ಸಾಹಿತ್ಯ ಸ್ವರಾಜ್ಯ

ಸ್ವಾತಂತ್ರ್ಯದ ಐವತ್ತನೇ ವರ್ಷ ಆಚರಿಸುತ್ತಿರುವಾಗಲೇ ಭರತೀಯ ದೇಶ ಭಾಷೆಗಳ ಸಾಹಿತ್ಯದಲ್ಲಿ ಸ್ವರಾಜ್ಯ ಬಂದಿದೆಯೇ ಎಂಬ ಬಗ್ಗೆ ವಿವಾದವೊಂದು ಆರಂಭವಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ವಾದ ಎದ್ದಿರುವುದು ನಮ್ಮ ದೇಶ ಭಾಷೆಗಳ ಈಚಿನ ಸಾಹಿತ್ಯ ಕಳಪೆ ಎಂದು. ಇವಕ್ಕೆ ಹೋಲಿಸಿದಾಗ ಭಾರತೀಯ ಇಂಗ್ಲಿಷ್ ಸಾಹಿತ್ಯದ ಸಾಧನೆ ದೊಡ್ಡದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ದೇಶ ಭಾಷೆಗಳ ಆಧುನಿಕ ಸಾಹಿತ್ಯ, ಪಶ್ಚಿಮದ ಅನುಕರಣೆ ಎಂಬ ಆರೋಪ ಮೊದಲಿನಿಂದ ಇದೆ. ಈ ವಿವಾದವನ್ನು ಮತ್ತೆ ಎತ್ತಿ ಬಾಂಬ್ ಹಾಕಿದವರು ಪ್ರಸಿದ್ಧ ಇಂಗ್ಲಿಷ್ ಲೇಖಕ ಸಲ್ಮಾನ್ ರಷ್ದಿ. ಮೇಲೆ ಹೇಳಿದ ವಿಚಾರಗಳನ್ನು ರಷ್ದಿ ಹೇಳಿದ್ದರಿಂದ ಈ ಜಗಳ ಪ್ರಾರಂಭವಾಗಿದೆ. ಈಚೆಗೆ ಹಲವು ತಿಂಗಳುಗಳಿಂದ ರಷ್ದಿ ಈ ರೀತ್ಯ ಅಭಿಪ್ರಾಯಗಳನ್ನು ಅಲ್ಲಲ್ಲಿ ಹೇಳುತ್ತಲೇ ಬಂದಿದ್ದರು. ಆರು ತಿಂಗಳ ಹಿಂದೆ ಅಮೇರಿಕಾದ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುತ್ತಾ ಇದೇ ಅಭಿಪ್ರಾಯವನ್ನು ಹೇಳಿದಾಗ ಆ ಸಭೆಯಲ್ಲಿದ್ದ ಬಲ್ಲವರು ಸುಮ್ಮನಾದರು. ಈ ವಿಷಯವನ್ನು ಆ ವಿಶ್ವವಿದ್ಯಾನಿಲಯದಲ್ಲಿ ಪಿ‌ಎಚ್. ಡಿ. ಅಧ್ಯಯನ ಮಾಡುತ್ತಿರುವ ಪ್ರತಿಭಾವಂತ ಕನ್ನಡಿಗ ಚಂದನಗೌಡ ಅಪಾರ ವಿಸ್ಮಯದಿಂದ ನನಗೆ ಹೇಳಿದ್ದರು. ನಂತರ ಇದೇ ವಿಚಾರಗಳನ್ನು ರಷ್ದಿ ’ನ್ಯೂಯಾರ್ಕರ್’ ಪತ್ರಿಕೆಯಲ್ಲಿ ಬರೆದರು. ಶುರುವಾಯಿತು ಗುಲ್ಲು, ಗಲಭೆ.

ಎಲ್ಲ ನಿರೀಕ್ಷಿಸಿದ ಹಾಗೇ ನಡೆಯಿತು. ಸಹಜವಾಗಿಯೇ ದೇಶಭಾಷಾಭಿಮಾನಿಗಳು ಉರಿದುಬಿದ್ದರು. ಇಂಗ್ಲಿಷ್ ಪತ್ರಿಕೆಗಳಲ್ಲಿ, ಟೆಲಿವಿಷನ್‌ಗಳಲ್ಲಿ ಈ ಬಗ್ಗೆ ಭಾರೀ ಚರ್ಚೆ ಆರಂಭವಾಯಿತು. ಸಾಹಿತ್ಯದ ಚರ್ಚೆ ಸಮೂಹ ಮಾಧ್ಯಮಗಳಲ್ಲಿ ಬಂದಾಗ ಏನಾಗಬಹುದೋ ಅದೇ ಇಲ್ಲಿಯೂ ಆಯಿತು. ವಿಷಯಗಳು ಸರಳೀಕರಣಗೊಂಡು ಬಿಟ್ಟವು. ’ಟೈಂಸ್ ಆಫ್ ಇಂಡಿಯಾ’ ದವರು ದೇಶದ ಹಲ ಕಡೆಗಳಿಂದ ಸಾಹಿತಿಗಳನ್ನು ಸಂದರ್ಶಿಸಿ ಈ ಬಗೆಗೆ ಪ್ರತಿಕ್ರಿಯೆ ಕೇಳಿದರು. ಅಲ್ಲಿ ನನ್ನನ್ನು ಕೇಳಿದಾಗ ಹೇಳಿದ್ದೆ ’ರಷ್ದಿ ತುಂಬಾ ಪ್ರತಿಭಾವಂತ ಲೇಖಕ. ಮಜಾ ಎಂದರೆ ಆತ ಅನೇಕ ಸಾರಿ ತನ್ನ ಕಾದಂಬರಿಗಳ ಪಾತ್ರದ ಹಾಗೆಯೇ ವರ್ತಿಸುತ್ತಾರೆ. ಅವರ ಅನೇಕ ಪಾತ್ರಗಳಿಗೆ ವಾಸ್ತವ ಮತ್ತ್ಯ್ ಫ್ಯಾಂಟಸಿಗಳ ನಡುವೆ ವ್ಯತ್ಯಾಸವೇ ತಿಳಿಯದ ಸ್ಥಿತಿ ಇರುತ್ತದೆ. ರಷ್ದಿಗೆ ಈ ವಿವಾದದಲ್ಲೂ ಹೀಗಾಗಿದೆ. ಭಾರತೀಯ ದೇಶ ಭಾಷೆಗಳ ಸಾಹಿತ್ಯ್ದ ವಾಸ್ತವತೆಯ ಪರಿಚಯ ಅವರಿಗಿಲ್ಲ, ಭಾರತೀಯ ಇಂಗ್ಲಿಷೇ ದೊಡ್ಡದು ಎಂಬುದು ಅವರ ಫ್ಯಾಂಟಸಿ.’

