ನನ್ನ ಹಿಮಾಲಯ – ೩

ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ ಕೇಳಬೇಕು. ಹೇಗೆ?

ಹೀಗೆ ಇದ್ದದ್ದನೆಲ್ಲ ಇದ್ದ ಹಾಗೆ ಬಿಟ್ಟು ಬರಲಿ ‘ಇದ್ದ’ ಕಾರಣ ಇನ್ನೊಬ್ಬರಿಗೆ ಹೇಳಿದರೆ ಕ್ಷುಲ್ಲಕವಾಗಿ ಕಾಣುತ್ತದೆ. ಬಂದದ್ದು ನಿಜ. ಯಾಕೆ ಅಂತ ವಿವರಿಸತೊಡಗಿದರೆ ನನಗೇ ಸುಳ್ಳಾಗಿ ಕಾಣತೊಡಗುತ್ತದೆ. ಈ ಮುದುಕ ಒಪ್ಪುವಂಥ ಮಾತು ಏನು ಹೇಳಲಿ?
ಜಗಲಿಯ ಮೇಲೆ ಕೂತು ನನ್ನನ್ನೂ ಪಕ್ಕದಲ್ಲಿ ಕೂಡಿಸಿಕೊಂಡ.
“ಬೆಂಗಳೂರಿನಿಂದ ಬಂದಿದ್ದೇನೆ.”
ಬಹುಶಃ ಅರ್ಥ ಆಗಲಿಲ್ಲ.
“ನನಗೆ ಹಿಂದಿ ಬರಲ್ಲ.”
ಅದು ಅವನಿಗೆ ತಿಳಿಯಿತು.
“ಬಂದದ್ದು ಯಾಕೆ?”
“ಗಣೇಶಪುರಿಯನ್ನು ನೋಡಲು ಬಂದೆ.”
ತಕ್ಷಣ ಆತ ನನ್ನನ್ನು ತಡೆದು ಗಣೇಶ ಪುರಿ ಅನ್ನಬಾರದು. ಗಣೇಶಾನಂದ ಪುರಿ ಮಾಹಾರಾಜ್ ಅನ್ನಬೇಕು, ತಿಳಿಯಿತೆ.” ಅಂದ.
ತಪ್ಪಾಯಿತು ಅಂತ ಕ್ಷಮೆ ಕೇಳಿದೆ.
“ಯಾರು ಅವರನ್ನು ನಿಮಗೆ ತಿಳಿಸಿದ್ದು? ಯಾಕೆ ಬಂದಿರಿ?”
ಯಾರು ಅನ್ನುವುದಕ್ಕೆ ಉತ್ತರ ಸುಲಭ.
“ಉಬ್ಬ ಅಂಗ್ರೇಜಿ ಮಹಿಳೆ. ಬನಾರಸ್ಸಿನಲ್ಲಿ ಹೇಳಿದರು.”
ಯಾಕೆ ಅನ್ನುವ ಪ್ರಶ್ನೆಗೆ ಉತ್ತರ ಹೇಳಲಿ ಕಷ್ಟ ಆಯಿತು.
“ಮನಸ್ಸಿಗೆ ನೆಮ್ಮದಿ ಇಲ್ಲ. ಮನೆ ಬಿಟ್ಟಿದ್ದೇನೆ. ಇಲ್ಲಿ ಗುರುವನ್ನು ನೋಡಬಹುದೆ? ಇಲ್ಲಿ ನಾನು ಇರಬಹುದೆ?”
“ಇರುವುದಕ್ಕೆ ಮಾಹಾರಾಜ್ ಹೇಳಬೇಕು. ಅವರು ಸಂಚಾರ ಹೋಗಿದ್ದಾರೆ. ಇನ್ನೂ ಹದಿನೈದು ದಿನ ಆಗುತ್ತೆ ಬರೋದು. ಅಲ್ಲಿಯವರೆಗೆ ಬೇಕಾದರೆ ಇಲ್ಲಿ ಇರಿ. ಮುಂದೆ ಅವರು ಹೇಳಿದ ಹಾಗೆ ಮಾಡಿ.”
ಆ ಮುದುಕ “ನಿಮ್ಮ ಸಾಮಗ್ರಿಗಳು ಎಲ್ಲಿವೆ” ಅಂತ ಕೇಳಿದ.
“ಸ್ಟೇಶನ್ನಿನಲ್ಲಿ” ಅಂದೆ.
“ಅಲ್ಲಿ ಯಾಕೆ ಇಲ್ಲೆ ತಂದುಬಿಡಿ.”
ಬಹಳ ನಿಧಾನವಾಗಿ ಮಾತನಾಡುತ್ತಿದ್ದ. ಆತನ ನಿಧಾನ ನನಗೆ ಇಷ್ಟ ಆಯಿತು. ಸ್ಟೇಶನ್ನಿನಿಂದ ಚೀಲ ತರುತ್ತೇನೆ ಅಂತ ಹೇಳಿ ಹೊರ ಬಂದೆ.
ಸ್ಟೇಶನ್ನಿನ ಕೆಲಸದಾಕೆಗೆ ತುಂಬ ಸಂತೋಷ ಆಯಿತು. ನನಗೂ. ಇನ್ನು ಹದಿನೈದು ದಿನ ಇರಲು

ಒಂದು ಜಾಗ ಸಿಕ್ಕಿತು. ದಿನ ದೂಡಲು ಒಂದು ನೆಪ ಸಿಕ್ಕಿತು. ನಡೆದು ಹೋಗಿ ನಡೆದು ಬಂದೆ. ಹರಿದ್ವಾರ ನನ್ನ ಊರು ಅನ್ನಿಸತೊಡಗಿತ್ತು. ವಾಪಸ್ಸು ಬಂದಾಗ ಸಂಜೆ ಆಗುತ್ತಿತ್ತು. ಇನ್ನೊಬ್ಬ, ಎತ್ತರ ನಿಲವಿನ, ಕಠಿಣ ಎಂಬಂತಿದ್ದ ದೃಷ್ಟಿಯ, ಖಚಿತವಾಗಿ ಗೆರೆಕೊರೆದಂತಿದ್ದ ಮುಖದ ಕಾವಿ ಧಾರಿ ಎದುರಾದ. ಆತ ಅಲ್ಲಿ ಮಹಾ ಪ್ರಧಾನ ಎಂದು ತಿಳಿಯಿತು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಪೂಜೆಗೆ ಬರಬೇಕು; ಪ್ರವಚನ ತಪ್ಪಿಸಿಕೊಳ್ಳಬಾರದು; ಇಲ್ಲಿನ ನಿಯಮಗಳನ್ನು ಪಾಲಿಸಬೇಕು ಅಂತ ಹೇಳಿದ. ಒಬ್ಬ ಹುಡುಗನನ್ನು ಕೂಗಿ “ಯಾರೋ ಭಗತ್ ಬಂದಿದ್ದಾನೆ. ಸಾಧಕನಿವಾಸದಲ್ಲಿ ಜಾಗ ಕೊಡು” ಅಂತ ಶುದ್ಧ ಹಿಂದಿಯಲ್ಲಿ ಹೇಳಿದ. ನಾನೆಂಥ ಭಗತ! ಆಮೇಲೆ ಹೊಳೆಯಿತು. ಅದು ಹಿಂದಿಯಲ್ಲಿ ‘ಭಕ್ತ’ತಾಳುವ ರೂಪ. ಆದರೆ, ಆ ಮಹಾ ಪ್ರಧಾನನಿಗೆ ನನ್ನ ಬಗ್ಗೆ ಅಂಥ ಒಳ್ಳೆಯ ಅಭಿಪ್ರಾಯ ಬಂದಿಲ್ಲ ಅನ್ನಿಸಿತು.

ನಾಲ್ಕು ಅಂತಸ್ತುಗಳು. ಒಂದೊಂದರಲ್ಲೂ ಹತ್ತು ಹದಿನೈದು ಕೋಣೆಗಳು. ಒಬ್ಬ ಹುಡುಗ ನನ್ನನ್ನು ಚಾವಣಿಯ ಮೇಲೆ ಕರೆದುಕೊಂಡು ಹೋದ. ಚಾವಣಿಯ ಮೇಲೆ, ಮೆಟ್ಟಿಲಿನಿಂದ ದೂರ, ಎಡತುದಿಗೆ ಒಂದು ಬಲತುದಿಗೆ ಇನ್ನೊಂದು, ಚಿಕ್ಕ ಎರಡು ಕೋಣೆಗಳು. ಕೋಣೆಯೊಳಗೆ ಒಂದು ಮಂಚ. ಎರಡು ಕಿಟಕಿ. ಕಿಟಕಿಯ ತುಂಬ, ನೆಲದ ತುಂಬ ಧೂಳು. ಒಂದು ಬಾಗಿಲು. ಅದರಾಚೆಗೆ ಒಳಗೆ ಬಚ್ಚಲು ಮನೆ, ನಲ್ಲಿ.

ನನ್ನ ಕೋಣೆಯ ಆಚೆ ಬಂದರೆ ಹಿತ್ತಿಲು ಕಾಣುತ್ತಿತ್ತು. ಅಲ್ಲೆ, ನಾಲ್ಕು ಅಂತಸ್ತು ಕೆಳಗೆ, ಕಾಂಪೌಂಡಿನ ಆಚೆ, ಗಂಗಾ ನದಿ. ನದಿಯ ದಡದಲ್ಲಿ ಉರುಟುರುಟು ಕಲ್ಲುಗಳ ರಾಶಿ ಹರಡಿ ಬಿದ್ದಿತ್ತು. ಸಂಜೆಯ ತಣ್ಣನೆ ಬಿಸಿಲು ಕತ್ತಲ ಬಣ್ಣಕ್ಕೆ ಬದಲಾಗುತ್ತಿತ್ತು. ಗಂಟೆಯ ಶಬ್ದ ಕೇಳಿಸಿತು. ಹಿತ್ತಿಲಲ್ಲಿ ಪುಟ್ಟ ಪುಟ್ಟ ಗುಡಿಗಳು ಕಂಡವು. ಆರೆಂಟು ಹದಿನೈದು ವಯಸಿನೊಳಗಿನ ಹುಡುಗರು ಬಿಳೀ ಪಂಚೆ ಉಟ್ಟು, ಬಿಳೀ ಬಟ್ಟೆ ಹೊದ್ದು ಒಂದು ಗುಡಿಯ ಮುಂದೆ ನಿಂತಿದ್ದರು. ನೋಡಲು ಹೋದೆ.

ಸ್ತೋತ್ರಗಳನ್ನು ಹೇಳುತ್ತಿದ್ದರು. ಮಂಗಳಾರತಿ ಮಾಡಿದರು. ಇನ್ನೊಂದು ಗುಡಿಗೆ ಹೋದರು. ಅಲ್ಲೂ ಅದೇ. ಅಮೇಲೆ ಇನ್ನೊ೦ದು ಗುಡಿಗೆ. ಅಲ್ಲೂ ಅದೆ. ಬಿಳಿ ಉಡುಗೆಯ ಆ ಮಕ್ಕಳ ನಡುವೆ ಪ್ಯಾಂಟು ಜರ್ಕಿನ್ನು ಹಾಕಿಕೊಂಡ ನಾನು ವಿಚಿತ್ರವಾಗಿದ್ದೆ. ಅಲ್ಲೆ ಒಂದು ಮೆಟ್ಟಿಲ ಮೇಲೆ ಬಿಳೀ ಬಿಳೀ ಸೀರೆ ಕುಪ್ಪಸ ತೊಟ್ಟ ಮಧ್ಯವಯಸ್ಸಿನ ಹೆಂಗಸು ಕುಳಿತಿದ್ದಳು. ಸುಮ್ಮನೆ ನಮ್ಮನ್ನೆಲ್ಲ ನೋಡುತ್ತಿದಳು. ನಾನು ಮೊದಲು ನೋಡಿದ್ದ ಅಂಗಳದಲ್ಲಿ ಗಂಟೆ ಸದ್ದು ಕೇಳಿಸಿತು. ಎಲ್ಲರೂ ಅಲ್ಲಿಗೆ ಹೋದರು. ನಾನೂ. ಅಲ್ಲಿ ಆರೆಂಟು ಜನ ಸನ್ಯಾಸಿಗಳಿದ್ದರು.

ಮತ್ತೆ ಬರವಣಿಗೆಯ ಎರಡನೆಯ ದಿನ

ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ ಶರಟುಗಳು. ಹಿಮ ಇದ್ದೀತೆಂಬ ಹೆದರಿಕೆಯಿಂದ ತಂಪು ಕನ್ನಡಕ, ಕಾಲಿಗೆ ಹಂಟರ್ ಶೂಗಳು, ನೀರಿನ ಬಾಟಲು, ಊಟಕ್ಕೆ ಪ್ಲಾಸ್ಟಿಕ್ಕು ತಟ್ಟೆಗಳು, ಬೆನ್ನಿಗೆ ದೊಡ್ಡ ಆನೆ ಚೀಲಗಳು – ನನ್ನ ಬದುಕಿನಲ್ಲಿ ಅದೇ ಮೊದಲ ಬಾರಿ ಅಂಥ ಉಡುಪು ತೊಡುತ್ತಿದ್ದೆ. ಏನೋ ನಾನೇ ಬದಲಾಗಿಬಿಟ್ಟಂತೆ. ಕಾಣದ ಹಿಮಾಲಯದಲ್ಲಿ ನಾನು ಹೀಗೆ ಹೀಗೆ ಕಾಣಿಸಿಕೊಳ್ಳಬೇಕೆಂಬ ಉತ್ಸಾಹ ಹುಮ್ಮಸ್ಸುಗಳು ಮಾತಿನಲ್ಲಿ, ನಡಿಗೆಯಲ್ಲಿ, ಸುಮ್ಮನೆ ಇದ್ದಾಗ ಮತ್ತು ನಿದ್ದೆಯಲ್ಲಿ ಕೂಡ ವ್ಯಕ್ತವಾಗೇ ತುಳುಕುತ್ತಿದ್ದವು. ಚಂದ್ರಾ, ಧಾರಿಣಿಯರೂ ಅಷ್ಟೇ. ಅದೇ ಮೊದಲ ಬಾರಿಗೆ ಚೂಡಿದಾರ್‌ಗಳನ್ನು ಜೀನ್ಸ್ ಪ್ಯಾಂಟು ಶರಟುಗಳನ್ನು, ಉಣ್ಣೆ ಟೋಪಿಗಳನ್ನು ತೊಟ್ಟು ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಟಿಕೆಟ್ಟು ರಿಸರ್ವ್ ಮಾಡಿಸುವ, ಮ್ಯಾಪು ತೆಗೆದುಕೊಂಡು ದಾರು ಹೀಗೆ ಹೀಗೆ ಹೋಗುತ್ತದೆ ಎಂದು ಊಹಿಸುವ ಸಂಭ್ರಮದಲ್ಲಿ ತಿಂಗಳು ಉರುಳಿದ್ದೇ ನಮಗೆ ಯಾರಿಗೂ ತಿಳಿಯಲಿಲ್ಲ. ಬೆಂಗಳೂರಿಗೆ, ಭದ್ರಾವತಿಗೆ, ದೆಹಲಿಗೆ, ಹರಿಹರಕ್ಕೆ ಕಾಗದಗಳು ಎಷ್ಟೊಂದು ಓಡಾಡಿದವು. ನಡೆಯಲು, ಹಿಮಾಲಯದಲ್ಲಿ ಗುಡ್ಡ ಹತ್ತಲು ಅಭ್ಯಾಸ ಇರಲಿ ಅಂತ ದಿನಾ ಸಂಜೆ ನಾಲ್ಕು ನಾಲ್ಕು ಕಿಲೋಮೀಟರ್ ನಡೆದೆವು. ಅದು ನಿಜವಾಗಿ ಏನೂ ಉಪಯೋಗಕ್ಕೆ ಬರಲಿಲ್ಲ ಅನ್ನುವುದು ಬೇರೆ ಮಾತು.

ಆದರೂ ಮನಸ್ಸಿನಲ್ಲಿ ಅಮ್ಮ ಎಲ್ಲೋ ಸಣ್ಣಗೆ ಒತ್ತುತ್ತಿದ್ದರು. ಮುಳ್ಳಿನ ಹಾಗೆ. ನಾನು ಅಲ್ಲೆಲ್ಲೋ ಹೋದಾಗ ಅವರು ಸತ್ತು ಹೋದರೆ? ಅಥವ ಎಂದಿನ ಹಾಗೆ ‘ಅಯ್ಯೊ. ನನ್ನ ಮಗ ಕಷ್ಟ ಪಡುತ್ತಾನಲ್ಲ’ ಅಂತ ಸುಮ್ಮನೆ ತಾವು ಕಷ್ಟ, ಸಂಕಟ ಪಟ್ಟರೆ? ಅದಕ್ಕೇ ತೀರ್ಮಾನ ಮಾಡಿದೆ. ನಾವು ನಡೆದು ಹೋಗುತ್ತೇವೆ ಅಂತ ಅಮ್ಮನಿಗೆ ಹೇಳುವುದೇ ಬೇಡ. ಟೂರ್ ಹೋಗುತ್ತೇವೆ ಅಂದೆ. ಅಯ್ಯೊ, ಸುಳ್ಳು ಹೇಳುತ್ತೇನಲ್ಲ ಅಂತ ಕೊರಗು. ಇರಲಿ. ಪ್ರತಿ ವಾರ, ಅಥವ ಮೂರು ದಿನಕ್ಕೆ ಒಂದು ಕಾಗದ ಬರೆಯುವುದು. ಹಿಮಾಲಯದ ಜೊತೆ ಇದ್ದಾಗ, ಗೆಳೆಯರ ಜೊತೆ ಇದ್ದಾಗ ಅಮ್ಮನ ನೆನಪು ಬರಬಾರದು. ನಾನು ಮಗ ಆಗಿ ಅಲ್ಲ, ಗಂಡ ಆಗಿ ಅಲ್ಲ, ಗೆಳೆಯ ಆಗಿ ಅಲ್ಲ, ನಾನೇ ಅಂತ ಅಲ್ಲಿ ಇರಬೇಕು. ಆದರೆ ಅಮ್ಮನನ್ನು ಅಷ್ಟು ಸುಲಭವಾಗಿ ಒರೆಸಿ ಹಾಕಲು ಸಾಧ್ಯವೆ ಮನಸ್ಸಿನಿಂದ. ಶಿವಮೊಗ್ಗದಲ್ಲಿ ಕೂತೇ ಹೊರಡುವ ಹದಿನೈದು ದಿನ ಮೊದಲೇ ಒಂದಷ್ಟು ಕಾರ್ಡುಗಳಿಗೆ ಅಡ್ರೆಸ್ಸಿನ ಸಮೇತ ಬರೆದಿಟ್ಟುಕೊಂಡೆ: “ಅಮ್ಮನಿಗೆ ನಮಸ್ಕಾರಗಳು. ನಾವು ಕ್ಷೇಮ. ಅರೋಗ್ಯವಾಗಿದ್ದೇನೆ. ತುಂಬ ಚೆನ್ನಾಗಿದ್ದೇನೆ. ಇಂಥಾ ತಾರೀಖು ವಾಪಸ್ಸು ಬರುತ್ತೇವೆ. ಚಂದ್ರಾ ಚನ್ನಾಗಿದ್ದಾಳೆ.” ಅಂತ ಒಕ್ಕಣಿಸಿ ಜೋಡಿಸಿಟ್ಟುಕೊಂಡೆ. ಡಬ್ಬ ಕಂಡ ಕಡೆಯಲ್ಲೆಲ್ಲ ತಾರೀಖು ಬರೆದು ಹಾಕುತ್ತಿದ್ದೆ. ಎಂಥದೋ ಕರ್ತವ್ಯ ನೆರವೇರಿಸಿದ ಸಮಾಧಾನ ಸಿಕ್ಕಿತು – ಅಂದುಕೊಂಡೆ. ಬೆಂಗಳೂರಲ್ಲಿ ರೈಲು ಹತ್ತಿ ಇನ್ನೇನು ಹೊರಡಬೇಕು ಅನ್ನುವ ಹತ್ತು ನಿಮಿಷ ಮುಂಚೆ ಅಮ್ಮ ನಮ್ಮ ಮಾವನನ್ನು ಜೊತೆ ಮಾಡಿಕೊಂಡು ಆಟೋ ಹತ್ತಿ ಓಡಿ ಬಂದಿದ್ದರು. ನಾನು ಬಿಟ್ಟು ಬಂದಿದ್ದ ಗಡಿಯಾರ ಕೊಡಲು. ಹಿಮಾಲಯದಲ್ಲಿ ಗಡಿಯಾರ ಇರಬಾರದು ಅಂತಲೇ ಬಿಟ್ಟಿದ್ದೆ. ಅಮ್ಮನಿಗೆ ಗಡಿಯಾರ ಕೊಡುವುದಕ್ಕಿಂತ ನನ್ನ ಜೊತೆ ಇನ್ನಷ್ಟು ಹೊತ್ತು ಇರುವ ಆಸೆ ಇದ್ದಿರಬಹುದು. ಮಗನಿಗೆ ಅವನು ಮರೆತು ಬಂದಿರುವುದನ್ನು ಕೊಟ್ಟು ಉಪಕಾರ ಮಾಡುವ ಅಪೇಕ್ಷೆ ಇರಬಹುದು. ನನಗೆ ಮುಜುಗರ ಆಯಿತು.

