಲಾದ ಮೇಲೆ ನಡೆದು ಗಂಗಾನದಿಯ ಆ ದಂಡೆಗೆ ಹೋಗಿಬರುತ್ತಿದ್ದೆ.

ಕ್ರಿಕೆಟ್ ಕಾಮೆಂಟರಿ ಕೇಳುತ್ತಿರುವಾಗ, ಈಗ, ಹೃಷಿಕೇಶದ ನೆನಪು ಆಗುತ್ತಿದೆ. ಬಹಳ ಕಾಲದ ನಂತರ ನಾಲ್ಕು ದಿನ ತಿಮ್ಮೇಗೌಡರ ಗೊತೆ ಕಳೆದದ್ದು. ಅವರೆದುರು ರಾಘು ನನ್ನ ಹಿಮಾಲಯ ಬರಹ ಮೆಚ್ಚಿದ್ದು. ನನಗೇ ಈ ಬರೆದದ್ದನ್ನೆಲ್ಲ ರಹಮತ್‌ಗೆ ಕೊಡಬೇಕು ಅನ್ನಿಸಿದ್ದು, ಅಥವ ತಿಂಗಳಿಗೆ ಎರಡು ಬಾರಿಯಾದರೂ ಹೃಷಿಕೇಶ, ಈಗಲೂ, ಕನಸಿನಲ್ಲಿ ಬರುವುದು ಹೀಗೆ ಏನೇನೋ ಕಾರಣ ಇರಬಹುದು.

ದಿನಕ್ಕೆ ಎರಡು ಬಾರಿ ತೂಗುಸೇತುವೆ ದಾಟಿ ಹೋಗುತ್ತಿದ್ದೆ. ಮಲೆನಾಡಿನ ಅಡಿಕೆ ಸಾರದ ಮೇಲೆ ನಡೆದದ್ದು, ಹಿಂದೆ ಚಂದ್ರಾ ಜೊತೆ ಟ್ರೆಕಿಂಗ್ ಹೋದಾಗ ನೋಡಿದ, ದಾಟಿದ, ಕೆಲವು ಬಾರಿ ಖುಷಿಗೆ ಎಂದು ಹಗ್ಗಕ್ಕೆ ಜೋತು ಬಿದ್ದು ತಲೆಕೆಳಗಾಗಿ ನದಿ ದಾಟುವ ಸಾಹಸ ಅಭ್ಯಾಸ ಮಾಡಿದ್ದು ಇವಲ್ಲ ಆ ಸೇತುವೆ ಮೇಲೆ ಹೋಗುತ್ತಾ ಇರುವಾಗ ಬಿಳೀ ಪಂಚೆ ಉಟ್ಟು ಖಾದಿ ಜುಬ್ಬದ ಜೇಬಿನಲ್ಲಿ ಕೈ ಇಟ್ಟು ನಡೆಯುತ್ತಿದ್ದೆ. ಹರಿದ್ವಾರದಲ್ಲಿ ಇಪ್ಪತ್ತು ರೂಪಾಯಿಗೆ ಒಂದರಂತೆ ಎರಡು ಜುಬ್ಬ ತೆಗೆದುಕೊಂಡಿದ್ದೆ. ಇಲ್ಲಿ ಕೃಷ್ಣಾನಂದರು ನನಗೆ ಪಂಚೆ ಕೊಡುವ ಹೊತ್ತಿಗೆ ಹದಿನೈದು ದಿನ ಕಳೆದಿತ್ತು. ಹೃಷಿಕೇಶ ನನ್ನನ್ನು ನಿಧಾನವಾಗಿ ಒಪ್ಪಿಕೊಳ್ಳುತ್ತಿತ್ತು.

ಡಿಸೆಂಬರಿನ ಕೊನೆಯ ಭಾಗದಲ್ಲಿ, ನುಣ್ಣಗೆ ಕ್ಷೌರ ಮಾಡಿದ ಮುಖದ ಮೆಲೆ ಮತ್ತು ಸ್ವಲ್ಪ ಉದ್ದವಾಗಿ ಬೆಳೆದ ತಲೆಕೂದಲ ಒಳಗೆ ನದಿಯ ಮೇಲಿನ ಡಿಸೆಂಬರ್ ಗಾಳಿ ಜೋರಾಗಿ ಬೀಸುತ್ತಿತು. ಸೇತುವೆಯ ತೀರ ಕೆಳಗೆ ತೆಳುವಾಗಿ ಹರಿಯುವ ಗಂಗೆಯ ಮೀನುಗಳಿಗೆ ಆಹಾರ ಹಾಕಿ ಪುಣ್ಯ ಕಟ್ಟಿಕೊಳ್ಳಿ ಎಂದು ಯಾತ್ರಿಗಳಿಗೆ ದುಂಬಾಲು ಬೀಳುವ ಬಾಲಕಿಯರು ನನ್ನತ್ತ ಗಮನಕೊಡುವುದು ಬಿಟ್ಟಿದ್ದರು. ಹಳತಾದ ಕೊಳಕು ಲಂಗ, ಹರಿದ ಸ್ವೆಟರು ಹಾಕಿಕೊಂಡ ಇಂಥ ಹುಡುಗಿಯರು ನಾನು ಕಂಡಾಗ ನಕ್ಕೂ ನಗದಂತೆ ನಕ್ಕು, ಬೇರೆ ಯಾತ್ರಿಗಳ ಅಂಗಿ ಹಿಡಿದು, ಕೈ ಹಿಡಿದು, ಹಿಟ್ಟಿನ ಗೋಲಿಗಳ ಪ್ಯಾಕೆಟ್ಟು ತೆಗೆದುಕೊಳ್ಳಿ ಎಂದು ಕಾಡುತ್ತಿದ್ದರು. ರೂಪಾಯಿಗೆ ಒಂದು ಪ್ಯಾಕೆಟ್ಟು. ಅವರು ಈಗ ನನ್ನ ಗಮನಿಸುತ್ತಿರಲಿಲ್ಲ. ಹೃಷಿಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ಮೊದಮೊದಲು ಫೋಟೋಗಳನ್ನು ಮಾರಲು ನನ್ನ ಬಳಿ ಬರುತ್ತಿದ್ದವರು, ಸೇತುವೆ ನಡುವೆ ನಿಲ್ಲಿಸಿ ನದಿ ಮತ್ತು ಹಿಮಾಲಯದ ಹಿನ್ನೆಲೆಯ ಫೋಟೋ ತೆಗೆಸಿಕೊಳ್ಳಲು ಒತ್ತಾಯಿಸುತ್ತಿದ್ದವರು ನಾನೊಬ್ಬ ಗಿರಾಕಿಯೇ ಅಲ್ಲ ಅಂತ ಈಗ ತೀರ್ಮಾನಿಸಿಬಿಟ್ಟಿದ್ದರು. ಹೃಷಿಕೇಶ ನನ್ನನ್ನು…..ಸೇತುವೆಯ ಮೊದಲಿಗೇ ಒಂದು ಇದ್ದಿಲು ಒಲೆ ಇಟ್ಟುಕೊಂಡು ದಿನದ ಅಲ್ಲ ಹೊತ್ತಿನಲ್ಲೂ ಒಂದೇ ಸಮ “ಪಾಪಡ್ ಲೇಲೋ, ದುನಿಯಾ ಕಾ ಪಾಪಡ್”ಎಂದು ಬಿಡುವು ಕೊಡದೆ, ಜನ ಅವನತ್ತ ನೋಡಿದಾಗೆಲ್ಲ ಕೂಗುವ ಮುದುಕ ನನ್ನ ಕಂಡಾಗ ಸುಮ್ಮನೆ ಇರುತ್ತಿದ್ದ. ಹೃಷಿಕೇಶ ನನ್ನನ್ನು…. ಗಂಗೆಯ ಆ ಕಡೆಯ ದಡದಲ್ಲಿ ಒಂದು ಟೀ ಅಂಗಡಿ. ಅದರ ಯಜಮಾನನಿಗೆ ಕುರುಚುಲು ಗಡ್ದ. ಕ್ರಾಪು ಮತ್ತು ಅದರೊಳಗೆ ಬಚ್ಚಿಟ್ಟುಕೊಂಡಿದ್ದ. ಸ್ವಲ್ಪ ಉಬ್ಬು ಹಲ್ಲು. ಸದಾ ನಗುಮುಖ. ಕೆಲಸದ ಹುಡುಗನನ್ನು ಮಾತ್ರ ಬೈಯುತ್ತಿದ್ದ. ನಾನು ಅವನ ಅಂಗಡಿಗೆ ಕಾಲಿಟ್ಟ ಕೂಡಲೆ ಸ್ಪೆಶಲ್ ಚಾ ಮಾಡಿ ಉದ್ದ ಲೋಟಕ್ಕೆ ತುಂಬಿ, ಲೋಟವನ್ನು ಒಮ್ಮೆ ಹೆಗಲಮೇಲಿದ್ದ ಟವಲಿನಲ್ಲಿ ಒರೆಸಿ ನನ್ನ ಮುಂದೆ ಇಡುತ್ತಿದ್ದ. ನಾನು ಆರಾಮಾಗಿ ಒಂದು ಸಿಗರೇಟು ಸೇದುತ್ತಿದ್ದೆ. ಸಂಜೆ ಹೊತ್ತು ರಸ್ತೆ ಪಕ್ಕದಲ್ಲಿ ಒಂದು ಒಲೆ ಇಟ್ಟು ಜಿಲೇಬಿ ಕರೆಯುತ್ತಿದ್ದ. ಹಳ್ಳಿ ಹಿಂದಿಯಲ್ಲಿ ಮಾತಾಡುತ್ತಿದ್ದ. ಚಿಲ್ಲರೆ ಇಲ್ಲದಿದ್ದರೆ ನಾಳೆ ಬಂದಾಗ ಕೊಡಿ ಅನ್ನುತ್ತಿದ್ದ. ಒಂದು ದಿನ ಹೋಗದಿದ್ದರೆ ನಿನ್ನೆ ಯಾಕೆ ಬರಲಿಲ್ಲ ಅಂತ ಕೇಳುತ್ತಿದ್ದ. ತನ್ನ ಮಗ, ಸೊಸೆ, ರಸ್ತೆ ಎದುರು ಇರುವ ತನ್ನ ಬಳೆ ಅಂಗಡಿ ಎಲ್ಲದರ ಬಗ್ಗೆ ಏನೇನಾದರೂ ಹೇಳುತ್ತಿದ್ದ. ನನಗೆ ಹಿಂದಿ ತಿಳಿಯುತ್ತದೆ, ಮಾತಾಡಲು ಬರುವುದಿಲ್ಲ ಅಂತ ಅವನಿಗೆ ಗೊತ್ತಿತ್ತು. ಹೃಷಿಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ನೆಲೆ ಇಲ್ಲದೆ ಅಲ್ಲಿ ನೆಲೆಸಿದ್ದ ಹಲವು ನೂರು ಜನರಲ್ಲಿ ನಾನು ಒಬ್ಬನಾಗಿಬಿಟ್ಟಿದ್ದೆ.