ಈ ಬಗ್ಗೆ ಎದ್ದ ವಿವಾದದಲ್ಲಿ ವಸ್ತುನಿಷ್ಠ ಚರ್ಚೆಗಿಂತ ಭಾವುಕ ಪ್ರತಿಕ್ರಿಯೆಗಳೇ ಹೆಚ್ಚಾಗಿದ್ದವು. ಭಾರತೀಯ ಇಂಗ್ಲಿಷ್ ಸಾಹಿತ್ಯದ ಮೇಲಂತೂ ಅನೇಕ ಪ್ರತಿಭಾವಂತ ಸಾಹಿತ್ಯ ಚಿಂತಕರೇ ಹಾರಿಬಿದ್ದರು. ಭಾರತೀಯ ಇಂಗ್ಲಿಷ್ ಸಾಹಿತ್ಯ ಎಲಿಟಿಸ್ಟ್ ಸಾಹಿತ್ಯ, ಅದಕ್ಕೂ ಭಾರತದ ವಾಸ್ತವಕ್ಕೂ ಸಂಬಂಧವೇ ಇಲ್ಲ. ಈ ರೀತಿಯ ಆಕ್ರೋಶಪೂರಿತ ನಿಲುವುಗಳು ಪ್ರಕಟವಾದವು. ಇಂಗ್ಲಿಷಿಗೆ ಹೋಲಿಸಿದರೆ ಹಿಂದಿಯೂ ಸೇರಿದಂತೆ ಭಾರತದ ಭಾಷೆಗಳು ಅಧಿಕಾರಹೀನ ಭಾಷೆಗಳು. ಇಂಗ್ಲಿಷಿನಲ್ಲಿ ಬರೆದಾಗ ಬರುವ ಗ್ಲಾಮರ್, ಅಂತಸ್ತು, ಧಿಮಾಕು ದೇಶಭಾಷೆಗಳಲ್ಲಿ ಬರೆದಾಗ ಬರುವುದಿಲ್ಲ. ರಾತ್ರೋರಾತ್ರಿ ಇಲ್ಲಿ ದೊಡ್ಡ ಲೇಖಕರು ಸೃಷ್ಟಿಯಾಗುತ್ತಾರೆ. ಸೋಪನ್ನು, ಸೆಂಟನ್ನು, ಬ್ಲೇಡನ್ನು, ವಿಸ್ಕಿಯನ್ನು ಮಾರಾಟ ಮಾಡುವ ತಂತ್ರಗಳನ್ನು ಬಳಸಿ ಇಂಗ್ಲಿಷ್ ಸಾಹಿತ್ಯವನ್ನೂ ಮಾರುತ್ತಾರೆ. ಇಲ್ಲಿಯ ಒಂದು ವಿಶಿಷ್ಟ ತಂತ್ರ ಎಂದರೆ ಲೇಖಕ/ಲೇಖಕಿಯರಿಗೆ ಸಿಕ್ಕುವ ಗೌರವಧನದ ಮೊತ್ತವನ್ನೇ ಜಾಹೀರಾತಿನ ಸಾಧನವನ್ನಾಗಿ ಬಳಸಿಕೊಳ್ಳುವುದು. ಮಾರುಕಟ್ಟೆಯ ಎಲ್ಲ ವಿಕಟ ತಂತ್ರಗಳು ಭಾರತೀಯ ಇಂಗ್ಲಿಷ್ ಸಾಹಿತ್ಯವನ್ನು ’ಪ್ರಮೋಟ್’ ಮಾಡುವಾಗ ಬಳಕೆಯಾಗುತ್ತವೆ.

ಆದರೆ, ಈ ಅಂಶಗಳು ನಮ್ಮನ್ನು ವಾಸ್ತವದಿಂದ ದೂರ ತಳ್ಳಬಹುದು. ಏಕೆಂದರೆ, ಭಾರತೀಯ ಇಂಗ್ಲಿಷ್ ಸಾಹಿತ್ಯ್ದಲ್ಲೂ ಎರಡು ರೀತಿಯ ವರ್ಗೀಕರಣಗಳು ಮೊದಲಿನಿಂದ ಇವೆ. ಒಂದು ’ರೆಸಿಡೆಂಟ್ ನಾನ್-ಇಂಡಿಯನ್’ ಸಾಹಿತ್ಯ. ಎರಡು, ’ದೇಸಿ ಇಂಗ್ಲಿಷ್ ಸಾಹಿತ್ಯ’. ಮೊದಲನೆಯದಕ್ಕೆ ನೂರಾರು ಜನರ ಉದಾಹರಣೆ ಕೊಡಬಹುದು. ಈಚೆಗೆ ಬಂದ ವಿಕ್ರಂ ಸೇಠ್, ಶೋಭಾ ಡೇ, ಅರುಂಧತಿ ಇತ್ಯಾದಿ ಜನ. ಈ ಜನರ ಸಾಹಿತ್ಯ ಪ್ರಚಾರದ ಮೇಲೆ ನಿಂತಿರುತ್ತದೆ. ಥಳುಕಿನ ಬರೆವಣಿಗೆ. ಆದರೆ, ಇವರಲ್ಲೂ ತುಂಬ ಪ್ರತಿಭಾವಂತರಿದ್ದಾರೆ. ಉದಾಹರಣೆಗೆ, ಅಮಿತಾಭ್ ಘೋಷ್ ಯಾವುದೇ ಸಾಹಿತ್ಯ ಪರಂಪರೆಗೆ ಘನತೆ, ಶೋಭೆ ತಂದುಕೊಡುವ ಕಾದಂಬರಿಕಾರ. ಇನ್ನೊಂದು ಮಟ್ಟದಲ್ಲಿ ರಷ್ದಿಯ ಸಾಹಿತ್ಯವೂ ತುಂಬ ದೋಡ್ಡ ಮಟ್ಟದ ಸಾಧನೆಯೇ. ನಾವು ಒಪ್ಪಲಿ, ಒಪ್ಪದೇ ಇರಲಿ, ಇವರೆಲ್ಲ ಕಾದಂಬರೀ ಪ್ರಕಾರದಲ್ಲಿ ತುಂಬ ಆಕರ್ಷಕವಾದದ್ದನ್ನು ಸಾಧಿಸಿದ್ದಾರೆ.

