ಸಂಸ್ಕಾರ – ೨

ಅಧ್ಯಾಯ ಮೂರು

ಬ್ರಾಹ್ಮಣರೆಲ್ಲರೂ ಪಾರಿಜಾತಪುರಕ್ಕೆ ಹೊರಟುಹೋದ ಮೇಲೆ ಪ್ರಾಣೀಶಾಚಾರ್ಯರು ಚಂದ್ರಿಗೆ ’ಕೂತುಕೊ’ ಎಂದು ಹೇಳಿ ತನ್ನ ಹೆಂಡತಿ ಮಲಗಿದ್ದ ಊಟದ ಮನೆಗೆ ಬಂದರು. ’ಇವಳೇ, ಚಂದ್ರಿಯದು ತುಂಬ ನಿಷ್ಕಲ್ಮಷ ಹೃದಯ ಕಾಣೇ’ ಎಂದು ಅವಳು ಬಂಗಾರವನ್ನು ಕೊಟ್ಟದ್ದು, ಅದರಿಂದ ಉದ್ಭವಿಸಿದ ಹೊಸ ಸಮಸ್ಯೆಯನ್ನು ವಿವರಿಸಿ, ತಾಳೆಗರಿ-ಗ್ರಂಥಗಳನ್ನೆಲ್ಲ ಬಿಚ್ಚಿ ಧರ್ಮಶಾಸ್ತವೇನೆನ್ನುತ್ತದೆಂದು ಹುಡುಕುತ್ತ ಕೂತರು. ಯಾವತ್ತಿನಿಂದಲೂ ಈ ನಾರಣಪ್ಪ ತನಗೆ ಸಮಸ್ಯೆಯಾಗಿಯೇ ಉಳಿದ. ಅಗ್ರಹಾರದಲ್ಲಿ ಕೊನೆಗೆ ನಿಲ್ಲುವುದು ಸನಾತನಧರ್ಮವನ್ನು ಹಿಡಿದ ತನ್ನ ತಪಸ್ಸೋ ಅಥವ ಅವನ ರಾಕ್ಷಸ ಸ್ವಭಾವವೋ ಎಂದು ಅವರ ಹಠ. ಯಾವ ಶನಿಕಾಟದಿಂದ ಅವನು ಹೀಗಾದನೋ ಎಂದು ನೊಂದು, ದೇವರ ದಯದಿಂದ ಅವನು ಉದ್ಧಾರವಾಗಲಿ ಎಂದು ಅವರು ವಾರದಲ್ಲಿ ಎರಡು ದಿನ ರಾತ್ರೆ ಊಟ ಬಿಟ್ಟು ಒಪ್ಪತ್ತು ಮಾಡುತ್ತಿದ್ದರು. ಅಲ್ಲದೆ ಅವನ ಬಗ್ಗೆ ಅವರ ಹೃದಯದಲ್ಲಷ್ಟು ಪಶ್ಚಾತ್ತಾಪ, ಕಳವಳ ಇರೋಕ್ಕೆ ಕಾರಣ ಅವನ ತಾಯಿಗೆ ತಾನು ಕೊಟ್ಟಿದ್ದ ವಚನ ’ನಿನ್ನ ಮಗನ ಹಿತಾನ್ನ ಕಾಯುತ್ತೇನೆ, ಅವನನ್ನು ಒಳ್ಳೆಯ ಮಾರ್ಗಕ್ಕೆ ತರುತ್ತೇನೆ’-ಹೀಗೆ ಸಾಯುವ ಮುದುಕಿಗೆ ಧೆರ್ಯ ಹೇಳಿದ್ದರು. ಆದರೆ ನಾರಣಪ್ಪ ಮಾರ್ಗ ಹತ್ತಲಿಲ್ಲ; ಬುದ್ಧಿವಾದ ಕಿವಿಗೆ ಹಾಕಿಕೊಳ್ಳಲಿಲ್ಲ. ತಾನು ವೇದ ಹೇಳಿ, ಮಂತ್ರಗಳನ್ನು ಬಾಯಿಪಾಠ ಮಾಡಿಸಿ ಬೆಳೆಸಿದ ಗರುಡನ ಮಗ ಶ್ಯಾಮ, ಲಕ್ಷ್ಮಣನ ಅಳಿಯ ಶ್ರೀಪತಿ-ಇಬ್ಬರನ್ನೂ ತನ್ನ ವರ್ಚಸ್ಸಿನಿಂದ ಕಸಿದುಕೊಂಡ. ಶ್ಯಾಮನಿಗೆ ಮನೆ ಬಿಟ್ಟು ಓಡಿಸಿ ಮಿಲಿಟರಿ ಸೇರಲು ಪ್ರೇರೇಪಿಸಿದ. ಗರುಡಾ ಲಕ್ಷ್ಮಣರು ತಂದ ದೂರುಗಳನ್ನು ಕೇಳಿ ಕೇಳಿ ಸಾಕಾಗಿ ಅವರು ಒಂದು ದಿನ ಅವನಲ್ಲಿಗೆ ಹೋಗಿದ್ದರು. ಸುಪ್ಪತ್ತಿಗೆಯ ಮೇಲೆ ಮಲಗಿದ್ದವ ತನ್ನನ್ನು ಕಂಡು ಎದ್ದು ಕೂರುವಷ್ಟು ಮರ್ಯಾದೆ ತೋರಿಸಿದ. ಆದರೆ ಹಿತಾ ಹೇಳಲು ಹೋದರೆ ಯದ್ವಾತದ್ವ ಮಾತಾಡಿದ. ಬ್ರಾಹ್ಮಣ ಧರ್ಮವನ್ನ ಜರಿದ : ’ಇನ್ನು ನಿಮ್ಮ ಶಾಸ್ತ ನಡೆಯೋದಿಲ್ಲ. ಮುಂದೆ ಬರೋದು ಕಾಂಗ್ರೆಸ್ಸು. ಪಂಚಮರನ್ನ ದೇವಸ್ಥಾನದೊಳಕ್ಕೆ ಬಿಡಬೇಕು’ ಎಂದೆಲ್ಲ ಏನೇನೊ, ಅಸಂಬದ್ಧ ಪ್ರಲಾಪಿಸಿದ. ಬೇಡವೋ ಎಂದೆ. ಆ ಶ್ರೀಪತಿಯನ್ನ ಅವನ ಹೆಂಡತಿಯಿಂದ ದೂರ ಮಾಡಬೇಡವೋ ಎಂದೆ. ಅಹಹಾ ಎಂದು ನಕ್ಕುಬಿಟ್ಟ. ಸುಖ ಕೊಡದ ಹುಡುಗಿಯ ಕೂಡ ಯಾರು ತಾನೇ ಸಂಸಾರ ಮಾಡುತ್ತಾರೆ ಆಚಾರ್ಯರೇ, ಗೊಡ್ಡು ಬ್ರಾಹ್ಮಣರನ್ನ ಬಿಟ್ಟರೆ-ಎಂದು ಮೂದಲಿಸಿದ. ’ಸಂಬಂಧಾಂತ ನನಗೆ ಭ್ರಾಂತಿ ಹಿಡಿದ ಹುಡುಗಿನ್ನ ಕಟ್ಟಿ ಹಾಳುಮಾಡಬೇಕೂಂತ ಇದ್ದಿರಲ್ಲ-ನೀವು-ಬ್ರಾಹ್ಮಣರು-ನಿಮ್ಮ ಧರ್ಮ ನಿಮಗೇ ಇರಲಿ-ಇರೋದು ಒಂದು ಆಯುಷ್ಯ. ನಾನು ಚಾರ್ವಾಕವಂಶದವ ’ಋಣಂ ಕೃತ್ವಾ ಘೃತಂ ಪಿಬೇv’-ಎಂದ. ಈ ಭೌತಶರೀರ ಶಾಶ್ವತವಲ್ಲಪ್ಪ ಎಂದು ಬೋಧಿಸಿದೆ; ಬೇಡಿದೆ; ’ನೀನು ಏನೇ ಮಾಡು, ಹುಡುಗರನ್ನಾದರೂ ಹಾಳುಮಾಡಬೇಡ’ ಎಂದು ಅಂಗಲಾಚಿದೆ. ಅದಕ್ಕೂ ನಕ್ಕುಬಿಟ್ಟ. ’ಮುಂಡೆಯರ ಆಸ್ತಿಗೆ ಮುಟ್ಟುಗೋಲು ಹಾಕಿ, ಮಾಟಮಂತ್ರ ಮಾಡಿಸಿ, ಕೆಟ್ಟದ್ದು ಬಗೆಯುವ ಗರುಡ ನಿಮ್ಮ ಪ್ರಕಾರ ಬ್ರಾಹ್ಮಣನೋ?’ ಎಂದು ಗೇಲಿ ಮಾಡಿದ. ’ಕೊನೆಯಲ್ಲಿ ಗೆಲ್ಲೋದು ನಾನೋ, ನೀವೋ? ನೋಡುವ ಆಚಾರ್ಯರೆ, ಎಷ್ಟು ದಿನ ಈ ಬ್ರಾಹ್ಮಣ್ಯ ಉಳಿಯುತ್ತೆ ಅಂತ? ಈ ಬ್ರಾಹ್ಮಣ್ಯದ ಮರ್‍ಯಾದೇನೆಲ್ಲ ನಾನು ಬೇಕಾದರೆ ಒಂದು ಹೆಣ್ಣಿನ ಸುಖಕ್ಕೆ ಸುಳಿದು ಹಾಕಿಬಿಡ್ತೇನೆ. ನೀವಿನ್ನು ಹೊರಡಿ. ಹೆಚ್ಚಿಗೆ ಮಾತಾಡಿ ನಿಮ್ಮನ್ನು ನೋಯಿಸೋಕ್ಕೆ ಇಷ್ಟವಿಲ್ಲ’ ಎಂದುಬಿಟ್ಟಿದ್ದ. ಇಂತಹ ಪ್ರಾಣಿಗೆ ಬಹಿಷ್ಕಾರ ಹಾಕಿಸೋಕ್ಕೆ ನಾನು ಯಾಕೆ ಅಡ್ಡಬಂದೆ? ಭೀತಿಯೋ? ಪಶ್ಚಾತ್ತಾಪವೋ? ಕೊನೆಗೆ ನಾನೇ ಗೆಲ್ಲುವೆನೆಂಬ ಹಟವೋ? ಅಂತೂ ಅವನು ಅಂದ ಹಾಗೆ-ಬದುಕಿದ್ದಾಗ ಹೇಗೋ ಹಾಗೆ ಈಗ ಸತ್ತು ನನ್ನ ಬ್ರಾಹ್ಮಣ್ಯದ ಸತ್ವಪರೀಕ್ಷೆ ಮಾಡುತ್ತಿದ್ದಾನೆ. ಕೊನೆಯ ಸಾರಿ ನಾರಣಪ್ಪನನ್ನು ನೋಡಿದ್ದೆಂದರೆ ಮೂರು ತಿಂಗಳ ಹಿಂದೆ ಚತುರ್ದಶಿಯ ಒಂದು ಸಂಜೆ. ಅವತ್ತು ಬೆಳಿಗ್ಗೆ ಅವ ಮುಸಲ್ಮಾನರನ್ನ ಕರೆದುಕೊಂಡು ಹೋಗಿ, ಗಣಪತಿದೇವಸ್ಥಾನದ ಹೊಳೆಯ ದೇವರ ಮೀನನ್ನು ಹಿಡಿದು, ಅಗ್ರಹಾರದಲ್ಲಿ ಎಲ್ಲರ ಕಣ್ಣೆದುರು ಎತ್ತಿಕೊಂಡು ಹೋದ ಎಂದು ಗರುಡಾಚಾರ್ಯ ದೂರು ತಂದಿದ್ದ. ಮೇಲಕ್ಕೆ ಬಂದು ಕೆಯಿಂದ ಅಕ್ಕಿಯನ್ನು ತಿಂದು, ಹೊಳೆಯಲ್ಲಿ ನಿರಂಬಳ ಕ್ರೀಡಿಸುವ ಆ ಆಳೆತ್ತರದ ಮೀನುಗಳನ್ನು ಹಿಡಿದರೆ ರಕ್ತಕಾರಿ ಸಾಯುತ್ತಾರೆಂಬ ನಂಬಿಕೆಯನ್ನು ನಾರಣಪ್ಪ ನಿರ್ಲಕ್ಷಿಸಿದನೆಂದು ಪ್ರಾಣೇಶಾಚಾರ್ಯರಿಗೆ ಗಾಬರಿಯಾಯಿತು: ಇವ ಹೀಗೆ ದಾರಿ ಹಾಕಿಕೊಟ್ಟ ಮೇಲೆ ಶೂದ್ರಾದಿಗಳಾಗಿ ಎಲ್ಲರಿಗೂ ನ್ಯಾಯಧರ್ಮದ ಅಂಕೆ ತಪ್ಪಿ ಹೋಗದೆ ಇರುತ್ತದೋ? ದೆವ ಭಯದಿಂದಲಾದರೂ ಸಾಮಾನ್ಯರಲ್ಲಿ ಇಷ್ಟಾದರೂ ಧರ್ಮಬುದ್ಧಿ ಈ ಕಲಿಗಾಲದಲ್ಲಿ ಉಳಿದಿರೋದು. ಅದೂ ನಾಶವಾದರೆ? ಈ ಭೂಮಿಯನ್ನು ಎತ್ತಿಹಿಡಿಯೋ ಶಕ್ತಿ ಇನ್ನೆಲ್ಲಿ ಉಳಿದಿರುತ್ತೆ? ಈಗ ತಾನು ಸುಮ್ಮನಿರೋದು