ಆದು ಮೊದಲ ಬಾರಿ: ಎರಡನೆ ಬಾರಿ ನಾನು ಹಿಮಾಲಯಕ್ಕೆ ಹೋಗಿ ಆ ಊರಿನವನೇ ಆದಾಗ ನನಗೆ ಯಾರೂ ನೆನಪು ಬರಲಿಲ್ಲ, ಇರಲಿಲ್ಲ. ಹಾಗೂ ಒಂದು ಸಲ ಸಂಜೆ ನೆದರ್ ಲ್ಯಾಂಡಿನ ಹ್ಯಾನ್ಸ್ ಜೊತೆ ಟೀ ಕುಡಿದು, ಸಂಜೆ ಕತ್ತಲಲ್ಲಿ ಗಂಗೆಯ ಜುಳು ಜುಳು ಕೇಳುತ್ತ, ತಲೆಕೆಳಗಾಗಿ ಕಾಣುವ ಹೃಷಿಕೇಶದ ದೀಪಗಳನ್ನು ನೋಡುತ್ತ ಅವನು ತನ್ನ ಮನೆಯ ಬಗ್ಗೆ ನಾನು ನನ್ನ ಬಗ್ಗೆ ಆಪ್ತವಾಗಿ ಮಾತಾಡಿಕೊಂಡೆವು. ಅವನು ಒಂದು ತಿಂಗಳ ಮಟ್ಟಿಗೆ ಇನ್ನಿಲ್ಲದಂಥ ಆಪ್ತನಾಗಿದ್ದ. ಒಂದು ಕ್ಷಣ ನಾವು ಒಬ್ಬರನ್ನೊಬ್ಬರು ನೋಡದಿದ್ದರೆ ಏನೋ ಕಳಕೊಂಡಂತೆ ನಮಗೆ ಅನಿಸುತ್ತಿತ್ತು. ನಾನು ಮೀಸೆ ತೆಗೆದಿದ್ದೆ. ಆಶ್ರಮಕ್ಕೆ ಮೀಸೆ ಹೊಂದುವುದಿಲ್ಲ ಅಂತ. ಮೀಸೆಯ ಜೊತೆಗೆ ನನ್ನ ಹಳೆಯ ನಾನು ಕೂಡ ಹೊರಟು ಹೋಗಿತ್ತು. ಆಶ್ರಮದವರು ನನಗೆ ಬಿಳೀ ಪಂಚೆ ಕೊಟ್ಟಿದ್ದರು. ನನ್ನ ಖಾದಿ ಜುಬ್ಬ ಇದ್ದವು. ಅಲ್ಲ, ಉಡುಪು ಹೇಗೆ ಎಂತೆಂಥ ಆಸೆ ಹುಟ್ಟಿಸುತ್ತೆ. ಈಗ ನನಗೆ ಹಂಬಲ ಇದ್ದದ್ದು ಅಲ್ಲಿನ ಬಟ್ಟೆಗಳ ವ್ಯವಸ್ಥೆಯಲ್ಲಿ ತೀರ ಮೇಲಕ್ಕೇರಬೇಕು ಅಂತ. ನಮ್ಮಂಥವರು ಬಿಳಿ ಉಡುಗೆಯವರು. ಬ್ರಹ್ಮಚಾರಿಗಳದ್ದು ಹಳದಿ ಬಟ್ಟೆ. ಸನ್ಯಾಸಿಗಳದು ಕಾವಿ. ಕಾವಿಗೆ ಬೇಕಾದ ಸಿದ್ಧತೆಯನ್ನು ಅಥವಾ ಯೋಗ್ಯತೆಯನ್ನು ಪಡೆವ ಅವಕಾಶ ನನಗೆ ಸಿಗುವುದು ಸಾಧ್ಯವೇ ಇರಲಿಲ್ಲ. ಕಾವಿ ಧರಿಸುವ ಅವಕಾಶವಲ್ಲ, ಅಧಿಕಾರ ಇದ್ದಿದ್ದರೆ ನನಗೆ ಚೆನ್ನಾಗಿರುತ್ತಿತ್ತು ಅನ್ನುವ ಆಸೆ ಇತ್ತು. ಸುಮ್ಮನೆ ಅಲ್ಲ ನಿಜವಾಗಲೂ ಆ ಅಧಿಕಾರ ನಾನು ಪಡೆವಂತಿದ್ದರೆ! ಅರಿಶಿನದ ಬಟ್ಟೆಗಳಿಗೆ ಬೇಕಾದ ಯೋಗ್ಯತೆಯನ್ನೂ ಕಳಕೊಂಡಿದ್ದೆ. ಆಶ್ರಮದ ಶ್ರೇಣಿಯಲ್ಲಿ ತೀರ ಕೆಳಹಂತದ ಬಿಳಿ ಉಡುಪಿನವನಾಗಿಯಷ್ಟೆ ಇರಬೇಕು. ಆದರೂ ಒಂದು ಥರ ಹೆಮ್ಮೆ. ನನ್ನ ಬಿಳಿ ಬಟ್ಟೆಯ ಅಧಿಕಾರ ಹ್ಯಾನ್ಸ್‌ನ ಕಿರುಗಡ್ಡ, ಮೀಸೆ, ನಗುಮುಖ, ಪ್ಯಾಂಟು ಶರಟುಗಳಿಗಿಂತ ಮೇಲಿನದು ಅಂತ. ಅವನು ಎಷ್ಟೆಂದರೂ ಕೆಲವು ದಿನಗಳ ಅತಿಥಿ. ನಾನು ಅಲ್ಲಿಯವನು. ಆಶ್ರಮ ವಾಸಿ. ಅವನು ಹಕ್ಕಿ, ನಾನು ಬೇರು ಭದ್ರ ಮಾಡಿಕೊಳ್ಳುತ್ತಿರುವ ಸಸಿ. ಇಂಥ ಹೆಮ್ಮೆ ಅಹಂಕಾರವಾಗಿದ್ದು ಇಂಗ್ಲೆಂಡಿನ ಡಾಕ್ಟರು ಥಾಮಸ್‌ನ ಜೊತೆ ಪಾಥೆಗಾವ್‌ನ ಗುಡ್ಡ ಹತ್ತಿ ಇಳಿಯುತ್ತಿದ್ದಾಗ. ಅವನ ಕೋಟು, ಶೂ, ತುಂಬು ತೋಳಿನ ಬಿಳೀ ಶರ್ಟ್, ಇವುಗಳ ಜೊತೆ ನನ್ನ ಸರಳ ಉಡುಪನ್ನು ಹೋಲಿಸಿ ಮಾತಾಡಿದ್ದೆ. ನಿಜವಾಗಲೂ ಹಾಗನ್ನಿಸಿದ್ದೂ ಹೌದು. ಎರಡು ಬಿಳೀ ಪಂಚೆ, ಎರಡು ಖಾದಿ ಜುಬ್ಬ ಸಾಕಲ್ಲವೇ. ಯಾಕೆ ನಾವು ಉಡುಪಿನ ಬಗ್ಗೆ ಇಷ್ಟು ಆಸೆ ಇಟ್ಟುಕೊಳ್ಳುತ್ತೇವೆ? ಆದರೂ ಆಶ್ರಮ ಬಿಟ್ಟು ಮೂರು ಮೈಲು ಆಚೆ ಹೋಗುವಾಗ, ಪೇಟೆಗೆ ಪ್ಯಾಂಟು ಚೆನ್ನ ಅಂತ ಕೆಲವು ಸಾರಿ ಅನ್ನಿಸುತ್ತಿತ್ತು. ಕ್ರಮೇಣ ಅದೂ ಹೋಯಿತು. ಆದರೆ ಡೆಹರಾಡೂನಿಗೆ ಹೋಗುವುದಾದರೆ ಪ್ಯಾಂಟನ್ನೇ ತೊಡುತ್ತಿದ್ದೆ. ಶಿವಮೊಗ್ಗದಲ್ಲಿ ಕಾಲೇಜಿನ ಉಡುಪು – ಆದರೆ ಚಂದ್ರ ಸಿಡುಕುತ್ತಿದ್ದಳು: ನೀಟಾಗಿರುವುದಿಲ್ಲ, ಇಸ್ತ್ರಿ ಮಾಡುವುದಿಲ್ಲ ಅಂತೆಲ್ಲ, ಬಟ್ಟೆ ಆಗ ಬಹಳ ಇತ್ತು, ಸರಿಯಾಗಿರಲಿಲ್ಲ. ಈಗ ಹಿಮಾಲಯದಿಂದ ಬಂದಮೇಲೆ ಬಟ್ಟೆ ಬದಲಾಗಿದೆ. ಇಸ್ತ್ರಿ ಬಂದಿದೆ, ವೈವಿಧ್ಯ ಬಂದಿದೆ. ಈಗಲೂ ಆಶ್ರಮ ನನಗೆಕೊಟ್ಟ ಎರಡು ಬಿಳೀ ಅಂಗಿ, ಎರಡು ಪಂಚೆ ಇವೆ. ಅವನ್ನು ತೊಟ್ಟಾಗ, ತೊಟ್ಟಷ್ಟು ಹೊತ್ತು ಬೇರೆಯೇ ಅನ್ನಿಸುತ್ತದೆ.

ಹ್ಯಾನ್ಸ್ ಮತ್ತು ನಾನು ನದಿಯ ಪಕ್ಕದಲ್ಲಿ ಕೂತು ಮಾತಾಡುತ್ತಿದ್ದೆವು. ಹ್ಯಾನ್ಸ್‌ಗೆ ಹೆಂಡತಿ ಇದ್ದಾಳೆ. ಇವನ ಆಧ್ಯಾತ್ಮಿಕ ಅಪೇಕ್ಷೆ ಅವಳಿಗೆ ಹಿಡಿಸುವುದಿಲ್ಲ. ಇವನು ಓದಿದ ಕೆಮಿಸ್ಟ್ರಿ ಮತ್ತು ಸೈಕಾಲಜಿ ಇವನಿಗೆ ಸಮಾಧಾನ ಕೊಟ್ಟಿಲ್ಲ. ತುಂಬ ನಿಶಿತ ಬುದ್ಧಿಯ ಹ್ಯಾನ್ಸ್ ಬ್ರಹ್ಮಾನಂದರನ್ನೂ ಕೃಷ್ಣಾನಂದರನ್ನೂ ಕೇಳುವ ಪ್ರಶ್ನೆಗಳು ಕೆಲವುಬಾರಿ ನನ್ನವೂ ಹೌದು. ಅವನು ಹೆಂಡತಿ ಜೊತೆ ಜಗಳಾಡಿದ. ಕಾರಣ ಬೇರೆಯೂ ಇರಬಹುದು ಅನ್ನುವ ಸೂಚನೆಯಷ್ಟೆ ನನಗೆ ಹೊಳೆಯಿತು. ಇಲ್ಲಿಗೆ ಬಂದ ತತ್ತ್ವಶಾಸ್ತ್ರ ಅವನಿಗೆ ಒಡ್ಡುವ ಸಮಸ್ಯೆ, ಪ್ರಶ್ನೆ ಬೇರೆ ರೀತಿಯದು, ನನಗೆ ಬೇರೆ ರೀತಿಯದು. ಆದರೆ ನನಗೆ ಅರ್ಥ ಆದಂತೆ ಅನ್ನಿಸಿದ್ದು ಹೊಳೆದದ್ದು ಅವನಿಗೆ ಹೊಳೆಯುತ್ತಿರಲಿಲ್ಲ. ಆದರೆ ಇಬ್ಬರೂ ಅವು ಜೀವನ್ಮರಣದ ಪ್ರಶ್ನೆಗಳು ಅನ್ನುವ ಹಾಗೆ ಚರ್ಚೆ ಮಾಡುತ್ತಿದ್ದೆವು. ತತ್ತ್ವ ಕಲಿಯುವ ಅನಿವಾರ್ಯವಾಗಿರಲಿಲ್ಲ ನಮ್ಮ ಅನಿವಾರ್ಯ, ಹಿಂಗಿದ, ಹಸಿವು ಆಗಿತ್ತು. ನಿಜವಾಗಿ ತತ್ತ್ವದ ಬಗ್ಗೆ ಅಲ್ಲ ನಮ್ಮ ಬಗ್ಗೆ ತಿಳಿಯುತ್ತಿದ್ದೆವು.

ಟೀ ಕುಡಿದು ಮತ್ತೆ ಬಂದು ಕೂತೆವು. ಹೇಳಿದೆ. ಅಪರಿಚಿತರೊಂದಿಗೆ ಹೇಳಿಕೊಳ್ಳುವಾಗ ನಮ್ಮ ಬಗ್ಗೆಯೇ ಆದರೂ ನಾವೇ ನಮ್ಮನ್ನು ಅಪರಿಚಿತರೆಂಬಂತೆ ಕತೆಮಾಡಿ ಹೇಳಿಕೊಳ್ಳುತ್ತೀವೋ ಏನೋ. ಕತೆಯಲ್ಲಿ ಪಾತ್ರದ ಬಗ್ಗೆ ಬೇಕಾದ ಕೆಲವೇ ಮಾತು ಹೇಳುವ ಹಾಗೆ ನಮ್ಮ ಬಗ್ಗೆ ನಾವೇ ಒಂದೆರಡು ಮಾತುಗಳಲ್ಲಿ ನಮ್ಮ ಸತ್ವ ನಿರೂಪಿಸುವುದಕ್ಕೆ ತೊದಗುತ್ತೇವೇನೋ. ಹಾಗ್ ಹ್ಯಾನ್ಸ್ ನನಗೆ ಅಪರಿಚಿತನೂ ಅಲ್ಲ. ಅವನ ಅಗಲ ದಪ್ಪ ಕೈ, ಸ್ವಲ್ಪ ಚೌಕ ಮುಖ, ಪುಟ್ಟ ಬಾಯಿ, ಹಸುವಿನಂಥ ಕಣ್ಣು, ನುಣುಪಾದ ಹದವಾಗಿ ಕತ್ತರಿಸಿದ ಕೆದರು ಕೂದಲು, ಹುಡುಗುತನ ಮತ್ತು ಪ್ರಬುದ್ಧತೆ ಎರಡೂ ಇದ್ದ ದೃಢವಾದ ಕತ್ತು, ಕೊರಳು, ಭುಜದ ಹ್ಯಾನ್ಸ್ ನನ್ಗೆ, ಸ್ವಲ್ಪ, ಗೆಳೆಯ ರಾಮುನ ನಮ್ಮ ವೇಣುವಿನ ನೆನಪನ್ನೂ ಅವರ ಮನೆಯಲ್ಲಿದ್ದ ಹಸುವಿನ ನೆನಪನ್ನೂ ತರುತ್ತಿದ್ದ.
ಹೇಳಿದೆ – “ಬಹಳ ಸಾರಿ ನನಗೆ ಯೋಚನೆ ಮಾಡುವುದಕ್ಕೆ ಭಯವಾಗುತ್ತದೆ. ಯಾಕೆಂದರೆ ಯೋಚನೆ ಮಾಡಿದ್ದು ಇಚ್ಛೆಯಾಗಿ, ಇಚ್ಛೆ ಪ್ರಬಲವಾಗಿ, ಪ್ರಬಲವಾದ ಇಚ್ಛೆ ನಿಜವಾಗಿಯೇ ಬಿಡುತ್ತದೆ. ನನಗೆ ಚಿಕ್ಕಂದಿನಲ್ಲಿ ಅಪ್ಪ ಅಮ್ಮ ಯಾರೂ ನನಗೆ ಇರಬಾರದು ಅನ್ನಿಸಿತ್ತು. ಒಬ್ಬನೇ ಯಾರಿಗೂ ಹೇಳದೇ ಕೇಳದೇ ಅಲೆಮಾರಿಯಾಗಿ ಹೊರಟು ಹೋಗಬೇಕು ಅನ್ನಿಸಿತ್ತು. ನನ್ನ ಅಪ್ಪ ಅಮ್ಮ ಹೆಂಡತಿ ಎಲ್ಲರೂ ನನ್ನ ಬಗ್ಗೆ ತುಂಬ ಪ್ರೀತಿ ಇದ್ದವರೆ, ಇಟ್ಟುಕೊಂಡವರೇ. ನನಗೆ ಕೆಲವು ಸಾರಿ ಅದು ಮನಸ್ಸಿಗೆ ಬಂದಾಗ ಅಯ್ಯೊ ಅನ್ನಿಸುತ್ತೆ. ಅಯೋಗ್ಯ ಅನ್ನಿಸುತ್ತೆ, ಬೇರೆ ಥರ ಇರಬೇಕು ಅನ್ನಿಸುತ್ತೆ. ನನ್ನ ಹೆಂಡತಿ ಜೊತೆ ಇರಲು ನಾನು ಅಯೋಗ್ಯ ಅನ್ನಿಸಿದಾಗ ಥಟ್ಟಂತ ಹೊರಟುಬಿಟ್ಟೆ. ಈಗ ಮತ್ತೆ ವಾಪಸ್ಸು ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ. ಇಲ್ಲೆ ಯಾಕಿದ್ದೇನೋ ಗೊತ್ತಿಲ್ಲ. ನನಗೆ ಬೇಕಾದ್ದಿ ಸಿಕ್ಕಿದೆಯೋ ಗೊತ್ತಿಲ್ಲ. ಹಾಗೆಯೇ ಮನೆಯ ನೆನಪು ಕೂಡ ಯಾವಾಗಲೂ ಬರಲ್ಲ. ವಾಪಸ್ಸು ಹೋಗಬೇಕು ಆನ್ನಿಸಲ್ಲ.”
ಹ್ಯಾನ್ಸ್ ಕೇಳಿದ – “ನಿನ್ನ ಹೆಂಡತಿಗೆ, ನಿನ್ನ ಅಮ್ಮನಿಗೆ ನೋವು ಆಗುವುದಿಲ್ಲವಾ? ನೀನು ಇಲ್ಲಿರುವುದು ಅವರಿಗೆ ಗೊತ್ತಾ?”
“ಇಲ್ಲ ಗೊತ್ತಿಲ್ಲ. ನೋವಾಗುತ್ತೆ. ನಾನು ಅಲ್ಲೇ ಇದ್ದಿದ್ದರೆ ನನಗೆ ನೋವಾಗುತ್ತಿತ್ತು. ಈಗ ನೋವು ಇಲ್ಲ. ಹೋಗಬಾರದು ಅಂತಲೂ ಇಲ್ಲ. ನಾನು ಬದಲಾಗಿದ್ದೇನೆ ಅನ್ನುವುದು ನಿಜ.”
ನಾವಿಬ್ಬರೂ ನಮ್ಮದಲ್ಲದ ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದೆವು. ಎಷ್ಟು ಹೇಳಿದೆವೊ ಎಷ್ಟು ತಿಳಿಯಿತೊ. ಆದರೂ ಹಿಮಾಲಯದ ಬೆಟ್ಟಗಳು, ಗಂಗೆ, ಆಶ್ರಮದ ಬದುಕು, ಒಂದು ತಿಂಗಳ ನಮ್ಮ ಒಡನಾಟ ಎಲ್ಲ ಸೇರಿ ನಾನು ಬದಲಾಗಿರುವುದು ನನಗೆ, ಅವನು ಬದಲಾಗಿರುವುದು ಅವನಿಗೆ ತಿಳಿವಂತೆ ಮಾಡಿದ್ದವು.