ಹೃಷಿಕೇಶಕ್ಕೆ ಬಂದಾಗ ಬಹುಶಃ ನಾನು ಎದ್ದುಕಾಣುವ ಅಪರಿಚಿತ ಆಗಿದ್ದೆ! ಹರಿದ್ವಾರದ ಪ್ರೊಫೆಶನಲ್ ಸನ್ಯಾಸಿಗಳು ನನಗೆ ಒಗ್ಗಿರಲಿಲ್ಲ. ಅವರ ಬದುಕು ಬೇರೆ ಥರದ್ದು. ಅವರು ನನಗೆ ಪರಿಚಯ ಆಗಿ ಅವರೊಡನೆ ಹದಿನೈದು ಇಪ್ಪತ್ತು ದಿನ ಕಳೆಯಲು ವಾರಣಾಸಿಯಲ್ಲಿ ನನಗೆ ಸಿಕ್ಕ ಇಂಗ್ಲಿಷ್ ಮಹಿಳೆ ಕಾರಣ.

ಡಿಸೆಂಬರ್ ತಿಂಗಳ ಮೊದಲ ವಾರದ ಕೊನೆಗೆ ನಾನು ವಾರಣಾಸಿಗೆ ಬಂದೆ. ರಾತ್ರಿಯ ಕೊರೆಯುವ ಚಳಿ. ಸುರಿಯುವ ಮಂಜಿನಲ್ಲಿ ಸ್ಟೇಶನ್ನಿನ ಪ್ರಖರ ದೀಪಗಳು ಮಂಕಾಗಿ, ನೆಲದ ಆಧಾರ ಇಲ್ಲದೆ, ಅಂತರದಲ್ಲಿ ಇದ್ದೂ ಇಲ್ಲದಂತೆ ಉರಿಯುತ್ತಿದ್ದವು. ರೈಲಿನಲ್ಲಿ ನನ್ನ ಜೊತೆ ಬಂದ ಕಾನ್ವೆಂಟಿನ ಮಹಿಳೆಯರು ಹೊರಟುಹೋಗಿದ್ದರು. ಅವರಿಗೆ ಹೋಗಲು ಗೊತ್ತಾದ ಒಂದು ಜಾಗ ಇತ್ತು. ವ್ಯಾಪಾರಿಯ ಮಗ ಗುಡ್‌ಬೈ ಅಂತ ಹೇಳಿ ನಗುತ್ತ ಹೊರಟುಹೋದ. ಅವನಿಗೆ ಹೋಗಲು ಮನೆ ಇತ್ತು. ನಾನು ಕೆಲಸ ಬಿಟ್ಟು ಹೊರಟಿದ್ದೇನೆ ಅಂತ ಅವನಿಗೆ ಹೇಳಿದ್ದೆ. ಪೆನ್‌ಶನ್ ಬರುತ್ತೆ ಅಂತ ಹೇಳಿದ್ದೆ. ಒಳ್ಳೆ ಕೆಲಸ ಮಾಡಿದಿರಿ, ಸರ್ಕಾರಿ ಕೆಲಸದಿಂದ ಏನೂ ಲಾಭ ಇಲ್ಲ ಅಂದ. ಬಿಸಿನೆಸ್ ಮಾಡುವ ಆಸೆ ಇದೆಯಾ ಅಂದ. ಹ್ಞೂ ಅಂದೆ. ಊರು ಬಂದಾಗ ಸುಮ್ಮನೆ ಹೊರಟು ಹೋದ. ರೈಲು ಇಳಿದಾಗ ರಾತ್ರಿ ಹನ್ನೆರಡು. ನಾಲ್ಕು ಗಂಟೆ ತಡ. ಚಳಿ ಎಷ್ಟಿತ್ತು ಅಂದರೆ ಚಳಿಯ ಅನುಭವ ಆಗುವ ಮಿತಿಯನ್ನೂ ಮೀರಿತ್ತು. ನನ್ನ ಜರ್ಕಿನ್ ನೆಟ್ ಬನೀನಿನಷ್ಟು ನಿರುಪಯುಕ್ತವಾಗಿತ್ತು. ಜೊತೆಗೆ ಇದ್ದ ಹೆಗಲು ಚೀಲದಲ್ಲಿ ಒಂದು ಷರಟು ಮಾತ್ರ ಇತ್ತು. ಇನ್ನೊಂದು ಪ್ಯಾಂಟು ಮಂಗಳೂರಲ್ಲೆ ಕಳೆದು ಹೋಗಿತ್ತು. ಬೆಳಗಾದರೆ ಎಲ್ಲಾದರೂ ಹೋಗಬಹುದಾಗಿತ್ತು. ಈಗ ಚಳಿ ಇರದ ಮಲಗುವ ಜಾಗಮಾತ್ರ ಬೇಕಿತ್ತು. ಕೆಲವರು ಮುದುರಿ ಮಲಗಿದ್ದರು. ಒಬ್ಬಿಬ್ಬರು ಕೂಲಿಯವರು ಇದ್ದರೂ ಬರಿಗೈಯ ನನ್ನನ್ನು ತಿರುಗಿಯೂ ನೋಡಲಿಲ್ಲ.