ಅತ್ಯಂತ ಅನುಚಿತವೆಂದು ದಡದಡನೆ ನಡೆದು ನಾರಣಪ್ಪನ ಮುಖಕ್ಕೆ ಮುಖಕೊಟ್ಟು ಅವನ ಪಡಸಾಲೆಯಲ್ಲಿ ನಿಂತರು. ಕುಡಿದಿದ್ದ ಎಂದು ಕಾಣುತ್ತದೆ : ಕಣ್ಣು ಕೆಂಪಾಗಿತ್ತು, ಕ್ರಾಪು ಕೆದರಿತ್ತು… ಆಗ-ತನ್ನನ್ನು ಕಂಡೊಡನೆ ಧಡ್ಡನೆದ್ದು ಬಟ್ಟೆಯಿಂದ ಬಾಯಿ ಮುಚ್ಚಿಕೊಂಡನಲ್ಲವೆ? ಅವನ ಸ್ವಭಾವ ಚಕ್ರವ್ಯೂಹದಂತೆಂದು, ಅದರೊಳಕ್ಕೆ ತನಗೆ ಹೋಗಲು ಪ್ರಾಯಶಃ ಎಡೆಯಿಲ್ಲವೆಂದು ಕೆಲವೊಮ್ಮೆ ಪರಿತಪಿಸುತ್ತಿದ್ದ ಆಚಾರ್ಯರಿಗೆ, ಅವನ ಗರ್ವದ ರಾವಣತ್ವದಲ್ಲಿ ತನ್ನನ್ನು ಕಂಡು ಅಂಜುವಷ್ಟಾದರೂ ಬಿರುಕು ಬಿಟ್ಟಿದ್ದು ನೋಡಿ, ಒಳಗಿನಿಂದ ಸಾತ್ವಿಕಶಕ್ತಿ ನುಗ್ಗಿದಂತಾಗಿ ಆಶೋದಯವಾಯಿತು. ಈಗ ಮಾತು ವ್ಯರ್ಥವೆಂದು ಅವರಿಗೆ ಗೊತ್ತು. ತನ್ನೊಳಗಿನ ಸಾತ್ವಿಕ ಗಂಗಾಜಲ ಅವನೊಳಕ್ಕೆ ಮೌನವಾಗಿ ನುಗ್ಗದ ಹೊರ್ತು ಅವನು ಅರಳುವವನಲ್ಲವೆಂದು ಅವರಿಗೆ ಗೊತ್ತು. ಗರುಡನಂತೆರಗಿ ಅವನನ್ನು ಜರ್ಜರಗೊಳಿಸಿ ಒಳಗಿನ ಅಮೃತವನ್ನು ಪುಟಿಸಬೇಕೆಂದು ಕಾಮದಂತಹ ಆಸೆ ಎದ್ದಿತು. ಕಠೋರವಾಗಿ ನೋಡಿದರು. ಸಾಮಾನ್ಯ ಪಾಪಿ ಅಂಜಿ, ಹೇಸಿ, ಭೂಗತವಾಗಬೇಕು-ಹಾಗೆ ನೋಡಿದರು. ಇವನ ಕಣ್ಣಿಂದ ಪಶ್ಚಾತ್ತಾಪದ ಎರಡು ಹನಿ ನೀರು ಬೀಳಲಿ ಸಾಕು. ತನಗಿಂತ ಐದು ವರ್ಷ ಕಿರಿಯವನಾದ ನಾರಣಪ್ಪನನ್ನು ಭ್ರಾತೃವಾತ್ಸಲ್ಯದಿಂದ ಹಿಡಿದಪ್ಪಿಬಿಡುತ್ತೇನೆಂದು ಕಾಮಿಸಿ ನೋಡಿದರು. ನಾರಣಪ್ಪ ತಲೆತಗ್ಗಿಸಿದ. ಭರ್ರನೆ ಹಾರಿ ಕವಿದುಕೊಂಡ ಗರುಡನ ತೊಡೆಗೆ ಸಿಕ್ಕಿದವನಂತೆ, ಕ್ಷಣ ಹುಳುವಾದಂತೆ, ಮುಚ್ಚಿದ ಬಾಗಿಲೊಂದನ್ನು ತುಸು ತೆರೆದು ಇಣುಕಿ ತಬ್ಬಿಬ್ಬಾದ ಹಾಗೆ-ಕಂಡ… ಇಲ್ಲ. ಬಾಯಿಂದ ಬಟ್ಟೆಯನ್ನು ತೆಗೆದು, ಕುರ್ಚಿಯ ಮೇಲೆ ಬಿಸಾಕಿ, ಗಹಗಹಸಿ ನಕ್ಕ: “ಚಂದ್ರೀ, ಎಲ್ಲಿ ಬಾಟಲು? ಆಚಾರ್ಯರಿಗಷ್ಟು ತೀರ್ಥ ಕೊಡು” “ಬಾಯಿ ಮುಚ್ಚು!” ಪ್ರಾಣೇಶಾಚಾರ್ಯರು ಸರ್ವಾಂಗ ಕಂಪಿಸುತ್ತ, ತಮ್ಮ ವರ್ಚಸ್ಸಿನಿಂದ ಥಟ್ಟನೆ ನುಣುಚಿಕೊಂಡವನನ್ನು ಕಂಡು, ಮೆಟ್ಟಲಿಳಿಯುವಾಗ ಪಾದತಪ್ಪಿದವರಂತೆ ಹತಾಶರಾದರು. “ಆಹಾ! ಆಚಾರ್ಯರಿಗೂ ಸಿಟ್ಟು ಬರುತ್ತದಲ್ಲವೆ? ಕಾಮಕ್ರೋಧಾದಿಗಳು ನಮ್ಮಂತಹವರಿಗೆ ಮಾತ್ರವೆಂದು ತಿಳಿದಿದ್ದೆ. ಕಾಮಾನ ತುಳಿದವನಿಗೆ ಕೋಪ ಮೂಗಿನ ತುದೀಲೇ ಇರುತ್ತಂತೆ… ದೂರ್ವಾಸ, ಪರಾಶರ, ಭೃಗು, ಬೃಹಸ್ಪತಿ, ಕಾಶ್ಯಪ-ಚಂದ್ರೀ, ಎಲ್ಲಿ ಬಾಟಲು? ಅಲ್ಲ ಆಚಾರ್ಯರೇ, ನಿಮ್ಮ ಋಷಿಗಳು ಸೆ ಬೇಕಾದರೆ. ಮೀನಿನ ವಾಸನೆಯವಳನ್ನ ದೋಣಿಯಲ್ಲೆ ಕೆಡೆಸಿ ಸುಗಂಧಿ ಮಾಡಿದವನ ಹೆಸರೇನು? ಅಂತಹ ಪರಂಪರೇಲಿ ಬಂದ ಈ ಅಗ್ರಹಾರದ ಬಡ ಬ್ರಾಹ್ಮಣರನ್ನ ನೋಡಿರಪ್ಪ…” “ನಾರಣಪ್ಪ, ಬಾಯಿ ಮುಚ್ಚು” ಎಂದೆ. ಚಂದ್ರಿ ಬಾಟಲು ತರದಿದ್ದುದನ್ನು ಕಂಡು ನಾರಣಪ್ಪ ರೇಗಿ ಸ್ವತಃ ಉಪ್ಪರಿಗೆಗೆ ದಡದಡನೆ ಹತ್ತಿ ಸಾರಾಯಿಯನ್ನು ತಂದು ಬಟ್ಟಲು ತುಂಬಿಸಿದ. ಚಂದ್ರಿ ಬೇಡವೆಂದು ಅವನ ಕೆ ಹಿಡಿಯಹೋದರೆ ಅವಳನ್ನು ನೂಕಿದ. ಪ್ರಾಣೇಶಾಚಾರ್ಯರು ಕಣ್ಣುಮುಚ್ಚಿ ಹೊರಡಲೆಂದು ಬೆನ್ನು ತಿರುಗಿಸಿದರು. “ಆಚಾರ್ಯರೆ, ಸ್ವಲ್ಪ ನಿಲ್ಲಿ” ಎಂದ. ತಾನೀಗ ಹೊರಟುಬಿಟ್ಟರೆ ಭೀತನಂತೆ ಕಾಣಿಸುವೆನೆಂದು ಹೆದರಿ ಪ್ರಾಣೇಶಾಚಾರ್ಯರು ಯಾಂತ್ರಿಕವಾಗಿ ನಿಂತರು. ಸಾರಾಯಿಯ ವಾಸನೆ ಅಸಹ್ಯವಾಯಿತು. “ಕೇಳಿ” ಎಂದು ನಾರಣಪ್ಪ ಆಜ್ಞೆಮಾಡಿ, ಬಟ್ಟಲಿನಿಂದ ಒಂದು ಗುಟುಕು ಕುಡಿದು ವಕ್ರವಾಗಿ ನಗುತ್ತ ಹೇಳಿದ: “ಕೊನೆಗೆ ಗೆಲ್ಲೋದು ನಾನೋ ನೀವೋ-ನೋಡುವ. ನಾನು ಬ್ರಾಹ್ಮಣ್ಯದ ನಾಶಮಾಡ್ತೇನೆ. ಮಾಡಿಯೇ ತೀರ್‍ತೇನೆ. ನನ್ನ ದುಃಖವೆಂದರೆ ನಾಶ ಮಾಡೋಕ್ಕೆ ಈ ಅಗ್ರಹಾರದಲ್ಲಿ ಬ್ರಾಹ್ಮಣ್ಯಾನೇ ಉಳಿದಿಲ್ಲಲ್ಲಾಂತ-ನಿಮ್ಮೊಬ್ಬರನ್ನ ಬಿಟ್ಟರೆ, ಗರುಡ, ಲಕ್ಷ್ಮಣ, ದುರ್ಗಾಭಟ್ಟ-ಅಹಹಾ-ಎಂಥ ಬ್ರಾಹ್ಮಣರಯ್ಯ? ನಾನೇನಾದರೂ ಬ್ರಾಹ್ಮಣನಾಗಿ ಉಳಿದಿದ್ದರೆ ನಿಮ್ಮ ಗರುಡಾಚಾರ್ಯ ನನ್ನನ್ನ ಆಪೋಶನಾ ತಗೊಂಡುಬಿಡ್ತಿದ್ದ. ಅಥವಾ ಆಸ್ತಿ ಮೇಲಿನ ಆಸೆಗೆ-ಹೇಲಿನಲ್ಲಿ ಬಿದ್ದಿರೋ ಕಾಸನ್ನ ನಾಲಗೇಂದ ನೆಕ್ಕಿ ತೆಗಿಯೋ ಆ ಲಕ್ಷ್ಮಣ ತನ್ನ ಇನ್ನೊಂದು ನರಪೇತಲ ನಾದಿನಿಯನ್ನ ನನಗೆ ಕಟ್ಟಿರುತ್ತಿದ್ದ. ಒಟ್ಟಿನಲ್ಲಿ-ಜುಟ್ಟು ಬಿಟ್ಟು, ಅಂಗಾರ ಹಾಕಿ ನಿಮ್ಮ ಕಟ್ಟೆ ಮೇಲೆ ಕೂತು, ನೀವು ಹೇಳೋ ಪುರಾಣಾನ್ನ ಕೇಳಿಸಿಕೊಂಡು ಇರಬೇಕಾಗಿತ್ತು…” ನಾರಣಪ್ಪ ಇನ್ನೊಂದು ಗುಟುಕು ಕುಡಿದು ತೇಗಿದ. ಒಳಗಿನಿಂದ ಭಯಗ್ರಸ್ತಳಾಗಿ ನೋಡುತ್ತ ನಿಂತಿದ್ದ ಚಂದ್ರಿ ಕೆಮುಗಿದು ಹೋಗಿರೆನ್ನುವಂತೆ ಸಂಜ್ಞೆಮಾಡಿದಳು. ಪ್ರಾಣೇಶಾಚಾರ್ಯರು ಮತ್ತೆ ತಿರುಗಿದರು-ಕುಡುಕನ ಜೊತೆ ಏನು ಹರಟೆ ಅಂತ. “ಆಚಾರ್ಯರೆ, ಕೇಳಿ ಇಲ್ಲಿ. ನಿಮ್ಮ ಮಾತನ್ನೇ ಯಾವತ್ತೂ ಅಗ್ರಹಾರ ಕೇಳ್ತಾ ಇರಬೇಕೆಂದು ಯಾಕೆ ಗರ್ವ? ಸ್ವಲ್ಪ ನನ್ನ ಮಾತನ್ನೂ ಕಿವಿಗೆ ಹಾಕಿಕೊಳ್ಳಿ. ನಾನೊಂದು ಪುರಾಣ ಹೇಳ್ತೇನೆ. ಕೇಳಿ! “ಒಂದು ಅಗ್ರಹಾರದಲ್ಲಿ ಒಬ್ಬ ಪರಮಪೂಜ್ಯ ಆಚಾರಿಯಿದ್ದ-ಒಂದಾನೊಂದು ಕಾಲದಲ್ಲಿ. ಅವನ ಹೆಂಡತಿ ಸದಾ ರೋಗಿಯಾದ್ದರಿಂದ ಸ್ತೀಸುಖವೇನೆಂದು ತಿಳಿಯದ ಅವನ ತೇಜಸ್ಸು-ಅಂದರೆ ಅವನ ಖ್ಯಾತಿ-ಊರೂರು ಹರಡಿತ್ತು. ಅಗ್ರಹಾರದಲ್ಲಿ ಉಳಿದ ಬ್ರಾಹ್ಮಣರು ಪರಮಪಾಪಿಗಳು. ಅನ್ನಮೂಲ, ಕಾಂಚನಮೂಲವಾದ ಸರ್ವಪಾಪಗಳನ್ನೂ ಮಾಡಿದವರು. ಅದರೆ ತಮ್ಮ ಪಾಪಾನ್ನ ಹೇಗೂ ಈ ಅಚಾರಿ ಮಾಡುವ ಪುಣ್ಯ ಮುಚ್ಚುತ್ತಲ್ಲಾಂತ ಅವರು ಇನ್ನಷ್ಟು ಪಾಪಾನ್ನ ಸಲೀಸಾಗಿ ಮಾಡತೊಡಗಿದರು. ಈ ಆಚಾರಿಯ ಪುಣ್ಯ ಏರಿದಷ್ಟೂ ಅವರ ಪಾಪಾನೂ ಏರಿತು. ಒಂದು ದಿನ ಒಂದು ತಮಾಷೆಯಾಯಿತು. ಏನು ಆಚಾರ್ಯರೆ, ಕೇಳಿಸಿಕೊಳ್ಳುತ್ತಿದ್ದೀರೇನು? ನಾವು ಮಾಡೋ ಕರ್ಮಕ್ಕೆಲ್ಲ ತದ್ರೂಪವಾದ ಫಲ ಹೇಗೋ ಹಾಗೆ ತದ್ವಿರುದ್ಧವಾದ ಫಲಾನೂ ಪ್ರಾಪ್ತವಾಗುತ್ತದೆ ಎಂಬೋದು ನನ್ನ ಕತೆಯ ನೀತಿ. ಕೇಳಿಸಿಕೊಂಡು ಉಳಿದ ಬ್ರಾಹ್ಮಣರಿಗೂ ಹೇಳಿ. “ಏನದು ತಮಾಷೇಂದರೆ ಆ ಅಗ್ರಹಾರದಲ್ಲಿ ಒಬ್ಬ ಯುವಕನಿದ್ದ. ಅವನ ಕೆಹಿಡಿದ ಹೆಂಡತಿ ಅವನ ಜೊತೆ ಮಲಗ್ತಾ ಇರಲಿಲ್ಲ-ಮಾತೃವಾಕ್ಯ ಪರಿಪಾಲನಾರ್ಥವಾಗಿ. ಆ ಯುವಕ ಈ ಆಚಾರಿ ಪುರಾಣ ಓದೋದನ್ನ ಕೇಳಲಿಕ್ಕೆಂದು ಪ್ರತಿ ಸಂಜೆಯೂ ಹಾಜರು. ಕಾರಣ-ಜೀವನದಲ್ಲಿ ಅನುಭವ ಇಲ್ಲದಿದ್ದರೂ ಈ ಆಚಾರಿ ಕಾವ್ಯಗೀವ್ಯಾಂದರೆ ಬಲೇ ರಸಿಕ. ಒಂದು ದಿನ ಕಾಳಿದಾಸನ ಶಕುಂತಲೆಯ ವರ್ಣನೆ ನಡೆದಿತ್ತು. ಮುಟ್ಟ ಹೋದರೆ ಚಿಗುಟಿದಾಂತ ತಾಯಿಯ ಹತ್ತಿರ ಹೋಗಿ ದೂರು ಹೇಳುವ ಹೆಂಡತಿಯಿಂದ ಬೇಸತ್ತ ಈ ಯುವಕನಿಗೆ ಆಚಾರಿಯ ವರ್ಣನೆಯಿಂದ ತನ್ನ ಮೆಯೊಳಗೆ ಒಂದು ಹೆಣ್ಣು ಬೆಳೆದಂತಾಗಿ, ತೊಡೇಲಿ ಕಿಚ್ಚು ಉರಿದು-ಅಂದರೆ ಏನೂ ಅಂತ ನಿಮಗೆ ಗೊತ್ತೆ, ಆಚಾರ್ಯರೇ?-ಆಚಾರಿ ಜಗುಲಿಂದ ಜಿಗಿದ, ಓಡಿದ. ಹೆಚ್ಚು ಕೇಳಿಸಿಕೊಳ್ಳೊ ಸಹನೆಯಿಲ್ಲದೆ ಸೀದ ಹೊಳೆಗೆ ತಣ್ಣೀರಿನಲ್ಲಿ ಮೀಯಲೆಂದು ಓಡಿದ. ಪುಣ್ಯವಶಾv ಅಲ್ಲೊಬ್ಬಳು ಹೊಲತಿ. ಬೆಳದಿಂಗಳು. ಪುಣ್ಯವಶಾv ಅವಳ ಮೆಮೇಲೆ ಅಷ್ಟೇನು ವಸ್ತವಿಲ್ಲದೆ ನೋಡಬೇಕೆಂದು ಅವನು ಬಯಸಿದ ಅಂಗಾಂಗಗಳೆಲ್ಲ ನಿರಾಯಾಸವಾಗಿ ಕಣ್ಣಿನ ಎದುರಿನಲ್ಲೆ. ನಿಮ್ಮ ಋಷಿ ಒಲಿದ ಮತ್ಸ್ಯಗಂಧೀ ತರಹದವಳು ಅವಳು. ಇವಳೇ ಶಕುಂತಳಾಂತ ಭ್ರಮಿಸಿ ಈ ಬ್ರಾಹ್ಮಣ ಯುವಕ ಅವಳನ್ನ ಅಲ್ಲೇ ಸಂಭೋಗಿಸಿಬಿಟ್ಟ-ಚಂದ್ರಸಾಕ್ಷಿಯಾಗಿ. “ಈಗ, ಅರ್ಥಮಾಡಿ ಹೇಳಿ, ಅಚಾರ್ಯರೆ: ಆ ಆಚಾರೀನೇ ಬ್ರಾಹ್ಮಣ್ಯಾನ್ನ ಹಾಳುಮಾಡಿದಂತೆ-ಹೌದೋ ಅಲ್ಲವೋ? ಅದಕ್ಕೇ ಹಿರಿಯರು ಹೇಳ್ತಾ ಇದ್ದದ್ದು: ವೇದ ಪುರಾಣ ಓದಿರೊ, ಆದರೆ ಅದಕ್ಕೆ ಅರ್ಥಮಾಡಲಿಕ್ಕೆ ಹೋಗಬೇಡಿರೊ-ಅಂತ. ಕಾಶಿಗೆ ಹೋಗಿ ಬಂದವರಲ್ಲವ ನೀವು? ನೀವೇ ಹೇಳಿ? ಬ್ರಾಹ್ಮಣ್ಯ ಯಾರಿಂದ ಕೆಟ್ಟಿತು?” ನಾರಣಪ್ಪನ ಮಾತನ್ನು ನಿಶ್ಚಲವಾಗಿ ನಿಂತು ಕೇಳುತ್ತ ಕೇಳುತ್ತ ಪ್ರಾಣೇಶಾಚಾರ್ಯರಿಗೆ ಕಳವಳವಾಯಿತು: ಕುಡುಕನ ತಲೆ ಕೆಟ್ಟ ಮಾತೋ? ನಿಜವೋ, ತನ್ನಿಂದ ಅಂತಹ ಪ್ರಮಾದವಾಗಿರೋದು ಶಕ್ಯವೋ? “ಪುಣ್ಯಕ್ಕೆ ನಾಲಿಗೆಯಿಲ್ಲಪ್ಪ, ಪಾಪಕ್ಕಿದೆ.” ಪ್ರಾಣೇಶಾಚಾರ್ಯರು ನಿಟ್ಟುಸಿರಿಟ್ಟು, “ದೇವರೇ ನಿನಗೆ ಕರುಣೆ ತೋರಿಸಬೇಕು-ಅಷ್ಟೇ” ಎಂದರು. “ನೀವು ರಸಭರಿತವಾದ ಪುರಾಣ ಓದುತ್ತೀರಿ: ಆದರೆ ಗೊಡ್ಡಾಗಿ ಬಾಳೂಂತ ಬೋಧಿಸ್ತೀರಿ. ಆದರೆ ನನ್ನ ಮಾತಿಗೆ ಒಂದೇ ಅರ್ಥ: ಹೆಣ್ಣಿನ ಜೊತೆ ಮಲಗು ಎಂದರೆ ಹೆಣ್ಣಿನ ಜೊತೆ ಮಲಗು; ಮೀನು ತಿನ್ನು ಎಂದರೆ ಮೀನು ತಿನ್ನು. ನಿಮಗೆಲ್ಲ ಒಂದು ಬುದ್ಧಿವಾದದ ಮಾತು ಹೇಳಲಾ, ಆಚಾರ್ಯರೆ? ಮೊದಲು ನಿಮ್ಮಗಳ ಆ ರೋಗಗ್ರಸ್ತ ಹೆಂಡಿರನ್ನ ಹೊಳೆಗೆ ನೂಕಿ. ಪುರಾಣದ ಋಷಿಗಳಂತೆ ಒಳ್ಳೆ ಮೀನುಸಾರು ಮಾಡಬಲ್ಲ ಒಬ್ಬ ಮತ್ಸ್ಯಗಂಧೀನ್ನ ತಬ್ಬಿಕೊಂಡು ಮಲಗಿ. ಕಣ್ಣು ಬಿಟ್ಟು ನೋಡಿದಾಗ ನಿಮಗೆ ಪರಮಾತ್ಮನ ಅನುಭವ ಆಗಿರದಿದ್ದರೆ ನನ್ನ ಹೆಸರು ನಾರಣಪ್ಪನಲ್ಲ” ಎಂದು ಕಣ್ಣು ಮಿಟುಕಿಸಿ ಬಟ್ಟಲಿನಲ್ಲಿದ್ದ ಸಾರಾಯಿಯನ್ನು ಗಟಗಟನೆ ಕುಡಿದು ಹೇಂii ಎಂದು ತೇಗಿದ. ತನ್ನ ರೋಗಗ್ರಸ್ತ ಹೆಂಡತೀನ್ನ ಇವ ಹೀಗೆ ಚುಚ್ಚುತ್ತಿರಬಹುದೆಂದು ಆಚಾರ್ಯರು ಪೂರ್ಣ ವ್ಯಗ್ರರಾಗಿ “ಥೂ ನೀಚ” ಎಂದು ಬೆದು ಮನಗೆ ಬಂದುಬಿಟ್ಟರು. ಅವತ್ತು ರಾತ್ರಿ ಜಪಕ್ಕೆ ಕೂತರೆ ಚಿತ್ತವೃತ್ತಿಯ ನಿರೋಧ ಸಾಧ್ಯವಾಗಲಿಲ್ಲ. ಪರಮಾತ್ಮ ಎಂದು ಕಳವಳಪಟ್ಟರು. ಸಂಜೆ ಹೊತ್ತು ರಸಭರಿತ ಕತೆಗಳನ್ನ ಓದೋದು ಬಿಟ್ಟು ವ್ರತದ ನೀತಿಕತೆಗಳನ್ನು ಹೇಳತೊಡಗಿದರು. ಪರಿಣಾಮ-ತನಗೆ ಪುರಾಣ ಹೇಳುವುದರಲ್ಲಿದ್ದ ಹುಮ್ಮಸ್ಸೇ ಮಾಯವಾಯಿತು. ಜೀವತುಂಬಿದ ಕಣ್ಣುಗಳಿಂದ ನೋಡುತ್ತ, ಕೇಳುತ್ತ ತನ್ನ ಹೃದಯಕ್ಕಷ್ಟು ಗೆಲುವು ತರುತ್ತಿದ್ದ ಹುಡುಗರು ಬರೋದನ್ನು ನಿಲ್ಲಿಸಿದರು. ಪುಣ್ಯಸಂಪಾದನಾಕಾಂಕ್ಷಿಗಳಾದ, ಕತೆ ಮಧ್ಯದಲ್ಲಿ ಆಕಳಿಸುತ್ತ ಹರಿನಾಮ ಸ್ಮರಣೆ ಮಾಡುವ ವಿಧವೆಯರು, ವೃದ್ಧರು ಮಾತ್ರ ಬರಹತ್ತಿದರು. ತಾಳೆಗರಿ ಓಲೆಗಳನ್ನು ಓದುತ್ತ, ಚಿಂತಿಸುತ್ತ ಕೂತಿದ್ದ ಪ್ರಾಣೇಶಾಚಾರ್ಯರು ಹೆಂಡತಿ ನರಳಿದ್ದನ್ನು ಗಮನಿಸಿ, ಮಧ್ಯಾಹ್ನದ ಔಷಧಿ ಇನ್ನೂ ಕೊಟ್ಟಿಲ್ಲ ಅಲ್ಲವೆ ಎಂದು ಬಟ್ಟಲಲ್ಲಿ ಮದ್ದನ್ನು ತಂದು, ಹೆಂಡತಿಯನ್ನು ಎತ್ತಿ ಎದೆಗಾನಿಸಿಕೊಂಡು ಅವಳ ಬಾಯಲ್ಲಿ ಹೊಯ್ದು, ’ಮಲಗಿ ನಿದ್ದೆ ಮಾಡು’ ಎಂದರು. ನಡುಮನೆಗೆ ಬಂದು ’ಧರ್ಮಶಾಸ್ತದಲ್ಲಿ ಇದಕ್ಕೆ ಉತ್ತರವಿಲ್ಲ ಅಂದರೆ ಏನು ಅರ್ಥ’ ಎಂದು ಹಟ ತೊಟ್ಟು ಓದತೊಡಗಿದರು.