ನಿಜ ಒಂದು ಸಾಯಂಕಾಲ. ಫೆಬ್ರುವರಿ ತಿಂಗಳ ಚಳಿ ಬಿಸಿಲಲ್ಲಿ ಥಾಮಸ್‌ನ ಜೊತೆ ಪಾಥೆಗಾವ್‌ದ ಸಾಸುವೆ ಹೊಲದ ಹೂ ತುಂಬಿದ ಗಿಡಗಳನ್ನು ನೋಡಿ ಇಳಿಯುತ್ತ ಹೇಳಿದೆ. ಅವನಿಗೆ ಆಶ್ರಮದ ಜನರ ಬಗ್ಗೆ ಕುತೂಹಲ ಇತ್ತು. ಹೇಳಿದೆ – “ಇಲ್ಲಿ ಇರುವ ಎಲ್ಲರಿಗೂ ಭೂತಕಾಲ ಮಾತ್ರ ಇದೆ. ಭವಿಷ್ಯ ಇಲ್ಲ. ಹಾಗೆ ಇದ್ದೇವೆ.” ಉದ್ದ ಗಡ್ಡದ ದಪ್ಪ ಮೈಯ ಮುದುಕ ಕಾವಲುಗಾರ. ಕ್ರಿಸ್ತನ ಹಾಗೆ ತಲೆಗೂದಲು ಗಡ್ಡ ಇರುವ ಕೇರಳದ ತರುಣ ಮೈಕೆಲ್, ಊಟ ಬಡಿಸುವ ಸಂಸ್ಕೃತ ವಿದ್ವಾಂಸ, ಮನೆಯವರೆಲ್ಲರ ಕಗ್ಗೊಲೆ ನೋಡಿ ಶ್ರೀಲಂಕೆಯಿಂದ ತಾನೊಬ್ಬನೆ ಉಳಿದು ಬಂದು ಇಲ್ಲಿರುವ ಯುವಕ ಕಾವಿಧಾರಿ, ಲೆಕ್ಕ ಪತ್ರ ನೋಡಿಕೊಳ್ಳುವ ಅಲಾವುದೀನ್ ಕತೆಯ ಭೂತದಂತಿರುವ ಮಲೆಯೇಷಿಯಾದ ಕಪ್ಪು ಮನುಷ್ಯ, ಕರಾಟೆಯಲ್ಲಿ ಒಬ್ಬನನ್ನು ಪ್ರಾಣಾಂತಿಕವಾಗಿ ಗಾಯಗೊಳಿಸಿ ವೈರಾಗ್ಯ ಹುಟ್ಟಿ ಇಲ್ಲಿ ಪ್ರೆಸ್ಸಿನ ಜವಾಬ್ದಾರಿ ನೋಡಿಕೊಳ್ಳುತ್ತಿರುವ ಯುವಕ ಭಾವಗ್ರಾಹಿ – ನನ್ನ ಪರಿಚಯಕ್ಕೆ ಹಲವು ತಿಂಗಳಲ್ಲಿ ಒದಗಿಬಂದ ಹಲವು ನೂರು ಜನಕ್ಕೆ ಅವರದೇ ಆದ ಭೂತಗಳಿವೆ. ಭವಿಷ್ಯ ಗೊತ್ತಿಲ್ಲದೆ ಇದ್ದಾರೆ. ಭವಿಷ್ಯ ಇಲ್ಲವೇ ಇಲ್ಲ ಅನ್ನುವ ಹಾಗೆ ಇದ್ದಾರೆ. ನಾನೂ.

ಅಲ್ಲೆ ಆಶ್ರಮದ ಹತ್ತಿರವೆ ಪೋಲೀಸ್ ಇನ್ಸ್‌ಪೆಕ್ಟರರ ಮನೆ. ಸೈಕಲ್ಲು. ಒಣಹಾಕಿರುವ ಬಟ್ಟೆಗಳು. ಮಕ್ಕಳು. ಟ್ರಾನ್ಸಿಸ್ಟರ್ ಕೇಳುತ್ತ ಕೂರುವ ಹುಡುಗಿಯರು. ಸಂಜೆ ಟಿವಿ ನೋಡಲು ಅಲ್ಲಲ್ಲಿ ಗುಂಪು ಸೇರುವ ಜನ. ಭವಿಷ್ಯದ ಗುರಿ ಕನಸು ಇರುವವರು. ನನಗೆ ಒಮ್ಮೆ ಪರಿಚಿತವಾಗಿದ್ದ ನನ್ನದೂ ಆಗಿದ್ದ ಬದುಕು ಕೈಯಳತೆಯಲ್ಲೆ ಇದೆ. ಆಶ್ರಮದಲ್ಲಿ ಎರಡೂ ಹೊತ್ತು ಉಳಿದು ಹೋದ ಊಟವನ್ನು ಬೇಡಲು ಬರುವ ಭಿಕ್ಷುಕರ ಗುಂಪು ಇದೆ. ಅವರಿಗೂ ಭವಿಷ್ಯ ಇಲ್ಲ. ಬೇರೆ ಥರದಲ್ಲಿ ಭವಿಷ್ಯ ಇಲ್ಲ.

ಇರುವುದು ಈ ಕ್ಷಣ ಮಾತ್ರ ಅಂತ ಆಗಲೂ ಅನ್ನಿಸಿತ್ತು – ಮೈ ಕೊರೆವ ಸೊನ್ನೆಗೆ ಹತ್ತಿರದ ಚಳಿಯಲ್ಲಿ ರಾತ್ರಿ ದಿನವೆಲ್ಲ ನಡೆದು ಸುಸ್ತಾಗಿ, ಗುರುದ್ವಾರದ ಜನ ಕರುಣಿಸಿದ ಕಂಬಳಿ ಹೊದ್ದು, ರಾಜು ಮತ್ತು ಶ್ರೀನಾಥ ತಂದ ಕೇಜಿಗಟ್ಟಲೆ ಜಿಲೇಬಿಗಳನ್ನು ಬಿಸಿ ಬಿಸಿಯಾಗಿ ನಾವು ಕಬಳಿಸುತ್ತ ಕೂತಿದ್ದಾಗ ಹಾಗನ್ನಿಸಿತ್ತು.

ಮತ್ತೆ ಆಗಲೂ ಹಾಗೇ ಅನ್ನಿಸಿತ್ತು – ಹಿಮದ ಮೇಲೆ ಕೋಲೂರಿ ನಡೆದು ತೀರ ಬೆಳಗಿನ ಜಾವದಲ್ಲಿ ಹೂಗಳ ಕಣಿವೆಗ ಹೋಗಿ ನಿಂತಾಗ. ಕೈಗೆ ತಗಲುವಷ್ಟು ಸಮೀಪ ಇರುವಂತೆನ್ನಿಸುವ ಆದರೆ ನೂರಾರು ಅಡಿ ದೂರವಿರುವ, ಬೃಹತ್ ಅತೀ ಬೃಹತ್ ಗಾತ್ರದಿಂದ ಮೈಮೇಲೆ ಬೀಳುವಂತೆಯೇ ಇರುವ, ಮೊನಚು ಕಲ್ಲುಗಳ ಬೆಟ್ಟಸಾಲುಗಳು ಎತ್ತರ ಅತೀ ಎತ್ತರವಾಗಿ ಎಡಬಲಗಳಲ್ಲಿ ಕಣ್ಣು ಹರಿವಷ್ಟು ದೂರವೂ ನಿಂತು, ಮೇಲೆ ಕವುಚಿ ಬೀಳುವಂತಿರುವ ಮಳೆ ಮೋಡವೂ ಬೆಟ್ಟದ ಮಧ್ಯಂತರದಲ್ಲಿ ನಮ್ಮ ತಲೆ ಸವರಲೆಂದು ಇಳಿದು ಬರುತ್ತಿರುವ ನೇರಳೆ – ಬಿಳಿ ಮೋಡವೂ ಇದ್ದು, ತೇವ ತುಂಬಿದ ಗಾಳಿ ಬೀಸುತ್ತ, ಅಷ್ಟಿಷ್ಟೆ ಎಳೆ ಬಿಸಿಲು ಬೀಳುತ್ತ, ಹೂಗಳ ಬಣ್ಣ ಕಣ್ಣು ತುಂಬುತ್ತ – ಕಲ್ಲುಗಳ ಬಣ್ಣ, ಅಷ್ಟಿಷ್ಟು ಆಗೀಗ ತೋರಿಸುವ ಆಕಾಶದ ಬಣ್ಣ, ಮೋಡದ ಬಣ್ಣ, ಬಿಸಿಲು ಬಿದ್ದ ಮೋಡದ ಬಣ್ಣ, ಮಳೆ ಮೋಡದ ಬಣ್ಣ, ಹೆಪ್ಪುಗಟ್ಟಿದ ಹಿಮನದಿಯ ಬಣ್ಣ, ಹುಲ್ಲು ಹಾಸಿನ ಮೇಲೆ ಬೆಳಗಿನ ಬೆಳಕಿನ ಬೇರೆ ಬೇರೆ ವಿನ್ಯಾಸ, ಅಪ್ಪಟ ಚಳಿಯ ಗಾಳಿಗೆ ನನಗೆ ಚಳಿಚಳಿಯಾಗುತ್ತಿರುವಾಗಲೇ ನನ್ನೊಳಗೆ ಸ್ವಲ್ಪ ಬೆಚ್ಚಗೆ ಹರಿಯುತ್ತಿರುವ ರಕ್ತದ ಬಿಸುಪು, ಉಸಿರಾಡಿದಂತೆಲ್ಲ ಬರುವ ಹಬೆ, ನಾನಿರುವಷ್ಟು ಜಾಗ, ನನ್ನ ಕಣ್ಣಿಗೆ ಬೀಳುವಷ್ಟು ಲೋಕ ಬಿಟ್ಟರೆ ಇನ್ನೇನೂ ಇಲ್ಲವೇ ಇಲ್ಲ ಅಂತ ಅನ್ನಿಸಿದಾಗ – ಇರುವುದು ಈ ಕ್ಷಣ ಮಾತ್ರ. ಆ ದೊಡ್ಡ ಕಣಿವೆಯಲ್ಲಿ ಇದ್ದ ನಾವು ಹತ್ತು ಜನ ಚದುರಿ ಒಬ್ಬೊಬ್ಬರೆ ಇಬ್ಬಿಬ್ಬರೆ ಆದಾಗ ಏಕಾಂತದ ಭಯ ಸ್ವಲ್ಪ ಆಯಿತಲ್ಲ ಆ ಭಯ ಬಿಟ್ಟರೆ ಬೇರೆ ಏನೂ ಇಲ್ಲ ಅನ್ನಿಸಿದ್ದೂ ಇದೆ.

ಆದರೆ ಹಾಗೆ ಬಹಳ ಹೊತ್ತು ಇರಲಿಲ್ಲ. ರಾತ್ರಿ ಬಿದ್ದ ಮಳೆಯ ಹನಿಗಳನ್ನು ಈಗಲೂ ಉದುರಿಸುತ್ತಿರುವ ಎತ್ತರ ಮರಗಳ ಹಿಂದೆ ಇನ್ನೂ ಕತ್ತಲು ಇದೆ. ನಡೆದಷ್ಟೂ ಇರುವ ಕಣಿವೆ, ತಿರುವುಗಳಲ್ಲಿ ಧುತ್ತನೆ ಎದುರಾಗುವ ಬೃಹತ್ ಮತ್ತು ಮೊನಚು ಕೋಡುಗಲ್ಲುಗಳು. ದೇವರು ಇದ್ದರೆ ಇಲ್ಲೆ ಎಲ್ಲೊ ಮುಂದಿನ ತಿರುವಿನಲ್ಲಿ, ಅಲ್ಲಿ ತೇಲುತ್ತಿರುವ ಮೋಡದ ಕೆಳಗೆ, ಇಷ್ಟೆ ಬಿದ್ದಿರುವ ಬೆಳಗಿನ ಬಿಸಿಲಿನಲ್ಲಿ, ಹಿಮದ ಮೇಲೆ ಏನೋ ಮಾಡುತ್ತ ಕೂತಿರಬಹುದು ಅನ್ನಿಸುವ ಹಾಗೆ. ಅಕಸ್ಮಾತ್ತಾಗಿ ಬೀಳುವ ಕನಸೂ ಕೂಡ ಹೂಗಳ ಕಣಿವೆಯಷ್ಟು ಸುಂದರ, ಏಕಾಕಿ, ಭಯಂಕರ, ಮುಗ್ಧವಾಗಿರಲಾರದು. ಆದರೆ ಬಹಳ ಹೊತ್ತು ಹಾಗೇ ಅಲ್ಲಿ ಇರಲಾಗದು. ಮತ್ತೆ ನಡೆದು ಹಿಂದಿರುಗಿ ಗುರುದ್ವಾರಕ್ಕೆ ಹೋಗಿ, ಅಲ್ಲಿಂದ ನಡೆದು ರಸ್ತೆ ತಲುಪಿ, ಅಲ್ಲಿಂದ ಬಸ್ಸು ಹಿಡಿದು ಬದರಿಗೆ ಹೋಗಿ, ಅಲ್ಲಿಂದ ದೆಹಲಿಗೆ ಹೋಗಿ, ಅಲ್ಲಿಂದ ಬೆಂಗಳೂರಿಗೆ ಹೋಗಿ, ಅಲ್ಲಿಂದ ಶಿವಮೊಗ್ಗಕ್ಕೆ ಹೋಗಿ ಕಾಲೇಜಿಗೆ ತಲುಪಿ ಪಾಠ ಮಾಡಬೇಕು ಅನ್ನುವ ಭವಿಷ್ಯ ಇಲ್ಲೇ ಇದೇ ನಿಜ ಅನ್ನುವ ಕ್ಷಣಗಳನ್ನು ಆಳುತ್ತಿತ್ತು.

ಹೃಷೀಕೇಶ ಹಾಗಲ್ಲ. ಭೂತ ಮಾತ್ರ ಇತ್ತು. ಭೂತದ ಅಳುಕು, ಅಪರಾಧ, ಪಶ್ಚಾತ್ತಾಪಗಳು ನಿಧಾನವಾಗಿ – ಅವತ್ತು ಪೀನಿಯಲ್ಲಿ ಮಳೆ ಬಂದಾಗ ಬಿದ್ದ ಆಲಿಕಲ್ಲಿನಂತೆ – ಕರಗುತ್ತಿದ್ದವು. ಹಿಂದಿರುಗುವ ಆಸೆ ಇಲ್ಲದೆ, ಭವಿಷ್ಯದಲ್ಲಿ ಏನಿದೆ ಅನ್ನುವ ಚಿಂತೆ ಇಲ್ಲದೆ, ನಾಳೆಯ ಒತ್ತಾಯ ಇಲ್ಲದೆ ದಿನ ದಿನಾ ಸುಮ್ಮನೆ ಇದ್ದೆ. ಇರುತ್ತಿದ್ದೆ, ಭೂತಗಳನ್ನು ಹೊತ್ತ ಜನ, ಭೂತದಿಂದ ತಪ್ಪಿಸಿಕೊಳ್ಳಲು ಬರುವ ಜನ, ಆಶ್ರಮದ ಮೇಲೆ ಕರುಣೆ ತೋರುವ ಜನ, ಅತಿಥಿಗಳಾಗಿ ಬರುವ ಜನ, ಎಲ್ಲರೂ ಬಂದು ಹೋಗುವುದನ್ನು ನೋಡುತ್ತ ಸುಮ್ಮನೆ ಬೆಟ್ಟದಹಾಗೆ ನದಿಯಹಾಗೆ ಇದ್ದೆ. ಎಷ್ಟು ದಿನ ಹೀಗೆ ಇರುತ್ತೇನೋ ಗೊತ್ತಿಲ್ಲದ ಹಾಗೆ ಇದ್ದೆ.