ಸ್ಟೇಷನ್ನಿನ ಹೊರಗೆ ಸೈಕಲ್ ರಿಕ್ಷಾಗಳಲ್ಲಿ ರಿಕ್ಷಾವಾಲಾಗಳು ಮಲಗಿದ್ದರು. ಅವರು ಯಾರನ್ನಾದರೂ ಹೋಟೆಲ್ ಎಲ್ಲಿದೆ ಕೇಳಬೇಕು ಅಂದುಕೊಂಡರೂ ಮೋಸ ಮಾಡಿದರೆ ಅನ್ನುವ ಅಳುಕು ಇತ್ತು. ಆಗ ಬಿಳೀ ಪ್ಯಾಂಟು, ಶರಟು, ಸ್ವೆಟರು, ತಲೆಗೆ ಉಣ್ಣೆ ಟೋಪಿ ಹಾಕಿಕೊಂಡಿದ್ದ ಹುಡುಗ ಸಿಕ್ಕಿದ. ಉಳಿಯಲು ಜಾಗ ಬೇಕೆ? ಬೇಕು. ಎಂಥಾ ಹೋಟೆಲ್? ತುಂಬಾ ಬೆಲೆಯದ್ದು ಬೇಡ. ಎಲ್ಲಿಂದ ಬರ್ತಿದೀರಿ? ಕರ್ನಾಟಕ. ಪ್ರವಾಸಿಯೇ? ಹೌದು. ಹೀಗೆ ಕೇಳುತ್ತ ಕೇಳುತ್ತ ಹೋಟೆಲಿಗೆ ಒಯ್ದ. ದಿನಕ್ಕೆ ನೂರ ಐವತ್ತು. ಅಷ್ಟು ಕೊಡುವುದು ಕಷ್ಟ. ಇರುವ ಎರಡು ಸಾವಿರ ಇನ್ನೂ ಕೆಲವು ತಿಂಗಳಾದರೂ ನನಗೆ ಆಧಾರವಾಗಿ ಉಳಿಯಬೇಕು. ನನಗೆ ನೆಲೆ ಸಿಗುವವರೆಗೆ. ಆದರೆ ಇಲ್ಲಿ, ಈಗ, ನಾನು ಪ್ರವಾಸಿ ಅಂತ ನಟಿಸಬೇಕಿತ್ತು. ಚಳಿಯಿಂದ ತಪ್ಪಿಸಿಕೊಳ್ಳಬೇಕಿತ್ತು. ಒಪ್ಪಿದೆ. ಆ ಹುಡುಗ ತನ್ನ ಹೆಸರು ಪಾಂಡೆ ಅಂತ ಹೇಳಿ, ಹೋಟೆಲ್ಲಿನವನ ಬಳಿ ಕಮೀಷನ್ ಪಡೆದು ಬೆಳಿಗ್ಗೆ ಬೇಗ ಬರುತ್ತೇನೆಂದು ಹೋಗಿಬಿತ್ತ. ಎರಡು ದಪ್ಪ ರಗ್ಗುಗಳನ್ನು ಹೊದ್ದು ನಿದ್ದೆ ಮಾಡಿದೆ.
ಬೆಳಗಾಗುವ ಹೊತ್ತಿಗೆ ಪಾಂಡೆ ಬಂದ. ಬನಾರಸ್ ತೋರಿಸ್ತೇನೆ. ಅಂದ. ಎಷ್ಟು ದಿನ ಇರುತ್ತೀರಿ? ಮೂರು ದಿನ ಅಂದೆ. ಸುಮ್ಮನೆ. ಇಲ್ಲೇ ಇರಲು, ಸಾಧ್ಯವಾದರೆ, ಬಂದವನು ಅಂತ ಹೇಳಲಿಲ್ಲ. ರಿಕ್ಷಾನೋ ಟ್ಯಾಕ್ಸೀನೋ ಅಂದ. ನಡೆಯೋಣ ಅಂದೆ. ನನ್ನತ್ತ ವಿಚಿತ್ರವಾಗಿ ನೋಡಿದ. ಸರಿ ಅಂದ. ಬೆಳಗಿನ ಚಳಿ ಬಿಸಿಲಲ್ಲಿ ಬನಾರಸ್ ಎದ್ದೇಳುತ್ತಿತ್ತು. ಶಾಲೆಗೆ ಹೋಗುವ ಉಣ್ಣೆ ಉಡುಪಿನ ಮಕ್ಕಳು. ತರಕಾರಿ ಮಾರಲು ಬಂದ ಹಳ್ಳಿ ಜನ. ಕಾಂಪೌಂಡಿನ ಬಾಗಿಲಲ್ಲಿ ನಿಂತು ವ್ಯಾಪಾರ ಮಾಡುವ ಸ್ವೆಟರು ತೊಟ್ಟ ಹೆಂಗಸರು ಅಲ್ಲೊಂದು ಇಲ್ಲೊಂದು ಬಾಗಿಲು ತೆರೆದ ಅಂಗಡಿಗಳು…. ಅದು ಯಾವುದೇ ಊರು ಇರಬಹುದು.

ಈ ಊರಲ್ಲಿ ತಿಥಿ ಮಾಡಿಸಿದರೆ ಹಿರಿಯರಿಗೆ ಶಾಶ್ವತವಾದ ಮುಕ್ತಿ ಸಿಗುತ್ತೆ. ತಾನು ಅದನ್ನು ಕಡಿಮೆ ಖರ್ಚಿನಲ್ಲಿ, ಕೇವಲ ಐನೂರು ರೂಪಾಯಿಯಲ್ಲಿ ಮಾಡಿಸಲು ಏರ್ಪಾಡು ಮಾಡಿಕೊಡುವೆ, ಬೇರೆಯವರ ಹತ್ತಿರ ಹೋಗಿ ಮೋಸ ಬೀಳಬೇಡಿ ಅಂತ ಪಾಂಡೆ ಬಲೆ ನೇಯತೊಡಗಿದ. ನಮ್ಮಲ್ಲಿ ತಿಥಿ ಮಾಡಿಸುವ ಸಂಪ್ರದಾಯ ಇಲ್ಲ ಅಂದೆ. ನೀವು ಮುಸ್ಲಿಮರಾ ಅಂದ. ಅಲ್ಲ ಅಂದೆ. ಮತ್ತೆ? ತನ್ನ ಎದೆಯ ಮೇಲೆ ಕೈಯಿಂದ ಶಿಲುಬೆಯ ಆಕಾರ ಮೂಡಿಸುತ್ತಾ ಕ್ರಿಶ್ಚಿಯನ್ನರೆ ಅನ್ನುವ ಹಾಗೆ ನೋಡಿದ. ಅಲ್ಲ ಅಂದೆ. ಮತ್ತೆ ಹಿಂದೂ ಆದರೆ ತಿಥಿ ಯಾಕೆ ಮಾಡಲ್ಲ? ಅವನ ಹತ್ತಿರ ವಾದ ಮಾಡುವಷ್ಟು ಹಿಂದಿ ನನಗೆ ಗೊತ್ತಿರಲಿಲ್ಲ.