ಅಧ್ಯಾಯ : ನಾಲ್ಕು

ಇತ್ತ ಪಾರಿಜಾತಪುರದಿಂದ ಬಿಸಿಲಿನಲ್ಲಿ ಹಸಿವಿನಲ್ಲಿ ಹರಿ ಹರಿ ಎಂದು ನಡೆದುಬಂದು ಮನೆಯಲ್ಲಷ್ಟು ವಿಶ್ರಮಿಸಿಕೊಳ್ಳೋಣೆಂದರೆ ಬ್ರಾಹ್ಮಣರಿಗೆ ಅವರ ಕಾಂತೆಯರ ಪ್ರಭುಸಂಮಿತಿ ಪ್ರಾರಂಭವಾಯಿತು. ಮುಖ್ಯವಾಗಿ ಗರುಡಾಚಾರ್ಯ, ಲಕ್ಷ್ಮಣಾಚಾರ್ಯರಿಗೆ. ಗರುಡಾಚಾರ್ಯನ ಏಕಮಾತ್ರ ಸಂತಾನವಾದ ಅವನ ಮಗ ಶ್ಯಾಮ ಮನೆಯಿಂದ ಓಡಿಬಿಟ್ಟು ಮಿಲಿಟರಿ ಸೇರಿದ್ದಕ್ಕೆ ಬಗೆಬಗೆಯ ಕಾರಣಗಳನ್ನು ಅಗ್ರಹಾರದಲ್ಲಿ ಹೇಳುತ್ತಾರೆ. ತಂದೆಯ ಶಿಕ್ಷೆ ತಡೆಯಲಾರದೆ ಹೋದ ಎಂದು ಗರುಡಾಚಾರ್ಯನನ್ನು ಕಂಡರೆ ಆಗದವರು ಅಂದರೆ, ನಾರಣಪ್ಪನನ್ನು ಕಂಡರೆ ಆಗದ ಎಲ್ಲರೂ ಅವನ ಪ್ರೇರಣೆಯಿಂದ ಮಿಲಿಟರಿ ಸೇರಿದ ಎಂದು ಅನ್ನುತ್ತಾರೆ. ಅಲ್ಲದೆ ಪ್ರಾಣೇಶಾಚಾರ್ಯರಿಂದ ಪಾಠ ಹೇಳಿಸಿಕೊಂಡೂ ಹೀಗೆ ಅವ ಓಡಿಹೋಗುವ ದುರ್ಬುದ್ಧಿ ಮಾಡಿರಬೇಕಾದರೆ-ಲಕ್ಷ್ಮಣಾಚಾರ್ಯನ ಮತ-ಗರುಡ ನಾರಣಪ್ಪನ ತಂದೆಯ ಮೇಲೆ ಮಾಡಿಸಿದ ಮಾಟ ಈಗ ಗರುಡನ ಮೇಲೆಯೇ ತಿರುಗಿಬಿದ್ದದ್ದು. ಸೃಷ್ಟಿಸಿದವನನ್ನೇ ಸುಟ್ಟು ಬಿಡಲು ಹೋದ ಭಸ್ಮಾಸುರನಂತೆ ಈ ಮಾಟ ಮಂತ್ರಗಳು. ಗರುಡ ಮಾಟ ಮಾಡಿಸದಿದ್ದರೆ, ’ಸತ್ಕುಲದಲ್ಲಿ ಹುಟ್ಟಿದ ನಾರಣಪ್ಪ ಹೀಗೇಕೆ ಚಾಂಡಾಲನಾಗುತ್ತಿದ್ದ’ ಎಂದು ತನ್ನ ತಾಯಿಯ ಕುಲಕ್ಕೆ ಕಳಂಕ ತಟ್ಟಿತೆಂದು ನೋಯುತ್ತಿದ್ದ ಲಕ್ಷ್ಮಣಾಚಾರ್ಯನ ಹೆಂಡತಿ ಅನಸೂಯ ಹೇಳುತ್ತಾಳೆ. ಚಾಂಡಾಲ ನಾರಣಪ್ಪನ ಪ್ರೇರಣೆಯಿಂದ ಕೆಗೆ ಬಂದ ಮಗ ಕೆಟ್ಟು ಓಡಿದನೆಂದು ಗರುಡಾಚಾರ್ಯನ ಹೆಂಡತಿ ಸೀತಾದೇವಿ ಅನ್ನ ನೀರು ಬಿಟ್ಟು ಸೊರಗಿ, ಮಮ್ಮಲ ಮರುಗಿ, ಹಗಲು ರಾತ್ರೆ ದಾರಿ ಕಾದು, ಮೂರು ತಿಂಗಳಾದ ಮೇಲೆ, ಶ್ಯಾಮನಿಂದ-ತಾನು ಪುಣೆಯಲ್ಲಿರುವುದಾಗಿಯೂ, ಮಿಲಿಟರಿ ಸೇರಿರುವುದಾಗಿಯೂ, ಪತ್ರ ಬರೆದುಕೊಟ್ಟು ಸೇರಿದ ಮೇಲೆ ಆರುನೂರು ರೂಪಾಯಿಗಳನ್ನು ಕೊಡದ ಹೊರ್ತು ಬಿಟ್ಟು ಬರುವಂತಿಲ್ಲವೆಂದೂ-ತಾಯಿಗೆ ಕಾಗದ ಬಂದಿತ್ತು. ಸೀತಾದೇವಿ ಸೊಂಟದ ಮೇಲೆ ಕೆಯಿಟ್ಟು, ನಾರಣಪ್ಪನನ್ನು ದಾರಿಯಲ್ಲಿ ನಿಲ್ಲಿಸಿ ಬಯ್ದು, ಅತ್ತು, ಮಗನಿಗೆ ’ಮಾಂಸಾಹಾರ ಮಾಡಬೇಡ, ಸ್ನಾನಸಂಧ್ಯಾವಂದನೆ ಬಿಡಬೇಡ’ವೆಂದು ಕಾಗದ ಬರೆಸಿದ್ದಳು. ಮಗನಿಗೆ ಒಳ್ಳೆಯ ಬುದ್ಧಿಬರಲೆಂದು ಶುಕ್ರವಾರದ ರಾತ್ರೆಯ ಊಟ ಬಿಟ್ಟಳು. ಗರುಡಾಚಾರ್ಯರು ದೂರ್ವಾಸಕೋಪತಾಳಿ, ’ಅವನು ಸತ್ತಂತೆ ನನ್ನ ಪಾಲಿಗೆ, ಈ ಸೂರಿನೊಳಕ್ಕೆ ಅವನು ತಲೆಯಿಕ್ಕಲಿ, ಸೀಳಿಬಿಡುತ್ತೇನೆ, ಎಂದು ಕೆಂಜಗದ ಇರುವೆ ಮೆಗೆ ಹತ್ತಿದವರಂತೆ ಕುಣಿದರು. ಸೀತಾದೇವಿ, ’ಗಂಡನಿಗೊಂದಷ್ಟು ಸಮಾಧಾನ ಕೊಡಪ್ಪ, ಮಗನ ಮೇಲಿನ ಪ್ರೀತಿ ಉಳಿಸಪ್ಪ’ ಎಂದು ತುಳಸಿಯನ್ನು ಪ್ರಾರ್ಥಿಸಿ ಶನಿವಾರವೂ ಒಪ್ಪತ್ತು ಮಾಡತೊಡಗಿದಳು. ಉರಿಯುವ ಬೆಂಕಿಗೆ ತುಪ್ಪ ಹಾಕುವೋಪಾಧಿಯಲ್ಲಿ ಮಾಧ್ವದ್ವೇಷಿ ದುರ್ಗಾಭಟ್ಟ, “ಮಿಲಿಟರಿಯಲ್ಲಿ ಸ್ನಾನ ಸಂಧ್ಯಾವಂದನೆ ಮಾಡುವಂತಿಲ್ಲ, ಬಲಾತ್ಕಾರವಾಗಿ ಮಾಂಸ ತಿನ್ನಿಸುತ್ತಾರೆ”೦ದು ಹೇಳಿ ಗರುಡಾಚಾರ್ಯನಿಗೆ ತಲೆ ಎತ್ತದಂತೆ ಮಾಡಿದ್ದ. ಮನೆಗೆ ಬಂದ ಸೀತಾದೇವಿಗೆ ಚಂದ್ರಿಯ ಆಭರಣ ತಮಗೆ ಸೇರಿದ್ದೇ ಆದರೆ ಮಗನನ್ನು ಮಿಲಿಟರಿಯಿಂದ ಬಿಡಿಸಿಕೊಳ್ಳಲು ಒಂದು ಮಾರ್ಗವಾದಂತಾಗುವುದೆಂದು ಹಿಗ್ಗಿದಳು. ತನ್ನ ಯಜಮಾನರು ನಾರಣಪ್ಪನ ಶವಸಂಸ್ಕಾರ ಮಾಡೋದು ಸಾಧ್ಯವಿರಲಿಕ್ಕೇ ಬೇಕು ಧರ್ಮಶಾಸ್ತದ ಪ್ರಕಾರ. ತನ್ನ ಗಂಡನಿಗಿಂತ ಮುಂಚೆ ಎಲ್ಲಿಯಾದರೂ ಲಕ್ಷ್ಮಣಾಚಾರ್ಯ ಒಪ್ಪಿಬಿಟ್ಟರೆ? ಅಥವ ಆ ಮಡಿಮೆಲಿಗೆಯಿಲ್ಲದ ಪಾರಿಜಾತಪುರದವರು ಒಪ್ಪಿಬಿಟ್ಟರೆ? ಚಡಪಡಿಸಿದಳು. ಮಾರುತಿಗೆ ಹಣ್ಣುಕಾಯಿಯ ಹರಕೆ ಹೇಳಿಕೊಂಡಳು-“ದೇವರೇ ನನ್ನ ಗಂಡನೇ ಸಂಸ್ಕಾರ ಮಾಡುವಂತಾಗಲಪ್ಪ.” ಈಗ ಅವಳ ಕಣ್ಣಿಗೆ ನಾರಣಪ್ಪ ಮಾಂಸಾಹಾರ ಮಾಡಿದ್ದು ಅಂತಹ ಭಯಂಕರ ಪಾಪದ ಹಾಗೆ ಕಾಣಲಿಲ್ಲ. ನಾಳೆ ತನ್ನ ಮಗನೇನಾದರೂ ಮನಗೆ ಹಿಂದಕ್ಕೆ ಬಂದರೆ ಅಗ್ರಹಾರದ ಅನ್ಯಾಯದ ನಾಲಿಗೆಗಳು ಅವನ ಮೇಲೆಯೂ ಹೇಳದೆ ಇರುತ್ತವೋ? ತನ್ನ ಮಗನಿಗೇನಾದರೂ ಬಹಿಷ್ಕಾರ ಹಾಕಿದಲ್ಲಿ ಏನು ಗತಿ? ನಾರಣಪ್ಪನ ಮೇಲೆ ಬಹಿಷ್ಕಾರ ಹಾಕಿಸಲು ಮುಂದೆ ಬಾರದಿದ್ದ ಪ್ರಾಣೇಶಾಚಾರ್ಯರನ್ನು ಹಿಂದೆ ದೂರುತ್ತಿದ್ದವಳು ಈಗ ಗೌರವದಿಂದ ಸ್ಮರಿಸಿದಳು: ಅವರು ಕರುಣಾವಂತರು; ನನ್ನ ಮಗನ ಪಾಪವನ್ನೂ ಹೊಟ್ಟೆಯಲ್ಲಿ ಹಾಕಿಕೊಂಡು ಖಂಡಿತಾ ಸಲಹುತ್ತಾರೆ; ಸಂಶಯವಿಲ್ಲ. ಮನೆಗೆ ಬಂದ ಮೇಲೆ ನೆಲದ ಮೇಲೆ ಒರಗುತ್ತಿದ್ದಂತೆ, ಕಣ್ಣೀರಿಡುತ್ತ ಕಾಡಿದ ಸೀತಾದೇವಿಗೆ ಗರುಡಾಚಾರ್ಯರು ’ಅವನು ನನ್ನ ಪಾಲಿಗೆ ಸತ್ತಂತೆ, ಆ ದುಷ್ಟನ ಮಾತೆತ್ತಬೇಡ’ ಎಂದು ಬಿಟ್ಟರು. ಆದರೆ ಹೆಂಡತಿಯ ಸೂಚನೆ ತೊಣಚಿಯಂತೆ ಅವರನ್ನು ಹೊಕ್ಕು ಕಾಡಿತು. ಏನೇ ನಾಶವಾಗಲಿ, ಪುತ್ರನಾಶ ಬೇಕಾದರೂ ಆಗಲಿ, ತನ್ನ ಬ್ರಾಹ್ಮಣ್ಯದ ನಾಶಕ್ಕೆ ತಾನು ತಯಾರಿಲ್ಲ. ಆದರೆ ಪ್ರಾಣೇಶಾಚಾರ್ಯರೇನಾದರೂ ಸೆ ಅಂದರೆ ಎಲ್ಲ ಸುಗಮವಾಗಿಬಿಡುತ್ತದೆ. ತಾನು ಸತ್ತ ಮೇಲೆ ತನಗೆ ಪಿಂಡ ಹಾಕಬಲ್ಲ ಏಕಮಾತ್ರ ಪುತ್ರನನ್ನು ಆಗ ಮಿಲಿಟರಿಯಿಂದ ಬಿಡಿಸಿಕೊಳ್ಳಬಹುದು. ಹೆಂಡತಿಗೆ “ಅದು ಆಗದ ಮಾತು. ಬಾಯಿ ಮುಚ್ಚು” ಎಂದು ಗದರಿಸಿ ಕಳ್ಳನ ಹಾಗೆ ಪ್ರಾಣೇಶಾಚಾರ್ಯರ ಮನೆಗೆ ಗರುಡಾಚಾರ್ಯ ನಡೆದ. ಅಂಗಳದಲ್ಲಿ ಕೂತಿದ್ದ ಚಂದ್ರಿಯ ಮುಖ ನೋಡದೆ ಆಚಾರ್ಯರ ನಡುಮನಗೆ ಬಂದ. ಪ್ರಾಣೇಶಾಚಾರ್ಯರು ತಲೆ ಎತ್ತದೆ ತಾಳೆಗರಿ ಗ್ರಂಥಗಳನ್ನು ಓದುತ್ತ ಕೂತವರು: “ಕೂತುಕೊ ಗರುಡಾ. ಪಾರಿಜಾತಪುರದವರು ಧರ್ಮಶಾಸ್ತದಲ್ಲಿ ಹೇಳಿದಂತೆ ಮಾಡೋಣ ಎಂದರಂತೆ. ಒಂದು ಲೆಕ್ಕಕ್ಕೆ ಅವರಂದಿದ್ದು ಸರಿ” ಎಂದು ತಿರುಗಿ ಓದುತ್ತ ಕೂತರು. ಗರುಡ ಗಂಟಲು ಕೆರೆದುಕೊಂಡು, “ಮನುಸ್ಮೃತಿ ಏನೆನ್ನುತ್ತೆ, ಆಚಾರ್ಯರೆ…?” ಎಂದ. ಪ್ರಾಣೇಶಾಚಾರ್ಯ್ಯ ತಲೆಯಾಡಿಸಿದರು. “ಧರ್ಮಶಾಸ್ತದಲ್ಲಿ ತಮಗೆ ತಿಳಿಯದೇ ಇರೋದು ಏನಿದೆ? ಅದಕ್ಕಲ್ಲ ನಾನು ಅನ್ನೋದು. ಏನು. ಅವತ್ತು-ಏನು-ಟೀಕಾಚಾರ್ಯರ ಪುಣ್ಯದಿನ-ಏನು-ಮಠದಲ್ಲಿ ಶ್ರೀಗುರುಗಳ ಎದುರು ಕಂಬದ ಎಲೆಯಲ್ಲಿ ತಾವು ಕೂತು ವ್ಯಾಸರಾಯಮಠದ ಆ ಮಹಾಪಂಡಿತರ ಜೊತೆ-ಏನು-ತಾವು ವಾದಿಸಿದ್ದನ್ನ ನಾನು ಕೇಳಿಲ್ಲವೆ? ’ಬಿಂಬೋಸಿ, ಪ್ರತಿಬಿಂಬೋಸ್ಮಿ’ ಎಂಬೋದನ್ನ ಮಧ್ವಮತದ ಪ್ರಕಾರ ಅರ್ಥಮಾಡಿ ಹೇಳಿ ಅಂತ ನೀವು ಹಾಕಿದ ಸವಾಲಿಗೆ ಅವರು ತತ್ತರಿಸಿಹೋದರು. ಏನು. ನಾಲ್ಕು ಗಂಟೆಕಾಲ ನಡೀತು ಅವತ್ತಿನ ಊಟ. ಅದ್ದರಿಂದ ತಮಗೆ ಸೂಚನೆ ಕೊಡಲಿಕ್ಕೆ ಬಂದೆಂತ ತಾವು ಭಾವಿಸಬಾರದು. ತಮ್ಮ ಎದುರು ನಾನು ಸಿಂಗಲೀಕ. ಏನು.” ತಮ್ಮನ್ನು ಮೆಚ್ಚಿಸಿ ತನ್ನ ಕಡೆಗೆ ಎಳೆದುಕೊಳ್ಳಲು ಗರುಡ ಯತ್ನಿಸುತ್ತಿರೋದು ನೋಡಿ ಆಚಾರ್ಯರಿಗೆ ಅಸಹ್ಯವಾಯಿತು. ಧರ್ಮಶಾಸ್ತದಲ್ಲಿ ಏನಿದೆ, ಏನಿಲ್ಲ ಇವನಿಗೆ ಬೇಡ. ತನ್ನ ಬಾಯಿಂದ ಆಗಲಿ ಎಂದು ಬಂದರೆ ಸಾಕು, ಆಗ ಯಾರೂ ದೋಷ ಹುಡುಕೋದಿಲ್ಲವಲ್ಲ-ಎಂದು ತಿಳಿದು ಹೀಗೆ ತನ್ನನ್ನು ಅಟ್ಟಕ್ಕೇರಿಸುತ್ತಿದ್ದಾನೆ. ಅದಕ್ಕೆ ಕಾರಣ: ಆ ಬಂಗಾರ, ಔದಾರ್ಯದ ಫಲ ಅದರ ತದ್ವಿರುದ್ಧ. ನಾರಣಪ್ಪ ಹೇಳಿದ ಹಾಗೆ ಈಗ ತಾನು ಮರುಕಕ್ಕೆ ಕರಗಿಬಿಡಬಾರದು. ಗಟ್ಟಿಯಾಗಿ ನಿಂತು ಧರ್ಮಶಾಸ್ತ ಏನೆನ್ನುತ್ತದೋ ಹಾಗೆ ಮಾಡಬೇಕು. “ತ್ರಿಕಾಲಜ್ಞರಾದ ಋಷಿಗಳು ಇದನ್ನು ಯೋಚಿಸದೆ ಹೋಗಿರೋದು ಸಾಧ್ಯವೇ? ಏನು.” ಗರುಡನ ಮಾತಿಗೆ ಉತ್ತರ ಕೊಡದೆ ಆಚಾರ್ಯರು ಓದುತ್ತಲೇ ಹೋದರು. “ವೇದಾಂತವೆಂದು ಕರೆಯಲು ಕಾರಣ, ಏನು, ಇದರ ತತ್ವದ ಅಂತ್ಯ ಅಂತ ತಾವೇ ಅಪ್ಪಣೆ ಕೊಡಿಸಿದ್ದಿರಿ ಅಲ್ಲವೆ, ಆಚಾರ್ಯರೆ? ವೇದಾಂತದಲ್ಲಿ ಉತ್ತರವಿಲ್ಲದೆ ಇರೋಕ್ಕೆ ಸಾಧ್ಯವೊ? ಒಬ್ಬ ಬ್ರಾಹ್ಮಣನ ಶವ ಅಗ್ರಹಾರದಲ್ಲಿದ್ದ ಮೇಲೆ, ಏನು, ಕೇರಿಯ ಬ್ರಾಹ್ಮಣರು ತಮ್ಮ ಬ್ರಾಹ್ಮಣ್ಯದ ವಿಧಿನಿಯಮಗಳನ್ನು ಸಾಂಗವಾಗಿ ನಡೆಸಿಕೊಂಡು ಹೋಗೋದಕ್ಕೆ ಅಡ್ಡಿಯಾದ ಮೇಲೆ, ಏನು, ಬರೇ ಊಟ ಮಾಡುವಂತಿಲ್ಲವೆಂದು ನಾನು ಈ ಪ್ರಶ್ನೇನ ಎತ್ತುತೇನೆಂದಲ್ಲ…ಏನು.” ಪ್ರಾಣೇಶಾಚಾರ್ಯರು ಇದಕ್ಕೂ ಉತ್ತರ ಕೊಡಲಿಲ್ಲ. ತಾನು ಹೇಳಿಕೊಟ್ಟ ವೇದಾಂತ, ಪುರಾಣ, ತತ್ವ ಎಲ್ಲವನ್ನೂ ಈಗ ತನಗೆ ವಾಪಸ್ಸು ಒಪ್ಪಿಸುತ್ತಿದ್ದಾನೆ ಗರುಡ. ಕಾರಣ? ಹೊನ್ನು! ಅಯ್ಯೋ ಮನುಷ್ಯನ ಬಾಳೇ ಎನ್ನಿಸಿತು. “ಅಲ್ಲದೆ ತಾವು ಹೇಳಿದ್ದು ನಿಜ ಅನ್ನಿಸಿತು ನನಗೆ. ಅವನು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಟ್ಟಂತಲ್ಲವಲ್ಲ! ಅವನಿಗೆ ನಾವು ಬಹಿಷ್ಕಾರ ಹಾಕಿಸಲಿಲ್ಲವಲ್ಲ. ಏನು. ಬಹಿಷ್ಕಾರವನ್ನೇನಾದರೂ ಹಾಕಿಬಿಟ್ಟಿದ್ದರೆ ಅವ ತುರುಕಾ ಆಗಿ ನಾವೆಲ್ಲ ಈ ಅಗ್ರಹಾರಾನ್ನ ಬಿಡಬೇಕಾಗಿ ಬಂದು ಬಿಡ್ತಿತ್ತಲ್ಲ; ಏನು.” “ಧರ್ಮಶಾಸ್ತ ಏನು ಅನ್ನುತ್ತೋ ಹಾಗೆ ಮಾಡೋದೂಂತ ನನ್ನ ನಿರ್ಧಾರ, ಗರುಡ” ಎಂದು ಅವನ ಮಾತನ್ನ ನಿಲ್ಲಿಸಲು ಗ್ರಂಥದಿಂದ ತಮ್ಮ ಕಣ್ಣುಗಳನ್ನೆತ್ತಿ ಹೇಳಿ ಮತ್ತೆ ಓದಲು ಪ್ರಾರಂಭಿಸಿದರು. “ಧರ್ಮಶಾಸ್ತದಲ್ಲಿ ಪಶ್ಚಾv ಉತ್ತರ ಸಿಗಲಿಲ್ಲ ಎನ್ನಿ. ಸಿಗಲಿಕ್ಕಿಲ್ಲ ಎಂದಲ್ಲ ನನ್ನ ಮಾತು. ಏನು. ಒಂದು ವೇಳೆ ಸಿಕ್ಕದೆ ಹೋದರೆ ಆಪದ್ಧರ್ಮ ಅಂತ ಒಂದು ಇದೇಂತ ತಾವು ಹಿಂದೊಮ್ಮೆ ಅಪ್ಪಣೆ ಕೊಡಿಸಿದ್ದುಂಟಲ್ಲ. ಒಬ್ಬ ಮನುಷ್ಯನ ಪ್ರಾಣಾ ಉಳಿಸಲು ಗೋಮಾಂಸಾನ್ನ ಕೊಡಬೇಕಾಗಿ ಬಂದರೆ ಗೋಮಾಂಸಕ್ಕೂ ದೋಷವಿಲ್ಲಾಂತ-ಏನು-ತಾವೇ ಹೇಳಿದ್ದಿಲ್ಲವೆ? ಏನು-ತಾವು ಹೇಳಿದ ಒಂದು ಕತೆಯ ಪ್ರಕಾರ ವಿಶ್ವಾಮಿತ್ರ ಋಷಿ ಭೂಮಿಯಲ್ಲಿ ಕ್ಷಾಮ ತಲೆದೋರಿದಾಗ ಒಮ್ಮೆ, ಹಸಿವು ತಾಳದಾಗಿ, ಜೀವಾನ ಉಳಿಸಿಕೊಳ್ಳೋದೇ ಪರಮಧರ್ಮ ಅಂತ, ಏನು, ಸತ್ತ ನಾಯಿಯ ಮಾಂಸಾನ್ನೂ ತಿನ್ನಹೋದನೆಂದು, ಏನು…” “ತಿಳಿಯಿತು ಗರುಡ. ಈಗ ನಿನ್ನ ಮನಸ್ಸಿನಲ್ಲಿರೋದು ಹೇಳಿಬಿಡು” ಎಂದು ಪ್ರಾಣೇಶಾಚಾರ್ಯರು ತಲೆಬೇಸರ ಬಂದು ತಾಳೆಗರಿ-ಗ್ರಂಥಗಳನ್ನು ಮುಚ್ಚಿ ಕೇಳಿದರು. “ಏನೂ ಇಲ್ಲಪ್ಪ” ಎಂದು ಗರುಡಾಚಾರ್ಯ ನೆಲ ನೋಡಿದ. ಮತ್ತೆ ಆಚಾರ್ಯರಿಗೆ ಉದ್ದಂಡ ನಮಸ್ಕಾರ ಮಾಡಿ ಎದ್ದು ಕೂತು: “ಶ್ಯಾಮನನ್ನು ಮಿಲಿಟರಿಯಿಂದ ಬಿಡಿಸಿಕೊಳ್ಳದಿದ್ದರೆ ನನ್ನ ಶವಸಂಸ್ಕಾರ ಮಾಡೋರು ಯಾರು ಹೇಳಿ, ಆಚಾರ್ಯರೆ. ತಮ್ಮ ಅನುಮತಿ ದೊರಕಿಬಿಟ್ಟರೆ, ಏನು…” ಎಂದು ಅನ್ನುತ್ತಿರುವಂತೆ ಲಕ್ಷ್ಮಣಾಚಾರ್ಯ ಬಂದು ನಿಂತಿದ್ದ.