ನಿದ್ದೆ ಬರಲಿಲ್ಲ. ಹೀಗಾಗುವುದು ಅಪರೂಪ. ಮತ್ತೆ ಎದ್ದು ಬರೆಯುತ್ತಿದ್ದೇನೆ. ಹಿಮಾಲಯ ದಿನಗಳ ತುಣುಕುಗಳು ಹಾಸಿಗೆಯಲ್ಲಿ ಹೊರಳಾಡಿಸಿದವು. ನನ್ನ ಇಚ್ಛೆಯದಲ್ಲದ ಆದರೆ ನಾನು ಮಾಡಬೇಕಾದ ಕೆಲಸಗಳು ಬೆಳಗಾಗಲೆಂದೆ ಕಾದಿವೆ. ಆದರೆ –

ಕೈ ಮುಗಿದಾಗ ಹಿಂದೆಂದೂ ಹಾಗೆ ಅನ್ನಿಸಿರಲಿಲ್ಲ. ಹಾಗೆ ಹೃತ್ಪೂರ್ವಕ ಕೈ ಮುಗಿದೂ ಇರಲಿಲ್ಲ. ನನ್ನವೇ ಕೈ ಬೆರಳುಗಳು ಒಂದಕ್ಕೊಂದು ವಿರುದ್ಧವಾಗಿ ಒತ್ತಿಕೊಂಡು, ಅಂಗೈಗೆ ಅಂಗೈ ಒತ್ತಿ, ಒಂದು ಬೆರಳಲ್ಲಿ ಹರಿವ ರಕ್ತದ ಚಲನೆ ಇನ್ನೊಂದು ಬೆರಳಿಗೆ ಗೊತ್ತಾಗಿ, ಇಡೀ ನಾನು ಮುಗಿದ ಕೈಯಾಗಿ, ಕಣ್ಣುಮುಚ್ಚಿ, ಗಂಟೆ ಸದ್ದು ಕಿವಿ ತುಂಬ ತುಂಬಿಕೊಂಡು, ಅಹಂಕಾರ ಮುಕ್ಕು ಮಾಡಿಕೊಳ್ಳುತ್ತ, ನೋಯುತ್ತಲೂ ಸಂತೋಷ ಪಡುತ್ತಲೂ ಸ್ವಲ್ಪಹೊತ್ತು ಇದ್ದೆ. ಮತ್ತೆ, ಆಮೇಲೆ, ನಮಸ್ಕಾರ ಪೂರ್ತಿಮಾಡಿದೆ. ನನ್ನ ಇಡೀ ಮೈಯನ್ನು ನೆಲ ಎತ್ತಿ ಹಿಡಿದಿತ್ತು. ಹಣೆಗೆ ತಗಲುವ ತಣ್ಣಗೆ ಕೊರೆಯುವ ನೆಲ, ತೊಡೆಗೆ ಒತ್ತುವ ನೆಲ, ಕಾಲ ಬೆರಳಿಗೆ ತಂಪ್ಪೆನ್ನಿಸುವ ನೆಲ, ಮನಸ್ಸು ಪೂರ್ತಿ ಇಟ್ಟು ಮಾಡುವ ನಮಸ್ಕಾರ ನೆಲದ ಜೊತೆಗೆ ನನ್ನನ್ನು ಸೇರಿಸಿಕೊಂಡಿತ್ತು. ಆಗಲೂ ಹಿಂದೆ ಒಮ್ಮೆ ಜೊತೆಯಲ್ಲಿದ್ದವರನ್ನೆಲ್ಲ ಮರೆತು, ಸುಸ್ತಾಗಿ, ಬ್ರಿಂಗ್ಟಾ ಟಾಪನ್ನು ಹತ್ತಿ ನೆಲಕ್ಕೆ ಬೆನ್ನು ಕೊಟ್ಟು ಮಲಗಿದಾಗ – ಅದು ಮಲಗಿದ್ದು. ನೆಲ ನನಗೆ ಶಕ್ತಿ ಕೊಟ್ಟಿತ್ತು. ಆ ಶಕ್ತಿಯಲ್ಲಿ ಕೆಲವು ಕ್ಷಣ ಇದ್ದವರನ್ನು ಮರೆತು, ಇರಬೇಕೆಂದು ಬಯಸಿದ – ನನಗೆ ಬೇಕೇ ಬೇಕೆಂದು ನಾನು ಹಂಬಲಿಸಿದ ಮುಖಗಳನ್ನು ಮನಸ್ಸಿಗೆ ತಂದುಕೊಂಡಿದ್ದೆ. ಪಾರ್ವತಿ ನದಿ, ದೂರದಲ್ಲಿ ಕೆಳಗೆ, ಆಳದಲ್ಲಿ, ಸಾವಿರ ಸಾವಿರ ಅಡಿ ಏರಿ ಹತ್ತಿದ ಅಹಂಕಾರ. ಕಾಮನೆಯ ನೆನಪುಗಳು, ಚಿತ್ರಗಳು. ಈಗ ಆಯಾಸವಿಲ್ಲದೆ, ಹತ್ತಿದ ಅಹಂಕಾರವಿಲ್ಲದೆ, ಕಾಡಿದ ಕಾಮನೆಗಳು ನಿಜವಾಗಿ ಉಬ್ಬಿದ ಅಹಂಕಾರಕ್ಕೆ ಕೊಟ್ಟ ನೋವು ಇಲ್ಲದೆ, ಮನುಷ್ಯ ಎಷ್ಟೋ ಕಾಲದಿಂದ ಕಲ್ಪಿಸಿಕೊಂಡ ಇನ್ನೊಂದರ ಎದುರು ಸುಮ್ಮನೆ ನಮಸ್ಕಾರ ಮಾಡಿದಾಗ ತಿಳಿಯಿತು ನಮಸ್ಕಾತ ಎಂಥ ಬಿಡುಗಡೆ ತರುತ್ತದೆ ಎಂದು. ಹುಡುಗನಾಗಿದ್ದಾಗ ಅಪ್ಪ ಅಮ್ಮ ಹೇಳಿಕೊಟ್ಟಹಾಗೆ, ಹೆದರಿಕೊಂಡು, ನಮಸ್ಕಾರ ಮಾಡದಿದ್ದರೆ ಏನಾದೀತೋ ಎಂದು ಕೈ ಮುಗಿದದ್ದು ಬರೀ ಸುಳ್ಳು. ಅವತ್ತು, ಆ ಬೆಳಗ್ಗೆ, ನಿಜವಾಗಿ, ನನಗೇ ನಿಜ ಅನ್ನಿಸುವ ಹಾಗೆ, ನಮಸ್ಕಾರ ಮಾಡಿದ್ದು ಒಂದೇ ಸಲ. ಕೆಲವು ಬಾರಿ ಹೀಗೂ ನಾನು ಕೈ ಮುಗಿದೇನು ಅಂತ ಎಂದೂ ಕಲ್ಪಿಸಿಕೊಂಡೂ ಇರಲಿಲ್ಲ. ಒಮ್ಮೆಯಾದರೂ ಆಯಿತಲ್ಲ. ಸಾಕು.

ಅಂದು ಒಂದು ದಿನ ಹೀಗೇ ರಾತ್ರಿ ನಿದ್ದೆ ಬಾರದೆ ನನ್ನ ಕೋಣೆಯ ಆಚೆ ಕಾಸಾಲೆಯಲ್ಲಿ ಬಂದು ಸುಮ್ಮನೆ ಕೂತಿದ್ದೆ. ಆಗಲೂ ಈಗ ಇರುವ ಹಾಗೇ ಮುಕ್ಕಾಲು ಚಂದ್ರನ ಬೆಳಕಿತ್ತು. ನನಗೆ ನಿದ್ರೆ ಬಾರದಿರುವುದು ಅಪರೂಪ. ನಿದ್ರೆ ಬರಲಿಲ್ಲ. ಅಷ್ಟೆ. ಯಾಕೋ. ಈಗಾದರೂ ಹಿಮಾಲಯದ ಚಿತ್ರ ಮನಸ್ಸಿಗೆ ಬರುತ್ತಿವೆ. ಆಗ ಕಾಡುವ ಚಿತ್ರಗಳೂ ಇರಲಿಲ್ಲ. ವಿಶಾಲ ಅಂಗಳದಲ್ಲಿ ಮರ ಸುಮ್ಮನೆ ನಿಂತಿತ್ತು. ಅಂಗಳದ ತುಂಬ ಚೌಕ ಚೌಕ ಜೋಡಿಸಿದ ಚಪ್ಪಡಿ ಕಲ್ಲುಗಳ ಮೇಲೆದೀಪದ ಬೆಳಕು, ಚಂದ್ರನ ಬೆಳಕು ಇತ್ತು. ಮರದ ಹಿಂದೆ ಅಡುಗೆ ಮನೆಯ ಬಿಸಿಲು ಮಚ್ಚು. ಎರಡು ಮೂಟೆಗಳು ಕೆಲವು ಸೌದೆ ತುಂಡುಗಳು ಸುಮ್ಮನೆ ಇದ್ದವು. ಮರದ ಪಕ್ಕದಲ್ಲಿ ಸ್ಟೀಲಿನ ಗೇಟು ಹಳೆಯ ಹೊಳಪನ್ನು ಬೀರುತ್ತಿತ್ತು. ಅಡುಗೆ ಕೋಣೆಯ ಆಚೆ ಬದಿಗೆ ಗುಡ್ಡ. ಗುಡ್ಡದ ತುಂಬ ಕಾಡು. ಅದರಾಚೆ ಮುಖ್ಯ ರಸ್ತೆ. ಅದರಾಚೆ ಅಲೆಗಳ ಹಾಗೆ ಆರಂಭವಾಗುವ ಹಿಮಾಲಯದ ಬೆಟ್ಟಗಳ ಶ್ರೇಣಿ. ಅಲ್ಲೆ ಹತ್ತಿರದಲ್ಲಿ ಪಾಥೆಗಾವ್ ಹಳ್ಳಿ. ಅಲ್ಲಿ ಎಷ್ಟೊಂದು ಸಾಸುವೆ ಹೂಗಳು ನೆಲದ ತುಂಬ ಹರಡಿದ್ದವು. ಗಂಗಾನದಿಯ ಶಬ್ದ ತೆಳುವಾಗಿ ಕೇಳುತ್ತಿತ್ತು. ಇನ್ನೂ ಹಿಮ ಕರಗಿಲ್ಲ. ನದಿಯ ನೀರು ಹೆಚ್ಚಿಲ್ಲ. ಕೈಸಾಲೆಯಲ್ಲಿ ಖಾಲಿ ಮಂಚ. ಉದ್ದಕ್ಕೂ ಮುಚ್ಚಿದ ಬಾಗಿಲುಗಳು. ಕೆಳಗೆ ಎರಡು ಅಂತಸ್ತು. ನಿದ್ದೆ ಮಾಡುತ್ತಿರುವ ಜನ. ಸನ್ಯಾಸಿಗಳು, ಬ್ರಹ್ಮಾಚಾರಿಗಳು, ನನ್ನಂಥವರು, ಅತಿಥಿಗಳು, ಕೆಲಸದವರು. ಸುಮ್ಮನೆ ಕೂತೇ ಇದ್ದೆ. ಹೀಗೂ ಸುಮ್ಮನೆ ಕೂತೇ ಇರಬಹುದು ಒಂದೊಂದು ಸಲ. ತಟ್ಟನೆ ಎಲ್ಲ ಖಾಲಿಯಾಗಿದೆ. ಈಗ ರಾತ್ರಿ ಎರಡು ಗಂಟೆ. ಸಾಕು.

ಮತ್ತೆ ಮೂರನೆಯ ದಿನದ ಬರವಣಿಗೆ

ಬೇಜವಾಬ್ದಾರಿಯ ಬದುಕು ಅದು. ನನ್ನ ಸುತ್ತಲೆಲ್ಲ ಒಂದು ಸಮುದ್ರದಷ್ಟು ಜನ ಇದ್ದರೂ ನಾನು ಯಾರಿಗೂ ಏನೂ ಹೇಳಬೇಕಾಗಿರಲಿಲ್ಲ. ಸುಮಾರು ಒಂದು ತಿಂಗಳ ಕಾಲ ಭಾಷೆಯ ಜವಾಬ್ದಾರಿ ಕೂಡ ಇಲ್ಲದವನಂತೆ ಅಲೆದೆ. ತೀರ ಕೆಲವು ಅಗತ್ಯದ ನಾಮಪದಗಳನ್ನು ಮಾತ್ರ – ಚಾ, ಕಾಫಿ, ಮಧುರೆ, ಕ್ವಿಲಾನ್ ಇಂಥವು – ಆಡಬೇಕಿತ್ತು. ಎಲ್ಲಿಗೆ ಹೋಗುತ್ತೇನೆ, ಯಾಕೆ ಹೋಗುತ್ತೇನೆ, ಯಾವಾಗ ಹೋಗುತ್ತೇನೆ, ಎಲ್ಲಿ ಇರುತ್ತೇನೆ ಇವು ಯಾವುದಕ್ಕೂ ಯಾರಿಗೂ, ನನಗೂ ಕೂಡ ವಿವರಣೆ ಕೊಟ್ಟುಕೊಳ್ಳುವ ಅಗತ್ಯವೇ ಇಲ್ಲದೆ ಸುಮ್ಮನೆ ಅಲೆದೆ. ಸವಾಲು ಇದ್ದರೆ ತಾನೆ ಜವಾಬಿನ ಮಾತು. ಬಹುಶಃ ಆಗ ನನ್ನೊಳಗೆ ಪ್ರಶ್ನೆಗಳೂ ಇರಲಿಲ್ಲ. ಆದ್ದರಿಂದ ನಾನು ಬೇಜವಾಬ್ದಾರ ಕೂಡ ಆಗಿರಲಿಲ್ಲ.

ಹೋಗಬೇಕು, ಹೋಗಬೇಕು, ಹೋಗಬೇಕು, ಹೋಗಿಬಿಡಬೇಕು ಎಂಬ ಒತ್ತಾಯ ಮಾತ್ರ ಆ ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ದಿನದ ಎಲ್ಲ ಕ್ಷಣಗಳಲ್ಲೂ ನನ್ನೊಳಗೆ ಅಗಾಧವಾಗಿ ಬೆಳೆದು ಹಬ್ಬತೊಡಗಿತು. ಅಸ್ಪಷ್ಟವಾಗಿ ಬೆಟ್ಟದ ಕಾಡಿನ ಒಂದು ಚಿತ್ರ ನನ್ನ ಮನಸ್ಸಿನಲ್ಲಿತ್ತು. ಬಹುಶಃ ಕೊಡಚಾದ್ರಿ ಇರಬೇಕು. ಈ ಚಿತ್ರ ಬೆಳೆದು ಹಿಮಾಲಯವೇ ಆಗಿ ನನ್ನ ಅಲ್ಲಿಗೆ ಒಯ್ದದ್ದು ಇನ್ನೂ ಇಪ್ಪತ್ತು ದಿನ ಆದಮೇಲೆ.

ಬೆಂಗಳೂರಿನಲ್ಲಿದ್ದೆ. ಆ ವರ್ಷದ ಕೊನೆಯ ತಿಂಗಳ ಮೊದಲನೆಯ ದಿನ. ಅಂದು ನಾವು ಒಂದು ಮದುವೆಗೆ ಹೋಗಬೇಕಿತ್ತು. ಬೆಳಗಿನ ಜಾವ ಎದ್ದು ಗೀಸರಿನ ಬಿಸಿನೀರು ಸ್ನಾನ ಮಾಡುತ್ತ “ಇದೇ ನನ್ನ ಮನೆಯ ಕೊನೆಯ ಸ್ನಾನ” ಅಂದುಕೊಂಡೆ. ಬಚ್ಚಲಿನ ಚೌಕ ಇಟ್ಟಿಗೆಗಳ ಗೆರೆಗಳನ್ನೇ ನೋಡುತ್ತ ತುಂಬ ಹೊತ್ತು ಹಬೆ ನೀರಲ್ಲಿ ಮಿಂದೆ. ರಾತ್ರಿಯೇ ಬರೆದಿಟ್ಟ ಕಾಗದವನ್ನು ಇನ್ನೂ ಮಲಗಿದ್ದ ಚಂದ್ರಳ ಪಕ್ಕದಲ್ಲಿಟ್ಟು “ಹೋಗುತ್ತೇನೆ” ಅಂದು ಹೊರಟುಬಿಟ್ಟೆ. ಹೇಳಿದೆ ಅನ್ನುವ ನನ್ನ ಸಮಾಧಾನಕ್ಕೆ ಅಷ್ಟೆ ಅಂದದ್ದು. ಬಹುಶಃ ಅವಳಿಗೆ ಕೇಳಿಸಲಿಲ್ಲ. ಸಣ್ಣದೊಂದು ಚೀಲದಲ್ಲಿ ಒಂದು ಜೊತೆ ಬಟ್ಟೆ ಇಟ್ಟುಕೊಂಡು ರಸ್ತೆಗೆ ಇಳಿದೆ.

ನಮ್ಮ ಮನೆಯ ಬೀದಿಯೊಂದು ದಾಟಿದರೆ ಸಾಕು ಅನ್ನುವ ಆತುರ. ಎಲ್ಲಿಗೆ? ಬಸ್ಸೊ? ರೈಲೊ? ಆಟೋ ಸಿಕ್ಕಿತು. ಹಳ್ಳಿಯವರು ಯಾರೋ ಸಿಟಿ ಮಾರ್ಕೆಟ್ಟಿಗೆ ತರಕಾರಿ ಒಯ್ಯುತ್ತಿದ್ದರು. ಚಳಿಯ ಬಗ್ಗೆ ಮಾತಾಡುತ್ತಿದ್ದರು. ಯಾರನ್ನೋ ಆಡಿಕೊಳ್ಳುತ್ತಿದ್ದರು. ಒಂದಷ್ಟು ದೂರ ನಿದ್ದೆ ಮಾಡುತ್ತಿರುವ ಮನೆಗಳ ಸಾಲು. ಅಲ್ಲೊಂದು ಇಲ್ಲೊಂದು, ಬೆಳಗಾದ ಮೇಲೆ ಸಾಧ್ಯವೇ ಇರದ ಬಿಡುಬೀಸು ವೇಗದಿಂದ ಸಾಗುವ, ಸ್ಕೂಟರುಗಳು. ಹಾಲಿನ ಡಬ್ಬಿಗಳನ್ನು ಹೊತ್ತು, ಪ್ಯಾಕೆಟ್ಟುಗಳನ್ನು ಹೊತ್ತು, ಹೊರಡಲು ಸಿದ್ಧವಾಗುತ್ತಿದ್ದ ಸೈಕಲ್ಲುಗಳ ಗುಂಪು. ಪೇಪರುಗಳನ್ನು ಹಂಚಿಕೊಳ್ಳುವ ಹುಡುಗರು. ನೂಕು ಗಾಡಿಗಳನ್ನು ದಬ್ಬಿಕೊಂಡು, ಕೆಲವರು ಅದರ ಮೇಲೆ ಕೂತುಕೊಂಡು, ಹೋಗುವವರು. ಫ್ಯಾಕ್ಟರಿ ಬಸ್ಸಿಗೆ ಕಾದವರು. ಹೊತ್ತಲ್ಲದ ಹೊತ್ತಲ್ಲಿ ಬರುವ ನೀರಿಗೆ ನಲ್ಲಿಗಳ ಮುಂದೆ ನಿಂತ ಹೆಂಗಸರು. ರಸ್ತೆ ಬದಿಯ ಟೀ ಕಾಫಿ ಅಂಗಡಿಗಳ ಮುಂದೆ ಪೆಟ್ರೊಮ್ಯಾಕ್ಸ್ ಬೆಳಕಿನಲ್ಲಿ ಕಾಫಿ ಕುಡಿಯುವ ಟವಲು ಹೊದ್ದ ಬೀಡಿ ಸಿಗರೇಟುಗಳು – ಮಾರ್ಕೆಟ್ಟು ಬೆಳೆದಾಗ ತನ್ನತ್ತ ಬರುವ ಸವಾಲುಗಳಿಗೆ ಉತ್ತರ ಕೊಡಲು ಸಿದ್ಧವಾಗುತ್ತಿತ್ತು. ಇನ್ನೊಂದು ಆಟೋ ಹಿಡಿದು ರೇಲ್ವೇ ಸ್ಟೇಷನ್ನಿಗೆ ಹೋದೆ. ನನ್ನ ಅವನು ತೀರಜವಾಬ್ದಾರಿಯಿಂದ ಸ್ಟೇಷನ್ನಿಗೆ ತಲುಪಿಸಿದ. ರೇಲುಗಳ ವೇಳಾಪಟ್ಟಿ. ಜವಾಬ್ದಾರಿಯಿಂದ ಓಡಾಡುವ ರೇಲುಗಳು. ಮದರಾಸಿಗೆ ಇದ್ದ ರೇಲು ಹತ್ತಿದೆ. ಯಾವ ಊರಿಗಾದರೂ ಆಗಬಹುದಾಗಿತ್ತು. ಇತ್ತು, ಮದರಾಸಿಗೆ. ಹತ್ತಿದೆ.