ಅತೃಪ್ತಿ

ಇಷ್ಟಾದರೂ ಇವುಗಳ ಬಗ್ಗೆ ತೀವ್ರವಾದ ಅತೃಪ್ತಿಯನ್ನು ಕೆಲ ಸಾಹಿತ್ಯ ಚಿಂತಕರು ವ್ಯಕ್ತಪಡಿಸುತ್ತಾರೆ. ಈ ನೆಲದ ಜೀವನ, ರೀತಿ, ರಂಗು, ಚರಿತ್ರೆಯ ಚಲನೆ – ಈ ಯಾವುದೂ ಈ ’ರೆಸಿಡೆಂಟ್ ನಾನ್-ಇಂಡಿಯನ್’ ಸಾಹಿತ್ಯದಿಂದ ತಿಳಿಯುವುದಿಲ್ಲ ಎಂದು ಅವುಗಳನ್ನು ಟೀಕಿಸುತ್ತಾರೆ. ಸಾಹಿತ್ಯದ ಬಗೆಗಿನ ಒಂದು ನಿರ್ದಿಷ್ಟ ಪರಿಕಲ್ಪನೆಗೆ ಮುಗ್ಧವಾಗಿ ಅಂಟಿಕೊಂಡದ್ದರಿಂದ ಬರುವ ಹಠಮಾರೀ ತಿರಸ್ಕಾರ ಅದು. ಅಂದರೆ, ಸಾಹಿತ್ಯ ವಾಸ್ತವವನ್ನು ಪ್ರತಿನಿಧಿಕರಿಸಲೇ ಬೇಕು ಎಂಬ ತಾಂತ್ರಿಕ ಹಠಮಾರಿತನ ಇದು. ಸಾಹಿತ್ಯ ಜೀವನದ ಕನ್ನಡೀ. ಸಾಹಿತ್ಯ ಸಾಮಾಜಿಕ ಬದಲಾವಣೆಯ ಖಡ್ಗ. ಈ ರೀತಿಯ ತುಂಬಾ ಪ್ರಭಾವಶಾಲೀ ಘೋಷಣೆಗಳಿಂದ ಉಂಟಾಗುವ ಪ್ರತಿಕ್ರಿಯೆ ಇದು.