ತನ್ನ ತಂಗಿಯ ಕೊರಳಿನಲ್ಲಿರಬೇಕಾಗಿದ್ದ ಆಭರಣ ಪರವಶವಾಯಿತೆಂದು, ಈ ಸೂಳೆಯಿಂದಾಗಿ ಅವಳು ಸತ್ತಳೆಂದು ಕಣ್ಣೀರಿಡುತ್ತ ಮನೆಗೆ ಬಂದ ಲಕ್ಷ್ಮಣಾಚಾರ್ಯನ ಹೆಂಡತಿ ಅನುಸೂಯಳಿಗೆ ಕಣ್ಣೀರು ಕ್ರಮೇಣ ನಾರಣಪ್ಪನ ಬಗ್ಗೆಯೂ ಹರಿಯಹತ್ತಿತ್ತು. ಎಷ್ಟೆಂದರೂ ಅವ ತನ್ನ ಸೋದರಮಾವನ ಮಗನಲ್ಲವೆ? ಮಾವ ಬದುಕಿದ್ದರೆ, ತಂಗಿ ಜೀವದಿಂದಿದ್ದರೆ ಆ ಗರುಡ ಮಾಟ ಮಾಡಿಸಿರದಿದ್ದರೆ, ನಮ್ಮ ನಾರಣಪ್ಪ ಹೀಗೆ ಬುದ್ಧಿ ಕೆಟ್ಟು, ಅಷ್ಟೊಂದು ಚಿನ್ನ ಪರಭಾರೆ ಮಾಡಿ, ಹೀಗೆ ಪರದೇಶಿಯಂತೆ, ನಿರ್ಗತಿಕನಂತೆ ಸತ್ತು, ಶವಸಂಸ್ಕಾರೆವಿಲ್ಲದೆ ಕೊಳೆಯಬೇಕಾಗಿತ್ತೇ ಎಂದು ಗೊಳೋ ಎಂದು ಅಳಹತ್ತಿದಳು. ’ಅವನು ಏನೇ ಮಾಡಲಿ, ಕರುಳಿನ ಬಳ್ಳಿ ಕಡಿಯುತ್ತದ ಪರಮಾತ್ಮ’ ಎಂದು ಗೋಡೆಗೊರಗಿ ಕಣ್ಣೀರು ಹಾಕಿದಳು. ಆದರೆ ಮರುಕ್ಷಣ ಕಣ್ಣೆದುರು ಮೋಟು ಜಡೆಯನ್ನು ಬಿಗಿಯಾಗಿ ಕಟ್ಟಿ, ಬುಗುಡಿ ಮೂಗುಬಟ್ಟು ಧರಿಸಿ, ಉದ್ದ ಕುಂಕುಮವಿಟ್ಟು ಕುಳ್ಳಗೆ ಗುಂಡಗೆ ಇದ್ದ ಮಗಳು ಲೀಲಾವತಿ ಸುಳಿದು ಎದೆ ಕಲ್ಲಾಯಿತು: “ಶ್ರೀಪತಿ ಯಾವತ್ತು ಬರುತ್ತೇನೆಂದು ಹೇಳಿ ಹೋದನೆ?” ಎಂದು ಹತ್ತನೆಯ ಬಾರಿಗೆ ಕೇಳಿದಳು. ಲೀಲಾವತಿ ’ಗೊತ್ತಿಲ್ಲ’ ಎಂದುಬಿಟ್ಟಳು. ಪರದೇಶಿ ಹುಡುಗಾಂತ ಅವನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದರೆ ತನ್ನ ಒಡಹುಟ್ಟಾದ ನಾರಣಪ್ಪನೇ ಅವನ ತಲೆ ತಿರುಗಿಸಿಬಿಡಬೇಕೇ? ತನ್ನ ಮೊಟ್ಟೆಯನ್ನ ತಾನೇ ತಿನ್ನುವ ಸರ್ಪವಾದ ಅವ ತನ್ನ ಪಾಲಿಗೆ. ಏನೇನು ಹಚ್ಚಿದನೊ ತನ್ನ ಅಳಿಯನ ತಲೆಗೆ? ಮನೆಯಲ್ಲಿ ತಿಂಗಳಿಗೆ ಎರಡು ದಿನ ನಿಲ್ಲುವುದಿಲ್ಲ. ಯಕ್ಷಗಾನದ ಮೇಳಗಳ ಬೆನ್ನುಹತ್ತಿ ಊರೂರು ಅಲೆಯುತ್ತಾನೆ. ಪಾರಿಜಾತಪುರದ ಹುಡುಗರ ಸಹವಾಸ ಮಾಡುತ್ತಾನೆ. ಅಲ್ಲೊಂದು ಇಲ್ಲೊಂದು ಅವನಿಗೆ ಸೂಳೆಗಳಿವೆಯೆಂದು ಅವಳಿಗೆ ದುರ್ಗಾಭಟ್ಟರ ಹೆಂಡತಿಯಿಂದ ಸುದ್ದಿ ತಲ್ಪಿದೆ. ಕದ್ದು ಮುಚ್ಚಿ ಶ್ರೀಪತಿ ನಾರಣಪ್ಪನ ಮನೆಗೆ ಹೋಗಿಬಂದಾಗಲೇ ಗೊತ್ತಾಯ್ತು ಅವಳಿಗೆ-ಕೆಟ್ಟ ಅಂತ. ಕೆಟ್ಟ ದಾರಿ ಹಿಡಿದ ಅಂತ. ಪ್ರಾರಬ್ಧ, ಏನೇನನ್ನು ಅವನು ಅಲ್ಲಿ ಕುಡುದನೋ, ತಿಂದನೋ! ಆ ಚಂದ್ರಿಯ ವಯ್ಯಾರಕ್ಕೆ ಬಲಿಯಾಗದವರು ಇಲ್ಲ. ಅಳಿಯನಿಗೆ ತಕ್ಕ ಬುದ್ಧಿ ಕಲಿಸಲೆಂದು ಅನಸೂಯ ಮಗಳಗೆ ಹಚ್ಚಿಕೊಟ್ಟಳು “ನಿನ್ನ ಗಂಡನಿಗೆ ಒಪ್ಪಬೇಡ. ಹೀಗೆ ತೊಡೆಯನ್ನ ಗಂಟುಹಾಕಿಕೊಂಡು ಕೌಂಚಿ ಮಲಗಿಬಿಡು. ಬುದ್ಧಿ ಬರಲಿ.” ಲೀಲಾವತಿ ಹಾಗೆಯೇ ಮಾಡಿದಳು. ಗಂಡ ರಾತ್ರೆ ತನ್ನನ್ನು ಬಳಚಲು ಬಂದರೆ ’ಚೂಟಿದರು, ಕಚ್ಚಿದರು’ ಎಂದು ಅಳುತ್ತ ತಾಯಿಯ ಮಗ್ಗುಲಿನಲ್ಲಿ ಬಂದು ಮಲಗಲು ಪ್ರಾರಂಬಿಸಿದಳು. ಶ್ರೀಪತಿಗೆ ಇದರಿಂದ ಬುದ್ಧಿ ಬಂದಂತೆ ಕಾಣಲಿಲ್ಲ. ತಾನು ತನ್ನ ಗಂಡನಿಂದ ಮನಸ್ಸಿನ ಇಷ್ಟವನ್ನು ನಡೆಸಿಕೊಂಡ ಹಾಗೆ ಈಗ ನಡೆಯಲಿಲ್ಲ. ಶ್ರೀಪತಿ ಜುಟ್ಟನ್ನು ತೆಗೆಸಿ ನಾರಣಪ್ಪನಂತೆ ಕ್ರಾಪು ಬಿಟ್ಟ. ಕೆಯಲ್ಲಿ ಒಟ್ಟಾದ ದಕ್ಷಿಣೆ ದುಡ್ಡಿನಲ್ಲಿ ಒಂದು ಬ್ಯಾಟರಿಯನ್ನು ಕೊಂಡುಕೊಂಡ. ಸಂಜೆಯ ಹೊತ್ತು ಶಿಳ್ಳೆಹಾಕಿ ಅಗ್ರಹಾರ ಸುತ್ತುವುದಕ್ಕೆ ಶುರುಮಾಡಿದ. ಮೊದಲೇ ಜ್ವರಗಡ್ಡೆಯಿಂದ ಕೃಶನಾಗಿ, ಕಣ್ಣುಗಳು ಹೂತುಬಿದ್ದು ಇವತ್ತೋ ನಾಳೆಯೋ ಎನ್ನುವಂತೆ ಕಾಣುತ್ತಿದ್ದ ಲಕ್ಷ್ಮಣಾಚಾರ್ಯ ಬಿಸಿಲು ಮತ್ತು ಹಸಿವಿನಿಂದ ಇನ್ನಷ್ಟು ನರಪೇತಲನಾಗಿ ಮನೆಗೆ ಬಂದು ಬಿದ್ದದ್ದೇ ತಡ ಅನಸೂಯ ಅವನನ್ನು ಕಾಡತೊಡಗಿದಳು : ತನ್ನ ಸೋದರಮಾವನ ಮಗ ತಾನೇ ನಾರಣಪ್ಪ? ಅವನು ಏನೇ ಕುಲಗೆಡಲಿ, ಅವನ ಹೆಣಾನ್ನ ಶೂದ್ರರು ಎತ್ತಿ ಸಾಗಿಸಿದ್ದೇ ಆದರೆ ತಾನು ಪ್ರಾಣ ಇಟ್ಟುಕೊಳ್ಳುವವಳಲ್ಲ. ಪ್ರಾಣೇಶಾಚಾರ್ಯರದು ಮೃದುಸ್ವಭಾವ. ಗರುಡ ಊರು ಹಾಳು ಮಾಡುವ ಪ್ರಚಂಡ, ಗಟ್ಟಿಗ, ನಿಮ್ಮ ಹಾಗೆ ಭೋಳೇ ಅಲ್ಲ. ಅವನೆಲ್ಲಾದರೂ ಶವಸಂಸ್ಕಾರಕ್ಕೆ ಅಪ್ಪಣೆ ಪಡೆದುಬಿಟ್ಟರೆ ಆಭರಣವೆಲ್ಲ ಮೊದಲೇ ಗರ್ವದಿಂದ ತಿರುಗೋ ಸೀತಾದೇವಿಗೆ ಸೇರಿಬಿಡುತ್ತೆ. ಅವರ ಅನಿಷ್ಟ ಬುದ್ಧಿಗೆ ದೇವರು ತಕ್ಕದು ಮಾಡಿದಾ ಎನ್ನಿ. ಇಲ್ಲದಿದ್ದರೆ ಶ್ಯಾಮ ಮನೆ ಬಿಟ್ಟೋಡಿ ಮಿಲಿಟರಿ ಸೇರುತ್ತಿದ್ದನೆ? ಈಗ ನನ್ನ ಅಳಿಯನ ಮೇಲೆ, ನನ್ನ ಸೋದರಮಾವನ ಮಗ ನಾರಣಪ್ಪನ ಮೇಲೆ ಅನ್ನುತ್ತಾರಲ್ಲಾ-ಇವರು-ಇವರ ಮಗ ಶ್ಯಾಮ ಆಚಾರಾನ್ನ ನಡೆಸಿಕೊಂಡು ಬರುತ್ತಿದ್ದಾನೆಂಬೋದು ಏನು ಖಾತ್ರಿ. ಗರುಡಾ ಹೋಗಿ ಪ್ರಾಣೇಶಾಚಾರ್ಯರ ಮನಸ್ಸನ್ನ ಒಲಿಸಿಕೊಳ್ಳಲಿಕ್ಕೆ ಬಿಡಬೇಡಿ. ನೀವೂ ಹೋಗಿ. ಅವನು ಈಗ ಅಲ್ಲಿ ಹಾಜರು-ನೀವಿಲ್ಲಿ ದಂಡಕ್ಕೆ ಬಿದ್ದುಕೊಂಡಿರೋವಾಗ-ನನಗೆ ಗೊತ್ತಿಲ್ಲವ? ಎಂದು ಹೊರಕ್ಕೆ ಬಂದು ಗರುಡಾಚಾರ್ಯನ ಮನೆಯ ಮುಂಭಾಗ ಹಿಂಭಾಗವನ್ನೆಲ್ಲ ಪರೀಕ್ಷಿಸಿ ಗಂಡನನ್ನು ಬಲಾತ್ಕಾರವಾಗಿ ದೂಡಿದ್ದಳು. ಶಿವಪೂಜೆಯ ನಡುವೆ ಕರಡಿ ಬಿಟ್ಟಂತೆ ಬಂದ ಕುಚೇಲಸ್ವರೂಪದ ಲಕ್ಷ್ಮಣಾಚಾರ್ಯನನ್ನು ಕಂಡು ಗರುಡಾಚಾರ್ಯನಿಗೆ ರೋಷಾತಿರೋಷವಾಯಿತು. ಉ ಉ ಎನ್ನುತ್ತ ಮುಂಭಾಗದ ಹೊಟ್ಟೆಯನ್ನು ಒಂದು ಕೆಯಿಂದ ಹಿಡಿದು, ಇನ್ನೊಂದು ಕೆಯಿಂದ ನೆಲವನ್ನು ಊರಿ ಕೂತವನನ್ನು ನುಂಗಿಬಿಡುವಂತೆ ನೋಡಿದ. ಜುಗ್ಗಾತಿಜುಗ್ಗ, ಜಿಪುಣಾಗ್ರೇಸರ, ತಾಯಿಗ್ಗಂಡ ಎಂದೆಲ್ಲ ಅನ್ನಬೇಕೆಂಬ ಆಸೆಯನ್ನು ಪ್ರಾಣೇಶಾಚಾರ್ಯರು ಎದುರಿದ್ದಾರಲ್ಲ ಎಂದು ಅದುಮಿಕೊಂಡ. ಎರೆದುಕೊಳ್ಳಲು ಒಂದು ಚಮಚಾ ಎಳ್ಳೆಣ್ಣೆಯನ್ನೂ ಕೊಳ್ಳದಂತಹ ವಜ್ರಮುಷ್ಟಿಯ ಬ್ರಾಹ್ಮಣಾಧಮ ಇವ. ಅಗ್ರಹಾರದಲ್ಲಿ ಯಾರಿಗೆ ತಿಳಿದಿಲ್ಲ? ಎರದುಕೊಳ್ಳಿ ಎಂದು ಹೆಂಡತಿ ಕಾಡಿದರೆ ಬೆಳಿಗ್ಗೆ ಎದ್ದು ನಾಲ್ಕು ಮೆಲಿ ನಡೆದು