ಕಿಟಕಿಯಾಚೆ ಮುಖ ಇಟ್ಟು ನೋಡುತ್ತ ಕುಳಿತೆ. ನಿಧಾನವಾಗಿ ಬಿಸಿಲು ಏರುತ್ತಿತ್ತು. ಡಬ್ಬಿಯ ತುಂಬ ಜನ ತುಂಬಿಕೊಂಡರು. ಎಲ್ಲ ಜವಾಬ್ದಾರಿ ಹೊತ್ತ ಜನ. ಕಾಟ್ಪಾಡಿಯಲ್ಲಿ ಇಳಿದು ಹೋದ, ಕಂದು ಬಣ್ಣದ ಸೀರೆ ಉಟ್ಟ, ಎಣ್ಣೆಗೆಂಪು ಬಣ್ಣದ ಹುಡುಗಿ ಬಟ್ಟಲುಗಣ್ಣಗಲಿಸಿ ಸುಮ್ಮನೆ ನೋಡುತ್ತ ಕುಳಿತದ್ದು ಇನ್ನೂ ಯಾಕೋ ನೆನಪಲ್ಲಿ ಉಳಿದಿದೆ.

ಸಮುದ್ರದ ಮುಂದೆ ಕುಳಿತೆ. ಇಳಿ ಬಿಸಿಲಲ್ಲಿ ಸಮುದ್ರದ ಅಲೆಗಳೊಡನೆ ಆಡುವ ಜನ. ಮನೆಯಿಂದ ಬಂದವರು. ಮನೆಗೆ ಹೋಗುವವರು. ತೊಯ್ದ ಕಾಲುಗಳು. ಅಂಟಿದ ಬಟ್ಟೆಗಳು. ಬಿಸಿ ಕಳೆದು ತಣ್ಣಗಾಗುತ್ತಿರುವ ಮರಳು. ಕೂಗುವ, ಕುಪ್ಪಳಿಸುವ, ಓಡುವ, ಬೀಳುವ, ಉರುಳುವ, ಮಾತಾಡುವ, ತಿನ್ನುವ, ಸುಮ್ಮನೆ ಇರುವ ಜನ. ಜನ. ವಾಹನದ ಸದ್ದು. ನಾನು ಇವರು ಯಾರ ಹಾಗೂ ಅಲ್ಲ. ಓಡುವ ವಾಹನಗಳು, ಹೋಗಲಿರುವ ಜನಗಳು, ಅವರಿಗಾಗಿ ಕಾದಿರುವ ಮನೆಗಳು, ನನ್ನ ಹೊತ್ತು ತಂದ ಆಟೋಗಳು, ರೈಲು, ಬೀದಿ – ಏನೂ ಅನ್ನಿಸದೆ ನನ್ನೊಳಗೆ ತುಂಬಿಕೊಂಡ ಖಾಲಿಯಾಗಿ ಹೋದ, ಮತ್ತೆ ಈಗ ಬರೆಯುವಾಗ ನೆನಪಿಗೆ ಬರುತ್ತಿರುವ ಆಗ ಗಮನಿಸಿದ್ದೆನೋ ಇಲ್ಲವೋ ಗೊತ್ತಿಲ್ಲದಿದ್ದ ಜಗತ್ತು – ಈಗ ಅನ್ನಿಸುತ್ತಿದೆ – ನನ್ನಂಥವನು ಒಬ್ಬ ಬೇಜವಾಬ್ದಾರಿಯಿಂದ ಬದುಕಬೇಕದರೆ ಇಡೀ ಜಗತ್ತು ಜವಾಬ್ದಾರಿಯಿಂದ ಬದುಕುತ್ತಿದ್ದರೆ ಮಾತ್ರ ಸಾಧ್ಯ. ಹೀಗೆ ಗಾಢವಾಗಿ ಅನ್ನಿಸಿದ್ದು ನಾನು ಹಿಮಾಲಯ ತಲುಪಿದ ಮೇಲೆ ಅಂತ ಈಗ ಅನ್ನಿಸುತ್ತಿದೆ.

ಮತ್ತೆ ಮೂರನೆಯ ದಿನವೇ ಬರೆದದ್ದು

ಹರಿದ್ವಾರದ ಒಂದೊಂದು ಬೀದಿಯನ್ನೂ ಬಿಡದೆ ದಿನವೂ ಅಲೆಯುತ್ತಿದ್ದೆ. ಅಲ್ಲಿನ ಸಾಧಕ ನಿವಾಸದಲ್ಲಿ ಗುಜಾರಾತಿನ ವೃದ್ಧ ದಂಪತಿಗಳ ಪರಿಚಯ ಆಯಿತು. ಅವನಿಗೆ ಸುಮಾರು ಅರುವತ್ತು ವರ್ಷ ವಯಸ್ಸು. ಆಕೆಗೆ ಐವತ್ತು ದಾಟಿತ್ತು. ಅವನು ತೆಳ್ಳಗೆ ಇದ್ದ. ತಲೆ ಬೋಳಾಗಿತ್ತು. ಬೆನ್ನು ಸ್ವಲ್ಪವೇ ಸ್ವಲ್ಪ ಬಗ್ಗಿತ್ತು. ಹುಬ್ಬಿನ ಹತ್ತಿರ ಮತ್ತು ಮುಂಗೈ ಮೇಲೆ ಅಲ್ಲಲ್ಲಿ ಚರ್ಮ ಬೆಳ್ಳಗಾಗಿತ್ತು. ಆಕೆ ದಪ್ಪಗೆ ಇದ್ದಳು. ಕೂದಲು ಬಹಳಷ್ಟು ಬೆಳ್ಳಗೆ ಇದ್ದವು. ಸುಖವಾಗಿ ಬೆಳೆದ ಮುದುಕಿ. ಅವನು ಮಾತಾಡುವಾಗ ಸ್ವಲ್ಪ ಉಗ್ಗುತ್ತಿದ್ದ. ಅವರಿಬ್ಬರೂ ಗಣೇಶಪುರಿ ಮಹಾರಾಜ್ ಬರುವುದನ್ನು ಕಾಯುತ್ತಿದ್ದರು. ಒಂದು ತಿಂಗಳಿನಿಂದ ಆ ಆಶ್ರಮದಲ್ಲಿ ದೇವರ ಸೇವೆ ಮಾಡುತ್ತ ಇದ್ದಾರಂತೆ. ಅವನಿಗೆ ಬರೋಡಾದಲ್ಲಿ ಕ್ಯಾಸೆಟ್ಟುಗಳ ಅಂಗಡಿ ಇದೆಯಂತೆ. ಹಿಂದೆ ಫಿಲಿಪ್ಸ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದನೆಂತೆ. ಇಡೀ ಸಾಧಕ ನಿವಾಸದ ಸುಮಾರು ಐವತ್ತು ಕೋಣೆಗಳಲ್ಲಿ ‘ಲೌಕಿಕರು’ ಇದ್ದದ್ದು ಆ ದಂಪತಿಗಳು ಮತ್ತು ನಾನು ಮಾತ್ರ. ಉಳಿದ ಸುಮಾರು ನಲವತ್ತು ಖಾಲಿ ಇದ್ದವು. ನನ್ನ ಕೋಣೆಯ ಕಸ ಗುಡಿಸಲು ಅವರ ಬಳಿ ಇದ್ದ ಪೊರಕೆ ಸಾಲ ಕೇಳಿದ್ದೆ ಆರಂಭ, ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯಿತು.

ಹರಿದ್ವಾರದ ಆ ಸನ್ಯಾಸಿಗಳ ವ್ಯವಸ್ಥೆಯೇ ಬೇರೆ. ತುಂಬ ಪರಿಣತ ಸನ್ಯಾಸಿಗಳು. ನಾನು ಬಂದಾಗ ಕರೆದು ಮಾತನಾಡಿಸಿದ ಮುದುಕ – ಆತ ದಿನಾ ಬೆಳಗಿನ ಜಾವ ಎದ್ದು ಮೈಕಿನಲ್ಲಿ ಶಾಂತಿ ಮಂತ್ರ ಪಠಿಸುತ್ತಿದ್ದ. ಆತ ‘ಶಾನ್ತಿಃ’ ಎಂದು ಉಚ್ಚರಿಸುವ ರೀತಿಯೇ ಕೇಳುವ ನನ್ನೊಳಗೆ ಶಾಂತಿ ತುಂಬಿಕೊಳ್ಳುವಂತೆ ಮಾಡುತ್ತಿತ್ತು. ಆಮೇಲೆ ವಿಷ್ಣು ಸಹಸ್ರನಾಮ ಓದುತ್ತಿದ್ದ. ನಾನೂ ಹೋಗಿ ಕೂಡಬೇಕಾಗಿತ್ತು. ಇನ್ನೊಬ್ಬ ದಪ್ಪ ಕನ್ನಡಕದ. ಅಗಲ ಮುಖದ, ಗೆರೆಬಿದ್ದ ಮುಖದ ಯಜಮಾನ ವಿದ್ವಾಂಸ. ಅವನೊಡನೆ ಉಬ್ಬು ಹಲ್ಲಿನ ತೆಳ್ಳನೆ ಮೈಯ ಕುರುಚಲು ಗಡ್ಡದ, ಶೃಂಗೇರಿಯ ಬ್ರಾಹ್ಮಣನಂತೆ ಕಾಣುವ ವ್ಯಾಖ್ಯಾನಕಾರ ವಿದ್ವಾಂಸ. ಜೊತೆಗೆ ಅಲ್ಲಿನ ಬಹುಶಃ ಶಾಶ್ವತ ನಿವಾಸಿಗಳಾದ ಇನ್ನು ಕೆಲವರು ಸಂಚಾರಿಗಳಾದ ಸನ್ಯಾಸಿಗಳು. ಯುವಕರು ಅವರೆಲ್ಲ.

ವೃದ್ಧ ದಂಪತಿಗಳು ಗಣೇಶಪುರಿಯವರ ದರ್ಶನ ಪಡೆಯಲೇಬೇಕೆಂದು ಕಾಯುತ್ತಿದ್ದರು. ಪ್ರತಿವರ್ಷ ಬರುವವರು ಅವರು. ನನಗೆ ಭಕ್ತಿ ಇರದಿದ್ದರೂ ಕಾಯುತ್ತಿದ್ದೆ. ಬಹುಶಃ ನನ್ನ ಗುರು ಅವರಿರಬಹುದು ಎಂದು. ಎಲ್ಲಾದರೂ ಇರಲೇಬೇಕಲ್ಲ ಎಂದು. ಅಲ್ಲೇ ಇರಲು ಕಾಯುವ ನೆಪ ಇದೆ ಎಂದು.

ಅಲ್ಲಿ ಇನ್ನೊಬ್ಬ ಮಹಿಳೆ ಇದ್ದಳು. ಬಿಳೀ ಸೀರೆ, ತುಂಬ ತೋಳಿನ ಬಿಳೀ ರವಿಕೆ, ದಟ್ಟ ಕಪ್ಪು ಕೂದಲು, ಅಗಲ ಕಣ್ಣು, ಖಾಲಿ ಹಣೆ, ಹಾಲಿನಂಥ ಮೈಬಣ್ಣ. ಆದರೆ ಆಕೆ ಮಾತನಾಡಿದ್ದನ್ನು ನಾನು ಎಂದೂ ನೋಡಲಿಲ್ಲ. ಸುಮ್ಮನೆ ನಿಶ್ಚಲವಾಗಿ ಕೂತಿರುತ್ತಿದ್ದಳು. ಮೆಟ್ಟಿಲ ಮೇಲೆ ಅಥವ ಚಾವಣಿಯ ಮೇಲೆ. ನಕ್ಕದ್ದು ನೋಡಲಿಲ್ಲ. ಆ ಆಶ್ರಮದಲ್ಲಿ ಶಾಶ್ವತವಾಗಿದ್ದ ಸನ್ಯಾಸಿಗಳು ಮತ್ತು ಎಂಟು ಹತ್ತು ಹುಡುಗರನ್ನು ಬಿಟ್ಟರೆ ಅಪರಿಚಿತನಾದ ನನ್ನ ಬಗ್ಗೆಯೂ ಯಾವ ಕುತೂಹಲವೂ ಇಲ್ಲದಂತೆ ಇದ್ದಳು. ನಿರ್ಭಾವ, ನಿಶ್ಚಲ, ನೀರವ ಮಹಿಳೆ. ನನ್ನ ಹಳೆಯ ಬುದ್ಧಿ ಆಗಾಗ ನನ್ನಲ್ಲಿ ಅವಳಿಗೆ ಆಸೆ ಹುಟ್ಟುವಂತೆ ಮಾಡಬೇಕು. ಆಕೆ ಯಾಕೆ ಹೀಗೆ ಎಂದು ತಿಳಿಯಬೇಕು ಎಂಬ ಕುತೂಹಲ ಹುಟ್ಟಿಸುತ್ತಿತ್ತು. ಆಕೆ ಬಹಳ ದುಃಖಿ ಇರಬಹುದು. ಹೌದಾದರೆ ‘ನಿಮ್ಮ ದುಃಖ ಅರ್ಥ ಆಗುತ್ತದೆ’ ಅನ್ನಬೇಕು ಅನ್ನಿಸಿತು.

ಆದರೆ ನನ್ನನ್ನು ಬಹಳ ಹಚ್ಚಿಕೊಂಡವರು ಬರೋಡದ ದಂಪತಿಗಳು. “ಬಬನ್ ನ್ನಿ. ತತತರಕಾರಿ ತರಣ…. ಕೃಷನ್ ಪರಮಾತ್ಮಂಗೆ ಶಾಲು ತರಣ…. ನನ್ನ ಹೆಂಡತಿ ಇವತ್ತು ಮಾಡಿದ ಅಡಿಗೆ ಊಟ ಮಾಡಿ..” ಇತ್ಯಾದಿ ಮಾತಾಡಿಸುತ್ತದ್ದರು. ಅಥವ “ನನ್ನ ಮಗ ಇಂಥ ಕೆಲಸದಲ್ಲಿದ್ದಾನೆ, ಇನ್ನೊಬ್ಬ ಹೀಗೆ, ನೀವು ಯಾವ ಕೆಲಸದಲ್ಲಿದ್ದೀರಿ? ನಿಮ್ಮ ಮನೆಯವರು? ಮಕ್ಕಳು? ಇಲ್ಲವೆ. ಅಯ್ಯೊ ಪಾಪ.” “ನೋಡಿದೆಯಾ ಈ ಬೇಚಾರ ಪಾಪ ಪೇಪರು ಓದಿ ಹದಿನೈದು ದಿನ ಆಯಿತಂತೆ. ನಿನ್ನೆ ಬರೀ ಬ್ರೆಡ್ಡು ತಿಂದನಂತೆ..” ಹೀಗೆ ಉಗ್ಗುತ್ತ ಹೆಂಡತಿ ಹತ್ತಿರ ಹೇಳುತ್ತಿದ್ದರು.

ಅವರಿಗೆ ಯಾರಾದರೂ ನನ್ನಂಥವನ ಜೊತೆ ಬೇಕಿತ್ತು. ಹರಿದ್ವಾರದ ಆ ಸಾಧನಾ ಮಂದಿರದ ಸನ್ಯಾಸಿಗಳು ಬ್ರಹ್ಮಸೂತ್ರ ಓದಿ ಅರ್ಥ ಹೇಳುತ್ತಿದ್ದರು. ಭಗವದ್ಗೀತೆ ಓದಿ ವ್ಯಾಖ್ಯಾನ ಮಾಡುತ್ತಿದ್ದರು. ದೇವರ ಸಾಕ್ಷಾತ್ಕಾರದ ಬಗ್ಗೆ ಮಾತಾಡುತ್ತಿದ್ದರು. ಆದರೆ ‘ಲೌಕಿಕ’ರ ಬಗ್ಗೆ ಅಪಾರವಾದ, ಅಗಾಧವಾದ, ಅನಂತವಾದ, ತೀವ್ರವಾದ, ಅವರು ಒಂದಿಷ್ಟೂ ಅದನ್ನು ಮರೆಮಾಚಿಕೊಳ್ಳದ, ಇಂಥ ಇನ್ನೂ ಹತ್ತು ವಿಶೇಷಣ ಸೇರಿಸಬಹುದಾದ, ತಿರಸ್ಕಾರ ಇತ್ತು. ಇಂಗ್ಲಿಷು ಬಲ್ಲವರಿಗೆ ಬಣ್ಣದ ಬಟ್ಟೆ ತೊಡುವವರ ಬಗ್ಗೆ ಮರುಕ ಬೆರೆತ ಹೀಯಾಳಿಕೆ ಇತ್ತು. ಅವರ ಸತ್ಸಂಗ ಕೇಳಬೇಕಾದರೆ ‘ನಾವು’ ಕೂರುವುದಕ್ಕೇ ಬೇರೆ ಜಾಗ. ಅವರ ವಿದ್ವತ್ತು ನನ್ನ ಬುದ್ಧಿಯನ್ನು ಕೆಣಕಿದ್ದು ನಿಜ. ಅಲ್ಲಿದ್ದಷ್ಟು ದಿನ ತುಂಬ ಶ್ರದ್ಧೆಯಿಂದ ಅವರ ವ್ಯಾಖ್ಯಾನಗಳನ್ನು ಟಿಪ್ಪಣಿ ಮಾಡಿಕೊಂಡು ಒಂದಷ್ಟು ಬ್ರಹ್ಮ ಸೂತ್ರಗಳನ್ನು ಬಾಯಿ ಪಾಠ ಮಾಡಿಕೊಂಡೆ. ಆದರೂ ಅವರ ನೋಟವನ್ನು ತಿರಸ್ಕಾರ ಮಾಡಬೇಕು, ಅವರ ಮೇಲೆ ಕೋಪ ಮಾಡಿಕೊಳ್ಳಬೇಕು ಅನ್ನಿಸುತ್ತಿತ್ತು.