ಈ ಹಿನ್ನಲೆಯಲ್ಲಿ ಹೇಳುವುದಾದರೆ ಸಾಹಿತ್ಯದಲ್ಲಿ ಎರಡು ರೀತಿಯ ಮಾದರಿಗಳಿವೆ. ಒಂದು, ಪ್ರತಿನಿಧೀಕರಣದ ಮಾದರಿ. ಎರಡು, ಕಥನದ ಮಾದರಿ. ಪ್ರತಿನಿಧೀಕರಣದ ಮಾದರಿ ಸಾಹಿತ್ಯ ಜೀವನದ ಕನ್ನಡಿ ಎಂದು ನಂಬುವಂಥಾದ್ದು. ಇಲ್ಲಿ ಜೀವನದ, ಚರಿತ್ರೆಯ ಬದಲಾವಣೆಯ ಪ್ರತಿಮೆಗಳನ್ನು ಸಾಹಿತ್ಯ ಸೃಷ್ಟಿಸುತ್ತದೆ. ಮಾರ್ಕ್ಸ್‌ವಾದೀ ಸಾಹಿತ್ಯ ವಿಮರ್ಶೆ ಯಾವುದನ್ನು ’ಟೈಪ್’ ಎಂದು ಕರೆಯುತ್ತದೋ ಅಂಥದು ಇಲ್ಲಿ ಸಂರುದ್ಧವಾಗಿ ಸೃಷ್ಟಿಯಾಗುತ್ತದೆ. ಕಲೆ, ಜೀವನದ ಪ್ರತಿನಿಧಿಯಾಗಿರಬೇಕು ಎಂದಾಗ ಅಲ್ಲಿ ಸಾಹಿತ್ಯ ವೃತ್ತಪತ್ರಿಕೆಯ ಹಾಗೆ, ಚರಿತ್ರೆಯ ಗೆಜೆಟಿಯರ್‌ನ ಹಾಗೆ ಕೆಲಸ ಮಾಡತೊಡಗುತ್ತದೆ. ಪಾತ್ರವೊಂದು ಇಡೀ ತಲೆಮಾರಿನ ಪ್ರತೀಕವಾಗುತ್ತದೆ. ಶಿವರಾಮ ಕಾರಂತರ ರಾಮ, ಕುವೆಂಪು ಅವರ ಹೂವಯ್ಯ ಈ ರೀತಿಯ ಪಾತ್ರಗಳು. ಲಂಕೇಶರ ಬಸವರಾಜ, ಶಾಂತಿನಾಥ ದೇಸಾಯರ ನಾಯಕರು ಆ ರೀತಿಯ ತಲೆಮಾರಿನ ಸಮಗ್ರ ಪ್ರತಿನಿಧಿಗಳು. ಆದರೆ, ಕಥನದ ಮಾದರಿಗೆ ಆ ಹೊಣೆ ಇಲ್ಲ. ಅಲ್ಲಿ ಸಾಹಿತ್ಯ ಪ್ರತಿಭಾ ವಿಲಾಸಿ.

ಈ ಹಿನ್ನಲೆಯಿಂದ ಭಾರತೀಯ ಇಂಗ್ಲಿಷ್ ಸಾಹಿತ್ಯದ ಮೊದಲ ಮಾದರಿ ದುರ್ಬಲವಾದದ್ದು. ರಷ್ದಿಯನ್ನು ಬಿಟ್ಟರೆ ಉಳಿದವರಲ್ಲಿ ಭಾರತೀಯ ಚಾರಿತ್ರಿಕಾನುಭವವನ್ನು ಪ್ರತಿಮೆಗಳ ಮೂಲಕ ಮುಖಾಮುಖಿಯಾಗುವ ಪ್ರಯತ್ನ ಅಷ್ಟು ಪ್ರಮುಖವಾಗಿಲ್ಲ. ರಷ್ದಿಯಲ್ಲಿ ಮಾತ್ರ ಆ ಪ್ರಯತ್ನ ಉದ್ದಕ್ಕೂ ಇದೆ. ಆದರೆ, ಆತ ಅದನ್ನು ವಾಸ್ತವವಾದೀ ಮಾರ್ಗದಲ್ಲಿ ಮಾಡುವುದಿಲ್ಲ. ಹೀಗಾಗಿ, ಸಾಮಾನ್ಯ ಓದುಗರಿಗೆ ಈತ ಸಮಕಾಲೀನ ಭಾರತದ ಪ್ರತಿಕ್ರಿಯೆಯೊಂದನ್ನು ಶೋಧಿಸುತ್ತಿದ್ದಾನೆ ಎಂಬುದು ಅರ್ಥವಾಗುವುದು ಕಷ್ಟ. ರಷ್ದಿ ಕಥನ ಮಾರ್ಗದಲ್ಲಿ ಪ್ರತಿನಿಧೀಕರಣವನ್ನು ಮಾಡುತ್ತಿರುತ್ತಾರೆ.

