ಎಲೆಗೆ

ಎಲೆ ಎಲೆಯೆ
ನಿನ್ನ ಹಸಿ ಹಸಿದ ಹಸಿ
ರು ಮೈಗುಂಟ
ಸರಾಗ ಕೊರೆಯುತ್ತವೆ
ನರಗಳ ದೌರ್‍ಬಲ್ಯ.
ಹಾದಿಗಳೆಲ್ಲ ಕಾಲು ಚಾಚಿ
ಮಲಗಿವೆ ಅಲ್ಲಲ್ಲಿ ಇತಿಹಾಸ
ಹೆಕ್ಕುತ್ತ ಸಂಚರಿಸುವ
ಬಾಧೆಗಳು ತೊಲಗಿವೆ
ಹಸಿರುಗಚ್ಚುತ್ತಿರುವ ಕೋಶಗಳೆದುರೂ
ಮೈ ಕಳಚಿ ಮೆರೆದಿವೆ
ಹತ್ತಾರು ಕಾಮನಬಿಲ್ಲು. ತಿಳಿದೆಯಾ

ಹುಳಿ ಹಳದಿ ಹಳಸುತ್ತಿರುವ
ಕಂಪನಗಳ ಹೆಸರಲ್ಲಿ
ಏಯ್
ನಿನ್ನ ಮೈ ನಿರಿಗೆಗಟ್ಟುತ್ತಿದೆ
ಕೊನೆಗೊಮ್ಮೆ ನೀ ತಟ್ಟನೆ
ತೊಟ್ಟು ಕಳಚಿ
ತೂರಿ ಬೀಳುವದುಂಟಲ್ಲ
ಆಗಿನ
ಆ ಕ್ಷಣದ
ನಿನ್ನ ತೇಲುಬೀಳಿನ
ಅನಿವಾರ್‍ಯನೀರವದಲ್ಲಿ
ಇನ್ನೂ ಇನ್ನೂ ನೀನು
ಉಸಿರಾಡುತ್ತಿರುವ ಸದ್ದು
ನನಗಿಲ್ಲಿ ಕೂತಲ್ಲಿ
ಕೇಳಿಸುತ್ತದೆ. ಕಳೆದೆಯಾ
*****