ನನಗೆ ಅಲ್ಲೇ ಊಟ ಮಾಡುವಂತೆ ಹೇಳಿದ್ದು ನಿಜ. ಎರಡು ದಿನ ಊಟ ಮಾಡಿದೆ. ಅಕ್ಕಿ ಮೂಟೆ ಎತ್ತಿಡಲು ಸಹಾಯ ಮಾಡಿದ್ದು, ಕಡಲೆ ಕಾಳು ಆರಿಸಿದ್ದು ಎಲ್ಲ ಸರಿ. ಅವರು ಮುದ್ದೆ ಜೊತೆ ಕೊಟ್ಟ ಉಪ್ಪು ಸೋಕಿಸಿದ, ತರಕಾರಿ ಹಾಕದ, ತಿಳೀ ಮೆಣಸಿನ ಸಾರನ್ನೂ ಬಹಳ ಸಂತೋಷಪಟ್ಟೆ ತಿಂದೆ ಆದರೆ, ಒಬ್ಬ ಹುಡುಗ, ಆಶ್ರಮದ ಶಾಶ್ವತ ವಾಸಿ. ನನ್ನನ್ನು ‘ನೀವು ಯಾರು’ ಎಂದು ಕೇಳಿದ ರೀತಿಗೆ ಮುನಿಸು ಬಂದು ಅಲ್ಲಿ ಊಟ ಮಾಡುವುದನ್ನೆ ಬಿಟ್ಟೆ. ಮುಂಬೈನ ಯುವಕ, ಕರೀ ಗಡ್ಡದ, ಚಿನ್ನದ ಕಟ್ಟಿನ ಕನ್ನಡಕದ ಸನ್ಯಾಸಿ ‘ಕೋಯೀ ಬಗತ್’ ಅಂತ ಕ್ಷುಲ್ಲಕ ಸಂಗತಿ ಅದು ಎಂಬಂತೆ ಉತ್ತರಿಸಿದ್ದು ಇನ್ನೂ ಕೆರಳಿಸಿತು.

ಕಾಯಬೇಕಿತ್ತು ಗಣೇಶ ಪುರಿಯವರಿಗಾಗಿ. ಹರಿದ್ವಾರ ನನಗೆ ಅನ್ನ ಹಾಕಿತು. ನನ್ನ ಹೊಟ್ಟೆಗೆ ನಾನೆ ಜವಾಬ್ದಾರನಾದೆ. ಅಲ್ಲ. ನನ್ನ ಜೇಬಿನಲ್ಲಿದ್ದ ಸ್ವಲ್ಪ ಹಣ ಪೇಟೆ ಬೀದಿಯಲ್ಲಿ ಸದಾ ಬಾಗಿಲು ಮುಚ್ಚಿರುವ ಆಫೀಸು ಮತ್ತು ರಸ್ತೆಯ ನಡುವೆ ಇದ್ದ ದೊಡ್ಡ ಚರಂಡಿಗೆ ಮರದ ಹಲಗೆ ಹಾಕಿ, ಅದರ ಮೇಲೆ ಪಂಕ್ಚರಾದ ಸೈಕಲ್ ಚಕ್ರಗಳ ಗಾಡಿ ನಿಲ್ಲಿಸಿಕೊಂಡು, ಐದು ರುಪಾಯಿಗೊಂದು ಅದ್ಭುತ ಊಟ ಕೊಡುವ ಅಂಗಡಿ ಪತ್ತೆ ಮಾಡಿದೆ. ಎರಡು ರೋಟಿ, ಎರಡು ಥರ ಪಲ್ಯ, ಸ್ವಲ್ಪ ಅನ್ನ, ದಾಲ್ ಮತ್ತು ಉಪ್ಪಿನಕಾಯಿ ಅಥವಾ ಇನ್ನು ಕೆಲವು ದಿನ ಬ್ರೆಡ್ಡು ತಿಂದು ಕಳೆದೆ. ನಾನು ಏನು ತಿಂದೆ ಅಥವ ತಿನ್ನಲಿಲ್ಲ ಅಂತ ಕೇಳುವವರು ಯಾರೂ ಇರಲಿಲ್ಲ. ಇರಬೇಕಾಗೂ ಇರಲಿಲ್ಲ.

ಗುಜರಾತಿನ ಮುದುಕ ಇಪ್ಪತ್ತು ಸಾವಿರ ರೂಪಾಯಿ ತಂದಿದ್ದನಂತೆ. ಅದೆಲ್ಲವನ್ನೂ ಯಾತ್ರೆ ಮಾಡುತ್ತ ಮಾಡುತ್ತ ‘ಬಾಂಟ್ ದಿಯಾ’ ಅಂದ. ಆಶ್ರಮದಲ್ಲಿ ಒಂದು ತಿಂಗಳಿನಿಂದ ಇದ್ದೀವಿ. ಇವರ ಋಣ ಬೇಡ. ಇಲ್ಲಿನ ಮೂರು ದೇವರಿಗೂ ಶಾಲು ಕೊಟ್ಟುಬಿಡೋಣ ಅಂತಿದ್ದೀನಿ. ಹೋಗಿ ತರೋಣ ಬಾ ಅಂತ ನನ್ನನ್ನು ಕರೆದೊಯ್ದ. ಅವನು ಶಾಲು ವ್ಯಾಪಾರ ಮಾಡಿದ್ದು ತುಂಬ ಚೆನ್ನಾಗಿತ್ತು. ಮಹದೇವ್‌ಜೀ ಗೆ, ರಾಧಾಕಿಶನ್‌ಜೀ ಗೆ ಸಿಯಾರಾಮ್ ಗೆ ಒಳ್ಳೊಳ್ಳೆ ಶಾಲು ಬೇಕು, ಅಂಚು ಹೀಗಿರಬೇಕು, ಬಣ್ಣ ಹೀಗಿರಬೇಕು, ನಯವಾಗಿರಬೇಕು ಅಂತೆಲ್ಲ ಅಂಗಡಿ ಅಂಗಡಿ ಅಲೆದು ಸಾವಿರದ ಇನ್ನೂರು ರೂಪಾಯಿ ಕೊಟ್ಟು ಶಾಲು ತಂದ. ಅಂಚು, ಜರಿ, ಬಣ್ಣ, ಡಿಸೈನು – ಹೆಂಗಸರು ಸೀರೆ ಆರಿಸುವಷ್ಟೆ ಮುತುವರ್ಜಿಯಿಂದ ದೇವರಿಗೆ ಶಾಲು ಆರಿಸಿದ. ದೇವರು ನನಗೆ ಕೊಟ್ಟದ್ದನ್ನ ದೇವರಿಗೆ ಕೊಡುತ್ತೀನಿ. ಈ ಆಶ್ರಮ, ಈ ಗುರು ನನಗೆ ನೆಮ್ಮದಿ ಕೊಟ್ಟಿದ್ದಾರೆ. ಅವರ ಋಣ ಹೀಗೆ ತೀರಿಸ್ತೀನಿ ಅಂತ ತುಂಬ ಪ್ರಾಮಾಣಿಕವಾಗಿ ಹೇಳಿದ.

ಮತ್ತೆ ಬರವಣಿಗೆಯ ನಾಲ್ಕನೆಯ ದಿನ

ಮೊದಲ ಬಾರಿ ನಾವು ನಮ್ಮ ಬಹುದಿನದ ಬಯಕೆಯ ಹಿಮಾಲಯನ್ ಟ್ರೆಕ್ಕಿಂಗ್ ಮುಗಿಸಿ ಹರಿದ್ವಾರದಿಂದ ದೆಹಲಿಗೆ ಬಸ್ ಹತ್ತಿದಾಗ ಮನೆ ಬಿಟ್ಟು ಹೋಗುತ್ತಿರುವಂತೆ ಅನ್ನಿಸಿತ್ತು. ಹಿಮಾಲಯ ನನ್ನ ಬೆನ್ನಿಗಾಗಿ ಬೈಲಿನ ಗದ್ದೆಗಳು ಮರಿ ಸೂರ್ಯನ ಬಿಸಿ ಎಳೆತನದಲ್ಲಿ ಹರಡಿಕೊಂಡು ಕಾಣುತ್ತಿರುವಾಗ ತಿಮ್ಮೇಗೌಡರು ನನ್ನ ಮಾತನ್ನೇ ಜೋರಾಗಿ ಹೇಳಿದ್ದರು: “ನಾವು ಊರು ಬಿಟ್ಟು ಹೋಗುತ್ತಿದ್ದೇವೆ ಅನ್ನಿಸುತ್ತೆ. ಮತ್ತೆ ಯಾವಾಗ ಬರುತ್ತೇವೋ ಏನೋ.” ಮತ್ತೆ ಒಂದೇ ವರ್ಷದಲ್ಲಿ ಶ್ರೀನಾಥ ಹೆಂಡತಿ ಮಕ್ಕಳನ್ನು ಕರೆದುಕೊಂಡು ನಾವು ಹೋದ ಎಡೆಗಳಿಗೆಲ್ಲ ಹೋಗಿ ಬಂದ. ನಾನು ಮತ್ತೆ ಈ ರೀತಿ ಹಿಮಾಲಯಕ್ಕೆ ಹೋಗುತ್ತೇನೆ ಅಂದುಕೊಂಡಿರಲಿಲ್ಲ.

ಎರಡನೆಯ ಬಾರಿ ಹೃಷೀಕೇಶದತ್ತ ಬಸ್ಸು ಹೋಗುತ್ತಿದ್ದಂತೆ ಮತ್ತೆ ನನ್ನ ಮನೆಗೆ ಹೋಗುತ್ತಿದ್ದೇನೆ ಅನ್ನಿಸಿತು. ಸನಿಹದಲ್ಲೆ ಕಣುವ ಆದರೆ ದೂರ ಇರುವ, ದೂರ ಇದ್ದರೂ ಸಹ್ಯಾದ್ರಿಗಿಂತ ಎತ್ತೆತ್ತರ ಇರುವ ಬೆಟ್ಟಗಳ ಬುಡದಲ್ಲೆ ಇರುವ ಊರು. ಅಲ್ಲಿ ಇದ್ದಷ್ಟು ದಿನವೂ ನಡೆದಾಡುವಾಗ ನಾನು ಅಲ್ಲಿಯವನೇ ಅನ್ನಿಸುತ್ತಿತ್ತು. ವಕ್ರವಾದ ರಸ್ತೆ. ಎಷ್ಟೊಂದು ತಿರುವುಗಳು. ಒಂದೊಂದು ತಿರುವಿನಲ್ಲೂ ರಸ್ತೆ ಅಲ್ಲಿಗೇ ಮುಗಿಯುತ್ತದೆ ಅನ್ನಿಸುವ ಹಾಗೆ. ಆದರೆ ಬೆಟ್ಟದ ಕರುಣೆಯಿಂದ ರಸ್ತೆ ತಿರುಗಿ ಮತ್ತೆ ಮುಂದುವರೆದು ಮತ್ತೆ ತಿರುಗಿ-ಬೆಟ್ಟ ಕರುಣೆ ತೋರಿದ್ದೋ ಅಥವ ಮನುಷ್ಯ ಹಟ ಹಿಡಿದು ದಾರಿ ಮಾಡಿಕೊಂಡಿದ್ದೋ? ರಾಜು ಹೇಳುತ್ತಿದ್ದ ಮಾತು ಥಟ್ಟನೆ ಜ್ಞಾಪಕ ಬರುತ್ತಿತ್ತು. ಹಿಮಾಲಯದಲ್ಲಿ ಕಾಣುವ ಭೋರ್ಗರೆಯುವ ಅಸಂಖ್ಯಾತ ಜಲಪಾತಗಳನ್ನೂ ಸುತ್ತಿ ಸುತ್ತಿ ಹರಿದು ಬರುವ ಅಸಂಖ್ಯಾತ ನದಿಗಳನ್ನೂ ನೋಡಿ ನೋಡಿ ಒಂದು ದಿನ ರಾಜು ಹೇಳಿದ್ದು-“ತಗ್ಗು ಎಲ್ಲೆಲ್ಲಿ ಇದೆ ಅಂತ ಹುಡುಕಿ ಹುಡುಕಿ ಈ ನೀರು ಹರಿಯುತ್ತದೋ ಅಥವಾ ನೀರು ಹರಿದು ಹರಿದು ಈ ಬೆಟ್ಟ, ಈ ಕಲ್ಲು ಎಲ್ಲ ಈ ಶೇಪು ಆಗಿವೆಯೋ.”

ಹೃಷಿಕೇಶಕ್ಕೆ ಹೋಗುವಂತೆ ಗಣೇಶ ಪುರಿಯವರೇ ಹೇಳಿದ್ದು. ಅವರು ಹೇಳದಿದ್ದರೂ ಬಹುಶಃ ನಾನೇ ಹೋಗುತ್ತಿದ್ದೆನೋ ಏನೋ. ದಿನಾ ಇನ್ನೊಂದು ಜಾಗ ಹುಡುಕುತ್ತಿದ್ದೆ. ಗಣೇಶಪುರಿ ಹಿಂದಿರುಗಲು ಇನ್ನೂ ಹತ್ತುಹನ್ನೆರಡು ದಿನ ಇತ್ತು. ನನಗೆ ಅವರನ್ನು ಕಾಯುವ ನೆಪ ಇತ್ತು. ದಿನಾ ದಿನಾ ಹರಿದ್ವಾರದ ಎಲ್ಲ ಬೀದಿಗಳನ್ನು ಅಲೆಯುತ್ತಿದ್ದೆ. ಗೋರಖನಾಥನ ಹೆಸರು ಹೊತ್ತ ಒಂದು ಆಶ್ರಮ. ನದಿಯ ದಡದಲ್ಲೆ ಇತ್ತು. ದೊಡ್ಡ ಕಲ್ಲಿನ ಕಟ್ಟಡ. ಅದರಲ್ಲಿ ಯಾವತ್ತೂ ಯಾರೂ ಕಾಣಲಿಲ್ಲ. ವೇದವನ್ನೂ ವಿಜ್ಞಾನವನ್ನೂ ಅಥವಾ ವೇದದ ವಿಜ್ಞಾನವನ್ನು ಅಥವ ವಿಜ್ಞಾನದ ವೇದವನ್ನು ವೈಜ್ಞಾನಿಕವಾಗಿ ಸಾಬೀತು ಮಾಡಲು ಕಟ್ಟಿದ ದೊಡ್ಡಾತಿದೊಡ್ಡ ಮಠ-ಪ್ರಯೋಗಾಲಯ. ಅಲ್ಲಿ ಸದಾ ಆಹಾ ಓಹೋ ಅನ್ನುತ್ತ ಗಿಜಿ ಗಿಜಿ ಯಾತ್ರಿಕರು. ಎಲ್ಲರಿಗೂ ಆನಂದವನ್ನು ಕೊಡುತ್ತೇನೆನ್ನುವ ಮಾತಾಜಿಯ ಮಂದಿರ. ಜಾತಿ ಕುಲ ಗೋತ್ರ ಕೇಳದೆ ಬಂದವರಿಗೆ ಊಟ ಬಡಿಸುವ ಸಿಖ್‌ರ ಲಂಗರ್. ಗುಡ್ಡದ ಮೇಲೆ ಇರುವ ಮಾನಸಾ ದೇವಿ. ದಕ್ಷನ ರುಂಡ ಕತ್ತರಿಸಿದ ಜಾಗ ಕನ್ ಖಾಲ್. ಮತ್ತು ಎಲ್ಲ ಎಡೆಗಳಲ್ಲೂ ಅರ್ಧ ಗಂಟೆಯಲ್ಲಿ ಇಡೀ ಊರು ನೋಡಿ ಮತ್ತೆ ಇನ್ನೊಂದು ಊರಿಗೆ ಹೋಗಲು ಬಯಸುವ ಯಾತ್ರಿಕರು.

ನಾನು ಸರಿಯಾದ ಜಾಗವನ್ನು ಹುಡುಕುತ್ತಿದ್ದೆ. ಸರಿಯಾದ ಮಾತನ್ನು ಹುಡುಕುತ್ತಿದ್ದೆ. ಹರಿದ್ವಾರದ ಬೀದಿಗಳಲ್ಲಿ. ಮಳೆ ಬಿದ್ದು ಕೆಸರಾದ ರಸ್ತೆಗಳಲ್ಲಿ. ಅಲೆಯುವುದೆ ಉದ್ದೇಶವಾಗಿ ಅಲೆಯುತ್ತಿದ್ದಾಗಲೂ, ಕನ್ ಖಾಲ್‌ನ ಶಕ್ತಿ ದೇವತೆಗಳ ವಿಗ್ರಹ ನೋಡುತ್ತ-ಇಲ್ಲೆ ದಕ್ಷ ಯಜ್ಞ ಮಾಡಿದ್ದನೊ, ಇಲ್ಲೆ ಅವನ ಶಿರ ಹೋಗಿತ್ತೊ ಅಂತೆಲ್ಲ ಹಳೆ ಕತೆ ಮನಸ್ಸಿಗೆ ಬರುತ್ತಿದ್ದಾಗಲೂ, ಮುದುಕರು ತಿಳಿಯಲಾರದೆ ಸೈಕಲ್ ರಿಕ್ಷಾ ತುಳಿಯುವುದನ್ನು ನೋಡುತ್ತಿದ್ದಾಗಲೂ, ಹುಡುಕುತ್ತಿದ್ದೆ. ಹುಡುಕುತ್ತಿದ್ದೆ. ಎತ್ತರವಾದ, ಮಜಬೂತಾಗಿದ್ದು ಈಗ ಹಾಳಾಗುತ್ತಿರುವ ಇಮಾರತುಗಳು. ಅವುಗಳ ದೊಡ್ಡ ದೊಡ್ಡ ಬಾಗಿಲುಗಳು. ಗೋಡೆಗಳ ಮೇಲೆ ಬಾಗಿಲ ಸುತ್ತ ಕಿಟಕಿಗಳ ಸುತ್ತ ಬಿಡಿಸಿದ ಗಾರೆ ಚಿತ್ರಗಳು. ಬಣ್ಣದ ನವಿಲುಗಳು ಬಳ್ಳಿ ಹೂ ಹಣ್ಣು ಆನೆಗಳು; ಕಲ್ಲಿನ ಕೆತ್ತನೆ ಕಿಟಕಿಗಳು; ಈಗ ಅವೆಲ್ಲ ಛತ್ರಗಳಾಗಿ ಒಂದೊಂದು ರಾಜ್ಯದ, ಭಾಷೆಯ, ಜಾತಿಯ ಹೆಸರು ಹೊತ್ತ ಛತ್ರಗಳು-ಹುಡುಕುತ್ತಿದ್ದೆ. ಕರ್ನಾಟಕ ಛತ್ರದ ಮುಂದೆ ಹೋದಾಗೆಲ್ಲ ಹಿಂದೆ ಚಂದ್ರ, ನಾನು ಮತ್ತು ನಾವೆಲ್ಲ ಅಲ್ಲಿ ಉಳಿದುಕೊಂಡಿದ್ದ ನೆನಪು ಬರುತ್ತಿತ್ತು.ಊರ ತುಂಬ ನೂರಕ್ಕೆ ಐವತ್ತುಜನ ಪ್ರವಾಸಿಗಳು. ಯಾತ್ರಾರ್ಥಿಗಳು. ಆತಂಕದ ಜೊತೆ ಸ್ವಲ್ಪ ಭಕ್ತಿ. ಚೂರು ಶ್ರದ್ಧೆ. ಇಲ್ಲದಿದ್ದರೂ ಇದೆ ಎಂದು ನಟಿಸುವ ಉತ್ಸಾಹ, ಬೇಗ ನೋಡಿ ಬೇಗ ಹಿಂದಿರುಗುವ ಆತುರ, ಮತ್ತೊಂದು ದೇವಸ್ಥಾನಕ್ಕೆ. ಮತ್ತೊಂದು ಊರಿಗೆ. ಮತ್ತೊಂದು…….ಕೊನೆಗೆ ಬೇಗ ಮನೆಗೆ ಮುಟ್ಟುವ ಆತುರ. ಯಾಕೆ ಈ ಯಾತ್ರಿಗಳೆಲ್ಲ ಐವತ್ತು ದಾಟಿದವರು? ಹುಡುಕುತ್ತಿದ್ದೆ. ಊರತುಂಬ ನೂರಕ್ಕೆ ಇಪ್ಪತ್ತೈದು ಜನ ಸನ್ಯಾಸಿಗಳು. ಹಾಡುಹೇಳುವವರು. ಸುಮ್ಮನೆ ಇರುವವರು. ಭಿಕ್ಷೆ ಬೇಡುವವರು. ತಾವೇ ಹರಿದ್ವಾರದ ಹಕ್ಕುದಾರರೆಂದು ತಿಳಿದವರು. ಒಂದೊಂದು ಮಠ, ಒಂದೊಂದು ಆಶ್ರಮ ಹಿಡಿದು, ಅಲ್ಲಿನ ಗುರುವಿನ ಪಾದ ಹಿಡಿದು, ನಿಧಾನವಾಗಿ ಮೇಲೇರುತ್ತಾ ತಾವೂ ಮಹಾರಾಜ್, ಮಾಂಡಲಿಕ್, ಮಹಾ ಮಾಂಡಲೇಶ್ವರ್ ಆಗುವ ದಾರಿಯನ್ನು ಬೇಗ ಸಾಗಿಸಿ ಮುಗಿಸಬೇಕೆನ್ನುವ ಸನ್ಯಾಸಿಗಳು. ಎಲ್ಲೆಲ್ಲಿ ವಿಶೇಷ ಭಂಡಾರ ಇದೆಯೋ ಅಲ್ಲಿಗೆಲ್ಲ ಪಾಸು ಗಿಟ್ಟಿಸಿ, ಕೈಯಲ್ಲಿ ಥಳಥಳ ಹೊಳೆಯುವ ತಂಬಿಗೆ ಹಿಡಿದು ಮೊದಲ ಪಂಕ್ತಿಯಲ್ಲೆ ಜಾಗ ಗಿಟ್ಟಿಸಲು ಧಾವಿಸುವ ಸಾಧುಗಳು. ಊಟದ ನಂತರ ದಕ್ಷಿಣೆ ಕಡಿಮೆಯಾಯುತೆನ್ನುವ, ಜಗಳಾಡುವ ಸಾಧುಗಳು. ಹುಡುಕುತ್ತಿದ್ದೆ.