ಭಿನ್ನ ಮಾದರಿ

ಭಾರತೀಯ ಇಂಗ್ಲಿಷ್ ಸಾಹಿತ್ಯವೆಂದರೆ ಬರೀ ’ರೆಸಿಡೆಂಟ್ ನಾನ್-ಇಂಡಿಯನ್’ ಮಂದಿ ಬರೆದ ಸಾಹಿತ್ಯ ಮಾತ್ರವಲ್ಲ. ಅದಕ್ಕಿಂತ ಭಿನ್ನವಾದ ಮಾದರಿ ಮೊದಲಿನಿಂದಲೂ ಅಲ್ಲಿತ್ತು. ರಾಜಾ ರಾವ್, ಆರ್. ಕೆ. ನಾರಾಯಣ್ ಮುಂತಾದವರು ಕನ್ನಡದಲ್ಲೋ, ತಮಿಳಿನಲ್ಲೋ ಬರೆಯಬಹುದಾಗಿದ್ದ ರೀತಿಯವರು. ಈ ಪರಂಪರೆಯನ್ನು ನಾನು ’ದೇಸಿ ಇಂಗ್ಲಿಷ್’ ಪರಂಪರೆ ಎಂದು ಕರೆಯುತ್ತೇನೆ. ಇತ್ತೀಚಿನೆ ವರ್ಷಗಳಲ್ಲಿ ಈ ರೀತಿಯ ಪರಂಪರೆ ಬೆಳೆಯುತ್ತ ಬರುತ್ತಿದೆ. ಉದಾಹರಣೆಗೆ, ಬೆಂಗಳೂರಿನ ಕನ್ನಡಿಗಾರದ ಮುಕುಂದರಾವ್ ಈ ಧಾರೆಯ ಪ್ರತಿಭಾವಂತ ಬರಹಗಾರ. ಅವರ ಇತ್ತೀಚಿನ ಕಾದಂಬರಿ ’ಡೆತ್ ಆಫ್ ಎನ್ ಆಯಾಕ್ಟಿವಿಸ್ಟ್’ ಕನ್ನಡದ್ದೂ ಆಗಬಹುದಾದ ಕೃತಿ. ಈ ನಾಡಿನ ಕ್ರಾಂತಿಕಾರಿ ಕತೆ, ದ್ವಂದ್ವ, ಸಾಮಾಜಿಕ, ರಾಜಕೀಯ ದಿಗ್ಭ್ರಮೆ ಈ ಎಲ್ಲ ಮುಕುಂದ ರಾವ್ ಕಾದಂಬರಿಯಲ್ಲಿ ಶೋಧಿತವಾಗಿವೆ. ಈ ರೀತಿಯ ಕಾದಂಬರಿಗಳ ಕಲಾತ್ಮಕ ಸಾಧನೆಗಳ ಬಗ್ಗೆ ಗಂಭೀರವಾದ ಚರ್ಚೆ ಸಾಧ್ಯವಿದೆಯಾದರೂ ಇವನ್ನು ಪರಕೀಯ ಅಥವ ಎಲಿಟಿಸ್ಟ್ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಶಶಿ ದೇಶಪಾಂಡೆ ಕೂಡಾ ಈ ರೀತಿಯ ದೇಸಿ ಲೇಖಕಿ.