ತುಂಬ ದಿನ ಉಳುಯೋದಕ್ಕೆ ಇಲ್ಲಿ ಛತ್ರಗಳು ಇಲ್ಲವಾ ಅಂದೆ. ಇವೆ. ನೀವು ಉಳುಯುವಂಥವು ಇಲ್ಲ ಅಂದ. ಸರ್ಕಾರವೇ ಗಾಂಜಾ ಮಾರುವ ಲೈಸನ್ಸ್ ಅಂಗಡಿ ಹತ್ತಿರ ಉದ್ದ ಗಡ್ಡದವರು, ಬೋಳು ತಲೆಯವರು, ಬೂದಿಬಡುಕರು ಗುಂಪುಗೂಡಿದ್ದರು. ಯಾಕೆ ಇವರೆಲ್ಲ ಹೀಗಿದ್ದಾರೆ? ವಿಶ್ವನಾಥಮಂದಿರದ ಕಿರು ಓಣಿ ಬೆಂಗಳೂರಿನ ಚಿಕ್ಕಪೇಟೆಯ ಅಜ್ಞಾತ ಗಲ್ಲಿಯಂತಿತ್ತು. ಚಪ್ಪಡಿ ಹಾಕಿದ ರಸ್ತೆಯ ಮೇಲೆ ದನಗಳು ಓಡಾಡುತ್ತಿದ್ದವು. ಅಪರಾಜಿತೋ ಸಿನಿಮಾ ಜ್ಞಾಪಕಕ್ಕೆ ಬಂತು. ದೇವಾಲಯದಲ್ಲಿ ನೆಲದೊಳಗೆ ಅಡಗಿದ ನುಣುಪು ಕಲ್ಲು ಮುಟ್ಟಿ ಹೂವಿಟ್ಟಾಗ ಕಾಲಿಗೆ ನೀರಿನಲ್ಲಿ ನೆನೆದ ಚಪ್ಪಡಿ ಕಲ್ಲು ತಣ್ಣಗೆ ತಗಲುತ್ತಿತ್ತು. ಮಂಕು ದೀಪ, ಸಣ್ಣಗೆ ಉರಿಯುವ ಎಣ್ಣೆ ದೀಪ, ಸುತ್ತ ಜನರ ಮೈ‌ಒತ್ತಡ. ಹೆಜ್ಜೆ ಹೆಜ್ಜೆಗೆ ಕಾಡುವ ಪಂಡರಿಗೆ ನೂರೈವತ್ತು ರೂಪಾಯಿ ಕೊಡದೆ ತಪ್ಪಿಸಿಕೊಳ್ಳಲು ಆಗಲಿಲ್ಲ.

ಪಾಂಡೆ ಮತ್ತೆ ತಿಥಿ ಮಾಡಿಸುವುದಕ್ಕೆ, ಮನೆಯವರಿಗೆ ಸೀರೆ ಕೊಡಿಸುವುದಕ್ಕೆ ಗಂಟುಬಿದ್ದ. ದೋಣಿಯಲ್ಲಿ ಕೂತು ಗಂಗೆಯ ಆಕಡೆ ದಡಕ್ಕೆ ಹೋಗುತ್ತೀರಾ. ಬರೀ ಇನ್ನೂರು ರೂಪಾಯಿ ಅಂದ. ಬೇಡವೇ ಬೇಡ ಅಂತಂದಾಗ ಸಂಕಟಮೋಚನ ಮಂದಿರ ತೋರಿಸುತ್ತೇನೆ ಅಂತ ಯೂನಿವರ್ಸಿಟಿ ಹತ್ತಿರ ಕರಕೊಂಡು ಹೋಗಿ ದೇವಸ್ಥಾನಗಳನ್ನು ತೋರಿಸಿದ. ಸಂಜೆ ಹೊತ್ತಿಗೆ ಖುಷಿ ಆಯಿತಾ ಬಕ್ಷೀಸು ಕೊಡಿ ಅಂತ-ಐವತ್ತು, ಸಾಲದು ಎಪ್ಪತ್ತೈದು, ಸಾಲದು ನೂರು, ನೂರೈವತ್ತು ಪಡೆದು ನಾಳೆ ಬೆಳಿಗ್ಗೆ ಬರುತ್ತೇನೆ ಅಂತ ಮಾಯವಾದ.

ನಾನು ಮಾಡಿದ ಮೊದಲನೆಯ ಕೆಲಸ ಅಂದರೆ ಅವನು ಗೊತ್ತು ಮಾಡಿದ ಹೋಟೆಲು ಖಾಲಿ ಮಾಡಿದ್ದು. ಇನ್ನೊಂದು ಚಿಕ್ಕ ಮನೆಯಂಥ ಹೋಟೆಲು. ಹೆಸರು ಸುಂದರವಾಗಿತ್ತು. ನೀಲಗಂಗಾ. ಬಾಡಿಗೆ ತೀರ ಕಡಿಮೆ. ಅದರ ವಾಚಾಳಿ ಮಾಲಕನಿಂದ ತಪ್ಪಿಸಿಕೊಳ್ಳಲು ಮಾರನೆಯ ಇಡೀ ದಿನ ಊರು ಅಲೆದೆ.

ವಿಷಕನ್ಯಾ ಸಿನಿಮಾದ ಪೋಸ್ಟರು ತುಂಬಿದ ಗೋಡೆಗಳು. ಟಿವಿ, ಬಟ್ಟೆ ಜಾಹಿರಾತು ನೇತುಹಾಕಿಕೊಂಡ ಕಂಬಗಳು. ಎಲ್ಲೆಲ್ಲೋ ತಿರುಗುವ ಗಲ್ಲಿಗಳು. ನಿರ್ದಿಷ್ಟ ಕೆಲಸ ಮತ್ತು ಗುರು ಇರುವಂತೆ ಓಡಾಡುವ ಜನಗಳು. ನೀನೆ ಅಂತ ಕೇಳುವವರಿಲ್ಲದೆ ನಾನೂ ಯಾರೊಡನೆಯೂ ಮಾತಾಡದೆ ನನ್ನ ಯಾರೂ ಮಾತಾಡಿಸದೆ ಇಡೀ ದಿನ ವಾರಣಾಸಿ ಸುತ್ತಿದೆ. ಆ ಬೀದಿ ತುಂಬ ಕಡಿತದ ಬೆಲೆಯ ರಜಾಯಿ ಮಾರಾಟದ ಬೋರ್ಡುಗಳು. ತೀರ ಕಡಿಮೆ ಬೆಲೆಯ ಒಂದು ರಜಾಯಿ ಕೊಂಡೆ. ನೀಲಗಂಗಾದಲ್ಲಿ ರಗ್ಗು ಇರಲಿಲ್ಲ.