ಗುರು ಆಗಬಹುದೋ ಗಣೇಶ ಪುರಿ? ಏನು ಹೇಳಲಿ ಅವರಿಗೆ? ಯಾವಾಗಲೂ ಈ ಪ್ರಶ್ನೆ ಮನಸ್ಸಿನಲ್ಲಿ ಒತ್ತುತ್ತಲೇ ಇತ್ತು. ಅಪರಿಚಿತರೊಡನೆ ಸತ್ಯ ಹೇಳುವುದು ಸುಲಭವಂತೆ. ಹೇಗೆ? ಹೀಗೆ ನಾನು ಮನೆಯಿಂದ ಹಿಮಾಲಯದ ಮನೆಗೆ ಬಂದದ್ದು ಯಾಕೆ ಎಂಬುದನ್ನು ಅಪರಿಚಿತ ಇತರನೂ ಒಪ್ಪುವಂತೆ ಹೇಳುವುದು ಹೇಗೆ? ಬಂದಿದ್ದೇನೆ ಎಂಬ ಆದಷ್ಟನ್ನು, ಆದಷಟನ್ನೇ ಒಪ್ಪಿಕೊಳ್ಳುವವರು ಸಿಗುತ್ತಾರೋ ಯಾರಾದರೂ? ‘ಯಾಕೆ’ ಎಂಬುದಕ್ಕೆ ಏನಾದರೂ ಕಾರಣ ಹೇಳಬೇಕಲ್ಲ. ಏನೇ ಹೇಳಿದರೂ ಅದು ಕಾರಣ ಮಾತ್ರವಾಗಿರುತ್ತದೆ. ನಿಜವಾಗಲಾರದು. ಬಹುಶಃ ನಿಜವನ್ನು ನನಗೂ ಕೂಡ ಹೇಳಿಕೊಳ್ಳಲಾರೆನೇನೋ. ಹೇಳಿದ ತಕ್ಷಣ ಅದು ಒಂದು ಕಾರಣ ಆಗಿ ಬಿಡುತ್ತದೆ. ನಿಜವಾಗಿ ಇರುವುದಿಲ್ಲ.

ಹರಿದ್ವಾರದ ಬೀದಿಗಳನ್ನು ಅಲೆಯುತ್ತ ಮನಸ್ಸಿನಲ್ಲೆ ಗಣೇಶ ಪುರಿಗೆ ಹೇಳಬೇಕಾದ ಮಾತುಗಳನ್ನು ಜೋಡಿಸಿಕೊಳ್ಳುತ್ತಿದ್ದೆ. ಅವರಿಗೆ ಕನ್ನಡ ಗೊತ್ತಿರಲು ಸಾಧ್ಯವಿಲ್ಲ. ಖಂಡಿತ. ಇಂಗ್ಲಿಷು ತಿಳಿಯಲಾರದು. ನನಗೆ ಹಿಂದಿ ತಿಳಿದರೂ ಮಾತನಾಡಲು ಬರುವುದಿಲ್ಲ. ನಾನಿದ್ದ ಹರಿದ್ವಾರದ ಸಾಧಕ ನಿವಾಸದಲ್ಲಿದ್ದವರಿಗೆಲ್ಲ ಇಂಗ್ಲಿಷು ವಿದ್ಯೆಯಬಗ್ಗೆ ಅಪಾರ ತಿರಸ್ಕಾರ ಇತ್ತು. ಚಾವಣೆಯ ಮೇಲೆ ನಾನಿದ್ದ ರೂಮಿನ ಪಕ್ಕದ ಇನ್ನೊಂದರಲ್ಲಿ ಸಂಸ್ಕೃತ ವಿದ್ವಾಂಸನೊಬ್ಬ ತನ್ನ ಹೆಂಡತಿ ಮತ್ತು ಮಗನೊಡನೆ ಇದ್ದ. ಅವರ ರೂಮಿಗೆ ಬಚ್ಚಲು ಇರಲಿಲ್ಲ.ನನ್ನ ರೂಮಿಗೇ ಬರಬೇಕಾಗಿತ್ತು. ಆ ವಿದ್ವಾಂಸ ಸಾಧುವೊಬ್ಬನಿಗೆ ಯಾವುದೋ ಆಧ್ಯಾತ್ಮ ಗ್ರಂಥದ ಪಾಠ ಹೇಳುತ್ತಿದ್ದ. ಸಾಧುವಿಗೆ ಸಂಸ್ಕೃತ ಉಚ್ಚಾರ ಮಾಡುವುದು ಕಷ್ಟವಾಗುತ್ತಿತ್ತು. ವಿದ್ವಾಂಸ ಹೇಳಿದ್ದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಅವನಿಗೆ ಇತ್ತೆಂದೂ ಅನಿಸಲಿಲ್ಲ. ಅವರ ಪಾಠ ದಿನಾ ನನಗೆ ಕೇಳಿಸುತ್ತಿತ್ತು. ಆ ವಿದ್ವಾಂಸ ಹಳ್ಳಿಯ ರೈತನ ಹಾಗಿದ್ದ. ರಸ್ತೆಯಲ್ಲಿ ಕಂಡರೆ ಅವನೊಬ್ಬ ವಿದ್ವಾಂಸ ಇರಬಹುದು ಅನ್ನಿಸುವುದು ಸಾಧ್ಯವೇ ಇರಲಿಲ್ಲ. ಕಚ್ಚೆ ಪಂಚೆ ಕಸೆ ಅಂಗಿ ಹಾಕಿಕೊಳ್ಳುತ್ತಿದ್ದ. ಅದಕ್ಕೆ ಜೇಬು ಇರಲಿಲ್ಲ. ಮುಖದ ಮೇಲೆ ಗಡ್ಡ ಕುರುಚಲಾಗಿತ್ತು. ಹಲ್ಲು ಸ್ವಲ್ಪ ಮುಂದಿತ್ತು.

ಅವನ ಹತ್ತಿರ ಬ್ರಹ್ಮ ಸೂತ್ರಗಳ ಬಗ್ಗೆ ಒಂದು ದಿನ ಮಾತಾಡಿದೆ. ಯಾಕೆಂದರೆ ಆ ಸಾಧಕ ನಿವಾಸದಲ್ಲಿ ದಿನಾ ಬೆಳಿಗ್ಗೆ ಬ್ರಹ್ಮ ಸೂತ್ರದ ಪಾಠ ನಡೆಯುತ್ತಿತ್ತು. ಕನ್ನಡಕ ಹಾಕಿಕೊಂಡ ಮುದಿ ಸನ್ಯಾಸಿ ತುಂಬ ಅಹಂಕಾರದಿಂದೆಂಬಂತೆ ಪಾಠ ಹೇಳುತ್ತಿದ್ದ. ಕೇಳುವ ಶಿಷ್ಯರು ಬಿಳಿಯ ಸೀರೆಯ ಮಹಿಳೆ, ಸ್ಥಳೀಯ ವೃದ್ಧನೊಬ್ಬ, ಗುಜರಾತಿನ ಆ ಮುದುಕ ಮತ್ತು ನಾನು. ಮುದಿ ಸನ್ಯಾಸಿ ತಾನು ಕಲಿತ ಪಾಠ ಒಪ್ಪಿಸುತ್ತಿದ್ದಂತೆ ಇತ್ತು. ಕಲ್ಪಿತ ‘ಶತ್ರು’ಗಳೊಡನೆವಾದ ಮಾಡುವಂತೆ ಇತ್ತು. ಅಧುನಿಕ ಶಿಕ್ಷಣ, ಇಂಗ್ಲಿಷು ಇತ್ಯಾದಿಗಳನ್ನು ಖಂಡಿಸುವಂತೆ ಮಾತ್ರ ಇತ್ತು. ಲೋಕದ ಬದುಕಿನಲ್ಲಿ ಮುಳುಗಿ ಉಸಿರು ಕಟ್ಟಿಸಿಕೊಂಡವರಬಗ್ಗೆ ತಿರಸ್ಕಾರ ಇತ್ತು. ಅವರ ಪಾಠ ಕೇಳುತ್ತ ನನ್ನಲ್ಲಿ ಇದ್ದ ಹಳೆಯ ಪ್ರಶ್ನೆಗಳೇ ಹೊಸ ಕೋಪದೊಡನೆ ಮನಸ್ಸಿನಲ್ಲಿ ಮತ್ತೆ ಹುಟ್ಟುತ್ತಿದ್ದವು.
ನನ್ನ ‘ನೆರೆಮನೆ’ಯ ಸಂಸ್ಕೃತ ವಿದ್ವಾಂಸ ದಕ್ಷಿಣ ಭಾರತದವರ ಸಂಸ್ಕೃತಿ ಉಚ್ಚಾರಣೆ ಬಗ್ಗೆ ಟೀಕೆ ಮಾಡುತ್ತಿದ್ದ. ಶಾಸ್ತ್ರಗಳನ್ನು ಸರಿಯಾದ ಗುರುವಿನಿಂದ ಅರಿಯಬೇಕು ಅನ್ನುತ್ತಿದ್ದ. ಅವನಿಗೆ ತನ್ನ ಹಳ್ಳಿ, ಬನಾರಸ್ ಮತ್ತು ಹರಿದ್ವಾರ ಬಿಟ್ಟರೆ ಬೇರೆ ಜಗತ್ತು ತಿಳಿಯುತ್ತಿರಲಿಲ್ಲ. ಅವನ ಮಗನೂ ಹಾಗೇ. ಬಹುಶಃ ಆರನೆಯದೋ ಏಳನೆಯದೋ ಕ್ಲಾಸಿನ ಹುಡುಗನ ವಯಸ್ಸು. ಅವನು ನನ್ನ ಹತ್ತಿರ ಇದ್ದ ರೇಲ್ವೇ ಗೈಡನ್ನು ತೀರ ಅಶ್ಚರ್ಯಪಟ್ಟು ನೋಡಿ ತಂದೆಗೆ ತೋರಿಸಲು ಓಡಿಹೋಗಿದ್ದ. ರೇಲು ಗೈಡು ಅಂತ ಒಂದು ಇರುತ್ತದೆ, ಅದರಲ್ಲಿ ಮ್ಯಾಪು ಇರುತ್ತದೆ. ಅದು ನಮ್ಮ ದೇಶದ ಮ್ಯಾಪು ಇವೆಲ್ಲ ಅವನಿಗೆ ಅಶ್ಚರ್ಯದ ತಿಳಿವಳಿಕೆಗಳಾಗಿದ್ದವು. ಅವನ ಹೆಸರನ್ನು ಬೇರೆ ಭಾಷೆಗಳಲ್ಲಿ ಕನ್ನಡ, ಇಂಗ್ಲಿಷು, ತಮಿಳು – ನನ್ನಿಂದ ಬರೆಸಿ ನೋಡಿ ನೋಡಿ ಆಶ್ಚರ್ಯಪಡುತ್ತಿದ್ದ.
ನಾನು ಹುಡುಕುತ್ತಿದ್ದೆ. ಗಣೇಶಪುರಿ ನಾಳಿದ್ದು ಬಂದಾಗ ಏನು ಹೇಳಲಿ? ಹೇಗೆ ಹೇಳಲಿ? ಸಾಧಕ ನಿವಾಸಕ್ಕೆ ಮೊದಲು ನನ್ನ ಸ್ವಾಗತಿಸಿದ ಮುದುಕ ದಿನಾ ಬೆಳಗಿನ ನಾಲ್ಕುವರೆಗೆ ಹೇಳುವ ಶಾಂತಿ ಪಾಠದ ಸೂತ್ರಗಳನ್ನು ಕೇಳುತ್ತ- ತುಂಬ ಹಿತವಾಗಿ, ಮನಸ್ಸಿಗೆ ಶಾಂತಿ ನಿಜವಾಗಲೂ ಸಿಗುವ ಹಾಗೆ ತುಂಬ ಮಾಗಿದ ಧ್ವನಿಯಲ್ಲಿ ಹೇಳುತ್ತಿದ್ದ – ಸಂಜೆ ಭಗವದ್ಗೀತೆಯ ಪಾಠವನ್ನು ಸಿಡಿಮಿಡಿಗೊಳ್ಳುತ್ತ ಕೇಳಿಸಿಕೊಳ್ಳುತ್ತ, ರಾಧಾಕೃಷ್ಣ, ಶಿವ, ರಾಮಸೀತೆಯರ ಗುಡಿ ಸುತ್ತ ಓಣಿಯಂಥ ಪ್ರದಕ್ಷಿಣೆದಾರಿಯಲ್ಲಿ ಕಾವಿಧಾರಿಗಳ ರೈಲಿನ ಕೊನೆಯ ಡಬ್ಬಿಯಾಗಿ ಹಾಡು ಹೇಳಿಕೊಂಡು ಸುತ್ತಿ ಬರುತ್ತ, ಗಣೇಶಪುರಿಯವರಿಗೆ ಏನು ಹೇಳಲಿ? ಏನು ಹೇಳಿಯಾರು ಅವರು? ಗುರುವೇ ನನಗೆ? ಹೌದೋ? ಏನು ಹೇಳಲಿ ಎಂದು ಹುಡುಕುತ್ತ ಹರಿದ್ವಾರದಲ್ಲಿ ಅಲೆಯುತ್ತ ಇದ್ದೆ.

ಮತ್ತೆ ಬರವಣಿಗೆಯ ಐದನೆಯ ದಿನ

ನನಗೆ ಹೀಗೆ, ಹೀಗೇ ಇರಲು ಆಸೆ ಇದೆಯೆ? ಹೃಷಿಕೇಶದಲ್ಲಿರುತ್ತ ನನ್ನನ್ನು ಈ ಪ್ರಶ್ನೆ ಬಹಳ ಬಾರಿ ಕೇಳಿಕೊಂಡಿದ್ದೆ. ನನಗೆ ಹಾಗೇ ಇರಲು ಆಸೆ ಇತ್ತೆ? ಇದೆಯೇ ಇನ್ನೂ? ಅಂತ ಈಗಲೂ ಕೇಳಿಕೊಳ್ಳುತ್ತಿದ್ದೇನೆ-ಫೆಬ್ರವರಿಯಲ್ಲಿ. ಹೆಚ್ಚುತ್ತಿರುವ ಹಂಪಿಯ ಬಿಸಿಲಲ್ಲಿ, ಇವತ್ತು ಕಾಫಿಯ ನೆಪಕ್ಕೆ ನಾಲ್ಕು ಸಾರಿ ಅಲೆದು, ಹೀಗೆಲ್ಲ ಬರೆಯುವುದು, ಇನ್ನೂ ಹೇಗೆ ಎಂದು ನನ್ನ ಒಳಗನ್ನೆ ಬೇಯಿಸಿಕೊಳ್ಳುತ್ತ. ಮತ್ತೆ ಮತ್ತೆ ನನ್ನ ಕೋಣೆಗೆ ಬಂದು ಎರಡು ಸಾಲು, ನಾಲ್ಕು ಸಾಲು ಆಗಾಗ ಬರೆಯುತ್ತಿದ್ದೇನೆ.