ಹೀಗಾಗಿ, ಇಲ್ಲಿ ಏಳುವ ಪ್ರಶ್ನೆ ಎಂದರೆ: ಈ ರೀತಿಯ ದೇಸಿ ಇಂಗ್ಲಿಷ್ ಲೇಖಕರು ದೇಶ ಬಾಷೆಗಳಲ್ಲಿ ಯಾಕೆ ಬರೆಯಲಿಲ್ಲ ಎಂದು. ಇದಕ್ಕೆ ಉತ್ತರ ಸರಳವಲ್ಲ. ಸಮಾಜ ಶಾಸ್ತ್ರೀಯವಾಗಿ ಒಂದು ಪ್ರಾಥಮಿಕ ಮಟ್ಟದ ಉತ್ತರ ಸಾಧ್ಯವಿದೆ. ಇವತ್ತು ಮನೆಯಲ್ಲಿ, ಹೊರಗೆ, ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಬರೀ ಇಂಗ್ಲಿಷನ್ನೇ ಬಳಸುತ್ತಿರುವ ಹೊಸ ನಗರದ ಮಧ್ಯಮ ವರ್ಗವೊಂದು ಸೃಷ್ಟಿಯಾಗಿದೆ. ಈ ಜನಕ್ಕೆ ಇಂಗ್ಲಿಷೇ ಈಗ ಮಾತೃಬಾಷೆ. ಇದನ್ನು ನೈತಿಕವಾದ ಭಾಷೆಯಲ್ಲಿ ಟೀಕಿಸುವುದು ತಪ್ಪು. ಈ ವರ್ಗಕ್ಕೆ ಮನೆಯ ಕೌಟಂಬಿಕ ವ್ಯವಹಾರದ ಮಟ್ಟಿಗೆ ದೇಸಿ ಭಾಷೆ ಬಳಸಿದರೂ ಬೌದ್ಧಿಕ, ಸಾಹಿತ್ಯಕ ಅಭಿವ್ಯಕ್ತಿಗೆ ಇಂಗ್ಲಿಷನ್ನೇ ಆತ್ಮೀಯವಾಗಿ ಅವಲಂಬಿಸಿದೆ. ಈ ರೀತಿಯ ಎರಡು ವರ್ಗಗಳಿಂದ ದೇಸಿ ಇಂಗ್ಲಿಷ್ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಇದನ್ನು ಅಪರಾಧ ಎನ್ನುವುದು ತಪ್ಪು.

ಕೌಟಂಬಿಕ, ದೈನಂದಿನ ವ್ಯವಹಾರಗಳಲ್ಲಿ ಸುತ್ತಣ ಜನಸಮೂಹ ಬಳಸುವ ಭಾಷೆಗಳಿಗಿಂತ ಬೇರಾದ ಇಂಗ್ಲಿಷ್ ಭಾಷೆ ತನ್ನ ಪ್ರತಿಭೆಯಲ್ಲಿ ಎಷ್ಟು ಆಳವಾದದ್ದನ್ನು ಒಳಗೊಳ್ಳಬಹುದು ಎಂಬ ಪ್ರಶ್ನೆಯಂತೂ ಉಳಿದೇ ಉಳಿಯುತ್ತದೆ. ಸಾಹಿತ್ಯದಲ್ಲಿ ಭಾಷೆ ಮನೆಮಠ ಹಿತ್ತಲು ಗಡಂಗು ದೇವಾಲಯ ಸ್ಕೂಲು ಕೋರ್ಟುಗಳನ್ನು ಸಮಗ್ರವಾಗಿ ಒಳಗೊಳ್ಳುವ ಶಕ್ತಿ, ವ್ಯಾಪ್ತಿ ಪಡೆದಿರಬೇಕು. ಅದರಲ್ಲೂ ಕಾವ್ಯಕ್ಕೆ ಇದು ಅನಿವಾರ್ಯ. ಕಾವ್ಯದ ಶೈಲಿ ಎಂದರೆ ಸ್ಮೃತಿ ಪರಿಚಯ. ಈ ದೃಷ್ಟಿಯಿಂದ ದೇಸಿ ಇಂಗ್ಲಿಷಗರೂ ಕೂಡ ತುಂಬ ಆಳವಾದ, ಬಹುಮುಖಿಯಾದ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಕಾವ್ಯ ಬರೆಯುವುದು ಕಷ್ಟ. ಈ ಸೌಭಾಗ್ಯ ಏನಿದ್ದರೂ ದೇಶ ಭಾಷೆಗಳಿಗಷ್ಟೇ ಮೀಸಲು. ಬೇಂದ್ರೆ, ಕಂಬಾರ, ಅಯ್ಯಪ್ಪ ಪಣಿಕ್ಕರ್, ಠಾಗೂರ್, ಅಡಿಗ ಈ ಪ್ರತಿಭೆಗಳು ಶುದ್ಧಾಂಗವಾಗಿ ದೇಶ ಭಾಷಾ ಸೃಷ್ಟಿಗರು. ಈಗ ಭಾರತೀಯ ಇಂಗ್ಲಿಷ್ ಕಾವ್ಯ ಹೆಚ್ಚೆಂದರೆ ಮಧ್ಯಮವರ್ಗದ ಖಾಸಗೀ ಭಾವಗೀತ.