ಬೆಳಿಗ್ಗೆ ಮತ್ತೆ ಹೊರಟೆ. ವಿಶ್ವನಾಥ ದೇವಸ್ಥಾನದ ದಾರಿ ಸಿಗಲಿಲ್ಲ. ಕೇಳುತ್ತ ಹೊರಟೆ. ದೇವಸ್ಥಾನದ ಪಕ್ಕದಲ್ಲೆ ಇದ್ದ ಗಂಗಾ ನದಿಯ ಉದ್ದಕ್ಕೂ ನದಿಯ ಜೊತೆ ಮತ್ತು ನದಿಯ ವಿರುದ್ಧ ದಿಕ್ಕಿನಲ್ಲಿ ಸುಮ್ಮನೆ ಅಲೆದಾಡಿದೆ. ಈಗುವವರು, ಬಟ್ಟೆ ಒಗೆಯುವವರು, ಹಾರುವವರು, ನಾಯಿಗಳು, ಪೂಜೆಮಾಡುವವರು, ಮೆಟ್ಟಿಲುಗಳು, ಕಟ್ಟೆಯಮೇಲೆ ದುಂಡಾದ ಹಾಳೆ ಛತ್ರಿಗಳು. ದಪ್ಪ ದಪ್ಪ ಅಕ್ಷರಗಳಲ್ಲಿ ಘಾಟಿಯ ಹೆಸರು ಬರೆದುಕೊಂಡ ಬೋರ್ಡುಗಳು. ನದಿಯ ಮೇಲೆ ಓಡಾಡುವ ದೋಣಿಗಳು. ನನ್ನ ನಿರುದ್ದಿಶ್ಯ ನಡೆ…..ಇನ್ನೂ ಹತ್ತು ಗಂಟೆ. ನಡೆದಿದ್ದೆ. ಯಾರನ್ನೋ ಕಾಣಬೇಕು. ಏನೋ ಆಗಬೇಕು, ಇಡೀ ದಿನ ಕಳೆಯುವುದು? ಅಥವಾ ಇಡೀ ಬದುಕು ಹೀಗೇ? ಗೊತ್ತಿಲ್ಲ ನಡೆದಿದ್ದೆ.

ಅಲ್ಲೊಂದು ಕಡೆ ಜಗತ್ತೆಲ್ಲ ಮರೆತಂತೆ ಪುಸ್ತಕ ಓದುತ್ತ ಕುಳಿತ ಒಬ್ಬ ವಿದೇಶೀ ಮಹಿಳೆ ಇದ್ದಳು. ಸ್ವಲ್ಪ ಹೊತ್ತು ನೋಡುತ್ತ ನಿಂತೆ. ಬಿಳೀ ಪಂಚೆ, ಬನೀನು ತೊಟ್ಟ, ಸ್ವಲ್ಪ ಗಡ್ಡ ಇದ್ದ, ಜುಟ್ಟು ಗಂಟು ಹಾಕಿಕೊಂಡ ಒಬ್ಬ ಯುವಕ ನದಿಯಿಂದ ಸ್ನಾನ ಮಾಡಿ ಎದ್ದು ಬರುತ್ತಿದ್ದ. ಅವಳನ್ನು ಗುರುತು ಹಿಡಿದು ಮಾತನಾಡಿಸಿದ. ಇಬ್ಬರೂ ಒಬ್ಬನೇ ಗುರುವಿನ ಶಿಷ್ಯರಂತೆ. ಅವನು ನಿಂತು, ಅವಳು ಓದುತ್ತಿದ್ದ ಪುಟದ ಗುರುತಿಗೆಂದು ಬೆರಳಿಟ್ಟು ಪುಸ್ತಕ ಮಡಚಿ ಮೊದಲ ಮೆಟ್ಟಿಲ ಕಟ್ಟೆಯ ಮೇಲೆ ಕುಳಿತು, ಹಳೆಯ ಕತೆಗಳನ್ನು ಮನುಷ್ಯರನ್ನು ಜ್ಞಾಪಿಸಿಕೊಳ್ಳುತ್ತ ಇದ್ದರು. ಅವನು ಹೋಗುವವರೆಗೆ ಕಾದೆ. ನಾನು ನೋಡಬೇಕಾದವಳು ಇವಳೇನೇ? ಅವಳು ನನ್ನ ಕಣ್ಣ ಅಳತೆಯಿಂದ ತಪ್ಪಿ ಹೋಗದಂತೆ ಅಲ್ಲೆ ಹದಿನೈದು ನಿಮಿಷ ಸುತ್ತಾಡಿದೆ. ಧೈರ್ಯ ಕೂಡುತ್ತ ಚದುರುತ್ತ ಇತ್ತು. ಆಕೆ ಬಿಸಿಲಿಗೆ ಬೆನ್ನು ಕೊಟ್ಟು ಪುಸ್ತಕ ಓದುತ್ತ ತನ್ಮಯಳಾಗಿದ್ದಳು. ಏಚುಸ್ ಮೆ ಅಂದೆ. ಅವಳು ಕ್ಷಮಿಸದೆ, ಶಾಪ ಕೊಡುವವಳಂತೆ ತಲೆ ಎತ್ತಿ ನೋಡಿ, ಹುಬ್ಬು ಗಂಟಿಕ್ಕಿ, ಟಪ್ಪನೆ ಪುಸ್ತಕ ಮುಚ್ಚಿ ‘ಏನು” ಎಂಬಂತೆ ನೋಡಿದಳು. “ನೀವು ಓದುತ್ತಿರುವುದು ಏನು?” ಅಂದೆ. ಎಂಥ ಮೂರ್ಖ ಪ್ರಶ್ನೆ! “ಪ್ರಾರ್ಥನೆಗಳ ಪುಸ್ತಕ.” ಶೊ ವ್ಹಟ್ ಎಂಬಂತೆ ಅವಳ ಮುಖ ಭಾವ. ಅದನ್ನು ದೂರ ಮಾಡಲೆಂಬಂತೆ ತಡವರಿಸುತ್ತ ನನ್ನ ಬಗ್ಗೆ ಹೇಳಿಕೊಂಡೆ. ನಾನು ಇಂಗ್ಲಿಷ್ ಮೇಷ್ಟರು ಇತ್ಯಾದಿ. ನಾನು ಭಿಕ್ಷುಕನೋ ಮೋಸಗಾರನೋ ಅಲ್ಲ ಎಂದು ಖಚಿತವಾಯಿತೇನೋ ಎಂಬಂತೆ ತಾನೂ ಇಂಗ್ಲಿಷ್ ಲಿಟರೀಚರ್ ಕಲಿಸುವವಳು ಇತ್ಯಾದಿ ಹೇಳಿದಳು. ಹೀಗೆ ಮಾತಾಡುತ್ತ ನನ್ನ ಬಗ್ಗೆ ಅಂಥ ಕುತೂಹಲ ಏನೂ ಇಲ್ಲದೆ ಕೇಳುತ್ತ “ನಿನಗೆ ಒಬ್ಬ ಗುರು ಅಗತ್ಯ” ಅಂದಳು.
“ಇರಬಹುದು. ಆದರೆ ಗುರು ಯಾರು. ಎಲ್ಲಿ ಅಂತ ಹುಡುಕುವುದು.”
“ಹುಡುಕುತ್ತ ಹೋಗಬೇಕು. ಒಮ್ಮೆಯಲ್ಲ ಒಮ್ಮೆ ಸಿಗುತ್ತಾನೆ.”
“ನಿಮಗೆ ಸಿಕ್ಕಿದ್ದಾನಾ?”
“ಹೌದು”
“ಯಾರು.”
“ಗಣೇಶಪುರಿ.”
“ಎಲ್ಲಿದ್ದಾರೆ?”
“ಇಂಥ ಕಡೆ ಅಂತ ಇಲ್ಲ. ಇಂಡಿಯಾದಲ್ಲಿ ಎಲ್ಲ ಕಡೆ ಓಡಾಡುತ್ತಿರುತ್ತಾರೆ. ಹರಿದ್ವಾರದಲ್ಲಿ ಅವರ ಒಂದು ಮಠ ಇದೆ. ವಿಚಾರಿಸಿದರೆ ತಿಳಿಯಬಹುದು. ಆತ ತುಂಬ ಅದ್ಭುತ ಮನುಷ್ಯ. ಮನಸ್ಸನ್ನ ತುಂಬ ಚೆನ್ನಾಗಿ ತಿಳೀತಾರೆ. ನಮಗೆ ಏನು ಬೇಕು ಅಂತ ಅವರಿಗೆ ಗೊತ್ತಾಗುತ್ತೆ. ನನ್ನ ಮನಸ್ಸಿಗೆ ಅವರಿಂದ ತುಂಬ ಸಮಾಧಾನ ಸಿಕ್ಕಿತು.”

ಆಮೇಲೆ ಸ್ವಲ್ಪ ಹೊತ್ತು ಸುಮ್ಮನಿದ್ದು ಹೇಳಿದಳು. “ಅವರು ನಿನ್ನ ಗುರು ಆಗಬಹುದೋ, ಗೊತ್ತಿಲ್ಲ. ನಮಗೆ ತಕ್ಕ ಗುರುವನ್ನು ನಾವೇ ಹುಡುಕಿಕೊಳ್ಳಬೇಕು. ಸಿಕ್ಕರೆ ನೋಡು. ನಿನ್ನ ಪುಣ್ಯ.”

ಬನಾರಸಿನಿಂದ ಹರಿದ್ವಾರಕ್ಕೆ ಒಂದು ಇಡೀ ದಿನದ ಪ್ರಯಾಣ. ನಾನಿದ್ದ ರೈಲು ಬೋಗಿಯ ಬಾಗಿಲಿಗೆ ಒಂದೆರಡು ಗುಮ್ ಶುದಾ ನೋಟೀಸುಗಳನ್ನು ಹಚ್ಚಿದ್ದರು. ಕಳೆದು ಹೋದ ಇಂಥವರನ್ನು ಹುಡುಕಿಕೊಟ್ಟರೆ ಸಾವಿರ, ಐದು ಸಾವಿರ ಬಹುಮಾನ ಇತ್ಯಾದಿ. ಎಷ್ಟೊಂದು ಜನ ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ನಿಜವಾಗಿ ಹುಡುಕಲು ಸಾಧ್ಯವೆ, ಸಿಗಲು ಸಾಧ್ಯವೆ? ಈಗ ನನ್ನ ಹುಡುಕಲು ಚಂದ್ರಾ ಏನು ಮಾಡುತ್ತಿರಬಹುದು? ಅಮ್ಮ? ನಾನು ಇಂಥಲ್ಲಿ ಇದ್ದೇನೆ, ಇಂಥಲ್ಲಿ ಹೋಗುತ್ತಿದ್ದೇನೆ ಅಂತ ನನಗೇ ಗೊತ್ತಿಲ್ಲದಿರುವಾಗ ಇನ್ನು ಯಾರು ತಾನೇ ನನ್ನ ಹುಡುಕಲು ಸಾಧ್ಯ?

ಹರಿದ್ವಾರದ ಗುರಿ ಹಿಡಿದು ಹೋಗುತ್ತಿದ್ದ ರೈಲಿಗೆ ಸಿಕ್ಕಿ ಅವತ್ತು ಮಧ್ಯಾಹ್ನ ಯಾರೋ ಹುಡುಗ ಸತ್ತು ಹೋದ. ರೈಲು ಬಹಳ ಹೊತ್ತು ನಿಂತಿತು. ಆದರೂ ಇಳಿದು ಹೋಗಿ ನೋಡಬೇಕು ಅನ್ನಿಸಲಿಲ್ಲ. ನನ್ನ ಬೋಗಿಯ ಪಕ್ಕದಲ್ಲೆ ಕೆಲವು ಹೆಂಗಸರು ಅಳುತ್ತ ಓಡಿ ಬಂದರು. ಅವರು ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು. ಅಳುತ್ತಿದ್ದರು. ರೈಲು ದಾರಿಯ ಪಕ್ಕದಲ್ಲೆ ಇದ್ದ ರಸ್ತೆಯ ಮೇಲೆ ಲಾರಿ ಬಸ್ಸುಗಳು ನಿಂತಿದ್ದವು. ಮಧ್ಯಾಹ್ನದ ಬಿಸಿಲಿನಲ್ಲಿ. ದೂರದಲ್ಲಿ ಇಂಜಿನ್ನಿನ ಕೆಳಗೆ ಹುಡುಗ ಸತ್ತು ಬಿದ್ದಿದ್ದ. ಯಾರೋ? ನನ್ನ ಬೋಗಿಯ್

ಹಾಗೆ ಬಹಳ ಹೊತ್ತು ಒಬ್ಬನೇ ಇರಲಿಲ್ಲ. ಸಂಜೆ ಹೊತ್ತಿಗೆ ಒಂದು ಸ್ಟೇಶನ್ನಿನಲ್ಲಿ ಕೆಲಸಗಾರರ ಒಂದು ಗುಂಪು ನನ್ನ ಬೋಗಿಗೆ ಹತ್ತಿತು. ಹರಿದ್ವಾರಕ್ಕೆ ಹೊರಟಿದ್ದ ಇನ್ನೊಬ್ಬ ಸ್ಮಾರ್ಟ್ ಯುವಕ ಹತ್ತಿದವನೇ ಹಾಸಿಗೆ ದಿಂಬು ಎಲ್ಲ ಅಣಿಮಾಡಿಕೊಂಡು ಅಚ್ಚುಕಟ್ಟಾಗಿ ಹೊದ್ದು ಮಲಗಿಬಿಟ್ಟ. ನಾನು ಓದಿ ಸುಮ್ಮನೆ ಎಸೆದಿದ್ದ ಇಂಗ್ಲಿಷ್ ಪೇಪರನ್ನು ಒಬ್ಬ ಕೆಲಸಗಾರ ಎತ್ತಿಕೊಂಡ. ಇದು ಯಾರದು ಅಂದ. ಸುಮ್ಮನೆ ಇದ್ದೆ. ಓದಿ ಮುಗಿಸಿದ ಹಳೇ ಪೇಪರು. ಏ ಲಾ-ವಾರಿಸ್ ಹೈ ಕ್ಯಾ ಅಂದ. ಯಾರೂ ಮಾತಾಡಲಿಲ್ಲ. ಹಾಗಾದರೆ ನನಗಿರಲಿ ಅಂತ ಚೀಲದೊಳಕ್ಕೆ ಇಟ್ಟುಕೊಂಡ. ಅವನ ಗೆಳೆಯರು ರೇಗಿಸಿದರು. “ಇಂಗ್ಲಿಷ್ ಪೇಪರು ತಗೊಂಡು ಏನು ಮಾಡುತ್ತೀ?” ಇದು ಹೇಗೂ ಲಾ ವಾರಿಸ್. ಯಾತಕ್ಕಾದರೂ ಬರುತ್ತೆ. “ಬಿಟ್ಟಿ ಸಿಕ್ಕಿದ್ದರ ಖುಷಿ. ಯಾರಾದರೂ ಕೇಳಿಯಾರೆಂಬ ಅಳುಕು. ಗೆಳೆಯರೆಲ್ಲರನ್ನೂ ಬಿಟ್ಟು ತಾನೇ ಹೀಗೆ ತಗೊಂಡದ್ದು ಸರಿಯೇ ಎಂಬ ಅನುಮಾನ ಎಲ್ಲ ಸೇರಿ ಸ್ವಲ್ಪ ಪೆಕರನ ಹಾಗೆ ನಕ್ಕ. ಪೇಪರು ಇಟ್ಟುಕೊಂಡ ಚೀಲವನ್ನು ತಟ್ಟಿ ನೇವರಿಸಿದ. ನನ್ನ ಕಡೆಗೆ ನೋಡಿದ. ಬಹುಶಃ ಈ ಪೇಪರು ಇವನದ್ದು ಇರಬಹುದು. ಕೇಳಿಯಾನೋ ಏನೋ ಎಂಬ ಗುಮಾನಿಯಿಂದೆಂಬಂತೆ. ಕುರುಚಲು ಗಡ್ಡ. ಗುಳಿ ಬಿದ್ದ ಕಣ್ಣು. ಬಹುಶಃ ರೋಗದ ಮೈ. ತೆಳ್ಳಗಿದ್ದ. ಆತ ಯಾಕೋ ಬಹಳ ನೆನಪಿನಲ್ಲಿ ಉಳಿದಿದ್ದಾನೆ ಬ್ರಿಂಗ್ಟಾ ಟಾಪಿನಲ್ಲಿ ಕಾಲು ಚಾಚಿ ಟೀ ಕಾಯಿಸುತ್ತಿದ್ದವನ ಹಾಗೆ.