ಈಜಬಹುದು. ಮುಳುಗಬಹುದೆ? ಹೇಮ ಕುಂಡ ನೆನಪಾಗುತ್ತಿದೆ. ಹದಿನಾಲ್ಕುವರೆಸಾವಿರ ಅಡಿ ಎತ್ತರದಲ್ಲಿದ್ದ ಸರೋವರ. ಹೂಗಳ ಕಣಿವೆಯ ಕೊಂಚ ಆ ಬದಿಯಲ್ಲಿ. ಸಿಖ್ಖರು ಸಿಖ್ಖರು ಎಷ್ಟೊಂದು ಮಂದಿ ಸಿಕ್ಕರು. ಜೊತೆಯವರು ಸಿಕ್ಕರು. ಸಿಕ್ಕರೂ ಸಿಕ್ಕರು. ಆರಡಿ ಮೀರಿದ ದೇಹ ಅವನದು. ಪಂಜಾಬಿನ ಗೋಧಿಯೆಲ್ಲ ಬಣ್ಣವಾಗಿ ಅವನ ಮೈಗೆ ಇಳಿದಿತ್ತು. ಗಂಡುಕಾಲು, ಗಂಡು ಭುಜ, ಗಂಡು ಗಡ್ಡ ಮೀಸೆ ಥಳ ಥಳ ಕಪ್ಪು. ಕಣಿವೆಯೆಲ್ಲ ತುಂಬುವಂಥ ಧ್ವನಿ. ಸಲೀಸಾಗಿ ದಪ ದಪ ಹೆಜ್ಜೆ ಹಾಕುತ್ತ. ಅಲ್ಲ, ಅವನು ನಡೆಯಲು ಶ್ರಮ ಪಡುತ್ತಲೇ ಇಲ್ಲವೇನೋ ಎಂಬಂತೆ ತೇಲು ನಡೆಯುತ್ತ ಯಾವ ಆತಂಕವೂ ಇಲ್ಲದೆ ಹಾಡುತ್ತಿದ್ದ. ಹಾಡು ನನ್ನ ತುಂಬ ಹಿಡಿಸಿತು. ನನ್ನ ತುಂಬಿ, ನನ್ನ ಸುತ್ತಲೂ ಗಾಳಿಯಾಗಿ ಹಿಮವಾಗಿ ಚಳಿಯಾಗಿ ಬಿಸಿ ಹಬೆಯಾಗಿ ವಾತಾ-ಆವರಣವಾಯಿತು. ಗಂಡುಸೆಂದರೆ ಇವನೆ, ಈ ಹಾಡೆ ನನ್ನ ಮೈಯಾಗಲೀ ನನ್ನ ಧ್ವನಿಯಾಗಲೀ ನನ್ನ ನನ್ನ ಕಾಲಾಗಲೀ ನನ್ನ ಎತ್ತರವಾಗಲೀ ಗಂಡಸು ಅವನಾದರೆ ನಾನಲ್ಲ. ನಾವು ಯಾರೂ ಅಲ್ಲ ಅನ್ನುವ ಹಾಗೆ ಮಾಡಿಬಿಟ್ಟಿತು. ಬೆಳಗಿನ ಜಾವದ ಕತ್ತಲಲ್ಲಿ ಅವನು ಕಾಣುತ್ತಿರಲಿಲ್ಲ. ಅವನ ಹಾಡು ಕೇಳುತ್ತಿತ್ತು. ಗಂಡಸುತನದಲ್ಲಿ ಹೋಲಿಕೆ ತೊಡಗಿಬಿಟ್ಟರೆ ಎಷ್ಟೊಂದು ಹಿಂಸೆ ಆಗುತ್ತದೆ. ಎಷ್ಟೊಂದು ಕೀಳುತನ ಕಾಡುತ್ತದೆ. ನನ್ನ ಹಿಂದಿನಿಂದ ಕೇಳುತ್ತ ಬಂದ ಹಾಡಿನ ದನಿ ಕೆಲವೇ ನಿಮಿಷದಲ್ಲಿ ನನ್ನ ಪಕ್ಕ ಬಂದು, ನಾಲ್ಕು ಹೆಜ್ಜೆ ನನ್ನ ಜೊತೆ ನಡೆದು, ಮಂಜಿನಲ್ಲಿ ಮರೆಯಾಗಿ ಬೆಟ್ಟ ಹತ್ತಿಕೊಂಡು ಹೋಗಿ ದನಿಯಾಗಿ ಗೊತ್ತೇ ಆಗದಷ್ಟು ಸ್ವಲ್ಪ ಸ್ವಲ್ಪ ಕ್ಷೀಣವಾಗುತ್ತ ಉಳಿದುಬಿಟ್ಟಿತು. ನಾವು ಯಾರೂ ಟ್ರಕಿಂಗಿನಲ್ಲಿ ಅಷ್ಟು ಎತ್ತರ ಹತ್ತಿರಲಿಲ್ಲ. ಮೊಣಕಾಲು ಕುಸಿದು, ಬೆನ್ನು ನೊಂದು, ಬಾಯಿ ಉಸಿರಾಡಿ, ಮೂಗು ಚಳಿಗೆ ತಣ್ಣಗಾಗಿ, ಮೈಯೆಲ್ಲ ಬೆವರಾಗಿ, ಹಾಡು ನನ್ನೊಳಗೆಲ್ಲ ತುಂಬಿ. ಇವನೆಂಥ ಗಂಡು ಅನ್ನುವ ಮೆಚ್ಚುಗೆಯೋ, ಅಸೂಯೆಯೋ, ನೋವೋ, ಹಾಡಿನ ಸವಿಯೋ, ಎಲ್ಲ ಬೆರೆತು ಚಂದ್ರಳೊಡನೆ ನಿಧಾನ ನಿಧಾನ ಏರುತ್ತ ಬಂದರೆ ಅಲ್ಲೆ ಕುಳಿತಿದ್ದ. ಉದ್ದನೆಯ, ನೀಲಿ ನಿಲುವಂಗಿ ಮಾತ್ರ ತೊಟ್ಟು, ಸೊಂಟಕ್ಕೆ ಹೊಳೆಯುವ ಕೃಪಾಣ ಸಿಕ್ಕಿಸಿಕೊಂಡು. “ನಿಮ್ಮ ಹಾಡು ತುಂಬ ಚೆನ್ನಾಗಿತ್ತು” ಅಂತ ನಿಜವಾಗಲೂ ನಾನು ಹೇಳಿದರೆ ಹೂಂಕರಿಸಿ ಗಂಡುತಿರಸ್ಕಾರ ತೋರಿಸಿಬಿಟ್ಟ. ಮೆಚ್ಚಿದ್ದಕ್ಕೇ ಅವಮಾನ ಅನಿಸಿಬಿಟ್ಟಿತು ನನಗೆ. ಉಳಿದ ಸಿಖ್ಖರು ಆ ಹಾಡು ಇರಲೇ ಇಲ್ಲವೇನೋ ಅನ್ನುವಂತೆ ತಮ್ಮ ಪಾಡಿಗೆ ತಾವು ಹತ್ತಿಹೋಗುತ್ತಿದ್ದರು. ತಿರಸ್ಕೃತ ಮೆಚ್ಚುಗೆ ಮನಸ್ಸನ್ನು ನಡುಗಿಸಿತು.

ಏಳು ಬೆಟ್ಟಗಳ ಶಿಖರದ ಮೈಮೇಲೆಲ್ಲ ಬಿಳಿಬಿಳೀ ಹಿಮ. ನುಣ್ಣನೆ, ತೆಳ್ಳನೆ ಹಿಮ. ಏಳೂ ಶಿಖರಗಳ ನಡುವೆ ದೊಡ್ಡ ಬೋಗುಣಿ. ಅದರ ತುಂಬ ನೀರು. ಆಗತಾನೆ ಗುಡ್ಡದ ನೆತ್ತಿಯ ಅಂಚಿನಿಂದ ಎರಡು ಶಿಖರಗಳ ನಡುವೆ ಇಣುಕುವ ಸೂರ್ಯ. ಇಣುಕುವ ಸೂರ್ಯ ಬಹುಶಃ ಕೆಂಪಗಿದ್ದರೂ ಮೋಡ ಮಂಜುಕವಿದು ಬೂದಿಬಳಿದುಕೊಂಡ ಹಿತ್ತಾಳೆ ತಟ್ಟೆಯಾಗಿದ್ದ. ಅವನ ಬಿಸಿಲು ಎರಡು ಕ್ಷಣ ಚಿನ್ನವಾಗಿ ಹೊಳೆಯಿತು. ಹಿಮಕ್ಕೆ ಬಣ್ಣ ಬಂತು. ಹಿಮದ ಬಣ್ಣ ಕೊಳದ ನೀರಿನಲ್ಲಿ, ನೀರಲ್ಲ, ಹೆಪ್ಪುಗಟ್ಟಿ ತೇಲುವ ಹಿಮದ ತೆಳ್ಳನೆ ಹಾಳೆಯ ಮೇಲೆ ಬಿದ್ದು ಹೊಳೆಯಿತು. ತೇಲುವ ಹಾಳೆಗಳ ನಡುವೆ ಅಲ್ಲಲ್ಲಿನ ನೀರಿನಲ್ಲಿ ತಲೆಕೆಳಕಾಗಿ ಕಂಡವು. ಪ್ರತಿಫಲನಕ್ಕೇ ಬೇರೆ ಬಣ್ಣ, ಮೂಲಕ್ಕೇ ಬೇರೆ ಬಣ್ಣ. ಮೋಡ ಬಂದು ಎಲ್ಲ ಮಬ್ಬು. ಕೆಲಹೊತ್ತು ಮತ್ತೆ ಬಿಸಿಲು. ಕೊಳದ ನೀರಿನಿಂದ ಚಳಿಯ ಹಬೆ ನುಸುಳಿ ಏಳುತ್ತ ಬಿಸಿಲಲ್ಲಿ ಚಳಿಯ ಹಬೆಗೇ ಮತ್ತಿನ್ನೊಂದು ಬಣ್ಣ. ನೀರು ಹೆಪ್ಪಾಗುವ ಸೊನ್ನೆ ದಾಟಿದ ಚಳಿಯಲ್ಲಿ ಹೇಮಕುಂಡದ ಸರೋವರದಲ್ಲಿ ಮುಳುಗುವ ಧೈರ್ಯ ಚಂದ್ರಳಿಗೆ ಮಾತ್ರ ಬಂತು. ಒಮ್ಮೆ ಮುಳುಗಬಹುದೇನೋ. ನನಗೆ ಆ ಧೈರ್ಯವೂ ಬರಲಿಲ್ಲ.

ಬಹುಶಃ ರಶೋಲ್ ಝೂಟ್ ಹತ್ತುವಾಗ ಮತ್ತು ಎರಡೇ ದಿನದ ಹಿಂದೆ ಈ ಹೇಮಕುಂಡದ ದಾರಿಯ ಆರಂಭದಲ್ಲಿ ಮೂರ್ತಿಯ ಮೇಲೆ ಸಿಟ್ಟುಮಾಡಿಕೊಂಡಿದ್ದೆ. ನಿನ್ನ ಜೊತೆ ಇನ್ನು ಎಂದೂ ಎಲ್ಲೂ ಟ್ರೆಕ್ಕಿಂಗ್ ಬರಲ್ಲ ಅಂದಿದ್ದೆ. ಮೂರ್ತಿಗೆ ತಾನು ಮತ್ತು ಧಾರಿಣಿ ಮಾತ್ರ ಈ ಜಗತ್ತಿನ ಅತ್ಯಂತ ಆದರ್ಶ ದಂಪತಿಗಳೆಂಬ ಬಲವಾದ ನಂಬಿಕೆ ಇತ್ತು. ನಿಜ ಇರಬಹುದು. ಹಾಗಾದರೆ ಅವನು ಧಾರಿಣಿ ಜೊತೆ ಇರುವ ಹಾಗೆ ನನಗೆ ಯಾಕೆ ಚಂದ್ರಳ ಜೊತೆ ಇರಲು ಆಗುವುದಿಲ್ಲ? ಹೋಲಿಕೆಗಿಂತ ಹಿಂಸೆ ಕೊಡುವುದು ಇನ್ನೊಂದಿಲ್ಲ. ಅಥವ ನಾನು ಏನು ಅಪೇಕ್ಷಿಸುತ್ತೇನೆ. ಏನು ನೋಡುತ್ತೇನೆ ನನಗೇ ಗೊತ್ತಿದೆಯೇ? ಚಂದ್ರಳಿಗೆ ನಾನು ಸರ್ವಸ್ವ ಅಗಬಹುದಾದಂತೆ ಅವಳು ಯಾಕೆ ನನಗೆ ಅಲ್ಲ?

ನಾನು ಮೇಲೆ ಮಾಡಿದ ವರ್ಣನೆ ಪೂರ್ತಿ ನಿಜ ಅಲ್ಲ. ಯಾಕೆಂದರೆ ನಾನು ಚಂದ್ರಳೊಡನೆ ಹೇಮಕುಂಡ ತಲುಪುವ ಹೊತ್ತಿಗೆ ಮೋಡ ಕವಿದು ಸೂರ್ಯ ಪೂರ್ತಿ ಮರೆಯಾಗಿದ್ದ. ಅಲ್ಲಿಗೆ ಮೊದಲೇ ತಲುಪಿದ್ದ ರಾಜು. ಶ್ರೀನಾಥ, ತಿಮ್ಮೇಗೌಡ, ಅವರೆಲ್ಲ ಕಂಡು ವರ್ಣಿಸಿದ ವೈಭವವನ್ನು ನಾನು ಕಂಡಷ್ಟು ಹೇಮಕುಂಡದ ನೆನಪಿಗೆ ಜೋಡಿಸಿ ವರ್ಣಿಸಿದ್ದೇನೆ. ನಿಜ ಏನೆಂದರೆ ನಾನು ಮುಳುಗುವ ಧೈರ್ಯ ಮಾಡಲಿಲ್ಲ.

ಮತ್ತೆ ಬರವಣಿಗೆಯ ಆರನೆಯ ದಿನ

ಅವನ ಹೆಸರು ಗೊತ್ತಿರಲಿಲ್ಲ. ಅವತ್ತು ಬೆಳಿಗ್ಗೆ ಅವನು ಸತ್ತುಹೋದ. ನಾನು ಹೃಷಿಕೇಶದಲ್ಲಿರುತ್ತ ಎರಡು ತಿಂಗಳು ಕಳೆದಿತ್ತು. ಅವನಿಗೆ ಕಾಯಿಲೆ ಅಂತ ಒಂದು ವಾರದಿಂದ ಕೇಳುತ್ತಿದ್ದೆ.ಅವನು ಸತ್ತುಹೋದ.

ಸನ್ಯಾಸಿಯ ಸಾವು ಹೀಗಿರುತ್ತೆ ಅಂತ ಗೊತ್ತಿರಲಿಲ್ಲ. ನಾನು ಹೀಗೇ ಇದ್ದುಬಿಡಬೇಕು ಅಂದುಕೊಂಡಿದ್ದೆ. ತುಂಬ ವಿಷಾದ ಆಯಿತು. ಬೆಳಿಗ್ಗೆ ಊಟದ ಮನೆಗೆ ಹೋಗಿ ಎಲ್ಲರೂ ಕಡಲೆಕಾಳು ಉಸಲಿ ತಿನ್ನುವಾಗ ಯಾರೂ ಮಾತಾಡುತ್ತಿರಲಿಲ್ಲ. ಅವತ್ತು ಆಶ್ರಮದ ಎಲ್ಲ ಕೆಲಸ ನಿಂತು ಹೋಗಿತ್ತು. ಯಾರು ಯಾರನ್ನೂ ಮಾತಾಡಿಸುತ್ತಿರಲಿಲ್ಲ. ಮೋಡ ಮುತ್ತಿಕೊಂಡು ಹೌದೋ ಅಲ್ಲವೋ ಅನ್ನುವ ಹಾಗೆ ತುಂತುರು ಮಳೆ ಆಗಾಗ ಬರುತ್ತಿತ್ತು. ಗಾಳಿ ಜೋರಾಗಿ ಬೀಸುತ್ತಿತ್ತು. ನನಗೆ ಮಾತ್ರ ವಿಷಾದ ಇತ್ತೋ ಎಲ್ಲರಿಗೂ ವಿಷಾದ ಆವರಿಸಿ ತಾವೇ ಸತ್ತುಹೋದವರ ಹಾಗೆ ಓಡಾಡುತ್ತಿದ್ದರೋ ತಿಳಿಯಲಿಲ್ಲ.

ನಮ್ಮ ವಸತಿ ಗುಡ್ಡದ ಮೇಲೆ. ಒಂದು ನೂರು ಮೆಟ್ಟಿಲಿಳಿದು ರಸ್ತೆಗೆ ಬಂದು ಆಚೆಗೆ ಇರುವ ಆಶ್ರಮದ್ದೇ ಆಸ್ಪತ್ರೆ. ಆಶ್ರಮದ್ದೇ ಆಫೀಸು. ಪಕ್ಕದಲ್ಲಿ ಅಧ್ಯಕ್ಷರ ನಿವಾಸ. ಅಲ್ಲಿ ಹೆಣ ಇಟ್ಟಿದ್ದರಂತೆ. ಬಹುಶಃ ಪೂಜೆ ಮಾಡಿದ್ದರೋ?

ಇದ್ದಲ್ಲಿ ಇರಲಾರದೆ, ನನಗೆ ಗೊತ್ತಿಲ್ಲದ ಸನ್ಯಾಸಿಯ ಹೆಣ ನೋಡಲಾರದೆ, ಅಲ್ಲಲ್ಲೆ ಸುಳಿದಾಡಿದೆ. ತುಂಬ ರಾಗವಾಗಿ ಶ್ಲೋಕಗಳನ್ನು ಹೇಳುತ್ತಿರುವುದು ಕೇಳುತ್ತಿತ್ತು. ಇನ್ನೇನು ಈಗ, ಬೆಳಗಿನ ಹತ್ತು ಗಂಟೆ ಹೊತ್ತಿಗೆ ಸಂಸ್ಕಾರ ಮಾಡುತ್ತಾರಂತೆ.

ಆತ ಸನ್ಯಾಸಿಯಾಗಿ ಹದಿನೆಂಟು ಇಪ್ಪತ್ತು ವರ್ಷದಿಂದ ನಮ್ಮ ಆಶ್ರಮದಲ್ಲೆ ಇದ್ದನಂತೆ. ನಮ್ಮ ನಡುವೆಯೇ ಸಾವು ಬಂದು ಇದ್ದಾಗ, ಅಲ್ಲಿ ಮೊದಲಿಂದಲೂ ಇದ್ದಿದ್ದು ಗೊತ್ತಾದಾಗ, ವಿಷಾದದ ಜೊತೆಗೆ ಮನಸ್ಸೆಲ್ಲ ಖಾಲಿ ಆಗಿ ಬಿಡುತ್ತದೆ. ನೋಡುತ್ತಿದ್ದೆ. ಕೇಳುತ್ತಿದ್ದೆ. ಖಾಲಿಯಾಗಿದ್ದೆ. ಸುಮ್ಮನೆ ಮೆಟ್ಟಿಲಿಳಿದೆ. ರಾಜುಗಾರು ಸಿಕ್ಕ. ಅರವತ್ತು ವರ್ಷ, ಬೊಚ್ಚುಬಾಯಿ. ಬಿಳೀ ಅಂಗಿ ಪಂಚೆ. ದುಂಡು ದುಂಡು. ಎಣ್ಣೆ ಊಟ ಕದ್ದು ಕದ್ದು ಮಾಡಿ ಬೆಳೆದ, ಕಪ್ಪು ಬೊಜ್ಜು ಮೈ. ಇಬ್ಬರನ್ನು ಮದುವೆ ಆಗಿ ಒಬ್ಬಳನ್ನು ಕೊಂದು ಬಂದವನೋ ಏನೋ ಅಂತೆ. ಅವನದು ಕೀಳು ಅನ್ನಿಸುವಂಥ, ಎಲ್ಲರ ಗುಟ್ಟುಗಳನ್ನು ಕೆದಕಿ ತಿಳಿದು ಅವೆಲ್ಲ ಗೊತ್ತು ಎಂದೇ ಖುಷಿ ಪಡುವ ಮನಸಾಶ್ರಮದ ಹಳೆಯ ಹಂದಿಯಂಥ ಕರಡಿ.


ಮುಂದುವರೆಯುವುದು

ಕೀಲಿಕರಣ: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.