ಇಷ್ಟಾದರೂ ದೇಶಭಾಷೆಗಳ ಮಟ್ಟಿಗೆ ಮೂಲಭೂತ ಪ್ರಶ್ನೆಯೊಂದು ಉಳಿದೇ ಉಳಿಯುತ್ತದೆ. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಕೆ. ಸಿ. ಭಟ್ಟಾಚಾರ್ಯ – ಇಂದು ಪ್ರಸಿದ್ಧ ತತ್ವಜ್ಞಾನಿ- ’ಸ್ವರಾಜ್ ಇನ್ ಐಡಿಯಾಸ್’ ಎಂಬ ಮುಖ್ಯ ಲೇಖನ ಬರೆದು ಭಾರತೀಯ ವೈಚಾರಿಕತೆಯನ್ನು ಇದರಲ್ಲಿ ಎಷ್ಟರ ಮಟ್ಟಿಗೆ ಸ್ವೋಪಜ್ಞತೆ ಇದೆ ಎಂಬ ಪ್ರಶ್ನೆ ಎತ್ತಿದ್ದರು. ಪರಕೀಯ ಪ್ರಭಾವಗಳಿಂದ ಮುಕ್ತವಾಗಿ ಸ್ವತಂತ್ರ ಮಾರ್ಗವೊಂದನ್ನು ನಿರ್ಮಿಸಿಕೊಳ್ಳುವ ಅಗತ್ಯದ ಬಗ್ಗೆ ಮಾತನಾಡಿದ್ದರು.

ಸಮಕಾಲೀನ ಸಾಹಿತ್ಯದ ಬಗೆಗೂ ಈ ರೀತಿಯ ಪ್ರಶ್ನೆಗಳು ಪ್ರಸ್ತುತವೇ. ಓಟ್ಟಾರೆಯಾಗಿ ನಮ್ಮ ಸಾಹಿತ್ಯ ಸಂಸ್ಕೃತಿಗಳ ಸಾಧನೆ ಅತಿ ದೊಡ್ಡದು ಎಂಬ ಬಗ್ಗೆ ಸಂದೇಹವೇ ಇಲ್ಲ. ಆದರೆ, ಸಾಹಿತ್ಯಕ್ಕೆ ವೈಚಾರಿಕ ಮಾರ್ಗಗಳಲ್ಲಿ ಪೂರ್ಣ ಸ್ವರಾಜ್ಯ ಸಿದ್ಧಿಸಿದೆಯೇ ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ತ. ಸಾಹಿತ್ಯದಲ್ಲಿ ಶುದ್ಧ ಸ್ವರಾಜ್ಯ ಎಂಬುದೇ ಎಲ್ಲ, ಏನಿದ್ದರೂ ಅದು ಬಹುಮುಖೀ ಪರಕೀಯ ಪ್ರಭಾವಗಳ ನಿರಂತರ ಸಂಗರ್ಷ ಎಂಬ ನಿಲುವು ಕೂಡಾ ಇದೆ.

ಶುದ್ಧ ಸ್ವರಾಜ್ಯ ಮತ್ತು ಪ್ರಭಾವಗಳ ನಿರಂತರ ಸಂಗರ್ಷ ಎಂಬೆರಡು ಮಾದರಿಗಳ ಘರ್ಷಣೆಯಲ್ಲಿ ಸಮಕಾಲೀನ ಭಾರತೀಯ ಸಾಹಿತ್ಯದ ಅತಿ ಮುಖ್ಯ ವಾಗ್ವಾದ ಅಡಗಿದೆ.
*****
ಕನ್ನಡ ಪ್ರಭ, ವಾಗ್ವಾದ ಅಂಕಣ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.