ಹರಿದ್ವಾರದ ರೈಲ್ವೆ ಡಾರ್ಮಿಟರಿಯಲ್ಲಿ ಜಾಗ ಕೇಳಿದ್ದಕ್ಕೆ ಎಲ್ಲರಿಗೂ ಆಶ್ಚರ್ಯ ಆಯಿತು. ಹೆಜ್ಜೆಗೆ ಹತ್ತು ಛತ್ರ ಇರುವ ಊರು ಅದು. ಆಗ ನನಗೆ ಗೊತ್ತಿರಲಿಲ್ಲ. ಅಚ್ಚುಕಟ್ಟಾದ ಕೋಣೆಗಳಿರುವ ಡಾರ್ಮಿಟರಿಯನ್ನು ನೋಡಿ ಕೊಳ್ಳುವ ಹೆಂಗಸು ನನ್ನನ್ನು ಒಬ್ಬ ಪೀಡೆ ಎಂಬಂತೆ ಕಂಡಳು. ಎಷ್ಟು ದಿನ ಇರುತ್ತೀ ಅಂತ ಕೇಳಿದಳು.

ಇದು ಹಿಂದೆ ನಾನು ಎಲ್ಲರೊಡನೆ ಬಂದ ಹರಿದ್ವಾರ ಅಲ್ಲ. ಅಥವ ಹರದ್ವಾರವೋ? ಸರ್ಕಲಿನಲ್ಲಿ ಒಂದು ಬಿಳಿಕಲ್ಲಿನ ಶಿವನ ಬೊಂಬೆ. ಆಗ ಒಮ್ಮೆ ನಾನು ಮತ್ತು ಚಂದ್ರ ಅದನ್ನು ನೋಡಿ ಮೆಚ್ಚಿದ್ದು ಜ್ಞಾಪಕ ಬಂತು. ಹತ್ತಿರದಲ್ಲೆ ಓಣಿಯಲ್ಲಿ, ಹಿಂದೆ ಒಮ್ಮೆ ರಾಜು ಹುಡುಕಿಕೊಂಡು ಬಂದು ನಮ್ಮನ್ನೆಲ್ಲ ಕರಕೊಂಡು ಹೋಗಿದ್ದ ಮದರಾಸು ರೆಸ್ಟಾರೆಂಟ್. ಮಾಲಿಕ ಬಹುಶಃ ಅವನೇ ಇದ್ದ. ನಾಲ್ಕೈದು ವರ್ಷದ ಹಿಂದೆ ನಮಗೆ ಊಟ ಬಡಿಸಿದ್ದ. ಸಿನಿಮಾ ಹುಚ್ಚಿನ, ಬಹುಶಃ ಗಣೇಶ ಎಂಬ ಹೆಸರಿನ ಮಾಣಿ ಕಾಣಲಿಲ್ಲ. ಹೋಟೆಲಿನಲ್ಲಿ ಜನವೇ ಇರಲಿಲ್ಲ. ಆಗ ಟ್ರೆಕಿಂಗ್ ಮುಗಿಸಿ ಸುಸ್ತಾಗಿ ಬಂದ ನಮಗೆ ಅಷ್ಟು ಸುಂದರ ಅನ್ನಿಸಿದ್ದ ಮದರಾಸೀ ಊಟದ ರುಚಿ ಈಗ ಕಾಣಲಿಲ್ಲ.
ಹಿಂದೆ, ಆಗ, ಎಲ್ಲರೊಡನೆ ಬಂದಾಗ ಹೂಗಳ ಕಣಿವೆಗೆ ಹೋಗುವ ದಾರಿಯಲ್ಲಿ ಒಂದು ದಿನ ತಂಗುವ ಊರು ಮಾತ್ರವಾಗಿ ಕಂಡಿದ್ದ ಊರನ್ನು ಈಗ ಇಲ್ಲೆ ಇರಲು ಬಂದ ಒಬ್ಬಂಟಿಯಂತೆ ಹೊಸದಾಗಿ ನೋಡುತ್ತ, ನೆನಪುಗಳನ್ನು ಮಾಡಿಕೊಳ್ಳುತ್ತ ಹೋದೆ.

ಎಲ್ಲ ಬೋರ್ಡುಗಳನ್ನು ಗಮನ ಕೊಟ್ಟು ನೋಡುತ್ತ ಹೋದೆ. ಹಿಂದೆ ಒಮ್ಮೆ ಚಂದ್ರಾ ಆಸೆಪಟ್ಟು ಕೇಜಿಗಟ್ಟಲೆ ಸ್ವೆಟರು ಕೊಂಡ ಅಂಗಡಿ ಸಿಕ್ಕಿತು. ಸೌಮ್ಯಮರಿಗೆ ಕೊಡುವುದಕ್ಕೆ ಬೇಕು ಅಂತ ನಾನೇ ಚಂದ್ರಳಿಗೆ ಹೇಳಿ ಸ್ವೆಟರು ಒಂದು ಕೊಂಡಿದ್ದೆ. ಈಗ ಅವಳು ಅವಳ ಅಮ್ಮ ಏನು ಮಾಡುತ್ತಿರಬಹುದೋ. ಚಂದ್ರಾ ಹಿತ್ತಾಳೆ ಕಂಚು ದೀಪಗಳನ್ನು ಕೊಂಡಿದ್ದ ಅಂಗಡಿ ಸಿಕ್ಕಿತು. ನಾನು ವಾಲ್ಮೀಕಿ ರಾಮಾಯಣ ಕೊಂಡ ಅಂಗಡಿಯೂ ಇದೆ. ಆದರೆ ಈ ಅಂಗಡಿಗಳಿಗೆ ನಾನು ಖಂಡಿತ ನೆನಪಿಲ್ಲ. ಊರಿನ ನೆನಪು ನನಗೇ ಹೊರತು, ನನ್ನ ನೆನಪು ಊರಿಗೆ ಯಾಕಿರಬೇಕು? ನಾನೇನೂ ಅಲ್ಲಿ ಊರಿಕೊಂಡವನಲ್ಲ.