ಕೊಂಕಣಿಯ ಅಂಗಡಿಗೆ ಹೋಗುತ್ತಾನೆ. ’ಏನೋ ಕಾಮತ, ಒಳ್ಳೆಣ್ಣೆ ತರಸಿದ್ದೀಯ ಹೇಗೆ? ಏನು ಬೆಲೆ? ಮಾಲು ಹೇಗಿದೆ? ಮುಗ್ಗಲೋ ಹೇಗೆ, ನೋಡುವ’ ಎಂದು ಕೆಯ್ಯೊಡ್ಡಿ ಎರಡು ಚಮಚಾ ಹಾಕಿಸಿಕೊಂಡು ಮೂಸಿದಂತೆ ನಟಿಸಿ ’ಚಿಂತೆಯಿಲ್ಲ. ಆದರೂ ಬೆರಕೆ ಕಣಯ್ಯ, ಯಾವತ್ತು ಹೊಸ ಮಾಲು ಬರೋದು ಹೇಳು, ನಮ್ಮ ಮನೆಗೊಂದು ಡಬ್ಬ ಆಗಬೇಕು’ ಎಂದು ತಲೆಗೆ ಅದನ್ನು ಸವರಿಕೊಳ್ಳುತ್ತಾನೆ. ಮತ್ತೆ ಮೆಣಸಿನಕಾಯಿ ಚೀಲಕ್ಕಿ ಕೆಹಾಕಿ ’ಒಂದು ಮಣಕ್ಕೇನು ಬೆಲೆ’ ಎಂದು ವಿಚಾರಿಸಿ ಒಂದು ಮುಷ್ಟಿ ಮೆಣಸಿನಕಾಯಿಯನ್ನು ಲೋಕಾಭಿರಾಮವಾಗಿ ಮಾತನಾಡುತ್ತ ತನ್ನ ಚೀಲಕ್ಕೆ ಸಾಗಿಸುತ್ತಾನೆ. ಅಲ್ಲಿಂದ ಸೀದ ಇನ್ನೊಂದು ಮೆಲಿ ನಡೆದು ಶೆಣೆ ಅಂಗಡಿಯಲ್ಲಿ ’ಕಾಮತನಂಗಡಿಯಲ್ಲಿ ಎಷ್ಟು ದುಬಾರಿಯಪ್ಪ’ ಎಂದು ಕಾಮತನನ್ನು ಹಳಿದು, ಇನ್ನೆರಡು ಚಮಚಾ ಎಳ್ಳೆಣ್ಣೆ, ಮುಷ್ಟಿ ಮೆಣಸಿನಕಾಯಿ. ಮನೆಗೆ ಬಂದು ಸ್ನಾನ, ಅಡಿಗೆ. ಮತ್ತೆ ಅವರಿವರ ತೋಟಕ್ಕೆ ಹೋಗಿ ಬಾಳೆಲೆ ಕೊಯ್ದು ತಂದು, ಅದನ್ನು ಒಣಗಿಸಿ ದೊನ್ನೆ ಮಾಡಿ ಮಾರಿ ಒಂದಿಷ್ಟು ಕಾಸು ಸಂಪಾದನೆ. ಜನಿವಾರ ಮಾರಿ ಇನ್ನಷ್ಟು ಕಾಸು. ಊಟದ ಕರೆಗೆಂದು ಹದ್ದಿನ ಹಾಗೆ ಕಾದಿರುತ್ತಾನೆ. ಈಗ ಬಂಗಾರದ ಮೇಲೆ ಇವನ ಕಣ್ಣು ನೆಟ್ಟಿದೆ. ಏನಾದರೂ ಸೆ-ಇವನಿಗೆ ಅದು ದಕ್ಕದಂತೆ ಮಾಡಬೇಕು. “ನಾರಾಯಣ ನಾರಾಯಣ” ಎನ್ನುತ್ತ ಏದುಸಿರುಬಿಡುತ್ತ, ಬೆವರನ್ನು ಒರೆಸಿಕೊಂಡು ಲಕ್ಷ್ಮಣಾಚಾರ್ಯ : “ಆಚಾರ್ಯರೇ, ಧರ್ಮಶಾಸ್ತದ ಪ್ರಕಾರ ಅಡ್ಡಿಯಿಲ್ಲವಾದರೆ ಶವಸಂಸ್ಕಾರ ಮಾಡೋಕ್ಕೆ ನನ್ನದೇನೂ ಅಡ್ಡಿಯಿಲ್ಲ. ಎಷ್ಟೆಂದರೂ ಅವ ನನ್ನ ಷಡ್ಡಕ ಅಲ್ಲವೆ? ತಮ್ಮ ಅಪ್ಪಣೆಯಾದರೆ ಶವಸಂಸ್ಕಾರದ ಹಕ್ಕು ನನಗಲ್ಲದೆ ಬೇರೆ ಯಾರಿಗೂ ಇಲ್ಲ” ಎಂದು ಮುಚ್ಚಿದ್ದ ಕಣ್ಣನ್ನು ಬಿಟ್ಟ. ಗರುಡಾಚಾರ್ಯ ಪೆಚ್ಚಾದ. ಇದಕ್ಕೆ ಯಾವ ಅಸ್ತವಿದೆ ತನ್ನಲ್ಲಿ? ಶವಸಂಸ್ಕಾರ ಮಾಡೋ ಅರ್ಹತೆಯ ಪ್ರಶ್ನೆ ಬಂದರೆ-ಏನು-ನನ್ನದೇನೂ ಅಡ್ಡಿಯಿಲ್ಲ. ನೀನೇ ಮಾಡಂತೆ. ಬೇರೆಯವರ ಪಾಪಾನ್ನ ಸ್ವೀಕರಿಸಲಿಕ್ಕೆ ಎಂದೇ ಬ್ರಾಹ್ಮಣಜನ್ಮ ಬಂದಿರೋದು ತಾನೆ? ಆದರೆ ಆ ಬಂಗಾರ ಮಾತ್ರ ಕೋರ್ಟಿಗೆ ಹೋಗಬೇಕು. ಅಥವಾ ಧರ್ಮಸ್ಥಳದ ನ್ಯಾಯದ ಪ್ರಕಾರ ನನಗೆ ಸೇರಬೇಕು.” ಪ್ರಾಣೇಶಾಚಾರ್ಯರು ಅತ್ಯಂತ ವ್ಯಥಿತರಾದರು. ಒಂದು ವೇಳೆ ಶವಸಂಸ್ಕಾರದ ಪ್ರಶ್ನೆ ಇತ್ಯರ್ಥವಾದರೂ ಈ ಬಂಗಾರದ ಪ್ರಶ್ನೆ ಇತ್ಯರ್ಥ ಮಾಡೋದು ಸುಲಭವಲ್ಲ. ಘಳಿಗೆ ಘಳಿಗೆಗೂ ತನ್ನ ಜವಾಬ್ದಾರಿ ಹೆಚ್ಚುತ್ತಿದೆ. ನಾರಣಪ್ಪನ ಸವಾಲು ತ್ರಿವಿಕ್ರಮ ಪಾದವಾಗಿ ಬೆಳೆಯುತ್ತಿದೆ…. ಅಷ್ಟರಲ್ಲಿ ಬಡವ ದಾಸಾಚಾರ್ಯನ ನಾಯಕತ್ವದಲ್ಲಿ ಉಳಿದ ಬಡಬ್ರಾಹ್ಮಣರು ಬಂದು ಸೇರಿದರು. “ಆಚಾರ್ಯರೆ….” ದಾಸಾಚಾರ್ಯ ಹೊಟ್ಟೆಯನ್ನು-ಅಳುವ ಮಕ್ಕಳ ಬೆನ್ನನ್ನು ತಾಯಿ ಸವರುವಂತೆ-ಸವರುತ್ತ ಹೇಳಿದ: “ನನಗೆ ಆರೋಗ್ಯ ನೆಟ್ಟಗಿಲ್ಲ-ನಿಮಗೆ ಗೊತ್ತು. ಆಹಾರವಿಲ್ಲದೇ ಇದ್ದರೆ ನನ್ನ ಪ್ರಾಣಕ್ಕೇ ಅಪಾಯ. ನೀವು ಒಂದು ಮಾರ್ಗ ತೋರಿಸಬೇಕು. ಅಥವ ಆ ಆಪದ್ಧರ್ಮದ ಪ್ರಕಾರ ಏನು ಮಾಡಬಹುದೆಂದಾದರೂ ಆಜ್ಞೆ ಮಾಡಬೇಕು. ಹೆಣವನ್ನು ಅಗ್ರಹಾರದಲ್ಲಿಟ್ಟುಕೊಂಡು ಊಟ ಮಾಡಬಹುದೋ ಹೇಗೋ ಹೇಳಿ. ಅಲ್ಲದೆ ಇದು ನಡುಬೇಸಗೆ. ಇನ್ನೊಂದು ದಿನದೊಳಗೆ ಹೆಣ ವಾಸನೆ ಬಂದು ನಾರೋದು ಖಂಡಿತ. ನನ್ನ ಮನೆಯೋ ಅವನದ್ದಕ್ಕೆ ಹತ್ತಿರ. ಯಾರಿಗೂ ಅದು ಒಳ್ಳೆಯದಲ್ಲ. ಅಗ್ರಹಾರದ ಹಿತದ ದೃಷ್ಟಿಯಿಂದ ಲಕ್ಷ್ಮಣಾಚಾರ್ಯ ಅಥವ ಗರುಡಾಚಾರ್ಯ ಒಂದು ತೀರ್ಮಾನಕ್ಕೆ ಬರಬೇಕು.”
ಸಂಜೆಯಾಯಿತು. ಆದರೆ ಸಂಧ್ಯಾವಂದನವಿಲ್ಲ. ಊಟವೂ ಇಲ್ಲ. ಪ್ರಾಣೇಶಾಚಾರ್ಯರಿಗೆ ಕೆಗೇನೂ ಕೆಲಸವಿಲ್ಲದೆ ರಗಳೆಯಾದಂತಾಗಿ ಒಳಗಿಂದ ಹೊರಕ್ಕೆ, ಹೊರಗಿಂದ ಒಳಕ್ಕೆ, ಓಡಾಡಿದರು. ಅಂಗಳದಲ್ಲಿ ಕೂತಿದ್ದ ಚಂದ್ರಿಗೆ “ಮೇಲೆ ಬಂದು ಕೂತುಕೊ” ಎಂದರು. ಹೆಂಡತಿಯನ್ನು ಮಗುವಿನಂತೆ ಎರಡು ಕೆಯಲ್ಲಿ ಹಿತ್ತಿಲಿಗೆ ಎತ್ತಿಕೊಂಡು ಹೋಗಿ ಮೂತ್ರ ಹೊಯ್ಯಿಸಿ, ತಿರುಗಿ ಎತ್ತಿ ತಂದು ಹಾಸಿಗೆಯ ಮೇಲೆ ಮಲಗಿಸಿದರು. ಸಂಜೆಯ ಔಷಧವನ್ನು ಕುಡಿಸಿ, ತಿರುಗಿ ನಡುಮನೆಗೆ ಬಂದು ಲಾಟೀನಿನ ಬೆಳಕಿನಲ್ಲಿ ಶಾಸ್ತಗಳನ್ನು ತಿರುವಿಹಾಕುತ್ತ ಕೂತರು.

ಅಧ್ಯಾಯ : ಐದು

ಶಿರ್ನಾಳಿಗೆ ಹಿಂದಿನ ರಾತ್ರೆ ಕೇಳೂರು ಮೇಳದವರ ಜಾಂಬುವಂತಿ-ಕಲ್ಯಾಣ ನೋಡಹೋಗಿದ್ದ ಶ್ರೀಪತಿಗೆ ನಾರಣಪ್ಪ ಶಿವಮೊಗ್ಗೆಯಿಂದ ಬಂದವನು ಹಾಸಿಗೆ ಹಿಡಿದು ಮಲಗಿದ್ದೂ ತಿಳಿಯದು, ಸತ್ತದ್ದೂ ತಿಳಿಯದು. ತಿಳಿದಿದ್ದರೆ ಅಗ್ರಹಾರದಲ್ಲೆಲ್ಲ ಗುಪ್ತವಾಗಿ ತನಗೆ ಆಪ್ತನಾದ ಗೆಳೆಯನೊಬ್ಬನ ಸಾವಿನಿಂದಾಗಿ ಅವನಿಗೆ ವ್ಯಥೆಯಾಗುತ್ತಿತ್ತು. ಅವನು ಮನೆಬಿಟ್ಟು ಹೊರಟು ವಾರದ ಮೇಲಾಗಿದೆ. ಕೇಳೂರು ಮೇಳದ ಭಾಗವತನ ಸ್ನೇಹಮಾಡಿ ಅವನು ಬಿಡಾರಬಿಟ್ಟಲ್ಲಿ ಆಟದವರ ಜೊತೆ ತಂಗಿ, ಊಟ ಮಾಡಿ, ರಾತ್ರೆ ಆಟ ನೋಡಿ, ಹಗಲು ನಿದ್ದೆಮಾಡಿ, ಬಿಡುವಿನಲ್ಲಿ ಅಕ್ಕಪಕ್ಕದ ಹಳ್ಳಿಯ ಜನರಲ್ಲಿಗೆ ಹೋಗಿ ಮೇಳದವರಿಗೆ ವೀಳ್ಯಕೊಟ್ಟು ಸ್ವಾಗತಿಸುವಂತೆ ಪ್ರಚಾರಮಾಡಿ, ಸರಸ-ಕುಶಲ-ಸಂಭಾಷಣೆಯಲ್ಲಿ ಲೋಕವನ್ನು ಒಂದು ವಾರ ಮರೆತಿದ್ದು, ಇವತ್ತು ರಾತ್ರೆ ಕೆಯಲ್ಲಿ ಬ್ಯಾಟರಿ ಹಿಡಿದು ಕಾಡಿನ ಕತ್ತಲಲ್ಲಿ ತನ್ನ ಧೆರ್ಯಕ್ಕಾಗಿ ಗಟ್ಟಿಯಾಗಿ ಒಂದು ಪದ ಹೇಳುತ್ತ ಬರುತ್ತಿದ್ದಾನೆ. ಮೇಲಕ್ಕೆ ಬಾಚಿದ ಅವನ ಕ್ರಾಪಿನ ಕೂದಲು ಕ್ಷೌರವಿಲ್ಲದೆ ಕತ್ತಿನ ತನಕ ಬೆಳೆದಿರಲು ಕಾರಣ ತನಗೊಂದು ಸ್ತೀವೇಷವನ್ನು ಮುಂದಿನ ವರ್ಷ ಕೊಡುವುದಾಗಿ ಭಾಗವತ ಕೊಟ್ಟ ಆಶ್ವಾಸನೆ. ಎಷ್ಟೆಂದರೂ ಪ್ರಾಣೇಶಾಚಾರ್ಯರು ತಿದ್ದದ ನಾಲಿಗೆ ತಾನೇ? ನಿನ್ನ ವಾಕ್ಯಸರಣಿ ಗಂಟಲು ಪರಿಶುದ್ಧವಾಗಿದೆಯೆಂದು ಭಾಗವತ ಮೆಚ್ಚಿದ್ದ. ಅಲ್ಲದೆ ಆಚಾರ್ಯರಿಂದ ಒಂದಿಷ್ಟು ಸಂಸ್ಕೃತ ತರ್ಕ ಪುರಾಣ ಕೇಳಿ ಯಕ್ಷಗಾನದ ಗಹನವಾದ ಸಂಭಾಷಣೆಗೆ ಅವಶ್ಯವಾದ ಸಂಸ್ಕೃತಿಯೂ ಇದೆ ತನ್ನಲ್ಲಿ. ಮೇಳದಲ್ಲೊಂದು ಪಾರ್ಟು ಸಿಕ್ಕಿದ ಮೇಲೆ ಬೊಜ್ಜದ ಒಡೆ, ಬೊಜ್ಜದ ಪಾಯಸ, ಹಲಸಿನ ಹಣ್ಣಿನ ಮುಳಕಕ್ಕೆಂದು ಬದುಕುವ ಬ್ರಾಹ್ಮಣರ ಕೊಂಪೆಯಿಂದ ಪಾರಾಗಬಹುದು ಎಂದು ಶ್ರೀಪತಿಗೆ ಹರ್ಷ ತುಂಬಿ ಕತ್ತಲೆಯಲ್ಲಿ ಕಾಡಿನಲ್ಲಿ ಭಯವಾಗುತ್ತಿಲ್ಲ. ಅಲ್ಲದೆ ಪೂಜಾರಿ ಶೀನನ ಗುಡಿಸಲಿನಲ್ಲಿ ಕುಡಿದಿದ್ದ ಹೆಂಡ ಹಿತವಾಗಿ ತಲೆಗೆ ಏರಿ ಕಾಡಿನ ಗಾಢವಾದ ಮೌನ ಅವನಲ್ಲಿ ನಡುಕ ಹುಟ್ಟಿಸುತ್ತಿಲ್ಲ. ಎರಡು ಸೀಸೆ ಹೆಂಡ; ಒತ್ತಿದೊಡನೆ ಬೆಳಕು ಚೆಲ್ಲುವ, ಹಳ್ಳಿಯ ಜನರಿಗೆ ಪರಮಾಶ್ಚರ್ಯ ವಸ್ತುವಾದ ಬ್ಯಾಟರಿ-ಹೀಗೆ ಸಶಸ್ತನಾಗಿ ಹೊರಟಮೇಲೆ ದೆವ್ವವೆಲ್ಲಿ, ಭೂತವೆಲ್ಲಿ? ದೂರ್ವಾಸಪುರ ಹತ್ತಿರವಾದಂತೆ ಅವನ ಮೆ ತನಗೆ ಕಾದಿರುವ ಸುಖದ ಕಲ್ಪನೆಯಿಂದ ಬೆಚ್ಚಗಾಯಿತು. ಅವನ ಹೆಂಡತಿ ತೊಡೆಯನ್ನು ಗಂಟು ಹಾಕಿ ಕೌಂಚಿ ಮಲಗಿದರೇನಂತೆ? ಬೆಳ್ಳಿಯಿದ್ದಾಳಲ್ಲ. ಬೆಳ್ಳಿ ಹೊಲತಿಯಾದರೇನಂತೆ? ನಾರಣಪ್ಪ ಹೇಳುವುದಿಲ್ಲವೆ-ಕಾಳಿಯಾದರೇನು? ಬೋಳಿಯಾದರೇನು? ಬೆಳ್ಳಿ ಕಾಳಿಯೂ ಅಲ್ಲ ಬೋಳಿಯೂ ಅಲ್ಲ. ಬಚ್ಚ-ಗಲ್ಲದ, ಬತ್ತಿದ ಮೊಲೆಯ, ಬೇಳೆಹುಳಿ ವಾಸನೆ ಬರುವ ಬಾಯಿಯ ಯಾವ ಬ್ರಾಹ್ಮಣ ಹುಡುಗಿ ಅವಳಿಗೆ ಸಮ? ಕೆಗೆ ತೊಡೆಗೆ ಭರ್ತಿಯಾಗಿ ಸಿಗುವ, ಮರಳಿನಲ್ಲಿ ಮಣ್ಣಿನಲ್ಲಿ ಎಣೆಯಾಡುವ ಹಾವಿನಂತೆ ತನ್ನ ಜೊತೆ ಹೊರಳುವ ಬೆಳ್ಳಿಗೇನು ಕೊರತೆ? ಇಷ್ಟು ಹೊತ್ತಿಗೆ ಅವಳು ಗುಡಿಸಲಿನ ಎದುರು ಮಡಿಕೆಯಲ್ಲಿ ಕಾಯಿಸಿದ ಬಿಸಿನೀರು ಸ್ನಾನ ಮಾಡಿ, ಅವಳಪ್ಪ ತಂದ ಹುಳಿ ಹೆಂಡವನ್ನಷ್ಟು ಕುಡಿದು ಬೆಚ್ಚಗೆ ಹದವಾಗಿರುತ್ತಾಳೆ : ಶ್ರುತಿ ಮಾಡಿದ ಮೃದಂಗದಂತೆ. ಅಚ್ಚಕಪ್ಪೂ ಅಲ್ಲ, ಬಿಳುಚಿದ ಬಿಳಿಯೂ ಅಲ್ಲ-ಬೀಜಕ್ಕೆ ಫಲವತ್ತಾದ ಎಳೆಬಿಸಿಲಿನಲ್ಲಿ ಕಾದ ಮಣ್ಣಿನ ಬಣ್ಣ ಅವಳ ಮೆ; ಶ್ರೀಪತಿಯ ನಡೆಯುವ ಹೆಜ್ಜೆ ನಿಲ್ಲುತ್ತದೆ. ಖುಷಿಗೆ ಬ್ಯಾಟರಿಯೊತ್ತಿ ಬೆಳಕು ಮಾಡಿ ಆರಿಸುತ್ತಾನೆ. ಮತ್ತೆ ಹತ್ತಿಸಿ ಅರಣ್ಯದ ಸುತ್ತ ಬೆಳಕನ್ನು ಚೆಲ್ಲಿ ರಾಕ್ಷಸವೇಷ ಹಾಕಿ ಬಂದ ಆಟದವನಂತೆ ಹಿಗ್ಗುತ್ತಾನೆ. ಥೆ ಥೆ ತಕಥೆಥೆಥೆಥೆ : ಕುಣಿಯುತ್ತಾನೆ. ಕುಮ್ಮಚಟ್ಟು ಹಾಕಿ ತನಗೆ ಮಂಡಿಯ ಮೇಲೆ ಸುತ್ತುವುದಕ್ಕೆ ಬರುತ್ತದೊ ನೋಡುವ ಎಂದು ಪ್ರಯತ್ನಿಸಿ ಮಂಡಿಗೆ ಪೆಟ್ಟಾಗಿ ಎದ್ದು ನಿಲ್ಲುತ್ತಾನೆ. ಅರಣ್ಯದ ನಿರ್ಜನತೆ, ಬ್ಯಾಟರಿಯ ಬೆಳಕಿಗೆ ಗಾಬರಿಯಾದ ಹಕ್ಕಿಗಳ ರೆಕ್ಕೆಯ ಪಟಪಟದಿಂದ ಇನ್ನಷ್ಟು ಮದವುಕ್ಕುತ್ತದೆ. ಕರೆದ ಕೂಡಲೆ ಹಾಜರಾಗುತ್ತವೆ: ನವರಸಭಾವಗಳು. ಕೋಪವೇ, ಬೀಭತ್ಸವೇ, ರೌದ್ರವೇ, ಭಕ್ತಿಯೇ, ಶೃಂಗಾರವೇ-ಒಂದರಿಂದೊಂದಕ್ಕೆ ಸಲೀಸಾಗಿ ಜಾರುತ್ತದೆ ಅವನ ಕಲ್ಪನೆ. ಈಗ ಲಕ್ಷ್ಮೀದೇವಿ ನಸುಕಿನಲ್ಲೆದ್ದು ಯಕ್ಷಗಾನದ ಧಾಟಿಯಲ್ಲಿ ಉದಯರಾಗದ ಕೀರ್ತನೆಯನ್ನು ಶೇಷಶಾಯಿಗೆ ಹಾಡುತ್ತಿದ್ದಾಳೆ…ಏಳು…ನಾರಾಽಽಽಯಣನೆ
ಏಳು ಲಕ್ಷ್ಮೀರಮಣಽಽ
ಏಳಯ್ಯಽಽ ಬೆಳಽಽಗಾಯಿತೂ… ಶ್ರೀಪತಿಯ ಕಣ್ಣಿನಲ್ಲಿ ನೀರೇ ಬಂದುಬಿಡುತ್ತದೆ. ಗರುಡ ಬಂದು ಎಬ್ಬಿಸುತ್ತಾನೆ-’ಏಳು ನಾರಾಯಣನೆ.” ನಾರದ ಬಂದು ತಂಬೂರಿ ಬಾರಿಸುತ್ತ ಎಬ್ಬಿಸುತ್ತಾನೆ-’ಏಳು ಲಕ್ಷಮೀರಮಣ.’ ಸಮಸ್ತ ಪಶುಪಕ್ಷಿಗಳು, ವಾನರ, ಕಿನ್ನರ, ಯಕ್ಷ, ಗಂಧರ್ವಾದಿಗಳು ಬೇಡಿಕೊಳ್ಳುತ್ತಾರೆ-’ಏಳಯ್ಯ ಬೆಳಽಽಗಾಯಿತು.’ ಶ್ರೀಪತಿ ಮತ್ತೆ ಲಾಸ್ಯದಲ್ಲಿ ಉಟ್ಟ ಪಂಚೆಯನ್ನು ಸೀರೆಯಂತೆ ಹಿಡಿದು ಕೆಯಾಡಿಸಿ, ಕತ್ತು ಕೊಂಕಿಸಿ ಕುಣಿದ. ಶೀನನ ಹೆಂಡ ಏರೇ ಬಿಟ್ಟಿತಲ್ಲ, ನಾರಣಪ್ಪನಲ್ಲಿಗೆ ಹೋಗಿ ಇನ್ನಷ್ಟು ಏರಿಸಿಬಿಡಬೇಕೆಂದುಕೊಂಡ. ಯಕ್ಷಗಾನದ ಸ್ತೀಪಾತ್ರಗಳೆಲ್ಲ ನೆನಪಾಗುತ್ತವೆ. ಪುರಾಣಗಳಲ್ಲಿ ಹೆಣ್ಣಿನ ಮೋಹಕ್ಕೆ ಬಲಿಯಾಗದ ಋಷಿಯೇ ಇಲ್ಲ. ವಿಶ್ವಾಮಿತ್ರನ ತಪೋಭಂಗ ಮಾಡಿದ ಮೇನಕೆ-ಹೇಗಿದ್ದಿರಬೇಕು ಅವಳು? ಚಂದ್ರಿಗಿಂತ ಸುಂದರಿಯಿದ್ದಿರಬೇಕು. ಯಾರ ಕಣ್ಣಿಗೂ ಹರಕು ತುಂಡುಟ್ಟು ಗೊಬ್ಬರ ಎತ್ತಲು ಬರುವ ಬೆಳ್ಳಿಯ ರೂಪು ಬೀಳದಿದ್ದುದು ಪರಮಾಶ್ಚರ್ಯ. ಅದರಲ್ಲಿ ಆಶ್ಚರ್ಯವೂ ಇಲ್ಲ ಎನ್ನಿ. ಬ್ರಾಹ್ಮಣಾರ್ಥದ ಗೊಡ್ಡುಗಳ ಕಣ್ಣಿಗೆ ಏನು ತಾನೇ ಕಂಡೀತು? ಸಾರಿ ಸಾರಿ ಮಕ್ಕಳಿಗೆನ್ನುವಂತೆ ಪ್ರಾಣೇಶಾಚಾರ್ಯರು ವಿವರಿಸುತ್ತಾರೆ: ವೇದವ್ಯಾಸರು ಎಷ್ಟು ಪುಳಕಿತರಾಗಿರಬೇಕು! ಉದಯಕಾಲದಲ್ಲಿ ಅವರು ಎದ್ದು ಉಷೆಯನ್ನು ಕಂಡಾಗ ಭಗವಂತ ಈ ಮಾತುಗಳನ್ನು ಅವರ ಬಾಯಿಂದ ಆಡಿಸಿದಾಗ ’ಸ್ನಾನ ಮಾಡಿ ಶುಭ್ರಳಾದ ಪುಷ್ಪವತಿಯ ತೊಡೆಯ ಹಾಗೆ’ : ಆಹಾ ಎಂತಹ ಧೀರ ಕಲ್ಪನೆ, ಸುಂದರ ಉಪಮೆ. ಆದರೆ ಬ್ರಾಹ್ಮಣರಿಗೆ ಅದು ಬರಿಯ ಮಂತ್ರ, ಉದ್ಯೋಗಕ್ಕೊಂದು ಮಾರ್ಗ. ರಾಜನ ವೇಷ ಹಾಕುವ ಕುಂದಾಪುರದ ನಾಗಪ್ಪ ಎಷೊಂದು ಗಮ್ಮತ್ತಿನಲ್ಲಿ ಮಾತನ್ನಾಡುತ್ತಾನೆ: ಈ ದುಂಬಿಗಳೋ ಈ ಪಾರಿಜಾತ, ಸಂಪಿಗೆ, ಮಲ್ಲಿಗೆ, ಕೇದಗೆ ಬೆಳೇದ ಈ ವನವೋ, ಇಲ್ಲಿ ಏಕಾಂಗಿಯಾಗಿ, ಅವನತವದನೆಯಾಗಿ, ದುಃಖದಿಂದ ಬಾಧಿತಳಾಗಿ ಕಾಣುವ ಎಲೆ ರಮಣಿ, ನೀನು ಯಾರು? ಶ್ರೀಪತಿ ಮುಗುಳ್ನಗುತ್ತ ನಡೆಯುತ್ತಾನೆ. ಅಗ್ರಹಾರದಲೆಲ್ಲ ಸೌಂದರ್ಯವನ್ನು ಕಾಣುವ ಕಣ್ಣಿರುವುದೆಂದರೆ ಇಬ್ಬರಿಗೆ ಮಾತ್ರ: ನಾರಣಪ್ಪನಿಗೆ, ಚಂದ್ರಿಗೆ.
*****
ಮುಂದುವರೆಯುವುದು

ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.