ಎಲ್ಲಿದೆ ಗಣೇಶಪುರಿಯ ಆಶ್ರಮ. ಯಾರನ್ನು ಕೇಳುವುದು ಇಲ್ಲಿ. ಎಡಗಡೆಗೆ ಹೋದರೆ ನದಿ. ವಿಶಾಲ. ವಿಶಾಲ. ಎಕರೆಗಟ್ಟಲೆ ವಿಶಾಲವಾಗಿ ಹರಿಯುವ ಗಂಗೆಗೆ ಒಡ್ಡು ಕಟ್ಟಿ ವೇಗ ತಡೆದು ಎರಡು ಮೂರು ಸೀಳು ಮಾಡಿ ನಿಯಂತ್ರಿಸಿರುವ ಹರ ಕೀ ಪಾವಡಿ. ಇಲ್ಲಿ ಈಗಲೂ ಅಂದಿನಂತೆಯೇ ಸಹಸ್ರ ಸಹಸ್ರ ಜನ. ಎಲ್ಲ ಥರದ ಮುಖ, ಇಡೀ ಇಂಡಿಯ ಈ ನದಿಯ ದಡದಲ್ಲಿ ಸೇರಿದ ಹಾಗೆ ಇರುತ್ತದೆ. ಇಲ್ಲ, ಇಲ್ಲಿ ಸಿಖ್ಖರ ಲಂಗರ್ ಇದೆ. ಮಾನಸಾ ದೇವಿಗೆ ಹೋಗುವ ರಸ್ತೆ ಇದೆ. ಹೋಟೆಲುಗಳು ಇವೆ. ನನಗೆ ಬೇಕಾದ ಆಶ್ರಮ ಇಲ್ಲ. ಹಿಂದಿರುಗಿ ಮತ್ತೆ ಸ್ಟೇಶನ್ನಿನವರೆಗೆ ಬಂದು ಬಲದ ರಸ್ತೆ ಹಿಡಿದೆ. ಆಫೀಸುಗಳ ದಾರಿ. ಗಂಗೆಯ ಕಾಲುವೆಗೆ ಒಂದು ಕಬ್ಬಿಣದ ಸೇತುವೆ. ಅದರ ಮೇಲಿಂದ ಧುಮುಕಿ ಈಗುವ ಹುಡುಗರು ಸೇತುವೆ ಮೇಲೆ ನಿಂತರೆ ಅಗಾಧ ವೇಗದ ಗಂಗಾ ನೀರು. ಸೇತುವೆಯ ಆಚೆ ನಿಶ್ಚಲವಾಗಿ ನಿಂತ ಮನೆಗಳ ಗುಂಪು. ಸೇತುವೆಯನ್ನು ದಾಟಿ ಬಲಕ್ಕೆ ತಿರುಗಿ ಮತ್ತೆ ಎಡಕ್ಕೆ ತಿರುಗುವಂತೆ ಇರುವ ವಕ್ರವಾದ ಟಾರು ರಸ್ತೆ. ಅದರ ಬದಿಗೆ ಚಾ ದುಕಾನು. ಕಾದು ನಿಂತ ಸೈಕಲ್ ರಿಕ್ಷಾಗಳು. ಆಫೀಸಿನ ಕಾಂಪೌಂಡುಗಳು. ಇನ್ನೂ ಮುಂದೆ. ಅಲ್ಲೂ ಹೋಗಿ ನೋಡೋಣ.

ಊರು ಮುಗಿಯುವಂತಿರುವ ಲಕ್ಷಣ. ಅಲ್ಲಿ ಒಂದು ಗೋಡೆಯ ಮೇಲೆ ಈಶ್ವರನ ಚಿತ್ರ ಇರುವ ಬೋರ್ಡು. ಪಕ್ಕದಲ್ಲಿ ಕೊಲಾಪ್ಸಬಲ್ ಗೇಟು. ಅದು ಮುಚ್ಚಿದ ದೇವಸ್ಥಾನ. ಸಾಧನಾ ಮಂದಿರ ಅಂತ ಬರೆದು ಪಕ್ಕದ ಗಲ್ಲಿಗೆ ಬಾಣ ತೋರಿಸಿದ್ದರು. ಕೆಳಗೆ ಶ್ರೀ ಗಣೇಶಾನಂದ ಪುರಿ ಮಹಾರಾಜ್ ಅಂತ ಬರೆದಿತ್ತು. ಮೊನ್ನೆ ಬನಾರಸಿನಲ್ಲಿ ಇಂಗ್ಲೆಂಡಿನ ಹೆಣ್ಣುಮಗಳು ಹೇಳಿದ ಗಣೇಶ ಪುರಿ ಇವರೇ ಇರಬಹುದು. ಬಾಣದ ಗುರಿ ಹಿಡಿದು ತಿರುಗಿದೆ. ಗಲ್ಲಿಗೆ ಮಣ್ಣು ರಸ್ತೆ. ಬಲತುದಿಯಲ್ಲಿ ನಾಲ್ಕಂತಸ್ತಿನ ಕಟ್ಟಡ. ಏನೋ ರಿಪೇರಿ ಮಾಡುತ್ತಿದ್ದರು. ಎಡಗಡೆ ಇನ್ನೊಂದು. ಒಳಗೆ ಹೋದೆ. ಗಾಳಿಗೆ ತೆರೆದುಕೊಂಡ ವಿಶಾಲವಾದ ಹಜಾರ. ಅದರ ಸುತ್ತಲೂ ಜಗಲಿ.

ಜಗಲಿಯಲ್ಲಿ ಕೋಣೆಗಳು. ಎಲ್ಲ ಮುಚ್ಚಿದ ಬಾಗಿಲುಗಳು. ಗೋಡೆ ತುಂಬ ಬೋರ್ಡುಗಳು, ಫೋಟೋಗಳು. ಉಜ್ಜಿ ಉಜ್ಜಿ ತೊಳೆದ ಹೊಳೆಯುವ ನೆಲ. ವಿಶಾಲವಾದ ಜಮಖಾನ. ಗಾಢ ಬಣ್ಣದ ಅಂಚಿರುವ ಗೋಡೆಗಳು. ಪ್ಯಾಂಟು ಜರ್ಕಿನು ತೊಟ್ಟ ನಾನು ಅಲ್ಲಿನ ನಿಶ್ಯಬ್ದಕ್ಕೆ ಅಸಂಗತ ಅಂತ ನನಗೆ ಅನ್ನಿಸತೊಡಗಿತು. ಹಜಾರದ ಪಕ್ಕದಲ್ಲೆ ಒಂದು ಮಂದಿರ. ರಾಮ ಸೀತೆ ಲಕ್ಷ್ಮಣರ ವಿಗ್ರಹಗಳು. ಇನ್ನೊಂದು ಮಂದಿರದಲ್ಲಿ ಕೊಳಲು ಊದುತ್ತಿರುವಕೃಷ್ಣ. ಆಮೇಲೆ ಇನ್ನೊಂದು ಕೋಣೆಯಲ್ಲಿ ತಪಸ್ಸಿಗೆ ಕುಳಿತ ಈಶ್ವರ. ಮುಂದೆ ಹೋಗಲೋ ಬೇಡವೋ ಯಾರಾದರೂ ಇದ್ದಾರೋ ಇಲ್ಲವೋ ಅಂತ ನಾನು ಅಳುಕುತ್ತ ಅನುಮಾನ ಪಡುತ್ತ ಇದ್ದಾಗ ಒಬ್ಬ ಮುದುಕ.
ಮುದುಕನ ಮುಖದ ತುಂಬ ಬಿಳೀ ಗಡ್ಡ. ಅಲ್ಲಲ್ಲಿ ಸ್ವಲ್ಪ ಕಡಮೆ ಬಿಳಿ ಬಣ್ಣದ ಕೂದಲುಗಳು. ತುಂಬ ಎತ್ತರ ಏನಿರಲಿಲ್ಲ. ನನಗಿಂತಲೂ ಕುಳ್ಳು. ಸ್ಥೂಲ ಅನ್ನುವಂಥ ಮೈ. ಸೊಂಟಕ್ಕೆ ಸುತ್ತಿಕೊಂಡ, ಮೊಳಕಾಲು ಮುಟ್ಟುತ್ತಿದ್ದ ಕಾವಿ ಪಂಚೆ. ಹೊದ್ದದ್ದು ಇನ್ನೊಂದು ಕಾವಿ ಟವಲು. ತಲೆ ತುಂಬ ಉದ್ದ ಬಿಳೀ ಕೂದಲು. ದಪ್ಪ ದಪ್ಪ ಮೀನ ಖಂಡಗಳು.


ಮುಂದುವರೆಯುವುದು

ಕೀಲಿಕರಣ: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.